[ಒಂಭತ್ತನೆಯ ಸರ್ಗ]
ಭಾಗಸೂಚನಾ
ಮೇಘನಾದ ವಧೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ವಿಭೀಷಣವಚಃ ಶ್ರುತ್ವಾ ರಾಮೋ ವಾಕ್ಯಮಥಾಬ್ರವೀತ್ ।
ಜಾನಾಮಿ ತಸ್ಯ ರೌದ್ರಸ್ಯ ಮಾಯಾಂ ಕೃತ್ಸ್ನಾಂ ವಿಭೀಷಣ ॥
(ಶ್ಲೋಕ-2)
ಮೂಲಮ್
ಸ ಹಿ ಬ್ರಹ್ಮಾಸ್ತ್ರವಿಚ್ಛೂರೋ ಮಾಯಾವೀ ಚ ಮಹಾಬಲಃ ।
ಜಾನಾಮಿ ಲಕ್ಷ್ಮಣಸ್ಯಾಪಿ ಸ್ವರೂಪಂ ಮಮ ಸೇವನಮ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ವಿಭೀಷಣನ ಮಾತನ್ನು ಕೇಳಿ ಶ್ರೀರಾಮನು ಹೀಗೆ ಹೇಳಿದನು-‘‘ವಿಭೀಷಣಾ! ಆ ಭಯಂಕರನಾದ ರಾಕ್ಷಸನ ಸಮಸ್ತ ಮಾಯೆಯನ್ನು ನಾನು ಬಲ್ಲೆನು. ಅವನು ಬ್ರಹ್ಮಾಸವನ್ನು ಬಲ್ಲವನು. ಶೂರನೂ, ಮಹಾಬಲಿಷ್ಠನೂ ಮತ್ತು ಮಾಯವಿಯೂ ಆಗಿರುವನು. ಹಾಗೆಯೇ ಲಕ್ಷ್ಮಣನ ಸ್ವರೂಪವನ್ನೂ, ನನ್ನನ್ನು ಸೇವಿಸುವುದನ್ನು ತಿಳಿದಿರುವೆನು. ॥1-2॥
(ಶ್ಲೋಕ-3)
ಮೂಲಮ್
ಜ್ಞಾತ್ವೈವಾಸಮಹಂ ತೂಷ್ಣೀಂ ಭವಿಷ್ಯತ್ಕಾರ್ಯಗೌರವಾತ್ ।
ಇತ್ಯುಕ್ತ್ವಾ ಲಕ್ಷ್ಮಣಂ ಪ್ರಾಹ ರಾಮೋ ಜ್ಞಾನವತಾಂ ವರಃ ॥
(ಶ್ಲೋಕ-4)
ಮೂಲಮ್
ಗಚ್ಛ ಲಕ್ಷ್ಮಣ ಸೈನ್ಯೇನ ಮಹತಾ ಜಹಿ ರಾವಣಿಮ್ ।
ಹನೂಮತ್ಪ್ರಮುಖೈಃ ಸರ್ವೈರ್ಯೂಥಪೈಃ ಸಹ ಲಕ್ಷ್ಮಣ ॥
ಅನುವಾದ
ಮುಂದೆ ನಡೆಯಬೇಕಾಗಿರುವ ಕಾರ್ಯವಿಶೇಷಗಳ ನಿಮಿತ್ತವಾಗಿಯೇ ನಾನು ತಿಳಿದಿದ್ದೂ ಸುಮ್ಮನಿರುವೆನು.’’ ಹೀಗೆಂದು ಹೇಳಿ ಲಕ್ಮಣನನ್ನು ಕುರಿತು ಜ್ಞಾನಿಗಳಲ್ಲಿ ಶ್ರೇಷ್ಠನಾದ ಭಗವಾನ್ ಶ್ರೀರಾಮ ಚಂದ್ರನು ಇಂತೆಂದನು - ‘‘ತಮ್ಮಾ ಲಕ್ಷ್ಮಣಾ! ನೀನು ಹನುಮಂತನೇ ಮುಂತಾದ ಎಲ್ಲ ಸೇನಾನಾಯಕರಿಂದ ಕೂಡಿದ ವಿಶಾಲವಾದ ಸೇನೆಯೊಂದಿಗೆ ಹೊರಡು ಮತ್ತು ರಾವಣನ ಪುತ್ರನಾದ ಮೇಘನಾದನನ್ನು ಸಂಹರಿಸು. ॥3-4॥
(ಶ್ಲೋಕ-5)
ಮೂಲಮ್
ಜಾಂಬವಾನೃಕ್ಷರಾಜೋಽಯಂ ಸಹ ಸೈನ್ಯೇನ ಸಂವೃತಃ ।
ವಿಭೀಷಣಶ್ಚ ಸಚಿವೈಃ ಸಹ ತ್ವಾಮಭಿಯಾಸ್ಯತಿ ॥
ಅನುವಾದ
ಈ ಕರಡಿಗಳ ಒಡೆಯನಾದ ಜಾಂಬವಂತನೂ ತನ್ನ ಸೈನ್ಯದೊಡನೆ ಹೊರಡಲಿ. ಮಂತ್ರಿಗಳೊಡಗೂಡಿ ವಿಭೀಷಣನೂ ನಿನ್ನೊಡನೆ ಹೊರಡಲಿ. ॥5॥
(ಶ್ಲೋಕ-6)
ಮೂಲಮ್
ಅಭಿಜ್ಞಸ್ತಸ್ಯ ದೇಶಸ್ಯ ಜಾನಾತಿ ವಿವರಾಣಿ ಸಃ ।
ರಾಮಸ್ಯ ವಚನಂ ಶ್ರುತ್ವಾ ಲಕ್ಷ್ಮಣಃ ಸವಿಭೀಷಣಃ ॥
(ಶ್ಲೋಕ-7)
ಮೂಲಮ್
ಜಗ್ರಾಹ ಕಾರ್ಮುಕಂ ಶ್ರೇಷ್ಠಮನ್ಯದ್ಭೀಮಪರಾಕ್ರಮಃ ।
ರಾಮಪಾದಾಂಬುಜಂ ಸ್ಪೃಷ್ಟ್ವಾ ಹೃಷ್ಟಃ ಸೌಮಿತ್ರಿರಬ್ರವೀತ್ ॥
(ಶ್ಲೋಕ-8)
ಮೂಲಮ್
ಅದ್ಯ ಮತ್ಕಾರ್ಮುಕಾನ್ಮುಕ್ತಾಃ ಶರಾ ನಿರ್ಭಿದ್ಯ ರಾವಣಿಮ್ ।
ಗಮಿಷ್ಯಂತಿ ಹಿ ಪಾತಾಲಂ ಸ್ನಾತುಂ ಭೋಗವತೀಜಲೇ ॥
ಅನುವಾದ
ಈ ವಿಭೀಷಣನಿಗೆ ಆ ರಾಕ್ಷಸನು ಚಿರಪರಿಚಿತನು. ಅವನು ಅಡಗಿಕೊಳ್ಳುವ ಎಲ್ಲ ಗುಹೆಗಳನ್ನು ಬಲ್ಲವನಾಗಿದ್ದಾನೆ. ಅದರಿಂದ ಅವನನ್ನು ಹುಡುಕಲು ಇವನಿಂದ ತುಂಬಾ ಸಹಾಯವಾದೀತು.’’ ಶ್ರೀರಾಮನ ಮಾತನ್ನು ಕೇಳಿ ಮಹಾಪರಾಕ್ರಮಿ ಲಕ್ಷ್ಮಣನು ವಿಭೀಷಣನನ್ನು ಜೊತೆಯಾಗಿಸಿಕೊಂಡು, ಬೇರೊಂದು ಶ್ರೇಷ್ಠವಾದ ಧನುಸ್ಸನ್ನು ಕೈಗೆತ್ತಿಕೊಂಡು, ಸಂತೋಷದಿಂದ ಭಗವಾನ್ ಶ್ರಿರಾಮನ ಚರಣಗಳನ್ನು ಮುಟ್ಟಿ ಹೀಗೆಂದನು ‘‘ಸ್ವಾಮಿ! ಇಂದು ನನ್ನ ಬಿಲ್ಲಿನಿಂದ ಹೊರಟ ಬಾಣಗಳು ರಾವಣಪುತ್ರ ಇಂದ್ರಜಿತನ ಶರೀರವನ್ನು ಸೀಳಿ ಪಾತಾಳದಲ್ಲಿರುವ ಭೋಗವತಿ ನದಿಯ ನೀರಿನಲ್ಲಿ ಸ್ನಾನ ಮಾಡಲು ಹೋಗಲಿವೆ.’’ ॥6-8॥
(ಶ್ಲೋಕ-9)
ಮೂಲಮ್
ಏವಮುಕ್ತ್ವಾ ಸ ಸೌಮಿತ್ರಿಃ ಪರಿಕ್ರಮ್ಯ ಪ್ರಣಮ್ಯ ತಮ್ ।
ಇಂದ್ರಜಿನ್ನಿಧನಾಕಾಂಕ್ಷೀ ಯಯೌ ತ್ವರಿತವಿಕ್ರಮಃ ॥
ಅನುವಾದ
ಹೀಗೆಂದು ಶ್ರೀರಾಮಚಂದ್ರನ ಬಳಿ ಹೇಳಿ ಸುಮಿತ್ರಾನಂದನ ಲಕ್ಷ್ಮಣನು ಅವನಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಇಂದ್ರಜಿತನನ್ನು ಸಂಹಾರ ಮಾಡುವ ಇಚ್ಛೆಯಿಂದ ವೇಗವಾಗಿ ಹೊರಟನು. ॥9॥
(ಶ್ಲೋಕ-10)
ಮೂಲಮ್
ವಾನರೈರ್ಬಹುಸಾಹಸ್ರೈರ್ಹನೂಮಾನ್ ಪೃಷ್ಠತೋಽನ್ವಗಾತ್ ।
ವಿಭೀಷಣಶ್ಚ ಸಹಿತೋ ಮಂತ್ರಿಭಿಸ್ತ್ವರಿತಂ ಯಯೌ ॥
ಅನುವಾದ
ಅನೇಕ ಸಹಸ್ರ ಕಪಿಗಳೊಡನೆ ಹನುಮಂತನು ಹಿಂಬಾಲಿಸಿ ಹೊರಟನು, ಮಂತ್ರಿಗಳೊಡನೆ ವಿಭೀಷಣನೂ ಬೇಗನೆ ಹೊರಟನು. ॥10॥
(ಶ್ಲೋಕ-11)
ಮೂಲಮ್
ಜಾಂಬವತ್ಪ್ರಮುಖಾ ಋಕ್ಷಾಃ ಸೌಮಿತ್ರಿಂ ತ್ವರಯಾನ್ವಯುಃ ।
ಗತ್ವಾ ನಿಕುಂಭಿಲಾದೇಶಂ ಲಕ್ಷ್ಮಣೋ ವಾನರೈಃ ಸಹ ॥
(ಶ್ಲೋಕ-12)
ಮೂಲಮ್
ಅಪಶ್ಯದ್ಬಲಸಂಘಾತಂ ದೂರಾದ್ರಾಕ್ಷಸಸಂಕುಲಮ್ ।
ಧನುರಾಯಮ್ಯ ಸೌಮಿತ್ರಿರ್ಯತ್ತೋಽಭೂದ್ಭೂರಿವಿಕ್ರಮಃ ॥
ಅನುವಾದ
ಜಾಂಬವಂತನೇ ಆದಿ ಮುಖ್ಯ-ಮುಖ್ಯ ಕರಡಿಗಳೂ ಲಕ್ಷ್ಮಣನನ್ನು ಲಗುಬಗೆಯಿಂದ ಹಿಂಬಾಲಿಸಿದವು. ಹೀಗೆ ವಾನರರೊಡನೆ ಲಕ್ಷ್ಮಣನು ನಿಕುಂಭಿಳೆಯ ಪ್ರದೇಶವನ್ನು ಹೊಕ್ಕು, ದೂರದಿಂದಲೇ ರಾಕ್ಷಸರಿಂದ ತುಂಬಿಹೋಗಿದ್ದ ಭಾರೀ ಸಮೂಹವನ್ನು ಕಂಡನು. ಹೆಚ್ಚಿನ ಪರಾಕ್ರಮಿಯಾದ ಲಕ್ಷ್ಮಣನು ಧನುಸ್ಸನ್ನೆತ್ತಿ ಕೊಂಡು ಸನ್ನದ್ಧನಾದನು. ॥11-12॥
(ಶ್ಲೋಕ-13)
ಮೂಲಮ್
ಅಂಗದೇನ ಚ ವೀರೇಣ ಜಾಂಬವಾನ್ ರಾಕ್ಷಸಾಧಿಪಃ ।
ತದಾ ವಿಭೀಷಣಃ ಪ್ರಾಹ ಸೌಮಿತ್ರಿಂ ಪಶ್ಯ ರಾಕ್ಷಸಾನ್ ॥
(ಶ್ಲೋಕ-14)
ಮೂಲಮ್
ಯದೇತದ್ರಾಕ್ಷಸಾನೀಕಂ ಮೇಘಶ್ಯಾಮಂ ವಿಲೋಕ್ಯತೇ ।
ಅಸ್ಯಾನೀಕಸ್ಯ ಮಹತೋ ಭೇದನೇ ಯತ್ನವಾನ್ ಭವ ॥
ಅನುವಾದ
ಆಗ ಜಾಂಬವಂತನು ಅಂಗದನೊಡಗೂಡಿ ಯುದ್ಧಕ್ಕೆ ಸಿದ್ಧನಾದನು. ರಾಕ್ಷಸಾಧಿಪತಿಯಾದ ವಿಭೀಷಣನು ಲಕ್ಷ್ಮಣನನ್ನು ಕುರಿತು ‘‘ಅಯ್ಯಾ! ಈ ರಾಕ್ಷಸರನ್ನು ನೋಡು. ಇದೋ ಈ ನೀಲಮೇಘದಂತೆ ರಾಕ್ಷಸರ ಗುಂಪು ಕಾಣುತ್ತಿದೆಯಲ್ಲ! ಈ ಭಾರೀ ಪ್ರಬಲ ಗುಂಪನ್ನು ಚದುರಿಸುವುದರಲ್ಲಿ ಉದ್ಯುಕ್ತನಾಗು. ॥13-14॥
(ಶ್ಲೋಕ-15)
ಮೂಲಮ್
ರಾಕ್ಷಸೇಂದ್ರಸುತೋಪ್ಯಸ್ಮಿನ್ ಭಿನ್ನೇ ದೃಶ್ಯೋ ಭವಿಷ್ಯತಿ ।
ಅಭಿದ್ರವಾಶು ಯಾವದ್ವೈ ನೈತತ್ಕರ್ಮ ಸಮಾಪ್ಯತೇ ॥
ಅನುವಾದ
ಇದು ನಾಶವಾದ ಬಳಿಕ ರಾಕ್ಷಸೇಂದ್ರನಾದ ರಾವಣನ ಮಗನು ಕಂಡು ಬರುವನು. ರಾಕ್ಷಸರ ಈ ಆಭಿಚಾರಿಕ ಕರ್ಮವು ಪೂರೈಸುವ ಮೊದಲು ಕೂಡಲೇ ನೀನು ಆಕ್ರಮಣಮಾಡು. ॥15॥
(ಶ್ಲೋಕ-16)
ಮೂಲಮ್
ಜಹಿ ವೀರ ದುರಾತ್ಮಾನಂ ಹಿಂಸಾಪರಮಧಾರ್ಮಿಕಮ್ ।
ವಿಭೀಷಣವಚಃ ಶ್ರುತ್ವಾ ಲಕ್ಷ್ಮಣಃ ಶುಭಲಕ್ಷಣಃ ॥
(ಶ್ಲೋಕ-17)
ಮೂಲಮ್
ವವರ್ಷ ಶರವರ್ಷಾಣಿ ರಾಕ್ಷಸೇಂದ್ರಸುತಂ ಪ್ರತಿ ।
ಪಾಷಾಣೈಃ ಪರ್ವತಾಗ್ರೈಶ್ಚ ವೃಕ್ಷೈಶ್ಚ ಹರಿಯೂಥಪಾಃ ॥
(ಶ್ಲೋಕ-18)
ಮೂಲಮ್
ನಿರ್ಜಘ್ನುಃ ಸರ್ವತೋ ದೈತ್ಯಾಂಸ್ತೇಽಪಿ ವಾನರಯೂಥಪಾನ್ ।
ಪರಶ್ವಧೈಃ ಶಿತೈರ್ಬಾಣೈರಸಿಭಿರ್ಯಷ್ಟಿತೋಮರೈಃ ॥
(ಶ್ಲೋಕ-19)
ಮೂಲಮ್
ನಿರ್ಜಘ್ನುರ್ವಾನರಾನೀಕಂ ತದಾ ಶಬ್ದೋ ಮಹಾನಭೂತ್ ।
ಸ ಸಂಪ್ರಹಾರಸ್ತುಮುಲಃ ಸಂಜಜ್ಞೇ ಹರಿರಕ್ಷಸಾಮ್ ॥
ಅನುವಾದ
ಎಲೈ ವೀರನೆ! ಈ ಹಿಂಸಾ ಪರಾಯಣ ದುರಾತ್ಮನಾದ ಪಾಪಿಯನ್ನು ನೀನು ಬೇಗನೆ ಕೊಂದು ಬಿಡು.’’ ವಿಭೀಷಣನ ಮಾತನ್ನು ಕೇಳಿ ಶುಭಲಕ್ಷಣನಾದ ಲಕ್ಷ್ಮಣನು ರಾಕ್ಷಸೇಂದ್ರನ ಪುತ್ರನಾದ ಇಂದ್ರಜಿತನ ಕಡೆಗೆ ಬಾಣಗಳ ಮಳೆಗರೆದನು. ಕಪಿನಾಯಕರುಗಳು ಕಲ್ಲುಗಳೂ, ಪರ್ವತ ಶಿಖರಗಳೂ, ಮರಗಳನ್ನೆತ್ತಿಕೊಂಡು ಎಲ್ಲೆಂದರಲ್ಲಿ ರಾಕ್ಷಸರನ್ನು ಸದೆಬಡಿದರು. ಆ ರಾಕ್ಷಸರೂ ಕೂಡ ವಾನರ ಸೇನಾಪತಿಗಳ ಮೇಲೆ, ವಾನರ ಸೇನೆಯ ಮೇಲೆ ಹರಿತವಾದ ಬಾಣಗಳು, ಪರಶು, ಖಡ್ಗ, ಯಷ್ಟಿ, ತೋಮರ ಮುಂತಾದ ಆಯುಧ ವಿಶೇಷಗಳಿಂದ ಕಪಿಗಳ ಸಮೂಹವನ್ನು ಕೊಲ್ಲುತ್ತಿದ್ದರು. ಆಗ ಅಲ್ಲಿ ದೊಡ್ಡ ಗದ್ದಲವಾಯಿತು. ರಾಕ್ಷಸರಿಗೂ ವಾನರರಿಗೂ ತುಮುಲವಾದ ಯುದ್ಧವು ಹತ್ತಿಕೊಂಡಿತು. ॥16-19॥
(ಶ್ಲೋಕ-20)
ಮೂಲಮ್
ಇಂದ್ರಜಿತ್ ಸ್ವಬಲಂ ಸರ್ವಮರ್ದ್ಯಮಾನಂ ವಿಲೋಕ್ಯ ಸಃ ।
ನಿಕುಂಭಿಲಾಂ ಚ ಹೋಮಂ ಚ ತ್ಯಕ್ತ್ವಾ ಶೀಘ್ರಂ ವಿನಿರ್ಗತಃ ॥
ಅನುವಾದ
ತನ್ನ ಸೈನ್ಯವೆಲ್ಲವೂ ನಾಶವಾಗುತ್ತಿರುವುದನ್ನು ಕಂಡ ಇಂದ್ರಜಿತನು ನಿಕುಂಭಿಳೆಯನ್ನು ಹಾಗೂ ಹೋಮವನ್ನು ಬಿಟ್ಟು ಬೇಗನೇ ಹೊರಗೆ ಬಂದನು. ॥20॥
(ಶ್ಲೋಕ-21)
ಮೂಲಮ್
ರಥಮಾರುಹ್ಯ ಸಧನುಃ ಕ್ರೊಧೇನ ಮಹತಾಗಮತ್ ।
ಸಮಾಹ್ವಯನ್ ಸ ಸೌಮಿತ್ರಿಂ ಯುದ್ಧಾಯ ರಣಮೂರ್ಧನಿ ॥
(ಶ್ಲೋಕ-22)
ಮೂಲಮ್
ಸೌಮಿತ್ರೇ ಮೇಘನಾದೋಹಂ ಮಯಾ ಜೀವನ್ನ ಮೋಕ್ಷಸೇ ।
ತತ್ರ ದೃಷ್ಟ್ವಾ ಪಿತೃವ್ಯಂ ಸ ಪ್ರಾಹ ನಿಷ್ಠುರಭಾಷಣಮ್ ॥
(ಶ್ಲೋಕ-23)
ಮೂಲಮ್
ಇಹೈವ ಜಾತಃ ಸಂವೃದ್ಧಃ ಸಾಕ್ಷಾದ್ ಭ್ರಾತಾ ಪಿತುರ್ಮಮ ।
ಯಸ್ತ್ವಂ ಸ್ವಜನಮುತ್ಸೃಜ್ಯ ಪರಭೃತ್ಯತ್ವಮಾಗತಃ ॥
ಅನುವಾದ
ಕೂಡಲೇ ರಥವನ್ನಡರಿ ಅತ್ಯಂತ ಸಿಟ್ಟುಗೊಂಡು ಕೈಯಲ್ಲಿ ಧನುಸ್ಸನ್ನು ಧರಿಸಿ ರಣರಂಗದಲ್ಲಿ ಮುಂದೆ ಬಂದು ಲಕ್ಷ್ಮಣನನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಹೇಳಿದನು ‘‘ಎಲವೋ ಲಕ್ಷ್ಮಣಾ! ನಾನು ಮೇಘನಾದನಾಗಿದ್ದೇನೆ. ಈಗ ನೀನು ನನ್ನಿಂದ ಜೀವಸಹಿತ ತಪ್ಪಿಸಿಕೊಂಡು ಹೋಗಲಾರೆ.’’ ಮತ್ತೆ ಅಲ್ಲಿ ತನ್ನ ಚಿಕ್ಕಪ್ಪನನ್ನು ಕಂಡು ಅವನು ಕಠೋರ ವಾಕ್ಯಗಳಿಂದ ಹೇಳತೊಡಗಿದನು ‘‘ನೀನು ಈ ಲಂಕೆಯಲ್ಲೇ ಹುಟ್ಟಿ ಇಲ್ಲಿಯೇ ಬೆಳೆದು, ನನ್ನ ತಂದೆಯ ಒಡಹುಟ್ಟಿದ ತಮ್ಮನಾಗಿದ್ದು, ತನ್ನ ಸ್ವಜನರನ್ನು ಕೈ ಬಿಟ್ಟು ಶತ್ರುಗಳ ದಾಸ್ಯವನ್ನು ಸ್ವೀಕರಿಸಿರುವೆಯಲ್ಲ! ॥21-23॥
(ಶ್ಲೋಕ-24)
ಮೂಲಮ್
ಕಥಂ ದ್ರುಹ್ಯಸಿ ಪುತ್ರಾಯ ಪಾಪೀಯಾನಸಿ ದುರ್ಮತಿಃ ।
ಇತ್ಯುಕ್ತ್ವಾ ಲಕ್ಷ್ಮಣಂ ದೃಷ್ಟ್ವಾ ಹನೂಮತ್ಪೃಷ್ಠತಃ ಸ್ಥಿತಮ್ ॥
ಅನುವಾದ
ನಾನು ನಿನ್ನ ಮಗನಂತೆ ಇದ್ದೇನೆ. ನೀನು ನನ್ನೊಡನೆ ಹೇಗೆ ದ್ರೋಹಮಾಡುತ್ತಿರುವೆ ತಿಳಿಯದು. ಅವಶ್ಯವಾಗಿ ನೀನು ದುರ್ಬುದ್ಧಿಯುಳ್ಳ ಮಹಾಪಾಪಿಯಾಗಿರುವೆ.’’ ಹೀಗೆ ಹೇಳುತ್ತಾ ಅವನು ಹನುಮಂತನ ಬೆನ್ನ ಮೇಲೆ ಕುಳಿತಿರುವ ಲಕ್ಷ್ಮಣನ ಕಡೆಗೆ ನೋಡಿದನು. ॥24॥
(ಶ್ಲೋಕ-25)
ಮೂಲಮ್
ಉದ್ಯದಾಯುಧನಿಸ್ತ್ರಿಂಶೇ ರಥೇ ಮಹತಿ ಸಂಸ್ಥಿತಃ ।
ಮಹಾಪ್ರಮಾಣಮುದ್ಯಮ್ಯ ಘೋರಂ ವಿಸ್ಫಾರಯನ್ಧನುಃ ॥
ಅನುವಾದ
ಅನೇಕ ಪ್ರಕಾರದ ಆಯುಧಗಳಿಂದ ಸನ್ನದ್ಧವಾದ ಭಾರೀ ರಥವನ್ನೇರಿ, ಆ ದೈತ್ಯನು ದೊಡ್ಡ ಪ್ರಮಾಣದ ಭಯಂಕರವಾದ ಬಿಲ್ಲನ್ನು ಟಂಕಾರಮಾಡಿದನು. ॥25॥
(ಶ್ಲೋಕ-26)
ಮೂಲಮ್
ಅದ್ಯ ವೋ ಮಾಮಕಾ ಬಾಣಾಃ ಪ್ರಾಣಾನ್ಪಾಸ್ಯಂತಿ ವಾನರಾಃ ।
ತತಃ ಶರಂ ದಾಶರಥಿಃ ಸಂಧಾಯಾಮಿತ್ರಕರ್ಷಣಃ ॥
(ಶ್ಲೋಕ-27)
ಮೂಲಮ್
ಸಸರ್ಜ ರಾಕ್ಷಸೇಂದ್ರಾಯ ಕ್ರುದ್ಧಃ ಸರ್ಪ ಇವ ಶ್ವಸನ್ ।
ಇಂದ್ರಜಿದ್ರಕ್ತನಯನೋ ಲಕ್ಷ್ಮಣಂ ಸಮುದೈಕ್ಷತ ॥
ಅನುವಾದ
ಮತ್ತೆ ಗುಡುಗಿದನು ‘‘ಎಲೈ ಕಪಿಗಳಿರಾ! ಈಗ ನನ್ನ ಬಾಣಗಳು ನಿಮ್ಮ ಪ್ರಾಣಗಳನ್ನು ಕುಡಿದು ಬಿಡುವವು.’’ ಆಗ ಕ್ರೋಧಗೊಂಡು ಹಾವಿನಂತೆ ಬುಸುಗುಟ್ಟುತ್ತಾ, ಶತ್ರು ನಾಶಕನಾದ ಲಕ್ಷ್ಮಣನು ಬಾಣವೊಂದನ್ನು ಹೂಡಿ ರಾಕ್ಷಸೇಂದ್ರನಾದ ಇಂದ್ರಜಿತನ ಕಡೆಗೆ ಎಸೆದನು. ಇತ್ತ ಇಂದ್ರಜಿತನೂ ಕೂಡ ಸಿಟ್ಟಿನಿಂದ ಕೆಂಪಾದ ಕಣ್ಣುಗಳಿಂದ ಲಕ್ಷ್ಮಣನನ್ನು ನೋಡಿದನು. ॥26-27॥
(ಶ್ಲೋಕ-28)
ಮೂಲಮ್
ಶಕ್ರಾಶನಿಸಮಸ್ಪರ್ಶೈರ್ಲಕ್ಷ್ಮಣೇನಾಹತಃ ಶರೈಃ ।
ಮುಹೂರ್ತಮಭವನ್ಮೂಢಃ ಪುನಃ ಪ್ರತ್ಯಾಹೃತೇಂದ್ರಿಯಃ ॥
(ಶ್ಲೋಕ-29)
ಮೂಲಮ್
ದದರ್ಶಾವಸ್ಥಿತಂ ವೀರಂ ವೀರೋ ದಶರಥಾತ್ಮಜಮ್ ।
ಸೋಽಭಿಚಕ್ರಾಮ ಸೌಮಿತ್ರಿಂ ಕ್ರೋಧಸಂರಕ್ತಲೋಚನಃ ॥
ಅನುವಾದ
ಲಕ್ಷ್ಮಣನು ಬಿಟ್ಟಿರುವ ಇಂದ್ರನ ವಜ್ರಾಯುಧದಂತೆ ಮಹಾ ಕಠೋರ ಬಾಣದ ಹೊಡೆತಕ್ಕೆ ಇಂದ್ರಜಿತನು ಒಂದು ಮುಹೂರ್ತಕಾಲದವರೆಗೆ ನಿಃಶ್ಚೇಷ್ಟಿತನಾದನು. ಮತ್ತೆ ಎಚ್ಚರಗೊಂಡು ಎದುರಿಗೆ ನಿಂತಿದ್ದ ದಶರಥನಂದನ ವೀರವರ ಲಕ್ಷ್ಮಣನನ್ನು ನೋಡಿದನು. ಅವನನ್ನು ನೋಡಿ ಆ ರಾಕ್ಷಸನು ಕೋಪದಿಂದ ಕೆಂಪಾದ ಕಣ್ಣುಗಳಿಂದ ಅವನೆಡೆಗೆ ಧಾವಿಸಿದನು. ॥28-29॥
(ಶ್ಲೋಕ-30)
ಮೂಲಮ್
ಶರಾಂಧನುಷಿ ಸಂಧಾಯ ಲಕ್ಷ್ಮಣಂ ಚೇದಮಬ್ರವೀತ್ ।
ಯದಿ ತೇ ಪ್ರಥಮೇ ಯುದ್ಧೇ ನ ದೃಷ್ಟೋ ಮೇ ಪರಾಕ್ರಮಃ ॥
(ಶ್ಲೋಕ-31)
ಮೂಲಮ್
ಅದ್ಯ ತ್ವಾಂ ದರ್ಶಯಿಷ್ಯಾಮಿ ತಿಷ್ಠೇದಾನೀಂ ವ್ಯವಸ್ಥಿತಃ ।
ಇತ್ಯುಕ್ತ್ವಾ ಸಪ್ತಭಿರ್ಬಾಣೈರಭಿವಿವ್ಯಾಧ ಲಕ್ಷ್ಮಣಮ್ ॥
(ಶ್ಲೋಕ-32)
ಮೂಲಮ್
ದಶಭಿಶ್ಚ ಹನೂಮಂತಂ ತೀಕ್ಷ್ಣಧಾರೈಃ ಶರೋತ್ತಮೈಃ ।
ತತಃ ಶರಶತೇನೈವ ಸಂಪ್ರಯುಕ್ತೇನ ವೀರ್ಯವಾನ್ ॥
(ಶ್ಲೋಕ-33)
ಮೂಲಮ್
ಕ್ರೋಧದ್ವಿಗುಣಸಂರಬ್ಧೋ ನಿರ್ಭಿಭೇದ ವಿಭೀಷಣಮ್ ।
ಲಕ್ಷ್ಮಣೋಽಪಿ ತಥಾ ಶತ್ರುಂ ಶರವರ್ಷೈರವಾಕಿರತ್ ॥
ಅನುವಾದ
ತನ್ನ ಧನುಸ್ಸಿಗೆ ಬಾಣವನ್ನು ಹೂಡಿ ಲಕ್ಷ್ಮಣನನ್ನು ಕುರಿತು ‘‘ಒಂದು ವೇಳೆ ನಿನಗೆ ಮೊದಲನೆಯ ಯುದ್ಧದಲ್ಲಿ ನನ್ನ ಪರಾಕ್ರಮವು ಕಂಡು ಬರಲಿಲ್ಲವಾದರೆ ಈಗ ನಿನಗೆ ತೋರಿಸುವೆನು. ನೀನು ಸರಿಯಾಗಿ ನಿಲ್ಲು’’ ಹೀಗೆಂದು ಹೇಳಿ ಏಳು ಬಾಣಗಳಿಂದ ಲಕ್ಷ್ಮಣನನ್ನು ಹೊಡೆದನು. ಚೂಪಾದ ಅಲಗುಳ್ಳ ಉತ್ತಮವಾದ ಹತ್ತು ಬಾಣಗಳಿಂದ ಹನುಮಂತನನ್ನು ಹೊಡೆದನು. ಅನಂತರ ಪರಾಕ್ರಮಶಾಲಿಯಾದ ಅವನು ಕೋಪದಿಂದ ಇಮ್ಮಡಿಯಾಗಿ ಕೆರಳಿದವನಾಗಿ ಒಂದು ನೂರು ಬಾಣಗಳಿಂದ ವಿಭೀಷಣನನ್ನು ಹೊಡೆದನು. ಇತ್ತ ಲಕ್ಷ್ಮಣನೂ ಕೂಡ ಹಾಗೆಯೇ ಶತ್ರುವನ್ನು ಬಾಣದ ಮಳೆಯಿಂದ ಆವರಿಸಿ ಬಿಟ್ಟನು. ॥30-33॥
(ಶ್ಲೋಕ-34)
ಮೂಲಮ್
ತಸ್ಯ ಬಾಣೈಃ ಸುಸಂವಿದ್ಧಂ ಕವಚಂ ಕಾಂಚನಪ್ರಭಮ್ ।
ವ್ಯಶೀರ್ಯತ ರಥೋಪಸ್ಥೇ ತಿಲಶಃ ಪತಿತಂ ಭುವಿ ॥
ಅನುವಾದ
ಅವನ ಬಾಣಗಳಿಂದ ಮೇಘನಾದನ ಚಿನ್ನದಂತೆ ಹೊಳೆಯುತ್ತಿದ್ದ ಹಾಗೂ ಚೆನ್ನಾಗಿ ತೊಟ್ಟಿದ್ದ ಕವಚವು ಪುಡಿ-ಪುಡಿಯಾಗಿ ರಥದ ಒಳಗೆ ಬಿದ್ದು, ಬಳಿಕ ಅಲ್ಲಿಂದ ಭೂಮಿಗೆ ಬಿದ್ದು ಹೋಯಿತು. ॥34॥
(ಶ್ಲೋಕ-35)
ಮೂಲಮ್
ತತಃ ಶರಸಹಸ್ರೇಣ ಸಂಕ್ರುದ್ಧೋ ರಾವಣಾತ್ಮಜಃ ।
ಬಿಭೇದ ಸಮರೇ ವೀರಂ ಲಕ್ಷ್ಮಣಂ ಭೀಮವಿಕ್ರಮಮ್ ॥
ಅನುವಾದ
ಆಗ ರಾವಣಕುಮಾರ ಇಂದ್ರಜಿತನು ಸಂಗ್ರಾಮದಲ್ಲಿ ಅತ್ಯಂತ ಕ್ರೋಧಿತನಾಗಿ ಮಹಾಪರಾಕ್ರಮಿ ಲಕ್ಷ್ಮಣನನ್ನು ಸಾವಿರಾರು ಬಾಣಗಳಿಂದ ಹೊಡೆದನು. ॥35॥
(ಶ್ಲೋಕ-36)
ಮೂಲಮ್
ವ್ಯಶೀರ್ಯತಾಪತದ್ದಿವ್ಯಂ ಕವಚಂ ಲಕ್ಷ್ಮಣಸ್ಯ ಚ ।
ಕೃತಪ್ರತಿಕೃತಾನೋನ್ಯಂ ಬಭೂವತುರಭಿದ್ರುತೌ ॥
ಅನುವಾದ
ಇದರಿಂದ ಲಕ್ಷ್ಮಣನ ದಿವ್ಯ ಕವಚವು ಹರಿದು ಬಿದ್ದುಹೋಯಿತು. ಈ ಪ್ರಕಾರ ಮುನ್ನುಗಿದ್ದ ಇಬ್ಬರೂ ಒಬ್ಬರಿಗೊಬ್ಬರು ಪ್ರತೀಕಾರ ಮಾಡುತ್ತಾ ಪರಸ್ಪರ ಯುದ್ಧ ಮಾಡತೊಡಗಿದರು. ॥36॥
(ಶ್ಲೋಕ-37)
ಮೂಲಮ್
ಅಭೀಕ್ಷ್ಣಂ ನಿಃಶ್ವಸಂತೌ ತೌ ಯುಧ್ಯೇತಾಂ ತುಮುಲಂ ಪುನಃ ।
ಶರಸಂವೃತಸರ್ವಾಂಗೌ ಸರ್ವತೋ ರುಧಿರೋಕ್ಷಿತೌ ॥
(ಶ್ಲೋಕ-38)
ಮೂಲಮ್
ಸುದೀರ್ಘಕಾಲಂ ತೌ ವೀರಾವನ್ಯೋನ್ಯಂ ನಿಶಿತೈಃ ಶರೈಃ ।
ಅಯುಧ್ಯೇತಾಂ ಮಹಾಸತ್ತ್ವೌ ಜಯಾಜಯವಿವರ್ಜಿತೌ ॥
ಅನುವಾದ
ಅವರಿಬ್ಬರೂ ನಿಟ್ಟುಸಿರುಬಿಡುತ್ತಾ ಘನವಾದ ಯುದ್ಧ ಮಾಡಿದರು. ಮೈಯಲೆಲ್ಲ ಬಾಣಗಳು ಚುಚ್ಚಿಕೊಂಡವರಾಗಿ ಎಲ್ಲೆಲ್ಲಿಯೂ ರಕ್ತದಿಂದ ತೊಯ್ದು ಹೋದವರಾಗಿ, ಬಹು ದೀರ್ಘಕಾಲದ ವರೆಗೆ ಬಲಶಾಲಿಗಳಾದ ಆ ವೀರರು ಪರಸ್ಪರ ಹರಿತವಾದ ಬಾಣಗಳಿಂದ ಕಾದಾಡುತ್ತಾ, ಜಯ ಪರಾಜಯ ಗಳಿಗೆ ಹೋರಾಡುತ್ತಿದ್ದರು. ॥37-38॥
(ಶ್ಲೋಕ-39)
ಮೂಲಮ್
ಏತಸ್ಮಿನ್ಮಂತರೇ ವೀರೋ ಲಕ್ಷ್ಮಣಃ ಪಂಚಭಿಃ ಶರೈಃ ।
ರಾವಣೇಃ ಸಾರಥಿಂ ಸಾಶ್ವಂ ರಥಂ ಚ ಸಮಚೂರ್ಣಯತ್ ॥
ಅನುವಾದ
ಈ ನಡುವೆ ವೀರನಾದ ಲಕ್ಷ್ಮಣನು ಐದು ಬಾಣಗಳಿಂದ ರಾವಣಪುತ್ರನ ರಥ, ಕುದುರೆ, ಸಾರಥಿ ಎಲ್ಲವನ್ನು ಪುಡಿ ಮಾಡಿದನು. ॥39॥
(ಶ್ಲೋಕ-40)
ಮೂಲಮ್
ಚಿಚ್ಛೇದ ಕಾರ್ಮುಕಂ ತಸ್ಯ ದರ್ಶಯನ್ಹಸ್ತಲಾಘವಮ್ ।
ಸೋಽನ್ಯತ್ತು ಕಾರ್ಮುಕಂ ಭದ್ರಂ ಸಜ್ಯಂ ಚಕ್ರೇ ತ್ವರಾನ್ವಿತಃ ॥
ಅನುವಾದ
ತನ್ನ ಕೈಚಳಕವನ್ನು ಪ್ರದರ್ಶಿಸುತ್ತಾ ಇಂದ್ರಜಿತನ ಧನುಸ್ಸನ್ನು ಕತ್ತರಿಸಿಬಿಟ್ಟನು. ಆಗ ಅವನು ಬೇಗನೇ ಬೇರೊಂದು ಗಟ್ಟಿಯಾದ ಬಿಲ್ಲನ್ನು ಸಿದ್ಧಗೊಳಿಸಿ ಕೊಂಡನು. ॥40॥
(ಶ್ಲೋಕ-41)
ಮೂಲಮ್
ತಚ್ಚಾಪಮಪಿ ಚಿಚ್ಛೇದ ಲಕ್ಷ್ಮಣಸ್ತ್ರಿಭಿರಾಶುಗೈಃ ।
ತಮೇವ ಛಿನ್ನಧನ್ವಾನಂ ವಿವ್ಯಾಧಾನೇಕಸಾಯಕೈಃ ॥
(ಶ್ಲೋಕ-42)
ಮೂಲಮ್
ಪುನರನ್ಯತ್ಸ ಮಾದಾಯ ಕಾರ್ಮುಕಂ ಭೀಮವಿಕ್ರಮಃ ।
ಇಂದ್ರಜಿಲ್ಲಕ್ಷ್ಮಣಂ ಬಾಣೈಃ ಶಿತೈರಾದಿತ್ಯಸನ್ನಿಭೈಃ ॥
(ಶ್ಲೋಕ-43)
ಮೂಲಮ್
ಬಿಭೇದ ವಾನರಾನ್ಸರ್ವಾನ್ಬಾಣೈರಾಪೂರಯಂದಿಶಃ ।
ತತ ಐಂದ್ರಂ ಸಮಾದಾಯ ಲಕ್ಷ್ಮಣೋ ರಾವಣಿಂ ಪ್ರತಿ ॥
(ಶ್ಲೋಕ-44)
ಮೂಲಮ್
ಸಂಧಾಯಾಕೃಷ್ಯ ಕರ್ಣಾಂತಂ ಕಾರ್ಮುಕಂ ದೃಢನಿಷ್ಠುರಮ್ ।
ಉವಾಚ ಲಕ್ಷಣೋ ವೀರಃ ಸ್ಮರನ್ ರಾಮಪದಾಂಬುಜಮ್ ॥
ಅನುವಾದ
ಲಕ್ಷ್ಮಣನು ಆ ಬಿಲ್ಲನ್ನೂ ಕೂಡ ವೇಗವಾದ ಮೂರು ಬಾಣಗಳಿಂದ ತುಂಡರಿಸಿ, ಧನುಷ್ಯಹೀನ ನಾದ ಆ ರಾಕ್ಷಸನನ್ನೂ ಅನೇಕ ಬಾಣಗಳಿಂದ ಹೊಡೆದನು. ಮತ್ತೆ ಭಯಂಕರವಾದ ಪರಾಕ್ರಮವುಳ್ಳ ಇಂದ್ರಜಿತನು ಬೇರೊಂದು ಬಿಲ್ಲನ್ನು ಹಿಡಿದುಕೊಂಡು ಸೂರ್ಯನಂತೆ ಹೊಳೆಯುವ ಹರಿತವಾದ ಬಾಣಗಳಿಂದ ಲಕ್ಷ್ಮಣನನ್ನೂ, ಎಲ್ಲ ಕಪಿಗಳನ್ನೂ ಹೊಡೆಯುತ್ತಾ, ಎಲ ದಿಕ್ಕುಗಳನ್ನು ಬಾಣಗಳಿಂದ ತುಂಬಿದನು. ಆಗ ವೀರವರನಾದ ಲಕ್ಷ್ಮಣನು ಇಂದ್ರಜಿತನನ್ನು ಕುರಿತು ಐಂದ್ರಾಸವನ್ನು ತೆಗೆದುಕೊಂಡು ಗಟ್ಟಿಮುಟ್ಟಾದ ಬಿಲ್ಲಿಗೆ ಜೋಡಿಸಿ, ಗುರಿಯಿಟ್ಟು ಆಕರ್ಣಾಂತವಾಗಿ ಸೆಳೆದು, ಶ್ರೀರಾಮನ ಪಾದಾರವಿಂದಗಳನ್ನು ನೆನೆಯುತ್ತಾ ಹೀಗೆಂದನು ॥41-44॥
(ಶ್ಲೋಕ-45)
ಮೂಲಮ್
ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ ।
ತ್ರಿಲೋಕ್ಯಾಮಪ್ರತಿದ್ವಂದ್ವಸ್ತದೇನಂ ಜಹಿ ರಾವಣಿಮ್ ॥
ಅನುವಾದ
‘‘ದಶರಥನಂದನ ಭಗವಾನ್ ಶ್ರೀರಾಮನು ಧರ್ಮಾತ್ಮನೂ, ಸತ್ಯಸಂಧನೂ, ಮೂರು ಲೋಕಗಳಲ್ಲಿ ಎದು ರಾಳಿಯಿಲ್ಲದವನೂ ಆಗಿದ್ದರೆ ಎಲೈ ಬಾಣವೆ! ನೀನು ಈ ರಾವಣಪುತ್ರನನ್ನು ಕೊಂದುಬಿಡು.’’ ॥45॥
(ಶ್ಲೋಕ-46)
ಮೂಲಮ್
ಇತ್ಯುಕ್ತ್ವಾ ಬಾಣಮಾಕರ್ಣಾದ್ವಿಕೃಷ್ಯ ತಮಜಿಹ್ಮಗಮ್ ।
ಲಕ್ಷ್ಮಣಃ ಸಮರೇ ವೀರಃ ಸಸರ್ಜೇಂದ್ರಜಿತಂ ಪ್ರತಿ ॥
(ಶ್ಲೋಕ-47)
ಮೂಲಮ್
ಸ ಶರಃ ಸಶಿರಸ್ತ್ರಾಣಂ ಶ್ರೀಮಜ್ಜ್ವಲಿತಕುಂಡಲಮ್ ।
ಪ್ರಮಥ್ಯೇಂದ್ರಜಿತಃ ಕಾಯಾತ್ಪಾತಯಾಮಾಸ ಭೂತಲೇ ॥
ಅನುವಾದ
ಮಹಾವೀರನಾದ ಲಕ್ಷ್ಮಣನು ರಣರಂಗದಲ್ಲಿ ಹೀಗೆ ಹೇಳಿ ಸಾರ್ಥಕವಾದ, ಅಮೋಘವಾದ ಆ ಬಾಣವನ್ನು ಕಿವಿವರೆಗೆ ಸೆಳೆದು ಇಂದ್ರಜಿತ ನೆಡೆಗೆ ಪ್ರಯೋಗಿಸಿದನು. ಆ ಬಾಣವು ಹೊಳೆಯುತ್ತಿರುವ ಕರ್ಣಾ ಭರಣಗಳುಳ್ಳ ಹಾಗೂ ಶಿರದ ಮೇಲೆ ರಕ್ಷಾಕವಚವುಳ್ಳ ಇಂದ್ರಜಿತನ ಶಿರಸ್ಸನ್ನು ಶರೀರದಿಂದ ಬೇರ್ಪಡಿಸಿ ನೆಲದ ಮೇಲೆ ಕೆಡವಿಬಿಟ್ಟಿತು. ॥46-47॥
(ಶ್ಲೋಕ-48)
ಮೂಲಮ್
ತತಃ ಪ್ರಮುದಿತಾ ದೇವಾಃ ಕೀರ್ತಯಂತೋ ರಘೂತ್ತಮಮ್ ।
ವವರ್ಷುಃ ಪುಷ್ಪವರ್ಷಾಣಿ ಸ್ತುವಂತಶ್ಚ ಮುಹುರ್ಮುಹುಃ ॥
(ಶ್ಲೋಕ-49)
ಮೂಲಮ್
ಜಹರ್ಷ ಶಕ್ರೋ ಭಗವಾನ್ಸಹ ದೇವೈರ್ಮಹರ್ಷಿಭಿಃ ।
ಆಕಾಶೇಪಿ ಚ ದೇವಾನಾಂ ಶುಶ್ರುವೇ ದುಂದುಭಿಸ್ವನಃ ॥
ಅನುವಾದ
ಈ ಪ್ರಕಾರ ಮೇಘನಾದನು ಸತ್ತುಹೋದಾಗ ಸಂತುಷ್ಟರಾದ ದೇವತೆಗಳು ಶ್ರೀರಾಮಾನುಜನನ್ನು ಸ್ತುತಿಸುತ್ತಾ, ಮತ್ತೆ-ಮತ್ತೆ ಹೊಗಳುತ್ತಾ ಹೂವಿನ ಮಳೆಯನ್ನು ಸುರಿಸಿದರು. ಪೂಜ್ಯನಾದ ದೇವೇಂದ್ರನು ಋಷಿಗಳು ಹಾಗೂ ದೇವತೆಗಳೊಡಗೂಡಿ ಸಂತೋಷಗೊಂಡನು. ಆಗ ಆಕಾಶದಲ್ಲಿ ದೇವತೆಗಳು ಬಾರಿಸಿದ ನಗಾರಿಯ ಶಬ್ದವು ಎಲ್ಲೆಡೆ ಕೇಳಿಸ ತೊಡಗಿತು. ॥48-49॥
(ಶ್ಲೋಕ-50)
ಮೂಲಮ್
ವಿಮಲಂ ಗಗನಂ ಚಾಸೀತ್ಸ್ಥಿರಾಭೂದ್ವಿಶ್ವಧಾರಿಣೀ ।
ನಿಹತಂ ರಾವಣಿಂ ದೃಷ್ಟ್ವಾ ಜಯಜಲ್ಪಸಮನ್ವಿತಃ ॥
ಅನುವಾದ
ಲಕ್ಷ್ಮಣನ ಈ ದುಷ್ಕರವಾದ ಕಾರ್ಯವನ್ನು ನೋಡಿ ಎಲ್ಲೆಡೆ ಜಯ-ಜಯಕಾರ ಧ್ವನಿಯು ತುಂಬಿಹೋಯಿತು. ಆಕಾಶವು ನಿರ್ಮಲವಾಯಿತು. ಜಗದ್ಧಾತ್ರಿ ಧರಣಿ ದೇವಿಯು ಸ್ಥಿರವಾದಳು. ॥50॥
(ಶ್ಲೋಕ-51)
ಮೂಲಮ್
ಗತಶ್ರಮಃ ಸ ಸೌಮಿತ್ರಿಃ ಶಂಖಮಾಪೂರಯದ್ರಣೇ ।
ಸಿಂಹನಾದಂ ತತಃ ಕೃತ್ವಾ ಜ್ಯಾಶಬ್ದಮಕರೋದ್ವಿಭುಃ ॥
ಅನುವಾದ
ಲಕ್ಷ್ಮಣನು ಶ್ರಮರಹಿತನಾದಾಗ ಅವನು ಶಂಖವನ್ನೂದಿದನು. ಆ ಧ್ವನಿಯು ರಣರಂಗದಲ್ಲೆಲ್ಲ ತುಂಬಿ ಹೋಯಿತು. ಅನಂತರ ಸಿಂಹನಾದ ಮಾಡುತ್ತಾ ಧನುಷ್ಟಂಕಾರ ಮಾಡಿದನು. ॥51॥
(ಶ್ಲೋಕ-52)
ಮೂಲಮ್
ತೇನ ನಾದೇನ ಸಂಹೃಷ್ಟಾ ವಾನರಾಶ್ಚ ಗತಶ್ರಮಾಃ ।
ವಾನರೇಂದ್ರೈಶ್ಚ ಸಹಿತಃ ಸ್ತುವದ್ಭಿರ್ಹೃಷ್ಟಮಾನಸೈಃ ॥
(ಶ್ಲೋಕ-53)
ಮೂಲಮ್
ಲಕ್ಷ್ಮಣಃ ಪರಿತುಷ್ಟಾತ್ಮಾ ದದರ್ಶಾಭ್ಯೇತ್ಯ ರಾಘವಮ್ ।
ಹನೂಮದ್ರಾಕ್ಷಸಾಭ್ಯಾಂ ಚ ಸಹಿತೋ ವಿನಯಾನ್ವಿತಃ ॥
(ಶ್ಲೋಕ-54)
ಮೂಲಮ್
ವವಂದೇ ಭ್ರಾತರಂ ರಾಮಂ ಜ್ಯೇಷ್ಠಂ ನಾರಾಯಣಂ ವಿಭುಮ್ ।
ತ್ವತ್ಪ್ರಸಾದಾದ್ರಘುಶ್ರೇಷ್ಠ ಹತೋ ರಾವಣಿರಾಹವೇ ॥
ಅನುವಾದ
ಆ ಸಿಂಹನಾದದಿಂದ ಎಲ್ಲ ವಾನರ ಸಮೂಹವು ಹೆಚ್ಚಿನ ಆನಂದಿತರಾಗಿ ಎಲ್ಲ ಆಯಾಸವನ್ನು ಕಳೆದುಕೊಂಡರು. ಮತ್ತೆ ಪ್ರಸನ್ನಚಿತ್ತರಾದ ವಾನರರಿಂದ ಹೊಗಳಿಸಿಕೊಂಡ ಲಕ್ಷ್ಮಣನು ಆತ್ಮಸಂತೋಷ ಯುಕ್ತನಾಗಿ, ವಿನಯದಿಂದ ಕೂಡಿ, ವಿಭೀಷಣ, ಹನುಮಂತ ಇವರೊಡನೆ ಹೊರಟು ಬಂದು ಶ್ರೀರಾಮನನ್ನು ಕಂಡನು. ಹಿರಿಯನೂ, ವ್ಯಾಪಕನೂ, ಸಾಕ್ಷಾತ್ ನಾರಾಯಣ ಸ್ವರೂಪನಾದ ಅಣ್ಣನಾದ ಭಗವಾನ್ ಶ್ರೀರಾಮಚಂದ್ರನಿಗೆ ನಮಸ್ಕರಿಸಿ ಹೀಗೆಂದನು ‘‘ಅಣ್ಣಾ ರಘುಶ್ರೇಷ್ಠನೆ! ನಿನ್ನ ಅನುಗ್ರಹದ ಬಲದಿಂದ ಇಂದ್ರಜಿತನು ಯುದ್ಧದಲ್ಲಿ ಹತನಾದನು.’’ ॥52-54॥
(ಶ್ಲೋಕ-55)
ಮೂಲಮ್
ಶ್ರುತ್ವಾ ತಲ್ಲಕ್ಷ್ಮಣಾದ್ಭಕ್ತ್ಯಾ ತಮಾಲಿಂಗ್ಯ ರಘೂತ್ತಮಃ ।
ಮೂರ್ಧ್ನ್ಯ ವಘ್ರಾಯ ಮುದಿತಃ ಸಸ್ನೇಹಮಿದಮಬ್ರವೀತ್ ॥
(ಶ್ಲೋಕ-56)
ಮೂಲಮ್
ಸಾಧು ಲಕ್ಷ್ಮಣ ತುಷ್ಟೋಽಸ್ಮಿ ಕರ್ಮ ತೇ ದುಷ್ಕರಂ ಕೃತಮ್ ।
ಮೇಘನಾದಸ್ಯ ನಿಧನೇ ಜಿತಂ ಸರ್ವಮರಿಂದಮ ॥
ಅನುವಾದ
ಲಕ್ಷ್ಮಣನ ಈ ಭಕ್ತಿಮಯ ಮಾತನ್ನು ಕೇಳಿದ ಶ್ರೀರಘು ನಾಥನು ಹೆಚ್ಚಿನ ಸಂತೋಷದಿಂದ ಕೂಡಿ ಅವನನ್ನು ಆಲಿಂಗಿಸಿಕೊಂಡು, ನೆತ್ತಿಯನ್ನು ಆಘ್ರಾಣಿಸಿ ಪ್ರೇಮದಿಂದ ಹೀಗೆಂದನು ‘‘ತಮ್ಮ ಲಕ್ಷ್ಮಣಾ! ನೀನು ಧನ್ಯನಾಗಿರುವೆ. ನಿನ್ನ ಈ ಕಾರ್ಯದಿಂದ ನಾನು ಬಹಳ ಸಂತೋಷಗೊಂಡಿರುವೆ. ಇಂದು ನೀನು ಬಹಳ ದುಸ್ಸಾಧ್ಯವಾದ ಕಾರ್ಯವನ್ನು ಮಾಡಿರುವೆ. ಶತ್ರುನಾಶಕನೆ! ಈ ಇಂದ್ರಜಿತನನ್ನು ಕೊಂದದ್ದರಿಂದ ನಾವು ಎಲ್ಲರನ್ನು ಗೆದ್ದಂತಾಗಿದೆ. ॥55-56॥
(ಶ್ಲೋಕ-57)
ಮೂಲಮ್
ಅಹೋರಾತ್ರೈಸ್ತ್ರಿಭಿರ್ವೀರಃ ಕಥಂಚಿದ್ವಿನಿಪಾತಿತಃ ।
ನಿಃಸಪತ್ನಃ ಕೃತೋಸ್ಮ್ಯದ್ಯ ನಿರ್ಯಾಸ್ಯತಿ ಹಿ ರಾವಣಃ ॥
(ಶ್ಲೋಕ-58)
ಮೂಲಮ್
ಪುತ್ರಶೋಕಾನ್ಮಯಾ ಯೋದ್ಧುಂ ತಂ ಹನಿಷ್ಯಾಮಿ ರಾವಣಮ್ ॥
ಅನುವಾದ
ನೀನು ಮೂರು ಹಗಲು-ಮೂರು ರಾತ್ರಿಗಳ ಕಾಲ ನಿರಂತರ ಯುದ್ಧ ಮಾಡಿ ಆ ಮಹಾವೀರನನ್ನು ಹೇಗೋ ಕಷ್ಟದಿಂದ ಕೊಂದಿರುವೆ. ಈಗ ನಾನು ಶತ್ರುರಹಿತನಾದೆನು. ಇನ್ನು ಮುಂದೆ ಪುತ್ರಶೋಕದಿಂದ ಕೂಡಿದ ರಾವಣನು ನನ್ನೊಡನೆ ಯುದ್ಧ ಮಾಡಲು ಬರುವನು. ಅವನನ್ನು ನಾನು ಕೊಂದು ಬಿಡುವೆನು.’’ ॥57-58॥
(ಶ್ಲೋಕ-59)
ಮೂಲಮ್
ಮೇಘನಾದಂ ಹತಂ ಶ್ರುತ್ವಾ ಲಕ್ಷ್ಮಣೇನ ಮಹಾಬಲಮ್ ।
ರಾವಣಃ ಪತಿತೋ ಭೂಮೌ ಮೂರ್ಚ್ಛಿತಃ ಪುನರುತ್ಥಿತಃ ।
ವಿಲಲಾಪಾತಿದೀನಾತ್ಮಾ ಪುತ್ರಶೋಕೇನ ರಾವಣಃ ॥
ಅನುವಾದ
ಮೇಘನಾದ(ಇಂದ್ರಜಿತು)ನು ಲಕ್ಷ್ಮಣನಿಂದ ಹತನಾದ ವಾರ್ತೆಯನ್ನು ಕೇಳಿ ರಾವಣನು ಮೂರ್ಛಿತನಾಗಿ ನೆಲಕ್ಕೆ ಉರುಳಿದನು. ಮತ್ತೆ ಮೂರ್ಛೆ ತಳೆದು ಪುತ್ರಶೋಕದಿಂದ ಅತ್ಯಂತ ದೀನನಾಗಿ ವಿಲಾಪಿಸಿದನು. ॥59॥
(ಶ್ಲೋಕ-60)
ಮೂಲಮ್
ಪುತ್ರಸ್ಯ ಗುಣಕರ್ಮಾಣಿ ಸಂಸ್ಮರನ್ಪರ್ಯದೇವಯತ್ ।
ಅದ್ಯ ದೇವಗಣಾಃ ಸರ್ವೇ ಲೋಕಪಾಲಾ ಮಹರ್ಷಯಃ ॥
(ಶ್ಲೋಕ-61)
ಮೂಲಮ್
ಹತಮಿಂದ್ರಜಿತಂ ಜ್ಞಾತ್ವಾ ಸುಖಂ ಸ್ವಪ್ಸ್ಯಂತಿ ನಿರ್ಭಯಾಃ ।
ಇತ್ಯಾದಿ ಬಹುಶಃ ಪುತ್ರಲಾಲಸೋ ವಿಲಲಾಪ ಹ ॥
ಅನುವಾದ
ಮಗನ ಗುಣಗಳನ್ನೂ, ಸಾಹಸಗಳನ್ನೂ ನೆನೆ-ನೆನೆದು ಅಳತೊಡಗಿದನು. ‘‘ಇನ್ನು ಮುಂದೆ ಎಲ್ಲ ದೇವತೆಗಳೂ, ಲೋಕಪಾಲರೂ, ಮಹರ್ಷಿಗಳೂ ಇಂದ್ರಜಿತನು ಸತ್ತಸುದ್ದಿಯನ್ನು ಕೇಳಿ ನಿರ್ಭಯರಾಗಿ ಸುಖವಾಗಿ ನಿದ್ರಿಸುವರು.’’ ಈ ಪ್ರಕಾರ ಪುತ್ರಪ್ರೇಮದಿಂದ ಅವನು ಅನೇಕ ರೀತಿಯಿಂದ ವಿಲಾಪಿಸತೊಡಗಿದನು. ॥60-61॥
(ಶ್ಲೋಕ-62)
ಮೂಲಮ್
ತತಃ ಪರಮಸಂಕ್ರುದ್ಧೋ ರಾವಣೋ ರಾಕ್ಷಸಾಧಿಪಃ ।
ಉವಾಚ ರಾಕ್ಷಸಾನ್ಸರ್ವಾನ್ನಿನಾಶಯಿಷುರಾಹವೇ ॥
ಅನುವಾದ
ಅನಂತರ ಬಹಳವಾಗಿ ಸಿಟ್ಟಿಗೆದ್ದ ರಾಕ್ಷಸಾಧಿಪತಿ ರಾವಣನು ಯುದ್ಧದಲ್ಲಿ ಸಮಸ್ತ ಶತ್ರುಗಳನ್ನು ನಾಶಗೊಳಿಸಿಬಿಡುವ ಛಲದಿಂದ ಎಲ್ಲ ರಾಕ್ಷಸ ರೊಂದಿಗೆ ಯುದ್ಧ ಮಾಡಲು ಹೇಳಿದನು. ॥62॥
(ಶ್ಲೋಕ-63)
ಮೂಲಮ್
ಸ ಪುತ್ರವಧಸಂತಪ್ತಃ ಶೂರಃ ಕೋಧವಶಂ ಗತಃ ।
ಸಂವೀಕ್ಷ್ಯ ರಾವಣೋ ಬುದ್ಧ್ಯಾ ಹಂತುಂ ಸೀತಾಂ ಪ್ರದುದ್ರುವೇ ॥
ಅನುವಾದ
ಬಳಿಕ ಶೂರನಾದ ರಾವಣನು ಪುತ್ರವಧೆಯಿಂದ ದುಃಖಿತ ನಾಗಿ, ಕೋಪಕ್ಕೆ ವಶನಾಗಿ ಅದೇ ಬುದ್ಧಿಯಿಂದ ಆಲೋಚಿಸಿ, ಸೀತೆಯನ್ನು ಕೊಲ್ಲಲು ವೇಗವಾಗಿ ಧಾವಿಸಿದನು. (ಅರ್ಥಾತ್ ಶೋಕ ಹಾಗೂ ಕ್ರೋಧದ ಕಾರಣದಿಂದ ಅವನು ಇಂತಹ ನಿಂದ್ಯವಾದ ಕರ್ಮವನ್ನೂ ಕೂಡ ತನ್ನ ಕರ್ತವ್ಯವೆಂದು ತಿಳಿದುಕೊಂಡನು.) ॥63॥
(ಶ್ಲೋಕ-64)
ಮೂಲಮ್
ಖಡ್ಗಪಾಣಿಮಥಾಯಾಂತಂ ಕ್ರುದ್ಧಂ ದೃಷ್ಟ್ವಾ ದಶಾನನಮ್ ।
ರಾಕ್ಷಸೀಮಧ್ಯಗಾ ಸೀತಾ ಭಯಶೋಕಾಕುಲಾಭವತ್ ॥
ಅನುವಾದ
ಖಡ್ಗವನ್ನೆತ್ತಿಕೊಂಡು ತನ್ನೆಡೆಗೆ ಬರುತ್ತಿರುವ ಕುಪಿತನಾದ ರಾವಣನನ್ನು ಕಂಡು ರಾಕ್ಷಸಿಯರ ನಡುವೆಯಿದ್ದ ಸೀತೆಯು ಭಯದಿಂದಲೂ, ದುಃಖದಿಂದಲೂ ವ್ಯಾಕುಲಚಿತ್ತಳಾದಳು. ॥64॥
(ಶ್ಲೋಕ-65)
ಮೂಲಮ್
ಏತಸ್ಮಿನ್ನಂತರೇ ತಸ್ಯ ಸಚಿವೋ ಬುದ್ಧಿಮಾನ್ ಶುಚಿಃ ।
ಸುಪಾರ್ಶ್ವೋ ನಾಮ ಮೇಧಾವೀ ರಾವಣಂ ವಾಕ್ಯಮಬ್ರವೀತ್ ॥
(ಶ್ಲೋಕ-66)
ಮೂಲಮ್
ನನು ನಾಮ ದಶಗ್ರೀವ ಸಾಕ್ಷಾದ್ವೈಶ್ರವಣಾನುಜಃ ।
ವೇದವಿದ್ಯಾವ್ರತಸ್ನಾತಃ ಸ್ವಕರ್ಮಪರಿನಿಷ್ಠಿತಃ ॥
(ಶ್ಲೋಕ-67)
ಮೂಲಮ್
ಅನೇಕಗುಣಸಂಪನ್ನಃ ಕಥಂ ಸ್ತ್ರೀವಧಮಿಚ್ಛಸಿ ।
ಅಸ್ಮಾಭಿಃ ಸಹಿತೋ ಯುದ್ಧೇ ಹತ್ವಾ ರಾಮಂ ಚ ಲಕ್ಷ್ಮಣಮ್ ।
ಪ್ರಾಪ್ಸ್ಯಸೇ ಜಾನಕೀಂ ಶೀಘ್ರಮಿತ್ಯುಕ್ತಃ ಸ ನ್ಯವರ್ತತ ॥
ಅನುವಾದ
ಇದೇ ಸಮಯದಲ್ಲಿ ಪರಮ ಬುದ್ಧಿವಂತನೂ, ಶುದ್ಧ ಹೃದಯವುಳ್ಳ, ವಿಚಾರವಂತನಾದ, ರಾವಣನ ಮಂತ್ರಿಯಾದ ಸುಪಾರ್ಶ್ವನೆಂಬುವನು ರಾವಣನಲ್ಲಿ ಹೇಳಿದನು ‘‘ಎಲೈ ದಶಕಂಠನೆ! ನೀನಾದರೋ ಕುಬೇರನ ತಮ್ಮನಾಗಿದ್ದು, ವೇದ ವಿದ್ಯೆಗಳನ್ನು ಕಲಿತು ನಿಷ್ಣಾತನಾಗಿರುವೆ. ನೀನು ಕರ್ಮಗಳಲ್ಲಿ ನಿಷ್ಠನಾಗಿದ್ದು, ಅನೇಕ ಗುಣಗಳಿಂದ ಕೂಡಿದವನಾಗಿರುವೆ. ಹೀಗಿರುವಾಗ ಸೀವಧೆಯನ್ನು ಹೇಗೆ ತಾನೇ ಮಾಡಲಿಚ್ಛಿಸುವೆ? ನಮ್ಮೆಲ್ಲರನ್ನು ಜೊತೆ ಗೂಡಿ ನೀನು ಯುದ್ಧದಲ್ಲಿ ರಾಮನನ್ನೂ, ಲಕ್ಷ್ಮಣನನ್ನೂಕೊಂದು ಬೇಗನೇ ಸೀತೆಯನ್ನು ಪಡೆದುಕೋ.’’ ಸುಪಾರ್ಶ್ವನ ಈ ಪ್ರಕಾರದ ಮಾತನ್ನು ಕೇಳಿ ರಾವಣನು ಮರಳಿದನು. ॥65-67॥
(ಶ್ಲೋಕ-68)
ಮೂಲಮ್
ತತೋ ದುರಾತ್ಮಾ ಸುಹೃದಾ ನಿವೇದಿತಂ
ವಚಃ ಸುಧರ್ಮ್ಯಂ ಪ್ರತಿಗೃಹ್ಯ ರಾವಣಃ ।
ಗೃಹಂ ಜಗಾಮಾಶು ಶುಚಾ ವಿಮೂಢಧೀಃ
ಪುನಃ ಸಭಾಂ ಚ ಪ್ರಯಯೌ ಸುಹೃದ್ವೃತಃ ॥
ಅನುವಾದ
ಅನಂತರ ದುರಾತ್ಮನಾದ ರಾವಣನು ಸ್ನೇಹಿತನು ತಿಳಿಸಿದ ಧರ್ಮಬದ್ಧವಾದ ಒಳ್ಳೆಯ ಮಾತನ್ನು ಸ್ವೀಕರಿಸಿ ಬೇಗನೆ ಅರಮನೆಗೆ ಬಂದನು. ಮತ್ತೆ ಶೋಕದಿಂದ ದಿಕ್ಕುಗಾಣದೆ ಮರುದಿನ ತನ್ನ ಸ್ನೇಹಿತರೊಡನೆ ಮಂತ್ರಾಲೋಚನ ಸಭೆಯನ್ನು ಪ್ರವೇಶಿಸಿದನು. ॥68॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ನವಮಃ ಸರ್ಗಃ ॥9॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.