[ಮೊದಲನೆಯ ಸರ್ಗ]
ಭಾಗಸೂಚನಾ
ವಿರಾಧ ವಧೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಅಥ ತತ್ರ ದಿನಂ ಸ್ಥಿತ್ವಾ ಪ್ರಭಾತೇ ರಘುನಂದನಃ ।
ಸ್ನಾತ್ವಾ ಮುನಿಂ ಸಮಾಮಂತ್ರ್ಯ ಪ್ರಯಾಣಾಯೋಪಚಕ್ರಮೇ ॥
(ಶ್ಲೋಕ-2)
ಮೂಲಮ್
ಮುನೇ ಗಚ್ಛಾಮಹೇ ಸರ್ವೇ ಮುನಿಮಂಡಲಮಂಡಿತಮ್ ।
ವಿಪಿನಂ ದಂಡಕಂ ಯತ್ರ ತ್ವಮಾಜ್ಞಾತುಮಿಹಾರ್ಹಸಿ ॥
ಅನುವಾದ
ಶ್ರೀಮಹಾದೇವನಿಂತೆಂದನು — ಎಲೈಗೌರಿ! ಶ್ರೀರಘುನಂದನನು ಅಲ್ಲಿ ಒಂದು ದಿನ ಉಳಿದು, ಮರುದಿನ ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಅತ್ರಿ ಮುನಿವರರ ಸಮ್ಮತಿಯಿಂದ ಹೊರಡಲನುವಾಗಿ ‘‘ಮಹರ್ಷಿಯೆ! ನಾವೆಲ್ಲರೂ ಋಷಿಗಳ ಗುಂಪಿನಿಂದ ಸುಶೋಭಿತವಾದ ದಂಡಕಾರಣ್ಯಕ್ಕೆ ಹೋಗಲು ಬಯಸುತ್ತೇವೆ. ನೀವು ನಮಗೆ ಅಪ್ಪಣೆ ಕೊಡಬೇಕು. ॥1-2॥
(ಶ್ಲೋಕ-3)
ಮೂಲಮ್
ಮಾರ್ಗಪ್ರದರ್ಶನಾರ್ಥಾಯ ಶಿಷ್ಯಾನಾಜ್ಞಪ್ತುಮರ್ಹಸಿ ।
ಶ್ರುತ್ವಾ ರಾಮಸ್ಯ ವಚನಂ ಪ್ರಹಸ್ಯಾತ್ರಿರ್ಮಹಾಯಶಾಃ ।
ಪ್ರಾಹ ತತ್ರ ರಘುಶ್ರೇಷ್ಠಂ ರಾಮ ರಾಮ ಸುರಾಶ್ರಯ ॥
(ಶ್ಲೋಕ-4)
ಮೂಲಮ್
ಸರ್ವಸ್ಯ ಮಾರ್ಗದ್ರಷ್ಟಾ ತ್ವಂ ತವ ಕೋ ಮಾರ್ಗದರ್ಶಕಃ ।
ತಥಾಪಿ ದರ್ಶಯಿಷ್ಯಂತಿ ತವ ಲೋಕಾನುಸಾರಿಣಃ ॥
ಅನುವಾದ
ಹಾಗೂ ನಮಗೆ ದಾರಿಯನ್ನು ತೋರಿಸುವುದಕ್ಕಾಗಿ ಶಿಷ್ಯರಿಗೆ ಆಜ್ಞೆ ಕೊಡಬೇಕು’’ ಎಂದು ವಿನಂತಿಸಿಕೊಂಡನು. ಶ್ರೀರಾಮನ ಈ ಮಾತನ್ನು ಕೇಳಿ ಮಹಾಮಹಿಮರಾದ ಅತ್ರಿಮುನಿಗಳು ನಗುತ್ತಾ ಹೇಳುತ್ತಾರೆ ‘‘ಹೇ ರಘುಶ್ರೇಷ್ಠ ರಾಮಾ! ದೇವತೆಗಳಿಗೆ ಆಶ್ರಯ ಸ್ವರೂಪನಾದ ನೀನೇ ಎಲ್ಲರಿಗೂ ಮಾರ್ಗ ದರ್ಶಕನಾಗಿರುವೆ. ನಿನಗೆ ದಾರಿ ತೋರುವವರು ಯಾರು? ಹೀಗಿದ್ದರೂ ಲೋಕವ್ಯವಹಾರವನ್ನು ಅನುಸರಿಸುತ್ತಿರುವೆ. ಆದ್ದರಿಂದ ನನ್ನ ಶಿಷ್ಯರು ನಿನಗೆ ದಾರಿ ತೋರಿಸಲು ಬರುವರು.’’ ॥3-4॥
(ಶ್ಲೋಕ-5)
ಮೂಲಮ್
ಇತಿ ಶಿಷ್ಯಾನ್ಸಮಾದಿಶ್ಯ ಸ್ವಯಂ ಕಿಂಚಿತ್ತಮನ್ವಗಾತ್ ।
ರಾಮೇಣ ವಾರಿತಃ ಪ್ರೀತ್ಯಾ ಅತ್ರಿಃ ಸ್ವಭವನಂ ಯಯೌ ॥
ಅನುವಾದ
ಅನಂತರ ಶಿಷ್ಯರಿಗೆ ಅಪ್ಪಣೆ ಮಾಡಿ, ಅತ್ರಿಮುನಿಗಳೂ ಕೂಡ ಸ್ವಲ್ಪದೂರ ಶ್ರೀರಾಮನನ್ನು ಅನುಸರಿಸಿ ನಡೆದರು. ಆಗ ರಾಮನು ಪ್ರೀತಿಯಿಂದ ಸ್ವಾಮಿ! ಸಾಕು, ತಾವು ಇನ್ನು ಹಿಂದಿರುಗಿ ಹೋಗಿರಿ ಎಂದು ಅವರನ್ನು ತಡೆದಾಗ ಅತ್ರಿಮುನಿಗಳು ತಮ್ಮ ಆಶ್ರಮಕ್ಕೆ ಮರಳಿದರು. ॥5॥
(ಶ್ಲೋಕ-6)
ಮೂಲಮ್
ಕ್ರೋಶಮಾತ್ರಂ ತತೋ ಗತ್ವಾ ದದರ್ಶ ಮಹತೀಂ ನದೀಮ್ ।
ಅತ್ರೇಃ ಶಿಷ್ಯಾನುವಾಚೇದಂ ರಾಮೋ ರಾಜೀವಲೋಚನಃ ॥
ಅನುವಾದ
ಒಂದು ಕ್ರೋಶದಷ್ಟು ದೂರ ಸಾಗಿದ ಮೇಲೆ ಶ್ರೀರಾಮನು ಒಂದು ದೊಡ್ಡ ನದಿಯನ್ನು ಕಂಡನು. ರಾಜೀವನೇತ್ರನಾದ ಶ್ರೀರಾಮನು ಅತ್ರಿ ಋಷಿಯ ಶಿಷ್ಯರನ್ನು ಕುರಿತು ಕೇಳಿದನು. ॥6॥
(ಶ್ಲೋಕ-7)
ಮೂಲಮ್
ನದ್ಯಾಃ ಸಂತರಣೇ ಕಶ್ಚಿದುಪಾಯೋ ವಿದ್ಯತೇ ನ ವಾ ।
ಊಚುಸ್ತೇ ವಿದ್ಯತೇ ನೌಕಾ ಸುದೃಢಾ ರಘುನಂದನ ॥
ಅನುವಾದ
‘‘ಹೇ ಬ್ರಹ್ಮಚಾರಿಗಳೇ! ಈ ನದಿಯನ್ನು ದಾಟಲು ಸಾಧನವೇನಾದರೂ ಇದೆಯೇ?’’ ಎಂದು ಕೇಳಿದಾಗ ಶಿಷ್ಯರೆಂದರು ‘‘ಹೇ ರಘುನಂದನಾ! ಇಲ್ಲಿ ಸದೃಢವಾದ ದೋಣಿಯೊಂದಿದೆ. ॥7॥
(ಶ್ಲೋಕ-8)
ಮೂಲಮ್
ತಾರಯಿಷ್ಯಾಮಹೇ ಯುಷ್ಮಾನ್ವಯಮೇವ ಕ್ಷಣಾದಿಹ ।
ತತೋ ನಾವಿ ಸಮಾರೋಪ್ಯ ಸೀತಾಂ ರಾಘವಲಕ್ಷ್ಮಣೌ ॥
(ಶ್ಲೋಕ-9)
ಮೂಲಮ್
ಕ್ಷಣಾತ್ಸಂತಾರಯಾಮಾಸುರ್ನದೀಂ ಮುನಿಕುಮಾರಕಾಃ ।
ರಾಮಾಭಿನಂದಿತಾಃ ಸರ್ವೇ ಜಗ್ಮುರತ್ರೇರಥಾಶ್ರಮಮ್ ॥
ಅನುವಾದ
ನಾವುಗಳು ಕ್ಷಣಮಾತ್ರದಲ್ಲಿ ನಿಮ್ಮನ್ನು ದಾಟಿಸುತ್ತೇವೆ’’ ಎಂದರು. ಅನಂತರ ಆ ದೋಣಿಯಲ್ಲಿ ಸೀತೆಯನ್ನು, ರಾಮಲಕ್ಷ್ಮಣರನ್ನು ಕುಳ್ಳಿರಿಸಿಕೊಂಡು ಮುನಿಕುಮಾರರು ಕ್ಷಣಮಾತ್ರದಲ್ಲಿ ನದಿಯನ್ನು ದಾಟಿಸಿದರು. ರಾಮನು ಅವರನ್ನು ಪ್ರಶಂಸಿಸಿದನು, ಮತ್ತೆ ಎಲ್ಲ ಶಿಷ್ಯರು ಅತ್ರಿಯ ಆಶ್ರಮಕ್ಕೆ ಹಿಂತಿರುಗಿದರು. ॥8-9॥
(ಶ್ಲೋಕ-10)
ಮೂಲಮ್
ತಾವೇತ್ಯ ವಿಪಿನಂ ಘೋರಂ ಝಿಲ್ಲೀಝಂಕಾರನಾದಿತಮ್ ।
ನಾನಾಮೃಗಗಣಾಕೀರ್ಣಂ ಸಿಂಹವ್ಯಾಘ್ರಾದಿಭೀಷಣಮ್ ॥
(ಶ್ಲೋಕ-11)
ಮೂಲಮ್
ರಾಕ್ಷಸೈರ್ಘೋರರೂಪೈಶ್ಚ ಸೇವಿತಂ ರೋಮಹರ್ಷಣಮ್ ।
ಪ್ರವಿಶ್ಯ ವಿಪಿನಂ ಘೋರಂ ರಾಮೋ ಲಕ್ಷ್ಮಣಮಬ್ರವೀತ್ ॥
ಅನುವಾದ
ಅಲ್ಲಿಂದ ಮುಂದೆ ಅವರು ಭಯಂಕರವಾದ ಕಾಡುಕೋಣಗಳ ಝೇಂಕಾರದಿಂದ ಪ್ರತಿಧ್ವನಿತವಾದ, ಹುಲಿ, ಸಿಂಹ, ಕರಡಿ ಮುಂತಾದ ಭಯವನ್ನುಂಟುಮಾಡುವ ಅನೇಕ ಮೃಗಗಳ ಗುಂಪುಗಳಿಂದ ತುಂಬಿದ್ದ, ಘೋರವಾದ ಮತ್ತು ರೋಮಾಂಚನವುಂಟು ಮಾಡುವ ಭಯಂಕರ ರೂಪಧಾರಿ ರಾಕ್ಷಸರುಗಳಿಂದ ಕೂಡಿದ ಗಹನವಾದ ಅಡವಿಯನ್ನು ಹೊಕ್ಕರು. ಆಗ ಶ್ರೀರಾಮಚಂದ್ರನು ಲಕ್ಷ್ಮಣನಲ್ಲಿ ಹೇಳುತ್ತಾನೆ — ॥10-11॥
(ಶ್ಲೋಕ-12)
ಮೂಲಮ್
ಇತಃ ಪರಂ ಪ್ರಯತ್ನೇನ ಗಂತವ್ಯಂ ಸಹಿತೇನ ಮೇ ।
ಧನುರ್ಗುಣೇನ ಸಂಯೋಜ್ಯ ಶರಾನಪಿ ಕರೇ ದಧತ್ ॥
(ಶ್ಲೋಕ-13)
ಮೂಲಮ್
ಅಗ್ರೇ ಯಾಸ್ಯಾಮ್ಯಹಂ ಪಶ್ಚಾತ್ತ್ವಮನ್ವೇಹಿ ಧನುರ್ಧರಃ ।
ಆವಯೋರ್ಮಧ್ಯಗಾ ಸೀತಾ ಮಾಯೇವಾತ್ಮಪರಾತ್ಮನೋಃ ॥
ಅನುವಾದ
‘‘ತಮ್ಮಾ! ಇಲ್ಲಿಂದ ಮುಂದೆ ನಾವಿಬ್ಬರೂ ತುಂಬಾ ಎಚ್ಚರಿಕೆಯಿಂದ ಮುಂದರಿಯಬೇಕು. ನಾನು ಧನುಷ್ಯವನ್ನು ಹೆದೆಯೇರಿಸಿ, ಕೈಯಲ್ಲಿ ಬಾಣವನ್ನು ಹಿಡಿದುಕೊಂಡು ಮುಂದೆ ಮುಂದೆ ಸಾಗುವೆ, ನೀನು ಧನುಷ್ಪಾಣಿಯಾಗಿ ಹಿಂದಿನಿಂದ ಬಾ. ನಮ್ಮಿಬ್ಬರ ನಡುವೆ-ಜೀವ-ಪರಮಾತ್ಮರ ನಡುವೆ ಮಾಯೆ ಇರುವಂತೆ ಸೀತೆಯು ನಡೆಯಲಿ. ॥12-13॥
(ಶ್ಲೋಕ-14)
ಮೂಲಮ್
ಚಕ್ಷುಶ್ಚಾರಯ ಸರ್ವತ್ರ ದೃಷ್ಟಂ ರಕ್ಷೋಭಯಂ ಮಹತ್ ।
ವಿದ್ಯತೇ ದಂಡಕಾರಣ್ಯೇ ಶ್ರುತಪೂರ್ವಮರಿಂದಮ ॥
ಅನುವಾದ
ಹೇ ಶತ್ರುನಾಶಕನೆ! ಎಲ್ಲ ಕಡೆಗಳಲ್ಲೂ ದೃಷ್ಟಿಯನ್ನು ಹಾಯಿಸುತ್ತಿರು. ದುಷ್ಟ ರಾಕ್ಷಸರ ಕಾಟವು ಇಲ್ಲಿ ಹೆಚ್ಚಾಗಿದೆ ಎಂದು ನಾನು ಹಿಂದೆ ಕೇಳಿರುವೆ.’’ ॥14॥
(ಶ್ಲೋಕ-15)
ಮೂಲಮ್
ಇತ್ಯೇವಂ ಭಾಷಮಾಣೌ ತೌ ಜಗ್ಮತುಃ ಸಾರ್ಧಯೋಜನಮ್ ।
ತತ್ರೈಕಾ ಪುಷ್ಕರಿಣ್ಯಾಸ್ತೇ ಕಹ್ಲಾರಕುಮುದೋತ್ಪಲೈಃ ॥
(ಶ್ಲೋಕ-16)
ಮೂಲಮ್
ಅಂಬುಜೈಃ ಶೀತಲೋದೇನ ಶೋಭಮಾನಾ ವ್ಯದೃಶ್ಯತ ।
ತತ್ಸಮೀಪಮಥೋ ಗತ್ವಾ ಪೀತ್ವಾ ತತ್ಸಲಿಲಂ ಶುಭಮ್ ॥
ಅನುವಾದ
ಹೀಗೆ ಮಾತನಾಡುತ್ತಾ ಅವರುಗಳು ಒಂದೂವರೆ ಯೋಜನದಷ್ಟು ದೂರ ಹೋದರು. ಅಲ್ಲಿ ಸುಂದರವಾದ ಒಂದು ಕೊಳವಿತ್ತು. ಅದು ಕಲ್ಹಾರ, ಕುಮುದ, ನೈದಿಲೆ, ಕಮಲ ಮುಂತಾದ ಹೂವುಗಳಿಂದ ಕೂಡಿದ್ದು ತಂಪಾದ ನೀರಿನಿಂದ ಶೋಭಾಯಮಾನವಾಗಿತ್ತು. ಅವರುಗಳು ಸರೋವರದ ಸಮೀಪಕ್ಕೆ ಹೋಗಿ ನೀರನ್ನು ಕುಡಿದರು. ॥15-16॥
(ಶ್ಲೋಕ-17)
ಮೂಲಮ್
ಊಷುಸ್ತೇ ಸಲಿಲಾಭ್ಯಾಶೇ ಕ್ಷಣಂ ಛಾಯಾಮುಪಾಶ್ರಿತಾಃ ।
ತತೋ ದದೃಶುರಾಯಾಂತಂ ಮಹಾಸತ್ತ್ವಂ ಭಯಾನಕಮ್ ॥
ಅನುವಾದ
ಅಲ್ಲೇ ತೀರದಲ್ಲಿ ಕ್ಷಣಕಾಲ ಮರದ ನೆರಳಿನಲ್ಲಿ ವಿಶ್ರಮಿಸಿದರು. ಆಗಲೇ ಬಲಿಷ್ಠನಾದ, ಭಯಾನಕ ರಾಕ್ಷಸನೋರ್ವನು ತಮ್ಮತ್ತ ಬರುವುದನ್ನು ನೋಡಿದರು. ॥17॥
(ಶ್ಲೋಕ-18)
ಮೂಲಮ್
ಕರಾಲದಂಷ್ಟ್ರವದನಂ ಭೀಷಯಂತಂ ಸ್ವಗರ್ಜಿತೈಃ ।
ವಾಮಾಂಸೇ ನ್ಯಸ್ತಶೂಲಾಗ್ರಗ್ರಥಿತಾನೇಕಮಾನುಷಮ್ ॥
ಅನುವಾದ
ಅವನ ಮುಖವು ಕೋರೆದಾಡೆಗಳನ್ನು ಚಾಚಿಕೊಂಡು, ಭಯಂಕರ ಗರ್ಜನೆಯಿಂದ ಎಲ್ಲರನ್ನು ಹೆದರಿಸುತ್ತಾ, ಎಡದ ಭುಜದ ಮೇಲೆ ಅನೇಕ ಮನುಷ್ಯರ ದೇಹಗಳನ್ನು ಪೋಣಿಸಿಕೊಂಡು ತ್ರಿಶೂಲವೊಂದನ್ನು ಏರಿಸಿಕೊಂಡಿದ್ದನು. ॥18॥
(ಶ್ಲೋಕ-19)
ಮೂಲಮ್
ಭಕ್ಷಯಂತಂ ಗಜವ್ಯಾಘ್ರಮಹಿಷಂ ವನಗೋಚರಮ್ ।
ಜ್ಯಾರೋಪಿತಂ ಧನುರ್ಧೃತ್ವಾ ರಾಮೋ ಲಕ್ಷ್ಮಣಮಬ್ರವೀತ್ ॥
ಅನುವಾದ
ಕಾಡಿನಲ್ಲಿ ಕಂಡುಬರುವ ಆನೆ, ಹುಲಿ, ಕಾಡೆಮ್ಮೆಗಳನ್ನು ತಿನ್ನುತ್ತಾ ಬರುತ್ತಿದ್ದನು. ಅವನನ್ನು ನೋಡಿ ಶ್ರೀರಾಮಚಂದ್ರನು ಹೆದೆಯೇರಿಸಿದ ಬಿಲ್ಲನ್ನು ಎತ್ತಿಕೊಂಡು ಲಕ್ಷ್ಮಣನ ಬಳಿ ಇಂತೆಂದನು. ॥19॥
(ಶ್ಲೋಕ-20)
ಮೂಲಮ್
ಪಶ್ಯ ಭ್ರಾತರ್ಮಾಹಾಕಾಯೋ ರಾಕ್ಷಸೋಽಯಮುಪಾಗತಃ ।
ಆಯಾತ್ಯಭಿಮುಖಂ ನೋಽಗ್ರೇ ಭೀರೂಣಾಂ ಭಯಮಾವಹನ್ ॥
(ಶ್ಲೋಕ-21)
ಮೂಲಮ್
ಸಜ್ಜೀಕೃತಧನುಸ್ತಿಷ್ಠ ಮಾ ಭೈರ್ಜನಕನಂದಿನಿ ।
ಇತ್ಯುಕ್ತ್ವಾ ಬಾಣಮಾದಾಯ ಸ್ಥಿತೋ ರಾಮ ಇವಾಚಲಃ ॥
ಅನುವಾದ
‘‘ಸಹೋದರಾ! ಅಂಜುಬುರುಕರಿಗೆ ಹೆದರಿಕೆಯನ್ನುಂಟುಮಾಡುತ್ತಾ ಉಗ್ರರೂಪೀ ಮಹಾ ಕಾಯದ ರಾಕ್ಷಸನು ಬರುತ್ತಿದ್ದಾನೆ. ನೀನು ಬಿಲ್ಲನ್ನು ಸಿದ್ಧಗೊಳಿಸಿಟ್ಟುಕೊ. ಎಲೈ ಜನಕಪುತ್ರಿಯೇ! ಹೆದರಬೇಡ.’’ ಹೀಗೆಂದು ಹೇಳುತ್ತಾ ಬಾಣವನ್ನು ಕೈಗೆತ್ತಿಕೊಂಡು ರಾಮನು ಬೆಟ್ಟದಂತೆ ಸ್ಥಿರವಾಗಿ ನಿಂತುಬಿಟ್ಟನು. ॥20-21॥
(ಶ್ಲೋಕ-22)
ಮೂಲಮ್
ಸ ತು ದೃಷ್ಟ್ವಾ ರಮಾನಾಥಂ ಲಕ್ಷ್ಮಣಂ ಜಾನಕೀಂ ತದಾ ।
ಅಟ್ಟಹಾಸಂ ತತಃ ಕೃತ್ವಾ ಭೀಷಯನ್ನಿದಮಬ್ರವೀತ್ ॥
(ಶ್ಲೋಕ-23)
ಮೂಲಮ್
ಕೌ ಯುವಾಂ ಬಾಣತೂಣೀರಜಟಾವಲ್ಕಲಧಾರಿಣೌ ।
ಮುನಿವೇಷಧರೌ ಬಾಲೌ ಸ್ತ್ರೀಸಹಾಯೌ ಸುದುರ್ಮದೌ ॥
ಅನುವಾದ
ಬಂದಂತಹ ರಾಕ್ಷಸನು ಶ್ರೀರಾಮ ಲಕ್ಷ್ಮಣ ಸೀತೆ ಇವರನ್ನು ನೋಡಿ ಅಟ್ಟಹಾಸದಿಂದ ನಕ್ಕು ಹೆದರಿಸುತ್ತಾ ಹೀಗೆಂದನು ‘‘ಎಲೈ ಬಾಲಕರೆ ಬಾಣ-ಬತ್ತಳಿಕೆ, ಜಟಾವಲ್ಕಲಧಾರಿಯಾಗಿ ಮುನಿವೇಷವನ್ನು ಧರಿಸಿರುವ, ಇನ್ನೂ ಸಣ್ಣ ಪ್ರಾಯದವರಾದ ನೀವು ಯಾರು? ಜೊತೆಗೆ ಓರ್ವ ಸೀಯಿರುವಳು. ಪರಾಕ್ರಮ ಶಾಲಿಗಳಾದ ನೀವಿಬ್ಬರು ಯಾರು? ॥22-23॥
(ಶ್ಲೋಕ-24)
ಮೂಲಮ್
ಸುಂದರೌ ಬತ ಮೇ ವಕ್ತ್ರಪ್ರವಿಷ್ಟಕವಲೋಪಮೌ ।
ಕಿಮರ್ಥಮಾಗತೌ ಘೋರಂ ವನಂ ವ್ಯಾಲನಿಷೇವಿತಮ್ ॥
ಅನುವಾದ
ನೀವು ತುಂಬಾ ಸುಂದರರಾಗಿದ್ದೀರಿ. ನನ್ನ ಮುಖದ ಗ್ರಾಸದಂತಿರುವ ನೀವು, ಕ್ರೂರ ಪ್ರಾಣಿಗಳಿಂದ ಕೂಡಿದ ಈ ಭಯಂಕರ ಕಾಡಿಗೆ ಏಕೆ ಬಂದಿರುವಿರಿ? ॥24॥
(ಶ್ಲೋಕ-25)
ಮೂಲಮ್
ಶ್ರುತ್ವಾ ರಕ್ಷೋವಚೋ ರಾಮಃ ಸ್ಮಯಮಾನ ಉವಾಚ ತಮ್ ।
ಅಹಂ ರಾಮಸ್ತ್ವಯಂ ಭ್ರಾತಾ ಲಕ್ಷ್ಮಣೋ ಮಮ ಸಮ್ಮತಃ ॥
(ಶ್ಲೋಕ-26)
ಮೂಲಮ್
ಏಷಾ ಸೀತಾ ಮಮ ಪ್ರಾಣವಲ್ಲಭಾ ವಯಮಾಗತಾಃ ।
ಪಿತೃವಾಕ್ಯಂ ಪುರಸ್ಕೃತ್ಯ ಶಿಕ್ಷಣಾರ್ಥಂ ಭವಾದೃಶಾಮ್ ॥
ಅನುವಾದ
ರಾಕ್ಷಸನ ಮಾತುಗಳನ್ನು ಕೇಳಿದ ಶ್ರೀರಾಮನು ಮುಗುಳ್ನುಗುತ್ತಾ ಹೀಗೆಂದನು ‘‘ನಾನು ಶ್ರೀರಾಮನು, ಇವನು ನನಗೆ ಪ್ರೀತಿಪಾತ್ರನಾದ ಸೋದರ ಲಕ್ಷ್ಮಣನು. ಇವಳು ನನ್ನ ಪ್ರಾಣವಲ್ಲಭೆಯಾದ ಸೀತೆಯು. ತಂದೆಯ ಮಾತನ್ನು ಗೌರವಿಸಿ ನಾವು ನಿನ್ನಂಥವರನ್ನು ತಿದ್ದುವುದಕ್ಕಾಗಿ ಇಲ್ಲಿಗೆ ಬಂದಿರುತ್ತೇವೆ.’’ ॥25-26॥
(ಶ್ಲೋಕ-27)
ಮೂಲಮ್
ಶ್ರುತ್ವಾ ತದ್ರಾಮವಚನಮಟ್ಟಹಾಸಮಥಾಕರೋತ್ ।
ವ್ಯಾದಾಯ ವಕ್ತ್ರಂ ಬಾಹುಭ್ಯಾಂ ಶೂಲಮಾದಾಯ ಸತ್ವರಃ ॥
ಅನುವಾದ
ರಾಮಚಂದ್ರನ ಈ ವಚನಗಳನ್ನು ಕೇಳಿದ ಆ ರಾಕ್ಷಸನು ಅಟ್ಟಹಾಸದಿಂದ ನಗುತ್ತಾ ಬಾಯನ್ನು ತೆರೆದುಕೊಂಡು ಎರಡೂ ಕೈಗಳಿಂದಲೂ ಶೂಲವನ್ನೆತ್ತಿಕೊಂಡು ಹೀಗೆಂದನು — ॥27॥
(ಶ್ಲೋಕ-28)
ಮೂಲಮ್
ಮಾಂ ನ ಜಾನಾಸಿ ರಾಮ ತ್ವಂ ವಿರಾಧಂ ಲೋಕವಿಶ್ರುತಮ್ ।
ಮದ್ಭಯಾನ್ಮುನಯಃ ಸರ್ವೇ ತ್ಯಕ್ತ್ವಾ ವನಮಿತೋ ಗತಾಃ ॥
(ಶ್ಲೋಕ-29)
ಮೂಲಮ್
ಯದಿ ಜೀವಿತುಮಿಚ್ಛಾಸ್ತಿ ತ್ಯಕ್ತ್ವಾ ಸೀತಾಂ ನಿರಾಯುಧೌ ।
ಪಲಾಯತಂ ನ ಚೇಚ್ಛೀಘ್ರಂ ಭಕ್ಷಯಾಮಿ ಯುವಾಮಹಮ್ ॥
ಅನುವಾದ
‘‘ಎಲೈ ರಾಮನೆ! ಲೋಕಪ್ರಸಿದ್ಧನಾದ ವಿರಾಧನೆಂಬುವವನೇ ನಾನು ಎಂಬುದನ್ನು ತಿಳಿಯೆಯಾ? ನನ್ನ ಭಯದಿಂದಲೇ ಋಷಿಗಳೆಲ್ಲರೂ ಈ ಕಾಡನ್ನು ಬಿಟ್ಟು ಓಡಿ ಹೋಗಿದ್ದಾರೆ. ನಿಮ್ಮಿಬ್ಬರಿಗೂ ಬದುಕುವ ಆಸೆಯೇನಾದರೂ ಇದ್ದರೆ, ಆಯುಧಗಳನ್ನು ಬಿಸುಟು, ಸೀತೆಯನ್ನು ಇಲ್ಲಿಯೇ ಬಿಟ್ಟು ಓಡಿ ಹೋಗಿರಿ. ಹಾಗಿಲ್ಲವಾದರೆ ನಿಮ್ಮಿಬ್ಬರನ್ನು ತಿಂದುಬಿಡುವೆನು.’’ ॥28-29॥
(ಶ್ಲೋಕ-30)
ಮೂಲಮ್
ಇತ್ಯುಕ್ತ್ವಾ ರಾಕ್ಷಸಃ ಸೀತಾಮಾದಾತುಮಭಿದುದ್ರುವೇ ।
ರಾಮಶ್ಚಿಚ್ಛೇದ ತದ್ಬಾಹೂ ಶರೇಣ ಪ್ರಹಸನ್ನಿವ ॥
ಅನುವಾದ
ಹೀಗೆಂದು ಹೇಳುತಾ ರಾಕ್ಷಸನು ಸೀತೆಯನ್ನು ಒಯ್ಯಲು ನುಗ್ಗಿ ಬಂದನು. ಆಗ ಶ್ರೀರಾಮಚಂದ್ರನು ನಗು-ನಗುತ್ತಾ ಅವನ ಭುಜಗಳನ್ನು ಬಾಣದಿಂದ ಕತ್ತರಿಸಿಬಿಟ್ಟನು. ॥30॥
(ಶ್ಲೋಕ-31)
ಮೂಲಮ್
ತತಃ ಕ್ರೋಧಪರೀತಾತ್ಮಾ ವ್ಯಾದಾಯ ವಿಕಟಂ ಮುಖಮ್ ।
ರಾಮಮಭ್ಯದ್ರವದ್ರಾಮಶ್ಚಿಚ್ಛೇದ ಪರಿಧಾವತಃ ॥
(ಶ್ಲೋಕ-32)
ಮೂಲಮ್
ಪದದ್ವಯಂ ವಿರಾಧಸ್ಯ ತದದ್ಭುತಮಿವಾಭವತ್ ॥
(ಶ್ಲೋಕ-33)
ಮೂಲಮ್
ತತಃ ಸರ್ಪ ಇವಾಸ್ಯೇನ ಗ್ರಸಿತುಂ ರಾಮಮಾಪತತ್ ।
ತತೋಽರ್ಧಚಂದ್ರಾಕಾರೇಣ ಬಾಣೇನಾಸ್ಯ ಮಹಚ್ಛಿರಃ ॥
(ಶ್ಲೋಕ-34)
ಮೂಲಮ್
ಚಿಚ್ಛೇದ ರುಧಿರೌಘೇಣ ಪಪಾತ ಧರಣೀತಲೇ ।
ತತಃ ಸೀತಾ ಸಮಾಲಿಂಗ್ಯ ಪ್ರಶಶಂಸ ರಘೂತ್ತಮಮ್ ॥
ಅನುವಾದ
ಹೀಗಾದಾಗ ಕೋಪದಿಂದ ಕೆರಳಿದವನಾದ ಆ ರಾಕ್ಷಸನು ತನ್ನ ಬಾಯನ್ನು ತೆರೆದುಕೊಂಡು ರಾಮನ ಎದುರಿಗೆ ಬಂದನು. ರಾಮಚಂದ್ರನು ಓಡಿಬರುತ್ತಿರುವ ಆ ವಿರಾಧನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಿದನು. ಅದೊಂದು ಚಮತ್ಕಾರವಾಗಿ ಕಂಡುಬಂದಿತು. ಅನಂತರ ರಾಮನನ್ನು ಹಾವಿನಂತೆ ನುಂಗಲು ಅವನ ಮೇಲೆ ಬಿದ್ದನು. ಕೂಡಲೇ ರಾಮನು ಅರ್ಧಚಂದ್ರಾಕಾರವಾದ ಬಾಣದಿಂದ ಅವನ ತಲೆಯನ್ನು ಕತ್ತರಿಸಿಬಿಟ್ಟನು. ಅವನು ರಕ್ತದ ಪ್ರವಾಹದೊಂದಿಗೆ ನೆಲದ ಮೇಲೆ ಬಿದ್ದನು. ಈ ಪ್ರಕಾರ ರಾಕ್ಷಸನು ಸತ್ತಿರುವುದನ್ನು ನೋಡಿ ಸೀತೆಯು ರಘುಶ್ರೇಷ್ಠನನ್ನು ಆಲಿಂಗಿಸಿಕೊಂಡು ಅನೇಕ ವಿಧವಾಗಿ ಹೊಗಳಿದಳು. ॥31-34॥
(ಶ್ಲೋಕ-35)
ಮೂಲಮ್
ತತೋ ದುಂದುಭಯೋನೇದುಃ ದಿವಿದೇವಗಣೇರಿತಾಃ ।
ನನೃತುಶ್ಚಾಪ್ಸರಾ ಹೃಷ್ಟಾ ಜಗುರ್ಗಂಧರ್ವಕಿನ್ನರಾಃ ॥
ಅನುವಾದ
ಆಗ ಆಕಾಶದಲ್ಲಿ ದೇವತೆಗಳು ದುಂದುಭಿಗಳನ್ನು ನುಡಿಸತೊಡಗಿದರು, ಅಪ್ಸರೆಯರು ಆನಂದದಿಂದ ಕುಣಿದಾಡಿದರು, ಗಂಧರ್ವರೂ-ಕಿನ್ನರರೂ ಹಾಡಿ ಹೊಗಳಿದರು. ॥35॥
(ಶ್ಲೋಕ-36)
ಮೂಲಮ್
ವಿರಾಧಕಾಯಾದತಿಸುಂದರಾಕೃತಿ -
ರ್ವಿಭ್ರಾಜಮಾನೋ ವಿಮಲಾಂಬರಾವೃತಃ ।
ಪ್ರತಪ್ತಚಾಮೀಕರಚಾರುಭೂಷಣೋ
ವ್ಯದೃಶ್ಯತಾಗ್ರೇ ಗಗನೇ ರವಿರ್ಯಥಾ ॥
ಅನುವಾದ
ಆಗಲೇ ವಿರಾಧನ ಮೃತದೇಹದಿಂದ ಅತ್ಯಂತ ಸುಂದರವಾದ ಆಕಾರವುಳ್ಳ ಶುಭ್ರವಾದ ಬಟ್ಟೆಗಳನ್ನುಟ್ಟ, ಪುಟವಿಟ್ಟ ಚಿನ್ನದಿಂದ ಮಾಡಿದ ಒಡವೆಗಳನ್ನು ತೊಟ್ಟ ಓರ್ವ ಪುರುಷನು ಆಕಾಶದಲ್ಲಿ ಸ್ಥಿತನಿರುವ ಸೂರ್ಯನಂತೆ ಎದುರಿಗೆ ಕಾಣಿಸಿಕೊಂಡನು. ॥36॥
(ಶ್ಲೋಕ-37)
ಮೂಲಮ್
ಪ್ರಣಮ್ಯ ರಾಮಂ ಪ್ರಣತಾರ್ತಿಹಾರಿಣಂ
ಭವಪ್ರವಾಹೋಪರಮಂ ಘೃಣಾಕರಮ್ ।
ಪ್ರಣಮ್ಯ ಭೂಯಃ ಪ್ರಣನಾಮ ದಂಡವತ್
ಪ್ರಪನ್ನಸರ್ವಾರ್ತಿಹರಂ ಪ್ರಸನ್ನಧೀಃ ॥
ಅನುವಾದ
ಆಗ ಆ ಪುರುಷನು ಶರಣಾಗತರ ದುಃಖವನ್ನು ದೂರಮಾಡುವ, ಸಂಸಾರ ಸಾಗರವನ್ನು ದಾಟಿಸುವ ದಯಾಮಯನಾದ ಶ್ರೀರಾಮಚಂದ್ರನನ್ನು ಸಂತೋಷ ಚಿತ್ತವುಳ್ಳವನಾಗಿ ನಮಸ್ಕರಿಸಿದನು. ಆ ಪ್ರಸನ್ನ ಮನಸ್ಸುಳ್ಳ, ಶರಣಾಗತರ ಕಷ್ಟಗಳನ್ನು ಪರಿಹರಿಸುವಂತಹ ಶ್ರೀರಾಮನನ್ನು ಪುನಃ ದಂಡವತ್ ಪ್ರಣಾಮಗೈದು ಕೈ ಜೋಡಿಸಿಕೊಂಡು ನಿಂತುಕೊಂಡನು. ॥37॥
(ಶ್ಲೋಕ-38)
ಮೂಲಮ್ (ವಾಚನಮ್)
ವಿರಾಧ ಉವಾಚ
ಮೂಲಮ್
ಶ್ರೀರಾಮ ರಾಜೀವದಲಾಯತಾಕ್ಷ
ವಿದ್ಯಾಧರೋಹಂ ವಿಮಲಪ್ರಕಾಶಃ ।
ದುರ್ವಾಸಸಾಕಾರಣಕೋಪಮೂರ್ತಿನಾ
ಶಪ್ತಃ ಪುರಾ ಸೋದ್ಯ ವಿಮೋಚಿತಸ್ತ್ವಯಾ ॥
ಅನುವಾದ
ವಿರಾಧನಿಂತೆಂದನು — ಹೇ ಕಮಲಲೋಚನ ಶ್ರೀರಾಮಾ! ನಾನೊಬ್ಬ ಶುದ್ಧ ಪ್ರಕಾಶರೂಪನಾದ ವಿದ್ಯಾಧರನು. ಕಾರಣವಿಲ್ಲದೆ ಕೋಪಗೊಳ್ಳುವ ಸ್ವಭಾವದವರಾದ ದುರ್ವಾಸರು ಹಿಂದೆ ನನಗೆ ಶಾಪಕೊಟ್ಟಿದ್ದರು. ಇಂದು ನಿನ್ನಿಂದ ನನಗೆ ಶಾಪಮುಕ್ತಿಯು ದೊರಕಿತು. ॥38॥
(ಶ್ಲೋಕ-39)
ಮೂಲಮ್
ಇತಃ ಪರಂ ತ್ವಚ್ಚರಣಾರವಿಂದಯೋಃ
ಸ್ಮೃತಿಃ ಸದಾ ಮೇಽಸ್ತು ಭವೋಪಶಾಂತಯೇ ।
ತ್ವನ್ನಾಮಸಂಕೀರ್ತನಮೇವ ವಾಣೀ
ಕರೋತು ಮೇ ಕರ್ಣಪುಟಂ ತ್ವದೀಯಮ್ ॥
(ಶ್ಲೋಕ-40)
ಮೂಲಮ್
ಕಥಾಮೃತಂ ಪಾತು ಕರದ್ವಯಂ ತೇ
ಪಾದಾರವಿಂದಾರ್ಚನಮೇವ ಕುರ್ಯಾತ್ ।
ಶಿರಶ್ಚ ತೇ ಪಾದಯುಗಪ್ರಣಾಮಂ
ಕರೋತು ನಿತ್ಯಂ ಭವದೀಯಮೇವಮ್ ॥
ಅನುವಾದ
ಇನ್ನು ಮುಂದೆ ನನಗೆ ನಿನ್ನ ಪಾದಾರವಿಂದಗಳಲ್ಲಿಯೇ ಸದಾಕಾಲ ಸಂಸಾರ ತಾಪನಾಶ ಮಾಡುವಂತಹ ಸ್ಮೃತಿ ಉಳಿದುಕೊಳ್ಳಲಿ. ನಿನ್ನ ನಾಮ ಸಂಕೀರ್ತನೆಯನ್ನೇ ನನ್ನ ನಾಲಿಗೆಯು ಮಾಡುತ್ತಿರಲಿ. ನಿನ್ನ ಕಥಾಮೃತವನ್ನೇ ನನ್ನ ಕಿವಿಗಳು ಪಾನಮಾಡುತ್ತಿರಲಿ. ನನ್ನ ಎರಡೂ ಕೈಗಳು ನಿನ್ನ ಪಾದಕಮಲಗಳನ್ನು ಪೂಜಿಸುತ್ತಿರಲಿ. ನನ್ನ ಶಿರವು ಕೂಡ ನಿನ್ನ ಎರಡೂ ಚರಣಾರವಿಂದಗಳಲ್ಲಿ ನಮಸ್ಕರಿಸುತ್ತಿರಲಿ. ॥39-40॥
(ಶ್ಲೋಕ-41)
ಮೂಲಮ್
ನಮಸ್ತುಭ್ಯಂ ಭಗವತೇ ವಿಶುದ್ಧಜ್ಞಾನಮೂರ್ತಯೇ ।
ಆತ್ಮಾರಾಮಾಯ ರಾಮಾಯ ಸೀತಾರಾಮಾಯ ವೇಧಸೇ ॥
ಅನುವಾದ
ಪರಿಶುದ್ಧ ಜ್ಞಾನ ಸ್ವರೂಪನಾದ, ಆತ್ಮಾರಾಮನಾದ, ಸೀತಾರಾಮನಾದ, ಪರಬ್ರಹ್ಮನೇ ಆಗಿರುವ ಶ್ರೀರಾಮನೇ ನಿನಗೆ ನಮಸ್ಕಾರವು. ॥41॥
(ಶ್ಲೋಕ-42)
ಮೂಲಮ್
ಪ್ರಪನ್ನಂ ಪಾಹಿ ಮಾಂ ರಾಮ ಯಾಸ್ಯಾಮಿ ತ್ವದನುಜ್ಞಯಾ ।
ದೇವಲೋಕಂ ರಘುಶ್ರೇಷ್ಠ ಮಾಯಾ ಮಾಂ ಮಾವೃಣೋತು ತೇ ॥
ಅನುವಾದ
ಎಲೈ ರಘುರಾಮನೆ! ಶರಣಾಗತನಾದ ನನ್ನನ್ನು ಕಾಪಾಡು. ಹೇ ರಘುಶ್ರೇಷ್ಠನೆ! ನಿನ್ನ ಅಪ್ಪಣೆಯಂತೆ ನಾನು ದೇವಲೋಕಕ್ಕೆ ಹೋಗುತ್ತಿದ್ದೇನೆ; ನಿನ್ನ ಮಾಯೆಯು ನನ್ನನ್ನು ಆವರಿಸದಿರಲಿ. ॥42॥
(ಶ್ಲೋಕ-43)
ಮೂಲಮ್
ಇತಿ ವಿಜ್ಞಾಪಿತಸ್ತೇನ ಪ್ರಸನ್ನೋ ರಘುನಂದನಃ ।
ದದೌ ವರಂ ತದಾ ಪ್ರೀತೋ ವಿರಾಧಾಯ ಮಹಾಮತಿಃ ॥
ಅನುವಾದ
ವಿದ್ಯಾಧರನ ಈ ಪ್ರಕಾರದ ಪ್ರಾರ್ಥನೆಯಿಂದ, ಮಹಾಮತಿಯಾದ ರಘುನಂದನನು ಪ್ರಸನ್ನನಾಗಿ ಸಂತೋಷದಿಂದ ಅವನಿಗೆ ವರವನ್ನು ಕೊಟ್ಟನು. ॥43॥
(ಶ್ಲೋಕ-44)
ಮೂಲಮ್
ಗಚ್ಛ ವಿದ್ಯಾಧರಾಶೇಷಮಾಯಾದೋಷಗುಣಾ ಜಿತಾಃ ।
ತ್ವಯಾ ಮದ್ದರ್ಶನಾತ್ಸದ್ಯೋ ಮುಕ್ತೋ ಜ್ಞಾನವತಾಂ ವರಃ ॥
ಅನುವಾದ
‘‘ಹೇ ವಿದ್ಯಾಧರನೆ! ಈಗ ನೀನು ಹೊರಡು. ಮಾಯಾ ನಿಮಿತ್ತವಾದ ಗುಣದೋಷಗಳನ್ನೆಲ್ಲ ನೀನು ಗೆದ್ದಿರುವೆ. ನೀನು ನನ್ನನ್ನು ದರ್ಶನ ಮಾಡಿದ್ದರಿಂದ ಕೂಡಲೇ ಮುಕ್ತನಾಗಿ ಜ್ಞಾನಿಗಳಲ್ಲಿ ಶ್ರೇಷ್ಠನಾಗಿರುವೆ. ॥44॥
(ಶ್ಲೋಕ-45)
ಮೂಲಮ್
ಮದ್ಭಕ್ತಿರ್ದುರ್ಲಭಾ ಲೋಕೇ ಜಾತಾ ಚೇನ್ಮುಕ್ತಿದಾ ಯತಃ ।
ಅತಸ್ತ್ವಂ ಭಕ್ತಿಸಂಪನ್ನಃ ಪರಂ ಯಾಹಿ ಮಮಾಜ್ಞಯಾ ॥
ಅನುವಾದ
ನನ್ನ ಭಕ್ತಿಯು ಲೋಕದ ಜನರಿಗೆ ದುರ್ಲಭವಾದುದು. ಆದರೆ ಅದು ಉಂಟಾದರೆ ಮುಕ್ತಿಯನ್ನು ಕೊಟ್ಟೇ ಕೊಡುವುದು. ಆದ್ದರಿಂದ ಭಕ್ತಿಯನ್ನು ಪಡೆದಿರುವ ನೀನು ನನ್ನ ಅಪ್ಪಣೆಯಂತೆ ಪರಮ ಮೋಕ್ಷವನ್ನು ಹೊಂದುವವನಾಗು.’’ ॥45॥
(ಶ್ಲೋಕ-46)
ಮೂಲಮ್
ರಾಮೇಣ ರಕ್ಷೋನಿಧನಂ ಸುಘೋರಂ
ಶಾಪಾದ್ವಿಮುಕ್ತಿರ್ವರದಾನಮೇವಮ್ ।
ವಿದ್ಯಾಧರತ್ವಂ ಪುನರೇವ ಲಬ್ಧಂ
ರಾಮಂ ಗೃಹನ್ನೇತಿ ನರೋಽಖಿಲಾರ್ಥಾನ್ ॥
ಅನುವಾದ
ಹೀಗೆ ಅನುಗ್ರಹಿಸಿದ ಶ್ರೀರಾಮಚಂದ್ರನು ಭಯಂಕರನಾದ ರಾಕ್ಷಸನನ್ನು ವಧಿಸಿದ್ದು, ಶಾಪದಿಂದ ಅವನು ಮುಕ್ತನಾದುದು, ಶ್ರೀರಾಮನು ವಿದ್ಯಾಧರನಿಗೆ ವರವನ್ನು ಕೊಟ್ಟಿದ್ದು, ಅವನು ಮತ್ತೆ ವಿದ್ಯಾಧರತ್ವವನ್ನು ಪಡೆದುಕೊಂಡಿದ್ದು; ಇಂತಹ ಭಗವಂತನ ಮಂಗಳ ಲೀಲೆಗಳನ್ನು ಕೊಂಡಾಡುವ ಮನುಷ್ಯನು ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುವನು. ॥46॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅರಣ್ಯಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅರಣ್ಯಕಾಂಡದಲ್ಲಿ ಮೊದಲನೆಯ ಸರ್ಗವು ಮುಗಿಯಿತು.