೦೫

[ಐದನೆಯ ಸರ್ಗ]

ಭಾಗಸೂಚನಾ

ಹನುಮಂತನು ಸೀತೆಯಿಂದ ಬೀಳ್ಕೊಂಡು ಶ್ರೀರಾಮಚಂದ್ರನಿಗೆ ಅವಳ ಸಂದೇಶವನ್ನು ಹೇಳುವುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ತತಃ ಸೀತಾಂ ನಮಸ್ಕೃತ್ಯ ಹನೂಮಾನಬ್ರವೀದ್ವಚಃ ।
ಆಜ್ಞಾಪಯತು ಮಾಂ ದೇವಿ ಭವತೀ ರಾಮಸನ್ನಿಧಿಮ್ ॥

(ಶ್ಲೋಕ-2)

ಮೂಲಮ್

ಗಚ್ಛಾಮಿ ರಾಮಸ್ತ್ವಾಂ ದ್ರಷ್ಟುಮಾಗಮಿಷ್ಯತಿ ಸಾನುಜಃ ।
ಇತ್ಯುಕ್ತ್ವಾ ತ್ರಿಃಪರಿಕ್ರಮ್ಯ ಜಾನಕೀಂ ಮಾರುತಾತ್ಮಜಃ ॥

(ಶ್ಲೋಕ-3)

ಮೂಲಮ್

ಪ್ರಣಮ್ಯ ಪ್ರಸ್ಥಿತೋ ಗಂತುಮಿದಂ ವಚನಮಬ್ರವೀತ್ ।
ದೇವಿ ಗಚ್ಛಾಮಿ ಭದ್ರಂ ತೇ ತೂರ್ಣಂ ದ್ರಕ್ಷ್ಯಸಿ ರಾಘವಮ್ ॥

(ಶ್ಲೋಕ-4)

ಮೂಲಮ್

ಲಕ್ಷ್ಮಣಂ ಚ ಸಸುಗ್ರೀವಂ ವಾನರಾಯುತಕೋಟಿಭಿಃ ।
ತತಃ ಪ್ರಾಹ ಹನೂಮಂತಂ ಜಾನಕೀ ದುಃಖಕರ್ಶಿತಾ ॥

(ಶ್ಲೋಕ-5)

ಮೂಲಮ್

ತ್ವಾಂ ದೃಷ್ಟ್ವಾ ವಿಸ್ಮೃತಂ ದುಃಖಮಿದಾನೀಂ ತ್ವಂ ಗಮಿಷ್ಯಸಿ ।
ಇತಃ ಪರಂ ಕಥಂ ವರ್ತೇ ರಾಮವಾರ್ತಾಶ್ರುತಿಂ ವಿನಾ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಅನಂತರ ಹನುಮಂತನು ಸೀತೆಯ ಬಳಿಗೆ ಬಂದು ನಮಸ್ಕರಿಸಿ ‘ದೇವಿಯೆ! ಶ್ರೀರಾಮನ ಸನ್ನಿಧಿಗೆ ಹೋಗಲು ನನಗೆ ಅಪ್ಪಣೆ ಕೊಡು. ನಾನು ಹೊರಡುವೆನು. ಸೋದರನೊಡಗೂಡಿ ಶ್ರೀರಾಮಚಂದ್ರನು ಬೇಗನೇ ನಿನ್ನನ್ನು ನೋಡಲು ಬರಲಿದ್ದಾನೆ.’ ಹೀಗೆಂದು ಹೇಳಿ ಸೀತೆಯನ್ನು ಮೂರು ಬಾರಿ ಪ್ರದಕ್ಷಿಣೆಮಾಡಿ ಮಾರುತಿಯು ಮತ್ತೆ ಹೊರಡಲನುವಾದನು. ಸ್ವಲ್ಪ ದೂರ ಹೋಗಿ ಪುನಃ ಸೀತೆಯ ಬಳಿಗೆ ಬಂದು ‘‘ಹೇ ದೇವಿ! ನಾನು ಹೋಗುವೆನು. ನಿನಗೆ ಮಂಗಳವಾಗಲಿ. ಭಗವಾನ್ ಶ್ರೀರಾಮನನ್ನು ಹತ್ತುಸಾವಿರ ಕೋಟಿ ವಾನರರ ಸಹಿತ ಸುಗ್ರೀವ ಮತ್ತು ಲಕ್ಷ್ಮಣರನ್ನು ಬೇಗನೇ ಕಾಣಲಿರುವೆ.’’ ಅನಂತರ ದುಃಖದಿಂದ ಬಳಲಿದ ಸೀತಾದೇವಿಯು ಹನುಮಂತನನ್ನು ಕುರಿತು ‘‘ಮಗೂ! ನಿನ್ನನ್ನು ನೋಡಿ ನನ್ನ ದುಃಖವನ್ನು ಮರೆತಿದ್ದೆ. ಈಗಲಾದರೋ ನೀನು ಹೊರಟಿರುವೆ. ಇನ್ನು ಮುಂದೆ ನಾನು ಶ್ರೀರಾಮನ ವೃತ್ತಾಂತವನ್ನು ಕೇಳದೆ ಹೇಗೆ ಇರಲಿ?’’ ॥1-5॥

(ಶ್ಲೋಕ-6)

ಮೂಲಮ್ (ವಾಚನಮ್)

ಮಾರುತ್ಯುವಾಚ

ಮೂಲಮ್

ಯದ್ಯೇವಂ ದೇವಿ ಮೇ ಸ್ಕಂಧಮಾರೋಹ ಕ್ಷಣಮಾತ್ರತಃ ।
ರಾಮೇಣ ಯೋಜಯಿಷ್ಯಾಮಿ ಮನ್ಯಸೇ ಯದಿ ಜಾನಕಿ ॥

ಅನುವಾದ

ಮಾರುತಿಯು ಇಂತೆಂದನು — ‘‘ಹೇ ದೇವಿ! ಹಾಗಾದರೆ ನೀನು ನನ್ನ ಹೆಗಲನ್ನೇರು. ನೀನು ಬಯಸುವೆಯಾದರೆ ತಾಯಿ ಜಾನಕಿಯೆ! ನಿನ್ನನ್ನು ನಾನು ಕ್ಷಣಮಾತ್ರದಲ್ಲಿ ಶ್ರೀರಾಮನೊಡನೆ ಸೇರಿಸಿ ಬಿಡುವೆನು. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಸೀತೋವಾಚ

ಮೂಲಮ್

ರಾಮಃ ಸಾಗರಮಾಶೋಷ್ಯ ಬದ್ ಧ್ವಾ ವಾ ಶರಪಂಜರೈಃ ।
ಆಗತ್ಯ ವಾನರೈಃ ಸಾರ್ಧಂ ಹತ್ವಾ ರಾವಣಮಾಹವೇ ॥

(ಶ್ಲೋಕ-8)

ಮೂಲಮ್

ಮಾಂ ನಯೇದ್ಯದಿ ರಾಮಸ್ಯ ಕೀರ್ತಿರ್ಭವತಿ ಶಾಶ್ವತೀ ।
ಅತೋ ಗಚ್ಛ ಕಥಂ ಚಾಪಿ ಪ್ರಾಣಾನ್ಸಂಧಾರಯಾಮ್ಯಹಮ್ ॥

ಅನುವಾದ

ಸೀತೆಯಿಂತೆಂದಳು — ಶ್ರೀರಾಮಚಂದ್ರನು ಸಮುದ್ರವನ್ನು ಒಣಗಿಸಿಯೋ ಅಥವಾ ಬಾಣಗಳ ಪಂಜರದಿಂದ ಸೇತುವನ್ನು ಬಿಗಿದು ಕಪಿಗಳೊಡಗೂಡಿ ಇಲ್ಲಿಗೆ ಬಂದು ಯುದ್ಧದಲ್ಲಿ ರಾವಣನನ್ನು ಕೊಂದು, ನನ್ನನ್ನು ಕರೆದೊಯ್ದನಾದರೆ ಆಗ ರಾಮನಿಗೆ ಶಾಶ್ವತವಾದ ಕೀರ್ತಿಯುಂಟಾಗುವುದು. ಆದ್ದರಿಂದ ನೀನು ಹೊರಡು. ನಾನು ಹೇಗಾದರೂ ಪ್ರಾಣಗಳನ್ನು ಧರಿಸಿಕೊಂಡಿರುವೆನು. ॥7-8॥

(ಶ್ಲೋಕ-9)

ಮೂಲಮ್

ಇತಿ ಪ್ರಸ್ಥಾಪಿತೋ ವೀರಃ ಸೀತಯಾ ಪ್ರಣಿಪತ್ಯ ತಾಮ್ ।
ಜಗಾಮ ಪರ್ವತಸ್ಯಾಗ್ರೇ ಗಂತುಂ ಪಾರಂ ಮಹೋದಧೇಃ ॥

ಅನುವಾದ

ಈ ಪ್ರಕಾರ ಸೀತೆಯಿಂದ ಬೀಳ್ಕೊಂಡ ವೀರನಾದ ಹನುಮಂತನು ಆಕೆಗೆ ವಂದಿಸಿ, ಸಮುದ್ರವನ್ನು ದಾಟುವುದಕ್ಕಾಗಿ ಪರ್ವತ ಶಿಖರವನ್ನು ಏರಿದನು. ॥9॥

(ಶ್ಲೋಕ-10)

ಮೂಲಮ್

ತತ್ರ ಗತ್ವಾ ಮಹಾಸತ್ತ್ವಃ ಪಾದಾಭ್ಯಾಂ ಪೀಡಯನ್ ಗಿರಿಮ್ ।
ಜಗಾಮ ವಾಯುವೇಗೇನ ಪರ್ವತಶ್ಚ ಮಹೀತಲಮ್ ॥

(ಶ್ಲೋಕ-11)

ಮೂಲಮ್

ಗತೋ ಮಹೀಸಮಾನತ್ವಂ ತ್ರಿಂಶದ್ಯೋಜನಮುಚ್ಛ್ರಿತಃ ।
ಮಾರುತಿರ್ಗಗನಾಂತಃಸ್ಥೋ ಮಹಾಶಬ್ದಂ ಚಕಾರ ಸಃ ॥

ಅನುವಾದ

ಮಹಾಬಲಶಾಲಿಯಾದ ಮಾರುತಿಯು ಅಲ್ಲಿಗೆ ಹೋಗಿ ಎರಡೂ ಕಾಲುಗಳಿಂದ ಪರ್ವತವನ್ನು ಅದುಮಿ ನೆಗೆದು ವಾಯು ವೇಗದಿಂದ ಹೊರಟನು. ಮೂವತ್ತು ಯೊಜನಗಳಷ್ಟು ಎತ್ತರವಾದ ಆ ಪರ್ವತವು ಹನುಮನ ಕಾಲ್ತುಳಿತಕ್ಕೆ ನೆಲಸಮವಾಯಿತು. ಆಕಾಶದಲ್ಲಿ ಹಾರಿ ಹೋಗುತ್ತಿರುವಾಗ ಹನುಮಂತನು ಭಾರಿ ಗರ್ಜನೆ ಮಾಡಿದನು. ॥10-11॥

(ಶ್ಲೋಕ-12)

ಮೂಲಮ್

ತಂ ಶ್ರುತ್ವಾ ವಾನರಾಃ ಸರ್ವೇಜ್ಞಾತ್ವಾ ಮಾರುತಿಮಾಗತಮ್ ।
ಹರ್ಷೇಣ ಮಹತಾವಿಷ್ಟಾಃ ಶಬ್ದಂ ಚಕ್ರುರ್ಮಹಾಸ್ವನಮ್ ॥

ಅನುವಾದ

ಅದನ್ನು ಕೇಳಿ ಕಪಿಗಳೆಲ್ಲರೂ ಹನುಮಂತನು ಮರಳುತ್ತಿದ್ದಾನೆಂದು ಅರಿತು ಬಹಳ ಸಂlaಷಗೊಂಡು ದೊಡ್ಡದಾಗಿ ಕೂಗಿಕೊಂಡರು. ॥12॥

(ಶ್ಲೋಕ-13)

ಮೂಲಮ್

ಶಬ್ದೇ ನೈವ ವಿಜಾನೀಮಃ ಕೃತಕಾರ್ಯಃ ಸಮಾಗತಃ ।
ಹನೂಮಾನೇವ ಪಶ್ಯಧ್ವಂ ವಾನರಾ ವಾನರರ್ಷಭಮ್ ॥

ಅನುವಾದ

‘‘ಎಲೈ ಕಪಿಗಳಿರಾ! ನೋಡಿರಿ, ಹನುಮಂತನು ಕಾರ್ಯ ಸಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾನೆ. ಇದು ಅವನ ಧ್ವನಿಯಿಂದಲೇ ಗೊತ್ತಾಗುತ್ತದೆ’’ ಎಂದು ವಾನರರೆಲ್ಲರೂ ಪರಸ್ಪರ ಮಾತಾಡಿಕೊಂಡರು. ॥13॥

(ಶ್ಲೋಕ-14)

ಮೂಲಮ್

ಏವಂ ಬ್ರುವತ್ಸು ವೀರೇಷು ವಾನರೇಷು ಸ ಮಾರುತಿಃ ।
ಅವತೀರ್ಯ ಗಿರೇರ್ಮೂರ್ಧ್ನಿ ವಾನರಾನಿದಮಬ್ರವೀತ್ ॥

ಅನುವಾದ

ವಾನರವೀರರೆಲ್ಲ ಹೀಗೆ ಹೇಳುತ್ತಿರುವಂತೆ ಮಾರುತಿಯು ಬೆಟ್ಟದ ಮೇಲಿಂದ ಇಳಿದು ಬಂದು ಕಪಿಗಳನ್ನು ಕುರಿತು ಹೇಳುತ್ತಾನೆ. ॥14॥

(ಶ್ಲೋಕ-15)

ಮೂಲಮ್

ದೃಷ್ಟ್ವಾ ಸೀತಾ ಮಯಾ ಲಂಕಾ ಧರ್ಷಿತಾ ಚ ಸಕಾನನಾ ।
ಸಂಭಾಷಿತೋ ದಶಗ್ರೀವಸ್ತತೋಽಹಂ ಪುನರಾಗತಃ ॥

ಅನುವಾದ

‘‘ನಾನು ಸೀತೆಯನ್ನು ಕಂಡೆನು. ಅಶೋಕವನ ಸಹಿತ ಇಡೀ ಲಂಕೆಯನ್ನು ಹಾಳುಗೆಡವಿದ್ದಾಯಿತು. ರಾವಣನನ್ನು ಮಾತನಾಡಿಸಿಯೂ ಆಯಿತು. ಅನಂತರ ನಾನು ಹಿಂದಿರುಗಿ ಬಂದಿರುತ್ತೇನೆ. ॥15॥

(ಶ್ಲೋಕ-16)

ಮೂಲಮ್

ಇದಾನೀಮೇವ ಗಚ್ಛಾಮೋ ರಾಮಸುಗ್ರೀವಸನ್ನಿಧಿಮ್ ।
ಇತ್ಯುಕ್ತಾ ವಾನರಾಃ ಸರ್ವೇ ಹರ್ಷೇಣಾಲಿಂಗ್ಯ ಮಾರುತಿಮ್ ॥

(ಶ್ಲೋಕ-17)

ಮೂಲಮ್

ಕೇಚಿಚ್ಚುಚುಂಬುರ್ಲಾಂಗೂಲಂ ನನೃತುಃ ಕೇಚಿದುತ್ಸುಕಾಃ ।
ಹನೂಮತಾ ಸಮೇತಾಸ್ತೇ ಜಗ್ಮುಃ ಪ್ರಸ್ರವಣಂ ಗಿರಿಮ್ ॥

ಅನುವಾದ

ನಾವು ಈಗಲೇ ಶ್ರೀರಾಮ ಮತ್ತು ಸುಗ್ರೀವರ ಸಮೀಪಕ್ಕೆ ಹೋಗೋಣ.’’ ಹೀಗೆ ಹೇಳಿದಾಗ ಎಲ್ಲ ಕಪಿಗಳು ಹೆಚ್ಚಿನ ಸಂತೋಷದಿಂದ ಮಾರುತಿಯನ್ನು ತಬ್ಬಿಕೊಂಡು, ಕೆಲವರು ಬಾಲವನ್ನು ಮುತ್ತಿಟ್ಟರು. ಕೆಲವರು ಉತ್ಸಾಹದಿಂದ ಕುಣಿಯಲಾರಂಭಿಸಿದರು. ಅನಂತರ ಅವರೆಲ್ಲರೂ ಹನುಮಂತನೊಡಗೂಡಿ ಪ್ರಸ್ರವಣ ಪರ್ವತಕ್ಕೆ ಹೊರಟರು. ॥16-17॥

(ಶ್ಲೋಕ-18)

ಮೂಲಮ್

ಗಚ್ಛಂತೋ ದದೃಶುರ್ವೀರಾ ವನಂ ಸುಗ್ರೀವರಕ್ಷಿತಮ್ ।
ಮಧುಸಂಜ್ಞಂ ತದಾ ಪ್ರಾಹುರಂಗದಂ ವಾನರರ್ಷಭಾಃ ॥

ಅನುವಾದ

ಅವರು ಬರುವಾಗ ದಾರಿಯಲ್ಲಿ ಸುಗ್ರೀವನಿಗಾಗಿ ಕಾದಿಟ್ಟ ಮಧುವನದ ಮೇಲೆ ಅವರ ದೃಷ್ಟಿ ಬಿತ್ತು. ಆಗ ವಾನರ ಶ್ರೇಷ್ಠರು ಅಂಗದನನ್ನು ಕುರಿತು ಹೇಳಿದರು — ॥18॥

(ಶ್ಲೋಕ-19)

ಮೂಲಮ್

ಕ್ಷುಧಿತಾಃ ಸ್ಮೋ ವಯಂ ವೀರ ದೇಹ್ಯನುಜ್ಞಾಂ ಮಹಾಮತೇ ।
ಭಕ್ಷಯಾಮಃ ಲಾನ್ಯದ್ಯ ಪಿಬಾಮೋಮೃತವನ್ಮಧು ॥

(ಶ್ಲೋಕ-20)

ಮೂಲಮ್

ಸಂತುಷ್ಟಾ ರಾಘವಂ ದ್ರಷ್ಟುಂ ಗಚ್ಛಾಮೋದ್ಯೈವ ಸಾನುಜಮ್ ॥

ಅನುವಾದ

‘‘ಎಲೈ ವೀರವರನೆ! ನಾವು ಹಸಿದಿರುತ್ತೇವೆ. ಮಹಾಬುದ್ಧಿಶಾಲಿಯೆ! ಈಗ ನಾವು ಹಣ್ಣುಗಳನ್ನು ತಿನ್ನುವೆವು. ಅಮೃತ ಸಮಾನವಾದ ಜೇನನ್ನು ಕುಡಿಯುವೆವು. ನಮಗೆ ಅಪ್ಪಣೆಯಾಗಬೇಕು. ನಾವು ತೃಪ್ತರಾಗಿ ಅನಂತರ ಲಕ್ಷ್ಮಣನೊಡಗೂಡಿದ ಶ್ರೀರಾಮನ ದರ್ಶನಕ್ಕೆ ಹೊರಡುವೆವು.’’ ॥19-20॥

(ಶ್ಲೋಕ-21)

ಮೂಲಮ್ (ವಾಚನಮ್)

ಅಂಗದ ಉವಾಚ

ಮೂಲಮ್

ಹನೂಮಾನ್ಕೃತಕಾರ್ಯೋಯಂ ಪಿಬತೈತತ್ಪ್ರಸಾದತಃ ।
ಜಕ್ಷಧ್ವಂ ಲಮೂಲಾನಿ ತ್ವರಿತಂ ಹರಿಸತ್ತಮಾಃ ॥

ಅನುವಾದ

ಅಂಗದನಿಂತೆಂದನು — ‘‘ಎಲೈ ಕಪಿಶ್ರೇಷ್ಠರೆ ! ಹನುಮಂತನು ಕಾರ್ಯಸಾಧನೆ ಮಾಡಿಕೊಂಡು ಬಂದಿದ್ದಾನೆ. ಆದ್ದರಿಂದ ಅವನ ಕೃಪೆಯಿಂದ ನೀವು ಬೇಗನೇ ಫಲ-ಮೂಲಾದಿಗಳನ್ನು ತಿಂದು ಮಧುವನ್ನು ಕುಡಿಯಿರಿ.’’ ॥21॥

(ಶ್ಲೋಕ-22)

ಮೂಲಮ್

ತತಃ ಪ್ರವಿಶ್ಯ ಹರಯಃ ಪಾತುಮಾರೇಭಿರೇ ಮಧು ।
ರಕ್ಷಿಣಸ್ತಾನನಾದೃತ್ಯ ದಧಿವತೇಣ ನೋದಿತಾನ್ ॥

(ಶ್ಲೋಕ-23)

ಮೂಲಮ್

ಪಿಬತಸ್ತಾಡಯಾಮಾಸುರ್ವಾನರಾನ್ವಾನರರ್ಷಭಾಃ ।
ತತಸ್ತಾನ್ಮುಷ್ಟಿಭಿಃ ಪಾದೈಶ್ಚೂರ್ಣಯಿತ್ವಾ ಪಪುರ್ಮಧು ॥

ಅನುವಾದ

ಅಂಗದನ ಅಪ್ಪಣೆಯನ್ನು ಪಡೆದ ಕಪಿಗಳು ವನವನ್ನು ಹೊಕ್ಕು ಫಲಗಳನ್ನು ತಿನ್ನುತ್ತಾ ಮಧುವನ್ನು ಕುಡಿಯಲಾರಂಭಿಸಿದರು. ಆಗ ದಧಿಮುಖನಿಂದ ನೇಮಿಸಲ್ಪಟ್ಟ ಕಾವಲುಗಾರರು ತಡೆದಾಗ, ಅವರನ್ನು ತಿರಸ್ಕರಿಸಿ, ಗುದ್ದಿ, ಹೊಡೆದು ಜೇನನ್ನು ಕುಡಿಯುತ್ತಿದ್ದರು. ಅಡ್ಡಬಂದವರನ್ನು ಕಾಲುಗಳಿಂದ ತುಳಿದು ಪುಡಿಮಾಡಿದರು. ॥22-23॥

(ಶ್ಲೋಕ-24)

ಮೂಲಮ್

ತತೋ ದಧಿಮುಖಃ ಕ್ರುದ್ಧಃ ಸುಗ್ರೀವಸ್ಯ ಸ ಮಾತುಲಃ ।
ಜಗಾಮ ರಕ್ಷಿಭಿಃ ಸಾರ್ಧಂ ಯತ್ರ ರಾಜಾ ಕಪೀಶ್ವರಃ ॥

ಅನುವಾದ

ಅನಂತರ ಸುಗ್ರೀವನ ಸೋದರಮಾವನಾದ ದಧಿಮುಖನು ಕ್ರೋಧಗೊಂಡು ಇತರ ಕಾವಲುಗಾರರೊಡನೆ ಕೂಡಿಕೊಂಡು ಸುಗ್ರೀವನಿದ್ದಲ್ಲಿಗೆ ಬಂದನು. ॥24॥

(ಶ್ಲೋಕ-25)

ಮೂಲಮ್

ಗತ್ವಾ ತಮಬ್ರವೀದ್ದೇವ ಚಿರಕಾಲಾಭಿರಕ್ಷಿತಮ್ ।
ನಷ್ಟಂ ಮಧುವನಂ ತೇದ್ಯ ಕುಮಾರೇಣ ಹನೂಮತಾ ॥

ಅನುವಾದ

ಅಲ್ಲಿಗೆ ಬಂದು ‘‘ಎಲೈ ರಾಜರೆ! ನೀವು ಬಹಳ ಕಾಲದಿಂದ ಕಾಪಾಡಿಕೊಂಡಿದ್ದ ಮಧುವನವನ್ನು ಯುವರಾಜ ಅಂಗದ ಮತ್ತು ಹನುಮಂತ ಇವರುಗಳಿಂದ ನಾಶವಾಗಿ ಹೋಯಿತು’’ ಎಂದು ವಿನಂತಿಸಿಕೊಂಡನು. ॥25॥

(ಶ್ಲೋಕ-26)

ಮೂಲಮ್

ಶ್ರುತ್ವಾ ದಧಿಮುಖೇನೋಕ್ತಂ ಸುಗ್ರೀವೋ ಹೃಷ್ಟಮಾನಸಃ ।
ದೃಷ್ಟ್ವಾಗತೋ ನ ಸಂದೇಹಃ ಸೀತಾಂ ಪವನನಂದನಃ ॥

(ಶ್ಲೋಕ-27)

ಮೂಲಮ್

ನೋ ಚೇನ್ಮಧುವನಂ ದ್ರಷ್ಟುಂ ಸಮರ್ಥಃ ಕೋ ಭವೇನ್ಮಮ ।
ತತ್ರಾಪಿ ವಾಯುಪುತ್ರೇಣ ಕೃತಂ ಕಾರ್ಯಂ ನ ಸಂಶಯಃ ॥

ಅನುವಾದ

ದಧಿಮುಖನ ಮಾತನ್ನು ಕೇಳಿದ ಸುಗ್ರೀವನು ಸಂತೊಷಗೊಂಡು ‘ವಾಯುಪುತ್ರನಾದ ಮಾರುತಿಯು ಸೀತೆಯನ್ನು ಕಂಡು ಹಿಂದಿರುಗಿ ಬಂದಿರುವನು. ಇದರಲ್ಲಿ ಸಂಶಯವೇ ಇಲ್ಲ, ಹೀಗಿಲ್ಲದ್ದಿದ್ದರೆ ನನ್ನ ಮಧುವನದ ಕಡೆ ಕಣ್ಣುಹಾಯಿಸುವ ಧೈರ್ಯ ಯಾರಿಗಿದ್ದೀತು? ಅದರಲ್ಲಿಯೂ ಪವನನಂದನ ಹನುಮಂತನೇ ಈ ಸೀತಾದರ್ಶನದ ಕಾರ್ಯವನ್ನು ಮಾಡಿದ್ದಾನೆ ಇದು ನಿಜ,’ ಎಂದು ಹೇಳಿದನು. ॥26-27॥

(ಶ್ಲೋಕ-28)

ಮೂಲಮ್

ಶ್ರುತ್ವಾ ಸುಗ್ರೀವವಚನಂ ಹೃಷ್ಟೋ ರಾಮಸ್ತಮಬ್ರವೀತ್ ।
ಕಿಮುಚ್ಯತೇ ತ್ವಯಾ ರಾಜನ್ವಚಃ ಸೀತಾಕಥಾನ್ವಿತಮ್ ॥

(ಶ್ಲೋಕ-29)

ಮೂಲಮ್

ಸುಗ್ರೀವಸ್ತ್ವಬ್ರವೀದ್ವಾಕ್ಯಂ ದೇವ ದೃಷ್ಟಾವನೀಸುತಾ ।
ಹನೂಮತ್ಪ್ರಮುಖಾಃ ಸರ್ವೇ ಪ್ರವಿಷ್ಟಾ ಮಧುಕಾನನಮ್ ॥

(ಶ್ಲೋಕ-30)

ಮೂಲಮ್

ಭಕ್ಷಯಂತಿ ಸ್ಮ ಸಕಲಂ ತಾಡಯಂತಿ ಸ್ಮ ರಕ್ಷಿಣಃ ।
ಅಕೃತ್ವಾ ದೇವಕಾರ್ಯಂ ತೇ ದ್ರಷ್ಟುಂ ಮಧುವನಂ ಮಮ ॥

(ಶ್ಲೋಕ-31)

ಮೂಲಮ್

ನ ಸಮರ್ಥಾಸ್ತತೋ ದೇವೀ ದೃಷ್ಟಾ ಸೀತೇತಿ ನಿಶ್ಚಿತಮ್ ।
ರಕ್ಷಿಣೋ ವೋ ಭಯಂ ಮಾಸ್ತು ಗತ್ವಾ ಬ್ರೂತ ಮಮಾಜ್ಞಯಾ ॥

(ಶ್ಲೋಕ-32)

ಮೂಲಮ್

ವಾನರಾನಂಗದಮುಖಾನಾನಯಧ್ವಂ ಮಮಾಂತಿಕಮ್ ।
ಶ್ರುತ್ವಾ ಸುಗ್ರೀವವಚನಂ ಗತ್ವಾ ತೇ ವಾಯುವೇಗತಃ ॥

(ಶ್ಲೋಕ-33)

ಮೂಲಮ್

ಹನೂಮತ್ಪ್ರಮುಖಾನೂಚುರ್ಗಚ್ಛತೇಶ್ವರಶಾಸನಾತ್ ।
ದ್ರಷ್ಟುಮಿಚ್ಛತಿ ಸುಗ್ರೀವಃ ಸರಾಮೋ ಲಕ್ಷ್ಮಣಾನ್ವಿತಃ ॥

(ಶ್ಲೋಕ-34)

ಮೂಲಮ್

ಯುಷ್ಮಾನತೀವ ಹೃಷ್ಟಾಸ್ತೇ ತ್ವರಯಂತಿ ಮಹಾಬಲಾಃ ।
ತಥೇತ್ಯಂಬರಮಾಸಾದ್ಯ ಯಯುಸ್ತೇ ವಾನರೋತ್ತಮಾಃ ॥

(ಶ್ಲೋಕ-35)

ಮೂಲಮ್

ಹನೂಮಂತಂ ಪುರಸ್ಕೃತ್ಯ ಯುವರಾಜಂ ತಥಾಂಗದಮ್ ।
ರಾಮಸುಗ್ರೀವಯೋರಗ್ರೇ ನಿಪೇತುರ್ಭುವಿ ಸತ್ವರಮ್ ॥

ಅನುವಾದ

ಸುಗ್ರೀವನ ಮಾತನ್ನು ಕೇಳಿ ಸಂತೋಷಗೊಂಡ ಶ್ರೀರಾಮನು — ‘‘ಎಲೈ ರಾಜನೆ! ಸೀತೆಯ ವೃತ್ತಾಂತದೊಡಗೂಡಿದ ಯಾವ ಮಾತನ್ನು ಆಡುತ್ತಿರುವೆ?’’ ಎಂದು ಕೇಳಿದಾಗ ; ಸುಗ್ರೀವನು ‘‘ಸ್ವಾಮಿ! ಸೀತೆಯು ಸಿಕ್ಕಿರುತ್ತಾಳೆ. ಹನುಮಂತನೇ ಮೊದಲಾದ ‘ಕಪಿವೀರರೆಲ್ಲರೂ ಮಧುವನವನ್ನು ಹೊಕ್ಕಿದ್ದಾರೆ. ಎಲ್ಲ ಹಣ್ಣುಗಳನ್ನು ತಿನ್ನುತ್ತಿದ್ದಾರೆ. ಕಾವಲುಗಾರರನ್ನು ಹೊಡೆಯುತ್ತಿದ್ದಾರೆ’ ಎಂಬ ಸುದ್ದಿ ಬಂದಿದೆ.’’ ಸ್ವಾಮಿಕಾರ್ಯವನ್ನು ನೆರವೇರಿಸದೆ ನನ್ನ ಮಧುವನವನ್ನು ಅವರು ಕಣ್ಣೆತ್ತಿಯೂ ನೊಡಲಾರರು. ಆದ್ದರಿಂದ ಅವರುಗಳು ಸೀತಾದೇವಿಯನ್ನು ಕಂಡು ಬಂದಿರುವುದು ಖಂಡಿತಾ ಎಂದು ಹೇಳಿದನು. ‘‘ಎಲೈ ಕಾವಲುಗಾರರಿರಾ! ನೀವು ಹೆದರಬೇಡಿರಿ. ಈಗಲೇ ಹೋಗಿ ನನ್ನ ಅಪ್ಪಣೆಯನ್ನು ತಿಳಿಸಿರಿ. ಅಂಗದನೇ ಮೊದಲಾದ ಕಪಿಗಳನ್ನು ನನ್ನ ಬಳಿಗೆ ಕರೆದು ತನ್ನಿ’’ ಎಂದು ಹೇಳಿದಾಗ, ಸುಗ್ರೀವನ ಮಾತನ್ನು ಕೇಳಿ ಅವರುಗಳು ವಾಯುವೇಗದಿಂದ ಹೋಗಿ ಹನುಮಂತನೇ ಮೊದಲಾದವರನ್ನು ಕಂಡು ‘‘ಮಹಾರಾಜರ ಅಪ್ಪಣೆಯಾಗಿದೆ; ಬೇಗನೇ ನಡೆಯಿರಿ. ಶ್ರೀರಾಮ-ಲಕ್ಷ್ಮಣರೊಡನೆ ಇರುವ ಸುಗ್ರೀವನು ನಿಮ್ಮನ್ನು ನೋಡಲು ಇಚ್ಛಿಸುತ್ತಿದ್ದಾನೆ. ಹೇ ವಾನರವೀರರೆ! ಪ್ರಸನ್ನರಾಗಿ ನೀವು ಬೇಗನೆ ಬರಬೇಕು’’ ಎಂದು ಕಾವಲುಗಾರರು ತಿಳಿಸಿದರು. ಕಾವಲುಗಾರರ ಮಾತನ್ನು ಕೇಳಿದ ಆ ಮಹಾಬಲಶಾಲಿಗಳು ಹಾಗೆಯೇ ಆಗಲಿ ಎಂದು ಆತುರ ಪಟ್ಟು ಆಕಾಶಮಾರ್ಗದಿಂದ ಹೊರಟರು. ಹನುಮಂತನನ್ನು, ಯುವರಾಜ ಅಂಗದನನ್ನು ಮುಂದಿಟ್ಟುಕೊಂಡು ಶೀಘ್ರವಾಗಿ ಬಂದು ಶ್ರೀರಾಮ, ಸುಗ್ರೀವನ ಮುಂದೆ ಇಳಿದರು. ॥28-35॥

(ಶ್ಲೋಕ-36)

ಮೂಲಮ್

ಹನೂಮಾನ್ ರಾಘವಂ ಪ್ರಾಹ ದೃಷ್ಟಾ ಸೀತಾ ನಿರಾಮಯಾ ।
ಸಾಷ್ಟಾಂಗಂ ಪ್ರಣಿಪತ್ಯಾಗ್ರೇ ರಾಮಂ ಪಶ್ಚಾದ್ಧರೀಶ್ವರಮ್ ॥

ಅನುವಾದ

ಹನುಮಂತನು ‘‘ಕ್ಷೇಮವಾಗಿರುವ ಸೀತೆಯನ್ನು ನಾನು ನೋಡಿ ಬಂದಿರುವೆನು’’ ಎಂದು ಹೇಳಿ ಶ್ರೀರಾಮಚಂದ್ರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಬಳಿಕ ವಾನರರಾಜನಾದ ಸುಗ್ರೀವನನ್ನು ವಂದಿಸಿದನು. ॥36॥

(ಶ್ಲೋಕ-37)

ಮೂಲಮ್

ಕುಶಲಂ ಪ್ರಾಹ ರಾಜೇಂದ್ರ ಜಾನಕೀ ತ್ವಾಂ ಶುಚಾನ್ವಿತಾ ।
ಅಶೋಕವನೀಕಾಮಧ್ಯೇ ಶಿಂಶಪಾಮೂಲ ಮಾಶ್ರಿತಾ ॥

(ಶ್ಲೋಕ-38)

ಮೂಲಮ್

ರಾಕ್ಷಸೀಭಿಃ ಪರಿವೃತಾ ನಿರಾಹಾರಾ ಕೃಶಾ ಪ್ರಭೋ ।
ಹಾ ರಾಮ ರಾಮ ರಾಮೇತಿ ಶೋಚಂತೀ ಮಲಿನಾಂಬರಾ ॥

(ಶ್ಲೋಕ-39)

ಮೂಲಮ್

ಏಕವೇಣೀ ಮಯಾ ದೃಷ್ಟಾ ಶನೈರಾಶ್ವಾಸಿತಾ ಶುಭಾ ।
ವೃಕ್ಷಶಾಖಾಂತರೇ ಸ್ಥಿತ್ವಾ ಸೂಕ್ಷ್ಮರೂಪೇಣ ತೇ ಕಥಾಮ್ ॥

(ಶ್ಲೋಕ-40)

ಮೂಲಮ್

ಜನ್ಮಾರಭ್ಯ ತವಾತ್ಯರ್ಥಂ ದಂಡಕಾಗಮನಂ ತಥಾ ।
ದಶಾನನೇನ ಹರಣಂ ಜಾನಕ್ಯಾ ರಹಿತೇ ತ್ವಯಿ ॥

(ಶ್ಲೋಕ-41)

ಮೂಲಮ್

ಸುಗ್ರೀವೇಣ ಯಥಾ ಮೈತ್ರೀ ಕೃತ್ವಾ ವಾಲಿನಿಬರ್ಹಣಮ್ ।
ಮಾರ್ಗಣಾರ್ಥಂ ಚ ವೈದೇಹ್ಯಾಃ ಸುಗ್ರೀವೇಣ ವಿಸರ್ಜಿತಾಃ ॥

(ಶ್ಲೋಕ-42)

ಮೂಲಮ್

ಮಹಾಬಲಾ ಮಹಾಸತ್ತ್ವಾ ಹರಯೋ ಜಿತಕಾಶಿನಃ ।
ಗತಾಃ ಸರ್ವತ್ರ ಸರ್ವೇ ವೈ ತತ್ರೈಕೋಹಮಿಹಾಗತಃ ॥

ಅನುವಾದ

‘‘ಹೇ ರಾಜೇಂದ್ರಾ! ಶೋಕಾವಿಷ್ಟಳಾದ ಸೀತಾದೇವಿಯು ನಿನಗೆ ಕುಶಲವನ್ನು ತಿಳಿಸಿರುತ್ತಾಳೆ. ಅವಳು ಲಂಕೆಯ ಅಶೋಕವನದಲ್ಲಿ ಶಿಂಶಪಾವೃಕ್ಷದ ಬುಡದಲ್ಲಿ ಕುಳಿತಿರುವಳು. ಸ್ವಾಮಿ! ರಾಕ್ಷಸಿಯರಿಂದ ಸುತ್ತು ವರಿಯಲ್ಪಟ್ಟವಳಾಗಿ, ಆಹಾರ ಸೇವಿಸದೆ ಬಳಲಿದ್ದು, ಕೊಳೆಯಾದ ಬಟ್ಟೆಯನ್ನುಟ್ಟು, ಯಾವಾಗಲೂ ರಾಮಾ! ರಾಮಾ! ಎಂದು ದುಃಖದಿಂದ ಉಚ್ಚರಿಸುತ್ತಾ, ಒಂದೇ ಜಡೆಯುಳ್ಳ ಶುಭಳಾದ ಜಾನಕೀ ಮಾತೆಯನ್ನು ಸಂದರ್ಶಿಸಿ ನಿಧಾನವಾಗಿ ಅವಳನ್ನು ಸಮಾಧಾನಗೊಳಿಸಿದೆನು. ಅಲ್ಲಿಗೆ ಹೋಗಿ ಮೊದಲಿಗೆ ನಾನು ಸೂಕ್ಷ್ಮರೂಪದಿಂದ ಮರದ ಕೊಂಬೆಯಲ್ಲಿ ಕುಳಿತು, ಎಲೆಗಳಲ್ಲಿ ಮರೆಯಾಗಿದ್ದುಕೊಂಡು ನಿನ್ನ ಮಂಗಳ ಕಥೆಯನ್ನು ಹಾಡಲಾರಂಭಿಸಿದೆ. ನೀನು ಹುಟ್ಟಿದಾಗಿನಿಂದ ದಂಡಕಾರಣ್ಯಕ್ಕೆ ಬಂದುದು, ಆಶ್ರಮದಲ್ಲಿ ನೀವಿಲ್ಲದಿರುವಾಗ ರಾವಣನು ಸೀತೆಯನ್ನು ಕದ್ದುಕೊಂಡು ಹೋದುದು, ಅವಳನ್ನು ಹುಡುಕುತ್ತಾ ಸುಗ್ರೀವನೊಡನೆ ಸ್ನೇಹವನ್ನು ಬೆಳೆಸಿದ್ದು, ವಾಲಿಯನ್ನು ಕೊಂದುದು, ಸೀತೆಯನ್ನು ಹುಡುಕಲು ಸುಗ್ರೀವನಿಂದ ಮಹಾಬಲಿಷ್ಠರೂ, ಪರಾಕ್ರಮಶಾಲಿಗಳೂ ಆದ ತೇಜಸ್ವಿಗಳಾದ ಕಪಿಗಳನ್ನು ಎಲ್ಲ ಕಡೆಗಳಿಗೂ ಕಳಿಸಿದುದು, ಅದರಲ್ಲಿ ನಾನೊಬ್ಬನು ಇಲ್ಲಿ ಲಂಕೆಗೆ ಬಂದಿರುವೆನು ಎಂದು ತಿಳಿಸಿದೆ. ನಾನು ಸುಗ್ರೀವನ ಮಂತ್ರಿಯು ಶ್ರೀರಾಮನ ಸೇವಕನೂ ಆಗಿರುವೆ. ಭಾಗ್ಯವಶದಿಂದ ನಾನು ಜಾನಕಿಯನ್ನು ಕಂಡೆನು, ಈಗ ನನ್ನ ಶ್ರಮವೂ ಸಾರ್ಥಕವಾಯಿತು.’’ ॥37-42॥

(ಶ್ಲೋಕ-43)

ಮೂಲಮ್

ಅಹಂ ಸುಗ್ರೀವಸಚಿವೋ ದಾಸೋಽಹಂ ರಾಘವಸ್ಯ ಹಿ ।
ದೃಷ್ಟಾ ಯತ್ ಜಾನಕೀ ಭಾಗ್ಯಾತ್ ಪ್ರಯಾಸಃ ಲಿತೋಽದ್ಯ ಮೇ ॥

(ಶ್ಲೋಕ-44)

ಮೂಲಮ್

ಇತ್ಯುದೀರಿತಮಾಕರ್ಣ್ಯ ಸೀತಾ ವಿಸ್ಫಾರಿತೇಕ್ಷಣಾ ।
ಕೇನ ವಾ ಕರ್ಣಪೀಯೂಷಂ ಶ್ರಾವಿತಂ ಮೇ ಶುಭಾಕ್ಷರಮ್ ॥

(ಶ್ಲೋಕ-45)

ಮೂಲಮ್

ಯದಿ ಸತ್ಯಂ ತದಾಯಾತು ಮದ್ದರ್ಶನಪಥಂ ತು ಸಃ ।
ತತೋಽಹಂ ವಾನರಾಕಾರಃ ಸೂಕ್ಷ್ಮರೂಪೇಣ ಜಾನಕೀಮ್ ॥

(ಶ್ಲೋಕ-46)

ಮೂಲಮ್

ಪ್ರಣಮ್ಯ ಪ್ರಾಂಜಲಿರ್ಭೂತ್ವಾ ದೂರಾದೇವ ಸ್ಥಿತಃ ಪ್ರಭೋ ।
ಪೃಷ್ಟೋಽಹಂ ಸೀತಯಾ ಕಸ್ತ್ವಮಿತ್ಯಾದಿ ಬಹುವಿಸ್ತರಮ್ ॥

ಅನುವಾದ

ಹೀಗೆಂದ ಮಾತನ್ನು ಕೇಳಿ ಸೀತೆಯ ಎಡಗಣ್ಣು ಹಾರಿತು. ಈ ಕರ್ಣಾನಂದಕರವಾದ ಶುಭಾಕ್ಷರ ವುಳ್ಳ ಮಾತುಗಳನ್ನು ಯಾರು ನನಗೆ ಕೇಳಿಸಿದರು? ಇದು ನಿಜವಾಗಿದ್ದರೆ ಅವನು ನನ್ನ ಕಣ್ಣೆದುರಿಗೆ ಬರಲಿ ಎಂದಳು. ಹೇ ಒಡೆಯಾ! ಆಗ ನಾನು ಪುಟ್ಟ ಕಪಿರೂಪದಿಂದ ಸೀತಾದೇವಿಯ ಬಳಿ ಸಾರಿ, ದೂರದಿಂದ ಕೈ ಮುಗಿದು ನಿಂತುಕೊಂಡೆ. ಅನಂತರ ಸೀತೆಯು ನೀನು ಯಾರು? ಮುಂತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದಳು. ॥43-46॥

(ಶ್ಲೋಕ-47)

ಮೂಲಮ್

ಮಯಾ ಸರ್ವಂ ಕ್ರಮೇಣೈವ ವಿಜ್ಞಾಪಿತಮರಿಂದಮ ।
ಪಶ್ಚಾನ್ಮಯಾರ್ಪಿತಂ ದೇವ್ಯೈ ಭವದ್ದತ್ತಾಂಗುಲೀಯಕಮ್ ॥

ಅನುವಾದ

ಹೇ ಶತ್ರುನಾಶಕನೆ! ನಾನು ಬಹಳ ವಿವರವಾಗಿ ಕ್ರಮವಾಗಿ ಎಲ್ಲವನ್ನು ಹೇಳಿದೆನು ಮತ್ತು ನೀನು ಕೊಟ್ಟಿರುವ ಮುದ್ರಿಕೆಯನ್ನು ದೇವಿಯರಿಗೆ ಅರ್ಪಿಸಿದೆನು. ॥47॥

(ಶ್ಲೋಕ-48)

ಮೂಲಮ್

ತೇನ ಮಾಮತಿವಿಶ್ವಸ್ತಾ ವಚನಂ ಚೇದಮಬ್ರವೀತ್ ।
ಯಥಾ ದೃಷ್ಟಾಸ್ಮಿ ಹನುಮನ್ಪೀಡ್ಯಮಾನಾ ದಿವಾನಿಶಮ್ ॥

(ಶ್ಲೋಕ-49)

ಮೂಲಮ್

ರಾಕ್ಷಸೀನಾಂ ತರ್ಜನೈಸ್ತತ್ಸರ್ವಂ ಕಥಯ ರಾಘವೇ ।
ಮಯೋಕ್ತಂ ದೇವಿ ರಾಮೋಽಪಿ ತ್ವಚ್ಚಿಂತಾಪರಿನಿಷ್ಠಿತಃ ॥

(ಶ್ಲೋಕ-50)

ಮೂಲಮ್

ಪರಿಶೋಚತ್ಯಹೋರಾತ್ರಂ ತ್ವದ್ವಾರ್ತಾಂ ನಾಧಿಗಮ್ಯ ಸಃ ।
ಇದಾನೀಮೇವ ಗತ್ವಾಹಂ ಸ್ಥಿತಿಂ ರಾಮಾಯ ತೇ ಬ್ರುವೇ ॥

ಅನುವಾದ

ಅದರಿಂದ ಅವರಿಗೆ ನನ್ನಲ್ಲಿ ಹೆಚ್ಚಿನ ನಂಬಿಕೆ ಉಂಟಾಯಿತು ಹಾಗೂ ಹನುಮಂತಾ! ಹಗಲೂ-ರಾತ್ರೆ ಈ ರಾಕ್ಷಸಿಯರು ನನ್ನನ್ನು ಪಿಡಿಸುತ್ತಿರುವುದನ್ನು ನೀನು ಕಣ್ಣಾರೆ ಕಂಡಂತೆಯೇ ಎಲ್ಲವನ್ನು ಶ್ರೀರಾಮನಿಗೆ ತಿಳಿಸು ಎಂದು ಹೇಳಿದಾಗ ನಾನು ಅಮ್ಮಾ! ಶ್ರೀರಾಮನೂ ಕೂಡ ಹಗಲೂ ರಾತ್ರೆ ನಿನ್ನ ಯೋಚನೆಯಲ್ಲೆ ಮುಳುಗಿದ್ದು, ನಿನ್ನ ಸುದ್ದಿಯನ್ನು ತಿಳಿಯದೆ ದುಃಖಪಡುತ್ತಿರುವನು. ನಾನು ಈಗಲೇ ಹೋರಟು ರಾಮನ ಬಳಿಗೆ ಹೋಗಿ ನಿನ್ನ ಪರಿಸ್ಥಿತಿಯನ್ನು ಅವನಿಗೆ ತಿಳಿಸುವೆನು. ॥48-50॥

(ಶ್ಲೋಕ-51)

ಮೂಲಮ್

ರಾಮಃ ಶ್ರವಣಮಾತ್ರೇಣ ಸುಗ್ರೀವೇಣ ಸಲಕ್ಷ್ಮಣಃ ।
ವಾನರಾನೀಕಪೈಃ ಸಾರ್ಧಮಾಗಮಿಷ್ಯತಿ ತೇಂತಿಕಮ್ ॥

ಅನುವಾದ

ಶ್ರೀರಾಮಚಂದ್ರನು ಸುದ್ದಿಯನ್ನು ತಿಳಿದ ಕೂಡಲೆ ಸುಗ್ರೀವ ಲಕ್ಷ್ಮಣಸಹಿತನಾಗಿ ವಾನರ ಸೈನ್ಯದೊಂದಿಗೆ ನಿನ್ನ ಸಮೀಪಕ್ಕೆ ಬರುವನು. ॥51॥

(ಶ್ಲೋಕ-52)

ಮೂಲಮ್

ರಾವಣಂ ಸಕುಲಂ ಹತ್ವಾ ನೇಷ್ಯತಿ ತ್ವಾಂ ಸ್ವಕಂ ಪುರಮ್ ।
ಅಭಿಜ್ಞಾಂ ದೇಹಿ ಮೇ ದೇವಿ ಯಥಾ ಮಾಂ ವಿಶ್ವಸೇದ್ವಿಭುಃ ॥

ಅನುವಾದ

ಪರಿವಾರ ಸಹಿತನಾದ ರಾವಣನನ್ನು ಕೊಂದು ನಿನ್ನನ್ನು ತನ್ನ ರಾಜಧಾನಿ ಅಯೋಧ್ಯೆಗೆ ಕೊಂಡೊಯ್ಯಲಿರುವನು. ದೇವಿ! ಶ್ರೀರಾಮ ದೇವರು ನಂಬುವಂತಹ ಒಂದು ಗುರುತನ್ನು ನನಗೆ ಕೊಡು. ॥52॥

(ಶ್ಲೋಕ-53)

ಮೂಲಮ್

ಇತ್ಯುಕ್ತಾ ಸಾ ಶಿರೋರತ್ನಂ ಚೂಡಾಪಾಶೇ ಸ್ಥಿತಂ ಪ್ರಿಯಮ್ ।
ದತ್ತ್ವಾ ಕಾಕೇನ ಯದ್ವೃತ್ತಂ ಚಿತ್ರಕೂಟಗಿರೌ ಪುರಾ ॥

(ಶ್ಲೋಕ-54)

ಮೂಲಮ್

ತದಪ್ಯಾಹಾಶ್ರುಪೂರ್ಣಾಕ್ಷೀ ಕುಶಲಂ ಬ್ರೂಹಿ ರಾಘವಮ್ ।
ಲಕ್ಷ್ಮಣಂ ಬ್ರೂಹಿ ಮೇ ಕಿಂಚಿದ್ದುರುಕ್ತಂ ಭಾಷಿತಂ ಪುರಾ ॥

ಅನುವಾದ

ಹೀಗೆ ನಾನು ಹೇಳಿದಾಗ ಆಕೆಯು ಪ್ರಿಯವಾದ ತನ್ನ ಚೂಡಾಮಣಿಯನ್ನು ಕೊಟ್ಟು, ಹಿಂದೆ ಚಿತ್ರಕೂಟದಲ್ಲಿ ಕಾಗೆಯಿಂದ ಸಂಭವಿಸಿದ ಕಥೆಯನ್ನು ಹೇಳಿದಳು. ಅನಂತರ ಕಣ್ಣುಗಳಲ್ಲಿ ನೀರನ್ನು ತಂದುಕೊಂಡು ‘‘ಶ್ರೀರಾಮನಿಗೆ ನನ್ನ ಕುಶಲ ಸಮಾಚಾರವನ್ನು ಹೇಳು. ಲಕ್ಷ್ಮಣನಿಗೂ ಕೂಡ ಹಿಂದೆ ನಾನು ತಿಳಿಯದೆ ಆಡಿದ ಕೆಟ್ಟ ಮಾತುಗಳನ್ನು ಕ್ಷಮಿಸುವಂತೆ ಹೇಳು. ಹೇ ಕುಲಪುತ್ರಾ! ದಯಾಮಯನಾದ ಶ್ರೀರಾಮನು ನನ್ನನ್ನು ಬೇಗನೇ ಉದ್ಧಾರ ಮಾಡುವಂತಹ ಕಾರ್ಯವನ್ನು ಮಾಡು. ॥53-54॥

(ಶ್ಲೋಕ-55)

ಮೂಲಮ್

ತತ್ ಕ್ಷಮಸ್ವಾಜ್ಞಭಾವೇನ ಭಾಷಿತಂ ಕುಲನಂದನ ।
ತಾರಯೇನ್ಮಾಂ ಯಥಾ ರಾಮಸ್ತಥಾ ಕುರು ಕೃಪಾನ್ವಿತಃ ॥

(ಶ್ಲೋಕ-56)

ಮೂಲಮ್

ಇತ್ಯುಕ್ತ್ವಾ ರುದತೀ ಸೀತಾ ದುಃಖೇನ ಮಹತಾವೃತಾ ।
ಮಯಾಪ್ಯಾಶ್ವಾಸಿತಾ ರಾಮ ವದತಾ ಸರ್ವಮೇವ ತೇ ॥

(ಶ್ಲೋಕ-57)

ಮೂಲಮ್

ತತಃ ಪ್ರಸ್ಥಾಪಿತೋ ರಾಮ ತ್ವತ್ಸಮೀಪಮಿಹಾಗತಃ ।
ತದಾಗಮನವೇಲಾಯಾಮಶೋಕವನಿಕಾಂ ಪ್ರಿಯಾಮ್ ॥

(ಶ್ಲೋಕ-58)

ಮೂಲಮ್

ಉತ್ಪಾಟ್ಯ ರಾಕ್ಷಸಾಂಸ್ತತ್ರ ಬಹೂನ್ ಹತ್ವಾ ಕ್ಷಣಾದಹಮ್ ।
ರಾವಣಸ್ಯ ಸುತಂ ಹತ್ವಾ ರಾವಣೇನಾಭಿಭಾಷ್ಯ ಚ ॥

(ಶ್ಲೋಕ-59)

ಮೂಲಮ್

ಲಂಕಾಮಶೇಷತೋ ದಗ್ಧ್ವಾ ಪುನರಪ್ಯಾಗಮಂ ಕ್ಷಣಾತ್ ।
ಶ್ರುತ್ವಾ ಹನೂಮತೋ ವಾಕ್ಯಂ ರಾಮೋತ್ಯಂತಪ್ರಹೃಷ್ಟಧೀಃ ॥

ಅನುವಾದ

ಈ ಪ್ರಕಾರ ಹೇಳಿ ಹೆಚ್ಚಿನ ದುಃಖದಿಂದ ಅಳುತ್ತಾ ಇರಲು, ನಾನು ಎಲ್ಲವನ್ನು ಹೇಳಿ ಸಮಾಧಾನಗೊಳಿಸಿದೆನು. ಹೇ ರಾಮಾ! ಹೀಗೆ ನಿನಗೆ ಎಲ್ಲವನ್ನು ತಿಳಿಸಿರುವೆ. ಅನಂತರ ಅಲ್ಲಿಂದ ಹೊರಟು ನಿನ್ನಲ್ಲಿಗೆ ಬರುವಾಗ ರಾವಣನಿಗೆ ಪ್ರಿಯವಾಗಿದ್ದ ಅಶೋಕವನವನ್ನು ಧ್ವಂಸಗೊಳಿಸಿ, ಬಹಳ ಮಂದಿ ರಾಕ್ಷಸರನ್ನು ಕ್ಷಣಮಾತ್ರದಲ್ಲಿ ಕೊಂದು, ರಾವಣನ ಮಗ ಅಕ್ಷಕುಮಾರನನ್ನು ಯಮಸದನಕ್ಕೆ ಅಟ್ಟಿ, ರಾವಣನೊಡನೆ ಮಾತನಾಡಿಕೊಂಡು, ಲಂಕೆಯನ್ನು ಪೂರ್ಣವಾಗಿ ಸುಟ್ಟು ಬೂದಿಮಾಡಿ ಕ್ಷಣಾರ್ಧದಲ್ಲಿ ಇಲ್ಲಿಗೆ ಹಿಂದಿರುಗಿ ಬಂದಿರುವೆನು.’’ ಹನುಮಂತನ ಮಾತನ್ನು ಕೇಳಿ, ಶ್ರೀರಾಮನು ಬಹಳವಾಗಿ ಸಂತಸಗೊಂಡು ಹೇಳತೊಡಗಿದನು. ॥55-59॥

(ಶ್ಲೋಕ-60)

ಮೂಲಮ್

ಹನೂಮಂಸ್ತೇ ಕೃತಂ ಕಾರ್ಯಂ ದೇವೈರಪಿ ಸುದುಷ್ಕರಮ್ ।
ಉಪಕಾರಂ ನ ಪಶ್ಯಾಮಿ ತವ ಪ್ರತ್ಯುಪಕಾರಿಣಃ ॥

ಅನುವಾದ

‘‘ಎಲೈ ಹನುಮಂತಾ! ದೇವತೆಗಳಿಂದಲೂ ಮಾಡಲು ಅಸಾಧ್ಯವಾದ ಕಾರ್ಯವನ್ನು ನೀನು ಮಾಡಿರುವೆ. ಇದಕ್ಕೆ ಬದಲಾಗಿ ನಾನು ಹೇಗೆ ಪ್ರತ್ಯುಪಕಾರವನ್ನು ಮಾಡಲಿ? ನನಗೆ ತಿಳಿಯದು. ॥60॥

(ಶ್ಲೋಕ-61)

ಮೂಲಮ್

ಇದಾನೀಂ ತೇ ಪ್ರಯಚ್ಛಾಮಿ ಸರ್ವಸ್ವಂ ಮಮ ಮಾರುತೇ ।
ಇತ್ಯಾಲಿಂಗ್ಯ ಸಮಾಕೃಷ್ಯಗಾಢಂ ವಾನರಪುಂಗವಮ್ ॥

ಅನುವಾದ

ಇದೋ ಈಗ ನಿನಗೆ ನನ್ನ ಸರ್ವಸ್ವವನ್ನು ಒಪ್ಪಿಸುವೆನು’’ ಎಂದು ಹೇಳುತ್ತಾ ವಾನರಶ್ರೇಷ್ಠ ಮಾರುತಿಯನ್ನು ಬರಸೆಳೆದು ಗಾಢವಾಗಿ ಆಲಿಂಗಿಸಿಕೊಂಡನು. ॥61॥

(ಶ್ಲೋಕ-62)

ಮೂಲಮ್

ಸಾರ್ದ್ರನೇತ್ರೋ ರಘುಶ್ರೇಷ್ಠಃ ಪರಾಂ ಪ್ರೀತಿಮವಾಪ ಸಃ ।
ಹನೂಮಂತಮುವಾಚೇದಂ ರಾಘವೋ ಭಕ್ತವತ್ಸಲಃ ॥

(ಶ್ಲೋಕ-63)

ಮೂಲಮ್

ಪರಿರಂಭೋ ಹಿ ಮೇ ಲೋಕೇ ದುರ್ಲಭಃ ಪರಮಾತ್ಮನಃ ।
ಅತಸ್ತ್ವಂ ಮಮ ಭಕ್ತೋಽಸಿ ಪ್ರಿಯೋಽಸಿ ಹರಿಪುಂಗವ ॥

ಅನುವಾದ

ರಘುನಾಥನ ಕಣ್ಣುಗಳಲ್ಲಿ ನೀರು ತುಂಬಿ ಬಂದು, ಹೃದಯದಲ್ಲಿ ಪರಮಪ್ರೇಮವು ಹಿಡಿಸದಾಯಿತು. ಆಗ ಭಕ್ತವತ್ಸಲನಾದ ಶ್ರೀರಾಮಚಂದ್ರನು ‘‘ಹನುಮಂತಾ! ಪ್ರಪಂಚದಲ್ಲಿ ಪರಮಾತ್ಮನಾದ ನನ್ನ ಆಲಿಂಗನವು ಅತ್ಯಂತ ದುರ್ಲಭವಾಗಿದೆ. ಆದ್ದರಿಂದ ಹರಿಶ್ರೇಷ್ಠನೆ! ನೀನು ನನ್ನ ಭಕ್ತ ಮತ್ತು ಪ್ರೀತಿಪಾತ್ರನಾಗಿರುವೆ.’’ ॥62-63॥

(ಶ್ಲೋಕ-64)

ಮೂಲಮ್

ಯತ್ಪಾದಪದ್ಮಯುಗಲಂ ತುಲಸೀದಲಾದ್ಯೈಃ
ಸಂಪೂಜ್ಯ ವಿಷ್ಣುಪದವೀಮತುಲಾಂ ಪ್ರಯಾಂತಿ ।
ತೇನೈವ ಕಿಂ ಪುನರಸೌ ಪರಿರಬ್ಧಮೂರ್ತೀ
ರಾಮೇಣ ವಾಯುತನಯಃ ಕೃತಪುಣ್ಯಪುಂಜಃ ॥

ಅನುವಾದ

ಹೇ ಪಾರ್ವತಿ! ಯಾರ ಚರಣಾರವಿಂದಯುಗಳವನ್ನು ತುಳಸೀದಳ ಮುಂತಾದವುಗಳಿಂದ ಪೂಜಿಸುವ ಭಕ್ತರು ಹೆಚ್ಚಿನದಾದ ವಿಷ್ಣುಪದವಿಯನ್ನು ಹೊಂದುವರೋ, ಅಂತಹ ರಾಮನಿಂದ ಆಲಿಂಗಿಸಲ್ಪಟ್ಟ ಶರೀರವುಳ್ಳ ಪವನನಂದನ ಹನುಮಂತನು ಹಿಂದೆ ಮಾಡಿದ ಪುಣ್ಯಪುಂಜವುಳ್ಳ ಭಕ್ತನೆಂದು ಹೇಳುವುದೇನಿದೆ? ॥64॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಸುಂದರಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಸುಂದರಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.
ಸುಂದರಕಾಂಡವು ಮುಗಿದುದು