[ಹನ್ನೆರಡನೆಯ ಸರ್ಗ]
ಭಾಗಸೂಚನಾ
ವಿಭೀಷಣನ ರಾಜ್ಯಾಭಿಷೇಕ ಮತ್ತು ಸೀತೆಯ ಅಗ್ನಿಪರೀಕ್ಷೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ರಾಮೋ ವಿಭೀಷಣಂ ದೃಷ್ಟ್ವಾ ಹನೂಮಂತಂ ತಥಾಂಗದಮ್ ।
ಲಕ್ಷ್ಮಣಂ ಕಪಿರಾಜಂ ಚ ಜಾಂಬವಂತಂ ತಥಾ ಪರಾನ್ ॥
(ಶ್ಲೋಕ-2)
ಮೂಲಮ್
ಪರಿತುಷ್ಟೇನ ಮನಸಾ ಸರ್ವಾನೇವಾಬ್ರವೀದ್ವಚಃ ।
ಭವತಾಂ ಬಾಹುವೀರ್ಯೇಣ ನಿಹತೋ ರಾವಣೋ ಮಯಾ ॥
ಅನುವಾದ
ಶ್ರೀಮಹಾದೇವನಿಂತೆಂದನು — ಗಿರಿಜೆ! ಶ್ರೀರಾಮಚಂದ್ರನು ವಿಭೀಷಣ, ಹನುಮಂತ, ಅಂಗದ, ಲಕ್ಷ್ಮಣ, ವಾನರರಾಜ ಸುಗ್ರೀವ, ಜಾಂಬವಂತ ಹಾಗೂ ಇತರ ವೀರರ ಕಡೆಗೆ ನೋಡಿ ಸಂತುಷ್ಟಮನಸ್ಸಿನಿಂದ ಎಲ್ಲರನ್ನು ಕುರಿತು ಹೀಗೆಂದನು ‘‘ನಿಮ್ಮೆಲ್ಲರ ಭುಜಪರಾಕ್ರಮದಿಂದ ಇಂದು ನಾನು ರಾವಣನನ್ನು ಸಂಹಾರ ಮಾಡಿದೆ. ॥1-2॥
(ಶ್ಲೋಕ-3)
ಮೂಲಮ್
ಕೀರ್ತಿಃ ಸ್ಥಾಸ್ಯತಿ ವಃ ಪುಣ್ಯಾ ಯಾವಚ್ಚಂದ್ರದಿವಾಕರೌ ।
ಕೀರ್ತಯಿಷ್ಯಂತಿ ಭವತಾಂ ಕಥಾಂ ತ್ರೈಲೋಕ್ಯಪಾವನೀಮ್ ॥
(ಶ್ಲೋಕ-4)
ಮೂಲಮ್
ಮಯೋಪೇತಾಂ ಕಲಿಹರಾಂ ಯಾಸ್ಯಂತಿ ಪರಮಾಂ ಗತಿಮ್ ।
ಏತಸ್ಮಿನ್ನಂತರೇ ದೃಷ್ಟ್ವಾ ರಾವಣಂ ಪತಿತಂ ಭುವಿ ॥
(ಶ್ಲೋಕ-5)
ಮೂಲಮ್
ಮಂದೋದರೀಮುಖಾಃ ಸರ್ವಾಃ ಸಿಯೋ ರಾವಣಪಾಲಿತಾಃ ।
ಪತಿತಾ ರಾವಣಸ್ಯಾಗ್ರೇ ಶ್ಯೋಚಂತ್ಯಃ ಪರ್ಯದೇವಯನ್ ॥
ಅನುವಾದ
ಸೂರ್ಯಚಂದ್ರರು ಇರುವವರೆವಿಗೂ ನಿಮ್ಮ ಪುಣ್ಯತಮವಾದ ಕೀರ್ತಿಯು ಸ್ಥಿರವಾಗಿರುವುದು. ನನ್ನ ಕಥೆಯೊಂದಿಗೆ ನಿಮ್ಮೆಲ್ಲರ ಕಲಿಕಲ್ಮಷನಾಶಿನಿಯಾದ, ಮೂರು ಲೋಕಗಳನ್ನು ಪವಿತ್ರಗೊಳಿಸುವಂತಹ ಕಥೆಯನ್ನು ಕೀರ್ತಿಸುವವ ಸತ್ಪುರುಷರು ಪರಮಪದವನ್ನು ಪಡೆದುಕೊಳ್ಳುವರು.’’ ಈ ನಡುವೆ ರಾವಣನು ಸತ್ತುಬಿದ್ದಿರುವುದನ್ನು ಕಂಡು ರಾವಣನ ಪತ್ನೀ ಮಂದೋದರಿಯೇ ಮುಂತಾದ ಎಲ್ಲ ಹೆಂಗಸರೂ ರಾವಣನ ಮುಂದೆ ಬಿದ್ದು ಹೊರಳಾಡುತ್ತಾ ಅಳುತ್ತಾ ದುಃಖಿಸುತ್ತಿದ್ದರು. ॥3-5॥
(ಶ್ಲೋಕ-6)
ಮೂಲಮ್
ವಿಭೀಷಣಃ ಶುಶೋಚಾರ್ತಃ ಶೋಕೇನ ಮಹತಾವೃತಃ ।
ಪತಿತೋ ರಾವಣಸ್ಯಾಗ್ರೇ ಬಹುಧಾ ಪರ್ಯದೇವಯತ್ ॥
ಅನುವಾದ
ವಿಭೀಷಣನೂ ಕೂಡ ಹೆಚ್ಚಿನ ಶೋಕಾಕುಲನಾಗಿ ಆರ್ತನಾಗಿ ರಾವಣನ ಎದುರಿಗೆ ಬಿದ್ದುಕೊಂಡು ಬಹಳವಾಗಿ ಅಳುತ್ತಿದ್ದನು. ॥6॥
(ಶ್ಲೋಕ-7)
ಮೂಲಮ್
ರಾಮಸ್ತು ಲಕ್ಷ್ಮಣಂ ಪ್ರಾಹ ಬೋಧಯಸ್ವ ವಿಭೀಷಣಮ್ ।
ಕರೋತು ಭಾತೃಸಂಸ್ಕಾರಂ ಕಿಂ ವಿಲಂಬೇನ ಮಾನದ ॥
ಅನುವಾದ
ಶ್ರೀರಾಮನು ಲಕ್ಷ್ಮಣನನ್ನು ಕುರಿತು ಇಂತೆಂದನು ‘‘ಎಲೈ ಮಾನವಂತನೆ! ವಿಭೀಷಣನನ್ನು ಸಮಾಧಾನಪಡಿಸು. ಅವನು ಅಣ್ಣನ ಔರ್ಧ್ವ ದೈಹಿಕ (ಭೌತಿಕ) ಸಂಸ್ಕಾರವನ್ನು ಮಾಡಲಿ. ಈಗ ಸುಮ್ಮನೆ ತಡ ಮಾಡುವುದರಿಂದ ಏನು ಪ್ರಯೋಜನ? ॥7॥
(ಶ್ಲೋಕ-8)
ಮೂಲಮ್
ಸ್ತ್ರಿಯೋ ಮಂದೋದರೀಮುಖ್ಯಾಃ ಪತಿತಾ ವಿಲಪಂತಿ ಚ ।
ನಿವಾರಯತು ತಾಃ ಸರ್ವಾ ರಾಕ್ಷಸೀ ರಾವಣಪ್ರಿಯಾಃ ॥
ಅನುವಾದ
ರಾವಣನಿಗೆ ಪ್ರಿಯರಾದ ಮಂದೋದರಿಯೇ ಮುಂತಾದ ರಾಕ್ಷಸಿಯರು ಬಿದ್ದು-ಬಿದ್ದು ಅಳುತ್ತಿರುವರು. ಅವರೆಲ್ಲರನ್ನು ಸಮಾಧಾನ ಪಡಿಸು. ॥8॥
(ಶ್ಲೋಕ-9)
ಮೂಲಮ್
ಏವಮುಕ್ತೋಥ ರಾಮೇಣ ಲಕ್ಷ್ಮಣೋಽಗಾದ್ವಿಭೀಷಣಮ್ ।
ಉವಾಚ ಮೃತಕೋಪಾಂತೇ ಪತಿತಂ ಮೃತಕೋಪಮಮ್ ॥
(ಶ್ಲೋಕ-10)
ಮೂಲಮ್
ಶೋಕೇನ ಮಹತಾವಿಷ್ಟಂ ಸೌಮಿತ್ರಿರಿದಮಬ್ರವೀತ್ ।
ಯಂ ಶೋಚಸಿ ತ್ವಂ ದುಃಖೇನ ಕೋಽಯಂ ತವ ವಿಭೀಷಣ ॥
ಅನುವಾದ
ಭಗವಾನ್ ಶ್ರೀರಾಮನು ಹೀಗೆಂದು ಹೇಳಿದುದನ್ನು ಕೇಳಿ ಲಕ್ಷ್ಮಣನು ವಿಭೀಷಣನ ಬಳಿಗೆ ಬಂದು. ಸತ್ತುಹೋದ ರಾವಣನ ಸಮೀಪದಲ್ಲಿ ಸತ್ತಂತೆ ಬಿದ್ದಿದ್ದ ಹಾಗೂ ಬಹಳವಾದ ದುಃಖದಲ್ಲಿ ಮುಳುಗಿದ್ದ ವಿಭೀಷಣನನ್ನು ಕುರಿತು ಇಂತೆಂದನು ‘‘ವಿಭೀಷಣಾ! ಯಾರಿಗಾಗಿ ನೀನು ದುಃಖಿತನಾಗಿ ಶೋಕಿಸುತ್ತಿರುವೆಯೋ ಅವನು ನಿನಗೇನಾಗಬೇಕು? ॥9-10॥
(ಶ್ಲೋಕ-11)
ಮೂಲಮ್
ತ್ವಂ ವಾಸ್ಯ ಕತಮಃ ಸೃಷ್ಟೇಃ ಪುರೇದಾನೀಮತಃ ಪರಮ್ ।
ಯದ್ವತ್ತೋಯೌಘಪತಿತಾಃ ಸಿಕತಾ ಯಾಂತಿ ತದ್ವಶಾಃ ॥
(ಶ್ಲೋಕ-12)
ಮೂಲಮ್
ಸಂಯುಜ್ಯಂತೇ ವಿಯುಜ್ಯಂತೇ ತಥಾ ಕಾಲೇನ ದೇಹಿನಃ ।
ಯಥಾ ಧಾನಾಸು ವೈ ಧಾನಾ ಭವಂತಿ ನ ಭವಂತಿ ಚ ॥
(ಶ್ಲೋಕ-13)
ಮೂಲಮ್
ಏವಂ ಭೂತೇಷು ಭೂತಾನಿ ಪ್ರೇರಿತಾನೀಶಮಾಯಯಾ ।
ತ್ವಂ ಚೇಮೇ ವಯಮನ್ಯೇ ಚ ತುಲ್ಯಾಃ ಕಾಲವಶೋದ್ಭವಾಃ ॥
ಅನುವಾದ
ನೀನು ಅವನಿಗೆ ಏನಾಗಬೇಕು? ಈ ಹುಟ್ಟಿಗಿಂತ ಮೊದಲು, ಈಗ, ಸತ್ತ ನಂತರ ನೀನು ಏನಾಗಿದ್ದೆ? ನೀರಿನ ಪ್ರವಾಹದಲ್ಲಿ ಬಿದ್ದು ಹೋದ ಮರಳಿನ ಕಣಗಳು ನೀರು ಕೊಚ್ಚಿಕೊಂಡು ಹೋಗುತ್ತಾ ಒಂದಕ್ಕೊಂದು ಸೇರುತ್ತಲೂ, ಅಗಲುತ್ತಲೂ ಹೋದಂತೆ ಈ ಶರೀರಧಾರೀ ಪ್ರಾಣಿಗಳು ಕಾಲಕ್ಕೆ ವಶೀಭೂತರಾಗಿ ಸಂಯೋಗ ಹಾಗೂ ವಿಯೋಗವನ್ನು ಪಡೆಯುತ್ತವೆ. ಬೀಜಗಳಿಂದ ಬೇರೆ ಬೀಜಗಳು ಉತ್ಪನ್ನವಾಗಿ ನಾಶವಾಗುವಂತೆ ಭಗವಂತನ ಮಾಯೆಯಿಂದ ಪ್ರೇರಿತರಾಗಿ ಸಮಸ್ತ ಪ್ರಾಣಿಗಳು ಬೇರೆ ಪ್ರಾಣಿಗಳಿಂದ ಹುಟ್ಟಿ, ಸಾಯುತ್ತಾ ಇರುತ್ತವೆ. ನಾನು ನೀನು, ಇವರು, ಉಳಿದವರೆಲ್ಲರೂ ಒಂದೇ ರೀತಿಯಿಂದ ಕಾಲಕ್ಕೆ ವಶೀಭೂತರಾಗಿಯೇ ಹುಟ್ಟಿದ್ದೇವೆ. ॥11-13॥
(ಶ್ಲೋಕ-14)
ಮೂಲಮ್
ಜನ್ಮಮೃತ್ಯೂ ಯದಾ ಯಸ್ಮಾತ್ತದಾ ತಸ್ಮಾದ್ಭವಿಷ್ಯತಃ ।
ಈಶ್ವರಃ ಸರ್ವಭೂತಾನಿ ಭೂತೈಃ ಸೃಜತಿ ಹಂತ್ಯಜಃ ॥
(ಶ್ಲೋಕ-15)
ಮೂಲಮ್
ಆತ್ಮಸೃಷ್ಟೈರಸ್ವತಂತ್ರೈರ್ನಿರಪೇಕ್ಷೋಽಪಿ ಬಾಲವತ್ ।
ದೇಹೇನ ದೇಹಿನೋ ಜೀವಾ ದೇಹಾದ್ದೇಹೋಽಭಿಜಾಯತೇ ॥
(ಶ್ಲೋಕ-16)
ಮೂಲಮ್
ಬೀಜಾದೇವ ಯಥಾ ಬೀಜಂ ದೇಹಾನ್ಯ ಇವ ಶಾಶ್ವತಃ ।
ದೇಹಿದೇಹವಿಭಾಗೋಽಯಮವಿವೇಕಕೃತಃ ಪುರಾ ॥
ಅನುವಾದ
ಪ್ರಾಣಿಗಳಿಗೆ ಹುಟ್ಟು ಹಾಗೂ ಸಾವುಗಳು ಯಾವ ಸಮಯದಲ್ಲಾಗಬೇಕೋ ಅಂತೆಯೇ ಆಗಿ ಹೋಗುವುದು. ಅಜನಾದ ಈಶ್ವರನು ಎಲ್ಲ ಪ್ರಾಣಿಗಳನ್ನು ಪಂಚಭೂತಗಳಿಂದ ಸೃಷ್ಟಿಸಿ, ನಾಶಗೊಳಿಸುತ್ತಾನೆ. ತಾನು ಸೃಷ್ಟಿಸಿದ ಸ್ವಾತಂತ್ರ್ಯವಿಲ್ಲದೆ ಬಾಳುತ್ತಿರುವ ಪ್ರಾಣಿಗಳ ವಿಷಯದಲ್ಲಿ ಅವನು ಮಗುವಿನಂತೆ ಏನೂ ಆಸಕ್ತಿಯಿಲ್ಲದವನಾಗಿರುವನು. ಜೀವಿಯು ದೇಹ ಸಂಯೋಗದ ಕಾರಣವೇ ದೇಹೀ ಎಂದು ಹೇಳಿಸಿಕೊಳ್ಳುವನು. ದೇಹದಿಂದ ಮತ್ತೊಂದು ದೇಹವು ಬೀಜದಿಂದ ಬೀಜವು ಹುಟ್ಟುವಂತೆ ಹುಟ್ಟುತ್ತದೆ. ಸನಾತನ ಆತ್ಮನಾದರೋ ದೇಹದಿಂದ ಬೇರೆಯೇ ಆಗಿದ್ದಾನೆ. ನಿಜವಾಗಿ ಈ ದೇಹ-ದೇಹೀ ವಿಭಾಗವೂ ಅವಿವೇಕದ ಫಲವೇ ಆಗಿದೆ. ಬ್ರಹ್ಮಜ್ಞಾನ ಉಂಟಾಗುವವರೆಗೆ ಇದು ಇರುತ್ತದೆ. ॥14-16॥
(ಶ್ಲೋಕ-17)
ಮೂಲಮ್
ನಾನಾತ್ವಂ ಜನ್ಮ ನಾಶಶ್ಚ ಕ್ಷಯೋ ವೃದ್ಧಿಃ ಕ್ರಿಯಾ ಫಲಮ್ ।
ದ್ರಷ್ಟುರಾಭಾಂತ್ಯತದ್ಧರ್ಮಾ ಯಥಾಗ್ನೇರ್ದಾರುವಿಕ್ರಿಯಾಃ ॥
ಅನುವಾದ
ಅಗ್ನಿಯಲ್ಲಿ ಕಟ್ಟಿಗೆಯ ವಿಕಾರಗಳು ಕಂಡು ಬರುವಂತೆ ಸಾಕ್ಷೀ ಆತ್ಮನಲ್ಲಿ ಭಿನ್ನತೆ, ಜನ್ಮ, ಮರಣ, ಕ್ಷಯ, ವೃದ್ಧಿ ಕರ್ಮ ಮತ್ತು ಕರ್ಮಫಲ ಮುಂತಾದವುಗಳು ಕಂಡುಬರುತ್ತವೆ. ಇವು ನಿಜವಾಗಿ ಅವನ ಧರ್ಮಗಳಲ್ಲ. ॥17॥
(ಶ್ಲೋಕ-18)
ಮೂಲಮ್
ತ ಇಮೇ ದೇಹಸಂಯೋಗಾದಾತ್ಮನಾ ಭಾಂತ್ಯಸದ್ ಗ್ರಹಾತ್ ।
ಪ್ರಪಾ ಯಥಾ ತಥಾ ಚಾನ್ಯದ್ಧ್ಯಾಯತೋಽಸತ್ಸದಾಗ್ರಹಾತ್ ॥
(ಶ್ಲೋಕ-19)
ಮೂಲಮ್
ಪ್ರಸುಪ್ತಸ್ಯಾನಹಂಭಾವಾತ್ತದಾ ಭಾತಿ ನ ಸಂಸೃತಿಃ ।
ಜೀವತೋಪಿ ತಥಾ ತದ್ವದ್ವಿಮುಕ್ತಸ್ಯಾನಹಂಕೃತೇಃ ॥
ಅನುವಾದ
ಮಿಥ್ಯಾ ಭ್ರಾಂತಿಯ ಕಾರಣ ಆತ್ಮನೊಂದಿಗೆ ದೇಹದ ಸಂಯೋಗವನ್ನು ತಿಳಿಯುವುದರಿಂದ ಇವೆಲ್ಲ ಧರ್ಮಗಳು ಸತ್ಯದಂತೆ ಕಾಣುವ ಸತ್ಯವೂ ನಿತ್ಯವೂ ಆದ ಆತ್ಮನದೇ ನಿಶ್ಚಯ ಮಾಡಿಕೊಂಡು ಅದನ್ನೇ ಚಿಂತಿಸುತ್ತಾ ಇರುವುದರಿಂದ ಇವುಗಳು ಮಿಥ್ಯೆಯೆಂದು ತೋರ ತೊಡಗುತ್ತವೆ. ಗಾಢನಿದ್ದೆಯಲ್ಲಿ ಮಲಗಿದ ಪುರುಷನಿಗೆ ಅಹಂಕಾರದ ಅಭಾವವಾಗುವುದರಿಂದ ಪ್ರಪಂಚದ ಪ್ರತೀತಿ ಆಗುವುದಿಲ್ಲ. ಹಾಗೆಯೇ ಅಹಂಕಾರ ರಹಿತ ಮುಕ್ತ ಪುರುಷನಿಗೆ ಬದುಕಿರುವಾಗಲೇ ಸಂಸಾರವು ನಿರ್ಜನವಾದ ಅರವಟ್ಟಿಗೆಯಂತೆ ತೋರುವುದೇ ಇಲ್ಲ. ॥18-19॥
(ಶ್ಲೋಕ-20)
ಮೂಲಮ್
ತಸ್ಮಾನ್ಮಾಯಾಮನೋಧರ್ಮಂ ಜಹ್ಯಹಮ್ಮಮತಾಭ್ರಮಮ್ ।
ರಾಮಭದ್ರೇ ಭಗವತಿ ಮನೋ ಧೇಹ್ಯಾತ್ಮನೀಶ್ವರೇ ॥
(ಶ್ಲೋಕ-21)
ಮೂಲಮ್
ಸರ್ವಭೂತಾತ್ಮನಿ ಪರೇ ಮಾಯಾಮಾನುಷರೂಪಿಣಿ ।
ಬಾಹ್ಯೇಂದ್ರಿಯಾರ್ಥಸಂಬಂಧಾತ್ತ್ಯಾಜಯಿತ್ವಾ ಮನಃ ಶನೈಃ ॥
ಅನುವಾದ
ಆದ್ದರಿಂದ ನೀನು ಅಹಂತೆ-ಮಮತೆ ಹಾಗೂ ಭ್ರಾಂತಿ ರೂಪೀ ಮಾಯಾಮಯ ಮನೋಧರ್ಮವನ್ನು ತ್ಯಜಿಸು ಮತ್ತು ಇಂದ್ರಿಯಗಳ ಬಾಹ್ಯ ವಿಷಯಗಳಿಂದ ತನ್ನ ಮನಸ್ಸಿನ ಸಂಬಂಧವನ್ನು ಬಿಡಿಸಿ, ಅದನ್ನು ಕ್ರಮವಾಗಿ ತನ್ನ ಆತ್ಮ ಸ್ವರೂಪೀ ಸರ್ವಭೂತಾಂತರ್ಯಾಮೀ ಪರಮೇಶ್ವರ ಮಾಯಾ-ಮಾನವ ರೂಪೀ ಭಗವಾನ್ ಶ್ರೀರಾಮನಲ್ಲಿ ಸ್ಥಿರಗೊಳಿಸು. ॥20-21॥
(ಶ್ಲೋಕ-22)
ಮೂಲಮ್
ತತ್ರ ದೋಷಾಂದರ್ಶಯಿತ್ವಾ ರಾಮಾನಂದೇ ನಿಯೋಜಯ ।
ದೇಹಬುದ್ಧ್ಯಾ ಭವೇದ್ ಭ್ರಾತಾ ಪಿತಾ ಮಾತಾ ಸುಹೃತ್ಪ್ರಿಯಃ ॥
ಅನುವಾದ
ಮನಸ್ಸಿಗೆ ಬಾಹ್ಯ ವಿಷಯಗಳಲ್ಲಿರುವ ದೋಷಗಳನ್ನು ತೋರಿಸಿ ಕೊಟ್ಟು, ಅದನ್ನು ರಾಮನೆಂಬ ಆನಂದ ರೂಪದಲ್ಲಿ ನೆಲೆಗೊಳಿಸುವವನಾಗು. ಶರೀರ ಬುದ್ಧಿಯ ನಿಮಿತ್ತವಾಗಿಯೇ, ಸೋದರ, ತಂದೆ, ತಾಯಿ, ಸ್ನೇಹಿತ, ಪ್ರಿಯನಾದವನು ಮುಂತಾದ ವ್ಯವಹಾರವುಂಟಾಗಿದೆ. ॥22॥
(ಶ್ಲೋಕ-23)
ಮೂಲಮ್
ವಿಲಕ್ಷಣಂ ಯದಾ ದೇಹಾಜ್ಜಾನಾತ್ಯಾತ್ಮಾನಮಾತ್ಮನಾ ।
ತದಾ ಕಃ ಕಸ್ಯ ವಾ ಬಂಧುರ್ಭಾತಾ ಮಾತಾ ಪಿತಾ ಸುಹೃತ್ ॥
ಅನುವಾದ
ತನ್ನ ವಿಶುದ್ಧ ಅಂತಃಕರಣದ ಮೂಲಕ ಮನುಷ್ಯನು ಆತ್ಮನನ್ನು ದೇಹದಿಂದ ಬೇರೆಯೆಂದು ತಿಳಿದಾಗ ಯಾರಿಗೆ ಯಾರು ತಂದೆ, ತಾಯಿ, ಸಹೋದರ, ನೆಂಟರು, ಸ್ನೇಹಿತರಾಗಿದ್ದಾರೆ? ॥23॥
(ಶ್ಲೋಕ-24)
ಮೂಲಮ್
ಮಿಥ್ಯಾಜ್ಞಾನವಶಾಜ್ಜಾತಾ ದಾರಾಗಾರಾದಯಃ ಸದಾ ।
ಶಬ್ದಾದಯಶ್ಚ ವಿಷಯಾ ವಿವಿಧಾಶ್ಚೈವ ಸಂಪದಃ ॥
(ಶ್ಲೋಕ-25)
ಮೂಲಮ್
ಬಲಂ ಕೋಶೋ ಭೃತ್ಯವರ್ಗೋ ರಾಜ್ಯಂ ಭೂಮಿಃ ಸುತಾದಯಃ ।
ಅಜ್ಞಾನಜತ್ವಾತ್ಸರ್ವೇ ತೇ ಕ್ಷಣಸಂಗಮಭಂಗುರಾಃ ॥
ಅನುವಾದ
ಈ ಪತ್ನೀ, ಮನೆ ಮುಂತಾದವುಗಳು, ಶಬ್ದಾದಿ ವಿಷಯಗಳೂ, ಅನೇಕ ರೀತಿಯ ಸಂಪತ್ತು, ಬಲ, ಕೋಶ, ಸೇವಕರು, ರಾಜ್ಯ, ಭೂಮಿ ಹಾಗೂ ಪುತ್ರಾದಿ ಎಲ್ಲವೂ ಮಿಥ್ಯಾ ಜ್ಞಾನದ ಕಾರಣವೇ ಉಂಟಾಗಿವೆ. ಅಜ್ಞಾನಜನ್ಯವಾದ ಕಾರಣ ಇವೆಲ್ಲವೂ ಕ್ಷಣ ಭಂಗುರವಾಗಿವೆ. ॥24-25॥
(ಶ್ಲೋಕ-26)
ಮೂಲಮ್
ಅಥೋತಿಷ್ಠ ಹೃದಾ ರಾಮಂ ಭಾವಯನ್ ಭಕ್ತಿಭಾವಿತಮ್ ।
ಅನುವರ್ತಸ್ವ ರಾಜ್ಯಾದಿ ಭುಂಜನ್ ಪ್ರಾರಬ್ಧಮನ್ವಹಮ್ ॥
ಅನುವಾದ
ಆದ್ದರಿಂದ ಎಲೈ ವಿಭೀಷಣನೆ! ಭಕ್ತಿಯಿಂದ ದೊರಕುವ ಶ್ರೀರಾಮನನ್ನು ಹೃದಯದಲ್ಲಿ ಚಿಂತಿಸುತ್ತಾ ಎದ್ದೇಳು. ಪ್ರಾರಬ್ಧನಿಮಿತ್ತವಾಗಿ ಬಂದದೊದಗಿರುವ ರಾಜ್ಯಾದಿ ಸುಖಗಳನ್ನು ಅನುಭವಿಸು. ॥26॥
(ಶ್ಲೋಕ-27)
ಮೂಲಮ್
ಭೂತಂ ಭವಿಷ್ಯದಭಜನ್ ವರ್ತಮಾನಮಥಾಚರನ್ ।
ವಿಹರಸ್ವ ಯಥಾನ್ಯಾಯಂ ಭವದೋಷೈರ್ನ ಲಿಪ್ಯಸೇ ॥
ಅನುವಾದ
ಭೂತ-ಭವಿಷ್ಯವನ್ನು ಚಿಂತಸದೆ ಈಗ ಬಂದೊದಗಿದುದನ್ನು ಅನುಸರಿಸುತ್ತಾ ನ್ಯಾಯಾನು ಕೂಲವಾಗಿ ಆಚರಣ ಮಾಡು. ಇದರಿಂದ ನೀನು ಸಂಸಾರ ದೋಷಗಳಿಂದ ಲಿಪ್ತನಾಗಲಾರೆ. ॥27॥
(ಶ್ಲೋಕ-28)
ಮೂಲಮ್
ಆಜ್ಞಾಪಯತಿ ರಾಮಸ್ತ್ವಾಂ ಯದ್ ಭ್ರಾತುಃ ಸಾಂಪರಾಯಿಕಮ್ ।
ತತ್ಕುರುಷ್ವ ಯಥಾಶಾಸ್ತ್ರಂ ರುದತೀಶ್ಚಾಪಿ ಯೋಷಿತಃ ॥
(ಶ್ಲೋಕ-29)
ಮೂಲಮ್
ನಿವಾರಯ ಮಹಾಬುದ್ಧೇ ಲಂಕಾಂ ಗಚ್ಛಂತು ಮಾ ಚಿರಮ್ ।
ಶ್ರುತ್ವಾ ಯಥಾವದ್ವಚನಂ ಲಕ್ಷ್ಮಣಸ್ಯ ವಿಭೀಷಣಃ ॥
(ಶ್ಲೋಕ-30)
ಮೂಲಮ್
ತ್ಯಕ್ತ್ವಾ ಶೋಕಂ ಚ ಮೋಹಂ ಚ ರಾಮಪಾರ್ಶ್ವಮುಪಾಗಮತ್ ।
ವಿಮೃಶ್ಯ ಬುದ್ಧ್ಯಾ ಧರ್ಮಜ್ಞೋ ಧರ್ಮಾರ್ಥಸಹಿತಂ ವಚಃ ॥
(ಶ್ಲೋಕ-31)
ಮೂಲಮ್
ರಾಮಸ್ಯೈವಾನುವೃತ್ತ್ಯರ್ಥಮುತ್ತರಂ ಪರ್ಯಭಾಷತ ।
ನೃಶಂಸಮನೃತಂ ಕ್ರೂರಂ ತ್ಯಕ್ತಧರ್ಮವ್ರತಂ ಪ್ರಭೋ ॥
(ಶ್ಲೋಕ-32)
ಮೂಲಮ್
ನಾರ್ಹೋಽಸ್ಮಿ ದೇವ ಸಂಸ್ಕರ್ತುಂ ಪರದಾರಾಭಿಮರ್ಶಿನಮ್ ।
ಶ್ರುತ್ವಾ ತದ್ವಚನಂ ಪ್ರೀತೋ ರಾಮೋ ವಚನಮಬ್ರವೀತ್ ॥
(ಶ್ಲೋಕ-33)
ಮೂಲಮ್
ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಮ್ ।
ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ ॥
ಅನುವಾದ
ರಾಮನು ನಿನಗೆ ನಿನ್ನಣ್ಣನ ಉತ್ತರಕ್ರಿಯಾದಿಗಳನ್ನು ಮಾಡುವಂತೆ ಅಪ್ಪಣೆ ಮಾಡಿರುವನು. ಶಾಸ್ತ್ರಾನುಸಾರವಾಗಿ ಅದನ್ನು ಮಾಡು ಮತ್ತು ಅಳುತ್ತಿರುವ ಹೆಂಗಸರನ್ನು ಇಲ್ಲಿಂದ ಬೇರೆಯಾಗಿಸು. ಇವರೆಲ್ಲರೂ ತಡಮಾಡದೆ ಲಂಕೆಗೆ ಹಿಂದಿರುಗಲಿ.’’ ಲಕ್ಷ್ಮಣನು ಹೇಳಿದ ಯಥಾಯೋಗ್ಯವಾದ ಮಾತುಗಳನ್ನು ಕೇಳಿ ವಿಭೀಷಣನು ಶೋಕ-ಮೋಹಗಳನ್ನು ಬಿಟ್ಟು ಶ್ರೀರಾಮನ ಸಮೀಪಕ್ಕೆ ಬಂದನು. ಧರ್ಮಜ್ಞನಾದ ವಿಭೀಷಣನು ಮನಸ್ಸಿನಲ್ಲಿ ವಿಚಾರಮಾಡಿ ಶ್ರೀರಾಮಚಂದ್ರನನ್ನೇ ಅನು ಸರಿಸುವುದಕ್ಕಾಗಿ ಧರ್ಮಾರ್ಥಗಳಿಂದ ಕೂಡಿದ ಮಾತುಗಳನ್ನು ಹೇಳಿದನು ‘‘ಪ್ರಭುವೆ! ಪಾಪಿಯೂ, ಸುಳ್ಳುಗಾರನೂ, ಕ್ರೂರನೂ, ಧರ್ಮವನ್ನು ಕೈಬಿಟ್ಟವನೂ, ಪರರ ಹೆಂಡಂದಿರನ್ನು ಸ್ಪರ್ಶಮಾಡಿದವನೂ ಆದ ಇವನ ಸಂಸ್ಕಾರಮಾಡಲು ನಾನು ಸಮರ್ಥನಲ್ಲ.’’ ಅವನ ಮಾತನ್ನು ಕೇಳಿ ಶ್ರೀರಾಮಚಂದ್ರನು ಸುಪ್ರೀತನಾಗಿ ‘ಅಯ್ಯಾ! ವೈರವು ಸಾಯುವವರೆಗೆ ಇರುತ್ತದೆ. ನಮ್ಮ ಕಾರ್ಯಸಿದ್ಧಿಯಾಗಿಬಿಟ್ಟಿದೆ. ಇನ್ನು ಮುಂದೆ ಇವನು ನಿನಗೆ ಹೇಗೋ ಹಾಗೇ ನನ್ನವನೂ ಆಗಿರುವನು. ಆದ್ದರಿಂದ ಇವನ ಸಂಸ್ಕಾರವನ್ನು ಮಾಡು’ ಎಂದನು. ॥28-33॥
(ಶ್ಲೋಕ-34)
ಮೂಲಮ್
ರಾಮಾಜ್ಞಾಂ ಶಿರಸಾ ಧೃತ್ವಾ ಶೀಘ್ರಮೇವ ವಿಭೀಷಣಃ ।
ಸಾಂತ್ವವಾಕ್ಯೈರ್ಮಹಾಬುದ್ಧಿಂ ರಾಜ್ಞೀಂ ಮಂದೋದರಿಂ ತದಾ ॥
(ಶ್ಲೋಕ-35)
ಮೂಲಮ್
ಸಾಂತ್ವಯಾಮಾಸ ಧರ್ಮಾತ್ಮಾ ಧರ್ಮಬುದ್ಧಿರ್ವಿಭೀಷಣಃ ।
ತ್ವರಯಾಮಾಸ ಧರ್ಮಜ್ಞಃ ಸಂಸ್ಕಾರಾರ್ಥಂ ಸ್ವಬಾಂಧವಾನ್ ॥
ಅನುವಾದ
ವಿಭೀಷಣನು ಶ್ರೀರಾಮನ ಆಜ್ಞೆಯನ್ನು ಶಿರದಲ್ಲಿ ಹೊತ್ತು ಕೂಡಲೇ ಮಹಾಬುದ್ಧಿಶಾಲಿನಿಯಾದ ರಾವಣನ ಪತ್ನಿ ಮಹಾರಾಣೀ ಮಂದೋದರಿಯನ್ನು ಸಮಾಧಾನದ ಮಾತುಗಳನ್ನು ಹೇಳಿ ಧೈರ್ಯಕೊಟ್ಟನು. ಅನಂತರ ಧರ್ಮ ಬುದ್ಧಿಯುಳ್ಳ ಧರ್ಮಾತ್ಮಾ ವಿಭೀಷಣನು ತನ್ನ ಬಂಧುಗಳೊಂದಿಗೆ ಸಂಸ್ಕಾರಕ್ಕಾಗಿ ಆತುರಪಡಿಸಿದನು. ॥34-35॥
(ಶ್ಲೋಕ-36)
ಮೂಲಮ್
ಚಿತ್ಯಾಂ ನಿವೇಶ್ಯ ವಿಧಿವತ್ ಪಿತೃಮೇಧವಿಧಾನತಃ ।
ಆಹಿತಾಗ್ನೇರ್ಯಥಾ ಕಾರ್ಯಂ ರಾವಣಸ್ಯ ವಿಭೀಷಣಃ ॥
(ಶ್ಲೋಕ-37)
ಮೂಲಮ್
ತಥೈವ ಸರ್ವಮಕರೋದ್ಬಂಧುಭಿಃ ಸಹ ಮಂತ್ರಿಭಿಃ ।
ದದೌ ಚ ಪಾವಕಂ ತಸ್ಯ ವಿಧಿಯುಕ್ತಂ ವಿಭೀಷಣಃ ॥
ಅನುವಾದ
ರಾವಣನ ಶರೀರವನ್ನು ವಿಧಿವತ್ತಾಗಿ ಚಿತೆಯ ಮೇಲಿರಿಸಿ, ಆಹಿತಾಗ್ನಿಯಾದ ಯಜಮಾನನಿಗೆ ಹೇಗೆ ಸಂಸ್ಕಾರ ಮಾಡಬೇಕೋ ಹಾಗೆ ವಿಭೀಷಣನು ಪಿತೃಮೇಧ ವಿಧಿಪ್ರಕಾರವಾಗಿ ಬಂಧುಗಳಿಂದಲೂ, ಮಂತ್ರಿಗಳಿಂದಲೂ ಕೂಡಿ ಎಲ್ಲ ಕರ್ಮಗಳನ್ನು ಮಾಡಿದನು. ವಿಧಿಯುಕ್ತವಾಗಿ ವಿಭೀಷಣನು ಅಗ್ನಿಯನ್ನು ಹಚ್ಚಿದನು. (ದಹನ ಮಾಡಿದನು.) ॥36-37॥
(ಶ್ಲೋಕ-38)
ಮೂಲಮ್
ಸ್ನಾತ್ವಾ ಚೈವಾರ್ದ್ರವಸ್ತ್ರೇಣ ತಿಲಾನ್ ದರ್ಭಾಭಿಮಿಶ್ರಿತಾನ್ ।
ಉದಕೇನ ಚ ಸಮ್ಮಿಶ್ರಾನ್ ಪ್ರದಾಯ ವಿಧಿಪೂರ್ವಕಮ್ ॥
ಅನುವಾದ
ಅನಂತರ ಸ್ನಾನ ಮಾಡಿ ಒದ್ದೆ ಬಟ್ಟೆಯಿಂದ ಎಳ್ಳು ದರ್ಭೆಗಳಿಂದ ವಿಧಿಪೂರ್ವಕವಾಗಿ ಜಲಾಂಜಲಿಯನ್ನು ಕೊಟ್ಟನು. ॥38॥
(ಶ್ಲೋಕ-39)
ಮೂಲಮ್
ಪ್ರದಾಯ ಚೋದಕಂ ತಸ್ಮೈ ಮೂರ್ಧ್ನಾ ಚೈನಂ ಪ್ರಣಮ್ಯ ಚ ।
ತಾಃ ಸ್ತ್ರಿಯೋಽನುನಯಾಮಾಸ ಸಾಂತ್ವಮುಕ್ತ್ವಾ ಪುನಃ ಪುನಃ ॥
ಅನುವಾದ
ಹೀಗೆ ತಿಲಾಂಜಲಿಯನ್ನು ಕೊಟ್ಟು ನೆಲದಲ್ಲಿ ತಲೆಯನ್ನಿರಿಸಿ ಅವನಿಗೆ ನಮಸ್ಕಾರ ಮಾಡಿದನು. ಪುನಃ-ಪುನಃ ಆ ರಾವಣನ ಕಡೆಯ ಸ್ತ್ರೀಯರನ್ನು ಸಾಂತ್ವನಗೊಳಿಸಿದನು. ॥39॥
(ಶ್ಲೋಕ-40)
ಮೂಲಮ್
ಗಮ್ಯತಾಮಿತಿ ತಾಃ ಸರ್ವಾ ವಿವಿಶುರ್ನಗರಂ ತದಾ ।
ಪ್ರವಿಷ್ಟಾಸು ಚ ಸರ್ವಾಸು ರಾಕ್ಷಸೀಷು ವಿಭೀಷಣಃ ॥
(ಶ್ಲೋಕ-41)
ಮೂಲಮ್
ರಾಮಪಾರ್ಶ್ವಮುಪಾಗತ್ಯ ತದಾತಿಷ್ಠದ್ವಿನೀತವತ್ ।
ರಾಮೋಽಪಿ ಸಹ ಸೈನ್ಯೇನ ಸಸುಗ್ರೀವಃ ಸಲಕ್ಷ್ಮಣಃ ॥
(ಶ್ಲೋಕ-42)
ಮೂಲಮ್
ಹರ್ಷಂ ಲೇಭೇ ರಿಪೂನ್ ಹತ್ವಾ ಯಥಾ ವೃತ್ರಂ ಶತಕ್ರತುಃ ।
ಮಾತಲಿಶ್ಚ ತದಾ ರಾಮಂ ಪರಿಕ್ರಮ್ಯಾಭಿವಂದ್ಯ ಚ ॥
(ಶ್ಲೋಕ-43)
ಮೂಲಮ್
ಅನುಜ್ಞಾತಶ್ಚ ರಾಮೇಣ ಯಯೌ ಸ್ವರ್ಗಂ ವಿಹಾಯಸಾ ।
ತತೋ ಹೃಷ್ಟಮನಾ ರಾಮೋ ಲಕ್ಷ್ಮಣಂ ಚೇದಮಬ್ರವೀತ್ ॥
ಅನುವಾದ
‘ನೀವೆಲ್ಲರೂ ಹೊರಡಿರಿ’ ಎಂದು ವಿಭೀಷಣನು ಹೇಳಿದಾಗ ಅವರೆಲ್ಲ ಸ್ತ್ರೀಯರು ನಗರದೊಳಗೆ ಹೊರಟು ಹೋದರು. ಎಲ್ಲ ರಾಕ್ಷಸಿಯರು ಲಂಕೆಯನ್ನು ಹೊಕ್ಕ ಮೇಲೆ ವಿಭೀಷಣನು ರಾಮನ ಹತ್ತಿರಕ್ಕೆ ಬಂದು ವಿನೀತಭಾವದಿಂದ ನಿಂತುಕೊಂಡನು. ಸುಗ್ರೀವ ಲಕ್ಷ್ಮಣರೊಡಗೂಡಿ, ಸೇನಾಸಮೇತನಾಗಿ ಶತ್ರುಗಳನ್ನು ಕೊಂದ ಬಳಿಕ ಶ್ರೀರಾಮನೂ ಕೂಡ ದೇವೇಂದ್ರನು ವೃತ್ರಾಸುರನನ್ನು ಗೆದ್ದಾಗ ಸಂತೋಷಪಟ್ಟಂತೆ ಹರ್ಷಿತನಾದನು. ಮಾತಲಿಯು ಶ್ರೀರಾಮಚಂದ್ರನನ್ನು ಪ್ರದಕ್ಷಿಣೆ ಬಂದು ನಮಸ್ಕರಿಸಿ, ಅವನ ಅಪ್ಪಣೆಯನ್ನು ಪಡೆದು ಆಕಾಶಮಾರ್ಗದಿಂದ ದೇವಲೋಕ್ಕೆ ಹೊರಟುಹೋದನು. ಆಗ ಶ್ರೀರಘುನಾಥನು ಸಂತೋಷಗೊಂಡ ಮನಸ್ಸಿನಿಂದ ಲಕ್ಷ್ಮಣನನ್ನು ಕುರಿತು ಹೀಗೆಂದನು ॥40-43॥
(ಶ್ಲೋಕ-44)
ಮೂಲಮ್
ವಿಭೀಷಣಾಯ ಮೇ ಲಂಕಾರಾಜ್ಯಂ ದತ್ತಂ ಪುರೈವ ಹಿ ।
ಇದಾನೀಮಪಿ ಗತ್ವಾ ತ್ವಂ ಲಂಕಾಮಧ್ಯೇ ವಿಭೀಷಣಮ್ ॥
(ಶ್ಲೋಕ-45)
ಮೂಲಮ್
ಅಭಿಷೇಚಯ ವಿಪ್ರೈಶ್ಚ ಮಂತ್ರವದ್ವಿಧಿಪೂರ್ವಕಮ್ ।
ಇತ್ಯುಕ್ತೋ ಲಕ್ಷ್ಮಣಸ್ತೂರ್ಣಂ ಜಗಾಮ ಸಹ ವಾನರೈಃ ॥
(ಶ್ಲೋಕ-46)
ಮೂಲಮ್
ಲಂಕಾಂ ಸುವರ್ಣಕಲಶೈಃ ಸಮುದ್ರಜಲಸಂಯುತೈಃ ।
ಅಭಿಷೇಕಂ ಶುಭಂ ಚಕ್ರೇ ರಾಕ್ಷಸೇಂದ್ರಸ್ಯ ಧೀಮತಃ ॥
ಅನುವಾದ
‘‘ನಾನು ವಿಭೀಷಣನಿಗೆ ಲಂಕೆಯ ರಾಜ್ಯವನ್ನು ಮೊದಲೇ ಕೊಟ್ಟಿರುವೆನು. ಆದರೂ ನೀನು ಈಗ ಲಂಕೆಗೆ ಹೋಗಿ ಬ್ರಾಹ್ಮಣರಿಂದ ವೇದ ಮಂತ್ರಗಳ ವಿಧಿಪೂರ್ವಕವಾಗಿ ವಿಭೀಷಣನ ಪಟ್ಟಾಭಿಷೇಕವನ್ನು ಮಾಡಿಸು.’’ ಭಗವಾನ್ ಶ್ರೀರಾಮನ ಆಜ್ಞೆಯನ್ನು ಪಡೆದು ವಾನರರನ್ನು ಕೂಡಿಕೊಂಡು ಲಕ್ಷ್ಮಣನು ಬೇಗನೇ ಲಂಕೆಗೆ ಹೋದನು. ಸಮುದ್ರ ಜಲದಿಂದ ತುಂಬಿದ ಚಿನ್ನದ ಕಲಶಗಳಿಂದ ಧೀಮಂತನಾದ ರಾಕ್ಷಸ ಶ್ರೇಷ್ಠ ವಿಭೀಷಣನಿಗೆ ಶುಭಕರವಾದ ಪಟ್ಟಾಭಿಷೇಕವನ್ನು ನೆರವೇರಿಸಿದನು. ॥44-46॥
(ಶ್ಲೋಕ-47)
ಮೂಲಮ್
ತತಃ ಪೌರಜನೈಃ ಸಾರ್ಧಂ ನಾನೋಪಾಯನಪಾಣಿಭಿಃ ।
ವಿಭೀಷಣಃ ಸಸೌಮಿತ್ರಿರುಪಾಯನಪುರಸ್ಕೃತಃ ॥
(ಶ್ಲೋಕ-48)
ಮೂಲಮ್
ದಂಡಪ್ರಣಾಮಮಕರೋದ್ರಾಮಸ್ಯಾಕ್ಲಿಷ್ಟಕರ್ಮಣಃ ।
ರಾಮೋ ವಿಭೀಷಣಂ ದೃಷ್ಟ್ವಾ ಪ್ರಾಪ್ತರಾಜ್ಯಂ ಮುದಾನ್ವಿತಃ ॥
(ಶ್ಲೋಕ-49)
ಮೂಲಮ್
ಕೃತಕೃತ್ಯಮಿವಾತ್ಮಾನಮಮನ್ಯತ ಸಹಾನುಜಃ ।
ಸುಗ್ರೀವಂ ಚ ಸಮಾಲಿಂಗ್ಯ ರಾಮೋ ವಾಕ್ಯಮಥಾಬ್ರವೀತ್ ॥
ಅನುವಾದ
ಅನಂತರ ಅನೇಕವಿಧವಾದ ಕಪ್ಪ-ಕಾಣಿಕೆಗಳನ್ನು ಕೈಯಲ್ಲೆತ್ತಿಕೊಂಡು ಅನೇಕ ಪೌರಜನರೊಡಗೂಡಿ, ಲಕ್ಷ್ಮಣ ಸಹಿತ ವಿಭೀಷಣನು ಶ್ರೀರಾಮಚಂದ್ರನ ಬಳಿಗೆ ಸಾರಿ, ವಿಧ ವಿಧವಾದ ಉಡುಗೊರೆಗಳನ್ನು ಅಮೋಘಕರ್ಮನಾದ ಶ್ರೀರಾಮನ ಮುಂದಿರಿಸಿ ದಂಡವತ್ ಪ್ರಣಾಮಗಳನ್ನು ಅರ್ಪಿಸಿದನು. ವಿಭೀಷಣನಿಗೆ ರಾಜ್ಯವು ದೊರೆತುದನ್ನು ಕಂಡು ಶ್ರೀರಾಮಚಂದ್ರನು ತುಂಬಾ ಸಂತೋಷಗೊಂಡು ಲಕ್ಷ್ಮಣನೊಡನೆ ತಾನು ಕೃತಕೃತ್ಯನಾದೆನೆಂದು ತಿಳಿದುಕೊಂಡನು. ಮತ್ತೆ ಸುಗ್ರೀವನನ್ನು ಆಲಿಂಗಿಸಿಕೊಂಡು ಶ್ರೀರಾಮನು ಹೀಗೆಂದನು. ॥47-49॥
(ಶ್ಲೋಕ-50)
ಮೂಲಮ್
ಸಹಾಯೇನ ತ್ವಯಾ ವೀರ ಜಿತೋ ಮೇ ರಾವಣೋ ಮಹಾನ್ ।
ವಿಭೀಷಣೋಽಪಿ ಲಂಕಾಯಾಮಭಿಷಿಕ್ತೋ ಮಯಾನಘ ॥
ಅನುವಾದ
‘‘ಎಲೈ ವೀರನೆ! ನಿನ್ನ ಸಹಾಯದಿಂದ ನಾನು ಮಹಾಬಲಿಯಾದ ರಾವಣನನ್ನು ಗೆದ್ದುಕೊಂಡೆನು. ಎಲೈ ಪಾಪರಹಿತನೆ! ಅದರಿಂದ ವಿಭೀಷಣನೂ ಕೂಡ ಲಂಕೆಯಲ್ಲಿ ಪಟ್ಟಾಭಿಷಿಕ್ತನಾದನು. ॥50॥
(ಶ್ಲೋಕ-51)
ಮೂಲಮ್
ತತಃ ಪ್ರಾಹ ಹನೂಮಂತಂ ಪಾರ್ಶ್ವಸ್ಥಂ ವಿನಯಾನ್ವಿತಮ್ ।
ವಿಭೀಷಣಸ್ಯಾನುಮತೇರ್ಗಚ್ಛ ತ್ವಂ ರಾವಣಾಲಯಮ್ ॥
ಅನುವಾದ
ಬಳಿಕ ಬಳಿಯಲ್ಲೇ ವಿನೀತ ಭಾವದಿಂದ ನಿಂತಿರುವ ಹನುಮಂತನಿಗೆ ಹೀಗೆಂದನು ‘‘ಮಾರುತಿ! ನೀನು ವಿಭೀಷಣನ ಅಪ್ಪಣೆಯನ್ನು ಪಡೆದು ರಾವಣನ ಅರಮನೆಗೆ ಹೋಗು. ॥51॥
(ಶ್ಲೋಕ-52)
ಮೂಲಮ್
ಜಾನಕ್ಯೈ ಸರ್ವಮಾಖ್ಯಾಹಿ ರಾವಣಸ್ಯ ವಧಾದಿಕಮ್ ।
ಜಾನಕ್ಯಾಃ ಪ್ರತಿವಾಕ್ಯಂ ಮೇ ಶೀಘ್ರಮೇವ ನಿವೇದಯ ॥
ಅನುವಾದ
ಅಲ್ಲಿ ಅಶೋಕಾ ವನದಲ್ಲಿರುವ ಸೀತೆಗೆ ರಾವಣವಧೆಯೇ ಮುಂತಾದ ಎಲ್ಲ ವೃತ್ತಾಂತಗಳನ್ನು ಹೇಳು. ಸೀತೆಯ ಉತ್ತರವನ್ನು ಬೇಗನೇ ನನಗೆ ಬಂದು ಹೇಳು.’’ ॥52॥
(ಶ್ಲೋಕ-53)
ಮೂಲಮ್
ಏವಮಾಜ್ಞಾಪಿತೋ ಧೀಮಾನ್ ರಾಮೇಣ ಪವನಾತ್ಮಜಃ ।
ಪ್ರವಿವೇಶ ಪುರೀಂ ಲಂಕಾಂ ಪೂಜ್ಯಮಾನೋ ನಿಶಾಚರೈಃ ॥
ಅನುವಾದ
ಬುದ್ಧಿವಂತನಾದ ಪವನನಂದನನು ಶ್ರೀರಾಮನ ಆಜ್ಞೆಯನ್ನು ಪಡೆದು, ರಾಕ್ಷಸರಿಂದ ಗೌರವಿಸಲ್ಟಟ್ಟವನಾಗಿ ಲಂಕೆಯನ್ನು ಪ್ರವೇಶಿಸಿದನು. ॥53॥
(ಶ್ಲೋಕ-54)
ಮೂಲಮ್
ಪ್ರವಿಶ್ಯ ರಾವಣಗೃಹಂ ಶಿಂಶಪಾಮೂಲಮಾಶ್ರಿತಾಮ್ ।
ದದರ್ಶ ಜಾನಕೀಂ ತತ್ರ ಕೃಶಾಂ ದಿನಾಮನಿಂದಿತಾಮ್ ॥
ಅನುವಾದ
ಮತ್ತೆ ರಾವಣನ ಅರಮನೆಯನ್ನು ಹೊಕ್ಕು ಅಲ್ಲಿ ಶಿಂಶಪಾವೃಕ್ಷದ ಬುಡದಲ್ಲಿ ಕುಳಿತ್ತಿದ್ದ, ದೀನಳಾದ, ಬಡಕಳಾದ ಹಾಗೂ ಪರಿಶುದ್ಧಳಾದ ಸೀತಾದೇವಿಯನ್ನು ಕಂಡನು. ॥54॥
(ಶ್ಲೋಕ-55)
ಮೂಲಮ್
ರಾಕ್ಷಸೀಭಿಃ ಪರಿವೃತಾಂ ಧ್ಯಾಯಂತೀಂ ರಾಮಮೇವ ಹಿ ।
ವಿನಯಾವನತೋ ಭೂತ್ವಾ ಪ್ರಣಮ್ಯ ಪವನಾತ್ಮಜಃ ॥
ಅನುವಾದ
ಅವಳು ರಾಕ್ಷಸಿಯರು ಸುತ್ತು ವರಿದಿದ್ದರೂ ಏಕಮಾತ್ರ ಭಗವಾನ್ ಶ್ರೀರಾಮನನ್ನೇ ಧ್ಯಾನಿಸುತ್ತಿದ್ದಳು. ವಾಯುನಂದನನು ಅತಿವಿನಯದಿಂದ ಬಗ್ಗಿ ನಮಸ್ಕರಿಸಿದನು. ॥55॥
(ಶ್ಲೋಕ-56)
ಮೂಲಮ್
ಕೃತಾಂಜಲಿಪುಟೋ ಭೂತ್ವಾ ಪ್ರಹ್ವೋ ಭಕ್ತ್ಯಾಗ್ರತಃ ಸ್ಥಿತಃ ।
ತಂ ದೃಷ್ಟ್ವಾ ಜಾನಕೀ ತೂಷ್ಣೀಂ ಸ್ಥಿತ್ವಾ ಪೂರ್ವಸ್ಮೃತಿಂ ಯಯೌ ॥
ಅನುವಾದ
ಮತ್ತೆ ಅತ್ಯಂತ ನಮ್ರತೆಯಿಂದ ಭಕ್ತಿಭಾವದಿಂದೊಡಗೂಡಿ ಕೈ ಜೋಡಿಸಿಕೊಂಡು ಎದುರಿಗೆ ನಿಂತುಕೊಂಡನು. ಅವನನ್ನು ನೋಡಿ ಜಾನಕಿಯು ಮೊದಲು ಸ್ವಲ್ಪ ಹೊತ್ತು ಸುಮ್ಮನಿದ್ದು ಹಿಂದಿನ ನೆನಪನ್ನು ತಂದುಕೊಂಡಳು. ॥56॥
(ಶ್ಲೋಕ-57)
ಮೂಲಮ್
ಜ್ಞಾತ್ವಾ ತಂ ರಾಮದೂತಂ ಸಾ ಹರ್ಷಾತ್ಸೌಮ್ಯಮುಖೀ ಬಭೌ ।
ಸ ತಾಂ ಸೌಮ್ಯಮುಖೀಂ ದೃಷ್ಟ್ವಾ ತಸ್ಯೈ ಪವನನಂದನಃ ।
ರಾಮಸ್ಯ ಭಾಷಿತಂ ಸರ್ವಮಾಖ್ಯಾತುಮುಪಚಕ್ರಮೇ ॥
ಅನುವಾದ
ಆಕೆಯು ಅವನನ್ನು ಶ್ರೀರಾಮನ ದೂತನೆಂದು ತಿಳಿದು ಹರ್ಷದಿಂದ ಹಸನ್ಮುಖಿಯಾಗಿ ವಿರಾಜಿಸಿದಳು. ಹನುಮಂತನು ಸೌಮ್ಯಮುಖಿಯಾದ ಆಕೆಯನ್ನು ಕುರಿತು ಶ್ರೀರಾಮನು ಹೇಳಿದ್ದೆಲ್ಲವನ್ನು ಅರಿಕೆಮಾಡಿಕೊಂಡನು. ॥57॥
(ಶ್ಲೋಕ-58)
ಮೂಲಮ್
ದೇವಿ ರಾಮಃ ಸಸುಗ್ರೀವೋ ವಿಭೀಷಣಸಹಾಯವಾನ್ ।
ಕುಶಲೀ ವಾನರಾಣಾಂ ಚ ಸೈನ್ಯೈಶ್ಚ ಸಹಲಕ್ಷ್ಮಣಃ ॥
ಅನುವಾದ
‘‘ಅಮ್ಮಾ! ವಿಭೀಷಣನ ಸಹಾಯವುಳ್ಳ ಶ್ರೀರಾಮಚಂದ್ರನು ಲಕ್ಷ್ಮಣ, ಸುಗ್ರೀವ ಹಾಗೂ ಸಮಸ್ತ ವಾನರಸೇನೆಯೊಂದಿಗೆ ಕ್ಷೇಮವಾಗಿದ್ದಾನೆ. ॥58॥
(ಶ್ಲೋಕ-59)
ಮೂಲಮ್
ರಾವಣಂ ಸಸುತಂ ಹತ್ವಾ ಸಬಲಂ ಸಹ ಮಂತ್ರಿಭಿಃ ।
ತ್ವಾಮಾಹ ಕುಶಲಂ ರಾಮೋ ರಾಜ್ಯೇ ಕೃತ್ವಾ ವಿಭೀಷಣಮ್ ॥
ಅನುವಾದ
ಆ ಭಗವಾನ್ ಶ್ರೀರಾಮನು ಪುತ್ರ, ಸೈನ್ಯ ಹಾಗೂ ಮಂತ್ರಿಗಳ ಸಹಿತ ರಾವಣನನ್ನು ಕೊಂದು, ಲಂಕೆಯ ರಾಜ್ಯವನ್ನು ವಿಭೀಷಣನಿಗೆ ಇತ್ತು ನಿಮಗೆ ಕುಶಲವನ್ನು ಹೇಳಿ ಕಳಿಸಿದ್ದಾನೆ.’’ ॥59॥
(ಶ್ಲೋಕ-60)
ಮೂಲಮ್
ಶ್ರುತ್ವಾ ಭರ್ತುಃ ಪ್ರಿಯಂ ವಾಕ್ಯಂ ಹರ್ಷಗದ್ಗದಯಾ ಗಿರಾ ।
ಕಿಂ ತೇ ಪ್ರಿಯಂ ಕರೋಮ್ಯದ್ಯ ನ ಪಶ್ಯಾಮಿ ಜಗತ್ರಯೇ ॥
(ಶ್ಲೋಕ-61)
ಮೂಲಮ್
ಸಮಂ ತೇ ಪ್ರಿಯವಾಕ್ಯಸ್ಯ ರತ್ನಾನ್ಯಾಭರಣಾನಿ ಚ ।
ಏವಮುಕ್ತಸ್ತು ವೈದೇಹ್ಯಾ ಪ್ರತ್ಯುವಾಚ ಪ್ಲವಂಗಮಃ ॥
ಅನುವಾದ
ಪತಿಯ ಈ ಪ್ರಿಯವಾದ ಸಂದೇಶವನ್ನು ಕೇಳಿ ಸೀತಾದೇವಿಯು ಹರ್ಷಗೊಂಡು ಗದ್ಗದ ವಾಣಿಯಿಂದ ಹೀಗೆಂದಳು ‘‘ಅಯ್ಯಾ! ನಿನಗೆ ಈಗ ಏನು ಪ್ರಿಯವಾದುದನ್ನು ಮಾಡಲಿ? ಮೂರು ಲೋಕಗಳಲ್ಲಿಯೂ ಅಂತಹುದು ಯಾವುದೂ ಇಲ್ಲ. ನಿನ್ನ ಪ್ರಿಯವಾದ ಮಾತಿಗೆ ಯಾವ ರತ್ನಗಳೂ, ಒಡವೆಗಳೂ ಸಮವಾಗಲಾರವು. ಹೀಗೆ ಸೀತೆಯು ಹೇಳಿದಾಗ ಹನುಮಂತನು ಪ್ರತ್ಯುತ್ತರವನ್ನು ಕೊಡುತ್ತಾ ಹೀಗೆಂದನು - ॥60-61॥
(ಶ್ಲೋಕ-62)
ಮೂಲಮ್
ರತ್ನೌಘಾದ್ವಿವಿಧಾದ್ವಾಪಿ ದೇವರಾಜ್ಯಾದ್ವಿಶಿಷ್ಯತೇ ।
ಹತಶತ್ರುಂ ವಿಜಯಿನಂ ರಾಮಂ ಪಶ್ಯಾಮಿ ಸುಸ್ಥಿರಮ್ ॥
ಅನುವಾದ
‘‘ಅಮ್ಮಾ! ನಾನಾ ವಿಧವಾದ ರತ್ನರಾಶಿಗಳಿಂದಲೂ, ದೇವರಾಜ್ಯಕ್ಕಿಂತಲೂ ಹೆಚ್ಚಿನದಾಗಿರುವ ಶತ್ರುವನ್ನು ಜಯಿಸಿ ವಿಜಯಿಯಾದ ಹಾಗೂ ಸುಸ್ಥಿರನಾದ ಶ್ರೀರಾಮನನ್ನು ನೋಡುತ್ತಿರುವೆನಲ್ಲ! ಇದಕ್ಕಿಂತ ಹೆಚ್ಚಿನದು ನನಗೆ ಏನು ಇದ್ದೀತು?’’ ॥62॥
(ಶ್ಲೋಕ-63)
ಮೂಲಮ್
ತಸ್ಯ ತದ್ವಚನಂ ಶ್ರುತ್ವಾ ಮೈಥಿಲೀ ಪ್ರಾಹ ಮಾರುತಿಮ್ ।
ಸರ್ವೇ ಸೌಮ್ಯಾ ಗುಣಾಃ ಸೌಮ್ಯ ತ್ವಯ್ಯೇವ ಪರಿನಿಷ್ಠಿತಾಃ ॥
ಅನುವಾದ
ಅವನ ಮಾತನ್ನು ಕೇಳಿ ಮಿಥಿಲೇಶ ನಂದಿನಿಯು ಮಾರುತಿಯ ಬಳಿ ಹೇಳುತ್ತಾಳೆ ‘‘ಎಲೈ ಸೌಮ್ಯನೆ ! ನಿನ್ನಲ್ಲಿ ಎಲ್ಲ ಉತ್ತಮಗುಣಗಳು ನೆಲೆಸಿರುವುವು. ॥63॥
(ಶ್ಲೋಕ-64)
ಮೂಲಮ್
ರಾಮಂ ದ್ರಕ್ಷ್ಯಾಮಿ ಶೀಘ್ರಂ ಮಾಮಾಜ್ಞಾಪಯತು ರಾಘವಃ ।
ತಥೇತಿ ತಾಂ ನಮಸ್ಕೃತ್ಯ ಯಯೌ ದ್ರಷ್ಟುಂ ರಘೂತ್ತಮಮ್ ॥
ಅನುವಾದ
ಈಗ ನಾನು ಶ್ರೀರಘುನಾಥನನ್ನು ನೋಡಲು ಇಚ್ಛಿಸುತ್ತೇನೆ. ರಾಮನು ಹಾಗೆಂದು ನನಗೆ ಅಪ್ಪಣೆ ಮಾಡಲಿ! ‘‘ಹಾಗೆಯೇ ಆಗಲೆಂದು ಹೇಳಿ ಹನುಮಂತನು ಆಕೆಗೆ ನಮಸ್ಕರಿಸಿ ರಾಮನನ್ನು ಕಾಣಲು ಹೊರಟನು. ॥64॥
(ಶ್ಲೋಕ-65)
ಮೂಲಮ್
ಜಾನಕ್ಯಾ ಭಾಷಿತಂ ಸರ್ವಂ ರಾಮಸ್ಯಾಗ್ರೇ ನ್ಯವೇದಯತ್ ।
ಯನ್ನಿಮಿತ್ತೋಽಯಮಾರಂಭಃ ಕರ್ಮಣಾಂ ಚ ಫಲೋದಯಃ ॥
(ಶ್ಲೋಕ-66)
ಮೂಲಮ್
ತಾಂ ದೇವೀಂ ಶೋಕಸಂತಪ್ತಾಂ ದ್ರಷ್ಟುಮರ್ಹಸಿ ಮೈಥಿಲೀಮ್ ।
ಏವಮುಕ್ತೋ ಹನುಮತಾ ರಾಮೋ ಜ್ಞಾನವತಾಂ ವರಃ ॥
(ಶ್ಲೋಕ-67)
ಮೂಲಮ್
ಮಾಯಾಸೀತಾಂ ಪರಿತ್ಯಕ್ತುಂ ಜಾನಕೀಮನಲೇ ಸ್ಥಿತಾಮ್ ।
ಆದಾತುಂ ಮನಸಾ ಧ್ಯಾತ್ವಾ ರಾಮಃ ಪ್ರಾಹ ವಿಭೀಷಣಮ್ ॥
ಅನುವಾದ
ಶ್ರೀರಾಮನ ಬಳಿಗೆ ಹೋದ ಮಾರುತಿಯು ಸೀತಾದೇವಿಯು ಹೇಳಿದ್ದೆಲ್ಲವನ್ನು ನಿವೇದಿಸಿಕೊಂಡನು. ‘‘ಸ್ವಾಮಿ! ಯಾರಿಗಾಗಿ ಈ ಯುದ್ಧಾದಿ ಎಲ್ಲ ಕಾರ್ಯಗಳು ಆರಂಭವಾಗಿದ್ದವೋ ಮತ್ತು ಯಾರು ಅವೆಲ್ಲದರ ಫಲಸ್ವರೂಪಳಾಗಿದ್ದಾಳೋ, ಅಂತಹ ಶೋಕ ಸಂತಪ್ತಳಾದ ಮಿಥಿಲೇಶನಂದಿನಿ ಸೀತಾದೇವಿಯನ್ನು ನೀನು ಈಗ ಬೇಗನೆ ನೋಡಲಿರುವೆಯಲ್ಲ’’ ಎಂದು ಹೇಳಿದನು. ಹನುಮಂತನು ಹೀಗೆ ಹೇಳಿದಾಗ ಜ್ಞಾನಿಗಳಲ್ಲಿ ಶ್ರೇಷ್ಠನಾದ ಶ್ರೀರಾಮನು ಮಾಯಾ ಸೀತೆಯನ್ನು ಕೈಬಿಡುವುದಕ್ಕಾಗಿ ಹಾಗೂ ಅಗ್ನಿಯಲ್ಲಿದ್ದ ನಿಜವಾದ ಸೀತೆಯನ್ನು ಸ್ವೀಕರಿಸುವುದಕ್ಕಾಗಿ ಮನಸ್ಸಿನಲ್ಲಿ ಚಿಂತಿಸಿ, ವಿಭೀಷಣನಲ್ಲಿ ಹೀಗೆಂದನು- ॥65-67॥
(ಶ್ಲೋಕ-68)
ಮೂಲಮ್
ಗಚ್ಛ ರಾಜನ್ ಜನಕಜಾಮಾನಯಾಶು ಮಮಾಂತಿಕಮ್ ।
ಸ್ನಾತಾಂ ವಿರಜವಸಾಢ್ಯಾಂ ಸರ್ವಾಭರಣಭೂಷಿತಾಮ್ ॥
ಅನುವಾದ
‘‘ಎಲೈ ರಾಜನೆ! ನೀನು ಬೇಗನೆ ಹೋಗು ಮತ್ತು ಜಾನಕಿಯನ್ನು ಸಖಿಯರಿಂದ ಸ್ನಾನ ಮಾಡಿಸಿ, ಶುಭ್ರ ವಸ್ತ್ರಗಳನ್ನು ಧರಿಸಿಕೊಂಡು, ಸರ್ವಾಭರಣಗಳಿಂದ ಅಲಂಕೃತಳಾದ ಜನಕ ಪುತ್ರಿಯನ್ನು ಬೇಗನೇ ನನ್ನ ಬಳಿಗೆ ಕರಕೊಂಡು ಬಾ’’ ॥68॥
(ಶ್ಲೋಕ-69)
ಮೂಲಮ್
ವಿಭೀಷಣೋಽಪಿ ತಚ್ಛ್ರುತ್ವಾ ಜಗಾಮ ಸಹಮಾರುತಿಃ ।
ರಾಕ್ಷಸೀಭಿಃ ಸುವೃದ್ಧಾಭಿಃ ಸ್ನಾಪಯಿತ್ವಾ ತು ಮೈಥಿಲೀಮ್ ॥
(ಶ್ಲೋಕ-70)
ಮೂಲಮ್
ಸರ್ವಾಭರಣಸಂಪನ್ನಾಮಾರೋಪ್ಯ ಶಿಬಿಕೋತ್ತಮೆ ।
ಯಾಷ್ಟಿಕೈರ್ಬಹುಭಿರ್ಗುಪ್ತಾಂ ಕಂಚುಕೋಷ್ಣೀಷಿಭಿಃ ಶುಭಾಮ್ ॥
ಅನುವಾದ
ವಿಭೀಷಣನು ಅದನ್ನು ಕೇಳಿ ಹನುಮಂತನೊಡನೆ ಲಗುಬಗೆಯಿಂದ ಹೊರಟನು. ವಯಸ್ಕರಾದ ಜಾಣ ರಾಕ್ಷಸಿಯರಿಂದ ಸೀತಾದೇವಿಗೆ ಸ್ನಾನ ಮಾಡಿಸಿ, ಉತ್ತಮ ವಸಾಭರಣಗಳಿಂದ ಅವಳನ್ನು ಅಲಂಕರಿಸಿದರು. ಮತ್ತೆ ಒಂದು ಉತ್ತಮವಾದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಕವಚ-ಶಿರಸಾಣಗಳಿಂದ ಕೂಡಿದ ಕೈಯಲ್ಲಿ ಕೋಲುಗಳನ್ನು ಹಿಡಿದಿದ್ದ ಬಹುಜನ ರಕ್ಷಕರ ಕಾವಲಿನಲ್ಲಿ ಶುಭಳಾದ ಸೀತಾದೇವಿಯನ್ನು ಕರಕೊಂಡು ಬಂದರು. ॥69-70॥
(ಶ್ಲೋಕ-71)
ಮೂಲಮ್
ತಾಂ ದ್ರಷ್ಟುಮಾಗತಾಃ ಸರ್ವೇ ವಾನರಾ ಜನಕಾತ್ಮಜಾಮ್ ।
ತಾನ್ವಾರಯಂತೋ ಬಹವಃ ಸರ್ವತೋ ವೇತ್ರಪಾಣಯಃ ॥
(ಶ್ಲೋಕ-72)
ಮೂಲಮ್
ಕೋಲಾಹಲಂ ಪ್ರಕುರ್ವಂತೋ ರಾಮಪಾರ್ಶ್ವಮುಪಾಯಯುಃ ।
ದೃಷ್ಟ್ವಾ ತಾಂ ಶಿಬಿಕಾರೂಢಾಂ ದೂರಾದಥ ರಘೂತ್ತಮಃ ॥
(ಶ್ಲೋಕ-73)
ಮೂಲಮ್
ವಿಭೀಷಣ ಕಿಮರ್ಥಂ ತೇ ವಾನರಾನ್ವಾರಯಂತಿ ಹಿ ।
ಪಶ್ಯಂತು ವನರಾಃ ಸರ್ವೇ ಮೈಥಿಲೀಂ ಮಾತರಂ ಯಥಾ ॥
ಅನುವಾದ
ಆಗ ಜನಕನಂದಿನಿಯನ್ನು ನೋಡಲು ಎಲ್ಲ ಕಪಿಗಳು ಓಡಿ ಬಂದರು. ಅಲ್ಲಿ ಸುತ್ತಲೂ ಬೆತ್ತವನ್ನು ಹಿಡಿದಿದ್ದ ನೆರೆದ ಅಂಗರಕ್ಷಕರು ದೂರ ಸರಿಯಿರಿ ಎಂದು ಹೇಳುತ್ತಾ ಕಪಿಗಳನ್ನು ತಡೆಯುತ್ತಿದ್ದರು. ಹೀಗೆ ಗದ್ದಲ ಮಾಡುತ್ತಾ ಎಲ್ಲರೂ ಶ್ರೀರಾಮಚಂದ್ರನ ಬಳಿಗೆ ಬಂದರು. ರಘುಶ್ರೇಷ್ಠನು ಪಲ್ಲಕ್ಕಿಯಲ್ಲಿ ಬರುತ್ತಿದ್ದ ಸೀತೆಯನ್ನು ನೋಡಿ ‘‘ವಿಭೀಷಣಾ! ನಿನ್ನ ಈ ಅಂಗರಕ್ಷಕರು ಕಪಿಗಳನ್ನು ಯಾಕೆ ತಡೆಯುತ್ತಿದ್ದಾರೆ? ಎಲ್ಲ ವಾನರರು ಜಾನಕಿಯನ್ನು ತಾಯಿಯೆಂಬ ಭಾವನೆಯಿಂದ ನೋಡಲಿ! ॥71-73॥
(ಶ್ಲೋಕ-74)
ಮೂಲಮ್
ಪಾದಚಾರೇಣ ಸಾಯಾತು ಜಾನಕೀ ಮಮ ಸನ್ನಿಧಿಮ್ ।
ಶ್ರುತ್ವಾ ತದ್ರಾಮವಚನಂ ಶಿಬಿಕಾದವರುಹ್ಯ ಸಾ ॥
(ಶ್ಲೋಕ-75)
ಮೂಲಮ್
ಪಾದಚಾರೇಣ ಶನಕೈರಾಗತಾ ರಾಮಸನ್ನಿಧಿಮ್ ।
ರಾಮೋಽಪಿ ದೃಷ್ಟ್ವಾ ತಾಂ ಮಾಯಾಸೀತಾಂ ಕಾರ್ಯಾರ್ಥ ನಿರ್ಮಿತಾಮ್ ॥
(ಶ್ಲೋಕ-76)
ಮೂಲಮ್
ಅವಾಚ್ಯವಾದಾನ್ಬಹುಶಃ ಪ್ರಾಹ ತಾಂ ರಘುನಂದನಃ ।
ಅಮೃಷ್ಯಮಾಣಾ ಸಾ ಸೀತಾ ವಚನಂ ರಾಘವೋದಿತಮ್ ॥
(ಶ್ಲೋಕ-77)
ಮೂಲಮ್
ಲಕ್ಷ್ಮಣಂ ಪ್ರಾಹ ಮೇ ಶೀಘ್ರಂ ಪ್ರಜ್ವಾಲಯ ಹುತಾಶನಮ್ ।
ವಿಶ್ವಾಸಾರ್ಥಂ ಹಿ ರಾಮಸ್ಯ ಲೋಕಾನಾಂ ಪ್ರತ್ಯಯಾಯ ಚ ॥
ಅನುವಾದ
ಹಾಗೂ ಸೀತೆಯು ಕಾಲುನಡಿಗೆಯಿಂದಲೇ ನನ್ನ ಬಳಿಗೆ ಬರಲಿ’’ ಎಂದು ಹೇಳಿದನು. ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಸೀತಾದೇವಿಯು ಪಲ್ಲಕ್ಕಿಯಿಂದ ಕೆಳಗಿಳಿದು ಕಾಲುನಡಿಗೆಯಿಂದ ಮೆಲ್ಲ-ಮೆಲ್ಲನೆ ಶ್ರೀರಾಮನ ಹತ್ತಿರಕ್ಕೆ ಬಂದಳು. ಭಗವಾನ್ ಶ್ರೀರಾಮನು ರಾವಣವಧೆಯ ಕಾರ್ಯಾರ್ಥವಾಗಿ ನಿರ್ಮಿತಳಾಗಿದ್ದ ಆ ಮಾಯಾ ಸೀತೆಯನ್ನು ಕಂಡು ಬಹಳವಾಗಿ ಆಕೆಯ ಕುರಿತು ಆಡಬಾರದ ಮಾತನ್ನಾಡಿದನು. ಶ್ರೀರಾಮನು ಹೇಳಿದ ಮಾತನ್ನು ಸಹಿಸಲಾರದೆ ಸೀತೆಯು ಲಕ್ಷ್ಮಣನನ್ನು ಕುರಿತು ಇಂತೆಂದಳು ‘‘ಲಕ್ಷ್ಮಣಾ! ಭಗವಾನ್ ಶ್ರೀರಾಮನಿಗೆ ವಿಶ್ವಾಸವುಂಟಾಗುವುದಕ್ಕಾಗಿ ಮತ್ತು ಲೋಕದ ಜನರಿಗೆ ನಂಬಿಕೆಯು ಬರುವುದಕ್ಕಾಗಿ ನೀನು ಬೇಗನೇ ನನಗಾಗಿ ಬೆಂಕಿಯನ್ನು ಉರಿಸು.’’ ॥74-77॥
(ಶ್ಲೋಕ-78)
ಮೂಲಮ್
ರಾಘವಸ್ಯ ಮತಂ ಜ್ಞಾತ್ವಾ ಲಕ್ಷ್ಮಣೋಽಪಿ ತದೈವ ಹಿ ।
ಮಹಾಕಾಷ್ಠಚಯಂ ಕೃತ್ವಾ ಜ್ವಾಲಯಿತ್ವಾ ಹುತಾಶನಮ್ ॥
(ಶ್ಲೋಕ-79)
ಮೂಲಮ್
ರಾಮಪಾರ್ಶ್ವಮುಪಾಗಮ್ಯ ತಸ್ಥೌ ತೂಷ್ಣೀಮರಿಂದಮಃ ।
ತತಃ ಸೀತಾ ಪರಿಕ್ರಮ್ಯ ರಾಘವಂ ಭಕ್ತಿಸಂಯುತಾ ॥
ಅನುವಾದ
ಶ್ರೀರಾಮನ ಅಭಿಪ್ರಾಯವನ್ನು ಅರಿತು ಶತ್ರುದಮನ ಲಕ್ಷ್ಮಣನೂ ಆಗಲೇ ದೊಡ್ಡ ಕಟ್ಟಿಗೆಗಳನ್ನು ಸಂಗ್ರಹಿಸಿ ಬೆಂಕಿಯನ್ನು ಉರಿಸಿ ರಾಮನ ಸಮೀಪಕ್ಕೆ ಬಂದು ಸುಮ್ಮನೆ ನಿಂತುಕೊಂಡನು. ಅನಂತರ ಸೀತೆಯು ಭಕ್ತಿಯಿಂದ ಶ್ರೀರಾಮಚಂದ್ರನಿಗೆ ಪ್ರದಕ್ಷಿಣೆ ಬಂದಳು. ॥78-79॥
(ಶ್ಲೋಕ-80)
ಮೂಲಮ್
ಪಶ್ಯತಾಂ ಸರ್ವಲೋಕಾನಾಂ ದೇವರಾಕ್ಷಸಯೋಷಿತಾಮ್ ।
ಪ್ರಣಮ್ಯ ದೇವತಾಭ್ಯಶ್ಚ ಬ್ರಾಹ್ಮಣೇಭ್ಯಶ್ಚ ಮೈಥಿಲೀ ॥
(ಶ್ಲೋಕ-81)
ಮೂಲಮ್
ಬದ್ಧಾಂಜಲಿಪುಟಾ ಚೇದಮುವಾಚಾಗ್ನಿಸಮೀಪಗಾ ।
ಯಥಾ ಮೇ ಹೃದಯಂ ನಿತ್ಯಂ ನಾಪಸರ್ಪತಿ ರಾಘವಾತ್ ॥
(ಶ್ಲೋಕ-82)
ಮೂಲಮ್
ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ।
ಏವಮುಕ್ತ್ವಾ ತದಾ ಸೀತಾ ಪರಿಕ್ರಮ್ಯ ಹುತಾಶನಮ್ ॥
(ಶ್ಲೋಕ-83)
ಮೂಲಮ್
ವಿವೇಶ ಜ್ವಲನಂ ದೀಪ್ತಂ ನಿರ್ಭಯೇನ ಹೃದಾ ಸತಿ ॥
ಅನುವಾದ
ಮತ್ತೆ ಸಮಸ್ತ ಜನರೂ, ದೇವ ರಾಕ್ಷಸ ಸ್ತ್ರೀಯರೂ ನೋಡುತ್ತಿರುವಾಗ ದೇವತೆಗಳಿಗೂ, ಬ್ರಾಹ್ಮಣರಿಗೂ ನಮಸ್ಕರಿಸಿ ಆ ಮೈಥಿಲಿಯು ಅಗ್ನಿಯನ್ನು ಸಮೀಪಿಸಿ ಕೈಗಳನ್ನು ಮುಗಿದುಕೊಂಡು ‘‘ನನ್ನ ಹೃದಯವು ಶ್ರೀರಘುನಾಥನನ್ನು ಬಿಟ್ಟು ಎಂದೂ ಬೇರೆಡೆಗೆ ಹೋಗಿರದಿದ್ದರೆ, ಸರ್ವಲೋಕಗಳಿಗೂ ಸಾಕ್ಷಿಯನಿಸಿರುವ ಅಗ್ನಿದೇವನು ಎಲ್ಲ ರೀತಿಯಿಂದಲೂ ನನ್ನನ್ನು ಕಾಪಾಡಲಿ’’ ಎಂದು ಹೇಳಿ, ಸತಿ ಶಿರೋಮಣಿ ಸೀತಾದೇವಿಯು ಅಗ್ನಿಗೆ ಪ್ರದಕ್ಷಿಣೆ ಬಂದು ನಿರ್ಭಯ ಚಿತ್ತಳಾಗಿ ಚೆನ್ನಾಗಿ ಉರಿಯುತ್ತಿದ್ದ ಆ ಅಗ್ನಿಯಲ್ಲಿ ಪ್ರವೇಶಿಸಿದಳು. ॥80-83॥
(ಶ್ಲೋಕ-84)
ಮೂಲಮ್
ದೃಷ್ಟ್ವಾ ತತೋ ಭೂತಗಣಾಃ ಸಸಿದ್ಧಾಃ
ಸೀತಾಂ ಮಹಾವಹ್ನಿಗತಾಂ ಭೃಶಾರ್ತಾಃ ।
ಪರಸ್ಪರಂ ಪ್ರಾಹುರಹೋ ಸ ಸೀತಾಂ
ರಾಮಃ ಶ್ರಿಯಂ ಸ್ವಾಂ ಕಥಮತ್ಯಜತ್ ಜ್ಞಃ ॥
ಅನುವಾದ
ಆಗ ಸೀತಾದೇವಿಯು ಮಹಾಪ್ರಚಂಡ ಅಗ್ನಿಯಲ್ಲಿ ಪ್ರವೇಶಿಸಿದ್ದನ್ನು ಕಂಡ ಸಮಸ್ತ ಸಿದ್ಧರೊಡಗೂಡಿ ಎಲ್ಲಾ ಭೂತಗಳೂ ಅತ್ಯಂತ ವ್ಯಾಕುಲರಾಗಿ ತಮ್ಮ-ತಮ್ಮಲ್ಲೇ ‘‘ಅಯ್ಯೋ! ಸರ್ವಜ್ಞನಾದ ಶ್ರೀರಾಮನು ತನ್ನ (ಅನಪಾಯಿನಿಯಾದ) ಲಕ್ಷ್ಮಿಯಾದ ಸೀತೆಯನ್ನು ಏಕೆ ಕೈಬಿಟ್ಟನು?’’ ಎಂದು ಆಡಿಕೊಳ್ಳುತ್ತಿದ್ದರು. ॥84॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ದ್ವಾದಶಃ ಸರ್ಗಃ ॥12॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹನ್ನೆರಡನೆಯ ಸರ್ಗವು ಮುಗಿಯಿತು.