೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ಸಮುದ್ರವನ್ನು ದಾಟಿ, ಲಂಕಾನಿರೀಕ್ಷಣ ಹಾಗೂ ರಾವಣ-ಶುಕ ಸಂವಾದ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಸೇತುಮಾರಭಮಾಣಸ್ತು ತತ್ರ ರಾಮೇಶ್ವರಂ ಶಿವಮ್ ।
ಸಂಸ್ಥಾಪ್ಯ ಪೂಜಯಿತ್ವಾಹ ರಾಮೋ ಲೋಕಹಿತಾಯ ಚ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಸೇತುವನ್ನು ಕಟ್ಟಿಲಾರಂಭಿಸಿದಾಗ ಭಗವಾನ್ ಶ್ರೀರಾಮನು ಲೋಕಹಿತಕ್ಕಾಗಿ ಅಲ್ಲಿ ರಾಮೇಶ್ವರ ಹೆಸರಿನಿಂದ ಶಿವನನ್ನು ಪ್ರತಿಷ್ಠಾಪಿಸಿ ಹೀಗೆಂದನು. ॥1॥

(ಶ್ಲೋಕ-2)

ಮೂಲಮ್

ಪ್ರಣಮೇತ್ಸೇತುಬಂಧಂ ಯೋ ದೃಷ್ಟ್ವಾ ರಾಮೇಶ್ವರಂ ಶಿವಮ್ ।
ಬ್ರಹ್ಮಹತ್ಯಾದಿಪಾಪೇಭ್ಯೋ ಮುಚ್ಯತೇ ಮದನುಗ್ರಹಾತ್ ॥

ಅನುವಾದ

‘‘ಶ್ರೀರಾಮೇಶ್ವರ ದರ್ಶನವನ್ನು ಮಾಡಿ, ಸೇತುಬಂಧಕ್ಕೆ ನಮಸ್ಕರಿಸುವವನು ನನ್ನ ಅನುಗ್ರಹದಿಂದ ಬ್ರಹ್ಮಹತ್ಯಾದಿ ದೋಷಗಳಿಂದ ಬಿಡುಗಡೆ ಹೊಂದುವನು. ॥2॥

(ಶ್ಲೋಕ-3)

ಮೂಲಮ್

ಸೇತುಬಂಧೇ ನರಃ ಸ್ನಾತ್ವಾ ದೃಷ್ಟ್ವಾ ರಾಮೇಶ್ವರಂ ಹರಮ್ ।
ಸಂಕಲ್ಪನಿಯತೋ ಭೂತ್ವಾ ಗತ್ವಾ ವಾರಾಣಸೀಂ ನರಃ ॥

(ಶ್ಲೋಕ-4)

ಮೂಲಮ್

ಆನೀಯ ಗಂಗಾಸಲಿಲಂ ರಾಮೇಶಮಭಿಷಿಚ್ಯ ಚ ।
ಸಮುದ್ರೇ ಕ್ಷಿಪ್ತತದ್ಭಾರೋ ಬ್ರಹ್ಮ ಪ್ರಾಪ್ನೋತ್ಯಸಂಶಯಮ್ ॥

ಅನುವಾದ

ಸೇತುಬಂಧ ತೀರ್ಥದಲ್ಲಿ ಸ್ನಾನಮಾಡಿ ಪಾಪಹರನಾದ ರಾಮೇಶ್ವರನನ್ನು ಕಂಡು ಅನಂತರ ಸಂಕಲ್ಪಮಾಡಿ, ವಾರಾಣಸೀ ಕ್ಷೇತ್ರಕ್ಕೆ, ಹೋಗಿ ಅಲ್ಲಿಂದ ಗಂಗೆಯ ನೀರನ್ನು ತಂದು ರಾಮೇಶ್ವರನಿಗೆ ಅಭಿಷೇಕ ಮಾಡಿದ ಮನುಷ್ಯನು ಸಮಸ್ತ ಪಾಪ ಭಾರದಿಂದ ಮುಕ್ತನಾಗಿ ನಿಃಸಂಶಯವಾಗಿ ಬ್ರಹ್ಮವನ್ನು ಪಡೆಯುವನು.’’ ॥3-4॥

(ಶ್ಲೋಕ-5)

ಮೂಲಮ್

ಕೃತಾನಿ ಪ್ರಥಮೇನಾಹ್ನಾ ಯೋಜನಾನಿ ಚತುರ್ದಶ ।
ದ್ವಿತೀಯೇನ ತಥಾ ಚಾಹ್ನಾ ಯೋಜನಾನಿ ತು ವಿಂಶತಿಃ ॥

(ಶ್ಲೋಕ-6)

ಮೂಲಮ್

ತೃತೀಯೇನ ತಥಾ ಚಾಹ್ನಾ ಯೋಜನಾನ್ಯೇಕವಿಂಶತಿಃ ।
ಚತುರ್ಥೇನ ತಥಾ ಚಾಹ್ನಾ ದ್ವಾವಿಂಶತಿರಿತಿ ಶ್ರುತಮ್ ॥

(ಶ್ಲೋಕ-7)

ಮೂಲಮ್

ಪಂಚಮೇನ ತ್ರಯೋವಿಂಶದ್ಯೋಜನಾನಿ ಸಮಂತತಃ ।
ಬಬಂಧ ಸಾಗರೇ ಸೇತುಂ ನಲೋ ವಾನರಸತ್ತಮಃ ॥

ಅನುವಾದ

ವಾನರಶ್ರೇಷ್ಠ ನಳನು ಸಮುದ್ರದಲ್ಲಿ ಮೊದಲನೇ ದಿನ ಹದಿನಾಲ್ಕು ಯೋಜನ, ಎರಡನೇ ದಿನ ಇಪ್ಪತ್ತು ಯೋಜನ, ಮೂರನೇ ದಿನ ಇಪ್ಪತ್ತೊಂದು ಯೋಜನ, ನಾಲ್ಕನೇ ದಿನ ಇಪ್ಪತ್ತೆರಡು ಯೋಜನ ಮತ್ತು ಐದನೇ ದಿನ ಇಪ್ಪತ್ತಮೂರು ಯೋಜನ ಸೇತುವೆಯನ್ನು ಇತರ ಕಪಿಗಳ ಸಹಾಯದಿಂದ ಕಟ್ಟಿದನು. ॥5-7॥

(ಶ್ಲೋಕ-8)

ಮೂಲಮ್

ತೇನೈವ ಜಗ್ಮುಃ ಕಪಯೋ ಯೋಜನಾನಾಂ ಶತಂ ದ್ರುತಮ್ ।
ಅಸಂಖ್ಯಾತಾಃ ಸುವೇಲಾದ್ರಿಂ ರುರುಧುಃ ಪ್ಲವಗೋತ್ತಮಾಃ ॥

ಅನುವಾದ

ಆ ಸೇತುವಿನ ಮೂಲಕವೇ ಎಲ್ಲ ಕಪಿಗಳು ಬೇಗನೇ ನೂರು ಯೋಜನ ದೂರದ ಸಮುದ್ರವನ್ನು ದಾಟಿದರು. ಲೆಕ್ಕವಿಲ್ಲದಷ್ಟು ವಾನರ ವೀರರು ಸುವೇಲವೆಂಬ ಪರ್ವತವನ್ನು ಮುತ್ತಿದರು. ॥8॥

(ಶ್ಲೋಕ-9)

ಮೂಲಮ್

ಆರುಹ್ಯ ಮಾರುತಿಂ ರಾಮೋ ಲಕ್ಷ್ಮಣೋಽಪ್ಯಂಗದಂ ತಥಾ ।
ದಿದೃಕ್ಷೂ ರಾಘವೋ ಲಂಕಾಮಾರುರೋಹಾಚಲಂ ಮಹತ್ ॥

ಅನುವಾದ

ಮತ್ತೆ ಶ್ರೀರಾಮನು ಲಂಕೆಯನ್ನು ನೋಡುವ ಇಚ್ಛೆಯಿಂದ ಹನುಮಂತನ ಹೆಗಲೇರಿ ಹಾಗೂ ಲಕ್ಷ್ಮಣನು ಅಂಗದನ ಹೆಗಲೇರಿ ಆ ದೊಡ್ಡದಾದ ಪರ್ವತವನ್ನು ಏರಿದರು. ॥9॥

(ಶ್ಲೋಕ-10)

ಮೂಲಮ್

ದೃಷ್ಟ್ವಾ ಲಂಕಾಂ ಸುವಿಸ್ತೀರ್ಣಾಂ ನಾನಾಚಿತ್ರಧ್ವಜಾಕುಲಾಮ್ ।
ಚಿತ್ರಪ್ರಾಸಾದಸಂಬಾಧಾಂ ಸ್ವರ್ಣಪ್ರಕಾರತೋರಣಾಮ್ ॥

(ಶ್ಲೋಕ-11)

ಮೂಲಮ್

ಪರಿಖಾಭಿಃ ಶತಘ್ನೀಭಿಃ ಸಂಕ್ರಮೈಶ್ಚ ವಿರಾಜಿತಾಮ್ ।
ಪ್ರಾಸಾದೋಪರಿ ವಿಸ್ತೀರ್ಣಪ್ರದೇಶೇ ದಶಕಂಧರಃ ॥

(ಶ್ಲೋಕ-12)

ಮೂಲಮ್

ಮಂತ್ರಿಭಿಃ ಸಹಿತೋ ವೀರೈಃ ಕಿರೀಟದಶಕೋಜ್ಜ್ವಲಃ ।
ನೀಲಾದ್ರಿಶಿಖರಾಕಾರಃ ಕಾಲಮೇಘಸಮಪ್ರಭಃ ॥

ಅನುವಾದ

ಅಲ್ಲಿಂದ ವಿಸ್ತಾರವಾದ ಲಂಕೆಯನ್ನು ಕಂಡನು. ಅದು ನಾನಾ ರೀತಿಯ ಚಿತ್ರ-ವಿಚಿತ್ರವಾದ ಧ್ವಜಗಳಿಂದ ತುಂಬಿದ್ದು, ಎತ್ತರವಾದ ಸೌಧಗಳಿಂದ ಕೂಡಿದ್ದು, ಸುತ್ತಲೂ ಬಂಗಾರದ ಕೋಟೆಗಳಿಂದಲೂ, ದ್ವಾರ ತೋರಣಗಳಿಂದಲೂ, ನೀರಿನ ಕಾಲುವೆಯಿಂದಲೂ, ಶತಘ್ನಿ ಮುಂತಾದ ಆಯುಧಗಳಿಂದಲೂ, ಸುರಂಗಗಳಿಂದಲೂ ಶೋಭಿಸುತ್ತಿತ್ತು. ಅದರ ಒಂದು ರಾಜಭವನದ ವಿಸ್ತೀರ್ಣವಾದ ಮೆಲ್ಭಾಗದಲ್ಲಿ ತನ್ನ ವೀರರಾದ ಮಂತ್ರಿಗಳೊಡಗೂಡಿ, ಹತ್ತು ಕಿರೀಟಗಳನ್ನು ಧರಿಸಿ, ನೀಲ ಪರ್ವತದ ಶಿಖರದಂತೆ ಆಕಾರವುಳ್ಳ, ಕಾಲಮೇಘಕ್ಕೆ ಸಮಾನವಾದ ಕಾಂತಿಯುಳ್ಳ ರಾವಣನು ಕುಳಿತಿರುವನು. ॥10-12॥

(ಶ್ಲೋಕ-13)

ಮೂಲಮ್

ರತ್ನದಂಡೈಃ ಸಿತಚ್ಛತ್ರೈರನೇಕೈಃ ಪರಿಶೋಭಿತಃ ।
ಏತಸ್ಮಿನ್ನಂತರೇ ಬದ್ಧೋ ಮುಕ್ತೋ ರಾಮೇಣ ವೈ ಶುಕಃ ॥

(ಶ್ಲೋಕ-14)

ಮೂಲಮ್

ವಾನರೈಸ್ತಾಡಿತಃ ಸಮ್ಯಗ್ ದಶಾನನಮುಪಾಗತಃ ।
ಪ್ರಹಸನ್ ರಾವಣಃ ಪ್ರಾಹ ಪೀಡಿತಃ ಕಿಂ ಪರೈಃ ಶುಕ ॥

ಅನುವಾದ

ರತ್ನದಂಡಗಳಿಂದಲೂ, ಬೆಳ್ಗೊಡೆಗಳಿಂದಲೂ ಅಲಂಕೃತ ಅವನ ಶೋಭೆ ಅಪೂರ್ವವಾಗಿತ್ತು. ಆಗಲೇ ವಾನರರಿಂದ ಬಂಧಿಸಲ್ಟಟ್ಟು ಅನಂತರ ಶ್ರೀರಾಮನಿಂದ ಬಿಡುಗಡೆ ಹೊಂದಿದ ಶುಕನೆಂಬ ರಾಕ್ಷಸನು ಕಪಿಗಳಿಂದ ಚೆನ್ನಾಗಿ ಏಟುಗಳನ್ನು ತಿಂದು ರಾವಣನ ಬಳಿಗೆ ಬಂದನು. ಅವನನ್ನು ನೋಡುತ್ತಲೇ ರಾವಣನು ನಗುತ್ತಾ ‘‘ಎಲೈ ಶುಕನೆ! ಶತ್ರುಗಳು ನಿನಗೆ ತುಂಬಾ ಕಷ್ಟ ಕೊಟ್ಟರೇನು?’’ ಎಂದು ಕೇಳಿದನು. ॥13-14॥

(ಶ್ಲೋಕ-15)

ಮೂಲಮ್

ರಾವಣಸ್ಯ ವಚಃ ಶ್ರುತ್ವಾ ಶುಕೋ ವಚನಮಬ್ರವೀತ್ ।
ಸಾಗರಸ್ಯೋತ್ತರೇ ತೀರೇಽಬ್ರವಂ ತೇ ವಚನಂ ಯಥಾ ।
ತತ ಉತ್ ಪ್ಲುತ್ಯ ಕಪಯೋ ಗೃಹೀತ್ವಾ ಮಾಂ ಕ್ಷಣಾತ್ತತಃ ॥

ಅನುವಾದ

ರಾವಣನ ಮಾತನ್ನು ಕೇಳಿದ ಶುಕನು ಹೇಳ ತೊಡಗಿದನು ‘‘ಸಮುದ್ರದ ಉತ್ತರ ತೀರಕ್ಕೆ ಹೋಗಿ ನಾನು, ನಿಮ್ಮ ಸಂದೇಶವನ್ನು ತಿಳಿಸುತ್ತಲೇ ಕೆಲವು ವಾನರರು ನೆಗೆದು ಕ್ಷಣಮಾತ್ರದಲ್ಲಿ ನನ್ನನ್ನು ಹಿಡಿದು ಕೊಂಡರು. ॥15॥

(ಶ್ಲೋಕ-16)

ಮೂಲಮ್

ಮುಷ್ಟಿಭಿರ್ನಖದಂತೈಶ್ಚ ಹಂತುಂ ಲೋಪ್ತುಂ ಪ್ರಚಕ್ರಮುಃ ।
ತತೋ ಮಾಂ ರಾಮ ರಕ್ಷೇತಿ ಕ್ರೋಶಂತಂ ರಘುಪುಂಗವಃ ॥

(ಶ್ಲೋಕ-17)

ಮೂಲಮ್

ವಿಸೃಜ್ಯತಾಮಿತಿ ಪ್ರಾಹ ವಿಸೃಷ್ಟೋಽಹಂ ಕಪೀಶ್ವರೈಃ ।
ತತೋಽಹಮಾಗತೋ ಭೀತ್ಯಾ ದೃಷ್ಟ್ವಾ ತದ್ವಾನರಂ ಬಲಮ್ ॥

ಅನುವಾದ

ಮುಷ್ಟಿ ಪ್ರಹಾರಗಳಿಂದಲೂ, ಉಗುರು-ಹಲ್ಲುಗಳಿಂದಲೂ ನನ್ನನ್ನು ಕೊಲ್ಲಲು ತೊಡಗಿದರು. ಅನಂತರ ನಾನು ‘ರಾಮಾ ಕಾಪಾಡು’ ಎಂದು ಕೂಗಿಕೊಂಡೆ. ನನ್ನ ಪ್ರಾರ್ಥನೆಯಂತೆ ರಘುಶ್ರೇಷ್ಠನಾದ ರಾಮನು ‘ಇವನನ್ನು ಬಿಟ್ಟು ಬಿಡಿ’ ಎಂದು ಹೇಳಿದನು. ಆ ಕಪಿ ಶ್ರೇಷ್ಠರಿಂದ ಬಿಡುಗಡೆ ಹೊಂದಿದ ನಾನು, ಆ ವಾನರ ಸೈನ್ಯವನ್ನು ನೋಡಿ ಹೆದರುತ್ತಲೇ ಇಲ್ಲಿಗೆ ಬಂದಿರುವೆನು. ॥16-17॥

(ಶ್ಲೋಕ-18)

ಮೂಲಮ್

ರಾಕ್ಷಸಾನಾಂ ಬಲೌಘಸ್ಯ ವಾನರೇಂದ್ರಬಲಸ್ಯ ಚ ।
ನೈತಯೋರ್ವಿದ್ಯತೇ ಸಂಧಿರ್ದೇವದಾನವಯೋರಿವ ॥

ಅನುವಾದ

ರಾಕ್ಷಸರ ಸೈನ್ಯಬಲಕ್ಕೂ, ವಾನರೇಂದ್ರನಾದ ಸುಗ್ರೀವನ ಸೈನ್ಯಕ್ಕೂ ದೇವತೆಗಳ ಹಾಗೂ ದಾನವರ ಸೈನ್ಯದಂತೆ ಸಂಧಿಯಾಗುವ ಸಂಭವವೇ ಇಲ್ಲವೆಂದು ನನಗನಿಸುತ್ತದೆ. ॥18॥

(ಶ್ಲೋಕ-19)

ಮೂಲಮ್

ಪುರಪ್ರಾಕಾರಮಾಯಾಂತಿ ಕ್ಷಿಪ್ರಮೇಕತರಂ ಕುರು ।
ಸೀತಾಂ ವಾಸ್ಮೈ ಪ್ರಯಚ್ಛಾಶು ಯುದ್ಧಂ ವಾ ದೀಯತಾಂ ಪ್ರಭೋ ॥

ಅನುವಾದ

ಹೇ ಒಡೆಯಾ! ವಾನರರು ಈಗಾಗಲೇ ಪಟ್ಟಣದ ಕೋಟೆಯೊಳಕ್ಕೆ ಬರುವವರಿದ್ದಾರೆ. ಒಂದೋ ಸೀತೆಯನ್ನು ಬೇಗನೇ ಅವರಿಗೆ ಒಪ್ಪಿಸಿಬಿಡು, ಇಲ್ಲವೇ ಅವರೊಂದಿಗೆ ಯುದ್ಧ ಮಾಡು. ॥19॥

(ಶ್ಲೋಕ-20)

ಮೂಲಮ್

ಮಾಮಾಹ ರಾಮಸ್ತ್ವಂ ಬ್ರೂಹಿ ರಾವಣಂ ಮದ್ವಚಃ ಶುಕ ।
ಯದ್ಬಲಂ ಚ ಸಮಾಶ್ರಿತ್ಯ ಸೀತಾಂ ಮೇ ಹೃತವಾನಸಿ ॥

(ಶ್ಲೋಕ-21)

ಮೂಲಮ್

ತದ್ದರ್ಶಯ ಯಥಾಕಾಮಂ ಸಸೈನ್ಯಃ ಸಹಬಾಂಧವಃ ।
ಶ್ವಃಕಾಲೇ ನಗರೀಂ ಲಂಕಾಂ ಸಪ್ರಾಕಾರಾಂ ಸತೋರಣಾಮ್ ॥

(ಶ್ಲೋಕ-22)

ಮೂಲಮ್

ರಾಕ್ಷಸಂ ಚ ಬಲಂ ಪಶ್ಯ ಶರೈರ್ವಿಧ್ವಂಸಿತಂ ಮಯಾ ।
ಘೋರರೋಷಮಹಂ ಮೋಕ್ಷ್ಯೇ ಬಲಂ ಧಾರಯ ರಾವಣ ॥

ಅನುವಾದ

ರಾಮನು ನನ್ನಲ್ಲಿ ಹೀಗೆ ಹೇಳಿರುವನು — ‘ಎಲೈ ಶುಕನೆ! ನೀನು ರಾವಣನಿಗೆ ನನ್ನ ಈ ಮಾತನ್ನು ಹೇಳು. ಏನೆಂದರೆ ಯಾವ ಸೈನ್ಯಬಲವನ್ನು ನೆಚ್ಚಿಕೊಂಡು ನನ್ನ ಪತ್ನಿಯಾದ ಸೀತೆಯನ್ನು ನೀನು ಅಪಹರಿಸಿರುವೆಯೋ, ಈಗ ಬಂಧುಗಳೊಡನೆ, ಸೇನಾಸಮೇತನಾಗಿ ಆ ಬಲವನ್ನು ಪ್ರದರ್ಶಿಸು. ನಾಳೆ ಬೆಳಗಿನ ವೇಳೆಯಲ್ಲಿ ಪ್ರಾಕಾರ ತೋರಣಗಳಿಂದ ಕೂಡಿದ ಲಂಕೆಯನ್ನು ಹಾಗೂ ರಾಕ್ಷಸ ಬಲವನ್ನೂ ನನ್ನ ಬಾಣಗಳಿಂದ ನಾಶವಾಗುವುದನ್ನು ನೋಡುವೆ. ನಾನು ಭಯಂಕರವಾದ ಕೋಪವನ್ನು ಪ್ರಕಟಿಸಲಿರುವೆನು. ರಾವಣಾ! ನೀನು ಬಲ ವನ್ನಾಶ್ರಯಿಸಿ ಎದುರಿಸು.’ ॥20-22॥

(ಶ್ಲೋಕ-23)

ಮೂಲಮ್

ಇತ್ಯುಕ್ತ್ವೋಪರರಾಮಾಥ ರಾಮಃ ಕಮಲಲೋಚನಃ ।
ಏಕಸ್ಥಾನಗತಾ ಯತ್ರ ಚತ್ವಾರಃ ಪುರುಷರ್ಷಭಾಃ ॥

(ಶ್ಲೋಕ-24)

ಮೂಲಮ್

ಶ್ರೀರಾಮೋ ಲಕ್ಷ್ಮಣಶ್ಚೈವ ಸುಗ್ರೀವಶ್ಚ ವಿಭೀಷಣಃ ।
ಏತ ಏವ ಸಮರ್ಥಾಸ್ತೇ ಲಂಕಾಂ ನಾಶಯಿತುಂ ಪ್ರಭೋ ॥

(ಶ್ಲೋಕ-25)

ಮೂಲಮ್

ಉತ್ಪಾಟ್ಯ ಭಸ್ಮೀಕರಣೇ ಸರ್ವೇ ತಿಷ್ಠಂತು ವಾನರಾಃ ।
ತಸ್ಯ ಯಾದೃಗ್ ಬಲಂ ದೃಷ್ಟಂ ರೂಪಂ ಪ್ರಹರಣಾನಿ ಚ ॥

(ಶ್ಲೋಕ-26)

ಮೂಲಮ್

ವಧಿಷ್ಯತಿ ಪುರಂ ಸರ್ವಮೇಕಸ್ತಿಷ್ಠಂತು ತೇ ತ್ರಯಃ ।
ಪಶ್ಯ ವಾನರಸೇನಾಂ ತಾಮಸಂಖ್ಯಾತಾಂ ಪ್ರಪೂರಿತಾಮ್ ॥

ಅನುವಾದ

ಹೀಗೆಂದು ತಿಳಿಸುವಂತೆ ಹೇಳಿ ಕಮಲಲೋಚನನಾದ ಶ್ರೀರಾಮನು ಸುಮ್ಮನಾದನು. ‘‘ಎಲೈ ಒಡೆಯಾ! ಪುರುಷಶ್ರೇಷ್ಠರಾದ ರಾಮ, ಲಕ್ಷ್ಮಣ, ಸುಗ್ರೀವ, ವಿಭೀಷಣ ಇವರು ನಾಲ್ವರು ಒಂದೇ ಜಾಗದಲ್ಲಿ ಕೂಡಿದವರಾದರೆ ಲಂಕೆಯನ್ನು ನಾಶಗೊಳಿಸುವುದಕ್ಕೆ ಇವರೇ ಸಮರ್ಥರಾಗಿರುವರು. ಉಳಿದ ಕಪಿಗಳು ಹಾಗಿರಲಿ ಅಥವಾ ಆ ಮೂವರು ಒಂದು ಕಡೆ ಇರಲಿ! ಶ್ರೀರಾಮನೊಬ್ಬನೇ ಸಾಕು. ಅವನ ಬಲ, ರೂಪ, ಆಯುಧಗಳನ್ನು ನಾನು ಕಂಡದ್ದಾಯಿತು. ಇಡಿಯ ಲಂಕೆಯನ್ನೆಲ್ಲ ಅವನೊಬ್ಬನೇ ನಾಶಗೊಳಿಸ ಬಲ್ಲನು. ರಾವಣೇಶ್ವರಾ! ಇದೋ ಲೆಕ್ಕವಿಲ್ಲದಷ್ಟು ಎಲ್ಲೆಡೆ ಹರಡಿಕೊಂಡಿರುವ ವಾನರ ಸೈನ್ಯವನ್ನು ನೋಡು. ॥23-26॥

(ಶ್ಲೋಕ-27)

ಮೂಲಮ್

ಗರ್ಜಂತಿ ವಾನರಾಸ್ತತ್ರ ಪಶ್ಯ ಪರ್ವತಸನ್ನಿಭಾಃ ।
ನ ಶಕ್ಯಾಸ್ತೇ ಗಣಯಿತುಂ ಪ್ರಾಧಾನ್ಯೇನ ಬ್ರವೀಮಿ ತೇ ॥

ಅನುವಾದ

ಅಲ್ಲಿ ಬೆಟ್ಟಗಳಂತಿರುವ ಕಪಿಗಳು ಗರ್ಜಿಸುತ್ತಿರುವರು. ಅವರನ್ನೆಲ್ಲ ಎಣಿಸಲು ಸಾಧ್ಯವಿಲ್ಲ. ಅವರಲ್ಲಿ ಮುಖ್ಯ-ಮುಖ್ಯರಾದ ಕೆಲವರನ್ನು ನಿಮಗೆ ತಿಳಿಸುವೆನು. ॥27॥

(ಶ್ಲೋಕ-28)

ಮೂಲಮ್

ಏಷ ಯೋಽಭಿಮುಖೋ ಲಂಕಾಂ ನದಂಸ್ತಿಷ್ಠತಿ ವಾನರಃ ।
ಯೂಥಪಾನಾಂ ಸಹಸ್ರಾಣಾಂ ಶತೇನ ಪರಿವಾರಿತಃ ॥

(ಶ್ಲೋಕ-29)

ಮೂಲಮ್

ಸುಗ್ರೀವಸೇನಾಧಿಪತಿರ್ನೀಲೋ ನಾಮಾಗ್ನಿನಂದನಃ ।
ಏಷ ಪರ್ವತಶೃಂಗಾಭಃ ಪದ್ಮಕಿಂಜಲ್ಕಸನ್ನಿಭಃ ॥

(ಶ್ಲೋಕ-30)

ಮೂಲಮ್

ಸ್ಫೋಟಯತ್ಯಭಿಸಂರಬ್ಧೋ ಲಾಂಗೂಲಂ ಚ ಪುನಃ ಪುನಃ ।
ಯುವರಾಜೋಂಗದೋ ನಾಮ ವಾಲಿಪುತ್ರೋಽತಿವೀರ್ಯವಾನ್ ॥

ಅನುವಾದ

ನೋಡು, ಈ ವಾನರನು ಲಂಕೆಯನ್ನು ನೋಡುತ್ತಾ ಆಗಾಗ ಗರ್ಜಿಸುತ್ತಿರುವನು, ಒಂದು ಲಕ್ಷ ಯೂಥಪತಿಗಳಿಂದ ಸುತ್ತುವರಿದು, ವಾನರರಾಜನಾದ ಸುಗ್ರೀವನ ಸೇನಾಪತಿ ಅಗ್ನಿನಂದನ ನೀಲ ನೆಂಬುವನು. ಅದೋ ಪರ್ವತ ಶಿಖರದಂತೆ ಎತ್ತರವಾಗಿದ್ದು, ಕಮಲದ ಕೇಸರದಂತೆ ಕಾಂತಿಯುಳ್ಳವನಾಗಿ, ಮತ್ತೆ-ಮತ್ತೆ ಕಾರ್ಯಾಭಿಮುಖನಾಗಿ ಬಾಲವನ್ನು ಆಗಾಗ ಕೊಡಹುತ್ತಾ ಇರುವವನು ವಾಲಿಯ ಮಗನಾದ ಮಹಾಬಲಶಾಲಿ ಯುವರಾಜ ಅಂಗದನೆಂಬುವನು. ॥28-30॥

(ಶ್ಲೋಕ-31)

ಮೂಲಮ್

ಯೇನ ದೃಷ್ಟಾ ಜನಕಜಾ ರಾಮಸ್ಯಾತೀವವಲ್ಲಭಾ ।
ಹನೂಮಾನೇಷ ವಿಖ್ಯಾತೋ ಹತೋ ಯೇನ ತವಾತ್ಮಜಃ ॥

ಅನುವಾದ

ರಾಮನ ಪ್ರಾಣ ಪ್ರಿಯಳಾದ ಜನಕನಂದಿನಿ ಸೀತೆಯನ್ನು ಕಂಡು, ನಿನ್ನ ಮಗ ಅಕ್ಷಕುಮಾರನನ್ನು ಕೊಂದಿರುವ ವಿಖ್ಯಾತನಾದ ಹನುಮಂತ ಇವನೇ ಆಗಿದ್ದಾನೆ. ॥31॥

(ಶ್ಲೋಕ-32)

ಮೂಲಮ್

ಶ್ವೇತೋ ರಜತಸಂಕಾಶೋ ಮಹಾಬುದ್ಧಿಪರಾಕ್ರಮಃ ।
ತೂರ್ಣಂ ಸುಗ್ರೀವಮಾಗಮ್ಯ ಪುನರ್ಗಚ್ಛತಿ ವಾನರಃ ॥

(ಶ್ಲೋಕ-33)

ಮೂಲಮ್

ಯಸ್ತ್ವೇಷ ಸಿಂಹಸಂಕಾಶಃ ಪಶ್ಯತ್ಯತುಲವಿಕ್ರಮಃ ।
ರಂಭೋ ನಾಮ ಮಹಾಸತ್ತ್ವೋ ಲಂಕಾಂ ನಾಶಯಿತುಂ ಕ್ಷಮಃ ॥

ಅನುವಾದ

ಇನ್ನು ಬೆಳ್ಳಗಿದ್ದು ಬೆಳ್ಳಿಯಂತೆ ಹೊಳೆಯುತ್ತಿರುವ, ಮಹಾಬುದ್ಧಿಶಾಲಿಯೂ, ಆಗಾಗ್ಗೆ ಸುಗ್ರೀವನ ಬಳಿಗೆ ಹೋಗಿ ಬಂದು ಮಾತಾಡುತ್ತಿರುವವನು ಸಿಂಹ ಪರಾಕ್ರಮನಾದ, ಅಪರಿಮಿತ ಬಲಶಾಲಿಯಾದ ರಂಭನೆಂಬ ಮಹಾಕಪಿಯು ಲಂಕೆಯನ್ನು ನಾಶಗೊಳಿಸಲು ಇವನೊಬ್ಬನೇ ಸಮರ್ಥನಾಗಿದ್ದಾನೆ. ॥32-33॥

(ಶ್ಲೋಕ-34)

ಮೂಲಮ್

ಏಷ ಪಶ್ಯತಿ ವೈ ಲಂಕಾಂ ದಿಧಕ್ಷನ್ನಿವ ವಾನರಃ ।
ಶರಭೋ ನಾಮ ರಾಜೇಂದ್ರ ಕೋಟಿಯೂಥಪನಾಯಕಃ ॥

ಅನುವಾದ

ಎಲೈ ರಾಜೇಂದ್ರಾ! ಲಂಕೆಯನ್ನು ಸುಟ್ಟುಬಿಡುವವನಂತೆ ನೋಡುತ್ತಿರುವ ಇನ್ನೊಬ್ಬನಿವನು ಕೋಟಿ ಯೂಥಪತಿಗಳಿಗೆ ನಾಯಕನಾದ ‘ಶರಭ’ನೆಂಬುವನು. ॥34॥

(ಶ್ಲೋಕ-35)

ಮೂಲಮ್

ಪನಸಶ್ಚ ಮಹಾವೀರ್ಯೋ ಮೈಂದಶ್ಚ ದ್ವಿವಿದಸ್ತಥಾ ।
ನಲಶ್ಚ ಸೇತುಕರ್ತಾಸೌ ವಿಶ್ವಕರ್ಮಸುತೋ ಬಲೀ ॥

(ಶ್ಲೋಕ-36)

ಮೂಲಮ್

ವಾನರಾಣಾಂ ವರ್ಣನೇ ವಾ ಸಂಖ್ಯಾನೇ ವಾ ಕ ಈಶ್ವರಃ ।
ಶೂರಾಃ ಸರ್ವೇ ಮಹಾಕಾಯಾಃ ಸರ್ವೇ ಯುದ್ಧಾಭಿಕಾಂಕ್ಷಿಣಃ ॥

ಅನುವಾದ

ಇವರಲ್ಲದೆ ಮಹಾವೀರ್ಯಶಾಲಿಯಾದ ಪನಸ, ಮೈಂದ, ದ್ವಿವಿದ, ಸೇತುವನ್ನು ಕಟ್ಟಿದ ವಿಶ್ವಕರ್ಮನ ಮಗನಾದ ಬಲಶಾಲಿಯಾದ ನಳ, ಇವರೆಲ್ಲರೂ ಮುಖ್ಯ-ಮುಖ್ಯ ಯೋಧರಾಗಿದ್ದಾರೆ. ಈ ವಾನರರನ್ನು ವರ್ಣಿಸುವುದಕ್ಕಾಗಲೀ, ಎಣಿಸುವುದಕ್ಕಾಗಲಿ ಯಾವಾತನು ಸಮರ್ಥನಾದಾನು? ಮಹಾಶರೀರಿಗಳಾದ ಇವರೆಲ್ಲರೂ ಶೂರರೂ ಯುದ್ಧವನ್ನು ಬಯಸುವವರಾಗಿದ್ದಾರೆ. ॥35-36॥

(ಶ್ಲೋಕ-37)

ಮೂಲಮ್

ಶಕ್ತಾಃ ಸರ್ವೇ ಚೂರ್ಣಯಿತುಂ ಲಂಕಾಂ ರಕ್ಷೋಗಣೈಃ ಸಹ ।
ಏತೇಷಾಂ ಬಲಸಂಖ್ಯಾನಂ ಪ್ರತ್ಯೇಕಂ ವಚ್ಮಿ ತೇ ಶೃಣು ॥

ಅನುವಾದ

ರಾಕ್ಷಸರ ಸಮೇತ ವಾದ ಲಂಕೆಯನ್ನು ಪುಡಿಮಾಡಿಬಿಡಲು ಇವರೆಲ್ಲರೂ ಸಮರ್ಥರಾಗಿರುವರು. ಇವರುಗಳ ಸೈನ್ಯದ ಗಣನೆಯನ್ನು ಬೇರೆ-ಬೇರೆಯಾಗಿ ಹೇಳುವೆನು, ಕೇಳಿ. ॥37॥

(ಶ್ಲೋಕ-38)

ಮೂಲಮ್

ಏಷಾಂ ಕೋಟಿಸಹಸ್ರಾಣಿ ನವ ಪಂಚ ಚ ಸಪ್ತ ಚ ।
ತಥಾ ಶಂಖಸಹಸ್ರಾಣಿ ತಥಾರ್ಬುದಶತಾನಿ ಚ ॥

ಅನುವಾದ

ಇವರು ಗಳಲ್ಲಿ ಪ್ರತಿಯೊಬ್ಬರ ಕೈಕೆಳಗೆ ಇಪ್ಪತ್ತೊಂದು ಸಾವಿರ ಕೋಟಿ, ಸಾವಿರಾರು ಶಂಖ, ನೂರಾರು ಅರ್ಬುದ ಅಂದರೆ ಅಸಂಖ್ಯಾಕ ಸೈನ್ಯವಿದೆ. ॥38॥

(ಶ್ಲೋಕ-39)

ಮೂಲಮ್

ಸುಗ್ರೀವಸಚಿವಾನಾಂ ತೇ ಬಲಮೇತತ್ಪ್ರಕೀರ್ತಿತಮ್ ।
ಅನ್ಯೇಷಾಂ ತು ಬಲಂ ನಾಹಂ ವಕ್ತುಂ ಶಕ್ತೋಸ್ಮಿ ರಾವಣ ॥

ಅನುವಾದ

‘‘ಎಲೈ ರಾವಣೇಶ್ವರಾ ! ಇದಾದರೋ ನಾನು ಸುಗ್ರೀವನ ಮಂತ್ರಿಗಳ ಸೈನ್ಯವನ್ನು ಮಾತ್ರ ಹೇಳಿರುವೆನು. ಇವರಲ್ಲದೆ ಇನ್ನುಳಿದವರ ಸೈನ್ಯವನ್ನು ಎಣಿಸಲು ನಾನು ಸಮರ್ಥನಲ್ಲ. ॥39॥

(ಶ್ಲೋಕ-40)

ಮೂಲಮ್

ರಾಮೋ ನ ಮಾನುಷಃ ಸಾಕ್ಷಾದಾದಿನಾರಾಯಣಃ ಪರಃ ।
ಸೀತಾ ಸಾಕ್ಷಾಜ್ಜಗದ್ಧೇತುಃ ಚಿಚ್ಛಕ್ತಿರ್ಜಗದಾತ್ಮಿಕಾ ॥

(ಶ್ಲೋಕ-41)

ಮೂಲಮ್

ತಾಭ್ಯಾ ಮೇವ ಸಮುತ್ಪನ್ನಂ ಜಗತ್ಸ್ಥಾವರಜಂಗಮಮ್ ।
ತಸ್ಮಾದ್ರಾಮಶ್ಚ ಸೀತಾ ಚ ಜಗತಸ್ತಸ್ಥುಷಶ್ಚ ತೌ ॥

(ಶ್ಲೋಕ-42)

ಮೂಲಮ್

ಪಿತರೌ ಪೃಥಿವೀಪಾಲ ತಯೋರ್ವೈರೀ ಕಥಂ ಭವೇತ್ ।
ಅಜಾನತಾ ತ್ವಯಾನೀತಾ ಜಗನ್ಮಾತೈವ ಜಾನಕೀ ॥

ಅನುವಾದ

ಎಲೈ ಭೂಪಾಲನೆ! ರಾಮನೂ ಕೂಡ ಸಾಮಾನ್ಯ ಮನುಷ್ಯನಲ್ಲ. ಅವನು ಸಾಕ್ಷಾತ್ ಆದಿನಾರಾಯಣ ಪರಮಾತ್ಮನಾಗಿದ್ದಾನೆ. ಸೀತೆಯಾದರೋ ಜಗದ್ವ್ಯಾಪಿನಿಯಾದ, ಜಗತ್ಕಾರಣಳಾದ ಚಿಚ್ಛಕ್ತಿರೂಪಳು. ಇವರಿಬ್ಬರಿಂದಲೇ ಸ್ಥಾವರ ಜಂಗಮಾತ್ಮಕ (ಜಡ-ಚೇತನ)ವಾದ ಪ್ರಪಂಚವೆಲ್ಲವೂ ಉಂಟಾಗಿರುವುದು. ಆದ್ದರಿಂದ ರಾಮನೂ, ಸೀತೆಯೂ ಈ ಜಡ-ಚೇತನರಾದ ಎಲ್ಲ ಪ್ರಾಣಿಗಳಿಗೂ ತಂದೆ-ತಾಯಿಯರಾಗಿದ್ದಾರೆ. ಇವರಿಗೆ ಯಾರಾದರೂ ಹೇಗೆ ವೈರಿಗಳಾಗುವರು? ನೀನಾದರೋ ಈ ವಿಷಯವನ್ನು ಅರಿಯದೆ ಲೋಕಮಾತೆಯಾದ ಸೀತೆಯನ್ನು ಕದ್ದು ತಂದಿರುವೆಯಲ್ಲ! ॥40-42॥

(ಶ್ಲೋಕ-43)

ಮೂಲಮ್

ಕ್ಷಣನಾಶಿನಿ ಸಂಸಾರೇ ಶರೀರೇ ಕ್ಷಣಭಂಗುರೇ ।
ಪಂಚಭೂತಾತ್ಮಕೇ ರಾಜಂಶ್ಚತುರ್ವಿಂಶತಿತತ್ತ್ವಕೇ ॥

(ಶ್ಲೋಕ-44)

ಮೂಲಮ್

ಮಲಮಾಂಸಾಸ್ಥಿದುರ್ಗಂಧಭೂಯಿಷ್ಠೇಽಹಂಕೃತಾಲಯೇ
ಕೈವಾಸ್ಥಾ ವ್ಯತಿರಿಕ್ತಸ್ಯ ಕಾಯೇ ತವ ಜಡಾತ್ಮಕೇ ॥

ಅನುವಾದ

ಕ್ಷಣಕಾಲವಿದ್ದು ಮರೆಯಾಗುವ ಈ ಸಂಸಾರದಲ್ಲಿ ಕ್ಷಣಭಂಗುರವೂ, ಪಂಚಭೂತಾತ್ಮಕವೂ, ಇಪ್ಪತ್ತನಾಲ್ಕು* ತತ್ತ್ವರೂಪವೂ, ಮಲ, ಮಾಂಸ, ಅಸ್ತಿ, ದುರ್ವಾಸನೆ ಇವುಗಳಿಂದ ಕೂಡಿದ ಅಹಂಕಾರಾಶ್ರಯವಾದ ಜಡರೂಪವಾದ ನಿನ್ನ ದೇಹದಲ್ಲಿ ನಂಬಿಕೆಯಾದರೂ ಏನಿದ್ದೀತು? ನೀನಾದರೋ ಇದರಿಂದ ಸರ್ವಥಾ ಬೇರೆಯಾಗಿರುವೆ. ॥43-44॥

ಟಿಪ್ಪನೀ
  • ಪ್ರಕೃತಿ, ಬುದ್ಧಿ, ಅಹಂಕಾರ, ಹನ್ನೊಂದು ಇಂದ್ರಿಯಗಳು, ಪಂಚಭೂತಗಳು ಹಾಗೂ ಶಬ್ದ ಸ್ಪರ್ಶಾದಿ ಐದು ವಿಷಯಗಳೂ, ಇವೆಲ್ಲ ಸೇರಿ ಇಪ್ಪತ್ತನಾಲ್ಕು ತತ್ತ್ವಗಳೆಂದು ಹೇಳಲ್ಪಡುತ್ತವೆ.

(ಶ್ಲೋಕ-45)

ಮೂಲಮ್

ಯತ್ಕೃತೇ ಬ್ರಹ್ಮಹತ್ಯಾದಿಪಾತಕಾನಿ ಕೃತಾನಿ ತೇ ।
ಭೋಗಭೋಕ್ತಾ ತು ಯೋ ದೇಹಃ ಸ ದೇಹೋಽತ್ರ ಪತಿಷ್ಯತಿ ॥

ಅನುವಾದ

ಯಾವ ದೇಹಸುಖಕ್ಕಾಗಿ ಬ್ರಹ್ಮಹತ್ಯೆಯೇ ಮುಂತಾದ ಪಾಪಗಳನ್ನು ಮಾಡಿರುವೆಯೋ, ಭೋಗವನ್ನ ನುಭವಿಸುವ ಶರೀರವು ಇಲ್ಲಿಯೇ ಬಿದ್ದು ಹೋಗಲಿದೆ. ॥45॥

(ಶ್ಲೋಕ-46)

ಮೂಲಮ್

ಪುಣ್ಯಪಾಪೇ ಸಮಾಯಾತೇ ಜೀವೇನ ಸುಖದುಃಖಯೋಃ ।
ಕಾರಣೇ ದೇಹಯೋಗಾದಿನಾತ್ಮನಃ ಕುರುತೋಽನಿಶಮ್ ॥

(ಶ್ಲೋಕ-47)

ಮೂಲಮ್

ಯಾವದ್ದೇಹೋಽಸ್ಮಿ ಕರ್ತಾಸ್ಮೀತ್ಯಾತ್ಮಾಹಂಕುರುತೇಽವಶಃ ।
ಅಧ್ಯಾಸಾತ್ತಾವದೇವ ಸ್ಯಾಜ್ಜನ್ಮನಾಶಾದಿಸಂಭವಃ ॥

ಅನುವಾದ

ಸುಖ-ದುಃಖಗಳಿಗೆ ಕಾರಣವಾದ ಪಾಪ-ಪುಣ್ಯಗಳು ಮಾತ್ರ ಜೀವನೊಡನೆ ಬರುವುವು. ಇವುಗಳೇ ದೇಹಾದಿಗಳನ್ನುಂಟು ಮಾಡುವುದಕ್ಕೆ ಕಾರಣಗಳಾಗಿಯಾವಾಗಲೂ ಹಿಂಬಾಲಿಸುವುವು. ಅವಿದ್ಯೆಗೆ ಬದ್ಧನಾಗಿ ನಾನು ದೇಹವು ಎಂದೂ, ನಾನು ಕರ್ತೃವೆಂದೂ ಆತ್ಮನು ಅಹಂಕಾರಾವಿಷ್ಟನಾಗಿ ದೇಹಾತ್ಮ ಧ್ಯಾಸವಿರುವವರೆಗೆ ಜನ್ಮಮರಣಗಳು ಸಂಭವಿಸುತ್ತಿರುವುವು. ॥46-47॥

(ಶ್ಲೋಕ-48)

ಮೂಲಮ್

ತಸ್ಮಾತ್ತ್ವಂ ತ್ಯಜ ದೇಹಾದಾವಭಿಮಾನಂ ಮಹಾಮತೇ ।
ಆತ್ಮಾತಿನಿರ್ಮಲಃ ಶುದ್ಧೋ ವಿಜ್ಞಾನಾತ್ಮಾಚಲೋಽವ್ಯಯಃ ॥

ಅನುವಾದ

ಆದ್ದರಿಂದ ಎಲೈ ಬುದ್ಧಿಶಾಲಿಯೆ! ದೇಹಾದಿಗಳಲ್ಲಿ ಅಭಿಮಾನವನ್ನು ಬಿಟ್ಟುಬಿಡು. ಆತ್ಮನಾದರೋ ಅತ್ಯಂತ ನಿರ್ಮಲ, ಶುದ್ಧ ಸ್ವರೂಪ, ವಿಜ್ಞಾನ ಮಯ, ಅವಿಚಲ ಹಾಗೂ ಅವಿಕಾರಿಯಾಗಿದ್ದಾನೆ. ॥48॥

(ಶ್ಲೋಕ-49)

ಮೂಲಮ್

ಸ್ವಾಜ್ಞಾನವಶತೋ ಬಂಧಂ ಪ್ರತಿಪದ್ಯ ವಿಮುಹ್ಯತಿ ।
ತಸ್ಮಾತ್ತ್ವಂ ಶುದ್ಧಭಾವೇನ ಜ್ಞಾತ್ವಾತ್ಮಾನಂ ಸದಾ ಸ್ಮರ ॥

ಅನುವಾದ

ತನ್ನ ಅಜ್ಞಾನದ ಕಾರಣವೇ ಅವನು ಬಂಧನದಲ್ಲಿ ಬಿದ್ದು ಮೋಹವನ್ನು ಪಡೆಯುತ್ತಾನೆ. ಆದ್ದರಿಂದ ನೀನು ಶುದ್ಧ ಭಾವದಿಂದ ಆತ್ಮವನ್ನು ಅರಿತುಕೊಂಡು ಅದನ್ನೇ ಯಾವಾಗಲೂ ಸ್ಮರಿಸು. ॥49॥

(ಶ್ಲೋಕ-50)

ಮೂಲಮ್

ವಿರತಿಂ ಭಜ ಸರ್ವತ್ರ ಪುತ್ರದಾರಗೃಹಾದಿಷು ।
ನಿರಯೇಷ್ವಪಿ ಭೋಗಃ ಸ್ಯಾಚ್ಛ್ವಶೂಕರತನಾವಪಿ ॥

ಅನುವಾದ

ಪತ್ನೀ, ಪುತ್ರ, ಮನೆ ಮುಂತಾದವುಗಳಲ್ಲಿ ವೈರಾಗ್ಯವನ್ನು ಹೊಂದು ವವನಾಗು. ಏಕೆಂದರೆ ಭೋಗಗಳಾದರೋ ನಾಯಿ, ಹಂದಿ ಮುಂತಾದ ಯೋನಿಗಳಲ್ಲಿ ಹಾಗೂ ನರಕಾದಿಗಳಲ್ಲಿಯೂ ಸಿಗಬಲ್ಲವು. ॥50॥

(ಶ್ಲೋಕ-51)

ಮೂಲಮ್

ದೇಹಂ ಲಬ್ದ್ವಾ ವಿವೇಕಾಢ್ಯಂ ದ್ವಿಜತ್ವಂ ಚ ವಿಶೇಷತಃ ।
ತತ್ರಾಪಿ ಭಾರತೇ ವರ್ಷೇ ಕರ್ಮಭೂಮೌ ಸುದುರ್ಲಭಮ್ ॥

(ಶ್ಲೋಕ-52)

ಮೂಲಮ್

ಕೋ ವಿದ್ವಾನಾತ್ಮಸಾತ್ಕೃತ್ವಾ ದೇಹಂ ಭೋಗಾನುಗೋ ಭವೇತ್ ।
ಅತಸ್ತ್ವಂ ಬ್ರಾಹ್ಮಣೋ ಭೂತ್ವಾ ಪೌಲಸ್ತ್ಯತನಯಶ್ಚ ಸನ್ ॥

(ಶ್ಲೋಕ-53)

ಮೂಲಮ್

ಅಜ್ಞಾನೀವ ಸದಾ ಭೋಗಾನನುಧಾವಸಿ ಕಿಂ ಮುಧಾ ।
ಇತಃ ಪರಂ ವಾ ತ್ಯಕ್ತ್ವಾ ತ್ವಂ ಸರ್ವಸಂಗಂ ಸಮಾಶ್ರಯ ॥

(ಶ್ಲೋಕ-54)

ಮೂಲಮ್

ರಾಮಮೇವ ಪರಾತ್ಮಾನಂ ಭಕ್ತಿಭಾವೇನ ಸರ್ವದಾ ।
ಸೀತಾಂ ಸಮರ್ಪ್ಯ ರಾಮಾಯ ತತ್ಪಾದಾನುಚರೋ ಭವ ॥

ಅನುವಾದ

ಸದಸದ್-ವಿವೇಕ ಬುದ್ಧಿಯಿಂದ ಕೂಡಿದ ಮನುಷ್ಯ ಶರೀರಪಡೆದರೂ, ಅದರಲ್ಲಿಯೂ ವಿಶೇಷವಾಗಿ ಬ್ರಾಹ್ಮಣ್ಯವನ್ನು ಪಡೆದು, ದುರ್ಲಭವಾದ ಕರ್ಮಭೂಮಿ ಭಾರತವರ್ಷದಲ್ಲಿ ಹುಟ್ಟಿದಯಾವ ಬುದ್ಧಿವಂತನು ತಾನೇ ದೇಹದಲ್ಲಿ ಆತ್ಮಬುದ್ಧಿಯನ್ನಿರಿಸಿ ಭೋಗಗಳ ಬೆನ್ನು ಹತ್ತುವನು? ಆದ್ದರಿಂದ ನೀನು ಬ್ರಾಹ್ಮಣನಾಗಿದ್ದುಕೊಂಡು ಜೊತೆಗೆ ಪೌಲಸ್ತ್ಯನಂದನ ವಿಶ್ರವಸ್ಸುವಿನ ಮಗನಾಗಿದ್ದು, ಅಜ್ಞಾನಿಯಂತೆ ಯಾವಾಗಲೂ ಭೋಗಗಳನ್ನು ಅನುಸರಿಸಿಕೊಂಡು ವ್ಯರ್ಥವಾಗಿ ಏಕೆ ಓಡುತ್ತಿರುವೆ? ಇನ್ನು ಮುಂದೆಯಾದರೂ ನೀನು ಎಲ್ಲ ಆಸಕ್ತಿಗಳನ್ನು ಬಿಟ್ಟು ಪರಮಾತ್ಮನಾದ ರಾಮನನ್ನೇ ಭಕ್ತಿಭಾವದಿಂದ ಆಶ್ರಯಿಸಿರಿ. ರಾಮನಿಗೆ ಸೀತೆಯನ್ನು ಒಪ್ಪಿಸಿ ಅವನ ಪಾದಸೇವಕನಾಗಿ ಬದುಕಿಕೊ. ॥51-54॥

(ಶ್ಲೋಕ-55)

ಮೂಲಮ್

ವಿಮುಕ್ತಃ ಸರ್ವಪಾಪೇಭ್ಯೋ ವಿಷ್ಣುಲೋಕಂ ಪ್ರಯಾಸ್ಯಸಿ ।
ನೋ ಚೇದ್ಗಮಿಷ್ಯಸೇಽಧೋಽಧಃ ಪುನರಾವೃತ್ತಿವರ್ಜಿತಃ ।
ಅಂಗೀಕುರುಷ್ವ ಮದ್ವಾಕ್ಯಂ ಹಿತಮೇವ ವದಾಮಿ ತೇ ॥

ಅನುವಾದ

ನೀನು ಹೀಗೆ ಮಾಡಿದರೆ ಎಲ್ಲ ಪಾಪಗಳಿಂದ ಬಿಡುಗಡೆ ಹೊಂದಿ ವಿಷ್ಣುಲೋಕಕ್ಕೆ ಹೋಗುವೆ. ಹಾಗಿಲ್ಲ ವಾದರೆ ಸದ್ಗತಿಗೆ ಹಿಂದಿರುಗದ ಸ್ಥಿತಿಯಲ್ಲಿ ಕೆಳ-ಕೆಳಕ್ಕೆ ಹೋಗಿ ಬಿಡುವೆ. ತನ್ನ ಉದ್ಧಾರಮಾಡಿಕೊಳ್ಳುವಂತಹ ಈ ಮಾನವ ಶರೀರವು ಪುನಃ ದೊರೆಯಲಾರದು. ನಾನು ನಿನ್ನ ಹಿತದ ಮಾತನ್ನೇ ಹೇಳುತ್ತಿರುವೆನು, ಇದನ್ನು ಒಪ್ಪಿಕೊ. ॥55॥

(ಶ್ಲೋಕ-56)

ಮೂಲಮ್

ಸತ್ಸಂಗತಿಂ ಕುರು ಭಜಸ್ವ ಹರಿಂ ಶರಣ್ಯಂ
ಶ್ರೀರಾಘವಂ ಮರಕತೋಪಲಕಾಂತಿಕಾಂತಮ್ ।
ಸೀತಾಸಮೇತಮನಿಶಂ ಧೃತಚಾಪಬಾಣಂ
ಸುಗ್ರೀವಲಕ್ಷ್ಮಣವಿಭೀಷಣಸೇವಿತಾಂಘ್ರಿಮ್ ॥

ಅನುವಾದ

ಎಲೈ ರಾವಣೇಶ್ವರಾ! ನೀನು ಯಾವಾಗಲೂ ಸತ್ಸಂಗವನ್ನು ಮಾಡು ಹಾಗೂ ನೀಲ ವಜ್ರದಂತೆ ಕಾಂತಿಯುಳ್ಳ ಸೀತಾ ಸಮೇತನಾದ, ಧನುರ್ಬಾಣಗಳನ್ನು ಧರಿಸಿರುವ, ಸುಗ್ರೀವ, ಲಕ್ಷ್ಮಣ ವಿಭೀಷಣಾದಿಗಳಿಂದ ಸೇವಿತವಾದ ಪಾದಗಳುಳ್ಳ, ಶರಣ್ಯನಾದ ಶ್ರೀಹರಿಯನ್ನು (ಶ್ರೀರಾಮನನ್ನು) ಯಾವಾಗಲೂ ಭಜಿಸುವವನಾಗು. ॥56॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.