[ಹನ್ನೊಂದನೆಯ ಸರ್ಗ]
ಭಾಗಸೂಚನಾ
ರಾಮ-ರಾವಣರ ಸಂಗ್ರಾಮ ಮತ್ತು ರಾವಣವಧೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಇತ್ಯುಕ್ತ್ವಾ ವಚನಂ ಪ್ರೇಮ್ಣಾ ರಾಜ್ಞೀಂ ಮಂದೋದರೀಂ ತದಾ ।
ರಾವಣಃ ಪ್ರಯಯೌ ಯೋದ್ಧುಂ ರಾಮೇಣ ಸಹ ಸಂಯುಗೇ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ರಾವಣನು ಮಹಾರಾಣಿ ಮಂದೋದರಿಗೆ ಪ್ರೀತಿಯಿಂದ ಈ ಪ್ರಕಾರ ತಿಳಿಸಿಹೇಳಿ ಶ್ರೀರಾಮಚಂದ್ರನೊಡನೆ ಯುದ್ಧಮಾಡುವುದಕ್ಕಾಗಿ ರಣರಂಗಕ್ಕೆ ಹೊರಟನು. ॥1॥
(ಶ್ಲೋಕ-2)
ಮೂಲಮ್
ದೃಢಂ ಸ್ಯಂದನಮಾಸ್ಥಾಯ ವೃತೋ ಘೋರೈರ್ನಿಶಾಚರೈಃ ।
ಚಕ್ರೈಃ ಷೋಡಶಭಿರ್ಯುಕ್ತಂ ಸವರೂಥಂ ಸಕೂಬರಮ್ ॥
(ಶ್ಲೋಕ-3)
ಮೂಲಮ್
ಪಿಶಾಚವದನೈರ್ಘೋರೈಃ ಖರೈರ್ಯುಕ್ತಂ ಭಯಾವಹಮ್ ।
ಸರ್ವಾಸ್ತ್ರಶಸ್ತ್ರಸಹಿತಂ ಸರ್ವೋಪಸ್ಕರಸಂಯುತಮ್ ॥
ಅನುವಾದ
ಅವನು ಮಹಾ ಭಯಂಕರ ರಾಕ್ಷಸರಿಂದ ಸುತ್ತುವರಿದು ಒಂದು ದೃಢವಾದ ರಥವನ್ನೇರಿದನು. ಆ ರಥವು ಹದಿನಾರು ಚಕ್ರಗಳಿಂದಲೂ ವರೂಥ1 ಕೂಬರ2ಗಳಿಂದ ಕೂಡಿದ್ದಾಗಿತ್ತು. ಭಯಂಕರನಾದ ಹಾಗೂ ಪಿಶಾಚಿಗಳಂತೆ ಮುಖಗಳುಳ್ಳ ಕತ್ತೆಗಳನ್ನು ಹೂಡಿದ ಸಕಲವಿಧವಾದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತ ಹಾಗೂ ಎಲ್ಲ ಯುದ್ಧ ಸಾಮಗ್ರಿಗಳಿಂದ ಸಜ್ಜಾಗಿತ್ತು. ॥2-3॥
ಟಿಪ್ಪನೀ
1 ರಥದ ರಕ್ಷಣೆಗಾಗಿ ಮಾಡಿದ ಕಬ್ಬಿಣದ ಆವರಣ.
2 ರಥದ ನೊಗವನ್ನು ಕಟ್ಟುವ ಭಾಗ.
(ಶ್ಲೋಕ-4)
ಮೂಲಮ್
ನಿಶ್ಚಕ್ರಾಮಾಥ ಸಹಸಾ ರಾವಣೋ ಭೀಷಣಾಕೃತಿಃ ।
ಆಯಾಂತಂ ರಾವಣಂ ದೃಷ್ಟ್ವಾ ಭೀಷಣಂ ರಣಕರ್ಕಶಮ್ ॥
(ಶ್ಲೋಕ-5)
ಮೂಲಮ್
ಸಂತ್ರಸ್ತಾಭೂತ್ತದಾ ಸೇನಾ ವಾನರೀ ರಾಮಪಾಲಿತಾ ॥
ಅನುವಾದ
ಈ ಪ್ರಕಾರ ಮಹಾ ಭಯಂಕರನಾದ ರಾಕ್ಷಸರ ರಾಜನಾದ ರಾವಣನು ಲಂಕೆಯಿಂದ ಹೊರಬಿದ್ದನು. ಭಯಂಕರನೂ, ರಣಕರ್ಕಶನೂ ಆದ ರಾವಣನು ಬರುತ್ತಿರುವುದನ್ನು ಕಂಡು ರಾಮನಿಂದ ರಕ್ಷಿತವಾದ ವಾನರ ಸೈನ್ಯವು ಭಯಗೊಂಡಿತು. ॥4-5॥
(ಶ್ಲೋಕ-6)
ಮೂಲಮ್
ಹನೂಮಾನಥ ಚೋತ್ ಪ್ಲುತ್ಯ ರಾವಣಂ ಯೋದ್ಧುಮಾಯಯೌ ।
ಆಗತ್ಯ ಹನುಮಾನ್ ರಕ್ಷೋವಕ್ಷಸ್ಯತುಲವಿಕ್ರಮಃ ॥
(ಶ್ಲೋಕ-7)
ಮೂಲಮ್
ಮುಷ್ಟಿಬಂಧಂ ದೃಢಂ ಬದ್ ಧ್ವಾ ತಾಡಯಾಮಾಸ ವೇಗತಃ ।
ತೇನ ಮುಷ್ಟಿಪ್ರಹಾರೇಣ ಜಾನುಭ್ಯಾಮಪತದ್ರಥೇ ॥
ಅನುವಾದ
ಆಗ ಹನುಮಂತನು ರಾವಣನೊಡನೆ ಯುದ್ಧಮಾಡಲು ನೆಗೆದು ಅವನ ಮುಂದೆ ಬಂದುನಿಂತನು. ಅತಿಪರಾಕ್ರಮಶಾಲಿಯಾದ ಪವನನಂದನನು ಬಂದವನೆ ಮುಷ್ಟಿಯನ್ನು ಬಿಗಿದು ವೇಗವಾಗಿ ರಾವಣನ ಎದೆಗೆ ಗುದ್ದಿದನು. ಆ ಮುಷ್ಟಿಯ ಹೊಡೆತದಿಂದ ಅವನು ಮುಂಗಾಲು ಚಾಚಿಕೊಂಡು ರಥದಲ್ಲೇ ಬಿದ್ದನು. ॥6-7॥
(ಶ್ಲೋಕ-8)
ಮೂಲಮ್
ಮೂರ್ಚ್ಛಿತೋಽಥ ಮುಹೂರ್ತೇನ ರಾವಣಃ ಪುನರುತ್ಥಿತಃ ।
ಉವಾಚ ಚ ಹನೂಮಂತಂ ಶೂರೋಽಸಿ ಮಮ ಸಮ್ಮತಃ ॥
ಅನುವಾದ
ಒಂದು ಮುಹೂರ್ತಕಾಲ ಮೂರ್ಛಿತನಾಗಿದ್ದು ಬಳಿಕ ಮೂರ್ಛೆತಳೆದು ಮೇಲಕ್ಕೆದ್ದು, ಹನುಮಂತನನ್ನು ಕುರಿತು ‘‘ನೀನು ನಿಜವಾಗಿ ಮಹಾಶೂರನೇ ಆಗಿರುವೆ ಎಂಬುದನ್ನು ನಾನು ಒಪ್ಪುತ್ತೇನೆ’’ ಎಂದು ನುಡಿದನು. ॥8॥
(ಶ್ಲೋಕ-9)
ಮೂಲಮ್
ಹನೂಮಾನಾಹ ತಂ ಧಿಙ್ಮಾಂ ಯಸ್ತ್ವಂ ಜೀವಸಿ ರಾವಣ ।
ತ್ವಂ ತಾವನ್ಮುಷ್ಟಿನಾ ವಕ್ಷೋ ಮಮ ತಾಡಯ ರಾವಣ ॥
ಅನುವಾದ
ಹನುಮಂತನು ಹೇಳಿದನು — ‘‘ಅಯ್ಯೋ ನನಗೆ ಧಿಕ್ಕಾರವಿರಲಿ! ಎಲೈ ರಾವಣಾ! ನಾನು ಗುದ್ದಿದಾಗಲೂ ಇನ್ನೂ ನೀನು ಬದುಕಿರುವೆಯಲ್ಲ? ಇರಲಿ; ರಾವಣಾ ಈಗ ನೀನು ನನ್ನ ಎದೆಗೆ ಬಂದು ಗುದ್ದು. ॥9॥
(ಶ್ಲೋಕ-10)
ಮೂಲಮ್
ಪಶ್ಚಾನ್ಮಯಾ ಹತಃ ಪ್ರಾಣಾನ್ಮೋಕ್ಷ್ಯಸೇ ನಾತ್ರ ಸಂಶಯಃ ।
ತಥೇತಿ ಮುಷ್ಟಿನಾ ವಕ್ಷೋ ರಾವಣೇನಾಪಿ ತಾಡಿತಃ ॥
ಅನುವಾದ
ಅನಂತರ ನಾನು ನಿನಗೆ ಗುದ್ದುವೆನು; ಆಗ ನೀನು ಬಿದ್ದು ಪ್ರಾಣಗಳನ್ನು ಕಳೆದುಕೊಳ್ಳುವೆ. ಇದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಆಗಲೆಂದು ಹೇಳಿ ರಾವಣನು ಹನುಮಂತನ ಎದೆಗೆ ಬಂದು ಗುದ್ದು ಹೊಡೆದನು. ॥10॥
(ಶ್ಲೋಕ-11)
ಮೂಲಮ್
ವಿಘೂರ್ಣಮಾನನಯನಃ ಕಿಂಚಿತ್ಕಶ್ಮಲಮಾಯಯೌ ।
ಸಂಜ್ಞಾಮವಾಪ್ಯ ಕಪಿರಾಡ್ ರಾವಣಂ ಹಂತುಮುದ್ಯತಃ ॥
ಅನುವಾದ
ಹನುಮಂತನಿಗೆ ಆ ಏಟಿನಿಂದ ಕಣ್ಣು ಕತ್ತಲಾಗಿ, ತಲೆ ತಿರುಗಿದಂತಾಗಿ ಸ್ವಲ್ಪ ಮಟ್ಟಿಗೆ ವಿಷಾದ ಮಗ್ನನಾದನು. ಅನಂತರ ಚೇತರಿಸಿಕೊಂಡು ಆ ಕಪಿಶ್ರೇಷ್ಠನು ರಾವಣನನ್ನು ಕೊಲ್ಲಲು ಹೊರಟನು. ॥11॥
(ಶ್ಲೋಕ-12)
ಮೂಲಮ್
ತತೋಽನ್ಯತ್ರ ಗತೋ ಭೀತ್ಯಾ ರಾವಣೋ ರಾಕ್ಷಸಾಧಿಪಃ ।
ಹನೂಮಾನಂಗದಶ್ಚೈವ ನಲೋ ನೀಲಸ್ತಥೈವ ಚ ॥
(ಶ್ಲೋಕ-13)
ಮೂಲಮ್
ಚತ್ವಾರಃ ಸಮವೇತ್ಯಾಗ್ರೇ ದೃಷ್ಟ್ವಾ ರಾಕ್ಷಸಪುಂಗವಾನ್ ।
ಅಗ್ನಿವರ್ಣಂ ತಥಾ ಸರ್ಪರೋಮಾಣಂ ಖಡ್ಗರೋಮಕಮ್ ॥
(ಶ್ಲೋಕ-14)
ಮೂಲಮ್
ತಥಾ ವೃಶ್ಚಿಕರೋಮಾಣಂ ನಿರ್ಜಘ್ನುಃ ಕ್ರಮಶೋಸುರಾನ್ ।
ಚತ್ವಾರಶ್ಚತುರೋ ಹತ್ವಾ ರಾಕ್ಷಸಾನ್ ಭೀಮವಿಕ್ರಮಾನ್ ।
ಸಿಂಹನಾದಂ ಪೃಥಕ್ ಕೃತ್ವಾ ರಾಮಪಾರ್ಶ್ವಮುಪಾಗತಾಃ ॥
ಅನುವಾದ
ಆಗ ರಾಕ್ಷಸಾಧಿಪನಾದ ರಾವಣನು ಭಯದಿಂದ ಬೇರೊಂದು ಕಡೆಗೆ ಹೊರಟು ಹೋದನು. ಹನುಮಂತ, ಅಂಗದ, ನಳ, ನೀಳ ಈ ನಾಲ್ವರು ಒಂದಾಗಿ ತಮ್ಮ ಎದುರಿಗೆ ನಿಂತಿದ್ದ - ಅಗ್ನಿವರ್ಣ, ಸರ್ಪರೋಮ, ಖಡ್ಗರೋಮ ಮತ್ತು ವೃಶ್ಚಿಕ ರೋಮ ಎಂಬ ನಾಲ್ವರನ್ನು ನೋಡಿದರು. ಆಗ ಅವರು ನಾಲ್ವರೂ ಕ್ರಮಶಃ ಆ ನಾಲ್ವರು ಮಹಾಪರಾಕ್ರಮಿ ರಾಕ್ಷಸರನ್ನು ಕೊಂದು ಬಿಟ್ಟರು. ಮತ್ತೆ ಬೇರೆ-ಬೇರೆಯಾಗಿ ಗರ್ಜಿಸುತ್ತಾ ಶ್ರೀರಾಮನ ಬಳಿಗೆ ಬಂದು ನಿಂತುಕೊಂಡರು. ॥12-14॥
(ಶ್ಲೋಕ-15)
ಮೂಲಮ್
ತತಃ ಕ್ರುದ್ಧೋ ದಶಗ್ರೀವಃ ಸಂದಶ್ಯ ದಶನಚ್ಛದಮ್ ॥
(ಶ್ಲೋಕ-16)
ಮೂಲಮ್
ವಿವೃತ್ಯ ನಯನೇ ಕ್ರೂರೋ ರಾಮಮೆವಾನ್ವಧಾವತ ।
ದಶಗ್ರೀವೋ ರಥಸ್ಥಸ್ತು ರಾಮಂ ವಜ್ರೋಪಮೈಃ ಶರೈಃ ॥
(ಶ್ಲೋಕ-17)
ಮೂಲಮ್
ಆಜಘಾನ ಮಹಾಘೋರೈರ್ಧಾರಾಭಿರಿವ ತೋಯದಃ ।
ರಾಮಸ್ಯ ಪುರತಃ ಸರ್ವಾನ್ವಾನರಾನಪಿ ವಿವ್ಯಥೇ ॥
ಅನುವಾದ
ಅನಂತರ ಕುಪಿತನಾದ ರಾವಣನು ಹಲ್ಲುಗಳನ್ನು ಕಡಿಯುತ್ತಾ, ಕಣ್ಣುಗಳನ್ನು ಅಗಲವಾಗಿಸಿಕೊಂಡು ಶ್ರೀರಾಮಚಂದ್ರನೆಡೆಗೆ ನುಗ್ಗಿದನು. ರಾವಣನು ರಥದಲ್ಲಿ ಅಡರಿದ್ದನು. (ರಾಮನು ರಥಹೀನನಾಗಿದ್ದರೂ ಕೂಡ) ಅವನು ವಜ್ರಕ್ಕೆ ಸಮಾನವಾದ ಮಹಾಘೋರವಾದ ಬಾಣಗಳಿಂದ ಮೋಡವು ಜಲಧಾರೆಗಳನ್ನು ಸುರಿಸುವಂತೆ ರಾಮನ ಮೇಲೆ ಪ್ರಹಾರ ಮಾಡಲು ತೊಡಗಿದನು ಮತ್ತು ರಾಮನ ಮುಂದೆಯೇ ಎಲ್ಲ ಕಪಿಗಳನ್ನು ಪೀಡಿಸಿದನು. ॥15-17॥
(ಶ್ಲೋಕ-18)
ಮೂಲಮ್
ತತಃ ಪಾವಕಸಂಕಾಶೈಃ ಶರೈಃ ಕಾಂಚನಭೂಷಣೈಃ ।
ಅಭ್ಯವರ್ಷದ್ರಣೇ ರಾಮೋ ದಶಗ್ರೀವಂ ಸಮಾಹಿತಃ ॥
(ಶ್ಲೋಕ-19)
ಮೂಲಮ್
ರಥಸ್ಥಂ ರಾವಣಂ ದೃಷ್ಟ್ವಾ ಭೂಮಿಷ್ಠಂ ರಘುನಂದನಮ್ ।
ಆಹೂಯ ಮಾತಲಿಂ ಶಕ್ರೋ ವಚನಂ ಚೆದಮಬ್ರವೀತ್ ॥
ಅನುವಾದ
ಆಗ ಶ್ರೀರಾಮಚಂದ್ರನು ಯುದ್ಧದಲ್ಲಿ ಬೆಂಕಿಯಂತಿರುವ ಸುವರ್ಣಾಲಂಕೃತವಾದ ಬಾಣಗಳಿಂದ ರಾವಣನ ಮೇಲೆ ಧಾಳಿಮಾಡಿದನು. ರಾವಣನು ರಥದಲ್ಲಿದ್ದಾನೆ, ಶ್ರೀರಘುನಾಥನು ನೆಲದಮೇಲೆ ನಿಂತಿರುವನು. ಇದನ್ನು ಕಂಡ ದೇವೇಂದ್ರನು ತನ್ನ ಸಾರಥಿ ಮಾತಲಿಯನ್ನು ಕರೆದು ಹೇಳಿದನು ॥18-19॥
(ಶ್ಲೋಕ-20)
ಮೂಲಮ್
ರಥೇನ ಮಮ ಭೂಮಿಷ್ಠಂ ಶೀಘ್ರಂ ಯಾಹಿ ರಘೂತ್ತಮಮ್ ।
ತ್ವರಿತಂ ಭೂತಲಂ ಗತ್ವಾ ಕುರು ಕಾರ್ಯಂ ಮಮಾನಘ ॥
ಅನುವಾದ
ಎಲೈ ಪಾಪರಹಿತನೆ! ನೋಡು, ರಘುನಾಥನು ಭೂಮಿಯ ಮೇಲೆ ನಿಂತಿರುವನು. ನೀನು ಈಗಲೇ ನನ್ನ ರಥವನ್ನು ಭೂಲೋಕಕ್ಕೆ ಕೊಂಡು ಹೋಗಿ ರಾಮನ ಬಳಿಗೆ ಹೋಗು ಹಾಗೂ ನನ್ನ ಕಾರ್ಯವನ್ನು ಮಾಡು. ॥20॥
(ಶ್ಲೋಕ-21)
ಮೂಲಮ್
ಏವ ಮುಕ್ತೋಥ ತಂ ನತ್ವಾ ಮಾತಲಿರ್ದೇವಸಾರಥಿಃ ।
ತತೋ ಹಯೈಶ್ಚ ಸಂಯೋಜ್ಯ ಹರಿತೈಃ ಸ್ಯಂದನೋತ್ತಮಮ್ ॥
(ಶ್ಲೋಕ-22)
ಮೂಲಮ್
ಸ್ವರ್ಗಾಜ್ಜಯಾರ್ಥಂ ರಾಮಸ್ಯ ಹ್ಯುಪಚಕ್ರಾಮ ಮಾತಲಿಃ ।
ಪ್ರಾಂಜಲಿರ್ದೇವರಾಜೇನ ಪ್ರೇಷಿತೋಽಸ್ಮಿ ರಘೂತ್ತಮ ॥
ಅನುವಾದ
ದೇವೇಂದ್ರನ ಈ ಆಜ್ಞೆಯನ್ನು ಪಡೆದು ದೇವಸಾರಥಿ ಮಾತಲಿಯು ಅವನಿಗೆ ನಮಸ್ಕರಿಸಿ, ಅವನ ಉತ್ತಮ ರಥಕ್ಕೆ ಹಸಿರು ಬಣ್ಣದ ಕುದುರೆಗಳನ್ನು ಹೂಡಿ, ಭಗವಾನ್ ಶ್ರೀರಾಮನ ವಿಜಯಕ್ಕಾಗಿ ಸ್ವರ್ಗದಿಂದ ಹೊರಟು ರಾಮನ ಬಳಿಗೆ ಬಂದನು ಹಾಗೂ ಅವನಿಗೆ ಕೈಮುಗಿದು ಇಂತೆಂದನು ‘‘ಹೇ ರಘುಶ್ರೇಷ್ಠಾ! ನನ್ನನ್ನು ದೇವರಾಜ ಇಂದ್ರನು ಕಳಿಸಿರುವನು. ॥21-22॥
(ಶ್ಲೋಕ-23)
ಮೂಲಮ್
ರಥೋಽಯಂ ದೇವರಾಜಸ್ಯ ವಿಜಯಾಯ ತವ ಪ್ರಭೋ ।
ಪ್ರೇಷಿತಶ್ಚ ಮಹಾರಾಜ ಧನುರೈಂದ್ರಂ ಚ ಭೂಷಿತಮ್ ॥
(ಶ್ಲೋಕ-24)
ಮೂಲಮ್
ಅಭೇದ್ಯಂ ಕವಚಂ ಖಡ್ಗಂ ದಿವ್ಯತೂಣೀಯುಗಂ ತಥಾ ।
ಆರುಹ್ಯ ಚ ರಥಂ ರಾಮ ರಾವಣಂ ಜಹಿ ರಾಕ್ಷಸಮ್ ॥
(ಶ್ಲೋಕ-25)
ಮೂಲಮ್
ಮಯಾ ಸಾರಥಿನಾ ದೇವ ವೃತ್ರಂ ದೇವಪತಿರ್ಯಥಾ ।
ಇತ್ಯುಕ್ತಸ್ತಂ ಪರಿಕ್ರಮ್ಯ ನಮಸ್ಕೃತ್ಯ ರಥೋತ್ತಮಮ್ ॥
ಅನುವಾದ
ಸ್ವಾಮಿ! ಈ ರಥವು ಇಂದ್ರನದ್ದಾಗಿದ್ದು ಇದನ್ನು ಅವನು ನಿನ್ನ ವಿಜಯಕ್ಕಾಗಿ ಕಳಿಸಿರುವನು. ಹೇ ಮಹಾರಾಜಾ! ಇದರೊಂದಿಗೆ ಈ ಅತಿ ಶೋಭಾಯ ಮಾನವಾದ ಐಂದ್ರ ಧನುಸ್ಸು, ಅಭೇದ್ಯ ಕವಚ, ಖಡ್ಗ ಮತ್ತು ಎರಡು ದಿವ್ಯ ಬತ್ತಳಿಕೆ ಇವುಗಳನ್ನು ಕಳಿಸಿರುವನು. ಹೇ ರಾಮಾ! ಸಾರಥಿಯಾದ ನನ್ನೊಂದಿಗೆ ಇಂದ್ರನು ವೃತ್ರಾಸುರನನ್ನು ವಧಿಸಿದಂತೆ, ಹೇ ದೇವಾ! ನೀನು ಈ ರಥವನ್ನು ಏರಿ ರಾಕ್ಷಸನಾದ ರಾವಣನನ್ನು ವಧಿಸಿಬಿಡು.’’ ಮಾತಲಿಯು ಹೀಗೆ ವಿನಂತಿಸಿಕೊಂಡಾಗ ಶ್ರೀರಾಮ ಚಂದ್ರನು ಆ ಶ್ರೇಷ್ಠ ರಥಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸಿದನು. ॥23-25॥
(ಶ್ಲೋಕ-26)
ಮೂಲಮ್
ಆರುರೋಹ ರಥಂ ರಾಮೋ ಲೋಕಾಂಲ್ಲಕ್ಷ್ಮ್ಯಾನಿಯೊಜಯನ್ ।
ತತೋಽಭವನ್ಮಹಾಯುದ್ಧಂ ಭೈರವಂ ರೋಮಹರ್ಷಣಮ್ ॥
(ಶ್ಲೋಕ-27)
ಮೂಲಮ್
ಮಹಾತ್ಮನೋ ರಾಘವಸ್ಯ ರಾವಣಸ್ಯ ಚ ಧೀಮತಃ ।
ಆಗ್ನೇಯೇನ ಚ ಆಗ್ನೇಯಂ ದೈವಂ ದೈವೇನ ರಾಘವಃ ॥
(ಶ್ಲೋಕ-28)
ಮೂಲಮ್
ಅಸ್ತ್ರಂ ರಾಕ್ಷಸರಾಜಸ್ಯ ಜಘಾನ ಪರಮಾಸ್ತ್ರವಿತ್ ।
ತತಸ್ತು ಸಸೃಜೇ ಘೋರಂ ರಾಕ್ಷಸಂ ಚಾಸ್ತ್ರಮಸ್ತ್ರವಿತ್ ।
ಕ್ರೋಧೇನ ಮಹತಾವಿಷ್ಟೋ ರಾಮಸ್ಯೋಪರಿ ರಾವಣಃ ॥
ಅನುವಾದ
ಸಮಸ್ತ ಜಗತ್ತಿಗೆ ಕ್ಷೇಮವನ್ನುಂಟು ಮಾಡಲು ಆ ರಥವನ್ನೇರಿದನು. ಅನಂತರ ಮಹಾತ್ಮಾ ರಾಮ ಮತ್ತು ಬುದ್ಧಿಶಾಲಿಯಾದ ರಾವಣರಲ್ಲಿ ಭಯಂಕರವೂ, ರೋಮಾಂಚಕಾರಿಯೂ ಆದ ಘೋರ ಯುದ್ಧವು ನಡೆಯಿತು. ಅಸ್ತ್ರವಿದ್ಯೆಯಲ್ಲಿ ಪರಮ ಕುಶಲನಾದ ಶ್ರೀರಾಮಚಂದ್ರನು ರಾವಣನ ಆಗ್ನೇಯಾಸವನ್ನು ಆಗ್ನೇಯಾಸ್ತ್ರದಿಂದ ಮತ್ತು ದೇವಾಸ್ತ್ರವನ್ನು ದೇವಾಸ್ತ್ರದಿಂದ ತುಂಡರಿಸಿದನು. ಆಗ ಅಸ್ತ್ರವಿದ್ಯಾ ವಿಶಾರದನಾದ ರಾವಣನು ಅತ್ಯಂತ ಕ್ರೋಧಾವಿಷ್ಟನಾಗಿ ಭಯಂಕರವಾದ ರಾಕ್ಷಸಾಸ್ತ್ರವನ್ನು ರಾಮನ ಮೇಲೆ ಪ್ರಯೋಗಿಸಿದನು. ॥26-28॥
(ಶ್ಲೋಕ-29)
ಮೂಲಮ್
ರಾವಣಸ್ಯ ಧನುರ್ಮುಕ್ತಾಃ ಸರ್ಪಾ ಭೂತ್ವಾ ಮಹಾವಿಷಾಃ ।
ಶರಾಃ ಕಾಂಚನಪುಂಖಾಭಾ ರಾಘವಂ ಪರಿತೋಽಪತನ್ ॥
ಅನುವಾದ
ರಾವಣನ ಬಿಲ್ಲಿನಿಂದ ಹೊರಟ ಚಿನ್ನದ ಗರಿಗಳುಳ್ಳ ಕಾಂತಿಯುಕ್ತವಾದ ಬಾಣಗಳು ಮಹಾವಿಷವುಳ್ಳ ಹಾವುಗಳಾಗಿ ಶ್ರೀರಘುನಾಥನನ್ನು ಸುತ್ತುವರಿದು ಬೀಳತೊಡಗಿದವು. ॥29॥
(ಶ್ಲೋಕ-30)
ಮೂಲಮ್
ತೈಃ ಶರೈಃ ಸರ್ಪವದನೈರ್ವಮದ್ಭಿರನಲಂ ಮುಖೈಃ ।
ದಿಶಶ್ಚ ವಿದಿಶಶ್ಚೈವ ವ್ಯಾಪ್ತಾಸ್ತತ್ರ ತದಾಭವನ್ ॥
(ಶ್ಲೋಕ-31)
ಮೂಲಮ್
ರಾಮಃ ಸರ್ಪಾಂಸ್ತತೋ ದೃಷ್ಟ್ವಾ ಸಮಂತಾತ್ಪರಿಪೂರಿತಾನ್ ।
ಸೌಪರ್ಣಮಸ್ತ್ರಂ ತದ್ ಘೋರಂ ಪುರಃ ಪ್ರಾವರ್ತಯದ್ರಣೇ ॥
ಅನುವಾದ
ಹಾವಿನ ಮುಖವುಳ್ಳ ಆ ಬಾಣಗಳಿಂದ ಹೊರಬಿದ್ದ ಬೆಂಕಿಯು ಆಗ ಹತ್ತುದಿಕ್ಕುಗಳಿಗೂ ವ್ಯಾಪಿಸಿತು. ಶ್ರೀರಾಮನು ರಣರಂಗದಲ್ಲಿ ಎಲ್ಲ ಕಡೆಗಳಲ್ಲಿ ಸರ್ಪಗಳು ಆವರಿಸಿಕೊಂಡಿರುವುದನ್ನು ನೋಡಿ ಮಹಾ ಭಯಂಕರ ಗರುಡಾಸ್ತ್ರವನ್ನು ಪ್ರಯೋಗಿಸಿದನು. ॥30-31॥
(ಶ್ಲೋಕ-32)
ಮೂಲಮ್
ರಾಮೇಣ ಮುಕ್ತಾಸ್ತೇ ಬಾಣಾ ಭೂತ್ವಾ ಗರುಡರೂಪಿಣಃ ।
ಚಿಚ್ಛಿದುಃ ಸರ್ಪಬಾಣಾಂಸ್ತಾನ್ಸಮಂತಾತ್ಸರ್ಪಶತ್ರವಃ ॥
ಅನುವಾದ
ಶ್ರೀರಾಮಚಂದ್ರನು ಬಿಟ್ಟ ಆ ಬಾಣಗಳು ಸರ್ಪಗಳ ವೈರಿ ಗರುಡನ ಆಕಾರವನ್ನು ಪಡೆದು ಎಲ್ಲ ಸರ್ಪ ರೂಪೀ ಬಾಣಗಳನ್ನು ಕತ್ತರಿಸಿ ಬಿಟ್ಟವು. ॥32॥
(ಶ್ಲೋಕ-33)
ಮೂಲಮ್
ಅಸ್ತ್ರೇ ಪ್ರತಿಹತೇ ಯುದ್ಧೇ ರಾಮೇಣ ದಶಕಂಧರಃ ।
ಅಭ್ಯವರ್ಷತ್ತತೋ ರಾಮಂ ಘೋರಾಭಿಃ ಶರವೃಷ್ಟಿಭಿಃ ॥
ಅನುವಾದ
ಈ ಪ್ರಕಾರ ರಾಮನಿಂದ ತನ್ನ ಶಸ್ತ್ರವು ನಾಶವಾದುದನ್ನು ಕಂಡು ರಾವಣನು ರಾಮನ ಮೇಲೆ ಭಯಂಕರ ಬಾಣಗಳ ಮಳೆಗರೆದನು. ॥33॥
(ಶ್ಲೋಕ-34)
ಮೂಲಮ್
ತತಃ ಪುನಃ ಶರಾನೀಕೈ ರಾಮಮಕ್ಲಿಷ್ಟಕಾರಿಣಮ್ ।
ಅರ್ದಯಿತ್ವಾ ತು ಘೋರೇಣ ಮಾತಲಿಂ ಪ್ರತ್ಯವಿಧ್ಯತ ॥
ಅನುವಾದ
ಪುನಃ ಲೀಲಾವಿಹಾರಿ ಭಗವಾನ್ ರಾಮನನ್ನು ಹೆಚ್ಚಿನ ಹರಿತವಾದ ಬಾಣಾವಳಿಗಳಿಂದ ಮುಚ್ಚಿಬಿಟ್ಟನು ಹಾಗೂ ಮಾತಲಿಯನ್ನು ಹೊಡೆದನು. ॥34॥
(ಶ್ಲೋಕ-35)
ಮೂಲಮ್
ಪಾತಯಿತ್ವಾ ರಥೋಪಸ್ಥೇ ರಥಕೇತುಂ ಚ ಕಾಂಚನಮ್ ।
ಐಂದ್ರಾನಶ್ವಾನಭ್ಯಹನದ್ರಾವಣಃ ಕ್ರೋಧಮೂರ್ಚ್ಛಿತಃ ॥
ಅನುವಾದ
ಇಷ್ಟೇ ಅಲ್ಲದೆ ಕ್ರೋಧದಿಂದ ಉನ್ಮತ್ತನಾದ ರಾವಣನು ರಥದ ಸ್ವರ್ಣಮಯ ಧ್ವಜವನ್ನು ತುಂಡರಿಸಿ ರಥದ ಹಿಂದುಗಡೆ ಬೀಳಿಸಿದನು ಮತ್ತು ಇಂದ್ರನ ಕುದುರೆಗಳನ್ನು ಗಾಯಗೊಳಿಸಿದನು. ॥35॥
(ಶ್ಲೋಕ-36)
ಮೂಲಮ್
ವಿಷೇದುರ್ದೇವಗಂಧರ್ವಾಶ್ಚಾರಣಾಃ ಪಿತರಸ್ತಥಾ ।
ಆರ್ತ್ತಾಕಾರಂ ಹರಿಂ ದೃಷ್ಟ್ವಾ ವ್ಯಥಿತಾಶ್ಚ ಮಹರ್ಷಯಃ ॥
ಅನುವಾದ
ಇಂತಹ ಆಪತ್ತಿನಲ್ಲಿ ಸಿಲುಕಿದ ಭಗವಂತನನ್ನು ನೋಡಿ ದೇವತೆಗಳೂ, ಗಂಧರ್ವರೂ, ಚಾರಣರೂ, ಪಿತೃಗಳೂ ಮುಂತಾದವರು ವಿಷಾದಮಗ್ನರಾದರು. ಮಹರ್ಷಿಗಡಣವೂ ಕೂಡ ಮನಸ್ಸಿನಲ್ಲಿ ದುಃಖಿತರಾದರು. ॥36॥
(ಶ್ಲೋಕ-37)
ಮೂಲಮ್
ವ್ಯಥಿತಾ ವಾನರೇಂದ್ರಾಶ್ಚ ಬಭೂವುಃ ಸವಿಭೀಷಣಾಃ ।
ದಶಾಸ್ಯೋ ವಿಂಶತಿಭುಜಃ ಪ್ರಗೃಹೀತಶರಾಸನಃ ॥
(ಶ್ಲೋಕ-38)
ಮೂಲಮ್
ದದೃಶೇ ರಾವಣಸ್ತತ್ರ ಮೈನಾಕ ಇವ ಪರ್ವತಃ ।
ರಾಮಸ್ತು ಭ್ರುಕುಟಿಂ ಬದ್ಧ್ವಾ ಕ್ರೋಧಸಂರಕ್ತಲೋಚನಃ ॥
(ಶ್ಲೋಕ-39)
ಮೂಲಮ್
ಕೋಪಂ ಚಕಾರ ಸದೃಶಂ ನಿರ್ದಹನ್ನಿವ ರಾಕ್ಷಸಮ್ ।
ಧನುರಾದಾಯ ದೇವೇಂದ್ರಧನುರಾಕಾರಮದ್ಭುತಮ್ ॥
(ಶ್ಲೋಕ-40)
ಮೂಲಮ್
ಗೃಹೀತ್ವಾ ಪಾಣಿನಾ ಬಾಣಂ ಕಾಲಾನಲಸಮಪ್ರಭಮ್ ।
ನಿರ್ದಹನ್ನಿವ ಚಕ್ಷುರ್ಭ್ಯಾಂ ದದೃಶೇ ರಿಪುಮಂತಿಕೇ ॥
ಅನುವಾದ
ವಿಭೀಷಣ ನೊಡಗೂಡಿದ ಸಮಸ್ತ ಕಪಿಗಳೂ ವಿಷಾದಹೊಂದಿದರು. ಹತ್ತು ತಲೆಗಳಿಂದಲೂ, ಇಪ್ಪತ್ತು ತೋಳುಗಳಿಂದಲೂ ಕೂಡಿದ ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿರುವ ರಾವಣನು ಆ ರಣರಂಗದಲ್ಲಿ ಮೈನಾಕ ಪರ್ವತದಂತೆ ಕಂಡು ಬಂದನು. ಭಗವಾನ್ ಶ್ರೀರಾಮನು ಹುಬ್ಬುಗಂಟಿಕ್ಕಿದವನಾಗಿ, ಕೋಪದಿಂದ ಕಣ್ಣುಗಳನ್ನು ಕೆಂಪಾಗಿಸಿ, ರಾಕ್ಷಸನನ್ನು ಸುಟ್ಟು ಬಿಡುವಂತೆ ಸಿಟ್ಟಾದನು. ದೇವೇಂದ್ರನ ಧನುಸ್ಸಿನಂತಿದ್ದ ಬೇರೊಂದು ಧನುಸ್ಸನ್ನು ತೆಗೆದುಕೊಂಡು ಪ್ರಳಯಾಗ್ನಿಯಂತಿದ್ದ ಬಾಣವನ್ನು ಕೈಯಲ್ಲಿ ಧರಿಸಿ, ಹತ್ತಿರವೇ ಇದ್ದ ಶತ್ರುವನ್ನು ಕಣ್ಣುಗಳಿಂದಲೇ ಸುಟ್ಟುಬಿಡುವಂತೆ ನೋಡಿದನು. ॥37-40॥
(ಶ್ಲೋಕ-41)
ಮೂಲಮ್
ಪರಾಕ್ರಮಂ ದರ್ಶಯಿತುಂ ತೇಜಸಾ ಪ್ರಜ್ವಲನ್ನಿವ ।
ಪ್ರಚಕ್ರಮೇ ಕಾಲರೂಪೀ ಸರ್ವಲೋಕಸ್ಯ ಪಶ್ಯತಃ ॥
ಅನುವಾದ
ಕಾಲರೂಪೀ ಭಗವಾನ್ ಶ್ರೀರಾಮನು ತನ್ನ ತೇಜದಿಂದ ಪ್ರಜ್ವಲಿತನಂತಾಗಿ ಸಮಸ್ತ ಲೋಕಗಳ ಇದಿರು ತನ್ನ ಪರಾಕ್ರಮವನ್ನು ತೋರಲು ಪ್ರಾರಂಭಿಸಿದನು. ॥41॥
(ಶ್ಲೋಕ-42)
ಮೂಲಮ್
ವಿಕೃಷ್ಯ ಚಾಪಂ ರಾಮಸ್ತು ರಾವಣಂ ಪ್ರತಿವಿಧ್ಯ ಚ ।
ಹರ್ಷಯನ್ವಾನರಾನೀಕಂ ಕಾಲಾಂತಕ ಇವಾಬಭೌ ॥
ಅನುವಾದ
ಅವನು ಬಾಣಗಳನ್ನು ಎಳೆದೆಳೆದು ರಾವಣನನ್ನು ಪ್ರತಿಯಾಗಿ ಹೊಡೆದು ಘಾಸಿಗೊಳಿಸಿದನು ಹಾಗೂ ಕಪಿಸಮೂಹಕ್ಕೆಲ್ಲ ಆನಂದವನ್ನುಂಟುಮಾಡುತ್ತಾ, ಲೋಕಾಂತಕಾರಿ ಕಾಲನಂತೆ ಪ್ರಕಾಶಿಸುತ್ತಿದ್ದನು. ॥42॥
(ಶ್ಲೋಕ-43)
ಮೂಲಮ್
ಕ್ರುದ್ಧಂ ರಾಮಸ್ಯ ವದನಂ ದೃಷ್ಟ್ವಾ ಶತ್ರುಂ ಪ್ರಧಾವತಃ ।
ತತ್ರಸುಃ ಸರ್ವಭೂತಾನಿ ಚಚಾಲ ಚ ವಸುಂಧರಾ ॥
ಅನುವಾದ
ಶತ್ರುವಿನ ಆಕ್ರಮಣದಿಂದ ಕುಪಿತಗೊಂಡ ಭಗವಾನ್ ಶ್ರೀರಾಮನ ಮುಖವನ್ನು ನೋಡಿ ಎಲ್ಲ ಪ್ರಾಣಿ ಗಳು ಭಯಭೀತರಾದರು. ಭೂಮಿಯು ನಡುಗಿಹೋಯಿತು. ॥43॥
(ಶ್ಲೋಕ-44)
ಮೂಲಮ್
ರಾಮಂ ದೃಷ್ಟ್ವಾ ಮಹಾರೌದ್ರಮುತ್ಪಾತಾಂಶ್ಚ ಸುದಾರುಣಾನ್ ।
ತ್ರಸ್ತಾನಿ ಸರ್ವಭೂತಾನಿ ರಾವಣಂ ಚಾವಿಶದ್ಭಯಮ್ ॥
ಅನುವಾದ
ಮಹಾಭಯಂಕರನಾದ ಶ್ರೀರಾಮನನ್ನು ಮತ್ತು ದಾರುಣವಾದ ಉತ್ಪಾತಗಳನ್ನು ಕಂಡು ಎಲ್ಲ ಪ್ರಾಣಿಗಳು ತತ್ತರಿಸಿದವು. ರಾವಣನ ಅಂತಃಕರಣದಲ್ಲಿ ಆತಂಕ ತುಂಬಿ ಹೋಯಿತು. ॥44॥
(ಶ್ಲೋಕ-45)
ಮೂಲಮ್
ವಿಮಾನಸ್ಥಾಃ ಸುರಗಣಾಃ ಸಿದ್ಧಗಂಧರ್ವಕಿನ್ನರಾಃ ।
ದದೃಶುಃ ಸುಮಹಾಯುದ್ಧಂ ಲೋಕಸಂವರ್ತಕೋಪಮಮ್ ।
ಐಂದ್ರಮಸ್ತ್ರಂ ಸಮಾದಾಯ ರಾವಣಸ್ಯ ಶಿರೋಽಚ್ಛಿನತ್ ॥
ಅನುವಾದ
ಆಗ ಆಗಸದಲ್ಲಿ ವಿಮಾನಗಳಲ್ಲಿ ಕುಳಿತುಕೊಂಡು ದೇವತೆಗಳೂ, ಸಿದ್ಧರೂ, ಗಂಧರ್ವರೂ, ಕಿನ್ನರರೂ ಲೋಕಪ್ರಳಯಕ್ಕೆ ಸಮಾನವಾದ ಮಹಾಯುದ್ಧವನ್ನು ನೋಡಲು ನೆರೆದರು. ಆಗಲೇ ಶ್ರೀರಾಮಚಂದ್ರನು ಐಂದ್ರಾಸ್ತ್ರವನ್ನು ಪ್ರಯೋಗಿಸಿ ರಾವಣನ ತಲೆಗಳನ್ನು ಕತ್ತರಿಸಿಬಿಟ್ಟನು. ॥45॥
(ಶ್ಲೋಕ-46)
ಮೂಲಮ್
ಮೂರ್ಧಾನೋ ರಾವಣಸ್ಯಾಥ ಬಹವೋ ರುಧಿರೋಕ್ಷಿತಾಃ ।
ಗಗನಾತ್ಪ್ರಪತಂತಿ ಸ್ಮ ತಾಲಾದಿವ ಫಲಾನಿ ಹಿ ॥
ಅನುವಾದ
ರಾವಣನ ಅನೇಕ ತಲೆಗಳು ರಕ್ತದಿಂದ ತೊಯ್ದವುಗಳಾಗಿ, ತಾಳೆ ಮರದಿಂದ ಹಣ್ಣುಗಳು ಉದುರುವಂತೆ ಆಕಾಶ ದಿಂದ ಉದುರಿ ಬೀಳುತ್ತಿದ್ದವು. ॥46॥
(ಶ್ಲೋಕ-47)
ಮೂಲಮ್
ನ ದಿನಂ ನ ಚ ವೈ ರಾತ್ರಿರ್ನ ಸಂಧ್ಯಾ ನ ದಿಶೋಽಪಿ ವಾ ।
ಪ್ರಕಾಶಂತೇ ನ ತದ್ರೂಪಂ ದೃಶ್ಯತೇ ತತ್ರ ಸಂಗರೇ ॥
ಅನುವಾದ
ಆಗ ಹಗಲಾಗಲೀ, ರಾತ್ರಿಯಾಗಲೀ, ಸಂಧ್ಯಾಕಾಲವಾಗಲೀ, ದಿಕ್ಕುಗಳಾಗಲಿ ಯಾವುದೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆ ಸಂಗ್ರಾಮ ಭೂಮಿಯಲ್ಲಿ ರಾವಣನ ರೂಪವೂ ಸರಿಯಾಗಿ ಕಂಡು ಬರದೆ ಕೇವಲ ತುಂಡಾದ ಶಿರಗಳೇ ಕಂಡು ಬರುತ್ತಿದ್ದುವು. ॥47॥
(ಶ್ಲೋಕ-48)
ಮೂಲಮ್
ತತೋ ರಾಮೋ ಬಭೂವಾಥ ವಿಸ್ಮಯಾವಿಷ್ಟಮಾನಸಃ ।
ಶತಮೇಕೋತ್ತರಂ ಛಿನ್ನಂ ಶಿರಸಾಂ ಚೈಕವರ್ಚಸಾಮ್ ॥
(ಶ್ಲೋಕ-49)
ಮೂಲಮ್
ನ ಚೈವ ರಾವಣಃ ಶಾಂತೋ ದೃಶ್ಯತೇ ಜೀವಿತಕ್ಷಯಾತ್ ।
ತತಃ ಸರ್ವಾಸ್ತ್ರ ವಿದ್ಧೀರಃ ಕೌಸಲ್ಯಾನಂದವರ್ಧನಃ ॥
(ಶ್ಲೋಕ-50)
ಮೂಲಮ್
ಅಸ್ತ್ರೈಶ್ಚ ಬಹುಭಿರ್ಯುಕ್ತಶ್ಚಿಂತಯಾಮಾಸ ರಾಘವಃ ।
ಯರ್ಯೈರ್ಬಾಣೈರ್ಹತಾ ದೈತ್ಯಾ ಮಹಾಸತ್ತ್ವಪರಾಕ್ರಮಾಃ ॥
(ಶ್ಲೋಕ-51)
ಮೂಲಮ್
ತ ಏತೇ ನಿಷ್ಫಲಂ ಯಾತಾ ರಾವಣಸ್ಯ ನಿಪಾತನೇ ।
ಇತಿ ಚಿಂತಾಕುಲೇ ರಾಮೇ ಸಮೀಪಸ್ಥೋ ವಿಭೀಷಣಃ ॥
(ಶ್ಲೋಕ-52)
ಮೂಲಮ್
ಉವಾಚ ರಾಘವಂ ವಾಕ್ಯಂ ಬ್ರಹ್ಮದತ್ತವರೋ ಹ್ಯಸೌ ।
ವಿಚ್ಛಿನ್ನಾ ಬಾಹವೋಽಪ್ಯಸ್ಯ ವಿಚ್ಛಿನ್ನಾನಿ ಶಿರಾಂಸಿ ಚ ॥
(ಶ್ಲೋಕ-53)
ಮೂಲಮ್
ಉತ್ಪತ್ಸ್ಯಂತಿ ಪುನಃ ಶೀಘ್ರಮಿತ್ಯಾಹ ಭಗವಾನಜಃ ।
ನಾಭಿದೇಶೇಽಮೃತಂ ತಸ್ಯ ಕುಂಡಲಾಕಾರಸಂಸ್ಥಿತಮ್ ॥
ಅನುವಾದ
ಆಗ ಶ್ರೀರಾಮಚಂದ್ರನಿಗೆ ಮನಸ್ಸಿನಲ್ಲಿ ತುಂಬಾ ಆಶ್ಚರ್ಯವಾಯಿತು. ‘ನಾನು ಒಂದೇ ರೀತಿಯ ಕಾಂತಿಯುಳ್ಳ ರಾವಣನ ಒಂದು ನೂರು ತಲೆಗಳನ್ನು ಕತ್ತರಿಸಿ ಹಾಕಿದರೂ ರಾವಣನು ಪ್ರಾಣಗಳನ್ನು ಕಳೆದುಕೊಂಡು ನಿಶ್ಚೇಷ್ಟಿತನಾಗಲಿಲ್ಲವಲ್ಲ!’ ಎಂದು ಯೋಚಿಸಿದನು. ಅನೇಕ ಅಸ್ತ್ರಗಳಿಂದ ಕೂಡಿದ ಸರ್ವಾಸ್ತ್ರವಿಶಾರದ ಧೀರನಾದ ಕೌಸಲ್ಯಾನಂದವರ್ಧನ ರಘುನಾಥನು ‘ನಾನು ಯಾವ-ಯಾವ ಬಾಣಗಳಿಂದ ದೊಡ್ಡ-ದೊಡ್ಡ ತೇಜಸ್ವಿ, ಪರಾಕ್ರಮಿ ದೈತ್ಯರನ್ನು ಕೊಂದಿರುವೆನೋ ಆ ಬಾಣಗಳು ರಾವಣನನ್ನು ವಧಿಸುವುದರಲ್ಲಿ ನಿಷ್ಫಲವಾದುವಲ್ಲ!’ ಎಂದು ಯೋಚಿಸಿದನು. ಭಗವಾನ್ ಶ್ರೀರಾಮನು ಈ ರೀತಿ ಚಿಂತಾಗ್ರಸ್ತನಾದುದನ್ನು ಕಂಡು, ಅವನ ಬಳಿಯಲ್ಲೇ ನಿಂತಿದ್ದ ವಿಭೀಷಣನು ‘‘ಭಗವಂತಾ! ಈ ರಾವಣನಿಗೆ ಬ್ರಹ್ಮದೇವರು ‘ನಿನ್ನ ಭುಜಗಳು ಮತ್ತು ತಲೆಗಳು ಎಷ್ಟೇ ಬಾರಿ ತುಂಡರಿಸಿದರೂ ಪುನಃ ಚಿಗುರುವವು’ ಎಂಬ ವರವನ್ನು ಕೊಟ್ಟಿದ್ದರು. ಇವನ ನಾಭಿಪ್ರದೇಶದಲ್ಲಿ ಕುಂಡಲಾಕಾರದಿಂದ ಅಮೃತವನ್ನಿರಿಸಲಾಗಿದೆ. ॥48-53॥
(ಶ್ಲೋಕ-54)
ಮೂಲಮ್
ತಚ್ಛೋಷಯಾನಲಾಸ್ತ್ರೇಣ ತಸ್ಯ ಮೃತ್ಯುಸ್ತತೋ ಭವೇತ್ ।
ವಿಭೀಷಣವಚಃ ಶ್ರುತ್ವಾ ರಾಮಃ ಶೀಘ್ರಪರಾಕ್ರಮಃ ॥
(ಶ್ಲೋಕ-55)
ಮೂಲಮ್
ಪಾವಕಾಸ್ತ್ರೇಣ ಸಂಯೋಜ್ಯ ನಾಭಿಂ ವಿವ್ಯಾಧ ರಕ್ಷಸಃ ।
ಅನಂತರಂ ಚ ಚಿಚ್ಛೇದ ಶಿರಾಂಸಿ ಚ ಮಹಾಬಲಃ ॥
(ಶ್ಲೋಕ-56)
ಮೂಲಮ್
ಬಾಹೂನಪಿ ಚ ಸಂರಬ್ಧೋ ರಾವಣಸ್ಯ ರಘೂತ್ತಮಃ ।
ತತೋ ಘೋರಾಂ ಮಹಾಶಕ್ತಿಮಾದಾಯ ದಶಕಂಧರಃ ॥
(ಶ್ಲೋಕ-57)
ಮೂಲಮ್
ವಿಭೀಷಣವಧಾರ್ಥಾಯ ಚಿಕ್ಷೇಪ ಕೋಧವಿಹ್ವಲಃ ।
ಚಿಚ್ಛೇದ ರಾಘವೋ ಬಾಣೈಸ್ತಾಂ ಶಿತೈರ್ಹೇಮಭೂಷಿತೈಃ ॥
ಅನುವಾದ
ಅದನ್ನು ನೀನು ಆಗ್ನೇಯಾಸದಿಂದ ಒಣಗಿಸಿ ಬಿಡು, ಆಗಲೇ ಇವನ ಮೃತ್ಯುವಾಗಬಹುದು ಎಂದು ಸೂಚಿಸಿದನು. ವಿಭೀಷಣನ ಮಾತನ್ನು ಕೇಳಿ ಶೀಘ್ರಪರಾಕ್ರಮಿಯಾದ ರಘುನಾಥನು ರಾಕ್ಷಸನ ಹೊಕ್ಕುಳಿಗೆ ಪಾವಕಾಸ್ತ್ರವನ್ನು ಪ್ರಯೋಗಿಸಿದನು. ಅನಂತರ ಆ ಮಹಾಬಲಶಾಲಿಯು ಕ್ರೋಧಗೊಂಡು ರಾವಣನ ಒಂದೊಂದೇ ತಲೆಗಳನ್ನು ಹಾಗೂ ಭುಜಗಳನ್ನು ಕತ್ತರಿಸಿ ಬಿಟ್ಟನು. ಇದರಿಂದ ಭಾರೀ ಕೋಪಗೊಂಡ ರಾವಣನು ವಿಭೀಷಣನನ್ನು ಕೊಲ್ಲುವುದಕ್ಕಾಗಿ ಮಹಾಶಕ್ತ್ಯಾಯುಧವೊಂದನ್ನು ಪ್ರಯೋಗಿಸಿದನು. ಆದರೆ ಶ್ರೀರಾಮನು ಆ ಶಕ್ತ್ಯಾಯುಧವನ್ನು ಹರಿತವಾದ ಸುವರ್ಣಾಲಂಕೃತ ಬಾಣಗಳಿಂದ ಕತ್ತರಿಸಿ ಹಾಕಿದನು. ॥54-57॥
(ಶ್ಲೋಕ-58)
ಮೂಲಮ್
ದಶಗ್ರೀವಶಿರಶ್ಛೇದಾತ್ತದಾ ತೇಜೋ ವಿನಿರ್ಗತಮ್ ।
ಮ್ಲಾನರೂಪೋ ಬಭೂವಾಥ ಛಿನ್ನೈಃ ಶಿರ್ಷೈರ್ಭಯಂಕರೈಃ ॥
ಅನುವಾದ
ರಾವಣನ ತಲೆಗಳು ತುಂಡಾಗುತ್ತಲೇ ಅವನ ತೇಜವು ಹೊರಟು ಹೋಯಿತು. ಅವನು ತಲೆಗಳನ್ನು ಕಳೆದುಕೊಂಡು ಭಯಂಕರ ವಿರೂಪನಾಗಿ ಕಾಣುತ್ತಿದ್ದನು. ॥58॥
(ಶ್ಲೋಕ-59)
ಮೂಲಮ್
ಏಕೇನ ಮುಖ್ಯ ಶಿರಸಾ ಬಾಹುಭ್ಯಾಂ ರಾವಣೋ ಬಭೌ ।
ರಾವಣಸ್ತು ಪುನಃ ಕ್ರುದ್ಧೋ ನಾನಾಶಸ್ತ್ರಾಸ್ತ್ರವೃಷ್ಟಿಭಿಃ ॥
(ಶ್ಲೋಕ-60)
ಮೂಲಮ್
ವವರ್ಷ ರಾಮಂ ತಂ ರಾಮಸ್ತಥಾ ಬಾಣೈರ್ವವರ್ಷ ಚ ।
ತತೋ ಯುದ್ಧಮಭೂದ್ ಘೋರಂ ತುಮುಲಂ ಲೋಮಹರ್ಷಣಮ್ ॥
ಅನುವಾದ
ಈಗ ರಾವಣನಿಗೆ ಒಂದೇ ಮುಖ್ಯ ತಲೆ ಮತ್ತು ಎರಡು ತೋಳುಗಳೇ ಉಳಿದಿದ್ದವು. ಆದರೂ ಅವನು ಅತ್ಯಂತ ಕ್ರುದ್ಧನಾಗಿ ಭಗವಾನ್ ಶ್ರೀರಾಮನಮೇಲೆ ಅನೇಕ ಪ್ರಕಾರದ ಬಾಣಗಳ ಮಳೆಗರೆದನು. ಇದೇ ಪ್ರಕಾರ ಶ್ರೀರಾಮಚಂದ್ರನೂ ಅವನ ಮೇಲೆ ಬಾಣಗಳನ್ನು ಮಳೆಯಂತೆ ಸುರಿಸಿದನು. ಆಗ ಅಲ್ಲಿ ರೋಮಾಂಚಕಾರಿ, ಭಯಂಕರವಾದ ಯುದ್ಧವು ನಡೆಯಿತು. ॥59-60॥
(ಶ್ಲೋಕ-61)
ಮೂಲಮ್
ಅಥ ಸಂಸ್ಮಾರಯಾಮಾಸ ಮಾತಲೀ ರಾಘವಂ ತದಾ ।
ವಿಸೃಜಾಸಂ ವಧಾಯಾಸ್ಯ ಬ್ರಾಹ್ಮಂ ಶೀಘ್ರಂ ರಘೂತ್ತಮ ॥
ಅನುವಾದ
ಆಗ ಮಾತಲಿಯು ಶ್ರೀರಾಮಚಂದ್ರನಿಗೆ ನೆನಪು ಕೊಡುತ್ತಾ ‘‘ಹೇ ರಘುಶ್ರೇಷ್ಠನೆ! ಇವನ ಸಂಹಾರಕ್ಕಾಗಿ ಬೇಗನೇ ಬ್ರಹ್ಮಾಸ್ತ್ರವನ್ನು ಪ್ರಯೋಗಿಸು. ॥61॥
(ಶ್ಲೋಕ-62)
ಮೂಲಮ್
ವಿನಾಶಕಾಲಃ ಪ್ರಥಿತೋ ಯಃ ಸುರೈಃ ಸೋಽದ್ಯ ವರ್ತತೇ ।
ಉತ್ತಮಾಂಗಂ ನ ಚೈತಸ್ಯ ಛೇತ್ತವ್ಯಂ ರಾಘವ ತ್ವಯಾ ॥
(ಶ್ಲೋಕ-63)
ಮೂಲಮ್
ನೈವ ಶಿರ್ಷ್ಣಿ ಪ್ರಭೋ ವಧ್ಯೋ ವಧ್ಯ ಏವ ಹಿ ಮರ್ಮಣಿ ।
ತತಃ ಸಂಸ್ಮಾರಿತೋ ರಾಮಸ್ತೇನ ವಾಕ್ಯೇನ ಮಾತಲೇಃ ॥
(ಶ್ಲೋಕ-64)
ಮೂಲಮ್
ಜಗ್ರಾಹ ಸ ಶರಂ ದೀಪ್ತಂ ನಿಃಶ್ವಸಂತಮಿವೋರಗಮ್ ।
ಯಸ್ಯ ಪಾರ್ಶ್ವೇ ತು ಪವನಃ ಫಲೇ ಭಾಸ್ಕರಪಾವಕೌ ॥
(ಶ್ಲೋಕ-65)
ಮೂಲಮ್
ಶರೀರಮಾಕಾಶಮಯಂ ಗೌರವೇ ಮೇರುಮಂದರೌ ।
ಪರ್ವಸ್ವಪಿ ಚ ವಿನ್ಯಸ್ತಾ ಲೋಕಪಾಲಾ ಮಹೌಜಸಃ ॥
ಅನುವಾದ
ದೇವತೆಗಳು ಗೊತ್ತುಪಡಿಸಿದ ಇವನ ವಿನಾಶಕಾಲವು ಈಗ ಸನ್ನಿಹಿತವಾಗಿದೆ. ರಾಘವಾ! ಇವನ ತಲೆಯನ್ನು ಕತ್ತರಿಸಬೇಡಿರಿ. ಏಕೆಂದರೆ ಹೇ ಪ್ರಭೊ! ಇವನು ತಲೆಯನ್ನು ಕತ್ತರಿಸುವುದರಿಂದ ಸಾಯಲಾರನು. ಮರ್ಮಸ್ಥಾನವಾದ ಹೃದಯವು ಬಿರಿದಾಗ ಇವನು ಸಾಯಬಲ್ಲನು’’ ಎಂದು ಹೇಳಿದನು. ಮಾತಲಿಯು ಈ ರೀತಿಯಾಗಿ ಸೂಚಿಸಿದಾಗ ಭಗವಾನ್ ಶ್ರೀರಾಮನು ಬುಸುಗುಟ್ಟುತ್ತಿರುವ ಹಾವಿನಂತಿರುವ ಒಂದು ಪರಮ ತೇಜಸ್ವಿ ಬಾಣವನ್ನು ಕೈಗೆತ್ತಿಕೊಂಡನು. ಅದರ ಅಕ್ಕ-ಪಕ್ಕಗಳಲ್ಲಿ ವಾಯುವನ್ನು, ತುದಿಯಲ್ಲಿ ಸೂರ್ಯಾಗ್ನಿಗಳನ್ನು, ಭಾರದಲ್ಲಿ ಮೇರು ಮಂದರಾಚಲಗಳನ್ನು, ಗೆಣ್ಣುಗಳಲ್ಲಿ ಮಹಾತೇಜಸ್ವೀ ಲೋಕಪಾಲಕರನ್ನು ಸ್ಥಾಪಿಸಿದನು. ಅದರ ಸ್ವರೂಪವು ಆಕಾಶದಂತೆ ಇತ್ತು. ॥62-65॥
(ಶ್ಲೋಕ-66)
ಮೂಲಮ್
ಜಾಜ್ವಲ್ಯಮಾನಂ ವಪುಷಾ ಭಾತಂ ಭಾಸ್ಕರವರ್ಚಸಾ ।
ತಮುಗ್ರಮಸ್ತ್ರಂ ಲೋಕಾನಾಂ ಭಯನಾಶನಮದ್ಭುತಮ್ ॥
(ಶ್ಲೋಕ-67)
ಮೂಲಮ್
ಅಭಿಮಂತ್ರ್ಯ ತತೋ ರಾಮಸ್ತಂ ಮಹೇಷುಂ ಮಹಾಭುಜಃ ।
ವೇದಪ್ರೋಕ್ತೇನ ವಿಧಿನಾ ಸಂದಧೇ ಕಾರ್ಮುಕೇ ಬಲೀ ॥
ಅನುವಾದ
ಅದರ ಆಕಾರ ಅತ್ಯಂತ ದೇದೀಪ್ಯಮಾನವಿದ್ದ ಕಾರಣ ಸೂರ್ಯನಂತೆ ಪ್ರಕಾಶಮಾನವಾಗಿತ್ತು. ಮಹಾಬಾಹು ಭಗವಾನ್ ಶ್ರೀರಾಮನು ಸಮಸ್ತ ಲೋಕಗಳ ಭಯವನ್ನು ದೂರಮಾಡುವಂತಹ ಆ ಅತ್ಯಂತ ಉಗ್ರ ಹಾಗೂ ಅದ್ಭುತವಾದ ಅಸ್ತ್ರವನ್ನು ಧನುರ್ವೇದೋಕ್ತ ವಿಧಿಯಿಂದ ಅಭಿಮಂತ್ರಿಸಿ ತನ್ನ ಧನುಸ್ಸಿಗೆ ಹೂಡಿದನು. ॥66-67॥
(ಶ್ಲೋಕ-68)
ಮೂಲಮ್
ತಸ್ಮಿನ್ಸಂಧೀಯಮಾನೇ ತು ರಾಘವೇಣ ಶರೋತ್ತಮೇ ।
ಸರ್ವಭೂತಾನಿ ವಿತ್ರೇಸುಶ್ಚಚಾಲ ಚ ವಸುಂಧರಾ ॥
ಅನುವಾದ
ಭಗವಾನ್ ಶ್ರೀರಾಮನು ಆ ಉತ್ತಮೋತ್ತಮ ಬಾಣವನ್ನು ಹೂಡಿದಾಗ ಸಮಸ್ತ ಪ್ರಾಣಿಗಳು ಭಯಗೊಂಡವು ಹಾಗೂ ಭೂಮಿಯು ನಡುಗಿತು. ॥68॥
(ಶ್ಲೋಕ-69)
ಮೂಲಮ್
ಸ ರಾವಣಾಯ ಸಂಕ್ರುದ್ಧೋ ಭೃಶಮಾನಮ್ಯ ಕಾರ್ಮುಕಮ್ ।
ಚಿಕ್ಷೇಪ ಪರಮಾಯತ್ತಸ್ತಮಸ್ತ್ರಂ ಮರ್ಮಘಾತಿನಮ್ ॥
ಅನುವಾದ
ಆಗ ಅವನು ಅತ್ಯಂತ ಕ್ರುದ್ಧನಾಗಿ ಧನುಸ್ಸನ್ನು ಆಕರ್ಣಾಂತವಾಗಿ ಸೆಳೆದು ಹೆಚ್ಚಿನ ಸಾಹಸದಿಂದ ಮರ್ಮಘಾತಿಯಾದ ಆ ಅಸ್ತ್ರವನ್ನು ರಾವಣನ ಮೇಲೆ ಪ್ರಯೋಗಿಸಿದನು. ॥69॥
(ಶ್ಲೋಕ-70)
ಮೂಲಮ್
ಸ ವಜ್ರ ಇವ ದುರ್ದ್ಧರ್ಷೋ ವಜ್ರಪಾಣಿವಿಸರ್ಜಿತಃ ।
ಕೃತಾಂತ ಇವ ಘೋರಾಸ್ಯೋ ನ್ಯಪತದ್ರಾವಣೋರಸಿ ॥
ಅನುವಾದ
ದೇವೇಂದ್ರನು ಪ್ರಯೋಗಿಸಿದ ವಜ್ರಾಯುಧದಂತೆ ಇದ್ದ ಸಹಿಸಲಸಾಧ್ಯವಾದ ಹಾಗೂ ಯಮನಂತೆ ಭಯಂಕರ ಮುಖವುಳ್ಳ ಆ ಬಾಣವು ರಾವಣನ ಎದೆಯನ್ನು ಹೊಕ್ಕಿತು. ॥70॥
(ಶ್ಲೋಕ-71)
ಮೂಲಮ್
ಸ ನಿಮಗ್ನೋ ಮಹಾಘೋರಃ ಶರೀರಾಂತಕರಃ ಪರಃ ।
ಬಿಭೇದ ಹೃದಯಂ ತೂರ್ಣಂ ರಾವಣಸ್ಯ ಮಹಾತ್ಮನಃ ॥
ಅನುವಾದ
ಶರೀರವನ್ನು ಕೊನೆಗೊಳಿಸುವಂತಹ ಭಯಂಕರ ವಾದ ಆ ಬಾಣವು ಮಹಾಕಾಯನಾದ ರಾವಣನ ಎದೆ ಯನ್ನು ಹೊಕ್ಕು ಹೃದಯವನ್ನು ಸೀಳಿ ಬಿಟ್ಟಿತು. ॥71॥
(ಶ್ಲೋಕ-72)
ಮೂಲಮ್
ರಾವಣಸ್ಯಾಹರತ್ಪ್ರಾಣಾನ್ವಿವೇಶ ಧರಣೀತಲೇ ।
ಸ ಶರೋ ರಾವಣಂ ಹತ್ವಾ ರಾಮತೂಣೀರಮಾವಿಶತ್ ॥
ಅನುವಾದ
ಅದು ರಾವಣನ ಪ್ರಾಣಗಳನ್ನು ಅಪಹರಿಸಿಬಿಟ್ಟಿತು. ರಾವಣನನ್ನು ಕೊಂದು ಆ ಬಾಣವು ಪಾತಾಳವನ್ನು ಹೊಕ್ಕು ಮತ್ತೆ ಭಗವಾನ್ ರಾಮನ ಬತ್ತಳಿಕೆಯನ್ನು ಬಂದು ಸೇರಿತು. ॥72॥
(ಶ್ಲೋಕ-73)
ಮೂಲಮ್
ತಸ್ಯ ಹಸ್ತಾತ್ಪಪಾತಾಶು ಸಶರಂ ಕಾರ್ಮುಕಂ ಮಹತ್ ।
ಗತಾಸುರ್ಭ್ರಮಿವೇಗೇನ ರಾಕ್ಷಸೇಂದ್ರೋಪತದ್ಭುವಿ ॥
ಅನುವಾದ
ಬಾಣವು ತಗಲುತ್ತಲೇ ರಾವಣನ ಕೈಯಿಂದ ಭಾರೀ ದೊಡ್ಡ ಧನುಸ್ಸು ಬಾಣ ಸಹಿತ ಕೆಳಗೆ ಬಿತ್ತು. ರಾಕ್ಷಸೇಂದ್ರನಾದ ರಾವಣನು ಚಕ್ರದಂತೆ ಗಿರಗಿರನೆ ತಿರುಗಿ ಪ್ರಾಣತ್ಯಾಗಗೈದು ನೆಲಕ್ಕೆ ಬಿದ್ದು ಬಿಟ್ಟನು. ॥73॥
(ಶ್ಲೋಕ-74)
ಮೂಲಮ್
ತಂ ದೃಷ್ಟ್ವಾ ಪತಿತಂ ಭೂಮೌ ಹತಶೇಷಾಶ್ಚ ರಾಕ್ಷಸಾಃ ।
ಹತನಾಥಾ ಭಯತ್ರಸ್ತಾ ದುದ್ರುವುಃ ಸರ್ವತೋದಿಶಮ್ ॥
ಅನುವಾದ
ಅವನು ಕೆಳಗೆ ಬಿದ್ದುದನ್ನು ನೋಡಿ ಅಳಿದುಳಿದಿದ್ದ ರಾಕ್ಷಸರೆಲ್ಲರೂ ಒಡೆಯನಿಲ್ಲದವರಾಗಿ ಭಯಗೊಂಡು ದಿಕ್ಕಾಪಾಲಾಗಿ ಓಡಿ ಹೋದರು. ॥74॥
(ಶ್ಲೋಕ-75)
ಮೂಲಮ್
ದಶಗ್ರೀವಸ್ಯ ನಿಧನಂ ವಿಜಯಂ ರಾಘವಸ್ಯ ಚ ।
ತತೋ ವಿನೇದುಃ ಸಂಹೃಷ್ಟಾ ವಾನರಾ ಜಿತಕಾಶಿನಃ ॥
(ಶ್ಲೋಕ-76)
ಮೂಲಮ್
ವದಂತೋ ರಾಮವಿಜಯಂ ರಾವಣಸ್ಯ ಚ ತದ್ವಧಮ್ ।
ಅಥಾಂತರಿಕ್ಷೇ ವ್ಯನದತ್ ಸೌಮ್ಯಸ್ತ್ರಿದಶದುಂದುಭಿಃ ॥
ಅನುವಾದ
ಶ್ರೀರಾಮನ ವಿಜಯವನ್ನೂ, ರಾವಣನ ಮರಣವನ್ನು ಕಂಡು ವಿಜಯೋತ್ಸಾಹದಿಂದ ತೇಜಸ್ವಿಗಳಾದ ವಾನರರು ಶ್ರೀರಾಮನ ಜಯಘೋಷ ಮಾಡಿದರು. ‘ರಾಮನಿಗೆ ಜಯವಾಗಲಿ’ ಎಂದು ಹೇಳುತ್ತ ಕುಣಿದಾಡಿದರು. ಎಲ್ಲ ಕಪಿಗಳ ಬಾಯಲ್ಲೂ ಶ್ರೀರಾಮನ ವಿಜಯ ಮತ್ತು ರಾವಣನ ವಧೆಯ ಮಾತುಗಳೇ ಕೇಳುತ್ತಿದ್ದುವು. ಆಗಲೇ ಆಕಾಶದಲ್ಲಿ ಇಂಪಾದ, ಹಿತವಾದ ದೇವಲೋಕದ ದುಂದುಭಿಗಳು ಮೊಳಗಿದುವು. ॥75-76॥
(ಶ್ಲೋಕ-77)
ಮೂಲಮ್
ಪಪಾತ ಪುಷ್ಪವೃಷ್ಟಿಶ್ಚ ಸಮಂತಾದ್ರಾಘವೋಪರಿ ।
ತುಷ್ಟುವುರ್ಮುನಯಃ ಸಿದ್ಧಾಶ್ಚಾರಣಾಶ್ಚ ದಿವೌಕಸಃ ॥
ಅನುವಾದ
ಭಗವಾನ್ ಶ್ರೀರಾಮನ ಮೇಲೆ ಎಲ್ಲೆಡೆಗಳಿಂದ ಹೂವಿನ ಮಳೆ ಸುರಿಯಿತು. ಮುನಿಗಳು, ಸಿದ್ಧರು, ಚಾರಣರು, ದೇವತೆಗಳು ಅವನನ್ನು ಸ್ತುತಿಸ ತೊಡಗಿದರು. ॥77॥
(ಶ್ಲೋಕ-78)
ಮೂಲಮ್
ಅಥಾಂತರಿಕ್ಷೇ ನನೃತುಃ ಸರ್ವತೋಽಪ್ಸರಸೋ ಮುದಾ ।
ರಾವಣಸ್ಯ ಚ ದೇಹೋತ್ಥಂ ಜ್ಯೋತಿರಾದಿತ್ಯವತ್ಸ್ಫುರತ್ ॥
(ಶ್ಲೋಕ-79)
ಮೂಲಮ್
ಪ್ರವಿವೇಶ ರಘುಶ್ರೇಷ್ಠಂ ದೇವಾನಾಂ ಪಶ್ಯತಾಂ ಸತಾಮ್ ।
ದೇವಾ ಊಚುರಹೋ ಭಾಗ್ಯಂ ರಾವಣಸ್ಯ ಮಹಾತ್ಮನಃ ॥
ಅನುವಾದ
ಅನಂತರ ಆಕಾಶದಲ್ಲಿ ಎಲ್ಲೆಲ್ಲಿಯೂ ಸಂತೋಷದಿಂದ ನಲಿದಾಡಿದರು. ರಾವಣನ ಶರೀರದಿಂದ ಹೊರಬಿದ್ದ ಸೂರ್ಯನಂತೆ ಹೊಳೆಯುವ ಬೆಳಕೊಂದು ದೇವತೆಗಳು ನೋಡುತ್ತಿರುವಂತೆಯೇ ಶ್ರೀರಾಮನಲ್ಲಿ ಪ್ರವೇಶಿಸಿತು. ‘‘ಆಹಾ! ಮಹಾತ್ಮನಾದ ರಾವಣನ ಸೌಭಾಗ್ಯವೆಂತಹುದು?’’ ಎಂದು ದೇವತೆಗಳು ಕೊಂಡಾಡಿದರು. ॥78-79॥
(ಶ್ಲೋಕ-80)
ಮೂಲಮ್
ವಯಂ ತು ಸಾತ್ವಿಕಾ ದೇವಾ ವಿಷ್ಣೋಃ ಕಾರುಣ್ಯಭಾಜನಾಃ ।
ಭಯದುಃಖಾದಿಭಿರ್ವ್ಯಾಪ್ತಾಃ ಸಂಸಾರೇ ಪರಿವರ್ತಿನಃ ॥
ಅನುವಾದ
‘‘ನಾವಾದರೋ ವಿಷ್ಣುವಿನ ಕರುಣೆಗೆ ಪಾತ್ರರಾದ ಸಾತ್ವಿಕ ದೇವತೆಗಳಾಗಿದ್ದೇವೆ. ಆದರೂ ಭಯ- ದುಃಖಾದಿಗಳಿಂದ ವ್ಯಾಪ್ತರಾಗಿ ಸಂಸಾರದಲ್ಲಿ ಅಲೆಯುತ್ತಿದ್ದೇವೆ. ॥80॥
(ಶ್ಲೋಕ-81)
ಮೂಲಮ್
ಅಯಂ ತು ರಾಕ್ಷಸಃ ಕ್ರೂರೋ ಬ್ರಹ್ಮಹಾತೀವ ತಾಮಸಃ ।
ಪರದಾರರತೋ ವಿಷ್ಣುದ್ವೇಷೀ ತಾಪಸ ಹಿಂಸಕಃ ॥
ಅನುವಾದ
ಈ ರಾಕ್ಷಸನಾದರೋ, ಅತಿತಾ ಮಸನೂ, ಕ್ರೂರನೂ, ಬ್ರಹ್ಮಹತ್ಯೆಯನ್ನು ಮಾಡಿದವನಾಗಿದ್ದನು. ಇಷ್ಟೇ ಅಲ್ಲ ಪರಸ್ತ್ರೀಸಕ್ತನಾಗಿದ್ದವನೂ, ವಿಷ್ಣುದ್ವೇಷಿಯೂ, ತಪಸ್ವಿಗಳ ಹಿಂಸಕನೂ ಆಗಿದ್ದನು. ॥81॥
(ಶ್ಲೋಕ-82)
ಮೂಲಮ್
ಪಶ್ಯತ್ಸು ಸರ್ವಭೂತೇಷು ರಾಮಮೇವ ಪ್ರವಿಷ್ಟವಾನ್ ।
ಏವಂ ಬ್ರುವತ್ಸು ದೇವೇಷು ನಾರದಃ ಪ್ರಾಹ ಸುಸ್ಮಿತಃ ॥
(ಶ್ಲೋಕ-83)
ಮೂಲಮ್
ಶ್ರುಣುತಾತ್ರ ಸುರಾ ಯೂಯಂ ಧರ್ಮತತ್ತ್ವವಿಚಕ್ಷಣಾಃ ।
ರಾವಣೋ ರಾಘವದ್ವೇಷಾದನಿಶಂ ಹೃದಿ ಭಾವಯನ್ ॥
(ಶ್ಲೋಕ-84)
ಮೂಲಮ್
ಭೃತ್ಯೈಃ ಸಹ ಸದಾ ರಾಮಚರಿತಂ ದ್ವೇಷಸಂಯುತಃ ।
ಶ್ರುತ್ವಾ ರಾಮಾತ್ಸ್ವ ನಿಧನಂ ಭಯಾತ್ಸರ್ವತ್ರ ರಾಘವಮ್ ॥
(ಶ್ಲೋಕ-85)
ಮೂಲಮ್
ಪಶ್ಯನ್ನನುದಿನಂ ಸ್ವಪ್ನೇ ರಾಮಮೇವಾನುಪಶ್ಯತಿ ।
ಕ್ರೋಧೋಪಿ ರಾವಣಸ್ಯಾಶು ಗುರುಬೋಧಾಧಿಕೋಽಭವತ್ ॥
ಅನುವಾದ
ಹೀಗಿದ್ದರೂ ಎಲ್ಲರೂ ನೋಡು ನೋಡುತ್ತಿರುವಂತೆಯೇ ಶ್ರೀರಾಮನಲ್ಲಿ ಲೀನವಾಗಿ ಹೋದನು. ದೇವತೆಗಳು ಹೀಗೆ ಆಡಿಕೊಳ್ಳುತ್ತಿರುವಾಗ, ನಾರದರು ಮುಗುಳ್ಳಕ್ಕು ಹೀಗೆಂದರು ‘‘ಎಲೈ ದೇವತೆಗಳಿರಾ! ನೀವೆಲ್ಲ ಧರ್ಮತತ್ತ್ವ ವಿಶಾರದರಾಗಿರುವಿರಿ. ಆದ್ದರಿಂದ ಈ ವಿಷಯದಲ್ಲಿ ಕೇಳಿರಿ ಶ್ರೀರಾಮನ ಮೇಲಿನ ವೈರದಿಂದ ರಾವಣನು ಯಾವಾಗಲೂ ತನ್ನ ಸೇವಕರೊಡನೆ ಅವನನ್ನೇ ಹೃದಯದಲ್ಲಿ ಚಿಂತಿಸುತ್ತಾ ಅವನ ಚರಿತ್ರಗಳನ್ನು ದ್ವೇಷ ಪೂರ್ವಕವಾಗಿ ಕೇಳುತ್ತಿದ್ದನು. ರಾಮನ ಕೈಯಿಂದ ತನಗೆ ಮರಣವುಂಟಾಗುತ್ತದೆಂದು ತಿಳಿದವನಾಗಿ ಭಯದಿಂದ ಎಲ್ಲೆಲ್ಲಿಯೂ ರಾಮನನ್ನೇ ಕಾಣುತ್ತಾ, ದಿನ-ದಿನವು ಕನಸಿನಲ್ಲಿಯೂ ಅವನನ್ನೇ ನೋಡುತ್ತಿದ್ದನು. ರಾವಣನಿಗೆ ರಾಮನ ವಿಷಯದಲ್ಲಿ ಇದ್ದ ಕ್ರೋಧವೂ ಗುರುವಿನ ಬೋಧೆಗಿಂತಲೂ ಹೆಚ್ಚಿನ ಪ್ರಯೋಜನಕಾರಿಯಾಯಿತು. ॥82-85॥
(ಶ್ಲೋಕ-86)
ಮೂಲಮ್
ರಾಮೇಣ ನಿಹತಶ್ಚಾಂತೇ ನಿರ್ಧೂತಾಶೇಷಕಲ್ಮಷಃ ।
ರಾಮಸಾಯುಜ್ಯಮೇವಾಪ ರಾವಣೋ ಮುಕ್ತಬಂಧನಃ ॥
ಅನುವಾದ
ಕೊನೆಗೆ ಭಗವಾನ್ ಶ್ರೀರಾಮನ ಕೈಯಿಂದಲೇ ಸತ್ತ ಕಾರಣದಿಂದ ಅವನ ಎಲ್ಲ ಪಾಪಗಳು ತೊಳೆದು ಹೋದುವು. ಆದ್ದರಿಂದ ಬಂಧನವನ್ನು ಕಳಚಿಕೊಂಡು ರಾವಣನು ಶ್ರೀರಾಮನ ಸಾಯುಜ್ಯವನ್ನೇ ಹೊಂದಿದನು. ॥86॥
(ಶ್ಲೋಕ-87)
ಮೂಲಮ್
ಪಾಪಿಷ್ಠೋ ವಾ ದುರಾತ್ಮಾ ಪರಧನಪರ-
ದಾರೇಷು ಸಕ್ತೋ ಯದಿ ಸ್ಯಾ-
ನ್ನಿತ್ಯಂ ಸ್ನೇಹಾದ್ಭಯಾದ್ವಾ ರಘುಕುಲತಿಲಕಂ
ಭಾವಯನ್ಸಂಪರೇತಃ ।
ಭೂತ್ವಾ ಶುದ್ಧಾಂತರಂಗೋ ಭವಶತಜನಿತಾ-
ನೇಕದೋಷೈರ್ವಿಮುಕ್ತಃ
ಸದ್ಯೋ ರಾಮಸ್ಯ ವಿಷ್ಣೋಃ ಸುರವರವಿನುತಂ
ಯಾತಿ ವೈಕುಂಠಮಾದ್ಯಮ್ ॥
ಅನುವಾದ
ಪಾಪಿಯಾಗಲಿ, ದುರಾತ್ಮನಾಗಲಿ, ಬೇರೊಬ್ಬರ ಧನ ಸ್ತ್ರೀಯಲ್ಲಿ ಆಸಕ್ತನಾಗಿದ್ದರೂ ಅವನು ಯಾವಾಗಲೂ ಭಯದಿಂದಾಗಲಿ, ಪ್ರೀತಿಯಿಂದಾಗಲಿ, ರಘುಕುಲತಿಕನಾದ ಶ್ರೀರಾಮನನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಸಾವನ್ನು ಪಡೆದರೆ, ಪರಿಶುದ್ಧ ಮನಸ್ಕನಾಗಿ ನೂರು ಜನ್ಮಗಳಲ್ಲಿ ಮಾಡಿರುವ ಅನೇಕ ದೋಷಗಳಿಂದ ಬಿಡುಗಡೆಯನ್ನು ಹೊಂದಿ ಇಂದ್ರಾದಿದೇವತೆಗಳಿಂದ ವಂದಿತನಾದ ವಿಷ್ಣು ಸ್ವರೂಪಿಯಾದ ಸಾಕ್ಷಾತ್ ಶ್ರೀರಾಮನ ಆದಿಸ್ಥಾನವಾದ ವೈಕುಂಠ ಪದವಿಯನ್ನು ತಡವಿಲ್ಲದೆ ಪಡೆದುಕೊಳ್ಳುವನು. ॥87॥
(ಶ್ಲೋಕ-88)
ಮೂಲಮ್
ಹತ್ವಾ ಯುದ್ಧೇ ದಶಾಸ್ಯಂ ತ್ರಿಭುವನವಿಷಮಂ
ವಾಮಹಸ್ತೇನ ಚಾಪಂ
ಭೂಮೌ ವಿಷ್ಟಭ್ಯ ತಿಷ್ಠನ್ನಿತರಕರಧೃತಂ
ಭ್ರಾಮಯನ್ಬಾಣಮೇಕಮ್ ।
ಆರಕ್ತೋಪಾಂತನೇತ್ರಃ ಶರದಲಿತವಪುಃ
ಸೂರ್ಯಕೋಟಿಪ್ರಕಾಶೋ
ವೀರಶ್ರೀಬಂಧುರಾಂಗಸಿದಶಪತಿನುತಃ
ಪಾತು ಮಾಂ ವೀರರಾಮಃ ॥
ಅನುವಾದ
ಮೂರು ಲೋಕಗಳಿಗೂ ಕಂಟಕನಾಗಿದ್ದ ರಾವಣನನ್ನು ಯುದ್ಧದಲ್ಲಿ ಕೊಂದಿರುವ, ಎಡಗೈಯಿಂದ ಧನುಸ್ಸನ್ನು ನೆಲಕ್ಕೂರಿ ನಿಂತಿರುವ, ಬಲ ಕೈಯಲ್ಲಿರುವ ಬಾಣವನ್ನು ತಿರುಗಿಸುತ್ತಾ ಇರುವ, ತುದಿ ಗಣ್ಣುಗಳವರೆಗೂ ಕೆಂಪಾದ ಬಣ್ಣವುಳ್ಳವನೂ, ಬಾಣಗಳಿಂದ ಗಾಯಗೊಂಡ ಶರೀವುಳ್ಳವನೂ, ಕೋಟಿ ಸೂರ್ಯ ಪ್ರಕಾಶನೂ, ವಿಜಯಲಕ್ಷ್ಮಿಯಿಂದ ಅಲಂಕೃತನೂ, ಸುಂದರಾಂಗನೂ, ದೇವರಾಜ ಇಂದ್ರನಿಂದ ವಂದಿತನೂ ಆದ ವೀರರಾಮನು ನನ್ನನ್ನು ಕಾಪಾಡಲಿ.’’ ॥88॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಏಕಾದಶಃ ಸರ್ಗಃ ॥11॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹನ್ನೊಂದನೆಯ ಸರ್ಗವು ಮುಗಿಯಿತು.