೦೧

[ಮೊದಲನೆಯ ಸರ್ಗ]

ಭಾಗಸೂಚನಾ

ವಾನರ ಸೇನೆಯ ಪ್ರಯಾಣ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಯಥಾವದ್ಭಾಷಿತಂ ವಾಕ್ಯಂ ಶ್ರುತ್ವಾ ರಾಮೋ ಹನೂಮತಃ ।
ಉವಾಚಾನಂತರಂ ವಾಕ್ಯಂ ಹರ್ಷೇಣ ಮಹತಾವೃತಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಪಾರ್ವತಿ! ಹನುಮಂತನು ಸೀತೆಯ ವಿಷಯದಲ್ಲಿ ಇದ್ದದ್ದು ಇದ್ದಂತೆ ಹೇಳಿದ ಮಾತನ್ನು ಕೇಳಿದ ಶ್ರೀರಾಮನು ಬಹಳ ಸಂತೋಷಗೊಂಡು ಹೀಗೆ ಹೇಳಿದನು.॥1॥

(ಶ್ಲೋಕ-2)

ಮೂಲಮ್

ಕಾರ್ಯಂ ಕೃತಂ ಹನುಮತಾ ದೇವೈರಪಿ ಸುದುಷ್ಕರಮ್ ।
ಮನಸಾಪಿ ಯದನ್ಯೇನ ಸ್ಮರ್ತುಂ ಶಕ್ಯಂ ನ ಭೂತಲೇ ॥

ಅನುವಾದ

‘‘ದೇವತೆಗಳಿಂದಲೂ ಮಾಡಲು ಕಷ್ಟಕರವಾದಂತಹ ಕೆಲಸವನ್ನು ಹನುಮಂತನು ಮಾಡಿರುತ್ತಾನೆ. ಭೂಮಿಯಲ್ಲಿ ಬೇರೆ ಯಾರೂ ಮನಸ್ಸಿ ನಲ್ಲಿಯೂ ಕೂಡ ಇಂತಹ ಕಾರ್ಯವನ್ನು ಯೋಚಿಸಲಾರರು. ॥2॥

(ಶ್ಲೋಕ-3)

ಮೂಲಮ್

ಶತಯೋಜನವಿಸ್ತೀರ್ಣಂ ಲಂಘಯೇತ್ಕಃ ಪಯೋನಿಧಿಮ್ ।
ಲಂಕಾಂ ಚ ರಾಕ್ಷಸೈರ್ಗುಪ್ತಾಂ ಕೋ ವಾ ಧರ್ಷಯಿತುಂ ಕ್ಷಮಃ ॥

ಅನುವಾದ

ನೂರು ಯೋಜನಗಳಷ್ಟು ಅಗಲವಾದ ಸಮುದ್ರವನ್ನು ಯಾರು ತಾನೆ ನೆಗೆದಾರು? ರಾಕ್ಷಸರಿಂದ ಪಾಲಿತ ಲಂಕೆಯನ್ನು ಯಾರು ತಾನೆ ಧ್ವಂಸಗೊಳಿಸಬಲ್ಲರು? ॥3॥

(ಶ್ಲೋಕ-4)

ಮೂಲಮ್

ಭೃತ್ಯಕಾರ್ಯಂ ಹನುಮತಾ ಕೃತಂ ಸರ್ವಮಶೇಷತಃ ।
ಸುಗ್ರೀವಸ್ಯೇದೃಶೋ ಲೋಕೇ ನ ಭೂತೋ ನ ಭವಿಷ್ಯತಿ ॥

ಅನುವಾದ

ಸುಗ್ರೀವನ ಸೇವಕನಾದ ಹನುಮಂತನು ಸೇವಾಧರ್ಮವನ್ನು ದಕ್ಷತೆಯಿಂದ ಚೆನ್ನಾಗಿ ಪೂರೈಸಿರುವನು. ಇಂತಹ ಸೇವಕನು ಭುವಿಯಲ್ಲಿ ‘ನಭೂತೋ ನ ಭಷ್ಯತಿ’ ॥4॥

(ಶ್ಲೋಕ-5)

ಮೂಲಮ್

ಅಹಂ ಚ ರಘುವಂಶಶ್ಚ ಲಕ್ಷ್ಮಣಶ್ಚ ಕಪೀಶ್ವರಃ ।
ಜಾನಕ್ಯಾ ದರ್ಶನೇನಾದ್ಯ ರಕ್ಷಿತಾಃ ಸ್ಮೋ ಹನೂಮತಾ ॥

ಅನುವಾದ

ಹನುಮಂತನು ಸೀತೆಯನ್ನು ಕಂಡು ಬಂದು, ನನ್ನನ್ನೂ, ರಘುವಂಶವನ್ನೂ, ಲಕ್ಷ್ಮಣ - ಕಪಿರಾಜ ಸುಗ್ರೀವನನ್ನೂ ರಕ್ಷಿಸಿರುವನು. ॥5॥

(ಶ್ಲೋಕ-6)

ಮೂಲಮ್

ಸರ್ವಥಾ ಸುಕೃತಂ ಕಾರ್ಯಂ ಜಾನಕ್ಯಾಃ ಪರಿಮಾರ್ಗಣಮ್ ।
ಸಮುದ್ರಂ ಮನಸಾ ಸ್ಮೃತ್ವಾ ಸೀದತೀವ ಮನೋ ಮಮ ॥

ಅನುವಾದ

ಸೀತೆಯನ್ನು ಹುಡುಕಿದ್ದು ಎಲ್ಲ ರೀತಿಯಿಂದ ಉತ್ತಮವಾದ ಕೆಲಸವಾಗಿದೆ. ಆದರೆ ಸಮುದ್ರವನ್ನು ನೆನೆಸಿಕೊಂಡರೆ ನನ್ನ ಮನಸ್ಸು ಕುಸಿಯುವಂತಾಗಿದೆ. ॥6॥

(ಶ್ಲೋಕ-7)

ಮೂಲಮ್

ಕಥಂ ನಕ್ರಝಷಾಕೀರ್ಣಂ ಸಮುದ್ರಂ ಶತಯೋಜನಮ್ ।
ಲಂಘಯಿತ್ವಾ ರಿಪುಂ ಹನ್ಯಾಂ ಕಥಂ ದ್ರಕ್ಷ್ಯಾಮಿ ಜಾನಕೀಮ್ ॥

ಅನುವಾದ

ಮೀನು-ಮೊಸಳೆಗಳಿಂದ ತುಂಬಿದ ನೂರು ಯೋಜನ ಅಗಲವಾದ ಸಮುದ್ರವನ್ನು ದಾಟಿ ಶತ್ರುವನ್ನು ನಾನು ಹೇಗೆ ಕೊಲ್ಲಲಿ? ಸೀತೆಯನ್ನು ಹೇಗೆ ನೋಡ ಬಲ್ಲೆನು?’’ ॥7॥

(ಶ್ಲೋಕ-8)

ಮೂಲಮ್

ಶ್ರುತ್ವಾ ತು ರಾಮವಚನಂ ಸುಗ್ರೀವಃ ಪ್ರಾಹ ರಾಘವಮ್ ।
ಸಮುದ್ರಂ ಲಂಘಯಿಷ್ಯಾಮೋ ಮಹಾನಕ್ರಝಷಾಕುಲಮ್ ॥

(ಶ್ಲೋಕ-9)

ಮೂಲಮ್

ಲಂಕಾಂ ಚ ವಿಧಮಿಷ್ಯಾಮೋ ಹನಿಷ್ಯಾಮೋಽದ್ಯ ರಾವಣಮ್ ।
ಚಿಂತಾಂ ತ್ಯಜ ರಘುಶ್ರೇಷ್ಠ ಚಿಂತಾ ಕಾರ್ಯವಿನಾಶಿನೀ ॥

ಅನುವಾದ

ಶ್ರೀರಾಮನ ಮಾತನ್ನು ಕೇಳಿ ಸುಗ್ರೀವನು ಹೇಳಿದನು- ಹೇ ರಘುನಾಥಾ! ದೊಡ್ಡ-ದೊಡ್ಡ ಮೊಸಳೆ-ತಿಮಿಂಗಿಲಗಳಿಂದ ಕೂಡಿದ ಸಮುದ್ರವನ್ನು ನಾವು ಹಾರಿ ಹೋಗಿ ಬೇಗನೆ ಲಂಕೆಯನ್ನು ನಾಶಮಾಡಿ, ರಾವಣನನ್ನು ಕೊಂದು ಬಿಡೋಣ. ಹೇ ರಘುರಾಮಾ! ನೀನು ಚಿಂತೆಯನ್ನು ಬಿಡು. ಚಿಂತೆಯೆಂಬುದು ಎಲ್ಲ ಕಾರ್ಯವನ್ನು ಕೆಡಿಸುವಂತಹುದು. ॥8-9॥

(ಶ್ಲೋಕ-10)

ಮೂಲಮ್

ಏತಾನ್ಪಶ್ಯ ಮಹಾಸತ್ತ್ವಾನ್ ಶೂರಾನ್ವಾನರಪುಂಗವಾನ್ ।
ತ್ವತ್ಪ್ರಿಯಾರ್ಥಂ ಸಮುದ್ಯುಕ್ತಾನ್ಪ್ರವೇಷ್ಟುಮಪಿ ಪಾವಕಮ್ ॥

ಅನುವಾದ

ಇದೋ, ಶೂರರೂ, ಮಹಾಶಕ್ತಿಶಾಲಿಗಳೂ ಆದ ಕಪಿ ಶ್ರೇಷ್ಠರನ್ನು ನೋಡು. ಇವರುಗಳು ನಿನ್ನ ಪ್ರೀತಿಗಾಗಿ ಬೇಕಾದರೆ ಅಗ್ನಿಪ್ರವೇಶವನ್ನು ಕೂಡ ಮಾಡಲು ಸಿದ್ಧರಾಗಿರುವರು. ॥10॥

(ಶ್ಲೋಕ-11)

ಮೂಲಮ್

ಸಮುದ್ರತರಣೇ ಬುದ್ಧಿಂ ಕುರುಷ್ವ ಪ್ರಥಮಂ ತತಃ ।
ದೃಷ್ಟ್ವಾ ಲಂಕಾಂ ದಶಗ್ರೀವೋ ಹತ ಇತ್ಯೇವ ಮನ್ಮಹೇ ॥

ಅನುವಾದ

ಮೊದಲು ಸಮುದ್ರವನ್ನು ದಾಟುವ ಬಗ್ಗೆ ಮನಸ್ಸು ಮಾಡು. ಲಂಕೆಯನ್ನು ದರ್ಶಿಸುತ್ತಲೇ ರಾವಣನು ಹತನಾದನೆಂದೇ ಭಾವಿಸುವೆವು. ॥11॥

(ಶ್ಲೋಕ-12)

ಮೂಲಮ್

ನಹಿ ಪಶ್ಯಾಮ್ಯಹಂ ಕಂಚಿತ್ತ್ರಿಷು ಲೋಕೇಷು ರಾಘವ ।
ಗೃಹೀತಧನುಷೋ ಯಸ್ತೇ ತಿಷ್ಠೇದಭಿಮುಖೋ ರಣೇ ॥

ಅನುವಾದ

ಹೇ ರಾಘವಾ! ಈ ಮೂರು ಲೋಕಗಳಲ್ಲಿಯೂ ನಿನಗೆ ಎದುರಾಗಿ ಯುದ್ಧದಲ್ಲಿ ಬಿಲ್ಲನ್ನು ಹಿಡಿದು ನಿಲ್ಲುವಂತಹ ಯಾವ ವೀರನನ್ನು ನಾನು ಕಾಣೆನು. ॥12॥

(ಶ್ಲೋಕ-13)

ಮೂಲಮ್

ಸರ್ವಥಾ ನೋ ಜಯೋ ರಾಮ ಭವಿಷ್ಯತಿ ನ ಸಂಶಯಃ ।
ನಿಮಿತ್ತಾನಿ ಚ ಪಶ್ಯಾಮಿ ತಥಾ ಭೂತಾನಿ ಸರ್ವಶಃ ॥

ಅನುವಾದ

ರಾಮಾ! ನಮಗೆ ಜಯವಾಗುವುದರಲ್ಲಿ ಸಂಶಯವೇ ಇಲ್ಲ. ಇದು ಖಂಡಿತವಾದುದು; ಏಕೆಂದರೆ ನನಗೆ ಎಲ್ಲ ಕಡೆಗಳಲ್ಲಿ ಶುಭಶಕುನಗಳೇ ಕಂಡುಬರುತ್ತಿವೆ.’’ ॥13॥

(ಶ್ಲೋಕ-14)

ಮೂಲಮ್

ಸುಗ್ರೀವವಚನಂ ಶ್ರುತ್ವಾ ಭಕ್ತಿವೀರ್ಯಸಮನ್ವಿತಮ್ ।
ಅಂಗೀಕೃತ್ಯಾಬ್ರವೀದ್ರಾಮೋ ಹನೂಮಂತಂ ಪುರಃಸ್ಥಿತಮ್ ॥

(ಶ್ಲೋಕ-15)

ಮೂಲಮ್

ಯೇನ ಕೇನ ಪ್ರಕಾರೇಣ ಲಂಘಯಾಮೋ ಮಹಾರ್ಣವಮ್ ।
ಲಂಕಾಸ್ವರೂಪಂ ಮೇ ಬ್ರೂಹಿ ದುಃಸಾಧ್ಯಂ ದೇವದಾನವೈಃ ॥

(ಶ್ಲೋಕ-16)

ಮೂಲಮ್

ಜ್ಞಾತ್ವಾ ತಸ್ಯ ಪ್ರತೀಕಾರಂ ಕರಿಷ್ಯಾಮಿ ಕಪೀಶ್ವರ ।
ಶ್ರುತ್ವಾ ರಾಮಸ್ಯವಚನಂ ಹನೂಮಾನ್ವಿನಯಾನ್ವಿತಃ ॥

(ಶ್ಲೋಕ-17)

ಮೂಲಮ್

ಉವಾಚ ಪ್ರಾಂಜಲಿರ್ದೇವ ಯಥಾ ದೃಷ್ಟಂ ಬ್ರವೀಮಿ ತೇ ।
ಲಂಕಾ ದಿವ್ಯಾ ಪುರೀ ದೇವ ತ್ರಿಕೂಟಶಿಖರೇ ಸ್ಥಿತಾ ॥

ಅನುವಾದ

ಸುಗ್ರೀವನ ಭಕ್ತಿ ಹಾಗೂ ಪೌರುಷಗಳಿಂದ ಒಡಗೂಡಿದ ಮಾತನ್ನು ಶ್ರೀರಾಮಚಂದ್ರನು ಆದರದಿಂದ ಒಪ್ಪಿಕೊಂಡು, ಎದುರಿಗೆ ನಿಂತಿದ್ದ ಹನುಮಂತನನ್ನು ಕುರಿತು ‘‘ಆಂಜನೇಯಾ! ಹೇಗಾದರೂ ಸಮುದ್ರವನ್ನು ದಾಟಬಹುದು. ಈಗ ನೀನು ನನಗೆ ಲಂಕೆಯ ಸ್ವರೂಪವನ್ನು ತಿಳಿಸು; ಏಕೆಂದರೆ ಅದು ದೇವ-ದಾನವರಿಗೂ ಜಯಿಸಲು ಅಶಕ್ಯವಾಗಿದೆ ಎಂದು ಕೇಳಿದ್ದೇನೆ. ಅದರ ಸ್ವರೂಪ ತಿಳಿದ ಮೇಲೆ ಅದಕ್ಕೆ ಬೇಕಾದ ಪ್ರತಿಕಾರವನ್ನು ಯೋಚಿಸಬಹುದು.’’ ರಾಮಚಂದ್ರನ ಮಾತನ್ನು ಕೇಳಿದ ಹನುಮಂತನು ವಿನಯದಿಂದ ಕೂಡಿ ಕೈಮುಗಿದುಕೊಂಡು ಹೇಳುತ್ತಾನೆ ‘‘ಸ್ವಾಮಿ! ನಾನು ಕಂಡಂತೆ ನಿನಗೆ ಹೇಳುತ್ತೇನೆ. ದಿವ್ಯವಾದ ಲಂಕಾಪಟ್ಟಣವು ತ್ರಿಕೂಟ ಪರ್ವತದ ಶಿಖರದಲ್ಲಿ ನೆಲೆಸಿದೆ. ॥14-17॥

(ಶ್ಲೋಕ-18)

ಮೂಲಮ್

ಸ್ವರ್ಣಪ್ರಾಕಾರಸಹಿತಾ ಸ್ವರ್ಣಾಟ್ಟಾಲಕಸಂಯುತಾ ।
ಪರಿಖಾಭಿಃ ಪರಿವೃತಾ ಪೂರ್ಣಾಭಿರ್ನಿರ್ಮಲೋದಕೈಃ ॥

(ಶ್ಲೋಕ-19)

ಮೂಲಮ್

ನಾನೋಪವನಶೋಭಾಢ್ಯಾ ದಿವ್ಯವಾಪೀಭಿರಾವೃತಾ ।
ಗೃಹೈರ್ವಿಚಿತ್ರಶೋಭಾಡೈರ್ಮಣಿಸ್ತಂಭಮಯೈಃ ಶುಭೈಃ ॥

ಅನುವಾದ

ಎತ್ತರವಾದ ಚಿನ್ನದ ಕೋಟೆಯಿಂದ ಒಡಗೊಂಡು, ಶುದ್ಧವಾದ ನೀರಿನಿಂದ ತುಂಬಿದ ಕಂದಕಗಳು ಸುತ್ತಲೂ ಇವೆ. ಅನೇಕ ವನ-ಉಪವನಗಳಿಂದ ಶೋಭಾಯಮಾನವಾಗಿದೆ. ಅಲ್ಲಲ್ಲಿ ಸುಂದರವಾದ ಸರೋವರಗಳೂ, ಬಾವಿಗಳೂ ಇವೆ. ವಿಚಿತ್ರ ಶೋಭೆಯಿಂದ ಒಡಗೂಡಿದ ಮಣಿಮಯ ಕಂಬಗಳಿಂದ ಶೋಭಿತವಾದ ಅನೇಕ ಪ್ರಾಸಾದಗಳಿಂದ ತುಂಬಿದೆ. ॥18-19॥

(ಶ್ಲೋಕ-20)

ಮೂಲಮ್

ಪಶ್ಚಿಮದ್ವಾರಮಾಸಾದ್ಯ ಗಜವಾಹಾಃ ಸಹಸ್ರಶಃ ।
ಉತ್ತರೇ ದ್ವಾರಿ ತಿಷ್ಠಂತಿ ಸಾಶ್ವವಾಹಾಃ ಸಪತ್ತಯಃ ॥

(ಶ್ಲೋಕ-21)

ಮೂಲಮ್

ತಿಷ್ಠಂತ್ಯರ್ಬುದಸಂಖ್ಯಾಕಾಃ ಪ್ರಾಚ್ಯಾಮಪಿ ತಥೈವ ಚ ।
ರಕ್ಷಿಣೋ ರಾಕ್ಷಸಾ ವೀರಾ ದ್ವಾರಂ ದಕ್ಷಿಣಮಾಶ್ರಿತಾಃ ॥

ಅನುವಾದ

ಅದರ ಪಶ್ಚಿಮದ ಬಾಗಿಲಲ್ಲಿ ಸಾವಿರಾರು ಆನೆಸವಾರರೂ, ತಮ್ಮ ವಾಹನಗಳೊಡನೆ ಸನ್ನದ್ಧರಾಗಿರುವರು. ಉತ್ತರದ ಬಾಗಿಲಲ್ಲಿ ಕುದುರೆ ಸವಾರರು, ಕಾಲಾಳುಗಳು ಅಸಂಖ್ಯವಾಗಿ ಸಿದ್ಧರಾಗಿ ನಿಂತಿದ್ದಾರೆ. ಪೂರ್ವದ ಬಾಗಿಲಲ್ಲಿ ಒಂದು ಅರ್ಬುದ ರಾಕ್ಷಸವೀರರೂ ಮತ್ತು ದಕ್ಷಿಣದ ಬಾಗಿಲಲ್ಲಿ ಇಷ್ಟೇ ಸಂಖ್ಯೆಯ ಕಾವಲುಗಾರರು ಸನ್ನದ್ಧರಾಗಿ ಇರುವರು. ॥20-21॥

(ಶ್ಲೋಕ-22)

ಮೂಲಮ್

ಮಧ್ಯಕಕ್ಷೇಽಪ್ಯಸಂಖ್ಯಾತಾ ಗಜಾಶ್ವರಥಪತ್ತಯಃ ।
ರಕ್ಷಯಂತಿ ಸದಾ ಲಂಕಾಂ ನಾನಾಸ್ತ್ರಕುಶಲಾಃ ಪ್ರಭೋ ॥

ಅನುವಾದ

ಪ್ರಭುವೇ! ಲಂಕೆಯ ಮಧ್ಯ ಭಾಗದಲ್ಲಿಯೂ ಲೆಕ್ಕವಿಲ್ಲದಷ್ಟು ಆನೆ, ಕುದುರೆ, ರಥ, ಕಾಲಾಳುಗಳ ಸೈನ್ಯವು ಇದ್ದು ನಗರವನ್ನು ಕಾಯುತ್ತಿದ್ದಾರೆ. ಅವರೆಲ್ಲರೂ ಅನೇಕ ಪ್ರಕಾರದ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವುದರಲ್ಲಿ ಕುಶಲರಾಗಿದ್ದಾರೆ. ॥22॥

(ಶ್ಲೋಕ-23)

ಮೂಲಮ್

ಸಂಕ್ರಮೈರ್ವಿವಿಧೈರ್ಲಂಕಾ ಶತಘ್ನೀಭಿಶ್ಚ ಸಂಯುತಾ ।
ಏವಂ ಸ್ಥಿತೇಽಪಿ ದೇವೇಶ ಶೃಣು ಮೇ ತತ್ರ ಚೇಷ್ಟಿತಮ್ ॥

ಅನುವಾದ

ಈ ಪ್ರಕಾರ ಲಂಕೆಯನ್ನು ಪ್ರವೇಶಿಸುವ ಅನೇಕ ಸಂಕ್ರಮ (ಸುರಂಗ)ಗಳಿಂದ ಕೂಡಿದ್ದು ಶತಘ್ನಿ (ನೂರಾರು ಜನರನ್ನು ಒಮ್ಮೆಲೇ ಕೊಲ್ಲಬಲ್ಲ ತೋಪುಗಳು)ಗಳಿಂದ ಸುರಕ್ಷಿತವಾಗಿದೆ. ಹೀಗಿದ್ದರೂ ಹೇ ದೇವೇಶನೆ! ನಾನು ಅಲ್ಲಿ ಮಾಡಿರುವ ಕಾರ್ಯವನ್ನು ತಿಳಿಸುವೆನು ಕೇಳು. ॥23॥

(ಶ್ಲೋಕ-24)

ಮೂಲಮ್

ದಶಾನನಬಲೌಘಸ್ಯ ಚತುರ್ಥಾಂಶೋ ಮಯಾ ಹತಃ ।
ದಗ್ಧ್ವಾ ಲಂಕಾಂ ಪುರೀಂ ಸ್ವರ್ಣಪ್ರಾಸಾದೋ ದರ್ಷಿತೋ ಮಯಾ ॥

(ಶ್ಲೋಕ-25)

ಮೂಲಮ್

ಶತಘ್ನ್ಯಃ ಸಂಕ್ರಮಾಶ್ಚೈವ ನಾಶಿತಾ ಮೇ ರಘೂತ್ತಮ ।
ದೇವ ತ್ವದ್ದರ್ಶನಾದೇವ ಲಂಕಾ ಭಸ್ಮೀಕೃತಾ ಭವೇತ್ ॥

ಅನುವಾದ

ರಾವಣನ ಬಲಶಕ್ತಿಯ ನಾಲ್ಕನೆಯ ಒಂದು ಭಾಗವನ್ನು ನಾನು ನಾಶಗೊಳಿಸಿರುವೆನು ಹಾಗೂ ಲಂಕಾಪುರವನ್ನು ಸುಟ್ಟು ಬೂದಿ ಮಾಡಿ ಚಿನ್ನದ ಗೋಪುರಗಳನ್ನು ಕೆಡವಿ ಬಿಟ್ಟಿರುವೆನು. ರಘುಶ್ರೇಷ್ಠನೆ! ಶತಘ್ನಿಗಳನ್ನು, ರಕ್ಷಣಾ ವ್ಯವಸ್ಥೆಯನ್ನು ನಾಶಮಾಡಿರುವೆನು. ಸ್ವಾಮಿ! ನೀನು ನೋಡಿದ ಮಾತ್ರದಿಂದಲೇ ಲಂಕೆಯು ಸುಟ್ಟು ಬೂದಿಯಾಗಿ ಹೋದೀತು. ॥24-25॥

(ಶ್ಲೋಕ-26)

ಮೂಲಮ್

ಪ್ರಸ್ಥಾನಂ ಕುರು ದೇವೇಶ ಗಚ್ಛಾಮೋ ಲವಣಾಂಬುಧೇಃ ।
ತೀರಂ ಸಹ ಮಹಾವೀರೈರ್ವಾನರೌಘೈಃ ಸಮಂತತಃ ॥

ಅನುವಾದ

ಹೇ ದೇವೇಶ್ವರಾ! ಈಗ ಹೊರಡಲು ಸಿದ್ಧರಾಗಿರಿ. ಸುತ್ತುವರಿದಿರುವ ಮಹಾ ವೀರರಾದ ವಾನರ ಸೇನೆಯೊಂದಿಗೆ ಕ್ಷಾರಸಮುದ್ರದ ದಡಕ್ಕೆ ಹೋಗೋಣ.’’ ॥26॥

(ಶ್ಲೋಕ-27)

ಮೂಲಮ್

ಶ್ರುತ್ವಾ ಹನೂಮತೋ ವಾಕ್ಯಮುವಾಚ ರಘುನಂದನಃ ।
ಸುಗ್ರೀವ ಸೈನಿಕಾನ್ಸರ್ವಾನ್ಪ್ರಸ್ಥಾನಾಯಾಭಿನೋದಯ ॥

(ಶ್ಲೋಕ-28)

ಮೂಲಮ್

ಇದಾನೀಮೇವ ವಿಜಯೋ ಮುಹೂರ್ತಃ ಪರಿವರ್ತತೇ ।
ಅಸ್ಮಿನ್ಮುಹೂರ್ತೇ ಗತ್ವಾಹಂ ಲಂಕಾಂ ರಾಕ್ಷಸಸಂಕುಲಾಮ್ ॥

(ಶ್ಲೋಕ-29)

ಮೂಲಮ್

ಸಪ್ರಾಕಾರಾಂ ಸುದುರ್ಧರ್ಷಾಂ ನಾಶಯಾಮಿ ಸರಾವಣಾಮ್ ।
ಆನೇಷ್ಯಾಮಿ ಚ ಸೀತಾಂ ಮೇ ದಕ್ಷಿಣಾಕ್ಷಿ ಸ್ಫುರತ್ಯಧಃ ॥

ಅನುವಾದ

ಹನುಮಂತನ ಮಾತನ್ನು ಕೇಳಿ ಶ್ರೀರಾಮನಿಂತೆಂದನು — ‘‘ಎಲೈ ಸುಗ್ರೀವನೆ! ಎಲ್ಲ ಸೈನಿಕರನ್ನು ಹೊರಡುವಂತೆ ಪ್ರೇರೇಪಿಸು. ಈಗಲೇ ವಿಜಯವೆಂಬ ಮುಹೂರ್ತವು ಒದಗಿ ಬಂದಿರುತ್ತದೆ. ಈ ಮುಹೂರ್ತದಲ್ಲಿ ನಾನು ಹೊರಟು, ರಾಕ್ಷಸರಿಂದ ತುಂಬಿದ ಹಾಗೂ ಪ್ರಾಕಾರಗಳಿಂದ ಆವೃತವಾದ, ಜಯಿಸಲು ದುರ್ಜಯವಾದ ಲಂಕೆಯನ್ನು ರಾವಣನ ಸಹಿತವಾಗಿ ನಾಶಗೊಳಿಸುವೆ ಹಾಗೂ ಸೀತೆಯನ್ನು ಕರೆತರುವೆ. ಈಗ ನನ್ನ ಬಲಗಣ್ಣಿನ ಕೆಳಭಾಗ ಅದುರುತ್ತಿದೆ. ॥27-29॥

(ಶ್ಲೋಕ-30)

ಮೂಲಮ್

ಪ್ರಯಾತು ವಾಹಿನೀ ಸರ್ವಾ ವಾನರಾಣಾಂ ತರಸ್ವಿನಾಮ್ ।
ರಕ್ಷಂತು ಯೂಥಪಾಃ ಸೇನಾಮಗ್ರೇ ಪೃಷ್ಠೇ ಚ ಪಾರ್ಶ್ವಯೋಃ ॥

ಅನುವಾದ

ವೇಗಶಾಲಿಗಳಾದ ಕಪಿಗಳ ಸೈನ್ಯವೆಲ್ಲವೂ ಹೊರಡಲಿ. ಸೆನಾಪತಿಗಳು ತಮ್ಮ ಸೈನ್ಯವನ್ನು ಹಿಂದೆ-ಮುಂದೆ, ಅಕ್ಕ-ಪಕ್ಕಗಳಲ್ಲಿ ಕಾಪಾಡುತ್ತಿರಲಿ. ॥30॥

(ಶ್ಲೋಕ-31)

ಮೂಲಮ್

ಹನೂಮಂತಮಥಾರುಹ್ಯ ಗಚ್ಛಾಮ್ಯಗ್ರೇಽಂಗದಂ ತತಃ ।
ಆರುಹ್ಯ ಲಕ್ಷ್ಮಣೋ ಯಾತು ಸುಗ್ರೀವ ತ್ವಂ ಮಯಾ ಸಹ ॥

ಅನುವಾದ

ನಾನು ಹನುಮಂತನ ಹೆಗಲೇರಿ ಎಲ್ಲರಿಗೆ ಮುಂದೆ ಹೋಗುವೆನು. ನನ್ನ ಹಿಂದೆ ಅಂಗದನ ಹೆಗಲನ್ನೇರಿ ಲಕ್ಷ್ಮಣನು ಬರಲಿ. ಎಲೈ ಸುಗ್ರೀವಾ! ನೀನು ನನ್ನೊಡನೆ ಬಾ. ॥31॥

(ಶ್ಲೋಕ-32)

ಮೂಲಮ್

ಗಜೋ ಗವಾಕ್ಷೋ ಗವಯೋ ಮೈಂದೋ ದ್ವಿವಿದ ಏವ ಚ ।
ನಲೋ ನೀಲಃ ಸುಷೇಣಶ್ಚ ಜಾಂಬವಾಂಶ್ಚ ತಥಾಪರೇ ॥

(ಶ್ಲೋಕ-33)

ಮೂಲಮ್

ಸರ್ವೇ ಗಚ್ಛಂತು ಸರ್ವತ್ರ ಸೇನಾಯಾಃ ಶತ್ರುಘಾತಿನಃ ।
ಇತ್ಯಾಜ್ಞಾಪ್ಯ ಹರೀನ್ ರಾಮಃ ಪ್ರತಸ್ಥೇ ಸಹಲಕ್ಷ್ಮಣಃ ॥

ಅನುವಾದ

ಗಜ, ಗವಾಕ್ಷ, ಗವಯ, ಮೈಂದ ದ್ವಿವಿದ, ನಲ, ನೀಲ, ಸುಷೇಣ, ಜಾಂಬ ವಂತ ಹಾಗೂ ಇತರ ಎಲ್ಲರೂ ಹೊರಡಲಿ. ಶತ್ರುಸಂಹಾರಕರಾದ ಸೇನಾ ವೃಂದದವರೆಲ್ಲ ತೆರಳಲಿ.’’ ಹೀಗೆ ಕಪಿಗಳಿಗೆ ಅಪ್ಪಣೆಮಾಡಿ ಶ್ರೀರಾಮಚಂದ್ರನು ಹೊರಟನು.॥32-33॥

(ಶ್ಲೋಕ-34)

ಮೂಲಮ್

ಸುಗ್ರೀವಸಹಿತೋ ಹರ್ಷಾತ್ಸೇನಾಮಧ್ಯಗತೋ ವಿಭುಃ ।
ವಾರಣೇಂದ್ರನಿಭಾಃ ಸರ್ವೇ ವಾನರಾಃ ಕಾಮರೂಪಿಣಃ ॥

(ಶ್ಲೋಕ-35)

ಮೂಲಮ್

ಕ್ಷ್ವೇಲಂತಃ ಪರಿಗರ್ಜಂತೋ ಜಗ್ಮುಸ್ತೇ ದಕ್ಷಿಣಾಂ ದಿಶಮ್ ।
ಭಕ್ಷಯಂತೋ ಯಯುಃ ಸರ್ವೇ ಫಲಾನಿ ಚ ಮಧೂನಿ ಚ ॥

ಅನುವಾದ

ಭಗವಾನ್ ಶ್ರೀರಾಮನು ಅತೀವ ಸಂತೋಷಗೊಂಡು ಸುಗ್ರೀವ ಲಕ್ಷ್ಮಣರಿಂದೊಡಗೂಡಿ ಸೇನೆಗಳ ನಡುವೆ ಹೋಗುತ್ತಿದ್ದನು. ಇಚ್ಛಾರೂಪವನ್ನು ಧರಿಸಬಲ್ಲ ಆ ಕಪಿಗಳೆಲ್ಲರೂ ಗಜರಾಜನಂತೆ ಕಂಡುಬರುತ್ತಿದ್ದರು. ಅವರೆಲ್ಲರೂ ಘರ್ಜಿಸುತ್ತಾ, ಕಿರಿಚಾಡುತ್ತಾ ದಕ್ಷಿಣದಿಕ್ಕಿನತ್ತ ವೇಗವಾಗಿ ಹೊರಟವರಾಗಿ ಕಂದ-ಮೂಲ-ಫಲಗಳನ್ನು, ಜೇನನ್ನು ತಿನ್ನುತ್ತಾ ಹೋಗುತ್ತಿದ್ದಾರೆ. ॥34-35॥

(ಶ್ಲೋಕ-36)

ಮೂಲಮ್

ಬ್ರುವಂತೋ ರಾಘವಸ್ಯಾಗ್ರೇ ಹನಿಷ್ಯಾಮೋಽದ್ಯ ರಾವಣಮ್ ।
ಏವಂ ತೇ ವಾನರಶ್ರೇಷ್ಠಾ ಗಚ್ಛಂತ್ಯತುಲವಿಕ್ರಮಾಃ ॥

ಅನುವಾದ

ಈ ಪ್ರಕಾರ ಆ ಅತುಲ ಪರಾಕ್ರಮಿ ವಾನರ ವೀರರು ಶ್ರೀರಾಮನ ಮುಂದೆ ನಾವು ಇದೋ ರಾವಣನನ್ನು ಕೊಲ್ಲುವೆವು’’ ಎಂದು ಹೇಳುತ್ತಾ ಮುನ್ನಡೆದರು. ॥36॥

(ಶ್ಲೋಕ-37)

ಮೂಲಮ್

ಹರಿಭ್ಯಾಮುಹ್ಯಮಾನೌ ತೌ ಶುಶುಭಾತೇ ರಘೂತ್ತಮೌ ।
ನಕ್ಷತ್ರೈಃ ಸೇವಿತೌ ಯದ್ವಚ್ಚಂದ್ರಸೂರ್ಯಾವಿವಾಂಬರೇ ॥

(ಶ್ಲೋಕ-38)

ಮೂಲಮ್

ಆವೃತ್ಯ ಪೃಥಿವೀಂ ಕೃತ್ಸ್ನಾಂ ಜಗಾಮ ಮಹತೀ ಚಮೂಃ ।
ಪ್ರಸ್ಫೋಟಯಂತಃ ಪುಚ್ಛಾಗ್ರಾನುದ್ವಹಂತಶ್ಚ ಪಾದಪಾನ್ ॥

(ಶ್ಲೋಕ-39)

ಮೂಲಮ್

ಶೈಲಾನಾರೋಹಯಂತಶ್ಚ ಜಗ್ಮುರ್ಮಾರುತವೇಗತಃ ।
ಅಸಂಖ್ಯಾತಾಶ್ಚ ಸರ್ವತ್ರ ವಾನರಾಃ ಪರಿಪೂರಿತಾಃ ॥

ಅನುವಾದ

ಹನುಮಂತ ಮತ್ತು ಅಂಗದನ ಹೆಗಲನ್ನೇರಿ ಹೊರಟ ರಘುಶ್ರೇಷ್ಠರಾದ ಶ್ರೀರಾಮ-ಲಕ್ಷ್ಮಣರು ಆಕಾಶದಲ್ಲಿ ನಕ್ಷತ್ರಗಳಿಂದ ಸುಸೇವಿತ ಚಂದ್ರ-ಸೂರ್ಯರಂತೆ ವಿರಾಜಮಾನರಾಗಿದ್ದರು. ಆ ಭಾರೀ ದೊಡ್ಡದಾದ ಸೈನ್ಯವು ಸಂಪೂರ್ಣ ಪೃಥ್ವಿಯನ್ನು ವ್ಯಾಪಿಸಿ ಸಾಗುತ್ತಿತ್ತು. ಕಪಿಗಳು ಆಗಾಗ ತಮ್ಮ ಬಾಲದ ತುದಿಯನ್ನು ಕೊಡಹುತ್ತಾ, ಮರಗಳನ್ನು ಕೆಡಹುತ್ತಾ, ಬೆಟ್ಟಗಳನ್ನು ನೆಗೆಯುತ್ತಾ, ವಾಯುವೇಗದಿಂದ ಹೋಗುತ್ತಿದ್ದರು. ಲೆಕ್ಕವಿಲ್ಲದಷ್ಟು ವಾನರರು ಎಲ್ಲೆಡೆಗಳಲ್ಲಿ ತುಂಬಿಹೋದರು. ॥37-39॥

(ಶ್ಲೋಕ-40)

ಮೂಲಮ್

ಹೃಷ್ಟಾಸ್ತೇ ಜಗ್ಮುರತ್ಯರ್ಥಂ ರಾಮೇಣ ಪರಿಪಾಲಿತಾಃ ।
ಗತಾ ಚಮೂರ್ದಿವಾರಾತ್ರಂ ಕ್ವಚಿನ್ನಾಸಜ್ಜತ ಕ್ಷಣಮ್ ॥

ಅನುವಾದ

ಭಗವಾನ್ ಶ್ರೀರಾಮನಿಂದ ಸುರಕ್ಷಿತರಾಗಿ ಅವರೆಲ್ಲರೂ ಸಂತೋಷವಾಗಿ ತುಂಬಾ ವೇಗವಾಗಿ ಹೋಗುತ್ತಿದ್ದರು. ಆ ವಾನರ ಸೇನೆಯು ಹಗಲೂ-ರಾತ್ರಿ ಕ್ಷಣಕಾಲವೂ ವಿಶ್ರಾಂತಿಯಿಲ್ಲದೆ ಹೋಗುತ್ತಿತ್ತು. ॥40॥

(ಶ್ಲೋಕ-41)

ಮೂಲಮ್

ಕಾನನಾನಿ ವಿಚಿತ್ರಾಣಿ ಪಶ್ಯನ್ಮಲಯಸಹ್ಯಯೋಃ ।
ತೇ ಸಹ್ಯಂ ಸಮತಿಕ್ರಮ್ಯ ಮಲಯಂ ಚ ತಥಾ ಗಿರಿಮ್ ॥

(ಶ್ಲೋಕ-42)

ಮೂಲಮ್

ಆಯಯುಶ್ಚಾನುಪೂರ್ವ್ಯೇಣ ಸಮುದ್ರಂ ಭೀಮನಿಃ ಸ್ವನಮ್ ।
ಅವತೀರ್ಯ ಹನೂಮಂತಂ ರಾಮಃ ಸುಗ್ರೀವಸಂಯುತಃ ॥

(ಶ್ಲೋಕ-43)

ಮೂಲಮ್

ಸಲಿಲಾಭ್ಯಾಶಮಾಸಾದ್ಯ ರಾಮೋ ವಚನಮಬ್ರವೀತ್ ।
ಆಗತಾಃ ಸ್ಮೋ ವಯಂ ಸರ್ವೇ ಸಮುದ್ರಂ ಮಕರಾಲಯಮ್ ॥

(ಶ್ಲೋಕ-44)

ಮೂಲಮ್

ಇತೋ ಗಂತುಮಶಕ್ಯಂ ನೋ ನಿರುಪಾಯೇನ ವಾನರಾಃ ।
ಅತ್ರ ಸೇನಾನಿವೇಶೋಽಸ್ತು ಮಂತ್ರಯಾಮೋಽಸ್ಯ ತಾರಣೇ ॥

ಅನುವಾದ

ಕೊನೆಗೆ ಅವರೆಲ್ಲರೂ ಮಲಯಾಚಲ, ಸಹ್ಯಾದ್ರಿಯ ವಿಚಿತ್ರವಾದ ವನಗಳನ್ನು ನೋಡುತ್ತಾ ಆ ಎರಡೂ ಪರ್ವತಗಳನ್ನು ಕ್ರಮವಾಗಿ ಹಾದು ಭಯಂಕರವಾಗಿ ಭೋರ್ಗರೆಯುತ್ತಿರುವ ಸಮುದ್ರದ ಬಳಿಗೆ ಬಂದರು. ಆಗ ಶ್ರೀರಾಮಚಂದ್ರನು ಹನುಮಂತನ ಹೆಗಲಿನಿಂದ ಕೆಳಗಿಳಿದು, ಸುಗ್ರೀವನೊಂದಿಗೆ ನೀರನ್ನು ಸಮೀಪಿಸಿ ಹೇಳುತ್ತಾನೆ ‘‘ಎಲೈ ವಾನರರೇ! ಮೊಸಳೆಗಳೇ ಆದಿ ಜಲಚರಗಳಿಗೆ ವಾಸಸ್ಥಾನವಾದ ಸಮುದ್ರದ ಬಳಿಗೆ ನಾವೆಲ್ಲರೂ ಬಂದಿರುತ್ತೇವೆ. ಆದರೆ ಇದನ್ನು ದಾಟಲು ಏನಾದರೂ ಉಪಾಯಮಾಡದೇ ನಾವು ಮುಂದೆ ಹೋಗಲಾರೆವು. ಆದ್ದರಿಂದ ನಮ್ಮ ಸೈನ್ಯವು ಇಲ್ಲಿಯೇ ಬೀಡು ಬಿಟ್ಟಿರಲಿ; ಈ ಸಮುದ್ರವನ್ನು ಹೇಗೆ ದಾಟಬಹುದು ಇದರ ಬಗ್ಗೆ ಪರಸ್ಪರ ಆಲೋಚಿಸೋಣ.’’ ॥41-44॥

(ಶ್ಲೋಕ-45)

ಮೂಲಮ್

ಶ್ರುತ್ವಾ ರಾಮಸ್ಯ ವಚನಂ ಸುಗ್ರೀವಃ ಸಾಗರಾಂತಿಕೇ ।
ಸೇನಾಂ ನ್ಯವೇಶಯತ್ ಕ್ಷಿಪ್ರಂ ರಕ್ಷಿತಾಂ ಕಪಿಕುಂಜರೈಃ ॥

ಅನುವಾದ

ಶ್ರೀರಾಮನ ಮಾತನ್ನು ಕೇಳಿ ಸುಗ್ರೀವನು ಸಮುದ್ರದ ದಡದಲ್ಲೇ ಎಲ್ಲ ಸೈನ್ಯವನ್ನು ನೆಲೆಗೊಳಿಸಿದನು ಹಾಗೂ ವಾನರ ವೀರರನ್ನು ರಕ್ಷಣೆಗಾಗಿ ನೇಮಿಸಿದನು. ॥45॥

(ಶ್ಲೋಕ-46)

ಮೂಲಮ್

ತೇ ಪಶ್ಯಂತೋ ವಿಷೇದುಸ್ತಂ ಸಾಗರಂ ಭೀಮದರ್ಶನಮ್ ।
ಮಹೋನ್ನತತರಂಗಾಢ್ಯಂ ಭೀಮನಕ್ರಭಯಂಕರಮ್ ॥

(ಶ್ಲೋಕ-47)

ಮೂಲಮ್

ಅಗಾಧಂ ಗಗನಾಕಾರಂ ಸಾಗರಂ ವೀಕ್ಷ್ಯದುಃಖಿತಾಃ ।
ತರಿಷ್ಯಾಮಃ ಕಥಂ ಘೋರಂ ಸಾಗರಂ ವರುಣಾಲಯಮ್ ॥

(ಶ್ಲೋಕ-48)

ಮೂಲಮ್

ಹಂತವ್ಯೋಽಸ್ಮಾಭಿರದ್ಯೈವ ರಾವಣೋ ರಾಕ್ಷಸಾಧಮಃ ।
ಇತಿ ಚಿಂತಾಕುಲಾಃ ಸರ್ವೇ ರಾಮಪಾರ್ಶ್ವೇ ವ್ಯವಸ್ಥಿತಾಃ ॥

ಅನುವಾದ

ಅವರು ಭಯಂಕರವಾಗಿ ಕಾಣುವ ಸಮುದ್ರವನ್ನು ಕಂಡು ಮನಸ್ಸಿನಲ್ಲಿ ವಿಷಾದಗೊಂಡರು. ಅತಿ ಎತ್ತರವಾದ ಅಲೆಗಳಿಂದ ಕೂಡಿದ, ಭಾರೀ ಮೊಸಳೆಗಳಿಂದ ಹೆದರಿಕೆಯನ್ನುಂಟು ಮಾಡುವ, ಆಳವಾದ, ಆಕಾಶದಂತೆ ಎಲ್ಲೆಡೆ ಹರಡಿರುವ ಸಾಗರವನ್ನು ನೋಡಿ ದುಃಖಿತರಾಗಿ ವರುಣನ ವಾಸಸ್ಥಾನವಾದ ಘೋರವಾದ ಈ ಸಮುದ್ರವನ್ನು ಹೇಗೆ ದಾಟುವುದು? ರಾಕ್ಷಸಾಧಮನಾದ ರಾವಣನನ್ನು ನಾವು ಈಗಲೇ ಕೊಲ್ಲಬೇಕಾಗಿದೆ. ಆದರೆ ಹೇಗೆ ಸಾಧ್ಯವಾದೀತು? ಎಂದು ಚಿಂತಾಕ್ರಾಂತರಾಗಿ ಎಲ್ಲರೂ ಶ್ರೀರಾಮನ ಪಕ್ಕದಲ್ಲಿ ಕುಳಿತುಕೊಂಡರು. ॥46-48॥

(ಶ್ಲೋಕ-49)

ಮೂಲಮ್

ರಾಮಃ ಸೀತಾಮನುಸ್ಮೃತ್ಯ ದುಃಖೇನ ಮಹತಾವೃತಃ ।
ವಿಲಪ್ಯ ಜಾನಕೀಂ ಸೀತಾಂ ಬಹುಧಾ ಕಾರ್ಯಮಾನುಷಃ ॥

(ಶ್ಲೋಕ-50)

ಮೂಲಮ್

ಅದ್ವಿತೀಯಶ್ಚಿದಾತ್ಮೈಕಃ ಪರಮಾತ್ಮಾ ಸನಾತನಃ ।
ಯಸ್ತು ಜಾನಾತಿ ರಾಮಸ್ಯ ಸ್ವರೂಪಂ ತತ್ತ್ವತೋ ಜನಃ ॥

(ಶ್ಲೋಕ-51)

ಮೂಲಮ್

ತಂ ನ ಸ್ಪೃಶತಿ ದುಃಖಾದಿ ಕಿಮುತಾನಂದಮವ್ಯಯಮ್ ।
ದುಃಖಹರ್ಷಭಯಕ್ರೋಧ ಲೋಭಮೋಹಮದಾದಯಃ ॥

(ಶ್ಲೋಕ-52)

ಮೂಲಮ್

ಅಜ್ಞಾನಲಿಂಗಾನ್ಯೇತಾನಿ ಕುತಃ ಸಂತಿ ಚಿದಾತ್ಮನಿ ।
ದೇಹಾಭಿಮಾನಿನೋ ದುಃಖಂ ನ ದೇಹಸ್ಯ ಚಿದಾತ್ಮನಃ ॥

ಅನುವಾದ

ಶ್ರೀರಾಮಚಂದ್ರನೂ ಕೂಡ ಸೀತೆಯನ್ನು ನೆನೆದುಕೊಂಡು ಭಾರೀ ದುಃಖದಲ್ಲಿ ಮುಳುಗಿದನು. ಅವನು ಏಕನೂ, ಅದ್ವಿತಿಯನೂ, ಚಿದಾತ್ಮರೂಪನೂ, ಸನಾತನನೂ, ಪರಮಾತ್ಮನೂ ಆಗಿದ್ದರೂ ಕಾರ್ಯವಶ ಮನುಷ್ಯರೂಪವನ್ನು ಧರಿಸಿದ ಕಾರಣ ಜಾನಕಿಗಾಗಿ ನಾನಾಪ್ರಕಾರದಿಂದ ವಿಲಪಿಸ ತೊಡಗಿದನು. ಪರಮಾತ್ಮನಾದ ಶ್ರೀರಾಮನ ನಿಜವಾದ ಸ್ವರೂಪವನ್ನು ತಿಳಿಯುವವನಿಗೆ ದುಃಖಾದಿಗಳು ಸ್ಪರ್ಶಿಸಲಾರವು. ಮತ್ತೆ ಆನಂದ ಸ್ವರೂಪೀ, ಅವಿನಾಶೀ, ಚಿದಾತ್ಮನಾದ ಭಗವಾನ್ ಶ್ರೀರಾಮನಲ್ಲಾದರೋ ದುಃಖ, ಹರ್ಷ, ಭಯ, ಕ್ರೋಧ, ಲೋಭ, ಮೋಹ, ಮದ ಮುಂತಾದ ಅಜ್ಞಾನದ ಚಿಹ್ನೆಗಳಾದ ಇವುಗಳು ಹೇಗೆ ಇರಬಲ್ಲವು? ದೇಹದ ದುಃಖವು ದೇಹಾಭಿಮಾನಿಗಳಿಗೆ ಆಗುವುದು, ಚಿದಾತ್ಮನಿಗೆ ಅಲ್ಲ. ॥49-52॥

(ಶ್ಲೋಕ-53)

ಮೂಲಮ್

ಸಂಪ್ರಸಾದೇ ದ್ವಯಾಭಾವಾತ್ಸುಖಮಾತ್ರಂ ಹಿ ದೃಶ್ಯತೇ ।
ಬುದ್ಧ್ಯಾದ್ಯಭಾವಾತ್ಸಂಶುದ್ಧೇ ದುಃಖಂ ತತ್ರ ನ ದೃಶ್ಯತೇ ।
ಅತೋ ದುಃಖಾದಿಕಂ ಸರ್ವಂ ಬುದ್ಧೇರೇವ ನ ಸಂಶಯಃ ॥

ಅನುವಾದ

ಸಮಾಧಿ ಅವಸ್ಥೆಯಲ್ಲಿ ದ್ವೈತಪ್ರಪಂಚದ ಅಭಾವವಾಗುವ ಕಾರಣ ಅಲ್ಲಿ ಕೇವಲ ಸುಖದ್ದೇ ಸಾಕ್ಷಾತ್ಕಾರವಾಗುತ್ತದೆ. ಆ ಅವಸ್ಥೆಯಲ್ಲಿ ಬುದ್ಧ್ಯಾದಿಗಳ ಅಭಾವವಾದ್ದರಿಂದ ಸಂಶುದ್ಧ ಆತ್ಮನಲ್ಲಿ ಲೇಶ ಮಾತ್ರ ದುಃಖವು ಕಂಡುಬರುವುದಿಲ್ಲ. ಆದ್ದರಿಂದ ಇದರಲ್ಲಿ ಸಂದೇಹವೇ ಇಲ್ಲ. ಈ ದುಃಖಾದಿಗಳೆಲ್ಲವೂ ಬುದ್ಧಿಯ ಧರ್ಮವಾಗಿದೆ. ॥53॥

(ಶ್ಲೋಕ-54)

ಮೂಲಮ್

ರಾಮಃ ಪರಾತ್ಮಾ ಪುರುಷಃ ಪುರಾಣೋ
ನಿತ್ಯೋದಿತೋ ನಿತ್ಯಸುಖೋ ನಿರೀಹಃ ।
ತಥಾಪಿ ಮಾಯಾಗುಣಸಂಗತೋಽಸೌ
ಸುಖೀವ ದುಃಖೀವ ವಿಭಾವ್ಯತೇಽಬುಧೈಃ ॥

ಅನುವಾದ

ಭಗವಾನ್ ಶ್ರೀರಾಮನು ಪರಮಾತ್ಮನೂ, ಪುರಾಣ ಪುರುಷನೂ, ನಿತ್ಯ ಪ್ರಕಾಶ ಸ್ವರೂಪನೂ, ನಿತ್ಯಸುಖ ಸ್ವರೂಪನೂ, ಕ್ರಿಯಾ ರಹಿತನೂ ಆಗಿರುವನು. ಹೀಗಿದ್ದರೂ ಅಜ್ಞಾನಿ ಪುರುಷರಿಗೆ ಅವನು ಮಾಯೆಯ ಗುಣಗಳ ಸಂಬಂಧದಿಂದ ಸುಖಿ ಯಂತೆಯೂ, ದುಃಖಿಯಂತೆಯೂ ಕಂಡು ಬರುತ್ತಾನೆ. ॥54॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಯುದ್ದಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಯುದ್ದಕಾಂಡದಲ್ಲಿ ಒಂದನೆಯ ಸರ್ಗವು ಮುಗಿಯಿತು.

ಮೂಲಮ್