[ಹದಿನೈದನೆಯ ಸರ್ಗ]
ಭಾಗಸೂಚನಾ
ಶ್ರೀರಾಮಪಟ್ಟಾಭಿಷೇಕ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತತಸ್ತು ಕೈಕಯೀಪುತ್ರೋ ಭರತೋ ಭಕ್ತಿಸಂಯುತಃ ।
ಶಿರಸ್ಯಂಜಲಿಮಾಧಾಯ ಜ್ಯೇಷ್ಠಂ ಭ್ರಾತರಮಬ್ರವೀತ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಎಲೈ ಗಿರಿಜೆ! ಅನಂತರ ಕೈಕೆಯೀಪುತ್ರನಾದ ಭರತನು ಭಕ್ತಿಯಿಂದ ಕೂಡಿದವನಾಗಿ ಕೈಗಳನ್ನು ತಲೆಯ ಮೇಲಕ್ಕೆ ಜೋಡಿಸಿಕೊಂಡು ಹಿರಿಯಣ್ಣ ನಾದ ಶ್ರೀರಾಮನನ್ನು ಕುರಿತು ಹೀಗೆಂದನು ॥1॥
(ಶ್ಲೋಕ-2)
ಮೂಲಮ್
ಮಾತಾ ಮೇ ಸತ್ಕೃತಾ ರಾಮ ದತ್ತಂ ರಾಜ್ಯಂ ತ್ವಯಾ ಮಮ ।
ದದಾಮಿ ತತ್ತೇ ಚ ಪುನರ್ಯಥಾ ತ್ವಮದದಾ ಮಮ ॥
ಅನುವಾದ
‘‘ಹೇ ರಾಮಚಂದ್ರಾ! ನೀನು ನನಗೆ ರಾಜ್ಯವನ್ನು ಕೊಟ್ಟಿದ್ದೆ, ಇದರಿಂದ ನನ್ನ ತಾಯಿಯ ಸತ್ಕಾರವಾದರೋ ಆಗಿಹೋಯಿತು. ಈಗ ನೀನು ನನಗೆ ಕೊಟ್ಟಂತೆ ನಾನು ಪುನಃ ನಿನಗೆ ಅದನ್ನು ಒಪ್ಪಿಸುತ್ತಿದ್ದೇನೆ.’’ ॥2॥
(ಶ್ಲೋಕ-3)
ಮೂಲಮ್
ಇತ್ಯುಕ್ತ್ವಾ ಪಾದಯೋರ್ಭಕ್ತ್ಯಾ ಸಾಷ್ಟಾಂಗಂ ಪ್ರಣಿಪತ್ಯ ಚ ।
ಬಹುಧಾ ಪ್ರಾರ್ಥಯಾಮಾಸ ಕೈಕೇಯ್ಯಾ ಗುರುಣಾ ಸಹ ॥
ಅನುವಾದ
ಎಂದು ಹೇಳುತ್ತಾ ಅವನು ಚರಣಗಳಲ್ಲಿ ಭಕ್ತಿಯಿಂದ ಸಾಷ್ಟಾಂಗ ನಮಸ್ಕರಿಸಿದನು. ರಾಜ್ಯವನ್ನು ಸ್ವೀಕರಿಸಲಿಕ್ಕಾಗಿ ಕೈಕೆಯಿ ಹಾಗೂ ಗುರುಗಳಾದ ವಸಿಷ್ಠರೊಂದಿಗೆ ಬಹಳವಾಗಿ ಬೇಡಿ ಕೊಂಡನು. ॥3॥
(ಶ್ಲೋಕ-4)
ಮೂಲಮ್
ತಥೇತಿ ಪ್ರತಿಜಗ್ರಾಹ ಭರತಾದ್ರಾಜ್ಯಮೀಶ್ವರಃ ।
ಮಾಯಾಮಾಶ್ರಿತ್ಯ ಸಕಲಾಂ ನರಚೇಷ್ಟಾಮುಪಾಗತಃ ॥
ಅನುವಾದ
ಆಗ ತನ್ನ ಮಾಯೆಯನ್ನು ಆಶ್ರಯಿಸಿ ಎಲ್ಲ ಪ್ರಕಾರದ ಮಾನುಷ ಲೀಲೆಗಳನ್ನು ಮಾಡುವುದರಲ್ಲಿ ಪ್ರವೃತ್ತನಾದ ಭಗವಾನ್ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ ಭರತನಿಂದ ರಾಜ್ಯವನ್ನು ಸ್ವೀಕರಿಸಿದನು. ॥4॥
(ಶ್ಲೋಕ-5)
ಮೂಲಮ್
ಸ್ವಾರಾಜ್ಯಾನುಭವೋ ಯಸ್ಯ ಸುಖಜ್ಞಾನೈಕರೂಪಿಣಃ ।
ನಿರಸ್ತಾತಿಶಯಾನಂದರೂಪಿಣಃ ಪರಮಾತ್ಮನಃ ॥
(ಶ್ಲೋಕ-6)
ಮೂಲಮ್
ಮಾನುಷೇಣ ತು ರಾಜ್ಯೇನ ಕಿಂ ತಸ್ಯ ಜಗದೀಶಿತುಃ ।
ಯಸ್ಯ ಭ್ರೂಭಂಗಮಾತ್ರೇಣ ತ್ರಿಲೋಕೀ ನಶ್ಯತಿ ಕ್ಷಣಾತ್ ॥
ಅನುವಾದ
ಜಗದೀಶ್ವರನಾದ ಹಾಗೂ ಸುಖಜ್ಞಾನ ಸ್ವರೂಪನೂ, ಆನಂದದ ಎಲ್ಲೆಯನ್ನೇ ಮೀರಿದ ಸ್ವರೂಪನೂ ಆದ ಪರಮಾತ್ಮನಾದ ಅವನಿಗೆ ತನ್ನ ಸ್ವರೂಪಾನಂದವೆಂಬ ಸ್ವಾರಾಜ್ಯಾನುಭವವೇ ಇದ್ದು ಕೊಂಡಿರುವಾಗ ಈ ಮನುಷ್ಯ ರಾಜ್ಯ ಮಾತ್ರದಿಂದ ಆಗಬೇಕಾದದ್ದಾರೂ ಏನಿದೆ? ಅವನ ಭ್ರುಕುಟಿ-ವಿಲಾಸಮಾತ್ರದಿಂದ ಮೂರುಲೋಕಗಳು ಒಂದೇ ಕ್ಷಣದಲ್ಲಿ ನಷ್ಟವಾಗಿ ಹೋಗುತ್ತವೆ. ॥5-6॥
(ಶ್ಲೋಕ-7)
ಮೂಲಮ್
ಯಸ್ಯಾನುಗ್ರಹಮಾತ್ರೇಣ ಭವಂತ್ಯಾಖಂಡಲಶ್ರಿಯಃ ।
ಲೀಲಾಸೃಷ್ಟಮಹಾಸೃಷ್ಟೇಃ ಕಿಯದೇತದ್ರಮಾಪತೇಃ ॥
ಅನುವಾದ
ಯಾರ ಅನುಗ್ರಹ ಮಾತ್ರದಿಂದ ದೇವೇಂದ್ರನ ರಾಜ್ಯಲಕ್ಷ್ಮೀಯು ಪ್ರಾಪ್ತವಾಗುತ್ತದೋ, ಯಾರು ಲೀಲಾಮಾತ್ರದಿಂದ ಈ ಸೃಷ್ಟಿಯನ್ನು ರಚಿಸಿರುವನೋ, ಅಂತಹ ರಮಾಪತಿಯಾದವನಿಗೆ ಈ ಅಯೋಧ್ಯೆಯ ರಾಜ್ಯವು ಎಷ್ಟರ ಮಟ್ಟಿನದು? ॥7॥
(ಶ್ಲೋಕ-8)
ಮೂಲಮ್
ತಥಾಪಿ ಭಜತಾಂ ನಿತ್ಯಂ ಕಾಮಪೂರವಿಧಿತ್ಸಯಾ ।
ಲೀಲಾಮಾನುಷ ದೇಹೇನ ಸರ್ವಮಪ್ಯನುವರ್ತತೇ ॥
ಅನುವಾದ
ಹೀಗಿದ್ದರೂ ಭಜಿಸುವವರಿಗೆ ಯಾವಾಗಲೂ ಇಷ್ಟಾರ್ಥಗಳನ್ನು ಪೂರೈಸುವ ದೃಷ್ಟಿಯಿಂದ, ಲೀಲಾಮಾನುಷ ದೇಹದಿಂದ ಎಲ್ಲ ಜಗದ್ವ್ಯಾಪಾರಗಳನ್ನು ನಡೆಸುತ್ತಿರುವನು. ॥8॥
(ಶ್ಲೋಕ-9)
ಮೂಲಮ್
ತತಃ ಶತ್ರುಘ್ನವಚನಾನ್ನಿಪುಣಃ ಶ್ಮಶ್ರುಕೃಂತಕಃ ।
ಸಂಭಾರಾಶ್ಚಾಭಿಷೇಕಾರ್ಥಮಾನೀತಾ ರಾಘವಸ್ಯ ಹಿ ॥
ಅನುವಾದ
ಆಗ ಶತ್ರುಘ್ನನ ಅಪ್ಪಣೆಯಂತೆ ಕುಶಲನಾದ ಕ್ಷೌರಿಕನನ್ನು ಕರೆಸಲಾಯಿತು. ಹಾಗೆಯೇ ಮಂಗಳಸ್ನಾನಕ್ಕಾಗಿ ಪದಾರ್ಥಗಳನ್ನು ತರಿಸಲಾಯಿತು. ॥9॥
(ಶ್ಲೋಕ-10)
ಮೂಲಮ್
ಪೂರ್ವಂ ತು ಭರತೇ ಸ್ನಾತೇ ಲಕ್ಷ್ಮಣೇ ಚ ಮಹಾತ್ಮನಿ ।
ಸುಗ್ರೀವೇ ವಾನರೇಂದ್ರೇ ಚ ರಾಕ್ಷಸೇಂದ್ರೇ ವಿಭೀಷಣೇ ॥
ಅನುವಾದ
ಮೊದಲಿಗೆ ಭರತನು ಸ್ನಾನ ಮಾಡಲಾಗಿ, ಕ್ರಮವಾಗಿ ಮಹಾತ್ಮನಾದ ಲಕ್ಷ್ಮಣನು ಸ್ನಾನ ಮಾಡಿದನು. ಬಳಿಕ ವಾನರರಾಜ ಸುಗ್ರೀವ, ರಾಕ್ಷಸ ರಾಜನಾದ ವಿಭೀಷಣ ಇವರುಗಳು ಸ್ನಾನಮಾಡಿದರು. ॥10॥
(ಶ್ಲೋಕ-11)
ಮೂಲಮ್
ವಿಶೋಧಿತಜಟಃ ಸ್ನಾತಶ್ಚಿತ್ರಮಾಲ್ಯಾನುಲೇಪನಃ ।
ಮಹಾರ್ಹವಸನೋಪೇತಸ್ತಸ್ಥೌ ತತ್ರ ಶ್ರಿಯಾ ಜ್ವಲನ್ ॥
ಅನುವಾದ
ಅನಂತರ ಶ್ರೀರಾಮನು ಜಟೆಗಳನ್ನು ವಿಸರ್ಜಿಸಿ, ಸ್ನಾನಮಾಡಿ ಬಹಳವಾಗಿ ಬೆಲೆಬಾಳುವ ವಸ್ತ್ರಗಳನ್ನುಟ್ಟು, ಚಿತ್ರವಾದ ಮಾಲೆಗಳನ್ನೂ, ಸುಗಂಧಗಳನ್ನೂ ಧರಿಸಿಕೊಂಡು ತನ್ನಕಾಂತಿಯಿಂದ ಬೆಳಗುತ್ತಾ ಅಲ್ಲಿ ಕಾಣಿಸಿಕೊಂಡನು. ॥11॥
(ಶ್ಲೋಕ-12)
ಮೂಲಮ್
ಪ್ರತಿಕರ್ಮ ಚ ರಾಮಸ್ಯ ಲಕ್ಷ್ಮಣಸ್ಯ ಮಹಾಮತಿಃ ।
ಕಾರಯಾಮಾಸ ಭರತಃ ಸೀತಾಯಾ ರಾಜಯೋಷಿತಃ ॥
(ಶ್ಲೋಕ-13)
ಮೂಲಮ್
ಮಹಾರ್ಹವಸ್ತ್ರಾಭರಣೈರಲಂಚಕ್ರುಃ ಸುಮಧ್ಯಮಾಮ್ ।
ತತೋ ವಾನರಪತ್ನೀನಾಂ ಸರ್ವಾಸಾಮೇವ ಶೋಭನಾ ॥
(ಶ್ಲೋಕ-14)
ಮೂಲಮ್
ಅಕಾರಯತ ಕೌಸಲ್ಯಾ ಪ್ರಹೃಷ್ಟಾ ಪುತ್ರವತ್ಸಲಾ ।
ತತಃ ಸ್ಯಂದನಮಾದಾಯ ಶತ್ರುಘ್ನವಚನಾತ್ಸುಧೀಃ ॥
(ಶ್ಲೋಕ-15)
ಮೂಲಮ್
ಸುಮಂತ್ರಃ ಸೂರ್ಯಸಂಕಾಶಂ ಯೋಜಯಿತ್ವಾಗ್ರತಃ ಸ್ಥಿತಃ ।
ಆರುರೋಹ ರಥಂ ರಾಮಃ ಸತ್ಯಧರ್ಮಪರಾಯಣಃ ॥
ಅನುವಾದ
ಮಹಾಬುದ್ಧಿಶಾಲಿಯಾದ ಭರತನು ಶ್ರೀರಾಮನಿಗೂ, ಲಕ್ಷ್ಮಣನಿಗೂ ಅಲಂಕಾರಗಳನ್ನು ಮಾಡಿದನು. ರಾಜಸ್ತ್ರೀಯರು ಬಹಳ ಬೆಲೆಬಾಳುವ ವಸ್ತ್ರಾಭರಣಗಳಿಂದ, ಸುಂದರ ನಡುವುಳ್ಳ ಸೀತೆಯನ್ನು ಸಿಂಗರಿಸಿದರು. ಅನಂತರ ಪುತ್ರಪ್ರೇಮವುಳ್ಳ ಸಂತುಷ್ಟಳಾದ ಕೌಸಲ್ಯೆಯೇ ಎಲ್ಲ ವಾನರ ಸ್ತ್ರೀಯರಿಗೂ ಸಿಂಗಾರಗಳನ್ನು ಮಾಡಿಸಿದಳು. ಆಗಲೇ ಶತ್ರುಘ್ನನ ಅಪ್ಪಣೆಯಂತೆ ಬುದ್ಧಿಶಾಲಿಯಾದ ಸುಮಂತ್ರನು ಸೂರ್ಯನಂತೆ ವಿರಾಜಮಾನವಾದ ರಥವನ್ನು ಉತ್ತಮವಾದ ಕುದುರೆಗಳನ್ನು ಹೂಡಿ ತಂದು ಎದುರಿಗೆ ನಿಲ್ಲಿಸಿದನು. ಆಗ ಸತ್ಯಧರ್ಮಪರಾಯಣನಾದ ಭಗವಾನ್ ಶ್ರೀರಾಮನು ಆ ರಥವನ್ನೇರಿದನು. ॥12-15॥
(ಶ್ಲೋಕ-16)
ಮೂಲಮ್
ಸುಗ್ರೀವೋ ಯುವರಾಜಶ್ಚ ಹನುಮಾಂಶ್ಚ ವಿಭೀಷಣಃ ।
ಸ್ನಾತ್ವಾ ದಿವ್ಯಾಂಬರಧರಾ ದಿವ್ಯಾಭರಣಭೂಷಿತಾಃ ॥
(ಶ್ಲೋಕ-17)
ಮೂಲಮ್
ರಾಮಮನ್ವೀಯುರಗ್ರೇ ಚ ರಥಾಶ್ವಗಜವಾಹನಾಃ ।
ಸುಗ್ರೀವಪತ್ನ್ಯಃ ಸೀತಾ ಚ ಯಯುರ್ಯಾನೈಃ ಪುರಂ ಮಹತ್ ॥
ಅನುವಾದ
ಆಗ ಸುಗ್ರೀವ, ಯುವರಾಜನಾದ ಅಂಗದ, ಹನುಮಂತ, ವಿಭೀಷಣ ಮುಂತಾದವರು ಸ್ನಾನಾದಿಗಳನ್ನು ಮಾಡಿ, ದಿವ್ಯವಾದ ವಸ್ತ್ರಾಭರಣಗಳನ್ನು ಉಟ್ಟು-ತೊಟ್ಟು ಅಲಂಕೃತರಾಗಿ ಆನೆ, ಕುದುರೆ, ರಥಗಳನ್ನೇರಿ ಶ್ರೀರಾಮಚಂದ್ರನ ಹಿಂದೆ-ಮುಂದೆ ಸುತ್ತುವರೆದು ಹೊರಟರು. ಸುಗ್ರೀವನ ಪತ್ನಿಯರೂ ಸೀತಾ ದೇವಿಯೂ ಸುಂದರವಾದ ಪಲ್ಲಕ್ಕಿಗಳಲ್ಲಿ ಕುಳಿತು ವಿಶಾಲವಾದ ಅಯೋಧ್ಯಾಪುರವನ್ನು ಕುರಿತು ಹೊರಟರು. ॥16-17॥
(ಶ್ಲೋಕ-18)
ಮೂಲಮ್
ವಜ್ರಪಾಣಿರ್ಯಥಾ ದೇವೈರ್ಹರಿತಾಶ್ವರಥೇ ಸ್ಥಿತಃ ।
ಪ್ರಯಯೌ ರಥಮಾಸ್ಥಾಯ ತಥಾ ರಾಮೋ ಮಹತ್ಪುರಮ್ ॥
ಅನುವಾದ
ವಜ್ರಪಾಣಿ ದೇವೇಂದ್ರನು ಹಸಿರಾದ ಕುದುರೆಗಳ ರಥದಲ್ಲಿ ಕುಳಿತು ದೇವತೆಗಳೊಡಗೂಡಿ ಹೊರಡುವಂತೆ ಭಗವಾನ್ ಶ್ರೀರಾಮಚಂದ್ರನು ರಥವನ್ನೇರಿ ಮಹಾಪುರಿಯಾದ ಅಯೋಧ್ಯೆಗೆ ಹೊರಟನು. ॥18॥
(ಶ್ಲೋಕ-19)
ಮೂಲಮ್
ಸಾರಥ್ಯಂ ಭರತಶ್ಚಕ್ರೇ ರತ್ನ ದಂಡಂ ಮಹಾದ್ಯುತಿಃ ।
ಶ್ವೇತಾತಪತ್ರಂ ಶತ್ರುಘ್ನೋ ಲಕ್ಷ್ಮಣೋ ವ್ಯಜನಂ ದಧೇ ॥
ಅನುವಾದ
ಆಗ ಮಹಾತೇಜಸ್ವೀ ಭರತನೇ ಸಾರಥ್ಯವನ್ನು ವಹಿಸಿಕೊಂಡನು. ಶತ್ರುಘ್ನನು ರತ್ನಗಳನ್ನು ಕೋದದಂಡವುಳ್ಳ ಮಹಾಕಾಂತಿಯುಕ್ತವಾದ ಬಿಳುಪಾದ ಛತ್ರವನ್ನು ಹಿಡಿದನು. ಲಕ್ಷ್ಮಣನು ವ್ಯಜನ(ಬೀಸಣಿಗೆ)ವನ್ನು ಬೀಸಿದನು. ॥19॥
(ಶ್ಲೋಕ-20)
ಮೂಲಮ್
ಚಾಮರಂ ಚ ಸಮೀಪಸ್ಥೋ ನ್ಯವೀಜಯದರಿಂದಮಃ ।
ಶಶಿಪ್ರಕಾಶಂ ತ್ವಪರಂ ಜಗ್ರಾಹಾಸುರನಾಯಕಃ ॥
ಅನುವಾದ
ಒಂದು ಕಡೆಯಲ್ಲಿ ಬಳಿಯಲ್ಲೆ ನಿಂತಿದ್ದ ಶತ್ರುದಮನ ಸುಗ್ರೀವನು, ಮತ್ತೊಂದು ಕಡೆಯಲ್ಲಿ ರಾಕ್ಷಸರಾಜ ವಿಭೀಷಣನು ಚಂದ್ರನಂತೆ ಹೊಳೆಯುತ್ತಿದ್ದ ಚಾಮರಗಳನ್ನು ಬೀಸಿದರು. ॥20॥
(ಶ್ಲೋಕ-21)
ಮೂಲಮ್
ದಿವಿಜೈಃ ಸಿದ್ಧಸಂಘೈಶ್ಚ ಋಷಿಭಿರ್ದಿವ್ಯದರ್ಶನೈಃ ।
ಸ್ತೂಯಮಾನಸ್ಯ ರಾಮಸ್ಯ ಶುಶ್ರುವೇ ಮಧುರಧ್ವನಿಃ ॥
ಅನುವಾದ
ಆಗ ದೇವತೆಗಳು, ಸಿದ್ಧರ ಗುಂಪುಗಳು, ದಿವ್ಯದರ್ಶನವುಳ್ಳ ಋಷಿಗಳು, ಎಲ್ಲರಿಂದ ಸ್ತುತ್ಯನಾದ ಶ್ರೀರಾಮನ ಸ್ತೋತ್ರಗಳ ಮಧುರವಾದ ಧ್ವನಿಗಳು ಕೇಳಿ ಬರುತ್ತಿದ್ದುವು. ॥21॥
(ಶ್ಲೋಕ-22)
ಮೂಲಮ್
ಮಾನುಷಂ ರೂಪಮಾಸ್ಥಾಯ ವಾನರಾ ಗಜವಾಹನಾಃ ।
ಭೇರಿ ಶಂಖನಿನಾದೈಶ್ಚ ಮೃದಂಗಪಣವಾನಕೈಃ ॥
(ಶ್ಲೋಕ-23)
ಮೂಲಮ್
ಪ್ರಯಯೌ ರಾಘವಶ್ರೇಷ್ಠಸ್ತಾಂ ಪುರೀಂ ಸಮಲಂಕೃತಾಮ್ ।
ದದೃಶುಸ್ತೇ ಸಮಾಯಾಂತಂ ರಾಘವಂ ಪುರವಾಸಿನಃ ॥
ಅನುವಾದ
ವಾನರರು ಮನುಷ್ಯರೂಪವನ್ನು ಧರಿಸಿ ಆನೆಗಳ ಮೇಲೆ ಕುಳಿತು ಬರುತ್ತಿದ್ದರು. ಹೀಗೆ ಭೇರಿ, ಶಂಖ, ಮೃದಂಗ, ಪಣವ, ಗೋಮುಖ ಮುಂತಾದ ವಾದ್ಯಘೋಷದೊಡನೆ ಅಲಂಕೃತವಾದ ಅಯೋಧ್ಯೆಯನ್ನು ಶ್ರೀರಾಮಚಂದ್ರನು ಪ್ರವೇಶಿಸಿದನು. ಆಗ ನಗರವಾಸಿಗಳು ವೈಭವದಿಂದ ಬರುತ್ತಿರುವ ಶ್ರೀರಾಮನನ್ನೇ ನೋಡತೊಡಗಿದರು. ॥22-23॥
(ಶ್ಲೋಕ-24)
ಮೂಲಮ್
ದೂರ್ವಾದಲಶ್ಯಾಮತನುಂ ಮಹಾರ್ಹ-
ಕಿರೀಟರತ್ನಾಭರಣಾಂಚಿತಾಂಗಮ್ ।
ಆರಕ್ತಕಂಜಾಯತಲೋಚನಾಂತಂ
ದೃಷ್ಟ್ವಾ ಯಯುರ್ಮೋದಮತೀವ ಪುಣ್ಯಾಃ ॥
(ಶ್ಲೋಕ-25)
ಮೂಲಮ್
ವಿಚಿತ್ರರತ್ನಾಂಚಿತಸೂತ್ರನದ್ಧ-
ಪೀತಾಂಬರಂ ಪೀನಭುಜಾಂತರಾಲಮ್
ಅನರ್ಘ್ಯಮುಕ್ತಾಫಲದಿವ್ಯಹಾರೈ-
ರ್ವಿರೋಚಮಾನಂ ರಘುನಂದನಂ ಪ್ರಜಾಃ ॥
(ಶ್ಲೋಕ-26)
ಮೂಲಮ್
ಸುಗ್ರೀವಮುಖ್ಯೈರ್ಹರಿಭಿಃ ಪ್ರಶಾಂತೈ -
ರ್ನಿಷೇವ್ಯಮಾಣಂ ರವಿತುಲ್ಯಭಾಸಮ್ ।
ಕಸ್ತೂರಿಕಾಚಂದನಲಿಪ್ತಗಾತ್ರಂ
ನಿವೀತಕಲ್ಪದ್ರುಮಪುಷ್ಪಮಾಲಮ್ ॥
ಅನುವಾದ
ಅತ್ಯಂತ ಪುಣ್ಯ ಶಾಲಿಗಳಾದ ಪ್ರಜೆಗಳು ಗರಿಕೆಯ ದಳದಂತೆ ಶ್ಯಾಮಲವರ್ಣ ಶರೀರವುಳ್ಳವನೂ, ಬೆಲೆಬಾಳುವ ಕಿರೀಟ, ರತ್ನಾಭರಣ, ಭುಜ ಕೀರ್ತಿಗಳಿಂದ ಅಲಂಕೃತನೂ, ಕಮಲದ ಎಸಳಿನಂತೆ ಸ್ವಲ್ಪ ಕೆಂಪಾದ ಅರಳಿದ ಕಣ್ಣುಗಳುಳ್ಳವನೂ, ಚಿತ್ರ-ವಿಚಿತ್ರವಾದ ರತ್ನಗಳಿಂದ ಮೆಟ್ಟಿದ ಉಡಿದಾರವನ್ನು ಬಿಗಿದಿರುವ ಪೀತಾಂಬರವನ್ನುಟ್ಟವನೂ, ಉಬ್ಬಿದ ತೋಳುಗಳುಳ್ಳವನೂ, ವಿಶಾಲ ವಕ್ಷ ಸ್ಥಲವುಳ್ಳವನೂ, ಬೆಲೆಕಟ್ಟಲಾಗದಂತಹ ಮುತ್ತುಗಳ ದಿವ್ಯಹಾರಗಳಿಂದ ವಿರಾಜಮಾನನೂ ಆಗಿದ್ದ, ಸುಗ್ರೀವನೇ ಮುಂತಾದ ಪ್ರಶಾಂತರಾದ ಕಪಿಗಳಿಂದ ಸೇವಿತನಾದ, ಸೂರ್ಯನಂತೆ ಕಾಂತಿಯುಕ್ತವಾದ, ಕಸ್ತೂರಿ-ಚಂದನಗಳಿಂದ ಲೇಪಿತವಾದ ಶರೀರವುಳ್ಳವನೂ ಹಾಗೂ ಕಲ್ಪವೃಕ್ಷದ ಹೂಗಳ ಮಾಲೆಯಿಂದ ಅಲಂಕೃತನಾದ ಶ್ರೀರಘುರಾಮನನ್ನು ನೋಡಿ ಅತ್ಯಂತ ಆನಂದಭರಿತರಾದರು. ॥24-26॥
(ಶ್ಲೋಕ-27)
ಮೂಲಮ್
ಶ್ರುತ್ವಾ ಸ್ತ್ರಿಯೋ ರಾಮಮುಪಾಗತಂ ಮುದಾ
ಪ್ರಹರ್ಷವೇಗೋತ್ಕಲಿತಾನನಶ್ರಿಯಃ ।
ಅಪಾಸ್ಯ ಸರ್ವಂ ಗೃಹಕಾರ್ಯಮಾಹಿತಂ
ಹರ್ಮ್ಯಾಣಿ ಚೈವಾರುರುಹುಃ ಸ್ವಲಂಕೃತಾಃ ॥
ಅನುವಾದ
ಶ್ರೀರಾಮಚಂದ್ರನು ಬಂದನು ಎಂಬ ವೃತ್ತಾಂತವನ್ನು ಕೇಳಿದ ಸ್ತ್ರೀಯರು ಸಂತೋಷದಿಂದ ಅರಳಿದ ಮುಖ ಕಾಂತಿಯುಳ್ಳವರಾಗಿ, ಅಲಂಕಾರಗಳನ್ನು ಸರಿಪಡಿಸಿಕೊಂಡು, ಎಲ್ಲ ಮನೆಗೆಲಸಗಳನ್ನೂ ಅಲ್ಲಲ್ಲೇ ಬಿಟ್ಟು ಉಪ್ಪರಿಗೆಗಳನ್ನು ಏರಿದರು. ॥27॥
(ಶ್ಲೋಕ-28)
ಮೂಲಮ್
ದೃಷ್ಟ್ವಾ ಹರಿಂ ಸರ್ವದೃಗುತ್ಸವಾಕೃತಿಂ
ಪುಷ್ಪೈಃ ಕಿರಂತ್ಯಃ ಸ್ಮಿತಶೋಭಿತಾನನಾಃ ।
ದೃಗ್ಭಿಃ ಪುನರ್ನೇತ್ರಮನೋರಸಾಯನಂ
ಸ್ವಾನಂದಮೂರ್ತಿಂ ಮನಸಾಭಿರೇಭಿರೇ ॥
ಅನುವಾದ
ಎಲ್ಲರ ಕಣ್ಣುಗಳಿಗೂ ಹಬ್ಬವನ್ನುಂಟು ಮಾಡುವಂತಹ ಶ್ರೀಹರಿಯನ್ನು ಕಂಡು, ಹೂಗಳನ್ನು ಎರಚುತ್ತಾ, ಮುಗುಳುನಗೆಯ ಮುಖವುಳ್ಳವರಾಗಿ, ಮತ್ತೆ ತಮ್ಮ ಕಣ್ಣುಗಳಿಂದ ಹೃದಯಕ್ಕೂ ನೋಟಕ್ಕೂ ಅಮೃತದಂತಿದ್ದ ಆನಂದ ಮೂರ್ತಿಯಾದ ಶ್ರೀರಾಮನನ್ನು ಮನಸ್ಸಿನಲ್ಲಿಯೇ ಆಲಿಂಗಿಸಿಕೊಂಡರು. ॥28॥
(ಶ್ಲೋಕ-29)
ಮೂಲಮ್
ರಾಮಃ ಸ್ಮಿತಸ್ನಿಗ್ಧದೃಶಾ ಪ್ರಜಾಸ್ತಥಾ
ಪಶ್ಯನ್ಪ್ರಜಾನಾಥ ಇವಾಪರಃ ಪ್ರಭುಃ ।
ಶನೈರ್ಜಗಾಮಾಥ ಪಿತುಃ ಸ್ವಲಂಕೃತಂ
ಗೃಹಂ ಮಹೇಂದ್ರಾಲಯಸನ್ನಿಭಂ ಹರಿಃ ॥
ಅನುವಾದ
ಈ ಪ್ರಕಾರ ವಿಷ್ಣುಸ್ವರೂಪೀ ಭಗವಾನ್ ಶ್ರೀರಾಮನು ಮುಗುಳುನಗೆಯಿಂದ ಹಾಗೂ ಸ್ನೇಹಪೂರಿತ ದೃಷ್ಟಿಯಿಂದ ಪ್ರಜೆಗಳೆಲ್ಲರನ್ನು ನೋಡುತ್ತಾ ಇನ್ನೊಬ್ಬ ಪ್ರಜಾಪತಿಯಂತೆ ಕಂಡುಬಂದನು. ಉತ್ತಮ ರೀತಿಯಿಂದ ಅಲಂಕೃತ ವಾದ ದೇವೆಂದ್ರನ ಅರಮನೆಯಂತಿದ್ದ ತಂದೆಯ ರಾಜಗೃಹವನ್ನು ಮೆಲ್ಲ ಮೆಲ್ಲನೆ ಪ್ರವೇಶಿಸಿದನು. ॥29॥
(ಶ್ಲೋಕ-30)
ಮೂಲಮ್
ಪ್ರವಿಶ್ಯ ವೇಶ್ಮಾಂತರಸಂಸ್ಥಿತೋ ಮುದಾ
ರಾಮೋ ವವಂದೇ ಚರಣೌ ಸ್ವಮಾತುಃ ।
ಕ್ರಮೇಣ ಸರ್ವಾಃ ಪಿತೃಯೋಷಿತಃ ಪ್ರಭು-
ರ್ನನಾಮ ಭಕ್ತ್ಯಾ ರಘುವಂಶಕೇತುಃ ॥
ಅನುವಾದ
ಅರಮನೆಯೊಳಗೆ ಹೋದ ಶ್ರೀರಾಮಚಂದ್ರನು ಹೆಚ್ಚಿನ ಸಂತೋಷ ದಿಂದ ತನ್ನ ತಾಯಿಯ ಪಾದಗಳಿಗೆ ಅಭಿವಂದಿಸಿದನು. ಅನಂತರ ರಘುವಂಶಭೂಷಣನಾದ ಆ ಪ್ರಭುವು ಎಲ್ಲ ತಾಯಂದಿರಿಗೂ (ದಶರಥನ ಪತ್ನಿಯರು) ಕ್ರಮವಾಗಿ ನಮಸ್ಕರಿಸಿದನು. ॥30॥
(ಶ್ಲೋಕ-31)
ಮೂಲಮ್
ತತೋ ಭರತ ಮಾಹೇದಂ ರಾಮಃ ಸತ್ಯಪರಾಕ್ರಮಃ ।
ಸರ್ವಸಂಪತ್ಸಮಾಯುಕ್ತಂ ಮಮ ಮಂದಿರಮುತ್ತಮಮ್ ॥
(ಶ್ಲೋಕ-32)
ಮೂಲಮ್
ಮಿತ್ರಾಯ ವಾನರೇಂದ್ರಾಯ ಸುಗ್ರೀವಾಯ ಪ್ರದೀಯತಾಮ್ ।
ಸರ್ವೇಭ್ಯಃ ಸುಖವಾಸಾರ್ಥಂ ಮಂದಿರಾಣಿ ಪ್ರಕಲ್ಪಯ ॥
ಅನುವಾದ
ಅನಂತರ ಸತ್ಯ ಪರಾಕ್ರಮಿಯಾದ ಶ್ರೀರಾಮನು ಭರತನನ್ನು ಕುರಿತು ಹೀಗೆಂದನು ‘‘ಸಕಲ ಸಂಪತ್ತುಗಳಿಂದ ಕೂಡಿದ ಉತ್ತಮವಾದ ನನ್ನ ಅರಮನೆಯನ್ನು ನನ್ನ ಸ್ನೇಹಿತನೂ, ವಾನರಶ್ರೇಷ್ಠನೂ ಆದ ಸುಗ್ರೀವನಿಗೆ ಬಿಟ್ಟು ಕೊಡು. ಹಾಗೆಯೇ ಎಲ್ಲರಿಗೂ ಸುಖವಾಗಿ ತಂಗುವ ಸಲುವಾಗಿ ಒಳ್ಳೆಯ ಸ್ಥಳದ ವ್ಯವಸ್ಥೆಮಾಡು.’’ ॥31-32॥
(ಶ್ಲೋಕ-33)
ಮೂಲಮ್
ರಾಮೇಣೈವಂ ಸಮಾದಿಷ್ಟೋ ಭರತಶ್ಚ ತಥಾಕರೋತ್ ।
ಉವಾಚ ಚ ಮಹಾತೇಜಾಃ ಸುಗ್ರೀವಂ ರಾಘವಾನುಜಃ ॥
ಅನುವಾದ
ಶ್ರೀರಘುನಾಥನ ಅಪ್ಪಣೆಯನ್ನು ಪಡೆದು ಭರತನು ಹಾಗೆಯೇ ಮಾಡಿದನು ಹಾಗೂ ಶ್ರೀರಾಮನ ಸೊದರ ಮಹಾತೇಜಸ್ವಿಯಾದ ಅವನು ಸುಗ್ರೀವನನ್ನು ಕುರಿತು ಹೀಗೆಂದನು - ॥33॥
(ಶ್ಲೋಕ-34)
ಮೂಲಮ್
ರಾಘವಸ್ಯಾಭಿಷೇಕಾರ್ಥಂ ಚತುಃಸಿಂಧುಜಲಂ ಶುಭಮ್ ।
ಆನೇತುಂ ಪ್ರೇಷಯಸ್ವಾಶು ದೂತಾಂಸ್ತ್ವರಿತವಿಕ್ರಮಾನ್ ॥
ಅನುವಾದ
‘‘ವಾನರರಾಜಾ! ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ನಾಲ್ಕೂ ಸಮುದ್ರಗಳ ಪವಿತ್ರವಾದ ಜಲವನ್ನು ತರುವುದಕ್ಕಾಗಿ ಬೇಗನೇ ವೇಗಶಾಲಿಗಳಾದ ದೂತರನ್ನು ಕಳಿಸಿಕೊಡು.’’ ॥34॥
(ಶ್ಲೋಕ-35)
ಮೂಲಮ್
ಪ್ರೇಷಯಾಮಾಸ ಸುಗ್ರೀವೋ ಜಾಂಬವಂತಂ ಮರುತ್ಸುತಮ್ ।
ಅಂಗದಂ ಚ ಸುಷೇಣಂ ಚ ತೇ ಗತ್ವಾ ವಾಯುವೇಗತಃ ॥
(ಶ್ಲೋಕ-36)
ಮೂಲಮ್
ಜಲಪೂರ್ಣಾನ್ ಶಾತಕುಂಭಕಲಶಾಂಶ್ಚ ಸಮಾನಯನ್ ।
ಆನೀತಂ ತೀರ್ಥಸಲಿಲಂ ಶತ್ರುಘ್ನೋ ಮಂತ್ರಿಭಿಃ ಸಹ ॥
(ಶ್ಲೋಕ-37)
ಮೂಲಮ್
ರಾಘವಸ್ಯಾಭಿಷೇಕಾರ್ಥಂ ವಸಿಷ್ಠಾಯ ನ್ಯವೇದಯತ್ ।
ತತಸ್ತು ಪ್ರಯತೋ ವೃದ್ಧೋ ವಸಿಷ್ಠೋ ಬ್ರಾಹ್ಮಣೈಃ ಸಹ ॥
(ಶ್ಲೋಕ-38)
ಮೂಲಮ್
ರಾಮಂ ರತ್ನಮಯೇ ಪೀಠೇ ಸಸೀತಂ ಸಂನ್ಯವೇಶಯತ್ ।
ವಸಿಷ್ಠೋ ವಾಮದೇವಶ್ಚ ಜಾಬಾಲಿರ್ಗೌತಮಸ್ತಥಾ ॥
(ಶ್ಲೋಕ-39)
ಮೂಲಮ್
ವಾಲ್ಮೀಕಿಶ್ಚ ತಥಾ ಚಕ್ರುಃ ಸರ್ವೇ ರಾಮಾಭಿಷೇಚನಮ್ ।
ಕುಶಾಗ್ರತುಲಸೀಯುಕ್ತ ಪುಣ್ಯಗಂಧಜಲೈರ್ಮುದಾ ॥
ಅನುವಾದ
ಆಗ ಸುಗ್ರೀವನು ಜಾಂಬವಂತ, ಹನುಮಂತ, ಅಂಗದ, ಸುಷೇಣ ಈ ನಾಲ್ವರನ್ನು ಕಳಿಸಿಕೊಟ್ಟನು. ಅವರುಗಳು ವಾಯು ವೇಗದಿಂದ ಹೊರಟು ಸಮುದ್ರಗಳನ್ನು ತಲುಪಿ ಚಿನ್ನದ ಕೊಡಗಳಲ್ಲಿ ಪುಣ್ಯಜಲವನ್ನು ತುಂಬಿ ತಂದರು. ಅವರು ತಂದಿರುವ ತೀರ್ಥ ಜಲವನ್ನು ಮಂತ್ರಿಗಳೊಡಗೂಡಿ ಶತ್ರುಘ್ನನು ಶ್ರೀರಾಮವ ಅಭಿಷೇಕಕ್ಕಾಗಿ ಎಂದು ವಸಿಷ್ಠರಿಗೆ ಸಮರ್ಪಿಸಿದನು. ಅನಂತರ ಶ್ರದ್ಧಾಯುಕ್ತನಾದ, ವೃದ್ಧರಾದ ವಸಿಷ್ಠರು ಬ್ರಾಹ್ಮಣರೊಡಗೂಡಿ ರತ್ನಮಯವಾದ ಸಿಂಹಾಸನದಲ್ಲಿ ಸೀತಾ ಸಮೇತನಾದ ಶ್ರೀರಾಮಚಂದ್ರನನ್ನು ಕುಳ್ಳಿರಿಸಿದನು. ಮತ್ತೆ ವಸಿಷ್ಠ, ವಾಮದೇವ, ಜಾಬಾಲಿ, ಗೌತಮ, ವಾಲ್ಮೀಕಿ ಮುಂತಾದ ಎಲ್ಲ ಮಹರ್ಷಿಗಳು ಸೇರಿ ಹೆಚ್ಚಿನ ಸಂತೋಷದಿಂದ ದರ್ಭೆ ಮತ್ತು ತುಲಸೀ ಸಹಿತ ಪುಣ್ಯಕರವಾದ ಸುಗಂಧಯುಕ್ತ ಜಲದಿಂದ ಶ್ರೀರಾಮಚಂದ್ರನಿಗೆ ಅಭಿಷೇಕ ಮಾಡಿದರು. ॥35-39॥
(ಶ್ಲೋಕ-40)
ಮೂಲಮ್
ಅಭ್ಯಷಿಂಚನ್ ರಘುಶ್ರೇಷ್ಠಂ ವಾಸವಂ ವಸವೋ ಯಥಾ ।
ಋತ್ವಿಗ್ಭಿರ್ಬ್ರಾಹ್ಮಣೈಃ ಶ್ರೇಷ್ಠೈಃ ಕನ್ಯಾಭಿಃ ಸಹ ಮಂತ್ರಿಭಿಃ ॥
(ಶ್ಲೋಕ-41)
ಮೂಲಮ್
ಸರ್ವೌಷಧಿರಸೈಶ್ಚೈವ ದೈವತೈರ್ನಭಸಿ ಸ್ಥಿತೈಃ ।
ಚತುರ್ಭಿರ್ಲೋಕ ಪಾಲೈಶ್ಚ ಸ್ತುವದ್ಭಿಃ ಸಗಣೈಸ್ತಥಾ ॥
ಅನುವಾದ
ಋತ್ವಿಜರುಗಳಿಂದಲೂ, ಶ್ರೇಷ್ಠ ಬ್ರಾಹ್ಮಣರುಗಳಿಂದಲೂ, ಕನ್ಯೆಯರು, ಮಂತ್ರಿಗಳ ಸಹಿತ ಆ ಮಹರ್ಷಿಗಳು, ಆಕಾಶದಲ್ಲಿ ನೆರೆದಿದ್ದ ದೇವತೆಗಳ ಪರಿವಾರ ಸಮೇತ ಬಂದು, ಸ್ತುತಿಸುತ್ತಿರುವ ನಾಲ್ವರು ಲೋಕಪಾಲರುಗಳಿಂದಲೂ ಕೂಡಿ ಸರ್ವೌಷಧಿಗಳ ರಸದಿಂದ, ವಸುಗಳು ಇಂದ್ರನಿಗೆ ಅಭಿಷೇಕ ಮಾಡಿದಂತೆ ರಘುಶ್ರೇಷ್ಠನಿಗೆ ಅಭಿಷೇಕ ಮಾಡಿದರು. ॥40-41॥
(ಶ್ಲೋಕ-42)
ಮೂಲಮ್
ಛತ್ರಂ ಚ ತಸ್ಯ ಜಗ್ರಾಹ ಶತ್ರುಘ್ನಃ ಪಾಂಡುರಂ ಶುಭಮ್ ।
ಸುಗ್ರೀವರಾಕ್ಷಸೇಂದ್ರೌ ತೌ ದಧತುಃ ಶ್ವೇತಚಾಮರೇ ॥
ಅನುವಾದ
ಆಗ ಶತ್ರುಘ್ನನು ಭಗವಾನ್ ಶ್ರೀರಾಮನ ಮೇಲೆ ಸುಂದರ ವಾದ ಬಿಳಿಯ ಛತ್ರವನ್ನು ಹಿಡಿದನು. ಸುಗ್ರೀವ, ವಿಭೀಷಣರು ಶ್ವೇತ ಚಾಮರಗಳನ್ನು ಬೀಸಿದರು. ॥42॥
(ಶ್ಲೋಕ-43)
ಮೂಲಮ್
ಮಾಲಾಂ ಚ ಕಾಂಚನೀಂ ವಾಯುರ್ದದೌ ವಾಸವಚೋದಿತಃ ।
ಸರ್ವರತ್ನಸಮಾಯುಕ್ತಂ ಮಣಿಕಾಂಚನಭೂಷಿತಮ್ ॥
(ಶ್ಲೋಕ-44)
ಮೂಲಮ್
ದದೌ ಹಾರಂ ನರೇಂದ್ರಾಯ ಸ್ವಯಂ ಶಕ್ರಸ್ತು ಭಕ್ತಿತಃ ।
ಪ್ರಜಗುರ್ದೇವಗಂಧರ್ವಾ ನನೃತುಶ್ಚಾಪ್ಸರೋಗಣಾಃ ॥
ಅನುವಾದ
ವಾಯುದೇವನು ಇಂದ್ರನಿಂದ ಪ್ರೇರಿತನಾಗಿ ದಿವ್ಯವಾದ ಕಾಂಚನ ಮಾಲೆಯನ್ನು ಶ್ರೀರಾಮನಿಗೆ ಅರ್ಪಿಸಿದನು. ದೇವೇಂದ್ರನು ಭಕ್ತಿಯಿಂದ ಕೂಡಿದವನಾಗಿ ಸ್ವತಃ ತಾನೇ ಸಕಲವಿಧವಾದ ರತ್ನಗಳಿಂದ ಕೂಡಿರುವ ಹಾಗೂ ವಜ್ರ, ಚಿನ್ನ ಇವುಗಳಿಂದ ಅಲಂಕೃತವಾದ ಒಂದು ಸುಂದರಹಾರವನ್ನು ರಾಜಶ್ರೇಷ್ಠನಾದ ಶ್ರೀರಾಮನಿಗೆ ಸಮರ್ಪಿಸಿದನು. ಆ ಸಮಯದಲ್ಲಿ ದೇವತೆಗಳೂ, ಗಂಧರ್ವರೂ ಗಾನಮಾಡಿದರು. ಅಪ್ಸರಸ್ತ್ರೀಯರು ನೃತ್ಯವನ್ನು ಮಾಡತೊಡಗಿದರು. ॥43-44॥
(ಶ್ಲೋಕ-45)
ಮೂಲಮ್
ದೇವದುಂದುಭಯೋ ನೇದುಃ ಪುಷ್ಪವೃಷ್ಟಿಃ ಪಪಾತ ಖಾತ್ ।
ನವದೂರ್ವಾದಲಶ್ಯಾಮಂ ಪದ್ಮಪತ್ರಾಯತೇಕ್ಷಣಮ್ ॥
(ಶ್ಲೋಕ-46)
ಮೂಲಮ್
ರವಿಕೋಟಿಪ್ರಭಾಯುಕ್ತಕಿರೀಟೇನ ವಿರಾಜಿತಮ್ ।
ಕೋಟಿಕಂದರ್ಪಲಾವಣ್ಯಂ ಪೀತಾಂಬರಸಮಾವೃತಮ್ ॥
(ಶ್ಲೋಕ-47)
ಮೂಲಮ್
ದಿವ್ಯಾಭರಣಸಂಪನ್ನಂ ದಿವ್ಯಚಂದನಲೇಪನಮ್ ।
ಅಯುತಾದಿತ್ಯಸಂಕಾಶಂ ದ್ವಿಭುಜಂ ರಘುನಂದನಮ್ ॥
(ಶ್ಲೋಕ-48)
ಮೂಲಮ್
ವಾಮಭಾಗೇ ಸಮಾಸೀನಾಂ ಸೀತಾಂ ಕಾಂಚನಸನ್ನಿಭಾಮ್ ।
ಸರ್ವಾಭರಣಸಂಪನ್ನಾಂ ವಾಮಾಂಕೇ ಸಮುಪಸ್ಥಿತಾಮ್ ॥
(ಶ್ಲೋಕ-49)
ಮೂಲಮ್
ರಕ್ತೋತ್ಪಲಕರಾಂಭೋಜಾಂ ವಾಮೇನಾಲಿಂಗ್ಯ ಸಂಸ್ಥಿತಮ್ ।
ಸರ್ವಾತಿಶಯಶೋಭಾಢ್ಯಂ ದೃಷ್ಟ್ವಾ ಭಕ್ತಿಸಮನ್ವಿತಃ ॥
(ಶ್ಲೋಕ-50)
ಮೂಲಮ್
ಉಮಯಾ ಸಹಿತೋ ದೇವಃ ಶಂಕರೋ ರಘುನಂದನಮ್ ।
ಸರ್ವದೇವಗಣೈರ್ಯುಕ್ತಃ ಸ್ತೋತುಂ ಸಮುಪಚಕ್ರಮೇ ॥
ಅನುವಾದ
ದೇವಲೋಕದ ದುಂದುಭಿಗಳು ಮೊಳಗಿದವು. ಆಕಾಶದಿಂದ ಹೂವಿನ ಮಳೆ ಸುರಿಯಿತು. ನವದೂರ್ವಾದಲ ಶ್ಯಾಮನೂ, ಪದ್ಮದಂತೆ ವಿಶಾಲ ಕಣ್ಣುಳ್ಳವನೂ, ಕೋಟಿಸೂರ್ಯ ಪ್ರಕಾಶವುಳ್ಳ ಕಿರೀಟವನ್ನು ಧರಿಸಿ ವಿರಾಜಮಾನನೂ, ಕೋಟಿಮನ್ಮಥರಿಗೆ ಸಮಾನವಾದ ಲಾವಣ್ಯವುಳ್ಳ, ಪೀತಾಂಬರವನ್ನುಟ್ಟಿರುವ, ದಿವ್ಯಾಭರಣಗಳಿಂದ ಸಂಪನ್ನನಾದ, ದಿವ್ಯವಾದ ಚಂದನ, ಗಂಧವನ್ನು ಲೇಪಿಸಿ ಕೊಂಡಿರುವ, ಹತ್ತುಸಾವಿರ ಸೂರ್ಯರಿಗೆ ಸಮಾನವಾದ ಕಾಂತಿಯುಳ್ಳ, ದ್ವಿಭುಜನಾದ ಶ್ರೀರಘುನಾಥನ ಎಡಭಾಗದಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಸಕಲಾಭರಣಗಳಿಂದ ಅಲಂಕೃತಳಾದ, ಕೆಂಪು ನೈದಿಲೆಯನ್ನು ಕೈಯಲ್ಲಿ ಹಿಡಿದು ಕುಳಿತಿರುವ ಸೀತಾಮಾತೆಯನ್ನು ತನ್ನ ಎಡ ತೋಳಿನಿಂದ ಅಪ್ಪಿಕೊಂಡು ಕುಳಿತಿರುವ ಅತಿಶಯ ಕಾಂತಿ ಸಂಪನ್ನನಾದ ಶ್ರೀರಾಮನನ್ನು ಉಮಾಸಹಿತ ಶಂಕರನು ಕಂಡು ಭಕ್ತಿ ಭಾವದಿಂದ ಕೂಡಿ ಸಮಸ್ತ ದೇವಗಣಗಳಿಂದೊಡಗೂಡಿ ಸ್ತೋತ್ರ ಮಾಡಲಾರಂಭಿಸಿದರು. ॥45-50॥
(ಶ್ಲೋಕ-51)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ನಮೋಽಸ್ತು ರಾಮಾಯ ಸಶಕ್ತಿಕಾಯ
ನೀಲೋತ್ಪಲಶ್ಯಾಮಲಕೋಮಲಾಯ ।
ಕಿರೀಟಹಾರಾಂಗದಭೂಷಣಾಯ
ಸಿಂಹಾಸನಸ್ಥಾಯ ಮಹಾಪ್ರಭಾಯ ॥
ಅನುವಾದ
ಶ್ರೀಮಹಾದೇವನಿಂತೆಂದನು — ನೀಲ ಕಮಲದಂತೆ ಸುಕೋಮಲ ಶ್ಯಾಮಲ ವರ್ಣನೂ, ಕಿರೀಟ, ಹಾರ, ಭುಜ ಕೀರ್ತಿಗಳಿಂದ ಅಲಂಕೃತನೂ ಆದ, ತನ್ನ ಶಕ್ತಿ (ಸೀತೆ)ಯ ಸಹಿತ ಸಿಂಹಾಸನದಲ್ಲಿ ವಿರಾಜಮಾನನಾದ ಮಹಾತೇಜಸ್ವೀ ಶ್ರೀರಾಮಚಂದ್ರನಿಗೆ ನಮಸ್ಕಾರವು. ॥51॥
(ಶ್ಲೋಕ-52)
ಮೂಲಮ್
ತ್ವಮಾದಿಮಧ್ಯಾಂತವಿಹೀನ ಏಕಃ
ಸೃಜಸ್ಯವಸ್ಯತ್ಸಿ ಚ ಲೋಕಜಾತಮ್ ।
ಸ್ವಮಾಯಯಾ ತೇನ ನ ಲಿಪ್ಯಸೇ ತ್ವಂ
ಯತ್ಸ್ವೇ ಸುಖೇಜಸ್ರರತೋನವದ್ಯಃ ॥
ಅನುವಾದ
ಹೇ ರಾಮಚಂದ್ರಾ! ನೀನು ಆದಿಮಧ್ಯಾಂತರಹಿತನೂ, ಅದ್ವಿತೀಯನೂ ಆಗಿರುವೆ. ತನ್ನ ಮಾಯೆಯಿಂದಲೇ ಎಲ್ಲ ಲೋಕಗಳನ್ನು ಸೃಷ್ಟಿಸಿ, ಪಾಲಿಸುತ್ತಾ ಸಂಹಾರ ಮಾಡುತ್ತಿರುವೆ. ಆದರೂ ನೀನು ಆ ಕಾರ್ಯಗಳಲ್ಲಿ ಅಂಟಿಕೊಂಡಿರುವುದಿಲ್ಲ; ಏಕೆಂದರೆ ನೀನು ಯಾವಾಗಲೂ ಸ್ವಸುಖರೂಪದಲ್ಲಿ ನಿರತನೂ, ದೋಷ ರಹಿತನೂ ಆಗಿರುವೆ. ॥52॥
(ಶ್ಲೋಕ-53)
ಮೂಲಮ್
ಲೀಲಾಂ ವಿಧತ್ಸೇ ಗುಣಸಂವೃತಸ್ತ್ವಂ
ಪ್ರಪನ್ನಭಕ್ತಾನುವಿಧಾನಹೇತೋಃ ।
ನಾನಾವತಾರೈಃ ಸುರಮಾನುಷಾದ್ಯೈಃ
ಪ್ರತೀಯಸೇ ಜ್ಞಾನಿಭಿರೇವ ನಿತ್ಯಮ್ ॥
ಅನುವಾದ
ತನ್ನ ಮಾಯೆಯ ಗುಣಗಳಿಂದ ಕೂಡಿದವನಾಗಿ ತನ್ನ ಶರಣಾಗತ ಭಕ್ತರಿಗೆ ಮಾರ್ಗ ತೋರಿಸಲಿಕ್ಕಾಗಿ ದೇವ, ಮನುಷ್ಯಾದಿ ರೂಪವಾದ ನಾನಾವತಾರಗಳಿಂದ ಲೀಲೆಯನ್ನು ಕೈಗೊಂಡಿರುವೆಯಲ್ಲ! ಆಗ ಜ್ಞಾನಿಗಳಿಗೆ ಮಾತ್ರ ನೀನು ಕಂಡು ಬರುತ್ತೀಯೆ. ॥53॥
(ಶ್ಲೋಕ-54)
ಮೂಲಮ್
ಸ್ವಾಂಶೇನ ಲೋಕಂ ಸಕಲಂ ವಿಧಾಯ ತಂ
ಬಿಭರ್ಷಿ ಚ ತ್ವಂ ತದಧಃ ಣೀಶ್ವರಃ ।
ಉಪರ್ಯಥೋ ಭಾನ್ವನಿಲೋಡುಪೌಷ-
ಪ್ರವರ್ಷರೂಪೋಽವಸಿ ನೈಕಧಾ ಜಗತ್ ॥
ಅನುವಾದ
ನೀನು ನಿನ್ನ ಅಂಶದಿಂದ ಎಲ್ಲ ಲೋಕಗಳನ್ನು ಉಂಟುಮಾಡಿ ಅವುಗಳನ್ನು ಆದಿಶೇಷನಾಗಿ ಕೆಳಗಿನಿಂದ ಧರಿಸಿರುವೆ. ಮೇಲಿನಿಂದ ಸೂರ್ಯ, ವಾಯು, ಚಂದ್ರ, ಔಷಧಿ ಮತ್ತು ಮಳೆಯಾಗಿಯೂ ನಾನಾರೀತಿಯಿಂದ ಕಾಪಾಡುತ್ತಿರುವೆ. ॥54॥
(ಶ್ಲೋಕ-55)
ಮೂಲಮ್
ತ್ವಮಿಹ ದೇಹಭೃತಾಂ ಶಿಖಿರೂಪಃ
ಪಚಸಿ ಭುಕ್ತಮಶೇಷಮಜಸ್ರಮ್ ।
ಪವನಪಂಚಕರೂಪಸಹಾಯೋ
ಜಗದಖಂಡಮನೇನ ಬಿಭರ್ಷಿ ॥
ಅನುವಾದ
ನೀನೇ ಜಠರಾಗ್ನಿಯಾಗಿ (ಪ್ರಾಣ-ಅಪಾನಾದಿ) ಐದು ಪ್ರಾಣಗಳ ಸಹಾಯದಿಂದ ಪ್ರಾಣಿಗಳು ತಿಂದಿರುವ ಅನ್ನವನ್ನು ಜೀರ್ಣಗೊಳಿಸಿ ಅದರ ಮೂಲಕ ಯಾವಾಗಲೂ ಅಖಂಡ ಜಗತ್ತನ್ನು ಪಾಲಿಸುತ್ತಿ ರುವೆ. ॥55॥
(ಶ್ಲೋಕ-56)
ಮೂಲಮ್
ಚಂದ್ರಸೂರ್ಯಶಿಖಿಮಧ್ಯಗತಂ ಯತ್
ತೇಜ ಈಶ ಚಿದಶೇಷತನೂನಾಮ್ ।
ಪ್ರಾಭವತ್ತನುಭೃತಾಮಿವ ಧೈರ್ಯಂ
ಶೌರ್ಯಮಾಯುರಖಿಲಂ ತವ ಸತ್ತ್ವಮ್ ॥
ಅನುವಾದ
ಹೇ ಒಡೆಯಾ! ಸೂರ್ಯ, ಚಂದ್ರ, ಅಗ್ನಿ ಇವುಗಳಲ್ಲಿರುವ ತೇಜವೂ, ಎಲ್ಲ ಪ್ರಾಣಿಗಳಲ್ಲಿ ಕಂಡು ಬರುವ ಚೇತನಾಂಶವೂ, ದೇಹಧಾರಿಗಳಲ್ಲಿ ಕಂಡು ಬರುವ ಧೈರ್ಯ, ಶೌರ್ಯ, ಆಯುಸ್ಸು ಇದೆಲ್ಲವೂ ನಿನ್ನ ಸತ್ತೆಯೇ ಆಗಿದೆ. ॥56॥
(ಶ್ಲೋಕ-57)
ಮೂಲಮ್
ತ್ವಂ ವಿರಿಂಚಿಶಿವವಿಷ್ಣುವಿಭೇದಾತ್
ಕಾಲಕರ್ಮಶಶಿಸೂರ್ಯವಿಭಾಗಾತ್ ।
ವಾದಿನಾಂ ಪೃಥಗಿವೇಶ ವಿಭಾಸಿ
ಬ್ರಹ್ಮ ನಿಶ್ಚಿತಮನನ್ಯದಿಹೈಕಮ್ ॥
ಅನುವಾದ
ಹೇ ರಾಮಾ! ಬ್ರಹ್ಮ, ವಿಷ್ಣು ಮಹೇಶ್ವರ ಎಂಬೀ ರೀತಿಯಿಂದಲೂ; ಕಾಲ, ಕರ್ಮ, ಚಂದ್ರ, ಸೂರ್ಯ ಎಂಬ ವಿಭಾಗಗಳಿಂದವಾದ ಮಾಡುವವರಿಗೆ ನೀನು ಬೇರೆ - ಬೇರೆಯಾಗಿರುವವನಂತೆ ಕಂಡುಬರುವೆ. ಆದರೆ ನಿಶ್ಚಯ ವಾಗಿಯೂ ಬೇರೊಂದು ಇಲ್ಲದ ಅದ್ವಿತೀಯ ಬ್ರಹ್ಮವೊಂದೇ ನೀನಾಗಿರುವೆ. ॥57॥
(ಶ್ಲೋಕ-58)
ಮೂಲಮ್
ಮತ್ಸ್ಯಾದಿರೂಪೇಣ ಯಥಾ ತ್ವಮೇಕಃ
ಶ್ರುತೌ ಪುರಾಣೇಷು ಚ ಲೋಕಸಿದ್ಧಃ ।
ತಥೈವ ಸರ್ವಂ ಸದಸದ್ವಿಭಾಗ-
ಸ್ತ್ವಮೇವ ನಾನ್ಯದ್ಭವತೋ ವಿಭಾತಿ ॥
ಅನುವಾದ
ಮತ್ಸ್ಯವೇ ಮುಂತಾದ ರೂಪಗಳಿಂದ ಹೇಗೆ ನೀನೊಬ್ಬನೇ ಶ್ರುತಿ ಪುರಾಣಗಳಲ್ಲಿ ಪ್ರಸಿದ್ಧನಾಗಿರುವೆಯೋ ಹಾಗೆಯೇ ಪ್ರಪಂಚದಲ್ಲಿ ಏನೆಲ್ಲ ಸತ್-ಅಸತ್-ರೂಪವಿಭಾಗವಿದೆಯೋ ಅದೆಲ್ಲವೂ ನೀನೇ ಆಗಿರುವೆ. ನಿನ್ನಿಂದ ಭಿನ್ನವಾದುದು ಯಾವುದೂ ಇಲ್ಲವೇ ಇಲ್ಲ. ॥58॥
(ಶ್ಲೋಕ-59)
ಮೂಲಮ್
ಯದ್ಯತ್ಸಮುತ್ಪನ್ನಮನಂತಸೃಷ್ಟಾ-
ವುತ್ಪತ್ಸ್ಯತೇ ಯಚ್ಚ ಭವಚ್ಚ ಯಚ್ಚ ।
ನ ದೃಶ್ಯತೇ ಸ್ಥಾವರಜಂಗಮಾದೌ
ತ್ವಯಾ ವಿನಾತಃ ಪರತಃ ಪರಸ್ತ್ವಮ್ ॥
ಅನುವಾದ
ಈ ಅನಂತವಾದ ಸೃಷ್ಟಿಯಲ್ಲಿ ಏನೇನು ಹುಟ್ಟಿರುವುದೋ, ಏನೇನು ಹುಟ್ಟಲಿರುವುದೋ ಮತ್ತು ಈಗ ಏನೇನು, ಇದ್ದುಕೊಂಡಿದೆಯೋ ಈ ಸ್ಥಾವರ-ಜಂಗಮ ಪ್ರಪಂಚದಲ್ಲಿ ನಿನ್ನನ್ನು ಬಿಟ್ಟು ಏನೂ ಕಂಡುಬರುವುದೇ ಇಲ್ಲ. ಆದ್ದರಿಂದ ಹೆಚ್ಚಿನದೆಲ್ಲಕ್ಕಿಂತಲೂ ಹೆಚ್ಚಿನವನು ನೀನೇ ಆಗಿರುವೆ. ಅರ್ಥಾತ್ ಬ್ರಹ್ಮಾದಿಗಳಿಂದಲೂ ಹೆಚ್ಚಿನವನಾಗಿರುವೆ. ॥59॥
(ಶ್ಲೋಕ-60)
ಮೂಲಮ್
ತತ್ತ್ವಂ ನ ಜಾನಂತಿ ಪರಾತ್ಮನಸ್ತೇ
ಜನಾಃ ಸಮಸ್ತಾಸ್ತವ ಮಾಯಯಾತಃ ।
ತ್ವದ್ಭಕ್ತಸೇವಾಮಲಮಾನಸಾನಾಂ
ವಿಭಾತಿ ತತ್ತ್ವಂ ಪರಮೇಕಮೈಶಮ್ ॥
ಅನುವಾದ
ಹೇ ರಾಮಾ! ನಿನ್ನ ಮಾಯೆಯಿಂದ ಮೋಹಿತರಾದ ಎಲ್ಲ ಜನರೂ ಪರಮಾತ್ಮನಾದ ನಿನ್ನ ಸ್ವರೂಪವನ್ನು ಅರಿಯಲಾರರು. ಆದರೆ ನಿನ್ನ ಭಕ್ತರ ಸೇವೆಯಿಂದ ಪರಿಶುದ್ಧವಾದ ಅಂತಃಕರಣವುಳ್ಳವರಿಗೆ ಪರಮವೂ, ಅದ್ವಿತೀಯವೂ, ಸ್ವತಂತ್ರವೂ ಆದ ತತ್ತ್ವವು ಗೋಚರವಾಗುವುದು. ॥60॥
(ಶ್ಲೋಕ-61)
ಮೂಲಮ್
ಬ್ರಹ್ಮಾದಯಸ್ತೇ ನ ವಿದುಃ ಸ್ವರೂಪಂ
ಚಿದಾತ್ಮತತ್ತ್ವಂ ಬಹಿರರ್ಥಭಾವಾಃ ।
ತತೋ ಬುಧಸ್ತ್ವಾಮಿದಮೇವ ರೂಪಂ
ಭಕ್ತ್ಯಾ ಭಜನ್ಮುಕ್ತಿಮುಪೈತ್ಯದುಃಖಃ ॥
ಅನುವಾದ
ಬಾಹ್ಯವಾದ ವಸ್ತುಗಳಲ್ಲಿ ಮನಸ್ಸುಳ್ಳ ಬ್ರಹ್ಮಾದಿದೇವತೆಗಳೂ ಕೂಡ ನಿನ್ನ ಚಿದಾತ್ಮ ತತ್ತ್ವ ಸ್ವರೂಪವನ್ನರಿಯರು. ಆದ್ದರಿಂದ ಜಾಣರಾದವರು ಈ ನಿನ್ನ ರೂಪವನ್ನೇ ಭಕ್ತಿಯಿಂದ ಭಜಿಸುತ್ತಾ, ಎಲ್ಲ ದುಃಖಗಳನ್ನು ಕಳೆದುಕೊಂಡು ಮುಕ್ತಿಯನ್ನು ಹೊಂದುವರು. ॥61॥
(ಶ್ಲೋಕ-62)
ಮೂಲಮ್
ಅಹಂ ಭವನ್ನಾಮ ಗೃಣನ್ಕೃತಾರ್ಥೋ
ವಸಾಮಿ ಕಾಶ್ಯಾಮನಿಶಂ ಭವಾನ್ಯಾ ।
ಮುಮೂರ್ಷಮಾಣಸ್ಯ ವಿಮುಕ್ತಯೇಹಂ
ದಿಶಾಮಿ ಮಂತ್ರಂ ತವ ರಾಮ ನಾಮ ॥
ಅನುವಾದ
ಹೇ ರಘುನಾಥಾ! ನಾನಾದರೋ ನಿನ್ನ ನಾಮವನ್ನು ಸದಾಕಾಲ ಉಚ್ಚರಿಸುತ್ತಾ ಪಾರ್ವತಿದೇವಿಯೊಡನೆ ಕಾಶಿಯಲ್ಲಿ ವಾಸ ಮಾಡಿಕೊಂಡು ಕೃತಾರ್ಥನಾಗಿರುವೆನು. ಅಲ್ಲಿ ಮರಣಾಸನ್ನ ಜನರಿಗೆ ಅವರ ಮೋಕ್ಷಕ್ಕಾಗಿ ನಿನ್ನ ‘ರಾಮ’ ಎಂಬ ತಾರಕ ಮಂತ್ರವನ್ನು ಉಪದೇಶಿಸುತ್ತೇನೆ. ॥62॥
(ಶ್ಲೋಕ-63)
ಮೂಲಮ್
ಇಮಂ ಸ್ತವಂ ನಿತ್ಯಮನನ್ಯಭಕ್ತ್ಯಾ
ಶೃಣ್ವಂತಿ ಗಾಯಂತಿ ಲಿಖಂತಿ ಯೇ ವೈ ।
ತೇ ಸರ್ವಸೌಖ್ಯಂ ಪರಮಂ ಚ ಲಬ್ಧ್ವಾ
ಭವತ್ಪದಂ ಯಾಂತು ಭವತ್ಪ್ರಸಾದಾತ್ ॥
ಅನುವಾದ
ಈ ಸ್ತೋತ್ರವನ್ನು ಪ್ರತಿದಿನವೂ ಅನನ್ಯಭಕ್ತಿಯಿಂದ ಯಾರು ಕೇಳುವರೋ, ಗಾನಮಾಡುವರೋ, ಬರೆಯುವರೋ ಅಂತಹವರು ನಿನ್ನ ಅನುಗ್ರಹದಿಂದ ಸಕಲವಿಧವಾದ ಹೆಚ್ಚಿನ ಸುಖವನ್ನು ಹೊಂದಿ, ನಿನ್ನ ಪದವಿಯನ್ನು ಸೇರುವಂತಾಗಲಿ. ಇದೇ ನಿನ್ನಲ್ಲಿ ನನ್ನ ಪ್ರಾರ್ಥನೆಯಾಗಿದೆ. ॥63॥
(ಶ್ಲೋಕ-64)
ಮೂಲಮ್ (ವಾಚನಮ್)
ಇಂದ್ರ ಉವಾಚ
ಮೂಲಮ್
ರಕ್ಷೋಽಧಿಪೇನಾಖಿಲದೇವ ಸೌಖ್ಯಂ
ಹೃತಂ ಚ ಮೇ ಬ್ರಹ್ಮವರೇಣ ದೇವ ।
ಪುನಶ್ಚ ಸರ್ವಂ ಭವತಃ ಪ್ರಸಾದಾತ್
ಪ್ರಾಪ್ತಂ ಹತೋ ರಾಕ್ಷಸದುಷ್ಟಶತ್ರುಃ ॥
ಅನುವಾದ
ಇಂದ್ರನಿಂತೆಂದನು ದೇವದೇವಾ! ಬ್ರಹ್ಮನ ವರಬಲವುಳ್ಳ ರಾಕ್ಷಸಾಧಿಪನಾದ ರಾವಣನು ಸಮಸ್ತದೇವತೆಗಳ ಹಾಗೂ ನನ್ನ ಎಲ್ಲ ಸುಖವನ್ನು ಅಪಹರಿಸಿದ್ದನು. ಈಗ ಆ ದುಷ್ಟ ಶತ್ರು ರಾಕ್ಷಸರಾಜನು ಹತನಾಗಿ ನಿನ್ನ ಅನುಗ್ರಹದಿಂದ ಅದೆಲ್ಲವೂ ನನಗೆ ದೊರಕಿದೆ. ॥64॥
(ಶ್ಲೋಕ-65)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ಹೃತಾ ಯಜ್ಞಭಾಗಾ ಧರಾದೇವದತ್ತಾ
ಮುರಾರೇ ಖಲೇನಾದಿದೈತ್ಯೇನ ವಿಷ್ಣೋ ।
ಹತೋಽದ್ಯ ತ್ವಯಾ ನೋ ವಿತಾನೇಷು ಭಾಗಾಃ
ಪುರಾವದ್ಭವಿಷ್ಯಂತಿ ಯುಷ್ಮತ್ಪ್ರಸಾದಾತ್ ॥
ಅನುವಾದ
ದೇವತೆಗಳಿಂತೆಂದರು ಹೇ ವಿಷ್ಣುವೆ! ಹೇ ಮುರಾರೆ! ಭೂ ದೇವತೆಗಳೆನಿಸಿದ ಬ್ರಾಹ್ಮಣರು ಅರ್ಪಿಸಿದ ಯಜ್ಞಭಾಗಗಳೆಲ್ಲವೂ ದುಷ್ಟನಾದ ಆ ಹಿರಿಯ ದೈತ್ಯನು ಅಪಹರಿಸಿದ್ದನು. ಈಗ ನೀನು ಅವನನ್ನು ಸಂಹರಿಸಿಬಿಟ್ಟಿರುವೆ. ನಿನ್ನ ಪ್ರಸಾದದಿಂದ ಇನ್ನು ಮುಂದೆ ಮೊದಲಿನಂತೆ ಯಜ್ಞಭಾಗಗಳು ದೊರಕಲಿರುವವು. ॥65॥
(ಶ್ಲೋಕ-66)
ಮೂಲಮ್ (ವಾಚನಮ್)
ಪಿತರ ಊಚುಃ
ಮೂಲಮ್
ಹತೋಽದ್ಯ ತ್ವಯಾ ದುಷ್ಟದೈತ್ಯೋ ಮಹಾತ್ಮನ್
ಗಯಾದೌ ನರೈರ್ದತ್ತಪಿಂಡಾದಿಕಾನ್ನಃ ।
ಬಲಾದತ್ತಿ ಹತ್ವಾ ಗೃಹೀತ್ವಾ ಸಮಸ್ತಾ -
ನಿದಾನೀಂ ಪುನರ್ಲಬ್ಧಸತ್ತ್ವಾ ಭವಾಮಃ ॥
ಅನುವಾದ
ಪಿತೃಗಳಿಂತೆಂದರು ಎಲೈ ಮಹಾತ್ಮನೆ! ದುಷ್ಟ ರಾಕ್ಷಸನಾದ ರಾವಣನು ಗಯೆ ಮುಂತಾದ ಕ್ಷೇತ್ರಗಳಲ್ಲಿ ಮನುಷ್ಯರು ನಮಗೆ ಕೊಡುತ್ತಿದ್ದ ಪಿಂಡಾದಿಗಳೆಲ್ಲವನ್ನು ಬಲಾತ್ಕಾರದಿಂದ ಕಸಿದುಕೊಂಡು ತಿಂದುಬಿಡುತ್ತಿದ್ದನು. ಈಗ ಅವನು ನಾಶವಾದ್ದರಿಂದ, ನಮ್ಮ ಭಾಗವನ್ನು ಪಡೆದು ಮತ್ತೆ ಶಕ್ತಿಶಾಲಿಗಳಾಗುವೆವು. ॥66॥
(ಶ್ಲೋಕ-67)
ಮೂಲಮ್ (ವಾಚನಮ್)
ಯಕ್ಷಾ ಊಚುಃ
ಮೂಲಮ್
ಸದಾ ವಿಷ್ಟಿಕರ್ಮಣ್ಯನೇನಾಭಿಯುಕ್ತಾ
ವಹಾಮೋ ದಶಾಸ್ಯಂ ಬಲಾದ್ದುಃಖಯುಕ್ತಾಃ ।
ದುರಾತ್ಮಾ ಹತೋ ರಾವಣೋ ರಾಘವೇಶ
ತ್ವಯಾ ತೇ ವಯಂ ದುಃಖಜಾತಾದ್ವಿಮುಕ್ತಾಃ ॥
ಅನುವಾದ
ಯಕ್ಷರಿಂತೆಂದರು ಎಲೈ ರಾಘವೇಶನೆ! ನಮ್ಮನ್ನು ಯಾವಾಗಲೂ ಈ ರಾವಣನು ಪಲ್ಲಕ್ಕಿಯನ್ನು ಹೊರುವ ಕೆಲಸದಲ್ಲಿ ನೇಮಿಸಿ ಬಲವಂತವಾಗಿ ದುಃಖದಿಂದ ಸೇವೆ ಮಾಡಿಸುತ್ತಿದ್ದನು. ಈಗ ದುರಾತ್ಮನಾದ ರಾವಣನು ನಿನ್ನಿಂದ ಹತನಾದನು. ಅದರಿಂದ ನಾವು ನಿನ್ನಿಂದಾಗಿ ಅನೇಕ ದುಃಖಗಳಿಂದ ಪಾರಾದೆವು. ॥67॥
(ಶ್ಲೋಕ-68)
ಮೂಲಮ್ (ವಾಚನಮ್)
ಗಂಧರ್ವಾ ಊಚುಃ
ಮೂಲಮ್
ವಯಂ ಸಂಗೀತನಿಪುಣಾ ಗಾಯಂತಸ್ತೇ ಕಥಾಮೃತಮ್ ।
ಆನಂದಾಮೃತಸಂದೋಹಯುಕ್ತಾಃ ಪೂರ್ಣಾಃ ಸ್ಥಿತಾಃ ಪುರಾ ॥
ಅನುವಾದ
ಗಂಧರ್ವರಿಂತೆಂದರು ಸಂಗೀತ ನಿಪುಣರಾದ ನಾವು ಹಿಂದೆ ನಿನ್ನ ಕಥಾಮೃತವನ್ನು ಗಾನಮಾಡುತ್ತಾ ಆನಂದಾಮೃತ ಸಾಗರದಲ್ಲಿ ಮುಳುಗಿ ಪೂರ್ಣರಾಗಿದ್ದೆವು. ॥68॥
(ಶ್ಲೋಕ-69)
ಮೂಲಮ್
ಪಶ್ಚಾದ್ದುರಾತ್ಮನಾ ರಾಮ ರಾವಣೇನಾಭಿವಿದ್ರುತಾಃ ।
ತಮೇವ ಗಾಯಮಾನಾಶ್ಚ ತದಾರಾಧನತತ್ಪರಾಃ ॥
(ಶ್ಲೋಕ-70)
ಮೂಲಮ್
ಸ್ಥಿತಾಸ್ತ್ವಯಾ ಪರಿತ್ರಾತಾ ಹತೋಽಯಂ ದುಷ್ಟರಾಕ್ಷಸಃ ।
ಏವಂ ಮಹೋರಗಾಃ ಸಿದ್ಧಾಃ ಕಿನ್ನರಾ ಮರುತಸ್ತಥಾ ॥
(ಶ್ಲೋಕ-71)
ಮೂಲಮ್
ವಸವೋ ಮುನಯೋ ಗಾವೋ ಗುಹ್ಯಕಾಶ್ಚ ಪತತ್ತ್ರಿಣಃ ।
ಸಪ್ರಜಾಪತಯಶ್ಚೈತೇ ತಥಾ ಚಾಪ್ಸರಸಾಂ ಗಣಾಃ ॥
(ಶ್ಲೋಕ-72)
ಮೂಲಮ್
ಸರ್ವೇ ರಾಮಂ ಸಮಾಸಾದ್ಯ ದೃಷ್ಟ್ವಾ ನೇತ್ರಮಹೋತ್ಸವಮ್ ।
ಸ್ತುತ್ವಾ ಪೃಥಕ್ ಪೃಥಕ್ ಸರ್ವೇ ರಾಘವೇಣಾಭಿವಂದಿತಾಃ ॥
(ಶ್ಲೋಕ-73)
ಮೂಲಮ್
ಯಯುಃ ಸ್ವಂ ಸ್ವಂ ಪದಂ ಸರ್ವೇ ಬ್ರಹ್ಮರುದ್ರಾದಯಸ್ತಥಾ ।
ಪ್ರಶಂಸಂತೋ ಮುದಾ ರಾಮಂ ಗಾಯಂತಸ್ತಸ್ಯ ಚೇಷ್ಟಿತಮ್ ॥
(ಶ್ಲೋಕ-74)
ಮೂಲಮ್
ಧ್ಯಾಯಂತಸ್ತ್ವಭಿಷೇಕಾರ್ದ್ರಂ ಸೀತಾಲಕ್ಷ್ಮಣ ಸಂಯುತಮ್ ।
ಸಿಂಹಾಸನಸ್ಥಂ ರಾಜೇಂದ್ರಂ ಯಯುಃ ಸರ್ವೇ ಹೃದಿ ಸ್ಥಿತಮ್ ॥
(ಶ್ಲೋಕ-75)
ಮೂಲಮ್
ಖೇ ವಾದ್ಯೇಷು ಧ್ವನತ್ಸು ಪ್ರಮುದಿತಹೃದಯೈ-
ರ್ದೇವವೃಂದೈಃ ಸ್ತುವದ್ಭಿಃ
ವರ್ಷದ್ಭಿಃ ಪುಷ್ಪವೃಷ್ಟಿಂ ದಿವಿ ಮುನಿನಿಕರೈ-
ರೀಡ್ಯಮಾನಃ ಸಮಂತಾತ್ ।
ರಾಮಃ ಶ್ಯಾಮಃ ಪ್ರಸನ್ನಸ್ಮಿತರುಚಿರಮುಖಃ
ಸೂರ್ಯಕೋಟಿಪ್ರಕಾಶಃ
ಸೀತಾಸೌಮಿತ್ರಿವಾತಾತ್ಮಜಮುನಿಹರಿಭಿಃ
ಸೇವ್ಯಮಾನೋ ವಿಭಾತಿ ॥
ಅನುವಾದ
ಹೇ ರಾಮಚಂದ್ರಾ! ಅನಂತರ ದುರಾತ್ಮನಾದ ರಾವಣನು ಪೀಡಿಸಿದಾಗ ಅವನನ್ನೇ ಹೊಗಳುತ್ತಾ, ಅವನ ಸೇವೆಯಲ್ಲಿ ತತ್ಪರರಾಗಿ ಬಿಟ್ಟೆವು. ಆ ದುಷ್ಟರಾಕ್ಷಸನನ್ನು ನೀನು ಕೊಂದು ನಮ್ಮನ್ನು ಕಾಪಾಡಿರುವೆ. ಇದೇ ಪ್ರಕಾರ ಮಹಾನಾಗಗಳು, ಸಿದ್ಧರು, ಕಿನ್ನರರು, ಮರುದ್ದೇವತೆಗಳು, ವಸುಗಳು, ಮುನಿಗಳು, ಸುರಭಿ ಮುಂತಾದ ಗೋವುಗಳು, ಗುಹ್ಯಕರು, ಪಕ್ಷಿಶ್ರೇಷ್ಠರು, ಪ್ರಜಾಪತಿಗಳು, ಅಪ್ಸರಸ್ತ್ರೀಯರ ಗುಂಪುಗಳು ಮೊದಲಾದವ ರೆಲ್ಲರೂ ಭಗವಾನ್ ಶ್ರೀರಾಮನ ಬಳಿಗೆ ಬಂದು, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಶ್ರೀರಾಮನ ದರ್ಶನವನ್ನು ಪಡೆದು, ಎಲ್ಲರೂ ಬೇರೆ-ಬೇರೆಯಾಗಿ ಸ್ತುತಿಸಿ ರಾಮನಿಂದ ಗೌರವ ಪಡೆದು ತಮ್ಮ-ತಮ್ಮ ಲೋಕಗಳಿಗೆ ಹೊರಟು ಹೋದರು. ಬ್ರಹ್ಮ ರುದ್ರರೇ ಮೊದಲಾದವರೂ ಕೂಡ ರಾಮನನ್ನು ಧ್ಯಾನಿಸುತ್ತಾ ತಮ್ಮ ಲೋಕಗಳಿಗೆ ತೆರಳಿದರು. ಜನರೆಲ್ಲರೂ ಸಂತೋಷ ಭರಿತರಾಗಿ ತಮ್ಮ ಹೃದಯದಲ್ಲಿಯೇ ಇರುವ ಶ್ರೀರಾಮನನ್ನು ಹೊಗಳುತ್ತಾ, ಅವನ ಲೀಲೆಗಳನ್ನು ಹಾಡುತ್ತಾ, ಪಟ್ಟಾಭಿಷಿಕ್ತನಾಗಿ ಶಾಂತನಾದ, ರಾಜಶ್ರೇಷ್ಠನಾದ ಹಾಗೂ ಸಿಂಹಾಸನದಲ್ಲಿ ಸೀತಾಸಹಿತನಾಗಿ ಕುಳಿತಿರುವ, ಲಕ್ಷ್ಮಣನೊಡಗೂಡಿದ ಶ್ರೀರಾಮಚಂದ್ರನನ್ನು ಧ್ಯಾನ ಮಾಡುತ್ತಾ ತಮ್ಮ-ತಮ್ಮ ಲೋಕಗಳಿಗೆ ಮರಳಿದರು. ಆಕಾಶದಲ್ಲಿ ವಾದ್ಯಗಳು ಮೊಳಗುತ್ತಿದ್ದವು. ದೇವತೆಗಳ ಗುಂಪುಗಳು ಸ್ತೋತ್ರಮಾಡುತ್ತಾ ಹೂಮಳೆಗರೆಯುತ್ತಿದ್ದರು. ಮಹರ್ಷಿಗಳ ಸಮೂಹಗಳು ಸುತ್ತಲೂ ನೆರೆದು ಸ್ತುತಿ ಮಾಡುತ್ತಿದ್ದರು. ಇವರ ಮಧ್ಯದಲ್ಲಿ ಕೋಟಿಸೂರ್ಯ ಪ್ರಕಾಶನೂ, ಪ್ರಸನ್ನವಾದ ಮುಗುಳುನಗೆಯ ಸುಂದರ ಮುಖವುಳ್ಳವನೂ, ಶ್ಯಾಮಲವರ್ಣನೂ ಆದ ಭಗವಾನ್ ಶ್ರೀರಾಮನು ಸೀತಾದೇವಿ, ಲಕ್ಷ್ಮಣ, ಆಂಜನೇಯ, ಮುನಿಗಳು, ವಾನರಗಡಣ ಇವರಿಂದ ಸೇವಿತನಾಗಿ ಅತ್ಯಂತ ಶೋಭಿತನಾದನು. ॥69-75॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಪಂಚದಶಃ ಸರ್ಗಃ ॥15॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹದಿನೈದನೆಯ ಸರ್ಗವು ಮುಗಿಯಿತು.