೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮನು ಲಕ್ಷ್ಮಣನಿಗೆ ಕ್ರಿಯಾಯೋಗವನ್ನು ವರ್ಣಿಸುವುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ತತ್ರ ವಾರ್ಷಿಕದಿನಾನಿ ರಾಘವೋ
ಲೀಲಯಾ ಮಣಿಗುಹಾಸು ಸಂಚರನ್ ।
ಪಕ್ವಮೂಲಫಲಭೋಗ ತೋಷಿತೋ
ಲಕ್ಷ್ಮಣೇನ ಸಹಿತೋಽವಸತ್ಸುಖಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ರಾಘವನು ಅಲ್ಲಿ ವರ್ಷಾಕಾಲದ ಸಮಯವನ್ನು ಲೀಲೆಯಿಂದ ಕಳೆಯುತ್ತಾ, ಮಣಿಮಯವಾದ ಗುಹೆಗಳಲ್ಲಿ ಓಡಾಡುತ್ತಾ, ಚೆನ್ನಾಗಿ ಮಾಗಿದ ಹಣ್ಣು-ಕಂದಮೂಲಗಳನ್ನು ತಿಂದು ಸಂತುಷ್ಟವಾಗಿ ಲಕ್ಷ್ಮಣನ ಸಹಿತನಾಗಿ ಸುಖವಾಗಿ ವಾಸಿಸುತ್ತಿದ್ದನು. ॥1॥

(ಶ್ಲೋಕ-2)

ಮೂಲಮ್

ವಾತನುನ್ನಜಲಪೂರಿತಮೇಘಾ-
ನಂತರಸ್ತನಿತವೈದ್ಯುತಗರ್ಭಾನ್ ।
ವೀಕ್ಷ್ಯ ವಿಸ್ಮಯಮಗಾದ್ಗಜಯೂಥಾ -
ನ್ಯದ್ವದಾಹಿತಸುಕಾಂಚನಕಕ್ಷಾನ್ ॥

ಅನುವಾದ

ಗಾಳಿಯಿಂದ ಪ್ರೇರಿತವಾದ ನೀರಿನಿಂದ ತುಂಬಿದ, ಮಿಂಚುಗಳ ಪ್ರಕಾಶದಿಂದ ಕೂಡಿಕೊಂಡು ಸಂಚರಿಸುತ್ತಿರುವ ಮೋಡಗಳನ್ನು ನೋಡಿ ಮದ್ದಾನೆಗಳ ಗುಂಪು ಚಿನ್ನದ ಜರಿಯ ವಸ್ತ್ರಗಳನ್ನು ಹೊದ್ದು ಅತ್ತಿತ್ತ ಸಂಚರಿಸುತ್ತಿರುವಂತೆ ಭಾವಿಸಿ ಶ್ರೀರಾಮನು ಆಶ್ಚರ್ಯಗೊಂಡನು. ॥2॥

(ಶ್ಲೋಕ-3)

ಮೂಲಮ್

ನವಘಾಸಂ ಸಮಾಸ್ವಾದ್ಯ ಹೃಷ್ಟಪುಷ್ಟಮೃಗದ್ವಿಜಾಃ ।
ಧಾವಂತಃ ಪರಿತೋ ರಾಮಂ ವೀಕ್ಷ್ಯ ವಿಸ್ಫಾರಿತೇಕ್ಷಣಾಃ ॥

ಅನುವಾದ

ಹೊಸದಾದ ಎಳೆ ಹುಲ್ಲನ್ನು, ಆಹಾರಗಳನ್ನು ಸೇವಿಸಿ ಸಂತುಷ್ಟವಾದ ಹಾಗೂ ಕೊಬ್ಬಿದ ಪ್ರಾಣಿ ಪಕ್ಷಿಗಳು ಅತ್ತಿತ್ತ ಓಡಾಡುತ್ತಾ ಶ್ರೀರಾಮನನ್ನು ಬಿಟ್ಟ ಕಣ್ಣುಗಳಿಂದ ನೋಡಿ ಸುತ್ತಲೂ ಅಲೆಯುತ್ತಿದ್ದುವು. ॥3॥

(ಶ್ಲೋಕ-4)

ಮೂಲಮ್

ನ ಚಲಂತಿ ಸದಾಧ್ಯಾನನಿಷ್ಠಾ ಇವ ಮುನೀಶ್ವರಾಃ ।
ರಾಮಂ ಮಾನುಷರೂಪೇಣ ಗಿರಿಕಾನನಭೂಮಿಷು ॥

(ಶ್ಲೋಕ-5)

ಮೂಲಮ್

ಚರಂತಂ ಪರಮಾತ್ಮಾನಂ ಜ್ಞಾತ್ವಾ ಸಿದ್ಧಗಣಾ ಭುವಿ ।
ಮೃಗಪಕ್ಷಿಗಣಾ ಭೂತ್ವಾ ರಾಮಮೇವಾನುಸೇವಿರೇ ॥

ಅನುವಾದ

ಕೆಲವುಸಲ ಧ್ಯಾನನಿಷ್ಠರಾದ ಋಷಿಗಳಂತೆ ಮೃಗಗಳು ಬೆಟ್ಟ-ಗುಡ್ಡ, ಕಾಡು ಪ್ರದೇಶದಲ್ಲಿ ಶ್ರೀರಾಮನನ್ನು ಕಂಡು ಅಲುಗಾಡದೆ ನಿಂತು ಬಿಡುತ್ತಿದ್ದುವು. ಈಗ ಪರಮಾತ್ಮಾ ಶ್ರೀರಾಮನು ಮನುಷ್ಯರೂಪದಿಂದ ಗಿರಿ-ಕಾನನದಲ್ಲಿ ಸಂಚರಿಸುವುದನ್ನು ತಿಳಿದು ಅನೇಕ ಸಿದ್ಧರುಗಳ ಗುಂಪುಗಳು ಮೃಗಪಕ್ಷಿಗಳ ರೂಪವನ್ನು ಧರಿಸಿ ಶ್ರೀರಾಮಚಂದ್ರನ ಸೇವೆಯಲ್ಲಿ ಇರ ತೊಡಗಿದರು. ॥4-5॥

(ಶ್ಲೋಕ-6)

ಮೂಲಮ್

ಸೌಮಿತ್ರಿರೇಕದಾ ರಾಮಮೇಕಾಂತೇ ಧ್ಯಾನತತ್ಪರಮ್ ।
ಸಮಾಧಿವಿರಮೇ ಭಕ್ತ್ಯಾ ಪ್ರಣಯಾದ್ವಿನಯಾನ್ವಿತಃ ॥

(ಶ್ಲೋಕ-7)

ಮೂಲಮ್

ಅಬ್ರವೀದ್ದೇವ ತೇ ವಾಕ್ಯಾತ್ಪೂರ್ವೋಕ್ತಾದ್ವಿಗತೋ ಮಮ ।
ಅನಾದ್ಯವಿದ್ಯಾಸಂಭೂತಃ ಸಂಶಯೋ ಹೃದಿ ಸಂಸ್ಥಿತಃ ॥

ಅನುವಾದ

ಒಂದುದಿನ ಏಕಾಂತದಲ್ಲಿ ಧ್ಯಾನ ಮಾಡುತ್ತಾ ಇರುವ ಭಗವಾನ್ ಶ್ರೀರಾಮನಲ್ಲಿ ಅವನು ಸಮಾಧಿಯಿಂದ ಬಹಿರ್ಮುಖನಾದಾಗ ಸುಮಿತ್ರಾನಂದನ ಲಕ್ಷ್ಮಣನು ಅತಿ ಪ್ರೇಮ-ಭಕ್ತಿಯಿಂದ ವಿನೀತನಾಗಿ ಕೇಳಿದನು ‘‘ಹೇ ದೇವಾ! ಹಿಂದೆ ನೀನು ಹೇಳಿದ ಉಪದೇಶದಿಂದ ಅನಾದಿಯಾದ ಅವಿದ್ಯೆಯಿಂದುಂಟಾದ ಹೃದಯದಲ್ಲಿದ್ದ ನನ್ನ ಸಂಶಯವು ಪರಿಹಾರವಾಯಿತು. ॥6-7॥

(ಶ್ಲೋಕ-8)

ಮೂಲಮ್

ಇದಾನೀಂ ಶ್ರೋತುಮಿಚ್ಛಾಮಿ ಕ್ರಿಯಾಮಾರ್ಗೇಣ ರಾಘವ ।
ಭವದಾರಾಧನಂ ಲೋಕೇ ಯಥಾ ಕುರ್ವಂತಿ ಯೋಗಿನಃ ॥

ಅನುವಾದ

ಈಗ ಎಲೈ ರಾಘವನೆ! ಕ್ರಿಯಾ ಮಾರ್ಗ(ಪೂಜಾಪದ್ಧತಿ)ದಿಂದ ಯೋಗಿಗಳು ನಿನ್ನ ಆರಾಧನೆಯನ್ನು ಹೇಗೆ ಮಾಡುವರೆಂಬುದನ್ನು ಕೇಳಲಿಚ್ಛಿಸುತ್ತೇನೆ. ॥8॥

(ಶ್ಲೋಕ-9)

ಮೂಲಮ್

ಇದಮೇವ ಸದಾ ಪ್ರಾಹುರ್ಯೋಗಿನೋ ಮುಕ್ತಿಸಾಧನಮ್ ।
ನಾರದೋಽಪಿ ತಥಾ ವ್ಯಾಸೋ ಬ್ರಹ್ಮಾ ಕಮಲಸಂಭವಃ ॥

(ಶ್ಲೋಕ-10)

ಮೂಲಮ್

ಬ್ರಹ್ಮಕ್ಷತ್ರಾದಿವರ್ಣಾನಾಮಾಶ್ರಮಾಣಾಂ ಚ ಮೋಕ್ಷದಮ್ ।
ಸ್ತ್ರೀಶೂದ್ರಾಣಾಂ ಚ ರಾಜೇಂದ್ರ ಸುಲಭಂ ಮುಕ್ತಿಸಾಧನಮ್ ।
ತವ ಭಕ್ತಾಯ ಮೇ ಭ್ರಾತ್ರೇ ಬ್ರೂಹಿ ಲೋಕೋಪಕಾರಕಮ್ ॥

ಅನುವಾದ

ಎಲ್ಲ ಯೋಗಿಗಳು ಹಾಗೂ ದೇವರ್ಷಿ ನಾರದರು, ಮಹರ್ಷಿ ವ್ಯಾಸರು, ಕಮಲಸಂಭವ ಬ್ರಹ್ಮದೇವರೂ ಕೂಡ ಇದನ್ನು ಮುಕ್ತಿಯ ಸಾಧನೆಯೆಂದು ಹೇಳುತ್ತಾರೆ. ಹೇ ರಾಜರಾಜೇಶ್ವರ! ಬ್ರಾಹ್ಮಣ, ಕ್ಷತ್ರಿಯಾದಿ ವರ್ಣಗಳವರಿಗೂ, ಬ್ರಹ್ಮ ಚರ್ಯಾದಿ ಆಶ್ರಮಿಗಳಿಗೂ ಮೋಕ್ಷಕ್ಕೆ ಹಾದಿಯಾಗಿರುವ ಲೋಕೋಪಕಾರಕವಾದ ಈ ವಿಷಯವನ್ನು ನಿನ್ನ ಭಕ್ತನೂ, ಸೋದರನೂ ಆದ ನನಗೆ ಹೇಳುವವನಾಗು. ॥9-10॥

(ಶ್ಲೋಕ-11)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಮಮ ಪೂಜಾವಿಧಾನಸ್ಯ ನಾಂತೋಽಸ್ತಿ ರಘುನಂದನ ।
ತಥಾಪಿ ವಕ್ಷ್ಯೇ ಸಂಕ್ಷೇಪಾದ್ಯಥಾವದನುಪೂರ್ವಶಃ ॥

ಅನುವಾದ

ಶ್ರೀರಾಮಚಂದ್ರನು ಹೇಳಿದನು — ‘‘ಎಲೈ ರಘುನಂದನ ಲಕ್ಷ್ಮಣಾ! ನನ್ನ ಪೂಜಾಕ್ರಮಗಳು ಲೆಕ್ಕವಿಲ್ಲದಷ್ಟು ಇರುವವು. ಅವುಗಳಿಗೆ ಕೊನೆಯೇ ಇಲ್ಲ. ಆದರೂ ಸಂಕ್ಷೇಪದಿಂದ ಕ್ರಮವಾಗಿ ಇದ್ದದ್ದು ಇದ್ದಂತೆಯೇ ಹೇಳುವೆನು. ॥11॥

(ಶ್ಲೋಕ-12)

ಮೂಲಮ್

ಸ್ವಗೃಹ್ಯೋಕ್ತಪ್ರಕಾರೇಣ ದ್ವಿಜತ್ವಂ ಪ್ರಾಪ್ಯ ಮಾನವಃ ।
ಸಕಾಶಾತ್ಸದ್ಗುರೋರ್ಮಂತ್ರಂ ಲಬ್ಧ್ವಾ ಮದ್ಭಕ್ತಿಸಂಯುತಃ ॥

(ಶ್ಲೋಕ-13)

ಮೂಲಮ್

ತೇನ ಸಂದರ್ಶಿತವಿಧಿರ್ಮಾಮೇವಾರಾಧಯೇತ್ಸುಧಿಃ ।
ಹೃದಯೇ ವಾನಲೇ ವಾರ್ಚೇತ್ಪ್ರತಿಮಾದೌ ವಿಭಾವಸೌ ॥

ಅನುವಾದ

ಮನುಷ್ಯನು ತನ್ನ ಶಾಖೆಯ ಗೃಹ್ಯಸೂತ್ರವಿಧಿಗಳಿಗೆ ಅನುಗುಣವಾಗಿ ದ್ವಿಜತ್ವವನ್ನು (ಉಪನಯವನ್ನು) ಹೊಂದಿ ಸದ್ಗುರುವಿನಿಂದ ಮಂತ್ರೋಪದೇಶವನ್ನು ಪಡೆದು, ಭಕ್ತಿಯುಕ್ತನಾಗಿ, ತಿಳಿವಳಿಕೆಯುಳ್ಳವನಾಗಿ ಆ ಗುರುವು ತೋರಿಸಿಕೊಟ್ಟ ಮಾರ್ಗದಿಂದ ನನ್ನನ್ನೇ ಆರಾಧಿಸಬೇಕು. ಹೃದಯದಲ್ಲಾಗಲಿ ಅಥವಾ ಅಗ್ನಿ, ಪ್ರತಿಮಾದಿಗಳಲ್ಲಾಗಲಿ, ಸೂರ್ಯ, ಶಾಲಿಗ್ರಾಮದಲ್ಲಾಗಲಿ ನನ್ನನ್ನು ಬೇಸರವಿಲ್ಲದೆ ಪೂಜಿಸಬೇಕು. ॥12-13॥

(ಶ್ಲೋಕ-14)

ಮೂಲಮ್

ಶಾಲಗ್ರಾಮಶಿಲಾಯಾಂ ವಾ ಪೂಜಯೇನ್ಮಾಮತಂದ್ರಿತಃ ।
ಪ್ರಾತಃಸ್ನಾನಂ ಪ್ರಕುರ್ವೀತ ಪ್ರಥಮಂ ದೇಹಶುದ್ಧಯೇ ॥

(ಶ್ಲೋಕ-15)

ಮೂಲಮ್

ವೇದತಂತ್ರೋದಿತೈರ್ಮಂತ್ರೈರ್ಮೃಲ್ಲೇಪನವಿಧಾನತಃ ।
ಸಂಧ್ಯಾದಿ ಕರ್ಮ ಯನ್ನಿತ್ಯಂ ತತ್ಕುರ್ಯಾದ್ವಿಧಿನಾ ಬುಧಃ ॥

ಅನುವಾದ

ಬುದ್ಧಿ ವಂತನಾದ ಉಪಾಸಕನು ಮೊಟ್ಟಮೊದಲು ಶರೀರಶುದ್ಧಿಗಾಗಿ ವೇದಗಳಲ್ಲಿ ಅಥವಾ ಆಗಮಗಳಲ್ಲಿ ಹೇಳಿರುವ ಮಂತ್ರ ಪೂರ್ವಕವಾಗಿ ವಿಧಿವತ್ ಮೃತ್ತಿಕಾದಿಗಳನ್ನು ಶರೀರಕ್ಕೆ ಹಚ್ಚಿಕೊಂಡು ಪ್ರಾತಃಕಾಲದಲ್ಲಿ ಸ್ನಾನಮಾಡಬೇಕು. ಅನಂತರ ವಿಧಿಪೂರ್ವಕವಾಗಿ ಸಂಧ್ಯಾವಂದನೆಯೇ ಮುಂತಾದ ನಿತ್ಯಕರ್ಮಗಳನ್ನು ಮಾಡಬೇಕು. ॥14-15॥

(ಶ್ಲೋಕ-16)

ಮೂಲಮ್

ಸಂಕಲ್ಪಮಾದೌ ಕುರ್ವೀತ ಸಿದ್ಧ್ಯರ್ಥಂ ಕರ್ಮಣಾಂ ಸುಧೀಃ ।
ಸ್ವಗುರುಂ ಪೂಜಯೇದ್ಭಕ್ತ್ಯಾ ಮದ್ಬುದ್ಧ್ಯಾ ಪೂಜಕೋ ಮಮ ॥

ಅನುವಾದ

ನನ್ನನ್ನು ಪೂಜಿಸುವ ಬುದ್ಧಿವಂತನಾದ ಪುರುಷನು ಕರ್ಮಗಳ ಸಿದ್ಧಿಗಾಗಿ ಮೊದಲಿಗೆ ಸಂಕಲ್ಪ ಮಾಡಬೇಕು. ತನ್ನ ಗುರುವನ್ನು ನಾನೇ ಎಂಬ ಬುದ್ಧಿಯಿಂದ ಭಕ್ತಿಯಿಂದ ಪೂಜಿಸಬೇಕು. ॥16॥

(ಶ್ಲೋಕ-17)

ಮೂಲಮ್

ಶಿಲಾಯಾಂ ಸ್ನಪನಂ ಕುರ್ಯಾತ್ಪ್ರತಿಮಾಸು ಪ್ರಮಾರ್ಜನಮ್ ।
ಪ್ರಸಿದ್ಧೈರ್ಗಂಧಪುಷ್ಪಾದ್ಯೈರ್ಮತ್ಪೂಜಾ ಸಿದ್ಧಿದಾಯಿಕಾ ॥

ಅನುವಾದ

ಸಾಲಿಗ್ರಾಮ ರೂಪೀ ಮೂರ್ತಿಯಾದರೆ ಅಭಿಷೇಕ ಮಾಡಬೇಕು. ಪ್ರತಿಮೆಯಾದರೆ ನೀರನ್ನು ಪ್ರೋಕ್ಷಿಸಿ ಒರೆಸಿದರೂ ಸಾಕು. ಅನಂತರ ಉತ್ತಮ ಗಂಧ ಹಾಗೂ ಪ್ರಸಿದ್ಧ (ಸುಗಂಧಿತ) ಹೂವುಗಳಿಂದ ನನ್ನ ಪೂಜೆಯನ್ನು ಮಾಡಬೇಕು. ಅದು ಶೀಘ್ರವೇ ಸಿದ್ಧಿಪ್ರದವು. ॥17॥

(ಶ್ಲೋಕ-18)

ಮೂಲಮ್

ಅಮಾಯಿಕೋಽನುವೃತ್ತ್ಯಾ ಮಾಂ ಪೂಜಯೇನ್ನಿಯತವ್ರತಃ ।
ಪ್ರತಿಮಾದಿಷ್ವಲಂಕಾರಃ ಪ್ರಿಯೋ ಮೇ ಕುಲನಂದನ ॥

ಅನುವಾದ

ಕಪಟವಿಲ್ಲದವನಾಗಿ ಗುರೂಪದೇಶ ಕ್ರಮದಿಂದ ನಿಯಮಬದ್ಧನಾಗಿ ನನ್ನನ್ನು ಅರ್ಚಿಸಬೇಕು. ಹೇ ಕುಲನಂದನ! ಪ್ರತಿಮಾದಿಗಳಿಗೆ ಮಾಡಿದ ಅಲಂಕಾರವು ನನಗೆ ತುಂಬಾ ಪ್ರೀತಿಕರವಾದುದು. ॥18॥

(ಶ್ಲೋಕ-19)

ಮೂಲಮ್

ಅಗ್ನೌ ಯಜೇತ ಹವಿಷಾ ಭಾಸ್ಕರೇ ಸ್ಥಂಡಿಲೇ ಯಜೇತ್ ।
ಭಕ್ತೇನೋಪಹೃತಂ ಪ್ರೀತ್ಯೈ ಶ್ರದ್ಧಯಾ ಮಮ ವಾರ್ಯಪಿ ॥

ಅನುವಾದ

ಅಗ್ನಿಯಲ್ಲಿ ಪೂಜಿಸುವಾಗ ಹವಿಸ್ಸಿನಿಂದ ಹೋಮ ಮಾಡಬೇಕು. ಸೂರ್ಯನಲ್ಲಿ ಪೂಜಿಸುವಾಗ ಮಂಡಲವನ್ನು ರಚಿಸಿ ಅರ್ಚಿಸಬೇಕು. ಭಕ್ತನಾದವನು ಶ್ರದ್ಧೆಯಿಂದ ಅರ್ಪಿಸುವ ನೀರಾದರೂ ನನಗೆ ಪ್ರೀತಿಕರವು. ॥19॥

(ಶ್ಲೋಕ-20)

ಮೂಲಮ್

ಕಿಂ ಪುನರ್ಭಕ್ಷ್ಯಭೋಜ್ಯಾದಿ ಗಂಧಪುಷ್ಪಾಕ್ಷತಾದಿಕಮ್ ।
ಪೂಜಾದ್ರವ್ಯಾಣಿ ಸರ್ವಾಣಿ ಸಂಪಾದ್ಯೈವಂ ಸಮಾರಭೇತ್ ॥

ಅನುವಾದ

ಹೀಗಿರುವಲ್ಲಿ ಗಂಧ, ಪುಷ್ಟ, ಅಕ್ಷತೆ, ಭಕ್ಷ್ಯ, ಭೋಜ್ಯಾದಿಗಳನ್ನು ಅರ್ಪಿಸಿದ್ದಲ್ಲಿ ಹೇಳುವುದೇನಿದೆ? ಹೀಗೆ ಎಲ್ಲಾ ಪೂಜಾಸಾಮಗ್ರಿಗಳನ್ನು ಹೊಂದಿಸಿಕೊಂಡು ಪೂಜಾರಂಭ ಮಾಡಬೇಕು. ॥20॥

(ಶ್ಲೋಕ-21)

ಮೂಲಮ್

ಚೈಲಾಜಿನಕುಶೈಃ ಸಮ್ಯಗಾಸನಂ ಪರಿಕಲ್ಪಯೇತ್ ।
ತತ್ರೋಪವಿಶ್ಯ ದೇವಸ್ಯ ಸಮ್ಮುಖೇ ಶುದ್ಧಮಾನಸಃ ॥

ಅನುವಾದ

(ಈಗ ಹೇಗೆ ಪೂಜೆಮಾಡಬೇಕೆನ್ನುವುದನ್ನು ಹೇಳುತ್ತೇನೆ.) ಮೊದಲಿಗೆ ಕ್ರಮವಾಗಿ ದರ್ಭೆ, ಕೃಷ್ಣಾಜಿನ, ಬಟ್ಟೆ ಇವುಗಳನ್ನು ಹಾಸಿ ಚೆನ್ನಾದ ಆಸನವನ್ನು ಸಿದ್ಧಪಡಿಸಿಕೊಂಡು, ಅದರಲ್ಲಿ ಶುದ್ಧ ಮನಸ್ಕನಾಗಿ ಇಷ್ಟದೇವರ ಎದುರಿಗೆ ಕುಳಿತುಕೊಳ್ಳ ಬೇಕು. ॥21॥

(ಶ್ಲೋಕ-22)

ಮೂಲಮ್

ತತೋ ನ್ಯಾಸಂ ಪ್ರಕುರ್ವೀತ ಮಾತೃಕಾಬಹಿರಾಂತರಮ್ ।
ಕೇಶವಾದಿ ತತಃ ಕುರ್ಯಾತ್ತತ್ತ್ವನ್ಯಾಸಂ ತತಃ ಪರಮ್ ॥

(ಶ್ಲೋಕ-23)

ಮೂಲಮ್

ಮನ್ಮೂರ್ತಿಪಂಜರನ್ಯಾಸಂ ಮಂತ್ರನ್ಯಾಸಂ ತತೋ ನ್ಯಸೇತ್ ।
ಪ್ರತಿಮಾದಾವಪಿ ತಥಾ ಕುರ್ಯಾನ್ನಿತ್ಯಮತಂದ್ರಿತಃ ॥

ಅನುವಾದ

ಅನಂತರ ಬಹಿರ್ಮಾತೃಕಾ ಮತ್ತು ಅಂತರ್ಮಾತೃಕಾ ನ್ಯಾಸವನ್ನು ಮಾಡಿ ಕೇಶವಾದಿನಾಮಗಳಿಂದ ತತ್ತ್ವನ್ಯಾಸವನ್ನು ಮಾಡಿಕೊಳ್ಳಬೇಕು. ಅನಂತರ ವಿಷ್ಣುಪಂಜರ ರೀತಿಯಿಂದ ಮೂರ್ತಿನ್ಯಾಸವನ್ನು, ಮಂತ್ರನ್ಯಾಸವನ್ನು ಮಾಡಿಕೊಳ್ಳಬೇಕು. ನನ್ನ ಪ್ರತಿಮಾದಿಗಳಲ್ಲಿಯೂ ಬೇಸರವಿಲ್ಲದೆ ನ್ಯಾಸ ಮಾಡಬೇಕು. ॥22-23॥

(ಶ್ಲೋಕ-24)

ಮೂಲಮ್

ಕಲಶಂ ಸ್ವಪುರೋ ವಾಮೇ ಕ್ಷಿಪೇತ್ಪುಷ್ಪಾದಿ ದಕ್ಷಿಣೇ ।
ಅರ್ಘ್ಯಪಾದ್ಯಪ್ರದಾನಾರ್ಥಂ ಮಧುಪರ್ಕಾರ್ಥಮೇವ ಚ ॥

(ಶ್ಲೋಕ-25)

ಮೂಲಮ್

ತಥೈವಾಚಮನಾರ್ಥಂ ತು ನ್ಯಸೇತ್ಪಾತ್ರಚತುಷ್ಟಯಮ್ ।
ಹೃತ್ಪದ್ಮೇ ಭಾನುವಿಮಲೇ ಮತ್ಕಲಾಂ ಜೀವಸಂಜ್ಞಿತಾಮ್ ॥

(ಶ್ಲೋಕ-26)

ಮೂಲಮ್

ಧ್ಯಾಯೇತ್ಸ್ವದೇಹಮಖಿಲಂ ತಯಾ ವ್ಯಾಪ್ತಮರಿಂದಮ ।
ತಾಮೇವಾವಾಹಯೇನ್ನಿತ್ಯಂ ಪ್ರತಿಮಾದಿಷು ಮತ್ಕಲಾಮ್ ॥

ಅನುವಾದ

ತನ್ನ ಮುಂಭಾಗದಲ್ಲಿ ಎಡಕ್ಕೆ ಕಲಶವನ್ನು ಸ್ಥಾಪಿಸಬೇಕು. ಬಲಕ್ಕೆ ಹೂವು ಮುಂತಾದುಗಳನ್ನು ಹಾಗೂ ಅರ್ಘ್ಯ, ಪಾದ್ಯ, ಮಧುಪರ್ಕ, ಆಚಮನಾದ್ಯುಪಚಾರಗಳಿಗೆ ಬೇರೆ-ಬೇರೆ ನಾಲ್ಕು ಪಾತ್ರೆಗಳನ್ನು ಇರಿಸಿಕೊಳ್ಳ ಬೇಕು. ಅನಂತರ ಸೂರ್ಯನಂತೆ ಸ್ವಚ್ಛವಾದ ಹೃದಯಕಮಲದಲ್ಲಿ ಜೀವನೆಂಬ ಹೆಸರಿನ ನನ್ನ ಕಲೆಯನ್ನು ಧ್ಯಾನಿಸಿ ಆ ಚೈತನ್ಯದಿಂದ ತನ್ನ ದೇಹವೆಲ್ಲವೂ ವ್ಯಾಪ್ತವಾಗಿದೆ ಎಂದು ಆ ಕಲೆಯನ್ನೇ ಪ್ರತಿಮಾದಿಗಳಲ್ಲಿಯೂ ಆವಾಹಿಸಬೇಕು. ॥24-26॥

(ಶ್ಲೋಕ-27)

ಮೂಲಮ್

ಪಾದ್ಯಾರ್ಘ್ಯಾಚಮನೀಯಾದ್ಯೈಃ ಸ್ನಾನವಸವಿಭೂಷಣೈಃ ।
ಯಾವಚ್ಛಕ್ಯೋಪಚಾರೈರ್ವಾ ತ್ವರ್ಚಯೇನ್ಮಾಮಮಾಯಯಾ ॥

ಅನುವಾದ

ಮುಂದುವರೆದು ಪಾದ್ಯ, ಅರ್ಘ್ಯ, ಆಚಮನೀಯ, ಸ್ನಾನ, ವಸ್ತ್ರ, ಒಡವೆಗಳು ಮುಂತಾದವು ಸಾಧ್ಯವಾದಷ್ಟು ಉಪಚಾರ ಗಳಿಂದ ವಂಚನೆಯಿಲ್ಲದೆ ನನ್ನನ್ನು ಪೂಜಿಸಬೇಕು. ॥27॥

(ಶ್ಲೋಕ-28)

ಮೂಲಮ್

ವಿಭವೇ ಸತಿ ಕರ್ಪೂರಕುಂಕುಮಾಗರುಚಂದನೈಃ ।
ಅರ್ಚಯೇನ್ಮಂತ್ರವನ್ನಿತ್ಯಂ ಸುಗಂಧ ಕುಸುಮೈಃ ಶುಭೈಃ ॥

ಅನುವಾದ

ಒಂದು ವೇಳೆ ಸಂಪತ್ತು ಇದ್ದರೆ ಪ್ರತಿದಿನ ಕುಂಕುಮ (ಕೇಸರಿ), ಅಗರು, ಕರ್ಪೂರ, ಚಂದನ ಇತ್ಯಾದಿ ಸುಗಂಧ ದ್ರವ್ಯಗಳಿಂದಲೂ ಹಾಗೂ ಸುವಾಸನೆಯುಳ್ಳ ಹೂವುಗಳಿಂದ ಮಂತ್ರೋಚ್ಚಾರಣೆ ಮಾಡುತ್ತಾ ನನ್ನ ಪೂಜೆ ಮಾಡಬೇಕು. ॥28॥

(ಶ್ಲೋಕ-29)

ಮೂಲಮ್

ದಶಾವರಣಪೂಜಾಂ ವೈ ಹ್ಯಾಗಮೋಕ್ತಾಂ ಪ್ರಕಾರಯೇತ್ ।
ನೀರಾಜನೈರ್ಧೂಪದೀಪೈರ್ನೈವೇದ್ಯೈರ್ಬಹುವಿಸ್ತರೈಃ ॥

(ಶ್ಲೋಕ-30)

ಮೂಲಮ್

ಶ್ರದ್ಧಯೋಪಹರೇನ್ನಿತ್ಯಂ ಶ್ರದ್ಧಾಭುಗಹಮೀಶ್ವರಃ ।
ಹೋಮಂ ಕುರ್ಯಾತ್ಪ್ರಯತ್ನೇನ ವಿಧಿನಾ ಮಂತ್ರಕೋವಿದಃ ॥

ಅನುವಾದ

ಆಗಮೋಕ್ತ ದಶಾವರಣ ಪೂಜೆಯನ್ನು ಮಾಡಿ, ಧೂಪ, ದೀಪ, ನೈವೇದ್ಯ, ಮಂಗಳಾರತಿ ಮುಂತಾದ ವಿಸ್ತಾರವಾದ ಅಂಗಗಳಿಂದ ಶ್ರದ್ಧೆಯಿಂದ ಉಪಚಾರಾದಿಗಳನ್ನು ಸಮರ್ಪಿಸಬೇಕು. ಈಶ್ವರನಾದ ನಾನು ಶ್ರದ್ಧೆಯನ್ನೇ ಸ್ವೀಕರಿಸುವವನು. ಮಂತ್ರ-ವಿಧಿಗಳನ್ನು ತಿಳಿದ ಸಾಧಕನು ಪ್ರಯತ್ನಪೂರ್ವಕ ಹೋಮ ಮಾಡಬೇಕು. ॥29-30॥

(ಶ್ಲೋಕ-31)

ಮೂಲಮ್

ಅಗಸ್ತ್ಯೇನೋಕ್ತಮಾರ್ಗೇಣ ಕುಂಡೇನಾಗಮವಿತ್ತಮಃ ।
ಜುಹುಯಾನ್ಮೂಲಮಂತ್ರೇಣ ಪುಂಸೂಕ್ತೇನಾಥವಾ ಬುಧಃ ॥

ಅನುವಾದ

ಅಗಸ್ತ್ಯರು ತಿಳಿಸಿರುವಂತೆ ಹೋಮ ಕುಂಡವನ್ನು ನಿರ್ಮಿಸಿ, ಮೂಲಮಂತ್ರದಿಂದಾಗಲಿ, ಪುರುಷಸೂಕ್ತ ಮಂತ್ರಗಳಿಂದಾಗಲಿ ವಿದ್ವಾಂಸನಾದವನು ಹೋಮ ಮಾಡಬೇಕು. ॥31॥

(ಶ್ಲೋಕ-32)

ಮೂಲಮ್

ಅಥವೌಪಾಸನಾಗ್ನೌ ವಾ ಚರುಣಾ ಹವಿಷಾ ತಥಾ ।
ತಪ್ತಜಾಂಬೂನದಪ್ರಖ್ಯಂ ದಿವ್ಯಾಭರಣಭೂಷಿತಮ್ ॥

(ಶ್ಲೋಕ-33)

ಮೂಲಮ್

ಧ್ಯಾಯೇದನಲಮಧ್ಯಸ್ಥಂ ಹೋಮಕಾಲೇ ಸದಾ ಬುಧಃ ।
ಪಾರ್ಷದೇಭ್ಯೋ ಬಲಿಂ ದತ್ತ್ವಾ ಹೋಮಶೇಷಂ ಸಮಾಪಯೇತ್ ॥

ಅನುವಾದ

ಅಥವಾ ತನ್ನ ನಿತ್ಯೌಪಾಸನಾಗ್ನಿಯಲ್ಲಿ ಚರು, ಆಜ್ಯವೇ ಮುಂತಾದ ಹವಿಸ್ಸುಗಳಿಂದ ಹೋಮ ಮಾಡಬಹುದು. ಹಾಗೆ ಹೋಮ ಮಾಡುವಾಗ ಅಗ್ನಿಯ ಮಧ್ಯದಲ್ಲಿ ಪುಟವಿಟ್ಟ ಚಿನ್ನದಂತೆ ಕಾಂತಿಯುಳ್ಳವನಾಗಿರುವ ಹಾಗೂ ದಿವ್ಯ ಆಭರಣಗಳಿಂದ ಅಲಂಕೃತನಾಗಿರುವ ಯಜ್ಞ ಪುರುಷನ ರೂಪದಲ್ಲಿ ನನ್ನ ಸ್ವರೂಪವನ್ನು ಚಿಂತಿಸಬೇಕು. ಅನಂತರ ದಿಕ್ಪಾಲಕರೇ ಆದಿ ಪಾರ್ಷದರಿಗೆ ಬಲಿಪ್ರದಾನ ವನ್ನರ್ಪಿಸಿ ಪೂರ್ಣಾಹುತಿಯೊಂದಿಗೆ ಹೋಮವನ್ನು ಪೂರೈಸಬೇಕು. ॥32-33॥

(ಶ್ಲೋಕ-34)

ಮೂಲಮ್

ತತೋ ಜಪಂ ಪ್ರಕುರ್ವೀತ ಧ್ಯಾಯೇನ್ಮಾಂ ಯತವಾಕ್ ಸ್ಮರನ್ ।
ಮುಖವಾಸಂ ಚ ತಾಂಬೂಲಂ ದತ್ತ್ವಾ ಪ್ರೀತಿಸಮನ್ವಿತಃ ॥

(ಶ್ಲೋಕ-35)

ಮೂಲಮ್

ಮದರ್ಥೇ ನೃತ್ಯಗೀತಾದಿ ಸ್ತುತಿಪಾಠಾದಿ ಕಾರಯೇತ್ ।
ಪ್ರಣಮೇದ್ದಂಡವದ್ಭೂವೌ ಹೃದಯೇ ಮಾಂ ನಿಧಾಯ ಚ ॥

ಅನುವಾದ

ಬಳಿಕ ಮೌನದಿಂದ ನನ್ನನ್ನೇ ಸ್ಮರಿಸುತ್ತಾ ಯಥಾಶಕ್ತಿ ಮಂತ್ರಜಪವನ್ನು ಮಾಡಬೇಕು. ಮತ್ತೆ ಮುಖವಾಸಕ್ಕಾಗಿ ಕರ್ಪೂರ ಯಾಲಕ್ಕಿಯಿಂದೊಡಗೂಡಿದ ತಾಂಬೂಲವನ್ನು ಅರ್ಪಿಸಬೇಕು. ನನಗಾಗಿ ನೃತ್ಯ, ಸಂಗೀತಾದಿ ಸ್ತೋತ್ರಪಾಠಗಳನ್ನು ನಡೆಸಬೇಕು. ಹೃದಯದಲ್ಲಿ ನನ್ನನ್ನು ಚಿಂತಿಸುತ್ತಾ ನೆಲದ ಮೇಲೆ ದೀರ್ಘದಂಡ ನಮಸ್ಕಾರವನ್ನು ಮಾಡಬೇಕು. ॥34-35॥

(ಶ್ಲೋಕ-36)

ಮೂಲಮ್

ಶಿರಸ್ಯಾಧಾಯ ಮದ್ದತ್ತಂ ಪ್ರಸಾದಂ ಭಾವನಾಮಯಮ್ ।
ಪಾಣಿಭ್ಯಾಂ ಮತ್ಪದೇ ಮೂರ್ಧ್ನಿ ಗೃಹೀತ್ವಾ ಭಕ್ತಿಸಂಯುತಃ ॥

(ಶ್ಲೋಕ-37)

ಮೂಲಮ್

ರಕ್ಷ ಮಾಂ ಘೋರಸಂಸಾರಾದಿತ್ಯುಕ್ತ್ವಾ ಪ್ರಣಮೇತ್ಸುಧೀಃ ।
ಉದ್ವಾಸಯೇದ್ಯಥಾಪೂರ್ವಂ ಪ್ರತ್ಯಗ್ ಜ್ಯೋತಿಷಿ ಸಂಸ್ಮರನ್ ॥

ಅನುವಾದ

ಅನಂತರ ನಾನೇ ಕೊಟ್ಟ ಪ್ರಸಾದವೆಂದು ಭಾವಿಸಿ ನನಗರ್ಪಿತವಾದ ಹೂವನ್ನು ತಲೆಯ ಮೇಲಿಟ್ಟುಕೊಂಡು, ಎರಡೂ ಕೈಗಳಿಂದಲೂ ನನ್ನ ಪಾದಗಳನ್ನು ಮುಟ್ಟಿ ಶಿರವನ್ನಿಟ್ಟು ಭಕ್ತಿಯುಕ್ತವಾಗಿ ‘ಹೇ ಸ್ವಾಮಿ! ನನ್ನನ್ನು ಈ ಘೋರವಾದ ಸಂಸಾರದಿಂದ ಕಾಪಾಡು’ ಎಂದು ನಮಸ್ಕರಿಸಬೇಕು ಮತ್ತೆ ಹಿಂದಿನಂತೆಯೇ ಒಳಗಿನ ಆತ್ಮ ಜ್ಯೋತಿಯಲ್ಲಿ ನನ್ನನ್ನು ನೆನೆಯುತ್ತಾ ಒಂದಾಗಿಸಬೇಕು. ॥36-37॥

(ಶ್ಲೋಕ-38)

ಮೂಲಮ್

ಏವಮುಕ್ತಪ್ರಕಾರೇಣ ಪೂಜಯೇದ್ವಿಧಿವದ್ಯದಿ ।
ಇಹಾಮುತ್ರ ಚ ಸಂಸಿದ್ಧಿಂ ಪ್ರಾಪ್ನೋತಿ ಮದನುಗ್ರಹಾತ್ ॥

ಅನುವಾದ

ಈ ರೀತಿಯಾಗಿ ಈವರೆಗೆ ಹೇಳಿದಂತೆ ವಿಧಿವತ್ತಾಗಿ ಪೂಜಿಸುವವನು ನನ್ನ ಅನುಗ್ರಹದಿಂದ ಇಹ-ಪರಗಳಲ್ಲಿ ಸಂಸಿದ್ಧಿಯನ್ನು ಪಡೆಯುವನು. ॥38॥

(ಶ್ಲೋಕ-39)

ಮೂಲಮ್

ಮದ್ಭಕ್ತೋ ಯದಿ ಮಾಮೇವಂ ಪೂಜಾಂ ಚೈವ ದಿನೇ ದಿನೇ ।
ಕರೋತಿ ಮಮ ಸಾರೂಪ್ಯಂ ಪ್ರಾಪ್ನೋತ್ಯೇವ ನ ಸಂಶಯಃ ॥

ಅನುವಾದ

ನನ್ನ ಭಕ್ತನು ಹೀಗೆ ಪ್ರತಿದಿನವೂ ನನ್ನನ್ನು ಪೂಜಿಸಿದರೆ ನನ್ನ ಸಾರೂಪ್ಯ ಮುಕ್ತಿಯನ್ನೇ ಹೊಂದುವನು. ಈ ವಿಷಯದಲ್ಲಿ ಸಂಶಯವೇ ಇಲ್ಲ.’’ ॥39॥

(ಶ್ಲೋಕ-40)

ಮೂಲಮ್

ಇದಂ ರಹಸ್ಯಂ ಪರಮಂ ಚ ಪಾವನಂ
ಮಯೈವ ಸಾಕ್ಷಾತ್ಕಥಿತಂ ಸನಾತನಮ್ ।
ಪಠತ್ಯಜಸ್ರಂ ಯದಿ ವಾ ಶೃಣೋತಿ ಯಃ
ಸ ಸರ್ವಪೂಜಾ ಫಲಭಾಙ್ ನ ಸಂಶಯಃ ॥

ಅನುವಾದ

ಇಂತಹ ರಹಸ್ಯವಾದ, ಪರಮಪವಿತ್ರವಾದ, ಸನಾತನವಾದ ಕ್ರಿಯಾಯೋಗವನ್ನು ನಾನೇ ಸಾಕ್ಷಾತ್ತಾಗಿ ಹೇಳಿರುವೆನು. ಇದನ್ನು ಪುನಃ-ಪುನಃ ಓದುವವನು, ಕೇಳುವವನು ಎಲ್ಲಾ ಪೂಜೆಗಳನ್ನು ಮಾಡಿದ ಫಲಕ್ಕೆ ಪಾತ್ರನಾಗುವನು. ಇದರಲ್ಲಿ ಸಂದೇಹವೇ ಬೇಡ. ॥40॥

(ಶ್ಲೋಕ-41)

ಮೂಲಮ್

ಏವಂ ಪರಾತ್ಮಾ ಶ್ರೀರಾಮಃ ಕ್ರಿಯಾಯೋಗಮನುತ್ತಮಮ್ ।
ಪೃಷ್ಟಃ ಪ್ರಾಹ ಸ್ವಭಕ್ತಾಯ ಶೇಷಾಂಶಾಯ ಮಹಾತ್ಮನೇ ॥

(ಶ್ಲೋಕ-42)

ಮೂಲಮ್

ಪುನಃ ಪ್ರಾಕೃತವದ್ರಾಮೋ ಮಾಯಾಮಾಲಂಬ್ಯ ದುಃಖಿತಃ ।
ಹಾ ಸೀತೇತಿ ವದನ್ನೈವ ನಿದ್ರಾಂ ಲೇಭೇ ಕಥಂಚನ ॥

ಅನುವಾದ

ಈ ಪ್ರಕಾರ ತನ್ನ ಭಕ್ತನಾದ ಆದಿಶೇಷನ ಅಂಶಸಂಭೂತ ಮಹಾತ್ಮಾ ಲಕ್ಷ್ಮಣನು ಕೇಳಿದಾಗ ಪರಮಾತ್ಮನಾದ ಶ್ರೀರಾಮಚಂದ್ರನು ಈ ಕ್ರಿಯಾ ಯೋಗವನ್ನು ಹೇಳಿದನು. ಮತ್ತೆ ಶ್ರೀರಾಮನು ಮಾಯೆ ಯನ್ನಾಶ್ರಯಿಸಿ ಸಾಮಾನ್ಯ ಮನುಷ್ಯನಂತೆ ದುಃಖಿತನಂತಾಗಿ ಹಾ ಸೀತೆ! ಜಾನಕಿ! ಎಂದು ಹೇಳುತ್ತಾ ಇಡೀ ರಾತ್ರಿಯನ್ನು ಕಳೆದನು. ಅವನಿಗೆ ನಿದ್ದೆಯೇ ಬಂದಿಲ್ಲ. ॥41-42॥

(ಶ್ಲೋಕ-43)

ಮೂಲಮ್

ಏತಸ್ಮಿನ್ನಂತರೇ ತತ್ರ ಕಿಷ್ಕಿಂಧಾಯಾಂ ಸುಬುದ್ಧಿಮಾನ್ ।
ಹನೂಮಾನ್ಪ್ರಾಹ ಸುಗ್ರೀವಮೇಕಾಂತೇ ಕಪಿನಾಯಕಮ್ ॥

(ಶ್ಲೋಕ-44)

ಮೂಲಮ್

ಶೃಣು ರಾಜನ್ಪ್ರವಕ್ಷ್ಯಾಮಿ ತವೈವ ಹಿತಮುತ್ತಮಮ್ ।
ರಾಮೇಣ ತೇ ಕೃತಃ ಪೂರ್ವಮುಪಕಾರೋ ಹ್ಯನುತ್ತಮಃ ॥

ಅನುವಾದ

ಈ ನಡುವೆ ಪರಮ ಬುದ್ಧಿವಂತನಾದ ಹನುಮಂತನು ಕಿಷ್ಕಿಂಧೆಯಲ್ಲಿ ಕಪಿರಾಜನಾದ ಸುಗ್ರೀವನಿಗೆ ಏಕಾಂತದಲ್ಲಿ ಹೇಳುತ್ತಾನೆ ‘‘ಎಲೈ ರಾಜನೆ ! ಕೇಳು ! ನಿನಗೆ ಹಿತವಾದ ಮಾತನ್ನು ಹೇಳುವೆನು. ನೋಡು ! ಶ್ರೀರಾಮಚಂದ್ರನು ಶ್ರೇಷ್ಠ ವಾದ ಎಷ್ಟು ದೊಡ್ಡ ಉಪಕಾರ ಮಾಡಿರುವನು. ॥43-44॥

(ಶ್ಲೋಕ-45)

ಮೂಲಮ್

ಕೃತಘ್ನವತ್ತ್ವಯಾ ನೂನಂ ವಿಸ್ಮೃತಃ ಪ್ರತಿಭಾತಿ ಮೇ ।
ತ್ವತ್ಕೃತೇ ನಿಹತೋ ವಾಲೀ ವೀರಃ ತ್ರೈಲೋಕ್ಯಸಮ್ಮತಃ ॥

(ಶ್ಲೋಕ-46)

ಮೂಲಮ್

ರಾಜ್ಯೇ ಪ್ರತಿಷ್ಠಿತೋಽಸಿ ತ್ವಂ ತಾರಾಂ ಪ್ರಾಪ್ತೋಽಸಿ ದುರ್ಲಭಾಮ್ ।
ಸ ರಾಮಃ ಪರ್ವತಸ್ಯಾಗ್ರೇ ಭ್ರಾತ್ರಾ ಸಹ ವಸನ್ ಸುಧೀಃ ॥

(ಶ್ಲೋಕ-47)

ಮೂಲಮ್

ತ್ವದಾಗಮನಮೇಕಾಗ್ರಮೀಕ್ಷತೇ ಕಾರ್ಯಗೌರವಾತ್ ।
ತ್ವಂ ತು ವಾನರಭಾವೇನ ಸ್ತ್ರೀಸಕ್ತೋ ನಾವಬುದ್ಧ್ಯಸೇ ॥

ಅನುವಾದ

ಆದರೆ ನೀನು ಕೃತಘ್ನನಂತೆ ಮರೆತುಬಿಟ್ಟಿರುವೆಯೆಂದು ನನಗನಿಸುತ್ತದೆ. ನಿನಗಾಗಿ ತ್ರೈಲೋಕ್ಯವೀರನಾದ ವಾಲಿಯನ್ನು ಕೊಂದು, ನಿನಗೆ ಕಿಷ್ಕಿಂಧೆಯ ರಾಜ್ಯಾಭಿಷೇಕ ಮಾಡಿಸಿದನು ಹಾಗೂ ದುರ್ಲಭಳಾದ ತಾರೆಯು ದೊರಕಿರುವಳು. ಅಂತಹ ಬುದ್ಧಿಶಾಲಿಯಾದ ಶ್ರೀರಾಮನು ಬೆಟ್ಟದ ತುದಿಯಲ್ಲಿ ಸೊದರನೊಡನೆ ವಾಸಮಾಡಿಕೊಂಡಿರುವನು. ನಿರಂತರ ನಿನ್ನ ಬರುವಿಕೆಯನ್ನೇ ನಿರೀಕ್ಷಿಸುತ್ತಾ ತನ್ನ ಕಾರ್ಯಸಿದ್ಧಿಗಾಗಿ ಕಾಯುತ್ತಿರುವನು. ಆದರೆ ನೀನು ವಾನರ ಸ್ವಭಾವಕ್ಕನುಸಾರ ಸ್ತ್ರೀಲಂಪಟನಾಗಿ ಎಲ್ಲವನ್ನು ಮರೆತಿರುವೆ. ॥45-47॥

(ಶ್ಲೋಕ-48)

ಮೂಲಮ್

ಕರೋಮೀತಿ ಪ್ರತಿಜ್ಞಾಯ ಸೀತಾಯಾಃ ಪರಿಮಾರ್ಗಣಮ್ ।
ನ ಕರೋಷಿ ಕೃತಘ್ನಸ್ತ್ವಂ ಹನ್ಯಸೇ ವಾಲಿವದ್ ದ್ರುತಮ್ ॥

ಅನುವಾದ

‘ಸೀತೆಯನ್ನು ಹುಡುಕುವ ಕೆಲಸವನ್ನು ನಾನು ಮಾಡುವೆ’ ಎಂದು ನೀನು ಪ್ರತಿಜ್ಞೆಯನ್ನು ಮಾಡಿಯೂ ಇಷ್ಟರವರೆಗೆ ಏನೂ ಮಾಡಲಿಲ್ಲ. ನೀನು ಉಪಕಾರ ಸ್ಮರಣೆಯಿಲ್ಲದವನು. ಬೇಗನೇ ನೀನೂ ವಾಲಿಯಂತೆ ಕಾಲವಶನಾಗುವೆ ಎಂದು ನನಗನಿಸುತ್ತದೆ. ॥48॥

(ಶ್ಲೋಕ-49)

ಮೂಲಮ್

ಹನೂಮದ್ವಚನಂ ಶ್ರುತ್ವಾ ಸುಗ್ರೀವೋ ಭಯವಿಹ್ವಲಃ ।
ಪ್ರತ್ಯುವಾಚ ಹನೂಮಂತಂ ಸತ್ಯಮೇವ ತ್ವಯೋದಿತಮ್ ॥

ಅನುವಾದ

ಹನುಮಂತನ ಮಾತನ್ನು ಕೇಳಿ ಭಯದಿಂದ ವಿಹ್ವಲನಾದ ಸುಗ್ರೀವನು ಹನುಮಂತನಲ್ಲಿ ಹೇಳುತ್ತಾನೆ — ‘‘ಹೇ ಮಾರುತಿ! ನೀನು ಹೇಳಿರುವುದು ನಿಜವಾಗಿದೆ.’’ ॥49॥

(ಶ್ಲೋಕ-50)

ಮೂಲಮ್

ಶೀಘ್ರಂ ಕುರು ಮಮಾಜ್ಞಾಂ ತ್ವಂ ವಾನರಾಣಾಂ ತರಸ್ವಿನಾಮ್ ।
ಸಹಸ್ರಾಣಿ ದಶೆದಾನೀಂ ಪ್ರೇಷಯಾಶು ದಿಶೋ ದಶ ॥

ಅನುವಾದ

ಈಗ ನನ್ನ ಆಜ್ಞೆಯಂತೆ ನೀನು ವೇಗಶಾಲಿಗಳಾದ ಹತ್ತು ಸಾವಿರ ವಾನರ ವೀರರನ್ನು ಹತ್ತು ದಿಕ್ಕುಗಳಿಗೂ ಕಳಿಸು. ॥50॥

(ಶ್ಲೋಕ-51)

ಮೂಲಮ್

ಸಪ್ತದ್ವೀಪಗತಾನ್ ಸರ್ವಾನ್ ವಾನರಾನಾನಯಂತು ತೇ ।
ಪಕ್ಷಮಧ್ಯೇ ಸಮಾಯಾಂತು ಸರ್ವೇ ವಾನರಪುಂಗವಾಃ ॥

ಅನುವಾದ

ಅವರುಗಳು ಏಳೂ ದ್ವೀಪಗಳಲ್ಲಿರುವ ಎಲ್ಲಾ ಕಪಿಗಳನ್ನು ಕರೆತರಲಿ. ಎಲ್ಲಾ ವಾನರ ಶ್ರೇಷ್ಠರು ಒಂದು ಪಕ್ಷ (ಹದಿನೈದು ದಿನ)ದೊಳಗೆ ಇಲ್ಲಿ ಬಂದು ಸೇರಲಿ. ॥51॥

(ಶ್ಲೋಕ-52)

ಮೂಲಮ್

ಯೇ ಪಕ್ಷಮತಿವರ್ತಂತೇ ತೇ ವಧ್ಯಾ ಮೇ ನ ಸಂಶಯಃ ।
ಇತ್ಯಾಜ್ಞಾಪ್ಯ ಹನೂಮಂತಂ ಸುಗ್ರೀವೋ ಗೃಹಮಾವಿಶತ್ ॥

ಅನುವಾದ

ಈ ಅವಧಿಯನ್ನು ಮೀರುವವರು ನನ್ನ ಕೈಯಿಂದ ಹತರಾಗುವರು. ಇದರಲ್ಲಿ ಸಂದೇಹವೇ ಬೇಡ. ಹೀಗೆ ಹನುಮಂತನಿಗೆ ಆಜ್ಞಾಪಿಸಿ ಸುಗ್ರೀವನು ಅಂತಃಪುರವನ್ನು ಹೊಕ್ಕನು. ॥52॥

(ಶ್ಲೋಕ-53)

ಮೂಲಮ್

ಸುಗ್ರೀವಾಜ್ಞಾಂ ಪುರಸ್ಕೃತ್ಯ ಹನೂಮಾನ್ಮಂತ್ರಿಸತ್ತಮಃ ।
ತತ್ ಕ್ಷಣೇ ಪ್ರೇಷಯಾಮಾಸ ಹರೀಂದಶ ದಿಶಃ ಸುಧೀಃ ॥

ಅನುವಾದ

ಸುಗ್ರೀವನ ಅಪ್ಪಣೆಯನ್ನು ಮುಂದಿಟ್ಟುಕೊಂಡು ಮಂತ್ರಿಶೇಷ್ಠನಾದ, ಬುದ್ಧಿಶಾಲಿಯಾದ ಹನುಮಂತನು ಕೂಡಲೇ ಹತ್ತು ದಿಕ್ಕುಗಳಿಗೆ ವಾನರ ವೀರರನ್ನು ಕಳಿಸಿದನು. ॥53॥

(ಶ್ಲೋಕ-54)

ಮೂಲಮ್

ಅಗಣಿತಗುಣಸತ್ತ್ವಾನ್ವಾಯುವೇಗಪ್ರಚಾರಾನ್
ವನಚರಗಣಮುಖ್ಯಾನ್ ಪರ್ವತಾಕಾರರೂಪಾನ್ ।
ಪವನಹಿತಕುಮಾರಃ ಪ್ರೇಷಯಾಮಾಸ ದೂತಾನ್
ಅತಿರಭಸತರಾತ್ಮಾ ದಾನಮಾನಾದಿತೃಪ್ತಾನ್ ॥

ಅನುವಾದ

ಅಪರಿಮಿತವಾದ ಶಕ್ತಿಸಂಪನ್ನರೂ, ಗುಣಾಢ್ಯರೂ, ವಾಯುವಿನಂತೆ ವೇಗವುಳ್ಳವರೂ, ಪರ್ವತದಂತೆ ಭಾರೀ ಶರೀರವುಳ್ಳವರೂ ಆದ ವಾನರ ವೀರರನ್ನು ದಾನ-ಮಾನಗಳಿಂದ ತೃಪ್ತಿಪಡಿಸಿ, ಕಾಡಿನಲ್ಲಿ ಸಂಚರಿಸುವ ಗುಣವುಳ್ಳ ಕಪಿಗಳನ್ನು ರಾಮಕಾರ್ಯ ಧುರಂಧರನಾದ ಪವನನಂದನನು ಎಲ್ಲ ಕಡೆಗೆ ಕಳಿಸಿಕೊಟ್ಟನು. ॥54॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.