೦೨

[ಎರಡನೆಯ ಸರ್ಗ]

ಭಾಗಸೂಚನಾ

ವಾಲಿವಧೆ ಮತ್ತು ಭಗವಂತನೊಂದಿಗೆ ಅವನ ಸಂಭಾಷಣೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಇತ್ಥಂ ಸ್ವಾತ್ಮಪರಿಷ್ವಂಗನಿರ್ಧೂತಾಶೇಷಕಲ್ಮಷಮ್ ।
ರಾಮಃ ಸುಗ್ರೀವಮಾಲೋಕ್ಯ ಸಸ್ಮಿತಂ ವಾಕ್ಯಮಬ್ರವೀತ್ ॥

(ಶ್ಲೋಕ-2)

ಮೂಲಮ್

ಮಾಯಾಂ ಮೋಹಕರೀಂ ತಸ್ಮಿನ್ವಿತನ್ವನ್ ಕಾರ್ಯಸಿದ್ಧಯೇ ।
ಸಖೇ ತ್ವದುಕ್ತಂ ಯತ್ತನ್ಮಾಂ ಸತ್ಯಮೇವ ನ ಸಂಶಯಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಹೀಗೆ ತನ್ನ ಶರೀರಾಲಿಂಗನದಿಂದ ಸಮಸ್ತ ಪಾಪಗಳನ್ನು ಕಳೆದುಕೊಂಡ ಸುಗ್ರೀವನ ಕುರಿತು ತನ್ನ ಕಾರ್ಯ ಸಿದ್ಧಿಗಾಗಿ ಮೋಹಕರ ಮಾಯೆಯನ್ನು ಹರಡುತ್ತಾ ಶ್ರೀರಾಮನು ಮುಗುಳ್ನಗುತ್ತಾ ಅವನನ್ನು ನೋಡಿ ಹೀಗೆ ಹೇಳುತ್ತಾನೆ ‘‘ಎಲೈ ಮಿತ್ರನೆ! ನನ್ನನ್ನು ಕುರಿತು ಈವರೆಗೆ ನೀನು ಏನು ಹೇಳಿರುವೆಯೋ ಅದೆಲ್ಲವೂ ನಿಜವೆ. ಅದರಲ್ಲಿ ಸಂಶಯವೇ ಇಲ್ಲ. ॥1-2॥

(ಶ್ಲೋಕ-3)

ಮೂಲಮ್

ಕಿಂತು ಲೋಕಾ ವದಿಷ್ಯಂತಿ ಮಾಮೇವಂ ರಘುನಂದನಃ ।
ಕೃತವಾನ್ಕಿಂ ಕಪೀಂದ್ರಾಯ ಸಖ್ಯಂ ಕೃತ್ವಾಗ್ನಿಸಾಕ್ಷಿಕಮ್ ॥

ಅನುವಾದ

ಆದರೆ ನೀನು ರಾಜ್ಯಾದಿಗಳಿಂದ ನಿವೃತ್ತನಾದರೆ, ಲೋಕದ ಜನರು ನನ್ನನ್ನು ಕುರಿತು ಓಹೋ, ಶ್ರೀರಾಮನು ಅಗ್ನಿಸಾಕ್ಷಿಯಾಗಿ ಕಪಿರಾಜನೊಡನೆ ಸ್ನೇಹಮಾಡಿಕೊಂಡು ಆತನಿಗೆ ಏನು ಉಪಕಾರ ಮಾಡಿದನು? ಎಂದು ಆಡಿಕೊಳ್ಳುವರು. ॥3॥

(ಶ್ಲೋಕ-4)

ಮೂಲಮ್

ಇತಿ ಲೋಕಾಪವಾದೋ ಮೇ ಭವಿಷ್ಯತಿ ನ ಸಂಶಯಃ ।
ತಸ್ಮಾದಾಹ್ವಯ ಭದ್ರಂ ತೇ ಗತ್ವಾ ಯುದ್ಧಾಯ ವಾಲಿನಮ್ ॥

ಅನುವಾದ

ಇಂತಹ ಲೋಕಾಪವಾದ ಬರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈಗಲೇ ನೀನು ಹೋಗಿ ವಾಲಿಯನ್ನು ಯುದ್ಧಕ್ಕೆ ಕರೆ. ನಿನಗೆ ಒಳ್ಳೆಯದಾಗಲಿ. ॥4॥

(ಶ್ಲೋಕ-5)

ಮೂಲಮ್

ಬಾಣೇನೈಕೇನ ತಂ ಹತ್ವಾ ರಾಜ್ಯೇ ತ್ವಾಮಭಿಷೇಚಯೇ ।
ತಥೇತಿ ಗತ್ವಾ ಸುಗ್ರೀವಃ ಕಿಷ್ಕಿಂಧೋಪವನಂ ದ್ರುತಮ್ ॥

(ಶ್ಲೋಕ-6)

ಮೂಲಮ್

ಕೃತ್ವಾ ಶಬ್ದಂ ಮಹಾನಾದಂ ತಮಾಹ್ವಯತ ವಾಲಿನಮ್ ।
ತಚ್ಛ್ರುತ್ವಾ ಭ್ರಾತೃನಿನದಂ ರೋಷತಾಮ್ರವಿಲೋಚನಃ ॥

(ಶ್ಲೋಕ-7)

ಮೂಲಮ್

ನಿರ್ಜಗಾಮ ಗೃಹಾಚ್ಛೀಘ್ರಂ ಸುಗ್ರೀವೋ ಯತ್ರ ವಾನರಃ ।
ತಮಾಪತಂತಂ ಸುಗ್ರೀವಃ ಶೀಘ್ರಂ ವಕ್ಷಸ್ಯತಾಡಯತ್ ॥

ಅನುವಾದ

ನಾನು ಅವನನ್ನು ಒಂದೇ ಬಾಣದಿಂದ ಕೊಂದು ಕಿಷ್ಕಿಂಧೆಯ ರಾಜ್ಯದಲ್ಲಿ ನಿನಗೆ ಪಟ್ಟಕಟ್ಟುವೆನು’’ ಎಂದು ಹೇಳಿದನು. ಹಾಗೆಯೇ ಆಗಲೆಂದು ಸುಗ್ರೀವನು ಬೇಗನೇ ಉಪವನದ ಸಮೀಪಕ್ಕೆ ಹೋಗಿ ಗಟ್ಟಿಯಾಗಿ ಸಿಂಹನಾದವನ್ನು ಮಾಡಿ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನು. ಸಹೋದರನ ಗರ್ಜನೆಯನ್ನು ಕೇಳಿ ಕೋಪದಿಂದ ವಾಲಿಯ ಕಣ್ಣುಗಳು ಕಿಡಿಕಾರಿದವು. ರೋಷದಿಂದಲೇ ಅರಮನೆಯಿಂದ ಹೊರಟು ಸುಗ್ರೀವನಿದ್ದಲ್ಲಿಗೆ ಬಂದನು. ಹಾಗೆ ನುಗ್ಗಿ ಬಂದ ವಾಲಿಯ ವಕ್ಷಸ್ಥಳದಲ್ಲಿ ಸುಗ್ರೀವನು ಜೋರಾಗಿ ಗುದ್ದಿದನು. ॥5-7॥

(ಶ್ಲೋಕ-8)

ಮೂಲಮ್

ಸುಗ್ರೀವಮಪಿ ಮುಷ್ಟಿಭ್ಯಾಂ ಜಘಾನ ಕ್ರೋಧಮೂರ್ಚ್ಛಿತಃ ।
ವಾಲೀ ತಮಪಿ ಸುಗ್ರೀವ ಏವಂ ಕ್ರುದ್ಧೌ ಪರಸ್ಪರಮ್ ॥

(ಶ್ಲೋಕ-9)

ಮೂಲಮ್

ಅಯುದ್ಧ್ಯೆತಾಮೇಕರೂಪೌ ದೃಷ್ಟ್ವಾ ರಾಮೋಽತಿವಿಸ್ಮಿತಃ ।
ನ ಮುಮೋಚ ತದಾ ಬಾಣಂ ಸುಗ್ರೀವ ವಧಶಂಕಯಾ ॥

ಅನುವಾದ

ವಾಲಿಯು ಕೋಪಗೊಂಡವನಾಗಿ ಎರಡೂ ಕೈಗಳ ಮುಷ್ಟಿಗಳಿಂದ ಸುಗ್ರೀವನನ್ನು ಹೊಡೆದನು. ಸುಗ್ರೀವನೂ ವಾಲಿಯ ಮೇಲೆ ಆಕ್ರಮಣ ಮಾಡಿದನು. ಈ ಪ್ರಕಾರ ಅವರಿಬ್ಬರೂ ಕುಪಿತರಾಗಿ ಪರಸ್ಪರ ಯುದ್ಧ ಮಾಡತೊಡಗಿದರು. ಶ್ರೀರಾಮನು ಒಂದೇ ರೂಪವುಳ್ಳ ಅವರಿಬ್ಬರನ್ನು ನೋಡಿ ಅತಿಯಾಗಿ ಆಶ್ಚರ್ಯಗೊಂಡು ವಾಲಿ ಯಾರು - ಸುಗ್ರೀವ ಯಾರು ಎಂದು ತಿಳಿಯದೆ, ಎಲ್ಲಿಯಾದರೂ ಸುಗ್ರೀವನು ನನ್ನ ಬಾಣದಿಂದ ಸತ್ತು ಹೋದರೆ ಎಂಬ ಆಶಂಕೆಯಿಂದ ಬಾಣವನ್ನು ಪ್ರಯೋಗಿಸಲಿಲ್ಲ. ॥8-9॥

(ಶ್ಲೋಕ-10)

ಮೂಲಮ್

ತತೋ ದುದ್ರಾವ ಸುಗ್ರೀವೋ ವಮನ್ ರಕ್ತಂ ಭಯಾಕುಲಃ ।
ವಾಲೀ ಸ್ವಭವನಂ ಯಾತಃ ಸುಗ್ರೀವೋ ರಾಮಮಬ್ರವೀತ್ ॥

ಅನುವಾದ

ಅನಂತರ ಸುಗ್ರೀವನು ರಕ್ತವನ್ನು ಕಾರುತ್ತಾ ಭಯಾತುರನಾಗಿ ಓಡಿ ಹೋದನು. ವಾಲಿಯು ತನ್ನ ಅರಮನೆಗೆ ಮರಳಿದನು. ಆಗ ಭಯಗೊಂಡ ಸುಗ್ರೀವನು ಶ್ರೀರಾಮಚಂದ್ರನಲ್ಲಿ ಹೇಳುತ್ತಾನೆ — ॥10॥

(ಶ್ಲೋಕ-11)

ಮೂಲಮ್

ಕಿಂ ಮಾಂ ಘಾತಯಾಸೇ ರಾಮ ಶತ್ರುಣಾ ಭ್ರಾತೃರೂಪಿಣಾ ।
ಯದಿ ಮದ್ಹನನೇ ವಾಂಛಾ ತ್ವಮೇವ ಜಹಿ ಮಾಂ ವಿಭೋ ॥

ಅನುವಾದ

‘‘ಹೇ ರಾಮಾ! ಸೋದರನ ರೂಪದಿಂದಿರುವ ಶತ್ರುವಿನಿಂದ ನನ್ನನ್ನೇಕೆ ಕೊಲ್ಲಿಸುವೆ? ಒಂದು ವೇಳೆ ನನ್ನನ್ನು ಕೊಲ್ಲುವ ಇಚ್ಛೆ ನಿನಗಿದ್ದರೆ ಹೇ ವಿಭೊ! ನೀನೇ ಕೊಂದು ಬಿಡು. ॥11॥

(ಶ್ಲೋಕ-12)

ಮೂಲಮ್

ಏವಂ ಮೇ ಪ್ರತ್ಯಯಂ ಕೃತ್ವಾ ಸತ್ಯವಾದಿನ್ ರಘೂತ್ತಮ ।
ಉಪೇಕ್ಷಸೇ ಕಿಮರ್ಥಂ ಮಾಂ ಶರಣಾಗತವತ್ಸಲ ॥

ಅನುವಾದ

ಹೇ ಸತ್ಯವಾದಿಯಾದ, ಶರಣಾಗತವತ್ಸಲ ರಘುನಾಥನೆ ! ಹೀಗೆಲ್ಲ ನನಗೆ ನಂಬಿಕೆಯನ್ನು ಹುಟ್ಟಿಸಿ ಏಕೆ ಉಪೇಕ್ಷೆ ಮಾಡುತ್ತಿರುವೆ?’’ ॥12॥

(ಶ್ಲೋಕ-13)

ಮೂಲಮ್

ಶ್ರುತ್ವಾ ಸುಗ್ರೀವವಚನಂ ರಾಮಃ ಸಾಶ್ರುವಿಲೋಚನಃ ।
ಆಲಿಂಗ್ಯ ಮಾ ಸ್ಮ ಭೈಷೀಸ್ತ್ವಂ ದೃಷ್ಟ್ವಾ ವಾಮೇಕರೂಪಿಣೌ ॥

(ಶ್ಲೋಕ-14)

ಮೂಲಮ್

ಮಿತ್ರಘಾತಿತ್ವಮಾಶಂಕ್ಯ ಮುಕ್ತವಾನ್ಸಾಯಕಂ ನ ಹಿ ।
ಇದಾನೀಮೇವ ತೇ ಚಿಹ್ನಂ ಕರಿಷ್ಯೇ ಭ್ರಮಶಾಂತಯೇ ॥

ಅನುವಾದ

ಸುಗ್ರೀವನ ಮಾತನ್ನು ಕೇಳಿದ ಶ್ರೀರಾಮಚಂದ್ರನು ಕಣ್ಣೀರು ತುಂಬಿಕೊಂಡು ಅವನನ್ನು ತಬ್ಬಿಕೊಂಡು ‘‘ಅಯ್ಯಾ! ಹೆದರಬೇಡ. ನೀವಿಬ್ಬರೂ ಒಂದೇ ರೂಪದವರಾಗಿದ್ದು, ಎಲ್ಲಿ ಸ್ನೇಹಿತನನ್ನು ಕೊಂದುಬಿಡುವೆನೋ ಎಂಬ ಆಶಂಕೆಯು ನನಗುಂಟಾಗಿ ಬಾಣ ಪ್ರಯೋಗಿಸಲಿಲ್ಲ. ಈಗ ಈ ಭ್ರಾಂತಿಯ ಪರಿಹಾರಕ್ಕೆ ನಿನ್ನ ಶರೀರದಲ್ಲಿ ಯಾವುದಾದರು ಚಿಹ್ನೆಯನ್ನು ಮಾಡುವೆನು. ॥13-14॥

(ಶ್ಲೋಕ-15)

ಮೂಲಮ್

ಗತ್ವಾಹ್ವಯ ಪುನಃ ಶತ್ರುಂ ಹತಂ ದ್ರಕ್ಷ್ಯಸಿ ವಾಲಿನಮ್ ।
ರಾಮೋಽಹಂ ತ್ವಾಂ ಶಪೇ ಭ್ರಾತರ್ಹನಿಷ್ಯಾಮಿ ರಿಪುಂ ಕ್ಷಣಾತ್ ॥

ಅನುವಾದ

ನೀನು ಇನ್ನೊಮ್ಮೆ ಹೋಗಿ ಪುನಃ ವಾಲಿಯನ್ನು ಕರೆ. ಈಸಲ ವಾಲಿಯು ಸತ್ತಿರುವುದನ್ನು ನೀನು ನೋಡುವೆ. ರಾಮನಾದ ನಾನು ಆಣೆಯಿಟ್ಟು ನಿನಗೆ ಹೇಳುತ್ತಿರುವೆನು ಅಯ್ಯಾ! ಈ ಬಾರಿ ನಾನು ಅವಶ್ಯವಾಗಿ ಕ್ಷಣಮಾತ್ರದಲ್ಲಿ ವಾಲಿಯನ್ನು ಕೊಲ್ಲುವೆನು.’’ ॥15॥

(ಶ್ಲೋಕ-16)

ಮೂಲಮ್

ಇತ್ಯಾಶ್ವಾಸ್ಯ ಸ ಸುಗ್ರೀವಂ ರಾಮೋ ಲಕ್ಷ್ಮಣಮಬ್ರವೀತ್ ।
ಸುಗ್ರೀವಸ್ಯ ಗಲೇ ಪುಷ್ಪಮಾಲಾಮಾಮುಚ್ಯ ಪುಷ್ಪಿತಾಮ್ ॥

ಅನುವಾದ

ಹೀಗೆಂದು ಶ್ರೀರಾಮಚಂದ್ರನು ಸುಗ್ರೀವನನ್ನು ಸಮಾಧಾನಗೊಳಿಸಿ ಲಕ್ಷ್ಮಣನಲ್ಲಿ ಹೇಳಿದನು — ‘‘ತಮ್ಮಾ! ಸುಗ್ರೀವನ ಕತ್ತಿನಲ್ಲಿ ಅರಳಿದ ಹೂವಿನ ಮಾಲೆಯನ್ನು ತೊಡಿಸು. ॥16॥

(ಶ್ಲೋಕ-17)

ಮೂಲಮ್

ಪ್ರೇಷಯಸ್ವ ಮಹಾಭಾಗ ಸುಗ್ರೀವಂ ವಾಲಿನಂ ಪ್ರತಿ ।
ಲಕ್ಷ್ಮಣಸ್ತು ತದಾ ಬದ್ಧ್ವಾ ಗಚ್ಛ ಗಚ್ಛೇತಿ ಸಾದರಮ್ ॥

(ಶ್ಲೋಕ-18)

ಮೂಲಮ್

ಪ್ರೇಷಯಾಮಾಸ ಸುಗ್ರೀವಂ ಸೋಽಪಿ ಗತ್ವಾ ತಥಾಕರೋತ್ ।
ಪುನರಪ್ಯದ್ಭುತಂ ಶಬ್ದಂ ಕೃತ್ವಾ ವಾಲಿನಮಾಹ್ವಯತ್ ॥

ಅನುವಾದ

ಹೇ ಮಹಾಭಾಗ! ಇವನನ್ನು ವಾಲಿಯ ಬಳಿಗೆ ಪುನಃ ಯುದ್ಧಕ್ಕೆ ಕಳಿಸು.’’ ಆಗ ಲಕ್ಷ್ಮಣನು ಸುಗ್ರೀವನ ಕತ್ತಿನಲ್ಲಿ ಹೂಮಾಲೆಯನ್ನು ಹಾಕಿ ಧೈರ್ಯತುಂಬಿ ಹೋಗು-ಹೋಗು ಎಂದು ಯುದ್ಧಕ್ಕಾಗಿ ಕಳಿಸಿದನು. ಸುಗ್ರೀವನು ಲಕ್ಷ್ಮಣನ ಮಾತಿನಂತೆ ಮತ್ತೊಮ್ಮೆ ಅದ್ಭುತವಾಗಿ ಸಿಂಹನಾದ ಮಾಡಿ ವಾಲಿಯನ್ನು ಕರೆದನು. ॥17-18॥

(ಶ್ಲೋಕ-19)

ಮೂಲಮ್

ತಚ್ಛ್ರುತ್ವಾ ವಿಸ್ಮಿತೋ ವಾಲೀ ಕ್ರೋಧೇನ ಮಹತಾವೃತಃ ।
ಬದ್ಧ್ವಾ ಪರಿಕರಂ ಸಮ್ಯಗ್ಗಮನಾಯೋಪಚಕ್ರಮೇ ॥

ಅನುವಾದ

ಸುಗ್ರೀವನ ಕೂಗನ್ನು ಕೇಳಿದ ವಾಲಿಯು ಆಶ್ಚರ್ಯಗೊಂಡು ಹೆಚ್ಚಿನ ಕೋಪಗೊಂಡು ಚೆನ್ನಾಗಿ ಸೊಂಟವನ್ನು ಕಟ್ಟಿ ಕೊಂಡು ಹೊರಡಲುಪಕ್ರಮಿಸಿದನು. ॥19॥

(ಶ್ಲೋಕ-20)

ಮೂಲಮ್

ಗಚ್ಛಂತ ವಾಲಿನಂ ತಾರಾ ಗೃಹೀತ್ವಾ ನಿಷಿಷೇಧ ತಮ್ ।
ನ ಗಂತವ್ಯಂ ತ್ವಯೇದಾನೀಂ ಶಂಕಾ ಮೇಽತೀವ ಜಾಯತೇ ॥

(ಶ್ಲೋಕ-21)

ಮೂಲಮ್

ಇದಾನೀಮೇವ ತೇ ಭಗ್ನಃ ಪುನರಾಯಾತಿ ಸತ್ವರಃ ।
ಸಹಾಯೋ ಬಲವಾಂಸ್ತಸ್ಯ ಕಶ್ಚಿನ್ನೂನಂ ಸಮಾಗತಃ ॥

ಅನುವಾದ

ಹೋಗುತ್ತಿರುವ ವಾಲಿಯನ್ನು ಅವನ ಪತ್ನೀ ತಾರೆಯು ಕೈ ಹಿಡಿದು ತಡೆದು ‘‘ಸ್ವಾಮಿ! ಈಗ ನೀವು ಹೋಗಬಾರದು. ನನ್ನ ಹೃದಯದಲ್ಲಿ ಬಹಳ ಸಂಶಯವುಂಟಾಗಿದೆ. ಈಗ ತಾನೇ ನಿಮ್ಮಿಂದ ಪರಾಜಿತನಾಗಿದ್ದು ಮತ್ತೆ ಇಷ್ಟು ಬೇಗ ಅವನು ಬಂದುದನ್ನು ನೋಡಿದರೆ, ಯಾರೋ ಬಲಿಷ್ಠನ ಸಹಾಯವು ಅವನಿಗೆ ಖಂಡಿತನಾಗಿ ಒದಗಿರಬೇಕು’’ ಎಂದು ಹೇಳಿ ಅಡ್ಡಿಪಡಿಸಿದಳು. ॥20-21॥

(ಶ್ಲೋಕ-22)

ಮೂಲಮ್

ವಾಲೀ ತಾಮಾಹ ಹೇ ಸುಭ್ರು ಶಂಕಾ ತೇ ವೇತು ತದ್ಗತಾ ।
ಪ್ರಿಯೇ ಕರಂ ಪರಿತ್ಯಜ್ಯ ಗಚ್ಛ ಗಚ್ಛಾಮಿ ತಂ ರಿಪುಮ್ ॥

(ಶ್ಲೋಕ-23)

ಮೂಲಮ್

ಹತ್ವಾ ಶೀಘ್ರಂ ಸಮಾಯಾಸ್ಯೇ ಸಹಾಯಸ್ತಸ್ಯ ಕೋ ಭವೇತ್ ।
ಸಹಾಯೋ ಯದಿ ಸುಗ್ರೀವಸ್ತತೋ ಹತ್ವೋಭಯಂ ಕ್ಷಣಾತ್ ॥

(ಶ್ಲೋಕ-24)

ಮೂಲಮ್

ಆಯಾಸ್ಯೇ ಮಾ ಶುಚಃ ಶೂರಃ ಕಥಂ ತಿಷ್ಠೇದ್ ಗೃಹೇ ರಿಪುಮ್ ।
ಜ್ಞಾತ್ವಾಪ್ಯಾಹ್ವಯಮಾನಂ ಹಿ ಹತ್ವಾಯಾಸ್ಯಾಮಿ ಸುಂದರಿ ॥

ಅನುವಾದ

ವಾಲಿಯು ಹೇ ಸುಂದರವಾದ ಹುಬ್ಬುಳ್ಳವಳೆ! ಈ ವಿಷಯದಲ್ಲಿ ನಿನಗಿರುವ ಸಂಶಯವು ಪೊಳ್ಳಾದುದು. ಪ್ರಿಯೆ! ನನ್ನ ಕೈ ಬಿಡು. ನೀನು ಅಂತಃಪುರಕ್ಕೆ ಹೋಗು. ನಾನು ಈಗಲೇ ಹೋಗಿ ಆ ಶತ್ರುವನ್ನು ಬೇಗನೇ ಕೊಂದು ಬರುವೆನು. ಆ ಬಡಪಾಯಿಗೆ ಸಹಾಯಕನಾದರೋ ಯಾರು ಸಿಗುವರು? ಒಂದು ವೇಳೆ ಸುಗ್ರೀವನಿಗೆ ಯಾರಾದರು ಸಹಾಯಕನು ದೊರಕಿದ್ದರೆ ಅವರಿಬ್ಬರನ್ನು ಕ್ಷಣಮಾತ್ರದಲ್ಲಿ ಕೊಂದು ಹಿಂತಿರುಗುವೆನು. ಹೇ ಸುಂದರಿ! ನೀನು ದುಃಖಿಸಬೇಡ. ಶೂರನಾದವನು ಶತ್ರುವು ಯುದ್ಧಕ್ಕಾಗಿ ಆಹ್ವಾನಿಸಿದಾಗ ಹೇಗೆ ತಾನೇ ಸುಮ್ಮನಿರಬಲ್ಲನು? ಆದ್ದರಿಂದ ನಾನು ಈಗಲೇ ಆತನನ್ನು ಕೊಂದು ಬರುವೆನು’’ ಎಂದು ಸಮಾಧಾನ ಪಡಿಸಿದನು. ॥22-24॥

(ಶ್ಲೋಕ-25)

ಮೂಲಮ್ (ವಾಚನಮ್)

ತಾರೋವಾಚ

ಮೂಲಮ್

ಮತ್ತೋಽನ್ಯಛೃಣು ರಾಜೇಂದ್ರ ಶ್ರುತ್ವಾ ಕುರು ಯಥೋಚಿತಮ್ ।
ಆಹ ಮಾಮಂಗದಃ ಪುತ್ರೋ ಮೃಗಯಾಯಾಂ ಶ್ರುತಂ ವಚಃ ॥

ಅನುವಾದ

ತಾರೆ ಹೇಳಿದಳು — ‘‘ಹೇ ರಾಜೇಂದ್ರಾ! ನಾನು ಹೇಳುವ ಮತ್ತೊಂದು ವಿಚಾರವನ್ನು ಕೇಳು. ಕೇಳಿದ ಬಳಿಕ ನಿನ್ನಿಷ್ಟದಂತೆ ಮಾಡು. ಮಗನಾದ ಅಂಗದನು ಬೇಟೆಗೆ ಹೋದಾಗ ಕೇಳಿದ ಈ ಮಾತನ್ನು ನನಗೆ ಹೇಳಿರುವನು. ॥25॥

(ಶ್ಲೋಕ-26)

ಮೂಲಮ್

ಅಯೋಧ್ಯಾಧಿಪತಿಃ ಶ್ರೀಮಾನ್ ರಾಮೋ ದಾಶರಥಿಃ ಕಿಲ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಭಾರ್ಯಯಾ ಸಹ ॥

(ಶ್ಲೋಕ-27)

ಮೂಲಮ್

ಆಗತೋ ದಂಡಕಾರಣ್ಯಂ ತತ್ರ ಸೀತಾ ಹೃತಾ ಕಿಲ ।
ರಾವಣೇನ ಸಹ ಭ್ರಾತ್ರಾ ಮಾರ್ಗಮಾಣೋಽಥ ಜಾನಕೀಮ್ ॥

(ಶ್ಲೋಕ-28)

ಮೂಲಮ್

ಆಗತೋ ಋಷ್ಯಮೂಕಾದ್ರಿಂ ಸುಗ್ರೀವೇಣ ಸಮಾಗತಃ ।
ಚಕಾರ ತೇನ ಸುಗ್ರೀವಃ ಸಖ್ಯಂ ಚಾನಲಸಾಕ್ಷಿಕಮ್ ॥

ಅನುವಾದ

ಅಯೋಧ್ಯೆಯ ಒಡೆಯನಾದ ದಶರಥಪುತ್ರನಾದ ಶ್ರೀರಾಮನು ಸಹೋದರನಾದ ಲಕ್ಷ್ಮಣ ಹಾಗೂ ಪತ್ನೀ ಸೀತೆಯಿಂದೊಡಗೂಡಿ ದಂಡಕಾರಣ್ಯಕ್ಕೆ ಬಂದಿದ್ದನಂತೆ. ಅಲ್ಲಿ ರಾವಣನು ಸೀತೆಯನ್ನು ಕದ್ದುಕೊಂಡೊಯ್ದನಂತೆ. ಅನಂತರ ತಮ್ಮನೊಂದಿಗೆ ಶ್ರೀರಾಮನು ಜಾನಕಿಯನ್ನು ಹುಡುಕುತ್ತಾ ಋಷ್ಯ ಮೂಕ ಪರ್ವತಕ್ಕೆ ಬಂದು ಸುಗ್ರೀವನೊಡನೆ ಕೂಡಿಕೊಂಡಿರುವನಂತೆ, ಸುಗ್ರೀವನು ಅವನೊಡನೆ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಮಾಡಿಕೊಂಡಿರುವನಂತೆ. ॥26-28॥

(ಶ್ಲೋಕ-29)

ಮೂಲಮ್

ಪ್ರತಿಜ್ಞಾಂ ಕೃತವಾನ್ ರಾಮಃ ಸುಗ್ರೀವಾಯ ಸಲಕ್ಷ್ಮಣಃ ।
ವಾಲಿನಂ ಸಮರೇ ಹತ್ವಾ ರಾಜಾನಂ ತ್ವಾಂ ಕರೋಮ್ಯಹಮ್ ॥

(ಶ್ಲೋಕ-30)

ಮೂಲಮ್

ಇತಿ ನಿಶ್ಚಿತ್ಯ ತೌ ಯಾತೌ ನಿಶ್ಚಿತಂ ಶೃಣು ಮದ್ವಚಃ ।
ಇದಾನೀಮೇವ ತೇ ಭಗ್ನಃ ಕಥಂ ಪುನರುಪಾಗತಃ ॥

ಅನುವಾದ

ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಸುಗ್ರೀವನ ಬಳಿ ‘ವಾಲಿಯನ್ನು ಯುದ್ಧದಲ್ಲಿ ಕೊಂದು ನಿನ್ನನ್ನು ರಾಜನನ್ನಾಗಿ ಮಾಡುವೆನು’ ಎಂದು ಪ್ರತಿಜ್ಞೆ ಮಾಡಿರುವನಂತೆ. ಹೀಗೆ ನಿರ್ಣಯಿಸಿಕೊಂಡೇ ಇಬ್ಬರೂ ಹೊರಟಿದ್ದಾರೆ. ಆದ್ದರಿಂದ ನನ್ನ ಮಾತನ್ನು ನಿಜವೆಂದು ತಿಳಿಯಿರಿ. ಇಲ್ಲದಿದ್ದರೆ ನಿಮ್ಮಿಂದ ಪರಾಜಿತನಾಗಿ ಅವನು ಇಷ್ಟು ಬೇಗ ಹೇಗೆ ಬರುತ್ತಿದ್ದನು? ॥29-30॥

(ಶ್ಲೋಕ-31)

ಮೂಲಮ್

ಅತಸ್ತ್ವಂ ಸರ್ವಥಾ ವೈರಂ ತ್ಯಕ್ತ್ವಾ ಸುಗ್ರೀವ ಮಾನಯ ।
ಯೌವರಾಜ್ಯೇಽಭಿಷಿಂಚಾಶು ರಾಮಂ ತ್ವಂ ಶರಣಂ ವ್ರಜ ॥

ಅನುವಾದ

ಆದ್ದರಿಂದ ಈಗ ನೀವು ಸುಗ್ರೀವನ ಕುರಿತಾದ ಎಲ್ಲ ವೈರವನ್ನು ಬಿಟ್ಟು, ಆತನನ್ನು ಕರೆತಂದು ಬೇಗನೇ ಯುವ ರಾಜನನ್ನಾಗಿ ಅಭಿಷೇಕ ಮಾಡಿರಿ ಹಾಗೂ ನೀವು ರಾಮನಿಗೆ ಶರಣಾಗಿರಿ. ॥31॥

(ಶ್ಲೋಕ-32)

ಮೂಲಮ್

ಪಾಹಿ ಮಾಮಂಗದಂ ರಾಜ್ಯಂ ಕುಲಂ ಚ ಹರಿಪುಂಗವ ।
ಇತ್ಯುಕ್ತ್ವಾಶ್ರುಮುಖೀ ತಾರಾ ಪಾದಯೋಃ ಪ್ರಣಿಪತ್ಯ ತಮ್ ॥

(ಶ್ಲೋಕ-33)

ಮೂಲಮ್

ಹಸ್ತಾಭ್ಯಾಂ ಚರಣೌ ಧೃತ್ಯಾ ರುರೋದ ಭಯವಿಹ್ವಲಾ ।
ತಾಮಾಲಿಂಗ್ಯ ತದಾ ವಾಲೀ ಸಸ್ನೇಹಮಿದಮಬ್ರವೀತ್ ॥

ಅನುವಾದ

ಹೇ ವಾನರಶ್ರೇಷ್ಠನೆ! ನನ್ನನ್ನು, ಅಂಗದನನ್ನು ರಾಜ್ಯವನ್ನು ಮತ್ತು ವಾನರಕುಲವನ್ನು ಕಾಪಾಡುವವರಾಗಿರಿ. ಹೀಗೆಂದು ಕಣ್ಣೀರಿಡುತ್ತಾ ತಾರೆಯು ಅವನ ಎರಡೂ ಪಾದಗಳಿಗೆ ನಮಸ್ಕರಿಸಿ, ಹೆದರಿದವಳಾಗಿ ತನ್ನ ಎರಡೂ ಕೈಗಳಿಂದ ಅವನ ಕಾಲುಗಳನ್ನು ಹಿಡಿದುಕೊಂಡು ಅಳತೊಡಗಿದಳು. ಆಗ ವಾಲಿಯು ಪ್ರೀತಿಯಿಂದ ಅವಳನ್ನು ಅಪ್ಪಿಕೊಂಡು ಹೀಗೆಂದು ನುಡಿದನು — ॥32-33॥

(ಶ್ಲೋಕ-34)

ಮೂಲಮ್

ಸ್ತ್ರೀಸ್ವಭಾವಾದ್ಬಿಭೇಷಿ ತ್ವಂ ಪ್ರಿಯೇ ನಾಸ್ತಿ ಭಯಂ ಮಮ ।
ರಾಮೋ ಯದಿ ಸಮಾಯಾತೋ ಲಕ್ಷ್ಮಣೇನ ಸಮಂ ಪ್ರಭುಃ ॥

(ಶ್ಲೋಕ-35)

ಮೂಲಮ್

ತದಾ ರಾಮೇಣ ಮೇ ಸ್ನೇಹೋ ಭವಿಷ್ಯತಿ ನ ಸಂಶಯಃ ।
ರಾಮೋ ನಾರಾಯಣಃ ಸಾಕ್ಷಾದವತೀರ್ಣೋಖಿಲಪ್ರಭುಃ ॥

(ಶ್ಲೋಕ-36)

ಮೂಲಮ್

ಭೂಭಾರಹರಣಾರ್ಥಾಯ ಶ್ರುತಂ ಪೂರ್ವಂ ಮಯಾನಘೇ ।
ಸ್ವಪಕ್ಷಃ ಪರಪಕ್ಷೋ ವಾ ನಾಸ್ತಿ ತಸ್ಯ ಪರಾತ್ಮನಃ ॥

ಅನುವಾದ

‘‘ಪ್ರಿಯೆ! ಹೆಣ್ಣು ಸ್ವಭಾವಕ್ಕೆ ತಕ್ಕಂತೆ ನೀನು ಹೆದರಿಕೊಂಡಿರುವೆ. ನನಗೇನೂ ಭಯವಿಲ್ಲ. ಒಂದು ವೇಳೆ ಲಕ್ಷ್ಮಣನೊಂದಿಗೆ ರಾಮನು ಬಂದಿದ್ದರೆ, ಆಗ ರಾಮನೊಡನೆ ನನಗೆ ಸ್ನೇಹ ಉಂಟಾದೀತು. ಇದರಲ್ಲಿ ಸಂಶಯವೇ ಇಲ್ಲ. ಎಲೈ ಪಾಪರಹಿತಳೆ! ರಾಮನು ಸಾಕ್ಷಾತ್ ನಾರಾಯಣನೇ ಆಗಿದ್ದು ಭೂಮಿಯ ಭಾರವನ್ನು ಕಳೆಯುವುದಕ್ಕಾಗಿ ಜಗತ್ತಿನ ಪ್ರಭುವು ಅವತಾರ ಮಾಡಿದ್ದಾನೆಂದು ಹಿಂದೆ ನಾನು ಕೇಳಿದ್ದೇನೆ. ಪರಮಾತ್ಮನಾದ ಅವನಿಗೆ ತನ್ನವರು, ಶತ್ರುಗಳು ಎಂಬ ಭೇದವಿಲ್ಲ. ॥34-36॥

(ಶ್ಲೋಕ-37)

ಮೂಲಮ್

ಆನೇಷ್ಯಾಮಿ ಗೃಹಂ ಸಾಧ್ವಿ ನತ್ವಾ ತಚ್ಚರಣಾಂಬುಜಮ್ ।
ಭಜತೋಽನುಭಜತ್ಯೇಷ ಭಕ್ತಿಗಮ್ಯಃ ಸುರೇಶ್ವರಃ ॥

ಅನುವಾದ

ಎಲೈ ಪತಿವ್ರತೆಯೆ! ಆತನ ಪಾದಾರವಿಂದಗಳಿಗೆ ಎರಗಿ ನನ್ನ ಮನೆಗೆ ಕರೆತರುವೆನು. ದೇವತೆಗಳ ಒಡೆಯನಾದ ಅವನು ತನ್ನನ್ನು ಸೇವಿಸುವವರನ್ನು ಅನುಸರಿಸುವನು. ಅವನು ಭಕ್ತಿಗೆ ದೊರೆಯುವವನಾಗಿದ್ದಾನೆ. ॥37॥

(ಶ್ಲೋಕ-38)

ಮೂಲಮ್

ಯದಿ ಸ್ವಯಂ ಸಮಾಯಾತಿ ಸುಗ್ರೀವೋ ಹನ್ಮಿ ತಂ ಕ್ಷಣಾತ್ ।
ಯದುಕ್ತಂ ಯೌವರಾಜ್ಯಾಯ ಸುಗ್ರೀವಸ್ಯಾಭಿಷೇಚನಮ್ ॥

(ಶ್ಲೋಕ-39)

ಮೂಲಮ್

ಕಥಮಾಹೂಯಮಾನೋಽಹಂ ಯುದ್ಧಾಯ ರಿಪುಣಾ ಪ್ರಿಯೇ ।
ಶೂರೋಽಹಂ ಸರ್ವಲೋಕಾನಾಂ ಸಮ್ಮತಃ ಶುಭಲಕ್ಷಣೇ ॥

(ಶ್ಲೋಕ-40)

ಮೂಲಮ್

ಭೀತಭೀತಮಿದಂ ವಾಕ್ಯಂ ಕಥಂ ವಾಲೀ ವದೇತ್ಪ್ರಿಯೇ ।
ತಸ್ಮಾಚ್ಛೋಕಂ ಪರಿತ್ಯಜ್ಯ ತಿಷ್ಠ ಸುಂದರಿ ವೇಶ್ಮನಿ ॥

ಅನುವಾದ

ಸುಗ್ರೀವನೇನಾದರೂ ಸ್ವತಃ ಬಂದಿದ್ದರೆ ಕ್ಷಣಮಾತ್ರದಲ್ಲಿ ಅವನನ್ನು ಕೊಂದುಬಿಡುವೆ. ಇದಲ್ಲದೆ ಸುಗ್ರೀವನನ್ನು ಯುವರಾಜನಾಗಿ ಪಟ್ಟಾಭಿಷೇಕ ಮಾಡಬೇಕೆಂದು ನೀನು ಹೇಳಿದೆಯಲ್ಲವೆ? ಆದರೆ ಎಲೈ ಪ್ರಿಯೆ! ಶತ್ರುವಿನಿಂದ ಯುದ್ಧಕ್ಕಾಗಿ ಕರೆಯಲ್ಪಟ್ಟಾಗ ನಾನು ಇದನ್ನು ಹೇಗೆ ತಾನೇ ಮಾಡಬಲ್ಲೆ? ಎಲೈ ಶುಭಲಕ್ಷಣಳೆ! ನಾನಾದರೋ ಎಲ್ಲ ಜನರಿಂದ ಶೂರನೆಂದೆನಿಸಿಕೊಂಡಿರುವೆನು. ಪ್ರಿಯಳೆ! ವಾಲಿ ಯೆನಿಸಿದ ನಾನು ಹೆದರಿಕೊಂಡು ಈ ಮಾತನ್ನು ಹೇಗೆ ಹೇಳಲಿ? ಆದ್ದರಿಂದ ನೀನು ಅಳುವುದನ್ನು ನಿಲ್ಲಿಸಿ ನಿಶ್ಚಿಂತಳಾಗಿ ಅರಮನೆಯಲ್ಲಿರು. ॥38-40॥

(ಶ್ಲೋಕ-41)

ಮೂಲಮ್

ಏವಮಾಶ್ವಾಸ್ಯ ತಾರಾಂ ತಾಂ ಶೋಚನ್ತೀಮಶ್ರುಲೋಚನಾಮ್ ।
ಗತೋ ವಾಲೀ ಸಮುದ್ಯುಕ್ತಃ ಸುಗ್ರೀವಸ್ಯ ವಧಾಯ ಸಃ ॥

ಅನುವಾದ

ಹೀಗೆ ಅಳುತ್ತಾ ಕಣ್ಣೀರಿಡುತ್ತಿರುವ ಆ ತಾರೆಯನ್ನು ಸಮಾಧಾನಗೊಳಿಸಿ ವಾಲಿಯು ಯುದ್ಧಕ್ಕೆ ಸಿದ್ಧನಾಗಿ ಸುಗ್ರೀವನನ್ನು ಕೊಂದುಬಿಡಲು ಹೊರಟನು. ॥41॥

(ಶ್ಲೋಕ-42)

ಮೂಲಮ್

ದೃಷ್ಟ್ವಾ ವಾಲಿನಮಾಯಾನ್ತಂ ಸುಗ್ರೀವೋ ಭೀಮವಿಕ್ರಮಃ ।
ಉತ್ಪಪಾತ ಗಲೇ ಬದ್ಧಪುಷ್ಪಮಾಲೋ ಮತಂಗವತ್ ॥

ಅನುವಾದ

ವಾಲಿಯು ಬರುತ್ತಿರುವುದನ್ನು ಕಂಡು ಪ್ರಚಂಡ ಪರಾಕ್ರಮಿ ಸುಗ್ರೀವನು ಕೊರಳಲ್ಲಿ ಹೂಮಾಲೆಯನ್ನು ತೊಟ್ಟುಕೊಂಡು ಆನೆಯಂತೆ ಮೇಲೆರಗಿದನು. ॥42॥

(ಶ್ಲೋಕ-43)

ಮೂಲಮ್

ಮುಷ್ಟಿಭ್ಯಾಂ ತಾಡಯಾಮಾಸ ವಾಲಿನಂ ಸೋಽಪಿ ತಂ ತಥಾ ।
ಅಹನ್ವಾಲೀ ಚ ಸುಗ್ರೀವಂ ಸುಗ್ರೀವೋ ವಾಲಿನಂ ತಥಾ ॥

ಅನುವಾದ

ವಾಲಿಯನ್ನು ಎರಡೂ ಕೈಗಳ ಮುಷ್ಟಿಗಳಿಂದ ಗುದ್ದಿದನು. ವಾಲಿಯು ಸುಗ್ರೀವನನ್ನು ಗುದ್ದಿದನು. ಹೀಗೆ ಸುಗ್ರೀವ ಮತ್ತು ವಾಲಿಯರಲ್ಲಿ, ಸುಗ್ರೀವನು ಪರಸ್ಪರ ಭಾರೀ ಮುಷ್ಟಿಯುದ್ಧ ನಡೆಯಿತು. ॥43॥

(ಶ್ಲೋಕ-44)

ಮೂಲಮ್

ರಾಮಂ ವಿಲೋಕಯನ್ನೇವ ಸುಗ್ರೀವೋ ಯುಯುಧೇ ಯುಧಿ ।
ಇತ್ಯೇವಂ ಯುದ್ಧ್ಯಮಾನೌ ತೌ ದೃಷ್ಟ್ವಾ ರಾಮಃ ಪ್ರತಾಪವಾನ್ ॥

(ಶ್ಲೋಕ-45)

ಮೂಲಮ್

ಬಾಣಮಾದಾಯ ತೂಣೀರಾದೈನ್ದ್ರೇ ಧನುಷಿ ಸಂದಧೇ ।
ಆಕೃಷ್ಯ ಕರ್ಣಪರ್ಯಂತಮದೃಶ್ಯೋ ವೃಕ್ಷಶಂಡಗಃ ॥

(ಶ್ಲೋಕ-46)

ಮೂಲಮ್

ನಿರೀಕ್ಷ್ಯ ವಾಲಿನಂ ಸಮ್ಯಗ್ ಲಕ್ಷ್ಯಂ ತದ್ ಧೃದಯಂ ಹರಿಃ ।
ಉತ್ಸಸರ್ಜಾಶನಿಸಮಂ ಮಹಾವೇಗಂ ಮಹಾಬಲಃ ॥

ಅನುವಾದ

ಯುದ್ಧ ಮಾಡುವಾಗಲೂ ಸುಗ್ರೀವನ ದೃಷ್ಟಿ ಶ್ರೀರಾಮನ ಕಡೆಗೇ ಇತ್ತು. ಹೀಗೆ ಯುದ್ಧ ಮಾಡುತ್ತಿರುವ ಅವರಿಬ್ಬರನ್ನು ಕಂಡು ಪರಮ ಪ್ರತಾಪಶಾಲಿಯಾದ ಶ್ರೀರಘುನಾಥನು ಬತ್ತಳಿಕೆಯಿಂದ ಬಾಣವೊಂದನ್ನು ತೆಗೆದು ಇಂದ್ರಧನುಸ್ಸಿಗೆ ಹೂಡಿ ಮರದ ಮರೆಯಲ್ಲಿ ನಿಂತು ಆಕರ್ಣಾಂತವಾಗಿ ಸೆಳೆದು ವಾಲಿಯನ್ನು ನೋಡುತ್ತಾ ಸರಿಯಾಗಿ ಗುರಿಯಿಟ್ಟು ಮಹಾ ಬಲಶಾಲಿಯಾದ ಶ್ರೀಹರಿಯು ಸಿಡಿಲಿಗೆ ಸಮಾನವಾದ ವೇಗವುಳ್ಳ ಬಾಣವನ್ನು ಪ್ರಯೋಗಿಸಿದನು. ॥44-46॥

(ಶ್ಲೋಕ-47)

ಮೂಲಮ್

ಬಿಭೇದ ಸ ಶರೋ ವಕ್ಷೋ ವಾಲಿನಃ ಕಂಪಯನ್ಮಹೀಮ್ ।
ಉತ್ಪಪಾತ ಮಹಾಶಬ್ದಂ ಮುಂಚನ್ಸ ನಿಪಪಾತ ಹ ॥

ಅನುವಾದ

ಆ ಬಾಣವು ಭೂಮಿಯನ್ನು ನಡುಗಿಸುತ್ತಾ ವಾಲಿಯ ಎದೆಯನ್ನು ಸೀಳಿತು. ಅವನು ಗಟ್ಟಿಯಾಗಿ ಕೂಗುತ್ತಾ ಮೇಲಕ್ಕೆ ನೆಗೆದು ನೆಲಕ್ಕೆ ಉರುಳಿದನು. ॥47॥

(ಶ್ಲೋಕ-48)

ಮೂಲಮ್

ತದಾ ಮುಹೂರ್ತ್ತಂ ನಿಃಸಂಜ್ಞೋ ಭೂತ್ವಾ ಚೇತನಮಾಪ ಸಃ ।
ತತೋ ವಾಲೀ ದದರ್ಶಾಗ್ರೇ ರಾಮಂ ರಾಜೀವಲೋಚನಮ್ ।
ಧನುರಾಲಂಬ್ಯ ವಾಮೇನ ಹಸ್ತೇನಾನ್ಯೇನ ಸಾಯಕಮ್ ॥

(ಶ್ಲೋಕ-49)

ಮೂಲಮ್

ಬಿಭ್ರಾಣಂ ಚೀರವಸನಂ ಜಟಾಮುಕುಟಧಾರಿಣಮ್ ।
ವಿಶಾಲವಕ್ಷಸಂ ಭ್ರಾಜದ್ವನಮಾಲಾವಿಭೂಷಿತಮ್ ॥

(ಶ್ಲೋಕ-50)

ಮೂಲಮ್

ಪೀನಚಾರ್ವಾಯತಭುಜಂ ನವದೂರ್ವಾದಲಚ್ಛವಿಮ್ ।
ಸುಗ್ರೀವಲಕ್ಷ್ಮಣಾಭ್ಯಾಂ ಚ ಪಾರ್ಶ್ವಯೋಃ ಪರಿಸೇವಿತಮ್ ॥

ಅನುವಾದ

ಆಗ ಮುಹೂರ್ತಕಾಲ ಜ್ಞಾನತಪ್ಪಿದ ವಾಲಿಯು ಮತ್ತೆ ಎಚ್ಚರಗೊಂಡು ಎದುರಿಗೆ ನಿಂತಿರುವ ಕಮಲನೇತ್ರನೂ, ಎಡಗೈಯಲ್ಲಿ ಧನುಸ್ಸನ್ನೂ, ಬಲಗೈಯಲ್ಲಿ ಬಾಣವನ್ನೂ ಧರಿಸಿರುವ, ನಾರು ಬಟ್ಟೆಯನ್ನುಟ್ಟು, ತಲೆಯ ಮೇಲೆ ಜಟೆಯ ಕಿರೀಟಧಾರಿಯಾದ, ಅಗಲವಾದ ಎದೆಯುಳ್ಳ, ವನಮಾಲೆಗಳಿಂದ ಅಲಂಕೃತನಾಗಿದ್ದನು. ಸುಂದರವಾದ ಭುಜಗಳು ದಷ್ಟ-ಪುಷ್ಟವಾಗಿದ್ದು ದೀರ್ಘವಾಗಿದ್ದುವು. ಶರೀರದ ಕಾಂತಿಯು ಹೊಸ ಗರಿಕೆಯ ಚಿಗುರಿನಂತೆ ಶ್ಯಾಮಲವರ್ಣವಾಗಿದ್ದು, ಎರಡೂ ಕಡೆಗಳಲ್ಲಿ ಲಕ್ಷ್ಮಣ ಮತ್ತು ಸುಗ್ರೀವರಿಂದ ಸೇವಿತನಾದ ಶ್ರೀರಾಮನನ್ನು ಕಂಡನು. ॥48-50॥

(ಶ್ಲೋಕ-51)

ಮೂಲಮ್

ವಿಲೋಕ್ಯ ಶನಕೈಃ ಪ್ರಾಹ ವಾಲೀ ರಾಮಂ ವಿಗರ್ಹಯನ್
ಕಿಂ ಮಯಾಪಕೃತಂ ರಾಮ ತವ ಯೇನ ಹತೋಸ್ಮ್ಯಹಮ್ ॥

ಅನುವಾದ

ಶ್ರೀರಾಮಚಂದ್ರನನ್ನು ನೋಡಿದ ವಾಲಿಯು ಮೂದಲಿ ಸುತ್ತಾ ಮೆಲ್ಲನೆ ಹೇಳತೊಡಗಿದ - ‘‘ಎಲೈ ರಾಮನೆ! ನೀನು ನನ್ನನ್ನು ಕೊಂದೆಯಲ್ಲ, ನಾನು ನಿನಗೆ ಮಾಡಿರುವ ಅಪರಾಧವಾದರೂ ಏನು? ॥51॥

(ಶ್ಲೋಕ-52)

ಮೂಲಮ್

ರಾಜಧರ್ಮಮವಿಜ್ಞಾಯ ಗರ್ಹಿತಂ ಕರ್ಮ ತೇ ಕೃತಮ್ ।
ವೃಕ್ಷಶಂಡೇ ತಿರೋಭೂತ್ವಾ ತ್ಯಜತಾ ಮಯಿ ಸಾಯಕಮ್ ॥

(ಶ್ಲೋಕ-53)

ಮೂಲಮ್

ಯಶಃ ಕಿಂ ಲಪ್ಸ್ಯಸೇ ರಾಮ ಚೋರವತ್ಕೃತಸಂಗರಃ ।
ಯದಿ ಕ್ಷತ್ರಿಯದಾಯಾದೋ ಮನೋರ್ವಂಶಸಮುದ್ಭವಃ ॥

(ಶ್ಲೋಕ-54)

ಮೂಲಮ್

ಯುದ್ಧಂ ಕೃತ್ವಾ ಸಮಕ್ಷಂ ಮೇ ಪ್ರಾಪ್ಸ್ಯಸೇ ತತ್ಫಲಂ ತದಾ ।
ಸುಗ್ರೀವೇಣ ಕೃತಂ ಕಿಂ ತೇ ಮಯಾ ವಾ ನ ಕೃತಂ ಕಿಮು ॥

ಅನುವಾದ

ರಾಜಧರ್ಮವನ್ನರಿಯದೆ ನೀನು ನಿಂದನೀಯ ಕೆಲಸ ಮಾಡಿರುವೆ. ಹೇ ರಾಮಾ! ನೀನು ಕಳ್ಳನಂತೆ ಮರದ ಮರೆಯಾಗಿನಿಂತು ನನ್ನ ಮೇಲೆ ಬಾಣ ಪ್ರಯೋಗಿಸಿದೆಯಲ್ಲ! ಇದರಿಂದ ಯಾವ ಕೀರ್ತಿ ಸಂಪಾದಿಸಿದೆ? ಮನುವಿನ ಕುಲದಲ್ಲಿ ಹುಟ್ಟಿದವನಾಗಿ ಕ್ಷತ್ರಿಯವಂಶಸ್ಥನಾಗಿದ್ದಲ್ಲಿ ಎದುರಿಗೆ ನಿಂತು ಯುದ್ಧ ಮಾಡಿದ್ದರೆ ಆ ಫಲ (ಯಶ ಅಥವಾ ಕೀರ್ತಿ) ಪಡೆಯುತ್ತಿದ್ದೆ. ಸುಗ್ರೀವನು ನಿನಗೆ ಮಾಡಿದ್ದಾದರೂ ಏನು? ನಾನು ಮಾಡದಿರುವುದು ಏನು? ॥52-54॥

(ಶ್ಲೋಕ-55)

ಮೂಲಮ್

ರಾವಣೇನ ಹೃತಾ ಭಾರ್ಯಾ ತವ ರಾಮ ಮಹಾವನೇ ।
ಸುಗ್ರೀವಂ ಶರಣಂ ಯಾತಸ್ತದರ್ಥಮಿತಿ ಶುಶ್ರುಮ ॥

ಅನುವಾದ

ಹೇ ರಾಮಾ! ದಂಡಕಾರಣ್ಯದಲ್ಲಿ ನಿನ್ನ ಹೆಂಡತಿಯನ್ನು ರಾವಣನು ಕದ್ದೊಯ್ದಿರುವನು. ಅವಳನ್ನು ಮತ್ತೆ ಪಡೆಯಲಿಕ್ಕಾಗಿ ಸುಗ್ರೀವನನ್ನು ಆಶ್ರಯಿಸಿರುವೆಯಂತೆ ಎಂದು ನಾನು ಕೇಳಿದ್ದೆ. ॥55॥

(ಶ್ಲೋಕ-56)

ಮೂಲಮ್

ಬತ ರಾಮ ನ ಜಾನೀಷೇ ಮದ್ಬಲಂ ಲೋಕವಿಶ್ರುತಮ್ ।
ರಾವಣಂ ಸಕುಲಂ ಬದ್ಧ್ವಾ ಸಸೀತಂ ಲಂಕಯಾ ಸಹ ॥

(ಶ್ಲೋಕ-57)

ಮೂಲಮ್

ಆನಯಾಮಿ ಮುಹೂರ್ತ್ತಾರ್ದ್ಧಾದ್ಯದಿ ಚೇಚ್ಛಾಮಿ ರಾಘವ ।
ಧರ್ಮಿಷ್ಠ ಇತಿ ಲೋಕೇಽಸ್ಮಿನ್ ಕಥ್ಯಸೇ ರಘುನಂದನ ॥

ಅನುವಾದ

ಅಯ್ಯೊ! ಲೋಕ ಪ್ರಸಿದ್ಧವಾದ ನನ್ನ ಶಕ್ತಿಯನ್ನು ನೀನು ತಿಳಿಯದೆ ಹೋದೆಯಲ್ಲ! ಹೇ ರಾಘವಾ! ನಾನು ಮನಸ್ಸು ಮಾಡಿದ್ದರೆ ಕ್ಷಣಾರ್ಧದಲ್ಲಿ ಸೀತೆಯನ್ನು, ಲಂಕೆಯೊಡನೆ ರಾಕ್ಷಸಕುಲಸಹಿತ ರಾವಣನನ್ನೊಡಗೊಂಡು ಕಟ್ಟಿ ತರುತ್ತಿದ್ದೆ. ಹೇ ರಘುನಂದನಾ! ನೀನಾದರೋ ಈ ಲೋಕದಲ್ಲಿ ಧರ್ಮಿಷ್ಠನೆಂದು ಹೇಳಿಸಿಕೊಳ್ಳುವೆ. ॥56-57॥

(ಶ್ಲೋಕ-58)

ಮೂಲಮ್

ವಾನರಂ ವ್ಯಾಧವದ್ಧತ್ವಾ ಧರ್ಮಂ ಕಂ ಲಪ್ಸ್ಯಸೇ ವದ ।
ಅಭಕ್ಷ್ಯಂ ವಾನರಂ ಮಾಂಸಂ ಹತ್ವಾ ಮಾಂ ಕಿಂ ಕರಿಷ್ಯಸಿ ॥

ಅನುವಾದ

ಆದರೆ ಬೇಡನಂತೆ ಒಂದು ಕಪಿಯನ್ನು ಕೊಂದ ನೀನು ಯಾವ ಧರ್ಮ(ಪುಣ್ಯ)ವನ್ನು ಪಡೆಯುವೆ? ಹೇಳು. ವಾನರ ಮಾಂಸವು ತಿನ್ನಲು ನಿಷೇಧವಿರುವಾಗ ನನ್ನನ್ನು ಕೊಂದಾದರೂ ಏನು ಮಾಡುವೆ?’’ ॥58॥

(ಶ್ಲೋಕ-59)

ಮೂಲಮ್

ಇತ್ಯೇವಂ ಬಹು ಭಾಷನ್ತಂ ವಾಲಿನಂ ರಾಘವೋಽಬ್ರವೀತ್ ।
ಧರ್ಮಸ್ಯ ಗೋಪ್ತಾ ಲೋಕೇಸ್ಮಿಂಶ್ಚರಾಮಿ ಸಶರಾಸನಃ ॥

(ಶ್ಲೋಕ-60)

ಮೂಲಮ್

ಅಧರ್ಮಕಾರಿಣಂ ಹತ್ವಾ ಸದ್ಧರ್ಮಂ ಪಾಲಯಾಮ್ಯಹಮ್ ।
ದುಹಿತಾ ಭಗಿನೀ ಭ್ರಾತುರ್ಭಾರ್ಯಾ ಚೈವ ತಥಾ ಸ್ನುಷಾ ॥

(ಶ್ಲೋಕ-61)

ಮೂಲಮ್

ಸಮಾ ಯೋ ರಮತೇ ತಾಸಾಮೇಕಾಮಪಿ ವಿಮೂಢಧೀಃ ।
ಪಾತಕೀ ಸ ತು ವಿಜ್ಞೇಯಃ ಸ ವಧ್ಯೋ ರಾಜಭಿಃ ಸದಾ ॥

ಅನುವಾದ

ಹೀಗೆಲ್ಲ ಅತಿಯಾಗಿ ಮಾತಾಡುತ್ತಿದ್ದ ವಾಲಿಯನ್ನು ಕುರಿತು ರಾಮನು ಇಂತೆಂದನು - ‘‘ಧರ್ಮವನ್ನು ಕಾಪಾಡಲಿಕ್ಕಾಗಿ ನಾನು ಈ ಲೋಕದಲ್ಲಿ ಧನುರ್ಧಾರಿಯಾಗಿ ಸಂಚರಿಸುತ್ತಾ ಅಧರ್ಮಿಗಳನ್ನು ನಾಶಗೊಳಿಸಿ ಸದ್ಧರ್ಮವನ್ನು ಪಾಲಿಸುತ್ತಿರುವೆನು. ಮಗಳು, ಸೋದರಿ, ಸೋದರನ ಪತ್ನೀ, ಸೊಸೆ ಈ ನಾಲ್ವರೂ ಸಮಾನರು. ಇವರಲ್ಲಿ ಯಾರೊಂದಿಗಾದರೂ ಮೂಢ ಬುದ್ಧಿಯಿಂದ ರಮಿಸಿದ್ದನಾದರೆ ಅವನನ್ನು ಪಾಪಿಯೆಂದೇ ತಿಳಿಯಬೇಕು. ಅಂಥವನನ್ನು ಕೊಲ್ಲುವುದು ರಾಜನಿಗೆ ಉಚಿತವಾಗಿದೆ. ॥59-61॥

(ಶ್ಲೋಕ-62)

ಮೂಲಮ್

ತ್ವಂ ತು ಭ್ರಾತುಃ ಕನಿಷ್ಠಸ್ಯ ಭಾರ್ಯಾಯಾಂ ರಮಸೇ ಬಲಾತ್ ।
ಅತೋ ಮಯಾ ಧರ್ಮವಿದಾ ಹತೋಽಸಿ ವನಗೋಚರ ॥

(ಶ್ಲೋಕ-63)

ಮೂಲಮ್

ತ್ವಂ ಕಪಿತ್ವಾನ್ನ ಜಾನೀಷೇ ಮಹಾನ್ತೋ ವಿಚರಂತಿಯತ್ ।
ಲೋಕಂ ಪುನಾನಾಃ ಸಂಚಾರೈರತಸ್ತಾನ್ನಾತಿಭಾಷಯೇತ್ ॥

ಅನುವಾದ

ನೀನಾದರೋ ಕಿರಿಯ ತಮ್ಮನ ಹೆಂಡತಿಯಲ್ಲಿ ಬಲಾತ್ಕಾರದಿಂದ ರಮಿಸಿರುವೆ. ಆದ್ದರಿಂದ ಎಲೈ ಕಾಡು ಪ್ರಾಣಿಯೆ! ಧರ್ಮಜ್ಞನಾದ ನನ್ನಿಂದ ಹತನಾಗಿರುವೆ. ಮಹಾಪುರುಷರು ಸದಾಕಾಲ ತಮ್ಮ ಆಚರಣೆಗಳಿಂದ ಲೋಕವನ್ನು ಪವಿತ್ರಗೊಳಿಸುತ್ತಾ ಸಂಚರಿಸುತ್ತಿರುತ್ತಾರೆ ಎಂಬುದನ್ನು ನೀನು ಕಪಿಯಾದ್ದರಿಂದ ತಿಳಿಯೆ. ಅದಕ್ಕಾಗಿ ಅವರನ್ನು ಹೀಗೆ ದೂಷಿಸಬಾರದು.’’ ॥62-63॥

(ಶ್ಲೋಕ-64)

ಮೂಲಮ್

ತಚ್ಛ್ರುತ್ವಾ ಭಯಸಂತ್ರಸ್ತೋ ಜ್ಞಾತ್ವಾ ರಾಮಂ ರಮಾಪತಿಮ್ ।
ವಾಲೀ ಪ್ರಣಮ್ಯ ರಭಸಾದ್ರಾಮಂ ವಚನಮಬ್ರವೀತ್ ॥

ಅನುವಾದ

ಭಗವಂತನ ಈ ಮಾತುಗಳನ್ನು ಕೇಳಿ ಹೆದರಿದ ವಾಲಿಯು ರಾಮನನ್ನು ಸಾಕ್ಷಾತ್ ಲಕ್ಷ್ಮೀಪತಿಯಾದ ಶ್ರೀಹರಿಯೇ ಎಂದು ಅರಿತವನಾಗಿ ಕೂಡಲೇ ನಮಸ್ಕರಿಸಿ ಹೀಗೆಂದನು - ॥64॥

(ಶ್ಲೋಕ-65)

ಮೂಲಮ್

ರಾಮ ರಾಮ ಮಹಾಭಾಗ ಜಾನೇ ತ್ವಾಂ ಪರಮೇಶ್ವರಮ್ ।
ಅಜಾನತಾ ಮಯಾ ಕಿಂಚಿದುಕ್ತಂ ತತ್ ಕ್ಷನ್ತುಮರ್ಹಸಿ ॥

ಅನುವಾದ

‘‘ಹೇ ರಾಮ! ರಾಮಾ! ಮಹಾತ್ಮನೆ! ನೀನು ಸಾಕ್ಷಾತ್ ಪರಮೇಶ್ವರನೆಂದು ತಿಳಿದುಕೊಂಡೆ. ಅರಿಯದೆ ನಾನು ಆಡಿದ ಅಲ್ಪ ಮಾತುಗಳನ್ನು ನೀನು ಕ್ಷಮಿಸಿಬಿಡು. ॥65॥

(ಶ್ಲೋಕ-66)

ಮೂಲಮ್

ಸಾಕ್ಷಾತ್ತ್ವಚ್ಛರಘಾತೇನ ವಿಶೇಷೇಣ ತವಾಗ್ರತಃ ।
ತ್ಯಜಾಮ್ಯಸೂನ್ಮಹಾಯೋಗಿದುರ್ಲಭಂ ತವ ದರ್ಶನಮ್ ॥

ಅನುವಾದ

ನೇರವಾಗಿ ನಿನ್ನ ಬಾಣ ಪ್ರಹಾರದಿಂದ ಹಾಗೂ ಹೆಚ್ಚಾಗಿ ನಿನ್ನ ಎದುರಿಗೇ ಈಗ ಪ್ರಾಣಬಿಡುವೆನು. ನಿನ್ನ ದರ್ಶನವು ಯೋಗಿಗಳಿಗೂ ದುರ್ಲಭವಾಗಿದೆ. ॥66॥

(ಶ್ಲೋಕ-67)

ಮೂಲಮ್

ಯನ್ನಾಮ ವಿವಶೋ ಗೃಹ್ಣನ್ ಮ್ರಿಯಮಾಣಃ ಪರಂ ಪದಮ್ ।
ಯಾತಿ ಸಾಕ್ಷಾತ್ಸ ಏವಾದ್ಯ ಮುಮೂರ್ಷೋರ್ಮೇ ಪುರಃ ಸ್ಥಿತಃ ॥

ಅನುವಾದ

ಪರಾಧೀನನಾದಾಗಲೂ ನಿನ್ನ ನಾಮವನ್ನು ನೆನೆಯುತ್ತಾ ಶರೀರವನ್ನು ಬಿಡುವವನು ಪರಮ ಪದವಿಯನ್ನೇ ಹೊಂದುವನು. ಅಂತಹ ಸಾಕ್ಷಾತ್ ಭಗವಂತನು ಸಾಯುತ್ತಿರುವ ನನ್ನ ಮುಂದೆ ಪ್ರತ್ಯಕ್ಷನಾಗಿರುವನು. ॥67॥

(ಶ್ಲೋಕ-68)

ಮೂಲಮ್

ದೇವ ಜಾನಾಮಿ ಪುರುಷಂ ತ್ವಾಂ ಶ್ರಿಯಂ ಜಾನಕೀಂ ಶುಭಾಮ್ ।
ರಾವಣಸ್ಯ ವಧಾರ್ಥಾಯ ಜಾತಂ ತ್ವಾಂ ಬ್ರಹ್ಮಣಾರ್ಥಿತಮ್ ॥

(ಶ್ಲೋಕ-69)

ಮೂಲಮ್

ಅನುಜಾನೀಹಿ ಮಾಂ ರಾಮ ಯಾಂತಂ ತತ್ಪದಮುತ್ತಮಮ್ ।
ಮಮ ತುಲ್ಯಬಲೇ ಬಾಲೇ ಅಂಗದೇ ತ್ವಂ ದಯಾಂ ಕುರು ॥

ಅನುವಾದ

ಹೇ ದೇವಾ! ನೀನು ಸಾಕ್ಷಾತ್ ಪರಮಪುರುಷ ನಾರಾಯಣನೂ, ಶುಭಳಾದ ಸೀತೆಯು ಲಕ್ಷ್ಮೀದೇವಿಯೆಂದೂ ತಿಳಿದಿರುವೆನು. ಬ್ರಹ್ಮನಿಂದ ಪ್ರಾರ್ಥಿತನಾಗಿ ರಾವಣನ ಸಂಹಾರಕ್ಕಾಗಿ ನೀನು ಅವತರಿಸಿರುವವನು ಎಂದೂ ತಿಳಿದಿದ್ದೇನೆ. ಹೇ ರಾಮಾ! ಈಗ ನಾನು ನಿನ್ನ ಸರ್ವಶ್ರೇಷ್ಠ ಪರಮಪದವನ್ನು ಕುರಿತು ಹೋಗುತ್ತಿದ್ದೇನೆ. ನನಗೆ ಅಪ್ಪಣೆ ಕೊಡು. ನನ್ನ ಮಗ ಅಂಗದನು ನನ್ನಂತೆಯೇ ಬಲಶಾಲಿಯಾಗಿದ್ದಾನೆ. ಅವನ ಮೇಲೆ ದಯೆಯಿಡು. ॥68-69॥

(ಶ್ಲೋಕ-70)

ಮೂಲಮ್

ವಿಶಲ್ಯಂ ಕುರು ಮೇ ರಾಮ ಹೃದಯಂ ಪಾಣಿನಾ ಸ್ಪೃಶನ್ ।
ತಥೇತಿ ಬಾಣಮುದ್ ಧೃತ್ಯ ರಾಮಃ ಪಸ್ಪರ್ಶ ಪಾಣಿನಾ ।
ತ್ಯಕ್ತ್ವಾ ತದ್ವಾನರಂ ದೇಹಮಮರೇಂದ್ರೋಭವತ್ಕ್ಷಣಾತ್ ॥

ಅನುವಾದ

ಹೇ ರಾಮಾ! ನನ್ನ ಹೃದಯವನ್ನು ನಿನ್ನ ಕೈಯಿಂದ ಮುಟ್ಟಿ ಬಾಣವನ್ನು ಕಿತ್ತುಬಿಡು.’’ ಹಾಗೆಯೇ ಆಗಲೆಂದು ಹೇಳಿ ಶ್ರೀರಾಮನು ಅವನನ್ನು ಸ್ಪರ್ಶಿಸಿ ಆ ಬಾಣವನ್ನು ಕಿತ್ತೊಗೆದನು. ಅದನ್ನು ತೆಗೆಯುತ್ತಲೇ ವಾಲಿಯು ವಾನರ ಶರೀರವನ್ನು ಬಿಟ್ಟು ಇಂದ್ರರೂಪನಾದನು. ॥70॥

(ಶ್ಲೋಕ-71)

ಮೂಲಮ್

ವಾಲೀ ರಘೂತ್ತಮಶರಾಭಿಹತೋ ವಿಮೃಷ್ಟೋ
ರಾಮೇಣ ಶೀತಲಕರೇಣ ಸುಖಾಕರೇಣ ।
ಸದ್ಯೋ ವಿಮುಚ್ಯ ಕಪಿದೇಹಮನನ್ಯಲಭ್ಯಂ
ಪ್ರಾಪ್ತಂ ಪದಂ ಪರಮಹಂಸಗಣೈರ್ದುರಾಪಮ್ ॥

ಅನುವಾದ

ಹೇ ಪಾರ್ವತಿ! ವಾಲಿಯು ಶ್ರೀರಾಮನ ಬಾಣದಿಂದ ಸತ್ತುಹೋದನು ಹಾಗೂ ಸುಖಕರನಾದ ರಾಮನ ಕೈಯಿಂದ ಶೀತಲವಾದ ಸ್ಪರ್ಶವೂ ದೊರೆಯಿತು. ಆದ್ದರಿಂದ ಅವನು ಕೂಡಲೇ ತನ್ನ ವಾನರ ದೇಹವನ್ನು ಬಿಟ್ಟು, ಪರಮಹಂಸರಿಗೂ ದುಃಸಾಧ್ಯವೆನಿಸಿದ ಹಾಗೂ ಸಾಮಾನ್ಯರಿಗೆ ಅಲಭ್ಯವಾದ ಪದವಿಯನ್ನು ಪಡೆದು ಕೊಂಡನು. ॥71॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.