೦೧

[ಮೊದಲನೆಯ ಸರ್ಗ]

ಭಾಗಸೂಚನಾ

ಸುಗ್ರೀವ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ತತಃ ಸಲಕ್ಷ್ಮಣೋ ರಾಮಃ ಶನೈಃ ಪಂಪಾಸರಸ್ತಟಮ್ ।
ಆಗತ್ಯ ಸರಸಾಂ ಶ್ರೇಷ್ಠಂ ದೃಷ್ಟ್ವಾ ವಿಸ್ಮಯಮಾಯಯೌ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈಪಾರ್ವತಿ! ಅನಂತರ ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಮೆಲ್ಲನೆ ಸರೋವರಗಳಲ್ಲಿ ಶ್ರೇಷ್ಠವಾದ ಪಂಪಾಸರೋವರದ ದಡಕ್ಕೆ ಬಂದು ಅದನ್ನು ನೋಡಿ ಆಶ್ಚರ್ಯಗೊಂಡನು. ॥1॥

(ಶ್ಲೋಕ-2)

ಮೂಲಮ್

ಕ್ರೋಶಯಾತ್ರಂ ಸುವಿಸ್ತೀರ್ಣಮಗಾಧಾಮಲಶಂಬರಮ್ ।
ಉತ್ಪುಲ್ಲಾಂಬುಜಕಹ್ಲಾರಕುಮುದೋತ್ಪಲಮಂಡಿತಮ್ ॥

ಅನುವಾದ

ಅದರ ವಿಸ್ತಾರ ಒಂದು ಗಾವುದದಷ್ಟಿತ್ತು. ಅದು ಬಹಳ ಆಳವಾಗಿದ್ದು ಸ್ವಚ್ಛವಾದ ನೀರಿನಿಂದ ತುಂಬಿತ್ತು. ಎಲ್ಲೆಡೆ ಅರಳಿದ ತಾವರೆ, ಕಲ್ಹಾರ, ಕುಮುದ, ನೈದಿಲೆಗಳಿಂದ ಮನೋಹರವಾಗಿತ್ತು. ॥2॥

(ಶ್ಲೋಕ-3)

ಮೂಲಮ್

ಹಂಸಕಾರಂಡವಾಕೀರ್ಣಂ ಚಕ್ರವಾಕಾದಿಶೋಭಿತಮ್ ।
ಜಲಕುಕ್ಕುಟಕೋಯಷ್ಟಿಕ್ರೌಂಚನಾದೋಪನಾದಿತಮ್ ॥

(ಶ್ಲೋಕ-4)

ಮೂಲಮ್

ನಾನಾಪುಷ್ಪಲತಾಕೀರ್ಣಂ ನಾನಾಫಲಸಮಾವೃತಮ್ ।
ಸತಾಂ ಮನಃಸ್ವಚ್ಛಜಲಂ ಪದ್ಮಕಿಂಜಲ್ಕವಾಸಿತಮ್ ॥

ಅನುವಾದ

ಆ ಸರೋವರದಲ್ಲಿ ಹಂಸ, ಚಕ್ರವಾಕ ಪಕ್ಷಿಗಳ ಗುಂಪುಗಳು ವಿಹರಿಸುತ್ತ ಅದರ ಶೋಭೆಯನ್ನು ಹೆಚ್ಚಿಸಿದ್ದವು. ನೀರುಕೋಳಿ, ಕ್ರೌಂಚಾದಿ ಪಕ್ಷಿಗಳ ಧ್ವನಿಯಿಂದ ಕೂಡಿತ್ತು. ಅನೇಕ ವಿಧವಾದ ಹೂಗಳು, ಗಿಡ-ಬಳ್ಳಿಗಳಿಂದ ಮತ್ತು ಫಲಭರಿತ ವೃಕ್ಷಗಳಿಂದ ಸುತ್ತುವರಿದಿತ್ತು. ಕಮಲದ ಪರಾಗದಿಂದ ಸುವಾಸಿತವಾಗಿದ್ದು ಸರೋವರದ ನೀರು ಸತ್ಪುರುಷರ ಮನಸ್ಸಿನಂತೆ ತಿಳಿಯಾಗಿತ್ತು. ॥3-4॥

(ಶ್ಲೋಕ-5)

ಮೂಲಮ್

ತತ್ರೋಪಸ್ಪೃಶ್ಯ ಸಲಿಲಂ ಪೀತ್ವಾ ಶ್ರಮಹರಂ ವಿಭುಃ ।
ಸಾನುಜಃ ಸರಸಸ್ತೀರೇ ಶೀತಲೇನ ಪಥಾ ಯಯೌ ॥

ಅನುವಾದ

ಅಲ್ಲಿಗೆ ತಲುಪಿದಾಗ ಸೋದರನೊಡಗೂಡಿದ ವಿಭುವಾದ ಶ್ರೀರಾಮನು ಸ್ನಾನಮಾಡಿ, ಶ್ರಮವನ್ನು ಪರಿಹರಿಸುವ ಅದರ ಜಲವನ್ನು ಕುಡಿದನು. ಸರೋವರದ ದಡದಲ್ಲಿರುವ ತಂಪಾದ ನೆರಳುಳ್ಳ ಹಾದಿಯಿಂದ ಮುನ್ನಡೆದನು. ॥5॥

(ಶ್ಲೋಕ-6)

ಮೂಲಮ್

ಋಷ್ಯಮೂಕಗಿರೇಃ ಪಾರ್ಶ್ವೇ ಗಚ್ಛಂತೌ ರಾಮಲಕ್ಷ್ಮಣೌ ।
ಧನುರ್ಬಾಣಕರೌ ದಾಂತೌ ಜಟಾವಲ್ಕಲಮಂಡಿತೌ ।
ಪಶ್ಯಂತೌ ವಿವಿಧಾನ್ ವೃಕ್ಷಾನ್ ಗಿರೇಃ ಶೋಭಾಂ ಸುವಿಕ್ರಮೌ ॥

ಅನುವಾದ

ಹೀಗೆ ಋಷ್ಯ ಮೂಕಪರ್ವತದ ತಪ್ಪಲಿನಲ್ಲಿ ಹೋಗುತ್ತಿರುವ, ಜಟಾವಲ್ಕಲ ಧಾರಿಗಳಾಗಿ, ಧನುರ್ಬಾಣಗಳನ್ನು ಹಿಡಿದಿರುವ ರಾಮ ಲಕ್ಷ್ಮಣರು ನಾನಾ ವಿಧವಾದ ಮರಗಳ ಶೋಭೆಯನ್ನು, ಪರ್ವತದ ರಮಣೀಯತೆಯನ್ನು ಕಂಡು ವಿಸ್ಮಿತರಾಗಿದ್ದರು. ॥6॥

(ಶ್ಲೋಕ-7)

ಮೂಲಮ್

ಸುಗ್ರೀವಸ್ತು ಗಿರೇರ್ಮೂರ್ದ್ನಿ ಚತುರ್ಭಿಃ ಸಹ ವಾನರೈಃ ।
ಸ್ಥಿತ್ವಾ ದದರ್ಶ ತೌ ಯಾಂತಾವಾರುರೋಹ ಗಿರೇಃ ಶಿರಃ ॥

ಅನುವಾದ

ಆಗ ನಾಲ್ಕು ಮಂತ್ರಿಗಳಿಂದೊಡಗೂಡಿ ಬೆಟ್ಟದ ತುದಿಯಲ್ಲಿ ಕುಳಿತಿರುವ ಸುಗ್ರೀವನು ಅವರಿಬ್ಬರು ಬರುತ್ತಿರುವುದನ್ನು ನೋಡಿ, ಇನ್ನೊಂದು ಎತ್ತರವಾದ ಪರ್ವತ ಶಿಖರವನ್ನು ಏರಿದನು. ॥7॥

(ಶ್ಲೋಕ-8)

ಮೂಲಮ್

ಭಯಾದಾಹ ಹನೂಮಂತಂ ಕೌ ತೌ ವೀರವರೌ ಸಖೇ ।
ಗಚ್ಛ ಜಾನೀಹಿ ಭದ್ರಂ ತೇ ವಟುರ್ಭೂತ್ವಾ ದ್ವಿಜಾಕೃತಿಃ ॥

(ಶ್ಲೋಕ-9)

ಮೂಲಮ್

ವಾಲಿನಾ ಪ್ರೇಷಿತೌ ಕಿಂವಾ ಮಾಂ ಹನ್ತುಂ ಸಮುಪಾಗತೌ ।
ತಾಭ್ಯಾಂ ಸಂಭಾಷಣಂ ಕೃತ್ವಾ ಜಾನೀಹಿ ಹೃದಯಂ ತಯೋಃ ॥

(ಶ್ಲೋಕ-10)

ಮೂಲಮ್

ಯದಿ ತೌ ದುಷ್ಟಹೃದಯೌ ಸಂಜ್ಞಾಂ ಕುರು ಕರಾಗ್ರತಃ ।
ವಿನಯಾವನತೋ ಭೂತ್ವಾ ಏವಂ ಜಾನೀಹಿ ನಿಶ್ಚಯಮ್ ॥

ಅನುವಾದ

ಭಯದಿಂದ ಕೂಡಿದವನಾಗಿ ಹನುಮಂತನ ಬಳಿ ಹೇಳಿದನು — ‘‘ಹೇ ಮಿತ್ರನೇ! ನೋಡು, ಆ ವೀರಶ್ರೇಷ್ಠರಿಬ್ಬರು ಯಾರು? ನೀನು ಬ್ರಾಹ್ಮಣವೇಷದ ಬ್ರಹ್ಮಚಾರಿಯಾಗಿ ಅವರ ಬಳಿಗೆ ಹೋಗಿ ಅವರಾರೆಂದು ತಿಳಿದುಕೊಂಡು ಬಾ. ನಿನಗೆ ಒಳ್ಳೆಯದಾಗಲಿ! ನನ್ನನ್ನು ಕೊಲ್ಲುವುದಕ್ಕಾಗಿ ವಾಲಿಯಿಂದ ಪ್ರೇರಿತರಾಗಿ ಇಲ್ಲಿಗೆ ಬಂದಿರಬಹುದೆ? ಅವರೊಡನೆ ಮಾತನಾಡಿ ಅವರ ಅಭಿಪ್ರಾಯವನ್ನು ತಿಳಿಯುವವನಾಗು. ಅವರೇನಾದರು ಕಪಟಹೃದಯದಿಂದ ಕೂಡಿದ್ದರೆ ನನಗೆ ಕೈಯಿಂದ ಸನ್ನೆ ಮಾಡು. ನೀನು ವಿನಯ ಸಂಪನ್ನನಾಗಿ ವಿಷಯವನ್ನು ನಿಶ್ಚಯವಾಗಿ ತಿಳಿಯುವವನಾಗು. ॥8-10॥

(ಶ್ಲೋಕ-11)

ಮೂಲಮ್

ತಥೇತಿ ವಟುರೂಪೇಣ ಹನುಮಾನ್ ಸಮುಪಾಗತಃ ।
ವಿನಯಾವನತೋ ಭೂತ್ವಾ ರಾಮಂ ನತ್ವೇದಮಬ್ರವೀತ್ ॥

(ಶ್ಲೋಕ-12)

ಮೂಲಮ್

ಕೌ ಯುವಾಂ ಪುರುಷವ್ಯಾಘ್ರೌ ಯುವಾನೌ ವೀರಸಮ್ಮತೌ ।
ದ್ಯೋತಯಂತೌದಿಶಃ ಸರ್ವಾಃ ಪ್ರಭಯಾ ಭಾಸ್ಕರಾವಿವ ॥

ಅನುವಾದ

ಆಗ ಹನುಮಂತನು ಹಾಗೆಯೇ ಆಗಲೆಂದು ವಟುರೂಪವನ್ನು ಧರಿಸಿ ಶ್ರೀರಘುನಾಥನ ಬಳಿಗೆ ಬಂದು ವಿನಯದಿಂದ ನಮಸ್ಕರಿಸಿ ಕೇಳಿದನು — ‘‘ಹೇ ಪುರುಷ ಶ್ರೇಷ್ಠರೇ! ನೀವಿಬ್ಬರು ಯಾರು? ಪರಾಕ್ರಮಶಾಲಿಗಳಲ್ಲಿ ಗಣ್ಯರೂ, ಯುವಕರೂ, ತಮ್ಮ ಕಾಂತಿಯಿಂದ ಎಲ್ಲ ದಿಕ್ಕುಗಳನ್ನು ಬೆಳಗಿಸುತ್ತಾ ಸೂರ್ಯ ನಂತಿರುವವರೂ ಆದ ನೀವು ಯಾರು? ॥11-12॥

(ಶ್ಲೋಕ-13)

ಮೂಲಮ್

ಯುವಾಂ ತ್ರೈಲೋಕ್ಯಕರ್ತಾರಾವಿತಿ ಭಾತಿ ಮನೋ ಮಮ ।
ಯುವಾಂ ಪ್ರಧಾನಪುರುಷೌ ಜಗದ್ಧೇತೂ ಜಗನ್ಮಯೌ ॥

(ಶ್ಲೋಕ-14)

ಮೂಲಮ್

ಮಾಯಯಾ ಮಾನುಷಾಕಾರೌ ಚರಂತಾವಿವ ಲೀಲಯಾ ।
ಭೂಭಾರಹರಣಾರ್ಥಾಯ ಭಕ್ತಾನಾಂ ಪಾಲನಾಯ ಚ ॥

(ಶ್ಲೋಕ-15)

ಮೂಲಮ್

ಅವತೀರ್ಣಾವಿಹ ಪರೌ ಚರಂತೌ ಕ್ಷತ್ರಿಯಾಕೃತೀ ।
ಜಗತ್ ಸ್ಥಿತಿ ಲಯೋ ಸರ್ಗಂ ಲೀಲಯಾ ಕರ್ತುಮುದ್ಯತೌ ॥

(ಶ್ಲೋಕ-16)

ಮೂಲಮ್

ಸ್ವತಂತ್ರೌ ಪ್ರೇರಕೌ ಸರ್ವಹೃದಯಸ್ಥಾವಿಹೇಶ್ವರೌ ।
ನರನಾರಾಯಣೌ ಲೋಕೇ ಚರಂತಾವಿತಿ ಮೇ ಮತಿಃ ॥

ಅನುವಾದ

ನೀವಿಬ್ಬರು ತ್ರೈಲೋಕ್ಯವನ್ನು ರಚಿಸುವಂತಹ ಪ್ರಪಂಚದ ಕಾರಣೀಭೂತ ಜಗನ್ಮಯ ಪ್ರಧಾನ ಮತ್ತು ಪುರುಷರೇ ಆಗಿದ್ದೀರಿ. ನೀವು ಭೂಭಾರವನ್ನು ಹರಿಸಲು ಹಾಗೂ ಭಕ್ತರನ್ನು ಕಾಪಾಡಲು ಲೀಲಾವಶ ತನ್ನ ಮಾಯೆಯಿಂದ ಮನುಷ್ಯ ರೂಪವನ್ನು ಧರಿಸಿ ಸಂಚರಿಸುತ್ತಿರುವಿರಿ. ನೀವು ಸಾಕ್ಷಾತ್ ಪರಮಾತ್ಮರಾಗಿದ್ದು ಕ್ಷತ್ರಿಯ ಕುಮಾರರಾಗಿ ಅವತರಿಸಿ ಭೂಮಿಯಲ್ಲಿ ಸಂಚರಿಸುತ್ತಿರುವಿರಿ. ನೀವು ಲೀಲೆಯಿಂದಲೇ ಪ್ರಪಂಚದ ಉತ್ಪತ್ತಿ, ಸ್ಥಿತಿ ಹಾಗೂ ದುಷ್ಟರ ನಾಶ ಮಾಡಲು ತತ್ಪರರಾಗಿರುವಿರಿ’’ ಎಂದು ನನ್ನ ಮನಸ್ಸಿಗೆ ಅನಿಸುತ್ತದೆ. ನೀವು ಎಲ್ಲರ ಹೃದಯದಲ್ಲಿ ವಿರಾಜಮಾನರಾದ, ಎಲ್ಲರ ಪ್ರೇರಕ, ಪರಮ ಸ್ವತಂತ್ರ ಭಗವಾನ್ ನರ-ನಾರಾಯಣರೇ ಈ ಲೋಕದಲ್ಲಿ ತಿರುಗತ್ತಿರುವಿರಿ ಎಂದು ನನ್ನ ಬುದ್ಧಿ ತಿಳಿಯುತ್ತದೆ. ॥13-16॥

(ಶ್ಲೋಕ-17)

ಮೂಲಮ್

ಶ್ರೀರಾಮೋ ಲಕ್ಷ್ಮಣಂ ಪ್ರಾಹ ಪಶ್ಯೈನಂ ವಟುರೂಪಿಣಮ್ ।
ಶಬ್ದಶಾಸ್ತ್ರಮಶೇಷೇಣ ಶ್ರುತಂ ನೂನಮನೇಕಧಾ ॥

ಅನುವಾದ

ಇದನ್ನು ಕೇಳಿದ ಶ್ರೀರಾಮಚಂದ್ರನು ಲಕ್ಷ್ಮಣನಲ್ಲಿ ಹೇಳುತ್ತಾನೆ- ತಮ್ಮಾ! ಇದೋ ಈ ಬ್ರಹ್ಮಚಾರಿ ವಟುವನ್ನು ನೋಡು. ಇವನು ಅನೇಕ ವ್ಯಾಕರಣ ಶಾಸ್ತ್ರಗಳನ್ನು ಪೂರ್ತಿಯಾಗಿ ಕಲಿತಿರುವನೆಂದು ತಿಳಿಯುತ್ತದೆ. ॥17॥

(ಶ್ಲೋಕ-18)

ಮೂಲಮ್

ಅನೇನ ಭಾಷಿತಂ ಕೃತ್ಸ್ನಂ ನ ಕಿಂಚಿದಪಶಬ್ದಿತಮ್ ।
ತತಃ ಪ್ರಾಹ ಹನೂಮಂತಂ ರಾಘವೋ ಜ್ಞಾನವಿಗ್ರಹಃ ॥

ಅನುವಾದ

ಇವನು ಇಷ್ಟು ಮಾತನಾಡಿದರೂ ಇದರಲ್ಲಿ ಒಂದೂ ಅಪಶಬ್ದವೂ ಬಂದಿಲ್ಲ. ಅನಂತರ ವಿಜ್ಞಾನಘನ ಶ್ರೀರಘುನಾಥನು ಹನುಮಂತನನ್ನು ಕುರಿತು ಹೇಳುತ್ತಾನೆ. - ॥18॥

(ಶ್ಲೋಕ-19)

ಮೂಲಮ್

ಅಹಂ ದಾಶರಥೀ ರಾಮಸ್ತ್ವಯಂ ಮೇ ಲಕ್ಷ್ಮಣೋಽನುಜಃ ।
ಸೀತಯಾ ಭಾರ್ಯಯಾ ಸಾರ್ಧಂ ಪಿತುರ್ವಚನಗೌರವಾತ್ ॥

(ಶ್ಲೋಕ-20)

ಮೂಲಮ್

ಆಗತಸ್ತತ್ರ ವಿಪಿನೇ ಸ್ಥಿತೋಽಹಂ ದಂಡಕೇ ದ್ವಿಜ ।
ತತ್ರ ಭಾರ್ಯಾ ಹೃತಾ ಸೀತಾ ರಕ್ಷಸಾ ಕೇನಚಿನ್ಮಮ ।
ತಾಮನ್ವೇಷ್ಟುಮಿಹಾಯಾತೌ ತ್ವಂ ಕೋ ವಾ ಕಸ್ಯ ವಾ ವದ ॥

ಅನುವಾದ

ಎಲೈ ವಟುವೆ! ನಾನು ದಶರಥನ ಮಗನಾದ ರಾಮನಾಗಿರುವೆ. ಇವನು ನನ್ನ ತಮ್ಮ ಲಕ್ಷ್ಮಣ. ನಾನು ಪಿತೃವಾಕ್ಯ ಪರಿಪಾಲನೆಗಾಗಿ ನನ್ನ ಪತ್ನೀ ಸೀತೆಯೊಂದಿಗೆ ಕಾಡಿಗೆ ಬಂದಿದ್ದೆ. ಇಲ್ಲಿ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ಯಾರೋ ರಾಕ್ಷಸನು ನನ್ನ ಭಾರ್ಯೆಯನ್ನು ಕದ್ದೊಯ್ದನು. ಅವಳನ್ನು ಹುಡುಕುವುದಕ್ಕಾಗಿ ನಾವಿಬ್ಬರು ಇಲ್ಲಿಗೆ ಬಂದಿರುವೆವು. ನೀನು ಯಾರು? ಯಾರ ಕಡೆಯವನು? ಹೇಳು. ॥19-20॥

(ಶ್ಲೋಕ-21)

ಮೂಲಮ್ (ವಾಚನಮ್)

ವಟುರುವಾಚ

ಮೂಲಮ್

ಸುಗ್ರೀವೋ ನಾಮ ರಾಜಾ ಯೋ ವಾನರಾಣಾಂ ಮಹಾಮತಿಃ ।
ಚತುರ್ಭಿರ್ಮಂತ್ರಿಭಿಃ ಸಾರ್ಧಂ ಗಿರಿಮೂರ್ಧನಿ ತಿಷ್ಠತಿ ॥

(ಶ್ಲೋಕ-22)

ಮೂಲಮ್

ಭ್ರಾತಾ ಕನೀಯಾನ್ ಸುಗ್ರೀವೋ ವಾಲಿನಃ ಪಾಪಚೇತಸಃ ।
ತೇನ ನಿಷ್ಕಾಸಿತೋ ಭಾರ್ಯಾ ಹೃತಾ ತಸ್ಯೇಹ ವಾಲಿನಾ ॥

ಅನುವಾದ

ಬ್ರಹ್ಮಚಾರಿಯು ಹೇಳಿದನು — ಕಪಿಗಳಿಗೆಲ್ಲ ಒಡೆಯನಾದ, ಬುದ್ಧಿಶಾಲಿಯಾದ ಸುಗ್ರೀವನೆಂಬ ರಾಜನು ನಾಲ್ಕು ಜನ ತನ್ನ ಮಂತ್ರಿಗಳೊಡನೆ ಬೆಟ್ಟದ ತುದಿಯಲ್ಲಿದ್ದಾನೆ. ಪಾಪಿಷ್ಠನಾದ ವಾಲಿಯೆಂಬ ವಾನರನು ತಮ್ಮನಾದ ಈ ಸುಗ್ರೀವನನ್ನು ಓಡಿಸಿ, ಇವನ ಪತ್ನಿಯನ್ನು ಅಪಹರಿಸಿರುವನು. ॥21-22॥

(ಶ್ಲೋಕ-23)

ಮೂಲಮ್

ತದ್ಭಯಾದ್ ಋಷ್ಯಮೂಕಾಖ್ಯಂ ಗಿರಿಮಾಶ್ರಿತ್ಯ ಸಂಸ್ಥಿತಃ ।
ಅಹಂ ಸುಗ್ರೀವಸಚಿವೋ ವಾಯುಪುತ್ರೋ ಮಹಾಮತೇ ॥

(ಶ್ಲೋಕ-24)

ಮೂಲಮ್

ಹನೂಮಾನ್ನಾಮ ವಿಖ್ಯಾತೋ ಹ್ಯಂಜನೀಗರ್ಭಸಂಭವಃ ।
ತೇನ ಸಖ್ಯಂ ತ್ವಯಾ ಯುಕ್ತಂ ಸುಗ್ರೀವೇಣ ರಘೂತ್ತಮ ॥

(ಶ್ಲೋಕ-25)

ಮೂಲಮ್

ಭಾರ್ಯಾಪಹಾರಿಣಂ ಹನ್ತುಂ ಸಹಾಯಸ್ತೇ ಭವಿಷ್ಯತಿ ।
ಇದಾನೀಮೇವ ಗಚ್ಛಾಮ ಆಗಚ್ಛ ಯದಿ ರೋಚತೇ ॥

ಅನುವಾದ

ಆ ವಾಲಿಯ ಭಯದಿಂದಲೇ ಈ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿರುವನು. ಹೇ ಮಹಾಮತೆ! ನಾನು ಆ ಸುಗ್ರೀವನ ಮಂತ್ರಿಯಾಗಿದ್ದೇನೆ. ವಾಯುಪುತ್ರನಾದ ನಾನು ಅಂಜನಾದೇವಿಯಲ್ಲಿ ಹುಟ್ಟಿದವನು. ಹನುಮಂತನೆಂದು ನಾನು ಖ್ಯಾತನಾಗಿದ್ದೇನೆ. ಹೇ ರಘುಶ್ರೇಷ್ಠ! ನೀನು ಸುಗ್ರೀವನೊಂದಿಗೆ ಸ್ನೇಹ ಬೆಳೆಸುವುದು ಯೋಗ್ಯವಾಗಿದೆ. ಅವನು ನಿನ್ನ ಭಾರ್ಯೆಯನ್ನು ಕದ್ದೊಯ್ದವನನ್ನು ಕೊಲ್ಲಲು ನಿನಗೆ ಸಹಾಯಕನಾಗು ವನು. ನೀನು ಇಷ್ಟಪಡುವುದಾದರೆ ಈಗಲೇ ನಿಮ್ಮನ್ನು ಅವನ ಬಳಿಗೆ ಕರೆದುಕೊಂಡು ಹೋಗುವೆ.’’ ॥23-25॥

(ಶ್ಲೋಕ-26)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಅಹಮಪ್ಯಾಗತಸ್ತೇನ ಸಖ್ಯಂ ಕರ್ತುಂ ಕಪೀಶ್ವರ ।
ಸಖ್ಯುಸ್ತಸ್ಯಾಪಿ ಯತ್ಕಾರ್ಯಂ ತತ್ಕರಿಷ್ಯಾಮ್ಯಸಂಶಯಮ್ ॥

ಅನುವಾದ

ಶ್ರೀರಾಮಚಂದ್ರನಿಂತೆಂದನು — ‘ಎಲೈ ಕಪೀಶ್ವರಾ! ನಾನು ಕೂಡ ಅವನೊಡನೆ ಸ್ನೇಹವನ್ನು ಬೆಳೆಸುವುದಕ್ಕಾಗಿಯೇ ಬಂದಿರುತ್ತೇನೆ. ಆ ಸ್ನೇಹಿತನ ಏನು ಕಾರ್ಯವಿದೆಯೋ ಅದನ್ನು ನಾನು ನಿಶ್ಚಯವಾಗಿ ನಡೆಸಿಕೊಡುತ್ತೇನೆ. ॥26॥

(ಶ್ಲೋಕ-27)

ಮೂಲಮ್

ಹನೂಮಾನ್ ಸ್ವಸ್ವರೂಪೇಣ ಸ್ಥಿತೋ ರಾಮಮಥಾಬ್ರವೀತ್ ।
ಆರೋಹತಾಂ ಮಮ ಸ್ಕಂಧೌ ಗಚ್ಛಾಮಃ ಪರ್ವತೋಪರಿ ॥

(ಶ್ಲೋಕ-28)

ಮೂಲಮ್

ಯತ್ರ ತಿಷ್ಠತಿ ಸುಗ್ರೀವೋ ಮಂತ್ರಿಭಿರ್ವಾಲಿನೋ ಭಯಾತ್ ।
ತಥೇತಿ ತಸ್ಯಾರುರೋಹ ಸ್ಕಂಧಂ ರಾಮೋಽಥ ಲಕ್ಷ್ಮಣಃ ॥

ಅನುವಾದ

ಇದನ್ನು ಕೇಳಿದ ಹನುಮಂತನು ತನ್ನ ನಿಜ ರೂಪದಿಂದ ಕಾಣಿಸಿಕೊಂಡು ರಾಮನಲ್ಲಿ ಹೇಳುತ್ತಾನೆ ‘‘ನೀವಿಬ್ಬರು ನನ್ನ ಭುಜವನ್ನೇರಿರಿ. ವಾಲಿಯ ಭಯದಿಂದ ಮಂತ್ರಿಗಳೊಂದಿಗೆ ಅಡಗಿಕೊಂಡಿರುವ ಸುಗ್ರೀವನ ಬಳಿಗೆ ನಾವು ಹೋಗೋಣ.’’ ಆಗ ರಾಮ-ಲಕ್ಷ್ಮಣರು ಹಾಗೆಯೇ ಆಗಲಿ ಎಂದು ಹೇಳಿ ಹನುಮಂತನ ಭುಜವನ್ನೇರಿದರು. ॥27-28॥

(ಶ್ಲೋಕ-29)

ಮೂಲಮ್

ಉತ್ಪಪಾತ ಗಿರೇರ್ಮೂರ್ಧ್ನಿ ಕ್ಷಣಾದೇವ ಮಹಾಕಪಿಃ ।
ವೃಕ್ಷಚ್ಛಾಯಾಂ ಸಮಾಶ್ರಿತ್ಯ ಸ್ಥಿತೌ ತೌ ರಾಮಲಕ್ಷ್ಮಣೌ ॥

ಅನುವಾದ

ಮಹಾಕಪಿಯಾದ ಹನುಮಂತನು ಕ್ಷಣಮಾತ್ರದಲ್ಲಿ ನೆಗೆದು ಪರ್ವತ ತುದಿಗೆ ತಲುಪಿದನು. ಅಲ್ಲಿ ರಾಮ ಲಕ್ಷ್ಮಣರಿಬ್ಬರೂ ಮರದ ನೆರಳನ್ನಾಶ್ರಯಿಸಿ ನಿಂತುಕೊಂಡರು. ॥29॥

(ಶ್ಲೋಕ-30)

ಮೂಲಮ್

ಹನೂಮಾನಪಿ ಸುಗ್ರೀವಮುಪಗಮ್ಯ ಕೃತಾಂಜಲಿಃ ।
ವ್ಯೇತು ತೇ ಭಯಮಾಯಾತೌ ರಾಜನ್ ಶ್ರೀರಾಮಲಕ್ಷ್ಮಣೌ ॥

(ಶ್ಲೋಕ-31)

ಮೂಲಮ್

ಶೀಘ್ರಮುತ್ತಿಷ್ಠ ರಾಮೇಣ ಸಖ್ಯಂ ತೇ ಯೋಜಿತಂ ಮಯಾ ।
ಅಗ್ನಿಂ ಸಾಕ್ಷಿಣಮಾರೋಪ್ಯ ತೇನ ಸಖ್ಯಂ ದ್ರುತಂ ಕುರು ॥

ಅನುವಾದ

ಇತ್ತ ಹನುಮಂತನು ಸುಗ್ರೀವನ ಬಳಿಗೆ ಬಂದು ಕೈ ಮುಗಿದುಕೊಂಡು ಹೇಳುತ್ತಾನೆ ‘‘ರಾಜಾ! ನಿನ್ನ ಭಯವು ನಿವಾರಣೆಯಾಗಲಿದೆ. ಏಕೆಂದರೆ, ಇಲ್ಲಿಗೆ ಶ್ರೀರಾಮ ಲಕ್ಷ್ಮಣರು ಆಗಮಿಸಿರುವರು. ಬೇಗನೇ ಎದ್ದೇಳು. ರಾಮನೊಡನೆ ನಿನಗೆ ಸ್ನೇಹವು ದೊರಕುವಂತೆ ಏರ್ಪಡಿಸಿದ್ದೇನೆ. ಅಗ್ನಿಯನ್ನು ಸಾಕ್ಷಿಯಾಗಿ ಮಾಡಿಕೊಂಡು ಅವನೊಡನೆ ಬೇಗನೇ ಸ್ನೇಹವನ್ನು ಬೆಳೆಸು.’’ ॥30-31॥

(ಶ್ಲೋಕ-32)

ಮೂಲಮ್

ತತೋಽತಿಹರ್ಷಾತ್ಸುಗ್ರೀವಃ ಸಮಾಗಮ್ಯ ರಘೂತ್ತಮಮ್ ।
ವೃಕ್ಷಶಾಖಾಂ ಸ್ವಯಂ ಛಿತ್ತ್ವಾ ವಿಷ್ಟರಾಯ ದದೌ ಮುದಾ ॥

ಅನುವಾದ

ಆಗ ಬಹಳ ಆನಂದದಿಂದ ಸುಗ್ರೀವನು ರಾಮನಿದ್ದಲ್ಲಿಗೆ ಬಂದು ತಾನೇ ಒಂದು ಮರದ ರೆಂಬೆಯನ್ನು ಮುರಿದು ಕುಳಿತುಕೊಳ್ಳಲು ಆಸನವಾಗಿ ಕೊಟ್ಟನು. ॥32॥

(ಶ್ಲೋಕ-33)

ಮೂಲಮ್

ಹನೂಮಾಲ್ಲಕ್ಷ್ಮಣಾಯಾದಾತ್ಸುಗ್ರೀವಾಯ ಚ ಲಕ್ಷ್ಮಣಃ ।
ಹರ್ಷೇಣ ಮಹತಾವಿಷ್ಟಾಃ ಸರ್ವ ಏವಾವತಸ್ಥಿರೇ ॥

ಅನುವಾದ

ಹಾಗೆಯೇ ಹನುಮಂತನು ಲಕ್ಷ್ಮಣನಿಗೆ ಮತ್ತು ಸುಗ್ರೀವನಿಗೆ ಆಸನವನ್ನು ನೀಡಿದನು. ಎಲ್ಲರೂ ಸಂತೋಷದಿಂದ ಕೂಡಿದವರಾಗಿ ಕುಳಿತುಕೊಂಡರು. ॥33॥

(ಶ್ಲೋಕ-34)

ಮೂಲಮ್

ಲಕ್ಷ್ಮಣಸ್ತ್ವಬ್ರವೀತ್ಸರ್ವಂ ರಾಮವೃತ್ತಾಂತಮಾದಿತಃ ।
ವನವಾಸಾಭಿಗಮನಂ ಸೀತಾಹರಣಮೇವ ಚ ॥

ಅನುವಾದ

ಅನಂತರ ಲಕ್ಷ್ಮಣನು ಪ್ರಾರಂಭದಿಂದ ಈವರೆಗಿನ ವನವಾಸಕ್ಕೆ ಬಂದುದು, ಸೀತೆಯ ಅಪಹರಣ ಮುಂತಾದ ಎಲ್ಲ ರಾಮನ ವೃತ್ತಾಂತವನ್ನು ಸುಗ್ರೀವನಿಗೆ ಹೇಳಿದನು. ॥34॥

(ಶ್ಲೋಕ-35)

ಮೂಲಮ್

ಲಕ್ಷ್ಮಣೋಕ್ತಂ ವಚಃ ಶ್ರುತ್ವಾ ಸುಗ್ರೀವೋ ರಾಮಮಬ್ರವೀತ್ ।
ಅಹಂ ಕರಿಷ್ಯೇ ರಾಜೇಂದ್ರ ಸೀತಾಯಾಃ ಪರಿಮಾರ್ಗಣಮ್ ॥

(ಶ್ಲೋಕ-36)

ಮೂಲಮ್

ಸಾಹಾಯ್ಯಮಪಿ ತೇ ರಾಮ ಕರಿಷ್ಯೇ ಶತ್ರುಘಾತಿನಃ ।
ಶೃಣು ರಾಮ ಮಯಾ ದೃಷ್ಟಂ ಕಿಂಚಿತ್ತೇ ಕಥಯಾಮ್ಯಹಮ್ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿದ ಸುಗ್ರೀವನು ಶ್ರೀರಾಮ ಚಂದ್ರನಲ್ಲಿ ಹೇಳಿದನು — ‘‘ಹೇ ರಾಮಚಂದ್ರಾ! ನಾನು ಸೀತೆಯನ್ನು ಹುಡುಕುವ ಕೆಲಸವನ್ನೂ ಮಾಡುವೆನು ಮತ್ತು ಹೇ ರಾಮನೆ ! ಶತ್ರುಸಂಹಾರಕನಾದ ನಿನಗೆ ಸಹಾಯವನ್ನೂ ಮಾಡುವೆನು. ರಾಮಾ ! ನಾನು ಕಂಡದ್ದು ಸ್ವಲ್ಪ ವಿಚಾರವನ್ನು ನಿನಗೆ ಹೇಳವೆನು ಕೇಳು. ॥35-36॥

(ಶ್ಲೋಕ-37)

ಮೂಲಮ್

ಏಕದಾ ಮಂತ್ರಿಭಿಃ ಸಾರ್ಧಂ ಸ್ಥಿತೋಽಹಂ ಗಿರಿಮೂರ್ಧನಿ ।
ವಿಹಾಯಸಾ ನೀಯಮಾನಾಂ ಕೇನಚಿತ್ಪ್ರಮದೋತ್ತಮಾಮ್ ॥

(ಶ್ಲೋಕ-38)

ಮೂಲಮ್

ಕ್ರೋಶಂತೀಂ ರಾಮರಾಮೇತಿ ದೃಷ್ಟ್ವಾಸ್ಮಾನ್ಪರ್ವತೋಪರಿ ।
ಆಮುಚ್ಯಾಭರಣಾನ್ಯಾಶು ಸ್ವೋತ್ತರೀಯೇಣ ಭಾಮಿನೀ ॥

(ಶ್ಲೋಕ-39)

ಮೂಲಮ್

ನಿರೀಕ್ಷ್ಯಾಧಃ ಪರಿತ್ಯಜ್ಯ ಕ್ರೋಶಂತೀ ತೇನ ರಕ್ಷಸಾ ।
ನೀತಾಹಂ ಭೂಷಣಾನ್ಯಾಶು ಗುಹಾಯಾಮಕ್ಷಿಪಂ ಪ್ರಭೋ ॥

ಅನುವಾದ

ಒಮ್ಮೆ ನಾನು ಮಂತ್ರಿಗಳೊಂದಿಗೆ ಬೆಟ್ಟದ ತುದಿಯಲ್ಲಿ ಕುಳಿತಿದ್ದೆ. ಆಗ ಯಾರೋ ರಾಕ್ಷಸನೊಬ್ಬನು ಓರ್ವ ಸ್ತ್ರೀಯನ್ನು ಆಕಾಶ ಮಾರ್ಗದಿಂದ ಕೊಂಡೊಯ್ಯುತ್ತಿದ್ದನು. ಆ ಸ್ತ್ರೀಯು ರಾಮಾ! ರಾಮಾ! ಎಂದು ಹೇಳುತ್ತಾ ವಿಲಪಿಸುತ್ತಿದ್ದಳು. ಪರ್ವತದ ಮೇಲೆ ಕುಳಿತಿದ್ದ ನಮ್ಮನ್ನು ನೋಡಿ ಆಕೆಯು ಬೇಗನೆ ತನ್ನ ಆಭರಣಗಳನ್ನು ಕಳಚಿ ತನ್ನ ಸೆರಗಿನಲ್ಲಿ ಗಂಟುಕಟ್ಟಿ ಕೆಳಗೆ ನೋಡುತ್ತಾ ಎಸೆದುಬಿಟ್ಟಳು. ಈ ಪ್ರಕಾರ ನಿರಂತರ ವಿಲಪಿಸುತ್ತಿರುವ ಅಬಲೆಯನ್ನು ಆ ರಾಕ್ಷಸನು ಕೊಂಡೊಯ್ದನು. ಹೇ ಪ್ರಭೋ! ನಾನು ಬೇಗನೇ ಆ ಒಡವೆಗಳನ್ನು ತಂದು ಸುರಕ್ಷಿತವಾಗಿ ಗುಹೆಯಲ್ಲಿಟ್ಟಿರುವೆನು. ॥37-39॥

(ಶ್ಲೋಕ-40)

ಮೂಲಮ್

ಇದಾನೀಮಪಿ ಪಶ್ಯ ತ್ವಂ ಜಾನೀಹಿ ತವ ವಾ ನ ವಾ ।
ಇತ್ಯುಕ್ತ್ವಾನೀಯ ರಾಮಾಯ ದರ್ಶಯಾಮಾಸ ವಾನರಃ ॥

ಅನುವಾದ

ನೀನು ಅದನ್ನು ಈಗಲೇ ನೋಡು ಹಾಗೂ ನಿನ್ನ ಪತ್ನಿಯದು ಹೌದೇ ಅಲ್ಲವೇ ಎಂಬು ದನ್ನು ಗುರುತಿಸು’’ ಎಂದು ಹೇಳಿ ಕಪಿರಾಜ ಸುಗ್ರೀವನು ಆ ಒಡವೆಗಳ ಗಂಟನ್ನು ರಾಮನಿಗೆ ತೋರಿಸಿದನು. ॥40॥

(ಶ್ಲೋಕ-41)

ಮೂಲಮ್

ವಿಮುಚ್ಯ ರಾಮಸ್ತದ್ದೃಷ್ಟ್ವಾ ಹಾ ಸೀತೇತಿ ಮುಹುರ್ಮುಹುಃ ।
ಹೃದಿ ನಿಕ್ಷಿಪ್ಯ ತತ್ಸರ್ವಂ ರುರೋದ ಪ್ರಾಕೃತೋ ಯಥಾ ॥

ಅನುವಾದ

ರಾಮನು ಆ ಗಂಟನ್ನು ಬಿಚ್ಚಿನೋಡಿ ಅಯ್ಯೋ! ಸೀತಾ ಎಂದು ಮತ್ತೆ-ಮತ್ತೆ ವಿಲಪಿಸುತ್ತಾ ಅದೆಲ್ಲವನ್ನು ಎದೆಗೆ ಒತ್ತಿಕೊಂಡು ಸಾಮಾನ್ಯ ಮನುಷ್ಯನಂತೆ ಅಳತೊಡಗಿದನು. ॥41॥

(ಶ್ಲೋಕ-42)

ಮೂಲಮ್

ಆಶ್ವಾಸ್ಯ ರಾಘವಂ ಭ್ರಾತಾ ಲಕ್ಷ್ಮಣೋ ವಾಕ್ಯಮಬ್ರವೀತ್ ।
ಅಚಿರೇಣೈವ ತೇ ರಾಮ ಪ್ರಾಪ್ಯತೇ ಜಾನಕೀ ಶುಭಾ ।
ವಾನರೇಂದ್ರಸಹಾಯೇನ ಹತ್ವಾ ರಾವಣಮಾಹವೇ ॥

ಅನುವಾದ

ಸಹೋದರನಾದ ಲಕ್ಷ್ಮಣನು ರಾಮನನ್ನು ಸಮಾಧಾನ ಪಡಿಸುತ್ತಾ — ‘‘ಅಣ್ಣ ರಾಮಾ! ಕಪಿಶ್ರೇಷ್ಠ ಸುಗ್ರೀವನ ಸಹಾಯದಿಂದ ಯುದ್ಧದಲ್ಲಿ ರಾವಣನನ್ನು ಕೊಂದು ನೀನು ಬೇಗನೇ ಸೀತೆಯನ್ನು ಹೊಂದುವೆ’’ ಎಂದು ನುಡಿದನು. ॥42॥

(ಶ್ಲೋಕ-43)

ಮೂಲಮ್

ಸುಗ್ರೀವೋಽಪ್ಯಾಹ ಹೇ ರಾಮ ಪ್ರತಿಜ್ಞಾಂ ಕರವಾಣಿ ತೇ ।
ಸಮರೇ ರಾವಣಂ ಹತ್ವಾ ತವ ದಾಸ್ಯಾಮಿ ಜಾನಕೀಮ್ ॥

ಅನುವಾದ

ಸುಗ್ರೀವನೂ ಕೂಡ ‘‘ರಾಮಾ! ನಾನು ಪ್ರತಿಜ್ಞೆ ಮಾಡಿ ಹೇಳುತ್ತೇನೆ, ಯುದ್ಧದಲ್ಲಿ ರಾವಣನನ್ನು ಕೊಂದು ಸೀತೆಯನ್ನು ತಂದು ಕೊಡುವೆನು. ॥43॥

(ಶ್ಲೋಕ-44)

ಮೂಲಮ್

ತತೋ ಹನೂಮಾನ್ ಪ್ರಜ್ವಾಲ್ಯ ತಯೋರಗ್ನಿಂ ಸಮೀಪತಃ ।
ತಾವುಭೌ ರಾಮಸುಗ್ರೀವಾವಗ್ನೌ ಸಾಕ್ಷಿಣಿ ತಿಷ್ಠತಿ ॥

(ಶ್ಲೋಕ-45)

ಮೂಲಮ್

ಬಾಹೂ ಪ್ರಸಾರ್ಯ ಚಾಲಿಂಗ್ಯ ಪರಸ್ಪರಮಕಲ್ಮಷೌ ।
ಸಮೀಪೇ ರಘುನಾಥಸ್ಯ ಸುಗ್ರೀವಃ ಸಮುಪಾವಿಶತ್ ॥

ಅನುವಾದ

ಅನಂತರ ಹನುಮಂತನು ಅವರಿಬ್ಬರ ಸಮೀಪದಲ್ಲಿ ಬೆಂಕಿಯನ್ನು ಪ್ರತಿಷ್ಠಾಪಿಸಿದನು. ಬಳಿಕ ದೋಷರಹಿತನಾದ ರಾಮನು ಮತ್ತು ಸುಗ್ರೀವನು ಅಗ್ನಿಯನ್ನು ಸಾಕ್ಷಿಯಾಗಿರಿಸಿ ಎರಡೂ ತೋಳುಗಳನ್ನು ಚಾಚಿ ಅನ್ಯೋನ್ಯವಾಗಿ ಆಲಿಂಗಿಸಿಕೊಂಡು ಸ್ನೇಹಿತರಾದರು. ಮತ್ತೆ ಸುಗ್ರೀವನು ರಾಮನ ಬಳಿಯಲ್ಲಿ ಬಂದು ಕುಳಿತನು. ॥44-45॥

(ಶ್ಲೋಕ-46)

ಮೂಲಮ್

ಸ್ವೋದನ್ತಂ ಕಥಯಾಮಾಸ ಪ್ರಣಯಾದ್ರಘುನಾಯಕೇ ।
ಸಖೇ ಶೃಣು ಮಮೋದನ್ತಂ ವಾಲಿನಾ ಯತ್ಕೃತಂ ಪುರಾ ॥

ಅನುವಾದ

ಶ್ರೀರಾಮನಲ್ಲಿ ಪ್ರೇಮದಿಂದ ತನ್ನ ವೃತ್ತಾಂತವನ್ನು ಹೇಳ ತೊಡಗಿದನು. ಮಿತ್ರಾ! ವಾಲಿಯು ಹಿಂದೆ ಏನೇನು ಮಾಡಿದನೆಂಬ ನನ್ನ ವೃತ್ತಾಂತವನ್ನು ಕೇಳು, ಹೇಳುತ್ತೇನೆ. ॥46॥

(ಶ್ಲೋಕ-47)

ಮೂಲಮ್

ಮಯಪುತ್ರೋಽಥ ಮಾಯಾವೀ ನಾಮ್ನಾ ಪರಮದುರ್ಮದಃ ।
ಕಿಷ್ಕಿಂಧಾಂ ಸಮುಪಾಗತ್ಯ ವಾಲಿನಂ ಸಮುಪಾಹ್ವಯತ್ ॥

(ಶ್ಲೋಕ-48)

ಮೂಲಮ್

ಸಿಂಹನಾದೇನ ಮಹತಾ ವಾಲೀ ತು ತದಮರ್ಷಣಃ ।
ನಿರ್ಯಯೌ ಕ್ರೋಧತಾಮ್ರಾಕ್ಷೋ ಜಘಾನ ದೃಢಮುಷ್ಟಿನಾ ॥

ಅನುವಾದ

ಒಮ್ಮೆ ಮಯನ ಮಗನಾದ ಮಾಯಾವೀ ಎಂಬ ಮದೋನ್ಮತ್ತ ರಾಕ್ಷಸನು ಕಿಷ್ಕಿಂಧೆಗೆ ಬಂದು ಘಟ್ಟಿಯಾಗಿ ಸಿಂಹನಾದವನ್ನು ಮಾಡಿ ವಾಲಿಯನ್ನು ಯುದ್ಧಕ್ಕಾಗಿ ಕರೆದನು. ವಾಲಿಯು ಅವನ ದರ್ಪವನ್ನು ಸಹಿಸಲಾಗದೆ ಕೋಪದಿಂದ ಕಣ್ಣುಗಳಿಂದ ಕಿಡಿಕಾರುತ್ತಾ ಹೊರ ಬಂದು ದೃಢವಾದ ಮುಷ್ಟಿಯಿಂದ ರಾಕ್ಷಸನನ್ನು ಗುದ್ದಿದನು. ॥47-48॥

(ಶ್ಲೋಕ-49)

ಮೂಲಮ್

ದುದ್ರಾವ ತೇನ ಸಂವಿಗ್ನೋ ಜಗಾಮ ಸ್ವಗುಹಾಂ ಪ್ರತಿ ।
ಅನುದುದ್ರಾವ ತಂ ವಾಲೀ ಮಾಯಾವಿನಮಹಂ ತಥಾ ॥

ಅನುವಾದ

ಅದರಿಂದ ತತ್ತರಿಸಿ ಹೋದ ಅವನು ತನ್ನ ಗುಹೆಯ ಕಡೆಗೆ ಓಡಿದನು. ಆಗ ವಾಲಿಯು ಮತ್ತು ನಾನೂ ಆ ರಾಕ್ಷಸನನ್ನು ಅಟ್ಟಿಸಿಕೊಂಡು ಹೋದೆವು. ॥49॥

(ಶ್ಲೋಕ-50)

ಮೂಲಮ್

ತತಃ ಪ್ರವಿಷ್ಟಮಾಲೋಕ್ಯ ಗುಹಾಂ ಮಾಯಾವಿನಂ ರುಷಾ ।
ವಾಲೀ ಮಾಮಾಹ ತಿಷ್ಠ ತ್ವಂ ಬಹಿರ್ಗಚ್ಛಾಮ್ಯಹಂ ಗುಹಾಮ್ ।
ಇತ್ಯುಕ್ತ್ವಾವಿಶ್ಯ ಸ ಗುಹಾಂ ಮಾಸಮೇಕಂ ನ ನಿರ್ಯಯೌ ॥

ಅನುವಾದ

ಅನಂತರ ಗುಹೆಯನ್ನು ಹೊಕ್ಕ ಮಾಯಾವಿಯನ್ನು ಕಂಡು ಕೋಪದಿಂದ ವಾಲಿಯು ನನ್ನನ್ನು ಕುರಿತು — ‘ನೀನು ಹೊರಗೇ ಇರು, ನಾನು ಗುಹೆಯೊಳಗೆ ಹೋಗುವೆನು’ ಎಂದು ಹೇಳಿ ಗುಹೆಯನ್ನು ಹೊಕ್ಕು ಒಂದು ತಿಂಗಳಾದರೂ ಹೊರಗೆ ಬರಲಿಲ್ಲ. ॥50॥

(ಶ್ಲೋಕ-51)

ಮೂಲಮ್

ಮಾಸಾದೂರ್ಧ್ವಂ ಗುಹಾದ್ವಾರಾನ್ನಿರ್ಗತಂ ರುಧಿರಂ ಬಹು ।
ತತ್ ದೃಷ್ಟ್ವಾ ಪರಿತಪ್ತಾಂಗೋ ಮೃತೋ ವಾಲೀತಿ ದುಃಖಿತಃ ॥

(ಶ್ಲೋಕ-52)

ಮೂಲಮ್

ಗುಹಾದ್ವಾರಿ ಶಿಲಾಮೇಕಾಂ ನಿಧಾಯ ಗೃಹಮಾಗತಃ ।
ತತೋಽಬ್ರವಂ ಮೃತೋ ವಾಲೀ ಗುಹಾಯಾಂ ರಕ್ಷಸಾ ಹತಃ ॥

(ಶ್ಲೋಕ-53)

ಮೂಲಮ್

ತಚ್ಛ್ರುತ್ವಾ ದುಃಖಿತಾಃ ಸರ್ವೇ ಮಾಮನಿಚ್ಛಂತಮಪ್ಯುತ ।
ರಾಜ್ಯೇಽಭಿಷೇಚನಂ ಚಕ್ರುಃ ಸರ್ವೇ ವಾನರಮಂತ್ರಿಣಃ ॥

ಅನುವಾದ

ಒಂದು ತಿಂಗಳ ಅನಂತರ ಗುಹೆಯ ದ್ವಾರದಿಂದ ಬಹಳವಾಗಿ ರಕ್ತವು ಹರಿದುಕೊಂಡು ಬಂತು. ಅದನ್ನು ಕಂಡು ವಾಲಿಯು ಸತ್ತಿರಬಹುದೆಂದು ನಾನು ಬಹಳ ಕಳವಳಗೊಂಡೆ. ರಾಕ್ಷಸನು ಗುಹೆಯಿಂದ ಹೊರಗೆ ಬರದಂತೆ ಒಂದು ದೊಡ್ಡ ಬಂಡೆಯಿಂದ ಗುಹಾದ್ವಾರವನ್ನು ಮುಚ್ಚಿ ಮನೆಗೆ ಬಂದೆನು. ಮತ್ತೆ ನಾನು ಆ ರಾಕ್ಷಸನಿಂದ ಗುಹೆಯಲ್ಲಿ ವಾಲಿಯು ಹತನಾದನೆಂದು ಎಲ್ಲರಿಗೆ ತಿಳಿಸಿದೆ. ಅದನ್ನು ಕೇಳಿ ಎಲ್ಲರೂ ದುಃಖಪಟ್ಟವರಾಗಿ ಮುಂದೆ ನಾನು ಬಯಸದೇ ಇದ್ದರೂ ಎಲ್ಲಾ ವಾನರಮಂತ್ರಿಗಳು ಸೇರಿ ನನ್ನನ್ನು ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು. ॥51-53॥

(ಶ್ಲೋಕ-54)

ಮೂಲಮ್

ಶಿಷ್ಟಂ ತದಾ ಮಯಾ ರಾಜ್ಯಂ ಕಿಂಚಿತ್ಕಾಲಮರಿಂದಮ ।
ತತಃಸಮಾಗತೋವಾಲೀಮಾಮಾಹಪರುಷಂರುಷಾ ॥

(ಶ್ಲೋಕ-55)

ಮೂಲಮ್

ಬಹುಧಾ ಭರ್ತ್ಸಯಿತ್ವಾ ಮಾಂ ನಿಜಘಾನ ಚ ಮುಷ್ಟಿಭಿಃ ।
ತತೋ ನಿರ್ಗತ್ಯ ನಗರಾದಧಾವಂ ಪರಯಾ ಭಿಯಾ ॥

ಅನುವಾದ

ಹೇ ಶತ್ರುನಾಶಕನೆ! ನಾನು ಆಗ ಕೆಲವು ಕಾಲ ರಾಜ್ಯವನ್ನು ಆಳಿದೆನು. ಅಷ್ಟರಲ್ಲಿ ವಾಲಿಯು ಬಂದು ಕೋಪದಿಂದ ನನ್ನನ್ನು ಅನೇಕ ವಿಧವಾದ ನಿಷ್ಠುರ ಮಾತುಗಳನ್ನಾಡಿದನು. ಈ ಪ್ರಕಾರ ನನಗೆ ಬೈದು, ಹೆದರಿಸಿ ಮುಷ್ಟಿಗಳಿಂದ ಗುದ್ದಿದನು. ಆಗ ಹೆಚ್ಚಿನ ಭಯದಿಂದ ನಾನು ಊರನ್ನು ಬಿಟ್ಟು ಹೊರಗೆ ಓಡಿಹೋದೆ. ॥54-55॥

(ಶ್ಲೋಕ-56)

ಮೂಲಮ್

ಲೋಕಾನ್ ಸರ್ವಾನ್ಪರಿಕ್ರಮ್ಯ ಋಷ್ಯಮೂಕಂ ಸಮಾಶ್ರಿತಃ ।
ಋಷೇಃ ಶಾಪಭಯಾತ್ಸೋಽಪಿ ನಾಯಾತೀಮಂ ಗಿರಿಂ ಪ್ರಭೋ ॥

(ಶ್ಲೋಕ-57)

ಮೂಲಮ್

ತದಾದಿ ಮಮ ಭಾರ್ಯಾಂ ಸ ಸ್ವಯಂ ಭುಂಕ್ತೇ ವಿಮೂಢಧೀಃ ।
ಅತೋ ದುಃಖೇನ ಸಂತಪ್ತೋ ಹೃತದಾರೋ ಹೃತಾಶ್ರಯಃ ॥

(ಶ್ಲೋಕ-58)

ಮೂಲಮ್

ವಸಾಮ್ಯದ್ಯ ಭವತ್ಪಾದಸಂಸ್ಪರ್ಶಾತ್ಸುಖಿತೋಽಸ್ಮ್ಯಹಮ್ ।
ಮಿತ್ರದುಃಖೇನ ಸಂತಪ್ತೋ ರಾಮೋ ರಾಜೀವಲೋಚನಃ ॥

(ಶ್ಲೋಕ-59)

ಮೂಲಮ್

ಹನಿಷ್ಯಾಮಿ ತವ ದ್ವೇಷ್ಯಂ ಶೀಘ್ರಂ ಭಾರ್ಯಾಪಹಾರಿಣಮ್ ।
ಇತಿ ಪ್ರತಿಜ್ಞಾಮಕರೋತ್ಸುಗ್ರೀವಸ್ಯ ಪುರಸ್ತದಾ ॥

ಅನುವಾದ

ಹೇ ಪ್ರಭೋ! ನಾನು ಎಲ್ಲ ಲೋಕಗಳನ್ನು ಸುತ್ತು ಹೊಡೆದು, ಕೊನೆಗೆ ಈ ಋಷ್ಯಮೂಕವನ್ನು ಆಶ್ರಯಿಸಿರುವೆನು. ಆತನಾದರೋ ಋಷಿಗಳ ಶಾಪಕ್ಕೆ ಹೆದರಿ ಈ ಪರ್ವತಕ್ಕೆ ಬರುವುದಿಲ್ಲ. ಅಂದಿನಿಂದಲೂ ನನ್ನ ಹೆಂಡತಿಯನ್ನು ಮೂಢ ಬುದ್ಧಿಯ ಅವನು ತಾನೇ ಅನುಭವಿಸುತ್ತಿದ್ದಾನೆ. ಆಗಿನಿಂದ ನಾನು ಬಹಳ ದುಃಖದಿಂದ ಬೇಯುತ್ತಾ ಹೆಂಡತಿಯನ್ನು, ಆಶ್ರಯವನ್ನು ಕಳೆದುಕೊಂಡು ಇಲ್ಲಿ ವಾಸವಾಗಿರುವೆನು. ಈಗ ನಿನ್ನ ಪಾದಸ್ಪರ್ಶದಿಂದ ಸುಖವನ್ನು ಹೊಂದಿರುವೆನು. ತನ್ನ ಮಿತ್ರನ ದುಃಖದಿಂದ ಸಂತಾಪಗೊಂಡು ರಾಜೀವಲೋಚನ ಶ್ರೀರಾಮನು — ‘‘ಎಲೈ ಮಿತ್ರನೆ! ನಿನ್ನ ಭಾರ್ಯೆಯನ್ನು ಅಪಹರಿಸಿದ ನಿನ್ನ ಶತ್ರುವನ್ನು ನಾನು ಕೊಲ್ಲುವೆನು’’ ಎಂದು ಸುಗ್ರೀವನ ಮುಂದೆ ಪ್ರತಿಜ್ಞೆ ಮಾಡಿದನು. ॥56-59॥

(ಶ್ಲೋಕ-60)

ಮೂಲಮ್

ಸುಗ್ರೀವೋಽಪ್ಯಾಹ ರಾಜೇಂದ್ರ ವಾಲೀ ಬಲವತಾಂ ಬಲೀ ।
ಕಥಂ ಹನಿಷ್ಯತಿ ಭವಾನ್ ದೇವೈರಪಿ ದುರಾಸದಮ್ ॥

(ಶ್ಲೋಕ-61)

ಮೂಲಮ್

ಶೃಣು ತೇ ಕಥಯಿಷ್ಯಾಮಿ ತದ್ಬಲಂ ಬಲಿನಾಂ ವರ ।
ಕದಾಚಿದ್ದುಂದುಭಿರ್ನಾಮ ಮಹಾಕಾಯೋ ಮಹಾಬಲಃ ॥

(ಶ್ಲೋಕ-62)

ಮೂಲಮ್

ಕಿಷ್ಕಿಂಧಾಮಗಮದ್ರಾಮ ಮಹಾಮಹಿಷರೂಪಧೃಕ್ ।
ಯುದ್ಧಾಯ ವಾಲಿನಂ ರಾತ್ರೌ ಸಮಾಹ್ವಯತ ಭೀಷಣಃ ॥

ಅನುವಾದ

ಆಗ ಸುಗ್ರೀವನಿಂತೆಂದನು — ‘‘ಹೇ ರಾಜೇಂದ್ರಾ! ವಾಲಿಯು ಬಲಿಷ್ಠರಲ್ಲೆಲ್ಲ ಅತ್ಯಂತ ಬಲಶಾಲಿಯಾದವನು. ಅವನನ್ನು ಗೆಲ್ಲುವುದು ದೇವತೆಗಳಿಗೂ ಅಸಾಧ್ಯವಾಗಿರುವಾಗ ನೀನು ಹೇಗೆ ಗೆಲ್ಲ ಬಲ್ಲೆ? ಹೇ ಬಲಾಗ್ರಣಿಯೆ! ಆ ವಾಲಿಯ ಬಲದ ಕುರಿತು ಹೇಳುವೆನು ಕೇಳು. ಒಮ್ಮೆ ಮಹಾಶರೀರಿಯೂ, ಹೆಚ್ಚಿನ ಬಲಶಾಲಿಯೂ ಆದ ದುಂದುಭಿ ಎಂಬ ರಾಕ್ಷಸನು ದೊಡ್ಡ ಕೋಣನ ರೂಪವನ್ನು ಧರಿಸಿ ಕಿಷ್ಕಿಂಧೆಗೆ ಬಂದನು. ರಾಮಾ! ಅವನು ರಾತ್ರಿವೇಳೆಯಲ್ಲಿ ವಾಲಿಯನ್ನು ಯುದ್ಧಕ್ಕೆ ಕರೆದನು.॥60-62॥

(ಶ್ಲೋಕ-63)

ಮೂಲಮ್

ತಚ್ಛ್ರುತ್ವಾಸಹಮಾನೋಽಸೌ ವಾಲೀ ಪರಮಕೋಪನಃ ।
ಮಹಿಷಂ ಶೃಂಗಯೋರ್ಧೃತ್ವಾ ಪಾತಯಾಮಾಸ ಭೂತಲೇ ॥

ಅನುವಾದ

ಅದನ್ನು ಕೇಳಿ ಸಹಿಸಲಾರದೆ ವಾಲಿಯು ಭಾರೀ ಸಿಟ್ಟಿನಿಂದ ಬಂದು ಆ ರಾಕ್ಷಸನ ಎರಡೂ ಕೋಡುಗಳನ್ನು ಹಿಡಿದೆತ್ತಿ ನೆಲಕ್ಕೆ ಅಪ್ಪಳಿಸಿದನು. ॥63॥

(ಶ್ಲೋಕ-64)

ಮೂಲಮ್

ಪಾದೇನೈಕೇನ ತತ್ಕಾಯಮಾಕ್ರಮ್ಯಾಸ್ಯ ಶಿರೋ ಮಹತ್ ।
ಹಸ್ತಾ ಭ್ಯಾಂ ಭ್ರಾಮಯಂಶ್ಛಿತ್ತ್ವಾ ತೋಲಯಿತ್ವಾಕ್ಷಿಪದ್ಭುವಿ ॥

ಅನುವಾದ

ತನ್ನ ಒಂದು ಕಾಲಿನಿಂದ ಅವನ ಶರೀರವನ್ನು ಮೆಟ್ಟಿ, ದೊಡ್ಡದಾದ ಆ ರಾಕ್ಷಸನ ತಲೆಯನ್ನು ಎರಡು ಕೈಗಳಿಂದ ತಿರುಚಿ ಕಿತ್ತು ನೆಲದ ಮೇಲೆ ದೂರಕ್ಕೆ ಎಸೆದು ಬಿಟ್ಟನು. ॥64॥

(ಶ್ಲೋಕ-65)

ಮೂಲಮ್

ಪಪಾತ ತಚ್ಛಿರೋ ರಾಮ ಮಾತಂಗಾಶ್ರಮಸನ್ನಿಧೌ ।
ಯೋಜನಾತ್ಪತಿತಂ ತಸ್ಮಾನ್ ಮುನೇರಾಶ್ರಮಮಂಡಲೇ ॥

(ಶ್ಲೋಕ-66)

ಮೂಲಮ್

ರಕ್ತವೃಷ್ಟಿಃ ಪಪಾತೋಚ್ಚೈರ್ದೃಷ್ಟ್ವಾ ತಾಂ ಕ್ರೋಧಮೂರ್ಚ್ಛಿತಃ ।
ಮಾತಂಗೋ ವಾಲಿನಂ ಪ್ರಾಹ ಯದ್ಯಾಗಂತಾಸಿ ಮೇ ಗಿರಿಮ್ ॥

(ಶ್ಲೋಕ-67)

ಮೂಲಮ್

ಇತಃ ಪರಂ ಭಗ್ನಶಿರಾ ಮರಿಷ್ಯಸಿ ನ ಸಂಶಯಃ ।
ಏವಂ ಶಪ್ತಸ್ತದಾರಭ್ಯ ಋಷ್ಯಮೂಕಂ ನ ಯಾತ್ಯಸೌ ॥

ಅನುವಾದ

ಹೇ ರಾಮಾ! ಆ ತಲೆಯು ಮತಂಗ ಋಷಿಗಳ ಆಶ್ರಮದ ಹತ್ತಿರ ಬಿತ್ತು. ಇದರಿಂದ ಒಂದು ಯೋಜನದ ಸುತ್ತಲೂ ಆ ಋಷಿಗಳ ಆಶ್ರಮ ಭೂಮಿಯಲ್ಲಿ ದೊಡ್ಡದಾದ ರಕ್ತದ ಮಳೆಯೇ ಸುರಿಯಿತು. ಅದನ್ನು ಕಂಡು ಕೋಪದಿಂದ ಕೆರಳಿದ ಮತಂಗ ಋಷಿಗಳು ವಾಲಿಯನ್ನು ಕುರಿತು — ‘ನೀನೇನಾದರೂ ಇನ್ನು ಮುಂದೆ ನನ್ನ ಪರ್ವತಕ್ಕೆ ಬಂದರೆ ತಲೆಯೊಡೆದು ಸಾಯುವೆ, ಈ ಬಗ್ಗೆ ಸಂಶಯವಿಲ್ಲ’ ಎಂದು ಶಪಿಸಿದರು. ಹೀಗೆ ಶಾಪಗೊಂಡ ಮೇಲೆ ಅಂದಿನಿಂದ ಅವನು ಈ ಋಷ್ಯಮೂಕಕ್ಕೆ ಬರುವುದಿಲ್ಲ. ॥65-67॥

(ಶ್ಲೋಕ-68)

ಮೂಲಮ್

ಏತಜ್ಜ್ಞಾತ್ವಾಹಮಪ್ಯತ್ರ ವಸಾಮಿ ಭಯವರ್ಜಿತಃ ।
ರಾಮ ಪಶ್ಯ ಶಿರಸ್ತಸ್ಯ ದುಂದುಭೇಃ ಪರ್ವತೋಪಮಮ್ ॥

(ಶ್ಲೋಕ-69)

ಮೂಲಮ್

ತತ್ ಕ್ಷೇಪಣೇ ಯದಾ ಶಕ್ತಃ ಶಕ್ತಸ್ತ್ವಂ ವಾಲಿನೋ ವಧೇ ।
ಇತ್ಯುಕ್ತ್ವಾ ದರ್ಶಯಾಮಾಸ ಶಿರಸ್ತದ್ಗಿರಿಸನ್ನಿಭಮ್ ॥

ಅನುವಾದ

ಇದನ್ನು ತಿಳಿದು ನಾನು ಇಲ್ಲಿ ಭಯವಿಲ್ಲದೆ ವಾಸಮಾಡುತ್ತಿರುವೆನು. ಹೇ ರಾಮಾ! ವಾಲಿಯು ಕೊಂದ ಪರ್ವತ ಸಮಾನವಾದ ದುಂದುಭಿಯ ತಲೆಯನ್ನು ನೋಡು. ಅದನ್ನು ಎಸೆಯುವುದರಲ್ಲಿ ನೀನು ಸಮರ್ಥನಾದರೆ ವಾಲಿಯನ್ನು ಸಂಹರಿಸುವುದರಲ್ಲಿಯೂ ಶಕ್ತನೆನಿಸುವೆ.’’ ಹೀಗೆಂದು ಹೇಳಿ ಬೆಟ್ಟದಂತಿರುವ ಆ ತಲೆಯನ್ನು ತೋರಿಸಿದನು. ॥68-69॥

(ಶ್ಲೋಕ-70)

ಮೂಲಮ್

ದೃಷ್ಟ್ವಾ ರಾಮಃ ಸ್ಮಿತಂ ಕೃತ್ವಾ ಪಾದಾಂಗುಷ್ಠೇನ ಚಾಕ್ಷಿಪತ್ ।
ದಶಯೋಜನಪರ್ಯಂತ ತದದ್ಭುತಮಿವಾಭವತ್ ॥

(ಶ್ಲೋಕ-71)

ಮೂಲಮ್

ಸಾಧು ಸಾಧ್ವಿತಿ ಸಂಪ್ರಾಹ ಸುಗ್ರೀವೋ ಮಂತ್ರಿಭಿಃ ಸಹ ।
ಪುನರಪ್ಯಾಹ ಸುಗ್ರೀವೋ ರಾಮಂ ಭಕ್ತಪರಾಯಣಮ್ ॥

ಅನುವಾದ

ರಾಮನು ಅದನ್ನು ನೋಡಿ ಅಷ್ಟೆನಾ! ಎಂದು ಹೇಳಿ ಮುಗುಳ್ನಕ್ಕು ತನ್ನ ಕಾಲಿನ ಹೆಬ್ಬೆರಳಿನ ತುದಿಯಿಂದ ಹಾರಿಸಿ ಹತ್ತು ಯೋಜನ ದೂರದವರೆಗೆ ಎಸೆದು ಬಿಟ್ಟನು. ಅದೊಂದು ಆಶ್ಚರ್ಯಕರ ಘಟನೆಯಾಯಿತು. ಸುಗ್ರೀವನು ಮಂತ್ರಿಗಳೊಡನೆ ಭಲೇ-ಭಲೇ ಎಂದು ಕೂಗಿದನು. ಮತ್ತೆ ಭಕ್ತಪರಾಯಣನಾದ ಶ್ರೀರಾಮನನ್ನು ಕುರಿತು ಹೀಗೆಂದನು — ॥70-71॥

(ಶ್ಲೋಕ-72)

ಮೂಲಮ್

ಏತೇ ತಾಲಾ ಮಹಾಸಾರಾಃ ಸಪ್ತ ಪಶ್ಯ ರಘೂತ್ತಮ ।
ಏಕೈಕಂ ಚಾಲಯಿತ್ವಾಸೌ ನಿಷ್ಪತ್ರಾಂಕುರುತೇಂಜಸಾ ॥

ಅನುವಾದ

‘‘ಎಲೈ ರಘುಶ್ರೇಷ್ಠನೆ! ಇದೋ ಈ ಬಹಳ ಗಟ್ಟಿಯಾದ ಏಳು ತಾಳೆಯ ಹೆಮ್ಮರಗಳನ್ನು ನೋಡು. ವಾಲಿಯು ಒಂದೊಂದನ್ನು ಅಳ್ಳಾಡಿಸಿ ಒಮ್ಮೆಗೆ ಎಲ್ಲ ಎಲೆಗಳನ್ನು ಉದುರಿಸಿ ಬಿಡುತ್ತಿದ್ದನು. ॥72॥

(ಶ್ಲೋಕ-73)

ಮೂಲಮ್

ಯದಿ ತ್ವಮೇಕಬಾಣೇನ ಭಿತ್ವಾಛಿದ್ರಂ ಕರೋಷಿ ಚೇತ್ ।
ಹತಸ್ತ್ವಯಾ ತದಾ ವಾಲೀ ವಿಶ್ವಾಸೋ ಮೇ ಪ್ರಜಾಯತೇ ।
ತಥೇತಿ ಧನುರಾದಾಯ ಸಾಯಕಂ ತತ್ರ ಸಂದಧೇ ॥

(ಶ್ಲೋಕ-74)

ಮೂಲಮ್

ಬಿಭೇದ ಚ ತದಾ ರಾಮಃ ಸಪ್ತ ತಾಲಾನ್ಮಹಾಬಲಃ ।
ತಾಲಾನ್ಸಪ್ತ ವಿನಿರ್ಭಿದ್ಯ ಗಿರಿಂ ಭೂಮಿಂ ಚ ಸಾಯಕಃ ॥

(ಶ್ಲೋಕ-75)

ಮೂಲಮ್

ಪುನರಾಗತ್ಯ ರಾಮಸ್ಯ ತೂಣೀರೇ ಪೂರ್ವವತ್ಸ್ಥಿತಃ ।
ತತೋಽತಿಹರ್ಷಾತ್ಸುಗ್ರೀವೋ ರಾಮಮಾಹಾತಿವಿಸ್ಮಿತಃ ॥

ಅನುವಾದ

ನೀನಾದರೋ ಒಂದೇ ಬಾಣದಿಂದ ಇವುಗಳನ್ನು ಹೊಡೆದು ತುಂಡು ಮಾಡುವೆಯಾದರೆ ಆಗ ನಿನ್ನಿಂದ ವಾಲಿಯು ಹತನಾದನೆಂದೇ ನಾನು ನಿಶ್ಚಯವಾಗಿ ನಂಬುವೆನು. ಹಾಗೇ ಆಗಲೆಂದು ಶ್ರೀರಾಮನು ತನ್ನ ಬಿಲ್ಲಿಗೆ ಬಾಣವನ್ನು ಹೂಡಿದನು ಹಾಗೂ ಮಹಾಬಲಿಷ್ಠನಾದ ರಾಮನು ಅವನ್ನು ಒಂದೇ ಬಾಣದಿಂದ ಕತ್ತರಿಸಿದನು. ಆ ರಾಮಬಾಣವು ಏಳು ತಾಳೆಮರಗಳನ್ನು ಕೆಡವಿ ಬೆಟ್ಟವನ್ನೂ ಭೂಮಿಯನ್ನೂ ಕೊರೆದು ಮತ್ತೆ ರಾಮನ ಬತ್ತಳಿಕೆಯಲ್ಲಿ ಹಿಂದಿನಂತೆ ಬಂದು ಸೇರಿಕೊಂಡಿತು. ಆಗ ಸುಗ್ರೀವನು ಸಂತೋಷದಿಂದ ಅತ್ಯಂತ ಆಶ್ಚರ್ಯ ಚಕಿತನಾಗಿ ಶ್ರೀರಾಮಚಂದ್ರನೊಂದಿಗೆ ಹೇಳಿದನು. ॥73-75॥

(ಶ್ಲೋಕ-76)

ಮೂಲಮ್

ದೇವ ತ್ವಂ ಜಗತಾಂ ನಾಥಃ ಪರಮಾತ್ಮಾ ನ ಸಂಶಯಃ ।
ಮತ್ಪೂರ್ವಕೃತಪುಣ್ಯೌಘೈಃ ಸಂಗತೋದ್ಯ ಮಯಾ ಸಹ ॥

ಅನುವಾದ

‘‘ಹೇ ದೇವಾ! ನೀನು ಸಮಸ್ತ ಜಗತ್ತಿನ ಒಡೆಯನಾದ ಪರಮಾತ್ಮನೇ ಆಗಿರುವೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ನನ್ನ ಹಿಂದಿನ ಜನ್ಮದ ಪುಣ್ಯಗಳ ರಾಶಿಯ ಫಲವಾಗಿ ನನ್ನೊಡನೆ ಬಂದು ಸೇರಿರುವೆ. ॥76॥

(ಶ್ಲೋಕ-77)

ಮೂಲಮ್

ತ್ವಾಂ ಭಜಂತಿ ಮಹಾತ್ಮಾನಃ ಸಂಸಾರವಿನಿವೃತ್ತಯೇ ।
ತ್ವಾಂ ಪ್ರಾಪ್ಯ ಮೋಕ್ಷಸಚಿವಂ ಪ್ರಾರ್ಥಯೇಽಹಂ ಕಥಂ ಭವಮ್ ॥

ಅನುವಾದ

ಸಂಸಾರದಿಂದ ಬಿಡುಗಡೆಯನ್ನು ಹೊಂದುವುದಕ್ಕಾಗಿ ಮಹಾತ್ಮರು ನಿನ್ನನ್ನು ಸೇವಿಸುತ್ತಾರೆ. ಮೋಕ್ಷದಾಯಕನಾದ ನಿನ್ನನ್ನು ಪಡೆದ ನಾನು ಈ ಸಂಸಾರ ಸುಖಗಳನ್ನು ಹೇಗೆ ಬೇಡಲಿ? ॥77॥

(ಶ್ಲೋಕ-78)

ಮೂಲಮ್

ದಾರಾಃ ಪುತ್ರಾ ಧನಂ ರಾಜ್ಯಂ ಸರ್ವಂ ತ್ವನ್ಮಾಯಯಾ ಕೃತಮ್ ।
ಅತೋಽಹಂ ದೇವದೇವೇಶ ನಾಕಾಂ ಕ್ಷೇಽನ್ಯತ್ಪ್ರಸೀದ ಮೇ ॥

ಅನುವಾದ

ಹೇ ದೇವ ದೇವೇಶ್ವರಾ! ಹೆಂಡತಿ, ಮಕ್ಕಳು, ರಾಜ್ಯ ಇವೆಲ್ಲವೂ ನಿನ್ನ ಮಾಯೆಯಿಂದುಂಟಾದುದು. ಆದ್ದರಿಂದ ನಿನ್ನ ಹೊರತು ನಾನು ಬೇರೇನನ್ನೂ ಬೇಡುವುದಿಲ್ಲ. ನನ್ನ ಮೇಲೆ ಪ್ರಸನ್ನನಾಗು. ॥78॥

(ಶ್ಲೋಕ-79)

ಮೂಲಮ್

ಆನಂದಾನುಭವಂ ತ್ವಾದ್ಯ ಪ್ರಾಪ್ತೋಽಹಂ ಭಾಗ್ಯಗೌರವಾತ್ ।
ಮೃದರ್ಥಂ ಯತಮಾನೇನ ನಿಧಾನಮಿವ ಸತ್ಪತೇ ॥

(ಶ್ಲೋಕ-80)

ಮೂಲಮ್

ಅನಾದ್ಯವಿದ್ಯಾಸಂಸಿದ್ಧಂ ಬಂಧನಂ ಛಿನ್ನಮದ್ಯ ನಃ ।
ಯಜ್ಞದಾನತಪಃ ಕರ್ಮಪೂರ್ತೇಷ್ಟಾದಿಭಿರಪ್ಯಸೌ ॥

(ಶ್ಲೋಕ-81)

ಮೂಲಮ್

ನ ಜೀರ್ಯತೇ ಪುನರ್ದಾರ್ಢ್ಯಂ ಭಜತೇ ಸಂಸೃತಿಃ ಪ್ರಭೋ ।
ತ್ವತ್ಪಾದದರ್ಶನಾತ್ಸದ್ಯೋ ನಾಶಮೇತಿ ನ ಸಂಶಯಃ ॥

ಅನುವಾದ

ಹೇ ಸತ್ಪತೆ! ನಾನು ಪುಣ್ಯ ವಿಶೇಷದಿಂದ ಆನಂದಾನುಭವ ರೂಪನಾದ ನಿನ್ನನ್ನು ಪಡೆದುಕೊಂಡಿದ್ದೇನೆ. ಮಣ್ಣಿಗಾಗಿ ಅಗೆಯುವವನಿಗೆ ನಿಧಿಯೇ ದೊರೆತಂತೆ ಈಗ ನನ್ನ ಸ್ಥಿತಿಯಾಗಿದೆ. ಅನಾದಿಯಾದ ಅವಿದ್ಯೆಯುಂಟಾಗಿದ್ದ ನನ್ನ ಬಂಧನವು ಕಳಚಿ ಹೋಯಿತು. ಯಜ್ಞ, ದಾನ, ತಪಸ್ಸು, ನಿತ್ಯಕರ್ಮಗಳು, ಇಷ್ಟಾಪೂರ್ತಗಳೇ ಮುಂತಾದ ಯಾವುದೇ ಪುಣ್ಯ ಕೆಲಸಗಳಿಂದ ಈ ಸಂಸಾರ ಬಂಧನವು ಕಳಚಿ ಹೋಗದೆ ಮತ್ತು - ಮತ್ತು ದೃಢವಾಗುತ್ತಲೇ ಇರುತ್ತದೆ. ಆದರೆ ಹೇ ಪ್ರಭುವೆ! ನಿನ್ನ ಪಾದದರ್ಶನದಿಂದ ಕೂಡಲೇ ನಾಶವಾಗುತ್ತದೆ. ಈ ವಿಷಯದಲ್ಲಿ ಸಂಶಯವಿಲ್ಲ. ॥79-81॥

(ಶ್ಲೋಕ-82)

ಮೂಲಮ್

ಕ್ಷಣಾರ್ಧಮಪಿ ಯಚ್ಚಿತ್ತಂ ತ್ವಯಿ ತಿಷ್ಠತ್ಯಚಂಚಲಮ್ ।
ತಸ್ಯಾಜ್ಞಾನಮನರ್ಥಾನಾಂ ಮೂಲಂ ನಶ್ಯತಿ ತತ್ ಕ್ಷಣಾತ್ ॥

(ಶ್ಲೋಕ-83)

ಮೂಲಮ್

ತತ್ತಿಷ್ಠತು ಮನೋ ರಾಮ ತ್ವಯಿ ನಾನ್ಯತ್ರ ಮೇ ಸದಾ ॥

ಅನುವಾದ

ಯಾರ ಮನಸ್ಸು ಅರೆಕ್ಷಣವಾದರೂ ನಿಶ್ಚಲವಾಗಿ ನಿನ್ನಲ್ಲಿ ನೆಲೆ ನಿಲ್ಲುವುದೋ, ಅವನ ಅನರ್ಥಗಳಿಗೆ ಕಾರಣವಾದ ಅವಿದ್ಯೆಯು ಕೂಡಲೇ ನಾಶವಾಗುತ್ತದೆ. ಆದ್ದರಿಂದ ಹೇ ರಾಮಾ! ನನ್ನ ಮನಸ್ಸು ಬೇರೆಲ್ಲಿಯೂ ಹೋಗದೆ ಯಾವಾಗಲೂ ನಿನ್ನಲ್ಲೇ ನಿಲ್ಲಲಿ! ॥82-83॥

(ಶ್ಲೋಕ-84)

ಮೂಲಮ್

ರಾಮರಾಮೇತಿ ಯದ್ವಾಣೀ ಮಧುರಂ ಗಾಯತಿ ಕ್ಷಣಮ್ ।
ಸ ಬ್ರಹ್ಮಹಾ ಸುರಾಪೋ ವಾ ಮುಚ್ಯತೇ ಸರ್ವಪಾತಕೈಃ ॥

ಅನುವಾದ

ಯಾರ ವಾಣಿಯು ಒಂದು ಕ್ಷಣವಾದರೂ ರಾಮ! ಎಂದು ಇಂಪಾಗಿ ಹಾಡುವುದೋ ಅವನು ಮದ್ಯಪಾನ ಮಾಡಿದವನಾಗಲಿ, ಬ್ರಹ್ಮಹತ್ಯೆಯನ್ನೆಸಗಿದವನಾಗಲಿ, ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುವನು. ॥84॥

(ಶ್ಲೋಕ-85)

ಮೂಲಮ್

ನ ಕಾಂಕ್ಷೇ ವಿಜಯಂ ರಾಮ ನ ಚ ದಾರಸುಖಾದಿಕಮ್ ।
ಭಕ್ತಿಮೇವ ಸದಾಕಾಂಕ್ಷೇ ತ್ವಯಿ ಬಂಧವಿಮೋಚನೀಮ್ ॥

ಅನುವಾದ

ಹೇ ರಾಮಚಂದ್ರಾ! ನಾನು ಹೆಂಡತಿ ಮುಂತಾದ ಸುಖವನ್ನಾಗಲಿ, ವಿಜಯವನ್ನಾಗಲಿ ಬಯಸುತ್ತಿಲ್ಲ. ಸಂಸಾರದಿಂದ ಬಿಡುಗಡೆಹೊಂದುವಂತಹ ನಿನ್ನ ಭಕ್ತಿಯನ್ನೇ ಬಯಸುತ್ತೇನೆ. ॥85॥

(ಶ್ಲೋಕ-86)

ಮೂಲಮ್

ತ್ವನ್ಮಾಯಾಕೃತಸಂಸಾರಸ್ತ್ವದಂಶೋಽಹಂ ರಘೂತ್ತಮ ।
ಸ್ವಪಾದಭಕ್ತಿಮಾದಿಶ್ಯ ತ್ರಾಹಿ ಮಾಂ ಭವಸಂಕಟಾತ್ ॥

ಅನುವಾದ

ಹೇ ರಘೋತ್ತಮನೆ! ಸಂಸಾರವು ನಿನ್ನ ಮಾಯೆಯಿಂದ ಉಂಟಾಗಿದೆ. ನಾನು ನಿನ್ನ ಅಂಶನಾಗಿರುವೆನು. ನಿನ್ನ ಪಾದ ಭಕ್ತಿಯನ್ನು ಅನುಗ್ರಹಿಸಿ ನನ್ನನ್ನು ಸಂಸಾರ ದುಃಖದಿಂದ ಕಾಪಾಡು. ॥86॥

(ಶ್ಲೋಕ-87)

ಮೂಲಮ್

ಪೂರ್ವಂ ಮಿತ್ರಾರ್ಯುದಾಸೀನಾಸ್ತ್ವನ್ಮಾಯಾವೃತಚೇತಸಃ ।
ಆಸನ್ಮೇದ್ಯ ಭವತ್ಪಾದದರ್ಶನಾದೇವ ರಾಘವ ॥

(ಶ್ಲೋಕ-88)

ಮೂಲಮ್

ಸರ್ವಂ ಬ್ರಹ್ಮೈವ ಮೇ ಭಾತಿ ಕ್ವ ಮಿತ್ರಂ ಕ್ವ ಚ ಮೇ ರಿಪುಃ ।
ಯಾವತ್ತ್ವನ್ಮಾಯಯಾ ಬದ್ಧಸ್ತಾವದ್ಗುಣವಿಶೇಷತಾ ॥

ಅನುವಾದ

ಮೊದಲು ನನ್ನ ಮನಸ್ಸು ಮಾಯೆಯಿಂದ ಮುಚ್ಚಲ್ಪಟ್ಟಿದ್ದಾಗ ಜನರು ನನಗೆ ಸ್ನೇಹಿತರು, ಶತ್ರುಗಳು, ಉದಾಸೀನರೆಂದು ಕಾಣುತ್ತಿದ್ದರು. ಹೇ ರಾಘವನೆ! ಈಗ ನಿನ್ನ ಪಾದದರ್ಶನ ಮಾತ್ರದಿಂದ ಅವರೆಲ್ಲರೂ ಬ್ರಹ್ಮಸ್ವರೂಪ ರಾಗಿಯೇ ಕಾಣುತ್ತಿದ್ದಾರೆ. ಹೀಗಿರುವಲ್ಲಿ ಯಾರು ಮಿತ್ರರು? ಯಾರು ಶತ್ರುಗಳು? ನಿನ್ನ ಮಾಯೆಯಿಂದ ಬದ್ಧನಾಗಿರುವವರೆಗೆ ಜೀವನ ಮೇಲೆ ಸತ್ವಾದಿ ಗುಣಗಳ ಪ್ರಭಾವ ಬೀಳುತ್ತಿರುತ್ತದೆ. ॥87-88॥

(ಶ್ಲೋಕ-89)

ಮೂಲಮ್

ಸಾ ಯಾವದಸ್ತಿ ನಾನಾತ್ವಂ ತಾವದ್ಭವತಿ ನಾನ್ಯಥಾ ।
ಯಾವನ್ನಾನಾತ್ವಮಜ್ಞಾನಾತ್ತಾವತ್ಕಾಲಕೃತಂ ಭಯಮ್ ॥

ಅನುವಾದ

ಮಾಯೆಯ ಪ್ರಭಾವವಿರುವ ತನಕ ಶತ್ರು ಮಿತ್ರಾದಿ ಭೇದಗಳು ಇರುತ್ತವೆ. ಅದು ದೂರವಾಗುತ್ತಲೇ ಎಲ್ಲ ಭೇದ ಭಾವಗಳು ಅಳಿದು ಹೋಗುತ್ತವೆ. ಅಜ್ಞಾನದಿಂದ ಉಂಟಾದ ನಾನಾತ್ವವಿರುವವರೆಗೆ ಮೃತ್ಯುವಿನ ಭಯವು ಇರುವುದು. ॥89॥

(ಶ್ಲೋಕ-90)

ಮೂಲಮ್

ಅತೋಽವಿದ್ಯಾಮುಪಾಸ್ತೇ ಯಃ ಸೋಽಂಧೇ ತಮಸಿ ಮಜ್ಜತಿ ।
ಮಾಯಾಮೂಲಮಿದಂ ಸರ್ವಂ ಪುತ್ರದಾರಾದಿಬಂಧನಮ್ ।
ತದುತ್ಸಾರಯ ಮಾಯಾಂ ತ್ವಂ ದಾಸೀಂ ತವ ರಘೂತ್ತಮ ॥

ಅನುವಾದ

ಆದ್ದರಿಂದ ಈ ಅವಿದ್ಯೆ (ನಾನಾತ್ವ) ಯನ್ನು ಚಿಂತಿಸುವವನು ಕಗ್ಗತ್ತಲಿನಲ್ಲಿ (ಸಂಸಾರ ದಲ್ಲಿ) ಮುಳುಗುವನು. ಈ ಪತ್ನೀ-ಪುತ್ರರು ಮುಂತಾದ ಬಂಧನಗಳೆಲ್ಲವೂ ಮಾಯಾಮೂಲವಾಗಿವೆ. ಆದ್ದರಿಂದ ಹೇ ರಘುಶ್ರೇಷ್ಠ ! ನಿನ್ನ ದಾಸಿಯಾಗಿರುವ ಈ ಮಾಯೆಯನ್ನು ನಮ್ಮಿಂದ ನೀನು ಹೋಗಲಾಡಿಸು. ॥90॥

(ಶ್ಲೋಕ-91)

ಮೂಲಮ್

ತ್ವತ್ಪಾದಪದ್ಮಾರ್ಪಿತಚಿತ್ತವೃತ್ತಿಃ
ತ್ವನ್ನಾಮಸಂಗೀತಕಥಾಸು ವಾಣೀ ।
ತ್ವದ್ಭಕ್ತಸೇವಾನಿರತೌ ಕರೌ ಮೇ
ತ್ವದಂಗಸಂಗಂ ಲಭತಾಂ ಮದಂಗಮ್ ॥

ಅನುವಾದ

ಪ್ರಭು ! ನನ್ನ ಚಿತ್ತವೃತ್ತಿಯು ನಿನ್ನ ಪಾದಪದ್ಮಗಳಲ್ಲಿಯೇ ನೆಟ್ಟಿರಲಿ. ಮಾತು ನಿನ್ನ ನಾಮಸಂಕೀರ್ತನರೂಪವಾದ ಕಥೆಗಳಲ್ಲಿಯೂ, ಎರಡೂ ಕೈಗಳು ನಿನ್ನ ಭಕ್ತರ ಸೇವೆಯಲ್ಲಿ ನಿರತವಾಗಿರಲಿ. ನನ್ನ ಶರೀರವು ನಿನ್ನ ಪವಿತ್ರದೇಹಸಂಬಂಧವುಳ್ಳದ್ದಾಗಲಿ. ॥91॥

(ಶ್ಲೋಕ-92)

ಮೂಲಮ್

ತ್ವನ್ಮೂರ್ತಿಭಕ್ತಾನ್ ಸ್ವಗುರುಂ ಚ ಚಕ್ಷುಃ
ಪಶ್ಯತ್ವಜಸ್ರಂ ಸ ಶೃಣೋತಿ ಕರ್ಣಃ ।
ತ್ವಜ್ಜನ್ಮಕರ್ಮಾಣಿ ಚ ಪಾದಯುಗ್ಮಂ
ವ್ರಜತ್ವಜಸ್ರಂ ತವ ಮಂದಿರಾಣಿ ॥

(ಶ್ಲೋಕ-93)

ಮೂಲಮ್

ಅಂಗಾನಿ ತೇ ಪಾದರಜೋವಿಮಿಶ್ರ-
ತೀರ್ಥಾನಿ ಬಿಭ್ರತ್ವಹಿಶತ್ರುಕೇತೋ ।
ಶಿರಸ್ತ್ವದೀಯಂ ಭವಪದ್ಮಜಾದ್ಯೈ-
ರ್ಜುಷ್ಟಂ ಪದಂ ರಾಮ ನಮತ್ವಜಸ್ರಮ್ ॥

ಅನುವಾದ

ಹಾಗೆಯೇ ನನ್ನ ಕಣ್ಣುಗಳು ಯಾವಾಗಲು ನಿನ್ನ ಮೂರ್ತಿಯನ್ನು, ಭಕ್ತರನ್ನು, ಗುರುವನ್ನು ಕಾಣುವಂತಾಗಲಿ. ನನ್ನ ಕಿವಿಗಳು ನಿನ್ನ ಅವತಾರಗಳನ್ನೂ ದಿವ್ಯಲೀಲೆಗಳನ್ನೂ ಕೇಳುವಂತಾಗಲಿ. ಕಾಲುಗಳು ನಿನ್ನ ದೇವಾಲಯಗಳಿಗೆ ಪುನಃ ಪುನಃ ಹೋಗುವಂತಾಗಲಿ. ಹೇ ಗರುಡಧ್ವಜಾ! ನನ್ನ ದೇಹದ ಅವಯವಗಳು ನಿನ್ನ ಪಾದಧೂಳಿನಿಂದ ಬೆರೆತ ತೀರ್ಥವನ್ನು ಧರಿಸುವಂತಾಗಲಿ. ನನ್ನ ತಲೆಯು ಶಿವ-ಬ್ರಹ್ಮಾದಿ ದೇವತೆಗಳಿಂದ ಸೇವಿತವಾದ ನಿನ್ನ ಪಾದಗಳಿಗೆ ಸದಾಕಾಲ ನಮಸ್ಕರಿಸುತ್ತಿರಲಿ. ॥92-93॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಕಿಷ್ಕಿಂಧಾಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಮೊದಲನೆಯ ಸರ್ಗವು ಮುಗಿಯಿತು.