[ಎರಡನೆಯ ಸರ್ಗ]
ಭಾಗಸೂಚನಾ
ಹನುಮಂತನ ಅಶೋಕವನ ಪ್ರವೇಶ ಹಾಗೂ ರಾವಣನು ಸೀತೆಗೆ ಭಯವನ್ನುಂಟು ಮಾಡುವುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀ ಮಹಾದೇವ ಉವಾಚ
ಮೂಲಮ್
ತತೋ ಜಗಾಮ ಹನುಮಾನ್ ಲಂಕಾಂ ಪರಮಶೋಭನಾಮ್ ।
ರಾತ್ರೌ ಸೂಕ್ಷ್ಮತನುರ್ಭೂತ್ವಾ ಬಭ್ರಾಮ ಪರಿತಃ ಪುರೀಮ್ ॥
ಅನುವಾದ
ಶ್ರೀಮಹಾದೇನಿಂತೆಂದನು — ಎಲೈ ಪಾರ್ವತಿ! ಅನಂತರ ಹನುಮಂತನು ಪರಮ ಸುಂದರವಾದ ಲಂಕಾಪುರವನ್ನು ಪ್ರವೇಶಿಸಿದನು. ರಾತ್ರೆಯಲ್ಲಿ ಸೂಕ್ಷ್ಮವಾದ ಶರೀರವನ್ನು ಧರಿಸಿ ನಗರದ ಎಲ್ಲೆಡೆ ಸಂಚರಿಸಿದನು. ॥1॥
(ಶ್ಲೋಕ-2)
ಮೂಲಮ್
ಸೀತಾನ್ವೇಷಣ ಕಾರ್ಯಾರ್ಥೀ ಪ್ರವಿವೇಶ ನೃಪಾಲಯಮ್ ।
ತತ್ರ ಸರ್ವಪ್ರದೇಶೇಷು ವಿವಿಚ್ಯ ಹನುಮಾನ್ಕಪಿಃ ॥
(ಶ್ಲೋಕ-3)
ಮೂಲಮ್
ನಾಪಶ್ಯತ್ ಜಾನಕೀಂ ಸ್ಮೃತ್ವಾ ತತೋ ಲಂಕಾಭಿಭಾಷಿತಮ್ ।
ಜಗಾಮ ಹನುಮಾನ್ ಶೀಘ್ರಮಶೋಕವನಿಕಾಂ ಶುಭಾಮ್ ॥
ಅನುವಾದ
ಸೀತಾದೇವಿಯನ್ನು ಹುಡುಕುವುದಕ್ಕಾಗಿ ಅವನು ರಾಜಮಂದಿರವನ್ನು ಹೊಕ್ಕನು. ಅಲ್ಲಿ ಎಲ್ಲ ಕಡೆ ಹುಡುಕಿದರೂ ಹನುಮಂತನಿಗೆ ಸೀತೆಯು ಕಾಣಸಿಗದಾಗ, ಲಂಕಿಣಿಯು ಹೇಳಿದ್ದ ಮಾತನ್ನು ನೆನೆದುಕೊಂಡು ಬೇಗನೇ ಶುಭವಾದ ಅಶೋಕವನಕ್ಕೆ ಹೋದನು. ॥2-3॥
(ಶ್ಲೋಕ-4)
ಮೂಲಮ್
ಸುರಪಾದಪಸಂಬಾಧಾಂ ರತ್ನಸೋಪಾನವಾಪಿಕಾಮ್ ।
ನಾನಾಪಕ್ಷಿಮೃಗಾಕೀರ್ಣಾಂ ಸ್ವರ್ಣಪ್ರಾಸಾದಶೋಭಿತಾಮ್ ॥
(ಶ್ಲೋಕ-5)
ಮೂಲಮ್
ಫಲೈರಾನಮ್ರಶಾಖಾಗ್ರಪಾದಪೈಃ ಪರಿವಾರಿತಾಮ್ ।
ವಿಚಿನ್ವನ್ ಜಾನಕೀಂ ತತ್ರ ಪ್ರತಿವೃಕ್ಷಂ ಮರುತ್ಸುತಃ ॥
(ಶ್ಲೋಕ-6)
ಮೂಲಮ್
ದದರ್ಶಾಭ್ರಂಲಿಹಂ ತತ್ರ ಚೈತ್ಯಪ್ರಾಸಾದಮುತ್ತಮಮ್ ।
ದೃಷ್ಟ್ವಾ ವಿಸ್ಮಯಮಾಪನ್ನೋ ಮಣಿಸ್ತಂಭಶತಾನ್ವಿತಮ್ ॥
ಅನುವಾದ
ದೇವಲೋಕದ ವೃಕ್ಷಗಳ ಸಮೂಹಗಳಿಂದಲೂ, ರತ್ನಮಯವಾದ ಮೆಟ್ಟಿಲುಗಳುಳ್ಳ ಸುಂದರ ಸರೋವರಗಳಿಂದಲೂ, ಇರುವ ಅನೇಕ ಮೃಗಪಕ್ಷಿಗಳಿಂದ ತುಂಬಿದ, ಅಲ್ಲಲ್ಲಿ ಚಿನ್ನದ ಉಪ್ಪರಿಗೆಗಳಿಂದ ರಮಣೀಯವಾಗಿರುವ, ರಸಭರಿತ ಹಣ್ಣುಗಳ ಭಾರದಿಂದ ಭೂಸ್ಪರ್ಶ ಮಾಡಿರುವ ಕೊಂಬೆಗಳುಳ್ಳ ಮರಗಳಿಂದ ತುಂಬಿರುವ ಆ ವನದಲ್ಲಿ ಒಂದೊಂದು ಮರವನ್ನೂ ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತಾ, ಸೀತೆಯನ್ನು ಅನ್ವೇಷಣೆ ಮಾಡುತ್ತಿರುವ ವಾಯುಪುತ್ರನು ಅತಿ ಎತ್ತರವಾದ ಆಕಾಶವನ್ನೇ ಮುಟ್ಟುವಂತಿರುವ ಅತಿ ಸುಂದರವಾದ ದೇವಾಲಯವನ್ನು ಕಂಡನು. ನೂರಾರು ರತ್ನಮಯ ಕಂಬಗಳಿಂದ ಕೂಡಿದ ಆ ದೇವಾಲಯವನ್ನು ನೋಡಿ ಆಶ್ಚರ್ಯಗೊಂಡನು. ॥4-6॥
(ಶ್ಲೋಕ-7)
ಮೂಲಮ್
ಸಮತೀತ್ಯ ಪುನರ್ಗತ್ವಾ ಕಿಂಚಿದ್ದೂರಂ ಸ ಮಾರುತಿಃ ।
ದದರ್ಶ ಶಿಂಶಪಾವೃಕ್ಷಮತ್ಯಂತನಿವಿಡಚ್ಛದಮ್ ॥
(ಶ್ಲೋಕ-8)
ಮೂಲಮ್
ಅದೃಷ್ಟಾತಪಮಾಕೀರ್ಣಂ ಸ್ವರ್ಣವರ್ಣವಿಹಂಗಮಮ್ ।
ತನ್ಮೂಲೇ ರಾಕ್ಷಸೀಮಧ್ಯೇ ಸ್ಥಿತಾಂ ಜನಕನಂದಿನೀಮ್ ॥
(ಶ್ಲೋಕ-9)
ಮೂಲಮ್
ದದರ್ಶ ಹನುಮಾನ್ ವೀರೋ ದೇವತಾಮಿವ ಭೂತಲೇ ।
ಏಕವೇಣೀಂ ಕೃಶಾಂ ದೀನಾಂ ಮಲಿನಾಂಬರಧಾರಿಣೀಮ್ ॥
ಅನುವಾದ
ಅದನ್ನು ದಾಟಿ ಸ್ವಲ್ಪದೂರ ಮುಂದೆ ಹೋಗುತ್ತಿರುವಂತೆ ದಟ್ಟವಾಗಿ ಎಲೆಗಳಿಂದ ಹರಡಿಕೊಂಡಿದ್ದ, ಬುಡದಲ್ಲಿ ಎಂದೂ ಬಿಸಿಲನ್ನೇ ಕಾಣದಿರುವ, ಬಂಗಾರದ ಬಣ್ಣದ ಹಕ್ಕಿಗಳಿಂದ ತುಂಬಿದ ಶಿಂಶಪಾ ವೃಕ್ಷವನ್ನು ಕಂಡನು. ಅದರ ಬುಡದಲ್ಲಿ ಭೂಲೋಕದ ದೇವತೆಯೋ ಎಂಬಂತಿರುವ ರಾಕ್ಷಸಿಯರ ಮಧ್ಯದಲ್ಲಿ ಕುಳಿತ್ತಿದ್ದ ಸೀತೆಯನ್ನು ವೀರನಾದ ಹನುಮಂತನು ನೋಡಿದನು. ಆಕೆಯ ಕೂದಲು ಜಟೆಗಟ್ಟಿ ಒಂದೇ ಜಡೆಯಾಗಿತ್ತು, ಅತ್ಯಂತ ದುರ್ಬಲಳಾದ ದೈನ್ಯದಿಂದ ಕೂಡಿದವಳಾಗಿ, ಮಾಸಿದ ಬಟ್ಟೆಯನ್ನು ಧರಿಸಿದ್ದಳು. ॥7-9॥
(ಶ್ಲೋಕ-10)
ಮೂಲಮ್
ಭೂಮೌ ಶಯಾನಾಂ ಶೋಚಂತೀಂ ರಾಮರಾಮೇತಿ ಭಾಷಿಣೀಮ್ ।
ತ್ರಾತಾರಂ ನಾಧಿಗಚ್ಛಂತೀಮುಪವಾಸ ಕೃಶಾಂ ಶುಭಾಮ್ ॥
ಅನುವಾದ
ಇಂತಹ ಸ್ಥಿತಿಯಲ್ಲಿ ನೆಲದ ಮೇಲೆ ಕುಳಿತಿದ್ದು ದುಃಖಿಸುತ್ತಾ ರಾಮಾ! ರಾಮಾ! ಎಂದು ಉಚ್ಚರಿಸುತ್ತಿದ್ದಳು. ತನ್ನನ್ನು ಕಾಪಾಡುವವರು ಯಾರೂ ಇಲ್ಲದೆ ಉಪವಾಸದಿಂದ ಬಳಲಿದವಳಾಗಿದ್ದಳು. ॥10॥
(ಶ್ಲೋಕ-11)
ಮೂಲಮ್
ಶಾಖಾಂತಚ್ಛದಮಧ್ಯಸ್ಥೋ ದದರ್ಶ ಕಪಿಕುಂಜರಃ ।
ಕೃತಾರ್ಥೋಽಹಂ ಕೃತಾರ್ಥೋಽಹಂ ದೃಷ್ಟ್ವಾ ಜನಕನಂದಿನೀಮ್ ॥
(ಶ್ಲೋಕ-12)
ಮೂಲಮ್
ಮಯೈವ ಸಾಧಿತಂ ಕಾರ್ಯಂ ರಾಮಸ್ಯ ಪರಮಾತ್ಮನಃ ।
ತತಃ ಕಿಲಕಿಲಾಶಬ್ದೋ ಬಭೂವಾಂತಃಪುರಾದ್ಬಹಿಃ ॥
ಅನುವಾದ
ಕಪಿಶ್ರೇಷ್ಠ ಹನುಮಂತನು ಮರದ ಎಲೆಗಳ ನಡುವೆ ಕುಳಿತುಕೊಂಡು ಜಾನಕಿಯನ್ನು ದರ್ಶಿಸಿ, ಆಹಾ! ಸೀತಾಮಾತೆಯನ್ನು ಇಂದು ಕಂಡು ನಾನು ಕೃತಾರ್ಥನಾದೆ, ಕೃತಕೃತ್ಯನಾದೆ. ಪರಮಾತ್ಮನಾದ ಶ್ರೀರಾಮನ ಕಾರ್ಯವು ನನ್ನಿಂದಲೇ ನೆರವೇರಿದಂತಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡನು. ಆಗಲೇ ಅಂತಃಪುರದ ಹೊರಭಾಗದಲ್ಲಿ ಕಿಲ-ಕಿಲ ಎಂಬ ಗಲಾಟೆ ಕೇಳಿಬಂತು. ॥11-12॥
(ಶ್ಲೋಕ-13)
ಮೂಲಮ್
ಕಿಮೇತದಿತಿ ಸಂಲ್ಲೀನೋ ವೃಕ್ಷಪತ್ರೇಷು ಮಾರುತಿಃ ।
ಆಯಾಂತಂ ರಾವಣಂ ತತ್ರ ಸ್ತ್ರೀಜನೈಃ ಪರಿವಾರಿತಮ್ ॥
(ಶ್ಲೋಕ-14)
ಮೂಲಮ್
ದಶಾಸ್ಯಂ ವಿಂಶತಿಭುಜಂ ನೀಲಾಂಜನಚಯೋಪಮಮ್ ।
ದೃಷ್ಟ್ವಾ ವಿಸ್ಮಯಮಾಪನ್ನಃ ಪತ್ರಷಂಡೇಷ್ವಲೀಯತ ॥
ಅನುವಾದ
ಇದೇನಿರಬಹುದು? ಎಂದು ಮಾರುತಿಯು ಯೋಚಿಸುತ್ತಾ, ಎಲೆಗಳ ಮರೆಯಲ್ಲಿ ಅಡಗಿಕೊಂಡನು. ಸ್ತ್ರೀಯರಿಂದ ಸುತ್ತುವರಿದು, ಹತ್ತು ತಲೆಗಳಿದ್ದು, ಇಪ್ಪತ್ತು ತೋಳುಗಳುಳ್ಳ, ಕಾಡಿಗೆಯ ಬೆಟ್ಟದಂತೆ ಕಾಂತಿಯ ಶರೀರವುಳ್ಳ ರಾವಣನು ಬರುತ್ತಿರುವುದನ್ನು ಕಂಡು ಹನುಮಂತನು ಆಶ್ಚರ್ಯಗೊಂಡವನಾಗಿ ಎಲೆಗಳ ಮರೆಯಲ್ಲಿ ಸೇರಿಕೊಂಡನು. ॥13-14॥
(ಶ್ಲೋಕ-15)
ಮೂಲಮ್
ರಾವಣೋ ರಾಘವೇಣಾಶು ಮರಣಂ ಮೇ ಕಥಂ ಭವೇತ್ ।
ಸೀತಾರ್ಥಮಪಿ ನಾಯಾತಿ ರಾಮಃ ಕಿಂ ಕಾರಣಂ ಭವೇತ್ ॥
(ಶ್ಲೋಕ-16)
ಮೂಲಮ್
ಇತ್ಯೇವಂ ಚಿಂತಯನ್ನಿತ್ಯಂ ರಾಮಮೇವ ಸದಾ ಹೃದಿ ।
ತಸ್ಮಿನ್ದಿನೇಽಪರರಾತ್ರೌ ರಾವಣೋ ರಾಕ್ಷಸಾಧಿಪಃ ॥
(ಶ್ಲೋಕ-17)
ಮೂಲಮ್
ಸ್ವಪ್ನೇ ರಾಮೇಣ ಸನ್ದಿಷ್ಟಃ ಕಶ್ಚಿದಾಗತ್ಯ ವಾನರಃ ।
ಕಾಮರೂಪಧರಃ ಸೂಕ್ಷ್ಮೋ ವೃಕ್ಷಾಗ್ರಸ್ಥೋಽನುಪಶ್ಯತಿ ॥
ಅನುವಾದ
ರಾವಣನಾದರೋ ಅಯ್ಯೋ! ಶ್ರೀರಾಮನಿಂದ ಬಹುಬೇಗನೆ ನನಗೆ ಮರಣವು ಎಂದು ಉಂಟಾಗಬಹುದು? ಸೀತೆ ಗೋಸ್ಕರವಾಗಿಯಾದರೂ ರಾಮನು ಬರಲಿಲ್ಲವಲ್ಲ! ಕಾರಣವೇನಿರಬಹುದು? ಹೀಗೆಂದು ಯಾವಾಗಲೂ ಹೃದಯದಲ್ಲಿ ರಾಮನನ್ನೇ ಚಿಂತಿಸುತ್ತಿದ್ದನು. ಅಂದು ರಾಕ್ಷಸಾಧಿಪನಾದ ರಾವಣನು ರಾತ್ರಿಯ ಕೊನೆಯ ಭಾಗದಲ್ಲಿ (ಬೆಳಗಿನ ಜಾವಕ್ಕೆ) ಕನಸೊಂದನ್ನು ಕಂಡನು. ಅದರಲ್ಲಿ ರಾಮನಿಂದ ಸಂದೇಶವನ್ನು ಹೊತ್ತು ತಂದಿದ್ದ ಇಚ್ಛಾರೂಪಧಾರಿಯಾದ ವಾನರನೋರ್ವನು ಲಂಕೆಗೆ ಬಂದು ಸೂಕ್ಷ್ಮರೂಪದಿಂದ ಮರದ ತುದಿಯಲ್ಲಿ ಕುಳಿತು ನೋಡುತ್ತಿರುವನು. ॥15-17॥
(ಶ್ಲೋಕ-18)
ಮೂಲಮ್
ಇತಿ ದೃಷ್ಟ್ವಾದ್ಭುತಂ ಸ್ವಪ್ನಂ ಸ್ವಾತ್ಮನ್ಯೇವಾನುಚಿಂತ್ಯ ಸಃ ।
ಸ್ವಪ್ನಃ ಕದಾಚಿತ್ಸತ್ಯಃ ಸ್ಯಾದೇವಂ ತತ್ರ ಕರೋಮ್ಯಹಮ್ ॥
(ಶ್ಲೋಕ-19)
ಮೂಲಮ್
ಜಾನಕೀಂ ವಾಕ್ಶರೈರ್ವಿದ್ಧ್ವಾ ದುಃಖಿತಾಂ ನಿತರಾಮಹಮ್ ।
ಕರೋಮಿ ದೃಷ್ಟ್ವಾ ರಾಮಾಯ ನಿವೇದಯತು ವಾನರಃ ॥
ಅನುವಾದ
ಇಂತಹ ಅದ್ಭುತ ಕನಸನ್ನು ಕಂಡ ಅವನು ‘ಕೆಲವು ಸ್ವಪ್ನಗಳು ನಿಜವಾಗುತ್ತವೆ’ ಎಂದು ಮನಸ್ಸಿನಲ್ಲಿ ಯೋಚಿಸಿದನು. ‘ಆದ್ದರಿಂದ ಈಗಲೇ ಅಶೋಕವನಕ್ಕೆ ಹೋಗಿ ದುಃಖಿತಳಾದ ಸೀತೆಯನ್ನು ಕಟುವಾದ ವಾಗ್ಬಾಣಗಳಿಂದ ಚೆನ್ನಾಗಿ ಹಿಂಸಿಸಿ ಪೀಡಿಸುವೆನು. ಕಪಿಯು ಇದನ್ನು ಕಂಡು ರಾಮನಲ್ಲಿಗೆ ಹೋಗಿ ಹೇಳಲಿ.’ ॥18-19॥
(ಶ್ಲೋಕ-20)
ಮೂಲಮ್
ಇತ್ಯೇವಂ ಚಿಂತಯನ್ಸೀತಾಸಮೀಪಮಗಮದ್ ದ್ರುತಮ್ ।
ನೂಪುರಾಣಾಂ ಕಿಂಕಿಣೀನಾಂ ಶ್ರುತ್ವಾ ಶಿಂಜಿತಮಂಗನಾ ॥
(ಶ್ಲೋಕ-21)
ಮೂಲಮ್
ಸೀತಾ ಭೀತಾ ಲೀಯಮಾನಾ ಸ್ವಾತ್ಮನ್ಯೇವ ಸುಮಧ್ಯಮಾ ।
ಅಧೋಮುಖ್ಯಶ್ರುನಯನಾ ಸ್ಥಿತಾ ರಾಮಾರ್ಪಿತಾಂತರಾ ॥
ಅನುವಾದ
ಹೀಗೆಂದು ಆಲೋಚಿಸುತ್ತಾ ಲಗುಬಗೆಯಿಂದ ಸೀತೆಯ ಬಳಿಗೆ ಬಂದನು. ಕಾಲುಗೆಜ್ಜೆಗಳ ಹಾಗೂ ಬಳೆಗಳ ಧ್ವನಿಯನ್ನು ಕೇಳಿದ ಸುಂದರ ನಡುವಿನ ಸೀತಾದೇವಿಯು ಹೆದರಿದವಳಾಗಿ ನಡುಗುತ್ತಾ ತನ್ನಲ್ಲಿಯೇ ತಾನು ಮುದುರಿಕೊಂಡಳು. ತಲೆ ತಗ್ಗಿಸಿದವಳಾಗಿ ಕಣ್ಣೀರ ಸುರಿಸುತ್ತಾ ಅಂತರಂಗವನ್ನು ಶ್ರೀರಾಮನಿಗೆ ಸಮರ್ಪಿಸಿಕೊಂಡು ಕುಳಿತಿದ್ದಳು. ॥20-21॥
(ಶ್ಲೋಕ-22)
ಮೂಲಮ್
ರಾವಣೋಽಪಿ ತದಾ ಸೀತಾಮಾಲೋಕ್ಯಾಹ ಸುಮಧ್ಯಮೇ ।
ಮಾಂ ದೃಷ್ಟ್ವಾ ಕಿಂ ವೃಥಾ ಸುಭ್ರು ಸ್ವಾತ್ಮನ್ಯೇವ ವಿಲೀಯಸೇ ॥
ಅನುವಾದ
ರಾವಣನು ಸೀತೆಯನ್ನು ಕಂಡು ‘‘ಎಲೈ ಸುಂದರೀ! ನೀನು ನನ್ನನ್ನು ಕಂಡು ಏತಕ್ಕಾಗಿ ವ್ಯರ್ಥವಾಗಿ ಮುದುರಿಕೊಂಡಿರುವೆ? ॥22॥
(ಶ್ಲೋಕ-23)
ಮೂಲಮ್
ರಾಮೋ ವನಚರಾಣಾಂ ಹಿ ಮಧ್ಯೇ ತಿಷ್ಠತಿ ಸಾನುಜಃ ।
ಕದಾಚಿದ್ದೃಶ್ಯತೇ ಕೈಶ್ಚಿತ್ಕದಾಚಿನ್ನೈವ ದೃಶ್ಯತೇ ॥
ಅನುವಾದ
ಈಗ ರಾಮನು ತಮ್ಮನೊಡನೆ ಕಾಡುಜನರ ನಡುವೆ ವಾಸಿಸುತ್ತಿರುವನು. ಕೆಲವು ಸಲ ಅವನು ಕಾಣಿಸಿಕೊಳ್ಳುತ್ತಾನೆ, ಮತ್ತೆ ಕೆಲವು ಸಲ ಕಾಣಿಸಿಕೊಳ್ಳುವುದಿಲ್ಲ. ॥23॥
(ಶ್ಲೋಕ-24)
ಮೂಲಮ್
ಮಯಾ ತು ಬಹುಧಾ ಲೋಕಾಃ ಪ್ರೇಷಿತಾಸ್ತಸ್ಯ ದರ್ಶನೇ ।
ನ ಪಶ್ಯಂತಿ ಪ್ರಯತ್ನೇನ ವೀಕ್ಷಮಾಣಾಃ ಸಮಂತತಃ ॥
ಅನುವಾದ
ನಾನಾದರೋ ಅವನನ್ನು ಹುಡುಕಲು ಅನೇಕ ಜನರನ್ನು ಕಳಿಸಿರುವೆನು. ಪ್ರಯತ್ನಪೂರ್ವಕವಾಗಿ ಹುಡುಕುತ್ತಿದ್ದರೂ ಎಲ್ಲಿಯೂ ಅವನು ಅವರಿಗೆ ಕಂಡು ಬರಲಿಲ್ಲ. ॥24॥
(ಶ್ಲೋಕ-25)
ಮೂಲಮ್
ಕಿಂ ಕರಿಷ್ಯಸಿ ರಾಮೇಣ ನಿಃಸ್ಪೃಹೇಣ ಸದಾ ತ್ವಯಿ ।
ತ್ವಯಾ ಸದಾಲಿಂಗಿತೋಽಪಿ ಸಮೀಪಸ್ಥೋಽಪಿ ಸರ್ವದಾ ॥
(ಶ್ಲೋಕ-26)
ಮೂಲಮ್
ಹೃದಯೇಸ್ಯ ನ ಚ ಸ್ನೇಹಸ್ತ್ವಯಿ ರಾಮಸ್ಯ ಜಾಯತೇ ।
ತ್ವತ್ಕೃತಾನ್ ಸರ್ವಭೋಗಾಂಶ್ಚ ತ್ವದ್ ಗುಣಾನಪಿ ರಾಘವಃ ॥
(ಶ್ಲೋಕ-27)
ಮೂಲಮ್
ಭುಂಜಾನೋಽಪಿ ನ ಜಾನಾತಿ ಕೃತಘ್ನೋ ನಿರ್ಗುಣೋಧಮಃ ।
ತ್ವಮಾನೀತಾ ಮಯಾ ಸಾಧ್ವೀ ದುಃಖಶೋಕ ಸಮಾಕುಲಾ ॥
(ಶ್ಲೋಕ-28)
ಮೂಲಮ್
ಇದಾನೀಮಪಿ ನಾಯಾತಿ ಭಕ್ತಿಹೀನಃ ಕಥಂ ವ್ರಜೇತ್ ।
ನಿಃಸತ್ತ್ವೋ ನಿರ್ಮಮೋ ಮಾನೀ ಮೂಢಃ ಪಂಡಿತಮಾನವಾನ್ ॥
ಅನುವಾದ
ಯಾವಾಗಲೂ ನಿನ್ನಲ್ಲಿ ಪ್ರೀತಿಯೇ ಇಲ್ಲದಿರುವ ರಾಮನನ್ನು ಕಟ್ಟಿಕೊಂಡು ಏನು ಮಾಡುವೆ? ಅವನು ಸದಾಕಾಲ ನಿನ್ನ ಹತ್ತಿರವೇ ಇದ್ದಾಗಲೂ ನೀನು ಆಲಿಂಗಿಸಿಕೊಂಡಾಗಲೂ ಅವನ ಹೃದಯದಲ್ಲಿ ನಿನ್ನ ಬಗೆಗೆ ಪ್ರೀತಿಯು ಹುಟ್ಟುವುದಿಲ್ಲ. ರಾಮನು ನಿನ್ನಿಂದ ಪಡೆದ ಭೋಗಗಳ ಬಗ್ಗೆಯಾಗಲಿ, ನಿನ್ನ ಗುಣಗಳ ಬಗ್ಗೆಯಾಗಲಿ, ಕೃತಘ್ನನೂ, ಗುಣಹೀನನೂ, ಅಧಮನೂ, ಆದ ಅವನು ಎಂದೂ ನೆನೆಸಿಕೊಳ್ಳುವುದಿಲ್ಲ. ನೋಡು, ಪತಿವ್ರತೆಯಾದ ನಿನ್ನನ್ನು ನಾನು ಕದ್ದು ತಂದಾಗಲೂ, ಸುಶೀಲೆಯೂ ಆಗಿದ್ದು, ದುಃಖ-ಶೋಕಾದಿಗಳಿಂದ ವ್ಯಾಕುಲಳಾಗಿದ್ದರೂ ಅವನು ಇಷ್ಟರವರೆಗೆ ಬಂದೇ ಇಲ್ಲ; ನಿನ್ನಲ್ಲಿ ಪ್ರೇಮವೇ ಇಲ್ಲದಿರುವಾಗ ಬರುವುದಾದರೂ ಹೇಗೆ? ಅವನು ಪೂರ್ಣವಾಗಿ ಅಸಮರ್ಥನೂ, ಮಮತಾ ಶೂನ್ಯನೂ, ಅಭಿಮಾನಿ, ಮೂರ್ಖ ಮತ್ತು ತನ್ನನ್ನು ದೊಡ್ಡ ಬುದ್ಧಿವಂತನೆಂದು ತಿಳಿಯುವನು. ॥25-28॥
(ಶ್ಲೋಕ-29)
ಮೂಲಮ್
ನರಾಧಮಂ ತ್ವದ್ವಿಮುಖಂ ಕಿಂ ಕರಿಷ್ಯಸಿ ಭಾಮಿನಿ ।
ತ್ವಯ್ಯತೀವ ಸಮಾಸಕ್ತಂ ಮಾಂ ಭಜಸ್ವಾಸುರೋತ್ತಮಮ್ ॥
(ಶ್ಲೋಕ-30)
ಮೂಲಮ್
ದೇವಗಂಧರ್ವನಾಗಾನಾಂ ಯಕ್ಷಕಿನ್ನರಯೋಷಿತಾಮ್ ।
ಭವಿಷ್ಯಸಿ ನಿಯೋಕ್ತ್ರೀ ತ್ವಂ ಯದಿ ಮಾಂ ಪ್ರತಿಪದ್ಯಸೇ ॥
ಅನುವಾದ
ಎಲೈ ಭಾಮಿನಿಯೆ! ನಿನ್ನ ವಿಷಯದಲ್ಲಿ ಪರಾಙ್ಮುಖನಾದ ಆ ನರಾಧಮನನ್ನು ಕಟ್ಟಿಕೊಂಡು ಏನು ಮಾಡುವೆ?* ಇದಕ್ಕೆ ಬದಲಾಗಿ ನಿನ್ನಲ್ಲಿ ಅತಿಯಾದ ಪ್ರೀತಿಯುಳ್ಳ ರಾಕ್ಷಸ ಶ್ರೇಷ್ಠನಾದ ನನ್ನನ್ನು ಭಜಿಸುವವಳಾಗು. ನೀನು ನನ್ನನ್ನು ಸೇರುವೆಯಾದರೆ ದೇವ, ಗಂಧರ್ವ, ಯಕ್ಷ, ಕಿನ್ನರ ಸ್ತ್ರೀಯರೆಲ್ಲರಿಗೆ ಒಡತಿಯಾಗುವೆ.’’ ॥29-30॥
ಟಿಪ್ಪನೀ
- ಇಲ್ಲಿ 23ರಿಂದ 28ನೇ ಶ್ಲೋಕದವರೆಗೆ ರಾವಣನು ಗೂಢಭಾವದಿಂದ ನಿಂದಿಸುವ ನೆಪದಲ್ಲಿ ಭಗವಾನ್ ರಾಮನ ಸ್ತುತಿ ಮಾಡಿದ್ದಾನೆ. ಇವುಗಳ ತಾತ್ಪರ್ಯ ಹೀಗಿದೆ ರಾಮನು ತನ್ನ ಸಹೋದರನ ಸಹಿತ ವನವಾಸೀ ತಪಸ್ವಿಗಳ ಜೊತೆಯಲ್ಲಿರುತ್ತಾನೆ. ಆತನು ಅವರಲ್ಲಿ ಕೆಲವರಿಗೆ (ಧ್ಯಾನ-ಧಾರಣಾದಿಗಳ ಮೂಲಕ) ಒಮ್ಮೆ ಕಾಣಿಸುತ್ತಾನೆ. ಮತ್ತು ಒಮ್ಮೆ (ಧ್ಯಾನ-ಧಾರಣಾದಿಗಳಿಂದಲೂ ಸಹ) ಕಂಡುಬರುವುದಿಲ್ಲ. ॥23॥ ನಾನು ಆತನ ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕಾಗಿ ಅನೇಕಸಾರಿ ನನ್ನ ಇಂದ್ರಿಯಗಳನ್ನು ಆಕಡೆ ತೊಡಗಿಸಿದ್ದೇನೆ, ಆದರೆ ಬಹಳವಾಗಿ ಪ್ರಯತ್ನಮಾಡಿದರೂ ಸಹ ನನಗೆ ಆತನ ಸಾಕ್ಷಾತ್ಕಾರವುಂಟಾಗಲಿಲ್ಲ. ॥24॥ (ನೀನು ಸಾಕ್ಷಾತ್ ಯೋಗಮಾಯೆ, ಪರಬ್ರಹ್ಮರೂಪೀ ರಾಮನೊಡನೆ ಸದಾ ನಿನ್ನ ಸಹವಾಸ ಮತ್ತು ಆತನೊಡನೆ ತಾದಾತ್ಮ್ಯವೂ ಸಹ ಉಂಟು.) ಆದರೂ ಸಹ ಅವನು ಯಾವಾಗಲೂ ನಿಃಸ್ಪೃಹ ಮತ್ತು ಸಂಗರಹಿತನು ಮತ್ತು ಉದಾಸೀನನಾಗಿದ್ದಾನೆ. ॥25॥ ನಿಃಸ್ಪೃಹ ಮತ್ತು ಸಂಗರಹಿತನಾದುದರಿಂದ ಪರಬ್ರಹ್ಮರೂಪೀ ರಾಮನಿಗೆ ಮಾಯಾರೂಪಿಣಿಯಾದ ನಿನ್ನಿಂದ ಬಂಧನವೂ ಸಹ ಉಂಟಾಗುವುದಿಲ್ಲ ಮತ್ತು ಅವನು ನಿನ್ನ (ಮಾಯೆಯ) ಗುಣ ಅಥವಾ ಭೋಗಗಳಲ್ಲಿ ಸಿಕ್ಕಿಬೀಳುವುದಿಲ್ಲ. ॥26॥ ಸಾಂಖ್ಯವಾದಿಗಳು (ಉಪಚಾರದಿಂದ) ಅವನನ್ನು ಭೋಕ್ತಾ ಎಂದೂ ಸಹ ಹೇಳುತ್ತಾರೆ. ಆದಾಗ್ಯೂ ಅವರ ಮತಾನುಸಾರ ‘ಜಹಾತ್ಯೇನಾಂ ಭುಕ್ತಭೋಗಾಮಜೋನ್ಯಃ’ ಈ ಶ್ರುತಿಯ ಅನುಸಾರ ಅವನು ಭೋಗಿಸಿದ ಭೋಗಗಳಲ್ಲಿ ಲಿಪ್ತನಾಗದ ಕಾರಣ, ಅವನಲ್ಲಿ ಕರ್ತೃತ್ವ-ಭೋಕ್ತೃತವದ ಅಭಿಮಾನ ಇರುವುದಿಲ್ಲ. ಹೀಗೆಯೇ ಅವನಿಂದ ಮಾಡಲಾದ ಕರ್ಮಗಳು ಅಂತ್ಯವಾಗುತ್ತವೆ. ಅದಕ್ಕಾಗಿ ಅವನು ಕೃತಘ್ನನಾಗಿದ್ದಾನೆ. (ಮಾಡಿದ ಕರ್ಮಗಳನ್ನು ನಾಶಮಾಡುವವ), ನಿರ್ಗುಣ (ಸತ್ತ್ವ, ರಜ, ತಮಗಳಿಂದ ರಹಿತ) ಮತ್ತು ಅಧಮ (ನ ಧಮತಿ ಶಬ್ದ ವಿಷಯೋ ಭವತಿ ಯಾವುದು ಶಬ್ದಕ್ಕೆ ವಿಷಯವಲ್ಲವೋ ಅರ್ಥಾತ್ ಅಶಬ್ದ) ಕೂಡಾ ಆಗಿದ್ದಾನೆ. ॥27॥ ಅವನಿಗೆ ಮಾಯೆಯ ಮೇಲೆ ಪ್ರೀತಿಯಿಲ್ಲ. ಆದುದರಿಂದ ಅವನು ಈ ತನಕ ಬರಲಿಲ್ಲ. ಇದರಿಂದ ರಾವಣನು ತನ್ನನ್ನು ಲಕ್ಷ್ಯವಾಗಿಟ್ಟುಕೊಂಡು ಹೇಳುತ್ತಾನೆ ಅವನು ಈಗಲೂ ಸಹ ನನ್ನ ಹೃದಯಕ್ಕೆ ಬರುವುದಿಲ್ಲ. ಏಕೆಂದರೆ ಭಕ್ತಿಹೀನನಾದ್ದರಿಂದ ನನ್ನ ಹೃದಯ ಅವನವರೆಗೆ ಹೇಗೆ ತಲುಪಬಲ್ಲದು? ಅವನು ನಿರ್ಗುಣ, ಮಮತಾರಹಿತ, ನಿರಭಿಮಾನಿ, ಮೂಢ (ಮ್=ಶಿವಃ +ಉಃ = ಬ್ರಹ್ಮಾ ತಾಭ್ಯಾಮ್ ಊಥಃ ಧ್ಯಾನವಿಷಯನ್ನೀತಃ ಅರ್ಥಾತ್ ಶಿವ ಮತ್ತು ಬ್ರಹ್ಮನ ಧ್ಯೇಯ) ಮತ್ತು ವಿದ್ವಾಂಸರಲ್ಲಿ ಸನ್ಮಾನಿತನು. ॥28॥ ನರಾಧಮ (ನರಾಃ ಅಧಮಾಃ ಯಸ್ಮಾತ್ ಸ ನರಾಧಮಃ ಮನುಷ್ಯ ಯಾದುದರಿಂದ ಅಧಮನು ಅರ್ಥಾತ್ ಪುರುಷೋತ್ತಮ), ವಿಮುಖ (ಮಾಯಾ-ಪರಾಙ್ಮುಖ).
(ಶ್ಲೋಕ-31)
ಮೂಲಮ್
ರಾವಣಸ್ಯ ವಚಃ ಶ್ರುತ್ವಾ ಸೀತಾಮರ್ಷಸಮನ್ವಿತಾ ।
ಉವಾಚಾಧೋಮುಖೀ ಭೂತ್ವಾ ನಿಧಾಯ ತೃಣಮಂತರೇ ॥
ಅನುವಾದ
ರಾವಣನ ಮಾತನ್ನು ಕೇಳಿದ ಸೀತೆಯು ಕೋಪದಿಂದ ಕೂಡಿದವಳಾಗಿ ತಲೆ ತಗ್ಗಿಸಿಕೊಂಡು ಒಂದು ಹುಲ್ಲು ಕಡ್ಡಿಯನ್ನು ಅಡ್ಡಲಾಗಿಟ್ಟು* - ಹೀಗೆ ನುಡಿದಳು. ॥31॥
ಟಿಪ್ಪನೀ
- ಪತಿವ್ರತಾ ಸ್ತ್ರೀಯು ಪರ-ಪುರುಷನೊಡನೆ ಪ್ರತ್ಯಕ್ಷವಾಗಿ ವಾರ್ತಾಲಾಪ ಮಾಡಬಾರದು. ಯಾವುದಾದರೂ ಅನಿವಾರ್ಯ ಪ್ರಸಂಗ ಬಂದೊದಗಿದರೂ ಸಹ ಯಾವುದಾದರೂ ಜಡ ವಸ್ತುವನ್ನೇ ಮಧ್ಯದಲ್ಲಿ ಇಟ್ಟುಕೊಳ್ಳಬೇಕು. ಈ ನಿಯಮ ಪ್ರಕಾರವೇ ಸೀತೆಯು ಮಧ್ಯದಲ್ಲಿ ಕಡ್ಡಿಯನ್ನು ಇಟ್ಟಿದ್ದಳು.
(ಶ್ಲೋಕ-32)
ಮೂಲಮ್
ರಾಘವಾದ್ಬಿಭ್ಯತಾ ನೂನಂ ಭಿಕ್ಷುರೂಪಂ ತ್ವಯಾ ಧೃತಮ್ ।
ರಹಿತೇ ರಾಘವಾಭ್ಯಾಂ ತ್ವಂ ಶುನೀವ ಹವಿರಧ್ವರೇ ॥
(ಶ್ಲೋಕ-33)
ಮೂಲಮ್
ಹೃತವಾನಸಿ ಮಾಂ ನೀಚ ತತ್ಫಲಂ ಪ್ರಾಪ್ಸ್ಯಸೇಚಿರಾತ್ ।
ಯದಾ ರಾಮಶರಾಘಾತವಿದಾರಿತವಪುರ್ಭವಾನ್ ॥
(ಶ್ಲೋಕ-34)
ಮೂಲಮ್
ಜ್ಞಾಸ್ಯಸೇಽಮಾನುಷಂ ರಾಮಂ ಗಮಿಷ್ಯಸಿ ಯಮಾಂತಿಕಮ್ ।
ಸಮುದ್ರಂ ಶೋಷಯಿತ್ವಾ ವಾ ಶರೈರ್ಬಧ್ವಾಥ ವಾರಿಧಿಮ್ ॥
(ಶ್ಲೋಕ-35)
ಮೂಲಮ್
ಹಂತುಂ ತ್ವಾಂ ಸಮರೇ ರಾಮೋ ಲಕ್ಷ್ಮಣೇನ ಸಮನ್ವಿತಃ ।
ಆಗಮಿಷ್ಯತ್ಯಸಂದೇಹೋ ದ್ರಕ್ಷ್ಯಸೇ ರಾಕ್ಷಸಾಧಮ ॥
ಅನುವಾದ
‘‘ಎಲೈ ನೀಚನೆ! ನೀನು ಶ್ರೀರಾಮಚಂದ್ರನಿಗೆ ಹೆದರಿ ಸಂನ್ಯಾಸಿಯ ವೇಶವನ್ನು ಧರಿಸಿ ರಘುವಂಶೀಯರಾದ ರಾಮ-ಲಕ್ಷ್ಮಣರು ಇಲ್ಲದಿದ್ದಾಗ ಯಜ್ಞಶಾಲೆಯಿಂದ ಹವಿಸ್ಸನ್ನು ಕದ್ದುಕೊಂಡು ಹೋಗುವ ನಾಯಿಯಂತೆ ನನ್ನನ್ನು ಅಪಹರಿಸಿಕೊಂಡು ಬಂದಿ ರುವೆ. ಸದ್ಯದಲ್ಲೇ ಅದರ ಲವನ್ನು ಹೊಂದಲಿರುವೆ. ಇದರಲ್ಲಿ ಸಂಶಯವೇ ಇಲ್ಲ. ಭಗವಾನ್ ಶ್ರಿರಾಮನ ಬಾಣಾಘಾತಕ್ಕೆ ಶರೀರವು ವಿದೀರ್ಣವಾಗಿ ಯಮಲೋಕಕ್ಕೆ ಹೋಗುವಾಗ ನೀನು ರಾಮನು ಮನುಷ್ಯನಲ್ಲ ಎಂಬುದನ್ನು ಅರಿಯುವೆ. ಎಲೈ ರಾಕ್ಷಸಾಧಮನೆ! ಯುದ್ಧದಲ್ಲಿ ನಿನ್ನನ್ನು ಕೊಲ್ಲುವುದಕ್ಕಾಗಿ ಲಕ್ಷ್ಮಣ ಸಹಿತನಾದ ಶ್ರೀರಾಮನು ಸಮುದ್ರವನ್ನು ಒಣಗಿಸಿ ಯಾಗಲಿ, ಅಥವಾ ಸಮುದ್ರಕ್ಕೆ ಶರಸೇತುವನ್ನು ಬಿಗಿದು ಆಗಲಿ ಇಲ್ಲಿಗೆ ಬರುತ್ತಾನೆ. ಇದರಲ್ಲಿ ಸಂದೇಹವೇ ಇಲ್ಲ. ॥32-35॥
(ಶ್ಲೋಕ-36)
ಮೂಲಮ್
ತ್ವಾಂ ಸಪುತ್ರಂ ಸಹಬಲಂ ಹತ್ವಾ ನೇಷ್ಯತಿ ಮಾಂ ಪುರಮ್ ।
ಶ್ರುತ್ವಾ ರಕ್ಷಃ ಪತಿಃ ಕ್ರುದ್ಧೋ ಜಾನಕ್ಯಾಃ ಪರುಷಾಕ್ಷರಮ್ ॥
(ಶ್ಲೋಕ-37)
ಮೂಲಮ್
ವಾಕ್ಯಂ ಕ್ರೋಧಸಮಾವಿಷ್ಟಃ ಖಡ್ಗಮುದ್ಯಮ್ಯ ಸತ್ವರಃ ।
ಹಂತುಂ ಜನಕರಾಜಸ್ಯ ತನಯಾಂ ತಾಮ್ರಲೋಚನಃ ॥
ಅನುವಾದ
ಪುತ್ರ, ಪರಿವಾರ, ಸೈನ್ಯಬಲ ಸಹಿತ ನಿನ್ನನ್ನು ಕೊಂದು ನನ್ನನ್ನು ಅಯೋಧ್ಯೆಗೆ ಕೊಂಡೊಯ್ಯುವನು. ಜಾನಕಿಯ ಕಠೋರವಾದ ಮಾತುಗಳನ್ನು ಕೇಳಿ ರಾಕ್ಷಸಾಧಿಪ ರಾವಣನು ಕುಪಿತನಾಗಿ ಕೆಂಗಣ್ಣುಗಳಿಂದ ಒಡಗೊಂಡು ಕೂಡಲೇ ಖಡ್ಗವನ್ನು ಹಿರಿದು ಜನಕರಾಜನ ಮಗಳಾದ ಸೀತೆಯನ್ನು ಕೊಲ್ಲಲು ಮುಂದಾದನು. ॥36-37॥
(ಶ್ಲೋಕ-38)
ಮೂಲಮ್
ಮಂದೋದರೀ ನಿವಾರ್ಯಾಹ ಪತಿಂ ಪತಿಹಿತೇ ರತಾ ।
ತ್ಯಜೈನಾಂ ಮಾನುಷೀಂ ದೀನಾಂ ದುಃಖಿತಾಂ ಕೃಪಣಾಂ ಕೃಶಾಮ್ ॥
ಅನುವಾದ
ಪತಿಯ ಹಿತದಲ್ಲಿ ನಿರತಳಾದ ಮಹಾರಾಣಿ ಮಂಡೋದರಿಯು ಆಗ ಪತಿಯನ್ನು ತಡೆದು, ‘‘ಸ್ವಾಮಿ! ಮನುಷ್ಯಳೂ, ದೀನಳೂ, ದುಃಖಿತಳೂ, ಬಳಲಿದವಳೂ, ಕ್ಷೀಣಕಾಯಳೂ ಆದ ಈಕೆಯನ್ನು ಬಿಟ್ಟು ಬಿಡಿರಿ. ॥38॥
(ಶ್ಲೋಕ-39)
ಮೂಲಮ್
ದೇವಗಂಧರ್ವನಾಗಾನಾಂ ಬಹ್ವ್ಯಃ ಸಂತಿ ವರಾಂಗನಾಃ ।
ತ್ವಾಮೇವ ವರಯಂತ್ಯುಚ್ಚೈರ್ಮದಮತ್ತವಿಲೋಚನಾಃ ॥
ಅನುವಾದ
ದೇವಗಂಧರ್ವನಾಗ ಕನ್ಯೆಯರಲ್ಲಿ ಸುಂದರಿ ಯರಾದ ಅನೇಕರು ಮದದಿಂದ ಕೊಬ್ಬಿದ ದೃಷ್ಟಿಯುಳ್ಳವರು ನಿನ್ನನ್ನೇ ವರಿಸಲು ಬಯಸುತ್ತಿರುವರು’’ ಎಂದು ನುಡಿದಳು. ॥39॥
(ಶ್ಲೋಕ-40)
ಮೂಲಮ್
ತತೋಽಬ್ರವೀದ್ದಶಗ್ರೀವೋ ರಾಕ್ಷಸೀರ್ವಿಕೃತಾನನಾಃ ।
ಯಥಾ ಮೇ ವಶಗಾ ಸೀತಾ ಭವಿಷ್ಯತಿ ಸಕಾಮನಾ ।
ತಥಾ ಯತಧ್ವಂ ತ್ವರಿತಂ ತರ್ಜನಾದರಣಾದಿಭಿಃ ॥
ಅನುವಾದ
ಆಗ ರಾವಣನು ವಿಕಾರವಾದ ಮುಖವುಳ್ಳ ರಾಕ್ಷಸಿಯರನ್ನು ಕರೆದು ಹೇಳಿದನು — ‘‘ಎಲೈ ನಿಶಾಚರಿಯರೆ! ನೀವೆಲ್ಲ ಈಗಿನಿಂದಲೇ ಭಯವನ್ನು ತೋರಿಸಿಯೋ, ಆದರವನ್ನು ತೋರಿಸಿಯೋ, ಯಾವರೀತಿಯಿಂದಲಾದರೂ ಸೀತೆಯು ತನ್ನ ಇಚ್ಛೆಯಿಂದ ನನ್ನವಳಾಗುವಂತೆ ಪ್ರಯತ್ನಿಸಿರಿ. ॥40॥
(ಶ್ಲೋಕ-41)
ಮೂಲಮ್
ದ್ವಿಮಾಸಾಭ್ಯಂತರೇ ಸೀತಾ ಯದಿ ಮೇ ವಶಗಾ ಭವೇತ್ ।
ತದಾ ಸರ್ವಸುಖೋಪೇತಾ ರಾಜ್ಯಂ ಭೋಕ್ಷ್ಯತಿ ಸಾ ಮಯಾ ॥
ಅನುವಾದ
ಇನ್ನು ಎರಡು ತಿಂಗಳೊಳಗೆ ಸೀತೆಯು ನನಗೆ ಅಧೀನಳಾದಲ್ಲಿ ಆಗ ಎಲ್ಲ ಸುಖಗಳಿಂದ ಕೂಡಿದ ರಾಜ್ಯವನ್ನು ಅನುಭವಿಸಲಿರುವಳು. ॥41॥
(ಶ್ಲೋಕ-42)
ಮೂಲಮ್
ಯದಿ ಮಾಸದ್ವಯಾದೂರ್ಧ್ವಂ ಮಚ್ಛಯ್ಯಾಂ ನಾಭಿನಂದತಿ ।
ತದಾ ಮೇ ಪ್ರಾತರಾಶಾಯ ಹತ್ವಾ ಕುರುತ ಮಾನುಷೀಮ್ ॥
ಅನುವಾದ
ಒಂದು ವೇಳೆ ಎರಡು ತಿಂಗಳು ಕಳೆದ ಅನಂತರವೂ ಆಕೆಯು ನನ್ನನ್ನು ವರಿಸದೇ ಹೋದರೆ, ಆಗ ಆಕೆಯನ್ನು ಕೊಂದು ನನ್ನ ಬೆಳಗಿನ ಉಪಹಾರಕ್ಕಾಗಿ ಸಿದ್ಧಗೊಳಿಸಿರಿ. ॥42॥
(ಶ್ಲೋಕ-43)
ಮೂಲಮ್
ಇತ್ಯುಕ್ತ್ವಾ ಪ್ರಯಯೌ ಸ್ತ್ರೀಭೀ ರಾವಣೋಽಂತಃಪುರಾಲಯಮ್ ।
ರಾಕ್ಷ ಸ್ಯೋ ಜಾನಕೀಮೇತ್ಯ ಭೀಷಯಂತ್ಯಃ ಸ್ವತರ್ಜನೈಃ ॥
ಅನುವಾದ
ಹೀಗೆಂದು ಹೇಳಿ ರಾವಣನು ಸ್ತ್ರೀಯರೊಡಗೂಡಿ ಅಂತಃಪುರಕ್ಕೆ ಹೊರಟು ಹೋದನು. ರಾಕ್ಷಸಿಯರು ಸೀತೆಯ ಬಳಿಗೆ ಬಂದು ತಮ್ಮ-ತಮ್ಮ ಉಪಾಯಗಳಿಂದ ಗದರಿಸುತ್ತಾ ಭಯವನ್ನು ತೋರತೊಡಗಿದರು. ॥43॥
(ಶ್ಲೋಕ-44)
ಮೂಲಮ್
ತತ್ರೈಕಾ ಜಾನಕೀಮಾಹ ಯೌವನಂ ತೇ ವೃಥಾ ಗತಮ್ ।
ರಾವಣೇನ ಸಮಾಸಾದ್ಯ ಸಫಲಂ ತು ಭವಿಷ್ಯತಿ ॥
(ಶ್ಲೋಕ-45)
ಮೂಲಮ್
ಅಪರಾ ಚಾಹ ಕೋಪೇನ ಕಿಂ ವಿಲಂಬೇನ ಜಾನಕಿ ।
ಇದಾನೀಂ ಛೇದ್ಯತಾಮಂಗ ವಿಭಜ್ಯ ಚ ಪೃಥಕ್ ಪೃಥಕ್ ॥
(ಶ್ಲೋಕ-46)
ಮೂಲಮ್
ಅನ್ಯಾ ತು ಖಡ್ಗಮುದ್ಯಮ್ಯ ಜಾನಕೀಂ ಹಂತುಮುದ್ಯತಾ ।
ಅನ್ಯಾ ಕರಾಲವದನಾ ವಿದಾರ್ಯಾಸ್ಯಮಭೀಷಯತ್ ॥
ಅನುವಾದ
ಅವರುಗಳಲ್ಲೊಬ್ಬಳು — ‘‘ಎಲೈ ಜಾನಕಿ! ನಿನ್ನ ಯೌವನವು ವ್ಯರ್ಥವಾಗುತ್ತಾ ಇದೆ. ಈಗಲಾದರೂ ರಾವಣನೊಡಗೂಡಿದರೆ ಸಫಲವಾದೀತು’’ ಎಂದು ಹೇಳಿದರೆ, ಮತ್ತೊಬ್ಬಳು ‘‘ಜಾನಕಿ! ನಮ್ಮ ಮಾತನ್ನು ಒಪ್ಪಿಕೊಳ್ಳಲು ತಡವೇಕೆ ಮಾಡುತ್ತಿರುವೆ? ಈಗಲೇ ಇವಳ ಶರೀರವನ್ನು ತುಂಡು-ತುಂಡು ಮಾಡಿಬಿಡೋಣ.’’ ಮತ್ತೊಬ್ಬಳು ಕತ್ತಿಯನ್ನೆತ್ತಿಕೊಂಡು ಸೀತೆಯನ್ನು ಕೊಲ್ಲಲು ಮುಂದಾದಳು. ಭಯಂಕರವಾದ ಮುಖವುಳ್ಳ ಇನ್ನೊಬ್ಬಳು ತನ್ನ ವಿಕರಾಳವಾದ ಬಾಯನ್ನು ತೆರೆದು ಸೀತೆಯನ್ನು ಹೆದರಿಸಿದಳು. ॥44-46॥
(ಶ್ಲೋಕ-47)
ಮೂಲಮ್
ಏವಂ ತಾಂ ಭೀಷಯಂತೀಸ್ತಾ ರಾಕ್ಷಸೀರ್ವಿಕೃತಾನನಾಃ ।
ನಿವಾರ್ಯ ತ್ರಿಜಟಾ ವೃದ್ಧಾ ರಾಕ್ಷಸೀ ವಾಕ್ಯಮಬ್ರವೀತ್ ॥
ಅನುವಾದ
ಹೀಗೆ ಆಕೆಯನ್ನು ಗದರಿಸುತ್ತಿದ್ದ ವಿಕಾರಮುಖಿಯರಾದ ರಾಕ್ಷಸಿಯರನ್ನು ತಡೆದು ಜ್ಞಾನ ವೃದ್ಧಳಾದ ತ್ರಿಜಟೆಯೆಂಬ ರಾಕ್ಷಸಿಯು ಹೀಗೆಂದಳು. ॥47॥
(ಶ್ಲೋಕ-48)
ಮೂಲಮ್
ಶೃಣುಧ್ವಂ ದುಷ್ಟರಾಕ್ಷಸ್ಯೋ ಮದ್ವಾಕ್ಯಂ ವೋ ಹಿತಂ ಭವೇತ್ ॥
(ಶ್ಲೋಕ-49)
ಮೂಲಮ್
ನ ಭೀಷಯಧ್ವಂ ರುದತೀಂ ನಮಸ್ಕುರುತ ಜಾನಕೀಮ್ ।
ಇದಾನೀಮೇವ ಮೇ ಸ್ವಪ್ನೇ ರಾಮಃ ಕಮಲಲೋಚನಃ ॥
(ಶ್ಲೋಕ-50)
ಮೂಲಮ್
ಆರುಹ್ಯೈರಾವತಂ ಶುಭ್ರಂ ಲಕ್ಷ್ಮಣೇನ ಸಮಾಗತಃ ।
ದಗ್ಧ್ವಾ ಲಂಕಾಪುರೀಂ ಸರ್ವಾಂ ಹತ್ವಾ ರಾವಣಮಾಹವೇ ॥
(ಶ್ಲೋಕ-51)
ಮೂಲಮ್
ಆರೋಪ್ಯ ಜಾನಕೀಂ ಸ್ವಾಂಕೇ ಸ್ಥಿತೋ ದೃಷ್ಟೋಽಗಮೂರ್ಧನಿ ।
ರಾವಣೋ ಗೋಮಯಹ್ರದೇ ತೈಲಾಭ್ಯಕ್ತೋ ದಿಗಂಬರಃ ॥
(ಶ್ಲೋಕ-52)
ಮೂಲಮ್
ಅಗಾಹತ್ಪುತ್ರಪೌತ್ರೈಶ್ಚ ಕೃತ್ವಾ ವದನಮಾಲಿಕಾಮ್ ।
ವಿಭೀಷಣಸ್ತು ರಾಮಸ್ಯ ಸನ್ನಿಧೌ ಹೃಷ್ಟಮಾನಸಃ ॥
(ಶ್ಲೋಕ-53)
ಮೂಲಮ್
ಸೇವಾಂ ಕರೋತಿ ರಾಮಸ್ಯ ಪಾದಯೋರ್ಭಕ್ತಿಸಂಯುತಃ ।
ಸರ್ವಥಾ ರಾವಣಂ ರಾಮೋ ಹತ್ವಾ ಸಕುಲಮಂಜಸಾ ॥
(ಶ್ಲೋಕ-54)
ಮೂಲಮ್
ವಿಭೀಷಣಾಯಾಧಿಪತ್ಯಂ ದತ್ತ್ವಾ ಸೀತಾಂ ಶುಭಾನನಾಮ್ ।
ಅಂಕೇ ನಿಧಾಯ ಸ್ವಪುರೀಂ ಗಮಿಷ್ಯತಿ ನ ಸಂಶಯಃ ॥
ಅನುವಾದ
‘‘ಎಲೈ ದುಷ್ಟರಾದ ರಾಕ್ಷಸಿಯರೆ! ನನ್ನ ಮಾತನ್ನು ಕೇಳಿರಿ. ಇದರಿಂದ ನಿಮಗೆ ಒಳ್ಳೆಯದಾದೀತು. ಅಳುತ್ತಿರುವ ಸೀತೆಯನ್ನು ಗದರಿಸ ಬೇಡಿರಿ. ಆಕೆಗೆ ನಮಸ್ಕಾರ ಮಾಡಿರಿ. ಇದೇ ತಾನೇ ನಾನೊಂದು ಕನಸು ಕಂಡೆನು. ಅದರಲ್ಲಿ ಕಮಲ ಲೋಚನನಾದ ಶ್ರೀರಾಮನು ಲಕ್ಷ್ಮಣನೊಡಗೂಡಿ ಶುಭ್ರವಾದ ಐರಾವತವನ್ನು ಏರಿ ಲಂಕೆಗೆ ಬಂದು, ಲಂಕಾನಗರಿಯನ್ನು ಸುಟ್ಟು, ಯುದ್ಧದಲ್ಲಿ ರಾವಣ ನನ್ನು ಕೊಂದು ಸೀತೆಯನ್ನು ತೊಡೆಯಮೇಲೆ ಕುಳ್ಳಿರಿಸಿ ಕೊಂಡು ಪರ್ವತದ ಶಿಖರದಲ್ಲಿ ಕುಳಿತಿರುವಂತೆ ಕಂಡೆನು. ರಾವಣನು ಸಗಣಿಯ ಹೊಂಡದಲ್ಲಿ ಮೈಗೆ ಎಣ್ಣೆಯನ್ನು ಸವರಿಕೊಂಡು ನಗ್ನನಾಗಿ, ಕತ್ತಿನಲ್ಲಿ ರುಂಡಮಾಲೆಯನ್ನು ಧರಿಸಿಕೊಂಡು, ಮಕ್ಕಳು ಮೊಮ್ಮಕ್ಕಳೊಂದಿಗೆ ಮುಳುಗಿದ್ದನು. ವಿಭೀಷಣನಾದರೋ ರಾಮನ ಹತ್ತಿರದಲ್ಲಿ ಸಂತೋಷ ಚಿತ್ತವುಳ್ಳವನಾಗಿ ಭಕ್ತಿಯಿಂದ ಕೂಡಿ ರಾಮನ ಪಾದಗಳ ಸೇವೆಯನ್ನು ಮಾಡುತ್ತಿದ್ದನು. ಎಲ್ಲ ರೀತಿಯಿಂದಲೂ ರಾಮನು ರಾವಣನನ್ನು ವಂಶಸಮೇತನಾಗಿ ಕೊಂದು ಕೂಡಲೇ ವಿಭೀಷಣನಿಗೆ ರಾಜ್ಯದ ಅಧಿಕಾರವನ್ನು ದಯಪಾಲಿಸಿ ಶುಭ ಮುಖಿಯಾದ ಸೀತೆಯನ್ನು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು ತನ್ನ ಊರಿಗೆ ಹೊರಡುವನು. ಈ ಬಗ್ಗೆ ಸಂಶಯವೇ ಇಲ್ಲ.’’ ॥48-54॥
(ಶ್ಲೋಕ-55)
ಮೂಲಮ್
ತ್ರಿಜಟಾಯಾ ವಚಃ ಶ್ರುತ್ವಾ ಭೀತಾಸ್ತಾ ರಾಕ್ಷಸಸ್ತ್ರಿಯಃ ।
ತೂಷ್ಣೀಮಾಸಂಸ್ತತ್ರ ತತ್ರ ನಿದ್ರಾವಶಮುಪಾಗತಾಃ ॥
ಅನುವಾದ
ತ್ರಿಜಟೆಯು ಆಡಿದ ಮಾತನ್ನು ಕೇಳಿ ಹೆದರಿದ ಆ ರಾಕ್ಷಸ ಸ್ತ್ರೀಯರು ಸುಮ್ಮನಾದರು ಹಾಗೂ ಅಲ್ಲಲ್ಲೇ ನಿದ್ರಾಪರವಶರಾಗಿ ಮಲಗಿದರು. ॥55॥
(ಶ್ಲೋಕ-56)
ಮೂಲಮ್
ತರ್ಜಿತಾ ರಾಕ್ಷಸೀಭಿಃ ಸಾ ಸೀತಾ ಭೀತಾತಿವಿಹ್ವಲಾ
ತ್ರಾತಾರಂ ನಾಧಿಗಚ್ಛಂತೀ ದುಃಖೇನ ಪರಿಮೂರ್ಚ್ಛಿತಾ ॥
ಅನುವಾದ
ರಾಕ್ಷಸಿಯರು ಹೆದರಿಸಿದಾಗ ಸೀತೆಯು ಬಹಳ ಭಯದಿಂದ ವಿಹ್ವಲಳಾಗಿ ತನ್ನನ್ನು ಕಾಪಾಡುವವರಿಲ್ಲದೆ ದುಃಖದಿಂದ ಎಚ್ಚರತಪ್ಪಿದಳು. ॥56॥
(ಶ್ಲೋಕ-57)
ಮೂಲಮ್
ಅಶ್ರುಭಿಃ ಪೂರ್ಣನಯನಾ ಚಿಂತಯಂತೀದಮಬ್ರವೀತ್ ।
ಪ್ರಭಾತೇ ಭಕ್ಷಯಿಷ್ಯಂತಿ ರಾಕ್ಷಸ್ಯೋ ಮಾಂ ನ ಸಂಶಯಃ ।
ಇದಾನೀಮೇವ ಮರಣಂ ಕೇನೋಪಾಯೇನ ಮೇ ಭವೇತ್ ॥
ಅನುವಾದ
ಮತ್ತೆ ಕಣ್ಣೀರು ತುಂಬಿಕೊಂಡು ಹೆಚ್ಚಾಗಿ ಚಿಂತಿಸುತ್ತಾ ಹೀಗೆಂದಳು — ‘‘ಬೆಳಗಾಗುತ್ತಲೇ ರಾಕ್ಷಸ್ತ್ರೀಯರು ನನ್ನನ್ನು ತಿಂದು ಬಿಡುವರು. ಇದರ ಬಗ್ಗೆ ಸಂದೇಹವೇ ಇಲ್ಲ. ಈಗಾಗಲೇ ನನಗೆ ಯಾವ ಉಪಾಯದಿಂದ ಸಾವು ಬಂದೀತು? ॥57॥
(ಶ್ಲೋಕ-58)
ಮೂಲಮ್
ಏವಂ ಸುದುಃಖೇನ ಪರಿಪ್ಲುತಾ ಸಾ
ವಿಮುಕ್ತಕಂಠಂ ರುದತೀ ಚಿರಾಯ ।
ಆಲಂಬ್ಯ ಶಾಖಾಂ ಕೃತನಿಶ್ಚಯಾ ಮೃತೌ
ನ ಜಾನತೀ ಕಂಚಿದುಪಾಯಮಂಗನಾ ॥
ಅನುವಾದ
ಈ ಪ್ರಕಾರ ಸಾಯುವ ನಿಶ್ಚಯ ಮಾಡಿಯೂ ಯಾವುದೇ ಸಾಧನವು ಕಾಣದಿದ್ದಾಗ ಸೀತೆಯು ಮರದ ಕೊಂಬೆಯನ್ನು ಆಶ್ರಯಿಸಿ, ಅತ್ಯಂತ ದುಃಖದಿಂದ ಬಹಳ ಕಾಲ ಅಳುತ್ತಾ ಇದ್ದಳು. ॥58॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಸುಂದರಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಸುಂದರಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.