[ಒಂಭತ್ತನೆಯ ಸರ್ಗ]
ಭಾಗಸೂಚನಾ
ಕಬಂಧ ಉದ್ಧಾರ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತತೋ ರಾಮೋ ಲಕ್ಷ್ಮಣೇನ ಜಗಾಮ ವಿಪಿನಾಂತರಮ್ ।
ಪುನರ್ದುಃಖಂ ಸಮಾಶ್ರಿತ್ಯ ಸೀತಾನ್ವೇಷಣತತ್ಪರಃ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಅನಂತರ ಶ್ರೀರಾಮಚಂದ್ರನು ದುಃಖದಿಂದ ಕೂಡಿದವನಾಗಿ ಸೀತೆಯನ್ನು ಹುಡುಕುತ್ತಾ ಲಕ್ಷ್ಮಣನೊಂದಿಗೆ ಬೇರೊಂದು ಕಾಡಿಗೆ ಹೋದನು. ॥1॥
(ಶ್ಲೋಕ-2)
ಮೂಲಮ್
ತತ್ರಾದ್ಭುತಸಮಾಕಾರೋ ರಾಕ್ಷಸಃ ಪ್ರತ್ಯದೃಶ್ಯತ ।
ವಕ್ಷಸ್ಯೇವ ಮಹಾವಕ್ತ್ರಶ್ಚಕ್ಷುರಾದಿವಿವರ್ಜಿತಃ ॥
ಅನುವಾದ
ಅಲ್ಲಿ ಹೊಟ್ಟೆಯಲ್ಲೇ ದೊಡ್ಡ ಬಾಯಿಯುಳ್ಳ ಹಾಗೂ ಕಣ್ಣು ಮುಂತಾದವುಗಳಿಲ್ಲದ, ಅದ್ಭುತ ಆಕಾರವುಳ್ಳ ಒಬ್ಬರಾಕ್ಷಸನು ಕಾಣಿಸಿಕೊಂಡನು. ॥2॥
(ಶ್ಲೋಕ-3)
ಮೂಲಮ್
ಬಾಹೂ ಯೋಜನಮಾತ್ರೇಣ ವ್ಯಾಪೃತೌ ತಸ್ಯ ರಕ್ಷಸಃ ।
ಕಬಂಧೋ ನಾಮ ದೈತ್ಯೇಂದ್ರಃ ಸರ್ವಸತ್ತ್ವವಿಹಿಂಸಕಃ ॥
ಅನುವಾದ
ಆ ರಾಕ್ಷಸನ ತೋಳುಗಳು ಒಂದು ಯೋಜನದಷ್ಟು ದೂರದವರೆಗೆ ಚಾಚಿಕೊಂಡಿದ್ದವು. ಅವನು ಎಲ್ಲ ಪ್ರಾಣಿಗಳನ್ನು ಹಿಂಸಿಸುತ್ತಿರುವ ಕಬಂಧನೆಂಬ ರಾಕ್ಷಸ ಮುಖ್ಯನಾಗಿದ್ದನು. ॥3॥
(ಶ್ಲೋಕ-4)
ಮೂಲಮ್
ತದ್ಬಾಹ್ವೋರ್ಮಧ್ಯದೇಶೇ ತೌ ಚರಂತೌ ರಾಮಲಕ್ಷ್ಮಣೌ ।
ದದರ್ಶತುರ್ಮಹಾಸತ್ತ್ವಂ ತದ್ಬಾಹುಪರಿವೇಷ್ಟಿತೌ ॥
ಅನುವಾದ
ಆ ರಾಕ್ಷಸನ ಎರಡೂ ತೋಳುಗಳ ನಡುವೆ ಸಂಚರಿಸುವಾಗ ರಾಮ-ಲಕ್ಷ್ಮಣರು ಮಹಾಕಾಯನಾದ ರಾಕ್ಷಸನ ತೋಳುಗಳಿಂದ ಸುತ್ತುವರಿದಿರುವುದನ್ನು ಕಂಡುಕೊಂಡರು. ॥4॥
(ಶ್ಲೋಕ-5)
ಮೂಲಮ್
ರಾಮಃ ಪ್ರೋವಾಚ ವಿಹಸನ್ಪಶ್ಯ ಲಕ್ಷ್ಮಣ ರಾಕ್ಷಸಮ್ ।
ಶಿರಃ ಪಾದವಿಹೀನೋಽಯಂ ಯಸ್ಯ ವಕ್ಷಸಿ ಚಾನನಮ್ ॥
ಅನುವಾದ
ಆಗ ಶ್ರೀರಾಮಚಂದ್ರನು ನಗುತ್ತಾ ಲಕ್ಷ್ಮಣನಲ್ಲಿ ‘‘ತಮ್ಮಾ! ಈ ರಾಕ್ಷಸನನ್ನು ನೋಡು; ಇವನ ತಲೆ-ಕಾಲುಗಳಿಲ್ಲದೆ ಎದೆಯಲ್ಲೇ ಮುಖವಿದೆ. ॥5॥
(ಶ್ಲೋಕ-6)
ಮೂಲಮ್
ಬಾಹುಭ್ಯಾಂ ಲಭ್ಯತೇ ಯದ್ಯತ್ತತ್ತದ್ಭಕ್ಷನ್ ಸ್ಥಿತೋ ಧ್ರುವಮ್ ।
ಆವಾಮಪ್ಯೇತಯೋರ್ಬಾಹ್ವೋರ್ಮಧ್ಯೇ ಸಂಕಲಿತೌ ಧ್ರುವಮ್ ॥
ಅನುವಾದ
ತನ್ನ ಎರಡೂ ತೋಳುಗಳಿಂದ ದೊರೆತುದನ್ನು ತಿಂದು ಜೀವಿಸಿರುವನು. ಈಗ ನಾವುಗಳೂ ನಿಜವಾಗಿ ಈತನ ತೋಳುಗಳ ನಡುವೆ ಸಿಕ್ಕಿಕೊಂಡಿರುವೆವು. ॥6॥
(ಶ್ಲೋಕ-7)
ಮೂಲಮ್
ಗಂತುಮನ್ಯತ್ರ ಮಾರ್ಗೋ ನ ದೃಶ್ಯತೇ ರಘುನಂದನ ।
ಕಿಂ ಕರ್ತವ್ಯಮಿತೋಽಸ್ಮಾಭಿರಿದಾನೀಂ ಭಕ್ಷಯೇತ್ಸ ನೌ ॥
(ಶ್ಲೋಕ-8)
ಮೂಲಮ್
ಲಕ್ಷ್ಮಣಸ್ತಮುವಾಚೇದಂ ಕಿಂ ವಿಚಾರೇಣ ರಾಘವ ।
ಆವಾಮೇಕೈಕಮವ್ಯಗ್ರೌ ಛಿಂದ್ಯಾವಾಸ್ಯ ಭುಜೌ ಧ್ರುವಮ್ ॥
(ಶ್ಲೋಕ-9)
ಮೂಲಮ್
ತಥೇತಿ ರಾಮಃ ಖಡ್ಗೇನ ಭುಜಂ ದಕ್ಷಿಣಮಚ್ಛಿನತ್ ।
ತಥೈವ ಲಕ್ಷ್ಮಣೋ ವಾಮಂ ಚಿಚ್ಛೇದ ಭುಜಮಂಜಸಾ ॥
ಅನುವಾದ
ಹೇ ರಘುನಂದನ ಲಕ್ಷ್ಮಣಾ! ಬೇರೆಲ್ಲಿಗೂ ಹೋಗಲು ದಾರಿಯೇ ಕಾಣುವುದಿಲ್ಲ. ಈಗ ನಾವು ಏನಾದರೂ ಮಾಡಬೇಕು. ಇಲ್ಲದಿದ್ದರೆ ಇವನು ನಮ್ಮನ್ನು ತಿಂದು ಬಿಡುವನು’’ ಎಂದಾಗ, ಲಕ್ಷ್ಮಣನೆಂದ ‘‘ಅಣ್ಣಾ! ಇದರಲ್ಲಿ ಹೆಚ್ಚಿನ ವಿಚಾರ ಮಾಡುವುದೇನಿದೆ? ನಾವಿಬ್ಬರು ಕೂಡಿ ಎಚ್ಚರಿಕೆಯಿಂದ ಈ ರಾಕ್ಷಸನ ಎರಡೂ ಭುಜಗಳನ್ನು ಕತ್ತರಿಸಿಬಿಡೋಣ’’ ಎಂದಾಗ, ಹಾಗೇ ಆಗಲೆಂದು ರಾಮನು ಖಡ್ಗದಿಂದ ಅವನ ಬಲಭುಜವನ್ನು, ಲಕ್ಷ್ಮಣನು ಎಡಭುಜವನ್ನು ತಡಮಾಡದೆ ಕಡಿದು ಹಾಕಿದರು. ॥7-9॥
(ಶ್ಲೋಕ-10)
ಮೂಲಮ್
ತತೋಽತಿವಿಸ್ಮಿತೋ ದೈತ್ಯಃ ಕೌ ಯುವಾಂ ಸುರಪುಂಗವೌ ।
ಮದ್ಬಾಹುಚ್ಛೇದಕೌ ಲೋಕೇ ದಿವಿ ದೇವೇಷು ವಾ ಕುತಃ ॥
ಅನುವಾದ
ಆಗ ಆ ದೈತ್ಯನು ಬಹಳ ಆಶ್ಚರ್ಯಗೊಂಡು ‘‘ನೀವು ಯಾರು ದೇವತಾಶ್ರೇಷ್ಠರು? ನನ್ನ ತೋಳುಗಳನ್ನು ಕತ್ತರಿಸಿದ ನೀವು ದೇವಲೋಕದವರೋ, ಈ ಲೋಕದವರೋ? ಸಾಮಾನ್ಯರಿಂದ ಇದು ಸಾಧ್ಯವಾಗದು’’ ಎಂದು ಕೇಳಿದನು. ॥10॥
(ಶ್ಲೋಕ-11)
ಮೂಲಮ್
ತತೊಽಬ್ರವೀದ್ಧಸನ್ನೇವ ರಾಮೋ ರಾಜೀವಲೋಚನಃ ।
ಅಯೋಧ್ಯಾಧಿಪತಿಃ ಶ್ರೀಮಾನ್ ರಾಜಾ ದಶರಥೋ ಮಹಾನ್ ॥
(ಶ್ಲೋಕ-12)
ಮೂಲಮ್
ರಾಮೋಽಹಂ ತಸ್ಯ ಪುತ್ರೋಽಸೌ ಭ್ರಾತಾ ಮೇ ಲಕ್ಷ್ಮಣಃ ಸುಧೀಃ ।
ಮಮ ಭಾರ್ಯಾ ಜನಕಜಾ ಸೀತಾ ತ್ರೈಲೋಕ್ಯಸುಂದರೀ ॥
ಅನುವಾದ
ಕಮಲನಯನ ಶ್ರೀರಾಮಚಂದ್ರನು ನಗುತ್ತಾ ಹೇಳುತ್ತಾನೆ — ‘‘ಅಯೋಧ್ಯೆಯ ಒಡೆಯನಾದ ಶ್ರೀಮಾನ್ ದಶರಥ ಮಹಾರಾಜನ ಮಗನಾದ ರಾಮನೆಂಬುವವನು ನಾನು. ಇವನು ಬುದ್ಧಿಶಾಲಿಯಾದ ನನ್ನ ತಮ್ಮ ಲಕ್ಷ್ಮಣ. ಮೂರು ಲೋಕಕ್ಕೂ ಸುಂದರಿಯಾದ ಜನಕನಂದಿನೀ ಸೀತೆಯು ನನ್ನ ಭಾರ್ಯೆಯು. ॥11-12॥
(ಶ್ಲೋಕ-13)
ಮೂಲಮ್
ಆವಾಂ ಮೃಗಯಯಾ ಯಾತೌ ತದಾ ಕೇನಾಪಿ ರಕ್ಷಸಾ ।
ನೀತಾಂ ಸೀತಾಂ ವಿಚಿನ್ವಂತೌ ಚಾಗತೌ ಘೋರಕಾನನೇ ॥
(ಶ್ಲೋಕ-14)
ಮೂಲಮ್
ಬಾಹುಭ್ಯಾಂ ವೇಷ್ಟಿತಾವತ್ರ ತವ ಪ್ರಾಣರಿರಕ್ಷಯಾ ।
ಛಿನ್ನೌ ತವ ಭುಜೌ ತ್ವಂ ಚ ಕೋ ವಾ ವಿಕಟರೂಪಧೃಕ್ ॥
ಅನುವಾದ
ನಾವಿಬ್ಬರೂ ಬೇಟೆಗಾಗಿ ಹೊರಗೆ ಹೋಗಿದ್ದಾಗ ಯಾವನೋ ಒಬ್ಬ ರಾಕ್ಷಸನು ಸೀತೆಯನ್ನು ಕದ್ದೊಯ್ದಿರುವನು. ಆಕೆಯನ್ನು ಹುಡುಕುತ್ತಾ ಈ ಗೊಂಡಾರಣ್ಯಕ್ಕೆ ಬಂದಿರುವೆವು. ಅಷ್ಟರಲ್ಲಿ ನಿನ್ನ ತೋಳುಗಳಿಂದ ಸುತ್ತುವರಿಯಲ್ಪಟ್ಟೆವು. ಪ್ರಾಣಗಳನ್ನು ಉಳಿಸಿಕೊಳ್ಳಲು ನಿನ್ನ ತೋಳುಗಳನ್ನು ಕತ್ತರಿಸಿದ್ದೇವೆ. ಈ ವಿಕಾರ ದೇಹವುಳ್ಳವನು ನೀನು ಯಾರಾಗಿರುವೆ? ॥13-14॥
(ಶ್ಲೋಕ-15)
ಮೂಲಮ್ (ವಾಚನಮ್)
ಕಬಂಧ ಉವಾಚ
ಮೂಲಮ್
ಧನ್ಯೋಽಹಂ ಯದಿ ರಾಮಸ್ತ್ವ ಮಾಗತೋಸಿ ಮಮಾಂತಿಕಮ್ ।
ಪುರಾ ಗಂಧರ್ವರಾಜೋಽಹಂ ರೂಪಯೌವನದರ್ಪಿತಃ ॥
(ಶ್ಲೋಕ-16)
ಮೂಲಮ್
ವಿಚರಲ್ಲೋಕಮಖಿಲಂ ವರನಾರೀಮನೋಹರಃ ।
ತಪಸಾ ಬ್ರಹ್ಮಣೋ ಲಬ್ಧಮವಧ್ಯತ್ವಂ ರಘೂತ್ತಮ ॥
ಅನುವಾದ
ಕಬಂಧನಿಂತೆಂದನು ನನ್ನ ಸಮೀಪಕ್ಕೆ ಬಂದಿರುವ ನೀನು ರಾಮನಾದರೆ ನಾನು ಧನ್ಯನಾದೆನು. ಹಿಂದೆ ನಾನು ರೂಪ-ಯೌವನದಿಂದ ಮದೋನ್ಮತ್ತನಾದ ಓರ್ವ ಗಂಧರ್ವ ರಾಜನಾಗಿದ್ದೆ. ಶ್ರೇಷ್ಠರಾದ ಸುಂದರ ಸ್ತ್ರೀಯರ ಮನಸ್ಸನ್ನಪ ಹರಿಸುತ್ತಾ ಎಲ್ಲ ಲೋಕಗಳಲ್ಲಿ ಸಂಚರಿಸುತ್ತಿದ್ದೆ. ಹೇ ರಘುಶ್ರೇಷ್ಠನೆ! ತಪಸ್ಸಿನಿಂದ ಬ್ರಹ್ಮದೇವರನ್ನು ಒಲಿಸಿ ಸಾಯದೇ ಇರುವ ವರವನ್ನು ಪಡೆದುಕೊಂಡಿದ್ದೆ. ॥15-16॥
(ಶ್ಲೋಕ-17)
ಮೂಲಮ್
ಅಷ್ಟಾವಕ್ರಂ ಮುನಿಂ ದೃಷ್ಟ್ವಾ ಕದಾಚಿದಹಸಂ ಪುರಾ ।
ಕ್ರುದ್ಧೋಽಸಾವಾಹ ದುಷ್ಟ ತ್ವಂ ರಾಕ್ಷಸೋ ಭವ ದುರ್ಮತೇ ॥
ಅನುವಾದ
ಒಮ್ಮೆ ನಾನು ಅಷ್ಟಾವಕ್ರರೆಂಬ ಮುನಿಯನ್ನು ಕಂಡು ಹಾಸ್ಯಮಾಡಿದೆ. ಕುಪಿತರಾದ ಅವರು ‘ಎಲೈ ದುಷ್ಟನೇ, ದುರ್ಬುದ್ಧಿಯುಳ್ಳ ನೀನು ‘ರಾಕ್ಷಸನಾಗು’ ಎಂದು ಶಪಿಸಿದರು’ ॥17॥
(ಶ್ಲೋಕ-18)
ಮೂಲಮ್
ಅಷ್ಟಾವಕ್ರಃ ಪುನಃ ಪ್ರಾಹ ವಂದಿತೋ ಮೇ ದಯಾಪರಃ ।
ಶಾಪಸ್ಯಾಂತಂ ಚ ಮೇ ಪ್ರಾಹ ತಮಸಾ ದ್ಯೋತಿತಪ್ರಭಃ ॥
ಅನುವಾದ
ಶಾಪದಿಂದ ಭಯಗೊಂಡ ನಾನು ಅವರನ್ನು ಸ್ತುತಿಸಲಾಗಿ, ತಪಸ್ಸಿನ ಕಾರಣ ಪರಮ ತೇಜಸ್ವೀ ಆ ದಯಾಳುಗಳಾದ ಮುನೀಶ್ವರರು ನನ್ನ ಶಾಪದ ಅಂತ್ಯವನ್ನು ಈ ರೀತಿ ಹೇಳಿದರು ॥18॥
(ಶ್ಲೋಕ-19)
ಮೂಲಮ್
ತ್ರೇತಾಯುಗೇ ದಾಶರಥಿರ್ಭೂತ್ವಾ ನಾರಾಯಣಃ ಸ್ವಯಮ್ ।
ಆಗಮಿಷ್ಯತಿ ತೇ ಬಾಹೂ ಛಿದ್ಯೇತೇ ಯೋಜನಾಯತೌ ॥
ಅನುವಾದ
‘ತ್ರೇತಾಯುಗದಲ್ಲಿ ಶ್ರೀಮನ್ನಾರಾಯಣನೇ ಸ್ವತಃ ದಶರಥನ ಪುತ್ರನಾಗಿ ಅವತರಿಸುವನು. ಅವನು ನಿನ್ನ ಬಳಿಗೆ ಬಂದು ಯೋಜನದಷ್ಟು ಉದ್ದವಾದ ನಿನ್ನ ಬಾಹುಗಳನ್ನು ಕತ್ತರಿಸಿ ಬಿಡುವನು. ॥19॥
(ಶ್ಲೋಕ-20)
ಮೂಲಮ್
ತೇನ ಶಾಪಾದ್ವಿನಿರ್ಮುಕ್ತೋ ಭವಿಷ್ಯಸಿ ಯಥಾ ಪುರಾ ।
ಇತಿ ಶಪ್ತೋಽಹಮದ್ರಾಕ್ಷಂ ರಾಕ್ಷಸೀಂ ತನುಮಾತ್ಮನಃ ॥
ಅನುವಾದ
ಅದರಿಂದ ನೀನು ಶಾಪ ಮುಕ್ತನಾಗಿ ಹಿಂದಿನ ರೂಪವನ್ನೇ ಪಡೆಯುವೆ.’ ಅವರ ಶಾಪದಿಂದ ನಾನು ರಾಕ್ಷಸದೇಹವನ್ನು ಪಡೆದುಕೊಂಡೆ. ॥20॥
(ಶ್ಲೋಕ-21)
ಮೂಲಮ್
ಕದಾಚಿದ್ದೇವರಾಜಾನಮಭ್ಯದ್ರವಮಹಂ ರುಷಾ ।
ಸೋಽಪಿ ವಜ್ರೇಣ ಮಾಂ ರಾಮ ಶಿರೋದೇಶೇಽಭ್ಯತಾಡಯತ್ ॥
(ಶ್ಲೋಕ-22)
ಮೂಲಮ್
ತದಾ ಶಿರೋ ಗತಂ ಕುಕ್ಷಿಂ ಪಾದೌ ಚ ರಘುನಂದನ ।
ಬ್ರಹ್ಮದತ್ತವರಾನ್ಮೃತ್ಯುರ್ನಾಭೂನ್ಮೇ ವಜ್ರತಾಡನಾತ್ ॥
ಅನುವಾದ
ಹೇ ರಾಮಾ! ಒಮ್ಮೆ ನಾನು ದೇವರಾಜ ಇಂದ್ರನನ್ನು ಕೋಪದಿಂದ ಎದುರಿಸಲು ಹೋದಾಗ, ಅವನು ತನ್ನ ವಜ್ರಾಯುಧದಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದನು. ಆಗ ನನ್ನ ತಲೆಯೂ, ಕಾಲುಗಳೂ ಹೊಟ್ಟೆಯೊಳಗೆ ಸೇರಿಕೊಂಡವು. ಬ್ರಹ್ಮನ ವರಬಲದಿಂದ ವಜ್ರಾಘಾತದಿಂದಲೂ ನಾನು ಸಾಯಲಿಲ್ಲ. ॥21-22॥
(ಶ್ಲೋಕ-23)
ಮೂಲಮ್
ಮುಖಾಭಾವೇ ಕಥಂ ಜೀವೇದಯಮಿತ್ಯ ಮರಾಧಿಪಮ್ ।
ಊಚುಃ ಸರ್ವೇ ದಯಾವಿಷ್ಟಾ ಮಾಂ ವಿಲೋಕ್ಯಾಸ್ಯವರ್ಜಿತಮ್ ॥
(ಶ್ಲೋಕ-24)
ಮೂಲಮ್
ತತೋ ಮಾಂ ಪ್ರಾಹ ಮಘವಾ ಜಠರೇ ತೇ ಮುಖಂ ಭವೇತ್ ।
ಬಾಹೂ ತೇ ಯೋಜನಾಯಾಮೌ ಭವಿಷ್ಯತ ಇತೋ ವ್ರಜ ॥
ಅನುವಾದ
ಮುಖ ಹೀನನಾದ ನನ್ನನ್ನು ಕಂಡ ದೇವತೆಗಳೆಲ್ಲರೂ ದಯಾ ಪೂರ್ಣರಾಗಿ ‘ಬಾಯಿಯಿಲ್ಲದ ಇವನು ಬದುಕುವುದಾದರೂ ಹೇಗೆ?’ ಎಂದು ದೇವರಾಜ ಇಂದ್ರನಲ್ಲಿ ಹೇಳಿದಾಗ, ಇಂದ್ರನು ನನ್ನನ್ನು ಕುರಿತು ‘ನಿನಗೆ ಹೊಟ್ಟೆಯಲ್ಲೇ ಮುಖವಿರುವುದು. ನಿನ್ನ ತೋಳುಗಳು ಒಂದೊಂದು ಯೋಜನದಷ್ಟು ಉದ್ದವಾಗುವುದು. ಈಗ ನೀನು ಇಲ್ಲಿಂದ ಹೊರಟು ಹೋಗು’ ಎಂದನು. ॥23-24॥
(ಶ್ಲೋಕ-25)
ಮೂಲಮ್
ಇತ್ಯುಕ್ತೋಽತ್ರ ವಸನ್ನಿತ್ಯಂ ಬಾಹುಭ್ಯಾಂ ವನಗೋಚರಾನ್ ।
ಭಕ್ಷಯಾಮ್ಯಧುನಾ ಬಾಹೂ ಖಂಡಿತೌ ಮೇ ತ್ವಯಾನಘ ॥
ಅನುವಾದ
ಇಂದ್ರನು ಹೀಗೆ ಹೇಳಿದಾಗ ನಾನು ಇಲ್ಲಿಯೇ ಯಾವಾಗಲೂ ವಾಸಿಸುತ್ತಾ ಎರಡು ತೋಳುಗಳಿಂದಲೂ ಕಾಡಿನಲ್ಲಿ ಕಂಡು ಬರುವ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿರುವೆನು. ಹೇ ಪುಣ್ಯಪುರುಷಾ! ಈಗ ನೀನು ಆ ಬಾಹುಗಳನ್ನು ಕತ್ತರಿಸಿಬಿಟ್ಟಿರುವೆ. ॥25॥
(ಶ್ಲೋಕ-26)
ಮೂಲಮ್
ಇತಃ ಪರಂ ಮಾಂ ಶ್ವಭ್ರಾಸ್ಯೇ ನಿಕ್ಷಿಪಾಗ್ನೀಂಧನಾವೃತೇ ।
ಅಗ್ನಿನಾ ದಹ್ಯಮಾನೋಽಹಂ ತ್ವಯಾ ರಘುಕುಲೋತ್ತಮ ॥
(ಶ್ಲೋಕ-27)
ಮೂಲಮ್
ಪೂರ್ವರೂಪಮನುಪ್ರಾಪ್ಯ ಭಾರ್ಯಾಮಾರ್ಗಂ ವದಾಮಿ ತೇ ।
ಇತ್ಯುಕ್ತೇ ಲಕ್ಷ್ಮಣೇನಾಶು ಶ್ವಭ್ರಂ ನಿರ್ಮಾಯ ತತ್ರ ತಮ್ ॥
(ಶ್ಲೋಕ-28)
ಮೂಲಮ್
ನಿಕ್ಷಿಪ್ಯ ಪ್ರಾದಹತ್ಕಾಷ್ಠೈಸ್ತತೋ ದೇಹಾತ್ಸಮುತ್ಥಿತಃ ।
ಕಂದರ್ಪಸದೃಶಾಕಾರಃ ಸರ್ವಾಭರಣಭೂಷಿತಃ ॥
(ಶ್ಲೋಕ-29)
ಮೂಲಮ್
ರಾಮಂ ಪ್ರದಕ್ಷಿಣಂ ಕೃತ್ವಾ ಸಾಷ್ಟಾಂಗಂ ಪ್ರಣಿಪತ್ಯ ಚ ।
ಕೃತಾಂಜಲಿರುವಾಚೇದಂ ಭಕ್ತಿಗದ್ಗದಯಾ ಗಿರಾ ॥
ಅನುವಾದ
ಹೇ ರಘುಕುಲಶ್ರೇಷ್ಠ! ಈಗ ನೀನು ಕಟ್ಟಿಗೆಗಳು ಉರಿಯುತ್ತಿರುವ ದೊಡ್ಡ ಹೊಂಡದಲ್ಲಿ ನನ್ನನ್ನು ಹಾಕಿ ಸುಟ್ಟುಬಿಡು. ನೀನು ಸುಟ್ಟಾಗ ನಾನು ಹಿಂದಿನ ರೂಪವನ್ನು ಪಡೆಯುವೆನು ಹಾಗೂ ನಿನ್ನ ಹೆಂಡತಿಯನ್ನು ಹುಡುಕುವ ಉಪಾಯವನ್ನು ಹೇಳುವೆನು’’ ಎಂದು ಹೇಳಿದನು. ಹೀಗೆ ಕೇಳಿದ ಶ್ರೀರಾಮಚಂದ್ರನು ಲಕ್ಷ್ಮಣನ ಮೂಲಕ ದೊಡ್ಡ ಹೊಂಡವನ್ನು ನಿರ್ಮಿಸಿ, ಅದರಲ್ಲಿ ಆ ಕಬಂಧನ ಶರೀರವನ್ನಿಟ್ಟು ಕಟ್ಟಿಗೆಗಳಿಂದ ಸುಟ್ಟನು. ಆಗ ಆ ಶರೀರದಿಂದ ಮನ್ಮಥನಿಗೆ ಸಮಾನವಾದ ರೂಪವುಳ್ಳ, ಎಲ್ಲ ಒಡವೆಗಳಿಂದ ಅಲಂಕೃತನಾದ ಓರ್ವ ಸುಂದರ ಪುರುಷನು ಪ್ರಕಟನಾದನು. ಅವನು ಶ್ರೀರಾಮಚಂದ್ರನಿಗೆ ಪ್ರದಕ್ಷಿಣೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ, ಕೈ ಮುಗಿದುಕೊಂಡು ಭಕ್ತಿಯಿಂದ ಗದ್ಗದಿತವಾದ ಮಾತುಗಳಿಂದ ಹೀಗೆ ಸ್ತುತಿಸಿದನು. ॥26-29॥
(ಶ್ಲೋಕ-30)
ಮೂಲಮ್ (ವಾಚನಮ್)
ಗಂಧರ್ವ ಉವಾಚ
ಮೂಲಮ್
ಸ್ತೋತುಮುತ್ಸಹತೇ ಮೇಽದ್ಯ ಮನೋ ರಾಮಾತಿಸಂಭ್ರಮಾತ್ ।
ತ್ವಾಮನಂತಮನಾದ್ಯಂತಂ ಮನೋವಾಚಾಮಗೋಚರಮ್ ॥
ಅನುವಾದ
ಗಂಧರ್ವನು ಹೇಳಿದನು — ‘‘ಹೇ ರಾಮನೆ! ನನ್ನ ಮನಸ್ಸು ಬಹಳ ಆದರದಿಂದ ಅನಂತನೂ, ಕೊನೆ-ಮೊದಲಿಲ್ಲದವನೂ, ಮನಸ್ಸಿಗೂ ಮಾತಿಗೂ ನಿಲುಕದವನೂ ಆದ ನಿನ್ನನ್ನು ಸ್ತೋತ್ರ ಮಾಡಲು ಉತ್ಸಾಹಪಡುತ್ತಿದೆ. ॥30॥
(ಶ್ಲೋಕ-31)
ಮೂಲಮ್
ಸೂಕ್ಷ್ಮಂ ತೇ ರೂಪಮವ್ಯಕ್ತಂ ದೇಹದ್ವಯವಿಲಕ್ಷಣಮ್ ।
ದೃಗ್ರೂಪಮಿತರತ್ಸರ್ವಂ ದೃಶ್ಯಂ ಜಡಮನಾತ್ಮಕಮ್ ।
ತತ್ಕಥಂ ತ್ವಾಂ ವಿಜಾನೀಯಾದ್ ವ್ಯತಿರಿಕ್ತಂ ಮನಃ ಪ್ರಭೋ ॥
(ಶ್ಲೋಕ-32)
ಮೂಲಮ್
ಬುದ್ಧ್ಯಾತ್ಮಾಭಾಸಯೋರೈಕ್ಯಂ ಜೀವ ಇತ್ಯಭಿಧೀಯತೇ ।
ಬುದ್ಧ್ಯಾದಿಸಾಕ್ಷಿ ಬ್ರಹ್ಮೈವ ತಸ್ಮಿನ್ನಿರ್ವಿಷಯೇಖಿಲಮ್ ॥
(ಶ್ಲೋಕ-33)
ಮೂಲಮ್
ಆರೋಪ್ಯತೇಽಜ್ಞಾನವಶಾನ್ನಿರ್ವಿಕಾರೇಽಖಿಲಾತ್ಮನಿ ।
ಹಿರಣ್ಯಗರ್ಭಸ್ತೇ ಸೂಕ್ಷ್ಮಂ ದೇಹಂ ಸ್ಥೂಲಂ ವಿರಾಟ್ ಸ್ಮೃತಮ್ ॥
(ಶ್ಲೋಕ-34)
ಮೂಲಮ್
ಭಾವನಾವಿಷಯೋ ರಾಮ ಸೂಕ್ಷ್ಮಂ ತೇ ಧ್ಯಾತೃಮಂಗಲಮ್ ।
ಭೂತಂ ಭವ್ಯಂ ಭವಿಷ್ಯಚ್ಚ ಯತ್ರೇದಂ ದೃಶ್ಯತೇ ಜಗತ್ ॥
ಅನುವಾದ
ಹೇ ಪ್ರಭೋ! ನಿನ್ನ ಸ್ಥೂಲ ಮತ್ತು ಸೂಕ್ಷ್ಮ ಶರೀರ (ವಿರಾಟ್ ಹಾಗೂ ಹಿರಣ್ಯಗರ್ಭ) ದಿಂದ ನಿನ್ನ ವಾಸ್ತವಿಕ ಸ್ವರೂಪವು ಸೂಕ್ಷ್ಮವಾಗಿ (ಅರ್ಥಾತ್ ಯೋಗಿಗಳಿಗಿಂತಲೂ ಸರ್ವಥಾ) ಇಂದ್ರಿಯಗಳಿಗೆ ಅಗೋಚರವಾಗಿದೆ. ಉಳಿದೆಲ್ಲ ದೃಶ್ಯವು ಅನಾತ್ಮವೂ ಜಡವೂ ಆಗಿದೆ. ಆದ್ದರಿಂದ ಮನಸ್ಸಿಗೆ ಬೇರೆಯಾದ ನಿನ್ನನ್ನು ಅದು ತಿಳಿಯುವುದಾದರೂ ಹೇಗೆ? ಆತ್ಮನ ಆಭಾಸ ಹಾಗೂ ಬುದ್ಧಿಯ ಒಂದಾಗುವಿಕೆಯೇ ಜೀವನೆನಿಸುವನು. ಆದರೆ ಬುದ್ಧ್ಯಾದಿ ಅನಾತ್ಮಗಳೆಲ್ಲಕ್ಕೂ ಬ್ರಹ್ಮವೇ ಸಾಕ್ಷಿಯು. ನಿರ್ವಿಷಯ ಆ ಸಾಕ್ಷಿಯಲ್ಲಿ ಅಜ್ಞಾನ ನಿಮಿತ್ತವಾಗಿ ಎಲ್ಲ ಚರಾಚರ ಜಗತ್ತು ಆರೋಪಿತವಾಗಿದೆ. ಆದರೆ ಅದು ನಿರ್ವಿಕಾರವೂ ಎಲ್ಲರ ಅಂತರಾತ್ಮನೂ ಆಗಿರುವದು. ಹೇ ರಾಮನೆ! ಹಿರಣ್ಯಗರ್ಭನು ನಿನ್ನ ಸೂಕ್ಷ್ಮ ಶರೀರವು. ವಿರಾಟವೇ ಸ್ಥೂಲ ಶರೀರವು. ಧ್ಯಾನಮಾಡುವವರಿಗೆ ಮಂಗಲಕರವಾಗಿರುವ ನಿನ್ನ ಸೂಕ್ಷ್ಮರೂಪವೂ ಭಾವನೆಗೆ ವಿಷಯವಾಗಿರುವುದು. ಅದರಲ್ಲಿಯೇ ಭೂತಭವಿಷ್ಯದ್ ವರ್ತಮಾನ ಕಾಲಗಳೂ, ಈ ಜಗತ್ತೂ ತೋರುತ್ತಿರುವುದು. ॥31-34॥
(ಶ್ಲೋಕ-35)
ಮೂಲಮ್
ಸ್ಥೂಲೇಽಂಡಕೋಶೇ ದೇಹೇ ತೇ ಮಹದಾದಿಭಿರಾವೃತೇ ।
ಸಪ್ತಭಿರುತ್ತರಗುಣೈರ್ವೈರಾಜೋ ಧಾರಣಾಶ್ರಯಃ ॥
ಅನುವಾದ
ಸ್ಥೂಲವಾದ ಬ್ರಹ್ಮಾಂಡ ರೂಪವಾದ ನಿನ್ನ ದೇಹದಲ್ಲಿ ಮಹತ್ತೇ ಮುಂತಾದ ಏಳು ತತ್ತ್ವಗಳು* ವ್ಯಾಪಿಸಿಕೊಂಡಿದ್ದು ಹೆಚ್ಚು ಹೆಚ್ಚಾದ ಗುಣಗಳಿಂದ ರಚಿಸಲ್ಪಟ್ಟ ವಿರಾಟ್ ಪುರುಷನೇ ಈ ಜಗತ್ತಿನ ಧಾರಣೆಗೆ ಆಶ್ರಯನಾಗಿರುತ್ತಾನೆ. ॥35॥
ಟಿಪ್ಪನೀ
- ಇಲ್ಲಿ ಸಾಂಖ್ಯ ಮತ್ತು ಪುರಾಣಸಮ್ಮತ ಈ ಪ್ರಕಾರದ ಪ್ರಕ್ರಿಯೆ ಟೀಕೆಯಲ್ಲಿ ಬರೆದಿದೆ. ಸ್ವಯಂಭೂ (ಬ್ರಹ್ಮ)ವಿನ ಸಂಕಲ್ಪದಿಂದ ಉಂಟಾದ ಹದಿನಾಲ್ಕು ಭುವನಗಳು (ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯಮ್) ಇವೆ. ಇದು ಸ್ವಯಂಭೂವಿನ ಸ್ಥೂಲ ಶರೀರವು. ಇದರ ಹೊರಗೆ ಸುತ್ತಲೂ ಪೃಥ್ವಿ ತೇಜದಿಂದ ಉಂಟಾದ ಅಂಡವಿದೆ. ಇದು ಹದಿನಾಲ್ಕು ಭುವನಗಳಿಂದ ಹತ್ತು ಪಟ್ಟು ಇದೆ. ಆ ಅಂಡದ ಆವರಣ ಪೃಥ್ವಿಯಾಗಿದೆ. ಅದು ಅಂಡಕ್ಕಿಂತ ಹತ್ತು ಪಟ್ಟು ಇದೆ. ಈ ಪೃಥ್ವಿಯ ಆವರಣ ಜಲವಾಗಿದೆ. ಇದು ಪೃಥ್ವಿಗಿಂತ ಹತ್ತು ಪಟ್ಟು ಇದೆ. ಜಲದ ಆವರಣ ತೇಜವಾಗಿದೆ, ತೇಜದ ಆವರಣ ವಾಯು, ವಾಯುವಿನ ಆವರಣ ಆಕಾಶ, ಆಕಾಶದ ಆವರಣ ಅಹಂಕಾರ, ಅಹಂಕಾರದ ಆವರಣ ಮಹತತ್ತ್ವವಾಗಿದೆ; ಇದರಲ್ಲಿ ಪ್ರತಿಯೊಂದು ಆವರಣವು ತಮ್ಮ ಆವರಣೀಯ ಪೃಥ್ವಿ ಇವುಗಳು ಹತ್ತು ಪಟ್ಟು ದೊಡ್ಡದಾಗಿವೆ. ಪೃಥ್ವಿ, ಜಲ, ತೇಜ, ವಾಯು, ಆಕಾಶ ಇವೆಲ್ಲ ಆವರಣಗಳು ಇಲ್ಲಿ ಸೂಕ್ಷ್ಮ ಪೃಥ್ವಿ ಇತ್ಯಾದಿಗಳಾಗಿವೆ, ಸ್ಥೂಲವಲ್ಲ.
ಇಲ್ಲಿ ವಿರಾಟರೂಪವನ್ನು ಧಾರಣೆಯ ಆಶ್ರಯ (ವಿಷಯ) ಎಂದು ಹೇಳಿದೆ. ಯೋಗದರ್ಶನದಲ್ಲಿ ಧಾರಣೆಯನ್ನು ಈ ರೀತಿ ಹೇಳಲಾಗಿದೆ- ‘ದೇಶಬಂಧಶ್ಚಿತ್ತಸ್ಯ ಧಾರಣಾ’ (3/1) ವಿಷಯಾಂತರವನ್ನು ತ್ಯಾಗಮಾಡಿ ಯಾವುದೇ ವಸ್ತುವಿನಲ್ಲಿ ವೃತ್ತಿಯ ಮೂಲಕ ಚಿತ್ತದ ಸ್ಥಿರೀಕರಣದ ಹೆಸರು ಧಾರಣೆಯಾಗಿದೆ.
(ಶ್ಲೋಕ-36)
ಮೂಲಮ್
ತ್ವಮೇವ ಸರ್ವಕೈವಲ್ಯಂ ಲೋಕಾಸ್ತೇಽವಯವಾಃ ಸ್ಮೃತಾಃ ।
ಪಾತಾಲಂ ತೇ ಪಾದಮೂಲಂ ಪಾರ್ಷ್ಣಿಸ್ತವ ಮಹಾತಲಮ್ ॥
(ಶ್ಲೋಕ-37)
ಮೂಲಮ್
ರಸಾತಲಂ ತೇ ಗುಲ್ಛೌ ತು ತಲಾತಲಮಿತೀರ್ಯತೇ ।
ಜಾನುನೀ ಸುತಲಂ ರಾಮ ಊರೂ ತೇ ವಿತಲಂ ತಥಾ ॥
ಅನುವಾದ
ನೀನೇ ಏಕಮಾತ್ರ ಮೋಕ್ಷಸ್ವರೂಪಿಯಾಗಿರುವೆ. ಭೂರಾದಿ ಲೋಕಗಳೆಲ್ಲವೂ ನಿನ್ನ ಶರೀರದ ಅವಯವಗಳಾಗಿವೆ. ನಿನ್ನ ಪಾದಗಳ ಬುಡವೇ ಪಾತಾಳ ಲೋಕವು. ಮುಂಗಾಲೇ ಮಹಾತಲ. ಹಿಮ್ಮಡಿಗಂಟುಗಳೇ ರಸಾತಲವು. ಎರಡು ಮಂಡಿಗಳೂ ತಲಾತಲವು ಹಾಗೂ ಸುತಲಲೋಕಗಳೆನಿಸುವುವು. ಎರಡೂ ತೊಡೆಗಳು ವಿತಲ ಮತ್ತು ಅತಲ. ॥36-37॥
(ಶ್ಲೋಕ-38)
ಮೂಲಮ್
ಅತಲಂ ಚ ಮಹೀ ರಾಮ ಜಘನಂ ನಾಭಿಗಂ ನಭಃ ।
ಉರಃಸ್ಥಲಂ ತೇ ಜ್ಯೋತೀಂಷಿ ಗ್ರೀವಾ ತೇ ಮಹ ಉಚ್ಯತೇ ॥
(ಶ್ಲೋಕ-39)
ಮೂಲಮ್
ವದನಂ ಜನಲೋಕಸ್ತೇ ತಪಸ್ತೇ ಶಂಖದೇಶಗಮ್ ।
ಸತ್ಯಲೋಕೋ ರಘುಶ್ರೇಷ್ಠ ಶೀರ್ಷಣ್ಯಾಸ್ತೇ ಸದಾ ಪ್ರಭೋ ॥
ಅನುವಾದ
ಶ್ರೀರಾಮ! ನಿನ್ನ ಶರೀರದ ಕಟಿಭಾಗವು ಭೂರ್ಲೋಕವು, ನಾಭಿಯು ಅಂತರಿಕ್ಷ ಲೋಕವು. ಎದೆಯೇ ಜ್ಯೋತಿರ್ಮಂಡಲವು. ಕುತ್ತಿಗೆಯೇ ಮಹರ್ಲೋಕವು. ಮುಖವೇ ಜನೋಲೋಕವು. ಲಲಾಟವೇ ತಪೋಲೋಕವು. ಹೇ ಪ್ರಭೋ! ಸತ್ಯಲೋಕವು ನಿನ್ನ ತಲೆಯಾಗಿದೆ. ॥38-39॥
(ಶ್ಲೋಕ-40)
ಮೂಲಮ್
ಇಂದ್ರಾದಯೋ ಲೋಕಪಾಲಾ ಬಾಹವಸ್ತೇ ದಿಶಃ ಶ್ರುತೀ ।
ಅಶ್ವಿನೌ ನಾಸಿಕೇ ರಾಮ ವಕ್ತ್ರಂ ತೇಽಗ್ನಿರುದಾಹೃತಃ ॥
ಅನುವಾದ
ಹೇ ರಾಮಾ! ಇಂದ್ರಾದಿ ಲೋಕಪಾಲರೇ ನಿನ್ನ ಭುಜಗಳು. ದಿಕ್ಕುಗಳೇ ಕಿವಿಗಳು. ಅಶ್ವಿನೀಕುಮಾರರು ಮೂಗು. ಅಗ್ನಿಯೇ ನಿನ್ನ ಮುಖವು. ॥40॥
(ಶ್ಲೋಕ-41)
ಮೂಲಮ್
ಚಕ್ಷುಸ್ತೇ ಸವಿತಾ ರಾಮ ಮನಶ್ಚಂದ್ರ ಉದಾಹೃತಃ ।
ಭ್ರೂಭ್ರಂಗ ಏವ ಕಾಲಸ್ತೇ ಬುದ್ಧಿಸ್ತೇ ವಾಕ್ಪತಿರ್ಭವೇತ್ ॥
ಅನುವಾದ
ಹೇ ರಾಮಾ! ನಿನ್ನ ಕಣ್ಣೇ ಸೂರ್ಯನೆನಿಸುವನು. ಮನಸ್ಸೇ ಚಂದ್ರನೆನಿಸುವನು. ನಿನ್ನ ಹುಬ್ಬುಹಾರಿಸುವಿಕೆಯೇ ಕಾಲವು. ನಿನ್ನ ಬುದ್ಧಿಯೇ ಬೃಹಸ್ಪತಿಯು. ॥41॥
(ಶ್ಲೋಕ-42)
ಮೂಲಮ್
ರುದ್ರೋಽಹಂಕಾರರೂಪಸ್ತೇ ವಾಚಶ್ಛಂದಾಂಸಿ ತೇಽವ್ಯಯ ।
ಯಮಸ್ತೇ ದಂಷ್ಟ್ರದೇಶಸ್ಥೋ ನಕ್ಷತ್ರಾಣಿ ದ್ವಿಜಾಲಯಃ ॥
ಅನುವಾದ
ಹೇ ಅವ್ಯಯನೇ ! ನಿನ್ನ ಅಹಂಕಾರ ರೂಪವೇ ರುದ್ರನು. ಮಾತುಗಳೇ ವೇದಗಳು. ನಿನ್ನ ಕೋರೆದಾಡೆಗಳೇ ಯಮನು. ಹಲ್ಲಿನ ಸಾಲುಗಳೇ ನಕ್ಷತ್ರಗಳು. ॥42॥
(ಶ್ಲೋಕ-43)
ಮೂಲಮ್
ಹಾಸೋ ಮೋಹಕರೀ ಮಾಯಾ ಸೃಷ್ಟಿಸ್ತೇಽಪಾಂಗಮೋಕ್ಷಣಮ್ ।
ಧರ್ಮಃ ಪುರಸ್ತೇಽಧರ್ಮಶ್ಚ ಪೃಷ್ಠಭಾಗ ಉದೀರಿತಃ ॥
ಅನುವಾದ
ನಿನ್ನ ನಗೆಯೇ ಮೋಹವನ್ನುಂಟು ಮಾಡುವ ಮಾಯೆಯು. ಕುಡಿಕಣ್ಣಿನ ನೋಟವೇ ಜಗತ್ ಸೃಷ್ಟಿಯು. ನಿನ್ನ ಶರೀರದ ಮುಂಭಾಗವೇ ಧರ್ಮವು. ಹಿಂಭಾಗವೇ ಅಧರ್ಮವು. ॥43॥
(ಶ್ಲೋಕ-44)
ಮೂಲಮ್
ನಿಮಿಷೋನ್ಮೇಷಣೇ ರಾತ್ರಿರ್ದಿವಾ ಚೈವ ರಘೂತ್ತಮ ।
ಸಮುದ್ರಾಃ ಸಪ್ತ ತೇ ಕುಕ್ಷಿರ್ನಾಡ್ಯೋ ನದ್ಯಸ್ತವ ಪ್ರಭೋ ॥
ಅನುವಾದ
ಹೇ ರಘುಶ್ರೇಷ್ಠನೆ! ನಿನ್ನ ರೆಪ್ಪೆಗಳು ಮುಚ್ಚಿ-ತೆರೆಯುವುದೇ ರಾತ್ರಿ-ಹಗಲುಗಳು. ನಿನ್ನ ಹೊಟ್ಟೆಯೇ ಏಳು ಸಮುದ್ರಗಳು. ನಿನ್ನ ನಾಡಿಗಳೇ ನದಿಗಳು. ॥44॥
(ಶ್ಲೋಕ-45)
ಮೂಲಮ್
ರೋಮಾಣಿ ವೃಕ್ಷೌಷಧಯೋ ರೇತೋ ವೃಷ್ಟಿಸ್ತವ ಪ್ರಭೋ ।
ಮಹಿಮಾ ಜ್ಞಾನಶಕ್ತಿಸ್ತೇ ಏವಂ ಸ್ಥೂಲಂ ವಪುಸ್ತವ ॥
ಅನುವಾದ
ಹೇ ಪ್ರಭೋ! ನಿನ್ನ ರೋಮಕೂಪಗಳೇ ವೃಕ್ಷೌಷಧಿಗಳು. ರೆತಸ್ಸೇ ಮಳೆ. ಜ್ಞಾನಶಕ್ತಿಯೇ ನಿನ್ನ ಮಹಿಮೆಯು. ಹೀಗೆ ನಿನ್ನ ಸ್ಥೂಲ ಶರೀರವಾಗಿದೆ. ॥45॥
(ಶ್ಲೋಕ-46)
ಮೂಲಮ್
ಯದಸ್ಮಿನ್ ಸ್ಥೂಲರೂಪೇ ತೇ ಮನಃ ಸಂಧಾರ್ಯತೇ ನರೈಃ ।
ಅನಾಯಾಸೇನ ಮುಕ್ತಿಃ ಸ್ಯಾದತೋಽನ್ಯನ್ನಹಿ ಕಿಂಚನ ॥
ಅನುವಾದ
ನಿನ್ನ ಈ ಸ್ಥೂಲ ಶರೀರದಲ್ಲಿ ಮನಸ್ಸನ್ನು ಸ್ಥಿರಗೊಳಿಸುವ ಪುರುಷನು ಆಯಾಸವಿಲ್ಲದೆ ಮುಕ್ತನಾಗಿ ಹೋಗುತ್ತಾನೆ. ಇದಕ್ಕಿಂತ ಹೆಚ್ಚಿನದು ಬೇರೇನೂ ಇರಲಾರದು. ॥46॥
(ಶ್ಲೋಕ-47)
ಮೂಲಮ್
ಅತೋಽಹಂ ರಾಮ ರೂಪಂ ತೇ ಸ್ಥೂಲಮೇವಾನುಭಾವಯೇ ।
ಯಸ್ಮಿಂಧ್ಯಾತೇ ಪ್ರೇಮರಸಃ ಸರೋಮಪುಲಕೋ ಭವೇತ್ ॥
(ಶ್ಲೋಕ-48)
ಮೂಲಮ್
ತದೈವ ಮುಕ್ತಿಃ ಸ್ಯಾದ್ರಾಮ ಯದಾ ತೇ ಸ್ಥೂಲಭಾವಕಃ ।
ತದಪ್ಯಾಸ್ತಾಂ ತವೈವಾಹಮೇತದ್ರೂಪಂ ವಿಚಿಂತಯೇ ॥
ಅನುವಾದ
ಆದ್ದರಿಂದ ಹೇ ರಾಮಾ! ನಾನು ನಿನ್ನ ಸ್ಥೂಲರೂಪವನ್ನೇ ಚಿಂತಿಸುವೆನು. ಏಕೆಂದರೆ, ಅದನ್ನು ಧ್ಯಾನ ಮಾಡಿದಾಗ ರೋಮಾಂಚನವಾಗಿ ಪ್ರೇಮರಸವು ಉಕ್ಕೇರುವುದು. ಹೇ ರಾಘವಾ! ಈ ಜೀವಿಯು ನಿನ್ನ ವಿರಾಟರೂಪವನ್ನು ಚಿಂತಿಸಿದಾಗಲೇ ಮುಕ್ತನಾಗುತ್ತಾನೆ. ಆದರೆ ನನಗೆ ಅದರ ಆವಶ್ಯಕತೆ ಇಲ್ಲ. ನಾನಾದರೋ ನಿನ್ನ ಈ ರಾಮರೂಪವನ್ನೇ ಚಿಂತಿಸುವೆನು. ॥47-48॥
(ಶ್ಲೋಕ-49)
ಮೂಲಮ್
ಧನುರ್ಬಾಣಧರಂ ಶ್ಯಾಮಂ ಜಟಾವಲ್ಕಲಭೂಷಿತಮ್ ।
ಅಪೀಚ್ಯವಯಸಂ ಸೀತಾಂ ವಿಚಿನ್ವಂತಂ ಸಲಕ್ಷ್ಮಣಮ್ ॥
ಅನುವಾದ
ಹೇ ರಘುನಂದನಾ! ಈ ಧನುರ್ಬಾಣಗಳನ್ನು ಧರಿಸಿರುವ, ನೀಲವರ್ಣನಾದ, ಜಟಾವಲ್ಕಲಗಳಿಂದ ಅಲಂಕೃತವಾದ ಸುಂದರ ತರುಣ ವಯಸ್ಸಿನ ಹಾಗೂ ಲಕ್ಷ್ಮಣ ಸಹಿತನಾಗಿ ಸೀತೆಯನ್ನು ಹುಡುಕುತ್ತಿರುವ ನಿನ್ನ ರೂಪವನ್ನೇ ಚಿಂತಿಸುವೆನು. ॥49॥
(ಶ್ಲೋಕ-50)
ಮೂಲಮ್
ಇದಮೇವ ಸದಾ ಮೇ ಸ್ಯಾನ್ಮಾನಸೇ ರಘುನಂದನ ।
ಸರ್ವಜ್ಞಃ ಶಂಕರಃ ಸಾಕ್ಷಾತ್ಪಾರ್ವತ್ಯಾ ಸಹಿತಃ ಸದಾ ॥
(ಶ್ಲೋಕ-51)
ಮೂಲಮ್
ತ್ವದ್ರೂಪಮೇವಂ ಸತತಂ ಧ್ಯಾಯನ್ನಾಸ್ತೇ ರಘೂತ್ತಮ ।
ಮುಮೂರ್ಷೂಣಾಂ ತದಾ ಕಾಶ್ಯಾಂ ತಾರಕಂ ಬ್ರಹ್ಮವಾಚಕಮ್ ॥
(ಶ್ಲೋಕ-52)
ಮೂಲಮ್
ರಾಮರಾಮೇತ್ಯುಪದಿಶನ್ ಸದಾ ಸಂತುಷ್ಟಮಾನಸಃ ।
ಅತಸ್ತ್ವಂ ಜಾನಕೀನಾಥ ಪರಮಾತ್ಮಾ ಸುನಿಶ್ಚಿತಃ ॥
ಅನುವಾದ
ಹೇ ರಘುಶ್ರೇಷ್ಠ! ನನ್ನ ಮನಸ್ಸಿನಲ್ಲಿ ಈ ರೂಪವೇ ಸದಾ ವಾಸಿಸುತ್ತಿರಲಿ. ಪಾರ್ವತಿ ಸಹಿತನಾದ ಸರ್ವಜ್ಞನಾದ ಶಂಕರನು ಯಾವಾಗಲೂ ಈ ನಿನ್ನ ರೂಪವನ್ನೇ ಧ್ಯಾನ ಮಾಡುತ್ತಾ ಇರುವನು. ಕಾಶಿಯಲ್ಲಿ ಸಾಯುವವರಿಗೆ ಸಂಸಾರದಿಂದ ಪಾರಾಗಿಸಲು ಬ್ರಹ್ಮವನ್ನೇ ಮುಖ್ಯಾರ್ಥದಲ್ಲಿ ಹೇಳುವ ‘ರಾಮ-ರಾಮ’ ಈ ತಾರಕ ಮಂತ್ರವನ್ನು ಉಪದೇಶಿಸುತ್ತಾ ಸದಾಕಾಲ ಆನಂದಮಗ್ನನಾಗಿ ಇರುವನು. ಆದ್ದರಿಂದ ಹೇ ಜಾನಕೀನಾಥಾ! ನೀನು ನಿಶ್ಚಯವಾಗಿ ಪರಮಾತ್ಮನೇ ಆಗಿರುವೆ. ॥50-52॥
(ಶ್ಲೋಕ-53)
ಮೂಲಮ್
ಸರ್ವೇ ತೇ ಮಾಯಯಾ ಮೂಢಾಸ್ತ್ವಾಂ ನ ಜಾನಂತಿ ತತ್ತ್ವತಃ ।
ನಮಸ್ತೇ ರಾಮಭದ್ರಾಯ ವೇಧಸೇ ಪರಮಾತ್ಮನೇ ॥
(ಶ್ಲೋಕ-54)
ಮೂಲಮ್
ಅಯೋಧ್ಯಾಧಿಪತೇ ತುಭ್ಯಂ ನಮಃ ಸೌಮಿತ್ರಿಸೇವಿತ ।
ತ್ರಾಹಿ ತ್ರಾಹಿ ಜಗನ್ನಾಥ ಮಾಂ ಮಾಯಾ ನಾವೃಣೋತು ತೇ ॥
ಅನುವಾದ
ಜನರೆಲ್ಲರೂ ಮಾಯಾಮೋಹಿತರಾಗಿ ನಿಜವಾದ ನಿನ್ನ ತತ್ತ್ವವನ್ನು ಅರಿಯದೇ ಇರುವರು. ರಾಮಭದ್ರನಾದ, ಪರಬ್ರಹ್ಮನಾದ, ಪರಮಾತ್ಮನಾದ ನಿನಗೆ ನಮಸ್ಕರಿಸುತ್ತೇನೆ. ಲಕ್ಷ್ಮಣನಿಂದ ಸೇವಿತನಾದ, ಅಯೋಧ್ಯೆಯ ಒಡೆಯನೆ, ನಿನಗೆ ವಂದನೆಗಳು. ಹೇ ಜಗನ್ನಾಥಾ! ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು. ನಿನ್ನ ಮಾಯೆಯು ನನ್ನನ್ನು ಮುಸುಕದೇ ಇರಲಿ. ॥53-54॥
(ಶ್ಲೋಕ-55)
ಮೂಲಮ್ (ವಾಚನಮ್)
ಶ್ರೀರಾಮ ಉವಾಚ
ಮೂಲಮ್
ತುಷ್ಟೋಽಹಂ ದೇವಗಂಧರ್ವ ಭಕ್ತ್ಯಾ ಸ್ತುತ್ಯಾ ಚ ತೇಽನಘ ।
ಯಾಹಿ ಮೇ ಪರಮಂ ಸ್ಥಾನಂ ಯೋಗಿಗಮ್ಯಂ ಸನಾತನಮ್ ॥
ಅನುವಾದ
ಶ್ರೀರಾಮಚಂದ್ರನು ಹೇಳಿದನು — ‘‘ಹೇ ದೇವಗಂಧರ್ವ! ನಾನು ನಿನ್ನ ಭಕ್ತಿ ಮತ್ತು ಸ್ತುತಿಯಿಂದ ತೃಪ್ತನಾಗಿರುವೆ. ಪಾಪರಹಿತನೆ! ಯೋಗಿಗಳಿಗೆ ಮಾತ್ರ ಗೋಚರವಾಗುವ ಸನಾತನವಾದ ನನ್ನ ಪರಮಧಾಮಕ್ಕೆ ನೀನು ಹೋಗು. ॥55॥
(ಶ್ಲೋಕ-56)
ಮೂಲಮ್
ಜಪಂತಿ ಯೇ ನಿತ್ಯಮನನ್ಯಬುದ್ಧ್ಯಾ
ಭಕ್ತ್ಯಾ ತ್ವದುಕ್ತಂ ಸ್ತವಮಾಗಮೋಕ್ತಮ್ ।
ತೇಜ್ಞಾನಸಂಭೂತಭವಂ ವಿಹಾಯ
ಮಾಂ ಯಾಂತಿ ನಿತ್ಯಾನುಭವಾನುಮೇಯಮ್ ॥
ಅನುವಾದ
ಈ ನಿನ್ನ ಆಗಮೋಕ್ತ (ವೇದಸಮ್ಮತವಾದ) ಸ್ತೋತ್ರವನ್ನು ಅನನ್ಯ ಬುದ್ಧಿಯಿಂದ ನಿತ್ಯವೂ ಭಕ್ತಿಪೂರ್ವಕ ಜಪಿಸುವವರು ಅಜ್ಞಾನದಿಂದುಂಟಾದ ಸಂಸಾರವನ್ನು ಮೀರಿ ನಿತ್ಯಾನುಭವದಿಂದ ಅರಿಯಲಾಗುವ ನನ್ನನ್ನು ಹೊಂದುವರು.’’ ॥56॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ನವಮಃ ಸರ್ಗಃ ॥9॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.