೦೯

[ಒಂಭತ್ತನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮ ಮತ್ತು ಭರತರ ಭೇಟಿ, ಭರತನು ಅಯೋಧ್ಯೆಗೆ ಮರಳುವುದು, ಶ್ರೀರಾಮಚಂದ್ರನು ಅತ್ರಿಮುನಿಯ ಆಶ್ರಮಕ್ಕೆ ಹೋಗುವುದು

1
ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಅಥ ಗತ್ವಾಶ್ರಮಪದಸಮೀಪಂ ಭರತೋ ಮುದಾ ।
ಸೀತಾರಾಮಪದೈರ್ಯುಕ್ತಂ ಪವಿತ್ರಮತಿಶೋಭನಮ್ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಎಲೈ ಗಿರಿಜೆ! ಅನಂತರ ಭರತನು ಹೆಚ್ಚಿನ ಆನಂದಭರಿತನಾಗಿ ಶ್ರೀಸೀತಾರಾಮರ ಮಂಗಳಕರವೂ ಅತ್ಯಂತ ಪವಿತ್ರವೂ ಆದ ಚರಣ ಚಿಹ್ನೆಗಳಿಂದ ಸುಶೋಭಿತ ಸುಂದರ-ಪವಿತ್ರ ಆಶ್ರಮದ ಸ್ಥಳಕ್ಕೆ ತಲುಪಿದನು. ॥1॥

2
ಮೂಲಮ್

ಸ ತತ್ರ ವಜ್ರಾಂಕುಶವಾರಿಜಾಂಚಿತ-
ಧ್ವಜಾದಿಚಿಹ್ನಾನಿ ಪದಾನಿ ಸರ್ವತಃ ।
ದದರ್ಶ ರಾಮಸ್ಯ ಭುವೋತಿಮಂಗಲಾ-
ನ್ಯಚೇಷ್ಟಯತ್ಪಾದರಜಃಸು ಸಾನುಜಃ ॥

ಅನುವಾದ

ಅಲ್ಲಿ ಎಲ್ಲೆಲ್ಲೂ ಹರಡಿರುವ ವಜ್ರ, ಅಂಕುಶ, ಪದ್ಮ, ಧ್ವಜ ಮುಂತಾದ ಚರಣ ಚಿಹ್ನೆಗಳಿಂದ ಅಲಂಕೃತವಾದ ಮತ್ತು ಜಗತ್ತಿಗೆ ಮಂಗಳವನ್ನುಂಟುಮಾಡುವ ಭಗವಾನ್ ಶ್ರೀರಾಮನ ಹೆಜ್ಜೆಗಳನ್ನು ಕಂಡವನಾಗಿ ತಮ್ಮನೊಂದಿಗೆ ಭರತನು ಆ ಪಾದಧೂಳಿಯಲ್ಲಿ ಹೊರಳಾಡಿದನು. ॥2॥

3
ಮೂಲಮ್

ಅಹೋ ಸುಧನ್ಯೋಹಮಮೂನಿ ರಾಮ-
ಪಾದಾರವಿಂದಾಂಕಿತಭೂತಲಾನಿ ।
ಪಶ್ಯಾಮಿ ಯತ್ಪಾದರಜೋ ವಿಮೃಗ್ಯಂ
ಬ್ರಹ್ಮಾದಿದೇವೈಃ ಶ್ರುತಿಭಿಶ್ಚ ನಿತ್ಯಮ್ ॥

ಅನುವಾದ

‘‘ಆಹಾ ನಾನು ಪರಮ ಧನ್ಯನು! ಏಕೆಂದರೆ ಶ್ರೀರಾಮಚಂದ್ರನ ಪಾದಾರವಿಂದದ ಗುರುತುಗಳಿಂದ ಶೋಭಿತವಾದ ಭೂಮಿಯನ್ನು ನೋಡುತ್ತಿದ್ದೇನೆ. ಬ್ರಹ್ಮದೇವರೇ ಮುಂತಾದ ದೇವತೆಗಳೂ, ವೇದಗಳೂ ಸದಾಕಾಲವು ಹುಡುಕುತ್ತಿರುವ ಪಾದರಜವನ್ನು ಇಂದು ನಾನು ನೋಡುತ್ತಿರುವೆನು.’’ ॥3॥

4
ಮೂಲಮ್

ಇತ್ಯದ್ಭುತಪ್ರೇಮರಸಾಪ್ಲುತಾಶಯೋ
ವಿಗಾಢಚೇತಾ ರಘುನಾಥಭಾವನೇ ।
ಆನಂದಜಾಶ್ರುಸ್ನಪಿತಸ್ತನಾಂತರಃ
ಶನೈರವಾಪಾಶ್ರಮಸನ್ನಿಧಿಂ ಹರೇಃ ॥

ಅನುವಾದ

ಹೀಗೆಂದುಕೊಂಡು ಅದ್ಭುತವಾದ ಪ್ರೇಮರಸದಿಂದ ತುಂಬಿದ ಹೃದಯವುಳ್ಳವನಾಗಿ, ರಘುನಾಥನ ಭಾವನೆಯಲ್ಲಿ ಮುಳುಗಿದವನಾಗಿ, ಆನಂದದಿಂದ ಹೊರಹೊಮ್ಮಿದ ಕಣ್ಣೀರಿನಿಂದ ಎದೆಯಭಾಗ ನೆನೆದವನಾಗಿ ಭರತನು ಮೆಲ್ಲನೆ ಶ್ರೀಹರಿರೂಪಿಯಾದ ಶ್ರೀರಾಮನ ಆಶ್ರಮದ ಸನಿಹಕ್ಕೆ ಬಂದನು. ॥4॥

5
ಮೂಲಮ್

ಸ ತತ್ರ ದೃಷ್ಟ್ವಾ ರಘುನಾಥಮಾಸ್ಥಿತಂ
ದೂರ್ವಾದಲಶ್ಯಾಮಲಮಾಯತೇಕ್ಷಣಮ್ ।
ಜಟಾಕಿರೀಟಂ ನವವಲ್ಕಲಾಂಬರಂ
ಪ್ರಸನ್ನವಕ್ತ್ರಂ ತರುಣಾರುಣದ್ಯುತಿಮ್ ॥

ಅನುವಾದ

ಅಲ್ಲಿ ಅವನು ದೂರ್ವಾದಲ ಶ್ಯಾಮನಾದ, ವಿಶಾಲ ನೇತ್ರಗಳುಳ್ಳ, ಜಟಾಕಿರೀಟವನ್ನು ಧರಿಸಿರುವ, ಹೊಸದಾದ ನಾರು ಮಡಿಯನ್ನು ಉಟ್ಟಿರುವ, ಪ್ರಸನ್ನವದನನಾದ, ಬಾಲಸೂರ್ಯನಂತೆ ಕಾಂತಿಯುಕ್ತನಾಗಿ ಕುಳಿತಿರುವ ಶ್ರೀರಘುನಾಥನನ್ನು ನೋಡಿದನು. ॥5॥

6
ಮೂಲಮ್

ವಿಲೋಕಯಂತಂ ಜನಕಾತ್ಮಜಾಂ ಶುಭಾಂ
ಸೌಮಿತ್ರಿಣಾ ಸೇವಿತ ಪಾದಪಂಕಜಮ್ ।
ತದಾಭಿದುದ್ರಾವ ರಘೂತ್ತಮಂ ಶುಚಾ
ಹರ್ಷಾಚ್ಚ ತತ್ಪಾದಯುಗಂ ತ್ವರಾಗ್ರಹೀತ್ ॥

ಅನುವಾದ

ಅವನು ಶುಭಲಕ್ಷಣಳಾದ ಜನಕ ನಂದಿನಿಯ ಕಡೆಗೆ ನೋಡುತ್ತಿದ್ದನು. ಲಕ್ಷ್ಮಣನು ಸೇವಿಸುವ ಪಾದಕಮಲವುಳ್ಳ ರಘುಶ್ರೇಷ್ಠನಾದ ಶ್ರೀರಾಮನನ್ನು ಕಂಡು, ದುಃಖದಿಂದಲೂ, ಸಂತೋಷದಿಂದಲೂ ಕೂಡಿದವನಾಗಿ ಓಡಿಬಂದು ಬೇಗನೆ ಅವನ ಪಾದಗಳನ್ನು ಹಿಡಿದುಕೊಂಡನು. ॥6॥

7
ಮೂಲಮ್

ರಾಮಸ್ತಮಾಕೃಷ್ಯ ಸುದೀರ್ಘಬಾಹು -
ರ್ದೋರ್ಭ್ಯಾಂ ಪರಿಷ್ವಜ್ಯ ಸಿಷಿಂಚ ನೇತ್ರಜೈಃ ।
ಜಲೈರಥಾಂಕೋಪರಿ ಸಂನ್ಯವೇಶಯತ್
ಪುನಃ ಪುನಃ ಸಂಪರಿಷಸ್ವಜೇ ವಿಭುಃ ॥

ಅನುವಾದ

ನೀಳವಾದ ತೋಳುಗಳುಳ್ಳ ವಿಭುವಾದ ಶ್ರೀರಾಮನು ಭರತನನ್ನು ಬರಸೆಳೆದು ಎರಡೂ ಕೈಗಳಿಂದ ಆಲಿಂಗಿಸಿಕೊಂಡು ತನ್ನ ಕಣ್ಣೀರಿನಿಂದ ಅವನನ್ನು ತೋಯಿಸಿದನು. ಅನಂತರ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಪುನಃ ಪುನಃ ಅಪ್ಪಿಕೊಂಡನು. ॥7॥

8
ಮೂಲಮ್

ಅಥ ತಾ ಮಾತರಾಃ ಸರ್ವಾಃ ಸಮಾಜಗ್ಮುಸ್ತ್ವರಾನ್ವಿತಾಃ ।
ರಾಘವಂ ದ್ರಷ್ಟುಕಾಮಾಸ್ತಾಸ್ತೃಷಾರ್ತಾ ಗೌರ್ಯಥಾ ಜಲಮ್ ॥

ಅನುವಾದ

ಅನಂತರ ತಾಯಂದಿರುಗಳೆಲ್ಲರೂ ಬೇಗನೆ ರಾಮನನ್ನು ನೋಡಬೇಕೆಂಬ ಆತುರದಿಂದ ಬಾಯಾರಿದ ಹಸುವು ನೀರಿನ ಸಮೀಪಕ್ಕೆ ಓಡಿಹೋಗುವಂತೆ ಅಲ್ಲಿಗೆ ಬಂದರು. ॥8॥

9
ಮೂಲಮ್

ರಾಮಃ ಸ್ವಮಾತರಂ ವೀಕ್ಷ್ಯ ದ್ರುತಮುತ್ಥಾಯ ಪಾದಯೋಃ ।
ವವಂದೇ ಸಾಶ್ರು ಸಾ ಪುತ್ರಮಾಲಿಂಗ್ಯಾತೀವ ದುಃಖಿತಾ ॥

ಅನುವಾದ

ಶ್ರೀರಾಮನು ತನ್ನ ತಾಯನ್ನು ನೋಡುತ್ತಲೇ ಲಗುಬಗೆಯಿಂದ ಮೇಲೆದ್ದು ಅವಳ ಪಾದಗಳಿಗೆ ವಂದಿಸಿದನು. ಆಕೆಯು ಕಣ್ಣೀರು ತುಂಬಿಕೊಂಡು ಅತ್ಯಂತ ದುಃಖದಿಂದ ಮಗನನ್ನು ಬಿಗಿದಪ್ಪಿಕೊಂಡಳು. ॥9॥

10
ಮೂಲಮ್

ಇತರಾಶ್ಚ ತಥಾ ನತ್ವಾ ಜನನೀ ರಘುನಂದನಃ ।
ತತಃ ಸಮಾಗತಂ ದೃಷ್ಟ್ವಾ ವಸಿಷ್ಠಂ ಮುನಿಪುಂಗವಮ್ ॥

11
ಮೂಲಮ್

ಸಾಷ್ಟಾಂಗಂ ಪ್ರಣಿಪತ್ಯಾಹ ಧನ್ಯೋಽಸ್ಮೀತಿ ಪುನಃ ಪುನಃ ।
ಯಥಾರ್ಹಮುಪವೇಶ್ಯಾಹ ಸರ್ವಾನೇವ ರಘೂದ್ವಹಃ ॥

ಅನುವಾದ

ಮತ್ತೆ ಉಳಿದ ತಾಯಂದಿರನ್ನು ರಾಮನು ನಮಸ್ಕರಿಸಿದನು. ಅನಂತರ ಬಂದ ಮುನಿಶ್ರೇಷ್ಠ ವಸಿಷ್ಠರನ್ನು ಕಂಡು ಸಾಷ್ಟಾಂಗ ನಮಸ್ಕಾರವನ್ನು ಮಾಡಿ ‘ಧನ್ಯನಾದೆನು’ ಎಂದು ಮತ್ತೆ-ಮತ್ತೆ ರಾಮನು ಅಂದುಕೊಂಡನು. ಗೌರವಕ್ಕೆ ತಕ್ಕಂತೆ ಎಲ್ಲರನ್ನು ಕುಳ್ಳಿರಿಸಿ ಶ್ರೀರಾಮನು ‘‘ನಮ್ಮ ತಂದೆಯವರು ಕ್ಷೇಮವೇ’’ ಎಂದು ಕೇಳಿದನು. ॥10-11॥

12
ಮೂಲಮ್

ಪಿತಾ ಮೇ ಕುಶಲೀ ಕಿಂ ವಾ ಮಾಂ ಕಿಮಾಹಾತಿದುಃಖಿತಃ ।
ವಸಿಷ್ಠಸ್ತಮುವಾಚೇದಂ ಪಿತಾ ತೇ ರಘುನಂದನ ॥

13
ಮೂಲಮ್

ತ್ವದ್ವಿಯೋಗಾಭಿತಪ್ತಾತ್ಮಾ ತ್ವಾಮೇವ ಪರಿಚಿಂತಯನ್ ।
ರಾಮ ರಾಮೇತಿ ಸೀತೇತಿ ಲಕ್ಷ್ಮಣೇತಿ ಮಮಾರ ಹ ॥

ಅನುವಾದ

‘‘ಹೇಳಿ ನಮ್ಮ ತಂದೆಯವರು ಕುಶಲರಾಗಿದ್ದಾರಲ್ಲ! ಅವರು ನನ್ನ ವಿಯೋಗದಿಂದ ಅತ್ಯಂತ ದುಃಖಾತುರರಾಗಿ ನನಗಾಗಿ ಏನು ಅಪ್ಪಣೆಕೊಟ್ಟಿರುವರು?’’ ಆಗ ವಸಿಷ್ಠರು ಹೇಳಿದರು - ‘‘ಹೇ ರಘುನಂದನಾ! ನಿನ್ನ ತಂದೆಯು ನಿನ್ನ ಅಗಲುವಿಕೆಯಿಂದ ಬಹಳ ಸಂಕಟಗೊಂಡವನಾಗಿ ಹಾ ರಾಮಾ! ರಾಮಾ!! ಹಾ ಸೀತೆ! ಹಾ ಲಕ್ಷ್ಮಣಾ! ಎಂದುಕೊಂಡು ನಿನ್ನನ್ನೇ ಚಿಂತಿಸುತ್ತಾ ಪ್ರಾಣತ್ಯಾಗ ಮಾಡಿದನು.’’ ॥12-13॥

14
ಮೂಲಮ್

ಶ್ರುತ್ವಾ ತತ್ಕರ್ಣಶೂಲಾಭಂ ಗುರೋರ್ವಚನಮಂಜಸಾ ।
ಹಾ ಹತೋಽಸ್ಮೀತಿ ಪತಿತೋ ರುದನ್ ರಾಮಃ ಸಲಕ್ಷ್ಮಣಃ ॥

ಅನುವಾದ

ಕಿವಿಗಳಿಗೆ ಶೂಲಪ್ರಾಯದಂತಿರುವ ಗುರುಗಳ ಈ ಮಾತನ್ನು ಕೇಳಿ ಶ್ರೀರಾಮ ಲಕ್ಷ್ಮಣರು ‘ಅಯ್ಯೋ! ಕೆಟ್ಟೆವು!’ ಎಂದು ಅಳುತ್ತಾ ಕುಸಿದು ಬಿದ್ದರು. ॥14॥

15
ಮೂಲಮ್

ತತೋಽನುರುರುದುಃ ಸರ್ವಾ ಮಾತರಶ್ಚ ತಥಾಪರೇ ।
ಹಾ ತಾತ ಮಾಂ ಪರಿತ್ಯಜ್ಯ ಕ್ವ ಗತೋಽಸಿ ಘೃಣಾಕರ ॥

ಅನುವಾದ

ಆಗ ಎಲ್ಲ ತಾಯಂದಿರು ಹಾಗೂ ಉಳಿದವರೆಲ್ಲರೂ ಅಳಲಾರಂಭಿಸಿದರು. ಶ್ರೀರಾಮಚಂದ್ರನು ‘‘ಅಪ್ಪಾ! ದಯಾಮಯ! ನನ್ನನ್ನು ಬಿಟ್ಟು ನೀನು ಎಲ್ಲಿಗೆ ಹೋದೆ? ॥15॥

16
ಮೂಲಮ್

ಅನಾಥೋಽಸ್ಮಿ ಮಹಾಬಾಹೋ ಮಾಂ ಕೋ ವಾ ಲಾಲಯೇದಿತಃ ।
ಸೀತಾ ಚ ಲಕ್ಷ್ಮಣಶ್ಚೈವ ವಿಲೇಪತುರತೋ ಭೃಶಮ್ ॥

ಅನುವಾದ

ಮಹಾಬಾಹುವೆ! ನಾನು ಅನಾಥನಾದೆನು; ಇನ್ನು ನನ್ನನ್ನು ನೋಡಿಕೊಳ್ಳುವವರು ಯಾರು?’’ ಹೀಗೆಂದು ಸೀತೆಯೂ, ಲಕ್ಷ್ಮಣನೂ ಹೆಚ್ಚು-ಹೆಚ್ಚಾಗಿ ಅಳತೊಡಗಿದರು. ॥16॥

17
ಮೂಲಮ್

ವಸಿಷ್ಠಃ ಶಾಂತವಚನೈಃ ಶಮಯಾಮಾಸ ತಾಂ ಶುಚಮ್ ।
ತತೋ ಮಂದಾಕಿನೀಂ ಗತ್ವಾ ಸ್ನಾತ್ವಾ ತೇ ವೀತಕಲ್ಮಷಾಃ ॥

ಅನುವಾದ

ಆಗ ವಸಿಷ್ಠರು ಸಮಾಧಾನದ ಮಾತುಗಳಿಂದ ಆ ದುಃಖವನ್ನು ತಣ್ಣಗಾಗಿಸಿದರು. ಅನಂತರ ಎಲ್ಲರೂ ಮಂದಾಕಿನಿ ನದಿಗೆ ಹೋಗಿ ಸ್ನಾನಮಾಡಿ ಪವಿತ್ರರಾದರು. ॥17॥

18
ಮೂಲಮ್

ರಾಜ್ಞೇ ದದುರ್ಜಲಂ ತತ್ರ ಸರ್ವೇ ತೇ ಜಲಕಾಂಕ್ಷಿಣೇ ।
ಪಿಂಡಾನ್ನಿರ್ವಾಪಯಾಮಾಸ ರಾಮೋ ಲಕ್ಷ್ಮಣಸಂಯುತಃ ॥

ಅನುವಾದ

ಅಲ್ಲಿ ಎಲ್ಲರೂ ತರ್ಪಣವನ್ನು ಬಯಸುತ್ತಿದ್ದ ಮಹಾರಾಜಾ ದಶರಥನಿಗೆ ಜಲಾಂಜಲಿಯನ್ನು ಅರ್ಪಿಸಿದರು. ಲಕ್ಷ್ಮಣಸಹಿತನಾದ ರಾಮನು ಪಿಂಡದಾನ ಮಾಡಿದನು. ॥18॥

19
ಮೂಲಮ್

ಇಂಗುದೀಫಲಪಿಣ್ಯಾಕರಚಿತಾನ್ಮಧುಸಂಪ್ಲುತಾನ್ ।
ವಯಂ ಯದನ್ನಾಃ ಪಿತರಸ್ತದನ್ನಾಃ ಸ್ಮೃತಿನೋದಿತಾಃ ॥

ಅನುವಾದ

‘ನಾವು ಯಾವ ಅನ್ನವನ್ನು ತಿನ್ನುವೆವೋ ಅದನ್ನೇ ಪಿತೃಗಳಿಗೆ ಕೊಡಬೇಕು’ ಎಂಬ ಸ್ಮೃತಿಗೆ ತಲೆಬಾಗಿ, ಇಂಗಳದ ಕಾಯಿ, ಗೆಡ್ಡೆ ಗೆಣಸುಗಳಿಂದ ತಯಾರಿಸಿದ, ಜೇನುತುಪ್ಪದಿಂದ ಕೂಡಿದ ಪಿಂಡಪ್ರದಾನ ಮಾಡಿದನು. ॥19॥

20
ಮೂಲಮ್

ಇತಿ ದುಃಖಾಶ್ರುಪೂರ್ಣಾಕ್ಷಃ ಪುನಃ ಸ್ನಾತ್ವಾ ಗೃಹಂ ಯಯೌ ।
ಸರ್ವೇ ರುದಿತ್ವಾ ಸುಚಿರಂ ಸ್ನಾತ್ವಾ ಜಗ್ಮುಸ್ತದಾಶ್ರಮಮ್ ॥

ಅನುವಾದ

ಮತ್ತೆ ಕಣ್ಣೀರಿಡುತ್ತಾ ಪುನಃ ಸ್ನಾನಮಾಡಿ ಆಶ್ರಮಕ್ಕೆ ಮರಳಿದನು. ಇದೇ ರೀತಿ ಎಲ್ಲರೂ ಬಹಳ ಕಾಲ ಅಳುತ್ತಾ ಕೊನೆಯಲ್ಲಿ ಸ್ನಾನಮಾಡಿ ಪರ್ಣಕುಟಿಗೆ ಬಂದರು. ॥20॥

21
ಮೂಲಮ್

ತಸ್ಮಿಂಸ್ತು ದಿವಸೇ ಸರ್ವೇ ಉಪವಾಸಂ ಪ್ರಚಕ್ರಿರೇ ।
ತತಃ ಪರೇದ್ಯುರ್ವಿಮಲೇ ಸ್ನಾತ್ವಾ ಮಂದಾಕಿನೀಜಲೇ ॥

22
ಮೂಲಮ್

ಉಪವಿಷ್ಟಂ ಸಮಾಗಮ್ಯ ಭರತೋ ರಾಮಮಬ್ರವೀತ್ ।
ರಾಮ ರಾಮ ಮಹಾಭಾಗ ಸ್ವಾತ್ಮಾನಮಭಿಷೇಚಯ ॥

ಅನುವಾದ

ಆ ದಿನ ಎಲ್ಲರೂ ಉಪವಾಸ ಮಾಡಿದರು. ಮರುದಿನ ಪವಿತ್ರವಾದ ಮಂದಾಕಿನಿ ನದಿಯಲ್ಲಿ ಸ್ನಾನಮಾಡಿ ಕುಳಿತಿದ್ದ ಶ್ರೀರಾಮನ ಬಳಿಗೆ ಭರತನು ಬಂದು ಹೀಗೆಂದನು ‘ಮಹಾಭಾಗನಾದ ರಾಮಾ! ಅಣ್ಣಾ! ನೀನು ಪಟ್ಟಾಭಿಷಿಕ್ತನಾಗು’. ॥21-22॥

23
ಮೂಲಮ್

ರಾಜ್ಯಂ ಪಾಲಯ ಪಿತ್ರ್ಯಂ ತೇ ಜ್ಯೇಷ್ಠಸ್ತ್ವಂ ಮೇ ಪಿತಾ ಯಥಾ ।
ಕ್ಷತ್ರಿಯಾಣಾಮಯಂ ಧರ್ಮೋ ಯತ್ಪ್ರಜಾಪರಿಪಾಲನಮ್ ॥

ಅನುವಾದ

‘ನಮ್ಮ ತಂದೆಯ ಜ್ಯೇಷ್ಠಪುತ್ರನೂ, ನನಗೂ ಹಿರಿಯವನಾಗಿದ್ದು ನೀನು ತಂದೆಗೆ ಸಮಾನನಾಗಿರುವೆ. ಪಿತ್ರಾರ್ಜಿತವಾದ ರಾಜ್ಯಕ್ಕೆ ನೀನೇ ಒಡೆಯನಾಗಿರುವೆ. ಪ್ರಜೆಯನ್ನು ಪಾಲಿಸುವುದೇ ಕ್ಷತ್ರಿಯರಿಗೆ ಪರಮಧರ್ಮವಾಗಿದೆ.’ ॥23॥

24
ಮೂಲಮ್

ಇಷ್ಟ್ವಾ ಯಜ್ಞೈರ್ಬಹುವಿಧೈಃ ಪುತ್ರಾನುತ್ಪಾದ್ಯ ತಂತವೇ ।
ರಾಜ್ಯೇ ಪುತ್ರಂ ಸಮಾರೋಪ್ಯ ಗಮಿಷ್ಯಸಿ ತತೋ ವನಮ್ ॥

ಅನುವಾದ

ಆದ್ದರಿಂದ ನೀನು ನಾನಾ ವಿಧವಾದ ಯಜ್ಞಗಳನ್ನು ಮಾಡಿ, ಪ್ರಜಾಸಂತತಿಯನ್ನು ಕಾಪಾಡಲು ಪುತ್ರರನ್ನು ಪಡೆದು, ಅವರು ದೊಡ್ಡವರಾದಾಗ ರಾಜ್ಯವನ್ನು ಅವರಿಗೆ ಒಪ್ಪಿಸಿ ಅನಂತರ ವಾನ ಪ್ರಸ್ಥಾಶ್ರಮದ ನಿಮಿತ್ತ ಕಾಡಿಗೆ ಹೋಗುವಿಯಂತೆ. ॥24॥

25
ಮೂಲಮ್

ಇದಾನೀಂ ವನವಾಸಸ್ಯ ಕಾಲೋ ನೈವ ಪ್ರಸೀದ ಮೇ ।
ಮಾತುರ್ಮೇ ದೃಷ್ಕೃತಂ ಕಿಂಚಿತ್ಸ್ಮರ್ತುಂ ನಾರ್ಹಸಿ ಪಾಹಿ ನಃ ॥

ಅನುವಾದ

ಹೇ ಪ್ರಭೋ! ಈಗ ವನವಾಸವನ್ನು ಮಾಡುವ ಸಮಯವಲ್ಲ. ನೀನು ನನ್ನ ಮೇಲೆ ಪ್ರಸನ್ನನಾಗು. ನನ್ನ ತಾಯಿಯು ಮಾಡಿದಂತಹ ಕೆಟ್ಟ ಕೆಲಸವನ್ನು ಮರೆತು ನಮ್ಮನ್ನು ಕಾಪಾಡು ಎಂದು ವಿನಂತಿಸಿ ಕೊಂಡನು. ॥25॥

26
ಮೂಲಮ್

ಇತ್ಯುಕ್ತ್ವಾ ಚರಣೌ ಭ್ರಾತುಃ ಶಿರಸ್ಯಾಧಾಯ ಭಕ್ತಿತಃ ।
ರಾಮಸ್ಯ ಪುರತಃ ಸಾಕ್ಷಾದ್ದಂಡವತ್ಪತಿತೋ ಭುವಿ ॥

ಅನುವಾದ

ಹೀಗೆ ಹೇಳುತ್ತಾ ಅಣ್ಣನ ಪಾದಗಳಿಗೆ ಭಕ್ತಿಯಿಂದ ತಲೆಯೂರಿದವನಾಗಿ ರಾಮನ ಮುಂದೆ ನೇರವಾಗಿ ದಂಡವತ್ ಪ್ರಣಾಮಮಾಡಿ ಮಲಗಿಬಿಟ್ಟನು. ॥26॥

27
ಮೂಲಮ್

ಉತ್ಥಾಪ್ಯ ರಾಘವಃ ಶೀಘ್ರಮಾರೋಪ್ಯಾಂಕೇಽತಿಭಕ್ತಿತಃ ।
ಉವಾಚ ಭರತಂ ರಾಮಃ ಸ್ನೇಹಾರ್ದ್ರನಯನಃ ಶನೈಃ ॥

ಅನುವಾದ

ಶ್ರೀರಾಮನು ಬೇಗನೇ ಭರತನನ್ನು ಮೇಲಕ್ಕೆಬ್ಬಿಸಿ ಪ್ರೀತಿಯಿಂದ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಸ್ನೇಹದಿಂದ ಕಣ್ಣೀರಿಡುತ್ತಾ ನಿಧಾನವಾಗಿ ಹೀಗೆಂದನು. ॥27॥

28
ಮೂಲಮ್

ಶೃಣು ವತ್ಸ ಪ್ರವಕ್ಷ್ಯಾಮಿ ತ್ವಯೋಕ್ತಂ ಯತ್ತಥೈವ ತತ್ ।
ಕಿಂತು ಮಾಮಬ್ರವೀತ್ತಾತೋ ನವ ವರ್ಷಾಣಿ ಪಂಚ ಚ ॥

29
ಮೂಲಮ್

ಉಷಿತ್ವಾ ದಂಡಕಾರಣ್ಯೇ ಪುರಂ ಪಶ್ಚಾತ್ ಸಮಾವಿಶ ।
ಇದಾನೀಂ ಭರತಾಯೇದಂ ರಾಜ್ಯಂ ದತ್ತಂ ಮಯಾಖಿಲಮ್ ॥

ಅನುವಾದ

‘‘ಮಗು ಭರತಾ! ನಾನು ಹೇಳುವುದನ್ನು ಕೇಳು. ನೀನು ಹೇಳಿದುದೆಲ್ಲ ಖಂಡಿತವಾಗಿ ಸರಿಯಾಗಿದೆ. ಆದರೆ ತಂದೆಯು ನನಗೆ ‘ಹದಿನಾಲ್ಕು ವರ್ಷಗಳು ದಂಡಕಾರಣ್ಯದಲ್ಲಿ ವಾಸಮಾಡಿ ಅನಂತರ ಅಯೋಧ್ಯೆಗೆ ಬಾ; ಈಗ ಭರತನಿಗೆ ಎಲ್ಲ ರಾಜ್ಯವನ್ನು ನಾನು ಕೊಟ್ಟಿರುವೆ’ ಎಂದು ಆಜ್ಞಾಪಿಸಿದ್ದನು. ॥28-29॥

30
ಮೂಲಮ್

ತತಃ ಪಿತ್ರೈವ ಸುವ್ಯಕ್ತಂ ರಾಜ್ಯಂ ದತ್ತಂ ತವೈವ ಹಿ ।
ದಂಡಕಾರಣ್ಯರಾಜ್ಯಂ ಮೇ ದತ್ತಂ ಪಿತ್ರಾ ತಥೈವ ಚ ॥

ಅನುವಾದ

ಆದ್ದರಿಂದ ನಿನಗೆ ರಾಜ್ಯವನ್ನು ತಂದೆಯವರೇ ಕೊಟ್ಟಿರುವರು ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ದಂಡಕಾರಣ್ಯದ ರಾಜ್ಯವನ್ನು ನನಗೆ ತಂದೆಯವರಿಂದ ಕೊಡಲಾಗಿದೆ. ॥30॥

31
ಮೂಲಮ್

ಅತಃ ಪಿತುರ್ವಚಃ ಕಾರ್ಯಮಾವಾಭ್ಯಾಮತಿಯತ್ನತಃ ।
ಪಿತುರ್ವಚನಮುಲ್ಲಂಘ್ಯ ಸ್ವತಂತ್ರೋ ಯಸ್ತು ವರ್ತತೇ ॥

32
ಮೂಲಮ್

ಸ ಜೀವನ್ನೇವ ಮೃತಕೋ ದೇಹಾಂತೇ ನಿರಯಂ ವ್ರಜೇತ್ ।
ತಸ್ಮಾದ್ರಾಜ್ಯಂ ಪ್ರಶಾಧಿ ತ್ವಂ ವಯಂ ದಂಡಕಪಾಲಕಾಃ ॥

ಅನುವಾದ

ಆದ್ದರಿಂದ ನಾವಿಬ್ಬರೂ ತಂದೆಯ ಮಾತನ್ನು ಪ್ರಯತ್ನಪೂರ್ವಕವಾಗಿ ನಡೆಯಿಸಬೇಕು. ತಂದೆಯ ಮಾತನ್ನು ಮೀರಿ ಸ್ವೇಚ್ಛೆಯಿಂದ ನಡೆಯುವವನು ಬದುಕಿದ್ದರೂ ಸತ್ತಂತೆಯೇ ಸರಿ. ಕೊನೆಗೆ ಸತ್ತ ಬಳಿಕ ನರಕಕ್ಕೆ ಹೋಗುತ್ತಾನೆ. ಆದ್ದರಿಂದ ನೀನು ಅಯೋಧ್ಯೆಯ ರಾಜ್ಯವನ್ನಾಳು, ನಾನು ದಂಡಕಾರಣ್ಯದ ರಾಜ್ಯವನ್ನು ಕಾಪಾಡುತ್ತೇನೆ. ॥31-32॥

33
ಮೂಲಮ್

ಭರತಸ್ತ್ವಬ್ರವೀದ್ರಾಮಂ ಕಾಮುಕೋ ಮೂಢಧೀಃ ಪಿತಾ ।
ಸ್ತ್ರೀಜಿತೋ ಭ್ರಾಂತಹೃದಯ ಉನ್ಮತ್ತೋ ಯದಿ ವಕ್ಷ್ಯತಿ ।
ತತ್ಸತ್ಯಮಿತಿ ನ ಗ್ರಾಹ್ಯಂ ಭ್ರಾಂತವಾಕ್ಯಂ ಯಥಾ ಸುಧೀಃ ॥

ಅನುವಾದ

ಆಗ ಭರತನು ರಾಮಚಂದ್ರನಲ್ಲಿ ಹೇಳುತ್ತಾನೆ ಅಣ್ಣಾ! ಕಾಮವಶನಾಗಿ, ಮೂಢಬುದ್ಧಿಯವನೂ, ಹೆಂಗಸಿಗೆ ಸೋತವನೂ, ಅರಳು-ಮರಳು ಮನಸ್ಸಿನ ಹುಚ್ಚನಂತಾದ ತಂದೆಯು ಏನನ್ನಾದರು ಹೇಳಿದ್ದಲ್ಲಿ ನೀನು ಅದನ್ನು ನಿಜವೆಂದು ಎಣಿಸಬಾರದು. ವಿದ್ವಾಂಸನಾದವನು ಭ್ರಾಂತನ ಮಾತನ್ನು ಲೆಕ್ಕಿಸದಂತೆ ನೀನು ಅದನ್ನು ತಳ್ಳಿಬಿಡು. ॥33॥

34
ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ನ ಸ್ತ್ರೀಜಿತಃ ಪಿತಾ ಬ್ರೂಯಾನ್ನ ಕಾಮೀ ನೈವ ಮೂಢಧೀಃ ।
ಪೂರ್ವಂ ಪ್ರತಿಶ್ರುತಂ ತಸ್ಯ ಸತ್ಯವಾದೀ ದದೌ ಭಯಾತ್ ॥

ಅನುವಾದ

ಶ್ರೀರಾಮನು ಹೇಳಿದನು — ತಂದೆಯವರು ಹೆಂಗಸಿಗೆ ಸೋತಾಗಲಿ, ಕಾಮ-ಪರವಶನಾಗಲಿ, ಮೂಢತನದಿಂದಾಗಲಿ ಎಂದಿಗೂ ಹಾಗೆ ಹೇಳಿರುವುದಿಲ್ಲ. ಈ ಹಿಂದೆಯೆ ಕೈಕೆಯಮ್ಮನಿಗೆ ವರಗಳನ್ನು ಕೊಟ್ಟಿದ್ದನು. ಸತ್ಯವಾದಿಯಾದ ಮಹಾರಾಜನು ಪ್ರತಿಜ್ಞಾಭಂಗದ ಭಯದಿಂದ ವರಗಳನ್ನು ನೆರವೇರಿಸಿ ಕೊಟ್ಟಿರುತ್ತಾನೆ. ॥34॥

35
ಮೂಲಮ್

ಅಸತ್ಯಾದ್ಭೀತಿರಧಿಕಾ ಮಹತಾಂ ನರಕಾದಪಿ ।
ಕರೋಮೀತ್ಯಹಮಪ್ಯೇತತ್ಸತ್ಯಂ ತಸ್ಯೈ ಪ್ರತಿಶ್ರುತಮ್ ॥

36
ಮೂಲಮ್

ಕಥಂ ವಾಕ್ಯಮಹಂ ಕುರ್ಯಾಮಸತ್ಯಂ ರಾಘವೋ ಹಿ ಸನ್ ।
ಇತ್ಯುದೀರಿತಮಾಕರ್ಣ್ಯ ರಾಮಸ್ಯ ಭರತೋಽಬ್ರವೀತ್ ॥

ಅನುವಾದ

ಮಹಾತ್ಮರಿಗೆ ಅಸತ್ಯದ ಭಯವು ನರಕಕ್ಕಿಂತಲೂ ಹೆಚ್ಚಾಗಿರುತ್ತದೆ. ನಾನೂ ಕೂಡ ಅಮ್ಮನಿಗೆ ನಡೆಸಿಕೊಡುತ್ತೇನೆ ಎಂದು ಮಾತುಕೊಟ್ಟಿದ್ದೆ. ರಘುವಂಶದಲ್ಲಿ ಹುಟ್ಟಿದ ನಾನು ಆಡಿದ ಮಾತನ್ನು ಹೇಗೆ ಸುಳ್ಳಾಗಿಸಲಿ? ಶ್ರೀರಾಮನ ಈ ಮಾತನ್ನು ಕೇಳಿದ ಭರತನು ಇಂತೆಂದನು ॥35-36॥

37
ಮೂಲಮ್

ತಥೈವ ಚೀರವಸನೋ ವನೇ ವತ್ಸ್ಯಾಮಿ ಸುವ್ರತ ।
ಚತುರ್ದಶ ಸಮಾಸ್ತ್ವಂ ತು ರಾಜ್ಯಂ ಕುರು ಯಥಾಸುಖಮ್ ॥

ಅನುವಾದ

‘‘ಹೇ ವ್ರತನಿಷ್ಠನೆ! ಸರಿ, ಹಾಗಾದರೆ ತಂದೆಯ ಮಾತನ್ನು ಸತ್ಯವಾಗಿಸಲು ನಿನ್ನಂತೆಯೇ ನಾನೂ ಹದಿನಾಲ್ಕು ವರ್ಷ ಕಾಲ ನಾರುಮಡಿಯನ್ನುಟ್ಟು ಕಾಡಿನಲ್ಲಿ ವಾಸಮಾಡುವೆನು. ನೀನಾದರೋ ಸುಖವಾಗಿ ರಾಜ್ಯಭಾರ ಮಾಡುವವನಾಗು.’’ ॥37॥

38
ಮೂಲಮ್ (ವಾಚನಮ್)

ಶ್ರೀರಾಮ ಉವಾಚ

ಮೂಲಮ್

ಪಿತ್ರಾ ದತ್ತಂ ತವೈವೈತದ್ರಾಜ್ಯಂ ಮಹ್ಯಂ ವನಂ ದದೌ ।
ವ್ಯತ್ಯಯಂ ಯದ್ಯಹಂ ಕುರ್ಯಾಮಸತ್ಯಂ ಪೂರ್ವವತ್ ಸ್ಥಿತಮ್ ॥

ಅನುವಾದ

ಶ್ರೀರಾಮನಿಂತೆಂದನು — ಈ ರಾಜ್ಯವನ್ನು ತಂದೆಯವರೇ ನಿನಗೆ ಕೊಟ್ಟಿರುವರು. ನನಗೆ ಕಾಡನ್ನು ಕೊಟ್ಟಿರುವರು. ನಾನೇನಾದರು ಈ ಪ್ರತಿಜ್ಞೆಯನ್ನು ಬದಲಾಯಿಸಿದರೆ ಅಸತ್ಯವು ಹೇಗಿದೆಯೋ ಹಾಗೆಯೇ ಉಳಿಯುವುದು. ॥38॥

39
ಮೂಲಮ್ (ವಾಚನಮ್)

ಭರತ ಉವಾಚ

ಮೂಲಮ್

ಅಹಮಪ್ಯಾಗಮಿಷ್ಯಾಮಿ ಸೇವೇ ತ್ವಾಂ ಲಕ್ಷ್ಮಣೋ ಯಥಾ ।
ನೋಚೇತ್ಪ್ರಾಯೋಪವೇಶೇನ ತ್ಯಜಾಮ್ಯೇತತ್ಕಲೇವರಮ್ ॥

ಅನುವಾದ

ಭರತನಿಂತೆಂದನು ಸರಿ, ನೀನು ಕಾಡಿನಿಂದ ಹಿಂದಿರುಗಲು ಬಯಸುವುದಿಲ್ಲವಾದರೆ ನಾನೂ ಲಕ್ಷ್ಮಣನಂತೆಯೇ ನಿನ್ನ ಸೇವೆಯನ್ನು ಮಾಡಿಕೊಂಡು ನಿನ್ನೊಡನೆಯೇ ಇರುವೆನು. ಹಾಗಾಗದಿದ್ದರೆ, ಉಪವಾಸದಿಂದ ಈ ಶರೀರವನ್ನು ಇಲ್ಲಿಯೇ ಬಿಟ್ಟು ಬಿಡುವೆನು. ॥39॥

40
ಮೂಲಮ್

ಇತ್ಯೇವಂ ನಿಶ್ಚಯಂ ಕೃತ್ವಾ ದರ್ಭಾನಾಸ್ತೀರ್ಯ ಚಾತಪೇ ।
ಮನಸಾಪಿ ವಿನಿಶ್ಚಿತ್ಯ ಪ್ರಾಙ್ಮುಖೋಪವಿವೇಶ ಸಃ ॥

ಅನುವಾದ

ಹೀಗೆಂದು ನಿರ್ಣಯಿಸಿ ಬಿಸಿಲಿನಲ್ಲಿ ದರ್ಭೆಗಳನ್ನು ಹರಡಿ ಅವುಗಳ ಮೇಲೆ ಪೂರ್ವಾಭಿಮುಖನಾಗಿ ಕುಳಿತು, ಮನಸ್ಸಿನಲ್ಲಿಯೂ ಹಾಗೆ ನಿಶ್ಚಿಯಿಸಿಕೊಂಡನು. ॥40॥

41
ಮೂಲಮ್

ಭರತಸ್ಯಾಪಿ ನಿರ್ಬಂಧಂ ದೃಷ್ಟ್ವಾ ರಾಮೋಽತಿವಿಸ್ಮಿತಃ ।
ನೇತ್ರಾಂತಸಂಜ್ಞಾಂ ಗುರವೇ ಚಕಾರ ರಘುನಂದನಃ ॥

ಅನುವಾದ

ಭರತನ ಈ ಒತ್ತಾಯವನ್ನು ಕಂಡು ಆಶ್ಚರ್ಯಚಕಿತನಾದ ಶ್ರೀರಘುನಂದನನು ಗುರುಗಳಾದ ವಸಿಷ್ಠರಿಗೆ ಕಣ್ಣುಗಳಿಂದ ಸಂಜ್ಞೆಮಾಡಿ (ತತ್ತ್ವೋಪದೇಶ ಮಾಡುವಂತೆ) ಸೂಚಿಸಿದನು. ॥41॥

42
ಮೂಲಮ್

ಏಕಾಂತೇ ಭರತಂ ಪ್ರಾಹ ವಸಿಷ್ಠೋ ಜ್ಞಾನಿನಾಂ ವರಃ ।
ವತ್ಸ ಗುಹ್ಯಂ ಶೃಣುಷ್ವೇದಂ ಮಮ ವಾಕ್ಯಾತ್ಸುನಿಶ್ಚಿತಮ್ ॥

ಅನುವಾದ

ಆಗ ಜ್ಞಾನಿಗಳಲ್ಲಿ ಶ್ರೇಷ್ಠರಾದ ವಸಿಷ್ಠರು ಭರತನನ್ನು ಏಕಾಂತದಲ್ಲಿ ಕರೆದುಕೊಂಡು ಹೋಗಿ ಹೇಳಿದರು — ‘‘ಮಗು ಭರತಾ! ನಾನು ಹೇಳುತ್ತಿರುವುದು ನಿಶ್ಚಯವಾಗಿ ಗುಹ್ಯ-ರಹಸ್ಯದ ಮಾತಾಗಿದೆ, ಅದನ್ನು ಕೇಳು. ॥42॥

43
ಮೂಲಮ್

ರಾಮೋ ನಾರಾಯಣಃ ಸಾಕ್ಷಾದ್ಬ್ರಹ್ಮಣಾ ಯಾಚಿತಃ ಪುರಾ ।
ರಾವಣಸ್ಯ ವಧಾರ್ಥಾಯ ಜಾತೋ ದಶರಥಾತ್ಮಜಃ ॥

ಅನುವಾದ

ಶ್ರೀರಾಮನು ಸಾಕ್ಷಾತ್ ನಾರಾಯಣನಾಗಿದ್ದಾನೆ. ಹಿಂದೆ ಬ್ರಹ್ಮನಿಂದ ಪ್ರಾರ್ಥಿತನಾಗಿ ರಾವಣನ ವಿನಾಶಕ್ಕಾಗಿ ದಶರಥನ ಪುತ್ರನಾಗಿ ಪ್ರಾದುರ್ಭವಿಸಿರುವನು. ॥43॥

44
ಮೂಲಮ್

ಯೋಗಮಾಯಾಪಿ ಸೀತೇತಿ ಜಾತಾ ಜನಕನಂದಿನೀ ।
ಶೇಷೋಽಪಿ ಲಕ್ಷ್ಮಣೋ ಜಾತೋ ರಾಮಮನ್ವೇತಿ ಸರ್ವದಾ ॥

ಅನುವಾದ

ಇದೇ ಪ್ರಕಾರ ಯೋಗಮಾಯೆಯು ಜನಕ ನಂದಿನೀ ಸೀತೆಯಾಗಿ ಅವತರಿಸಿರುವಳು. ಆದಿಶೇಷನು ಲಕ್ಷ್ಮಣನ ರೂಪದಿಂದ ಅವತರಿಸಿ ಸದಾಕಾಲ ಶ್ರೀರಾಮನನ್ನು ಅನುಸರಿಸುತ್ತಿರುವನು. ॥44॥

45
ಮೂಲಮ್

ರಾವಣಂ ಹಂತುಕಾಮಾಸ್ತೇ ಗಮಿಷ್ಯಂತಿ ನ ಸಂಶಯಃ ।
ಕೈಕೇಯ್ಯಾ ವರದಾನಾದಿ ಯದ್ಯನ್ನಿಷ್ಠುರಭಾಷಣಮ್ ॥

46
ಮೂಲಮ್

ಸರ್ವಂ ದೇವಕೃತಂ ನೋಚೇದೇವಂ ಸಾ ಭಾಷಯೇತ್ಕಥಮ್ ।
ತಸ್ಮಾತ್ತ್ಯಜಾಗ್ರಹಂ ತಾತ ರಾಮಾಸ್ಯ ವಿನಿವರ್ತನೇ ॥

ಅನುವಾದ

ಇವರೆಲ್ಲರು ರಾವಣನನ್ನು ಕೊಲ್ಲಲು ಬಯಸುತ್ತಿದ್ದಾರೆ. ಆದ್ದರಿಂದ ಕಾಡಿಗೆ ಹೋಗಿಯೇ ಹೋಗುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ. ಕೈಕೆಯಿಗೆ ವರವನ್ನು ಕೊಟ್ಟಿದ್ದು, ಆಕೆಯು ಕಠಿನವಾಗಿ ಮಾತನಾಡಿದ್ದು ಇವೆಲ್ಲವೂ ದೇವತೆಗಳ ಪ್ರೇರಣೆಯಿಂದಲೇ ನಡೆದಿದೆ. ಹಾಗಿಲ್ಲದಿದ್ದರೆ ಆಕೆಯಾದರೂ ತಾನೆ ಇಂತಹ ಕೆಟ್ಟ ಮಾತುಗಳನ್ನು ಏಕೆ ಆಡುತ್ತಿದ್ದಳು? ಆದ್ದರಿಂದ, ಮಗು! ಶ್ರೀರಾಮನನ್ನು ಹಿಂದಿರುಗಿಸುವ ವಿಚಾರದಲ್ಲಿ ನೀನು ಹಟವನ್ನು ಬಿಟ್ಟು ಬಿಡು. ॥45-46॥

47
ಮೂಲಮ್

ನಿವರ್ತಸ್ವ ಮಹಾಸೈನ್ಯೈರ್ಮಾತೃಭಿಃ ಸಹಿತಃ ಪುರಮ್ ।
ರಾವಣಂ ಸಕುಲಂ ಹತ್ವಾ ಶೀಘ್ರಮೇವಾಗಮಿಷ್ಯತಿ ॥

ಅನುವಾದ

ತಾಯಂದಿರೊಡನೆ ಹಾಗೂ ದೊಡ್ಡ ಸೈನ್ಯದ ಜೊತೆಗೂಡಿ ಊರಿಗೆ ಹಿಂತಿರುಗು. ಶ್ರೀರಾಮನು ಕುಲಸಹಿತ ರಾವಣನನ್ನು ವಧಿಸಿ ಬೇಗನೇ ಅಯೋಧ್ಯೆಗೆ ಹಿಂತಿರುಗಲಿದ್ದಾನೆ.’’ ॥47॥

48
ಮೂಲಮ್

ಇತಿ ಶ್ರುತ್ವಾ ಗುರೋರ್ವಾಕ್ಯಂ ಭರತೋ ವಿಸ್ಮಯಾನ್ವಿತಃ ।
ಗತ್ವಾ ಸಮೀಪಂ ರಾಮಸ್ಯ ವಿಸ್ಮಯೋತ್ಫುಲ್ಲಲೋಚನಃ ॥

ಅನುವಾದ

ಗುರುಗಳು ಆಡಿದ ನುಡಿಯನ್ನು ಕೇಳಿ ಭರತನು ಆಶ್ಚರ್ಯ ಚಕಿತನಾಗಿ ಅರಳಿದ ಕಣ್ಣುಗಳುಳ್ಳವನಾಗಿ ಶ್ರೀರಾಮನ ಬಳಿಗೆ ಬಂದು ನುಡಿದನು. ॥48॥

49
ಮೂಲಮ್

ಪಾದುಕೇ ದೇಹಿ ರಾಜೇಂದ್ರ ರಾಜ್ಯಾಯ ತವ ಪೂಜಿತೇ ।
ತಯೋಃ ಸೇವಾಂ ಕರೋಮ್ಯೇವ ಯಾವದಾಗಮನಂ ತವ ॥

ಅನುವಾದ

‘‘ಹೇ ರಾಜೇಂದ್ರಾ! ನೀನು ನನಗೆ ರಾಜ್ಯಶಾಸನಕ್ಕಾಗಿ ನಿನ್ನ ಜಗತ್ಪೂಜ್ಯ ಚರಣ ಪಾದುಕೆಗಳನ್ನು ಕರುಣಿಸು. ನೀನು ಬರುವವರೆಗೂ ಅವುಗಳ ಸೇವೆಯನ್ನು ಮಾಡಿಕೊಂಡಿರುವೆನು.’’ ॥49॥

50
ಮೂಲಮ್

ಇತ್ಯುಕ್ತ್ವಾ ಪಾದುಕೇ ದಿವ್ಯೇ ಯೋಜಯಾಮಾಸ ಪಾದಯೋಃ ।
ರಾಮಸ್ಯ ತೇ ದದೌ ರಾಮೋ ಭರತಾಯಾತಿಭಕ್ತಿತಃ ॥

ಅನುವಾದ

ಹೀಗೆಂದು ಹೇಳಿ ಅನರ್ಘ್ಯವಾದ ಎರಡು ಪಾದುಕೆಗಳನ್ನು ಶ್ರೀರಾಮನ ಕಾಲುಗಳಿಗೆ ತೊಡಿಸಿದನು. ಶ್ರೀರಾಮಚಂದ್ರನು ಭರತನ ಭಕ್ತಿ-ಭಾವವನ್ನು ನೋಡಿ ಆ ಪಾದುಕೆಗಳನ್ನು ಅನುಗ್ರಹಿಸಿದನು. ॥50॥

51
ಮೂಲಮ್

ಗೃಹೀತ್ವಾ ಪಾದುಕೇ ದಿವ್ಯೇ ಭರತೋ ರತ್ನಭೂಷಿತೇ ।
ರಾಮಂ ಪುನಃ ಪರಿಕ್ರಮ್ಯ ಪ್ರಣನಾಮ ಪುನಃ ಪುನಃ ॥

ಅನುವಾದ

ಭರತನು ರತ್ನಾಲಂಕೃತವಾದ ಆ ಎರಡು ದಿವ್ಯ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ಶ್ರೀರಾಮಚಂದ್ರನಿಗೆ ಪ್ರದಕ್ಷಿಣೆ ಬಂದು ಪದೇ-ಪದೇ ವಂದಿಸಿಕೊಂಡನು. ॥51॥

52
ಮೂಲಮ್

ಭರತಃ ಪುನರಾಹೇದಂ ಭಕ್ತ್ಯಾ ಗದ್ಗದಯಾ ಗಿರಾ ।
ನವಪಂಚಸಮಾಂತೇ ತು ಪ್ರಥಮೇ ದಿವಸೇ ಯದಿ ॥

53
ಮೂಲಮ್

ನಾಗಮಿಷ್ಯಸಿ ಚೇದ್ರಾಮ ಪ್ರವಿಶಾಮಿ ಮಹಾನಲಮ್ ।
ಬಾಢಮಿತ್ಯೇವ ತಂ ರಾಮೋ ಭರತಂ ಸಂನ್ಯವರ್ತಯತ್ ॥

ಅನುವಾದ

ಭಕ್ತಿಯಿಂದ ಗದ್ಗದಿತನಾಗಿ ಕಂಠ ಉಳ್ಳಿಸಿ ಬಂದ ಭರತನು ಪುನಃ ಹೇಳುತ್ತಾನೆ ‘‘ರಘುಪ್ರವರಾ! ಹದಿನಾಲ್ಕು ವರ್ಷಗಳು ಕಳೆದ ನಂತರ (ಹದಿನೈದನೇ ವರ್ಷದ) ಮೊದಲ ದಿನವೇ ನೀನು ಅಯೋಧ್ಯೆಗೆ ಬರಲಿಲ್ಲವಾದರೆ ನಾನು ದೊಡ್ಡ ಬೆಂಕಿಯನ್ನು ಪ್ರವೇಶಿಸಿ ಬಿಡುವೆನು.’’ ಆಗ ರಾಮಚಂದ್ರನು ‘‘ಹಾಗೇ ಆಗಲಿ; ಬಂದೇ ಬರುವೆನು’’ ಎಂದು ಆಶ್ವಾಸನೆಯನ್ನಿತ್ತು ಭರತನನ್ನು ಬೀಳ್ಕೊಟ್ಟನು. ॥52-53॥

54
ಮೂಲಮ್

ಸಸೈನ್ಯಃ ಸವಸಿಷ್ಠಶ್ಚ ಶತ್ರುಘ್ನಸಹಿತಃ ಸುಧೀಃ ।
ಮಾತೃಭಿರ್ಮಂತ್ರಿಭಿಃ ಸಾರ್ಧಂ ಗಮನಾಯೋಪಚಕ್ರಮೇ ॥

ಅನುವಾದ

ಅನಂತರ ಜಾಣನಾದ ಭರತನು ವಸಿಷ್ಠರನ್ನು, ತಾಯಂದಿರನ್ನು, ಮಂತ್ರಿಗಳನ್ನು ಕರೆದುಕೊಂಡು ಸೇನಾಸಹಿತ ಹೊರಡಲನುವಾದನು. ॥54॥

55
ಮೂಲಮ್

ಕೈಕೇಯೀ ರಾಮಮೇಕಾಂತೇ ಸ್ರವನ್ನೇತ್ರಜಲಾಕುಲಾ ।
ಪ್ರಾಂಜಲಿಃ ಪ್ರಾಹ ಹೇ ರಾಮ ತವ ರಾಜ್ಯವಿಘಾತನಮ್ ॥

56
ಮೂಲಮ್

ಕೃತಂ ಮಯಾ ದುಷ್ಟಧಿಯಾ ಮಾಯಾಮೋಹಿತ ಚೇತಸಾ ।
ಕ್ಷಮಸ್ವ ಮಮ ದೌರಾತ್ಮ್ಯಂ ಕ್ಷಮಾಸಾರಾ ಹಿ ಸಾಧವಃ ॥

ಅನುವಾದ

ಆಗಲೇ ಕೈಕೆಯಿಯು ಶ್ರೀರಾಮಚಂದ್ರನನ್ನು ಏಕಾಂತದಲ್ಲಿ ಸಂಧಿಸಿ ಕಣ್ಣೀರು ಸುರಿಸುತ್ತಾ, ಕೈಮುಗಿದುಕೊಂಡು ಹೀಗೆಂದಳು ‘‘ರಾಮಭದ್ರಾ! ನಿನ್ನ ರಾಜ್ಯಾಭಿಷೇಕವನ್ನು ಕೆಡಿಸಿ ನಾನು ಅಪರಾಧಿಯಾಗಿದ್ದೇನೆ. ದುಷ್ಟಚಿತ್ತಳೂ, ಮಾಯಾ ಮೋಹಿತಳೂ ಆದ ನನ್ನಿಂದಾದ ಈ ಕೆಟ್ಟಕೆಲಸವನ್ನು ಕ್ಷಮಿಸಿಬಿಡು; ಏಕೆಂದರೆ, ಸಾಧುಗಳು ಸರ್ವದಾ ಕ್ಷಮಾಶೀಲರಾಗಿರುತ್ತಾರೆ. ॥55-56॥

57
ಮೂಲಮ್

ತ್ವಂ ಸಾಕ್ಷಾದ್ವಿಷ್ಣುರವ್ಯಕ್ತಃ ಪರಮಾತ್ಮಾ ಸನಾತನಃ ।
ಮಾಯಾಮಾನುಷರೂಷೇಣ ಮೋಹಯಸ್ಯಖಿಲಂ ಜಗತ್ ।
ತ್ವಯೈವ ಪ್ರೇರಿತೋ ಲೋಕಃ ಕುರುತೇ ಸಾಧ್ವಸಾಧು ವಾ ॥

ಅನುವಾದ

ನೀನಾದರೋ ಸಾಕ್ಷಾತ್ ವಿಷ್ಣುಸ್ವರೂಪನು. ಅವ್ಯಕ್ತನೂ ಸನಾತನನೂ ಆದ ಪರಮಾತ್ಮನಾಗಿರುವೆ. ಮಾಯಾಮಯ ಮನುಷ್ಯನಾಗಿ ಅವತರಿಸಿ ಎಲ್ಲ ಪ್ರಪಂಚವನ್ನು ಮೋಹಗೊಳಿಸುತ್ತಿರುವೆ. ನಿನ್ನ ಪ್ರೇರಣೆಯಿಂದಲೇ ಜೀವರುಗಳು ಶುಭ-ಅಶುಭ ಕರ್ಮಗಳನ್ನು ಮಾಡುತ್ತಿರುತ್ತಾರೆ. ॥57॥

58
ಮೂಲಮ್

ತ್ವದಧೀನಮಿದಂ ವಿಶ್ವಮಸ್ವತಂತ್ರಂ ಕರೋತಿ ಕಿಮ್ ।
ಯಥಾ ಕೃತ್ರಿಮನರ್ತಕ್ಯೋ ನೃತ್ಯಂತಿ ಕುಹಕೇಚ್ಛಯಾ ॥

59
ಮೂಲಮ್

ತ್ವದಧೀನಾ ತಥಾ ಮಾಯಾ ನರ್ತಕೀ ಬಹುರೂಪಿಣೀ ।
ತ್ವಯೈವ ಪ್ರೇರಿತಾಹಂ ಚ ದೇವಕಾರ್ಯಂ ಕರಿಷ್ಯತಾ ॥

60
ಮೂಲಮ್

ಪಾಪಿಷ್ಠಂ ಪಾಪಮನಸಾ ಕರ್ಮಾಚರಮರಿಂದಮ ।
ಅದ್ಯ ಪ್ರತೀತೋಽಸಿ ಮಮ ದೇವಾನಾಮಪ್ಯಗೋಚರಃ ॥

ಅನುವಾದ

ಪ್ರಪಂಚವೆಲ್ಲವೂ ನಿನಗೆ ಅಧೀನವಾಗಿದೆ. ಅಸ್ವತಂತ್ರವಾದ ಅದು ತಾನಾಗಿಯೇ ಏನು ಮಾಡೀತು? ಕುಣಿಯುವ ಸೂತ್ರದ ಗೊಂಬೆಗಳು ಸೂತ್ರಧಾರನ ಇಚ್ಛೆಯಂತೆ ನರ್ತನಮಾಡುವಂತೆ ನಿನಗೆ ವಶಳಾದ ಮಾಯೆಯೆಂಬ ನರ್ತಕಿಯು ಬಹುರೂಪಿಣಿಯಾಗಿದ್ದು ಜಗತ್ತನ್ನು ಕುಣಿಸುತ್ತಿರುವಳು. ಹೇ ಶತ್ರುನಾಶಕನೆ! ದೇವಕಾರ್ಯವನ್ನು ಸಾಧಿಸಲಿರುವ ನಿನ್ನಿಂದಲೇ ಪ್ರೇರಿತಳಾದ ನಾನು ಕೆಟ್ಟ ಮನಸ್ಸಿನಿಂದ ಈ ಪಾಪಕಾರ್ಯವನ್ನು ಮಾಡಿಬಿಟ್ಟೆನು. ದೇವತೆಗಳಿಗೂ ಅದೃಶ್ಯನಾಗಿರುವ ನೀನು ಈಗ ನನಗೆ ಕಾಣಿಸಿಕೊಳ್ಳುತ್ತಿರುವೆ. ॥58-60॥

61
ಮೂಲಮ್

ಪಾಹಿ ವಿಶ್ವೇಶ್ವರಾನಂತ ಜಗನ್ನಾಥ ನಮೋಽಸ್ತು ತೇ ।
ಛಿಂಧಿ ಸ್ನೇಹಮಯಂ ಪಾಶಂ ಪುತ್ರವಿತ್ತಾದಿಗೋಚರಮ್ ॥

62
ಮೂಲಮ್

ತ್ವಜ್ಜ್ಞಾನಾನಲಖಡ್ಗೇನ ತ್ವಾಮಹಂ ಶರಣಂ ಗತಾ ।
ಕೈಕೇಯ್ಯಾ ವಚನಂ ಶ್ರುತ್ವಾ ರಾಮಃ ಸಸ್ಮಿತಮಬ್ರವೀತ್ ॥

ಅನುವಾದ

ಹೇ ವಿಶ್ವೇಶ್ವರಾ! ಹೇ ಅನಂತಾ! ಜಗನ್ನಾಥನೇ! ಕಾಪಾಡು. ನಿನಗೆ ನಮಸ್ಕಾರವಿರಲಿ. ಮೋಹಕ ರೂಪವಾದ ಪುತ್ರ, ಐಶ್ವರ್ಯ ಮುಂತಾದ ಈ ಸ್ನೇಹಪಾಶವನ್ನು ನಿನ್ನ ಜ್ಞಾನಾಗ್ನಿರೂಪೀ ಖಡ್ಗದಿಂದ ಕತ್ತರಿಸಿಬಿಡು. ನಾನು ನಿನಗೆ ಶರಣು ಬಂದಿರುವೆನು.’’ ಕೈಕೆಯಿಯ ಮಾತುಗಳನ್ನು ಕೇಳಿ ಮುಗುಳುನಗುತ್ತಾ ಶ್ರೀರಾಮನು ಇಂತೆಂದನು. ॥61-62॥

63
ಮೂಲಮ್

ಯದಾಹ ಮಾಂ ಮಹಾಭಾಗೇ ನಾನೃತಂ ಸತ್ಯಮೇವ ತತ್ ।
ಮಯೈವ ಪ್ರೇರಿತಾ ವಾಣೀ ತವ ವಕಾದ್ವಿನಿರ್ಗತಾ ॥

64
ಮೂಲಮ್

ದೇವಕಾರ್ಯಾರ್ಥಸಿದ್ಧ್ಯರ್ಥಮತ್ರ ದೋಷಃ ಕುತಸ್ತವ ।
ಗಚ್ಛ ತ್ವಂ ಹೃದಿ ಮಾಂ ನಿತ್ಯಂ ಭಾವಯಂತಿ ದಿವಾನಿಶಮ್ ॥

65
ಮೂಲಮ್

ಸರ್ವತ್ರ ವಿಗತಸ್ನೇಹಾ ಮದ್ಭಕ್ತ್ಯಾ ಮೋಕ್ಷ್ಯಸೇಽಚಿರಾತ್ ।
ಅಹಂ ಸರ್ವತ್ರ ಸಮದೃಗ್ ದ್ವೇಷ್ಯೋ ವಾ ಪ್ರಿಯ ಏವ ವಾ ॥

ಅನುವಾದ

‘‘ಎಲೈ ಪೂಜ್ಯಳೆ! ನನ್ನನ್ನು ಕುರಿತು ನೀನು ಹೇಳಿದ್ದೆಲ್ಲವೂ ಸುಳ್ಳಲ್ಲ, ಸತ್ಯವೇ ಆಗಿದೆ. ನನ್ನಿಂದ ಪ್ರೇರಿತಳಾಗಿ, ದೇವತೆಗಳ ಕಾರ್ಯವನ್ನು ಸಾಧಿಸುವುದಕ್ಕಾಗಿ ನಿನ್ನ ಮುಖದಿಂದ ಆ ಶಬ್ದಗಳು ಹೊರಬಂದಿವೆ. ಇದರಲ್ಲಿ ನಿನ್ನದು ಯಾವುದೇ ತಪ್ಪು ಇಲ್ಲ. ನೀನಾದರೋ ಹಗಲಿರುಳೂ ನನ್ನನ್ನೇ ಹೃದಯದಲ್ಲಿ ಚಿಂತಿಸುತ್ತಾ ಯಾವುದರಲ್ಲಿಯೂ ಆಶೆಯಿಲ್ಲದವಳಾಗಿ ನನ್ನ ಭಕ್ತಿಯಿಂದ ಇದ್ದುಕೊಂಡಿರು. ನೀನು ಬೇಗನೇ ಮುಕ್ತಿಯನ್ನು ಪಡೆಯುವೆ. ಇನ್ನು ನೀನು ಹೊರಡು. ನಾನು ಸರ್ವತ್ರ ಸಮದರ್ಶಿಯಾಗಿದ್ದೇನೆ. ನನಗೆ ಬೇಕಾದವರಾಗಲೀ, ಬೇಡದವರಾಗಲೀ ಯಾರೂ ಇಲ್ಲ. ॥63-65॥

66
ಮೂಲಮ್

ನಾಸ್ತಿ ಮೇ ಕಲ್ಪಕಸ್ಯೇವ ಭಜತೋಽನುಭಜಾಮ್ಯಹಮ್ ।
ಮನ್ಮಾಯಾಮೋಹಿತಧಿಯೋ ಮಾಮಂಬ ಮನುಜಾಕೃತಿಮ್ ॥

67
ಮೂಲಮ್

ಸುಖದುಃಖಾದ್ಯನುಗತಂ ಜಾನಂತಿ ನ ತು ತತ್ತ್ವತಃ ।
ದಿಷ್ಟ್ಯಾ ಮದ್ಗೋಚರಂ ಜ್ಞಾನಮುತ್ಪನ್ನಂ ತೇ ಭವಾಪಹಮ್ ॥

ಅನುವಾದ

ಮಾಯೆಯಿಂದ ವಸ್ತುಗಳನ್ನು ಸೃಷ್ಟಿಸುವ ಐಂದ್ರಜಾಲಿಕನಿಗೆ ತನ್ನ ವಸ್ತುಗಳಲ್ಲಿ ಬೇಕು-ಬೇಡ ಎಂಬ ಭಾವನೆಗಳಿರುವುದಿಲ್ಲವೋ ಹಾಗೆಯೇ ನನಗೂ ಯಾರೊಂದಿಗೂ ರಾಗ-ದ್ವೇಷಗಳಿಲ್ಲ. ಆದರೆ ಯಾರು ನನ್ನನ್ನು ಹೇಗೆ ಭಜಿಸುತ್ತಾರೋ ಹಾಗೆಯೇ ನಾನು ಅನುಗ್ರಹಿಸುವೆನು. ಎಲೈ ತಾಯೆ! ನನ್ನ ಮಾಯೆಯಿಂದ ಮೋಹಿತರಾದ ಅಜ್ಞಾನಿಗಳು ಮನುಷ್ಯಾಕಾರನಾದ ನನ್ನನ್ನು ಸುಖ-ದುಃಖಗಳಿಂದ ಕೂಡಿದವನೆಂದು ಭಾವಿಸುತ್ತಾರೆ. ಅವರು ನನ್ನ ನಿಜವಾದ ಸ್ವರೂಪವನ್ನು ಅರಿಯರು. ನಿನಗಾದರೋ ಅದೃಷ್ಟವಿಶೇಷದಿಂದ ನನ್ನ ವಿಷಯಕ ನಿಜ ಜ್ಞಾನ ಉಂಟಾಗಿದೆ. ಇದು ಸಂಸಾರದ ಭಯವನ್ನು ನೀಗುವುದಾಗಿದೆ. ॥66-67॥

68
ಮೂಲಮ್

ಸ್ಮರಂತೀ ತಿಷ್ಠ ಭವನೇ ಲಿಪ್ಯಸೇ ನ ಚ ಕರ್ಮಭಿಃ ।
ಇತ್ಯುಕ್ತ್ವಾ ಸಾ ಪರಿಕ್ರಮ್ಯ ರಾಮಂ ಸಾನಂದವಿಸ್ಮಯಾ ॥

69
ಮೂಲಮ್

ಪ್ರಣಮ್ಯ ಶತಶೋ ಭೂಮೌ ಯಯೌ ಗೇಹಂ ಮುದಾನ್ವಿತಾ ।
ಭರತಸ್ತು ಸಹಾಮಾತ್ಯೈರ್ಮಾತೃಭಿರ್ಗುರುಣಾ ಸಹ ॥

70
ಮೂಲಮ್

ಅಯೋಧ್ಯಾಮಗಮಚ್ಛೀಘ್ರಂ ರಾಮಮೇವಾನುಚಿಂತಯನ್ ।
ಪೌರಜಾನಪದಾನ್ ಸರ್ವಾನಯೋಧ್ಯಾಯಾಮುದಾರಧೀಃ ॥

71
ಮೂಲಮ್

ಸ್ಥಾಪಯಿತ್ವಾ ಯಥಾನ್ಯಾಯಂ ನಂದಿಗ್ರಾಮಂ ಯಯೌ ಸ್ವಯಮ್ ।
ತತ್ರ ಸಿಂಹಾಸನೇ ನಿತ್ಯಂ ಪಾದುಕೇ ಸ್ಥಾಪ್ಯ ಭಕ್ತಿತಃ ॥

72
ಮೂಲಮ್

ಪೂಜಯಿತ್ವಾ ಯಥಾ ರಾಮಂ ಗಂಧಪುಷ್ಪಾಕ್ಷತಾದಿಭಿಃ ।
ರಾಜೋಪಚಾರೈರಖಿಲೈಃ ಪ್ರತ್ಯಹಂ ನಿಯತವ್ರತಃ ॥

73
ಮೂಲಮ್

ಫಲಮೂಲಾಶನೋ ದಾಂತೋ ಜಟಾವಲ್ಕಲಧಾರಕಃ ।
ಅಧಃಶಾಯೀ ಬ್ರಹ್ಮಚಾರೀ ಶತ್ರುಘ್ನಸಹಿತಸ್ತದಾ ॥

ಅನುವಾದ

ನೀನು ನನ್ನನ್ನೇ ನೆನೆಯುತ್ತಾ ಮನೆಯಲ್ಲೇ ಇದ್ದುಕೊಂಡಿರು. ನಿನಗೆ ಯಾವ ಕರ್ಮಲೇಪವೂ ಉಂಟಾಗದು.’’ ಶ್ರೀರಾಮಚಂದ್ರನು ಈ ಪ್ರಕಾರ ಹೇಳಿದಾಗ ಕೈಕೆಯಿಯು ಆನಂದದಿಂದಲೂ, ಆಶ್ಚರ್ಯದಿಂದಲೂ ಕೂಡಿ ಶ್ರೀರಾಮನಿಗೆ ಪ್ರದಕ್ಷಿಣೆ ಬಂದು ನೂರಾರು ಬಾರಿ ನೆಲಮುಟ್ಟಿ ನಮಸ್ಕರಿಸಿ ಸಂತೋಷದಿಂದ ಮನೆಗೆ ಹೊರಟಳು. ಆಗ ಭರತನು ಮಂತ್ರಿಗಳೂ, ತಾಯಂದಿರೂ, ಗುರುಗಳಾದ ವಸಿಷ್ಠರೊಡಗೂಡಿ ಸೇನಾಸಹಿತ ಶ್ರೀರಾಮನನ್ನೇ ಧ್ಯಾನಿಸುತ್ತಾ ಶಿಘ್ರವಾಗಿ ಅಯೋಧ್ಯಾನಗರಿಗೆ ಬಂದನು. ಉದಾರ ಬುದ್ಧಿಯವನಾದ ಭರತನು ಪಟ್ಟಣಿಗರೆಲ್ಲರನ್ನು ಅಯೋಧ್ಯೆಯಲ್ಲಿ ಯಥಾಯೋಗ್ಯ ರೀತಿಯಿಂದ ನೆಲೆಗೊಳಿಸಿ, ಸ್ವತಃ ನಂದಿಗ್ರಾಮಕ್ಕೆ ಹೊರಟು ಹೋದನು. ಅಲ್ಲಿ ರತ್ನಖಚಿತವಾದ ಸಿಂಹಾಸನದ ಮೇಲೆ ದಿವ್ಯವಾದ ಆ ಪಾದುಕೆಗಳನ್ನು ಸ್ಥಾಪಿಸಿ, ಭಕ್ತಿಯಿಂದ ಗಂಧ, ಪುಷ್ಪ, ಅಕ್ಷತೆ ಮುಂತಾದವುಗಳಿಂದ ಸಾಕ್ಷಾತ್ ಶ್ರೀರಾಮನನ್ನು ಪೂಜಿಸುವಂತೆ ರಾಜೋಪಚಾರಗಳಿಂದ ಪ್ರತಿದಿನವೂ ನಿಯಮದಿಂದ ಅರ್ಚಿಸುತ್ತಿದ್ದನು. ತಾನು ಮಾತ್ರ ಕಂದ ಮೂಲ ಫಲಗಳನ್ನು ತಿಂದು ಜೀವಿಸುತ್ತಾ ಜಟಾವಲ್ಕಲಗಳನ್ನುಟ್ಟು ಇಂದ್ರಿಯ ನಿಗ್ರಹ, ಬ್ರಹ್ಮಚರ್ಯದಿಂದ ಕೂಡಿ ನೆಲದ ಮೇಲೆ ಮಲಗುತ್ತಾ ಶತ್ರುಘ್ನನೊಡನೆ ಇರತೊಡಗಿದನು. ॥68-73॥

74
ಮೂಲಮ್

ರಾಜಕಾರ್ಯಾಣಿ ಸರ್ವಾಣಿ ಯಾವಂತಿ ಪೃಥಿವೀತಲೇ ।
ತಾನಿ ಪಾದುಕಯೋಃ ಸಮ್ಯಙ್ ನಿವೇದಯತಿ ರಾಘವಃ ॥

75
ಮೂಲಮ್

ಗಣಯನ್ ದಿವಸಾನೇವ ರಾಮಾಗಮನಕಾಂಕ್ಷಯಾ ।
ಸ್ಥಿತೋ ರಾಮಾರ್ಪಿತಮನಾಃ ಸಾಕ್ಷಾದ್ಬ್ರಹ್ಮಮುನಿರ್ಯಥಾ ॥

ಅನುವಾದ

ಭೂಮಿಯ ಪಾಲನೆಗೆ ಅಗತ್ಯವಾದ ಎಲ್ಲ ರಾಜಕಾರ್ಯಗಳನ್ನು ಭರತನು ಶ್ರೀರಾಮನ ಪಾದುಕೆಗಳಿಗೆ ಒಪ್ಪಿಸುತ್ತಿದ್ದನು. ಈ ಪ್ರಕಾರ ಶ್ರೀರಾಮಚಂದ್ರನ ಬರುವಿಕೆಯ ಅವಧಿಯ ದಿನಗಳನ್ನು ಎಣಿಸುತ್ತಾ ಬ್ರಹ್ಮನಿಷ್ಠನಾದ ಋಷಿಯಂತೆ ರಾಮನಲ್ಲೇ ಅರ್ಪಿತವಾದ ಮನಸ್ಸುಳ್ಳವನಾಗಿ ಇರುತ್ತಿದ್ದನು. ॥74-75॥

76
ಮೂಲಮ್

ರಾಮಸ್ತು ಚಿತ್ರಕೂಟಾದ್ರೌ ವಸನ್ಮುನಿಭಿರಾವೃತಃ ।
ಸೀತಯಾ ಲಕ್ಷ್ಮಣೇನಾಪಿ ಕಿಂಚಿತ್ಕಾಲಮುಪಾವಸತ್ ॥

ಅನುವಾದ

ಇತ್ತ ಶ್ರೀರಾಮನಾದರೋ ಋಷಿಗಳಿಂದ ಸುತ್ತುವರಿದು ಸೀತಾಲಕ್ಷ್ಮಣರೊಡನೆ ಚಿತ್ರಕೂಟ ಪರ್ವತದಲ್ಲಿಯೇ ಕೆಲವು ದಿವಸಗಳನ್ನು ಕಳೆದನು. ॥76॥

77
ಮೂಲಮ್

ನಾಗರಾಶ್ಚ ಸದಾ ಯಾಂತಿ ರಾಮದರ್ಶನಲಾಲಸಾಃ ।
ಚಿತ್ರಕೂಟ ಸ್ಥಿತಂ ಜ್ಞಾತ್ವಾ ಸೀತಯಾ ಲಕ್ಷ್ಮಣೇನ ಚ ॥

ಅನುವಾದ

ಹೀಗೆ ಚಿತ್ರಕೂಟದಲ್ಲಿ ಸೀತಾ ಲಕ್ಷ್ಮಣರೊಡಗೂಡಿ ಇರುವ ಶ್ರೀರಾಮಚಂದ್ರನನ್ನು ಅರಿತಿರುವ ಸುತ್ತಲ ನಾಗರಿಕರು ಅವನ ದರ್ಶನದ ಇಚ್ಛೆಯಿಂದ ಯಾವಾಗಲೂ ಬರಲಾರಂಭಿಸಿದರು. ॥77॥

78
ಮೂಲಮ್

ದೃಷ್ಟ್ವಾ ತಜ್ಜನಸಂಬಾಧಂ ರಾಮಸ್ತತ್ಯಾಜ ತಂ ಗಿರಿಮ್ ।
ದಂಡಕಾರಣ್ಯಗಮನೇ ಕಾರ್ಯಮಪ್ಯನುಚಿಂತಯನ್ ॥

ಅನುವಾದ

ಶ್ರೀರಾಮನು ಆ ಜನಗಳ ಗುಂಪನ್ನು ನೋಡಿ, ಅವರಿಂದ ದೂರವುಳಿಯಲು, ದಂಡಕಾರಣ್ಯಕ್ಕೆ ಹೋಗುವ ವಿಚಾರವನ್ನು ಮನಸ್ಸಿನಲ್ಲಿಟ್ಟು ಆ ಪರ್ವತವನ್ನು ಬಿಟ್ಟು ಹೊರಟನು. ॥78॥

79
ಮೂಲಮ್

ಅನ್ವಗಾತ್ಸೀತಯಾ ಭ್ರಾತ್ರಾ ಹ್ಯತ್ರೇರಾಶ್ರಮಮುತ್ತಮಮ್ ।
ಸರ್ವತ್ರ ಸುಖಸಂವಾಸಂ ಜನಸಂಬಾಧವರ್ಜಿತಮ್ ॥

ಅನುವಾದ

ಅಲ್ಲಿಂದ ಹೊರಟು ಲಕ್ಷ್ಮಣ ಸೀತೆಯಿಂದೊಡಗೂಡಿ ಅತ್ರಿಮಹರ್ಷಿಗಳ ಶ್ರೇಷ್ಠವಾದ ಆಶ್ರಮಕ್ಕೆ ಬಂದನು. ಅದು ಸುಖಕರ ವಾಸಪ್ರದೇಶವುಳ್ಳದ್ದಾಗಿ ಜನ ಜಂಗುಳಿಯಿಂದ ದೂರವಾಗಿತ್ತು. ॥79॥

80
ಮೂಲಮ್

ಗತ್ವಾ ಮುನಿಮುಪಾಸೀನಂ ಭಾಸಯಂತಂ ತಪೋವನಮ್ ।
ದಂಡವತ್ಪ್ರಣಿಪತ್ಯಾಹ ರಾಮೋಽಹಮಭಿವಾದಯೇ ॥

ಅನುವಾದ

ಅಲ್ಲಿಗೆ ಹೋಗಿ ಬ್ರಹ್ಮಚಿಂತನೆ ಮಾಡುತ್ತಾ, ತಪೋವನವನ್ನೆಲ್ಲಾ ಬೆಳಗಿಸುತ್ತಾ ಕುಳಿತಿದ್ದ ಅತ್ರಿಮಹಾಮುನೀಶ್ವರರಿಗೆ ದಂಡವತ್ ನಮಸ್ಕಾರ ಮಾಡಿ ‘‘ರಾಮನಾದ ನಾನು ವಂದಿಸುತ್ತಿದ್ದೇನೆ’’ ಎಂದು ಹೇಳಿಕೊಂಡನು. ॥80॥

81
ಮೂಲಮ್

ಪಿತುರಾಜ್ಞಾಂ ಪುರಸ್ಕೃತ್ಯ ದಂಡಕಾನನಮಾಗತಃ ।
ವನವಾಸ ಮಿಷೇಣಾಪಿ ಧನ್ಯೋಽಹಂ ದರ್ಶನಾತ್ತವ ॥

ಅನುವಾದ

ನಾನು ತಂದೆಯ ಆಜ್ಞೆಯನ್ನು ಗೌರವಿಸಿ, ಕಾಡಿನಲ್ಲಿ ವಾಸಮಾಡುವ ನಿಮಿತ್ತವಾಗಿ ದಂಡಕಾರಣ್ಯಕ್ಕೆ ಬಂದಿರುವೆನು. ತಮ್ಮ ದರ್ಶನದಿಂದ ಧನ್ಯನಾದೆನು. ॥81॥

82
ಮೂಲಮ್

ಶ್ರುತ್ವಾ ರಾಮಸ್ಯ ವಚನಂ ರಾಮಂ ಜ್ಞಾತ್ವಾ ಹರಿಂ ಪರಮ್ ।
ಪೂಜಯಾಮಾಸ ವಿಧಿವದ್ಭಕ್ತ್ಯಾ ಪರಮಯಾ ಮುನಿಃ ॥

ಅನುವಾದ

ರಾಮನ ಮಾತನ್ನು ಕೇಳಿ - ಶ್ರೀರಾಮನು ಸಾಕ್ಷಾತ್ ಪರಬ್ರಹ್ಮ ಶ್ರೀಹರಿಯೇ ಎಂದು ತಿಳಿದ ಮುನಿವರ್ಯರು ವಿಧಿಪೂರ್ವಕವಾಗಿ ಪರಮ ಭಕ್ತಿಯಿಂದ ಅವನನ್ನು ಪೂಜಿಸಿದರು. ॥82॥

83
ಮೂಲಮ್

ವನ್ಯೈಃ ಫಲೈಃ ಕೃತಾತಿಥ್ಯಮುಪವಿಷ್ಟಂ ರಘೂತ್ತಮಮ್ ।
ಸೀತಾಂ ಚ ಲಕ್ಷ್ಮಣಂ ಚೈವ ಸಂತುಷ್ಟೋ ವಾಕ್ಯಮಬ್ರವೀತ್ ॥

ಅನುವಾದ

ಕಾಡಿನಲ್ಲಿ ದೊರಕುವ ಹಣ್ಣುಗಳಿಂದ ಆತಿಥ್ಯ-ಸತ್ಕಾರಗೈದು, ಆಸನದಲ್ಲಿ ಕುಳಿತಿರುವ ರಘುನಾಥ, ಮಹಾರಾಣಿ ಸೀತೆ, ಲಕ್ಷ್ಮಣರನ್ನು ಕುರಿತು ಸಂತುಷ್ಟನಾದ ಋಷಿಯು ಈ ಪ್ರಕಾರ ಹೇಳಿದನು ॥83॥

84
ಮೂಲಮ್

ಭಾರ್ಯಾ ಮೇಽತೀವ ಸಂವೃದ್ಧಾ ಹ್ಯನಸೂಯೇತಿ ವಿಶ್ರುತಾ ।
ತಪಶ್ಚರಂತಿ ಸುಚಿರಂ ಧರ್ಮಜ್ಞಾ ಧರ್ಮವತ್ಸಲಾ ॥

ಅನುವಾದ

‘‘ನನ್ನ ಭಾರ್ಯೆಯಾದ ‘ಅನಸೂಯಾ’ ಎಂದು ಖ್ಯಾತಳಾದವಳು ಬಹಳ ಮುದುಕಿಯಾಗಿದ್ದಾಳೆ. ಅನೇಕ ಕಾಲದಿಂದ ತಪಸ್ಸು ಮಾಡುತ್ತಿದ್ದು ಧರ್ಮವನ್ನು ಬಲ್ಲವಳೂ, ಧರ್ಮತತ್ಪರಳೂ ಆಗಿದ್ದಾಳೆ. ॥84॥

85
ಮೂಲಮ್

ಅಂತಸ್ತಿಷ್ಠತಿ ತಾಂ ಸೀತಾ ಪಶ್ಯತ್ವರಿನಿಷೂದನ ।
ತಥೇತಿ ಜಾನಕೀಂ ಪ್ರಾಹ ರಾಮೋ ರಾಜೀವಲೋಚನಃ ॥

86
ಮೂಲಮ್

ಗಚ್ಛ ದೇವೀಂ ನಮಸ್ಕೃತ್ಯ ಶೀಘ್ರಮೇಹಿ ಪುನಃ ಶುಭೇ ।
ತಥೇತಿ ರಾಮವಚನಂ ಸೀತಾ ಚಾಪಿ ತಥಾಕರೋತ್ ॥

ಅನುವಾದ

ಈಗ ಅವಳು ಒಳಗಿರುತ್ತಾಳೆ. ಹೇ ಶತ್ರುನಾಶನನೆ! ಸೀತೆಯು ಅವಳನ್ನು ಕಾಣಲಿ.’’ ಹೀಗೆನ್ನಲು ಕಮಲನೇತ್ರನಾದ ಶ್ರೀರಾಮನು ಸೀತೆಯ ಬಳಿ ಹೇಳಿದನು — ‘‘ಹೇ ಶುಭಾಂಗಿಯೆ! ಒಳಕ್ಕೆ ಹೋಗು. ತಾಯಿಯಾದ ಅನಸೂಯೆಯನ್ನು ನಮಸ್ಕರಿಸಿ ಬೇಗನೇ ಬಾ.’’ ಹೀಗೆಂದ ರಾಮನ ಮಾತಿನಂತೆ ಸೀತೆಯು ಹಾಗೆಯೇ ಮಾಡಿದಳು. ॥85-86॥

87
ಮೂಲಮ್

ದಂಡವತ್ ಪತಿತಾಮಗ್ರೇ ಸೀತಾಂ ದೃಷ್ಟ್ವಾತಿಹೃಷ್ಟಧೀಃ ।
ಅನಸೂಯಾ ಸಮಾಲಿಂಗ್ಯ ವತ್ಸೇ ಸೀತೇತಿ ಸಾದರಮ್ ॥

88
ಮೂಲಮ್

ದಿವ್ಯೇ ದದೌ ಕುಂಡಲೇ ದ್ವೇ ನಿರ್ಮಿತೇ ವಿಶ್ವಕರ್ಮಣಾ ।
ದುಕೂಲೇ ದ್ವೇ ದದೌ ತಸ್ಯೈ ನಿರ್ಮಲೇ ಭಕ್ತಿಸಂಯುತಾ ॥

ಅನುವಾದ

ದಂಡದಂತೆ ನಮಸ್ಕರಿಸಿದ ಸೀತೆಯನ್ನು ಕಂಡು ಬಹಳ ಸಂತೋಷಗೊಂಡು ಅನಸೂಯೆಯು ‘ಮಗಳೇ ಸೀತೆ, ಬಾ’ ಎಂದು ಪ್ರೀತಿಯಿಂದ ಆಲಿಂಗಿಸಿಕೊಂಡಳು. ಆಕೆಗೆ ವಿಶ್ವಕರ್ಮನು ನಿರ್ಮಿಸಿದ ದೇವಲೋಕದ ಒಂದು ಜೊತೆ ಕುಂಡಲ (ಬೆಂಡೋಲೆ)ಗಳನ್ನೂ, ಶುಭ್ರವಾದ ಒಂದು ಜೊತೆ ರೇಷ್ಮೆಯ ಸೀರೆಯನ್ನೂ ಭಕ್ತಿಯಿಂದ ಕೊಟ್ಟಳು. ॥87-88॥

89
ಮೂಲಮ್

ಅಂಗರಾಗಂ ಚ ಸೀತಾಯೈ ದದೌ ದಿವ್ಯಂ ಶುಭಾನನಾ ।
ನ ತ್ಯಕ್ಷ್ಯತೇಽಂಗರಾಗೇಣ ಶೋಭಾ ತ್ವಾಂ ಕಮಲಾನನೇ ॥

ಅನುವಾದ

ಮಂಗಳ ಮುಖಿಯಾದ ಅನಸೂಯೆಯು ಸೀತೆಗೆ ದಿವ್ಯವಾದ ಅಂಗರಾಗ (ಕೆನ್ನೆಗೆ-ಮೈಗೆ ಸವರುವ ಅರಸಿನರೂಪವಾದ ಮಂಗಳದ್ರವ್ಯ)ವನ್ನೂ ಕೊಟ್ಟು ಹೇಳಿದಳು ‘‘ಹೇ ಕಮಲಮುಖಿಯೆ! ಈ ಅಂಗರಾಗವನ್ನು ಹಚ್ಚುವುದರಿಂದ ನಿನ್ನ ಶರೀರದ ಕಾಂತಿಯು ಎಂದಿಗೂ ಮಾಸುವುದಿಲ್ಲ. ॥89॥

90
ಮೂಲಮ್

ಪಾತಿವ್ರತ್ಯಂ ಪುರಸ್ಕೃತ್ಯ ರಾಮಮನ್ವೇಹಿ ಜಾನಕಿ ।
ಕುಶಲೀ ರಾಘವೋ ಯಾತು ತ್ವಯಾ ಸಹ ಪುನರ್ಗೃಹಮ್ ॥

ಅನುವಾದ

ಜಾನಕಿ! ಪಾತಿವ್ರತ್ಯವನ್ನು ಗೌರವಿಸಿ ನೀನು ಶ್ರೀರಾಮನನ್ನು ಹಿಂಬಾಲಿಸು. ರಾಘವನು ನಿನ್ನೊಡ ಗೂಡಿ ಸುಖವಾಗಿ ಮತ್ತೆ ಅಯೋಧ್ಯೆಗೆ ಹಿಂದಿರುಗಲಿ’’ ಎಂದು ಹರಸಿದಳು. ॥90॥

91
ಮೂಲಮ್

ಭೋಜಯಿತ್ವಾ ಯಥಾನ್ಯಾಯಂ ರಾಮಂ ಸೀತಾಸಮನ್ವಿತಮ್ ।
ಲಕ್ಷ್ಮಣಂ ಚ ತದಾ ರಾಮಂ ಪುನಃ ಪ್ರಾಹ ಕೃತಾಂಜಲಿಃ ॥

92
ಮೂಲಮ್

ರಾಮ ತ್ವಮೇವ ಭುವನಾನಿ ವಿಧಾಯ ತೇಷಾಂ
ಸಂರಕ್ಷಣಾಯ ಸುರಮಾನುಷತಿರ್ಯಗಾದೀನ್ ।
ದೇಹಾನ್ಬಿಭರ್ಷಿ ನ ಚ ದೇಹಗುಣೈರ್ವಿಲಿಪ್ತ -
ಸ್ತ್ವತ್ತೋ ಬಿಭೇತ್ಯಖಿಲಮೋಹಕರೀ ಚ ಮಾಯಾ ॥

ಅನುವಾದ

ಬಳಿಕ ಅತ್ರಿಮುನಿಗಳು ಲಕ್ಷ್ಮಣ ಸೀತಾ ಸಮೇತ ಶ್ರೀರಾಮನಿಗೆ ವಿಧಿಪೂರ್ವಕ ಭೋಜನ ಮಾಡಿಸಿದರು. ಅನಂತರ ಕೈಮುಗಿದು ರಾಮನ ಬಳಿ ಇಂತೆಂದರು ‘‘ಎಲೈ ರಘುಪುಂಗವಾ! ನೀನೇ ಎಲ್ಲ ಲೋಕಗಳನ್ನು ಸೃಷ್ಟಿ ಮಾಡಿದವನಾಗಿ, ಅವುಗಳನ್ನು ಕಾಪಾಡುವುದಕ್ಕಾಗಿ ದೇವತೆ, ಮನುಷ್ಯ, ಮೂಕಪ್ರಾಣಿಗಳ ದೇಹಗಳನ್ನೂ ಧರಿಸಿಕೊಂಡಿದ್ದೀಯೆ. ಆದರೆ ಆಯಾ ದೇಹಗುಣಗಳಿಂದ ಎಂದೂ ನೀನು ಲಿಪ್ತನಾಗುವುದಿಲ್ಲ. ಎಲ್ಲರನ್ನು ಮೋಹಗೊಳಿಸುವ ಮಾಯೆಯೂ ಕೂಡ ನಿನಗೆ ಹೆದರುತ್ತಿರುವಳು’’ ಎಂದು ಹೇಳಿ ಸುಮ್ಮನಾದರು. ॥91-92॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ನವಮಃ ಸರ್ಗಃ ॥9॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.
ಅಯೋಧ್ಯಾಕಾಂಡವು ಸಮಾಪ್ತವಾಯಿತು.