೦೩

[ಮೂರನೆಯ ಸರ್ಗ]

ಭಾಗಸೂಚನಾ

ಮುನೀಶ್ವರ ಅಗಸ್ತ್ಯರ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಅಥ ರಾಮಃ ಸುತೀಕ್ಷ್ಣೇನ ಜಾನಕ್ಯಾ ಲಕ್ಷ್ಮಣೇನ ಚ ।
ಅಗಸ್ತ್ಯಸ್ಯಾನುಜಸ್ಥಾನಂ ಮಧ್ಯಾಹ್ನೇ ಸಮಪದ್ಯತ ॥

ಅನುವಾದ

ಶ್ರೀಮಹಾದೇವನಿಂತೆಂದನು — ಪಾರ್ವತಿ! ಶ್ರೀರಾಮನು ಸೀತಾಲಕ್ಷ್ಮಣರೊಡಗೂಡಿ ಸುತೀಕ್ಷ್ಣರೊಂದಿಗೆ ಮಧ್ಯಾಹ್ನದ ವೇಳೆಗೆ ಅಗಸ್ತ್ಯರ ಸಹೋದರ ಅಗ್ನಿಜಿಹ್ವರ ಆಶ್ರಮಕ್ಕೆ ತಲುಪಿದನು. ॥1॥

(ಶ್ಲೋಕ-2)

ಮೂಲಮ್

ತೇನ ಸಂಪೂಜಿತಃ ಸಮ್ಯಗ್ಭುಕ್ತ್ವಾ ಮೂಲಫಲಾದಿಕಮ್ ।
ಪರೇದ್ಯುಃ ಪ್ರಾತರುತ್ಥಾಯ ಜಗ್ಮುಸ್ತೇಽಗಸ್ತ್ಯಮಂಡಲಮ್ ॥

ಅನುವಾದ

ಅವರಿಂದ ಚೆನ್ನಾಗಿ ಉಪಚರಿಸಲ್ಪಟ್ಟು ಅವರಿತ್ತ ಕಂದ ಮೂಲಲಗಳನ್ನು ಸ್ವೀಕರಿಸಿ ಅಂದಿನ ರಾತ್ರಿ ಅಲ್ಲೆ ಇದ್ದು, ಮರುದಿನ ಬೆಳಿಗ್ಗೆ ಏಳುತ್ತಲೇ ಎಲ್ಲರಿಂದೊಡಗೂಡಿ ಶ್ರೀರಾಮನು ಅಗಸ್ತ್ಯರ ಆಶ್ರಮಕ್ಕೆ ಹೊರಟನು. ॥2॥

(ಶ್ಲೋಕ-3)

ಮೂಲಮ್

ಸರ್ವರ್ತುಫಲಪುಪ್ಪಾಢ್ಯಂ ನಾನಾಮೃಗಗಣೈರ್ಯುತಮ್ ।
ಪಕ್ಷಿಸಂಘೈಶ್ಚ ವಿವಿಧೈರ್ನಾದಿತಂ ನಂದನೋಪಮಮ್ ॥

ಅನುವಾದ

ಅಗಸ್ತ್ಯರ ಆಶ್ರಮ ಸ್ಥಳವು ಎಲ್ಲ ಋತುಗಳಲ್ಲಿಯೂ ಫಲ-ಪುಷ್ಪಾದಿಗಳಿಂದ ಸಮೃದ್ಧವಾಗಿತ್ತು. ನಾನಾ ವಿಧವಾದ ಮೃಗಸಂಕುಲಗಳಿಂದ ಕೂಡಿದ, ಪಕ್ಷಿಗಳ ಮಧುರ ಕೂಜನದಿಂದ ಪ್ರತಿಧ್ವನಿಸುತ್ತಾ, ನಂದನವನಕ್ಕೆ ಸಮಾನವಾಗಿತ್ತು. ॥3॥

(ಶ್ಲೋಕ-4)

ಮೂಲಮ್

ಬ್ರಹ್ಮರ್ಷಿಭಿರ್ದೇವರ್ಷಿಭಿಃ ಸೇವಿತಂ ಮುನಿಮಂದಿರೈಃ ।
ಸರ್ವತೋಽಲಂಕೃತಂ ಸಾಕ್ಷಾದ್ ಬ್ರಹ್ಮಲೋಕಮಿವಾಪರಮ್ ॥

ಅನುವಾದ

ಅಲ್ಲಿ ಬ್ರಹ್ಮರ್ಷಿಗಳಿಂದ, ದೇವರ್ಷಿಗಳಿಂದ ಸೇವಿತವಾದ ಅನೇಕ ಮುನಿಮಂದಿರಗಳಿಂದ ಅಲಂಕೃತವಾಗಿದ್ದು ಮತ್ತೊಂದು ಬ್ರಹ್ಮಲೋಕವೋ ಎಂಬಂತಿತ್ತು. ॥4॥

(ಶ್ಲೋಕ-5)

ಮೂಲಮ್

ಬಹಿರೇವಾಶ್ರಮಸ್ಯಾಥ ಸ್ಥಿತ್ವಾ ರಾಮೋಽಬ್ರವೀನ್ಮುನಿಮ್ ।
ಸುತೀಕ್ಷ್ಣ ಗಚ್ಛ ತ್ವಂ ಶೀಘ್ರಮಾಗತಂ ಮಾಂ ನಿವೇದಯ ॥

(ಶ್ಲೋಕ-6)

ಮೂಲಮ್

ಅಗಸ್ತ್ಯಮುನಿವರ್ಯಾಯ ಸೀತಯಾ ಲಕ್ಷ್ಮಣೇನ ಚ ।
ಮಹಾಪ್ರಸಾದ ಇತ್ಯುಕ್ತ್ವಾ ಸುತೀಕ್ಷ್ಣಃ ಪ್ರಯಯೌ ಗುರೋಃ ॥

(ಶ್ಲೋಕ-7)

ಮೂಲಮ್

ಆಶ್ರಮಂ ತ್ವರಯಾ ತತ್ರ ಋಷಿಸಂಘಸಮಾವೃತಮ್ ।
ಉಪವಿಷ್ಟಂ ರಾಮಭಕ್ತೈರ್ವಿಶೇಷೇಣ ಸಮಾಯುತಮ್ ॥

(ಶ್ಲೋಕ-8)

ಮೂಲಮ್

ವ್ಯಾಖ್ಯಾತರಾಮಮಂತ್ರಾರ್ಥಂ ಶಿಷ್ಯೇಭ್ಯಶ್ಚಾತಿಭಕ್ತಿತಃ ।
ದೃಷ್ಟ್ವಾಗಸ್ತ್ಯಂ ಮುನಿಶ್ರೇಷ್ಠಂ ಸುತೀಕ್ಷ್ಣಃ ಪ್ರಯಯೌ ಮುನೇಃ ॥

ಅನುವಾದ

ಆಶ್ರಮದ ಹೊರ ಭಾಗದಲ್ಲೆ ನಿಂತುಕೊಂಡು ಶ್ರೀರಾಮನು ಸುತೀಕ್ಷ್ಣರಲ್ಲಿ ‘‘ಹೇ ಮುನಿವರ್ಯಾ! ನೀನು ಬೇಗನೇ ಒಳಗೆ ಹೋಗಿ ಸೀತಾಲಕ್ಷ್ಮಣರೊಡಗೂಡಿ ನಾನು ಬಂದಿರುವ ವಾರ್ತೆಯನ್ನು ಮುನಿಶ್ರೇಷ್ಠರಾದ ಅಗಸ್ತ್ಯರಿಗೆ ತಿಳಿಸು’’ ಎಂದನು. ಸುತೀಕ್ಷ್ಣರು ಮಹಾಪ್ರಸಾದವೆಂದು ಹೇಳಿ, ತನ್ನ ಗುರುವಿನ ಆಶ್ರಮದೊಳಗೆ ತ್ವರಿತವಾಗಿ ಹೋದರು. ಅಲ್ಲಿ ಋಷಿಗಳ ಗುಂಪಿನಿಂದ ಸುತ್ತುವರಿದು, ವಿಶೇಷವಾಗಿ ರಾಮಭಕ್ತರಿಂದ ಕೂಡಿಕೊಂಡು, ತಮ್ಮ ಶಿಷ್ಯರುಗಳಿಗೆ ಬಹಳ ಭಕ್ತಿಯಿಂದ ರಾಮಮಂತ್ರದ ಅರ್ಥವನ್ನು ವಿವರಿಸುತ್ತಾ ಕುಳಿತ್ತಿದ್ದ ಮುನೀಶ್ವರರಾದ ಅಗಸ್ತ್ಯರನ್ನು ಕಂಡು ಅವರ ಬಳಿಗೆ ಹೋದರು. ॥5-8॥

(ಶ್ಲೋಕ-9)

ಮೂಲಮ್

ದಂಡವತ್ಪ್ರಣಿಪತ್ಯಾಹ ವಿನಯಾವನತಃ ಸುಧೀಃ ।
ರಾಮೋ ದಾಶರಥಿರ್ಬ್ರಹ್ಮನ್ ಸೀತಯಾ ಲಕ್ಷ್ಮಣೇನ ಚ ।
ಆಗತೋ ದರ್ಶನಾರ್ಥಂ ತೇ ಬಹಿಸ್ತಿಷ್ಠತಿ ಸಾಂಜಲಿಃ ॥

ಅನುವಾದ

ಅವರು ದೀರ್ಘದಂಡ ನಮಸ್ಕಾರ ಮಾಡಿ ವಿನಯದಿಂದ ಕೂಡಿ ‘‘ಬ್ರಹ್ಮನಿಷ್ಠರೇ! ದಶರಥನಂದನ ಶ್ರೀರಾಮಚಂದ್ರನು ಸೀತಾಲಕ್ಷ್ಮಣರೊಡನೆ ನಿಮ್ಮ ದರ್ಶನಕ್ಕಾಗಿ ಬಂದಿರುವನು. ಹೊರಭಾಗದಲ್ಲೇ ಕೈಮುಗಿದು ನಿಂತಿರುವನು. ಎಂದು ವಿನಂತಿಸಿಕೊಂಡನು. ॥9॥

(ಶ್ಲೋಕ-10)

ಮೂಲಮ್ (ವಾಚನಮ್)

ಅಗಸ್ತ್ಯ ಉವಾಚ

ಮೂಲಮ್

ಶೀಘ್ರಮಾನಯ ಭದ್ರಂ ತೇ ರಾಮಂ ಮಮ ಹೃದಿ ಸ್ಥಿತಮ್ ।
ತಮೇವ ಧ್ಯಾಯಮಾನೋಽಹಂ ಕಾಂಕ್ಷಮಾಣೋಽತ್ರ ಸಂಸ್ಥಿತಃ ॥

ಅನುವಾದ

ಅಗಸ್ತ್ಯರು ಇಂತೆಂದರು — ‘‘ಮಗು! ನಿನಗೆ ಮಂಗಳವಾಗಲಿ. ನನ್ನ ಹೃದಯದಲ್ಲಿ ವಾಸವಾಗಿರುವ ಭಗವಾನ್ ಶ್ರೀರಾಮನನ್ನು ಬೇಗನೇ ಕರೆದುಕೊಂಡು ಬಾ. ಅವನನ್ನೇ ಚಿಂತಿಸುತ್ತಾ ನಾನು ಅವನ ದಾರಿಕಾಯುತ್ತಾ ಇಲ್ಲಿ ಇದ್ದೇನೆ.’’ ॥10॥

(ಶ್ಲೋಕ-11)

ಮೂಲಮ್

ಇತ್ಯುಕ್ತ್ವಾ ಸ್ವಯಮುತ್ಥಾಯ ಮುನಿಭಿಃ ಸಹಿತೋ ದ್ರುತಮ್ ।
ಅಭ್ಯಗಾತ್ಪರಯಾ ಭಕ್ತ್ಯಾ ಗತ್ವಾ ರಾಮಮಥಾಬ್ರವೀತ್ ॥

(ಶ್ಲೋಕ-12)

ಮೂಲಮ್

ಆಗಚ್ಛ ರಾಮ ಭದ್ರಂ ತೇ ದಿಷ್ಟ್ಯಾ ತೇಽದ್ಯ ಸಮಾಗಮಃ ।
ಪ್ರಿಯಾತಿಥಿರ್ಮಮ ಪ್ರಾಪ್ತೋಽಸ್ಯದ್ಯ ಮೇ ಸಫಲಂ ದಿನಮ್ ॥

ಅನುವಾದ

ಹೀಗೆಂದು ಹೇಳಿ ತಾನೇ ಮೇಲೆದ್ದು ಋಷಿಗಳೊಡಗೂಡಿ ಲಗುಬಗೆಯಿಂದ ರಾಮನ ಬಳಿಗೆ ಬಂದರು. ಅತ್ಯಂತ ಭಕ್ತಿ ಪೂರ್ವಕವಾಗಿ ರಾಮನನ್ನು ಕುರಿತು ‘‘ಹೇ ರಾಮನೆ! ಇತ್ತ ಆಗಮಿಸಬೇಕು. ನಿನಗೆ ಮಂಗಳವಾಗಲಿ! ನನ್ನ ಪುಣ್ಯವಿಶೇಷದಿಂದ ನಿನ್ನ ಸಮಾಗಮವಾಗಿದೆ. ನನಗೆ ಪ್ರಿಯವಾದ ಅತಿಥಿಯಾಗಿ ನೀನು ದೊರಕಿರುವೆ. ನೀನು ಬಂದದ್ದರಿಂದ ಇಂದಿನ ದಿನವು ಸಾರ್ಥಕವಾಯಿತು.’’ ॥11-12॥

(ಶ್ಲೋಕ-13)

ಮೂಲಮ್

ರಾಮೋಪಿ ಮುನಿಮಾಯಾಂತಂ ದೃಷ್ಟ್ವಾ ಹರ್ಷಸಮಾಕುಲಃ ।
ಸೀತಯಾ ಲಕ್ಷ್ಮಣೇನಾಪಿ ದಂಡವತ್ಪತಿತೋ ಭುವಿ ॥

ಅನುವಾದ

ಶ್ರೀರಾಮಚಂದ್ರನು ಬರುತ್ತಿರುವ ಮುನೀಶ್ವರರನ್ನು ಕಂಡು ಮಿಗಿಲಾದ ಸಂತೋಷದಿಂದ ಸೀತಾಲಕ್ಷ್ಮಣರೊಡನೆ ನೆಲದ ಮೇಲೆ ದಂಡವತ್ ನಮಸ್ಕಾರ ಮಾಡಿದನು. ॥13॥

(ಶ್ಲೋಕ-14)

ಮೂಲಮ್

ದ್ರುತಮುತ್ಥಾಪ್ಯ ಮುನಿರಾಡ್ರಾಮಮಾಲಿಂಗ್ಯ ಭಕ್ತಿತಃ ।
ತದ್ಗಾತ್ರಸ್ಪರ್ಶಜಾಹ್ಲಾದಸ್ರವನ್ನೇತ್ರಜಲಾಕುಲಃ ॥

ಅನುವಾದ

ಆಗ ಮುನೀಶ್ವರ ಅಗಸ್ತ್ಯರು ರಾಮನನ್ನು ಬೇಗನೆ ಮೇಲೆತ್ತಿಕೊಂಡು ಭಕ್ತಿಯಿಂದ ಆಲಿಂಗಿಸಿಕೊಂಡರು. ಆ ರಾಮನ ಶರೀರ ಸ್ಪರ್ಶದಿಂದುಂಟಾದ ಸಂತೋಷದಿಂದ ಕಣ್ಣೀರು ಕೋಡಿಯಾಗಿ ಹರಿಯಿತು. ॥14॥

(ಶ್ಲೋಕ-15)

ಮೂಲಮ್

ಗೃಹೀತ್ವಾ ಕರಮೇಕೇನ ಕರೇಣ ರಘುನಂದನಮ್ ।
ಜಗಾಮ ಸ್ವಾಶ್ರಮಂ ಹೃಷ್ಟೋ ಮನಸಾ ಮುನಿಪುಂಗವಃ ॥

ಅನುವಾದ

ಅನಂತರ ಮುನಿಶ್ರೇಷ್ಠ ಅಗಸ್ತ್ಯರು ಮನಸ್ಸಿನಲ್ಲಿ ಅತ್ಯಂತ ಆನಂದಿತರಾಗಿ ಶ್ರೀರಾಮನ ಕೈಯನ್ನು ಹಿಡಿದು ಕರೆದುಕೊಂಡು ತಮ್ಮ ಆಶ್ರಮಕ್ಕೆ ಬಂದರು. ॥15॥

(ಶ್ಲೋಕ-16)

ಮೂಲಮ್

ಸುಖೋಪವಿಷ್ಟಂ ಸಂಪೂಜ್ಯ ಪೂಜಯಾ ಬಹುವಿಸ್ತರಮ್ ।
ಭೋಜಯಿತ್ವಾ ಯಥಾನ್ಯಾಯಂ ಭೋಜ್ಯೈರ್ವನ್ಯೈರನೇಕಧಾ ॥

(ಶ್ಲೋಕ-17)

ಮೂಲಮ್

ಸುಖೋಪವಿಷ್ಟಮೇಕಾಂತೇ ರಾಮಂ ಶಶಿನಿಭಾನನಮ್ ।
ಕೃತಾಂಜಲಿರುವಾಚೇದಮಗಸ್ತ್ಯೋ ಭಗವಾನೃಷಿಃ ॥

ಅನುವಾದ

ಅವನನ್ನು ಸುಖಾಸನದಲ್ಲಿ ಕುಳ್ಳಿರಿಸಿ, ವಿಧಿ-ವಿಧಾನಗಳಿಂದ ವಿಸ್ತಾರವಾಗಿ ವಿಶೇಷ ಪೂಜೆಯನ್ನು ಮಾಡಿದರು. ಕಾಡಿನಲ್ಲಿ ಸಮಯಾನುಸಾರ ದೊರಕುವ ನಾನಾ ಬಗೆಯ ಫಲಗಳಿಂದ ಯೋಗ್ಯರೀತಿಯಿಂದ ಶ್ರೀರಾಮನಿಗೆ ಭೋಜನ ಮಾಡಿಸಿದರು. ಬಳಿಕ ಏಕಾಂತದಲ್ಲಿ ಸುಖವಾಗಿ ಕುಳಿತ್ತಿದ್ದ ಚಂದ್ರವದನ ಶ್ರೀರಾಮಚಂದ್ರನಲ್ಲಿ ಪೂಜ್ಯರಾದ ಅಗಸ್ತ್ಯ ಋಷಿಗಳು ಕೈ ಮುಗಿದುಕೊಂಡು ಹೀಗೆಂದರು. ॥16-17॥

(ಶ್ಲೋಕ-18)

ಮೂಲಮ್

ತ್ವದಾಗಮನಮೇವಾಹಂ ಪ್ರತೀಕ್ಷನ್ಸಮವಸ್ಥಿತಃ ।
ಯದಾ ಕ್ಷೀರಸಮುದ್ರಾಂತೇ ಬ್ರಹ್ಮಣಾ ಪ್ರಾರ್ಥಿತಃ ಪುರಾ ॥

(ಶ್ಲೋಕ-19)

ಮೂಲಮ್

ಭೂಮೇರ್ಭಾರಾಪನುತ್ತ್ಯರ್ಥಂ ರಾವಣಸ್ಯ ವಧಾಯ ಚ ।
ತದಾದಿ ದರ್ಶನಾಕಾಂಕ್ಷೀ ತವ ರಾಮ ತಪಶ್ಚರನ್ ।
ವಸಾಮಿ ಮುನಿಭಿಃ ಸಾರ್ಧಂ ತ್ವಾಮೇವ ಪರಿಚಿಂತಯನ್ ॥

ಅನುವಾದ

‘‘ಹೇ ರಾಮಾ! ಹಿಂದೆ ಕ್ಷೀರಸಮುದ್ರ ತಟದಲ್ಲಿ ಬ್ರಹ್ಮದೇವರು ನಿನ್ನ ಬಳಿ ಭೂಭಾರಹರಣಕ್ಕಾಗಿ, ರಾವಣನನ್ನು ವಧಿಸಲಿಕ್ಕಾಗಿ ಪ್ರಾರ್ಥಿಸಿದ್ದಂದಿನಿಂದ ನಿನ್ನ ದರ್ಶನಾಕಾಂಕ್ಷಿಯಾಗಿ, ಋಷಿಗಳೊಡನೆ ತಪಸ್ಸನ್ನಾಚರಿಸುತ್ತಾ, ನಿನ್ನನ್ನೇ ಚಿಂತಿಸುತ್ತಾ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೆ. ॥18-19॥

(ಶ್ಲೋಕ-20)

ಮೂಲಮ್

ಸೃಷ್ಟೇಃ ಪ್ರಾಗೇಕ ಏವಾಸೀರ್ನಿರ್ವಿಕಲ್ಪೋನುಽಪಾಧಿಕಃ ।
ತ್ವದಾಶ್ರಯಾ ತ್ವದ್ವಿಷಯಾ ಮಾಯಾ ತೇ ಶಕ್ತಿರುಚ್ಯತೇ ॥

ಅನುವಾದ

ನಿರ್ವಿಕಲ್ಪನೂ, ಉಪಾಧಿರಹಿತನೂ ಆದ ನೀನೊಬ್ಬನೇ ಸೃಷ್ಟಿಯ ಮೊದಲು ಇದ್ದೆ. ಆಗ ನೀನಲ್ಲದೆ ಬೇರೆ ಏನೂ ಇರಲಿಲ್ಲ. ನಿನ್ನನ್ನೇ ಆಶ್ರಯಿಸಿಕೊಂಡು ನಿನ್ನನ್ನೇ ವಿಷಯವಾಗಿಸಿಕೊಂಡಿರುವ ಮಾಯೆಯನ್ನು ನಿನ್ನ ಶಕ್ತಿ ಯೆಂದೇ ಹೇಳುತ್ತಾರೆ. ॥20॥

(ಶ್ಲೋಕ-21)

ಮೂಲಮ್

ತ್ವಾಮೇವ ನಿರ್ಗುಣಂ ಶಕ್ತಿರಾವೃಣೋತಿ ಯದಾ ತದಾ ।
ಅವ್ಯಾಕೃತಮಿತಿ ಪ್ರಾಹುರ್ವೇದಾಂತಪರಿನಿಷ್ಠಿತಾಃ ॥

ಅನುವಾದ

ನಿರ್ಗುಣವಾಗಿರುವ ನಿನ್ನನ್ನು ಆ ಶಕ್ತಿಯು ಆವರಿಸಿದಾಗ ಮಾಯೆಯನ್ನು ವೇದಾಂತವನ್ನು ಬಲ್ಲವರು ‘ಅವ್ಯಾಕೃತ’ವೆಂದು ಹೇಳುತ್ತಾರೆ. ॥21॥

(ಶ್ಲೋಕ-22)

ಮೂಲಮ್

ಮೂಲಪ್ರಕೃತಿರಿತ್ಯೇಕೇ ಪ್ರಾಹುರ್ಮಾಯೇತಿ ಕೇಚನ ।
ಅವಿದ್ಯಾ ಸಂಸೃತಿರ್ಬಂಧ ಇತ್ಯಾದಿ ಬಹುಧೋಚ್ಯತೇ ॥

ಅನುವಾದ

ಮತ್ತೆ ಕೆಲವರು ಇದನ್ನೇ ಮೂಲಪ್ರಕೃತಿಯೆಂದೂ, ಮತ್ತೆ ಕೆಲವರು ಮಾಯೆಯೆಂದೂ, ಅವಿದ್ಯೆ, ಸಂಸಾರ, ಬಂಧ ಮುಂತಾಗಿಯೂ ನಾನಾ ಹೆಸರುಗಳಿಂದ ಕರೆಯುತ್ತಾರೆ. ॥22॥

(ಶ್ಲೋಕ-23)

ಮೂಲಮ್

ತ್ವಯಾ ಸಂಕ್ಷೋಭ್ಯಮಾಣಾ ಸಾ ಮಹತ್ತ ತ್ತ್ವಂ ಪ್ರಸೂಯತೇ ।
ಮಹತ್ತತ್ತ್ವಾದಹಂಕಾರಸ್ತ್ವಯಾ ಸಂಚೋದಿತಾದಭೂತ್ ॥

ಅನುವಾದ

ಹೇ ರಾಮನೆ! ನಿನ್ನಿಂದ ಸಂಕ್ಷೋಭಗೊಂಡ ಆ ಮೂಲ ಪ್ರಕೃತಿಯಿಂದ ಮಹತ್ತತ್ತ್ವವು ಉಂಟಾಗುತ್ತದೆ. ಮತ್ತೆ ನಿನ್ನ ಪ್ರೇರಣೆಯಿಂದಲೇ ಮಹತ್ತತ್ತ್ವದಿಂದ ಅಹಂಕಾರವು ಪ್ರಕಟವಾಯಿತು. ॥23॥

(ಶ್ಲೋಕ-24)

ಮೂಲಮ್

ಅಹಂಕಾರೋ ಮಹತ್ತತ್ತ್ವಸಂವೃತಸ್ತ್ರಿವಿಧೋಽಭವತ್ ।
ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚೇತಿ ಭಣ್ಯತೇ ॥

ಅನುವಾದ

ಮಹತ್ತತ್ತ್ವದಿಂದ ಉಂಟಾದ ಅಹಂಕಾರವು ಸಾತ್ತ್ವಿಕ, ರಾಜಸ, ತಾಮಸಗಳೆಂದು ಮೂರು ಪ್ರಕಾರವಾಯಿತು. ॥24॥

(ಶ್ಲೋಕ-25)

ಮೂಲಮ್

ತಾಮಸಾತ್ ಸೂಕ್ಷ್ಮತನ್ಮಾತ್ರಾಣ್ಯಾಸನ್ ಭೂತಾನ್ಯತಃ ಪರಮ್ ।
ಸ್ಥೂಲಾನಿ ಕ್ರಮಶೋ ರಾಮ ಕ್ರಮೋತ್ತರಗುಣಾನಿ ಹ ॥

ಅನುವಾದ

ಹೇ ರಾಮಾ! ಅದರಲ್ಲಿ ತಾಮಸಾಹಂಕಾರದಿಂದ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮುಂತಾದ ಐದು ಸೂಕ್ಷ್ಮತನ್ಮಾತ್ರೆಗಳು ಉಂಟಾದುವು. ಅನಂತರ ಕ್ರಮವಾಗಿ ಸೂಕ್ಷ್ಮತನ್ಮಾತ್ರೆಗಳಿಂದ ಒಂದೊಂದು ಗುಣಗಳ ಹೆಚ್ಚಳವುಳ್ಳ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಎಂಬ ಸ್ಥೂಲ ಪಂಚಭೂತಗಳು ಉಂಟಾದುವು. ॥25॥

(ಶ್ಲೋಕ-26)

ಮೂಲಮ್

ರಾಜಸಾನೀಂದ್ರಿಯಾಣ್ಯೇವ ಸಾತ್ತ್ವಿಕಾ ದೇವತಾ ಮನಃ ।
ತೇಭ್ಯೋಽಭವತ್ಸೂತ್ರರೂಪಂ ಲಿಂಗಂ ಸರ್ವಗತಂ ಮಹತ್ ॥

ಅನುವಾದ

ರಾಜಸಾಹಂಕಾರದಿಂದ ಹತ್ತು ಇಂದ್ರಿಯಗಳೂ ಮತ್ತು ಸಾತ್ತ್ವಿಕಾಹಂಕಾರದಿಂದ ಇಂದ್ರಿಯಗಳ ಅಧಿಷ್ಠಾತೃ ದೇವತೆಗಳು ಹಾಗೂ ಮನಸ್ಸು ಉತ್ಪನ್ನವಾಯಿತು. ಇವೆಲ್ಲದರ ಸೇರುವಿಕೆಯಿಂದ ಸರ್ವಗತನಾದ ಸೂತ್ರರೂಪನಾದ ಮಹತ್ತೆಂಬ ಹಿರಣ್ಯಗರ್ಭನು ಉಂಟಾದನು. ॥26॥

(ಶ್ಲೋಕ-27)

ಮೂಲಮ್

ತತೋ ವಿರಾಟ್ ಸಮುತ್ಪನ್ನಃ ಸ್ಥೂಲಾದ್ ಭೂತಕದಂಬಕಾತ್ ।
ವಿರಾಜಃ ಪುರುಷಾತ್ಸರ್ವಂ ಜಗತ್ಸ್ಥಾವರಜಂಗಮಮ್ ॥

ಅನುವಾದ

ಅನಂತರ ಸ್ಥೂಲವಾದ ಪಂಚಭೂತಗಳ ಸಮೂಹದಿಂದ ವಿರಾಟ್ ಪುರುಷನು ಹುಟ್ಟಿದನು. ಆ ವಿರಾಟ್ ಪುರುಷನಿಂದ ಈ ಸಮಸ್ತ ಸ್ಥಾವರ ಜಂಗಮ ರೂಪವಾದ ಪ್ರಪಂಚವು ಹುಟ್ಟಿರುವುದು. ॥27॥

(ಶ್ಲೋಕ-28)

ಮೂಲಮ್

ದೇವತಿರ್ಯಙ್ಮನುಷ್ಯಾಶ್ಚ ಕಾಲಕರ್ಮಕ್ರಮೇಣ ತು ।
ತ್ವಂ ರಜೋಗುಣತೋ ಬ್ರಹ್ಮಾ ಜಗತಃ ಸರ್ವಕಾರಣಮ್ ॥

(ಶ್ಲೋಕ-29)

ಮೂಲಮ್

ಸತ್ತ್ವಾದ್ವಿಷ್ಣುಸ್ತ್ವಮೇವಾಸ್ಯ ಪಾಲಕಃ ಸದ್ಭಿರುಚ್ಯತೇ ।
ಲಯೇ ರುದ್ರಸ್ತ್ವಮೇವಾಸ್ಯ ತ್ವನ್ಮಾಯಾಗುಣಭೇದತಃ ॥

ಅನುವಾದ

ಮುಂದೆ ಕಾಲಕರ್ಮಾನುಗುಣವಾಗಿ ದೇವತೆಗಳು, ಮೂಕಪ್ರಾಣಿಗಳು, ಮನುಷ್ಯರೇ ಮುಂತಾದವರೆಲ್ಲರೂ ಹುಟ್ಟಿದರು. ತನ್ನದೇ ಮಾಯಿಕ ಗುಣಗಳ ಭೇದದಿಂದ ನೀನೇ ರಜೋಗುಣ ಸಂಬಂಧದಿಂದ ಜಗತ್ತಿಗೆಲ್ಲಕ್ಕೂ ಕಾರಣನಾದ ಬ್ರಹ್ಮನಾಗಿಯೂ, ಸತ್ತ್ವಗುಣ ನಿಮಿತ್ತದಿಂದ ಜಗತ್ತಿನ ರಕ್ಷಕನಾಗಿ ವಿಷ್ಣು ಆಗಿರುವೆ. ತಮೋಗುಣದ ನಿಮಿತ್ತದಿಂದ ಪ್ರಳಯಕಾಲದಲ್ಲಿ ರುದ್ರನಾಗಿಯೂ ನೀನೇ ತೋರಿಕೊಳ್ಳುವೆ ಎಂದು ಬಲ್ಲವರು ಹೇಳುತ್ತಾರೆ. ॥28-29॥

(ಶ್ಲೋಕ-30)

ಮೂಲಮ್

ಜಾಗ್ರತ್ಸ್ವಪ್ನಸುಷುಪ್ತ್ಯಾಖ್ಯಾ ವೃತ್ತಯೋ ಬುದ್ಧಿಜೈರ್ಗುಣೈಃ ।
ತಾಸಾಂ ವಿಲಕ್ಷಣೋ ರಾಮ ತ್ವಂ ಸಾಕ್ಷೀ ಚಿನ್ಮಯೋಽವ್ಯವಃ ॥

ಅನುವಾದ

ಹೇ ರಾಮಚಂದ್ರಾ! ಬುದ್ಧಿಯ ಸತ್ತ್ವ, ರಜ, ತಮ ಈ ಮೂರು ಗುಣಗಳಿಂದಲೇ ಪ್ರಾಣಿಗಳಿಗೆ ಕ್ರಮಶಃ ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಅವಸ್ಥೆಗಳಾಗುತ್ತವೆ. ಆದರೆ ನೀನು ಅವುಗಳಿಂದ ವಿಲಕ್ಷಣನೂ, ಚಿನ್ಮಯನೂ, ಅವ್ಯಯನೂ ಆದ ಸಾಕ್ಷಿ ಆಗಿರುವೆ. ॥30॥

(ಶ್ಲೋಕ-31)

ಮೂಲಮ್

ಸೃಷ್ಟಿಲೀಲಾಂ ಯದಾ ಕರ್ತುಮೀಹಸೇ ರಘುನಂದನ ।
ಅಂಗೀಕರೋಷಿ ಮಾಯಾಂ ತ್ವಂ ತದಾ ವೈ ಗುಣವಾನಿವ ॥

ಅನುವಾದ

ಹೇ ರಘುನಂದನಾ! ನೀನು ಸೃಷ್ಟಿಯೆಂಬ ಲೀಲೆಯನ್ನು ಮಾಡಲು ಬಯಸಿದಾಗ ಮಾಯೆಯನ್ನು ಅಂಗೀಕರಿಸಿಕೊಂಡು ಗುಣವುಳ್ಳವನಂತೆ ತೋರುತ್ತೀಯೆ. ॥31॥

(ಶ್ಲೋಕ-32)

ಮೂಲಮ್

ರಾಮ ಮಾಯಾ ದ್ವಿಧಾ ಭಾತಿ ವಿದ್ಯಾವಿದ್ಯೇತಿ ತೇ ಸದಾ ।
ಪ್ರವೃತ್ತಿಮಾರ್ಗನಿರತಾ ಅವಿದ್ಯಾವಶವರ್ತಿನಃ ।
ನಿವೃತ್ತಿಮಾರ್ಗನಿರತಾ ವೇದಾಂತಾರ್ಥವಿಚಾರಕಾಃ ॥

(ಶ್ಲೋಕ-33)

ಮೂಲಮ್

ತ್ವದ್ಭಕ್ತಿನಿರತಾ ಯೇ ಚ ತೇ ವೈ ವಿದ್ಯಾಮಯಾಃ ಸ್ಮೃತಾಃ ।
ಅವಿದ್ಯಾವಶಗಾ ಯೇ ತು ನಿತ್ಯಂ ಸಂಸಾರಿಣಶ್ಚ ತೇ ।
ವಿದ್ಯಾಭ್ಯಾಸರತಾ ಯೇ ತು ನಿತ್ಯಮುಕ್ತಾಸ್ತ ಏವ ಹಿ ॥

ಅನುವಾದ

ಹೇ ರಾಮಾ! ನಿನ್ನ ಈ ಮಾಯೆಯು ವಿದ್ಯೆ, ಅವಿದ್ಯೆ ಎಂದು ಎರಡು ವಿಧವಾಗಿ ಯಾವಾಗಲೂ ತೋರಿಕೊಳ್ಳುತ್ತದೆ. ಪ್ರವೃತ್ತಿಮಾರ್ಗ (ಸಂಸಾರ)ದ ಕಡೆಗೆ ತೊಡಗಿರುವವರು ಅವಿದ್ಯಾವಶರಾಗಿ ಅದರ ಅಧೀನರಾಗುವರು. ಆದರೆ ನಿವೃತ್ತಿ ಮಾರ್ಗಾವಲಂಬಿಗಳಾಗಿ, ವೇದಾಂತದ ಅರ್ಥವನ್ನು ವಿಚಾರ ಮಾಡುವವರು ಹಾಗೂ ನಿನ್ನ ಭಕ್ತಿಯನ್ನು ಆಶ್ರಯಿಸಿರುವವರು ವಿದ್ಯೆಯನ್ನು ಹೊಂದಿರುವರು. ಇವರುಗಳಲ್ಲಿ ಅವಿದ್ಯಾವಶರಾದವರು ಯಾವಾಗಲೂ ಸಂಸಾರಿಗಳಾಗಿಯೂ, ಜನನ-ಮರಣದಲ್ಲಿ ಸಿಕ್ಕಿಹಾಕಿಕೊಂಡಿರುವರು ಮತ್ತು ವಿದ್ಯಾಭ್ಯಾಸಿಗಳಾದವರು ನಿತ್ಯ ಮುಕ್ತರಾಗಿಯೂ ಇರುವರು. ॥32-33॥

(ಶ್ಲೋಕ-34)

ಮೂಲಮ್

ಲೋಕೇ ತ್ವದ್ಭಕ್ತಿನಿರತಾಸ್ತ್ವನ್ಮಂತ್ರೋಪಾಸಕಾಶ್ಚ ಯೇ ।
ವಿದ್ಯಾ ಪ್ರಾದುರ್ಭವೇತ್ತೇಷಾಂ ನೇತರೇಷಾಂ ಕದಾಚನ ॥

ಅನುವಾದ

ಲೋಕದಲ್ಲಿ ನಿನ್ನ ಭಕ್ತಿಯಲ್ಲಿಯೇ ನಿರತರಾಗಿದ್ದು ನಿನ್ನ ಮಂತ್ರವನ್ನೇ ಉಪಾಸನೆ ಮಾಡುವವರಿಗೇ ವಿದ್ಯೆಯ ಪ್ರಾದುರ್ಭಾವವಾಗುತ್ತದೆ. ಬೇರೆ ಯಾರಿಗೂ ಇಲ್ಲ. ॥34॥

(ಶ್ಲೋಕ-35)

ಮೂಲಮ್

ಅತಸ್ತ್ವದ್ಭಕ್ತಿಸಂಪನ್ನಾ ಮುಕ್ತಾ ಏವ ನ ಸಂಶಯಃ ।
ತ್ವದ್ಭಕ್ತ್ಯಮೃತಹೀನಾನಾಂ ಮೋಕ್ಷಃ ಸ್ವಪ್ನೇಽಪಿ ನೋ ಭವೇತ್ ॥

ಅನುವಾದ

ಆದ್ದರಿಂದ ನಿನ್ನ ಭಕ್ತಿಯಿಂದ ಕೂಡಿರುವವರು ಮುಕ್ತರೇ ಆಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಿನ್ನ ಭಕ್ತಿಯೆಂಬ ಅಮೃತವಿಲ್ಲದವರಿಗೆ ಕನಸಿನಲ್ಲಿಯೂ ಮೋಕ್ಷವು ಸಿಗಲಾರದು. ॥35॥

(ಶ್ಲೋಕ-36)

ಮೂಲಮ್

ಕಿಂ ರಾಮ ಬಹುನೋಕ್ತೇನ ಸಾರಂ ಕಿಂಚಿದ್ಬ್ರವೀಮಿ ತೇ ।
ಸಾಧುಸಂಗತಿರೇವಾತ್ರ ಮೋಕ್ಷಹೇತುರುದಾಹೃತಾ ॥

ಅನುವಾದ

ಹೇ ರಾಮಭದ್ರಾ! ಹೆಚ್ಚಾಗಿ ಹೇಳುವುದರಿಂದೇನು ಪ್ರಯೋಜನ? ಸಾರಭೂತವಾದ ವಿಚಾರವನ್ನು ನಿನಗೆ ಹೇಳುವೆನು. ಪ್ರಪಂಚದಲ್ಲಿ ಸಾಧುಗಳ ಸಂಗವೇ ಮುಕ್ತಿಯ ಮುಖ್ಯ ಕಾರಣವೆಂದು ಪ್ರಸಿದ್ಧವಾಗಿದೆ. ॥36॥

(ಶ್ಲೋಕ-37)

ಮೂಲಮ್

ಸಾಧವಃ ಸಮಚಿತ್ತಾ ಯೇ ನಿಃಸ್ಪೃಹಾ ವಿಗತೈಷಣಾಃ ।
ದಾಂತಾಃ ಪ್ರಶಾಂತಾಸ್ತ್ವದ್ಭಕ್ತಾ ನಿವೃತ್ತಾಖಿಲಕಾಮನಾಃ ॥

(ಶ್ಲೋಕ-38)

ಮೂಲಮ್

ಇಷ್ಟಪ್ರಾಪ್ತಿವಿಪತ್ತ್ಯೋಶ್ಚ ಸಮಾಃ ಸಂಗವಿವರ್ಜಿತಾಃ ।
ಸಂನ್ಯಸ್ತಾಖಿಲಕರ್ಮಾಣಃ ಸರ್ವದಾ ಬ್ರಹ್ಮತತ್ಪರಾಃ ॥

(ಶ್ಲೋಕ-39)

ಮೂಲಮ್

ಯಮಾದಿಗುಣಸಂಪನ್ನಾಃ ಸಂತುಷ್ಟಾ ಯೇನ ಕೇನಚಿತ್ ।
ಸತ್ಸಂಗಮೋ ಭವೇದ್ಯರ್ಹಿ ತ್ವತ್ಕಥಾಶ್ರವಣೇ ರತಿಃ ॥

ಅನುವಾದ

ಸಾಧುಗಳೆಂದರೆ ಯಾವಾಗಲೂ ಸಂಪದ್-ವಿಪದ್ ಗಳಲ್ಲಿ ಸಮಚಿತ್ತರಾಗಿರುವವರೂ. ಸ್ಪೃಹಾರಹಿತರೂ, ಪುತ್ರ-ವಿತ್ತಾದಿ ಇಚ್ಛೆಗಳಿಂದ ರಹಿತರೂ, ಇಂದ್ರಿಯಗಳನ್ನು ಗೆದ್ದುಕೊಂಡಿರುವವರೂ, ಶಾಂತಚಿತ್ತವುಳ್ಳವರೂ, ಆಗಿರುವರು. ನಿನ್ನ ಭಕ್ತರಾದರು ಸಮಸ್ತ ಕಾಮನೆಗಳಿಂದ ಶೂನ್ಯರೂ, ಅನುಕೂಲ-ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮವಾಗಿರುವವರೂ, ಸಂಗರಹಿತರೂ, ಸಮಸ್ತ ಕರ್ಮಗಳನ್ನು ಭಗವದರ್ಪಣ ಮಾಡುವವರೂ, ಬ್ರಹ್ಮತತ್ಪರರೂ, ಯಮ-ನಿಯಮಾದಿ ಗುಣಸಂಪನ್ನರೂ, ದೊರೆತುದರಲ್ಲಿ ತೃಪ್ತರಾಗಿರುವವರೂ ಆಗಿರುತ್ತಾರೆ. ಇಂತಹ ಸಾಧು ಸತ್ಪುರುಷರ ಸಂಗವಾದಾಗ ನಿನ್ನ ಕಥಾ ಶ್ರವಣದಲ್ಲಿ ಪ್ರೇಮ ಉಂಟಾಗುತ್ತದೆ. ॥37-39॥

(ಶ್ಲೋಕ-40)

ಮೂಲಮ್

ಸಮುದೇತಿ ತತೋ ಭಕ್ತಿಸ್ತ್ವಯಿ ರಾಮ ಸನಾತನೇ ।
ತ್ವದ್ಭಕ್ತಾವುಪಪನ್ನಾಯಾಂ ವಿಜ್ಞಾನಂ ವಿಪುಲಂ ಸ್ಫುಟಮ್ ॥

(ಶ್ಲೋಕ-41)

ಮೂಲಮ್

ಉದೇತಿ ಮುಕ್ತಿಮಾರ್ಗೋಽಯಮಾದ್ಯಶ್ಚತುರಸೇವಿತಃ ।
ತಸ್ಮಾದ್ರಾಘವ ಸದ್ಭಕ್ತೆಸ್ತ್ವಯಿ ಮೇ ಪ್ರೇಮಲಕ್ಷಣಾ ॥

(ಶ್ಲೋಕ-42)

ಮೂಲಮ್

ಸದಾ ಭೂಯಾದ್ಧರೇ ಸಂಗಸ್ತ್ವದ್ಭಕ್ತೇಷು ವಿಶೇಷತಃ ।
ಅದ್ಯ ಮೇ ಸಫಲಂ ಜನ್ಮ ಭವತ್ಸಂದರ್ಶನಾದಭೂತ್ ॥

ಅನುವಾದ

‘‘ಹೇ ರಾಮಾ! ಅನಂತರ ಸನಾತನನಾದ ನಿನ್ನಲ್ಲಿ ಭಕ್ತಿ ಉಂಟಾಗುವುದು. ನಿನ್ನ ಭಕ್ತಿಯು ಉಂಟಾದ ಬಳಿಕ ಸ್ಪಷ್ಟವಾದ ವಿಜ್ಞಾನವು (ಆತ್ಮಾನುಭವವು) ಪ್ರಾಪ್ತವಾಗುವುದು. ಇದೇ ಜಾಣರು ಸೇವಿಸುವ ಭಕ್ತಿಮಾರ್ಗವು ಮುಕ್ತಿಗೆ ಎಲ್ಲಕ್ಕಿಂತ ಹಿರಿದಾಗಿದೆ. ಆದ್ದರಿಂದ ಹೇ ರಾಘವಾ! ಪ್ರೇಮ ರೂಪವಾದ ನಿನ್ನ ಭಕ್ತಿಯು ನನ್ನಲ್ಲಿ ಸದಾಕಾಲವು ಇರಲಿ. ಹೇ ಹರೇ! ನಿನ್ನ ಭಕ್ತರ ಸಂಗವು ನನಗೆ ಹೆಚ್ಚು-ಹೆಚ್ಚಾಗಿ ದೊರೆಯುತ್ತಿರಲಿ. ಇಂದು ನಿನ್ನ ದರ್ಶನದಿಂದ ನನ್ನ ಜನ್ಮವು ಸಾರ್ಥಕವಾಯಿತು. ॥40-42॥

(ಶ್ಲೋಕ-43)

ಮೂಲಮ್

ಅದ್ಯ ಮೇ ಕ್ರತವಃ ಸರ್ವೇ ಬಭೂವುಃ ಸಫಲಾಃ ಪ್ರಭೋ ।
ದೀರ್ಘಕಾಲಂ ಮಯಾ ತಪ್ತಮನನ್ಯಮತಿನಾ ತಪಃ ।
ತಸ್ಯೇಹ ತಪಸೋ ರಾಮ ಫಲಂ ತವ ಯದರ್ಚನಮ್ ॥

ಅನುವಾದ

ಹೇ ಸ್ವಾಮಿ! ಇಂದು ನಾನು ಮಾಡಿದ ಯಜ್ಞಗಳೆಲ್ಲವೂ ಸಫಲವಾದುವು. ಬಹಳ ಕಾಲದಿಂದ ನಾನು ಅನನ್ಯಭಾವದಿಂದ ತಪಸ್ಸು ಮಾಡಿದೆ. ಹೇ ರಾಮಾ! ಆ ತಪಸ್ಸಿನ ಫಲದಿಂದಲೇ ಇಂದು ನಾನು ನಿನ್ನನ್ನು ಪ್ರತ್ಯಕ್ಷವಾಗಿ ಪೂಜಿಸುವ ಭಾಗ್ಯ ಒದಗಿತು. ॥43॥

(ಶ್ಲೋಕ-44)

ಮೂಲಮ್

ಸದಾ ಮೇ ಸೀತಯಾ ಸಾರ್ಧಂ ಹೃದಯೇ ವಸ ರಾಘವ ।
ಗಚ್ಛತಸ್ತಿಷ್ಠತೋ ವಾಪಿ ಸ್ಮೃತಿಃ ಸ್ಯಾನ್ಮೇ ಸದಾ ತ್ವಯಿ ॥

ಅನುವಾದ

ಹೇ ರಾಘವನೆ! ನೀನು ಸೀತಾಸಮೇತನಾಗಿ ಯಾವಾಗಲೂ ನನ್ನ ಹೃದಯದಲ್ಲಿ ವಾಸ ಮಾಡುವವನಾಗು. ನಾನು ನಿಂತಿರಲಿ, ಓಡಾಡುತ್ತಿರಲಿ, ನಿನ್ನ ಸ್ಮೃತಿಯು ಎಂದೆಂದಿಗೂ ನನಗೆ ಇರಲಿ. ॥44॥

(ಶ್ಲೋಕ-45)

ಮೂಲಮ್

ಇತಿ ಸ್ತುತ್ವಾ ರಮಾನಾಥ ಮಗಸ್ತ್ಯೋ ಮುನಿಸತ್ತಮಃ ।
ದದೌ ಚಾಪಂ ಮಹೇಂದ್ರೇಣ ರಾಮಾರ್ಥೇ ಸ್ಥಾಪಿತಂ ಪುರಾ ॥

(ಶ್ಲೋಕ-46)

ಮೂಲಮ್

ಅಕ್ಷಯ್ಯೌ ಬಾಣತೂಣೀರೌ ಖಡ್ಗೋ ರತ್ನವಿಭೂಷಿತಃ ।
ಜಹಿ ರಾಘವ ಭೂಭಾರಭೂತಂ ರಾಕ್ಷಸಮಂಡಲಮ್ ॥

ಅನುವಾದ

ಈ ಪ್ರಕಾರ ರಮಾಪತಿಯಾದ ರಾಮನನ್ನು ಸ್ತುತಿಸಿ ಮುನಿಶ್ರೇಷ್ಠರಾದ ಅಗಸ್ತ್ಯರು ಹಿಂದೆ ಶ್ರೀರಾಮನಿಗಾಗಿ ಮಹೇಂದ್ರನು ಕೊಟ್ಟಿದ್ದ ಧನುಸ್ಸನ್ನು ಅಕ್ಷಯವಾದ ಎರಡು ಬತ್ತಳಿಕೆಗಳನ್ನು ರತ್ನಾಲಂಕೃತವಾದ ಖಡ್ಗವನ್ನು ರಾಮನಿಗೆ ಅರ್ಪಿಸಿದರು. ಹೇ ರಾಮನೆ! ಭೂಮಿಗೆ ಭಾರವಾಗಿರುವ ರಾಕ್ಷಸರ ಗುಂಪನ್ನೆಲ್ಲ ನಾಶಗೊಳಿಸು. ॥45-46॥

(ಶ್ಲೋಕ-47)

ಮೂಲಮ್

ಯದರ್ಥಮವತೀರ್ಣೋಽಸಿ ಮಾಯಯಾ ಮನುಜಾಕೃತಿಃ ।
ಇತೋ ಯೋಜನಯುಗ್ಮೇ ತು ಪುಣ್ಯಕಾನನಮಂಡಿತಃ ॥

(ಶ್ಲೋಕ-48)

ಮೂಲಮ್

ಅಸ್ತಿ ಪಂಚವಟೀನಾಮ್ನಾ ಆಶ್ರಮೋ ಗೌತಮೀತಟೇ ।
ನೇತವ್ಯಸ್ತತ್ರ ತೇ ಕಾಲಃ ಶೇಷೋ ರಘುಕುಲೋದ್ವಹ ॥

(ಶ್ಲೋಕ-49)

ಮೂಲಮ್

ತತ್ರೈವ ಬಹುಕಾರ್ಯಾಣಿ ದೇವಾನಾಂ ಕುರು ಸತ್ಪತೇ ॥

ಅನುವಾದ

ಮಾಯಾ ಮನುಷ್ಯನಾಗಿ ಏತಕ್ಕಾಗಿ ಅವತರಿಸಿರುವೆಯೋ ಆ ಕಾರ್ಯವನ್ನು ಸಾಧಿಸು. ಇಲ್ಲಿಂದ ಎರಡು ಯೋಜನ ದೂರದಲ್ಲಿ ಪುಣ್ಯತಮವಾದ ಕಾಡುಗಳಿಂದ ಅಲಂಕೃತವಾದ, ಗೌತಮೀನದಿಯ ತಟದಲ್ಲಿ ಪಂಚವಟೀ ಎಂಬ ಆಶ್ರಮವಿದೆ. ನೀನು ಅಲ್ಲಿ ಉಳಿದ ಕಾಲವನ್ನು ಕಳೆಯುವವನಾಗು. ಹೇ ರಘುಕುಲ ಶ್ರೇಷ್ಠನೆ! ಸತ್ಪತೇ! ನೀನು ಅಲ್ಲಿಯೇ ಇದ್ದು ದೇವತೆಗಳ ಅನೇಕ ಕಾರ್ಯಗಳನ್ನು ಸಿದ್ಧಗೊಳಿಸು.’’ ॥47-49॥

(ಶ್ಲೋಕ-50)

ಮೂಲಮ್

ಶ್ರುತ್ವಾ ತದಾಗಸ್ತ್ಯಸುಭಾಷಿತಂ ವಚಃ
ಸ್ತೋತ್ರಂ ಚ ತತ್ತ್ವಾರ್ಥಸಮನ್ವಿತಂ ವಿಭುಃ ।
ಮುನಿಂ ಸಮಾಭಾಷ್ಯ ಮುದಾನ್ವಿತೋ ಯಯೌ
ಪ್ರದರ್ಶಿತಂ ಮಾರ್ಗಮಶೇಷವಿದ್ಧರಿಃ ॥

ಅನುವಾದ

ವಿಭುವೂ ಶ್ರೀಹರಿಯೂ ಆದ ಶ್ರೀರಾಮನು ಅಗಸ್ತ್ಯರ ಹಿತವಚನವನ್ನು, ತತ್ವಾರ್ಥಯುಕ್ತವಾದ ಸ್ತೋತ್ರವನ್ನು ಕೇಳಿ, ಸಂತೋಷದಿಂದ ಅವರಿಂದ ಅನುಮತಿ ಪಡೆದು, ಅವರು ತಿಳಿಸಿದ ದಾರಿಯಲ್ಲಿ ಮುಂದಕ್ಕೆ ಪ್ರಯಾಣ ಮಾಡಿದನು. ॥50॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.