೦೯

[ಒಂಭತ್ತನೆಯ ಸರ್ಗ]

ಭಾಗಸೂಚನಾ

ಸಮುದ್ರೋಲ್ಲಂಘನದ ಮಂತ್ರಾಲೋಚನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಗತೇ ವಿಹಾಯಸಾ ಗೃಧ್ರರಾಜೇ ವಾನರಪುಂಗವಾಃ ।
ಹರ್ಷೇಣ ಮಹತಾವಿಷ್ಟಾಃ ಸೀತಾದರ್ಶನಲಾಲಸಾಃ ॥

(ಶ್ಲೋಕ-2)

ಮೂಲಮ್

ಉಚುಃ ಸಮುದ್ರಂ ಪಶ್ಯಂತೋ ನಕ್ರಚಕ್ರಭಯಂಕರಮ್ ।
ತರಂಗಾದಿಭಿರುನ್ನದ್ಧಮಾಕಾಶಮಿವ ದುರ್ಗ್ರಹಮ್ ॥

(ಶ್ಲೋಕ-3)

ಮೂಲಮ್

ಪರಸ್ಪರಮವೋಚನ್ವೈ ಕಥಮೇನಂ ತರಾಮಹೇ ।
ಉವಾಚ ಚಾಂಗದಸ್ತತ್ರ ಶೃಣುಧ್ವಂ ವಾನರೋತ್ತಮಾಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಗೃಧ್ರರಾಜನಾದ ಸಂಪಾತಿಯು ಆಕಾಶ ಮಾರ್ಗದಿಂದ ಹಾರಿ ಹೋಗಲಾಗಿ, ಸೀತೆಯನ್ನು ನೋಡಬೇಕೆಂದು ತವಕಿಸುವಂಥ ಕಪಿಗಳು ಬಹಳ ಸಂತೋಷದಿಂದ ಕೂಡಿದವರಾಗಿ ಸಮುದ್ರದ ಕಡೆಗೆ ನೋಡುತ್ತಾ ಹೀಗೆಂದರು ಮೊಸಳೆಗಳು, ನೀರಿನ ಸುಳಿಗಳು, ಹೆದ್ದೆರೆಗಳಿಂದ ಕೂಡಿದ ಎದ್ದು ಕುಣಿಯುತ್ತಿರುವಂತೆ ಕಂಡು ಬರುವ ಹಾಗೂ ಆಕಾಶದಂತೆ ಅಳತೆಗೆ ಸಿಗದ ಈ ಸಮುದ್ರವನ್ನು ನಾವು ಹೇಗೆ ದಾಟಬಲ್ಲೆವು? ಹೀಗೆ ಪರಸ್ಪರ ಮಾತನಾಡಿಕೊಂಡರು. ಆಗ ಅಂಗದನು ಹೇಳಿದನು — ‘‘ಎಲೈ ವಾನರಶ್ರೇಷ್ಠರೆ! ನನ್ನ ಮಾತನ್ನು ಕೇಳಿರಿ. ॥1-3॥

(ಶ್ಲೋಕ-4)

ಮೂಲಮ್

ಭವಂತೋಽತ್ಯಂತಬಲಿನಃ ಶೂರಾಶ್ಚ ಕೃತವಿಕ್ರಮಾಃ ।
ಕೋ ವಾತ್ರ ವಾರಿಧಿಂ ತೀರ್ತ್ವಾ ರಾಜಕಾರ್ಯಂ ಕರಿಷ್ಯತಿ ॥

(ಶ್ಲೋಕ-5)

ಮೂಲಮ್

ಏತೇಷಾಂ ವಾನರಾಣಾಂ ಸ ಪ್ರಾಣದಾತಾ ನ ಸಂಶಯಃ ।
ತದುತ್ತಿಷ್ಠತು ಮೇ ಶೀಘ್ರಂ ಪುರತೋ ಯೋ ಮಹಾಬಲಃ ॥

ಅನುವಾದ

ನೀವುಗಳು ಹೆಚ್ಚಿನ ಬಲಿಷ್ಠರೂ, ಶೂರರೂ, ಪರಾಕ್ರಮಿಗಳೂ ಆಗಿರುವಿರಿ. ನಿಮ್ಮಗಳ ನಡುವೆ ಯಾರು ಸಮುದ್ರವನ್ನು ದಾಟಿ ರಾಜ ಕಾರ್ಯವನ್ನು ಮಾಡಬಲ್ಲನೋ ಅವನು ಈ ಎಲ್ಲ ಕಪಿಗಳಿಗೂ ಪ್ರಾಣದಾನವನ್ನು ಮಾಡುವವನಾಗುವನು. ಆದ್ದರಿಂದ ಯಾರು ಬಹಳ ಬಲಿಷ್ಠನೋ ಅವನು ಮೇಲಕ್ಕೆದ್ದು ನನ್ನೆದುರಿಗೆ ಬಂದು ನಿಲ್ಲಲಿ. ॥4-5॥

(ಶ್ಲೋಕ-6)

ಮೂಲಮ್

ವಾನರಾಣಾಂ ಚ ಸರ್ವೇಷಾಂ ರಾಮಸುಗ್ರೀವಯೋರಪಿ ।
ಸ ಏವ ಪಾಲಕೋ ಭೂಯಾನ್ನಾತ್ರ ಕಾರ್ಯಾ ವಿಚಾರಣಾ ॥

ಅನುವಾದ

ಅವನೇ ಎಲ್ಲ ಕಪಿಗಳನ್ನೂ ಹಾಗೂ ರಾಮ-ಸುಗ್ರೀವರನ್ನೂ ಕಾಪಾಡುವವನಾಗುವನು. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ವಿರುವುದಿಲ್ಲ.’’ ॥6॥

(ಶ್ಲೋಕ-7)

ಮೂಲಮ್

ಇತ್ಯುಕ್ತೇ ಯುವರಾಜೇನ ತೂಷ್ಣೀಂ ವಾನರಸೈನಿಕಾಃ ।
ಆಸನ್ನೋಚುಃ ಕಿಂಚಿದಪಿ ಪರಸ್ಪರವಿಲೋಕಿನಃ ॥

ಅನುವಾದ

ಯುವರಾಜ ಅಂಗದನು ಈ ರೀತಿಯಾಗಿ ನುಡಿಯಲಾಗಿ, ವಾನರ ಸೈನಿಕರೆಲ್ಲರೂ ಸುಮ್ಮನಾಗಿಬಿಟ್ಟರು. ಯಾರ ಬಾಯಿಯಿಂದಲೂ ಒಂದು ಶಬ್ದವೂ ಹೊರಡಲಿಲ್ಲ. ಕೇವಲ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತಾ ಕುಳಿತರು. ॥7॥

(ಶ್ಲೋಕ-8)

ಮೂಲಮ್ (ವಾಚನಮ್)

ಅಂಗದ ಉವಾಚ

ಮೂಲಮ್

ಉಚ್ಯತಾಂ ವೈ ಬಲಂ ಸರ್ವೈಃ ಪ್ರತ್ಯೇಕಂ ಕಾರ್ಯಸಿದ್ಧಯೇ ।
ಕೇನ ವಾ ಸಾಧ್ಯತೇ ಕಾರ್ಯಂ ಜಾನೀಮಸ್ತದನಂತರಮ್ ॥

ಅನುವಾದ

ಅಂಗದನು ಇಂತೆಂದನು — ಸರಿ, ಈ ಕಾರ್ಯವನ್ನು ಮಾಡುವುದಕ್ಕಾಗಿ ಎಲ್ಲರೂ ತಮ್ಮ-ತಮ್ಮ ಶಕ್ತಿಯನ್ನು ವರ್ಣಿಸಿರಿ. ಆಗ ಈ ಕಾರ್ಯವನ್ನು ಯಾರು ಮಾಡುವರು ಎಂಬುದು ತಿಳಿದೀತು. ॥8॥

(ಶ್ಲೋಕ-9)

ಮೂಲಮ್

ಅಂಗದಸ್ಯ ವಚಃ ಶ್ರುತ್ವಾ ಪ್ರೋಚುರ್ವೀರಾ ಬಲಂ ಪೃಥಕ್ ।
ಯೋಜನಾನಾಂ ದಶಾರಭ್ಯ ದಶೋತ್ತರಗುಣಂ ಜಗುಃ ॥

(ಶ್ಲೋಕ-10)

ಮೂಲಮ್

ಶತಾದರ್ವಾಗ್ಜಾಂಬವಾಂಸ್ತು ಪ್ರಾಹ ಮಧ್ಯೆ ವನೌಕಸಾಮ್ ।
ಪುರಾ ತ್ರಿವಿಕ್ರಮೇ ದೇವೇ ಪಾದಂ ಭೂಮಾನಲಕ್ಷಣಮ್ ॥

(ಶ್ಲೋಕ-11)

ಮೂಲಮ್

ತ್ರಿಃಸಪ್ತಕೃತ್ವೋಽಹಮಗಾಂ ಪ್ರದಕ್ಷಿಣವಿಧಾನತಃ ।
ಇದಾನೀಂ ವಾರ್ಧಕಗ್ರಸ್ತೋ ನ ಶಕ್ನೋಮಿ ವಿಲಂಘಿತುಮ್ ॥

ಅನುವಾದ

ಅಂಗದನ ಮಾತನ್ನು ಕೇಳಿ ಆ ವೀರರೆಲ್ಲರೂ ತಮ್ಮ-ತಮ್ಮ ಬಲವನ್ನು ಬೇರೆ-ಬೇರೆಯಾಗಿ ಹೇಳತೊಡಗಿದರು. ಹತ್ತು ಯೋಜನಗಳಿಂದಾರಂಭಿಸಿ ಹತ್ತು ಹತ್ತರಂತೆಯೇ ಏರಿಸುತ್ತಾ ನೂರಕ್ಕಿಂತ ಕಡಿಮೆಯೇ ಹೇಳಿದರು. ಕೊನೆಗೆ ಆ ಎಲ್ಲ ವಾನರರಲ್ಲಿ ಜಾಂಬವಂತರು ಹೀಗೆಂದರು ‘‘ಹಿಂದೆ ಭಗವಂತನು ತ್ರಿವಿಕ್ರಮಾವತಾರಮಾಡಿ ವ್ಯಾಪಕವಾದ ಭೂಮಿಯನ್ನೆಲ್ಲ ತನ್ನ ಪಾದದಿಂದ ಅಳತೆಮಾಡಿದನಲ್ಲವೆ? ಅಂಥ ಭೂಮಿಯನ್ನು ವಿಷ್ಣುಪಾದ ಸಹಿತ ನಾನು ಇಪ್ಪತ್ತೊಂದು ಬಾರಿ ಪ್ರದಕ್ಷಿಣೆ ಮಾಡಿರುವೆನು. ಈಗಲಾದರೋ ಮುದಿತನದಿಂದ ಬಳಲಿರುವುದರಿಂದ ಹಿಂದಿನಂತೆ ಹಾರಲಾರೆನು. ॥9-11॥

(ಶ್ಲೋಕ-12)

ಮೂಲಮ್

ಅಂಗದೋಽಪ್ಯಾಹ ಮೇ ಗಂತುಂ ಶಕ್ಯಂ ಪಾರಂ ಮಹೋದಧೇಃ ।
ಪುನರ್ಲಂಘನಸಾಮರ್ಥ್ಯಂ ನ ಜಾನಾಮ್ಯಸ್ತಿ ವಾ ನ ವಾ ॥

ಅನುವಾದ

ಅಂಗದನೂ ಹೇಳಿದನು — ‘‘ನನಗೆ ಸಮುದ್ರದ ಆಚೆಗೆ ಹೋಗಲು ಶಕ್ತಿಯೇನೋ ಇದೆ. ಆದರೆ ಮತ್ತೆ ಹಿಂದಿರುಗಿ ಹಾರಿ ಬರುವಷ್ಟು ಶಕ್ತಿಯು ಇದೆಯೋ ಇಲ್ಲವೋ ಹೇಳಲಾರೆನು.’’ ॥12॥

(ಶ್ಲೋಕ-13)

ಮೂಲಮ್

ತಮಾಹ ಜಾಂಬವಾನ್ವೀರಸ್ತ್ವಂ ರಾಜಾ ನೋ ನಿಯಾಮಕಃ ।
ನ ಯುಕ್ತಂ ತ್ವಾಂ ನಿಯೋಕ್ತುಂ ಮೇ ತ್ವಂ ಸಮರ್ಥೋಽಸಿ ಯದ್ಯಪಿ ॥

ಅನುವಾದ

ಆಗ ವೀರನಾದ ಜಾಂಬವಂತನು ಅವನಲ್ಲಿ ಹೇಳಿದನು — ‘‘ಮಗು ಅಂಗದ! ಈ ಕಾರ್ಯವನ್ನು ಮಾಡಲು ನೀನು ಸಮರ್ಥನಾಗಿದ್ದರೂ ನಿನ್ನನ್ನು ಈ ಕಾರ್ಯಕ್ಕಾಗಿ ಕಳಿಸುವುದು ಯುಕ್ತವಲ್ಲ; ಏಕೆಂದರೆ ನೀನು ನಮಗೆ ನಾಯಕನೂ, ನಿಯಾಮಕನೂ ಆಗಿರುವೆ.’’ ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ಅಂಗದ ಉವಾಚ

ಮೂಲಮ್

ಏವಂ ಚೇತ್ಪೂರ್ವವತ್ಸರ್ವೇ ಸ್ವಪ್ಸ್ಯಾಮೋ ದರ್ಭವಿಷ್ಟರೇ ।
ಕೇನಾಪಿ ನ ಕೃತಂ ಕಾರ್ಯಂ ಜೀವಿತುಂ ಚ ನ ಶಕ್ಯತೇ ॥

ಅನುವಾದ

ಅಂಗದನು ಹೇಳಿದನು — ‘‘ಹೀಗಾದರೆ ನಾವೆಲ್ಲರೂ ಹಿಂದಿನಂತೆ ದರ್ಭಾಸನದಲ್ಲಿ ಮಲಗಿ ಪ್ರಾಯೋಪವೇಶವನ್ನೇ ಮುಂದುವರಿಸೋಣ ; ಏಕೆಂದರೆ, ಯಾರಿಂದಲೂ ಕಾರ್ಯವು ಸಾಧ್ಯವಾಗದೆ ಹೋದರೆ ಬದುಕಲು ಸಾಧ್ಯವಾಗುವುದಿಲ್ಲ.’’ ॥14॥

(ಶ್ಲೋಕ-15)

ಮೂಲಮ್

ತಮಾಹ ಜಾಂಬವಾನ್ವೀರೋ ದರ್ಶಯಿಷ್ಯಾಮಿ ತೇ ಸುತ ।
ಯೇನಾಸ್ಮಾಕಂ ಕಾರ್ಯಸಿದ್ಧಿರ್ಭವಿಷ್ಯತ್ಯಚಿರೇಣ ಚ ॥

ಅನುವಾದ

ಆಗ ವೀರನಾದ ಜಾಂಬವಂತನು ‘‘ಮಗು! ನಮ್ಮ ಕೆಲಸವು ಬೇಗನೇ ಸಿದ್ಧಿಯಾಗಿಸುವಂತಹ ವೀರನನ್ನು ತೋರಿಸುತ್ತೇನೆ’’ ॥15॥

(ಶ್ಲೋಕ-16)

ಮೂಲಮ್

ಇತ್ಯುಕ್ತ್ವಾ ಜಾಂಬವಾನ್ಪ್ರಾಹ ಹನೂಮಂತಮವಸ್ಥಿತಮ್ ।
ಹನೂಮನ್ಕಿಂ ರಹಸ್ತೂಷ್ಣೀಂ ಸ್ಥೀಯತೇ ಕಾರ್ಯಗೌರವೇ ॥

(ಶ್ಲೋಕ-17)

ಮೂಲಮ್

ಪ್ರಾಪ್ತೇಽಜ್ಞೇನೇವ ಸಾಮರ್ಥ್ಯಂ ದರ್ಶಯಾದ್ಯ ಮಹಾಬಲ ।
ತ್ವಂ ಸಾಕ್ಷಾದ್ವಾಯುತನಯೋ ವಾಯುತುಲ್ಯಪರಾಕ್ರಮಃ ॥

ಅನುವಾದ

ಎಂದು ಹೇಳುತ್ತಾ ಅಲ್ಲೇ ಕುಳಿತಿದ್ದ ಹನುಮಂತನನ್ನು ಕುರಿತು ಹೇಳುತ್ತಾನೆ — ‘‘ಹೇ ಹನುಮಂತನೆ! ಹೆಚ್ಚಿನ ಕಾರ್ಯ ಸಾಧನೆಯ ಸಮಯವು ಬಂದಿರುವಾಗ ಏನೂ ತಿಳಿಯದವನಂತೆ ಏಕಾಂತದಲ್ಲಿ ಸುಮ್ಮನೆ ಏಕೆ ಕುಳಿತಿರುವೆ? ಹೇ ಮಹಾಬಲನೆ! ನೀನಾದರೋ ಸಾಕ್ಷಾತ್ ವಾಯುದೇವರ ಪುತ್ರನಾಗಿರುವೆ. ವಾಯುವಿಗೆ ಸಮಾನವಾದ ಬಲವುಳ್ಳವನು. ಆದ್ದರಿಂದ ಇಂದು ನಿನ್ನ ಸಾಮರ್ಥ್ಯವನ್ನು ತೋರಿಸು. ॥16-17॥

(ಶ್ಲೋಕ-18)

ಮೂಲಮ್

ರಾಮಕಾರ್ಯಾರ್ಥಮೇವ ತ್ವಂ ಜನಿತೋಽಸಿ ಮಹಾತ್ಮನಾ ।
ಜಾತಮಾತ್ರೇಣ ತೇ ಪೂರ್ವಂ ದೃಷ್ಟ್ವೋದ್ಯಂತಂ ವಿಭಾವಸುಮ್ ॥

(ಶ್ಲೋಕ-19)

ಮೂಲಮ್

ಪಕ್ವಂ ಫಲಂ ಜಿಘೃಕ್ಷಾಮೀತ್ಯುತ್ ಪ್ಲುತಂ ಬಾಲಚೇಷ್ಟಯಾ ।
ಯೋಜನಾನಾಂ ಪಂಚಶತಂ ಪತಿತೋಽಸಿ ತತೋ ಭುವಿ ॥

ಅನುವಾದ

ಮಹಾತ್ಮನಾದ ವಾಯುದೇವರಿಂದ ಶ್ರೀರಾಮನ ಕಾರ್ಯಕ್ಕಾಗಿಯೇ ಸೃಷ್ಟಿಸಲ್ಪಟ್ಟಿರುವೆ. ಹಿಂದೆ ನೀನು ಹುಟ್ಟಿದ ಕೂಡಲೇ ಆಗ ತಾನೇ ಉದಯಿಸುತ್ತಿರುವ ಸೂರ್ಯನನ್ನು ಕಂಡು ಹುಡುಗಾಟಿಕೆಯ ಚೇಷ್ಟೆಗೆ ತಕ್ಕಂತೆ ಹಣ್ಣಾದ ಫಲವನ್ನು ಹಿಡಿದುಕೊಳ್ಳುವೆನೆಂದು ಐದುನೂರು ಯೋಜನಗಳ ಎತ್ತರಕ್ಕೆ ನೆಗೆದು ಭೂಮಿಯ ಮೇಲೆ ಬಿದ್ದಿದ್ದೆ. ॥18-19॥

(ಶ್ಲೋಕ-20)

ಮೂಲಮ್

ಅತಸ್ತ್ವದ್ಬಲಮಾಹಾತ್ಮ್ಯಂ ಕೋ ವಾ ಶಕ್ನೋತಿ ವರ್ಣಿತುಮ್ ।
ಉತ್ತಿಷ್ಠ ಕುರು ರಾಮಸ್ಯ ಕಾರ್ಯಂ ನಃ ಪಾಹಿ ಸುವ್ರತ ॥

ಅನುವಾದ

ಆದ್ದರಿಂದ ನಿನ್ನ ಬಲದ ಮಹಿಮೆಯನ್ನು ಯಾರು ವರ್ಣಿಸಬಲ್ಲರು? ಎಲೈ ಸುವ್ರತನೆ! ಎದ್ದೇಳು. ರಾಮಕಾರ್ಯವನ್ನು ಮಾಡುವವನಾಗು ಹಾಗೂ ನಮ್ಮನ್ನು ಕಾಪಾಡು.’’ ॥20॥

(ಶ್ಲೋಕ-21)

ಮೂಲಮ್

ಶ್ರುತ್ವಾ ಜಾಂಬವತೋ ವಾಕ್ಯಂ ಹನೂಮಾನತಿಹರ್ಷಿತಃ ।
ಚಕಾರ ನಾದಂ ಸಿಂಹಸ್ಯ ಬ್ರಹ್ಮಾಂಡಂ ಸ್ಫೋಟಯನ್ನಿವ ॥

ಅನುವಾದ

ಹೀಗೆಂದ ಜಾಂಬವಂತನ ಮಾತನ್ನು ಕೇಳಿ ಬಹಳ ಸಂತೋಷಗೊಂಡ ಹನುಮಂತನು ಬ್ರಹ್ಮಾಂಡವೇ ಸಿಡಿಯುವಂತಹ ಸಿಂಹನಾದವನ್ನು ಮಾಡಿದನು. ॥21॥

(ಶ್ಲೋಕ-22)

ಮೂಲಮ್

ಬಭೂವ ಪರ್ವತಾಕಾರಸ್ತ್ರಿವಿಕ್ರಮ ಇವಾಪರಃ ।
ಲಂಘಯಿತ್ವಾ ಜಲನಿಧಿಂ ಕೃತ್ವಾ ಲಂಕಾಂ ಚ ಭಸ್ಮಸಾತ್ ॥

(ಶ್ಲೋಕ-23)

ಮೂಲಮ್

ರಾವಣಂ ಸಕುಲಂ ಹತ್ವಾನೇಷ್ಯೇ ಜನಕನಂದಿನೀಮ್ ।
ಯದ್ವಾ ಬಧ್ವಾ ಗಲೇ ರಜ್ಜ್ವಾ ರಾವಣಂ ವಾಮಪಾಣಿನಾ ॥

(ಶ್ಲೋಕ-24)

ಮೂಲಮ್

ಲಂಕಾ ಸಪರ್ವತಾಂ ಧೃತ್ವಾ ರಾಮಸ್ಯಾಗ್ರೇ ಕ್ಷಿಪಾಮ್ಯಹಮ್ ।
ಯದ್ವಾ ದೃಷ್ಟೈವ ಯಾಸ್ಯಾಮಿ ಜಾನಕೀಂ ಶುಭಲಕ್ಷಣಾಮ್ ॥

ಅನುವಾದ

ಮತ್ತೊಬ್ಬ ತ್ರಿವಿಕ್ರಮನಂತೆ ಪರ್ವತಾಕಾರವಾಗಿ ಬೆಳೆದನು ಹಾಗೂ ‘‘ಎಲೈ ವಾನರರೆ! ನಾನು ಸಮುದ್ರವನ್ನು ದಾಟಿ ಲಂಕೆಯನ್ನು ಸುಟ್ಟು ಬೂದಿ ಮಾಡಿ, ರಾಕ್ಷಸಕುಲಸಹಿತ ರಾವಣನನ್ನು ಕೊಂದು ಸೀತೆಯನ್ನು ತಂದು ಬಿಡುವೆನು. ಅಥವಾ ರಾವಣನ ಕತ್ತಿಗೆ ಹಗ್ಗ ಬಿಗಿದು ತ್ರಿಕೂಟ ಸಹಿತ ಲಂಕೆಯನ್ನು ಕಿತ್ತು ಎಡಕೈಯಿಂದ ಎತ್ತಿಕೊಂಡು ಶ್ರೀರಾಮನ ಎದುರಿಗೆ ಇಡುವೆನು. ಅಥವಾ ಶುಭಲಕ್ಷಣಳಾದ ಸೀತೆಯನ್ನು ಕಂಡೇ ಹಿಂದಿರುಗಿ ಬರುವೆನು’’ ಎಂದು ಗರ್ಜಿಸಿದನು. ॥22-24॥

(ಶ್ಲೋಕ-25)

ಮೂಲಮ್

ಶ್ರುತ್ವಾ ಹನುಮತೋ ವಾಕ್ಯಂ ಜಾಂಬವಾನಿದಮಬ್ರವೀತ್ ।
ದೃಷ್ಟೈವಾಗಚ್ಛ ಭದ್ರಂ ತೇ ಜೀವಂತೀಂ ಜಾನಕೀಂ ಶುಭಾಮ್ ॥

(ಶ್ಲೋಕ-26)

ಮೂಲಮ್

ಪಶ್ಚಾದ್ರಾಮೇಣ ಸಹಿತೋ ದರ್ಶಯಿಷ್ಯಸಿ ಪೌರುಷಮ್ ।
ಕಲ್ಯಾಣಂ ಭವತಾದ್ಭದ್ರ ಗಚ್ಛತಸ್ತೇ ವಿಹಾಯಸಾ ॥

ಅನುವಾದ

ಹನುಮಂತನ ವಚನಗಳನ್ನು ಕೇಳಿ ಜಾಂಬವಂತನಿಂತೆಂದನು — ‘‘ಹೇ ವೀರಾ! ನಿನಗೆ ಮಂಗಳವಾಗಲಿ. ನೀನು ಕೇವಲ ಶುಭಳಾದ ಜೀವಂತಳಾದ ಸೀತೆಯನ್ನು ಕಂಡೇ ಹಿಂದಿರುಗಿ ಬಾ. ಅನಂತರ ರಾಮನೊಡಗೂಡಿ ನಿನ್ನ ಪರಾಕ್ರಮವನ್ನು ತೋರಿಸುವೆಯಂತೆ. ಆಕಾಶ ಮಾರ್ಗದಿಂದ ಹೋಗುವ ಮಂಗಳ ಸ್ವರೂಪನಾದ ನಿನಗೆ ಶುಭವಾಗಲಿ. ॥25-26॥

(ಶ್ಲೋಕ-27)

ಮೂಲಮ್

ಗಚ್ಛಂತಂ ರಾಮಕಾರ್ಯಾರ್ಥಂ ವಾಯುಸ್ತ್ವಾಮನುಗಚ್ಛತು ।
ಇತ್ಯಾಶೀರ್ಭಿಃ ಸಮಾಮಂತ್ರ್ಯ ವಿಸೃಷ್ಟಃ ಪ್ಲವಗಾಧಿಪೈಃ ॥

(ಶ್ಲೋಕ-28)

ಮೂಲಮ್

ಮಹೇಂದ್ರಾದ್ರಿಶಿರೋ ಗತ್ವಾ ಬಭೂವಾದ್ಭುತದರ್ಶನಃ ॥

ಅನುವಾದ

ರಾಮ ಕಾರ್ಯಕ್ಕಾಗಿ ಹೊರಟಿರುವ ನಿನ್ನನ್ನು ವಾಯುದೇವರು ಹಿಂಬಾಲಿಸಲಿ.’’ ಈ ಪ್ರಕಾರ ಆಶೀರ್ವಾದಗಳಿಂದ ಹರಸಲ್ಪಟ್ಟು ಕಪಿಮುಖ್ಯರಿಂದ ಬೀಳ್ಕೊಂಡ ಹನುಮಂತನು ಮಹೇಂದ್ರ ಪರ್ವತದ ಶಿಖರವನ್ನೇರಿ ಅದ್ಭುತ ರೂಪವನ್ನು ಧರಿಸಿದನು. ॥27-28॥

(ಶ್ಲೋಕ-29)

ಮೂಲಮ್

ಮಹಾನಗೇಂದ್ರಪ್ರತಿಮೋ ಮಹಾತ್ಮಾ
ಸುವರ್ಣವರ್ಣೋರುಣಚಾರುವಕ್ತ್ರಃ ।
ಮಹಾಫಣೀಂದ್ರಾಭಸುದೀರ್ಘಬಾಹುಃ
ವಾತಾತ್ಮಜೋಽದೃಶ್ಯತ ಸರ್ವಭೂತೈಃ ॥

ಅನುವಾದ

ಮಹಾತ್ಮನಾದ ವಾಯುಪುತ್ರನು ಆಗ ದೊಡ್ಡ ಪರ್ವತಕ್ಕೆ ಸಮನಾದ ಆಕಾರವುಳ್ಳವನಾಗಿ, ಹೊಂಬಣ್ಣದಿಂದ ಕೂಡಿದ, ಕೆಂಪಾದ ಕಣ್ಣುಗಳುಳ್ಳ, ಸುಂದರ ಮುಖವುಳ್ಳವನೂ, ದೊಡ್ಡ ಹಾವಿನಂತಿರುವ ಉದ್ದವಾದ ಭುಜಗಳುಳ್ಳವನೂ ಆಗಿ ಎಲ್ಲ ಪ್ರಾಣಿಗಳಿಗೂ ಕಾಣಿಸಿಕೊಂಡನು. ॥29॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ನವಮಃ ಸರ್ಗಃ ॥9॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.
ಕಿಷ್ಕಿಂಧಾಕಾಂಡವು ಮುಗಿಯಿತು.