೦೫

[ಐದನೆಯ ಸರ್ಗ]

ಭಾಗಸೂಚನಾ

ಶುಕನ ಪೂರ್ವ ಚರಿತ್ರೆ, ಮಾಲ್ಯವಂತನು ರಾವಣನಿಗೆ ಸಮಜಾಯಿಸುವುದು ಹಾಗೂ ವಾನರ-ರಾಕ್ಷಸ ಸಂಗ್ರಾಮ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಶ್ರುತ್ವಾ ಶುಕಮುಖೋದ್ಗೀತಂ ವಾಕ್ಯಮಜ್ಞಾನನಾಶನಮ್ ।
ರಾವಣಃ ಕ್ರೋಧತಾಮ್ರಾಕ್ಷೋ ದಹನ್ನಿವ ತಮಬ್ರವೀತ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ಶುಕನ ಮುಖದಿಂದ ಹೊರಬಂದ ಅಜ್ಞಾನನಾಶಕವಾದ ಮಾತನ್ನು ಕೇಳಿ, ರಾವಣನು ಕೋಪದಿಂದ ಕೆಂಗಣ್ಣನಾಗಿ ಸುಡುವವನಂತೆ ನೋಡುತ್ತಾ ಹೀಗೆಂದನು. ॥1॥

(ಶ್ಲೋಕ-2)

ಮೂಲಮ್

ಅನುಜೀವ್ಯ ಸುದುರ್ಬುದ್ಧೇ ಗುರುವದ್ಭಾಷಸೇ ಕಥಮ್ ।
ಶಾಸಿತಾಹಂ ತ್ರಿಜಗತಾಂ ತ್ವಂ ಮಾಂ ಶಿಕ್ಷನ್ನ ಲಜ್ಜಸೇ ॥

ಅನುವಾದ

‘‘ಎಲವೋ, ದುರ್ಬುದ್ಧಿಯೆ! ನನ್ನ ಆಶ್ರಿತನಾಗಿ, ನನ್ನ ಅನ್ನ ತಿಂದು ಬದುಕುವ ನೀನು ಗುರುವಿನಂತೆ ಮಾತಾಡುತ್ತಿರುವೆಯಲ್ಲ? ಮೂರು ಲೋಕಗಳಿಗೂ ಒಡೆಯನಾದ ನನಗೆ ಬುದ್ದಿ ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೆ? ॥2॥

(ಶ್ಲೋಕ-3)

ಮೂಲಮ್

ಇದಾನೀಮೇವ ಹನ್ಮಿ ತ್ವಾಂ ಕಿಂತು ಪೂರ್ವಕೃತಂ ತವ ।
ಸ್ಮರಾಮಿ ತೇನ ರಕ್ಷಾಮಿ ತ್ವಾಂ ಯದ್ಯಪಿ ವಧೋಚಿತಮ್ ॥

ಅನುವಾದ

ನಿನ್ನನ್ನು ಈಗಲೇ ಕೊಲ್ಲುತ್ತಿದ್ದೆ. ಆದರೆ ನೀನು ಹಿಂದೆ ಮಾಡಿದ ಉಪಕಾರವನ್ನು ನೆನೆದು ವಧಾರ್ಹನಾದರೂ ಕೂಡ ನಿನ್ನನ್ನು ಬಿಟ್ಟು ಬಿಟ್ಟಿರುವೆನು. ॥3॥

(ಶ್ಲೋಕ-4)

ಮೂಲಮ್

ಇತೋ ಗಚ್ಛ ವಿಮೂಢ ತ್ವಮೇವಂ ಶ್ರೋತುಂ ನ ಮೇ ಕ್ಷಮಮ್ ।
ಮಹಾಪ್ರಸಾದ ಇತ್ಯುಕ್ತ್ವಾ ವೇಪಮಾನೋ ಗೃಹಂ ಯಯೌ ॥

ಅನುವಾದ

ಎಲೈ ಮೂಢನೆ! ಕೂಡಲೇ ಇಲ್ಲಿಂದ ತೊಲಗು. ಹೀಗೆಲ್ಲ ಹರಟುವ ನಿನ್ನ ಮಾತನ್ನು ನಾನು ಕೇಳಲಿಚ್ಛಿಸುವುದಿಲ್ಲ.’’ ರಾವಣನ ಮಾತನ್ನು ಕೇಳಿದ ಶುಕನು ‘ಮಹಾಪ್ರಸಾದ’ ಎಂದು ಹೇಳಿ ನಡುಗುತ್ತಾ ಮನೆಗೆ ಹೊರಟು ಹೋದನು.॥4॥

(ಶ್ಲೋಕ-5)

ಮೂಲಮ್

ಶುಕೋಽಪಿ ಬ್ರಾಹ್ಮಣಃ ಪೂರ್ವಂ ಬ್ರಹ್ಮಿಷ್ಠೋ ಬ್ರಹ್ಮವಿತ್ತಮಃ ।
ವಾನಪ್ರಸ್ಥವಿಧಾನೇನ ವನೇ ತಿಷ್ಠನ್ ಸ್ವಕರ್ಮಕೃತ್ ॥

ಅನುವಾದ

ಹಿಂದಿನ ಜನ್ಮದಲ್ಲಿ ಮಹಾಮತಿಯಾದ ಶುಕನೂ ಕೂಡ ವೇದನಿಷ್ಠನಾದ ಬ್ರಾಹ್ಮಣನಾಗಿದ್ದನು. ವಾನಪ್ರಸ್ಥಾಶ್ರಮದಲ್ಲಿದ್ದುಕೊಂಡು ತಮ್ಮ ಧರ್ಮ-ಕರ್ಮಗಳಲ್ಲಿ ತತ್ಪರನಾಗಿದ್ದು ಕಾಡಿನಲ್ಲಿ ವಾಸಿಸುತ್ತಿದ್ದನು. ॥5॥

(ಶ್ಲೋಕ-6)

ಮೂಲಮ್

ದೇವಾನಾಮಭಿವೃದ್ಧ್ಯರ್ಥಂ ವಿನಾಶಾಯ ಸುರದ್ವಿಷಾಮ್ ।
ಚಕಾರ ಯಜ್ಞವಿತತಿಮವಿಚ್ಛಿನ್ನಾಂ ಮಹಾಮತಿಃ ॥

ಅನುವಾದ

ಮಹಾಮತಿಯಾದ ಇವನು ದೇವತೆಗಳ ವೃದ್ಧಿ ಹಾಗೂ ರಾಕ್ಷಸರ ವಿನಾಶಕ್ಕಾಗಿ ಒಂದೇ ಸಮನೆ ಅನೇಕ ದೊಡ್ಡ-ದೊಡ್ಡ ಯಜ್ಞಗಳನ್ನು ಮಾಡುತ್ತಿದ್ದನು. ॥6॥

(ಶ್ಲೋಕ-7)

ಮೂಲಮ್

ರಾಕ್ಷಸಾನಾಂ ವಿರೋಧೋಽಭೂಚ್ಛುಕೋ ದೇವಹಿತೋದ್ಯತಃ ।
ವಜ್ರದಂಷ್ಟ್ರ ಇತಿ ಖ್ಯಾತಸ್ತತ್ರೈಕೋ ರಾಕ್ಷಸೋ ಮಹಾನ್ ॥

(ಶ್ಲೋಕ-8)

ಮೂಲಮ್

ಅಂತರಂ ಪ್ರೇಪ್ಸುರಾತಿಷ್ಠತ್ ಶುಕಾಪಕರಣೋದ್ಯತಃ ।
ಕದಾಚಿದಾಗತೋಽಗಸ್ತ್ಯಸ್ತಸ್ಯಾಶ್ರಮಪದಂ ಮುನೇಃ ॥

ಅನುವಾದ

ಆದ್ದರಿಂದ ದೇವತೆಗಳ ಹಿತದಲ್ಲಿ ತೊಡಗಿರುವ ಕಾರಣ ಶುಕನ ಕುರಿತು ರಾಕ್ಷಸರಲ್ಲಿ ವಿರೋಧ ಉಂಟಾಯಿತು. ಆಗ ರಾಕ್ಷಸರಲ್ಲೊಬ್ಬನಾದ ವಜ್ರದಂಷ್ಟ್ರನೆಂದು ಖ್ಯಾತನಾದವನು ಶುಕನಿಗೆ ಅಪಕಾರವನ್ನೆಸಗಲು ಸಮಯ ಕಾಯುತ್ತಿದ್ದನು. ಒಮ್ಮೆ ಶುಕಮುನಿಯ ಆಶ್ರಮಕ್ಕೆ ಮಹರ್ಷಿ ಅಗಸ್ತ್ಯರು ಬಂದರು. ॥7-8॥

(ಶ್ಲೋಕ-9)

ಮೂಲಮ್

ತೇನ ಸಂಪೂಜಿತೋಽಗಸ್ತ್ಯೋ ಭೋಜನಾರ್ಥಂ ನಿಮಂತ್ರಿತಃ ।
ಗತೇ ಸ್ನಾತುಂ ಮುನೌ ಕುಂಭಸಂಭವೇ ಪ್ರಾಪ್ಯ ಚಾಂತರಮ್ ॥

(ಶ್ಲೋಕ-10)

ಮೂಲಮ್

ಅಗಸ್ತ್ಯರೂಪಧೃಕ್ ಸೋಽಪಿ ರಾಕ್ಷಸಃ ಶುಕಮಬ್ರವೀತ್ ।
ಯದಿ ದಾಸ್ಯಸಿ ಮೇ ಬ್ರಹ್ಮನ್ ಭೋಜನಂ ದೇಹಿ ಸಾಮಿಷಮ್ ॥

ಅನುವಾದ

ಶುಕನು ಅಗಸ್ತ್ಯರನ್ನು ಪೂಜಿಸಿ, ಅವರನ್ನು ಊಟಕ್ಕಾಗಿ ನಿಮಂತ್ರಣ ನೀಡಿದನು. ಅಗಸ್ತ್ಯರು ಸ್ನಾನಕ್ಕಾಗಿ ಹೋದ ಸಮಯವನ್ನು ಸಾಧಿಸಿ ವಜ್ರದಂಷ್ಟ್ರ ರಾಕ್ಷಸನು ಅಗಸ್ತ್ಯರ ರೂಪವನ್ನು ಧರಿಸಿ ಬಂದು ಶುಕನಲ್ಲಿ ಹೇಳಿದನು ‘‘ಹೇ ಬ್ರಾಹ್ಮಣೋತ್ತಮಾ! ನೀನು ನನಗೆ ಭೋಜನವನ್ನು ಮಾಡಿಸ ಬೇಕೆಂದಿದ್ದರೆ ಮಾಂಸದಿಂದ ಕೂಡಿದ ಊಟವನ್ನು ಮಾಡಿಸು. ॥9-10॥

(ಶ್ಲೋಕ-11)

ಮೂಲಮ್

ಬಹುಕಾಲಂ ನ ಭುಕ್ತಂ ಮೇ ಮಾಂಸಂ ಛಾಗಾಂಗಸಂಭವಮ್ ।
ತಥೇತಿ ಕಾರಯಾಮಾಸ ಮಾಂಸಭೋಜ್ಯಂ ಸವಿಸ್ತರಮ್ ॥

ಅನುವಾದ

ನಾನು ಬಹಳ ಕಾಲದಿಂದ ಆಡಿನ ಮಾಂಸವನ್ನು ತಿಂದಿಲ್ಲ.’’ ಹಾಗೆಯೇ ಆಗಲೆಂದು ಶುಕನು ಬಗೆ-ಬಗೆಯ ಮಾಂಸಾಹಾರಗಳನ್ನು ಸಿದ್ಧಪಡಿಸಿದನು. ॥11॥

(ಶ್ಲೋಕ-12)

ಮೂಲಮ್

ಉಪವಿಷ್ಟೇ ಮುನೌ ಭೋಕ್ತುಂ ರಾಕ್ಷಸೋಽತೀವ ಸುಂದರಮ್ ।
ಶುಕಭಾರ್ಯಾವಪುರ್ಧೃತ್ವಾ ತಾಂ ಚಾಂತರ್ಮೋಹಯನ್ ಖಲಃ ॥

(ಶ್ಲೋಕ-13)

ಮೂಲಮ್

ನರಮಾಂಸಂ ದದೌ ತಸ್ಮೈ ಸುಪಕ್ವಂ ಬಹುವಿಸ್ತರಮ್ ।
ದತ್ತ್ವೈ ವಾಂತರ್ದಧೇ ರಕ್ಷಸ್ತತೋ ದೃಷ್ಟ್ವಾ ಚುಕೋಪ ಸಃ ॥

(ಶ್ಲೋಕ-14)

ಮೂಲಮ್

ಅಮೇಧ್ಯಂ ಮಾನುಷಂ ಮಾಂಸಮಗಸ್ತ್ಯಃ ಶುಕಮಬ್ರವೀತ್ ।
ಅಭಕ್ಷ್ಯಂ ಮಾನುಷಂ ಮಾಂಸಂ ದತ್ತವಾನಸಿ ದುರ್ಮತೇ ॥

(ಶ್ಲೋಕ-15)

ಮೂಲಮ್

ಮಹ್ಯಂ ತ್ವಂ ರಾಕ್ಷಸೋ ಭೂತ್ವಾ ತಿಷ್ಠ ತ್ವಂ ಮಾನುಷಾಶನಃ ।
ಇತಿ ಶಪ್ತಃ ಶುಕೋ ಭೀತ್ಯಾ ಪ್ರಾಹಾಗಸ್ತ್ಯಂ ಮುನೇ ತ್ವಯಾ ॥

(ಶ್ಲೋಕ-16)

ಮೂಲಮ್

ಇದಾನೀಂ ಭಾಷಿತಂ ಮೇದ್ಯ ಮಾಂಸಂ ದೇಹೀತಿ ವಿಸ್ತರಮ್ ।
ತಥೈವ ದತ್ತಂ ಭೋ ದೇವ ಕಿಂ ಮೇ ಶಾಪಂ ಪ್ರದಾಸ್ಯಸಿ ॥

ಅನುವಾದ

ಅಗಸ್ತ್ಯರು ಊಟಮಾಡಲು ಕುಳಿತಾಗ ಆ ದುಷ್ಟರಾಕ್ಷಸನು ಶುಕನ ಹೆಂಡತಿಯಂತೆ ಸುಂದರ ರೂಪವವನ್ನು ಧರಿಸಿ, ನಿಜವಾದ ಶುಕಪತ್ನಿಯನ್ನು ಮೂರ್ಛಿತಳನ್ನಾಗಿಸಿ, ಬಗೆ ಬಗೆಯಾದ ಊಟದ ಜೊತೆಯಲ್ಲಿ ನರಮಾಂಸವನ್ನು ಬಡಿಸಿದನು. ಹಾಗೆ ಬಡಿಸಿದಾಕ್ಷಣ ರಾಕ್ಷಸನು ಕಣ್ಮರೆಯಾದನು. ಮುನಿವರ ಅಗಸ್ತ್ಯರು ತನ್ನ ಮುಂದೆ ಬಡಿಸಿರುವ ಅಭಕ್ಷ್ಯವಾದ ನರಮಾಂಸವನ್ನು ನೋಡಿ ಹೆಚ್ಚಾದ ಸಿಟ್ಟಿನಿಂದ ಶುಕನಲ್ಲಿ ಹೇಳುತ್ತಾರೆ ‘‘ಎಲೈ ದುರ್ಬುದ್ಧಿಯೆ! ತಿನ್ನಲು ಅಯೋಗ್ಯವಾದ ಮನುಷ್ಯ ಮಾಂಸವನ್ನು ನೀನು ಕೊಟ್ಟಿರುವೆ. ಆದ್ದರಿಂದ ನೀನು ಮನುಷ್ಯರನ್ನು ತಿನ್ನುವ ರಾಕ್ಷಸನಾಗು’’ ಹೀಗೆಂದು ಅಗಸ್ತ್ಯರು ಶಪಿಸಿದಾಗ ಶುಕನು ಭಯದಿಂದ ಹೇಳುತ್ತಾನೆ ‘‘ಮುನಿವರ್ಯಾ! ನೀವು ಈಗತಾನೆ ನಾನಾ ಪ್ರಕಾರದ ಮಾಂಸವನ್ನು ಕೊಡು ಎಂದು ಹೇಳಿದಿರಿ. ನಿಮ್ಮ ಮಾತಿನಂತೆಯೇ, ನಾನು ಮಾಂಸವನ್ನು ಬಡಿಸಿದರೆ ಮತ್ತೆ ನನಗೆ ಶಾಪವನ್ನು ಏಕೆ ಕೊಡುತ್ತಿರುವಿರಿ?’’ ॥12-16॥

(ಶ್ಲೋಕ-17)

ಮೂಲಮ್

ಶ್ರುತ್ವಾ ಶುಕಸ್ಯ ವಚನಂ ಮುಹೂರ್ತಂ ಧ್ಯಾನಮಾಸ್ಥಿತಃ ।
ಜ್ಞಾತ್ವಾ ರಕ್ಷಃ ಕೃತಂ ಸರ್ವಂ ತತಃ ಪ್ರಾಹ ಶುಕಂ ಸುಧೀಃ ॥

ಅನುವಾದ

ಶುಕನ ಮಾತನ್ನು ಕೇಳಿದ ಅಗಸ್ತ್ಯರು ಒಂದು ಮುಹೂರ್ತ ಕಾಲ ಧ್ಯಾನಸ್ಥರಾಗಿ ರಾಕ್ಷಸನು ಮಾಡಿದ ಮೋಸವನ್ನು ಅರಿತವರಾಗಿ ಶುಕನಲ್ಲಿ ಹೇಳಿದರು. ॥17॥

(ಶ್ಲೋಕ-18)

ಮೂಲಮ್

ತವಾಪಕಾರಿಣಾ ಸರ್ವಂ ರಾಕ್ಷಸೇನ ಕೃತಂ ತ್ವಿದಮ್ ।
ಅವಿಚಾರ್ಯೈವ ಮೇ ದತ್ತಃ ಶಾಪಸ್ತೇ ಮುನಿಸತ್ತಮ ॥

ಅನುವಾದ

‘‘ಹೇ ಮುನಿಶ್ರೇಷ್ಠ! ನಿನಗೆ ಕೆಟ್ಟದ್ದನ್ನು ಮಾಡುವ ಉದ್ದೇಶವುಳ್ಳ ಆ ರಾಕ್ಷಸನಿಂದ ಇದೆಲ್ಲವೂ ನಡೆದುಹೋಯಿತು. ನಾನಾದರೋ ವಿಚಾರ ಮಾಡದೆಯೇ ನಿನಗೆ ಶಾಪವನ್ನು ಕೊಟ್ಟೆ. ॥18॥

(ಶ್ಲೋಕ-19)

ಮೂಲಮ್

ತಥಾಪಿ ಮೇ ವಚೋಽಮೋಘಮೇವಮೇವ ಭವಿಷ್ಯತಿ ।
ರಾಕ್ಷಸಂ ವಪುರಾಸ್ಥಾಯ ರಾವಣಸ್ಯ ಸಹಾಯಕೃತ್ ॥

(ಶ್ಲೋಕ-20)

ಮೂಲಮ್

ತಿಷ್ಠ ತಾವದ್ಯದಾ ರಾಮೋ ದಶಾನನವಧಾಯ ಹಿ ।
ಆಗಮಿಷ್ಯತಿ ಲಂಕಾಯಾಃ ಸಮೀಪಂ ವಾನರೈಃ ಸಹ ॥

(ಶ್ಲೋಕ-21)

ಮೂಲಮ್

ಪ್ರೇಷಿತೋ ರಾವಣೇನ ತ್ವಂ ಚಾರೋ ಭೂತ್ವಾ ರಘೂತ್ತಮಮ್ ।
ದೃಷ್ಟ್ವಾ ಶಾಪಾದ್ವಿನಿರ್ಮುಕ್ತೋ ಬೋಧಯಿತ್ವಾ ಚ ರಾವಣಮ್ ॥

(ಶ್ಲೋಕ-22)

ಮೂಲಮ್

ತತ್ತ್ವಜ್ಞಾನಂ ತತೋ ಮುಕ್ತಃ ಪರಂ ಪದಮವಾಪ್ಸ್ಯಸಿ ।
ಇತ್ಯುಕ್ತೋಽಗಸ್ತ್ಯಮುನಿನಾ ಶುಕೋ ಬ್ರಾಹ್ಮಣ ಸತ್ತಮಃ ॥

(ಶ್ಲೋಕ-23)

ಮೂಲಮ್

ಬಭೂವ ರಾಕ್ಷಸಃ ಸದ್ಯೋ ರಾವಣಂ ಪ್ರಾಪ್ಯ ಸಂಸ್ಥಿತಃ ।
ಇದಾನೀಂ ಚಾರರೂಪೇಣ ದೃಷ್ಟ್ವಾ ರಾಮಂ ಸಹಾನುಜಮ್ ॥

(ಶ್ಲೋಕ-24)

ಮೂಲಮ್

ರಾವಣಂ ತತ್ತ್ವವಿಜ್ಞಾನಂ ಬೋಧಯಿತ್ವಾ ಪುನರ್ದ್ರುತಮ್ ।
ಪೂರ್ವವದ್ಬ್ರಾಹ್ಮಣೋ ಭೂತ್ವಾ ಸ್ಥಿತೋ ವೈಖಾನಸೈಃ ಸಹ ॥

ಅನುವಾದ

ಆದರೆ ನನ್ನ ಮಾತು ವ್ಯರ್ಥವಾಗಲಾರದು. ಅದು ಹಾಗೆಯೇ ಆಗಲಿರುವುದು. ನೀನು ರಾಕ್ಷಸ ಶರೀರವನ್ನು ಧರಿಸಿಕೊಂಡು ರಾವಣನಿಗೆ ಸಹಾಯಕನಾಗಿದ್ದುಕೊಂಡಿರು. ಶ್ರೀರಾಮನು ರಾವಣನ ಸಂಹಾರಕ್ಕಾಗಿ ಕಪಿಗಳೊಡಗೂಡಿ ಲಂಕೆಯ ಸಮೀಪಕ್ಕೆ ಬಂದಾಗ, ನಿನ್ನನ್ನು ಗೂಢಚಾರನಾಗಿ ರಾವಣನು ಕಳುಹಿಸಿದಾಗ ಶ್ರೀರಾಮನ ಬಳಿಗೆ ಬಂದು ಅವನ ದರ್ಶನ ಮಾಡಿದಾಗ ನೀನು ಶಾಪದಿಂದ ಮುಕ್ತನಾಗುವೆ. ಮತ್ತೆ ರಾವಣನಿಗೆ ತತ್ತ್ವಬೋಧೆಯನ್ನು ಮಾಡಿದವನಾಗಿ, ಅವನಿಂದ ಬಿಡುಗಡೆ ಹೊಂದಿ ಪರಮಪದವಿಯನ್ನು ಸೇರುವೆ.’’ ಮುನಿವರ್ಯರಾದ ಅಗಸ್ತ್ಯರು ಹೀಗೆ ನುಡಿದಾಗ ವಿಪ್ರವರ ಶುಕನು ಕೂಡಲೇ ರಾಕ್ಷಸನಾಗಿ ರಾವಣನ ಬಳಿಗೆ ಬಂದು ಸೇರಿದರು. ಈಗ ಗೂಢಚಾರವೇಷದಿಂದ ಬಂದು ಸೋದರ ಸಹಿತನಾದ ಶ್ರೀರಾಮನನ್ನು ದರ್ಶಿಸಿ, ಅಲ್ಲಿಂದ ಹಿಂದಿರುಗಿ ರಾವಣನಿಗೆ ತತ್ತ್ವಜ್ಞಾನದ ಉಪದೇಶವನ್ನು ಮಾಡಿ, ಮತ್ತೆ ಬೇಗನೇ ಅಲ್ಲಿಂದ ಹೊರಟು ಹಿಂದಿನಿಂತೆಯೇ ಬ್ರಾಹ್ಮಣನಾಗಿ ವಾನಪ್ರಸ್ಥರೊಡನೆ ಇರತೊಡಗಿದನು. ॥19-24॥

(ಶ್ಲೋಕ-25)

ಮೂಲಮ್

ತತಃ ಸಮಾಗಮ್ವದ್ಧೋ ಮಾಲ್ಯವಾನ್ ರಾಕ್ಷಸೋ ಮಹಾನ್ ।
ಬುದ್ಧಿಮಾನ್ನೀತಿನಿಪುಣೋ ರಾಜ್ಞೋ ಮಾತುಃ ಪ್ರಿಯಃ ಪಿತಾ ॥

ಅನುವಾದ

ಶುಕನು ಹೊರಟುಹೋದ ಮೇಲೆ ವೃದ್ಧನೂ, ಬುದ್ಧಿವಂತನೂ, ನೀತಿನಿಪುಣನೂ, ರಾವಣನ ತಾಯಿಯ ಪ್ರೀತಿಯ ತಂದೆ ಮಾಲ್ಯವಂತನೆಂಬ ರಾಕ್ಷಸನು ಅಲ್ಲಿಗೆ ಬಂದನು. ॥25॥

(ಶ್ಲೋಕ-26)

ಮೂಲಮ್

ಪ್ರಾಹ ತಂ ರಾಕ್ಷಸಂ ವೀರಂ ಪ್ರಶಾಂತೇನಾಂತರಾತ್ಮನಾ ।
ಶೃಣು ರಾಜನ್ವಚೋ ಮೇದ್ಯ ಶ್ರುತ್ವಾ ಕುರು ಯಥೇಪ್ಸಿತಮ್ ॥

ಅನುವಾದ

ಅವನು ರಾಕ್ಷಸವೀರನಾದ ರಾವಣನಲ್ಲಿ ಹೀಗೆಂದನು ‘‘ಎಲೈ ರಾಜನೆ! ನನ್ನ ಮಾತನ್ನು ಸಮಾಧಾನ ಚಿತ್ತದಿಂದ ಕೇಳು. ಕೇಳಿದ ಅನಂತರ ನಿನಗೆ ಇಷ್ಟಬಂದಂತೆ ಮಾಡು. ॥26॥

(ಶ್ಲೋಕ-27)

ಮೂಲಮ್

ಯದಾ ಪ್ರವಿಷ್ಟಾ ನಗರೀಂ ಜಾನಕೀ ರಾಮವಲ್ಲಭಾ ।
ತದಾದಿ ಪುರ್ಯಾಂ ದೃಶ್ಯಂತೇ ನಿಮಿತ್ತಾನಿ ದಶಾನನ ॥

(ಶ್ಲೋಕ-28)

ಮೂಲಮ್

ಘೋರಾಣಿ ನಾಶಹೇತೂನಿ ತಾನಿ ಮೇ ವದತಃ ಶೃಣು ।
ಖರಸ್ತನಿತನಿರ್ಘೋಷಾ ಮೇಘಾ ಅತಿಭಯಂಕರಾಃ ॥

(ಶ್ಲೋಕ-29)

ಮೂಲಮ್

ಶೋಣಿತೇನಾಭಿವರ್ಷಂತಿ ಲಂಕಾಮುಷ್ಣೇನ ಸರ್ವದಾ ।
ರುದಂತಿ ದೇವಲಿಂಗಾನಿ ಸ್ವಿದ್ಯಂತಿ ಪ್ರಚಲಂತಿ ಚ ॥

ಅನುವಾದ

ಹೇ ದಶಾನನಾ! ರಾಮನ ಪತ್ನಿ ಜಾನಕಿಯು ಲಂಕೆಗೆ ಬಂದಂದಿನಿಂದ ಈ ಪಟ್ಟಣದಲ್ಲಿ ಕೆಟ್ಟ ಅಪಶಕುನಗಳು ಕಂಡು ಬರುತ್ತಿವೆ. ಭಯಂಕರವಾದ ಹಾಗೂ ರಾಕ್ಷಸರ ವಿನಾಶವಾಗುವಂತಹವುಗಳನ್ನು ನಾನು ಹೇಳುತ್ತೇನೆ ಕೇಳು ಬಹಳ ಭಯವನ್ನುಂಟುಮಾಡುವ ಮೋಡಗಳು ಕತ್ತೆಗಳು ಕಿರುಚಿದ ಧ್ವನಿಯಂತೆ ಶಬ್ದಮಾಡುತ್ತಾ, ಯಾವಾಗಲೂ ಲಂಕೆಯ ಮೇಲೆ ಬಿಸಿ-ಬಿಸಿ ರಕ್ತದ ಮಳೆಗರೆಯುತ್ತಿವೆ. ದೇವಮೂರ್ತಿಗಳು ಕಣ್ಣೀರು ಹಾಕುತ್ತಿವೆ, ಬೆವರುತ್ತಿವೆ ಹಾಗೂ ತಮ್ಮ ಸ್ಥಳದಿಂದ ಅಳ್ಳಾಡುತ್ತಿವೆ. ॥27-29॥

(ಶ್ಲೋಕ-30)

ಮೂಲಮ್

ಕಾಲಿಕಾ ಪಾಂಡುರೈರ್ದಂತೈಃ ಪ್ರಹಸತ್ಯಗ್ರತಃ ಸ್ಥಿತಾ ।
ಖರಾ ಗೋಷು ಪ್ರಜಾಯಂತೇ ಮೂಷಕಾ ನಕುಲೈಃ ಸಹ ॥

(ಶ್ಲೋಕ-31)

ಮೂಲಮ್

ಮಾರ್ಜಾರೇಣ ತು ಯುಧ್ಯಂತಿ ಪನ್ನಗಾ ಗರುಡೇನ ತು ।
ಕರಾಲೋ ವಿಕಟೋ ಮುಂಡಃ ಪುರುಷಃ ಕೃಷ್ಣಪಿಂಗಲಃ ॥

(ಶ್ಲೋಕ-32)

ಮೂಲಮ್

ಕಾಲೋ ಗೃಹಾಣಿ ಸರ್ವೇಷಾಂ ಕಾಲೇ ಕಾಲೇ ತ್ವವೇಕ್ಷತೇ ।
ಏತಾನ್ಯನ್ಯಾನಿ ದೃಶ್ಯಂತೇ ನಿಮಿತ್ತಾನ್ಯುದ್ಭವಂತಿ ಚ ॥

ಅನುವಾದ

ಕಾಳಿಕಾ ದೇವಿಯು ರಾಕ್ಷಸರ ಮುಂದೆ ತನ್ನ ಬಿಳುಪಾದ ಹಲ್ಲುಗಳನ್ನು ತೋರುತ್ತಾ ನಗುತ್ತಿದ್ದಾಳೆ. ಹಸುಗಳಲ್ಲಿ ಕತ್ತೆ ಮರಿಗಳು ಹುಟ್ಟುತ್ತಿವೆ. ಹಾಗೆಯೇ ಇಲಿಗಳು ಮುಂಗುಸಿ ಮತ್ತು ಬೆಕ್ಕುಗಳೊಡನೆ, ಹಾವುಗಳು ಗರುಡನೊಡನೆ ಕಾದಾಡುತ್ತಿವೆ. ವಿಕಾರ ರೂಪನಾದ ವಕ್ರನೂ, ಬೋಳಾದವನೂ, ಕೆಂಪಾದ ಕಣ್ಗಳುಳ್ಳವನೂ ಆದ ಕಾಲ ಪುರುಷನು ಆಗಾಗ ಎಲ್ಲರ ಮನೆಗಳನ್ನು ಕಣ್ಣಿಟ್ಟು ನೋಡುತ್ತಿರುವನು. ಇವೇ ಮುಂತಾದ ಅಪಶಕುನಗಳು ಉಂಟಾಗುತ್ತವೆ ಹಾಗೂ ಕಂಡು ಬರುತ್ತವೆ. ॥30-32॥

(ಶ್ಲೋಕ-33)

ಮೂಲಮ್

ಅತಃ ಕುಲಸ್ಯ ರಕ್ಷಾರ್ಥಂ ಶಾಂತಿಂ ಕುರು ದಶಾನನ ।
ಸೀತಾಂ ಸತ್ಕೃತ್ಯ ಸಧನಾಂ ರಾಮಾಯಾಶು ಪ್ರಯಚ್ಛ ಭೋಃ ॥

ಅನುವಾದ

ಆದ್ದರಿಂದ ಎಲೈ ರಾವಣನೆ! ರಾಕ್ಷಸ ಕುಲವನ್ನು ಕಾಪಾಡಲು ಸೀತೆಯನ್ನು ಗೌರವಿಸಿ ಹೆಚ್ಚಿನ ಧನದೊಂದಿಗೆ ಬೇಗನೇ ರಘುನಾಥನಿಗೆ ಅರ್ಪಿಸಿ, ತನ್ಮೂಲಕ ಶಾಂತಿಯನ್ನು ಆಚರಿಸು. ॥33॥

(ಶ್ಲೋಕ-34)

ಮೂಲಮ್

ರಾಮಂ ನಾರಾಯಣಂ ವಿದ್ಧಿ ವಿದ್ವೇಷಂ ತ್ಯಜ ರಾಘವೇ ।
ಯತ್ಪಾದಪೋತಮಾಶ್ರಿತ್ಯ ಜ್ಞಾನಿನೋ ಭವಸಾಗರಮ್ ॥

(ಶ್ಲೋಕ-35)

ಮೂಲಮ್

ತರಂತಿ ಭಕ್ತಿಪೂತಾಂತಾಸ್ತತೋ ರಾಮೋ ನ ಮಾನುಷಃ ।
ಭಜಸ್ವ ಭಕ್ತಿಭಾವೇನ ರಾಮಂ ಸರ್ವಹೃದಾಲಯಮ್ ॥

ಅನುವಾದ

ಶ್ರೀರಾಮನನ್ನು ಸಾಕ್ಷಾತ್ ನಾರಾಯಣನೆಂದೇ ತಿಳಿ. ಅದಕ್ಕಾಗಿ ಅವನಲ್ಲಿರುವ ದ್ವೇಷ ಭಾವವನ್ನು ಬಿಡು. ಈ ರಘುನಾಥನ ಚರಣಕಮಲ ರೂಪೀ ನೌಕೆಯನ್ನು ಆಶ್ರಯಿಸಿ, ಭಕ್ತಿಯಿಂದ ಪವಿತ್ರವಾದ ಅಂತಃಕರಣವುಳ್ಳ ಜ್ಞಾನಿಗಳು ಭವಸಾಗರವನ್ನು ದಾಟಿ ಬಿಡುವರು. ಇಂತಹ ಶ್ರೀರಾಮನು ಎಂದೆಂದಿಗೂ ಮನುಷ್ಯಮಾತ್ರನಲ್ಲ. ಎಲ್ಲರ ಹೃದಯವನ್ನೇ ಮನೆಯಾಗಿಸಿಕೊಂಡಿರುವ ಅವನನ್ನು ಭಕ್ತಿಯಿಂದ ಸೇವಿಸು. ॥34-35॥

(ಶ್ಲೋಕ-36)

ಮೂಲಮ್

ಯದ್ಯಪಿ ತ್ವಂ ದುರಾಚಾರೋ ಭಕ್ತ್ಯಾ ಪೂತೋ ಭವಿಷ್ಯಸಿ ।
ಮದ್ವಾಕ್ಯಂ ಕುರು ರಾಜೇಂದ್ರ ಕುಲಕೌಶಲಹೇತವೇ ॥

ಅನುವಾದ

ಒಂದು ವೇಳೆ ನೀನು ಕೆಟ್ಟನಡತೆಯವನಾಗಿದ್ದರೂ ಭಕ್ತಿಯಿಂದ ಪವಿತ್ರನಾಗುವೆ. ಎಲೈ ರಾಜೇಂದ್ರಾ! ಕುಲದ ಕ್ಷೇಮಕ್ಕಾಗಿ ನನ್ನ ಮಾತನ್ನು ನಡೆಸುವವನಾಗು. ॥36॥

(ಶ್ಲೋಕ-37)

ಮೂಲಮ್

ತತ್ತು ಮಾಲ್ಯವತೋ ವಾಕ್ಯಂ ಹಿತಮುಕ್ತಂ ದಶಾನನಃ ।
ನ ಮರ್ಷಯತಿ ದುಷ್ಟಾತ್ಮಾ ಕಾಲಸ್ಯ ವಶಮಾಗತಃ ॥

(ಶ್ಲೋಕ-38)

ಮೂಲಮ್

ಮಾನವಂ ಕೃಪಣಂ ರಾಮಮೇಕಂ ಶಾಖಾಮೃಗಾಶ್ರಯಮ್ ।
ಸಮರ್ಥಂ ಮನ್ಯಸೇ ಕೇನ ಹೀನಂ ಪಿತ್ರಾ ಮುನಿಪ್ರಿಯಮ್ ॥

ಅನುವಾದ

ಆ ಮಾಲ್ಯವಂತನ ಹಿತವಾದ ವಾಕ್ಯವನ್ನು ದುಷ್ಟ ಚಿತ್ತನಾದ ರಾವಣನು ಕಾಲವಶನಾದ್ದರಿಂದ ಸಹಿಸಲಾರದಾದನು. ‘‘ಕೃಪಣನೂ, ಮನುಷ್ಯಮಾತ್ರನೂ, ಏಕಾಕಿಯೂ, ಕಪಿಗಳ ಸಹಾಯವುಳ್ಳವನೂ, ತಂದೆಯಿಂದ ಹೊರಹಾಕಲ್ಪಟ್ಟವನೂ, ಮುನಿಗಳಿಗೆ ಪ್ರಿಯನೂ ಆದ ರಾಮನನ್ನು ಸಮರ್ಥನೆಂದು ತಿಳಿಯುವೆಯಲ್ಲ! ॥37-38॥

(ಶ್ಲೋಕ-39)

ಮೂಲಮ್

ರಾಮೇಣ ಪ್ರೇಷಿತೋ ನೂನಂ ಭಾಷಸೇ ತ್ವಮನರ್ಗಲಮ್ ।
ಗಚ್ಛ ವೃದ್ಧೋಽಸಿ ಬಂಧುಸ್ತ್ವಂ ಸೋಢಂ ಸರ್ವಂ ತ್ವಯೋದಿತಮ್ ॥

(ಶ್ಲೋಕ-40)

ಮೂಲಮ್

ಇತೋ ಮತ್ಕರ್ಣಪದವೀಂ ದಹತ್ಯೇತದ್ವಚಸ್ತವ ।
ಇತ್ಯುಕ್ತ್ವಾ ಸರ್ವಸಚಿವೈಃ ಸಹಿತಃ ಪ್ರಸ್ಥಿತಸ್ತದಾ ॥

ಅನುವಾದ

ನೀನಾದರೋ ನಿಜವಾಗಿಯೂ ರಾಮನಿಂದ ಕಳುಹಲ್ಪಟ್ಟವನಂತೆ ಕಾಣುತ್ತದೆ. ಆದ್ದರಿಂದ ಈ ರೀತಿ ಅಡೆತಡೆಯಿಲ್ಲದೆ ಮಾತನಾಡುತ್ತಿರುವೆ. ನೀನು ಮುದುಕನಾಗಿದ್ದು, ನನ್ನ ಬಂಧುವೂ ಆಗಿರುವೆ. ಅದರಿಂದಾಗಿ ನೀನು ಹೇಳಿದ್ದನ್ನೆಲ್ಲ ಸಹಿಸಿಕೊಂಡೆನು. ಇನ್ನು ಮುಂದೆ ಮಾತನಾಡಿದರೆ ನನ್ನ ಕಿವಿಗಳು ಸುಡುವಂತಾಗುತ್ತದೆ. ಆದ್ದರಿಂದ ಇಲ್ಲಿಂದ ಹೊರಡು’’ ಎಂದು ಹೇಳಿ ಎಲ್ಲ ಮಂತ್ರಿಗಳೊಡನೆ ಎದ್ದು ಅಲ್ಲಿಂದ ಹೊರಟು ಹೋದನು. ॥39-40॥

(ಶ್ಲೋಕ-41)

ಮೂಲಮ್

ಪ್ರಾಸಾದಾಗ್ರೇ ಸಮಾಸೀನಃ ಪಶ್ಯನ್ವಾನರಸೈನಿಕಾನ್ ।
ಯುದ್ಧಾಯಾಯೋಜಯತ್ಸರ್ವರಾಕ್ಷಸಾನ್ಸಮುಪಸ್ಥಿತಾನ್ ॥

ಅನುವಾದ

ರಾಜಭವನದ ಎತ್ತರದ ಉಪ್ಪರಿಗೆಯ ಮೇಲ್ಭಾಗದಲ್ಲಿ ಕುಳಿತುಕೊಂಡು ವಾನರ ಸೈನ್ಯವನ್ನು ನೋಡುತ್ತಾ ಸನ್ನದ್ಧರಾದ ಎಲ್ಲ ರಾಕ್ಷಸರನ್ನು ಯುದ್ಧಕ್ಕಾಗಿ ನೇಮಿಸಿದನು. ॥41॥

(ಶ್ಲೋಕ-42)

ಮೂಲಮ್

ರಾಮೋಽಪಿ ಧನುರಾದಾಯ ಲಕ್ಷ್ಮಣೇನ ಸಮಾಹೃತಮ್ ।
ದೃಷ್ಟ್ವಾ ರಾವಣಮಾಸೀನಂ ಕೋಪೇನ ಕಲುಷೀಕೃತಃ ॥

(ಶ್ಲೋಕ-43)

ಮೂಲಮ್

ಕಿರೀಟಿನಂ ಸಮಾಸೀನಂ ಮಂತ್ರಿಭಿಃ ಪರಿವೇಷ್ಟಿತಮ್ ।
ಶಶಾಂಕಾರ್ಧನಿಭೇನೈವ ಬಾಣೇನೈಕೇನ ರಾಘವಃ ॥

(ಶ್ಲೋಕ-44)

ಮೂಲಮ್

ಶ್ವೇತಚ್ಛತ್ರಸಹಸ್ರಾಣಿ ಕಿರೀಟದಶಕಂ ತಥಾ ।
ಚಿಚ್ಛೇದ ನಿಮಿಷಾರ್ಧೇನ ತದದ್ಭುತಮಿವಾಭವತ್ ॥

ಅನುವಾದ

ಇತ್ತ ಶ್ರೀರಾಮಚಂದ್ರನು ಲಕ್ಷ್ಮಣನು ತಂದಿತ್ತ ಧನುಸ್ಸನ್ನು ಕೈಗೆತ್ತಿಕೊಂಡು, ಎತ್ತರವಾದ ಉಪ್ಪರಿಗೆಯಲ್ಲಿ ಮಂತ್ರಿಗಳೊಡ ಗೂಡಿ, ಕಿರೀಟಧಾರಿಯಾಗಿ ಕುಳಿತ್ತಿದ್ದ ರಾವಣನನ್ನು ಕಂಡು ಕೋಪದಿಂದ ಕದಡಿದ ಮನಸ್ಸುಳ್ಳವನಾಗಿ ಅರ್ಧಚಂದ್ರಾಕಾರವಾದ ಒಂದು ಬಾಣದಿಂದ ಆ ರಾವಣನ ಸಾವಿರಾರು ಸಂಖ್ಯೆಯ ಬಿಳಿಯ ಛತ್ರಿಗಳ ಸಮೂಹವನ್ನು, ಹತ್ತು ಕಿರೀಟಗಳನ್ನು ಅರ್ಧ ನಿಮಿಷದಲ್ಲಿ ಕತ್ತರಿಸಿ ಹಾಕಿದನು. ಅದೊಂದು ಅದ್ಭುತವಾದ ಕಾರ್ಯವಾಗಿ ಪರಿಣಮಿಸಿತು. ॥42-44॥

(ಶ್ಲೋಕ-45)

ಮೂಲಮ್

ಲಜ್ಜಿತೋ ರಾವಣಸ್ತೂರ್ಣಂ ವಿವೇಶ ಭವನಂ ಸ್ವಕಮ್ ।
ಆಹೂಯ ರಾಕ್ಷಸಾನ್ ಸರ್ವಾನ್ಪ್ರಹಸ್ತಪ್ರಮುಖಾನ್ ಖಲಃ ॥

(ಶ್ಲೋಕ-46)

ಮೂಲಮ್

ವಾನರೈಃ ಸಹ ಯುದ್ಧಾಯ ನೋದಯಾಮಾಸ ಸತ್ವರಃ ।
ತತೋ ಭೇರೀಮೃದಂಗಾಧ್ಯೈಃ ಪಣವಾನಕಗೋಮುಖೈಃ ॥

(ಶ್ಲೋಕ-47)

ಮೂಲಮ್

ಮಹಿಷೋಷ್ಟ್ರೈಃ ಖರೈಃ ಸಿಂಹೈರ್ದ್ವೀಪಿಭಿಃ ಕೃತವಾಹನಾಃ ।
ಖಡ್ಗಶೂಲಧನುಃಪಾಶಯಷ್ಟಿತೋಮರಶಕ್ತಿಭಿಃ ॥

(ಶ್ಲೋಕ-48)

ಮೂಲಮ್

ಲಕ್ಷಿತಾಃ ಸರ್ವತೋ ಲಂಕಾಂ ಪ್ರತಿದ್ವಾರಮುಪಾಯಯುಃ ।
ತತ್ಪೂರ್ವಮೇವ ರಾಮೇಣ ನೋದಿತಾ ವಾನರರ್ಷಭಾಃ ॥

ಅನುವಾದ

ನಾಚಿಕೊಂಡ ರಾವಣನು ಕೂಡಲೇ ತನ್ನ ಅರಮನೆಗೆ ಹಿಂತಿರುಗಿ ಬಿಟ್ಟನು. ಆ ದುಷ್ಟನು ಕೂಡಲೇ ಪ್ರಹಸ್ತನೇ ಮುಂತಾದ ಎಲ್ಲ ರಾಕ್ಷಸರನ್ನು ಕರೆಯಿಸಿ ಕಪಿಗಳೊಡನೆ ಯುದ್ಧಮಾಡಲು ಪ್ರೇರೇಪಿಸಿ ಕಳಿಸಿದನು. ಆಗ ರಾಕ್ಷಸರು ಭೇರಿ, ಮೃದಂಗ, ಕಹಳೆ ನಗಾರಿ, ಗೋಮುಖ, ಮುಂತಾದ ವಾದ್ಯಘೋಷಗಳೊಡನೆ, ಕೋಣ, ಒಂಟೆ, ಕತ್ತೆ, ಸಿಂಹ, ಆನೆಗಳನ್ನು ವಾಹನವಾಗಿಸಿಕೊಂಡು, ಕತ್ತಿ, ಭರ್ಜಿ, ಬಿಲ್ಲು, ಪಾಶ, ಕೋಲು, ತೋಮರ, ಶಕ್ತಿ ಮುಂತಾದ ಆಯುಧಗಳನ್ನು ಧರಿಸಿಕೊಂಡು, ಲಂಕೆಯ ಪ್ರತಿಯೊಂದು ಬಾಗಿಲಿಗೆ ಬಂದು ಸೇರಿದರು. ಭಗವಾನ್ ಶ್ರೀರಾಮನು ವಾನರ ಶ್ರೇಷ್ಠರಿಗೆ ಮೊದಲೇ ಅಪ್ಪಣೆ ಕೊಟ್ಟಿದ್ದನು. ॥45-48॥

(ಶ್ಲೋಕ-49)

ಮೂಲಮ್

ಉದ್ಯಮ್ಯ ಗಿರಿಶೃಂಗಾಣಿ ಶಿಖರಾಣಿ ಮಹಾಂತಿ ಚ ।
ತರೂಂಶ್ಚೋತ್ಪಾಟ್ಯ ವಿವಿಧಾನ್ಯುದ್ಧಾಯ ಹರಿಯೂಥಪಾಃ ॥

(ಶ್ಲೋಕ-50)

ಮೂಲಮ್

ಪ್ರೇಕ್ಷಮಾಣಾ ರಾವಣಸ್ಯ ತಾನ್ಯನೀಕಾನಿ ಭಾಗಶಃ ।
ರಾಘವಪ್ರಿಯಕಾಮಾರ್ಥಂ ಲಂಕಾಮಾರುರುಹುಸ್ತದಾ ॥

ಅನುವಾದ

ಅವರೆಲ್ಲರೂ ಬೆಟ್ಟಗಳ ಬಂಡೆಗಳನ್ನು, ದೊಡ್ಡ-ದೊಡ್ಡ ಪರ್ವತ ಶಿಖರಗಳನ್ನು ಎತ್ತಿಕೊಂಡು, ನಾನಾವಿಧವಾದ ಮರ ಗಳನ್ನು ಕಿತ್ತುಕೊಂಡು ಯುದ್ಧಸನ್ನದ್ಧರಾಗಿ ರಾವಣನ ಬೇರೆ-ಬೇರೆ ಸೈನ್ಯವನ್ನು ನೋಡಿಕೊಂಡು, ಶ್ರೀರಾಮನಿಗೆ ಸಂತೋಷವನ್ನುಂಟು ಮಾಡುವುದಕ್ಕಾಗಿ ಲಂಕೆಯ ಮೇಲೆ ಏರಿ ಹೋದರು. ॥49-50॥

(ಶ್ಲೋಕ-51)

ಮೂಲಮ್

ತೇ ದ್ರುಮೈಃ ಪರ್ವತಾಗ್ರೈಶ್ಚ ಮುಷ್ಟಿಭಿಶ್ಚ ಪ್ಲವಂಗಮಾಃ ।
ತತಃ ಸಹಸ್ರಯೂಥಾಶ್ಚ ಕೋಟಿಯೂಥಾಶ್ಚ ಯೂಥಪಾಃ ॥

(ಶ್ಲೋಕ-52)

ಮೂಲಮ್

ಕೋಟೀಶತಯುತಾಶ್ಚಾನ್ಯೇ ರುರುಧುರ್ನಗರಂ ಭೃಶಮ್ ।
ಆಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ॥

ಅನುವಾದ

ಅವರಲ್ಲಿ ಕೆಲವರು ಸಾವಿರ ತುಕಡಿಯ ಒಡೆಯರೂ, ಕೆಲವರು ಕೋಟೆ ತುಕಡಿಯ ಒಡೆಯರೂ, ಕೆಲವರು ನೂರು ಕೋಟಿ ತುಕಡಿಗಳ ಒಡೆಯರಾಗಿದ್ದರು. ಆ ವಾನರವೀರರು ಹಾರುತ್ತಾ, ನೆಗೆಯುತ್ತಾ, ಗರ್ಜಿಸುತ್ತಾ, ಮರಗಳಿಂದಲೂ, ಪರ್ವತ ಶಿಖರಗಳಿಂದಲೂ, ಮುಷ್ಟಿಗಳಿಂದಲೂ, ಲಂಕೆಯನ್ನು ಎಲ್ಲ ಕಡೆಗಳಿಂದ ಮುತ್ತಿದರು. ॥51-52॥

(ಶ್ಲೋಕ-53)

ಮೂಲಮ್

ರಾಮೋ ಜಯತ್ಯತಿಬಲೋ ಲಕ್ಷ್ಮಣಶ್ಚ ಮಹಾಬಲಃ ।
ರಾಜಾ ಜಯತಿ ಸುಗ್ರೀವೋ ರಾಘವೇಣಾನುಪಾಲಿತಃ ॥

(ಶ್ಲೋಕ-54)

ಮೂಲಮ್

ಇತ್ಯೇವಂ ಘೊಷಯಂತಶ್ಚ ಸಮಂ ಯುಯುಧಿರೇರಿಭಿಃ ।
ಹನೂಮಾನಂಗದಶ್ಚೈವ ಕುಮುದೋ ನೀಲ ಏವ ಚ ॥

(ಶ್ಲೋಕ-55)

ಮೂಲಮ್

ನಲಶ್ಚ ಶರಭಶ್ಚೈವ ಮೈಂದೋ ದ್ವಿವಿದ ಏವ ಚ ।
ಜಾಂಬವಾನ್ದಧಿವಕ್ತ್ರಶ್ಚ ಕೇಸರೀ ತಾರ ಏವ ಚ ॥

(ಶ್ಲೋಕ-56)

ಮೂಲಮ್

ಅನ್ಯೇ ಚ ಬಲಿನಃ ಸರ್ವೇ ಯೂಥಪಾಶ್ಚ ಪ್ಲವಂಗಮಾಃ ।
ದ್ವಾರಾಣ್ಯುತ್ಪ್ಲುತ್ಯ ಲಂಕಾಯಾಃ ಸರ್ವತೋ ರುರುಧುರ್ಭೃಶಮ್ ।
ತದಾ ವೃಕ್ಷೈರ್ಮಹಾಕಾಯಾಃ ಪರ್ವತಾಗ್ರೈಶ್ಚ ವಾನರಾಃ ॥

(ಶ್ಲೋಕ-57)

ಮೂಲಮ್

ನಿಜಘ್ನುಸ್ತಾನಿ ರಕ್ಷಾಂಸಿ ನಖೈರ್ದಂತೈಶ್ಚ ವೇಗಿತಾಃ ।
ರಾಕ್ಷಸಾಶ್ಚ ತದಾ ಭೀಮಾ ದ್ವಾರೇಭ್ಯಃ ಸರ್ವತೋ ರುಷಾ ॥

(ಶ್ಲೋಕ-58)

ಮೂಲಮ್

ನಿರ್ಗತ್ಯ ಭಿಂದಿಪಾಲೈಶ್ಚ ಖಡ್ಗೈಃ ಶೂಲೈಃ ಪರಶ್ವಧೈಃ ।
ನಿಜಘ್ನುರ್ವಾನರಾನೀಕಂ ಮಹಾಕಾಯಾ ಮಹಾಬಲಾಃ ॥

ಅನುವಾದ

‘ಮಹಾಬಲಶಾಲಿಯಾದ ಶ್ರೀರಾಮನಿಗೆ ಜಯವಾಗಲಿ, ವೀರವರನಾದ ಲಕ್ಷ್ಮಣನಿಗೆ ಜಯವಾಗಲಿ, ರಘುನಾಥನಿಂದ ರಕ್ಷಿತನಾದ ಸುಗ್ರೀವನಿಗೆ ಜಯವಾಗಲಿ;’ ಎಂದು ಘೋಷಿಸುತ್ತಾ, ಸಮಬಲರಾದ ಶತ್ರುಗಳೊಂದಿಗೆ ಯುದ್ಧ ಮಾಡಲು ತೊಡಗಿದರು. ಹನುಮಂತ, ಅಂಗದ, ಕುಮುದ, ನೀಲ, ನಳ, ಶರಭ, ಮೈಂದ, ದ್ವಿವಿದ, ಜಾಂಬವಂತ, ದಧಿಮುಖ, ಕೇಸರೀ, ತಾರ ಹಾಗೂ ಇನ್ನೂ ಅನೇಕ ಬಲಿಷ್ಠರಾದ ಸೇನಾಪತಿಗಳಾದ ವಾನರಶ್ರೇಷ್ಠರು, ಲಂಕೆಯ ಎಲ್ಲ ಬಾಗಿಲುಗಳನ್ನು ಮುರಿದು ಲಂಕೆಯನ್ನು ಆಕ್ರಮಿಸಿದರು. ಮಹಾಕಾಯರಾದ ಆ ವಾನರರು ಮರಗಳಿಂದಲೂ, ಪರ್ವತಶಿಖರಗಳಿಂದಲೂ, ಉಗುರು-ಹಲ್ಲುಗಳಿಂದಲೂ ಆ ರಾಕ್ಷಸರನ್ನು ಚೆನ್ನಾಗಿ ಹೊಡೆದು, ಬಡಿದು, ಪರಚಿ, ಕಚ್ಚಿ ವೇಗವಾಗಿ ಕೊಲ್ಲತೊಡಗಿದರು. ಆಗ ಕೋಪಾವಿಷ್ಟರೂ, ಭಯಂಕರರೂ ಹಾಗೂ ಮಹಾಕಾಯರೂ, ಬಲ ಶಾಲಿಗಳೂ ಆದ ರಾಕ್ಷಸರೂ ಕೂಡ ಬಾಗಿಲುಗಳಿಂದ ಹೊರ ಬಂದು, ಭಿಂದಿಪಾಲ, ಖಡ್ಗ, ಭರ್ಜಿ, ಕೊಡಲಿ ಮುಂತಾದ ಆಯುಧಗಳಿಂದ ವಾನರ ಸೈನ್ಯವನ್ನು ಹೊಡೆಯ ತೊಡಗಿದರು. ॥53-58॥

(ಶ್ಲೋಕ-59)

ಮೂಲಮ್

ರಾಕ್ಷಸಾಂಶ್ಚ ತಥಾ ಜಘ್ನುರ್ವಾನರಾ ಜಿತಕಾಶಿನಃ ।
ತದಾ ಬಭೂವ ಸಮರೋ ಮಾಂಸಶೋಣಿತಕರ್ದಮಃ ॥

(ಶ್ಲೋಕ-60)

ಮೂಲಮ್

ರಕ್ಷಸಾಂ ವಾನರಾಣಾಂ ಚ ಸಂಬಭೂವಾದ್ಭುತೋಪಮಃ ।
ತೇ ಹಯೈಶ್ಚ ಗಜೈಶ್ಚೈವ ರಥೈಃ ಕಾಂಚನಸನ್ನಿಭೈಃ ॥

(ಶ್ಲೋಕ-61)

ಮೂಲಮ್

ರಕ್ಷೋವ್ಯಾಘ್ರಾ ಯುಯುಧಿರೇ ನಾದಯಂತೋ ದಿಶೋ ದಶ ।
ರಾಕ್ಷಸಾಶ್ಚ ಕಪೀಂದ್ರಾಶ್ಚ ಪರಸ್ಪರಜಯೈಷಿಣಃ ॥

ಅನುವಾದ

ಇದೇ ಪ್ರಕಾರ ವಿಜಯೀ ವಾನರವೀರರೂ ರಾಕ್ಷಸರನ್ನು ಕೊಲ್ಲತೊಡಗಿದರು. ರಾಕ್ಷಸರಿಗೂ ಕಪಿಗಳಿಗೂ ವಿಚಿತ್ರವಾದ ಭಯಂಕರ ಯುದ್ಧವು ಪ್ರಾರಂಭವಾಯಿತು. ಅದರಿಂದ ಎಲ್ಲೆಲ್ಲೂ ರಣಭೂಮಿಯಲ್ಲಿ ರಕ್ತ-ಮಾಂಸಗಳ ಕೆಸರೇ ಉಂಟಾಯಿತು. ರಾಕ್ಷಸವೀರರು ಕುದುರೆ, ಆನೆ, ಚಿನ್ನದಂತೆ ಹೊಳೆಯುವ ರಥಗಳನ್ನೇರಿ, ಹತ್ತು ದಿಕ್ಕುಗಳಲ್ಲಿಯೂ ಧ್ವನಿಮಾಡುತ್ತಾ ಯುದ್ಧಮಾಡುತ್ತಿದ್ದರು. ರಾಕ್ಷಸರು ಮತ್ತು ವಾನರರು ಪರಸ್ಪರ ಒಬ್ಬರು ಮತ್ತೊಬ್ಬರನ್ನು ಗೆಲ್ಲಬೇಕೆಂಬ ಇಚ್ಛೆಯಿಂದ ಕಾದಾಡುತ್ತಿದ್ದರು. ॥59-61॥

(ಶ್ಲೋಕ-62)

ಮೂಲಮ್

ರಾಕ್ಷಸಾನ್ವಾನರಾ ಜಘ್ನುರ್ವಾನರಾಂಶ್ಚೈವ ರಾಕ್ಷಸಾಃ ।
ರಾಮೇಣ ವಿಷ್ಣುನಾ ದೃಷ್ಟಾ ಹರಯೋ ದಿವಿಜಾಂಶಜಾಃ ॥

(ಶ್ಲೋಕ-63)

ಮೂಲಮ್

ಬಭೂವುರ್ಬಲಿನೋ ಹೃಷ್ಟಾಸ್ತದಾ ಪೀತಾಮೃತಾ ಇವ ।
ಸೀತಾಭಿಮರ್ಶಪಾಪೇನ ರಾವಣೇನಾಭಿಪಾಲಿತಾನ್ ॥

(ಶ್ಲೋಕ-64)

ಮೂಲಮ್

ಹತಶ್ರೀಕಾನ್ಹತಬಲಾನ್ ರಾಕ್ಷಸಾನ್ ಜಘ್ನುರೋಜಸಾ ।
ಚತುರ್ಥಾಂಶಾವಶೇಷೇಣ ನಿಹತಂ ರಾಕ್ಷಸಂ ಬಲಮ್ ॥

ಅನುವಾದ

ರಾಕ್ಷಸರನ್ನು ವಾನರರು ಹಾಗೂ ಕಪಿಗಳನ್ನು ರಾಕ್ಷಸರು ಕೊಲ್ಲುತ್ತಿದ್ದರು. ವಿಷ್ಣುರೂಪಿಯಾದ ಭಗವಾನ್ ಶ್ರೀರಾಮನ ದೃಷ್ಟಿ ಬಿದ್ದಿದ್ದರಿಂದ, ದೇವತಾಂಶ ಸಂಭೂತರಾದ ಕಪಿಗಳು ಅಮೃತವನ್ನು ಕುಡಿದವರಂತೆ ಹರ್ಷಗೊಂಡು ಬಲಿಷ್ಠರಾಗಿದ್ದರು. ಸೀತಾದೇವಿಯನ್ನು ಅಪಹರಿಸುವಾಗ ಮುಟ್ಟಿದ ಮಹಾಪಾಪದಿಂದ ಕೂಡಿದ ರಾವಣನಿಂದ ಕಾಪಾಡಲ್ಪಟ್ಟ ನಷ್ಟವಾದ ಐಶ್ವರ್ಯ ಬಲಗಳುಳ್ಳ ರಾಕ್ಷಸರನ್ನು ತಮ್ಮ ತೇಜಸ್ಸಿನ ಸಹಾಯದಿಂದ ವಾನರರು ಕೊಲ್ಲುತ್ತಿದ್ದರು. ಹೀಗೆ ರಾಕ್ಷಸರ ಸೈನ್ಯವು ನಾಶವಾಗುತ್ತಾ ನಾಲ್ಕನೆಯ ಒಂದು ಭಾಗಮಾತ್ರ ಉಳಿದುಕೊಂಡಿತು. ॥62-64॥

(ಶ್ಲೋಕ-65)

ಮೂಲಮ್

ಸ್ವಸೈನ್ಯಂ ನಿಹತಂ ದೃಷ್ಟ್ವಾ ಮೇಘನಾದೋಽತಿ ರುಷ್ಟಧೀಃ ।
ಬ್ರಹ್ಮದತ್ತವರಃ ಶ್ರೀಮಾನಂತರ್ಧಾನಂ ಗತೋಽಸುರಃ ॥

ಅನುವಾದ

ತನ್ನ ಸೈನ್ಯವು ನಾಶವಾಗುವುದನ್ನು ಕಂಡು ಅತ್ಯಂತ ಕ್ರುದ್ಧನಾದ, ಬ್ರಹ್ಮನಿಂದ ವರವನ್ನು ಪಡೆದುಕೊಂಡಿದ್ದ, ಶ್ರೀಮಂತನಾದ ಅಸುರ ಇಂದ್ರಜಿತುವು ಮಾಯವಾಗಿ ಯುದ್ಧಮಾಡ ತೊಡಗಿದನು. ॥65॥

(ಶ್ಲೋಕ-66)

ಮೂಲಮ್

ಸರ್ವಾಸ್ತ್ರಕುಶಲೋ ವ್ಯೋಮ್ನಿ ಬ್ರಹ್ಮಾಸ್ತ್ರೇಣ ಸಮಂತತಃ ।
ನಾನಾವಿಧಾನಿ ಶಸ್ತ್ರಾಣಿ ವಾನರಾನೀಕಮರ್ದಯನ್ ॥

(ಶ್ಲೋಕ-67)

ಮೂಲಮ್

ವವರ್ಷ ಶರಜಾಲಾನಿ ತದದ್ಭುತಮಿವಾಭವತ್ ।
ರಾಮೋಽಪಿ ಮಾನಯನ್ಬ್ರಾಹ್ಮಮಸ್ತ್ರಮಸ್ತ್ರವಿದಾಂ ವರಃ ॥

(ಶ್ಲೋಕ-68)

ಮೂಲಮ್

ಕ್ಷಣಂ ತೂಷ್ಣೀಮುವಾಸಾಥ ದದರ್ಶ ಪತಿತಂ ಬಲಮ್ ।
ವಾನರಾಣಾಂ ರಘುಶ್ರೇಷ್ಠಶ್ಚುಕೋಪಾನಲಸನ್ನಿಭಃ ॥

ಅನುವಾದ

ಆ ದೈತ್ಯನು ಎಲ್ಲ ಅಸ-ಶಸ ಪ್ರಯೋಗದಲ್ಲಿ ನಿಪುಣನಾಗಿದ್ದನು. ಅವನು ಆಕಾಶದಲ್ಲಿ ನಿಂತು ಬ್ರಹ್ಮಾಸ್ತ್ರದಿಂದ ಎಲ್ಲೆಡೆಗಳಲ್ಲಿ ನಾನಾ ವಿಧವಾದ ಶಸ್ತ್ರಗಳ ಮತ್ತು ಬಾಣಗಳ ಮಳೆಯನ್ನೇ ಸುರಿಸಿ, ಕಪಿ ಸೈನ್ಯವನ್ನು ದಮನಮಾಡುತ್ತಿದ್ದನು. ಅದೊಂದು ಅದ್ಭುತವಾಗಿ ಪರಿಣಮಿಸಿತು. ಅಸ್ತ್ರಜ್ಞರಲ್ಲಿ ಶ್ರೇಷ್ಠನಾದ ಶ್ರೀರಾಮನೂ ಕೂಡ ಬ್ರಹ್ಮಾಸ್ತ್ರವನ್ನು ಗೌರವಿಸಲೋಸುಗ ಒಂದು ಕ್ಷಣಕಾಲ ವಾನರ ಸೈನ್ಯದ ಪತನವನ್ನು ಸುಮ್ಮನೆ ನೋಡುತ್ತಲೇ ಇದ್ದನು. ಅನಂತರ ಕಪಿಗಳ ಸ್ಥಿತಿಯನ್ನು ಕಂಡು ರಘುಶ್ರೇಷ್ಠನು ಕೋಪಗೊಂಡು ಬೆಂಕಿಯಂತೆ ಪ್ರಜ್ವಲಿಸಿದನು. ॥66-68॥

(ಶ್ಲೋಕ-69)

ಮೂಲಮ್

ಚಾಪಮಾನಯ ಸೌಮಿತ್ರೇ ಬ್ರಹ್ಮಾಸ್ತ್ರೇಣಾಸುರಂ ಕ್ಷಣಾತ್ ।
ಭಸ್ಮೀಕರೋಮಿ ಮೇ ಪಶ್ಯ ಬಲಮದ್ಯ ರಘೂತ್ತಮ ॥

ಅನುವಾದ

ಆಗ ‘‘ಲಕ್ಷ್ಮಣಾ, ನನ್ನ ಧನುಸ್ಸನ್ನು ಇತ್ತಕೊಡು. ಕ್ಷಣಮಾತ್ರದಲ್ಲಿ ಬ್ರಹ್ಮಾಸ್ತ್ರದಿಂದ ಈ ರಾಕ್ಷಸನನ್ನು ಸುಟ್ಟು ಬೂದಿ ಮಾಡಿಬಿಡುತ್ತೇನೆ. ಹೇ ರಘುಶ್ರೇಷ್ಠಾ ! ಇಂದು ನೀನು ನನ್ನ ಪರಾಕ್ರಮವನ್ನು ನೋಡು’’ ಎಂದನು. ॥69॥

(ಶ್ಲೋಕ-70)

ಮೂಲಮ್

ಮೇಘನಾದೋಽಪಿ ತಚ್ಛ್ರುತ್ವಾ ರಾಮವಾಕ್ಯಮತಂದ್ರಿತಃ ।
ತೂರ್ಣಂ ಜಗಾಮ ನಗರಂ ಮಾಯಯಾ ಮಾಯಿಕೋಽಸುರಃ ॥

ಅನುವಾದ

ಮಾಯಾವಿಯಾದ ರಾಕ್ಷಸ ಇಂದ್ರಜಿತುವು ರಾಮಚಂದ್ರನ ಮಾತನ್ನು ಕೇಳಿ ಎಚ್ಚರಗೊಂಡು ತಡಮಾಡದೆ ತನ್ನ ನಗರಕ್ಕೆ ಹೊರಟು ಹೋದನು. ॥70॥

(ಶ್ಲೋಕ-71)

ಮೂಲಮ್

ಪತಿತಂ ವಾನರಾನೀಕಂ ದೃಷ್ಟ್ವಾ ರಾಮೋಽತಿದುಃಖಿತಃ ।
ಉವಾಚ ಮಾರುತಿಂ ಶೀಘ್ರಂ ಗತ್ವಾ ಕ್ಷೀರಮಹೋದಧಿಮ್ ॥

(ಶ್ಲೋಕ-72)

ಮೂಲಮ್

ತತ್ರ ದ್ರೋಣಗಿರಿರ್ನಾಮ ದಿವ್ಯೌಷಧಿಸಮುದ್ಭವಃ ।
ತಮಾನಯ ದ್ರುತಂ ಗತ್ವಾ ಸಂಜೀವಯ ಮಹಾಮತೇ ॥

(ಶ್ಲೋಕ-73)

ಮೂಲಮ್

ವಾನರೌಘಾನ್ಮಹಾಸತ್ತ್ವಾನ್ಕೀರ್ತಿಸ್ತೇ ಸುಸ್ಥಿರಾ ಭವೇತ್ ।
ಆಜ್ಞಾ ಪ್ರಮಾಣಮಿತ್ಯುಕ್ತ್ವಾ ಜಗಾಮಾನಿಲನಂದನಃ ॥

ಅನುವಾದ

ನಾಶವಾದ ವಾನರಸೇನೆಯನ್ನು ಕಂಡು ಶ್ರೀರಾಮನು ಅತೀವ ದುಃಖಿತನಾಗಿ ಹನುಮಂತನನ್ನು ಕುರಿತು ಇಂತೆಂದನು ‘‘ಮಾರುತಿ! ನೀನು ಕೂಡಲೇ ಕ್ಷಿರಸಮುದ್ರಕ್ಕೆ ಹೋಗಿ ಅಲ್ಲಿರುವ ದ್ರೋಣಗಿರಿ ಎಂಬ ದಿವ್ಯವಾದ ಔಷಧಿಗಳ ಭಂಡಾರವಾದ ಪರ್ವತವಿದೆ. ಎಲೈ ಬುದ್ಧಿವಂತನೆ! ಅದನ್ನು ಬೇಗನೇ ತೆಗೆದುಕೊಂಡು ಬಾ ಹಾಗೂ ಮಹಾಬಲಿಷ್ಠರಾದ ಈ ವಾನರ ಸೈನ್ಯವನ್ನು ಬದುಕಿಸು. ಇದರಿಂದ ನಿನ್ನ ಕೀರ್ತಿಯು ಶಾಶ್ವತವಾಗಿ ಉಳಿಯುವುದು. ಇದನ್ನು ಕೇಳಿದ ಪವನನಂದನು ‘ತಮ್ಮ ಅಪ್ಪಣೆಯನ್ನು ಪಾಲಿಸುವೆನು’ ಎಂದು ಹೇಳಿ ಹೊರಟು ಹೋದನು. ॥71-73॥

(ಶ್ಲೋಕ-74)

ಮೂಲಮ್

ಆನೀಯ ಚ ಗಿರಿಂ ಸರ್ವಾನ್ ವಾನರಾನ್ವಾನರರ್ಷಭಃ ।
ಜೀವಯಿತ್ವಾ ಪುನಸ್ತತ್ರ ಸ್ಥಾಪಯಿತ್ವಾಯಯೌ ದ್ರುತಮ್ ॥

(ಶ್ಲೋಕ-75)

ಮೂಲಮ್

ಪೂರ್ವವದ್ಭೈರವಂ ನಾದಂ ವಾನರಾಣಾಂ ಬಲೌಘತಃ ।
ಶ್ರುತ್ವಾ ವಿಸ್ಮಯಮಾಪನ್ನೋ ರಾವಣೋ ವಾಕ್ಯಮಬ್ರವೀತ್ ॥

ಅನುವಾದ

ಶೀಘ್ರವಾಗಿ ಆ ಬೆಟ್ಟವನ್ನು ತಂದು ಅದರ ಔಷಧಿಗಳಿಂದ ಎಲ್ಲ ವಾನರ ರನ್ನು ಬದುಕಿಸಿ, ಮತ್ತೆ ಆ ಪರ್ವತವನ್ನು ಮೊದಲಿದ್ದ ಜಾಗದಲ್ಲಿ ಇರಿಸಿ ಬಂದನು. ಹಿಂದಿನಂತೆಯೇ ಭಯಂಕರವಾಗಿ ಶಬ್ದಮಾಡುತ್ತಾ ಇರುವ ಕಪಿಗಳ ಬಲಸಮೂಹದ ಧ್ವನಿಯಿಂದ ಆಶ್ಚರ್ಯಗೊಂಡ ರಾವಣನು ಹೀಗೆಂದನು. ॥74-75॥

(ಶ್ಲೋಕ-76)

ಮೂಲಮ್

ರಾಘವೋ ಮೇ ಮಹಾನ್ ಶತ್ರುಃ ಪ್ರಾಪ್ತೋ ದೇವವಿನಿರ್ಮಿತಃ ।
ಹಂತುಂ ತಂ ಸಮರೇ ಶೀಘ್ರಂ ಗಚ್ಛಂತು ಮಮ ಯೂಥಪಾಃ ॥

(ಶ್ಲೋಕ-77)

ಮೂಲಮ್

ಮಂತ್ರಿಣೋ ಬಾಂಧವಾಃ ಶೂರಾ ಯೇ ಚ ಮತ್ಪ್ರಿಯಕಾಂಕ್ಷಿಣಃ ।
ಸರ್ವೇ ಗಚ್ಛಂತು ಯುದ್ಧಾಯ ತ್ವರಿತಂ ಮಮ ಶಾಸನಾತ್ ॥

ಅನುವಾದ

‘‘ದೇವತೆಗಳಿಂದ ಸೃಷ್ಟಿಸಲ್ಪಟ್ಟ ನನ್ನ ಮಹಾನ್ ಶತ್ರುವಾದ ಈ ರಾಮನು ಇಲ್ಲಿಗೆ ಬಂದಿರುವನು. ಯುದ್ಧದಲ್ಲಿ ಇವನನ್ನು ಕೊಲ್ಲಲು ನನ್ನ ಸೇನಾಪತಿಗಳೆಲ್ಲರೂ ಬೇಗನೆ ಹೊರಡಿರಿ. ಮಂತ್ರಿಗಳು, ನನ್ನ ಬಂಧುಗಳು ಹಾಗೂ ನನಗೆ ಪ್ರಿಯವನ್ನು ಬಯಸುವ ಯಾವ ಶೂರರೇ ಆಗಲಿ, ಎಲ್ಲರೂ ನನ್ನ ಆಜ್ಞೆಯಂತೆ ಯುದ್ಧಕ್ಕೆ ಹೊರಡಿರಿ. ॥76-77॥

(ಶ್ಲೋಕ-78)

ಮೂಲಮ್

ಯೇ ನ ಗಚ್ಛಂತಿ ಯುದ್ಧಾಯ ಭೀರವಃ ಪ್ರಾಣವಿಪ್ಲವಾತ್ ।
ತಾನ್ ಹನಿಷ್ಯಾಮ್ಯಹಂ ಸರ್ವಾನ್ಮಚ್ಛಾಸನಪರಾಙಮುಖಾನ್ ॥

ಅನುವಾದ

ಪ್ರಾಣಭಯದಿಂದ ಹೆದರಿ ಯುದ್ಧಕ್ಕೆ ಹೋಗದವರನ್ನು ಹಾಗೂ ನನ್ನ ಆಜ್ಞೆಯನ್ನು ಮೀರಿದವರೆಲ್ಲರನ್ನು ನಾನು ಕೊಂದು ಬಿಡುವೆನು.॥78॥

(ಶ್ಲೋಕ-79)

ಮೂಲಮ್

ತಚ್ಛ್ರುತ್ವಾ ಭಯಸಂತ್ರಸ್ತಾ ನಿರ್ಜಗ್ಮೂ ರಣಕೋವಿದಾಃ ।
ಅತಿಕಾಯಃ ಪ್ರಹಸ್ತಶ್ಚ ಮಹಾನಾದಮಹೋದರೌ ॥

(ಶ್ಲೋಕ-80)

ಮೂಲಮ್

ದೇವಶತ್ರುರ್ನಿಕುಂಭಶ್ಚ ದೇವಾಂತಕನರಾಂತಕೌ ।
ಅಪರೇ ಬಲಿನಃ ಸರ್ವೇ ಯಯುರ್ಯುದ್ಧಾಯ ವಾನರೈಃ ॥

ಅನುವಾದ

ರಾವಣನ ಮಾತನ್ನು ಕೇಳಿ ಹೆದರಿಕೊಂಡೇ ಯುದ್ಧಕುಶಲಿಗಳಾದ ಅತಿಕಾಯ, ಪ್ರಹಸ್ತ, ಮಹಾನಾದ, ಮಹೋದರ, ದೇವಶತ್ರು, ನಿಕುಂಭ, ದೇವಾಂತಕ, ನರಾಂತಕ ಮತ್ತು ಇನ್ನೂ ಅನೇಕ ಬಲಿಷ್ಠ ರಾಕ್ಷಸ ವೀರರು ವಾನರರೊಡನೆ ಯುದ್ಧ ಮಾಡುವುದಕ್ಕಾಗಿ ಹೊರಟು ಬಂದರು. ॥79-80॥

(ಶ್ಲೋಕ-81)

ಮೂಲಮ್

ಏತೇ ಚಾನ್ಯೇ ಚ ಬಹವಃ ಶೂರಾಃ ಶತಸಹಸ್ರಶಃ ।
ಪ್ರವಿಶ್ಯ ವಾನರಂ ಸೈನ್ಯಂ ಮಮಂಥುರ್ಬಲದರ್ಪಿತಾಃ ॥

ಅನುವಾದ

ಇವರುಗಳಲ್ಲದೆ ಇನ್ನೂ ಸಾವಿರಾರು ಶೂರ-ವೀರ ರಕ್ಕಸರು ಬಲದಿಂದ ಉನ್ಮತ್ತರಾಗಿ ವಾನರ ಸೈನ್ಯವನ್ನು ಹೊಕ್ಕು ಕಪಿಗಳನ್ನು ಹಿಸುಕಿಹಾಕಿದರು. ॥81॥

(ಶ್ಲೋಕ-82)

ಮೂಲಮ್

ಭುಶುಂಡೀಭಿಂದಿಪಾಲೈಶ್ಚ ಬಾಣೈಃ ಖಡ್ಗೈಃ ಪರಶ್ವಧೈಃ ।
ಅನ್ಯೈಶ್ಚ ವಿವಿಧೈರಸ್ತ್ರೈರ್ನಿಜಘ್ನುರ್ಹರಿಯೂಥಪಾನ್ ॥

ಅನುವಾದ

ಅವರು ಭುಶುಂಡಿ, ಭಿಂದಿಪಾಲ, ಬಾಣ, ಖಡ್ಗ, ಪರಶು ಹಾಗೂ ನಾನಾವಿಧವಾದ ಅಸ-ಶಸ ಗಳಿಂದ ಕಪಿಶ್ರೇಷ್ಠರನ್ನು ಹೊಡೆಯ ತೊಡಗಿದರು. ॥82॥

(ಶ್ಲೋಕ-83)

ಮೂಲಮ್

ತೇ ಪಾದಪೈಃ ಪರ್ವತಾಗ್ರೈರ್ನಖದಂಷ್ಟ್ರೈಶ್ಚ ಮುಷ್ಟಿಭಿಃ ।
ಪ್ರಾಣೈರ್ವಿಮೋಚಯಾಮಾಸುಃ ಸರ್ವರಾಕ್ಷಸಯೂಥಪಾನ್ ॥

ಅನುವಾದ

ಆ ವಾನರ ವೀರರೂ ಕೂಡ ಮರಗಳಿಂದ, ಪರ್ವತ ಶಿಖರಗಳಿಂದ, ಉಗುರು, ಹಲ್ಲುಗಳಿಂದ ಹಾಗೂ ಮುಷ್ಟಿ ಗಳಿಂದ ಎಲ್ಲ ರಾಕ್ಷಸ ಸೇನಾಪತಿಗಳನ್ನು ಕೊಂದುಹಾಕಿದರು. ॥83॥

(ಶ್ಲೋಕ-84)

ಮೂಲಮ್

ರಾಮೇಣ ನಿಹತಾಃ ಕೇಚಿತ್ಸುಗ್ರೀವೇಣ ತಥಾಪರೇ ।
ಹನೂಮತಾ ಚಾಂಗದೇನ ಲಕ್ಷ್ಮಣೇನ ಮಹಾತ್ಮನಾ ।
ಯೂಥಪೈರ್ವಾನರಾಣಾಂ ತೇ ನಿಹತಾಃ ಸರ್ವರಾಕ್ಷಸಾಃ ॥

ಅನುವಾದ

ಆ ರಾಕ್ಷಸರಲ್ಲಿ ಕೆಲವರು ರಾಮನ ಕೈಯಿಂದ, ಕೆಲವರು ಸುಗ್ರೀವನಿಂದ, ಕೆಲವರು ಹನುಮಂತನಿಂದ, ಅಂಗದನಿಂದ ಹಾಗೂ ಮಹಾತ್ಮನಾದ ಲಕ್ಷ್ಮಣನ ಕೈಯಿಂದ ಮತ್ತು ಕೆಲವರು ವಾನರಸೇನಾಪತಿಗಳಿಂದ ಹತರಾದರು. ॥84॥

(ಶ್ಲೋಕ-85)

ಮೂಲಮ್

ರಾಮತೇಜಃ ಸಮಾವಿಶ್ಯ ವಾನರಾ ಬಲಿನೋಽಭವನ್ ।
ರಾಮಶಕ್ತಿವಿಹೀನಾನಾಮೇವಂ ಶಕ್ತಿಃ ಕುತೋ ಭವೇತ್ ॥

ಅನುವಾದ

ರಾಮನ ಶಕ್ತಿಯನ್ನು ಆಶ್ರಯಿಸಿಕೊಂಡ ಕಪಿಗಳು ಬಹಳ ಬಲಶಾಲಿಗಳಾಗಿದ್ದರು. ರಾಮನ ಶಕ್ತಿಯಲ್ಲದೆ ಇವರಿಗೆ ಇಂತಹ ಪರಾಕ್ರಮವು ಎಲ್ಲಿಂದ ಬಂದಿತು? ॥85॥

(ಶ್ಲೋಕ-86)

ಮೂಲಮ್

ಸರ್ವೇಶ್ವರಃ ಸರ್ವಮಯೋ ವಿಧಾತಾ
ಮಾಯಾಮನುಷ್ಯತ್ವವಿಡಂಬನೇನ ।
ಸದಾ ಚಿದಾನಂದಮಯೋಽಪಿ ರಾಮೋ
ಯುದ್ಧಾದಿಲೀಲಾಂ ವಿತನೋತಿ ಮಾಯಾಮ್ ॥

ಅನುವಾದ

ಸರ್ವೇಶ್ವರನೂ, ಸರ್ವಮಯನೂ, ಸೃಷ್ಟಿಕರ್ತನೂ, ಸದಾಕಾಲ ಚಿದಾನಂದ ಸ್ವರೂಪನೂ ಆದ ಶ್ರೀರಾಮನು ಮಾಯಾ ಮನುಷ್ಯನಾಗಿ ತೋರಿಕೊಂಡವನಾಗಿ ಮಾಯೆಯಿಂದ ಯುದ್ಧವೇ ಮುಂತಾದ ಲೀಲೆಯನ್ನು ವಿಸ್ತರಿಸುತ್ತಿದ್ದಾನೆ. ॥86॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.