[ಆರನೆಯ ಸರ್ಗ]
ಭಾಗಸೂಚನಾ
ಲಕ್ಷ್ಮಣನ ಮೂರ್ಛೆ, ರಾಮ-ರಾವಣ ಸಂಗ್ರಾಮ, ಹನುಮಂತನು ಔಷಧಿಯನ್ನು ತರುವುದು ಮತ್ತು ರಾವಣ-ಕಾಲನೇಮಿ ಸಂವಾದ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀ ಮಹಾದೇವ ಉವಾಚ
ಮೂಲಮ್
ಶ್ರುತ್ವಾ ಯುದ್ಧೇ ಬಲಂ ನಷ್ಟಮತಿಕಾಯಮುಖಂ ಮಹತ್ ।
ರಾವಣೋ ದುಃಖಸಂತಪ್ತಃ ಕ್ರೋಧೇನ ಮಹತಾವೃತಃ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಯುದ್ಧದಲ್ಲಿ ಅತಿಕಾಯನೇ ಮುಂತಾದ ರಾಕ್ಷಸರ ಮಹಾನ್ ಸೇನೆಯು ನಾಶವಾದದ್ದನ್ನು ಕೇಳಿದ ರಾವಣನು ಅತೀವ ದುಃಖಾತುರನಾಗಿ ಭಾರೀ ಕೋಪಗೊಂಡನು. ॥1॥
(ಶ್ಲೋಕ-2)
ಮೂಲಮ್
ನಿಧಾಯೇಂದ್ರಜಿತಂ ಲಂಕಾರಕ್ಷಣಾರ್ಥಂ ಮಹಾದ್ಯುತಿಃ ।
ಸ್ವಯಂ ಜಗಾಮ ಯುದ್ಧಾಯ ರಾಮೇಣ ಸಹ ರಾಕ್ಷಸಃ ॥
ಅನುವಾದ
ಲಂಕೆಯನ್ನು ರಕ್ಷಿಸುವುದಕ್ಕೆ ಇಂದ್ರಜಿತುವನ್ನು ನಿಯಮಿಸಿ, ಮಹಾತೇಜಸ್ವಿಯಾದ ಆ ರಾಕ್ಷಸನು ಸ್ವತಃ ರಾಮನೊಡನೆ ಯುದ್ಧ ಮಾಡಲು ಹೊರಟನು. ॥2॥
(ಶ್ಲೋಕ-3)
ಮೂಲಮ್
ದಿವ್ಯಂ ಸ್ಯಂದನಮಾರುಹ್ಯ ಸರ್ವಶಸ್ತ್ರಾಸ್ತ್ರಸಂಯುತಮ್ ।
ರಾಮಮೇವಾಭಿದುದ್ರಾವ ರಾಕ್ಷಸೇಂದ್ರೋ ಮಹಾಬಲಃ ॥
ಅನುವಾದ
ಮಹಾಬಲಿಷ್ಠನಾದ ರಾಕ್ಷಸೇಂದ್ರನು ಸಕಲವಿಧವಾದ ಶಸ್ತ್ರಾಸ್ತ್ರಗಳಿಂದ ಸಜ್ಜಾದ ದಿವ್ಯ ರಥವನ್ನೇರಿ ರಾಮನೆಡೆಗೆ ಧಾವಿಸಿದನು. ॥3॥
(ಶ್ಲೋಕ-4)
ಮೂಲಮ್
ವಾನರಾನ್ಬಹುಶೋ ಹತ್ವಾ ಬಾಣೈರಾಶೀವಿಷೋಪಮೈಃ ।
ಪಾತಯಾಮಾಸ ಸುಗ್ರೀವಪ್ರಮುಖಾನ್ಯೂಥನಾಯಕಾನ್ ॥
ಅನುವಾದ
ಯುದ್ಧ ರಂಗಕ್ಕೆ ಬಂದು ಸರ್ಪಗಳಂತಿರುವ ಉಗ್ರಬಾಣಗಳಿಂದ ವಾನರರನ್ನು ಕೊಲ್ಲುತ್ತಾ ಸುಗ್ರೀವಾದಿ ಸೇನಾನಾಯಕರನ್ನು ಧರೆಗೆ ಕೆಡಹಿದನು. ॥4॥
(ಶ್ಲೋಕ-5)
ಮೂಲಮ್
ಗದಾಪಾಣಿಂ ಮಹಾಸತ್ತ್ವಂ ತತ್ರ ದೃಷ್ಟ್ವಾ ವಿಭೀಷಣಮ್ ।
ಉತ್ಸಸರ್ಜ ಮಹಾಶಕ್ತಿಂ ಮಯದತ್ತಾಂ ವಿಭೀಷಣೇ ॥
ಅನುವಾದ
ಮಹಾಪರಾಕ್ರಮಿ ಗದಾಪಾಣಿಯಾಗಿ ಅಲ್ಲಿ ನಿಂತಿರುವ ವಿಭೀಷಣನನ್ನು ಕಂಡು, ಅವನನ್ನು ಕೊಲ್ಲುವ ಇಚ್ಛೆಯಿಂದ, ಮಯನು ಕೊಟ್ಟಿರುವ ಮಹಾಶಕ್ತ್ಯಾಯುಧವನ್ನು ಪ್ರಯೋಗಿಸಿದನು. ॥5॥
(ಶ್ಲೋಕ-6)
ಮೂಲಮ್
ತಾಮಾಪತಂತೀಮಾಲೋಕ್ಯ ವಿಭೀಷಣವಿಘಾತಿನೀಮ್ ।
ದತ್ತಾಭಯೋಽಯಂ ರಾಮೇಣ ವಧಾರ್ಹೋ ನಾಯಮಾಸುರಃ ॥
(ಶ್ಲೋಕ-7)
ಮೂಲಮ್
ಇತ್ಯುಕ್ತ್ವಾ ಲಕ್ಷ್ಮಣೋ ಭೀಮಂ ಚಾಪಮಾದಾಯ ವೀರ್ಯವಾನ್ ।
ವಿಭೀಷಣಸ್ಯ ಪುರತಃ ಸ್ಥಿತೋಽಕಂಪ ಇವಾಚಲಃ ॥
ಅನುವಾದ
ವಿಭೀಷಣನನ್ನು ಕೊಲ್ಲಲು ಮುಂದಾದ ಆ ಶಕ್ತ್ಯಾಯುಧವು ಅವನ ಮೇಲೆ ಬೀಳುತ್ತಿರುವುದನ್ನು ಕಂಡ ಲಕ್ಷ್ಮಣ ‘ಅಯ್ಯೋ! ಈತನು ಶ್ರೀರಾಮನಿಂದ ಅಭಯದಾನವನ್ನು ಪಡೆದಿರುವನು. ಆದ್ದರಿಂದ ಈ ಅಸುರನು ಸಾಯಬಾರದು’ ಎಂದು ಹೇಳುತ್ತಾ ಮಹಾವೀರ್ಯಶಾಲಿಯಾದ ಲಕ್ಷ್ಮಣನು ತನ್ನ ಪ್ರಚಂಡ ಧನುಸ್ಸನ್ನು ಎತ್ತಿಕೊಂಡು, ವಿಭೀಷಣನ ಮುಂಭಾಗದಲ್ಲಿ ಆ ಶಕ್ತ್ಯಾಯುಧಕ್ಕೆ ಎದೆಗೊಟ್ಟು ಪರ್ವತದಂತೆ ನಿಂತು ಬಿಟ್ಟನು. ॥6-7॥
(ಶ್ಲೋಕ-8)
ಮೂಲಮ್
ಸಾ ಶಕ್ತಿರ್ಲಕ್ಷ್ಮಣತನುಂ ವಿವೇಶಾಮೋಘಶಕ್ತಿತಃ ।
ಯಾವಂತ್ಯಃ ಶಕ್ತಯೋ ಲೋಕೇ ಮಾಯಾಯಾಃ ಸಂಭವಂತಿ ಹಿ ॥
(ಶ್ಲೋಕ-9)
ಮೂಲಮ್
ತಾಸಾಮಾಧಾರಭೂತಸ್ಯ ಲಕ್ಷ್ಮಣಸ್ಯ ಮಹಾತ್ಮನಃ ।
ಮಾಯಾಶಕ್ತ್ಯಾ ಭವೇತ್ಕಿಂವಾ ಶೇಷಾಂಶಸ್ಯ ಹರೇಸ್ತನೋಃ ॥
ಅನುವಾದ
ಆ ಶಕ್ತ್ಯಾಯುಧವು ಅಮೋಘವಾದ್ದರಿಂದ ಲಕ್ಷ್ಮಣನ ಶರೀರವನ್ನು ಪ್ರವೇಶಿಸಿತು. ಜಗತ್ತಿನಲ್ಲಿ ಮಾಯೆಯಿಂದ ಉಂಟಾಗುವ ಎಲ್ಲ ಶಕ್ತಿಗಳಿಗೂ ಆಧಾರ ಸ್ವರೂಪಿಯಾದ ಮಹಾತ್ಮಾ ಲಕ್ಷ್ಮಣನು ಭಗವಾನ್ ವಿಷ್ಣುವಿನ ಸ್ವರೂಪಭೂತ ಶೇಷನ ಅಂಶಾವತಾರನು. ಅವನ ಮೇಲೆ ಆ ಮಾಯಾ ಶಕ್ತಿಗಳು ಏನು ಪರಿಣಾಮ ಬೀರಬಲ್ಲವು? ॥8-9॥
(ಶ್ಲೋಕ-10)
ಮೂಲಮ್
ತಥಾಪಿ ಮಾನುಷಂ ಭಾವಮಾಪನ್ನಸ್ತದನುವ್ರತಃ ।
ಮೂರ್ಚ್ಛಿತಃ ಪತಿತೋ ಭೂವೌ ತಮಾದಾತುಂ ದಶಾನನಃ ॥
(ಶ್ಲೋಕ-11)
ಮೂಲಮ್
ಹಸ್ತೈಸ್ತೋಲಯಿತುಂ ಶಕ್ತೋ ನ ಬಭೂವಾತಿವಿಸ್ಮಿತಃ ।
ಸರ್ವಸ್ಯ ಜಗತಃ ಸಾರಂ ವಿರಾಜಂ ಪರಮೇಶ್ವರಮ್ ॥
(ಶ್ಲೋಕ-12)
ಮೂಲಮ್
ಕಥಂ ಲೋಕಾಶ್ರಯಂ ವಿಷ್ಣುಂ ತೋಲಯೇಲ್ಲಘುರಾಕ್ಷಸಃ ।
ಗ್ರಹೀತುಕಾಮಂ ಸೌಮಿತ್ರಿಂ ರಾವಣಂ ವೀಕ್ಷ್ಯ ಮಾರುತಿಃ ॥
(ಶ್ಲೋಕ-13)
ಮೂಲಮ್
ಆಜಘಾನೋರಸಿ ಕ್ರುದ್ಧೋ ವಜ್ರಕಲ್ಪೇನ ಮುಷ್ಟಿನಾ ।
ತೇನ ಮುಷ್ಟಿಪ್ರಹಾರೇಣ ಜಾನುಭ್ಯಾಮಪತದ್ಭುವಿ ॥
ಅನುವಾದ
ಆದರೂ ಈಗ ಮನುಷ್ಯ ಭಾವವನ್ನು ಹೊಂದಿ, ಅದಕ್ಕೆ ತಕ್ಕಂತೆ ನಡೆಯುವವನಾದ ಲಕ್ಷ್ಮಣನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದುಬಿಟ್ಟನು. ರಾವಣನು ಅವನನ್ನು ಕೈಗಳಿಂದ ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೂ, ಅಳ್ಳಾಡಿಸಲೂ ಶಕ್ತನಾಗದೆ ಆಶ್ಚರ್ಯಗೊಂಡನು. ಜಗತ್ತಿನ ಸಾರನೂ, ಪರಮೇಶ್ವರನೂ, ವಿರಾಟ್ ಪುರುಷನೂ, ಸರ್ವಲೋಕಾಧಾರನೂ, ವಿಷ್ಣುವಿನ ಅಂಶನೂ ಆದ ಲಕ್ಷ್ಮಣನನ್ನು ಕ್ಷುದ್ರ ನಾದ ರಾಕ್ಷಸನು ಹೇಗೆ ತಾನೇ ಎತ್ತಬಲ್ಲನು? ರಾವಣನು ಲಕ್ಷ್ಮಣನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುವುದನ್ನು ಕಂಡ ಹನುಮಂತನು ಕುಪಿತನಾಗಿ ವಜ್ರದಂತಹ ತನ್ನ ಮುಷ್ಟಿಯಿಂದ ರಾವಣನ ಎದೆಗೆ ಬಲವಾಗಿ ಗುದ್ದಿದನು. ಆ ಮುಷ್ಟಿ ಪ್ರಹಾರದಿಂದ ತತ್ತರಿಸಿದ ರಾವಣನು ಮಂಡಿಗಳನ್ನೂರಿ ನೆಲದ ಮೇಲೆ ಬಿದ್ದನು. ॥10-13॥
(ಶ್ಲೋಕ-14)
ಮೂಲಮ್
ಆಸ್ಯೈಶ್ಚ ನೇತ್ರಶ್ರವಣೈರುದ್ವಮನ್ ರುಧಿರಂ ಬಹು ।
ವಿಘೂರ್ಣಮಾನನಯನೋ ರಥೋಪಸ್ಥ ಉಪಾವಿಶತ್ ॥
ಅನುವಾದ
ಮುಖಗಳಿಂದಲೂ, ಕಣ್ಣು, ಕಿವಿಗಳಿಂದ ಬಹಳವಾಗಿ ರಕ್ತವನ್ನು ಕಾರುತ್ತಾ, ಕಣ್ಣು ಕತ್ತಲೆ ಬಂದು, ತಲೆತಿರುಗುತ್ತಿರಲು ರಥದಲ್ಲಿ ಕುಳಿತು ಬಿಟ್ಟನು. ॥14॥
(ಶ್ಲೋಕ-15)
ಮೂಲಮ್
ಅಥ ಲಕ್ಷ್ಮಣಮಾದಾಯ ಹನೂಮಾನ್ ರಾವಣಾರ್ದಿತಮ್ ।
ಆನಯದ್ರಾಮಸಾಮೀಪ್ಯಂ ಬಾಹುಭ್ಯಾಂ ಪರಿಗೃಹ್ಯ ತಮ್ ॥
ಅನುವಾದ
ಅನಂತರ ಹನುಮಂತನು ರಾವಣನು ಬೀಳಿಸಿದ ಲಕ್ಷ್ಮಣನನ್ನು ಲೀಲಾಜಾಲವಾಗಿ ಕೈಗಳಿಂದ ಎತ್ತಿಕೊಂಡು ಶ್ರೀರಾಮಚಂದ್ರನ ಸಮೀಪಕ್ಕೆ ಕರೆತಂದನು. ॥15॥
(ಶ್ಲೋಕ-16)
ಮೂಲಮ್
ಹನೂಮತಃ ಸುಹೃತ್ತ್ವೇನ ಭಕ್ತ್ಯಾ ಚ ಪರಮೇಶ್ವರಃ ।
ಲಘುತ್ವಮಗಮದ್ದೇವೋ ಗುರೂಣಾಂ ಗುರುರಪ್ಯಜಃ ॥
ಅನುವಾದ
ಹನುಮಂತನಿಗಾಗಿ ಅವನ ಸ್ನೇಹಕ್ಕೆ ಹಾಗೂ ಭಕ್ತಿಗೆ ಒಲಿದವನೂ ಆದ ಆ ಪರಮೇಶ್ವರನು ಭಾರ ವಾದವುಗಳಲ್ಲಿ ಅತ್ಯಂತ ಭಾರನಾದ, ಅಜನಾದ ಲಕ್ಷ್ಮಣನು ಹಗುರನಾದನು. ॥16॥
(ಶ್ಲೋಕ-17)
ಮೂಲಮ್
ಸಾ ಶಕ್ತಿರಪಿ ತಂ ತ್ಯಕ್ತ್ವಾ ಜ್ಞಾತ್ವಾ ನಾರಾಯಣಾಂಶಜಮ್ ।
ರಾವಣಸ್ಯ ರಥಂ ಪ್ರಾಗಾದ್ರಾವಣೋಽಪಿ ಶನೈಸ್ತತಃ ॥
(ಶ್ಲೋಕ-18)
ಮೂಲಮ್
ಸಂಜ್ಞಾಮವಾಪ್ಯ ಜಗ್ರಾಹ ಬಾಣಾಸನಮಥೋ ರುಷಾ ।
ರಾಮಮೇವಾಭಿದುದ್ರಾವ ದೃಷ್ಟ್ವಾ ರಾಮೋಽಪಿ ತಂ ಕ್ರುಧಾ ॥
(ಶ್ಲೋಕ-19)
ಮೂಲಮ್
ಆರುಹ್ಯ ಜಗತಾಂ ನಾಥೋ ಹನೂಮಂತಂ ಮಹಾಬಲಮ್ ।
ರಥಸ್ಥಂ ರಾವಣಂ ದೃಷ್ಟ್ವಾ ಅಭಿದುದ್ರಾವ ರಾಘವಃ ॥
ಅನುವಾದ
ಆ ಶಕ್ತ್ಯಾಯುಧವೂ ಕೂಡ ಲಕ್ಷ್ಮಣನು ನಾರಾಯಣಾಂಶನೆಂಬುದನ್ನು ಕಂಡುಕೊಂಡು, ಅವನನ್ನು ಬಿಟ್ಟು ರಾವಣನ ರಥಕ್ಕೆ ಬಂದು ಸೇರಿಕೊಂಡಿತು. ರಾವಣನೂ ಮೆಲ್ಲನೆ ಎಚ್ಚೆತ್ತವನಾಗಿ ಕೋಪದಿಂದ ಧನುರ್ಬಾಣಗಳನ್ನು ಎತ್ತಿಕೊಂಡು ರಾಮಚಂದ್ರನ ಕಡೆಗೆ ಧಾವಿಸಿದನು. ತನ್ನ ಕಡೆಗೆ ಧಾವಿಸಿ ಬರುತ್ತಿರುವ ರಾವಣನನ್ನು ಕಂಡು, ಜಗತ್ಪತಿ ಭಗವಾನ್ ರಾಮನು ಅತಿ ಕ್ರೋಧಗೊಂಡು, ಮಹಾಬಲಶಾಲಿಯಾದ ಹನುಮಂತನ ಹೆಗಲನ್ನೇರಿ ರಥದಲ್ಲಿದ್ದ ರಾವಣನನ್ನು ನೋಡಿ ಮುನ್ನುಗ್ಗಿದನು.॥17-19॥
(ಶ್ಲೋಕ-20)
ಮೂಲಮ್
ಜ್ಯಾಶಬ್ದಮಕರೋತ್ತೀವ್ರಂ ವಜ್ರನಿಷ್ಪೇಷನಿಷ್ಠುರಮ್ ।
ರಾಮೋ ಗಂಭೀರಯಾ ವಾಚಾ ರಾಕ್ಷಸೇಂದ್ರಮುವಾಚ ಹ ॥
ಅನುವಾದ
ಆಗ ಶ್ರೀರಾಮಚಂದ್ರನು ವಜ್ರಗಳ ಘರ್ಷಣೆಯಂತಿರುವ ಬಹಳ ತೀವ್ರವಾದ ಶಬ್ದವುಳ್ಳ ಧನುಷ್ಟಂಕಾರ ಮಾಡಿದನು ಹಾಗೂ ರಾಕ್ಷಸೇಂದ್ರನಾದ ರಾವಣನನ್ನು ಕುರಿತು ಗಂಭೀರವಾದ ಮಾತಿನಿಂದ ಇಂತೆಂದನು.॥20॥
(ಶ್ಲೋಕ-21)
ಮೂಲಮ್
ರಾಕ್ಷಸಾಧಮ ತಿಷ್ಠಾದ್ಯ ಕ್ವ ಗಮಿಷ್ಯಸಿ ಮೇ ಪುರಃ ।
ಕೃತ್ವಾಪರಾಧಮೇವಂ ಮೇ ಸರ್ವತ್ರ ಸಮದರ್ಶಿನಃ ॥
ಅನುವಾದ
‘‘ಎಲೈ ರಾಕ್ಷಸಾಧಮಾ! ನನ್ನ ಎದುರಿಗೆ ಸ್ವಲ್ಪ ನಿಲ್ಲು. ಎಲ್ಲಿಗೆ ಹೋಗುವೆ? ಎಲ್ಲೆಲ್ಲೂ ಸಮದರ್ಶಿಯಾದ ನನಗೆ ಈ ರೀತಿಯಾದ ಅಪಕಾರವನ್ನು ಎಸಗಿರುವೆ.॥21॥
(ಶ್ಲೋಕ-22)
ಮೂಲಮ್
ಯೇನ ಬಾಣೇನ ನಿಹತಾ ರಾಕ್ಷಸಾಸ್ತೇ ಜನಾಲಯೇ ।
ತೇನೈವ ತ್ವಾಂ ಹನಿಷ್ಯಾಮಿ ತಿಷ್ಠಾದ್ಯ ಮಮ ಗೋಚರೇ ॥
ಅನುವಾದ
ಜನಸ್ಥಾನ ದಲ್ಲಿ ನಿನ್ನ ಕಡೆಯ ರಾಕ್ಷಸರು ಯಾವ ಬಾಣದಿಂದ ಹತ ರಾದರೋ ಅದರಿಂದಲೇ ನಿನ್ನನ್ನೂ ಕೊಂದುಬಿಡುವೆನು. ಈಗ ನನ್ನ ಎದುರಿಗೆ ನಿಲ್ಲು.॥22॥
(ಶ್ಲೋಕ-23)
ಮೂಲಮ್
ಶ್ರೀರಾಮಸ್ಯ ವಚಃ ಶ್ರುತ್ವಾ ರಾವಣೋ ಮಾರುತಾತ್ಮಜಮ್ ।
ವಹಂತಂ ರಾಘವಂ ಸಂಖ್ಯೇ ಶರೈಸ್ತೀಕ್ಷೈರತಾಡಯತ್ ॥
ಅನುವಾದ
ಶ್ರೀರಾಮನ ಮಾತನ್ನು ಕೇಳಿ ರಾವಣನು ಯುದ್ಧ ರಂಗದಲ್ಲಿ ರಾಮನನ್ನು ಹೊತ್ತು ತಿರುಗುತ್ತಿದ್ದ ಹನುಮಂತ ನನ್ನು ಬಲವಾದ ಬಾಣಗಳಿಂದ ಹೊಡೆದನು. ॥23॥
(ಶ್ಲೋಕ-24)
ಮೂಲಮ್
ಹತಸ್ಯಾಪಿ ಶರೈಸ್ತೀಕ್ಷೈರ್ವಾಯುಸೂನೋಃ ಸ್ವತೇಜಸಾ ।
ವ್ಯವರ್ಧತ ಪುನಸ್ತೇಜೋ ನನರ್ದ ಚ ಮಹಾಕಪಿಃ ॥
ಅನುವಾದ
ಆದರೆ ಇಂತಹ ತೀಕ್ಷ್ಣವಾದ ಬಾಣಗಳು ತಾಗಿದರೂ ವಾಯುಪುತ್ರನಾದ ಹನುಮಂತನ ಕಾಂತಿಯು, ತನ್ನ ಆತ್ಮತೇಜಸ್ಸಿನಿಂದ ಮತ್ತಷ್ಟು ಹೆಚ್ಚತೊಡಗಿತು. ಆ ಮಹಾಕಪೀಶ್ವರನು ಜೋರಾಗಿ ಗರ್ಜನೆ ಮಾಡಿದನು. ॥24॥
(ಶ್ಲೋಕ-25)
ಮೂಲಮ್
ತತೋ ದೃಷ್ಟ್ವಾ ಹನೂಮಂತಂ ಸವ್ರಣಂ ರಘುಸತ್ತಮಃ ।
ಕ್ರೋಧಮಾಹಾರಯಾಮಾಸ ಕಾಲರುದ್ರ ಇವಾಪರಃ ॥
(ಶ್ಲೋಕ-26)
ಮೂಲಮ್
ಸಾಶ್ವಂ ರಥಂ ಧ್ವಜಂ ಸೂತಂ ಶಸ್ತ್ರೌಘಂ ಧನುರಂಜಸಾ ।
ಛತ್ರಂ ಪತಾಕಾಂ ತರಸಾ ಚಿಚ್ಛೇದ ಶಿತಸಾಯಕೈಃ ॥
ಅನುವಾದ
ಗಾಯಗೊಂಡ ಹನುಮಂತನನ್ನು ನೋಡಿ ಶ್ರೀರಘುನಾಥನು ಕಾಲರುದ್ರನಂತೆ ಕೋಪಾವಿಷ್ಟನಾದನು ಮತ್ತು ತೀಕ್ಷ್ಣವಾದ ಬಾಣಗಳಿಂದ ರಾವಣನ ಕುದುರೆ, ರಥ, ಧ್ವಜ, ಸಾರಥಿ, ಶಸ್ತ್ರಗಳ ಸಮೂಹ, ಧನುಸ್ಸು, ಛತ್ರ, ಬಾವುಟಗಳನ್ನೆಲ್ಲ ಬೇಗ-ಬೇಗನೇ ಕತ್ತರಿಸಿದನು. ॥25-26॥
(ಶ್ಲೋಕ-27)
ಮೂಲಮ್
ತತೋ ಮಹಾಶರೇಣಾಶು ರಾವಣಂ ರಘುಸತ್ತಮಃ ।
ವಿವ್ಯಾಧ ವಜ್ರಕಲ್ಪೇನ ಪಾಕಾರಿರಿವ ಪರ್ವತಮ್ ॥
ಅನುವಾದ
ಅನಂತರ ವಜ್ರಾಯುಧದಂತೆ ಬಹಳ ಅಮೋಘವಾದ ಮಹಾಬಾಣದಿಂದ ರಘುವೀರನಾದ ರಾಮನು ದೇವೇಂದ್ರನು ಪರ್ವತಗಳ ಮೇಲೆ ಆಕ್ರಮಿಸಿದಂತೆ ರಾವಣನಿಗೆ ಹೊಡೆದನು. ॥27॥
(ಶ್ಲೋಕ-28)
ಮೂಲಮ್
ರಾಮಬಾಣಹತೋ ವೀರಶ್ಚಚಾಲ ಚ ಮುಮೋಹ ಚ ।
ಹಸ್ತಾನ್ನಿಪತಿತಶ್ಚಾಪಸ್ತಂ ಸಮೀಕ್ಷ್ಯ ರಘೂತ್ತಮಃ ॥
(ಶ್ಲೋಕ-29)
ಮೂಲಮ್
ಅರ್ಧಚಂದ್ರೇಣ ಚಿಚ್ಛೇದ ತತ್ಕಿರೀಟಂ ರವಿಪ್ರಭಮ್ ।
ಅನುಜಾನಾಮಿ ಗಚ್ಛ ತ್ವಮಿದಾನೀಂ ಬಾಣಪೀಡಿತಃ ॥
ಅನುವಾದ
ಭಗವಾನ್ ಶ್ರೀರಾಮನ ಬಾಣವು ತಗಲುತ್ತಲೇ ವೀರನಾದ ರಾವಣನು ವಿಚಲಿತನಾಗಿ ಮೂರ್ಛಿತನಾದನು. ಅವನ ಕೈಯಿಂದ ಧನುಸ್ಸು ಜಾರಿಬಿತ್ತು. ಈ ಸ್ಥಿತಿಯನ್ನು ಕಂಡ ಶ್ರೀರಾಮನು ಸೂರ್ಯನಂತೆ ಹೊಳೆಯುತ್ತಿದ್ದ ಆ ರಾವಣನ ಕಿರೀಟವನ್ನು ಅರ್ಧಚಂದ್ರಾಕಾರವಾದ ಬಾಣದಿಂದ ಕತ್ತರಿಸಿ ಬಿಟ್ಟನು ಮತ್ತು ಹೀಗೆಂದನು ‘‘ಎಲೈ ರಾವಣಾ! ನೀನು ನನ್ನ ಬಾಣದಿಂದ ಪೀಡಿತನಾಗಿರುವೆ. ಈಗ ನೀನು ಲಂಕೆಗೆ ಮರಳು. ॥28-29॥
(ಶ್ಲೋಕ-30)
ಮೂಲಮ್
ಪ್ರವಿಶ್ಯ ಲಂಕಾಮಾಶ್ವಾಸ್ಯ ಶ್ವಃ ಪಶ್ಯಸಿ ಬಲಂ ಮಮ ।
ರಾಮಬಾಣೇನ ಸಂವಿದ್ಧೋ ಹತದರ್ಪೋಽಥ ರಾವಣಃ ॥
(ಶ್ಲೋಕ-31)
ಮೂಲಮ್
ಮಹತ್ಯಾ ಲಜ್ಜಯಾ ಯುಕ್ತೋ ಲಂಕಾಂ ಪ್ರಾವಿಶದಾತುರಃ ।
ರಾಮೋಽಪಿ ಲಕ್ಷ್ಮಣಂ ದೃಷ್ಟ್ವಾ ಮೂರ್ಚ್ಛಿತಂ ಪತಿತಂ ಭುವಿ ॥
(ಶ್ಲೋಕ-32)
ಮೂಲಮ್
ಮಾನುಷತ್ವಮುಪಾಶ್ರಿತ್ಯ ಲೀಲಯಾನುಶುಶೋಚ ಹ ।
ತತಃ ಪ್ರಾಹ ಹನೂಮಂತಂ ವತ್ಸ ಜೀವಯ ಲಕ್ಷ್ಮಣಮ್ ॥
(ಶ್ಲೋಕ-33)
ಮೂಲಮ್
ಮಹೌಷಧೀಃ ಸಮಾನೀಯ ಪೂರ್ವದದ್ವಾನರಾನಪಿ ।
ತಥೇತಿ ರಾಘವೇಣೋಕ್ತೋ ಜಗಾಮಾಶು ಮಹಾಕಪಿಃ ॥
(ಶ್ಲೋಕ-34)
ಮೂಲಮ್
ಹನೂಮಾನ್ವಾಯುವೇಗೇನ ಕ್ಷಣಾತ್ತೀರ್ತ್ವಾ ಮಹೋದಧಿಮ್ ।
ಏತಸ್ಮಿನ್ನಂತರೇ ಚಾರಾ ರಾವಣಾಯ ನ್ಯವೇದಯನ್ ॥
ಅನುವಾದ
ಇಂದು ಲಂಕೆಯನ್ನು ಪ್ರವೇಶಿಸಿ ಎಲ್ಲರನ್ನು ಸಮಾಧಾನಗೊಳಿಸು. ನನ್ನ ಪರಾಕ್ರಮವನ್ನು ನಾಳೆ ನೋಡುವಿಯಂತೆ.’’ ಆಗ ರಾಮಬಾಣದಿಂದ ಗಾಯಗೊಂಡು, ದರ್ಪವು ಚೂರು-ಚೂರಾಗಿ ರಾವಣನು ಬಹಳ ನಾಚಿಕೆಯಿಂದ, ದುಃಖದಿಂದ ಕೂಡಿದವನಾಗಿ ಅವಸರದಿಂದ ಲಂಕೆಯನ್ನು ಪ್ರವೇಶಿಸಿದನು. ಇತ್ತ ಮೂರ್ಛಿತನಾಗಿ ನೆಲದ ಮೇಲೆ ಬಿದ್ದಿರುವ ಲಕ್ಷ್ಮಣನನ್ನು ನೋಡಿ, ಮನುಷ್ಯಭಾವವನ್ನು ಹೊಂದಿದವನಾದ ಶ್ರೀರಾಮಚಂದ್ರನೂ ಕೂಡ ಲೀಲೆಗಾಗಿ ದುಃಖಿಸತೊಡಗಿದನು. ಅನಂತರ ಹನುಮಂತನನ್ನು ಕಂಡು ‘‘ಮಗು! ಹಿಂದಿನಂತೆಯೇ ದ್ರೋಣಾಚಲದಿಂದ ಮಹೌಷಧಿಗಳನ್ನು ತಂದು ಲಕ್ಷ್ಮಣನನ್ನು ಮತ್ತು ಕಪಿಗಳನ್ನು ಬದುಕಿಸಪ್ಪ’’ ಎಂದು ಹೇಳಲು ಹಾಗೆಯೇ ಆಗಲಿ ಎಂದು ಹೇಳಿ ಶ್ರೀರಾಮನಿಂದ ಆಜ್ಞಪ್ತನಾದ ಮಹಾಕಪಿಯಾದ ಹನುಮಂತನು ವಾಯು ವೇಗದಿಂದ ಹೊರಟು ಕ್ಷಣಮಾತ್ರದಲ್ಲಿ ಮಹಾಸಮುದ್ರವನ್ನು ದಾಟಿ ಮುನ್ನಡೆದನು. ಆಗಲೇ ರಾವಣನ ಗುಪ್ತಚರರು ಅವನಲ್ಲಿಗೆ ಬಂದು ಹೇಳಿದರು. ॥30-34॥
(ಶ್ಲೋಕ-35)
ಮೂಲಮ್
ರಾಮೇಣ ಪ್ರೇಷಿತೋ ದೇವ ಹನೂಮಾನ್ ಕ್ಷೀರಸಾಗರಮ್ ।
ಗತೋ ನೇತುಂ ಲಕ್ಷ್ಮಣಸ್ಯ ಜೀವನಾರ್ಥಂ ಮಹೌಷಧೀಃ ॥
ಅನುವಾದ
‘‘ಒಡೆಯಾ! ರಾಮನಿಂದ ಕಳುಹಲ್ಪಟ್ಟ ಹನುಮಂತನು ಲಕ್ಷ್ಮಣನನ್ನು ಬದುಕಿಸುವುದಕ್ಕಾಗಿ ಮಹೌಷಗಳನ್ನು ತರಲು ಕ್ಷೀರಸಮುದ್ರಕ್ಕೆ ಹೋಗಿರುವನು.॥35॥
(ಶ್ಲೋಕ-36)
ಮೂಲಮ್
ಶ್ರುತ್ವಾ ತಚ್ಚಾರವಚನಂ ರಾಜಾ ಚಿಂತಾಪರೋಽಭವತ್ ।
ಜಗಾಮ ರಾತ್ರಾವೇಕಾಕೀ ಕಾಲನೇಮಿಗೃಹಂ ಕ್ಷಣಾತ್ ॥
(ಶ್ಲೋಕ-37)
ಮೂಲಮ್
ಗೃಹಾಗತಂ ಸಮಾಲೋಕ್ಯ ರಾವಣಂ ವಿಸ್ಮಯಾನ್ವಿತಃ ।
ಕಾಲನೇಮಿರುವಾಚೇದಂ ಪ್ರಾಂಜಲಿರ್ಭಯವಿಹ್ವಲಃ ।
ಅರ್ಘ್ಯಾದಿಕಂ ತತಃ ಕೃತ್ವಾ ರಾವಣಸ್ಯಾಗ್ರತಃ ಸ್ಥಿತಃ ॥
ಅನುವಾದ
ಚಾರರ ಈ ಮಾತನ್ನು ಕೇಳಿದ ರಾಕ್ಷಸರಾಜನು ಚಿಂತಾಕ್ರಾಂತನಾದನು. ಆ ಕ್ಷಣ ರಾತ್ರಿಯೇ ಒಬ್ಬಂಟಿಗನಾಗಿ ಕಾಲನೇಮಿಯ ಮನೆಗೆ ನಡೆದನು. ಮನೆಗೆ ಬಂದ ರಾವಣನನ್ನು ಕಂಡು ಆಶ್ಚರ್ಯ ಚಕಿತನಾದ ಕಾಲನೇಮಿಯು ರಾವಣನಿಗೆ ಅರ್ಘ್ಯಪಾದ್ಯಾದಿಗಳನ್ನಿತ್ತು ಅವನ ಮುಂದೆ ಹೆದರಿಕೊಂಡೆ ಕೈಮುಗಿದು ನಿಂತುಕೊಂಡು ಹೇಳಿದನು ॥36-37॥
(ಶ್ಲೋಕ-38)
ಮೂಲಮ್
ಕಿಂ ತೇ ಕರೋಮಿ ರಾಜೇಂದ್ರ ಕಿಮಾಗಮನಕಾರಣಮ್ ।
ಕಾಲನೇಮಿಮುವಾಚೇದಂ ರಾವಣೋ ದುಃಖಪೀಡಿತಃ ॥
ಅನುವಾದ
‘‘ಎಲೈ ರಾಜೇಂದ್ರನೆ! ನಾನು ನಿಮಗೆ ಯಾವ ಸೇವೆಮಾಡಲಿ? ಹೇಳಿ. ನೀವು ಬಂದುದರ ಉದ್ದೇಶವೇನು?’’ ಆಗ ಅತಿ ದುಃಖಿತನಾದ ರಾವಣನು ಕಾಲನೇಮಿಯ ಬಳಿ ಹೇಳಿದನು — ॥38॥
(ಶ್ಲೋಕ-39)
ಮೂಲಮ್
ಮಮಾಪಿ ಕಾಲವಶತಃ ಕಷ್ಟಮೇತದುಪಸ್ಥಿತಮ್ ।
ಮಯಾ ಶಕ್ತ್ಯಾಹತೋ ವೀರೋ ಲಕ್ಷ್ಮಣಃ ಪತಿತೋ ಭುವಿ ॥
ಅನುವಾದ
‘‘ಅಯ್ಯಾ! ನನಗೂ ಕೂಡ ಕಾಲಗತಿಯಿಂದ ಇದೊಂದು ಕಷ್ಟ ಬಂದಿದೆ. ನನ್ನ ಶಕ್ತ್ಯಾಯುಧದಿಂದ ವೀರನಾದ ಲಕ್ಷ್ಮಣನು ಭೂಮಿಯಲ್ಲಿ ಬಿದ್ದಿರುವನು. ॥39॥
(ಶ್ಲೋಕ-40)
ಮೂಲಮ್
ತಂ ಜೀವಯಿತುಮಾನೇತುಮೋಷಧೀರ್ಹನುಮಾನ್ ಗತಃ ।
ಯಥಾ ತಸ್ಯ ಭವೇದ್ವಿಘ್ನಸ್ತಥಾ ಕುರು ಮಹಾಮತೇ ॥
(ಶ್ಲೋಕ-41)
ಮೂಲಮ್
ಮಾಯಯಾ ಮುನಿವೇಷೇಣ ಮೋಹಯಸ್ವ ಮಹಾಕಪಿಮ್ ।
ಕಾಲಾತ್ಯಯೋ ಯಥಾ ಭೂಯಾತ್ತಥಾ ಕೃತ್ವೈಹಿ ಮಂದಿರೇ ॥
ಅನುವಾದ
ಅವನನ್ನು ಬದುಕಿಸುವುದಕ್ಕಾಗಿ ಸಂಜೀವಿನ್ಯಾದಿ ಔಷಧಿಗಳನ್ನು ತರಲು ಹನುಮಂತನು ಹೋಗಿರುವನು. ಎಲೈ ಬುದ್ಧಿಶಾಲಿಯೆ! ಅವನಿಗೆ ಅಡ್ಡಿಯನ್ನುಂಟು ಮಾಡಲು ಮಾಯೆಯಿಂದ ಋಷಿವೇಶವನ್ನು ತಳೆದು ನೀನು ಆ ಕಪಿಯನ್ನು ವಂಚಿಸುವವನಾಗು. ಅದರಿಂದ ಆ ಔಷಧಿಯ ಪ್ರಯೋಗದ ಸಮಯವು ಮೀರಿಹೋಗುವಂತೆ ಮಾಡಿ ಮನೆಗೆ ಹಿಂತಿರುಗು. ॥40-41॥
(ಶ್ಲೋಕ-42)
ಮೂಲಮ್
ರಾವಣಸ್ಯ ವಚಃ ಶ್ರುತ್ವಾ ಕಾಲನೇಮಿರುವಾಚ ತಮ್ ।
ರಾವಣೇಶ ವಚೋ ಮೇದ್ಯ ಶೃಣು ಧಾರಯ ತತ್ತ್ವತಃ ॥
ಅನುವಾದ
ರಾವಣನ ಮಾತನ್ನು ಕೇಳಿ ಕಾಲನೇಮಿಯು ಹೇಳಿದನು - ‘‘ಎಲೈ ರಾವಣೇಶ್ವರಾ! ಈ ನನ್ನ ಮಾತನ್ನು ಕೇಳಿರಿ; ಹಾಗೂ ನಿಜವಾದುದನ್ನು ಕಂಡುಕೊಳ್ಳಿರಿ. ॥42॥
(ಶ್ಲೋಕ-43)
ಮೂಲಮ್
ಪ್ರಿಯಂ ತೇ ಕರವಾಣ್ಯೇವ ನ ಪ್ರಾಣಾನ್ ಧಾರಯಾಮ್ಯಹಮ್ ।
ಮಾರೀಚಸ್ಯ ಯಥಾರಣ್ಯೇ ಪುರಾಭೂನ್ಮೃಗರೂಪಿಣಃ ॥
(ಶ್ಲೋಕ-44)
ಮೂಲಮ್
ತಥೈವ ಮೇ ನ ಸಂದೇಹೋ ಭವಿಷ್ಯತಿ ದಶಾನನ ।
ಹತಾಃ ಪುತ್ರಾಶ್ಚ ಪೌತ್ರಾಶ್ಚ ಬಾಂಧವಾ ರಾಕ್ಷಸಾಶ್ಚ ತೇ ॥
ಅನುವಾದ
ಬೇಕಾದರೆ ನನ್ನ ಪ್ರಾಣಗಳೇ ಹೋಗಲಿ. ಪ್ರಿಯವನ್ನೇನೋ ಮಾಡುವೆನು. ದಶಕಂಠನೇ! ಮೃಗರೂಪಿಯಾಗಿದ್ದ ಮಾರೀಚನಿಗೆ ದಂಡಕಾರಣ್ಯದಲ್ಲಿ ಆದ ಗತಿಯೇ ನನಗೂ ಆಗಲಿದೆ. ಈ ವಿಷಯದಲ್ಲಿ ಸಂಶಯವೇ ಇಲ್ಲ. ನೋಡು, ನಿನ್ನ ಮಕ್ಕಳು, ಮೊಮ್ಮಕ್ಕಳು, ಬಂಧುಗಳಾದ ರಾಕ್ಷಸರು ಎಲ್ಲರೂ ನಾಶವಾದರು. ॥43-44॥
(ಶ್ಲೋಕ-45)
ಮೂಲಮ್
ಘಾತಯಿತ್ವಾಸುರಕುಲಂ ಜೀವಿತೇನಾಪಿ ಕಿಂ ತವ ।
ರಾಜ್ಯೇನ ವಾ ಸೀತಯಾ ವಾ ಕಿಂ ದೇಹೇನ ಜಡಾತ್ಮನಾ ॥
ಅನುವಾದ
ಈ ಪ್ರಕಾರ ರಾಕ್ಷಸವಂಶವನ್ನು ನಾಶಗೊಳಿಸಿದ ಬಳಿಕ ನೀನು ಬದುಕಿದ್ದೇನಾಗಬೇಕಾಗಿದೆ? ರಾಜ್ಯದಿಂದಾಗಲಿ, ಸೀತೆಯಿಂದಾಗಲೀ, ಜಡವಾದ ಈ ದೇಹದಿಂದಾಗಲಿ ಏನು ಲಾಭವಿದೆ? ॥45॥
(ಶ್ಲೋಕ-46)
ಮೂಲಮ್
ಸೀತಾಂ ಪ್ರಯಚ್ಛ ರಾಮಾಯ ರಾಜ್ಯಂ ದೇಹಿ ವಿಭೀಷಣೇ ।
ವನಂ ಯಾಹಿ ಮಹಾಬಾಹೋ ರಮ್ಯಂ ಮುನಿಗಣಾಶ್ರಯಮ್ ॥
ಅನುವಾದ
ಹೇ ಮಹಾ ಬಾಹೋ! ಸೀತೆಯನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿಬಿಡು. ವಿಭೀಷಣನಿಗೆ ರಾಜ್ಯವನ್ನು ಕೊಡು. ಮುನಿಗಳಿಗೆ ಆಶ್ರಯ ವಾಗಿರುವ ರಮ್ಯವಾದ ಕಾಡಿಗೆ ಹೋಗು. ॥46॥
(ಶ್ಲೋಕ-47)
ಮೂಲಮ್
ಸ್ನಾತ್ವಾ ಪ್ರಾತಃ ಶುಭಜಲೇ ಕೃತ್ವಾ ಸಂಧ್ಯಾದಿಕಾಃ ಕ್ರಿಯಾಃ ।
ತತ ಏಕಾಂತಮಾಶ್ರಿತ್ಯ ಸುಖಾಸನಪರಿಗ್ರಹಃ ॥
(ಶ್ಲೋಕ-48)
ಮೂಲಮ್
ವಿಸೃಜ್ಯ ಸರ್ವತಃ ಸಂಗಮಿತರಾನ್ವಿಷಯಾನ್ಬಹಿಃ ।
ಬಹಿಃ ಪ್ರವೃತ್ತಾಕ್ಷಗಣಂ ಶನೈಃ ಪ್ರತ್ಯಕ್ ಪ್ರವಾಹಯ ॥
ಅನುವಾದ
ಅಲ್ಲಿ ಪ್ರಾತಃಕಾಲದಲ್ಲಿ ಶುಭವಾದ ನೀರಿನಿಂದ ಸ್ನಾನಮಾಡಿ, ಸಂಧ್ಯಾವಂದನಾದಿಗಳನ್ನು ಮುಗಿಸಿ ಅನಂತರ ಏಕಾಂತದಲ್ಲಿ ಸುಖಾಸನದಲ್ಲಿ ಕುಳಿತುಕೊಂಡು ಎಲ್ಲ ಕಡೆಗಳಿಂದ ನಿಃಸಂಗನಾಗಿ, ಬಾಹ್ಯ ವಿಷಯಗಳನ್ನು ಬಿಟ್ಟು, ತನ್ನ ಬಾಹ್ಯವೃತ್ತಿಗಳುಳ್ಳ ಇಂದ್ರಿಯಗಳನ್ನು ನಿಧಾನವಾಗಿ ಅಂತರ್ಮುಖವಾಗಿಸಬೇಕು. ॥47-48॥
(ಶ್ಲೋಕ-49)
ಮೂಲಮ್
ಪ್ರಕೃತೇರ್ಭಿನ್ನಮಾತ್ಮಾನಂ ವಿಚಾರಯ ಸದಾನಘ ।
ಚರಾಚರಂ ಜಗತ್ಕೃತ್ಸ್ನಂ ದೇಹಬುದ್ಧೀಂದ್ರಿಯಾದಿಕಮ್ ॥
(ಶ್ಲೋಕ-50)
ಮೂಲಮ್
ಆಬ್ರಹ್ಮಸ್ತಂಬಪರ್ಯಂತಂ ದೃಶ್ಯತೇ ಶ್ರೂಯತೇ ಚ ಯತ್ ।
ಸೈಷಾ ಪ್ರಕೃತಿರಿತ್ಯುಕ್ತಾ ಸೈವ ಮಾಯೇತಿ ಕೀರ್ತಿತಾ ॥
ಅನುವಾದ
ಎಲೈ ಪಾಪರಹಿತನೆ! ಆತ್ಮನು ಪ್ರಕೃತಿಗಿಂತ ಬೇರೆಯೆಂದು ವಿಚಾರ ಮಾಡು. ಈ ಚೇತನಾಚೇತನಾತ್ಮಕವಾದ, ಬ್ರಹ್ಮನಿಂದ ಹಿಡಿದು ಒಂದು ಸಣ್ಣ ಕೀಟದವರೆಗಿನ ಈ ಜಗತ್ತೇನಿದೆಯೋ, ಅಂದರೆ ಕಂಡು ಬರುವ ಹಾಗೂ ಕೇಳಿಬರುವುದೆಲ್ಲವೂ, ದೇಹೇಂದ್ರಿಯ ಪ್ರಾಣ ಮನೋಬುದ್ಧಿಗಳೂ ಕೂಡ ಪ್ರಕೃತಿಯೆನಿಸುವುವು. ಇದನ್ನೇ ಮಾಯೆ ಎಂದು ಹೇಳುವರು. ॥49-50॥
(ಶ್ಲೋಕ-51)
ಮೂಲಮ್
ಸರ್ಗಸ್ಥಿತಿವಿನಾಶಾನಾಂ ಜಗತ್ ವೃಕ್ಷಸ್ಯ ಕಾರಣಮ್ ।
ಲೋಹಿತಶ್ವೇತಕೃಷ್ಣಾದಿಪ್ರಜಾಃ ಸೃಜತಿ ಸರ್ವದಾ ॥
ಅನುವಾದ
ಇವಳೇ ಸೃಷ್ಟಿ, ಸಿಥತಿ, ಲಯಗಳೆಂಬ ವಿಕಾರವನ್ನು ಹೊಂದುವ ಪ್ರಪಂಚವೆಂಬ ವೃಕ್ಷಕ್ಕೆ ಕಾರಣ ಳಾಗಿದ್ದಾಳೆ. ಇದು ಯಾವಾಗಲೂ ಬಿಳುಪು (ಸಾತ್ವಿಕ), ಕೆಂಪು (ರಾಜಸ), ಕಪ್ಪು (ತಾಮಸ) ಬಣ್ಣದ ಪ್ರಜೆಗಳನ್ನು ಸೃಷ್ಟಿ ಮಾಡುತ್ತಾಳೆ. ॥51॥
(ಶ್ಲೋಕ-52)
ಮೂಲಮ್
ಕಾಮಕ್ರೋಧಾದಿಪುತ್ರಾದ್ಯಾನ್ ಹಿಂಸಾತೃಷ್ಣಾದಿಕನ್ಯಕಾಃ ।
ಮೋಹಯತ್ಯನಿಶಂ ದೇವಮಾತ್ಮಾನಂ ಸ್ವೈರ್ಗುಣೈರ್ವಿಭುಮ್ ॥
ಅನುವಾದ
ಅವಳೇ ತನ್ನ ಗುಣಗಳಿಂದ ಹಗಲು-ರಾತ್ರಿ ಸರ್ವವ್ಯಾಪಕ ಆತ್ಮನನ್ನು ಮೋಹಿತ ಗೊಳಿಸಿ, ಕಾಮಕ್ರೋಧಗಳೇ ಮುಂತಾದ ಗಂಡು ಮಕ್ಕಳನ್ನೂ, ಹಿಂಸೆ-ಆಸೆ ಮುಂತಾದ ಹೆಣ್ಣು ಮಕ್ಕಳನ್ನು ಹಡೆಯುತ್ತಿರುವಳು. ॥52॥
(ಶ್ಲೋಕ-53)
ಮೂಲಮ್
ಕರ್ತೃತ್ವಭೋಕ್ತೃತ್ವಮುಖಾನ್ ಸ್ವಗುಣಾನಾತ್ಮನೀಶ್ವರೇ ।
ಆರೋಪ್ಯ ಸ್ವವಶಂ ಕೃತ್ವಾ ತೇನ ಕ್ರೀಡತಿ ಸರ್ವದಾ ॥
ಅನುವಾದ
ಮಾಯೆಯಾದರೋ ಕರ್ತೃತ್ವ-ಭೋಕ್ತೃತ್ವವೇ ಮುಂತಾದ ತನ್ನ ಗುಣಗಳನ್ನು ಈಶ್ವರನಾದ ಆತ್ಮನಲ್ಲಿ ಆರೋಪಿಸಿ ತನ್ನ ವಶಗೊಳಿಸಿಕೊಂಡು ಆತನೊಡನೆ ಯಾವಾಗಲೂ ಆಟವಾಡುತ್ತಿರುವಳು. ॥53॥
(ಶ್ಲೋಕ-54)
ಮೂಲಮ್
ಶುದ್ಧೋಽಪ್ಯಾತ್ಮಾ ಯಯಾ ಯುಕ್ತಃ ಪಶ್ಯತೀವ ಸದಾ ಬಹಿಃ ।
ವಿಸ್ಮೃತ್ಯ ಚ ಸ್ವಮಾತ್ಮಾನಂ ಮಾಯಾಗುಣವಿಮೋಹಿತಃ ॥
ಅನುವಾದ
ಆತ್ಮನು ಶುದ್ಧನಾಗಿದ್ದರೂ ಈ ಪ್ರಕೃತಿಯೊಡನೆ ಕೂಡಿದವನಾಗಿ ಯಾವಾಗಲೂ ಹೊರಮುಖನಾಗಿದ್ದುಕೊಂಡು, ಮಾಯಾ ಗುಣಗಳಿಂದ ವಿಮೋಹಿತನಾಗಿ ತನ್ನನ್ನು ತಾನು ಮರೆತಿರುವನು. ॥54॥
(ಶ್ಲೋಕ-55)
ಮೂಲಮ್
ಯದಾ ಸದ್ಗುರುಣಾ ಯುಕ್ತೊ ಬೋಧ್ಯತೇ ಬೋಧರೂಪಿಣಾ ।
ನಿವೃತ್ತದೃಷ್ಟಿರಾತ್ಮಾನಂ ಪಶ್ಯತ್ಯೇವ ಸದಾ ಸ್ಫುಟಮ್ ॥
ಅನುವಾದ
ಸದ್ಗುರುವಿನ ಸಂಗವನ್ನು ಹೊಂದಿ ಜ್ಞಾನ ರೂಪಿಯಾದ ಅವನಿಂದ ಬೋಧ ಪಡೆದಾಗ ಅವನು ಬಾಹ್ಯ ವಿಷಯಗಳಿಂದ ತನ್ನ ದೃಷ್ಟಿಯನ್ನು ಹೊರಳಿಸಿ ತಾನೇ ತನ್ನನ್ನು ಸ್ಫುಟವಾಗಿ ಕಂಡುಕೊಳ್ಳುವನು. ॥55॥
(ಶ್ಲೋಕ-56)
ಮೂಲಮ್
ಜೀವನ್ಮುಕ್ತಃ ಸದಾ ದೇಹೀ ಮುಚ್ಯತೇ ಪ್ರಾಕೃತೈರ್ಗುಣೈಃ ।
ತ್ವಮಪ್ಯೇವಂ ಸದಾತ್ಮಾನಂ ವಿಚಾರ್ಯ ನಿಯತೇಂದ್ರಿಯಃ ॥
ಅನುವಾದ
ಮತ್ತೆ ದೇಹಧಾರೀ ದೇಹಿಯು ಜೀವನ್ಮುಕ್ತನಾಗಿ ಪ್ರಾಕೃತಗುಣಗಳಿಂದ ಬಿಡುಗಡೆ ಹೊಂದುವನು. ‘‘ಹೇ ರಾವಣಾ! ನೀನೂ ಕೂಡ ಇಂದ್ರಿಯ ನಿಗ್ರಹ ಸಂಪನ್ನನಾಗಿ ನಿಜವಾದ ಆತ್ಮಸ್ವರೂಪವನ್ನು ಚಿಂತಿಸು. ॥56॥
(ಶ್ಲೋಕ-57)
ಮೂಲಮ್
ಪ್ರಕೃತೇರನ್ಯಮಾತ್ಮಾನಂ ಜ್ಞಾತ್ವಾ ಮುಕ್ತೋ ಭವಿಷ್ಯಸಿ ।
ಧ್ಯಾತುಂ ಯದ್ಯಸಮರ್ಥೋಽಸಿ ಸಗುಣಂ ದೇವಮಾಶ್ರಯ ॥
ಅನುವಾದ
ಇದರಿಂದ ಆತ್ಮನು ಪ್ರಕೃತಿಗಿಂತಲೂ ಬೇರೆಯವನೆಂದು ತಿಳಿದ ನೀನು ಮುಕ್ತನಾಗುವೆ, ಒಂದು ವೇಳೆ ಈ ಪ್ರಕಾರ (ನಿರ್ಗುಣನಾದ) ಆತ್ಮವನ್ನು ಧ್ಯಾನಮಾಡಲು ಅಸಮರ್ಥನಾದರೆ ಸಗುಣ ಭಗವಂತನನ್ನು ಆಶ್ರಯಿಸುವವನಾಗು. ॥57॥
(ಶ್ಲೋಕ-58)
ಮೂಲಮ್
ಹೃತ್ಪದ್ಮಕರ್ಣಿಕೇ ಸ್ವರ್ಣಪೀಠೇ ಮಣಿಗಣಾನ್ವಿತೇ ।
ಮೃದುಶ್ಲಕ್ಷ್ಣತರೇ ತತ್ರ ಜಾನಕ್ಯಾ ಸಹ ಸಂಸ್ಥಿತಮ್ ॥
(ಶ್ಲೋಕ-59)
ಮೂಲಮ್
ವೀರಾಸನಂ ವಿಶಾಲಾಕ್ಷಂ ವಿದ್ಯುತ್ಪುಂಜನಿಭಾಂಬರಮ್ ।
ಕಿರೀಟಹಾರಕೇಯೂರಕೌಸ್ತುಭಾದಿಭಿರನ್ವಿತಮ್ ॥
(ಶ್ಲೋಕ-60)
ಮೂಲಮ್
ನೂಪುರೈಃ ಕಟಕೈರ್ಭಾಂತಂ ತಥೈವ ವನಮಾಲಯಾ ।
ಲಕ್ಷ್ಮಣೇನ ಧನುರ್ದ್ವಂದ್ವಕರೇಣ ಪರಿಸೇವಿತಮ್ ॥
(ಶ್ಲೋಕ-61)
ಮೂಲಮ್
ಏವಂ ಧ್ಯಾತ್ವಾ ಸದಾತ್ಮಾನಂ ರಾಮಂ ಸರ್ವಹೃದಿ ಸ್ಥಿತಮ್ ।
ಭಕ್ತ್ಯಾ ಪರಮಯಾ ಯುಕ್ತೋ ಮುಚ್ಯತೇ ನಾತ್ರ ಸಂಶಯಃ ॥
ಅನುವಾದ
(ಆ ಸಗುಣ ಧ್ಯಾನದ ವಿಧಿ ಈ ಪ್ರಕಾರವಿದೆ) ಹೃದಯಪದ್ಮದ ಕರ್ಣಿಕೆಯಲ್ಲಿ ಅತಿ ಮೃದುವಾದ ಮತ್ತು ಸುಂದರ ಸುವರ್ಣ ಸಿಂಹಾಸನದ ಮೇಲೆ ಜಾನಕಿಸಹಿತ ಶ್ರೀರಾಮನು ವೀರಾಸನದಲ್ಲಿ ಕುಳಿತಿರುವನು. ಅವನ ಕಣ್ಣುಗಳು ವಿಶಾಲವಾಗಿದ್ದು, ಪೀತಾಂಬರವು ವಿದ್ಯುತ್ತಿನ ಸಮೂಹದಂತೆ ತೇಜೋಮಯವಾಗಿದೆ. ಕಿರೀಟ, ಹಾರ, ತೋಳುಬಂದಿ, ಕೌಸ್ತುಭ ರತ್ನಾದಿಗಳಿಂದ ಸುಶೋಭಿತನಾಗಿದ್ದಾನೆ. ಕಾಲುಗೆಜ್ಜೆ, ಕಡಗಗಳಿಂದಲೂ, ವನಮಾಲೆ ಮುಂತಾದವುಗಳಿಂದ ಯಾರು ಅಪೂರ್ವ ಶೋಭೆಯಿಂದೊಡಗೂಡಿರುವನೋ, ಲಕ್ಷ್ಮಣನು ಕೈಯಲ್ಲಿ ಎರಡು ಧನುಸ್ಸುಗಳನ್ನು (ಒಂದು ಶ್ರೀರಾಮನ ಮತ್ತೊಂದು ತನ್ನದು) ಹಿಡಿದುಕೊಂಡು ಯಾರ ಸೇವೆಯಲ್ಲಿ ನಿಂತಿರುವನೋ, ಆ ಎಲ್ಲರ ಹೃದಯದಲ್ಲಿ ವಿರಾಜಮಾನ ತನ್ನ ಆತ್ಮರೂಪೀ ಭಗವಾನ್ ಶ್ರೀರಾಮನ ಧ್ಯಾನವನ್ನು ಸರ್ವದಾ ಅತ್ಯಂತ ಭಕ್ತಿಯಿಂದ ಮಾಡುವುದರಿಂದ ನೀನು ಮುಕ್ತನಾಗುವೆ. ಇದರಲ್ಲಿ ಸಂಶಯವೇ ಇಲ್ಲ. ॥58-61॥
(ಶ್ಲೋಕ-62)
ಮೂಲಮ್
ಶೃಣು ವೈ ಚರಿತಂ ತಸ್ಯ ಭಕ್ತೈರ್ನಿತ್ಯಮನನ್ಯಧೀಃ ।
ಏವಂ ಚೇತ್ಕೃತಪೂರ್ವಾಣಿ ಪಾಪಾನಿ ಚ ಮಹಾಂತ್ಯಪಿ ।
ಕ್ಷಣಾದೇವ ವಿನಶ್ಯಂತಿ ಯಥಾಗ್ನೇಸ್ತೂಲರಾಶಯಃ ॥
ಅನುವಾದ
ಅವನ ಚರಿತ್ರೆಯನ್ನು ನಿತ್ಯವೂ ಭಕ್ತರ ಮೂಲಕ ಅನ್ಯಮನಸ್ಕನಾಗಿ ಕೇಳು. ಹೀಗೆ ಮಾಡುವುದರಿಂದ ಹಿಂದೆ ಮಾಡಿದ್ದ ಮಹಾಪಾಪಗಳೂ ಕೂಡ ಬೆಂಕಿಯಿಂದ ಹತ್ತಿಯ ರಾಶಿಯು ಸುಟ್ಟು ಹೋಗುವಂತೆ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೋಗುವವು.॥62॥
(ಶ್ಲೋಕ-63)
ಮೂಲಮ್
ಭಜಸ್ವ ರಾಮಂ ಪರಿಪೂರ್ಣಮೇಕಂ
ವಿಹಾಯ ವೈರಂ ನಿಜಭಕ್ತಿಯುಕ್ತಃ ।
ಹೃದಾ ಸದಾ ಭಾವಿತಭಾವರೂಪ-
ಮನಾಮರೂಪಂ ಪುರುಷಂ ಪುರಾಣಮ್ ॥
ಅನುವಾದ
ಸರ್ವತ್ರ ಪರಿಪೂರ್ಣನೂ, ಅದ್ವಿತೀಯನೂ ಆದ ಭಗವಾನ್ ಶ್ರೀರಾಮನೊಂದಿಗೆ ವೈರವನ್ನು ಬಿಟ್ಟು ಆತ್ಮಪ್ರೇಮ ಪೂರ್ವಕವಾಗಿ ಆ ನಾಮ-ರೂಪರಹಿತ ಪುರಾಣ ಪುರುಷನನ್ನು ಹೃದಯದಲ್ಲಿ ಸಗುಣ ಭಾವದಿಂದ ಭಾವಿಸಿ ಅವನನ್ನು ಯಾವಾಗಲೂ ಭಜಿಸುವವನಾಗು.* ॥63॥
ಟಿಪ್ಪನೀ
- ಈ ಅಧ್ಯಾಯವು ರಾವಣ-ಕಾಲನೇಮಿಸಂವಾದದ ನೆಪದಿಂದ ಅಧ್ಯಾತ್ಮವಿಚಾರವನ್ನು ಒಳಗೊಂಡ ಮನನೀಯವಾದ ಭಾಗವಾಗಿದೆ. ಕಾಲನೇಮಿಯಂಥ ರಾಕ್ಷಸನು ಕೂಡ ತತ್ತ್ವವನ್ನು ಬಲ್ಲವನಾಗಿದ್ದುದು ವಿಶೇಷವೇ ಸರಿ. ಆದರೆ ಅದನ್ನು ಅನುಷ್ಠಾನದಲ್ಲಿಟ್ಟುಕೊಳ್ಳದೆ ಕೇವಲ ಪರೋಪದೇಶಕ್ಕಾಗಿ ಅವನು ಬಳಸಿಕೊಂಡನಾದ್ದರಿಂದ ತಾನು ರಾಕ್ಷಸನಾಗಿಯೇ ಉಳಿದುಕೊಂಡನು. ಈ ವಿಚಾರವು ಆತನ ಕಥೆಯಲ್ಲಿ ಮುಂದೆ ಗೊತ್ತಾಗುವುದು. ಆದ್ದರಿಂದ ಯಾರೇ ಆಗಲಿ, ಅಧ್ಯಾತ್ಮ ತತ್ತ್ವವನ್ನು ತಮ್ಮ ಸ್ವಂತ ಉಪಯೋಗಕ್ಕಾಗಿ ಅನುಷ್ಠಾನ ಮಾಡಿದರೆ ಅವನು ಜ್ಞಾನೀ ಸಂತನೇ ಆದಾನು.
ಆತ್ಮನನ್ನು ಅರಿಯದೆ ಇರುವ ಮೂಢರನ್ನೆಲ್ಲ ಉಪನಿಷತ್ತುಗಳಲ್ಲಿ ಅಸುರರೆಂದೇ ಕರೆದಿರುತ್ತದೆ. ಇಲ್ಲಿಯೂ ಅಸುರನ ಬಾಯಿಂದ ತತ್ತ್ವವಿಚಾರವನ್ನು ಹೊರಗೆಡವಿರುವುದರ ಉದ್ದೇಶವೇನೆಂದರೆ : ವೇದಾಂತವು ಕೇವಲ ಪ್ರವಚನಕ್ಕಾಗಿ ಅಲ್ಲ, ಅದು ತನ್ನ ಅನುಸಂಧಾನಕ್ಕಾಗಿ-ಎಂಬುದನ್ನು ವ್ಯತಿರೇಕನ್ಯಾಯದಿಂದ ತಿಳಿಸುವುದಕ್ಕೇ ಆಗಿರುತ್ತದೆ. ಯಾವನು ಅನುಷ್ಠಾನತತ್ಪರನಲ್ಲವೋ ಅಂಥವನ ಬೋಧೆಯು ಪರಿಣಾಮಕಾರಿಯಾಗಲಾರದು ಎಂಬುದೂ ಇಲ್ಲಿ ಕಂಡು ಬರುತ್ತದೆ. ಕಾಲನೇಮಿಯ ಉಪದೇಶವನ್ನು ರಾವಣನು ಸ್ವಲ್ಪವೂ ಸ್ವೀಕರಿಸಲಿಲ್ಲವೆಂಬುದೇ ಇದಕ್ಕೆ ಸಾಕ್ಷಿಯಾಗಿದೆ. ಅಂತೂ ಈ ಸಂದರ್ಭದಿಂದ ನಾವು ತತ್ತ್ವಶ್ರವಣ-ಬೋಧನೆಗಳ ವಿಷಯಕ್ಕೆ ಬ್ರಹ್ಮನಿಷ್ಠರಾದ ಸದ್ಗುರುಗಳ ಮೂಲಕವೇ ಪ್ರಯತ್ನಿಸಬೇಕೆಂದೂ ಕೇವಲ ಶಾಸ್ತ್ರಜ್ಞರ ಉಪದೇಶಗಳು ಕಾರ್ಯ ಕಾರಿಯಾಗಲಾರವೆಂದೂ ತಿಳಿಯಬಹುದಾಗಿದೆ.
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.