೦೮

[ಎಂಟನೆಯ ಸರ್ಗ]

ಭಾಗಸೂಚನಾ

ಸೀತಾ ವಿಯೋಗದಿಂದ ಭಗವಾನ್ ಶ್ರೀರಾಮನ ವಿಲಾಪ ಮತ್ತು ಜಟಾಯು ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ರಾಮೋ ಮಾಯಾವಿನಂ ಹತ್ವಾ ರಾಕ್ಷಸಂ ಕಾಮರೂಪಿಣಮ್ ।
ಪ್ರತಸ್ಥೇ ಸ್ವಾಶ್ರಮಂ ಗಂತುಂ ತತೋ ದೂರಾದ್ದದರ್ಶ ತಮ್ ॥

(ಶ್ಲೋಕ-2)

ಮೂಲಮ್

ಆಯಾಂತಂ ಲಕ್ಷ್ಮಣಂ ದೀನಂ ಮುಖೇನ ಪರಿಶುಷ್ಯತಾ ।
ರಾಘವಶ್ಚಿಂತಯಾಮಾಸ ಸ್ವಾತ್ಮನ್ಯೇವ ಮಹಾಮತಿಃ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಪಾರ್ವತಿ! ಇತ್ತ ಶ್ರೀರಾಮನು ಕಾಮರೂಪಿಯೂ ಮಾಯಾವಿಯೂ ಆದ ರಾಕ್ಷಸನನ್ನು ಕೊಂದು ತನ್ನ ಆಶ್ರಮಕ್ಕೆ ಮರಳುವಾಗ ದೂರದಲ್ಲಿ ಬರುತ್ತಿರುವ ಬಾಡಿದ ಮುಖದಿಂದ ದೀನನಾದ ಲಕ್ಷ್ಮಣನನ್ನು ನೋಡಿದನು. ಆಗ ಮಹಾಮತಿಯಾದ ರಾಮನು ತನ್ನಲ್ಲಿಯೇ ಯೋಚಿಸತೊಡಗಿದನು. ॥1-2॥

(ಶ್ಲೋಕ-3)

ಮೂಲಮ್

ಲಕ್ಷ್ಮಣಸ್ತನ್ನ ಜಾನಾತಿ ಮಾಯಾಸೀತಾಂ ಮಯಾ ಕೃತಾಮ್ ।
ಜ್ಞಾತ್ವಾ ಪ್ಯೇನಂ ವಂಚಯಿತ್ವಾ ಶೋಚಾಮಿ ಪ್ರಾಕೃತೋ ಯಥಾ ॥

ಅನುವಾದ

‘ನಾನು ಸೀತೆಯನ್ನು ಮಾಯಾಸೀತೆಯಾಗಿಸಿದುದು ಲಕ್ಷ್ಮಣನಿಗೆ ತಿಳಿಯದು. ನಾನು ಇದನ್ನು ತಿಳಿದಿದ್ದರೂ ಇವನನ್ನು ಮರಳುಮಾಡಲಿಕ್ಕಾಗಿ ಸಾಮಾನ್ಯ ಮನುಷ್ಯನಂತೆ ದುಃಖ ಪಡುವೆನು. ॥3॥

(ಶ್ಲೋಕ-4)

ಮೂಲಮ್

ಯದ್ಯಹಂ ವಿರತೋ ಭೂತ್ವಾ ತೂಷ್ಣೀಂ ಸ್ಥಾಸ್ಯಾಮಿ ಮಂದಿರೇ ।
ತದಾ ರಾಕ್ಷಸ ಕೋಟೀನಾಂ ವಧೋಪಾಯಃ ಕಥಂ ಭವೇತ್ ॥

ಅನುವಾದ

ಒಂದುವೇಳೆ ನಾನು ವಿರಕ್ತನಾಗಿ ಸುಮ್ಮನೆ ಕುಟೀರದಲ್ಲಿ ಇದ್ದುಬಿಟ್ಟರೆ ಆಗ ಕೋಟಿಗಟ್ಟಲೆ ರಾಕ್ಷಸರ ನಾಶದ ಉಪಾಯವು ಹೇಗೆ ಒದಗೀತು? ॥4॥

(ಶ್ಲೋಕ-5)

ಮೂಲಮ್

ಯದಿ ಶೋಚಾಮಿ ತಾಂ ದುಃಖಸಂತಪ್ತಃ ಕಾಮುಕೋ ಯಥಾ ।
ತದಾ ಕ್ರಮೇಣಾನುಚಿನ್ವನ್ ಸೀತಾಂ ಯಾಸ್ಯೇಽಸುರಾಲಯಮ್ ।
ರಾವಣಂ ಸಕುಲಂ ಹತ್ವಾ ಸೀತಾಮಗ್ನೌ ಸ್ಥಿತಾಂ ಪುನಃ ॥

(ಶ್ಲೋಕ-6)

ಮೂಲಮ್

ಮಯೈವ ಸ್ಥಾಪಿತಾಂ ನೀತ್ವಾ ಯಾತಾಯೋಧ್ಯಾಮತಂದ್ರಿತಃ ।
ಅಹಂ ಮನುಷ್ಯಭಾವೇನ ಜಾತೋಽಸ್ಮಿ ಬ್ರಹ್ಮಣಾರ್ಥಿತಃ ॥

(ಶ್ಲೋಕ-7)

ಮೂಲಮ್

ಮನುಷ್ಯಭಾವಮಾಪನ್ನಃ ಕಿಂಚಿತ್ಕಾಲಂ ವಸಾಮಿ ಕೌ ।
ತತೋ ಮಾಯಾಮನುಷ್ಯಸ್ಯ ಚರಿತಂ ಮೇಽನುಶೃಣ್ವತಾಮ್ ॥

(ಶ್ಲೋಕ-8)

ಮೂಲಮ್

ಮುಕ್ತಿಃ ಸ್ಯಾದಪ್ರಯಾಸೇನ ಭಕ್ತಿಮಾರ್ಗಾನುವರ್ತಿನಾಮ್ ।
ನಿಶ್ಚಿತ್ಯೈವಂ ತದಾ ದೃಷ್ಟ್ವಾ ಲಕ್ಷ್ಮಣಂ ವಾಕ್ಯಮಬ್ರವೀತ್ ॥

ಅನುವಾದ

ಆದ್ದರಿಂದ ನಾನು ಸೀತೆಗಾಗಿ ದುಃಖಾತುರನಾಗಿ ಕಾಮೀಪುರುಷರಂತೆ ಅಳುತ್ತಾ ಅವಳನ್ನು ಹುಡುಕುತ್ತಾ ಕ್ರಮವಾಗಿ ರಾಕ್ಷಸರಾಜ ರಾವಣನ ನಿವಾಸವನ್ನು ತಲುಪಬಹುದು ಮತ್ತು ಅಲ್ಲಿ ಪರಿವಾರ ಸಹಿತ ಅವನನ್ನು ಕೊಂದು ಅಗ್ನಿಯಲ್ಲಿ ಅಡಗಿರುವ ಸೀತೆಯನ್ನು ಮರಳಿ ಪಡೆದು ಬೇಗನೇ ಅಯೋಧ್ಯೆಗೆ ಹೊರಟು ಹೋಗುವೆನು. ಬ್ರಹ್ಮನ ಪ್ರಾರ್ಥನೆಯಂತೆ ನಾನು ಮನುಷ್ಯನಾಗಿ ಅವತರಿಸಿರುವೆನು. ಈ ಭೂಮಿಯಲ್ಲಿ ಕೆಲವು ಕಾಲ ಮನುಷ್ಯಭಾವದಿಂದಲೇ ವಾಸಿಸುವೆನು. ಇದರಿಂದ ಮಾಯಾಮನುಷ್ಯನಾಗಿದ್ದ ನನ್ನ ಕಥೆಯನ್ನು ಕೇಳುವ ಭಕ್ತಿಮಾರ್ಗದಲ್ಲಿ ನಡೆಯುವ ಸಾಧಕರಿಗೆ ಆಯಾಸವಿಲ್ಲದೆ ಮೋಕ್ಷ ಉಂಟಾಗುವುದು.’ ಶ್ರೀರಾಮಚಂದ್ರನು ಹೀಗೆ ನಿಶ್ಚಯಿಸಿಕೊಂಡು ಲಕ್ಷ್ಮಣನನ್ನು ಕಂಡು ಹೇಳುತ್ತಾನೆ. ॥5-8॥

(ಶ್ಲೋಕ-9)

ಮೂಲಮ್

ಕಿಮರ್ಥಮಾಗತೋಽಸಿ ತ್ವಂ ಸೀತಾಂ ತ್ಯಕ್ತ್ವಾ ಮಮ ಪ್ರಿಯಾಮ್ ।
ನೀತಾ ವಾ ಭಕ್ಷಿತಾ ವಾಪಿ ರಾಕ್ಷಸೈರ್ಜನಕಾತ್ಮಜಾ ॥

ಅನುವಾದ

‘‘ಲಕ್ಷ್ಮಣಾ! ನನಗೆ ಪ್ರಿಯಳಾದ ಸೀತೆಯನ್ನು ಬಿಟ್ಟು ನೀನೇಕೆ ಬಂದೆ? ಜನಕನಂದಿನೀ ಸೀತೆಯನ್ನು ಈಗಾಗಲೇ ರಾಕ್ಷಸರು ಕದ್ದು ಹೋಗಿರುವರೋ ಅಥವಾ ತಿಂದು ಬಿಟ್ಟಿರುವರೋ ತಿಳಿಯದು.’’ ॥9॥

(ಶ್ಲೋಕ-10)

ಮೂಲಮ್

ಲಕ್ಷ್ಮಣಃ ಪ್ರಾಂಜಲಿಃ ಪ್ರಾಹ ಸೀತಾಯಾ ದುರ್ವಚೋ ರುದನ್ ।
ಹಾ ಲಕ್ಷ್ಮಣೇತಿ ವಚನಂ ರಾಕ್ಷಸೋಕ್ತಂ ಶ್ರುತಂ ತಯಾ ॥

(ಶ್ಲೋಕ-11)

ಮೂಲಮ್

ತ್ವದ್ವಾಕ್ಯಸದೃಶಂ ಶ್ರುತ್ವಾ ಮಾಂ ಗಚ್ಛೇತಿ ತ್ವರಾಬ್ರವೀತ್ ।
ರುದಂತಿ ಸಾ ಮಯಾ ಪ್ರೋಕ್ತಾ ದೇವಿ ರಾಕ್ಷಸಭಾಷಿತಮ್ ।
ನೇದಂ ರಾಮಸ್ಯ ವಚನಂ ಸ್ವಸ್ಥಾ ಭವ ಶುಚಿಸ್ಮಿತೇ ॥

ಅನುವಾದ

ಆಗ ಲಕ್ಷ್ಮಣನು ಕೈ ಮುಗಿದುಕೊಂಡು ಅಳುತ್ತಾ ಸೀತೆಯ ಮಾತನ್ನು ತಿಳಿಸಿದ. ‘‘ಅಣ್ಣಾ! ಅಯ್ಯೋ ಲಕ್ಷ್ಮಣಾ ಎಂದು ರಾಕ್ಷಸನು ನಿನ್ನಂತೆಯೇ ಕೂಗಿದ ಧ್ವನಿಯನ್ನು ಕೇಳಿ, ಕೂಡಲೇ ‘ನನ್ನನ್ನು ಹೋಗು’ ಎಂದು ಹೇಳಿದಳು. ಹೀಗೆಂದು ಅಳುತ್ತಾ ಇರುವ ಅತ್ತಿಗೆಯನ್ನು ಸಮಾಧಾನ ಪಡಿಸುತ್ತಾ ‘ಅಮ್ಮ! ಇದು ರಾಕ್ಷಸನ ಶಬ್ದಗಳಾಗಿವೆ ರಘುನಾಥನದಲ್ಲ. ಹೇ ಶುಚಿಸ್ಮಿತೇ! ನೀನು ಸಮಾಧಾನ ಚಿತ್ತಳಾಗಿರು’ ಎಂದು ಹೇಳಿದೆ. ॥10-11॥

(ಶ್ಲೋಕ-12)

ಮೂಲಮ್

ಇತ್ಯೇವಂ ಸಾಂತ್ವಿತಾ ಸಾಧ್ವೀ ಮಯಾ ಪ್ರೋವಾಚ ಮಾಂ ಪುನಃ ।
ಯದುಕ್ತಂ ದುರ್ವಚೋ ರಾಮ ನ ವಾಚ್ಯಂ ಪುರತಸ್ತವ ॥

(ಶ್ಲೋಕ-13)

ಮೂಲಮ್

ಕರ್ಣೌ ಪಿಧಾಯ ನಿರ್ಗತ್ಯ ಯಾತೋಹಂ ತ್ವಾಂ ಸಮೀಕ್ಷಿತುಮ್ ।
ರಾಮಸ್ತು ಲಕ್ಷ್ಮಣಂ ಪ್ರಾಹ ತಥಾಪ್ಯನುಚಿತಂ ಕೃತಮ್ ॥

ಅನುವಾದ

ಹೀಗೆಂದು ನಾನು ಧೈರ್ಯಕೊಟ್ಟರೂ ಆ ಪತಿವ್ರತೆಯು ಆಡಿದ ಕೆಟ್ಟ ಮಾತುಗಳನ್ನು ರಾಮಾ! ನಿನ್ನೆದುರಿಗೆ ಹೇಳಲು ಯೋಗ್ಯವಲ್ಲ. ನಾನು ಎರಡೂ ಕಿವಿಗಳನ್ನು ಮುಚ್ಚಿಕೊಂಡು ನಿನ್ನನ್ನು ಕಾಣುವ ಸಲುವಾಗಿ ಹೊರಟು ಬಂದೆ.’’ ಶ್ರೀರಾಮಚಂದ್ರನು ಆಗ ‘‘ಲಕ್ಷ್ಮಣಾ! ಸರಿ, ಆದರೂ ನೀನು ಮಾಡಿದ್ದು ತಪ್ಪೇ ಆಗಿದೆ. ॥12-13॥

(ಶ್ಲೋಕ-14)

ಮೂಲಮ್

ತ್ವಯಾ ಸ್ತ್ರೀ ಭಾಷಿತಂ ಸತ್ಯಂ ಕೃತ್ವಾ ತ್ಯಕ್ತಾ ಶುಭಾನನಾ ।
ನೀತಾ ವಾ ಭಕ್ಷಿತಾ ವಾಪಿ ರಾಕ್ಷಸೈರ್ನಾತ್ರ ಸಂಶಯಃ ॥

ಅನುವಾದ

ಶುಭಾನನೆಯಾದ ಸೀತೆಯನ್ನು ಬಿಟ್ಟು ನೀನು ಹೆಂಗಸಿನ ಮಾತಿಗೆ ಬೆಲೆ ಕೊಟ್ಟು ಹೊರಟು ಬಂದದ್ದು ಸರಿಯಲ್ಲ. ಆಕೆಯನ್ನು ರಾಕ್ಷಸರು ಕದ್ದುಕೊಂಡು ಹೋಗಿರುವರೋ, ತಿಂದು ಹಾಕಿದ್ದಾರೋ ಕಾಣೆ. ಈ ಘಟನೆಯು ನಡೆದಿರುವುದರಲ್ಲಿ ಸಂಶಯವಿಲ್ಲ.’’ ॥14॥

(ಶ್ಲೋಕ-15)

ಮೂಲಮ್

ಇತಿ ಚಿಂತಾಪರೋ ರಾಮಃ ಸ್ವಾಶ್ರಮಂ ತ್ವರಿತೋ ಯಯೌ ।
ತತ್ರಾದೃಷ್ಟ್ವಾ ಜನಕಜಾಂ ವಿಲಲಾಪಾತಿದುಃಖಿತಃ ॥

ಅನುವಾದ

ಹೀಗೆ ಚಿಂತಿಸುತ್ತಾ ರಾಘವನು ವೇಗವಾಗಿ ತನ್ನ ಆಶ್ರಮಕ್ಕೆ ಬಂದು, ಅಲ್ಲಿ ಜನಕನಂದನೆಯನ್ನು ಕಾಣದೆ ಅತಿದುಃಖಿತನಾಗಿ ವಿಲಾಪ ಮಾಡತೊಡಗಿದನು. ॥15॥

(ಶ್ಲೋಕ-16)

ಮೂಲಮ್

ಹಾ ಪ್ರಿಯೆ ಕ್ವ ಗತಾಸಿ ತ್ವಂ ನಾಸಿ ಪೂರ್ವವದಾಶ್ರಮೇ ।
ಅಥವಾ ಮದ್ವಿಮೋಹಾರ್ಥಂ ಲೀಲಯಾ ಕ್ವ ವಿಲೀಯಸೇ ॥

ಅನುವಾದ

‘ಅಯ್ಯೋ, ಪ್ರಿಯಳೆ! ಎಲ್ಲಿಗೆ ಹೋಗಿರುವೆ. ಹಿಂದಿನಂತೆ ಆಶ್ರಮದಲ್ಲಿ ನೀನು ಕಾಣುತ್ತಿಲ್ಲವಲ್ಲ ಅಥವಾ ನನ್ನನ್ನು ಮೋಸಗೊಳಿಸಲು ವಿನೋದಕ್ಕಾಗಿ ಎಲ್ಲಿಯಾದರು ಅಡಗಿಕೊಂಡಿರುವೆಯಾ?’ ॥16॥

(ಶ್ಲೋಕ-17)

ಮೂಲಮ್

ಇತ್ಯಾಚಿನ್ವನ್ ವನಂ ಸರ್ವಂ ನಾಪಶ್ಯಜ್ಜಾನಕೀಂ ತದಾ ।
ವನದೇವ್ಯಃ ಕುತಃ ಸೀತಾಂ ಬ್ರುವಂತು ಮಮ ವಲ್ಲಭಾಮ್ ॥

(ಶ್ಲೋಕ-18)

ಮೂಲಮ್

ಮೃಗಾಶ್ಚ ಪಕ್ಷಿಣೋ ವೃಕ್ಷಾ ದರ್ಶಯಂತು ಮಮ ಪ್ರಿಯಾಮ್ ।
ಇತ್ಯೇವಂ ವಿಲಪನ್ನೇವ ರಾಮಃ ಸೀತಾಂ ನ ಕುತ್ರಚಿತ್ ॥

ಅನುವಾದ

ಈ ಪ್ರಕಾರ ರಾಮನು ವಿಲಾಪಿಸುತ್ತಾ ಎಲ್ಲ ಕಾಡನ್ನು ಹುಡುಕಿದರೂ ಸೀತೆಯನ್ನು ಕಾಣದೇ ಹೋದನು. ಆಗ ಎಲೈ ವನದೇವಿಯರೆ, ನನ್ನ ಪ್ರಿಯಳಾದ ಸೀತೆಯು ಎಲ್ಲಿರುವಳು? ಅವಳ ಬಗ್ಗೆ ಹೇಳಿರಿ. ಮೃಗಗಳೇ, ಪಕ್ಷಿಗಳೇ, ಮರಗಳೇ ಯಾರಾದರೂ ನನ್ನ ಪ್ರಿಯೆಯನ್ನು ತೋರಿಸಿರಿ. ಹೀಗೆ ಅಳುತ್ತಲೇ ರಾಮನು ಹುಡುಕಿದರೂ ಸೀತೆಯು ಕಾಣ ಸಿಗಲಿಲ್ಲ. ಸರ್ವಜ್ಞನಾದ ಶ್ರೀರಾಮನು ಎಲ್ಲಿಯೂ ಸೀತೆ ಯನ್ನು ನೋಡದೆ ಹೋದನು. ॥17-18॥

(ಶ್ಲೋಕ-19)

ಮೂಲಮ್

ಸರ್ವಜ್ಞಃ ಸರ್ವಥಾ ಕ್ವಾಪಿ ನಾಪಶ್ಯದ್ರಘುನಂದನಃ ।
ಆನಂದೋಽಪ್ಯನ್ವಶೋಚತ್ತಾಮಚಲೋಽಪ್ಯನುಧಾವತಿ ॥

(ಶ್ಲೋಕ-20)

ಮೂಲಮ್

ನಿರ್ಮಮೋ ನಿರಹಂಕಾರೋಽಪ್ಯಖಂಡಾನಂದರೂಪವಾನ್ ।
ಮಮ ಜಾಯೇತಿ ಸೀತೇತಿ ವಿಲಲಾಪಾತಿದುಃಖಿತಃ ॥

ಅನುವಾದ

ತಾನು ಆನಂದ ಸ್ವರೂಪನಾಗಿದ್ದರೂ ಆಕೆಯನ್ನು ಕುರಿತು ಶೋಕಿಸಿದನು. ಹಾಗೆಯೇ ಚಲನವಿಲ್ಲದವನಾದರೂ ಹುಡುಕುತ್ತಾ ಅಲೆಯುತ್ತಿದ್ದನು. ನಾನು ನನ್ನದೆಂಬುದಿಲ್ಲದ ಅಖಂಡ ಆನಂದ ಸ್ವರೂಪನಾಗಿದ್ದರೂ ‘ನನ್ನ ಹೆಂಡತಿ ಸೀತೆ’ ಎಂದು ಬಹಳವಾಗಿ ದುಃಖದಿಂದ ಅತ್ತನು. ॥19-20॥

(ಶ್ಲೋಕ-21)

ಮೂಲಮ್

ಏವಂ ಮಾಯಾಮನುಚರನ್ನಸಕ್ತೋಽಪಿ ರಘೂತ್ತಮಃ ।
ಆಸಕ್ತ ಇವ ಮೂಢಾನಾಂ ಭಾತಿ ತತ್ತ್ವವಿದಾಂ ನ ಹಿ ॥

ಅನುವಾದ

ಹೀಗೆ ಮಾಯೆಯನ್ನು ಆಶ್ರಯಿಸಿ ರಘೂತ್ತಮನು ತಾನು ಅಸಂಗನಾದರೂ ಆಸಕ್ತಿಯುಳ್ಳವನಂತೆಯೇ ಮೂಢರಿಗೆ ಕಂಡು ಬರುತ್ತಿದ್ದನು. ತತ್ತ್ವವನ್ನು ಬಲ್ಲವರಿಗೆ ಹಾಗೆ ಕಂಡು ಬರುವುದಿಲ್ಲ. ॥21॥

(ಶ್ಲೋಕ-22)

ಮೂಲಮ್

ಏವಂ ವಿಚಿನ್ವನ್ ಸಕಲಂ ವನಂ ರಾಮಃ ಸಲಕ್ಷ್ಮಣಃ ।
ಭಗ್ನಂ ರಥಂ ಛತ್ರಚಾಪಂ ಕೂಬರಂ ಪತಿತಂ ಭುವಿ ॥

(ಶ್ಲೋಕ-23)

ಮೂಲಮ್

ದೃಷ್ಟ್ವಾ ಲಕ್ಷ್ಮಣಮಾಹೇದಂ ಪಶ್ಯ ಲಕ್ಷ್ಮಣ ಕೇನಚಿತ್ ।
ನೀಯಮಾನಾಂ ಜನಕಜಾಂ ತಂ ಜಿತ್ವಾನ್ಯೋ ಜಹಾರ ತಾಮ್ ॥

ಅನುವಾದ

ಹೀಗೆ ಎಲ್ಲ ಕಾಡನ್ನು ಲಕ್ಷ್ಮಣನೊಂದಿಗೆ ಸೀತೆಯನ್ನು ಹುಡುಕುತ್ತಾ-ಹುಡುಕುತ್ತಾ ಒಂದೆಡೆ ಮುರಿದು ಬಿದ್ದಿದ್ದ ರಥ, ಛತ್ರ, ಧನುಸ್ಸು, ರಥದ ಗೂಟ ಇವುಗಳು ಭೂಮಿಯಲ್ಲಿ ಹರಡಿಕೊಂಡು ಬಿದ್ದುದನ್ನು ಶ್ರೀರಾಮನು ನೋಡಿ ಲಕ್ಷ್ಮಣನಲ್ಲಿ ಹೇಳುತ್ತಾನೆ ‘‘ತಮ್ಮ! ನೋಡು, ಯಾವನೋ ಒಬ್ಬನು ಸೀತೆಯನ್ನು ಕದ್ದೊಯ್ಯುತ್ತಿರುವಾಗ ಅವನನ್ನು ಗೆದ್ದು ಮತ್ತೊಬ್ಬನು ಆಕೆಯನ್ನು ಅಪಹರಿಸಿಕೊಂಡು ಹೋಗಿರುವನು.’’॥22-23॥

(ಶ್ಲೋಕ-24)

ಮೂಲಮ್

ತತಃ ಕಂಚಿದ್ಭುವೋ ಭಾಗಂ ಗತ್ವಾ ಪರ್ವತಸನ್ನಿಭಮ್ ।
ರುಧಿರಾಕ್ತವಪುರ್ದೃಷ್ಟ್ವಾ ರಾಮೋ ವಾಕ್ಯಮಥಾಬ್ರವೀತ್ ॥

(ಶ್ಲೋಕ-25)

ಮೂಲಮ್

ಏಷ ವೈ ಭಕ್ಷಯಿತ್ವಾ ತಾಂ ಜಾನಕೀಂ ಶುಭದರ್ಶನಾಮ್ ।
ಶೇತೇ ವಿವಿಕ್ತೇಽತಿತೃಪ್ತಃ ಪಶ್ಯ ಹನ್ಮಿ ನಿಶಾಚರಮ್ ॥

(ಶ್ಲೋಕ-26)

ಮೂಲಮ್

ಚಾಪಮಾನಯ ಶೀಘ್ರಂ ಮೇ ಬಾಣಂ ಚ ರಘುನಂದನ ।
ತಚ್ಛ್ರುತ್ವಾ ರಾಮವಚನಂ ಜಟಾಯುಃ ಪ್ರಾಹ ಭೀತವತ್ ॥

ಅನುವಾದ

ಸ್ವಲ್ಪ ದೂರ ಭೂಭಾಗವನ್ನು ಕ್ರಮಿಸಿದಾಗ, ರಕ್ತದಿಂದ ತೊಯ್ದಿರುವ ಬೆಟ್ಟದಂತಹ ಶರೀರದ ಒಂದು ಭಾರೀ ಆಕೃತಿಯನ್ನು ಕಂಡು ಶ್ರೀರಾಮನು ಹೇಳುತ್ತಾನೆ ‘‘ರಘುನಂದನ ಲಕ್ಷ್ಮಣಾ! ನೋಡು ಶುಭ ದರ್ಶನಳಾದ ಜಾನಕಿಯನ್ನು ಇವನೇ ತಿಂದುಹಾಕಿ, ಚೆನ್ನಾಗಿ ಕೊಬ್ಬಿ ಇಲ್ಲಿ ಏಕಾಂತದಲ್ಲಿ ಮಲಗಿರುವನು. ಇವನನ್ನು ಕೊಂದುಬಿಡುವೆನು ನೋಡುತ್ತಿರು. ಬೇಗನೇ ನನ್ನ ಧನುರ್ಬಾಣಗಳನ್ನು ಇತ್ತ ಕೊಡು.’’ ರಾಮನ ಈ ಮಾತನ್ನು ಕೇಳಿ ಹೆದರಿದವನಾದ ಜಟಾಯು ಹೀಗೆ ಹೇಳುತ್ತಾನೆ. ॥24-26॥

(ಶ್ಲೋಕ-27)

ಮೂಲಮ್

ಮಾಂ ನ ಮಾರಯ ಭದ್ರಂ ತೇ ಮ್ರಿಯಮಾಣಂ ಸ್ವಕರ್ಮಣಾ ।
ಅಹಂ ಜಟಾಯುಸ್ತೇ ಭಾರ್ಯಾಹಾರಿಣಂ ಸಮನುದ್ರುತಃ ॥

(ಶ್ಲೋಕ-28)

ಮೂಲಮ್

ರಾವಣಂ ತತ್ರ ಯುದ್ಧಂ ಮೇ ಬಭೂವಾರಿವಿಮರ್ದನ ।
ತಸ್ಯ ವಾಹಾನ್ ರಥಂ ಚಾಪಂ ಛಿತ್ತ್ವಾಹಂ ತೇನ ಘಾತಿತಃ ॥

(ಶ್ಲೋಕ-29)

ಮೂಲಮ್

ಪತಿತೋಽಸ್ಮಿಜಗನ್ನಾಥ ಪ್ರಾಣಾಂಸ್ತ್ಯಕ್ಷ್ಯಾಮಿ ಪಶ್ಯ ಮಾಮ್ ॥

ಅನುವಾದ

‘‘ನನ್ನನ್ನು ಕೊಲ್ಲದಿರು; ನಿನಗೆ ಒಳ್ಳೆಯದಾಗಲಿ. ನಾನು ಜಟಾಯುವು. ನಿನ್ನ ಹೆಂಡತಿಯನ್ನು ಕದ್ದವನನ್ನು ಹಿಂಬಾಲಿಸಿದಾಗ ನನ್ನ ಕರ್ಮದಿಂದಲೇ ಈ ಸಾಯುವ ಸ್ಥಿತಿಗೆ ಬಂದಿರುವೆನು. ಎಲೈ ಶತ್ರುನಾಶಕನೇ! ಆ ರಾವಣನಿಗೂ ನನಗೂ ಯುದ್ಧವಾಯಿತು. ಅವನ ಕುದುರೆ ಗಳನ್ನೂ, ರಥವನ್ನೂ, ಧನುಸ್ಸನ್ನೂ ಕತ್ತರಿಸಿದ ನಾನು ಅವನ ಖಡ್ಗಕ್ಕೆ ಬಲಿಯಾಗಿ ನೆಲಕ್ಕೆ ಬಿದ್ದಿರುವೆನು. ಹೇ ಜಗನ್ನಾಥಾ! ನನ್ನ ಕಡೆಗೆ ನೋಡು. ನಾನೀಗಲೇ ಪ್ರಾಣಗಳನ್ನು ಬಿಡಲಿಚ್ಛಿಸುವೆನು.’’ ॥27-29॥

(ಶ್ಲೋಕ-30)

ಮೂಲಮ್

ತಚ್ಛ್ರುತ್ವಾ ರಾಘವೋ ದೀನಂ ಕಂಠಪ್ರಾಣಂ ದದರ್ಶ ಹ ।
ಹಸ್ತಾಭ್ಯಾಂ ಸಂಸ್ಪೃಶನ್ ರಾಮೋ ದುಃಖಾಶ್ರುವೃತಲೋಚನಃ ॥

(ಶ್ಲೋಕ-31)

ಮೂಲಮ್

ಜಟಾಯೋ ಬ್ರೂಹಿ ಮೇ ಭಾರ್ಯಾ ಕೇನ ನೀತಾ ಶುಭಾನನಾ ।
ಮತ್ಕಾರ್ಯಾರ್ಥಂ ಹತೋಸಿ ತ್ವಮತೋ ಮೇ ಪ್ರಿಯಬಾಂಧವಃ ॥

ಅನುವಾದ

ಇದನ್ನು ಕೇಳಿದ ಶ್ರೀರಘುನಾಥನು ಜಟಾಯುವಿನ ಬಳಿಗೆ ಬಂದು ಕಂಠಗತ ಪ್ರಾಣನಾದ ಅತಿ ದೀನ ಸ್ಥಿತಿಯಲ್ಲಿರುವುದನ್ನು ನೋಡಿದನು. ಆಗ ರಾಮನು ಕಣ್ಣೀರು ಸುರಿಸುತ್ತಾ ಎರಡೂ ಕೈಗಳಿಂದ ಜಟಾಯುವನ್ನು ಸವರುತ್ತಾ, ‘‘ಹೇ ಜಟಾಯುವೆ! ಶುಭಾನನೆಯಾದ ನನ್ನ ಪತ್ನಿಯನ್ನು ಯಾರು ಕೊಂಡುಹೋದರು, ಹೇಳು. ನೀನು ನನ್ನ ಕಾರ್ಯಕ್ಕಾಗಿ ಘಾಸಿಗೊಂಡೆ. ಆದ್ದರಿಂದ ನೀನು ನನಗೆ ಪ್ರೀತಿ ಪಾತ್ರನಾದ ಬಂಧುವಾಗಿರುವೆ.’’ ॥30-31॥

(ಶ್ಲೋಕ-32)

ಮೂಲಮ್

ಜಟಾಯುಃ ಸನ್ನಯಾ ವಾಚಾ ವಕ್ತ್ರಾದ್ರಕ್ತಂ ಸಮುದ್ವಮನ್ ।
ಉವಾಚ ರಾವಣೋ ರಾಮ ರಾಕ್ಷಸೋ ಭೀಮವಿಕ್ರಮಃ ॥

(ಶ್ಲೋಕ-33)

ಮೂಲಮ್

ಆದಾಯ ಮೈಥಿಲೀಂ ಸೀತಾಂ ದಕ್ಷಿಣಾಭಿಮುಖೋ ಯಯೌ ।
ಇತೋ ವಕ್ತುಂ ನ ಮೇ ಶಕ್ತಿಃ ಪ್ರಾಣಾಂಸ್ತ್ಯಕ್ಷ್ಯಾಮಿ ತೇಽಗ್ರತಃ ॥

ಅನುವಾದ

ಜಟಾಯುವು ಬಾಯಿಂದ ರಕ್ತವನ್ನು ಸುರಿಸುತ್ತಾ ತೊದಲುತ್ತಾ ಹೇಳುತ್ತಾನೆ ‘‘ಹೇ ರಾಮಚಂದ್ರಾ! ಮಹಾ ಪರಾಕ್ರಮಿ ರಾಕ್ಷಸರಾಜ ರಾವಣನು ಮಿಥಿಲೇಶನಂದಿನೀ ಸೀತೆಯನ್ನೆತ್ತಿಕೊಂಡು ದಕ್ಷಿಣಾಭಿಮುಖನಾಗಿ ಹೊರಟು ಹೋದನು. ಇನ್ನು ಮುಂದೆ ಮಾತನಾಡಲು ನನ್ನಲ್ಲಿ ಶಕ್ತಿ ಇಲ್ಲ. ನಾನೀಗಲೇ ನಿನ್ನೆದುರಿಗೆ ಪ್ರಾಣತ್ಯಾಗ ಮಾಡುವೆನು. ॥32-33॥

(ಶ್ಲೋಕ-34)

ಮೂಲಮ್

ದಿಷ್ಟ್ಯಾ ದೃಷ್ಟೋಽಸಿ ರಾಮ ತ್ವಂ ಮ್ರಿಯಮಾಣೇನ ಮೇಽನಘ ।
ಪರಮಾತ್ಮಾಸಿ ವಿಷ್ಣುಸ್ತ್ವಂ ಮಾಯಾಮನುಜರೂಪಧೃಕ್ ॥

ಅನುವಾದ

ಹೇ ರಾಮಾ! ಇಂದು ನನ್ನ ಪುಣ್ಯದಿಂದಲೇ ಸಾಯುತ್ತಿರುವಾಗ ನಿನ್ನ ದರ್ಶನವಾಗಿದೆ. ಹೇ ಪಾಪ ರಹಿತನೇ! ನೀನು ಮಾಯಾ ಮಾನವರೂಪನ್ನು ಧರಿಸಿದ ಸಾಕ್ಷಾತ್ ಪರಮಾತ್ಮನಾದ ವಿಷ್ಣುವಾಗಿರುವೆ. ॥34॥

(ಶ್ಲೋಕ-35)

ಮೂಲಮ್

ಅಂತಕಾಲೇಽಪಿ ದೃಷ್ಟ್ವಾ ತ್ವಾಂ ಮುಕ್ತೋಽಹಂ ರಘುಸತ್ತಮ ।
ಹಸ್ತಾಭ್ಯಾಂ ಸ್ಪೃಶ ಮಾಂ ರಾಮ ಪುನರ್ಯಾಸ್ಯಾಮಿ ತೇ ಪದಮ್ ॥

ಅನುವಾದ

ಹೇ ರಘ್ರುಶ್ರೇಷ್ಠ! ಅಂತ್ಯಕಾಲದಲ್ಲಿ ನಿನ್ನ ದರ್ಶನ ಮಾಡುವುದರಿಂದ ನಾನು ಮುಕ್ತನೇ ಆಗಿದ್ದೇನೆ. ಆದರೂ ನೀನು ನಿನ್ನ ಎರಡೂ ಕೈಗಳಿಂದ ನನ್ನನ್ನು ಸ್ಪರ್ಶಿಸು. ಮತ್ತೆ ನಾನು ನಿನ್ನ ಪರಮ ಪದವನ್ನು ಪಡೆಯುವೆನು’’ ಎಂದನು. ॥35॥

(ಶ್ಲೋಕ-36)

ಮೂಲಮ್

ತಥೇತಿ ರಾಮಃ ಪಸ್ಪರ್ಶ ತದಂಗಂ ಪಾಣಿನಾ ಸ್ಮಯನ್ ।
ತತಃ ಪ್ರಾಣಾನ್ಪರಿತ್ಯಜ್ಯ ಜಟಾಯುಃ ಪತಿತೋ ಭುವಿ ॥

ಅನುವಾದ

ಆಗ ಶ್ರೀರಾಮಚಂದ್ರನು ಮುಗುಳ್ಳಗುತ್ತಾ ‘ಹಾಗೇ ಆಗಲೀ’ ಎಂದು ಹೇಳುತ್ತಾ ಅವನ ಶರೀರವನ್ನು ಮುಟ್ಟಿದನು. ಅನಂತರ ಜಟಾಯು ಪ್ರಾಣಗಳನ್ನು ಬಿಟ್ಟು ಭೂಮಿಯ ಮೇಲೆ ಉರುಳಿದನು. ॥36॥

(ಶ್ಲೋಕ-37)

ಮೂಲಮ್

ರಾಮಸ್ತಮನುಶೋಚಿತ್ವಾ ಬಂಧುವತ್ಸಾಶ್ರುಲೋಚನಃ ।
ಲಕ್ಷ್ಮಣೇನ ಸಮಾನಾಯ್ಯ ಕಾಷ್ಠಾನಿ ಪ್ರದದಾಹ ತಮ್ ॥

(ಶ್ಲೋಕ-38)

ಮೂಲಮ್

ಸ್ನಾತ್ವಾದುಃಖೇನ ರಾಮೋಽಪಿ ಲಕ್ಷ್ಮಣೇನ ಸಮನ್ವಿತಃ ।
ಹತ್ವಾ ವನೇ ಮೃಗಂ ತತ್ರ ಮಾಂಸಖಂಡಾನ್ಸಮಂತಿತಃ ॥

(ಶ್ಲೋಕ-39)

ಮೂಲಮ್

ಶಾದ್ವಲೇ ಪ್ರಾಕ್ಷಿಪದ್ರಾಮಃ ಪೃಥಕ್ ಪೃಥಗನೇಕಧಾ ।
ಭಕ್ಷಂತು ಪಕ್ಷಿಣಃ ಸರ್ವೇ ತೃಪ್ತೋ ಭವತು ಪಕ್ಷಿರಾಟ್ ॥

ಅನುವಾದ

ರಾಮಚಂದ್ರನು ಕಣ್ಣುಗಳಲ್ಲಿ ನೀರು ತುಂಬಿ ತಮ್ಮ ಸಂಬಂಧಿಗಳಿಗೆ ಶೋಕಿಸುವಂತೆ ದುಃಖಿಸುತ್ತಾ ಲಕ್ಷ್ಮಣನಿಂದ ಸೌದೆಗಳನ್ನು ತರಿಸಿ ಜಟಾಯುವಿನ ದಹನ ಸಂಸ್ಕಾರ ಮಾಡಿದನು. (ಯದನ್ನಂ ಪುರುಷೋಶ್ನಾತಿ ತದನ್ನಾಸ್ತಸ್ಯ ದೇವಾತಾಃ) ಎಂಬ ವಚನದಂತೆ ಶ್ರೀರಾಮನು ಆ ಜಟಾಯುವಿನ ಶ್ರಾದ್ಧಕರ್ಮಾದಿಗಳನ್ನು ನೆರವೇರಿಸಿದನು. ಬಳಿಕ ಸ್ನಾನಾದಿಗಳನ್ನು ಗೈದು ಲಕ್ಷ್ಮಣನೊಂದಿಗೆ ದುಃಖಿಸಿದನು.॥37-39॥

(ಶ್ಲೋಕ-40)

ಮೂಲಮ್

ಇತ್ಯುಕ್ತ್ವಾ ರಾಘವಃ ಪ್ರಾಹ ಜಟಾಯೋ ಗಚ್ಛ ಮತ್ಪದಮ್ ।
ಮತ್ಸಾರೂಪ್ಯಂ ಭಜಸ್ವಾದ್ಯ ಸರ್ವಲೋಕಸ್ಯ ಪಶ್ಯತಃ ॥

(ಶ್ಲೋಕ-41)

ಮೂಲಮ್

ತತೋಽನಂತರಮೇವಾಸೌ ದಿವ್ಯರೂಪಧರಃ ಶುಭಃ ।
ವಿಮಾನವರಮಾರುಹ್ಯ ಭಾಸ್ವರಂ ಭಾನುಸನ್ನಿಭಮ್ ॥

ಅನುವಾದ

ಶ್ರೀರಘುನಾಥನು ಹೇಳಿದನು — ‘‘ಹೇ ಜಟಾಯುವೆ! ನೀನು ನನ್ನ ಪರಮಪದವನ್ನು ಪಡೆ. ಇಂದು ಎಲ್ಲರೂನೋಡು ನೋಡುತ್ತಿರುವಂತೆ ನನ್ನ ಸಾರೂಪ್ಯವನ್ನು ಪಡೆಯುವೆ.’’ ಅನಂತರ ಅವನು ಕೂಡಲೇ ದಿವ್ಯ ಸುಂದರರೂಪವನ್ನು ಧರಿಸಿ, ಸೂರ್ಯಸದೃಶ ಹೊಳೆಯುತ್ತಿರುವ ಶ್ರೇಷ್ಠವಾದ ವಿಮಾನವನ್ನಡರಿದನು. ॥40-41॥

(ಶ್ಲೋಕ-42)

ಮೂಲಮ್

ಶಂಕಚಕ್ರಗದಾಪದ್ಮ ಕಿರೀಟವರಭೂಷಣೈಃ ।
ದ್ಯೋತಯನ್ ಸ್ವಪ್ರಕಾಶೇನ ಪೀತಾಂಬರಧರೋಮಲಃ ॥

(ಶ್ಲೋಕ-43)

ಮೂಲಮ್

ಚತುರ್ಭಿಃ ಪಾರ್ಷದೈರ್ವಿಷ್ಣೋಸ್ತಾದೃಶೈರಭಿಪೂಜಿತಃ ।
ಸ್ತೂಯಮಾನೋ ಯೋಗಿಗಣೈ ರಾಮಮಾಭಾಷ್ಯ ಸತ್ವರಃ ।
ಕೃತಾಂಜಲಿಪುಟೋ ಭೂತ್ವಾ ತುಷ್ಟಾವ ರಘುನಂದನಮ್ ॥

ಅನುವಾದ

ಆಗ ಅವನು ಸುಂದರ ಪೀತಾಂಬರವನ್ನು ಧರಿಸಿ, ಶಂಖ ಚಕ್ರ ಗದಾ ಪದ್ಮ ಮತ್ತು ಕಿರೀಟ ಇತ್ಯಾದಿ ಶ್ರೇಷ್ಠ ಆಭರಣಗಳಿಂದೊಡಗೂಡಿ, ತನ್ನ ಕಾಂತಿಯಿಂದ ದಶ ದಿಕ್ಕುಗಳನ್ನು ಬೆಳಗಿಸುತ್ತಿದ್ದನು. ವಿಷ್ಣುವಿನಂತೆಯೇ ವೇಷಭೂಷಣಗಳುಳ್ಳ ನಾಲ್ಕು ಜನ ವಿಷ್ಣು ಪಾರ್ಷದರು ಅವನನ್ನು ಪೂಜಿಸುತ್ತಿದ್ದರು ಹಾಗೂ ಯೋಗಿಜನರು ಅವನನ್ನು ಸ್ತುತಿಸುತ್ತಿದ್ದರು. ಅನಂತರ ಅವನು ಕೈ ಜೋಡಿಸಿಕೊಂಡು ಶ್ರೀರಘುನಾಥನನ್ನು ಸಂಬೋಧಿಸಿ ಅವನನ್ನು ಸ್ತುತಿಸತೊಡಗಿದನು. ॥42-43॥

(ಶ್ಲೋಕ-44)

ಮೂಲಮ್ (ವಾಚನಮ್)

ಜಟಾಯುರುವಾಚ

ಮೂಲಮ್

ಅಗಣಿತಗುಣಮಪ್ರಮೇಯಮಾದ್ಯಂ
ಸಕಲಜಗತ್ಸ್ಥಿತಿ ಸಂಯಮಾದಿಹೇತುಮ್ ।
ಉಪರಮಪರಮಂ ಪರಾತ್ಮಭೂತಂ
ಸತತಮಹಂ ಪ್ರಣತೋಽಸ್ಮಿ ರಾಮಚಂದ್ರಮ್ ॥

ಅನುವಾದ

ಜಟಾಯು ಹೇಳಿದನು — ‘‘ಅನಂತಕಲ್ಯಾಣಗುಣಗಳುಳ್ಳವನೂ, ಪ್ರಮಾಣಗಳಿಗೆ ಅಗೋಚರನೂ, ಜಗತ್ತಿನ ಆದಿಕಾರಣನೂ, ಸ್ಥಿತಿ-ಲಯಗಳಿಗೆ ಕಾರಣನೂ, ಪರಮಶಾಂತ ಸ್ವರೂಪನೂ, ಪರಮಾತ್ಮನಾಗಿರುವ ಶ್ರೀರಾಮಚಂದ್ರನನ್ನು ನಾನು ನಿರಂತರ ನಮಸ್ಕರಿಸುತ್ತೇನೆ. ॥44॥

(ಶ್ಲೋಕ-45)

ಮೂಲಮ್

ನಿರವಧಿಸುಖಮಿಂದಿರಾಕಟಾಕ್ಷಂ
ಕ್ಷಪಿತಸುರೇಂದ್ರಚತುರ್ಮುಖಾದಿದುಃಖಮ್ ।
ನರವರಮನಿಶಂ ನತೋಽಸ್ಮಿ ರಾಮಂ
ವರದಮಹಂ ವರಚಾಪಬಾಣಹಸ್ತಮ್ ॥

ಅನುವಾದ

ನಿರತಿಶಯ ಸುಖರೂಪನೂ, ಲಕ್ಷ್ಮೀ ಕಟಾಕ್ಷಸಂಪನ್ನನೂ, ದೇವೇಂದ್ರ, ಬ್ರಹ್ಮಾದಿ ದೇವತೆಗಳ ದುಃಖವನ್ನು ನಾಶಗೊಳಿಸುವವನೂ, ಪುರುಷಶ್ರೇಷ್ಠನೂ, ಉತ್ತಮವಾದ ಧನುರ್ಬಾಣಗಳನ್ನು ಧರಿಸಿರುವವನೂ, ವರಪ್ರದನೂ ಆದ ಶ್ರೀರಾಮನನ್ನು ಯಾವಾಗಲೂ ನಮಸ್ಕರಿಸುವೆನು. ॥45॥

(ಶ್ಲೋಕ-46)

ಮೂಲಮ್

ತ್ರಿಭುವನಕಮನೀಯರೂಪಮೀಡ್ಯಂ
ರವಿಶತಭಾಸುರಮೀಹಿತಪ್ರದಾನಮ್ ।
ಶರಣದಮನಿಶಂ ಸುರಾಗಮೂಲೇ
ಕೃತನಿಲಯಂ ರಘುನಂದನಂ ಪ್ರಪದ್ಯೇ ॥

ಅನುವಾದ

ತ್ರೈಲೋಕ್ಯ ಮೋಹನ ರೂಪವುಳ್ಳವನಾದ, ಎಲ್ಲರಿಂದ ಸ್ತುತ್ಯನಾದ, ನೂರಾರು ಸೂರ್ಯರಿಗೆ ಸಮಾನವಾದ ಪ್ರಕಾಶವುಳ್ಳ, ಇಷ್ಟಾರ್ಥಗಳನ್ನು ಕೊಡುವವನಾದ, ಶರಣಾಗತರಿಗೆ ಗತಿಯಾದ, ಭಕ್ತಿಯುಳ್ಳವರ ಹೃದಯದಲ್ಲಿ ನೆಲೆಸಿರುವ ರಘುನಂದನನನ್ನು ನಾನು ಶರಣು ಹೊಕ್ಕಿರುವೆನು. ॥46॥

(ಶ್ಲೋಕ-47)

ಮೂಲಮ್

ಭವವಿಪಿನದವಾಗ್ನಿನಾಮಧೇಯಂ
ಭವಮುಖದೈವತದೈವತಂ ದಯಾಲುಮ್ ।
ದನುಜಪತಿಸಹಸ್ರಕೋಟಿನಾಶಂ
ರವಿತನಯಾಸದೃಶಂ ಹರಿಂ ಪ್ರಪದ್ಯೇ ॥

ಅನುವಾದ

ಸಂಸಾರವೆಂಬ ಕಾಡಿಗೆ ಕಾಡ್ಗಿಚ್ಚಿನ ರೂಪನಾದವನೂ, ಶಿವನೇ ಮೊದಲಾದ ದೇವತೆಗಳಿಗೆ ದೇವತೆ ಯಾದ, ದಯಾಳುವಾದ, ಸಾವಿರಾರು ಕೋಟಿ ರಾಕ್ಷಸ ರೊಡೆಯರನ್ನು ನಾಶಗೊಳಿಸುವವನಾದ, ಸೂರ್ಯಪುತ್ರಿ ಯಾದ ಯಮುನೆಯಂತೆ ನೀಲವರ್ಣನಾದ ಶ್ರೀಹರಿಯನ್ನು ಶರಣು ಹೊಕ್ಕಿರುವೆನು. ॥47॥

(ಶ್ಲೋಕ-48)

ಮೂಲಮ್

ಅವಿರತಭವಭಾವನಾತಿದೂರಂ
ಭವವಿಮುಖೈರ್ಮುನಿಭಿಃ ಸದೈವ ದೃಶ್ಯಮ್ ।
ಭವಜಲಧಿಸುತಾರಣಾಂಘ್ರಿಪೋತಂ
ಶರಣಮಹಂ ರಘುನಂದನಂ ಪ್ರಪದ್ಯೇ ॥

ಅನುವಾದ

ಸದಾಕಾಲವೂ ಪ್ರಾಪಂಚಿಕ ಚಿಂತೆಯಲ್ಲಿ ಮುಳುಗಿರುವವರಿಗೆ ಅತಿದೂರನಾದ, ಸಂಸಾರದಿಂದ ವಿರಕ್ತರಾದ ಮುನಿಗಳಿಗೆ ಸದಾ ಕಣ್ಮುಂದೆ ಇರುವ, ಸಂಸಾರ ಸಮುದ್ರವನ್ನು ದಾಟಲು ಉತ್ತಮವಾದ ತೆಪ್ಪದಂತಿರುವ ಪಾದಗಳುಳ್ಳ, ದೇವತೆಗಳಿಗೂ ವರಪ್ರದನಾದ ರಘುನಾಯಕನನ್ನು ಶರಣು ಹೊಂದುವೆನು. ॥48॥

(ಶ್ಲೋಕ-49)

ಮೂಲಮ್

ಗಿರಿಶಗಿರಿಸುತಾಮನೋನಿವಾಸಂ
ಗಿರಿವರಧಾರಿಣಮೀಹಿತಾಭಿರಾಮಮ್ ।
ಸುರವರದನುಜೇಂದ್ರಸೇವಿತಾಂಘ್ರಿಂ
ಸುರವರದಂ ರಘುನಾಯಕಂ ಪ್ರಪದ್ಯೇ ॥

ಅನುವಾದ

ಶ್ರೀಶಿವಪಾರ್ವತಿಯರ ಮನಮಂದಿರದಲ್ಲಿ ವಾಸಿಸುವ, ಮಂದರಾಚಲವನ್ನು ಹಿಡಿದೆತ್ತಿ ಧರಿಸಿರುವ, ಇಷ್ಟಾರ್ಥಗಳನ್ನು ಕೊಡುವ ದೇವಶ್ರೇಷ್ಠರಾದ ಇಂದ್ರಾದಿಗಳ ಹಾಗೂ ರಾಕ್ಷಸ ಶ್ರೇಷ್ಠರಾದ ಪ್ರಹ್ಲಾದಾದಿಗಳಿಂದ ಪೂಜಿತ ಪಾದಗಳುಳ್ಳ, ದೇವತೆಗಳಿಗೆ ವರಪ್ರದನಾದ ರಘುನಾಯಕನನ್ನು ಶರಣು ಹೊಂದುವೆನು. ॥49॥

(ಶ್ಲೋಕ-50)

ಮೂಲಮ್

ಪರಧನಪರದಾರವರ್ಜಿತಾನಾಂ
ಪರಗುಣಭೂತಿಷು ತುಷ್ಟಮಾನಸಾನಾಮ್ ।
ಪರಹಿತನಿರತಾತ್ಮನಾಂ ಸುಸೇವ್ಯಂ
ರಘುವರಮಂಬುಜಲೋಚನಂ ಪ್ರಪದ್ಯೇ ॥

ಅನುವಾದ

ಪರಧನ, ಪರಸ್ತ್ರೀ ಇವುಗಳಿಂದ ಸದಾಕಾಲ ದೂರವುಳಿದವರಿಂದ, ಬೇರೆಯವರ ಗುಣಗಳನ್ನು ಮತ್ತು ವಿಭೂತಿ(ಐಶ್ವರ್ಯ) ಯನ್ನು ಕಂಡು ಮನಸ್ಸಿನಲ್ಲಿ ಆನಂದಿಸುವ, ನಿರಂತರ ಪರೋಪಕಾರ ಪರಾಯಣರಾದ ಮಹಾತ್ಮರಿಂದ ಸೇವಿತನಾದ ಕಮಲನಯನ ರಘುವರನನ್ನು ಶರಣು ಹೊಕ್ಕಿರುವೆ. ॥50॥

(ಶ್ಲೋಕ-51)

ಮೂಲಮ್

ಸ್ಮಿತರುಚಿರವಿಕಾಸಿತಾನನಾಬ್ಜ -
ಮತಿಸುಲಭಂ ಸುರರಾಜನೀಲನೀಲಮ್ ।
ಸಿತಜಲರುಹಚಾರುನೇತ್ರಶೋಭಂ
ರಘುಪತಿಮೀಶಗುರೋರ್ಗುರುಂ ಪ್ರಪದ್ಯೇ ॥

ಅನುವಾದ

ಮುಗುಳುನಗೆಯಿಂದ ಅರಳಿದ ಮುಖಕಮಲವುಳ್ಳ, ಭಕ್ತರಿಗೆ ಅತಿಸುಲಭನಾದ, ಇಂದ್ರನೀಲ ಮಣಿಯಂತೆ ಸುಂದರ ನೀಲವರ್ಣನಾಗಿರುವ, ಬಿಳುಪಾದ ತಾವರೆಯಂತೆ ಸುಂದರವಾದ ಕಣ್ಣುಗಳ ಕಾಂತಿಯುಳ್ಳ, ಮಹಾದೇವನಿಗೂ ಗುರುವಾದ ಶ್ರೀರಘುನಾಥನನ್ನು ಶರಣು ಹೊಕ್ಕಿರುವೆ. ॥51॥

(ಶ್ಲೋಕ-52)

ಮೂಲಮ್

ಹರಿಕಮಲಜಶಂಭುರೂಪಭೇದಾತ್
ತ್ವಮಿಹ ವಿಭಾಸಿ ಗುಣತ್ರಯಾನುವೃತ್ತಃ ।
ರವಿರಿವ ಜಲಪೂರಿತೋದಪಾತ್ರೇ-
ಷ್ವಮರಪತಿಸ್ತುತಿಪಾತ್ರಮೀಶಮೀಡೇ ॥

ಅನುವಾದ

ಹೇ ರಾಮಾ! ನೀನು ತ್ರಿಗುಣಗಳನ್ನು ಸ್ವೀಕರಿಸಿ ವಿಷ್ಣು-ಬ್ರಹ್ಮ-ಶಿವ ಮುಂತಾದ ರೂಪಭೇದದಿಂದ ಕಂಡುಬರುತ್ತಿರುವೆ, ನೀರು ತುಂಬಿದ ಬೇರೆ-ಬೇರೆ ಪಾತ್ರೆಗಳಲ್ಲಿ ಒಬ್ಬನೇ ಸೂರ್ಯನು ಅನೇಕವಾಗಿ ಕಂಡು ಬರುವಂತೆ ನಾನಾರೂಪನಾಗಿರುವೆ, ಅಮರಾಧಿಪ ಇಂದ್ರನು ಸ್ತುತಿಸುವ, ಪರಮೇಶ್ವರನಾದ ನಿನ್ನನ್ನು ನಾನು ಸ್ತುತಿಸುತ್ತೇನೆ. ॥52॥

(ಶ್ಲೋಕ-53)

ಮೂಲಮ್

ರತಿಪತಿಶತಕೋಟಿಸುಂದರಾಂಗಂ
ಶತಪಥಗೋಚರಭಾವನಾವಿದೂರಮ್ ।
ಯತಿಪತಿಹೃದಯೇ ಸದಾ ವಿಭಾತಂ
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ ॥

ಅನುವಾದ

ಶತಕೋಟಿ ಮನ್ಮಥರನ್ನು ಮೀರಿದಂತಹ ಸುಂದರಪುರುಷನಾದ, ನೂರಾರು ಮಾರ್ಗಗಳಲ್ಲಿ ನಡೆಯುವ ಚಂಚಲ ಸ್ವಭಾವದವರಿಗೆ ಅತ್ಯಂತ ದೂರನಾಗಿರುವ, ಯತಿಶ್ರೇಷ್ಠರ ಹೃದಯದಲ್ಲಿ ಯಾವಾಗಲೂ ವಿರಾಜಿಸುತ್ತಿರುವ, ಪ್ರಪನ್ನರನ್ನು ಕಾಪಾಡುವ ಪ್ರಭುವನ್ನು ಶರಣು ಹೊಕ್ಕಿರುವೆನು.’’ ॥53॥

(ಶ್ಲೋಕ-54)

ಮೂಲಮ್

ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಽಭೂದ್ರಘೂತ್ತಮಃ ।
ಉವಾಚ ಗಚ್ಛ ಭದ್ರಂ ತೇ ಮಮ ವಿಷ್ಣೋಃ ಪರಂ ಪದಮ್ ॥

ಅನುವಾದ

ಹೀಗೆಂದು ಸ್ತುತಿಸುತ್ತಿರುವ ಜಟಾಯುವಿಗೆ ಶ್ರೀರಾಮನು ಪ್ರಸನ್ನನಾಗಿ ‘‘ನಿನಗೆ ಶ್ರೇಯಸ್ಸಾಗಲಿ. ನೀನು ನನ್ನ ಪರಮ ಧಾಮ ವಿಷ್ಣುಲೋಕವನ್ನು ಹೊಂದುವವನಾಗು.’’ ಎಂದು ಹರಸಿದನು. ॥54॥

(ಶ್ಲೋಕ-55)

ಮೂಲಮ್

ಶೃಣೋತಿ ಯ ಇದಂ ಸ್ತೋತ್ರಂ ಲಿಖೇದ್ವಾ ನಿಯತಃ ಪಠೇತ್ ।
ಸ ಯಾತಿ ಮಮ ಸಾರೂಪ್ಯಂ ಮರಣೇ ಮತ್ಸೃತಿಂ ಲಭೇತ್ ॥

ಅನುವಾದ

ಈ ಸ್ತೋತ್ರವನ್ನು ಕೇಳುವ, ಬರೆಯುವ, ನಿಯಮಿತವಾಗಿ ಪಾರಾಯಣೆ ಮಾಡುವ ಪುರುಷರು ನನ್ನ ಸಾರೂಪ್ಯವನ್ನು ಹೊಂದುವರು ಹಾಗೂ ಮರಣ ಕಾಲದಲ್ಲಿ ನನ್ನ ಸ್ಮರಣೆ ಉಂಟಾದೀತು. ॥55॥

(ಶ್ಲೋಕ-56)

ಮೂಲಮ್

ಇತಿ ರಾಘವಭಾಷಿತಂ ತದಾ
ಶ್ರುತವಾನ್ ಹರ್ಷಸಮಾಕುಲೋ ದ್ವಿಜಃ ।
ರಘುನಂದನಸಾಮ್ಯಮಾಸ್ಥಿತಃ
ಪ್ರಯಯೌ ಬ್ರಹ್ಮಸುಪೂಜಿತಂ ಪದಮ್ ॥

ಅನುವಾದ

ಪಕ್ಷಿರಾಜ ಜಟಾಯುವು ಸಂತೋಷ ಭರಿತನಾಗಿ ಶ್ರೀರಘುನಾಥನ ಈ ಮಾತನ್ನು ಕೇಳಿ, ಅವನಂತೇ (ಚತುರ್ಭುಜ) ರೂಪವನ್ನು ಪಡೆದು, ಬ್ರಹ್ಮನಿಂದ ವಿಶೇಷವಾಗಿ ಪೂಜಿತವಾದ ಪರಮಧಾಮವನ್ನು ಸೇರಿಕೊಂಡನು. ॥56॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಅಷ್ಟಮಃ ಸರ್ಗಃ ॥8॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.