೦೭

[ಏಳನೆಯ ಸರ್ಗ]

ಭಾಗಸೂಚನಾ

ವಾನರರ ಪ್ರಾಯೋಪವೇಶನ ಮತ್ತು ಸಂಪಾತಿಯ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಅಥ ತತ್ರ ಸಮಾಸೀನಾ ವೃಕ್ಷಷಂಡೇಷು ವಾನರಾಃ ।
ಚಿಂತಯಂತೋ ವಿಮುಹ್ಯಂತಃ ಸೀತಾಮಾರ್ಗಣಕರ್ಶಿತಾಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಇತ್ತ ಸೀತಾದೇವಿಯನ್ನು ಹುಡುಕುತ್ತಾ ಬಳಲಿದ ವಾನರರು ಮರದ ಮೇಲೆ ಕುಳಿತುಕೊಂಡು, ಸೀತೆಯು ದೊರೆಯದಿರುವಾಗ ಪರವಶರಾಗಿ ಚಿಂತಿಸುತ್ತಾ ಇದ್ದರು. ॥1॥

(ಶ್ಲೋಕ-2)

ಮೂಲಮ್

ತತ್ರೋವಾಚಾಂಗದಃ ಕಾಂಶ್ಚಿದ್ವಾನರಾನ್ ವಾನರರ್ಷಭಃ ।
ಭ್ರಮತಾಂ ಗಹ್ವರೇಸ್ಮಾಕಂ ಮಾಸೋ ನೂನಂ ಗತೋಭವತ್ ॥

ಅನುವಾದ

ಆಗ ವಾನರ ಶ್ರೇಷ್ಠನಾದ ಅಂಗದನು ಕೆಲವು ಕಪಿಗಳೊಂದಿಗೆ ಹೇಳುತ್ತಾನೆ - ‘‘ದಟ್ಟವಾದ ಕಾಡಿನಲ್ಲಿ ಅಲೆಯುತ್ತಿದ್ದ ನಮಗೆ ಒಂದು ತಿಂಗಳ ಕಾಲ ನಿಜವಾಗಿಯೂ ಕಳೆದು ಹೋಯಿತು. ॥2॥

(ಶ್ಲೋಕ-3)

ಮೂಲಮ್

ಸೀತಾ ನಾಧಿಗತಾಸ್ಮಾಭಿರ್ನ ಕೃತಂ ರಾಜಶಾಸನಮ್ ।
ಯದಿ ಗಚ್ಛಾಮ ಕಿಷ್ಕಿಂಧಾಂ ಸುಗ್ರೀವೋಸ್ಮಾನ್ ಹನಿಷ್ಯತಿ ॥

ಅನುವಾದ

ಆದರೆ ಇಷ್ಟರವರೆಗೆ ನಮಗೆ ಸೀತೆಯು ದೊರೆಯಲಿಲ್ಲ. ವಾನರರಾಜ ಸುಗ್ರೀವನ ಆಜ್ಞೆಯನ್ನು ನಮ್ಮಿಂದ ಪಾಲಿಸಲಾಗಲಿಲ್ಲ. ನಾವು ಈಗ ಕಿಷ್ಕಿಂಧೆಗೆ ಹಿಂದಿರುಗಿ ಹೋದರೆ ಸುಗ್ರೀವನು ನಮ್ಮನ್ನು ಖಂಡಿತವಾಗಿ ಕೊಂದುಬಿಡುವನು. ॥3॥

(ಶ್ಲೋಕ-4)

ಮೂಲಮ್

ವಿಶೇಷತಃ ಶತ್ರುಸುತಂ ಮಾಂ ಮಿಷಾನ್ನಿಹನಿಷ್ಯತಿ ।
ಮಯಿ ತಸ್ಯ ಕುತಃ ಪ್ರೀತಿರಹಂ ರಾಮೇಣ ರಕ್ಷಿತಃ ॥

ಅನುವಾದ

ವಿಶೇಷವಾಗಿ ಶತ್ರುವಿನ ಮಗನಾದ ನನ್ನನ್ನು ಇದೇ ನೆಪವೊಡ್ಡಿಕೊಂದು ಬಿಡುತ್ತಾನೆ. ಏಕೆಂದರೆ, ನನ್ನಲ್ಲಿ ಅವನಿಗೆ ಪ್ರೀತಿಯಾದರೂ ಹೇಗೆ ಇದ್ದೀತು? ನಾನಾದರೋ ಶ್ರೀರಾಮನಿಂದ ರಕ್ಷಿತನಾದವನು. ॥4॥

(ಶ್ಲೋಕ-5)

ಮೂಲಮ್

ಇದಾನೀಂ ರಾಮಕಾರ್ಯಂ ಮೇ ನ ಕೃತಂ ತನ್ಮಿಷಂ ಭವೇತ್ ।
ತಸ್ಯ ಮದ್ಧನನೇ ನೂನಂ ಸುಗ್ರೀವಸ್ಯ ದುರಾತ್ಮನಃ ॥

ಅನುವಾದ

ಈಗಲಾದರೋ ನಾನು ರಾಮಕಾರ್ಯವನ್ನು ನೆರವೇರಿಸಿರುವುದಿಲ್ಲ. ದುರಾತ್ಮನಾದ ಸುಗ್ರೀವನಿಗೆ ನನ್ನನ್ನು ಕೊಲ್ಲುವುದಕ್ಕೆ ಖಂಡಿತವಾಗಿಯೂ ಇದೇ ನೆಪವಾಗಬಹುದು. ॥5॥

(ಶ್ಲೋಕ-6)

ಮೂಲಮ್

ಮಾತೃಕಲ್ಪಾಂ ಭ್ರಾತೃಭಾರ್ಯಾಂ ಪಾಪಾತ್ಮಾನುಭವತ್ಯಸೌ ।
ನ ಗಚ್ಛೇಯಮತಃ ಪಾರ್ಶ್ವಂ ತಸ್ಯ ವಾನರ ಪುಂಗವಾಃ ॥

ಅನುವಾದ

ಆ ಪಾಪಾತ್ಮನಾದರೋ ತಾಯಿಗೆ ಸಮಾನಳಾದ ಅಣ್ಣನ ಹೆಂಡತಿಯನ್ನು ಅನುಭವಿಸುತ್ತಿರುವನು. ಎಲೈ ವಾನರಶ್ರೇಷ್ಠರೆ! ಆದ್ದರಿಂದ ನಾನು ಅವನ ಬಳಿಗೆ ಹೋಗುವುದಿಲ್ಲ. ॥6॥

(ಶ್ಲೋಕ-7)

ಮೂಲಮ್

ತ್ಯಕ್ಷ್ಯಾಮಿ ಜೀವಿತಂ ಚಾತ್ರ ಯೇನ ಕೇನಾಪಿ ಮೃತ್ಯುನಾ ।
ಇತ್ಯಶ್ರುನಯನಂ ಕೇಚಿದ್ದೃಷ್ಟ್ವಾ ವಾನರಪುಂಗವಾಃ ॥

ಅನುವಾದ

ಯಾವುದಾದರೂ ಉಪಾಯದಿಂದ ನಾನು ಇಲ್ಲೇ ನನ್ನ ಜೀವನವನ್ನು ಮುಗಿಸಿ ಬಿಡುವೆನು.’’ ಹೀಗೆ ಕಣ್ಣೀರಿನಿಂದ ಕೂಡಿದ ಅಂಗದನನ್ನು ಕಂಡು ಕೆಲವು ವಾನರಶ್ರೇಷ್ಠರು ದುಃಖಿತರಾಗಿ ತಾವೂ ಕಣ್ಣೀರು ಸುರಿಸುತ್ತಾ ಯುವರಾಜನಲ್ಲಿ ಹೇಳುತ್ತಾರೆ- ॥7॥

(ಶ್ಲೋಕ-8)

ಮೂಲಮ್

ವ್ಯಥಿತಾಃ ಸಾಶ್ರುನಯನಾ ಯುವರಾಜಮಥಾಬ್ರುವನ್ ॥

(ಶ್ಲೋಕ-9)

ಮೂಲಮ್

ಕಿಮರ್ಥಂ ತವ ಶೋಕೋತ್ರ ವಯಂ ತೇ ಪ್ರಾಣರಕ್ಷಕಾಃ ।
ಭವಾಮೋ ನಿವಸಾಮೋತ್ರ ಗುಹಾಯಾಂ ಭಯವರ್ಜಿತಾಃ ॥

ಅನುವಾದ

‘‘ಅಂಗದಾ! ನೀನು ಇಷ್ಟೊಂದು ಶೋಕ ಏಕೆ ಮಾಡುತ್ತಿರುವೆ? ನಿನ್ನ ಪ್ರಾಣಗಳನ್ನು ನಾವು ಕಾಪಾಡುತ್ತೇವೆ ಹಾಗೂ ನಾವೆಲ್ಲರೂ ಇಲ್ಲಿಯೇ ಗುಹೆಯಲ್ಲಿ ನಿರ್ಭಯರಾಗಿ ಇದ್ದು ಬಿಡೋಣ. ॥8-9॥

(ಶ್ಲೋಕ-10)

ಮೂಲಮ್

ಸರ್ವಸೌಭಾಗ್ಯಸಹಿತಂ ಪುರಂ ದೇವಪುರೋಪಮಮ್ ।
ಶನೈಃ ಪರಸ್ಪರಂ ವಾಕ್ಯಂ ವದತಾಂ ಮಾರುತಾತ್ಮಜಃ ॥

(ಶ್ಲೋಕ-11)

ಮೂಲಮ್

ಶ್ರುತ್ವಾಂಗದಂ ಸಮಾಲಿಂಗ್ಯ ಪ್ರೋವಾಚ ನಯಕೋವಿದಃ ।
ವಿಚಾರ್ಯತೇ ಕಿಮರ್ಥಂ ತೇ ದುರ್ವಿಚಾರೋ ನ ಯುಜ್ಯತೇ ॥

(ಶ್ಲೋಕ-12)

ಮೂಲಮ್

ರಾಜ್ಞೋತ್ಯಂತಪ್ರಿಯಸ್ತ್ವಂ ಹಿ ತಾರಾಪುತ್ರೋಽತಿವಲ್ಲಭಃ ।
ರಾಮಸ್ಯ ಲಕ್ಷ್ಮಣಾತ್ ಪ್ರೀತಿಃ ತ್ವಯಿ ನಿತ್ಯಂ ಪ್ರವರ್ಧತೇ ॥

ಅನುವಾದ

ಈ ಗುಹಾನಗರಿಯು ಎಲ್ಲ ಸುಖ-ಸೌಭಾಗ್ಯಗಳಿಂದ ಕೂಡಿದ್ದು ಅಮರಾವತಿಯಂತೆ ಇದೆ. ಹೀಗೆ ಪರಸ್ಪರಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿದ ನೀತಿ ನಿಪುಣನಾದ ಮರುತಾತ್ಮಜ ಹನುಮಂತನು ಅಂಗದನ ಬಳಿಗೆ ಬಂದು ಅವನನ್ನು ಬಿಗಿದಪ್ಪಿಕೊಂಡು ಹೇಳಿದನು ‘‘ಯುವರಾಜಾ! ನೀನು ಹೀಗೇಕೆ ಚಿಂತಿಸುತ್ತಿರುವೆ? ಕೆಟ್ಟವಿಚಾರಗಳನ್ನು ಮನಸ್ಸಿಗೆ ತರುವುದು ಉಚಿತವಲ್ಲ. ನೀನು ತಾರಾದೇವಿಯ ಮುದ್ದಿನ ಮಗನಾಗಿದ್ದು, ಮಹಾರಾಜಾ ಸುಗ್ರೀವನಿಗೂ ಹೆಚ್ಚಿನ ಪ್ರೇಮಪಾತ್ರನಾಗಿರುವೆ. ಶ್ರೀರಾಮನಿಗೆ ತಮ್ಮನಾದ ಲಕ್ಷ್ಮಣನಿಗಿಂತಲೂ ಹೆಚ್ಚಾದ ಪ್ರೀತಿಯು ನಿನ್ನಲ್ಲಿ ಬೆಳೆದಿದೆ. ॥10-12॥

(ಶ್ಲೋಕ-13)

ಮೂಲಮ್

ಅತೋ ನ ರಾಘವಾದ್ಭೀತಿಸ್ತವ ರಾಜ್ಞೋ ವಿಶೇಷತಃ ।
ಅಹಂ ತವ ಹಿತೇ ಸಕ್ತೋ ವತ್ಸ ನಾನ್ಯಂ ವಿಚಾರಯ ॥

ಅನುವಾದ

ಆದ್ದರಿಂದ ನಿನಗೆ ರಾಮನಿಂದ ಅಥವಾ ಹೆಚ್ಚಾಗಿ ರಾಜನಾದ ಸುಗ್ರೀವನಿಂದ ಯಾವ ಹೆದರಿಕೆಯೂ ಇರಬಾರದು. ಮಗು! ನಾನೂ ಕೂಡ ಎಲ್ಲ ಪ್ರಕಾರದ ನಿನ್ನ ಹಿತದಲ್ಲಿ ತತ್ಪರನಾಗಿದ್ದೇನೆ. ಆದ್ದರಿಂದ ನೀನು ಅಂತಿಂತಹ ಚಿಂತೆಯನ್ನು ಮಾಡಬೇಡ. ॥13॥

(ಶ್ಲೋಕ-14)

ಮೂಲಮ್

ಗುಹಾವಾಸಶ್ಚ ನಿರ್ಭೇದ್ಯ ಇತ್ಯುಕ್ತಂ ವಾನರೈಸ್ತು ಯತ್ ।
ತದೇತದ್ರಾಮಬಾಣಾನಾಮಭೇದ್ಯಂ ಕಿಂ ಜಗತಯೇ ॥

ಅನುವಾದ

ಗುಹೆಯಲ್ಲಿ ವಾಸವಾಗಿದ್ದಲ್ಲಿ ಯಾರೂ ಭೇದಿಸಲಾರರು ಎಂದು ಈ ವಾನರರು ಹೇಳಿದರಲ್ಲ! ಇದು ಸರಿಯಲ್ಲ. ರಾಮನ ಬಾಣಗಳಿಗೆ ಅಭೇದ್ಯವಾಗಿರುವುದು ಈ ಮೂರು ಲೋಕಗಳಲ್ಲಿ ಏನಿದ್ದೀತು? ॥14॥

(ಶ್ಲೋಕ-15)

ಮೂಲಮ್

ಯೇ ತ್ವಾಂ ದುರ್ಬೋಧಯಂತ್ಯೇತೇ ವಾನರಾ ವಾನರರ್ಷಭ ।
ಪುತ್ರದಾರಾದಿಕಂ ತ್ಯಕ್ತ್ವಾ ಕಥಂ ಸ್ಥಾಸ್ಯಂತಿ ತೇ ತ್ವಯಾ ॥

ಅನುವಾದ

ಎಲೈ ವಾನರ ಶ್ರೇಷ್ಠನೆ! ಯಾವ ಈ ಕಪಿಗಳು ನಿನಗೆ ದುರ್ಬೋಧನೆಯನ್ನು ಮಾಡುತ್ತಿರುವರೋ ಅವರುಗಳು ತಮ್ಮ ಹೆಂಡಿರು ಮಕ್ಕಳನ್ನು ಬಿಟ್ಟು ಹೇಗೆ ತಾನೆ ನಿನ್ನೊಡನೆ ಇರುವರು? ॥15॥

(ಶ್ಲೋಕ-16)

ಮೂಲಮ್

ಅನ್ಯದ್ ಗುಹ್ಯತಮಂ ವಕ್ಷ್ಯೇ ರಹಸ್ಯಂ ಶ್ರುಣು ಮೇ ಸುತ ।
ರಾಮೋ ನ ಮಾನುಷೋ ದೇವಃ ಸಾಕ್ಷಾನ್ನಾರಾಯಣೋಽವ್ಯಯಃ ॥

ಅನುವಾದ

ಇದಲ್ಲದೆ ‘‘ಮಗು! ಮತ್ತೊಂದು ಗುಪ್ತವಾದ ರಹಸ್ಯತಮವಾದ ವಿಚಾರವನ್ನು ಹೇಳುವೆನು ಕೇಳು - ಶ್ರೀರಾಮನು ಸಾಮಾನ್ಯ ಮನುಷ್ಯನಲ್ಲ; ಅವನು ಅವ್ಯಯನಾದ ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದಾನೆ. ॥16॥

(ಶ್ಲೋಕ-17)

ಮೂಲಮ್

ಸೀತಾ ಭಗವತೀ ಮಾಯಾ ಜನಸಮ್ಮೋಹಕಾರಿಣೀ ।
ಲಕ್ಷ್ಮಣೋ ಭುವನಾಧಾರಃ ಸಾಕ್ಷಾಚ್ಛೇಷಃ ಫಣೀಶ್ವರಃ ॥

ಅನುವಾದ

ಜಗಜ್ಜನನಿ ಶ್ರೀಸೀತಾದೇವಿಯು ಜನರನ್ನು ಮೋಹಗೊಳಿಸುವ ಮಾಯೆಯೇ ಆಗಿದ್ದಾಳೆ. ಲಕ್ಷ್ಮಣನಾದರೋ ಪ್ರಪಂಚಕ್ಕೆ ಆಧಾರನಾದ ಫಣಿರಾಜನಾದ ಸಾಕ್ಷಾತ್ ಆದಿಶೇಷನೇ ಆಗಿರುವನು. ॥17॥

(ಶ್ಲೋಕ-18)

ಮೂಲಮ್

ಬ್ರಹ್ಮಣಾ ಪ್ರಾರ್ಥಿತಾಃ ಸರ್ವೇ ರಕ್ಷೋಗಣವಿನಾಶನೇ ।
ಮಾಯಾಮಾನುಷಭಾವೇನ ಜಾತಾ ಲೋಕೈಕರಕ್ಷಕಾಃ ॥

ಅನುವಾದ

ಇವರೆಲ್ಲ ಬ್ರಹ್ಮದೇವರ ಪ್ರಾರ್ಥನೆಯಂತೆ ರಾಕ್ಷಸರನ್ನು ನಾಶಗೊಳಿಸುವುದಕ್ಕಾಗಿ ಮಾಯೆಯಿಂದ ಮನುಷ್ಯ ಭಾವವನ್ನು ಹೊಂದಿ ಅವತರಿಸಿರುವರು. ಇವರಲ್ಲಿ ಒಬ್ಬೊಬ್ಬರೂ ತ್ರಿಲೋಕಗಳನ್ನು ಕಾಪಾಡಲು ಸಮರ್ಥರಾಗಿದ್ದಾರೆ. ॥18॥

(ಶ್ಲೋಕ-19)

ಮೂಲಮ್

ವಯಂ ಚ ಪಾರ್ಷದಾಃ ಸರ್ವೇ ವಿಷ್ಣೋರ್ವೈಕುಂಠವಾಸಿನಃ ।
ಮನುಷ್ಯಭಾವಮಾಪನ್ನೇ ಸ್ವೇಚ್ಛಯಾ ಪರಮಾತ್ಮನಿ ॥

(ಶ್ಲೋಕ-20)

ಮೂಲಮ್

ವಯಂ ವಾನರರೂಪೇಣ ಜಾತಾಸ್ತಸ್ಯೈವ ಮಾಯಯಾ ।
ವಯಂ ತು ತಪಸಾ ಪೂರ್ವಮಾರಾಧ್ಯ ಜಗತಾಂ ಪತಿಮ್ ॥

(ಶ್ಲೋಕ-21)

ಮೂಲಮ್

ತೇನೈವಾನುಗೃಹೀತಾಃ ಸ್ಮಃ ಪಾರ್ಷದತ್ವಮುಪಾಗತಾಃ ।
ಇದಾನೀಮಪಿ ತಸ್ಯೈವ ಸೇವಾಂ ಕೃತ್ವೈವ ಮಾಯಯಾ ॥

(ಶ್ಲೋಕ-22)

ಮೂಲಮ್

ಪುನರ್ವೈಕುಂಠಮಾಸಾದ್ಯ ಸುಖಂ ಸ್ಥಾಸ್ಯಾಮಹೇ ವಯಮ್ ।
ಇತ್ಯಂಗದಮಥಾಶ್ವಾಸ್ಯ ಗತಾ ವಿಂಧ್ಯಂ ಮಹಾಚಲಮ್ ॥

ಅನುವಾದ

ನಾವೆಲ್ಲರೂ ವೈಕುಂಠವಾಸಿಯಾದ ಭಗವಾನ್ ಶ್ರೀವಿಷ್ಣುವಿನ ಪಾರ್ಷದರು (ಸೇವಕರು). ಭಗವಂತನು ತನ್ನ ಇಚ್ಛೆಗನುಗುಣವಾಗಿ ಮನುಷ್ಯನಾಗಿ ಅವತರಿಸಲಾಗಿ, ಅವನ ಮಾಯೆಯಿಂದಲೇ ನಾವು ಕಪಿಗಳ ರೂಪದಿಂದ ಹುಟ್ಟಿರುತ್ತೇವೆ. ನಾವಾದರೋ ಹಿಂದೆ ತಪಸ್ಸಿನಿಂದ ಜಗತ್ಪತಿಯಾದ ವಿಷ್ಣುವನ್ನು ಆರಾಧಿಸಿ ಅವನ ಪ್ರಸಾದದಿಂದಲೇ ಪಾರ್ಷದರಾದವರು. ಈಗಲೂ ಕೂಡ ನಾವು ಮಾಯಾ ಪ್ರೇರಣೆಯಿಂದ ಅವನ ಲೀಲೆಯಲ್ಲಿ ಭಾಗಿಗಳಾಗಿ ಅವನ ಸೇವೆಯನ್ನೇ ಮಾಡಿ ಪುನಃ ವೈಕುಂಠವನ್ನು ಸೇರಿ ಅವನೊಂದಿಗೆ ಸುಖವಾಗಿರೋಣ.’’ ಹೀಗೆಂದು ಅಂಗದನನ್ನು ಸಮಾಧಾನಗೊಳಿಸಿ ಅವರೆಲ್ಲರೂ ವಿಂಧ್ಯಪರ್ವತಕ್ಕೆ ಹೋದರು. ॥19-22॥

(ಶ್ಲೋಕ-23)

ಮೂಲಮ್

ವಿಚಿನ್ವಂತೋಽಥ ಶನಕೈರ್ಜಾನಕೀಂ ದಕ್ಷಿಣಾಂಬುಧೇಃ ।
ತೀರೇ ಮಹೇಂದ್ರಾಖ್ಯಗಿರೇಃ ಪವಿತ್ರಂ ಪಾದಮಾಯಯುಃ ॥

ಅನುವಾದ

ಮತ್ತೆ ನಿಧಾನವಾಗಿ ಸೀತಾದೇವಿಯನ್ನು ಹುಡುಕುತ್ತಾ ದಕ್ಷಿಣ ಸಮುದ್ರ ತೀರದಲ್ಲಿರುವ ಪವಿತ್ರವಾದ ಮಹೇಂದ್ರ ಪರ್ವತದ ತಪ್ಪಲಿಗೆ ಬಂದು ತಲುಪಿದರು. ॥23॥

(ಶ್ಲೋಕ-24)

ಮೂಲಮ್

ದೃಷ್ಟ್ವಾ ಸಮುದ್ರಂ ದುಷ್ಪಾರಮಗಾಧಂ ಭಯವರ್ಧನಮ್ ।
ವಾನರಾ ಭಯಸಂತ್ರಸ್ತಾಃ ಕಿಂ ಕುರ್ಮ ಇತಿ ವಾದಿನಃ ॥

(ಶ್ಲೋಕ-25)

ಮೂಲಮ್

ನಿಷೇದುರುದಧೇಸ್ತೀರೇ ಸರ್ವೇ ಚಿಂತಾಸಮನ್ವಿತಾಃ ।
ಮಂತ್ರಯಾಮಾಸುರನ್ಯೋನ್ಯಮಂಗದಾದ್ಯಾ ಮಹಾಬಲಾಃ ॥

ಅನುವಾದ

ಅಲ್ಲಿಗೆ ತಲುಪುತ್ತಲೇ ಅಪಾರವೂ, ಅಗಾಧವೂ ಆದ ಭಯವನ್ನುಂಟುಮಾಡುವಂತಹ, ದಾಟಲಸಾಧ್ಯವಾದ ಸಮುದ್ರ ವನ್ನು ಕಂಡು ಕಪಿಗಳೆಲ್ಲ ಭಯದಿಂದ ನಡುಗಿಹೋಗಿ ಮುಂದೇನು ಮಾಡುವುದು ಎಂದು ಯೋಚಿಸುತ್ತಾ ಅಂಗದಾದಿ ಎಲ್ಲ ಮಹಾಪರಾಕ್ರಮಿ ವಾನರರು ಚಿಂತಾಕ್ರಾಂತರಾಗಿ ಸಮುದ್ರ ದಡದಲ್ಲಿ ಕುಳಿತು ಬಿಟ್ಟರು. ॥24-25॥

(ಶ್ಲೋಕ-26)

ಮೂಲಮ್

ಭ್ರಮತೋ ಮೇ ವನೇ ಮಾಸೋ ಗತೋಽತ್ರೈವ ಗುಹಾಂತರೇ ।
ನ ದೃಷ್ಟೋ ರಾವಣೋ ವಾದ್ಯ ಸೀತಾ ವಾ ಜನಕಾತ್ಮಜಾ ॥

(ಶ್ಲೋಕ-27)

ಮೂಲಮ್

ಸುಗ್ರೀವಸ್ತೀಕ್ಷ್ಣದಂಡೋಽಸ್ಮಾನ್ನಿಹಂತ್ಯೇವ ನ ಸಂಶಯಃ ।
ಸುಗ್ರೀವವಧತೋಽಸ್ಮಾಕಂ ಶ್ರೇಯಃ ಪ್ರಾಯೋಪವೇಶನಮ್ ॥

ಅನುವಾದ

ಅಯ್ಯೋ! ಕಾಡಿನಲ್ಲಿ ಅಲೆಯುತ್ತಾ-ಅಲೆಯುತ್ತಾ ಒಂದು ತಿಂಗಳಾದರೋ ಗುಹೆಯೊಳಗೆ ಕಳೆದುಹೋಯಿತು. ಆದರೆ ರಾವಣನನ್ನಾಗಲಿ, ಜನಕನಂದಿನಿ ಸೀತೆಯನ್ನಾಗಲಿ ನಮ್ಮಿಂದ ನೋಡಲಾಗಲಿಲ್ಲ. ತೀಕ್ಷ್ಣವಾದ ಶಿಕ್ಷೆಯನ್ನು ಕೊಡುವ ಸುಗ್ರೀವನು ನಮ್ಮನ್ನು ಖಂಡಿತವಾಗಿ ಕೊಂದು ಬಿಡುವನು. ಇದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಸುಗ್ರೀವನಿಂದ ಸಾಯುವುದಕ್ಕಿಂತ ಪ್ರಾಯೋಪ ವೇಶದಿಂದ (ಉಪವಾಸವಿದ್ದು) ಸಾಯುವುದೇ ಶ್ರೇಯಸ್ಕರವಾದುದು. ॥26-27॥

(ಶ್ಲೋಕ-28)

ಮೂಲಮ್

ಇತಿ ನಿಶ್ಚಿತ್ಯ ತತ್ರೈವ ದರ್ಭಾನಾಸ್ತೀರ್ಯ ಸರ್ವತಃ ।
ಉಪಾವಿವೇಶುಸ್ತೇ ಸರ್ವೇ ಮರಣೇ ಕೃತನಿಶ್ಚಯಾಃ ॥

ಅನುವಾದ

ಹೀಗೆಂದು ನಿಶ್ಚಯಿಸಿಕೊಂಡು ಅಲ್ಲಿಯೇ ಸುತ್ತಲೂ ದರ್ಭೆಗಳನ್ನು ಹಾಸಿ ಅವರೆಲ್ಲರೂ ಸಾಯಲು ಕುಳಿತು ಬಿಟ್ಟರು. ॥28॥

(ಶ್ಲೋಕ-29)

ಮೂಲಮ್

ಏತಸ್ಮಿನ್ನಂತರೇ ತತ್ರ ಮಹೇಂದ್ರಾದ್ರಿಗುಹಾಂತರಾತ್ ।
ನಿರ್ಗತ್ಯ ಶನಕೈರಾಗಾದ್ ಗೃಧ್ರಃ ಪರ್ವತಸನ್ನಿಭಃ ॥

(ಶ್ಲೋಕ-30)

ಮೂಲಮ್

ದೃಷ್ಟ್ವಾ ಪ್ರಾಯೋಪವೇಶೇನ ಸ್ಥಿತಾನ್ವಾನರಪುಂಗವಾನ್ ।
ಉವಾಚ ಶನಕೈರ್ಗೃಧ್ರಃ ಪ್ರಾಪ್ತೋ ಭಕ್ಷ್ಯೋಽದ್ಯ ಮೇ ಬಹುಃ ॥

ಅನುವಾದ

ಆಗಲೇ ಮಹೇಂದ್ರಪರ್ವತದ ಗುಹೆಯೊಂದರಿಂದ ಬೆಟ್ಟದಂತಹ ಭಾರೀ ದೊಡ್ಡದಾದ ಒಂದು ಹದ್ದು ಮೆಲ್ಲನೆ ಹೊರ ಬಂದು, ಪ್ರಾಯೋಪವೇಶಕ್ಕಾಗಿ ಕುಳಿತಿದ್ದ ವಾನರ ಶ್ರೇಷ್ಠರನ್ನು ಕಂಡು ಮೆಲ್ಲನೆ ಹೀಗೆಂದಿತು ‘‘ಆಹಾ! ಈಗ ನನಗೆ ಸಮೃದ್ಧಿಯಾಗಿ ಆಹಾರವು ದೊರಕಿತು. ॥29-30॥

(ಶ್ಲೋಕ-31)

ಮೂಲಮ್

ಏಕೈಕಶಃ ಕ್ರಮಾತ್ಸರ್ವಾನ್ ಭಕ್ಷಯಾಮಿ ದಿನೇ ದಿನೇ ।
ಶ್ರುತ್ವಾ ತದ್ ಗೃಧ್ರವಚನಂ ವಾನರಾ ಭೀತಮಾನಸಾಃ ॥

(ಶ್ಲೋಕ-32)

ಮೂಲಮ್

ಭಕ್ಷಯಿಷ್ಯತಿ ನಃ ಸರ್ವಾನಸೌ ಗೃಧ್ರೋ ನ ಸಂಶಯಃ ।
ರಾಮಕಾರ್ಯಂ ಚ ನಾಸ್ಮಾಭಿಃ ಕೃತಂ ಕಿಂಚಿದ್ಧರೀಶ್ವರಾಃ ॥

(ಶ್ಲೋಕ-33)

ಮೂಲಮ್

ಸುಗ್ರೀವಸ್ಯಾಪಿ ಚ ಹಿತಂ ನ ಕೃತಂ ಸ್ವಾತ್ಮನಾಮಪಿ ।
ವೃಥಾನೇನ ವಧಂ ಪ್ರಾಪ್ತಾ ಗಚ್ಛಾಮೋ ಯಮಸಾದನಮ್ ॥

ಅನುವಾದ

ಒಂದೊಂದೇ ಕಪಿಯನ್ನು ಕ್ರಮವಾಗಿ ಪ್ರತಿದಿನವೂ ತಿಂದು ಬಿಡುವೆನು.’’ ಕಪಿಗಳೆಲ್ಲ ಆ ಹದ್ದಿನ ಮಾತನ್ನು ಕೇಳಿ ಬೆದರಿದವರಾಗಿ ‘‘ಅಯ್ಯೋ! ಈ ಹದ್ದು ನಮ್ಮೆಲ್ಲರನ್ನು ತಿಂದುಹಾಕಲಿದೆ. ಈ ಬಗ್ಗೆ ಸಂಶಯವೇ ಇಲ್ಲ. ಕಪಿಶ್ರೇಷ್ಠರೇ! ನಾವು ಶ್ರೀರಾಮನ ಕಾರ್ಯವನ್ನು ನೆರವೇರಿಸಿದಂತಾಗಲಿಲ್ಲ, ನಮ್ಮವರಿಗೆ ಹಿತವನ್ನುಂಟುಮಾಡಲಾಗಲಿಲ್ಲ. ಸುಗ್ರೀವನಿಗೂ ಏನೂ ಉಪಕಾರ ಮಾಡಲಾಗಲಿಲ್ಲ. ವ್ಯರ್ಥವಾಗಿ ಈ ಹದ್ದಿನಿಂದ ಸಾವನ್ನಪ್ಪಿ ಯಮಲೋಕಕ್ಕೆ ಹೋಗುತ್ತಿದ್ದೇವೆ’’ ಎಂದು ಹೇಳತೊಡಗಿದರು. ॥31-33॥

(ಶ್ಲೋಕ-34)

ಮೂಲಮ್

ಅಹೋ ಜಟಾಯುಃಧರ್ಮಾತ್ಮಾ ರಾಮಸ್ಯಾರ್ಥೇ ಮೃತಃ ಸುಧೀಃ ।
ಮೋಕ್ಷಂ ಪ್ರಾಪ ದುರಾವಾಪಂ ಯೋಗಿನಾಮಪ್ಯರಿಂದಮಃ ॥

ಅನುವಾದ

ಆಹಾ! ಧರ್ಮಾತ್ಮನಾದ ಹಾಗೂ ಬುದ್ಧಿವಂತನಾದ ಜಟಾಯುವು ರಾಮ ಕಾರ್ಯಕ್ಕಾಗಿ ಪ್ರಾಣವನ್ನೇ ಬಿಟ್ಟನು. ಯೋಗಿಗಳಿಗೂ ದುರ್ಲಭವಾದ ಮುಕ್ತಿಯನ್ನು ಶತ್ರುನಾಶಕನಾದ ಅವನು ಪಡೆದುಕೊಂಡನು. ಅವನ ಬಾಳು ಧನ್ಯವಾಯಿತು. ॥34॥

(ಶ್ಲೋಕ-35)

ಮೂಲಮ್

ಸಂಪಾತಿಸ್ತು ತದಾ ವಾಕ್ಯಂ ಶ್ರುತ್ವಾ ವಾನರಭಾಷಿತಮ್ ।
ಕೇ ವಾ ಯೂಯಂ ಮಮ ಭ್ರಾತುಃ ಕರ್ಣಪೀಯೂಷಸನ್ನಿಭಮ್ ॥

(ಶ್ಲೋಕ-36)

ಮೂಲಮ್

ಜಟಾಯುರಿತಿ ನಾಮಾದ್ಯ ವ್ಯಾಹರಂತಃ ಪರಸ್ಪರಮ್ ।
ಉಚ್ಯತಾಂ ವೋ ಭಯಂ ಮಾ ಭೂನ್ಮತ್ತಃ ಪ್ಲವಗಸತ್ತಮಾಃ ॥

ಅನುವಾದ

ವಾನರರು ಆಡುತ್ತಿದ್ದ ಈ ಮಾತನ್ನು ಕೇಳಿದ ಸಂಪಾತಿಯು ‘‘ಎಲೈ ಕಪಿಗಳಿರಾ! ನೀವು ಯಾರು? ಕಿವಿಗೆ ಅಮೃತಪ್ರಾಯವಾದ ನನ್ನ ಸೋದರನಾದ ಜಟಾಯುವಿನ ಹೆಸರನ್ನು ಒಬ್ಬರಿಗೊಬ್ಬರು ಹೇಳುತ್ತಿದ್ದಿರಲ್ಲ! ನಿಮಗೆ ನನ್ನ ಕಡೆಯಿಂದ ಯಾವ ಭಯವೂ ಬೇಡ. ನಿಮ್ಮ ವೃತ್ತಾಂತವನ್ನು ಹೇಳಿರಿ’’ ಎಂದು ಕೇಳಿದನು. ॥35-36॥

(ಶ್ಲೋಕ-37)

ಮೂಲಮ್

ತಮುವಾಚಾಂಗದಃ ಶ್ರೀಮಾನುತ್ಥಿತೋ ಗೃಧ್ರಸನ್ನಿಧೌ ।
ರಾಮೋ ದಾಶರಥಿಃ ಶ್ರೀಮಾನ್ ಲಕ್ಷ್ಮಣೇನ ಸಮನ್ವಿತಃ ॥

(ಶ್ಲೋಕ-38)

ಮೂಲಮ್

ಸೀತಯಾ ಭಾರ್ಯಯಾ ಸಾರ್ಧಂ ವಿಚಚಾರ ಮಹಾವನೇ ।
ತಸ್ಯ ಸೀತಾ ಹೃತಾ ಸಾಧ್ವೀ ರಾವಣೇನ ದುರಾತ್ಮನಾ ॥

ಅನುವಾದ

ಆಗ ಶ್ರೀಮಾನ್ ಅಂಗದನು ಎದ್ದು ಆ ಹದ್ದಿನ ಬಳಿಗೆ ಹೋಗಿ ಹೇಳಿದನು ‘‘ದಶರಥನ ಪುತ್ರನಾದ ಶ್ರೀರಾಮ ಚಂದ್ರನು ತಮ್ಮನಾದ ಲಕ್ಷ್ಮಣ ಮತ್ತು ಪತ್ನಿಯಾದ ಸೀತೆಯಿಂದೊಡಗೂಡಿ ಘೋರವಾದ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದನು. ಅಲ್ಲಿ ಅವನ ಪತ್ನಿಯಾದ ಪತಿವ್ರತೆ ಸೀತೆಯನ್ನು ದುರಾತ್ಮನಾದ ರಾವಣನು ಅಪಹರಿಸಿಕೊಂಡು ಹೋದನು. ॥37-38॥

(ಶ್ಲೋಕ-39)

ಮೂಲಮ್

ಮೃಗಯಾಂ ನಿರ್ಗತೇ ರಾಮೇ ಲಕ್ಷ್ಮಣೇ ಚ ಹೃತಾ ಬಲಾತ್ ।
ರಾಮರಾಮೇತಿ ಕ್ರೋಶಂತೀ ಶ್ರುತ್ವಾ ಗೃಧ್ರಃ ಪ್ರತಾಪವಾನ್ ॥

(ಶ್ಲೋಕ-40)

ಮೂಲಮ್

ಜಟಾಯುರ್ನಾಮ ಪಕ್ಷೀಂದ್ರೋ ಯುದ್ಧಂ ಕೃತ್ವಾ ಸುದಾರುಣಮ್ ।
ರಾವಣೇನ ಹತೋ ವೀರೋ ರಾಘವಾರ್ಥಂ ಮಹಾಬಲಃ ॥

ಅನುವಾದ

ಶ್ರೀರಾಮನೂ, ಲಕ್ಷ್ಮಣನೂ ಬೇಟೆಗಾಗಿ ಹೊರಗೆ ಹೋಗಿದ್ದಾಗ ಬಲವಂತವಾಗಿ ಆಕೆಯನ್ನು ಅಪಹರಿಸಿದನು. ಆಗ ಅವಳು ಹಾ ರಾಮಾ! ರಾಮಾ! ಎಂದು ಅಳುತ್ತಿದ್ದಳು. ಅವಳ ಅಳುವನ್ನು ಕೇಳಿದ ಮಹಾಪ್ರತಾಪಶಾಲಿ ಗೃಧ್ರರಾಜ ಜಟಾಯುವೆಂಬ ಪಕ್ಷಿಶ್ರೇಷ್ಠನು ರಘುನಾಥನಿಗಾಗಿ ರಾವಣನೊಡನೆ ಭಯಂಕರ ಯುದ್ಧ ಮಾಡಿದನು. ಆದರೆ ಕೊನೆಗೆ ಅವನು ಮಹಾಬಲಶಾಲಿಯಾದ ರಾವಣನಿಂದ ಹತನಾದನು. ॥39-40॥

(ಶ್ಲೋಕ-41)

ಮೂಲಮ್

ರಾಮೇಣ ದಗ್ಧೋ ರಾಮಸ್ಯ ಸಾಯುಜ್ಯಮಗಮತ್ ಕ್ಷಣಾತ್ ।
ರಾಮಃ ಸುಗ್ರೀವಮಾಸಾದ್ಯ ಸಖ್ಯಂ ಕೃತ್ವಾಗ್ನಿಸಾಕ್ಷಿಕಮ್ ॥

ಅನುವಾದ

ಮತ್ತೆ ಸ್ವತಃ ಶ್ರೀರಾಮ ಚಂದ್ರನು ಅವನ ಅಗ್ನಿಸಂಸ್ಕಾರ ಮಾಡಿದನು. ಅವನು ಆಗಲೇ ಭಗವಾನ್ ಶ್ರೀರಾಮನಲ್ಲಿ ಲೀನನಾಗಿ ಸಾಯುಜ್ಯ ಮೋಕ್ಷವನ್ನು ಪಡೆದುಕೊಂಡನು. ಅನಂತರ ಶ್ರೀರಘುನಾಥನು ಸುಗ್ರೀವನ ಬಳಿಸಾರಿ ಅಗ್ನಿಸಾಕ್ಷಿಯಾಗಿ ಮೈತ್ರಿ ಮಾಡಿಕೊಂಡನು. ॥41॥

(ಶ್ಲೋಕ-42)

ಮೂಲಮ್

ಸುಗ್ರೀವಚೋದಿತೋ ಹತ್ವಾ ವಾಲಿನಂ ಸುದುರಾಸದಮ್ ।
ರಾಜ್ಯಂ ದದೌ ವಾನರಾಣಾಂ ಸುಗ್ರೀವಾಯ ಮಹಾಬಲಃ ॥

ಅನುವಾದ

ಬಳಿಕ ಸುಗ್ರೀವನಿಂದ ಪ್ರೇರಿತನಾಗಿ ಮಹಾಪರಾಕ್ರಮಿಯಾದ ವಾಲಿಯನ್ನು ಕೊಂದು ವಾನರರ ರಾಜ್ಯವನ್ನು ಸುಗ್ರೀವನಿಗೆ ಕೊಡಿಸಿದನು. ॥42॥

(ಶ್ಲೋಕ-43)

ಮೂಲಮ್

ಸುಗ್ರೀವಃ ಪ್ರೇಷಯಾಮಾಸ ಸೀತಾಯಾಃ ಪರಿಮಾರ್ಗಣೇ ।
ಅಸ್ಮಾನ್ವಾನರವೃಂದಾನ್ವೈ ಮಹಾಸತ್ತ್ವಾನ್ಮಹಾಬಲಃ ॥

ಅನುವಾದ

ಮಹಾಬಲಿಷ್ಠನಾದ ಸುಗ್ರೀವನು ಸೀತೆಯನ್ನು ಹುಡುಕುವುದಕ್ಕಾಗಿ ನಮ್ಮಂತಹ ಅನೇಕ ಮಹಾಪರಾಕ್ರಮಿ ವಾನರರನ್ನು ಕಳಿಸಿರುವನು. ॥43॥

(ಶ್ಲೋಕ-44)

ಮೂಲಮ್

ಮಾಸಾದರ್ವಾಙ್ ನಿವರ್ತಧ್ವಂ ನೋಚೇತ್ಪ್ರಾಣಾನ್ ಹರಾಮಿ ವಃ ।
ಇತ್ಯಾಜ್ಞಯಾ ಭ್ರಮಂತೋಽಸ್ಮಿನ್ವನೇ ಗಹ್ವರಮಧ್ಯಗಾಃ ॥

ಅನುವಾದ

‘ಒಂದು ತಿಂಗಳೊಳಗೆ ಸೀತೆಯನ್ನು ಹುಡುಕಿ ಹಿಂದಿರುಗಬೇಕು. ಹಾಗಿಲ್ಲವಾದರೆ ನಿಮ್ಮ ಪ್ರಾಣಗಳನ್ನು ತೆಗೆದುಬಿಡುವೆನು’ ಎಂದು ಸುಗ್ರೀವನ ಆಜ್ಞೆಯಂತೆ ಹೊರಟು ದಟ್ಟವಾದ ಕಾಡಿನಲ್ಲಿ ಸಂಚರಿಸುತ್ತಿರುವಾಗ ತಿಂಗಳೊಂದು ಕಳೆದುಹೋದುದೇ ತಿಳಿಯದೆ ಹೋದೆವು. ॥44॥

(ಶ್ಲೋಕ-45)

ಮೂಲಮ್

ಗತೋ ಮಾಸೋ ನ ಜಾನೀಮಃ ಸೀತಾಂ ವಾ ರಾವಣಂ ಚ ವಾ ।
ಮರ್ತುಂ ಪ್ರಾಯೋಪವಿಷ್ಟಾಃ ಸ್ಮಸ್ತೀರೇ ಲವಣವಾರಿಧೇಃ ॥

ಅನುವಾದ

ತಿಂಗಳು ಕಳೆದುಹೋದರೂ ಸೀತೆಯನ್ನಾಗಲೀ, ರಾವಣನನ್ನಾಗಲೀ ನಮ್ಮಿಂದ ಹುಡುಕಲಾಗಲಿಲ್ಲ. ಆದ್ದರಿಂದ ನಾವು ಸಾಯುವ ಉದ್ದೇಶದಿಂದ ಉಪವಾಸದಿಂದ ಸಮುದ್ರ ತೀರದಲ್ಲಿ ಕುಳಿತಿದ್ದೇವೆ. ॥45॥

(ಶ್ಲೋಕ-46)

ಮೂಲಮ್

ಯದಿ ಜಾನಾಸಿ ಹೇ ಪಕ್ಷಿನ್ಸೀತಾಂ ಕಥಯ ನಃ ಶುಭಾಮ್ ।
ಅಂಗದಸ್ಯ ವಚಃ ಶ್ರುತ್ವಾ ಸಂಪಾತಿರ್ಹೃಷ್ಟಮಾನಸಃ ॥

(ಶ್ಲೋಕ-47)

ಮೂಲಮ್

ಉವಾಚ ಮತ್ಪ್ರಿಯೋ ಭ್ರಾತಾ ಜಟಾಯುಃ ಪ್ಲವಗೇಶ್ವರಾಃ ।
ಬಹುವರ್ಷಸಹಸ್ರಾಂತೇ ಭ್ರಾತೃವಾರ್ತಾ ಶ್ರುತಾ ಮಯಾ ॥

ಅನುವಾದ

ಹೇ ಪಕ್ಷಿಯೆ! ನೀನೇನಾದರೂ ಶುಭಲಕ್ಷಣಳಾದ ಸೀತೆಯನ್ನು ಬಲ್ಲೆಯಾದರೆ ಹೇಳು.’’ ಅಂಗದನ ಈ ಮಾತನ್ನು ಕೇಳಿ ಸಂಪಾತಿಯು ಸಂತುಷ್ಟ ಮನಸ್ಕನಾಗಿ ಹೀಗೆಂದನು — ‘‘ಹೇ ಕಪೀಶ್ವರರೇ! ಜಟಾಯುವು ನನ್ನ ಪ್ರೀತಿಯ ಸಹೋದರನು. ಅನೇಕ ಸಾವಿರ ವರ್ಷಗಳ ಅನಂತರ ಸೋದರನ ಸುದ್ದಿಯನ್ನು ಕೇಳುತ್ತಿದ್ದೇನೆ. ॥46-47॥

(ಶ್ಲೋಕ-48)

ಮೂಲಮ್

ವಾಕ್ಸಾಹಾಯ್ಯಂ ಕರಿಷ್ಯೇಹಂ ಭವತಾಂ ಪ್ಲವಗೇಶ್ವರಾಃ ।
ಭ್ರಾತುಃ ಸಲಿಲದಾನಾಯ ನಯಧ್ವಂ ಮಾಂ ಜಲಾಂತಿಕಮ್ ॥

ಅನುವಾದ

ಎಲೈ ಕಪಿಗಳೆ! ನಾನು ನಿಮಗೆ ಮಾತಿನ ಸಹಾಯವನ್ನು ಮಾಡಬಲ್ಲೆನು. ಸೋದರನಿಗೆ ತರ್ಪಣ ಕೊಡುವುದಕ್ಕಾಗಿ ನನ್ನನ್ನು ನೀರಿನ ಸಮೀಪಕ್ಕೆ ಕರೆದೊಯ್ಯಿರಿ. ॥48॥

(ಶ್ಲೋಕ-49)

ಮೂಲಮ್

ಪಶ್ಚಾ ತ್ಸರ್ವಂ ಶುಭಂ ವಕ್ಷ್ಯೇ ಭವತಾಂ ಕಾರ್ಯಸಿದ್ಧಯೇ ।
ತಥೇತಿ ನಿನ್ಯುಸ್ತೇ ತೀರಂ ಸಮುದ್ರಸ್ಯ ವಿಹಂಗಮಮ್ ॥

ಅನುವಾದ

ಅನಂತರ ನಿಮ್ಮ ಕಾರ್ಯಸಿದ್ಧಿಗೆ ತಕ್ಕ ಎಲ್ಲ ಶುಭಸಮಾಚಾರವನ್ನು ಹೇಳಲಿರುವನು.’’ ಹಾಗೆಯೇ ಆಗಲೆಂದು ಅವರುಗಳು ಸಂಪಾತಿಯನ್ನು ಸಮುದ್ರತೀರಕ್ಕೆ ಕೊಂಡುಹೋದರು. ॥49॥

(ಶ್ಲೋಕ-50)

ಮೂಲಮ್

ಸೋಽಪಿ ತತ್ಸಲಿಲೇ ಸ್ನಾತ್ವಾ ಭ್ರಾತುರ್ದತ್ತ್ವಾ ಜಲಾಂಜಲಿಮ್ ।
ಪುನಃ ಸ್ವಸ್ಥಾನಮಾಸಾದ್ಯ ಸ್ಥಿತೋ ನೀತೋ ಹರೀಶ್ವರೈಃ ।
ಸಂಪಾತಿಃ ಕಥಯಾಮಾಸ ವಾನರಾನ್ಪರಿಹರ್ಷಯನ್ ॥

ಅನುವಾದ

ಅವನು ಅಲ್ಲಿಗೆ ಹೋಗಿ ನೀರಿನಲ್ಲಿ ಸ್ನಾನಮಾಡಿ ಸೋದರನಿಗೆ ಜಲ ತರ್ಪಣವನ್ನು ಕೊಟ್ಟು ಮತ್ತೆ ವಾನರರು ಪುನಃ ಹಿಂದಿನ ಜಾಗಕ್ಕೆ ತಂದಿರಿಸಿದರು. ಅಲ್ಲಿ ಕುಳಿತುಕೊಂಡು ಸಂಪಾತಿಯು ಕಪಿಗಳನ್ನು ಸಂತೋಷ ಪಡಿಸುತ್ತಾ ಹೀಗೆ ಹೇಳಿದನು. ॥50॥

(ಶ್ಲೋಕ-51)

ಮೂಲಮ್

ಲಂಕಾ ನಾಮ ನಗರ್ಯಾಸ್ತೇ ತ್ರಿಕೂಟಗಿರಿಮೂರ್ಧನಿ ।
ತತ್ರಾಶೋಕವನೇ ಸೀತಾ ರಾಕ್ಷಸೀಭಿಃ ಸುರಕ್ಷಿತಾ ॥

ಅನುವಾದ

ತ್ರಿಕೂಟ ಪರ್ವತದ ಶಿಖರದಲ್ಲಿ ಲಂಕೆ ಎಂಬ ಒಂದು ನಗರವಿದೆ. ಅಲ್ಲಿ ಅಶೋಕವನದಲ್ಲಿ ಸೀತೆಯು ರಾಕ್ಷಸಿಯರ ಕಾವಲಿನಲ್ಲಿ ಇದ್ದಾಳೆ. ॥51॥

(ಶ್ಲೋಕ-52)

ಮೂಲಮ್

ಸಮುದ್ರಮಧ್ಯೇ ಸಾ ಲಂಕಾ ಶತಯೋಜನದೂರತಃ ।
ದೃಶ್ಯತೇ ಮೇ ನ ಸಂದೇಹಃ ಸೀತಾ ಚ ಪರಿದೃಶ್ಯತೇ ॥

(ಶ್ಲೋಕ-53)

ಮೂಲಮ್

ಗೃಧ್ರತ್ವಾದ್ದೂರದೃಷ್ಟಿರ್ಮೇ ನಾತ್ರ ಸಂಶಯಿತುಂ ಕ್ಷಮಮ್ ।
ಶತಯೋಜನವಿಸ್ತೀರ್ಣಂ ಸಮುದ್ರಂ ಯಸ್ತು ಲಂಘಯೇತ್ ॥

(ಶ್ಲೋಕ-54)

ಮೂಲಮ್

ಸ ಏವ ಜಾನಕೀಂ ದೃಷ್ಟ್ವಾ ಪುನರಾಯಾಸ್ಯತಿ ಧ್ರುವಮ್ ।
ಅಹಮೇವ ದುರಾತ್ಮಾನಂ ರಾವಣಂ ಹಂತು ಮುತ್ಸಹೇ ।
ಭ್ರಾತುರ್ಹಂತಾರಮೇಕಾಕೀ ಕಿಂತು ಪಕ್ಷವಿವರ್ಜಿತಃ ॥

ಅನುವಾದ

ಆ ಲಂಕೆಯಾದರೋ ಸಮುದ್ರ ಮಧ್ಯದಲ್ಲಿ ಇಲ್ಲಿಂದ ನೂರು ಯೋಜನ ದೂರದಲ್ಲಿದೆ. ನನಗೆ ಇಲ್ಲಿಂದಲೇ ಸೀತೆಯಿರುವುದು ಕಂಡುಬರುತ್ತಿದೆ, ಇದರಲ್ಲಿ ಸಂಶಯವೇ ಇಲ್ಲ. ಗೃಧ್ರನಾದ ಕಾರಣ ಸ್ವಭಾವದಿಂದಲೇ ನನಗೆ ದೂರದೃಷ್ಟಿ ಇದೆ. ಈ ವಿಷಯದಲ್ಲಿ ಅನುಮಾನಿಸುವುದು ಸರಿಯಿಲ್ಲ. ಆದರೆ ನೂರು ಯೋಜನಗಳಷ್ಟು ವಿಸ್ತಾರವಾದ ಈ ಸಮುದ್ರವನ್ನು ದಾಟಬಲ್ಲವನೇ ಸೀತೆಯನ್ನು ಕಂಡು ಹಿಂದಿರುಗಿ ಬರಬಲ್ಲನು. ಇದು ನಿಶ್ಚಿತವು. ನನ್ನ ಸೋದರನನ್ನು ಕೊಂದಿರುವ ದುರಾತ್ಮನಾದ ರಾವಣನನ್ನು ಕೊಲ್ಲಲು ನಾನೊಬ್ಬನೇ ಸಮರ್ಥನಾಗಿದ್ದೇನೆ. ಆದರೇನು ಮಾಡಲಿ. ಈಗ ನನಗೆ ರೆಕ್ಕೆಗಳೇ ಇಲ್ಲವಲ್ಲ! ॥52-54॥

(ಶ್ಲೋಕ-55)

ಮೂಲಮ್

ಯತಧ್ವಮತಿಯತ್ನೇನ ಲಂಘಿತುಂ ಸರಿತಾಂ ಪತಿಮ್ ।
ತತೋ ಹಂತಾ ರಘುಶ್ರೇಷ್ಠೋ ರಾವಣಂ ರಾಕ್ಷಸಾಧಿಪಮ್ ॥

ಅನುವಾದ

ನೀವುಗಳು ಚೆನ್ನಾಗಿ ಪ್ರಯತ್ನಿಸಿ ಸಮುದ್ರವನ್ನು ಹಾರಲು ಕಾರ್ಯಪ್ರವೃತ್ತರಾಗಿರಿ. ಅನಂತರ ರಘುಶ್ರೇಷ್ಠನಾದ ರಾಮನು ರಾಕ್ಷಸಾಧಿಪನಾದ ರಾವಣನನ್ನು ಕೊಂದು ಬಿಡುವನು. ॥55॥

(ಶ್ಲೋಕ-56)

ಮೂಲಮ್

ಉಲ್ಲಂಘ್ಯ ಸಿಂಧುಂ ಶತಯೋಜನಾಯತಂ
ಲಂಕಾಂ ಪ್ರವಿಶ್ಯಾಥ ವಿದೇಹಕನ್ಯಕಾಮ್ ।
ದೃಷ್ಟ್ವಾ ಸಮಾಭಾಷ್ಯ ಚ ವಾರಿಧಿಂ ಪುನಃ
ತರ್ತುಂ ಸಮರ್ಥಃ ಕತಮೋ ವಿಚಾರ್ಯತಾಮ್ ॥

ಅನುವಾದ

ನೂರು ಯೋಜನಗಳ ವಿಸ್ತಾರವಾದ ಸಮುದ್ರವನ್ನು ದಾಟಿ ಲಂಕೆಯನ್ನು ಪ್ರವೇಶಿಸಿ ವಿದೇಹ ರಾಜನ ಮಗಳಾದ ಸೀತೆಯನ್ನು ಕಂಡು ಮಾತನಾಡಿಸಿ ಮತ್ತೊಮ್ಮೆ ಸಮುದ್ರವನ್ನು ದಾಟಿ ಬರಲು ನಿಮ್ಮಲ್ಲಿ ಯಾರು ಸಮರ್ಥರೆಂದು ವಿಚಾರ ಮಾಡಿರಿ. ॥56॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.