[ಎಂಟನೆಯ ಸರ್ಗ]
ಭಾಗಸೂಚನಾ
ಕುಂಭಕರ್ಣವಧೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಕುಂಭಕರ್ಣವಚಃ ಶ್ರುತ್ವಾ ಭ್ರುಕುಟೀವಿಕಟಾನನಃ ।
ದಶಗ್ರೀವೋ ಜಗಾದೇದಮಾಸನಾದುತ್ಪತನ್ನಿವ ॥
ಅನುವಾದ
ಶ್ರೀಮಹಾದೇವನಿಂತೆಂದನು — ಎಲೈ ಗಿರಿಜೆ! ಕುಂಭಕರ್ಣನ ಮಾತನ್ನು ಕೇಳಿ ದಶಕಂಠನ ಹುಬ್ಬುಗಳು ಗಂಟಿಕ್ಕಿ, ಕ್ರೋಧದಿಂದ ಮುಖವು ವಿಕರಾಳವಾಯಿತು. ತನ್ನ ಪೀಠದಿಂದ ನೆಗೆಯುವಂತೆ ಆರ್ಭಟಿಸುತ್ತಾ ಹೇಳಿದನು. ॥1॥
(ಶ್ಲೋಕ-2)
ಮೂಲಮ್
ತ್ವಮಾನೀತೋ ನ ಮೇ ಜ್ಞಾನಬೋಧನಾಯ ಸುಬುದ್ಧಿಮಾನ್ ।
ಮಯಾ ಕೃತಂ ಸಮೀಕೃತ್ಯ ಯುಧ್ಯಸ್ವ ಯದಿ ರೋಚತೇ ॥
ಅನುವಾದ
‘‘ನೀನು ತುಂಬಾ ಬುದ್ಧಿವಂತನೆಂದು ನಾನು ಬಲ್ಲೆನು. ಆದರೆ ಈಗ ನಾನು ನಿನ್ನನ್ನು ಜ್ಞಾನೋಪದೇಶಕ್ಕಾಗಿ ಕರೆಸಲಿಲ್ಲ. ನಿನಗೆ ಇಷ್ಟವಾದರೆ ನಾನು ಮಾಡಿರುವುದನ್ನು ಅರಿತು ಹೊಂದಿಕೊಂಡು ಯುದ್ಧಮಾಡು. ॥2॥
(ಶ್ಲೋಕ-3)
ಮೂಲಮ್
ನೋಚೇದ್ಗಚ್ಛ ಸುಷುಪ್ತ್ಯರ್ಥಂ ನಿದ್ರಾ ತ್ವಾಂ ಬಾಧತೇಽಧುನಾ ।
ರಾವಣಸ್ಯ ವಚಃ ಶ್ರುತ್ವಾ ಕುಂಭಕರ್ಣೋ ಮಹಾಬಲಃ ॥
(ಶ್ಲೋಕ-4)
ಮೂಲಮ್
ರುಷ್ಟೋಽಯಮಿತಿ ವಿಜ್ಞಾಯ ತೂರ್ಣಂ ಯುದ್ಧಾಯ ನಿರ್ಯಯೌ ।
ಸ ಲಂಘಯಿತ್ವಾ ಪ್ರಾಕಾರಂ ಮಹಾಪರ್ವತಸನ್ನಿಭಃ ॥
(ಶ್ಲೋಕ-5)
ಮೂಲಮ್
ನಿರ್ಯಯೌ ನಗರಾತ್ತೂರ್ಣಂ ಭೀಷಯನ್ಹರಿಸೈನಿಕಾನ್ ।
ಸ ನನಾದ ಮಹಾನಾದಂ ಸಮುದ್ರಮಭಿನಾದಯನ್ ॥
ಅನುವಾದ
ಹಾಗಿಲ್ಲವಾದರೆ ಹೋಗು ಮಲಗಿಕೋ; ನಿನಗೆ ಈಗ ನಿದ್ದೆಯು ಪೀಡಿಸುತ್ತಿರಬಹುದು.’’ ರಾವಣನ ಮಾತನ್ನು ಕೇಳಿ ಮಹಾಬಲಶಾಲಿಯಾದ ಕುಂಭಕರ್ಣನು ‘ಓಹೋ! ರಾವಣನು ಸಿಟ್ಟುಗೊಂಡಿರುವನು’ ಎಂದು ತಿಳಿದು ಬೇಗನೇ ಯುದ್ಧಕ್ಕಾಗಿ ಹೊರಟುಹೋದನು. ಮಹಾಪರ್ವತದಂತೆ ವಿಶಾಲ ಕಾಯನಾದ ಆ ರಾಕ್ಷಸನು ನಗರದ ಕೋಟೆಯನ್ನು ದಾಟಿ ಹೊರಗೆ ಬಂದನು. (ಏಕೆಂದರೆ ಅತ್ಯಂತ ದೊಡ್ಡ ಶರೀರವಿದ್ದ ಕಾರಣ ಅವನಿಗೆ ಲಂಕೆಯ ಸಣ್ಣ ಬಾಗಿಲುಗಳು ಸಾಕಾಗುತ್ತಿರಲಿಲ್ಲ.) ಕಪಿ ಸೈನ್ಯಕ್ಕೆಲ್ಲ ಭಯವನ್ನುಂಟು ಮಾಡುತ್ತಾ ಸಮುದ್ರವು ಪ್ರತಿಧ್ವನಿಸುವಷ್ಟು ಗಟ್ಟಿಯಾಗಿ ಆರ್ಭಟಿಸಿದನು. ॥3-5॥
(ಶ್ಲೋಕ-6)
ಮೂಲಮ್
ವಾನರಾನ್ಕಾಲಯಾಮಾಸ ಬಾಹುಭ್ಯಾಂ ಭಕ್ಷಯನ್ ರುಷಾ ।
ಕುಂಭಕರ್ಣಂ ತದಾ ದೃಷ್ಟ್ವಾ ಸಪಕ್ಷಮಿವ ಪರ್ವತಮ್ ॥
(ಶ್ಲೋಕ-7)
ಮೂಲಮ್
ದುದ್ರುವುರ್ವಾನರಾಃ ಸರ್ವೇ ಕಾಲಾಂತಕಮಿವಾಖಿಲಾಃ ।
ಭ್ರಮಂತಂ ಹರಿವಾಹಿನ್ಯಾಂ ಮುದ್ಗರೇಣ ಮಹಾಬಲಮ್ ॥
(ಶ್ಲೋಕ-8)
ಮೂಲಮ್
ಕಾಲಯಂತಂ ಹರೀನ್ವೇಗಾದ್ಭಕ್ಷಯಂತಂ ಸಮಂತತಃ ।
ಚೂರ್ಣಯಂತಂ ಮುದ್ಗರೇಣ ಪಾಣಿಪಾದೈರನೇಕಧಾ ॥
(ಶ್ಲೋಕ-9)
ಮೂಲಮ್
ಕುಂಭಕರ್ಣಂ ತದಾ ದೃಷ್ಟ್ವಾ ಗದಾಪಾಣಿರ್ವಿಭೀಷಣಃ ।
ನನಾಮ ಚರಣಂ ತಸ್ಯ ಭ್ರಾತುರ್ಜ್ಯೇಷ್ಠಸ್ಯ ಬುದ್ಧಿಮಾನ್ ॥
ಅನುವಾದ
ಮತ್ತೆ ಅತ್ಯಂತ ಕ್ರುದ್ಧನಾಗಿ ಅವನು ತನ್ನ ತೋಳುಗಳಿಂದ ಕಪಿಗಳನ್ನು ಕೂಡಿಹಾಕಿ ನುಂಗುತ್ತಾ ನಾಶಮಾಡತೊಡಗಿದನು. ರೆಕ್ಕೆಗಳುಳ್ಳ ಪರ್ವತದಂತೆ, ಕಾಲ ಯಮನಂತಿರುವ ಕುಂಭ ಕರ್ಣನನ್ನು ಕಂಡು ಸಮಸ್ತ ವಾನರರು ಓಡತೊಡಗಿದರು. ಮಹಾಬಲಶಾಲಿಯಾದ ಕುಂಭಕರ್ಣನು ಮುದ್ಗರವೆಂಬ ಆಯುಧವನ್ನು ಧರಿಸಿಕೊಂಡು, ಕಪಿ ಸೈನ್ಯದಲ್ಲಿ ತಿರುಗುತ್ತಾ ಕಪಿಗಳನ್ನು ಕೊಲ್ಲುತ್ತಾ, ಅವುಗಳನ್ನು ವೇಗವಾಗಿ ತಿನ್ನುತ್ತಾ, ತನ್ನ ಮುದ್ಗರದಿಂದ, ಕೈ ಕಾಲುಗಳಿಂದಲೂ ನಾನಾ ಪ್ರಕಾರವಾಗಿ ಕಪಿಗಳನ್ನು ಪುಡಿಮಾಡುತ್ತಿರುವ ಅವನನ್ನು ನೋಡಿ, ಪರಮ ಬುದ್ಧಿವಂತನಾದ ಗದಾಧಾರೀ ವಿಭೀಷಣನು ಮುಂದೆ ಬಂದು ಆ ಹಿರಿಯಣ್ಣನ ಪಾದಗಳಿಗೆ ನಮಸ್ಕರಿಸಿದನು. ॥6-9॥
(ಶ್ಲೋಕ-10)
ಮೂಲಮ್
ವಿಭೀಷಣೋಽಹಂ ಭ್ರಾತುರ್ಮೇ ದಯಾಂ ಕುರು ಮಹಾಮತೇ ।
ರಾವಣಸ್ತು ಮಯಾ ಭ್ರಾತರ್ಬಹುಧಾ ಪರಿಬೋಧಿತಃ ॥
(ಶ್ಲೋಕ-11)
ಮೂಲಮ್
ಸೀತಾಂ ದೇಹೀತಿ ರಾಮಾಯ ರಾಮಃ ಸಾಕ್ಷಾಜ್ಜನಾರ್ದನಃ ।
ನ ಶೃಣೋತಿ ಚ ಮಾಂ ಹಂತುಂ ಖಡ್ಗಮುದ್ಯಮ್ಯ ಚೋಕ್ತವಾನ್ ॥
(ಶ್ಲೋಕ-12)
ಮೂಲಮ್
ಧಿಕ್ ತ್ವಾಂ ಗಚ್ಛೇತಿ ಮಾಂ ಹತ್ವಾ ಪದಾ ಪಾಪಿಭಿರಾವೃತಃ ।
ಚತುರ್ಭಿರ್ಮಂತ್ರಿಭಿಃ ಸಾರ್ಧಂ ರಾಮಂ ಶರಣಮಾಗತಃ ॥
ಅನುವಾದ
ಹಾಗೂ ಹೇಳಿದನು — ‘‘ಹೇ ಮಹಾಮತಿಯೆ! ನಾನು ನಿಮ್ಮ ತಮ್ಮ ವಿಭೀಷಣನಾಗಿದ್ದೇನೆ. ನನ್ನ ಮೇಲೆ ದಯೆಯನ್ನಿಡು. ಅಣ್ಣಾ! ನಾನು ರಾವಣನಿಗೆ ಶ್ರೀರಾಮನು ಸಾಕ್ಷಾತ್ ಭಗವಾನ್ ವಿಷ್ಣುವಾಗಿದ್ದಾನೆ. ಅವನಿಗೆ ಸೀತೆಯನ್ನು ಒಪ್ಪಿಸಿ ಬಿಡು, ಎಂದು ಪದೇ-ಪದೇ ಎಚ್ಚರಿಸಿದ್ದೆ. ಆದರೆ ಅವನು ನನ್ನ ಮಾತನ್ನು ಕೇಳಲಿಲ್ಲ. ಮತ್ತೆ ಕತ್ತಿಯನ್ನು ಎತ್ತಿಕೊಂಡು ನಿನಗೆ ಧಿಕ್ಕಾರವಿರಲಿ! ಹೊರಟು ಹೋಗು ಇಲ್ಲಿಂದ ಎಂದು ಗದರಿಸುತ್ತಾ ಪಾಪಿಗಳಿಂದ ಸುತ್ತುವರಿದ ರಾವಣನು ನನ್ನನ್ನು ಒದ್ದು ಹೊರ ಹಾಕಿದನು. ಆಗ ನಾನು ನಾಲ್ಕು ಮಂತ್ರಿ ಗಳಿಂದೊಡಗೂಡಿ ಭಗವಾನ್ ಶ್ರೀರಾಮನಿಗೆ ಶರಣು ಹೋದೆ.’’ ॥10-12॥
(ಶ್ಲೋಕ-13)
ಮೂಲಮ್
ತಚ್ಛ್ರುತ್ವಾ ಕುಂಭಕರ್ಣೋಽಪಿ ಜ್ಞಾತ್ತ್ವಾ ಭ್ರಾತರಮಾಗತಮ್ ।
ಸಮಾಲಿಂಗ್ಯ ಚ ವತ್ಸ ತ್ವಂ ಜೀವ ರಾಮಪದಾಶ್ರಯಾತ್ ॥
(ಶ್ಲೋಕ-14)
ಮೂಲಮ್
ಕುಲಸಂರಕ್ಷಣಾರ್ಥಾಯ ರಾಕ್ಷಸಾನಾಂ ಹಿತಾಯ ಚ ।
ಮಹಾಭಾಗವತೋಽಸಿ ತ್ವಂ ಪುರಾ ಮೇ ನಾರದಾಚ್ಛ್ರುತಮ್ ॥
ಅನುವಾದ
ಅದನ್ನು ಕೇಳಿದ ಕುಂಭಕರ್ಣನು ತಮ್ಮನು ಬಳಿಗೆ ಬಂದಿರುವನೆಂದು ತಿಳಿದು ಅವನನ್ನು ಆಲಿಂಗಿಸಿಕೊಂಡು ಹೇಳಿದನು ‘‘ಮಗು! ಭಗವಾನ್ ಶ್ರೀರಾಮನ ಪಾದಗಳನ್ನು ಆಶ್ರಯಿಸಿ ನಮ್ಮ ರಾಕ್ಷಸ ಕುಲವನ್ನು ಕಾಪಾಡಲು ಹಾಗೂ ಅವರ ಹಿತಕ್ಕಾಗಿ ನೀನು ಚಿರಕಾಲದವರೆಗೆ ಬಾಳು. ನೀನು ಮಹಾಭಾಗವತನೆಂದು ಹಿಂದೆ ನಾನು ನಾರದರಿಂದ ಕೇಳಿದ್ದೇನೆ. ॥13-14॥
(ಶ್ಲೋಕ-15)
ಮೂಲಮ್
ಗಚ್ಛ ತಾತ ಮಮೇದಾನೀಂ ದೃಶ್ಯತೇ ನ ಚ ಕಿಂಚನ ।
ಮದೀಯೋ ವಾ ಪರೋ ವಾಪಿ ಮದಮತ್ತವಿಲೋಚನಃ ॥
ಅನುವಾದ
ತಮ್ಮಾ! ಈಗ ನೀನು ಹೊರಡು ನನಗೆ ಮದವೇರಿದ ಕಣ್ಣುಗಳ ಕಾರಣ ಯಾರು ನಮ್ಮವರು ಯಾರು ಬೇರೆಯವರು ಎಂದು ಕಾಣುವುದಿಲ್ಲ’’ ಎಂದು ಹೇಳಿದನು. ॥15॥
(ಶ್ಲೋಕ-16)
ಮೂಲಮ್
ಇತ್ಯುಕ್ತೋಽಶ್ರುಮುಖೋ ಭ್ರಾತುಶ್ಚರಣಾವಭಿವಂದ್ಯ ಸಃ ।
ರಾಮಪಾರ್ಶ್ವಮುಪಾಗತ್ಯ ಚಿಂತಾಪರ ಉಪಸ್ಥಿತಃ ॥
ಅನುವಾದ
ಅಣ್ಣನಾದ ಕುಂಭಕರ್ಣನೆಂದ ಮಾತನ್ನು ಕೇಳಿ ವಿಭೀಷಣನು ಕಣ್ಣೀರು ತುಂಬಿದ ಮುಖ ವುಳ್ಳನಾಗಿ ಅಣ್ಣನ ಪಾದಗಳಿಗೆ ನಮಸ್ಕರಿಸಿ, ಚಿಂತಾತುರನಾಗಿ ಶ್ರೀರಾಮನ ಬಳಿಗೆ ಬಂದು ನಿಂತು ಕೊಂಡನು. ॥16॥
(ಶ್ಲೋಕ-17)
ಮೂಲಮ್
ಕುಂಭಕರ್ಣೋಽಪಿ ಹಸ್ತಾಭ್ಯಾಂ ಪಾದಾಭ್ಯಾಂ ಪೇಷಯನ್ಹರೀನ್ ।
ಚಚಾರ ವಾನರೀಂ ಸೇನಾಂ ಕಾಲಯನ್ ಗಂಧಹಸ್ತಿವತ್ ॥
ಅನುವಾದ
ಇತ್ತ ಕುಂಭಕರ್ಣನು ರಣರಂಗದಲ್ಲಿ ಮದಮತ್ತ ಆನೆಯಂತೆ ಕಪಿಸೈನ್ಯವನ್ನು ಹೊಕ್ಕು ಕೈಗಳಿಂದ, ಕಾಲುಗಳಿಂದ ಅವರನ್ನು ಅರೆದು ಹಾಕುತ್ತಾ ಸಮಸ್ತ ಕಪಿ ಸೈನ್ಯವನ್ನು ನಾಶಮಾಡುತ್ತಾ ತಿರುಗುತ್ತಿದ್ದನು. ॥17॥
(ಶ್ಲೋಕ-18)
ಮೂಲಮ್
ದೃಷ್ಟ್ವಾ ತಂ ರಾಘವಃ ಕ್ರುದ್ಧೋ ವಾಯವ್ಯಂ ಶಸ್ತ್ರಮಾದರಾತ್ ।
ಚಿಕ್ಷೇಪ ಕುಂಭಕರ್ಣಾಯ ತೇನ ಚಿಚ್ಛೇದ ರಕ್ಷಸಃ ॥
(ಶ್ಲೋಕ-19)
ಮೂಲಮ್
ಸಮುದ್ಗರಂ ದಕ್ಷಹಸ್ತಂ ತೇನ ಘೋರಂ ನನಾದ ಸಃ ।
ಸ ಹಸ್ತಃ ಪತಿತೋ ಭೂಮಾವನೇಕಾನರ್ದಯನ್ಕಪೀನ್ ॥
ಅನುವಾದ
ಕುಂಭಕರ್ಣನನ್ನು ಕಂಡ ಶ್ರೀರಘುನಾಥನು ಕೋಪಗೊಂಡವನಾಗಿ ವಾಯವ್ಯಾಸವನ್ನು ಎತ್ತಿಕೊಂಡು ಸಂಭ್ರಮದಿಂದ ಅವನ ಮೇಲೆ ಪ್ರಯೋಗಿಸಿದನು. ಅದರಿಂದ ರಾಕ್ಷಸನ ಮುದ್ಗರಸಹಿತ ಬಲಕೈಯ್ಯು ಕತ್ತರಿಸಿ ಬಿತ್ತು. ಇದರಿಂದ ಅವನು ಭಯಂಕರ ಗರ್ಜನೆ ಮಾಡಿದನು. ಆ ತುಂಡಾದ ಅವನ ತೋಳು ನೆಲಕ್ಕೆ ಬೀಳುತ್ತಿರುವಾಗ ಅದರಡಿಯಲ್ಲಿ ಅನೇಕ ಕಪಿಗಳು ಪುಡಿಯಾದುವು. ॥18-19॥
(ಶ್ಲೋಕ-20)
ಮೂಲಮ್
ಪರ್ಯಂತ ಮಾಶ್ರಿತಾಃ ಸರ್ವೇ ವಾನರಾ ಭಯವೇಪಿತಾಃ ।
ರಾಮರಾಕ್ಷಸಯೋರ್ಯುದ್ಧಂ ಪಶ್ಯಂತಃ ಪರ್ಯವಸ್ಥಿತಾಃ ॥
ಅನುವಾದ
ಆಗ ಭಯದಿಂದ ನಡುಗುತ್ತಾ ವಾನರರೆಲ್ಲರೂ ಅತ್ತ-ಇತ್ತ ಚದುರಿ ಹೋಗಿ ಭಗವಾನ್ ಶ್ರೀರಾಮನಿಗೂ, ರಾಕ್ಷಸ ಕುಂಭಕರ್ಣನಿಗೂ ನಡೆಯುತ್ತಿರುವ ಯುದ್ಧವನ್ನು ನೋಡುತ್ತಾ ನಿಂತುಕೊಂಡರು. ॥20॥
(ಶ್ಲೋಕ-21)
ಮೂಲಮ್
ಕುಂಭಕರ್ಣಶ್ಛಿನ್ನಹಸ್ತಃ ಶಾಲಮುದ್ಯಮ್ಯ ವೇಗತಃ ।
ಸಮರೇ ರಾಘವಂ ಹಂತುಂ ದುದ್ರಾವ ತಮಥೋಽಚ್ಛಿನತ್ ॥
(ಶ್ಲೋಕ-22)
ಮೂಲಮ್
ಶಾಲೇನ ಸಹಿತಂ ವಾಮಹಸ್ತಮೈಂದ್ರೇಣ ರಾಘವಃ ।
ಛಿನ್ನಬಾಹುಮಥಾಯಾಂತಂ ನರ್ದಂತಂ ವೀಕ್ಷ್ಯ ರಾಘವಃ ॥
(ಶ್ಲೋಕ-23)
ಮೂಲಮ್
ದ್ವಾವರ್ಧಚಂದ್ರೌ ನಿಶಿತಾವಾದಾಯಾಸ್ಯ ಪದದ್ವಯಮ್ ।
ಚಿಚ್ಛೇದ ಪತಿತೌ ಪಾದೌ ಲಂಕಾದ್ವಾರಿ ಮಹಾಸ್ವನೌ ॥
ಅನುವಾದ
ಕೈತುಂಡಾದ ಕುಂಭಕರ್ಣನು ದೊಡ್ಡದಾದ ಸಾಲಮರವನ್ನು ಎತ್ತಿಕೊಂಡು ವೇಗವಾಗಿ ರಾಮನನ್ನೂ ಕೊಲ್ಲಲು ಯುದ್ಧರಂಗದಲ್ಲಿ ಓಡಿದನು. ಆದರೆ ಶ್ರೀರಾಮನು ಐಂದ್ರಾಸದಿಂದ ಮರಸಹಿತ ಎಡಕೈಯನ್ನು ಕತ್ತರಿಸಿಬಿಟ್ಟನು. ಎರಡೂ ತೋಳುಗಳು ಕತ್ತರಿಸಿ ಹೋದಾಗ ಆ ರಾಕ್ಷಸನು ಘೋರವಾಗಿ ಗರ್ಜಿಸುತ್ತಾ ತನ್ನತ್ತ ಬರುತ್ತಿರುವುದನ್ನು ಕಂಡ ಶ್ರೀರಾಮನು ತೀಕ್ಷ್ಣವಾದ ಎರಡು ಅರ್ಧಚಂದ್ರಾಕಾರ ಬಾಣಗಳನ್ನು ಎತ್ತಿಕೊಂಡು ಅವನ ಎರಡೂ ಕಾಲುಗಳನ್ನು ಕತ್ತರಿಸಿಬಿಟ್ಟನು. ಆ ಕತ್ತರಿಸಲ್ಪಟ್ಟ ಎರಡೂ ಕಾಲುಗಳು ಭಾರೀ ಸದ್ದನ್ನು ಮಾಡುತ್ತಾ ಲಂಕೆಯ ದ್ವಾರದಲ್ಲಿ ಹೋಗಿ ಬಿದ್ದವು. ॥21-23॥
(ಶ್ಲೋಕ-24)
ಮೂಲಮ್
ನಿಕೃತ್ತಪಾಣಿಪಾದೋಽಪಿ ಕುಂಭಕರ್ಣೋಽತಿಭೀಷಣಃ ।
ವಡವಾಮುಖವದ್ವಕ್ತ್ರಂ ವ್ಯಾದಾಯ ರಘುನಂದನಮ್ ॥
(ಶ್ಲೋಕ-25)
ಮೂಲಮ್
ಅಭಿದುದ್ರಾವ ನಿನದನ್ ರಾಹುಶ್ಚಂದ್ರಮಸಂ ಯಥಾ ।
ಅಪೂರಯಚ್ಛಿತಾಗ್ರೈಶ್ಚ ಸಾಯಕೈಸ್ತದ್ರಘೂತ್ತಮಃ ॥
ಅನುವಾದ
ಕೈ ಕಾಲುಗಳು ತುಂಡಾಗಿ ಹೋಗಿದ್ದರೂ ಭಯಂಕರನಾದ ಕುಂಭಕರ್ಣನು, ವಡವಾಗ್ನಿಯಂತೆ ಬಾಯಿ ತೆರೆದುಕೊಂಡು, ರಾಹುವು ಚಂದ್ರನನ್ನು ನುಂಗಲು ನುಗ್ಗಿ ಬರುವಂತೆ, ಸಿಂಹನಾದ ಮಾಡುತ್ತಾ ರಾಮಚಂದ್ರನ ಕಡೆಗೆ ಬರುತ್ತಿದ್ದಾನೆ. ಆಗ ಆ ತೆರೆದ ಬಾಯಿಯನ್ನು ಶ್ರೀರಾಮನು ಹರಿತವಾದ ಬಾಣಗಳಿಂದ ತುಂಬಿ ಬಿಟ್ಟನು. ॥24-25॥
(ಶ್ಲೋಕ-26)
ಮೂಲಮ್
ಶರಪೂರಿತವಕ್ತೋಽಸೌ ಚುಕ್ರೋಶಾತಿಭಯಂಕರಃ ।
ಅಥ ಸೂರ್ಯಪ್ರತೀಕಾಶಮೈಂದ್ರಂ ಶರಮನುತ್ತಮಮ್ ॥
(ಶ್ಲೋಕ-27)
ಮೂಲಮ್
ವಜ್ರಾಶನಿಸಮಂ ರಾಮಶ್ಚಿಕ್ಷೇಪಾಸುರಮೃತ್ಯವೇ ।
ಸ ತತ್ಪರ್ವತಸಂಕಾಶಂ ಸ್ಫುರತ್ಕುಂಡಲದಂಷ್ಟ್ರಕಮ್ ॥
(ಶ್ಲೋಕ-28)
ಮೂಲಮ್
ಚಕರ್ತ ರಕ್ಷೋಽಧಿಪತೇಃ ಶಿರೋ ವೃತ್ರಮಿವಾಶನಿಃ ।
ತಚ್ಛಿರಃ ಪತಿತಂ ಲಂಕಾದ್ವಾರಿ ಕಾಯೋ ಮಹೋದದೌ ॥
ಅನುವಾದ
ಬಾಣಗಳಿಂದ ತುಂಬಿದ ಮುಖವುಳ್ಳ ಆ ರಾಕ್ಷಸನು ಭಯಂಕರವಾಗಿ ಅರಚಿದನು. ಅನಂತರ ಶ್ರೀರಾಮನು ಸೂರ್ಯನಂತೆ ಹೊಳೆಯುವ ಅಮೋಘವಾದ ವಜ್ರಾಯುಧಕ್ಕೆ ಸಮಾನ ವಾದ ಐಂದ್ರಬಾಣವನ್ನು ಆ ರಾಕ್ಷಸನನ್ನು ಕೊಲ್ಲಲು ಪ್ರಯೋಗಿಸಿದನು. ಆ ಬಾಣವು ಪರ್ವತಕ್ಕೆ ಸಮಾನವಾದ ಹಾಗೂ ಹೊಳೆಯುತ್ತಿರುವ ಕುಂಡಲಗಳಿಂದ ಅಲಂಕೃತವಾದ, ಕೋರೆದಾಡೆಗಳಿಂದ ಕೂಡಿದ ರಾಕ್ಷಸಾಧಿಪತಿಯ ತಲೆಯನ್ನು, ಇಂದ್ರನು ವಜ್ರಾಯುಧದಿಂದ ವೃತ್ರಾಸುರನ ತಲೆಯನ್ನು ಕತ್ತರಿಸಿದಂತೆ ಕತ್ತರಿಸಿಬಿಟ್ಟನು. ಕುಂಭಕರ್ಣನ ತಲೆಯು ಲಂಕೆಯ ಬಾಗಿಲಲ್ಲಿ ಮತ್ತು ಶರೀರವು ಸಮುದ್ರದಲ್ಲಿ ಬಿದ್ದುಬಿಟ್ಟಿತು. ॥26-28॥
(ಶ್ಲೋಕ-29)
ಮೂಲಮ್
ಶಿರೋಸ್ಯ ರೋಧಯದ್ ದ್ವಾರಂ ಕಾಯೋ ನಕ್ರಾದ್ಯಚೂರ್ಣಯತ್ ।
ತತೋ ದೇವಾಃ ಸಋಷಯೋ ಗಂಧರ್ವಾಃ ಪನ್ನಗಾಃ ಖಗಾಃ ॥
(ಶ್ಲೋಕ-30)
ಮೂಲಮ್
ಸಿದ್ಧಾ ಯಕ್ಷಾ ಗುಹ್ಯಕಾಶ್ಚ ಅಪ್ಸರೋಭಿಶ್ಚ ರಾಘವಮ್ ।
ಈಡಿರೇ ಕುಸುಮಾಸಾರೈರ್ವರ್ಷಂತಶ್ಚಾಭಿನಂದಿತಾಃ ॥
ಅನುವಾದ
ಆ ತಲೆಯು ಲಂಕೆಯ ಬಾಗಿಲನ್ನೇ ಮುಚ್ಚಿ ಬಿಟ್ಟಿತು. ಶರೀರವು ಸಮುದ್ರದಲ್ಲಿ ಬಿದ್ದಾಗ ಅನೇಕ ಮೊಸಳೆಗಳು ತಿಮಿಂಗಿಲಗಳು ಪುಡಿ-ಪುಡಿಯಾದುವು. ಕುಂಭಕರ್ಣನ ವಧೆಯಾದಾಗ ಋಷಿಗಳಸಹಿತ ದೇವತೆಗಳೂ, ಅಪ್ಸರೆಯರೊಂದಿಗೆ ಗಂಧರ್ವರೂ, ಪನ್ನಗರೂ, ಪಕ್ಷಿಗಳೂ, ಸಿದ್ಧರೂ, ಯಕ್ಷರೂ, ಗುಹ್ಯಕರೂ ಮುಂತಾದವ ರೆಲ್ಲರೂ ಶ್ರೀರಾಮನ ಮೇಲೆ ಹೂಮಳೆಯನ್ನು ಸುರಿದು, ಅವನನ್ನು ಅಭಿನಂದಿಸುತ್ತಾ ಸ್ತೋತ್ರ ಮಾಡತೊಡಗಿದರು. ॥29-30॥
(ಶ್ಲೋಕ-31)
ಮೂಲಮ್
ಆಜಗಾಮ ತದಾ ರಾಮಂ ದ್ರಷ್ಟುಂ ದೇವಮುನೀಶ್ವರಃ ।
ನಾರದೋ ಗಗನಾತ್ತೂರ್ಣಂ ಸ್ವಭಾಸಾ ಭಾಸಯಂದಿಶಃ ॥
(ಶ್ಲೋಕ-32)
ಮೂಲಮ್
ರಾಮಮಿಂದೀವರಶ್ಯಾಮಮುದಾರಾಂಗ ಧನುರ್ಧರಮ್ ।
ಈಷತ್ತಾಮ್ರವಿಶಾಲಾಕ್ಷಮೈಂದ್ರಾಸ್ತ್ರಾಂಚಿತಬಾಹುಕಮ್ ॥
(ಶ್ಲೋಕ-33)
ಮೂಲಮ್
ದಯಾರ್ದ್ರದೃಷ್ಟ್ಯಾ ಪಶ್ಯಂತಂ ವಾನರಾಂಛರಪೀಡಿತಾನ್ ।
ದೃಷ್ಟ್ವಾ ಗದ್ಗದಯಾ ವಾಚಾ ಭಕ್ತ್ಯಾ ಸ್ತೋತುಂ ಪ್ರಚಕ್ರಮೇ ॥
ಅನುವಾದ
ಆಗ ದೇವಮುನಿ ಶ್ರೇಷ್ಠರಾದ ನಾರದರು ತನ್ನ ಕಾಂತಿಯಿಂದ ಎಲ್ಲ ದಿಕ್ಕುಗಳನ್ನು ಬೆಳಗಿಸುತ್ತಾ ಶ್ರೀರಾಮ ಚಂದ್ರನ ದರ್ಶನ ಪಡೆಯಲು ಆಗಸದಿಂದ ಇಳಿದು ಬಂದರು. ಕನ್ನೈದಿಲೆಯಂತೆ ನೀಲವರ್ಣನೂ, ಮನೋಹರ ಮೂರ್ತಿಯೂ, ಧನುರ್ಧಾರಿಯೂ, ನಸುಗೆಂಪಾದ ವಿಶಾಲ ಕಣ್ಣುಗಳುಳ್ಳವನೂ, ಐಂದ್ರಾಸದಿಂದ ಸುಶೋಭಿತ ಭುಜಗಳುಳ್ಳವನೂ, ತನ್ನ ಕರುಣಾರ್ದ್ರದೃಷ್ಟಿಯಿಂದ ಬಾಣಪೀಡಿತರಾದ ವಾನರರನ್ನು ನೋಡುತ್ತಿರುವ ಆ ಭಗವಾನ್ ಶ್ರೀರಾಮನನ್ನು ದರ್ಶಿಸುತ್ತಾ, ನಾರದರು ಗದ್ಗದ ಕಂಠದಿಂದ ಈ ರೀತಿ ಸ್ತುತಿಸತೊಡಗಿದರು - ॥31-33॥
(ಶ್ಲೋಕ-34)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ದೇವದೇವ ಜಗನ್ನಾಥ ಪರಮಾತ್ಮನ್ ಸನಾತನ ।
ನಾರಾಯಣಾಖಿಲಾಧಾರ ವಿಶ್ವಸಾಕ್ಷಿನ್ನಮೋಽಸ್ತು ತೇ ॥
ಅನುವಾದ
ನಾರದರು ಇಂತೆಂದರು — ‘‘ಹೇ ದೇವದೇವನೆ! ಜಗನ್ನಾಯಕನೆ! ಪರಮಾತ್ಮನೆ! ಸನಾತನನೆ! ನಾರಾಯಣನೆ! ಅಖಿಲಾಧಾರನೆ! ವಿಶ್ವಸಾಕ್ಷಿಯೆ! ನಿನಗೆ ನಮಸ್ಕಾರವು. ॥34॥
(ಶ್ಲೋಕ-35)
ಮೂಲಮ್
ವಿಶುದ್ಧಜ್ಞಾನರೂಪೋಽಪಿ ತ್ವಂ ಲೋಕಾನತಿವಂಚಯನ್ ।
ಮಾಯಯಾ ಮನುಜಾಕಾರಃ ಸುಖದುಃಖಾದಿಮಾನಿವ ॥
ಅನುವಾದ
ನೀನು ಪರಿಶುದ್ಧಜ್ಞಾನ ಸ್ವರೂಪನಾಗಿರುವೆ; ಆದರೂ ಲೋಕ (ಜನ)ಗಳನ್ನು ಬಹಳವಾಗಿ ಮೋಹಗೊಳಿಸುತ್ತಾ ಮಾಯೆಯಿಂದ ಮನುಷ್ಯರೂಪವನ್ನು ಧರಿಸಿ ಸುಖ-ದುಃಖಾದಿಗಳುಳ್ಳವನಂತೆ ತೋರಿಕೊಳ್ಳುತ್ತಿರುವೆ. ॥35॥
(ಶ್ಲೋಕ-36)
ಮೂಲಮ್
ತ್ವಂ ಮಾಯಯಾ ಗುಹ್ಯಮಾನಃ ಸರ್ವೇಷಾಂ ಹೃದಿ ಸಂಸ್ಥಿತಃ ।
ಸ್ವಯಂಜ್ಯೋತಿಃಸ್ವಭಾವಸ್ತ್ವಂ ವ್ಯಕ್ತ ಏವಾಮಲಾತ್ಮನಾಮ್ ॥
ಅನುವಾದ
ನೀನು ಮಾಯೆಯಿಂದ ಆಚ್ಛಾದಿತನಾಗಿ ಅಂತರ್ಯಾಮಿ ರೂಪದಿಂದ ಎಲ್ಲರ ಹೃದಯದಲ್ಲಿಯೂ ಸ್ಥಿತನಾಗಿರುವೆ. ನೀನು ಸ್ವಭಾವತಃ ಸ್ವಯಂ ಪ್ರಕಾಶನಾಗಿದ್ದು, ಪರಿಶುದ್ಧ ಹೃದಯವುಳ್ಳವರಿಗೆ ನಿನ್ನ ಸಾಕ್ಷಾತ್ಕಾರವಾಗುತ್ತದೆ. ॥36॥
(ಶ್ಲೋಕ-37)
ಮೂಲಮ್
ಉನ್ಮೀಲಯನ್ ಸೃಜಸ್ಯೇತನ್ನೇತ್ರೇ ರಾಮ ಜಗತಯಮ್ ।
ಉಪಸಂಹ್ರಿಯತೇ ಸರ್ವಂ ತ್ವಯಾ ಚಕ್ಷುರ್ನಿಮೀಲನಾತ್ ॥
ಅನುವಾದ
ಹೇ ರಾಮಾ! ನೀನು ಕಣ್ಣು ತೆರೆದಾಗ ಈ ತ್ರಿಲೋಕವನ್ನು ಸೃಷ್ಟಿಸುವೆ. ಹಾಗೆಯೇ ನೀನು ಕಣ್ಣು ಮುಚ್ಚಿದಾಗ ಎಲ್ಲವೂ ನಿನ್ನಲ್ಲಿ ಲಯಹೊಂದುತ್ತದೆ. ॥37॥
(ಶ್ಲೋಕ-38)
ಮೂಲಮ್
ಯಸ್ಮಿನ್ಸರ್ವಮಿದಂ ಭಾತಿ ಯತಶ್ಚೈತಚ್ಚರಾಚರಮ್ ।
ಯಸ್ಮಾನ್ನ ಕಿಂಚಿಲ್ಲೋಕೇಽಸ್ಮಿಂಸ್ತಸ್ಮೈ ತೇ ಬ್ರಹ್ಮಣೇ ನಮಃ ॥
ಅನುವಾದ
ಈ ಜಗತ್ತೆಲ್ಲವೂ ಯಾರಲ್ಲಿ ತೋರುತ್ತದೋ, ಚರಾಚರಾತ್ಮಕವಾದ ಇದೆಲ್ಲವೂ ಯಾರಿಂದ ಹೊರಹೊಮ್ಮಿದೆಯೋ, ಈ ಜಗತ್ತಿನಲ್ಲಿ ಯಾರ ಹೊರತು ಏನೂ ಇಲ್ಲವೋ, ಅಂತಹ ಬ್ರಹ್ಮನೂ ನೀನೇ ಆಗಿರುವೆ; ನಿನಗೆ ನಮಸ್ಕಾರಗಳು. ॥38॥
(ಶ್ಲೋಕ-39)
ಮೂಲಮ್
ಪ್ರಕೃತಿಂ ಪುರುಷಂ ಕಾಲಂ ವ್ಯಕ್ತಾವ್ಯಕ್ತಸ್ವರೂಪಿಣಮ್ ।
ಯಂ ಜಾನಂತಿ ಮುನಿಶ್ರೇಷ್ಠಾಸ್ತಸ್ಮೈ ರಾಮಾಯ ತೇ ನಮಃ ॥
ಅನುವಾದ
ಮುನಿಶ್ರೇಷ್ಠರು ನಿನ್ನನ್ನು ಪ್ರಕೃತಿ, ಪುರುಷ, ಕಾಲ, ವ್ಯಕ್ತ-ಅವ್ಯಕ್ತ ಹೀಗೆ ಎಲ್ಲ ಸ್ವರೂಪಗಳಿಂದಲೂ ಅರಿತುಕೊಂಡಿರುವರು. ಅಂತಹ ಶ್ರೀರಾಮನಾದ ನಿನಗೆ ನಮಸ್ಕಾರವು. ॥39॥
(ಶ್ಲೋಕ-40)
ಮೂಲಮ್
ವಿಕಾರರಹಿತಂ ಶುದ್ಧಂ ಜ್ಞಾನರೂಪಂ ಶ್ರುತಿರ್ಜಗೌ ।
ತ್ವಾಂ ಸರ್ವಜಗದಾಕಾರಮೂರ್ತಿಂ ಚಾಪ್ಯಾಹ ಸಾ ಶ್ರುತಿಃ ॥
(ಶ್ಲೋಕ-41)
ಮೂಲಮ್
ವಿರೋಧೋ ದೃಶ್ಯತೇ ದೇವ ವೈದಿಕೋ ವೇದವಾದಿನಾಮ್ ।
ನಿಶ್ಚಯಂ ನಾಧಿಗಚ್ಛಂತಿ ತ್ವತ್ಪ್ರಸಾದಂ ವಿನಾ ಬುಧಾಃ ॥
ಅನುವಾದ
ವೇದಗಳು ನಿನ್ನನ್ನು ವಿಕಾರರಹಿತನೆಂದೂ, ಶುದ್ಧಜ್ಞಾನ ಸ್ವರೂಪನೆಂದೂ ಹೊಗಳುತ್ತಿವೆ. ಹಾಗೆಯೇ ನೀನು ಎಲ್ಲ ಜಗತ್ತುಗಳ ಸ್ವರೂಪನೆಂದೂ ಅವೇ ಹೇಳುತ್ತವೆ. ಹೀಗೆ ವೇದವಾದಿಗಳಿಲ್ಲಿಯೂ (ನೀನು ಜಗದಾಕಾರನೋ, ನಿರಾಕಾರನೋ ಎಂಬ ವಿಷಯದಲ್ಲಿ) ವಿರೋಧವು ಕಂಡು ಬರುತ್ತದೆ. ಆದ್ದರಿಂದ ನಿನ್ನ ಅನುಗ್ರಹವಿಲ್ಲದೆ ವಿದ್ವಜ್ಜನರು ಈ ಕುರಿತು ನಿಶ್ಚಯವನ್ನು ಹೊಂದಲಾರರು. ॥40-41॥
(ಶ್ಲೋಕ-42)
ಮೂಲಮ್
ಮಾಯಯಾ ಕ್ರೀಡತೋ ದೇವ ನ ವಿರೋಧೋ ಮನಾಗಪಿ ।
ರಶ್ಮಿಜಾಲಂ ರವೇರ್ಯದ್ವದ್ ದೃಶ್ಯತೇ ಜಲವದ್ ಭ್ರಮಾತ್ ॥
(ಶ್ಲೋಕ-43)
ಮೂಲಮ್
ಭ್ರಾಂತಿಜ್ಞಾನಾತ್ತಥಾ ರಾಮ ತ್ವಯಿ ಸರ್ವಂ ಪ್ರಕಲ್ಪ್ಯತೇ ।
ಮನಸೋಽವಿಷಯೋ ದೇವ ರೂಪಂ ತೇ ನಿರ್ಗುಣಂ ಪರಮ್ ॥
ಅನುವಾದ
ದೇವಾ! ಮಾಯೆಯಿಂದ ಲೀಲೆಯನ್ನು ನಡೆಸುತ್ತಿರುವ ನಿನ್ನ ಸ್ವರೂಪದಲ್ಲಿ ಸ್ವಲ್ಪವೂ ವಿರೋಧವಿಲ್ಲ. ಭ್ರಾಂತಿಯಿಂದ ಸೂರ್ಯನ ಕಿರಣಗಳು ನೀರಿನಂತೆ ಕಂಡುಬಂದಂತೆ, ಭ್ರಾಂತಿ ಬುದ್ಧಿಯ ನಿಮಿತ್ತ ಎಲ್ಲವೂ ನಿನ್ನಲ್ಲಿ ಕಲ್ಪಿತವಾಗಿರುವುದು. ರಾಮಾ! ನಿನ್ನ ನಿರ್ಗುಣ ರೂಪವಾದರೋ ಮನಸ್ಸಿಗೆ ಅಗೋಚರವಾಗಿದೆ. ॥42-43॥
(ಶ್ಲೋಕ-44)
ಮೂಲಮ್
ಕಥಂ ದೃಶ್ಯಂ ಭವೇದ್ದೇವ ದೃಶ್ಯಾಭಾವೇ ಭಜೇತ್ಕಥಮ್ ।
ಅತಸ್ತವಾವತಾರೇಷು ರೂಪಾಣಿ ನಿಪುಣಾ ಭುವಿ ॥
(ಶ್ಲೋಕ-45)
ಮೂಲಮ್
ಭಜಂತಿ ಬುದ್ಧಿಸಂಪನ್ನಾಸ್ತರಂತ್ಯೇವ ಭವಾರ್ಣವಮ್ ।
ಕಾಮಕ್ರೋಧಾದಯಸ್ತತ್ರ ಬಹವಃ ಪರಿಪಂಥಿನಃ ॥
ಅನುವಾದ
ಅದು ಹೇಗೆ ತಾನೇ ಯಾರಿಗಾದರೂ ಕಂಡುಬಂದೀತು? ಕಾಣದೇ ಇರುವಾಗ ಭಜಿಸುವುದಾದರೂ ಹೇಗೆ? ಆದ್ದರಿಂದ ಜಗತ್ತಿನಲ್ಲಿ ಬುದ್ಧಿವಂತರೂ, ಜಾಣರೂ ನಿನ್ನ ಅವತಾರ ರೂಪಗಳನ್ನೇ ಭಜಿಸುತ್ತಾರೆ. ಅವರು ಜ್ಞಾನಸಂಪನ್ನರಾಗಿ ಸಂಸಾರ ಸಮುದ್ರವನ್ನು ದಾಟಿಹೋಗುತ್ತಾರೆ. ಈ ಭಕ್ತಿ ಮಾರ್ಗದಲ್ಲಿ ಕಾಮ, ಕ್ರೋಧ ಮುಂತಾದವು ಅನೇಕ ವಿಘ್ನಗಳೂ ಇರುತ್ತವೆ. ॥44-45॥
(ಶ್ಲೋಕ-46)
ಮೂಲಮ್
ಭೀಷಯಂತಿ ಸದಾ ಚೇತೋ ಮಾರ್ಜಾರಾ ಮೂಷಕಂ ಯಥಾ ।
ತ್ವನ್ನಾಮ ಸ್ಮರತಾಂ ನಿತ್ಯಂ ತ್ವದ್ರೂಪಮಪಿ ಮಾನಸೇ ॥
(ಶ್ಲೋಕ-47)
ಮೂಲಮ್
ತ್ವ ತ್ಪೂಜಾನಿರತಾನಾಂ ತೇ ಕಥಾಮೃತಪರಾತ್ಮನಾಮ್ ।
ತ್ವದ್ಭಕ್ತಸಂಗಿನಾಂ ರಾಮ ಸಂಸಾರೋ ಗೋಷ್ಪದಾಯತೇ ॥
ಅನುವಾದ
ಅವು ಬೆಕ್ಕು ಇಲಿಗಳನ್ನು ಬೆದರಿಸುವಂತೆ ಚಿತ್ತವನ್ನು ಯಾವಾಗಲೂ ಹೆದರಿಸುತ್ತವೆ. ರಾಮಾ! ನಿರಂತರವಾಗಿ ನಿನ್ನ ನಾಮಸ್ಮರಣೆ ಮಾಡುವವರಿಗೆ, ನಿನ್ನ ರೂಪವನ್ನು ಸದಾಕಾಲ ಹೃದಯದಲ್ಲಿ ಧ್ಯಾನಿಸುವವರಿಗೆ ನಿನ್ನ ಪೂಜೆಯಲ್ಲಿ ತತ್ಪರರಾದವರಿಗೆ, ನಿನ್ನ ಕಥಾಮೃತವನ್ನು ಯಾವಾಗಲೂ ಪಾನಮಾಡುವವರಿಗೆ ಮತ್ತು ನಿನ್ನ ಭಕ್ತರ ಸಂಗದಲ್ಲಿರುವವರಿಗೆ ಈ ಸಂಸಾರ ಸಾಗರವು ದುಸ್ತರವಾಗಿದ್ದರೂ ಗೋವಿನ ಗೊರಸಿನಂತಾಗುತ್ತದೆ (ಕಿರಿದಾಗುತ್ತದೆ). ॥46-47॥
(ಶ್ಲೋಕ-48)
ಮೂಲಮ್
ಅತಸ್ತೇ ಸಗುಣಂ ರೂಪಂ ಧ್ಯಾತ್ವಾಹಂ ಸರ್ವದಾ ಹೃದಿ ।
ಮುಕ್ತಶ್ಚರಾಮಿ ಲೋಕೇಷು ಪೂಜ್ಯೋಽಹಂ ಸರ್ವದೈವತೈಃ ॥
ಅನುವಾದ
ಆದ್ದರಿಂದ ನಾನು ನಿನ್ನ ಸಗುಣ ರೂಪವನ್ನೇ ಯಾವಾಗಲೂ ಹೃದಯದಲ್ಲಿ ಧ್ಯಾನಮಾಡುತ್ತ ಜೀವನ್ಮುಕ್ತ ನಾಗಿ ಲೋಕಾಂತರಗಳಲ್ಲಿ ಸಂಚರಿಸುತ್ತಿದ್ದೇನೆ ಹಾಗೂ ಎಲ್ಲ ದೇವತೆಗಳಿಂದ ಪೂಜಿತನಾಗಿದ್ದೇನೆ. ॥48॥
(ಶ್ಲೋಕ-49)
ಮೂಲಮ್
ರಾಮ ತ್ವಯಾ ಮಹತ್ಕಾರ್ಯಂ ಕೃತಂ ದೇವಹಿತೇಚ್ಛಯಾ ।
ಕುಂಭಕರ್ಣವಧೇನಾದ್ಯ ಭೂಭಾರೋಽಯಂ ಗತಃ ಪ್ರಭೋ ॥
ಅನುವಾದ
ಹೇರಾಮಾ! ನೀನು ದೇವತೆಗಳ ಹಿತದ ಇಚ್ಛೆಯಿಂದ ಬಹಳ ದೊಡ್ಡ ಕಾರ್ಯವನ್ನು ಮಾಡಿರುವಿ. ಹೇ ಪ್ರಭು! ಈ ಕುಂಭಕರ್ಣನ ವಧೆಯಿಂದ ಇಂದು ಭೂಭಾರವು ಬಹಳಷ್ಟು ಕಡಿಮೆಯಾಯಿತು. ॥49॥
(ಶ್ಲೋಕ-50)
ಮೂಲಮ್
ಶ್ವೋ ಹನಿಷ್ಯತಿ ಸೌಮಿತ್ರಿರಿಂದ್ರಜೇತಾರಮಾಹವೇ ।
ಹನಿಷ್ಯಸೇಽಥ ರಾಮ ತ್ವಂ ಪರಶ್ವೋ ದಶಕಂಧರಮ್ ॥
ಅನುವಾದ
ನಾಳೆ ಲಕ್ಷ್ಮಣನು ಯುದ್ಧದಲ್ಲಿ ಇಂದ್ರಜಿತುವನ್ನು ಕೊಲ್ಲುವನು. ರಾಮಾ! ನಾಡಿದ್ದು ನೀನು ರಾವಣನನ್ನು ಕೊಲ್ಲಲಿರುವೆ. ॥50॥
(ಶ್ಲೋಕ-51)
ಮೂಲಮ್
ಪಶ್ಯಾಮಿ ಸರ್ವಂ ದೇವೇಶ ಸಿದ್ಧೈಃ ಸಹ ನಭೋಗತಃ ।
ಅನುಗೃಹ್ಣೀಷ್ವ ಮಾಂ ದೇವ ಗಮಿಷ್ಯಾಮಿ ಸುರಾಲಯಮ್ ॥
ಅನುವಾದ
ಓ ದೇವತೆಗಳ ಒಡೆಯಾ! ನಾನು ಸಿದ್ಧರೊಡನೆ ಆಕಾಶದಲ್ಲಿ ನಿಂತು ಇದೆಲ್ಲವನ್ನು ನೋಡುವೆನು. ಹೇ ದೇವಾ! ನನಗೆ ಅನುಗ್ರಹಿಸು. ನಾನು ಈಗ ದೇವಲೋಕಕ್ಕೆ ಹೋಗುತ್ತೇನೆ.’’ ॥51॥
(ಶ್ಲೋಕ-52)
ಮೂಲಮ್
ಇತ್ಯುಕ್ತ್ವಾ ರಾಮಮಾಮಂತ್ರ್ಯ ನಾರದೋ ಭಗವಾನೃಷಿಃ ।
ಯಯೌ ದೇವೈಃ ಪೂಜ್ಯಮಾನೋ ಬ್ರಹ್ಮಲೋಕಮಕಲ್ಮಷಮ್ ॥
ಅನುವಾದ
ಹೀಗೆಂದು ಹೇಳಿ ಮುನಿವರ ನಾರದರು ಶ್ರೀರಾಮಚಂದ್ರನಿಂದ ಬೀಳ್ಕೊಂಡು, ದೇವತೆಗಳಿಂದ ಪೂಜಿತರೂ, ಪಾಪರಹಿತರೂ ಆದ ಅವರು ಬ್ರಹ್ಮಲೋಕಕ್ಕೆ ಹೊರಟು ಹೋದರು. ॥52॥
(ಶ್ಲೋಕ-53)
ಮೂಲಮ್
ಭ್ರಾತರಂ ನಿಹತಂ ಶ್ರುತ್ವಾ ಕುಂಭಕರ್ಣಂ ಮಹಾಬಲಮ್ ।
ರಾವಣಃ ಶೋಕಸಂತಪ್ತೋ ರಾಮೇಣಾಕ್ಲಿಷ್ಟಕರ್ಮಣಾ ॥
(ಶ್ಲೋಕ-54)
ಮೂಲಮ್
ಮೂರ್ಚ್ಛಿತಃ ಪತಿತೋ ಭೂಮಾವುತ್ಥಾಯ ವಿಲಲಾಪ ಹ ।
ಪಿತೃವ್ಯಂ ನಿಹತಂ ಶ್ರುತ್ವಾ ಪಿತರಂ ಚಾತಿವಿಹ್ವಲಮ್ ॥
(ಶ್ಲೋಕ-55)
ಮೂಲಮ್
ಇಂದ್ರಜಿತ್ಪ್ರಾಹ ಶೋಕಾರ್ತಂ ತ್ಯಜ ಶೋಕಂ ಮಹಾಮತೇ ।
ಮಯಿ ಜೀವತಿ ರಾಜೇಂದ್ರ ಮೇಘನಾದೇ ಮಹಾಬಲೇ ॥
(ಶ್ಲೋಕ-56)
ಮೂಲಮ್
ದುಃಖಸ್ಯಾವಸರಃ ಕುತ್ರ ದೇವಾಂತಕ ಮಹಾಮತೇ ।
ವ್ಯೇತು ತೇ ದುಃಖಮಖಿಲಂ ಸ್ವಸ್ಥೋ ಭವ ಮಹೀಪತೇ ॥
ಅನುವಾದ
ಮಹಾಬಲಶಾಲಿಯಾದ ಸೋದರ ಕುಂಭಕರ್ಣನು, ಅದ್ಭುತ ಕರ್ಮಮಾಡುವಂತಹ ಭಗವಾನ್ ಶ್ರೀರಾಮನಿಂದ ಹತನಾದುದನ್ನು ಕೇಳಿ ರಾವಣನು ಮೂರ್ಛೆಹೊಂದಿ ನೆಲದ ಮೇಲೆ ಬಿದ್ದುಬಿಟ್ಟನು. ಬಳಿಕ ಎಚ್ಚತ್ತು ವಿಲಾಪಿಸತೊಡಗಿದನು. ಆಗ ಇಂದ್ರಜಿತುವು ತನ್ನ ಚಿಕ್ಕಪ್ಪನು ಮರಣ ಹೊಂದಿದ ಕಾರಣದಿಂದ ತಂದೆಯು ಅತಿ ದುಃಖಿತನಾಗಿರುವುದನ್ನು ಕಂಡು ತಂದೆಯ ಬಳಿಗೆ ಬಂದು ಹೇಳುತ್ತಾನೆ ‘‘ಮಹಾಬುದ್ಧಿಶಾಲಿಯಾದ ಅಪ್ಪಾ! ಶೋಕವನ್ನು ಬಿಡು. ಮಹಾಬಲಶಾಲಿಯಾದ ಇಂದ್ರಜಿತುವು ಜೀವಂತನಾಗಿರುವಾಗ ನಿನ್ನ ದುಃಖಕ್ಕೆ ಕಾರಣವಾದರೂ ಎಲ್ಲಿದೆ? ದೇವತೆಗಳಿಗೆ ಕಾಲಸ್ವರೂಪನಾದ ಮಹಾನ್ ಬುದ್ಧಿಸಂಪನ್ನ ಮಹಾರಾಜನೆ! ನೀನು ಎಲ್ಲ ದುಃಖವನ್ನು ಬಿಟ್ಟು ಸಮಾಧಾನ ತಂದುಕೊ. ॥53-56॥
(ಶ್ಲೋಕ-57)
ಮೂಲಮ್
ಸರ್ವಂ ಸಮೀಕರಿಷ್ಯಾಮಿ ಹನಿಷ್ಯಾಮಿ ಚ ವೈ ರಿಪೂನ್ ।
ಗತ್ವಾ ನಿಕುಂಭಿಲಾಂ ಸದ್ಯಸ್ತರ್ಪಯಿತ್ವಾ ಹುತಾಶನಮ್ ॥
(ಶ್ಲೋಕ-58)
ಮೂಲಮ್
ಲಬ್ಧ್ವಾ ರಥಾದಿಕಂ ತಸ್ಮಾದಜೇಯೋಹಂ ಭವಾಮ್ಯರೇಃ ।
ಇತ್ಯುಕ್ತ್ವಾ ತ್ವರಿತಂ ಗತ್ವಾ ನಿರ್ದಿಷ್ಟಂ ಹವನಸ್ಥಲಮ್ ॥
ಅನುವಾದ
ನಾನು ಎಲ್ಲವನ್ನು ಸರಿಪಡಿಸುವೆನು. ಈ ಶತ್ರುಗಳೆಲ್ಲರನ್ನು ಕೊಂದುಹಾಕುವೆ. ಈಗ ನಾನು ನಿಕುಂಭಿಳಾ ಗುಹೆಗೆ ಹೋಗಿ, ಅಗ್ನಿಯನ್ನು ತೃಪ್ತಿಪಡಿಸಿ ರಥವೇ ಮುಂತಾದವುಗಳನ್ನು ಪಡೆದುಕೊಳ್ಳುವೆನು. ಇದರಿಂದ ನಾನು ಶತ್ರುಗಳಿಗೆ ಅಜೇಯನಾಗುವೆನು’’ ಎಂದು ಹೇಳಿ ಅವನು ನಿರ್ದಿಷ್ಟ ಯಜ್ಞಶಾಲೆಗೆ ಹೊರಟು ಹೋದನು. ॥57-58॥
(ಶ್ಲೋಕ-59)
ಮೂಲಮ್
ರಕ್ತಮಾಲ್ಯಾಂಬರಧರೋ ರಕ್ತಗಂಧಾನುಲೇಪನಃ ।
ನಿಕುಂಭಿಲಾಸ್ಥಲೇ ವೌನೀ ಹವನಾಯೋಪಚಕ್ರಮೇ ॥
ಅನುವಾದ
ಆ ನಿಕುಂಭಿಳಾ ಎಂಬ ದೇವಿಯ ಸ್ಥಾನಕ್ಕೆ ಹೋಗಿ ಅವನು ಕೆಂಪಾದ ಬಟ್ಟೆಗಳನ್ನು, ಹೂ ಮಾಲೆಯನ್ನು, ಕೆಂಪಾದ ಗಂಧವನ್ನು ಲೇಪಿಸಿಕೊಂಡು ಮೌನವಾಗಿ ಕುಳಿತು ಹೋಮ ಮಾಡಲಾರಂಭಿಸಿದನು. ॥59॥
(ಶ್ಲೋಕ-60)
ಮೂಲಮ್
ವಿಭೀಷಣೋಽಥ ತಚ್ಛ್ರುತ್ವಾ ಮೇಘನಾದಸ್ಯ ಚೇಷ್ಟಿತಮ್ ।
ಪ್ರಾಹ ರಾಮಾಯ ಸಕಲಂ ಹೋಮಾರಂಭಂ ದುರಾತ್ಮನಃ ॥
(ಶ್ಲೋಕ-61)
ಮೂಲಮ್
ಸಮಾಪ್ಯತೇ ಚೇದ್ಧೋಮೋಽಯಂ ಮೇಘನಾದಸ್ಯ ದುರ್ಮತೇಃ ।
ತದಾಜೇಯೋ ಭವೇದ್ರಾಮ ಮೇಘನಾದಃ ಸುರಾಸುರೈಃ ॥
ಅನುವಾದ
ವಿಭೀಷಣನಿಗೆ ಮೇಘನಾದನ ಕಾರ್ಯದ ಸುಳಿವು ಸಿಕ್ಕಿದಾಗ ಅವನು ಆ ದುರಾತ್ಮನ ಹೋಮಾರಂಭದ ಎಲ್ಲ ವೃತ್ತಾಂತ ವನ್ನು ಶ್ರೀರಾಮಚಂದ್ರನಿಗೆ ನಿವೇದಿಸಿಕೊಂಡನು ‘‘ಹೇ ರಾಮಾ! ದುರ್ಬುದ್ಧಿಯಾದ ಇಂದ್ರಜಿತುವಿನ ಈ ಯಾಗವು ನಿರ್ವಿಘ್ನವಾಗಿ ಪೂರ್ಣಗೊಂಡರೆ ಅವನು ದೇವಾಸುರರಿಗೆ ಅಜೇಯನಾಗಿ ಬಿಡುವನು. ॥60-61॥
(ಶ್ಲೋಕ-62)
ಮೂಲಮ್
ಅತಃ ಶೀಘ್ರಂ ಲಕ್ಷ್ಮಣೇನ ಘಾತಯಿಷ್ಯಾಮಿ ರಾವಣಿಮ್ ।
ಆಜ್ಞಾಪಯ ಮಯಾ ಸಾರ್ಧಂ ಲಕ್ಷ್ಮಣಂ ಬಲಿನಾಂ ವರಮ್ ।
ಹನಿಷ್ಯತಿ ನ ಸಂದೇಹೋ ಮೇಘನಾದಂ ತವಾನುಜಃ ॥
ಅನುವಾದ
ಆದ್ದರಿಂದ ನಾನು ಬೇಗನೆ ಆ ರಾವಣ ಪುತ್ರನನ್ನು ಲಕ್ಷ್ಮಣನಿಂದ ಕೊಲ್ಲಿಸುವೆನು. ಬಲಶಾಲಿಗಳಲ್ಲಿ ಶ್ರೇಷ್ಠನಾದ ಲಕ್ಷ್ಮಣನಿಗೆ ನನ್ನೊಡನೆ ಸೇರಿ ಈ ಕಾರ್ಯವನ್ನು ಕೈಗೊಳ್ಳುವಂತೆ ಅಪ್ಪಣೆ ಮಾಡು. ನಿನ್ನ ತಮ್ಮನು ಮೇಘನಾದನನ್ನು ಖಂಡಿತವಾಗಿ ಕೊಲ್ಲುವನು. ಇದರಲ್ಲಿ ಸಂದೇಹವೇ ಇಲ್ಲ.’’ ॥62॥
(ಶ್ಲೋಕ-63)
ಮೂಲಮ್ (ವಾಚನಮ್)
ಶ್ರೀರಾಮಚಂದ್ರ ಉವಾಚ
ಮೂಲಮ್
ಅಹಮೇವಾಗಮಿಷ್ಯಾಮಿ ಹಂತುಮಿಂದ್ರಜಿತಂ ರಿಪುಮ್ ।
ಆಗ್ನೇಯೇನ ಮಹಾಸೇಣ ಸರ್ವರಾಕ್ಷಸಘಾತಿನಾ ॥
ಅನುವಾದ
ಶ್ರೀರಾಮಚಂದ್ರನು ಇಂತೆಂದನು — ‘‘ಎಲ್ಲ ರಾಕ್ಷಸರನ್ನು ಸಂಹರಿಸುವಂತಹ ಆಗ್ನೆಯಾಸದಿಂದ ಶತ್ರುವಾದ ಇಂದ್ರಜಿತುವನ್ನು ಸಂಹರಿಸಲು ನಾನೇ ಹೊರಡುವೆನು.’’ ॥63॥
(ಶ್ಲೋಕ-64)
ಮೂಲಮ್
ವಿಭೀಷಣೋಪಿ ತಂ ಪ್ರಾಹ ನಾಸಾವನ್ಯೈರ್ನಿಹನ್ಯತೇ ।
ಯಸ್ತು ದ್ವಾದಶ ವರ್ಷಾಣಿ ನಿದ್ರಾಹಾರವಿವರ್ಜಿತಃ ॥
(ಶ್ಲೋಕ-65)
ಮೂಲಮ್
ತೇನೈವ ಮೃತ್ಯುರ್ನಿರ್ದಿಷ್ಟೋ ಬ್ರಹ್ಮಣಾಸ್ಯ ದುರಾತ್ಮನಃ ।
ಲಕ್ಷ್ಮಣಸ್ತು ಅಯೋಧ್ಯಾಯಾ ನಿರ್ಗಮ್ಯಾಯಾತ್ತ್ವಯಾ ಸಹ ॥
(ಶ್ಲೋಕ-66)
ಮೂಲಮ್
ತದಾದಿ ನಿದ್ರಾಹಾರಾದೀನ್ನ ಜಾನಾತಿ ರಘೂತ್ತಮ ।
ಸೇವಾರ್ಥಂ ತವ ರಾಜೇಂದ್ರ ಜ್ಞಾತಂ ಸರ್ವಮಿದಂ ಮಯಾ ॥
ಅನುವಾದ
ಆಗ ವಿಭೀಷಣನು ಹೇಳಿದನು — ‘‘ಎಲೈ ರಘುಶ್ರೇಷ್ಠನೆ! ಈ ರಾಕ್ಷಸನು ಲಕ್ಷ್ಮಣನ ಹೊರತು ಬೇರೆ ಯಾರಿಂದಲೂ ಸಾಯಲಾರನು. ಏಕೆಂದರೆ ‘ಹನ್ನೆರಡು ವರ್ಷಗಳ ಕಾಲ ನಿದ್ರಾಹಾರಗಳಿಲ್ಲದೆ ಇರುವವನಿಂದಲೇ ನೀನು ಸಾಯುವೆ’ ಎಂದು ಬ್ರಹ್ಮದೇವರು ಇವನಿಗೆ ವರಕೊಟ್ಟಿರುವನು. ಲಕ್ಷ್ಮಣನಾದರೋ ನಿನ್ನೊಡನೆ ಅಯೋಧ್ಯೆಯಿಂದ ಹೊರಟಮೇಲೆ ಅಂದಿನಿಂದ ಎಂದೂ ನಿದ್ರಾಹಾರಗಳನ್ನು ಸೇವಿಸಿರುವುದಿಲ್ಲ. ನಿನ್ನ ಸೇವೆಗಾಗಿ ಅವನು ಸದಾಕಾಲ ಎಚ್ಚರವಾಗಿಯೇ ಇರುತ್ತಿದ್ದನು. ಇದೆಲ್ಲವೂ ನನಗೆ ಗೊತ್ತಿದೆ. ॥64-66॥
(ಶ್ಲೋಕ-67)
ಮೂಲಮ್
ತದಾಜ್ಞಾಪಯ ದೇವೇಶ ಲಕ್ಷ್ಮಣಂ ತ್ವರಯಾ ಮಯಾ ।
ಹನಿಷ್ಯತಿ ನ ಸಂದೇಹಃ ಶೇಷಃ ಸಾಕ್ಷಾದ್ಧರಾಧರಃ ॥
ಅನುವಾದ
ಆದ್ದರಿಂದ ಹೇ ದೇವೇಶ್ವರಾ! ನೀನು ಬೇಗನೇ ಲಕ್ಷ್ಮಣನಿಗೆ ನನ್ನೊಡನೆ ಹೋಗಲು ಅಪ್ಪಣೆಯನ್ನು ಕೊಡು. ಭೂಮಿಯನ್ನು ಹೊತ್ತಿರುವ ಸಾಕ್ಷಾತ್ ಆದಿಶೇಷನಾದ ಲಕ್ಷ್ಮಣನು ಇಂದ್ರಜಿತನನ್ನು ಖಂಡಿತವಾಗಿ ಕೊಲ್ಲುವನು. ॥67॥
(ಶ್ಲೋಕ-68)
ಮೂಲಮ್
ತ್ವಮೇವ ಸಾಕ್ಷಾಜ್ಜಗತಾಮಧೀಶೋ
ನಾರಾಯಣೋ ಲಕ್ಷ್ಮಣ ಏವ ಶೇಷಃ ।
ಯುವಾಂ ಧರಾಭಾರನಿವಾರಣಾರ್ಥಂ
ಜಾತೌ ಜಗನ್ನಾಟಕಸೂತ್ರಧಾರೌ ॥
ಅನುವಾದ
ನೀನೇ ಜಗದೊಡೆಯನಾದ ಸಾಕ್ಷಾತ್ ನಾರಾಯಣನಾಗಿರುವೆ. ಲಕ್ಷ್ಮಣನೇ ಮಹಾಶೇಷನಾಗಿರುವನು. ಭೂಭಾರವನ್ನು ಕಳೆಯುವುದಕ್ಕಾಗಿ ನೀವಿಬ್ಬರೂ ಜಗತ್ತೆಂಬ ನಾಟಕದ ಸೂತ್ರಧಾರಿಗಳಾಗಿ ಅವತರಿಸಿರುವಿರಿ. ॥68॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಅಷ್ಟಮಃ ಸರ್ಗಃ ॥8॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.