೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ಹನುಮಂತ ರಾವಣರ ಸಂವಾದ ಹಾಗೂ ಲಂಕಾದಹನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಯಾಂತಂ ಕಪೀಂದ್ರಂ ಧೃತಪಾಶಬಂಧನಂ
ವಿಲೋಕ ಯಂತಂ ನಗರಂ ವಿಭೀತವತ್ ।
ಅತಾಡಯನ್ಮುಷ್ಟಿತಲೈಃ ಸುಕೋಪನಾಃ
ಪೌರಾಃ ಸಮಂತಾದನುಯಾಂತ ಈಕ್ಷಿತುಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ಬ್ರಹ್ಮಪಾಶದಿಂದ ಬಂಧಿತನಾಗಿ ನಗರವನ್ನು ನೋಡುತ್ತಾ ಹೋಗುತ್ತಿರುವ, ಹೆದರಿದವನಂತೆ ಕಂಡು ಬರುವ ಹನುಮಂತನನ್ನು ನೋಡಲು ಸುತ್ತಲೂ ನೆರೆದಿದ್ದ ಪೌರಜನರು ಕೋಪಾವಿಷ್ಟರಾಗಿ ಮುಷ್ಟಿಗಳಿಂದ ಅವನನ್ನು ಗುದ್ದುತ್ತಿದ್ದರು. ॥1॥

(ಶ್ಲೋಕ-2)

ಮೂಲಮ್

ಬ್ರಹ್ಮಾಸ್ತ್ರಮೇನಂ ಕ್ಷಣಮಾತ್ರ ಸಂಗಮಂ
ಕೃತ್ವಾ ಗತಂ ಬ್ರಹ್ಮವರೇಣ ಸತ್ವರಮ್ ।
ಜ್ಞಾತ್ವಾ ಹನೂಮಾನಪಿ ಲ್ಗುರಜ್ಜುಭಿ -
ರ್ಧೃತೋ ಯಯೌ ಕಾರ್ಯವಿಶೇಷಗೌರವಾತ್ ॥

ಅನುವಾದ

ಬ್ರಹ್ಮದೇವರ ವರಪ್ರದಾನದಂತೆ ಬ್ರಹ್ಮಾಸ್ತ್ರವು ಹನುಮಂತನನ್ನು ಒಂದು ಕ್ಷಣಕಾಲ ಮಾತ್ರ ಸ್ಪರ್ಶಿಸಿ ಹೊರಟು ಹೋಯಿತು. ಇದನ್ನು ತಿಳಿದಿದ್ದರೂ ಅವನು ನಿರ್ಬಲವಾದ ಹಗ್ಗಗಳಿಂದ ಬಂಧಿತನಾಗಿದ್ದು ಮುಂದೆ ವಿಶೇಷ ಕಾರ್ಯವನ್ನು ಸಾಧಿಸುವುದಕ್ಕಾಗಿ ರಾವಣನ ಸಭೆಗೆ ಹೋದನು. ॥2॥

(ಶ್ಲೋಕ-3)

ಮೂಲಮ್

ಸಭಾಂತರಸ್ಥಸ್ಯ ಚ ರಾವಣಸ್ಯ ತಂ
ಪುರೋ ನಿಧಾಯಾಹ ಬಲಾರಿಜಿತ್ತದಾ ।
ಬದ್ಧೋ ಮಯಾ ಬ್ರಹ್ಮವರೇಣ ವಾನರಃ
ಸಮಾಗತೋಽನೇನ ಹತಾ ಮಹಾಸುರಾಃ ॥

ಅನುವಾದ

ಇಂದ್ರಜಿತನು ಹನುಮಂತನನ್ನು ಸಭಾಮಧ್ಯದಲ್ಲಿ ರಾವಣನ ಎದುರು ನಿಲ್ಲಿಸಿ ಹೇಳುತ್ತಾನೆ - ‘‘ಅಪ್ಪಾ! ಈ ವಾನರನನ್ನು ಬ್ರಹ್ಮಪಾಶದಿಂದ ಬಂಧಿಸಿ ನಾನು ತಂದಿರುವೆನು. ಇವನು ದೊಡ್ಡ - ದೊಡ್ಡ ರಾಕ್ಷಸರನ್ನು ಕೊಂದಿರುವನು. ॥3॥

(ಶ್ಲೋಕ-4)

ಮೂಲಮ್

ಯದ್ಯುಕ್ತಮತ್ರಾರ್ಯ ವಿಚಾರ್ಯ ಮಂತ್ರಿಭಿ-
ರ್ವಿಧೀಯತಾಮೇಷ ನ ಲೌಕಿಕೋ ಹರಿಃ ।
ತತೋ ವಿಲೋಕ್ಯಾಹ ಸ ರಾಕ್ಷಸೇಶ್ವರಃ
ಪ್ರಹಸ್ತಮಗ್ರೇ ಸ್ಥಿತಮಂಜನಾದ್ರಿಭಮ್ ॥

ಅನುವಾದ

ಮಹಾರಾಜಾ! ಈಗ ಏನು ಮಾಡಬೇಕೆಂಬುದನ್ನು ಮಂತ್ರಿಗಳೊಡನೆ ಸಮಾಲೋಚನೆ ನಡೆಸಿ ಅನಂತರ ಅದರಂತೆ ಮಾಡಿರಿ. ಇವನು ಸಾಮಾನ್ಯ ಕಪಿ ಯಂತೂ ಅಲ್ಲ. ಆಗ ರಾಕ್ಷಸೇಶ್ವರನಾದ ರಾವಣನು ಇದುರಿಗೆ ಕುಳಿತಿದ್ದ ಕಾಡಿಗೆಯ ಪರ್ವತದಂತಿರುವ ಪ್ರಹಸ್ತನನ್ನು ನೋಡಿ ಹೀಗೆಂದನು. ॥4॥

(ಶ್ಲೋಕ-5)

ಮೂಲಮ್

ಪ್ರಹಸ್ತ ಪೃಚ್ಛೈನಮಸೌ ಕಿಮಾಗತಃ
ಕಿಮತ್ರ ಕಾರ್ಯಂ ಕುತ ಏವ ವಾನರಃ ।
ವನಂ ಕಿಮರ್ಥಂ ಸಕಲಂ ವಿನಾಶಿತಂ
ಹತಾಃ ಕಿಮರ್ಥಂ ಮಮ ರಾಕ್ಷಸಾ ಬಲಾತ್ ॥

ಅನುವಾದ

‘‘ಎಲೈ ಪ್ರಹಸ್ತನೆ! ಈತನನ್ನು ಕೇಳು. ಇವನು ಇಲ್ಲಿಗೆ ಏಕೆ ಬಂದನು? ಎಲ್ಲಿಂದ ಬಂದನು? ಇವನಿಗೆ ಇಲ್ಲಿ ಕೆಲಸವಾದರೂ ಏನು? ಈ ಕಪಿಯು ಅಶೋಕವನವನ್ನು ಏತಕ್ಕಾಗಿ ನಾಶ ಮಾಡಿದನು? ನಮ್ಮ ಕಡೆಯ ರಾಕ್ಷಸರನ್ನು ಏಕೆ ಕೊಂದನು?’’ ॥5॥

(ಶ್ಲೋಕ-6)

ಮೂಲಮ್

ತತಃ ಪ್ರಹಸ್ತೋ ಹನುಮಂತಮಾದರಾತ್
ಪಪ್ರಚ್ಛ ಕೇನ ಪ್ರಹಿತೋಽಸಿ ವಾನರ ।
ಭಯಂ ಚ ತೇ ಮಾಸ್ತು ವಿಮೋಕ್ಷ್ಯಸೇ ಮಯಾ
ಸತ್ಯಂ ವದಸ್ವಾಖಿಲರಾಜಸನ್ನಿಧೌ ॥

ಅನುವಾದ

ಆಗ ಪ್ರಹಸ್ತನು ಹನುಮಂತನನ್ನು ಆದರದಿಂದ ಕೇಳಿದನು - ‘‘ಎಲೈ ಕಪಿಯೇ! ನಿನ್ನನ್ನು ಯಾರು ಕಳಿಸಿರುವರು? ನೀನು ಭಯ ಪಡಬೇಡ. ರಾಜೇಶ್ವರನ ಮುಂದೆ ಎಲ್ಲ ಮಾತುಗಳನ್ನು ಸತ್ಯವಾಗಿ ಹೇಳು. ನಾನು ನಿನ್ನನ್ನು ಬಿಡುಗಡೆ ಮಾಡುವೆನು ।।6।।

(ಶ್ಲೋಕ-7)

ಮೂಲಮ್

ತತೋಽತಿಹರ್ಷಾತ್ಪವನಾತ್ಮಜೋ ರಿಪುಂ
ನಿರೀಕ್ಷ್ಯ ಲೋಕತ್ರಯಕಂಟಕಾಸುರಮ್ ।
ವಕ್ತುಂ ಪ್ರಚಕ್ರೇ ರಘುನಾಥಸತ್ಕಥಾಂ
ಕ್ರಮೇಣ ರಾಮಂ ಮನಸಾ ಸ್ಮರನ್ಮುಹುಃ ॥

ಅನುವಾದ

ಅನಂತರ ಬಹಳ ಸಂತೋಷದಿಂದ ಮಾರುತಿಯು ಮೂರು ಲೋಕಗಳಿಗೂ ಕಂಟಕನಾಗಿರುವ ತನ್ನ ಶತ್ರುವಾದ ರಾವಣನನ್ನು ನೋಡುತ್ತಾ, ಮನಸ್ಸಿನಲ್ಲಿ ಶ್ರೀರಾಮಚಂದ್ರನನ್ನು ಮತ್ತೆ-ಮತ್ತೆ ಧ್ಯಾನಿಸುತ್ತಾ ಕ್ರಮವಾಗಿ ಶ್ರೀರಾಮನ ಸತ್ಕಥೆಯನ್ನು ಹೇಳತೊಡಗಿದನು. ॥7॥

(ಶ್ಲೋಕ-8)

ಮೂಲಮ್

ಶೃಣು ಸ್ಫುಟಂ ದೇವಗಣಾದ್ಯಮಿತ್ರ ಹೇ
ರಾಮಸ್ಯ ದೂತೋಽಹಮಶೇಷಹೃತ್ಸ್ಥಿತೇಃ
ಯಸ್ಯಾಖಿಲೇಶಸ್ಯ ಹೃತಾಧುನಾ ತ್ವಯಾ
ಭಾರ್ಯಾ ಸ್ವನಾಶಾಯ ಶುನೇವ ಸದ್ಧವಿಃ ॥

ಅನುವಾದ

‘‘ಎಲೈ ದೇವಗಣಗಳ ಶತ್ರುವೆ! ನೀನು ಚೆನ್ನಾಗಿ ಕೇಳು. ನಾಯಿಯು ಪವಿತ್ರವಾದ ಹವಿಸ್ಸನ್ನು ಅಪಹರಿಸುವಂತೆ ನೀನು ನಿನ್ನ ನಾಶಕ್ಕಾಗಿ ಅಖಿಲೇಶ್ವರನಾದ ರಾಮನ ಪತ್ನಿಯನ್ನು ಕದ್ದು ತಂದಿರುವೆಯಲ್ಲ! ಆ ಸರ್ವಾಂತರ್ಯಾಮಿ ಭಗವಾನ್ ಶ್ರೀರಾಮನ ದೂತನು ನಾನಾಗಿದ್ದೇನೆ. ॥8॥

(ಶ್ಲೋಕ-9)

ಮೂಲಮ್

ಸ ರಾಘವೋಽಭ್ಯೇತ್ಯ ಮತಂಗಪರ್ವತಂ
ಸುಗ್ರೀವಮೈತ್ರೀಮನಲಸ್ಯ ಸನ್ನಿಧೌ ।
ಕೃತ್ವೈಕಬಾಣೇನ ನಿಹತ್ಯ ವಾಲಿನಂ
ಸುಗ್ರೀವಮೇವಾಧಿಪತಿಂ ಚಕಾರ ತಮ್ ॥

ಅನುವಾದ

ಆ ರಘುನಾಥನು ಮತಂಗ ಪರ್ವತಕ್ಕೆ ಬಂದು ಅಗ್ನಿದೇವರ ಸನ್ನಿಧಿಯಲ್ಲಿ ಸುಗ್ರೀವನೊಡನೆ ಸ್ನೇಹವನ್ನು ಬೆಳೆಸಿ, ಒಂದೇ ಬಾಣದಿಂದ ವಾಲಿಯನ್ನು ಕೊಂದು ಸುಗ್ರೀವನನ್ನು ವಾನರ ರಾಜ್ಯಕ್ಕೆ ಒಡೆಯನನ್ನಾಗಿಸಿದನು.॥9॥

(ಶ್ಲೋಕ-10)

ಮೂಲಮ್

ಸ ವಾನರಾಣಾಮಧಿಪೋ ಮಹಾಬಲೀ
ಮಹಾಬಲೈರ್ವಾನರಯೂಥಕೋಟಿಭಿಃ ।
ರಾಮೇಣ ಸಾರ್ಧಂ ಸಹ ಲಕ್ಷ್ಮಣೇನ ಭೋಃ
ಪ್ರವರ್ಷಣೇಮರ್ಷಯುತೋವತಿಷ್ಠತೇ ॥

ಅನುವಾದ

ಎಲೈ ರಾಕ್ಷಸರಾಜನೆ! ಕಪಿಗಳೊಡೆಯನಾದ ಮಹಾಬಲಶಾಲಿಯಾದ ಆತನು ಕೋಟಿಗಟ್ಟಲೆ ಕಪಿಗಳ ಗುಂಪಿನೊಡನೆ ರಾಮ ಲಕ್ಷ್ಮಣರಿಂದೊಡಗೂಡಿ ಈಗ ಪ್ರವರ್ಷಣ ಪರ್ವತದಲ್ಲಿ ಕುಪಿತನಾಗಿದ್ದುಕೊಂಡಿರುವನು. ॥10॥

(ಶ್ಲೋಕ-11)

ಮೂಲಮ್

ಸಂಚೋದಿತಾಸ್ತೇನ ಮಹಾಹರೀಶ್ವರಾ
ಧರಾಸುತಾಂ ಮಾರ್ಗಯಿತುಂ ದಿಶೋ ದಶ ।
ತತ್ರಾಹಮೇಕಃ ಪವನಾತ್ಮಜಃ ಕಪಿಃ
ಸೀತಾಂ ವಿಚಿನ್ವಂಛನಕೈಃ ಸಮಾಗತಃ ॥

ಅನುವಾದ

ಅವನು ಸೀತಾದೇವಿಯನ್ನು ಹುಡುಕುವುದಕ್ಕಾಗಿ ಹತ್ತು ದಿಕ್ಕುಗಳಿಗೂ ಮಹಾಕಪಿಗಳನ್ನು ಕಳಿಸಿರುವನು. ಅವರಲ್ಲಿ ಒಬ್ಬನಾದ ನಾನು ವಾಯುಪುತ್ರನಾಗಿದ್ದೇನೆ. ಸೀತೆಯನ್ನು ಹುಡುಕುತ್ತಾ ಹುಡುಕುತ್ತಾ ಮೆಲ್ಲಗೆ ಇಲ್ಲಿಗೆ ಬಂದಿರುವೆನು. ॥11॥

(ಶ್ಲೋಕ-12)

ಮೂಲಮ್

ದೃಷ್ಟಾ ಮಯಾ ಪದ್ಮಪಲಾಶಲೋಚನಾ
ಸೀತಾ ಕಪಿತ್ವಾದ್ವಿಪಿನಂ ವಿನಾಶಿತಮ್ ।
ದೃಷ್ಟ್ವಾ ತತೋಽಹಂ ರಭಸಾ ಸಮಾಗತಾನ್
ಮಾಂಹಂತುಕಾಮಾನ್ ಧೃತಚಾಪಸಾಯಕಾನ್ ॥

(ಶ್ಲೋಕ-13)

ಮೂಲಮ್

ಮಯಾ ಹತಾಸ್ತೇ ಪರಿರಕ್ಷಿತುಂ ವಪುಃ
ಪ್ರಿಯೋ ಹಿ ದೇಹೋಽಖಿಲದೇಹಿನಾಂ ಪ್ರಭೋ ।
ಬ್ರಹ್ಮಾಸ್ತ್ರಪಾಶೇನ ನಿಬಧ್ಯ ಮಾಂ ತತಃ
ಸಮಾಗಮನ್ಮೇಘನಿನಾದನಾಮಕಃ ॥

ಅನುವಾದ

ನಾನು ಕಮಲದಳಲೋಚನೆಯಾದ ಸೀತಾಮಾತೆಯನ್ನು ದರ್ಶಿಸಿರುವೆನು. ಕಪಿಯ ಸ್ವಭಾವಕ್ಕನು ಗುಣವಾಗಿ ಅಶೋಕವನವನ್ನು ಧ್ವಂಸಗೊಳಿಸಿರುವೆನು. ಅನಂತರ ಧನುರ್ಬಾಣಗಳನ್ನು ಧರಿಸಿ ನನ್ನನ್ನು ಕೊಲ್ಲಲು ನುಗ್ಗಿ ಬಂದ ರಾಕ್ಷಸರನ್ನು ನನ್ನ ಶರೀರವನ್ನು ಕಾಪಾಡಿಕೊಳ್ಳಲು ಕೊಂದುಹಾಕಿದೆನು. ಏಕೆಂದರೆ ಎಲೈ ರಾಜನೆ ! ತನ್ನ ಶರೀರವು ಎಲ್ಲ ದೇಹಧಾರಿಗಳಿಗೆ ಪ್ರಿಯವಾಗಿರುತ್ತದೆ. ಮತ್ತೆ ಈ ಮೇಘನಾದನೆಂಬುವನು ನನ್ನನ್ನು ಬ್ರಹ್ಮಾಸ ಪಾಶದಿಂದ ಕಟ್ಟಿ ಇಲ್ಲಿಗೆ ತಂದಿರುವನು. ॥12-13॥

(ಶ್ಲೋಕ-14)

ಮೂಲಮ್

ಸ್ಪೃಷ್ಟೈವ ಮಾಂ ಬ್ರಹ್ಮವರಪ್ರಭಾವತ -
ಸ್ತ್ಯಕ್ತ್ಯಾ ಗತಂ ಸರ್ವಮವೈಮಿ ರಾವಣ ।
ತಥಾಪ್ಯಹಂ ಬದ್ಧ ಇವಾಗತೋ ಹಿತಂ
ಪ್ರವಕ್ತುಕಾಮಃ ಕರುಣಾರಸಾರ್ದ್ರಧೀಃ ॥

ಅನುವಾದ

ರಾವಣಾ! ಬ್ರಹ್ಮನ ವರದಿಂದ ಅದು ನನ್ನನ್ನು ಸ್ಪರ್ಶಿಸುತ್ತಲೇ ಹೊರಟು ಹೋಯಿತು. ಇದನ್ನು ನಾನು ತಿಳಿದಿದ್ದರೂ ಬಂಧಿತನಂತೆ ಇಲ್ಲಿಗೆ ಬಂದಿರುತ್ತೇನೆ; ಏಕೆಂದರೆ ಕರುಣೆಯಿಂದ ಕರಗಿದ ಮನಸ್ಸುಳ್ಳವನಾಗಿ ನಿನಗೆ ಹಿತದ ಮಾತುಗಳನ್ನು ಹೇಳಲಿಕ್ಕಾಗಿ ಬಂದಿರುವೆನು. ॥14॥

(ಶ್ಲೋಕ-15)

ಮೂಲಮ್

ವಿಚಾರ್ಯ ಲೋಕಸ್ಯ ವಿವೇಕತೋ ಗತಿಂ
ನ ರಾಕ್ಷಸೀಂ ಬುದ್ಧಿಮುಪೈಹಿ ರಾವಣ ।
ದೈವೀಂ ಗತಿಂ ಸಂಸೃತಿಮೋಕ್ಷಹೈತುಕೀಂ
ಸಮಾಶ್ರಯಾತ್ಯಂತಹಿತಾಯ ದೇಹಿನಃ ॥

ಅನುವಾದ

ಎಲೈ ರಾವಣಾ! ನೀನು ವಿವೇಕದಿಂದ ಲೋಕವ್ಯವಹಾರಸ್ಥಿತಿಯನ್ನು ವಿಚಾರ ಮಾಡಿ ರಾಕ್ಷಸ ಬುದ್ಧಿಯನ್ನು ಕೈಬಿಡು. ದೇಹಿಯಾದವನಿಗೆ ಅತ್ಯಂತ ಹಿತವಾದ, ಸಂಸಾರ ಬಂಧನದಿಂದ ಬಿಡುಗಡೆ ಮಾಡಿಸುವಂತಹ ದೈವೀಸಂಪತ್ತಿನ ಹಾದಿಯನ್ನು ಆಶ್ರಯಿಸು. ॥15॥

(ಶ್ಲೋಕ-16)

ಮೂಲಮ್

ತ್ವಂ ಬ್ರಹ್ಮಣೋ ಹ್ಯುತ್ತಮವಂಶಸಂಭವಃ
ಪೌಲಸ್ತ್ಯಪುತ್ರೋಽಸಿ ಕುಬೇರಬಾಂಧವಃ ।
ದೇಹಾತ್ಮಬುದ್ಧ್ಯಾಪಿ ಚ ಪಶ್ಯ ರಾಕ್ಷಸೋ
ನಾಸ್ಯಾತ್ಮಬುದ್ಧ್ಯಾ ಕಿಮು ರಾಕ್ಷಸೋ ನಹಿ ॥

ಅನುವಾದ

ನೀನಾದರೋ ಪುಲಸ್ತ್ಯಬ್ರಹ್ಮನ ಉತ್ತಮ ವಂಶದಲ್ಲಿ ಪೌಲಸ್ತ್ಯನ ಮಗನಾಗಿ ಹುಟ್ಟಿದವನಾಗಿ ಕುಬೇರನ ಬಂಧುವಾಗಿರುವೆ. ದೇಹಾತ್ಮ ಬುದ್ಧಿಯಿಂದ ನೋಡಿದರೂ ನೀನು ರಾಕ್ಷಸನಲ್ಲ. ಇನ್ನು ಆತ್ಮಬುದ್ಧಿಯಿಂದ ರಾಕ್ಷಸನಲ್ಲವೆಂಬುದನ್ನು ಹೇಳುವುದೇನಿದೆ? ॥16॥

(ಶ್ಲೋಕ-17)

ಮೂಲಮ್

ಶರೀರಬುದ್ಧೀಂದ್ರಿಯದುಃಖಸಂತತಿ -
ರ್ನತೇ ನ ಚ ತ್ವಂ ತವ ನಿರ್ವಿಕಾರತಃ ।
ಅಜ್ಞಾನಹೇತೋಶ್ಚ ತಥೈವ ಸಂತತೇ-
ರಸತ್ತ್ವಮಸ್ಯಾಃ ಸ್ವಪತೋ ಹಿ ದೃಶ್ಯವತ್ ॥

ಅನುವಾದ

ನೀನು ನಿಜವಾಗಿ ಯಾರಾಗಿರುವೆ ಎಂಬುದನ್ನು ಹೇಳುವೆನು ಕೇಳು ನಿನ್ನ ಆತ್ಮನು ನಿರ್ವಿಕಾರವಾಗಿರುವುದರಿಂದ ಶರೀರ-ಮನ-ಬುದ್ಧಿ-ಇಂದ್ರಿಯಗಳ ಸಂಪರ್ಕದಿಂದ ಆಗುವ ದುಃಖವು ನಿನಗಲ್ಲ. ಅವು ನೀನಲ್ಲ. ಅಜ್ಞಾನದಿಂದ ಈ ದುಃಖ ಸಂತತಿಯು, ನಿದ್ರಿಸುತ್ತಿರುವವನಿಗೆ ತೋರುವ ಸ್ವಪ್ನ ದೃಶ್ಯಗಳು ಮಿಥ್ಯೆಯಾಗಿರುವಂತೆ ಅಸತ್ ಆಗಿವೆ. ॥17॥

(ಶ್ಲೋಕ-18)

ಮೂಲಮ್

ಇದಂ ತು ಸತ್ಯಂ ತವ ನಾಸ್ತಿ ವಿಕ್ರಿಯಾ
ವಿಕಾರಹೇತುರ್ನ ಚ ತೇಽದ್ವಯತ್ವತಃ ।
ಯಥಾ ನಭಃ ಸರ್ವಗತಂ ನ ಲಿಪ್ಯತೇ
ತಥಾ ಭವಾಂದೇಹಗತೋಽಪಿ ಸೂಕ್ಷ್ಮಕಃ ।
ದೇಹೇಂದ್ರಿಯಪ್ರಾಣಶರೀರಸಂಗತ-
ಸ್ತ್ವಾತ್ಮೇತಿ ಬುದ್ ಧ್ವಾಖಿಲಬಂಧಭಾಗ್ಭವೇತ್ ॥

ಅನುವಾದ

ನಿನ್ನ ಆತ್ಮಸ್ವರೂಪದಲ್ಲಿ ಯಾವುದೇ ವಿಕಾರವಿಲ್ಲವೆಂಬುದು ಸತ್ಯವಾಗಿದೆ. ನೀನು ಅದ್ವಯನಾಗಿರುವುದರಿಂದ ವಿಕಾರಕ್ಕೆ ಕಾರಣವೂ ಇಲ್ಲ. ಸರ್ವಗತನಾಗಿದ್ದರೂ ಆಕಾಶವು ಹೇಗೆ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲವೋ, ಹಾಗೆಯೇ ನೀನು ದೇಹದಲ್ಲಿದ್ದರೂ ಸೂಕ್ಷ್ಮನೂ, ಅಸಂಗನೂ ಆಗಿರುವೆ. ದೇಹ, ಇಂದ್ರಿಯಗಳು, ಪ್ರಾಣ, ಶರೀರ ಇವುಗಳಲ್ಲಿ ಸಂಬಂಧವನ್ನು ಹೊಂದಿದವನು ಆತ್ಮನೆಂದು ತಿಳಿದೆಯಾದರೆ ಎಲ್ಲ ವಿಧವಾದ ಬಂಧನಗಳಿಗೆ ಕಾರಣನಾಗುವೆ. ॥18॥

(ಶ್ಲೋಕ-19)

ಮೂಲಮ್

ಚಿನ್ಮಾತ್ರಮೇವಾಹಮಜೋಽಹಮಕ್ಷರೋ
ಹ್ಯಾನಂದಭಾವೋಽಹಮಿತಿ ಪ್ರಮುಚ್ಯತೇ ।
ದೇಹೋಽಪ್ಯನಾತ್ಮಾ ಪೃಥಿವೀವಿಕಾರಜೋ
ನ ಪ್ರಾಣ ಆತ್ಮಾನಿಲ ಏಷ ಏವ ಸಃ ॥

ಅನುವಾದ

ಆದರೆ ನಾನು ಚಿನ್ಮಾತ್ರನೂ, ಅಜನೂ, ಅಕ್ಷರನೂ, ಆನಂದ ರೂಪನೂ ಎಂದು ತಿಳಿದೆಯಾದರೆ ಬಿಡುಗಡೆಯನ್ನು ಹೊಂದುವೆ. ಪೃಥ್ವಿಯ ಕಾರ್ಯವಾದ್ದರಿಂದ ದೇಹವು ಅನಾತ್ಮವೇ ಆಗಿದೆ. ಪ್ರಾಣವೆಂಬುದು ಕೇವಲ ಗಾಳಿಯಾದ್ದರಿಂದ ಅದೂ ಆತ್ಮವಲ್ಲ. ॥19॥

(ಶ್ಲೋಕ-20)

ಮೂಲಮ್

ಮನೋಽಪ್ಯಹಂಕಾರವಿಕಾರ ಏವ ನೋ
ನ ಚಾಪಿ ಬುದ್ಧಿಃ ಪ್ರಕೃತೇರ್ವಿಕಾರಜಾ ।
ಆತ್ಮಾ ಚಿದಾನಂದಮಯೋಽವಿಕಾರವಾನ್
ದೇಹಾದಿಸಂಘಾದ್ವ್ಯತಿರಿಕ್ತ ಈಶ್ವರಃ ॥

(ಶ್ಲೋಕ-21)

ಮೂಲಮ್

ನಿರಂಜನೋ ಮುಕ್ತ ಉಪಾಧಿತಃ ಸದಾ
ಜ್ಞಾತ್ವೈವಮಾತ್ಮಾನಮಿತೋ ವಿಮುಚ್ಯತೇ ।
ಅತೋಽಹಮಾತ್ಯಂತಿಕಮೋಕ್ಷಸಾಧನಂ
ವಕ್ಷ್ಯೇ ಶೃಣುಷ್ವಾವಹಿತೋ ಮಹಾಮತೇ ॥

ಅನುವಾದ

ಮನಸ್ಸು ಕೂಡ ಅಹಂಕಾರದ ವಿಕಾರವೇ ಆದ್ದರಿಂದ ಆತ್ಮವಲ್ಲ. ಪ್ರಕೃತಿಯ ವಿಕಾರವಾದ ಬುದ್ಧಿಯೂ ಆತ್ಮವಲ್ಲ. ಆತ್ಮನಾದರೋ ಚಿದಾನಂದಸ್ವರೂಪನೂ, ಅವಿಕಾರಿಯೂ, ದೇಹಾದಿ ಸಂಘಾತಗಳಿಂದ ಬೇರೆಯಾದವನೂ, ಎಲ್ಲಕ್ಕೂ ಒಡೆಯನೂ, ನಿರ್ಮಲನೂ, ಉಪಾಧಿಗಳಿಂದ ಮುಕ್ತನೂ ಆಗಿರುವನು. ಹೀಗೆ ಆತ್ಮವನ್ನು ಅರಿತುಕೊಂಡವನು ಈ ಸಂಸಾರದಿಂದ ಮುಕ್ತನಾಗುವನು. ಆದ್ದರಿಂದ ಹೇ ಬುದ್ಧಿಶಾಲಿಯೆ! ನಾನು ನಿನಗೆ ಹೆಚ್ಚಿನ ಮೋಕ್ಷಸಾಧನೆಯನ್ನು ಹೇಳುವೆನು. ಮನಸ್ಸಿಟ್ಟು ಕೇಳು. ॥20-21॥

(ಶ್ಲೋಕ-22)

ಮೂಲಮ್

ವಿಷ್ಣೋರ್ಹಿ ಭಕ್ತಿಃ ಸುವಿಶೋಧನಂ ಧಿಯ-
ಸ್ತತೋ ಭವೇಜ್ಜ್ಞಾನಮತೀವ ನಿರ್ಮಲಮ್ ।
ವಿಶುದ್ಧತತ್ತ್ವಾನುಭವೋ ಭವೇತ್ತತಃ
ಸಮ್ಯಗ್ವಿದಿತ್ವಾ ಪರಮಂ ಪದಂ ವ್ರಜೇತ್ ॥

ಅನುವಾದ

ಭಗವಾನ್ ವಿಷ್ಣುವಿನ ಭಕ್ತಿಯು ಬುದ್ಧಿಯನ್ನು ಅತ್ಯಂತ ಶುದ್ಧವಾಗಿಸುವಂತಹುದು. ಅದರಿಂದ ಅತ್ಯಂತ ನಿರ್ಮಲವಾದ ಆತ್ಮಜ್ಞಾನ ಉಂಟಾಗುತ್ತದೆ. ಆತ್ಮಜ್ಞಾನದಿಂದ ಶುದ್ಧ ಆತ್ಮತತ್ತ್ವದ ಅನುಭವವು ಆಗುವುದು ಹಾಗೂ ಅದರಿಂದ ದೃಢವಾದ ಬೋಧ ಉಂಟಾದ್ದರಿಂದ ಮನುಷ್ಯನು ಪರಮ ಪದವನ್ನು ಪಡೆದುಕೊಳ್ಳುತ್ತಾನೆ. ॥22॥

(ಶ್ಲೋಕ-23)

ಮೂಲಮ್

ಅತೋ ಭಜಸ್ವಾದ್ಯ ಹರಿಂ ರಮಾಪತಿಂ
ರಾಮಂ ಪುರಾಣಂ ಪ್ರಕೃತೇಃ ಪರಂ ವಿಭುಮ್ ।
ವಿಸೃಜ್ಯ ವೌರ್ಖ್ಯಂ ಹೃದಿ ಶತ್ರುಭಾವನಾಂ
ಭಜಸ್ವ ರಾಮಂ ಶರಣಾಗತಪ್ರಿಯಮ್ ।
ಸೀತಾಂ ಪುರಸ್ಕೃತ್ಯ ಸಪುತ್ರಬಾಂಧವೋ
ರಾಮಂ ನಮಸ್ಕೃತ್ಯ ವಿಮುಚ್ಯಸೇ ಭಯಾತ್ ॥

ಅನುವಾದ

ಅದಕ್ಕಾಗಿ ನೀನು ಪ್ರಕೃತಿಗೆ ಪರನಾದ ರಮಾಪತಿಯೂ, ಪುರಾಣ ಪುರುಷನೂ, ಸರ್ವವ್ಯಾಪಕ ಆದಿನಾರಾಯಣ ಶ್ರೀಹರಿಯಾದ ಭಗವಾನ್ ಶ್ರೀರಾಮನನ್ನು ಭಜಿಸು. ಹೃದಯದಲ್ಲಿರುವ ಶತ್ರುಭಾವನೆ ಯನ್ನು, ಮೂರ್ಖತನವನ್ನು ಕೈಬಿಟ್ಟು, ಶರಣಾಗತ ಪ್ರಿಯನಾದ ರಾಮನನ್ನು ಸೇವಿಸು. ಸೀತಾದೇವಿಯನ್ನು ಮುಂದಿಟ್ಟುಕೊಂಡು ಪುತ್ರ-ಬಂಧುವರ್ಗ ಸಹಿತನಾಗಿ ಶ್ರೀರಾಮನಲ್ಲಿ ಶರಣಾಗಿ ನಮಸ್ಕರಿಸಿದರೆ ನೀನು ಭಯದಿಂದ ಬಿಡುಗಡೆ ಹೊಂದುವೆ. ॥23॥

(ಶ್ಲೋಕ-24)

ಮೂಲಮ್

ರಾಮಂ ಪರಾತ್ಮಾನಮಭಾವಯಂಜನೋ
ಭಕ್ತ್ಯಾ ಹೃದಿಸ್ಥಂ ಸುಖರೂಪಮದ್ವಯಮ್ ।
ಕಥಂ ಪರಂ ತೀರಮವಾಪ್ನುಯಾಜ್ಜನೋ
ಭವಾಂಬುಧೇರ್ದುಃಖತರಂಗಮಾಲಿನಃ ॥

ಅನುವಾದ

ತನ್ನ ಹೃದಯದಲ್ಲಿದ್ದ ಅದ್ವಿತೀಯ ಸುಖಸ್ವರೂಪನೂ ಆಗಿರುವ ಪರಮಾತ್ಮನಾದ ಶ್ರೀರಾಮನನ್ನು ಭಕ್ತಿಪೂರ್ವಕವಾಗಿ ಚಿಂತಿಸದೇ ಜೀವನು ದುಃಖವೆಂಬ ಅಲೆಗಳ ಮಾಲೆಗಳಿಂದ ಕೂಡಿದ ಸಂಸಾರ ಸಮುದ್ರವನ್ನು ಹೇಗೆ ದಾಟಬಲ್ಲನು? ॥24॥

(ಶ್ಲೋಕ-25)

ಮೂಲಮ್

ನೋ ಚೇತ್ತ್ವಮಜ್ಞಾನಮಯೇನ ವಹ್ನಿನಾ
ಜ್ಜಲಂತಮಾತ್ಮಾನಮರಕ್ಷಿತಾರಿವತ್ ।
ನಯಸ್ಯಧೋಽಧಃ ಸ್ವಕೃತೈಶ್ಚ ಪಾತಕೈ-
ರ್ವಿಮೋಕ್ಷಶಂಕಾ ನ ಚ ತೇ ಭವಿಷ್ಯತಿ ॥

ಅನುವಾದ

ನೀನು ಭಗವಾನ್ ಶ್ರೀರಾಮನ ಭಜನೆಮಾಡದಿದ್ದರೆ, ಅಜ್ಞಾನರೂಪೀ ಬೆಂಕಿಯಿಂದ ಬೇಯುತ್ತಾ ತಾನೇ-ತನ್ನ ಶತ್ರುವಿನಂತೆ ಕಾಪಾಡಿಕೊಳ್ಳದೆ ಇರುವೆ. ಅದರಿಂದ ತಾನು ಮಾಡಿದ ಪಾಪಗಳಿಂದ ತನ್ನನ್ನು ತುಳಿದು ಕೊಂಡವನಾಗಿ ಅಧೋಗತಿಯನ್ನು ಹೊಂದುವೆ. ಬಿಡುಗಡೆಯನ್ನು ಹೊಂದುವ ಆಸೆಯು ನಿನ್ನಲ್ಲಿ ಉಳಿಯಲಾರದು. ॥25॥

(ಶ್ಲೋಕ-26)

ಮೂಲಮ್

ಶ್ರುತ್ವಾಮೃತಾಸ್ವಾದಸಮಾನಭಾಷಿತಂ
ತದ್ವಾಯುಸೂನೋರ್ದಶಕಂಧರೋಸುರಃ ।
ಅಮೃಷ್ಯಮಾಣೋಽತಿರುಷಾ ಕಪೀಶ್ವರಂ
ಜಗಾದ ರಕ್ತಾಂತವಿಲೋಚನೋ ಜ್ವಲನ್ ॥

ಅನುವಾದ

ಪವನನಂದನನ ಈ ಅಮೃತರಸದಂತೆ ಮಧುರವಾದ ಮಾತನ್ನು ಕೇಳಿ ದಶಕಂಠರಾವಣನು ಅದನ್ನು ಸಹಿಸಲಾರದೆ ಹೆಚ್ಚಿನ ಕೋಪದಿಂದ ಮನಸ್ಸಿನಲ್ಲೇ ಕುದಿಯುತ್ತಾ ಕೆಂಪಾಗಿ ಉರಿಯುತ್ತಿರುವ ಕಣ್ಣುಗಳಿಂದ ಕಪೀಶ್ವರ ಹನುಮಂತನಲ್ಲಿ ಹೇಳುತ್ತಾನೆ. ॥26॥

(ಶ್ಲೋಕ-27)

ಮೂಲಮ್

ಕಥಂ ಮಮಾಗ್ರೇ ವಿಲಪಸ್ಯಭೀತವತ್
ಪ್ಲವಂಗಮಾನಾಮಧಮೋಽಸಿ ದುಷ್ಟಧೀಃ ।
ಕ ಏಷ ರಾಮಃ ಕತಮೋ ವನೇಚರೋ
ನಿಹನ್ಮಿ ಸುಗ್ರೀವಯುತಂ ನರಾಧಮಮ್ ॥

ಅನುವಾದ

‘‘ಎಲೈ ದುಷ್ಟಬುದ್ಧೆ ! ನೀನು ವಾನರರೆಲ್ಲರಲ್ಲಿ ಅಧಮನಾಗಿರುವೆ. ನನ್ನ ಎದುರು ಸ್ವಲ್ಪವೂ ಹೆದರದೆ ಏನು ಹರಟುತ್ತಿರುವೆ? ಈ ರಾಮನು ಮತ್ತು ಕಾಡಾಡಿಯಾದ ಸುಗ್ರೀವನು ನನಗೆ ಯಾವ ಲೆಕ್ಕ? ನರಾಧಮನಾದ ಅವನನ್ನು ಸುಗ್ರೀವನೊಡನೆ ಕೊಂದುಬಿಡುವೆನು. ॥27॥

(ಶ್ಲೋಕ-28)

ಮೂಲಮ್

ತ್ವಾಂ ಚಾದ್ಯ ಹತ್ವಾ ಜನಕಾತ್ಮಜಾಂ ತತೋ
ನಿಹನ್ಮಿ ರಾಮಂ ಸಹಲಕ್ಷ್ಮಣಂ ತತಃ ।
ಸುಗ್ರೀವಮಗ್ರೇ ಬಲಿನಂ ಕಪೀಶ್ವರಂ
ಸವಾನರಂ ಹನ್ಮ್ಯಚಿರೇಣ ವಾನರ ।
ಶ್ರುತ್ವಾ ದಶಗ್ರೀವವಚಃ ಸ ಮಾರುತಿ-
ರ್ವಿವೃದ್ಧಕೋಪೇನ ದಹನ್ನಿವಾಸುರಮ್ ॥

ಅನುವಾದ

ಎಲೈ ವಾನರಾ! ಮೊದಲು ನಿನ್ನನ್ನು ಕೊಂದು, ಅನಂತರ ಸೀತೆಯನ್ನು, ಬಳಿಕ ಲಕ್ಷ್ಮಣಸಹಿತನಾದ ರಾಮನನ್ನು ಕೊಲ್ಲುವೆನು. ಕೊನೆಗೆ ಕಪೀಶ್ವರನಾದ ಸುಗ್ರೀವನನ್ನು ಅವನ ದೊಡ್ಡ ಸೇನೆಯೊಂದಿಗೆ ಸಂಹರಿಸಲಿರುವೆನು.’’ ರಾವಣನ ಮಾತನ್ನು ಕೇಳಿ ಕೆರಳಿದ ಮಾರುತಿಯು ಕೋಪದಿಂದ ರಾಕ್ಷಸನನ್ನು ಸುಡುವಂತೆ ನೋಡುತ್ತಾ ಹೇಳುತ್ತಾನೆ. ॥28॥

(ಶ್ಲೋಕ-29)

ಮೂಲಮ್

ನ ಮೇ ಸಮಾ ರಾವಣಕೋಟಯೋಽಧಮ
ರಾಮಸ್ಯ ದಾಸೋಽಹಮಪಾರವಿಕ್ರಮಃ ।
ಶ್ರುತ್ವಾತಿಕೋಪೇನ ಹನೂಮತೋ ವಚೋ
ದಶಾನನೋ ರಾಕ್ಷಸಮೇವಮಬ್ರವೀತ್ ॥

(ಶ್ಲೋಕ-30)

ಮೂಲಮ್

ಪಾರ್ಶ್ವೇ ಸ್ಥಿತಂ ಮಾರಯ ಖಂಡಶಃ ಕಪಿಂ
ಪಶ್ಯಂತು ಸರ್ವೇಽಸುರಮಿತ್ರಬಾಂಧವಾಃ ।
ನಿವಾರಯಾಮಾಸ ತತೋ ವಿಭೀಷಣೋ
ಮಹಾಸುರಂ ಸಾಯುಧಮುದ್ಯತಂ ವಧೇ ।
ರಾಜನ್ವಧಾರ್ಹೋ ನ ಭವೇತ್ಕಥಂಚನ
ಪ್ರತಾಪಯುಕ್ತೈಃ ಪರರಾಜವಾನರಃ ॥

ಅನುವಾದ

‘‘ಎಲೈ ಅಧಮನೆ! ನಾನು ರಾಮನ ದಾಸನು. ಅಳೆಯಲಾರದ ಪರಾಕ್ರಮವುಳ್ಳವನು. ನೀನೊಬ್ಬ ರಾವಣ ಬಿಡು! ಕೋಟಿ ರಾವಣರೂ ನನಗೆ ಸರಿಸಾಟಿಯಾಗಲಾರರು. ಹನುಮಂತನ ಮಾತನ್ನು ಕೇಳಿದ ರಾವಣನು ಹೆಚ್ಚಿನ ಕೋಪದಿಂದ ಕೂಡಿ ಬಳಿಯಲ್ಲಿದ್ದ ರಾಕ್ಷಸರಿಗೆ ಹೇಳುತ್ತಾನೆ ‘‘ಈ ಕಪಿಯನ್ನು ತುಂಡು-ತುಂಡಾಗಿ ಕತ್ತರಿಸಿಹಾಕಿರಿ. ರಾಕ್ಷಸ ಬಂಧು-ಮಿತ್ರರೆಲ್ಲರೂ ನೋಡಲಿ. ಆಗ ವಿಭೀಷಣನು ಆಯುಧ ಸಮೇತನಾಗಿ ಕಪಿಯನ್ನು ಕೊಲ್ಲಲು ಹೊರಟಿರುವ ರಾಕ್ಷಸರನ್ನು ತಡೆದು, ರಾಜನೆ! ಪ್ರತಾಪಶಾಲಿಗಳಾದ ನಾವು ಪರರಾಜರ ಕಡೆಯ ಈ ವಾನರ ದೂತನನ್ನು ಯಾವ ರೀತಿಯಿಂದಲೂ ಕೊಲ್ಲಬಾರದು. ॥29-30॥

(ಶ್ಲೋಕ-31)

ಮೂಲಮ್

ಹತೇಽಸ್ಮಿನ್ವಾನರೇ ದೂತೇ ವಾರ್ತಾಂ ಕೋ ವಾ ನಿವೇದಯೇತ್ ।
ರಾಮಾಯ ತ್ವಂ ಯಮುದ್ದಿಶ್ಯ ವಧಾಯ ಸಮುಪಸ್ಥಿತಃ ॥

(ಶ್ಲೋಕ-32)

ಮೂಲಮ್

ಅತೋ ವಧಸಮಂ ಕಿಂಚಿದನ್ಯಚ್ಚಿಂತಯ ವಾನರೇ ।
ಸಚಿಹ್ನೋ ಗಚ್ಛತು ಹರಿರ್ಯಂ ದೃಷ್ಟ್ವಾಯಾಸ್ಯತಿ ದ್ರುತಮ್ ॥

(ಶ್ಲೋಕ-33)

ಮೂಲಮ್

ರಾಮಃ ಸುಗ್ರೀವಸಹಿತಸ್ತತೋ ಯುದ್ಧಂ ಭವೇತ್ತವ ।
ವಿಭೀಷಣವಚಃ ಶ್ರುತ್ವಾ ರಾವಣೋಽಪ್ಯೇತದಬ್ರವೀತ್ ॥

ಅನುವಾದ

ನೀನು ಕೊಲ್ಲಲು ಹೊರಟಿರುವ ಈ ದೂತನಾದ ಕಪಿಯನ್ನು ವಧಿಸಿದರೆ ರಾಮನಿಗೆ ಸುದ್ದಿಯನ್ನಾದರೂ ತಿಳಿಸುವವನು ಯಾರು? ಆದ್ದರಿಂದ ವಧೆಗೆ ಸಮಾನವಾದ ಬೇರೊಂದು ಶಿಕ್ಷೆಯನ್ನು ಕಪಿಗೆ ಕೊಡಲು ನಿಶ್ಚಯಿಸು. ಆ ಗುರುತನ್ನು ನೋಡಿ ಸುಗ್ರೀವ ಸಹಿತನಾದ ರಾಮನೆಂಬ ಶತ್ರುವು ಬೇಗನೇ ನಮ್ಮ ಮೇಲೆ ದಂಡೆತ್ತಿ ಬರುವಂತಹ ಗುರುತಿನೊಡನೆ ಈ ಕಪಿಯು ಹೋಗಲಿ. ಮತ್ತೆ ನಿನಗೆ ಯುದ್ಧ ಮಾಡುವ ಸಂದರ್ಭವು ಒದಗಲಿದೆ’’ ಎಂದನು. ವಿಭೀಷಣನ ಮಾತನ್ನು ಕೇಳಿದ ರಾವಣನು ಹೀಗೆಂದನು - ॥31-33॥

(ಶ್ಲೋಕ-34)

ಮೂಲಮ್

ವಾನರಾಣಾಂ ಹಿ ಲಾಂಗೂಲೇ ಮಹಾಮಾನೋ ಭವೇತ್ಕಿಲ ।
ಅತೋ ವಸ್ತ್ರಾದಿಭಿಃ ಪುಚ್ಛಂ ವೇಷ್ಟಯಿತ್ವಾ ಪ್ರಯತ್ನತಃ ॥

(ಶ್ಲೋಕ-35)

ಮೂಲಮ್

ವಹ್ನಿನಾ ಯೋಜಯಿತ್ವೈನಂ ಭ್ರಾಮಯಿತ್ವಾ ಪುರೇಽಭಿತಃ ।
ವಿಸರ್ಜಯತ ಪಶ್ಯಂತು ಸರ್ವೇ ವಾನರಯೂಥಪಾಃ ॥

ಅನುವಾದ

‘‘ಕಪಿಗಳಿಗೆ ಯಾವಾಗಲೂ ತಮ್ಮ ಬಾಲದಲ್ಲಿ ಅಭಿಮಾನವಿರುವುದು. ಆದ್ದರಿಂದ ಇದರ ಬಾಲಕ್ಕೆ ಬಟ್ಟೆಯೇ ಮುಂತಾದು ವನ್ನು ಚೆನ್ನಾಗಿ ಸುತ್ತಿ ಬೆಂಕಿಯಿಟ್ಟು ಊರಲ್ಲೆಲ್ಲ ತಿರುಗಾಡಿಸಿ ಬಿಟ್ಟುಬಿಡಿರಿ. ಇದರಿಂದ ಎಲ್ಲ ವಾನರ ವೀರರು ಇವನ ದುರ್ದೆಶೆಯನ್ನು ನೋಡಲಿ.’’ ॥34-35॥

(ಶ್ಲೋಕ-36)

ಮೂಲಮ್

ತಥೇತಿ ಶಣಪಟ್ಟೈಶ್ಚ ವಸ್ತ್ರೈರನ್ಯೈರನೇಕಶಃ ।
ತೈಲಾಕ್ತೈರ್ವೇಷ್ಟಯಾಮಾಸುರ್ಲಾಂಗಲೂಲಂ ಮಾರುತೇರ್ದೃಢಮ್ ॥

(ಶ್ಲೋಕ-37)

ಮೂಲಮ್

ಪುಚ್ಛಾಗ್ರೇ ಕಿಂಚಿದನಲಂ ದೀಪಯಿತ್ವಾಥ ರಾಕ್ಷಸಾಃ ।
ರಜ್ಜುಭಿಃ ಸುದೃಢಂ ಬದ್ಧ್ವಾ ಧೃತ್ವಾ ತಂ ಬಲಿನೋಽಸುರಾಃ ॥

(ಶ್ಲೋಕ-38)

ಮೂಲಮ್

ಸಮಂತಾದ್ ಭ್ರಾಮಯಾಮಾಸುಶ್ಚೋರೋಽಯಮಿತಿ ವಾದಿನಃ ।
ತೂರ್ಯಘೋಷೈರ್ಘೋಷಯಂತಸ್ತಾಡಯಂತೋ ಮುಹುರ್ಮುಹುಃ ॥

ಅನುವಾದ

ಹಾಗೆಯೇ ಆಗಲೆಂದು ರಾಕ್ಷಸರು ಹನುಂತನ ಬಾಲಕ್ಕೆ ಎಣ್ಣೆಯಲ್ಲಿ ಅದ್ದಿದ ಸೆಣಬಿನ ಬಟ್ಟೆಗಳು ಹಾಗೂ ಇತರ ಬಟ್ಟೆಗಳನ್ನು ಬಲವಾಗಿಸುತ್ತಿದರು. ಬಳಿಕ ಬಾಲದ ತುದಿಗೆ ಬೆಂಕಿಯನ್ನು ಹೊತ್ತಿಸಿ, ಬಲವಾದ ಹಗ್ಗಗಳಿಂದ ಮಹಾಬಲಿ ಹನುಮಂತನನ್ನು ಬಿಗಿದು ಕಟ್ಟಿ ಹಿಡಿದುಕೊಂಡು ‘ಇವನು ಕಳ್ಳನು’ ಎಂದು ಕಿರುಚುತ್ತಾ, ಅನೇಕ ವಾದ್ಯಗಳನ್ನು ಬಾರಿಸುತ್ತಾ ಮತ್ತೆ-ಮತ್ತೆ ಅವನಿಗೆ ಥಳಿಸುತ್ತಾ ಊರಿನಲ್ಲೆಲ್ಲ ಅಲೆದಾಡಿಸಿದರು. ॥36-38॥

(ಶ್ಲೋಕ-39)

ಮೂಲಮ್

ಹನೂಮತಾಪಿ ತತ್ಸರ್ವಂ ಸೋಢಂ ಕಿಂಚಿಚ್ಚಿಕೀರ್ಷುಣಾ ।
ಗತ್ವಾ ತು ಪಶ್ಚಿಮದ್ವಾರಸಮೀಪಂ ತತ್ರ ಮಾರುತಿಃ ॥

(ಶ್ಲೋಕ-40)

ಮೂಲಮ್

ಸೂಕ್ಷ್ಮೋ ಬಭೂವ ಬಂಧೇಭ್ಯೋ ನಿಃಸೃತಃ ಪುನರಪ್ಯಸೌ ।
ಬಭೂವ ಪರ್ವತಾಕಾರಸ್ತತ ಉತ್ ಪ್ಲುತ್ಯಗೋಪುರಮ್ ॥

ಅನುವಾದ

ಹನುಮಂತನು ಏನೋ ಕಾರ್ಯವನ್ನು ಮಾಡುವ ಇಚ್ಛೆಯಿಂದ ಅದೆಲ್ಲವನ್ನೂ ಸಹಿಸಿಕೊಂಡನು. ಪಶ್ಚಿಮದ ಬಾಗಿಲಿನ ಒಳಗೆ ಬರುತ್ತಲೇ ಮಾರುತಿಯು ಚಿಕ್ಕ ಆಕಾರವನ್ನು ಹೊಂದಿ ಕಟ್ಟುಗಳಿಂದ ಬಿಡಿಸಿಕೊಂಡನು. ಮತ್ತೆ ಪರ್ವತಾಕಾರವನ್ನು ತಳೆದು ಅಲ್ಲಿಂದ ನೆಗೆದು ಗೋಪುರವನ್ನು ಹತ್ತಿ ಕುಳಿತನು. ॥39-40॥

(ಶ್ಲೋಕ-41)

ಮೂಲಮ್

ತತ್ರೈಕಂ ಸ್ತಂಭಮಾದಾಯ ಹತ್ವಾ ತಾನ್ ರಕ್ಷಿಣಃ ಕ್ಷಣಾತ್ ।
ವಿಚಾರ್ಯ ಕಾರ್ಯಶೇಷಂ ಸ ಪ್ರಾಸಾದಾಗ್ರಾದ್ ಗೃಹಾದ್ ಗೃಹಮ್ ॥

(ಶ್ಲೋಕ-42)

ಮೂಲಮ್

ಉತ್ ಪ್ಲುತ್ಯೋತ್ ಪ್ಲುತ್ಯ ಸಂದೀಪ್ತಪುಚ್ಛೇನ ಮಹತಾ ಕಪಿಃ ।
ದದಾಹ ಲಂಕಾಮಖಿಲಾಂ ಸಾಟ್ಟಪ್ರಾಸಾದ ತೋರಣಾಮ್ ॥

ಅನುವಾದ

ಕಬ್ಬಿಣದ ಸ್ತಂಭವೊಂದನ್ನು ಕಿತ್ತು ಅದರಿಂದ ಕಾವಲುಗಾರರಾದ ರಾಕ್ಷಸರೆಲ್ಲರನ್ನು ಕ್ಷಣಮಾತ್ರದಲ್ಲಿ ಕೊಂದು ಹಾಕಿದನು. ಉಳಿದಿರುವ ಕಾರ್ಯವನ್ನು ಚಿಂತಿಸುತ್ತಾ ಉಪ್ಪರಿಗೆಯ ಮೇಲಿನಿಂದಲೇ ಮನೆಯಿಂದ ಮನೆಗೆ ನೆಗೆದು ಹತ್ತಿ ಉರಿಯುತ್ತಿರುವ ಬಾಲದ ಬೆಂಕಿಯಿಂದ ಮಹಡಿ-ಉಪ್ಪರಿಗೆಗಳಿಂದ ಕೂಡಿದ ಇಡೀ ಲಂಕೆಗೆ ಬೆಂಕಿಯಿಟ್ಟನು. ॥41-42॥

(ಶ್ಲೋಕ-43)

ಮೂಲಮ್

ಹಾ ತಾತ ಪುತ್ರ ನಾಥೇತಿ ಕ್ರಂದಮಾನಾಃ ಸಮಂತತಃ ।
ವ್ಯಾಪ್ತಾಃ ಪ್ರಾಸಾದಶಿಖರೇಽಪ್ಯಾರೂಢಾದೈತ್ಯಯೋಷಿತಃ ॥

(ಶ್ಲೋಕ-44)

ಮೂಲಮ್

ದೇವತಾ ಇವ ದೃಶ್ಯಂತೇ ಪತಂತ್ಯಃ ಪಾವಕೇಽಖಿಲಾಃ ।
ವಿಭೀಷಣಗೃಹಂ ತ್ಯಕ್ತ್ವಾ ಸರ್ವಂ ಭಸ್ಮೀಕೃತಂ ಪುರಮ್ ॥

ಅನುವಾದ

‘‘ಅಯ್ಯೋ! ಅಪ್ಪಾ! ನಾಥಾ! ಮಗನೆ!’’ ಎಂದು ಅಳುತ್ತಾ ಸುತ್ತಲೂ ಹರಡಿದ ರಾಕ್ಷಸಸ್ತ್ರೀಯರು ಉಪ್ಪರಿಗೆಯನ್ನು ಏರುತ್ತಿದ್ದು, ಉರಿಯುವ ಮನೆಯಲ್ಲಿ ಬೆಂಕಿಗೆ ಬೀಳುತ್ತಿರುವುದು ದೇವತೆಗಳಂತೆ ಕಂಡು ಬರುತ್ತಿದ್ದರು. ವಿಭೀಷಣನ ಮನೆಯೊಂದನ್ನು ಬಿಟ್ಟು ಎಲ್ಲ ಲಂಕಾನಗರಿಯನ್ನು ಸುಟ್ಟು ಬೂದಿಮಾಡಿದನು. ॥43-44॥

(ಶ್ಲೋಕ-45)

ಮೂಲಮ್

ತತ ಉತ್ ಪ್ಲುತ್ಯ ಜಲಧೌ ಹನೂಮಾನ್ಮಾರುತಾತ್ಮಜಃ ।
ಲಾಂಗೂಲಂ ಮಜ್ಜಯಿತ್ವಾಂತಃ ಸ್ವಸ್ಥಚಿತ್ತೋಬಭೂವ ಸಃ ॥

(ಶ್ಲೋಕ-46)

ಮೂಲಮ್

ವಾಯೋಃ ಪ್ರಿಯಸಖಿತ್ವಾಚ್ಚ ಸೀತಯಾ ಪ್ರಾರ್ಥಿತೋಽನಲಃ ।
ನ ದದಾಹ ಹರೇಃ ಪುಚ್ಛಂ ಬಭೂವಾತ್ಯಂತಶೀತಲಃ ॥

ಅನುವಾದ

ಬಳಿಕ ವಾಯುಪುತ್ರ ಹನುಮಂತನು ಹಾರಿ ಸಮುದ್ರದಲ್ಲಿ ಬಿದ್ದು ತನ್ನ ಬಾಲದ ಬೆಂಕಿಯನ್ನು ನಂದಿಸಿ ಸಮಾಧಾನಚಿತ್ತನಾದನು. ಸೀತೆಯ ಪ್ರಾರ್ಥನೆಯಿಂದ ಮತ್ತು ವಾಯುದೇವರಿಗೆ ಪರಮಮಿತ್ರನಾದ್ದರಿಂದ ಅಗ್ನಿಯು ಕಪಿಯ ಬಾಲವನ್ನು ಸುಡಲಿಲ್ಲ. ಅದು ಬಹಳ ತಂಪೆನಿಸಿತ್ತು. ॥45-46॥

(ಶ್ಲೋಕ-47)

ಮೂಲಮ್

ಯನ್ನಾಮಸಂಸ್ಮರಣಧೂತಸಮಸ್ತಪಾಪಾಃ
ತಾಪತ್ರಯಾನಲಮಪೀಹ ತರಂತಿ ಸದ್ಯಃ ।
ತಸ್ಯೈವ ಕಿಂ ರಘುವರಸ್ಯ ವಿಶಿಷ್ಟದೂತಃ
ಸಂತಪ್ಯತೇ ಕಥಮಸೌ ಪ್ರಕೃತಾನಲೇನ ॥

ಅನುವಾದ

ಯಾರ ನಾಮಸ್ಮರಣೆಯಿಂದ ಮನುಷ್ಯನು ಸಮಸ್ತ ಪಾಪ ಗಳಿಂದ ಬಿಡುಗೆಹೊಂದಿ ಕೂಡಲೇ ತಾಪತ್ರಯವೆಂಬ ಬೆಂಕಿಯಿಂದ ಕೂಡ ದಾಟಿಬಿಡುವರೋ, ಅಂತಹ ರಘುವರನ ವಿಶಿಷ್ಟ ದೂತನಾದ ಹನುಮಂತನಿಗೆ ಪ್ರಾಕೃತವಾದ ಈ ಬೆಂಕಿಯು ಹೇಗೆ ಸುಡಬಲ್ಲುದು? ॥ 47 ॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಸುಂದರಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಸುಂದರಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.