[ಮೂರನೆಯ ಸರ್ಗ]
ಭಾಗಸೂಚನಾ
ವಿಭೀಷಣನ ಶರಣಾಗತಿ, ಸಮುದ್ರದ ನಿಗ್ರಹ, ಸೇತು ಬಂಧನದ ಪ್ರಾರಂಭ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ವಿಭೀಷಣೋ ಮಹಾಭಾಗಶ್ಚತುರ್ಭಿರ್ಮಂತ್ರಿಭಿಃ ಸಹ ।
ಆಗತ್ಯ ಗಗನೇ ರಾಮಸಮ್ಮುಖೇ ಸಮವಸ್ಥಿತಃ ॥
(ಶ್ಲೋಕ-2)
ಮೂಲಮ್
ಉಚ್ಚೈರುವಾಚ ಭೋಃ ಸ್ವಾಮಿನ್ ರಾಮ ರಾಜೀವಲೋಚನ ।
ರಾವಣಸ್ಯಾನುಜೋಹಂ ತೇ ದಾರಹರ್ತುರ್ವಿಭೀಷಣಃ ॥
(ಶ್ಲೋಕ-3)
ಮೂಲಮ್
ನಾಮ್ನಾ ಭ್ರಾತ್ರಾ ನಿರಸ್ತೋಽಹಂ ತ್ವಾಮೇವ ಶರಣಂ ಗತಃ ।
ಹಿತಮುಕ್ತಂ ಮಯಾ ದೇವ ತಸ್ಯ ಚಾವಿದಿತಾತ್ಮನಃ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಗೌರಿ! ಮಹಾತ್ಮನಾದ ವಿಭೀಷಣನು ತನ್ನ ನಾಲ್ವರು ಮಂತ್ರಿಗಳೊಡನೆ ಬಂದು ಶ್ರೀರಾಮನ ಎದುರಿಗೆ ಆಕಾಶದಲ್ಲಿ ನಿಂತು, ಗಟ್ಟಿಯಾಗಿ ಹೀಗೆ ಹೇಳ ತೊಡಗಿದನು ‘‘ಹೇ ಕಮಲ ನಯನ ಪ್ರಭುವಾದ ರಾಮನೆ! ನಿನ್ನ ಹೆಂಡತಿಯನ್ನು ಅಪಹರಿಸಿದ ರಾವಣನ ಸಹೋದರನೇ ನಾನು. ನನ್ನ ಹೆಸರು ವಿಭೀಷಣ ಎಂದಾಗಿದೆ. ಅಣ್ಣನು ಹೊರಹಾಕಿದ್ದರಿಂದ ನಾನು ನಿನ್ನಲ್ಲೇ ಶರಣು ಬಂದಿರುವೆನು. ದೇವಾ! ನಾನು ಆ ಅಜ್ಞಾನಿಗೆ ಹಿತದ ಮಾತನ್ನು ಹೇಳಿದ್ದೆ. ॥1-3॥
(ಶ್ಲೋಕ-4)
ಮೂಲಮ್
ಸೀತಾಂ ರಾಮಾಯ ವೈದೇಹೀಂ ಪ್ರೇಷಯೇತಿ ಪುನಃ ಪುನಃ ।
ಉಕ್ತೋಽಪಿ ನ ಶೃಣೋತ್ಯೇವ ಕಾಲಪಾಶವಶಂ ಗತಃ ॥
ಅನುವಾದ
‘ನೀನು ವೈದೇಹಿಯಾದ ಸೀತೆಯನ್ನು ರಾಮನಿಗೆ ಅರ್ಪಿಸು’ ಎಂದು ಪುನಃ ಪುನಃ ಹೇಳಿದರೂ, ಕಾಲಪಾಶಕ್ಕೆ ತುತ್ತಾಗಿರುವ ಕಾರಣ ಅವನು ಏನನ್ನೂ ಕೇಳಲೊಲ್ಲನು. ॥4॥
(ಶ್ಲೋಕ-5)
ಮೂಲಮ್
ಹಂತುಂ ಮಾಂ ಖಡ್ಗಮಾದಾಯ ಪ್ರಾದ್ರವದ್ರಾಕ್ಷಸಾಧಮಃ ।
ತತೋಽಚಿರೇಣ ಸಚಿವೈಶ್ಚತುರ್ಭಿಃ ಸಹಿತೋ ಭಯಾತ್ ॥
(ಶ್ಲೋಕ-6)
ಮೂಲಮ್
ತ್ವಾಮೇವ ಭವಮೋಕ್ಷಾಯ ಮುಮುಕ್ಷುಃ ಶರಣಂ ಗತಃ ।
ವಿಭೀಷಣವಚಃ ಶ್ರುತ್ವಾ ಸುಗ್ರೀವೋ ವಾಕ್ಯಮಬ್ರವೀತ್ ॥
ಅನುವಾದ
ಆ ರಾಕ್ಷಸಾಧಮನು ಖಡ್ಗವನ್ನೆತ್ತಿಕೊಂಡು ನನ್ನನ್ನು ಕೊಲ್ಲಲು ಓಡಿ ಬಂದನು. ಆಗ ನಾನು ಕೂಡಲೇ ಭಯದಿಂದ ನಾಲ್ಕು ಮಂದಿ ಮಂತ್ರಿಗಳೊಂದಿಗೆ, ಸಂಸಾರ-ಪಾಶದಿಂದ ಬಿಡುಗಡೆ ಹೊಂದಲು, ಮುಮುಕ್ಷುವಾಗಿ ನಿನ್ನನ್ನೇ ಶರಣು ಹೊಕ್ಕಿರುವೆನು.’’ ವಿಭೀಷಣನ ಮಾತನ್ನು ಕೇಳಿ ಸುಗ್ರೀವನು ಹೇಳಿದನು ॥5-6॥
(ಶ್ಲೋಕ-7)
ಮೂಲಮ್
ವಿಶ್ವಾಸಾರ್ಹೋ ನ ತೇ ರಾಮ ಮಾಯಾವೀ ರಾಕ್ಷಸಾಧಮಃ ।
ಸೀತಾಹರ್ತುರ್ವಿಶೇಷೇಣ ರಾವಣಸ್ಯಾನುಜೋ ಬಲೀ ॥
ಅನುವಾದ
‘‘ಹೇ ರಾಮಾ! ಈ ಮಾಯಾವಿಯಾದ ರಾಕ್ಷಸಾಧಮನು ವಿಶ್ವಾಸವಿರಿಸಲು ಅರ್ಹನಲ್ಲ. ಬೇರೆ ಯಾರಾಗಿದ್ದರೆ ವಿಶೇಷವಾಗಿ ಚಿಂತಿಸುವ ಮಾತಾಗಿರಲಿಲ್ಲ. ಆದರೆ ಇವನಾದರೋ ಸೀತಾಪಹಾರಿಯಾದ ರಾವಣನ ಬಲಿಷ್ಠ ಸಹೋದರನಾಗಿದ್ದಾನೆ. ॥7॥
(ಶ್ಲೋಕ-8)
ಮೂಲಮ್
ಮಂತ್ರಿಭಿಃ ಸಾಯುಧೈರಸ್ಮಾನ್ ವಿವರೇ ನಿಹನಿಷ್ಯತಿ ।
ತದಾಜ್ಞಾಪಯ ಮೇ ದೇವ ವಾನರೈರ್ಹನ್ಯತಾಮಯಮ್ ॥
ಅನುವಾದ
ಇವನು ಆಯುಧ ಸಹಿತರಾದ ಮಂತ್ರಿಗಳೊಡಗೂಡಿ, ಸಮಯವನ್ನು ಸಾಧಿಸಿ ನಮ್ಮನ್ನು ಕೊಲ್ಲಲಿದ್ದಾನೆ. ಆದ್ದರಿಂದ ಸ್ವಾಮಿ! ನನಗೆ ಅಪ್ಪಣೆಯನ್ನು ಕೊಡು. ಕಪಿಗಳಿಂದ ಇವನನ್ನು ಕೊಲ್ಲಿಸಿ ಬಿಡುತ್ತೇನೆ. ॥8॥
(ಶ್ಲೋಕ-9)
ಮೂಲಮ್
ಮಮೈವಂ ಭಾತಿ ತೇ ರಾಮ ಬುದ್ಧ್ಯಾ ಕಿಂ ನಿಶ್ಚಿತಂ ವದ ।
ಶ್ರುತ್ವಾ ಸುಗ್ರೀವವಚನಂ ರಾಮಃ ಸಸ್ಮಿತಮಬ್ರವೀತ್ ॥
ಅನುವಾದ
ನನಗೇನೋ ಹೀಗೆತೋರುತ್ತಿದೆ. ರಾಮಾ! ನೀನು ಏನು ನಿಶ್ಚಯಮಾಡುವೆಯೋ ಅದನ್ನು ಹೇಳು.’’ ಸುಗ್ರೀವನ ಮಾತನ್ನು ಕೇಳಿದ ಶ್ರೀರಾಮಚಂದ್ರನು ಮುಗುಳ್ನಕ್ಕು ಹೇಳಿದನು. ॥9॥
(ಶ್ಲೋಕ-10)
ಮೂಲಮ್
ಯದೀಚ್ಛಾಮಿ ಕಪಿಶ್ರೇಷ್ಠ ಲೋಕಾನ್ಸರ್ವಾನ್ಸಹೇಶ್ವರಾನ್ ।
ನಿಮಿಷಾರ್ಧೇನ ಸಂಹನ್ಯಾಂ ಸೃಜಾಮಿ ನಿಮಿಷಾರ್ಧತಃ ॥
(ಶ್ಲೋಕ-11)
ಮೂಲಮ್
ಅತೋ ಮಯಾಭಯಂ ದತ್ತಂ ಶೀಘ್ರಮಾನಯ ರಾಕ್ಷಸಮ್ ॥
ಅನುವಾದ
‘‘ಎಲೈ ಕಪಿಶ್ರೇಷ್ಠನೆ! ನಾನು ಬಯಸಿದರೆ ಅರ್ಧ ನಿಮಿಷದಲ್ಲಿ ಲೋಕ ಪಾಲ ಸಹಿತ ಎಲ್ಲ ಲೋಕಗಳನ್ನು ನಾಶಮಾಡಿ ಬಿಡಬಲ್ಲೆ. ಹಾಗೆಯೇ ಅರ್ಧ ನಿಮಿಷದಲ್ಲಿ ಸೃಷ್ಟಿಸಲೂ ಬಲ್ಲೆನು. ಆದ್ದರಿಂದ ನೀನು ಏನನ್ನೂ ಚಿಂತಿಸಬೇಡ. ನಾನು ಈ ರಾಕ್ಷಸನಿಗೆ ಅಭಯದಾನ ನೀಡುವೆನು. ನೀನು ಬೇಗನೇ ಅವನನ್ನು ಕರೆದುಕೊಂಡು ಬಾ. ॥10-11॥
(ಶ್ಲೋಕ-12)
ಮೂಲಮ್
ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ॥
ಅನುವಾದ
‘ನಾನು ನಿನ್ನವನು’ ಎಂದು ಒಮ್ಮೆ ಮಾತ್ರ ಹೇಳಿ ಯಾರೇ ಶರಣಾಗತನಾಗಿ ಬೇಡಿದರೂ ಸರಿ, ಅವನನ್ನು ನಾನು ಎಲ್ಲ ಪ್ರಾಣಿಗಳಿಂದ ನಿರ್ಭಯನನ್ನಾಗಿಸುವೆನು. ಇದು ನನ್ನ ವ್ರತವಾಗಿದೆ’’ ಎಂದು ಹೇಳಿದನು. ॥12॥
(ಶ್ಲೋಕ-13)
ಮೂಲಮ್
ರಾಮಸ್ಯ ವಚನಂ ಶ್ರುತ್ವಾ ಸುಗ್ರೀವೋ ಹೃಷ್ಟಮಾನಸಃ ।
ವಿಭೀಷಣಮಥಾನಾಯ್ಯ ದರ್ಶಯಾಮಾಸ ರಾಘವಮ್ ॥
ಅನುವಾದ
ರಾಮನ ಮಾತನ್ನು ಕೇಳಿ ಸುಗ್ರೀವನು ಸಂತುಷ್ಟನಾಗಿ ವಿಭೀಷಣವನ್ನು ಕರೆತಂದು ಶ್ರೀರಾಮನ ದರ್ಶನವನ್ನು ಮಾಡಿಸಿದನು. ॥13॥
(ಶ್ಲೋಕ-14)
ಮೂಲಮ್
ವಿಭೀಷಣಸ್ತು ಸಾಷ್ಟಾಂಗಂ ಪ್ರಣಿಪತ್ಯ ರಘೂತ್ತಮಮ್ ।
ಹರ್ಷಗದ್ಗದಯಾ ವಾಚಾ ಭಕ್ತ್ಯಾ ಚ ಪರಯಾನ್ವಿತಃ ॥
(ಶ್ಲೋಕ-15)
ಮೂಲಮ್
ರಾಮಂ ಶ್ಯಾಮಂ ವಿಶಾಲಾಕ್ಷಂ ಪ್ರಸನ್ನಮುಖಪಂಕಜಮ್ ।
ಧನುರ್ಬಾಣಧರಂ ಶಾಂತಂ ಲಕ್ಷ್ಮಣೇನ ಸಮನ್ವಿತಮ್ ॥
(ಶ್ಲೋಕ-16)
ಮೂಲಮ್
ಕೃತಾಂಜಲಿಪುಟೋ ಭೂತ್ವಾ ಸ್ತೋತುಂ ಸಮುಪಚಕ್ರಮೇ ॥
ಅನುವಾದ
ವಿಭೀಷಣನು ರಘುನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೆಚ್ಚಿನ ಹರ್ಷದಿಂದ ಗದ್ಗದಿತನಾಗಿ ಪರಮ ಭಕ್ತಿಪೂರ್ವಕ ಕೈ ಜೋಡಿಸಿಕೊಂಡು, ಶಾಂತಮೂರ್ತಿ, ಪ್ರಸನ್ನವದನಾರವಿಂದ, ವಿಶಾಲಲೋಚನ ಶ್ಯಾಮಸುಂದರ ಧನುರ್ಬಾಣಧಾರಿ ಭಗವಾನ್ ಶ್ರೀರಾಮನನ್ನು ಲಕ್ಷ್ಮಣ ಸಹಿತ ಸ್ತುತಿಸಲು ತೊಡಗಿದನು. ॥14-16॥
(ಶ್ಲೋಕ-17)
ಮೂಲಮ್ (ವಾಚನಮ್)
ವಿಭೀಷಣ ಉವಾಚ
ಮೂಲಮ್
ನಮಸ್ತೇ ರಾಮ ರಾಜೇಂದ್ರ ನಮಃ ಸೀತಾಮನೋರಮ ।
ನಮಸ್ತೇ ಚಂಡಕೋದಂಡ ನಮಸ್ತೇ ಭಕ್ತವತ್ಸಲ ॥
ಅನುವಾದ
ವಿಭೀಷಣನಿಂತೆಂದನು — ‘‘ಹೇ ರಾಜರಾಜೇಶ್ವರ ರಾಮಾ! ನಿನಗೆ ನಮಸ್ಕಾರವು. ಹೇ ಸೀತಾಮನೋರಮನೆ ನಿನಗೆ ವಂದನೆಯು. ಪ್ರಚಂಡಧನುರ್ಧರ ಭಕ್ತವತ್ಸಲನೆ ನಿನಗೆ ಬಾರಿ-ಬಾರಿಗೂ ನಮಸ್ಕಾರಗಳು. ॥17॥
(ಶ್ಲೋಕ-18)
ಮೂಲಮ್
ನಮೋನಂತಾಯ ಶಾಂತಾಯ ರಾಮಾಯಾಮಿತತೇಜಸೇ ।
ಸುಗ್ರೀವಮಿತ್ರಾಯ ಚ ತೇ ರಘೂಣಾಂ ಪತಯೇ ನಮಃ ॥
ಅನುವಾದ
ಅನಂತನೂ, ಶಾಂತನೂ, ಅಪಾರ ತೇಜಸ್ಸುಳ್ಳವನೂ, ಸುಗ್ರೀವನ ಸ್ನೇಹಿತನೂ, ರಘುಕುಲನಾಯಕನೂ ಆದ ಭಗವಾನ್ ಶ್ರೀರಾಮನೇ ನಿನಗೆ ನಮಸ್ಕಾರವು. ॥18॥
(ಶ್ಲೋಕ-19)
ಮೂಲಮ್
ಜಗದುತ್ಪತ್ತಿನಾಶಾನಾಂ ಕಾರಣಾಯ ಮಹಾತ್ಮನೇ ।
ತ್ರೈಲೋಕ್ಯಗುರವೇಽನಾದಿಗೃಹಸ್ಥಾಯ ನಮೋ ನಮಃ ॥
ಅನುವಾದ
ಪ್ರಪಂಚದ ಉತ್ಪತ್ತಿ ವಿನಾಶಗಳಿಗೆ ಕಾರಣನೂ, ಮಹಾತ್ಮನೂ, ಮೂರು ಲೋಕಗಳಿಗೆ ಗುರುವೂ ಆದ ಅನಾದಿಗೃಹಸ್ಥನಾದ* ನಿನಗೆ ನಮಸ್ಕಾರಗಳು. ॥19॥
ಟಿಪ್ಪನೀ
- ಪ್ರಕೃತಿರೂಪಿ ಪತ್ನಿಯೊಡನೆ ಭಗವಂತನಿಗೆ ಅನಾದಿ ಸಂಬಂಧವಿದೆ, ಅದ್ದರಿಂದಲೇ ಅವನು ಅನಾದಿ ಗೃಹಸ್ಥನು.
(ಶ್ಲೋಕ-20)
ಮೂಲಮ್
ತ್ವಮಾದಿರ್ಜಗತಾಂ ರಾಮ ತ್ವಮೇವ ಸ್ಥಿತಿಕಾರಣಮ್ ।
ತ್ವಮಂತೇ ನಿಧನಸ್ಥಾನಂ ಸ್ವೇಚ್ಛಾಚಾರಸ್ತ್ವಮೇವ ಹಿ ॥
ಅನುವಾದ
ಹೇ ರಾಮಾ! ನೀನೇ ಜಗತ್ತಿಗೆ ಆದಿಯಾಗಿರುವೆ; ನೀನೇ ಸ್ಥಿತಿಕಾರಣನೂ, ಕೊನೆಯಲ್ಲಿ ಲಯಸ್ಥಾನವೂ ನೀನು ಆಗಿರುವೆ. ನೀನೇ ಇಷ್ಟಾನುಸಾರವಾಗಿ ಸ್ವತಂತ್ರವಾಗಿ ನಡೆಯುವವನು. ॥20॥
(ಶ್ಲೋಕ-21)
ಮೂಲಮ್
ಚರಾಚರಾಣಾಂ ಭೂತಾನಾಂ ಬಹಿರಂತಶ್ಚ ರಾಘವ ।
ವ್ಯಾಪ್ಯವ್ಯಾಪಕರೂಪೇಣ ಭವಾನ್ ಭಾತಿ ಜಗನ್ಮಯಃ ॥
ಅನುವಾದ
ಹೇ ರಾಘವಾ! ಸ್ಥಾವರ ಜಂಗಮಾತ್ಮಕವಾದ ಎಲ್ಲ ಪ್ರಾಣಿಗಳ ಒಳಗೂ - ಹೊರಗೂ ವ್ಯಾಪ್ಯವ್ಯಾಪಕರೂಪದಿಂದ ನೀನೇ ವಿಶ್ವರೂಪ ನಾಗಿ ಕಂಡು ಬರುತ್ತಿಯೆ. ॥21॥
(ಶ್ಲೋಕ-22)
ಮೂಲಮ್
ತ್ವನ್ಮಾಯಯಾ ಹೃತಜ್ಞಾನಾ ನಷ್ಟಾತ್ಮಾನೋ ವಿಚೇತಸಃ ।
ಗತಾಗತಂ ಪ್ರಪದ್ಯಂತೇ ಪಾಪಪುಣ್ಯವಶಾತ್ಸದಾ ॥
ಅನುವಾದ
ನಿನ್ನ ಮಾಯೆಯಿಂದ ಸದಸದ್ ವಿವೇಕವು ಕಳೆದುಕೊಂಡ ನಷ್ಟಾತ್ಮರಾದ, ಮಂದಮತಿಗಳು ತಮ್ಮ ಪಾಪ - ಪುಣ್ಯಗಳಿಗೆ ವಶರಾಗಿ ಸಂಸಾರಕ್ಕೆ ಬಂದು ಹೋಗುತ್ತಿರುತ್ತಾರೆ (ಹುಟ್ಟುತ್ತಾ- ಸಾಯುತ್ತಾ ಇರುತ್ತಾರೆ). ॥22॥
(ಶ್ಲೋಕ-23)
ಮೂಲಮ್
ತಾವತ್ಸತ್ಯಂ ಜಗದ್ಭಾತಿ ಶುಕ್ತಿಕಾರಜತಂ ಯಥಾ ।
ಯಾವನ್ನ ಜ್ಞಾಯತೇ ಜ್ಞಾನಂ ಚೇತಸಾನನ್ಯಗಾಮಿನಾ ॥
ಅನುವಾದ
ಮನುಷ್ಯನು ಏಕಾಗ್ರ ಚಿತ್ತದಿಂದ ನಿನ್ನ ಜ್ಞಾನ ಸ್ವರೂಪವನ್ನು ತಿಳಿಯುವ ತನಕ ಅವನಿಗೆ ಕಪ್ಪೆಚಿಪ್ಪಿನಲ್ಲಿ ಬೆಳ್ಳಿಯನ್ನು ಕಂಡಂತೆ ಪ್ರಪಂಚವು ಸತ್ಯವಾಗಿ ಕಂಡುಬರುತ್ತದೆ. ॥23॥
(ಶ್ಲೋಕ-24)
ಮೂಲಮ್
ತ್ವದಜ್ಞಾನಾತ್ಸದಾ ಯುಕ್ತಾಃ ಪುತ್ರದಾರಗೃಹಾದಿಷು ।
ರಮಂತೇ ವಿಷಯಾನ್ಸರ್ವಾನಂತೇ ದುಃಖಪ್ರದಾನ್ವಿಭೋ ॥
ಅನುವಾದ
ಹೇ ವಿಭೊ! ನಿನ್ನನ್ನು ತಿಳಿಯದೆ ಇರುವ ಕಾರಣ ಜನರು ಯಾವಾಗಲು ಪತ್ನಿ-ಪುತ್ರ-ಗೃಹ ಮುಂತಾದವು ಗಳಲ್ಲಿ ಆಸಕ್ತರಾಗಿ ಕೊನೆಗೆ ದುಃಖವನ್ನೇ ಕೊಡುವಂತಹ ವಿಷಯಗಳಲ್ಲಿಯೇ ಮುಳುಗಿರುತ್ತಾರೆ. ॥24॥
(ಶ್ಲೋಕ-25)
ಮೂಲಮ್
ತ್ವಮಿಂದ್ರೋಽಗ್ನಿರ್ಯಮೋ ರಕ್ಷೋ ವರುಣಶ್ಚ ತಥಾನಿಲಃ ।
ಕುಬೇರಶ್ಚ ತಥಾ ರುದ್ರಸ್ತ್ವಮೇವ ಪುರುಷೋತ್ತಮಃ ॥
ಅನುವಾದ
ಹೇ ವಿಭೋ! ನೀನೇ ಇಂದ್ರನು, ನೀನೇ ಅಗ್ನಿಯು. ಯಮನು, ನಿರ್ಋತಿಯು, ವರುಣನು, ವಾಯುವು, ಕುಬೇರನು, ರುದ್ರ(ಈಶಾನ)ನೂ ನೀನೇ ಪುರುಷೋತ್ತಮನೂ ಆಗಿರುವೆ. ॥25॥
(ಶ್ಲೋಕ-26)
ಮೂಲಮ್
ತ್ವಮಣೋರಪ್ಯಣೀಯಾಂಶ್ಚ ಸ್ಥೂಲಾತ್ ಸ್ಥೂಲತರಃ ಪ್ರಭೋ ।
ತ್ವಂ ಪಿತಾ ಸರ್ವಲೋಕಾನಾಂ ಮಾತಾ ಧಾತಾ ತ್ವಮೇವ ಹಿ ॥
ಅನುವಾದ
ಹೇ ಪ್ರಭೊ! ನೀನೇ ಅಣುವಿಗೂ ಅಣುವು, ಮಹತ್ತಿಗೆ ಮಹತ್ತೂ ಆಗಿರುವೆ. ನೀನೇ ಎಲ್ಲ ಲೋಕಗಳಿಗೂ ಮಾತಾ-ಪಿತಾ ಹಾಗೂ ಧಾತಾ (ಧಾರಣೆ-ಪೋಷಣೆ ಮಾಡುವವನು) ಆಗಿರುವೆ. ॥26॥
(ಶ್ಲೋಕ-27)
ಮೂಲಮ್
ಆದಿಮಧ್ಯಾಂತರಹಿತಃ ಪರಿಪೂರ್ಣೋಽಚ್ಯುತೋಽವ್ಯಯಃ ।
ತ್ವಂ ಪಾಣಿಪಾದರಹಿತಶ್ಚಕ್ಷುಃಶ್ರೋತ್ರವಿವರ್ಜಿತಃ ॥
(ಶ್ಲೋಕ-28)
ಮೂಲಮ್
ಶ್ರೋತಾ ದ್ರಷ್ಟಾ ಗ್ರಹೀತಾ ಚ ಜವನಸ್ತ್ವಂ ಖರಾಂತಕ ।
ಕೋಶೇಭ್ಯೋ ವ್ಯತಿರಿಕ್ತಸ್ತ್ವಂ ನಿರ್ಗುಣೋ ನಿರುಪಾಶ್ರಯಃ ॥
ಅನುವಾದ
ನೀನು ಆದಿ-ಮಧ್ಯ-ಅಂತ್ಯಗಳಿಲ್ಲದವನೂ, ಸರ್ವತ್ರ ಪರಿಪೂರ್ಣನೂ, ಅಚ್ಯುತನೂ, ಅವಿನಾಶಿಯೂ ಆಗಿರುವೆ. ನೀನು ಕೈಕಾಲುಗಳಿಲ್ಲದವನು, ಕಣ್ಣು-ಕಿವಿಗಳಿಲ್ಲದವನು. ಆದರೂ ಹೇ ಖರಾಂತಕನೆ! ನೀನೇ ಎಲ್ಲವನ್ನು ನೋಡುವವನೂ, ಎಲ್ಲವನ್ನು ಕೇಳುವವನೂ, ಎಲ್ಲವನ್ನು ತೆಗೆದುಕೊಳ್ಳುವವನೂ, ವೇಗವಾಗಿ ನಡೆಯುವವನೂ ಆಗಿರುವೆ. ಹೇ ಪ್ರಭೊ! ನೀನೇ ಅನ್ನಮಯ ಮುಂತಾದ ಐದು ಕೋಶಗಳಿಗಿಂತ ವಿಲಕ್ಷಣನೂ, ನಿರ್ಗುಣನೂ, ನಿರಾಶ್ರಯನೂ ಆಗಿರುವೆ. ॥27-28॥
(ಶ್ಲೋಕ-29)
ಮೂಲಮ್
ನಿರ್ವಿಕಲ್ಪೋ ನಿರ್ವಿಕಾರೋ ನಿರಾಕಾರೋ ನಿರೀಶ್ವರಃ
ಷಡ್ ಭಾವರಹಿತೋಽನಾದಿಃ ಪುರುಷಃ ಪ್ರಕೃತೇಃ ಪರಃ ॥
ಅನುವಾದ
ನೀನು ನಿರ್ವಿಕಲ್ಪನೂ, ನಿರ್ವಿಕಾರನೂ, ನಿರಾಕಾರನೂ ಆಗಿರುವೆ, ನಿನಗೆ ಯಾರೂ ಒಡೆಯರಿಲ್ಲ. ನೀನು ಉತ್ಪತ್ತಿ, ವೃದ್ಧಿ, ಪರಿಣಾಮ, ಕ್ಷಯ, ಜೀರ್ಣ, ಮತ್ತು ನಾಶ ಎಂಬ ಆರು ಭಾವ ವಿಕಾರಗಳಿಲ್ಲದವನೂ, ಪ್ರಕೃತಿಯನ್ನು ವಿಾರಿದ ವನೂ, ಅನಾದಿ ಪುರುಷನಾಗಿರುವೆ. ॥29॥
(ಶ್ಲೋಕ-30)
ಮೂಲಮ್
ಮಾಯಯಾ ಗೃಹ್ಯಮಾಣಸ್ತ್ವಂ ಮನುಷ್ಯ ಇವ ಭಾವ್ಯಸೇ ।
ಜ್ಞಾತ್ವಾ ತ್ವಾಂ ನಿರ್ಗುಣಮಜಂ ವೈಷ್ಣವಾ ಮೋಕ್ಷಗಾಮಿನಃ ॥
ಅನುವಾದ
ಮಾಯೆಯ ಕಾರಣವೇ ನೀನು ಸಾಮಾನ್ಯ ಮನುಷ್ಯರಂತೆ ಕಂಡು ಬರುತ್ತಿರುವೆ. ವೈಷ್ಣವರು ನಿನ್ನನ್ನು ಗುಣರಹಿತನೆಂದೂ, ಜನ್ಮ ರಹಿತನೆಂದೂ ತಿಳಿದು ಮುಕ್ತಿಯನ್ನು ಹೊಂದುವರು.॥30॥
(ಶ್ಲೋಕ-31)
ಮೂಲಮ್
ಅಹಂ ತ್ವತ್ಪಾದಸದ್ಭಕ್ತಿ ನಿಃಶ್ರೇಣೀಂ ಪ್ರಾಪ್ಯ ರಾಘವ ।
ಇಚ್ಛಾಮಿ ಜ್ಞಾನಯೋಗಾಖ್ಯಂ ಸೌಧಮಾರೋಢುಮೀಶ್ವರ ॥
ಅನುವಾದ
ಹೇ ರಾಘವಾ! ಒಡೆಯಾ! ನಾನು ನಿನ್ನ ಪಾದಕಮಲದ ಭಕ್ತಿಯೆಂಬ ನಿಚ್ಚಣಿಕೆಯನ್ನು ಪಡೆದು ಜ್ಞಾನಯೋಗವೆಂಬ ರಾಜಭವನನ್ನು ಏರಲು ಬಯಸುತ್ತಿರುವೆ. ॥31॥
(ಶ್ಲೋಕ-32)
ಮೂಲಮ್
ನಮಃ ಸೀತಾಪತೇ ರಾಮ ನಮಃ ಕಾರುಣಿಕೋತ್ತಮ ।
ರಾವಣಾರೇ ನಮಸ್ತುಭ್ಯಂ ತ್ರಾಹಿ ಮಾಂ ಭವಸಾಗರಾತ್ ॥
ಅನುವಾದ
ಕಾರುಣ್ಯ ಪೂರ್ಣವಾದ ಸೀತಾಪತಿ ಶ್ರೀರಾಮಾ ನಿನಗೆ ನಮಸ್ಕಾರಗಳು. ರಾವಣ ವೈರಿಯೇ ನಿನಗೆ ಬಾರಿ ಬಾರಿಗೂ ನಮಸ್ಕಾರಗಳು. ಈ ಸಂಸಾರ ಸಾಗರದಿಂದ ನನ್ನನ್ನು ಉದ್ಧರಿಸು.’’ ॥32॥
(ಶ್ಲೋಕ-33)
ಮೂಲಮ್
ತತಃ ಪ್ರಸನ್ನಃ ಪ್ರೋವಾಚ ಶ್ರೀರಾಮೋ ಭಕ್ತವತ್ಸಲಃ ।
ವರಂ ವೃಣೀಷ್ಟ ಭದ್ರಂ ತೇ ವಾಂಛಿತಂ ವರದೋಽಸ್ಮ್ಯಹಮ್ ॥
ಅನುವಾದ
ಆಗ ಭಕ್ತವತ್ಸಲನಾದ ಭಗವಾನ್ ಶ್ರೀರಾಮನು ಪ್ರಸನ್ನನಾಗಿ ಎಲೈ ವಿಭೀಷಣನೆ! ನಿನಗೆ ಮಂಗಳವಾಗಲಿ. ನಾನು ನಿನಗೆ ವರವನ್ನು ಕೊಡಲು ಬಯಸುತ್ತಿರುವೆನು. ನಿನಗೆ ಇಷ್ಟಾರ್ಥ ವಿರುವುದನ್ನು ಕೇಳಿಕೋ. ॥33॥
(ಶ್ಲೋಕ-34)
ಮೂಲಮ್ (ವಾಚನಮ್)
ವಿಭೀಷಣ ಉವಾಚ
ಮೂಲಮ್
ಧನ್ಯೋಽಸ್ಮಿ ಕೃತಕೃತ್ಯೋಽಸ್ಮಿ ಕೃತಕಾರ್ಯೋಽಸ್ಮಿ ರಾಘವ ।
ತ್ವತ್ಪಾದದರ್ಶನಾದೇವ ವಿಮುಕ್ತೋಽಸ್ಮಿ ನ ಸಂಶಯಃ ॥
ಅನುವಾದ
ವಿಭೀಷಣನು ಇಂತೆಂದನು — ‘‘ಹೇ ರಾಘವನೆ! ನಿನ್ನ ಪಾದಕಮಲಗಳ ದರ್ಶನದಿಂದ ನಾನು ಧನ್ಯನಾದೆನು, ಕೃತಕೃತ್ಯನಾದೆನು. ಸಂಸಾರ ಸಾಗರದಿಂದ ಮುಕ್ತನಾಗಿರುವೆನು. ಇದರಲ್ಲಿ ಸಂಶಯವೇ ಇಲ್ಲ. ॥34॥
(ಶ್ಲೋಕ-35)
ಮೂಲಮ್
ನಾಸ್ತಿ ಮತ್ಸದೃಶೋ ಧನ್ಯೋ ನಾಸ್ತಿ ಮತ್ಸದೃಶಃ ಶುಚಿಃ ।
ನಾಸ್ತಿ ಮತ್ಸದೃಶೋ ಲೋಕೇ ರಾಮ ತ್ವನ್ಮೂರ್ತಿದರ್ಶನಾತ್ ॥
ಅನುವಾದ
ಹೇ ರಾಮಾ! ನಿನ್ನ ಮನೋಹರ ಮೂರ್ತಿಯ ದರ್ಶನದಿಂದ ಇಂದು ನನಗೆ ಸಮಾನರಾಗಿ ಧನ್ಯರೂ, ಪವಿತ್ರರೂ ಯಾರೂ ಇಲ್ಲ. ಪ್ರಪಂಚದಲ್ಲಿ ನನ್ನಂಥಹ ಭಾಗ್ಯಶಾಲಿಗಳು ಯಾರೂ ಇಲ್ಲ. ॥35॥
(ಶ್ಲೋಕ-36)
ಮೂಲಮ್
ಕರ್ಮಬಂಧವಿನಾಶಾಯ ತ್ವಜ್ಜ್ಞಾನಂ ಭಕ್ತಿಲಕ್ಷಣಮ್ ।
ತ್ವದ್ಧ್ಯಾನಂ ಪರಮಾರ್ಥಂ ಚ ದೇಹಿ ಮೇ ರಘುನಂದನ ॥
ಅನುವಾದ
ಹೇ ರಘುನಂದನ! ಕರ್ಮಬಂಧನವನ್ನು ಕಳೆದುಕೊಳ್ಳುವುದಕ್ಕಾಗಿ ಭಕ್ತಿರೂಪವಾದ ನಿನ್ನ ಜ್ಞಾನವನ್ನೂ, ನಿನ್ನ ಪರಮಾರ್ಥ ಸ್ವರೂಪದ ಚಿಂತನೆಯನ್ನು ನನಗೆ ಕೊಡುವವನಾಗು. ॥36॥
(ಶ್ಲೋಕ-37)
ಮೂಲಮ್
ನ ಯಾಚೇ ರಾಮ ರಾಜೇಂದ್ರ ಸುಖಂ ವಿಷಯಸಂಭವಮ್ ।
ತ್ವತ್ಪಾದಕಮಲೇ ಸಕ್ತಾ ಭಕ್ತಿರೇವ ಸದಾಸ್ತು ಮೇ ॥
ಅನುವಾದ
ಹೇ ರಾಜೇಂದ್ರನಾದ ಶ್ರೀರಾಮಾ! ವಿಷಯಗಳಿಂದಾಗುವ ಸುಖವನ್ನು ನಾನು ಬೇಡುವುದಿಲ್ಲ. ಆದರೆ ಯಾವಾಗಲೂ ನಿನ್ನ ಪಾದಕಮಲಗಳಲ್ಲಿ ಅನುರಕ್ತಿ ರೂಪವಾದ ಭಕ್ತಿಯೊಂದೇ ನನಗೆ ಇರಲಿ.’’ ॥37॥
(ಶ್ಲೋಕ-38)
ಮೂಲಮ್
ಓಮಿತ್ಯುಕ್ತ್ವಾ ಪುನಃ ಪ್ರೀತೋ ರಾಮಃ ಪ್ರೋವಾಚ ರಾಕ್ಷಸಮ್ ।
ಶೃಣು ವಕ್ಷ್ಯಾಮಿ ತೇ ಭದ್ರಂ ರಹಸ್ಯಂ ಮಮ ನಿಶ್ಚಿತಮ್ ॥
ಅನುವಾದ
ರಘುನಾಥನು ಹಾಗೆಯೇ ಆಗಲಿ ಎಂದು ಹೇಳಿ ಪ್ರಸನ್ನನಾಗಿ ಪುನಃ ವಿಭೀಷಣನಲ್ಲಿ ಹೇಳುತ್ತಾನೆ ‘‘ಎಲೈ ಮಂಗಳನೆ! ನಾನು ನಿನಗೆ ನನ್ನ ನಿಶ್ಚಿತವಾದ ರಹಸ್ಯವನ್ನು ಹೇಳುವೆನು ಕೇಳು ॥38॥
(ಶ್ಲೋಕ-39)
ಮೂಲಮ್
ಮದ್ಭಕ್ತಾನಾಂ ಪ್ರಶಾಂತಾನಾಂ ಯೋಗಿನಾಂ ವೀತರಾಗಿಣಾಮ್ ।
ಹೃದಯೇ ಸೀತಯಾ ನಿತ್ಯಂ ವಸಾಮ್ಯತ್ರ ನ ಸಂಶಯಃ ॥
ಅನುವಾದ
ಆಸೆಗಳಿಲ್ಲದವರಾಗಿ, ಪ್ರಶಾಂತ ಚಿತ್ತರಾದ ಯೋಗಿಗಳೂ, ನನ್ನ ಭಕ್ತರೂ ಆಗಿರುವವರ ಹೃದಯದಲ್ಲಿ ನಾನು ಸೀತಾಸಹಿತನಾಗಿ ಯಾವಾಗಲೂ ವಾಸಮಾಡುತ್ತೇನೆ; ಇದರಲ್ಲಿ ಸಂಶಯವೇ ಇಲ್ಲ. ॥39॥
(ಶ್ಲೋಕ-40)
ಮೂಲಮ್
ತಸ್ಮಾತ್ತ್ವಂ ಸರ್ವದಾ ಶಾಂತಃ ಸರ್ವಕಲ್ಮಷವರ್ಜಿತಃ ।
ಮಾಂ ಧ್ಯಾತ್ವಾ ಮೋಕ್ಷ್ಯಸೇ ನಿತ್ಯಂ ಘೋರಸಂಸಾರಸಾಗರಾತ್ ॥
ಅನುವಾದ
ಆದ್ದರಿಂದ ನೀನು ಸದಾಕಾಲ ಶಾಂತನಾಗಿ, ಪಾಪರಹಿತನಾಗಿ ಇದ್ದುಕೊಂಡು, ನನ್ನನ್ನು ಧ್ಯಾನ ಮಾಡುವೆಯಾದರೆ ಭಯಂಕರವಾದ ಈ ಸಂಸಾರ ಸಾಗರವನ್ನು ದಾಟಿಬಿಡುವೆ. ॥40॥
(ಶ್ಲೋಕ-41)
ಮೂಲಮ್
ಸ್ತೋತ್ರಮೇತತ್ಪಠೇದ್ಯಸ್ತು ಲಿಖೇದ್ಯಃ ಶೃಣುಯಾದಪಿ ।
ಮತ್ಪ್ರೀತಯೇ ಮಮಾಭೀಷ್ಟಂ ಸಾರೂಪ್ಯಂ ಸಮವಾಪ್ನುಯಾತ್ ॥
ಅನುವಾದ
ನೀನು ಮಾಡಿದ ಈ ಸ್ತೋತ್ರವನ್ನು ನನ್ನನ್ನು ಒಲಿಸಿಕೊಳ್ಳಲು ಯಾರು ಬರೆಯುವನೋ, ಕೇಳುವನೋ, ಅವನು ನನ್ನ ಪ್ರೀತಿಯನ್ನು ಪಡೆದುಕೊಂಡು, ನನಗೆ ಇಷ್ಟವಾದ ಸಾರೂಪ್ಯಮುಕ್ತಿಯನ್ನು ಹೊಂದುವನು.’’ ॥41॥
(ಶ್ಲೋಕ-42)
ಮೂಲಮ್
ಇತ್ಯುಕ್ತ್ವಾ ಲಕ್ಷ್ಮಣಂ ಪ್ರಾಹ ಶ್ರೀರಾಮೋ ಭಕ್ತಭಕ್ತಿಮಾನ್ ।
ಪಶ್ಯತ್ವಿದಾನೀಮೇವೈಷ ಮಮ ಸಂದರ್ಶನೇ ಫಲಮ್ ॥
(ಶ್ಲೋಕ-43)
ಮೂಲಮ್
ಲಂಕಾರಾಜ್ಯೇಽಭಿಷೇಕ್ಷ್ಯಾಮಿ ಜಲಮಾನಯ ಸಾಗರಾತ್ ।
ಯಾವಚ್ಚಂದ್ರಶ್ಚ ಸೂರ್ಯಶ್ಚ ಯಾವತ್ತಿಷ್ಠತಿ ಮೇದಿನೀ ॥
(ಶ್ಲೋಕ-44)
ಮೂಲಮ್
ಯಾವನ್ಮಮ ಕಥಾ ಲೋಕೇ ತಾವದ್ರಾಜ್ಯಂ ಕರೋತ್ವಸೌ ।
ಇತ್ಯುಕ್ತ್ವಾ ಲಕ್ಷ್ಮಣೇನಾಂಬು ಹ್ಯಾನಾಯ್ಯ ಕಲಶೇನ ತಮ್ ॥
(ಶ್ಲೋಕ-45)
ಮೂಲಮ್
ಲಂಕಾರಾಜ್ಯಾಧಿಪತ್ಯಾರ್ಥಮಭಿಷೇಕಂ ರಮಾಪತಿಃ ।
ಕಾರಯಾಮಾಸ ಸಚಿವೈರ್ಲಕ್ಷ್ಮಣೇನ ವಿಶೇಷತಃ ॥
ಅನುವಾದ
ವಿಭೀಷಣನಲ್ಲಿ ಹೀಗೆ ಹೇಳಿ ಭಕ್ತವತ್ಸಲನಾದ ಶ್ರೀರಾಮನು ಲಕ್ಷ್ಮಣನಲ್ಲಿ ‘‘ತಮ್ಮಾ! ನನ್ನ ದರ್ಶನದ ಫಲವನ್ನು ಇವನು ಈಗಲೇ ನೋಡಲಿ. ಇದೋ ನಾನು ಇವನಿಗೆ ಲಂಕಾ ರಾಜ್ಯಕ್ಕೆ ಒಡೆಯನನ್ನಾಗಿ ಪಟ್ಟಾಭಿಷೇಕ ಮಾಡುವೆನು. ನೀನು ಸಮುದ್ರದ ನೀರನ್ನು ತೆಗೆದುಕೊಂಡು ಬಾ. ಸೂರ್ಯ-ಚಂದ್ರರು ಹಾಗೂ ಪೃಥ್ವಿಯು ಇರುವವರೆಗೆ, ಲೋಕದಲ್ಲಿ ನನ್ನ ಕಥೆಯನ್ನು ಕೊಂಡಾಡುವ ತನಕ ಇವನು ರಾಜ್ಯಭಾರವನ್ನು ಮಾಡುತ್ತಿರಲಿ.’’ ಹೀಗೆ ಹೇಳಿ ಶ್ರೀರಮಾ ಪತಿಯಾದ ರಾಮಚಂದ್ರನು ಲಕ್ಷ್ಮಣನಿಂದ ಕಲಶದಲ್ಲಿ ನೀರನ್ನು ತರಿಸಿ, ಮಂತ್ರಿಗಳಿಂದ ಹಾಗೂ ವಿಶೇಷವಾಗಿ ಲಕ್ಷ್ಮಣನಿಂದ ವಿಭೀಷಣನಿಗೆ ಲಂಕೆಯ ಪಟ್ಟಾಭಿಷೇಕವನ್ನು ಮಾಡಿಸಿದನು. ॥42-45॥
(ಶ್ಲೋಕ-46)
ಮೂಲಮ್
ಸಾಧು ಸಾಧ್ವಿತಿ ತೇ ಸರ್ವೇ ವಾನರಾಸ್ತುಷ್ಟುವುರ್ಬೃಶಮ್ ।
ಸುಗ್ರೀವೋಽಪಿ ಪರಿಷ್ವಜ್ಯ ವಿಭೀಷಣಮಥಾಬ್ರವೀತ್ ॥
ಅನುವಾದ
ಆಗ ಎಲ್ಲ ಕಪಿಗಳು ಸಂತೋಷಗೊಂಡು ಧನ್ಯ! ಧನ್ಯವೆಂದು ಕೊಂಡಾಡಿದರು. ಸುಗ್ರೀವನೂ ಕೂಡ ವಿಭೀಷಣನನ್ನು ಬಿಗಿದಪ್ಪಿಕೊಂಡು ಹೇಳಿದನು. ॥46॥
(ಶ್ಲೋಕ-47)
ಮೂಲಮ್
ವಿಭೀಷಣ ವಯಂ ಸರ್ವೇ ರಾಮಸ್ಯ ಪರಮಾತ್ಮನಃ ।
ಕಿಂಕರಾಸ್ತತ್ರ ಮುಖ್ಯಸ್ತ್ವಂ ಭಕ್ತ್ಯಾ ರಾಮಪರಿಗ್ರಹಾತ್ ।
ರಾವಣಸ್ಯ ವಿನಾಶೇ ತ್ವಂ ಸಾಹಾಯ್ಯಂ ಕರ್ತುಮರ್ಹಸಿ ॥
ಅನುವಾದ
‘‘ವಿಭೀಷಣಾ! ನಾವೆಲ್ಲರೂ ಪರಮಾತ್ಮನಾದ ಶ್ರೀರಾಮನ ಸೇವಕರು. ನೀನಾದರೋ ಶ್ರೀರಾಮನಲ್ಲಿ ಭಕ್ತಿಯಿಂದ ಶರಣಾದವನು. ಅದರಿಂದ ನಮ್ಮಗಳಲ್ಲಿ ಮುಖ್ಯನಾಗಿರುವೆ. ನೀನು ರಾವಣನನ್ನು ಸಂಹಾರ ಮಾಡುವ ಬಗ್ಗೆ ಸಹಾಯ ಮಾಡುವವನಾಗಬೇಕು.’’ ॥47॥
(ಶ್ಲೋಕ-48)
ಮೂಲಮ್ (ವಾಚನಮ್)
ವಿಭೀಷಣ ಉವಾಚ
ಮೂಲಮ್
ಅಹಂ ಕಿಯಾನ್ಸಹಾಯತ್ವೇ ರಾಮಸ್ಯ ಪರಮಾತ್ಮನಃ ।
ಕಿಂ ತು ದಾಸ್ಯಂ ಕರಿಷ್ಯೇಽಹಂ ಭಕ್ತ್ಯಾಶಕ್ತ್ಯಾ ಹ್ಯಮಾಯಯಾ ॥
ಅನುವಾದ
ವಿಭೀಷಣನಿಂತೆಂದನು ‘‘ಪರಮಾತ್ಮನಾದ ಶ್ರೀರಾಮಾ! ನಿನಗೆ ನಾನು ಏನು ಸಹಾಯ ಮಾಡಬಲ್ಲೆನು? ಆದರೂ ನನಗೆ ಶಕ್ತಿಯಿದ್ದಷ್ಟು ಸೇವೆಯನ್ನು ಭಕ್ತಿಯಿಂದ, ನಿರ್ವಂಚನೆಯಿಂದ ಮಾಡುವೆನು.’’ ॥48॥
(ಶ್ಲೋಕ-49)
ಮೂಲಮ್
ದಶಗ್ರೀವೇಣ ಸಂದಿಷ್ಟಃ ಶುಕೋ ನಾಮ ಮಹಾಸುರಃ ।
ಸಂಸ್ಥಿತೋ ಹ್ಯಂಬರೇ ವಾಕ್ಯಂ ಸುಗ್ರೀವಮಿದಮಬ್ರವೀತ್ ॥
(ಶ್ಲೋಕ-50)
ಮೂಲಮ್
ತ್ವಾಮಾಹ ರಾವಣೋ ರಾಜಾ ಭ್ರಾತರಂ ರಾಕ್ಷಸಾಧಿಪಃ ।
ಮಹಾಕುಲಪ್ರಸೂತಸ್ತ್ವಂ ರಾಜಾಸಿ ವನಚಾರಿಣಾಮ್ ॥
ಅನುವಾದ
ಆಗಲೇ ರಾವಣನಿಂದ ಕಳುಹಲ್ಪಟ್ಟ ಶುಕನೆಂಬ ರಾಕ್ಷಸನು ಆಕಾಶದಲ್ಲೇ ನಿಂತುಕೊಂಡು ಸುಗ್ರೀವನನ್ನು ಕುರಿತು ಹೀಗೆಂದನು — ‘‘ಕಪಿರಾಜಾ! ರಾಕ್ಷಸೇಶ್ವರನಾದ ರಾವಣನು ನಿನ್ನನ್ನು ಸಹೋದರನಂತೇ ತಿಳಿದಿರುವನು ಹಾಗೂ ನಿನಗೆ ಈ ರೀತಿಯಾಗಿ ಹೇಳಿಕಳಿಸಿರುವನು ನೀನು ಉತ್ತಮವಂಶದಲ್ಲಿ ಹುಟ್ಟಿರುವೆ. ಕಪಿಗಳಿಗೆ ರಾಜನಾಗಿರುವೆ. ॥49-50॥
(ಶ್ಲೋಕ-51)
ಮೂಲಮ್
ಮಮ ಭ್ರಾತೃಸಮಾನಸ್ತ್ವಂ ತವ ನಾಸ್ತ್ಯರ್ಥವಿಪ್ಲವಃ ।
ಅಹಂ ಯದಹರಂ ಭಾರ್ಯಾಂ ರಾಜಪುತ್ರಸ್ಯ ಕಿಂ ತವ ॥
ಅನುವಾದ
ನೀನು ನನಗೆ ಸೋದರ ಸಮಾನನಾಗಿರುವೆ. ನಿನಗೇನೂ ಈಗಲೂ ಧನಹಾನಿಯಾಗಿರುವುದಿಲ್ಲವಲ್ಲ! (ಯಾವುದೇ ಕಷ್ಟ ಬಂದಿಲ್ಲವಲ್ಲ!) ರಾಜಪುತ್ರನಾದ ರಾಮನ ಹೆಂಡತಿಯನ್ನು ನಾನು ಕದ್ದು ತಂದಿದ್ದರೆ ನಿನಗೇನಾಗಬೇಕು? ॥51॥
(ಶ್ಲೋಕ-52)
ಮೂಲಮ್
ಕಿಷ್ಕಿಂಧಾಂ ಯಾಹಿ ಹರಿಭಿರ್ಲಂಕಾ ಶಕ್ಯಾನದೈವತೈಃ ।
ಪ್ರಾಪ್ತುಂ ಕಿಂ ಮಾನವೈರಲ್ಪಸತ್ತೈರ್ವಾನರಯೂಥಪೈಃ ॥
ಅನುವಾದ
ಈಗ ನೀನು ಎಲ್ಲ ಕಪಿಗಳೊಂದಿಗೆ ಕಿಷ್ಕಿಂಧೆಗೆ ತೆರಳು. ಲಂಕೆಯನ್ನು ಜಯಿಸುವುದು ದೇವತೆಗಳಿಂದಲೂ ಆಗಲಾರದು. ಹೀಗಿರುವಾಗ ಅಲ್ಪರಾದ ಮನುಷ್ಯರಿಂದಲೂ, ಕಪಿಗಳ ಸಂದೋಹದಿಂದ ಹೇಗೆ ಸಾಧ್ಯವಾದೀತು?’’ ॥52॥
(ಶ್ಲೋಕ-53)
ಮೂಲಮ್
ತಂ ಪ್ರಾಪಯಂತಂ ವಚನಂ ತೂರ್ಣಮುತ್ ಪ್ಲುತ್ಯ ವಾನರಾಃ ।
ಪ್ರಾಪದ್ಯಂತ ತದಾ ಕ್ಷಿಪ್ರಂ ನಿಹಂತುಂ ದೃಢಮುಷ್ಟಿಭಿಃ ॥
ಅನುವಾದ
ಹೀಗೆ ರಾವಣನ ಸಂದೇಶವನ್ನು ಮುಟ್ಟಿಸುತ್ತಿರುವ ಶುಕನನ್ನು ಕಪಿಗಳು ನೆಗೆದು ಹಿಡಿದುಕೊಂಡು, ತಮ್ಮ ಬಲವಾದ ಮುಷ್ಟಿಗಳಿಂದ ಗುದ್ದತೊಡಗಿದರು. ॥53॥
(ಶ್ಲೋಕ-54)
ಮೂಲಮ್
ವಾನರೈರ್ಹನ್ಯಮಾನಸ್ತು ಶುಕೋ ರಾಮಮಥಾಬ್ರವೀತ್ ।
ನ ದೂತಾನ್ ಘ್ನಂತಿ ರಾಜೇಂದ್ರ ವಾನರಾನ್ವಾರಯ ಪ್ರಭೋ ॥
ಅನುವಾದ
ಆಗ ಕಪಿಗಳಿಂದ ಏಟು ತಿನ್ನುತ್ತಿದ್ದ ಶುಕನು ರಾಮನನ್ನು ಕುರಿತು ಹೀಗೆಂದನು ‘‘ಹೇ ರಾಜೇಂದ್ರ! ತಿಳಿದವರು ದೂತನನ್ನು ಕೊಲ್ಲುವುದಿಲ್ಲ. ಆದ್ದರಿಂದ ಹೇ ಪ್ರಭೋ! ಈ ಕಪಿಗಳನ್ನು ತಡೆಯುವವನಾಗು.’’ ॥54॥
(ಶ್ಲೋಕ-55)
ಮೂಲಮ್
ರಾಮಃ ಶ್ರುತ್ವಾ ತದಾ ವಾಕ್ಯಂ ಶುಕಸ್ಯ ಪರಿದೇವಿತಮ್ ।
ಮಾ ವಧಿಷ್ಟೇತಿ ರಾಮಸ್ತಾನ್ವಾರಯಾಮಾಸ ವಾನರಾನ್ ॥
ಅನುವಾದ
ಶುಕನ ಕರುಣಾಪೂರ್ಣವಾದ ಮಾತನ್ನು ಕೇಳಿ, ರಾಮನು ಕಪಿಗಳಿಗೆ ‘ಇವನನ್ನು ಕೊಲ್ಲಬೇಡಿ’ ಎಂದು ತಡೆದನು. ॥55॥
(ಶ್ಲೋಕ-56)
ಮೂಲಮ್
ಪುನರಂಬರಮಾಸಾದ್ಯ ಶುಕಃ ಸುಗ್ರೀವಮಬ್ರವೀತ್ ।
ಬ್ರೂಹಿ ರಾಜನ್ದಶಗ್ರೀವಂ ಕಿಂ ವಕ್ಷ್ಯಾಮಿ ವ್ರಜಾಮ್ಯಹಮ್ ॥
ಅನುವಾದ
ಆಗ ಶುಕನು ಪುನಃ ಆಕಾಶಕ್ಕೆ ನೆಗೆದು ಸುಗ್ರೀವನಲ್ಲಿ ಹೇಳುತ್ತಾನೆ ‘‘ಎಲೈ ವಾನರರಾಜನೆ! ನಾನು ಹೊರಟಿರುವೆನು. ರಾವಣನಿಗೆ ನಿನ್ನ ವಿಚಾರ ಏನು ಹೇಳಲಿ? ತಿಳಿಸು.’’ ॥56॥
(ಶ್ಲೋಕ-57)
ಮೂಲಮ್ (ವಾಚನಮ್)
ಸುಗ್ರೀವ ಉವಾಚ
ಮೂಲಮ್
ಯಥಾ ವಾಲೀ ಮಮ ಭ್ರಾತಾ ತಥಾ ತ್ವಂ ರಾಕ್ಷಸಾಧಮ ।
ಹಂತವ್ಯಸ್ತ್ವಂ ಮಯಾ ಯತ್ನಾತ್ಸಪುತ್ರಬಲವಾಹನಃ ॥
(ಶ್ಲೋಕ-58)
ಮೂಲಮ್
ಬ್ರೂಹಿ ಮೇ ರಾಮಚಂದ್ರಸ್ಯ ಭಾರ್ಯಾಂ ಹೃತ್ವಾ ಕ್ವ ಯಾಸ್ಯಸಿ ।
ತತೋ ರಾಮಾಜ್ಞಯಾ ಧೃತ್ವಾ ಶುಕಂ ಬಧ್ವಾನ್ವರಕ್ಷಯತ್ ॥
ಅನುವಾದ
ಸುಗ್ರೀವನಿಂತೆಂದನು — ‘‘ನನ್ನ ಸೋದರನಾದ ವಾಲಿಯು ರಾಮನಿಂದ ಹತನಾದಂತೆ, ಹೇ ರಾಕ್ಷಸಾಧಮಾ, ನೀನೂ ಮಕ್ಕಳು, ಸೈನ್ಯ, ವಾಹನಗಳೊಡನೆ ನನ್ನಿಂದ ಪ್ರಯತ್ನ ಪೂರ್ವಕ ಹತನಾಗುವೆ. ನೀನು ರಾಮಚಂದ್ರನ ಧರ್ಮಪತ್ನಿಯನ್ನು ಕದ್ದುಕೊಂಡು ಎಲ್ಲಿಗೆ ಹೋಗುವೆ? ಎಂದು ರಾವಣ ನಿಗೆ ಹೇಳು.’’ ಅನಂತರ ರಾಮನ ಅಪ್ಪಣೆಯಂತೆ ಶುಕನನ್ನು ಹಿಡಿದು ಬಂಧನದಲ್ಲಿಟ್ಟು ವಾನರರಿಂದ ರಕ್ಷಿಸಲ್ಪಟ್ಟನು. ॥57-58॥
(ಶ್ಲೋಕ-59)
ಮೂಲಮ್
ಶಾರ್ದೂಲೋಽಪಿ ತತಃ ಪೂರ್ವಂ ದೃಷ್ಟ್ವಾ ಕಪಿಬಲಂ ಮಹತ್ ।
ಯಥಾವತ್ಕಥಯಾಮಾಸ ರಾವಣಾಯ ಸ ರಾಕ್ಷಸಃ ॥
(ಶ್ಲೋಕ-60)
ಮೂಲಮ್
ದೀರ್ಘಚಿಂತಾಪರೋ ಭೂತ್ವಾ ನಿಃಶ್ವಸನ್ನಾಸ ಮಂದಿರೇ ।
ತತಃ ಸಮುದ್ರಮಾವೇಕ್ಷ್ಯ ರಾಮೋ ರಕ್ತಾಂತಲೋಚನಃ ॥
ಅನುವಾದ
ಶುಕನಿಂದ ಮೊದಲೇ ಶಾರ್ದೂಲನೆಂಬ ರಾಕ್ಷಸನು ಆ ದೊಡ್ಡ ಕಪಿಬಲವನ್ನು ಕಂಡು ರಾವಣನಿಗೆ ಇದ್ದದ್ದು ಇದ್ದಂತೆ ತಿಳಿಸಿದ್ದನು. ಆಗ ರಾವಣನು ಬಹಳವಾಗಿ ಚಿಂತಿಸುತ್ತಾ, ನಿಟ್ಟುಸಿರು ಬಿಡುತ್ತಾ ಅರಮನೆಯಲ್ಲಿ ಕುಳಿತಿದ್ದನು. ಆಗಲೇ ಭಗವಾನ್ ಶ್ರೀರಾಮನು ಸಮುದ್ರವನ್ನು ನೋಡಿ, ಕೋಪದಿಂದ ಕಣ್ಣು ಕೆಂಪಾಗಿಸಿಕೊಂಡು ಹೇಳುತ್ತಾನೆ ॥59-60॥
(ಶ್ಲೋಕ-61)
ಮೂಲಮ್
ಪಶ್ಯ ಲಕ್ಷ್ಮಣ ದುಷ್ಟೋಽಸೌ ವಾರಿಧಿರ್ಮಾಮುಪಾಗತಮ್ ।
ನಾಭಿನಂದತಿ ದುಷ್ಟಾತ್ಮಾ ದರ್ಶನಾರ್ಥಂ ಮಮಾನಘ ॥
ಅನುವಾದ
‘‘ಲಕ್ಷ್ಮಣಾ ನೋಡು, ಈ ದುಷ್ಟನಾದ ಸಮುದ್ರರಾಜನು ತನ್ನ ಬಳಿಗೆ ಬಂದಿರುವ ನನ್ನನ್ನು ಗೌರವಿಸುತ್ತಿಲ್ಲ. ಎಲೈ ಪಾಪ ರಹಿತನೆ! ಈ ದುರಾತ್ಮನು ನನ್ನ ದರ್ಶನಕ್ಕಾಗಿಯೂ ಬಂದಿಲ್ಲ. ॥61॥
(ಶ್ಲೋಕ-62)
ಮೂಲಮ್
ಜಾನಾತಿ ಮಾನುಷೋಽಯಂ ಮೇ ಕಿಂ ಕರಿಷ್ಯತಿ ವಾನರೈಃ ।
ಅದ್ಯ ಪಶ್ಯ ಮಹಾಬಾಹೋ ಶೋಷಯಿಷ್ಯಾಮಿ ವಾರಿಧಿಮ್ ॥
ಅನುವಾದ
ಈ ರಾಮನು ಓರ್ವ ಸಾಮಾನ್ಯ ಮನುಷ್ಯನು, ಕಪಿಗಳೊಡಗೂಡಿ ನನ್ನನ್ನು ಏನು ಮಾಡಿಯಾನು ? ಎಂದು ತಿಳಿದಿರುವನು. ಹೇ ಮಹಾಬಾಹೊ! ಇದೋ ನೋಡುತ್ತಿರು. ಇಂದು ಸಮುದ್ರರಾಜನನ್ನು ಒಣಗಿಸಿಬಿಡುತ್ತೇನೆ. ॥62॥
(ಶ್ಲೋಕ-63)
ಮೂಲಮ್
ಪಾದೇನೈವ ಗಮಿಷ್ಯಂತಿ ವಾನರಾ ವಿಗತಜ್ವರಾಃ ।
ಇತ್ಯುಕ್ತ್ವಾ ಕ್ರೋಧತಾಮ್ರಾಕ್ಷ ಆರೋಪಿತಧನುರ್ಧರಃ ॥
(ಶ್ಲೋಕ-64)
ಮೂಲಮ್
ತೂಣೀರಾದ್ಬಾಣಮಾದಾಯ ಕಾಲಾಗ್ನಿಸದೃಶಪ್ರಭಮ್ ।
ಸಂಧಾಯ ಚಾಪಮಾಕೃಷ್ಯ ರಾಮೋ ವಾಕ್ಯಮಥಾಬ್ರವೀತ್ ॥
ಅನುವಾದ
ಮತ್ತೆ ವಾನರರೆಲ್ಲರೂ ನಿಶ್ಚಿಂತರಾಗಿ ಕಾಲುನಡಿಗೆಯಿಂದಲೇ ಇದನ್ನು ದಾಟಿಬಿಡುವರು’’ ಎಂದು ಹೇಳುತ್ತಾ ಕೋಪದಿಂದ ಕೆಂಪಾದ ಕಣ್ಣುಗಳುಳ್ಳ ಶ್ರೀರಾಮನು ತನ್ನ ಧನುಸ್ಸನ್ನೆತ್ತಿಕೊಂಡು ಹೆದೆಯೇರಿಸಿ ಪ್ರಳಯ ಕಾಲಾಗ್ನಿಗೆ ಸಮಾನವಾದ ಕಾಂತಿಯುಳ್ಳ ಒಂದು ಬಾಣವನ್ನು ಬತ್ತಳಿಕೆಯಿಂದ ತೆಗೆದು ಹೂಡಿ ಅದನ್ನು ಸೆಳೆದು ಹೀಗೆಂದನು ॥63-64॥
(ಶ್ಲೋಕ-65)
ಮೂಲಮ್
ಪಶ್ಯಂತು ಸರ್ವಭೂತಾನಿ ರಾಮಸ್ಯ ಶರವಿಕ್ರಮಮ್ ।
ಇದಾನೀಂ ಭಸ್ಮಸಾತ್ಕುರ್ಯಾಂ ಸಮುದ್ರಂ ಸರಿತಾಂ ಪತಿಮ್ ॥
ಅನುವಾದ
‘‘ಇದೋ ಎಲ್ಲ ಪ್ರಾಣಿಗಳು ರಾಮನ ಬಾಣದ ಪ್ರತಾಪವನ್ನು ನೋಡಲಿ; ನದಿಗಳೊಡೆಯನಾದ ಸಮುದ್ರ ರಾಜನನ್ನು ಈಗ ಬೂದಿ ಮಾಡಿ ಬಿಡುತ್ತೇನೆ.’’ ॥65॥
(ಶ್ಲೋಕ-66)
ಮೂಲಮ್
ಏವಂ ಬ್ರುವತಿ ರಾಮೇ ತು ಸಶೈಲವನಕಾನನಾ ।
ಚಚಾಲ ವಸುಧಾ ದ್ಯೌಶ್ಚ ದಿಶಶ್ಚ ತಮಸಾವೃತಾಃ ॥
ಅನುವಾದ
ಭಗವಾನ್ ಶ್ರೀರಾಮನು ಹೀಗೆ ಹೇಳುತ್ತಿರಲು ಬೆಟ್ಟ-ಕಾಡುಗಳಿಂದ ಕೂಡಿದ ಇಡೀ ಭೂಮಿಯು ನಡುಗಿತು ಹಾಗೂ ಆಕಾಶ, ದಶದಿಕ್ಕುಗಳಲ್ಲಿ ಕಗ್ಗತ್ತಲೆ ಆವರಿಸಿಬಿಟ್ಟಿತು. ॥66॥
(ಶ್ಲೋಕ-67)
ಮೂಲಮ್
ಚುಕ್ಷುಭೇ ಸಾಗರೋ ವೆಲಾಂ ಭಯಾದ್ಯೋಜನಮತ್ಯಗಾತ್ ।
ತಿಮಿನಕ್ರಝಷಾ ಮೀನಾಃ ಪ್ರತಪ್ತಾಃ ಪರಿತತ್ರಸುಃ ॥
(ಶ್ಲೋಕ-68)
ಮೂಲಮ್
ಏತಸ್ಮಿನ್ನಂತರೇ ಸಾಕ್ಷಾತ್ಸಾಗರೋ ದಿವ್ಯರೂಪಧೃಕ್ ।
ದಿವ್ಯಾಭರಣಸಂಪನ್ನಃ ಸ್ವಭಾಸಾ ಭಾಸಯನ್ ದಿಶಃ ॥
(ಶ್ಲೋಕ-69)
ಮೂಲಮ್
ಸ್ವಾಂತಃ ಸ್ಥದಿವ್ಯರತ್ನಾನಿ ಕರಾಭ್ಯಾಂ ಪರಿಗೃಹ್ಯ ಸಃ ।
ಪಾದಯೋಃ ಪುರತಃ ಕ್ಷಿಪ್ತ್ವಾ ರಾಮಸ್ಯೋಪಾಯನಂ ಬಹು ॥
(ಶ್ಲೋಕ-70)
ಮೂಲಮ್
ದಂಡವತ್ಪ್ರಣಿಪತ್ಯಾಹ ರಾಮಂ ರಕ್ತಾಂತಲೋಚನಮ್ ।
ತ್ರಾಹಿ ತ್ರಾಹಿ ಜಗನ್ನಾಥ ರಾಮ ತ್ರೈಲೋಕ್ಯರಕ್ಷಕ ॥
ಅನುವಾದ
ಸಮುದ್ರರಾಜನು ನಡುಗಿಹೋದನು. ಹೆದರಿಕೆಯಿಂದ ಒಂದು ಯೋಜನ ದೂರ ದಡದಿಂದ ಮುಂದಕ್ಕೆ ಸರಿದನು (ಉಕ್ಕಿ ಹರಿದನು). ತಿಮಿಂಗಿಲಗಳು, ಮೊಸಳೆಗಳು, ಮೀನುಗಳೂ ಎಲ್ಲವೂ ಬೇಗೆಯಿಂದ ಬಳಲಿ ತತ್ತರಿಸಿ ಹೋದುವು. ಇಷ್ಟರಲ್ಲಿ ಸಮುದ್ರರಾಜನು ಸ್ವತಃ ತಾನು ದಿವ್ಯರೂಪವನ್ನು ಧರಿಸಿ, ದಿವ್ಯಾಭರಣಗಳಿಂದ ಅಲಂಕೃತನಾಗಿ ತನ್ನ ಕಾಂತಿಯಿಂದ ದಿಕ್ಕುಗಳನ್ನೆಲ್ಲ ಬೆಳಗುತ್ತಾ, ತನ್ನಲ್ಲಿ ಅಡಗಿದ್ದ ದಿವ್ಯರತ್ನಗಳನ್ನು ಎರಡೂ ಕೈಗಳಲ್ಲಿ ತುಂಬಿಕೊಂಡು ಶ್ರೀರಾಮನ ಎರಡೂ ಪಾದಗಳಲ್ಲಿ ಸಮರ್ಪಿಸಿ, ಬಹಳವಾದ ಕಾಣಿಕೆಗಳನ್ನರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ, ಕೆಂಪಾಗಿ ಕಣ್ಣುಳ್ಳ ಶ್ರೀರಾಮನನ್ನು ಕುರಿತು ಪ್ರಾರ್ಥಿಸಿ ಕೊಂಡನು ‘‘ಹೇ ತ್ರೈಲೋಕ್ಯಪಾಲಕನಾದ ಜಗನ್ನಾಥಾ! ನನ್ನನ್ನು ಕಾಪಾಡು, ಕಾಪಾಡು! ॥67-70॥
(ಶ್ಲೋಕ-71)
ಮೂಲಮ್
ಜಡೋಽಹಂ ರಾಮ ತೇ ಸೃಷ್ಟಃ ಸೃಜತಾ ನಿಖಿಲಂ ಜಗತ್ ।
ಸ್ವಭಾವಮನ್ಯಥಾ ಕರ್ತುಂ ಕಃ ಶಕ್ತೊ ದೇವನಿರ್ಮಿತಮ್ ॥
ಅನುವಾದ
ಹೇ ರಾಮಾ! ಸಮಸ್ತ ಪ್ರಪಂಚವನ್ನು ಸೃಷ್ಟಿಮಾಡುವಕಾಲಕ್ಕೆ ನೀನು ನನ್ನನ್ನು ಜಡವಾಗಿಯೇ ಸೃಷ್ಟಿಸಿದೆ. ನೀನೇ ಉಂಟು ಮಾಡಿದ ಸ್ವಭಾವವನ್ನು ಬೇರೆ ಯಾರಾದರು ಹೇಗೆ ಬದಲಿಸ ಬಲ್ಲರು? ॥71॥
(ಶ್ಲೋಕ-72)
ಮೂಲಮ್
ಸ್ಥೂಲಾನಿ ಪಂಚಭೂತಾನಿ ಜಡಾನ್ಯೇವ ಸ್ವಭಾವತಃ ।
ಸೃಷ್ಟಾನಿ ಭವತೈತಾನಿ ತ್ವದಾಜ್ಞಾಂ ಲಂಘಯಂತಿ ನ ॥
ಅನುವಾದ
ಸ್ಥೂಲವಾದ ಪಂಚಮಹಾಭೂತಗಳು ಸ್ವಭಾವದಿಂದಲೇ ಜಡವಾದವುಗಳು. ನೀನು ಸೃಷ್ಟಿಸಿದ ಇವುಗಳು ನಿನ್ನ ಆಜ್ಞೆಯನ್ನು ಮೀರಲಾರವು. ॥72॥
(ಶ್ಲೋಕ-73)
ಮೂಲಮ್
ತಾಮಸಾದಹಮೋ ರಾಮ ಭೂತಾನಿ ಪ್ರಭವಂತಿ ಹಿ ।
ಕಾರಣಾನುಗಮಾತ್ತೇಷಾಂ ಜಡತ್ವಂ ತಾಮಸಂ ಸ್ವತಃ ॥
ಅನುವಾದ
ಹೇ ರಾಮಾ! ತಾಮಸ ಅಹಂಕಾರದಿಂದ ಪಂಚಭೂತಗಳು ಹುಟ್ಟುವುವು. ಅವುಗಳಿಗೆ ತಮ್ಮ ಕಾರಣದ್ರವ್ಯವನ್ನು ಅನುಸರಿಸುವ ಸ್ವಭಾವ ಇರುವುದರಿಂದ ಅವು ಜಡವಾಗಿಯೇ ಇರುವುವು. ॥73॥
(ಶ್ಲೋಕ-74)
ಮೂಲಮ್
ನಿರ್ಗುಣಸ್ತ್ವಂ ನಿರಾಕಾರೋ ಯದಾ ಮಾಯಾಗುಣಾನ್ಪ್ರಭೋ ।
ಲೀಲಯಾಂಗೀಕರೋಷಿ ತ್ವಂ ತದಾ ವೈರಾಜನಾಮವಾನ್ ॥
(ಶ್ಲೋಕ-75)
ಮೂಲಮ್
ಗುಣಾತ್ಮನೋ ವಿರಾಜಶ್ಚ ಸತ್ತ್ವಾದ್ದೇವಾ ಬಭೂವಿರೇ ।
ರಜೋಗುಣಾತ್ಪ್ರಜೇಶಾದ್ಯಾ ಮನ್ಯೋರ್ಭೂತಪತಿಸ್ತವ ॥
ಅನುವಾದ
ಹೇ ಪ್ರಭುವೆ! ನೀನು ಸ್ವತಃ ನಿರ್ಗುಣನೂ, ನಿರಾಕಾರನೂ ಆಗಿರುವೆ. ನೀನು ಮಾಯಾಗುಣಗಳನ್ನು ಲೀಲೆಯಿಂದ ಸ್ವೀಕರಿಸಿದಾಗ ವಿರಾಟ್ ಪುರುಷನೆನಿಸುವೆ. ಗುಣಾತ್ಮಕನಾದ ವಿರಾಟ್ಪುರುಷನ ಸತ್ತ್ವಗುಣಾಂಶದಿಂದ ದೇವತೆಗಳೂ, ರಜೋಗುಣಾಂಶದಿಂದ ಪ್ರಜಾಪತಿಗಳೇ ಮುಂತಾದವರೂ, ನಿನ್ನ ತಮೋಗುಣಾಂಶ (ಕ್ರೋಧ)ದಿಂದ ರುದ್ರಗಣಗಳು ಹುಟ್ಟಿರುವರು. ॥74-75॥
(ಶ್ಲೋಕ-76)
ಮೂಲಮ್
ತ್ವಾಮಹಂ ಮಾಯಯಾ ಛನ್ನಂ ಲೀಲಯಾ ಮಾನುಷಾಕೃತಿಮ್ ॥
(ಶ್ಲೋಕ-77)
ಮೂಲಮ್
ಜಡಬುದ್ಧಿರ್ಜಡೋ ಮೂರ್ಖಃ ಕಥಂ ಜಾನಾಮಿ ನಿರ್ಗುಣಮ್ ।
ದಂಡ ಏವ ಹಿ ಮೂರ್ಖಾಣಾಂ ಸನ್ಮಾರ್ಗಪ್ರಾಪಕಃ ಪ್ರಭೋ ॥
(ಶ್ಲೋಕ-78)
ಮೂಲಮ್
ಭೂತಾನಾಮಮರಶ್ರೇಷ್ಠ ಪಶೂನಾಂ ಲಗುಡೋ ಯಥಾ ।
ಶರಣಂ ತೇ ವ್ರಜಾಮೀಶಂ ಶರಣ್ಯಂ ಭಕ್ತವತ್ಸಲ ।
ಅಭಯಂ ದೇಹಿ ಮೇ ರಾಮ ಲಂಕಾಮಾರ್ಗಂ ದದಾಮಿ ತೇ ॥
ಅನುವಾದ
ಒಡೆಯಾ! ಮಾಯೆಯಿಂದ ಆವೃತನಾಗಿ, ಲೀಲೆಯಿಂದ ಮನುಷ್ಯವೇಶವನ್ನು ಧರಿಸಿರುವ ನಿರ್ಗುಣ ಪರಮಾತ್ಮನಾದ ನಿನ್ನನ್ನು; ಜಡನೂ, ಮಂದಬುದ್ಧಿಯೂ, ಮೂರ್ಖನೂ ಆಗಿರುವ ನಾನು ಹೇಗೆ ತಾನೆ ತಿಳಿಯಬಲ್ಲೆನು? ಹೇ ದೇವಶ್ರೇಷ್ಠನೆ! ಪಶುಗಳಿಗೆ ದೊಣ್ಣೆಯೇ ಮಾರ್ಗದರ್ಶಕವಿರುವಂತೆ, ನನ್ನಂತಹ ಮೂರ್ಖರಿಗೆ ದಂಡವೇ ಸನ್ಮಾರ್ಗಕ್ಕೆ ಹಚ್ಚುವುದಾಗಿದೆ. ಹೇ ಭಕ್ತವತ್ಸಲ ಭಗವಾನ್ ಶ್ರೀರಾಮಾ! ಶರಣಾಗತ ರಕ್ಷಕನಾದ ನಿನಗೆ ನಾನು ಶರಣಾಗಿರುವೆನು. ನನಗೆ ಅಭಯವನ್ನು ಕೊಡು. ನಿನಗೆ ಲಂಕೆಗೆ ಹೋಗಲು ದಾರಿಯನ್ನು ಬಿಟ್ಟು ಕೊಡುವೆನು. ॥76-78॥
(ಶ್ಲೋಕ-79)
ಮೂಲಮ್ (ವಾಚನಮ್)
ಶ್ರೀರಾಮ ಉವಾಚ
ಮೂಲಮ್
ಅಮೋಘೋಽಯಂ ಮಹಾಬಾಣಃ ಕಸ್ಮಿಂದೇಶೇ ನಿಪಾತ್ಯತಾಮ್ ।
ಲಕ್ಷ್ಯಂ ದರ್ಶಯ ಮೇ ಶೀಘ್ರಂ ಬಾಣಸ್ಯಾಮೋಘಪಾತಿನಃ ॥
ಅನುವಾದ
ಶ್ರೀರಾಮಚಂದ್ರನಿಂತೆಂದನು — ‘‘ಇದೋ, ಈ ಮಹಾಬಾಣವು ವ್ಯರ್ಥವಾಗುವಂತಹುದಲ್ಲ. ಆದ್ದರಿಂದ ಇದನ್ನು ಯಾವ ಕಡೆಗೆ ಪ್ರಯೋಗಿಸಲಿ; ಅಮೋಘವಾದ ಪರಿಣಾಮವುಳ್ಳ ಈ ಬಾಣಕ್ಕೆ ಗುರಿಯನ್ನು ತೋರಿಸು.’’ ॥79॥
(ಶ್ಲೋಕ-80)
ಮೂಲಮ್
ರಾಮಸ್ಯ ವಚನಂ ಶ್ರುತ್ವಾ ಕರೇ ದೃಷ್ಟ್ವಾ ಮಹಾಶರಮ್ ।
ಮಹೋದಧಿರ್ಮಹಾತೇಜಾ ರಾಘವಂ ವಾಕ್ಯಮಬ್ರವೀತ್ ॥
ಅನುವಾದ
ಶ್ರೀರಾಮನ ಮಾತಿಗೆ ಉತ್ತರವಾಗಿ ರಾಮನ ಕೈಯಲ್ಲಿದ್ದ ಮಹಾಬಾಣವನ್ನು ನೋಡಿ, ಮಹಾತೇಜಸ್ವಿ ಯಾದ ಸಮುದ್ರ ರಾಜನು ರಾಮಚಂದ್ರನಲ್ಲಿ ಹೇಳಿದನು. ॥80॥
(ಶ್ಲೋಕ-81)
ಮೂಲಮ್
ರಾಮೋತ್ತರಪ್ರದೇಶೇ ತು ದ್ರುಮಕುಲ್ಯ ಇತಿ ಶ್ರುತಃ ।
ಪ್ರದೇಶಸ್ತತ್ರ ಬಹವಃ ಪಾಪಾತ್ಮಾನೋ ದಿವಾನಿಶಮ್ ॥
(ಶ್ಲೋಕ-82)
ಮೂಲಮ್
ಬಾಧಂತೇ ಮಾಂ ರಘುಶ್ರೇಷ್ಠ ತತ್ರ ತೇ ಪಾತ್ಯತಾಂ ಶರಃ ।
ರಾಮೇಣ ಸೃಷ್ಟೋ ಬಾಣಸ್ತು ಕ್ಷಣಾದಾಭೀರಮಂಡಲಮ್ ॥
(ಶ್ಲೋಕ-83)
ಮೂಲಮ್
ಹತ್ವಾ ಪುನಃ ಸಮಾಗತ್ಯ ತೂಣೀರೇ ಪೂರ್ವವತ್ ಸ್ಥಿತಃ ।
ತತೋಽಬ್ರವೀದ್ರಘುಶ್ರೇಷ್ಠಂ ಸಾಗರೋ ವಿನಯಾನ್ವಿತಃ ॥
ಅನುವಾದ
‘‘ಹೇ ರಘುರಾಮಾ! ಉತ್ತರದಿಕ್ಕಿನಲ್ಲಿ ‘ದ್ರುಮ ಕುಲ್ಯ’ ಎಂಬ ಪ್ರಸಿದ್ಧವಾದ ಜಾಗವೊಂದಿದೆ. ಅಲ್ಲಿ ಅನೇಕ ಪಾಪಿಗಳು ವಾಸಿಸುತ್ತಾರೆ. ಅವರು ನನಗೆ ಹಗಲು-ರಾತ್ರಿ ತೊಂದರೆ ಕೊಡುತ್ತಿದ್ದಾರೆ. ಹೇ ರಘುಶ್ರೇಷ್ಠಾ! ನಿನ್ನ ಈ ಬಾಣವನ್ನು ಅಲ್ಲಿಗೆ ಪ್ರಯೋಗಿಸು.’’ ಅನಂತರ ರಾಮನು ಪ್ರಯೋಗಿಸಿದ ಬಾಣವು ಕ್ಷಣಮಾತ್ರದಲ್ಲಿ ಇಡೀ ಆಭೀರ ಮಂಡಲವನ್ನು ಕೊಂದು ಮತ್ತೆ ಮರಳಿ ಬಂದು ಹಿಂದಿನಂತೆ ಬತ್ತಳಿಕೆಯಲ್ಲಿ ಸೇರಿಕೊಂಡಿತು. ಆಗ ಸಮುದ್ರ ರಾಜನು ವಿನಯದಿಂದ ಶ್ರೀರಘುನಾಥನಲ್ಲಿ ಹೀಗೆಂದನು. ॥81-83॥
(ಶ್ಲೋಕ-84)
ಮೂಲಮ್
ನಲಃ ಸೇತುಂ ಕರೋತ್ವಸ್ಮಿನ್ ಜಲೇ ಮೇ ವಿಶ್ವಕರ್ಮಣಃ ।
ಸುತೋ ಧೀಮಾನ್ ಸಮರ್ಥೋಽಸ್ಮಿನ್ಕಾರ್ಯೇ ಲಬ್ಧವರೋ ಹರಿಃ ॥
(ಶ್ಲೋಕ-85)
ಮೂಲಮ್
ಕೀರ್ತಿಂ ಜಾನಂತು ತೇ ಲೋಕಾಃ ಸರ್ವಲೋಕಮಲಾಪಹಾಮ್ ।
ಇತ್ಯುತ್ತ್ವಾ ರಾಘವಂ ನತ್ವಾ ಯಯೌ ಸಿಂಧುರದೃಶ್ಯತಾಮ್ ॥
ಅನುವಾದ
‘‘ರಾಮಾ! ಈ ನನ್ನ ಜಲಧಿಯ ಮೇಲೆ ವಿಶ್ವ ಕರ್ಮನ ಮಗನಾದ ನಳನು ಸೇತುವೆಯನ್ನು ನಿರ್ಮಿಸಲಿ. ಈ ಕೆಲಸದಲ್ಲಿ ಇವನು ಜಾಣನೂ, ವರವನ್ನು ಪಡೆದ ವಾನರ ನಿರುವನು. ಈ ಮೂಲಕ ಸಕಲಲೋಕಗಳ ಪಾಪಗಳನ್ನು ಕಳೆಯುವಂತಹ ನಿನ್ನ ಕೀರ್ತಿಯನ್ನು ಎಲ್ಲ ಲೋಕಗಳು ಅರಿಯಲಿ. ಹೀಗೆಂದು ಹೇಳಿ ರಘುನಾಥನಿಗೆ ವಂದಿಸಿ ಸಮುದ್ರರಾಜನು ಮರೆಯಾದನು. ॥84-85॥
(ಶ್ಲೋಕ-86)
ಮೂಲಮ್
ತತೋ ರಾಮಸ್ತು ಸುಗ್ರೀವಲಕ್ಷ್ಮಣಾಭ್ಯಾಂ ಸಮನ್ವಿತಃ ।
ನಲಮಾಜ್ಞಾಪಯಚ್ಛೀಘ್ರಂ ವಾನರೈಃ ಸೇತುಬಂಧನೇ ॥
ಅನುವಾದ
ಅನಂತರ ಸುಗ್ರೀವ ಲಕ್ಷ್ಮಣರೊಡಗೂಡಿ ಶ್ರೀರಾಮಚಂದ್ರನು ನಳನಿಗೆ ವಾನರರ ಸಹಾಯದಿಂದ ಬೇಗನೇ ಸೇತುವೆಯನ್ನು ಕಟ್ಟಲು ಅಪ್ಪಣೆ ಮಾಡಿದನು. ॥86॥
(ಶ್ಲೋಕ-87)
ಮೂಲಮ್
ತತೋತಿಹೃಷ್ಟಃ ಪ್ಲವಗೇಂದ್ರಯೂಥಪೈ-
ರ್ಮಹಾನಗೇಂದ್ರಪ್ರತಿಮೈರ್ಯುತೋ ನಲಃ ।
ಬಬಂಧ ಸೇತುಂ ಶತಯೋಜನಾಯತಂ
ಸುವಿಸ್ತೃತಂ ಪರ್ವತಪಾದಪೈರ್ದೃಢಮ್ ॥
ಅನುವಾದ
ಆಗ ನಳನು ಸಂತೋಷಗೊಂಡು ಮಹಾಪರ್ವತದಂತೆ ಬೃಹದಾಕಾರ ಶರೀರವುಳ್ಳ ಬೇರೆ ವಾನರಶ್ರೇಷ್ಠರೊಡಗೂಡಿ ಪರ್ವತ ಹಾಗೂ ವೃಕ್ಷಗಳಿಂದ ನೂರು ಯೋಜನ ದೂರವುಳ್ಳ ವಿಸ್ತಾರವಾದ ಬಿಗಿಯಾದ ಸೇತುವೆಯನ್ನು ಕಟ್ಟಿದನು. ॥87॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.