೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ಪಂಚವಟಿಯಲ್ಲಿ ನಿವಾಸ ಮತ್ತು ಲಕ್ಷ್ಮಣನಿಗೆ ಉಪದೇಶ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಮಾರ್ಗೇ ವ್ರಜನ್ ದದರ್ಶಾಥ ಶೈಲಶೃಂಗಮಿವ ಸ್ಥಿತಮ್ ।
ವೃದ್ಧಂ ಜಟಾಯುಷಂ ರಾಮಃ ಕಿಮೇತದಿತಿ ವಿಸ್ಮಿತಃ ॥

(ಶ್ಲೋಕ-2)

ಮೂಲಮ್

ಧನುರಾನಯ ಸೌಮಿತ್ರೇ ರಾಕ್ಷಸೋಽಯಂ ಪುರಃ ಸ್ಥಿತಃ ।
ಇತ್ಯಾಹ ಲಕ್ಷ್ಮಣಂ ರಾಮೋ ಹನಿಷ್ಯಾಮೃಷಿಭಕ್ಷಕಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಹಿಮಗಿರಿನಂದಿನಿ! ದಾರಿಯಲ್ಲಿ ಹೋಗುತ್ತಾ ರಾಮನು ಬೆಟ್ಟದಂತೆ ಆಕಾರವುಳ್ಳ ಮುದುಕನಾದ ಜಟಾಯುವನ್ನು ಕಂಡು ಇದೇನಿರಬಹುದು? ಎಂದು ಆಶ್ಚರ್ಯಗೊಂಡು ಕೈಯಲ್ಲಿ ಬಿಲ್ಲನ್ನು ಎತ್ತಿಕೊಂಡು ‘‘ಲಕ್ಷ್ಮಣ! ಇದೋ ಇದಿರಿಗೆ ಓರ್ವ ರಾಕ್ಷಸರು ಇರುವನು. ಋಷಿಗಳನ್ನು ತಿಂದು ಹಾಕುವ ಇವನನ್ನು ಈಗ ಕೊಂದು ಬಿಡುವೆ’’ ಎಂದನು. ॥1-2॥

(ಶ್ಲೋಕ-3)

ಮೂಲಮ್

ತಚ್ಛ್ರತ್ವಾ ರಾಮವಚನಂ ಗೃಧ್ರರಾಡ್ ಭಯಪೀಡಿತಃ ।
ವಧಾರ್ಹೋಹಂ ನ ತೇ ರಾಮ ಪಿತುಸ್ತೇಹಂ ಪ್ರಿಯಃ ಸಖಾ ॥

(ಶ್ಲೋಕ-4)

ಮೂಲಮ್

ಜಟಾಯುರ್ನಾಮ ಭದ್ರಂ ತೇ ಗೃಧ್ರೋಽಹಂ ಪ್ರಿಯಕೃತ್ತವ ॥

ಅನುವಾದ

ಶ್ರೀರಾಮನ ಈ ಮಾತನ್ನು ಕೇಳಿ ಗೃಧ್ರರಾಜನು ಹೆದರಿಕೊಂಡು ‘‘ಹೇ ರಾಮಚಂದ್ರಾ! ನಾನು ವಧಿಸಲು ಯೋಗ್ಯನಲ್ಲ. ನಿನ್ನ ತಂದೆಗೆ ನಾನು ಆಪ್ತಸ್ನೇಹಿತನು. ನನ್ನ ಹೆಸರು ಜಟಾಯು. ನಿನಗೆ ಮಂಗಳವಾಗಲಿ. ನಾನು ನಿನಗೆ ಬೇಕಾದವನು’’ ಎಂದನು. ॥3-4॥

(ಶ್ಲೋಕ-5)

ಮೂಲಮ್

ಪಂಚವಟ್ಯಾಮಹಂ ವತ್ಸ್ಯೇ ತವೈವ ಪ್ರಿಯಕಾಮ್ಯಯಾ ।
ಮೃಗಯಾಯಾಂ ಕದಾಚಿತ್ತು ಪ್ರಯಾತೇ ಲಕ್ಷ್ಮಣೇಽಪಿ ಚ ॥

(ಶ್ಲೋಕ-6)

ಮೂಲಮ್

ಸೀತಾ ಜನಕಕನ್ಯಾ ಮೇ ರಕ್ಷಿತವ್ಯಾ ಪ್ರಯತ್ನತಃ ।
ಶ್ರುತ್ವಾ ತದ್ ಗೃಧ್ರವಚನಂ ರಾಮಃ ಸಸ್ನೇಹಮಬ್ರವೀತ್ ॥

ಅನುವಾದ

‘‘ನಿನ್ನ ಹಿತಕ್ಕಾಗಿಯೇ ನಾನು ಪಂಚವಟಿಯಲ್ಲಿ ವಾಸಮಾಡುತ್ತಿರುವೆ. ನೀನು ಲಕ್ಷ್ಮಣನೊಡನೆ ಎಂದಾದರೂ ಬೇಟೆಗಾಗಿ ಹೋದಾಗ, ಜನಕನಂದಿನೀ ಸೀತೆಯನ್ನು ನಾನು ಪ್ರಯತ್ನ ಪೂರ್ವಕ ಕಾಪಾಡುವೆನು.’’ ಹೀಗೆಂದ ಗೃಧ್ರರಾಜನ ಮಾತನ್ನು ಕೇಳಿ ಶ್ರೀರಾಮನು ಪ್ರೀತಿಯಿಂದ ॥5-6॥

(ಶ್ಲೋಕ-7)

ಮೂಲಮ್

ಸಾಧು ಗೃಧ್ರ ಮಹಾರಾಜ ತಥೈವ ಕುರು ಮೇ ಪ್ರಿಯಮ್ ।
ಅತ್ರೈವ ಮೇ ಸಮೀಪಸ್ಥೋ ನಾತಿದೂರೇ ವನೇ ವಸನ್ ॥

ಅನುವಾದ

‘‘ಹೇ ಗೃಧ್ರರಾಜಾ! ಬಹಳ ಒಳ್ಳೆಯದು; ನೀನು ಇಲ್ಲೇ ಹತ್ತಿರದ ಹೆಚ್ಚು ದೂರವಲ್ಲದ ಕಾಡಿನಲ್ಲಿದ್ದುಕೊಂಡು ನನಗೆ ಇಷ್ಟವಾದ ಕೆಲಸವನ್ನು ಮಾಡುತ್ತಿರು.’’ ॥7॥

(ಶ್ಲೋಕ-8)

ಮೂಲಮ್

ಇತ್ಯಾಮಂತ್ರಿತಮಾಲಿಂಗ್ಯ ಯಯೌ ಪಂಚವಟೀಂ ಪ್ರಭುಃ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ರಘುನಂದನಃ ॥

ಅನುವಾದ

ಹೀಗೆ ಹೇಳಿ ಸಮ್ಮತಿಸಿ, ಜಟಾಯುವನ್ನು ಆಲಿಂಗಿಸಿಕೊಂಡು ವಿಭುವಾದ ಶ್ರೀರಾಮನು ಸೋದರನಾದ ಲಕ್ಷ್ಮಣ ಹಾಗೂ ಸೀತೆಯೊಡಗೂಡಿ ಪಂಚವಟಿಗೆ ಹೊರಟನು. ॥8॥

(ಶ್ಲೋಕ-9)

ಮೂಲಮ್

ಗತ್ವಾ ತೇ ಗೌತಮೀತೀರಂ ಪಂಚವಟ್ಯಾಂ ಸುವಿಸ್ತರಮ್।
ಮಂದಿರಂ ಕಾರಯಾಮಾಸ ಲಕ್ಷ್ಮಣೇನ ಸುಬುದ್ಧಿನಾ ॥

ಅನುವಾದ

ಗೌತಮೀ ನದಿಯ ತೀರಕ್ಕೆ ಶ್ರೀರಾಮನು ಬಂದು, ಜಾಣನಾದ ಲಕ್ಷ್ಮಣನಿಂದ ಆ ಪಂಚವಟಿಯಲ್ಲಿ ಒಂದು ವಿಶಾಲವಾದ ಪರ್ಣಕುಟಿಯನ್ನು ಕಟ್ಟಿಸಿದನು. ॥9॥

(ಶ್ಲೋಕ-10)

ಮೂಲಮ್

ತತ್ರ ತೇ ನ್ಯವಸಂಸರ್ವೇ ಗಂಗಾಯಾ ಉತ್ತರೇ ತಟೇ ।
ಕದಂಬಪನಸಾಮ್ರಾದಿ ಫಲವೃಕ್ಷಸಮಾಕುಲೇ ॥

(ಶ್ಲೋಕ-11)

ಮೂಲಮ್

ವಿವಿಕ್ತೇ ಜನಸಂಬಾಧ ವರ್ಜಿತೇ ನೀರುಜಸ್ಥಲೇ ।
ವಿನೋದಯನ್ ಜನಕಜಾಂ ಲಕ್ಷ್ಮಣೇನ ವಿಪಶ್ಚಿತಾ ॥

(ಶ್ಲೋಕ-12)

ಮೂಲಮ್

ಅಧ್ಯುವಾಸ ಸುಖಂ ರಾಮೋ ದೇವಲೋಕ ಇವಾಪರಃ ।
ಕಂದಮೂಲಲಾದೀನಿ ಲಕ್ಷ್ಮಣೋಽನುದಿನಂ ತಯೋಃ ॥

(ಶ್ಲೋಕ-13)

ಮೂಲಮ್

ಆನೀಯ ಪ್ರದದೌ ರಾಮಸೇವಾತತ್ಪರಮಾನಸಃ ।
ಧನುರ್ಬಾಣಧರೋ ನಿತ್ಯಂ ರಾತ್ರೌ ಜಾಗರ್ತಿ ಸರ್ವತಃ ॥

ಅನುವಾದ

ಗಂಗೆಗೆ ಸಮಾನವಾದ ಗೋದಾವರಿ ನದಿಯ ಉತ್ತರದಡದಲ್ಲಿ ಕದಂಬ, ಹಲಸು, ಮಾವು ಮುಂತಾದ ಹಣ್ಣುಳ್ಳ ಮರಗಳಿಂದ ನಿಬಿಡವಾದ, ಏಕಾಂತವಾದ, ಜನರ ಗದ್ದಲವಿಲ್ಲದ, ರೋಗ ರಹಿತವಾದ ಸ್ಥಳದಲ್ಲಿ ಬುದ್ಧಿವಂತನಾದ ಲಕ್ಷ್ಮಣನೊಡ ಗೂಡಿ, ಜನಕಾತ್ಮಜೆ ಸೀತೆಯನ್ನು ಸಂತೋಷ ಪಡಿಸುತ್ತಾ ಸುಖವಾಗಿ ದೇವಲೋಕದಲ್ಲಿ ಇಂದ್ರನಿರುವಂತೆ ಶ್ರೀರಾಮಚಂದ್ರನು ವಾಸ ಮಾಡಿಕೊಂಡಿದ್ದನು. ಪ್ರತಿದಿನವೂ ಲಕ್ಷ್ಮಣನು ಕಂದ ಮೂಲ ಫಲಗಳೇ ಮುಂತಾದುವನ್ನು ತಂದು ಶ್ರೀರಾಮನ ಸೇವಾತತ್ಪರನಾಗಿ ಅರ್ಪಿಸುತ್ತಿದ್ದನು. ರಾತ್ರಿಯಲ್ಲಿ ಧನುರ್ಬಾಣಗಳನ್ನು ಧರಿಸಿಕೊಂಡು ಸುತ್ತಲೂ ಅಡ್ಡಾಡುತ್ತಾ ಜಾಗರಣೆಯಿಂದ ಸೀತಾರಾಮರನ್ನು ಕಾಯುತ್ತಿದ್ದನು. ॥10-13॥

(ಶ್ಲೋಕ-14)

ಮೂಲಮ್

ಸ್ನಾನಂ ಕುರ್ವಂತ್ಯನುದಿನಂ ತ್ರಯಸ್ತೇ ಗೌತಮೀಜಲೇ ।
ಉಭಯೋರ್ಮಧ್ಯಗಾ ಸೀತಾ ಕುರುತೇ ಚ ಗಮಾಗವೌ ॥

(ಶ್ಲೋಕ-15)

ಮೂಲಮ್

ಆನೀಯ ಸಲಿಲಂ ನಿತ್ಯಂ ಲಕ್ಷ್ಮಣಃ ಪ್ರೀತಮಾನಸಃ ।
ಸೇವತೇಽಹರಹಃ ಪ್ರೀತ್ಯಾ ಏವಮಾಸನ್ ಸುಖಂ ತ್ರಯಃ ॥

ಅನುವಾದ

ಮೂವರೂ ಪ್ರತಿದಿನವೂ ಗೋದಾವರಿ ನದಿಯ ನೀರಿನಲ್ಲಿ ಸ್ನಾನಮಾಡುತ್ತಿದ್ದರು. ಸೀತೆಯು ಹೊರಗೆ-ಒಳಗೆ ಅಡ್ಡಾಡುವಾಗ ಶ್ರೀರಾಮ-ಲಕ್ಷ್ಮಣರ ನಡುವೆಯೇ ಚಲಿಸುತ್ತಿದ್ದಳು. ಲಕ್ಷ್ಮಣನು ಪ್ರಸನ್ನ ಚಿತ್ತದಿಂದ ದಿನವೂ ನೀರನ್ನು ತಂದುಕೊಟ್ಟು ಭಕ್ತಿಯಿಂದ ಅವರ ಸೇವೆ ಮಾಡುತ್ತಿದ್ದನು. ಹೀಗೆ ಮೂವರೂ ಅಲ್ಲಿ ಸುಖವಾಗಿ ವಾಸಿಸತೊಡಗಿದರು. ॥14-15॥

(ಶ್ಲೋಕ-16)

ಮೂಲಮ್

ಏಕದಾ ಲಕ್ಷ್ಮಣೋ ರಾಮಮೇಕಾಂತೇ ಸಮುಪಸ್ಥಿತಮ್ ।
ವಿನಯಾವನತೋ ಭೂತ್ವಾ ಪಪ್ರಚ್ಛ ಪರಮೇಶ್ವರಮ್ ॥

ಅನುವಾದ

ಒಮ್ಮೆ ಏಕಾಂತದಲ್ಲಿ ಕುಳಿತಿರುವ ಪರಮಾತ್ಮನಾದ ಶ್ರೀರಾಮನ ಬಳಿಗೆ ಲಕ್ಷ್ಮಣನು ಬಂದು ವಿನಯದಿಂದ ತಲೆಬಾಗಿ ಕೇಳಿದನು.॥16॥

(ಶ್ಲೋಕ-17)

ಮೂಲಮ್

ಭಗವನ್ ಶ್ರೋತುಮಿಚ್ಛಾಮಿ ಮೋಕ್ಷಸ್ಯೈಕಾಂತಿಕೀಂ ಗತಿಮ್ ।
ತ್ವತ್ತಃ ಕಮಲಪತ್ರಾಕ್ಷ ಸಂಕ್ಷೇಪಾದ್ವಕ್ತುಮರ್ಹಸಿ ॥

(ಶ್ಲೋಕ-18)

ಮೂಲಮ್

ಜ್ಞಾನಂ ವಿಜ್ಞಾನಸಹಿತಂ ಭಕ್ತಿವೈರಾಗ್ಯಬೃಂಹಿತಮ್ ।
ಆಚಕ್ಷ್ವ ಮೇ ರಘುಶ್ರೇಷ್ಠ ವಕ್ತಾ ನಾನ್ಯೋಽಸ್ತಿ ಭೂತಲೇ ॥

ಅನುವಾದ

‘‘ಪೂಜ್ಯನಾದ ಅಣ್ಣಾ! ಮೋಕ್ಷಕ್ಕೆ ನಿಶ್ಚಿತವಾಗಿ ಗೊತ್ತಾದ ಸಾಧನವು ಯಾವುದೆಂಬುದನ್ನು ನಿನ್ನ ಮುಖಾರವಿಂದದಿಂದ ಕೇಳಲು ಇಚ್ಛಿಸುತ್ತಿದ್ದೇನೆ. ಹೇ ಕಮಲನಯನಾ! ನೀನು ಸಂಕ್ಷೇಪವಾಗಿ ಈ ವಿಚಾರವನ್ನು ವರ್ಣಿಸು. ವಿಜ್ಞಾನ ಸಹಿತ ಜ್ಞಾನವನ್ನು ಭಕ್ತಿ ವೈರಾಗ್ಯಗಳೊಡನೆ ವಿಸ್ತರಿಸಿ ಹೇಳು. ಹೇ ರಘುಶ್ರೇಷ್ಠ! ಭೂಲೋಕದಲ್ಲಿ ನಿನ್ನಂತೆ ಉಪದೇಶ ಮಾಡುವವರು ಬೇರೊಬ್ಬನಿರುವುದಿಲ್ಲ. ॥17-18॥

(ಶ್ಲೋಕ-19)

ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಶೃಣು ವಕ್ಷ್ಯಾಮಿ ತೇ ವತ್ಸ ಗುಹ್ಯಾದ್ಗುಹ್ಯತರಂ ಪರಮ್ ।
ಯದ್ವಿಜ್ಞಾಯ ನರೋ ಜಹ್ಯಾತ್ಸದ್ಯೋ ವೈಕಲ್ಪಿಕಂ ಭ್ರಮಮ್ ॥

ಅನುವಾದ

ಶ್ರೀರಾಮನಿಂತೆಂದನು — ಮಗು ಲಕ್ಷ್ಮಣಾ! ಯಾವುದನ್ನು ತಿಳಿದುಕೊಂಡಾಗ ಮನುಷ್ಯನು ದ್ವೈತದಿಂದ ಉಂಟಾದ ಭ್ರಮೆಯಿಂದ ಮುಕ್ತನಾಗುತ್ತಾನೋ ಅಂತಹ ಅತ್ಯಂತ ಗುಹ್ಯಾತಿಗುಹ್ಯ ಪರಮ ರಹಸ್ಯವನ್ನು ನಾನು ನಿನಗೆ ಹೇಳುವೆನು ಕೇಳು. ॥19॥

(ಶ್ಲೋಕ-20)

ಮೂಲಮ್

ಆದೌ ಮಾಯಾಸ್ವರೂಪಂ ತೇ ವಕ್ಷ್ಯಾಮಿ ತದನಂತರಮ್ ।
ಜ್ಞಾನಸ್ಯ ಸಾಧನಂ ಪಶ್ಚಾತ್ ಜ್ಞಾನಂ ವಿಜ್ಞಾನಸಂಯುತಮ್ ॥

(ಶ್ಲೋಕ-21)

ಮೂಲಮ್

ಜ್ಞೇಯಂ ಚ ಪರಮಾತ್ಮಾನಂ ಯಜ್ಜ್ಞಾತ್ವಾ ಮುಚ್ಯತೇ ಭಯಾತ್ ।
ಅನಾತ್ಮನಿ ಶರೀರಾದಾವಾತ್ಮಬುದ್ಧಿಸ್ತು ಯಾ ಭವೇತ್ ॥

(ಶ್ಲೋಕ-22)

ಮೂಲಮ್

ಸೈವ ಮಾಯಾ ತಯೈವಾಸೌ ಸಂಸಾರಃ ಪರಿಕಲ್ಪ್ಯತೇ ।
ರೂಪೇ ದ್ವೇ ನಿಶ್ಚಿತೇ ಪೂರ್ವಂ ಮಾಯಾಯಾಃ ಕುಲನಂದನ ॥

ಅನುವಾದ

ಮೊದಲಿಗೆ ಮಾಯೆಯ ಸ್ವರೂಪವನ್ನೂ, ಅನಂತರ ಜ್ಞಾನದ ಸಾಧನೆಯನ್ನೂ, ಮುಂದೆ ಅನುಭವದಿಂದೊಡಗೂಡಿದ ವಿಜ್ಞಾನ ಸಹಿತ ಜ್ಞಾನವನ್ನೂ, ಬಳಿಕ ಜ್ಞೇಯನಾದ ಪರಮಾತ್ಮ ತತ್ತ್ವವನ್ನು ಹೇಳುವೆನು. ಅದನ್ನರಿಯುವುದರಿಂದ ಮನುಷ್ಯನು ಸಂಸಾರ ಭಯದಿಂದ ಮುಕ್ತನಾಗಿ ಹೋಗುತ್ತಾನೆ. ಆತ್ಮನಲ್ಲದ ಶರೀರಾದಿಗಳಲ್ಲಿ ನಾನೆಂಬ ಬುದ್ಧಿಯನ್ನೇ ಮಾಯೆ ಎಂದು ಹೇಳುವರು. ಅದರಿಂದಲೇ ಸಂಸಾರವು ಕಲ್ಪಿತವಾಗಿರುವುದು. ಹೇ ಕುಲನಂದನಾ! ಮಾಯೆಗೆ ಮೊಟ್ಟಮೊದಲು ಎರಡು ರೂಪಗಳು ನಿಶ್ಚಿತವಾಗಿವೆ. ॥20-22॥

(ಶ್ಲೋಕ-23)

ಮೂಲಮ್

ವಿಕ್ಷೇಪಾವರಣೇ ತತ್ರ ಪ್ರಥಮಂ ಕಲ್ಪಯೇಜ್ಜಗತ್ ।
ಲಿಂಗಾದ್ಯಬ್ರಹ್ಮಪರ್ಯಂತಂ ಸ್ಥೂಲಸೂಕ್ಷ್ಮವಿಭೇದತಃ ॥

ಅನುವಾದ

ವಿಕ್ಷೇಪ ಮತ್ತು ಆವರಣ ಎಂಬುದೇ ಆ ಎರಡು ರೂಪಗಳು. ಇವುಗಳಲ್ಲಿ ಮೊದಲನೆಯದು ವಿಕ್ಷೇಪ ಶಕ್ತಿಯು ಮಹತ್ತತ್ತ್ವದಿಂದ ಹಿಡಿದು ಬ್ರಹ್ಮನವರೆಗಿನ ಎಲ್ಲ ಪ್ರಪಂಚವನ್ನು ಸ್ಥೂಲ-ಸೂಕ್ಷ್ಮಗಳೆಂಬ ವಿಭಾಗಗಳಾಗಿಸಿ ಕಲ್ಪಿಸುತ್ತದೆ. ॥23॥

(ಶ್ಲೋಕ-24)

ಮೂಲಮ್

ಅಪರಂ ತ್ವಖಿಲಂ ಜ್ಞಾನರೂಪಮಾವೃತ್ಯ ತಿಷ್ಠತಿ ।
ಮಾಯಯಾ ಕಲ್ಪಿತಂ ವಿಶ್ವಂ ಪರಮಾತ್ಮನಿ ಕೇವಲೇ ॥

(ಶ್ಲೋಕ-25)

ಮೂಲಮ್

ರಜ್ಜೌ ಭುಜಂಗವದ್ ಭ್ರಾಂತ್ಯಾ ವಿಚಾರೇ ನಾಸ್ತಿ ಕಿಂಚನ ।
ಶ್ರೂಯತೇ ದೃಶ್ಯತೇ ಯದ್ಯತ್ಸ್ಮರ್ಯತೇ ವಾ ನರೈಃ ಸದಾ ॥

(ಶ್ಲೋಕ-26)

ಮೂಲಮ್

ಅಸದೇವ ಹಿ ತತ್ಸರ್ವಂ ಯಥಾ ಸ್ವಪ್ನಮನೋರಥೌ ।
ದೇಹ ಏವ ಹಿ ಸಂಸಾರವೃಕ್ಷಮೂಲಂ ದೃಢಂ ಸ್ಮೃತಮ್ ॥

ಅನುವಾದ

ಮತ್ತೊಂದು ಆವರಣ ಶಕ್ತಿಯು ಎಲ್ಲ ಜ್ಞಾನವನ್ನು ಆವರಿಸಿಕೊಂಡಿರುತ್ತದೆ. ಹೀಗೆ ಮಾಯೆಯಿಂದ ಕಲ್ಪಿತವಾದ ಬ್ರಹ್ಮಾಂಡವು ನಿರಂಜನನಾದ ಪರಮಾತ್ಮನಲ್ಲಿ ಹಗ್ಗದಲ್ಲಿ ಹಾವು ಎಂಬ ಭ್ರಮೆಯಂತೆ ತೋರಿಕೊಳ್ಳುತ್ತದೆ. ವಿಚಾರ ಮಾಡಿದಾಗ ಏನೂ ಇರುವುದೇ ಇಲ್ಲ. ಮನುಷ್ಯರು ಏನೇನು ಕೇಳುತ್ತಾರೋ, ನೋಡುತ್ತಾರೋ, ಸ್ಮರಿಸಿಕೊಳ್ಳುತ್ತಾರೋ, ಅದೆಲ್ಲವೂ ಸ್ವಪ್ನದಂತೆ, ಮನಸ್ಸಿನಲ್ಲಿ ಕಲ್ಪಿಸಿಕೊಂಡ ಇಷ್ಟಾರ್ಥದಂತೆ ಮಿಥ್ಯೆ ಆಗಿದೆ. ದೇಹವೇ ಸಂಸಾರವೆಂಬ ಮರಕ್ಕೆ ಭದ್ರವಾದ ಬೇರು ಆಗಿದೆ. ॥24-26॥

(ಶ್ಲೋಕ-27)

ಮೂಲಮ್

ತನ್ಮೂಲಃ ಪುತ್ರದಾರಾದಿಬಂಧಃ ಕಿಂ ತೇಽನ್ಯಥಾತ್ಮನಃ ॥

ಅನುವಾದ

ಪತ್ನೀ-ಪುತ್ರಾದಿ ಸಂಬಂಧಗಳು ಆ ದೇಹಾಭಿಮಾನದಿಂದಲೇ ಇರುವವು. ಅದಿಲ್ಲವಾದರೆ ಆತ್ಮನಿಗೆ ಬಂಧನವಾದರೂ ಏನಿದ್ದೀತು? ॥27॥

(ಶ್ಲೋಕ-28)

ಮೂಲಮ್

ದೇಹಸ್ತು ಸ್ಥೂಲಭೂತಾನಾಂ ಪಂಚ ತನ್ಮಾತ್ರಪಂಚಕಮ್ ।
ಅಹಂಕಾರಶ್ಚ ಬುದ್ಧಿಶ್ಚ ಇಂದ್ರಿಯಾಣಿ ತಥಾ ದಶ ॥

(ಶ್ಲೋಕ-29)

ಮೂಲಮ್

ಚಿದಾಭಾಸೋ ಮನಶ್ಚೈವ ಮೂಲಪ್ರಕೃತಿರೇವ ಚ ।
ಏತತ್ ಕ್ಷೇತ್ರಮಿತಿ ಜ್ಞೇಯಂ ದೇಹ ಇತ್ಯಭಿಧೀಯತೇ ॥

ಅನುವಾದ

ದೇಹವಾದರೋ ಸ್ಥೂಲವಾದ ಪಂಚಭೂತಗಳ ಅಂಶವಾಗಿದೆ. ಐದು ಮಹಾಭೂತಗಳು ಹಾಗೂ ಪಂಚ ತನ್ಮಾತ್ರೆಗಳು, ಅಹಂಕಾರ, ಬುದ್ಧಿ, ಹತ್ತು ಇಂದ್ರಿಯಗಳು, ಚಿದಾಭಾಸ ವೆಂಬ ಜೀವನು, ಮನಸ್ಸು, ಮೂಲ ಪ್ರಕೃತಿ ಇವೆಲ್ಲವೂ ಕ್ಷೇತ್ರವೆಂದು ತಿಳಿ. ಇದನ್ನೇ ದೇಹವೆಂದೂ ಹೇಳುತ್ತಾರೆ. ॥28-29॥

(ಶ್ಲೋಕ-30)

ಮೂಲಮ್

ಏತೈರ್ವಿಲಕ್ಷಣೋ ಜೀವಃ ಪರಮಾತ್ಮಾ ನಿರಾಮಯಃ ।
ತಸ್ಯ ಜೀವಸ್ಯ ವಿಜ್ಞಾನೇ ಸಾಧನಾನ್ಯಪಿ ಮೇ ಶೃಣು ॥

ಅನುವಾದ

ಇವುಗಳಿಗಿಂತ ವಿಲಕ್ಷಣನಾದ ಪರಮಾತ್ಮನೇ ದೋಷರಹಿತನಾದ ಜೀವನು. ಆ ಜೀವನ ವಿಜ್ಞಾನವನ್ನು ಪಡೆಯಲು ಸಾಧನೆಗಳನ್ನು ಹೇಳುವೆನು. ಎಚ್ಚರವಾಗಿ ಕೇಳು. ॥30॥

(ಶ್ಲೋಕ-31)

ಮೂಲಮ್

ಜೀವಶ್ಚ ಪರಮಾತ್ಮಾ ಚ ಪರ್ಯಾಯೋ ನಾತ್ರ ಭೇದಧೀಃ ।
ಮಾನಾಭಾವಸ್ತಥಾ ದಂಭಹಿಂಸಾದಿಪರಿವರ್ಜನಮ್ ॥

ಅನುವಾದ

ಜೀವ ಮತ್ತು ಪರಮಾತ್ಮ ಇಬ್ಬರೂ ಒಂದೇ. ಇವೆರಡೂ ಪರ್ಯಾಯ ಶಬ್ದಗಳೇ. ಆದ್ದರಿಂದ ಜೀವ ಬ್ರಹ್ಮರಲ್ಲಿ ನಿಜವಾಗಿ ಭೇದವಿರುವುದಿಲ್ಲ. ಇದನ್ನು ತಿಳಿಯಲು ಸಾಧನೆಗಳೆಂದರೆ ನಿರಹಂಕಾರಿಯಾಗಿರುವುದು, ಜಂಭ, ಹಿಂಸೆ ಮುಂತಾದುವನ್ನು ಬಿಟ್ಟಿರುವುದು. ॥31॥

(ಶ್ಲೋಕ-32)

ಮೂಲಮ್

ಪರಾಕ್ಷೇಪಾದಿಸಹನಂ ಸರ್ವತ್ರಾವಕ್ರತಾ ತಥಾ ।
ಮನೋವಾಕ್ಕಾಯ ಸದ್ಭಕ್ತ್ಯಾ ಸದ್ಗುರೋಃ ಪರಿಸೇವನಮ್ ॥

ಅನುವಾದ

ಮತ್ತೊಬ್ಬನು ಬೈದರೆ ತಡೆದುಕೊಳ್ಳುವುದು, ಎಲ್ಲರಲ್ಲಿಯೂ ಸರಳವಾಗಿರುವುದು. ಮನಸ್ಸು, ಮಾತು, ಶರೀರಗಳಿಂದ ಭಕ್ತಿಯನ್ನು ಮಾಡುತ್ತಾ ಸದ್ಗುರುವನ್ನು ಆಶ್ರಯಿಸುವುದು. ॥32॥

(ಶ್ಲೋಕ-33)

ಮೂಲಮ್

ಬಾಹ್ಯಾಭ್ಯಂತರಸಂಶುದ್ಧಿಃ ಸ್ಥಿರತಾ ಸತ್ಕ್ರಿಯಾದಿಷು ।
ಮನೋವಾಕ್ಕಾಯದಂಡಶ್ಚ ವಿಷಯೇಷು ನಿರೀಹತಾ ॥

ಅನುವಾದ

ಒಳಗೂ-ಹೊರಗೂ ಶುಚಿಯಾಗಿರುವುದು, ಸತ್ಕರ್ಮಗಳಲ್ಲಿ ತತ್ಪರನಾಗಿರುವುದು, ಮನಸ್ಸು, ವಾಣೀ, ಶರೀರ, ಇವುಗಳನ್ನು ಸಂಯಮಿಸುವುದು, ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು. ॥33॥

(ಶ್ಲೋಕ-34)

ಮೂಲಮ್

ನಿರಹಂಕಾರತಾ ಜನ್ಮಜರಾದ್ಯಾಲೋಚನಂ ತಥಾ ।
ಅಸಕ್ತಿಃ ಸ್ನೇಹಶೂನ್ಯತ್ವಂ ಪುತ್ರದಾರಧನಾದಿಷು ॥

ಅನುವಾದ

ಅಹಂಕಾರವಿಲ್ಲದಿರುವಿಕೆ, ಹುಟ್ಟು, ಮುಪ್ಪು, ಮುಂತಾದವುಗಳ ಕುರಿತು ಚಿಂತಿಸುವುದು, ಮಕ್ಕಳು, ಹೆಂಡತಿ, ಹಣ ಮುಂತಾದ ಪದಾರ್ಥಗಳಲ್ಲಿ ಸ್ನೇಹ ಆಸಕ್ತಿ ಇಲ್ಲದಿರುವುದು. ॥34॥

(ಶ್ಲೋಕ-35)

ಮೂಲಮ್

ಇಷ್ಟಾನಿಷ್ಟಾಗಮೇ ನಿತ್ಯಂ ಚಿತ್ತಸ್ಯ ಸಮತಾ ತಥಾ ।
ಮಯಿ ಸರ್ವಾತ್ಮಕೇ ರಾಮೇ ಹ್ಯನನ್ಯವಿಷಯಾ ಮತಿಃ ॥

ಅನುವಾದ

ಒಳ್ಳೆಯದಾಗಲಿ, ಕೆಟ್ಟದಾಗಲಿ ಬಂದೊದಗಿದಾಗ ಅಂತಃಕರಣ ವನ್ನು ಸ್ಥಿರವಾಗಿ ಸಮನಾಗಿರಿಸಿಕೊಳ್ಳುವುದು, ಸರ್ವಾತ್ಮಕ ರಾಮನಾದ ನನ್ನಲ್ಲಿ ಅನನ್ಯವಾದ ಬುದ್ಧಿಯನ್ನಿರಿಸುವುದು. ॥35॥

(ಶ್ಲೋಕ-36)

ಮೂಲಮ್

ಜನಸಂಬಾಧರಹಿತಶುದ್ಧದೇಶನಿಷೇವಣಮ್ ।
ಪ್ರಾಕೃತೈರ್ಜನಸಂಘೈಶ್ಚ ಹ್ಯರತಿಃ ಸರ್ವದಾ ಭವೇತ್ ॥

(ಶ್ಲೋಕ-37)

ಮೂಲಮ್

ಆತ್ಮಜ್ಞಾನೇ ಸದೋದ್ಯೋಗೋ ವೇದಾಂತಾರ್ಥಾವಲೋಕನಮ್ ।
ಉತ್ತೈರೇತೈರ್ಭವೇಜ್ಜ್ಞಾನಂ ವಿಪರೀತೈರ್ವಿಪರ್ಯಯಃ ॥

ಅನುವಾದ

ಜನಜಂಗುಳಿ ಇಲ್ಲದಿರುವ ಪರಿಶುದ್ಧವಾದ ಜಾಗದಲ್ಲಿ ವಾಸಿಸುವುದು (ಏಕಾಂತವಾಗಿರುವುದು), ಪ್ರಾಪಂಚಿಕ ಜನರಿಂದ ಸದಾಕಾಲ ಉದಾಸೀನನಾಗಿರುವುದು, ಆತ್ಮಜ್ಞಾನವನ್ನು ಸಂಪಾದಿಸುವುದರಲ್ಲೇ ಕ್ರಿಯಾಶೀಲನಾಗಿರುವುದು, ವೇದಾಂತದ ಅರ್ಥವನ್ನು ತಿಳಿಯಲು ಉಪನಿಷತ್ತುಗಳನ್ನು ಮನನ ಮಾಡುವುದು. ಇಲ್ಲಿ ಹೇಳಿದ ಅಧ್ಯಾತ್ಮ ಸಾಧನೆಗಳಿಂದ ಜ್ಞಾನವುಂಟಾಗುವುದು. ಇವುಗಳಿಗೆ ವಿರುದ್ಧವಾಗಿ ಆಚರಣೆ ಮಾಡಿದರೆ ವಿಪರೀತ ಫಲ (ಅಜ್ಞಾನ) ಹೊಂದುವನು. ॥36-37॥

(ಶ್ಲೋಕ-38)

ಮೂಲಮ್

ಬುದ್ಧಿಪ್ರಾಣಮನೋದೇಹಾಹಂಕೃತಿಭ್ಯೋ ವಿಲಕ್ಷಣಃ ।
ಚಿದಾತ್ಮಾಹಂ ನಿತ್ಯಶುದ್ಧೋ ಬುದ್ಧ ಏವೇತಿ ನಿಶ್ಚಯಮ್ ॥

(ಶ್ಲೋಕ-39)

ಮೂಲಮ್

ಯೇನ ಜ್ಞಾನೇನ ಸಂವಿತ್ತೇ ತಜ್ಜ್ಞಾನಂ ನಿಶ್ಚಿತಂ ಚ ಮೇ ।
ವಿಜ್ಞಾನಂ ಚ ತದೈವೈತತ್ಸಾಕ್ಷಾದನುಭವೇದ್ಯದಾ ॥

ಅನುವಾದ

ಬುದ್ಧಿ, ಪ್ರಾಣ, ಮನಸ್ಸು, ದೇಹ, ಅಹಂಕಾರ ಇವುಗಳಿಗಿಂತ ವಿಲಕ್ಷಣವಾದ ನಿತ್ಯ ಶುದ್ಧ ಬುದ್ಧನಾದ ಚಿದಾತ್ಮನೇ ನಾನು ಎಂಬ ಬೋಧವಾಗುವುದೇ ಜ್ಞಾನವಾಗಿದೆ. ತಿಳಿವಳಿಕೆಯೇ ಆತ್ಮನನ್ನು ಅರಿಯುವ ಸರಿಯಾದ ಜ್ಞಾನವೆಂಬುದು ನನ್ನ ನಿಶ್ಚಯವಾಗಿದೆ. ಆ ಜ್ಞಾನವು ನೇರವಾಗಿ ಅನುಭವಕ್ಕೆ ಬಂದರೆ ಅದೇ ವಿಜ್ಞಾನವಾಗಿದೆ. ॥38-39॥

(ಶ್ಲೋಕ-40)

ಮೂಲಮ್

ಆತ್ಮಾ ಸರ್ವತ್ರ ಪೂರ್ಣಃ ಸ್ಯಾಚ್ಚಿದಾನಂದಾತ್ಮಕೋಽವ್ಯಯಃ ।
ಬುದ್ಧ್ಯಾದ್ಯುಪಾಧಿರಹಿತಃ ಪರಿಣಾಮಾದಿವರ್ಜಿತಃ ॥

(ಶ್ಲೋಕ-41)

ಮೂಲಮ್

ಸ್ವಪ್ರಕಾಶೇನ ದೇಹಾದೀನ್ ಭಾಸಯನ್ನನಪಾವೃತಃ ।
ಏಕ ಏವಾದ್ವಿತೀಯಶ್ಚ ಸತ್ಯಜ್ಞಾನಾದಿಲಕ್ಷಣಃ ॥

(ಶ್ಲೋಕ-42)

ಮೂಲಮ್

ಅಸಂಗಃ ಸ್ವಪ್ರಭೋ ದ್ರಷ್ಟಾ ವಿಜ್ಞಾನೇನಾವಗಮ್ಯತೇ ।
ಆಚಾರ್ಯಶಾಸ್ತ್ರೋಪದೇಶಾತ್ ಐಕ್ಯಜ್ಞಾನಂ ಯದಾ ಭವೇತ್ ॥

(ಶ್ಲೋಕ-43)

ಮೂಲಮ್

ಆತ್ಮನೋರ್ಜೀವಪರಯೋರ್ಮೂಲಾವಿದ್ಯಾ ತದೈವ ಹಿ ।
ಲೀಯತೇ ಕಾರ್ಯಕರಣೈಃ ಸಹೈವ ಪರಮಾತ್ಮನಿ ॥

ಅನುವಾದ

ಆತ್ಮನು ಎಲ್ಲೆಲ್ಲಿಯೂ ಪೂರ್ಣನಾಗಿರುವನು. ಚಿದಾನಂದ ಸ್ವರೂಪನೂ, ಅವ್ಯಯನೂ, ಬುದ್ಧಿಯೇ ಮುಂತಾದ ಉಪಾಧಿಗಳಿಂದ ರಹಿತನೂ, ಪರಿಣಾಮಗಳಿಲ್ಲದವನೂ, ತನ್ನ ಬೆಳಕಿನಿಂದ ದೇಹಾದಿಗಳನ್ನು ಬೆಳಗಿಸುತ್ತಾ, ಆವರಣಗಳಿಲ್ಲದವನಾಗಿರುವನು. ಏಕನೂ, ಅದ್ವಿತೀಯನೂ, ಸತ್ಯಜ್ಞಾನಾದಿ ಸ್ವರೂಪನೂ, ಸಂಗವಿಲ್ಲದವನೂ, ಸ್ವಯಂ ಪ್ರಕಾಶನೂ, ಎಲ್ಲವನ್ನು ನೋಡುವವನೂ, ಹೀಗೆಂದು ವಿಜ್ಞಾನದಿಂದ ತಿಳಿಯಲಾಗುತ್ತದೆ. ಶಾಸ್ತ್ರ ಮತ್ತು ಆಚಾರ್ಯರ ಉಪದೇಶಗಳಿಂದ ಜೀವಾತ್ಮ-ಪರಮಾತ್ಮರ ಐಕ್ಯಜ್ಞಾನ ಉಂಟಾದಾಗಲೇ, ಜೀವಾತ್ಮ-ಪರಮಾತ್ಮರ ಭೇದಕ್ಕೆ ಕಾರಣವಾದ ಅನಾದ್ಯವಿದ್ಯೆಯು ಕಾರ್ಯಕಾರಣ (ಶರೀರ ಇಂದ್ರಿಯಾದಿಗಳೊಡನೆ ಪರಮಾತ್ಮನಲ್ಲಿಯೇ ಲಯವಾಗಿ ಬಿಡುತ್ತದೆ. ॥40-43॥

(ಶ್ಲೋಕ-44)

ಮೂಲಮ್

ಸಾವಸ್ಥಾ ಮುಕ್ತಿರಿತ್ಯುಕ್ತಾ ಹ್ಯುಪಚಾರೋಽಯಮಾತ್ಮನಿ ।
ಇದಂ ಮೋಕ್ಷಸ್ವರೂಪಂ ತೇ ಕಥಿತಂ ರಘುನಂದನ ॥

(ಶ್ಲೋಕ-45)

ಮೂಲಮ್

ಜ್ಞಾನವಿಜ್ಞಾನವೈರಾಗ್ಯಸಹಿತಂ ಮೇ ಪರಾತ್ಮನಃ ।
ಕಿಂತ್ವೇತದ್ದುರ್ಲಭಂ ಮನ್ಯೇ ಮದ್ಭಕ್ತಿವಿಮುಖಾತ್ಮನಾಮ್ ॥

ಅನುವಾದ

ಅವಿದ್ಯೆಯ ಈ ಲಯಾವಸ್ಥೆಯನ್ನೇ ಮುಕ್ತಿ ಎಂದು ಹೇಳುವರು. ಈ ಮೋಕ್ಷವು ಆತ್ಮನಲ್ಲಿ ಕೇವಲ ಉಪಚಾರಮಾತ್ರವಾಗಿದೆ. (ವಾಸ್ತವವಾಗಿ ಆತ್ಮನು ಸದಾ ಮುಕ್ತನೇ ಆಗಿದ್ದಾನೆ). ಹೇ ರಘುನಂದನ ಲಕ್ಷ್ಮಣಾ! ಪರಮಾತ್ಮನ ಈ ಮುಕ್ತಿಯ ಸ್ವರೂಪವನ್ನು ಜ್ಞಾನ ವಿಜ್ಞಾನ ವೈರಾಗ್ಯಗಳೊಡನೆ ನಿನಗೆ ಹೇಳಿರುವೆನು. ಆದರೆ ಈ ಜ್ಞಾನವು ನನ್ನ ಭಕ್ತಿಯಿಲ್ಲದವರಿಗೆ ದೊರಕುವುದು ಅತ್ಯಂತ ಕಷ್ಟವೇ ಆಗಿದೆ. ॥44-45॥

(ಶ್ಲೋಕ-46)

ಮೂಲಮ್

ಚಕ್ಷುಷ್ಮತಾಮಪಿ ಯಥಾ ರಾತ್ರೌ ಸಮ್ಯಙ್ ನ ದೃಶ್ಯತೇ ।
ಪದಂ ದೀಪಸಮೇತಾನಾಂ ದೃಶ್ಯತೇ ಸಮ್ಯಗೇವ ಹಿ ॥

(ಶ್ಲೋಕ-47)

ಮೂಲಮ್

ಏವಂ ಮದ್ಭಕ್ತಿಯುಕ್ತಾನಾಮಾತ್ಮಾ ಸಮ್ಯಕ್ ಪ್ರಕಾಶತೇ ।
ಮದ್ಭಕ್ತೇಃ ಕಾರಣಂ ಕಿಂಚಿದ್ವಕ್ಷ್ಯಾಮಿ ಶೃಣು ತತ್ತ್ವತಃ ॥

ಅನುವಾದ

ಏಕೆಂದರೆ, ಕಣ್ಣಿದ್ದರೂ ರಾತ್ರಿಯ ಕತ್ತಲಲ್ಲಿ ದಾರಿಯು ಕಾಣುವುದಿಲ್ಲ. ಆದರೆ ದೀಪವುಳ್ಳವರಿಗೆ ಚೆನ್ನಾಗಿ ಕಾಣುತ್ತದೆ. ಹಾಗೆಯೇ ನನ್ನ ಭಕ್ತಿಯುಳ್ಳವರಿಗೆ ಆತ್ಮನು ಚೆನ್ನಾಗಿ ಕಂಡು ಬರುತ್ತಾನೆ. ನನ್ನ ಭಕ್ತಿಗೆ ಕಾರಣವಾಗಿರುವ ಕೆಲವು ಉಪಾಯಗಳನ್ನು ತತ್ತ್ವತಃ ಹೇಳುವೆನು ಕೇಳು. ॥46-47॥

(ಶ್ಲೋಕ-48)

ಮೂಲಮ್

ಮದ್ಭಕ್ತಸಂಗೋ ಮತ್ಸೇವಾ ಮದ್ಭಕ್ತಾನಾಂ ನಿರಂತರಮ್ ।
ಏಕಾದಶ್ಯುಪವಾಸಾದಿ ಮಮ ಪರ್ವಾನುಮೋದನಮ್ ॥

ಅನುವಾದ

ನನ್ನ ಭಕ್ತರ ಸಂಗಮಾಡುವುದು, ನಿರಂತರವಾಗಿ ನನ್ನನ್ನು ಮತ್ತು ನನ್ನ ಭಕ್ತರನ್ನು ಸೇವಿಸುವುದು, ಏಕಾದಶೀ ಮುಂತಾದ ವ್ರತಗಳನ್ನು ಮಾಡುವುದು, ನನ್ನ ಪರ್ವದಿಗಳನ್ನು ಅಂದರೆ ಜಯಂತಿ ಮುಂತಾದ ವಿಶೇಷ ದಿನಗಳಲ್ಲಿ ಉತ್ಸವಾದಿಗಳನ್ನು ಆಚರಿಸುವುದು. ॥48॥

(ಶ್ಲೋಕ-49)

ಮೂಲಮ್

ಮತ್ಕಥಾಶ್ರವಣೇ ಪಾಠೇ ವ್ಯಾಖ್ಯಾನೇ ಸರ್ವದಾ ರತಿಃ ।
ಮತ್ಪೂಜಾಪರಿನಿಷ್ಠಾ ಚ ಮಮ ನಾಮಾನುಕೀರ್ತನಮ್ ॥

ಅನುವಾದ

ನನ್ನ ಕಥೆಯನ್ನು ಕೇಳುವುದರಲ್ಲಿ, ಹೇಳುವುದರಲ್ಲಿ, ಪಾರಾಯಣೆ ಮಾಡುವುದರಲ್ಲಿ ಸದಾಕಾಲ ಆಸಕ್ತಿಹೊಂದುವುದು. ನನ್ನ ಪೂಜೆಯಲ್ಲೇ ತತ್ಪರನಾಗಿರುವುದು, ನನ್ನ ನಾಮಗಳನ್ನು ಕೀರ್ತಿಸುವುದು. ॥49॥

(ಶ್ಲೋಕ-50)

ಮೂಲಮ್

ಏವಂ ಸತತಯುಕ್ತಾನಾಂ ಭಕ್ತಿರವ್ಯಭಿಚಾರಿಣೀ ।
ಮಯಿ ಸಂಜಾಯತೇ ನಿತ್ಯಂ ತತಃ ಕಿಮವಶಿಷ್ಯತೇ ॥

ಅನುವಾದ

ಈ ಪ್ರಕಾರ ನಿರಂತರ ನನ್ನಲ್ಲಿ ತೊಡಗಿರುವವರಿಗೆ ನನ್ನಲ್ಲಿ ಅವಿಚಲ ದೃಢ ಭಕ್ತಿಯು ಅವಶ್ಯವಾಗಿ ಉಂಟಾಗುವುದು ಮತ್ತೆ ಏನು ಬಾಕಿ ಉಳಿದೀತು? ॥50॥

(ಶ್ಲೋಕ-51)

ಮೂಲಮ್

ಅತೋ ಮದ್ಭಕ್ತಿಯುಕ್ತಸ್ಯ ಜ್ಞಾನಂ ವಿಜ್ಞಾನಮೇವ ಚ ।
ವೈರಾಗ್ಯಂ ಚ ಭವೇಚ್ಛೀಘ್ರಂ ತತೋ ಮುಕ್ತಿಮವಾಪ್ನುಯಾತ್ ॥

ಅನುವಾದ

ಆದ್ದರಿಂದ ನನ್ನ ಭಕ್ತಿಯಿಂದ ಕೂಡಿದವನಿಗೆ ಜ್ಞಾನವೂ, ವಿಜ್ಞಾನವೂ, ವೈರಾಗ್ಯವವೂ ಬೇಗನೇ ಉಂಟಾಗುತ್ತದೆ. ಅನಂತರ ಅವನು ಮೋಕ್ಷವನ್ನು ಪಡೆಯುತ್ತಾನೆ. ॥51॥

(ಶ್ಲೋಕ-52)

ಮೂಲಮ್

ಕಥಿತಂ ಸರ್ವಮೇತತ್ತೇ ತವ ಪ್ರಶ್ನಾನುಸಾರತಃ ।
ಅಸ್ಮಿನ್ಮನಃ ಸಮಾಧಾಯ ಯಸ್ತಿಷ್ಠೇತ್ಸ ತು ಮುಕ್ತಿಭಾಕ್ ॥

(ಶ್ಲೋಕ-53)

ಮೂಲಮ್

ನ ವಕ್ತವ್ಯಮಿದಂ ಯತ್ನಾನ್ಮದ್ಭಕ್ತಿವಿಮುಖಾಯ ಹಿ ।
ಮದ್ಭಕ್ತಾಯ ಪ್ರದಾತವ್ಯಮಾಹೂಯಾಪಿ ಪ್ರಯತ್ನತಃ ॥

ಅನುವಾದ

ಸಹೋದರಾ! ಈ ಪ್ರಕಾರ ನಾನು ನಿನ್ನ ಪ್ರಶ್ನೆಗನುಗುಣವಾಗಿ ಎಲ್ಲವನ್ನು ನಿನಗೆ ಹೇಳಿರುವೆನು. ಇದರಲ್ಲಿಯೇ ಮನಸ್ಸನ್ನು ನೆಲೆಗೊಳಿಸಿ ಇರುವವನು ಮುಕ್ತಿಗೆ ಅರ್ಹನಾಗುತ್ತಾನೆ. ನನ್ನ ಭಕ್ತಿಯಿಂದ ವಿಮುಖರಾದವರಿಗೆ ಇದನ್ನು ಖಂಡಿತವಾಗಿ ಹೇಳಬಾರದು. ಆದರೆ ನನ್ನ ಭಕ್ತರಾದವರಿಗೆ ಪ್ರಯತ್ನಪೂರ್ವಕ ಹುಡುಕಿಯಾದರೂ ಈ ರಹಸ್ಯವನ್ನು ಹೇಳಬೇಕು. ॥52-53॥

(ಶ್ಲೋಕ-54)

ಮೂಲಮ್

ಯ ಇದಂ ತು ಪಠೇನ್ನಿತ್ಯಂ ಶ್ರದ್ಧಾಭಕ್ತಿಸಮನ್ವಿತಃ ।
ಅಜ್ಞಾನಪಟಲಧ್ವಾಂತಂ ವಿಧೂಯ ಪರಿಮುಚ್ಯತೇ ॥

ಅನುವಾದ

ಈ ಸಂವಾದವನ್ನು ಶ್ರದ್ಧಾಭಕ್ತಿಯಿಂದೊಡಗೂಡಿ ನಿತ್ಯವೂ ಪಠಿಸುವವನು ಅಜ್ಞಾನದ ಪೊರೆಯನ್ನು ಕಳಚಿಕೊಂಡು ಮುಕ್ತಿಯನ್ನು ಹೊಂದುವನು. ॥54॥

(ಶ್ಲೋಕ-55)

ಮೂಲಮ್

ಭಕ್ತಾನಾಂ ಮಮ ಯೋಗಿನಾಂ ಸುವಿಮಲ-
ಸ್ವಾಂತಾತಿಶಾಂತಾತ್ಮನಾಂ
ಮತ್ಸೇವಾಭಿರತಾತ್ಮನಾಂ ಚ ವಿಮಲ-
ಜ್ಞಾನಾತ್ಮನಾಂ ಸರ್ವದಾ ।
ಸಂಗಂ ಯಃ ಕುರುತೇ ಸದೋದ್ಯತಮತಿ ತಃ
ತತ್ಸೇವನಾನನ್ಯಧೀ-
ರ್ಮೊಕ್ಷಸ್ತಸ್ಯ ಕರೇ ಸ್ಥಿತೋಽಹಮನಿಶಂ
ದೃಶ್ಯೋ ಭವೇ ನಾನ್ಯಥಾ ॥

ಅನುವಾದ

ಯೋಗಿಗಳ ಹಾಗೂ ವಿಮಲವೂ, ಶಾಂತವೂ ಅಂತಃಕರಣವುಳ್ಳ, ನನ್ನ ಸೇವೆಯಲ್ಲಿಯೇ ತೊಡಗಿದ ಕಾರ್ಯಕರಣಗಳುಳ್ಳ ನಿರ್ಮಲ ಜ್ಞಾನಾತ್ಮರಾದ ನನ್ನ ಭಕ್ತರ ಸಂಗವನ್ನು ಯಾವಾಗಲೂ ಮಾಡುವನೋ ಮತ್ತು ಸದಾಕಾಲವೂ ಪ್ರಯತ್ನಶೀಲನಾಗಿ ಭಕ್ತರ ಸೇವೆಯಲ್ಲೇ ಮನಸ್ಸನ್ನು ನೆಟ್ಟಿರುವನೋ ಅವನಿಗೆ ಮೋಕ್ಷವು ಕರಗತವಾಗಿರುತ್ತದೆ. ಅಂಥವನಿಗೆ ನಾನು ಯಾವಾಗಲೂ ಕಾಣಿಸಿಕೊಳ್ಳುವೆನು. ಹಾಗಿಲ್ಲದವನಿಗೆ ನಾನು ದೊರೆಯಲಾರೆನು. ॥55॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.