[ಐದನೆಯ ಸರ್ಗ]
ಭಾಗಸೂಚನಾ
ಶೂರ್ಪನಖಿಗೆ ಶಿಕ್ಷೆ-ಖರ-ದೂಷಣಾದಿ ರಾಕ್ಷಸರ ವಧೆ ಮತ್ತು ಶೂರ್ಪನಖಿಯು ರಾವಣನ ಬಳಿಗೆ ಹೋಗುವುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತಸ್ಮಿನ್ ಕಾಲೇ ಮಹಾರಣ್ಯೇ ರಾಕ್ಷಸೀ ಕಾಮರೂಪಿಣೀ ।
ವಿಚಚಾರ ಮಹಾಸತ್ತ್ವಾ ಜನಸ್ಥಾನನಿವಾಸಿನೀ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಆ ಸಮಯದಲ್ಲಿ ಆ ಮಹಾಕಾಡಿನಲ್ಲಿ ಇಚ್ಛಾರೂಪವನ್ನು ಧರಿಸುವ ಶಕ್ತಿಯುಳ್ಳ, ಜನಸ್ಥಾನದಲ್ಲಿ ವಾಸವಾಗಿದ್ದ ಬಹಳ ಬಲಿಷ್ಠಳಾದ ರಾಕ್ಷಸಿಯೊಬ್ಬಳು ಸಂಚರಿಸುತ್ತಿದ್ದಳು. ॥1॥
(ಶ್ಲೋಕ-2)
ಮೂಲಮ್
ಏಕದಾ ಗೌತಮೀತೀರೇ ಪಂಚವಟ್ಯಾಃ ಸಮೀಪತಃ ।
ಪದ್ಮವಜ್ರಾಂಕುಶಾಂಕಾನಿ ಪದಾನಿ ಜಗತೀಪತೇಃ ॥
(ಶ್ಲೋಕ-3)
ಮೂಲಮ್
ದೃಷ್ಟ್ವಾ ಕಾಮಪರೀತಾತ್ಮಾ ಪಾದಸೌಂದರ್ಯಮೋಹಿತಾ ।
ಪಶ್ಯಂತೀ ಸಾ ಶನೈರಾಯಾದ್ರಾಘವಸ್ಯ ನಿವೇಶನಮ್ ॥
ಅನುವಾದ
ಒಂದು ದಿನ ಪಂಚವಟಿಯ ಸಮೀಪದಲ್ಲಿ ಗೌತಮೀನದಿಯ ತೀರದಲ್ಲಿ ಜಗತ್ಪತಿಯಾದ ಶ್ರೀರಾಮನ ಪದ್ಮ, ವಜ್ರ, ಅಂಕುಶಗಳ ಚಿಹ್ನೆಯುಳ್ಳ ಹೆಜ್ಜೆಯ ಗುರುತುಗಳನ್ನು ಕಂಡಳು. ಆಗ ಆಕೆಯು ಕಾಮ ಪೀಡಿತಳಾಗಿ ರಾಮನ ಕಾಲಿನ ಸೌಂದರ್ಯಕ್ಕೆ ಮರುಳಾಗಿ ಅವುಗಳನ್ನು ನೋಡುತ್ತಾ ಸುಂದರ ರೂಪವನ್ನು ಧರಿಸಿ ಮೆಲ್ಲನೆ ರಾಮನ ಕುಟೀರದ ಕಡೆಗೆ ಬಂದಳು. ॥2-3॥
(ಶ್ಲೋಕ-4)
ಮೂಲಮ್
ತತ್ರ ಸಾ ತಂ ರಮಾನಾಥಂ ಸೀತಯಾ ಸಹ ಸಂಸ್ಥಿತಮ್ ।
ಕಂದರ್ಪಸದೃಶಂ ರಾಮಂ ದೃಷ್ಟ್ವಾ ಕಾಮವಿಮೋಹಿತಾ ॥
(ಶ್ಲೋಕ-5)
ಮೂಲಮ್
ರಾಕ್ಷಸೀ ರಾಘವಂ ಪ್ರಾಹ ಕಸ್ಯ ತ್ವಂ ಕಃ ಕಿಮಾಶ್ರಮೇ ।
ಯುಕ್ತೋ ಜಟಾವಲ್ಕಲಾದ್ಯೆಃ ಸಾಧ್ಯಂ ಕಿಂ ತೇತ್ರ ಮೇ ವದ ॥
ಅನುವಾದ
ಆಕೆಯು ಅಲ್ಲಿ ಕೋಟಿಮನ್ಮಥ ಸಮಾನ ಸೌಂದರ್ಯವುಳ್ಳ ಲಕ್ಷ್ಮೀಪತಿಯಾದ ಶ್ರೀರಾಮಚಂದ್ರನು ಸೀತೆಯೊಡನೆ ಕುಳಿತಿರುವುದನ್ನು ಕಂಡು ಕಾಮಪರವಶಳಾದ ಆ ರಾಕ್ಷಸಿಯು ರಾಮನನ್ನು ಕುರಿತು ಇಂತೆಂದಳು — ‘‘ನೀನು ಯಾರ ಕಡೆಯವನು? ನಿನ್ನ ಹೆಸರೇನು? ಜಟಾವಲ್ಕಲಗಳನ್ನು ಧರಿಸಿಕೊಂಡು ಈ ಆಶ್ರಮದಲ್ಲಿ ಏನು ಮಾಡುತ್ತಿರುವೆ? ಇಲ್ಲಿದ್ದುಕೊಂಡು ಏನನ್ನು ಪಡೆಯಲು ಬಯಸುತ್ತಿರುವೆ? ನನಗೆ ಹೇಳು. ॥4-5॥
(ಶ್ಲೋಕ-6)
ಮೂಲಮ್
ಅಹಂ ಶೂರ್ಪಣಖಾ ನಾಮ ರಾಕ್ಷಸೀ ಕಾಮರೂಪಿಣೀ ।
ಭಗಿನೀ ರಾಕ್ಷಸೇಂದ್ರಸ್ಯ ರಾವಣಸ್ಯ ಮಹಾತ್ಮನಃ ॥
ಅನುವಾದ
ನಾನಾದರೋ ಮಹಾತ್ಮನಾದ ರಾಕ್ಷಸೇಂದ್ರನಾದ ರಾವಣನ ಸಹೋದರಿ ಹಾಗೂ ಇಚ್ಛಾರೂಪವನ್ನು ಧರಿಸಬಲ್ಲ ಶೂರ್ಪನಖೀ ಎಂಬ ರಾಕ್ಷಸಿಯಾಗಿರುವೆನು. ॥6॥
(ಶ್ಲೋಕ-7)
ಮೂಲಮ್
ಖರೇಣ ಸಹಿತಾ ಭ್ರಾತ್ರಾ ವಸಾಮ್ಯತ್ರೈವ ಕಾನನೇ ।
ರಾಜ್ಞಾ ದತ್ತಂ ಚ ಮೇ ಸರ್ವಂ ಮುನಿಭಕ್ಷಾ ವಸಾಮ್ಯಹಮ್ ॥
ಅನುವಾದ
ನಾನು ಇಲ್ಲೇ ಕಾಡಿನಲ್ಲಿ ಸೋದರನಾದ ಖರನೊಡನೆ ವಾಸಿಸುತ್ತಿರುವೆನು. ರಾಕ್ಷಸರಾಜನು ಈ ವನದ ಪೂರ್ಣ ಅಧಿಕಾರವನ್ನು ನನಗೆ ಒಪ್ಪಿಸಿರುವನು. ಋಷಿಗಳನ್ನು ತಿಂದು ಹಾಕುತ್ತಾ ನಾನು ಕಾಲಕಳೆಯುತ್ತಿದ್ದೇನೆ. ॥7॥
(ಶ್ಲೋಕ-8)
ಮೂಲಮ್
ತ್ವಾಂ ತು ವೇದಿತುಮಿಚ್ಛಾಮಿ ವದ ಮೇ ವದತಾಂ ವರ ।
ತಾಮಾಹ ರಾಮನಾಮಾಹಮಯೋಧ್ಯಾಧಿಪತೇಃ ಸುತಃ ॥
ಅನುವಾದ
ನೀನು ಯಾರೆಂದು ತಿಳಿಯಲಿಚ್ಛಿಸುವೆನು. ಮಾತಿನಲ್ಲಿ ಅತಿಜಾಣನಾದ ನೀನು ನಿನ್ನ ಊರು, ಹೆಸರು ಇತ್ಯಾದಿ ಪರಿಚಯವನ್ನು ಹೇಳು. ಆಗ ಭಗವಂತನು ಅವಳಲ್ಲಿ ಹೇಳುತ್ತಾನೆ — ‘‘ಅಯೋಧ್ಯಾಧಿಪತಿ ದಶರಥರಾಜನ ಪುತ್ರ-ರಾಮನೆಂಬುವವನು ನಾನೇ. ॥8॥
(ಶ್ಲೋಕ-9)
ಮೂಲಮ್
ಏಷಾ ಮೇ ಸುಂದರೀ ಭಾರ್ಯಾ ಸೀತಾ ಜನಕನಂದಿನೀ ।
ಸ ತು ಭ್ರಾತಾ ಕನೀಯಾನ್ಮೇ ಲಕ್ಷ್ಮಣೋಽತೀವ ಸುಂದರಃ ॥
ಅನುವಾದ
ಇವಳು ಸುಂದರಿಯಾದ ಜನಕನಂದಿನೀ ಸೀತೆಯು ನನ್ನ ಭಾರ್ಯೆ ಆಗಿದ್ದಾಳೆ. ಅವನಾದರೋ ಅತ್ಯಂತ ಸುಂದರನಾದ ಲಕ್ಷ್ಮಣ ಎಂಬ ಹೆಸರಿನ ನನ್ನ ಸಹೋದರನು. ॥9॥
(ಶ್ಲೋಕ-10)
ಮೂಲಮ್
ಕಿಂ ಕೃತ್ಯಂ ತೇ ಮಯಾ ಭ್ರೂಹಿ ಕಾರ್ಯಂ ಭುವನಸುಂದರಿ ।
ಇತಿ ರಾಮವಚಃ ಶ್ರುತ್ವಾ ಕಾಮಾರ್ತಾ ಸಾಬ್ರವೀದಿದಮ್ ॥
ಅನುವಾದ
ಎಲೈ ಲೋಕಸುಂದರಿಯೇ! ನಿನಗೆ ನನ್ನಿಂದ ಏನು ಆಗ ಬೇಕಾಗಿದೆ? ಎಂಬ ರಾಮನ ನುಡಿಯನ್ನು ಕೇಳಿ ಕಾಮಾತುರಳಾದ ಆ ಶೂರ್ಪನಖಿಯು ಹೇಳುತ್ತಾಳೆ. ॥10॥
(ಶ್ಲೋಕ-11)
ಮೂಲಮ್
ಏಹಿ ರಾಮ ಮಯಾ ಸಾರ್ಧಂ ರಮಸ್ವ ಗಿರಿಕಾನನೇ ।
ಕಾಮಾರ್ತಾಹಂ ನ ಶಕ್ನೋಮಿ ತ್ಯಕ್ತುಂ ತ್ವಾಂ ಕಮಲೇಕ್ಷಣಮ್ ॥
ಅನುವಾದ
‘‘ಎಲೈ ರಾಮನೇ! ನನ್ನೊಡನೆ ಬಾ; ಕಾಮ ಪೀಡಿತಳಾದ ನಾನು ಕಮಲನೇತ್ರನಾದ ನಿನ್ನನ್ನು ಬಿಡಲಾರೆನು. ನನ್ನೊಡಗೂಡಿ ಕಾಡುಮೇಡು ಗಿರಿ ಗಹ್ವರಗಳಲ್ಲಿ ವಿಹಾರ ಮಾಡು.’’ ॥11॥
(ಶ್ಲೋಕ-12)
ಮೂಲಮ್
ರಾಮಃ ಸೀತಾಂ ಕಟಾಕ್ಷೇಣ ಪಶ್ಯನ್ಸಸ್ಮಿತಮಬ್ರವೀತ್ ।
ಭಾರ್ಯಾ ಮಮೈಷಾ ಕಲ್ಯಾಣೀ ವಿದ್ಯತೇ ಹ್ಯನಪಾಯಿನೀ ॥
ಅನುವಾದ
ಇದನ್ನು ಕೇಳಿದಾಕ್ಷಣ ಶ್ರೀರಾಮಚಂದ್ರನು ಸೀತೆಯನ್ನು ಕುಡಿನೋಟದಿಂದ ನೋಡುತ್ತಾ, ಮುಗುಳು ನಗೆಯಿಂದ ಹೀಗೆಂದನು ಎಲೈ ಸುಂದರಿ! ಮಂಗಳೆಯಾದ ನನ್ನ ಭಾರ್ಯೆ ಈ ಸೀತೆಯು ಯಾವಾಗಲೂ ನನ್ನೊಡನೆ ಇರುವಳು. ಅವಳನ್ನು ಬಿಡಲಾಗುವುದಿಲ್ಲ. ॥12॥
(ಶ್ಲೋಕ-13)
ಮೂಲಮ್
ತ್ವಂ ತು ಸಾಪತ್ನ್ಯದುಃಖೇನ ಕಥಂ ಸ್ಥಾಸ್ಯಸಿ ಸುಂದರಿ ।
ಬಹಿರಾಸ್ತೇ ಮಮ ಭ್ರಾತಾ ಲಕ್ಷ್ಮಣೋತೀವ ಸುಂದರಃ ॥
(ಶ್ಲೋಕ-14)
ಮೂಲಮ್
ತವಾನುರೂಪೋ ಭವಿತಾ ಪತಿಸ್ತೇನೈವ ಸಂಚರ ।
ಇತ್ಯುತ್ತಾ ಲಕ್ಷ್ಮಣಂ ಪ್ರಾಹ ಪತಿರ್ಮೇ ಭವ ಸುಂದರ ॥
(ಶ್ಲೋಕ-15)
ಮೂಲಮ್
ಭ್ರಾತುರಾಜ್ಞಾಂ ಪುರಸ್ಕೃತ್ಯ ಸಂಗಚ್ಛಾವೋಽದ್ಯ ಮಾಚಿರಮ್ ।
ಇತ್ಯಾಹ ರಾಕ್ಷಸೀ ಘೋರಾ ಲಕ್ಷ್ಮಣಂ ಕಾಮಮೋಹಿತಾ ॥
ಅನುವಾದ
ಇವಳು ಇರುತ್ತಿರುವಾಗ ಸವತಿಯ ಕಷ್ಟದಿಂದ ನೀನು ಹೇಗೆ ಬದುಕಬಲ್ಲೆ? ನನ್ನ ಸೋದರನಾದ ಅತ್ಯಂತ ಸುಂದರಕಾಯನಾದ ಲಕ್ಷ್ಮಣನು ಹೊರಗೆ ಇರುವನು. ಅವನು ನಿನಗೆ ಯೋಗ್ಯಪತಿಯಾಗಬಲ್ಲನು. ನೀನು ಅವನೊಡನೆ ವಿಹರಿಸು. ರಾಮಚಂದ್ರನ ಮಾತುಗಳನ್ನು ಕೇಳಿದ ಆಕೆಯು ಕಾಮ ಮೋಹಿತಳಾದ ಭಯಂಕರ ರಾಕ್ಷಸೀ ಶೂರ್ಪನಖಿಯು ಲಕ್ಷ್ಮಣನ ಬಳಿಗೆ ಬಂದು ‘‘ಎಲೈ ಸುಂದರನೇ! ನಿನ್ನಣ್ಣನ ಆಜ್ಞೆಯನ್ನು ಮನ್ನಿಸಿ ನನ್ನ ಪತಿಯಾಗು. ತಡಮಾಡದೆ ಇಂದು ನಾವು ಪರಸ್ಪರ ಒಂದು ಗೂಡುವಾ’’ ಎಂದು ನುಡಿದಳು. ॥13-15॥
(ಶ್ಲೋಕ-16)
ಮೂಲಮ್
ತಾಮಾಹ ಲಕ್ಷ್ಮಣಃ ಸಾಧ್ವಿ ದಾಸೋಹಂ ತಸ್ಯ ಧೀಮತಃ ।
ದಾಸೀ ಭವಿಷ್ಯಸಿ ತ್ವಂ ತು ತತೋ ದುಃಖತರಂ ನು ಕಿಮ್ ॥
ಅನುವಾದ
ಆಕೆಯ ಮಾತನ್ನು ಕೇಳಿದ ಲಕ್ಷ್ಮಣನು ‘‘ಸಾಧ್ವಿ! ನಾನಾದರೋ ಆ ಬುದ್ಧಿಶಾಲಿಯಾದ ಶ್ರೀರಾಮನ ದಾಸನಾಗಿದ್ದೇನೆ. ನೀನು ನನ್ನ ಕೈ ಹಿಡಿದರೆ ನೀನೂ ಅವನ ದಾಸಿಯಾಗಬೇಕಾದೀತು. ಇದಕ್ಕಿಂತ ದುಃಖಕರವಾದುದು ಏನಿದ್ದೀತು? ॥16॥
(ಶ್ಲೋಕ-17)
ಮೂಲಮ್
ತಮೇವ ಗಚ್ಛ ಭದ್ರಂ ತೇ ಸ ತು ರಾಜಾಖಿಲೇಶ್ವರಃ ।
ತಚ್ಛ್ರುತ್ವಾ ಪುನರಪ್ಯಾಗಾದ್ರಾಘವಂ ದುಷ್ಟಮಾನಸಾ ॥
(ಶ್ಲೋಕ-18)
ಮೂಲಮ್
ಕ್ರೋಧಾದ್ರಾಮ ಕಿಮರ್ಥಂ ಮಾಂ ಭ್ರಾಮಯಸ್ಯನವಸ್ಥಿತಃ ।
ಇದಾನೀಮೇವ ತಾಂ ಸೀತಾಂ ಭಕ್ಷಯಾಮಿ ತವಾಗ್ರತಃ ॥
ಅನುವಾದ
ನಿನಗೆ ಒಳ್ಳೆಯದಾಗಲಿ, ನೀನು ಅವನ ಬಳಿಗೆ ಹೋಗು. ಅವನು ಎಲ್ಲರ ಒಡೆಯನಾದ ರಾಜನಾಗಿದ್ದಾನೆ. ಇದನ್ನು ಕೇಳಿದ ಕೆಟ್ಟಮನಸ್ಸಿನವಳಾದ ಆ ರಾಕ್ಷಸಿಯು ಪುನಃ ರಾಮನ ಬಳಿಗೆ ಬಂದು ಕೋಪದಿಂದ ಎಲೈ ರಾಮನೆ! ನೀನು ಚಂಚಲ ಚಿತ್ತದವನು. ನನ್ನನ್ನು ಈ ರೀತಿ ಏಕೆ ಅಲೆಸುತ್ತಿರುವೆ? ನಿನ್ನೆದುರಿಗೆ ಈಗಲೇ ಈ ಸೀತೆಯನ್ನು ತಿಂದುಹಾಕಿ ಬಿಡುತ್ತೇನೆ. ॥17-18॥
(ಶ್ಲೋಕ-19)
ಮೂಲಮ್
ಇತ್ಯುಕ್ತ್ವಾ ವಿಕಟಾಕಾರಾ ಜಾನಕೀಮನುಧಾವತಿ ।
ತತೋ ರಾಮಾಜ್ಞಯಾ ಖಡ್ಗಮಾದಾಯ ಪರಿಗೃಹ್ಯ ತಾಮ್ ॥
(ಶ್ಲೋಕ-20)
ಮೂಲಮ್
ಚಿಚ್ಛೇದ ನಾಸಾಂ ಕರ್ಣೌ ಚ ಲಕ್ಷ್ಮಣೋ ಲಘುವಿಕ್ರಮಃ ।
ತತೋ ಘೋರಧ್ವನಿಂ ಕೃತ್ವಾ ರುಧಿರಾಕ್ತವಪುರ್ದ್ರುತಮ್ ॥
(ಶ್ಲೋಕ-21)
ಮೂಲಮ್
ಕ್ರಂದಮಾನಾ ಪಪಾತಾಗ್ರೇ ಖರಸ್ಯ ಪರುಷಾಕ್ಷರಾ ।
ಕಿಮೇತದಿತಿ ತಾಮಾಹ ಖರಃ ಖರತರಾಕ್ಷರಃ ॥
ಅನುವಾದ
ಹೀಗೆ ಹೇಳುತ್ತಾ ಅವಳು ತನ್ನ ವಿಕರಾಳ ರೂಪವನ್ನು ತೋರಿ ಸೀತೆಯ ಕಡೆಗೆ ನುಗ್ಗಿದಳು. ಆಗ ಚುರುಕಾದ ಪರಾಕ್ರಮವುಳ್ಳ ಲಕ್ಷ್ಮಣನು ರಾಮನ ಅಪ್ಪಣೆಯಂತೆ ಖಡ್ಗವನ್ನು ಹಿರಿದು ಆಕೆಯನ್ನು ಹಿಡಿದು ಅವಳ ಎರಡೂ ಕಿವಿಗಳನ್ನು ಮತ್ತು ಮೂಗನ್ನು ಕತ್ತರಿಸಿ ಬಿಟ್ಟನು. ಅನಂತರ ಅವಳು ಘೋರವಾದ ಕೆಟ್ಟ ದನಿಯಿಂದ ಕೂಗುತ್ತಾ, ರಕ್ತದಿಂದ ತೊಯ್ದ ಶರೀರದಿಂದ, ಅಳುತ್ತಾ, ವೇಗವಾಗಿ ಬಂದು ಖರನ ಮುಂದೆ ಬಿದ್ದಳು. ಅವಳನ್ನು ಕಂಡು ಕರ್ಕಶವಾದ ಧ್ವನಿಯುಳ್ಳ ಖರನು ‘‘ಇದೇನು’’ ಎಂದು ಕೇಳಿದನು. ॥19-21॥
(ಶ್ಲೋಕ-22)
ಮೂಲಮ್
ಕೇನೈವಂ ಕಾರಿತಾಸಿ ತ್ವಂ ಮೃತ್ಯೋರ್ವಕ್ತ್ರಾನುವರ್ತಿನಾ ।
ವದ ಮೇ ತಂ ವಧಿಷ್ಯಾಮಿ ಕಾಲಕಲ್ಪಮಪಿ ಕ್ಷಣಾತ್ ॥
ಅನುವಾದ
‘‘ಎಲೆಗೆ! ಮೃತ್ಯುವಿನ ದವಡೆಗೆ ತುತ್ತಾಗಿರುವ ಯಾವ ದುಷ್ಟನಿಂದ ನಿನಗೆ ಇಂತಹ ಸ್ಥಿತಿ ಉಂಟಾಯಿತು? ಹೇಳು. ಅವನು ಯಮನಿಗೆ ಸಮಾನನಾಗಿದ್ದರೂ ಕ್ಷಣಮಾತ್ರದಲ್ಲಿ ಅವನನ್ನು ಕೊಂದು ಹಾಕುವೆ.’’ ಎಂದನು. ॥22॥
(ಶ್ಲೋಕ-23)
ಮೂಲಮ್
ತಮಾಹ ರಾಕ್ಷಸೀ ರಾಮಃ ಸೀತಾಲಕ್ಷ್ಮಣಸಂಯುತಃ ।
ದಂಡಕಂ ನಿರ್ಭಯಂ ಕುರ್ವನ್ನಾಸ್ತೇ ಗೋದಾವರೀತಟೇ ॥
(ಶ್ಲೋಕ-24)
ಮೂಲಮ್
ಮಾಮೇವಂ ಕೃತವಾಂಸ್ತಸ್ಯ ಭ್ರಾತಾ ತೇನೈವ ಚೋದಿತಃ ।
ಯದಿ ತ್ವಂ ಕುಲಜಾತೋಽಸಿ ವೀರೋಽಸಿ ಜಹಿ ತೌ ರಿಪೂ ॥
(ಶ್ಲೋಕ-25)
ಮೂಲಮ್
ತಯೋಽಸ್ತು ರುಧಿರಂ ಪಾಸ್ಯೆ ಭಕ್ಷಯೈತೌ ಸುದುರ್ಮದೌ ।
ನೋ ಚೇತ್ಪ್ರಾಣಾನ್ಪರಿತ್ಯಜ್ಯ ಯಾಸ್ಯಾಮಿ ಯಮಸಾದನಮ್ ॥
ಅನುವಾದ
ಆಗ ರಾಕ್ಷಸಿಯಾದ ಶೂರ್ಪನಖಿಯು ‘‘ಅಣ್ಣಾ! ರಾಮನೆಂಬುವನು ಸೀತಾಲಕ್ಷ್ಮಣರೊಡಗೂಡಿ ಗೋದಾವರಿ ನದಿಯ ತೀರದಲ್ಲಿ ದಂಡಕಾರಣ್ಯವನ್ನು ನಿರ್ಭಯವಾಗಿಸಿ ವಾಸವಾಗಿದ್ದಾನೆ. ಅವನಿಂದಲೇ ಪ್ರೇರಿತನಾದ ಅವನ ಸಹೋದರ ಲಕ್ಷ್ಮಣನು ನನ್ನನ್ನು ಈ ಸ್ಥಿತಿಗೆ ತಂದಿರುವನು. ನೀನು ರಾಕ್ಷಸವಂಶದಲ್ಲಿ ಹುಟ್ಟಿದವನಾಗಿದ್ದು ಪರಾಕ್ರಮಶಾಲಿ ಆಗಿದ್ದರೆ ಆ ಇಬ್ಬರೂ ಶತ್ರುಗಳನ್ನು ನಾಶಮಾಡು. ಕೊಬ್ಬಿರುವ ಆ ಇಬ್ಬರನ್ನು ತಿಂದು ಹಾಕು. ನಾನು ಅವರ ರಕ್ತವನ್ನು ಕುಡಿಯುವೆನು. ಹೀಗಾಗದಿದ್ದರೆ ಪ್ರಾಣಗಳನ್ನು ಕಳೆದುಕೊಂಡು ಯಮ ಸದನಕ್ಕೆ ಹೋಗುವೆನು. ॥23-25॥
(ಶ್ಲೋಕ-26)
ಮೂಲಮ್
ತಚ್ಛ್ರುತ್ವಾ ತ್ವರಿತಂ ಪ್ರಾಗಾತ್ ಖರಃ ಕ್ರೋಧೇನ ಮೂರ್ಚ್ಛಿತಃ ।
ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ॥
(ಶ್ಲೋಕ-27)
ಮೂಲಮ್
ಚೋದಯಾಮಾಸ ರಾಮಸ್ಯ ಸಮೀಪಂ ವಧಕಾಂಕ್ಷಯಾ ।
ಖರಶ್ಚ ತ್ರಿಶಿರಾಶ್ಚೈವ ದೂಷಣಶ್ಚೈವ ರಾಕ್ಷಸಃ ॥
(ಶ್ಲೋಕ-28)
ಮೂಲಮ್
ಸರ್ವೇ ರಾಮಂ ಯಯುಃ ಶೀಘ್ರಂ ನಾನಾಪ್ರಹರಣೋದ್ಯತಾಃ ।
ಶ್ರುತ್ವಾ ಕೋಲಾಹಲಂ ತೇಷಾಂ ರಾಮಃ ಸೌಮಿತ್ರಿಮಬ್ರವೀತ್ ॥
ಅನುವಾದ
ಈ ಮಾತನ್ನು ಕೇಳಿ ಕೋಪದಿಂದ ಕೆರಳಿದ ಖರನು ಯುದ್ಧಕ್ಕೆ ಹೊರಟನು. ಹದಿನಾಲ್ಕು ಸಾವಿರ ಭಯಂಕರ ಕರ್ಮಿಗಳಾದ ರಾಕ್ಷಸ ಸೇನೆಯನ್ನು ರಾಮನನ್ನು ಕೊಲ್ಲುವ ಉದ್ದೇಶದಿಂದ ಅವನ ಬಳಿಗೆ ಕಳಿಸಿದನು. ಖರ, ತ್ರಿಶಿರಸ್ಸು, ದೂಷಣ ಮುಂತಾಗಿ ಎಲ್ಲರೂ ಅನೇಕ ರೀತಿಯ ಆಯುಧಗಳನ್ನು ಹಿಡಿದು ವೇಗವಾಗಿ ಹೊರಟರು. ಅವರುಗಳ ಕೋಲಾಹಲವನ್ನು ಕೇಳಿದ ಶ್ರೀರಾಮನು ಲಕ್ಷ್ಮಣನನ್ನು ಕುರಿತು ಇಂತೆಂದನು. ॥26-28॥
(ಶ್ಲೋಕ-29)
ಮೂಲಮ್
ಶ್ರೂಯತೇ ವಿಪುಲಃ ಶಬ್ದೋ ನೂನಮಾಯಾಂತಿ ರಾಕ್ಷಸಾಃ ।
ಭವಿಷ್ಯತಿ ಮಹದ್ಯುದ್ಧಂ ನೂನಮದ್ಯ ಮಯಾ ಸಹ ॥
(ಶ್ಲೋಕ-30)
ಮೂಲಮ್
ಸೀತಾಂ ನೀತ್ವಾ ಗುಹಾಂ ಗತ್ವಾ ತತ್ರ ತಿಷ್ಠ ಮಹಾಬಲ ।
ಹಂತುಮಿಚ್ಛಾಮ್ಯಹಂ ಸರ್ವಾನ್ ರಾಕ್ಷಸಾನ್ ಘೋರರೂಪಿಣಃ ॥
(ಶ್ಲೋಕ-31)
ಮೂಲಮ್
ಅತ್ರ ಕಿಂಚಿನ್ನ ವಕ್ತವ್ಯಂ ಶಾಪಿತೋಽಸಿ ಮಮೋಪರಿ ।
ತಥೇತಿ ಸೀತಾಮಾದಾಯ ಲಕ್ಷ್ಮಣೋ ಗಹ್ವರಂ ಯಯೌ ॥
ಅನುವಾದ
‘‘ತಮ್ಮಾ! ಅಗೋ! ಭಯಂಕರವಾದ ಸದ್ದು ಕೇಳಿ ಬರುತ್ತಿದೆ. ಖಂಡಿತವಾಗಿಯೂ ರಾಕ್ಷಸರು ಈ ಕಡೆಗೆ ಬರುತ್ತಿರುವಂತಿದೆ. ಇಷ್ಟರಲ್ಲೆ ದೊಡ್ಡ ಯುದ್ಧವು ನನ್ನೊಡನೆ ನಡೆಯಲಿದೆ. ಮಹಾಬಲಶಾಲಿಯೇ! ನೀನು ಸೀತಾದೇವಿಯನ್ನು ಗುಹೆಯಲ್ಲಿ ಅಡಗಿಸಿಟ್ಟು ನೀನೂ ಅಲ್ಲಿಯೇ ಕಾವಲು ಕಾಯುತ್ತಿರು. ಭಯಂಕರ ಆಕಾರವುಳ್ಳ ಈ ಎಲ್ಲ ರಾಕ್ಷಸರನ್ನು ನಾನು ಕೊಲ್ಲಲು ಬಯಸಿದ್ದೇನೆ. ಈ ವಿಷಯದಲ್ಲಿ ನೀನು ಪ್ರತಿಯಾಗಿ ಏನನ್ನು ಹೇಳಕೂಡದು. ನನ್ನ ಆಣೆ ಇಟ್ಟು ಹೇಳುತ್ತಿರುವೆನು. ಅಣ್ಣನ ಮಾತನ್ನು ಕೇಳಿ ಹಾಗೇ ಆಗಲೆಂದು ಲಕ್ಷ್ಮಣನು ಸೀತೆಯನ್ನು ಕರೆದುಕೊಂಡು ಗುಹೆಗೆ ಹೋದನು. ॥29-31॥
(ಶ್ಲೋಕ-32)
ಮೂಲಮ್
ರಾಮಃ ಪರಿಕರಂ ಬದ್ಧ್ವಾಧನುರಾದಾಯ ನಿಷ್ಠುರಮ್ ।
ತೂಣೀರಾವಕ್ಷಯಶರೌ ಬದ್ಧ್ವಾಯತ್ತೋಽಭವತ್ಪ್ರಭುಃ ॥
ಅನುವಾದ
ಶ್ರೀರಾಮನು ತನ್ನ ಸೊಂಟವನ್ನು ಬಿಗಿದು ದೃಢವಾದ ಬಿಲ್ಲನ್ನು ತೆಗೆದುಕೊಂಡು, ಅಕ್ಷಯವಾದ ಬಾಣಗಳುಳ್ಳ ಎರಡು ಬತ್ತಳಿಕೆಯನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧಕ್ಕಾಗಿ ಸಿದ್ಧನಾದನು. ॥32॥
(ಶ್ಲೋಕ-33)
ಮೂಲಮ್
ತತ ಆಗತ್ಯ ರಕ್ಷಾಂಸಿ ರಾಮಸ್ಯೋಪರಿ ಚಿಕ್ಷಿಪುಃ ।
ಆಯುಧಾನಿ ವಿಚಿತ್ರಾಣಿ ಪಾಷಾಣಾನ್ಪಾದಪಾನಪಿ ॥
ಅನುವಾದ
ಅನಂತರ ರಾಕ್ಷಸರು ಬಂದು ವಿಚಿತ್ರವಾದ ಆಯುಧಗಳನ್ನೂ, ಕಲ್ಲು ಬಂಡೆಗಳನ್ನೂ, ಮರಗಳನ್ನು ಶ್ರೀರಾಮನ ಮೇಲೆ ಮಳೆಗರೆದರು. ॥33॥
(ಶ್ಲೋಕ-34)
ಮೂಲಮ್
ತಾನಿ ಚಿಚ್ಛೇದ ರಾಮೋಽಪಿ ಲೀಲಯಾ ತಿಲಶಃ ಕ್ಷಣಾತ್ ।
ತತೌ ಬಾಣಸಹಸ್ರೇಣ ಹತ್ವಾ ತಾನ್ ಸರ್ವರಾಕ್ಷಸಾನ್ ॥
(ಶ್ಲೋಕ-35)
ಮೂಲಮ್
ಖರಂ ತ್ರಿಶಿರಸಂ ಚೈವ ದೂಷಣಂ ಚೈವ ರಾಕ್ಷಸಮ್ ।
ಜಘಾನ ಪ್ರಹರಾರ್ಧೇನ ಸರ್ವಾನೇವ ರಘೂತ್ತಮಃ ॥
ಅನುವಾದ
ಶ್ರೀರಾಮಚಂದ್ರನು ಲೀಲಾಮಾತ್ರದಿಂದಕ್ಷಣಕಾಲದೊಳಗೆ ಅವೆಲ್ಲವನ್ನೂ ಚೂರು-ಚೂರಾಗಿ ಕತ್ತರಿಸಿ ಬಿಟ್ಟನು. ಬಳಿಕ ಸಾವಿರಾರು ಬಾಣಗಳನ್ನು ಪ್ರಯೋಗಿಸಿ ಆ ಹದಿನಾಲ್ಕು ಸಾವಿರ ರಾಕ್ಷಸ ಸೇನೆಯೆಲ್ಲವನ್ನು ಮತ್ತು ಖರ, ತ್ರಿಶಿರ, ದೂಷಣರನ್ನು ಅರ್ಧಪ್ರಹರದಲ್ಲಿ ರಘುವಂಶಿಯಲ್ಲಿ ಶ್ರೇಷ್ಠನಾದ ಶ್ರೀರಾಮಚಂದ್ರನು ಸಂಹಾರ ಮಾಡಿದನು. ॥34-35॥
(ಶ್ಲೋಕ-36)
ಮೂಲಮ್
ಲಕ್ಷ್ಮಣೋಽಪಿ ಗುಹಾಮಧ್ಯಾತ್ಸೀತಾಮಾದಾಯ ರಾಘವೇ ।
ಸಮರ್ಪ್ಯ ರಾಕ್ಷಸಾಂದೃಷ್ಟ್ವಾ ಹತಾನ್ವಿಸ್ಮಯಮಾಯಯೌ ॥
ಅನುವಾದ
ಲಕ್ಷ್ಮಣನು ಗುಹಾಮಧ್ಯದಿಂದ ಸೀತೆಯನ್ನು ಕರೆತಂದು ಶ್ರೀರಾಮನಿಗೆ ಒಪ್ಪಿಸಿ, ಸತ್ತು ಬಿದ್ದಿರುವ ರಾಕ್ಷಸರನ್ನು ನೋಡಿ ಆಶ್ಚರ್ಯ ಚಕಿತನಾದನು. ॥36॥
(ಶ್ಲೋಕ-37)
ಮೂಲಮ್
ಸೀತಾ ರಾಮಂ ಸಮಾಲಿಂಗ್ಯ ಪ್ರಸನ್ನಮುಖಪಂಕಜಾ ।
ಶಸ್ತ್ರವ್ರಣಾನಿ ಚಾಂಗೇಷು ಮಮಾರ್ಜ ಜನಕಾತ್ಮಜಾ ॥
ಅನುವಾದ
ಜನಕನಂದಿನಿ ಸೀತೆಯು ಪ್ರಸನ್ನವದನಳಾಗಿ ಶ್ರೀರಾಮನನ್ನು ಆಲಿಂಗಿಸಿಕೊಂಡಳು. ಅವನ ಶರೀರದಲ್ಲಿ ಶಸಗಳಿಂದಾದ ಗಾಯಗಳನ್ನು ನೇವರಿಸಿ ಉಪಚರಿಸಿದಳು. ॥37॥
(ಶ್ಲೋಕ-38)
ಮೂಲಮ್
ಸಾಪಿ ದುದ್ರಾವ ದೃಷ್ಟ್ವಾ ತಾನ್ ಹತಾನ್ ರಾಕ್ಷಸಪುಂಗವಾನ್ ।
ಲಂಕಾಂ ಗತ್ವಾ ಸಭಾಮಧ್ಯೆ ಕ್ರೋಶಂತೀ ಪಾದಸನ್ನಿಧೌ ॥
(ಶ್ಲೋಕ-39)
ಮೂಲಮ್
ರಾವಣಸ್ಯ ಪಪಾತೋರ್ವ್ಯಾಂ ಭಗಿನೀ ತಸ್ಯ ರಕ್ಷಸಃ ।
ದೃಷ್ಟ್ವಾ ತಾಂ ರಾವಣಃ ಪ್ರಾಹ ಭಗಿನೀಂ ಭಯವಿಹ್ವಲಾಮ್ ॥
ಅನುವಾದ
ರಾವಣನ ತಂಗಿಯಾದ ಶೂರ್ಪನಖಿಯು ಸತ್ತು ಬಿದ್ದ ಆ ರಾಕ್ಷಸ ಶ್ರೇಷ್ಠರನ್ನೆಲ್ಲ ನೋಡಿ ದುಃಖಿತಳಾಗಿ ಲಂಕೆಗೆ ಧಾವಿಸಿದಳು. ರಾವಣನ ಸಭೆಯಲ್ಲಿ ಬಂದಿರುವ ಅವಳು ಅಣ್ಣನ ಪದತಲದಲ್ಲಿ ಬಿದ್ದು ಅಳತೊಡಗಿದಳು. ಹೆದರಿ ಕಂಗಾಲಾಗಿದ್ದ ತಂಗಿಯನ್ನು ನೋಡಿ ರಾವಣನು ಕೇಳಿದನು. ॥38-39॥
(ಶ್ಲೋಕ-40)
ಮೂಲಮ್
ಉತ್ತಿಷ್ಠೋತ್ತಿಷ್ಠ ವತ್ಸೇ ತ್ವಂ ವಿರೂಪಕರಣಂ ತವ ।
ಕೃತಂ ಶಕ್ರೇಣ ವಾ ಭದ್ರೇ ಯಮೇನ ವರುಣೇನ ವಾ ॥
(ಶ್ಲೋಕ-41)
ಮೂಲಮ್
ಕುಬೇರೇಣಾಥವಾ ಬ್ರೂಹಿ ಭಸ್ಮೀಕುರ್ಯಾಂ ಕ್ಷಣೇನ ತಮ್ ।
ರಾಕ್ಷಸೀ ತಮುವಾಚೇದಂ ತ್ವಂ ಪ್ರಮತ್ತೋ ವಿಮೂಢಧೀಃ ॥
ಅನುವಾದ
‘‘ಮಗಳೇ! ಮೇಲೇಳು. ನಿನಗೆ ಅಂಗವಿಕಾರವನ್ನು ಮಾಡಿದವರು ದೇವೇಂದ್ರನೋ, ಯಮನೋ, ವರುಣನೋ, ಕುಬೇರನೋ ಯಾರು? ಶುಭಾಂಗಿಯೇ! ಹೇಳು. ಅವರನ್ನು ಕ್ಷಣಮಾತ್ರದಲ್ಲಿ ಬೂದಿಮಾಡಿ ಬಿಡುವೆನು.’’ ಆಗ ಶೂರ್ಪನಖಿಯು ಹೇಳಿದಳು ‘‘ಅಣ್ಣಾ! ನೀನು ಪ್ರಮಾದೀ, ಮೂಢಬುದ್ಧಿಯವನಾಗಿರುವೆ. ॥40-41॥
(ಶ್ಲೋಕ-42)
ಮೂಲಮ್
ಪಾನಾಸಕ್ತಃ ಸ್ತ್ರೀವಿಜಿತಃ ಷಂಢಃ ಸರ್ವತ್ರ ಲಕ್ಷ್ಯಸೇ ।
ಚಾರಚಕ್ಷುರ್ವಿಹೀನಸ್ತ್ವಂ ಕಥಂ ರಾಜಾ ಭವಿಷ್ಯಸಿ ॥
ಅನುವಾದ
ಪಾನಮತ್ತನಾಗಿ ಹೆಂಗಸರಿಗೆ ವಶನಾಗಿ, ಎಲ್ಲ ವಿಷಯಗಳಲ್ಲಿ ನಪುಂಸಕನಂತೆ ಕಂಡುಬರುತ್ತೀಯೆ. ಗೂಢಚಾರರೆಂಬ ಕಣ್ಣುಗಳಿಲ್ಲದ ನೀನು ರಾಜನಾಗಲು ಹೇಗೆ ಅರ್ಹನಾಗಿರುವೆ? ॥42॥
(ಶ್ಲೋಕ-43)
ಮೂಲಮ್
ಖರಶ್ಚ ನಿಹತಃ ಸಂಖ್ಯೇ ದೂಷಣಸ್ತ್ರಿಶಿರಾಸ್ತಥಾ ।
ಚತುರ್ದಶ ಸಹಸ್ರಾಣಿ ರಾಕ್ಷಸಾನಾಂ ಮಹಾತ್ಮನಾಮ್ ॥
(ಶ್ಲೋಕ-44)
ಮೂಲಮ್
ನಿಹತಾನಿ ಕ್ಷಣೇನೈವ ರಾಮೇಣಾಸುರಶತ್ರುಣಾ ।
ಜನಸ್ಥಾನಮಶೇಷೇಣ ಮುನೀನಾಂ ನಿರ್ಭಯಂ ಕೃತಮ್ ।
ನ ಜಾನಾಸಿ ವಿಮೂಢಸ್ತ್ವಮತ ಏವ ಮಯೋಚ್ಯತೇ ॥
ಅನುವಾದ
ಯುದ್ಧದಲ್ಲಿ ಖರ, ದೂಷಣ, ತ್ರಿಶಿರಸು, ಇತ್ಯಾದಿ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಕ್ಷಸ ಶತ್ರುವಾದ ರಾಮನು ಒಂದು ಕ್ಷಣದಲ್ಲಿ ಸಂಹರಿಸಿದನು. ಇಡೀ ಜನಸ್ಥಾನವನ್ನು ಅಸುರ ರಹಿತವಾಗಿಸಿ ಋಷಿಗಳಿಗೆ ನಿರ್ಭಯವಾಗಿಸಿದನು. ಇಷ್ಟೊಂದು ಉತ್ಪಾತವಾದರೂ ನಿನಗೆ ತಿಳಿಯಲೇ ಇಲ್ಲ; ಆದ್ದರಿಂದ ನೀನು ಮೂಢನಾಗಿರುವೆ ಎಂದು ನಾನು ಹೇಳಿದ್ದು. ॥43-44॥
(ಶ್ಲೋಕ-45)
ಮೂಲಮ್ (ವಾಚನಮ್)
ರಾವಣ ಉವಾಚ
ಮೂಲಮ್
ಕೋ ವಾ ರಾಮಃ ಕಿಮರ್ಥಂ ವಾ ಕಥಂ ತೇನಾಸುರಾ ಹತಾಃ ।
ಸಮ್ಯಕ್ಕಥಯ ಮೇ ತೇಷಾಂ ಮೂಲಘಾತಂ ಕರೋಮ್ಯಹಮ್ ॥
ಅನುವಾದ
ರಾವಣನೆಂದನು — ತಂಗೀ! ರಾಮನೆಂಬುವನು ಯಾರು? ಅವನು ಏತಕ್ಕಾಗಿ (ಕಾಡಿಗೆ) ಬಂದಿರುವನು? ಅವನು ಹೇಗೆ ರಾಕ್ಷಸರನ್ನು ಕೊಂದನು? ಇದೆಲ್ಲವನ್ನು ನೀನು ಚೆನ್ನಾಗಿ ನನಗೆ ಹೇಳು. ಅವರ ಮೂಲವನ್ನೇ ನಾಶಗೊಳಿಸುತ್ತೇನೆ. ॥45॥
(ಶ್ಲೋಕ-46)
ಮೂಲಮ್ (ವಾಚನಮ್)
ಶೂರ್ಪಣಖೋವಾಚ
ಮೂಲಮ್
ಜನಸ್ಥಾನಾದಹಂ ಯಾತಾ ಕದಾಚಿದ್ಗೌತಮೀತಟೇ ।
ತತ್ರ ಪಂಚವಟೀ ನಾಮ ಪುರಾ ಮುನಿಜನಾಶ್ರಯಾ ॥
ಅನುವಾದ
ಶೂರ್ಪನಖಿಯೆಂದಳು — ಒಮ್ಮೆ ನಾನು ಜನಸ್ಥಾನದಲ್ಲಿ ಗೌತಮೀನದಿಯ ತೀರಕ್ಕೆ ಹೋಗಿದ್ದೆ. ಅಲ್ಲಿ ಪಂಚವಟಿ ಎಂಬ ಹಿಂದಿನಿಂದಲೂ ಋಷಿಗಳಿಗೆ ಆಶ್ರಯವಾದ ಒಂದು ಜಾಗವಿದೆ. ॥46॥
(ಶ್ಲೋಕ-47)
ಮೂಲಮ್
ತತ್ರಾಶ್ರಮೇ ಮಯಾ ದೃಷ್ಟೋ ರಾಮೋ ರಾಜೀವಲೋಚನಃ ।
ಧನುರ್ಬಾಣಧರಃ ಶ್ರೀಮಾನ್ ಜಟಾವಲ್ಕಲಮಂಡಿತಃ ॥
ಅನುವಾದ
ಅಲ್ಲಿ ಆಶ್ರಮಮಾಡಿಕೊಂಡಿರುವ ಕಮಲ ನೇತ್ರನಾದ ರಾಮನೆಂಬುವವನನ್ನು ನಾನು ನೋಡಿದೆ. ಅವನು ಧನುರ್ಬಾಣಗಳನ್ನು ಧರಿಸಿದ್ದು, ಜಟಾವಲ್ಕಲಗಳಿಂದ ಶೋಭಿತನಾಗಿದ್ದಾನೆ. ॥47॥
(ಶ್ಲೋಕ-48)
ಮೂಲಮ್
ಕನೀಯಾನನುಜಸ್ತಸ್ಯ ಲಕ್ಷ್ಮಣೋಽಪಿ ತಥಾವಿಧಃ ।
ತಸ್ಯ ಭಾರ್ಯಾ ವಿಶಾಲಾಕ್ಷೀ ರೂಪಿಣೀ ಶ್ರೀರಿವಾಪರಾ ॥
(ಶ್ಲೋಕ-49)
ಮೂಲಮ್
ದೇವಗಂಧರ್ವನಾಗಾನಾಂ ಮನುಷ್ಯಾಣಾಂ ತಥಾವಿಧಾ ।
ನ ದೃಷ್ಟಾ ನ ಶ್ರುತಾ ರಾಜನ್ ದ್ಯೋತಯಂತೀ ವನಂ ಶುಭಾ ॥
(ಶ್ಲೋಕ-50)
ಮೂಲಮ್
ಆನೇತುಮಹಮುದ್ಯುಕ್ತಾ ತಾಂ ಭಾರ್ಯಾರ್ಥಂ ತವಾನಘ ।
ಲಕ್ಷ್ಮಣೋ ನಾಮ ತದ್ಭ್ರಾತಾ ಚಿಚ್ಛೇದ ಮಮ ನಾಸಿಕಾಮ್ ॥
ಅನುವಾದ
ಅವನ ತಮ್ಮನಾದ ಲಕ್ಷ್ಮಣನೂ ಅವನಂತೆ ಸುಂದರನಾಗಿದ್ದಾನೆ. ಆ ರಾಮನ ಹೆಂಡತಿಯೂ ವಿಶಾಲ ಲೋಚನೆಯಾದ, ಸಾಕ್ಷಾತ್ ಇನ್ನೋರ್ವ ಲಕ್ಷ್ಮಿಯಂತೆ ರೂಪವತಿಯಾಗಿದ್ದು ವನವೆಲ್ಲವನ್ನು ಬೆಳಗುತ್ತಿರುವಳು. ಅಣ್ಣಾ! ಅಂತಹ ಹೆಂಗಸನ್ನು ನಾನು ದೇವತೆಗಳಲ್ಲಿ, ಗಂಧರ್ವರಲ್ಲಿ, ನಾಗಗಳಲ್ಲಿ, ಮನುಷ್ಯರಲ್ಲಿ ಎಲ್ಲಿಯೂ ನೋಡಿಲ್ಲ, ಕೇಳಿಲ್ಲ. ಆಕೆಯನ್ನು ನಿನ್ನ ಮಡದಿಯಾಗಿಸಲು ತರಲು ಪ್ರಯತ್ನಿಸಿದೆ. ಇದರಿಂದ ರಾಮನ ಸೋದರನಾದ ಲಕ್ಷ್ಮಣನು ನನ್ನ ಮೂಗನ್ನು ಕತ್ತರಿಸಿದನು. ॥48-50॥
(ಶ್ಲೋಕ-51)
ಮೂಲಮ್
ಕರ್ಣೌ ಚ ನೋದಿತಸ್ತೇನ ರಾಮೇಣ ಸ ಮಹಾಬಲಃ ।
ತತೋಹಮತಿದುಃಖೇನ ರುದತೀ ಖರಮನ್ವಗಾಮ್ ॥
ಅನುವಾದ
ಪುನಃ ರಾಮನ ಪ್ರೇರಣೆಯಿಂದ ಮಹಾಬಲಶಾಲಿಯಾದ ಲಕ್ಷ್ಮಣನು ನನ್ನ ಕಿವಿಗಳನ್ನು ಕತ್ತರಿಸಿ ಹಾಕಿದನು. ಆಗ ನಾನು ಅತೀವ ದುಃಖದಿಂದ ಅಳುತ್ತಾ ಖರನ ಬಳಿಗೆ ಹೋದೆ. ॥51॥
(ಶ್ಲೋಕ-52)
ಮೂಲಮ್
ಸೋಽಪಿ ರಾಮಂ ಸಮಾಸಾದ್ಯ ಯುದ್ಧಂ ರಾಕ್ಷಸಯೂಥಪೈಃ ।
ತತಃ ಕ್ಷಣೇನ ರಾಮೇಣ ತೇನೈವ ಬಲಶಾಲಿನಾ ॥
(ಶ್ಲೋಕ-53)
ಮೂಲಮ್
ಸರ್ವೇ ತೇನ ವಿನಷ್ಟಾ ವೈ ರಾಕ್ಷಸಾ ಭೀಮವಿಕ್ರಮಾಃ ।
ಯದಿ ರಾಮೋ ಮನಃ ಕುರ್ಯಾತ್ ತ್ರೈಲೋಕ್ಯಂ ನಿಮಿಷಾರ್ಧತಃ ॥
(ಶ್ಲೋಕ-54)
ಮೂಲಮ್
ಭಸ್ಮೀಕುರ್ಯಾನ್ನ ಸಂದೇಹ ಇತಿ ಭಾತಿ ಮಮ ಪ್ರಭೋ ।
ಯದಿ ಸಾ ತವ ಭಾರ್ಯಾ ಸ್ಯಾತ್ಸಫಲಂ ತವ ಜೀವಿತಮ್ ॥
ಅನುವಾದ
ಅವನೂ ಕೂಡ ರಾಕ್ಷಸ ಸೈನ್ಯದೊಂದಿಗೆ ರಾಮನೊಡನೆ ಯುದ್ಧ ಹೂಡಿದನು. ಆದರೆ ಆ ಬಲಶಾಲಿಯಾದ ರಾಮನು ಒಂದೇ ಕ್ಷಣದಲ್ಲಿ ಭಯಂಕರ ಪರಾಕ್ರಮವುಳ್ಳ ರಾಕ್ಷಸರೆಲ್ಲರನ್ನು ನಾಶಮಾಡಿದನು. ರಾಮನೇನಾದರೂ ಮನಸ್ಸು ಮಾಡಿದರೆ ಮೂರುಲೋಕಗಳನ್ನು ಅರ್ಧ ನಿಮಿಷದೊಳಗೆ ಬೂದಿ ಮಾಡಬಲ್ಲನು. ಈ ವಿಷಯದಲ್ಲಿ ಸಂದೇಹವೇ ಇಲ್ಲವೆಂದು ತೋರುತ್ತದೆ. ಆದರೆ ಆ ಸೀತೆಯು ನಿನ್ನ ಭಾರ್ಯೆಯಾದರೆ ನಿನ್ನ ಬಾಳು ಸಾರ್ಥಕವಾದೀತೆಂದು ತಿಳಿ. ॥52-54॥
(ಶ್ಲೋಕ-55)
ಮೂಲಮ್
ಅತೋ ಯತಸ್ವರಾಜೇಂದ್ರ ಯಥಾ ತೇ ವಲ್ಲಭಾ ಭವೇತ್ ।
ಸೀತಾ ರಾಜೀವಪತ್ರಾಕ್ಷಿ ಸರ್ವಲೋಕೈಕಸುಂದರೀ ॥
ಅನುವಾದ
ಎಲೈ ರಾಜಶ್ರೇಷ್ಠನೇ! ಸರ್ವಲೋಕ ಸುಂದರಿಯೂ, ಕಮಲದಂತೆ ಕಣ್ಣುಳ್ಳ ಆ ಸೀತೆಯು ನಿನ್ನ ಹೆಂಡತಿ ಯಾಗಿಸಿಕೊಳ್ಳಲು ಹೇಗೆ ಪ್ರಯತ್ನಿಸಬೇಕೋ ಹಾಗೆ ಕಾರ್ಯಶೀಲನಾಗು. ॥55॥
(ಶ್ಲೋಕ-56)
ಮೂಲಮ್
ಸಾಕ್ಷಾ ದ್ರಾಮಸ್ಯ ಪುರತಃ ಸ್ಥಾತುಂ ತ್ವಂ ನ ಕ್ಷಮಃ ಪ್ರಭೋ ।
ಮಾಯಯಾ ಮೋಹಯಿತ್ವಾ ತು ಪ್ರಾಪ್ಸ್ಯಸೇ ತಾಂ ರಘೂತ್ತಮಮ್ ॥
ಅನುವಾದ
ಒಡೆಯಾ! ನೀನು ರಾಮನ ಮುಂದೆ ನೇರವಾಗಿ ನಿಲ್ಲಲು ಸಮರ್ಥನಲ್ಲ. ಆದರೆ ಮಾಯಾಜಾಲದಿಂದ ಆ ರಾಮನನ್ನು ವಂಚಿಸಿ ಆಕೆಯನ್ನು ಪಡೆಯಬಲ್ಲೆ. ॥56॥
(ಶ್ಲೋಕ-57)
ಮೂಲಮ್
ಶ್ರುತ್ವಾ ತತ್ಸೂಕ್ತವಾಕ್ಯೈಶ್ಚ ದಾನಮಾನಾದಿಭಿಸ್ತಥಾ ।
ಆಶ್ವಾಸ್ಯ ಭಗಿನೀಂ ರಾಜಾ ಪ್ರವಿವೇಶ ಸ್ವಕಂ ಗೃಹಮ್ ।
ತತ್ರ ಚಿಂತಾಪರೋ ಭೂತ್ವಾ ನಿದ್ರಾಂ ರಾತ್ರೌ ನ ಲಬ್ಧವಾನ್ ॥
ಅನುವಾದ
ಶೂರ್ಪನಖಿಯ ಮಾತುಗಳನ್ನು ಕೇಳಿದ ರಾಕ್ಷಸರಾಜ ರಾವಣನು ಆಕೆಯನ್ನು ಒಳ್ಳೆಯ ಮಾತುಗಳಿಂದ ಸಮಾಧಾನಗೊಳಿಸಿ, ಉತ್ತಮ ಉಡುಗೊರೆಯನ್ನಿತ್ತು ಗೌರವಾದರಗಳಿಂದ ಮನ್ನಿಸಿ ತನ್ನ ಅಂತಃಪುರವನ್ನು ಪ್ರವೇಶಿಸಿದನು. ಆದರೆ ಅಲ್ಲಿ ಚಿಂತಾವಶನಾದ ಅವನಿಗೆ ರಾತ್ರಿಯೆಲ್ಲ ನಿದ್ದೆ ಬರದೆ ಹೋಯಿತು. ॥57॥
(ಶ್ಲೋಕ-58)
ಮೂಲಮ್
ಏಕೇನ ರಾಮೇಣ ಕಥಂ ಮನುಷ್ಯ-
ಮಾತ್ರೇಣ ನಷ್ಟಃ ಸಬಲಃ ಖರೋ ಮೇ ।
ಭ್ರಾತಾ ಕಥಂ ಮೇ ಬಲವೀರ್ಯದರ್ಪ-
ಯುತೋ ವಿನಷ್ಟೋ ಬತ ರಾಘವೇಣ ॥
ಅನುವಾದ
ಮನುಷ್ಯ ಮಾತ್ರನಾದ ರಘುವಂಶೀಯ ರಾಮನೊಬ್ಬನೇ ನನ್ನ ಸೋದರನೂ, ಬಲ, ಪರಾಕ್ರಮಿ, ಸಾಹಸಿಯೂ ಸೇನಾಬಲ ಯುತನೂ ಆದ ಖರನನ್ನು ಹೇಗೆ ಕೊಂದನು? ಇದು ತುಂಬಾ ಆಶ್ಚರ್ಯವಾಗಿದೆ, ಎಂದು ಯೋಚಿಸಿದ. ॥58॥
(ಶ್ಲೋಕ-59)
ಮೂಲಮ್
ಯದ್ವಾ ನ ರಾಮೋ ಮನುಜಃ ಪರೇಶೋ
ಮಾಂ ಹಂತುಕಾಮಃ ಸಬಲಂ ಬಲೌಘೈಃ ।
ಸಂಪ್ರಾರ್ಥಿತೋಽಯಂ ದ್ರುಹಿಣೇನ ಪೂರ್ವಂ
ಮನುಷ್ಯರೂಪೋಽದ್ಯ ರಘೋ ಕುಲೇಽಭೂತ್ ॥
ಅನುವಾದ
ಅಥವಾ ಈ ರಾಮನು ಹಿಂದೆ ಬ್ರಹ್ಮನಿಂದ ಪ್ರಾರ್ಥಿತನಾದ ಪರಮಾತ್ಮನೇ ಆಗಿದ್ದು, ಈಗ ಮನುಷ್ಯ ರೂಪದಿಂದ ರಘುಕುಲದಲ್ಲಿ ಅವತರಿಸಿ, ತನ್ನ ಸಂಗಡಿಗರಾದ ವಾನರರಿಂದೊಡಗೂಡಿ ರಾಕ್ಷಸಬಲ ಸಹಿತನಾದ ನನ್ನನ್ನು ಕೊಲ್ಲಲು ಇಚ್ಛಿಸಿರಬಹುದೇ? ॥59॥
(ಶ್ಲೋಕ-60)
ಮೂಲಮ್
ವಧ್ಯೋ ಯದಿ ಸ್ಯಾಂ ಪರಮಾತ್ಮನಾಹಂ
ವೈಕುಂಠರಾಜ್ಯಂ ಪರಿಪಾಲಯೇಹಮ್ ।
ನೋ ಚೇದಿದಂ ರಾಕ್ಷಸರಾಜ್ಯಮೇವ
ಭೋಕ್ಷ್ಯೇ ಚಿರಂ ರಾಮಮತೋ ವ್ರಜಾಮಿ ॥
ಅನುವಾದ
ಒಂದು ವೇಳೆ ನಾನು ಆ ಪರಮಾತ್ಮನ ಕೈಯಲ್ಲಿ ಸತ್ತುಹೋದರೆ ವೈಕುಂಠ ರಾಜ್ಯವನ್ನು ಆಳುವೆನು. ಇಲ್ಲವಾದರೆ ಈ ರಾಕ್ಷಸ ರಾಜ್ಯವನ್ನೇ ಬಹುಕಾಲದವರೆಗೆ ಅನುಭವಿಸಿ ಕೊಂಡಿರುವೆ. ಆದ್ದರಿಂದ ನಾನು ರಾಮನ ಬಳಿಗೆ ಅವಶ್ಯವಾಗಿ ಹೋಗುವೆನು. ॥60॥
(ಶ್ಲೋಕ-61)
ಮೂಲಮ್
ಇತ್ಥಂ ವಿಚಿಂತ್ಯಾಖಿಲರಾಕ್ಷಸೇಂದ್ರೋ
ರಾಮಂ ವಿದಿತ್ವಾ ಪರಮೇಶ್ವರಂ ಹರಿಮ್ ।
ವಿರೋಧಬುದ್ಧ್ಯೆವ ಹರಿಂ ಪ್ರಯಾಮಿ
ದ್ರುತಂ ನ ಭಕ್ತ್ಯಾ ಭಗವಾನ್ ಪ್ರಸೀದೇತ್ ॥
ಅನುವಾದ
ಸಮಸ್ತ ರಾಕ್ಷಸರ ಒಡೆಯನಾದ ರಾವಣನು ಎಲ್ಲವನ್ನು ಆಲೋಚಿಸಿ, ರಾಮನು ಪರಮೇಶ್ವರನಾದ ಸಾಕ್ಷ್ಯಾತ್ ಶ್ರೀಹರಿಯೇ ಎಂದು ಅರಿತುಕೊಂಡು, ‘ಭಗವಂತನು ಪ್ರೇಮಭಕ್ತಿಗೆ ಬೇಗನೇ ಒಲಿಯುವುದಿಲ್ಲ, ಆದ್ದರಿಂದ ದ್ವೇಷ ಬುದ್ಧಿಯಿಂದಲೇ ಹರಿಯ ಬಳಿಸಾರುವೆನು’ ಎಂದು ನಿಶ್ಚಯಿಸಿಕೊಂಡನು. ॥61॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.