೦೫

[ಐದನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮನ ಶೋಕ ಮತ್ತು ಲಕ್ಷ್ಮಣನು ಕಿಷ್ಕಿಂಧೆಗೆ ಹೋಗುವುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ರಾಮಸ್ತು ಪರ್ವತಸ್ಯಾಗ್ರೇ ಮಣಿಸಾನೌ ನಿಶಾಮುಖೇ ।
ಸೀತಾವಿರಹಜಂ ಶೋಕಮಸಹನ್ನಿದಮಬ್ರವೀತ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಗಿರಿಜೆ! ರಾಮನಾದರೋ ಪ್ರವರ್ಷಣ ಪರ್ವತದ ಮಣಿಮಯ ಶಿಖರದಲ್ಲಿ ಕುಳಿತು ಒಂದು ದಿನ ಸಂಜೆ ಸೀತೆಯ ವಿರಹದುಃಖವನ್ನು ತಾಳಲಾರದೆ ಹೀಗೆಂದನು — ॥1॥

(ಶ್ಲೋಕ-2)

ಮೂಲಮ್

ಪಶ್ಯ ಲಕ್ಷ್ಮಣ ಮೇ ಸೀತಾ ರಾಕ್ಷಸೇನ ಹೃತಾ ಬಲಾತ್ ।
ಮೃತಾಮೃತಾ ವಾ ನಿಶ್ಚೇತುಂ ನ ಜಾನೇಽದ್ಯಾಪಿ ಭಾಮಿನೀಮ್ ॥

ಅನುವಾದ

‘‘ತಮ್ಮ ಲಕ್ಷ್ಮಣಾ! ನೋಡು, ರಾಕ್ಷಸನಿಂದ ಬಲಾತ್ಕಾರವಾಗಿ ಅಪಹೃತಳಾದ ಸೀತೆಯು ಬದುಕಿದ್ದಾಳೋ, ದೇಹವನ್ನು ಬಿಟ್ಟಿರುವಳೋ ಎಂಬುದನ್ನು ಈವರೆಗೂ ನಿಶ್ಚಯಿಸಲಾರದೆ ಇದ್ದೇವೆ. ॥2॥

(ಶ್ಲೋಕ-3)

ಮೂಲಮ್

ಜೀವತೀತಿ ಮಮ ಬ್ರೂಯಾತ್ಕಶ್ಚಿದ್ವಾ ಪ್ರಿಯಕೃತ್ಸ ಮೇ ।
ಯದಿ ಜಾನಾಮಿ ತಾಂ ಸಾಧ್ವೀಂ ಜೀವಂತೀಂ ಯತ್ರ ಕುತ್ರ ವಾ ॥

(ಶ್ಲೋಕ-4)

ಮೂಲಮ್

ಹಠಾದೇವಾಹರಿಷ್ಯಾಮಿ ಸುಧಾಮಿವ ಪಯೋನಿಧೇಃ ।
ಪ್ರತಿಜ್ಞಾಂ ಶೃಣು ಮೇ ಭ್ರಾತರ್ಯೇನ ಮೇ ಜನಕಾತ್ಮಜಾ ॥

(ಶ್ಲೋಕ-5)

ಮೂಲಮ್

ನೀತಾ ತಂ ಭಸ್ಮಸಾತ್ಕುರ್ಯಾಂ ಸಪುತ್ರಬಲವಾಹನಮ್ ।
ಹೇ ಸೀತೇ ಚಂದ್ರವದನೇ ವಸಂತೀ ರಾಕ್ಷಸಾಲಯೇ ॥

(ಶ್ಲೋಕ-6)

ಮೂಲಮ್

ದುಃಖಾರ್ತ್ತಾ ಮಾಮಪಶ್ಯಂತೀ ಕಥಂ ಪ್ರಾಣಾನ್ ಧರಿಷ್ಯಸಿ ।
ಚಂದ್ರೋಪಿ ಭಾನುವದ್ಭಾತಿ ಮಮ ಚಂದ್ರಾನನಾಂ ವಿನಾ ॥

ಅನುವಾದ

ಆಕೆಯನ್ನು ಕಂಡು ಬದುಕಿದ್ದಾಳೆ ಎಂದು ಯಾರಾದರು ನನಗೆ ಹೇಳಿದರೆ ಅವನು ನನಗೆ ದೊಡ್ಡ ಉಪಕಾರ ಮಾಡಿದಂತಾದೀತು. ಎಲ್ಲಿಯೇ ಆದರೂ ಪತಿವ್ರತೆಯಾದ ಸೀತೆಯು ಬದುಕಿದ್ದಾಳೆ ಎಂದು ನಾನು ತಿಳಿದರೆ, ಸಮುದ್ರದಿಂದ ಅಮೃತವನ್ನು ತೆಗೆದಂತೆ ಹೇಗಾದರಾಗಲಿ ಅವಳನ್ನು ಎತ್ತಿ ತರುವೆನು. ಸಹಭವ! ನನ್ನ ಪ್ರತಿಜ್ಞೆಯನ್ನು ಕೇಳು. ‘ಜನಕ ನಂದಿನಿಯಾದ ಸೀತೆಯನ್ನು ಕದ್ದುಕೊಂಡು ಹೋದ ದುಷ್ಟನನ್ನು ಪುತ್ರ, ಸೇನೆ-ವಾಹನಾದಿಗಳ ಸಹಿತ ಸುಟ್ಟು ಬಿಡುವೆನು.’ ಹೇ ಚಂದ್ರ ಮುಖಿಯಾದ ಸೀತಾ! ರಾಕ್ಷಸನ ಅರಮನೆಯಲ್ಲಿದ್ದುಕೊಂಡು ದುಃಖಿತಳಾಗಿ ನನ್ನನ್ನು ಕಾಣದೆ ಹೇಗೆ ಪ್ರಾಣಗಳನ್ನು ಧರಿಸಿಕೊಂಡಿದ್ದೀಯೆ? ಅಯ್ಯೊ! ಚಂದ್ರಾನನೆಯಾದ ಸೀತೆಯಿಲ್ಲದೆ ನನಗೆ ಚಂದ್ರನೂ ಸೂರ್ಯನಂತೆ ತಾಪದಾಯಕನಾಗಿ ಕಂಡುಬರುತ್ತಿದ್ದಾನೆ. ॥3-6॥

(ಶ್ಲೋಕ-7)

ಮೂಲಮ್

ಚಂದ್ರ ತ್ವಂ ಜಾನಕೀಂ ಸ್ಪೃಷ್ಟ್ವಾ ಕರೈರ್ಮಾಂ ಸ್ಪೃಶ ಶೀತಲೈಃ ।
ಸುಗ್ರೀವೋಽಪಿ ದಯಾಹೀನೋ ದುಃಖಿತಂ ಮಾಂ ನ ಪಶ್ಯತಿ ॥

ಅನುವಾದ

ಎಲೈ ಚಂದ್ರನೆ! ನೀನು ಸೀತೆಯನ್ನು ಮುಟ್ಟಿ ಅನಂತರ ಅದೇ ಶೀತಲ ಕಿರಣಗಳಿಂದ ನನ್ನನ್ನು ಮುಟ್ಟಿಬಿಡು (ಅದರಿಂದ ನನಗೂ ಶೀತಲತೆ ಉಂಟಾದೀತು). ದಯೆಯಿಲ್ಲದ ಸುಗ್ರೀವನೂ ಕೂಡ ದುಃಖಿತನಾದ ನನ್ನ ಕಡೆಗೆ ತಿರುಗಿನೋಡುತ್ತಿಲ್ಲ. ॥7॥

(ಶ್ಲೋಕ-8)

ಮೂಲಮ್

ರಾಜ್ಯಂ ನಿಷ್ಕಂಟಕಂ ಪ್ರಾಪ್ಯ ಸ್ತ್ರೀಭಿಃ ಪರಿವೃತೋ ರಹಃ ।
ಕೃತನಘೋ ದೃಶ್ಯತೇ ವ್ಯಕ್ತಂ ಪಾನಾಸಕ್ತೋಽತಿಕಾಮುಕಃ ॥

ಅನುವಾದ

ಅಯ್ಯೊ! ಶತ್ರುರಹಿತವಾದ ರಾಜ್ಯವನ್ನು ಪಡೆದುಕೊಂಡ ಅವನು ಏಕಾಂತದಲ್ಲಿ ಸ್ತ್ರೀಯರೊಡಗೂಡಿ ಅತಿಕಾಮುಕನಾಗಿ ಪಾನಮತ್ತನಾಗಿ ಕೃತಘ್ನನಂತೆ ಕಂಡು ಬರುತ್ತಿದ್ದಾನೆ. ॥8॥

(ಶ್ಲೋಕ-9)

ಮೂಲಮ್

ನಾಯಾತಿ ಶರದಂ ಪಶ್ಯನ್ನಪಿ ಮಾರ್ಗಯಿತುಂ ಪ್ರಿಯಾಮ್ ।
ಪೂರ್ವೋಪಕಾರಿಣಂ ದುಷ್ಟಃ ಕೃತನಘೋ ವಿಸ್ಮೃತೋ ಹಿ ಮಾಮ್ ॥

ಅನುವಾದ

ಶರತ್ಕಾಲವು ಬಂದಿರುವುದನ್ನು ತಿಳಿದರೂ ಕೂಡ ನನ್ನ ಪ್ರಿಯಳಾದ ಸೀತೆಯನ್ನು ಹುಡುಕಲು ಇನ್ನೂ ಬಂದಿಲ್ಲವಲ್ಲ. ಹಿಂದೆ ಉಪಕಾರ ಮಾಡಿದ ನನ್ನನ್ನು ಆ ದುಷ್ಟನು ಮರೆತೇ ಬಿಟ್ಟನಲ್ಲ. ॥9॥

(ಶ್ಲೋಕ-10)

ಮೂಲಮ್

ಹನ್ಮಿ ಸುಗ್ರೀವಮಪ್ಯೇವಂ ಸಪುರಂ ಸಹಬಾಂಧವಮ್ ।
ವಾಲೀ ಯಥಾ ಹತೋ ಮೇಽದ್ಯ ಸುಗ್ರೀವೋಽಪಿ ತಥಾ ಭವೇತ್ ॥

ಅನುವಾದ

ವಾಲಿಯನ್ನು ನಾನು ಸಂಹರಿಸಿದಂತೆ ನಗರ ಸಹಿತ ಬಂಧು-ಬಾಂಧವರೊಡನೆ ಸುಗ್ರೀವನನ್ನು ನಾಶಮಾಡಿ ಬಿಡುವೆ. ॥10॥

(ಶ್ಲೋಕ-11)

ಮೂಲಮ್

ಇತಿ ರುಷ್ಟಂ ಸಮಾಲೋಕ್ಯ ರಾಘವಂ ಲಕ್ಷ್ಮಣೋಽಬ್ರವೀತ್ ।
ಇದಾನೀಮೇವ ಗತ್ವಾಹಂ ಸುಗ್ರೀವಂ ದುಷ್ಟಮಾನಸಮ್ ॥

(ಶ್ಲೋಕ-12)

ಮೂಲಮ್

ಮಾಮಾಜ್ಞಾಪಯ ಹತ್ವಾ ತಮಾಯಾಸ್ಯೇ ರಾಮ ತೇಽನ್ತಿಕಮ್ ।
ಇತ್ಯುಕ್ತ್ವಾ ಧನುರಾದಾಯ ಸ್ವಯಂ ತೂಣೀರಮೇವ ಚ ॥

(ಶ್ಲೋಕ-13)

ಮೂಲಮ್

ಗಂತುಮಭ್ಯುದ್ಯತಂ ವೀಕ್ಷ್ಯ ರಾಮೋ ಲಕ್ಷ್ಮಣಮಬ್ರವೀತ್ ।
ನ ಹಂತವ್ಯಸ್ತ್ವಯಾ ವತ್ಸ ಸುಗ್ರೀವೋ ಮೇ ಪ್ರಿಯಃ ಸಖಾ ॥

ಅನುವಾದ

ಹೀಗೆ ಕುಪಿತನಾದ ಶ್ರೀರಾಮನನ್ನು ನೋಡಿದ ಲಕ್ಷ್ಮಣನು ‘‘ಅಣ್ಣಾ! ನನಗೆ ಅಪ್ಪಣೆ ಕೊಡು. ನಾನು ಈಗಲೇ ಹೋಗಿ ದುಷ್ಟ ಚಿತ್ತನಾದ ಸುಗ್ರೀವನನ್ನು ಕೊಂದು ಬರುವೆನು.’’ ಹೀಗೆಂದು ಹೇಳಿ ಧನುರ್ಬಾಣಗಳನ್ನು ಎತ್ತಿಕೊಂಡು ಹೊರಟು ಸಿದ್ಧನಾದ ಲಕ್ಷ್ಮಣನನ್ನು ಸಂತೈಸುತ್ತಾ ಶ್ರೀರಾಮನಿಂತೆಂದನು - ತಮ್ಮಾ! ಸುಗ್ರೀವನು ನನಗೆ ಪ್ರಿಯ ಸ್ನೇಹಿತನು. ಅವನನ್ನು ಕೊಲ್ಲಬಾರದು. ॥11-13॥

(ಶ್ಲೋಕ-14)

ಮೂಲಮ್

ಕಿಂತು ಭೀಷಯ ಸುಗ್ರೀವಂ ವಾಲಿವತ್ತ್ವಂ ಹನಿಷ್ಯಸೇ ।
ಇತ್ಯುಕ್ತ್ವಾ ಶೀಘ್ರಮಾದಾಯ ಸುಗ್ರೀವಪ್ರತಿಭಾಷಿತಮ್ ॥

(ಶ್ಲೋಕ-15)

ಮೂಲಮ್

ಆಗತ್ಯ ಪಶ್ಚಾದ್ಯತ್ಕಾರ್ಯಂ ತತ್ಕರಿಷ್ಯಾಮ್ಯಸಂಶಯಮ್ ।
ತಥೇತಿ ಲಕ್ಷ್ಮಣೋಽಗಚ್ಛತ್ತ್ವರಿತೋ ಭೀಮವಿಕ್ರಮಃ ॥

(ಶ್ಲೋಕ-16)

ಮೂಲಮ್

ಕಿಷ್ಮಿಂಧಾಂ ಪ್ರತಿ ಕೋಪೇನ ನಿರ್ದಹನ್ನಿವ ವಾನರಾನ್ ।
ಸರ್ವಜ್ಞೋ ನಿತ್ಯಲಕ್ಷ್ಮೀಕೋ ವಿಜ್ಞಾನಾತ್ಮಾಪಿ ರಾಘವಃ ॥

(ಶ್ಲೋಕ-17)

ಮೂಲಮ್

ಸೀತಾಮನುಶುಶೋಚಾರ್ತ್ತಃ ಪ್ರಾಕೃತಃ ಪ್ರಾಕೃತಾಮಿವ ।
ಬುದ್ಧ್ಯಾದಿಸಾಕ್ಷಿಣಸ್ತಸ್ಯ ಮಾಯಾಕಾರ್ಯಾತಿವರ್ತಿನಃ ॥

(ಶ್ಲೋಕ-18)

ಮೂಲಮ್

ರಾಗಾದಿರಹಿತಸ್ಯಾಸ್ಯ ತತ್ಕಾರ್ಯಂ ಕಥಮುದ್ಭವೇತ್ ।
ಬ್ರಹ್ಮಣೋಕ್ತಮೃತಂ ಕರ್ತುಂ ರಾಜ್ಞೋ ದಶರಥಸ್ಯ ಹಿ ॥

(ಶ್ಲೋಕ-19)

ಮೂಲಮ್

ತಪಸಃ ಫಲದಾನಾಯ ಜಾತೋ ಮಾನುಷವೇಷಧೃಕ್ ।
ಮಾಯಯಾ ಮೋಹಿತಾಃ ಸರ್ವೇ ಜನಾ ಅಜ್ಞಾನಸಂಯುತಾಃ ॥

(ಶ್ಲೋಕ-20)

ಮೂಲಮ್

ಕಥಮೇಷಾಂ ಭವೇನ್ಮೋಕ್ಷ ಇತಿ ವಿಷ್ಣುರ್ವಿಚಿಂತಯನ್ ।
ಕಥಾಂ ಪ್ರಥಯಿತುಂ ಲೋಕೇ ಸರ್ವಲೋಕಮಲಾಪಹಾಮ್ ॥

(ಶ್ಲೋಕ-21)

ಮೂಲಮ್

ರಾಮಾಯಣಾಭಿಧಾಂ ರಾಮೋ ಭೂತ್ವಾ ಮಾನುಷಚೇಷ್ಟಕಃ ।
ಕ್ರೋಧಂ ಮೋಹಂ ಚ ಕಾಮಂ ಚ ವ್ಯವಹಾರಾರ್ಥಸಿದ್ಧಯೇ ॥

(ಶ್ಲೋಕ-22)

ಮೂಲಮ್

ತತ್ತತ್ಕಾಲೋಚಿತಂ ಗೃಹ್ಣನ್ ಮೋಹಯತ್ಯವಶಾಃ ಪ್ರಜಾಃ ।
ಅನುರಕ್ತ ಇವಾಶೇಷಗುಣೇಷು ಗುಣವರ್ಜಿತಃ ॥

ಅನುವಾದ

ಆದರೆ ‘ವಾಲಿಯಂತೆ ನೀನೂ ಸಾಯುವೆ’ ಎಂದು ಹೆದರಿಸು. ಹೀಗೆ ಹೇಳಿ ಅವನ ಪ್ರತ್ಯುತ್ತರವನ್ನು ಪಡೆದು ಬೇಗನೇ ಬಂದು ಬಿಡು. ನೀನು ಬಂದನಂತರ ಏನು ಮಾಡಬೇಕೋ ಅದನ್ನು ನಿಃಸಂಶಯನಾಗಿ ಮಾಡುವೆನು. ಹಾಗೇ ಆಗಲೆಂದು ಕೂಡಲೇ ಭಯಂಕರ ಪರಾಕ್ರಮಿಯಾದ ಲಕ್ಷ್ಮಣನು ಕಪಿಗಳೆಲ್ಲವನ್ನು ಸುಡುವವನಂತೆ ಕೋಪದಿಂದ ವೇಗವಾಗಿ ಕಿಷ್ಕಿಂಧೆಯ ಕಡೆಗೆ ಹೊರಟನು. ಶ್ರೀರಘುನಾಥನು ಸರ್ವಜ್ಞನೂ, ನಿತ್ಯಲಕ್ಷ್ಮಿ ಯುಕ್ತನೂ, ವಿಜ್ಞಾನಸ್ವರೂಪನೂ ಆಗಿದ್ದರೂ ಸಾಮಾನ್ಯ ಮನುಷ್ಯನು ತನ್ನವಳ ವಿಯೋಗದಿಂದ ಶೋಕಿಸುತ್ತಿರುವ ಪ್ರಾಕೃತ ಪುರುಷನಂತೆ ಸೀತಾದೇವಿಯ ಕುರಿತು ದುಃಖ ಪಡುತ್ತಿದ್ದನು. ಆ ಪ್ರಭುವು ಬುದ್ಧ್ಯಾದಿಗಳಿಗೆ ಸಾಕ್ಷಿಯೂ, ಮಾಯೆಯ ಕಾರ್ಯಗಳಿಂದ ಅತೀತನೂ, ರಾಗ-ದ್ವೇಷಾದಿ ವಿಕಾರಗಳಿಂದ ರಹಿತನೂ ಆಗಿರುವಾಗ ಈ ವಿಕಾರಗಳ ಕಾರ್ಯರೂಪೀ ಶೋಕವು ಅವನಿಗೆ ಹೇಗಾಗಬಲ್ಲದು? ಅವನಾದರೋ ಬ್ರಹ್ಮನ ವಾಣಿಯನ್ನು ಸತ್ಯವಾಗಿಸಲು, ಮಹಾರಾಜಾ ದಶರಥನ ತಪಸ್ಸಿನ ಫಲವನ್ನು ಕೊಡುವುದಕ್ಕೂ ಮನುಷ್ಯವೇಷದಿಂದ ಅವತರಿಸಿರುವನು. ಅಜ್ಞಾನದಿಂದೊಡ ಗೂಡಿದ ಜನರು ಮಾಯಾ ಮೋಹಿತರಾಗಿರುವರು. ಇವರುಗಳಿಗೆ ಮೋಕ್ಷವು ಹೇಗೆ ಉಂಟಾದೀತು? ಎಂದು ಭಗವಾನ್ ವಿಷ್ಣುವು ಚಿಂತಿಸಿದವನಾಗಿ ಸಕಲ ಲೋಕಗಳ ದೋಷಗಳನ್ನು ಕಳೆಯುವಂತಹ ರಾಮಾಯಣವೆಂಬ ಕಥೆಯನ್ನು ಪ್ರಸಿದ್ಧಿ ಗೊಳಿಸುವುದಕ್ಕಾಗಿ ರಾಮನಾಗಿ ಅವತರಿಸಿ ಮನುಷ್ಯರಂತೆ ಕಾರ್ಯಗಳನ್ನು ಮಾಡುತ್ತಾ, ವ್ಯವಹಾರದ ಪ್ರಯೋಜನಗಳ ಸಿದ್ಧಿಗಾಗಿ ಕ್ರೋಧ, ಮೋಹ, ಕಾಮಾದಿ ವಿಕಾರಗಳನ್ನು ಆಯಾಕಾಲಕ್ಕೆ ತಕ್ಕಂತೆ ಸ್ವೀಕರಿಸಿ, ಅಸ್ವತಂತ್ರರಾದ ಜನರನ್ನು ತನ್ನ ಲೀಲೆಗಳಿಂದ ಮೋಹಗೊಳಿಸುತ್ತಿರುವನು. ಆದರೆ ಎಲ್ಲ ಗುಣಗಳೊಡನೆ ಕೂಡಿದವನಂತೆ ಕಂಡುಬಂದರೂ ನಿಜವಾಗಿ ಅವೆಲ್ಲವುಗಳಿಂದ ರಹಿತನಾಗಿರುವನು. ॥14-22॥

(ಶ್ಲೋಕ-23)

ಮೂಲಮ್

ವಿಜ್ಞಾನಮೂರ್ತಿರ್ವಿಜ್ಞಾನಶಕ್ತಿಃ ಸಾಕ್ಷ್ಯಗುಣಾನ್ವಿತಃ ।
ಅತಃ ಕಾಮಾದಿಭಿರ್ನಿತ್ಯಮವಿಲಿಪ್ತೋ ಯಥಾ ನಭಃ ॥

ಅನುವಾದ

ಅವನು ವಿಜ್ಞಾನಮೂರ್ತಿಯೂ, ವಿಜ್ಞಾನಶಕ್ತಿಯೂ ಆಗಿ ಸಾಕ್ಷಿಯಾಗಿರುವನು. ಗುಣಗಳ ಸಂಬಂಧವಿಲ್ಲದವನಾಗಿರುವನು. ಆದ್ದರಿಂದ ಕಾಮಾದಿಗಳಿಂದ ಯಾವಾಗಲೂ ಅಂಟಿಕೊಳ್ಳದೆ, ಆಕಾಶದಂತೆ ಸದಾ ನಿರ್ಲಿಪ್ತನಾಗಿರುವನು. ॥23॥

(ಶ್ಲೋಕ-24)

ಮೂಲಮ್

ವಿಂದಂತಿ ಮುನಯಃ ಕೇಚಿಜ್ಜಾನಂತಿ ಜನಕಾದಯಃ ।
ತದ್ಭಕ್ತಾ ನಿರ್ಮಲಾತ್ಮಾನಃ ಸಮ್ಯಗ್ ಜಾನಂತಿ ನಿತ್ಯದಾ ।
ಭಕ್ತಚಿತ್ತಾನುಸಾರೇಣ ಜಾಯತೇ ಭಗವಾನಜಃ ॥

ಅನುವಾದ

ಕೆಲವು ಮುನಿಗಳೂ, ಜನಕಾದಿ ಜ್ಞಾನಿಗಳೂ ಅವನನ್ನು ಬಲ್ಲವರಾಗಿದ್ದಾರೆ. ನಿರ್ಮಲ ಚಿತ್ತರಾದ ಅವನ ಭಕ್ತರು ಯಾವಾಗಲೂ ಅವನನ್ನು ಚೆನ್ನಾಗಿ ಬಲ್ಲವರಾಗಿರುವರು. ಅಜನಾದ ಭಗವಂತನು ಭಕ್ತರ ಮನೋಭೀಷ್ಟಗಳಿಗೆ ಅನುಗುಣವಾಗಿ ಅವತರಿಸುವನು. ॥24॥

(ಶ್ಲೋಕ-25)

ಮೂಲಮ್

ಲಕ್ಷ್ಮಣೋಽಪಿ ತದಾ ಗತ್ವಾ ಕಿಷ್ಕಿಂಧಾನಗರಾಂತಿಕಮ್ ।
ಜ್ಯಾಘೋಷಮಕರೋತ್ತೀವ್ರಂ ಭೀಷಯನ್ ಸರ್ವವಾನರಾನ್ ॥

ಅನುವಾದ

ಇತ್ತ ಲಕ್ಷ್ಮಣನು ಕಿಷ್ಕಿಂಧಾನಗರಿಯ ಬಳಿಗೆ ಬಂದು ಎಲ್ಲ ವಾನರರನ್ನು ಹೆದರಿಸುವಂತೆ ತನ್ನ ಧನುಸ್ಸಿನ ಹಗ್ಗದಿಂದ ಭಯಂಕರ ಧ್ವನಿಯನ್ನು ಉಂಟುಮಾಡಿದನು. ॥25॥

(ಶ್ಲೋಕ-26)

ಮೂಲಮ್

ತಂ ದೃಷ್ಟ್ವಾ ಪ್ರಾಕೃತಾಸ್ತತ್ರ ವಾನರಾ ವಪ್ರಮೂರ್ಧನಿ ।
ಚಕ್ರುಃ ಕಿಲಕಿಲಾಶಬ್ದಂ ಧೃತಪಾಷಾಣಪಾದಪಾಃ ॥

(ಶ್ಲೋಕ-27)

ಮೂಲಮ್

ತಾನ್ದೃಷ್ಟ್ವಾ ಕ್ರೋಧತಾಮ್ರಾಕ್ಷೋ ವಾನರಾನ್ ಲಕ್ಷ್ಮಣಸ್ತದಾ ।
ನಿರ್ಮೂಲಾನ್ ಕರ್ತುಮುದ್ಯುಕ್ತೋ ಧನುರಾನಮ್ಯ ವೀರ್ಯಾವಾನ್ ॥

ಅನುವಾದ

ಆಗ ಕಾಡುಕಪಿಗಳಾದ ಆ ವಾನರರು ಅವನನ್ನು ಕಂಡು ಬೆಟ್ಟದ ತಪ್ಪಲು ಪ್ರದೇಶಗಳಲ್ಲೆಲ್ಲ ಕಿರುಚುತ್ತಾ ಕೂಗುತ್ತಾ ಕಲ್ಲುಗಳನ್ನು, ಮರಗಳನ್ನು ಎತ್ತಿಕೊಂಡರು. ಆ ಕಪಿಗಳನ್ನು ಕಂಡು ಕೋಪದಿಂದ ಕೆಂಪೇರಿದ ಕಣ್ಣುಗಳುಳ್ಳ ವೀರನಾದ ಲಕ್ಷ್ಮಣನು ಧನುಸ್ಸನ್ನು ಮೇಲಕ್ಕೆತ್ತಿ ಅವರನ್ನೆಲ್ಲ ನಾಶಗೊಳಿಸಲು ಹೊರಟನು. ॥26-27॥

(ಶ್ಲೋಕ-28)

ಮೂಲಮ್

ತತಃ ಶೀಘ್ರಂ ಸಮಾಪ್ಲುತ್ಯ ಜ್ಞಾತ್ವಾ ಲಕ್ಷ್ಮಣಮಾಗತಮ್ ॥

(ಶ್ಲೋಕ-29)

ಮೂಲಮ್

ನಿವಾರ್ಯ ವಾನರಾನ್ ಸರ್ವಾನಂಗದೋ ಮಂತ್ರಿಸತ್ತಮಃ ।
ಗತ್ವಾ ಲಕ್ಷ್ಮಣಸಾಮೀಪ್ಯಂ ಪ್ರಣನಾಮ ಸ ದಂಡವತ್ ॥

ಅನುವಾದ

ಆಗ ಲಕ್ಷ್ಮಣನು ಬಂದಿರುವುದನ್ನು ತಿಳಿದ ಮಂತ್ರಿಶೇಷ್ಠನಾದ ಅಂಗದನು ಬೇಗನೆ ಹಾರಿ ಬಂದು ಎಲ್ಲ ಕಪಿಗಳನ್ನು ತಡೆದು ನಿಲ್ಲಿಸಿ ತಾನು ಲಕ್ಷ್ಮಣನ ಬಳಿಗೆ ಹೋಗಿ ದಂಡವತ್ ಪ್ರಣಾಮವನ್ನು ಮಾಡಿದನು. ॥28-29॥

(ಶ್ಲೋಕ-30)

ಮೂಲಮ್

ತತೋಽಂಗದಂ ಪರಿಷ್ವಜ್ಯ ಲಕ್ಷ್ಮಣಃ ಪ್ರಿಯವರ್ಧನಃ ।
ಉವಾಚ ವತ್ಸ ಗಚ್ಛ ತ್ವಂ ಪಿತೃವ್ಯಾಯ ನಿವೇದಯ ॥

(ಶ್ಲೋಕ-31)

ಮೂಲಮ್

ಮಾಮಾಗತಂ ರಾಘವೇಣ ಚೋದಿತಂ ರೌದ್ರಮೂರ್ತಿನಾ ।
ತಥೇತಿ ತ್ವರಿತಂ ಗತ್ವಾ ಸುಗ್ರೀವಾಯ ನ್ಯವೇದಯತ್ ॥

ಅನುವಾದ

ಅನಂತರ ಪ್ರಿಯವರ್ಧನ ಲಕ್ಷ್ಮಣನು ಅಂಗದನನ್ನು ಬಿಗಿದಪ್ಪಿಕೊಂಡು — ‘‘ಮಗು! ಶ್ರೀರಾಮಚಂದ್ರನು ಬಹಳ ಕೋಪಗೊಂಡಿರುವನು, ಅವನ ಪ್ರೇರಣೆಯಿಂದ ನಾನು ಬಂದಿರುವೆನು ಎಂದು ನಿನ್ನ ಚಿಕ್ಕಪ್ಪನಿಗೆ ಹೋಗಿ ಹೇಳು’’ ಎಂದು ತಿಳಿಸಿದನು. ಸರಿ ಹಾಗೆ ಆಗಲೆಂದು ಅಂಗದನು ಸುಗ್ರೀವನ ಬಳಿಗೆ ಬಂದು ಹೇಳುತ್ತಾನೆ — ॥30-31॥

(ಶ್ಲೋಕ-32)

ಮೂಲಮ್

ಲಕ್ಷ್ಮಣಃ ಕ್ರೋಧತಾಮ್ರಾಕ್ಷಃ ಪುರದ್ವಾರಿಬಹಿಃ ಸ್ಥಿತಃ ।
ತಚ್ಛ್ರುತ್ವಾತೀವ ಸಂತ್ರಸ್ತಃ ಸುಗ್ರೀವೋ ವಾನರೇಶ್ವರಃ ॥

ಅನುವಾದ

‘ರಾಜಾ! ಕೋಪದಿಂದ ಕೆಂಪಾದ ಕಣ್ಣುಳ್ಳ ಲಕ್ಷ್ಮಣನು ಪಟ್ಟಣದ ಹೊರಭಾಗದಲ್ಲಿ ನಿಂತಿರುವನು’ ಎಂದು ತಿಳಿಸಿದನು. ವಾನರೇಶ್ವರನಾದ ಸುಗ್ರೀವನು ಇದನ್ನು ಕೇಳಿ ಅತೀವ ಭಯಗೊಂಡನು. ॥32॥

(ಶ್ಲೋಕ-33)

ಮೂಲಮ್

ಆಹೂಯ ಮಂತ್ರಿಣಾಂ ಶ್ರೇಷ್ಠಂ ಹನೂಮಂತಮಥಾಬ್ರವೀತ್ ।
ಗಚ್ಛ ತ್ವಮಂಗದೇನಾಶು ಲಕ್ಷ್ಮಣಂ ವಿನಯಾನ್ವಿತಃ ॥

(ಶ್ಲೋಕ-34)

ಮೂಲಮ್

ಸಾಂತ್ವಯನ್ಕೋಪಿತಂ ವೀರಂ ಶನೈರಾನಯ ಸಾದರಮ್ ।
ಪ್ರೇಷಯಿತ್ವಾ ಹನೂಮಂತಂ ತಾರಾಮಾಹ ಕಪೀಶ್ವರಃ ॥

ಅನುವಾದ

ಹಾಗೂ ಮಂತ್ರಿಶ್ರೇಷ್ಠನಾದ ಹನುಮಂತನನ್ನು ಕರೆದು ಹೇಳಿದನು — ‘ನೀನು ಅಂಗದನೊಡನೆ ವಿನೀತನಾಗಿ ಲಕ್ಷ್ಮಣನ ಬಳಿಗೆ ಹೋಗಿ ಕೋಪಗೊಂಡಿರುವ ವೀರನಾದ ಅವನನ್ನು ಸಮಾಧಾನಗೊಳಿಸಿ ಮೆಲ್ಲನೆ ಆದರಪೂರ್ವಕವಾಗಿ ಇಲ್ಲಿಗೆ ಕರೆದುಕೊಂಡು ಬಾ.’’ ಹೀಗೆ ಹನುಮಂತನನ್ನು ಲಕ್ಷ್ಮಣನ ಬಳಿಗೆ ಕಳಿಸಿ, ಕಪಿರಾಜನು ತಾರೆಯ ಬಳಿ ಹೇಳುತ್ತಾನೆ — ॥33-34॥

(ಶ್ಲೋಕ-35)

ಮೂಲಮ್

ತ್ವಂ ಗಚ್ಛ ಸಾಂತ್ವಯಂತೀ ತಂ ಲಕ್ಷ್ಮಣಂ ಮೃದುಭಾಷಿತೈಃ ।
ಶಾಂತಮಂತಃಪುರಂ ನೀತ್ವಾ ಪಶ್ಚಾದ್ದರ್ಶಯ ಮೇಽನಘೇ ॥

ಅನುವಾದ

‘‘ಎಲೈ ಪಾಪರಹಿತಳೆ! ನೀನು ಹೋಗಿ ಆ ವೀರವರನಾದ ಲಕ್ಷ್ಮಣನನ್ನು ಮೃದು-ಮಧುರ ಮಾತುಗಳಿಂದ ಸಮಾಧಾನ ಗೊಳಿಸಿ, ಅವನು ಶಾಂತನಾದ ಮೇಲೆ ಅಂತಃಪುರಕ್ಕೆ ನನ್ನ ಬಳಿಗೆ ಕರೆದುಕೊಂಡು ಬಾ.’’ ॥35॥

(ಶ್ಲೋಕ-36)

ಮೂಲಮ್

ಭವತ್ವಿತಿ ತತಸ್ತಾರಾ ಮಧ್ಯಕಕ್ಷಂ ಸಮಾವಿಶತ್ ।
ಹನೂಮಾನಂಗದೇನೈವ ಸಹಿತೋ ಲಕ್ಷ್ಮಣಾಂತಿಕಮ್ ॥

(ಶ್ಲೋಕ-37)

ಮೂಲಮ್

ಗತ್ವಾ ನನಾಮ ಶಿರಸಾ ಭಕ್ತ್ಯಾ ಸ್ವಾಗತಮಬ್ರವೀತ್ ।
ಏಹಿ ವೀರ ಮಹಾಭಾಗ ಭವದ್ ಗೃಹಮಶಂಕಿತಮ್ ॥

ಅನುವಾದ

ಇದನ್ನು ಕೇಳಿದ ತಾರೆಯು ಹಾಗೆಯೇ ಆಗಲೆಂದು ಅರಮನೆಯ ಮಧ್ಯದ ಅಂಗಳಕ್ಕೆ ಬಂದಳು. ಇತ್ತ ಹನುಮಂತನು ಅಂಗದನೊಡಗೂಡಿ ಲಕ್ಷ್ಮಣನ ಸಮೀಪಕ್ಕೆ ಹೋಗಿ ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಸ್ವಾಗತವನ್ನು ಕೋರಿದನು. ‘‘ಹೇ ಮಹಾಭಾಗ ವೀರನೆ! ಇದೆಲ್ಲ ನಿನ್ನದೇ ಆಗಿದೆ. ನಿಃಸಂಶಯನಾಗಿ ಆಗಮಿಸಬೇಕು. ॥36-37॥

(ಶ್ಲೋಕ-38)

ಮೂಲಮ್

ಪ್ರವಿಶ್ಯ ರಾಜದಾರಾದೀನ್ ದೃಷ್ಟ್ವಾ ಸುಗ್ರೀವಮೇವ ಚ ।
ಯದಾಜ್ಞಾಪಯಸೇ ಪಶ್ಚಾತ್ತತ್ಸರ್ವಂ ಕರವಾಣಿ ಭೋಃ ॥

ಅನುವಾದ

ಅರಮನೆಯೊಳಗೆ ಬಂದು ರಾಜಸ್ತ್ರೀಯರೇ ಮುಂತಾದವ ರೊಂದಿಗೆ ಮತ್ತು ಸುಗ್ರೀವನೊಂದಿಗೆ ಭೇಟಿಯಾಗಿ ಅನಂತರ ಏನು ಆಜ್ಞಾಪಿಸುವಿಯೋ ಅದೆಲ್ಲವನ್ನು ನೆರವೇರಿಸಿಕೊಡುವೆವು.’’ ॥38॥

(ಶ್ಲೋಕ-39)

ಮೂಲಮ್

ಇತ್ಯುಕ್ತ್ವಾ ಲಕ್ಷ್ಮಣಂ ಭಕ್ತ್ಯಾ ಕರೇ ಗೃಹ್ಯ ಸ ಮಾರುತಿಃ ।
ಆನಯಾಮಾಸ ನಗರಮಧ್ಯಾದ್ರಾಜಗೃಹಂ ಪ್ರತಿ ॥

ಅನುವಾದ

ಹೀಗೆಂದು ಹೇಳಿ ಮಾರುತಿಯು ಭಕ್ತಿಯಿಂದ ಲಕ್ಷ್ಮಣನ ಕೈ ಹಿಡಿದುಕೊಂಡು ನಗರದ ಮಧ್ಯಭಾಗದಿಂದ ಅರಮನೆಗೆ ಕರೆತಂದನು. ॥39॥

(ಶ್ಲೋಕ-40)

ಮೂಲಮ್

ಪಶ್ಯಂಸ್ತತ್ರ ಮಹಾಸೌಧಾನ್ ಯೂಥಪಾನಾಂ ಸಮಂತತಃ ।
ಜಗಾಮ ಭವನಂ ರಾಜ್ಞಃ ಸುರೇಂದ್ರಭವನೋಪಮಮ್ ॥

ಅನುವಾದ

ಆಗ ಲಕ್ಷ್ಮಣನು ಮಾರ್ಗದಲ್ಲಿ ಎಲ್ಲ ಕಡೆಗಳಲ್ಲಿ ದೊಡ್ಡ-ದೊಡ್ಡ ಸೇನಾಪತಿ ವಾನರರ ಸೌಧಗಳನ್ನು ನೋಡುತ್ತಾ ದೇವೇಂದ್ರನ ಅರಮನೆಯಂತಿದ್ದ ರಾಜಭವನವನ್ನು ಹೊಕ್ಕನು. ॥40॥

(ಶ್ಲೋಕ-41)

ಮೂಲಮ್

ಮಧ್ಯಕಕ್ಷೇ ಗತಾ ತತ್ರ ತಾರಾ ತಾರಾಧಿಪಾನನಾ ।
ಸರ್ವಾಭರಣಸಂಪನ್ನಾ ಮಂದರಕ್ತಾಂತಲೋಚನಾ ॥

(ಶ್ಲೋಕ-42)

ಮೂಲಮ್

ಉವಾಚ ಲಕ್ಷ್ಮಣಂ ನತ್ವಾ ಸ್ಮಿತಪೂರ್ವಾಭಿಭಾಷಿಣೀ ।
ಏಹಿ ದೇವರ ಭದ್ರಂ ತೇ ಸಾಧುಸ್ತ್ವಂ ಭಕ್ತವತ್ಸಲಃ ॥

ಅನುವಾದ

ಅಲ್ಲಿ ನಡುವಿನ ಭಾಗದಲ್ಲಿ ಚಂದ್ರನಂತೆ ಮುಖವುಳ್ಳ, ಸರ್ವಾಭರಣ ಭೂಷಿತಳಾಗಿ ಕಣ್ಣುಗಳು ಸ್ವಲ್ಪ ಕೆಂಪಾಗಿದ್ದ ತಾರೆಯು ಲಕ್ಷ್ಮಣನನ್ನು ಇದಿರ್ಗೊಂಡು ನಮಸ್ಕರಿಸಿ ಮುಗುಳು ನಗೆಯಿಂದ ಕೂಡಿದ ಮಾತುಗಳಿಂದ- ‘‘ಎಲೈ ಮೈದುನನೆ! ಬಾ; ನಿನಗೆ ಮಂಗಳವಾಗಲಿ. ನೀನು ಭಕ್ತವತ್ಸಲನೂ, ಸತ್ಪುರುಷನೂ ಆಗಿರುವೆ. ॥41-42॥

(ಶ್ಲೋಕ-43)

ಮೂಲಮ್

ಕಿಮರ್ಥಂ ಕೋಪಮಾಕಾರ್ಷೀರ್ಭಕ್ತೇ ಭೃತ್ಯೇ ಕಪೀಶ್ವರೇ ।
ಬಹುಕಾಲಮನಾಶ್ವಾಸಂ ದುಃಖಮೇವಾನುಭೂತವಾನ್ ॥

ಅನುವಾದ

ನಿಮ್ಮ ಭಕ್ತನೂ, ಸೇವಕನೂ ಆದ ಕಪಿರಾಜ ಸುಗ್ರೀವನ ವಿಷಯಕ್ಕೆ ಏಕೆ ಕೋಪಿಸಿಕೊಂಡಿರುವೆ? ಅವನಾದರೋ ಬಹಳಕಾಲ ಯಾವುದೇ ಆಸರೆ ದೊರೆಯದೆ ದುಃಖವೇ ದುಃಖವನ್ನು ಅನುಭವಿಸಿದನು. ॥43॥

(ಶ್ಲೋಕ-44)

ಮೂಲಮ್

ಇದಾನೀಂ ಬಹುದುಃಖೌಘಾದ್ಭವದ್ಭಿರಭಿರಕ್ಷಿತಃ ।
ಭವತ್ಪ್ರಸಾದಾತ್ಸುಗ್ರೀವಃ ಪ್ರಾಪ್ತಸೌಖ್ಯೋ ಮಹಾಮತಿಃ ॥

ಅನುವಾದ

ಈಗ ನೀವೇ ಅವನನ್ನು ಅನೇಕ ಕಷ್ಟಗಳಿಂದ ಪಾರಾಗಿಸಿದ್ದೀರಿ. ನಿಮ್ಮಗಳ ಕೃಪೆಯಿಂದಲೇ ಮಹಾಬುದ್ಧಿಶಾಲಿಯಾದ ಸುಗ್ರೀವನು ಸೌಖ್ಯವನ್ನು ಪಡೆದುಕೊಂಡಿರುವನು. ॥44॥

(ಶ್ಲೋಕ-45)

ಮೂಲಮ್

ಕಾಮಾಸಕ್ತೋ ರಘುಪತೇಃ ಸೇವಾರ್ಥಂ ನಾಗತೋ ಹರಿಃ ।
ಆಗಮಿಷ್ಯಂತಿ ಹರಯೋ ನಾನಾದೇಶಗತಾಃ ಪ್ರಭೋ ॥

(ಶ್ಲೋಕ-46)

ಮೂಲಮ್

ಪ್ರೇಷಿತೋ ದಶಸಾಹಸ್ರಾ ಹರಯೋ ರಘುಸತ್ತಮ ।
ಆನೇತುಂ ವಾನರಾನ್ ದಿಗ್ಭ್ಯೋ ಮಹಾಪರ್ವತಸನ್ನಿಭಾನ್ ॥

ಅನುವಾದ

ಆದ್ದರಿಂದ ಕಾಮಾಸಕ್ತನಾದ ಅವನು ಶ್ರೀರಾಮನ ಸೇವೆಗೆ ಇನ್ನೂ ಬರಲಾಗಲಿಲ್ಲ. ಒಡೆಯಾ! ಈಗಾಗಲೇ ಅನೇಕ ದೇಶಗಳಿಗೆ ಹೋಗಿರುವ ಕಪಿಗಳೆಲ್ಲರೂ ಬರಲಿದ್ದಾರೆ. ಹೇ ರಘುಶ್ರೇಷ್ಠನೆ! ಹತ್ತು ಸಾವಿರ ಕಪಿವೀರರು ಎಲ್ಲ ಮೂಲೆ ಮೂಲೆಗಳಿಂದ ಬೆಟ್ಟದಂತೆ ಮಹಾಕಾಯವುಳ್ಳ ಕಪಿಗಳನ್ನು ಕರೆತಲು ಕಳುಹಿಸಲಾಗಿದೆ. ॥45-46॥

(ಶ್ಲೋಕ-47)

ಮೂಲಮ್

ಸುಗ್ರೀವಃ ಸ್ವಯಮಾಗತ್ಯ ಸರ್ವವಾನರಯೂಥಪೈಃ ।
ವಧಯಿಷ್ಯತಿ ದೈತ್ಯೌಘಾನ್ ರಾವಣಂ ಚ ಹನಿಷ್ಯತಿ ॥

(ಶ್ಲೋಕ-48)

ಮೂಲಮ್

ತ್ವಯೈವ ಸಹಿತೋಽದ್ಯೈವ ಗಂತಾ ವಾನರಪುಂಗವಃ ।
ಪಶ್ಯಾಂತರ್ಭವನಂ ತತ್ರ ಪುತ್ರದಾರಸುಹೃದ್ ವೃತಮ್ ॥

(ಶ್ಲೋಕ-49)

ಮೂಲಮ್

ದೃಷ್ಟ್ವಾ ಸುಗ್ರೀವಮಭಯಂ ದತ್ತ್ವಾ ನಯ ಸಹೈವ ತೇ ।
ತಾರಾಯಾ ವಚನಂ ಶ್ರುತ್ವಾ ಕೃಶಕ್ರೋಧೋಽಥ ಲಕ್ಷ್ಮಣಃ ॥

(ಶ್ಲೋಕ-50)

ಮೂಲಮ್

ಜಗಾಮಾಂತಃಪುರಂ ಯತ್ರ ಸುಗ್ರೀವೋ ವಾನರೇಶ್ವರಃ ।
ರುಮಾಮಾಲಿಂಗ್ಯ ಸುಗ್ರೀವಃ ಪರ್ಯಂಕೇ ಪರ್ಯವಸ್ಥಿತಃ ॥

ಅನುವಾದ

ಸುಗ್ರೀವನು ವಾನರ ಸೈನ್ಯದೊಂದಿಗೆ ತಾನೇ ಬಂದು ರಾಕ್ಷಸರ ಸಮೂಹವನ್ನೆಲ್ಲ ಕೊಂದು, ರಾವಣನನ್ನೂ ನಾಶಗೊಳಿಸುತ್ತಾನೆ. ಆ ವಾನರ ಶ್ರೇಷ್ಠನು ಈಗಲೇ ನಿನ್ನೊಡನೆಯೇ ಶ್ರೀರಾಮನ ಬಳಿಗೆ ಬರಲಿದ್ದಾನೆ. ಇದೋ, ಒಳಗೆ ನಡೆ. ಅಂತಃಪುರದೊಳಗೆ ಪತ್ನೀ-ಪುತ್ರರೊಂದಿಗೆ ಕೂಡಿ ಇರುವ ಸುಗ್ರೀವನನ್ನು ನೋಡು. ಅವನನ್ನು ಕಂಡು ಅಭಯವನ್ನು ನೀಡಿ ನಿನ್ನೊಡನೆಯೇ ಕರೆದುಕೊಂಡು ಹೋಗು.’’ ತಾರೆಯ ಮಾತುಗಳನ್ನು ಕೇಳಿದ ಲಕ್ಷ್ಮಣನ ಕೋಪವು ಶಾಂತವಾಯಿತು ಹಾಗೂ ವಾನರೇಶ್ವರನಾದ ಸುಗ್ರೀವನಿರುವ ಅಂತಃಪುರವನ್ನು ಪ್ರವೇಶಿಸಿದನು. ಅಲ್ಲಿ ಸುಗ್ರೀವನು ರುಮೆಯನ್ನು ಆಲಂಗಿಸಿಕೊಂಡು ಮಂಚದ ಮೇಲೆ ಬಿದ್ದುಕೊಂಡಿದ್ದನು. ॥47-50॥

(ಶ್ಲೋಕ-51)

ಮೂಲಮ್

ದೃಷ್ಟ್ವಾ ಲಕ್ಷ್ಮಣಮತ್ಯರ್ಥಮುತ್ಪಪಾತಾತಿಭೀತವತ್ ।
ತಂ ದೃಷ್ಟ್ವಾ ಲಕ್ಷ್ಮಣಃ ಕ್ರುದ್ಧೋ ಮದವಿಹ್ವಲಿತೇಕ್ಷಣಮ್ ॥

(ಶ್ಲೋಕ-52)

ಮೂಲಮ್

ಸುಗ್ರೀವಂ ಪ್ರಾಹ ದುರ್ವೃತ್ತ ವಿಸ್ಮೃತೋಽಸಿ ರಘೂತ್ತಮಮ್ ।
ವಾಲೀ ಯೇನ ಹತೋ ವೀರಃ ಸ ಬಾಣೋಽದ್ಯ ಪ್ರತೀಕ್ಷತೇ ॥

ಅನುವಾದ

ಲಕ್ಷ್ಮಣನನ್ನು ಕಂಡೊಡನೆ ಅತಿಯಾಗಿ ಹೆದರಿಕೊಂಡು ನೆಗೆದು ನಿಂತುಕೊಂಡನು. ಮದದಿಂದ ಮಬ್ಬಾದ ಕಣ್ಣುಳ್ಳ ಅವನನ್ನು ಕಂಡು ಕುಪಿತನಾದ ಲಕ್ಷ್ಮಣನು — ‘‘ಎಲೈ ಕೆಟ್ಟನಡತೆಯುಳ್ಳವನೆ! ನೀನು ರಾಮನನ್ನು ಮರೆತುಬಿಟ್ಟೆಯಾ? ಯಾವ ಬಾಣದಿಂದ ವಾಲಿಯು ಕೊಲ್ಲಲ್ಪಟ್ಟನೋ ಅದು ನಿನ್ನನ್ನು ನಿರೀಕ್ಷಿಸುತ್ತಿದೆ. ॥51-52॥

(ಶ್ಲೋಕ-53)

ಮೂಲಮ್

ತ್ವ ಮೇವ ವಾಲಿನೋ ಮಾರ್ಗಂ ಗಮಿಷ್ಯಸಿ ಮಯಾ ಹತಃ ।
ಏವಮತ್ಯಂತಪರುಷಂ ವದಂತಂ ಲಕ್ಷ್ಮಣಂ ತದಾ ॥

(ಶ್ಲೋಕ-54)

ಮೂಲಮ್

ಉವಾಚ ಹನುಮಾನ್ ವೀರಃ ತಥಮೇವಂ ಪ್ರಭಾಷಸೇ ।
ತ್ವತ್ತೋಽಧಿಕತರೋ ರಾಮೇ ಭಕ್ತೋಽಯಂ ವಾನರಾಧಿಪಃ ॥

ಅನುವಾದ

ನೀನೂ ಕೂಡ ನನ್ನಿಂದ ಹತನಾಗಿ ವಾಲಿಯ ದಾರಿಯನ್ನೇ ಹಿಡಿಯುವೆ.’’ ಹೀಗೆ ಬಹಳ ಕಠೋರವಾಗಿ ನುಡಿಯುತ್ತಿರುವ ಲಕ್ಷ್ಮಣನನ್ನು ಕಂಡು ಹನುಮಂತನು — ‘‘ಹೇ ವೀರನೆ! ಹೀಗೇಕೆ ಮಾತನಾಡುತ್ತಿರುವೆ? ಈ ಕಪಿರಾಜನು ಶ್ರೀರಾಮನಲ್ಲಿ ನಿನಗಿಂತಲೂ ಹೆಚ್ಚಿನ ಭಕ್ತನಾಗಿರುವನು. ॥53-54॥

(ಶ್ಲೋಕ-55)

ಮೂಲಮ್

ರಾಮಕಾರ್ಯಾರ್ಥಮನಿಶಂ ಜಾಗರ್ತಿ ನ ತು ವಿಸ್ಮೃತಃ ।
ಆಗತಾಃ ಪರಿತಃ ಪಶ್ಯ ವಾನರಾಃ ಕೋಟಿಶಃ ಪ್ರಭೋ ॥

(ಶ್ಲೋಕ-56)

ಮೂಲಮ್

ಗಮಿಷ್ಯಂತ್ಯಚಿರೇಣೈವ ಸೀತಾಯಾಃ ಪರಿಮಾರ್ಗಣಮ್ ।
ಸಾಧಯಿಷ್ಯತಿ ಸುಗ್ರೀವೋ ರಾಮಕಾರ್ಯಮಶೇಷತಃ ॥

ಅನುವಾದ

ಶ್ರೀರಾಮನ ಸೇವೆಗಾಗಿ ಹಗಲೂ ರಾತ್ರಿ ಎಚ್ಚೆತ್ತಿದ್ದು, ಎಂದಿಗೂ ಮರೆತಿಲ್ಲ. ಪ್ರಭುವೆ! ಇದೋ, ಕೊಟಿಗಟ್ಟಲೆ ಕಪಿಗಳು ಎಲ್ಲ ಕಡೆಗಳಿಂದ ಆಗಮಿಸುತ್ತಿದ್ದಾರೆ. ಇವರೆಲ್ಲರೂ ಸೀತೆಯನ್ನು ಹುಡುಕಲು ಶೀಘ್ರವಾಗಿ ಹೋಗಲಿದ್ದಾರೆ. ರಾಮನ ಎಲ್ಲ ಕೆಲಸ ಕಾರ್ಯಗಳನ್ನು ಸುಗ್ರೀವನು ನೆರವೇರಿಸಿಕೊಡಲಿದ್ದಾನೆ’’ ಎಂದು ಹೇಳಿದನು. ॥55-56॥

(ಶ್ಲೋಕ-57)

ಮೂಲಮ್

ಶ್ರುತ್ವಾ ಹನುಮತೋ ವಾಕ್ಯಂ ಸೌಮಿತ್ರಿರ್ಲಜ್ಜಿತೋಽಭವತ್ ।
ಸುಗ್ರೀವೋಽಪ್ಯರ್ಘ್ಯಪಾದ್ಯಾದ್ಯೈರ್ಲಕ್ಷ್ಮಣಂ ಸಮಪೂಜಯತ್ ॥

ಅನುವಾದ

ಹನುಮಂತನ ಮಾತನ್ನು ಕೇಳಿ ಲಕ್ಷ್ಮಣನು ನಾಚಿಕೊಂಡು ಸುಮ್ಮನಾದನು. ಸುಗ್ರೀವನೂ ಅರ್ಘ್ಯಪಾದ್ಯಾದ್ಯುಪಚಾರಗಳಿಂದ ಲಕ್ಷ್ಮಣನನ್ನು ಪೂಜಿಸಿದನು. ॥57॥

(ಶ್ಲೋಕ-58)

ಮೂಲಮ್

ಆಲಿಂಗ್ಯ ಪ್ರಾಹ ರಾಮಸ್ಯ ದಾಸೋಽಹಂ ತೇನ ರಕ್ಷಿತಃ ।
ರಾಮಃ ಸ್ವತೇಜಸಾ ಲೋಕಾನ್ ಕ್ಷಣಾರ್ದ್ಧೇನೈವ ಜೇಷ್ಯತಿ ॥

ಅನುವಾದ

ಹಾಗೂ ಅವನನ್ನು ಆಲಿಂಗಿಸಿಕೊಂಡು ಹೇಳಿದನು — ‘‘ನಾನಾದರೋ ಶ್ರೀರಾಮನ ದಾಸನಾಗಿದ್ದೇನೆ. ಅವನಿಂದ ರಕ್ಷಿತನಾಗಿದ್ದೇನೆ. ರಾಮನಾದರೋ ತನ್ನ ತೇಜಸ್ಸಿನಿಂದ ಕ್ಷಣಾರ್ಧದಲ್ಲಿ ಸಕಲಲೋಕಗಳನ್ನು ಜಯಿಸಬಲ್ಲನು. ॥58॥

(ಶ್ಲೋಕ-59)

ಮೂಲಮ್

ಸಹಾಯಮಾತ್ರ ಮೇವಾಹಂ ವಾನರೈಃ ಸಹಿತಃ ಪ್ರಭೋ ।
ಸೌಮಿತ್ರಿರಪಿ ಸುಗ್ರೀವಂ ಪ್ರಾಹ ಕಿಂಚಿನ್ಮಯೋದಿತಮ್ ॥

(ಶ್ಲೋಕ-60)

ಮೂಲಮ್

ತತ್ ಕ್ಷಮಸ್ವ ಮಹಾಭಾಗ ಪ್ರಣಯಾದ್ಭಾಷಿತಂ ಮಯಾ ।
ಗಚ್ಛಾಮೋಽದ್ಯೈವ ಸುಗ್ರೀವ ರಾಮಸ್ತಿಷ್ಠತಿ ಕಾನನೇ ॥

(ಶ್ಲೋಕ-61)

ಮೂಲಮ್

ಏಕ ಏವಾತಿದುಃಖಾರ್ತ್ತೋ ಜಾನಕೀವಿರಹಾತ್ಪ್ರಭುಃ ।
ತಥೇತಿ ರಥಮಾರುಹ್ಯ ಲಕ್ಷ್ಮಣೇನ ಸಮನ್ವಿತಃ ॥

(ಶ್ಲೋಕ-62)

ಮೂಲಮ್

ವಾನರೈಃ ಸಹಿತೋ ರಾಜಾ ರಾಮಮೇವಾನ್ವಪದ್ಯತ ॥

ಅನುವಾದ

ಒಡೆಯಾ! ನಾನಾದರೋ ನನ್ನ ಸೈನ್ಯದೊಂದಿಗೆ ಕೇವಲ ಸಹಾಯಕನಾಗಿದ್ದೇನೆ. ನನ್ನಿಂದ ಅವನ ಯಾವ ಕಾರ್ಯಸಿದ್ಧವಾಗಬಹುದು? ಅವನು ಸರ್ವಸಮರ್ಥನಾಗಿದ್ದಾನೆ. ಆಗ ಲಕ್ಷ್ಮಣನು ಸುಗ್ರೀವನಿಗೆ ಹೇಳುತ್ತಾನೆ — ‘‘ಎಲೈ ಮಹಾಭಾಗನೆ! ನಾನು ನಿನಗೆ ಹುಸಿಕೋಪದಿಂದ ಆಡಿದ ಅನುಚಿತ ಮಾತುಗಳನ್ನು ಕ್ಷಮಿಸಿ ಬಿಡು. ಸುಗ್ರೀವಾ! ಭಗವಾನ್ ಶ್ರೀರಾಮನು ಓರ್ವನೇ ಸೀತಾವಿರಹದಿಂದ ದುಃಖಿತನಾಗಿ ಬೆಟ್ಟದಲ್ಲಿ ಇರುವನು. ನಾವು ಈಗಲೇ ಅಲ್ಲಿಗೆ ಹೋಗೋಣ.’’ ಆಗ ವಾನರರಾಜನಾದ ಸುಗ್ರೀವನು ಹಾಗೆಯೇ ಆಗಲೆಂದು ಒಪ್ಪಿ ಲಕ್ಷ್ಮಣನೊಡಗೂಡಿ ರಥವನ್ನೇರಿ ಕಪಿಗಳ ಸಮೇತ ಶ್ರೀರಾಮಚಂದ್ರನ ಬಳಿಗೆ ಹೊರಟನು. ॥59-62॥

(ಶ್ಲೋಕ-63)

ಮೂಲಮ್

ಭೇರಿಮೃದಂಗೈರ್ಬಹುಋಕ್ಷವಾನರೈಃ
ಶ್ವೇತಾತಪತ್ರೈರ್ವ್ಯಜನೈಶ್ಚ ಶೋಭಿತಃ ।
ನೀಲಾಂಗದಾದ್ಯೈರ್ಹನುಮತ್ಪ್ರಧಾನೈಃ
ಸಮಾವೃತೋ ರಾಘವಮಭ್ಯಗಾದ್ಧರಿಃ ॥

ಅನುವಾದ

ಜೊತೆಗೆ ಭೇರಿ, ಮೃದಂಗಾದಿ ವಾದ್ಯ ಧ್ವನಿಗಳಿಂದಲೂ, ಅನೇಕ ಮಂದಿ ಕಪಿ, ಕರಡಿಗಳಿಂದಲೂ, ರಾಜಮರ್ಯಾದೆಗಳಾದ ಶ್ವೇತಚ್ಛತ್ರ, ಚಾಮರಗಳಿಂದ ಶೋಭಿಸುತ್ತಾ ನೀಲ, ಅಂಗದ, ಹನುಮಂತ ಮುಂತಾದ ಪ್ರಧಾನ ವಾನರ ವೀರರಿಂದೊಡಗೂಡಿ ಸುಗ್ರೀವನು ಶ್ರೀರಾಮನ ಬಳಿಗೆ ಬಂದನು. ॥63॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.