[ಆರನೆಯ ಸರ್ಗ]
ಭಾಗಸೂಚನಾ
ರಾವಣನು ಮಾರೀಚನ ಬಳಿಗೆ ಹೋಗುವುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ವಿಚಿಂತ್ಯೈವಂ ನಿಶಾಯಾಂ ಸ ಪ್ರಭಾತೇ ರಥಮಾಸ್ಥಿತಃ ।
ರಾವಣೋ ಮನಸಾ ಕಾರ್ಯಮೇಕಂ ನಿಶ್ಚಿತ್ಯ ಬುದ್ಧಿಮಾನ್ ॥
(ಶ್ಲೋಕ-2)
ಮೂಲಮ್
ಯಯೌ ಮಾರೀಚಸದನಂ ಪರಂ ಪಾರಮುದನ್ವತಃ ।
ಮಾರೀಚಸ್ತತ್ರ ಮುನಿವಜ್ಜಟಾವಲ್ಕಲಧಾರಕಃ ॥
(ಶ್ಲೋಕ-3)
ಮೂಲಮ್
ಧ್ಯಾಯನ್ ಹೃದಿ ಪರಾತ್ಮಾನಂ ನಿರ್ಗುಣಂ ಗುಣಭಾಸಕಮ್ ।
ಸಮಾಧಿವಿರಮೇಽಪಶ್ಯದ್ರಾವಣಂ ಗೃಹಮಾಗತಮ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಗಿರಿಜೇ! ಬುದ್ಧಿವಂತನಾದ ರಾವಣನು ಈ ರೀತಿಯಾಗಿ ರಾತ್ರಿಯೆಲ್ಲ ಆಲೋಚಿಸಿ, ಒಂದು ಕೆಲಸವನ್ನು ಸಾಧಿಸಲು ಮನಸ್ಸಿನಲ್ಲಿ ನಿಶ್ಚಿಯಿಸಿಕೊಂಡು, ಬೆಳಗಾಗುತ್ತಲೇ ರಥವನ್ನೇರಿ ಸಮುದ್ರದ ಆಚೆ ದಡದಲ್ಲಿರುವ ಮಾರೀಚನ ಆಶ್ರಮಕ್ಕೆ ಬಂದನು. ಅಲ್ಲಿ ಮಾರೀಚನು ಮುನಿವೇಷ ಧಾರಿಯಾಗಿ ಜಟಾವಲ್ಕಲಗಳನ್ನು ಧರಿಸಿಕೊಂಡು, ನಿರ್ಗುಣನೂ, ಗುಣಗಳನ್ನು ಬೆಳಗುವವನೂ ಆದ ಪರಮಾತ್ಮನನ್ನು ಹೃದಯದಲ್ಲಿ ಧ್ಯಾನಿಸುತ್ತಿದ್ದನು. ಸಮಾಧಿ ಭಂಗವಾದಾಗ ಆಶ್ರಮಕ್ಕೆ ಬಂದಿದ್ದ ರಾವಣನನ್ನು ಕಂಡನು. ॥1-3॥
(ಶ್ಲೋಕ-4)
ಮೂಲಮ್
ದ್ರುತಮುತ್ಥಾಯ ಚಾಲಿಂಗ್ಯ ಪೂಜಯಿತ್ವಾ ಯಥಾವಿಧಿ ।
ಕೃತಾತಿಥ್ಯಂ ಸುಖಾಸೀನಂ ಮಾರೀಚೋ ವಾಕ್ಯಮಬ್ರವೀತ್ ॥
ಅನುವಾದ
ಲಗುಬಗೆಯಿಂದ ಮೇಲೆದ್ದು ರಾವಣನನ್ನು ಆಲಿಂಗಿಸಿಕೊಂಡು ಯಥಾಯೋಗ್ಯವಾಗಿ ಪೂಜಿಸಿದನು. ಆತಿಥ್ಯದಿಂದ ತೃಪ್ತನಾಗಿ ಸುಖಾಸನದಲ್ಲಿ ಕುಳಿತಿರುವ ರಾವಣನಲ್ಲಿ ಮಾರೀಚನು ಕೇಳಿದನು — ॥4॥
(ಶ್ಲೋಕ-5)
ಮೂಲಮ್
ಸಮಾಗಮನಮೇತತ್ತೇ ರಥೇನೈಕೇನ ರಾವಣ ।
ಚಿಂತಾಪರ ಇವಾಭಾಸಿ ಹೃದಿ ಕಾರ್ಯಂ ವಿಚಿಂತಯನ್ ॥
ಅನುವಾದ
‘‘ರಾವಣೇಶ್ವರಾ! ರಥವನ್ನೇರಿ ಒಬ್ಬಂಟಿಗನಾಗಿ ಬಂದಿರುವ ನಿನ್ನ ಮನಸ್ಸಿನಲ್ಲಿ ಏನೋ ಚಿಂತೆ ಆವರಿಸಿದಂತೆ ಕಂಡು ಬರುತ್ತಿದೆ. ಯಾವ ಕಾರ್ಯವನ್ನು ಆಲೋಚಿಸಿಕೊಂಡು ಬಂದಿರುವೆ? ॥5॥
(ಶ್ಲೋಕ-6)
ಮೂಲಮ್
ಬ್ರೂಹಿ ಮೇ ನ ಹಿ ಗೋಪ್ಯಂ ಚೇತ್ಕರವಾಣಿ ತವ ಪ್ರಿಯಮ್ ।
ನ್ಯಾಯ್ಯಂ ಚೇದ್ ಬ್ರೂಹಿ ರಾಜೇಂದ್ರ ವೃಜಿನಂ ಮಾಂ ಸ್ಪೃಶೇನ್ನಹಿ ॥
ಅನುವಾದ
ಅದು ರಹಸ್ಯವಲ್ಲದಿದ್ದರೆ ನನಗೆ ಹೇಳು; ನಿನಗೆ ಪ್ರಿಯವಾದುದನ್ನು ಮಾಡುವೆನು. ಎಲೈ ರಾಜೇಂದ್ರಾ! ಅದನ್ನು ಮಾಡುವುದರಿಂದ ನನಗೆ ಪಾಪವೇನೂ ಅಂಟಿಕೊಳ್ಳದೇ ನ್ಯಾಯಸಮ್ಮತವಾದರೆ ಅಂಥ ಕಾರ್ಯವನ್ನು ಹೇಳು, ನಾನು ಮಾಡುವೆ. ॥6॥
(ಶ್ಲೋಕ-7)
ಮೂಲಮ್ (ವಾಚನಮ್)
ರಾವಣ ಉವಾಚ
ಮೂಲಮ್
ಅಸ್ತಿ ರಾಜಾ ದಶರಥಃ ಸಾಕೇತಾಧಿಪತಿಃ ಕಿಲ ।
ರಾಮನಾಮಾ ಸುತಸ್ತಸ್ಯ ಜ್ಯೇಷ್ಠಃ ಸತ್ಯಪರಾಕ್ರಮಃ ॥
ಅನುವಾದ
ರಾವಣ ಹೇಳಿದನು — ಮಾವಾ! ಅಯೋಧ್ಯಾಧಿಪತಿಯಾದ ದಶರಥನೆಂಬ ರಾಜನು ಇದ್ದನಷ್ಟೆ! ಅವನ ಹಿರಿಯ ಮಗ ಸತ್ಯ ಪರಾಕ್ರಮಿಯಾದ ರಾಮನೆಂಬುವನು ಇದ್ದಾನೆ. ॥7॥
(ಶ್ಲೋಕ-8)
ಮೂಲಮ್
ವಿವಾಸಯಾಮಾಸ ಸುತಂ ವನಂ ವನಜನಪ್ರಿಯಮ್ ।
ಭಾರ್ಯಯಾ ಸಹಿತಂ ಭ್ರಾತ್ರಾ ಲಕ್ಷ್ಮಣೇನ ಸಮನ್ವಿತಮ್ ॥
ಅನುವಾದ
ಆ ದಶರಥನು ಮುನಿಜನಪ್ರಿಯನಾದ ತನ್ನ ಮಗ ರಾಮನನ್ನು ಅವನ ಪತ್ನೀ ಸೀತೆ ಮತ್ತು ಸಹೋದರ ಲಕ್ಷ್ಮಣ ಸಹಿತ ಕಾಡಿಗೆ ಅಟ್ಟಿದನು. ॥8॥
(ಶ್ಲೋಕ-9)
ಮೂಲಮ್
ಸ ಆಸ್ತೇ ವಿಪಿನೇ ಘೋರೇ ಪಂಚವಟ್ಯಾಶ್ರಮೇ ಶುಭೇ ।
ತಸ್ಯ ಭಾರ್ಯಾ ವಿಶಾಲಾಕ್ಷೀ ಸೀತಾ ಲೋಕವಿಮೋಹಿನೀ ॥
ಅನುವಾದ
ಅವನು ಭಯಂಕರವಾದ ಕಾಡಿನಲ್ಲಿರುವ ಪಂಚವಟಿಯಲ್ಲಿ ಶೋಭಾಯ ಮಾನವಾದ ಆಶ್ರಮದಲ್ಲಿ ವಾಸವಾಗಿರುವನು. ಲೋಕವನ್ನೇ ಮೋಹಗೊಳಿಸುವಂತಹ ಅವನ ಹೆಂಡತಿಯಾದ ವಿಶಾಲ ಲೋಚನೆಯಾದ ಸೀತೆಯೆಂಬುವಳು ಇರುವಳೆಂದು ಕೇಳಿದ್ದೇನೆ. ॥9॥
(ಶ್ಲೋಕ-10)
ಮೂಲಮ್
ರಾಮೋ ನಿರಪರಾಧಾನ್ಮೇ ರಾಕ್ಷಸಾನ್ ಭೀಮವಿಕ್ರಮಾನ್ ।
ಖರಂ ಚ ಹತ್ವಾ ವಿಪಿನೇ ಸುಖಮಾಸ್ತೇಽತಿನಿರ್ಭಯಃ ॥
ಅನುವಾದ
ಆ ರಾಮನು ಭಯಂಕರ ವಾದ ಪರಾಕ್ರಮದಿಂದ ಕೂಡಿದ ನನ್ನ ಕಡೆಯ ನಿರಪರಾಧೀ ರಾಕ್ಷಸರನ್ನೂ, ತಮ್ಮನಾದ ಖರನ ಸಹಿತ ಕೊಂದುಹಾಕಿ ಆ ತಪೋವನದಲ್ಲಿ ನಿರ್ಭಯನಾಗಿ ಆನಂದದಿಂದ ಇದ್ದಾನೆ. ॥10॥
(ಶ್ಲೋಕ-11)
ಮೂಲಮ್
ಭಗಿನ್ಯಾಃ ಶೂರ್ಪಣಖಾಯಾ ನಿರ್ದೋಷಾಯಾಶ್ಚ ನಾಸಿಕಾಮ್ ।
ಕರ್ಣೌ ಚಿಚ್ಛೇದ ದುಷ್ಟಾತ್ಮಾ ವನೇ ತಿಷ್ಠತಿ ನಿರ್ಭಯಃ ॥
ಅನುವಾದ
ನನ್ನ ಸೋದರಿಯಾದ ಶೂರ್ಪನಖಿಯು ಏನೂ ತಪ್ಪು ಮಾಡದೆ ಅವಳ ಕಿವಿ-ಮೂಗನ್ನು ಕತ್ತರಿಸಿಬಿಟ್ಟನು ಹಾಗೂ ಈಗ ನಿರ್ಭಯನಾಗಿ ಆ ವನದಲ್ಲಿರುತ್ತಾನೆ. ॥11॥
(ಶ್ಲೋಕ-12)
ಮೂಲಮ್
ಅತಸ್ತ್ವಯಾ ಸಹಾಯೇನ ಗತ್ವಾ ತತ್ಪ್ರಾಣವಲ್ಲಭಾಮ್ ।
ಆನಯಿಷ್ಯಾಮಿ ವಿಪಿನೇ ರಹಿತೇ ರಾಘವೇಣ ತಾಮ್ ॥
ಅನುವಾದ
ಆದ್ದರಿಂದ ನಿನ್ನ ಸಹಾಯವನ್ನು ಪಡೆದು ಅಲ್ಲಿಗೆ ಹೋಗಿ ಆಶ್ರಮದಲ್ಲಿ ರಾಮನಿಲ್ಲದ ಸಮಯದಲ್ಲಿ ಆತನ ಪ್ರಿಯ ಪತ್ನಿಯಾದ ಸೀತೆಯನ್ನು ತರಬೇಕೆಂದು ನಿಶ್ಚಯಿಸಿರುವೆನು. ॥12॥
(ಶ್ಲೋಕ-13)
ಮೂಲಮ್
ತ್ವಂ ತು ಮಾಯಾಮೃಗೋ ಭೂತ್ವಾ ಹ್ಯಾಶ್ರಮಾದಪನೇಷ್ಯಸಿ ।
ರಾಮಂ ಚ ಲಕ್ಷ್ಮಣಂ ಚೈವ ತದಾ ಸೀತಾಂ ಹರಾಮ್ಯಹಮ್ ॥
ಅನುವಾದ
ನೀನು ಮಾಯಾಮೃಗವಾಗಿ ರಾಮ-ಲಕ್ಷ್ಮಣರನ್ನು ಉಪಾಯವಾಗಿ ಆಶ್ರಮದಿಂದ ದೂರ ಕರೆದೊಯ್ದು ಬಿಡು. ಆಗ ನಾನು ಸೀತೆಯನ್ನು ಕದ್ದುಕೊಂಡು ಹೋಗುವೆನು. ॥13॥
(ಶ್ಲೋಕ-14)
ಮೂಲಮ್
ತ್ವಂ ತು ತಾವತ್ಸಹಾಯಂ ಮೇ ಕೃತ್ವಾ ಸ್ಥಾಸ್ಯಸಿ ಪೂರ್ವವತ್ ।
ಇತ್ಯೇವಂ ಭಾಷಮಾಣಂ ತಂ ರಾವಣಂ ವೀಕ್ಷ್ಯ ವಿಸ್ಮಿತಃ ॥
ಅನುವಾದ
ಈ ಪ್ರಕಾರ ನೀನು ಸಹಾಯಮಾಡಿ ಹಿಂದಿನಂತೆಯೇ ತನ್ನ ಆಶ್ರಮದಲ್ಲಿ ಇದ್ದು ಕೊಂಡಿರು. ರಾವಣನ ಈ ಮಾತುಗಳನ್ನು ಕೇಳಿದ ಮಾರೀಚನು ಆಶ್ಚರ್ಯ ಚಕಿತನಾಗಿ ಇಂತೆಂದನು ॥14॥
(ಶ್ಲೋಕ-15)
ಮೂಲಮ್
ಕೇನೇದಮುಪದಿಷ್ಟಂ ತೇ ಮೂಲಘಾತಕರಂ ವಚಃ ।
ಸ ಏವ ಶತ್ರುರ್ವಧ್ಯಶ್ಚ ಯಸ್ತ್ವನ್ನಾಶಂ ಪ್ರತೀಕ್ಷತೇ ॥
(ಶ್ಲೋಕ-16)
ಮೂಲಮ್
ರಾಮಸ್ಯ ಪೌರುಷಂ ಸ್ಮೃತ್ವಾ ಚಿತ್ತಮದ್ಯಾಪಿ ರಾವಣ ।
ಬಾಲೋಽಪಿ ಮಾಂ ಕೌಶಿಕಸ್ಯ ಯಜ್ಞಸಂರಕ್ಷಣಾಯ ಸಃ ॥
(ಶ್ಲೋಕ-17)
ಮೂಲಮ್
ಆಗತಸ್ತ್ವಿಷುಣೈಕೇನ ಪಾತಯಾಮಾಸ ಸಾಗರೇ ।
ಯೋಜನಾನಾಂ ಶತಂ ರಾಮಸ್ತದಾದಿ ಭಯವಿಹ್ವಲಃ ॥
(ಶ್ಲೋಕ-18)
ಮೂಲಮ್
ಸ್ಮೃತ್ವಾ ಸ್ಮೃತ್ವಾ ತದೇವಾಹಂ ರಾಮಂ ಪಶ್ಯಾಮಿ ಸರ್ವತಃ ॥
ಅನುವಾದ
‘‘ರಾವಣೇಶ್ವರಾ! ಕುಲವನ್ನೇ ನಾಶಮಾಡುವ ಈ ಮಾತನ್ನು ನಿನಗೆ ಯಾರು ಹೇಳಿದರು? ನಿನ್ನ ನಾಶವನ್ನು ನಿರೀಕ್ಷಿಸುತ್ತಿರುವ ಆ ಶತ್ರುವು ವಧಾರ್ಹನೇ ಸರಿ! ಎಲೈ ರಾವಣಾ! ರಾಮನ ಪರಾಕ್ರಮವನ್ನು ನೆನೆಸಿಕೊಂಡರೆ ಈಗಲೂ ನನ್ನ ಮನಸ್ಸು ಭಯಗೊಳ್ಳುತ್ತದೆ. ಬಾಲಕನಾಗಿರುವಾಗಲೇ ವಿಶ್ವಾಮಿತ್ರನ ಯಜ್ಞವನ್ನು ಕಾಪಾಡಲು ಬಂದಿದ್ದನು. ಆಗ ಅವನು ಒಂದೇ ಬಾಣದಿಂದ ನೂರು ಯೋಜನ ದೂರಕ್ಕೆ ಸಮುದ್ರದಲ್ಲಿ ನನ್ನನ್ನು ಕೆಡಹಿಬಿಟ್ಟಿದ್ದನು. ಅಂದಿನಿಂದಲೂ ಹೆದರಿದವನಾಗಿ ರಾಮನನ್ನು ನೆನೆದುಕೊಂಡರೇ ಸಾಕು, ಎಲ್ಲೆಲ್ಲೂ ಅವನೇ ಕಂಗೊಳಿಸುತ್ತಿದ್ದಾನೆ. ॥15-18॥
(ಶ್ಲೋಕ-19)
ಮೂಲಮ್
ದಂಡಕೇಽಪಿ ಪುನರಪ್ಯಹಂ ವನೇ
ಪೂರ್ವವೈರಮನುಚಿಂತಯನ್ ಹೃದಿ ।
ತೀಕ್ಷ್ಣಶೃಂಗಮೃಗರೂಪಮೇಕದಾ
ಮಾದೃಶೈರ್ಬಹುಭಿರಾವೃತೋಽಭ್ಯಯಾಮ್ ॥
(ಶ್ಲೋಕ-20)
ಮೂಲಮ್
ರಾಘವಂ ಜನಕಜಾಸಮನ್ವಿತಂ
ಲಕ್ಷ್ಮಣೇನ ಸಹಿತಂ ತ್ವರಾನ್ವಿತಃ ।
ಆಗತೋಽಹಮಥ ಹಂತುಮುದ್ಯತೋ
ಮಾಂ ವಿಲೋಕ್ಯ ಶರಮೇಕಮಕ್ಷಿಪತ್ ॥
(ಶ್ಲೋಕ-21)
ಮೂಲಮ್
ತೇನ ವಿದ್ಧಹೃದಯೋಽಹಮುದ್ ಭ್ರಮನ್
ರಾಕ್ಷಸೇಂದ್ರ ಪತಿತೋಽಸ್ಮಿ ಸಾಗರೇ ।
ತತ್ಪ್ರಭೃತ್ಯಹಮಿದಂ ಸಮಾಶ್ರಿತಃ
ಸ್ಥಾನ ಮೂರ್ಜಿತಮಿದಂ ಭಯಾರ್ದಿತಃ ॥
ಅನುವಾದ
ಒಂದುದಿನ ನಾನು ಹಿಂದಿನ ದ್ವೇಷವನ್ನು ನೆನೆದು ದಂಡಕಾರಣ್ಯದಲ್ಲಿಯೂ ಚೂಪಾದ ಕೋಡುಗಳುಳ್ಳ ಒಂದು ಮೃಗದ ರೂಪವನ್ನು ಧರಿಸಿ, ನನ್ನಂತೆಯೇ ರೂಪವುಳ್ಳ ಅನೇಕ ರಾಕ್ಷಸರಿಂದೊಡಗೂಡಿ ಲಕ್ಷ್ಮಣ, ಸೀತೆಯಿಂದೊಡಗೂಡಿದ್ದ ರಾಮನನ್ನು ಕೊಲ್ಲಲು ವೇಗವಾಗಿ ಬಳಿಸಾರಿ ತಿವಿಯಲು ಪ್ರಯತ್ನಿಸಿದೆನು. ಅವನು ನನ್ನನ್ನು ನೋಡುತ್ತಲೇ ಒಂದು ಬಾಣವನ್ನು ಪ್ರಯೋಗಿಸಿದನು. ಹೇ ರಾಕ್ಷಸೇಶ್ವರಾ! ಆ ಬಾಣದ ಹೊಡೆತಕ್ಕೆ ಆಕಾಶದಲ್ಲಿ ಗಿರಗಿರನೆ ತಿರುಗುತ್ತಾ ಸಮುದ್ರದಲ್ಲಿ ಬಿದ್ದುಬಿಟ್ಟೆನು. ಅಂದಿನಿಂದ ನಾನು ಈ ಸ್ಥಳವನ್ನಾಶ್ರಯಿಸಿ ಶ್ರೇಷ್ಠವಾದ ತಪೋವನದಲ್ಲಿ ಇನ್ನೂ ಹೆದರಿಕೆಯಿಂದಲೇ ವಾಸಿಸುತ್ತಿರುವೆನು. ॥19-21॥
(ಶ್ಲೋಕ-22)
ಮೂಲಮ್
ರಾಮಮೇವ ಸತತಂ ವಿಭಾವಯೇ
ಭೀತಭೀತ ಇವ ಭೋಗರಾಶಿತಃ ।
ರಾಜರತ್ನರಮಣೀರಥಾದಿಕಂ
ಶ್ರೋತ್ರಯೋರ್ಯದಿ ಗತಂ ಭಯಂ ಭವೇತ್ ॥
ಅನುವಾದ
ಭೋಗ್ಯ ಪದಾರ್ಥಗಳಲ್ಲಿ ಹೆದರಿಕೆಯುಂಟಾಗಿ ಯಾವಾಗಲೂ ಶ್ರೀರಾಮನನ್ನೇ ಕುರಿತು ಚಿಂತಿಸುತ್ತಿರುವೆನು. ರಾಜ, ರತ್ನ, ರಮಣೀ, ರಥ ಎಂಬೀ ರೀತಿಯ ‘ರ’ ಕಾರದಿಂದ ಪ್ರಾರಂಭವಾಗುವ ಶಬ್ದಗಳು ಕಿವಿಗೆ ಬಿದ್ದರೂ ಸಾಕು, ರಾಮನ ನೆನಪಾಗಿ ಭಯವಿಹ್ವಲನಾಗುತ್ತೇನೆ. ॥22॥
(ಶ್ಲೋಕ-23)
ಮೂಲಮ್
ರಾಮ ಆಗತ ಇಹೇತಿ ಶಂಕಯಾ
ಬಾಹ್ಯಕಾರ್ಯಮಪಿ ಸರ್ವಮತ್ಯಜಮ್ ।
ನಿದ್ರಯಾ ಪರಿವೃತೋ ಯದಾ ಸ್ವಪೇ
ರಾಮಮೇವ ಮನಸಾನುಚಿಂತಯನ್ ॥
(ಶ್ಲೋಕ-24)
ಮೂಲಮ್
ಸ್ವಪ್ನದೃಷ್ಟಿಗತರಾಘವಂ ತದಾ
ಬೋಧಿತೋ ವಿಗತನಿದ್ರ ಆಸ್ಥಿತಃ ।
ತದ್ಭವಾನಪಿ ವಿಮುಚ್ಯ ಚಾಗ್ರಹಂ
ರಾಘವಂ ಪ್ರತಿ ಗೃಹಂ ಪ್ರಯಾಹಿ ಭೋಃ ॥
ಅನುವಾದ
ಇಲ್ಲಿಗೆ ರಾಮನು ಬಂದನು ಎಂಬ ಆಶಂಕೆಯಿಂದ ನಾನು ಹೊರಗಿನ ಚಟುವಟಿಕೆಗಳನ್ನು ಬಿಟ್ಟು ಬಿಟ್ಟಿರುವೆನು. ನಿದ್ರೆಯ ಜೊಂಪು ಹತ್ತಿದಾಗ ರಾಮನನ್ನೇ ನೆನೆಯುತ್ತಾ ಮಲಗುವೆ ಆದ್ದರಿಂದ ಕನಸಿನಲ್ಲಿಯೂ ರಾಮನನ್ನು ಕಂಡಂತಾಗಿ ಎಚ್ಚರವಾಗಿ ಬಿಡುತ್ತೇನೆ. ಹೀಗೆ ಶ್ರೀರಾಮನ ವಿಷಯದಲ್ಲಿ ನನಗೆ ಉಂಟಾಗಿರುವ ಭಯಾನಕ ಸ್ಥಿತಿಯನ್ನು ಅರಿತುಕೊಂಡು, ರಾವಣಾ! ನೀನು ಕೂಡ ರಾಮನ ವಿಷಯವಾಗಿ ಹಟವನ್ನು ಬಿಟ್ಟು ಮನೆಗೆ ಹಿಂತಿರುಗು. ॥23-24॥
(ಶ್ಲೋಕ-25)
ಮೂಲಮ್
ರಕ್ಷ ರಾಕ್ಷಸಕುಲಂ ಚಿರಾಗತಂ
ತತಸ್ಮೃತೌ ಸಕಲಮೇವ ನಶ್ಯತಿ ।
ತವ ಹಿತಂ ವದತೋ ಮಮ ಭಾಷಿತಂ
ಪರಿಗೃಹಾಣ ಪರಾತ್ಮನಿ ರಾಘವೇ ॥
(ಶ್ಲೋಕ-26)
ಮೂಲಮ್
ತ್ಯಜ ವಿರೋಧಮತಿಂ ಭಜ ಭಕ್ತಿತಃ
ಪರಮಕಾರುಣಿಕೋ ರಘುನಂದನಃ ।
ಅಹಮಶೇಷಮಿದಂ ಮುನಿವಾಕ್ಯತೋಽ-
ಶೃಣವಮಾದಿಯುಗೇ ಪರಮೇಶ್ವರಃ ॥
(ಶ್ಲೋಕ-27)
ಮೂಲಮ್
ಬ್ರಹ್ಮಣಾರ್ಥಿತ ಉವಾಚ ತಂ ಹರಿಃ
ಕಿಂ ತವೇಪ್ಸಿತಮಹಂ ಕರವಾಣಿ ತತ್ ।
ಬ್ರಹ್ಮಣೋಕ್ತಮರವಿಂದಲೋಚನ
ತ್ವಂ ಪ್ರಯಾಹಿ ಭುವಿ ಮಾನುಷಂ ವಪುಃ ।
ದಶರಥಾತ್ಮಜಭಾವಮಂಜಸಾ
ಜಹಿ ರಿಪುಂ ದಶಕಂಧರಂ ಹರೇ ॥
ಅನುವಾದ
ಬಹಳ ಕಾಲದಿಂದ ನಡೆದು ಬಂದಿರುವ ರಾಕ್ಷಸವಂಶವನ್ನು ಕಾಪಾಡು. ಶ್ರೀರಾಮನಲ್ಲಿ ವೈರವನ್ನು ಮಾಡಬೇಡ. ಆ ಶ್ರೀರಾಮನನ್ನು (ವೈರಭಾವದಿಂದ) ನೆನೆದುಕೊಂಡಲ್ಲಿ ಸರ್ವಸ್ವ ನಾಶವಾಗುತ್ತದೆ. ನಿನ್ನ ಹಿತಕ್ಕಾಗಿ ಹೇಳುತ್ತಿರುವ ನನ್ನ ಮಾತನ್ನು ಸ್ವೀಕರಿಸು. ಪರಮಾತ್ಮನಾದ ರಾಮನಲ್ಲಿ ವೈರಬುದ್ಧಿಯನ್ನು ಬಿಟ್ಟು ಬಿಡು. ಭಕ್ತಿ ಭಾವದಿಂದ ಅವನ ಭಜನೆ ಮಾಡು; ಏಕೆಂದರೆ ರಘುನಂದನನು ಪರಮ ದಯಾಮೂರ್ತಿಯಾಗಿದ್ದಾನೆ. ನಾನು ಇದೆಲ್ಲವನ್ನು ನಾರದ ಋಷಿಗಳ ಮುಖಾಂತರ ಕೇಳಿರುವೆನು. ಕೃತಯುಗದಲ್ಲಿ ಬ್ರಹ್ಮದೇವರು ಶ್ರೀಮನ್ನಾರಾಯಣನನ್ನು ಪ್ರಾರ್ಥಿಸಿದಾಗ ಶ್ರೀಹರಿಯು ‘ನಿನ್ನ ಕೊರಿಕೆಯೇನು? ನಾನು ಅದನ್ನು ನಡೆಸಿಕೊಡುತ್ತೇನೆ’ ಎಂದು ಹೇಳಿದನು. ಆಗ ಬ್ರಹ್ಮದೇವರು ‘ಹೇ ಕಮಲನಯನ ಶ್ರೀಹರಿಯೆ! ನೀನು ಭೂಲೋಕದಲ್ಲಿ ಮನುಷ್ಯ ಶರೀರಧಾರಿಯಾಗಿ ದಶರಥನ ಮಗನಾಗಿ ಅವತರಿಸಿ ದೇವಶತ್ರುವಾದ ದಶಕಂಠನನ್ನು ವಧಿಸುವವನಾಗು’ ಎಂದು ಬೇಡಿಕೊಂಡರು. ॥25-27॥
(ಶ್ಲೋಕ-28)
ಮೂಲಮ್
ಅತೋ ನ ಮಾನುಷೋ ರಾಮಃ ಸಾಕ್ಷಾನ್ನಾರಾಯಣೋಽವ್ಯಯಃ ।
ಮಾಯಾಮಾನುಷವೇಷೇಣ ವನಂ ಯಾತೋತಿನಿರ್ಭಯಃ ॥
(ಶ್ಲೋಕ-29)
ಮೂಲಮ್
ಭೂಭಾರಹರಣಾರ್ಥಾಯ ಗಚ್ಛ ತಾತ ಗೃಹಂ ಸುಖಮ್ ।
ಶ್ರುತ್ವಾ ಮಾರೀಚವಚನಂ ರಾವಣಃ ಪ್ರತ್ಯಭಾಷತ ॥
ಅನುವಾದ
ಆದ್ದರಿಂದ ಶ್ರೀರಾಮನು ಮನುಷ್ಯನಲ್ಲ. ನಾಶರಹಿತನಾದ ಸಾಕ್ಷಾತ್ ನಾರಾಯಣನೇ ಆಗಿದ್ದಾನೆ. ಮಾಯಾಮಾನು ಷವೇಷದಿಂದ ಭೂಭಾರವನ್ನು ಕಳೆಯುವುದಕ್ಕಾಗಿ ನಿರ್ಭಯನಾಗಿ ಕಾಡಿಗೆ ಬಂದಿರುವನು. ಆದ್ದರಿಂದ, ಅಯ್ಯಾ ರಾವಣಾ! ಸುಖವಾಗಿ ನೀನು ಲಂಕೆಗೆ ಮರಳು’’ ಎಂದು ಹೇಳಿದನು. ಮಾರೀಚನ ಮಾತುಗಳನ್ನು ಕೇಳಿದ ರಾವಣನು ಹೇಳಿದನು. ॥28-29॥
(ಶ್ಲೋಕ-30)
ಮೂಲಮ್
ಪರಮಾತ್ಮಾ ಯದಾ ರಾಮಃ ಪ್ರಾರ್ಥಿತೋ ಬ್ರಹ್ಮಣಾ ಕಿಲ ।
ಮಾಂ ಹಂತುಂ ಮಾನುಷೋ ಭೂತ್ವಾ ಯತ್ನಾದಿಹ ಸಮಾಗತಃ ॥
(ಶ್ಲೋಕ-31)
ಮೂಲಮ್
ಕರಿಷ್ಯತ್ಯಚಿರಾದೇವ ಸತ್ಯಸಂಕಲ್ಪ ಈಶ್ವರಃ ।
ಅತೋಽಹಂ ಯತ್ನತಃ ಸೀತಾಮಾನೇಷ್ಯಾಮ್ಯೇವ ರಾಘವಾತ್ ॥
ಅನುವಾದ
‘‘ಬ್ರಹ್ಮನ ಪ್ರಾರ್ಥನೆಯಂತೆ ಪರಮಾತ್ಮನೇ ರಾಮನಾಗಿ ಮನುಷ್ಯರೂಪದಿಂದ ಉದ್ದೇಶ ಪೂರ್ವಕವಾಗಿ ಇಲ್ಲಿಗೆ ಬಂದಿರುವನಾದರೆ, ಸತ್ಯಸಂಕಲ್ಪನಾದ ಅವನು ಶೀಘ್ರದಲ್ಲೇ ಆ ನಿಶ್ಚಯವನ್ನು ಕಾರ್ಯಗತಮಾಡುವನು. ಆದ್ದರಿಂದಲೇ ನಾನು ಪ್ರಯತ್ನಪೂರ್ವಕವಾಗಿ ಸೀತೆಯನ್ನು ರಾಮನ ಕಡೆಯಿಂದ ಅಪಹರಿಸಿ ತರುವೆನು. ॥30-31॥
(ಶ್ಲೋಕ-32)
ಮೂಲಮ್
ವಧೆ ಪ್ರಾಪ್ತೇ ರಣೇ ವೀರ ಪ್ರಾಪ್ಸ್ಯಾಮಿ ಪರಮಂ ಪದಮ್ ।
ಯದ್ವಾ ರಾಮಂ ರಣೇ ಹತ್ವಾ ಸೀತಾಂ ಪ್ರಾಪ್ಸ್ಯಾಮಿ ನಿರ್ಭಯಃ ॥
ಅನುವಾದ
ಎಲೈ ವೀರನೆ! ಯುದ್ಧದಲ್ಲಿ ನನಗೆ ಸಾವು ಸಂಭವಿಸಿದರೆ ಪರಮಪದವಿಯನ್ನೇ ಹೊಂದುವೆನು. ಹಾಗಿಲ್ಲವಾದರೆ ರಾಮನನ್ನೇ ರಣದಲ್ಲಿ ನಾಶಮಾಡಿ ಸೀತೆಯನ್ನು ನಿರ್ಭಯವಾಗಿ ಪಡೆದುಕೊಳ್ಳುವೆನು. ॥32॥
(ಶ್ಲೋಕ-33)
ಮೂಲಮ್
ತದುತ್ತಿಷ್ಠ ಮಹಾಭಾಗ ವಿಚಿತ್ರಮೃಗರೂಪಧೃಕ್ ।
ರಾಮಂ ಸಲಕ್ಷ್ಮಣಂ ಶೀಘ್ರಮಾಶ್ರಮಾದತಿದೂರತಃ ॥
(ಶ್ಲೋಕ-34)
ಮೂಲಮ್
ಆಕ್ರಮ್ಯ ಗಚ್ಛ ತ್ವಂ ಶೀಘ್ರಂ ಸುಖಂ ತಿಷ್ಠ ಯಥಾ ಪುರಾ ।
ಅತಃ ಪರಂ ಚೇದ್ಯತ್ಕಿಂಚಿದ್ಭಾಷಸೇ ಮದ್ವಿಭೀಷಣಮ್ ॥
(ಶ್ಲೋಕ-35)
ಮೂಲಮ್
ಹನಿಷ್ಯಾಮ್ಯಸಿನಾನೇನ ತ್ವಾಮತ್ರೈವ ನ ಸಂಶಯಃ ।
ಮಾರೀಚಸ್ತದ್ವಚಃ ಶ್ರುತ್ವಾ ಸ್ವಾತ್ಮನ್ಯೇವಾನ್ವಚಿಂತಯತ್ ॥
ಅನುವಾದ
ಹೇ ಮಹಾಭಾಗನೆ! ಆದ್ದರಿಂದ ಎದ್ದೇಳು. ನೀನು ವಿಚಿತ್ರವಾದ ಮನೋಹರವಾದ ಜಿಂಕೆಯ ರೂಪವನ್ನು ಧರಿಸಿ, ಲಕ್ಷ್ಮಣ ಸಹಿತ ರಾಮನನ್ನು ಆಶ್ರಮದಿಂದ ಬಹಳ ದೂರಕ್ಕೆ ಕರೆದೊಯ್ಯುಲು ಬೇಗನೇ ಹೊರಡು. ಅನಂತರ ಹಿಂದಿನಂತೆ ನಿನ್ನ ಆಶ್ರಮದಲ್ಲಿ ಸುಖವಾಗಿರು. ಹಾಗಿಲ್ಲದೆ ಇಷ್ಟರಮೇಲೂ ನೀನೇನಾದರು ನನ್ನನ್ನು ಹೆದರಿಸುವಂತಹ ಮಾತನ್ನಾಡಿದರೆ ಈಗಲೇ ಇಲ್ಲಿಯೇ ನಿನ್ನನ್ನು ಖಡ್ಗದಿಂದ ಕತ್ತರಿಸಿ ಬಿಡುತ್ತೇನೆ. ಇದರಲ್ಲಿ ಸಂಶಯವಿಲ್ಲ.’’ ಎಂದು ಗದರಿಸಿದನು. ರಾವಣನ ಈ ಮಾತನ್ನು ಕೇಳಿದ ಮಾರೀಚನು ತನ್ನಲ್ಲಿಯೇ ಹೀಗೆಂದು ಆಲೋಚಿಸಿಕೊಂಡನು ॥33-35॥
(ಶ್ಲೋಕ-36)
ಮೂಲಮ್
ಯದಿ ಮಾಂ ರಾಘವೋ ಹನ್ಯಾತ್ತದಾ ಮುಕ್ತೋ ಭವಾರ್ಣವಾತ್ ।
ಮಾಂ ಹನ್ಯಾದ್ಯದಿ ಚೇದ್ದುಷ್ಟಸ್ತದಾ ಮೇ ನಿರಯೋ ಧ್ರುವಮ್ ॥
(ಶ್ಲೋಕ-37)
ಮೂಲಮ್
ಇತಿ ನಿಶ್ಚಿತ್ಯ ಮರಣಂ ರಾಮಾದುತ್ಥಾಯ ವೇಗತಃ ।
ಅಬ್ರವೀದ್ರಾವಣಂ ರಾಜನ್ಕರೋಮ್ಯಾಜ್ಞಾಂ ತವ ಪ್ರಭೋ ॥
ಅನುವಾದ
ಒಂದು ವೇಳೆ ಶ್ರೀರಾಮನು ನನ್ನನ್ನು ಕೊಂದರೆ ಸಂಸಾರಸಾಗರದಿಂದ ಪಾರಾಗಿ ಹೋಗುವೆ. ಆದರೆ ಈ ದುಷ್ಟನೇನಾದರು ಕೊಂದರೆ ನಾನು ಖಂಡಿತವಾಗಿ ನರಕಕ್ಕೆ ಹೋಗುವೆನು. ಆದ್ದರಿಂದ ಶ್ರೀರಾಮನ ಕೈಯಿಂದಲೇ ಸಾಯುವುದು ಎಂದು ನಿಶ್ಚಯಿಸಿಕೊಂಡು, ಬೇಗನೇ ಎದ್ದು ರಾವಣನಲ್ಲಿ ‘‘ಹೇ ರಾಜನೆ! ಪ್ರಭುವೆ! ನಿನ್ನ ಅಪ್ಪಣೆಯನ್ನು ಅವಶ್ಯವಾಗಿ ಪಾಲಿಸುವೆನು’’ ಎಂದು ಹೇಳಿದನು. ॥36-37॥
(ಶ್ಲೋಕ-38)
ಮೂಲಮ್
ಇತ್ಯುಕ್ತ್ವಾ ರಥಮಾಸ್ಥಾಯ ಗತೋ ರಾಮಾಶ್ರಮಂ ಪ್ರತಿ ।
ಶುದ್ಧಜಾಂಬೂನದಪ್ರಖ್ಯೋ ಮೃಗೋಽಭೂದ್ರೌಪ್ಯಬಿಂದುಕಃ ॥
(ಶ್ಲೋಕ-39)
ಮೂಲಮ್
ರತ್ನಶೃಂಗೋ ಮಣಿಖುರೋ ನೀಲರತ್ನವಿಲೋಚನಃ ।
ವಿದ್ಯುತ್ಪ್ರಭೋ ವಿಮುಗ್ಧಾಸ್ಯೋ ವಿಚಚಾರ ವನಾಂತರೇ ॥
(ಶ್ಲೋಕ-40)
ಮೂಲಮ್
ರಾಮಾಶ್ರಮಪದಸ್ಯಾಂತೇ ಸೀತಾದೃಷ್ಟಿಪಥೇ ಚರನ್ ॥
ಅನುವಾದ
ಹೀಗೆ ಹೇಳಿ ಮಾರೀಚನು (ರಾವಣನ) ರಥವನ್ನೇರಿ ಶ್ರೀರಾಮನ ಆಶ್ರಮಕ್ಕೆ ಹೊರಟನು. ದಂಡಕಾರಣ್ಯಕ್ಕೆ ಬಂದು ಪುಟವಿಟ್ಟ ಚಿನ್ನದಂತೆ ಹೊಳೆಯುತ್ತಾ, ಬೆಳ್ಳಿಯ ಮಚ್ಚೆಗಳುಳ್ಳ, ರತ್ನದ ಕೋಡುಗಳು, ವಜ್ರದ ಗೊರಸುಗಳು, ನೀಲಮಣಿ ಯಂತಿರುವ ಕಣ್ಣುಗಳು, ಮಿಂಚಿನ ಕಾಂತಿಯಿಂದ, ಮುದ್ದಾದ ಮುಖವುಳ್ಳ ಜಿಂಕೆಯ ರೂಪವನ್ನು ಧರಿಸಿದನು. ಶ್ರೀರಾಮನ ಆಶ್ರಮದ ಸಮೀಪದಲ್ಲಿಯೇ, ಸೀತೆಗೆ ಗೋಚರಿಸುವಂತೆ ಉಪ ವನದಲ್ಲಿ ಸಂಚರಿಸ ತೊಡಗಿದನು. ॥38-40॥
(ಶ್ಲೋಕ-41)
ಮೂಲಮ್
ಕ್ಷಣಂ ಚ ಧಾವತ್ಯವತಿಷ್ಠತೇ ಕ್ಷಣಂ
ಸಮೀಪಮಾಗತ್ಯ ಪುನರ್ಭಯಾವೃತಃ ।
ಏವಂ ಸ ಮಾಯಾಮೃಗವೇಷರೂಪಧೃಕ್
ಚಚಾರ ಸೀತಾಂ ಪರಿಮೋಹಯನ್ ಖಲಃ ॥
ಅನುವಾದ
ಒಂದು ಕ್ಷಣಕಾಲ ಓಡುವುದು, ಮತ್ತೆ ನಿಲ್ಲುವುದು, ಹತ್ತಿರಕ್ಕೆ ಬರುವುದು, ಭಯದಿಂದ ಮತ್ತೆ ನೆಗೆಯುವುದು, ಹೀಗೆ ಮಾಯಾಮೃಗ ವೇಷಧಾರಿಯಾದ ಆ ದುಷ್ಟನು ಸೀತೆಯನ್ನು ವಂಚಿಸುತ್ತಾ ತಿರುಗುತ್ತಿದ್ದನು. ॥41॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.