೦೧

[ಮೊದಲನೆಯ ಸರ್ಗ]

ಭಾಗಸೂಚನಾ

ಹನುಮಂತನ ಸಮುದ್ರೋಲ್ಲಂಘನ ಮತ್ತು ಲಂಕಾ ಪ್ರವೇಶ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಶತಯೋಜನವಿಸ್ತೀರ್ಣಂ ಸಮುದ್ರಂ ಮಕರಾಲಯಮ್ ।
ಲಿಲಂಘಯಿಷುರಾನಂದಸಂದೋಹೋ ಮಾರುತಾತ್ಮಜಃ ॥

(ಶ್ಲೋಕ-2)

ಮೂಲಮ್

ಧ್ಯಾತ್ವಾ ರಾಮಂ ಪರಾತ್ಮಾನಮಿದಂ ವಚನಮಬ್ರವೀತ್ ।
ಪಶ್ಯಂತು ವಾನರಾಃ ಸರ್ವೇ ಗಚ್ಛಂತಂ ಮಾಂ ವಿಹಾಯಸಾ ॥

(ಶ್ಲೋಕ-3)

ಮೂಲಮ್

ಅಮೋಘಂ ರಾಮನಿರ್ಮುಕ್ತಂ ಮಹಾಬಾಣಮಿವಾಖಿಲಾಃ ।
ಪಶ್ಯಾಮ್ಯದ್ಯೈವ ರಾಮಸ್ಯ ಪತ್ನೀಂ ಜನಕನಂದಿನೀಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಗೌರಿ! ಆನಂದ ಘನ ಮಾರುತಾತ್ಮಜನು ನೂರು ಯೋಜನ ಅಗಲವಾದ, ಮೊಸಳೆಗಳೇ ಮುಂತಾದ ಕ್ರೂರ ಜಲ ಜಂತುಗಳಿಂದ ತುಂಬಿರುವ ಸಮುದ್ರವನ್ನು ದಾಟಲು ಉದ್ಯುಕ್ತನಾಗಿ ಪರಮಾತ್ಮನಾದ ಶ್ರೀರಾಮನನ್ನು ಧ್ಯಾನಿಸುತ್ತಾ ಹೀಗೆಂದನು - ‘‘ಎಲೈ ವಾನರರಿರಾ! ಇದೋ ನೀವೆಲ್ಲ ನೋಡಿರಿ; ರಾಮನು ಬಿಟ್ಟ ಅಮೋಘ ಬಾಣದಂತೆ ಆಕಾಶಮಾರ್ಗದಿಂದ ಹೋಗುತ್ತೇನೆ. ನಾನು ಇಂದೇ ರಾಮಪತ್ನಿಯಾದ ಜಾನಕಿಯನ್ನು ಕಾಣುವೆನು.॥1-3॥

(ಶ್ಲೋಕ-4)

ಮೂಲಮ್

ಕೃತಾರ್ಥೋಽಹಂ ಕೃತಾರ್ಥೋಽಹಂ ಪುನಃ ಪಶ್ಯಾಮಿ ರಾಘವಮ್ ।
ಪ್ರಾಣಪ್ರಯಾಣಸಮಯೇ ಯಸ್ಯ ನಾಮ ಸಕೃತ್ ಸ್ಮರನ್ ॥

(ಶ್ಲೋಕ-5)

ಮೂಲಮ್

ನರಸ್ತೀರ್ತ್ವಾ ಭವಾಂಭೋಧಿಮಪಾರಂ ಯಾತಿ ತತ್ಪದಮ್ ।
ಕಿಂ ಪುನಸ್ತಸ್ಯ ದೂತೋಹಂ ತದಂಗಾಂಗುಲಿಮುದ್ರಿಕಃ ॥

(ಶ್ಲೋಕ-6)

ಮೂಲಮ್

ತಮೇವ ಹೃದಯೇಧ್ಯಾತ್ವಾ ಲಂಘಯಾಮ್ಯಲ್ಪವಾರಿಧಿಮ್ ।
ಇತ್ಯುಕ್ತ್ವಾ ಹನುಮಾನ್ಬಾಹೂ ಪ್ರಸಾರ್ಯಾಯತವಾಲಧಿಃ ॥

(ಶ್ಲೋಕ-7)

ಮೂಲಮ್

ಋಜುಗ್ರೀವೋರ್ಧ್ವದೃಷ್ಟಿಃ ಸನ್ನಾಕುಂಚಿತಪದದ್ವಯಃ ।
ದಕ್ಷಿಣಾಭಿಮುಖಸ್ತೂರ್ಣಂ ಪುಪ್ಲುವೇಽನಿಲವಿಕ್ರಮಃ ॥

ಅನುವಾದ

ನಿಶ್ಚಯವಾಗಿ ಕಾರ್ಯಸಿದ್ಧಿಯನ್ನು ಹೊಂದಿ ಕೃತಕೃತ್ಯನಾಗಿ ನಾನು ಪುನಃ ಶ್ರೀರಾಮನನ್ನು ಸಂದರ್ಶಿಸುವೆನು. ಪ್ರಾಣ-ಪ್ರಯಾಣದ ಸಮಯದಲ್ಲಿ ಯಾರ ನಾಮವನ್ನು ಒಮ್ಮೆ ಸ್ಮರಿಸಿದರೂ ಮನುಷ್ಯನು ಅಪಾರ ಸಂಸಾರ ಸಮುದ್ರವನ್ನು ದಾಟಿ ಆ ಭಗವಂತನ ಪರಮಧಾಮಕ್ಕೆ ಹೋಗುವನೋ ಅಂತಹ ರಾಮನ ಸೇವಕನೂ, ಅವನ ನಾಮಾಂಕಿತ ಉಂಗುರವುಳ್ಳ ನಾನು ಅವನನ್ನೇ ಚಿಂತಿಸುತ್ತಾ ಅಲ್ಪವಾದ ಈ ಸಮುದ್ರವನ್ನು ದಾಟುವುದರಲ್ಲಿ ಯಾವ ದೊಡ್ಡ ಮಾತಿದೆ?’’ ಹೀಗೆಂದು ಹೇಳಿ ಹನುಮಂತನು ತೋಳುಗಳನ್ನು ಚಾಚಿ, ಬಾಲವನ್ನು ಬಿಚ್ಚಿಕೊಂಡು, ಕತ್ತನ್ನು ನೇರವಾಗಿಸಿ, ದೃಷ್ಟಿಯನ್ನು ಮೇಲಕ್ಕೆ ಬೀರಿ, ಎರಡೂ ಕಾಲುಗಳನ್ನು ಮಡಚಿಕೊಂಡು ದಕ್ಷಿಣ ದಿಕ್ಕಿಗೆ ಇದಿರಾಗಿ ವೇಗವಾಗಿ ವಾಯುವಿನಂತೆ ಪರಾಕ್ರಮದಿಂದ ಹಾರಿದನು. ॥4-7॥

(ಶ್ಲೋಕ-8)

ಮೂಲಮ್

ಆಕಾಶಾತ್ತ್ವರಿತಂ ದೇವೈರ್ವೀಕ್ಷ್ಯಮಾಣೋ ಜಗಾಮ ಸಃ ।
ದೃಷ್ಟ್ವಾನಿಲಸುತಂ ದೇವಾ ಗಚ್ಛಂತಂ ವಾಯುವೇಗತಃ ॥

(ಶ್ಲೋಕ-9)

ಮೂಲಮ್

ಪರೀಕ್ಷಣಾರ್ಥಂ ಸತ್ತ್ವಸ್ಯ ವಾನರಸ್ಯೇದಮಬ್ರುವನ್ ।
ಗಚ್ಛತ್ಯೇಷ ಮಹಾಸತ್ತ್ವೋ ವಾನರೋ ವಾಯುವಿಕ್ರಮಃ ॥

ಅನುವಾದ

ಆಗ ಅವನು ದೇವತೆಗಳು ನೋಡು-ನೋಡುತ್ತಿರುವಂತೆ ಆಕಾಶಮಾರ್ಗದಿಂದ ಬಹಳ ತೀವ್ರಗತಿಯಿಂದ ಹೋಗುತ್ತಿದ್ದನು. ವಾಯುವೇಗದಿಂದ ಹಾರುತ್ತಿದ್ದ ಪವನಪುತ್ರ ಹನುಮಂತನನ್ನು ನೋಡಿದ ದೇವತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ ‘‘ಈ ಬಲಶಾಲಿಯಾದ ವಾಯುವಿನಂತೆ ಪರಾಕ್ರಮವುಳ್ಳ ವಾನರನು ಲಂಕೆಗೆ ಹೊರಟಿರುವನು. ॥8-9॥

(ಶ್ಲೋಕ-10)

ಮೂಲಮ್

ಲಂಕಾಂ ಪ್ರವೇಷ್ಟುಂ ಶಕ್ತೋ ವಾ ನ ವಾ ಜಾನೀಮಹೇ ಬಲಮ್ ।
ಏವಂ ವಿಚಾರ್ಯ ನಾಗಾನಾಂ ಮಾತರಂ ಸುರಸಾಭಿಧಾಮ್ ॥

(ಶ್ಲೋಕ-11)

ಮೂಲಮ್

ಅಬ್ರವೀದ್ದೇವತಾವೃಂದಃ ಕೌತೂಹಲಸಮನ್ವಿತಃ ।
ಗಚ್ಛ ತ್ವಂ ವಾನರೇಂದ್ರಸ್ಯ ಕಿಂಚಿದ್ವಿಘ್ನಂ ಸಮಾಚರ ॥

(ಶ್ಲೋಕ-12)

ಮೂಲಮ್

ಜ್ಞಾತ್ವಾ ತಸ್ಯ ಬಲಂ ಬುದ್ಧಿಂ ಪುನರೇಹಿ ತ್ವರಾನ್ವಿತಾ ।
ಇತ್ಯುಕ್ತಾ ಸಾ ಯಯೌ ಶೀಘ್ರಂ ಹನುಮದ್ವಿಘ್ನಕಾರಣಾತ್ ॥

ಅನುವಾದ

ಆದರೆ ಲಂಕೆಯನ್ನು ಪ್ರವೇಶಿಸುವನೋ ಇಲ್ಲವೋ ಎಂಬುದನ್ನು ಪರೀಕ್ಷಿಸೋಣ’’ ಎಂದುಕೊಂಡು ಕುತೂಹಲಾವಿಷ್ಟರಾದ ದೇವತೆಗಳು ನಾಗಮಾತೆಯಾದ ಸುರಸೆಯ ಬಳಿ ಹೀಗೆಂದರು ‘‘ನೀನು ಈಗಲೇ ಹೋಗಿ ವಾನರಶ್ರೇಷ್ಠನ ಮಾರ್ಗದಲ್ಲಿ ಅಡ್ಡಿಯನ್ನುಂಟುಮಾಡಿ, ಅವನ ಬಲವನ್ನೂ, ಬುದ್ಧಿಯನ್ನೂ ತಿಳಿದುಕೊಂಡು ಜಾಗ್ರತೆಯಾಗಿ ಬಂದು ಬಿಡು.’’ ದೇವತೆಗಳ ಮಾತನ್ನು ಕೇಳಿದ ಸುರಸೆಯು ಹನುಮಂತನಿಗೆ ವಿಘ್ನವನ್ನೊಡ್ಡಲು ಹೊರಟಳು. ॥10-12॥

(ಶ್ಲೋಕ-13)

ಮೂಲಮ್

ಆವೃತ್ಯ ಮಾರ್ಗಂ ಪುರತಃ ಸ್ಥಿತ್ವಾ ವಾನರಮಬ್ರವೀತ್ ।
ಏಹಿ ಮೇ ವದನಂ ಶೀಘ್ರಂ ಪ್ರವಿಶಸ್ವ ಮಹಾಮತೇ ॥

(ಶ್ಲೋಕ-14)

ಮೂಲಮ್

ದೇವೈಸ್ತ್ವಂ ಕಲ್ಪಿತೋ ಭಕ್ಷ್ಯಃ ಕ್ಷುಧಾಸಂಪೀಡಿತಾತ್ಮನಃ ।
ತಾಮಾಹ ಹನುಮಾನ್ಮಾತರಹಂ ರಾಮಸ್ಯ ಶಾಸನಾತ್ ॥

(ಶ್ಲೋಕ-15)

ಮೂಲಮ್

ಗಚ್ಛಾಮಿ ಜಾನಕೀಂ ದ್ರಷ್ಟುಂ ಪುನರಾಗಮ್ಯ ಸತ್ವರಃ ।
ರಾಮಾಯ ಕುಶಲಂ ತಸ್ಯಾಃ ಕಥಯಿತ್ವಾ ತ್ವದಾನನಮ್ ॥

(ಶ್ಲೋಕ-16)

ಮೂಲಮ್

ನಿವೇಕ್ಷ್ಯೇ ದೇಹಿ ಮೇ ಮಾರ್ಗಂ ಸುರಸಾಯೈ ನಮೋಽಸ್ತುತೇ ।
ಇತ್ಯುಕ್ತಾ ಪುನರೇವಾಹ ಸುರಸಾ ಕ್ಷುಧಿತಾಸ್ಮ್ಯಹಮ್ ॥

(ಶ್ಲೋಕ-17)

ಮೂಲಮ್

ಪ್ರವಿಶ್ಯ ಗಚ್ಛ ಮೇ ವಕ್ತ್ರಂ ನೋ ಚೇತ್ತ್ವಾಂ ಭಕ್ಷಯಾಮ್ಯಹಮ್ ।
ಇತ್ಯುಕ್ತೋ ಹನುಮಾನಾಹ ಮುಖಂ ಶೀಘ್ರಂ ವಿದಾರಯ ॥

(ಶ್ಲೋಕ-18)

ಮೂಲಮ್

ಪ್ರವಿಶ್ಯ ವದನಂ ತೇಽದ್ಯ ಗಚ್ಛಾಮಿ ತ್ವರಯಾನ್ವಿತಃ ।
ಇತ್ಯುಕ್ತ್ವಾ ಯೋಜನಾಯಾಮದೇಹೋ ಭೂತ್ವಾಪುರಃ ಸ್ಥಿತಃ ॥

ಅನುವಾದ

ಸುರಸೆಯು ಅವನ ದಾರಿಯನ್ನು ಅಡ್ಡಗಟ್ಟಿ ಮುಂದೆ ನಿಂತು ಹೇಳಿದಳು — ‘‘ಎಲೈ ಬುದ್ಧಿಶಾಲಿಯೆ! ಬೇಗನೇ ನನ್ನ ಬಾಯೊಳಗೆ ಪ್ರವೇಶಿಸು. ಹಸಿವಿನಿಂದ ಬಳಲಿದ ನನಗೆ ದೇವತೆಗಳಿಂದಲೇ ನೀನು ಆಹಾರವಾಗಿ ದೊರಕಿರುವೆ.’’ ಆಗ ಹನುಮಂತನು ಆಕೆಯ ಬಳಿ ‘‘ತಾಯೆ! ನಾನು ಶ್ರೀರಾಮನ ಅಪ್ಪಣೆಯಂತೆ ಸೀತೆಯನ್ನು ಕಾಣುವುದಕ್ಕಾಗಿ ಹೋಗುತ್ತಿರುವೆನು. ಬೇಗನೇ ಹಿಂದಿರುಗಿ ಬಂದು ರಾಮನಿಗೆ ಆಕೆಯ ಕುಶಲವನ್ನು ತಿಳಿಸಿದ ಬಳಿಕ ನಿನ್ನ ಬಾಯನ್ನು ಪ್ರವೇಶಿಸುವೆನು.’’ ಈಗ ನನಗೆ ದಾರಿ ಬಿಡು, ನಿನಗೆ ನಮಸ್ಕಾರವಿರಲಿ ಎಂದು ಹೇಳಿದಾಗ, ಸುರಸೆಯು - ‘‘ನಾನು ತುಂಬಾ ಹಸಿದಿರುವೆನು. ಆದ್ದರಿಂದ ನನ್ನ ಬಾಯನ್ನು ಒಮ್ಮೆ ಪ್ರವೇಶಿಸಿ ಮತ್ತೆ ಮುನ್ನಡೆ, ಹಾಗಿಲ್ಲವಾದರೆ ನಿನ್ನನ್ನು ತಿಂದು ಹಾಕುವೆನು’’ ಎಂದು ಹೇಳಿದಳು. ಆಗ ಹನುಮಂತನು ‘‘ಸರಿ, ಹಾಗಾದರೆ ಬೇಗನೇ ಬಾಯಿತೆರೆ. ನಿನ್ನ ಬಾಯನ್ನು ಹೊಕ್ಕು ಬೇಗನೇ ಹೊರಡುವೆನು’’, ಎಂದು ಹೇಳಿ ಒಂದು ಯೋಜನದಷ್ಟು ವಿಸ್ತಾರವಾಗಿ ಶರೀರವನ್ನು ಬೆಳೆಸಿಕೊಂಡು ಎದುರಿಗೆ ನಿಂತುಕೊಂಡನು. ॥13-18॥

(ಶ್ಲೋಕ-19)

ಮೂಲಮ್

ದೃಷ್ಟ್ವಾ ಹನೂಮತೋ ರೂಪಂ ಸುರಸಾ ಪಂಚಯೋಜನಮ್ ।
ಮುಖಂ ಚಕಾರ ಹನುಮಾನ್ ದ್ವಿಗುಣಂ ರೂಪಮಾದಧತ್ ॥

(ಶ್ಲೋಕ-20)

ಮೂಲಮ್

ತತಶ್ಚಕಾರ ಸುರಸಾ ಯೋಜನಾನಾಂ ಚ ವಿಂಶತಿಮ್ ।
ವಕಂ ಚಕಾರ ಹನೂಮಾಂ ಸಿಂಶದ್ಯೋಜನ ಸಮ್ಮಿತಮ್ ॥

(ಶ್ಲೋಕ-21)

ಮೂಲಮ್

ತತಶ್ಚಕಾರ ಸುರಸಾ ಪಂಚಾಶದ್ಯೋಜನಾಯತಮ್ ।
ವಕಂ ತದಾ ಹನೂಮಾಂಸ್ತು ಬಭೂವಾಂಗುಷ್ಠಸನ್ನಿಭಃ ॥

(ಶ್ಲೋಕ-22)

ಮೂಲಮ್

ಪ್ರವಿಶ್ಯ ವದನಂ ತಸ್ಯಾಃ ಪುನರೇತ್ಯ ಪುರಃ ಸ್ಥಿತಃ ।
ಪ್ರವಿಷ್ಟೋ ನಿರ್ಗತೋಽಹಂ ತೇ ವದನಂ ದೇವಿ ತೇ ನಮಃ ॥

ಅನುವಾದ

ಸುರಸೆಯು ಹನುಮಂತನ ರೂಪವನ್ನು ಕಂಡು ತನ್ನ ಬಾಯನ್ನು ಐದು ಯೋಜನದಷ್ಟು ಅಗಲವಾಗಿಸಿದಳು. ಆಗ ಹನುಮಂತನು ಅದಕ್ಕೆ ಎರಡರಷ್ಟು ದೊಡ್ಡದಾದ ರೂಪವನ್ನು ಧರಿಸಿದನು. ಸುರಸೆಯು ಇಪ್ಪತ್ತು ಯೋಜನ ದಗಲವಾಗಿ ಬಾಯನ್ನು ತೆರೆದಳು. ಆಗ ಹನುಮಂತನು ಮೂವತ್ತು ಯೋಜನದಷ್ಟು ಶರೀರವುಳ್ಳವನಾದನು. ಅನಂತರ ಸುರಸೆಯು ಐವತ್ತು ಯೋಜನಗಳಷ್ಟು ಮುಖವನ್ನು ಅಗಲವಾಗಿ ಹಿಗ್ಗಿಸಿದಳು. ಅಷ್ಟರಲ್ಲಿ ಹನುಮತನು ಹೆಬ್ಬೆರಳಿನ ಗಾತ್ರದಷ್ಟು ಸಣ್ಣವನಾಗಿ ಆಕೆಯ ಬಾಯೊಳಗೆ ಹೊಕ್ಕು ಪುನಃ ಹೊರ ಬಂದು ಎದುರಿಗೆ ನಿಂತುಕೊಂಡು ‘‘ಎಲೈ ದೇವಿಯೆ! ನಿನ್ನ ಬಾಯನ್ನು ಪ್ರವೇಶಿಸಿ ಹೊರಬಂದಿರುವೆ. ನಿನಗೆ ನಮಸ್ಕಾರವಿರಲಿ.’’ ॥19-22॥

(ಶ್ಲೋಕ-23)

ಮೂಲಮ್

ಏವಂ ವದಂತಂ ದೃಷ್ಟ್ವಾ ಸಾ ಹನೂಮಂತಮಥಾಬ್ರವೀತ್ ।
ಗಚ್ಛ ಸಾಧಯ ರಾಮಸ್ಯ ಕಾರ್ಯಂ ಬುದ್ಧಿಮತಾಂ ವರ ॥

(ಶ್ಲೋಕ-24)

ಮೂಲಮ್

ದೇವೈಃ ಸಂಪ್ರೇಷಿತಾಹಂ ತೇ ಬಲಂ ಜಿಜ್ಞಾಸುಭಿಃ ಕಪೇ ।
ದೃಷ್ಟ್ವಾ ಸೀತಾಂ ಪುನರ್ಗತ್ವಾ ರಾಮಂ ದ್ರಕ್ಷ್ಯಸಿ ಗಚ್ಛ ಭೋಃ ॥

ಅನುವಾದ

ಹೀಗೆ ಹೇಳುತ್ತಿದ್ದ ಆ ಹನುಮಂತನನ್ನು ಕಂಡು ಸುರಸೆಯು - ‘‘ಎಲೈ ಬುದ್ಧಿವಂತರಲ್ಲಿ ಶ್ರೇಷ್ಠನೆ! ರಾಮಕಾರ್ಯವನ್ನು ಸಾಧಿಸುವವನಾಗು ; ಇನ್ನು ಹೊರಡು. ಎಲೈ ಕಪಿಯೆ ! ನಿನ್ನ ಬಲವನ್ನು ತಿಳಿಯುವುದಕ್ಕಾಗಿ ದೇವತೆಗಳಿಂದ ಕಳುಹಿಸಲ್ಪಟ್ಟವಳು ನಾನು. ನೀನು ನಿಶ್ಚಯವಾಗಿ ಸೀತೆಯನ್ನು ಕಂಡು ಹಿಂದಿರುಗಿ ಬಂದು ರಾಮನನ್ನು ಕಾಣಲಿರುವೆ’’ ಎಂದು ಹೇಳಿದಳು. ॥23-24॥

(ಶ್ಲೋಕ-25)

ಮೂಲಮ್

ಇತ್ಯುಕ್ತ್ವಾ ಸಾ ಯಯೌ ದೇವಲೋಕಂ ವಾಯುಸುತಃ ಪುನಃ ।
ಜಗಾಮ ವಾಯುಮಾರ್ಗೇಣ ಗರುತ್ಮಾನಿವ ಪಕ್ಷಿರಾಟ್ ॥

ಅನುವಾದ

ಹೀಗೆ ಹೇಳಿ ಸುರಸೆಯು ದೇವಲೋಕಕ್ಕೆ ಹೊರಟು ಹೋದಳು. ಮತ್ತೆ ಮಾರುತಿಯು ವಾಯುಮಾರ್ಗದಿಂದ ಪಕ್ಷಿ ಶ್ರೇಷ್ಠನಾದ ಗರುಡನಂತೆ ಹೊರಟನು. ॥25॥

(ಶ್ಲೋಕ-26)

ಮೂಲಮ್

ಸಮುದ್ರೋಽಪ್ಯಾಹ ಮೈನಾಕಂ ಮಣಿಕಾಂಚನಪರ್ವತಮ್ ।
ಗಚ್ಛತ್ಯೇಷ ಮಹಾಸತ್ತ್ವೋ ಹನೂಮಾನ್ಮಾರುತಾತ್ಮಜಃ ॥

(ಶ್ಲೋಕ-27)

ಮೂಲಮ್

ರಾಮಸ್ಯ ಕಾರ್ಯಸಿದ್ಧ್ಯರ್ಥಂ ತಸ್ಯ ತ್ವಂ ಸಚಿವೋ ಭವ ।
ಸಗರೈರ್ವರ್ದ್ಧಿತೋ ಯಸ್ಮಾತ್ಪುರಾಹಂ ಸಾಗರೋಭವಮ್ ॥

ಅನುವಾದ

ಆಗ ಸಮುದ್ರರಾಜನು ಹೊನ್ನು-ರತ್ನಮಯವಾದ ಮೈನಾಕ ಪರ್ವತವನ್ನು ಕುರಿತು ‘‘ಇದೋ, ಮಹಾಶಕ್ತಿಶಾಲಿಯಾದ ಪವನ ಪುತ್ರ ಹನುಮಂತನು ಶ್ರೀರಾಮನ ಕಾರ್ಯಸಾಧನೆಗಾಗಿ ಹೋಗುತ್ತಿರುವನು. ನೀನು ಅವನಿಗೆ ಸಹಾಯ ಮಾಡು. ಸಗರ ಪುತ್ರರಿಂದ ಹಿಂದೆ ಬೆಳೆದಿರುವ ನಾನು ಸಾಗರವೆನಿಸಿದೆನು. ॥26-27॥

(ಶ್ಲೋಕ-28)

ಮೂಲಮ್

ತಸ್ಯಾನ್ವಯೇ ಬಭೂವಾಸೌ ರಾಮೋ ದಾಶರಥಿಃ ಪ್ರಭುಃ ।
ತಸ್ಯ ಕಾರ್ಯಾರ್ಥಸಿದ್ಧ್ಯರ್ಥಂ ಗಚ್ಛತ್ಯೇಷ ಮಹಾಕಪಿಃ ॥

ಅನುವಾದ

ಆ ಸಗರನ ವಂಶದಲ್ಲೇ ದಶರಥ ಪುತ್ರನಾದ ಭಗವಾನ್ ಶ್ರೀರಾಮನು ಪ್ರಕಟನಾಗಿರುವನು. ಅವನ ಕೆಲಸ ಕ್ಕಾಗಿಯೇ ಈ ಮಹಾಕಪಿಯು ಪ್ರಯಾಣಮಾಡುತ್ತಿರುವನು. ॥28॥

(ಶ್ಲೋಕ-29)

ಮೂಲಮ್

ತ್ವ ಮುತ್ತಿಷ್ಠ ಜಲಾತ್ತೂರ್ಣಂ ತ್ವಯಿ ವಿಶ್ರಮ್ಯ ಗಚ್ಛತು ।
ಸ ತಥೇತಿ ಪ್ರಾದುರಭೂಜ್ಜಲಮಧ್ಯಾನ್ಮಹೋನ್ನತಃ ॥

(ಶ್ಲೋಕ-30)

ಮೂಲಮ್

ನಾನಾಮಣಿಮಯೈಃ ಶೃಂಗೈಸ್ತಸ್ಯೋಪರಿ ನರಾಕೃತಿಃ ।
ಪ್ರಾಹ ಯಾಂತಂ ಹನೂಮಂತಂ ಮೈನಾಕೋಹಂ ಮಹಾಕಪೇ ॥

(ಶ್ಲೋಕ-31)

ಮೂಲಮ್

ಸಮುದ್ರೇಣ ಸಮಾದಿಷ್ಟಸ್ತ್ವದ್ವಿಶ್ರಾಮಾಯ ಮಾರುತೇ ।
ಆಗಚ್ಛಾಮೃತಕಲ್ಪಾನಿ ಜಗ್ಧ್ವಾ ಪಕ್ವಫಲಾನಿ ಮೇ ॥

(ಶ್ಲೋಕ-32)

ಮೂಲಮ್

ವಿಶ್ರಮ್ಯಾತ್ರ ಕ್ಷಣಂ ಪಶ್ಚಾದ್ಗಮಿಷ್ಯಸಿ ಯಥಾಸುಖಮ್ ।
ಏವಮುಕ್ತೋಽಥ ತಂ ಪ್ರಾಹ ಹನೂಮಾನ್ಮಾರುತಾತ್ಮಜಃ ॥

(ಶ್ಲೋಕ-33)

ಮೂಲಮ್

ಗಚ್ಛತೋ ರಾಮಕಾರ್ಯಾಥಂ ಭಕ್ಷಣಂ ಮೇ ಕಥಂ ಭವೇತ್ ।
ವಿಶ್ರಾಮೋ ವಾ ಕಥಂ ಮೇ ಸ್ಯಾದ್ಗಂತವ್ಯಂ ತ್ವರಿತಂ ಮಯಾ ॥

(ಶ್ಲೋಕ-34)

ಮೂಲಮ್

ಇತ್ಯುಕ್ತ್ವಾ ಸ್ಪೃಷ್ಟಶಿಖರಃ ಕರಾಗ್ರೇಣ ಯಯೌ ಕಪಿಃ ।
ಕಿಂಚಿದ್ದೂರಂ ಗತಸ್ಯಾಸ್ಯ ಛಾಯಾಂ ಛಾಯಾಗ್ರಹೋಽಗ್ರಹೀತ್ ॥

ಅನುವಾದ

ನೀನು ಬೇಗನೇ ನೀರಿನಿಂದ ಮೇಲೇಳು. ನಿನ್ನಲ್ಲಿ ಅವನು ಸ್ವಲ್ಪ ವಿಶ್ರಾಂತಿಯನ್ನು ಪಡೆದು ಮುಂದಕ್ಕೆ ಹೋಗಲಿ’’ ಎಂದು ಹೇಳಿದನು. ಆಗ ಮೈನಾಕವು ಹಾಗೇ ಆಗಲೆಂದು ನೀರಿನ ಮಧ್ಯದಿಂದ ಎತ್ತರವಾಗಿ, ನಾನಾ ಮಣಿಮಯ ಶಿಖರದಮೇಲೆ ಮನುಷ್ಯಾಕಾರನಾಗಿ ನಿಂತುಕೊಂಡು ಹೋಗುತ್ತಿರುವ ಹನುಮಂತನನ್ನು ಕುರಿತು — ‘‘ಎಲೈ ಮಹಾಕಪಿಯೆ! ನಾನು ಮೈನಾಕನು. ಮಾರುತಿಯೆ! ನಿನ್ನ ವಿಶ್ರಾಂತಿಗಾಗಿ ಸಮುದ್ರರಾಜನಿಂದ ಅಪ್ಪಣೆ ಪಡೆದಿರುವೆನು. ಇಲ್ಲಿ ಇಳಿದು ಸಲ್ಪಕಾಲ ತಂಗಿ ಅಮೃತಸಮಾನವಾದ ಪಕ್ವವಾದ ಹಣ್ಣುಗಳನ್ನು ತಿಂದು ನನ್ನಲ್ಲಿ ವಿಶ್ರಾಂತಿಯನ್ನು ಪಡೆದು ಬಳಿಕ ಸುಖವಾಗಿ ಹೋಗುವೆಯಂತೆ’’ ಎಂದು ಹೇಳಿದನು. ಮೈನಾಕನು ಹೀಗೆ ನುಡಿದಾಗ ಪವನಪುತ್ರ ಹನುಮಂತನು ‘‘ಅಯ್ಯಾ! ರಾಮನ ಕಾರ್ಯಕ್ಕಾಗಿ ಹೊರಟಿರುವ ನನಗೆ ತಿನ್ನುವುದಾಗಲಿ, ವಿಶ್ರಾಂತಿ ಪಡೆಯುವುದಾಗಲಿ, ಹೇಗೆ ಯೋಗ್ಯವಾದೀತು? ನನಗೆ ಬೇಗನೇ ಹೋಗಬೇಕಾಗಿದೆ’’ ಎಂದು ಹೇಳಿ ಕಪಿಶ್ರೇಷ್ಠನು ಕೈಯಿಂದ ಮೈನಾಕವನ್ನು ಮುಟ್ಟಿ, ಅವನನ್ನು ಮನ್ನಿಸಿ ಮುಂದಕ್ಕೆ ನಡೆದನು. ಸ್ವಲ್ಪ ದೂರ ಹೋದಬಳಿಕ ಅವನ ನೆರಳನ್ನು ಒಂದು ಛಾಯಾಗ್ರಹಿಯು ಹಿಡಿದುಕೊಂಡಳು. ॥29-34॥

(ಶ್ಲೋಕ-35)

ಮೂಲಮ್

ಸಿಂಹಿಕಾ ನಾಮ ಸಾ ಘೋರಾ ಜಲಮಧ್ಯೇ ಸ್ಥಿತಾ ಸದಾ ।
ಆಕಾಶಗಾಮಿನಾಂ ಛಾಯಾಮಾಕ್ರಮ್ಯಾಕೃಷ್ಯ ಭಕ್ಷಯೇತ್ ॥

ಅನುವಾದ

ಅವಳು ಸಿಂಹಿಕೆಯೆಂಬ ಘೋರರಾಕ್ಷಸಿಯಾಗಿದ್ದು, ಸದಾಕಾಲ ನೀರಿನಲ್ಲೇ ಇದ್ದು, ಆಕಾಶಮಾರ್ಗದಲ್ಲಿ ಸಂಚರಿಸುವ ಪ್ರಾಣಿಗಳ ನೆರಳನ್ನು ಹಿಡಿದೆಳೆದು ತಿಂದುಬಿಡುತ್ತಿದ್ದಳು. ॥35॥

(ಶ್ಲೋಕ-36)

ಮೂಲಮ್

ತಯಾ ಗೃಹೀತೋ ಹನುಮಾಂಶ್ಚಿಂತಯಾಮಾಸ ವೀರ್ಯವಾನ್ ।
ಕೇನೇದಂ ಮೇ ಕೃತಂ ವೇಗರೋಧನಂ ವಿಘ್ನಕಾರಿಣಾ ॥

(ಶ್ಲೋಕ-37)

ಮೂಲಮ್

ದೃಶ್ಯತೇ ನೈವ ಕೋಽಪ್ಯತ್ರ ವಿಸ್ಮಯೋ ಮೇ ಪ್ರಜಾಯತೇ ।
ಏವಂ ವಿಚಿಂತ್ಯ ಹನೂಮಾನಧೋ ದೃಷ್ಟಿಂ ಪ್ರಸಾರಯತ್ ॥

(ಶ್ಲೋಕ-38)

ಮೂಲಮ್

ತತ್ರ ದೃಷ್ಟ್ವಾ ಮಹಾಕಾಯಾಂ ಸಿಂಹಿಕಾಂ ಘೋರರೂಪಿಣೀಮ್ ।
ಪಪಾತ ಸಲಿಲೇ ತೂರ್ಣಂ ಪದ್ ಭ್ಯಾಮೇವಾಹನದ್ರುಷಾ ॥

ಅನುವಾದ

ಆ ಸಿಂಹಿಕೆಯು ಹಿಡಿದುಕೊಂಡಾಗ ಪರಾಕ್ರಮಶಾಲಿಯಾದ ಹನುಮಂತನು ‘ವಿಘ್ನವನ್ನುಂಟುಮಾಡಿ ನನ್ನ ವೇಗವನ್ನು ಯಾರು ತಡೆದಿರುವರು? ಇಲ್ಲಾದರೋ ಯಾರೂ ಕಾಣಿಸುತ್ತಿಲ್ಲ! ನನಗೆ ಆಶ್ಚರ್ಯವಾಗುತ್ತಿದೆ’ ಎಂದು ಆಲೋಚಿಸತೊಡಗಿದನು. ಹೀಗೆ ಆಲೋಚಿಸುತ್ತಾ ತನ್ನ ದೃಷ್ಟಿಯನ್ನು ಕೆಳಚಾಚಿದನು. ಅಲ್ಲಿ ಮಹಾಭಯಂಕರಳಾದ ದೊಡ್ಡ ಶರೀರದ ಸಿಂಹಿಕಾ ರಾಕ್ಷಸಿಯನ್ನು ಕಂಡು ವೇಗವಾಗಿ ನೀರಿನೊಳಗೆ ಧುಮುಕಿ ಕೋಪದಿಂದ ಅವಳನ್ನು ಕಾಲಿನಿಂದಲೇ ಒದ್ದು ಕೊಂದುಬಿಟ್ಟನು. ॥36-38॥

(ಶ್ಲೋಕ-39)

ಮೂಲಮ್

ಪುನರುತ್ಪ್ಲುತ್ಯ ಹನುಮಾನ್ದಕ್ಷಿಣಾಭಿಮುಖೋ ಯಯೌ ।
ತತೋ ದಕ್ಷಿಣಮಾಸಾದ್ಯ ಕೂಲಂ ನಾನಾಫಲದ್ರುಮಮ್ ॥

ಅನುವಾದ

ಮತ್ತೆ ಮೇಲಕ್ಕೆ ನೆಗೆದು ದಕ್ಷಿಣಾಭಿಮುಖನಾಗಿ ಹೊರಟನು. ಮುಂದೆ ಸಮುದ್ರದ ದಕ್ಷಿಣ ತೀರವನ್ನು ತಲುಪಿದನು. ಅಲ್ಲಿ ಅನೇಕ ಪ್ರಕಾರದ ಲಗಳಿಂದ ತುಂಬಿದ ವೃಕ್ಷಗಳಿದ್ದವು. ॥ 39 ॥

(ಶ್ಲೋಕ-40)

ಮೂಲಮ್

ನಾನಾಪಕ್ಷಿಮೃಗಾಕೀರ್ಣಂ ನಾನಾಪುಷ್ಪಲತಾವೃತಮ್ ।
ತತೋ ದದರ್ಶ ನಗರಂ ತ್ರಿಕೂಟಾಚಲ ಮೂರ್ಧನಿ ॥

(ಶ್ಲೋಕ-41)

ಮೂಲಮ್

ಪ್ರಾಕಾರೈರ್ಬಹುಭಿರ್ಯುಕ್ತಂ ಪರಿಖಾಭಿಶ್ಚ ಸರ್ವತಃ ।
ಪ್ರವೇಕ್ಷ್ಯಾಮಿ ಕಥಂ ಲಂಕಾಮಿತಿ ಚಿಂತಾಪರೋಭವತ್ ॥

ಅನುವಾದ

ಹಾಗೂ ವಿಧ-ವಿಧವಾದ ಮೃಗ-ಪಕ್ಷಿಗಳಿಂದ ತುಂಬಿದ್ದ, ನಾನಾ ವಿಧವಾದ ಹೂವು-ಬಳ್ಳಿಗಳಿಂದ ಆವೃತವಾಗಿದ್ದ ತ್ರಿಕೂಟ ಪರ್ವತದಲ್ಲಿ ನೆಲೆಸಿದ, ಸುತ್ತಲೂ ಅನೇಕ ಕೋಟೆಗಳಿಂದಲೂ, ಕಂದಕಗಳಿಂದಲೂ ಕೂಡಿದ ಲಂಕಾಪುರಿಯನ್ನು ನೋಡಿದನು. ಅದನ್ನು ಕಂಡು ಈ ಲಂಕೆಯನ್ನು ಹೇಗೆ ಪ್ರವೇಶಿಸಬಹುದು? ಎಂದು ಯೋಚಿಸ ತೊಡಗಿದನು. ॥40-41॥

(ಶ್ಲೋಕ-42)

ಮೂಲಮ್

ರಾತ್ರೌ ವೇಕ್ಷ್ಯಾಮಿ ಸೂಕ್ಷ್ಮೋಽಹಂ ಲಂಕಾಂ ರಾವಣಪಾಲಿತಾಮ್ ।
ಏವಂ ವಿಚಿಂತ್ಯ ತತ್ರೈವ ಸ್ಥಿತ್ವಾ ಲಂಕಾಂ ಜಗಾಮ ಸಃ ॥

(ಶ್ಲೋಕ-43)

ಮೂಲಮ್

ಧೃತ್ವಾ ಸೂಕ್ಷ್ಮಂ ವಪುರ್ದ್ವಾರಂ ಪ್ರವಿವೇಶ ಪ್ರತಾಪವಾನ್ ।
ತತ್ರ ಲಂಕಾಪುರೀ ಸಾಕ್ಷಾದ್ರಾಕ್ಷಸೀವೇಷಧಾರಿಣೀ ॥

ಅನುವಾದ

ನಾನು ರಾತ್ರಿಯಲ್ಲಿ ಸೂಕ್ಷ್ಮ ರೂಪನಾಗಿ ರಾವಣನು ಆಳುತ್ತಿರುವ ಲಂಕೆಯನ್ನು ಪ್ರವೇಶಿಸುವೆನು ಎಂದು ಯೋಚಿಸಿ ಅಲ್ಲೇ ಉಳಿದುಕೊಂಡನು. ಸಂಜೆಯಾಗುತ್ತಲೇ ಲಂಕೆಯ ಕಡೆಗೆ ಹೊರಟನು. ಸೂಕ್ಷ್ಮವಾದ ಶರೀರವನ್ನು ಧರಿಸಿ ಪ್ರತಾಪಶಾಲಿಯಾದ ಹನುಮಂತನು ಲಂಕೆಯ ಮಹಾದ್ವಾರವನ್ನು ಪ್ರವೇಶಿಸುತ್ತಿರುವಂತೆ ಅಲ್ಲಿ ರಾಕ್ಷಸಿಯ ವೇಷವನ್ನು ಧರಿಸಿದ್ದ ಲಂಕಾಧಿದೇವತೆಯು ನಿಂತಿದ್ದಳು. ॥42-43॥

(ಶ್ಲೋಕ-44)

ಮೂಲಮ್

ಪ್ರವಿಶಂತಂ ಹನೂಮಂತಂ ದೃಷ್ಟ್ವಾ ಲಂಕಾ ವ್ಯತರ್ಜಯತ್ ।
ಕಸ್ತ್ವಂ ವಾನರರೂಪೇಣ ಮಾಮನಾದೃತ್ಯ ಲಂಕಿನೀಮ್ ॥

(ಶ್ಲೋಕ-45)

ಮೂಲಮ್

ಪ್ರವಿಶ್ಯ ಚೋರವದ್ರಾತ್ರೌ ಕಿಂ ಭವಾನ್ಕರ್ತುಮಿಚ್ಛತಿ ।
ಇತ್ಯುಕ್ತ್ವಾ ರೋಷತಾಮ್ರಾಕ್ಷೀ ಪಾದೇನಾಭಿಜಘಾನ ತಮ್ ॥

ಅನುವಾದ

ಒಳಗೆ ಪ್ರವೇಶಿಸುತ್ತಿದ್ದ ಹನುಮಂತನನ್ನು ತಡೆದು ಹೀಗೆಂದು ಗದರಿಸಿದಳು — ‘‘ಯಾರೋ ನೀನು? ನನ್ನನ್ನು ತಿರಸ್ಕರಿಸಿ ಕಪಿಯ ವೇಷದಿಂದ ಕಳ್ಳನಂತೆ ರಾತ್ರಿಯಲ್ಲಿ ಒಳಹೊಕ್ಕು ಏನು ಮಾಡಬೇಕೆಂದಿರುವೆ?’’ ಹೀಗೆ ಹೇಳುತ್ತಾ ಕೋಪದಿಂದ ಕಣ್ಣು ಕೆಂಪಾಗಿಸಿ ಕಾಲಿನಿಂದ ಒದ್ದುಬಿಟ್ಟಳು. ॥44-45॥

(ಶ್ಲೋಕ-46)

ಮೂಲಮ್

ಹನುಮಾನಪಿ ತಾಂ ವಾಮಮುಷ್ಟಿನಾವಜ್ಞಯಾಹನತ್ ।
ತದೈವ ಪತಿತಾ ಭೂವೌ ರಕ್ತಮುದ್ವಮತೀ ಭೃಶಮ್ ॥

ಅನುವಾದ

ಹನುಮಂತನು ಆಕೆಯನ್ನು ಇವಳು ಸೀಯೆಂದು ಕನಿಕರದಿಂದ ಎಡಗೈಮುಷ್ಟಿಯಿಂದ ಗುದ್ದಿದನು. ಅಷ್ಟುಮಾತ್ರಕ್ಕೆ ಅವಳು ರಕ್ತವನ್ನು ಕಾರುತ್ತಾ ನೆಲದ ಮೇಲೆ ಬಿದ್ದಳು. ॥46॥

(ಶ್ಲೋಕ-47)

ಮೂಲಮ್

ಉತ್ಥಾಯ ಪ್ರಾಹ ಸಾ ಲಂಕಾ ಹನೂಮಂತಂ ಮಹಾಬಲಮ್ ।
ಹನೂಮನ್ ಗಚ್ಛ ಭದ್ರಂ ತೇ ಜಿತಾ ಲಂಕಾ ತ್ವಯಾನಘ ॥

ಅನುವಾದ

ಮತ್ತೆ ಸ್ವಲ್ಪ ಹೊತ್ತಿನಲ್ಲೇ ಮೇಲೆದ್ದು ಆ ಲಂಕಿಣಿಯು ಮಹಾ ಬಲಶಾಲಿಯಾದ ಹನುಮಂತನನ್ನು ಕುರಿತು ‘‘ಎಲೈ ಕಪಿಯೆ! ನಿನಗೆ ಮಂಗಳವಾಗಲಿ! ಪಾಪ ರಹಿತನೆ! ನೀನು ಲಂಕೆಯನ್ನು ಗೆದ್ದಿರುವೆ. ನೀನು ಮುಂದಕ್ಕೆ ಹೋಗು’’ ಎಂದಳು. ॥47॥

(ಶ್ಲೋಕ-48)

ಮೂಲಮ್

ಪುರಾಹಂ ಬ್ರಹ್ಮಣಾ ಪ್ರೋಕ್ತಾ ಹ್ಯಷ್ಟಾವಿಂಶತಿಪರ್ಯಯೇ ।
ತ್ರೇತಾಯುಗೇ ದಾಶರಥೀ ರಾಮೋ ನಾರಾಯಣೋಽವ್ಯಯಃ ॥

(ಶ್ಲೋಕ-49)

ಮೂಲಮ್

ಜನಿಷ್ಯತೇ ಯೋಗಮಾಯಾ ಸೀತಾ ಜನಕವೇಶ್ಮನಿ ।
ಭೂಭಾರಹರಣಾರ್ಥಾಯ ಪ್ರಾರ್ಥಿತೋಽಯಂ ಮಯಾ ಕ್ವಚಿತ್ ॥

ಅನುವಾದ

ಹಿಂದೆ ಬ್ರಹ್ಮದೇವರು ನನಗೆ ಹೇಳಿದ್ದರು — ‘‘ಭೂಮಿಯ ಭಾರವನ್ನು ಇಳಿಸಲೋಸುಗ ನಾನು ಪ್ರಾರ್ಥಿಸಿದಂತೆ ಇಪ್ಪತ್ತೆಂಟನೇ ಚತುರ್ಯುಗದ ತ್ರೇತಾಯುಗದಲ್ಲಿ ಅವಿನಾಶಿಯಾದ ಭಗವಾನ್ ನಾರಾಯಣನು ದಶರಥನ ಮಗನಾಗಿ ಶ್ರೀರಾಮ ರೂಪದಿಂದ ಅವತರಿಸುವನು. ಅವನ ಯೋಗಮಾಯೆಯು ಮಹಾರಾಜಾ ಜನಕನ ಮನೆಯಲ್ಲಿ ಸೀತೆಯಾಗಿ ಪ್ರಕಟಳಾಗುವಳು. ॥48-49॥

(ಶ್ಲೋಕ-50)

ಮೂಲಮ್

ಸಭಾರ್ಯೋ ರಾಘವೋ ಭ್ರಾತ್ರಾ ಗಮಿಷ್ಯತಿ ಮಹಾವನಮ್ ।
ತತ್ರ ಸೀತಾಂ ಮಹಾಮಾಯಾಂ ರಾವಣೋಪಹರಿಷ್ಯತಿ ॥

ಅನುವಾದ

ಆ ರಾಮಚಂದ್ರನು ತಮ್ಮ ಲಕ್ಷ್ಮಣ, ಪತ್ನಿ ಸೀತೆಯೊಂದಿಗೆ ಮಹಾವನ ದಂಡಕಾರಣ್ಯಕ್ಕೆ ತೆರಳುವನು. ಅಲ್ಲಿ ಮಹಾಮಾಯೆಯಾದ ಸೀತೆಯನ್ನು ರಾವಣನು ಅಪಹರಿಸುವನು. ॥50॥

(ಶ್ಲೋಕ-51)

ಮೂಲಮ್

ಪಶ್ಚಾದ್ರಾಮೇಣ ಸಾಚಿವ್ಯಂ ಸುಗ್ರೀವಸ್ಯ ಭವಿಷ್ಯತಿ ।
ಸುಗ್ರೀವೋ ಜಾನಕೀಂ ದ್ರಷ್ಟುಂ ವಾನರಾನ್ಪ್ರೇಷಯಿಷ್ಯತಿ ॥

ಅನುವಾದ

ಅನಂತರ ರಾಮನೊಡನೆ ಸುಗ್ರೀವನಿಗೆ ಸ್ನೇಹವಾಗುವುದು. ಸುಗ್ರೀವನು ಸೀತೆಯನ್ನು ಹುಡುಕುವುದಕ್ಕಾಗಿ ವಾನರರನ್ನು ಕಳಿಸುವನು. ॥51॥

(ಶ್ಲೋಕ-52)

ಮೂಲಮ್

ತತ್ರೈಕೋ ವಾನರೋ ರಾತ್ರಾವಾಗಮಿಷ್ಯತಿ ತೇಂತಿಕಮ್ ।
ತ್ವಯಾ ಚ ಭರ್ತ್ಸಿತಃ ಸೋಪಿ ತ್ವಾಂ ಹನಿಷ್ಯತಿ ಮುಷ್ಟಿನಾ ॥

ಅನುವಾದ

ಅದರಲ್ಲಿನ ಓರ್ವ ವಾನರನು ರಾತ್ರಿಯಲ್ಲಿ ನೀನಿದ್ದಲ್ಲಿಗೆ ಬರುವನು. ನೀನು ಗದರಿಸಿದಾಗ ಆ ವಾನರನು ನಿನ್ನನ್ನು ಮುಷ್ಟಿಯಿಂದ ಗುದ್ದುವನು. ॥52॥

(ಶ್ಲೋಕ-53)

ಮೂಲಮ್

ತೇನಾಹತಾ ತ್ವಂ ವ್ಯಥಿತಾ ಭವಿಷ್ಯಸಿ ಯದಾನಘೇ ।
ತದೈವ ರಾವಣಸ್ಯಾಂತೋ ಭವಿಷ್ಯತಿ ನ ಸಂಶಯಃ ॥

ಅನುವಾದ

ಹೇ ಪಾಪರಹಿತಳೆ! ಅವನು ಹೊಡೆದಾಗ ನೀನು ಕಳೆಗುಂದಿ ಸೋಲುವೆಯೋ ಆಗಲೇ ರಾವಣನ ನಾಶವಾಗಲಿದೆ. ಈ ವಿಷಯದಲ್ಲಿ ಸಂಶಯವಿಲ್ಲ.’’ ॥53॥

(ಶ್ಲೋಕ-54)

ಮೂಲಮ್

ತಸ್ಮಾತ್ತ್ವಯಾ ಜಿತಾ ಲಂಕಾ ಜಿತಂ ಸರ್ವಂ ತ್ವಯಾನಘ ।
ರಾವಣಾಂತಃಪುರವರೇ ಕ್ರೀಡಾಕಾನನಮುತ್ತಮಮ್ ॥

ಅನುವಾದ

ಆದ್ದರಿಂದ ಹೇ ಪಾಪರಹಿತ ಹನುಮಂತನೆ! ನೀನು (ನನ್ನನ್ನು) ಲಂಕೆಯನ್ನು ಗೆದ್ದಿರುವೆ. ಇದರಿಂದ ನೀನು ಎಲ್ಲರನ್ನು ಗೆದ್ದಂತಾಯಿತು. ರಾವಣನ ಅಂತಃಪುರದ ನಡುವೆ ಒಂದು ಉತ್ತಮ ಕ್ರೀಡಾವನ ಇದೆ. ॥54॥

(ಶ್ಲೋಕ-55)

ಮೂಲಮ್

ತನ್ಮಧ್ಯೇಽಶೋಕವನಿಕಾ ದಿವ್ಯಪಾದಪಸಂಕುಲಾ ।
ಅಸ್ತಿ ತಸ್ಯಾಂ ಮಹಾವೃಕ್ಷಃ ಶಿಂಶಪಾ ನಾಮ ಮಧ್ಯಗಃ ॥

(ಶ್ಲೋಕ-56)

ಮೂಲಮ್

ತತ್ರಾಸ್ತೇ ಜಾನಕೀ ಘೋರರಾಕ್ಷಸೀಭಿಃ ಸುರಕ್ಷಿತಾ ।
ದೃಷ್ಟೈವ ಗಚ್ಛ ತ್ವರಿತಂ ರಾಘವಾಯ ನಿವೇದಯ ॥

ಅನುವಾದ

ಅದರಲ್ಲಿ ದಿವ್ಯವೃಕ್ಷಗಳಿಂದ ನಿಬಿಡವಾದ ಅಶೋಕವಾಟಿಕೆ ಇದೆ. ಅದರಲ್ಲಿ ಶಿಂಶಪಾ ಎಂಬ ಒಂದು ದೊಡ್ಡ ವೃಕ್ಷವಿದೆ. ಅಲ್ಲಿ ಭಯಂಕರರಾದ ರಾಕ್ಷಸಿಯರು ಕಾಯುತ್ತಿದ್ದು ಸೀತೆಯು ಇರುವಳು. ಆಕೆಯನ್ನು ಕಂಡು ಕೂಡಲೇ ಹೊರಟು ನೀನು ರಾಮನಿಗೆ ತಿಳಿಸು. ॥55-56॥

(ಶ್ಲೋಕ-57)

ಮೂಲಮ್

ಧನ್ಯಾಹಮಪ್ಯದ್ಯ ಚಿರಾಯ ರಾಘವ -
ಸ್ಮೃತಿರ್ಮಮಾಸೀದ್ಭವಪಾಶಮೋಚನೀ ।
ತದ್ಭಕ್ತಸಂಗೋಪ್ಯತಿದುರ್ಲಭೋ ಮಮ
ಪ್ರಸೀದತಾಂ ದಾಶರಥಿಃ ಸದಾ ಹೃದಿ ॥

ಅನುವಾದ

ನಾನು ಈಗ ಧನ್ಯಳಾದೆನು. ಬಹಳ ಕಾಲದ ಅನಂತರ ಸಂಸಾರಬಂಧವನ್ನೇ ನಾಶಗೊಳಿಸುವ ಶ್ರೀರಾಮನ ನೆನಪು ದೊರಕಿತು. ಅವನ ಭಕ್ತನ ದುರ್ಲಭವಾದ ಸಂಗವು ಪ್ರಾಪ್ತವಾಯಿತು. ನನ್ನ ಹೃದಯದಲ್ಲಿ ದಶರಥನಂದನ ಶ್ರೀರಾಮನು ಪ್ರಸನ್ನನಾಗಿ ವಾಸಿಸಲಿ’’ ಎಂದು ಪ್ರಾರ್ಥಿಸಿದಳು. ॥57॥

(ಶ್ಲೋಕ-58)

ಮೂಲಮ್

ಉಲ್ಲಂಘಿತೇಽಬ್ಧೌ ಪವನಾತ್ಮಜೇನ
ಧರಾಸುತಾಯಾಶ್ಚ ದಶಾನನಸ್ಯ ।
ಪುಸ್ಫೋರ ವಾಮಾಕ್ಷಿ ಭುಜಶ್ಚ ತೀವ್ರಂ
ರಾಮಸ್ಯ ದಕ್ಷಾಂಗಮತೀಂದ್ರಿಯಸ್ಯ ॥

ಅನುವಾದ

ಪವನನಂದನ ಹನುಮಂತನು ಸಮುದ್ರವನ್ನು ದಾಟುತ್ತಲೇ ಭೂಜಾತೆಯಾದ ಸೀತೆಯ ಮತ್ತು ರಾವಣನ ಎಡಗಣ್ಣು ಹಾಗೂ ಎಡಭುಜಗಳು ಅದುರಿದವು. ಇಂದ್ರಿಯ ಗೋಚರನಲ್ಲದ ರಾಮನ ಬಲಭಾಗವು ಜೋರಾಗಿ ಅದುರಿತು. ॥58॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಸುಂದರಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಸುಂದರಕಾಂಡದಲ್ಲಿ ಮೊದಲನೆಯ ಸರ್ಗವು ಮುಗಿಯಿತು.