೦೮

[ಎಂಟನೆಯ ಸರ್ಗ]

ಭಾಗಸೂಚನಾ

ವನಕ್ಕೆ ಭರತನ ಪ್ರಸ್ಥಾನ, ದಾರಿಯಲ್ಲಿ ಗುಹ ಮತ್ತು ಭರದ್ವಾಜರ ಭೇಟಿ, ಚಿತ್ರಕೂಟ ದರ್ಶನ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ವಸಿಷ್ಠೋ ಮುನಿಭಿಃ ಸಾರ್ಧಂ ಮಂತ್ರಿಭಿಃ ಪರಿವಾರಿತಃ ।
ರಾಜ್ಞಃ ಸಭಾಂ ದೇವಸಭಾಸನ್ನಿಭಾಮವಿಶದ್ವಿಭುಃ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಹೇ ಪಾರ್ವತಿ! ಒಂದುದಿನ ವಸಿಷ್ಠ ಋಷಿಗಳು ಉಳಿದ ಮುನೀಶ್ವರರೊಡಗೂಡಿ, ಮಂತ್ರಿಗಳೊಂದಿಗೆ ಸುತ್ತುವರಿದು ದೇವತೆಗಳ ಸಭೆಗೆ ಸಮಾನವಾದ ರಾಜಸಭೆಯನ್ನು ಪ್ರವೇಶಿಸಿದರು. ॥1॥

2
ಮೂಲಮ್

ತತ್ರಾಸನೇ ಸಮಾಸೀನಶ್ಚತುರ್ಮುಖ ಇವಾಪರಃ ।
ಆನೀಯ ಭರತಂ ತತ್ರ ಉಪವೇಶ್ಯ ಸಹಾನುಜಮ್ ॥

ಅನುವಾದ

ಅಲ್ಲಿ ಚತುರ್ಮುಖ ಬ್ರಹ್ಮನಂತೆ ವಿರಾಜಮಾನರಾಗಿ ವಸಿಷ್ಠರು ಸಹೋದರ ಶತ್ರುಘ್ನ ಸಹಿತ ಭರತನನ್ನು ಕರೆಸಿ ಆಸನದಲ್ಲಿ ಕುಳ್ಳಿರಿಸಿದರು. ॥2॥

3
ಮೂಲಮ್

ಅಬ್ರವೀದ್ವಚನಂ ದೇಶಕಾಲೋಚಿತಮರಿಂದಮಮ್ ।
ವತ್ಸ ರಾಜ್ಯೇಽಭಿಷೇಕ್ಷ್ಯಾಮಸ್ತ್ವಾಮದ್ಯಪಿತೃಶಾಸನಾತ್ ॥

ಅನುವಾದ

ಆ ಶತ್ರುನಾಶಕನಾದ ಭರತನಿಗೆ ಕಾಲೋಚಿತವಾದ ಹಾಗೂ ಆ ಜಾಗಕ್ಕೆ ತಕ್ಕ ಗೌರವವು ಬರುವ ರೀತಿಯ ಮಾತುಗಳಿಂದ ಹೀಗೆಂದರು ‘ವತ್ಸಾ! ನಿನಗೆ ತಂದೆಯ ಅಪ್ಪಣೆಯ ಪ್ರಕಾರ ಪಟ್ಟಾಭಿಷೇಕ ಮಾಡಲಿದ್ದೇವೆ. ॥3॥

4
ಮೂಲಮ್

ಕೈಕೇಯ್ಯಾ ಯಾಚಿತಂ ರಾಜ್ಯಂ ತ್ವದರ್ಥೇ ಪುರುಷರ್ಷಭ ।
ಸತ್ಯಸಂಧೋ ದಶರಥಃ ಪ್ರತಿಜ್ಞಾಯ ದದೌ ಕಿಲ ॥

ಅನುವಾದ

ಹೇ ಪುರುಷಶ್ರೇಷ್ಠ! ಕೈಕೆಯಿಯು ನಿನಗಾಗಿ ಮಹಾರಾಜಾ ದಶರಥನಿಂದ ರಾಜ್ಯವನ್ನು ಬೇಡಿದ್ದಳು. ಸತ್ಯಸಂಧನಾದ ದಶರಥನಾದರೋ ಪ್ರತಿಜ್ಞೆ ಮಾಡಿ ಕೊಟ್ಟು ಬಿಟ್ಟಿದ್ದನು. ॥4॥

5
ಮೂಲಮ್

ಅಭಿಷೇಕೋ ಭವತ್ವದ್ಯ ಮುನಿಭಿರ್ಮಂತ್ರಪೂರ್ವಕಮ್ ।
ತಚ್ಛ್ರುತ್ವಾ ಭರತೋಪ್ಯಾಹ ಮಮ ರಾಜ್ಯೇನ ಕಿಂ ಮುನೇ ॥

6
ಮೂಲಮ್

ರಾಮೋ ರಾಜಾಧಿರಾಜಶ್ಚ ವಯಂ ತಸ್ಯೈವ ಕಿಂಕರಾಃ ।
ಶ್ವಃ ಪ್ರಭಾತೇ ಗಮಿಷ್ಯಾಮೋ ರಾಮಮಾನೇತುಮಂಜಸಾ ॥

7
ಮೂಲಮ್

ಅಹಂ ಯೂಯಂ ಮಾತರಶ್ಚ ಕೈಕೇಯೀಂ ರಾಕ್ಷಸೀಂ ವಿನಾ ।
ಹನಿಷ್ಯಾಮ್ಯಧುನೈವಾಹಂ ಕೈಕೇಯೀಂ ಮಾತೃಗಂಧಿನೀಮ್ ॥

8
ಮೂಲಮ್

ಕಿಂತು ಮಾಂ ನೋ ರಘುಶ್ರೇಷ್ಠಃ ಸೀಹಂತಾರಂ ಸಹಿಷ್ಯತೇ ।
ತಚ್ಛ್ವೋಭೂತೇ ಗಮಿಷ್ಯಾಮಿ ಪಾದಚಾರೇಣ ದಂಡಕಾನ್ ॥

9
ಮೂಲಮ್

ಶತ್ರುಘ್ನಸಹಿತಸ್ತೂರ್ಣಂ ಯೂಯಮಾಯಾತ ವಾ ನ ವಾ ।
ರಾಮೋ ಯಥಾ ವನೇ ಯಾತಸ್ತಥಾಹಂ ವಲ್ಕಲಾಂಬರಃ ॥

10
ಮೂಲಮ್

ಫಲಮೂಲಕೃತಾಹಾರಃ ಶತ್ರುಘ್ನಸಹಿತೋ ಮುನೇ ।
ಭೂಮಿಶಾಯೀ ಜಟಾಧಾರೀ ಯಾವದ್ರಾಮೋ ನಿವರ್ತತೇ ॥

11
ಮೂಲಮ್

ಇತಿ ನಿಶ್ಚಿತ್ಯ ಭರತಸ್ತೂಷ್ಣೀ ಮೇವಾವತಸ್ಥಿವಾನ್ ।
ಸಾಧುಸಾಧ್ವಿತಿ ತಂ ಸರ್ವೇ ಪ್ರಶಶಂಸುರ್ಮುದಾನ್ವಿತಾಃ ॥

ಅನುವಾದ

ಆದ್ದರಿಂದ ಈಗ ಮುನಿಗಳಿಂದ ಮಂತ್ರೋಚ್ಚಾರ ಪೂರ್ವಕವಾಗಿ ನಿನಗೆ ಪಟ್ಟಾಭಿಷೇಕವು ನಡೆಯಲಿ.’ ಇದನ್ನು ಕೇಳಿ ಭರತನು ಹೀಗೆಂದನು - ಹೇ ಮುನಿನಾಥಾ! ನನಗೆ ರಾಜ್ಯದಿಂದ ಏನಾಗಬೇಕಾಗಿದೆ? ಶ್ರೀರಾಮನೇ ರಾಜಾಧಿರಾಜನು. ನಾವೆಲ್ಲರು ಅವನ ಸೇವಕರು. ನಾಳೆ ಬೆಳಿಗ್ಗೆಯೇ ಶ್ರೀರಾಮನನ್ನು ಕರೆತರಲು ನಾನು, ನೀವು, ರಾಕ್ಷಸೀ ಕೈಕೆಯಿಯ ಹೊರತು ಎಲ್ಲ ತಾಯಂದಿರು ಜಾಗ್ರತೆಯಾಗಿ ಕಾಡಿಗೆ ಹೊರಡೋಣ. ನಾನೇನು ಮಾಡಲಿ? ಹೆಸರಿಗೆ ಮಾತ್ರ ತಾಯಿಯಾಗಿರುವ ಈ ಕೈಕೆಯಿಯನ್ನು ಈಗಲೇ ಕೊಂದುಬಿಡುತ್ತಿದ್ದೆ. ಆದರೆ ರಘುಶ್ರೇಷ್ಠನಾದ ಶ್ರೀರಾಮನು ಸ್ತ್ರೀಹತ್ಯೆ ಮಾಡಿದ ಪಾಪಿಯನ್ನು ಕ್ಷಮಿಸಲಾರನೆಂದು ಸುಮ್ಮನಿದ್ದೇನೆ. ಆದ್ದರಿಂದ ಏನೇ ಆಗಲಿ, ಶತ್ರುಘ್ನನೊಡನೆ ಪಾದಚಾರಿಯಾಗಿ ನಾನು ನಾಳೆ ಬೆಳಿಗ್ಗೆ ಶೀಘ್ರವಾಗಿ ದಂಡಕಾರಣ್ಯಕ್ಕೆ ಹೊರಡುವುದು ನಿಶ್ಚಯ. ನೀವು ಬೇಕಾದರೆ ಬನ್ನಿ, ಬೇಡವಾದರೆ ಬಿಡಿರಿ. ಮುನಿವರ್ಯರೇ! ಶ್ರೀರಾಮನು ಹೇಗೆ ಕಾಡಿಗೆ ಹೊರಟನೋ ಹಾಗೆಯೇ ನಾನೂ ಕೂಡ ಶ್ರೀರಾಮಚಂದ್ರನು ಮರಳಿ ಬರುವವರೆಗೆ ಜಟಾಧಾರಿಯಾಗಿ, ಕಂದ-ಮೂಲ-ಫಲಗಳನ್ನು ಸೇವಿಸುತ್ತಾ, ಭೋಗಗಳನ್ನು ತ್ಯಜಿಸಿ ನೆಲದ ಮೇಲೆ ಮಲಗುವೆನು. ॥5-11॥

12
ಮೂಲಮ್

ತತಃ ಪ್ರಭಾತೇ ಭರತಂ ಗಚ್ಛಂತಂ ಸರ್ವಸೈನಿಕಾಃ ।
ಅನುಜಗ್ಮುಃ ಸುಮಂತ್ರೇಣ ನೋದಿತಾಃ ಸಾಶ್ವಕುಂಜರಾಃ ॥

ಅನುವಾದ

ಹೀಗೆಂದು ನಿಶ್ಚಯಿಸಿ ಭರತನು ಸುಮ್ಮನೆ ಕುಳಿತುಕೊಂಡನು. ಆಗ ಎಲ್ಲರೂ ಭಲೆ-ಭಲೆ ಎಂದು ಸಂತೋಷದಿಂದ ಕೊಂಡಾಡಿದರು. ಅನಂತರ ಪ್ರಾತಃಕಾಲವಾಗುತ್ತಿರುವಂತೆ ರಾಮಕಿಂಕರನಾದ ಭರತನು ಹೊರಟನು. ಸುಮಂತ್ರನ ಆಜ್ಞೆಯಂತೆ ಜೊತೆಗೆ ಆನೆ, ಕುದುರೆ, ಸಮಸ್ತ ಚತುರಂಗ ಸೈನ್ಯವು ಹಿಂಬಾಲಿಸಿತು. ॥12॥

13
ಮೂಲಮ್

ಕೌಸಲ್ಯಾದ್ಯಾ ರಾಜದಾರಾ ವಸಿಷ್ಠಪ್ರಮುಖಾ ದ್ವಿಜಾಃ ।
ಛಾದಯಂತೋ ಭುವಂ ಸರ್ವೇ ಪೃಷ್ಠತಃ ಪಾರ್ಶ್ವತೋಽಗ್ರತಃ ॥

ಅನುವಾದ

ಕೌಸಲ್ಯೆಯೇ ಮುಂತಾದ ರಾಜ ಮಹಿಷಿಯರು, ವಸಿಷ್ಠರೇ ಆದಿ ದ್ವಿಜರೆಲ್ಲರು ನಡೆದಾಗ ಹಿಂದೆ-ಮುಂದೆ-ಎಡಬಲಗಳಲ್ಲಿ ಜನಸಾಗರವೇ ಸೇರಿಹೋಯಿತು. ॥13॥

14
ಮೂಲಮ್

ಶೃಂಗವೇರಪುರಂ ಗತ್ವಾ ಗಂಗಾಕೂಲೇ ಸಮಂತತಃ ।
ಉವಾಸ ಮಹತೀ ಸೇನಾ ಶತ್ರುಘ್ನಪರಿಚೋದಿತಾ ॥

ಅನುವಾದ

ಈ ಪ್ರಕಾರ ಸಾಗುತ್ತಾ ಶೃಂಗವೇರಪುರಕ್ಕೆ ತಲುಪಿ ಶತ್ರುಘ್ನನ ಆಜ್ಞೆಯಂತೆ ಗಂಗಾ ತೀರದಲ್ಲಿ ಬೀಡು ಬಿಟ್ಟಿತು. ॥14॥

15
ಮೂಲಮ್

ಆಗತಂ ಭರತಂ ಶ್ರುತ್ವಾ ಗುಹಃ ಶಂಕಿತಮಾನಸಃ ।
ಮಹತ್ಯಾ ಸೇನಯಾ ಸಾರ್ಧಮಾಗತೋ ಭರತಃ ಕಿಲ ॥

16
ಮೂಲಮ್

ಪಾಪಂ ಕರ್ತುಂ ನ ವಾ ಯಾತಿ ರಾಮಸ್ಯಾವಿದಿತಾತ್ಮನಃ ।
ಗತ್ವಾ ತದ್ಧೃದಯಂ ಜ್ಞೇಯಂ ಯದಿ ಶುದ್ಧಸ್ತರಿಷ್ಯತಿ ॥

ಅನುವಾದ

ಭರತನು ಬಂದಿದ್ದಾನೆಂಬುದನ್ನು ತಿಳಿದು, ಸಂಶಯಗೊಂಡ ಗುಹನು ‘ಓಹೋ! ಭರತನು ದೊಡ್ಡ ಸೈನ್ಯದೊಂದಿಗೆ ಬಂದಿರುವನು. ಏನೂ ಅರಿಯದ ಒಡೆಯ ಶ್ರೀರಾಮಗೆ ಕೇಡನ್ನು ಮಾಡುವುದಕ್ಕಾಗಿ ಬಂದಿರುವನೋ! ಏನೋ! ತಿಳಿಯದು. ನಾವುಗಳು ಅವನ ಬಳಿಗೆ ಹೋಗಿ ಅವನ ಅಭಿಪ್ರಾಯವನ್ನು ತಿಳಿಯಬೇಕು. ಒಂದು ವೇಳೆ ಅವನ ಭಾವ ಶುದ್ಧವಾಗಿದ್ದರೆ ಗಂಗೆಯನ್ನು ದಾಟಿಸುವಾ. ॥15-16॥

17
ಮೂಲಮ್

ಗಂಗಾ ನೋಚೇತ್ಸಮಾಕೃಷ್ಯ ನಾವಸ್ತಿಷ್ಠಂತು ಸಾಯುಧಾಃ ।
ಜ್ಞಾತಯೋ ಮೇ ಸಮಾಯತ್ತಾಃ ಪಶ್ಯಂತಃ ಸರ್ವತೋದಿಶಮ್ ॥

ಅನುವಾದ

ಇಲ್ಲವಾದರೆ ಆಯುಧಗಳನ್ನು ಸಜ್ಜುಗೊಳಿಸಿಕೊಂಡು ನನ್ನ ಜ್ಞಾತಿಗಳೆಲ್ಲರೂ ಒಂದುಗೂಡಿ ದೋಣಿಗಳನ್ನು ಸಿದ್ಧವಾಗಿಸಿ ಗಂಗೆಯಲ್ಲಿ ನಿಲ್ಲಿಸಿ ಎಲ್ಲ ಕಡೆಗೆ ಕಣ್ಣು ಹಾಯಿಸುತ್ತಾ ಸನ್ನದ್ಧರಾಗಿರಿ. ॥17॥

18
ಮೂಲಮ್

ಇತಿ ಸರ್ವಾನ್ಸಮಾದಿಶ್ಯ ಗುಹೋ ಭರತಮಾಗತಃ ।
ಉಪಾಯನಾನಿ ಸಂಗೃಹ್ಯ ವಿವಿಧಾನಿ ಬಹೂನ್ಯಪಿ ॥

ಅನುವಾದ

ಹೀಗೆ ಅನುಚರರೆಲ್ಲರಿಗೆ ಅಪ್ಪಣೆಮಾಡಿ ಗುಹನು ನಾನಾ ವಿಧವಾದ ಕಾಣಿಕೆಗಳನ್ನು ಜೊತೆಗೆ ತೆಗೆದುಕೊಂಡು ಭರತನ ಬಳಿಗೆ ಬಂದನು. ॥18॥

19
ಮೂಲಮ್

ಪ್ರಯಯೌ ಜ್ಞಾತಿಭಿಃ ಸಾರ್ಧಂ ಬಹುಭಿರ್ವಿವಿಧಾಯುಧೈಃ ।
ನಿವೇದ್ಯೋಪಾಯನಾನ್ಯಗ್ರೇ ಭರತಸ್ಯ ಸಮಂತತಃ ॥

20
ಮೂಲಮ್

ದೃಷ್ಟ್ವಾ ಭರತಮಾಸೀನಂ ಸಾನುಜಂ ಸಹ ಮಂತ್ರಿಭಿಃ ।
ಚೀರಾಂಬರಂ ಘನಶ್ಯಾಮಂ ಜಟಾಮುಕುಟಧಾರಿಣಮ್ ॥

21
ಮೂಲಮ್

ರಾಮಮೇವಾನುಶೋಚಂತಂ ರಾಮರಾಮೇತಿ ವಾದಿನಮ್ ।
ನನಾಮ ಶಿರಸಾ ಭೂಮೌ ಗುಹೋಽಹಮಿತಿ ಚಾಬ್ರವೀತ್ ॥

ಅನುವಾದ

ಅನೇಕ ರೀತಿಯ ಆಯುಧಪಾಣಿಗಳಾದ ಬಂಧು ಜನರೊಡಗೂಡಿ ಭರತನಿದ್ದಲ್ಲಿಗೆ ಬಂದ ಗುಹನು ಕಾಣಿಕೆಗಳನ್ನು ಒಪ್ಪಿಸಿ ಸುತ್ತಲೂ ನೋಡಿದನು. ನಾರು ಮಡಿಯನ್ನುಟ್ಟು ನೀಲಮೇಘದಂತೆ ಬಣ್ಣವುಳ್ಳವನಾಗಿ, ಜಟಾ ಕಿರೀಟವನ್ನು ಧರಿಸಿರುವನು. ಮನಸ್ಸಿನಲ್ಲಿ ರಾಮನ ಕುರಿತು ಕಳವಳಪಡುತ್ತಾ ಬಾಯಲ್ಲಿ ರಾಮ-ರಾಮ ಎನ್ನುತ್ತಾ ಸೋದರ ಹಾಗೂ ಮಂತ್ರಿಗಳೊಡನೆ ಕುಳಿತಿರುವ ಭರತನನ್ನು ಕಂಡು ‘ನಾನು ಗುಹನು’ ಎಂದು ಹೇಳುತ್ತಾ ತಲೆಬಾಗಿ ನೆಲಮುಟ್ಟಿ ನಮಸ್ಕರಿದನು. ॥19-21॥

22
ಮೂಲಮ್

ಶೀಘ್ರಮುತ್ಥಾ ಪ್ಯ ಭರತೋ ಗಾಢಮಾಲಿಂಗ್ಯ ಸಾದರಮ್ ।
ಪೃಷ್ಟ್ವಾನಾಮಯಮವ್ಯಗ್ರಃ ಸಖಾಯಮಿದಮಬ್ರವೀತ್ ॥

23
ಮೂಲಮ್

ಭ್ರಾತಸ್ತ್ವಂ ರಾಘವೇಣಾತ್ರ ಸಮೇತಃ ಸಮವಸ್ಥಿತಃ ।
ರಾಮೇಣಾಲಿಂಗಿತಃ ಸಾರ್ದ್ರನಯನೇನಾಮಲಾತ್ಮನಾ ॥

ಅನುವಾದ

ಭರತನು ಅವನನ್ನು ಬೇಗನೆ ಮೇಲಕ್ಕೆಬ್ಬಿಸಿ ಗಾಢವಾಗಿ ಆಲಿಂಗಿಸಿಕೊಂಡು ಪ್ರೇಮದಿಂದ ಕುಶಲಪ್ರಶ್ನೆಮಾಡಿ ಸ್ನೇಹಭಾವದಿಂದ ಹೀಗೆಂದನು - ‘‘ಸೋದರ! ನೀನು ರಾಮನೊಡಗೂಡಿ ಧನ್ಯನಾಗಿರುವೆ. ಪರಿಶುದ್ಧ ಮನಸ್ಸುಳ್ಳ ಶ್ರೀರಾಮನು ಸ್ನೇಹದಿಂದ ನೆನೆದ ಕಣ್ಣುಗಳಿಂದ ನಿನ್ನನ್ನು ಆಲಿಂಗಿಸಿದ್ದನು. ॥22-23॥

24
ಮೂಲಮ್

ಧನ್ಯೋಽಸಿ ಕೃತಕೃತ್ಯೋಽಸಿ ಯತ್ತ್ವಯಾ ಪರಿಭಾಷಿತಃ ।
ರಾಮೋ ರಾಜೀವಪತ್ರಾಕ್ಷೋ ಲಕ್ಷ್ಮಣೇನ ಚ ಸೀತಯಾ ॥

ಅನುವಾದ

ಸೀತಾ ಲಕ್ಷ್ಮಣರೊಡನೆ ಕಮಲನಯನನಾದ ಶ್ರೀರಾಮನು ನಿನ್ನೊಡನೆ ಮಾತನಾಡಿದ್ದನು. ಆದ್ದರಿಂದ ನೀನು ಧನ್ಯನಾಗಿರುವೆ, ಕೃತಾರ್ಥನಾಗಿರುವೆ. ॥24॥

25
ಮೂಲಮ್

ಯತ್ರ ರಾಮಸ್ತ್ವಯಾ ದೃಷ್ಟಸ್ತತ್ರ ಮಾಂ ನಯ ಸುವ್ರತ ।
ಸೀತಯಾ ಸಹಿತೋ ಯತ್ರ ಸುಪ್ತಸ್ತದ್ದರ್ಶಯಸ್ವ ಮೇ ॥

ಅನುವಾದ

ಎಲೈ ಸುಶೀಲನೆ! ನೀನು ಶ್ರೀರಾಮಚಂದ್ರನನ್ನು ಎಲ್ಲಿ ಭೇಟಿಯಾಗಿದ್ದೆ. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು. ಎಲ್ಲಿ ಸೀತಾಸಹಿತ ಅವನು ವಿಶ್ರಮಿಸಿದ್ದನೋ ಆ ಜಾಗವನ್ನು ತೋರಿಸು. ॥25॥

26
ಮೂಲಮ್

ತ್ವಂ ರಾಮಸ್ಯ ಪ್ರಿಯತಮೋ ಭಕ್ತಿಮಾನಸಿ ಭಾಗ್ಯವಾನ್ ।
ಇತಿ ಸಂಸ್ಮೃತ್ಯ ಸಂಸ್ಮೃತ್ಯ ರಾಮಂ ಸಾಶ್ರುವಿಲೋಚನಃ ॥

ಅನುವಾದ

ನೀನಾದರೋ ಶ್ರೀರಾಮನಿಗೆ ಪ್ರೀತಿಪಾತ್ರನೂ, ಭಕ್ತನೂ, ಭಾಗ್ಯಶಾಲಿಯೂ ಆಗಿರುವೆ.’’ ಹೀಗೆಂದು ರಾಮನನ್ನು ನೆನೆನೆನೆದು ಭರತನ ಕಣ್ಣುಗಳಲ್ಲಿ ನೀರೂರಿದವು. ॥26॥

27
ಮೂಲಮ್

ಗುಹೇನ ಸಹಿತಸ್ತತ್ರ ಯತ್ರ ರಾಮಃ ಸ್ಥಿತೋ ನಿಶಿ ।
ಯಯೌ ದದರ್ಶ ಶಯನಸ್ಥಲಂ ಕುಶಸಮಾಸ್ತೃತಮ್ ॥

ಅನುವಾದ

ಹೀಗೆ ವಿರಹವ್ಯಾಕುಲನಾದ ಭರತನು ಗುಹನೊಂದಿಗೆ ಶ್ರೀರಾಮನು ರಾತ್ರಿ ತಂಗಿದ್ದಲ್ಲಿಗೆ ಹೋದನು. ಅಲ್ಲಿ ದರ್ಭೆಗಳನ್ನು ಹರಡಿ ಮಲಗಿದ ಜಾಗವನ್ನು ಕಂಡನು. ॥27॥

28
ಮೂಲಮ್

ಸೀತಾಭರಣಸಂಲಗ್ನಸ್ವರ್ಣಬಿಂದುಭಿರರ್ಚಿತಮ್ ।
ದುಃಖಸಂತಪ್ತಹೃದಯೋ ಭರತಃ ಪರ್ಯದೇವಯತ್ ॥

29
ಮೂಲಮ್

ಅಹೋಽತಿಸುಕುಮಾರೀ ಯಾ ಸೀತಾ ಜನಕನಂದಿನೀ ।
ಪ್ರಾಸಾದೇ ರತ್ನಪರ್ಯಂಕೇ ಕೋಮಲಾಸ್ತರಣೇ ಶುಭೇ ॥

30
ಮೂಲಮ್

ರಾಮೇಣ ಸಹಿತಾ ಶೇತೇ ಸಾ ತಥಂ ಕುಶವಿಷ್ಟರೇ ।
ಸೀತಾ ರಾಮೇಣ ಸಹಿತಾ ದುಃಖೇನ ಮಮ ದೋಷತಃ ॥

ಅನುವಾದ

ಸೀತಾದೇವಿಯ ಒಡವೆಗಳ ಸ್ಪರ್ಶದಿಂದ ಅಂಟಿಕೊಂಡ ಹೊನ್ನಿನ ಕಣಗಳಿಂದ ಅಲಂಕೃತವಾಗಿದ್ದ ಆ ಜಾಗವನ್ನು ಭರತನು ಕಂಡು ಅವನ ಹೃದಯ ದುಃಖದಿಂದ ತುಂಬಿಬಂತು ಹಾಗೂ ಅಳುತ್ತಾ ಹೀಗೆಂದನು ‘‘ಅಯ್ಯೊ! ಅತಿ ಸುಕುಮಾರಿಯೂ, ಜನಕನ ನಂದಿನಿಯೂ ಆದ ಸೀತಾದೇವಿಯು ಉಪ್ಪರಿಗೆಯ ಮೇಲೆ ರತ್ನಮಂಚದಲ್ಲಿ ಸುಂದರವಾದ ಹಂಸತೂಲಿಕಾತಲ್ಪದಲ್ಲಿ ರಾಘುನಾಥನೊಂದಿಗೆ ಮಲಗುತ್ತಿದ್ದವಳು ನನ್ನ ದೋಷದಿಂದ ಶ್ರೀರಾಮಚಂದ್ರನೊಡನೆ ಈ ದರ್ಭೆಗಳ ಹಾಸಿಗೆಯಲ್ಲಿ ಬಹಳ ಕಷ್ಟದಿಂದ ಮಲಗಬೇಕಾಯಿತಲ್ಲ? ॥28-30॥

31
ಮೂಲಮ್

ಧಿಙ್ಮಾಂ ಜಾತೋಽಸ್ಮಿ ಕೈಕೇಯ್ಯಾಂ ಪಾಪರಾಶಿಸಮಾನತಃ ।
ಮನ್ನಿಮಿತ್ತಮಿದಂ ಕ್ಲೇಶಂ ರಾಮಸ್ಯ ಪರಮಾತ್ಮನಃ ॥

ಅನುವಾದ

ಪಾಪಗಳ ರಾಶಿಯಂತಿರುವ ಕೈಕೆಯಿಯಲ್ಲಿ ಹುಟ್ಟಿದ ನನಗೆ ಧಿಕ್ಕಾರವಿರಲಿ! ಪರಮಾತ್ಮನಾದ ಶ್ರೀರಾಮನಿಗೆ ನನ್ನ ನಿಮಿತ್ತವಾಗಿ ಈ ಕ್ಲೇಶ ಸಹಿಸಬೇಕಾಯಿತು. ॥31॥

32
ಮೂಲಮ್

ಅಹೋಽತಿಸಫಲಂ ಜನ್ಮ ಲಕ್ಷ್ಮಣಸ್ಯ ಮಹಾತ್ಮನಃ ।
ರಾಮಮೇವ ಸದಾನ್ವೇತಿ ವನಸ್ಥಮಪಿ ಹೃಷ್ಟಧೀಃ ॥

ಅನುವಾದ

ಆಹಾ! ಮಹಾತ್ಮನಾದ ಲಕ್ಷ್ಮಣನ ಜನ್ಮವು ಅತ್ಯಂತ ಸಫಲವಾಯಿತು; ಏಕೆಂದರೆ ಕಾಡಿನಲ್ಲಿರುವಾಗಲೂ ಅವನು ಸಂತೋಷವಾದ ಮನಸ್ಸಿನಿಂದ ಹಿಂಬಾಲಿಸುತ್ತಿದ್ದಾನೆ. ॥32॥

33
ಮೂಲಮ್

ಅಹಂ ರಾಮಸ್ಯ ದಾಸಾ ಯೇ ತೇಷಾಂ ದಾಸಸ್ಯ ಕಿಂಕರಃ ।
ಯದಿ ಸ್ಯಾಂ ಸಫಲಂ ಜನ್ಮ ಮಮ ಭೂಯಾನ್ನ ಸಂಶಯಃ ॥

ಅನುವಾದ

ರಾಮನ ದಾಸರು ಯಾರಾಗಿದ್ದಾರೋ ಅವರ ದಾಸರ ದಾಸರ ದಾಸ ನಾನಾದರೂ ನನ್ನ ಜನ್ಮವು ಸಫಲವಾದೀತು ಎಂಬುದರಲ್ಲಿ ಸಂದೇಹವೇ ಇಲ್ಲ. ॥33॥

34
ಮೂಲಮ್

ಭ್ರಾತರ್ಜಾನಾಸಿ ಯದಿ ತತ್ಕಥಯಸ್ವ ಮಮಾಖಿಲಮ್ ।
ಯತ್ರ ತಿಷ್ಠತಿ ತತ್ರಾಹಂ ಗಚ್ಛಾಮ್ಯಾನೇತುಮಂಜಸಾ ॥

ಅನುವಾದ

ಸಹೋದರಾ! ರಾಮನು ಎಲ್ಲಿದ್ದಾನೆ? ಎಂಬುದನ್ನು ನೀನು ಬಲ್ಲೆಯಾದರೆ ಪೂರ್ಣವಾಗಿ ನನಗೆ ಎಲ್ಲವನ್ನೂ ಹೇಳು. ಅವನು ಎಲ್ಲೇ ಇದ್ದರೂ ನಾನು ಕೂಡಲೇ ಅವನನ್ನು ಕರೆತರಲು ಹೋಗುವೆನು.’’ ॥34॥

35
ಮೂಲಮ್

ಗುಹಸ್ತಂ ಶುದ್ಧಹೃದಯಂ ಜ್ಞಾತ್ವಾ ಸಸ್ನೇಹಮಬ್ರವೀತ್ ।
ದೇವ ತ್ವಮೇವ ಧನ್ಯೋಽಸಿ ಯಸ್ಯ ತೇ ಭಕ್ತಿರಿದೃಶೀ ॥

36
ಮೂಲಮ್

ರಾಮೇ ರಾಜೀವಪತ್ರಾಕ್ಷೇ ಸೀತಾಯಾಂ ಲಕ್ಷ್ಮಣೇ ತಥಾ ।
ಚಿತ್ರಕೂಟಾದ್ರಿನಿಕಟೇ ಮಂದಾಕಿನ್ಯಾವಿದೂರತಃ ॥

37
ಮೂಲಮ್

ಮುನೀನಾಮಾಶ್ರಮಪದೇ ರಾಮಸ್ತಿಷ್ಠತಿ ಸಾನುಜಃ ।
ಜಾನಕ್ಯಾ ಸಹಿತೋ ನಂದಾತ್ಸುಖಮಾಸ್ತೇ ಕಿಲಪ್ರಭುಃ ॥

ಅನುವಾದ

ಪರಿಶುದ್ಧ ಮನಸ್ಸಿನವನಾದ ಭರತನನ್ನು ಕಂಡು ಗುಹನು ಪ್ರೀತಿಯಿಂದ ಹೀಗೆಂದನು ‘‘ಸ್ವಾಮಿ! ಕಮಲನಯನ ಶ್ರೀರಾಮ, ಸೀತೆ, ಲಕ್ಷ್ಮಣರಲ್ಲಿ ನಿನಗೆ ಅಪಾರ ಭಕ್ತಿ ಇದೆ, ಅದರಿಂದ ನೀನು ಧನ್ಯನಾಗಿರುವೆ. ಪ್ರಭುವಾದ ಭಗವಾನ್ ಶ್ರೀರಾಮನು ತಮ್ಮನೊಡಗೂಡಿ ಚಿತ್ರಕೂಟ ಪರ್ವತದ ಸಮೀಪದಲ್ಲಿ ಮಂದಾಕಿನೀ ನದಿಯ ಬಳಿಯಲ್ಲಿ ಇರುವ ಋಷಿಗಳ ಆಶ್ರಮಗಳುಳ್ಳ ಸ್ಥಳದಲ್ಲಿ ಜಾನಕೀ ಸಹಿತನಾಗಿ ಶ್ರೀರಾಮನು ಆನಂದವಾಗಿ, ಸುಖವಾಗಿ ವಿರಾಜಮಾನನಾಗಿದ್ದಾನೆ. ॥35-37॥

38
ಮೂಲಮ್

ತತ್ರ ಗಚ್ಛಾಮಹೇ ಶೀಘ್ರಂ ಗಂಗಾಂ ತರ್ತುಮಿಹಾರ್ಹಸಿ ।
ಇತ್ಯುಕ್ತ್ವಾ ತ್ವರಿತಂ ಗತ್ವಾ ನಾವಃ ಪಂಚಶತಾನಿ ಹ ॥

39
ಮೂಲಮ್

ಸಮಾನಯತ್ಸಸೈನ್ಯಸ್ಯ ತರ್ತುಂ ಗಂಗಾಂ ಮಹಾನದೀಮ್ ।
ಸ್ವಯಮೇವಾನಿನಾಯೈಕಾಂ ರಾಜನಾವಂ ಗುಹಸ್ತದಾ ॥

ಅನುವಾದ

ನಡೆಯಿರಿ! ನಾವೆಲ್ಲರೂ ಅಲ್ಲಿಗೆ ಹೋಗೋಣ. ಮೊದಲು ನೀವೆಲ್ಲ ಗಂಗೆಯನ್ನು ದಾಟಿರಿ.’’ ಹೀಗೆ ಹೇಳಿ ಗುಹನು ತನ್ನ ಸೈನ್ಯಕ್ಕೆ ಸೇರಿದ ಐದುನೂರು ನಾವೆಗಳನ್ನು ಮಹಾನದಿ ಗಂಗೆಯನ್ನು ದಾಟುವ ಸಲುವಾಗಿ ತರಿಸಿದನು. ಮತ್ತು ರಾಜರು ಉಪಯೋಗಿಸುವಂತಹ ವಿಶೇಷ ನಾವೆಯೊಂದನ್ನು ತಾನೇ ಸ್ವತಃ ತೆಗೆದುಕೊಂಡು ಬಂದನು. ॥38-39॥

40
ಮೂಲಮ್

ಆರೋಪ್ಯ ಭರತಂ ತತ್ರ ಶತ್ರುಘ್ನಂ ರಾಮಮಾತರಮ್ ।
ವಸಿಷ್ಠಂ ಚ ತಥಾನ್ಯತ್ರ ಕೈಕೇಯೀಂ ಚಾನ್ಯಯೋಷಿತಃ ॥

41
ಮೂಲಮ್

ತೀರ್ತ್ವಾ ಗಂಗಾಂ ಯಯೌ ಶೀಘ್ರಂ ಭರದ್ವಾಜಾಶ್ರಮಂ ಪ್ರತಿ ।
ದೂರೇ ಸ್ಥಾಪ್ಯ ಮಹಾಸೈನ್ಯಂ ಭರತಃ ಸಾನುಜೋ ಯಯೌ ॥

ಅನುವಾದ

ಅದರಲ್ಲಿ ಭರತ, ಶತ್ರುಘ್ನ, ರಾಮನ ತಾಯಿಯಾದ ಕೌಸಲ್ಯೆಯನ್ನು, ಗುರುಗಳಾದ ವಸಿಷ್ಠರನ್ನು ಕುಳ್ಳಿರಿಸಿದನು. ಕೈಕೆಯಿಯನ್ನು ಉಳಿದ ರಾಜಸೀಯರನ್ನು ಬೇರೊಂದು ನಾವೆಯಲ್ಲಿ ಕುಳ್ಳಿರಿಸಿದನು. ಹೀಗೆ ಗುಹನ ಸಹಾಯದಿಂದ ಭರತನು ಪರಿವಾರಸಹಿತ ಶಿಘ್ರವಾಗಿ ಗಂಗಾನದಿಯನ್ನು ದಾಟಿ, ಭರದ್ವಾಜರ ಆಶ್ರಮದ ಕಡೆಗೆ ನಡೆದನು. ಆದರೆ ಸೈನ್ಯವನ್ನೆಲ್ಲ ದೂರದಲ್ಲಿಯೇ ನಿಲ್ಲಿಸಿ ಶತ್ರುಘ್ನನೊಂದಿಗೆ ಆಶ್ರಮವನ್ನು ಹೊಕ್ಕನು. ॥40-41॥

42
ಮೂಲಮ್

ಆಶ್ರಮೇ ಮುನಿಮಾಸೀನಂ ಜ್ವಲಂತಮಿವ ಪಾವಕಮ್ ।
ದೃಷ್ಟ್ವಾ ನನಾಮ ಭರತಃ ಸಾಷ್ಟಾಂಗಮತಿಭಕ್ತಿತಃ ॥

ಅನುವಾದ

ಪ್ರಜ್ವಲಿತ ಅಗ್ನಿಯಂತೆ ತೇಜೋಮಯರಾಗಿ ಆಶ್ರಮದಲ್ಲಿ ಕುಳಿತಿರುವ ಭರದ್ವಾಜ ಮುನಿವರ್ಯರನ್ನು ಕಂಡು ಭರತನು ಅತ್ಯಂತ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದನು. ॥42॥

43
ಮೂಲಮ್

ಜ್ಞಾತ್ವಾ ದಾಶರಥಿಂ ಪ್ರೀತ್ಯಾ ಪೂಜಯಾಮಾಸ ಮೌನಿರಾಟ್ ।
ಪಪ್ರಚ್ಛ ಕುಶಲಂ ದೃಷ್ಟ್ವಾ ಜಟಾವಲ್ಕಲಧಾರಿಣಮ್ ॥

ಅನುವಾದ

ಮುನಿ ಶ್ರೇಷ್ಠರಾದರೋ ದಶರಥ ಪುತ್ರನಾದ ಭರತನು ಈತನೆಂದು ಅರಿತು, ಜಟಾವಲ್ಕಲಗಳನ್ನು ಧರಿಸಿರುವುದನ್ನು ಕಂಡು ಕುಶಲ ಪ್ರಶ್ನೆಗಳನ್ನು ಮಾಡಿದರು. ॥43॥

44
ಮೂಲಮ್

ರಾಜ್ಯಂ ಪ್ರಶಾಸತಸ್ತೇಽದ್ಯ ಕಿಮೇತದ್ವಲ್ಕಲಾದಿಕಮ್ ।
ಆಗತೋಽಸಿ ಕಿಮರ್ಥಂ ತ್ವಂ ವಿಪಿನಂ ಮುನಿಸೇವಿತಮ್ ॥

ಅನುವಾದ

‘‘ತಮ್ಮ ಭರತಾ! ರಾಜ್ಯವನ್ನಾಳುತ್ತಿರುವ ನೀನು ಈಗ ನಾರುಮಡಿ ಮುಂತಾದವುಗಳನ್ನು ಏಕೆ ಧರಿಸಿರುವೆ. ಋಷಿಗಳಿಗೆ ವಾಸಸ್ಥಾನವಾಗಿರುವ ಕಾಡಿಗೆ ಏತಕ್ಕೆ ಬಂದಿರುವೆ?’’ ॥44॥

45
ಮೂಲಮ್

ಭರದ್ವಾಜವಚಃ ಶ್ರುತ್ವಾ ಭರತಃ ಸಾಶ್ರುಲೋಚನಃ ।
ಸರ್ವಂ ಜಾನಾಸಿ ಭಗವನ್ ಸರ್ವಭೂತಾಶಯಸ್ಥಿತಃ ॥

46
ಮೂಲಮ್

ತಥಾಪಿ ಪೃಚ್ಛಸೇ ಕಿಂಚಿತ್ತದನುಗ್ರಹ ಏವ ಮೇ ।
ಕೈಕೇಯ್ಯಾ ಯತ್ಕೃತಂ ಕರ್ಮ ರಾಮರಾಜ್ಯವಿಘಾತನಮ್ ॥

47
ಮೂಲಮ್

ವನವಾಸಾದಿಕಂ ವಾಪಿ ನ ಹಿ ಜಾನಾಮಿ ಕಿಂಚನ ।
ಭವತ್ಪಾದಯುಗಂ ಮೇಽದ್ಯ ಪ್ರಮಾಣಂ ಮುನಿಸತ್ತಮ ॥

ಅನುವಾದ

ಭರದ್ವಾಜರ ಮಾತುಗಳನ್ನು ಕೇಳಿ ಭರತನು ಕಣ್ಣೀರ ತುಂಬಿಕೊಂಡು ಪೂಜ್ಯರೇ ‘‘ಸರ್ವಾಂತರ್ಯಾಮಿಯಾಗಿರುವ ನೀವು ಎಲ್ಲವನ್ನು ಬಲ್ಲಿರಿ. ಆದರೂ ಇದನ್ನು ಕೇಳುತ್ತಿರುವಿರಿ, ಇದು ನನಗೆ ಅನುಗ್ರಹವೇ ಆಗಿದೆ. ಶ್ರೀರಾಮಚಂದ್ರನ ರಾಜ್ಯಾಭಿಷೇಕದಲ್ಲಿ ಕೈಕೆಯಿಯು ತಂದೊಡ್ಡಿದ ವಿಘ್ನದ ಕುರಿತಾಗಲಿ, ಅವನ ವನ ವಾಸಾದಿ ವಿಷಯಗಳಾಗಲಿ ನಾನೇನನ್ನು ಅರಿಯೆ. ಇದೋ ನಿಮ್ಮ ಪಾದದ್ವಯಗಳೇ ಸಾಕ್ಷಿ’’ ಎಂದು ವಿನಂತಿಸಿಕೊಂಡನು. ॥45-47॥

48
ಮೂಲಮ್

ಇತ್ಯುಕ್ತ್ವಾ ಪಾದಯುಗಲಂ ಮುನೇಃ ಸ್ಪೃಷ್ಟ್ವಾರ್ತ್ತಮಾನಸಃ ।
ಜ್ಞಾತುಮರ್ಹಸಿ ಮಾಂ ದೇವ ಶುದ್ಧೋ ವಾಶುದ್ಧ ಏವ ವಾ ॥

ಅನುವಾದ

ಹೀಗೆ ಹೇಳುತ್ತಾ ಅತಿ ಆರ್ತಚಿತ್ತನಾಗಿ ಮುನಿಗಳ ಚರಣ ಯುಗಲಗಳನ್ನು ಮುಟ್ಟಿ, ನಾನು ಅಪರಾಧಿಯೋ, ನಿರಪರಾಧಿಯೋ ನೀವೇ ಸ್ವತಃ ಅರಿತುಕೊಳ್ಳಿರಿ. ॥48॥

49
ಮೂಲಮ್

ಮಮ ರಾಜ್ಯೇನ ಕಿಂ ಸ್ವಾಮಿನ್ ರಾಮೇ ತಿಷ್ಠತಿ ರಾಜನಿ ।
ಕಿಂಕರೋಽಹಂ ಮುನಿಶ್ರೇಷ್ಠ ರಾಮಚಂದ್ರಸ್ಯ ಶಾಶ್ವತಃ ॥

ಅನುವಾದ

ಸ್ವಾಮಿ! ನನಗೆ ರಾಜ್ಯವನ್ನು ಕಟ್ಟಿಕೊಂಡು ಏನಾಗಬೇಕು? ಮಹಾತ್ಮನಾದ ಶ್ರೀರಾಮನಿರುವಲ್ಲಿಯೇ ನಾನು ಇರುವೆನು; ಮುನಿಶ್ರೇಷ್ಠರೇ! ನಾನಾದರೋ ಸದಾಕಾಲ ಶ್ರೀರಾಮಚಂದ್ರನ ದಾಸನಾಗಿರುವೆನು. ॥49॥

50
ಮೂಲಮ್

ಅತೋ ಗತ್ವಾ ಮುನಿಶ್ರೇಷ್ಠ ರಾಮಸ್ಯ ಚರಣಾಂತಿಕೇ ।
ಪತಿತ್ವಾ ರಾಜ್ಯಸಂಭಾರಾನ್ ಸಮರ್ಪ್ಯಾತ್ರೈವ ರಾಘವಮ್ ॥

ಅನುವಾದ

ಆದ್ದರಿಂದ ‘‘ಹೇ ಮುನಿನಾಥನೆ! ಶ್ರೀರಾಮನ ಬಳಿಗೆ ಹೋಗಿ ಅವನ ಚರಣಕಮಲಗಳಿಗೆ ಬಿದ್ದು ರಾಜ್ಯ ಸಂಭಾರಗಳೆಲ್ಲವನ್ನು ಸಮರ್ಪಿಸಿಬಿಡುವೆನು. ॥50॥

51
ಮೂಲಮ್

ಅಭಿಷೇಕ್ಷ್ಯೇ ವಸಿಷ್ಠಾದ್ಯೈಃ ಪೌರಜಾನಪದೈಃ ಸಹ ।
ನೇಷ್ಯೇಯೋಧ್ಯಾಂ ರಮಾನಾಥಂ ದಾಸಃ ಸೇವೇಽತಿನೀಚವತ್ ॥

ಅನುವಾದ

ಹಾಗೂ ವಸಿಷ್ಠರೇ ಆದಿ ಸಕಲ ಪೌರಜನರಿಂದೊಡಗೂಡಿ ಶ್ರೀರಘುರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಅಯೋಧ್ಯೆಗೆ ಕರೆದೊಯ್ಯುವೆ ಹಾಗೂ ತೀರ ಕೆಳಮಟ್ಟದ ಸೇವಕನಂತೆ ಆ ಲಕ್ಷ್ಮೀಪತಿಯ ಸೇವೆಗೈಯ್ಯುವೆನು.’’ ॥51॥

52
ಮೂಲಮ್

ಇತ್ಯುದೀರಿತಮಾಕರ್ಣ್ಯ ಭರತಸ್ಯ ವಚೋ ಮುನಿಃ ।
ಆಲಿಂಗ್ಯ ಮೂರ್ಧ್ನ್ಯವಘ್ರಾಯ ಪ್ರಶಶಂಸ ಸವಿಸ್ಮಯಃ ॥

ಅನುವಾದ

ಭರತನ ಈ ಉದ್ಗಾರವನ್ನು ಕೇಳಿದ ಮುನೀಶ್ವರರು ಆತನನ್ನು ಆಲಿಂಗಿಸಿಕೊಂಡು ನೆತ್ತಿಯನ್ನು ಆಘ್ರಾಣಿಸಿ ಆಶ್ಚರ್ಯದಿಂದ ಹೊಗಳಿದರು. ॥52॥

53
ಮೂಲಮ್

ವತ್ಸ ಜ್ಞಾತಂ ಪುರೈವೈತದ್ಭವಿಷ್ಯಂ ಜ್ಞಾನಚಕ್ಷುಷಾ ।
ಮಾಶುಚಸ್ತ್ವಪರೋಭಕ್ತಃಶ್ರೀರಾಮೇಲಕ್ಷ್ಮಣಾದಪಿ ॥

ಅನುವಾದ

ಅನಂತರ ‘‘ಮಗು! ಜ್ಞಾನದೃಷ್ಟಿಯಿಂದ ಈ ಭವಿಷ್ಯವೆಲ್ಲವನ್ನು ನಾನು ಮೊದಲೇ ತಿಳಿದಿದ್ದೆನು. ನೀನು ಅಳಬೇಡ. ನೀನಾದರೋ ಲಕ್ಷ್ಮಣನಿಗಿಂತಲೂ ಶ್ರೀರಾಮನಲ್ಲಿ ಹೆಚ್ಚು ಭಕ್ತಿಯುಳ್ಳವನು. ॥53॥

54
ಮೂಲಮ್

ಆತಿಥ್ಯಂ ಕರ್ತುಮಿಚ್ಛಾಮಿ ಸಸೈನ್ಯಸ್ಯ ತವಾನಘ ।
ಅದ್ಯ ಭುಕ್ತ್ವಾ ಸಸೈನ್ಯಸ್ತ್ವಂ ಶ್ವೋ ಗಂತಾ ರಾಮಸನ್ನಿಧಿಮ್ ॥

ಅನುವಾದ

ಎಲೈ ಪಾಪರಹಿತನೆ! ಸೇನಾಸಮೇತನಾದ ನಿನಗೆ ಆತಿಥ್ಯವನ್ನು ಮಾಡಲಿಚ್ಛಿಸುತ್ತೇನೆ. ಈದಿನ ಭೋಜನ ಮಾಡಿಕೊಂಡು ನಾಳೆಯ ದಿನ ಶ್ರೀರಾಮನ ಸನ್ನಿಧಿಗೆ ಸೇನಾಸಹಿತ ಹೋಗುವಿಯಂತೆ’’ ಎಂದು ಹೇಳಿದರು. ॥54॥

55
ಮೂಲಮ್

ಯಥಾಜ್ಞಾಪಯತಿ ಭವಾಂಸ್ತಥೇತಿ ಭರತೋಽಬ್ರವೀತ್ ।
ಭರದ್ವಾಜಸ್ತ್ವಪಃ ಸ್ಪೃಷ್ಟ್ವಾ ಮೌನೇ ಹೋಮಗೃಹೇ ಸ್ಥಿತಃ ॥

ಅನುವಾದ

ಭರತನು ‘‘ಪೂಜ್ಯರಾದ ನಿಮ್ಮ ಅಪ್ಪಣೆಯಂತೇ ಆಗಲಿ’’, ಎಂದು ಸಮ್ಮತಿಸಿದನು. ಆಗ ಭರದ್ವಾಜ ಮುನಿಗಳು ಯಜ್ಞಶಾಲೆ ಯನ್ನು ಹೊಕ್ಕು ಆಚಮನ ಮಾಡಿ ವೌನವಾಗಿ ಕುಳಿತರು. ॥55॥

56
ಮೂಲಮ್

ದಧ್ಯೌ ಕಾಮದುಧಾಂ ಕಾಮವರ್ಷಿಣೀಂ ಕಾಮದೋ ಮುನಿಃ ।
ಅಸೃಜತ್ಕಾಮಧುಕ್ ಸರ್ವಂ ಯಥಾಕಾಮಮಲೌಕಿಕಮ್ ॥

ಅನುವಾದ

ಅನಂತರ ಇಷ್ಟಾರ್ಥಗಳನ್ನು ಕೊಡುವ, ಕಾಮನೆಗಳನ್ನು ಪೂರ್ಣವಾಗಿಸುವಂತಹ ಕಾಮಧೇನುವನ್ನು ಮುನೀಶ್ವರರು ಸ್ಮರಿಸಿದರು. ಬಳಿಕ ಮನುಷ್ಯರಿಗೆ ಅಪರೂಪವಾದಂತಹ ಎಲ್ಲ ಭೋಗ ಸಾಮಗ್ರಿಗಳನ್ನು ಕಾಮಧೇನುವು ಸೃಷ್ಟಿಸಿತು. ॥56॥

57
ಮೂಲಮ್

ಭರತಸ್ಯ ಸಸೈನ್ಯಸ್ಯ ಯಥೇಷ್ಟಂ ಚ ಮನೋರಥಮ್ ।
ಯಥಾ ವವರ್ಷ ಸಕಲಂ ತೃಪ್ತಾಸ್ತೇ ಸರ್ವಸೈನಿಕಾಃ ॥

ಅನುವಾದ

ಸೇನಾ ಸಮೇತನಾದ ಭರತನ ಬಯಕೆಗಳಿಗೆ ತಕ್ಕಂತೆ ಎಲ್ಲ ಆಶೋತ್ತರಗಳನ್ನು ಮಳೆಗರೆಯಿತು. ಇದರಿಂದ ಸೈನಿಕರೆಲ್ಲರೂ ತೃಪ್ತರಾದರು. ॥57॥

58
ಮೂಲಮ್

ವಸಿಷ್ಠಂ ಪೂಜಯಿತ್ವಾಗ್ರೇ ಶಾಸ್ತ್ರದೃಷ್ಟೇನ ಕರ್ಮಣಾ ।
ಪಶ್ಚಾತ್ ಸಸೈನ್ಯಂ ಭರತಂ ತರ್ಪಯಾಮಾಸ ಯೋಗಿರಾಟ್ ॥

ಅನುವಾದ

ಮತ್ತೆ ಯೋಗಿಶ್ರೇಷ್ಠರಾದ ಭರದ್ವಾಜರು ಶಾಸ್ತ್ರ ಸಮ್ಮತವಾದ ರೀತಿಯಿಂದ ಮೊದಲು ವಸಿಷ್ಠರನ್ನು ಪೂಜಿಸಿ, ಅನಂತರ ಸೇನಾಸಹಿತ ಭರತನನ್ನು ಸಂತೋಷಗೊಳಿಸಿದರು. ॥58॥

59
ಮೂಲಮ್

ಉಷಿತ್ವಾ ದಿನಮೇಕಂ ತು ಆಶ್ರಮೇ ಸ್ವರ್ಗಸನ್ನಿಭೇ ।
ಅಭಿವಾದ್ಯ ಪುನಃ ಪ್ರಾತರ್ಭರದ್ವಾಜಂ ಸಹಾನುಜಃ ।
ಭರತಸ್ತು ಕೃತಾನುಜ್ಞಃ ಪ್ರಯಯೌ ರಾಮಸನ್ನಿಧಿಮ್ ॥

ಅನುವಾದ

ಈ ಪ್ರಕಾರ ಸ್ವರ್ಗ ಸಮಾನವಾದ ಆಶ್ರಮದಲ್ಲಿ ಒಂದುದಿನ ಉಳಿದುಕೊಂಡು ಮತ್ತೆ ಬೆಳಿಗ್ಗೆ ಸೋದರನೊಡಗೂಡಿ ಭರದ್ವಾಜರನ್ನು ನಮಸ್ಕರಿಸಿ ಭರತನು ಋಷಿಗಳ ಅಪ್ಪಣೆಯನ್ನು ಪಡೆದು ಶ್ರೀರಾಮನಿದ್ದಲ್ಲಿಗೆ ಪ್ರಯಾಣ ಬೆಳೆಸಿದನು. ॥59॥

60
ಮೂಲಮ್

ಚಿತ್ರಕೂಟಮನುಪ್ರಾಪ್ಯ ದೂರೇ ಸಂಸ್ಥಾಪ್ಯ ಸೈನಿಕಾನ್ ।
ರಾಮಸಂದರ್ಶನಾಕಾಂಕ್ಷೀ ಪ್ರಯಯೌ ಭರತಃ ಸ್ವಯಮ್ ॥

61
ಮೂಲಮ್

ಶತ್ರುಘ್ನೇನ ಸುಮಂತ್ರೇಣ ಗುಹೇನ ಚ ಪರಂತಪಃ ।
ತಪಸ್ವಿಮಂಡಲಂ ಸರ್ವಂ ವಿಚಿನ್ವಾನೋ ನ್ಯವರ್ತತ ॥

ಅನುವಾದ

ಚಿತ್ರಕೂಟವನ್ನು ತಲುಪಿ ಸೈನಿಕರೆಲ್ಲರನ್ನು ದೂರದಲ್ಲಿರಿಸಿ ಶ್ರೀರಾಮನನ್ನು ನೋಡುವ ಕುತೂಹಲದಿಂದ ಪಾಪರಹಿತನಾದ ಭರತನು ಶತ್ರುಘ್ನ, ಸುಮಂತ್ರ, ಗುಹರಿಂದೊಡಗೂಡಿ ಹೊರಟನು. ಋಷಿಗಳ ಗುಂಪುಗಳುಳ್ಳ ಜಾಗವನ್ನೆಲ್ಲ ಪೂರ್ಣವಾಗಿ ಹುಡುಕುತ್ತಾ ಹಿಂತಿರುಗಿದನು. ॥60-61॥

62
ಮೂಲಮ್

ಅದೃಷ್ಟ್ವಾ ರಾಮಭವನಮಪೃಚ್ಛದೃಷಿಮಂಡಲಮ್ ।
ಕುತ್ರಾಸ್ತೇ ಸೀತಯಾ ಸಾರ್ಧಂ ಲಕ್ಷ್ಮಣೇನ ರಘೂತ್ತಮಃ ॥

ಅನುವಾದ

ಆದರೆ ಶ್ರೀರಾಮಚಂದ್ರನ ಕುಟೀರವನ್ನು ಕಾಣದೆ ಋಷಿಗಳ ಗುಂಪನ್ನು ಕೇಳುತ್ತಾನೆ ‘‘ರಘೂತ್ತಮನಾದ ಶ್ರೀರಾಮನು ಸೀತಾ ಲಕ್ಷ್ಮಣರೊಡಗೂಡಿ ಎಲ್ಲಿರುವನು?’’ ॥62॥

63
ಮೂಲಮ್

ಊಚುರಗ್ರೇ ಗಿರೇಃ ಪಶ್ಚಾದ್ಗಂಗಾಯಾ ಉತ್ತರೇ ತಟೇ ।
ವಿವಿಕ್ತಂ ರಾಮಸದನಂ ರಮ್ಯಂ ಕಾನನಮಂಡಿತಮ್ ॥

ಅನುವಾದ

ಅವರೆಂದರು ‘‘ಮುಂದೆ ಕಾಣುವ ಪರ್ವತದ ಹಿಂಭಾಗಕ್ಕೆ ಮಂದಾಕಿನಿಯ ಉತ್ತರ ತಟದಲ್ಲಿ ರಮ್ಯವಾದ ಕಾಡಿನಿಂದ ಅಲಂಕೃತವಾದ ಪರಮ ರಮಣೀಯ ಏಕಾಂತ ಕುಟೀರವಿದೆ. ॥63॥

64
ಮೂಲಮ್

ಸಫಲೈರಾಮ್ರಪನಸೈಃ ಕದಲೀಶಂಡಸಂವೃತಮ್ ।
ಚಂಪಕೈಃ ಕೋವಿದಾರೈಶ್ಚ ಪುನ್ನಾಗೈರ್ವಿಪುಲೈಸ್ತಥಾ ॥

ಅನುವಾದ

ಅದು ಹಣ್ಣುಗಳು ತುಂಬಿ ಬಾಗಿರುವ ಅನೇಕ ಮಾವು, ಹಲಸು, ಬಾಳೆ ವೃಕ್ಷಗಳಿಂದ ಹಾಗೂ ಸಂಪಿಗೆ, ಕಂಚಿವಾಳ, ನಾಗಕೇಸರ ಮುಂತಾದ ಹೂವುಗಳ ಮರಗಳಿಂದ ಸುತ್ತುವರಿದಿದೆ.’’ ॥64॥

65
ಮೂಲಮ್

ಏವಂ ದರ್ಶಿತಮಾಲೋಕ್ಯ ಮುನಿಭಿರ್ಭರತೋಽಗ್ರತಃ ।
ಹರ್ಷಾದ್ಯಯೌ ರಘುಶ್ರೇಷ್ಠಭವನಂ ಮಂತ್ರಿಣಾ ಸಹ ॥

ಅನುವಾದ

ಋಷಿಗಳು ಈ ರೀತಿ ತಿಳಿಸಿದ ದಾರಿಯಿಂದ ಭರತನು ತಾನೇ ಮುಂದಾಗಿ ಮಂತ್ರಿಗಳೊಡ ಗೂಡಿ ಸಂತೋಷವಾಗಿ ಶ್ರೀರಾಮನ ನಿವಾಸ ಸ್ಥಾನದ ಕಡೆಗೆ ಹೊರಟನು. ॥65॥

66
ಮೂಲಮ್

ದದರ್ಶ ದೂರಾದತಿಭಾಸುರಂ ಶುಭಂ
ರಾಮಸ್ಯ ಗೇಹಂ ಮುನಿವೃಂದಸೇವಿತಮ್ ।
ವೃಕ್ಷಾಗ್ರಸಂಲಗ್ನಸುವಲ್ಕಲಾಜಿನಂ
ರಾಮಾಭಿರಾಮಂ ಭರತಃ ಸಹಾನುಜಃ ॥

ಅನುವಾದ

ಮುಂದರಿಯುತ್ತಾ ದೂರದಿಂದಲೇ ಪ್ರಕಾಶ ಮಾನವಾಗಿಯೂ, ಶುಭಕರವೂ, ಋಷಿಗಳ ಸಮೂಹದಿಂದ ಸೇವಿಸಲ್ಪಡುತ್ತಿರುವ, ಸಮೀಪದ ಮರಗಳ ತುದಿಯಲ್ಲಿ ತೂಗು ಹಾಕಿದ ವಲ್ಕಲವಸ್ತ್ರಗಳು, ಮೃಗಚರ್ಮಗಳಿಂದ ಕಂಗೊಳಿಸುವ ರಮಣೀಯವಾದ ಶ್ರೀರಾಮಚಂದ್ರನು ವಾಸವಾಗಿದ್ದ ಕುಟೀರವನ್ನು ಶತ್ರುಘ್ನನೊಂದಿಗೆ ಭರತನು ನೋಡಿದನು. ॥66॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಅಷ್ಟಮಃ ಸರ್ಗಃ ॥8॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.