೦೨

[ಎರಡನೆಯ ಸರ್ಗ]

ಭಾಗಸೂಚನಾ

ಶರಭಂಗ, ಸುತೀಕ್ಷ್ಣ ಮುಂತಾದ ಮುನೀಶ್ವರರ ಭೇಟಿ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ವಿರಾಧೇ ಸ್ವರ್ಗತೇ ರಾಮೋ ಲಕ್ಷ್ಮಣೇನ ಚ ಸೀತಯಾ ।
ಜಗಾಮ ಶರಭಂಗಸ್ಯ ವನಂ ಸರ್ವಸುಖಾವಹಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಉಮೆಯೇ! ವಿರಾಧನು ಸ್ವರ್ಗಕ್ಕೆ ಹೊರಟು ಹೋದಮೇಲೆ ಶ್ರೀರಾಮನು ಸೀತಾ ಲಕ್ಷ್ಮಣರೊಡಗೂಡಿ ಎಲ್ಲರಿಗೂ ಸುಖಕರವಾಗಿರುವ ತಪಸ್ವೀ ಶರಭಂಗರ ತಪೋವನಕ್ಕೆ ಬಂದನು. ॥1॥

(ಶ್ಲೋಕ-2)

ಮೂಲಮ್

ಶರಭಂಗಸ್ತತೋ ದೃಷ್ಟ್ವಾ ರಾಮಂ ಸೌಮಿತ್ರಿಣಾ ಸಹ ।
ಆಯಾಂತಂ ಸೀತಯಾ ಸಾರ್ಧಂ ಸಂಭ್ರಮಾದುತ್ಥಿತಃ ಸುಧೀಃ ॥

ಅನುವಾದ

ಸೀತಾ ಲಕ್ಷ್ಮಣರೊಡನೆ ಬಂದಿರುವ ಶ್ರೀರಾಮಚಂದ್ರನನ್ನು ಜ್ಞಾನಿಯಾದ ಶರಭಂಗ ಋಷಿಯು ನೋಡಿ ಸಂಭ್ರಮದಿಂದ ಮೇಲಕ್ಕೆದ್ದನು. ॥2॥

(ಶ್ಲೋಕ-3)

ಮೂಲಮ್

ಅಭಿಗಮ್ಯ ಸುಸಂಪೂಜ್ಯ ವಿಷ್ಟರೇಷೂಪವೇಶಯತ್ ।
ಆತಿಥ್ಯಮಕರೋತ್ತೇಷಾಂ ಕಂದಮೂಲಫಲಾದಿಭಿಃ ॥

ಅನುವಾದ

ಬಂದಿರುವ ಅತಿಥಿಗಳನ್ನು ಇದಿರ್ಗೊಂಡು ಗೌರವಿಸಿ ದರ್ಭಾಸನದ ಮೇಲೆ ಕುಳ್ಳಿರಿಸಿ, ವಿಧಿವತ್ ಪೂಜೆಯನ್ನು ಮಾಡಿ, ಕಂದ-ಫಲ-ಮೂಲಗಳಿಂದ ಆತಿಥ್ಯವನ್ನು ನೀಡಿದನು. ॥3॥

(ಶ್ಲೋಕ-4)

ಮೂಲಮ್

ಪ್ರೀತ್ಯಾಹ ಶರಭಂಗೋಽಪಿ ರಾಮಂ ಭಕ್ತಪರಾಯಣಮ್ ।
ಬಹುಕಾಲಮಿಹೈವಾಸಂ ತಪಸೇ ಕೃತನಿಶ್ಚಯಃ ॥

(ಶ್ಲೋಕ-5)

ಮೂಲಮ್

ತವ ಸಂದರ್ಶನಾಕಾಂಕ್ಷೀ ರಾಮ ತ್ವಂ ಪರಮೇಶ್ವರಃ ।
ಅದ್ಯ ಮತ್ತಪಸಾ ಸಿದ್ಧಂ ಯತ್ಪುಣ್ಯಂ ಬಹು ವಿದ್ಯತೇ ।
ತತ್ಸರ್ವಂ ತವ ದಾಸ್ಯಾಮಿ ತತೋ ಮುಕ್ತಿಂ ವ್ರಜಾಮ್ಯಹಮ್ ॥

ಅನುವಾದ

ಭಕ್ತಪರಾಯಣನಾದ ಶ್ರೀರಾಮನಲ್ಲಿ ಶರಭಂಗರು ಪ್ರೀತಿಯಿಂದ ಹೀಗೆಂದರು ‘‘ಹೇ ರಘುಪುಂಗವಾ! ನಿನ್ನ ದರ್ಶನಾಕಾಂಕ್ಷಿಯಾಗಿ ನಾನು ತಪಸ್ಸು ಮಾಡಲು ನಿಶ್ಚಯಿಸಿ ಬಹಳ ಕಾಲದಿಂದ ಇಲ್ಲಿಯೇ ವಾಸಮಾಡಿಕೊಂಡಿರುವೆನು. ನೀನಾದರೋ ಸಾಕ್ಷಾತ್ ಪರಮೇಶ್ವರನಾಗಿರುವೆ. ನನಗೆ ತಪಸ್ಸಿನಿಂದ ಪ್ರಾಪ್ತವಾದ ಹೆಚ್ಚಿನ ಪುಣ್ಯವೆಲ್ಲವನ್ನು ನಿನಗೆ ಸಮರ್ಪಿಸಿ ನಾನು ಮುಕ್ತಿಯನ್ನು ಹೊಂದುವೆನು.’’ ॥4-5॥

(ಶ್ಲೋಕ-6)

ಮೂಲಮ್

ಸಮರ್ಪ್ಯ ರಾಮಸ್ಯ ಮಹತ್ಸುಪುಣ್ಯ -
ಫಲಂ ವಿರಕ್ತಃ ಶರಭಂಗಯೋಗೀ ।
ಚಿತಿಂ ಸಮಾರೋಹಯದಪ್ರಮೇಯಂ
ರಾಮಂ ಸಸೀತಂ ಸಹಸಾ ಪ್ರಣಮ್ಯ ॥

ಅನುವಾದ

ಮಹಾವಿರಕ್ತನಾದ ಶರಭಂಗ ಮಹರ್ಷಿಗಳು ತನ್ನ ಮಹಾನ್ ತಪಃಪುಣ್ಯವನ್ನು ಶ್ರೀರಾಮಚಂದ್ರನಿಗೆ ಸಮರ್ಪಿಸಿ ಅಪ್ರಮೇಯನಾದ ಸೀತಾಸಹಿತನಾದ ಶ್ರೀರಾಮನನ್ನು ನಮಸ್ಕರಿಸಿ ಮೊದಲೇ ಸಿದ್ಧಪಡಿಸಿಟ್ಟ ಚಿತೆಯನ್ನು ತಟಕ್ಕನೇ ಏರಿದನು. ॥6॥

(ಶ್ಲೋಕ-7)

ಮೂಲಮ್

ಧ್ಯಾಯಂಶ್ಚಿರಂ ರಾಮಮಶೇಷಹೃತ್ಸ್ಥಂ
ದೂರ್ವಾದಲಶ್ಯಾಮಲಮಂಬುಜಾಕ್ಷಮ್ ।
ಚೀರಾಂಬರಂ ಸ್ನಿಗ್ಧಜಟಾಕಲಾಪಂ
ಸೀತಾಸಹಾಯಂ ಸಹಲಕ್ಷ್ಮಣಂ ತಮ್ ॥

ಅನುವಾದ

ಆಗ ಅವರು ಹೃದಯದಲ್ಲಿ ಎಲ್ಲರ ಹೃದಯನಿವಾಸಿಯೂ, ದೂರ್ವಾದಲ ಶ್ಯಾಮನೂ, ಕಮಲನಯನನೂ, ವಲ್ಕಲಗಳನ್ನು ಧರಿಸಿದವನೂ, ಜಟಾಜೂಟನೂ, ಮನೋಹರ ಮುಂಗುರುಳುಳ್ಳವನೂ, ಸೀತಾ ಲಕ್ಷ್ಮಣ ಸಹಿತನಾದ ಶ್ರೀರಾಮಚಂದ್ರನನ್ನು ತುಂಬಾ ಹೊತ್ತು ಧ್ಯಾನಿಸುತ್ತಿದ್ದನು. ॥7॥

(ಶ್ಲೋಕ-8)

ಮೂಲಮ್

ಕೋ ವಾ ದಯಾಲುಃ ಸ್ಮೃತಕಾಮಧೇನುಃ
ಅನ್ಯೋ ಜಗತ್ಯಾಂ ರಘುನಾಯಕಾದಹೋ ।
ಸ್ಮೃತೋ ಮಯಾ ನಿತ್ಯಮನನ್ಯಭಾಜಾ
ಜ್ಞಾತ್ವಾ ಸ್ಮೃತಿಂ ಮೇ ಸ್ವಯಮೇವ ಯಾತಃ ॥

ಅನುವಾದ

ಪುನಃ ಮನಸ್ಸಿನಲ್ಲೇ ‘‘ಆಹಾ! ಈ ಜಗತ್ತಿನಲ್ಲಿ ಶ್ರೀರಾಮನ ಹೊರತು ನೆನೆದವರ ಇಷ್ಟಾರ್ಥಗಳನ್ನು ಸಲ್ಲಿಸುವ ದಯಾಳುಯಾರಿದ್ದಾನೆ? ನಾನು ಅನನ್ಯಭಾವದಿಂದ ಅವನನ್ನು ದಿನಾಲೂ ಸ್ಮರಿಸುತ್ತಿದ್ದೆ. ಆದ್ದರಿಂದ ನನ್ನ ಸ್ಮರಣೆಯನ್ನು ತಿಳಿದವನಾಗಿ ತಾನೇ ಪ್ರತ್ಯಕ್ಷನಾಗಿ ಬಂದಿರುತ್ತಾನೆ. ॥8॥

(ಶ್ಲೋಕ-9)

ಮೂಲಮ್

ಪಶ್ಯತ್ವಿದಾನೀಂ ದೇವೇಶೋ ರಾಮೋ ದಾಶರಥಿಃ ಪ್ರಭುಃ ।
ದಗ್ಧ್ವಾ ಸ್ವದೇಹಂ ಗಚ್ಛಾಮಿ ಬ್ರಹ್ಮಲೋಕಮಕಲ್ಮಷಃ ॥

ಅನುವಾದ

ದೇವ ದೇವೇಶ ದಶರಥ ನಂದನ ಭಗವಾನ್ ಶ್ರೀರಾಮಪ್ರಭುವು ನನ್ನ ಕಡೆಗೆ ನೋಡುತ್ತಿರಲಿ. ನಾನು ನನ್ನ ಶರೀರವನ್ನು ಸುಟ್ಟುಕೊಂಡು, ಪಾಪರಹಿತನಾಗಿ ಬ್ರಹ್ಮಲೋಕಕ್ಕೆ ಹೋಗುತ್ತಿರುವೆನು. ॥9॥

(ಶ್ಲೋಕ-10)

ಮೂಲಮ್

ಅಯೋಧ್ಯಾಧಿಪತಿರ್ಮೇಽಸ್ತು ಹೃದಯೇ ರಾಘವಃ ಸದಾ ।
ಯದ್ವಾಮಾಂಕೇ ಸ್ಥಿತಾ ಸೀತಾ ಮೇಘಸ್ಯೇವ ತಡಿಲ್ಲತಾ ॥

ಅನುವಾದ

ಎಡಭಾಗದಲ್ಲಿ ಮೋಡಗಳ ನಡುವಿನ ಮಿಂಚಿನಂತೆ ಜಗನ್ಮಾತೆ ಸೀತೆಯು ವಿರಾಜಮಾನಳಾಗಿರುವ ಅಯೋಧ್ಯಾಪತಿ ಶ್ರೀರಾಮಚಂದ್ರನು ನನ್ನ ಹೃದಯದಲ್ಲಿ ಸದಾಕಾಲ ನೆಲೆಗೊಳ್ಳಲಿ.’’ ॥10॥

(ಶ್ಲೋಕ-11)

ಮೂಲಮ್

ಇತಿ ರಾಮಂ ಚಿರಂ ಧ್ಯಾತ್ವಾ ದೃಷ್ಟ್ವಾ ಚ ಪುರತಃ ಸ್ಥಿತಮ್ ।
ಪ್ರಜ್ವಾಲ್ಯ ಸಹಸಾ ವಹ್ನಿಂ ದಗ್ಧ್ವಾ ಪಂಚಾತ್ಮಕಂ ವಪುಃ ॥

(ಶ್ಲೋಕ-12)

ಮೂಲಮ್

ದಿವ್ಯದೇಹಧರಃ ಸಾಕ್ಷಾದ್ಯಯೌ ಲೋಕಪತೇಃ ಪದಮ್ ।
ತತೋ ಮುನಿಗಣಾಃ ಸರ್ವೇ ದಂಡಕಾರಣ್ಯವಾಸಿನಃ ।
ಆಜಗ್ಮೂ ರಾಘವಂ ದ್ರಷ್ಟುಂ ಶರಭಂಗನಿವೇಶನಮ್ ॥

ಅನುವಾದ

ಈ ಪ್ರಕಾರ ಶ್ರೀಸೀತಾರಾಮನನ್ನು ತುಂಬಾ ಹೊತ್ತಿನವರೆಗೆ ಧ್ಯಾನಿಸುತ್ತಾ, ಹಾಗೂ ಎದುರಿಗೆ ನಿಂತಿರುವ ಅವನ ಮಂಗಳ ಸ್ವರೂಪವನ್ನು ಕಣ್ತುಂಬಾ ನೋಡುತ್ತಾ ಮುನೀಶ್ವರ ಶರಭಂಗರು ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಅದರಲ್ಲಿ ತನ್ನ ಪಾಂಚಭೌತಿಕ ಶರೀರವನ್ನು ಸುಟ್ಟುಕೊಂಡು, ದಿವ್ಯದೇಹ (ತೇಜೋಮಯ ಶರೀರ)ವನ್ನು ಧರಿಸಿ ಪರಮಾತ್ಮನ ಪರಮಪದವನ್ನು ಪಡೆದುಕೊಂಡರು. ಅನಂತರ ದಂಡಕಾರಣ್ಯವಾಸಿಗಳಾದ ಋಷಿಗಳೆಲ್ಲರೂ ಶ್ರೀರಘುನಾಥನ ದರ್ಶನ ಪಡೆಯಲು ಶರಭಂಗರ ಆಶ್ರಮಕ್ಕೆ ಆಗಮಿಸಿದರು. ॥11-12॥

(ಶ್ಲೋಕ-13)

ಮೂಲಮ್

ದೃಷ್ಟ್ವಾ ಮುನಿಸಮೂಹಂ ತಂ ಜಾನಕೀರಾಮಲಕ್ಷ್ಮಣಾಃ ।
ಪ್ರಣೇಮುಃ ಸಹಸಾ ಭೂಮೌ ಮಾಯಾಮಾನುಷರೂಪಿಣಃ ॥

ಅನುವಾದ

ಆ ಮುನಿಗಳ ಗುಂಪನ್ನು ಕಂಡ ಕೂಡಲೇ ಮಾಯಾಮಾನುಷ್ಯರೂಪನಾದ ಶ್ರೀರಾಮ, ಸೀತೆ, ಲಕ್ಷ್ಮಣರು ನೆಲಮುಟ್ಟಿ ನಮಸ್ಕಾರ ಮಾಡಿದರು. ॥13॥

(ಶ್ಲೋಕ-14)

ಮೂಲಮ್

ಆಶೀರ್ಭಿರಭಿನಂದ್ಯಾಥ ರಾಮಂ ಸರ್ವಹೃದಿ ಸ್ಥಿತಮ್ ।
ಊಚುಃ ಪ್ರಾಂಜಲಯಃ ಸರ್ವೇ ಧನುರ್ಬಾಣಧರಂ ಹರಿಮ್ ॥

ಅನುವಾದ

ಆಗ ಆ ಮುನೀಶ್ವರರು ಸರ್ವಾಂತರ್ಯಾಮಿ ಭಗವಾನ್ ಶ್ರೀರಾಮನನ್ನು ಆಶೀರ್ವಾದಗಳಿಂದ ಹರಸಿದರು. ಪುನಃ ಧನುರ್ಬಾಣಗಳನ್ನು ಧರಿಸಿರುವ ಶ್ರೀಹರಿಯಲ್ಲಿ ಕೈ ಜೋಡಿಸಿಕೊಂಡು ಪ್ರಾರ್ಥಿಸಿಕೊಂಡರು — ॥14॥

(ಶ್ಲೋಕ-15)

ಮೂಲಮ್

ಭೂಮೇರ್ಭಾರಾವತಾರಾಯ ಜಾತೋಸಿ ಬ್ರಹ್ಮಣಾರ್ಥಿತಃ ।
ಜಾನೀಮಸ್ತ್ವಾಂ ಹರಿಂ ಲಕ್ಷ್ಮೀಂ ಜಾನಕೀಂ ಲಕ್ಷ್ಮಣಂ ತಥಾ ॥

(ಶ್ಲೋಕ-16)

ಮೂಲಮ್

ಶೇಷಾಂಶಂ ಶಂಖಚಕ್ರೇ ದ್ವೇ ಭರತಂ ಸಾನುಜಂ ತಥಾ ।
ಅತಶ್ಚಾದೌ ಋಷೀಣಾಂ ತ್ವಂ ದುಃಖಂ ಮೋಕ್ತುಮಿರ್ಹಾಸಿ ॥

ಅನುವಾದ

‘‘ಬ್ರಹ್ಮದೇವರ ಪ್ರಾರ್ಥನೆಯಂತೆ ಭೂಮಿಯ ಭಾರವನ್ನು ಹರಿಸಲಿಕ್ಕಾಗಿ ನೀನು ಅವತರಿಸಿರುವೆ. ನೀನು ಸಾಕ್ಷಾತ್ ನಾರಾಯಣನೆಂದೂ, ಜಾನಕಿಯು ಪ್ರತ್ಯಕ್ಷ ಲಕ್ಷಿಯೆಂದೂ, ಲಕ್ಷ್ಮಣನು ಆದಿಶೇಷನ ಅಂಶನೆಂದೂ, ಭರತ-ಶತ್ರುಘ್ನರೂ ಭಗವಂತನಾದ ನಿನ್ನ ಶಂಖ-ಚಕ್ರಗಳ ಅವತಾರವೆಂದೂ ನಾವು ತಿಳಿದಿದ್ದೇವೆ. ಆದ್ದರಿಂದ ನೀನು ಮೊಟ್ಟಮೊದಲು ಋಷಿಗಳ ದುಃಖವನ್ನು ದೂರಗೊಳಿಸು. ॥15-16॥

(ಶ್ಲೋಕ-17)

ಮೂಲಮ್

ಆಗಚ್ಛ ಯಾಮೋ ಮುನಿಸೇವಿತಾನಿ
ವನಾನಿ ಸರ್ವಾಣಿ ರಘೂತ್ತಮ ಕ್ರಮಾತ್ ।
ದ್ರಷ್ಟಂ ಸುಮಿತ್ರಾಸುತಜಾನಕೀಭ್ಯಾಂ
ತದಾ ದಯಾಽಸ್ಮಾಸು ದೃಢಾ ಭವಿಷ್ಯತಿ ॥

ಅನುವಾದ

ಹೇ ರಘುಶ್ರೇಷ್ಠನೆ! ಮುನಿಗಳು ವಾಸವಾಗಿರುವ ಎಲ್ಲ ತಪೋವನಗಳನ್ನು ಕ್ರಮವಾಗಿ ನೋಡುವಿಯಂತೆ, ನಾವೂ ನಿಮ್ಮ ಜೊತೆಗೆ ಬರುತ್ತೇವೆ. ಲಕ್ಷ್ಮಣ ಜಾನಕಿಯರೊಡಗೂಡಿ ಆ ಆಶ್ರಮಗಳನ್ನು ನೋಡಿದಾಗ ನಿನಗೆ ನಮ್ಮಲ್ಲಿ ಕರುಣೆಯು ಖಂಡಿತವಾಗಿ ಉಂಟಾಗುವುದು. ॥17॥

(ಶ್ಲೋಕ-18)

ಮೂಲಮ್

ಇತಿ ವಿಜ್ಞಾಪಿತೋ ರಾಮಃ ಕೃತಾಂಜಲಿಪುಟೈರ್ವಿಭುಃ ।
ಜಗಾಮ ಮುನಿಭಿಃ ಸಾರ್ಧಂ ದ್ರಷ್ಟುಂ ಮುನಿವನಾನಿ ಸಃ ॥

ಅನುವಾದ

ಹೀಗೆಂದು ಕೈ ಮುಗಿದು ಪ್ರಾರ್ಥಿಸಿಕೊಂಡಾಗ ಭಗವಾನ್ ಶ್ರೀರಾಮನು ಮುನಿಗಳ ವಾಸಸ್ಥಾನಗಳಾದ ತಪೋವನವನ್ನು ನೋಡಲು ಋಷಿಗಳೊಂದಿಗೆ ಹೊರಟನು. ॥18॥

(ಶ್ಲೋಕ-19)

ಮೂಲಮ್

ದದರ್ಶ ತತ್ರ ಪತಿತಾನ್ಯನೇಕಾನಿ ಶಿರಾಂಸಿ ಸಃ ।
ಅಸ್ಥಿಭೂತಾನಿ ಸರ್ವತ್ರ ರಾಮೋ ವಚನಮಬ್ರವೀತ್ ॥

(ಶ್ಲೋಕ-20)

ಮೂಲಮ್

ಅಸ್ಥೀನಿ ಕೇಷಾಮೇತಾನಿ ಕಿಮರ್ಥಂ ಪತಿತಾನಿ ವೈ ।
ತಮೂಚುರ್ಮುನಯೋ ರಾಮ ಋಷೀಣಾಂ ಮಸ್ತಕಾನಿ ಹಿ ॥

ಅನುವಾದ

ಶ್ರೀರಾಮನು ಅಲ್ಲಿ ತಲೆಬುರುಡೆಗಳು, ಮೂಳೆಗಳು ರಾಶಿ-ರಾಶಿಯಾಗಿ, ಬಿದ್ದಿರುವುದನ್ನು ನೋಡಿದನು. ಅದನ್ನು ನೋಡಿ ಶ್ರೀರಾಮನು ಋಷಿಗಳ ಬಳಿಯಲ್ಲಿ ಕೇಳಿದನು ‘‘ಇವು ಯಾರ ಅಸ್ಥಿಗಳು, ಹೀಗೇಕೆ ಬಿದ್ದಿವೆ?’’ ಆಗ ಮುನೀಶ್ವರರು ಹೇಳಿದರು ‘‘ಹೇ ರಾಮಾ! ಇವು ಋಷಿಗಳ ತಲೆಬುರುಡೆಗಳು. ॥19-20॥

(ಶ್ಲೋಕ-21)

ಮೂಲಮ್

ರಾಕ್ಷಸೈರ್ಭಕ್ಷಿತಾನೀಶ ಪ್ರಮತ್ತಾನಾಂ ಸಮಾಧಿತಃ ।
ಅಂತರಾಯಂ ಮುನೀನಾಂ ತೇ ಪಶ್ಯಂತೋಽನುಚರಂತಿ ಹಿ ॥

ಅನುವಾದ

ಹೇ ಸಮರ್ಥನೆ! ರಾಕ್ಷಸರು ಇವರನ್ನು ತಿಂದುಬಿಟ್ಟಿರುವರು. ಸಮಾಧಿಯಲ್ಲಿ ಮಗ್ನರಾದಾಗ ಓಡಿಹೋಗಲಾರದೆ ಇರುವ ಮುನಿಗಳನ್ನು ತಿಂದುಹಾಕಲು ರಾಕ್ಷಸರು ಹೊಂಚುಹಾಕುತ್ತಾ ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ॥21॥

(ಶ್ಲೋಕ-22)

ಮೂಲಮ್

ಶ್ರುತ್ವಾ ವಾಕ್ಯಂ ಮುನೀನಾಂ ಸ ಭಯದೈನ್ಯಸಮನ್ವಿತಮ್ ।
ಪ್ರತಿಜ್ಞಾಮಕರೋದ್ರಾಮೋ ವಧಾಯಾಶೇಷರಕ್ಷಸಾಮ್ ॥

ಅನುವಾದ

ಭಯ ಮತ್ತು ದೀನತೆಗಳಿಂದ ಕೂಡಿದ ಮುನಿಗಳ ಮಾತನ್ನು ಕೇಳಿದ ಶ್ರೀರಾಮಚಂದ್ರನು ಸಮಸ್ತ ರಾಕ್ಷಸರನ್ನು ಸಂಹಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದನು. ॥22॥

(ಶ್ಲೋಕ-23)

ಮೂಲಮ್

ಪೂಜ್ಯಮಾನಃ ಸದಾ ತತ್ರ ಮುನಿಭಿರ್ವನವಾಸಿಭಿಃ ।
ಜಾನಕ್ಯಾ ಸಹಿತೋ ರಾಮೋ ಲಕ್ಷ್ಮಣೇನ ಸಮನ್ವಿತಃ ॥

(ಶ್ಲೋಕ-24)

ಮೂಲಮ್

ಉವಾಸ ಕತಿಚಿತ್ತತ್ರ ವರ್ಷಾಣಿ ರಘುನಂದನಃ ।
ಏವಂ ಕ್ರಮೇಣ ಸಂಪಶ್ಯನ್ ಯಷೀಣಾಮಾಶ್ರಮಾನ್ವಿಭುಃ ॥

ಅನುವಾದ

ಈ ಪ್ರಕಾರ ಕ್ರಮವಾಗಿ ಮುನೀಶ್ವರರ ಆಶ್ರಮಗಳನ್ನು ನೋಡುತ್ತಾ ಪ್ರಭು ಶ್ರೀರಾಮಚಂದ್ರನು ವನವಾಸಿ ಋಷಿಗಳಿಂದ ನಿತ್ಯ ಪೂಜಿತನಾಗುತ್ತಾ ಸೀತಾ-ಲಕ್ಷ್ಮಣರೊಡಗೂಡಿ ಅಲ್ಲಿ ಕೆಲವು ವರ್ಷಗಳ ಕಾಲವನ್ನು ಕಳೆದನು. ॥23-24॥

(ಶ್ಲೋಕ-25)

ಮೂಲಮ್

ಸುತೀಕ್ಷ್ಣಸ್ಯಾಶ್ರಮಂ ಪ್ರಾಗಾತ್ಪ್ರಖ್ಯಾತಮೃಷಿಸಂಕುಲಮ್ ।
ಸರ್ವರ್ತುಗುಣಸಂಪನ್ನಂ ಸರ್ವಕಾಲಸುಖಾವಹಮ್ ॥

ಅನುವಾದ

ಈ ಪ್ರಕಾರ ಒಂದೊಂದಾಗಿ ಋಷಿಗಳ ಆಶ್ರಮವನ್ನು ಸಂದರ್ಶಿಸುತ್ತಾ ವಿಭುವಾದ ಶ್ರೀರಾಮನು ಸುಪ್ರಸಿದ್ಧವೂ ಋಷಿಗಳಿಂದ ತುಂಬಿರುವ, ಎಲ್ಲ ಋತುಧರ್ಮಗಳಿಂದ ಕೂಡಿದ, ಎಲ್ಲಾ ಸಮಯದಲ್ಲಿ ಹಿತಕರವಾದ ಹವಾಗುಣವುಳ್ಳ ಸುತೀಕ್ಷ್ಣ ಮಹರ್ಷಿಯ ಆಶ್ರಮಕ್ಕೆ ಬಂದನು. ॥25॥

(ಶ್ಲೋಕ-26)

ಮೂಲಮ್

ರಾಮಮಾಗತಮಾಕರ್ಣ್ಯ ಸುತೀಕ್ಷ್ಣಃ ಸ್ವಯಮಾಗತಃ ।
ಅಗಸ್ತ್ಯಶಿಷ್ಯೋ ರಾಮಸ್ಯ ಮಂತ್ರೋಪಾಸನತತ್ಪರಃ ।
ವಿಧಿವತ್ಪೂಜಯಾಮಾಸ ಭಕ್ತ್ಯುತ್ಕಂಠಿತಲೋಚನಃ ॥

ಅನುವಾದ

ಶ್ರೀರಾಮನ ಆಗಮನವನ್ನು ಕೇಳಿ ರಾಮಮಂತ್ರದ ಉಪಾಸಕರೂ, ಅಗಸ್ತ್ಯ ಋಷಿಯ ಶಿಷ್ಯರೂ ಆದ ಸುತೀಕ್ಷ್ಣರು ತಾನೇ ಎದ್ದು ಬಂದು ಇದಿರ್ಗೊಂಡರು. ಭಕ್ತಿಯಿಂದ ಉಕ್ಕಿಬಂದ ಕಣ್ಣೀರಿನಿಂದ ಕೂಡಿದರಾಗಿ ವಿಧಿಪೂರ್ವಕವಾಗಿ ಶ್ರೀರಾಮನನ್ನು ನಮಸ್ಕರಿಸಿ ಪೂಜಿಸಿದರು. ಅನಂತರ ಕೈ ಜೋಡಿಸಿಕೊಂಡು ಪ್ರಾರ್ಥಿಸತೊಡಗಿದರು. ॥26॥

(ಶ್ಲೋಕ-27)

ಮೂಲಮ್ (ವಾಚನಮ್)

ಸುತೀಕ್ಷ್ಣ ಉವಾಚ

ಮೂಲಮ್

ತ್ವನ್ಮಂತ್ರಜಾಪ್ಯಹಮನಂತಗುಣಾಪ್ರಮೇಯ
ಸೀತಾಪತೇ ಶಿವವಿರಿಂಚಿಸಮಾಶ್ರಿತಾಂರಘೇ ।
ಸಂಸಾರಸಿಂಧುತರಣಾಮಲಪೋತಪಾದ
ರಾಮಾಭಿರಾಮ ಸತತಂ ತವ ದಾಸದಾಸಃ ॥

ಅನುವಾದ

ಸುತೀಕ್ಷ್ಣರು ಹೇಳುತ್ತಾರೆ — ‘‘ಅನಂತ ಕಲ್ಯಾಣಗುಣ ಸಂಪನ್ನನೂ, ಅಪ್ರಮೇಯನೂ, ಮನೋಹರನೂ ಆದ ಶ್ರೀರಾಮಚಂದ್ರಾ! ನಿನ್ನ ಮಂತ್ರವನ್ನೇ ಜಪಿಸುತ್ತಿರುವ ನಾನು ನಿನ್ನ ದಾಸರ ದಾಸನು. ಹೇ ಸೀತಾಪತಿಯೆ! ಶಿವ-ಬ್ರಹ್ಮಾದಿಗಳು ನಿನಗೆ ಆಶ್ರಿತರಾಗಿರುವರು. ಜಗತ್ಪಾವನವಾದ ನಿನ್ನ ಚರಣಗಳು ಸಂಸಾರ-ಸಾಗರವನ್ನು ದಾಟಲು ಸದೃಢವಾದ ನಾವೆಯಂತಿವೆ. ॥27॥

(ಶ್ಲೋಕ-28)

ಮೂಲಮ್

ಮಾಮದ್ಯ ಸರ್ವಜಗತಾಮವಿಗೋಚರಸ್ತ್ವಂ
ತ್ವನ್ಮಾಯಯಾ ಸುತಕಲತ್ರಗೃಹಾಂಧಕೂಪೇ ।
ಮಗ್ನಂ ನಿರೀಕ್ಷ್ಯ ಮಲಪುದ್ಗಲಪಿಂಡಮೋಹ -
ಪಾಶಾನುಬದ್ಧಹೃದಯಂ ಸ್ವಯಮಾಗತೋಸಿ ॥

ಅನುವಾದ

ಸಕಲ ಪ್ರಪಂಚಕ್ಕೆ ಅಗೋಚರನಾಗಿರುವ ನೀನು, ನಿನ್ನ ಮಾಯೆಯಿಂದ ಪತ್ನೀ-ಪುತ್ರ-ಗೃಹಾದಿ ಕತ್ತಲೆಯ ಬಾವಿಯಲ್ಲಿ ಮುಳುಗಿ ರುವ ಹಾಗೂ ಮಲ-ಮೂತ್ರ ಭಾಂಡವಾದ ಶರೀರವನ್ನೇ ನಾನೆಂಬ ಪಾಶದಲ್ಲಿ ಬಂಧಿತನಾದ ನನಗೆ ದರ್ಶನ ಕೊಟ್ಟು, ನನ್ನನ್ನು ಉದ್ಧಾರಮಾಡಲು ನೀನೇ ಪ್ರತ್ಯಕ್ಷವಾಗಿ ಬಂದಿರುವೆ. ಇದು ನಿನ್ನ ಕರುಣೆಯೇ ಆಗಿದೆ. ॥28॥

(ಶ್ಲೋಕ-29)

ಮೂಲಮ್

ತ್ವಂ ಸರ್ವಭೂತಹೃದಯೇಷು ಕೃತಾಲಯೋಽಪಿ
ತ್ವನ್ಮಂತ್ರಜಾಪ್ಯವಿಮುಖೇಷುತನೋಷಿ ಮಾಯಾಮ್ ।
ತ್ವನ್ಮಂತ್ರಸಾಧನಪರೇಷ್ವಪಯಾತಿ ಮಾಯಾ
ಸೇವಾನುರೂಪಲದೋಽಸಿ ಯಥಾ ಮಹೀಪಃ ॥

ಅನುವಾದ

ನೀನು ಎಲ್ಲ ಪ್ರಾಣಿಗಳ ಹೃದಯದಲ್ಲಿ ಮನೆಮಾಡಿಕೊಂಡಿದ್ದರೂ ನಿನ್ನ ಮಂತ್ರವನ್ನು ಜಪಿಸದವರು ಮಾಯೆಯಿಂದ ಮೋಹಿತರಾಗುತ್ತಾರೆ. ಆದರೆ ನಿನ್ನ ನಾಮ ಚಿಂತನೆಯಲ್ಲಿ ನಿರತರಾದವರಿಂದ ಮಾಯೆಯು ದೂರವಾಗುತ್ತಾಳೆ. ರಾಜನು ಸೇವೆಗೆ ತಕ್ಕಂತೆ ಫಲಕೊಡುವಂತೆ ನೀನೂ ಅದಕ್ಕಿಂತಲೂ ಹೆಚ್ಚಿನದಾದ ಫಲವನ್ನು ಅನುಗ್ರಹಿಸುತ್ತಿರುವೆ. ॥29॥

(ಶ್ಲೋಕ-30)

ಮೂಲಮ್

ವಿಶ್ವಸ್ಯ ಸೃಷ್ಟಿಲಯಸಂಸ್ಥಿತಿಹೇತುರೇಕಃ
ತ್ತ್ವಂ ಮಾಯಯಾ ತ್ರಿಗುಣಯಾ ವಿಧಿರೀಶವಿಷ್ಣೂ ।
ಭಾಸೀಶ ಮೋಹಿತಧಿಯಾಂ ವಿವಿಧಾಕೃತಿಸ್ತ್ವಂ
ಯದ್ವದ್ರವಿಃ ಸಲಿಲಪಾತ್ರಗತೋ ಹ್ಯನೇಕಃ ॥

ಅನುವಾದ

ಸ್ವಾಮಿ! ಉತ್ಪತ್ತಿ, ಸ್ಥಿತಿ, ಪ್ರಳಯ ಇವುಗಳಿಗೆ ನೀನೊಬ್ಬನೇ ಕಾರಣನಾಗಿದ್ದು, ತ್ರಿಗುಣ ಮಯ ಮಾಯೆಯ ನಿಮಿತ್ತವಾಗಿ ಬ್ರಹ್ಮ, ವಿಷ್ಣು, ಶಿವರೆಂದು ಕಂಡು ಬರುತ್ತೀಯೆ. ಮಾಯಾಮೋಹಿತರಾದವರಿಗಂತೂ ಮನುಷ್ಯ, ಪಶು, ಪಕ್ಷಿ ಮುಂತಾಗಿ ನಾನಾರೂಪದಿಂದ ಕಂಡು ಬರುತ್ತೀಯೆ. ಸೂರ್ಯನು ತಾನೊಬ್ಬನೇ ಆಗಿದ್ದರೂ ಬೇರೆ-ಬೇರೆ ನೀರಿನ ಪಾತ್ರೆಗಳಲ್ಲಿ ಪ್ರತಿಬಿಂಬಿತನಾಗಿ ಅನೇಕ ಸೂರ್ಯರಂತೆ ಕಾಣು ವನೋ ಹಾಗೆಯೇ ಆಶ್ಚರ್ಯಗೊಳಿಸುತ್ತಿರುವೆ. ॥30॥

(ಶ್ಲೋಕ-31)

ಮೂಲಮ್

ಪ್ರತ್ಯಕ್ಷತೋಽದ್ಯ ಭವತಶ್ಚರಣಾರವಿಂದಂ
ಪಶ್ಯಾಮಿ ರಾಮ ತಮಸಃ ಪರತಃ ಸ್ಥಿತಸ್ಯ ।
ದೃಗ್ರೂಪತಸ್ತ್ವಮಸತಾಮವಿಗೋಚರೋಽಪಿ
ತ್ವನ್ಮಂತ್ರಪೂತಹೃದಯೇಷು ಸದಾ ಪ್ರಸನ್ನಃ ॥

ಅನುವಾದ

ಹೇ ರಾಮಾ! ಕತ್ತಲೆಯ ಆಚೆಗಿರುವ ನಿನ್ನ ಪಾದಾರವಿಂದಗಳನ್ನು ನಾನು ಈಗ ಪ್ರತ್ಯಕ್ಷವಾಗಿ ನೋಡುತ್ತಿರುವೆನು. ಸದಾ ಸಾಕ್ಷಿರೂಪನಾದ ನೀನು ಅಜ್ಞರಿಗೆ ಎಂದೆಂದಿಗೂ ಕಂಡುಬರದಿದ್ದರೂ ನಿನ್ನ ಮಂತ್ರಜಪದಿಂದ ಪವಿತ್ರರಾದವರ ಹೃದಯದಲ್ಲಿ ಪ್ರಸನ್ನನಾಗಿ ದರ್ಶನಕೊಡವೆ. ॥31॥

(ಶ್ಲೋಕ-32)

ಮೂಲಮ್

ಪಶ್ಯಾಮಿ ರಾಮ ತವ ರೂಪಮರೂಪಿಣೋಽಪಿ
ಮಾಯಾವಿಡಂಬನಕೃತಂ ಸುಮನುಷ್ಯವೇಷಮ್ ।
ಕಂದರ್ಪಕೋಟಿಸುಭಗಂ ಕಮನೀಯಚಾಪ -
ಬಾಣಂ ದಯಾರ್ದ್ರಹೃದಯಂ ಸ್ಮಿತಚಾರುವಕ್ತ್ರಮ್ ॥

ಅನುವಾದ

ಹೇ ರಾಮಚಂದ್ರಾ! ರೂಪರಹಿತನೇ ಆಗಿರುವ ನಿನ್ನನ್ನು ನಾನು ಈಗ ತನ್ನ ಮಾಯೆಯಿಂದಲೇ ಧರಿಸಿದ ಮನುಷ್ಯ ರೂಪದಿಂದ ನೋಡುತ್ತಿದ್ದೇನೆ. ನಿನ್ನ ಸ್ವರೂಪವು ಕೋಟಿ ಮನ್ಮಥರ ಲಾವಣ್ಯಕ್ಕೆ ಸಮವಾದ ಸೌಂದರ್ಯಯುಕ್ತವೂ ರಮಣೀಯವಾದ ಧನುರ್ಬಾಣಗಳನ್ನು ಧರಿಸಿರುವ, ದಯೆಯಿಂದ ಕೂಡಿದ ಅಂತಃಕರಣವುಳ್ಳದ್ದು, ಮುಗುಳು ನಗೆಯಿಂದ ಕೂಡಿದ ಸುಂದರ ಮುಖವುಳ್ಳದ್ದು ಆಗಿದೆ. ॥32॥

(ಶ್ಲೋಕ-33)

ಮೂಲಮ್

ಸೀತಾಸಮೇತಮಜಿನಾಂಬರಮಪ್ರಧೃಷ್ಯಂ
ಸೌಮಿತ್ರಿಣಾ ನಿಯತಸೇವಿತಪಾದಪದ್ಮಮ್ ।
ನೀಲೋತ್ಸಲದ್ಯುತಿಮನಂತಗುಣಂ ಪ್ರಶಾಂತಂ
ಮದ್ಭಾಗಧೇಯಮನಿಶಂ ಪ್ರಣಮಾಮಿ ರಾಮಮ್ ॥

ಅನುವಾದ

ಸೀತಾ ಸಮೇತನಾಗಿಯೂ, ಜಿಂಕೆಯ ಚರ್ಮವನ್ನು ಧರಿಸಿದವನಾಗಿ, ಅಜೇಯನಾಗಿರುವ ಮತ್ತು ಲಕ್ಷ್ಮಣನಿಂದ ಸದಾಕಾಲವು ಸೇವಿತವಾದ ಚರಣಗಳುಳ್ಳವನೂ, ಕನ್ನೈದಿಲೆಯಂತೆ ಕಾಂತಿಯುಳ್ಳವನೂ, ಅನಂತ ಗುಣಪರಿಪೂರ್ಣನಾದ, ಪ್ರಶಾಂತನಾದ, ನನ್ನ ಭಾಗ್ಯದೇವತೆಯಾದ ಶ್ರೀರಾಮನಾದ ನಿನ್ನನ್ನು ಅಹರ್ನಿಶಿ ನಮಸ್ಕರಿಸುತ್ತೇನೆ. ॥33॥

(ಶ್ಲೋಕ-34)

ಮೂಲಮ್

ಜಾನಂತು ರಾಮ ತವ ರೂಪಮಶೇಷದೇಶ-
ಕಾಲಾದ್ಯುಪಾಧಿರಹಿತಂ ಘನಚಿತ್ಪ್ರಕಾಶಮ್ ।
ಪ್ರತ್ಯಕ್ಷತೋಽದ್ಯ ಮಮ ಗೋಚರಮೇತದೇವ
ರೂಪಂ ವಿಭಾತು ಹೃದಯೇ ನ ಪರಂ ವಿಕಾಂಕ್ಷೇ ॥

ಅನುವಾದ

ಹೇ ರಘುನಂದನಾ! ನಿನ್ನ ಸ್ವರೂಪವು ದೇಶ, ಕಾಲ, ಮುಂತಾದ ಉಪಾಧಿಗಳಿಂದ ರಹಿತವಾಗಿಯೂ, ಅಖಂಡ ಚಿತ್ಪ್ರಕಾಶರೂಪವಾಗಿಯೂ ಇರುವುದೆಂದು ಜ್ಞಾನಿಗಳು ತಿಳಿದಿರುವರು. ಅವರು ಬೇಕಾದರೆ ಹಾಗೇ ತಿಳಿಯಲಿ. ಆದರೆ ನನಗೆ ಮಾತ್ರ ಎದುರಿಗೆ ಕಾಣಿಸುತ್ತಿರುವ ಸಗುಣರೂಪವೇ ನನ್ನ ಹೃದಯದಲ್ಲಿ ಸದಾ ಬೆಳಗುತ್ತಿರಲಿ; ಇದಲ್ಲದೆ ಮತ್ತೇನನ್ನೂ ನಾನು ಬಯಸುವುದಿಲ್ಲ.’’॥34॥

(ಶ್ಲೋಕ-35)

ಮೂಲಮ್

ಇತ್ಯೇವಂ ಸ್ತುವತಸ್ತಸ್ಯ ರಾಮಃ ಸಸ್ಮಿತಮಬ್ರವೀತ್ ।
ಮುನೇ ಜಾನಾಮಿ ತೇ ಚಿತ್ತಂ ನಿರ್ಮಲಂ ಮದುಪಾಸನಾತ್ ॥

ಅನುವಾದ

ಈ ರೀತಿಯಾಗಿ ಸ್ತೋತ್ರಮಾಡುತ್ತಿರುವ ಆ ಸುತೀಕ್ಷ್ಣನನ್ನು ಕುರಿತು ಶ್ರೀರಾಮನು ಮುಗುಳುನಗೆಯಿಂದ ಇಂತೆಂದನು - ‘‘ಹೇ ಮುನಿವರ್ಯನೆ! ನನ್ನ ಚಿಂತನೆಯಿಂದ ನಿನ್ನ ಮನಸ್ಸು ನಿರ್ಮಲವಾಗಿರುವುದನ್ನು ನಾನು ಬಲ್ಲೆನು. ॥35॥

(ಶ್ಲೋಕ-36)

ಮೂಲಮ್

ಅತೋಽಹಮಾಗತೋ ದ್ರಷ್ಟುಂ ಮದೃತೇ ನಾನ್ಯಸಾಧನಮ್ ।
ಮನ್ಮಂತ್ರೋಪಾಸಕಾ ಲೋಕೇ ಮಾಮೇವ ಶರಣಂ ಗತಾಃ ॥

(ಶ್ಲೋಕ-37)

ಮೂಲಮ್

ನಿರಪೇಕ್ಷಾ ನಾನ್ಯಗತಾಸ್ತೇಷಾಂ ದೃಶ್ಯೋಹಮನ್ವಹಮ್ ।
ಸ್ತೋತ್ರಮೇತತ್ಪಠೇದ್ಯಸ್ತು ತ್ವತ್ಕೃತಂ ಮತ್ಪ್ರಿಯಂ ಸದಾ ॥

(ಶ್ಲೋಕ-38)

ಮೂಲಮ್

ಸದ್ಭಕ್ತಿರ್ಮೇ ಭವೇತ್ತಸ್ಯ ಜ್ಞಾನಂ ಚ ವಿಮಲಂ ಭವೇತ್ ।
ತ್ವಂ ಮಮೋಪಾಸನಾದೇವ ವಿಮುಕ್ತೋಽಸೀಹ ಸರ್ವತಃ ॥

ಅನುವಾದ

ಅನನ್ಯವಾಗಿ ನನ್ನ ಉಪಾಸನೆಯನ್ನೆ ನೀನು ಮಾಡುತ್ತಿರುವೆ, ಆದ್ದರಿಂದ ನಿನ್ನನ್ನು ನೋಡಲು ನಾನು ಬಂದಿದ್ದೇನೆ. ಲೋಕದಲ್ಲಿ ಯಾರು ನನ್ನ ಮಂತ್ರೋಪಾಸನೆಯನ್ನು ಮಾಡುತ್ತಾ ನನ್ನನ್ನೇ ಶರಣು ಹೊಂದಿರುವರೋ, ಹಾಗೂ ಯಾವ ಬಯಕೆಗಳಿಲ್ಲದವರಾಗಿ ಅನ್ಯಗತಿಯಿಲ್ಲದವರಾಗಿರುವರೋ ಅಂಥವರಿಗೆ ನಾನು ಯಾವಾಗಲೂ ಕಾಣಿಸಿಕೊಳ್ಳುವೆನು. ನನಗೆ ಪ್ರಿಯವಾದ ನೀನು ಗೈದಿರುವ ಈ ಸ್ತೋತ್ರವನ್ನು ಸದಾ ಪಠಿಸುವವರಿಗೆ ಸದ್ಭಕ್ತಿಯೂ, ವಿಮಲಜ್ಞಾನವೂ ಉಂಟಾಗುವುದು. ನೀನು ಕೇವಲ ನನ್ನ ಉಪಾಸನೆಯನ್ನು ಮಾಡಿರುವುದರಿಂದಲೇ ಎಲ್ಲ ವಿಧವಾದ ಸಂಸಾರ ಬಂಧನದಿಂದ ಬಿಡುಗಡೆಹೊಂದಿ ಮುಕ್ತನಾಗಿರುವೆ. ॥36-38॥

(ಶ್ಲೋಕ-39)

ಮೂಲಮ್

ದೇಹಾಂತೇ ಮಮ ಸಾಯುಜ್ಯಂ ಲಪ್ಸ್ಯಸೇ ನಾತ್ರ ಸಂಶಯಃ ।
ಗುರುಂ ತೇ ದ್ರಷ್ಟುಮಿಚ್ಛಾಮಿ ಹ್ಯಗಸ್ತ್ಯಂ ಮುನಿನಾಯಕಮ್ ।
ಕಿಂಚಿತ್ಕಾಲಂ ತತ್ರ ವಸ್ತುಂ ಮನೋ ಮೇ ತ್ವರಯತ್ಯಲಮ್ ॥

ಅನುವಾದ

ದೇಹವು ಬಿದ್ದ ಬಳಿಕ ನನ್ನ ಸಾಯುಜ್ಯವನ್ನು ಸೇರಿ ಮುಕ್ತಿಯನ್ನೇ ಪಡೆಯುವೆ, ಇದರಲ್ಲಿ ಸಂಶಯವಿಲ್ಲ. ಮುನಿಗಳೊಡೆಯನೂ, ನಿನ್ನ ಗುರುಗಳೂ ಆದ ಅಗಸ್ತ್ಯರನ್ನು ನಾನು ನೋಡಲಿಚ್ಛಿಸುತ್ತೇನೆ. ಕೆಲವು ಕಾಲ ಅಲ್ಲಿ ವಾಸಮಾಡಬೇಕೆಂದು ನನ್ನ ಮನಸ್ಸು ತವಕ ಪಡುತ್ತಿದೆ. ॥ 39॥

(ಶ್ಲೋಕ-40)

ಮೂಲಮ್

ಸುತೀಕ್ಷ್ಣೋಪಿ ತಥೇತ್ಯಾಹ ಶ್ವೋ ಗಮಿಷ್ಯಸಿ ರಾಘವ ।
ಅಹಮಪ್ಯಾಗಮಿಷ್ಯಾಮಿ ಚಿರಾದ್ದೃಷ್ಟೋ ಮಹಾಮುನಿಃ ॥

(ಶ್ಲೋಕ-41)

ಮೂಲಮ್

ಅಥ ಪ್ರಭಾತೇ ಮುನಿನಾ ಸಮೇತೋ
ರಾಮಃ ಸಸೀತಃ ಸಹ ಲಕ್ಷ್ಮಣೇನ ।
ಅಗಸ್ತ್ಯಸಂಭಾಷಣಲೋಲಮಾನಸಃ
ಶನೈರಗಸ್ತ್ಯಾನುಜಮಂದಿರಂ ಯಯೌ ॥

ಅನುವಾದ

ಸುತೀಕ್ಷ್ಣನೂ ಕೂಡ ‘‘ಹಾಗೇ ಆಗಲಿ; ಹೇ ರಾಘವಾ! ಅಲ್ಲಿಗೆ ನಾಳೆ ಹೋಗೋಣವಂತೆ; ನಾನೂ ಬರುತ್ತೇನೆ. ನಾನು ಮಹಾಮುನಿಯನ್ನು ಕಂಡು ಬಹಳ ದಿನಗಳಾದುವು. ಪ್ರಾತಃಕಾಲವಾಗುತ್ತಲೇ ಸೀತಾ-ಲಕ್ಷ್ಮಣಸಹಿತ ಶ್ರೀರಾಮಚಂದ್ರನು ಸುತೀಕ್ಷ್ಮಣರನ್ನು ಜೊತೆಗೂಡಿ ಅಗಸ್ತ್ಯರೊಡನೆ ವಾರ್ತಾಲಾಪ ಮಾಡುವ ಮನಸ್ಸುಳ್ಳವನಾಗಿ ಬೇಗನೇ ಅಗಸ್ತ್ಯರ ತಮ್ಮ ಅಗ್ನಿಜಿಹ್ವ ಮುನಿಯ ಆಶ್ರಮದ ಕಡೆಗೆ ಪಯಣ ಬೆಳೆಸಿದನು. ॥40-41॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.