೧೦

[ಹತ್ತನೆಯ ಸರ್ಗ]

ಭಾಗಸೂಚನಾ

ಶಬರಿಯ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಲಬ್ಧ್ವಾ ವರಂ ಸ ಗಂಧರ್ವಃ ಪ್ರಯಾಸ್ಯನ್ ರಾಮಮಬ್ರವೀತ್ ।
ಶಬರ್ಯಾಸ್ತೇ ಪುರೋಭಾಗೇ ಆಶ್ರಮೇ ರಘುನಂದನ ॥

(ಶ್ಲೋಕ-2)

ಮೂಲಮ್

ಭಕ್ತ್ಯಾ ತ್ವತ್ಪಾದಕಮಲೇ ಭಕ್ತಿಮಾರ್ಗವಿಶಾರದಾ ।
ತಾಂ ಪ್ರಯಾಹಿ ಮಹಾಭಾಗ ಸರ್ವಂ ತೇ ಕಥಯಿಷ್ಯತಿ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಗಿರಿಜೇ! ಭಗವಾನ್ ಶ್ರೀರಾಮನಿಂದ ವರ ಪಡೆದ ಆ ಗಂಧರ್ವನು ಪರಮಧಾಮಕ್ಕೆ ಪ್ರಯಾಣ ಮಾಡುವಾಗ ರಾಮನಲ್ಲಿ ‘‘ಹೇ ರಘುನಂದನಾ! ಇದೋ ಮುಂದಿರುವ ಆಶ್ರಮದಲ್ಲಿ ನಿನ್ನ ಪಾದಕಮಲಗಳಲ್ಲಿ ಭಕ್ತಿಯಿರುವ ಹಾಗೂ ಭಕ್ತಿಮಾರ್ಗದಲ್ಲಿ ನಿಪುಣಳಾದ ಶಬರಿಯು ವಾಸವಾಗಿದ್ದಾಳೆ. ಹೇ ಮಹಾಭಾಗ! ಅಲ್ಲಿಗೆ ನೀನು ಹೋಗು. ಅವಳು ನಿನಗೆ ಸೀತಾ ವಿಷಯದಲ್ಲಿ ಎಲ್ಲವನ್ನು ಹೇಳುವಳು.’’ ॥1-2॥

(ಶ್ಲೋಕ-3)

ಮೂಲಮ್

ಇತ್ಯುಕ್ತ್ವಾ ಪ್ರಯಯೌ ಸೋಽಪಿ ವಿಮಾನೇನಾರ್ಕವರ್ಚಸಾ ।
ವಿಷ್ಣೋಃ ಪದಂ ರಾಮನಾಮಸ್ಮರಣೇ ಫಲಮೀದೃಶಮ್ ॥

ಅನುವಾದ

ಹೀಗೆಂದು ಹೇಳಿ ಸೂರ್ಯನಂತೆ ಕಾಂತಿಯುಕ್ತವಾದ ವಿಮಾನದಲ್ಲಿ ಕುಳಿತು ಗಂಧರ್ವನು ವಿಷ್ಣುಲೋಕಕ್ಕೆ ಹೋದನು. ರಾಮನಾಮದ ಸ್ಮರಣೆಯ ಫಲವು ಇದೇ ಆಗಿದೆ. ॥3॥

(ಶ್ಲೋಕ-4)

ಮೂಲಮ್

ತ್ಯಕ್ತ್ವಾ ತದ್ವಿಪಿನಂ ಘೊರಂ ಸಿಂಹವ್ಯಾಘ್ರಾದಿದೂಷಿತಮ್ ।
ಶನೈರಥಾಶ್ರಮಪದಂ ಶಬರ್ಯಾ ರಘುನಂದನಃ ॥

(ಶ್ಲೋಕ-5)

ಮೂಲಮ್

ಶಬರೀ ರಾಮಮಾಲೋಕ್ಯ ಲಕ್ಷ್ಮಣೇನ ಸಮನ್ವಿತಮ್ ।
ಆಯಾಂತಮಾರಾದ್ ಹರ್ಷೇಣ ಪ್ರತ್ಯುತ್ಥಾಯಾಚಿರೇಣ ಸಾ ॥

(ಶ್ಲೋಕ-6)

ಮೂಲಮ್

ಪತಿತ್ವಾ ಪಾದಯೋರಗ್ರೇ ಹರ್ಷಪೂರ್ಣಾಶ್ರುಲೋಚನಾ ।
ಸ್ವಾಗತೇನಾಭಿನಂದ್ಯಾಥ ಸ್ವಾಸನೇ ಸಂನ್ಯವೇಶಯತ್ ॥

ಅನುವಾದ

ಅನಂತರ ಸಿಂಹ, ಹುಲಿ ಮುಂತಾದವುಗಳಿಂದ ದೂಷಿತವಾದ ಆ ಭಯಂಕರ ಕಾಡನ್ನು ಬಿಟ್ಟು ಶ್ರೀರಾಮನು ನಿಧಾನವಾಗಿ ಶಬರಿಯ ಆಶ್ರಮದ ಬಳಿಗೆ ಬಂದನು. ಲಕ್ಷ್ಮಣ ನೊಡಗೂಡಿ ಬರುತ್ತಿರುವ ಶ್ರೀರಾಮನನ್ನು ಕಂಡ ಶಬರಿಯು ಅತ್ಯಂತ ಹರ್ಷದಿಂದ ಮೇಲೆದ್ದು, ಕಣ್ಣುಗಳಲ್ಲಿ ಆನಂದಾಶ್ರುಗಳನ್ನು ತುಂಬಿಕೊಂಡು ಅವಳು ಭಗವಾನ್ ಶ್ರೀರಾಮನ ಮುಂದೆ ಬಂದು ಅವನ ಚರಣಗಳಲ್ಲಿ ಹೊರಳಾಡಿ, ಸ್ವಾಗತಿಸಿ, ಹೊಗಳಿ ಸುಂದರವಾದ ಆಸನದಲ್ಲಿ ಕುಳ್ಳಿರಿಸಿದಳು. ॥4-6॥

(ಶ್ಲೋಕ-7)

ಮೂಲಮ್

ರಾಮಲಕ್ಷ್ಮಣಯೋಃ ಸಮ್ಯಕ್ಪಾದೌ ಪ್ರಕ್ಷಾಲ್ಯ ಭಕ್ತಿತಃ ।
ತಜ್ಜಲೇನಾಭಿಷಿಚ್ಯಾಂಗಮಥಾರ್ಘ್ಯಾದಿಭಿರಾದೃತಾ ॥

(ಶ್ಲೋಕ-8)

ಮೂಲಮ್

ಸಂಪೂಜ್ಯ ವಿಧಿವದ್ರಾಮಂ ಸಸೌಮಿತ್ರಿಂ ಸಪರ್ಯಯಾ ।
ಸಂಗೃಹೀತಾನಿ ದಿವ್ಯಾನಿ ರಾಮಾರ್ಥಂ ಶಬರೀ ಮುದಾ ॥

(ಶ್ಲೋಕ-9)

ಮೂಲಮ್

ಫಲಾನ್ಯಮೃತಕಲ್ಪಾನಿ ದದೌ ರಾಮಾಯ ಭಕ್ತಿತಃ ।
ಪಾದೌ ಸಂಪೂಜ್ಯ ಕುಸುಮೈಃ ಸುಗಂಧೈಃ ಸಾನುಲೇಪನೈಃ ॥

ಅನುವಾದ

ಬಳಿಕ ರಾಮಲಕ್ಷ್ಮಣರ ಪಾದಗಳನ್ನು ಚೆನ್ನಾಗಿ ತೊಳೆದು ಭಕ್ತಿಯಿಂದ ಆ ಪಾದೋದಕವನ್ನು ಶಿರದ ಮೇಲೆ ಪ್ರೋಕ್ಷಿಸಿಕೊಂಡು, ಶ್ರದ್ಧಾಯುಕ್ತಳಾಗಿ ಅರ್ಘ್ಯಾದಿ ಉಪಚಾರಗಳಿಂದ ವಿಧಿಪೂರ್ವಕವಾಗಿ ಸೌಮಿತ್ರಿ ಸಹಿತನಾದ ಶ್ರೀರಾಮನನ್ನು ಪೂಜಿಸಿದಳು. ಅನಂತರ ಶ್ರೀರಾಮನಿಗಾಗಿಯೇ ಸಂಗ್ರಹಿಸಿಟ್ಟಿದ್ದ ದಿವ್ಯವಾದ ಅಮೃತದಂತೆ ರುಚಿಯಾಗಿರುವ ಹಣ್ಣುಗಳನ್ನು ಭಕ್ತಿಯಿಂದ ಶ್ರೀರಾಮನಿಗೆ ಸಮರ್ಪಿಸಿದಳು ಹಾಗೂ ಒಳ್ಳೆಯ ಸುಗಂಧಿತವಾದ ಹೂವು, ಗಂಧಾದಿಗಳಿಂದ ಅವನ ಪಾದಗಳನ್ನು ಪೂಜಿಸಿದಳು. ॥7-9॥

(ಶ್ಲೋಕ-10)

ಮೂಲಮ್

ಕೃತಾತಿಥ್ಯಂ ರಘುಶ್ರೇಷ್ಠಮುಪವಿಷ್ಟಂ ಸಹಾನುಜಮ್ ।
ಶಬರೀ ಭಕ್ತಿಸಂಪನ್ನಾ ಪ್ರಾಂಜಲಿರ್ವಾಕ್ಯಮಬ್ರವೀತ್ ॥

(ಶ್ಲೋಕ-11)

ಮೂಲಮ್

ಅತ್ರಾಶ್ರಮೇ ರಘುಶ್ರೇಷ್ಠ ಗುರವೋ ಮೇ ಮಹರ್ಷಯಃ ।
ಸ್ಥಿತಾಃ ಶುಶ್ರೂಷಣಂ ತೇಷಾಂ ಕುರ್ವತೀ ಸಮುಪಸ್ಥಿತಾ ॥

(ಶ್ಲೋಕ-12)

ಮೂಲಮ್

ಬಹುವರ್ಷಸಹಪ್ರಾಣಿ ಗತಾಸ್ತೇ ಬ್ರಹ್ಮಣಃ ಪದಮ್ ।
ಗಮಿಷ್ಯಂತೋಽಬ್ರುವನ್ಮಾಂ ತ್ವಂ ವಸಾತ್ರೈವ ಸಮಾಹಿತಾ ॥

ಅನುವಾದ

ಸೋದರನೊಡನೆ ಆತಿಥ್ಯವನ್ನು ಸ್ವೀಕರಿಸಿ ಕುಳಿತಿರುವ ಶ್ರೀರಾಮಚಂದ್ರನಲ್ಲಿ ಭಕ್ತಿಸಂಪನ್ನಳಾದ ಶಬರಿಯು ಕೈ ಮುಗಿದು ಕೊಂಡು ಹೇಳುತ್ತಾಳೆ ‘‘ಹೇ ರಘುಶ್ರೇಷ್ಠನೆ! ಈ ಆಶ್ರಮದಲ್ಲಿ ನನ್ನ ಗುರುಗಳಾದ ಮಹರ್ಷಿ ಮತಂಗರು ಇದ್ದರು. ಅವರ ಸೇವೆಯನ್ನು ಮಾಡಿಕೊಂಡು ಅನೇಕ ಸಹಸ್ರ ವರ್ಷಗಳವರೆಗೆ ನಾನು ಇದ್ದೆ. ಅವರಾದರೋ ಬ್ರಹ್ಮಲೋಕಕ್ಕೆ ಹೊರಟು ಹೋದರು. ಹೋಗುವಾಗ ಅವರು ನೀನು ತಪಸ್ಸು ಮಾಡಿಕೊಂಡು ಇಲ್ಲಿಯೇ ಇರು. ॥10-12॥

(ಶ್ಲೋಕ-13)

ಮೂಲಮ್

ರಾಮೋ ದಾಶರಥಿರ್ಜಾತಃ ಪರಮಾತ್ಮಾ ಸನಾತನಃ ।
ರಾಕ್ಷಸಾನಾಂ ವಧಾರ್ಥಾಯ ಋಷೀಣಾಂ ರಕ್ಷಣಾಯ ಚ ॥

(ಶ್ಲೋಕ-14)

ಮೂಲಮ್

ಆಗಮಿಷ್ಯತಿ ಸೈಕಾಗ್ರಧ್ಯಾನನಿಷ್ಠಾ ಸ್ಥಿರಾ ಭವ ।
ಇದಾನೀಂ ಚಿತ್ರಕೂಟಾದ್ರಾವಾಶ್ರಮೇ ವಸತಿ ಪ್ರಭುಃ ॥

(ಶ್ಲೋಕ-15)

ಮೂಲಮ್

ಯಾವದಾಗಮನಂ ತಸ್ಯ ತಾವದ್ರಕ್ಷ ಕಲೇವರಮ್ ।
ದೃಷ್ಟೈವ ರಾಘವಂ ದಗ್ ಧ್ವಾದೇಹಂ ಯಾಸ್ಯಸಿ ತತ್ಪದಮ್ ॥

ಅನುವಾದ

ಸನಾತನ ಪರಬ್ರಹ್ಮನಾದ ಶ್ರೀರಾಮನು ದಶರಥಪುತ್ರನಾಗಿ ರಾಕ್ಷಸರನ್ನು ಕೊಲ್ಲುವುದಕ್ಕಾಗಿಯೂ, ಋಷಿಗಳನ್ನು ಕಾಪಾಡುವುದಕ್ಕಾಗಿಯೂ ಅವತರಿಸಿರುವನು. ಅವನು ಈಗ ಚಿತ್ರಕೂಟ ಪರ್ವತದಲ್ಲಿ ವಾಸಿಸುತ್ತಿರುವನು. ಆ ಪ್ರಭುವು ಇಲ್ಲಿಗೆ ಬರಲಿದ್ದಾನೆ. ಅವನು ಬರುವವರೆಗೂ ನೀನು ಏಕಾಗ್ರಮನಸ್ಸಿನಿಂದ ಧ್ಯಾನಿಸುತ್ತಾ ಇರು. ಅವನು ಬರುವವರೆಗೆ ನಿನ್ನ ಶರೀರವನ್ನು ಕಾಪಾಡಿಕೊಂಡಿರು. ಶ್ರೀರಾಮನನ್ನು ಕಂಡ ಮೇಲೆ ಈ ದೇಹವನ್ನು ಅಗ್ನಿಗೆ ಅರ್ಪಿಸಿ ಆ ಬ್ರಹ್ಮಪದವಿಯನ್ನು ಹೊಂದುವವಳಾಗು ಎಂದಿದ್ದರು. ॥13-15॥

(ಶ್ಲೋಕ-16)

ಮೂಲಮ್

ತಥೈವಾಕರವಂ ರಾಮ ತ್ವದ್ಧ್ಯಾನೈಕಪರಾಯಣಾ ।
ಪ್ರತೀಕ್ಷ್ಯಾಗಮನಂ ತೇಽದ್ಯ ಸಫಲಂ ಗುರುಭಾಷಿತಮ್ ॥

ಅನುವಾದ

ಹೇ ರಾಮಾ! ಗುರುಗಳ ಆಣತಿಯಂತೆ ಅಂದಿನಿಂದ ನಾನೂ ನಿನ್ನ ಧ್ಯಾನದಲ್ಲಿ ನಿಷ್ಠಳಾಗಿ ನಿನ್ನ ಬರುವಿಕೆಯನ್ನು ನಿರೀಕ್ಷಿಸುತ್ತಾ ಇದ್ದೆನು. ಇಂದು ಗುರುಗಳ ವಾಕ್ಯವು ಸಫಲವಾಯಿತು. ॥16॥

(ಶ್ಲೋಕ-17)

ಮೂಲಮ್

ತವ ಸಂದರ್ಶನಂ ರಾಮ ಗುರೂಣಾಮಪಿ ಮೇ ನ ಹಿ ।
ಯೋಷಿನ್ಮೂಢಾಪ್ರಮೇಯಾತ್ಮನ್ ಹೀನಜಾತಿಸಮುದ್ಭವಾ ॥

(ಶ್ಲೋಕ-18)

ಮೂಲಮ್

ತವ ದಾಸಸ್ಯ ದಾಸಾನಾಂ ಶತಸಂಖ್ಯೋತ್ತರಸ್ಯ ವಾ ।
ದಾಸೀತ್ವೇ ನಾಧಿಕಾರೋಽಸ್ತಿ ಕುತಃ ಸಾಕ್ಷಾತ್ತವೈವ ಹಿ ॥

(ಶ್ಲೋಕ-19)

ಮೂಲಮ್

ಕಥಂ ರಾಮಾದ್ಯ ಮೇ ದೃಷ್ಟಸ್ತ್ವ ಸಂ ಮನೋವಾಗಗೋಚರಃ ।
ಸ್ತೋತುಂ ನ ಜಾನೇ ದೇವೇಶ ಕಿಂ ಕರೋಮಿ ಪ್ರಸೀದ ಮೇ ॥

ಅನುವಾದ

ಹೇ ರಾಮಚಂದ್ರಾ! ನಿನ್ನ ದರ್ಶನವಾದರೋ ನನ್ನ ಗುರುಗಳಿಗೂ ದೊರಕಲಿಲ್ಲ. ಹೇ ಅಪ್ರಮೇಯನೆ! ನಾನಾದರೋ ಮೂಢ ಹೆಂಗಸು. ಕೀಳು ಜಾತಿಯಲ್ಲಿ ಹುಟ್ಟಿದವಳು. (ನನ್ನ ಮಾತಾದರೂ ಏನು?) ನಿನ್ನ ದಾಸರ ದಾಸರಲ್ಲಿ ನೂರುಮಂದಿಗೂ ಅಥವಾ ಅದಕ್ಕಿಂತಲೂ ಹೆಚ್ಚು ದಾಸರ ಸಾಲಿನಲ್ಲಿ ಕೊನೆಯ ದಾಸಿಯಾಗಿರಲೂ ಕೂಡ ನಾನು ಅನರ್ಹಳು. ಹೀಗಿರುವಾಗ ನೇರವಾಗಿ ನಿನ್ನ ದಾಸಿ ಯಾಗಲು ಹೇಗೆ ಸಾಧ್ಯವಾದೀತು? ಮಾತು-ಮನಸ್ಸಿಗೂ ಅಗೋಚರನಾದ ರಾಮಾ! ನಿನ್ನ ದರ್ಶನ ಹೇಗೆ ಸಾಧ್ಯವಾಯಿತು? ಹೇ ದೇವೇಶ್ವರಾ! ನಾನು ನಿನ್ನನ್ನು ಸ್ತೋತ್ರ ಮಾಡಲೂ ಅರಿಯೆನು. ನಾನು ಈಗೇನು ಮಾಡಲಿ? ದಯಾಳುವಾದ ನೀನು ಪ್ರಸನ್ನನನಾಗಿ ಸ್ವತಃ ನನಗೆ ಅಪ್ಪಣೆಕೊಡು.’’ ॥17-19॥

(ಶ್ಲೋಕ-20)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಪುಂಸ್ತ್ವೇ ಸೀತ್ವೇ ವಿಶೇಷೋ ವಾ ಜಾತಿನಾಮಾಶ್ರಮಾದಯಃ ।
ನ ಕಾರಣಂ ಮದ್ಭಜನೇ ಭಕ್ತಿರೇವ ಹಿ ಕಾರಣಮ್ ॥

(ಶ್ಲೋಕ-21)

ಮೂಲಮ್

ಯಜ್ಞದಾನತಪೋಭಿರ್ವಾ ವೇದಾಧ್ಯಯನಕರ್ಮಭಿಃ ।
ನೈವ ದ್ರಷ್ಟುಮಹಂ ಶಕ್ಯೋ ಮದ್ಭಕ್ತಿವಿಮುಖೈಃ ಸದಾ ॥

ಅನುವಾದ

ಶ್ರೀರಾಮಚಂದ್ರನಿಂತೆಂದನು — ‘‘ಪುರುಷತ್ವ-ಸೀತ್ವಎಂಬ ಭೇದವಾಗಲೀ, ಜಾತಿ, ಹೆಸರು, ಬ್ರಹ್ಮಚರ್ಯಾದಿ ಆಶ್ರಮಗಳಾಗಲಿ ನನ್ನನ್ನು ಪಡೆಯಲು ಮುಖ್ಯವಲ್ಲ. ನನ್ನನ್ನು ಭಜಿಸಲು ಭಕ್ತಿಯೊಂದೇ ಕಾರಣವಾಗಿರುವುದು. ಯಜ್ಞದಾನ ತಪಸ್ಸುಗಳಿಂದಾಗಲಿ, ವೇದಾಧ್ಯಯನವೇ ಮುಂತಾದ ಸತ್ಕರ್ಮಗಳಿಂದಾಗಲಿ, ನನ್ನ ಭಕ್ತಿಯಿಲ್ಲದವರು ನನ್ನನ್ನು ಕಾಣಲಾರರು. ॥20-21॥

(ಶ್ಲೋಕ-22)

ಮೂಲಮ್

ತಸ್ಮಾದ್ಭಾಮಿನಿ ಸಂಕ್ಷೇಪಾದ್ವಕ್ಷ್ಯೇಹಂ ಭಕ್ತಿಸಾಧನಮ್ ।
ಸತಾಂ ಸಂಗತಿರೇವಾತ್ರ ಸಾಧನಂ ಪ್ರಥಮಂ ಸ್ಮೃತಮ್ ॥

(ಶ್ಲೋಕ-23)

ಮೂಲಮ್

ದ್ವಿತೀಯಂ ಮತ್ಕಥಾಲಾಪಸ್ತೃತೀಯಂ ಮದ್ಗುಣೇರಣಮ್ ।
ವ್ಯಾಖ್ಯಾತೃತ್ವಂ ಮದ್ವಚಸಾಂ ಚತುರ್ಥಂ ಸಾಧನಂ ಭವೇತ್ ॥

ಅನುವಾದ

ಆದ್ದರಿಂದ ಹೇ ಭಾಮಿನಿ! ನಿನಗೆ ನಾನು ಸಂಕ್ಷೇಪವಾಗಿ ಈಗ ಭಕ್ತಿಯ ಸಾಧನೆಗಳನ್ನು ವರ್ಣಿಸುವೆನು. ಅದರಲ್ಲಿ ಸತ್ಪುರುಷರ ಸಹವಾಸವೇ ಮೊದಲನೆಯ ಸಾಧನವು. ನನ್ನ ಲೀಲಾಕಥೆಗಳನ್ನು ಕೀರ್ತನೆ ಮಾಡುವುದು ಎರಡನೆಯ ಸಾಧನೆಯು. ನನ್ನ ಗುಣಗಳನ್ನು ಪರಸ್ಪರ ಚರ್ಚಿಸುವುದು ಮೂರನೆಯ ಸಾಧನೆಯು. ಗೀತಾ-ಉಪನಿಷದಾದಿ ಸತ್ ಶಾಸ್ತ್ರಗಳನ್ನು ವಿವರಿಸಿ ಹೇಳುವುದು ನಾಲ್ಕನೆಯ ಸಾಧನವು. ॥22-23॥

(ಶ್ಲೋಕ-24)

ಮೂಲಮ್

ಆಚಾರ್ಯೋಪಾಸನಂ ಭದ್ರೇ ಮದ್ಭುದ್ಧ್ಯಾಮಾಯಯಾ ಸದಾ ।
ಪಂಚಮಂ ಪುಣ್ಯಶೀಲತ್ವಂ ಯಮಾದಿ ನಿಯಮಾದಿ ಚ ॥

(ಶ್ಲೋಕ-25)

ಮೂಲಮ್

ನಿಷ್ಠಾ ಮತ್ಪೂಜನೇ ನಿತ್ಯಂ ಷಷ್ಠಂ ಸಾಧನಮೀರಿತಮ್ ।
ಮಮ ಮಂತ್ರೋಪಾಸಕತ್ವಂ ಸಾಂಗಂ ಸಪ್ತಮಮುಚ್ಯತೇ ॥

ಅನುವಾದ

ಎಲೈ ಮಂಗಳ ಸ್ವರೂಪಳೆ! ತನ್ನ ಗುರುವನ್ನು ಭಗವದ್ ಬುದ್ಧಿಯಿಂದ ವಂಚನೆಯಿಲ್ಲದೆ ಯಾವಾಗಲೂ ಸೇವೆಮಾಡುವುದು ಐದನೆಯ ಸಾಧನೆ. ಪವಿತ್ರ ನಡೆ ಯುಳ್ಳವನಾಗಿ ಯಮನಿಯಮಗಳನ್ನು ಸಾಧಿಸುತ್ತಾ ನಿಷ್ಠೆ ಯಿಂದ ನನ್ನನ್ನು ಪೂಜಿಸುವುದು ಆರನೇ ಸಾಧನವು. ಸಾಂಗೋಪಾಂಗವಾಗಿ ನನ್ನ ಮಂತ್ರವನ್ನು ಉಪಾಸಿಸುವುದು ಏಳನೆಯ ಸಾಧನವು. ॥24-25॥

(ಶ್ಲೋಕ-26)

ಮೂಲಮ್

ಮದ್ಭಕ್ತೇಷ್ವಧಿಕಾ ಪೂಜಾ ಸರ್ವಭೂತೇಷು ಮನ್ಮತಿಃ ।
ಬಾಹ್ಯಾರ್ಥೇಷು ವಿರಾಗಿತ್ವಂ ಶಮಾದಿಸಹಿತಂ ತಥಾ ॥

(ಶ್ಲೋಕ-27)

ಮೂಲಮ್

ಅಷ್ಟಮಂ ನವಮಂ ತತ್ತ್ವವಿಚಾರೋ ಮಮ ಭಾಮಿನಿ ।
ಏವಂ ನವವಿಧಾ ಭಕ್ತಿಃ ಸಾಧನಂ ಯಸ್ಯ ಕಸ್ಯ ವಾ ॥

(ಶ್ಲೋಕ-28)

ಮೂಲಮ್

ಸ್ತ್ರೀಯೋ ವಾ ಪುರುಷಸ್ಯಾಪಿ ತಿರ್ಯಗ್ಯೋನಿಗತಸ್ಯ ವಾ ।
ಭಕ್ತಿಃ ಸಂಜಾಯತೇ ಪ್ರೇಮಲಕ್ಷಣಾ ಶುಭಲಕ್ಷಣೇ ॥

ಅನುವಾದ

ನನ್ನ ಭಕ್ತರನ್ನು ಹೆಚ್ಚಾಗಿ ಗೌರವಿಸುವುದು, ಎಲ್ಲ ಪ್ರಾಣಿಗಳಲ್ಲಿಯೂ ನನ್ನ ಬುದ್ಧಿಯನ್ನಿರಿಸುವುದು, ಶಮದಮಾದಿ ಸಾಧನಗಳೊಡಗೂಡಿ ಹೊರಗಿನ ಪದಾರ್ಥಗಳಲ್ಲಿ ವೈರಾಗ್ಯವನ್ನು ಹೊಂದುವುದು ಎಂಟನೆಯ ಸಾಧನವಾಗಿದೆ. ತತ್ತ್ವವಿಚಾರ ಮಾಡುವುದೇ ಒಂಭತ್ತನೆಯ ಸಾಧನೆಯಾಗಿದೆ. ಎಲೈ ಭಾಮಿನಿ! ಈ ಪ್ರಕಾರ ಇದು ಒಂಭತ್ತು ಪ್ರಕಾರದ ಭಕ್ತಿಯಾಗಿದೆ. ಎಲೈ ಶುಭಲಕ್ಷಣಳೆ! ಯಾರೇ ಆಗಲಿ, ಗಂಡಸಾಗಲಿ, ಹೆಂಗಸಾಗಲಿ, ಮೂಕ ಪ್ರಾಣಿಯ ಜನ್ಮದಲ್ಲಿರುವವನಾಗಿರಲಿ, ಅವರಿಗೆ ಈ ಒಂಭತ್ತು ಪ್ರಕಾರದ ಸಾಧನದಿಂದ ಪ್ರೇಮಲಕ್ಷಣಾ ಭಕ್ತಿಯು ಆವಿರ್ಭವಿಸುತ್ತದೆ. ॥26-28॥

(ಶ್ಲೋಕ-29)

ಮೂಲಮ್

ಭಕ್ತೌ ಸಂಜಾತಮಾತ್ರಾಯಾಂ ಮತ್ತತ್ತ್ವಾನುಭವಸ್ತದಾ ।
ಮಮಾನುಭವಸಿದ್ಧಸ್ಯ ಮುಕ್ತಿಸ್ತತ್ರೈವ ಜನ್ಮನಿ ॥

(ಶ್ಲೋಕ-30)

ಮೂಲಮ್

ಸ್ಯಾತ್ತಸ್ಮಾತ್ಕಾರಣಂ ಭಕ್ತಿರ್ಮೋಕ್ಷಸ್ಯೇತಿ ಸುನಿಶ್ಚಿತಮ್ ।
ಪ್ರಥಮಂ ಸಾಧನಂ ಯಸ್ಯ ಭವೇತ್ತಸ್ಯ ಕ್ರಮೇಣ ತು ॥

(ಶ್ಲೋಕ-31)

ಮೂಲಮ್

ಭವೇತ್ಸರ್ವಂ ತತೋ ಭಕ್ತಿರ್ಮುಕ್ತಿರೇವ ಸುನಿಶ್ಚಿತಮ್ ।
ಯಸ್ಮಾನ್ಮದ್ಭಕ್ತಿಯುಕ್ತಾ ತ್ವಂ ತತೋಽಹಂ ತ್ವಾಮುಪಸ್ಥಿತಃ ॥

ಅನುವಾದ

ಭಕ್ತಿಯು ಉಂಟಾದ ಮಾತ್ರದಿಂದ ನನ್ನ ಸ್ವರೂಪದ ಅನುಭವವಾಗುತ್ತದೆ. ಅಂತಹ ಅನುಭವದಿಂದ ಸಿದ್ಧನಾದವನಿಗೆ ಅದೇ ಜನ್ಮದಲ್ಲಿ ಮುಕ್ತಿಯಾಗುವುದು. ಆದ್ದರಿಂದ ಮೋಕ್ಷಕ್ಕೆ ಭಕ್ತಿಯೇ ಕಾರಣವೆಂದು ನಿಶ್ಚಯವಾಗಿ ಗೊತ್ತಾಗುತ್ತದೆ. ಯಾವನಿಗೆ ಮೊದಲನೆಯ ಸಾಧನೆ ಸತ್ಸಂಗವು ದೊರಕುವುದೋ ಅವನಿಗೆ ಕ್ರಮವಾಗಿ ಎಲ್ಲವೂ ದೊರಕುವವು. ಆದ್ದರಿಂದ ಭಕ್ತಿಯೆಂದರೆ ಮುಕ್ತಿಯೇ ಆಗಿದೆ ಎಂಬುದು ನನ್ನ ನಿಶ್ಚಯವು. ನೀನಾದರೋ ನನ್ನ ಭಕ್ತಿಯಿಂದ ಕೂಡಿದವಳಾಗಿರುವೆ. ಆದ್ದರಿಂದ ನಾನು ನಿನ್ನನ್ನು ನೋಡಲು ಬಂದಿರುವೆನು. ॥29-31॥

(ಶ್ಲೋಕ-32)

ಮೂಲಮ್

ಇತೋ ಮದ್ದರ್ಶನಾನ್ಮುಕ್ತಿಸ್ತವ ನಾಸ್ತ್ಯತ್ರ ಸಂಶಯಃ ।
ಯದಿ ಜಾನಾಸಿ ಮೇ ಬ್ರೂಹಿ ಸೀತಾ ಕಮಲಲೋಚನಾ ॥

(ಶ್ಲೋಕ-33)

ಮೂಲಮ್

ಕುತ್ರಾಸ್ತೇ ಕೇನ ವಾ ನೀತಾ ಪ್ರಿಯಾ ಮೇ ಪ್ರಿಯದರ್ಶನಾ ॥

ಅನುವಾದ

ಈಗ ನನ್ನ ದರ್ಶನದಿಂದ ನಿನಗೆ ಸಂಶಯವಿಲ್ಲದೆ ಮುಕ್ತಿಯು ಪ್ರಾಪ್ತಿಯಾಗುವುದು. ನನ್ನ ಪ್ರಿಯಳಾದ ಪ್ರಿಯದರ್ಶಿನಿ ಕಮಲನೇತ್ರೆಯಾದ ಸೀತೆಯು ಎಲ್ಲಿರುವಳು? ಯಾರು ಕದ್ದೊಯ್ದಿರುವರು? ನೀನು ಬಲ್ಲೆ ಯಾದರೆ ನನಗೆ ಹೇಳು’’ ಎಂದನು. ॥32-33॥

(ಶ್ಲೋಕ-34)

ಮೂಲಮ್ (ವಾಚನಮ್)

ಶಬರ್ಯುವಾಚ

ಮೂಲಮ್

ದೇವ ಜಾನಾಸಿ ಸರ್ವಜ್ಞ ಸರ್ವಂ ತ್ವಂ ವಿಶ್ವಭಾವನ ।
ತಥಾಪಿ ಪೃಚ್ಛಸೇ ಯನ್ಮಾಂ ಲೋಕಾನನುಸೃತಃ ಪ್ರಭೋ ॥

(ಶ್ಲೋಕ-35)

ಮೂಲಮ್

ತತೋಽಹಮಭಿಧಾಸ್ಯಾಮಿ ಸೀತಾ ಯತ್ರಾಧುನಾ ಸ್ಥಿತಾ ।
ರಾವಣೇನ ಹೃತಾ ಸೀತಾ ಲಂಕಾಯಾಂ ವರ್ತತೇಽಧುನಾ ॥

ಅನುವಾದ

ಶಬರಿ ಇಂತೆಂದಳು — ‘‘ಹೇ ದೇವಾ! ಸರ್ವಜ್ಞನೂ, ಜಗತ್ತಿನಲ್ಲೆಲ್ಲ ತುಂಬಿರುವವನೂ ಆದ ನೀನು ಎಲ್ಲವನ್ನು ಬಲ್ಲವನಾಗಿರುವೆ. ಆದರೂ ಹೇ ಪ್ರಭುವೆ! ಲೋಕ ವ್ಯವಹಾರದ ದೃಷ್ಟಿಯಿಂದ ನನ್ನನ್ನು ಕೇಳುತ್ತಿರುವೆ! ಸೀತೆಯು ಈಗ ಎಲ್ಲಿದ್ದಾಳೆಂಬುದನ್ನು ಹೇಳುವೆನು. ಸೀತೆಯನ್ನು ರಾವಣನು ಕದ್ದೊಯ್ದು ಈಗ ಲಂಕೆಯಲ್ಲಿ ಇರಿಸಿದ್ದಾನೆ. ॥34-35॥

(ಶ್ಲೋಕ-36)

ಮೂಲಮ್

ಇತಃ ಸಮೀಪೇ ರಾಮಾಸ್ತೇ ಪಂಪಾನಾಮ ಸರೋವರಮ್ ।
ಋಷ್ಯಮೂಕಗಿರಿರ್ನಾಮ ತತ್ಸಮೀಪೇ ಮಹಾನಗಃ ॥

ಅನುವಾದ

ಹೇ ರಾಮಾ! ಇಲ್ಲಿಗೆ ಸಮೀಪದಲ್ಲಿಯೇ ‘ಪಂಪಾ’ ಸರೋವರವಿದೆ. ಅದರ ಸಮೀಪವೇ ಋಷ್ಯಮೂಕ ಎಂಬ ದೊಡ್ಡ ಪರ್ವತವಿರುವುದು. ॥36॥

(ಶ್ಲೋಕ-37)

ಮೂಲಮ್

ಚತುರ್ಭಿರ್ಮಂತ್ರಿಭಿಃ ಸಾರ್ಧಂ ಸುಗ್ರೀವೋ ವಾನರಾಧಿಪಃ ।
ಭೀತಭೀತಃ ಸದಾ ಯತ್ರ ತಿಷ್ಠತ್ಯತುಲವಿಕ್ರಮಃ ॥

(ಶ್ಲೋಕ-38)

ಮೂಲಮ್

ವಾಲಿನಶ್ಚ ಭಯಾದ್ ಭ್ರಾತುಸ್ತದಗಮ್ಯಮೃಷೇರ್ಭಯಾತ್ ।
ವಾಲಿನಸ್ತತ್ರ ಗಚ್ಛ ತ್ವಂ ತೇನ ಸಖ್ಯಂ ಕುರು ಪ್ರಭೋ ॥

(ಶ್ಲೋಕ-39)

ಮೂಲಮ್

ಸುಗ್ರೀವೇಣ ಸ ಸರ್ವಂ ತೇ ಕಾರ್ಯಂ ಸಂಪಾದಯಿಷ್ಯತಿ ।
ಅಹಮಗ್ನಿಂ ಪ್ರವೇಕ್ಷ್ಯಾಮಿ ತವಾಗ್ರೇ ರಘುನಂದನ ॥

ಅನುವಾದ

ಆ ಪರ್ವತದಲ್ಲಿ ಅತುಲ ಪರಾಕ್ರಮಿ ವಾನರರಾಜ ಸುಗ್ರೀವನು ತನ್ನ ನಾಲ್ಕು ಜನ ಮಂತ್ರಿಗಳೊಂದಿಗೆ ಕೂಡಿ ಯಾವಾಗಲೂ ತನ್ನಣ್ಣ ವಾಲಿಯ ಭಯದಿಂದ ವಾಸಿಸುತ್ತಿರುವನು. ಋಷಿಯ ಶಾಪದ ಭಯದಿಂದ ಆ ಸ್ಥಳವು ವಾಲಿಗೆ ಸರ್ವಥಾ ಅಗಮ್ಯವಾಗಿದೆ. ಹೇ ಪ್ರಭೋ! ನೀನು ಅಲ್ಲಿಗೆ ಹೋಗು. ಆ ಸುಗ್ರೀವನೊಂದಿಗೆ ಸ್ನೇಹವನ್ನು ಬೆಳೆಸು. ಅವನು ನಿನ್ನ ಎಲ್ಲ ಕಾರ್ಯಗಳನ್ನೂ ನೆರವೇರಿಸಿಕೊಡುವನು. ಹೇ ರಘುನಂದನಾ! ನಾನು ಈಗಲೇ ನಿನ್ನ ಎದುರಿಗೆ ಅಗ್ನಿಯನ್ನು ಪ್ರವೇಶಿಸುವೆನು. ॥37-39॥

(ಶ್ಲೋಕ-40)

ಮೂಲಮ್

ಮುಹೂರ್ತಂ ತಿಷ್ಠ ರಾಜೇಂದ್ರ ಯಾವದ್ದಗ್ಧ್ವಾ ಕಲೇವರಮ್ ।
ಯಾಸ್ಯಾಮಿ ಭಗವನ್ ರಾಮ ತವ ವಿಷ್ಣೋಃ ಪರಂ ಪದಮ್ ॥

ಅನುವಾದ

ಹೇ ರಾಜೇಂದ್ರಾ! ಭಗವಾನ್ ರಾಮನೆ! ನೀನು ಒಂದು ಮುಹೂರ್ತಕಾಲ ನಿಲ್ಲುವವನಾಗು. ನಾನು ಈ ಶರೀರವನ್ನು ಸುಟ್ಟುಕೊಂಡು ವಿಷ್ಣುವಾದ ನಿನ್ನ ಪರಮ ಪದವಿಯನ್ನು ಹೊಂದುವೆನು ಅಲ್ಲಿಯವರೆಗೆ ಇರು.’’ ॥40॥

(ಶ್ಲೋಕ-41)

ಮೂಲಮ್

ಇತಿ ರಾಮಂ ಸಮಾಮಂತ್ರ್ಯ ಪ್ರವಿವೇಶ ಹುತಾಶನಮ್ ।
ಕ್ಷಣಾನ್ನಿರ್ಧೂಯ ಸಕಲಮವಿದ್ಯಾಕೃತಬಂಧನಮ್ ।
ರಾಮಪ್ರಸಾದಾಚ್ಛಬರೀ ಮೋಕ್ಷಂ ಪ್ರಾಪಾತಿದುರ್ಲಭಮ್ ॥

ಅನುವಾದ

ಶ್ರೀರಾಮಚಂದ್ರನೊಡನೆ ಈ ಪ್ರಕಾರ ಸಂಭಾಷಿಸಿದ ಬಳಿಕ ಶಬರಿಯು ಅಗ್ನಿಯನ್ನು ಪ್ರವೇಶಿಸಿದಳು. ಕ್ಷಣಮಾತ್ರದಲ್ಲಿ ಅವಿದ್ಯೆಯಿಂದ ಉಂಟಾಗಿದ್ದ ಎಲ್ಲ ಬಂಧನಗಳನ್ನು ಕಳಚಿಕೊಂಡು ರಾಮನ ಅನುಗ್ರಹದಿಂದ ಶಬರಿಯು ಅತಿ ದುರ್ಲಭವಾದ ಮೋಕ್ಷವನ್ನು ಪಡೆದುಕೊಂಡಳು. ॥41॥

(ಶ್ಲೋಕ-42)

ಮೂಲಮ್

ಕಿಂ ದುರ್ಲಭಂ ಜಗನ್ನಾಥೇ ಶ್ರೀರಾಮೇ ಭಕ್ತವತ್ಸಲೇ ।
ಪ್ರಸನ್ನೇಽಧಮಜನ್ಮಾಪಿ ಶಬರೀ ಮುಕ್ತಿಮಾಪ ಸಾ ॥

(ಶ್ಲೋಕ-43)

ಮೂಲಮ್

ಕಿಂ ಪುನರ್ಬ್ರಾಹ್ಮಣಾ ಮುಖ್ಯಾಃ ಪುಣ್ಯಾಃ ಶ್ರೀರಾಮಚಿಂತಕಾಃ ।
ಮುಕ್ತಿಂ ಯಾಂತೀತಿ ತದ್ಭಕ್ತಿರ್ಮುಕ್ತಿರೇವ ನ ಸಂಶಯಃ ॥

ಅನುವಾದ

ಭಕ್ತವತ್ಸಲನೂ, ಜಗನ್ನಾಥನೂ ಆದ ಶ್ರೀರಾಮನು ಪ್ರಸನ್ನನಾದಾಗ ಅಧಮ ಜನ್ಮದಲ್ಲಿ ಹುಟ್ಟಿದ ಶಬರಿಯೂ ಮುಕ್ತಿಯನ್ನು ಹೊಂದಿದಳು ಎಂದಾಗ ರಾಮನ ದಯೆ ಇದ್ದರೆ ದುರ್ಲಭವಾದುದೇನಿದೆ? (ಶಬರಿಗೆ ಮುಕ್ತಿಯಾದದ್ದಾದರೆ) ಶ್ರೀರಾಮ ಚಿಂತಕರಾದ ಪುಣ್ಯವಂತ ಬ್ರಾಹ್ಮಣರಿಗೆ ಮುಕ್ತಿಯು ಸಿಗುವುದರಲ್ಲಿ ಆಶ್ಚರ್ಯವೇನಿದೆ? ಆದ್ದರಿಂದ ‘ರಾಮ ಭಕ್ತಿಯೇ ಮುಕ್ತಿಯು’ ಇದರಲ್ಲಿ ಸಂಶಯವೇ ಇಲ್ಲ. ॥42-43॥

(ಶ್ಲೋಕ-44)

ಮೂಲಮ್

ಭಕ್ತಿರ್ಮುಕ್ತಿವಿಧಾಯಿನೀ ಭಗವತಃ ಶ್ರೀರಾಮಚಂದ್ರಸ್ಯ ಹೇ
ಲೋಕಾಃಕಾಮದುಘಾಂಘ್ರಿಪದ್ಮಯುಗಲಂ ಸೇವಧ್ವಮತ್ಯುತ್ಸುಕಾಃ ।
ನಾನಾಜ್ಞಾನವಿಶೇಷಮಂತ್ರವಿತತಿಂ ತ್ಯಕ್ತ್ವಾ ಸುದೂರೇ ಭೃಶಂ
ರಾಮಂ ಶ್ಯಾಮತನುಂ ಸ್ಮರಾರಿಹೃದಯೇ ಭಾಂತಂ ಭಜಧ್ವಂ ಬುಧಾಃ ॥

ಅನುವಾದ

ಎಲೈ ಜನಗಳಿರಾ! ಶ್ರೀರಾಮಚಂದ್ರನ ಭಕ್ತಿಯು ಮುಕ್ತಿಯನ್ನು ಕರುಣಿಸುವಂತಹ ಸಾಧನೆಯಾಗಿದೆ. ಕಾಮಧೇನು ವಿನಂತಿರುವ ಆತನ ಪಾದಪದ್ಮಗಳನ್ನು ಹೆಚ್ಚಿನ ಆದರದಿಂದ ಸೇವಿಸಿರಿ. ಈ ವಿವಿಧ ಪ್ರಕಾರದ ಲೌಕಿಕ ಹಾಗೂ ವೈದಿಕ ವಿಷಯಗಳನ್ನು ವಿಜ್ಞಾನದ ಮತ್ತು ಮಂತ್ರಸಮೂಹವನ್ನು ಅತ್ಯಂತ ದೂರದಲ್ಲಿ ಪೂರ್ತಿಯಾಗಿಬಿಟ್ಟು, ಬೇಗನೇ, ಜಾಣರಾದ ನೀವು ಮನ್ಮಥ ವೈರಿಯಾದ ಪರಮೇಶ್ವರನ ಹೃದಯ ಗಹ್ವರದಲ್ಲಿ ವಿರಾಜಮಾನನಾಗಿರುವ ಶ್ಯಾಮಶರೀರಿಯಾದ ಭಗವಾನ್ ಶ್ರೀರಾಮನನ್ನು ಭಜಿಸಿರಿ. ॥44॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ದಶಮಃ ಸರ್ಗಃ ॥10॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಹತ್ತನೆಯ ಸರ್ಗವು ಮುಗಿಯಿತು.
ಅರಣ್ಯಕಾಂಡವು ಮುಗಿಯಿತು.