[ಎರಡನೆಯ ಸರ್ಗ]
ಭಾಗಸೂಚನಾ
ರಾವಣನಿಂದ ವಿಭೀಷಣನ ತಿರಸ್ಕಾರ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಲಂಕಾಯಾಂ ರಾವಣೋ ದೃಷ್ಟ್ವಾ ಕೃತಂ ಕರ್ಮ ಹನೂಮತಾ ।
ದುಷ್ಕರಂ ದೈವತೈರ್ವಾಪಿ ಹ್ರಿಯಾ ಕಿಂಚಿದವಾಂಗ್ಮುಖಃ ॥
(ಶ್ಲೋಕ-2)
ಮೂಲಮ್
ಆಹೂಯ ಮಂತ್ರಿಣಃ ಸರ್ವಾನಿದಂ ವಚನಮಬ್ರವೀತ್ ।
ಹನೂಮತಾ ಕೃತಂ ಕರ್ಮ ಭವದ್ಭಿರ್ದೃಷ್ಟಮೇವ ತತ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಎಲೈ ಗಿರಿಜಾ! ಅತ್ತ ಲಂಕೆಯಲ್ಲಿ ದೇವತೆಗಳಿಗೂ ಅಸಾಧ್ಯವಾದ ಕಾರ್ಯವನ್ನು ಹನುಮಂತನು ಮಾಡಿದುದನ್ನು ಕಂಡು ರಾವಣನು ತನ್ನ ಎಲ್ಲ ಮಂತ್ರಿಗಳನ್ನು ಬರಮಾಡಿಕೊಂಡು, ನಾಚಿಕೆಯಿಂದ ತಲೆಯನ್ನು ಸ್ವಲ್ಪ ತಗ್ಗಿಸಿಕೊಂಡು ಹೇಳುತ್ತಾನೆ ಹನುಮಂತನು ಮಾಡಿದ ಕೆಲಸವನ್ನು ನೀವೆಲ್ಲ ನೋಡಿರುವಿರಿ. ॥1-2॥
(ಶ್ಲೋಕ-3)
ಮೂಲಮ್
ಪ್ರವಿಶ್ಯ ಲಂಕಾಂ ದುರ್ಧರ್ಷಾಂ ದೃಷ್ಟ್ವಾ ಸೀತಾಂ ದುರಾಸದಾಮ್ ।
ಹತ್ವಾ ಚ ರಾಕ್ಷಸಾನ್ವೀರಾನಕ್ಷಂ ಮಂದೋದರೀಸುತಮ್ ॥
(ಶ್ಲೋಕ-4)
ಮೂಲಮ್
ದಗ್ಧ್ವಾ ಲಂಕಾಮಶೇಷೇಣ ಲಂಘಯಿತ್ವಾ ಚ ಸಾಗರಮ್ ।
ಯುಷ್ಮಾನ್ಸರ್ವಾನತಿಕ್ರಮ್ಯ ಸ್ವಸ್ಥೋಽಗಾತ್ಪುನರೇವ ಸಃ ॥
ಅನುವಾದ
ಸುಲಭವಾಗಿ ಪ್ರವೇಶಿಸಲಾರದ ಲಂಕೆಯನ್ನು ಅವನು ಹೊಕ್ಕು, ನೋಡಲು ಅಸಾಧ್ಯಳಾದ ಸೀತೆಯನ್ನು ಕಂಡು, ವೀರರಾದ ರಾಕ್ಷಸರನ್ನು, ಮಂಡೋದರಿಯ ಮಗನಾದ ಅಕ್ಷಕುಮಾರನನ್ನು ಕೊಂದು, ಇಡೀ ಲಂಕೆಯನ್ನು ಸುಟ್ಟು, ನಿಮ್ಮೆಲ್ಲರನ್ನು (ವಂಚಿಸಿ) ಮೀರಿ, ಸಮುದ್ರವನ್ನು ದಾಟಿ ಸುಖವಾಗಿ ಹೊರಟು ಹೋಗಿರುತ್ತಾನೆ. ॥3-4॥
(ಶ್ಲೋಕ-5)
ಮೂಲಮ್
ಕಿಂ ಕರ್ತವ್ಯಮಿತೋಽಸ್ಮಾಭಿರ್ಯೂಯಂ ಮಂತ್ರವಿಶಾರದಾಃ ।
ಮಂತ್ರಯಧ್ವಂ ಪ್ರಯತ್ನೇನ ಯತ್ಕೃತಂ ಮೇ ಹಿತಂ ಭವೇತ್ ॥
ಅನುವಾದ
ಈಗ ನಾವು ಏನು ಮಾಡಬೇಕು? ನೀವುಗಳು ಮಂತ್ರಾಲೋಚನೆಯಲ್ಲಿ ಜಾಣರಾಗಿದ್ದೀರಿ. ಈಗ ನಾವು ಏನು ಮಾಡಿದರೆ ನಮಗೆ ಹಿತವಾದೀತೋ ಅದನ್ನು ಪ್ರಯತ್ನ ಪೂರ್ವಕವಾಗಿ ಚಿಂತಿಸಿ ನಿಶ್ಚಯಮಾಡಿರಿ. ॥5॥
(ಶ್ಲೋಕ-6)
ಮೂಲಮ್
ರಾವಣಸ್ಯ ವಚಃ ಶ್ರುತ್ವಾ ರಾಕ್ಷಸಾಸ್ತಮಥಾಬ್ರುವನ್ ।
ದೇವ ಶಂಕಾ ಕುತೋ ರಾಮಾತ್ತವ ಲೋಕಜಿತೋ ರಣೇ ॥
ಅನುವಾದ
ರಾವಣನ ಮಾತನ್ನು ಕೇಳಿದ ರಾಕ್ಷಸರು ಅವನನ್ನು ಕುರಿತು ಹೇಳುತ್ತಾರೆ ‘‘ಸ್ವಾಮಿ! ರಾಮನಿಂದ ತಮಗೆ (ಪರಾಜಯದ) ಭಯವೇಕೆ? ಯುದ್ಧದಲ್ಲಿ ಎಲ್ಲರನ್ನು ಗೆದ್ದಿರುವ ನಿಮಗೆ ಯಾರೂ ಸಮಾನರಿಲ್ಲ. ॥6॥
(ಶ್ಲೋಕ-7)
ಮೂಲಮ್
ಇಂದ್ರಸ್ತು ಬದ್ಧ್ವಾ ನಿಕ್ಷಿಪ್ತಃ ಪುತ್ರೇಣ ತವ ಪತ್ತನೇ ।
ಜಿತ್ವಾ ಕುಬೇರಮಾನೀಯ ಪುಷ್ಪಕಂ ಭುಜ್ಯತೇ ತ್ವಯಾ ॥
ಅನುವಾದ
ನಿಮ್ಮ ಪುತ್ರನು ಇಂದ್ರನನ್ನೇ ಬಂಧಿಸಿ, ನಿಮ್ಮ ರಾಜಧಾನಿಯಲ್ಲೆ ಸೆರೆಯಲ್ಲಿಟ್ಟಿದ್ದ. ನೀವೂ ಕೂಡ ಕುಬೇರನನ್ನು ಜಯಿಸಿ ಪುಷ್ಪಕ ವಿಮಾನವನ್ನು ವಶಪಡಿಸಿಕೊಂಡು ಭೋಗಿಸುತ್ತಿರುವಿರಿ. ॥7॥
(ಶ್ಲೋಕ-8)
ಮೂಲಮ್
ಯಮೋ ಜಿತಃ ಕಾಲದಂಡಾದ್ಭಯಂ ನಾಭೂತ್ತವ ಪ್ರಭೋ ।
ವರುಣೋ ಹುಂಕೃತೇನೈವ ಜಿತಃ ಸರ್ವೇಽಪಿ ರಾಕ್ಷಸಾಃ ॥
(ಶ್ಲೋಕ-9)
ಮೂಲಮ್
ಮಯೋ ಮಹಾಸುರೋ ಭೀತ್ಯಾ ಕನ್ಯಾಂ ದತ್ತ್ವಾ ಸ್ವಯಂ ತವ ।
ತ್ವದ್ವಶೇ ವರ್ತತೇಽದ್ಯಾಪಿ ಕಿಮುತಾನ್ಯೇ ಮಹಾಸುರಾಃ ॥
ಅನುವಾದ
ಒಡೆಯಾ! ನೀವು ಯಮನನ್ನೇ ಗೆದ್ದಿರುವಿರಿ. ಅವನ ಕಾಲದಂಡದಿಂದಲೂ ನಿಮಗೆ ಯಾವುದೇ ಭಯವಿಲ್ಲ. ಹುಂಕಾರ ಮಾತ್ರದಿಂದಲೇ ವರುಣನನ್ನು ಮತ್ತು ಎಲ್ಲ ರಾಕ್ಷಸರನ್ನು ಪರಾಜಿತರಾಗಿಸಿ ನಿಮ್ಮ ಅಧೀನದಲ್ಲಿ ಇರಿಸಿ ಕೊಂಡಿರುವಿರಿ. ಮಹಾರಾಕ್ಷಸನಾದ ಮಯಾಸುರನೂ ಕೂಡ ಹೆದರಿಕೊಂಡೇ ತನ್ನ ಮಗಳನ್ನು ನಿಮಗೆ ಕೊಟ್ಟು, ಈಗಲೂ ನಿಮ್ಮ ಅಧೀನದಲ್ಲಿದ್ದು ಕೊಂಡಿರುವನು. ಇನ್ನುಳಿದ ರಾಕ್ಷಸರ ಪಾಡೇನು? ॥8-9॥
(ಶ್ಲೋಕ-10)
ಮೂಲಮ್
ಹನೂಮದ್ಧರ್ಷಣಂ ಯತ್ತು ತದವಜ್ಞಾಕೃತಂ ಚ ನಃ ।
ವಾನರೋಽಯಂ ಕಿಮಸ್ಮಾಕಮಸ್ಮಿನ್ಪೌರುಷದರ್ಶನೇ ॥
(ಶ್ಲೋಕ-11)
ಮೂಲಮ್
ಇತ್ಯುಪೇಕ್ಷಿತಮಸ್ಮಾಭಿರ್ದರ್ಷಣಂ ತೇನ ಕಿಂ ಭವೇತ್ ।
ವಯಂ ಪ್ರಮತ್ತಾಃ ಕಿಂ ತೇನ ವಂಚಿತಾಃ ಸ್ಮೋ ಹನೂಮತಾ ॥
(ಶ್ಲೋಕ-12)
ಮೂಲಮ್
ಜಾನೀಮೋ ಯದಿ ತಂ ಸರ್ವೇ ಕಥಂ ಜೀವನ್ ಗಮಿಷ್ಯತಿ ।
ಆಜ್ಞಾಪಯ ಜಗತ್ಕೃತ್ಸ್ನಮವಾನರಮಮಾನುಷಮ್ ॥
(ಶ್ಲೋಕ-13)
ಮೂಲಮ್
ಕೃತ್ವಾಯಾಸ್ಯಾಮಹೇ ಸರ್ವೇ ಪ್ರತ್ಯೇಕಂ ವಾ ನಿಯೋಜಯ ।
ಕುಂಭಕರ್ಣಸ್ತದಾ ಪ್ರಾಹ ರಾವಣಂ ರಾಕ್ಷಸೇಶ್ವರಮ್ ॥
ಅನುವಾದ
ಹನುಮಂತನ ಧಾಳಿಯು ನಾವು ಉಪೇಕ್ಷೆ ಮಾಡಿದ್ದರ ಫಲವಾಗಿದೆ. ‘ಇವನೊಬ್ಬ ಕಪಿ, ಇವನ ಮುಂದೆ ನಾವೇಕೆ ಬಲವನ್ನು ತೋರಬೇಕು?’ ಎಂದುಕೊಂಡು ಅವನ ಹಾವಳಿಯ ಬಗ್ಗೆ ಉದಾಸೀನರಾದೆವು. ‘ಅವನಿಂದೇನಾದೀತು?’ ಎಂದುಕೊಂಡು ನಾವು ಉನ್ಮತ್ತರಾಗಿ ಸುಮ್ಮನಾದೆವು. ಹೀಗಾಗಿ ಹನುಮಂತನಿಂದ ಮೋಸ ಹೋದೆವು. ನಾವೆಲ್ಲರೂ ಅವನ ಶೌರ್ಯವನ್ನು ತಿಳಿದವರಾಗಿದ್ದರೆ ಅವನು ಹೇಗೆತಾನೇ ನಮ್ಮ ಕೈಯಿಂದ ಬದುಕಿ ಹೋಗುತ್ತಿದ್ದನು? ಈಗ ನೀವು ಅಪ್ಪಣೆ ಕೊಡಿರಿ. ಇಡೀ ಜಗತ್ತಿನಲ್ಲಿ ಒಂದು ಕಪಿಯಾಗಲಿ, ಓರ್ವ ಮನುಷ್ಯನಾಗಲಿ ಉಳಿಯದಂತೆ ಬರಿದಾಗಿಸಿ ಹಿಂದಿರುಗುವೆವು. ಎಲ್ಲರನ್ನು ಒಟ್ಟಿಗೆ ಅಥವಾ ಬಿಡಿ-ಬಿಡಿಯಾಗಿಯೇ ಆಜ್ಞೆ ಮಾಡಿ ಕಳಿಸಿಕೊಡಿ.’’ ಆಗ ಕುಂಭಕರ್ಣನು ರಾಕ್ಷಸೇಶ್ವರನಾದ ರಾವಣನನ್ನು ಕುರಿತು ಹೀಗೆಂದನು. ॥10-13॥
(ಶ್ಲೋಕ-14)
ಮೂಲಮ್
ಆರಬ್ಧಂ ಯತ್ತ್ವಯಾ ಕರ್ಮ ಸ್ವಾತ್ಮನಾಶಾಯ ಕೇವಲಮ್ ।
ನ ದೃಷ್ಟೋಽಸಿ ತದಾ ಭಾಗ್ಯಾತ್ತ್ವಂ ರಾಮೇಣ ಮಹಾತ್ಮನಾ ॥
ಅನುವಾದ
ಅಣ್ಣಾ! ‘‘ನೀನು ಪ್ರಾರಂಭಿಸಿರುವ ಕೆಲಸವು ಅದು ಕೇವಲ ನಿನ್ನ ನಾಶಕ್ಕಾಗಿಯೇ ಇದೆ. ಸೀತೆಯನ್ನು ಕದಿಯುವಾಗ ನೀನು ಪುಣ್ಯವಶದಿಂದ ರಾಮನ ಕಣ್ಣಿಗೆ ಬೀಳದೇ ಹೋದೆ. ॥14॥
(ಶ್ಲೋಕ-15)
ಮೂಲಮ್
ಯದಿ ಪಶ್ಯತಿ ರಾಮಸ್ತ್ವಾಂ ಜೀವನ್ನಾಯಾಸಿ ರಾವಣ ।
ರಾಮೋ ನ ಮಾನುಷೋ ದೇವಃ ಸಾಕ್ಷಾನ್ನಾರಾಯಣೋಽವ್ಯಯಃ ॥
ಅನುವಾದ
ಎಲೈ ರಾವಣಾ! ಅಂದು ರಾಮನೇನಾದರೂ ನಿನ್ನನ್ನು ಕಂಡಿದ್ದರೆ, ನೀನು ಬದುಕಿ ಬರುತ್ತಿರಲಿಲ್ಲ. ರಾಮನು ಸಾಮಾನ್ಯ ಮನುಷ್ಯನಲ್ಲ. ಅವನು ಸಾಕ್ಷಾತ್ ದೇವದೇವ ನಾದ ಅವ್ಯಯನಾದ ನಾರಾಯಣನೇ ಆಗಿದ್ದಾನೆ. ॥15॥
(ಶ್ಲೋಕ-16)
ಮೂಲಮ್
ಸೀತಾ ಭಗವತೀ ಲಕ್ಷ್ಮೀ ರಾಮಪತ್ನೀ ಯಶಸ್ವಿನೀ ।
ರಾಕ್ಷಸಾನಾಂ ವಿನಾಶಾಯ ತ್ವಯಾನೀತಾ ಸುಮಧ್ಯಮಾ ॥
ಅನುವಾದ
ಭಗವಾನ್ ರಾಮನ ಪತ್ನಿಯಾದ ಯಶಸ್ವಿನೀ ಸೀತೆಯು ಪೂಜ್ಯಳಾದ ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೆ. ರಾಕ್ಷಸರ ವಿನಾಶಕ್ಕಾಗಿಯೇ ನೀನು ಆ ಸುಂದರಿಯನ್ನು ಅಪಹರಿಸಿ ತಂದಿರುವೆ. ॥16॥
(ಶ್ಲೋಕ-17)
ಮೂಲಮ್
ವಿಷಪಿಂಡಮಿವಾಗೀರ್ಯ ಮಹಾಮೀನೋ ಯಥಾ ತಥಾ ।
ಆನೀತಾ ಜಾನಕೀ ಪಶ್ಚಾತ್ತ್ವಯಾ ಕಿಂ ವಾ ಭವಿಷ್ಯತಿ ॥
ಅನುವಾದ
ದೊಡ್ಡ ಮೀನೊಂದು ವಿಷದ ದೊಡ್ಡ ಉಂಡೆಯನ್ನು ನುಂಗಿದಂತೆ ನೀನು ನಿನ್ನ ನಾಶಕ್ಕಾಗಿ ಸೀತೆಯನ್ನು ತಂದಿರುವೆ. ಮುಂದೇನಾಗುವುದೋ ನೀನೇ ಆಲೋಚಿಸು. ॥17॥
(ಶ್ಲೋಕ-18)
ಮೂಲಮ್
ಯದ್ಯಪ್ಯನುಚಿತಂ ಕರ್ಮ ತ್ವಯಾ ಕೃತಮಜಾನತಾ ।
ಸರ್ವಂ ಸಮಂ ಕರಿಷ್ಯಾಮಿ ಸ್ವಸ್ಥಚಿತ್ತೋ ಭವ ಪ್ರಭೋ ॥
ಅನುವಾದ
ಪ್ರಭುವೆ! ಒಂದು ವೇಳೆ ಅರಿಯದೆ ಈಗ ನೀನು ಮಾಡಿರುವ ಕೆಲಸವು ಆಯೋಗ್ಯವಾಗಿದ್ದರೂ, ನಾನು ಎಲ್ಲವನ್ನು ಸರಿಪಡಿಸುವೆನು. ನೀನು ಸ್ವಸ್ಥಚಿತ್ತನಾಗು.’’ ॥18॥
(ಶ್ಲೋಕ-19)
ಮೂಲಮ್
ಕುಂಭಕರ್ಣವಚಃ ಶ್ರುತ್ವಾ ವಾಕ್ಯಮಿಂದ್ರಜಿದಬ್ರವೀತ್ ।
ದೇಹಿ ದೇವ ಮಮಾನುಜ್ಞಾಂ ಹತ್ವಾ ರಾಮಂ ಸಲಕ್ಷ್ಮಣಮ್ ।
ಸುಗ್ರೀವಂ ವಾನರಾಂಶ್ಚೈವ ಪುನರ್ಯಾಸ್ಯಾಮಿ ತೇಂತಿಕಮ್ ॥
ಅನುವಾದ
ಕುಂಭಕರ್ಣನ ಮಾತನ್ನು ಕೇಳಿದ ಇಂದ್ರಜಿತುವು- ‘‘ಒಡೆಯನೇ! ನನಗೆ ಅಪ್ಪಣೆಯನ್ನು ಕೊಡು; ಲಕ್ಷ್ಮಣ ಸಹಿತನಾದ ರಾಮನನ್ನೂ, ಸುಗ್ರೀವನನ್ನೂ, ಎಲ್ಲ ವಾನರರನ್ನೂ ಕೊಂದು ಮತ್ತೆ ನಿನ್ನ ಬಳಿಗೆ ಬರುವೆನು’’ ಎಂದು ಹೇಳಿದನು. ॥19॥
(ಶ್ಲೋಕ-20)
ಮೂಲಮ್
ತತ್ರಾಗತೋ ಭಾಗವತಪ್ರಧಾನೋ
ವಿಭೀಷಣೋ ಬುದ್ಧಿಮತಾಂ ವರಿಷ್ಠಃ ।
ಶ್ರೀರಾಮಪಾದದ್ವಯ ಏಕತಾನಃ
ಪ್ರಣಮ್ಯ ದೇವಾರಿಮುಪೋಪವಿಷ್ಟಃ ॥
ಅನುವಾದ
ಇದೇ ಸಮಯದಲ್ಲಿ ಭಾಗವತೋತ್ತಮನೂ, ಬುದ್ಧಿವಂತರಲ್ಲಿ ಶ್ರೇಷ್ಠನೂ, ಶ್ರೀರಾಮನ ಪಾದದ್ವಯಗಳೇ ಆಶ್ರಯವಾಗಿ ಉಳ್ಳವನೂ ಆದ ವಿಭೀಷಣನು ಅಲ್ಲಿಗೆ ಬಂದನು. ದೇವಶತ್ರುವಾದ ರಾವಣನಿಗೆ ನಮಸ್ಕರಿಸಿ ಸಮೀಪದಲ್ಲಿಯೇ ಕುಳಿತುಕೊಂಡನು. ॥20॥
(ಶ್ಲೋಕ-21)
ಮೂಲಮ್
ವಿಲೋಕ್ಯ ಕುಂಭಶ್ರವಣಾದಿದೈತ್ಯಾ -
ನ್ಮತ್ತಪ್ರಮತ್ತಾನತಿವಿಸ್ಮಯೇನ ।
ವಿಲೋಕ್ಯ ಕಾಮಾತುರಮಪ್ರಮತ್ತೋ
ದಶಾನನಂ ಪ್ರಾಹ ವಿಶುದ್ಧಬುದ್ಧಿಃ ॥
ಅನುವಾದ
ಹಾಗೆಯೇ ಮೈಮರೆತವರೂ, ಅತಿಯಾಗಿ ಕೊಬ್ಬಿರುವವರೂ ಆದ ಕುಂಭಕರ್ಣನೇ ಮೊದಲಾದ ರಾಕ್ಷಸರನ್ನು ಒಮ್ಮೆ ನೋಡಿ, ಬಹಳ ಆಶ್ಚರ್ಯಗೊಂಡವನಾಗಿ ಆ ಶುದ್ಧ ಬುದ್ಧಿಯಾದ ವಿಭೀಷಣನು ಕಾಮಾತುರನಾದ ರಾವಣನನ್ನು ಕುರಿತು ಎಚ್ಚರಿಕೆಯಿಂದ ಹೀಗೆಂದು ಹೇಳಿದನು. ॥21॥
(ಶ್ಲೋಕ-22)
ಮೂಲಮ್
ನ ಕುಂಭಕರ್ಣೇಂದ್ರಜಿತೌ ಚ ರಾಜಂ -
ಸ್ತಥಾ ಮಹಾಪಾರ್ಶ್ಚಮಹೋದರೌ ತೌ ।
ನಿಕುಂಭಕುಂಭೌ ಚ ತಥಾತಿಕಾಯಃ
ಸ್ಥಾತುಂ ನ ಶಕ್ತಾ ಯುಧಿ ರಾಘವಸ್ಯ ॥
ಅನುವಾದ
‘‘ಎಲೈ ರಾಜನೆ! ಕುಂಭಕರ್ಣನಾಗಲಿ, ಇಂದ್ರಜಿತು ವಾಗಲಿ, ಮಹಾಪಾರ್ಶ್ವ, ಮಹೋದರರುಗಳಾಗಲಿ, ಕುಂಭ, ನಿಕುಂಭರಾಗಲಿ, ಅತಿಕಾಯನಾಗಲಿ, ಯುದ್ಧದಲ್ಲಿ ಶ್ರೀರಾಮನ ಎದುರಿಗೆ ನಿಲ್ಲಲು ಸಮರ್ಥರಲ್ಲ.’’ ॥22॥
(ಶ್ಲೋಕ-23)
ಮೂಲಮ್
ಸೀತಾಭಿಧಾನೇನ ಮಹಾಗ್ರಹೇಣ
ಗ್ರಸ್ತೋಽಸಿ ರಾಜನ್ ನ ಚ ತೇ ವಿಮೋಕ್ಷಃ ।
ತಾಮೇವ ಸತ್ಕೃತ್ಯ ಮಹಾಧನೇನ
ದತ್ತ್ವಾಭಿರಾಮಾಯ ಸುಖೀ ಭವ ತ್ವಮ್ ॥
ಅನುವಾದ
‘‘ಎಲೈ ರಾಜನೆ! ಸೀತೆಯೆಂಬ ಹೆಸರಿನ ದೊಡ್ಡ ಮೊಸಳೆಯು ನಿನ್ನನ್ನು ನುಂಗಿಬಿಟ್ಟಿದೆ. ನಿನಗೆ ಇದರಿಂದ ಬಿಡುಗಡೆ ಇಲ್ಲ. ಆದರೆ ಆಕೆಯನ್ನು ಸತ್ಕಾರಪೂರ್ವಕ ಹೆಚ್ಚಿನ ಧನರಾಶಿಯೊಂದಿಗೆ ಶ್ರೀರಾಮಚಂದ್ರನಿಗೆ ಅರ್ಪಿಸಿದರೆ ಸುಖಿಯಾಗುವೆ. ॥23॥
(ಶ್ಲೋಕ-24)
ಮೂಲಮ್
ಯಾವನ್ನ ರಾಮಸ್ಯ ಶಿತಾಃ ಶಿಲೀಮುಖಾ
ಲಂಕಾಮಭಿವ್ಯಾಪ್ಯ ಶಿರಾಂಸಿ ರಕ್ಷಸಾಮ್ ।
ಛಿಂದಂತಿ ತಾವದ್ರಘುನಾಯಕಸ್ಯ ಭೋ-
ಸ್ತಾಂ ಜಾನಕೀಂ ತ್ವಂ ಪ್ರತಿದಾತುಮರ್ಹಸಿ ॥
ಅನುವಾದ
ತೀಕ್ಷ್ಣವಾದ ರಾಮಬಾಣಗಳು ಲಂಕೆಯನ್ನು ಸುತ್ತುವರೆದು ರಾಕ್ಷಸರ ತಲೆಗಳನ್ನು ಕತ್ತರಿಸುವುದರೊಳಗೆ ಎಲೈ ರಾವಣನೆ! ನೀನು ರಾಮನಿಗೆ ಜಾನಕಿಯನ್ನು ಒಪ್ಪಿಸಿಬಿಡು. ॥24॥
(ಶ್ಲೋಕ-25)
ಮೂಲಮ್
ಯಾವನ್ನಗಾಭಾಃ ಕಪಯೋ ಮಹಾಬಲಾ
ಹರೀಂದ್ರತುಲ್ಯಾ ನಖದಂಷ್ಟ್ರಯೋಧಿನಃ ।
ಲಂಕಾಂ ಸಮಾಕ್ರಮ್ಯ ವಿನಾಶಯಂತಿ ತೇ
ತಾವದ್ ದ್ರುತಂ ದೇಹಿ ರಘೂತ್ತಮಾಯ ತಾಮ್ ॥
ಅನುವಾದ
ಸಿಂಹ ಪರಾಕ್ರಮಿಗಳಾದ ಬೆಟ್ಟದಂತಹ ಆಕಾರವುಳ್ಳ ಬಹಳ ಬಲಶಾಲಿಗಳಾದ ಹಾಗೂ ಉಗುರು, ಹಲ್ಲುಗಳಿಂದಲೇ ಕಾದಾಡುವಂತಹ ಕಪಿಗಳು ಲಂಕೆಯನ್ನು ಮುತ್ತಿ ನಾಶ ಮಾಡುವುದರೊಳಗಾಗಿ ಬೇಗನೇ ರಘೂತ್ತಮನಿಗೆ ಆಕೆಯನ್ನು ಒಪ್ಪಿಸಿಬಿಡು. ॥25॥
(ಶ್ಲೋಕ-26)
ಮೂಲಮ್
ಜೀವನ್ನ ರಾಮೇಣ ವಿಮೋಕ್ಷ್ಯಸೇ ತ್ವಂ
ಗುಪ್ತಃ ಸುರೇಂದ್ರೈರಪಿ ಶಂಕರೇಣ ।
ನ ದೇವರಾಜಾಂಕಗತೋ ನ ಮೃತ್ಯೋಃ
ಪಾತಾಲಲೋಕಾನಪಿ ಸಂಪ್ರವಿಷ್ಟಃ ॥
ಅನುವಾದ
ಬ್ರಹ್ಮದೇವರಿಂದಾಗಲಿ, ಮಹಾದೇವನಿಂದಾಗಲಿ ನೀನು ರಕ್ಷಿತನಾದರೂ, ದೇವೇಂದ್ರನ ತೊಡೆಯ ಮೇಲೆಯೇ ಆಶ್ರಯ ಪಡೆದರೂ, ಮೃತ್ಯುವಿನ ಮೊರೆ ಹೋದರೂ, ಪಾತಾಳಲೋಕವನ್ನು ಹೊಕ್ಕಿದರೂ ನೀನು ಜೀವಂತನಾಗಿ ರಾಮನಿಂದ ಬಿಡುಗಡೆ ಹೊಂದಲಾರೆ.’’ ॥26॥
(ಶ್ಲೋಕ-27)
ಮೂಲಮ್
ಶುಭಂ ಹಿತಂ ಪವಿತ್ರಂ ಚ ವಿಭೀಷಣವಚಃ ಖಲಃ ।
ಪ್ರತಿಜಗ್ರಾಹ ನೈವಾಸೌ ಮ್ರಿಯಮಾಣ ಇವೌಷಧಮ್ ॥
ಅನುವಾದ
ಶುಭಕರವಾಗಿಯೂ, ಹಿತವಾಗಿಯೂ, ಪವಿತ್ರವಾಗಿಯೂ ಇದ್ದ ವಿಭೀಷಣನ ವಾಕ್ಯಗಳನ್ನು ಸಾಯುವವನು ಔಷಧಿಯನ್ನು ಸ್ವೀಕರಿಸದೆ ಇರುವಂತೆ ಆ ದುಷ್ಟರಾವಣನು ಮನ್ನಿಸದೇ ಹೋದನು. ॥27॥
(ಶ್ಲೋಕ-28)
ಮೂಲಮ್
ಕಾಲೇನ ನೋದಿತೋ ದೈತ್ಯೋ ವಿಭೀಷಣಮಥಾಬ್ರವೀತ್ ।
ಮದ್ದತ್ತಭೋಗೈಃ ಪುಷ್ಟಾಂಗೋ ಮತ್ಸಮೀಪೇ ವಸನ್ನಪಿ ॥
(ಶ್ಲೋಕ-29)
ಮೂಲಮ್
ಪ್ರತೀಪಮಾಚರತ್ಯೇಷ ಮಮೈವ ಹಿತಕಾರಿಣಃ ।
ಮಿತ್ರಭಾವೇನ ಶತ್ರುರ್ಮೇ ಜಾತೋ ನಾಸ್ತ್ಯತ್ರ ಸಂಶಯಃ ॥
ಅನುವಾದ
ಕಾಲಪ್ರೇರಿತನಾದ ಆ ರಾಕ್ಷಸನು ವಿಭೀಷಣನನ್ನು ಕುರಿತು ‘‘ನಾನು ಕೊಟ್ಟ ಭೋಗ ಸಾಮಗ್ರಿಗಳಿಂದ ಬೆಳೆದವನಾಗಿ, ನನ್ನ ಹತ್ತಿರವೇ ಇದ್ದುಕೊಂಡಿದ್ದು, ಈತನಕ ಹಿತವನ್ನು ಮಾಡಿದ ನನಗೆ ವಿರುದ್ಧವಾಗಿಯೇ ನಡೆಯುತ್ತಿದ್ದಾನಲ್ಲ. ಈತನು ಮಿತ್ರರೂಪ ದಿಂದ ಹುಟ್ಟಿದ ಶತ್ರುವೇ ಆಗಿದ್ದಾನೆ, ಇದರಲ್ಲಿ ಸಂಶಯವೇ ಇಲ್ಲ. ॥28-29॥
(ಶ್ಲೋಕ-30)
ಮೂಲಮ್
ಅನಾರ್ಯೇಣ ಕೃತನಘೇನ ಸಂಗತಿರ್ಮೇ ನ ಯುಜ್ಯತೇ ।
ವಿನಾಶಮಭಿಕಾಂಕ್ಷಂತಿ ಜ್ಞಾತೀನಾಂ ಜ್ಞಾತಯಃ ಸದಾ ॥
(ಶ್ಲೋಕ-31)
ಮೂಲಮ್
ಯೋಽನ್ಯಸ್ತ್ವೇವಂವಿಧಂ ಬ್ರೂಯಾದ್ವಾಕ್ಯಮೇಕಂ ನಿಶಾಚರಃ ।
ಹನ್ಮಿ ತಸ್ಮಿನ್ ಕ್ಷಣೇ ಏವ ಧಿಕ್ ತ್ವಾಂ ರಕ್ಷಃ ಕುಲಾಧಮಮ್ ॥
ಅನುವಾದ
ಉಪಕಾರ ಸ್ಮರಣೆ ಇಲ್ಲದ ಅಯೋಗ್ಯನಾದ ಈತನೊಡನೆ ನನಗೆ ಸಹವಾಸವು ತಕ್ಕದ್ದಲ್ಲ. ದಾಯಾದಿಗಳು ಯಾವಾಗಲೂ ತಮ್ಮ ದಾಯಾದಿಗಳು ಹಾಳಾಗುವುದನ್ನೇ ಬಯಸುತ್ತಾರೆ. ಯಾವನಾದರು ಬೇರೊಬ್ಬ ರಾಕ್ಷಸನು ಹೀಗೆ ಬಂದು ಮಾತನ್ನು ಹೇಳಿದನಾದರೆ ಆ ಕ್ಷಣದಲ್ಲಿಯೇ ಅವನನ್ನು ಕೊಂದುಬಿಡುತ್ತಿದ್ದೆ. ಇದೋ, ರಾಕ್ಷಸವಂಶಕ್ಕೆ ಅಧಮನೆನಿಸಿದ ನಿನಗೆ ಧಿಕ್ಕಾರವಿರಲಿ’’ ಎಂದು ಗುಡುಗಿದನು. ॥30-31॥
(ಶ್ಲೋಕ-32)
ಮೂಲಮ್
ರಾವಣೇನೈವಮುಕ್ತಃ ಸನ್ಪರುಷಂ ಸ ವಿಭೀಷಣಃ ।
ಉತ್ಪಪಾತ ಸಭಾಮಧ್ಯಾದ್ಗದಾಪಾಣಿರ್ಮಹಾಬಲಃ ॥
(ಶ್ಲೋಕ-33)
ಮೂಲಮ್
ಚತುರ್ಭಿರ್ಮಂತ್ರಿಭಿಃ ಸಾರ್ಧಂ ಗಗನಸ್ಥೋಽಬ್ರವೀದ್ವಚಃ ।
ಕ್ರೋಧೇನ ಮಹತಾವಿಷ್ಟೋ ರಾವಣಂ ದಶಕಂಧರಮ್ ।
ಮಾ ವಿನಾಶಮುಪೈಹಿ ತ್ವಂ ಪ್ರಿಯವಾದಿನಮೇವ ಮಾಮ್ ॥
ಅನುವಾದ
ರಾವಣನು ಈ ಕಟುವಚನ ಆಡಿದಾಗ ಮಹಾ ಬಲಿಷ್ಠನಾದ ವಿಭೀಷಣನು ಗದೆಯನ್ನು ಕೈಯ್ಯಲ್ಲೆತ್ತಿಕೊಂಡು, ಸಭಾ ಮಧ್ಯದಿಂದ ನಾಲ್ಕು ಮಂತ್ರಿಗಳೊಡಗೂಡಿ ಆಕಾಶಕ್ಕೆ ನೆಗೆದನು. ಅಲ್ಲೆ ನಿಂತು ಹೆಚ್ಚಿನ ಕೋಪದಿಂದ ಕೂಡಿ ದಶಕಂಠ ನಾದ ರಾವಣನನ್ನು ಕುರಿತು ಹೀಗೆಂದನು. ॥32-33॥
(ಶ್ಲೋಕ-34)
ಮೂಲಮ್
ಧಿಕ್ಕರೋಷಿ ತಥಾಪಿ ತ್ವಂ ಜ್ಯೇಷ್ಠೋ ಭ್ರಾತಾ ಪಿತುಃ ಸಮಃ ।
ಕಾಲೋ ರಾಘವರೂಪೇಣ ಜಾತೋ ದಶರಥಾಲಯೇ ॥
ಅನುವಾದ
‘‘ಅಯ್ಯಾ! ನಿನಗೆ ಹಿತವಾದುದ್ದನ್ನೇ ಹೇಳಿದ್ದರೂ ನೀನು ನನ್ನನ್ನು ತಿರಸ್ಕರಿಸಿರುವೆ. ನೀನು ಹಾಳಾಗಬೇಡ. ಹೇಗಾದರೂ ನೀನು ತಂದೆಗೆ ಸಮಾನನಾದ ಹಿರಿಯಣ್ಣನಾಗಿರುವೆ. ನಿನ್ನ ಮೃತ್ಯುವೇ ರಾಮನ ರೂಪದಿಂದ ದಶರಥನ ಮನೆಯಲ್ಲಿ ಪ್ರಕಟನಾಗಿರುವದು. ॥34॥
(ಶ್ಲೋಕ-35)
ಮೂಲಮ್
ಕಾಲೀ ಸೀತಾಭಿಧಾನೇನ ಜಾತಾ ಜನಕನಂದಿನೀ ।
ತಾವುಭಾವಾಗತಾವತ್ರ ಭೂಮೇರ್ಭಾರಾಪನುತ್ತಯೇ ॥
ಅನುವಾದ
ಮಹಾಶಕ್ತಿ ಸ್ವರೂಪಿಣಿ ಕಾಳಿಯೇ ಸೀತೆ ಎಂಬ ಹೆಸರಿನಿಂದ ಜನಕನ ಮಗಳಾಗಿ ಅವತರಿಸಿರುವಳು. ಇವರಿಬ್ಬರೂ ಭೂಭಾರ ಹರಣಕ್ಕಾಗಿ ಇಲ್ಲಿಗೆ ಬಂದಿರುವರು. ॥35॥
(ಶ್ಲೋಕ-36)
ಮೂಲಮ್
ತೇನೈವ ಪ್ರೇರಿತಸ್ತ್ವಂ ತು ನ ಶೃಣೋಷಿ ಹಿತಂ ಮಮ ।
ಶ್ರೀರಾಮಃ ಪ್ರಕೃತೇಃ ಸಾಕ್ಷಾತ್ಪರಸ್ತಾತ್ಸರ್ವದಾ ಸ್ಥಿತಃ ॥
ಅನುವಾದ
ಆ ಕಾಲನಿಂದ ಪ್ರೇರಿತನಾಗಿಯೇ ನೀನು ನನ್ನ ಹಿತವಾಕ್ಯಗಳನ್ನು ಕೇಳುತ್ತಿಲ್ಲ. ಶ್ರೀರಾಮನಾದರೋ ಪ್ರಕೃತಿಯನ್ನು ಮೀರಿದ ಸಾಕ್ಷಾತ್ ಪರಬ್ರಹ್ಮನಾಗಿರುವನು. ॥36॥
(ಶ್ಲೋಕ-37)
ಮೂಲಮ್
ಬಹಿರಂತಶ್ಚ ಭೂತಾನಾಂ ಸಮಃ ಸರ್ವತ್ರ ಸಂಸ್ಥಿತಃ ।
ನಾಮರೂಪಾದಿಭೇದೇನ ತತ್ತನ್ಮಯ ಇವಾಮಲಃ ॥
(ಶ್ಲೋಕ-38)
ಮೂಲಮ್
ಯಥಾ ನಾನಾಪ್ರಕಾರೇಷು ವೃಕ್ಷೇಷ್ವೇಕೋ ಮಹಾನಲಃ ।
ತತ್ತದಾಕೃತಿಭೇದೇನ ಭಿದ್ಯತೇಽಜ್ಞಾನಚಕ್ಷುಷಾಮ್ ॥
(ಶ್ಲೋಕ-39)
ಮೂಲಮ್
ಪಂಚಕೋಶಾದಿಭೇದೇನ ತತ್ತನ್ಮಯ ಇವಾಬಭೌ ।
ನೀಲಪೀತಾದಿಯೋಗೇನ ನಿರ್ಮಲಃ ಸ್ಫಟಿಕೋ ಯಥಾ ॥
ಅನುವಾದ
ಅವನು ಎಲ್ಲ ಪ್ರಾಣಿಗಳ ಒಳಗೂ-ಹೊರಗೂ ವ್ಯಾಪಿಸಿಕೊಂಡು ಸಮನಾಗಿ ಎಲ್ಲೆಲ್ಲಿಯೂ ಇದ್ದು ಕೊಂಡಿರುವನು. ನಾಮರೂಪಾದಿ ಭೇದದಿಂದ ಹೇಗೆ ಬೆಂಕಿಯು ಒಂದೇ ಆಗಿದ್ದರೂ ನಾನಾರೀತಿಯಾದ ಮರಗಳನ್ನಾಶ್ರಯಿಸಿ ತೋರಿಕೊಳ್ಳುವಾಗ ನಾನಾ ಆಕಾರಗಳಿಂದ ಕೂಡಿರುವಂತೆ ಕಂಡುಬರುವುದೋ, ಹಾಗೆ ಪರಿಶುದ್ಧನೇ ಆದ ಆತ್ಮನು ಅನೇಕ ನಾಮರರೂಪಗಳಿಂದ ಅಜ್ಞಾನಿಗಳಿಗೆ ತೋರುತ್ತಿರುವನು. ಸ್ವಚ್ಛವಾದ ಸ್ಫಟಿಕವು ಕಪ್ಪು, ಹಳದಿ ಮುಂತಾದ ಬಣ್ಣಗಳ ಸಮೀಪದಲ್ಲಿಟ್ಟಾಗ ಆಯಾ ಬಣ್ಣದಂತೆ ಕಂಡು ಬರುವಂತೆಯೇ ಪಂಚಕೋಶಗಳ ಉಪಾಧಿ ಭೇದದಿಂದ ಆತ್ಮನು ಆಯಾ ಉಪಾಧಿಮಯನಾಗಿ ಕಂಡು ಬರುತ್ತಿರುವನು. ॥37-39॥
(ಶ್ಲೋಕ-40)
ಮೂಲಮ್
ಸ ಏವ ನಿತ್ಯಮುಕ್ತೋಽಪಿ ಸ್ವಮಾಯಾಗುಣಬಿಂಬಿತಃ ।
ಕಾಲಃ ಪ್ರಧಾನಂ ಪುರುಷೋಽವ್ಯಕ್ತಂ ಚೇತಿ ಚತುರ್ವಿಧಃ ॥
ಅನುವಾದ
ಆ ಭಗವಂತನೇ ನಿತ್ಯಮುಕ್ತ ನಾಗಿದ್ದರೂ ತನ್ನ ಮಾಯಾಗುಣಗಳಿಂದ ಪ್ರತಿಬಿಂಬಿತನಾಗಿ ಕಾಲ, ಪ್ರಕೃತಿ, ಪುರುಷ, ಅವ್ಯಾಕೃತ ಎಂಬೀರೀತಿಯಿಂದ ನಾಲ್ಕು ರೂಪದಿಂದ ಪ್ರಕಟನಾಗುವನು. ॥40॥
(ಶ್ಲೋಕ-41)
ಮೂಲಮ್
ಪ್ರಧಾನಪುರುಷಾಭ್ಯಾಂ ಸ ಜಗತ್ಕೃತ್ಸ್ನಂ ಸೃಜತ್ಯಜಃ ।
ಕಾಲರೂಪೇಣ ಕಲನಾಂ ಜಗತಃ ಕುರುತೇವ್ಯಯಃ ॥
ಅನುವಾದ
ಅವನು ಅಜನ್ಮಾ ಆಗಿದ್ದರೂ ಪ್ರಕೃತಿ ಪುರುಷರೊಡಗೂಡಿ ಇಡೀ ಪ್ರಪಂಚವನ್ನೆಲ್ಲ ರಚಿಸುತ್ತಿರುವನು. ಅವಿನಾಶಿಯಾಗಿದ್ದರೂ ಕಾಲರೂಪದಿಂದ ಜಗತ್ತಿನ ಸಂಹಾರ ಮಾಡುತ್ತಿರುತ್ತಾನೆ. ॥41॥
(ಶ್ಲೋಕ-42)
ಮೂಲಮ್
ಕಾಲರೂಪೀ ಸ ಭಗವಾನ್ ರಾಮರೂಪೇಣ ಮಾಯಯಾ ॥
(ಶ್ಲೋಕ-43)
ಮೂಲಮ್
ಬ್ರಹ್ಮಣಾ ಪ್ರಾರ್ಥಿತೋ ದೇವಸ್ತ್ವದ್ವಧಾರ್ಥಮಿಹಾಗತಃ ।
ತದನ್ಯಥಾ ಕಥಂ ಕುರ್ಯಾತ್ಸತ್ಯಸಂಕಲ್ಪ ಈಶ್ವರಃ ॥
ಅನುವಾದ
ಅದೇ ಕಾಲರೂಪನಾದ ಭಗವಂತನು ಬ್ರಹ್ಮನ ಪ್ರಾರ್ಥನೆಯಂತೆ ರಾಮನಾಗಿ ಮಾಯೆಯಿಂದ ಅವತರಿಸಿ ನಿನ್ನನ್ನು ಕೊಲ್ಲಲು ಇಲ್ಲಿಗೆ ಬಂದಿರುವನು. ಸತ್ಯಸಂಕಲ್ಪನಾದ ಆ ಪ್ರಭುವು ಅದನ್ನು ಹೇಗೆ ತಾನೇ ಬದಲಾಯಿಸಿಯಾನು? ॥42-43॥
(ಶ್ಲೋಕ-44)
ಮೂಲಮ್
ಹನಿಷ್ಯತಿ ತ್ವಾಂ ರಾಮಸ್ತು ಸಪುತ್ರಬಲವಾಹನಮ್ ।
ಹನ್ಯಮಾನಂ ನ ಶಕ್ನೋಮಿ ದ್ರಷ್ಟುಂ ರಾಮೇಣ ರಾವಣ ॥
(ಶ್ಲೋಕ-45)
ಮೂಲಮ್
ತ್ವಾಂ ರಾಕ್ಷಸಕುಲಂ ಕೃತ್ಸ್ನಂ ತತೋ ಗಚ್ಛಾಮಿ ರಾಘವಮ್ ।
ಮಯಿ ಯಾತೇ ಸುಖೀ ಭೂತ್ವಾ ರಮಸ್ವಭವನೇ ಚಿರಮ್ ॥
ಅನುವಾದ
ಶ್ರೀರಾಮನಾದರೋ ಮಕ್ಕಳು, ಸೈನ್ಯ, ವಾಹನಾದಿಗಳ ಸಮೇತನಾದ ನಿನ್ನನ್ನು ಕೊಲ್ಲಲಿರುವನು. ಎಲೈ ರಾವಣಾ! ರಾಮನು ನಿನ್ನನ್ನೂ, ಇಡೀಯ ರಾಕ್ಷಸವಂಶವನ್ನೂ ವಿನಾಶ ಮಾಡುತ್ತಿರುವುದನ್ನು ನಾನು ನೋಡಲಾರೆನು. ಆದ್ದರಿಂದ ನಾನು ಶ್ರೀರಾಮನ ಬಳಿಗೆ ಹೋಗುವೆನು. ನಾನು ಹೊರಟು ಹೋದ ಮೇಲೆ ನೀನು ಸುಖವಾಗಿ, ಚಿರಕಾಲ ಅರಮನೆಯಲ್ಲಿದ್ದು ಭೋಗಗಳನ್ನು ಭೋಗಿಸುತ್ತಿರು.’’ ॥44-45॥
(ಶ್ಲೋಕ-46)
ಮೂಲಮ್
ವಿಭೀಷಣೋ ರಾವಣ ವಾಕ್ಯತಃ ಕ್ಷಣಾ-
ದ್ವಿಸೃಜ್ಯ ಸರ್ವಂ ಸಪರಿಚ್ಛದಂ ಗೃಹಮ್ ।
ಜಗಾಮ ರಾಮಸ್ಯ ಪದಾರವಿಂದಯೋಃ
ಸೇವಾಭಿಕಾಂಕ್ಷೀ ಪರಿಪೂರ್ಣಮಾನಸಃ ॥
ಅನುವಾದ
ವಿಭೀಷಣನು ರಾವಣನ ಮಾತಿನಿಂದ ನೊಂದವನಾಗಿ ಸಮಸ್ತ ಭೋಗೋಪಕರಣಗಳಿಂದ ಕೂಡಿದ್ದ ತನ್ನ ಮನೆಯನ್ನು ಬಿಟ್ಟು, ಶ್ರೀರಾಮನ ಪಾದಾರವಿಂದಗಳಿಗೆ ಶರಣಾಗಿ ಪೂರ್ಣವಾದ ಮನಸ್ಸಿನಿಂದ ಆತನ ಸೇವೆಯನ್ನು ಬಯಸಿ ಹೊರಟನು. ॥46॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.