[ಏಳನೆಯ ಸರ್ಗ]
ಭಾಗಸೂಚನಾ
ಕಾಲನೇಮಿಯ ಕಪಟ, ಹನುಮಂತನಿಂದ ಅವನ ವಧೆ, ಲಕ್ಷ್ಮಣನ ಮೂರ್ಛೆ ಕಳೆಯುವುದು ಮತ್ತು ರಾವಣನು ಕುಂಭಕರ್ಣನನ್ನು ಎಚ್ಚರಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಕಾಲನೇಮಿವಚಃ ಶ್ರುತ್ವಾ ರಾವಣೋಮೃತಸನ್ನಿಭಮ್ ।
ಜಜ್ವಾಲ ಕ್ರೋಧತಾಮ್ರಾಕ್ಷಃ ಸರ್ಪಿರದ್ಭಿರಿವಾಗ್ನಿಮತ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಗೌರಿ! ಅಮೃತಕ್ಕೆ ಸಮಾನವಾದ ಕಾಲನೇಮಿಯ ಮಾತುಗಳನ್ನು ಕೇಳಿ ರಾವಣನು ಕೋಪದಿಂದ ಕಣ್ಣು ಕೆಂಪಾಗಿಸಿ ಬೆಂಕಿಯಲ್ಲಿ ಉರಿಯುವ ತುಪ್ಪದಲ್ಲಿ ನೀರುಸೇರಿದ್ದರೆ ಚಟಚಟ ಎನ್ನುವಂತೆ ಉರಿದು ಬಿದ್ದನು. ॥1॥
(ಶ್ಲೋಕ-2)
ಮೂಲಮ್
ನಿಹನ್ಮಿ ತ್ವಾಂ ದುರಾತ್ಮಾನಂ ಮಚ್ಛಾಸನಪರಾಙ್ಮುಖಮ್ ।
ಪರೈಃ ಕಿಂಚಿದ್ಗೃಹೀತ್ವಾ ತ್ವಂ ಭಾಷಸೇ ರಾಮಕಿಂಕರಃ ॥
ಅನುವಾದ
ಅವನೆಂದ ‘‘ಎಲವೋ! ನೀನು ಶತ್ರುವಿನಿಂದ ಕೆಲ ಮಾತನ್ನು ಕಲಿತು ಈ ಪ್ರಕಾರ ರಾಮನ ದಾಸನಂತೆ ಮಾತನಾಡುತ್ತಿರುವೆ ಎಂದು ತಿಳಿಯುತ್ತದೆ. ನೆನಪಿಡು, ದುರಾತ್ಮನೂ, ನನ್ನ ಆಜ್ಞೆಯನ್ನು ತಿರಸ್ಕರಿಸುವವನೂ ಆದ ನಿನ್ನನ್ನು ಈಗಲೇ ಕೊಂದು ಬಿಡುವೆನು.’’ ॥2॥
(ಶ್ಲೋಕ-3)
ಮೂಲಮ್
ಕಾಲನೇಮಿರುವಾಚೇದಂ ರಾವಣಂ ದೇವ ಕಿಂ ಕ್ರುಧಾ ।
ನ ರೋಚತೇ ಮೇ ವಚನಂ ಯದಿ ಗತ್ವಾ ಕರೋಮಿ ತತ್ ॥
ಅನುವಾದ
ಆಗ ಕಾಲನೇಮಿಯು ರಾವಣನನ್ನು ಕುರಿತು ಹೇಳಿದನು ‘‘ಪ್ರಭೋ! ಕೋಪವೇಕೆ ಮಾಡುವಿರಿ. ನನ್ನ ಮಾತು ರುಚಿಸದೆ ಹೋದರೆ ನೀವು ಹೇಳಿದಂತೆ ಹೋಗಿ ಆ ಕೆಲಸವನ್ನು ಕೈಗೊಳ್ಳವೆನು.’’ ॥3॥
(ಶ್ಲೋಕ-4)
ಮೂಲಮ್
ಇತ್ಯುಕ್ತ್ವಾ ಪ್ರಯಯೌ ಶೀಘ್ರಂ ಕಾಲನೇಮಿರ್ಮಹಾಸುರಃ ।
ನೋದಿತೋ ರಾವಣೇನೈವ ಹನೂಮದ್ವಿಘ್ನಕಾರಣಾತ್ ॥
ಅನುವಾದ
ಇಷ್ಟು ಹೇಳಿ ಮಹಾದೈತ್ಯ ಕಾಲನೇಮಿಯು ರಾವಣನ ಪ್ರೇರಣೆಯಿಂದ ಹನುಮಂತನಿಗೆ ವಿಘ್ನವನ್ನುಂಟು ಮಾಡಲು ಅಲ್ಲಿಂದ ಆಗಲೇ ಹೊರಟನು. ॥4॥
(ಶ್ಲೋಕ-5)
ಮೂಲಮ್
ಸ ಗತ್ವಾ ಹಿಮವತ್ಪಾರ್ಶ್ವಂ ತಪೋವನಮಕಲ್ಪಯತ್ ।
ತತ್ರ ಶಿಷ್ಯೈಃ ಪರಿವೃತೋ ಮುನಿವೇಷಧರಃ ಖಲಃ ॥
(ಶ್ಲೋಕ-6)
ಮೂಲಮ್
ಗಚ್ಛತೋ ಮಾರ್ಗಮಾಸಾದ್ಯ ವಾಯುಸೂನೋರ್ಮಹಾತ್ಮನಃ ।
ತತೋ ಗತ್ವಾ ದದರ್ಶಾಥ ಹನೂಮಾನಾಶ್ರಮಂ ಶುಭಮ್ ॥
ಅನುವಾದ
ಅವನು ಹಿಮವತ್ಪರ್ವತದ ತಪ್ಪಲಿಗೆ ಬಂದು, ಆ ಕಡೆಯಿಂದ ಹೋಗುತ್ತಿರುವ ಮಹಾತ್ಮನಾದ ವಾಯುಪುತ್ರನ ಮಾರ್ಗದಲ್ಲಿ ಒಂದು ತಪೋವನವನ್ನು ನಿರ್ಮಿಸಿ, ಅಲ್ಲಿ ಆ ದುಷ್ಟನು ಮುನಿಯ ವೇಷವನ್ನಾಂತು ಶಿಷ್ಯರೊಡಗೂಡಿ ಕುಳಿತು ಬಿಟ್ಟನು. ಹನುಮಂತನು ಅಲ್ಲಿಗೆ ತಲುಪಿದಾಗ ಅವನು ಹೊಸದಾದ ಆ ಸುಂದರ ಆಶ್ರಮವನ್ನು ನೋಡಿದನು. ॥5-6॥
(ಶ್ಲೋಕ-7)
ಮೂಲಮ್
ಚಿಂತಯಾಮಾಸ ಮನಸಾ ಶ್ರೀಮಾನ್ಪವನನಂದನಃ ।
ಪುರಾ ನ ದೃಷ್ಟಮೇತನ್ಮೇ ಮುನಿಮಂಡಲಮುತ್ತಮಮ್ ॥
ಅನುವಾದ
ಅದನ್ನು ನೋಡಿ ಧೀಮಂತನಾದ ಪವನನಂದನನು ‘ನಾನು ಮೊದಲಾದರೋ ಇಂತಹ ಉತ್ತಮ ಮುನಿ ಮಂಡಲವನ್ನು ನೋಡಿರಲಿಲ್ಲವಲ್ಲ!’ ಎಂದು ಮನಸ್ಸಿನಲ್ಲೇ ಯೋಚಿಸಿದನು. ॥7॥
(ಶ್ಲೋಕ-8)
ಮೂಲಮ್
ಮಾರ್ಗೋ ವಿಭ್ರಂಶಿತೋ ವಾ ಮೇ ಭ್ರಮೋ ವಾ ಚಿತ್ತಸಂಭವಃ ।
ಯದ್ವಾವಿಶ್ಯಾಶ್ರಮಪದಂ ದೃಷ್ಟ್ವಾ ಮುನಿಮಶೇಷತಃ ॥
(ಶ್ಲೋಕ-9)
ಮೂಲಮ್
ಪೀತ್ವಾ ಜಲಂ ತತೋ ಯಾಮಿ ದ್ರೋಣಾಚಲಮನುತ್ತಮಮ್ ।
ಇತ್ಯುಕ್ತ್ವಾ ಪ್ರವಿವೇಶಾಥ ಸರ್ವತೋ ಯೋಜನಾಯತಮ್ ॥
ಅನುವಾದ
ನಾನೇನಾದರು ದಾರಿತಪ್ಪಿದೆನೆ? ಅಥವಾ ನನ್ನ ಮನಸ್ಸಿನಲ್ಲಿ ಏನಾದರು ಭ್ರಮೆ ಉಂಟಾಗಿದೆಯೋ? ಹೇಗಾದರೂ ಇರಲಿ; ಈ ಆಶ್ರಮವನ್ನು ಹೊಕ್ಕು ಎಲ್ಲ ಮುನಿಗಳನ್ನೂ ಭೇಟಿ ಮಾಡಿ, ಒಂದಿಷ್ಟು ನೀರು ಕುಡಿದು, ಅನಂತರ ಶ್ರೇಷ್ಠವಾದ ದ್ರೋಣಾಚಲಕ್ಕೆ ಹೊರಡುವೆನು ಎಂದು ಕೊಂಡು ಎಲ್ಲ ಕಡೆಗೂ ಯೋಜನ ದಷ್ಟಗಲವಾಗಿ ಹರಡಿ ಕೊಂಡಿರುವ ಆಶ್ರಮವನ್ನು ಹೊಕ್ಕನು. ॥8-9॥
(ಶ್ಲೋಕ-10)
ಮೂಲಮ್
ಆಶ್ರಮಂ ಕದಲೀಶಾಲಖರ್ಜೂರಪನಸಾದಿಭಿಃ ।
ಸಮಾವೃತಂ ಪಕ್ವಲೈರ್ನಮ್ರಶಾಖೈಶ್ಚ ಪಾದಪೈಃ ॥
(ಶ್ಲೋಕ-11)
ಮೂಲಮ್
ವೈರಭಾವವಿನಿರ್ಮುಕ್ತಂ ಶುದ್ಧಂ ನಿರ್ಮಲಲಕ್ಷಣಮ್ ।
ತಸ್ಮಿನ್ಮಹಾಶ್ರಮೇ ರಮ್ಯೇ ಕಾಲನೇಮಿಃ ಸ ರಾಕ್ಷಸಃ ॥
(ಶ್ಲೋಕ-12)
ಮೂಲಮ್
ಇಂದ್ರಯೋಗಂ ಸಮಾಸ್ಥಾಯ ಚಕಾರ ಶಿವಪೂಜನಮ್ ।
ಹನೂಮಾನಭಿವಾದ್ಯಾಹ ಗೌರವೇಣ ಮಹಾಸುರಮ್ ॥
ಅನುವಾದ
ಆ ಆಶ್ರಮವು ಬಾಳೆ, ಶಾಲ, ಖರ್ಜುರ, ಹಲಸು ಮುಂತಾದ ಹಣ್ಣಾದ ಫಲಗಳಿಂದ ಬಾಗಿಹೋದ ರೆಂಬೆಗಳುಳ್ಳ ಅನೇಕ ಮರಗಳಿಂದ ಕೂಡಿತ್ತು. ವೈರ ಭಾವವಿಲ್ಲದ ಪ್ರಾಣಿ ಸಮೂಹಗಳಿಂದಲೂ ಕೂಡಿದ್ದು, ಸ್ವಚ್ಛವಾಗಿ ನಿರ್ಮಲವಾಗಿತ್ತು. ಆ ರಮ್ಯವಾದ ಮಹಾಶ್ರಮದಲ್ಲಿ ಕಾಲನೇಮಿ ರಾಕ್ಷಸನು ಇಂದ್ರಯೋಗ (ಇಂದ್ರಜಾಲ)ವನ್ನು ಧರಿಸಿ ಶಿವಪೂಜೆಯನ್ನು ಮಾಡುತ್ತಿದ್ದನು. ಹನುಮಂತನು ಗೌರವ ಪೂರ್ವಕವಾಗಿ ನಮಸ್ಕರಿಸಿ ಆ ರಾಕ್ಷಸನ ಕುರಿತು ಹೀಗೆಂದನು ॥10-12॥
(ಶ್ಲೋಕ-13)
ಮೂಲಮ್
ಭಗವನ್ ರಾಮದೂತೋಽಹಂ ಹನೂಮಾನ್ನಾಮ ನಾಮತಃ ।
ರಾಮಕಾರ್ಯೇಣ ಮಹತಾ ಕ್ಷೀರಾಬ್ಧಿಂ ಗಂತುಮುದ್ಯತಃ ॥
ಅನುವಾದ
‘‘ಪೂಜ್ಯರೆ! ನಾನು ಭಗವಾನ್ ಶ್ರೀರಾಮನದಾಸನು. ನನ್ನನ್ನು ಹನುಮಂತನೆಂದು ಹೇಳುತ್ತಾರೆ. ನಾನು ಶ್ರೀರಾಮ ಚಂದ್ರನ ಒಂದು ಮಹತ್ತಾದ ಕಾರ್ಯಕ್ಕಾಗಿ ಕ್ಷೀರ ಸಮುದ್ರಕ್ಕೆ ಹೋಗುತ್ತಿರುವೆನು. ॥13॥
(ಶ್ಲೋಕ-14)
ಮೂಲಮ್
ತೃಷಾ ಮಾಂ ಬಾಧತೇ ಬ್ರಹ್ಮನ್ನುದಕಂ ಕುತ್ರ ವಿದ್ಯತೇ ।
ಯಥೇಚ್ಛಂ ಪಾತುಮಿಚ್ಛಾಮಿ ಕಥ್ಯತಾಂ ಮೇ ಮುನೀಶ್ವರ ॥
ಅನುವಾದ
ಮುನಿವರ್ಯರೆ! ನನಗೆ ತುಂಬಾ ಬಾಯಾರಿಕೆಯಾಗಿದೆ. ನಾನು ಸಮೃದ್ಧವಾಗಿ ನೀರು ಕುಡಿಯಲು ಬಯಸುತ್ತಿದ್ದೇನೆ. ದಯವಿಟ್ಟು ಇಲ್ಲಿ ನೀರೆಲ್ಲಿದೆ ಎಂದು ತಿಳಿಸಿರಿ.’’ ॥14॥
(ಶ್ಲೋಕ-15)
ಮೂಲಮ್
ತಚ್ಛ್ರುತ್ವಾ ಮಾರುತೇರ್ವಾಕ್ಯಂ ಕಾಲನೇಮಿಸ್ತಮಬ್ರವೀತ್ ।
ಕಮಂಡಲುಗತಂ ತೋಯಂ ಮಮ ತ್ವಂ ಪಾತುಮರ್ಹಸಿ ॥
ಅನುವಾದ
ಮಾರುತಿಯ ಮಾತನ್ನು ಆಲಿಸಿ ಕಾಲನೇಮಿಯು ಹೇಳಿದನು ‘‘ಅಯ್ಯಾ! ನೀನು ನನ್ನ ಕಮಂಡಲುವಿನಲ್ಲಿರುವ ನೀರನ್ನು ಕುಡಿಯಬಹುದು. ॥15॥
(ಶ್ಲೋಕ-16)
ಮೂಲಮ್
ಭುಂಕ್ಷ್ವ ಚೇಮಾನಿ ಪಕ್ವಾನಿ ಫಲಾನಿ ತದನಂತರಮ್ ।
ನಿವಸಸ್ವ ಸುಖೇನಾತ್ರ ನಿದ್ರಾಮೇಹಿ ತ್ವರಾಸ್ತು ಮಾ ॥
ಅನುವಾದ
ಅನಂತರ ಈ ಹಣ್ಣಾಗಿರುವ ಫಲಗಳನ್ನು ತಿಂದು, ಇಲ್ಲಿ ಸುಖವಾಗಿ ವಿಶ್ರಮಿಸಿ ನಿದ್ದೆಮಾಡು. ಅವಸರ ಪಡಬೇಡ. ॥16॥
(ಶ್ಲೋಕ-17)
ಮೂಲಮ್
ಭೂತಂ ಭವ್ಯಂ ಭವಿಷ್ಯಂ ಚ ಜಾನಾಮಿ ತಪಸಾ ಸ್ವಯಮ್ ।
ಉತ್ಥಿತೋ ಲಕ್ಷ್ಮಣಃ ಸರ್ವೇ ವಾನರಾ ರಾಮವೀಕ್ಷಿತಾಃ ॥
ಅನುವಾದ
ನಾನು ನನ್ನ ತಪೋಬಲದಿಂದ ಹಿಂದಿನ, ಮುಂದಿನ, ಈಗಿನ ಎಲ್ಲ ವಿಷಯಗಳನ್ನು ಬಲ್ಲೆನು. ಈಗ ರಾಮಚಂದ್ರನ ದೃಷ್ಟಿಮಾತ್ರದಿಂದಲೇ ಲಕ್ಷ್ಮಣನು ಹಾಗೂ ಎಲ್ಲ ವಾನರವೀರರು ಎಚ್ಚರಗೊಂಡಿರುವರು.’’ ॥17॥
(ಶ್ಲೋಕ-18)
ಮೂಲಮ್
ತಚ್ಛ್ರುತ್ವಾ ಹನುಮಾನಾಹ ಕಮಂಡಲುಜಲೇನ ಮೇ ।
ನ ಶಾಮ್ಯತ್ಯಧಿಕಾ ತೃಷ್ಣಾ ತತೋ ದರ್ಶಯ ಮೇ ಜಲಮ್ ॥
ಅನುವಾದ
ಇದನ್ನು ಕೇಳಿ ಹನುಮಂತನು ಹೇಳಿದನು ‘‘ಈ ಕಮಂಡಲುವಿನ ನೀರಿನಿಂದ ನನ್ನ ಹೆಚ್ಚಾದ ಬಾಯಾರಿಕೆಯು ಹಿಂಗುವಂತಿಲ್ಲ. ಆದ್ದರಿಂದ ದೊಡ್ಡದಾದ ಜಲಾಶಯವನ್ನು ತೋರಿಸು.’’ ॥18॥
(ಶ್ಲೋಕ-19)
ಮೂಲಮ್
ತಥೇತ್ಯಾಜ್ಞಾಪಯಾಮಾಸ ವಟುಂ ಮಾಯಾವಿಕಲ್ಪಿತಮ್ ।
ವಟೋ ದರ್ಶಯ ವಿಸ್ತೀರ್ಣಂ ವಾಯುಸೂನೋರ್ಜಲಾಶಯಮ್ ॥
ಅನುವಾದ
ಆಗ ಹಾಗೇ ಆಗಲಿ ಎಂದು ಹೇಳಿ, ಮಾಯೆಯಿಂದ ನಿರ್ಮಿಸಲ್ಪಟ್ಟ ಬ್ರಹ್ಮಚಾರಿಯನ್ನು ಕುರಿತು ‘‘ಎಲೈ ವಟುವೆ ! ವಾಯು ಪುತ್ರನಿಗೆ ವಿಸ್ತೀರ್ಣವಾದ ಜಲಾಶಯವನ್ನು ತೋರಿಸು’’ ಎಂದು ಆಜ್ಞಾಪಿಸಿದನು. ॥19॥
(ಶ್ಲೋಕ-20)
ಮೂಲಮ್
ನಿಮೀಲ್ಯ ಚಾಕ್ಷಿಣೀ ತೋಯಂ ಪೀತ್ವಾಗಚ್ಛ ಮಮಾಂತಿಕಮ್ ।
ಉಪದೇಕ್ಷ್ಯಾಮಿ ತೇ ಮಂತ್ರಂ ಯೇನ ದ್ರಕ್ಷ್ಯಸಿ ಚೌಷಧೀಃ ॥
ಅನುವಾದ
ಮತ್ತೆ ಹನುಮಂತನನ್ನು ಕುರಿತು ‘‘ಅಯ್ಯಾ! ನೋಡು; ನೀನು ಕಣ್ಣುಗಳನ್ನು ಮುಚ್ಚಿ ನೀರು ಕುಡಿದು ನನ್ನ ಬಳಿಗೆ ಬಾ, ನಿನಗೆ ಔಷಧಿಗಳು ಕಾಣಿಸಿಕೊಳ್ಳುವಂತಹ ಮಂತ್ರವನ್ನು ಉಪದೇಶ ಮಾಡುತ್ತೇನೆ’’ ಎಂದು ಹೇಳಿದನು. ॥20॥
(ಶ್ಲೋಕ-21)
ಮೂಲಮ್
ತಥೇತಿ ದರ್ಶಿತಂ ಶೀಘ್ರಂ ವಟುನಾ ಸಲಿಲಾಶಯಮ್ ।
ಪ್ರವಿಶ್ಯ ಹನುಮಾಂಸ್ತೋಯಮಪಿಬನ್ಮೀಲಿತೇಕ್ಷಣಃ ॥
ಅನುವಾದ
ಹಾಗೆಯೇ ಆಗಲೆಂದು ಹೇಳಿ ಬ್ರಹ್ಮಚಾರಿಯು ಕೂಡಲೇ ಸರೋವರವನ್ನು ತೋರಿಸಿದನು. ಹನುಮಂತನು ಅದನ್ನು ಹೊಕ್ಕು ಕಣ್ಣುಗಳನ್ನು ಮುಚ್ಚಿಕೊಂಡು ನೀರು ಕುಡಿಯ ತೊಡಗಿದನು. ॥21॥
(ಶ್ಲೋಕ-22)
ಮೂಲಮ್
ತತಶ್ಚಾಗತ್ಯ ಮಕರೀ ಮಹಾಮಾಯಾ ಮಹಾಕಪಿಮ್ ।
ಅಗ್ರಸತ್ತಂ ಮಹಾವೇಗಾನ್ಮಾರುತಿಂ ಘೋರರೂಪಿಣೀ ॥
ಅನುವಾದ
ಇಷ್ಟರಲ್ಲಿ ಮಹಾಮಾಯಾ ರೂಪಿಣಿಯಾದ ಭಯಂಕರವಾದ ಒಂದು ಹೆಣ್ಣು ಮೊಸಳೆಯು ಬಂದು ಬಹುವೇಗದಿಂದ ಮಹಾಕಪಿಯಾದ ಹನುಮಂತನನ್ನು ನುಂಗತೊಡಗಿತು. ॥22॥
(ಶ್ಲೋಕ-23)
ಮೂಲಮ್
ತತೋ ದದರ್ಶ ಹನುಮಾನ್ ಗ್ರಸಂತೀಂ ಮಕರೀಂ ರುಷಾ ।
ದಾರಯಾಮಾಸ ಹಸ್ತಾಭ್ಯಾಂ ವದನಂ ಸಾ ಮಮಾರ ಹ ॥
ಅನುವಾದ
ಆಗ ಹನುಮಂತನು ತನ್ನನ್ನು ನುಂಗುತ್ತಿರುವ ಮೊಸಳೆಯನ್ನು ನೋಡಿ ಕೋಪಗೊಂಡು ಎರಡೂ ಕೈಗಳಿಂದ ಅದರ ಬಾಯಿಯನ್ನು ಹಿಡಿದು ಸೀಳಿ ಹಾಕಿದನು. ಅದರಿಂದ ಅದು ಸತ್ತೇಹೋಯಿತು. ॥23॥
(ಶ್ಲೋಕ-24)
ಮೂಲಮ್
ತತೋಽಂತರಿಕ್ಷೇ ದದೃಶೇ ದಿವ್ಯರೂಪಧರಾಂಗನಾ ।
ಧಾನ್ಯಮಾಲೀತಿ ವಿಖ್ಯಾತಾ ಹನೂಮಂತಮಥಾಬ್ರವೀತ್ ॥
(ಶ್ಲೋಕ-25)
ಮೂಲಮ್
ತ್ವತ್ಪ್ರಸಾದಾದಹಂ ಶಾಪಾದ್ವಿಮುಕ್ತಾಸ್ಮಿ ಕಪೀಶ್ವರ ।
ಶಪ್ತಾಹಂ ಮುನಿನಾ ಪೂರ್ವಮಪ್ಸರಾಃ ಕಾರಣಾಂತರೇ ॥
ಅನುವಾದ
ಆಗಲೇ ಆಕಾಶದಲ್ಲಿ ದಿವ್ಯರೂಪವನ್ನು ಧರಿಸಿದ ಓರ್ವ ಯುವತಿಯು ಕಾಣಿಸಿಕೊಂಡಳು. ಅವಳು ಹನುಮಂತನನ್ನು ಕುರಿತು ‘‘ಎಲೈ ಕಪಿಶ್ರೇಷ್ಠನೆ! ನಾನು ನಿನ್ನ ಕೃಪೆಯಿಂದ ಇಂದು ಶಾಪಮುಕ್ತಳಾಗಿರುವೆ. ನಾನೊಬ್ಬ ಧಾನ್ಯಮಾಲಿನಿ ಎಂಬ ಅಪ್ಸರೆಯಾಗಿದ್ದೇನೆ. ಕಾರಣಾಂತರಿಂದ ಓರ್ವ ಋಷಿಯ ಶಾಪಕ್ಕೆ ಒಳಗಾಗಿದ್ದೆನು. ಇದರಿಂದ ಮೊಸಳೆಯಾಗಿ ಇಲ್ಲಿದ್ದೆ. ॥24-25॥
(ಶ್ಲೋಕ-26)
ಮೂಲಮ್
ಆಶ್ರಮೇ ಯಸ್ತು ತೇ ದೃಷ್ಟಃ ಕಾಲನೇಮಿರ್ಮಹಾಸುರಃ ।
ರಾವಣಪ್ರಹಿತೋ ಮಾರ್ಗೇ ವಿಘ್ನಂ ಕರ್ತುಂ ತವಾನಘ ॥
ಅನುವಾದ
ಎಲೈ ಪಾಪರಹಿತನೆ! ನೀನು ಆಶ್ರಮದಲ್ಲಿ ನೋಡಿದವನು ರಾವಣನಿಂದ ಕಳುಹಲ್ಪಟ್ಟ ಕಾಲನೇಮಿ ಎಂಬ ಮಹಾರಾಕ್ಷಸನು. ಅವನು ನಿನಗೆ ದಾರಿಯಲ್ಲಿ ವಿಘ್ನವನ್ನುಂಟು ಮಾಡಲು ಕುಳಿತಿರುವನು. ॥26॥
(ಶ್ಲೋಕ-27)
ಮೂಲಮ್
ಮುನಿವೇಷಧರೋ ನಾಸೌ ಮುನಿರ್ವಿಪ್ರವಿಹಿಂಸಕಃ ।
ಜಹಿ ದುಷ್ಟಂ ಗಚ್ಛ ಶೀಘ್ರಂ ದ್ರೋಣಾಚಲಮನುತ್ತಮಮ್ ॥
ಅನುವಾದ
ಈ ಮುನಿವೇಷವನ್ನು ಧರಿಸಿರುವ ಇವನು ನಿಜವಾದ ಮುನಿಯಲ್ಲ. ಋಷಿಗಳನ್ನು, ಬ್ರಾಹ್ಮಣರನ್ನು ಹಿಂಸಿಸುತ್ತಿರುವ ಆ ದುಷ್ಟನನ್ನು ಬೇಗನೇ ಕೊಂದು ಬಿಡು. ಅನಂತರ ದ್ರೋಣಾಚಲವನ್ನು ಹೊಕ್ಕು ಮೂಲಿಕೆಗಳನ್ನು ಒಯ್ಯುವವನಾಗು. ॥27॥
(ಶ್ಲೋಕ-28)
ಮೂಲಮ್
ಗಚ್ಛಾಮ್ಯಹಂ ಬ್ರಹ್ಮಲೋಕಂ ತ್ವತ್ ಸ್ಪರ್ಶಾದ್ಧತಕಲ್ಮಷಾ ।
ಇತ್ಯುಕ್ತ್ವಾ ಸಾ ಯಯೌ ಸ್ವರ್ಗಂ ಹನೂಮಾನಪ್ಯಥಾಶ್ರಮಮ್ ॥
ಅನುವಾದ
ನಿನ್ನ ಸ್ಪರ್ಶದಿಂದ ಪಾಪಗಳನ್ನೂ, ಶಾಪವನ್ನೂ ಕಳೆದುಕೊಂಡು ನಾನು ಬ್ರಹ್ಮಲೋಕಕ್ಕೆ ಹೋಗುತ್ತೇನೆ.’’ ಹೀಗೆಂದು ಹೇಳಿ ಆಕೆಯು ಸ್ವರ್ಗಕ್ಕೆ ಹೊರಟು ಹೋದಳು. ಹನುಮಂತನೂ ಆಶ್ರಮಕ್ಕೆ ಬಂದನು. ॥28॥
(ಶ್ಲೋಕ-29)
ಮೂಲಮ್
ಆಗತಂ ತಂ ಸಮಾಲೋಕ್ಯ ಕಾಲನೇಮಿರಭಾಷತ ।
ಕಿಂ ವಿಲಂಬೇನ ಮಹತಾ ತವ ವಾನರಸತ್ತಮ ॥
ಅನುವಾದ
ಹಿಂದಿರುಗಿ ಬಂದ ವಾಯುನಂದನನನ್ನು ಕಂಡು ಕಾಲನೇಮಿಯು ಹೇಳಿದನು ‘‘ಎಲೈ ವಾನರ ಶ್ರೇಷ್ಠನೆ! ಇಷ್ಟೊಂದು ವಿಳಂಬವೇಕಾಯಿತು? ॥29॥
(ಶ್ಲೋಕ-30)
ಮೂಲಮ್
ಗೃಹಾಣ ಮತ್ತೋ ಮಂತ್ರಾಂಸ್ತ್ವಂ ದೇಹಿ ಮೇ ಗುರುದಕ್ಷಿಣಾಮ್ ।
ಇತ್ಯುಕ್ತೋ ಹನುಮಾನ್ಮುಷ್ಟಿಂ ದೃಢಂ ಬದ್ಧ್ವಾಹ ರಾಕ್ಷಸಮ್ ॥
ಅನುವಾದ
ನನ್ನಿಂದ ಮಂತ್ರೋಪದೇಶವನ್ನು ಸ್ವೀಕರಿಸು ಹಾಗೂ ನನಗೆ ಗುರುದಕ್ಷಿಣೆಯನ್ನು ಕೊಡು. ಹೀಗೆನ್ನಲು ಹನುಮಂತನು ಗಟ್ಟಿಯಾಗಿ ಮುಷ್ಟಿಯನ್ನು ಬಿಗಿದು ರಾಕ್ಷಸನಲ್ಲಿ ಹೇಳಿದನು ॥30॥
(ಶ್ಲೋಕ-31)
ಮೂಲಮ್
ಗೃಹಾಣ ದಕ್ಷಿಣಾಮೇತಾಮಿತ್ಯುಕ್ತ್ವಾ ನಿಜಘಾನ ತಮ್ ।
ವಿಸೃಜ್ಯ ಮುನಿವೇಷಂ ಸ ಕಾಲನೇಮಿರ್ಮಹಾಸುರಃ ॥
(ಶ್ಲೋಕ-32)
ಮೂಲಮ್
ಯುಯುಧೇ ವಾಯುಪುತ್ರೇಣ ನಾನಾಮಾಯಾವಿಧಾನತಃ ।
ಮಹಾಮಾಯಿಕದೂತೋಽಸೌ ಹನೂಮಾನ್ಮಾಯಿನಾಂ ರಿಪುಃ ॥
ಅನುವಾದ
‘‘ಇಗೋ ಗುರುದಕ್ಷಿಣೆ ಎಂದು ಹೇಳಿ ಬಲವಾಗಿ ಒಂದು ಗುದ್ದು ಗುದ್ದಿದನು. ಅದರಿಂದ ಮಹಾಸುರ ಕಾಲನೇಮಿಯು ಮುನಿವೇಷವನ್ನು ಬಿಟ್ಟು, ಅನೇಕ ಮಾಯಾ ವಿಧಾನಗಳಿಂದ ಪವನಪುತ್ರನೊಂದಿಗೆ ಯುದ್ಧ ಮಾಡತೊಡಗಿದನು. ಆದರೆ ಮಾರುತಿಯು ಮಹಾಮಾಯಾವಿಯಾದ ಮಾಯಾಪತಿ (ಭಗವಾನ್ ಶ್ರೀರಾಮನ) ಸೇವಕನೂ, ಮಾಯಾವಿಗಳಾದ ರಾಕ್ಷಸರ ಶತ್ರುವೂ ಆಗಿದ್ದನು. (ಅವನ ಮೇಲೆ ಈ ತುಚ್ಛವಾದ ಮಾಯೆಯ ಪ್ರಭಾವ ಏನಾಗ ಬಲ್ಲದು?) ॥31-32॥
(ಶ್ಲೋಕ-33)
ಮೂಲಮ್
ಜಘಾನ ಮುಷ್ಟಿನಾ ಶೀರ್ಷ್ಣಿ ಭಗ್ನಮೂರ್ಧಾ ಮಮಾರ ಸಃ ।
ತತಃ ಕ್ಷೀರನಿಧಿಂ ಗತ್ವಾ ದೃಷ್ಟ್ವಾ ದ್ರೋಣಂ ಮಹಾಗಿರಿಮ್ ॥
(ಶ್ಲೋಕ-34)
ಮೂಲಮ್
ಅದೃಷ್ಟ್ವಾ ಚೌಷಧೀಸ್ತತ್ರ ಗಿರಿಮುತ್ಪಾಟ್ಯ ಸತ್ವರಃ ।
ಗೃಹೀತ್ವಾ ವಾಯುವೇಗೇನ ಗತ್ವಾ ರಾಮಸ್ಯ ಸನ್ನಿಧಿಮ್ ॥
(ಶ್ಲೋಕ-35)
ಮೂಲಮ್
ಉವಾಚ ಹನುಮಾನ್ ರಾಮಮಾನೀತೋಯಂ ಮಹಾಗಿರಿಃ ।
ಯದ್ಯುಕ್ತಂ ಕುರು ದೇವೇಶ ವಿಲಂಬೋ ನಾತ್ರ ಯುಜ್ಯತೇ ॥
ಅನುವಾದ
ಅವನು ಮುಷ್ಟಿಯಿಂದ ರಾಕ್ಷಸನ ತಲೆಯ ಮೇಲೆ ಹೊಡೆದಾಗ ಅದರಿಂದ ಅವನ ತಲೆಯೊಡೆದು ಸತ್ತುಹೋದನು. ಅನಂತರ ಹನುಮಂತನು ಕ್ಷೀರಸಮುದ್ರಕ್ಕೆ ಹೋಗಿ ಮಹಾಪರ್ವತ ದ್ರೋಣಾಚಲವನ್ನು ಕಂಡನು. ಆದರೆ ಅಲ್ಲಿ ಅವನಿಗೆ ಔಷಧಿ (ಗಿಡಮೂಲಿಕೆ)ಗಳು ಸಿಗದಿದ್ದಾಗ ಕೂಡಲೇ ಆ ಪರ್ವತವನ್ನು ಕಿತ್ತುಕೊಂಡು ವಾಯುವೇಗದಿಂದ ಶ್ರೀರಾಮನ ಸನ್ನಿಧಿಗೆ ಬಂದು ‘‘ಹೇ ದೇವಶ್ರೇಷ್ಠನೆ! ನಾನು ಈ ಪರ್ವತವನ್ನು ತಂದಿರುವೆನು. ಉಚಿತವಾದುದನ್ನು ನೀವು ಬೇಗನೇ ಮಾಡಿರಿ. ವಿಳಂಬ ಮಾಡುವುದು ಯೋಗ್ಯವಲ್ಲ’’ ಎಂದು ಹೇಳಿದನು. ॥33-35॥
(ಶ್ಲೋಕ-36)
ಮೂಲಮ್
ಶ್ರುತ್ವಾ ಹನೂಮತೋ ವಾಕ್ಯಂ ರಾಮಃ ಸಂತುಷ್ಟಮಾನಸಃ ।
ಗೃಹೀತ್ವಾ ಔಷಧೀಃ ಶೀಘ್ರಂ ಸುಷೇಣೇನ ಮಹಾಮತಿಃ ॥
(ಶ್ಲೋಕ-37)
ಮೂಲಮ್
ಚಿಕಿತ್ಸಾಂ ಕಾರಯಾಮಾಸ ಲಕ್ಷ್ಮಣಾಯ ಮಹಾತ್ಮನೇ ।
ತತಃ ಸುಪ್ತೋತ್ಥಿತ ಇವ ಬುದ್ಧ್ವಾಪ್ರೋವಾಚ ಲಕ್ಷ್ಮಣಃ ॥
ಅನುವಾದ
ಹನುಮಂತನ ಮಾತನ್ನು ಕೇಳಿ ಸಂತುಷ್ಟನಾದ ಮಹಾ ಮತಿಯಾದ ಶ್ರೀರಾಮನು ಬೇಗನೇ ಆ ಪರ್ವತದಿಂದ ಔಷಧಿಗಳನ್ನು ತೆಗೆದುಕೊಂಡು ಸುಷೇಣನಿಂದ ಲಕ್ಷ್ಮಣನ ಚಿಕಿತ್ಸೆ ಮಾಡಿಸಿದನು. ಅನಂತರ ಮಲಗಿದ್ದವನು ಏಳುವಂತೆ ಲಕ್ಷ್ಮಣನು ಎಚ್ಚೆತ್ತವನಾಗಿ ಗರ್ಜಿಸಿದನು. ॥36-37॥
(ಶ್ಲೋಕ-38)
ಮೂಲಮ್
ತಿಷ್ಠ ತಿಷ್ಠ ಕ್ವ ಗಂತಾಸಿ ಹನ್ಮೀದಾನೀಂ ದಶಾನನ ।
ಇತಿ ಬ್ರುವಂತಮಾಲೋಕ್ಯ ಮೂರ್ಧ್ನ್ಯವಘ್ರಾಯ ರಾಘವಃ ॥
(ಶ್ಲೋಕ-39)
ಮೂಲಮ್
ಮಾರುತಿಂ ಪ್ರಾಹ ವತ್ಸಾದ್ಯ ತ್ವತ್ಪ್ರಸಾದಾನ್ಮಹಾಕಪೇ ।
ನಿರಾಮಯಂ ಪ್ರಪಶ್ಯಾಮಿ ಲಕ್ಷ್ಮಣಂ ಭ್ರಾತರಂ ಮಮ ॥
ಅನುವಾದ
‘‘ಎಲೈ ದುಷ್ಟನಾದ ದಶಾನನಾ! ನಿಲ್ಲು, ನಿಲ್ಲು! ನೀನು ಎಲ್ಲಿಗೆ ಹೋಗುವೆ? ನಾನು ನಿನ್ನನ್ನು ಈಗಲೇ ಕೊಂದು ಬಿಡುವೆನು’’ ಎಂದು ಹೇಳುತ್ತಿರುವ ಲಕ್ಷ್ಮಣನನ್ನು ನೋಡಿ ಶ್ರೀರಘುನಾಥನು ಪ್ರೀತಿಯಿಂದ ಅವನ ನೆತ್ತಿಯನ್ನು ಮೂಸಿ ಹನುಮಂತನಲ್ಲಿ ಹೇಳಿದನು — ‘‘ಅಪ್ಪಾ, ಮಹಾಕಪಿಯೆ! ಇಂದು ನಿನ್ನ ದಯೆಯಿಂದ ನನ್ನ ಸೋದರನಾದ ಲಕ್ಷ್ಮಣನು ಆರೋಗ್ಯವಾಗಿರುವುದನ್ನು ಕಾಣುತ್ತಿದ್ದೇನೆ.’’ ॥38-39॥
(ಶ್ಲೋಕ-40)
ಮೂಲಮ್
ಇತ್ಯುಕ್ತ್ವಾ ವಾನರೈಃ ಸಾರ್ಧಂ ಸುಗ್ರೀವೇಣ ಸಮನ್ವಿತಃ ।
ವಿಭೀಷಣಮತೇನೈವ ಯುದ್ಧಾಯ ಸಮವಸ್ಥಿತಃ ॥
ಅನುವಾದ
ಹೀಗೆ ಹೇಳಿ ಶ್ರೀರಾಮಚಂದ್ರನು ಸುಗ್ರೀವ ಹಾಗೂ ಬೇರೆ ವಾನರರೊಂದಿಗೆ ವಿಭೀಷಣನ ಸಮ್ಮತಿಯಿಂದ ಯುದ್ಧದ ಸಿದ್ಧತೆಯಲ್ಲಿ ತೊಡಗಿದನು. ॥40॥
(ಶ್ಲೋಕ-41)
ಮೂಲಮ್
ಪಾಷಾಣೈಃ ಪಾದಪೈಶ್ಚೈವ ಪರ್ವತಾಗ್ರೈಶ್ಚ ವಾನರಾಃ ।
ಯುದ್ಧಾಯಾಭಿಮುಖಾ ಭೂತ್ವಾ ಯಯುಃ ಸರ್ವೇ ಯುಯುತ್ಸವಃ ॥
ಅನುವಾದ
ಆಗ ಯುದ್ಧಕ್ಕಾಗಿ ಅತ್ಯಂತ ಉತ್ಸುಕರಾದ ಎಲ್ಲ ಕಪಿಗಳು ಕಲ್ಲುಗಳನ್ನು, ಮರಗಳನ್ನು, ಪರ್ವತ ಶಿಖರಗಳನ್ನು ಎತ್ತಿಕೊಂಡು ಯುದ್ಧ ಮಾಡುವ ಇಚ್ಛೆಯಿಂದ ರಣರಂಗಕ್ಕೆ ಹೊರಟರು. ॥41॥
(ಶ್ಲೋಕ-42)
ಮೂಲಮ್
ರಾವಣೋ ವಿವ್ಯಥೇ ರಾಮಬಾಣೈರ್ವಿದ್ಧೋ ಮಹಾಸುರಃ ।
ಮಾತಂಗ ಇವ ಸಿಂಹೇನ ಗರುಡೇನೇವ ಪನ್ನಗಃ ॥
(ಶ್ಲೋಕ-43)
ಮೂಲಮ್
ಅಭಿಭೂತೋಽಗಮದ್ರಾಜಾ ರಾಘವೇಣ ಮಹಾತ್ಮನಾ ।
ಸಿಂಹಾಸನೇ ಸಮಾವಿಶ್ಯ ರಾಕ್ಷಸಾನಿದಮಬ್ರವೀತ್ ॥
ಅನುವಾದ
ಇತ್ತ ರಾವಣನು ಭಗವಾನ್ ಶ್ರೀರಾಮನ ಬಾಣಗಳಿಂದ ಘಾಸಿಗೊಂಡು ಪೀಡಿತನಾಗಿ ಸಿಂಹನು ಹಿಮ್ಮೆಟ್ಟಿಸಿದ ಆನೆ ಯಂತೆ, ಗರುಡನು ಹಿಂಸಿಸಿದ ಹಾವಿನಂತೆ ದುಃಖಿತನಾಗಿ, ಮಹಾತ್ಮಾ ರಾಘವನಿಂದ ಸೋತ ರಾಕ್ಷಸರಾಜನು ಲಂಕೆಗೆ ಹಿಂದಿರುಗಿದ್ದನು. ತನ್ನ ರಾಜಸಿಂಹಾಸನಲ್ಲಿ ಕುಳಿತು ರಾಕ್ಷಸರನ್ನು ಕುರಿತು ಹೀಗೆಂದನು ॥42-43॥
(ಶ್ಲೋಕ-44)
ಮೂಲಮ್
ಮಾನುಷೇಣೈವ ಮೇ ಮೃತ್ಯುಮಾಹ ಪೂರ್ವಂ ಪಿತಾಮಹಃ ।
ಮಾನುಷೋ ಹಿ ನ ಮಾಂ ಹಂತುಂ ಶಕ್ತೋಽಸ್ತಿ ಭುವಿ ಕಶ್ಚನ ॥
ಅನುವಾದ
‘‘ಹಿಂದೆ ಪಿತಾಮಹ ಬ್ರಹ್ಮನು ನನಗೆ ಮನುಷ್ಯನಿಂದಲೇ ಸಾವು ಬರಲಿದೆ ಎಂದು ಹೇಳಿದ್ದನು. ಆದರೆ ಈಗ ಭೂಲೋಕದಲ್ಲಿರುವ ಯಾವ ಮನುಷ್ಯನೂ ನನ್ನನ್ನು ಕೊಲ್ಲಲು ಸಮರ್ಥನಾಗಲಾರನು. ॥44॥
(ಶ್ಲೋಕ-45)
ಮೂಲಮ್
ತತೋ ನಾರಾಯಣಃ ಸಾಕ್ಷಾನ್ಮಾನುಷೋಽಭೂನ್ನ ಸಂಶಯಃ ।
ರಾಮೋ ದಾಶರಥಿರ್ಭೂತ್ವಾ ಮಾಂ ಹಂತುಂ ಸಮುಪಸ್ಥಿತಃ ॥
ಅನುವಾದ
ಆದ್ದರಿಂದ ಸಾಕ್ಷಾತ್ ನಾರಾಯಣನೇ ಮನುಷ್ಯಾ ವತಾರವನ್ನು ತಾಳಿ ದಾಶರಥಿ ರಾಮನಾಗಿ ನನ್ನನ್ನು ಕೊಲ್ಲಲು ಬಂದಿರುವನು. ಇದರಲ್ಲಿ ಯಾವುದೇ ಸಂಶಯವಿಲ್ಲ. ॥45॥
(ಶ್ಲೋಕ-46)
ಮೂಲಮ್
ಅನರಣ್ಯೇನ ಯತ್ಪೂರ್ವಂ ಶಪ್ತೋಽಹಂ ರಾಕ್ಷಸೇಶ್ವರ ।
ಉತ್ಪತ್ಸ್ಯತೇ ಚ ಮದ್ವಂಶೇ ಪರಮಾತ್ಮಾ ಸನಾತನಃ ॥
(ಶ್ಲೋಕ-47)
ಮೂಲಮ್
ತೇನ ತ್ವಂ ಪುತ್ರಪೌತ್ರೈಶ್ಚ ಬಾಂಧವೈಶ್ಚ ಸಮನ್ವಿತಃ ।
ಹನಿಷ್ಯಸೇ ನ ಸಂದೇಹ ಇತ್ಯುಕ್ತ್ವಾ ಮಾಂ ದಿವಂ ಗತಃ ॥
(ಶ್ಲೋಕ-48)
ಮೂಲಮ್
ಸ ಏವ ರಾಮಃ ಸಂಜಾತೋ ಮದರ್ಥೇ ಮಾಂ ಹನಿಷ್ಯತಿ ।
ಕುಂಭಕರ್ಣಸ್ತು ಮೂಢಾತ್ಮಾ ಸದಾ ನಿದ್ರಾವಶಂ ಗತಃ ॥
ಅನುವಾದ
ಹಿಂದಿನ ಕಾಲದಲ್ಲಿ ನನಗೆ ಸೂರ್ಯವಂಶೀ ಅನರಣ್ಯನು ‘ಹೇ ರಾಕ್ಷಸರಾಜಾ! ನನ್ನ ವಂಶದಲ್ಲಿ ಮುಂದೆ ಸನಾತನ ಪರಮಾತ್ಮನು ಅವತರಿಸಲಿರುವನು. ಅವನಿಂದ ನೀನು ಪುತ್ರ, ಪೌತ್ರ, ಬಂಧುಗಳೊಡನೆ ಸತ್ತುಹೋಗುವೆ; ಇದರ ಬಗ್ಗೆ ಸಂಶಯವೇ ಇಲ್ಲ’ ಎಂದು ಶಾಪವನ್ನಿತ್ತು ಸ್ವರ್ಗಕ್ಕೆ ಹೊರಟುಹೋದನು. ಈಗ ಆ ನಾರಾಯಣನೇ ನನ್ನ ನಿಮಿತ್ತವಾಗಿ ರಾಮನಾಗಿ ಅವತರಿಸಿರುವನು ಮತ್ತು ನನ್ನನ್ನು ಖಂಡಿತವಾಗಿ ಕೊಲ್ಲಲಿರುವನು. ಮೂಢ ತಮ್ಮನಾದ ಕುಂಭಕರ್ಣನಾದರೋ ಯಾವಾಗಲೂ ನಿದ್ರಾಪರವಶನಾಗಿರುವನು. ॥46-48॥
(ಶ್ಲೋಕ-49)
ಮೂಲಮ್
ತಂ ವಿಬೋಧ್ಯ ಮಹಾಸತ್ತ್ವಮಾನಯಂತು ಮಮಾಂತಿಕಮ್ ।
ಇತ್ಯುಕ್ತಾಸ್ತೇ ಮಹಾಕಾಯಾಸ್ತೂರ್ಣಂ ಗತ್ವಾ ತು ಯತ್ನತಃ ॥
(ಶ್ಲೋಕ-50)
ಮೂಲಮ್
ವಿಬೋಧ್ಯ ಕುಂಭಶ್ರವಣಂ ನಿನ್ಯೂ ರಾವಣಸನ್ನಿಧಿಮ್ ।
ನಮಸ್ಕೃತ್ಯ ಸ ರಾಜಾನಮಾಸನೋಪರಿ ಸಂಸ್ಥಿತಃ ॥
ಅನುವಾದ
ಬಹಳ ಬಲಶಾಲಿಯಾದ ಅವನನ್ನು ಎಚ್ಚರಿಸಿ ನನ್ನ ಬಳಿಗೆ ಕರೆದು ತನ್ನಿರಿ.’’ ರಾವಣನು ಹೀಗೆ ಹೇಳಿದಂತೆ ಆ ಮಹಾಬಲಶಾಲಿಯರಾದ ರಾಕ್ಷಸರು ಬೇಗನೇ ಹೋಗಿ ಪ್ರಯತ್ನ ಪೂರ್ವಕವಾಗಿ ಕುಂಭಕರ್ಣನನ್ನು ಎಬ್ಬಿಸಿ ರಾವಣನ ಬಳಿಗೆ ಕರೆತಂದರು. ಅವನು ರಾಜನಿಗೆ ನಮಸ್ಕರಿಸಿ ಆಸನದ ಮೇಲೆ ಕುಳಿತನು. ॥49-50॥
(ಶ್ಲೋಕ-51)
ಮೂಲಮ್
ತಮಾಹ ರಾವಣೋ ರಾಜಾ ಭ್ರಾತರಂ ದೀನಯಾ ಗಿರಾ ।
ಕುಂಭಕರ್ಣ ನಿಬೋಧ ತ್ವಂ ಮಹತ್ಕಷ್ಟಮುಪಸ್ಥಿತಮ್ ॥
ಅನುವಾದ
ಆಗ ರಾಜಾ ರಾವಣನು ಅತ್ಯಂತ ದೀನ ಸ್ವರದಿಂದ ತಮ್ಮನೊಂದಿಗೆ ಹೇಳಿದನು ‘‘ಎಲೈ ಕುಂಭಕರ್ಣನೆ ! ಕೇಳು, ಈಗ ನಮ್ಮ ಮೇಲೆ ದೊಡ್ಡ ಸಂಕಟ ಬಂದಿದೆ. ॥51॥
(ಶ್ಲೋಕ-52)
ಮೂಲಮ್
ರಾಮೇಣ ನಿಹತಾಃ ಶೂರಾಃ ಪುತ್ರಾಃ ಪೌತ್ರಾಶ್ಚ ಬಾಂಧವಾಃ ।
ಕಿಂ ಕರ್ತವ್ಯಮಿದಾನೀಂ ಮೇ ಮೃತ್ಯುಕಾಲ ಉಪಸ್ಥಿತೇ ॥
ಅನುವಾದ
ರಾಮನು ನಮ್ಮ ದೊಡ್ಡ-ದೊಡ್ಡ ಶೂರರನ್ನೂ, ಪುತ್ರರನ್ನೂ ಪೌತ್ರರನ್ನು, ಬಂಧು-ಬಾಂಧವರನ್ನೂ ಕೊಂದು ಬಿಟ್ಟಿರುವನು. ತಮ್ಮನೆ! ನನ್ನ ಮೃತ್ಯುಕಾಲವು ಒದಗಿದೆ. ಈಗ ನಾನು ಏನು ಮಾಡಲಿ. ॥52॥
(ಶ್ಲೋಕ-53)
ಮೂಲಮ್
ಏಷ ದಾಶರಥೀ ರಾಮಃ ಸುಗ್ರೀವಸಹಿತೋ ಬಲೀ ।
ಸಮುದ್ರಂ ಸಬಲಸ್ತೀರ್ತ್ವಾ ಮೂಲಂ ನಃ ಪರಿಕೃಂತತಿ ॥
ಅನುವಾದ
ಈ ಮಹಾಬಲಶಾಲಿ ಯಾದ ದಶರಥ ನಂದನ ರಾಮನು ಸುಗ್ರೀವನೊಡಗೂಡಿ ಸೇನಾ ಸಮೇತನಾಗಿ ಸಮುದ್ರವನ್ನು ದಾಟಿ ಬಂದು ನಮ್ಮ ಬುಡ (ವಂಶ)ವನ್ನೇ ಕತ್ತರಿಸುತ್ತಿರುವನು. ॥53॥
(ಶ್ಲೋಕ-54)
ಮೂಲಮ್
ಯೇ ರಾಕ್ಷಸಾ ಮುಖ್ಯತಮಾಸ್ತೇ ಹತಾ ವಾನರೈರ್ಯುಧಿ ।
ವಾನರಾಣಾಂ ಕ್ಷಯಂ ಯುದ್ಧೇ ನ ಪಶ್ಯಾಮಿ ಕದಾಚನ ॥
ಅನುವಾದ
ನಮ್ಮ ಮುಖ್ಯ-ಮುಖ್ಯರಾದ ರಾಕ್ಷಸರೆಲ್ಲರು ಯುದ್ಧದಲ್ಲಿ ವಾನರರಿಂದ ಹತರಾದರು. ಆದರೆ ಈ ಯುದ್ಧದಲ್ಲಿ ಕಪಿಗಳು ನಾಶವಾಗುವುದನ್ನು ಎಂದೂ ನೋಡಲೇ ಇಲ್ಲ. ॥54॥
(ಶ್ಲೋಕ-55)
ಮೂಲಮ್
ನಾಶಯಸ್ವ ಮಹಾಬಾಹೋ ಯದರ್ಥಂ ಪರಿಬೋಧಿತಃ ।
ಭ್ರಾತುರರ್ಥೇ ಮಹಾಸತ್ತ್ವ ಕುರು ಕರ್ಮ ಸುದುಷ್ಕರಮ್ ॥
ಅನುವಾದ
ಹೇ ಮಹಾಬಾಹುವೆ! ಮಹಾಬಲಿಷ್ಠನೆ! ನೀನು ಸಹೋದರನಿಗಾಗಿ ಅತ್ಯಂತ ಕಷ್ಟಸಾಧ್ಯವಾದ ಕೆಲಸವನ್ನು ಕೈಗೊಳ್ಳುವವನಾಗು. ಇವರನ್ನು ಕೊಂದು ಬಿಡು ಅದಕ್ಕಾಗಿ ನಿನ್ನನ್ನು ಎಬ್ಬಿಸಿರುವೆನು.’’ ॥55॥
(ಶ್ಲೋಕ-56)
ಮೂಲಮ್
ಶ್ರುತ್ವಾ ತದ್ರಾವಣೇಂದ್ರಸ್ಯ ವಚನಂ ಪರಿದೇವಿತಮ್ ।
ಕುಂಭಕರ್ಣೋ ಜಹಾಸೋಚ್ಚೈರ್ವಚನಂ ಚೇದಮಬ್ರವೀತ್ ॥
ಅನುವಾದ
ರಾಜನಾದ ರಾವಣನ ಈ ದುಃಖಮಯವಾದ ಮಾತನ್ನು ಕೇಳಿ ಕುಂಭಕರ್ಣನು ಗಟ್ಟಿಯಾಗಿ ಅಟ್ಟಹಾಸದಿಂದ ನಕ್ಕು ಹೀಗೆಂದನು ॥56॥
(ಶ್ಲೋಕ-57)
ಮೂಲಮ್
ಪುರಾ ಮಂತ್ರವಿಚಾರೇ ತೇ ಗದಿತಂ ಯನ್ಮಯಾ ನೃಪ ।
ತದದ್ಯ ತ್ವಾಮುಪಗತಂ ಫಲಂ ಪಾಪಸ್ಯ ಕರ್ಮಣಃ ॥
ಅನುವಾದ
‘‘ಎಲೈ ರಾಜನೆ! ಹಿಂದೆ ಮಂತ್ರಾಲೋಚನೆ ಸಮಯದಲ್ಲಿ ನಿನಗೆ ನಾನು ಹೇಳಿದ್ದೆ. ಈಗ ನಿನ್ನ ಪಾಪದ ಫಲವು ಅನುಭವಕ್ಕೆ ಬರುತ್ತಿದೆ. ॥57॥
(ಶ್ಲೋಕ-58)
ಮೂಲಮ್
ಪೂರ್ವಮೇವ ಮಯಾ ಪ್ರೋಕ್ತೋ ರಾಮೋ ನಾರಾಯಣಃ ಪರಃ ।
ಸೀತಾ ಚ ಯೋಗಮಾಯೇತಿ ಬೋಧಿತೋಽಪಿ ನ ಬುಧ್ಯಸೇ ॥
ಅನುವಾದ
ರಾಮನು ಸಾಕ್ಷಾತ್ ಪರಬ್ರಹ್ಮ ನಾರಾಯಣನೇ ಆಗಿದ್ದಾನೆ, ಸೀತೆಯು ಯೋಗಮಾಯೆ ಆಗಿದ್ದಾಳೆ ಎಂದು ನಾನಾದರೋ ಮೊದಲೇ ನಿನಗೆ ತಿಳಿಸಿದ್ದೆ. ಆದರೆ ನೀನು ಅರಿತುಕೊಳ್ಳಲಿಲ್ಲ. ॥58॥
(ಶ್ಲೋಕ-59)
ಮೂಲಮ್
ಏಕದಾಹಂ ವನೇ ಸಾನೌ ವಿಶಾಲಾಯಾಂ ಸ್ಥಿತೋ ನಿಶಿ ।
ದೃಷ್ಟೋ ಮಯಾ ಮುನಿಃ ಸಾಕ್ಷಾನ್ನಾರದೋ ದಿವ್ಯದರ್ಶನಃ ॥
ಅನುವಾದ
ಒಮ್ಮೆ ನಾನು ವಿಶಾಲ ಎಂಬ ಕಾಡಿನ ತಪ್ಪಲು ಪ್ರದೇಶದಲ್ಲಿ ರಾತ್ರಿಯ ವೇಳೆಯಲ್ಲಿ ಕುಳಿತಿದ್ದೆ. ಆಗ ದಿವ್ಯರೂಪರಾದ ನಾರದ ಮುನಿಗಳನ್ನು ನಾನು ನೋಡಿದೆ. ॥59॥
(ಶ್ಲೋಕ-60)
ಮೂಲಮ್
ತಮಬ್ರವಂ ಮಹಾಭಾಗ ಕುತೋ ಗಂತಾಸಿ ಮೇ ವದ ।
ಇತ್ಯುಕ್ತೋ ನಾರದಃ ಪ್ರಾಹ ದೇವಾನಾಂ ಮಂತ್ರಣೇ ಸ್ಥಿತಃ ॥
ಅನುವಾದ
ಅವರನ್ನು ನಾನು ನೋಡುತ್ತಲೇ ‘ಮಹಾತ್ಮರೇ! ತಾವು ಎಲ್ಲಿಗೆ ಹೋಗುವಿರಿ?’ ಎಂದು ಕೇಳಿದಾಗ ನಾರದರು ಹೇಳಿದರು ‘ನಾನು ದೇವತೆಗಳ ಗುಪ್ತವಾದ ಒಂದು ಮಂತ್ರಾಲೋಚನೆಯಲ್ಲಿದ್ದೆ. ॥60॥
(ಶ್ಲೋಕ-61)
ಮೂಲಮ್
ತತ್ರೋತ್ಪನ್ನಮುದಂತಂ ತೇ ವಕ್ಷ್ಯಾಮಿ ಶೃಣು ತತ್ತ್ವತಃ ।
ಯುವಾಭ್ಯಾಂ ಪೀಡಿತಾ ದೇವಾಃ ಸರ್ವೇ ವಿಷ್ಣುಮುಪಾಗತಾಃ ॥
ಅನುವಾದ
ಅಲ್ಲಿ ಏನೇನು ನಡೆಯಿತು ಎಂಬುದನ್ನು ನಾನು ನಿನಗೆ ಇದ್ದ ಹಾಗೆಯೇ ಹೇಳುವೆನು. ನೀವಿಬ್ಬರು ಸಹೋದರರಿಂದ ಅತ್ಯಂತ ತೊಂದರೆಗೊಳಗಾದ ದೇವತೆಗಳೆಲ್ಲರೂ ಭಗವಾನ್ ಶ್ರೀವಿಷ್ಣುವಿನ ಬಳಿಗೆ ಹೋದರು. ॥61॥
(ಶ್ಲೋಕ-62)
ಮೂಲಮ್
ಊಚುಸ್ತೇ ದೇವದೇವೇಶಂ ಸ್ತುತ್ವಾ ಭಕ್ತ್ಯಾ ಸಮಾಹಿತಾಃ ।
ಜಹಿ ರಾವಣಮಕ್ಷೋಭ್ಯಂ ದೇವ ತ್ರೈಲೋಕ್ಯಕಂಟಕಮ್ ॥
ಅನುವಾದ
ಅಲ್ಲಿ ದೇವದೇವೇಶ್ವರನನ್ನು ಅತ್ಯಂತ ಭಕ್ತಿಯಿಂದ ಏಕಾಗ್ರತೆಯಿಂದ ಸ್ತೋತ್ರ ಮಾಡತೊಡಗಿದರು. ಹೇ ದೇವಾ! ಈ ರಾವಣನ ಮುಂದೆ ನಮ್ಮದೇನೂ ನಡೆಯದಾಗಿದೆ. ಈ ತ್ರಿಲೋಕ ಕಂಟಕನಾದ ರಾವಣನನ್ನು ಬೇಗನೇ ಸಂಹಾರ ಮಾಡು. ॥62॥
(ಶ್ಲೋಕ-63)
ಮೂಲಮ್
ಮಾನುಷೇಣ ಮೃತಿಸ್ತಸ್ಯ ಕಲ್ಪಿತಾ ಬ್ರಹ್ಮಣಾ ಪುರಾ ।
ಅತಸ್ತ್ವಂ ಮಾನುಷೋ ಭೂತ್ವಾ ಜಹಿ ರಾವಣಕಂಟಕಮ್ ॥
ಅನುವಾದ
ಹಿಂದಿನ ಕಾಲದಲ್ಲಿ ಬ್ರಹ್ಮದೇವರು ಅವನ ಮೃತ್ಯುವನ್ನು ಮನುಷ್ಯನ ಕೈಯಿಂದ ನಿಶ್ಚಿತಪಡಿಸಿರುವರು. ಆದ್ದರಿಂದ ನೀನು ಮನುಷ್ಯನಾಗಿ ಅವತರಿಸಿ ಈ ರಾವಣ ರೂಪೀ ಮುಳ್ಳನ್ನು ಕಿತ್ತು ಬಿಡು ಎಂದು ಬೇಡಿಕೊಂಡರು. ॥63॥
(ಶ್ಲೋಕ-64)
ಮೂಲಮ್
ತಥೇತ್ಯಾಹ ಮಹಾವಿಷ್ಣುಃ ಸತ್ಯಸಂಕಲ್ಪ ಈಶ್ವರಃ ।
ಜಾತೋ ರಘುಕುಲೇ ದೇವೋ ರಾಮ ಇತ್ಯಭಿವಿಶ್ರುತಃ ॥
ಅನುವಾದ
ಆಗ ಸತ್ಯ ಸಂಕಲ್ಪನಾದ ಭಗವಾನ್ ಶ್ರೀವಿಷ್ಣುವು ‘ಹಾಗೆಯೇ ಆಗಲೆಂದು’ ಹೇಳಿದನು. ಈಗ ಅವನು ರಘು ಕುಲದಲ್ಲಿ ಅವತರಿಸಿ ರಾಮನೆಂಬ ನಾಮಾಭಿಧಾನದಿಂದ ವಿಖ್ಯಾತನಾಗಿರುವನು. ॥64॥
(ಶ್ಲೋಕ-65)
ಮೂಲಮ್
ಸ ಹನಿಷ್ಯತಿ ವಃ ಸರ್ವಾನಿತ್ಯುಕ್ತ್ವಾ ಪ್ರಯಯೌ ಮುನಿಃ ।
ಅತೋ ಜಾನೀಹಿ ರಾಮಂ ತ್ವಂ ಪರಂ ಬ್ರಹ್ಮ ಸನಾತನಮ್ ॥
ಅನುವಾದ
ಅವನು ನಿಮ್ಮೆಲ್ಲರನ್ನು ಸಂಹರಿಸಲಿರುವನು’ ಎಂದು ಹೇಳಿ ನಾರದ ಮುನಿಗಳು ಹೊರಟು ಹೋದರು. ‘‘ಆದ್ದರಿಂದ ಮಾಯೆಯಿಂದ ಮನುಷ್ಯ ಶರೀರವನ್ನು ಪಡೆದಿರುವ ರಾಮನನ್ನು ಸನಾತನ ಪರಬ್ರಹ್ಮನೆಂದೇ ನೀನು ತಿಳಿದುಕೋ. ॥65॥
(ಶ್ಲೋಕ-66)
ಮೂಲಮ್
ತ್ಯಜ ವೈರಂ ಭಜಸ್ವಾದ್ಯ ಮಾಯಾಮಾನುಷವಿಗ್ರಹಮ್ ।
ಭಜತೋ ಭಕ್ತಿಭಾವೇನ ಪ್ರಸೀದತಿ ರಘೂತ್ತಮಃ ॥
ಅನುವಾದ
ವೈರವನ್ನು ಬಿಟ್ಟು ಮಾಯಾಮಾನವ ರೂಪೀ ಭಗವಂತನನ್ನು ಭಜಿಸುವವನಾಗು. ಶ್ರೀರಘುನಾಥನು ಭಕ್ತಿಭಾವದಿಂದ ಭಜಿಸುವವರ ಮೇಲೆ ಪ್ರಸನ್ನನಾಗುವನು. ॥66॥
(ಶ್ಲೋಕ-67)
ಮೂಲಮ್
ಭಕ್ತಿರ್ಜನಿತ್ರೀ ಜ್ಞಾನಸ್ಯ ಭಕ್ತಿರ್ಮೋಕ್ಷಪ್ರದಾಯಿನೀ ।
ಭಕ್ತಿಹೀನೇನ ಯತ್ಕಿಂಚಿತ್ಕೃತಂ ಸರ್ವಮಸತ್ಸಮಮ್ ॥
ಅನುವಾದ
ಭಕ್ತಿಯೇ ಜ್ಞಾನದ ತಾಯಿಯಾಗಿದ್ದು ಮೋಕ್ಷವನ್ನು ಕರುಣಿಸುವಂತಹುದಾಗಿದೆ. ಭಕ್ತಿಯಿಲ್ಲದವನು ಏನನ್ನು ಮಾಡಿದರೂ ಅದು ಮಾಡಿದಂತಲ್ಲ. ॥67॥
(ಶ್ಲೋಕ-68)
ಮೂಲಮ್
ಅವತಾರಾಃ ಸುಬಹವೋ ವಿಷ್ಣೋರ್ಲೀಲಾನುಕಾರಿಣಃ ।
ತೇಷಾಂ ಸಹಸ್ರಸದೃಶೋ ರಾಮೋ ಜ್ಞಾನಮಯಃ ಶಿವಃ ॥
ಅನುವಾದ
ಭಗವಾನ್ ವಿಷ್ಣುವಿನ ಅನೇಕ ಅವತಾರಗಳಾಗಿವೆ. ಅವೆಲ್ಲವೂ ತಮ್ಮ ಸ್ವರೂಪಕ್ಕನುಸಾರ ಲೀಲೆಮಾಡುವಂತಹುದಾಗಿತ್ತು. ಆದರೆ ಈ ಮಂಗಳಸ್ವರೂಪೀ ಜ್ಞಾನಮಯ ರಾಮಾವತಾರವು ಅಂತಹ ಸಾವಿರಾರು ಅವತಾರಗಳಿಗೆ ಸಮಾನವಾಗಿದೆ. ॥68॥
(ಶ್ಲೋಕ-69)
ಮೂಲಮ್
ರಾಮಂ ಭಜಂತಿ ನಿಪುಣಾ ಮನಸಾ ವಚಸಾನಿಶಮ್ ।
ಅನಾಯಾಸೇನ ಸಂಸಾರಂ ತೀರ್ತ್ವಾ ಯಾಂತಿ ಹರೇಃ ಪದಮ್ ॥
ಅನುವಾದ
ಜಾಣರಾದವರು ಯಾವಾಗಲೂ ಮಾತಿನಿಂದಲೂ, ಮನಸ್ಸಿನಿಂದಲೂ ಭಗವಾನ್ ಶ್ರೀರಾಮನನ್ನು ಭಜಿಸುತ್ತಾ, ಆಯಾಸವಿಲ್ಲದೆ ಸಂಸಾರ ಸಾಗರವನ್ನು ದಾಟಿಕೊಂಡು ಶ್ರೀಹರಿಯ ಪರಮಪದವನ್ನು ಪಡೆಯುವರು. ॥69॥
(ಶ್ಲೋಕ-70)
ಮೂಲಮ್
ಯೇ ರಾಮಮೇವ ಸತತಂ ಭುವಿ ಶುದ್ಧಸತ್ತ್ವಾ
ಧ್ಯಾಯಂತಿ ತಸ್ಯ ಚರಿತಾನಿ ಪಠಂತಿ ಸಂತಃ ।
ಮುಕ್ತಾಸ್ತ ಏವ ಭವಭೋಗಮಹಾಹಿಪಾಶೈಃ
ಸೀತಾಪತೇಃ ಪದಮನಂತಸುಖಂ ಪ್ರಯಾಂತಿ ॥
ಅನುವಾದ
ಶುದ್ಧ ಮಹಾನುಭಾವರು ಈ ಭೂಮಂಡಲದಲ್ಲಿ ನಿರಂತರ ಶ್ರೀರಾಮನನ್ನೇ ಧ್ಯಾನಿಸುತ್ತಾ, ಅವನ ಚರಿತ್ರೆಗಳನ್ನು ಓದುವವರೇ ಭವಭೋಗವೆಂಬ ಮಹಾನ್ ಸರ್ಪದ ಕಟ್ಟಿನಿಂದ ಬಿಡುಗಡೆ ಹೊಂದಿ ಅಪರಿಮಿತಾನಂದ ರೂಪನಾದ ಶ್ರೀಸೀತಾಪತಿಯ ಪದವಿಯನ್ನು ಹೊಂದುವರು. ॥70॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.