೦೮

[ಎಂಟನೆಯ ಸರ್ಗ]

ಭಾಗಸೂಚನಾ

ಸಂಪಾತಿಯ ಆತ್ಮಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಅಥ ತೇ ಕೌತುಕಾವಿಷ್ಟಾಃ ಸಂಪಾತಿಂ ಸರ್ವವಾನರಾಃ ।
ಪಪ್ರಚ್ಛುರ್ಭಗವನ್ ಬ್ರೂಹಿ ಸ್ವಮುದಂತಂ ತ್ವಮಾದಿತಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ಅನಂತರ ಕುತೂಹಲಾವಿಷ್ಟರಾದ ಎಲ್ಲ ಕಪಿಗಳು ಸಂಪಾತಿಯನ್ನು ಕುರಿತು ಪೂಜ್ಯನೆ! ನೀನು ನಿನ್ನ ವೃತ್ತಾಂತವನ್ನು ಪ್ರಾರಂಭದಿಂದಲೂ ಹೇಳು ಎಂದು ಕೇಳಿದರು. ॥1॥

(ಶ್ಲೋಕ-2)

ಮೂಲಮ್

ಸಂಪಾತಿಃ ಕಥಯಾಮಾಸ ಸ್ವವೃತ್ತಾಂತಂ ಪುರಾ ಕೃತಮ್ ।
ಅಹಂ ಪುರಾ ಜಟಾಯುಶ್ಚ ಭ್ರಾತರೌ ರೂಢಯೌವನೌ ॥

(ಶ್ಲೋಕ-3)

ಮೂಲಮ್

ಬಲೇನ ದರ್ಪಿತಾವಾವಾಂ ಬಲಜಿಜ್ಞಾಸಯಾ ಖಗೌ ।
ಸೂರ್ಯಮಂಡಲಪರ್ಯಂತಂ ಗಂತುಮುತ್ಪತಿತೌ ಮದಾತ್ ॥

ಅನುವಾದ

ಆಗ ಸಂಪಾತಿಯು ತಾನು ಹಿಂದೆ ಮಾಡಿದುದೆಲ್ಲವನ್ನು ಹೇಳತೊಡಗಿದನು ನಾನು ಹಾಗೂ ಜಟಾಯುವು ಸಹೋದರರು. ಯೌವನದ ಮದಾವಿಷ್ಟರಾಗಿ ಬಲದಿಂದ ಕೊಬ್ಬಿ ಯಾರು ಹೆಚ್ಚು ಬಲಿಷ್ಠರೆಂಬುದನ್ನು ನಿರ್ಣಯಿಸಲೋಸುಗ ಸೂರ್ಯಮಂಡಲದವರೆಗೂ ಹೋಗಲೂ ಮೇಲೆ ಹಾರಿದೆವು. ॥2-3॥

(ಶ್ಲೋಕ-4)

ಮೂಲಮ್

ಬಹುಯೋಜನಸಾಹಸ್ರಂ ಗತೌ ತತ್ರ ಪ್ರತಾಪಿತಃ ।
ಜಟಾಯುಸ್ತಂ ಪರಿತ್ರಾತುಂ ಪಕ್ಷೈರಾಚ್ಛಾದ್ಯ ಮೋಹತಃ ॥

(ಶ್ಲೋಕ-5)

ಮೂಲಮ್

ಸ್ಥಿತೋಽಹಂ ರಶ್ಮಿಭಿರ್ದಗ್ಧಪಕ್ಷೋಽಸ್ಮಿನ್ವಿಂಧ್ಯಮೂರ್ಧನಿ ।
ಪತಿತೋ ದೂರಪತನಾನ್ಮೂರ್ಚ್ಛಿತೋಽಹಂ ಕಪೀಶ್ವರಾಃ ॥

ಅನುವಾದ

ನಾವಿಬ್ಬರೂ ಸಾವಿರಾರು ಯೋಜನಗಳ ದೂರ ಹೋದಾಗ ಜಟಾಯುವು ಸೂರ್ಯಕಿರಣಗಳಿಂದ ಸುಡುತ್ತಿರುವಾಗ ನಾನು ಅವನನ್ನು ಕಾಪಾಡಲು ಅವಿವೇಕದಿಂದ (ಮುಂದಿನ ಪರಿಣಾಮವನ್ನರಿಯದೆ) ಅವನಿಂದ ಮೇಲೇರಿ ನನ್ನ ರೆಕ್ಕೆಗಳಿಂದ ಅವನನ್ನು ಮುಚ್ಚಿಬಿಟ್ಟೆ. ಆಗ ಪ್ರಖರ ಸೂರ್ಯಕಿರಣಗಳಿಂದ ನನ್ನ ರೆಕ್ಕೆಗಳು ಸುಟ್ಟುಹೋಗಿ ಈ ವಿಂಧ್ಯಪರ್ವತದ ತಪ್ಪಲಿನಲ್ಲಿ ಬಿದ್ದು ಬಿಟ್ಟೆ. ಬಹಳ ಎತ್ತರದಿಂದ ಬಿದ್ದ ಕಾರಣ ಮೂರ್ಛಿತನಾದೆ. ॥4-5॥

(ಶ್ಲೋಕ-6)

ಮೂಲಮ್

ದಿನತ್ರಯಾತ್ಪುನಃ ಪ್ರಾಣಸಹಿತೋ ದಗ್ಧಪಕ್ಷಕಃ ।
ದೇಶಂ ವಾ ಗಿರಿಕೂಟಾನ್ವಾ ನ ಜಾನೇ ಭ್ರಾಂತಮಾನಸಃ ॥

ಅನುವಾದ

ಎಲೈ ಕಪಿಶ್ರೇಷ್ಠರೆ ! ಮೂರು ದಿನಗಳ ಬಳಿಕ ಮೂರ್ಛೆತಿಳಿದೆದ್ದು ಎಚ್ಚರಗೊಂಡಾಗ ಸುಟ್ಟ ರೆಕ್ಕೆಗಳ ನಾನು ಭ್ರಾಂತನಾಗಿ ಇದು ಯಾವ ಪರ್ವತ ಶಿಖರ, ಯಾವ ದೇಶ ಅರಿಯದೆ ಹೋದೆನು. ॥6॥

(ಶ್ಲೋಕ-7)

ಮೂಲಮ್

ಶನೈರುನ್ಮೀಲ್ಯ ನಯನೇ ದೃಷ್ಟ್ವಾ ತತ್ರಾಶ್ರಮಂ ಶುಭಮ್ ।
ಶನೈಃ ಶನೈರಾಶ್ರಮಸ್ಯ ಸಮೀಪಂ ಗತವಾನಹಮ್ ॥

ಅನುವಾದ

ಮೆಲ್ಲನೆ ಕಣ್ಣು ತೆರೆದು ನೋಡಲಾಗಿ ಅಲ್ಲಿ ಒಂದು ಸುಂದರ ಆಶ್ರಮವು ಗೋಚರಿಸಿತು. ನಾನು ನಿಧಾನವಾಗಿ ಕಷ್ಟಪಟ್ಟು ಆಶ್ರಮದ ಸಮೀಪಕ್ಕೆ ಹೋದೆನು. ॥7॥

(ಶ್ಲೋಕ-8)

ಮೂಲಮ್

ಚಂದ್ರಮಾ ನಾಮ ಮುನಿರಾಡ್ ದೃಷ್ಟ್ವಾ ಮಾಂ ವಿಸ್ಮಿತೋಽವದತ್ ।
ಸಂಪಾತೇ ಕಿಮಿದಂ ತೇಽದ್ಯ ವಿರೂಪಂ ಕೇನ ವಾ ಕೃತಮ್ ॥

(ಶ್ಲೋಕ-9)

ಮೂಲಮ್

ಜಾನಾಮಿ ತ್ವಾಮಹಂ ಪೂರ್ವಮತ್ಯಂತಂ ಬಲವಾನಸಿ ।
ದಗ್ಧೌ ಕಿಮರ್ಥಂ ತೇ ಪಕ್ಷೌ ಕಥ್ಯತಾಂ ಯದಿ ಮನ್ಯಸೇ ॥

ಅನುವಾದ

ಅಲ್ಲಿದ್ದ ಚಂದ್ರಮನೆಂಬ ಓರ್ವ ಮುನಿಶ್ರೇಷ್ಠರು ನನ್ನನ್ನು ಕಂಡು ಆಶ್ಚರ್ಯಭರಿತರಾಗಿ - ‘‘ಎಲೈ ಸಂಪಾತಿಯೆ! ಇದೇನು? ನಿನ್ನ ಈ ರೀತಿಯ ವಿಕೃತ ರೂಪ ಯಾರಿಂದ ಉಂಟಾಯಿತು? ನಾನಾದರೋ ನಿನ್ನನ್ನು ಮೊದಲಿನಿಂದಲೂ ಬಲ್ಲೆನು. ನೀನು ಬಹಳ ಬಲಿಷ್ಠನಾಗಿದ್ದೆಯಲ್ಲ? ನಿನ್ನ ರೆಕ್ಕೆಗಳು ಹೇಗೆ ಸುಟ್ಟು ಹೋದುವು? ಹೇಳಲೂ ಯಾವುದೇ ಸಂಕೋಚವಿಲ್ಲದಿದ್ದರೆ ಹೇಳು’’ ಎಂದರು. ॥8-9॥

(ಶ್ಲೋಕ-10)

ಮೂಲಮ್

ತತಃ ಸ್ವಚೇಷ್ಟಿತಂ ಸರ್ವಂ ಕಥಯಿತ್ವಾತಿದುಃಖಿತಃ ।
ಅಬ್ರವಂ ಮುನಿಶಾರ್ದೂಲಂ ದಹ್ಯೇಽಹಂ ದಾವವಹ್ನಿನಾ ॥

(ಶ್ಲೋಕ-11)

ಮೂಲಮ್

ಕಥಂ ಧಾರಯಿತುಂ ಶಕ್ತೋ ವಿಪಕ್ಷೋ ಜೀವಿತಂ ಪ್ರಭೋ ।
ಇತ್ಯುಕ್ತೋಽಥ ಮುನಿರ್ವೀಕ್ಷ್ಯ ಮಾಂ ದಯಾರ್ದ್ರವಿಲೋಚನಃ ॥

ಅನುವಾದ

ಅನಂತರ ನನ್ನ ಕಾರ್ಯಗಳೆಲ್ಲವನ್ನು ಅವರಿಗೆ ತಿಳಿಸಿ ಬಹಳ ದುಃಖಗೊಂಡು ಅವರ ಬಳಿ ಹೇಳಿದೆ ‘‘ಸ್ವಾಮಿ! ನಾನು ಕಾಡ್ಗಿಚ್ಚಿನಲ್ಲಿ ಬಿದ್ದು ಸತ್ತು ಹೋಗುವೆ; ಏಕೆಂದರೆ ರೆಕ್ಕೆಗಳಿಲ್ಲದೆ ಹೇಗೆ ಜೀವನ ಸಾಗಿಸಲಿ?’’ ನನ್ನ ಮಾತನ್ನು ಕೇಳಿ ಮುನೀಶ್ವರರು ಕರುಣಾಪೂರ್ಣವಾದ ದೃಷ್ಟಿಯಿಂದ ನನ್ನನ್ನು ನೋಡಿ ಹೇಳತೊಡಗಿದರು. ॥10-11॥

(ಶ್ಲೋಕ-12)

ಮೂಲಮ್

ಶೃಣು ವತ್ಸ ವಚೋ ಮೇಽದ್ಯ ಶ್ರುತ್ವಾ ಕುರು ಯಥೇಪ್ಸಿತಮ್ ।
ದೇಹಮೂಲಮಿದಂ ದುಃಖಂ ದೇಹಃ ಕರ್ಮಸಮುದ್ಭವಃ ॥

ಅನುವಾದ

‘‘ಮಗು! ಮೊದಲು ನಾನು ಹೇಳುವುದನ್ನು ಕೇಳು. ಬಳಿಕ ನಿನಗೆ ಇಷ್ಟಬಂದಂತೆ ಮಾಡು. ಈ ಎಲ್ಲ ದುಃಖಕ್ಕೆ ಕಾರಣವು ಶರೀರವೇ ಆಗಿದೆ. ಅದಾದರೋ ಕರ್ಮಜನ್ಯವಾದುದು. ॥12॥

(ಶ್ಲೋಕ-13)

ಮೂಲಮ್

ಕರ್ಮ ಪ್ರವರ್ತತೇ ದೇಹೇಹಂಬುದ್ಧ್ಯಾ ಪುರುಷಸ್ಯ ಹಿ ।
ಅಹಂಕಾರಸ್ತ್ವನಾದಿಃ ಸ್ಯಾದವಿದ್ಯಾಸಂಭವೋ ಜಡಃ ॥

(ಶ್ಲೋಕ-14)

ಮೂಲಮ್

ಚಿಚ್ಛಾಯಯಾ ಸದಾ ಯುಕ್ತಸ್ತಪ್ತಾಯಃ ಪಿಂಡವತ್ಸದಾ ।
ತೇನ ದೇಹಸ್ಯ ತಾದಾತ್ಮ್ಯಾದ್ದೇಹಶ್ಚೇತನವಾನ್ಭವೇತ್ ॥

ಅನುವಾದ

ಪುರುಷನಿಗೆ ದೇಹದಲ್ಲಿ ‘ನಾನು’ ಎಂಬ ಬುದ್ಧಿ ಉಂಟಾದಾಗ ಕರ್ಮದ ಪ್ರವೃತ್ತಿ ಉಂಟಾಗುತ್ತದೆ. ಅನಾದಿಯಾದ ಅವಿದ್ಯೆಯಿಂದ ಹುಟ್ಟಿದ ಈ ಅಹಂಕಾರವು ಜಡವಾಗಿದೆ. ಬೆಂಕಿಯಿಂದ ಕಾಯಿಸಿದ ಕಬ್ಬಿಣದ ಚೆಂಡಿನಂತೆ ಈ ಅಹಂಕಾರವು ಚಿತ್ ವಸ್ತುವಿನ ಆಭಾಸದಿಂದ ಕೂಡಿರುತ್ತದೆ. ಆ ಚಿದಾಭಾಸ ವಿಶಿಷ್ಟ ಅಹಂಕಾರವು ದೇಹದೊಂದಿಗೆ ತಾದಾತ್ಮ್ಯವಾದ ಕಾರಣ ದೇಹವು ಚೇತನವೆನಿಸುತ್ತದೆ. ॥13-14॥

(ಶ್ಲೋಕ-15)

ಮೂಲಮ್

ದೇಹೋಽಹಮಿತಿ ಬುದ್ಧಿಃ ಸ್ಯಾದಾತ್ಮನೋಽಹಂತಕೃತೇರ್ಬಲಾತ್ ।
ತನ್ಮೂಲ ಏಷ ಸಂಸಾರಃ ಸುಖದುಃಖಾದಿಸಾಧಕಃ ॥

ಅನುವಾದ

ಅಹಂಕಾರದ ಕಾರಣವೇ ಆತ್ಮನಲ್ಲಿ ‘ನಾನು ದೇಹನಾಗಿದ್ದೇನೆ’ ಎಂಬ ಬುದ್ಧಿ ಉಂಟಾಗುವುದು. ಸುಖ-ದುಃಖಾದಿಗಳಿಗೆ ಆಶ್ರಯವಾಗಿರುವ ಈ ಸಂಸಾರವೆಲ್ಲವೂ ಅಹಂಕಾರ-ದೇಹತಾದಾತ್ಮ್ಯದಿಂದಲೇ ಆಗಿರುವುದು. ॥15॥

(ಶ್ಲೋಕ-16)

ಮೂಲಮ್

ಆತ್ಮನೋ ನಿರ್ವಿಕಾರಸ್ಯ ಮಿಥ್ಯಾ ತಾದಾತ್ಮ್ಯತಃ ಸದಾ ।
ದೇಹೋಽಹಂ ಕರ್ಮಕರ್ತಾಹಮಿತಿ ಸಂಕಲ್ಪ್ಯ ಸರ್ವದಾ ॥

(ಶ್ಲೋಕ-17)

ಮೂಲಮ್

ಜೀವಃ ಕರೋತಿ ಕರ್ಮಾಣಿ ತತ್ಫಲೈರ್ಬಧ್ಯತೇವಶಃ ।
ಊರ್ಧ್ವಾಧೋ ಭ್ರಮತೇ ನಿತ್ಯಂ ಪಾಪಪುಣ್ಯಾತ್ಮಕಃ ಸ್ವಯಮ್ ॥

ಅನುವಾದ

ನಿರ್ವಿಕಾರನಾದ ಆತ್ಮನಿಗೆ ದೇಹಾದಿಗಳೊಡನೆ ಈ ಮಿಥ್ಯಾ ತಾದಾತ್ಮ್ಯದಿಂದಲೇ ಜೀವಿಯು ಯಾವಾಗಲೂ ‘ನಾನು ದೇಹವು; ನಾನು ಕರ್ಮಮಾಡುವವನು’ ಎಂದು ಸಂಕಲ್ಪಿಸಿಕೊಂಡು ಜೀವನು ಕರ್ಮಗಳನ್ನು ಮಾಡುವನು. ಅನಂತರ ಆ ಕರ್ಮ ಫಲಗಳಿಗೆ ವಿವಶನಾಗಿ ಬಂಧಿತನಾಗುತ್ತಾನೆ. ಈ ಪ್ರಕಾರ ಪಾಪ-ಪುಣ್ಯಗಳ ಕರ್ತೃವಾಗಿದ್ದರ ಫಲವಾಗಿ ಯಾವಾಗಲೂ ಉಚ್ಚ-ನೀಚ ಯೋನಿಗಳಲ್ಲಿ ಸಂಚರಿಸುತ್ತಿರುತ್ತಾನೆ. ॥16-17॥

(ಶ್ಲೋಕ-18)

ಮೂಲಮ್

ಕೃತಂ ಮಯಾಧಿಕಂ ಪುಣ್ಯಂ ಯಜ್ಞದಾನಾದಿ ನಿಶ್ಚಿತಮ್ ।
ಸ್ವರ್ಗಂ ಗತ್ವಾ ಸುಖಂ ಭೋಕ್ಷ್ಯ ಇತಿ ಸಂಕಲ್ಪವಾನ್ಭವೇತ್ ॥

ಅನುವಾದ

‘ನಾನು ನಿಶ್ಚಯವಾಗಿ ಯಜ್ಞ, ದಾನನಾದಿ ರೂಪವಾದ ಹೆಚ್ಚಿನ ಪುಣ್ಯವನ್ನು ಮಾಡಿರುವೆನು. ಆದ್ದರಿಂದ ಸ್ವರ್ಗಕ್ಕೆ ಹೋಗಿ ಸುಖವನ್ನು ಅನುಭವಿಸುವೆನು’ ಎಂದು ಸಂಕಲ್ಪ ಮಾಡತೊಡಗುತ್ತಾನೆ. ॥18॥

(ಶ್ಲೋಕ-19)

ಮೂಲಮ್

ತಥೈವಾಧ್ಯಾಸತಸ್ತತ್ರ ಚಿರಂ ಭುಕ್ತ್ವಾ ಸುಖಂ ಮಹತ್ ।
ಕ್ಷೀಣಪುಣ್ಯಃ ಪತತ್ಯರ್ವಾಗ್ ಆನಿಚ್ಛನ್ಕರ್ಮಚೋದಿತಃ ॥

ಅನುವಾದ

ಇಂತಹ ಅಧ್ಯಾಸ ಎಂದರೆ ತಪ್ಪು ತಿಳಿವಳಿಕೆಯಿಂದ ಸ್ವರ್ಗದಲ್ಲಿ ಹೆಚ್ಚಿನ ಸುಖವನ್ನು ಬಹುಕಾಲ ಅನುಭವಿಸಿ ಪುಣ್ಯವು ಕ್ಷೀಣವಾದಾಗ ಜೀವನು ಕರ್ಮಪ್ರೇರಿತನಾಗಿ ತಾನು ಬಯಸದಿದ್ದರೂ ತಲೆಕೆಳಗಾಗಿ ಬೀಳುವನು. ॥19॥

(ಶ್ಲೋಕ-20)

ಮೂಲಮ್

ಪತಿತ್ವಾ ಮಂಡಲೇ ಚೆಂದೋಸ್ತತೋ ನೀಹಾರಸಂಯುತಃ ।
ಭೂಮೌ ಪತಿತ್ವಾ ವ್ರೀಹ್ಯಾದೌ ತತ್ರ ಸ್ಥಿತ್ವಾ ಚಿರಂ ಪುನಃ ॥

ಅನುವಾದ

ಹಾಗೆ ಬೀಳುವಾಗ ಮೊದಲಿಗೆ ಚಂದ್ರಮಂಡಲವನ್ನು ಸೇರಿ, ಅಲ್ಲಿ ಹಿಮವಾಗಿ ಹನಿಯರೂಪದಿಂದ ಭೂಮಿಗೆ ಬಿದ್ದು, ಭತ್ತವೇ ಮುಂತಾದ ಧಾನ್ಯಗಳಲ್ಲಿ ಬಹಳ ಕಾಲ ಇರುತ್ತದೆ. ॥20॥

(ಶ್ಲೋಕ-21)

ಮೂಲಮ್

ಭೂತ್ವಾ ಚತುರ್ವಿಧಂ ಭೋಜ್ಯಂ ಪುರುಷೈರ್ಭುಜ್ಯತೇ ತತಃ ।
ರೇತೋ ಭೂತ್ವಾ ಪುನಸ್ತೇನ ಋತೌ ಸ್ತ್ರೀಯೋನಿಸಿಂಚಿತಃ ॥

ಅನುವಾದ

ಮತ್ತೆ ಅವನು ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯ ಎಂಬ ನಾಲ್ಕು ವಿಧವಾದ ತಿನ್ನುವ ಪದಾರ್ಥಗಳಾಗಿ ಪುರುಷನಿಂದ ಭಕ್ಷಿಸಲ್ಪಡುವನು. ಗಂಡಸಿನ ಶರೀರದಲ್ಲಿ ರೇತಸ್ಸಾಗಿ ಪರಿವರ್ತನೆ ಹೊಂದಿ ಋತುಮತಿಯಾದ ಸ್ತ್ರೀಯ ಯೋನಿಯಲ್ಲಿ ಸುರಿಯಲ್ಪಡುತ್ತಾನೆ. ॥21॥

(ಶ್ಲೋಕ-22)

ಮೂಲಮ್

ಯೋನಿರಕ್ತೇನ ಸಂಯುಕ್ತಂ ಜರಾಯುಪರಿವೇಷ್ಟಿತಮ್ ।
ದಿನೇನೈಕೇನ ಕಲಲಂ ಭೂತ್ವಾ ರೂಢತ್ವಮಾಪ್ನುಯಾತ್ ॥

ಅನುವಾದ

ಯೋನಿಯಲ್ಲಿರುವ ರಜದೊಂದಿಗೆ ಬೆರೆತು ಗರ್ಭವನ್ನು ಆವರಿಸಿರುವ ಕೋಶದಲ್ಲಿ ಒಂದು ದಿನದಲ್ಲಿ ಕಲಲ (ಕೆಸರಿನಂಥ) ರೂಪವನ್ನು ಹೊಂದುವನು. ॥22॥

(ಶ್ಲೋಕ-23)

ಮೂಲಮ್

ತತ್ಪುನಃ ಪಂಚರಾತ್ರೇಣ ಬುದ್ ಬುದಾಕಾರತಾಮಿಯಾತ್ ।
ಸಪ್ತರಾತ್ರೇಣ ತದಪಿ ಮಾಂಸಪೇಶಿತ್ವಮಾಪ್ನುಯಾತ್ ॥

(ಶ್ಲೋಕ-24)

ಮೂಲಮ್

ಪಕ್ಷಮಾತ್ರೇಣ ಸಾ ಪೇಶೀ ರುಧಿರೇಣ ಪರಿಪ್ಲುತಾ ।
ತಸ್ಯಾ ಏವಾಂಕುರೋತ್ಪತ್ತಿಃ ಪಂಚವಿಂಶತಿರಾತ್ರಿಷು ॥

ಅನುವಾದ

ಅದು ಮತ್ತೆ ಐದು ರಾತ್ರಿಗಳು ಕಳೆಯಲಾಗಿ ನೀರಿನ ಗುಳ್ಳೆಯ ಆಕಾರವನ್ನು ಪಡೆಯುವನು. ಏಳು ರಾತ್ರಿಗಳಿಗೆ ಅದು ಮಾಂಸದ ಮುದ್ದೆಯಾಗುವುದು. ಹದಿನೈದು ದಿನಗಳಿಗೆ ಆ ಪಿಂಡವು ರಕ್ತದೊಡಗೂಡಿ ಇಪ್ಪತ್ತೈದು ರಾತ್ರಿಗಳೊಳಗೆ ಮೊಳಕೆಯಾಗುವುದು. ॥23-24॥

(ಶ್ಲೋಕ-25)

ಮೂಲಮ್

ಗ್ರೀವಾ ಶಿರಶ್ಚ ಸ್ಕಂಧಶ್ಚ ಪೃಷ್ಠವಂಶಸ್ತಥೋದರಮ್ ।
ಪಂಚಧಾಂಗಾನಿ ಚೈಕೈಕಂ ಜಾಯಂತೇ ಮಾಸತಃ ಕ್ರಮಾತ್ ॥

ಅನುವಾದ

ಒಂದು ತಿಂಗಳೊಳಗೆ ಕತ್ತು, ತಲೆ, ಹೆಗಲು, ಬೆನ್ನಿನಹುರಿ, ಹೊಟ್ಟೆ ಹೀಗೆ ಐದು ವಿಧವಾದ ಅಂಗಗಳು ಕ್ರಮವಾಗಿ ಹುಟ್ಟುವವು. ॥25॥

(ಶ್ಲೋಕ-26)

ಮೂಲಮ್

ಪಾಣಿಪಾದೌ ತಥಾ ಪಾರ್ಶ್ವಃ ಕಟಿರ್ಜಾನು ತಥೈವ ಚ ।
ಮಾಸದ್ವಯಾತ್ಪ್ರಜಾಯಂತೇ ಕ್ರಮೇಣೈವ ನ ಚಾನ್ಯಥಾ ॥

(ಶ್ಲೋಕ-27)

ಮೂಲಮ್

ತ್ರಿಭಿರ್ಮಾಸೈಃ ಪ್ರಜಾಯಂತೇ ಅಂಗಾನಾಂ ಸಂಧಯಃ ಕ್ರಮಾತ್ ।
ಸರ್ವಾಂಗುಲ್ಯಃ ಪ್ರಜಾಯಂತೇ ಕ್ರಮಾನ್ಮಾಸಚತುಷ್ಟಯೇ ॥

ಅನುವಾದ

ಅನಂತರ ಕೈ, ಕಾಲು, ಪಕ್ಕೆಗಳು, ಸೊಂಟ, ಮಂಡಿ ಇವು ಕ್ರಮ ತಪ್ಪದೆ ಎರಡು ತಿಂಗಳುಗಳಿಗೆ ಮೂಡುವುವು. ಇದೇ ಕ್ರಮದಿಂದ ಮೂರು ತಿಂಗಳಲ್ಲಿ ಶರೀರದ ಕೀಲುಗಳು, ನಾಲ್ಕು ತಿಂಗಳಿಗೆ ಕೈ ಕಾಲುಗಳ ಬೆರಳುಗಳು ಉಂಟಾಗುವುವು. ॥26-27॥

(ಶ್ಲೋಕ-28)

ಮೂಲಮ್

ನಾಸಾ ಕರ್ಣೌಚ ನೇತ್ರೇ ಚ ಜಾಯಂತೇ ಪಂಚಮಾಸತಃ ।
ದಂತಪಂಕ್ತಿರ್ನಖಾ ಗುಹ್ಯಂ ಪಂಚಮೇ ಜಾಯತೇ ತಥಾ ॥

ಅನುವಾದ

ಮೂಗು, ಕಿವಿ, ಕಣ್ಣು ಇವು ಐದನೆಯ ತಿಂಗಳಲ್ಲಿಯೂ, ಹಲ್ಲಿನ ಸಾಲು (ವಸಡು)ಗಳು, ಉಗುರು, ಗುಹ್ಯೇಂದ್ರಿಯವೂ ಕೂಡ ಆಗಲೇ ಉಂಟಾಗುವುದು. ॥28॥

(ಶ್ಲೋಕ-29)

ಮೂಲಮ್

ಅರ್ವಾಕ್ ಷಣ್ಮಾಸತಶ್ಛಿದ್ರಂ ಕರ್ಣಯೋರ್ಭವತಿ ಸ್ಫುಟಮ್ ।
ಪಾಯುರ್ಮೇಢಮುಪಸ್ಥಂ ಚ ನಾಭಿಶ್ಚಾಪಿ ಭವೇನ್ನೃಣಾಮ್ ॥

ಅನುವಾದ

ಆರನೇ ತಿಂಗಳಿನ ಮೊದಲಿಗೇ ಕಿವಿಯ ರಂಧ್ರಗಳು ಸ್ಫುಟವಾಗಿ ರೂಪುಗೊಳ್ಳುವುವು. ಹಾಗೂ ಗುದ, ಸ್ತ್ರೀ-ಪುರುಷ ಭೇದದಿಂದ ಯೋನಿ ಅಥವಾ ಲಿಂಗ ಮತ್ತು ಹೊಕ್ಕಳು ಅಭಿವ್ಯಕ್ತವಾಗುವವು. ॥29॥

(ಶ್ಲೋಕ-30)

ಮೂಲಮ್

ಸಪ್ತಮೇ ಮಾಸಿ ರೋಮಾಣಿ ಶಿರಃ ಕೇಶಾಸ್ತಥೈವ ಚ ।
ವಿಭಕ್ತಾವಯವತ್ವಂ ಚ ಸರ್ವಂ ಸಂಪದ್ಯತೇಽಷ್ಟಮೇ ॥

ಅನುವಾದ

ಏಳನೆಯ ತಿಂಗಳಿನಲ್ಲಿ ತಲೆಯ ಕೂದಲುಗಳು, ಮೈಗೂದಲು ಉಂಟಾಗಿ ಎಲ್ಲ ಅವಯವಗಳೂ ಬಿಡಿ-ಬಿಡಿಯಾಗಿ ಕಾಣಿಸಿಕೊಂಡು, ಎಂಟನೆಯ ತಿಂಗಳಿಗೆ ಪೂರ್ಣಶರೀರ ಸಿದ್ಧವಾಗುವುದು. ॥30॥

(ಶ್ಲೋಕ-31)

ಮೂಲಮ್

ಜಠರೇ ವರ್ಧತೇ ಗರ್ಭಃ ಸಿಯಾ ಏವಂ ವಿಹಂಗಮ ।
ಪಂಚಮೇ ಮಾಸಿ ಚೈತನ್ಯಂ ಜೀವಃ ಪ್ರಾಪ್ನೋತಿ ಸರ್ವಶಃ ॥

(ಶ್ಲೋಕ-32)

ಮೂಲಮ್

ನಾಭಿಸೂತ್ರಾಲ್ಪರಂಧ್ರೇಣ ಮಾತೃಭುಕ್ತಾನ್ನಸಾರತಃ ।
ವರ್ಧತೇ ಗರ್ಭಗಃ ಪಿಂಡೋ ನ ಮ್ರಿಯೇತ ಸ್ವಕರ್ಮತಃ ॥

ಅನುವಾದ

ಎಲೈ ಪಕ್ಷಿಯೆ! ಹೀಗೆ ಸ್ತ್ರೀಯ ಹೊಟ್ಟೆಯಲ್ಲಿ ಗರ್ಭವು ಬೆಳೆಯುತ್ತದೆ. ತಾಯಿಯು ಮಾಡುವ ಊಟದ ಅನ್ನಸಾರದಿಂದ ಹೊಕ್ಕುಳಬಳ್ಳಿಯ ರಂಧ್ರದ ಮೂಲಕ ಐದನೆಯ ತಿಂಗಳಿನಲ್ಲಿ ಜೀವನು ಎಲ್ಲ ರೀತಿಯಿಂದಲೂ ಚೈತನ್ಯವನ್ನು ಪಡೆಯುತ್ತಾನೆ. ಗರ್ಭದಲ್ಲಿರುವ ಪಿಂಡವು ತನ್ನ ಕರ್ಮಾನುಗುಣವಾಗಿ ಸಾಯದೇ ಬೆಳೆಯುತ್ತದೆ. ॥31-32॥

(ಶ್ಲೋಕ-33)

ಮೂಲಮ್

ಸ್ಮೃತ್ವಾ ಸರ್ವಾಣಿ ಜನ್ಮಾನಿ ಪೂರ್ವಕರ್ಮಾಣಿ ಸರ್ವಶಃ ।
ಜಠರಾನಲತಪ್ತೋಽಯಮಿದಂ ವಚನಮಬ್ರವೀತ್ ॥

ಅನುವಾದ

ಆಗ ಹಿಂದಿನ ಜನ್ಮಗಳಲ್ಲಿ ಮಾಡಿದ ಎಲ್ಲ ಪೂರ್ವಕರ್ಮದ ಸ್ಮರಣೆ ಉಂಟಾಗುವುದು. ಜಠರಾಗ್ನಿಯ ತಾಪದಿಂದ ದುಃಖಿತನಾದ ಜೀವಿಯು ಹೀಗೆನ್ನುವನು. ॥33॥

(ಶ್ಲೋಕ-34)

ಮೂಲಮ್

ನಾನಾಯೋನಿಸಹಸ್ರೇಷು ಜಾಯಮಾನೋಽನುಭೂತವಾನ್ ।
ಪುತ್ರದಾರಾದಿಸಂಬಂಧಂ ಕೋಟಿಶಃ ಪಶುಬಾಂಧವಾನ್ ॥

ಅನುವಾದ

‘ಮೊದಲು ಅನೇಕ ಸಾವಿರ ಯೋನಿಗಳಲ್ಲಿ ಹುಟ್ಟಿ ನಾನು ಮಗು, ಹೆಂಡತಿ, ಪಶುಗಳು, ಬಂಧುಗಳು ಹೀಗೆ ಕೋಟಿ ಗಟ್ಟಲೆ ಜನರ ಸಂಬಂಧವನ್ನು ಅನುಭವಿಸಿದೆನು. ॥34॥

(ಶ್ಲೋಕ-35)

ಮೂಲಮ್

ಕುಟುಂಬಭರಣಾಸಕ್ತ್ಯಾ ನ್ಯಾಯಾನ್ಯಾಯೈರ್ಧನಾರ್ಜನಮ್ ।
ಕೃತಂ ನಾಕರವಂ ವಿಷ್ಣುಚಿಂತಾಂ ಸ್ವಪ್ನೇಽಪಿ ದುರ್ಭಗಃ ॥

ಅನುವಾದ

ನ್ಯಾಯವೋ, ಅನ್ಯಾಯವೋ, ಕುಟುಂಬವನ್ನು ಕಾಪಾಡುವ ಆಸೆಯಿಂದ ಹಣವನ್ನು ಸಂಪಾದಿಸಿದೆನು. ಪಾಪಿಯಾದ ನಾನು ಕನಸಿನಲ್ಲಿಯೂ ವಿಷ್ಣುವಿನ ಸ್ಮರಣೆಯನ್ನು ಮಾಡದೆ ಹೋದೆನು. ॥35॥

(ಶ್ಲೋಕ-36)

ಮೂಲಮ್

ಇದಾನೀಂ ತತ್ಫಲಂ ಭುಂಜೇ ಗರ್ಭದುಃಖಂ ಮಹತ್ತರಮ್ ।
ಅಶಾತ್ವತೇ ಶಾಶ್ವತವದ್ದೇಹೇ ತೃಷ್ಣಾಸಮನ್ವಿತಃ ॥

ಅನುವಾದ

ಆ ವಿಷ್ಣುವನ್ನು ಮರೆತ್ತಿದ್ದರ ಫಲವಾಗಿ ಈಗ ಬಹಳ ದಾರುಣವಾದ ಗರ್ಭವಾಸ ದುಃಖವನ್ನು ಅನುಭವಿಸುತ್ತಿರುವೆನು. ಅನಿತ್ಯವಾದ ಈ ದೇಹದಲ್ಲಿ ನಿತ್ಯವೆಂಬ ಭಾವನೆಯಿಂದ ಕೂಡಿ ಆಸೆಗೆ ಒಳಗಾಗಿ ಮೋಸಹೋದೆನು. ॥36॥

(ಶ್ಲೋಕ-37)

ಮೂಲಮ್

ಅಕಾರ್ಯಾಣ್ಯೇವ ಕೃತವಾನ್ನ ಕೃತಂ ಹಿತಮಾತ್ಮನಃ ।
ಇತ್ಯೇವಂ ಬಹುಧಾ ದುಃಖಮನುಭೂಯ ಸ್ವಕರ್ಮತಃ ॥

ಅನುವಾದ

ಮಾಡಬಾರದ್ದನ್ನೇ ಮಾಡಿದೆನು. ನನ್ನ ಹಿತಕ್ಕೆ ತಕ್ಕುದಾದುದನ್ನು ಮಾಡಲಿಲ್ಲ. ಆದ್ದರಿಂದ ತನ್ನ ಕರ್ಮಾನುಸಾರ ನಾನು ಈ ರೀತಿಯಾಗಿ ಬಹಳ ದುಃಖವನ್ನು ಅನುಭವಿಸಿದೆನು. ॥37॥

(ಶ್ಲೋಕ-38)

ಮೂಲಮ್

ಕದಾ ನಿಷ್ಕ್ರಮಣಂ ಮೇ ಸ್ಯಾದ್ಗರ್ಭಾನ್ನಿರಯಸನ್ನಿಭಾತ್ ।
ಇತ ಊರ್ಧ್ವಂ ನಿತ್ಯಮಹಂ ವಿಷ್ಣುಮೇವಾನುಪೂಜಯೇ ॥

ಅನುವಾದ

ನರಕ ಸದೃಶವಾದ ಈ ಗರ್ಭದಿಂದ ನನಗೆ ಯಾವಾಗ ಬಿಡುಗಡೆಯಾದೀತು? ಇನ್ನು ಮುಂದೆ ನಾನು ಯಾವಾಗಲೂ ವಿಷ್ಣುವನ್ನೇ ಪೂಜಿಸುವೆನು’, ಎಂದು ಚಿಂತಿಸುವನು. ॥38॥

(ಶ್ಲೋಕ-39)

ಮೂಲಮ್

ಇತ್ಯಾದಿ ಚಿಂತಯನ್ ಜೀವೋ ಯೋನಿಯಂತ್ರಪ್ರಪೀಡಿತಃ ।
ಜಾಯಮಾನೋಽತಿದುಃಖೇನ ನರಕಾತ್ಪಾತಕೀ ಯಥಾ ॥

(ಶ್ಲೋಕ-40)

ಮೂಲಮ್

ಪೂತಿವ್ರಣಾನ್ನಿಪತಿತಃ ಕೃಮಿರೇಷ ಇವಾಪರಃ ।
ತತೋ ಬಾಲ್ಯಾದಿದುಃಖಾನಿ ಸರ್ವ ಏವಂ ವಿಭುಂಜತೇ ॥

ಅನುವಾದ

ಹೀಗೆಲ್ಲ ಯೋಚಿಸುತ್ತಾ ಜೀವನು ಬಹಳ ಕಷ್ಟದಿಂದ ಪಾಪಿಯು ನರಕದಿಂದ ಹಿಂದಿರುಗುವಂತೆ ಯೋನಿಯೆಂಬ ಯಂತ್ರದಿಂದ ಹಿಂಸಿಸಲ್ಪಟ್ಟವನಾಗಿ ಕೀವು ತುಂಬಿದ ಹುಣ್ಣಿನಿಂದ ಕ್ರಿಮಿಯು ಹೊರಬರುವಂತೆ ಜನ್ಮವನ್ನು ಪಡೆಯುವನು. ಅನಂತರ ಬಾಲ್ಯವೇ ಮುಂತಾದ ದುಃಖಗಳನ್ನು ಭೋಗಿಸಬೇಕಾಗುತ್ತವೆ. ಈ ಪ್ರಕಾರ ಎಲ್ಲ ದೇಹಧಾರಿಗಳಿಗೆ ಕಷ್ಟ ಭೋಗಿಸಬೇಕಾಗುತ್ತದೆ. ॥39-40॥

(ಶ್ಲೋಕ-41)

ಮೂಲಮ್

ತ್ವಯಾ ಚೈವಾನುಭೂತಾನಿ ಸರ್ವತ್ರ ವಿದಿತಾನಿ ಚ ।
ನ ವರ್ಣಿತಾನಿ ಮೇ ಗೃಧ್ರ ಯೌವನಾದಿಷು ಸರ್ವತಃ ॥

ಅನುವಾದ

‘‘ಎಲೈ ಹದ್ದೆ! ಎಲ್ಲರಿಗೆ ಗೊತ್ತಿರುವ ಯೌವನಾದಿ ದುಃಖಗಳನ್ನು ನೀನೂ ಅನುಭವಿಸಿಯೇ ಇರುವೆ; ಆದ್ದರಿಂದ ನಾನು ವರ್ಣಿಸಲಿಲ್ಲ. ॥41॥

(ಶ್ಲೋಕ-42)

ಮೂಲಮ್

ಏವಂ ದೇಹೋಽಹಮಿತ್ಯಸ್ಮಾದಭ್ಯಾಸಾನ್ನಿರಯಾದಿಕಮ್ ।
ಗರ್ಭವಾಸಾದಿದುಃಖಾನಿ ಭವಂತ್ಯಭಿನಿವೇಶತಃ ॥

ಅನುವಾದ

ಹೀಗೆ ‘ದೇಹವೇ ನಾನು’ ಎಂಬ ಅಭ್ಯಾಸದ ತಪ್ಪು ತಿಳಿವಳಿಕೆಯ ದೇಹಾಭಿಮಾನದಿಂದ ನರಕಗಳೂ, ಗರ್ಭವಾಸಾದಿ ಅನೇಕ ದುಃಖಗಳೂ ಸಂಭವಿಸುತ್ತವೆ. ॥42॥

(ಶ್ಲೋಕ-43)

ಮೂಲಮ್

ತಸ್ಮಾದ್ದೇಹದ್ವಯಾದನ್ಯಮಾತ್ಮಾನಂ ಪ್ರಕೃತೇಃ ಪರಮ್ ।
ಜ್ಞಾತ್ವಾ ದೇಹಾದಿಮಮತಾಂ ತ್ಯಕ್ತ್ವಾತ್ಮಜ್ಞಾನವಾನ್ ಭವೇತ್ ॥

ಅನುವಾದ

ಆದ್ದರಿಂದ ಸ್ಥೂಲ-ಸೂಕ್ಷ್ಮ ಈ ಎರಡೂ ದೇಹಗಳಿಗಿಂತ ವಿಲಕ್ಷಣನಾದ, ಪ್ರಕೃತಿಯನ್ನು ಮೀರಿದ ಆತ್ಮನನ್ನು ಅರಿತುಕೊಂಡು ದೇಹಾದಿಗಳಲ್ಲಿ ನಾನೆಂಬ ಬುದ್ಧಿಯನ್ನು ತ್ಯಾಗಮಾಡಿ ಆತ್ಮಜ್ಞಾನಿಯಾಗಬೇಕು. ॥43॥

(ಶ್ಲೋಕ-44)

ಮೂಲಮ್

ಜಾಗ್ರದಾದಿವಿನಿರ್ಮುಕ್ತಂ ಸತ್ಯಜ್ಞಾನಾದಿಲಕ್ಷಣಮ್ ।
ಶುದ್ಧಂ ಬುದ್ಧಂ ಸದಾ ಶಾಂತಮಾತ್ಮಾನಮವಧಾರಯೇತ್ ॥

ಅನುವಾದ

ಎಚ್ಚರವೇ ಮುಂತಾದ ಅವಸ್ಥೆಗಳನ್ನು ಮೀರಿದ, ಸತ್ಯ ಜ್ಞಾನಾದಿ ರೂಪನಾದ ಹಾಗೂ ಸದಾ ಶುದ್ಧನೂ, ಬುದ್ಧನೂ, ಶಾಂತನೂ ಆದ ಆತ್ಮನನ್ನು ಅರಿತು ನಿಶ್ಚಿಯಿಸಿಕೊಳ್ಳಬೇಕು. ॥44॥

(ಶ್ಲೋಕ-45)

ಮೂಲಮ್

ಚಿದಾತ್ಮನಿ ಪರಿಜ್ಞಾತೇ ನಷ್ಟೇ ಮೋಹೇಽಜ್ಞಸಂಭವೇ ।
ದೇಹಃ ಪತತು ವಾರಬ್ಧಕರ್ಮವೇಗೇನ ತಿಷ್ಠತು ॥

(ಶ್ಲೋಕ-46)

ಮೂಲಮ್

ಯೋಗಿನೋ ನ ಹಿ ದುಃಖಂ ವಾ ಸುಖಂ ವಾಜ್ಞಾನಸಂಭವಮ್ ।
ತಸ್ಮಾದ್ದೇಹೇನ ಸಹಿತೋ ಯಾವತ್ಪ್ರಾರಬ್ಧಸಂಕ್ಷಯಃ ॥

(ಶ್ಲೋಕ-47)

ಮೂಲಮ್

ತಾವತ್ತಿಷ್ಠ ಸುಖೇನ ತ್ವಂ ಧೃತಕಂಚುಕಸರ್ಪವತ್ ।
ಅನ್ಯದ್ವಕ್ಷ್ಯಾಮಿ ತೇ ಪಕ್ಷಿನ್ ಶೃಣು ಮೇ ಪರಮಂ ಹಿತಮ್ ॥

ಅನುವಾದ

ಚಿದ್ರೂಪನಾದ ಆತ್ಮನ ಜ್ಞಾನ ಉಂಟಾದಾಗ ಅಜ್ಞಾನಜನಿತ ಮೋಹವು ನಾಶವಾಗುವುದು. ಆಗ ಈ ಶರೀರವು ಪ್ರಾರಬ್ಧ ಕರ್ಮದ ವೇಗದಿಂದ ಇರಲಿ, ಅಥವಾ ಬಿದ್ದು ಹೋಗಲಿ; ಯೋಗಿಯಾದವನಿಗೆ ಅಜ್ಞಾನ ನಿಮಿತ್ತವಾದ ಸುಖ-ದುಃಖಗಳಿರುವುದಿಲ್ಲ. ಆದ್ದರಿಂದ ನೀನು ಪ್ರಾರಬ್ಧವು ಕಳೆಯುವವರೆಗೆ ಪೊರೆರಹಿತವಾದ ಹಾವು ಇರುವಂತೆ ಸುಖವಾಗಿ ದೇಹವನ್ನು ಧರಿಸಿಕೊಂಡಿರು. ‘‘ಎಲೈ ಪಕ್ಷಿಯೆ! ನಿನ್ನ ಪರಮ ಹಿತದ ಇನ್ನೊಂದು ಮಾತು ಹೇಳುತ್ತೇನೆ ಕೇಳು - ॥45-47॥

(ಶ್ಲೋಕ-48)

ಮೂಲಮ್

ತ್ರೇತಾಯುಗೇ ದಾಶರಥಿರ್ಭೂತ್ವಾ ನಾರಾಯಣೋಽವ್ಯಯಃ ।
ರಾವಣಸ್ಯ ವಧಾರ್ಥಾಯ ದಂಡಕಾನಾಗಮಿಷ್ಯತಿ ॥

(ಶ್ಲೋಕ-49)

ಮೂಲಮ್

ಸೀತಯಾ ಭಾರ್ಯಯಾ ಸಾರ್ಧಂ ಲಕ್ಷ್ಮಣೇನ ಸಮನ್ವಿತಃ ।
ತತ್ರಾಶ್ರಮೇ ಜನಕಜಾಂ ಭ್ರಾತೃಭ್ಯಾಂ ರಹಿತೇ ವನೇ ॥

(ಶ್ಲೋಕ-50)

ಮೂಲಮ್

ರಾವಣಶ್ಚೋರವನ್ನೀತ್ವಾ ಲಂಕಾಯಾಂ ಸ್ಥಾಪಯಿಷ್ಯತಿ ।
ತಸ್ಯಾಃ ಸುಗ್ರೀವನಿರ್ದೇಶಾದ್ವಾನರಾಃ ಪರಿಮಾರ್ಗಣೇ ॥

(ಶ್ಲೋಕ-51)

ಮೂಲಮ್

ಆಗಮಿಷ್ಯಂತಿ ಜಲಧೇಸ್ತೀರಂ ತತ್ರ ಸಮಾಗಮಃ ।
ತ್ವಯಾ ತೈಃ ಕಾರಣವಶಾದ್ಭವಿಷ್ಯತಿ ನ ಸಂಶಯಃ ॥

ಅನುವಾದ

ತ್ರೇತಾ ಯುಗದಲ್ಲಿ ಅವ್ಯಯನಾದ ನಾರಾಯಣನು ದಶರಥನಿಗೆ ಮಗನಾದ ರಾಮನಾಗಿ ಅವತರಿಸಿ ರಾವಣನ ವಧೆಗಾಗಿ ದಂಡಕಾರಣ್ಯಕ್ಕೆ ಪತ್ನಿಯಾದ ಸೀತೆ ಹಾಗೂ ತಮ್ಮನಾದ ಲಕ್ಷ್ಮಣನೊಡಗೂಡಿ ಬರಲಿರುವನು. ಅಲ್ಲಿ ಆಶ್ರಮದಲ್ಲಿ ಸಹೋದರರಿಬ್ಬರೂ ಇಲ್ಲದಿದ್ದಾಗ, ಜನಕ ಪುತ್ರಿಯಾದ ಸೀತೆಯನ್ನು ರಾವಣನು ಕಳ್ಳನಂತೆ ಅಪಹರಿಸಿಕೊಂಡು ಹೋಗಿ ಲಂಕೆಯಲ್ಲಿಡುವನು. ಆಕೆಯನ್ನು ಹುಡುಕು ವುದಕ್ಕಾಗಿ ಸುಗ್ರೀವನ ಆಜ್ಞೆಯಂತೆ ಕಪಿಗಳು ಸಮುದ್ರತೀರಕ್ಕೆ ಬರಲಿರುವರು. ಅಲ್ಲಿ ಕಾರಣಾಂತರಗಳಿಂದ ಅವರೊಡನೆ ನಿನಗೆ ಸಮಾಗಮವಾಗುವುದು. ಈ ಬಗ್ಗೆ ಸಂಶಯವಿಲ್ಲ. ॥48-51॥

(ಶ್ಲೋಕ-52)

ಮೂಲಮ್

ತದಾ ಸೀತಾಸ್ಥಿತಿಂ ತೇಭ್ಯಃ ಕಥಯಸ್ವ ಯಥಾರ್ಥತಃ ।
ತದೈವ ತವ ಪಕ್ಷೌ ದ್ವಾವುತ್ಪತ್ಸ್ಯೇತೇ ಪುನರ್ನವೌ ॥

ಅನುವಾದ

ಆಗ ನೀನು ಸೀತೆಯ ಇರುವಿಕೆಯನ್ನು ಇದ್ದದ್ದು ಇದ್ದ ಹಾಗೆ ಅವರಿಗೆ ಹೇಳು. ಸರಿ, ಆಗಲೇ ನಿನಗೆ ಸುಟ್ಟು ಹೋದ ರೆಕ್ಕೆಗಳು ಪುನಃ ಹೊಸದಾಗಿ ಹುಟ್ಟಿ ಕೊಳ್ಳುವುವು.’’ ॥52॥

(ಶ್ಲೋಕ-53)

ಮೂಲಮ್ (ವಾಚನಮ್)

ಸಂಪಾತಿರುವಾಚ

ಮೂಲಮ್

ಬೋಧಯಾಮಾಸ ಮಾಂ ಚಂದ್ರನಾಮಾ ಮುನಿಕುಲೇಶ್ವರಃ ।
ಪಶ್ಯಂತು ಪಕ್ಷೌ ಮೇ ಜಾತೌ ನೂತನಾವತಿಕೋಮಲೌ ॥

ಅನುವಾದ

ಸಂಪಾತಿ ಇಂತೆಂದನು — ವಾನರಶ್ರೇಷ್ಠರೆ! ಈ ಪ್ರಕಾರ ನನಗೆ ಚಂದ್ರನೆಂಬ ಮುನಿಶ್ರೇಷ್ಠರು ಉಪದೇಶಿಸಿರುವರು. ಇದರಿಂದ ನಾನು ಶಾಂತನಾಗಿ ಈ ಸಮಯವನ್ನು ಕಾಯುತ್ತಿದ್ದೆ. ಇದೋ, ನೋಡಿರಿ ; ನನಗೆ ಹೊಸತಾದ ಬಹುಕೋಮಲವಾದ ಎರಡೂ ರೆಕ್ಕೆಗಳು ಹುಟ್ಟಿಕೊಂಡಿವೆ. ॥53॥

(ಶ್ಲೋಕ-54)

ಮೂಲಮ್

ಸ್ವಸ್ತಿ ವೋಽಸ್ತು ಗಮಿಷ್ಯಾಮಿ ಸೀತಾಂ ದ್ರಕ್ಷ್ಯಥ ನಿಶ್ಚಯಮ್ ।
ಯತ್ನಂ ಕುರುಧ್ವಂ ದುರ್ಲಂಘ್ಯ ಸಮುದ್ರಸ್ಯ ವಿಲಂಘನೆ ॥

ಅನುವಾದ

ನಿಮಗೆಲ್ಲ ಮಂಗಳವಾಗಲಿ. ಸೀತೆಯನ್ನು ನೀವು ಖಂಡಿತವಾಗಿ ಕಾಣುವಿರಿ. ದಾಟಲಸಾಧ್ಯವಾದ ಈ ಸಮುದ್ರವನ್ನು ದಾಟಿ ಹೋಗಲು ಪ್ರಯತ್ನಿಸಿರಿ. ನಾನು ಹೋಗಿ ಬರುತ್ತೇನೆ. ॥54॥

(ಶ್ಲೋಕ-55)

ಮೂಲಮ್

ಯನ್ನಾಮಸ್ಮೃತಿಮಾತ್ರತೋಽಪರಿಮಿತಂ ಸಂಸಾರವಾರಾಂನಿಧಿಂ
ತೀರ್ತ್ವಾ ಗಚ್ಛತಿ ದುರ್ಜನೋಽಪಿ ಪರಮಂ ವಿಷ್ಣೋಃ ಪದಂ ಶಾಶ್ವತಮ್ ।
ತಸ್ಯೈವ ಸ್ಥಿತಿಕಾರಿಣಸ್ತ್ರಿಜಗತಾಂ ರಾಮಸ್ಯ ಭಕ್ತಾಃ ಪ್ರಿಯಾ
ಯೂಯಂ ಕಿಂ ನ ಸಮುದ್ರಮಾತ್ರತರಣೇ ಶಕ್ತಾಃ ಕಥಂ ವಾನರಾಃ ॥

ಅನುವಾದ

ಹೇ ವಾನರರೆ! ದುಷ್ಟನಾದವನೂ ಕೂಡ ಯಾರ ನಾಮವನ್ನು ನೆನೆಸಿಕೊಂಡ ಮಾತ್ರದಿಂದ ಸಂಸಾರವೆಂಬ ಸಮುದ್ರವನ್ನು ದಾಟಿ ಶಾಶ್ವತವಾದ ಹಾಗೂ ಪರಮ ವಿಷ್ಣುವಿನ ಸ್ಥಾನವನ್ನು ಹೊಂದಬಲ್ಲನೋ, ಅಂತಹ ಮೂರು ಜಗತ್ತುಗಳ ಸ್ಥಿತಿಕಾರಕನೂ ಆದ ಶ್ರೀರಾಮನ ಪ್ರಿಯ ಭಕ್ತರಾದ ನಿಮಗೆ ಕೇವಲ ನೀರಿನ ಸಮುದ್ರವನ್ನು ದಾಟುವುದರಲ್ಲಿ ಶಕ್ತರಾಗದೆ ಹೋಗಲು ಹೇಗೆ ಸಾಧ್ಯವಾದೀತು? ॥55॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಅಷ್ಟಮಃ ಸರ್ಗಃ ॥8॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.

ಮೂಲಮ್