೧೪

[ಹದಿನಾಲ್ಕನೆಯ ಸರ್ಗ]

ಭಾಗಸೂಚನಾ

ಅಯೋಧ್ಯಾಯಾತ್ರೆ, ಭರದ್ವಾಜ ಮುನಿಯ ಆತಿಥ್ಯ ಹಾಗೂ ಭರತ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಪಾತಯಿತ್ವಾ ತತಶ್ಚಕ್ಷುಃ ಸರ್ವತೋ ರಘುನಂದನಃ ।
ಅಬ್ರವೀನ್ಮೈಥಿಲೀಂ ಸೀತಾಂ ರಾಮಃ ಶಶಿನಿಭಾನನಾಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಪಾರ್ವತಿ! ರಘುಪುತ್ರನಾದ ಶ್ರೀರಾಮನು ಅನಂತರ ತನ್ನ ದೃಷ್ಟಿಯನ್ನು ಸುತ್ತಲೂ ಬೀರಿ, ಚಂದ್ರಸಮಾನವಾದ ಕಾಂತಿಯುಕ್ತ ಮುಖವುಳ್ಳ ಸೀತೆಯನ್ನು ಕುರಿತು ಹೀಗೆಂದನು — ॥1॥

(ಶ್ಲೋಕ-2)

ಮೂಲಮ್

ತ್ರಿಕೂಟಶಿಖರಾಗ್ರಸ್ಥಾಂ ಪಶ್ಯ ಲಂಕಾಂ ಮಹಾಪ್ರಭಾಮ್ ।
ಏತಾಂ ರಣಭುವಂ ಪಶ್ಯ ಮಾಂಸಕರ್ದಮಪಂಕಿಲಾಮ್ ॥

ಅನುವಾದ

‘‘ಪ್ರಿಯೆ! ಅದೋ ತ್ರಿಕೂಟ ಪರ್ವತದ ತುದಿಯಲ್ಲಿ ನೆಲೆಸಿರುವ ಪರಮಪ್ರಕಾಶಮಯ ಈ ಲಂಕೆಯನ್ನು ನೋಡು ಹಾಗೂ ಮಾಂಸ ರಕ್ತಗಳ ಕೆಸರಿನಿಂದ ತುಂಬಿದ ಈ ರಣಭೂಮಿಯನ್ನು ನೋಡು. ॥2॥

(ಶ್ಲೋಕ-3)

ಮೂಲಮ್

ಅಸುರಾಣಾಂ ಪ್ಲವಂಗಾನಾಮತ್ರ ವೈಶಸನಂ ಮಹತ್ ।
ಅತ್ರ ಮೇ ನಿಹತಃ ಶೇತೇ ರಾವಣೋ ರಾಕ್ಷಸೇಶ್ವರಃ ॥

(ಶ್ಲೋಕ-4)

ಮೂಲಮ್

ಕುಂಭಕರ್ಣೇಂದ್ರಜಿನ್ಮುಖ್ಯಾಃ ಸರ್ವೇ ಚಾತ್ರ ನಿಪಾತಿತಾಃ ।
ಏಷ ಸೇತುರ್ಮಯಾ ಬದ್ಧಃ ಸಾಗರೇ ಸಲಿಲಾಶಯೇ ॥

ಅನುವಾದ

ಇಲ್ಲಿ ರಾಕ್ಷಸರಿಗೂ ಕಪಿಗಳಿಗೂ ಭಾರೀ ಯುದ್ಧವಾಯಿತು. ಇಲ್ಲೇ ನನ್ನ ಕೈಯಿಂದ ಹತನಾದ ರಾಕ್ಷಸ ರಾಜ ರಾವಣನು ಬಿದ್ದಿದ್ದನು. ಕುಂಭಕರ್ಣ, ಇಂದ್ರಜಿತ್ತು ಮುಂತಾದ ರಾಕ್ಷಸರೆಲ್ಲರೂ ಇಲ್ಲಿಯೇ ಹತರಾದರು. ನೀರಿನ ನಿಧಿಯಾದ ಸಮುದ್ರದ ಮೇಲೆ ಕಟ್ಟಿದ ಸೇತುವೆಯು ಇದೆಯೆ. ॥3-4॥

(ಶ್ಲೋಕ-5)

ಮೂಲಮ್

ಏತಚ್ಚ ದೃಶ್ಯತೇ ತೀರ್ಥಂ ಸಾಗರಸ್ಯ ಮಹಾತ್ಮನಃ ।
ಸೇತುಬಂಧಮಿತಿ ಖ್ಯಾತಂ ತ್ರೈಲೋಕ್ಯೇನ ಚ ಪೂಜಿತಮ್ ॥

ಅನುವಾದ

ಅದೋ ನೋಡು, ಮಹಾತ್ಮನಾದ ಸಮುದ್ರರಾಜನ ಪವಿತ್ರತೀರ್ಥವು ಕಂಡುಬರುತ್ತಿದೆ. ಇದು ಸೇತುಬಂಧ ಹೆಸರಿನಿಂದ ಪ್ರಖ್ಯಾತವಾಗಿದ್ದು, ಮೂರು ಲೋಕಗಳಲ್ಲಿಯೂ ಪೂಜ್ಯವಾಗಿದೆ. ॥5॥

(ಶ್ಲೋಕ-6)

ಮೂಲಮ್

ಏತ್ಪವಿತ್ರಂ ಪರಮಂ ದರ್ಶನಾತ್ಪಾತಕಾಪಹಮ್ ।
ಅತ್ರ ರಾಮೇಶ್ವರೋ ದೇವೋ ಮಯಾ ಶಂಭುಃ ಪ್ರತಿಷ್ಠಿತಃ ॥

ಅನುವಾದ

ಇದು ಪರಮವೂ, ಪವಿತ್ರವೂ ಆಗಿದ್ದು ದರ್ಶನಮಾತ್ರದಿಂದಲೇ ಎಲ್ಲ ಪಾಪಗಳನ್ನು ಪರಿಹರಿಸ ತಕ್ಕದ್ದಾಗಿದೆ. ಇಲ್ಲಿ ರಾಮೇಶ್ವರವೆಂಬ ಹೆಸರಿನಿಂದ ಶಂಭುವನ್ನು ನಾನು ಪ್ರತಿಷ್ಠಾಪಿಸಿರುವೆನು. ॥6॥

(ಶ್ಲೋಕ-7)

ಮೂಲಮ್

ಅತ್ರ ಮಾಂ ಶರಣಂ ಪ್ರಾಪ್ತೋ ಮಂತ್ರಿಭಿಶ್ಚ ವಿಭೀಷಣಃ ।
ಏಷಾ ಸುಗ್ರೀವನಗರೀ ಕಿಷ್ಕಿಂಧಾ ಚಿತ್ರಕಾನನಾ ॥

ಅನುವಾದ

ಇಲ್ಲಿ ಮಂತ್ರಿಗಳೊಡನೆ ವಿಭೀಷಣನು ನನಗೆ ಶರಣು ಬಂದಿದ್ದನು. ಇದೋ ವಿಚಿತ್ರ ಉಪವನಗಳುಳ್ಳ ಸುಗ್ರೀವನ ರಾಜಧಾನಿ ಕಿಷ್ಕಿಂಧೆಯಾಗಿದೆ’’ ॥7॥

(ಶ್ಲೋಕ-8)

ಮೂಲಮ್

ತತ್ರ ರಾಮಾಜ್ಞಯಾ ತಾರಾಪ್ರಮುಖಾ ಹರಿಯೋಷಿತಃ ।
ಆನಯಾಮಾಸ ಸುಗ್ರೀವಃ ಸೀತಾಯಾಃ ಪ್ರಿಯಕಾಮ್ಯಯಾ ॥

ಅನುವಾದ

ಕಿಷ್ಕಿಂಧೆಗೆ ತಲುಪುತ್ತಲೇ ಭಗವಾನ್ ಶ್ರೀರಾಮನ ಅಪ್ಪಣೆಯಂತೆ ಸೀತಾದೇವಿಗೆ ಸಂತೋಷವನ್ನುಂಟು ಮಾಡುವ ಉದ್ದೇಶದಿಂದ ಸುಗ್ರೀವನು ತಾರೆಯೇ ಮುಂತಾದ ವಾನರ ಸ್ತ್ರೀಯರನ್ನು ಕರೆದುಕೊಂಡು ಬಂದನು. ॥8॥

(ಶ್ಲೋಕ-9)

ಮೂಲಮ್

ತಾಭಿಃ ಸಹೋತ್ಥಿತಂ ಶೀಘ್ರಂ ವಿಮಾನಂ ಪ್ರೇಕ್ಷ್ಯ ರಾಘವಃ ।
ಪ್ರಾಹ ಚಾದ್ರಿಮೃಷ್ಯಮೂಕಂ ಪಶ್ಯ ವಾಲ್ಯತ್ರ ಮೇ ಹತಃ ॥

ಅನುವಾದ

ಅನಂತರ ಶ್ರೀರಾಮನು ಅವರೆಲ್ಲರೊಡನೆ ವೇಗವಾಗಿ ಹೊರಟು ವಿಮಾನದಲ್ಲಿ ಕುಳಿತವನಾಗಿ, ಸೀತೆಯನ್ನು ಕುರಿತು ‘‘ಇದೋ ಋಷ್ಯಮೂಕ ಪರ್ವತವನ್ನು ನೋಡು. ಇಲ್ಲಿಯೇ ನಾನು ವಾಲಿಯನ್ನು ಕೊಂದಿದ್ದೆನು.’’ ॥9॥

(ಶ್ಲೋಕ-10)

ಮೂಲಮ್

ಏಷಾ ಪಂಚವಟೀ ನಾಮ ರಾಕ್ಷಸಾ ಯತ್ರ ಮೇ ಹತಾಃ ।
ಅಗಸ್ತ್ಯಸ್ಯ ಸುತೀಕ್ಷ್ಣ ಸ್ಯ ಪಶ್ಯಾಶ್ರಮಪದೇ ಶುಭೇ ॥

ಅನುವಾದ

ಖರ-ದೂಷಣಾದಿ ರಾಕ್ಷಸರೆಲ್ಲರನ್ನೂ ಸಂಹಾರ ಮಾಡಿದ ಈ ಪಂಚ ವಟಿಯನ್ನು ನೋಡು. ಎಲೈ ಶುಭಳೆ! ಇದು ಅಗಸ್ತ್ಯ ಮಹಾಮುನಿಗಳ ಮತ್ತು ಸುತೀಕ್ಷ್ಣರ ಪರಮ ಪವಿತ್ರ ಆಶ್ರಮಗಳನ್ನು ನೋಡು. ॥10॥

(ಶ್ಲೋಕ-11)

ಮೂಲಮ್

ಏತೇ ತೇ ತಾಪಸಾಃ ಸರ್ವೇ ದೃಶ್ಯಂತೇ ವರವರ್ಣಿನಿ ।
ಅಸೌ ಶೈಲವರೋ ದೇವಿ ಚಿತ್ರಕೂಟಃ ಪ್ರಕಾಶತೇ ॥

ಅನುವಾದ

ಉತ್ತಮವಾದ ಬಣ್ಣ ಉಳ್ಳವಳೆ! ಇದೋ ಈ ತಪಸ್ವಿಗಳೆಲ್ಲರೂ ಇಲ್ಲಿ ಕಾಣುತ್ತಿದ್ದಾರೆ. ದೇವಿ! ಇದೋ ಪರ್ವತಶ್ರೇಷ್ಠ ಚಿತ್ರಕೂಟವು ಕಂಡು ಬರುತ್ತಿದೆಯಲ್ಲ! ॥11॥

(ಶ್ಲೋಕ-12)

ಮೂಲಮ್

ಅತ್ರ ಮಾಂ ಕೈಕಯೀಪುತ್ರಃ ಪ್ರಸಾದಯಿತುಮಾಗತಃ ।
ಭರದ್ವಾಜಾಶ್ರಮಂ ಪಶ್ಯ ದೃಶ್ಯತೇ ಯಮುನಾತಟೇ ॥

ಅನುವಾದ

ಇಲ್ಲಿಯೇ ನನ್ನನ್ನು ಸಮಾಧಾನ ಪಡಿಸಲು ಕೈಕೇಯಿಯ ಮಗನಾದ ಭರತನು ಬಂದಿದ್ದನು. ಅದೋ ಯಮುನಾ ನದಿಯ ದಡದಲ್ಲಿರುವ ಭರದ್ವಾಜಾಶ್ರಮವನ್ನು ನೋಡು. ॥12॥

(ಶ್ಲೋಕ-13)

ಮೂಲಮ್

ಏಷಾ ಭಾಗೀರಥೀ ಗಂಗಾ ದೃಶ್ಯತೇ ಲೋಕಪಾವನೀ ।
ಏಷಾ ಸಾ ದೃಶ್ಯತೇ ಸೀತೇ ಸರಯೂರ್ಯೂಪಮಾಲಿನೀ ॥

ಅನುವಾದ

ಇದೇ ತ್ರಿಲೋಕಗಳನ್ನು ಪಾವನಗೊಳಿಸುವಂತಹ ಭಗೀರಥನ ಪುತ್ರಿಯಾದ ಗಂಗೆಯು ಕಂಡು ಬರುತ್ತಿರುವಳು. ಸೀತಾ! ಸೂರ್ಯವಂಶೀ ರಾಜರು ಮಾಡಿದ ಯಜ್ಞಗಳ ಯೂಪ(ಯಜ್ಞಸ್ತಂಭ)ಗಳ ಸಾಲುಗಳಿಂದ ಕೂಡಿದ ಈ ಸರಯೂ ನದಿಕಂಡು ಬರುತ್ತಿರುವಳಲ್ಲ! ॥13॥

(ಶ್ಲೋಕ-14)

ಮೂಲಮ್

ಏಷಾ ಸಾ ದೃಶ್ಯತೇಽಯೋಧ್ಯಾ ಪ್ರಣಾಮಂ ಕುರು ಭಾಮಿನಿ ।
ಏವಂ ಕ್ರಮೇಣ ಸಂಪ್ರಾಪ್ತೋ ಭರದ್ವಾಜಾಶ್ರಮಂ ಹರಿಃ ॥

ಅನುವಾದ

ಹೇ ಸುಂದರಿ! ನೋಡು ಅದೋ ಅಯೋಧ್ಯಾನಗರವು ಕಂಡು ಬರುತ್ತಿದೆ. ಅದಕ್ಕೆ ನಮಸ್ಕರಿಸು.’’ ಈ ಪ್ರಕಾರ ಭಗವಾನ್ ಶ್ರೀರಾಮನು ಕ್ರಮದಿಂದ ಭರದ್ವಾಜ ಮುನಿಗಳ ಆಶ್ರಮಕ್ಕೆ ತಲುಪಿದನು. ॥14॥

(ಶ್ಲೋಕ-15)

ಮೂಲಮ್

ಪೂರ್ಣೇ ಚತುರ್ದಶೇ ವರ್ಷೇ ಪಂಚಮ್ಯಾಂ ರಘುನಂದನಃ ।
ಭರದ್ವಾಜಂ ಮುನಿಂ ದೃಷ್ಟ್ವಾ ವವಂದೇ ಸಾನುಜಃ ಪ್ರಭುಃ ॥

ಅನುವಾದ

ಶ್ರೀರಘುನಾಥನು ಹದಿನಾಲ್ಕು ವರ್ಷಗಳು ತುಂಬಿರಲಾಗಿ ಪಂಚಮಿಯ ದಿನ ಭರದ್ವಾಜಮುನಿಗಳ ದರ್ಶನ ಪಡೆದು ತಮ್ಮನಾದ ಲಕ್ಷ್ಮಣ ಸಹಿತ ಅವರಿಗೆ ವಂದಿಸಿಕೊಂಡನು. ॥15॥

(ಶ್ಲೋಕ-16)

ಮೂಲಮ್

ಪಪ್ರಚ್ಛ ಮುನಿಮಾಸೀನಂ ವಿನಯೇನ ರಘೂತ್ತಮಃ ।
ಶೃಣೋಷಿ ಕಚ್ಚಿದ್ಭರತಃ ಕುಶಲ್ಯಾಸ್ತೇ ಸಹಾನುಜಃ ॥

ಅನುವಾದ

ಆಶ್ರಮದಲ್ಲಿ ಆಸೀನರಾದ ಮುನಿವರರಲ್ಲಿ ರಘುಶ್ರೇಷ್ಠನು ವಿನಯದಿಂದ ‘‘ಭರತನು ಶತ್ರುಘ್ನ ಸಹಿತ ಕುಶಲನಾಗಿದ್ದಾನೆಂದು ನೀವು ಕೇಳಿರುವಿರಾ? ॥16॥

(ಶ್ಲೋಕ-17)

ಮೂಲಮ್

ಸುಭಿಕ್ಷಾ ವರ್ತತೇಽಯೋಧ್ಯಾ ಜೀವಂತಿ ಚ ಹಿ ಮಾತರಃ ।
ಶ್ರುತ್ವಾ ರಾಮಸ್ಯ ವಚನಂ ಭರದ್ವಾಜಃ ಪ್ರಹೃಷ್ಟಧೀಃ ॥

(ಶ್ಲೋಕ-18)

ಮೂಲಮ್

ಪ್ರಾಹ ಸರ್ವೇ ಕುಶಲಿನೋ ಭರತಸ್ತು ಮಹಾಮನಾಃ ।
ಫಲಮೂಲಕೃತಾಹಾರೋ ಜಟಾವಲ್ಕಲಧಾರಕಃ ॥

(ಶ್ಲೋಕ-19)

ಮೂಲಮ್

ಪಾದುಕೇ ಸಕಲಂ ನ್ಯಸ್ಯ ರಾಜ್ಯಂ ತ್ವಾಂ ಸುಪ್ರತೀಕ್ಷತೇ ।
ಯದ್ಯತ್ಕೃತಂ ತ್ವಯಾ ಕರ್ಮ ದಂಡಕೇ ರಘುನಂದನ ॥

(ಶ್ಲೋಕ-20)

ಮೂಲಮ್

ರಾಕ್ಷಸಾನಾಂ ವಿನಾಶಂ ಚ ಸೀತಾಹರಣಪೂರ್ವಕಮ್ ।
ಸರ್ವಂ ಜ್ಞಾತಂ ಮಯಾ ರಾಮ ತಪಸಾ ತೇ ಪ್ರಸಾದತಃ ॥

ಅನುವಾದ

ಅಯೋಧ್ಯೆಯು ಸುಭಿಕ್ಷವಾಗಿದೆಯಲ್ಲ? ನಮ್ಮ ತಾಯಂದಿರು ಬದುಕಿರುವರಲ್ಲ?’’ ಎಂದು ಕೇಳಿದನು. ಭಗವಾನ್ ಶ್ರೀರಾಮನ ಮಾತನ್ನು ಕೇಳಿ ಭರದ್ವಾಜರು ಸಂತೋಷಭರಿತರಾಗಿ ಹೇಳಿದರು ‘‘ರಾಮಚಂದ್ರಾ! ಅಯೋಧ್ಯೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಮಹಾ ಮನಸ್ಕನಾದ ಭರತನಾದರೋ ಕಂದ-ಮೂಲ ಫಲಗಳಿಂದಲೇ ನಿರ್ವಾಹ ಮಾಡುತ್ತಾ, ಜಟಾ-ವಲ್ಕಲಗಳನ್ನು ಧರಿಸಿ, ನಿನ್ನ ಪಾದುಕೆಗಳಿಗೆ ಎಲ್ಲ ಗೌರವವನ್ನರ್ಪಿಸುತ್ತಾ ರಾಜ್ಯವನ್ನು ಕಾಪಾಡುತ್ತಾ ನಿನಗಾಗಿ ಕಾದಿರುತ್ತಾನೆ. ಹೇ ರಘುನಂದನಾ! ದಂಡಕಾರಣ್ಯದಲ್ಲಿ ಸೀತೆಯ ಅಪಹಾರದಿಂದ ಮೊದಲುಗೊಂಡು ರಾಕ್ಷಸರ ಸಂಹಾರದವರೆಗೆ ನೀನು ಏನೇನು ಕಾರ್ಯಗಳನ್ನು ನೆರವೇರಿಸಿರುವೆಯೋ, ಅವೆಲ್ಲವನ್ನು ನಿನ್ನ ಅನುಗ್ರಹದಿಂದ ಹಾಗೂ ತಪೋಬಲದಿಂದ ನಾನು ತಿಳಿದುಕೊಂಡಿದ್ದೇನೆ. ॥17-20॥

(ಶ್ಲೋಕ-21)

ಮೂಲಮ್

ತ್ವಂ ಬ್ರಹ್ಮ ಪರಮಂ ಸಾಕ್ಷಾದಾದಿಮಧ್ಯಾಂತವರ್ಜಿತಃ ।
ತ್ವಮಗ್ರೇ ಸಲಿಲಂ ಸೃಷ್ಟ್ವಾ ತತ್ರ ಸುಪ್ತೋಽಸಿ ಭೂತಕೃತ್ ॥

(ಶ್ಲೋಕ-22)

ಮೂಲಮ್

ನಾರಾಯಣೋಽಸಿ ವಿಶ್ವಾತ್ಮನ್ನರಾಣಾಮಂತರಾತ್ಮಕಃ ।
ತ್ವನ್ನಾಭಿಕಮಲೋತ್ಪನ್ನೋ ಬ್ರಹ್ಮಾ ಲೋಕಪಿತಾಮಹಃ ॥

ಅನುವಾದ

ನೀನಾದರೋ ಆದಿ ಮಧ್ಯಾಂತ ರಹಿತನಾದ ಸಾಕ್ಷಾತ್ ಪರಬ್ರಹ್ಮನಾಗಿರುವೆ. ನೀನು ಸಮಸ್ತ ಪ್ರಾಣಿಗಳನ್ನು ಸೃಷ್ಟಿಸಿರುವೆ. ಮೊಟ್ಟಮೊದಲು ನೀನು ನೀರನ್ನು ಸೃಷ್ಟಿಸಿ ಅದರಲ್ಲಿ ಪವಡಿಸಿರುವೆ. ಹೇ ವಿಶ್ವಾತ್ಮನೆ! ನೀನೇ ನಾರಾಯಣನಾಗಿರುವೆ. ನರರೆಲ್ಲರ ಅಂತರಾತ್ಮನಾಗಿರುವೆ. ಲೋಕಪಿತಾಮಹನಾದ ಬ್ರಹ್ಮನು ನಿನ್ನ ನಾಭಿಕಮಲದಿಂದ ಉದಯಿಸಿರುವನು. ॥21-22॥

(ಶ್ಲೋಕ-23)

ಮೂಲಮ್

ಅತಸ್ತ್ವಂ ಜಗತಾಮೀಶಃ ಸರ್ವಲೋಕನಮಸ್ಕೃತಃ ।
ತ್ವಂ ವಿಷ್ಣುರ್ಜಾನಕೀ ಲಕ್ಷ್ಮೀಃ ಶೇಷೋಽಯಂಲಕ್ಷ್ಮಣಾಭಿಧಃ ॥

ಅನುವಾದ

ಆದ್ದರಿಂದ ನೀನು ಸಮಸ್ತ ಜಗತ್ತುಗಳಿಗೆ ಒಡೆಯನೂ, ಸರ್ವಲೋಕಗಳಿಂದ ನಮಸ್ಕೃತನೂ ಆಗಿರುವೆ. ನೀನು ಸಾಕ್ಷಾತ್ ಭಗವಾನ್ ವಿಷ್ಣುವೇ ಆಗಿರುವೆ. ಜಾನಕಿಯೇ ಲಕ್ಷ್ಮೀದೇವಿಯು. ಆದಿಶೇಷನೇ ಈ ಲಕ್ಷ್ಮಣ ಎಂಬ ಹೆಸರಿನಿಂದ ಖ್ಯಾತನಾಗಿರುವನು. ॥23॥

(ಶ್ಲೋಕ-24)

ಮೂಲಮ್

ಆತ್ಮನಾ ಸೃಜಸೀದಂ ತ್ವಮಾತ್ಮನ್ಯೇವಾತ್ಮಮಾಯಯಾ ।
ನ ಸಜ್ಜಸೇನಭೋವತ್ತ್ವಂ ಚಿಚ್ಛಕ್ತ್ಯಾ ಸರ್ವಸಾಕ್ಷಿಕಃ ॥

ಅನುವಾದ

ನೀನು ಅಧಿಷ್ಠಾನರೂಪದಿಂದ ತನ್ನಲ್ಲೇ ತನ್ನ ಮಾಯೆಯಿಂದ ಸ್ವತಃ ತಾನೇ-ತನ್ನಿಂದಲೇ ಈ ಸಮಸ್ತ ಜಗತ್ತನ್ನು ರಚಿಸುತ್ತಿರುವೆ. ಆದರೆ ಆಕಾಶದಂತೆ ಯಾವುದರಲ್ಲಿಯೂ ಅಂಟಿಕೊಳ್ಳದೆ, ತನ್ನ ಚಿತ್-ಶಕ್ತಿಯಿಂದ ಎಲ್ಲರ ಸಾಕ್ಷಿಯಾಗಿರುವೆ. ॥24॥

(ಶ್ಲೋಕ-25)

ಮೂಲಮ್

ಬಹಿರಂತಶ್ಚ ಭೂತಾನಾಂ ತ್ವಮೇವ ರಘುನಂದನ ।
ಪೂರ್ಣೋಽಪಿ ಮೂಢದೃಷ್ಟಿನಾಂ ವಿಚ್ಛಿನ್ನ ಇವ ಲಕ್ಷಸೇ ॥

ಅನುವಾದ

ಹೇ ರಘುನಂದನಾ! ಪ್ರಾಣಿಗಳ ಒಳಗೂ-ಹೊರಗೂ ನೀನೇ ಇದ್ದುಕೊಂಡಿರುವೆ. ನೀನು ಎಲ್ಲೆಲ್ಲಿಯೂ ಪರಿಪೂರ್ಣನಾಗಿರುವೆಯಾದರೂ ಮೂಢಬುದ್ಧಿಯವರಿಗೆ ಏಕದೇಶಿಯನಂತೆ ಕಂಡುಬರುವೆ. ॥25॥

(ಶ್ಲೋಕ-26)

ಮೂಲಮ್

ಜಗತ್ತ್ವಂ ಜಗದಾಧಾರಸ್ತ್ವಮೇವ ಪರಿಪಾಲಕಃ ।
ತ್ವಮೇವ ಸರ್ವಭೂತಾನಾಂ ಭೋಕ್ತಾ ಭೋಜ್ಯಂ ಜಗತ್ಪತೇ ॥

ಅನುವಾದ

ಹೇ ಜಗತ್ಪತಿಯೆ! ನೀನೇ ಜಗತ್ತಿಗೆಲ್ಲ ಆಧಾರನಾಗಿದ್ದು, ಎಲ್ಲರನ್ನು ಕಾಪಾಡುತ್ತಿರುವೆ. ಎಲ್ಲ ಪ್ರಾಣಿಗಳಲ್ಲಿ ಭೋಕ್ತೃನೂ ನೀನೇ ಆಗಿದ್ದು, (ಅನ್ನ ರೂಪದಿಂದ) ಭೋಜ್ಯನೂ ನೀನೇ ಆಗಿರುವೆ. ॥26॥

(ಶ್ಲೋಕ-27)

ಮೂಲಮ್

ದೃಶ್ಯತೇ ಶ್ರೂಯತೇ ಯದ್ಯತ್ ಸ್ಮರ್ಯತೇ ವಾ ರಘೂತ್ತಮ ।
ತ್ವಮೇವ ಸರ್ವಮಖಿಲಂ ತ್ವದ್ವಿನಾನ್ಯನ್ನ ಕಿಂಚನ ॥

ಅನುವಾದ

ಎಲೈ ರಘೂತ್ತಮನೆ! ಏನೇನು ಕಂಡು ಬರುತ್ತಿದೆಯೋ, ಕೇಳಿಬರುತ್ತಿದೆಯೋ, ನೆನಪಿಗೆ ಬರುತ್ತಿದೆಯೋ ಅದೆಲ್ಲವೂ ನೀನೇ ಆಗಿರುವೆ. ನಿನ್ನ ಹೊರತು ಏನೂ ಇರುವುದಿಲ್ಲ. ॥27॥

(ಶ್ಲೋಕ-28)

ಮೂಲಮ್

ಮಾಯಾ ಸೃಜತಿ ಲೋಕಾಂಶ್ಚ ಸ್ವಗುಣೈರಹಮಾದಿಭಿಃ ।
ತ್ವಚ್ಛಕ್ತಿ ಪ್ರೇರಿತಾ ರಾಮ ತಸ್ಮಾತ್ತ್ವಯ್ಯುಪಚರ್ಯತೇ ॥

ಅನುವಾದ

ರಾಮನೆ! ಮಾಯೆಯು ನಿನ್ನ ಶಕ್ತಿಯಿಂದ ಪ್ರೇರಿತಳಾಗಿ ತನ್ನ ಗುಣವಾದ ಅಹಂಕಾರಾದಿಗಳಿಂದ ಲೋಕಗಳನ್ನೆಲ್ಲ ರಚಿಸುತ್ತಾಳೆ. ಆದ್ದರಿಂದ ಆ ಮಾಯಾಕಾರ್ಯವನ್ನು ಅಜ್ಞರು ನಿನ್ನಲ್ಲಿ ಆರೋಪಿಸಿ ಹೇಳುತ್ತಾರೆ. ॥28॥

(ಶ್ಲೋಕ-29)

ಮೂಲಮ್

ಯಥಾ ಚುಂಬಕಸಾನ್ನಿಧ್ಯಾಚ್ಚಲಂತ್ಯೇವಾಯಸಾದಯಃ ।
ಜಡಾಸ್ತಥಾ ತ್ವಯಾ ದೃಷ್ಟಾ ಮಾಯಾ ಸೃಜತಿ ವೈ ಜಗತ್ ॥

ಅನುವಾದ

ಸೂಜಿಗಲ್ಲಿನ (ಚುಂಬಕ) ಸಾನ್ನಿಧ್ಯದಿಂದ ಜಡವಾದ ಕಬ್ಬಿಣವು ಚಲಿಸುವಂತೆ, ನಿನ್ನ ದೃಷ್ಟಿಪಾತಮಾತ್ರದಿಂದಲೇ ಮಾಯೆಯು ಸಮಸ್ತ ಜಗತ್ತನ್ನು ಸೃಷ್ಟಿಮಾಡುತ್ತಿರುವಳು. ॥29॥

(ಶ್ಲೋಕ-30)

ಮೂಲಮ್

ದೇಹದ್ವಯಮದೇಹಸ್ಯ ತವ ವಿಶ್ವಂ ರಿರಕ್ಷಿಷೋಃ ।
ವಿರಾಟ್ಸ್ಥೂಲಂ ಶರೀರಂ ತೇ ಸೂತ್ರಂ ಸೂಕ್ಷ್ಮಮುದಾಹೃತಮ್ ॥

ಅನುವಾದ

ವಿಶ್ವವನ್ನು ಕಾಪಾಡಲು ಇಚ್ಛಿಸುವ ನಿನಗೆ ದೇಹಹೀನನಾದರೂ ಎರಡು ದೇಹಗಳಿರುವವು. ವಿರಾಟ್ ಎಂಬ ಸ್ಥೂಲಶರೀರವೊಂದು, ಸೂತ್ರವೆಂಬ ಸೂಕ್ಷ್ಮಶರೀರ ಮತ್ತೊಂದು. ಹೀಗೆ ಎರಡು ದೇಹಗಳೆಂದು ಹೇಳುತ್ತಾರೆ. ॥30॥

(ಶ್ಲೋಕ-31)

ಮೂಲಮ್

ವಿರಾಜಃ ಸಂಭವಂತ್ಯೇತೇ ಅವತಾರಾಃ ಸಹಸ್ರಶಃ ।
ಕಾರ್ಯಾಂತೇ ಪ್ರವಿಶಂತ್ಯೇವ ವಿರಾಜಂ ರಘುನಂದನ ॥

ಅನುವಾದ

ಹೇ ರಘುನಂದನಾ! ನಿನ್ನ ಸ್ಥೂಲವಾದ ವಿರಾಟ್ ಶರೀರದಿಂದ ಸಹಸ್ರಾರು ಅವತಾರಗಳು ಸಂಭವಿಸುವವು. ಅವು ತಮ್ಮ ಕಾರ್ಯವನ್ನು ಪೂರೈಸಿದೊಡನೆ ವಿರಾಟ್ ಶರೀರವನ್ನೇ ಪ್ರವೇಶಿಸುವವು. ॥31॥

(ಶ್ಲೋಕ-32)

ಮೂಲಮ್

ಅವತಾರಕಥಾಂ ಲೋಕೇ ಯೇ ಗಾಯಂತಿ ಗೃಣಂತಿ ಚ ।
ಅನನ್ಯಮನಸೋ ಮುಕ್ತಿಸ್ತೇಷಾಮೇವ ರಘೂತ್ತಮ ॥

ಅನುವಾದ

ಹೇ ರಘೂತ್ತಮಾ! ಇಂತಹ ಅವತಾರಗಳಲ್ಲಿ ನಡೆದ ಕಥೆಗಳನ್ನು ಜಗತ್ತಿನಲ್ಲಿ ಗಾಯನಮಾಡುವ, ಶ್ರವಣಿಸುವ, ಅನನ್ಯ ಮನಸ್ಕರಾದ ಇಂತಹ ಭಕ್ತರಿಗೆ ಮುಕ್ತಿಯು ಶತಃಸಿದ್ಧವಾಗಿದೆ. ॥32॥

(ಶ್ಲೋಕ-33)

ಮೂಲಮ್

ತ್ವಂ ಬ್ರಹ್ಮಣಾ ಪುರಾ ಭೂಮೇರ್ಭಾರಹಾರಾಯ ರಾಘವ ।
ಪ್ರಾರ್ಥಿತಸ್ತಪಸಾ ತುಷ್ಟಸ್ತ್ವಂ ಜಾತೋಽಸಿ ರಘೋ ಕುಲೇ ॥

ಅನುವಾದ

ಹೇ ರಘುಶ್ರೇಷ್ಠ! ಹಿಂದೆ ಚತುರ್ಮುಖ ಬ್ರಹ್ಮದೇವರು ಭೂಭಾರಹರಣಕ್ಕಾಗಿ ನಿನ್ನನ್ನು ಪ್ರಾರ್ಥಿಸಿದ್ದರು. ಅವರ ತಪಸ್ಸಿಗೆ ಒಲಿದ ನೀನು ರಘುಕುಲದಲ್ಲಿ ಅವತರಿಸಿರುವೆ. ॥33॥

(ಶ್ಲೋಕ-34)

ಮೂಲಮ್

ದೇವಕಾರ್ಯಮಶೇಷೇಣ ಕೃತಂ ತೇ ರಾಮ ದುಷ್ಕರಮ್ ।
ಬಹುವರ್ಷಸಹಸ್ರಾಣಿ ಮಾನುಷಂ ದೇಹಮಾಶ್ರಿತಃ ॥

(ಶ್ಲೋಕ-35)

ಮೂಲಮ್

ಕುರ್ವನ್ ದುಷ್ಕರಕರ್ಮಾಣಿ ಲೋಕದ್ವಯಹಿತಾಯ ಚ ।
ಪಾಪಹಾರೀಣಿ ಭುವನಂ ಯಶಸಾ ಪೂರಯಿಷ್ಯಸಿ ॥

ಅನುವಾದ

ಹೇ ರಾಮಾ! ಅತ್ಯಂತ ದುಷ್ಕರವಾದ ದೇವತೆಗಳ ಕಾರ್ಯವನ್ನು ನೀನು ಮಾಡಿ ಮುಗಿಸಿರುವೆ. ಇನ್ನು ಅನೇಕ ಸಹಸ್ರವರ್ಷಗಳ ಕಾಲ ಮಾನುಷ ದೇಹವನ್ನಾಶ್ರಯಿಸಿಕೊಂಡಿದ್ದು, ಜೀವಿಗಳ ಇಹ-ಪರ ಎರಡೂ ಲೋಕಗಳ ಹಿತಕ್ಕಾಗಿ ಕಷ್ಟಕರವಾದ ಹಾಗೂ ಪಾಪಪರಿಹಾರಕವಾದ ಕಾರ್ಯಗಳನ್ನು ಮಾಡುತ್ತಾ ಎಲ್ಲೆಡೆ ತನ್ನ ಕೀರ್ತಿಯಿಂದ ತುಂಬಲಿರುವೆ. ॥34-35॥

(ಶ್ಲೋಕ-36)

ಮೂಲಮ್

ಪ್ರಾರ್ಥಯಾಮಿ ಜಗನ್ನಾಥ ಪವಿತ್ರಂ ಕುರು ಮೇ ಗೃಹಮ್ ।
ಸ್ಥಿತ್ವಾದ್ಯ ಭುಕ್ತ್ವಾ ಸಬಲಃ ಶ್ವೋ ಗಮಿಷ್ಯಸಿ ಪತ್ತನಮ್ ॥

ಅನುವಾದ

ಹೇ ಜಗತ್ಪತಿಯೆ! ನನ್ನ ಈ ಪ್ರಾರ್ಥನೆಯನ್ನು ನಡೆಸಿಕೊಡು. ನನ್ನ ಎಲೆಮನೆಯನ್ನು ಪವಿತ್ರಗೊಳಿಸು. ಇಂದು ಇಲ್ಲಿಯೇ ಸೇನಾಸಮೇತನಾಗಿ ಇದ್ದು ಊಟ ಉಪಚಾರಾದಿಗಳನ್ನು ಸ್ವೀಕರಿಸಿ ನಾಳೆಯ ದಿನ ಅಯೋಧ್ಯೆಗೆ ಹೋಗುವೆಯಂತೆ.’’ ॥36॥

(ಶ್ಲೋಕ-37)

ಮೂಲಮ್

ತಥೇತಿ ರಾಘವೋಽತಿಷ್ಠತ್ತಸ್ಮಿನ್ನಾಶ್ರಮ ಉತ್ತಮೇ ।
ಸಸೈನ್ಯಃ ಪೂಜಿತಸ್ತೇನ ಸೀತಯಾ ಲಕ್ಷ್ಮಣೇನ ಚ ॥

ಅನುವಾದ

ಹೀಗೆ ಭರದ್ವಾಜರು ಹೇಳಲು ‘ಹಾಗೆಯೇ ಆಗಲಿ’ ಎಂದು ಹೇಳಿ ರಘುನಾಥನು ಮುನಿವರರಿಂದ ಸತ್ಕೃತ ನಾಗಿ ಸೀತಾ-ಲಕ್ಷ್ಮಣರೊಡಗೂಡಿ, ಸೇನಾಸಮೇತನಾಗಿ ಆ ಉತ್ತಮ ಆಶ್ರಮದಲ್ಲಿ ತಂಗಿದನು. ॥37॥

(ಶ್ಲೋಕ-38)

ಮೂಲಮ್

ತತೋ ರಾಮಶ್ಚಿಂತಯಿತ್ವಾ ಮುಹೂರ್ತಂ ಪ್ರಾಹ ಮಾರುತಿಮ್ ।
ಇತೋ ಗಚ್ಛ ಹನೂಮನ್ ಸ್ತ್ವಮಯೋಧ್ಯಾಂ ಪ್ರತಿ ಸತ್ವರಃ ॥

ಅನುವಾದ

ಅನಂತರ ಭಗವಾನ್ ಶ್ರೀರಾಮನು ಮುಹೂರ್ತಕಾಲ ಆಲೋಚಿಸಿ ಹನುಮಂತನನ್ನು ಕುರಿತು ಇಂತೆಂದನು ‘‘ಎಲೈ ಹನುಮಂತಾ! ನೀನು ಬೇಗನೇ ಇಲ್ಲಿಂದ ಅಯೋಧ್ಯೆಗೆ ಹೋಗು. ॥38॥

(ಶ್ಲೋಕ-39)

ಮೂಲಮ್

ಜಾನೀಹಿ ಕುಶಲೀ ಕಶ್ಚಿಜ್ಜನೋ ನೃಪತಿಮಂದಿರೇ ।
ಶೃಂಗವೇರಪುರಂ ಗತ್ವಾ ಬ್ರೂಹಿ ಮಿತ್ರಂ ಗುಹಂ ಮಮ ॥

(ಶ್ಲೋಕ-40)

ಮೂಲಮ್

ಜಾನಕೀಲಕ್ಷ್ಮಣೋಪೇತಮಾಗತಂ ಮಾಂ ನಿವೇದಯ ।
ನಂದಿಗ್ರಾಮಂ ತತೋ ಗತ್ವಾ ಭ್ರಾತರಂ ಭರತಂ ಮಮ ॥

(ಶ್ಲೋಕ-41)

ಮೂಲಮ್

ದೃಷ್ಟ್ವಾ ಬ್ರೂಹಿ ಸಭಾರ್ಯಸ್ಯ ಸಭ್ರಾತುಃ ಕುಶಲಂ ಮಮ ।
ಸೀತಾಪಹರಣಾದೀನಿ ರಾವಣಸ್ಯ ವಧಾದಿಕಮ್ ॥

(ಶ್ಲೋಕ-42)

ಮೂಲಮ್

ಬ್ರೂಹಿ ಕ್ರಮೇಣ ಮೇ ಭ್ರಾತುಃ ಸರ್ವಂ ತತ್ರ ವಿಚೇಷ್ಟಿತಮ್ ।
ಹತ್ವಾ ಶತ್ರುಗಣಾನ್ಸರ್ವಾನ್ಸಭಾರ್ಯಃ ಸಹಲಕ್ಷ್ಮಣಃ ॥

(ಶ್ಲೋಕ-43)

ಮೂಲಮ್

ಉಪಯಾತಿ ಸಮೃದ್ಧಾರ್ಥಃ ಸಹ ಋಕ್ಷಹರೀಶ್ವರೈಃ ।
ಇತ್ಯುಕ್ತ್ವಾ ತತ್ರ ವೃತ್ತಾಂತಂ ಭರತಸ್ಯ ವಿಚೇಷ್ಟಿತಮ್ ॥

(ಶ್ಲೋಕ-44)

ಮೂಲಮ್

ಸರ್ವಂ ಜ್ಞಾತ್ವಾ ಪುನಃ ಶೀಘ್ರಮಾಗಚ್ಛ ಮಮ ಸನ್ನಿಧಿಮ್ ।
ತಥೇತಿ ಹನುಮಾಂಸ್ತತ್ರ ಮಾನುಷಂ ವಪುರಾಸ್ಥಿತಃ ॥

(ಶ್ಲೋಕ-45)

ಮೂಲಮ್

ನಂದಿಗ್ರಾಮಂ ಯಯೌ ತೂರ್ಣಂ ವಾಯುವೇಗೇನ ಮಾರುತಿಃ ।
ಗರುತ್ಮಾನಿವ ವೇಗೇನ ಜಿಘೃಕ್ಷನ್ ಭುಜಗೋತ್ತಮ್ ॥

ಅನುವಾದ

ರಾಜಗೃಹದಲ್ಲಿ ಎಲ್ಲರೂ ಕ್ಷೇಮವೇ ಎಂಬುದನ್ನು ತಿಳಿದುಕೊ. ಹಾಗೆಯೇ ಶೃಂಗವೇರಪುರಕ್ಕೆ ಹೋಗಿ ನನ್ನ ಮಿತ್ರನಾದ ಗುಹನೊಂದಿಗೆ ಭೇಟಿಯಾಗಿ, ಸೀತಾಲಕ್ಷ್ಮಣ ಸಹಿತನಾಗಿ ನಾನು ಬಂದಿರುವ ವರ್ತಮಾನವನ್ನು ತಿಳಿಸು. ಅನಂತರ ನಂದಿಗ್ರಾಮಕ್ಕೆ ಹೋಗಿ ನನ್ನ ತಮ್ಮನಾದ ಭರತನನ್ನು ಭೇಟಿಯಾಗಿ, ಪತ್ನಿಸೋದರನೊಡ ಗೂಡಿ ಬಂದಿರುವ ನನ್ನ ಕುಶಲವಾರ್ತೆಯನ್ನು ತಿಳಿಸು. ಭರತನಿಗೆ ಸೀತಾಪಹರಣದಿಂದ ಮೊದಲುಗೊಂಡು ರಾವಣನ ವಧೆಯವರೆಗಿನ ಎಲ್ಲ ವೃತ್ತಾಂತಗಳನ್ನು ಕ್ರಮವಾಗಿ ಹೇಳು. ಶತ್ರುಸಮೂಹವನ್ನೆಲ್ಲ ಸಂಹಾರಮಾಡಿ, ಲಕ್ಷ್ಮಣ-ಸೀತೆಯರೊಡನೆ ಹಾಗೂ ಕರಡಿ-ಕಪಿಗಳೊಡನೆ ಕೃತಕಾರ್ಯನಾಗಿ ನಿನ್ನಣ್ಣನು ಬರುತ್ತಿದ್ದಾನೆ ಎಂದು ತಿಳಿಸು. ಇದೆಲ್ಲವನ್ನು ಭರತನಿಗೆ ಹೇಳಿ ಅವನ ನಡೆವಳಿಕೆಯನ್ನು ಅಲ್ಲಿಯ ವಿಚಾರಗಳೆಲ್ಲವನ್ನು ತಿಳಿದುಕೊಂಡು ಬೇಗನೆ ನನ್ನ ಬಳಿಗೆ ಬಂದು ಬಿಡು.’’ ಹಾಗೆಯೇ ಆಗಲೆಂದು ಹೇಳಿ ಹನುಮಂತನು ಮನುಷ್ಯ ಶರೀರವನ್ನು ಧರಿಸಿ ಕೂಡಲೇ ವಾಯುಗತಿಯಿಂದ, ಗರುಡನು ಹಾವನ್ನು ತಿನ್ನುವ ಇಚ್ಛೆಯಿಂದ ಹಾರುವ ಹಾಗೆ ನಂದಿಗ್ರಾಮವನ್ನು ಕುರಿತು ಹೊರಟನು. ॥39-45॥

(ಶ್ಲೋಕ-46)

ಮೂಲಮ್

ಶೃಂಗವೇರಪುರಂ ಪ್ರಾಪ್ಯ ಗುಹಮಾಸಾದ್ಯ ಮಾರುತಿಃ ।
ಉವಾಚ ಮಧುರಂ ವಾಕ್ಯಂ ಪ್ರಹೃಷ್ಟೇನಾಂತರಾತ್ಮನಾ ॥

ಅನುವಾದ

ಮೊದಲಿಗೆ ಶೃಂಗವೇರಪುರವನ್ನು ಹೊಕ್ಕು ಗುಹನನ್ನು ಕಂಡು ಮಾರುತಿಯು ಸಂತುಷ್ಟಾಂತಃಕರಣನಾಗಿ, ಸಂತೋಷದಿಂದ ಮಧುರವಾಕ್ಯಗಳಿಂದ ಹೀಗೆಂದನು - ॥46॥

(ಶ್ಲೋಕ-47)

ಮೂಲಮ್

ರಾಮೋ ದಾಶರಥಿಃ ಶ್ರೀಮಾನ್ಸಖಾ ತೇ ಸಹ ಸೀತಯಾ ।
ಸಲಕ್ಷ್ಮಣಸ್ತ್ವಾಂ ಧರ್ಮಾತ್ಮಾ ಕ್ಷೇಮೀ ಕುಶಲಮಬ್ರವೀತ್ ॥

ಅನುವಾದ

‘‘ನಿನ್ನ ಸಖನಾದ, ಧರ್ಮಾತ್ಮನಾದ, ದಶರಥನಂದನ ಶ್ರೀರಾಮನು ಸೀತಾಲಕ್ಷ್ಮಣರೊಡನೆ ಕ್ಷೇಮದಿಂದಿರುವುದನ್ನು ತನ್ನ ಕುಶಲವನ್ನು ನಿನಗೆ ಹೇಳಿರುವನು. ॥47॥

(ಶ್ಲೋಕ-48)

ಮೂಲಮ್

ಅನುಜ್ಞಾತೋಽದ್ಯ ಮುನಿನಾ ಭರದ್ವಾಜೇನ ರಾಘವಃ ।
ಆಗಮಿಷ್ಯತಿ ತಂ ದೇವಂ ದ್ರಕ್ಷ್ಯಸಿ ತ್ವಂ ರಘೂತ್ತಮಮ್ ॥

ಅನುವಾದ

ಆ ರಾಘವನು ಮುನಿಗಳಾದ ಭರದ್ವಾಜರಿಂದ ಅಪ್ಪಣೆಯನ್ನು ಪಡೆದು ಇಷ್ಟರಲ್ಲೆ ಬರಲಿದ್ದಾನೆ. ಆ ರಘುಶ್ರೇಷ್ಠನನ್ನು ನೀನೂ ನೋಡಲಿರುವೆ.’’ ॥48॥

(ಶ್ಲೋಕ-49)

ಮೂಲಮ್

ಏವಮುಕ್ತ್ವಾ ಮಹಾತೇಜಾಃ ಸಂಪ್ರಹೃಷ್ಟತನೂರುಹಮ್ ।
ಉತ್ಪಪಾತ ಮಹಾವೇಗೋ ವಾಯುವೇಗೇನ ಮಾರುತಿಃ ॥

ಅನುವಾದ

ಹೀಗೆಂದು ನುಡಿದು ಮಹಾತೇಜಸ್ವಿಯಾದ ಹನುಮಂತನು ಬಹಳವಾಗಿ ಹಿಗ್ಗಿದವನಾಗಿ ವಾಯುವೇಗದಿಂದ ಮತ್ತೆ ಮೇಲಕ್ಕೆ ಹಾರಿದನು. ॥49॥

(ಶ್ಲೋಕ-50)

ಮೂಲಮ್

ಸೋಽಪಶ್ಯದ್ರಾಮತೀರ್ಥಂ ಚ ಸರಯೂಂ ಚ ಮಹಾನದೀಮ್ ।
ತಾಮತಿಕ್ರಮ್ಯ ಹನುಮಾನ್ನಂದಿಗ್ರಾಮಂ ಯಯೌ ಮುದಾ ॥

ಅನುವಾದ

ಅವನು ಹೋಗುತ್ತಿರುವಾಗ ದಾರಿಯಲ್ಲಿ ರಾಮತೀರ್ಥ (ಅಯೋಧ್ಯೆ) ವನ್ನೂ, ಸರಯೂ ನದಿಯನ್ನು ದರ್ಶಿಸಿ, ಆ ನದಿಯನ್ನು ದಾಟಿ ಸಂತೋಷದಿಂದ ನಂದಿಗ್ರಾಮದ ಕಡೆಗೆ ಹೊರಟನು. ॥50॥

(ಶ್ಲೋಕ-51)

ಮೂಲಮ್

ಕ್ರೋಶಮಾತ್ರೇ ತ್ವಯೋಧ್ಯಾಯಾಶ್ಚೀರಕೃಷ್ಣಾಜಿನಾಂಬರಮ್ ।
ದದರ್ಶ ಭರತಂ ದೀನಂ ಕೃಶಮಾಶ್ರಮವಾಸಿನಮ್ ॥

(ಶ್ಲೋಕ-52)

ಮೂಲಮ್

ಮಲಪಂಕವಿದಿಗ್ಧಾಂಗಂ ಜಟಿಲಂ ವಲ್ಕಲಾಂಬರಮ್ ।
ಫಲಮೂಲಕೃತಾಹಾರಂ ರಾಮಚಿಂತಾಪರಾಯಣಮ್ ॥

(ಶ್ಲೋಕ-53)

ಮೂಲಮ್

ಪಾದುಕೇ ತೇ ಪುರಸ್ಕೃತ್ಯ ಶಾಸಯಂತಂ ವಸುಂಧರಾಮ್ ।
ಮಂತ್ರಿಭಿಃ ಪೌರಮುಖ್ಯೈಶ್ಚ ಕಾಷಾಯಾಂಬರಧಾರಿಭಿಃ ॥

(ಶ್ಲೋಕ-54)

ಮೂಲಮ್

ವೃತದೇಹಂ ಮೂರ್ತಿಮಂತಂ ಸಾಕ್ಷಾದ್ಧರ್ಮಮಿವ ಸ್ಥಿತಮ್ ।
ಉವಾಚ ಪ್ರಾಂಜಲಿರ್ವಾಕ್ಯಂ ಹನುಮಾನ್ಮಾರುತಾತ್ಮಜಃ ॥

ಅನುವಾದ

ಅಯೋಧ್ಯೆಯಿಂದ ಕ್ರೋಶಮಾತ್ರದಷ್ಟು ದೂರದಲ್ಲಿರುವ ಆ ನಂದಿಗ್ರಾಮದಲ್ಲಿ ನಾರುಮಡಿ ಕೃಷ್ಣಾಜಿನಗಳನ್ನುಟ್ಟು, ದೀನನಾಗಿ ಬಡಕಲಾದ ಆಶ್ರಮವಾಸಿಯಾಗಿದ್ದ ಭರತನನ್ನು ಕಂಡನು. ಅವನ ಮೈಯೆಲ್ಲ ಧೂಳಿನಿಂದ ಕೊಳೆಯಾಗಿದ್ದು, ಜಟಾಜೂಟನಾಗಿ, ವಲ್ಕಲಗಳನ್ನೇ ಬಟ್ಟೆಯಾಗಿ ಉಪಯೋಗಿಸುತ್ತಿದ್ದನು. ಗೆಡ್ಡೆಗಳನ್ನು, ಹಣ್ಣುಗಳನ್ನೇ ಆಹಾರವುಳ್ಳ ಅವನು ಶ್ರೀರಾಮನ ಧ್ಯಾನದಲ್ಲಿ ತತ್ಪರನಾಗಿದ್ದು, ಶ್ರೀರಾಮಚಂದ್ರನ ಪಾದುಕೆಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ಆಳುತ್ತಿದ್ದನು. ಕಾಷಾಯ ವಸಧಾರಿಗಳಾದ ಮಂತ್ರಿಗಳಿಂದಲೂ, ಪುರಪ್ರಮುಖರಿಂದಲೂ ಸುತ್ತುವರಿದು, ಎದುರಿಗೆ ನಿಂತಿರುವ ಸಾಕ್ಷಾತ್ ಧರ್ಮದೇವತೆಯಂತೆ ಕಂಡು ಬರುತ್ತಿದ್ದ ಭರತನನ್ನು ನೋಡಿ ಪವಮಾನನಂದನ ಹನುಮಂತನು ಕೈ ಮುಗಿದುಕೊಂಡು ಹೀಗೆಂದನು - ॥51-54॥

(ಶ್ಲೋಕ-55)

ಮೂಲಮ್

ಯಂ ತ್ವಂ ಚಿಂತಯಸೇ ರಾಮಂ ತಾಪಸಂ ದಂಡಕೇ ಸ್ಥಿತಮ್ ।
ಅನುಶೋಚಸಿ ಕಾಕುತ್ಸ್ಥಃ ಸ ತ್ವಾಂ ಕುಶಲಮಬ್ರವೀತ್ ॥

ಅನುವಾದ

‘‘ಎಲೈ ಭರತನೆ! ದಂಡ ಕಾರಣ್ಯದಲ್ಲಿ ನೆಲೆಸಿ ತಪಸ್ವಿಯಾಗಿರುವ ಯಾವ ಶ್ರೀರಾಮನನ್ನು ನೀನು ಧ್ಯಾನಿಸುತ್ತಿರುವೆಯೋ ಹಾಗೂ ಯಾರಿಗಾಗಿ ಅನುತಾಪ ಪಡುತ್ತಿರುವೆಯೋ ಆ ಕಾಕುತ್ಸ್ಥನು ನಿಮಗೆ ತನ್ನ ಕುಶಲವಾರ್ತೆಯನ್ನು ತಿಳಿಸಿರುತ್ತಾನೆ. ॥55॥

(ಶ್ಲೋಕ-56)

ಮೂಲಮ್

ಪ್ರಿಯಮಾಖ್ಯಾಮಿ ತೇ ದೇವ ಶೋಕಂ ತ್ಯಜ ಸುದಾರುಣಮ್ ।
ಅಸ್ಮಿನ್ಮುಹೂರ್ತೇ ಭ್ರಾತ್ರಾ ತ್ವಂ ರಾಮೇಣ ಸಹ ಸಂಗತಃ ॥

ಅನುವಾದ

ದೇವಾ! ನೀವು ಈ ದಾರುಣವಾದ ಶೋಕವನ್ನು ಬಿಡಿರಿ. ನಿಮಗೆ ಪ್ರಿಯವಾದ ಮಾತನ್ನೇ ಹೇಳುವೆನು. ಈ ಮುಹೂರ್ತದಲ್ಲೇ ನಿಮ್ಮಣ್ಣನಾದ ರಾಮನನ್ನು ಭೇಟಿಯಾಗುವಿರಿ. ॥56॥

(ಶ್ಲೋಕ-57)

ಮೂಲಮ್

ಸಮರೇ ರಾವಣಂ ಹತ್ವಾ ರಾಮಃ ಸೀತಾಮವಾಪ್ಯ ಚ ।
ಉಪಯಾತಿ ಸಮೃದ್ಧಾರ್ಥಃ ಸಸೀತಃ ಸಹಲಕ್ಷ್ಮಣಃ ॥

ಅನುವಾದ

ಭಗವಾನ್ ಶ್ರೀರಾಮನು ಯುದ್ಧದಲ್ಲಿ ರಾವಣನನ್ನು ಸಂಹರಿಸಿ, ಸೀತೆಯನ್ನು ಪಡೆದುಕೊಂಡು, ಸಫಲ ಮನೋರಥವಾಗಿ ಸೀತಾಲಕ್ಷ್ಮಣರೊಡನೆ ಬರುತ್ತಿರುವನು.’’ ॥57॥

(ಶ್ಲೋಕ-58)

ಮೂಲಮ್

ಏವಮುಕ್ತೋ ಮಹಾತೇಜಾ ಭರತೋ ಹರ್ಷಮೂರ್ಚ್ಛಿತಃ ।
ಪಪಾತ ಭುವಿ ಚಾಸ್ವಸ್ಥಃ ಕೈಕಯೀ ಪ್ರಿಯನಂದನಃ ॥

ಅನುವಾದ

ಹನುಮಂತನು ಈ ರೀತಿಯಾಗಿ ಹೇಳಿರುವುದನ್ನು ಕೇಳಿ ಕೈಕೆಯಿಯ ಪ್ರಿಯಪುತ್ರ ಮಹಾತೇಜಸ್ವೀ ಭರತನು ಹರ್ಷ ದಿಂದ ಮೈಮರೆತವನಾಗಿ ಮೂರ್ಛೆಗೊಂಡವನಂತೆ ನೆಲದ ಮೇಲೆ ಕುಸಿದು ಬಿದ್ದನು. ॥58॥

(ಶ್ಲೋಕ-59)

ಮೂಲಮ್

ಆಲಿಂಗ್ಯ ಭರತಃ ಶೀಘ್ರಂ ಮಾರುತಿಂ ಪ್ರಿಯವಾದಿನಮ್ ।
ಆನಂದಜೈರಶ್ರುಜಲೈಃ ಸಿಷೇಚ ಭರತಃ ಕಪಿಮ್ ॥

ಅನುವಾದ

ಅನಂತರ ಎಚ್ಚತ್ತವನಾಗಿ ಎದ್ದು ಕೊಡಲೇ ಭರತನು ಪ್ರಿಯವಾರ್ತೆಯನ್ನು ಹೇಳಿದ ಹನುಮಂತನನ್ನು ಆಲಿಂಗಿಸಿಕೊಂಡು ಆನಂದಬಾಷ್ಪಗಳಿಂದ ವಾನರ ಶ್ರೇಷ್ಠನನ್ನು ತೋಯಿಸಿಬಿಟ್ಟನು. ॥59॥

(ಶ್ಲೋಕ-60)

ಮೂಲಮ್

ದೇವೋ ವಾ ಮಾನುಷೋ ವಾ ತ್ವಮನುಕ್ರೋಶಾದಿಹಾಗತಃ ।
ಪ್ರಿಯಾಖ್ಯಾನಸ್ಯ ತೇ ಸೌಮ್ಯ ದದಾಮಿ ಬ್ರುವತಃ ಪ್ರಿಯಮ್ ॥

(ಶ್ಲೋಕ-61)

ಮೂಲಮ್

ಗವಾಂ ಶತಸಹಸ್ರಂ ಚ ಗ್ರಾಮಾಣಾಂ ಚ ಶತಂ ವರಮ್ ।
ಸರ್ವಾಭರಣಸಂಪನ್ನಾ ಮುಗ್ಧಾಃ ಕನ್ಯಾಸ್ತು ಷೋಡಶ ॥

ಅನುವಾದ

‘‘ಅಯ್ಯಾ! ನೀನು ಯಾವನಾದರು ದೇವತೆಯೋ, ಮನುಷ್ಯನೋ ಆಗಿದ್ದು ನನ್ನ ಮೇಲಿನ ಕರುಣೆಯಿಂದ ಇಲ್ಲಿಗೆ ಬಂದಿರುವೆಯಷ್ಟೆ? ಎಲೈ ಸೌಮ್ಯನೆ! ಇಂತಹ ಪ್ರಿಯವನ್ನು ನುಡಿದ ನಿನಗೆ ಪ್ರಿಯ ವಾದದ್ದನ್ನೇ ನೀಡುವೆನು. ಇದೋ! ನೂರು ಸಾವಿರ ಗೋವುಗಳು, ಉತ್ತಮವಾದ ನೂರು ಗ್ರಾಮಗಳು, ಸರ್ವಾಭರಣ ಸುಂದರಿಯರಾದ ಎಳೆಯವರಾದ ಹದಿನಾರು ಕನ್ಯೆಯರನ್ನು ಕೊಡುತ್ತಿದ್ದೇನೆ. ॥60-61॥

(ಶ್ಲೋಕ-62)

ಮೂಲಮ್

ಏವಮುಕ್ತ್ವಾ ಪುನಃ ಪ್ರಾಹ ಭರತೋ ಮಾರುತಾತ್ಮಜಮ್ ।
ಬಹೂನೀಮಾನೀ ವರ್ಷಾಣಿ ಗತಸ್ಯ ಸುಮಹದ್ವನಮ್ ॥

(ಶ್ಲೋಕ-63)

ಮೂಲಮ್

ಶೃಣೋಮ್ಯಹಂ ಪ್ರಿತಿಕರಂ ಮಮ ನಾಥಸ್ಯ ಕೀರ್ತನಮ್ ।
ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮೇ ॥

(ಶ್ಲೋಕ-64)

ಮೂಲಮ್

ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ ।
ರಾಘವಸ್ಯ ಹರಿಣಾಂ ಚ ಕಥಮಾಸೀತ್ಸಮಾಗಮಃ ॥

(ಶ್ಲೋಕ-65)

ಮೂಲಮ್

ತತ್ತ್ವಮಾಖ್ಯಾಹಿ ಭದ್ರಂ ತೇ ವಿಶ್ವಸೇಯಂ ವಚಸ್ತವ ।
ಏವಮುಕ್ತೋಽಥ ಹನುಮಾನ್ ಭರತೇನ ಮಹಾತ್ಮನಾ ॥

(ಶ್ಲೋಕ-66)

ಮೂಲಮ್

ಆಚಚಕ್ಷೇಽಥ ರಾಮಸ್ಯ ಚರಿತಂ ಕೃತ್ಸ್ನಶಃ ಕ್ರಮಾತ್ ।
ಶ್ರುತ್ವಾ ತು ಪರಮಾನಂದಂ ಭರತೋ ಮಾರುತಾತ್ಮಜಾತ್ ॥

ಅನುವಾದ

ಹೀಗೆ ಹೇಳಿ ಪುನಃ ಭರತನು ಹನುಮಂತನನ್ನು ಕುರಿತು ಹೀಗೆಂದನು - ‘‘ನನ್ನ ಒಡೆಯನಾದ ಶ್ರೀರಾಮನ ಕಥೆಯನ್ನು ಅವನು ಮಹಾರಣ್ಯಕ್ಕೆ ಹೊರಟುಹೋದ ಬಳಿಕ ಅನೇಕ ವರ್ಷಗಳ ನಂತರ ಈಗ ಕೇಳುತ್ತಿರುವೆನು. ಆಹಾ! ಎಂತಹ ಆಶ್ಚರ್ಯವು! ಇಂದು ನನಗೆ ಈ ಮಂಗಳಕರವಾದ ಲೌಕಿಕಗಾದೆಯು ನೆನಪಾಗುತ್ತದೆ ‘ಮನುಷ್ಯನಿಗೆ ನೂರು ವರ್ಷಗಳ ಮೇಲಾದರೂ ಆನಂದವು ದೊರಕಿಯೇ ದೊರಕುವವುದು’ ಅಯ್ಯಾ ಕಪಿಯೆ! ನಿನಗೆ ಮಂಗಳವಾಗಲಿ. ಶ್ರೀರಾಮನಿಗೂ ಕಪಿಗಳಿಗೂ ಸಮಾಗಮನವು ಹೇಗೆ ಉಂಟಾಯಿತು? ನಿಜವನ್ನು ಹೇಳು. ನಿನ್ನ ಮಾತಿನ ಮೇಲೆ ಪೂರ್ಣವಿಶ್ವಾಸ ನನಗಿದೆ.’’ ಮಹಾತ್ಮಾ ಭರತನು ಈ ರೀತಿಯಾಗಿ ಹೇಳಿದಾಗ, ಹನುಮಂತನು ಶ್ರೀರಾಮನ ಸಂಪೂರ್ಣ ಚರಿತ್ರೆಯನ್ನು ಕ್ರಮವಾಗಿ ಹೇಳಿದನು. ಹನುಮಂತನಿಂದ ಆ ಚರಿತ್ರೆಯನ್ನು ಕೇಳಿ ಭರತನು ಪರಮಾನಂದಭರಿತನಾದನು. ॥62-66॥

(ಶ್ಲೋಕ-67)

ಮೂಲಮ್

ಆಜ್ಞಾಪಯಚ್ಛತ್ರುಹಣಂ ಮುದಾ ಯುಕ್ತಂ ಮುದಾನ್ವಿತಃ ।
ದೈವತಾನಿ ಚ ಯಾವಂತಿ ನಗರೇ ರಘುನಂದನ ॥

(ಶ್ಲೋಕ-68)

ಮೂಲಮ್

ನಾನೋಪಹಾರಬಲಿಭಿಃ ಪೂಜಯಂತು ಮಹಾಧಿಯಃ ।
ಸೂತಾ ವೈತಾಲಿಕಾಶ್ಚೈವ ಬಂದಿನಃ ಸ್ತುತಿಪಾಠಕಾಃ ॥

(ಶ್ಲೋಕ-69)

ಮೂಲಮ್

ವಾರಮುಖ್ಯಾಶ್ಚ ಶತಶೋ ನಿರ್ಯಾಂತ್ವದ್ಯೈವ ಸಂಘಶಃ ।
ರಾಜದಾರಾಸ್ತಥಾಮಾತ್ಯಾಃ ಸೇನಾ ಹಸ್ತ್ಯಶ್ವಪತ್ತಯಃ ॥

(ಶ್ಲೋಕ-70)

ಮೂಲಮ್

ಬ್ರಾಹ್ಮಣಾಶ್ಚ ತಥಾ ಪೌರಾ ರಾಜಾನೋ ಯೇ ಸಮಾಗತಾಃ ।
ನಿರ್ಯಾಂತು ರಾಘವಸ್ಯಾದ್ಯ ದ್ರಷ್ಟುಂ ಶಶಿನಿಭಾನನಮ್ ॥

ಅನುವಾದ

ಅವನು ಸಂತೋಷಗೊಂಡವನಾಗಿ ಆನಂದಮಗ್ನ ಶತ್ರುಘ್ನನಿಗೆ ಅಪ್ಪಣೆಯನ್ನು ಕೊಟ್ಟನು ‘‘ಹೇ ರಘುಶ್ರೇಷ್ಠನಾದ ತಮ್ಮಾ! ಅಯೋಧ್ಯಾನಗರಿಯಲ್ಲಿರುವ ಎಲ್ಲ ದೇವರುಗಳಿಗೆ ಪ್ರಾಜ್ಞರಾದ ಅರ್ಚಕರು ನಾನಾವಿಧವಾದ ಪೂಜಾ-ಬಲಿ-ಉಪಚಾರಗಳಿಂದ ಅರ್ಚಿಸಲಿ. ಅಣ್ಣನಾದ ಶ್ರೀರಾಮನನ್ನು ಸ್ವಾಗತಿಸಲಿಕ್ಕಾಗಿ ಸೂತರು, ಸ್ತುತಿಪಾಠಕರು, ವಂದಿ-ಮಾಗಧರು, ವಾರಾಂಗನೆಯರು ಮುಂತಾಗಿ ಎಲ್ಲರೂ ಗುಂಪು-ಗುಂಪಾಗಿ ನೂರಾರುಗಟ್ಟಲೆಯಾಗಿ ಈಗ ನಗರದ ಹೊರಗೆ ಹೊರಡಲಿ. ಇವರಲ್ಲದೆ ರಾಜಮಾತೆಯರೂ ರಾಜಪತ್ನಿಯರೂ, ಅಮಾತ್ಯರೂ, ಕುದುರೆ, ಆನೆ, ರಥ, ಕಾಲಾಳುಗಳಿಂದ ಕೂಡಿದ ಚದುರಂಗ ಸೇನೆ, ಬ್ರಾಹ್ಮಣರೂ, ಪೌರರೂ, ಇಲ್ಲಿಗೆ ಬಂದಿರುವ ರಾಜರುಗಳೂ ಎಲ್ಲರೂ ಶ್ರೀರಾಮಚಂದ್ರನ ಮುಖಚಂದ್ರನ ದರ್ಶನ ಪಡೆಯಲಿಕ್ಕಾಗಿ ನಗರದ ಹೊರಭಾಗದಲ್ಲಿ ಬಂದು ಸೇರಲಿ’’ ॥67-70॥

(ಶ್ಲೋಕ-71)

ಮೂಲಮ್

ಭರತಸ್ಯ ವಚಃ ಶ್ರುತ್ವಾ ಶತ್ರುಘ್ನಪರಿಚೋದಿತಾಃ ।
ಅಲಂಚಕ್ರುಶ್ಚ ನಗರೀಂ ಮುಕ್ತಾರತ್ನಮಯೋಜ್ಜ್ವಲೈಃ ॥

(ಶ್ಲೋಕ-72)

ಮೂಲಮ್

ತೋರಣೈಶ್ಚ ಪತಾಕಾಭಿರ್ವಿಚಿತ್ರಾಭಿರನೇಕಧಾ ।
ಅಲಂಕುರ್ವಂತಿ ವೇಶ್ಮಾನಿ ನಾನಾಬಲಿವಿಚಕ್ಷಣಾಃ ॥

ಅನುವಾದ

ಭರತನ ಮಾತನ್ನು ಕೇಳಿದ ಶತ್ರುಘ್ನನಿಂದ ಪ್ರೇರಿತರಾದ ನಾನಾ ಪ್ರಕಾರದ ರಚನೆಯಲ್ಲಿ ಕುಶಲರಾದ ನಾಗರಿಕರು ತಮ್ಮ-ತಮ್ಮ ಮನೆಗಳನ್ನು ಪೂಜಾಲಂಕಾರಗಳಿಂದ ಅಲಂಕರಿಸ ತೊಡಗಿದರು ಹಾಗೂ ಅನೇಕ ಪ್ರಕಾರದ ಮುತ್ತು ರತ್ನಗಳಿಂದ ಹೊಳೆಯುವ ತೋರಣಗಳಿಂದಲೂ, ವಿಚಿತ್ರವಾದ ಬಾವುಟಗಳಿಂದಲೂ ನಾನಾ ರೀತಿಯಾಗಿ ಪಟ್ಟಣವನ್ನು ಅಲಂಕರಿಸಿದರು. ॥71-72॥

(ಶ್ಲೋಕ-73)

ಮೂಲಮ್

ನಿರ್ಯಾಂತಿ ವೃಂದಶಃ ಸರ್ವೇ ರಾಮದರ್ಶನಲಾಲಸಾಃ ।
ಹಯಾನಾಂ ಶತಸಾಹಸ್ರಂ ಗಜಾನಾಮಯುತಂ ತಥಾ ॥

(ಶ್ಲೋಕ-74)

ಮೂಲಮ್

ರಥಾನಾಂ ದಶಸಾಹಸ್ರಂ ಸ್ವರ್ಣಸೂತ್ರವಿಭೂಷಿತಮ್
ಪಾರಮೇಷ್ಠೀನ್ಯುಪಾದಾಯ ದ್ರವ್ಯಾಣ್ಯುಚ್ಚಾವಚಾನಿ ಚ ॥

ಅನುವಾದ

ಭಗವಾನ್ ಶ್ರೀರಾಮನದರ್ಶನ ಲಾಲಸೆಯಿಂದ ಎಲ್ಲ ಜನರು ಗುಂಪು-ಗುಂಪುಗಳಾಗಿ, ಅವನಿಗೆ ಕೊಡಲು ಕಾಣಿಕೆಗಳನ್ನು ಎತ್ತಿಕೊಂಡು, ನೂರು ಸಾವಿರ ಕುದುರೆಗಳೂ, ಹತ್ತುಸಾವಿರ ಆನೆಗಳೂ, ಚಿನ್ನದ ದಾರಗಳನ್ನು ಹೆಣೆದು ಅಲಂಕರಿಸಿದ್ದ ಹತ್ತು ಸಾವಿರ ರಥಗಳೂ ಹೀಗೆ ಅನೇಕ ಐಶ್ವರ್ಯ ಸೂಚಕವಾದ ವಸ್ತು ಗಳನ್ನು ಹಿಡಿದುಕೊಂಡು ನಗರದ ಹೊರ ಭಾಗಕ್ಕೆ ಹೊರಟರು. ॥73-74॥

(ಶ್ಲೋಕ-75)

ಮೂಲಮ್

ತತಸ್ತು ಶಿಬಿಕಾರೂಢಾ ನಿರ್ಯಯೂ ರಾಜಯೋಷಿತಃ ।
ಭರತಃ ಪಾದುಕೇ ನ್ಯಸ್ಯ ಶಿರಸ್ಯೇವ ಕೃತಾಂಜಲಿಃ ॥

(ಶ್ಲೋಕ-76)

ಮೂಲಮ್

ಶತ್ರುಘ್ನಸಹಿತೋ ರಾಮಂ ಪಾದಚಾರೇಣ ನಿರ್ಯಯೌ ।
ತದೈವ ದೃಶ್ಯತೇ ದೂರಾದ್ವಿಮಾನಂ ಚಂದ್ರಸನ್ನಿಭಮ್ ॥

(ಶ್ಲೋಕ-77)

ಮೂಲಮ್

ಪುಷ್ಪಕಂ ಸೂರ್ಯಸಂಕಾಶಂ ಮನಸಾ ಬ್ರಹ್ಮನಿರ್ಮಿತಮ್ ।
ಏತಸ್ಮಿನ್ ಭ್ರಾತರೌ ವೀರೌ ವೈದೇಹ್ಯಾ ರಾಮಲಕ್ಷ್ಮಣೌ ॥

(ಶ್ಲೋಕ-78)

ಮೂಲಮ್

ಸುಗ್ರೀವಶ್ಚ ಕಪಿಶ್ರೇಷ್ಠೋ ಮಂತ್ರಿಭಿಶ್ಚ ವಿಭೀಷಣಃ ।
ದೃಶ್ಯತೇ ಪಶ್ಯತ ಜನಾ ಇತ್ಯಾಹ ಪವನಾತ್ಮಜಃ ॥

ಅನುವಾದ

ಅವರ ಹಿಂದೆ ಹಿಂದೆ ರಾಜಸ್ತ್ರೀಯರೆಲ್ಲರೂ ಪಲ್ಲಕ್ಕಿಗಳನ್ನು ಏರಿ ಹೊರಟರು. ಭರತನಾದರೋ ಭಗವಂತನ ಪಾದುಕೆಗಳನ್ನು ತಲೆಯಲ್ಲಿ ಹೊತ್ತುಕೊಂಡು, ಕೈ ಮುಗಿದುಕೊಂಡು, ಶತ್ರುಘ್ನನೊಡಗೂಡಿ ಕಾಲುನಡಿಗೆಯಿಂದಲೇ ಹೊರಟನು. ಆ ವೇಳೆಗಾಗಲೇ ಚಂದ್ರನಂತೆ ಕಾಣುತ್ತಿದ್ದ ಹಾಗೂ ಸೂರ್ಯನಂತೆ ಹೊಳೆಯುತ್ತಿದ್ದ ಬ್ರಹ್ಮನ ಮಾನಸ ಸೃಷ್ಟಿಯಾದ ಪುಷ್ಪಕವಿಮಾನವು ದೂರದಲ್ಲಿ ಕಾಣಿಸಿಕೊಂಡಿತು. ಅದನ್ನು ನೋಡಿದ ಹನುಮಂತನು ‘‘ಎಲೈ ಜನಗಳಿರಾ! ನೋಡಿರಿ ಈ ವಿಮಾನದಲ್ಲಿ ಸೀತಾದೇವಿಯರೊಂದಿಗೆ ವೀರರಾದ ಭ್ರಾತೃಗಳಾದ ರಾಮಲಕ್ಷ್ಮಣರು ಇದ್ದಾರೆ. ಕಪಿಶ್ರೇಷ್ಠನಾದ ಸುಗ್ರೀವನೂ, ಮಂತ್ರಿಗಳೊಡನೆ ವಿಭೀಷಣನೂ ಕಂಡು ಬರುತ್ತಿದ್ದಾರೆ’’ ಎಂದು ಹೇಳಿದನು. ॥75-78॥

(ಶ್ಲೋಕ-79)

ಮೂಲಮ್

ತತೋ ಹರ್ಷಸಮುದ್ಭೂತೋ ನಿಃಸ್ವನೋ ದಿವಮಸ್ಪೃಶತ್ ।
ಸ್ತ್ರೀಬಾಲಯುವವೃದ್ಧಾನಾಂ ರಾಮೋಽಯಮಿತಿ ಕಿರ್ತನಾತ್ ॥

ಅನುವಾದ

ಅನಂತರ ಸ್ತ್ರೀಯರು, ಬಾಲಕರು, ಯುವಕರು, ವೃದ್ಧರೇ ಮುಂತಾದವರ ಹರ್ಷದಿಂದೊಡ ಗೂಡಿದ ‘ಇವನೇ ರಾಮನು’ ಎಂಬ ಗಟ್ಟಿಯಾದ ಕೂಗು ಸ್ವರ್ಗಲೋಕವನ್ನು ಮುಟ್ಟಿತು. ॥79॥

(ಶ್ಲೋಕ-80)

ಮೂಲಮ್

ರಥಕುಂಜರವಾಜಿಸ್ಥಾ ಅವತೀರ್ಯ ಮಹೀಂ ಗತಾಃ ।
ದದೃಶುಸ್ತೇ ವಿಮಾನಸ್ಥಂ ಜನಾಃ ಸೋಮಮಿವಾಂಬರೇ ॥

ಅನುವಾದ

ರಥ, ಆನೆ, ಕುದುರೆಗಳ ಮೇಲೆ ಕುಳಿತ್ತಿದ್ದವರೆಲ್ಲರೂ ಕೆಳಗಿಳಿದು ಭೂಮಿಯ ಮೇಲೆ ನಿಂತುಕೊಂಡರು. ಆ ಜನರೆಲ್ಲರೂ ಆಕಾಶದಲ್ಲಿ ಚಂದ್ರನನ್ನು ನೋಡುವಂತೆ ವಿಮಾನದಲ್ಲಿದ್ದ ಶ್ರೀರಾಮನನ್ನು ನೋಡತೊಡಗಿದರು. ॥80॥

(ಶ್ಲೋಕ-81)

ಮೂಲಮ್

ಪ್ರಾಂಜಲಿರ್ಭರತೋ ಭೂತ್ವಾ ಪ್ರಹೃಷ್ಟೋ ರಾಘವೋನ್ಮುಖಃ ।
ತತೋ ವಿಮಾನಾಗ್ರಗತಂ ಭರತೋ ರಾಘವಂ ಮುದಾ ॥

(ಶ್ಲೋಕ-82)

ಮೂಲಮ್

ವವಂದೇ ಪ್ರಣತೋ ರಾಮಂ ಮೇರುಸ್ಥಮಿವ ಭಾಸ್ಕರಮ್ ।
ತತೋ ರಾಮಾಭ್ಯನುಜ್ಞಾತಂ ವಿಮಾನಮಪತದ್ಭುವಿ ॥

ಅನುವಾದ

ಕೈಮುಗಿದುಕೊಂಡಿದ್ದ ಭರತನು ಬಹಳ ಸಂತೋಷ ಗೊಂಡವನಾಗಿ ಶ್ರೀರಾಮನ ಇದಿರಾಗಿ ವಿಮಾನದ ಅಗ್ರಾಸನದಲ್ಲಿ ಕುಳಿತ್ತಿದ್ದ ಮೇರುಪರ್ವತದಲ್ಲಿರುವ ಸೂರ್ಯನಂತಿದ್ದ ಶ್ರೀರಾಮಚಂದ್ರನನ್ನು ನಮ್ರನಾಗಿ ನಮಸ್ಕರಿಸಿದನು. ಆಗ ರಾಮನ ಅಪ್ಪಣೆಯಂತೆ ವಿಮಾನವು ಭೂಮಿಗೆ ಇಳಿಯಿತು. ॥81-82॥

(ಶ್ಲೋಕ-83)

ಮೂಲಮ್

ಆರೋಪಿತೋ ವಿಮಾನಂ ತದ್ಭರತಃ ಸಾನುಜಸ್ತದಾ ।
ರಾಮಮಾಸಾದ್ಯ ಮುದಿತಃ ಪುನರೇವಾಭ್ಯವಾದಯತ್ ॥

ಅನುವಾದ

ಅನಂತರ ಭಗವಾನ್ ಶ್ರೀರಾಮನು ತಮ್ಮನಾದ ಶತ್ರುಘ್ನನೊಂದಿಗೆ ಭರತನನ್ನು ವಿಮಾನದಲ್ಲಿ ಹತ್ತಿಸಿಕೊಂಡನು. ಶ್ರೀರಾಮಚಂದ್ರನ ಬಳಿಸಾರಿ ಭರತನು ಸಂತೋಷ ಭರಿತನಾಗಿ ಪುನಃ-ಪುನಃ ನಮಸ್ಕಾರ ಮಾಡಿದನು. ॥83॥

(ಶ್ಲೋಕ-84)

ಮೂಲಮ್

ಸಮುತ್ಥಾಪ್ಯ ಚಿರಾದ್ ದೃಷ್ಟಂ ಭರತಂ ರಘುನಂದನಃ ।
ಭ್ರಾತರಂ ಸ್ವಾಂಕಮಾರೋಪ್ಯ ಮುದಾ ತಂ ಪರಿಷಸ್ವಜೇ ॥

ಅನುವಾದ

ಬಹಳ ಕಾಲದ ಅನಂತರ ಕಂಡ ರಘುನಂದನನು ಭರತನನ್ನು ಲಗುಬಗೆಯಿಂದ ಮೇಲಕ್ಕೆಬ್ಬಿಸಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆನಂದದಿಂದ ಆಲಿಂಗಿಸಿಕೊಂಡನು. ॥84॥

(ಶ್ಲೋಕ-85)

ಮೂಲಮ್

ತತೋ ಲಕ್ಷ್ಮಣಮಾಸಾದ್ಯ ವೈದೇಹೀಂ ನಾಮ ಕೀರ್ತಯನ್ ।
ಅಭ್ಯವಾದಯತ ಪ್ರೀತೋ ಭರತಃ ಪ್ರೇಮ ವಿಹ್ವಲಃ ॥

ಅನುವಾದ

ಮತ್ತೆ ಪ್ರೇಮವಿಹ್ವಲನಾಗಿ ಭರತನು ಲಕ್ಷ್ಮಣನನ್ನು ಭೇಟಿಯಾಗಿ, ಸೀತಾಮಾತೆಯ ಚರಣಗಳಲ್ಲಿ ತನ್ನ ನಾಮ ಧೇಯವನ್ನು ಉಚ್ಚರಿಸುತ್ತಾ ಪ್ರೀತಿಯಿಂದ ನಮಸ್ಕರಿಸಿದನು. ॥85॥

(ಶ್ಲೋಕ-86)

ಮೂಲಮ್

ಸುಗ್ರೀವಂ ಜಾಂಬವಂತಂ ಚ ಯುವರಾಜಂ ತಥಾಂಗದಮ್ ।
ಮೈಂದದ್ವಿವಿದನೀಲಾಂಶ್ಚ ಋಷಭಂ ಚೈವ ಸಸ್ವಜೇ ॥

(ಶ್ಲೋಕ-87)

ಮೂಲಮ್

ಸುಷೇಣಂ ಚ ನಲಂ ಚೈವ ಗವಾಕ್ಷಂ ಗಂಧಮಾದನಮ್ ।
ಶರಭಂ ಪನಸಂ ಚೈವ ಭರತಃ ಪರಿಷಸ್ವಜೇ ॥

ಅನುವಾದ

ಹಾಗೆಯೇ ಭರತನು ಸುಗ್ರೀವ, ಜಾಂಬವಂತ, ಯುವರಾಜನಾದ ಅಂಗದ, ಮೈಂದ, ದ್ವಿವಿದ, ನೀಲ, ಋಷಭ, ಸುಷೇಣ, ನಳ, ಗವಾಕ್ಷ, ಗಂಧಮಾದನ, ಶರಭ, ಪನಸ ಇವರುಗಳನ್ನು ಅಪ್ಪಿಕೊಂಡನು. ॥86-87॥

(ಶ್ಲೋಕ-88)

ಮೂಲಮ್

ಸರ್ವೇ ತೇ ಮಾನುಷಂ ರೂಪಂ ಕೃತ್ವಾ ಭರತಮಾದೃತಾಃ ।
ಪಪ್ರಚ್ಛುಃ ಕುಶಲಂ ಸೌಮ್ಯಾಃ ಪ್ರಹೃಷ್ಠಾಶ್ಚ ಪ್ಲವಂಗಮಾಃ ॥

ಅನುವಾದ

ಈ ಪ್ರಕಾರ ಭರತನಿಂದ ಸತ್ಕಾರವನ್ನು ಪಡೆದ ಆ ಸೌಮ್ಯರಾದ ವಾನರರೆಲ್ಲರು ಮನುಷ್ಯರೂಪವನ್ನು ಧರಿಸಿ ಆದರದಿಂದ ಭರತನನ್ನು ಕುಶಲಪ್ರಶ್ನೆಮಾಡಿದರು ಹಾಗೂ ಆ ವಾನರ ರೆಲ್ಲರೂ ಬಹಳ ಆನಂದಿತರಾದರು. ॥88॥

(ಶ್ಲೋಕ-89)

ಮೂಲಮ್

ತತಃ ಸುಗ್ರೀವಮಾಲಿಂಗ್ಯ ಭರತಃ ಪ್ರಾಹ ಭಕ್ತಿತಃ ।
ತ್ವತ್ಸಹಾಯೇನ ರಾಮಸ್ಯ ಜಯೋಽಭೂದ್ರಾವಣೋ ಹತಃ ॥

(ಶ್ಲೋಕ-90)

ಮೂಲಮ್

ತ್ವಮಸ್ಮಾಕಂ ಚತುರ್ಣಾಂ ತು ಭ್ರಾತಾ ಸುಗ್ರೀವ ಪಂಚಮಃ ।
ಶತ್ರುಘ್ನಶ್ಚ ತದಾ ರಾಮಮಭಿವಾದ್ಯ ಸಲಕ್ಷ್ಮಣಮ್ ॥

(ಶ್ಲೋಕ-91)

ಮೂಲಮ್

ಸೀತಾಯಾಶ್ಚರಣೌ ಪಶ್ಚಾದ್ವವಂದೇ ವಿನಯಾನ್ವಿತಃ ।
ರಾಮೋ ಮಾತರಮಾಸಾದ್ಯ ವಿವರ್ಣಾಂ ಶೋಕವಿಹ್ವಲಾಮ್ ॥

(ಶ್ಲೋಕ-92)

ಮೂಲಮ್

ಜಗ್ರಾಹ ಪ್ರಣತಃ ಪಾದೌ ಮನೋ ಮಾತುಃ ಪ್ರಸಾದಯನ್ ।
ಕೈಕೇಯೀಂ ಚ ಸುಮಿತ್ರಾಂ ಚ ನನಾಮೇತರಮಾತರೌ ॥

ಅನುವಾದ

ಅನಂತರ ಭರತನು ಸುಗ್ರೀವನನ್ನು ಆಲಿಂಗಿಸಿಕೊಂಡು ಭಕ್ತಿಯಿಂದ ಹೀಗೆಂದನು ‘‘ಎಲೈ ಸುಗ್ರೀವನೆ ! ನಿನ್ನ ಸಹಾಯದಿಂದ ಶ್ರೀರಾಮಚಂದ್ರನಿಗೆ ವಿಜಯವಾಯಿತು. ರಾವಣನು ನಾಶಹೊಂದಿದನು. ನೀನಾದರೋ ನಾವು ನಾಲ್ವರು ಸಹೋದರರ ಜೊತೆಗೆ ಐದನೆಯವನಾಗಿರುವೆ.’’ ಅನಂತರ ಶತ್ರುಘ್ನನು ಲಕ್ಷ್ಮಣ ಸಹಿತನಾದ ಶ್ರೀರಾಮನನ್ನು ನಮಸ್ಕರಿಸಿ, ಬಳಿಕ ಸೀತಾದೇವಿಯ ಚರಣಗಳಿಗೆ ವಿನಯದಿಂದ ನಮಸ್ಕರಿಸಿದನು. ಬಳಿಕ ಶ್ರೀರಾಮಚಂದ್ರನು ದುಃಖದಿಂದ ಬಳಲಿದವಳೂ, ವಿಷಾದ ಹೊಂದಿದವಳೂ ಆಗಿದ್ದ ತಾಯಿಯಾದ ಕೌಸಲ್ಯೆಯ ಬಳಿಸಾರಿ ಅವಳ ಮನಸ್ಸಂತೋಷಪಡಿಸಿ, ಬಗ್ಗಿ ಪಾದಗಳನ್ನು ಮುಟ್ಟಿ ವಂದಿಸಿಕೊಂಡನು. ಅನಂತರ ಕೈಕೆಯೀ, ಸುಮಿತ್ರಾ ತಾಯಂದಿರನ್ನೂ ನಮಸ್ಕರಿಸಿದನು. ॥89-92॥

(ಶ್ಲೋಕ-93)

ಮೂಲಮ್

ಭರತಃ ಪಾದುಕೇ ತೇ ತು ರಾಘವಸ್ಯ ಸುಪೂಜಿತೇ ।
ಯೋಜಯಾಮಾಸ ರಾಮಸ್ಯ ಪಾದಯೋರ್ಭಕ್ತಿಸಂಯುತಃ ॥

ಅನುವಾದ

ಭರತನು ಚೆನ್ನಾಗಿ ಪೂಜಿಸಿದ ಶ್ರೀರಾಮನ ಪಾದುಕೆಗಳನ್ನು ಭಕ್ತಿಯಿಂದ ಅವನ ಪಾದಗಳಿಗೆ ತೊಡಿಸಿದನು. ॥93॥

(ಶ್ಲೋಕ-94)

ಮೂಲಮ್

ರಾಜ್ಯಮೇತನ್ನ್ಯಾಸಭೂತಂ ಮಯಾ ನಿರ್ಯಾತಿತಂ ತವ ।
ಅದ್ಯ ಮೇ ಸಫಲಂ ಜನ್ಮ ಲಿತೋ ಮೇ ಮನೋರಥಃ ॥

(ಶ್ಲೋಕ-95)

ಮೂಲಮ್

ಯತ್ಪಶ್ಯಾಮಿ ಸಮಾಯಾತಮಯೋಧ್ಯಾಂ ತ್ವಾಮಹಂ ಪ್ರಭೋ ।
ಕೋಷ್ಠಾಗಾರಂ ಬಲಂ ಕೋಶಂ ಕೃತಂ ದಶಗುಣಂ ಮಯಾ ॥

(ಶ್ಲೋಕ-96)

ಮೂಲಮ್

ತ್ವತ್ತೇಜಸಾ ಜಗನ್ನಾಥ ಪಾಲಯಸ್ವ ಪುರಂ ಸ್ವಕಮ್ ।
ಇತಿ ಬ್ರುವಾಣಂ ಭರತಂ ದೃಷ್ಟ್ವಾ ಸರ್ವೇ ಕಪೀಶ್ವರಾಃ ॥

(ಶ್ಲೋಕ-97)

ಮೂಲಮ್

ಮುಮುಚುರ್ನೇತ್ರಜಂ ತೋಯಂ ಪ್ರಶಶಂಸುರ್ಮುದಾನ್ವಿತಾಃ ।
ತತೋ ರಾಮಃ ಪ್ರಹೃಷ್ಟಾತ್ಮಾ ಭರತಂ ಸ್ವಾಂಕಗಂ ಮುದಾ ॥

(ಶ್ಲೋಕ-98)

ಮೂಲಮ್

ಯಯೌ ತೇನ ವಿಮಾನೇನ ಭರತಸ್ಯಾಶ್ರಮಂ ತದಾ ।
ಅವರುಹ್ಯ ತದಾ ರಾಮೋ ವಿಮಾನಾಗ್ಯ್ರಾನ್ಮಹೀತಲಮ್ ॥

(ಶ್ಲೋಕ-99)

ಮೂಲಮ್

ಅಬ್ರವೀತ್ಪುಷ್ಪಕಂ ದೇವೋ ಗಚ್ಛ ವೈಶ್ರವಣಂ ವಹ ।
ಅನುಗಚ್ಛಾನುಜಾನಾಮಿ ಕುಬೇರಂ ಧನಪಾಲಕಮ್ ॥

ಅನುವಾದ

‘‘ಹೇ ಪ್ರಭುವೆ! ನನ್ನ ಬಳಿಯಲ್ಲಿ ನ್ಯಾಸವಾಗಿ ಇಡಲ್ಟಟ್ಟ ನಿನ್ನ ರಾಜ್ಯವನ್ನು ನಾನು ಪುನಃ ನಿನಗೇ ಒಪ್ಪಿಸುತ್ತಿದ್ದೇನೆ. ಇಂದು ನೀನು ಅಯೋಧ್ಯೆಗೆ ಬಂದಿರುವುದನ್ನು ನೋಡಿದೆ. ನನ್ನ ಜನ್ಮವು ಸಫಲವಾಯಿತು. ನನ್ನ ಎಲ್ಲ ಇಷ್ಟಾರ್ಥಗಳು ನೆರವೇರಿದವು. ಹೇ ಜಗನ್ನಾಥಾ! ನಿನ್ನ ಮಹಿಮೆಯಿಂದ ಅನ್ನ-ಭಂಡಾರ, ಸೇನೆ ಹಾಗೂ ಕೋಶಾದಿಗಳು ಮೊದಲಿಗಿಂತ ಹತ್ತು ಪಟ್ಟು ಬೆಳೆದಿವೆ. ಇನ್ನು ನೀನು ನಿನ್ನ ನಗರವನ್ನು ಸ್ವತಃ ಪಾಲಿಸುವವನಾಗು’’ ಎಂದು ವಿನಂತಿಸಿಕೊಂಡನು. ಈ ರೀತಿಯಾಗಿ ಹೇಳುತ್ತಿರುವ ಭರತನನ್ನು ಕಂಡು ಕಪಿಶ್ರೇಷ್ಠರೆಲ್ಲರೂ ಆನಂದಬಾಷ್ಟವನ್ನು ಸುರಿಸಿದರು. ಸಂತೋಷದಿಂದ ಭರತನನ್ನು ಹೊಗಳಿದರು. ಅನಂತರ ಶ್ರೀರಾಮಚಂದ್ರನು ಹೆಚ್ಚಿನ ಸಂತೋಷದಿಂದ ತನ್ನ ತೊಡೆಯ ಮೇಲೆ ಭರತನು ಕುಳಿತಿದ್ದಂತೆಯೇ ಅದೇ ವಿಮಾನದಲ್ಲಿ ಭರತನ ಆಶ್ರಮಕ್ಕೆ ಹೋದನು. ಅಲ್ಲಿ ಶ್ರೇಷ್ಠವಾದ ವಿಮಾನದಿಂದ ನೆಲದ ಮೇಲೆ ಇಳಿದು ಭಗವಾನ್ ಶ್ರೀರಾಮಚಂದ್ರನು ಪುಷ್ಪಕವನ್ನು ಕುರಿತು ಹೇಳಿದನು — ‘‘ಇನ್ನು ನೀನು ಇಲ್ಲಿಂದ ಹೊರಡು. ಮುಂದೆ ಧನಪತಿಯಾದ ಕುಬೇರನನ್ನು ಸೇರಿ ಅವನನ್ನು ಸೇವಿಸುವವನಾಗು. ನಿನಗೆ ಅಪ್ಪಣೆಯನ್ನು ಕೊಟ್ಟಿರುವೆನು.’’ ॥94-99॥

(ಶ್ಲೋಕ-100)

ಮೂಲಮ್

ರಾಮೋ ವಸಿಷ್ಠಸ್ಯ ಗುರೋಃ ಪದಾಂಬುಜಂ
ನತ್ವಾ ಯಥಾ ದೇವಗುರೋಃ ಶತಕ್ರತುಃ ।
ದತ್ತ್ವಾ ಮಹಾರ್ಹಾಸನಮುತ್ತಮಂ ಗುರೋ-
ರುಪಾವಿವೇಶಾಥ ಗುರೋಃ ಸಮೀಪತಃ ॥

ಅನುವಾದ

ಅನಂತರ ಶ್ರೀರಾಮನು ದೇವೇಂದ್ರನು ಬೃಹಸ್ಪತಿಯರನ್ನು ಗೌರವಿಸುವಂತೆ ಗುರುಗಳಾದ ವಸಿಷ್ಠರ ಪಾದಾರವಿಂದಗಳಲ್ಲಿ ವಂದಿಸಿಕೊಂಡು, ಅವರಿಗೆ ಒಂದು ಬೆಲೆಬಾಳುವ ಉತ್ತಮ ಆಸನವನ್ನು ನೀಡಿ, ತಾನೂ ಕೂಡ ಗುರುವಿನ ಬಳಿಯಲ್ಲೇ ಕುಳಿತುಕೊಂಡನು. ॥100॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಚತುರ್ದಶಃ ಸರ್ಗಃ ॥14॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹದಿನಾಲ್ಕನೆಯ ಸರ್ಗವು ಮುಗಿಯಿತು.