೦೩

[ಮೂರನೆಯ ಸರ್ಗ]

ಭಾಗಸೂಚನಾ

ಜಾನಕಿಯ ಭೇಟಿ, ಅಶೋಕಾವನ ವಿಧ್ವಂಸ, ಬ್ರಹ್ಮಪಾಶ ಬಂಧನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಉದ್ಬಂಧನೇನ ವಾ ಮೋಕ್ಷ್ಯೇ ಶರೀರಂ ರಾಘವಂ ವಿನಾ ।
ಜೀವಿತೇನ ಫಲಂ ಕಿಂ ಸ್ಯಾನ್ಮಮ ರಕ್ಷೋಽಧಿಮಧ್ಯತಃ ॥

(ಶ್ಲೋಕ-2)

ಮೂಲಮ್

ದೀರ್ಘಾ ವೇಣೀ ಮಮಾತ್ಯರ್ಥಮುದ್ಬಂಧಾಯ ಭವಿಷ್ಯತಿ ।
ಏವಂ ನಿಶ್ಚಿತಬುದ್ಧಿಂ ತಾಂ ಮರಣಾಯಾಥ ಜಾನಕೀಮ್ ॥

(ಶ್ಲೋಕ-3)

ಮೂಲಮ್

ವಿಲೋಕ್ಯ ಹನುಮಾನ್ಕಿಂಚಿದ್ವಿಚಾರ್ಯೈತದಭಾಷತ ।
ಶನೈಃ ಶನೈಃ ಸೂಕ್ಷ್ಮರೂಪೋ ಜಾನಕ್ಯಾಃ ಶ್ರೋತ್ರಗಂ ವಚಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಪಾರ್ವತಿ! ದುಃಖಿಸುತ್ತಿರುವ ಸೀತೆಯು ‘ನೇಣು ಹಾಕಿಕೊಂಡಾದರೂ ಈ ದೇಹ ತ್ಯಾಗ ಮಾಡಿಬಿಡುವೆನು. ಈ ರಾಕ್ಷಸರ ನಡುವೆ ಶ್ರೀರಾಮನಿಲ್ಲದೇ ಬದುಕಿದ್ದಾದರೂ ನನಗೆ ಫಲವೇನಿದೆ? ನನ್ನ ನೀಳವಾದ ಈ ಜಡೆಯೇ ನೇಣುಹಾಕಿಕೊಳ್ಳಲು ಸಾಕಾಗುವಷ್ಟಿದೆ.’ ಹೀಗೆಂದು ಸಾಯಲು ನಿಶ್ಚಯಿಸಿದ ಸೀತೆಯನ್ನು ಕಂಡ ಸೂಕ್ಷ್ಮರೂಪಧಾರಿಯಾದ ಹನುಮಂತನು ಮನಸ್ಸಿನಲ್ಲಿಯೇ ಯೋಚಿಸಿ, ಸೀತಾದೇವಿಗೆ ಕೇಳಿಸುವಷ್ಟು ಮೆಲ್ಲ-ಮೆಲ್ಲನೆ ಶ್ರೀರಾಮಕಥೆಯನ್ನು ಹೇಳತೊಡಗಿದನು ॥1-3॥

(ಶ್ಲೋಕ-4)

ಮೂಲಮ್

ಇಕ್ಷ್ವಾಕುವಂಶಸಂಭೂತೋ ರಾಜಾ ದಶರಥೋ ಮಹಾನ್ ।
ಅಯೋಧ್ಯಾಧಿಪತಿಸ್ತಸ್ಯ ಚತ್ವಾರೋ ಲೋಕವಿಶ್ರುತಾಃ ॥

(ಶ್ಲೋಕ-5)

ಮೂಲಮ್

ಪುತ್ರಾ ದೇವಸಮಾಃ ಸರ್ವೇ ಲಕ್ಷಣೈರುಪಲಕ್ಷಿತಾಃ ।
ರಾಮಶ್ಚ ಲಕ್ಷ್ಮಣಶ್ಚೈವ ಭರತಶ್ಚೈವ ಶತ್ರುಹಾ ॥

ಅನುವಾದ

‘‘ಇಕ್ಷ್ವಾಕುವಂಶದಲ್ಲಿ ಹುಟ್ಟಿದ ಮಹಾತ್ಮನಾದ ರಾಜಾ ದಶರಥನು ಅಯೋಧ್ಯೆಗೆ ಒಡೆಯನಾಗಿದ್ದನು. ಅವನಿಗೆ ಲೋಕಪ್ರಸಿದ್ಧರಾದ, ದೇವತೆಗಳಿಗೆ ಸಮಾನರಾದ, ರೂಪ ಲಕ್ಷಣ ಸಂಪನ್ನರಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರೆಂಬ ನಾಲ್ವರು ಪುತ್ರರಿದ್ದರು. ॥4-5॥

(ಶ್ಲೋಕ-6)

ಮೂಲಮ್

ಜ್ಯೇಷ್ಠೋ ರಾಮಃ ಪಿತುರ್ವಾಕ್ಯಾದ್ದಂಡಕಾರಣ್ಯಮಾಗತಃ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಭಾರ್ಯಯಾ ಸಹ ॥

(ಶ್ಲೋಕ-7)

ಮೂಲಮ್

ಉವಾಸ ಗೌತಮೀತೀರೇ ಪಂಚವಟ್ಯಾಂ ಮಹಾಮನಾಃ ।
ತತ್ರ ನೀತಾ ಮಹಾಭಾಗಾ ಸೀತಾ ಜನಕನಂದಿನೀ ॥

(ಶ್ಲೋಕ-8)

ಮೂಲಮ್

ರಹಿತೇ ರಾಮಚಂದ್ರೇಣ ರಾವಣೇನ ದುರಾತ್ಮನಾ ।
ತತೋ ರಾಮೋಽತಿದುಃಖಾರ್ತೋ ಮಾರ್ಗಮಾಣೋಽಥ ಜಾನಕೀಮ್ ॥

(ಶ್ಲೋಕ-9)

ಮೂಲಮ್

ಜಟಾಯುಷಂ ಪಕ್ಷಿರಾಜಮಪಶ್ಯತ್ಪತಿತಂ ಭುವಿ ।
ತಸ್ಮೈ ದತ್ತ್ವಾ ದಿವಂ ಶೀಘ್ರಮ್ ಋಷ್ಯಮೂಕಮುಪಾಗಮತ್ ॥

ಅನುವಾದ

ಅವರಲ್ಲಿ ಹಿರಿಯವನಾದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಪತ್ನೀ ಸೀತೆ ಮತ್ತು ತಮ್ಮನಾದ ಲಕ್ಷ್ಮಣನೊಡಗೂಡಿ ದಂಡಕಾರಣ್ಯಕ್ಕೆ ಹೋದನು. ಆ ಮಹಾತ್ಮನು ಅಲ್ಲಿ ಗೌತಮೀ ನದಿಯ ದಡದಲ್ಲಿರುವ ಪಂಚವಟಿಯಲ್ಲಿ ಆಶ್ರಮವನ್ನು ರಚಿಸಿಕೊಂಡು ವಾಸವಾಗಿದ್ದನು. ಒಮ್ಮೆ ಆಶ್ರಮದಲ್ಲಿ ರಾಮ ಲಕ್ಷ್ಮಣರಿಲ್ಲದಿರುವಾಗ ಮಹಾಭಾಗಳಾದ ಜನಕನ ಮಗಳಾದ ಸೀತೆಯನ್ನು ದುರಾತ್ಮನಾದ ರಾವಣನು ಕದ್ದುಕೊಂಡು ಹೋದನು. ಅನಂತರ ಶ್ರೀರಾಮನು ಬಹಳ ದುಃಖದಿಂದ ಬಳಲಿದವನಾಗಿ ಸೀತೆಯನ್ನು ಎಲ್ಲೆಡೆ ಹುಡುಕುತ್ತಿರುವಾಗ ಗಾಯಾಳುವಾಗಿ ನೆಲದ ಮೇಲೆ ಬಿದ್ದಿರುವ ಪಕ್ಷಿರಾಜ ಜಟಾಯುವನ್ನು ಕಂಡನು. ಅವನಿಗೆ ಬೇಗನೇ ಸ್ವರ್ಗಲೋಕವನ್ನು ಅನುಗ್ರಹಿಸಿ ಋಷ್ಯಮೂಕ ಪರ್ವತಕ್ಕೆ ಬಂದನು. ॥6-9॥

(ಶ್ಲೋಕ-10)

ಮೂಲಮ್

ಸುಗ್ರೀವೇಣ ಕೃತಾ ಮೈತ್ರಿ ರಾಮಸ್ಯ ವಿದಿತಾತ್ಮನಃ ।
ತದ್ಭಾರ್ಯಾಹಾರಿಣಂ ಹತ್ವಾ ವಾಲಿನಂ ರಘುನಂದನಃ ॥

(ಶ್ಲೋಕ-11)

ಮೂಲಮ್

ರಾಜ್ಯೇಽಭಿಷಿಚ್ಯ ಸುಗ್ರೀವಂ ಮಿತ್ರಕಾರ್ಯಂ ಚಕಾರ ಸಃ ।
ಸುಗ್ರೀವಸ್ತು ಸಮಾನಾಪ್ಯ ವಾನರಾನ್ವಾನರಪ್ರಭುಃ ॥

(ಶ್ಲೋಕ-12)

ಮೂಲಮ್

ಪ್ರೇಷಯಾಮಾಸ ಪರಿತೋ ವಾನರಾನ್ಪರಿಮಾರ್ಗಣೇ ।
ಸೀತಾಯಾಸ್ತತ್ರ ಚೈಕೋಽಹಂ ಸುಗ್ರೀವ ಸಚಿವೋ ಹರಿಃ ॥

(ಶ್ಲೋಕ-13)

ಮೂಲಮ್

ಸಂಪಾತಿವಚನಾಚ್ಛೀಘ್ರಮುಲ್ಲಂಘ್ಯ ಶತಯೋಜನಮ್ ।
ಸಮುದ್ರಂ ನಗರೀಂ ಲಂಕಾಂ ವಿಚಿನ್ವನ್ ಜಾನಕೀಂ ಶುಭಾಮ್ ॥

(ಶ್ಲೋಕ-14)

ಮೂಲಮ್

ಶನೈರಶೋಕವನಿಕಾಂ ವಿಚಿನ್ವಙ್ ಶಿಂಶಪಾತರುಮ್ ।
ಅದ್ರಾಕ್ಷಂ ಜಾನಕೀಮತ್ರ ಶೋಚಂತೀಂ ದುಃಖಸಂಪ್ಲುತಾಮ್ ॥

(ಶ್ಲೋಕ-15)

ಮೂಲಮ್

ರಾಮಸ್ಯ ಮಹಿಷೀಂ ದೇವೀಂ ಕೃತಕೃತ್ಯೋಽಹಮಾಗತಃ ।
ಇತ್ಯುಕ್ತ್ವೋಪರರಾಮಾಥ ಮಾರುತಿರ್ಬುದ್ಧಿಮತ್ತರಃ ॥

ಅನುವಾದ

ಅಲ್ಲಿ ಆತ್ಮಜ್ಞನಾದ ಶ್ರೀರಾಮನು ಸುಗ್ರೀವನೊಡನೆ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಬೆಳೆಸಿದನು. ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ದುಷ್ಟ ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿಸಿದನು. ಈ ಪ್ರಕಾರ ಶ್ರೀರಾಮನು ಮಿತ್ರಕಾರ್ಯವನ್ನು ನೆರವೇರಿಸಿಕೊಟ್ಟನು. ವಾನರ ರಾಜನಾದ ಸುಗ್ರೀವನು ಎಲ್ಲೆಡೆ ಇರುವ ವಾನರರನ್ನು ಕರೆಸಿ ಎಲ್ಲೆಡೆಗಳಲ್ಲಿ ಸೀತೆಯನ್ನು ಹುಡುಕುವುದಕ್ಕಾಗಿ ಕಳಿಸಿದನು. ಅವರಲ್ಲೊಬ್ಬನಾದ ಸುಗ್ರೀವನ ಮಂತ್ರಿಯಾದ ನಾನು ಸಂಪಾತಿಯ ಮಾತಿನಂತೆ ನೂರುಯೋಜನ ಅಗಲವಾದ ಸಮುದ್ರವನ್ನು ನೆಗೆದು ಲಂಕಾಪುರಿಯನ್ನು ಪ್ರವೇಶಿಸಿದೆನು. ಲಂಕೆಯಲ್ಲಿ ಎಲ್ಲೆಡೆ ಶುಭಳಾದ ಜಾನಕಿಯನ್ನು ಹುಡುಕುತ್ತಾ ಹುಡುಕುತ್ತಾ ಮೆಲ್ಲನೆ ಅಶೋಕವನವನ್ನು ಹೊಕ್ಕೆನು. ಇಲ್ಲಿ ಶಿಂಶಪಾ ವೃಕ್ಷದ ಬುಡದಲ್ಲಿ ಅಳುತ್ತಾ ದುಃಖದಲ್ಲಿ ಮುಳುಗಿದ್ದ ರಾಮಚಂದ್ರನ ಪತ್ನಿಯಾದ ಸೀತಾದೇವಿಯನ್ನು ಕಂಡು ನಾನು ಕೃತಾರ್ಥನಾದೆ’’ ಬುದ್ಧಿವಂತರಲ್ಲಿ ಹಿರಿಯವನಾದ ಮಾರುತಿಯು ಹೀಗೆ ಹೇಳಿ ಸುಮ್ಮನಾದನು. ॥10-15॥

(ಶ್ಲೋಕ-16)

ಮೂಲಮ್

ಸೀತಾ ಕ್ರಮೇಣ ತತ್ಸರ್ವಂ ಶ್ರುತ್ವಾ ವಿಸ್ಮಯಮಾಯಯೌ ।
ಕಿಮಿದಂ ಮೇ ಶ್ರುತಂ ವ್ಯೋಮ್ನಿ ವಾಯುನಾ ಸಮುದೀರಿತಮ್ ॥

(ಶ್ಲೋಕ-17)

ಮೂಲಮ್

ಸ್ವಪ್ನೋ ವಾ ಮೇ ಮನೋಭ್ರಾಂತಿರ್ಯದಿ ವಾ ಸತ್ಯಮೇವ ತತ್ ।
ನಿದ್ರಾ ಮೇ ನಾಸ್ತಿ ದುಃಖೇನ ಜಾನಾಮ್ಯೇತತ್ಕುತೋ ಭ್ರಮಃ ॥

(ಶ್ಲೋಕ-18)

ಮೂಲಮ್

ಯೇನ ಮೇ ಕರ್ಣಪೀಯೂಷಂ ವಚನಂ ಸಮುದೀರಿತಮ್ ।
ಸ ದೃಶ್ಯತಾಂ ಮಹಾಭಾಗಃ ಪ್ರಿಯವಾದೀ ಮಮಾಗ್ರತಃ ॥

ಅನುವಾದ

ಸೀತಾದೇವಿಯು ಕ್ರಮವಾಗಿ ಅದೆಲ್ಲವನ್ನು ಕೇಳಿ ಆಶ್ಚರ್ಯಗೊಂಡಳು. ‘ಆಕಾಶದಿಂದ ಕೇಳಿದ ಶಬ್ದವನ್ನು ವಾಯುವೇ ಉಚ್ಚರಿಸಿತೇ? ಇದೇನಿರಬಹುದು?’ ಎಂದುಕೊಂಡಳು. ಇದು ನನ್ನ ಕನಸೋ! ಅಥವಾ ಮನಸ್ಸಿನ ಭ್ರಮೆಯೋ! ಇಲ್ಲವೇ ಇದು ನಿಜವೇ ಆಗಿದ್ದಿತೊ! ಆದರೆ ದುಃಖದಿಂದ ನನಗೆ ನಿದ್ದೆಯೇ ಬರುವುದಿಲ್ಲ. ಭ್ರಮೆಯೂ ಅಲ್ಲ. ಏಕೆಂದರೆ ನಾನು ಚೆನ್ನಾಗಿ ಅರಿಯುತ್ತಿದ್ದೇನೆ. ಆದ್ದರಿಂದ ಇದು ನಿಜವೆ! ನನ್ನ ಕಿವಿಗೆ ಇಂಪಾದ ಅಮೃತೋಪಮವಾದ ಇದನ್ನು ಹೇಳಿದ ಪ್ರಿಯವಾದಿಯಾದ ಆ ಮಹಾನುಭಾವನು ನನ್ನೆದುರಿಗೆ ಕಾಣಿಸಿಕೊಳ್ಳಲಿ. ॥16-18॥

(ಶ್ಲೋಕ-19)

ಮೂಲಮ್

ಶ್ರುತ್ವಾ ತಜ್ಜಾನಕೀವಾಕ್ಯಂ ಹನುಮಾನ್ಪತ್ರಷಂಡತಃ ।
ಅವತೀರ್ಯ ಶನೈಃ ಸೀತಾಪುರತಃ ಸಮವಸ್ಥಿತಃ ॥

ಅನುವಾದ

ಸೀತೆಯು ಆಡಿದ ಮಾತನ್ನು ಕೇಳಿ ಹನುಮಂತನು ಎಲೆಗಳ ಮಧ್ಯದಿಂದ ಕೆಳಗಿಳಿದು ಮೆಲ್ಲಗೆ ಸೀತೆಯ ಮುಂದೆ ಬಂದುನಿಂತನು. ॥19॥

(ಶ್ಲೋಕ-20)

ಮೂಲಮ್

ಕಲವಿಂಕಪ್ರಮಾಣಾಂಗೋ ರಕ್ತಾಸ್ಯಃ ಪೀತವಾನರಃ ।
ನನಾಮ ಶನಕೈಃ ಸೀತಾಂ ಪ್ರಾಂಜಲಿಃ ಪುರತಃ ಸ್ಥಿತಃ ॥

ಅನುವಾದ

ಗುಬ್ಬಚ್ಚಿಯ ಪ್ರಮಾಣದ ಶರೀರ ಉಳ್ಳವನಾಗಿ, ಕೆಂಪಾದ ಮುಖದಿಂದಲೂ, ಹಳದಿಯ ವರ್ಣದಿಂದಲೂ ಕೂಡಿದ ಆ ಕಪಿಯು ಮೆಲ್ಲನೆ ಸೀತೆಯ ಮುಂಭಾಗದಲ್ಲಿ ನಿಂತು ಕೈಜೋಡಿಸಿ ನಮಸ್ಕರಿಸಿದನು. ॥20॥

(ಶ್ಲೋಕ-21)

ಮೂಲಮ್

ದೃಷ್ಟ್ವಾ ತಂ ಜಾನಕೀ ಭೀತಾ ರಾವಣೋಯ ಮುಪಾಗತಃ ।
ಮಾಂ ಮೋಹಯಿತುಮಾಯಾತೋ ಮಾಯಯಾ ವಾನರಾಕೃತಿಃ ॥

(ಶ್ಲೋಕ-22)

ಮೂಲಮ್

ಇತ್ಯೇವಂ ಚಿಂತಯಿತ್ವಾ ಸಾ ತೂಷ್ಣೀಮಾಸೀದಧೋಮುಖೀ ।
ಪುನರಪ್ಯಾಹ ತಾಂ ಸೀತಾಂ ದೇವಿ ಯತ್ತ್ವಂ ವಿಶಂಕಸೇ ॥

(ಶ್ಲೋಕ-23)

ಮೂಲಮ್

ನಾಹಂ ತಥಾವಿಧೋ ಮಾತಸ್ತ್ಯಜ ಶಂಕಾಂ ಮಯಿ ಸ್ಥಿತಾಮ್ ।
ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯ ಪರಮಾತ್ಮನಃ ॥

(ಶ್ಲೋಕ-24)

ಮೂಲಮ್

ಸಚಿವೋಹಂ ಹರೀಂದ್ರಸ್ಯ ಸುಗ್ರೀವಸ್ಯ ಶುಭಪ್ರದೇ ।
ವಾಯೋಃ ಪುತ್ರೋಹಮಖಿಲಪ್ರಾಣಭೂತಸ್ಯ ಶೋಭನೇ ॥

ಅನುವಾದ

ಅವನನ್ನು ಕಂಡು ಹೆದರಿದ ಸೀತೆಯು ರಾವಣನೇ ಕಪಿಯ ವೇಷದಿಂದ ನನ್ನನ್ನು ಮೋಸಗೊಳಿಸಲು ಬಂದಿರುವನೆಂದು ಚಿಂತಿಸುತ್ತಾ ತಲೆ ತಗ್ಗಿಸಿಕೊಂಡು ಸುಮ್ಮನೆ ಕುಳಿತುಬಿಟ್ಟಳು. ಆಗ ಹನುಮಂತನು ಸೀತೆಯ ಬಳಿ ಮತ್ತೆ ಹೇಳಿದನು ‘‘ದೇವಿ! ನೀನು ಯಾವ ಸಂಶಯವನ್ನು ಹೊಂದಿರುವೆಯೋ ಅಂತಹವನು ನಾನಲ್ಲ. ತಾಯೆ! ನನ್ನ ವಿಷಯದಲ್ಲಿರುವ ಸಂಶಯವನ್ನೂ ಬಿಟ್ಟು ಬಿಡು. ಹೇ ಶುಭಪ್ರದಳೆ! ನಾನು ಕೊಸಲೇಂದ್ರನಾದ ಪರಮಾತ್ಮ ಶ್ರೀರಾಮನ ದಾಸನಾಗಿದ್ದು, ಕಪಿಶ್ರೇಷ್ಠನಾದ ಸುಗ್ರೀವನ ಮಂತ್ರಿಯು. ನಾನು ಎಲ್ಲ ಪ್ರಾಣಿಗಳಿಗೆ ಪ್ರಾಣ ಸ್ವರೂಪನಾದ ವಾಯುದೇವರ ಪುತ್ರನಾಗಿರುವೆನು.’’ ॥21-24॥

(ಶ್ಲೋಕ-25)

ಮೂಲಮ್

ತಚ್ಛ್ರುತ್ವಾ ಜಾನಕೀ ಪ್ರಾಹ ಹನೂಮಂತಂ ಕೃತಾಂಜಲಿಮ್ ।
ವಾನರಾಣಾಂ ಮನುಷ್ಯಾಣಾಂ ಸಂಗತಿರ್ಘಟತೇ ಕಥಮ್ ॥

(ಶ್ಲೋಕ-26)

ಮೂಲಮ್

ಯಥಾ ತ್ವಂ ರಾಮಚಂದ್ರಸ್ಯ ದಾಸೋಽಹಮಿತಿ ಭಾಷಸೇ ।
ತಾಮಾಹ ಮಾರುತಿಃ ಪ್ರೀತೋ ಜಾನಕೀಂ ಪುರತಃ ಸ್ಥಿತಃ ॥

(ಶ್ಲೋಕ-27)

ಮೂಲಮ್

ಋಷ್ಯಮೂಕಮಗಾದ್ರಾಮಃ ಶಬರ್ಯಾ ನೋದಿತಃ ಸುಧೀಃ ।
ಸುಗ್ರೀವೋ ಋಷ್ಯಮೂಕಸ್ಥೋ ದೃಷ್ಟವಾನ್ ರಾಮಲಕ್ಷ್ಮಣೌ ॥

(ಶ್ಲೋಕ-28)

ಮೂಲಮ್

ಭೀತೋ ಮಾಂ ಪ್ರೇಷಯಾಮಾಸ ಜ್ಞಾತುಂ ರಾಮಸ್ಯ ಹೃದ್ಗತಮ್ ।
ಬ್ರಹ್ಮಚಾರಿವಪುರ್ಧೃತ್ವಾ ಗತೋಹಂ ರಾಮಸನ್ನಿಧಿಮ್ ॥

ಅನುವಾದ

ಆ ಮಾತನ್ನು ಕೇಳಿ ಸೀತಾದೇವಿಯು ಕೈ ಮುಗಿದು ನಿಂತಿರುವ ಹನುಮಂತನನ್ನು ಕುರಿತು ‘‘ಎಲೈ ವಾನರನೇ! ನೀನು ಶ್ರೀರಾಮನ ಸೇವಕನೆಂದು ಹೇಳಿಕೊಂಡೆಯಲ್ಲ, ಕಪಿಗಳಿಗೂ ಮನುಷ್ಯರಿಗೂ ಸ್ನೇಹವು ಹೇಗಾಗಬಲ್ಲುದು?’’ ಎಂದು ಕೇಳಿದಳು. ಆಗ ಎದುರಿಗೆ ನಿಂತಿರುವ ಹನುಮಂತನು ಸುಪ್ರೀತನಾಗಿ ಸೀತೆಯ ಬಳಿ ಹೇಳುತ್ತಾನೆ — ‘‘ಅಮ್ಮಾ! ಬುದ್ಧಿಶಾಲಿಯಾದ ಶ್ರೀರಾಮನು ಶಬರಿಯ ಪ್ರೇರಣೆಯಂತೆ ಋಷ್ಯಮೂಕ ಪರ್ವತಕ್ಕೆ ಬಂದನು. ಋಷ್ಯಮೂಕದಲ್ಲಿದ್ದ ಸುಗ್ರೀವನು ರಾಮ-ಲಕ್ಷ್ಮಣರನ್ನು ಕಂಡು ಹೆದರಿದವನಾಗಿ ರಾಮನ ಮನಸ್ಸನ್ನು ಅರಿತುಕೊಳ್ಳಲು ನನ್ನನ್ನು ಕಳಿಸಿದನು. ನಾನು ಬ್ರಹ್ಮಚಾರಿಯ ವೇಷವನ್ನು ಧರಿಸಿ ಶ್ರೀರಾಮನ ಸನ್ನಿಧಿಗೆ ಬಂದೆನು. ॥25-28॥

(ಶ್ಲೋಕ-29)

ಮೂಲಮ್

ಜ್ಞಾತ್ವಾ ರಾಮಸ್ಯ ಸದ್ಭಾವಂ ಸ್ಕಂಧೋಪರಿ ನಿಧಾಯ ತೌ ।
ನೀತ್ವಾ ಸುಗ್ರೀವಸಾಮೀಪ್ಯಂ ಸಖ್ಯಂ ಚಾಕರವಂ ತಯೋಃ ॥

ಅನುವಾದ

ಶ್ರೀರಾಮನ ಸದಭಿಪ್ರಾಯವನ್ನು ಅರಿತವನಾಗಿ ರಾಮ-ಲಕ್ಷ್ಮಣರಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿಗೆ ಕರೆದೊಯ್ದು ಅವರಿಬ್ಬರಿಗೂ ಸ್ನೇಹವನ್ನು ಮಾಡಿಸಿದೆನು. ॥29॥

(ಶ್ಲೋಕ-30)

ಮೂಲಮ್

ಸುಗ್ರೀವಸ್ಯ ಹೃತಾ ಭಾರ್ಯಾ ವಾಲಿನಾ ತಂ ರಘೂತ್ತಮಃ ।
ಜಘಾನೈಕೇನ ಬಾಣೇನ ತತೋ ರಾಜ್ಯೇಽಭ್ಯಷೇಚಯತ್ ॥

(ಶ್ಲೋಕ-31)

ಮೂಲಮ್

ಸುಗ್ರೀವಂ ವಾನರಾಣಾಂ ಸ ಪ್ರೇಷಯಾಮಾಸ ವಾನರಾನ್ ।
ದಿಗ್ಭ್ಯೋ ಮಹಾಬಲಾನ್ವೀರಾನ್ ಭವತ್ಯಾಃ ಪರಿಮಾರ್ಗಣೇ ॥

ಅನುವಾದ

ವಾಲಿಯು ಸುಗ್ರೀವನ ಪತ್ನಿಯನ್ನು ಅಪಹರಿಸಿ, ರಾಜ್ಯಭ್ರಷ್ಟನನ್ನಾಗಿಸಿದ್ದನು. ಶ್ರೀರಘುನಾಥನು ವಾಲಿಯನ್ನು ಒಂದೇ ಬಾಣದಿಂದ ಕೊಂದು ಸುಗ್ರೀವನಿಗೆ ರಾಜ್ಯಾಭಿಷೇಕವನ್ನು ಮಾಡಿದನು. ಆಗ ಸುಗ್ರೀವನು ನಿಮ್ಮನ್ನು ಹುಡುಕುವುದಕ್ಕಾಗಿ ಮಹಾಬಲಶಾಲಿಗಳೂ, ವೀರರೂ ಆದ ವಾನರರನ್ನು ಎಲ್ಲ ದಿಕ್ಕುಗಳಿಗೆ ಕಳಿಸಿಕೊಟ್ಟನು. ॥30-31॥

(ಶ್ಲೋಕ-32)

ಮೂಲಮ್

ಗಚ್ಚಂತಂ ರಾಘವೋ ದೃಷ್ಟ್ವಾ ಮಾಮಭಾಷತ ಸಾದರಮ್ ॥

ಅನುವಾದ

ಹೊರಡಡುತ್ತಿದ್ದ ನನ್ನನ್ನು ಕಂಡು ಶ್ರೀರಾಮದೇವರು ಆದರದಿಂದ ಹೇಳಿದರು — ‘ಹೇ ಪವನನಂದನಾ! ನನ್ನ ಎಲ್ಲ ಕಾರ್ಯಗಳೂ ನಿನ್ನ ಮೇಲೆ ಅವಲಂಬಿತವಾಗಿವೆ. ಸೀತಾದೇವಿಗೆ ನನ್ನ ಮತ್ತು ಲಕ್ಷ್ಮಣನ ಕುಶಲವಾರ್ತೆಯನ್ನು ಹೇಳು. ॥32॥

(ಶ್ಲೋಕ-33)

ಮೂಲಮ್

ತ್ವಯಿ ಕಾರ್ಯಮಶೇಷಂ ಮೇ ಸ್ಥಿತಂ ಮಾರುತನಂದನ ।
ಬ್ರೂಹಿ ಮೇ ಕುಶಲಂ ಸರ್ವಂ ಸೀತಾಯೈ ಲಕ್ಷ್ಮಣಸ್ಯ ಚ ॥

(ಶ್ಲೋಕ-34)

ಮೂಲಮ್

ಅಂಗುಲೀಯಕಮೇತನ್ಮೇ ಪರಿಜ್ಞಾನಾರ್ಥಮುತ್ತಮಮ್ ।
ಸೀತಾಯೈ ದೀಯತಾಂ ಸಾಧು ಮನ್ನಾಮಾಕ್ಷರಮುದ್ರಿತಮ್ ॥

(ಶ್ಲೋಕ-35)

ಮೂಲಮ್

ಇತ್ಯುಕ್ತ್ವಾ ಪ್ರದದೌ ಮಹ್ಯಂ ಕರಾಗ್ರಾದಂಗುಲೀಯಕಮ್ ।
ಪ್ರಯತ್ನೇನ ಮಯಾನೀತಂ ದೇವಿ ಪಶ್ಯಾಂಗುಲೀಯಕಮ್ ॥

ಅನುವಾದ

ಇದೋ ನನ್ನ ನೆನಪಿಗಾಗಿ ಈ ಉತ್ತಮವಾದ ನನ್ನ ಹೆಸರಿನ ಅಕ್ಷರಮುದ್ರೆಯುಳ್ಳ ಉಂಗುರವನ್ನು ಸೀತೆಗೆ ಎಚ್ಚರಿಕೆಯಿಂದ ಕೊಡು’ ಎಂದು ಹೇಳಿ, ತನ್ನ ಬೆರಳಿನಿಂದ ಉಂಗುರವನ್ನು ತೆಗೆದು ನನಗೆ ಕೊಟ್ಟನು. ನಾನು ಅದನ್ನು ಬಹಳ ಎಚ್ಚರಿಕೆಯಿಂದ ತಂದಿರುವೆನು. ದೇವಿ! ನೀವು ಈ ಉಂಗುರವನ್ನು ನೋಡಿರಿ’ ॥33-35॥

(ಶ್ಲೋಕ-36)

ಮೂಲಮ್

ಇತ್ಯುಕ್ತ್ವಾ ಪ್ರದದೌ ದೇವ್ಯೈ ಮುದ್ರಿಕಾಂ ಮಾರುತಾತ್ಮಜಃ ।
ನಮಸ್ಕೃತ್ಯ ಸ್ಥಿತೋ ದೂರಾದ್ಬದ್ಧಾಂಜಲಿಪುಟೋ ಹರಿಃ ॥

ಅನುವಾದ

ಎಂದು ಹೇಳಿ ಮಾರುತಿಯು ಮುದ್ರೆಯುಂಗುರವನ್ನು ಸೀತಾದೇವಿಗೆ ಅರ್ಪಿಸಿ ನಮಸ್ಕಾರ ಮಾಡಿ ಕೈ ಮುಗಿದು ದೂರದಲ್ಲಿ ನಿಂತು ಕೊಂಡನು. ॥36॥

(ಶ್ಲೋಕ-37)

ಮೂಲಮ್

ದೃಷ್ಟ್ವಾ ಸೀತಾ ಪ್ರಮುದಿತಾ ರಾಮನಾಮಾಂಕಿತಾಂ ತದಾ ।
ಮುದ್ರಿಕಾಂ ಶಿರಸಾ ಧೃತ್ವಾ ಸ್ರವದಾನಂದನೇತ್ರಜಾ ॥

ಅನುವಾದ

ರಾಮನಾಮಾಂಕಿತವಾಗಿದ್ದ ಆ ಮುದ್ರೆಯುಂಗುರವನ್ನು ಕಂಡು ಸೀತೆಯು ಆನಂದಬಾಷ್ಪಗಳನ್ನು ಸುರಿಸುತ್ತಾ ತಲೆಯಮೇಲಿಟ್ಟುಕೊಂಡಳು. ॥37॥

(ಶ್ಲೋಕ-38)

ಮೂಲಮ್

ಕಪೇ ಮೇ ಪ್ರಾಣದಾತಾ ತ್ವಂ ಬುದ್ಧಿಮಾನಸಿ ರಾಘವೇ ।
ಭಕ್ತೋಽಸಿ ಪ್ರಿಯಕಾರೀ ತ್ವಂ ವಿಶ್ವಾಸೋಽಸ್ತಿ ತವೈವ ಹಿ ॥

(ಶ್ಲೋಕ-39)

ಮೂಲಮ್

ನೋ ಚೇನ್ಮತ್ಸನ್ನಿಧಿಂ ಚಾನ್ಯಂ ಪುರುಷಂ ಪ್ರೇಷಯೇತ್ಕಥಮ್ ।
ಹನೂಮನ್ದೃಷ್ಟಮಖಿಲಂ ಮಮ ದುಃಖಾದಿಕಂ ತ್ವಯಾ ॥

ಅನುವಾದ

ಅನಂತರ ‘‘ಹೇ ಕಪಿವರ್ಯನೆ! ನೀನೇ ನನಗೆ ಪ್ರಾಣದಾತನಾಗಿರುವೆ. ನೀನು ಬಹಳ ಬುದ್ಧಿವಂತನಾಗಿದ್ದು, ಶ್ರೀರಾಮನಲ್ಲಿ ಭಕ್ತಿಯುಳ್ಳವನಾಗಿರುವೆ. ಆತನಿಗೆ ಪ್ರಿಯವಾದದ್ದನ್ನು ಮಾಡುವವನೂ ಅವನ ವಿಶ್ವಾಸಪಾತ್ರನಾಗಿರುವೆ. ಹಾಗಲ್ಲವಾದರೆ ನನ್ನ ಬಳಿಗೆ ಬೇರೊಬ್ಬ ಪುರುಷನನ್ನಾದರೂ ರಾಮನು ಹೇಗೆ ಕಳುಹಿಸಿಕೊಡುತ್ತಿದ್ದನು? ಎಲೈ ಹನುಮಂತನೆ! ನನ್ನ ಎಲ್ಲ ವಿಪತ್ತುಗಳನ್ನು ನೀನು ಕಣ್ಣಾರೆ ಕಂಡಿರುವೆ. ॥38-39॥

(ಶ್ಲೋಕ-40)

ಮೂಲಮ್

ಸರ್ವಂ ಕಥಯ ರಾಮಾಯ ಯಥಾ ಮೇ ಜಾಯತೇ ದಯಾ ।
ಮಾಸದ್ವಯಾವಧಿ ಪ್ರಾಣಾಃ ಸ್ಥಾಸ್ಯಂತಿ ಮಮ ಸತ್ತಮ ॥

ಅನುವಾದ

ನನ್ನ ಈ ಎಲ್ಲ ಕಷ್ಟಗಳನ್ನು ರಾಮನಿಗೆ ನನ್ನ ಮೇಲೆ ಅವನಿಗೆ ದಯೆ ಉಂಟಾಗುವಂತೆ ಹೇಳುವವನಾಗು. ಎಲೈ ಶ್ರೇಷ್ಠನೆ! ಇನ್ನು ಎರಡು ತಿಂಗಳುಗಳ ಕಾಲ ಮಾತ್ರವೇ ನನ್ನ ಪ್ರಾಣಗಳು ಇರುವುವು. ॥40॥

(ಶ್ಲೋಕ-41)

ಮೂಲಮ್

ನಾಗಮಿಷ್ಯತಿ ಚೇದ್ರಾಮೋ ಭಕ್ಷಯಿಷ್ಯತಿ ಮಾಂ ಖಲಃ ।
ಅತಃ ಶೀಘ್ರಂ ಕಪೀಂದ್ರೇಣ ಸುಗ್ರೀವೇಣ ಸಮನ್ವಿತಃ ॥

(ಶ್ಲೋಕ-42)

ಮೂಲಮ್

ವಾನರಾನೀಕಪೈಃ ಸಾರ್ಧಂ ಹತ್ವಾ ರಾವಣಮಾಹವೇ ।
ಸಪುತ್ರಂ ಸಬಲಂ ರಾಮೋ ಯದಿ ಮಾಂ ಮೋಚಯೇತ್ಪ್ರಭುಃ ॥

(ಶ್ಲೋಕ-43)

ಮೂಲಮ್

ತತ್ತಸ್ಯ ಸದೃಶಂ ವೀರ್ಯಂ ವೀರ ವರ್ಣಯ ವರ್ಣಿತಮ್ ।
ಯಥಾ ಮಾಂ ತಾರಯೇದ್ರಾಮೋ ಹತ್ವಾ ಶೀಘ್ರಂ ದಶಾನನಮ್ ॥

(ಶ್ಲೋಕ-44)

ಮೂಲಮ್

ತಥಾ ಯತಸ್ವ ಹನುಮನ್ವಾಚಾ ಧರ್ಮಮವಾಪ್ನುಹಿ ।
ಹನೂಮಾನಪಿ ತಾಮಾಹ ದೇವಿ ದೃಷ್ಟೋ ಯಥಾ ಮಯಾ ॥

(ಶ್ಲೋಕ-45)

ಮೂಲಮ್

ರಾಮಃ ಸಲಕ್ಷ್ಮಣಃ ಶೀಘ್ರಮಾಗಮಿಷ್ಯತಿ ಸಾಯುಧಃ ।
ಸುಗ್ರೀವೇಣ ಸಸೈನ್ಯೇನ ಹತ್ವಾ ದಶಮುಖಂ ಬಲಾತ್ ॥

(ಶ್ಲೋಕ-46)

ಮೂಲಮ್

ಸಮಾನೇಷ್ಯತಿ ದೇವಿ ತ್ವಾಮಯೋಧ್ಯಾಂ ನಾತ್ರ ಸಂಶಯಃ ।
ತಮಾಹ ಜಾನಕೀ ರಾಮಃ ಕಥಂ ವಾರಿಧಿಮಾತತಮ್ ॥

(ಶ್ಲೋಕ-47)

ಮೂಲಮ್

ತೀರ್ತ್ವಾಯಾಸ್ಯತ್ಯಮೇಯಾತ್ಮಾ ವಾನರಾನೀಕಪೈಃ ಸಹ ।
ಹನೂಮಾನಾಹ ಮೇ ಸ್ಕಂಧಾವಾರುಹ್ಯ ಪುರುಷರ್ಷಭೌ ॥

(ಶ್ಲೋಕ-48)

ಮೂಲಮ್

ಆಯಾಸ್ಯತಃ ಸಸೈನ್ಯಶ್ಚ ಸುಗ್ರೀವೋ ವಾನರೇಶ್ವರಃ ।
ವಿಹಾಯಸಾ ಕ್ಷಣೇನೈವ ತೀರ್ತ್ವಾ ವಾರಿಧಿಮಾತತಮ್ ॥

(ಶ್ಲೋಕ-49)

ಮೂಲಮ್

ನಿರ್ದಹಿಷ್ಯತಿ ರಕ್ಷೌಘಾಂಸ್ತ್ವತ್ಕೃತೇ ನಾತ್ರ ಸಂಶಯಃ ।
ಅನುಜ್ಞಾಂ ದೇಹಿ ಮೇ ದೇವಿ ಗಚ್ಛಾಮಿ ತ್ವರಯಾನ್ವಿತಃ ॥

(ಶ್ಲೋಕ-50)

ಮೂಲಮ್

ದ್ರಷ್ಟುಂ ರಾಮಂ ಸಹ ಭ್ರಾತ್ರಾ ತ್ವರಯಾಮಿ ತವಾಂತಿಕಮ್ ।
ದೇವಿ ಕಿಂಚಿದಭಿಜ್ಞಾನಂ ದೇಹಿ ಮೇ ಯೇನ ರಾಘವಃ ॥

(ಶ್ಲೋಕ-51)

ಮೂಲಮ್

ವಿಶ್ವಸೇನ್ಮಾಂ ಪ್ರಯತ್ನೇನ ತತೋ ಗಂತಾ ಸಮುತ್ಸುಕಃ ।
ತತಃ ಕಿಂಚಿದ್ವಿಚಾರ್ಯಾಥ ಸೀತಾ ಕಮಲಲೋಚನಾ ॥

(ಶ್ಲೋಕ-52)

ಮೂಲಮ್

ವಿಮುಚ್ಯ ಕೇಶಪಾಶಾಂತೇ ಸ್ಥಿತಂ ಚೂಡಾಮಣಿಂ ದದೌ ।
ಅನೇನ ವಿಶ್ವಸೇದ್ರಾಮಸ್ತ್ವಾಂ ಕಪೀಂದ್ರ ಸಲಕ್ಷ್ಮಣಃ ॥

ಅನುವಾದ

ರಾಮನು ಅಷ್ಟರಲ್ಲಿ ಬರದೇಹೋದರೆ ಆ ಪಾಪಿಯು ನನ್ನನ್ನು ತಿಂದು ಬಿಡುವನು. ಆದ್ದರಿಂದ ಜಾಗ್ರತೆಯಾಗಿ ಕಪಿಶ್ರೇಷ್ಠನಾದ ಸುಗ್ರೀವನೊಡಗೂಡಿ, ವಾನರಸೈನ್ಯ ಸಹಿತ ಇಲ್ಲಿಗೆ ಬಂದು ಶ್ರೀರಾಮನು ಯುದ್ಧದಲ್ಲಿ ಪುತ್ರ-ಬಲ ಸಹಿತನಾದ ರಾವಣನನ್ನು ಕೊಂದು ಆ ಪ್ರಭುವು ನನ್ನನ್ನು ಬಿಡಿಸಿದ್ದೇ ಆದರೆ, ಅದು ಅವನ ಶಕ್ತಿಪರಾಕ್ರಮಗಳಿಗೆ ತಕ್ಕುದಾದೀತು. ಎಲೈ ವೀರನೆ! ಈಗ ನಾನು ವಿವರಿಸಿದುದನ್ನು ರಾಮನಿಗೆ ವರ್ಣಿಸಿಹೇಳು. ರಾಮನು ಬೇಗನೆ ರಾವಣನನ್ನು ಕೊಂದು ಹೇಗೆ ನನ್ನನ್ನು ಕಾಪಾಡುವನೋ ಹಾಗೇ ನೀನೂ ಪ್ರಯತ್ನಮಾಡು. ಎಲೈ ಹನುಮಂತನೆ! ನನಗೆ ನೀನು ವಾಕ್ ಸಹಾಯವನ್ನು ಮಾಡಿ ಪುಣ್ಯಕಟ್ಟಿಕೊ.’’ ಆಗ ಹನುಮಂತನು ಕೂಡ ಆಕೆಯನ್ನು ಕುರಿತು - ‘‘ಅಮ್ಮಾ! ನಾನು ಕಂಡಿರುವುದೆಲ್ಲವನ್ನು ಶ್ರೀರಾಮನಿಗೆ ತಿಳಿಸುವೆನು. ಶ್ರೀರಾಮನು ಆಯುಧ ಸಮೇತನಾಗಿ ಲಕ್ಷ್ಮಣನೊಡಗೂಡಿ ಬೇಗನೇ ಬರಲಿದ್ದಾನೆ. ಸೇನಾಸಮೇತನಾಗಿ ಸುಗ್ರೀವನ ಸಹಾಯದಿಂದ ದಶಮುಖ ರಾವಣನನ್ನು ಕೊಂದು, ನಿನ್ನನ್ನು ಅಯೋಧ್ಯೆಗೆ ಕರೆದೊಯ್ಯುವನು. ಹೇ ದೇವಿ! ಈ ವಿಷಯದಲ್ಲಿ ಸಂಶಯವೇ ಇಲ್ಲ’’ ಎಂದು ಹೇಳಿದನು. ಆಗ ಸೀತಾದೇವಿಯು ಹನುಮಂತನ ಬಳಿ ಕೇಳುತ್ತಾಳೆ - ‘‘ಭಗವಾನ್ ಶ್ರೀರಾಮನು ಅಮೇಯಾತ್ಮಾ ಆಗಿದ್ದಾನೆ.(ಅವನ ಶರೀರದ ಯಾವುದೇ ಅಳತೆ ಇಲ್ಲ. ಅವನು ಸರ್ವವ್ಯಾಪಕನಾಗಿದ್ದಾನೆ.) ಆದರೆ ವಿಸ್ತಾರವಾಗಿ ಹರಡಿಕೊಂಡಿರುವ ಸಮುದ್ರವನ್ನು ದಾಟಿಕೊಂಡು ವಾನರ ಸೈನ್ಯದೊಡನೆ ಬರುವುದಾದರೂ ಹೇಗ?’’ ಆಗ ಹನುಮಂತನೆಂದನು - ‘‘ಪುರುಷಶ್ರೇಷ್ಠರಾದ ಆ ರಾಮ-ಲಕ್ಷ್ಮಣರಿಬ್ಬರೂ ನನ್ನ ಹೆಗಲನ್ನೇರಿ ಬರಲಿರುವರು. ವಾನರೇಶ್ವರನಾದ ಸುಗ್ರೀವನು ಸೇನಾ ಸಮೇತನಾಗಿ ವಿಶಾಲ ಸಮುದ್ರವನ್ನು ಕ್ಷಣಮಾತ್ರದಲ್ಲಿ ಆಕಾಶ ಮಾರ್ಗದಿಂದ ಹಾರಿಕೊಂಡು ಲಂಕೆಗೆ ಬಂದು ನಿನ್ನ ನಿಮಿತ್ತವಾಗಿಯೇ ರಾಕ್ಷಸರ ಗುಂಪನ್ನು ಸುಟ್ಟು ಬೂದಿ ಮಾಡುವನು. ಈ ವಿಷಯದಲ್ಲಿ ಸಂಶಯವೇ ಇಲ್ಲ. ಎಲೈ ದೇವಿಯೆ! ನನಗೆ ಅಪ್ಪಣೆಯನ್ನು ಕೊಡು. ಬೇಗನೇ ರಾಮನಲ್ಲಿಗೆ ಹೊರಡುವೆನು ಹಾಗೂ ಸಹೋದರನೊಡನೆ ರಾಮನನ್ನು ನಿನ್ನ ಬಳಿಗೆ ಬರಲು ಅವಸರ ಪಡಿಸುವೆನು. ದೇವಿ! ಪ್ರಯತ್ನಪೂರ್ವಕವಾಗಿ ನಾನು ನಿಮ್ಮನ್ನು ಸಂದರ್ಶಿಸಿದುದನ್ನು ಶ್ರೀರಾಮನು ನಂಬುವುದಕ್ಕಾಗಿ ಏನಾದರೊಂದು ಗುರುತನ್ನು ಕೊಡು. ಅದನ್ನೆತ್ತಿಕೊಂಡು ಉತ್ಸುಕನಾಗಿ ಹೊರಡಲನುವಾಗುವೆನು.’’ ಕಮಲಲೋಚನೆಯಾದ ಸೀತೆಯು ಸ್ವಲ್ಪ ಆಲೋಚಿಸಿ ತನ್ನ ಮುಡಿಯಲ್ಲಿದ್ದ ಚೂಡಾಮಣಿ ಎಂಬ ರತ್ನವನ್ನು ತೆಗೆದು ಹನುಮಂತನಿಗೆ ಕೊಟ್ಟಳು. ಹೇ ಕಪೀಂದ್ರನೆ! ಇದರಿಂದ ಲಕ್ಷ್ಮಣ ಸಹಿತನಾದ ಶ್ರೀರಾಮನು ನಿನ್ನನ್ನು ನಂಬುವನು. ॥41-52॥

(ಶ್ಲೋಕ-53)

ಮೂಲಮ್

ಅಭಿಜ್ಞಾನಾರ್ಥಮನ್ಯಚ್ಛ ವದಾಮಿ ತವ ಸುವ್ರತ ।
ಚಿತ್ರಕೂಟಗಿರೌ ಪೂರ್ವಮೇಕದಾ ರಹಸಿ ಸ್ಥಿತಃ ।
ಮದಂಕೇ ಶಿರ ಆಧಾಯ ನಿದ್ರಾತಿ ರಘುನಂದನಃ ॥

ಅನುವಾದ

ಹೇ ಸುವ್ರತನೆ! ಗುರುತಿಗಾಗಿ ಮತ್ತೊಂದು ವಿಷಯವನ್ನು ನಿನಗೆ ಹೇಳುವೆನು. ಒಮ್ಮೆ ಚಿತ್ರಕೂಟ ಪರ್ವತದಲ್ಲಿ ಶ್ರೀರಾಮನು ಏಕಾಂತದಲ್ಲಿ ನನ್ನ ತೊಡೆಯಮೇಲೆ ತಲೆಯ ನ್ನಿಟ್ಟುಕೊಂಡು ಮಲಗಿದ್ದನು. ॥53॥

(ಶ್ಲೋಕ-54)

ಮೂಲಮ್

ಐಂದ್ರಃ ಕಾಕಸ್ತದಾಗತ್ಯ ನಖೈಸ್ತುಂಡೇನ ಚಾಸಕೃತ್ ।
ಮತ್ಪಾದಾಂಗುಷ್ಠಮಾರಕ್ತಂ ವಿದದಾರಾಮಿಷಾಶಯಾ ॥

ಅನುವಾದ

ಆಗ ಇಂದ್ರ ಪುತ್ರ ಜಯಂತನು ಕಾಗೆಯರೂಪದಿಂದ ಬಂದು ಕಾಲಿನಿಂದ ಹಾಗೂ ಕೊಕ್ಕಿನಿಂದ ಬಾರಿ-ಬಾರಿಗೂ ಕೆಂಪಾದ ನನ್ನ ಕಾಲಿನ ಹೆಬ್ಬೆರಳನ್ನು ಮಾಂಸದ ಆಸೆಯಿಂದ ಗಾಯಗೊಳಿಸಿದನು. ॥54॥

(ಶ್ಲೋಕ-55)

ಮೂಲಮ್

ತತೋ ರಾಮಃ ಪ್ರಬುದ್ ಧ್ಯಾಥ ದೃಷ್ಟ್ವಾ ಪಾದಂ ಕೃತವ್ರಣಮ್ ।
ಕೇನ ಭದ್ರೇ ಕೃತಂ ಚೈತದ್ವಿಪ್ರಿಯಂ ಮೇ ದುರಾತ್ಮನಾ ॥

ಅನುವಾದ

ಅನಂತರ ಶ್ರೀರಾಮನು ಎಚ್ಚೆತ್ತು ಗಾಯಗೊಂಡಿರುವ ನನ್ನ ಕಾಲನ್ನು ನೋಡಿ ‘ಎಲೈ ಭದ್ರೆ! ನನಗೆ ಅಪ್ರಿಯವಾದ ಈ ಕೆಲಸವನ್ನು ಯಾರು ಮಾಡಿದರು?’ ॥55॥

(ಶ್ಲೋಕ-56)

ಮೂಲಮ್

ಇತ್ಯುಕ್ತ್ವಾ ಪುರತೋಽಪಶ್ಯದ್ವಾಯಸಂ ಮಾಂ ಪುನಃ ಪುನಃ ।
ಅಭಿದ್ರವಂತಂ ರಕ್ತಾಕ್ತನಖತುಂಡಂ ಚುಕೋಪ ಹ ॥

ಅನುವಾದ

ಹೀಗೆನ್ನುತ್ತಾ ಎದುರಿಗೆ ಇದ್ದ ಕಾಗೆಯನ್ನು ನನ್ನನ್ನು ಪುನಃ-ಪುನಃ ನೋಡಿದನು. ರಕ್ತದಿಂದ ಕೂಡಿದ ಉಗುರು ಮತ್ತು ಕೊಕ್ಕುಳ್ಳ ಕಾಗೆಯು ತಪ್ಪಿಸಿಕೊಂಡು ಓಡುತ್ತಿರಲು ಅತೀವ ಕೋಪಗೊಂಡನು. ॥56॥

(ಶ್ಲೋಕ-57)

ಮೂಲಮ್

ತೃಣಮೇಕಮುಪಾದಾಯ ದಿವ್ಯಾಸ್ತ್ರೇಣಾಭಿಯೋಜ್ಯ ತತ್ ।
ಚಿಕ್ಷೇಪ ಲೀಲಯಾ ರಾಮೋ ವಾಯಸೋಪರಿ ತಜ್ಜ್ವಲತ್ ॥

(ಶ್ಲೋಕ-58)

ಮೂಲಮ್

ಅಭ್ಯದ್ರವದ್ವಾಯಸಶ್ಚ ಭೀತೋ ಲೋಕಾನ್ ಭ್ರಮನ್ಪುನಃ ।
ಇಂದ್ರಬ್ರಹ್ಮಾದಿಭಿಶ್ಚಾಪಿ ನ ಶಕ್ಯೋ ರಕ್ಷಿತುಂ ತದಾ ॥

(ಶ್ಲೋಕ-59)

ಮೂಲಮ್

ರಾಮಸ್ಯ ಪಾದಯೋರಗ್ರೇ ಪತದ್ಭೀತ್ಯಾ ದಯಾನಿಧೇಃ ।
ಶರಣಾಗತಮಾಲೋಕ್ಯ ರಾಮಸ್ತಮಿದಮಬ್ರವೀತ್ ॥

ಅನುವಾದ

ಶ್ರೀರಾಮನು ಕೂಡಲೇ ಒಂದು ಹುಲ್ಲು ಕಡ್ಡಿಯನ್ನು ಎತ್ತಿಕೊಂಡು ದಿವ್ಯಾಸದಿಂದ ಅದನ್ನು ಅಭಿಮಂತ್ರಿಸಿ ಲೀಲಾಮಾತ್ರದಿಂದ ಪ್ರಜ್ವಲಿತವಾದ ಅದನ್ನು ಕಾಗೆಯ ಮೇಲೆ ಪ್ರಯೋಗಿಸಿದನು. ಆಗ ಆ ಕಾಗೆಯು ಭಯಗೊಂಡು ಎಲ್ಲ ಲೋಕಗಳನ್ನು ಅಲೆದು ಇಂದ್ರ-ಬ್ರಹ್ಮ ಮುಂತಾದವರಿಂದಲೂ ರಕ್ಷಿಸಿಕೊಳ್ಳಲು ಅಸಮರ್ಥನಾದಾಗ ಮತ್ತೆ ಹೆದರಿಕೊಂಡೇ ದಯಾನಿಧಿಯಾದ ರಾಮನ ಪಾದಗಳಲ್ಲಿ ಬಿದ್ದುಕೊಂಡಿತು. ಶರಣಾಗತನಾದ ಅವನನ್ನು ನೋಡಿದ ಶ್ರೀರಾಮಚಂದ್ರನು ಅವನಲ್ಲಿ ಹೇಳಿದನು ॥57-59॥

(ಶ್ಲೋಕ-60)

ಮೂಲಮ್

ಅಮೋಘಮೇತದಸ್ತ್ರಂ ಮೇ ದತ್ತೆತ್ತೈಕಾಕ್ಷಮಿತೋ ವ್ರಜ ।
ಸವ್ಯಂ ದತ್ತ್ವಾ ಗತಃ ಕಾಕ ಏವಂ ಪೌರುಷವಾನಪಿ ॥

(ಶ್ಲೋಕ-61)

ಮೂಲಮ್

ಉಪೇಕ್ಷತೇ ಕಿಮರ್ಥಂ ಮಾಮಿದಾನೀಂ ಸೋಽಪಿ ರಾಘವಃ ।
ಹನೂಮಾನಪಿ ತಾಮಾಹ ಶ್ರುತ್ವಾ ಸೀತಾನುಭಾಷಿತಮ್ ॥

(ಶ್ಲೋಕ-62)

ಮೂಲಮ್

ದೇವಿ ತ್ವಾಂ ಯದಿ ಜಾನಾತಿ ಸ್ಥಿತಾಮತ್ರ ರಘೂತ್ತಮಃ ।
ಕರಿಷ್ಯತಿ ಕ್ಷಣಾದ್ಭಸ್ಮ ಲಂಕಾಂ ರಾಕ್ಷಸಮಂಡಿತಾಮ್ ॥

ಅನುವಾದ

‘ನನ್ನ ಅಸವು ವ್ಯರ್ಥವಾಗತಕ್ಕದ್ದಲ್ಲ. ಇದು ಅಮೋಘವಾದುದು. ಇದಕ್ಕೆ ನಿನ್ನ ಒಂದು ಕಣ್ಣನ್ನು ಕೊಟ್ಟು ಇಲ್ಲಿಂದ ಹೊರಟು ಹೋಗು.’ ಆಗ ಕಾಗೆಯು ಎಡಗಣ್ಣನ್ನು ನೀಡಿ ಹೊರಟು ಹೋಯಿತು. ಇಂತಹ ಪೌರುಷವುಳ್ಳವನಾಗಿದ್ದರೂ ಶ್ರೀರಾಮನು ಏತಕ್ಕಾಗಿ ನನ್ನನ್ನು ಇನ್ನೂ ಉಪೇಕ್ಷಿಸುತ್ತಿರುವನು?’’ ಸೀತೆಯು ಆಡಿದ ಮಾತನ್ನು ಕೇಳಿದ ಹನುಮಂತನು ‘‘ದೇವಿ! ಶ್ರೀರಾಮನು ನೀನು ಇಲ್ಲಿರುವುದನ್ನು ತಿಳಿಯುತ್ತಲೇ ಒಂದು ಕ್ಷಣದಲ್ಲಿ ರಾಕ್ಷಸರಿಂದ ಅಲಂಕೃತವಾದ ಈ ಲಂಕೆಯನ್ನು ಸುಟ್ಟು ಬೂದಿ ಮಾಡಿಬಿಡುವನು ಎಂದು ಹೇಳಿದನು. ॥60-62॥

(ಶ್ಲೋಕ-63)

ಮೂಲಮ್

ಜಾನಕೀ ಪ್ರಾಹ ತಂ ವತ್ಸ ಕಥಂ ತ್ವಂ ಯೋತ್ಸ್ಯಸೇಸುರೈಃ ।
ಅತಿಸೂಕ್ಷ್ಮವಪುಃ ಸರ್ವೇ ವಾನರಾಶ್ಚ ಭವಾದೃಶಾಃ ॥

ಅನುವಾದ

ಆಗ ಜಾನಕಿಯು ಕೇಳುತ್ತಾಳೆ - ‘‘ಮಗೂ! ನೀನು ರಾಕ್ಷಸರೊಡನೆ ಹೇಗೆ ಯುದ್ಧಮಾಡುವೆ? ಇಷ್ಟೊಂದು ಸಣ್ಣ ಶರೀರ ದವನಾಗಿರುವಿಯಲ್ಲ! ಎಲ್ಲ ಕಪಿಗಳೂ ಕೂಡ ನಿನ್ನಂತೆ ಇರಬಹುದಲ್ಲ!’’ ॥63॥

(ಶ್ಲೋಕ-64)

ಮೂಲಮ್

ಶ್ರುತ್ವಾ ತದ್ವಚನಂ ದೇವ್ಯೈ ಪೂರ್ವರೂಪಮದರ್ಶಯತ್ ।
ಮೇರುಮಂದರಸಂಕಾಶಂ ರಕ್ಷೋಗಣವಿಭೀಷಣಮ್ ॥

ಅನುವಾದ

ಜಾನಕೀದೇವಿಯ ಮಾತನ್ನು ಕೇಳಿ ಹನುಮಂತನು ಆಕೆಗೆ ತನ್ನ ಹಿಂದಿನ ರೂಪವನ್ನು ಎಂದರೆ, ಮೇರು-ಮಂದರ ಪರ್ವತಗಳಿಗೆ ಸಮಾನವಾದ ವಿಶಾಲವಾದ ಹಾಗೂ ರಾಕ್ಷಸರ ಸಮೂಹಕ್ಕೆ ಭಯವನ್ನುಂಟು ಮಾಡುವಂತಹ ಬೃಹತ್ ರೂಪವನ್ನು ತೋರಿದನು. ॥64॥

(ಶ್ಲೋಕ-65)

ಮೂಲಮ್

ದೃಷ್ಟ್ವಾ ಸೀತಾ ಹನೂಮಂತಂ ಮಹಾಪರ್ವತಸನ್ನಿಭಮ್ ।
ಹರ್ಷೇಣ ಮಹತಾವಿಷ್ಟಾ ಪ್ರಾಹ ತಂ ಕಪಿಕುಂಜರಮ್ ॥

(ಶ್ಲೋಕ-66)

ಮೂಲಮ್

ಸಮರ್ಥೋಸಿ ಮಹಾಸತ್ತ್ವ ದ್ರಕ್ಷ್ಯಂತಿ ತ್ವಾಂ ಮಹಾಬಲಮ್ ।
ರಾಕ್ಷಸ್ಯಸ್ತೇ ಶುಭಃ ಪಂಥಾ ಗಚ್ಛ ರಾಮಾಂತಿಕಂ ದ್ರುತಮ್ ॥

ಅನುವಾದ

ಸೀತೆಯು ಮಹಾಪರ್ವತದಂತಿರುವ ಆ ಹನುಮಂತನನ್ನು ಕಂಡು ಬಹಳವಾದ ಸಂತೋಷದಿಂದ ಕೂಡಿದವಳಾಗಿ ಆ ಕಪಿಶ್ರೇಷ್ಠನನ್ನು ಕುರಿತು ‘‘ಹೇ ಬಲಾಢ್ಯನೆ! ನೀನು ಮಹಾಸಾಮರ್ಥ್ಯಶಾಲಿಯಾಗಿರುವೆ. ರಾಕ್ಷಸಿಯರು ನೀನು ಮಹಾಬಲಶಾಲಿಯೆಂಬುದನ್ನು ಕಂಡುಕೊಳ್ಳುವರು. ನೀನು ಬೇಗನೆ ರಾಮಚಂದ್ರನ ಬಳಿಗೆ ಹೋಗು. ನಿನ್ನ ದಾರಿಯು ಶುಭವಾಗಲಿ’’ ಎಂದು ಹರಸಿದಳು. ॥65-66॥

(ಶ್ಲೋಕ-67)

ಮೂಲಮ್

ಬುಭುಕ್ಷಿತಃ ಕಪಿಃ ಪ್ರಾಹ ದರ್ಶನಾತ್ಪಾರಣಂ ಮಮ ।
ಭವಿಷ್ಯತಿ ಫಲೈಃ ಸರ್ವೈಸ್ತವ ದೃಷ್ಟೌ ಸ್ಥಿತೈರ್ಹಿ ಮೇ ॥

(ಶ್ಲೋಕ-68)

ಮೂಲಮ್

ತಥೇತ್ಯುಕ್ತಃ ಸಜಾನಕ್ಯಾ ಭಕ್ಷಯಿತ್ವಾ ಫಲಂ ಕಪಿಃ ।
ತತಃ ಪ್ರಸ್ಥಾಪಿತೋಽಗಚ್ಛಜ್ಜಾನಕೀಂ ಪ್ರಣಿಪತ್ಯ ಸಃ ।
ಕಿಂಚಿದ್ದೂರಮಥೋ ಗತ್ವಾ ಸ್ವಾತ್ಮನ್ಯೇವಾನ್ವಚಿಂತಯತ್ ॥

ಅನುವಾದ

ಹನುಮಂತನು- ‘‘ಅಮ್ಮಾ! ನಿನ್ನ ದರ್ಶನ ಪಡೆದುಕೊಂಡೆ. ನನಗೆ ಹಸಿವೆಯಾಗಿದೆ. ಈಗ ನಿನ್ನ ಮುಂದೆ ಬಿಟ್ಟಿರುವ ಈ ಹಣ್ಣುಗಳಿಂದ ನಾನು ಪಾರಣೆ ಮಾಡಿಕೊಳ್ಳಲೇ?’’ ಎಂದು ಕೇಳಿದಾಗ, ಸೀತೆಯು ಹಾಗೆಯೇ ಆಗಲಿ ಎಂದು ಹೇಳಿದಳು. ಹೀಗೆ ಜಾನಕಿಯಿಂದ ಅಪ್ಪಣೆ ಪಡೆದ ಕಪಿಪುಂಗವನು ಹಣ್ಣುಗಳನ್ನು ತಿಂದು, ಬಳಿಕ ಸೀತೆಗೆ ನಮಸ್ಕಾರ ಮಾಡಿ ಅವಳಿಂದ ಬೀಳ್ಕೊಂಡು ಹೊರಟನು. ಸ್ವಲ್ಪ ದೂರ ಹೋಗುತ್ತಲೇ ತನ್ನಲ್ಲೇ ಯೋಚಿಸತೊಡಗಿದನು. ॥67-68॥

(ಶ್ಲೋಕ-69)

ಮೂಲಮ್

ಕಾರ್ಯಾರ್ಥಮಾಗತೋ ದೂತಃ ಸ್ವಾಮಿಕಾರ್ಯಾವಿರೋಧತಃ ।
ಅನ್ಯತ್ಕಿಂಚಿದಸಂಪಾದ್ಯ ಗಚ್ಛತ್ಯಧಮ ಏವ ಸಃ ॥

(ಶ್ಲೋಕ-70)

ಮೂಲಮ್

ಅತೋಽಹಂ ಕಿಂಚಿದನ್ಯಚ್ಚ ಕೃತ್ವಾ ದೃಷ್ಟ್ವಾಥ ರಾವಣಮ್ ।
ಸಂಭಾಷ್ಯ ಚ ತತೋ ರಾಮದರ್ಶನಾರ್ಥಂ ವ್ರಜಾಮ್ಯಹಮ್ ॥

ಅನುವಾದ

ಕಾರ್ಯ ಸಾಧನೆಗಾಗಿ ಬಂದಿರುವ ಸೇವಕನು ಯಜಮಾನನ ಕಾರ್ಯದಲ್ಲಿ ಬೇರೆ ಯಾವುದೇ ವಿರೋಧವಿಲ್ಲದಂತಹ ಬೇರೆ ಏನನ್ನಾದರೂ ಸಾಧಿಸದೇ ಹಾಗೆಯೇ ಹೋದರೆ ಅವನು ಕೀಳಾದವನೇ ಸರಿ. ಆದ್ದರಿಂದ ನಾನು ಇನ್ನೇನಾದರೂ ಬೇರೆ ಕೆಲಸ ಮಾಡಿ ರಾವಣನನ್ನು ಕಂಡು ಮಾತನಾಡಿ ಅನಂತರ ಶ್ರೀರಾಮನ ದರ್ಶನಕ್ಕೆ ಹೊರಡುವೆನು.’’ ॥69-70॥

(ಶ್ಲೋಕ-71)

ಮೂಲಮ್

ಇತಿ ನಿಶ್ಚಿತ್ಯ ಮನಸಾ ವೃಕ್ಷಷಂಡಾನ್ಮಹಾಬಲಃ ।
ಉತ್ಪಾಟ್ಯಾಶೋಕವನಿಕಾಂ ನಿರ್ವೃಕ್ಷಾಮಕರೋತ್ ಕ್ಷಣಾತ್ ॥

(ಶ್ಲೋಕ-72)

ಮೂಲಮ್

ಸೀತಾಶ್ರಯನಗಂ ತ್ಯಕ್ತ್ವಾ ವನಂ ಶೂನ್ಯಂ ಚಕಾರ ಸಃ ।
ಉತ್ಪಾಟಯಂತಂ ವಿಪಿನಂ ದೃಷ್ಟ್ವಾ ರಾಕ್ಷಸಯೋಷಿತಃ ॥

(ಶ್ಲೋಕ-73)

ಮೂಲಮ್

ಅಪೃಚ್ಛಞ ಜಾನಕೀಂ ಕೋಽಸೌ ವಾನರಾಕೃತಿರುದ್ಭಟಃ ॥

ಅನುವಾದ

ಹೀಗೆಂದು ಮನಸ್ಸಿನಲ್ಲಿ ನಿಶ್ಚಯಿಸಿ ಮಹಾಬಲಶಾಲಿಯಾದ ಹನುಮಂತನು ಅಶೋಕವನದ ಮರಗಳನ್ನೆಲ್ಲ ಬುಡ ಸಹಿತ ಕಿತ್ತುಹಾಕಿ ಕ್ಷಣಮಾತ್ರದಲ್ಲಿ ಬೋಳಾಗಿಸಿದನು. ಆದರೆ ಸೀತೆಯು ಕುಳಿತಿದ್ದ ಶಿಂಶಪಾವೃಕ್ಷ ಒಂದನ್ನು ಉಳಿಸಿ ಉಳಿದುದನ್ನು ಒಂದೂ ಬಿಡದೆ ಬರಿದು ಮಾಡಿದನು. ಹೀಗೆ ಮರಗಳನ್ನು ಕಿತ್ತೆಸೆಯುತ್ತಿರುವ ಕಪಿಯನ್ನು ಕಂಡು ರಾಕ್ಷಸಿಯರು ಸೀತೆಯ ಬಳಿ ‘‘ಈ ವಾನರಾಕೃತಿಯ ಉದ್ಧಟ ವ್ಯಕ್ತಿ ಯಾರು?’’ ಎಂದು ಕೇಳಿದರು. ॥71-73॥

(ಶ್ಲೋಕ-74)

ಮೂಲಮ್ (ವಾಚನಮ್)

ಜಾನಕ್ಯುವಾಚ

ಮೂಲಮ್

ಭವತ್ಯ ಏವ ಜಾನಂತಿ ಮಾಯಾಂ ರಾಕ್ಷಸನಿರ್ಮಿತಾಮ್ ।
ನಾಹಮೇನಂ ವಿಜಾನಾಮಿ ದುಃಖಶೋಕಸಮಾಕುಲಾ ॥

ಅನುವಾದ

ಜಾನಕಿಯಿಂತೆಂದಳು — ‘‘ರಾಕ್ಷಸರು ಹರಡಿರುವ ಈ ಮಾಯೆಯನ್ನು ನೀವೇ ಬಲ್ಲಿರಿ. ದುಃಖದಿಂದಲೂ, ಶೋಕದಿಂದಲೂ ಬಳಲುತ್ತಿರುವ ನಾನು ಏನು ಬಲ್ಲೆನು?’’ ॥74॥

(ಶ್ಲೋಕ-75)

ಮೂಲಮ್

ಇತ್ಯುಕ್ತಾಸ್ತ್ವರಿತಂ ಗತ್ವಾ ರಾಕ್ಷಸ್ಯೋ ಭಯಪೀಡಿತಾಃ ।
ಹನೂಮತಾ ಕೃತಂ ಸರ್ವಂ ರಾವಣಾಯ ನ್ಯವೇದಯನ್ ॥

ಅನುವಾದ

ಸೀತೆಯು ಹೀಗೆನ್ನಲು ಭಯದಿಂದ ನಡುಗಿದ ರಾಕ್ಷಸ ಸ್ತ್ರೀಯರು ಲಗುಬಗೆಯಿಂದ ರಾವಣನ ಬಳಿಗೆ ಹೋಗಿ ಹನುಮಂತನು ಮಾಡಿದ ಎಲ್ಲ ಕೃತ್ಯಗಳನ್ನು ಹೇಳತೊಡಗಿದರು. ॥75॥

(ಶ್ಲೋಕ-76)

ಮೂಲಮ್

ದೇವ ಕಶ್ಚಿನ್ಮಹಾಸತ್ತ್ವೋ ವಾನರಾಕೃತಿದೇಹಭೃತ್ ।
ಸೀತಯಾ ಸಹ ಸಂಭಾಷ್ಯ ಹ್ಯಶೋಕವನಿಕಾಂ ಕ್ಷಣಾತ್ ।
ಉತ್ಪಾಟ್ಯ ಚೈತ್ಯಪ್ರಾಸಾದಂ ಬಭಂಜಾಮಿತವಿಕ್ರಮಃ ॥

(ಶ್ಲೋಕ-77)

ಮೂಲಮ್

ಪ್ರಾಸಾದರಕ್ಷಿಣಃ ಸರ್ವಾನ್ಹತ್ವಾ ತತ್ರೈವ ತಸ್ಥಿವಾನ್ ।
ತಚ್ಛ್ರುತ್ವಾ ತೂರ್ಣಮುತ್ಥಾಯ ವನಭಂಗಂ ಮಹಾಪ್ರಿಯಮ್ ॥

(ಶ್ಲೋಕ-78)

ಮೂಲಮ್

ಕಿಂಕರಾನ್ಪ್ರೇಷಯಾಮಾಸ ನಿಯುತಂ ರಾಕ್ಷಸಾಧಿಪಃ ।
ನಿಭಗ್ನಚೈತ್ಯಪ್ರಾಸಾದಪ್ರಥಮಾಂತರಸಂಸ್ಥಿತಃ ॥

(ಶ್ಲೋಕ-79)

ಮೂಲಮ್

ಹನುಮಾನ್ಪರ್ವತಾಕಾರೋ ಲೋಹಸ್ತಂಭಕೃತಾಯುಧಃ ।
ಕಿಂಚಿಲ್ಲಾಂಗೂಲಚಲನೋ ರಕ್ತಾಸ್ಯೋ ಭೀಷಣಾಕೃತಿಃ ॥

ಅನುವಾದ

‘‘ಒಡೆಯಾ! ಕಪಿಯ ಆಕಾರವನ್ನು ಧರಿಸಿದ ಭಾರೀ ದೊಡ್ಡ ಶರೀರವುಳ್ಳ ಒಂದು ಪ್ರಾಣಿಯು ಸೀತೆಯೊಡನೆ ಮಾತನಾಡಿ, ಕ್ಷಣಮಾತ್ರದಲ್ಲಿ ಅಶೋಕವನವನ್ನು ಕಿತ್ತೆಸೆಯಿತು. ಆ ಮಹಾ ಪರಾಕ್ರಮಿಯು ಮಂದಿರವನ್ನು ಮುರಿದು ಹಾಕಿ ಅಲ್ಲಿ ರಕ್ಷಕರಾಗಿದ್ದ ಎಲ್ಲ ರಾಕ್ಷಸರನ್ನು ಕೊಂದು ಇನ್ನೂ ಅಲ್ಲಿಯೇ ಕುಳಿತಿರುವನು. ರಾಕ್ಷಸಾಧಿಪನಾದ ರಾವಣನು ತನಗೆ ಬಹಳ ಅಪ್ರಿಯವಾದ ವನಭಂಗದ ಸುದ್ದಿಯನ್ನು ಕೇಳಿ ದಿಗ್ಗನೇ ಎದ್ದು ಹತ್ತು ಲಕ್ಷ ಕಿಂಕರರೆಂಬ ರಾಕ್ಷಸರನ್ನು ಕಳಿಸಿದನು. ಇತ್ತ ಹನುಮಂತನು ಮುರಿದ ಮಂದಿರದ ಲೋಹಸ್ತಂಭವನ್ನೇ ಆಯುಧವನ್ನಾಗಿ ಧರಿಸಿಕೊಂಡು, ಭಗ್ನಗೊಂಡ ಮಂದಿರದ ಮುಂಭಾಗದಲ್ಲಿ ಕುಳಿತು, ಬಾಲವನ್ನು ಆಡಿಸುತ್ತಾ, ಕೆಂಪಾದ ಮುಖದಿಂದ ಭಯಂಕರವಾದ ರೂಪವನ್ನು ಧರಿಸಿಕೊಂಡಿದ್ದನು. ॥76-79॥

(ಶ್ಲೋಕ-80)

ಮೂಲಮ್

ಆಪತಂತಂ ಮಹಾಸಂಘಂ ರಾಕ್ಷಸಾನಾಂ ದದರ್ಶ ಸಃ ।
ಚಕಾರ ಸಿಂಹನಾದಂ ಚ ಶ್ರುತ್ವಾ ತೇ ಮುಮುಹುರ್ಭೃಶಮ್ ॥

ಅನುವಾದ

ತನ್ನೆಡೆಗೆ ಬರುತ್ತಿರುವ ರಾಕ್ಷಸ ಸಮೂಹವನ್ನು ಕಂಡು ಹನುಮಂತನು ಘೋರವಾದ ಸಿಂಹನಾದವನ್ನು ಮಾಡಿದನು. ಇದನ್ನು ಕೇಳಿದ ಅವರೆಲ್ಲರೂ ಸ್ತಬ್ಧರಾದರು. ॥80॥

(ಶ್ಲೋಕ-81)

ಮೂಲಮ್

ಹನೂಮಂತಮಥೋ ದೃಷ್ಟ್ವಾ ರಾಕ್ಷಸಾ ಭೀಷಣಾಕೃತಿಮ್ ।
ನಿರ್ಜಘ್ನುರ್ವಿವಿಧಾಸೌಘೈಃ ಸರ್ವರಾಕ್ಷಸಘಾತಿನಮ್ ॥

ಅನುವಾದ

ಅನಂತರ ಎಲ್ಲ ರಾಕ್ಷಸರನ್ನು ಕೊಲ್ಲುವಂತಹ ಭಯಂಕರಾಕೃತಿಯ ಹನುಮಂತನನ್ನು ಕಂಡು ರಾಕ್ಷಸರು ನಾನಾವಿಧವಾದ ಅಸ್ತ್ರಗಳ ಸಮೂಹದಿಂದ ಅವನನ್ನು ಹೊಡೆಯ ತೊಡಗಿದರು. ॥81॥

(ಶ್ಲೋಕ-82)

ಮೂಲಮ್

ತತ ಉತ್ಥಾಯ ಹನುಮಾನ್ಮುದ್ಗರೇಣ ಸಮಂತತಃ ।
ನಿಷ್ಪಿಪೇಷ ಕ್ಷಣಾದೇವ ಮಶಕಾನಿವ ಯೂಥಪಃ ॥

ಅನುವಾದ

ಅನಂತರ ಆನೆಯು ಸೊಳ್ಳೆಗಳನ್ನು ಮಸೆದು ಹಾಕುವಂತೆ ಹನುಮಂತನು ಮೇಲಕ್ಕೆದ್ದು ಮುದ್ಗರದಿಂದ ಕ್ಷಣಮಾತ್ರದಲ್ಲಿ ಸುತ್ತಲೂ ಇದ್ದ ರಾಕ್ಷಸರನ್ನು ಬಡಿದು ಕೊಂದು ಹಾಕಿದನು. ॥82॥

(ಶ್ಲೋಕ-83)

ಮೂಲಮ್

ನಿಹತಾಂಕಿಂಕರಾನ್ ಶ್ರುತ್ವಾ ರಾವಣಃ ಕ್ರೊಧಮೂರ್ಚ್ಛಿತಃ ।
ಪಂಚ ಸೇನಾಪತೀಂಸ್ತತ್ರ ಪ್ರೇಷಯಾಮಾಸ ದುರ್ಮದಾನ್ ॥

ಅನುವಾದ

ತಮ್ಮ ಸೈನ್ಯವು ಸತ್ತುಹೋದ ವಾರ್ತೆಯನ್ನು ಕೇಳಿ ರಾವಣನು ಸಿಟ್ಟಿನಿಂದ ಹುಚ್ಚನಂತಾಗಿ ಮದಗರ್ವಿತರಾದ ಐದು ಜನ ಸೇನಾಪತಿಗಳನ್ನು ಸೈನ್ಯದೊಂದಿಗೆ ಕಳಿಸಿದನು. ॥83॥

(ಶ್ಲೋಕ-84)

ಮೂಲಮ್

ಹನೂಮಾನಪಿ ತಾನ್ಸರ್ವಾಂಲ್ಲೋಹಸ್ತಂಭೇನ ಚಾಹನತ್ ।
ತತಃ ಕ್ರುದ್ಧೋ ಮಂತ್ರಿಸುತಾನ್ಪ್ರೇಷಯಾಮಾಸ ಸಪ್ತ ಸಃ ॥

ಅನುವಾದ

ಹನುಮಂತನು ಅವರೆಲ್ಲರನ್ನು ಲೋಹಸ್ತಂಭದಿಂದ ಹೊಡೆದುಕೊಂದನು. ಅನಂತರ ಕುಪಿತನಾದ ರಾವಣನು ಏಳು ಜನ ಮಂತ್ರಿ ಪುತ್ರರನ್ನು ಯುದ್ಧಕ್ಕೆ ಕಳಿಸಿದನು. ॥84॥

(ಶ್ಲೋಕ-85)

ಮೂಲಮ್

ಆಗತಾನಪಿ ತಾನ್ಸರ್ವಾನ್ಪೂರ್ವವದ್ವಾನರೇಶ್ವರಃ ।
ಕ್ಷಣಾನ್ನಿಃಶೇಷತೋ ಹತ್ವಾ ಲೋಹಸ್ತಂಭೇನ ಮಾರುತಿಃ ॥

ಅನುವಾದ

ವಾನರಾಧೀಶ ಪವನನಂದನನು ಹಿಂದಿನವರಂತೆ ಎಲ್ಲರನ್ನು ಲೋಹಸ್ತಂಭದಿಂದ ಕ್ಷಣಮಾತ್ರದಲ್ಲಿ ಒಬ್ಬರನ್ನೂ ಉಳಿಸದೆ ಕೊಂದುಹಾಕಿದನು. ॥85॥

(ಶ್ಲೋಕ-86)

ಮೂಲಮ್

ಪೂರ್ವಸ್ಥಾನಮುಪಾಶ್ರಿತ್ಯ ಪ್ರತೀಕ್ಷನ್ ರಾಕ್ಷಸಾನ್ ಸ್ಥಿತಃ ।
ತತೋ ಜಗಾಮ ಬಲವಾನ್ಕೂಮಾರೋಕ್ಷಃ ಪ್ರತಾಪವಾನ್ ॥

ಅನುವಾದ

ಮತ್ತೆ ತನ್ನ ಹಿಂದಿನ ಜಾಗಕ್ಕೆ ಬಂದು ಕುಳಿತು ರಾಕ್ಷಸರ ಬರವನ್ನು ಕಾಯುತ್ತಿದ್ದನು. ಆಗ ಪ್ರತಾಪಶಾಲಿಯೂ, ಬಲಿಷ್ಠನೂ ಆದ ರಾವಣನ ಮಗ ಅಕ್ಷಕುಮಾರನು ಬಂದನು. ॥86॥

(ಶ್ಲೋಕ-87)

ಮೂಲಮ್

ತಮುತ್ಪಪಾತ ಹನುಮಾನ್ ದೃಷ್ಟ್ವಾಕಾಶೇ ಸಮುದ್ಗರಃ ।
ಗಗನಾತ್ತ್ವರಿತೋ ಮೂರ್ಧ್ನಿ ಮುದ್ಗರೇಣ ವ್ಯತಾಡಯತ್ ॥

(ಶ್ಲೋಕ-88)

ಮೂಲಮ್

ಹತ್ವಾ ತಮಕ್ಷಂ ನಿಃಶೇಷಂ ಬಲಂ ಸರ್ವಂ ಚಕಾರ ಸಃ ॥

ಅನುವಾದ

ಅವನನ್ನು ಕಂಡು ಹನುಮಂತನು ಮುದ್ಗರವೆಂಬ ಆಯುಧಸಹಿತನಾಗಿ ಆಕಾಶಕ್ಕೆ ನೆಗೆದನು. ವೇಗವಾಗಿ ಆಕಾಶದಿಂದಲೇ ಕೆಳಕ್ಕೆ ಮುದ್ಗ ರಾಯುಧದಿಂದ ರಾಕ್ಷಸನ ತಲೆಯ ಮೇಲೆ ಹೊಡೆದನು. ಹೀಗೆ ಅಕ್ಷಕುಮಾರನನ್ನು ಕೊಂದು ರಾಕ್ಷಸಸೈನ್ಯವನ್ನೆಲ್ಲವನ್ನು ಸ್ವಲ್ಪವೂ ಉಳಿಯದಂತೆ ನಾಶಮಾಡಿದನು. ॥87-88॥

(ಶ್ಲೋಕ-89)

ಮೂಲಮ್

ತತಃ ಶ್ರುತ್ವಾ ಕುಮಾರಸ್ಯ ವಧಂ ರಾಕ್ಷಸಪುಂಗವಃ ।
ಕ್ರೋಧೇನ ಮಹತಾವಿಷ್ಟ ಇಂದ್ರಜೇತಾರಮಬ್ರವೀತ್ ॥

(ಶ್ಲೋಕ-90)

ಮೂಲಮ್

ಪುತ್ರ ಗಚ್ಛಾಮ್ಯಹಂ ತತ್ರ ಯತ್ರಾಸ್ತೇ ಪುತ್ರಹಾ ರಿಪುಃ ।
ಹತ್ವಾ ತಮಥವಾ ಬದ್ಧ್ವಾ ಆನಯಿಷ್ಯಾಮಿ ತೇಂತಕಮ್ ॥

ಅನುವಾದ

ರಾಜಕುಮಾರ ಅಕ್ಷನ ವಧೆಯ ವೃತ್ತಾಂತವನ್ನು ಕೇಳಿ ರಾಕ್ಷಸ ಶ್ರೇಷ್ಠನಾದ ರಾವಣನು ಬಹಳ ಕೋಪಾವಿಷ್ಟನಾಗಿ ಇಂದ್ರಜಿತು ವನ್ನು ಕುರಿತು - ‘‘ಮಗನೆ! ನನ್ನ ಮಗನನ್ನು ಕೊಂದ ಆ ಶತ್ರುವು ಇರುವಲ್ಲಿಗೆ ನಾನೇ ಹೋಗಿ ಅವನನ್ನು ಕೊಂದು ಅಥವಾ ಕಟ್ಟಿಕೊಂಡು ನಿನ್ನ ಬಳಿಗೆ ತರುವೆನು’’ ಎಂದನು. ॥89-90॥

(ಶ್ಲೋಕ-91)

ಮೂಲಮ್

ಇಂದ್ರಜಿತ್ಪಿತರಂ ಪ್ರಾಹ ತ್ಯಜ ಶೋಕಂ ಮಹಾಮತೇ ।
ಮಯಿ ಸ್ಥಿತೇ ಕಿಮರ್ಥಂ ತ್ವಂ ಭಾಷಸೇ ದುಃಖಿತಂ ವಚಃ ॥

ಅನುವಾದ

ಆಗ ಇಂದ್ರಜಿತ್ತು ತಂದೆಯ ಬಳಿ ಹೇಳುತ್ತಾನೆ - ‘‘ಎಲೈ ಬುದ್ಧಿಶಾಲಿಯೆ! ಶೋಕವನ್ನು ಬಿಡು. ನಾನು ಇರುವಾಗಲೇ ನೀನು ದುಃಖದಿಂದ ಕೂಡಿದ ಮಾತನ್ನು ಏಕೆ ಆಡುವೆ? ॥91॥

(ಶ್ಲೋಕ-92)

ಮೂಲಮ್

ಬದ್ ಧ್ವಾನೇಷ್ಯೇ ದ್ರುತಂ ತಾತ ವಾನರಂ ಬ್ರಹ್ಮಪಾಶತಃ ।
ಇತ್ಯುಕ್ತ್ವಾ ರಥಮಾರುಹ್ಯ ರಾಕ್ಷಸೈರ್ಬಹುಭಿರ್ವೃತಃ ॥

(ಶ್ಲೋಕ-93)

ಮೂಲಮ್

ಜಗಾಮ ವಾಯುಪುತ್ರಸ್ಯ ಸಮೀಪಂ ವೀರವಿಕ್ರಮಃ ।
ತತೋಽತಿಗರ್ಜಿತಂ ಶ್ರುತ್ವಾ ಸ್ತಂಭಮುದ್ಯಮ್ಯ ವೀರ್ಯವಾನ್ ॥

(ಶ್ಲೋಕ-94)

ಮೂಲಮ್

ಉತ್ಪಪಾತ ನಭೋದೇಶಂ ಗರುತ್ಮಾನಿವ ಮಾರುತಿಃ ।
ತತೋ ಭ್ರಮಂತಂ ನಭಸಿ ಹನೂಮಂತಂ ಶಿಲೀಮುಖೈಃ ॥

(ಶ್ಲೋಕ-95)

ಮೂಲಮ್

ವಿದ್ ಧ್ವಾ ತಸ್ಯ ಶಿರೋಭಾಗಮಿಷುಭಿಶ್ಚಾಷ್ಟಭಿಃ ಪುನಃ ।
ಹೃದಯಂ ಪಾದಯುಗಲಂ ಷಡ್ ಭಿರೇಕೇನ ವಾಲಧಿಮ್ ॥

(ಶ್ಲೋಕ-96)

ಮೂಲಮ್

ಭೇದಯಿತ್ವಾ ತತೋ ಘೋರಂ ಸಿಂಹನಾದಮಥಾಕರೋತ್ ।
ತತೋಽತಿಹರ್ಷಾದ್ಧನುಮಾನ್ ಸ್ತಂಭಮುದ್ಯಮ್ಯ ವೀರ್ಯವಾನ್ ॥

(ಶ್ಲೋಕ-97)

ಮೂಲಮ್

ಜಘಾನ ಸಾರಥಿಂ ಸಾಶ್ವಂ ರಥಂ ಚಾಚೂರ್ಣಯತ್ ಕ್ಷಣಾತ್ ।
ತತೋಽನ್ಯಂ ರಥಮಾದಾಯ ಮೇಘನಾದೋ ಮಹಾಬಲಃ ॥

(ಶ್ಲೋಕ-98)

ಮೂಲಮ್

ಶೀಘ್ರಂ ಬ್ರಹ್ಮಾಸಮಾದಾಯ ಬದ್ ಧ್ವಾ ವಾನರಪುಂಗವಮ್ ।
ನಿನಾಯ ನಿಕಟಂ ರಾಜ್ಞೋ ರಾವಣಸ್ಯ ಮಹಾಬಲಃ ॥

ಅನುವಾದ

‘‘ಅಪ್ಪಾ! ನಾನು ಆ ಕಪಿಯನ್ನು ಬ್ರಹ್ಮಾಸ್ತ್ರದಿಂದ ಕಟ್ಟಿ ತರುತ್ತೇನೆ’’ ಹೀಗೆಂದು ಹೇಳಿ ಮಹಾಪರಾಕ್ರಮಿ, ವೀರನಾದ ಅವನು ರಥವನ್ನೇರಿ ಅನೇಕ ರಾಕ್ಷಸರೊಡನೆ ಪವನ ಪುತ್ರ ಹನುಮಂತನ ಬಳಿಗೆ ಬಂದನು. ಆಗ ಹೆಚ್ಚಿನ ಗರ್ಜನೆಯನ್ನು ಕೇಳಿದ ವೀರನಾದ ಹನುಮಂತನು ಲೋಹಸ್ತಂಭವನ್ನು ಕೈಗೆತ್ತಿಕೊಂಡು ಗರುಡನಂತೆ ಆಕಾಶಕ್ಕೆ ನೆಗೆದನು. ಹಾಗೆ ಆಕಾಶದಲ್ಲಿ ಹಾರಾಡುತ್ತಿದ್ದ ಹನುಮಂತನ ತಲೆಯ ಭಾಗಕ್ಕೆ ಎಂಟು ಬಾಣಗಳನ್ನು ಹೊಡೆದು ಆರು ಬಾಣಗಳನ್ನು ಎದೆಗೆ ಮತ್ತು ಎರಡು ಕಾಲುಗಳಿಗೆ ಹೊಡೆದು, ಒಂದು ಬಾಣವನ್ನು ಬಾಲಕ್ಕೆ ಹೊಡೆದು ಇಂದ್ರಜಿತುವು ಘಟ್ಟಿಯಾಗಿ ಸಿಂಹನಾದ ಮಾಡಿದನು. ಆಗ ಹೆಚ್ಚಿನ ಸಂತೋಷದಿಂದ ವೀರ್ಯಶಾಲಿಯಾದ ಹನುಮಂತನು ಲೋಹಸ್ತಂಭವನ್ನೆತ್ತಿಕೊಂಡು ಒಂದೇ ಕ್ಷಣದಲ್ಲಿ ಇಂದ್ರಜಿತುವಿನ ಸಾರಥಿಯನ್ನು ಕುದುರೆಗಳನ್ನು ಕೊಂದು, ರಥವನ್ನು ಪುಡಿಮಾಡಿದನು. ಆಗ ಮೇಘನಾದನು ಬೇರೊಂದು ರಥವನ್ನೇರಿ ಕೂಡಲೇ ಬ್ರಹ್ಮಾಸ್ತ್ರದಿಂದ ವಾನರಶ್ರೇಷ್ಠ ಹನುಮಂತನನ್ನು ಬಂಧಿಸಿ ರಾಜನಾದ ರಾವಣನ ಬಳಿಗೆ ಕರೆದೊಯ್ದನು. ॥92-98॥

(ಶ್ಲೋಕ-99)

ಮೂಲಮ್

ಯಸ್ಯ ನಾಮ ಸತತಂ ಜಪಂತಿ
ಯೇಽಜ್ಞಾನ ಕರ್ಮಕೃತಬಂಧನಂ ಕ್ಷಣಾತ್ ।
ಸದ್ಯ ಏವ ಪರಿಮುಚ್ಯ ತತ್ಪದಂ
ಯಾಂತಿ ಕೋಟಿರವಿಭಾಸುರಂ ಶಿವಮ್ ॥

(ಶ್ಲೋಕ-100)

ಮೂಲಮ್

ತಸ್ಯೈವ ರಾಮಸ್ಯ ಪದಾಂಬುಜಂ ಸದಾ
ಹೃತ್ಪದ್ಮಮಧ್ಯೇ ಸುನಿಧಾಯ ಮಾರುತಿಃ ।
ಸದೈವ ನಿರ್ಮುಕ್ತಸಮಸ್ತಬಂಧನಃ
ಕಿಂ ತಸ್ಯ ಪಾಶೈರಿತರೈಶ್ಚ ಬಂಧನೈಃ ॥

ಅನುವಾದ

ಶ್ರೀರಾಮನ ನಾಮವನ್ನು ಸದಾಕಾಲವೂ ಜಪಿಸುತ್ತಿರುವಂಥವರು ಕ್ಷಣಮಾತ್ರದಲ್ಲಿ ಅಜ್ಞಾನದಿಂದ ಉಂಟಾದ ಬಂಧನವನ್ನು ಬಿಡಿಸಿಕೊಂಡು ಕೋಟಿಸೂರ್ಯ ಪ್ರಕಾಶಮಾನವಾದ ಮಂಗಳಕರವಾದ ಅವನ ಪದವಿಯನ್ನು ಸೇರುವರು. ಅಂತಹ ಶ್ರೀರಾಮನ ಪಾದಾರವಿಂದಗಳನ್ನು ಸದಾಕಾಲ ಹೃದಯ ಕಮಲದಲ್ಲಿ ದೃಢವಾಗಿರಿಸಿಕೊಂಡ ಮಾರುತಿಯು ಎಲ್ಲ ಬಂಧನಗಳಿಂದ ಬಿಡುಗಡೆ ಹೊಂದಿದನು. ಅಂಥವನಿಗೆ ಪಾಶಗಳಿಂದಾಗಲಿ, ಇತರ ಬಂಧನಗಳಿಂದಾಗಲಿ ಏನಾದೀತು? ॥99-100॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಸುಂದರಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಸುಂದರಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.