೧೩

[ಹದಿಮೂರನೆಯ ಸರ್ಗ]

ಭಾಗಸೂಚನಾ

ದೇವತೆಗಳು ಭಗವಾನ್ ಶ್ರೀರಾಮನನ್ನು ಸ್ತುತಿಸುವುದು, ಸೀತಾದೇವಿ ಸಹಿತ ಅಗ್ನಿದೇವನು ಪ್ರಕಟನಾಗುವುದು, ಅಯೋಧ್ಯೆಗಾಗಿ ಪ್ರಯಾಣ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ತತಃ ಶಕ್ರಃ ಸಹಸ್ರಾಕ್ಷೋ ಯಮಶ್ಚ ವರುಣಸ್ತಥಾ ।
ಕುಬೇರಶ್ಚ ಮಹಾತೇಜಾಃ ಪಿನಾಕೀ ವೃಷವಾಹನಃ ॥

(ಶ್ಲೋಕ-2)

ಮೂಲಮ್

ಬ್ರಹ್ಮಾ ಬ್ರಹ್ಮವಿದಾಂ ಶ್ರೇಷ್ಠೋ ಮುನಿಭಿಃ ಸಿದ್ಧಚಾರಣೈಃ ।
ಋಷಯಃ ಪಿತರಃ ಸಾಧ್ಯಾ ಗಂಧರ್ವಾಪ್ಸರಸೋರಗಾಃ ॥

(ಶ್ಲೋಕ-3)

ಮೂಲಮ್

ಏತೇ ಚಾನ್ಯೇ ವಿಮಾನಾಗ್ರೈರಾಜಗ್ಮುರ್ಯತ್ರ ರಾಘವಃ ।
ಅಬ್ರುನ್ಪರಮಾತ್ಮಾನಂ ರಾಮಂ ಪ್ರಾಂಜಲಯಶ್ಚ ತೇ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಪಾರ್ವತಿ! ಇದೇ ಸಮಯದಲ್ಲಿ ಸಹಸ್ರಾಕ್ಷನಾದ ದೇವೇಂದ್ರನೂ, ಯಮನೂ, ವರುಣನೂ, ಕುಬೇರನೂ, ಮಹಾತೇಜಸ್ವೀ ವೃಷಭವಾಹನ ಪರಮೇಶ್ವರನೂ, ಬ್ರಹ್ಮದೇವರೂ, ಬ್ರಹ್ಮವಿದರಲ್ಲಿ ಶ್ರೇಷ್ಠರಾದ ಮುನಿಗಳೂ, ಸಿದ್ಧರೂ, ಚಾರಣರೂ, ಋಷಿಗಳೂ, ಪಿತೃಗಳೂ, ಸಾಧ್ಯರೂ, ಗಂಧರ್ವರೂ, ಅಪ್ಸರೆಯರೂ, ನಾಗಗಳೂ ಇವರೆಲ್ಲರೂ ಹಾಗೂ ಇನ್ನು ಬೇರೆ-ಬೇರೆ ದೇವತೆಗಳೂ ಶ್ರೇಷ್ಠವಾದ ವಿಮಾನಗಳನ್ನೇರಿ ಶ್ರೀರಾಮನಿರುವಲ್ಲಿಗೆ ಬಂದರು. ಅವರೆಲ್ಲರೂ ಕೈ ಮುಗಿದುಕೊಂಡು ಪರಮಾತ್ಮನಾದ ರಾಮನಲ್ಲಿ ಹೀಗೆಂದರು. ॥1-3॥

(ಶ್ಲೋಕ-4)

ಮೂಲಮ್

ಕರ್ತಾ ತ್ವಂ ಸರ್ವಲೋಕಾನಾಂ ಸಾಕ್ಷೀ ವಿಜ್ಞಾನವಿಗ್ರಹಃ ।
ವಸೂನಾಮಷ್ಟಮೋಽಸಿ ತ್ವಂ ರುದ್ರಾಣಾಂ ಶಂಕರೋ ಭವಾನ್ ॥

ಅನುವಾದ

ಹೇ ರಾಮಚಂದ್ರಾ! ನೀನು ಎಲ್ಲ ಲೋಕಗಳ ಕರ್ತೃವಾಗಿರುವೆ. ಎಲ್ಲಕ್ಕೂ ಸಾಕ್ಷಿಯೂ, ವಿಶುದ್ಧ ವಿಜ್ಞಾನ ಸ್ವರೂಪನಾಗಿರುವೆ. ವಸುದೇವತೆಗಳಲ್ಲಿ ನೀನು ಎಂಟನೆಯವನಾಗಿರುವೆ. ರುದ್ರರಲ್ಲಿ ಶಂಕರನಾಗಿರುವೆ. ॥4॥

(ಶ್ಲೋಕ-5)

ಮೂಲಮ್

ಆದಿಕರ್ತಾಸಿ ಲೋಕಾನಾಂ ಬ್ರಹ್ಮಾ ತ್ವಂ ಚತುರಾನನಃ ।
ಅಶ್ವಿನೌ ಘ್ರಾಣಭೂತೌ ತೇ ಚಕ್ಷುಷೀ ಚಂದ್ರಭಾಸ್ಕರೌ ॥

ಅನುವಾದ

ಎಲ್ಲ ಲೋಕಗಳ ಆದಿ ಕರ್ತೃವೂ ನೀನೇ, ಚತುರ್ಮುಖ ಬ್ರಹ್ಮದೇವನೂ ನೀನೇ ಆಗಿರುವೆ. ಅಶ್ವಿನಿಕುಮಾರರು ನಿನ್ನ ನಾಸಿಕವಾಗಿರುವರು. ಸೂರ್ಯ-ಚಂದ್ರರೇ ನಿನ್ನ ಕಣ್ಣುಗಳಾಗಿರುವರು. ॥5॥

(ಶ್ಲೋಕ-6)

ಮೂಲಮ್

ಲೋಕಾನಾಮಾದಿರಂತೋಽಸಿ ನಿತ್ಯ ಏಕಃ ಸದೋದಿತಃ ।
ಸದಾ ಶುದ್ಧಃ ಸದಾ ಬುದ್ಧಃ ಸದಾ ಮುಕ್ತೋಽಗುಣೋದ್ವಯಃ ॥

ಅನುವಾದ

ಎಲ್ಲ ಲೋಕಗಳ ಆದಿ (ಉತ್ಪತ್ತಿಸ್ಥಾನ) ಮತ್ತು ಅಂತ್ಯನೂ (ಲಯಸ್ಥಾನ) ನೀನೇ ಆಗಿರುವೆ. ನಿತ್ಯನೂ, ನಿರಂಜನನೂ, ಸದೋದಿತನೂ, (ಆವಿರ್ಭಾವ-ತಿರೋಭಾವಗಳಿಂದ ರಹಿತ ನಿತ್ಯಪ್ರಕಾಶ ಸ್ವರೂಪನು) ಸದಾಶುದ್ಧನೂ, ಸದಾಬುದ್ಧನೂ, ಸದಾಮುಕ್ತನೂ, ನಿರ್ಗುಣನೂ, ಅದ್ವಿತೀಯನೂ ಆಗಿರುವೆ. ॥6॥

(ಶ್ಲೋಕ-7)

ಮೂಲಮ್

ತ್ವನ್ಮಾಯಾಸಂವೃತಾನಾಂ ತ್ವಂ ಭಾಸಿ ಮಾನುಷವಿಗ್ರಹಃ ।
ತ್ವನ್ನಾಮ ಸ್ಮರತಾಂ ರಾಮ ಸದಾ ಭಾಸಿ ಚಿದಾತ್ಮಕಃ ॥

ಅನುವಾದ

ನಿನ್ನ ಮಾಯೆಯಿಂದ ಆವರಿಸಲ್ಪಟ್ಟಿರುವವರಿಗೆ ನೀನು ಮನುಷ್ಯಾಕಾರನಾಗಿ ಕಂಡುಬರುತ್ತಿರುವೆ. ನಿನ್ನ ನಾಮವನ್ನು ನೆನೆಯುವವರಿಗೆ ಯಾವಾಗಲೂ ಚಿದಾತ್ಮಕನಾಗಿ ತೋರಿಕೊಳ್ಳುವೆ. ॥7॥

(ಶ್ಲೋಕ-8)

ಮೂಲಮ್

ರಾವಣೇನ ಹೃತಂ ಸ್ಥಾನಮಸ್ಮಾಕಂ ತೇಜಸಾ ಸಹ ।
ತ್ವಯಾದ್ಯ ನಿಹತೋ ದುಷ್ಟಃ ಪುನಃ ಪ್ರಾಪ್ತಂ ಪದಮ ಸ್ವಕಮ್ ॥

ಅನುವಾದ

ರಾವಣನು ನಮ್ಮ ತೇಜ ಸಹಿತ ನಮ್ಮ ಸ್ಥಾನಗಳನ್ನು ಕಸಿದುಕೊಂಡಿದ್ದನು. ಆ ದುಷ್ಟನು ಇಂದು ನಿನ್ನಿಂದ ಹತನಾದನು. ಅದರಿಂದ ನಮ್ಮ ಸ್ಥಾನಗಳು ಮರಳಿ ಪಡೆದುಕೊಂಡಂತಾಗಿದೆ. ॥8॥

(ಶ್ಲೋಕ-9)

ಮೂಲಮ್

ಏವಂ ಸ್ತುವತ್ಸು ದೇವೇಷು ಬ್ರಹ್ಮಾ ಸಾಕ್ಷಾತ್ಪಿತಾಮಹಃ ।
ಅಬ್ರವೀತ್ಪ್ರಣತೋ ಭೂತ್ವಾ ರಾಮಂ ಸತ್ಯಪಥೇ ಸ್ಥಿತಮ್ ॥

ಅನುವಾದ

ಈ ರೀತಿಯಾಗಿ ದೇವತೆಗಳು ಸ್ತುತಿಸುತ್ತಿರುವಾಗ ಸಾಕ್ಷ್ಮಾತ್ ಪಿತಾಮಹ ಬ್ರಹ್ಮದೇವರು ಹೆಚ್ಚಿನ ವಿನಮ್ರತೆಯಿಂದ ಸತ್ಯಮಾರ್ಗದಲ್ಲಿ ನೆಲೆಗೊಂಡಿದ್ದ ಭಗವಾನ್ ಶ್ರೀರಾಮನಿಗೆ ನಮಸ್ಕರಿಸುತ್ತಾ ಹೀಗೆಂದನು ॥9॥

(ಶ್ಲೋಕ-10)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ವಂದೇ ದೇವಂ ವಿಷ್ಣುಮಶೇಷಸ್ಥಿತಿಹೇತುಂ
ತ್ವಾಮಧ್ಯಾತ್ಮಜ್ಞಾನಿಭಿರಂತರ್ಹೃದಿ ಭಾವ್ಯಮ್ ।
ಹೇಯಾಹೇಯದ್ವಂದ್ವವಿಹೀನಂ ಪರಮೇಕಂ
ಸತ್ತಾಮಾತ್ರಂ ಸರ್ವಹೃದಿಸ್ಥಂ ದೃಶಿರೂಪಮ್ ॥

ಅನುವಾದ

ಬ್ರಹ್ಮದೇವರು ಇಂತೆಂದರು — ‘‘ಹೇ ರಾಮಚಂದ್ರಾ! ಎಲ್ಲ ಪ್ರಾಣಿಗಳ ಸ್ಥಿತಿಗೆ ಕಾರಣನೂ, ಆತ್ಮಜ್ಞಾನಿಗಳ ಮೂಲಕ ಹೃದಯದಲ್ಲಿ ಧ್ಯಾನಿಸಲ್ಪಡುವವನೂ, ರಾಗ-ದ್ವೇಷರಹಿತನೂ, ದ್ವಂದ್ವಗಳಿಲ್ಲದವನೂ, ಏಕನೂ, ಪರಮನೂ, ಸತ್ತಾಮಾತ್ರನೂ, ಎಲ್ಲರ ಹೃದಯದಲ್ಲಿ ವಿರಾಜಮಾನನೂ ಸಾಕ್ಷಿರೂಪನೂ, ಆದ ಭಗವಾನ್ ವಿಷ್ಣುವನ್ನು ನಾನು ನಮಸ್ಕರಿಸುತ್ತೇನೆ. ॥10॥

(ಶ್ಲೋಕ-11)

ಮೂಲಮ್

ಪ್ರಾಣಾಪಾನೌ ನಿಶ್ಚಯಬುದ್ಧ್ಯಾ ಹೃದಿ ರುದ್ ಧ್ವಾ
ಛಿತ್ವಾ ಸರ್ವಂ ಸಂಶಯಬಂಧಂ ವಿಷಯೌಘಾನ್ ।
ಪಶ್ಯಂತೀಶಂ ಯಂ ಗತಮೋಹಾ ಯತಯಸ್ತಂ
ವಂದೇ ರಾಮಂ ರತ್ನಕೀರಿಟಂ ರವಿ ಭಾಸಮ್ ॥

ಅನುವಾದ

ಮೋಹವಿಲ್ಲದ ಸಂನ್ಯಾಸಿಗಳು ನಿಶ್ಚಿತ ಬುದ್ಧಿಯ ಮೂಲಕ ಪ್ರಾಣಾಪಾನವಾಯುಗಳನ್ನು ಹೃದಯದಲ್ಲಿ ತಡೆ ಹಿಡಿದು, ತಮ್ಮ ಸಮಸ್ತ ಸಂಶಯ-ಬಂಧನ ಮತ್ತು ವಿಷಯ-ವಾಸನೆಗಳನ್ನು ಕತ್ತರಿಸಿಹಾಕಿ ಯಾವ ಈಶನನ್ನು ಕಂಡುಕೊಳ್ಳುವರೋ ಅಂತಹ ಸೂರ್ಯಸಮಾನ ಕಾಂತಿಯುಳ್ಳ ರತ್ನ ಕಿರೀಟಧಾರಿಯಾದ ಶ್ರೀರಾಮನನ್ನು ನಾನು ವಂದಿಸುತ್ತೇನೆ. ॥11॥

(ಶ್ಲೋಕ-12)

ಮೂಲಮ್

ಮಾಯಾತೀತಂ ಮಾಧವಮಾದ್ಯಂ ಜಗದಾದಿಂ
ಮಾನಾತೀತಂ ಮೋಹವಿನಾಶಂ ಮುನಿವಂದ್ಯಮ್ ।
ಯೋಗಿಧ್ಯೇಯಂ ಯೋಗವಿಧಾನಂ ಪರಿಪೂರ್ಣಂ
ವಂದೇ ರಾಮಂ ರಂಜಿತಲೋಕಂ ರಮಣೀಯಮ್ ॥

ಅನುವಾದ

ಮಾಯಾತೀತನೂ, ಲಕ್ಷ್ಮೀಪತಿಯೂ, ಎಲ್ಲರ ಆದ್ಯನೂ, ಜಗತ್ಕಾರಣನೂ, ಪ್ರತ್ಯಕ್ಷಾದಿ ಪ್ರಮಾಣಗಳಿಗೆ ನಿಲುಕದವನೂ, ಮೋಹವನ್ನು ಕಳೆಯುವವನೂ, ಮುನಿಜನರಿಂದ ನಮಸ್ಕೃತನೂ, ಯೋಗಿಗಳಿಂದ ಚಿಂತಿಸಲ್ಟಡುವವನೂ, ಯೋಗ ಮಾರ್ಗದ ಪ್ರವರ್ತಕನೂ, ಸರ್ವತ್ರ ಪರಿಪೂರ್ಣನೂ, ಎಲ್ಲ ಲೋಕಗಳನ್ನು ರಂಜಿಸುವವನೂ, ಆದ ಪರಮಸುಂದರ ಭಗವಾನ್ ಶ್ರೀರಾಮನನ್ನು ನಾನು ನಮಿಸುವೆನು. ॥12॥

(ಶ್ಲೋಕ-13)

ಮೂಲಮ್

ಭಾವಾಭಾವಪ್ರತ್ಯಯಹೀನಂ ಭವಮುಖ್ಯೈ-
ರ್ಯೋಗಾಸಕ್ತೈರರ್ಚಿತಪಾದಾಂಬುಜಯುಗ್ಮಮ್ ।
ನಿತ್ಯಂ ಶುದ್ಧಂ ಬುದ್ಧಮನಂತಂ ಪ್ರಣವಾಖ್ಯಂ
ವಂದೇ ರಾಮಂ ವೀರಮಶೇಷಾಸುರದಾವಮ್ ॥

ಅನುವಾದ

ಇದೆ - ಇಲ್ಲ ಎಂಬ ಪ್ರತ್ಯಯಗಳಿಗೂ ಮೀರಿದವನಾದ (ಶಾಶ್ವತ), ಯೋಗಾಸಕ್ತರಾದ ಪರಮೇಶ್ವರನೇ ಮುಂತಾದವರಿಂದ ಪಪೂಜಿಸಲ್ಟಟ್ಟ ಪಾದದ್ವಯಗಳುಳ್ಳ, ನಿತ್ಯನೂ, ಶುದ್ಧನೂ, ಬುದ್ಧನೂ, ಅನಂತನೂ ಆದ ಓಂಕಾರವೆಂಬ ನಾಮಧೇಯವುಳ್ಳ ಸಮಸ್ತ ರಾಕ್ಷಸರೆಂಬ ಕಾಡಿಗೆ ದಾವಾಲನನಂತಿರುವ ವೀರನಾದ ಶ್ರೀರಾಮನಿಗೆ ನಾನು ನಮಸ್ಕರಿಸುವೆನು. ॥13॥

(ಶ್ಲೋಕ-14)

ಮೂಲಮ್

ತ್ವಂ ಮೇ ನಾಥೋ ನಾಥಿತಕಾರ್ಯಾಖಿಲಕಾರೀ
ಮಾನಾತೀತೋ ಮಾಧವರೂಪೋಽಖಿಲಧಾರೀ ।
ಭಕ್ತ್ಯಾ ಗಮ್ಯೋ ಭಾವಿತರೂಪೋ ಭವಹಾರೀ
ಯೋಗಾಭ್ಯಾಸೈರ್ಭಾವಿತಚೇತಃ ಸಹಚಾರೀ ॥

ಅನುವಾದ

ಹೇ ರಾಮಾ! ನೀನೇ ನನಗೆ ಒಡೆಯನಾಗಿರುವೆ. ನಾನು ಬೇಡಿಕೊಂಡ ಎಲ್ಲ ಕೆಲಸಗಳನ್ನು ನೆರವೇರಿಸಿಕೊಡುವವನೂ, ಅಪ್ರಮೇಯನೂ, ಲಕ್ಷ್ಮೀಧವನೂ, ಅಖಿಲರೂಪಗಳನ್ನು ಧರಿಸಿರುವವನೂ, ಭಕ್ತಿಗೆ ಸಿಗುವವನೂ, ತನ್ನ ಸ್ವರೂಪವನ್ನು ಧ್ಯಾನಿಸುವವರ ಸಂಸಾರ ಭಯವನ್ನು ಕಳೆಯುವವನೂ, ಆದ ನೀನು ಯೋಗಾಭ್ಯಾಸದಿಂದ ಶುದ್ಧವಾದ ಚಿತ್ತದಲ್ಲಿ ವಿಹರಿಸುವವನಾಗಿರುವೆ. ॥14॥

(ಶ್ಲೋಕ-15)

ಮೂಲಮ್

ತ್ವಾಮಾದ್ಯಂತಂ ಲೋಕತತೀನಾಂ ಪರಮೀಶಂ
ಲೋಕಾನಾಂ ನೋ ಲೌಕಿಕಮಾನೈರಧಿಗಮ್ಯಮ್ ।
ಭಕ್ತಿಶ್ರದ್ಧಾಭಾವಸಮೇತೈರ್ಭಜನೀಯಂ
ವಂದೇ ರಾಮಂ ಸುಂದರಮಿಂದೀವರನೀಲಮ್ ॥

ಅನುವಾದ

ಸ್ವಾಮಿ! ನೀನೇ ಈ ಲೋಕ ಪರಂಪರೆಯ ಆದಿ ಮತ್ತು ಅಂತ್ಯ (ಅರ್ಥಾತ್ ಉತ್ಪತ್ತಿ ಹಾಗೂ ಪ್ರಳಯದ ಸ್ಥಾನ)ನಾಗಿರುವೆ. ನೀನೇ ಎಲ್ಲ ಲೋಕಗಳಿಗೆ ಒಡೆಯನಾಗಿರುವೆ. ನೀನು ಯಾವುದೇ ಲೌಕಿಕ ಪ್ರಮಾಣಗಳಿಂದ ತಿಳಿಯಲ್ಪಡುವವನಲ್ಲ. ಭಕ್ತಿ ಶ್ರದ್ಧೆ ಯಿಂದೊಡಗೂಡಿದ ಪುರುಷರಿಗೆ ಭಜನೀಯನಾದ ಕನ್ನೈದಿಲೆ ಯಂತೆ ಶ್ಯಾಮ ಸುಂದರನಾದ ಶ್ರೀರಾಮಚಂದ್ರನನ್ನು ನಾನು ವಂದಿಸುತ್ತೇನೆ. ॥15॥

(ಶ್ಲೋಕ-16)

ಮೂಲಮ್

ಕೋ ವಾ ಜ್ಞಾತುಂ ತ್ವಾಮತಿಮಾನಂ ಗತಮಾನಂ
ಮಾಯಾಸಕ್ತೋ ಮಾಧವ ಶಕ್ತೋ ಮುನಿಮಾನ್ಯಮ್ ।
ವೃಂದಾರಣ್ಯೇ ವಂದಿತವೃಂದಾರಕವೃಂದಂ
ವಂದೇ ರಾಮಂ ಭವಮುಖವಂದ್ಯಂ ಸುಖಕಂದಮ್ ॥

ಅನುವಾದ

ಹೇ ಲಕ್ಷೀಪತಿಯೆ! ನೀನು ಪ್ರಮಾಣಗಳಿಗೆ ನಿಲುಕದವನೂ, ಅವುಗಳನ್ನು ಮೀರಿದವನೂ ಆಗಿರುವೆ. ಮಾಯೆಯಿಂದ ಸೆಳೆಯಲ್ಟಟ್ಟ ಯಾವನು ತಾನೇ ನಿನ್ನನ್ನು ತಿಳಿಯಲು ಸಮರ್ಥನಾಗಬಲ್ಲನು? ನೀನು ಮಹರ್ಷಿಗಳಿಗೆ ಮಾನ್ಯನಾಗಿರುವೆ. (ಕೃಷ್ಣಾವತಾರದ ಸಮಯ) ನೀನು ವೃಂದಾವನದಲ್ಲಿ ಅಖಿಲ ದೇವತಾ ಸಮೂಹದಿಂದ ವಂದಿಸಲ್ಟಡುವವನೂ, ರಾಮರೂಪದಿಂದ ಶಿವನೇ ಮುಂತಾದ ದೇವತೆಗಳಿಗೆ ಸ್ವತಃ ವಂದನೀಯನಾಗಿರುವೆ. ಅಂತಹ ಆನಂದಘನ ಭಗವಾನ್ ಶ್ರೀರಾಮನಾದ ನಿನಗೆ ನಾನು ನಮಿಸುತ್ತೇನೆ. ॥16॥

(ಶ್ಲೋಕ-17)

ಮೂಲಮ್

ನಾನಾಶಾಸ್ತ್ರೈರ್ವೇದಕದಂಬೈಃ ಪ್ರತಿಪಾದ್ಯಂ
ನಿತ್ಯಾನಂದಂ ನಿರ್ವಿಷಯಜ್ಞಾನಮನಾದಿಮ್ ।
ಮತ್ಸೇವಾರ್ಥಂ ಮಾನುಷಭಾವಂ ಪ್ರತಿಪನ್ನಂ
ವಂದೇ ರಾಮಂ ಮರಕತವರ್ಣಂ ಮಥುರೇಶಮ್ ॥

ಅನುವಾದ

ಅನೇಕ ಶಾಸಗಳಿಂದಲೂ, ವೇದಗಳ ಸಮೂಹದಿಂದಲೂ ಪ್ರತಿಪಾದ್ಯನಾದ, ನಿತ್ಯಾನಂದ ರೂಪನಾದ, ನಿರ್ವಿಷಯ ಜ್ಞಾನ ನೆನಿಸಿರುವ, ಅನಾದಿಯಾದ, ನನ್ನ ಸೇವೆಯನ್ನು ಸ್ವೀಕರಿಸುವುದಕ್ಕಾಗಿ ಮನುಷ್ಯ ಭಾವವನ್ನು ಹೊಂದಿರುವ, ಮರಕತ ರತ್ನದಂತೆ ನೀಲವರ್ಣನಾದ ಮಥುರಾನಾಯಕನಾದ* ಭಗವಾನ್ ಶ್ರೀರಾಮನನ್ನು ನಮಸ್ಕರಿಸುವೆನು.’’ ॥17॥

ಟಿಪ್ಪನೀ
  • ಇಲ್ಲಿ ಭಗವಾನ್ ರಾಮನನ್ನು ‘ಮಥುರಾನಾಥ’ ಎಂದು ಹೇಳಿ ಶ್ರೀರಾಮ ಮತ್ತು ಶ್ರೀಕೃಷ್ಣ ಇವರ ಅಭಿನ್ನತೆಯನ್ನು ಪ್ರಕಟಿಸಿರುವರು.

(ಶ್ಲೋಕ-18)

ಮೂಲಮ್

ಶ್ರದ್ಧಾಯುಕ್ತೋ ಯಃ ಪಠತೀಮಂ ಸ್ತವಮಾದ್ಯಂ
ಬ್ರಾಹ್ಮಂ ಬ್ರಹ್ಮಜ್ಞಾನವಿಧಾನಂ ಭುವಿ ಮರ್ತ್ಯಃ ।
ರಾಮಂ ಶ್ಯಾಮಂ ಕಾಮಿತಕಾಮಪ್ರದಮೀಶಂ
ಧ್ಯಾತ್ವಾ ಧ್ಯಾತಾ ಪಾತಕಜಾಲೈರ್ವಿಗತಃ ಸ್ಯಾತ್ ॥

ಅನುವಾದ

ಭೂಲೋಕದಲ್ಲಿ ಶ್ರದ್ಧಾ - ಭಕ್ತಿಗಳಿಂದ ಕೂಡಿದವನಾಗಿ ಈ ಆದ್ಯವೂ, ಬ್ರಹ್ಮಪ್ರೋಕ್ತವೂ, ಬ್ರಹ್ಮಜ್ಞಾನವನ್ನು ತಿಳಿಸತಕ್ಕದ್ದು ಆಗಿರುವ ಈ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸುವವನು, ನೀಲವರ್ಣನಾದ, ಇಷ್ಟಾರ್ಥಗಳನ್ನು ಕೊಡುವ, ಈಶನಾದ ರಾಮನನ್ನು ಚಿಂತಿಸುತ್ತಾ, ಚಿಂತಿಸುತ್ತಾ ಪಾಪಗಳ ಸಮೂಹದಿಂದ ಮುಕ್ತನಾಗುವನು. ॥18॥

(ಶ್ಲೋಕ-19)

ಮೂಲಮ್

ಶ್ರುತ್ವಾ ಸ್ತುತಿಂ ಲೋಕಗುರೋರ್ವಿಭಾವಸುಃ
ಸ್ವಾಂಕೇ ಸಮಾದಾಯ ವಿದೇಹಪುತ್ರಿಕಾಮ್ ।
ವಿಭ್ರಾಜಮಾನಾಂ ವಿಮಲಾರುಣದ್ಯುತಿಂ
ರಕ್ತಾಂಬರಾಂ ದಿವ್ಯವಿಭೂಷಣಾನ್ವಿತಾಮ್ ॥

(ಶ್ಲೋಕ-20)

ಮೂಲಮ್

ಪ್ರೋವಾಚ ಸಾಕ್ಷೀ ಜಗತಾಂ ರಘೂತ್ತಮಂ
ಪ್ರಪನ್ನಸರ್ವಾರ್ತಿಹರಂ ಹುತಾಶನಃ ।
ಗೃಹಾಣ ದೇವೀಂ ರಘುನಾಥ ಜಾನಕೀಂ
ಪುರಾ ತ್ವಯಾ ಮಯ್ಯವರೋಪಿತಾಂ ವನೇ ॥

ಅನುವಾದ

ಲೋಕಪೂಜ್ಯನಾದ ಬ್ರಹ್ಮದೇವರ ಈ ಸ್ತೋತ್ರವನ್ನು ಕೇಳಿದ ಅಗ್ನಿದೇವನು ನಿರ್ಮಲ ಅರುಣೋದಯ ಕಾಂತಿಯನ್ನು ಹೊಂದಿರುವವಳೂ, ಕೆಂಪಾದ ಸೀರೆಯನ್ನುಟ್ಟಿರುವ, ದಿವ್ಯವಾದ ಒಡವೆಗಳನ್ನು ತೊಟ್ಟುಕೊಂಡಿರುವ ವಿದೇಹಪುತ್ರಿ ಜಾನಕಿಯನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಪ್ರಕಟನಾದನು. ಜಗತ್ತಿನಲ್ಲಿರುವ ಪ್ರಾಣಿಗಳ ಕರ್ಮಗಳಿಗೆಲ್ಲ ಸಾಕ್ಷಿಯಾದ ಅಗ್ನಿದೇವನು ಶರಣಾಗತರ ದುಃಖಗಳನ್ನು ಪರಿಹಾರ ಮಾಡುವವನೂ ಆದ ಶ್ರೀರಘುನಾಥನಲ್ಲಿ ‘‘ಹೇ ರಘುವೀರಾ! ಹಿಂದೆ ನೀನು ತಪೋವನದಲ್ಲಿ ನನ್ನಲ್ಲಿ ಮುಡು ಪಾಗಿಟ್ಟಿದ್ದ ಸೀತಾದೇವಿಯನ್ನು ಸ್ವೀಕರಿಸುವವನಾಗು’’ ಎಂದು ವಿನಂತಿಸಿಕೊಂಡನು. ॥19-20॥

(ಶ್ಲೋಕ-21)

ಮೂಲಮ್

ವಿಧಾಯ ಮಾಯಾಜನಕಾತ್ಮಜಾಂ ಹರೇ
ದಶಾನನಪ್ರಾಣವಿನಾಶನಾಯ ಚ ।
ಹತೋ ದಶಾಸ್ಯಃ ಸಹ ಪುತ್ರಬಾಂಧವೈ-
ರ್ನಿರಾಕೃತೋಽನೇನ ಭರೋ ಭುವಃ ಪ್ರಭೋ ॥

ಅನುವಾದ

‘‘ಶ್ರೀಹರಿಯೆ! ನೀನು ರಾವಣನ ಪ್ರಾಣವಿನಾಶಕ್ಕಾಗಿ ಮಾಯಾಸೀತೆಯನ್ನು ಸೃಷ್ಟಿಸಿದ್ದೆಯಲ್ಲ! ಈಗ ಪುತ್ರ-ಬಂಧು ವರ್ಗ ಸಹಿತ ರಾವಣನು ಹತನಾದನು. ಇದರಿಂದ ಭೂ ಭಾರವು ಕಳೆಯಿತು. ॥21॥

(ಶ್ಲೋಕ-22)

ಮೂಲಮ್

ತಿರೋಹಿತಾ ಸಾ ಪ್ರತಿಬಿಂಬರೂಪಿಣೀ
ಕೃತಾ ಯದರ್ಥಂ ಕೃತಕೃತ್ಯತಾಂ ಗತಾ ।
ತತೋಽತಿಹೃಷ್ಟಾಂ ಪರಿಗೃಹ್ಯ ಜಾನಕೀಂ
ರಾಮಃ ಪ್ರಹೃಷ್ಟಃ ಪ್ರತಿಪೂಜ್ಯ ಪಾವಕಮ್ ॥

ಅನುವಾದ

ಆ ಪ್ರತಿಬಿಂಬರೂಪಿಣೀ ಮಾಯಾ ಸೀತೆಯು, ಯಾವ ಕಾರ್ಯಕ್ಕಾಗಿ ರಚಿಸಲ್ಟಟ್ಟಿ ದ್ದಳೋ ಅದನ್ನು ನೆರವೇರಿಸಿ ಕೃತಕೃತ್ಯಳಾಗಿ ಅದೃಶ್ಯಳಾಗಿರುವಳು. ಹೀಗೆಂದ ಅಗ್ನಿಯ ಮಾತನ್ನು ಕೇಳಿ ಸಂತುಷ್ಟನಾದ ಶ್ರೀರಾಮನು ಅವನನ್ನು ಪೂಜಿಸಿ ಪ್ರಸನ್ನವದನೆಯಾದ ಜಾನಕಿಯನ್ನು ಸ್ವೀಕರಿಸಿದನು. ॥22॥

(ಶ್ಲೋಕ-23)

ಮೂಲಮ್

ಸ್ವಾಂಕೇ ಸಮಾವೇಶ್ಯ ಸದಾನಪಾಯಿನೀಂ
ಶ್ರಿಯಂ ತ್ರಿಲೋಕೀಜನನೀಂ ಶ್ರಿಯಃ ಪತಿಃ ।
ದೃಷ್ಟ್ವಾಥ ರಾಮಂ ಜನಕಾತ್ಮಜಾಯುತಂ
ಶ್ರಿಯಾ ಸ್ಫುರಂತಂ ಸುರನಾಯಕೋ ಮುದಾ ।
ಭಕ್ತ್ಯಾ ಗಿರಾ ಗದ್ಗದಯಾ ಸಮೇತ್ಯ
ಕೃತಾಂಜಲಿಃ ಸ್ತೋತುಮಥೋಪಚಕ್ರಮೇ ॥

ಅನುವಾದ

ಮತ್ತೆ ಲಕ್ಷ್ಮೀಪತಿ ಭಗವಾನ್ ಶ್ರೀರಾಮನು ತನ್ನನ್ನು ಎಂದೂ ಬಿಟ್ಟಗಲದೆ ಇರುವ ತ್ರಿಲೋಕಮಾತೆಯಾದ ಲಕ್ಷ್ಮೀರೂಪಳಾದ ಸೀತಾದೇವಿಯನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡನು. ಹೀಗೆ ಸೀತಾ ಸಮೇತನಾಗಿರುವ, ಸಂಪದ್ಯುಕ್ತನಾದ ರಾಮನನ್ನು ದೇವ ನಾಯಕನಾದ ಇಂದ್ರನು ಕಂಡು ಹೆಚ್ಚಾಗಿ ಸಂತೋಷ ಪಟ್ಟು ಗದ್ಗದ ಮಾತುಗಳಿಂದ, ಭಕ್ತಿಯುಕ್ತನಾಗಿ, ಕೈಗಳನ್ನು ಮುಗಿದುಕೊಂಡು ಸ್ತೋತ್ರಮಾಡಲಾರಂಭಿಸಿದನು. ॥23॥

(ಶ್ಲೋಕ-24)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ಭಜೇಽಹಂ ಸದಾ ರಾಮಮಿಂದೀವರಾಭಂ
ಭವಾರಣ್ಯದಾವಾನಲಾಭಾಭಿಧಾನಮ್ ।
ಭವಾನೀಹೃದಾ ಭಾವಿತಾನಂದರೂಪಂ
ಭವಾಭಾವಹೇತುಂ ಭವಾದಿಪ್ರಪನ್ನಮ್ ॥

ಅನುವಾದ

ಇಂದ್ರನಿಂತೆಂದನು ‘‘ನೈದಿಲೆಯಂತೆ ಕಾಂತಿಯುಳ್ಳವನೂ, ಯಾರ ನಾಮವು ಸಂಸಾರವೆಂಬ ಗೊಂಡಾರಣ್ಯಕ್ಕೆ ಕಾಡುಗಿಚ್ಚಿನಂತಿರುವುದೋ, ಯಾವಾಗಲೂ ಪಾರ್ವತಿಯ ಹೃದಯದಲ್ಲಿ ಚಿಂತಿಸಲ್ಟಡುವ ಆನಂದರೂಪನೂ, ಸಂಸಾರವನ್ನು ಇಲ್ಲವಾಗಿಸುವವನೂ, ಮಹಾದೇವನೇ ಮುಂತಾದವರೆಲ್ಲರೂ ಆಶ್ರಯಿಸಿರುವ ಆ ಭಗವಾನ್ ಶ್ರೀರಾಮನನ್ನು ನಾನು ಭಜಿಸುವೆನು. ॥24॥

(ಶ್ಲೋಕ-25)

ಮೂಲಮ್

ಸುರಾನೀಕದುಃಖೌಘನಾಶೈಕಹೇತುಂ
ನರಾಕಾರದೇಹಂ ನಿರಾಕಾರಮೀಡ್ಯಮ್ ।
ಪರೇಶಂ ಪರಾನಂದರೂಪಂ ವರೇಣ್ಯಂ
ಹರಿಂ ರಾಮಮೀಶಂ ಭಜೇ ಭಾರನಾಶಮ್ ॥

ಅನುವಾದ

ದೇವತೆಗಳ ದುಃಖವನ್ನು ಕಳೆಯುವ ಏಕಮಾತ್ರ ಕಾರಣನಾದ, ಮನುಷ್ಯಾಕಾರನಾಗಿ ತೋರಿ ಕೊಂಡಿರುವ, ಆದರೆ ನಿರಾಕಾರನಾದ, ಸ್ತುತ್ಯನಾದ, ಪರಮಾ ನಂದ ರೂಪನಾದ, ಪರಮೇಶ್ವರನಾದ, ಶ್ರೇಷ್ಠನೂ, ಪಾಪ ಹರ್ತನೂ, ಭೂ ಭಾರವನ್ನು ಹರಣ ಮಾಡುವವನೂ ಆದ ಈಶನಾದ ಶ್ರೀರಾಮನನ್ನು ಭಜಿಸುತ್ತೇನೆ. ॥25॥

(ಶ್ಲೋಕ-26)

ಮೂಲಮ್

ಪ್ರಪನ್ನಾಖಿಲಾನಂದದೋಹಂ ಪ್ರಪನ್ನಂ
ಪ್ರಪನ್ನಾರ್ತಿನಿಃಶೇಷನಾಶಾಭಿಧಾನಮ್ ।
ತಪೋ ಯೋಗ ಯೋಗೀಶಭಾವಾಭಿಭಾವ್ಯಂ
ಕಪೀಶಾದಿಮಿತ್ರಂ ಭಜೇ ರಾಮಮಿತ್ರಮ್ ॥

ಅನುವಾದ

ಶರಣಾಗತರಾದವರಿಗೆ ಆನಂದವನ್ನು ಮಳೆಗರೆಯುವ ಹಾಗೂ ಅಂತಹವರ ದುಃಖವನ್ನು ಸಮೂಲವಾಗಿ ನಾಶಗೊಳಿಸುವ, ತಪಸ್ವಿಗಳ, ಯೋಗಿಗಳ, ಯೋಗೀಶ್ವರರುಗಳ ಹೃದಯದಲ್ಲಿ ಪ್ರಕಟನಾಗಿರುವ, ಸುಗ್ರೀವನೇ ಮುಂತಾದವರ ಸ್ನೇಹಿತನಾದ ಶ್ರೀರಾಮನೆಂಬ ಸಖನನ್ನು ಭಜಿಸುವೆನು. ॥26॥

(ಶ್ಲೋಕ-27)

ಮೂಲಮ್

ಸದಾ ಭೋಗಭಾಜಾಂ ಸುದೂರೇ ವಿಭಾತಂ
ಸದಾ ಯೋಗಭಾಜಾಮದೂರೆ ವಿಭಾಂತಮ್ ।
ಚಿದಾನಂದಕಂದಂ ಸದಾ ರಾಘವೇಶಂ
ವಿದೇಹಾತ್ಮಜಾನಂದರೂಪಂ ಪ್ರಪದ್ಯೇ ॥

ಅನುವಾದ

ಭೋಗಾಸಕ್ತರಿಗೆ ಯಾವಾಗಲೂ ಬಹುದೂರದಲ್ಲಿರುವವನಾದ, ಯೋಗಾಸಕ್ತರಿಗೆ ಹತ್ತಿರದಲ್ಲಿಯೇ ಕಂಡು ಬರುವ, ಚಿದಾನಂದ ಕಂದನಾದ, ಸೀತಾದೇವಿಗೆ ಆನಂದವನ್ನುಂಟುಮಾಡುವವನಾದ ರಾಘವೇಶನನ್ನು ಶರಣು ಹೊಂದುತ್ತೇನೆ. ॥27॥

(ಶ್ಲೋಕ-28)

ಮೂಲಮ್

ಮಹಾಯೋಗಮಾಯಾವಿಶೇಷಾನುಯುಕ್ತೋ
ವಿಭಾಸೀಶ ಲಿಲಾನರಾಕಾರವೃತ್ತಿಃ ।
ತ್ವದಾನಂದಲೀಲಾಕಥಾಪೂರ್ಣಕರ್ಣಾಃ
ಸದಾನಂದರೂಪಾ ಭವಂತೀಹ ಲೋಕೇ ॥

ಅನುವಾದ

ಹೇ ಈಶನೆ! ನೀನು ಮಹಾ ಯೋಗಮಾಯೆಯಿಂದ ಕೂಡಿದವನಾಗಿ ಲೀಲಾಮಾನುಷ ರೂಪವನ್ನು ಧರಿಸಿ ನಟಿಸುವವನಾಗಿರುವೆ. ನಿನ್ನ ರಮಣೀಯವಾದ ಲೀಲಾಕಥಾ ವಿನೋದಗಳಿಂದ ತುಂಬಿದ ಕಿವಿಗಳುಳ್ಳ ಭಕ್ತರು ಈ ಲೋಕದಲ್ಲಿ ಯಾವಾಗಲೂ ಸದಾನಂದ ಸ್ವರೂಪರಾಗಿರುವರು. ॥28॥

(ಶ್ಲೋಕ-29)

ಮೂಲಮ್

ಅಹಂ ಮಾನಪಾನಾಭಿಮತ್ತಪ್ರಮತ್ತೋ
ನ ವೇದಾಖಿಲೇಶಾಭಿಮಾನಾಭಿಮಾನಃ ।
ಇದಾನೀಂ ಭವತ್ಪಾದಪದ್ಮಪ್ರಸಾದಾತ್
ತ್ರಿಲೋಕಾಧಿಪತ್ಯಾಭಿಮಾನೋ ವಿನಷ್ಟಃ ॥

ಅನುವಾದ

ಪ್ರಭುವೆ! ನಾನಾದರೋ ಅಭಿಮಾನ ಮತ್ತು ಸೋಮಪಾನದಿಂದ ಉನ್ಮತ್ತನಾಗಿ ಮೈಮರೆತು ಎಲ್ಲಕ್ಕೂ ನಾನೇ ಒಡೆಯನೆಂಬ ಹೆಮ್ಮೆಯಿಂದ ಏನನ್ನೂ ಅರಿಯದವನಾಗಿದ್ದೆ. ಈಗಲಾದರೋ ನಿನ್ನ ಪಾದಪದ್ಮಗಳ ಅನುಗ್ರಹದಿಂದ ನಾನು ತ್ರಿಲೋಕಾಧಿಪತಿಯೆಂಬ ಅಹಂಕಾರವು ಅಳಿಸಿ ಹೋಯಿತು. ॥29॥

(ಶ್ಲೋಕ-30)

ಮೂಲಮ್

ಸ್ಫುರದ್ರತ್ನಕೇಯೂರಹಾರಾಭಿರಾಮಂ
ಧರಾಭಾರಭೂತಾಸುರಾನೀಕದಾವಮ್ ।
ಶರಶ್ಚಂದ್ರವಕಂ ಲಸತ್ ಪದ್ಮನೇತ್ರಂ
ದುರಾವಾರಪಾರಂ ಭಜೇ ರಾಘವೇಶಮ್ ॥

ಅನುವಾದ

ಹೊಳೆಯುತ್ತಿರುವ ವಜ್ರ ಗಳುಳ್ಳ ತೋಳು ಬಂದಿಗಳು, ಕಂಠ ಹಾರಗಳಿಂದ ವಿರಾಜ ಮಾನನಾದ, ಭೂಮಿಗೆ ಹೊರಯಾದಂತಹ ರಾಕ್ಷಸರ ಸಮೂಹವನ್ನು ಸುಡುವ ದಾವಾಗ್ನಿಯಂತಿರುವ, ಶರತ್ಕಾಲದ ಚಂದ್ರನಂತೆ ಕಾಂತಿಮಯ ಮುಖವುಳ್ಳ, ಪದ್ಮದಂತೆ ವಿರಾಜ ಮಾನವಾದ ಕಣ್ಣುಗಳುಳ್ಳ, ಆದಿ-ಅಂತ್ಯವನ್ನು ತಿಳಿಯಲು ದುಸ್ಸಾಧ್ಯನಾದ ರಾಘವೇಶನನ್ನು ಭಜಿಸುತ್ತೇನೆ. ॥30॥

(ಶ್ಲೋಕ-31)

ಮೂಲಮ್

ಸುರಾಧೀಶನೀಲಾಭ್ರನೀಲಾಂಗಕಾಂತಿಂ
ವಿರಾಧಾದಿರಕ್ಷೋವಧಾಲ್ಲೋಕಶಾಂತಿಮ್ ।
ಕಿರೀಟಾದಿಶೋಭಂ ಪುರಾರಾತಿಲಾಭಂ
ಭಜೇ ರಾಮಚಂದ್ರಂ ರಘೂಣಾಮಧೀಶಮ್ ॥

ಅನುವಾದ

ಇಂದ್ರನೀಲ ಮಣಿಯಂತೆ ಹಾಗೂ ನೀಲಮೇಘದಂತೆ ಶರೀರ ಕಾಂತಿಯುಳ್ಳವನಾದ, ವಿರಾಧನೇ ಮೊದಲಾದ ರಾಕ್ಷಸರನ್ನು ಕೊಂದು ಲೋಕದಲ್ಲಿ ಶಾಂತಿಯನ್ನು ಉಂಟು ಮಾಡಿರುವ, ಕಿರೀಟಾದ್ಯಾಭರಣಗಳಿಂದ ಶೋಭಿಸುತ್ತಿರುವ, ಮಹೇಶ್ವರನಿಗೆ ಪರಮಧನವೆನಿಸಿರುವ, ರಘುಕುಲೇಶ್ವರನಾದ ಶ್ರೀರಾಮಚಂದ್ರನನ್ನು ಭಜಿಸುವೆನು. ॥31॥

(ಶ್ಲೋಕ-32)

ಮೂಲಮ್

ಲಸಚ್ಚಂದ್ರಕೋಟಿಪ್ರಕಾಶಾದಿಪೀಠೇ
ಸಮಾಸೀನಮಂಕೇ ಸಮಾಧಾಯ ಸೀತಾಮ್ ।
ಸ್ಫುರದ್ಧೇಮವರ್ಣಾಂ ತಡಿತ್ಪುಂಜಭಾಸಂ
ಭಜೇ ರಾಮಚಂದ್ರಂ ನಿವೃತ್ತಾರ್ತಿತಂದ್ರಮ್ ॥

ಅನುವಾದ

ಕೋಟಿಚಂದ್ರ ಕಾಂತಿಯುಕ್ತವಾದ ದಿವ್ಯ ಆದಿಪೀಠದಲ್ಲಿ ಕುಳಿತು, ತೊಡೆಯಮೇಲೆ ಚಿನ್ನದಂತೆ ಕಾಂತಿಯುಳ್ಳ ಹಾಗೂ ಮಿಂಚಿನಂತೆ ಶೋಭಿಸುವ ಸೀತಾಮಾತೆಯನ್ನು ಕುಳ್ಳಿರಿಸಿ ಕೊಂಡಿರುವ, ಎಲ್ಲ ದುಃಖಗಳನ್ನು ದಾಟಿರುವ, ಮಾಡುವ ಕೆಲಸದಲ್ಲಿ ತಡಮಾಡದಿರುವ ಭಗವಾನ್ ಶ್ರೀರಾಮಚಂದ್ರನನ್ನು ನಾನು ಭಜಿಸುತ್ತೇನೆ. ॥32॥

(ಶ್ಲೋಕ-33)

ಮೂಲಮ್

ತತಃ ಪ್ರೋವಾಚ ಭಗವಾನ್ಭವಾನ್ಯಾ ಸಹಿತೋ ಭವಃ ।
ರಾಮಂ ಕಮಲಪತ್ರಾಕ್ಷಂ ವಿಮಾನಸ್ಥೋ ನಭಃಸ್ಥಲೇ ॥

ಅನುವಾದ

ಅನಂತರ ಪಾರ್ವತೀ ಸಮೇತನಾದ ಪೂಜ್ಯನಾದ ಪರಮೇಶ್ವರನು ಆಕಾಶದಲ್ಲಿ ವಿಮಾನದ ಮೇಲೆ ಕುಳಿತುಕೊಂಡು ಕಮಲನಯನನಾದ ರಾಮನನ್ನು ಕುರಿತು ಹೀಗೆಂದನು ॥33॥

(ಶ್ಲೋಕ-34)

ಮೂಲಮ್

ಆಗಮಿಷ್ಯಾಮ್ಯಯೋಧ್ಯಾಯಾಂ ದ್ರಷ್ಟುಂ ತ್ವಾಂ ರಾಜ್ಯಸತ್ಕೃತಮ್ ।
ಇದಾನೀಂ ಪಶ್ಯ ಪಿತರಮಸ್ಯ ದೇಹಸ್ಯ ರಾಘವಃ ॥

ಅನುವಾದ

‘‘ಹೇ ರಘುನಂದನಾ! ಪಟ್ಟಾಭಿಷಿಕ್ತನಾದ ನಿನ್ನನ್ನು ನೋಡುವುದಕ್ಕಾಗಿ ನಾನು ಅಯೋಧ್ಯೆಗೆ ಬರಲಿರುವೆನು. ಈಗ ಈ ನಿನ್ನ ಶರೀರಕ್ಕೆ ನಿಮಿತ್ತನಾದ ತಂದೆ ದಶರಥನು ಬಂದಿರುವನು. ಅವನನ್ನು ನೋಡು. ॥34॥

(ಶ್ಲೋಕ-35)

ಮೂಲಮ್

ತತೋಽಪಶ್ಯದ್ವಿಮಾನಸ್ಥಂ ರಾಮೋ ದಶರಥಂ ಪುರಃ ।
ನನಾಮ ಶಿರಸಾ ಪಾದೌ ಮುದಾ ಭಕ್ತ್ಯಾ ಸಹಾನುಜಃ ॥

ಅನುವಾದ

ಬಳಿಕ ಶ್ರೀರಾಮಚಂದ್ರನು ತನ್ನ ಮುಂದೆ ವಿಮಾನದಲ್ಲಿ ಕುಳಿತ್ತಿದ್ದ ಮಹಾರಾಜಾ ದಶರಥನನ್ನು ನೋಡಿದನು. ನೋಡುತ್ತಲೇ ಸಹೋದರನೊಡಗೂಡಿ ಸಂತೋಷ ಭರಿತನಾಗಿ ಭಕ್ತಿಯಿಂದ ಚರಣದಲ್ಲಿ ತಲೆಯನ್ನಿಟ್ಟು ನಮಸ್ಕರಿಸಿದನು. ॥35॥

(ಶ್ಲೋಕ-36)

ಮೂಲಮ್

ಆಲಿಂಗ್ಯ ಮೂರ್ಧ್ನ್ಯವಘ್ರಾಯ ರಾಮಂ ದಶರಥೋಽಬ್ರವೀತ್ ।
ತಾರಿತೋಽಸ್ಮಿ ತ್ವಯಾ ವತ್ಸ ಸಂಸಾರಾದ್ದುಃಖಸಾಗರಾತ್ ॥

ಅನುವಾದ

ಆಗ ದಶರಥನು ಶ್ರೀರಾಮಚಂದ್ರನನ್ನು ಅಪ್ಪಿಕೊಂಡು, ತಲೆಯನ್ನು ಮೂಸಿ ಹೇಳಿದನು ‘‘ಮಗು ! ನೀನು ನನ್ನನ್ನು ಸಂಸಾರರೂಪೀ ದುಃಖ ಸಮುದ್ರದಿಂದ ಪಾರುಮಾಡಿದೆ.’’ ॥36॥

(ಶ್ಲೋಕ-37)

ಮೂಲಮ್

ಇತ್ಯುಕ್ತ್ವಾ ಪುನರಾಲಿಂಗ್ಯ ಯಯೌ ರಾಮೇಣ ಪೂಜಿತಃ ।
ರಾಮೋಽಪಿ ದೇವರಾಜಂ ತಂ ದೃಷ್ಟ್ವಾ ಪ್ರಾಹ ಕೃತಾಂಜಲಿಮ್ ॥

ಅನುವಾದ

ಹೀಗೆಂದು ಪುನಃ ಶ್ರೀರಾಮನನ್ನು ಆಲಿಂಗಿಸಿಕೊಂಡು, ಅವನಿಂದ ಪೂಜಿತನಾಗಿ ದಶರಥನು ಹೊರಟುಹೋದನು. ರಾಮನು ಕೂಡ ಕೈ ಮುಗಿದು ನಿಂತುಕೊಂಡಿದ್ದ ದೇವ ರಾಜನಾದ ಇಂದ್ರನನ್ನು ಕಂಡು ಹೀಗೆಂದನು- ॥37॥

(ಶ್ಲೋಕ-38)

ಮೂಲಮ್

ಮತ್ಕೃತೇ ನಿಹತಾನ್ ಸಂಖ್ಯೇ ವಾನರಾನ್ಪತಿತಾನ್ ಭುವಿ ।
ಜೀವಯಾಶು ಸುಧಾವೃಷ್ಟ್ಯಾ ಸಹಸ್ರಾಕ್ಷ ಮಮಾಜ್ಞಯಾ ॥

ಅನುವಾದ

‘‘ಹೇ ಸಹಸ್ರಾಕ್ಷಾ! ನನ್ನ ಅಪ್ಪಣೆಯಂತೆ, ನನಗಾಗಿ ಯುದ್ಧ ಮಾಡಿ ಸಾವನ್ನಪ್ಪಿ ಭೂಮಿಯಲ್ಲಿ ಬಿದ್ದಿರುವ ಕಪಿಗಳನ್ನು ಅಮೃತದ ಮಳೆಗರೆದು ಬದುಕಿಸುವವನಾಗು. ॥38॥

(ಶ್ಲೋಕ-39)

ಮೂಲಮ್

ತಥೇತ್ಯಮೃತವೃಷ್ಟ್ಯಾ ತಾನ್ ಜೀವಯಾಮಾಸ ವಾನರಾನ್ ।
ಯೇ ಯೇ ಮೃತಾ ಮೃಧೇ ಪೂರ್ವಂ ತೇ ತೇ ಸುಪ್ತೋತ್ಥಿತಾ ಇವ ।
ಪೂವವದ್ಬಲಿನೋ ಹೃಷ್ಟಾ ರಾಮ ಪಾರ್ಶ್ವಮುಪಾಯಯುಃ ॥

ಅನುವಾದ

ಇದನ್ನು ಕೇಳಿದ ದೇವೇಂದ್ರನು ‘‘ಹಾಗೆಯೇ ಆಗಲಿ’’ ಎಂದು ಹೇಳಿ ಅಮೃತವನ್ನು ಸುರಿಸಿ ಎಲ್ಲ ವಾನರರನ್ನು ಬದುಕಿಸಿದನು. ಯಾರು-ಯಾರು ಹಿಂದೆ ಯುದ್ಧದಲ್ಲಿ ಸತ್ತು ಬಿದ್ದಿದ್ದರೋ ಅವರೆಲ್ಲರು ಮಲಗಿದ್ದವರು ಏಳುವಂತೆ ಹಿಂದಿನಂತೆಯೇ ಬಲಶಾಲಿಗಳಾಗಿ ಎದ್ದು ಸಂತೋಷದಿಂದ ರಾಮನ ಸಮೀಪಕ್ಕೆ ಬಂದರು. ॥39॥

(ಶ್ಲೋಕ-40)

ಮೂಲಮ್

ನೋತ್ಥಿತಾ ರಾಕ್ಷಸಾಸ್ತತ್ರ ಪೀಯೂಷಸ್ಪರ್ಶನಾದಪಿ ।
ವಿಭೀಷಣಸ್ತು ಸಾಷ್ಟಾಂಗಂ ಪ್ರಣಿಪತ್ಯಾಬ್ರವೀದ್ವಚಃ ॥

ಅನುವಾದ

ಆದರೆ ಅಮೃತದ ಸ್ಪರ್ಶವಾದರೂ (ಯುದ್ಧದಲ್ಲಿ ಸತ್ತು ಬಿದ್ದಿರುವ) ರಾಕ್ಷಸರು ಮಾತ್ರ ಏಳಲಿಲ್ಲ.* ಆಗ ವಿಭೀಷಣನು ಸಾಷ್ಟಾಂಗ ನಮಸ್ಕಾರ ಮಾಡಿ ಶ್ರೀರಾಮನಲ್ಲಿ ಹೀಗೆಂದನು ॥40॥

ಟಿಪ್ಪನೀ
  • ಅಮೃತದ ಸ್ವಾಭಾವಿಕ ಗುಣವೇ ಜೀವದಾನ ಮಾಡುವಂತಹುದು; ಆದರೂ ಅಮೃತದ ಸ್ವರ್ಶವಾದರೂ ರಾಕ್ಷಸರು ಜೀವಿತರಾಗದಿರುವುದರಿಂದ ಸ್ವಭಾವ ವಿಪರ್ಯಯದ ದೋಷ ಬರುತ್ತದೆ. ಆದರೆ ಭಗವದಿಚ್ಛೆಯ ಪ್ರಭಾವದ ಮುಂದೆ ಯಾವುದೂ ಅಸಂಭವವಿಲ್ಲದಷ್ಟು ಪ್ರಬಲವಾಗಿದೆ; ಭಗವಂತನ ಇಚ್ಛೆ ಇಲ್ಲದ ಕಾರಣ ಅಮೃತದ ಪ್ರಭಾವವೂ ಕೂಡ ಬಾಧಿತವಾಯಿತು. ಇದಲ್ಲದೆ ಇನ್ನೊಂದು ಕಾರಣವೂ ಇರಬಲ್ಲದು; ಸಾಕ್ಷಾತ್ ಭಗವಾನ್ ಶ್ರೀರಾಮನಿಂದ ಹತರಾದ ಕಾರಣ ರಾಕ್ಷಸರೆಲ್ಲರೂ ಮುಕ್ತರಾಗಿ ಹೋಗಿದ್ದರು. ಅದಕ್ಕಾಗಿ ಅಮೃತದ ಸಂಸರ್ಗವೂ ಅವರನ್ನು ಜೀವಂತರಾಗಿಸದೆ ಹೋಯಿತು.

(ಶ್ಲೋಕ-41)

ಮೂಲಮ್

ದೇವ ಮಾಮನುಗೃಹ್ಣೀಷ್ವ ಮಯಿ ಭಕ್ತಿರ್ಯದಾ ತವ ।
ಮಂಗಲಸ್ನಾನಮದ್ಯ ತ್ವಂ ಕುರು ಸೀತಾಸಮನ್ವಿತಃ ॥

ಅನುವಾದ

‘‘ಸ್ವಾಮಿ! ನನ್ನನ್ನು ಅನುಗ್ರಹಿಸುವವನಾಗು. ನನ್ನ ಮೇಲೆ ನಿನಗೆ ಪ್ರೀತಿಯಿದೆಯಾದರೆ ದಯಮಾಡಿ ಸೀತಾಮಾತೆ ಸಹಿತ ನೀನು ಮಂಗಲ ಸ್ನಾನವನ್ನು ಮಾಡು. ॥41॥

(ಶ್ಲೋಕ-42)

ಮೂಲಮ್

ಅಲಂಕೃತ್ಯ ಸಹ ಭ್ರಾತಾ ಶ್ವೋ ಗಮಿಷ್ಯಾಮಹೇ ವಯಮ್ ।
ವಿಭೀಷಣವಚಃ ಶ್ರುತ್ವಾ ಪ್ರತ್ಯುವಾಚ ರಘೂತ್ತಮಃ ॥

ಅನುವಾದ

ಮತ್ತೆ ನಾಳೆ ತಮ್ಮನಾದ ಲಕ್ಷ್ಮಣನೊಡಗೂಡಿ ವಸಾಭೂಷಣಗಳಿಂದ ಅಲಂಕರಿಸಿಕೊಂಡು ನಾವೆಲ್ಲರೂ ಹೊರಡೋಣ.’’ ವಿಭೀಷಣನ ಮಾತನ್ನು ಕೇಳಿದ ರಘುನಾಥನು ಇಂತೆಂದನು. ॥42॥

(ಶ್ಲೋಕ-43)

ಮೂಲಮ್

ಸುಕುಮಾರೋಽತಿಭಕ್ತೋ ಮೇ ಭರತೋ ಮಾಮವೇಕ್ಷತೇ ।
ಜಟಾವಲ್ಕಲಧಾರೀ ಸ ಶಬ್ದಬ್ರಹ್ಮ ಸಮಾಹಿತಃ ॥

ಅನುವಾದ

‘‘ವಿಭೀಷಣಾ! ನನ್ನ ತಮ್ಮನಾದ ಭರತನು ಸುಕುಮಾರನೂ ಹೆಚ್ಚಿನ ಭಕ್ತನೂ ಆಗಿರುವನು. ಅವನು ಜಟಾ-ವಲ್ಕಲಗಳನ್ನು ಧರಿಸಿಕೊಂಡು ಭಗವನ್ನಾಮದಲ್ಲಿ ತತ್ಪರನಾಗಿ ನನ್ನನ್ನೇ ನಿರೀಕ್ಷಿಸುತ್ತಿರುವನು. ॥43॥

(ಶ್ಲೋಕ-44)

ಮೂಲಮ್

ಕಥಂ ತೇನ ವಿನಾ ಸ್ನಾನಮಲಂಕಾರಾದಿಕಂ ಮಮ ।
ಅತಃ ಸುಗ್ರೀವಮುಖ್ಯಾಂಸ್ತ್ವಂ ಪೂಜಯಾಶು ವಿಶೇಷತಃ ॥

ಅನುವಾದ

ಅವನನ್ನು ಭೇಟಿಯಾಗದೆ ನಾನು ಹೇಗೆ ಸ್ನಾನಾಲಂಕಾರಗಳನ್ನು ಧರಿಸಬಲ್ಲೆನು? ಆದ್ದರಿಂದ ಈಗ ನೀನು ಬೇಗನೇ ಸುಗ್ರೀವಾದಿ ಮುಖ್ಯರಾದ ವಾನರರನ್ನು ವಿಶೇಷವಾಗಿ ಗೌರವಿಸುವನಾಗು. ॥44॥

(ಶ್ಲೋಕ-45)

ಮೂಲಮ್

ಪೂಜಿತೇಷು ಕಪೀಂದ್ರೇಷು ಪೂಜಿತೋಹಂ ನ ಸಂಶಯಃ ।
ಇತ್ಯುಕ್ತೋ ರಾಘವೇಣಾಷು ಸ್ವರ್ಣರತ್ನಾಂಬರಾಣಿ ಚ ॥

(ಶ್ಲೋಕ-46)

ಮೂಲಮ್

ವವರ್ಷ ರಾಕ್ಷಸಶ್ರೇಷ್ಠೋ ಯಥಾಕಾಮಂ ಯಥಾರುಚಿ ।
ತತಸ್ತಾನ್ ಪೂಜಿತಾನ್ದೃಷ್ಟ್ವಾ ರಾಮೋ ರತ್ನೈಶ್ಚ ಯೂಥಪಾನ್ ॥

(ಶ್ಲೋಕ-47)

ಮೂಲಮ್

ಅಭಿನಂದ್ಯ ಯಥಾನ್ಯಾಯಂ ವಿಸಸರ್ಜ ಹರೀಶ್ವರಾನ್ ।
ವಿಭೀಷಣಸಮಾನೀತಂ ಪುಷ್ಪಕಂ ಸೂರ್ಯವರ್ಚಸಮ್ ॥

(ಶ್ಲೋಕ-48)

ಮೂಲಮ್

ಆರುರೋಹ ತತೋ ರಾಮಸ್ತದ್ವಿಮಾನಮನುತ್ತಮಮ್ ।
ಅಂಕೇ ನಿಧಾಯ ವೈದೇಹೀಂ ಲಜ್ಜಮಾನಾಂ ಯಶಸ್ವಿನೀಮ್ ॥

(ಶ್ಲೋಕ-49)

ಮೂಲಮ್

ಲಕ್ಷ್ಮಣೇನ ಸಹ ಭ್ರಾತ್ರಾ ವಿಕ್ರಾಂತೇನ ಧನುಷ್ಮತಾ ।
ಅಬ್ರವೀಚ್ಚ ವಿಮಾನಸ್ಥಃ ಶ್ರೀರಾಮಃ ಸರ್ವವಾನರಾನ್ ॥

(ಶ್ಲೋಕ-50)

ಮೂಲಮ್

ಸುಗ್ರೀವಂ ಹರಿರಾಜಂ ಚ ಅಂಗದಂ ಚ ವಿಭಿಷಣಮ್ ।
ಮಿತ್ರಕಾರ್ಯಂ ಕೃತಂ ಸರ್ವಂ ಭವದ್ಭಿಃ ಸಹ ವಾನರೈಃ ॥

ಅನುವಾದ

ಈ ವಾನರ ವೀರರ ಸತ್ಕಾರದಿಂದ ನನ್ನ ಸತ್ಕಾರವೇ ಆದಂತಾಗುವುದು. ಇದರಲ್ಲಿ ಸಂದೇಹವೇ ಇಲ್ಲ.’’ ರಘುನಾಥನು ಹೀಗೆ ಹೇಳಲಾಗಿ ರಾಕ್ಷಸಶ್ರೇಷ್ಠ ವಿಭೀಷಣನು ವಾನರರ ಇಚ್ಛೆ ಮತ್ತು ರುಚಿಗನುಸಾರವಾಗಿ ಹೇರಳವಾಗಿ ರತ್ನ-ವಸಾದಿಗಳನ್ನು ಅವರಿಗೆ ಮುಕ್ತಹಸ್ತದಿಂದ ಕೊಟ್ಟನು. ಈ ಪ್ರಕಾರ ಆ ವಾನರಯೂಥಪತಿಗಳು ರತ್ನಾದಿಗಳಿಂದ ಸತ್ಕೃತರಾಗಿರುವುದನ್ನು ನೋಡಿ ಶ್ರೀರಾಮಚಂದ್ರನು ಎಲ್ಲರನ್ನು ಯಥಾಯೋಗ್ಯವಾಗಿ ಪ್ರಶಂಸೆ ಗೈದು ಅವರನ್ನು ಬೀಳ್ಕೊಟ್ಟನು. ಸೂರ್ಯಸಮಾನ ಕಾಂತಿಯುಳ್ಳ ಪುಷ್ಪಕವಿಮಾನವನ್ನು ವಿಭೀಷಣನು ತರಲಾಗಿ, ಅತ್ಯುತ್ತಮವಾದ ಆ ಕುಬೇರನ ವಿಮಾನವನ್ನು ಶ್ರೀರಾಮನು ಹತ್ತಿ ಕುಳಿತನು. ನಾಚಿಕೊಳ್ಳುತ್ತಿರುವ ಹಾಗೂ ಕೀರ್ತಿಶಾಲಿನಿಯಾದ ಸೀತೆಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ಧನುರ್ಧಾರಿಯೂ, ಪ್ರತಾಪಶಾಲಿಯೂ ಆದ ಸೋದರನಾದ ಲಕ್ಷ್ಮಣನೊಡಗೂಡಿದ ಶ್ರೀರಾಮಚಂದ್ರನು ವಿಮಾನದಲ್ಲಿ ಕುಳಿತುಕೊಂಡೇ ವಾನರರಾಜ ಸುಗ್ರೀವ, ಅಂಗದ, ವಿಭೀಷಣ ಹಾಗೂ ಎಲ್ಲಾ ವಾನರರನ್ನು ಕುರಿತು ಹೀಗೆಂದನು ‘‘ನೀವೆಲ್ಲರೂ ವಾನರರೊಡಗೂಡಿ ಮಿತ್ರಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿರುವಿರಿ. ॥45-50॥

(ಶ್ಲೋಕ-51)

ಮೂಲಮ್

ಅನುಜ್ಞಾತಾ ಮಯಾ ಸರ್ವೇ ಯಥೇಷ್ಟಂ ಗಂತುಮರ್ಹಥ ।
ಸುಗ್ರೀವ ಪ್ರತಿಯಾಹ್ಯಾಶು ಕಿಷ್ಕಿಂಧಾಂ ಸರ್ವಸೈನಿಕೈಃ ॥

ಅನುವಾದ

ಈಗ ನನ್ನ ಅಪ್ಪಣೆಯಂತೆ ನೀವೆಲ್ಲರೂ ನಿಮ್ಮ-ನಿಮ್ಮ ಇಚ್ಛಿತ ಸ್ಥಾನಗಳಿಗೆ ಹೋಗಬಹುದು. ಸುಗ್ರೀವಾ! ನೀನು ನಿನ್ನ ಎಲ್ಲ ಸೈನಿಕರೊಡಗೂಡಿ ಬೇಗನೇ ಕಿಷ್ಕಿಂಧೆಗೆ ಹಿಂತಿರುಗುವವನಾಗು. ॥51॥

(ಶ್ಲೋಕ-52)

ಮೂಲಮ್

ಸ್ವರಾಜ್ಯೇ ವಸ ಲಂಕಾಯಾಂ ಮಮ ಭಕ್ತೋ ವಿಭಿಷಣ ।
ನ ತ್ವಾಂ ಧರ್ಷಯಿತುಂ ಶಕ್ತಾಃ ಸೇಂದ್ರಾ ಅಪಿ ದಿವೌಕಸಃ ॥

ಅನುವಾದ

ವಿಭೀಷಣಾ ! ನೀನು ನನ್ನ ಭಕ್ತಿಯಲ್ಲಿ ತತ್ಪರನಾಗಿ ತನ್ನ ರಾಜ್ಯವಾದ ಲಂಕೆಯಲ್ಲಿ ಇರು. ಇನ್ನು ಮುಂದೆ ದೇವೇಂದ್ರನೇ ಆದಿ ದೇವತೆಗಳೂ ಕೂಡ ನಿನ್ನ ಕೂದಲು ಕೊಂಕಿಸಲಾರರು. ॥52॥

(ಶ್ಲೋಕ-53)

ಮೂಲಮ್

ಅಯೋಧ್ಯಾಂ ಗಂತುಮಿಚ್ಛಾಮಿ ರಾಜಧಾನೀಂ ಪಿರ್ತುಮಮ ।
ಏವಮುಕ್ತಾಸ್ತು ರಾಮೇಣ ವಾನರಾಸ್ತೇ ಮಹಾಬಲಾಃ ॥

(ಶ್ಲೋಕ-54)

ಮೂಲಮ್

ಊಚುಃ ಪ್ರಾಂಜಲಯಃ ಸರ್ವೇ ರಾಕ್ಷಸಶ್ಚ ವಿಭೀಷಣಃ ।
ಅಯೋಧ್ಯಾಂ ಗಂತುಮಿಚ್ಛಾಮಸ್ತ್ವಯಾ ಸಹ ರಘೂತ್ತಮ ॥

ಅನುವಾದ

ಈಗ ನಾನು ನನ್ನ ತಂದೆಯ ರಾಜಧಾನಿಯಾದ ಅಯೋಧ್ಯೆಗೆ ಹೋಗಲಿರುವೆನು. ಶ್ರೀರಾಮಚಂದ್ರನ ಮಾತನ್ನು ಕೇಳಿದ ಮಹಾಬಲಿಗಳಾದ ಎಲ್ಲ ವಾನರರೂ ಹಾಗೂ ರಾಕ್ಷಸರಾಜ ವಿಭೀಷಣನೂ ಕೈ ಜೋಡಿಸಿಕೊಂಡು ‘‘ಹೇ ರಘುಶ್ರೇಷ್ಠ! ನಾವೆಲ್ಲರೂ ನಿನ್ನೊಡನೆ ಅಯೋಧ್ಯೆಗೆ ಬರಲು ಇಚ್ಛಿಸುತ್ತಿದ್ದೇವೆ. ॥53-54॥

(ಶ್ಲೋಕ-55)

ಮೂಲಮ್

ದೃಷ್ಟ್ವಾ ತ್ವಾಮಭಿಷಿಕ್ತಂ ತು ಕೌಸಲ್ಯಾಮಭಿವಾದ್ಯ ಚ ।
ಪಶ್ಚಾದ್ ವೃಣೀಮಹೇ ರಾಜ್ಯಮನುಜ್ಞಾಂ ದೇಹಿ ನಃ ಪ್ರಭೋ ॥

ಅನುವಾದ

ಸ್ವಾಮಿ! ಪಟ್ಟಾಭಿಷಿಕ್ತನಾದ ನಿನ್ನನ್ನು ಕಂಡು, ಮಾತೆ ಕೌಸಲ್ಯೆಗೂ ನಮಸ್ಕರಿಸಿ ಅನಂತರ ನಮ್ಮ-ನಮ್ಮ ರಾಜ್ಯಗಳನ್ನು ಸ್ವೀಕರಿಸುವೆವು. ಈ ವಿಷಯದಲ್ಲಿ ನಮಗೆ ಅಪ್ಪಣೆಯನ್ನು ನೀಡುವವನಾಗು’’ ಎಂದು ವಿನಂತಿಸಿಕೊಂಡರು. ॥55॥

(ಶ್ಲೋಕ-56)

ಮೂಲಮ್

ರಾಮಸ್ತಥೇತಿ ಸುಗ್ರೀವ ವಾನರೈಃ ಸವಿಭಿಷಣಃ ।
ಪುಷ್ಪಕಂ ಸಹನೂಮಾಂಶ್ಚ ಶೀಘ್ರಮಾರೋಹ ಸಾಂಪ್ರತಮ್ ॥

ಅನುವಾದ

ಆಗ ಶ್ರೀರಾಮಚಂದ್ರನು ‘ಹಾಗೇ ಆಗಲಿ’ ಎಂದು ಹೇಳಿ, ‘‘ಎಲೈ ಸುಗ್ರೀವಾ ! ಈಗ ಎಲ್ಲ ವಾನರರೊಡಗೂಡಿ ನೀನು ವಿಭೀಷಣ ಹಾಗೂ ಹನುಮಂತನೊಡನೆ ಕೂಡಲೇ ಪುಷ್ಪಕ ವಿಮಾನವನ್ನು ಹತ್ತುವವನಾಗು’’ ಎಂದು ನುಡಿದನು. ॥56॥

(ಶ್ಲೋಕ-57)

ಮೂಲಮ್

ತತಸ್ತು ಪುಷ್ಪಕಂ ದಿವ್ಯಂ ಸುಗ್ರೀವಃ ಸಹ ಸೇನಯಾ ।
ವಿಭಿಷಣಶ್ಚ ಸಾಮಾತ್ಯಃ ಸರ್ವೇ ಚಾರುರುಹುರ್ದ್ರುತಮ್ ॥

ಅನುವಾದ

ಆಗ ಸಮಸ್ತ ಸೇನಾಸಮೇತ ಸುಗ್ರೀವನು ಹಾಗೂ ಮಂತ್ರಿಗಳೊಡಗೂಡಿ ವಿಭೀಷಣನು ಎಲ್ಲರೂ ಲಗುಬಗೆಯಿಂದ ದಿವ್ಯವಾದ ಪುಷ್ಟಕವಿಮಾನವನ್ನಡರಿದರು. ॥57॥

(ಶ್ಲೋಕ-58)

ಮೂಲಮ್

ತೆಷ್ವಾರೂಢೇಷು ಸರ್ವೇಷು ಕೌಬೇರಂ ಪರಮಾಸನಮ್ ।
ರಾಘವೇಣಾಭ್ಯನುಜ್ಞಾತನ್ಮುತ್ಪಪಾತ ವಿಹಾಯಸಾ ॥

ಅನುವಾದ

ಅವರೆಲ್ಲರೂ ಹತ್ತಿದ ಅನಂತರ ಕುಬೇರನ ಸ್ವತ್ತಾದ ಆ ವಾಹನವು ರಾಮನ ಅಪ್ಪಣೆಯನ್ನು ಪಡೆದು ಆಕಾಶಮಾರ್ಗದಿಂದ ಹಾರಿತು. ॥58॥

(ಶ್ಲೋಕ-59)

ಮೂಲಮ್

ಬಭೌ ತೇನ ವಿಮಾನೇನ ಹಂಸಯುಕ್ತೇನ ಭಾಸ್ವತಾ ।
ಪ್ರಹೃಷ್ಟಶ್ಚ ತದಾ ರಾಮಶ್ಚತುರ್ಮುಖ ಇವಾಪರಃ ॥

ಅನುವಾದ

ಭಗವಾನ್ ಶ್ರೀರಾಮನು ಆ ತೇಜಸ್ವಿ ವಿಮಾನದಲ್ಲಿ ಹೋಗುತ್ತಿರುವಾಗ ತುಂಬಾ ಸಂತೋಷ ಭರಿತನಾಗಿ ಹಂಸವಾಹನನಾದ ಮತ್ತೊಬ್ಬ ಬ್ರಹ್ಮನಂತೆ ಹೊಳೆಯುತ್ತಿದ್ದನು. ॥59॥

(ಶ್ಲೋಕ-60)

ಮೂಲಮ್

ತತೋ ಬಭೌ ಭಾಸ್ಕರಬಿಂಬತುಲ್ಯಂ
ಕುಬೇರಯಾನಂ ತಪಸಾನುಲಬ್ಧಮ್ ।
ರಾಮೇಣ ಶೋಭಾಂ ನಿತರಾಂ ಪ್ರಪೇದೇ
ಸೀತಾಸಮೇತೇನ ಸಹಾನುಜೇನ ॥

ಅನುವಾದ

ಆಗ ತಪಸ್ಸಿನಿಂದ ಪ್ರಾಪ್ತವಾದ ಆ ಕುಬೇರನ ವಿಮಾನವು ಸೂರ್ಯಬಿಂಬದಂತೆ ಹೊಳೆಯುತ್ತಿತ್ತು ಹಾಗೂ ಸೀತಾದೇವಿ ಸಮೇತ ಸೋದರ ಲಕ್ಷ್ಮಣನೊಡಗೂಡಿದ ಶ್ರೀರಾಮನಿಂದಾಗಿ ಅದು ಇನ್ನೂ ಹೆಚ್ಚಿನ ಕಾಂತಿಯನ್ನು ಪಡೆಯಿತು. ॥60॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ತ್ರಯೋದಶಃ ಸರ್ಗಃ ॥13॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹದಿಮೂರನೆಯ ಸರ್ಗವು ಮುಗಿಯಿತು.