೧೦

[ಹತ್ತನೆಯ ಸರ್ಗ]

ಭಾಗಸೂಚನಾ

ರಾವಣನ ಯಜ್ಞ ವಿಧ್ವಂಸ ಹಾಗೂ ಅವನು ಮಂದೋದರಿಗೆ ತಿಳಿಸಿ ಹೇಳುವುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಸ ವಿಚಾರ್ಯ ಸಭಾಮಧ್ಯೆ ರಾಕ್ಷಸೈಃ ಸಹ ಮಂತ್ರಿಭಿಃ ।
ನಿರ್ಯಯೌ ಯೇವಶಿಷ್ಟಾಸ್ತೈ ರಾಕ್ಷಸೈಃ ಸಹ ರಾಘವಮ್ ॥

(ಶ್ಲೋಕ-2)

ಮೂಲಮ್

ಶಲಭಃ ಶಲಭೈರ್ಯುಕ್ತಃ ಪ್ರಜ್ವಲಂತಮಿವಾನಲಮ್ ।
ತತೋ ರಾಮೇಣ ನಿಹತಾಃ ಸರ್ವೇ ತೇ ರಾಕ್ಷಸಾ ಯುಧಿ ॥

(ಶ್ಲೋಕ-3)

ಮೂಲಮ್

ಸ್ವಯಂ ರಾಮೇಣ ನಿಹತಸ್ತೀಕ್ಷ್ಣಬಾಣೇನ ವಕ್ಷಸಿ ।
ವ್ಯಥಿತಸ್ತ್ವರಿತಂ ಲಂಕಾಂ ಪ್ರವಿವೇಶ ದಶಾನನಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ರಾವಣನು ಸಭೆಯಲ್ಲಿ ತನ್ನ ಮಂತ್ರಿಗಳೊಡನೆ ಸಮಾಲೋಚನೆ ನಡೆಸಿ, ದೀಪದ ಹುಳುವು ಬೇರೆ-ಬೇರೆ ಹುಳಗಳೊಂದಿಗೆ ಉರಿಯುವ ಬೆಂಕಿಯಲ್ಲಿ ಬೀಳುವಂತೆ, ಅಳಿದುಳಿದ ರಾಕ್ಷಸರನ್ನು ಜೊತೆ ಸೇರಿ ರಘುನಾಥನ ಬಳಿಗೆ ಯುದ್ಧಕ್ಕಾಗಿ ಹೊರಟನು. ಆದರೆ ಶ್ರೀರಾಮಚಂದ್ರನು ಎಲ್ಲ ರಾಕ್ಷಸರನ್ನು ಯುದ್ಧದಲ್ಲಿ ಕೊಂದುಬಿಟ್ಟನು. ರಾವಣನೂ ಕೂಡ ಭಗವಾನ್ ಶ್ರೀರಾಮನ ಹರಿತವಾದ ಬಾಣವು ಹೃದಯಕ್ಕೆ ತಗುಲಿ ಬಹಳ ನೋವುಂಟಾದ ಕಾರಣ ಬೇಗನೆ ಲಂಕೆಗೆ ಮರಳಿದನು. ॥1-3॥

(ಶ್ಲೋಕ-4)

ಮೂಲಮ್

ದೃಷ್ಟ್ವಾ ರಾಮಸ್ಯ ಬಹುಶಃ ಪೌರುಷಂ ಚಾಪ್ಯಮಾನುಷಮ್ ।
ರಾವಣೋ ಮಾರುತೇಶ್ಚೈವ ಶೀಘ್ರಂ ಶುಕ್ರಾಂತಿಕಂ ಯಯೌ ॥

ಅನುವಾದ

ಭಗವಾನ್ ಶ್ರೀರಾಮನ ಮತ್ತು ಹನುಮಂತನ ಹೆಚ್ಚಿನ ಅತಿಮಾನುಷವಾದ ಪರಾಕ್ರಮವನ್ನು ಕಂಡು ರಾವಣನು ಅತಿ ಶೀಘ್ರವಾಗಿ ಶುಕ್ರಾಚಾರ್ಯರ ಬಳಿಗೆ ಹೋದನು. ॥4॥

(ಶ್ಲೋಕ-5)

ಮೂಲಮ್

ನಮಸ್ಕೃತ್ಯ ದಶಗ್ರೀವಃ ಶುಕ್ರಂ ಪ್ರಾಂಜಲಿರಬ್ರವೀತ್ ।
ಭಗವನ್ ರಾಘವೇಣೈವಂ ಲಂಕಾ ರಾಕ್ಷಸಯೂಥಪೈಃ ॥

(ಶ್ಲೋಕ-6)

ಮೂಲಮ್

ವಿನಾಶಿತಾ ಮಹಾದೈತ್ಯಾ ನಿಹತಾಃ ಪುತ್ರಬಾಂಧವಾಃ ।
ಕಥಂ ಮೇ ದಃಖಸಂದೋಹಸ್ತ್ವಯಿ ತಿಷ್ಠತಿ ಸದ್ಗುರೌ ॥

ಅನುವಾದ

ಶುಕ್ರಾಚಾರ್ಯರಿಗೆ ನಮಸ್ಕರಿಸಿ ಕೈಮುಗಿದುಕೊಂಡು ರಾವಣನು ಇಂತೆಂದನು ‘‘ಪೂಜ್ಯರೇ! ರಾಮನು ಸಮಸ್ತ ಮಹಾದೈತ್ಯರನ್ನೂ, ರಾಕ್ಷಸ ಸೇನಾಪತಿಗಳೊಂದಿಗೆ ಲಂಕೆಯನ್ನು ನಾಶಗೊಳಿಸಿದನು. ನನ್ನ ಮಕ್ಕಳನ್ನೂ, ನೆಂಟರನ್ನೂ ಎಲ್ಲರನ್ನೂ ಕೊಂದುಬಿಟ್ಟನು. ನಿಮ್ಮಂತಹ ಸದ್ಗುರುಗಳು ಇರುವಾಗ ನಾನು ಇಂತಹ ದುಃಖವನ್ನು ಏಕೆ ನೋಡಬೇಕಾಗಿಬಂತು?’’ ॥5-6॥

(ಶ್ಲೋಕ-7)

ಮೂಲಮ್

ಇತಿ ವಿಜ್ಞಾಪಿತೋ ದೈತ್ಯಗುರುಃ ಪ್ರಾಹ ದಶಾನನಮ್ ।
ಹೋಮಂ ಕುರು ಪ್ರಯತ್ನೇನ ರಹಸಿ ತ್ವಂ ದಶಾನನ ॥

ಅನುವಾದ

ರಾವಣನು ಈ ರೀತಿಯಾಗಿ ಪ್ರಾರ್ಥಿಸಿದಾಗ ದೈತ್ಯಗುರು ಶುಕ್ರಾಚಾರ್ಯರು ‘‘ಎಲೈ ದಶಾನನಾ! ನೀನು ಹೇಗಾದರೂ ಮಾಡಿಯಾವುದಾದರು ಏಕಾಂತ ಪ್ರದೇಶದಲ್ಲಿ ಒಂದು ಹೋಮವನ್ನು ಮಾಡು. ॥7॥

(ಶ್ಲೋಕ-8)

ಮೂಲಮ್

ಯದಿ ವಿನಘೋ ನ ಚೇದ್ಧೋಮೇ ತರ್ಹಿ ಹೋಮಾನಲೋತ್ಥಿತಃ ॥

(ಶ್ಲೋಕ-9)

ಮೂಲಮ್

ಮಹಾನ್ ರಥಶ್ಚ ವಾಹಾಶ್ಚ ಚಾಪತೂಣೀರಸಾಯಕಾಃ ।
ಸಂಭವಿಷ್ಯಂತಿ ತೈರ್ಯುಕ್ತಸ್ತ್ವ ಮಜೇಯೋ ಭವಿಷ್ಯಸಿ ॥

ಅನುವಾದ

ಹೋಮದಲ್ಲಿ ವಿಘ್ನವುಬಾರದೆ ಪೂರ್ಣಗೊಂಡರೆ ಆ ಹೋಮಾಗ್ನಿಯಿಂದ ಒಂದು ಭಾರೀ ದೊಡ್ಡರಥ, ಕುದುರೆಗಳು, ಧನುಸ್ಸು, ಬಾಣ ಬತ್ತಳಿಕೆ ಇವುಗಳು ಉತ್ಪನ್ನವಾದಾವು. ಅವನ್ನು ಪಡೆದು ನೀನು ಅಜೇಯನಾಗುವಿ. ॥8-9॥

(ಶ್ಲೋಕ-10)

ಮೂಲಮ್

ಗೃಹಾಣ ಮಂತ್ರಾನ್ಮದ್ದತ್ತಾನ್ ಗಚ್ಛ ಹೋಮಂ ಕುರು ದ್ರುತಮ್ ।
ಇತ್ಯುಕ್ತಸ್ತ್ವರಿತಂ ಗತ್ವಾ ರಾವಣೋ ರಾಕ್ಷಸಾಧಿಪಃ ॥

(ಶ್ಲೋಕ-11)

ಮೂಲಮ್

ಗುಹಾಂ ಪಾತಾಲಸದೃಶೀಂ ಮಂದಿರೇ ಸ್ವೇ ಚಕಾರ ಹ ।
ಲಂಕಾದ್ವಾರಕಪಾಟಾದಿ ಬದ್ಧ್ವಾ ಸರ್ವತ್ರ ಯತ್ನತಃ ॥

ಅನುವಾದ

ಇಗೋ ನಾನು ಉಪದೇಶಿಸುವ ಮಂತ್ರವನ್ನು ಗ್ರಹಿಸು. ಬೇಗನೆ ಹೋಗಿ ಹೋಮವನ್ನು ಪ್ರಾರಂಭಿಸು ಎಂದು ಹೇಳಿದರು. ಶುಕ್ರಾಚಾರ್ಯರು ಈ ಪ್ರಕಾರ ಹೇಳಿದ್ದನ್ನು ಕೇಳಿ ರಾಕ್ಷಸಾಧಿಪ ರಾವಣನು ಅವಸರವಾಗಿ ಹೊರಟು ತನ್ನ ಅರಮನೆಯಲ್ಲಿಯೇ ಒಂದು ಪಾತಾಳದಂತಹ ಆಳವಾದ ಗುಹೆಯನ್ನು ಮಾಡಿಸಿದನು. ಎಚ್ಚರಿಕೆಯಿಂದ ಲಂಕೆಯ ಎಲ್ಲ ಮಹಾದ್ವಾರಗಳನ್ನು ಮುಚ್ಚಿಸಿ ಭದ್ರಪಡಿಸಿದನು. ॥10-11॥

(ಶ್ಲೋಕ-12)

ಮೂಲಮ್

ಹೋಮದ್ರವ್ಯಾಣಿ ಸಂಪಾದ್ಯ ಯಾನ್ಯುಕ್ತಾನ್ಯಾಭಿಚಾರಿಕೇ ।
ಗುಹಾಂ ಪ್ರವಿಶ್ಯ ಚೈಕಾಂತೇ ಮೌನೀ ಹೋಮಂ ಪ್ರಚಕ್ರಮೇ ॥

ಅನುವಾದ

ಆ ಗುಹೆಯಲ್ಲಿ ಹೊಕ್ಕು ಆಭಿಚಾರಿಕ ಶತ್ರುನಾಶಕವಾದ ಹೋಮಕ್ಕೆ ಬೇಕಾದ ಎಲ್ಲ ಪದಾರ್ಥಗಳನ್ನು ಕೂಡಿಸಿಕೊಂಡು ಏಕಾಂತದಲ್ಲಿ ಮೌನವನ್ನು ಧರಿಸಿ ಹೋಮವನ್ನು ಪ್ರಾರಂಭಿಸಿದನು. ॥12॥

(ಶ್ಲೋಕ-13)

ಮೂಲಮ್

ಉತ್ಥಿತಂ ಧೂಮಮಾಲೋಕ್ಯ ಮಹಾಂತಂ ರಾವಣಾನುಜಃ ।
ರಾಮಾಯ ದರ್ಶಯಾಮಾಸ ಹೋಮಧೂಮಂ ಭಯಾಕುಲಃ ॥

ಅನುವಾದ

ಆಗ ಮೇಲಕ್ಕೆದ್ದ ಭಾರೀ ಹೊಗೆಯನ್ನು ನೋಡಿ ವಿಭೀಷಣನು ಭಯಗೊಂಡು ಆ ಹೋಮದ ಹೊಗೆಯನ್ನು ಶ್ರೀರಾಮನಿಗೆ ತೋರಿಸಿದನು. ॥13॥

(ಶ್ಲೋಕ-14)

ಮೂಲಮ್

ಪಶ್ಯ ರಾಮ ದಶಗ್ರೀವೋ ಹೋಮಂ ಕರ್ತುಂ ಸಮಾರಭತ್ ।
ಯದಿ ಹೋಮಃ ಸಮಾಪ್ತಃ ಸ್ಯಾತ್ತದಾಜೇಯೋ ಭವಿಷ್ಯತಿ ॥

ಅನುವಾದ

‘‘ಹೇ ರಾಮಚಂದ್ರಾ! ನೋಡು, ರಾವಣನು ಹೋಮವನ್ನು ಮಾಡಲಾರಂಭಿಸಿದ್ದಾನೆ. ಈ ಹೋಮವು ನಿರ್ವಿಘ್ನವಾಗಿ ಪೂರ್ಣಗೊಂಡರೆ ಅವನು ಅಜೇಯನಾಗುವನು. ॥14॥

(ಶ್ಲೋಕ-15)

ಮೂಲಮ್

ಅತೋ ವಿಘ್ನಾಯ ಹೋಮಸ್ಯ ಪ್ರೇಷಯಾಶು ಹರೀಶ್ವರಾನ್ ।
ತಥೇತಿ ರಾಮಃ ಸುಗ್ರೀವಸಮ್ಮತೇನಾಂಗದಂ ಕಪಿಮ್ ॥

(ಶ್ಲೋಕ-16)

ಮೂಲಮ್

ಹನೂಮತ್ಪ್ರಮುಖಾನ್ವೀರಾನಾದಿದೇಶ ಮಹಾಬಲಾನ್
ಪ್ರಾಕಾರಂ ಲಂಘಯಿತ್ವಾ ತೇ ಗತ್ವಾ ರಾವಣಮಂದಿರಮ್ ॥

ಅನುವಾದ

ಅದಕ್ಕಾಗಿ ಇದರಲ್ಲಿ ವಿಘ್ನವನ್ನೊಡ್ಡಲು ಬೇಗನೇ ಕಪಿಶ್ರೇಷ್ಠರನ್ನು ಕಳಿಸು’’ ಎಂದು ಹೇಳಿದನು. ಆಗ ಶ್ರೀರಾಮನು ಹಾಗೇ ಆಗಲೆಂದು ಹೇಳಿ, ಸುಗ್ರೀವನ ಅನುಮತಿಯಂತೆ ಅಂಗದ, ಹನುಮಂತನೇ ಮೊದಲಾದವರಿಗೆ ಅಪ್ಪಣೆ ಮಾಡಿದನು. ಅವರೆಲ್ಲರು ಲಂಕೆಯ ಕೋಟೆಯನ್ನು ನೆಗೆದು ರಾವಣನ ಅರಮನೆಗೆ ನುಗ್ಗಿದರು. ॥15-16॥

(ಶ್ಲೋಕ-17)

ಮೂಲಮ್

ದಶಕೋಟ್ಯಃ ಪ್ಲವಂಗಾನಾಂ ಗತ್ವಾ ಮಂದಿರರಕ್ಷಕಾನ್ ।
ಚೂರ್ಣಯಾಮಾಸುರಶ್ವಾಂಶ್ಚ ಗಜಾಂಶ್ಚ ನ್ಯಹನನ್ಕ್ಷಣಾತ್ ॥

ಅನುವಾದ

ಹತ್ತು ಕೋಟಿ ಸಂಖ್ಯೆಯ ಆ ಕಪಿಗಳು ಅಲ್ಲಿದ್ದ ಅರಮನೆಯ ಕಾವಲುಗಾರರನ್ನು ಪುಡಿ ಮಾಡಿದರು. ಕ್ಷಣಮಾತ್ರದಲ್ಲಿ ಉಳಿದ ಆನೆ-ಕುದುರೆಗಳನ್ನು ಕೊಂದು ಹಾಕಿದರು. ॥17॥

(ಶ್ಲೋಕ-18)

ಮೂಲಮ್

ತತಶ್ಚ ಸರಮಾ ನಾಮ ಪ್ರಭಾತೇ ಹಸ್ತಸಂಜ್ಞಯಾ ।
ವಿಭೀಷಣಸ್ಯ ಭಾರ್ಯಾ ಸಾ ಹೋಮಸ್ಥಾನಮಸೂಚಯತ್ ॥

ಅನುವಾದ

(ಈ ಪ್ರಕಾರ ಲಂಕೆಯಲ್ಲಿ ರಾತ್ರಿಯಿಡೀ ಭಾರೀ ಗದ್ದಲ ನಡೆಯುತ್ತಿತ್ತು.) ಬೆಳಗಾಗುತ್ತಲೇ ವಿಭೀಷಣನ ಧರ್ಮಪತ್ನಿಯಾದ ಸರಮೆಯು ಕೈಸನ್ನೆಯಿಂದ ಹೋಮ ಮಾಡುವ ಜಾಗವನ್ನು ತೋರಿಸಿದಳು. ॥18॥

(ಶ್ಲೋಕ-19)

ಮೂಲಮ್

ಗುಹಾಪಿಧಾನಪಾಷಾಣಮಂಗದಃ ಪಾದಘಟ್ಟನೈಃ ।
ಚೂರ್ಣಯಿತ್ವಾ ಮಹಾಸತ್ತ್ವಃ ಪ್ರವಿವೇಶ ಮಹಾಗುಹಾಮ್ ॥

ಅನುವಾದ

ಆಗ ಮಹಾಬಲಶಾಲಿಯಾದ ಅಂಗದನು ಗುಹೆಗೆ ಮುಚ್ಚಿದ್ದ ದೊಡ್ಡ ಬಂಡೆಯನ್ನು ಕಾಲಿನಿಂದ ಒದ್ದು ಪುಡಿ-ಪುಡಿ ಮಾಡಿ ಆ ಗುಹೆಯನ್ನು ಹೊಕ್ಕನು. ॥19॥

(ಶ್ಲೋಕ-20)

ಮೂಲಮ್

ದೃಷ್ಟ್ವಾ ದಶಾನನಂ ತತ್ರ ಮೀಲಿತಾಕ್ಷಂ ದೃಢಾಸನಮ್ ।
ತತೋಽಂಗದಾಜ್ಞಯಾ ಸರ್ವೇ ವಾನರಾ ವಿವಿಶುರ್ದ್ರುತಮ್ ॥

ಅನುವಾದ

ಅಲ್ಲಿ ಕಣ್ಣು ಮುಚ್ಚಿಕೊಂಡು ದೃಢವಾದ ಆಸನದಲ್ಲಿ ಕುಳಿತಿರುವ ರಾವಣನನ್ನು ಕಂಡನು. ಅನಂತರ ಅಂಗದನ ಆಜ್ಞೆಯಂತೆ ಸಮಸ್ತ ವಾನರರು ಗುಹೆಯನ್ನು ಹೊಕ್ಕರು. ॥20॥

(ಶ್ಲೋಕ-21)

ಮೂಲಮ್

ತತ್ರ ಕೋಲಾಹಲಂ ಚಕ್ರುಸ್ತಾಡಯಂತಶ್ಚ ಸೇವಕಾನ್ ।
ಸಂಭಾರಾಂಶ್ಚಿಕ್ಷಿಪುಸ್ತಸ್ಯ ಹೋಮಕುಂಡೇ ಸಮಂತತಃ ॥

ಅನುವಾದ

ಗುಹೆಯಲ್ಲಿ ಪ್ರವೇಶಿಸಿ ರಾವಣನನ್ನು ಸುತ್ತುವರೆದು, ಸೇವಕರೆಲ್ಲರನ್ನು ಹೊಡೆಯುತ್ತಾ, ಭಾರೀ ಗಲಾಟೆಮಾಡಿದರು. ಅಲ್ಲಲ್ಲಿ ಇಟ್ಟಿದ್ದ ಹೋಮದ್ರವ್ಯವನ್ನೆಲ್ಲ ಎತ್ತಿ ಹೋಮಕುಂಡಕ್ಕೆ ಎಸೆದರು. ॥21॥

(ಶ್ಲೋಕ-22)

ಮೂಲಮ್

ಸ್ರುವಮಾಚ್ಛಿದ್ಯ ಹಸ್ತಾಚ್ಚ ರಾವಣಸ್ಯ ಬಲಾದ್ರುಷಾ ।
ತೇನೈವ ಸಂಜಘಾನಾಶು ಹನೂಮಾನ್ ಪ್ಲವಗಾಗ್ರಣೀಃ ॥

ಅನುವಾದ

ವಾನರಾಗ್ರಣಿ ಹನುಮಂತನು ಕುಪಿತಗೊಂಡು ರಾವಣನ ಕೈಯಲ್ಲಿದ್ದ ಸ್ರುವ (ಹೋಮಮಾಡಲು ಉಪಯೋಗಿಸುವ ಸೌಟು) ವನ್ನು ಕಿತ್ತುಕೊಂಡು ಅದರಿಂದಲೇ ರಾವಣನಿಗೆ ಹೊಡೆಯ ತೊಡಗಿದನು. ॥22॥

(ಶ್ಲೋಕ-23)

ಮೂಲಮ್

ಘ್ನಂತಿ ದಂತೈಶ್ಚ ಕಾಷ್ಠೈಶ್ಚ ವಾನರಾಸ್ತಮಿತಸ್ತತಃ ।
ನ ಜಹೌ ರಾವಣೋ ಧ್ಯಾನಂ ಹತೋಽಪಿ ವಿಜಿಗೀಷಯಾ ॥

ಅನುವಾದ

ಉಳಿದ ವಾನರರು ಹಲ್ಲುಗಳಿಂದ, ಕೋಲುಗಳಿಂದ ಎಲ್ಲ ಕಡೆಗಳಿಂದ ರಾವಣನನ್ನು ಗಾಯ ಗೊಳಿಸಿದರು. ಆದರೂ ರಾಮನನ್ನು ಗೆಲ್ಲುವ ಸಂಕಲ್ಪವುಳ್ಳ ರಾವಣನು ಕಪಿಗಳ ಉಪದ್ರವದಿಂದ ವಿಚಲಿತನಾಗದೆ ಧ್ಯಾನವನ್ನು ಬಿಡಲಿಲ್ಲ. ॥23॥

(ಶ್ಲೋಕ-24)

ಮೂಲಮ್

ಪ್ರವಿಶ್ಯಾಂತಃಪುರೇ ವೇಶ್ಮನ್ಯಂಗದೋ ವೇಗವತ್ತರಃ ।
ಸಮಾನಯತ್ಕೇಶಬಂಧೇ ಧೃತ್ವಾ ಮಂದೋದರೀಂ ಶುಭಾಮ್ ॥

(ಶ್ಲೋಕ-25)

ಮೂಲಮ್

ರಾವಣಸ್ಯೈವ ಪುರತೋ ವಿಲಪಂತೀಮನಾಥವತ್ ।
ವಿದದಾರಾಂಗದಸ್ತಸ್ಯಾಃ ಕಂಚುಕಂ ರತ್ನಭೂಷಿತಮ್ ॥

(ಶ್ಲೋಕ-26)

ಮೂಲಮ್

ಮುಕ್ತಾ ವಿಮುಕ್ತಾಃ ಪತಿತಾಃ ಸಮಂತಾದ್ರತ್ನಸಂಚಯೈಃ ।
ಶ್ರೋಣಿಸೂತ್ರಂ ನಿಪತಿತಂ ತ್ರುಟಿತಂ ರತ್ನಚಿತ್ರಿತಮ್ ॥

(ಶ್ಲೋಕ-27)

ಮೂಲಮ್

ಕಟಿಪ್ರದೇಶಾದ್ವಿಸ್ರಸ್ತಾ ನೀವೀ ತಸ್ಯೈವ ಪಶ್ಯತಃ ।
ಭೂಷಣಾನಿ ಚ ಸರ್ವಾಣಿ ಪತಿತಾನಿ ಸಮಂತತಃ ॥

(ಶ್ಲೋಕ-28)

ಮೂಲಮ್

ದೇವಗಂಧರ್ವಕನ್ಯಾಶ್ಚ ನೀತಾ ಹೃಷ್ಟೈಃ ಪ್ಲವಂಗಮೈಃ ।
ಮಂದೋದರೀ ರುರೋದಾಥ ರಾವಣಸ್ಯಾಗ್ರತೋ ಭೃಶಮ್ ॥

ಅನುವಾದ

ವೇಗಶಾಲಿಯಾದ ಅಂಗದನು ರಾವಣನ ಅಂತಃಪುರವನ್ನು ಹೊಕ್ಕು ಶುಭಲಕ್ಷಣೆಯಾದ ಮಂದೋದರಿಯನ್ನು ಜಡೆ- ಮುಡಿಯನ್ನು ಹಿಡಿದು ಎಳೆದು ತಂದನು. ರಾವಣನ ಎದುರಿಗೇ ಅನಾಥಳಂತೆ ಅಳುತ್ತಿದ್ದ ಆಕೆಯ ರತ್ನಭೂಷಿತವಾದ ಕುಪ್ಪಸವನ್ನು ಹರಿದುಬಿಟ್ಟನು. ಅದರಲ್ಲಿ ಪೊಣಿಸಿದ ರತ್ನ-ಮುತ್ತುಗಳೆಲ್ಲ ಚೆಲ್ಲಾ-ಪಿಲ್ಲಿಯಾಗಿ ಹರಡಿಕೊಂಡವು. ಹಾಗೆಯೇ ಮಂದೋದರಿಯ ಸೊಂಟದ ಡಾಬು ಮತ್ತು ಇತರ ಆಭರಣಗಳೆಲ್ಲವೂ ಕಳಚಿಬಿದ್ದುವು. ಅದರಿಂದ ಉಟ್ಟ ಬಟ್ಟೆಯು ಜಾರಿತು. ಉಳಿದ ಕಪಿಗಳು ಇನ್ನೂ ಅನೇಕ ದೇವ ಗಂಧರ್ವ ಕನ್ಯೆಯರನ್ನು (ಅವರೆಲ್ಲ ರಾವಣನ ಪತ್ನಿಯರಾಗಿದ್ದರು) ಹಿಡಿದುಕೊಂಡು ಎಳೆದು ತಂದರು. ಮಂದೋದರಿಯು ರಾವಣನ ಮುಂದೆ ಅತ್ಯಂತ ದೀನಳಾಗಿ ವಿಲಾಪಿಸತೊಡಗಿದಳು. ॥24-28॥

(ಶ್ಲೋಕ-29)

ಮೂಲಮ್

ಕ್ರೋಶಂತೀ ಕರುಣಂ ದೀನಾ ಜಗಾದ ದಶಕಂಧರಮ್ ।
ನಿರ್ಲಜ್ಜೋಽಸಿ ಪರೈರೇವಂ ಕೇಶಪಾಶೇ ವಿಕೃಷ್ಯತೇ ॥

(ಶ್ಲೋಕ-30)

ಮೂಲಮ್

ಭಾರ್ಯಾ ತವೈವ ಪುರತಃ ಕಿಂ ಜುಹೋಷಿ ನ ಲಜ್ಜಸೇ ।
ಹನ್ಯತೇ ಪಶ್ಯತೋ ಯಸ್ಯ ಭಾರ್ಯಾ ಪಾಪೈಶ್ಚ ಶತ್ರುಭಿಃ ॥

(ಶ್ಲೋಕ-31)

ಮೂಲಮ್

ಮರ್ತವ್ಯಂ ತೇನ ತತ್ರೈವ ಜೀವಿತಾನ್ಮರಣಂ ವರಮ್ ।
ಹಾ ಮೇಘನಾದ ತೇ ಮಾತಾ ಕ್ಲಿಶ್ಯತೇ ಬತ ವಾನರೈಃ ॥

(ಶ್ಲೋಕ-32)

ಮೂಲಮ್

ತ್ವಯಿ ಜೀವತಿ ಮೇ ದುಃಖಮೀದೃಶಂ ಚ ಕಥಂ ಭವೇತ್ ।
ಭಾರ್ಯಾ ಲಜ್ಜಾ ಚ ಸಂತ್ಯಕ್ತಾ ಭರ್ತ್ರಾ ಮೇ ಜೀವಿತಾಶಯಾ ॥

ಅನುವಾದ

ದೀನಳಾದ ಮಂದೋದರಿಯು ಕರುಣೆಯುಂಟಾಗುವಂತೆ ಅಳುತ್ತಾ ರಾವಣನನ್ನು ಕುರಿತು ಹೀಗೆಂದಳು ‘‘ಅಯ್ಯಾ! ನೀನು ನಾಚಿಕೆಗೆಟ್ಟವನಾಗಿರುವೆ. ನಿನ್ನ ಎದುರಿಗೇ ಶತ್ರುಗಳು ನಿನ್ನ ಹೆಂಡತಿಯನ್ನು ತಲೆಗೂದಲು ಹಿಡಿದು ಎಳೆದು ತಂದರೂ ನೀನು ನಾಚಿಕೊಳ್ಳದೆ ಹೋಮ ಮಾಡುತ್ತಿರುವೆಯಲ್ಲ? ಯಾರ ಹೆಂಡತಿಯು ಪಾಪಿಗಳಾದ ಶತ್ರುಗಳಿಂದ ಪೀಡಿತಳಾಗಿ ಸಾಯುವಳೋ ಅಂತಹವನು ಬದುಕಿರುವುದಕ್ಕಿಂತ ಸಾಯುವುದೇ ಲೇಸು. ಅಯ್ಯೋ ಮೇಘನಾದನೆ! ಇಂದು ನಿನ್ನ ತಾಯಿಯು ಕಪಿಗಳ ಕೈಗೆ ಸಿಕ್ಕಿ ಹಿಂಸೆಗೊಳಗಾಗಿರುವಳಲ್ಲ? ಮಗೂ! ನೀನು ಬದುಕಿದ್ದರೆ ನನಗೆ ಇಂತಹ ದುಃಖವಾದರೂ ಹೇಗೆ ಬರಲು ಸಾಧ್ಯವಿತ್ತು? ಹೆಂಡತಿಯನ್ನು ರಕ್ಷಿಸಲು ನನ್ನ ಗಂಡನೇ ಇಂದು ನಾಚಿಕೆಯನ್ನು ತೊರೆದು ಬಿಟ್ಟಿರುವನು.’’ ॥29-32॥

(ಶ್ಲೋಕ-33)

ಮೂಲಮ್

ಶ್ರುತ್ವಾ ತದ್ದೇವಿತಂ ರಾಜಾ ಮಂದೋದರ್ಯಾ ದಶಾನನಃ ।
ಉತ್ತಸ್ಥೌ ಖಡ್ಗಮಾದಾಯ ತ್ಯಜ ದೇವೀಮಿತಿ ಬ್ರುವನ್ ॥

ಅನುವಾದ

ಮಂದೋದರಿಯ ಈ ಅಳುವನ್ನು ಕೇಳಿ ರಾಕ್ಷಸ ರಾಜನಾದ ರಾವಣನು ‘‘ಎಲವೋ, ದೇವಿಯನ್ನು ಬಿಟ್ಟು ಬಿಡು’’ ಎಂದು ಗರ್ಜಿಸುತ್ತಾ ಖಡ್ಗವನ್ನೆತ್ತಿ ಎದ್ದು ನಿಂತನು. ॥33॥

(ಶ್ಲೋಕ-34)

ಮೂಲಮ್

ಜಘಾನಾಂಗದಮವ್ಯಗ್ರಃ ಕಟಿದೇಶೇ ದಶಾನನಃ ।
ತದೋತ್ಸೃಜ್ಯ ಯಯುಃ ಸರ್ವೇ ವಿಧ್ವಂಸ್ಯ ಹವನಂ ಮಹತ್ ॥

(ಶ್ಲೋಕ-35)

ಮೂಲಮ್

ರಾಮಪಾರ್ಶ್ವಮುಪಾಗಮ್ಯ ತಸ್ಥುಃ ಸರ್ವೇ ಪ್ರಹರ್ಷಿತಾಃ ॥

ಅನುವಾದ

ದಶಾನನನು ಏಳುತ್ತಲೇ ಅಂಗದನ ಸೊಂಟಕ್ಕೆ ಹೊಡೆದನು. ಆಗ ಎಲ್ಲ ಕಪಿಗಳು ಆ ಮಹಾಯಜ್ಞವನ್ನು ಧ್ವಂಸಗೈದು ಅಲ್ಲಿಂದ ಹೊರಟುಹೋದರು. ಎಲ್ಲರೂ ಸಂತೋಷಹೊಂದಿ ಶ್ರೀರಾಮನ ಬಳಿಗೆ ಬಂದು ಸೇರಿದರು. ॥34-35॥

(ಶ್ಲೋಕ-36)

ಮೂಲಮ್

ರಾವಣಸ್ತು ತತೋ ಭಾರ್ಯಾಮುವಾಚ ಪರಿಸಾಂತ್ವಯನ್ ।
ದೈವಾಧೀನಮಿದಂ ಭದ್ರೇ ಜೀವತಾ ಕಿಂ ನ ದೃಶ್ಯತೇ ।
ತ್ಯಜ ಶೋಕಂ ವಿಶಾಲಾಕ್ಷಿ ಜ್ಞಾನಮಾಲಂಬ್ಯ ನಿಶ್ಚಿತಮ್ ॥

ಅನುವಾದ

ಅನಂತರ ರಾವಣನು ಪತ್ನೀ ಮಂದೋದರಿಯನ್ನು ಸಮಾಧಾನಗೊಳಿಸುತ್ತಾ ಹೀಗೆಂದನು ‘‘ಮಂಗಳ ಸ್ವರೂಪಳೆ! ಈ ಸುಖ-ದುಃಖಾದಿಗಳೆಲ್ಲ ದೈವಾಧೀನವು. ಬದುಕಿರುವ ವನು ಸುಖ-ದುಃಖವೆಲ್ಲವನ್ನೂ ನೋಡಬೇಕಾಗುತ್ತದೆ. ಎಲೈ ವಿಶಾಲಾಕ್ಷಿ! ಇಂತಹ ನಿಶ್ಚಿತವಾದ ಜ್ಞಾನವನ್ನು ಆಶ್ರಯಿಸಿ ನೀನು ಶೋಕವನ್ನು ಬಿಡು. ॥36॥

(ಶ್ಲೋಕ-37)

ಮೂಲಮ್

ಅಜ್ಞಾನಪ್ರಭವಃ ಶೋಕಃ ಶೋಕೋ ಜ್ಞಾನವಿನಾಶಕೃತ್ ।
ಅಜ್ಞಾನಪ್ರಭವಾಹಂಧೀಃ ಶರೀರಾದಿಷ್ವನಾತ್ಮಸು ॥

ಅನುವಾದ

ಶೋಕವಾದರೋ ಅಜ್ಞಾನದಿಂದ ಉಂಟಾಗುತ್ತದೆ. ಅದು ಜ್ಞಾನವನ್ನು ನಾಶ ಮಾಡುತ್ತದೆ. ಶರೀರವೇ ಮುಂತಾದ ಅನಾತ್ಮಗಳಲ್ಲಿ ನಾನು ಎಂಬ ಅಹಂ ಬುದ್ಧಿಯೂ ಅಜ್ಞಾನದಿಂದಲೇ ಉಂಟಾಗುತ್ತದೆ. ॥37॥

(ಶ್ಲೋಕ-38)

ಮೂಲಮ್

ತನ್ಮೂಲಃ ಪುತ್ರದಾರಾದಿಸಂಬಂಧಃ ಸಂಸೃತಿಸ್ತತಃ ।
ಹರ್ಷಶೋಕಭಯಕ್ರೋಧಲೋಭಮೋಹ ಸ್ಪೃಹಾದಯಃ ॥

ಅನುವಾದ

ಈ ಮಿಥ್ಯಾ ಅಹಂಕಾರದಿಂದಲೇ ಪತ್ನೀ-ಪುತ್ರರೇ ಮುಂತಾದವರ ಸಂಬಂಧ ಬೆಳೆಯುತ್ತದೆ. ಈ ಸಂಬಂಧಗಳಲ್ಲಿ ಪ್ರೀತಿ ಇರುವುದರಿಂದಲೇ ಜನ್ಮ-ಮರಣರೂಪೀ ಸಂಸಾರ ಹಾಗೂ ಹರ್ಷ, ಶೋಕ, ಭಯ, ಲೋಭ, ಕ್ರೋಧ, ಮೋಹ ಮತ್ತು ಸ್ಪೃಹೆ ಮುಂತಾದವುಗಳು ಉಂಟಾಗುತ್ತವೆ. ॥38॥

(ಶ್ಲೋಕ-39)

ಮೂಲಮ್

ಅಜ್ಞಾನಪ್ರಭವಾ ಹ್ಯೇತೇ ಜನ್ಮಮೃತ್ಯುಜರಾದಯಃ ।
ಆತ್ಮಾ ತು ಕೇವಲಂ ಶುದ್ಧೋ ವ್ಯತಿರಿಕ್ತೋ ಹ್ಯಲೇಪಕಃ ॥

ಅನುವಾದ

ಈ ಹುಟ್ಟು, ಸಾವು, ಮುದಿತನ ಮುಂತಾದ ಎಲ್ಲ ಅವಸ್ಥೆಗಳೂ ಅಜ್ಞಾನ ಜನ್ಯವೇ ಆಗಿವೆ. ಆತ್ಮನಾದರೋ, ನಿರಂಜನನೂ, ಶುದ್ಧನೂ, ದೇಹಾದಿಗಳಿಂದ ವ್ಯತಿರಿಕ್ತನೂ, ಅಸಂಗನೂ ಆಗಿರುವನು. ॥39॥

(ಶ್ಲೋಕ-40)

ಮೂಲಮ್

ಆನಂದರೂಪೋ ಜ್ಞಾನಾತ್ಮಾ ಸರ್ವಭಾವವಿವರ್ಜಿತಃ ।
ನ ಸಂಯೋಗೋ ವಿಯೋಗೋ ವಾ ವಿದ್ಯತೇ ಕೇನಚಿತ್ಸತಃ ॥

ಅನುವಾದ

ಅವನು ಆನಂದ ರೂಪನೂ, ಜ್ಞಾನ ಮಯನೂ, ಎಲ್ಲ ಭಾವಗಳಿಂದ ರಹಿತನೂ ಆಗಿದ್ದಾನೆ. ಆ ಸತ್ಯಸ್ವರೂಪಿಗೆ ಎಂದೂ, ಯಾರೊಂದಿಗೂ ಸಂಯೋಗ-ವಿಯೋಗ ಆಗುವುದಿಲ್ಲ. ॥40॥

(ಶ್ಲೋಕ-41)

ಮೂಲಮ್

ಏವಂ ಜ್ಞಾತ್ವಾ ಸ್ವಮಾತ್ಮಾನಂ ತ್ಯಜ ಶೋಕಮನಿಂದಿತೇ ।
ಇದಾನೀಮೇವ ಗಚ್ಛಾಮಿ ಹತ್ವಾ ರಾಮಂ ಸಲಕ್ಷ್ಮಣಮ್ ॥

(ಶ್ಲೋಕ-42)

ಮೂಲಮ್

ಆಗಮಿಷ್ಯಾಮಿ ನೋಚೇನ್ಮಾಂ ದಾರಯಿಷ್ಯತಿ ಸಾಯಕೈಃ ।
ಶ್ರೀರಾಮೋ ವಜ್ರಕಲ್ಪೈಶ್ಚ ತತೋ ಗಚ್ಛಾಮಿ ತತ್ಪದಮ್ ॥

ಅನುವಾದ

ಎಲೈ ಅನಿಂದಿತೆ! ತನ್ನ ಆತ್ಮನ ಇಂತಹ ಸ್ವರೂಪವನ್ನು ತಿಳಿದುಕೊಂಡು ನೀನು ಶೋಕ ರಹಿತಳಾಗು. ನಾನು ಈಗಲೇ ಹೊರಡುತ್ತೇನೆ. ಒಂದೋ ಲಕ್ಷ್ಮಣ ಸಹಿತ ರಾಮನನ್ನು ಕೊಂದೇ ಬರುವೆನು; ಇಲ್ಲವೇ ಶ್ರೀರಾಮನೇ ತನ್ನ ವಜ್ರದಂತಹ ಬಾಣದಿಂದ ನನ್ನನ್ನು ಕೊಂದು ಬಿಡುವನು. ಆಗ ನಾನು ಅವನ ಪರಮಪದವನ್ನು ಹೊಂದುವೆನು. ॥41-42॥

(ಶ್ಲೋಕ-43)

ಮೂಲಮ್

ತದಾ ತ್ವಯಾ ಮೇ ಕರ್ತವ್ಯಾ ಕ್ರಿಯಾ ಮಚ್ಛಾಸನಾತ್ಪ್ರಿಯೇ ।
ಸೀತಾಂ ಹತ್ವಾ ಮಯಾ ಸಾರ್ಧಂ ತ್ವಂ ಪ್ರವೇಕ್ಷ್ಯಸಿ ಪಾವಕಮ್ ॥

ಅನುವಾದ

ಪ್ರಿಯೆ! ಬಳಿಕ ನೀನು ನನ್ನ ಅಪ್ಪಣೆಯಂತೆ ಒಂದು ಕೆಲಸವನ್ನು ಮಾಡಬೇಕು. ಸೀತೆಯನ್ನು ಕೊಂದು ಹಾಕಿ ನನ್ನೊಡನೆ ಅಗ್ನಿಯಲ್ಲಿ ಸಹಗಮನ ಮಾಡು.’’ ॥43॥

(ಶ್ಲೋಕ-44)

ಮೂಲಮ್

ಏವಂ ಶ್ರುತ್ವಾ ವಚಸ್ತಸ್ಯ ರಾವಣಸ್ಯಾತಿದುಃಖಿತಾ ।
ಉವಾಚ ನಾಥ ಮೇ ವಾಕ್ಯಂ ಶೃಣು ಸತ್ಯಂ ತಥಾ ಕುರು ॥

ಅನುವಾದ

ರಾವಣನ ಮಾತನ್ನು ಕೇಳಿ ಮಂದೋದರಿಯು ಅತೀವ ದುಃಖಿತಳಾಗಿ ‘‘ಸ್ವಾಮಿ! ನಾನು ನಿಜವಾದ ಮಾತನ್ನೇ ಹೇಳುತ್ತೇನೆ. ಅದನ್ನು ಕೇಳಿ ಹಾಗೆಯೇ ನಡೆದುಕೊಳ್ಳಿರಿ. ॥44॥

(ಶ್ಲೋಕ-45)

ಮೂಲಮ್

ಶಕ್ಯೋ ನ ರಾಘವೋ ಜೇತುಂ ತ್ವಯಾ ಚಾನ್ಯೈಃ ಕದಾಚನ ।
ರಾಮೋ ದೇವವರಃ ಸಾಕ್ಷಾತ್ಪ್ರಧಾನಪುರುಷೇಶ್ವರಃ ॥

ಅನುವಾದ

ನಿಮ್ಮಿಂದಾಗಲಿ ಅಥವಾ ಬೇರೆಯಾರಿಂದಲೂ ರಾಮನನ್ನು ಜಯಿಸುವುದು ಆಗಲಾರದು. ದೇವಾಧಿದೇವನಾದ ಭಗವಾನ್ ಶ್ರೀರಾಮನು ಸಾಕ್ಷಾತ್ ಪ್ರಕೃತಿ ಮತ್ತು ಪುರುಷರ ನಿಯಾಮಕನಾಗಿರುವನು. ॥45॥

(ಶ್ಲೋಕ-46)

ಮೂಲಮ್

ಮತ್ಸ್ಯೋ ಭೂತ್ವಾ ಪುರಾ ಕಲ್ಪೇ ಮನುಂ ವೈವಸ್ವತಂ ಪ್ರಭುಃ ।
ರರಕ್ಷ ಸಕಲಾಪದ್ ಭ್ಯೋ ರಾಘವೋ ಭಕ್ತವತ್ಸಲಃ ॥

ಅನುವಾದ

ಭಕ್ತವತ್ಸಲ ರಘುನಾಥನೇ ಕಲ್ಪದ ಪ್ರಾರಂಭದಲ್ಲಿ ಮತ್ಸ್ಯಾವತಾರವನ್ನು ತಾಳಿ ವೈವಸ್ವತ ಮನುವಿನ ಎಲ್ಲ ವಿಧವಾದ ಕಷ್ಟ ಪರಂಪರೆಗಳಿಂದ ಕಾಪಾಡಿದವನು. ॥46॥

(ಶ್ಲೋಕ-47)

ಮೂಲಮ್

ರಾಮಃ ಕೂರ್ಮೋಽಭವತ್ಪೂರ್ವಂ ಲಕ್ಷಯೋಜನವಿಸ್ತೃತಃ ।
ಸಮುದ್ರಮಥನೇ ಪೃಷ್ಠೇ ದಧಾರ ಕನಕಾಚಲಮ್ ॥

ಅನುವಾದ

ಹಿಂದಿನ ಕಾಲದಲ್ಲಿ ಶ್ರೀರಾಮನೇ ಒಂದು ಲಕ್ಷ ಯೋಜನ ವಿಸ್ತಾರವಾದ ಕಚ್ಛಪನಾಗಿ ಅವತರಿಸಿ, ಸಮುದ್ರಮಂಥನ ನಡೆವಾಗ ತನ್ನ ಬೆನ್ನಮೇಲೆ ಸುಮೇರು (ಮಂದರಾಚಲ) ಪರ್ವತವನ್ನು ಧರಿಸಿದ್ದನು. ॥47॥

(ಶ್ಲೋಕ-48)

ಮೂಲಮ್

ಹಿರಣ್ಯಾಕ್ಷೋಽತಿದುರ್ವತ್ತೋ ಹತೋಽನೇನ ಮಹಾತ್ಮನಾ ।
ಕ್ರೋಡರೂಪೇಣ ವಪುಷಾ ಕ್ಷೋಣೀಮುದ್ಧರತಾ ಕ್ವಚಿತ್ ॥

ಅನುವಾದ

ಒಮ್ಮೆ ಇದೇ ಮಹಾತ್ಮನು ವರಾಹ ರೂಪವನ್ನು ಧರಿಸಿ ಭೂಮಿಯನ್ನು ಉದ್ಧರಿಸುವಾಗ ದುರಾಚಾರಿ ಹಿರಣ್ಯಾಕ್ಷನೆಂಬ ದೈತ್ಯನನ್ನು ವಧಿಸಿದ್ದನು. ॥48॥

(ಶ್ಲೋಕ-49)

ಮೂಲಮ್

ತ್ರಿಲೋಕಕಂಟಕಂ ದೈತ್ಯಂ ಹಿರಣ್ಯಕಶಿಪುಂ ಪುರಾ ।
ಹತವಾನ್ನಾರಸಿಂಹೇನ ವಪುಷಾ ರಘುನಂದನಃ ॥

ಅನುವಾದ

ಇದೇ ರಘುಶ್ರೇಷ್ಠನು ನರಸಿಂಹ ಶರೀರವನ್ನು ಧರಿಸಿ, ಮೂರು ಲೋಕಗಳನ್ನು ಪೀಡಿಸುತ್ತಿದ್ದ ದೈತ್ಯನಾದ ಹಿರಣ್ಯಕಶಿಪುವನ್ನು ಸೀಳಿಬಿಟ್ಟಿದ್ದನು. ॥49॥

(ಶ್ಲೋಕ-50)

ಮೂಲಮ್

ವಿಕ್ರಮೈಸ್ತ್ರೀಭಿರೇವಾಸೌ ಬಲಿಂ ಬದ್ ಧ್ವಾ ಜಗತ್ತ್ರಯಮ್ ।
ಆಕ್ರಮ್ಯಾದಾತ್ಸುರೇಂದ್ರಾಯ ಭೃತ್ಯಾಯ ರಘುಸತ್ತಮಃ ॥

ಅನುವಾದ

ಇದೇ ರಘುವರನು ವಾಮನಾವತಾರವನ್ನು ತಾಳಿ ಬಲಿಯನ್ನು ಬಂಧಿಸಿ, ಮೂರು ಹೆಜ್ಜೆಗಳಿಂದ ತ್ರಿಲೋಕಗಳನ್ನು ಆಕ್ರಮಿಸಿಕೊಂಡು ತ್ರಿವಿಕ್ರಮನಾಗಿ ತನ್ನ ಸೇವಕನಾದ ದೇವೇಂದ್ರನಿಗೆ ಅದನ್ನು ಕೊಟ್ಟಿದ್ದನು. ॥50॥

(ಶ್ಲೋಕ-51)

ಮೂಲಮ್

ರಾಕ್ಷಸಾಃ ಕ್ಷತ್ರಿಯಾಕಾರಾ ಜಾತಾ ಭೂಮೇರ್ಭರಾವಹಾಃ ।
ತಾನ್ ಹತ್ವಾ ಬಹುಶೋ ರಾಮೋ ಭುವಂ ಜಿತ್ವಾ ಹ್ಯದಾನ್ಮುನೇಃ ॥

ಅನುವಾದ

ರಾಕ್ಷಸರು ಕ್ಷತ್ರಿಯರೂಪ ವನ್ನಾಂತು ಭೂಮಿಗೆ ಭಾರಸ್ವರೂಪರಾದಾಗ, ಇವನೇ ಪರಶು ರಾಮಾವತಾರವನ್ನು ತಾಳಿ, ಅನೇಕ ಬಾರಿ ಕ್ಷತ್ರಿಯರನ್ನು ಸಂಹರಿಸಿ, ಪೃಥ್ವಿಯನ್ನು ಕಶ್ಯಪರಿಗೆ ದಾನ ಮಾಡಿದ್ದನು. ॥51॥

(ಶ್ಲೋಕ-52)

ಮೂಲಮ್

ಸ ಏವ ಸಾಂಪ್ರತಂ ಜಾತೋ ರಘುವಂಶೇ ಪರಾತ್ಪರಃ ।
ಭವದರ್ಥೇ ರಘುಶ್ರೇಷ್ಠೋ ಮಾನುಷತ್ವಮುಪಾಗತಃ ॥

ಅನುವಾದ

ಈಗ ಅದೇ ಪರಾತ್ಪರ ಸ್ವಾಮಿಯು ರಘುವಂಶದಲ್ಲಿ ರಾಮನಾಗಿ ಅವತರಿಸಿ ನಿಮ್ಮ ವಧೆಗಾಗಿ ಮನುಷ್ಯನಾಗಿರುವನು. ॥52॥

(ಶ್ಲೋಕ-53)

ಮೂಲಮ್

ತಸ್ಯ ಭಾರ್ಯಾ ಕಿಮರ್ಥಂ ವಾ ಹೃತಾ ಸೀತಾ ವನಾದ್ಬಲಾತ್ ।
ಮಮ ಪುತ್ರವಿನಾಶಾರ್ಥಂ ಸ್ವಸ್ಯಾಪಿ ನಿಧನಾಯ ಚ ॥

ಅನುವಾದ

ನಮ್ಮ ಪುತ್ರರ ನಾಶಕ್ಕಾಗಿ ಹಾಗೂ ನಿಮ್ಮ ಮೃತ್ಯುವನ್ನು ಬರಮಾಡಿಕೊಳ್ಳಲೆಂದೇ, ನೀವು ರಾಮನ ಪತ್ನೀ ಸೀತೆಯನ್ನು ಬಲಾತ್ಕಾರವಾಗಿ ತಪೋವನದಿಂದ ಕದ್ದು ತಂದಿರುವಿರಿ. ॥53॥

(ಶ್ಲೋಕ-54)

ಮೂಲಮ್

ಇತಃ ಪರಂ ವಾ ವೈದೇಹಿಂ ಪ್ರೇಷಯಸ್ವ ರಘೂತ್ತಮೇ ।
ವಿಭೀಷಣಾಯ ರಾಜ್ಯಂ ತು ದತ್ತ್ವಾ ಗಚ್ಛಾಮಹೇ ವನಮ್ ॥

ಅನುವಾದ

ಈಗಲಾದರೂ ನೀವು ಜಾನಕಿಯನ್ನು ರಾಮನ ಬಳಿಗೆ ಕಳಿಸಿಕೊಡಿರಿ. ಮತ್ತೆ ವಿಭೀಷಣನಿಗೆ ರಾಜ್ಯವನ್ನು ಒಪ್ಪಿಸಿ ನಾವು ಕಾಡಿಗೆ ಹೊರಡೋಣ’’ ಎಂದು ನುಡಿದಳು. ॥54॥

(ಶ್ಲೋಕ-55)

ಮೂಲಮ್

ಮಂದೋದರೀವಚಃ ಶ್ರುತ್ವಾ ರಾವಣೋ ವಾಕ್ಯಮಬ್ರವೀತ್ ।
ಕಥಂ ಭದ್ರೇ ರಣೇ ಪುತ್ರಾನ್ ಭ್ರಾತೄನ್ ರಾಕ್ಷಸಮಂಡಲಮ್ ॥

(ಶ್ಲೋಕ-56)

ಮೂಲಮ್

ಘಾತಯಿತ್ವಾ ರಾಘವೇಣ ಜೀವಾಮಿ ವನಗೋಚರಃ ।
ರಾಮೇಣ ಸಹ ಯೋತ್ಸ್ಯಾಮಿ ರಾಮಬಾಣೈಃ ಸುಶೀಘ್ರಗೈಃ ॥

(ಶ್ಲೋಕ-57)

ಮೂಲಮ್

ವಿದಾರ್ಯಮಾಣೋ ಯಾಸ್ಯಾಮಿ ತದ್ವಿಷ್ಣೋಃ ಪರಮಂ ಪದಮ್ ।
ಜಾನಾಮಿ ರಾಘವಂ ವಿಷ್ಣುಂ ಲಕ್ಷ್ಮೀಂ ಜಾನಾಮಿ ಜಾನಕೀಮ್ ।
ಜ್ಞಾತ್ವೈವ ಜಾನಕೀ ಸೀತಾ ಮಯಾನೀತಾ ವನಾದ್ಬಲಾತ್ ॥

(ಶ್ಲೋಕ-58)

ಮೂಲಮ್

ರಾಮೇಣ ನಿಧನಂ ಪ್ರಾಪ್ಯ ಯಾಸ್ಯಾಮೀತಿ ಪರಂ ಪದಮ್ ।
ವಿಮುಚ್ಯ ತ್ವಾಂ ತು ಸಂಸಾರಾದ್ಗಮಿಷ್ಯಾಮಿ ಸಹ ಪ್ರಿಯೇ ॥

ಅನುವಾದ

ಮಂದೋದರಿಯ ಮಾತನ್ನು ಕೇಳಿ ರಾವಣನು ‘‘ಎಲೈ ಕಲ್ಯಾಣಿ! ಯುದ್ಧದಲ್ಲಿ ಮಕ್ಕಳನ್ನೂ ಸಹೋದರರನ್ನೂ, ರಾಕ್ಷಸ ಸಮೂಹವನ್ನು ರಾಮನಿಂದ ಕೊಲ್ಲಿಸಿದ ಬಳಿಕ ಕಾಡುತಪಸ್ವಿಯಾಗಿ ಹೇಗೆ ಬದುಕಿರಲಿ? ಈಗಲಾದರೋ ನಾನು ರಾಮನೊಡನೆ ಯುದ್ಧಮಾಡುವೆನು. ಅವನ ವೇಗವಾದ ರಾಮಬಾಣಗಳಿಂದ ಸೀಳಲ್ಪಟ್ಟು, ಆ ವಿಷ್ಣುವಿನ ಪರಮ ಪದವಿಯನ್ನು ಹೊಂದಲಿರುವೆನು. ರಾಮನು ಸಾಕ್ಷಾತ್ ವಿಷ್ಣುವೆಂದು ನಾನು ತಿಳಿದಿದ್ದೇನೆ ಹಾಗೂ ಜಾನಕಿಯು ಸಾಕ್ಷಾತ್ ಲಕ್ಷೀ ಎಂದೂ ತಿಳಿದಿದ್ದೇನೆ. ರಾಮನ ಕೈಯಿಂದ ಮಡಿದು ಪರಮಪದವಿಯನ್ನು ಪಡೆಯಲೆಂದೇ ನಾನು ಜನಕನಂದಿನೀ ಸೀತೆಯನ್ನು ಬಲಾತ್ಕಾರದಿಂದ ತಪೋವನದಿಂದ ತಂದಿರುವೆನು. ಹೇ ಪ್ರಿಯೇ! ಈಗ ನಾನು ನಿನ್ನನ್ನು ಬಿಟ್ಟು ನನ್ನ ರಾಕ್ಷಸ ವೀರರೊಂದಿಗೆ ಸಂಸಾರದಿಂದ ಬಿಡುಗಡೆ ಹೊಂದಲಿರುವೆನು. ॥55-58॥

(ಶ್ಲೋಕ-59)

ಮೂಲಮ್

ಪರಾನಂದಮಯೀ ಶುದ್ಧಾ ಸೇವ್ಯತೇ ಯಾ ಮುಮುಕ್ಷುಭಿಃ ।
ತಾಂ ಗತಿಂ ತು ಗಮಿಷ್ಯಾಮಿ ಹತೋ ರಾಮೇಣ ಸಂಯುಗೇ ॥

ಅನುವಾದ

ಮುಮುಕ್ಷುಗಳಾದವರು ಪರಮಾನಂದ ಸ್ವರೂಪವಾದ ಯಾವ ಸ್ಥಿತಿಯನ್ನು ಸೇವಿಸುವರೋ, ಅಂತಹ ಗತಿಯನ್ನು ನಾನು ರಾಮನಿಂದ ಯುದ್ಧದಲ್ಲಿ ಮಡಿದು ಪಡೆಯಲಿರುವೆನು. ॥59॥

(ಶ್ಲೋಕ-60)

ಮೂಲಮ್

ಪ್ರಕ್ಷಾಲ್ಯ ಕಲ್ಮಷಾಣೀಹ ಮುಕ್ತಿಂ ಯಾಸ್ಯಾಮಿ ದುರ್ಲಭಾಮ್ ॥

ಅನುವಾದ

ಇಲ್ಲಿಯೇ ಪಾಪಗಳೆಲ್ಲವನ್ನು ಕಳೆದುಕೊಂಡು ದುರ್ಲಭವಾದ ಮುಕ್ತಿಯನ್ನು ಹೊಂದುವೆನು. ॥60॥

(ಶ್ಲೋಕ-61)

ಮೂಲಮ್

ಕ್ಲೇಶಾದಿಪಂಚಕತರಂಗಯುತಂ ಭ್ರಮಾಢ್ಯಂ
ದಾರಾತ್ಮಜಾಪ್ತಧನಬಂಧುಝಷಾಭಿಯುಕ್ತಮ್ ।
ಔರ್ವಾನಲಾಭನಿಜರೋಷಮನಂಗಜಾಲಂ
ಸಂಸಾರಸಾಗರಮತೀತ್ಯ ಹರಿಂ ವ್ರಜಾಮಿ ॥

ಅನುವಾದ

ರಾಗಾದಿ (ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ ಮತ್ತು ಅಭಿನಿವೇಶ) ಐದು ಕ್ಲೇಶಗಳೆಂಬ ಅಲೆಗಳುಳ್ಳು, ಭ್ರಮೆಯೆಂಬ ಸುಳಿಗಳುಳ್ಳ, ಪತ್ನೀ, ಪುತ್ರ, ಸ್ನೇಹಿತ, ಹಣ, ನೆಂಟರು ಮುಂತಾದ ತಿಮಿಂಗಿಲಗಳುಳ್ಳ, ಕಾಡುಗಿಚ್ಚಿ ನಂತಿರುವ, ತನ್ನಲ್ಲಿಯೇ ಹುದುಗಿಕೊಂಡಿರುವ ಕಾಮ-ಕ್ರೋಧಗಳೆಂಬ ಬಡವಾನಲವುಳ್ಳ ಸಂಸಾರ ಸಾಗರವನ್ನು ದಾಟಿ ನಾನು ಈಗ ಶ್ರೀಹರಿಯ ಬಳಿಗೆ ಹೋಗುವೆನು. ॥61॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ದಶಮಃ ಸರ್ಗಃ ॥10॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಹತ್ತನೆಯ ಸರ್ಗವು ಮುಗಿಯಿತು.