[ಏಳನೆಯ ಸರ್ಗ]
ಭಾಗಸೂಚನಾ
ಮಾರೀಚ ವಧೆ ಹಾಗೂ ಸೀತಾಪಹಾರ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಅಥ ರಾಮೋಽಪಿ ತತ್ಸರ್ವಂ ಜ್ಞಾತ್ವಾ ರಾವಣಚೇಷ್ಟಿತಮ್ ।
ಉವಾಚ ಸೀತಾ ಮೇಕಾಂತೇ ಶೃಣು ಜಾನಕಿ ಮೇ ವಚಃ ॥
(ಶ್ಲೋಕ-2)
ಮೂಲಮ್
ರಾವಣೋ ಭಿಕ್ಷುರೂಪೇಣ ಆಗಮಿಷ್ಯತಿ ತೇಽಂತಿಕಮ್ ।
ತ್ವಂ ತು ಛಾಯಾಂ ತ್ವದಾಕಾರಾಂ ಸ್ಥಾಪಯಿತ್ವೋಟಜೇ ವಿಶ ॥
(ಶ್ಲೋಕ-3)
ಮೂಲಮ್
ಅಗ್ನಾವದೃಶ್ಯರೂಪೇಣ ವರ್ಷಂ ತಿಷ್ಠ ಮಮಾಜ್ಞಯಾ ।
ರಾವಣಸ್ಯ ವಧಾಂತೇ ಮಾಂ ಪೂರ್ವವತ್ಪ್ರಾಪ್ಸ್ಯಸೇ ಶುಭೇ ॥
ಅನುವಾದ
ಶ್ರೀಮಹಾದೇವನು ಹೇಳುತ್ತಾನೆ — ಹೇ ಗೌರಿ! ಅನಂತರ ಶ್ರೀರಾಮನೂ ರಾವಣನ ಎಲ್ಲ ಷಡ್ಯಂತ್ರವನ್ನು ಬಲ್ಲವನಾಗಿ, ರಹಸ್ಯದಲ್ಲಿ ಸೀತೆಯನ್ನು ಕಂಡು ಹೇಳುತ್ತಾನೆ ‘‘ಎಲೈ ಜಾನಕಿ! ನನ್ನ ಮಾತನ್ನು ಕೇಳು. ರಾವಣನು ಇಷ್ಟರಲ್ಲೇ ಸಂನ್ಯಾಸಿಯ ವೇಷದಿಂದ ನಿನ್ನ ಬಳಿಗೆ ಬರಲಿದ್ದಾನೆ. ನೀನಾದರೋ ನಿನ್ನಂತೆಯೇ ಇರುವ ನೆರಳಿನ ರೂಪಳಾದ ಛಾಯಾಸೀತೆಯನ್ನು ಇಲ್ಲಿ ಕುಟೀರದಲ್ಲಿ ಇರಿಸಿ ಅಗ್ನಿ ದೇವನಲ್ಲಿ ಅದೃಶ್ಯರೂಪದಿಂದ ಒಂದು ವರ್ಷಕಾಲ ನನ್ನ ಅಪ್ಪಣೆಯಂತೆ ಅಡಗಿಕೊಂಡಿರು. ಹೇ ಶುಭಾಂಗಿಯೆ! ರಾವಣನ ವಧೆಯಾದ ಮೇಲೆ ಹಿಂದಿನಂತೆಯೇ ಮತ್ತೆ ನನ್ನನ್ನು ಸೇರುವೆಯಂತೆ. ॥1-3॥
(ಶ್ಲೋಕ-4)
ಮೂಲಮ್
ಶ್ರುತ್ವಾ ರಾಮೋದಿತಂ ವಾಕ್ಯಂ ಸಾಪಿ ತತ್ರ ತಥಾಕರೋತ್ ।
ಮಾಯಾಸೀತಾಂ ಬಹಿಃ ಸ್ಥಾಪ್ಯ ಸ್ವಯಮಂತರ್ದಧೇಽನಲೇ ॥
ಅನುವಾದ
ಶ್ರೀರಾಮಚಂದ್ರನ ವಚನವನ್ನು ಕೇಳಿ ಸೀತೆಯು ಹಾಗೆಯೇ ಮಾಡಿದಳು. ಅವಳು ಮಾಯಾ ಸೀತೆಯನ್ನು ಹೊರಗೆ ಕುಟೀರದಲ್ಲಿ ಇರಿಸಿ ತಾನು ಅಗ್ನಿಯಲ್ಲಿ ಅಂತರ್ಧಾನವಾದಳು. ॥4॥
(ಶ್ಲೋಕ-5)
ಮೂಲಮ್
ಮಾಯಾಸೀತಾ ತದಾಪಶ್ಯನ್ ಮೃಗಂ ಮಾಯಾವಿನಿರ್ಮಿತಮ್ ।
ಹಸಂತಿ ರಾಮಮಭ್ಯೇತ್ಯ ಪ್ರೊವಾಚ ವಿನಯಾನ್ವಿತಾ ॥
(ಶ್ಲೋಕ-6)
ಮೂಲಮ್
ಪಶ್ಯ ರಾಮ ಮೃಗಂ ಚಿತ್ರಂ ಕಾನಕಂ ರತ್ನಭೂಷಿತಮ್ ।
ವಿಚಿತ್ರಬಿಂದುಭಿರ್ಯುಕ್ತಂ ಚರಂತಮಕುತೋಭಯಮ್ ।
ಬದ್ ಧ್ವಾ ದೇಹಿ ಮಮ ಕ್ರೀಡಾಮೃಗೋ ಭವತು ಸುಂದರಃ ॥
ಅನುವಾದ
ಆಗ ಆ ಮಾಯಾಸೀತೆಯು ಮಾಯೆಯಿಂದ ನಿರ್ಮಿತವಾದ ಮೃಗವನ್ನು ನೋಡಿದಳು. ನಗುತ್ತಾ ರಾಮಚಂದ್ರನ ಬಳಿಗೆ ಬಂದು ವಿನಯದಿಂದ ಕೂಡಿದವಳಾಗಿ ‘‘ಹೇ ರಾಮಾ! ಸುವರ್ಣಮಯವಾದ, ರತ್ನಾಲಂಕಾರಗಳಿಂದ ಕೂಡಿದ ಈ ವಿಚಿತ್ರ ಜಿಂಕೆಯನ್ನು ನೋಡಿದೆಯಾ! ಆಹಾ! ಇದು ವಿಚಿತ್ರ ಮಚ್ಚೆಗಳಿಂದ ಕೂಡಿದ್ದು ನಿರ್ಭಯವಾಗಿ ಹೇಗೆ ಓಡುತ್ತಿದೆ ನೋಡು. ನೀನು ಇದನ್ನು ಹಿಡಿದು ನನಗೆ ಕೊಡು. ಸುಂದರವಾದ ಇದನ್ನು ಆಟದ ಜಿಂಕೆಯಾಗಿ ನಾನು ಉಪಯೋಗಿಸಿಕೊಳ್ಳುವೆನು.’’ ॥5-6॥
(ಶ್ಲೋಕ-7)
ಮೂಲಮ್
ತಥೇತಿ ಧನುರಾದಾಯ ಗಚ್ಛನ್ ಲಕ್ಷ್ಮಣಮಬ್ರವೀತ್ ।
ರಕ್ಷ ತ್ವಮತಿಯತ್ನೇನ ಸೀತಾಂ ಮತ್ಪ್ರಾಣವಲ್ಲಭಾಮ್ ॥
(ಶ್ಲೋಕ-8)
ಮೂಲಮ್
ಮಾಯಿನಃ ಸಂತಿ ವಿಪಿನೇ ರಾಕ್ಷಸಾ ಘೋರದರ್ಶನಾಃ ।
ಅತೋಽತ್ರಾವಹಿತಃ ಸಾಧ್ವೀಂ ರಕ್ಷ ಸೀತಾಮನಿಂದಿತಾಮ್ ॥
ಅನುವಾದ
ಹಾಗೇ ಆಗಲಿ ಎಂದು ಹೇಳಿ ಬಿಲ್ಲನ್ನೆತ್ತಿಕೊಂಡು ಹೊರಟ ರಾಮನು ಲಕ್ಷ್ಮಣನಲ್ಲಿ ‘‘ತಮ್ಮ ಲಕ್ಷ್ಮಣಾ! ನೀನು ಬಹಳ ಎಚ್ಚರಿಕೆ ಯಿಂದ ನನ್ನ ಪ್ರಾಣ-ಪ್ರಿಯಳಾದ ಸೀತೆಯನ್ನು ಕಾಪಾಡಿಕೊಂಡಿರು. ಈ ಕಾಡಿನಲ್ಲಿ ಭಯಂಕರರೂಪವುಳ್ಳ ಮಾಯಾನಿಪುಣರಾದ ರಾಕ್ಷಸರಿದ್ದಾರೆ. ಆದ್ದರಿಂದ ನೀನು ಬಹಳ ಜಾಗರೂಕನಾಗಿ ಪವಿತ್ರಳಾದ ಈ ಪತಿವ್ರತೆಯನ್ನು ಕಾಪಾಡು’’ ಎಂದು ಹೇಳಿದನು. ॥7-8॥
(ಶ್ಲೋಕ-9)
ಮೂಲಮ್
ಲಕ್ಷ್ಮಣೋ ರಾಮಮಾಹೇದಂ ದೇವಾಯಂ ಮೃಗರೂಪಧೃಕ್ ।
ಮಾರೀಚೋತ್ರ ನ ಸಂದೇಹ ಏವಂಭೂತೋ ಮೃಗಃ ಕುತಃ ॥
ಅನುವಾದ
ಆಗ ಲಕ್ಷ್ಮಣನು ‘‘ಅಣ್ಣ ದೇವಾ! ಇವನು ಜಿಂಕೆಯ ವೇಷಧಾರಿಯಾದ ಮಾಯಾವಿ ಮಾರೀಚನು. ಇಂತಹ ಮೃಗವಾದರೂ ಇರುವುದು ಹೇಗೆ ಸಾಧ್ಯ? ಈ ವಿಷಯದಲ್ಲಿ ಸಂದೇಹವೇ ಬೇಡ’’ ಎಂದು ಹೇಳಿದನು. ॥9॥
(ಶ್ಲೋಕ-10)
ಮೂಲಮ್ (ವಾಚನಮ್)
ಶ್ರೀರಾಮ ಉವಾಚ
ಮೂಲಮ್
ಯದಿ ಮಾರೀಚ ಏವಾಯಂ ತದಾ ಹನ್ಮಿ ನ ಸಂಶಯಃ ।
ಮೃಗಶ್ಚೇದಾನಯಿಷ್ಯಾಮಿ ಸೀತಾವಿಶ್ರಮಹೇತವೇ ॥
ಅನುವಾದ
ಶ್ರೀರಾಮಚಂದ್ರನು ಹೇಳುತ್ತಾನೆ — ಒಂದು ವೇಳೆ ಇವನು ಮಾರೀಚನಾಗಿದ್ದರೆ ಇವನನ್ನು ಕೊಂದುಬಿಡುತ್ತೇನೆ. ಇದರಲ್ಲಿ ಸಂಶಯವಿಲ್ಲ. ಮೃಗವಾಗಿದ್ದಲ್ಲಿ ಸೀತೆಯ ಮನಃಪ್ರೀತಿಗಾಗಿ ಹಿಡಿದು ತರುತ್ತೇನೆ. ॥10॥
(ಶ್ಲೋಕ-11)
ಮೂಲಮ್
ಗಮಿಷ್ಯಾಮಿ ಮೃಗಂ ಬದ್ಧ್ವಾ ಹ್ಯಾನಯಿಷ್ಯಾಮಿ ಸತ್ವರಃ ।
ತ್ವಂ ಪ್ರಯತ್ನೇನ ಸಂತಿಷ್ಠ ಸೀತಾಸಂರಕ್ಷಣೋದ್ಯತಃ ॥
ಅನುವಾದ
ಈಗ ನಾನು ಈ ಮೃಗವನ್ನು ಕಟ್ಟಿ ತರಲು ಬೇಗನೇ ಹೊರಡುತ್ತೇನೆ. ಅಲ್ಲಿಯವರೆಗೆ ನೀನು ಸೀತೆಯನ್ನು ಕಾಪಾಡಿಕೊಂಡು ಎಚ್ಚರವಾಗಿರು.’’ ॥11॥
(ಶ್ಲೋಕ-12)
ಮೂಲಮ್
ಇತ್ಯುಕ್ತ್ವಾ ಪ್ರಯಯೌ ರಾಮೋ ಮಾಯಾಮೃಗಮನುದ್ರುತಃ ।
ಮಾಯಾ ಯದಾಶ್ರಯಾ ಲೋಕಮೋಹಿನೀ ಜಗದಾಕೃತಿಃ ॥
ಅನುವಾದ
ಈ ವಿಶ್ವಪ್ರಪಂಚರೂಪಿಣಿ ಜಗನ್ಮೋಹಿನೀ ಮಾಯೆಯು ಯಾರ ಆಶ್ರಿತವಾಗಿದೆಯೋ ಆ ಶ್ರೀರಾಮಚಂದ್ರನು ಹೀಗೆ ಹೇಳಿ ಆ ಮೃಗವನ್ನು ಹಿಂಬಾಲಿಸಿಕೊಂಡು ಹೋದನು. ॥12॥
(ಶ್ಲೋಕ-13)
ಮೂಲಮ್
ನಿರ್ವಿಕಾರಶ್ಚಿದಾತ್ಮಾಪಿ ಪೂರ್ಣೋಽಪಿ ಮೃಗಮನ್ವಗಾತ್ ।
ಭಕ್ತಾನುಕಂಪೀ ಭಗವಾನಿತಿ ಸತ್ಯಂ ವಚೋ ಹರಿಃ ॥
ಅನುವಾದ
ಅವನು ನಿರ್ವಿಕಾರ ಚಿದಾತ್ಮಾ ಹಾಗೂ ಸರ್ವವ್ಯಾಪಕನಾಗಿದ್ದರೂ ಕೂಡ ಆ ಮೃಗದ ಹಿಂದೆ ಓಡಿದುದರಿಂದ ‘ಭಗವಾನ್ ಶ್ರೀಹರಿಯು ತುಂಬಾ ಭಕ್ತವತ್ಸಲನಾಗಿದ್ದಾನೆ’ ಎಂಬ ಮಾತು ಸರ್ವಥಾ ಸತ್ಯವಾಗಿದೆ. ॥13॥
(ಶ್ಲೋಕ-14)
ಮೂಲಮ್
ಕರ್ತುಂ ಸೀತಾಪ್ರಿಯಾರ್ಥಾಯ ಜಾನನ್ನಪಿ ಮೃಗಂ ಯಯೌ ।
ಅನ್ಯಥಾ ಪೂರ್ಣಕಾಮಸ್ಯ ರಾಮಸ್ಯ ವಿದಿತಾತ್ಮನಃ ॥
(ಶ್ಲೋಕ-15)
ಮೂಲಮ್
ಮೃಗೇಣ ವಾ ಸ್ತ್ರಿಯಾ ವಾಪಿ ಕಿಂ ಕಾರ್ಯಂ ಪರಮಾತ್ಮನಃ ।
ಕದಾಚಿದ್ ದೃಶ್ಯತೇಽಭ್ಯಾಶೇ ಕ್ಷಣಂ ಧಾವತಿ ಲೀಯತೇ ॥
ಅನುವಾದ
ಭಗವಂತನು ಈ ಮೃಗವು ರಾಕ್ಷಸನೇ ಎಂದು ಬಲ್ಲವನಾಗಿದ್ದರೂ, ಸೀತೆಗೆ ಸಂತೋಷವನ್ನುಂಟು ಮಾಡಲು ಅದನ್ನು ಅನುಸರಿಸಿ ಹೋದನು. ಹಾಗಿಲ್ಲವಾದರೆ ಪೂರ್ಣಕಾಮನೂ, ಆತ್ಮಜ್ಞನೂ ಆದ ಶ್ರೀರಾಮನಿಗೆ ಹೆಂಡತಿಯಿಂದಾಗಲೀ, ಜಿಂಕೆಯಿಂದಾಗಲೀ ಏನು ಆಗಬೇಕಾಗಿದೆ? ಆ ಮೃಗವು ಕೆಲವು ಸಲ ಹತ್ತಿರದಲ್ಲಿಯೇ ಕಾಣಿಸಿಕೊಳ್ಳುವುದು, ತಕ್ಷಣವೇ ದೂರ ಓಡಿ ಅಡಗಿಕೊಳ್ಳುವುದು. ॥ 14-15॥
(ಶ್ಲೋಕ-16)
ಮೂಲಮ್
ದೃಶ್ಯತೇ ಚ ತತೋ ದೂರಾದೇವಂ ರಾಮಮಪಾಹರತ್ ।
ತತೋ ರಾಮೋಽಪಿ ವಿಜ್ಞಾಯ ರಾಕ್ಷಸೋಽಯಮಿತಿ ಸ್ಫುಟಮ್ ॥
(ಶ್ಲೋಕ-17)
ಮೂಲಮ್
ವಿವ್ಯಾಧ ಶರಮಾದಾಯ ರಾಕ್ಷಸಂ ಮೃಗರೂಪಿಣಮ್ ।
ಪಪಾತ ರುಧಿರಾಕ್ತಾಸ್ಯೋ ಮಾರೀಚಃ ಪೂರ್ವರೂಪಧೃಕ್ ॥
(ಶ್ಲೋಕ-18)
ಮೂಲಮ್
ಹಾ ಹತೋಽಸ್ಮಿ ಮಹಾಬಾಹೋ ತ್ರಾಹಿ ಲಕ್ಷ್ಮಣ ಮಾಂ ದ್ರುತಮ್ ।
ಇತ್ಯುಕ್ತ್ವಾ ರಾಮವದ್ವಾಚಾ ಪಪಾತ ರುಧಿರಾಶನಃ ॥
ಅನುವಾದ
ಪುನಃ ದೂರದಲ್ಲಿ ಕಾಣಿಸಿಕೊಳ್ಳುವುದು. ಈ ಪ್ರಕಾರ ಅದು ಶ್ರೀರಾಮಚಂದ್ರನನ್ನು ತುಂಬಾ ದೂರ ಸೆಳೆದೊಯ್ದಿತು. ಅನಂತರ ಶ್ರೀರಾಮನು ‘ಇವನು ರಾಕ್ಷಸನೇ’ ಎಂದು ಚೆನ್ನಾಗಿ ನಿಶ್ಚಯಿಸಿಕೊಂಡು ಒಂದು ಬಾಣವನ್ನು ಮೃಗರೂಪನಾಗಿದ್ದ ರಾಕ್ಷಸನ ಮೇಲೆ ಪ್ರಯೋಗಿಸಿದನು. ಮಾರೀಚನು ಕೂಡಲೇ ತನ್ನ ನಿಜರೂಪವನ್ನು ಹೊಂದಿ ಬಾಯಿಂದ ರಕ್ತವನ್ನು ಕಾರುತ್ತಾ ‘ಅಯ್ಯೋ ಮಹಾಬಾಹುವಾದ ಲಕ್ಷ್ಮಣಾ, ನಾನು ಸತ್ತೆ, ಬೇಗ ಕಾಪಾಡು’ ಎಂದು ರಾಮನ ದನಿಯಂತೆಯೇ ಕೂಗಿಕೊಂಡು ಆ ರಾಕ್ಷಸನು ನೆಲಕ್ಕೆ ಉರುಳಿದನು. ॥16-18॥
(ಶ್ಲೋಕ-19)
ಮೂಲಮ್
ಯನ್ನಾಮಾಜ್ಞೋಽಪಿ ಮರಣೇ ಸ್ಮೃತ್ವಾತ್ ಸಾಮ್ಯಮಾಪ್ನುಯಾತ್ ।
ಕಿಮುತಾಗ್ರೇ ಹರಿಂ ಪಶ್ಯಂಸ್ತೇನೈವ ನಿಹತೋಽಸುರಃ ॥
ಅನುವಾದ
ಮರಣ ಸಮಯದಲ್ಲಿ ಯಾವಾತನ ನಾಮವನ್ನು ಸ್ಮರಣೆ ಮಾಡುವುದರಿಂದ ಅಜ್ಞಾನಿಯೂ ಕೂಡ ಆ ರಾಮನಲ್ಲಿ ಲೀನನಾಗುತ್ತಾನೋ ಅಂತಹ ಶ್ರೀಹರಿಯನ್ನೇ ಎದುರಿಗೆ ನೋಡು-ನೋಡುತ್ತಾ ಅವನ ಕೈಯಿಂದ ಸತ್ತ ರಾಕ್ಷಸನ ಬಗ್ಗೆ ಹೇಳುವುದೇನಿದೆ? ॥19॥
(ಶ್ಲೋಕ-20)
ಮೂಲಮ್
ತದ್ದೇಹಾದುತ್ಥಿತಂ ತೇಜಃ ಸರ್ವಲೋಕಸ್ಯ ಪಶ್ಯತಃ ।
ರಾಮಮೇವಾವಿಶದ್ದೇವಾ ವಿಸ್ಮಯಂ ಪರಮಂ ಯಯುಃ ॥
ಅನುವಾದ
ಅವನ ಶರೀರದಿಂದ ಹೊರಟ ತೇಜವೊಂದು ಎಲ್ಲರೂ ನೋಡುತ್ತಿರುವಂತೆ ಶ್ರೀರಾಮನಲ್ಲಿ ಸೇರಿ ಲೀನವಾಯಿತು. ಇದನ್ನು ಕಂಡ ದೇವತೆಗಳು ಆಶ್ಚರ್ಯಗೊಂಡರು. ॥20॥
ಮೂಲಮ್
(ಶ್ಲೋಕ-21)
ಕಿಂ ಕರ್ಮ ಕೃತ್ವಾ ಕಿಂ ಪ್ರಾಪ್ತಃ ಪಾತಕೀ ಮುನಿಹಿಂಸಕಃ ।
ಅಥವಾ ರಾಘವಸ್ಯಾಯಂ ಮಹಿಮಾ ನಾತ್ರ ಸಂಶಯಃ ॥
ಅನುವಾದ
ಅವರು ಆಡಿಕೊಳ್ಳುತ್ತಾರೆ ಪಾಪಿಯೂ ಋಷಿಗಳಿಗೆ ಪೀಡಾಕಾರಕನೂ ಆಗಿದ್ದ ಈ ರಾಕ್ಷಸನು ಇಂತಹ ಕೆಟ್ಟ ಕೆಲಸವನ್ನು ಮಾಡಿದರೂ, ಎಂತಹ ಒಳ್ಳೆಯ ಗತಿಯನ್ನು ಪಡೆದನಲ್ಲ! ಹಾಗಿರಲಾರದು ಆಹಾ! ನಿಃಸಂದೇಹವಾಗಿ ಇದು ಶ್ರೀರಾಮನ ಮಹಿಮೆಯೇ ಆಗಿದೆ. ॥21॥
(ಶ್ಲೋಕ-22)
ಮೂಲಮ್
ರಾಮಬಾಣೇನ ಸಂವಿದ್ಧಃ ಪೂರ್ವಂ ರಾಮಮನುಸ್ಮರನ್ ।
ಭಯಾತ್ಸರ್ವಂ ಪರಿತ್ಯಜ್ಯ ಗೃಹವಿತ್ತಾದಿಕಂ ಚ ಯತ್ ॥
(ಶ್ಲೋಕ-23)
ಮೂಲಮ್
ಹೃದಿ ರಾಮಂ ಸದಾ ಧ್ಯಾತ್ವಾ ನಿರ್ಧೂತಾಶೇಷಕಲ್ಮಷಃ ।
ಅಂತೇ ರಾಮೇಣ ನಿಹತಃ ಪಶ್ಯನ್ ರಾಮಮವಾಪ ಸಃ ॥
(ಶ್ಲೋಕ-24)
ಮೂಲಮ್
ದ್ವಿಜೋ ವಾ ರಾಕ್ಷಸೋ ವಾಪಿ ಪಾಪೀ ವಾ ಧಾರ್ಮಿಕೋಽಪಿ ವಾ ।
ತ್ಯಜನ್ಕಲೇವರಂ ರಾಮಂ ಸ್ಮೃತ್ವಾ ಯಾತಿ ಪರಂ ಪದಮ್ ॥
ಅನುವಾದ
ಹಿಂದೆ ಇವನು ರಾಮಬಾಣದಿಂದ ಹೊಡೆಯಲ್ಪಟ್ಟಾಗಲೇ ರಾಮನನ್ನು ನೆನೆಯುತ್ತಾ ಹೆದರಿಕೆಯಿಂದ ಪತ್ನೀ, ಮನೆ, ಐಶ್ಚರ್ಯಗಳನ್ನೆಲ್ಲ ತ್ಯಾಗಮಾಡಿ ಹೃದಯದಲ್ಲಿ ನಿರಂತರ ಶ್ರೀರಾಮಚಂದ್ರನ ಸ್ಮರಣೆ ಮಾಡುತ್ತಿದ್ದ. ರಾಮಧ್ಯಾನ ದಿಂದ ಸಮಸ್ತ ಪಾಪಗಳನ್ನು ಪರಿಹರಿಸಿಕೊಂಡವನಾಗಿ ಕಡೆಗೆ ರಾಮನಿಂದಲೆ ಕೊಲ್ಲಲ್ಪಟ್ಟು, ರಾಮನನ್ನೇ ನೋಡುತ್ತಾ ದೇಹತ್ಯಾಗ ಮಾಡಿ ಶ್ರೀರಾಮನನ್ನೇ ಹೊಂದಿದನು. ದ್ವಿಜನಾಗಿರಲಿ, ರಾಕ್ಷಸ ನಾಗಿರಲಿ, ಪಾಪಿಷ್ಠನಾಗಿರಲಿ, ಪುಣ್ಯವಂತನಾಗಿರಲಿ ಶ್ರೀರಾಮನನ್ನೇ ನೆನೆಯುತ್ತಾ ಶರೀರವನ್ನು ಬಿಡುವವನು ಪರಮಪದವಿಯನ್ನೇ ಪಡೆಯುವನು. ॥22-24॥
(ಶ್ಲೋಕ-25)
ಮೂಲಮ್
ಇತಿ ತೇನ್ಯೋಽನ್ಯಮಾಭಾಷ್ಯ ತತೋ ದೇವಾ ದಿವಂ ಯಯುಃ ।
ರಾಮಸ್ತಚ್ಚಿಂತಯಾಮಾಸ ಮ್ರಿಯಮಾಣೋಽಸುರಾಧಮಃ ॥
(ಶ್ಲೋಕ-26)
ಮೂಲಮ್
ಹಾ ಲಕ್ಷ್ಮಣೇತಿ ಮದ್ವಾಕ್ಯಮನುಕುರ್ವನ್ಮಮಾರ ಕಿಮ್ ।
ಶ್ರುತ್ವಾ ಮದ್ವಾಕ್ಯಸದೃಶಂ ವಾಕ್ಯಂ ಸೀತಾಪಿ ಕಿಂ ಭವೇತ್ ॥
ಅನುವಾದ
ದೇವತೆಗಳು ಹೀಗೆಂದು ಪರಸ್ಪರ ಮಾತಾಡಿಕೊಂಡು ಸ್ವರ್ಗವನ್ನು ಸೇರಿದರು. ರಾಮನಾದರೋ ‘ಎಲಾ ಈ ರಾಕ್ಷಸಾಧಮನು ಸಾಯುವಾಗ ಹಾ ಲಕ್ಷ್ಮಣಾ!’ ಎಂದು ನನ್ನ ಧ್ವನಿಯನ್ನೇ ಅನುಕರಿಸಿ ಕೂಗುತ್ತಾ ಏಕೆ ಪ್ರಾಣ ತ್ಯಾಗ ಮಾಡಿದನು? ನನ್ನಂತೆಯೇ ಇರುವ ಮಾತುಗಳನ್ನು ಕೇಳಿ ಸೀತೆಯ ಸ್ಥಿತಿ ಏನಾಗಬಹುದು? ॥ 25-26॥
(ಶ್ಲೋಕ-27)
ಮೂಲಮ್
ಇತಿ ಚಿಂತಾಪರೀತಾತ್ಮಾ ರಾಮೋ ದೂರಾನ್ನ್ಯವರ್ತತ ।
ಸೀತಾ ತದ್ಭಾಷಿತಂ ಶ್ರುತ್ವಾ ಮಾರೀಚಸ್ಯ ದುರಾತ್ಮನಃ ॥
(ಶ್ಲೋಕ-28)
ಮೂಲಮ್
ಭೀತಾತಿದುಃಖಸಂವಿಗ್ನಾ ಲಕ್ಷ್ಮಣಂ ತ್ವಿದಮಬ್ರವೀತ್ ।
ಗಚ್ಛ ಲಕ್ಷ್ಮಣ ವೇಗೇನ ಭ್ರಾತಾ ತೇಽಸುರಪೀಡಿತಃ ॥
ಅನುವಾದ
ಈ ಪ್ರಕಾರ ಚಿಂತಿಸುತ್ತಾ ರಾಮನು ದೂರದ ಕಾಡಿನಿಂದ ಹಿಂತಿರುಗಿದನು. ಇತ್ತ ದುರಾತ್ಮನಾದ ರಾಕ್ಷಸ ಮಾರೀಚನ ಮಾತನ್ನು ಕೇಳಿದ ಸೀತೆಯು ಅತ್ಯಂತ ದುಃಖದಿಂದ ವ್ಯಾಕುಲಳಾಗಿ ಲಕ್ಷ್ಮಣನಲ್ಲಿ ಇಂತೆಂದಳು ‘‘ಎಲೈ ಲಕ್ಷ್ಮಣಾ! ನಿನ್ನ ಅಣ್ಣನು ರಾಕ್ಷಸನಿಂದ ಹಿಂಸೆ ಗೊಳಗಾದಂತಿದೆ. ಬೇಗನೇ ಹೋಗು. ॥27-28॥
(ಶ್ಲೋಕ-29)
ಮೂಲಮ್
ಹಾ ಲಕ್ಷ್ಮಣೇತಿ ವಚನಂ ಭ್ರಾತುಸ್ತೇ ನ ಶೃಣೋಷಿ ಕಿಮ್ ।
ತಾಮಾಹ ಲಕ್ಷ್ಮಣೋ ದೇವಿ ರಾಮವಾಕ್ಯಂ ನ ತದ್ಭವೇತ್ ॥
(ಶ್ಲೋಕ-30)
ಮೂಲಮ್
ಯಃ ಕಶ್ಚಿದ್ರಾಕ್ಷಸೋ ದೇವಿ ಮ್ರಿಯಮಾಣೋಽಬ್ರವೀದ್ವಚಃ ।
ರಾಮಸ್ತ್ರೈಲೋಕ್ಯಮಪಿ ಯಃ ಕ್ರುದ್ಧೋ ನಾಶಯತಿ ಕ್ಷಣಾತ್ ॥
ಅನುವಾದ
‘ಅಯ್ಯೋ ಲಕ್ಷ್ಮಣಾ!’ ಎಂಬ ನಿಮ್ಮಣ್ಣನ ದನಿಯನ್ನು ಕೇಳಲಿಲ್ಲವೇ?’’ ಆಗ ಲಕ್ಷ್ಮಣನು ‘‘ದೇವಿ! ಅದು ರಾಮನ ಮಾತಲ್ಲ. ಯಾವುದೋ ಕ್ಷುದ್ರರಾಕ್ಷಸನು ಸಾಯುವಾಗ ಹೇಳಿರುವ ಮಾತು ಗಳು ಅವು. ಶ್ರೀರಾಮನು ಕುಪಿತನಾದರೆ ಮೂರು ಲೋಕಗಳನ್ನು ಕ್ಷಣಮಾತ್ರದಲ್ಲಿ ನಾಶಮಾಡಬಲ್ಲನು. ॥29-30॥
(ಶ್ಲೋಕ-31)
ಮೂಲಮ್
ಸ ಕಥಂ ದೀನವಚನಂ ಭಾಷತೇಽಮರಪೂಜಿತಃ ।
ಕ್ರುದ್ಧಾ ಲಕ್ಷ್ಮಣಮಾಲೋಕ್ಯ ಸೀತಾ ಬಾಷ್ಪವಿಲೋಚನಾ ॥
(ಶ್ಲೋಕ-32)
ಮೂಲಮ್
ಪ್ರಾಹ ಲಕ್ಷ್ಮಣ ದುರ್ಬುದ್ದೇ ಭ್ರಾತುರ್ವ್ಯಸನಮಿಚ್ಛಸಿ ।
ಪ್ರೇಷಿತೋ ಭರತೇನೈವ ರಾಮನಾಶಾಭಿಕಾಂಕ್ಷಿಣಾ ॥
ಅನುವಾದ
ದೇವತೆಗಳಿಂದಲೂ ಪೂಜಿಸಲ್ಪಡುವ ಅವನು ಹೇಗೆ ತಾನೆ ಇಂತಹ ದೈನ್ಯದ ಮಾತನ್ನು ಆಡಬಲ್ಲನು?’’ ಎಂದು ಹೇಳಿದನು. ಆಗ ಸೀತೆಯು ಕಣ್ಣೀರು ಸುರಿಸುತ್ತಾ ಕುಪಿತಳಾಗಿ ಲಕ್ಷ್ಮಣನ ಕುರಿತು ಹೇಳುತ್ತಾಳೆ ‘‘ಎಲವೋ ಲಕ್ಷ್ಮಣಾ! ದುರ್ಬುದ್ಧಿಯವನಾದ ನೀನು ತನ್ನಣ್ಣನು ವಿಪತ್ತಿನಲ್ಲಿರುವುದನ್ನು ನೋಡಬಯಸುವೆಯಾ? ರಾಮನ ನಾಶವನ್ನು ಬಯಸುವ ಭರತನೇ ನಿನ್ನನ್ನು ಕಳುಹಿಸಿದಂತಿದೆ. ॥31-32॥
(ಶ್ಲೋಕ-33)
ಮೂಲಮ್
ಮಾಂ ನೇತುಮಾಗತೋಸಿ ತ್ವಂ ರಾಮನಾಶ ಉಪಸ್ಥಿತೇ ।
ನ ಪ್ರಾಪ್ಸ್ಯಸೇ ತ್ವಂ ಮಾಮದ್ಯ ಪಶ್ಯ ಪ್ರಾಣಾಂಸ್ತ್ಯಜಾಮ್ಯಹಮ್ ॥
ಅನುವಾದ
ರಾಮನು ನಾಶಹೊಂದಿದಾಗ ನನ್ನನ್ನು ಕರೆದೊಯ್ಯಲು ನೀನು ಬಂದಿರುವೆ. ಆದರೆ ನೀನು ನನ್ನನ್ನು ಪಡೆಯಲಾರೆ. ನೋಡುತ್ತಿರು. ಈಗಲೇ ನಿನ್ನೆದುರಿಗೆ ಪ್ರಾಣಗಳನ್ನು ಕಳೆದುಕೊಳ್ಳುವೆನು. ॥33॥
(ಶ್ಲೋಕ-34)
ಮೂಲಮ್
ನ ಜಾನಾತೀದೃಶಂ ರಾಮಸ್ತ್ವಾಂ ಭಾರ್ಯಾಹರಣೋದ್ಯತಮ್ ।
ರಾಮಾದನ್ಯಂ ನ ಸ್ಪೃಶಾಮಿ ತ್ವಾಂ ವಾ ಭರತಮೇವ ವಾ ॥
ಅನುವಾದ
ಹೆಂಡತಿಯನ್ನು ಅಪಹರಿಸುವಂತಹ ವಂಚಕನು ನೀನೆಂದು ರಾಮನು ತಿಳಿದಿರಲಾರನು. ನಾನಾದರೋ ರಾಮನ ಹೊರತು ಭರತನನ್ನಾಗಲಿ, ನಿನ್ನನ್ನಾಗಲಿ ಕೈಯಿಂದಲೂ ಮುಟ್ಟಲಾರೆ. ॥34॥
(ಶ್ಲೋಕ-35)
ಮೂಲಮ್
ಇತ್ಯುಕ್ತ್ವಾ ವಧ್ಯಮಾನಾ ಸಾ ಸ್ವಬಾಹುಭ್ಯಾಂ ರುರೋದ ಹ ।
ತಚ್ಛ್ರುತ್ವಾ ಲಕ್ಷ್ಮಣಃ ಕರ್ಣೌ ಪಿಧಾಯಾತೀವ ದುಃಖಿತಃ ॥
(ಶ್ಲೋಕ-36)
ಮೂಲಮ್
ಮಾಮೇವಂ ಭಾಷಸೇ ಚಂಡಿ ಧಿಕ್ ತ್ವಾಂ ನಾಶಮುಪೈಷ್ಯಸಿ ।
ಇತ್ಯುಕ್ತ್ವಾ ವನದೇವಿಭ್ಯಃ ಸಮರ್ಪ್ಯ ಜನಕಾತ್ಮಜಾಮ್ ॥
(ಶ್ಲೋಕ-37)
ಮೂಲಮ್
ಯಯೌ ದುಃಖಾತಿಸಂವಿಗ್ನೋ ರಾಮಮೇವ ಶನೈಃ ಶನೈಃ ।
ತತೋಽಂತರಂ ಸಮಾಲೋಕ್ಯ ರಾವಣೋ ಭಿಕ್ಷುವೇಷಧೃಕ್ ॥
(ಶ್ಲೋಕ-38)
ಮೂಲಮ್
ಸೀತಾಸಮೀಪಮಗಮತ್ಸ್ಫುರದ್ದಂಡಕಮಂಡಲುಃ ।
ಸೀತಾ ತಮವಲೋಕ್ಯಾಶು ನತ್ವಾ ಸಂಪೂಜ್ಯ ಭಕ್ತಿತಃ ॥
(ಶ್ಲೋಕ-39)
ಮೂಲಮ್
ಕಂದಮೂಲ ಫಲಾದೀನಿ ದತ್ವಾ ಸ್ವಾಗತಮಬ್ರವೀತ್ ।
ಮುನೇ ಭುಂಕ್ಷ್ವ ಫಲಾದಿನೀ ವಿಶ್ರಮಸ್ವ ಯಥಾಸುಖಮ್ ॥
(ಶ್ಲೋಕ-40)
ಮೂಲಮ್
ಇದಾನೀಮೇವ ಭರ್ತಾ ಮೇ ಹ್ಯಾಗಮಿಷ್ಯತಿ ತೇ ಪ್ರಿಯಮ್ ।
ಕರಿಷ್ಯತಿ ವಿಶೇಷೇಣ ತಿಷ್ಠ ತ್ವಂ ಯದಿ ರೋಚತೇ ॥
ಅನುವಾದ
ಹೀಗೆಂದು ಹೇಳುತ್ತಾ ಆಕೆಯು ತನ್ನ ತೋಳುಗಳಿಂದ ಎದೆಯನ್ನು ಬಡಿದುಕೊಳ್ಳುತ್ತಾ ಅಳಲಾರಂಭಿಸಿದಳು. ಇಂತಹ ಕರ್ಣಕಠೋರವಾದ ಮಾತನ್ನು ಕೇಳಿ ಲಕ್ಷ್ಮಣನು ತನ್ನ ಕಿವಿಗಳನ್ನು ಮುಚ್ಚಿಕೊಂಡು ಬಹಳ ದುಃಖದಿಂದ ‘‘ಎಲೈ ಹಟಮಾರಿಯೆ! ನನ್ನನ್ನು ಕುರಿತು ಹೀಗೆಲ್ಲ ಬೈಯ್ಯುತ್ತಿರುವೆಯಲ್ಲ! ನೀನು ಹಾಳಾಗಿ ಹೋಗುವೆ! ನಿನಗೆ ಧಿಕ್ಕಾರವಿರಲಿ!’’ ಎಂದು ಹೇಳುತ್ತಾ ವನದೇವಿಯರನ್ನು ಸೀತೆಯನ್ನು ಕಾಪಾಡಿಕೊಂಡಿರುವಂತೆ ಪ್ರಾರ್ಥಿಸಿ, ಅವರಿಗೆ ಒಪ್ಪಿಸಿ ರಾಮನನ್ನು ಹುಡುಕಿಕೊಂಡು, ಅತೀವ ದುಃಖಿತನಾಗಿ ಬೇಸರಗೊಂಡು ಬೇಗ-ಬೇಗನೇ ಹೊರಟನು. ಅನಂತರ ಸಮಯವನ್ನು ಸಾಧಿಸಿ ರಾವಣನು ಸಂನ್ಯಾಸಿಯ ವೇಷವನ್ನು ಧರಿಸಿದಂಡ ಕಮಂಡಲುಗಳಿಂದ ಅಲಂಕೃತನಾಗಿ ಸೀತೆಯ ಬಳಿಗೆ ಬಂದನು. ಸೀತೆಯು ಅವನನ್ನು ಕಂಡ ಕೂಡಲೇ ನಮಸ್ಕರಿಸಿ, ಭಕ್ತಿಯಿಂದ ಪೂಜಿಸಿ ಕಂದ ಮೂಲ ಫಲಗಳನ್ನು ಸಮರ್ಪಿಸಿ ಸ್ವಾಗತಿಸಿದಳು. ಹಾಗೂ ‘‘ಮುನಿಯೆ! ಈ ಹಣ್ಣುಗಳನ್ನು ಭುಂಜಿಸಿ ವಿಶ್ರಮಿಸಿಕೊಳ್ಳಿ. ಇಷ್ಟರಲ್ಲೆ ನನ್ನ ಪತಿದೇವರು ಬರುವವರಿದ್ದಾರೆ. ನೀವು ಬಯಸುವುದಾದರೆ ಇಲ್ಲಿ ಉಳಿದು ಕೊಳ್ಳಿ. ಅವರು ಬಂದ ಮೇಲೆ ವಿಶೇಷವಾಗಿ ಉಪಚರಿಸುವರು.’’ ॥35-40॥
(ಶ್ಲೋಕ-41)
ಮೂಲಮ್ (ವಾಚನಮ್)
ಭಿಕ್ಷುರುವಾಚ
ಮೂಲಮ್
ಕಾ ತ್ವಂ ಕಮಲಪತ್ರಾಕ್ಷಿ ಕೋ ವಾ ಭರ್ತಾ ತವಾನಘೇ ।
ಕಿಮರ್ಥಮತ್ರ ತೇ ವಾಸೋ ವನೇ ರಾಕ್ಷಸಸೇವಿತೇ ।
ಬ್ರೂಹಿ ಭದ್ರೇ ತತಃ ಸರ್ವಂ ಸ್ವವೃತ್ತಾಂತಂ ನಿವೇದಯೇ ॥
ಅನುವಾದ
ಸಂನ್ಯಾಸಿಯು ಹೇಳಿದನು — ‘‘ಹೇ ಕಮಲಲೋಚನೆ! ನೀನು ಯಾರು? ನಿನ್ನ ಗಂಡನು ಯಾರು? ಪಾಪರಹಿತಳೆ! ರಾಕ್ಷಸರಿಂದ ತುಂಬಿದ ಈ ಕಾಡಿನಲ್ಲಿ ನೀನು ಏಕೆ ವಾಸವಾಗಿದ್ದೀಯೆ? ಶುಭಾಂಗಳೇ! ಎಲ್ಲವನ್ನೂ ತಿಳಿಸು. ಅನಂತರ ನನ್ನ ವೃತ್ತಾಂತವನ್ನು ಹೇಳುವೆನು.’’ ॥41॥
ಮೂಲಮ್
(ಶ್ಲೋಕ-42)
ಮೂಲಮ್ (ವಾಚನಮ್)
ಸೀತೋವಾಚ
ಮೂಲಮ್
ಅಯೋಧ್ಯಾಧಿಪತಿಃ ಶ್ರೀಮಾನ್ ರಾಜಾ ದಶರಥೋ ಮಹಾನ್ ।
ತಸ್ಯ ಜ್ಯೇಷ್ಠಃ ಸುತೋ ರಾಮಃ ಸರ್ವಲಕ್ಷಣಲಕ್ಷಿತಃ ॥
(ಶ್ಲೋಕ-43)
ಮೂಲಮ್
ತಸ್ಯಾಹಂ ಧರ್ಮತಃ ಪತ್ನಿ ಸೀತಾ ಜನಕನಂದಿನೀ ।
ತಸ್ಯ ಭ್ರಾತಾ ಕನೀಯಾಂಶ್ಚ ಲಕ್ಷ್ಮಣೋ ಭ್ರಾತೃವತ್ಸಲಃ ॥
(ಶ್ಲೋಕ-44)
ಮೂಲಮ್
ಪಿತುರಾಜ್ಞಾಂ ಪುರಸ್ಕೃತ್ಯ ದಂಡಕೇ ವಸ್ತುಮಾಗತಃ ।
ಚತುರ್ದಶ ಸಮಾಸ್ತ್ವಾಂ ತು ಜ್ಞಾತುಮಿಚ್ಛಾಮಿ ಮೇ ವದ ॥
ಅನುವಾದ
ಸೀತಾದೇವಿಯು ಹೇಳಿದಳು — ‘‘ಹೇ ಮುನಿಯೇ! ಅಯೋಧ್ಯೆಯ ಒಡೆಯರಾದ ಶ್ರೀಮಾನ್ ದಶರಥ ಮಹಾರಾಜರ ಹಿರಿಯ ಪುತ್ರರಾದ ಸರ್ವಲಕ್ಷಣಸಂಪನ್ನ ಶ್ರೀರಾಮರೆಂಬುವರಿ ರುವರು. ನಾನು ಜನಕರಾಜನ ಮಗಳಾದ ಸೀತೆಯು ಅವರ ಧರ್ಮಪತ್ನಿಯಾಗಿರುವೆ. ಅವರ ಕಿರಿಯ ತಮ್ಮ ಲಕ್ಷ್ಮಣನು ಅಣ್ಣನಲ್ಲಿ ವಿಶೇಷ ವಿಶ್ವಾಸವುಳ್ಳವನು, ಅವನೂ ನಮ್ಮ ಜೊತೆಗಿದ್ದಾನೆ. ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮದೇವರು ಹದಿನಾಲ್ಕು ವರ್ಷ ವನವಾಸಕ್ಕಾಗಿ ದಂಡಕಾರಣ್ಯದಲ್ಲಿ ವಾಸಮಾಡಲು ಬಂದಿರುವರು. ನೀವಾರೆಂದು ತಿಳಿಯಲು ಇಚ್ಛಿಸುತ್ತಿದ್ದೇನೆ. ತಮ್ಮ ಪರಿಚಯವನ್ನು ಹೇಳಿರಿ.’’ ॥ 42-44॥
(ಶ್ಲೋಕ-45)
ಮೂಲಮ್ (ವಾಚನಮ್)
ಭಿಕ್ಷುರುವಾಚ
ಮೂಲಮ್
ಪೌಲಸ್ತ್ಯತನಯೋಹಂ ತು ರಾವಣೋ ರಾಕ್ಷಸಾಧಿಪಃ ।
ತ್ವತ್ಕಾಮಪರಿತಪ್ತೋಹಂ ತ್ವಾಂ ನೇತುಂ ಪುರಮಾಗತಃ ॥
ಅನುವಾದ
ಕಪಟಸಂನ್ಯಾಸಿ ಹೇಳಿದನು — ‘‘ನಾನು ಪುಲಸ್ತ್ಯನಂದನ ವಿಶ್ರವಸುವಿನ ಪುತ್ರ, ರಾಕ್ಷಸಾಧಿಪತಿ ರಾವಣನಾಗಿರುವೆನು. ನಿನ್ನ ವ್ಯಾಮೋಹದಿಂದ ಬಳಲಿದವನಾಗಿ ನಿನ್ನನ್ನು ಲಂಕೆಗೆ ಕರೆದೊಯ್ಯಲು ಬಂದಿರುವೆನು. ॥45॥
(ಶ್ಲೋಕ-46)
ಮೂಲಮ್
ಮುನಿವೇಷೇಣ ರಾಮೇಣ ಕಿಂ ಕರಿಷ್ಯಸಿ ಮಾಂ ಭಜ ।
ಭುಙ್ಕ್ಷ್ವ ಭೋಗಾನ್ಮಯಾ ಸಾರ್ಧಂ ತ್ಯಜದುಃಖಂ ವನೋದ್ಭವಮ್ ॥
ಅನುವಾದ
ಮುನಿವೇಷ ಧಾರಿಯಾದ ರಾಮನೊಡನೆ ನೀನೇನು ಮಾಡುವೆ? ನನ್ನನ್ನು ವರಿಸುವವಳಾಗು. ವನವಾಸದ ದುಃಖಗಳನ್ನು ಕಳೆದು ನನ್ನೊಡನೆ ನಾನಾ ವಿಧವಾದ ಭೋಗಗಳನ್ನು ಅನುಭವಿಸುವವಳಾಗು. ॥46॥
(ಶ್ಲೋಕ-47)
ಮೂಲಮ್
ಶ್ರುತ್ವಾ ತದ್ವಚನಂ ಸೀತಾ ಭೀತಾ ಕಿಂಚಿದುವಾಚ ತಮ್ ।
ಯದ್ಯೇವಂ ಭಾಷಸೇ ಮಾಂ ತ್ವಂ ನಾಶಮೇಷ್ಯಸಿ ರಾಘವಾತ್ ॥
(ಶ್ಲೋಕ-48)
ಮೂಲಮ್
ಆಗಮಿಷ್ಯತಿ ರಾಮೋಽಪಿ ಕ್ಷಣಂ ತಿಷ್ಠ ಸಹಾನುಜಃ ।
ಮಾಂ ಕೋ ಧರ್ಷಯಿತುಂ ಶಕ್ತೋ ಹರೇರ್ಭಾರ್ಯಾಂ ಶಶೋ ಯಥಾ ॥
ಅನುವಾದ
ಅವನ ಮಾತನ್ನು ಕೇಳಿದ ಸೀತೆಯು ಸ್ವಲ್ಪ ಹೆದರಿಕೊಂಡು ಅವನಲ್ಲಿ ಹೇಳುತ್ತಾಳೆ ‘‘ನೀನು ಹೀಗೆಲ್ಲ ಗಳುಹುವುದಾದರೆ ಶ್ರೀರಾಮನಿಂದ ನೀನು ನಾಶಹೊಂದುವೆ. ಕ್ಷಣಕಾಲ ಇರು. ತಮ್ಮನೊಡನೆ ಶ್ರೀರಾಮಚಂದ್ರನು ಈಗ ಬರಲಿದ್ದಾನೆ. ಸಿಂಹ ಪತ್ನಿಯನ್ನು ಮೊಲವು ಹೇಗೆ ಅಪಹರಿಸಲಾರದೋ ಹಾಗೇ ನನ್ನನ್ನು ಯಾವನು ತಾನೆ ಬಲವಂತ ಮಾಡಬಲ್ಲನು? ॥47-48॥
(ಶ್ಲೋಕ-49)
ಮೂಲಮ್
ರಾಮಬಾಣೈರ್ವಿಭಿನ್ನಸ್ತ್ವಂ ಪತಿಷ್ಯಸಿ ಮಹೀತಲೇ ।
ಇತಿ ಸೀತಾವಚಃ ಶ್ರುತ್ವಾ ರಾವಣಃ ಕ್ರೋಧಮೂರ್ಛಿತಃ ॥
(ಶ್ಲೋಕ-50)
ಮೂಲಮ್
ಸ್ವರೂಪಂ ದರ್ಶಯಾಮಾಸ ಮಹಾಪರ್ವತಸನ್ನಿಭಮ್ ।
ದಶಾಸ್ಯಂ ವಿಂಶತಿಭುಜಂ ಕಾಲಮೇಘಸಮದ್ಯುತಿಮ್ ॥
ಅನುವಾದ
‘‘ರಾಮನ ಬಾಣದಿಂದ ನೀನು ಛಿನ್ನ-ಭಿನ್ನವಾಗಿ ನೆಲಕ್ಕುರುಳುವೆ.’’ ಸೀತೆಯ ಇಂತಹ ಮಾತನ್ನು ಕೇಳಿದ ರಾವಣನು ಕೋಪದಿಂದ ಕೆರಳಿದವನಾಗಿ ಮಹಾಪರ್ವತದಂತಿರುವ ತನ್ನ ನಿಜರೂಪವನ್ನು ಪ್ರಕಟಿಸಿದನು. ಹತ್ತು ಮುಖಗಳೂ, ಇಪ್ಪತ್ತು ತೋಳುಗಳೂ ಉಳ್ಳ ಪ್ರಳಯಕಾಲದ ಮೇಘದಂತೆ ಕಾಂತಿಯುಳ್ಳವನಾಗಿದ್ದನು. ॥49-50॥
(ಶ್ಲೋಕ-51)
ಮೂಲಮ್
ತದ್ ದೃಷ್ಟ್ವಾ ವನದೇವ್ಯಶ್ಚ ಭೂತಾನಿ ಚ ವಿತತ್ರಸುಃ ।
ತತೋ ವಿದಾರ್ಯ ಧರಣೀಂ ನಖೈರುದ್ ಧೃತ್ಯ ಬಾಹುಭಿಃ ॥
(ಶ್ಲೋಕ-52)
ಮೂಲಮ್
ತೋಲಯಿತ್ವಾರಥೇ ಕ್ಷಿಪ್ತ್ವಾ ಯಯೌ ಕ್ಷಿಪ್ರಂ ವಿಹಾಯಸಾ ।
ಹಾ ರಾಮ ಹಾ ಲಕ್ಷ್ಮಣೇತಿ ರುದತೀ ಜನಕಾತ್ಮಜಾ ॥
(ಶ್ಲೋಕ-53)
ಮೂಲಮ್
ಭಯೋದ್ವಿಗ್ನಮನಾ ದೀನಾ ಪಶ್ಯಂತೀ ಭುವಮೇವ ಸಾ ।
ಶ್ರುತ್ವಾ ತತ್ಕ್ರಂದಿತಂ ದೀನಂ ಸೀತಾಯಾಃ ಪಕ್ಷಿಸತ್ತಮಃ ॥
(ಶ್ಲೋಕ-54)
ಮೂಲಮ್
ಜಟಾಯುರುತ್ಥಿತಃ ಶೀಘ್ರಂ ನಗಾಗ್ರಾತ್ತೀಕ್ಷ್ಣತುಂಡಕಃ ।
ತಿಷ್ಠ ತಿಷ್ಠೇತಿ ತಂ ಪ್ರಾಹ ಕೋ ಗಚ್ಛತಿ ಮಮಾಗ್ರತಃ ॥
(ಶ್ಲೋಕ-55)
ಮೂಲಮ್
ಮುಷಿತ್ವಾ ಲೋಕನಾಥಸ್ಯ ಭಾರ್ಯಾಂ ಶೂನ್ಯಾದ್ವನಾಲಯಾತ್ ।
ಶುನಕೋ ಮಂತ್ರಪೂತಂ ತ್ವಂ ಪುರೋಡಾಶಮಿವಾಧ್ವರೇ ॥
ಅನುವಾದ
ಆ ಭಯಂಕರ ರೂಪವನ್ನು ನೋಡಿ ವನದೇವಿಯರೂ, ಎಲ್ಲ ಪ್ರಾಣಿಗಳೂ ಭಯಗೊಂಡವು. ಆಗ ರಾವಣನು ಸೀತೆಯು ನಿಂತಿದ್ದ ಕಾಲು ಬುಡದ ಭೂಮಿಯನ್ನು ಉಗುರುಗಳಿಂದ ಅಗೆದು.* ಅವಳನ್ನು ತನ್ನ ಬಾಹುಗಳಿಂದ ಭೂಮಿಸಹಿತ ಎತ್ತಿಕೊಂಡು ತನ್ನ ರಥದಲ್ಲಿರಿಸಿಕೊಂಡು ವೇಗವಾಗಿ ಆಕಾಶ ಮಾರ್ಗವಾಗಿ ಹಾರಿದನು. ಆಗ ಸೀತೆಯು ತುಂಬಾ ಭಯಗೊಂಡ ಚಿತ್ತವುಳ್ಳವಳಾಗಿ, ದೀನದೃಷ್ಟಿಯಿಂದ ನೆಲವನ್ನು ನೋಡುತ್ತಾ ‘ಹಾ ರಾಮಾ! ಹಾ ಲಕ್ಷ್ಮಣಾ!’ ಎಂದು ಹೇಳುತ್ತಾ ಅಳತೊಡಗಿದಳು. ಸೀತೆಯ ಆ ಆಕ್ರಂದನ ಕೇಳಿದ ತೀಕ್ಷ್ಣವಾದ ಕೊಕ್ಕುಳ್ಳ ಪಕ್ಷಿಶ್ರೇಷ್ಠನಾದ ಜಟಾಯುವು ಕೂಡಲೇ ಬೆಟ್ಟದ ತುದಿಯಲ್ಲಿದ್ದವನು ಮೇಲೆದ್ದನು. ‘‘ಎಲವೋ ನಿಲ್ಲು, ನಿಲ್ಲು’’ ಎಂದು ಹೇಳುತ್ತಾ ಮಂತ್ರಪೂತವಾದ ಪರಿಶುದ್ಧವಾದ ಯಜ್ಞದ ಪುರೋಡಾಶ (ಹವಿಸ್ಸು)ವನ್ನು ನಾಯಿಯು ಅಪಹರಿಸಿಕೊಂಡು ಹೋಗುವಂತೆ, ಶೂನ್ಯವಾದ ಕಾಡಿನಿಂದ ಲೋಕಕ್ಕೆಲ್ಲ ಒಡೆಯನಾದ ಶ್ರೀರಾಮಚಂದ್ರನ ಭಾರ್ಯೆಯನ್ನು ಒಯ್ಯುತ್ತಿರುವನು ಯಾರು ನೀನು? ॥51-55॥
ಟಿಪ್ಪನೀ
- ವಾಲ್ಮೀಕಿರಾಮಾಯಣ ಯುದ್ಧಕಾಂಡ ಸರ್ಗ 13ರಲ್ಲಿ ರಾವಣನು ಹೇಳುತ್ತಾನೆ ಒಮ್ಮೆ ನಾನು ಬ್ರಹ್ಮನ ಬಳಿಗೆ ಆಕಾಶ ಮಾರ್ಗದಿಂದ ಹೋಗುತ್ತಿರುವಾಗ ಪುಂಜಿಕಸ್ಥಲಾ ಎಂಬ ಅಪ್ಸರೆಯನ್ನು ನೋಡಿದೆ. ಆಗ ನಾನು ಅವಳನ್ನು ಬಲವಂತವಾಗಿ ವಸಹೀನಳಾಗಿಸಿ ಅವಳನ್ನು ಸಂಭೋಗಿಸಿದೆ. ಈ ಮಾತು ಬ್ರಹ್ಮನಿಗೆ ತಿಳಿದುದರಿಂದ ಅವನು ನನಗೆ ‘ನೀನು ಇಂದಿನಿಂದ ಯಾವುದೇ ಸೀಯಳೊಂದಿಗೆ ಬಲಾತ್ಕಾರ ಮಾಡಿದರೆ ನಿನ್ನ ತಲೆಯು ಸಾವಿರ ಹೋಳುಗಳಾಗಬಹುದು’ ಎಂಬ ಶಾಪ ಕೊಟ್ಟನು. ಆ ಶಾಪದ ಭಯದಿಂದಲೇ ರಾವಣನು ಸೀತೆಯನ್ನು ಸ್ಪರ್ಶಿಸಲಿಲ್ಲ. ರಾವಣನಿಗೆ ಇದೇ ಪ್ರಕಾರ ರಂಭೆಯನ್ನು ಬಲಾತ್ಕಾರ ಮಾಡಿದ ಕಾರಣ ಕುಬೇರಪುತ್ರ ನಳಕೂಬರನೂ ಶಾಪ ಕೊಟ್ಟಿದ್ದನು. (ವಾ. ರಾ. ಉ. ಕಾಂಡ 26 ನೇ ಸರ್ಗ) ಆದರೆ ಆ ಶಾಪವು ಮೊದಲಿನದಾಗಿತ್ತು ಹಾಗೂ ತನ್ನ ತಪೋಬಲದಿಂದ ರಾವಣನು ಅದಕ್ಕೆ ಹೆದರುತ್ತಿರಲಿಲ್ಲ. ಅದಕ್ಕಾಗಿ ನಂತರ ಅವನು ಪುಂಜಲಿಕಸ್ಥಳೆಯ ಮೇಲೆ ಬಲಾತ್ಕಾರ ಮಾಡುವ ಸಾಹಸ ಮಾಡಿದನು.
Misc Detail
(ವಾ.ರಾ.ಯು. ಕಾಂಡ 13/14).
(ಶ್ಲೋಕ-56)
ಮೂಲಮ್
ಇತ್ಯುಕ್ತ್ವಾ ತೀಕ್ಷ್ಣತುಂಡೇನ ಚೂರ್ಣಯಾಮಾಸ ತದ್ರಥಮ್ ।
ವಾಹಾಂಬಿಭೇದ ಪಾದಾಭ್ಯಾಂ ಚೂರ್ಣಯಾಮಾಸ ತದ್ಧನುಃ ॥
ಅನುವಾದ
ಹೀಗೆಂದು ಹೇಳುತ್ತಾ ಜಟಾಯುವು ತನ್ನ ಹರಿತವಾದ ಕೊಕ್ಕಿನಿಂದ ರಾವಣನ ರಥವನ್ನು ಪುಡಿ-ಪುಡಿ ಮಾಡಿದನು. ಕುದುರೆಗಳನ್ನು ಸೀಳಿದನು. ಎರಡೂ ಕಾಲುಗಳಿಂದ ಅವನ ಬಿಲ್ಲನ್ನು ಮುರಿದು ಪುಡಿಮಾಡಿದನು. ॥56॥
(ಶ್ಲೋಕ-57)
ಮೂಲಮ್
ತತಃ ಸೀತಾಂ ಪರಿತ್ಯಜ್ಯ ರಾವಣಃ ಖಡ್ಗಮಾದದೇ ।
ಚಿಚ್ಛೇದ ಪಕ್ಷೌ ಸಾಮರ್ಷಃ ಪಕ್ಷಿರಾಜಸ್ಯ ಧೀಮತಃ ॥
(ಶ್ಲೋಕ-58)
ಮೂಲಮ್
ಪಪಾತ ಕಿಂಚಿತ್ ಶೇಷೇಣ ಪ್ರಾಣೇನ ಭುವಿ ಪಕ್ಷಿರಾಟ್ ।
ಪುನರನ್ಯರಥೇನಾಶು ಸೀತಾಮಾದಾಯ ರಾವಣಃ ॥
ಅನುವಾದ
ಆಗ ರಾವಣನು ಸೀತೆಯನ್ನು ಕೈ ಬಿಟ್ಟು ಖಡ್ಗವನ್ನೆತ್ತಿಕೊಂಡು ಝಳಪಿಸುತ್ತಾ ಕೋಪದಿಂದ ಬುದ್ಧಿವಂತನಾದ ಆ ಪಕ್ಷಿರಾಜನ ಎರಡೂ ರೆಕ್ಕೆಗಳನ್ನು ಕತ್ತರಿಸಿದನು. ರೆಕ್ಕೆಗಳು ಕತ್ತರಿಸಿದಾಗ ಅಲ್ಪ ಸ್ವಲ್ಪ ಉಳಿದ ಪ್ರಾಣದಿಂದ ಆ ಪಕ್ಷಿಶ್ರೇಷ್ಠನು ನೆಲಕ್ಕುರುಳಿದನು. ರಾವಣನು ಬೇರೊಂದು ರಥನ್ನಡರಿ ಸೀತೆಯನ್ನು ಹತ್ತಿಸಿಕೊಂಡು ಹೊರಟು ಹೋದನು. ॥57-58॥
(ಶ್ಲೋಕ-59)
ಮೂಲಮ್
ಕ್ರೋಶಂತೀ ರಾಮ ರಾಮೇತಿ ತ್ರಾತಾರಂ ನಾಧಿಗಚ್ಛತಿ ।
ಹಾ ರಾಮ ಹಾ ಜಗನ್ನಾಥ ಮಾಂ ನ ಪಶ್ಯಸಿ ದುಃಖಿತಾಮ್ ॥
ಅನುವಾದ
ಆಗ ಸೀತೆಯು ಯಾರೂ ಕಾಪಾಡುವವರನ್ನು ಕಾಣದೆ ಪದೇ-ಪದೇ ಶ್ರೀರಾಮನನ್ನು ಕೂಗಿ ಕರೆಯುತ್ತಾ, ಅಳುತ್ತಾ ‘‘ಹೇ ರಾಮಾ! ಹೇ ಜಗನ್ನಾಥಾ! ದುಃಖಿತಳಾದ ನನ್ನನ್ನು ಕಾಣೆಯಾ? ॥59॥
(ಶ್ಲೋಕ-60)
ಮೂಲಮ್
ರಕ್ಷಸಾ ನೀಯಮಾನಾಂ ಸ್ವಾಂ ಭಾರ್ಯಾಂ ಮೋಚಯ ರಾಘವ ।
ಹಾ ಲಕ್ಷ್ಮಣ ಮಹಾಭಾಗ ತ್ರಾಹಿ ಮಾಮಪರಾಧಿನೀಮ್ ॥
ಅನುವಾದ
ಹೇ ರಾಘವಾ! ನಿನ್ನ ಹೆಂಡತಿಯಾಗಿರುವ ನನ್ನನ್ನು ರಾಕ್ಷಸನು ಎಳೆದೊಯ್ಯುತ್ತಿರುವಾಗ ಬಿಡಿಸಲಾರೆಯಾ? ಮಹಾಭಾಗನಾದ ಲಕ್ಷ್ಮಣನೇ! ಅಪರಾಧಿಯಾದ ನನ್ನನ್ನು ಕಾಪಾಡು. ॥60॥
(ಶ್ಲೋಕ-61)
ಮೂಲಮ್
ವಾಕ್ ಶರೇಣ ಹತಸ್ತ್ವಂ ಮೇ ಕ್ಷಂತುಮರ್ಹಸಿ ದೇವರ ।
ಇತ್ಯೇವಂ ಕ್ರೋಶಮಾನಾಂ ತಾಂ ರಾಮಾಗಮನಶಂಕಯಾ ॥
(ಶ್ಲೋಕ-62)
ಮೂಲಮ್
ಜಗಾಮ ವಾಯುವೇಗೇನ ಸೀತಾಮಾದಾಯ ಸತ್ವರಃ ।
ವಿಹಾಯಸಾ ನೀಯಮಾನಾ ಸೀತಾಪಶ್ಯದಧೋಮುಖೀ ॥
(ಶ್ಲೋಕ-63)
ಮೂಲಮ್
ಪರ್ವತಾಗ್ರೇ ಸ್ಥಿತಾನ್ಪಂಚ ವಾನರಾನ್ವಾರಿಜಾನನಾ ।
ಉತ್ತರೀಯಾರ್ಧಖಂಡೇನ ವಿಮುಚ್ಯಾಭರಣಾದಿಕಮ್ ॥
(ಶ್ಲೋಕ-64)
ಮೂಲಮ್
ಬದ್ಧ್ವಾ ಚಿಕ್ಷೇಪ ರಾಮಾಯ ಕಥಯಂತ್ವಿತಿ ಪರ್ವತೇ ।
ತತಃ ಸಮುದ್ರಮುಲ್ಲಂಘ್ಯ ಲಂಕಾಂ ಗತ್ವಾ ಸ ರಾವಣಃ ॥
(ಶ್ಲೋಕ-65)
ಮೂಲಮ್
ಸ್ವಾಂತಃಪುರೇ ರಹಸ್ಯೇತಾಮಶೋಕವಿಪಿನೇಽಕ್ಷಿಪತ್ ।
ರಾಕ್ಷಸೀಭಿಃ ಪರಿವೃತಾಂ ಮಾತೃಬುದ್ಧ್ಯಾನ್ವಪಾಲಯತ್ ॥
ಅನುವಾದ
ಎಲೈ ಮೈದುನಾ! ನಾನು ನಿನ್ನನ್ನು ವಾಗ್ಬಾಣಗಳಿಂದ ಚುಚ್ಚಿರುವೆನು, ಅದನ್ನು ಕ್ಷಮಿಸು. ಹೀಗೆಂದು ಅಳುತ್ತಿರುವ ಇವಳನ್ನು ರಾಮನು ಬಂದು ಬಿಡಿಸಬಹುದೆಂಬ ಆಶಂಕೆಯಿಂದ ಗಾಳಿಯಂತೆ ಅತಿ ವೇಗವಾಗಿ ರಾವಣನು ಕರೆದೊಯ್ದನು. ಈ ಪ್ರಕಾರ ಆಕಾಶಮಾರ್ಗದಿಂದ ಹೋಗುತ್ತಿರುವಾಗ ಕಮಲ ಮುಖಿಯಾದ ಸೀತೆಯು ಕೆಳಗೆ ಬಗ್ಗಿ ನೋಡಿದಾಗ ಪರ್ವತದ ತುದಿಯಲ್ಲಿ ಕುಳಿತಿದ್ದ ಐದು ಮಂದಿ ಕಪಿಗಳು ಕಂಡು ಬಂದವು. ಇವರನ್ನು ನೋಡಿ ಸೀತೆಯು ತನ್ನ ಒಡವೆಗಳನ್ನು ಕಳಚಿ, ಸೆರಗಿನ ತುಂಡೊಂದರಲ್ಲಿ ಕಟ್ಟಿ, ರಾಮನಿಗೆ ಹೇಳಲಿ ಎಂಬ ಉದ್ದೇಶದಿಂದ ಪರ್ವತದ ಮೇಲೆ ಎಸೆದು ಬಿಟ್ಟಳು. ಅನಂತರ ರಾವಣನು ಸಮುದ್ರವನ್ನು ದಾಟಿ ಲಂಕೆಯನ್ನು ತಲುಪಿ ಅಲ್ಲಿ ತನ್ನ ಅಂತಃಪುರದ ಒಂದು ಭಾಗದಲ್ಲಿ ಏಕಾಂತ ಸ್ಥಳವಾದ ಅಶೋಕವನದಲ್ಲಿ ಸೀತೆಯನ್ನು ಇರಿಸಿದನು. ರಾಕ್ಷಸಿ ಯರನ್ನು ಕಾವಲಿಗಿಟ್ಟು ತನ್ನ ತಾಯಿಯಂತೆ ಕಾಪಾಡುತ್ತಿದ್ದನು. ॥61-65॥
(ಶ್ಲೋಕ-66)
ಮೂಲಮ್
ಕೃಶಾತಿದೀನಾ ಪರಿಕರ್ಮವರ್ಜಿತಾ
ದುಃಖೇನ ಶುಷ್ಯದ್ವದನಾತಿವಿಹ್ವಲಾ ।
ಹಾ ರಾಮ ರಾಮೇತಿ ವಿಲಪ್ಯಮಾನಾ
ಸೀತಾ ಸ್ಥಿತಾ ರಾಕ್ಷಸವೃಂದಮಧ್ಯೇ ॥
ಅನುವಾದ
ಅಲ್ಲಿ ಬಹಳ ಬಡಕಲಾದ, ದೀನವದನಳಾದ ಸೀತೆಯು ಎಲ್ಲ ಅಲಂಕಾರಗಳನ್ನು ತೊರೆದು, ದುಃಖದಕಾರಣ ಒಣಗಿದ ಮುಖವುಳ್ಳವಳಾಗಿ, ಬಹಳ ಭಯಗೊಂಡು, ಅಯ್ಯೋ! ರಾಮಾ! ರಾಮಾ! ಎಂದು ಅಳುತ್ತಾ ರಾಕ್ಷಸರ ಗುಂಪಿನಲ್ಲಿ ಇದ್ದಳು. ॥66॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.