೦೩

[ಮೂರನೆಯ ಸರ್ಗ]

ಭಾಗಸೂಚನಾ

ತಾರೆಯ ವಿಲಾಪ, ಶ್ರೀರಾಮಚಂದ್ರನು ಅವಳನ್ನು ಸಮಾಧಾನ ಪಡಿಸುವುದು, ಸುಗ್ರೀವ ಪಟ್ಟಾಭಿಷೇಕ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ನಿಹತೇ ವಾಲಿನಿ ರಣೇ ರಾಮೇಣ ಪರಮಾತ್ಮನಾ ।
ದುದ್ರುವುರ್ವಾನರಾಃ ಸರ್ವೇ ಕಿಷ್ಕಿಂಧಾಂ ಭಯವಿಹ್ವಲಾಃ ॥

(ಶ್ಲೋಕ-2)

ಮೂಲಮ್

ತಾರಾಮೂಚುರ್ಮಹಾಭಾಗೇ ಹತೋ ವಾಲೀ ರಣಾಜಿರೇ ।
ಅಂಗದಂ ಪರಿರಕ್ಷಾದ್ಯ ಮಂತ್ರಿಣಃ ಪರಿನೋದಯ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ಪರಮಾತ್ಮನಾದ ಶ್ರೀರಾಮನಿಂದ ಯುದ್ಧದಲ್ಲಿ ವಾಲಿಯು ಹತನಾದ ಮೇಲೆ ಭಯಚಕಿತರಾದ ಕಪಿಗಳೆಲ್ಲರೂ ಕಿಷ್ಕಿಂಧೆಗೆ ಓಡಿಹೋದರು. ತಾರೆಯನ್ನು ಕುರಿತು — ‘‘ಹೇ ಮಹಾಭಾಗಳೆ! ಯುದ್ಧರಂಗದಲ್ಲಿ ವಾಲಿಯು ಹತನಾದನು. ಈಗ ನೀವು ಅಂಗದನನ್ನು ಕಾಪಾಡಿಕೊಳ್ಳಿ. ಮಂತ್ರಿಗಳನ್ನು ಎಚ್ಚರಿಸಿರಿ. ॥1-2॥

(ಶ್ಲೋಕ-3)

ಮೂಲಮ್

ಚತುರ್ದ್ವಾರಕಪಾಟಾದೀನ್ ಬದ್ ಧ್ವಾ ರಕ್ಷಾಮಹೇ ಪುರೀಮ್ ।
ವಾನರಾಣಾಂ ತು ರಾಜಾನಮಂಗದಂ ಕುರು ಭಾಮಿನಿ ॥

ಅನುವಾದ

ಹೇ ನಾರೀಮಣಿ! ನಾವು ಈಗ ನಾಲ್ಕು ಬಾಗಿಲುಗಳ ಕದಗಳನ್ನು ಮುಚ್ಚಿ ಈ ನಗರಿಯನ್ನು ಕಾಪಾಡುವೆವು. ಅಂಗದನನ್ನು ವಾನರರ ರಾಜನನ್ನಾಗಿಸಿರಿ’’ ಎಂದು ಹೇಳಿದರು. ॥3॥

(ಶ್ಲೋಕ-4)

ಮೂಲಮ್

ನಿಹತಂ ವಾಲಿನಂ ಶ್ರುತ್ವಾ ತಾರಾ ಶೋಕವಿಮೂರ್ಚ್ಛಿತಾ ।
ಅತಾಡಯತ್ಸ್ವಪಾಣಿಭ್ಯಾಂ ಶಿರೋ ವಕ್ಷಶ್ಚ ಭೂರಿಶಃ ॥

(ಶ್ಲೋಕ-5)

ಮೂಲಮ್

ಕಿಮಂಗದೇನ ರಾಜ್ಯೇನ ನಗರೇಣ ಧನೇನ ವಾ ।
ಇದಾನೀಮೇವ ನಿಧನಂ ಯಾಸ್ಯಾಮಿ ಪತಿನಾ ಸಹ ॥

ಅನುವಾದ

ವಾಲಿಯು ಸತ್ತಿರುವುದನ್ನು ಕೇಳಿ ತಾರೆಯು ದುಃಖದಿಂದ ಮೂರ್ಛಿತಳಾದಳು ಹಾಗೂ ತನ್ನ ಎರಡೂ ಕೈಗಳಿಂದ ತಲೆಯನ್ನು ಎದೆಯನ್ನು ಪುನಃ ಪುನಃ ಚಚ್ಚಿಕೊಂಡಳು. ಅಯ್ಯೋ! ಅಂಗದನಿಂದಾಗಲಿ, ರಾಜ್ಯ, ಹಣದಿಂದಾಗಲಿ ನನಗೆ ಆಗಬೇಕಾದ್ದೇನು? ನಾನು ಈಗಲೇ ಗಂಡನೊಂದಿಗೆ ಸಾಯುವೆನು. ॥4-5॥

(ಶ್ಲೋಕ-6)

ಮೂಲಮ್

ಇತ್ಯುಕ್ತ್ವಾ ತ್ವರಿತಾ ತತ್ರ ರುದತೀ ಮುಕ್ತಮೂರ್ಧಜಾ ।
ಯಯೌ ತಾರಾತಿಶೋಕಾರ್ತಾ ಯತ್ರ ಭರ್ತೃಕಲೇವರಮ್ ॥

(ಶ್ಲೋಕ-7)

ಮೂಲಮ್

ಪತಿತಂ ವಾಲಿನಂ ದೃಷ್ಟ್ವಾ ರಕ್ತೈಃ ಪಾಂಸುಭಿರಾವೃತಮ್ ।
ರುದತೀ ನಾಥನಾಥೇತಿ ಪತಿತಾ ತಸ್ಯ ಪಾದಯೋಃ ॥

ಅನುವಾದ

ಹೀಗೆಂದು ಹೇಳುತ್ತಾ ಅಳುತ್ತಾ ತಲೆಗೆದರಿದವಳಾಗಿ ಅತಿಯಾದ ಸಂಕಟದಿಂದ ತನ್ನ ಗಂಡನ ಶರೀರ ಬಿದ್ದಲ್ಲಿಗೆ ಹೋದಳು. ಅಲ್ಲಿ ರಕ್ತದಿಂದಲೂ ಧೂಳಿನಿಂದಲೂ ಮೆತ್ತಿಕೊಂಡು ಬಿದ್ದಿರುವ ವಾಲಿಯನ್ನು ಕಂಡು ನಾಥಾ ! ನಾಥಾ ! ಎಂದು ಅಳುತ್ತಾ-ಕೂಗುತ್ತಾ ಅವನ ಕಾಲಿಗೆ ಬಿದ್ದಳು. ॥6-7॥

(ಶ್ಲೋಕ-8)

ಮೂಲಮ್

ಕರುಣಂ ವಿಲಪಂತೀ ಸಾ ದದರ್ಶ ರಘುನಂದನಮ್ ।
ರಾಮ ಮಾಂ ಜಹಿ ಬಾಣೇನ ಯೇನ ವಾಲೀ ಹತಸ್ತ್ವಯಾ ॥

(ಶ್ಲೋಕ-9)

ಮೂಲಮ್

ಗಚ್ಛಾಮಿ ಪತಿಸಾಲೋಕ್ಯಂ ಪತಿರ್ಮಾಮಭಿಕಾಂಕ್ಷತೇ ।
ಸ್ವರ್ಗೇಽಪಿ ನ ಸುಖಂ ತಸ್ಯ ಮಾಂ ವಿನಾ ರಘುನಂದನ ॥

ಅನುವಾದ

ಈ ಪ್ರಕಾರ ಕರುಣೆಯಿಂದ ಅಳುತ್ತಾ ಆಕೆಯು ಅಲ್ಲೇ ನಿಂತಿರುವ ಶ್ರೀರಾಮನನ್ನು ನೋಡಿ ಹೇಳುತ್ತಾಳೆ — ‘‘ರಾಮಾ! ಯಾವ ಬಾಣದಿಂದ ನೀನು ವಾಲಿಯನ್ನು ಕೊಂದಿರುವೆಯೋ, ಅದೇ ಬಾಣದಿಂದ ನನ್ನನ್ನು ಕೊಂದುಬಿಡು. ಅದರಿಂದ ನಾನೂ ಬೇಗನೇ ಪತಿಲೋಕಕ್ಕೆ ಹೋಗುವೆನು. ಏಕೆಂದರೆ ಅವರು ನನ್ನ ದಾರಿ ನೋಡುತ್ತಿರಬಹುದು. ಹೇ ರಘುನಂದನಾ ನನ್ನನ್ನು ಬಿಟ್ಟು ಅವರಿಗೆ ಸ್ವರ್ಗದಲ್ಲಿಯೂ ಸುಖಸಿಗಲಾರದು. ॥8-9॥

(ಶ್ಲೋಕ-10)

ಮೂಲಮ್

ಪತ್ನೀವಿಯೋಗಜಂ ದುಃಖಮನುಭೂತಂ ತ್ವಯಾನಘ ।
ವಾಲಿನೇ ಮಾಂ ಪ್ರಯಚ್ಛಾಶು ಪತ್ನೀದಾನ ಫಲಂ ಭವೇತ್ ॥

ಅನುವಾದ

ಎಲೈ ಪಾಪರಹಿತನೆ! ಹೆಂಡತಿಯ ಅಗಲುವಿಕೆಯ ದುಃಖವನ್ನು ನೀನು ಅನುಭವಿಸುತ್ತಿರುವೆ. ಅದರ ತೀವ್ರತೆಯ ಅರಿವು ನಿನಗಿರಬಹುದು. ಆದ್ದರಿಂದ ಬಹುಬೇಗನೇ ನನ್ನನ್ನು ವಾಲಿಯ ಬಳಿಗೆ ಕಳಿಸಿಕೊಡು. ಆಗ ನಿನಗೆ ಪತ್ನೀದಾನದ ಫಲ ಸಿಗಬಹುದು. ॥10॥

(ಶ್ಲೋಕ-11)

ಮೂಲಮ್

ಸುಗ್ರೀವ ತ್ವಂ ಸುಖಂ ರಾಜ್ಯಂ ದಾಪಿತಂ ವಾಲಿಘಾತಿನಾ ।
ರಾಮೇಣ ರುಮಯಾ ಸಾರ್ಧಂ ಭುಂಕ್ಷ್ವ ಸಾಪತ್ನವರ್ಜಿತಮ್ ॥

ಅನುವಾದ

ಎಲೈ ಸುಗ್ರೀವನೆ! ವಾಲಿಸಂಹಾರಕನಾದ ರಾಮನಿಂದ ನಿನಗೆ ರಾಜ್ಯವು ದೊರಕಿದೆ. ನಿಷ್ಕಂಟಕವಾದ ರಾಜ್ಯವನ್ನು ರುಮೆಯಿಂದೊಡಗೂಡಿ ಸುಖದಿಂದ ಅನುಭವಿಸು.’’ ॥11॥

(ಶ್ಲೋಕ-12)

ಮೂಲಮ್

ಇತ್ಯೇವಂ ವಿಲಪಂತೀಂ ತಾಂ ತಾರಾಂ ರಾಮೋ ಮಹಾಮನಾಃ ।
ಸಾಂತ್ವಯಾಮಾಸ ದಯಯಾ ತತ್ತ್ವಜ್ಞಾನೋಪದೇಶತಃ ॥

ಅನುವಾದ

ಹೀಗೆಂದು ವಿಲಾಪಿಸುತ್ತಿರುವ ತಾರೆಯನ್ನು ಮಹಾತ್ಮನಾದ ಶ್ರೀರಾಮನು ಕರುಣೆಯಿಂದ ತತ್ತ್ವೋಪದೇಶವನ್ನಿತ್ತು ಸಮಾಧಾನ ಪಡಿಸಿದನು. ॥12॥

(ಶ್ಲೋಕ-13)

ಮೂಲಮ್

ಕಿಂ ಭೀರು ಶೋಚಸಿ ವ್ಯರ್ಥಂ ಶೋಕಸ್ಯಾವಿಷಯಂ ಪತಿಮ್ ।
ಪತಿಸ್ತವಾಯಂ ದೇಹೋ ವಾ ಜೀವೋ ವಾ ವದ ತತ್ತ್ವತಃ ॥

(ಶ್ಲೋಕ-14)

ಮೂಲಮ್

ಪಂಚಾತ್ಮಕೋ ಜಡೋ ದೇಹಸ್ತ್ವಙ್ಮಾಂಸರುಧಿರಾಸ್ಥಿಮಾನ್ ।
ಕಾಲಕರ್ಮಗುಣೋತ್ಪನ್ನಃ ಸೋಽಪ್ಯಾಸ್ತೇಽದ್ಯಾಪಿ ತೇ ಪುರಃ ॥

ಅನುವಾದ

ರಾಮನೆಂದನು — ‘‘ಎಲೈ ಅಬಲೆಯೆ! ನಿನ್ನ ಪತಿಯು ಶೋಕಮಾಡಲು ಯೋಗ್ಯನಲ್ಲ, ನೀನು ಅವನ ಕುರಿತು ವ್ಯರ್ಥವಾಗಿ ಏಕೆ ಶೋಕಿಸುತ್ತಿರುವೆ? ನಿನ್ನ ಗಂಡನೆಂಬುವನು ದೇಹವೋ ಅಥವಾ ಜೀವನೋ ವಿಚಾರ ಮಾಡಿಹೇಳು. ಪಂಚಭೂತಾತ್ಮಕವಾದ, ಚರ್ಮ, ಮಾಂಸ, ರಕ್ತ, ಎಲುಬುಗಳಿಂದ ಕೂಡಿದ, ಕಾಲ-ಕರ್ಮ-ಗುಣಗಳಿಂದ ಹುಟ್ಟಿರುವ ಜಡವಾದ ದೇಹವೇ ನಿನ್ನ ಪತಿಯಾಗಿದ್ದರೆ ಅದು ಈಗಲೂ ನಿನ್ನ ಎದುರಿಗೇ ಇದೆ. ॥13-14॥

(ಶ್ಲೋಕ-15)

ಮೂಲಮ್

ಮನ್ಯಸೇ ಜೀವಮಾತ್ಮಾನಂ ಜೀವಸ್ತರ್ಹಿ ನಿರಾಮಯಃ ।
ನ ಜಾಯತೇ ನ ಮ್ರಿಯತೇ ನ ತಿಷ್ಠತಿ ನ ಗಚ್ಛತಿ ॥

(ಶ್ಲೋಕ-16)

ಮೂಲಮ್

ನ ಸ್ತ್ರೀ ಪುಮಾನ್ವಾಷಂಢೋ ವಾ ಜೀವಃ ಸರ್ವಗತೋಽವ್ಯಯಃ ।
ಏಕ ಏವಾದ್ವಿತೀಯೋಽಯಮಾಕಾಶವದಲೇಪಕಃ ।
ನಿತ್ಯೋ ಜ್ಞಾನಮಯಃ ಶುದ್ಧಃ ಸ ಕಥಂ ಶೋಕಮರ್ಹತಿ ॥

ಅನುವಾದ

ಹಾಗಿಲ್ಲದೆ ಜೀವನೇ ನಿನ್ನ ಪತಿಯಾಗಿದ್ದರೆ, ಜೀವನು ದೋಷ ರಹಿತನು; ಹುಟ್ಟು-ಸಾವುಗಳಿಲ್ಲದವನು; ನಿಂತಿರುವುದಿಲ್ಲ, ಓಡಾಡುವುದಿಲ್ಲ; ಅವನು ಗಂಡಸಲ್ಲ, ಹೆಂಗಸಲ್ಲ, ನಪುಂಸಕನಲ್ಲ, ಅವನು ಸರ್ವಗತನೂ, ಅವ್ಯಯನೂ ಆಗಿರುವನು ಮತ್ತು ಏಕನೂ, ಅದ್ವಿತೀಯನೂ, ಆಕಾಶದಂತೆ ನಿರ್ಲಿಪ್ತನೂ ಆಗಿರುವನು. ನಿತ್ಯನೂ, ಜ್ಞಾನಸ್ವರೂಪನೂ, ಶುದ್ಧನೂ ಆದ ಅವನ ಕುರಿತು ಶೋಕಿಸುವುದಾದರೂ ಏಕೆ?’’ ॥15-16॥

(ಶ್ಲೋಕ-17)

ಮೂಲಮ್ (ವಾಚನಮ್)

ತಾರೋವಾಚ

ಮೂಲಮ್

ದೇಹೋಽಚಿತ್ಕಾಷ್ಠವದ್ರಾಮ ಜೀವೋ ನಿತ್ಯಶ್ಚಿದಾತ್ಮಕಃ ।
ಸುಖದುಃಖಾದಿಸಂಬಂಧಃ ಕಸ್ಯ ಸ್ಯಾದ್ರಾಮ ಮೇ ವದ ॥

ಅನುವಾದ

ತಾರೆಯೆಂದಳು — ‘‘ಹೇ ರಾಮಾ! ಶರೀರವು ಕಟ್ಟಿಗೆಯಂತೆ ಜಡವು. ಜೀವನು ಚೇತನ ಸ್ವರೂಪನಾದ ನಿತ್ಯನು. ಹೀಗಿರುವಲ್ಲಿ ಸುಖದುಃಖಾದಿಗಳ ಸಂಬಂಧವು ಯಾರಿಗಾಗುತ್ತದೆ? ಎಂಬುದನ್ನು ನನಗೆ ಹೇಳು.’’ ॥17॥

(ಶ್ಲೋಕ-18)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಅಹಂಕಾರಾದಿಸಂಬಂಧೋ ಯಾವದ್ದೇಹೇಂದ್ರಿಯೈಃ ಸಹ ।
ಸಂಸಾರಸ್ತಾವದೇವ ಸ್ಯಾದಾತ್ಮನಸ್ತ್ವವಿವೇಕಿನಃ ॥

ಅನುವಾದ

ಶ್ರೀರಾಮನಿಂತೆಂದನು — ‘‘ದೇಹೇಂದ್ರಿಯಗಳ ಜೊತೆಗೆ ‘ನಾನು ನನ್ನದು’ ಎಂಬ ಅಹಂಕಾರದ ಸಂಬಂಧವಿರುವ ತನಕ ಆತ್ಮ-ಅನಾತ್ಮದ ವಿವೇಕದಿಂದ ರಹಿತ ಜೀವಿಗೆ ಸುಖ-ದುಃಖಾದಿ ಭೋಗರೂಪೀ ಸಂಸಾರದೊಂದಿಗೆ ಸಂಬಂಧವಿರುತ್ತದೆ. ॥18॥

(ಶ್ಲೋಕ-19)

ಮೂಲಮ್

ಮಿಥ್ಯಾರೋಪಿತಸಂಸಾರೋ ನ ಸ್ವಯಂ ವಿನಿವರ್ತತೇ ।
ವಿಷಯಾಂಧ್ಯಾಯಮಾನಸ್ಯ ಸ್ವಪ್ನೇ ಮಿಥ್ಯಾಗಮೋ ಯಥಾ ॥

ಅನುವಾದ

ಈ ಸಂಸಾರವು ಆತ್ಮನಲ್ಲಿ ಮಿಥ್ಯೆಯಾಗಿಯೇ ಆರೋಪಿತವಾಗಿದೆ. ವಿಷಯಗಳನ್ನೇ ಚಿಂತಿಸುತ್ತಿರುವವನಿಗೆ ಕನಸಿನಲ್ಲಿ ಅನೇಕ ಪದಾರ್ಥಗಳು ಪ್ರತ್ಯಕ್ಷವಾಗಿ ಕಂಡಂತೆ (ಹಾಗೂ ಕನಸಿನಲ್ಲಿರುವವರೆಗೆ ಅವು ನಿಜವಾಗಿರುವಂತೆ) ಜ್ಞಾನವಾಗುವವರೆಗೂ ಇವು ಇರುತ್ತವೆ. ತನ್ನಿಂದ ತಾನೇ ನಿವೃತ್ತವಾಗುವುದಿಲ್ಲ. ॥19॥

(ಶ್ಲೋಕ-20)

ಮೂಲಮ್

ಅನಾದ್ಯವಿದ್ಯಾಸಂಬಂಧಾತ್ತತ್ಕಾರ್ಯಾಹಂಕೃತೇಸ್ತಥಾ ।
ಸಂಸಾರೋಽಪಾರ್ಥಕೋಽಪಿ ಸ್ಯಾದ್ರಾಗದ್ವೇಷಾದಿಸಂಕುಲಃ ॥

ಅನುವಾದ

ಅನಾದಿಯಾದ ಅವಿದ್ಯೆಯ ಸಂಬಂಧದಿಂದ ಹಾಗೂ ಅವಿದ್ಯೆಯ ಕಾರ್ಯವಾದ ಅಹಂಕಾರದ ನಿಮಿತ್ತ ರಾಗದ್ವೇಷಾದಿಗಳಿಂದ ಕಲುಷಿತವಾಗಿರುವ ಈ ಸಂಸಾರವು ಮಿಥ್ಯೆಯಾಗಿಯೇ ಇದೆ. ॥20॥

(ಶ್ಲೋಕ-21)

ಮೂಲಮ್

ಮನ ಏವ ಹಿ ಸಂಸಾರೋ ಬಂಧಶ್ಚೈವ ಮನಃ ಶುಭೇ ।
ಆತ್ಮಾ ಮನಃ ಸಮಾನತ್ವಮೇತ್ಯ ತದ್ಗತಬಂಧಭಾಕ್ ॥

ಅನುವಾದ

ಎಲೈ ಶುಭರೂಪಳೆ ! ಮನಸ್ಸೇ ಸಂಸಾರವಾಗಿದೆ, ಬಂಧನವೂ ಮನಸ್ಸೇ ಆಗಿದೆ. ಅನಾತ್ಮ ವಸ್ತುವಾದ ಮನಸ್ಸಿನೊಂದಿಗೆ ಆತ್ಮನು ಹೊಂದಿಕೊಂಡವನಾಗಿರುವಾಗ ಆ ಮನಸ್ಸಿನ ಬಂಧನದಿಂದ ತಾನೂ ಬದ್ಧನಾದಂತೆ ಕಂಡುಬರುವನು. ॥21॥

(ಶ್ಲೋಕ-22)

ಮೂಲಮ್

ಯಥಾ ವಿಶುದ್ಧಃ ಸ್ಫಟಿಕೋಽಲಕ್ತಕಾದಿಸಮೀಪಗಃ ।
ತತ್ತದ್ವರ್ಣಯುಗಾಭಾತಿ ವಸ್ತುತೋ ನಾಸ್ತಿ ರಂಜನಮ್ ॥

(ಶ್ಲೋಕ-23)

ಮೂಲಮ್

ಬುದ್ಧೀಂದ್ರಿಯಾದಿಸಾಮೀಪ್ಯಾದಾತ್ಮನಃ ಸಂಸೃತಿರ್ಬಲಾತ್ ।
ಆತ್ಮಾ ಸ್ವಲಿಂಗಂ ತು ಮನಃ ಪರಿಗೃಹ್ಯ ತದುದ್ಭವಾನ್ ॥

(ಶ್ಲೋಕ-24)

ಮೂಲಮ್

ಕಾಮಾನ್ ಜುಷನ್ ಗುಣೈರ್ಬದ್ಧಃ ಸಂಸಾರೇ ವರ್ತತೇಽವಶಃ ।
ಆದೌ ಮನೋಗುಣಾನ್ ಸೃಷ್ಟ್ವಾ ತತಃ ಕರ್ಮಾಣ್ಯನೇಕಧಾ ॥

(ಶ್ಲೋಕ-25)

ಮೂಲಮ್

ಶುಕ್ಲಲೋಹಿತಕೃಷ್ಣಾನಿ ಗತಯಸ್ತತ್ಸಮಾನತಃ ।
ಏವಂ ಕರ್ಮವಶಾಜ್ಜೀವೋ ಭ್ರಮತ್ಯಾಭೂತಸಂಪ್ಲವಮ್ ॥

ಅನುವಾದ

ಸ್ವಚ್ಛವಾದ ಸ್ಫಟಿಕವು ಅರಗು ಮುಂತಾದ ಪದಾರ್ಥಗಳ ಸಮೀಪದಲ್ಲಿದ್ದಾಗ ಆಯಾ ಬಣ್ಣವನ್ನು ಹೊಂದುವಂತೆ ಕಾಣುತ್ತದೆ; ನಿಜವಾಗಿ ನೋಡಿದರೆ ಅದರಲ್ಲಿ ಕೆಂಪು ಬಣ್ಣ ಇರುವುದಿಲ್ಲ. ಹಾಗೆಯೇ ಬುದ್ಧಿ, ಇಂದ್ರಿಯಗಳೇ ಮುಂತಾದ ಉಪಾಧಿಗಳ ಸಂಬಂಧದಿಂದ ಆತ್ಮ ಬಲವಂತವಾಗಿ ಸಂಸಾರ ಚಕ್ರದಲ್ಲಿ ಸಿಲುಕುತ್ತಾನೆ. ಆತ್ಮನಾದರೋ ತನ್ನ ಉಪಾಧಿಯಾದ ಶರೀರ-ಮನಸ್ಸನ್ನು ಸ್ವೀಕರಿಸಿ ಆ ಮನಸ್ಸಿನಲ್ಲಿ ಹುಟ್ಟುವ ಕಾಮಾದಿಗಳನ್ನು ಅನುಭವಿಸುತ್ತಾ ಸತ್ತ್ವಾದಿಗುಣಗಳಿಂದ ಉಂಟಾದ ವಿಷಯಾದಿಗಳಲ್ಲಿ ಬದ್ಧನಾಗುತ್ತಾನೆ. ಅದರಿಂದ ಸಂಸಾರದಲ್ಲಿ ಪರಾಧೀನನಾಗಿ ಸುತ್ತುತ್ತಿರುತ್ತಾನೆ. ಮೊದಲು ಜೀವನು ರಾಗ-ದ್ವೇಷಾದಿ ಗುಣಗಳನ್ನು ಇಟ್ಟುಕೊಂಡು ಅನಂತರ ಅವುಗಳ ಯೋಗದಿಂದ ನಾನಾ ಪ್ರಕಾರದ ಕರ್ಮಗಳನ್ನು ಮಾಡುತ್ತಾನೆ. ಆ ಕರ್ಮಗಳು ಶುಕ್ಲ (ಜಪ ಧ್ಯಾನಾದಿ), ಲೋಹಿತ (ಹಿಂಸಾಮಯ ಯಜ್ಞ-ಯಾಗಾದಿ), ಕೃಷ್ಣ (ಮದ್ಯಪಾನಾದಿ ಪಾಪ ಕರ್ಮಗಳು) ಹೀಗೆ ಮೂರು ವಿಧದಿಂದಿರುತ್ತವೆ. ಆ ಕರ್ಮಗಳುನುಸಾರವೇ ಜೀವಿಯ ಗತಿಗಳು ಉಂಟಾಗುತ್ತವೆ. ಹೀಗೆ ಜೀವನು ಕರ್ಮವಶನಾಗಿ ಪ್ರಳಯಕಾಲದವರೆಗೂ ಹುಟ್ಟು-ಸಾವುಗಳಲ್ಲಿ ಸುತ್ತುತ್ತಿರುವನು. ॥22-25॥

(ಶ್ಲೋಕ-26)

ಮೂಲಮ್

ಸರ್ವೋಪಸಂಹೃತೌ ಜೀವೋ ವಾಸನಾಭಿಃ ಸ್ವಕರ್ಮಭಿಃ ।
ಅನಾದ್ಯವಿದ್ಯಾವಶಗಸ್ತಿಷ್ಠತ್ಯಭಿನಿವೇಶತಃ ॥

ಅನುವಾದ

ಎಲ್ಲವೂ ಪ್ರಳಯವಾದಾಗಲೂ ಈ ಜೀವನು ತನ್ನ ಕರ್ಮವಾಸನೆಗಳಿಂದ ಅನಾದಿಯಾದ ಅವಿದ್ಯೆಗೆ ವಶನಾಗಿ ಅವ್ಯಕ್ತನಾಗಿದ್ದುಕೊಂಡಿರುವನು. ॥26॥

(ಶ್ಲೋಕ-27)

ಮೂಲಮ್

ಸೃಷ್ಟಿಕಾಲೇ ಪುನಃ ಪೂರ್ವವಾಸನಾಮಾನಸೈಃ ಸಹ ।
ಜಾಯತೇ ಪುನರಪ್ಯೇವಂ ಘಟೀಯಂತ್ರಮಿವಾವಶಃ ॥

ಅನುವಾದ

ಬಳಿಕ ಸೃಷ್ಟಿ ಕಾಲದಲ್ಲಿ ಹಿಂದಿನ ವಾಸನೆಗಳಿಂದ ಕೂಡಿದ ಮನಸ್ಸಿನೊಂದಿಗೆ ಪುನಃ ಕರ್ಮ ವಶನಾಗಿ ಘಟೀಯಂತ್ರವು (ಏತ) ಮೇಲಕ್ಕೂ, ಕೆಳಕ್ಕೂ ಓಡಾಡುವಂತೆ ಪುನಃ ಹುಟ್ಟುತ್ತಾನೆ. ॥27॥

(ಶ್ಲೋಕ-28)

ಮೂಲಮ್

ಯದಾ ಪುಣ್ಯವಿಶೇಷೇಣ ಲಭತೇ ಸಂಗತಿಂ ಸತಾಮ್ ।
ಮದ್ಭಕ್ತಾನಾಂ ಸುಶಾಂತಾನಾಂ ತದಾ ಮದ್ವಿಷಯಾ ಮತಿಃ ॥

(ಶ್ಲೋಕ-29)

ಮೂಲಮ್

ಮತ್ಕಥಾಶ್ರವಣೇ ಶ್ರದ್ಧಾ ದುರ್ಲಭಾ ಜಾಯತೇ ತತಃ ।
ತತಃ ಸ್ವರೂಪವಿಜ್ಞಾನಮನಾಯಾಸೇನ ಜಾಯತೇ ॥

ಅನುವಾದ

ಯಾವಾಗ ಪುಣ್ಯ ಬಲದಿಂದ ನನ್ನ ಭಕ್ತರಾದ, ಶಾಂತರಾದ ಸತ್ಪುರುಷರ ಸಂಗವನ್ನು ಹೊಂದುವನೋ, ಆಗ ನನ್ನ ವಿಷಯವಾದ ಬುದ್ಧಿಯುಂಟಾಗುವುದು. ಅನಂತರ ಪಾಪಿಗಳಿಗೆ ದುರ್ಲಭವಾದ ನನ್ನ ಕಥೆಯನ್ನು ಕೇಳುವುದರಲ್ಲಿ ಶ್ರದ್ಧೆ ಉಂಟಾಗುವುದು. ಅನಂತರ ಶ್ರಮವಿಲ್ಲದೆ ನನ್ನ ಸ್ವರೂಪ ಜ್ಞಾನ ಉಂಟಾಗುವುದು. ॥28-29॥

(ಶ್ಲೋಕ-30)

ಮೂಲಮ್

ತದಾಚಾರ್ಯ ಪ್ರಸಾದೇನ ವಾಕ್ಯಾರ್ಥಜ್ಞಾನತಃ ಕ್ಷಣಾತ್ ।
ದೇಹೇಂದ್ರಿಯಮನಃ ಪ್ರಾಣಾಹಂ ಕೃತಿಭ್ಯಃ ಪೃಥಕ್ ಸ್ಥಿತಮ್ ॥

(ಶ್ಲೋಕ-31)

ಮೂಲಮ್

ಸ್ವಾತ್ಮಾನುಭವತಃ ಸತ್ಯಮಾನಂದಾತ್ಮಾನಮದ್ವಯಮ್ ।
ಜ್ಞಾತ್ವಾ ಸದ್ಯೋ ಭವೇನ್ಮುಕ್ತಃ ಸತ್ಯಮೇವ ಮಯೋದಿತಮ್ ॥

ಅನುವಾದ

ಆಗ ಗುರುವಿನ ಅನುಗ್ರಹದಿಂದ ಹಾಗೂ ವಾಕ್ಯಾರ್ಥ ಜ್ಞಾನದಿಂದ ಕ್ಷಣಮಾತ್ರ ದಲ್ಲಿ ದೇಹ, ಇಂದ್ರಿಯಗಳು, ಅಹಂಕಾರಗಳಿಂದ ವಿಲಕ್ಷಣನಾದ, ಸತ್ಯನಾದ, ಅದ್ವಿತೀಯನಾದ, ಆನಂದಾತ್ಮನನ್ನು ತನ್ನ ಅನುಭವದಿಂದ ಅರಿತುಕೊಂಡವನಾಗಿ ಕೂಡಲೇ ಮುಕ್ತನಾಗಿಬಿಡುವನು. ನಾನು ಈ ವಾಸ್ತವಿಕ ಸತ್ಯವನ್ನು ನಿನಗೆ ಹೇಳಿಬಿಟ್ಟಿರುವೆನು. ॥30-31॥

(ಶ್ಲೋಕ-32)

ಮೂಲಮ್

ಏವಂ ಮಯೋದಿತಂ ಸಮ್ಯಗಾಲೋಚಯತಿ ಯೋಽನಿಶಮ್ ।
ತಸ್ಯ ಸಂಸಾರದುಃಖಾನಿ ನ ಸ್ಪೃಶಂತಿ ಕದಾಚನ ॥

ಅನುವಾದ

ನಾನು ಹೇಳಿರುವ ಈ ಪರಮಾರ್ಥ ಜ್ಞಾನವನ್ನು ಹಗಲು - ರಾತ್ರಿ ಮನನ ಮಾಡುವವನಿಗೆ ಎಂದೆಂದಿಗೂ ಸಂಸಾರ ದುಃಖಗಳು ಸೋಂಕುವುದಿಲ್ಲ. ॥32॥

(ಶ್ಲೋಕ-33)

ಮೂಲಮ್

ತ್ವಮಪ್ಯೇತನ್ಮಯಾ ಪ್ರೋಕ್ತಮಾಲೋಚಯ ವಿಶುದ್ಧಧೀಃ ।
ನ ಸ್ಪೃಶ್ಯಸೇ ದುಃಖಜಾಲೈಃ ಕರ್ಮಬಂಧಾದ್ವಿಮೋಕ್ಷ್ಯಸೇ ॥

ಅನುವಾದ

ನೀನು ಕೂಡ ಈಗ ನಾನು ಹೇಳಿದ್ದನ್ನು ಶುದ್ಧ ಚಿತ್ತದಿಂದ ಮನನ ಮಾಡು. ಆಗ ಯಾವುದೇ ದುಃಖ ಸಮೂಹಗಳು ನಿನಗೆ ಅಂಟಿಕೊಳ್ಳದೆ ಕರ್ಮಗಳ ಬಂಧನದಿಂದ ಬಿಡುಗಡೆ ಹೊಂದುವೆ. ॥33॥

(ಶ್ಲೋಕ-34)

ಮೂಲಮ್

ಪೂರ್ವಜನ್ಮನಿ ತೇ ಸುಭ್ರು ಕೃತಾ ಮದ್ಭಕ್ತಿರುತ್ತಮಾ ।
ಅತಸ್ತವ ವಿಮೋಕ್ಷಾಯ ರೂಪಂ ಮೇ ದರ್ಶಿತಂ ಶುಭೇ ॥

ಅನುವಾದ

ಎಲೈ ಶೋಭನವಾದ ಹುಬ್ಬುಳ್ಳವಳೆ! ನೀನು ಹಿಂದಿನ ಜನ್ಮದಲ್ಲಿ ನನ್ನ ಉತ್ತಮವಾದ ಭಕ್ತಿಯನ್ನು ಮಾಡಿರುವೆ. ಆದ್ದರಿಂದ ಹೇ ಸುಂದರಿ! ನಿನ್ನನ್ನು ಮುಕ್ತಗೊಳಿಸಲು ನಾನು ನನ್ನ ದರ್ಶನವನ್ನು ಕೊಟ್ಟಿರುವೆನು. ॥34॥

(ಶ್ಲೋಕ-35)

ಮೂಲಮ್

ಧ್ಯಾತ್ವಾ ಮದ್ರೂಪಮನಿಶಮಾಲೋಚಯ ಮಯೋದಿತಮ್ ।
ಪ್ರವಾಹಪತಿತಂ ಕಾರ್ಯಂ ಕುರ್ವತ್ಯಪಿ ನ ಲಿಪ್ಯಸೇ ॥

ಅನುವಾದ

ನೀನು ಯಾವಾಗಲೂ ನನ್ನ ರೂಪವನ್ನು ಧ್ಯಾನಿಸುತ್ತಾ, ನನ್ನ ಉಪದೇಶವನ್ನು ಚಿಂತಿಸುತ್ತಿರು. ಹೀಗೆ ಮಾಡುವುದರಿಂದ ಕಾಲಪ್ರವಾಹದಲ್ಲಿ ಆಗಾಗ ಒದಗಿ ಬರುವ ಕರ್ಮಗಳನ್ನು ಮಾಡುತ್ತಿದ್ದರೂ ಅದರಿಂದ ನೀನು ಅಂಟಿಕೊಳ್ಳುವುದಿಲ್ಲ.’’ ॥35॥

(ಶ್ಲೋಕ-36)

ಮೂಲಮ್

ಶ್ರೀರಾಮೇಣೋದಿತಂ ಸರ್ವಂ ಶ್ರುತ್ವಾ ತಾರಾತಿವಿಸ್ಮಿತಾ ।
ದೇಹಾಭಿಮಾನಜಂ ಶೋಕಂ ತ್ಯಕ್ತ್ವಾ ನತ್ವಾ ರಘೂತ್ತಮಮ್ ॥

(ಶ್ಲೋಕ-37)

ಮೂಲಮ್

ಆತ್ಮಾನುಭವಸಂತುಷ್ಟಾ ಜೀವನ್ಮುಕ್ತಾ ಬಭೂವ ಹ ।
ಕ್ಷಣಸಂಗಮಮಾತ್ರೇಣ ರಾಮೇಣ ಪರಮಾತ್ಮನಾ ॥

(ಶ್ಲೋಕ-38)

ಮೂಲಮ್

ಅನಾದಿಬಂಧಂ ನಿರ್ಧೂಯ ಮುಕ್ತಾ ಸಾಪಿ ವಿಕಲ್ಮಷಾ ।
ಸುಗ್ರೀವೋಽಪಿ ಚ ತಚ್ಛ್ರುತ್ವಾ ರಾಮವಕ್ತ್ರಾ ತ್ಸಮೀರಿತಮ್ ॥

(ಶ್ಲೋಕ-39)

ಮೂಲಮ್

ಜಹಾವಜ್ಞಾನಮಖಿಲಂ ಸ್ವಸ್ಥಚಿತ್ತೋಽಭವತ್ತದಾ ।
ತತಃ ಸುಗ್ರೀವಮಾಹೇದಂ ರಾಮೋ ವಾನರಪುಂಗವಮ್ ॥

ಅನುವಾದ

ಭಗವಾನ್ ಶ್ರೀರಾಮನ ಈ ಅದ್ಭುತ ಉಪದೇಶವನ್ನು ಕೇಳಿ ತಾರೆಯು ಆಶ್ಚರ್ಯಗೊಂಡವಳಾಗಿ ದೇಹಾಭಿಮಾನ ನಿಮಿತ್ತದಿಂದ ಉಂಟಾದ ಶೋಕವನ್ನು ಬಿಟ್ಟು ರಘೋತ್ತಮನಾದ ರಾಮನನ್ನು ನಮಸ್ಕರಿಸಿ ಆತ್ಮಾನುಭವದಿಂದ ತೃಪ್ತಳಾಗಿ ಜೀವನ್ಮುಕ್ತಳಾದಳು. ಪರಮಾತ್ಮನಾದ ಶ್ರೀರಾಮನ ಕ್ಷಣಮಾತ್ರದ ಸಂಸರ್ಗದಿಂದ ಅನಾದಿಯಾದ ಅವಿದ್ಯೆಯ ಬಂಧನ ವನ್ನು ಕೊಡವಿಕೊಂಡು ಪಾಪರಹಿತಳಾಗಿ ಬದುಕಿರುವಾಗಲೇ ಮುಕ್ತಳಾದಳು. ಭಗವಂತನ ಶ್ರೀಮುಖದಿಂದ ಹೊರಟ ಉಪ ದೇಶವನ್ನು ಕೇಳಿದ ಸುಗ್ರೀವನ ಅಜ್ಞಾನವೂ ಕೂಡ ಹೊರಟು ಹೋಯಿತು ಹಾಗೂ ಶಾಂತಚಿತ್ತನಾದನು. ಅನಂತರ ಶ್ರೀರಾಮನು ವಾನರಶ್ರೇಷ್ಠ ಸುಗ್ರೀವನನ್ನು ಕುರಿತು ಹೇಳಿದನು. ॥36-39॥

(ಶ್ಲೋಕ-40)

ಮೂಲಮ್

ಭ್ರಾತುರ್ಜ್ಯೇಷ್ಠಸ್ಯ ಪುತ್ರೇಣ ಯದ್ಯುಕ್ತಂ ಸಾಂಪರಾಯಿಕಮ್ ।
ಕುರು ಸರ್ವಂ ಯಥಾನ್ಯಾಯಂ ಸಂಸ್ಕಾರಾದಿ ಮಮಾಜ್ಞಯಾ ॥

ಅನುವಾದ

‘‘ಹಿರಿಯಣ್ಣನಾದ ಮೃತವಾಲಿಗೆ ಮಗನ ಮೂಲಕ ಮಾಡಬೇಕಾದ ಯಾವ-ಯಾವ ಕರ್ಮಾಂತರಗಳುಂಟೋ ಅವೆಲ್ಲ ಸಂಸ್ಕಾರಗಳನ್ನು ನನ್ನ ಆಜ್ಞೆಯಂತೆ ಶಾಸ್ತ್ರಾನುಸಾರವಾಗಿ ಮಾಡು’’ ಎಂದನು. ॥40॥

(ಶ್ಲೋಕ-41)

ಮೂಲಮ್

ತಥೇತಿ ಬಲಿಭಿರ್ಮುಖ್ಯೈರ್ವಾನರೈಃ ಪರಿಣೀಯ ತಮ್ ।
ವಾಲಿನಂ ಪುಷ್ಪಕೇ ಕ್ಷಿಪ್ತ್ವಾ ಸರ್ವರಾಜೋಪಚಾರಕೈಃ ॥

(ಶ್ಲೋಕ-42)

ಮೂಲಮ್

ಭೇರೀದುಂದುಭಿನಿರ್ಘೋಷೈರ್ಬ್ರಾಹ್ಮಣೈರ್ಮಂತ್ರಿಭಿಃ ಸಹ ।
ಯೂಥಪೈರ್ವಾನರೈಃ ಪೌರೈಸ್ತಾರಯಾ ಚಾಂಗದೇನ ಚ ॥

(ಶ್ಲೋಕ-43)

ಮೂಲಮ್

ಗತ್ವಾ ಚಕಾರ ತತ್ಸರ್ವಂ ಯಥಾಶಾಸ್ತ್ರಂ ಪ್ರಯತ್ನತಃ ।
ಸ್ನಾತ್ವಾ ಜಗಾಮ ರಾಮಸ್ಯ ಸಮೀಪಂ ಮಂತ್ರಿಭಿಃ ಸಹ ॥

ಅನುವಾದ

ಹಾಗೆಯೇ ಆಗಲೆಂದು ಸುಗ್ರೀವನು ಪ್ರಮುಖ ವಾನರ ಮುಖ್ಯರೊಂದಿಗೆ, ಮಂತ್ರಿಗಳೂ, ಪೌರರೂ, ತಾರಾದೇವಿ, ಅಂಗದರಿಂದೊಡಗೂಡಿ ವಾಲಿಯ ಶವವನ್ನು ಹೂವಿನ ರಥದಲ್ಲಿರಿಸಿ ಸಮಸ್ತ ರಾಜೋಚಿತ ಉಪಚಾರಗಳಿಂದ ಭೇರಿ ನಗಾರಿಗಳ ಧ್ವನಿಗಳಿಂದಲೂ, ಬ್ರಾಹ್ಮಣರ ವೇದಘೋಷಗಳಿಂದಲೂ ಅಂತ್ಯಯಾತ್ರೆ ಮಾಡಿಸಿ ರಾಜ ಗೌರವದಿಂದ ಪ್ರಯತ್ನಪೂರ್ವಕ ಶಾಸ್ತ್ರಾನುಕೂಲ ಸಂಸ್ಕಾರಗಳನ್ನು ನೆರವೇರಿಸಿದನು. ಅನಂತರ ಸ್ನಾನಾದಿ ಗೈದು ಮಂತ್ರಿಗಳೊಡಗೂಡಿ ಶ್ರೀರಾಮನ ಸಮೀಪಕ್ಕೆ ಬಂದನು. ॥41-43॥

(ಶ್ಲೋಕ-44)

ಮೂಲಮ್

ನತ್ವಾ ರಾಮಸ್ಯ ಚರಣೌ ಸುಗ್ರೀವಃ ಪ್ರಾಹ ಹೃಷ್ಟಧೀಃ ।
ರಾಜ್ಯಂ ಪ್ರಶಾಧಿ ರಾಜೇಂದ್ರ ವಾನರಾಣಾಂ ಸಮೃದ್ಧಿಮತ್ ॥

(ಶ್ಲೋಕ-45)

ಮೂಲಮ್

ದಾಸೋಽಹಂ ತೇ ಪಾದಪದ್ಮಂ ಸೇವೇ ಲಕ್ಷ್ಮಣವಚ್ಚಿರಮ್ ।
ಇತ್ಯುಕ್ತೋ ರಾಘವಃ ಪ್ರಾಹ ಸುಗ್ರೀವಂ ಸಸ್ಮಿತಂ ವಚಃ ॥

ಅನುವಾದ

ಅಲ್ಲಿಗೆ ಬಂದ ಸುಗ್ರೀವನು ಶ್ರೀರಾಮನ ಪಾದಗಳಿಗೆ ನಮಸ್ಕರಿಸಿ ಸಂತುಷ್ಟ ಬುದ್ಧಿಯುಳ್ಳ ಅವನು ಹೀಗೆಂದನು ‘‘ಹೇ ರಾಜೇಂದ್ರಾ! ಸಮೃದ್ಧಿಪೂರ್ಣವಾದ ಈ ವಾನರ ರಾಜ್ಯವನ್ನು ನೀನೇ ಆಳಿಕೊಂಡಿರು. ನಾನು ನಿನ್ನ ದಾಸನಾಗಿದ್ದುಕೊಂಡು ಲಕ್ಷ್ಮಣನಂತೆ ಸದಾಕಾಲ ನಿನ್ನ ಪಾದಾರವಿಂದಗಳ ಸೇವೆ ಮಾಡಿಕೊಂಡಿರುವೆನು.’’ ಇದನ್ನು ಕೇಳಿದ ಶ್ರೀರಘುನಾಥನು ಸುಗ್ರೀವನಲ್ಲಿ ಮುಗುಳ್ನಗುತ್ತಾ ಹೀಗೆಂದನು - ॥44-45॥

(ಶ್ಲೋಕ-46)

ಮೂಲಮ್

ತ್ವಮೇವಾಹಂ ನ ಸಂದೇಹಃ ಶೀಘ್ರಂ ಗಚ್ಛ ಮಮಾಜ್ಞಯಾ ।
ಪುರರಾಜ್ಯಾಧಿಪತ್ಯೇ ತ್ವಂ ಸ್ವಾತ್ಮಾನಮಭಿಷೇಚಯ ॥

(ಶ್ಲೋಕ-47)

ಮೂಲಮ್

ನಗರಂ ನ ಪ್ರವೇಕ್ಷ್ಯಾಮಿ ಚತುರ್ದಶ ಸಮಾಃ ಸಖೇ ।
ಆಗಮಿಷ್ಯತಿ ಮೇ ಭ್ರಾತಾ ಲಕ್ಷ್ಮಣಃ ಪತ್ತನಂ ತವ ॥

ಅನುವಾದ

‘‘ಹೇ ಸುಗ್ರೀವಾ! ನಾನು-ನೀನು ಒಂದೇ ಆಗಿದ್ದೇವೆ, ಇದರಲ್ಲಿ ಸಂದೇಹವೇ ಇಲ್ಲ. ನನ್ನ ಅಪ್ಪಣೆಯಂತೆ ನೀನು ಬೇಗನೆ ಹೋಗಿ ಕಿಷ್ಕಿಂಧೆಯಲ್ಲಿ ಪಟ್ಟಾಭಿಷಿಕ್ತನಾಗಿ ರಾಜ್ಯವನ್ನು ಆಳು. ಹೇ ಸ್ನೇಹಿತನೆ! ನಾನು ಹದಿನಾಲ್ಕು ವರ್ಷಗಳಕಾಲ ಯಾವುದೇ ನಗರದಲ್ಲಿ ಪ್ರವೇಶಿಸುವುದಿಲ್ಲ. ಅದಕ್ಕಾಗಿ ನನ್ನ ತಮ್ಮನಾದ ಲಕ್ಷ್ಮಣನು ನಿನ್ನ ಪಟ್ಟಾಭಿಷೇಕಕ್ಕಾಗಿ ಬರಲಿದ್ದಾನೆ. ॥46-47॥

(ಶ್ಲೋಕ-48)

ಮೂಲಮ್

ಅಂಗದಂ ಯೌವರಾಜ್ಯೇ ತ್ವಮಭಿಷೇಚಯ ಸಾದರಮ್ ।
ಅಹಂ ಸಮೀಪೇ ಶಿಖರೇ ಪರ್ವತಸ್ಯ ಸಹಾನುಜಃ ॥

(ಶ್ಲೋಕ-49)

ಮೂಲಮ್

ವತ್ಸ್ಯಾಮಿ ವರ್ಷದಿವಸಾಂಸ್ತತಸ್ತ್ವಂ ಯತ್ನವಾನ್ ಭವ ।
ಕಿಂಚಿತ್ಕಾಲಂ ಪುರೇ ಸ್ಥಿತ್ವಾ ಸೀತಾಯಾಃ ಪರಿಮಾರ್ಗಣೇ ॥

ಅನುವಾದ

ನೀನು ಅಂಗದನನ್ನು ಪ್ರೀತಿ ಪೂರ್ವಕವಾಗಿ ಯುವರಾಜನನ್ನಾಗಿಸು. ನಾನಾದರೋ ಇಲ್ಲೇ ಸಮೀಪದಲ್ಲಿರುವ ಪರ್ವತಶಿಖರದಲ್ಲಿ ಮಳೆಗಾಲ ಕಳೆಯುವವರೆಗೆ ಲಕ್ಷ್ಮಣನೊಡನೆ ವಾಸಮಾಡಿಕೊಂಡಿರುವೆ. ನೀನು ಕೆಲವು ಕಾಲ ಕಿಷ್ಕಿಂಧೆಯಲ್ಲಿದ್ದು ಅನಂತರ ಸೀತಾನ್ವೇಷಣೆಯ ಪ್ರಯತ್ನ ಮಾಡು.’’ ॥48-49॥

(ಶ್ಲೋಕ-50)

ಮೂಲಮ್

ಸಾಷ್ಟಾಂಗಂ ಪ್ರಣಿಪತ್ಯಾಹ ಸುಗ್ರೀವೋ ರಾಮಪಾದಯೋಃ ।
ಯದಾಜ್ಞಾಪಯಸೇ ದೇವ ತತ್ತಥೈವ ಕರೋಮ್ಯಹಮ್ ॥

(ಶ್ಲೋಕ-51)

ಮೂಲಮ್

ಅನುಜ್ಞಾತಶ್ಚ ರಾಮೇಣ ಸುಗ್ರೀವಸ್ತು ಸಲಕ್ಷ್ಮಣಃ ।
ಗತ್ವಾ ಪುರಂ ತಥಾ ಚಕ್ರೇ ಯಥಾ ರಾಮೇಣ ಚೋದಿತಃ ॥

(ಶ್ಲೋಕ-52)

ಮೂಲಮ್

ಸುಗ್ರೀವೇಣ ಯಥಾನ್ಯಾಯಂ ಪೂಜಿತೋ ಲಕ್ಷ್ಮಣಸ್ತದಾ ।
ಆಗತ್ಯ ರಾಘವಂ ಶೀಘ್ರಂ ಪ್ರಣಿಪತ್ಯೋಪತಸ್ಥಿವಾನ್ ॥

ಅನುವಾದ

ಸುಗ್ರೀವನು ರಾಮನ ಪಾದಗಳಿಗೆ ಸಾಷ್ಟಾಂಗನಮಸ್ಕಾರ ಮಾಡಿ ಹೀಗೆಂದನು — ‘‘ದೇವಾ! ನಿನ್ನ ಅಪ್ಪಣೆಯಂತೆ ಮಾಡುವೆನು. ಪುನಃ ರಾಮನನ್ನು ವಂದಿಸಿ ಅವನಿಂದ ಅಪ್ಪಣೆ ಪಡೆದು ಲಕ್ಷ್ಮಣನನ್ನು ಒಡಗೂಡಿ ಕಿಷ್ಕಿಂಧಾನಗರಿಗೆ ಹೋಗಿ ರಾಮನ ಪ್ರೇರಣೆಯಂತೆ ಎಲ್ಲವನ್ನು ನಡೆಸಿದನು. ಲಕ್ಷ್ಮಣನು ಸುಗ್ರೀವನಿಂದ ಯಥಾಯೋಗ್ಯ ಸತ್ಕಾರವನ್ನು ಹೊಂದಿ ಹಿಂದಿರುಗಿ ಬಂದು ಶ್ರೀರಾಮನ ಚರಣಗಳಲ್ಲಿ ವಂದಿಸಿಕೊಂಡು ಎಂದಿನಂತೆ ಅವನ ಸೇವೆಯಲ್ಲಿ ತತ್ಪರನಾದನು. ॥50-52॥

(ಶ್ಲೋಕ-53)

ಮೂಲಮ್

ತತೋ ರಾಮೋ ಜಗಾಮಾಶು ಲಕ್ಷ್ಮಣೇನ ಸಮನ್ವಿತಃ ।
ಪ್ರವರ್ಷಣಗಿರೇರೂರ್ಧ್ವಂ ಶಿಖರಂ ಭೂರಿವಿಸ್ತರಮ್ ॥

(ಶ್ಲೋಕ-54)

ಮೂಲಮ್

ತತ್ರೈಕಂ ಗಹ್ವರಂ ದೃಷ್ಟ್ವಾ ಸ್ಫಾಟಿಕಂ ದೀಪ್ತಿಮಚ್ಛುಭಮ್ ।
ವರ್ಷವಾತಾತಪಸಹಂ ಫಲಮೂಲಸಮೀಪಗಮ್ ।
ವಾಸಾಯ ರೋಚಯಾಮಾಸ ತತ್ರ ರಾಮಃ ಸಲಕ್ಷ್ಮಣಃ ॥

ಅನುವಾದ

ಅನಂತರ ಶ್ರೀರಾಮಚಂದ್ರನು ಲಕ್ಷ್ಮಣನೊಡನೆ ಬೇಗನೆ ಪ್ರವರ್ಷಣ ಎಂಬ ಪರ್ವತದ ಮೇಲಿರುವ ವಿಶಾಲವಾದ ಜಾಗವುಳ್ಳ ಹಾಗೂ ಎತ್ತರವಾದ ಸ್ಥಳಕ್ಕೆ ಹೋಗಿ, ಸ್ಫಟಿಕಮಯ ವಾದ ಸ್ವಚ್ಛವಾದ, ಪ್ರಕಾಶಮಾನವಾಗಿರುವ ಒಂದು ಗುಹೆಯನ್ನು ನೋಡಿದನು. ಅದು ಮಳೆ-ಬಿಸಿಲು-ಗಾಳಿಗಳಿಂದ ರಕ್ಷಿಸಿಕೊಳ್ಳಲು ಸಮರ್ಥವಾಗಿತ್ತು. ಸುತ್ತಲೂ ಫಲ, ಪುಷ್ಪ, ಕಂದ, ಮೂಲಗಳು ಹೇರಳವಾಗಿದ್ದುವು. ಅದನ್ನು ನೋಡಿ ರಾಮಲಕ್ಷ್ಮಣರಿಬ್ಬರೂ ಅಲ್ಲೇ ವಾಸಿಸಲು ಇಷ್ಟಪಟ್ಟರು. ॥53-54॥

(ಶ್ಲೋಕ-55)

ಮೂಲಮ್

ದಿವ್ಯಮೂಲ ಫಲಪುಷ್ಪ ಸಂಯುತೇ
ಮೌಕ್ತಿಕೋಪಮಜಲೌಘಪಲ್ವಲೇ ।
ಚಿತ್ರವರ್ಣಮೃಗಪಕ್ಷಿಶೋಭಿತೇ
ಪರ್ವತೇ ರಘುಕುಲೋತ್ತಮೋಽವಸತ್ ॥

ಅನುವಾದ

ದಿವ್ಯವಾದ ಕಂದಮೂಲ ಫಲಗಳಿಂದಲೂ, ಮುತ್ತಿನಂತೆ ಸ್ವಚ್ಛವಾದ ಜಲಧಾರೆಗಳಿಂದಲೂ, ತಂಪಾದ ಭೂಮಿಯಿಂದಲೂ, ಚಿತ್ರ-ವಿಚಿತ್ರ ವರ್ಣಗಳಿಂದ ಕೂಡಿದ ಮೃಗ-ಪಕ್ಷಿಗಳಿಂದಲೂ ರಮಣೀಯವಾದ ಆ ಪರ್ವತದಲ್ಲಿ ರಘುಕುಲ ಶ್ರೇಷ್ಠನಾದ ರಾಮನು ವಾಸವಾಗಿದ್ದನು. ॥55॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.