೧೬

[ಹದಿನಾರನೆಯ ಸರ್ಗ]

ಭಾಗಸೂಚನಾ

ವಾನರರ ಬೀಳ್ಕೊಡುಗೆ ಹಾಗೂ ಗ್ರಂಥಪ್ರಶಂಸೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ರಾಮೇಽಭಿಷಿಕ್ತೇ ರಾಜೇಂದ್ರೇ ಸರ್ವಲೋಕಸುಖಾವಹೇ ।
ವಸುಧಾ ಸಸ್ಯಸಂಪನ್ನಾ ಲವಂತೋ ಮಹೀರುಹಾಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಸರ್ವಲೋಕಗಳಿಗೆ ಸುಖವನ್ನುಂಟುಮಾಡುವ ರಾಜೇಂದ್ರನಾದ ಶ್ರೀರಾಮನು ಪಟ್ಟಾಭಿಷಿಕ್ತನಾದಾಗ, ಭೂಮಿಯು ಧನ-ಧಾನ್ಯ, ಸಸ್ಯಗಳಿಂದ ಸಮೃದ್ಧವಾಯಿತು. ವೃಕ್ಷಗಳೆಲ್ಲವೂ ಫಲಭರಿತವಾದುವು. ॥1॥

(ಶ್ಲೋಕ-2)

ಮೂಲಮ್

ಗಂಧಹೀನಾನಿ ಪುಷ್ಪಾಣಿ ಗಂಧವಂತಿ ಚಕಾಶಿರೇ ।
ಸಹಸ್ರಶತಮಶ್ವಾನಾಂ ಧೇನೂನಾಂ ಚ ಗವಾಂ ತಥಾ ॥

(ಶ್ಲೋಕ-3)

ಮೂಲಮ್

ದದೌ ಶತವೃಷಾನ್ಪೂರ್ವಂ ದ್ವಿಜೇಭ್ಯೋ ರಘುನಂದನಃ ।
ತ್ರಿಂಶತ್ಕೋಟಿ ಸುವರ್ಣಸ್ಯ ಬ್ರಾಹ್ಮಣೇಭ್ಯೋ ದದೌ ಪುನಃ ॥

ಅನುವಾದ

ಪರಿಮಳ ಇಲ್ಲದ ಹೂಗಳೂ ಕೂಡ ಸುಗಂಧಯುಕ್ತವಾಗಿ ವಿರಾಜಿಸಿದವು. ಶ್ರೀರಘುನಾಥನು ಪಟ್ಟಾಭಿಷಕ್ತನಾದ ಮೇಲೆ ಮೊದಲು ಒಂದು ಲಕ್ಷ ಕುದುರೆಗಳನ್ನು, ಒಂದುಲಕ್ಷ ಹಾಲು ಕರೆಯುವ ಹಸುಗಳನ್ನು ಹಾಗೂ ಸಾವಿರಾರು ಹೋರಿಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ಮತ್ತೆ ಪುನಃ ಮೂವತ್ತು ಕೋಟಿ ಸುವರ್ಣ ಮುದ್ರೆಗಳನ್ನು ವಿತರಿಸಿದನು. ॥2-3॥

(ಶ್ಲೋಕ-4)

ಮೂಲಮ್

ವಸ್ತ್ರಾಭರಣರತ್ನಾನಿ ಬ್ರಾಹ್ಮಣೇಭ್ಯೋ ಮುದಾ ತಥಾ ।
ಸೂರ್ಯಕಾಂತಿ ಸಮಪ್ರಖ್ಯಾಂ ಸರ್ವರತ್ನಮಯೀಂ ಸ್ರಜಮ್ ॥

(ಶ್ಲೋಕ-5)

ಮೂಲಮ್

ಸುಗ್ರೀವಾಯ ದದೌ ಪ್ರೀತ್ಯಾ ರಾಘವೋ ಭಕ್ತವತ್ಸಲಃ ।
ಅಂಗದಾಯ ದದೌ ದಿವ್ಯೇ ಹ್ಯಂಗದೇ ರಘುನಂದನಃ ॥

ಅನುವಾದ

ಹಾಗೆಯೇ ಬ್ರಾಹ್ಮಣರಿಗೆ ವಸಾಭರಣ ರತ್ನಗಳನ್ನು ಸಂತೋಷದಿಂದ ಕೊಟ್ಟನು. ಬಳಿಕ ಭಕ್ತವತ್ಸಲ ಶ್ರೀರಾಮನು ಸೂರ್ಯನಂತೆ ಕಾಂತಿಯುಳ್ಳ ಸಕಲ ರತ್ನಗಳಿಂದ ಮಾಡಿಸಿದ ಹಾರವೊಂದನ್ನು ಪ್ರೀತಿಯಿಂದ ಸುಗ್ರೀವನಿಗೆ ಕೊಟ್ಟನು ಹಾಗೂ ಅಂಗದನಿಗೆ ದಿವ್ಯವಾದ ಎರಡು ಅಂಗದ(ಭುಜಾಭರಣ)ಗಳನ್ನು ಉಡುಗೊರೆಯಾಗಿ ಕೊಟ್ಟನು. ॥4-5॥

(ಶ್ಲೋಕ-6)

ಮೂಲಮ್

ಚಂದ್ರಕೋಟಿಪ್ರತೀಕಾಶಂ ಮಣಿರತ್ನವಿಭೂಷಿತಮ್ ।
ಸೀತಾಯೈ ಪ್ರದದೌ ಹಾರಂ ಪ್ರೀತ್ಯಾ ರಘುಕುಲೋತ್ತಮಃ ॥

ಅನುವಾದ

ಬಳಿಕ ರಘುಕುಲತಿಲಕ ಶ್ರೀರಾಮನು ಕೋಟಿ ಚಂದ್ರಸಮಾನವಾದ ಕಾಂತಿಯುಳ್ಳ ಮಣಿರತ್ನಗಳಿಂದ ಅಲಂಕೃತವಾದ ಹಾರ ವೊಂದನ್ನು ಪ್ರೀತಿಯಿಂದ ಸೀತೆಗೆ ಕೊಟ್ಟನು. ॥6॥

(ಶ್ಲೋಕ-7)

ಮೂಲಮ್

ಅವಮುಚ್ಯಾತ್ಮನಃ ಕಂಠಾದ್ಧಾರಂ ಜನಕನಂದಿನೀ ।
ಅವೈಕ್ಷತ ಹರೀನ್ಸರ್ವಾನ್ ಭರ್ತಾರಂ ಚ ಮುಹುರ್ಮುಹುಃ ॥

ಅನುವಾದ

ಸೀತಾದೇವಿಯು ಆ ಹಾರವನ್ನು ತನ್ನ ಕೊರಳಿಂದ ತೆಗೆದು ಕೈಯಲ್ಲಿ ಹಿಡಿದುಕೊಂಡು ಎಲ್ಲ ಕಪಿಗಳನ್ನೂ, ಪ್ರಾಣವಲ್ಲಭನಾದ ರಾಮನನ್ನು ಮತ್ತೆ-ಮತ್ತೆ ನೋಡತೊಡಗಿದಳು. ॥7॥

(ಶ್ಲೋಕ-8)

ಮೂಲಮ್

ರಾಮಸ್ತಾಮಾಹ ವೈದೇಹೀಮಿಂಗಿತಜ್ಞೋ ವಿಲೋಕಯನ್ ।
ವೈದೇಹಿ ಯಸ್ಯ ತುಷ್ಟಾಸಿ ದೇಹಿ ತಸ್ಮೈ ವರಾನನೇ ॥

ಅನುವಾದ

ಇಂಗಿತಜ್ಞನಾದ ಶ್ರೀರಾಮನು ವೈದೇಹಿಯನ್ನು ನೋಡುತ್ತಾ ಹೇಳಿದನು ‘‘ಎಲೈ ಸುಂದರ ಮುಖವುಳ್ಳ ಜನಕನಂದಿನಿ! ನೀನು ಯಾರ ವಿಷಯದಲ್ಲಿ ಪ್ರಸನ್ನಳಾಗಿರುವೆಯೋ ಅವನಿಗೆ ಈ ಹಾರವನ್ನು ಕೊಡಬಹುದು.’’ ॥8॥

(ಶ್ಲೋಕ-9)

ಮೂಲಮ್

ಹನೂಮತೇ ದದೌ ಹಾರಂ ಪಶ್ಯತೋ ರಾಘವಸ್ಯ ಚ ।
ತೇನ ಹಾರೇಣ ಶುಶುಭೇ ಮಾರುತಿರ್ಗೌರವೇಣ ಚ ॥

ಅನುವಾದ

ಆಗ ಸೀತಾದೇವಿಯು ಶ್ರೀರಾಮಚಂದ್ರನು ನೋಡುತ್ತಿರುವಂತೆಯೇ ಆ ಹಾರವನ್ನು ಹನುಮಂತನಿಗೆ ಇತ್ತಳು. ಮಾರುತಿಯು ಆ ಹಾರದಿಂದಲೂ, ಆಕೆಯು ಇತ್ತ ಗೌರವದಿಂದಲೂ ಅತ್ಯಂತ ಶೋಭಿಸಿದನು. ॥9॥

(ಶ್ಲೋಕ-10)

ಮೂಲಮ್

ರಾಮೋಽಪಿ ಮಾರುತಿಂ ದೃಷ್ಟ್ವಾ ಕೃತಾಂಜಲಿಮುಪಸ್ಥಿತಮ್ ।
ಭಕ್ತ್ಯಾ ಪರಮಯಾ ತುಷ್ಟ ಇದಂ ವಚನಮಬ್ರವೀತ್ ॥

ಅನುವಾದ

ಕೈ ಮುಗಿದುಕೊಂಡು ಮುಂದೆ ನಿಂತಿದ್ದ ಹನುಮಂತನನ್ನು ಶ್ರೀರಾಮನು ಕಂಡು, ಅವನ ಪರಮವಾದ ಭಕ್ತಿಗೆ ಮೆಚ್ಚಿದವನಾಗಿ ಹೀಗೆಂದನು. ॥10॥

(ಶ್ಲೋಕ-11)

ಮೂಲಮ್

ಹನೂಮಂಸ್ತೇ ಪ್ರಸನ್ನೋಸ್ಮಿ ವರಂ ವರಯ ಕಾಂಕ್ಷಿತಮ್ ।
ದಾಸ್ಯಾಮಿ ದೇವೈರಪಿ ಯದ್ದುರ್ಲಭಂ ಭುವನತ್ರಯೇ ॥

ಅನುವಾದ

‘‘ಎಲೈ ಹನುಮಂತಾ! ನಾನು ನಿನಗೆ ಒಲಿದಿರುತ್ತೇನೆ. ನಿನಗೆ ಇಷ್ಟವಾದ ವರವನ್ನು ಕೇಳಿಕೊ. ಆ ವರವು ಮೂರು ಲೋಕಗಳಲ್ಲಿಯೂ, ದೇವತೆಗಳಿಗೂ ದುರ್ಲಭವಾದರೂ ಸರಿಯೆ, ನಿನಗೆ ಅವಶ್ಯವಾಗಿ ಕೊಡುತ್ತೇನೆ. ॥11॥

(ಶ್ಲೋಕ-12)

ಮೂಲಮ್

ಹನೂಮಾನಪಿ ತಂ ಪ್ರಾಹ ನತ್ವಾ ರಾಮಂ ಪ್ರಹೃಷ್ಟಧೀಃ ।
ತ್ವನ್ನಾಮ ಸ್ಮರತೋ ರಾಮ ನ ತೃಪ್ಯತಿ ಮನೋ ಮಮ ॥

ಅನುವಾದ

ಆಗ ಬುದ್ಧಿವಂತನಾದ ಹನುಮಂತನು ಹೆಚ್ಚಿನ ಸಂತೋಷದಿಂದ ನಮಸ್ಕರಿಸುತ್ತಾ ಹೇಳಿದನು ‘‘ಶ್ರೀರಾಮಾ! ನಿನ್ನ ನಾಮಸ್ಮರಣೆ ಮಾಡುತ್ತಾ ಇರುವಾಗ ನನಗೆ ತೃಪ್ತಿಯೇ ಆಗುತ್ತಿಲ್ಲ. ॥12॥

(ಶ್ಲೋಕ-13)

ಮೂಲಮ್

ಅತಸ್ತ್ವನ್ನಾಮ ಸತತಂ ಸ್ಮರನ್ ಸ್ಥಾಸ್ಯಾಮಿ ಭೂತಲೇ ।
ಯಾವತ್ಸ್ಥಾಸ್ಯತಿ ತೇ ನಾಮ ಲೋಕೇ ತಾವತ್ಕಲೇವರಮ್ ॥

(ಶ್ಲೋಕ-14)

ಮೂಲಮ್

ಮಮ ತಿಷ್ಠತು ರಾಜೇಂದ್ರ ವರೋಽಯಂ ಮೇಭಿಕಾಂಕ್ಷಿತಃ ।
ರಾಮಸ್ತಥೇತಿ ತಂ ಪ್ರಾಹ ಮುಕ್ತಸ್ತಿಷ್ಠ ಯಥಾಸುಖಮ್ ॥

ಅನುವಾದ

ಆದ್ದರಿಂದ ನಿರಂತರ ನಿನ್ನ ನಾಮವನ್ನು ಸ್ಮರಿಸುತ್ತಾ ಭೂಮಿಯ ಮೇಲೆ ಇರುವೆನು. ಹೇ ರಾಜೇಂದ್ರಾ! ‘ನಿನ್ನ ನಾಮವು ಭೂಮಂಡಲದಲ್ಲಿ ಇರುವ ತನಕ ನನ್ನ ಶರೀರವು ಇರಲಿ’ ಇದೇ ನಾನು ಬಯಸಿದ ವರವು.’’ ಆಗ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ, ನೀನು ಜೀವನ್ಮುಕ್ತನಾಗಿ ಆನಂದದಿಂದ ಚಿರಂಜೀವಿಯಾಗಿ ಇರು. ॥13-14॥

(ಶ್ಲೋಕ-15)

ಮೂಲಮ್

ಕಲ್ಪಾಂತೇ ಮಮ ಸಾಯುಜ್ಯಂ ಪ್ರಾಪ್ಸ್ಯಸೇ ನಾತ್ರ ಸಂಶಯಃ ।
ತಮಾಹ ಜಾನಕೀ ಪ್ರೀತಾ ಯತ್ರ ಕುತ್ರಾಪಿ ಮಾರುತೇ ॥

(ಶ್ಲೋಕ-16)

ಮೂಲಮ್

ಸ್ಥಿತಂ ತ್ವಾಮನುಯಾಸ್ಯಂತಿ ಭೋಗಾಃ ಸರ್ವೇ ಮಮಾಜ್ಞಯಾ ।
ಇತ್ಯುಕ್ತೋ ಮಾರುತಿಸ್ತಾಭ್ಯಾಮೀಶ್ವರಾಭ್ಯಾಂ ಪ್ರಹೃಷ್ಟಧೀಃ ॥

ಅನುವಾದ

ಕಲ್ಪದ ಕೊನೆಯಲ್ಲಿ ನನ್ನ ಸಾಯುಜ್ಯ ವನ್ನು ಪಡೆಯುವೆ. ಇದರಲ್ಲಿ ಸಂದೇಹವೇ ಇಲ್ಲ ಎಂದು ಹರಸಿದನು. ಮತ್ತೆ ಸುಪ್ರೀತಳಾದ ಸೀತಾದೇವಿಯು ಅವನನ್ನು ಕುರಿತು ‘‘ಎಲೈ ಮಾರುತಿಯೆ ! ನೀನು ಎಲ್ಲೇ ಇದ್ದರೂ ಅಲ್ಲೇ, ನನ್ನ ಅಪ್ಪಣೆಯಂತೆ ಸಕಲಭೋಗಗಳೂ ನಿನ್ನನ್ನು ಅನುಸರಿಸಿ ಬರುವವು’’ ಎಂದು ಆಶೀರ್ವದಿಸಿದಳು. ತನ್ನ ಒಡೆಯ ಭಗವಾನ್ ಶ್ರೀರಾಮನು ಮತ್ತು ಮಾತೆ ಸೀತಾದೇವಿಯು ಈ ಪ್ರಕಾರ ಹೇಳಿದಾಗ ಮಹಾಮತಿ ಹನುಮಂತನು ಹೆಚ್ಚಿನ ಸಂತೋಷಭರಿತನಾದನು. ॥15-16॥

(ಶ್ಲೋಕ-17)

ಮೂಲಮ್

ಆನಂದಾಶ್ರುಪರೀತಾಕ್ಷೋ ಭೂಯೋ ಭೂಯಃ ಪ್ರಣಮ್ಯ ತೌ ।
ಕೃಚ್ಛ್ರಾದ್ಯಯೌ ತಪಸ್ತಪ್ತುಂ ಹಿಮವಂತಂ ಮಹಾಮತಿಃ ॥

ಅನುವಾದ

ಮತ್ತೆ ಕಣ್ಣುಗಳಲ್ಲಿ ಆನಂದಬಾಷ್ಟಗಳನ್ನು ಸುರಿಸುತ್ತಾ ಪುನಃ ಪುನಃ ಅವರಿಬ್ಬರನ್ನು ನಮಸ್ಕರಿ, ಬಹಳ ಕಷ್ಟದಿಂದ ಅವರನ್ನಗಲಿ ಮಹಾಬುದ್ಧಿ ಶಾಲಿಯಾದ ಹನುಮಂತನು ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳಿದನು. ॥17॥

(ಶ್ಲೋಕ-18)

ಮೂಲಮ್

ತತೋ ಗುಹಂ ಸಮಾಸಾದ್ಯ ರಾಮಃ ಪ್ರಾಂಜಲಿಮಬ್ರವೀತ್ ।
ಸಖೇ ಗಚ್ಛ ಪುರಂ ರಮ್ಯಂ ಶೃಂಗವೇರಮನುತ್ತಮಮ್ ॥

ಅನುವಾದ

ಅನಂತರ ಕೈಮುಗಿದು ನಿಂತಿದ್ದ ಗುಹನ ಬಳಿಗೆ ಶ್ರೀರಾಮ ಚಂದ್ರನು ಬಂದು ‘‘ಎಲೈ ಸ್ನೇಹಿತನೆ! ಈಗ ನೀನು ರಮ್ಯವಾದ ಉತ್ತಮ ಶೃಂಗವೇರಪುರಕ್ಕೆ ಹೊರಡುವವನಾಗು. ॥18॥

(ಶ್ಲೋಕ-19)

ಮೂಲಮ್

ಮಾಮೇವ ಚಿಂತಯನ್ನಿತ್ಯಂ ಭುಙಕ್ಷ್ವ ಭೋಗಾನ್ನಿಜಾರ್ಜಿತಾನ್ ।
ಅಂತೇ ಮಮೈವ ಸಾರೂಪ್ಯಂ ಪ್ರಾಪ್ಸ್ಯಸೇ ತ್ವಂ ನ ಸಂಶಯಃ ॥

ಅನುವಾದ

ಅಲ್ಲಿ ನನ್ನನ್ನೇ ಚಿಂತಿಸುತ್ತಾ ತನ್ನ ಶುಭಕರ್ಮಗಳಿಂದ ದೊರಕಿದ ಭೋಗಗಳನ್ನು ಪ್ರಸಾದಬುದ್ಧಿಯಿಂದ ಭೋಗಿಸು. ಕೊನೆಗೆ ನನ್ನ ಸಾರೂಪ್ಯವನ್ನೇ ಪಡೆಯುವೆ. ಇದರಲ್ಲಿ ಸಂದೇಹವೇ ಇಲ್ಲ.’’ ॥19॥

(ಶ್ಲೋಕ-20)

ಮೂಲಮ್

ಇತ್ಯುಕ್ತ್ವಾ ಪ್ರದದೌ ತಸ್ಮೈ ದಿವ್ಯಾನ್ಯಾಭರಣಾನಿ ಚ ।
ರಾಜ್ಯಂ ಚ ವಿಪುಲಂ ದತ್ತ್ವಾ ವಿಜ್ಞಾನಂ ಚ ದದೌ ವಿಭುಃ ॥

ಅನುವಾದ

ಹೀಗೆ ಹೇಳಿ ಭಗವಾನ್ ಶ್ರೀರಾಮನು ಅವನಿಗೆ ದಿವ್ಯವಾದ ಆಭರಣಗಳನ್ನೂ, ವಿಸ್ತಾರವಾದ ರಾಜ್ಯವನ್ನೂ ಹಾಗೂ ತತ್ತ್ವಜ್ಞಾನದ ಉಪದೇಶವನ್ನೂ ಕೊಟ್ಟನು. ॥20॥

(ಶ್ಲೋಕ-21)

ಮೂಲಮ್

ರಾಮೇಣಾಲಿಂಗಿತೋ ಹೃಷ್ಟೋ ಯಯೌ ಸ್ವಭವನಂ ಗುಹಃ ।
ಯೇ ಚಾನ್ಯೇ ವಾನರಾಃ ಶ್ರೇಷ್ಠಾ ಅಯೋಧ್ಯಾಂ ಸಮುಪಾಗತಾಃ ॥

(ಶ್ಲೋಕ-22)

ಮೂಲಮ್

ಅಮೂಲ್ಯಾಭರಣೈರ್ವಸ್ತ್ರೈಃ ಪೂಜಯಾಮಾಸ ರಾಘವಃ ।
ಸುಗ್ರೀವಪ್ರಮುಖಾಃ ಸರ್ವೇ ವಾನರಾಃ ಸವಿಭೀಷಣಾಃ ॥

(ಶ್ಲೋಕ-23)

ಮೂಲಮ್

ಯಥಾರ್ಹಂ ಪೂಜಿತಾಸ್ತೇನ ರಾಮೇಣ ಪರಮಾತ್ಮನಾ ।
ಪ್ರಹೃಷ್ಟಮನಸಃ ಸರ್ವೇ ಜಗ್ಮುರೇವ ಯಥಾಗತಮ್ ॥

ಅನುವಾದ

ರಾಮನಿಂದ ಆಲಿಂಗಿತನಾಗಿ ಗುಹನು ಸಂತುಷ್ಟನಾಗಿ ತನ್ನ ಮನೆಗೆ ತೆರಳಿದನು. ಇನ್ನುಳಿದ ಕಪಿ ಶ್ರೇಷ್ಠರುಗಳು ಯಾರು-ಯಾರು ಅಯೋಧ್ಯೆಗೆ ಬಂದಿದ್ದರೋ ಅವರೆಲ್ಲರನ್ನು ಅಮೂಲ್ಯವಾದ ವಸಾಭರಣಗಳಿಂದ ಶ್ರೀರಾಮನು ಸತ್ಕರಿಸಿದನು. ಈ ಪ್ರಕಾರ ವಿಭೀಷಣ ಸಹಿತ ಸುಗ್ರೀವಾದಿ ಎಲ್ಲ ವಾನರ ಸಮೂಹವು ಪರಮಾತ್ಮ ಶ್ರೀರಾಮನಿಂದ ಯಥಾಯೋಗ್ಯವಾಗಿ ಸತ್ಕಾರವನ್ನು ಪಡೆದು ಬಹಳ ಸಂತುಷ್ಟ ರಾಗಿ ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು. ॥21-23॥

(ಶ್ಲೋಕ-24)

ಮೂಲಮ್

ಸುಗ್ರೀವ ಪ್ರಮುಖಾಃ ಸರ್ವೇ ಕಿಷ್ಕಿಂಧಾಂ ಪ್ರಯಯುರ್ಮುದಾ ।
ವಿಭೀಷಣಸ್ತು ಸಂಪ್ರಾಪ್ಯ ರಾಜ್ಯಂ ನಿಹತಕಂಟಕಮ್ ॥

(ಶ್ಲೋಕ-25)

ಮೂಲಮ್

ರಾಮೇಣ ಪೂಜಿತಃ ಪ್ರೀತ್ಯಾ ಯಯೌ ಲಂಕಾಮನಿಂದಿತಃ ।
ರಾಘವೋ ರಾಜ್ಯಮಖಿಲಂ ಶಶಾಸಾಖಿಲವತ್ಸಲಃ ॥

ಅನುವಾದ

ಸುಗ್ರೀವನೇ ಮುಂತಾದ ವಾನರರೆಲ್ಲರು ಸಂತೋಷ ಗೊಂಡು ಕಿಷ್ಕಿಂಧೆಗೆ ಹೊರಟು ಹೋದರು. ದೋಷರಹಿತ ನಾದ ವಿಭೀಷಣನು ಶ್ರೀರಾಮನಿಂದ ಸತ್ಕೃತನಾಗಿ, ಆನಂದವನ್ನು ಹೊಂದಿ ಪ್ರೀತಿಪೂರ್ವಕ ತನ್ನ ನಿಷ್ಕಂಟಕ ರಾಜ್ಯವಾದ ಲಂಕೆಗೆ ತೆರಳಿದನು. ಸಕಲರನ್ನು ಪ್ರೀತಿಸುವ ಶ್ರೀರಾಮನು ಅಖಂಡ ವಾದ ರಾಜ್ಯವನ್ನು ಆಳತೊಡಗಿದನು. ॥24-25॥

(ಶ್ಲೋಕ-26)

ಮೂಲಮ್

ಅನಿಚ್ಛನ್ನಪಿ ರಾಮೇಣ ಯೌವರಾಜ್ಯೇಽಭಿಷೇಚಿತಃ ।
ಲಕ್ಷ್ಮಣಃ ಪರಯಾ ಭಕ್ತ್ಯಾ ರಾಮಸೇವಾಪರೋಽಭವತ್ ॥

ಅನುವಾದ

ಲಕ್ಷ್ಮಣನು ಬಯಸದಿದ್ದರೂ ಶ್ರೀರಾಮಚಂದ್ರನು ಅವನನ್ನು ಯುವರಾಜನನ್ನಾಗಿ ಅಭಿಷಿಕ್ತಗೊಳಿಸಿದನು. ಅವನೂ ಕೂಡ ಅತ್ಯಂತ ಭಕ್ತಿಪೂರ್ವಕ ರಾಮಸೇವಾತತ್ಪರನಾದನು. ॥26॥

(ಶ್ಲೋಕ-27)

ಮೂಲಮ್

ರಾಮಸ್ತು ಪರಮಾತ್ಮಾಪಿ ಕರ್ಮಾಧ್ಯಕ್ಷೋಽಪಿ ನಿರ್ಮಲಃ ।
ಕರ್ತೃತ್ವಾದಿ ವಿಹೀನೋಽಪಿ ನಿರ್ವಿಕಾರೋಽಪಿ ಸರ್ವದಾ ॥

(ಶ್ಲೋಕ-28)

ಮೂಲಮ್

ಸ್ವಾನಂದೇನಾಪಿ ತುಷ್ಟಃ ಸನ್ ಲೋಕಾನಾಮುಪದೇಶಕೃತ್ ।
ಅಶ್ವಮೇಧಾದಿಯಜ್ಞೈಶ್ಚ ಸರ್ವೈರ್ವಿಪುಲದಕ್ಷಿಣೈಃ ॥

(ಶ್ಲೋಕ-29)

ಮೂಲಮ್

ಅಯಜತ್ಪರಮಾನಂದೋ ಮಾನುಷಂ ವಪುರಾಶ್ರಿತಃ ।
ನ ಪರ್ಯದೇವನ್ವಿಧವಾ ನ ಚ ವ್ಯಾಲಕೃತಂ ಭಯಮ್ ॥

(ಶ್ಲೋಕ-30)

ಮೂಲಮ್

ನ ವ್ಯಾಧಿಜಂ ಭಯಂ ಚಾಸೀದ್ರಾಮೇ ರಾಜ್ಯಂ ಪ್ರಶಾಸತಿ ।
ಲೋಕೇ ದಸ್ಯುಭಯಂ ನಾಸೀದನರ್ಥೋ ನಾಸ್ತಿ ಕಶ್ಚನ ॥

ಅನುವಾದ

ಶ್ರೀರಾಮನು ಯಾವಾಗಲೂ ಪರಮಾತ್ಮನೂ, ಕರ್ಮಸಾಕ್ಷಿಯೂ, ನಿರ್ಮಲನೂ, ಕರ್ತೃತ್ವಾದಿಗಳಿಲ್ಲದವನೂ, ನಿರ್ವಿಕಾರನೂ ಆಗಿದ್ದರೂ, ತನ್ನ ಆನಂದಸ್ವರೂಪದಿಂದಲೇ ಸಂತುಷ್ಟನಾಗಿ ದ್ದರೂ, ಲೋಕದ ಜನರಿಗೆ ಉಪದೇಶ ಕೊಡುವುದಕ್ಕಾಗಿ ಮನುಷ್ಯರೂಪವನ್ನು ಧರಿಸಿ ದೊಡ್ಡ-ದೊಡ್ಡ ದಕ್ಷಿಣೆಗಳುಳ್ಳ ಅಶ್ವಮೇಧವೇ ಮುಂತಾದ ಎಲ್ಲ ಯಜ್ಞಗಳ ಅನುಷ್ಠಾನ ಮಾಡಿದನು. ಮಹಾರಾಜಾ ಶ್ರೀರಾಮನು ರಾಜ್ಯವಾಳುತ್ತಿರುವಾಗ ವಿಧವೆಯರ ಆಕ್ರಂದನವಿರಲಿಲ್ಲ; ಹಾವುಗಳ (ನಿಮಿತ್ತವಾದ ಮರಣ) ಭಯವಿರಲಿಲ್ಲ. ಹಾಗೆಯೇ ರೋಗಭಯವೂ ಇರಲಿಲ್ಲ. ಕಳ್ಳಕಾಕರ ಹೆದರಿಕೆಯೂ ಇರಲಲ್ಲಿ. ಯಾರಿಗೂ ಏನೊಂದೂ ಕೆಡುಕು ಉಂಟಾಗುತ್ತಿರಲಿಲ್ಲ. ॥27-30॥

(ಶ್ಲೋಕ-31)

ಮೂಲಮ್

ವೃದ್ಧೇಷು ಸತ್ಸು ಬಾಲಾನಾಂ ನಾಸೀನ್ಮೃತ್ಯುಭಯಂ ತಥಾ ।
ರಾಮಪೂಜಾಪರಾಃ ಸರ್ವೇ ಸರ್ವೇ ರಾಘವಚಿಂತಕಾಃ ॥

ಅನುವಾದ

ಹಿರಿಯರು ಬದುಕಿರುವಾಗ ಬಾಲಕರಿಗೆ ಮೃತ್ಯು ಭಯ ವಿರಲಿಲ್ಲ. ಎಲ್ಲ ಜನರೂ ಶ್ರೀರಾಮಪೂಜಾತತ್ಪರರೂ, ರಾಮ ಚಿಂತಕರೂ ಆಗಿದ್ದರು. ॥31॥

(ಶ್ಲೋಕ-32)

ಮೂಲಮ್

ವವರ್ಷುರ್ಜಲದಾಸ್ತೋಯಂ ಯಥಾಕಾಲಂ ಯಥಾರುಚಿ ।
ಪ್ರಜಾಃ ಸ್ವಧರ್ಮನಿರತಾ ವರ್ಣಾಶ್ರಮಗುಣಾನ್ವಿತಾಃ ॥

ಅನುವಾದ

ಕಾಲಕ್ಕೆ ಸರಿಯಾಗಿ ಲೋಕದ ಕ್ಷೇಮಕ್ಕೆ ತಕ್ಕಷ್ಟು ಮಳೆಯನ್ನು ಮೋಡಗಳು ಸುರಿಸುತ್ತಿದ್ದವು. ಎಲ್ಲ ಪ್ರಜೆಗಳು ಸ್ವಧರ್ಮನಿರತರಾಗಿದ್ದು, ವರ್ಣಾಶ್ರಮ ಧರ್ಮನಿಷ್ಠರಾಗಿದ್ದರು. ॥32॥

(ಶ್ಲೋಕ-33)

ಮೂಲಮ್

ಔರಸಾನಿವ ರಾಮೋಽಪಿ ಜುಗೋಪ ಪಿತೃವತ್ಪ್ರಜಾಃ ।
ಸರ್ವಲಕ್ಷಣಸಂಯುಕ್ತಃ ಸರ್ವಧರ್ಮಪರಾಯಣಃ ॥

(ಶ್ಲೋಕ-34)

ಮೂಲಮ್

ದಶವರ್ಷಸಹಸ್ರಾಣಿ ರಾಮೋ ರಾಜ್ಯಮುಪಾಸ್ತ ಸಃ ॥

ಅನುವಾದ

ಶ್ರೀರಾಮಚಂದ್ರನೂ ಕೂಡ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ತಂದೆಯು ಪಾಲಿಸುವಂತೆ ತನ್ನ ಪ್ರಜೆಯನ್ನು ಪಾಲಿಸುತ್ತಿದ್ದನು. ಸರ್ವಲಕ್ಷಣ ಸಂಪನ್ನನೂ, ಸರ್ವಧರ್ಮಪರಾಯಣನೂ ಆದ ಭಗವಾನ್ ಶ್ರೀರಾಮನು ಹತ್ತುಸಾವಿರ ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದನು. ॥33-34॥

(ಶ್ಲೋಕ-35)

ಮೂಲಮ್

ಇದಂ ರಹಸ್ಯಂ ಧನಧಾನ್ಯಋದ್ಧಿಮ -
ದ್ದೀರ್ಘಾಯುರಾರೋಗ್ಯಕರಂ ಸುಪುಣ್ಯದಮ್ ।
ಪವಿತ್ರಮಾಧ್ಯಾತ್ಮಿಕಸಂಜ್ಞಿತಂ ಪುರಾ
ರಾಮಾಯಣಂ ಭಾಷಿತಮಾದಿಶಂಭುನಾ ॥

ಅನುವಾದ

ಧನಧಾನ್ಯಾದಿ ಎಲ್ಲ ವೈಭವಗಳನ್ನು ಕೊಡತಕ್ಕಂತಹ, ಪುಣ್ಯವನ್ನು ವೃದ್ಧಿಪಡಿಸುವಂತಹ ಈ ಆಧ್ಯಾತ್ಮಿಕ ರಾಮಾಯಣವೆಂಬ ಪರಮ ಪವಿತ್ರ ಹಾಗೂ ಗೋಪ್ಯವಾದ ರಹಸ್ಯವನ್ನು ಹಿಂದೆ ಆದಿಶಂಭುವೆನಿಸಿದ ಮಹಾದೇವನು ಪಾರ್ವತಿಗೆ ಹೇಳಿದ್ದನು. ॥35॥

(ಶ್ಲೋಕ-36)

ಮೂಲಮ್

ಶೃಣೋತಿ ಭಕ್ತ್ಯಾ ಮನುಜಃ ಸಮಾಹಿತೋ
ಭಕ್ತ್ಯಾ ಪಠೇದ್ವಾ ಪರಿತುಷ್ಟಮಾನಸಃ ।
ಸರ್ವಾಃ ಸಮಾಪ್ನೋತಿ ಮನೋಗತಾಶಿಷೋ
ವಿಮುಚ್ಯತೇ ಪಾತಕಕೋಟಿಭಿಃ ಕ್ಷಣಾತ್ ॥

ಅನುವಾದ

ಸಮಾಧಾನಚಿತ್ತನಾಗಿ, ಭಕ್ತಿಯಿಂದ ಕೇಳುವವನೂ, ಅಥವಾ ತೃಪ್ತಿಯಾದ ಅಂತಃಕರಣದಿಂದ ಪಠಿಸುವ ಮನುಷ್ಯನು ಮನೋರಥಗಳೆಲ್ಲವನ್ನು ಪಡೆಯುವನು. ಕ್ಷಣಮಾತ್ರದಲ್ಲಿ ಕೋಟಿಪಾಪಗಳಿಂದ ಬಿಡುಗಡೆ ಹೊಂದುವನು. ॥36॥

(ಶ್ಲೋಕ-37)

ಮೂಲಮ್

ರಾಮಾಭಿಷೇಕಂ ಪ್ರಯತಃ ಶೃಣೋತಿ ಯೋ
ಧನಾಭಿಲಾಷೀ ಲಭತೇ ಮಹದ್ಧನಮ್ ।
ಪುತ್ರಾಭಿಲಾಷೀ ಸುತಮಾರ್ಯಸಮ್ಮತಂ
ಪ್ರಾಪ್ನೋತಿ ರಾಮಾಯಣಮಾದಿತಃ ಪಠನ್ ॥

ಅನುವಾದ

ಹಣವನ್ನು ಬಯಸುವವನು ರಾಮ ಪಟ್ಟಾಭಿ ಷೇಕದ ಕಥೆಯನ್ನು ಏಕಾಗ್ರಚಿತ್ತದಿಂದ ಶ್ರವಣಿಸಿದರೆ ವಿಪುಲ ವಾದ ಧನವನ್ನು ಪಡೆಯುವನು. ಪುತ್ರರನ್ನು ಬಯಸಿ ಈ ರಾಮಾಯಣವನ್ನು ಪ್ರಾರಂಭದಿಂದ ಓದಿದರೆ ಆರ್ಯ ಜನರಿಗೆ ಸಮ್ಮತವಾದ ನಡತೆಯುಳ್ಳ ಯೋಗ್ಯ ಪುತ್ರನನ್ನು ಪಡೆಯುವನು. ॥37॥

(ಶ್ಲೋಕ-38)

ಮೂಲಮ್

ಶೃಣೋತಿ ಯೋಧ್ಯಾತ್ಮಿಕರಾಮಸಂಹಿತಾಂ
ಪ್ರಾಪ್ನೋತಿ ರಾಜಾ ಭುವಮೃದ್ಧಸಂಪದಮ್ ।
ಶತ್ರೂನ್ವಿಜಿತ್ಯಾರಿಭಿರಪ್ರಧರ್ಷಿತೋ
ವ್ಯಪೇತದುಃಖೋ ವಿಜಯೀ ಭವೇನ್ನೃಪಃ ॥

ಅನುವಾದ

ಈ ಆಧ್ಯಾತ್ಮಿಕರಾಮಸಂಹಿತೆ (ರಾಮಾಯಣ)ಯನ್ನು ಶ್ರವಣಿಸುವ ರಾಜನು ಧನ-ಧಾನ್ಯ ಸಮೃದ್ಧವಾದ ಭೂಮಿಯನ್ನು ಪಡೆಯುವನು. ಅವನು ಶತ್ರುಗಳನ್ನು ಗೆದ್ದು, ಅವರಿಗೆ ವಶನಾಗದೆ ವಿಜಯಿಯಾಗಿ ಎಲ್ಲ ದುಃಖವನ್ನು ನೀಗಿ ಸುಖಿಸುವನು. ॥38॥

(ಶ್ಲೋಕ-39)

ಮೂಲಮ್

ಸ್ತ್ರಿಯೋಽಪಿ ಶೃಣ್ವನ್ತ್ಯಧಿರಾಮಸಂಹಿತಾಂ
ಭವಂತಿ ತಾ ಜೀವಿಸುತಾಶ್ಚ ಪೂಜಿತಾಃ ।
ವಂಧ್ಯಾಪಿ ಪುತ್ರಂ ಲಭತೇ ಸುರೂಪಿಣಂ
ಕಥಾಮಿಮಾಂ ಭಕ್ತಿಯುತಾ ಶೃಣೋತಿ ಯಾ ॥

ಅನುವಾದ

ಸ್ತ್ರೀಯರೂ ಕೂಡ ಈ ಅಧ್ಯಾತ್ಮರಾಮಾಯಣವನ್ನು ಕೇಳಿದರೆ ಅವರ ಸಂತಾನ ಚಿರಂಜೀವಿಯಾಗುತ್ತದೆ ಹಾಗೂ ಅವರಿಂದ ಸಮ್ಮಾನಿತಳಾಗುವರು. ವಂಧ್ಯೆಯೂ ಕೂಡ ಈ ಕಥೆಯನ್ನು ಭಕ್ತಿಪೂರ್ವಕವವಾಗಿ ಶ್ರವಣಿಸಿದರೆ ಅವಳು ಸುಂದರರೂಪವುಳ್ಳ ಮಗನನ್ನು ಪಡೆಯುವಳು. ॥39॥

(ಶ್ಲೋಕ-40)

ಮೂಲಮ್

ಶ್ರದ್ಧಾನ್ವಿತೋ ಯಃ ಶೃಣುಯಾತ್ಪಠೇನ್ನರೋ
ವಿಜಿತ್ಯ ಕೋಪಂ ಚ ತಥಾ ವಿಮತ್ಸರಃ ।
ದುರ್ಗಾಣಿ ಸರ್ವಾಣಿ ವಿಜಿತ್ಯ ನಿರ್ಭಯೋ
ಭವೇತ್ಸುಖೀ ರಾಘವಭಕ್ತಿಸಂಯುತಃ ॥

ಅನುವಾದ

ಶ್ರದ್ಧಾ ಸಂಪನ್ನನಾಗಿ ಕೋಪವನ್ನು, ಮಾತ್ಸರ್ಯವನ್ನು ತ್ಯಜಿಸಿ ಈ ರಾಮಕಥೆಯನ್ನು ಕೇಳುವವನೂ ಅಥವಾ ಓದುವವನೂ ಎಲ್ಲ ಅವಗುಣಗಳನ್ನೂ ಜಯಿಸಿ ನಿರ್ಭಯ, ಸುಖೀ ಹಾಗೂ ರಾಮಭಕ್ತಿ ಸಂಪನ್ನನಾಗುವನು. ॥40॥

(ಶ್ಲೋಕ-41)

ಮೂಲಮ್

ಸುರಾಃ ಸಮಸ್ತಾ ಅಪಿ ಯಾಂತಿ ತುಷ್ಟತಾಂ
ವಿಘ್ನಾಃ ಸಮಸ್ತಾ ಅಪಯಾಂತಿ ಶೃಣ್ವತಾಮ್ ।
ಅಧ್ಯಾತ್ಮರಾಮಾಯಣಮಾದಿತೋ ನೃಣಾಂ
ಭವಂತಿ ಸರ್ವಾ ಅಪಿ ಸಂಪದಃ ಪರಾಃ ॥

ಅನುವಾದ

ಈ ಅಧ್ಯಾತ್ಮ ರಾಮಾಯಣವನ್ನು ಪ್ರಾರಂಭದಿಂದಲೂ ಕೇಳುವ ಮನುಷ್ಯರ ಮೇಲೆ ಎಲ್ಲ ದೇವತೆಗಳು ಸಂತುಷ್ಟರಾಗುವರು. ಅವರ ಎಲ್ಲ ವಿಘ್ನಗಳೂ ಪರಿಹಾರವಾಗುವವು. ಎಲ್ಲ ರೀತಿಯ ಉತ್ತಮ ಸಂಪತ್ತುಗಳೂ ದೊರಕುವವು. ॥41॥

(ಶ್ಲೋಕ-42)

ಮೂಲಮ್

ರಜಸ್ವಲಾ ವಾ ಯದಿ ರಾಮತತ್ಪರಾ
ಶೃಣೋತಿ ರಾಮಾಯಣಮೇತದಾದಿತಃ ।
ಪುತ್ರಂ ಪ್ರಸೂತೇ ಋಷಭಂ ಚಿರಾಯುಷಂ
ಪತಿವ್ರತಾ ಲೋಕಸುಪೂಜಿತಾ ಭವೇತ್ ॥

ಅನುವಾದ

ರಾಮನಲ್ಲೇ ತತ್ಪರಳಾಗಿ ರಜಸ್ವಲಾಸೀಯು ನಾಲ್ಕನೇ ದಿನ ಸ್ನಾನ ಶುದ್ಧಳಾಗಿ ಈ ರಾಮಾಯಣವನ್ನು ಪ್ರಾರಂಭದಿಂದ ಶ್ರವಣಿಸುವಳೋ ಅವಳು ಲೋಕಪೂಜಿತಳೂ, ಪತಿವ್ರತೆಯೂ ಆಗಿ ಬಾಳಿ ದೀರ್ಘಾಯುಷ್ಮಂತನಾದ ಶ್ರೇಷ್ಠ ಮಗನಿಗೆ ಜನ್ಮಕೊಡುವಳು. ॥42॥

(ಶ್ಲೋಕ-43)

ಮೂಲಮ್

ಪೂಜಯಿತ್ವಾ ತು ಯೇ ಭಕ್ತ್ಯಾ ನಮಸ್ಕುರ್ವಂತಿ ನಿತ್ಯಶಃ ।
ಸರ್ವೈಃ ಪಾಪೈರ್ವಿನಿರ್ಮುಕ್ತಾ ವಿಷ್ಣೋರ್ಯಾಂತಿ ಪರಂ ಪದಮ್ ॥

ಅನುವಾದ

(ಓದುವುದಕ್ಕೆ ಬಾರದವರೂ, ಕೇಳಲು ಅವಕಾಶವಿಲ್ಲದವರೂ ಕೂಡ) ಈ ಗ್ರಂಥವನ್ನು ಭಕ್ತಿಯಿಂದ ಪೂಜಿಸಿ, ನಮಸ್ಕರಿಸುವವರು ಎಲ್ಲ ಪಾಪಗಳಿಂದ ಬಿಡುಗಡೆಹೊಂದಿ ವಿಷ್ಣುವಿನ ಪರಮಪದವನ್ನು ಸೇರುವರು ॥43॥

(ಶ್ಲೋಕ-44)

ಮೂಲಮ್

ಅಧ್ಯಾತ್ಮರಾಮಚರಿತಂ ಕೃತ್ಸ್ನಂ ಶೃಣ್ವಂತಿ ಭಕ್ತಿತಃ ।
ಪಠಂತಿ ವಾ ಸ್ವಯಂ ವಕ್ತ್ರಾತ್ತೇಷಾಂ ರಾಮಃ ಪ್ರಸೀದತಿ ॥

ಅನುವಾದ

ಅಧ್ಯಾತ್ಮರಾಮಚರಿತ್ರವನ್ನು ಪೂರ್ತಿಯಾಗಿ ಭಕ್ತಿಯಿಂದ ಕೇಳಿದರೆ, ಅಥವಾ ಸ್ವತಃ ಪಠಿಸಿದವರಿಗೆ ಶ್ರೀರಾಮನು ಪ್ರಸನ್ನನಾಗುವನು. ॥44॥

(ಶ್ಲೋಕ-45)

ಮೂಲಮ್

ರಾಮ ಏವ ಪರಂ ಬ್ರಹ್ಮ ತಸ್ಮಿಂಸ್ತುಷ್ಟೇಖಿಲಾತ್ಮನಿ ।
ಧರ್ಮಾರ್ಥಕಾಮಮೋಕ್ಷಾಣಾಂ ಯದ್ಯದಿಚ್ಛತಿ ತದ್ಭವೇತ್ ॥

ಅನುವಾದ

ಭಗವಾನ್ ಶ್ರೀರಾಮನೇ ಪರಮ ಬ್ರಹ್ಮನು. ಅಖಿಲಾತ್ಮನಾದ ಅವನು ಸಂತುಷ್ಟನಾದರೆ ಭಕ್ತರು ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಏನನ್ನು ಬಯಸುವರೋ ಅದು ಪ್ರಾಪ್ತವಾಗುವುದು. ॥45॥

(ಶ್ಲೋಕ-46)

ಮೂಲಮ್

ಶ್ರೋತವ್ಯಂ ನಿಯಮೇನೈತದ್ರಾಮಾಯಣಮಖಂಡಿತಮ್ ।
ಆಯುಷ್ಯಮಾರೋಗ್ಯಕರಂ ಕಲ್ಪಕೋಟ್ಯಘನಾಶನಮ್ ॥

ಅನುವಾದ

ಈ ರಾಮಾಯಣವನ್ನು ನಿಯಮದಿಂದ ಅಖಂಡಿತವಾಗಿ (ವಿಚ್ಛೇದವಿಲ್ಲದೆ) ಕೇಳಬೇಕು. ಇದು ಆಯುಷ್ಯ, ಆರೋಗ್ಯಗಳನ್ನುಂಟು ಮಾಡಿ, ಕೋಟಿ ಕಲ್ಪಗಳ ಪಾಪವನ್ನು ಕಳೆಯುವುದು. ॥46॥

(ಶ್ಲೋಕ-47)

ಮೂಲಮ್

ದೇವಾಶ್ಚ ಸರ್ವೇ ತುಷ್ಯಂತಿ ಗ್ರಹಾಃ ಸರ್ವೇ ಮಹರ್ಷಯಃ ।
ರಾಮಾಯಣಸ್ಯ ಶ್ರವಣೇ ತೃಪ್ಯಂತಿ ಪಿತರಸ್ತಥಾ ॥

ಅನುವಾದ

ಇದನ್ನು ಶ್ರವಣಿಸುವುದರಿಂದ ಎಲ್ಲ ದೇವತೆಗಳೂ, ಗ್ರಹಗಳೂ, ಮಹರ್ಷಿಗಳೂ ಪ್ರಸನ್ನರಾಗುವರು ಹಾಗೂ ಪಿತೃಗಳೂ ತೃಪ್ತರಾಗುವರು. ॥47॥

(ಶ್ಲೋಕ-48)

ಮೂಲಮ್

ಅಧ್ಯಾತ್ಮರಾಮಾಯಣಮೇತದದ್ಭುತಂ
ವೈರಾಗ್ಯವಿಜ್ಞಾನಯುತಂ ಪುರಾತನಮ್ ।
ಪಠಂತಿ ಶೃಣ್ವಂತಿ ಲಿಖಂತಿ ಯೇ ನರಾ-
ಸ್ತೇಷಾಂ ಭವೇಽಸ್ಮಿನ್ನ ಪುನರ್ಭವೋ ಭವೇತ್ ॥

ಅನುವಾದ

ಪುರಾತನವೂ, ವೈರಾಗ್ಯ ವಿಜ್ಞಾನೋಪದೇಶಗಳಿಂದ ಕೂಡಿದುದೂ, ಅದ್ಭುತವೂ ಆದ ಈ ಅಧ್ಯಾತ್ಮರಾಮಾಯಣವನ್ನು ಪಠಿಸುವ, ಶ್ರವಣಿಸುವ, ಬರೆಯುವ ಮನುಷ್ಯರಿಗೆ ಈ ಸಂಸಾರದಲ್ಲಿ ಮತ್ತೆ ಹುಟ್ಟು ಸಂಭವಿಸುವುದಿಲ್ಲ. ॥48॥

(ಶ್ಲೋಕ-49)

ಮೂಲಮ್

ಆಲೋಡ್ಯಾಖಿಲವೇದರಾಶಿಮಸಕೃ-
ದ್ಯತ್ತಾರಕಂ ಬ್ರಹ್ಮ ತ-
ದ್ರಾಮೋ ವಿಷ್ಣುರಹಸ್ಯಮೂರ್ತಿರಿತಿ ಯೋ
ವಿಜ್ಞಾಯ ಭೂತೇಶ್ವರಃ ।
ಉದ್ ಧೃತ್ಯಾಖಿಲಸಾರಸಂಗ್ರಹಮಿದಂ
ಸಂಕ್ಷೇಪತಃ ಪ್ರಸ್ಫುಟಂ
ಶ್ರೀರಾಮಸ್ಯ ನಿಗೂಢತತ್ತ್ವಮಖಿಲಂ
ಪ್ರಾಹ ಪ್ರಿಯಾಯೈ ಭವಃ ॥

ಅನುವಾದ

ಭೂತನಾಥ ಭಗವಾನ್ ಶಂಕರನು ಸಮಸ್ತ ವೇದರಾಶಿಯನ್ನು ಅನೇಕಬಾರಿ ಅಧ್ಯಯನ ಮಾಡಿ, ತಾರಕ ಮಂತ್ರ ‘ರಾಮ’ ಎಂಬುದು ಭಗವಾನ್ ವಿಷ್ಣುವಿನ ಗುಪ್ತಮೂರ್ತಿಯಾಗಿದೆ ಎಂದು ನಿಶ್ಚಯಿಸಿಕೊಂಡನು. ಆದ್ದರಿಂದ ಅವನು ಸಮಸ್ತ ವೇದಗಳ ಸಾರ, ಉಪನಿಷತ್ತುಗಳ ಸಂಗ್ರಹ ರೂಪೀ ಭಗವಾನ್ ಶ್ರೀರಾಮನ ನಿಗೂಢ ತತ್ತ್ವವನ್ನು ಹೆಚ್ಚು ಸ್ಫುಟವಾಗಿ ತನ್ನ ಪ್ರಿಯಳಾದ ಪಾರ್ವತಿಗೆ ಸಂಕ್ಷೇಪವಾಗಿ ಉಪದೇಶಿಸಿದನು. ॥49॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಷೋಡಶಃ ಸರ್ಗಃ ॥16॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹದಿನಾರನೆಯ ಸರ್ಗವು ಮುಗಿಯಿತು.
ಯುದ್ಧಕಾಂಡವು ಮುಗಿದುದು.