೦೬

[ಆರನೆಯ ಸರ್ಗ]

ಭಾಗಸೂಚನಾ

ಸೀತಾನ್ವೇಷಣೆ, ವಾನರರ ಗುಹಾಪ್ರವೇಶ ಹಾಗೂ ಸ್ವಯಂಪ್ರಭೆಯ ಚರಿತ್ರೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ದೃಷ್ಟ್ವಾ ರಾಮಂ ಸಮಾಸೀನಂ ಗುಹಾದ್ವಾರಿ ಶಿಲಾತಲೇ ।
ಚೈಲಾಜಿನಧರಂ ಶ್ಯಾಮಂ ಜಟಾಮೌಲಿವಿರಾಜಿತಮ್ ॥

(ಶ್ಲೋಕ-2)

ಮೂಲಮ್

ವಿಶಾಲನಯನಂ ಶಾಂತಂ ಸ್ಮಿತಚಾರುಮುಖಾಂಬುಜಮ್ ।
ಸೀತಾವಿರಹಸಂತಪ್ತಂ ಪಶ್ಯಂತಂ ಮೃಗಪಕ್ಷಿಣಃ ॥

(ಶ್ಲೋಕ-3)

ಮೂಲಮ್

ರಥಾದ್ದೂರಾತ್ಸಮುತ್ಪತ್ಯ ವೇಗಾತ್ಸುಗ್ರೀವಲಕ್ಷ್ಮಣೌ ।
ರಾಮಸ್ಯ ಪಾದಯೋರಗ್ರೇ ಪೇತತುರ್ಭಕ್ತಿಸಂಯುತೌ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಗುಹೆಯ ಬಾಗಿಲಲ್ಲಿ ಕಲ್ಲಿನ ಮೇಲೆ ಕುಳಿತಿರುವ, ನಾರುಮಡಿ, ಜಿಂಕೆಯ ಚರ್ಮವನ್ನು ಧರಿಸಿರುವ, ಜಟಾಮುಕುಟದಿಂದ ಶೋಭಿಸುವ, ನೀಲವರ್ಣನಾದ, ವಿಶಾಲನೇತ್ರನಾದ, ಶಾಂತನಾದ, ಮುಗಳುನಗೆಯಿಂದ ಕೂಡಿದ, ಕಮಲದಂತಹ ಮುಖವುಳ್ಳ, ಸೀತಾ ವಿರಹ ವ್ಯಥೆಯಿಂದ ಬಳಲಿದ, ಮೃಗಪಕ್ಷಿಗಳನ್ನು ನೋಡುತ್ತಿರುವ ಶ್ರೀರಾಮಚಂದ್ರನನ್ನು ದೂರದಿಂದಲೇ ಕಂಡ ಸುಗ್ರೀವ-ಲಕ್ಷ್ಮಣರಿಬ್ಬರೂ ಕೂಡಲೇ ರಥದಿಂದ ಕೆಳಗೆ ನೆಗೆದು ವೇಗವಾಗಿ ಓಡಿಬಂದು ಭಕ್ತಿ ಸಮನ್ವಿತರಾಗಿ ಶ್ರೀರಾಮನ ಚರಣಗಳಲ್ಲಿ ವಂದಿಸಿಕೊಂಡರು. ॥1-3॥

(ಶ್ಲೋಕ-4)

ಮೂಲಮ್

ರಾಮಃ ಸುಗ್ರೀವಮಾಲಿಂಗ್ಯ ಪೃಷ್ಟ್ವಾನಾಮಯಮಂತಿಕೇ ।
ಸ್ಥಾಪಯಿತ್ವಾ ಯಥಾನ್ಯಾಯಂ ಪೂಜಯಾಮಾಸ ಧರ್ಮವಿತ್ ॥

ಅನುವಾದ

ಧರ್ಮಜ್ಞನಾದ ಶ್ರೀರಘುವರನು ಸುಗ್ರೀವನನ್ನು ತಬ್ಬಿಕೊಂಡು ಯೋಗ ಕ್ಷೇಮ ವನ್ನು ವಿಚಾರಿಸಿದನು. ಬಳಿಕ ರಾಜಯೋಗ್ಯವಾಗಿ ಅವನನ್ನು ಸತ್ಕರಿಸಿದನು. ॥4॥

(ಶ್ಲೋಕ-5)

ಮೂಲಮ್

ತತೋಽಬ್ರವೀದ್ರಘುಶ್ರೇಷ್ಠಂ ಸುಗ್ರೀವೋ ಭಕ್ತಿನಮ್ರಧೀಃ ।
ದೇವ ಪಶ್ಯ ಸಮಾಯಾಂತೀಂ ವಾನರಾಣಾಂ ಮಹಾಚಮೂಮ್ ॥

ಅನುವಾದ

ಸುಗ್ರೀವನು ಭಕ್ತಿವಶನಾಗಿ, ಅತಿವಿನಯದಿಂದ ಕೂಡಿ ಶ್ರೀರಾಮನಲ್ಲಿ ಹೇಳಿದನು ‘‘ಸ್ವಾಮಿ! ಇದೋ ಬರುತ್ತಿರುವ ವಾನರರ ದೊಡ್ಡ ಸೇನೆಯನ್ನು ನೋಡು. ॥5॥

(ಶ್ಲೋಕ-6)

ಮೂಲಮ್

ಕುಲಾಚಲಾದ್ರಿಸಂಭೂತಾ ಮೇರುಮಂದರಸನ್ನಿಭಾಃ ।
ನಾನಾದ್ವೀಪಸರಿಚ್ಛೈಲವಾಸಿನಃ ಪರ್ವತೋಪಮಾಃ ॥

(ಶ್ಲೋಕ-7)

ಮೂಲಮ್

ಅಸಂಖ್ಯಾತಾಃ ಸಮಾಯಾಂತಿ ಹರಯಃ ಕಾಮರೂಪಿಣಃ ।
ಸರ್ವೇ ದೇವಾಂಶಸಂಭೂತಾಃ ಸರ್ವೇ ಯುದ್ಧವಿಶಾರದಾಃ ॥

ಅನುವಾದ

ಹಿಮಾಲಯಾದಿ ಕುಲಪರ್ವತಗಳಲ್ಲಿ ಹುಟ್ಟಿ ಬೆಳೆದಿರುವ ಮೇರು, ಮಂದರ ಪರ್ವತಗಳಿಗೆ ಸಮಾನರಾದ, ಅನೇಕ ದ್ವೀಪಗಳಲ್ಲಿಯೂ, ನದಿಯ ದಡಗಳಲ್ಲಿಯೂ, ಪರ್ವತ ಗಳಲ್ಲಿಯೂ ವಾಸವಾಗಿರುವ, ಪರ್ವತಾಕಾರ ಶರೀರವುಳ್ಳ, ಬಯಸಿದ ರೂಪವನ್ನು ತಳೆಯಬಲ್ಲ ಅಸಂಖ್ಯಾತ ಕಪಿಗಳು ಬರುತ್ತಿರುವರು. ಇವರೆಲ್ಲರೂ ದೈವಾಂಶಸಂಭೂತರೂ ಹಾಗೂ ಯುದ್ಧ ಮಾಡುವುದರಲ್ಲಿ ಹೆಚ್ಚಿನ ಕುಶಲಿಗಳೂ ಆಗಿದ್ದಾರೆ. ॥6-7॥

(ಶ್ಲೋಕ-8)

ಮೂಲಮ್

ಅತ್ರ ಕೇಚಿದ್ಗಜಬಲಾಃ ಕೇಚಿದ್ದಶಗಜೋಪಮಾಃ ।
ಗಜಾಯುತಬಲಾಃ ಕೇಚಿದನ್ಯೇಮಿತಬಲಾಃ ಪ್ರಭೋ ॥

(ಶ್ಲೋಕ-9)

ಮೂಲಮ್

ಕೇಚಿದಂಜನಕೂಟಾಭಾಃ ಕೇಚಿತ್ಕನಕಸನ್ನಿಭಾಃ ।
ಕೇಚಿದ್ರಕ್ತಾಂತವದನಾ ದೀರ್ಘವಾಲಾಸ್ತಥಾಪರೇ ॥

(ಶ್ಲೋಕ-10)

ಮೂಲಮ್

ಶುದ್ಧಸ್ಫಟಿಕಸಂಕಾಶಾಃ ಕೇಚಿದ್ರಾಕ್ಷಸಸನ್ನಿಭಾಃ ।
ಗರ್ಜಂತಃ ಪರಿತೋ ಯಾಂತಿ ವಾನರಾ ಯುದ್ಧಕಾಂಕ್ಷಿಣಃ ॥

ಅನುವಾದ

ಸ್ವಾಮಿ! ಇವರಲ್ಲಿ ಕೆಲವರು ಒಂದು ಆನೆಯ ಬಲವುಳ್ಳವರು, ಕೆಲವರು ಹತ್ತು ಆನೆಗಳ ಬಲವುಳ್ಳವರು, ಕೆಲವರು ಸಾವಿರ, ಹತ್ತು ಸಾವಿರ ಆನೆಗಳ ಬಲವುಳ್ಳವರಾಗಿದ್ದಾರೆ. ಇನ್ನು ಕೆಲವರು ಎಣಿಸಲಾರದಷ್ಟು ಆನೆಗಳ ಬಲವುಳ್ಳವರಾಗಿದ್ದಾರೆ. ಕೆಲವರು ಅಂಜನ (ಕಾಡಿಗೆ) ಗಿರಿಯಂತೆ ಕಪ್ಪಾಗಿರುವವರು, ಕೆಲವು ಹೊನ್ನಿನಂತೆ ಹೊಳ ಪುಳ್ಳವರು, ಕೆಲವರು ಕೆಂಪಾದ ಮುಖವುಳ್ಳವರು, ಕೆಲವರು ಉದ್ದವಾದ ಬಾಲ ಉಳ್ಳವರು, ಕೆಲವರು ಉದ್ದವಾದ ಕೂದಲುಳ್ಳವರು, ಕೆಲವರು ಸ್ವಚ್ಛವಾದ ಸ್ಫಟಿಕದಂತೆ ಕಾಂತಿಯುಳ್ಳವರು, ಕೆಲವರು ರಾಕ್ಷಸರಂತೆ ಭಯಂಕರ ರೂಪುಳ್ಳವರೂ ಇದ್ದಾರೆ. ಯುದ್ಧಾಕಾಂಕ್ಷಿಗಳಾದ ಈ ಕಪಿ ವೀರರರು ಘರ್ಜಿಸುತ್ತಾ ಅತ್ತ-ಇತ್ತ ತಿರುಗಾಡುತ್ತಿರುವರು. ॥8-10॥

(ಶ್ಲೋಕ-11)

ಮೂಲಮ್

ತ್ವದಾಜ್ಞಾಕಾರಿಣಃ ಸರ್ವೇ ಫಲಮೂಲಾಶನಾಃ ಪ್ರಭೋ ।
ಋಕ್ಷಾಣಾಮಧಿಪೋ ವೀರೋ ಜಾಂಬವಾನ್ನಾಮ ಬುದ್ಧಿಮಾನ್ ॥

(ಶ್ಲೋಕ-12)

ಮೂಲಮ್

ಏಷ ಮೇ ಮಂತ್ರಿಣಾಂ ಶ್ರೇಷ್ಠಃ ಕೋಟಿಭಲ್ಲೂಕವೃಂದಪಃ ।
ಹನೂಮಾನೇಷ ವಿಖ್ಯಾತೋ ಮಹಾಸತ್ತ್ವಪರಾಕ್ರಮಃ ॥

(ಶ್ಲೋಕ-13)

ಮೂಲಮ್

ವಾಯುಪುತ್ರೋಽತಿತೇಜಸ್ವೀ ಮಂತ್ರೀ ಬುದ್ಧಿಮತಾಂ ವರಃ ।
ನಲೋ ನೀಲಶ್ಚ ಗವಯೋ ಗವಾಕ್ಷೋ ಗಂಧಮಾದನಃ ॥

(ಶ್ಲೋಕ-14)

ಮೂಲಮ್

ಶರಭೋ ಮೈಂದವ ಶ್ಚೈವ ಗಜಃ ಪನಸ ಏವ ಚ ।
ಬಲೀಮುಖೋ ದಧಿಮುಖಃ ಸುಷೇಣಸ್ತಾರ ಏವ ಚ ॥

(ಶ್ಲೋಕ-15)

ಮೂಲಮ್

ಕೇಸರೀ ಚ ಮಹಾಸತ್ತ್ವಃ ಪಿತಾ ಹನುಮತೋ ಬಲೀ ।
ಏತೇ ತೇ ಯೂಥಪಾ ರಾಮ ಪ್ರಾಧಾನ್ಯೇನ ಮಯೋದಿತಾಃ ॥

ಅನುವಾದ

ಹೇ ಪ್ರಭು! ಫಲಮೂಲಾದಿ ಆಹಾರವಾಗಿ ಉಳ್ಳ ಇವರೆಲ್ಲರೂ ನಿನ್ನ ಅಪ್ಪಣೆಯನ್ನು ನೆರವೇರಿಸುವರು. (ಇವರ ನಿರ್ವಾಹಕ್ಕಾಗಿ ನೀನು ಏನೂ ಚಿಂತಿಸಬೇಕಾಗಿಲ್ಲ.) ಇವನು ಬುದ್ಧಿವಂತನೂ, ಕೋಟಿ ಕರಡಿಗಳ ಗುಂಪಿಗೆ ಒಡೆಯನೂ ತುಂಬಾ ಹಿರಿಯನೂ ಆದ ನನ್ನ ಮಂತ್ರಿ ಶ್ರೇಷ್ಠನಾದ ಜಾಂಬವಂತನೆಂಬುವನು. ಇವನು ಮಹಾಬಲ ಪರಾಕ್ರಮಿಯೂ, ವಾಯುಪುತ್ರನೂ, ಅತ್ಯಂತ ತೇಜಸ್ವಿಯೂ, ಬುದ್ಧಿವಂತರಲ್ಲಿ ಅಗ್ರಗಣ್ಯನೂ, ನನಗೆ ಪ್ರಧಾನ ಮಂತ್ರಿಯೂ ಆದ ಹನುಮಂತನೆಂಬುವನು. ಇವರಲ್ಲದೆ, ರಾಮಾ! ಇನ್ನು ನಳ, ನೀಲ, ಗವಯ, ಗವಾಕ್ಷ, ಗಂಧಮಾದನ, ಶರಭ, ಮೈಂದ, ದ್ವಿವಿದ, ಗಜ, ಪನಸ, ಬಲೀಮುಖ, ದಧಿಮುಖ, ಸುಷೇಣ, ತಾರ, ಹನುಮಂತನ ತಂದೆ ಮಹಾಬಲಿಷ್ಠನಾದ ಕೇಸರಿ, ಮುಂತಾದವರೆಲ್ಲರೂ ಯೂಥ ಪತಿಗಳಾಗಿದ್ದಾರೆ. ಇವರಲ್ಲದೆ ಇನ್ನೂ ಅನೇಕ ಸೇನಾಪತಿಗಳೂ ಇದ್ದಾರೆ. ಮುಖ್ಯ-ಮುಖ್ಯಸ್ಥರ ಹೆಸರನ್ನು ಮಾತ್ರ ಹೇಳಿರುವೆನು. ॥11-15॥

(ಶ್ಲೋಕ-16)

ಮೂಲಮ್

ಮಹಾತ್ಮಾನೋ ಮಹಾವೀರ್ಯಾಃ ಶಕ್ರತುಲ್ಯಪರಾಕ್ರಮಾಃ ।
ಏತೇ ಪ್ರತ್ಯೇಕತಃ ಕೋಟಿ ಕೋಟಿವಾನರಯೂಥಪಾಃ ॥

(ಶ್ಲೋಕ-17)

ಮೂಲಮ್

ತವಾಜ್ಞಾಕಾರಿಣಃ ಸರ್ವೇ ಸರ್ವೇ ದೇವಾಂಶಸಂಭವಾಃ ।
ಏಷ ವಾಲಿಸುತಃ ಶ್ರೀಮಾನಂಗದೋ ನಾಮ ವಿಶ್ರುತಃ ॥

(ಶ್ಲೋಕ-18)

ಮೂಲಮ್

ವಾಲಿತುಲ್ಯಬಲೋ ವೀರೋ ರಾಕ್ಷಸಾನಾಂ ಬಲಾಂತಕಃ ।
ಏತೇ ಚಾನ್ಯೇ ಚ ಬಹವಸ್ತ್ವದರ್ಥೇ ತ್ಯಕ್ತಜೀವಿತಾಃ ॥

(ಶ್ಲೋಕ-19)

ಮೂಲಮ್

ಯೋದ್ಧಾರಃ ಪರ್ವತಾಗ್ರೈಶ್ಚ ನಿಪುಣಾಃ ಶತ್ರುಘಾತನೇ ।
ಆಜ್ಞಾಪಯ ರಘುಶ್ರೇಷ್ಠ ಸರ್ವೇ ತೇ ವಶವರ್ತಿನಃ ॥

ಅನುವಾದ

ಇವರೆಲ್ಲರೂ ಮಹಾಕಾಯವುಳ್ಳರೂ, ಮಹಾತ್ಮರೂ, ಮಹಾವೀರ್ಯ ಶಾಲಿಗಳೂ, ದೇವೇಂದ್ರನಿಗೆ ಸಮವಾದ ಪರಾಕ್ರಮವುಳ್ಳವರೂ ಆಗಿದ್ದು, ಇವರಲ್ಲಿ ಪ್ರತಿಯೊಬ್ಬರೂ ಕೋಟಿ ಕೋಟಿ ಕಪಿಗಳ ಗುಂಪಿಗೆ ಒಡೆಯರಾಗಿರುವರು. ಎಲ್ಲರೂ ದೈವಾಂಶ ಸಂಭೂತರಾಗಿದ್ದು, ನಿನ್ನ ಅಪ್ಪಣೆಯನ್ನು ನಡೆಸುವವರಾಗಿದ್ದಾರೆ. ಇವನು ವಾಲಿಪುತ್ರ ಅಂಗದನೆಂಬ ಪ್ರಸಿದ್ಧನಾದ ಕಪಿಯು. ಇವನು ವಾಲಿಗೆ ಸಮನಾಗಿ ಬಲವುಳ್ಳವನೂ, ರಾಕ್ಷಸರ ಬಲವನ್ನು ನಾಶಮಾಡುವವನೂ ಆಗಿದ್ದಾನೆ. ಇವರಲ್ಲದೆ ಇನ್ನೂ ಅನೇಕ ಕಪಿಗಳು ನಿನಗಾಗಿ ಪ್ರಾಣಕೊಡಲೂ ಸಿದ್ಧರಿರುತ್ತಾರೆ. ಇವರೆಲ್ಲ ಪರ್ವತ ಶಿಖರಗಳಿಂದ ಯುದ್ಧ ಮಾಡಿ ಶತ್ರುಗಳನ್ನು ನಾಶಗೊಳಿಸುವುದರಲ್ಲಿ ನಿಪುಣರಾಗಿರುವರು. ರಘುಶ್ರೇಷ್ಠನೆ! ಇವರೆಲ್ಲರೂ ನಿನ್ನ ಆಜ್ಞಾಧಾರಕರಾಗಿದ್ದಾರೆ. ಇವರಿಗೆ ಅಪ್ಪಣೆಮಾಡು.’’ ॥16-19॥

(ಶ್ಲೋಕ-20)

ಮೂಲಮ್

ರಾಮಃ ಸುಗ್ರೀವಮಾಲಿಂಗ್ಯ ಹರ್ಷಪೂರ್ಣಾಶ್ರುಲೋಚನಃ ।
ಪ್ರಾಹ ಸುಗ್ರೀವ ಜಾನಾಸಿ ಸರ್ವಂ ತ್ವಂ ಕಾರ್ಯಗೌರವಮ್ ॥

(ಶ್ಲೋಕ-21)

ಮೂಲಮ್

ಮಾರ್ಗಣಾರ್ಥಂ ಹಿ ಜಾನಕ್ಯಾ ನಿಯುಂಕ್ಷ್ವ ಯದಿ ರೋಚತೇ ।
ಶ್ರುತ್ವಾ ರಾಮಸ್ಯ ವಚನಂ ಸುಗ್ರೀವಃ ಪ್ರೀತಮಾನಸಃ ॥

(ಶ್ಲೋಕ-22)

ಮೂಲಮ್

ಪ್ರೇಷಯಾಮಾಸ ಬಲಿನೋ ವಾನರಾನ್ ವಾನರರ್ಷಭಃ ।
ದಿಕ್ಷು ಸರ್ವಾಸು ವಿವಿಧಾನ್ವಾನರಾನ್ ಪ್ರೇಷ್ಯ ಸತ್ವರಮ್ ॥

(ಶ್ಲೋಕ-23)

ಮೂಲಮ್

ದಕ್ಷಿಣಾಂ ದಿಶಮತ್ಯರ್ಥಂ ಪ್ರಯತ್ನೇನ ಮಹಾಬಲಾನ್ ।
ಯುವರಾಜಂ ಜಾಂಬವಂತಂ ಹನೂಮಂತಂ ಮಹಾಬಲಮ್ ॥

(ಶ್ಲೋಕ-24)

ಮೂಲಮ್

ನಲಂ ಸುಷೇಣಂ ಶರಭಂ ಮೈಂದಂ ದ್ವಿವಿದಮೇವ ಚ ।
ಪ್ರೇಷಯಾಮಾಸ ಸುಗ್ರೀವೋ ವಚನಂ ಚೇದಮಬ್ರವೀತ್ ॥

ಅನುವಾದ

ಆಗ ಸಂತೋಷದಿಂದ ಉಂಟಾದ ಕಣ್ಣೀರಿನಿಂದ ಶ್ರೀರಾಮನು ಸುಗ್ರೀವನನ್ನು ಆಲಿಂಗಿಸಿಕೊಂಡು ಇಂತೆಂದನು ‘‘ಸುಗ್ರೀವನೆ! ನೀನು ಎಲ್ಲ ಕಾರ್ಯಗಳ ಜವಾಬ್ದಾರಿಯನ್ನು ಬಲ್ಲವನು. ನಿನಗೆ ಸರಿಯೆನಿಸಿದರೆ ಸೀತಾದೇವಿಯನ್ನು ಹುಡುಕುವುದಕ್ಕಾಗಿ ಕಪಿಗಳನ್ನು ಗೊತ್ತು ಮಾಡಿ, ನೀನೇ ಅಪ್ಪಣೆ ಮಾಡು.’’ ಶ್ರೀರಾಮನ ಮಾತನ್ನು ಕೇಳಿದ ವಾನರ ಶ್ರೇಷ್ಠನಾದ ಸುಗ್ರೀವನು ಸಂತುಷ್ಟ-ಮನಸ್ಕನಾಗಿ ಕಪಿಗಳನ್ನು ಕಳುಹಿಸಲು ಅಪ್ಪಣೆ ಮಾಡಿದನು. ಎಲ್ಲ ದಿಕ್ಕುಗಳಿಗೂ ಜಾಗ್ರತೆಯಾಗಿ ಕಪಿವೀರರನ್ನು ಕಳಿಸಿಕೊಟ್ಟು, ವಿಶೇಷವಾಗಿ ದಕ್ಷಿಣ ದಿಕ್ಕಿಗೆ ಹೆಚ್ಚಿನ ಪ್ರಯತ್ನ ಮಾಡುವಂತಹ ಮಹಾಬಲಿಷ್ಠರಾದ ಜಾಂಬವಂತ, ಯುವರಾಜ ಅಂಗದ, ಮಹಾಬಲಶಾಲಿಯಾದ ಹನುಮಂತ, ನಲ, ಸುಷೇಣ, ಶರಭ, ಮೈಂದ, ದ್ವಿವಿದ ಇವರುಗಳನ್ನು ನೇಮಿಸಿ ಹೇಳಿದನು— ॥20-24॥

(ಶ್ಲೋಕ-25)

ಮೂಲಮ್

ವಿಚಿನ್ವಂತು ಪ್ರಯತ್ನೇನ ಭವಂತೋ ಜಾನಕೀಂ ಶುಭಾಮ್ ।
ಮಾಸಾದರ್ವಾಙ್ನಿವರ್ತಧ್ವಂ ಮಚ್ಛಾಸನಪುರಃ ಸರಾಃ ॥

(ಶ್ಲೋಕ-26)

ಮೂಲಮ್

ಸೀತಾಮದೃಷ್ಟ್ವಾ ಯದಿ ವೋ ಮಾಸಾದೂರ್ಧ್ವಂ ದಿನಂ ಭವೇತ್ ।
ತದಾ ಪ್ರಾಣಾಂತಿಕಂ ದಂಡಂ ಮತ್ತಃ ಪ್ರಾಪ್ಸ್ಯಥ ವಾನರಾಃ ॥

ಅನುವಾದ

‘‘ನೀವುಗಳು ಪ್ರಯತ್ನಮಾಡಿ ಶುಭಲಕ್ಷಣಳಾದ ಸೀತೆಯನ್ನು ಹುಡುಕಿರಿ. ನನ್ನ ಆಜ್ಞೆಯನ್ನು ಗೌರವಿಸಿ ಒಂದು ತಿಂಗಳೊಳಗಾಗಿ ಹಿಂದಕ್ಕೆ ಬನ್ನಿ. ಸೀತೆಯನ್ನು ಕಾಣದೆ ಒಂದು ತಿಂಗಳು ಕಾಲ ಮೀರಿದ ಮೇಲೆ ಒಂದು ದಿನವಾದರೂ ತಡವಾಗಿ ಹಿಂದಿರುಗಿದರೆ ಎಲೈ ಕಪಿಗಳೇ! ನೀವು ಪ್ರಾಣವನ್ನು ತೆರುವ ದಂಡವನ್ನು ಅನುಭವಿಸಬೇಕಾದೀತು.’’ ॥25-26॥

(ಶ್ಲೋಕ-27)

ಮೂಲಮ್

ಇತಿ ಪ್ರಸ್ಥಾಪ್ಯ ಸುಗ್ರೀವೋ ವಾನರಾನ್ ಭೀಮವಿಕ್ರಮಾನ್ ।
ರಾಮಸ್ಯ ಪಾರ್ಶ್ವೇ ಶ್ರೀರಾಮಂ ನತ್ವಾ ಚೋಪವಿವೇಶ ಸಃ ॥

ಅನುವಾದ

ಆ ಮಹಾಪರಾಕ್ರಮಿ ವಾನರವೀರರನ್ನು ಕಳಿಸಿಕೊಟ್ಟು, ಸುಗ್ರೀವನು ಶ್ರೀರಾಮನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡನು. ॥27॥

(ಶ್ಲೋಕ-28)

ಮೂಲಮ್

ಗಚ್ಛಂತಂ ಮಾರುತಿಂ ದೃಷ್ಟ್ವಾ ರಾಮೋ ವಚನಮಬ್ರವೀತ್ ।
ಅಭಿಜ್ಞಾನಾರ್ಥಮೇತನ್ಮೇ ಹ್ಯಂಗುಲೀಯಕಮುತ್ತಮಮ್ ॥

(ಶ್ಲೋಕ-29)

ಮೂಲಮ್

ಮನ್ನಾಮಾಕ್ಷರಸಂಯುಕ್ತಂ ಸೀತಾಯೈ ದೀಯತಾಂ ರಹಃ ।
ಅಸ್ಮಿನ್ ಕಾರ್ಯೇ ಪ್ರಮಾಣಂ ಹಿ ತ್ವಮೇವ ಕಪಿಸತ್ತಮ ।
ಜಾನಾಮಿ ಸತ್ತ್ವಂ ತೇ ಸರ್ವಂ ಗಚ್ಛ ಪಂಥಾಃ ಶುಭಸ್ತವ ॥

ಅನುವಾದ

ಹೊರಡುತ್ತಿರುವ ಹನುಮಂತನನ್ನು ಕಂಡು ಶ್ರೀರಾಮನು ಹೇಳಿದನು — ‘‘ಹೇ ಕಪಿಶ್ರೇಷ್ಠನೆ! ನನ್ನ ನಾಮಾಂಕಿತ ಈ ಉಂಗುರವನ್ನು ಗುರುತಿಗಾಗಿ ಸೀತಾದೇವಿಗೆ ರಹಸ್ಯದಲ್ಲಿ ಕೊಡು. ಮಾರುತಿ! ಈ ಕೆಲಸದಲ್ಲಿ ನೀನು ಮಾತ್ರವೇ ನಂಬಿಕೆಗೆ ಅರ್ಹನು. ಏಕೆಂದರೆ, ನಿನ್ನ ಬಲ ಪರಾಕ್ರಮಗಳನ್ನು ನಾನು ಚೆನ್ನಾಗಿ ಬಲ್ಲೆನು. ನೀವು ಹೊರಡಿರಿ. ನಿಮಗೆ ದಾರಿಯು ಸುಗಮವಾಗಲಿ.’’ ॥28-29॥

(ಶ್ಲೋಕ-30)

ಮೂಲಮ್

ಏವಂ ಕಪೀನಾಂ ರಾಜ್ಞಾ ತೇ ವಿಸೃಷ್ಟಾಃ ಪರಿಮಾರ್ಗಣೇ ।
ಸೀತಾಯಾ ಅಂಗದಮುಖಾ ಬಭ್ರಮುಸ್ತತ್ರ ತತ್ರ ಹ ॥

ಅನುವಾದ

ಹೀಗೆ ಕಪಿರಾಜನಿಂದ ಬೀಳ್ಕೊಂಡು ಅಂಗದಾದಿ ವಾನರರು ಸೀತಾದೇವಿಯನ್ನು ಹುಡುಕ್ತಾ ಅಲ್ಲಲ್ಲಿ ಅಲೆಯುತ್ತಿದ್ದರು. ॥30॥

(ಶ್ಲೋಕ-31)

ಮೂಲಮ್

ಭ್ರಮಂತೋ ವಿಂಧ್ಯಗಹನೇ ದದೃಶುಃ ಪರ್ವತೋಪಮಮ್ ।
ರಾಕ್ಷಸಂ ಭೀಷಣಾಕಾರಂ ಭಕ್ಷಯಂತಂ ಮೃಗಾನ್ ಗಜಾನ್ ॥

(ಶ್ಲೋಕ-32)

ಮೂಲಮ್

ರಾವಣೋಽಯಮಿತಿ ಜ್ಞಾತ್ವಾ ಕೇಚಿದ್ವಾನರಪುಂಗವಾಃ ।
ಜಘ್ನುಃ ಕಿಲಕಿಲಾಶಬ್ದಂ ಮುಂಚಂತೋ ಮುಷ್ಟಿಭಿಃ ಕ್ಷಣಾತ್ ॥

ಅನುವಾದ

ವಿಂಧ್ಯಪರ್ವತದ ದಟ್ಟವಾದ ಕಾಡಿನಲ್ಲಿ ಅಡ್ಡಾಡುತ್ತಿರುವಾಗ ಪರ್ವತದಂತೆ ದೇಹವುಳ್ಳ ಭಯಂಕರ ರಾಕ್ಷಸನೋರ್ವನು ಆನೆ ಮುಂತಾದ ಪ್ರಾಣಿಗಳನ್ನು ಹಿಡಿಹಿಡಿದು ತಿನ್ನುತ್ತಿರುವುದನ್ನು ಕಂಡರು. ಕೆಲವು ವಾನರಶ್ರೇಷ್ಠರು ಈತನೇ ರಾವಣನೆಂದು ಭಾವಿಸಿ ಕಿಲಕಿಲನೆ ಶಬ್ದ ಮಾಡುತ್ತಾ ಕ್ಷಣಮಾತ್ರದಲ್ಲಿ ತಮ್ಮ ಮುಷ್ಟಿಗಳಿಂದ ಗುದ್ದಿಕೊಂದುಬಿಟ್ಟರು. ॥31-32॥

(ಶ್ಲೋಕ-33)

ಮೂಲಮ್

ನಾಯಂ ರಾವಣ ಇತ್ಯುಕ್ತ್ವಾ ಯಯುರನ್ಯನ್ಮಹದ್ವನಮ್ ।
ತೃಷಾರ್ತಾಃ ಸಲಿಲಂ ತತ್ರ ನಾವಿಂದನ್ ಹರಿಪುಂಗವಾಃ ॥

ಅನುವಾದ

ಇಷ್ಟು ಸುಲಭವಾಗಿ ಸತ್ತಿರುವುದನ್ನು ತಿಳಿದು ಈತನು ರಾವಣನಲ್ಲವೆಂದು ತಿಳಿದು ಮತ್ತೊಂದು ಕಾಡಿಗೆ ಹೊರಟರು. ಅಲ್ಲಿ ಎಲ್ಲಿಯೂ ನೀರು ದೊರೆಯದ ಕಾರಣ ಕಪಿಗಳೆಲ್ಲರೂ ಬಾಯಾರಿ ಬಸವಳಿದರು. ॥33॥

(ಶ್ಲೋಕ-34)

ಮೂಲಮ್

ವಿಭ್ರಮಂತೋ ಮಹಾರಣ್ಯೇ ಶುಷ್ಕಕಂಠೋಷ್ಠತಾಲುಕಾಃ
ದದೃಶುರ್ಗಹ್ವರಂ ತತ್ರ ತೃಣಗುಲ್ಮಾವೃತಂ ಮಹತ್ ॥

ಅನುವಾದ

ಆ ಗೊಂಡಾರಣ್ಯದಲ್ಲಿ ತಿರುಗುತ್ತಾ ಗಂಟಲು, ನಾಲಿಗೆ, ತುಟಿ ಒಣಗಿಹೋಯಿತು. ಆಗ ಅವರು ಅಲ್ಲಿ ಗಿಡ-ಹುಲ್ಲು ಪೊದೆಯಿಂದ ಮುಚ್ಚಿರುವ ಗುಹೆಯೊಂದನ್ನು ನೋಡಿದರು. ॥34॥

(ಶ್ಲೋಕ-35)

ಮೂಲಮ್

ಆರ್ದ್ರಪಕ್ಷಾನ್ ಕ್ರೌಂಚಹಂಸಾನ್ನಿಃಸೃತಾಂದದೃಶುಸ್ತತಃ ।
ಅತ್ರಾಸ್ತೇ ಸಲಿಲಂ ನೂನಂ ಪ್ರವಿಶಾಮೋ ಮಹಾಗುಹಾಮ್ ॥

(ಶ್ಲೋಕ-36)

ಮೂಲಮ್

ಇತ್ಯುಕ್ತ್ವಾ ಹನುಮಾನಗ್ರೇ ಪ್ರವಿವೇಶ ತಮನ್ವಯುಃ ।
ಸರ್ವೇ ಪರಸ್ಪರಂ ಧೃತ್ವಾ ಬಾಹೂನ್ಬಾಹುಭಿರುತ್ಸುಕಾಃ ॥

ಅನುವಾದ

ಆ ಗುಹೆಯಿಂದ ಒದ್ದೆಯಾದ ರೆಕ್ಕೆಗಳುಳ್ಳ ಕ್ರೌಂಚ-ಹಂಸ ಮುಂತಾದ ಪಕ್ಷಿಗಳು ಹೊರಗೆ ಬರುವುದನ್ನು ಕಂಡರು. ಇದರೊಳಗೆ ಖಂಡಿತವಾಗಿ ನೀರು ಇದೆ. ಈ ದೊಡ್ಡ ಗುಹೆಯೊಳಗೆ ಹೋಗೋಣ ಎಂದು ಹೇಳಿಕೊಂಡು ಹನುಮಂತನು ಮುಂದಾಗಿ ಒಳಹೊಕ್ಕನು, ಉಳಿದವರು ಅವನನ್ನು ಹಿಂಬಾಲಿಸಿದರು. ಪರಸ್ಪರ ತೋಳುಗಳನ್ನು ಹಿಡಿದುಕೊಂಡು ಕುತೂಹಲದಿಂದ ಮುಂದುವರೆದರು. ॥35-36॥

(ಶ್ಲೋಕ-37)

ಮೂಲಮ್

ಅಂಧಕಾರೇ ಮಹದ್ದೂರಂ ಗತ್ವಾಪಶ್ಯನ್ ಕಪೀಶ್ವರಾಃ ।
ಜಲಾಶಯಾನ್ಮಣಿನಿಭತೋಯಾನ್ ಕಲ್ಪದ್ರುಮೋಪಮಾನ್ ॥

(ಶ್ಲೋಕ-38)

ಮೂಲಮ್

ವೃಕ್ಷಾನ್ ಪಕ್ವಲೈರ್ನಮ್ರಾನ್ಮಧುದ್ರೋಣಸಮನ್ವಿತಾನ್ ।
ಗೃಹಾನ್ ಸರ್ವಗುಣೋಪೇತಾನ್ ಮಣಿವಸಾದಿಪೂರಿತಾನ್ ॥

(ಶ್ಲೋಕ-39)

ಮೂಲಮ್

ದಿವ್ಯಭಕ್ಷ್ಯಾನ್ನಸಹಿತಾನ್ಮಾನುಷೈಃ ಪರಿವರ್ಜಿತಾನ್ ।
ವಿಸ್ಮಿತಾಸ್ತತ್ರ ಭವನೇ ದಿವ್ಯೇ ಕನಕವಿಷ್ಟರೇ ॥

(ಶ್ಲೋಕ-40)

ಮೂಲಮ್

ಪ್ರಭಯಾ ದೀಪ್ಯಮಾನಾಂ ತು ದದೃಶುಃ ಸ್ತ್ರೀಯಮೇಕಕಾಮ್ ।
ಧ್ಯಾಯಂತೀಂ ಚೀರವಸನಾಂ ಯೋಗಿನೀಂ ಯೋಗಮಾಸ್ಥಿತಾಮ್ ॥

ಅನುವಾದ

ಹೀಗೆ ಕತ್ತಲೆಯಲ್ಲೇ ಬಹಳ ದೂರ ಹೋದ ಬಳಿಕ ಆ ಕಪಿಶ್ರೇಷ್ಠರು ಸ್ಫಟಿಕದಂತೆ ಸ್ವಚ್ಛವಾದ ನೀರು ತುಂಬಿರುವ ಸರೋವರಗಳನ್ನು, ಕಲ್ಪವೃಕ್ಷದಂತೆ ಮಧುರ ಫಲ ಭಾರದಿಂದ ಬಾಗಿದ ಕೊಂಬೆಗಳುಳ್ಳ ವೃಕ್ಷಗಳನ್ನೂ, ತುಂಬಿತುಳುಕುತ್ತಿರುವ ಜೇನುಗೂಡುಗಳನ್ನೂ, ಒಡವೆ ವಸಗಳಿಂದ ಕೂಡಿದ, ದಿವ್ಯವಾದ ತಿಂಡಿ-ತಿನಿಸುಗಳಿಂದ ಸಮೃದ್ಧವಾದ, ನಿರ್ಜನವಾದ ಭವನವನ್ನು ಕಂಡರು. ಅದರಲ್ಲಿನ ಒಂದು ಭವನದಲ್ಲಿ ಓರ್ವ ಸುಂದರಿಯು ಸುವರ್ಣಸಿಂಹಾಸನದ ಮೇಲೆ ಕುಳಿತು ಯೋಗಾಭ್ಯಾಸದಲ್ಲಿ ನಿರತಳಾಗಿರುವುದನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಾರೆ. ॥37-40॥

(ಶ್ಲೋಕ-41)

ಮೂಲಮ್

ಪ್ರಣೇಮುಸ್ತಾಂ ಮಹಾಭಾಗಾಂ ಭಕ್ತ್ಯಾ ಭೀತ್ಯಾ ಚ ವಾನರಾಃ ।
ದೃಷ್ಟ್ವಾ ತಾನ್ವಾನರಾಂದೇವೀ ಪ್ರಾಹ ಯೂಯಂ ಕಿಮಾಗತಾಃ ॥

(ಶ್ಲೋಕ-42)

ಮೂಲಮ್

ಕುತೋ ವಾ ಕಸ್ಯ ದೂತಾ ವಾ ಮತ್ಸ್ಥಾನಂ ಕಿಂ ಪ್ರಧರ್ಷಥ ।
ತಚ್ಛ್ರುತ್ವಾ ಹನುಮಾನಾಹ ಶೃಣು ವಕ್ಷ್ಯಾಮಿ ದೇವಿ ತೇ ॥

ಅನುವಾದ

ಆ ಮಹಾಭಾಗಳಾದ ಯುವತಿಯನ್ನು ಕಂಡು ವಾನರರೆಲ್ಲರೂ ಭಯಭಕ್ತಿಯಿಂದ ನಮಸ್ಕಾರಮಾಡಿದರು. ಕಪಿಗಳನ್ನು ನೋಡಿದ ಆಕೆಯು ‘‘ನೀವು ಯಾರು? ಏಕೆ ಬಂದಿರುವಿರಿ? ಎಲ್ಲಿಂದ ಬಂದಿದ್ದೀರಿ? ನೀವು ಯಾರ ಸೇವಕರು? ನನ್ನ ಈ ಸ್ಥಾನವನ್ನು ಏಕೆ ಆಕ್ರಮಿಸಿದ್ದೀರಿ?’’ ಎಂದು ಕೇಳಿದಳು. ಅದನ್ನು ಕೇಳಿದ ಹನುಮಂತನು ‘‘ದೇವಿ! ನಾನು ನಿಮಗೆ ಎಲ್ಲ ವೃತ್ತಾಂತವನ್ನು ಹೇಳುವೆನು — ॥41-42॥

(ಶ್ಲೋಕ-43)

ಮೂಲಮ್

ಅಯೋಧ್ಯಾಧಿಪತಿಃ ಶ್ರೀಮಾನ್ ರಾಜಾ ದಶರಥಃ ಪ್ರಭುಃ ।
ತಸ್ಯ ಪುತ್ರೋ ಮಹಾಭಾಗೋ ಜ್ಯೇಷ್ಠೋ ರಾಮ ಇತಿ ಶ್ರುತಃ ॥

ಅನುವಾದ

ಪರಮ ಐಶ್ಚರ್ಯಸಂಪನ್ನ ಮಹಾರಾಜಾ ದಶರಥನು ಅಯೋಧ್ಯೆಗೆ ಒಡೆಯರಾಗಿದ್ದರು. ಅವರ ಮಹಾಭಾಗ್ಯಶಾಲಿ ಹಿರಿಯ ಪುತ್ರ ರಾಮನೆಂದು ಪ್ರಸಿದ್ಧನಾಗಿರುವನು. ॥43॥

(ಶ್ಲೋಕ-44)

ಮೂಲಮ್

ಪಿತುರಾಜ್ಞಾಂ ಪುರಸ್ಕೃತ್ಯ ಸಭಾರ್ಯಃ ಸಾನುಜೋ ವನಮ್ ।
ಗತಸ್ತತ್ರ ಹೃತಾ ಭಾರ್ಯಾ ತಸ್ಯ ಸಾಧ್ವೀ ದುರಾತ್ಮನಾ ॥

(ಶ್ಲೋಕ-45)

ಮೂಲಮ್

ರಾವಣೇನ ತತೋ ರಾಮಃ ಸುಗ್ರೀವಂ ಸಾನುಜೋ ಯಯೌ ।
ಸುಗ್ರೀವೋ ಮಿತ್ರಭಾವೇನ ರಾಮಸ್ಯ ಪ್ರಿಯವಲ್ಲಭಾಮ್ ॥

(ಶ್ಲೋಕ-46)

ಮೂಲಮ್

ಮೃಗಯಧ್ವಮಿತಿ ಪ್ರಾಹ ತತೋ ವಯಮುಪಾಗತಾಃ ।
ತತೋ ವನಂ ವಿಚಿನ್ವಂತೋ ಜಾನಕೀಂ ಜಲಕಾಂಕ್ಷಿಣಃ ॥

(ಶ್ಲೋಕ-47)

ಮೂಲಮ್

ಪ್ರವಿಷ್ಟಾ ಗಹ್ವರಂ ಘೋರಂ ದೈವಾದತ್ರ ಸಮಾಗತಾಃ ।
ತ್ವಂ ವಾ ಕಿಮರ್ಥಮತ್ರಾಸಿ ಕಾ ವಾ ತ್ವಂ ವದ ನಃ ಶುಭೇ ॥

ಅನುವಾದ

ಅವನು ತಂದೆಯ ಆಜ್ಞೆಯನ್ನು ಪಾಲಿಸಲು ತನ್ನ ಪತ್ನೀ ಮತ್ತು ತಮ್ಮನೊಡಗೂಡಿ ದಂಡಕಾರಣ್ಯಕ್ಕೆ ಬಂದಿದ್ದನು. ಅಲ್ಲಿ ಪತಿವ್ರತೆಯಾದ ಅವನ ಪತ್ನಿಯನ್ನು ದುರಾತ್ಮನಾದ ರಾವಣನು ಕದ್ದುಕೊಂಡು ಹೋದನು. ಅನಂತರ ರಾಮನು ಸಹೋದರನೊಂದಿಗೆ ಪತ್ನಿಯನ್ನು ಹುಡುಕುತ್ತಾ ಸುಗ್ರೀವನ ಬಳಿಗೆ ಬಂದನು. ಸುಗ್ರೀವನಿಗೆ ಅವನೊಂದಿಗೆ ಮಿತ್ರಭಾವ ಉಂಟಾದ್ದರಿಂದ ನಮಗೆ ರಾಮನ ಪತ್ನಿಯನ್ನು ಹುಡುಕಿ ತನ್ನಿ ಎಂದು ಆಜ್ಞಾಪಿಸಿದನು. ಆದ್ದರಿಂದ ರಾಮಸೇವಕರಾದ ನಾವು ಇಲ್ಲಿಗೆ ಬಂದೆವು. ಇಲ್ಲಿ ಕಾಡಿನಲ್ಲಿ ಸೀತೆಯನ್ನು ಹುಡುಕುತ್ತಿರುವಾಗ ನೀರಿನ ಬಯಕೆಯಿಂದ ಭಯಂಕರವೂ ಗಹನವೂ ಆದ ಗುಹೆಯನ್ನು ಹೊಕ್ಕು ದೈವಯೋಗದಿಂದ ಇಲ್ಲಿಗೆ ಬಂದೆವು. ಹೇ ಶುಭಳೆ! ನೀನು ಏತಕ್ಕಾಗಿ ಇಲ್ಲಿರುವೆ? ನೀನು ಯಾರು? ನನಗೆ ಹೇಳು’’ ಎಂದನು. ॥44-47॥

(ಶ್ಲೋಕ-48)

ಮೂಲಮ್

ಯೋಗಿನೀ ಚ ತಥಾ ದೃಷ್ಟ್ವಾ ವಾನರಾನ್ ಪ್ರಾಹ ಹೃಷ್ಟಧೀಃ ।
ಯಥೇಷ್ಟಂ ಫಲಮೂಲಾನಿ ಜಗ್ಧ್ವಾ ಪೀತ್ವಾಮೃತಂ ಪಯಃ ॥

(ಶ್ಲೋಕ-49)

ಮೂಲಮ್

ಆಗಚ್ಛತ ತತೋ ವಕ್ಷ್ಯೇ ಮಮ ವೃತ್ತಾಂತಮಾದಿತಃ ।
ತಥೇತಿ ಭುಕ್ತ್ವಾ ಪೀತ್ವಾ ಚ ಹೃಷ್ಟಾಸ್ತೇ ಸರ್ವವಾನರಾಃ ॥

(ಶ್ಲೋಕ-50)

ಮೂಲಮ್

ದೇವ್ಯಾಃ ಸಮೀಪಂ ಗತ್ವಾ ತೇ ಬದ್ಧಾಂಜಲಿಪುಟಾಃ ಸ್ಥಿತಾಃ ।
ತತಃ ಪ್ರಾಹ ಹನೂಮಂತಂ ಯೋಗಿನೀ ದಿವ್ಯದರ್ಶನಾ ॥

ಅನುವಾದ

ಇದೆಲ್ಲವನ್ನು ಕಂಡು ಆ ಯೋಗಿನಿಗೆ ತುಂಬಾ ಸಂತೋಷ ಉಂಟಾಗಿ ವಾನರರೊಂದಿಗೆ ಹೇಳಿದಳು ‘‘ಮೊಟ್ಟಮೊದಲು ನೀವು ಇಷ್ಟ ಬಂದಷ್ಟು ಹಣ್ಣು-ಗೆಡ್ಡೆಗಳನ್ನು ತಿಂದು, ಅಮೃತ ಸಮಾನವಾದ ನೀರನ್ನು ಕುಡಿದು ಬನ್ನಿ. ಅನಂತರ ನನ್ನ ಕಥೆಯನ್ನು ಪ್ರಾರಂಭದಿಂದ ಹೇಳುವೆನು.’’ ಆಗ ಆ ಎಲ್ಲ ವಾನರರು ಹಾಗೆಯೇ ಆಗಲೆಂದು ಹೇಳಿ ಯಥೇಷ್ಟವಾಗಿ ಹಣ್ಣು-ಗೆಡ್ಡೆಗಳನ್ನು ತಿಂದು, ನೀರು ಕುಡಿದು ಸಂತುಷ್ಟರಾಗಿ, ಅವರೆಲ್ಲರೂ ಆ ದೇವಿಯ ಬಳಿಗೆ ಬಂದು ಕೈ ಜೋಡಿಸಿಕೊಂಡು ನಿಂತುಕೊಂಡರು. ಅನಂತರ ಆ ದಿವ್ಯದೃಷ್ಟಿಯುಳ್ಳ ಯೋಗಿನಿಯು ಹನುಮಂತನ ಬಳಿ ಹೇಳುತ್ತಾಳೆ. ॥48-50॥

(ಶ್ಲೋಕ-51)

ಮೂಲಮ್

ಹೇಮಾ ನಾಮ ಪುರಾ ದಿವ್ಯರೂಪಿಣೀ ವಿಶ್ವಕರ್ಮಣಃ ।
ಪುತ್ರೀ ಮಹೇಶಂ ನೃತ್ಯೇನ ತೋಷಯಾಮಾಸ ಭಾಮಿನೀ ॥

ಅನುವಾದ

‘‘ವಿಶ್ವಕರ್ಮನ ಮಗಳು ದಿವ್ಯಸುಂದರಿಯಾದ ಹೇಮಾ ಎಂಬ ಸ್ತ್ರೀಯು ಹಿಂದೆ ಈಶ್ವರನನ್ನು ತನ್ನ ನಾಟ್ಯದಿಂದ ಸಂತೋಷಗೊಳಿಸಿದಳು. ॥51॥

(ಶ್ಲೋಕ-52)

ಮೂಲಮ್

ತುಷ್ಟೋ ಮಹೇಶಃ ಪ್ರದದಾವಿದಂ ದಿವ್ಯಪುರಂ ಮಹತ್ ।
ಅತ್ರ ಸ್ಥಿತಾ ಸಾ ಸುದತೀ ವರ್ಷಾಣಾಮಯುತಾಯುತಮ್ ॥

ಅನುವಾದ

ಪ್ರಸನ್ನನಾದ ಶಿವನು ದೊಡ್ಡದಾದ ದಿವ್ಯವಾದ ಈ ಪುರವನ್ನು ಅವಳಿಗೆ ಅನುಗ್ರಹಿಸಿದನು. ಇಲ್ಲಿ ಆ ಸುದತಿಯು ಅನೇಕ ಸಾವಿರ ವರ್ಷಗಳ ಕಾಲ ಇರುತ್ತಿದ್ದಳು. ॥52॥

(ಶ್ಲೋಕ-53)

ಮೂಲಮ್

ತಸ್ಯಾ ಅಹಂ ಸಖೀ ವಿಷ್ಣುತತ್ಪರಾ ಮೋಕ್ಷಕಾಂಕ್ಷಿಣೀ ।
ನಾಮ್ನಾ ಸ್ವಯಂಪ್ರಭಾ ದಿವ್ಯಗಂಧರ್ವತನಯಾ ಪುರಾ ॥

(ಶ್ಲೋಕ-54)

ಮೂಲಮ್

ಗಚ್ಛಂತಿ ಬ್ರಹ್ಮಲೋಕಂ ಸಾ ಮಾಮಾಹೇದಂ ತಪಶ್ಚರ ।
ಅತ್ರೈವ ನಿವಸಂತೀ ತ್ವಂ ಸರ್ವಪ್ರಾಣಿ ವಿವರ್ಜಿತೇ ॥

ಅನುವಾದ

ನಾನು ಅವಳ ಸ್ನೇಹಿತೆ ದಿವ್ಯ ಹೆಸರಿನ ಗಂಧರ್ವನ ಮಗಳು. ನನ್ನ ಹೆಸರು ಸ್ವಯಂಪ್ರಭೆ. ನನಗೆ ಮೋಕ್ಷದ ಇಚ್ಛೆ ಇದ್ದು ಸದಾಕಾಲ ನಾನು ಭಗವಾನ್ ವಿಷ್ಣುವಿನ ಉಪಾಸನೆಯಲ್ಲಿ ತತ್ಪರಳಾಗಿದ್ದೇನೆ. ಹಿಂದೆ ಆಕೆಯು ಬ್ರಹ್ಮಲೋಕಕ್ಕೆ ಹೊರಟಾಗ ಅವಳು ನನಗೆ ಹೇಳಿದಳು — ‘ನೀನು ಎಲ್ಲ ಪ್ರಕಾರದ ಪ್ರಾಣಿಗಳಿಂದ ರಹಿತವಾದ ಈ ಸ್ಥಾನದಲ್ಲಿದ್ದುಕೊಂಡು ತಪಸ್ಸನ್ನಾಚರಿಸುತ್ತಿರು. ॥ 53-54 ॥

(ಶ್ಲೋಕ-55)

ಮೂಲಮ್

ತ್ರೇತಾ ಯುಗೇ ದಾಶರಥಿರ್ಭೂತ್ವಾ ನಾರಾಯಣೋವ್ಯಯಃ ।
ಭೂಭಾರಹರಣಾರ್ಥಾಯ ವಿಚರಿಷ್ಯತಿ ಕಾನನೇ ॥

ಅನುವಾದ

ಅವ್ಯಯನಾದ ನಾರಾಯಣನು ತ್ರೇತಾಯುಗದಲ್ಲಿ ದಶರಥನ ಮಗನಾಗಿ ಅವತರಿಸಿ, ಭೂಭಾರವನ್ನು ಕಳೆಯುವುದಕ್ಕಾಗಿ ಕಾಡಿನಲ್ಲಿ ಸಂಚರಿಸುವನು. ॥55॥

(ಶ್ಲೋಕ-56)

ಮೂಲಮ್

ಮಾರ್ಗಂತೋ ವಾನರಾಸ್ತಸ್ಯ ಭಾರ್ಯಾಮಾಯಾಂತಿ ತೇ ಗುಹಾಮ್ ।
ಪೂಜಯಿತ್ವಾಥ ತಾನ್ ನತ್ವಾ ರಾಮಂ ಸ್ತುತ್ವಾ ಪ್ರಯತ್ನತಃ ॥

(ಶ್ಲೋಕ-57)

ಮೂಲಮ್

ಯಾತಾಸಿ ಭವನಂ ವಿಷ್ಣೋರ್ಯೋಗಿಗಮ್ಯಂ ಸನಾತನಮ್ ।
ಇತೋಽಹಂ ಗಂತುಮಿಚ್ಛಾಮಿ ರಾಮಂ ದ್ರಷ್ಟುಂ ತ್ವರಾನ್ವಿತಾ ॥

ಅನುವಾದ

ಅವನ ಪತ್ನಿಯನ್ನು ಹುಡುಕುತ್ತಾ ಕೆಲವು ಕಪಿಗಳು ನಿನ್ನ ಗುಹೆಗೆ ಬರುವರು. ಅವರೆಲ್ಲರನ್ನು ಚೆನ್ನಾಗಿ ಸತ್ಕರಿಸಿ ನೀನು ಶ್ರೀರಾಮಚಂದ್ರನ ಬಳಿಗೆ ಹೋಗಿ ಪ್ರಯತ್ನಪೂರ್ವಕ ವಂದಿಸಿ, ಸೋತ್ರವನ್ನು ಮಾಡಿ, ಅನಂತರ ಯೋಗಿಗಳು ಮಾತ್ರ ಪ್ರವೇಶಿಸುವಂತಹ ಸನಾತನವಾದ ವಿಷ್ಣುವಿನ ವೈಕುಂಠಮಂದಿರವನ್ನು ಪಡೆಯುವೆ’ ಎಂದಳು. ಆದ್ದರಿಂದ ಈಗ ನಾನು ಬೇಗನೇ ಭಗವಾನ್ ಶ್ರೀರಾಮನ ದರ್ಶನಕ್ಕಾಗಿ ಹೊಗಲಿಚ್ಛಿಸುತ್ತಿದ್ದೇನೆ. ॥56-57॥

(ಶ್ಲೋಕ-58)

ಮೂಲಮ್

ಯೂಯಂ ಪಿದಧ್ವಮಕ್ಷೀಣಿ ಗಮಿಷ್ಯಥ ಬಹಿರ್ಗುಹಾಮ್ ।
ತಥೈವ ಚಕ್ರುಸ್ತೇ ವೇಗಾದ್ಗತಾಃ ಪೂರ್ವಸ್ಥಿತಂ ವನಮ್ ॥

ಅನುವಾದ

ನೀವೆಲ್ಲರೂ ತಮ್ಮ-ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ಈಗಲೇ ಗುಹೆಯ ಹೊರಗೆ ಹೋಗಲಿರುವಿರಿ’’ ಎಂದು ಹೇಳಿದಳು. ಅವರೆಲ್ಲರೂ ಹಾಗೆಯೇ ಮಾಡಿದರು. ಬಹುಬೇಗನೇ ಹಿಂದೆ ತಾವಿದ್ದ ಕಾಡಿಗೆ ಬಂದು ಸೇರಿದರು. ॥58॥

(ಶ್ಲೋಕ-59)

ಮೂಲಮ್

ಸಾಪಿ ತ್ಯಕ್ತ್ವಾ ಗುಹಾಂ ಶೀಘ್ರಂ ಯಯೌ ರಾಘವಸನ್ನಿಧಿಮ್ ।
ತತ್ರ ರಾಮಂ ಸಸುಗ್ರೀವಂ ಲಕ್ಷ್ಮಣಂ ಚ ದದರ್ಶ ಹ ॥

ಅನುವಾದ

ಇತ್ತ ಆ ಯೋಗಿನಿ ಸ್ವಯಂಪ್ರಭೆಯೂ ಆ ಗುಹೆಯನ್ನು ಬಿಟ್ಟು ನೇರವಾಗಿ ಶ್ರೀರಾಮನ ಬಳಿಗೆ ಬಂದು ಅಲ್ಲಿ ಸುಗ್ರೀವ ಹಾಗೂ ಲಕ್ಷ್ಮಣನೊಡನೆ ಇರುವ ಶ್ರೀರಾಮಚಂದ್ರನ ದರ್ಶನವನ್ನು ಪಡೆದಳು. ॥59॥

(ಶ್ಲೋಕ-60)

ಮೂಲಮ್

ಕೃತ್ವಾ ಪ್ರದಕ್ಷಿಣಂ ರಾಮಂ ಪ್ರಣಮ್ಯ ಬಹುಶಃ ಸುಧೀಃ ।
ಆಹ ಗದ್ಗದಯಾ ವಾಚಾ ರೋಮಾಂಚಿತತನೂರುಹಾ ॥

ಅನುವಾದ

ಬುದ್ಧಿವಂತಳಾದ ಅವಳು ಶ್ರೀರಾಮನಿಗೆ ಪ್ರದಕ್ಷಿಣೆ ಬಂದು ಪದೇ-ಪದೇ ಅವನನ್ನು ನಮಸ್ಕರಿಸುತ್ತಾ, ಪುಳಕಿತ ಶರೀರೆಯಾಗಿ ಗದ್ಗದ ವಾಣಿಯಿಂದ ಅವನಲ್ಲಿ ಪ್ರಾರ್ಥಿಸಿದಳು. ॥60॥

(ಶ್ಲೋಕ-61)

ಮೂಲಮ್

ದಾಸೀ ತವಾಹಂ ರಾಜೇಂದ್ರ ದರ್ಶನಾರ್ಥಮಿಹಾಗತಾ ।
ಬಹುವರ್ಷಸಹಸ್ರಾಣಿ ತಪ್ತಂ ಮೇ ದುಶ್ಚರಂ ತಪಃ ॥

(ಶ್ಲೋಕ-62)

ಮೂಲಮ್

ಗುಹಾಯಾಂ ದರ್ಶನಾರ್ಥಂ ತೇ ಫಲಿತಂ ಮೇದ್ಯ ತತ್ತಪಃ ।
ಅದ್ಯ ಹಿ ತ್ವಾಂ ನಮಸ್ಯಾಮಿ ಮಾಯಾಯಾಃ ಪರತಃ ಸ್ಥಿತಮ್ ॥

(ಶ್ಲೋಕ-63)

ಮೂಲಮ್

ಸರ್ವಭೂತೇಷು ಚಾಲಕ್ಷ್ಯಂ ಬಹಿರಂತರವಸ್ಥಿತಮ್ ।
ಯೋಗಮಾಯಾಜವನಿಕಾಚ್ಛನ್ನೋ ಮಾನುಷವಿಗ್ರಹಃ ॥

(ಶ್ಲೋಕ-64)

ಮೂಲಮ್

ನ ಲಕ್ಷ್ಯಸೇಜ್ಞಾನದೃಶಾಂ ಶೈಲೂಷ ಇವ ರೂಪಧೃಕ್ ।
ಮಹಾಭಾಗವತಾನಾಂ ತ್ವಂ ಭಕ್ತಿಯೋಗ ವಿಧಿಸ್ತಯಾ ॥

(ಶ್ಲೋಕ-65)

ಮೂಲಮ್

ಅವತೀರ್ಣೋಽಸಿ ಭಗವನ್ ಕಥಂ ಜಾನಾಮಿ ತಾಮಸೀ ।
ಲೋಕೇ ಜಾನಾತು ಯಃ ಕಶ್ಚಿತ್ತವ ತತ್ತ್ವಂ ರಘೂತ್ತಮ ॥

(ಶ್ಲೋಕ-66)

ಮೂಲಮ್

ಮಮೈತದೇವ ರೂಪಂ ತೇ ಸದಾ ಭಾತು ಹೃದಾಲಯೇ ।
ರಾಮ ತೇ ಪಾದಯುಗಲಂ ದರ್ಶಿತಂ ಮೋಕ್ಷದರ್ಶನಮ್ ॥

(ಶ್ಲೋಕ-67)

ಮೂಲಮ್

ಅದರ್ಶನಂ ಭಾವಾರ್ಣಾನಾಂ ಸನ್ಮಾರ್ಗಪರಿದರ್ಶನಮ್ ।
ಧನಪುತ್ರಕಲತ್ರಾದಿವಿಭೂತಿಪರಿದರ್ಪಿತಃ ।
ಅಕಿಂಚನಧನಂ ತ್ವಾದ್ಯ ನಾಭಿಧಾತುಂ ಜನೋಽರ್ಹತಿ ॥

ಅನುವಾದ

‘‘ಹೇ ರಾಜೇಂದ್ರನೆ! ನಿನ್ನ ದಾಸಿಯಾದ ನಾನು ನಿನ್ನ ದರ್ಶನಕ್ಕಾಗಿ ಇಲ್ಲಿಗೆ ಬಂದಿರುವೆನು. ನಿನ್ನ ದರ್ಶನಕ್ಕಾಗಿಯೇ ಗುಹೆಯಲ್ಲಿದ್ದುಕೊಂಡು ಸಾವಿರಾರು ವರ್ಷ ತಪಸ್ಸನ್ನಾಚರಿಸಿದೆ. ಈಗ ನನ್ನ ತಪಸ್ಸು ಸಾರ್ಥಕವಾಯಿತು. ಮಾಯೆಯಿಂದ ಆಚೆ ಇರುವ ಹಾಗೂ ಎಲ್ಲ ಪ್ರಾಣಿಗಳಲ್ಲಿಯೂ ಗೂಢನಾಗಿದ್ದು ಕೊಂಡಿರುವ, ಒಳಗೂ-ಹೊರಗೂ ಎಲ್ಲೆಡೆಗಳಲ್ಲಿ ವ್ಯಾಪ್ತನಾಗಿರುವ ನಿನ್ನನ್ನು ನಾನು ಈಗ ವಂದಿಸುತ್ತೇನೆ. ಎಂತಹ ಶುಭಗಳಿಗೆ ಇದು! ನೀನು ತನ್ನ ಶುದ್ಧಸ್ವರೂಪವನ್ನು ಯೋಗಮಾಯೆಯಿಂದ ಆವರಿಸಿಕೊಂಡು ಮನುಷ್ಯರೂಪದಿಂದ ಪ್ರಕಟನಾಗಿರುವೆ. ನಟನಂತೆ ವೇಷಧಾರಿಯಾದ ನೀನು ಅಜ್ಞಾನಿಗಳ ಕಣ್ಣಿಗೆ ಕಂಡು ಬರುವವನಲ್ಲ. ಹೇ ಭಗವಂತಾ! ನೀನು ಮಹಾಭಾಗವತರುಗಳಿಗೆ ಭಕ್ತಿಯೋಗವನ್ನು ಉಪದೇಶಿಸುವುದಕ್ಕಾಗಿ ಅವತರಿಸಿರುವೆ. ತಾಮಸ ಗುಣ ವಿಶಿಷ್ಟಳಾದ ನಾನು ಹೇಗೆ ತಾನೇ ನಿನ್ನನ್ನು ತಿಳಿಯಬಲ್ಲೆ? ಹೇ ರಘುಶ್ರೇಷ್ಠನೆ! ಲೋಕದಲ್ಲಿ ಯಾರಾದರೂ ನಿನ್ನ ಪರಮ ತತ್ತ್ವವನ್ನು ಬೇಕಾದರೆ ಕಂಡುಕೊಳ್ಳಲಿ. ನನಗಾದರೋ ಎದುರಿಗಿರುವ ಈ ರೂಪವೇ ಸದಾಕಾಲ ಹೃದಯ ಮಂದಿರದಲ್ಲಿ ವಿರಾಜಮಾನವಾಗಿರಲಿ. ಹೇ ರಾಮಾ! ಈ ದುಸ್ತರ ಸಂಸಾರವನ್ನು ಕಳೆಯತಕ್ಕಂತಹ ಮೋಕ್ಷದಾಯಕ ನಿನ್ನ ಚರಣಕಮಲಗಳ ದರ್ಶನ ಇಂದು ನನಗೆ ಲಭಿಸಿದೆ. ಈ ಚರಣ ಕಮಲಗಳು ಸನ್ಮಾರ್ಗವನ್ನು ತೋರುವಂತಹವುಗಳು. ‘‘ಹೇ ಆದಿಪುರುಷಾ! ಧನ, ಪುತ್ರ, ಪತ್ನೀ, ವೈಭವ ಮುಂತಾದ ಮದದಿಂದ ಉತ್ಮತ್ತನಾದ ಮನುಷ್ಯನು ನಿನ್ನನ್ನು ಸ್ತುತಿಸಲಾರನು; ಏಕೆಂದರೆ ನೀನಾದರೋ ಅಕಿಂಚನರ (ಪ್ರಪಂಚದಲ್ಲಿ ಅನಾಸಕ್ತರ) ಸರ್ವಸ್ವನಾಗಿರುವೆ. ॥61-67॥

(ಶ್ಲೋಕ-68)

ಮೂಲಮ್

ನಿವೃತ್ತಗುಣಮಾರ್ಗಾಯ ನಿಷ್ಕಿಂಚನಧನಾಯ ತೇ ॥

(ಶ್ಲೋಕ-69)

ಮೂಲಮ್

ನಮಃ ಸ್ವಾತ್ಮಾಭಿರಾಮಾಯ ನಿರ್ಗುಣಾಯ ಗುಣಾತ್ಮನೇ ।
ಕಾಲರೂಪಿಣಮೀಶಾನಮಾದಿಮಧ್ಯಾಂತವರ್ಜಿತಮ್ ॥

(ಶ್ಲೋಕ-70)

ಮೂಲಮ್

ಸಮಂ ಚರಂತಂ ಸರ್ವತ್ರ ಮನ್ಯೇ ತ್ವಾಂ ಪುರುಷಂ ಪರಮ್ ।
ದೇವ ತೇ ಚೇಷ್ಟಿತಂ ಕಶ್ಚಿನ್ನ ವೇದ ನೃವಿಡಂಬನಮ್ ॥

(ಶ್ಲೋಕ-71)

ಮೂಲಮ್

ನ ತೇಽಸ್ತಿ ಕಶ್ಚಿದ್ದಯಿತೋ ದ್ವೇಷ್ಯೋ ವಾಪರ ಏವ ಚ ।
ತ್ವನ್ಮಾಯಾಪಿಹಿತಾತ್ಮಾನಸ್ತ್ವಾಂ ಪಶ್ಯಂತಿ ತಥಾವಿಧಮ್ ॥

ಅನುವಾದ

ಒಡೆಯಾ! ನಿನಗೆ ಪ್ರಿಯರಾದರೂ, ಅಪ್ರಿಯರಾದವರೂ ಯಾರೂ ಇಲ್ಲ. ನಿನ್ನ ಮಾಯೆಯಿಂದ ಮೋಹಿತರಾದವರು ನಿನ್ನನ್ನು ಶತ್ರು, ಮಿತ್ರನೆಂಬ ಭಾವದಿಂದ ನೋಡುತ್ತಾರೆ.॥71॥

(ಶ್ಲೋಕ-72)

ಮೂಲಮ್

ಅಜಸ್ಯಾಕರ್ತುರೀಶಸ್ಯ ದೇವತಿರ್ಯಙ್ನರಾದಿಷು ।
ಜನ್ಮಕರ್ಮಾದಿಕಂ ಯದ್ಯತ್ತದತ್ಯಂತವಿಡಂಬನಮ್ ॥

ಅನುವಾದ

ಜನ್ಮರಹಿತನೂ, ಅಕರ್ತೃವೂ, ಎಲ್ಲಕ್ಕೂ ಒಡೆಯನಾಗಿದ್ದರೂ ನೀನು ದೇವತೆಗಳು, ಮನುಷ್ಯರು, ಪಶು-ಪ್ರಾಣಿಗಳಲ್ಲಿ ಹುಟ್ಟಿದವನಂತೆ ನಟಿಸುತ್ತಾ ಜನ್ಮ-ಕರ್ಮಾದಿ ಲೀಲೆಗಳನ್ನು ತೋರ್ಪಡಿಸುತ್ತಿರುವುದು ಹೆಚ್ಚಿನ ಆಶ್ಚರ್ಯದ ವಿಷಯವಾಗಿದೆ.॥72॥

(ಶ್ಲೋಕ-73)

ಮೂಲಮ್

ತ್ವಾಮಾಹುರಕ್ಷರಂ ಜಾತಂ ಕಥಾಶ್ರವಣಸಿದ್ಧಯೇ ।
ಕೇಚಿತ್ಕೋಸಲರಾಜಸ್ಯ ತಪಸಃ ಫಲಸಿದ್ಧಯೇ ॥

(ಶ್ಲೋಕ-74)

ಮೂಲಮ್

ಕೌಸಲ್ಯಯಾ ಪ್ರಾರ್ಥ್ಯಮಾನಂ ಜಾತಮಾಹುಃ ಪರೇ ಜನಾಃ ।
ದುಷ್ಟರಾಕ್ಷಸಭೂಭಾರಹರಣಾಯಾರ್ಥಿತೋ ವಿಭುಃ ॥

(ಶ್ಲೋಕ-75)

ಮೂಲಮ್

ಬ್ರಾಹ್ಮಣಾ ನರರೂಪೇಣ ಜಾತೋಽಯಮಿತಿ ಕೇಚನ ।
ಶೃಣ್ವಂತಿ ಗಾಯಂತಿ ಚ ಯೇ ಕಥಾಸ್ತೇ ರಘುನಂದನ ॥

(ಶ್ಲೋಕ-76)

ಮೂಲಮ್

ಪಶ್ಯಂತಿ ತವ ಪಾದಾಬ್ಜಂ ಭವಾರ್ಣವಸುತಾರಣಮ್ ।
ತ್ವನ್ಮಾಯಾಗುಣಬದ್ಧಾಹಂ ವ್ಯತಿರಿಕ್ತಂ ಗುಣಾಶ್ರಯಮ್ ॥

(ಶ್ಲೋಕ-77)

ಮೂಲಮ್

ಕಥಂ ತ್ವಾಂ ದೇವ ಜಾನೀಯಾಂ ಸ್ತೋತುಂ ವಾವಿಷಯಂ ವಿಭುಮ್ ।
ನಮಸ್ಯಾಮಿ ರಘುಶ್ರೇಷ್ಠಂ ಬಾಣಾಸನಶರಾನ್ವಿತಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ಸುಗ್ರೀವಾದಿಭಿರನ್ವಿತಮ್ ॥

ಅನುವಾದ

‘‘ನಿನ್ನ ಕಥೆಯನ್ನು ಕೇಳಿ ಉದ್ಧಾರವಾಗಲೆಂದು ಕೃಪೆಯಿಂದ ನಾಶರಹಿತನಾದ ನೀನು ಕೋಸಲರಾಜನಾದ ದಶರಥನ ತಪಸ್ಸಿನ ಫಲಸಿದ್ಧಿಗಾಗಿ ಅವತರಿಸಿರುವೆ ಎಂದು ಕೆಲವರು ಹೇಳುವರು. ಮತ್ತೆ ಕೆಲವು ಜನರು ಕೌಸಲ್ಯೆಯ ಪ್ರಾರ್ಥನೆಗನುಗುಣವಾಗಿ ಹುಟ್ಟಿರುವೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬ್ರಹ್ಮದೇವರ ಪ್ರಾರ್ಥನೆಯಂತೆ ಭೂಭಾರವನ್ನು ಕಳೆಯುವುದಕ್ಕಾಗಿ, ದುಷ್ಟರಾದ ರಾಕ್ಷಸರನ್ನು ಕೊಲ್ಲುವುದಕ್ಕಾಗಿ, ಸರ್ವವ್ಯಾಪಕನಾಗಿದ್ದರೂ ಕೂಡ ಮನುಷ್ಯ ರೂಪದಿಂದ ಅವತರಿಸುವೆ ಎಂದು ಹೇಳುತ್ತಾರೆ. ಹೇ ರಘುನಂದನಾ! ನಿನ್ನ ಕಥೆಯನ್ನು ಕೇಳುವವರೂ, ಹಾಡುವವರೂ ಸಂಸಾರವೆಂಬ ಸಮುದ್ರವನ್ನು ಸುಲಭವಾಗಿ ದಾಟಿಸುವಂತಹ ನಿನ್ನ ಪಾದಾರವಿಂದಗಳನ್ನು ಕಂಡುಕೊಳ್ಳುವರು. ದೇವಾ! ನಿನ್ನ ಮಾಯಾಗುಣಗಳಿಗೆ ವಶಳಾದ ನಾನು, ಗುಣಗಳಿಂದ ಬೇರೆಯಾಗಿರುವವನೂ, ಗುಣಾಶ್ರಯನೂ ಆಗಿರುವ ನಿನ್ನನ್ನು ಹೇಗೆ ತಿಳಿದುಕೊಳ್ಳಲಿ? ಹಾಗೆಯೇ ವಾಣಿಯ ಅವಿಷಯನಾದ ವ್ಯಾಪಕನಾದ ನಿನ್ನನ್ನು ಹೇಗೆ ತಾನೇ ಸ್ತುತಿಸಬಲ್ಲೆನು? ಆದ್ದರಿಂದ ಸೋದರನಾದ ಲಕ್ಷ್ಮಣನೊಂದಿಗೆ ಹಾಗೂ ಸುಗ್ರೀವಾದಿ ಪಾರ್ಷದರೊಂದಿಗೆ ಧನುರ್ಬಾಣ ಧಾರಿಯಾದ ರಘುಶ್ರೇಷ್ಠ ನಾದ ನಿನ್ನನ್ನು ನಮಸ್ಕರಿಸುತ್ತೇನೆ.’’ ॥73-77॥

(ಶ್ಲೋಕ-78)

ಮೂಲಮ್

ಏವಂ ಸ್ತುತೋ ರಘುಶ್ರೇಷ್ಠಃ ಪ್ರಸನ್ನಃ ಪ್ರಣತಾಘಹೃತ್ ।
ಉವಾಚ ಯೋಗಿನೀಂ ಭಕ್ತಾಂ ಕಿಂ ತೇ ಮನಸಿ ಕಾಂಕ್ಷಿತಮ್ ॥

ಅನುವಾದ

ಈ ಪ್ರಕಾರ ಸ್ತೋತ್ರಮಾಡಿದುದರಿಂದ ನಮಸ್ಕರಿಸಿದವರ ಪಾಪಗಳನ್ನು ಕಳೆಯುವ ರಘುಶ್ರೇಷ್ಠನಾದ ಶ್ರೀರಾಮನು ಅನನ್ಯ ಭಕ್ತಳಾದ ಯೋಗಿನಿಯನ್ನು ಕುರಿತು — ‘‘ನಿನ್ನ ಮನಸ್ಸಿನ ಬಯಕೆಯೇನು?’’ ಎಂದು ಕೇಳಿದನು. ॥78॥

(ಶ್ಲೋಕ-79)

ಮೂಲಮ್

ಸಾ ಪ್ರಾಹ ರಾಘವಂ ಭಕ್ತ್ಯಾ ಭಕ್ತಿಂ ತೇ ಭಕ್ತವತ್ಸಲ ।
ಯತ್ರ ಕುತ್ರಾಪಿ ಜಾತಾಯಾ ನಿಶ್ಚಲಾಂ ದೇಹಿ ಮೇ ಪ್ರಭೋ ॥

ಅನುವಾದ

ಸ್ವಯಂಪ್ರಭೆಯು ಭಕ್ತಿಯಿಂದ ರಾಮನಲ್ಲಿ ಹೇಳುತ್ತಾಳೆ — ‘‘ಹೇ ಭಕ್ತವತ್ಸಲ ಪ್ರಭು! ನಾನು ಎಲ್ಲೇ ಹುಟ್ಟಿದರೂ ನಿನ್ನ ನಿಶ್ಚಲವಾದ ಭಕ್ತಿಯನ್ನು ಮಾತ್ರ ದಯಪಾಲಿಸು. ॥79॥

(ಶ್ಲೋಕ-80)

ಮೂಲಮ್

ತ್ವ ದ್ಭಕ್ತೇಷು ಸದಾ ಸಂಗೋ ಭೂಯಾನ್ಮೇ ಪ್ರಾಕೃತೇಷು ನ ।
ಜಿಹ್ವಾ ಮೇ ರಾಮರಾಮೇತಿ ಭಕ್ತ್ಯಾ ವದತು ಸರ್ವದಾ ॥

ಅನುವಾದ

ಪ್ರತಿಯೊಂದು ಜನ್ಮದಲ್ಲಿಯೂ ನನಗೆ ನಿನ್ನ ಭಕ್ತರೊಡನೆ ಸಂಗವು ದೊರೆಯಲಿ. ಸಂಸಾರಿಗಳೊಂದಿಗೆ ಸಂಗವಾಗದಿರಲಿ. ಯಾವಾಗಲೂ ನನ್ನ ನಾಲಿಗೆಯು ಭಕ್ತಿಯಿಂದ ರಾಮ-ರಾಮ ಎಂದು ಹೇಳುತ್ತಿರಲಿ. ॥80॥

(ಶ್ಲೋಕ-81)

ಮೂಲಮ್

ಮಾನಸಂ ಶ್ಯಾಮಲಂ ರೂಪಂ ಸೀತಾಲಕ್ಷ್ಮಣಸಂಯುತಮ್ ।
ಧನುರ್ಬಾಣಧರಂ ಪೀತವಾಸಸಂ ಮುಕುಟೋಜ್ಜ್ವಲಮ್ ॥

(ಶ್ಲೋಕ-82)

ಮೂಲಮ್

ಅಂಗದೈರ್ನೂಪುರೈರ್ಮುಕ್ತಾಹಾರೈಃ ಕೌಸ್ತುಭಕುಂಡಲೈಃ ।
ಭಾಂತಂ ಸ್ಮರತು ಮೇ ರಾಮ ವರಂ ನಾನ್ಯಂ ವೃಣೇ ಪ್ರಭೋ ॥

ಅನುವಾದ

ಹೇ ರಾಮಾ! ನನ್ನ ಮನಸ್ಸು ನೀಲಮೇಘ ಶ್ಯಾಮನಾದ, ಸೀತಾ ಲಕ್ಷ್ಮಣರೊಡಗೂಡಿದ, ಧನುರ್ಬಾಣಗಳನ್ನು ಧರಿಸಿರುವ, ಪೀತಾಂಬರಧಾರಿಯಾದ, ಕಿರೀಟದಿಂದ ವಿರಾಜಮಾನವಾದ ಹಾಗೂ ತೊಳುಬಂದಿ, ನೂಪುರ, ಮುತ್ತಿನಹಾರಗಳಿಂದಲೂ, ಕೌಸ್ತುಭರತ್ನದಿಂದಲೂ, ಕರ್ಣಕುಂಡಲಗಳಿಂದಲೂ ಶೋಭಾಯಮಾನವಾದ ನಿನ್ನ ರೂಪವನ್ನು ನೆನೆಯುತ್ತಿರಲಿ. ಹೇ ಒಡೆಯಾ! ಇದಲ್ಲದೆ ನಾನು ಬೇರೇನೂ ವರವನ್ನು ಬೇಡುವುದಿಲ್ಲ.’’ ॥81-82॥

(ಶ್ಲೋಕ-83)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಭವತ್ವೇವಂ ಮಹಾಭಾಗೇ ಗಚ್ಛ ತ್ವಂ ಬದರೀವನಮ್ ।
ತತ್ರೈವ ಮಾಂ ಸ್ಮರಂತೀ ತ್ವಂ ತ್ಯಕ್ತ್ವೇದಂ ಭೂತಪಂಚಕಮ್ ।
ಮಾಮೇವ ಪರಮಾತ್ಮಾನಮಚಿರಾತ್ಪ್ರತಿಪದ್ಯಸೇ ॥

ಅನುವಾದ

ಶ್ರೀರಾಮಚಂದ್ರನಿಂತೆಂದನು — ಎಲೈ ಮಹಾಭಾಗಳೆ! ಹಾಗೆಯೇ ಆಗಲಿ. ನೀನು ಬದರಿಕಾಶ್ರಮಕ್ಕೆ ಹೋಗು. ಅಲ್ಲಿದ್ದುಕೊಂಡು ನನ್ನನ್ನು ಧ್ಯಾನಿಸುತ್ತಾ ಈ ಪಾಂಚಭೌತಿಕ ಶರೀರವನ್ನು ತ್ಯಜಿಸಿ ಕೂಡಲೇ ಪರಮಾತ್ಮನಾದ ನನ್ನನ್ನು ಪಡೆಯುವೆ.’’ ॥83॥

(ಶ್ಲೋಕ-84)

ಮೂಲಮ್

ಶ್ರುತ್ವಾ ರಘೂತ್ತಮವಚೋಮೃತಸಾರಕಲ್ಪಂ
ಗತ್ವಾ ತದೈವ ಬದರೀತರುಷಂಡಜುಷ್ಟಮ್ ।
ತೀರ್ಥಂ ತದಾ ರಘುಪತಿಂ ಮನಸಾ ಸ್ಮರಂತೀ
ತ್ಯಕ್ತ್ವಾ ಕಲೇವರಮವಾಪ ಪರಂ ಪದಂ ಸಾ ॥

ಅನುವಾದ

ರಘುಶ್ರೇಷ್ಠನ ಅಮೃತದಂತಿರುವ ಮಧುರವಚನವನ್ನು ಕೇಳಿ ಸ್ವಯಂಪ್ರಭೆಯು ಆಗಲೇ ಬದರೀ ಮರಗಳಿಂದ ಕೂಡಿದ ಪುಣ್ಯ ಕ್ಷೇತ್ರವಾದ ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ಅಂತಃಕರಣದಲ್ಲಿ ಶ್ರೀರಾಮನನ್ನು ಧ್ಯಾನಿಸುತ್ತಾ ಇದ್ದು, ಕೊನೆಯಲ್ಲಿ ಶರೀರವನ್ನು ತ್ಯಜಿಸಿ ಪರಮಪದವನ್ನು ಪಡೆದಳು. ॥84॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.