[ಏಳನೆಯ ಸರ್ಗ]
ಭಾಗಸೂಚನಾ
ಸುಮಂತ್ರನು ಹಿಂದಕ್ಕೆ ಬರುವುದು, ರಾಜಾ ದಶರಥನ ಸ್ವರ್ಗವಾಸ, ಭರತನು ಮಾವನ ಮನೆಯಿಂದ ಬರುವುದು ಮತ್ತು ವಸಿಷ್ಠರ ಆದೇಶದಂತೆ ತಂದೆಯ ಅಂತ್ಯಕ್ರಿಯಾದಿಗಳನ್ನು ಮಾಡುವುದು
1
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಸುಮಂತ್ರೋಽಪಿ ತದಾಯೋಧ್ಯಾಂ ದಿನಾಂತೇ ಪ್ರವಿವೇಶ ಹ ।
ವಸ್ತ್ರೇಣ ಮುಖಮಾಚ್ಛಾದ್ಯ ವಾಷ್ಪಾಕುಲಿತಲೋಚನಃ ॥
ಅನುವಾದ
ಶ್ರೀಮಹದೇವನಿಂತೆಂದನು ಹಿಮನಗನಂದಿನಿ! ಇತ್ತ ಸುಮಂತ್ರನು ಸಂಜೆಯ ವೇಳೆಗೆ ಕಣ್ಣೀರು ತುಂಬಿಕೊಂಡು, ಮುಖವನ್ನು ಬಟ್ಟೆಯಿಂದ ಮರೆಮಾಡಿಕೊಂಡು ಅಯೋಧ್ಯೆಯನ್ನು ಪ್ರವೇಶಿಸಿದನು. ॥1॥
2
ಮೂಲಮ್
ಬಹಿರೇವ ರಥಂ ಸ್ಥಾಪ್ಯ ರಾಜಾನಂ ದ್ರಷ್ಟುಮಾಯಯೌ ।
ಜಯಶಬ್ದೇನ ರಾಜಾನಂ ಸ್ತುತ್ವಾ ತಂ ಪ್ರಣನಾಮ ಹ ॥
ಅನುವಾದ
ರಥವನ್ನು ಹೊರಭಾಗದಲ್ಲೇ ನಿಲ್ಲಿಸಿ ಅವನು ಮಹಾರಾಜರನ್ನು ನೋಡಲು ಅಂತಃಪುರಕ್ಕೆ ಹೋಗಿ ಜಯಕಾರದಿಂದ ರಾಜನನ್ನು ಹೊಗಳಿ ನಮಸ್ಕಾರ ಮಾಡಿದನು. ॥2॥
3
ಮೂಲಮ್
ತತೋ ರಾಜಾ ನಮನ್ತಂ ತಂ ಸುಮಂತ್ರಂ ವಿಹ್ವಲೋಽಬ್ರವೀತ್ ।
ಸುಮಂತ್ರ ರಾಮಃ ಕುತ್ರಾಸ್ತೇ ಸೀತಯಾ ಲಕ್ಷ್ಮಣೇನ ಚ ॥
4
ಮೂಲಮ್
ಕುತ್ರ ತ್ಯಕ್ತಸ್ತ್ವಯಾ ರಾಮಃ ಕಿಂ ಮಾಂ ಪಾಪಿನಮಬ್ರವೀತ್ ।
ಸೀತಾ ವಾ ಲಕ್ಷಣೋ ವಾಪಿ ನಿರ್ದಯಂ ಮಾಂ ಕಿಮಬ್ರವೀತ್ ॥
5
ಮೂಲಮ್
ಹಾ ರಾಮ ಹಾ ಗುಣನಿಧೇ ಹಾ ಸೀತೆ ಪ್ರಿಯವಾದಿನಿ ।
ದುಃಖಾರ್ಣವೇ ನಿಮಗ್ನಂ ಮಾಂ ಮ್ರಿಯಮಾಣಂ ನ ಪಶ್ಯಸಿ ॥
ಅನುವಾದ
ನಮಸ್ಕರಿಸುತ್ತಿರುವ ಸುಮಂತ್ರನನ್ನು ಕುರಿತು ದುಃಖಿತನಾದ ರಾಜನು ಕೇಳಿದನು ‘‘ಹೇ ಸುಮಂತ್ರಾ! ಸೀತಾ ಲಕ್ಷ್ಮಣ ಸಮೇತನಾದ ರಾಮನು ಈಗ ಎಲ್ಲಿರುವನು? ನೀನು ರಾಮನನ್ನು ಎಲ್ಲಿ ಬಿಟ್ಟು ಬಂದೆ? ಪಾಪಿಯಾದ ನನ್ನನ್ನು ಕುರಿತು ರಾಮನು ಏನು ಹೇಳಿದನು? ನಿರ್ದಯನಾದ ನನ್ನ ವಿಷಯದಲ್ಲಿ ಸೀತೆಯಾಗಲಿ, ಲಕ್ಷ್ಮಣನಾಗಲಿ ಏನೆಂದುಕೊಂಡರು? ಹಾ, ಗುಣನಿಧಿಯಾದ ರಾಮನೆ! ಹಾ, ಪ್ರಿಯವಾದಿನೀ ಸೀತೆಯೇ, ಶೋಕಸಮುದ್ರದಲ್ಲಿ ಮುಳುಗಿ ಸಾಯುತ್ತಿರುವ ನನ್ನನ್ನೇಕೆ ನೋಡುತ್ತಿಲ್ಲ?’’ ॥3-5॥
6
ಮೂಲಮ್
ವಿಲಪ್ಯೈವಂ ಚಿರಂ ರಾಜಾ ನಿಮಗ್ನೋ ದುಃಖಸಾಗರೇ ।
ಏವಂ ಮಂತ್ರಿ ರುದನ್ತಂ ತಂ ಪ್ರಾಂಜಲಿರ್ವಾಕ್ಯಮಬ್ರವೀತ್ ॥
ಅನುವಾದ
ಎಂಬುದಾಗಿ ಬಹಳ ಹೊತ್ತು ರಾಜನು ವಿಲಾಪಿಸುತ್ತಾ ದುಃಖಸಾಗರದಲ್ಲಿ ಮುಳುಗಿದನು. ಹೀಗೆ ಅಳುತ್ತಿರುವ ಮಹಾರಾಜರನ್ನು ಕುರಿತು ಮಂತ್ರಿಯು ಕೈ ಜೋಡಿಸಿಕೊಂಡು ಹೀಗೆಂದನು. ॥6॥
7
ಮೂಲಮ್
ರಾಮಃ ಸೀತಾ ಚ ಸೌಮಿತ್ರಿರ್ಮಯಾ ನೀತಾ ರಥೇನ ತೇ ।
ಶೃಂಗವೇರಪುರಾಭ್ಯಾಶೇ ಗಂಗಾಕೂಲೇ ವ್ಯವಸ್ಥಿತಾಃ ॥
ಅನುವಾದ
‘‘ಭೂಪಾಲಾ! ಶ್ರೀರಾಮನನ್ನು, ಸೀತೆಯನ್ನು, ಲಕ್ಷ್ಮಣನನ್ನು ನಿಮ್ಮ ರಥದಲ್ಲಿ ಕುಳ್ಳಿರಿಸಿಕೊಂಡು ನಾನು ಕರೆದುಕೊಂಡು ಹೋಗಿದ್ದೆ. ಅವರು ಶೃಂಗವೇರಪುರದ ಸಮೀಪ ಗಂಗಾನದಿಯ ತೀರದಲ್ಲಿ ಬಿಡಾರ ಮಾಡಿದರು. ॥7॥
8
ಮೂಲಮ್
ಗುಹೇನ ಕಿಂಚಿದಾನೀತಂ ಫಲಮೂಲಾದಿಕಂ ಚ ಯತ್ ।
ಸ್ಪೃಷ್ಟ್ವಾ ಹಸ್ತೇನ ಸಂಪ್ರೀತ್ಯಾ ನಾಗ್ರಹೀದ್ವಿಸಸರ್ಜ ತತ್ ॥
ಅನುವಾದ
ಅಲ್ಲಿ ನಿಷಾದರಾಜ ಗುಹನು ಸಮರ್ಪಿಸಿದ ಕೆಲವು ಕಂದಮೂಲ ಫಲಗಳನ್ನು ಶ್ರೀರಾಮನು ಪ್ರೀತಿಯಿಂದ ಕೈಯಿಂದ ಮುಟ್ಟಿ ಹಿಂತಿರುಗಿಸಿದನು ಸ್ವೀಕರಿಸಲಿಲ್ಲ. ॥8॥
9
ಮೂಲಮ್
ವಟಕ್ಷೀರಂ ಸಮಾನಾಯ್ಯ ಗುಹೇನ ರಘುನಂದನಃ ।
ಜಟಾಮುಕುಟಮಾಬದ್ಧ್ಯ ಮಾಮಾಹ ನೃಪತೇ ಸ್ವಯಮ್ ॥
ಅನುವಾದ
ಅನಂತರ ಶ್ರೀರಘುನಂದನನು ಆಲದ ಮರದ ಹಾಲನ್ನು ಗುಹನಿಂದ ತರಿಸಿ ಜಟಾಮುಕುಟವನ್ನು ಬಿಗಿದು ಶ್ರೀರಾಮನು ನನ್ನನ್ನು ಕುರಿತು ಹೀಗೆಂದನು- ॥9॥
10
ಮೂಲಮ್
ಸುಮಂತ್ರ ಬ್ರೂಹಿ ರಾಜಾನಂ ಶೋಕಸ್ತೇಽಸ್ತು ನ ಮತ್ಕೃತೇ ।
ಸಾಕೇತಾದಧಿಕಂ ಸೌಖ್ಯಂ ವಿಪಿನೇ ನೋ ಭವಿಷ್ಯತಿ ॥
ಅನುವಾದ
ಹೇ ಸುಮಂತ್ರಾ! ಮಹಾರಾಜರ ಬಳಿ ‘ನಮಗಾಗಿ ಶೋಕ ಪಡಬೇಕಾಗಿಲ್ಲ. ಅಯೋಧ್ಯೆಗಿಂತ ಹೆಚ್ಚಿನ ಸುಖವು ನಮಗೆ ಕಾಡಿನಲ್ಲಿ ದೊರೆಯಲಿದೆ’ ಎಂದು ಹೇಳು. ॥10॥
11
ಮೂಲಮ್
ಮಾತುರ್ಮೇ ವಂದನಂ ಬ್ರೂಹಿ ಶೋಕಂ ತ್ಯಜತು ಮತ್ಕೃತೇ ।
ಆಶ್ವಾಸಯತು ರಾಜಾನಂ ವೃದ್ಧಂ ಶೋಕಪರಿಪ್ಲುತಮ್ ॥
ಅನುವಾದ
ತಾಯಿಗೂ ನನ್ನ ನಮಸ್ಕಾರವನ್ನು ಹೇಳಿ ಆಕೆಯೂ ನನಗಾಗಿ ದುಃಖಪಡುವುದನ್ನು ಬಿಡಲಿ ಮತ್ತು ಸಂಕಟದಲ್ಲಿ ಮುಳುಗಿರುವ ವೃದ್ಧರಾದ ಮಹಾರಾಜರನ್ನು ಸಂತೈಸಲಿ ಎಂದು ಹೇಳು. ॥11॥
12
ಮೂಲಮ್
ಸೀತಾ ಚಾಶ್ರುಪರೀತಾಕ್ಷೀ ಮಾಮಾಹ ನೃಪಸತ್ತಮ ।
ದುಃಖಗದ್ಗದಯಾ ವಾಚಾ ರಾಮಂ ಕಿಂಚಿದವೇಕ್ಷತೀ ॥
13
ಮೂಲಮ್
ಸಾಷ್ಟಾಂಗಂ ಪ್ರಣಿಪಾತಂ ಮೇ ಬ್ರೂಹಿ ಶ್ವಶ್ರವೋ ಪದಾಂಬುಜೇ ।
ಇತಿ ಪ್ರರುದತೀ ಸೀತಾ ಗತಾ ಕಿಂಚಿದವಾಂಙ್ಮುಖೀ ॥
ಅನುವಾದ
ಹೇ ನೃಪಶ್ರೇಷ್ಠಾ! ದುಃಖದಿಂದ ಗದ್ಗದ ಮಾತುಗಳಿಂದ ಕಣ್ಣೀರು ತುಂಬಿದ ಸೀತೆಯು, ಸ್ವಲ್ಪ ರಾಮನಕಡೆಗೆ ನೋಡಿ ನನ್ನನ್ನು ಕುರಿತು ಹೀಗೆಂದಳು - ‘ಅತ್ತೆ ಮಾವಂದಿರ ಪಾದಾರವಿಂದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಹೇಳು’ ಎಂದು ಹೇಳಿ ಮುಖವನ್ನು ತಗ್ಗಿಸಿಕೊಂಡು ಅಳುತ್ತಾ ಆಕೆಯು ಹೊರಟು ಹೋದಳು. ॥12-13॥
14
ಮೂಲಮ್
ತತಸ್ತೇಶ್ರುಪರೀತಾಕ್ಷಾ ನಾವಮಾರುರುಹುಸ್ತದಾ ।
ಯಾವದ್ಗಂಗಾಂ ಸಮುತ್ತೀರ್ಯ ಗತಾಸ್ತಾವದಹಂ ಸ್ಥಿತಃ ॥
15
ಮೂಲಮ್
ತತೋ ದುಃಖೇನ ಮಹತಾ ಪುನರೇವಾಹಮಾಗತಃ ।
ತತೋ ರುದಂತೀ ಕೌಸಲ್ಯಾ ರಾಜಾನಮಿದಮಬ್ರವೀತ್ ॥
16
ಮೂಲಮ್
ಕೈಕೇಯ್ಯೈ ಪ್ರಿಯಭಾರ್ಯಾಯೈ ಪ್ರಸನ್ನೋ ದತ್ತವಾನ್ವರಮ್ ।
ತ್ವಂ ರಾಜ್ಯಂ ದೇಹಿ ತಸ್ಯೈವ ಮತ್ಪುತ್ರಃ ಕಿಂ ವಿವಾಸಿತಃ ॥
17
ಮೂಲಮ್
ಕೃತ್ವಾ ತ್ವಮೇವ ತತ್ಸರ್ವಮಿದಾನೀಂ ಕಿಂ ನು ರೋದಿಷಿ ।
ಕೌಸಲ್ಯಾವಚನಂ ಶ್ರುತ್ವಾ ಕ್ಷತೇ ಸ್ಪೃಷ್ಟ ಇವಾಗ್ನಿನಾ ॥
ಅನುವಾದ
ಅನಂತರ ಅವರುಗಳು ಕಣ್ಣೀರು ತುಂಬಿದವರಾಗಿ ಹರಿಗೋಲನ್ನು ಏರಿ ಗಂಗೆಯನ್ನು ದಾಟಿ ಮುಂದೆ ಹೋಗುವವರೆಗೂ ನಾನು ಅಲ್ಲೇ ನಿಂತಿದ್ದೆನು. ಬಳಿಕ ದುಃಖಿತನಾಗಿ ನಾನು ಮರಳಿ ಇಲ್ಲಿಗೆ ಬಂದೆ. ಅನಂತರ ಕೌಸಲ್ಯೆಯು ಅಳುತ್ತಾ ಮಹಾರಾಜರ ಬಳಿ ಇಂತೆಂದಳು ‘‘ನಾಥಾ! ಪ್ರಿಯಳಾದ ಹೆಂಡತಿ ಕೈಕೇಯಿಗೆ ನೀವು ಒಲಿದು ವರವನ್ನು ಕೊಟ್ಟಿರುವಿರಿ. ಅವಳ ಮಗನಿಗೆ ರಾಜ್ಯವನ್ನು ಕೊಟ್ಟಿದ್ದು ಒಳ್ಳೆಯದೆ. ಆದರೆ ನನ್ನ ಮಗನನ್ನೇಕೆ ಕಾಡಿಗೆ ಓಡಿಸಬೇಕಾಗಿತ್ತು? ನೀವೇ ಇದೆಲ್ಲವನ್ನು ಸ್ವತಃ ಮಾಡಿದವರಾಗಿ ಈಗ ಅಳುವುದಾದರೂ ಏಕೆ?’’ ಈ ರೀತಿಯ ಕೌಸಲ್ಯೆಯ ಮಾತುಗಳನ್ನು ಕೇಳಿ ಗಾಯಕ್ಕೆ ಬೆಂಕಿ ಸುರಿದಂತೆ ಹೆಚ್ಚಿನ ವೇದನೆ ಉಂಟಾಯಿತು. ॥14-17॥
18
ಮೂಲಮ್
ಪುನಃ ಶೋಕಾಶ್ರುಪೂರ್ಣಾಕ್ಷಃ ಕೌಸಲ್ಯಾಮಿದಮಬ್ರವೀತ್ ।
ದುಃಖೇನ ಮ್ರಿಯಮಾಣಂ ಮಾಂ ಕಿಂ ಪುನರ್ದುಃಖಯಸ್ಯಲಮ್ ॥
ಅನುವಾದ
ಆಗ ಮಹಾ ರಾಜರು ಕಣ್ಣುಗಳಲ್ಲಿ ಶೋಕಾಶ್ರುವನ್ನು ತುಂಬಿಕೊಂಡ ಕೌಸಲ್ಯೆಯ ಬಳಿ ಹೀಗೆ ಹೇಳಿದರು ‘‘ದುಃಖದಿಂದ ಈಗಾಗಲೇ ಸಾಯುತ್ತಿರುವ ನನ್ನನ್ನು ಮತ್ತೇಕೆ ದುಃಖಗೊಳಿಸುತ್ತಿರುವೆ? ಇದರಿಂದ ಏನು ಲಾಭವಿದೆ? ॥18॥
19
ಮೂಲಮ್
ಇದಾನೀಮೇವ ಮೇ ಪ್ರಾಣಾ ಉತ್ಕ್ರಮಿಷ್ಯಂತಿ ನಿಶ್ಚಯಃ ।
ಶಪ್ತೋಽಹಂ ಬಾಲ್ಯಭಾವೇನ ಕೇನಚಿನ್ಮುನಿನಾ ಪುರಾ ॥
ಅನುವಾದ
ಈಗಲೇ ನನ್ನ ಪ್ರಾಣಗಳು ದೇಹವನ್ನು ಬಿಟ್ಟು ಮೇಲಕ್ಕೇರುವುದು ನಿಶ್ಚಯವು. ಹುಡುಗಾಟಿಕೆಯ ಕಾರಣದಿಂದ ಹಿಂದೆ ನನಗೆ ಓರ್ವ ಋಷಿಗಳು ಶಪಿಸಿದ್ದರು. ॥19॥
20
ಮೂಲಮ್
ಪುರಾಹಂ ಯೌವನೇ ದೃಪ್ತಶ್ಚಾಪಬಾಣಧರೋ ನಿಶಿ ।
ಅಚರಂ ಮೃಗಯಾಸಕ್ತೋ ನದ್ಯಾಸ್ತೀರೆ ಮಹಾವನೇ ॥
ಅನುವಾದ
ಹಿಂದೆ ನಾನು ಯುವಕನಾಗಿದ್ದಾಗ ಒಂದುದಿನ ರಾತ್ರಿಯಲ್ಲಿ ಧನುರ್ಬಾಣಗಳನ್ನು ಹಿಡಿದುಕೊಂಡು ಬೇಟೆಯಲ್ಲಿ ಆಸಕ್ತನಾಗಿ ನದೀತೀರದಲ್ಲಿರುವ ದೊಡ್ಡ ಕಾಡಿನಲ್ಲಿ ಸಂಚರಿಸುತ್ತಿದ್ದೆ. ॥20॥
21
ಮೂಲಮ್
ತತ್ರಾರ್ಧರಾತ್ರಸಮಯೇ ಮುನಿಃ ಕಶ್ಚಿತೃಷಾರ್ದಿತಃ ।
ಪಿಪಾಸಾರ್ದಿತಯೋಃ ಪಿತ್ರೋರ್ಜಲಮಾನೇತುಮುದ್ಯತಃ ।
ಅಪೂರಯಜ್ಜಲೇ ಕುಂಭಂ ತದಾ ಶಬ್ದೋಭವನ್ಮಹಾನ್ ॥
ಅನುವಾದ
ಅಲ್ಲಿ ಅರ್ಧ ರಾತ್ರಿಯ ಹೊತ್ತಿನಲ್ಲಿ ಬಾಯಾರಿದ ಓರ್ವ ಮುನೀಶ್ವರನು ತನ್ನ ತೃಷಿತ ತಂದೆ-ತಾಯಿಗಳಿಗಾಗಿ ನೀರನ್ನು ಒಯ್ಯಲು ಉದ್ಯುಕ್ತನಾಗಿ ನೀರಿನಲ್ಲಿ ಪಾತ್ರೆಯನ್ನು ಮುಳುಗಿಸುವಾಗ ಸ್ಪಷ್ಟವಾದ ಧ್ವನಿಯಾಯಿತು. ॥21॥
22
ಮೂಲಮ್
ಗಜಃ ಪಿಬತಿ ಪಾನೀಯಮಿತಿ ಮತ್ವಾ ಮಹಾನಿಶಿ ।
ಬಾಣಂ ಧನುಷಿ ಸಂಧಾಯ ಶಬ್ದವೇಧಿನಮಕ್ಷಿಪಮ್ ॥
ಅನುವಾದ
ಈ ಅರ್ಧರಾತ್ರಿಯಲ್ಲಿ ಆನೆಯು ನೀರು ಕುಡಿಯುತ್ತಿರ ಬಹುದೆಂದು ನಾನು ಯೋಚಿಸಿ ‘ಶಬ್ದವೇಧಿ’ ಎಂಬ ಬಾಣವನ್ನು ಬಿಲ್ಲಿಗೆ ಏರಿಸಿ ಎಸೆದನು. ॥22॥
23
ಮೂಲಮ್
ಹಾ ಹತೋಽಸ್ಮೀತಿ ತತ್ರಾಭೂಚ್ಛಬ್ದೋ ಮಾನುಷಸೂಚಕಃ ।
ಕಸ್ಯಾಪಿ ನ ಕೃತೋ ದೋಷೋ ಮಯಾ ಕೇನ ಹತೋ ವಿಧೇ ॥
24
ಮೂಲಮ್
ಪ್ರತೀಕ್ಷತೇ ಮಾಂ ಮಾತಾ ಚ ಪಿತಾ ಚ ಜಲಕಾಂಕ್ಷಯಾ ।
ತಚ್ಛ್ರುತ್ವಾ ಭಯಸನ್ತ್ರಸ್ತಸ್ತತೋಽಹಂ ಪೌರುಷಂ ವಚಃ ॥
25
ಮೂಲಮ್
ಶನೈರ್ಗತ್ವಾಥತತ್ಪಾರ್ಶ್ವಂ ಸ್ವಾಮಿನ್ ದಶರಥೋಽಸ್ಮ್ಯಹಮ್ ।
ಅಜಾನತಾ ಮಯಾ ವಿದ್ಧಸ್ತ್ರಾತುಮರ್ಹಸಿ ಮಾಂ ಮುನೇ ॥
ಅನುವಾದ
ಅಯ್ಯೋ! ಸತ್ತೆನು! ಎಂಬುದಾಗಿ ಮಾನವ ಸೂಚಿಸುವ ಶಬ್ದವು ಕೇಳಿ ಬಂತು. ‘ಹೇ ವಿಧಿಯೇ! ನಾನು ಯಾರಿಗೂ ಅಪರಾಧವನ್ನು ಮಾಡಿಲ್ಲ; ನನ್ನನ್ನು ಯಾರು ಹೊಡೆದರು? ಅಯ್ಯೊ! ನೀರಿಗಾಗಿ ಬಾಯಿ ಬಿಡುತ್ತಿರುವ ನನ್ನ ತಂದೆ-ತಾಯಿಗಳು ನನ್ನನ್ನು ನಿರೀಕ್ಷಿಸುತ್ತಿರುವರು.’ ಈ ಮನುಷ್ಯ ವಾಕ್ಯವನ್ನು ಕೇಳಿ ಭಯಗೊಂಡ ನಾನು ತ್ವರಿತವಾಗಿ ಅವನ ಸಮೀಪಕ್ಕೆ ಹೋಗಿ ‘ಸ್ವಾಮಿ! ನಾನು ದಶರಥನು. ಅರಿಯದೆ ನಿಮ್ಮ ಮೇಲೆ ಬಾಣ ಪ್ರಯೋಗ ಮಾಡಿಬಿಟ್ಟೆ. ಮುನಿಯೇ ನನ್ನನ್ನು ಕಾಪಾಡು. ॥23-25॥
26
ಮೂಲಮ್
ಇತ್ಯುಕ್ತ್ವಾ ಪಾದಯೋಸ್ತಸ್ಯ ಪತಿತೋ ಗದ್ಗದಾಕ್ಷರಃ ।
ತದಾ ಮಾಮಾಹ ಸ ಮುನಿರ್ಮಾ ಭೈಷೀರ್ನೃಪಸತ್ತಮ ॥
27
ಮೂಲಮ್
ಬ್ರಹ್ಮಹತ್ಯಾ ಸ್ಪೃಶೇನ್ನ ತ್ವಾಂ ವೈಶ್ಯೋಽಹಂ ತಪಸಿ ಸ್ಥಿತಃ ।
ಪಿತರೌ ಮಾಂ ಪ್ರತೀಕ್ಷೇತೇ ಕ್ಷುತ್ತೃಡ್ ಭ್ಯಾಂ ಪರಿಪೀಡಿತೌ ॥
28
ಮೂಲಮ್
ತಯೋಸ್ತ್ವ ಮುದಕಂ ದೇಹಿ ಶೀಘ್ರಮೇವಾವಿಚಾರಯನ್ ।
ನ ಚೇತ್ತ್ವಾಂ ಭಸ್ಮಸಾತ್ಕುರ್ಯಾತ್ಪಿತಾ ಮೇ ಯದಿ ಕುಪ್ಯತಿ ॥
29
ಮೂಲಮ್
ಜಲಂ ದತ್ತ್ವಾ ತು ತೌ ನತ್ವಾ ಕೃತಂ ಸರ್ವಂ ನಿವೇದಯ ।
ಶಲ್ಯಮುದ್ಧರ ಮೇ ದೇಹಾತ್ಪ್ರಾಣಾಂಸ್ತ್ಯಕ್ಷ್ಯಾಮಿ ಪೀಡಿತಃ ॥
ಅನುವಾದ
ಹೀಗೆ ನಾನು ತೊದಲುನುಡಿಯಿಂದ ಹೇಳುತ್ತಾ ಅವನ ಪಾದಗಳಿಗೆ ಬಿದ್ದೆನು. ಆಗ ಮುನಿಯು ‘ಎಲೈ ರಾಜನೇ! ಹೆದರಬೇಡ. ನಿನಗೆ ಬ್ರಹ್ಮಹತ್ಯಾದೋಷವು ಮುಟ್ಟಲಾರದು. ಏಕೆಂದರೆ ನಾನೊಬ್ಬ ತಪಸ್ವಿಯಾದ ವೈಶ್ಯನಾಗಿರುವೆ. ಹಸಿವು ಬಾಯಾರಿಕೆಗಳಿಂದ ಪೀಡಿತರಾದ ನನ್ನ ತಂದೆ-ತಾಯಿಗಳು ನನ್ನ ದಾರಿಯನ್ನೇ ನೋಡುತ್ತಿರಬಹುದು. ನೀನು ಮತ್ತೇನೂ ಯೋಚಿಸದೆ ಕೂಡಲೇ ಅವರಿಗೆ ನೀರನ್ನು ಕೊಡು. ಹಾಗಿಲ್ಲದಿದ್ದರೆ ನನ್ನ ತಂದೆಯು ಕೋಪಗೊಂಡರೆ ನಿನ್ನನ್ನು ಬೂದಿಮಾಡಿ ಬಿಡುವನು. ಆದ್ದರಿಂದ ಮೊದಲು ನೀರನ್ನು ಕೊಟ್ಟು ಬಳಿಕ ನೀನು ಮಾಡಿದ್ದೆಲ್ಲವನ್ನು ವಿಜ್ಞಾಪಿಸಿಕೋ. ಈಗ ನನ್ನ ಶರೀರದಿಂದ ಬಾಣವನ್ನು ಕಿತ್ತು ಹೊರಗೆ ತೆಗೆ. ನಾನು ಬಾಣದಿಂದ ಪೀಡಿತನಾಗಿದ್ದು ಪ್ರಾಣಗಳನ್ನು ಬಿಡುವೆನು’ ಎಂದನು. ॥26-29॥
30
ಮೂಲಮ್
ಇತ್ಯುಕ್ತೋ ಮುನಿನಾ ಶೀಘ್ರಂ ಬಾಣಮುತ್ಪಾಟ್ಯ ದೇಹತಃ ।
ಸಜಲಂ ಕಲಶಂ ಧೃತ್ವಾ ಗತೋಽಹಂ ಯತ್ರ ದಂಪತೀ ॥
ಅನುವಾದ
‘‘ಮುನಿಯು ಹೀಗೆ ಹೇಳಿದಾಗ ನಾನು ಅವನ ದೇಹದಿಂದ ಬೇಗನೇ ಬಾಣವನ್ನು ಕಿತ್ತೊಗೆದೆನು. ಅನಂತರ ನೀರುತುಂಬಿದ ಪಾತ್ರೆಯನ್ನು ತೆಗೆದುಕೊಂಡು ಆ ವೃದ್ಧ ದಂಪತಿಗಳಿದ್ದಲ್ಲಿಗೆ ಹೋದೆನು. ॥30॥
31
ಮೂಲಮ್
ಅತಿವೃದ್ಧಾವಂಧದೃಶೌ ಕ್ಷುತ್ವಿಪಾಸಾರ್ದಿತೌ ನಿಶಿ ।
ನಾಯಾತಿ ಸಲಿಲಂ ಗೃಹ್ಯ ಪುತ್ರಃ ಕಿಂ ವಾತ್ರ ಕಾರಣಮ್ ॥
32
ಮೂಲಮ್
ಅನನ್ಯಗತಿಕೌ ವೃದ್ಧೌ ಶೋಚ್ಯೌ ತೃಟ್ಪರಿಪೀಡಿತೌ ।
ಆವಾಮುಪೇಕ್ಷತೇ ಕಿಂ ವಾ ಭಕ್ತಿಮಾನಾವಯೋಃ ಸುತಃ ॥
33
ಮೂಲಮ್
ಇತಿ ಚಿಂತಾವ್ಯಾಕುಲೌ ತೌ ಮತ್ಪಾದನ್ಯಾಸಜಂ ಧ್ವನಿಮ್ ।
ಶ್ರುತ್ವಾ ಪ್ರಾಹ ಪಿತಾ ಪುತ್ರ ಕಿಂ ವಿಲಂಬಃ ಕೃತಸ್ತ್ವಯಾ ॥
ಅನುವಾದ
ತೀರ ಮುದುಕರೂ, ಕುರುಡರೂ, ಹಸಿವು ಬಾಯಾರಿಕೆಯಿಂದ ಬಳಲಿದವರೂ ಆದ ಅವರು ಈ ರಾತ್ರಿಯಲ್ಲಿ ‘ಮಗನು ಏಕೆ ನೀರು ತೆಗೆದುಕೊಂಡು ಬರಲಿಲ್ಲ? ಏನು ಕಾರಣವಿರಬಹುದು? ಬೇರೆ ಗತಿಯಿಲ್ಲದ ಮುದುಕರಾದ, ಹಸಿವಿನಿಂದ ಬಳಲಿರುವ ದಯನೀಯರಾದ ನಮ್ಮನ್ನು ಅವನು ತಿರಸ್ಕರಿಸಿದನೆ? ಹಾಗಿರಲಾರದು. ನಮ್ಮ ಮಗನು ನಮ್ಮಲ್ಲಿ ತುಂಬು ಭಕ್ತಿಯುಳ್ಳವನು’ ಹೀಗೆಂದು ಚಿಂತೆಯಿಂದ ವ್ಯಾಕುಲರಾಗಿದ್ದ ಅವರು ನನ್ನ ಹೆಜ್ಜೆಯ ಸಪ್ಪಳ ಧ್ವನಿಯನ್ನು ಕೇಳಿ ತಂದೆಯು ‘ಮಗು! ಏಕೆ ತಡಮಾಡಿದೆಯಪ್ಪ? ॥31-33॥
34
ಮೂಲಮ್
ದೇಹ್ಯಾವಯೋಃ ಸುಪಾನೀಯಂ ಪಿಬ ತ್ವಮಪಿ ಪುತ್ರಕ ।
ಇತ್ಯೇವಂ ಲಪತೋರ್ಭೀತ್ಯಾ ಸಕಾಶಮಗಮಂ ಶನೈಃ ॥
ಅನುವಾದ
ನಮ್ಮಿಬ್ಬರಿಗೂ ಒಳ್ಳೆಯ ನೀರನ್ನು ಕುಡಿಯಲು ಕೊಡು. ನೀನೂ ಕುಡಿಯುವವನಾಗು. ಹೀಗೆಂದು ಮಾತನಾಡಿಕೊಳ್ಳುತ್ತಿದ್ದ ಅವರ ಬಳಿಗೆ ಮೆಲ್ಲನೆ ಹೋದೆನು. ॥34॥
35
ಮೂಲಮ್
ಪಾದಯೋಃ ಪ್ರಣಿಪತ್ಯಾಹಮಬ್ರವಂ ವಿನಯಾನ್ವಿತಃ ।
ನಾಹಂ ಪುತ್ರಸ್ತ್ವಯೋಧ್ಯಾಯಾ ರಾಜಾ ದಶರಥೋಽಸ್ಮ್ಯಹಮ್ ॥
36
ಮೂಲಮ್
ಪಾಪೋಽಹಂ ಮೃಗಯಾಸಕ್ತೋ ರಾತ್ರೌ ಮೃಗವಿಹಿಂಸಕಃ ।
ಜಲಾವತಾರಾದ್ದೂರೇಽಹಂ ಸ್ಥಿತ್ವಾ ಜಲಗತಂ ಧ್ವನಿಮ್ ॥
37
ಮೂಲಮ್
ಶ್ರುತ್ವಾಹಂ ಶಬ್ದವೇಧಿತ್ವಾದೇಕಂ ಬಾಣಮಥಾತ್ಯಜಮ್ ।
ಹತೋಽಸ್ಮೀತಿ ಧ್ವನಿಂ ಶ್ರುತ್ವಾ ಭಯಾತ್ತತ್ರಾಹಮಾಗತಃ ॥
ಅನುವಾದ
ವಿನಯದಿಂದ ಕೂಡಿದವನಾಗಿ ಅವರ ಪಾದಗಳಿಗೆ ನಮಸ್ಕರಿಸಿ ‘ಸ್ವಾಮಿ! ನಾನು ನಿಮ್ಮ ಮಗನಲ್ಲ; ಅಯೋಧ್ಯೆಯ ರಾಜನಾದ ದಶರಥನಾಗಿದ್ದೇನೆ. ಪಾಪಿಯಾದ ನಾನು ಬೇಟೆಯಲ್ಲಿ ಆಸಕ್ತನಾಗಿ ರಾತ್ರಿಯಲ್ಲಿ ಮೃಗಗಳನ್ನು ಕೊಲ್ಲಲು ಕಾಡಿಗೆಬಂದಿದ್ದೆ. ದೂರದಲ್ಲಿ ನಿಂತ ನಾನು ನೀರಿನಲ್ಲಿ ಊಂಟಾದ ಶಬ್ದವನ್ನು ಕೇಳಿ ಮೃಗವೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿದೆ. ‘ಅಯ್ಯೋ ಸತ್ತೆನು’ ಎಂಬ ಕೂಗನ್ನು ಕೇಳಿ ಭಯದಿಂದ ಅಲ್ಲಿಗೆ ಹೋದೆನು. ॥35-37॥
38
ಮೂಲಮ್
ಜಟಾ ವಿಕೀರ್ಯ ಪತಿತಂ ದೃಷ್ಟ್ವಾಹಂ ಮುನಿದಾರಕಮ್ ।
ಭೀತೋ ಗೃಹೀತ್ವಾ ತತ್ಪಾದೌ ರಕ್ಷ ರಕ್ಷೇತಿ ಚಾಬ್ರವಮ್ ॥
ಅನುವಾದ
ಜಟೆ ಬಿಚ್ಚಿ ಹರಡಿಕೊಂಡು ಬಿದ್ದಿದ್ದ ಮುನಿಕುಮಾರನನ್ನು ನೋಡಿ ಹೆದರಿದವನಾಗಿ ಅವರ ಕಾಲುಗಳನ್ನು ಹಿಡಿದುಕೊಂಡು ಕಾಪಾಡು! ಕಾಪಾಡು! ಎಂದು ಕೇಳಿಕೊಂಡೆ. ॥38॥
39
ಮೂಲಮ್
ಮಾ ಭೈಷೀರಿತಿ ಮಾಂ ಪ್ರಾಹ ಬ್ರಹ್ಮಹತ್ಯಾಭಯಂ ನ ತೇ ।
ಮತ್ಪಿತ್ರೌಃ ಸಲಿಲಂ ದತ್ತ್ವಾನತ್ವಾ ಪ್ರಾರ್ಥಯ ಜೀವಿತಮ್ ॥
40
ಮೂಲಮ್
ಇತ್ಯುಕ್ತೋ ಮುನಿನಾ ತೇನ ಹ್ಯಾಗತೋ ಮುನಿಹಿಂಸಕಃ ।
ರಕ್ಷೇತಾಂ ಮಾಂ ದಯಾಯುಕ್ತೌ ಯುವಾಂ ಹಿ ಶರಣಾಗತಮ್ ॥
ಅನುವಾದ
ಆಗ ಅವರು ‘ಹೆದರ ಬೇಡ, ನಿನಗೆ ಬ್ರಹ್ಮಹತ್ಯೆಯ ಪಾಪಭಯವೇನೂ ಇಲ್ಲ; ನನ್ನ ತಂದೆ-ತಾಯಿಗಳಿಗೆ ನೀರನ್ನು ಕೊಟ್ಟು ನಮಸ್ಕರಿಸಿ ಬದುಕಲು ಪ್ರಾರ್ಥಿಸಿಕೊ’ ಎಂದು ಹೇಳಿದರು. ಮುನಿಹಿಂಸಕನಾದ ನನ್ನನ್ನು ದಯಾಪೂರ್ಣರಾದ ನೀವುಗಳು ಕಾಪಾಡಿರಿ. ನಾನು ನಿಮ್ಮಲ್ಲಿ ಶರಣಾಗತನಾಗಿರುವೆನು ಎಂದು ಹೇಳಿದೆ. ॥39-40॥
41
ಮೂಲಮ್
ಇತಿ ಶ್ರುತ್ವಾ ತು ದುಃಖಾರ್ತೌ ವಿಲಪ್ಯ ಬಹು ಶೋಚ್ಯ ತಮ್ ।
ಪತಿತೌ ನೌ ಸುತೋ ಯತ್ರ ನಯ ತತ್ರಾವಿಲಂಬಯನ್ ॥
42
ಮೂಲಮ್
ತತೋ ನೀತೌ ಸುತೋ ಯತ್ರ ಮಯಾ ತೌ ವೃದ್ಧದಂಪತೀ ।
ಸ್ಪೃಷ್ಟ್ವಾ ಸುತಂ ತೌ ಹಸ್ತಾಭ್ಯಾಂ ಬಹುಶೋಥ ವಿಲೇ ಪತುಃ ॥
ಅನುವಾದ
ಇದನ್ನು ಕೇಳಿ ದುಃಖದಿಂದ ಬಳಲಿದವರಾದ ಅವರು ಮಗನಿಗಾಗಿ ಬಹಳ ಹೊತ್ತು ದುಃಖಿಸುತ್ತಾ ‘ಅಯ್ಯಾ! ತಡಮಾಡದೆ ನಮ್ಮ ಮಗನು ಬಿದ್ದಿರುವಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗು’ ಎಂದಾಗ ನಾನು ಆ ವೃದ್ಧರೀರ್ವರನ್ನು ಮಗನ ಬಳಿಗೆ ಕರೆದುಕೊಂಡು ಹೋದೆ. ಅವರೀರ್ವರು ಸತ್ತುಬಿದ್ದ ಮಗನನ್ನು ಕೈಯಿಂದ ತಡವರಿಸುತ್ತಾ ಬಹಳವಾಗಿ ಶೋಕ ಪಟ್ಟರು. ॥41-42॥
43
ಮೂಲಮ್
ಹಾಹೇತಿ ಕ್ರಂದಮಾನೌ ತೌ ಪುತ್ರಪುತ್ರೇತ್ಯವೋಚತಾಮ್ ।
ಜಲಂ ದೇಹೀತಿ ಪುತ್ರೇತಿ ಕಿಮರ್ಥಂ ನ ದದಾಸ್ಯಲಮ್ ॥
ಅನುವಾದ
ಅಯ್ಯೋ! ಎಂದು ಅಳುತ್ತಿರುವ ಅವರು ‘ಹಾ! ಪುತ್ರನೆ! ಹಾ ಮಗನೆ!’ ಎಂದು ಹೇಳುತ್ತಾ ‘ಮಗು! ನೀರನ್ನು ಕೊಡು ಎಂದು ಕೇಳಿದರೆ ಏಕೆ ಕೊಡುವುದಿಲ್ಲ?’ ॥43॥
44
ಮೂಲಮ್
ತತೋ ಮಾಮೂಚತುಃ ಶೀಘ್ರಂ ಚಿತಿಂ ರಚಯ ಭೂಪತೇ ।
ಮಯಾ ತದೈವ ರಚಿತಾ ಚಿತಿಸ್ತತ್ರ ನಿವೇಶಿತಾಃ ।
ತ್ರಯಸ್ತತ್ರಾಗ್ನಿರುತ್ಸೃಷ್ಟೋ ದಗ್ಧಾಸ್ತೇ ತ್ರಿದಿವಂ ಯಯುಃ ॥
45
ಮೂಲಮ್
ತತ್ರ ವೃದ್ಧಃ ಪಿತಾ ಪ್ರಾಹ ತ್ವಮಪ್ಯೇವಂ ಭವಿಷ್ಯ ಸಿ ।
ಪುತ್ರಶೋಕೇನ ಮರಣಂ ಪ್ರಾಪ್ಸ್ಯ ಸೇ ವಚನಾನ್ಮಮ ॥
ಅನುವಾದ
ಬಳಿಕ ಅವರು ನನ್ನಲ್ಲಿ ‘ಎಲೈ ರಾಜನೆ! ಬೇಗನೇ ಚಿತೆಯನ್ನು ನಿರ್ಮಾಣಮಾಡು’ ಎಂದು ಹೇಳಿದಾಗ ಕೂಡಲೇ ನಾನು ಚಿತೆಯನ್ನು ಸಿದ್ಧಮಾಡಿದೆ. ಮೂವರೂ ಅದರಮೇಲೆ ಕುಳಿತರು. ಆಗ ಬೆಂಕಿಯನ್ನು ಉರಿಸಲಾಗಿ ಮೂವರೂ ಸುಟ್ಟು ಹೋಗಿ ಸ್ವರ್ಗಲೋಕವನ್ನು ಸೇರಿದರು. ಅವರಲ್ಲಿ ಮುದುಕನಾದ ಆ ತಂದೆಯು ‘ಎಲೈ ರಾಜನೆ! ನೀನೂ ಹೀಗೆಯೇ ಆಗುವೆ. ನನ್ನ ಮಾತಿನಂತೆ ಪುತ್ರಶೋಕದಿಂದ ಮರಣ ಹೊಂದುವೆ’ ಎಂದು ಶಪಿಸಿದನು. ॥44-45॥
46
ಮೂಲಮ್
ಸ ಇದಾನೀಂ ಮಮ ಪ್ರಾಪ್ತಃ ಶಾಪಕಾಲೋಽನಿವಾರಿತಃ ।
ಇತ್ಯುಕ್ತ್ವಾ ವಿಲಲಾಪಾಥ ರಾಜಾ ಶೋಕಸಮಾಕುಲಃ ॥
47
ಮೂಲಮ್
ಹಾ ರಾಮ ಪುತ್ರ ಹಾ ಸೀತೇ ಹಾ ಲಕ್ಷ್ಮಣ ಗುಣಾಕರ ।
ತ್ವದ್ವಿಯೋಗಾದಹಂ ಪ್ರಾಪ್ತೋ ಮೃತ್ಯುಂ ಕೈಕೇಯಿಸಂಭವಮ್ ॥
ಅನುವಾದ
‘‘ಅದೇ ಶಾಪಕಾಲವು ಈಗ ನನಗೆ ಉಪಸ್ಥಿತವಾಗಿದೆ. ಇದು ಮೀರಲಸಾಧ್ಯವಾದುದು’’ ಎಂದು ಹೇಳಿ ಶೋಕದಲ್ಲಿ ಮುಳುಗಿದ ರಾಜನು ಅಳುತ್ತಾ ‘‘ಹೇ ರಾಮಾ! ಹಾ ಸೀತೆ! ಗುಣವಂತನಾದ ಲಕ್ಷಣಾ! ಕೈಕೇಯಿಯ ಮೂಲಕ ಸಂಭವಿಸಿದ ನಿಮ್ಮಗಳ ವಿಯೋಗದಿಂದ ನಾನು ಮರಣವನ್ನು ಹೊಂದುತ್ತಿರುವೆನು.’’ ॥46-47॥
48
ಮೂಲಮ್
ವದನ್ನೇವಂ ದಶರಥಃ ಪ್ರಾಣಾಂಸ್ತಕ್ತ್ವಾ ದಿವಂ ಗತಃ ।
ಕೌಸಲ್ಯಾ ಚ ಸುಮಿತ್ರಾ ಚ ತಥಾನ್ಯಾ ರಾಜಯೋಷಿತಃ ॥
49
ಮೂಲಮ್
ಚುಕ್ರುಶುಶ್ಚ ವಿಲೇಪುಶ್ಚ ಉರಸ್ತಾಡನಪೂರ್ವಕಮ್ ।
ವಸಿಷ್ಠಃ ಪ್ರಯಯೌ ತತ್ರ ಪ್ರಾತರ್ಮಂತ್ರಿಭಿರಾವೃತಃ ॥
ಅನುವಾದ
ಹೀಗೆಂದು ಹೇಳಿ ದಶರಥನು ಪ್ರಾಣತ್ಯಾಗ ಮಾಡಿ ಸ್ವರ್ಗವನ್ನು ಸೇರಿದನು. ಕೌಸಲ್ಯೆ, ಸುಮಿತ್ರೆ ಹಾಗೂ ಉಳಿದ ರಾಜಪತ್ನಿಯರು ಎದೆ ಬಡಿದುಕೊಂಡು ಗಟ್ಟಿಯಾಗಿ ಅಳುತ್ತಾ ವಿಲಾಪಿಸ ತೊಡಗಿದರು. ಪ್ರಾತಃ ಕಾಲದಲ್ಲಿ ಮಂತ್ರಿಗಳೊಡಗೂಡಿ ಮುನಿವರ ವಸಿಷ್ಠರು ಅಲ್ಲಿಗೆ ಬಂದರು. ॥48-49॥
50
ಮೂಲಮ್
ತೈಲದ್ರೋಣ್ಯಾಂ ದಶರಥಂ ಕ್ಷಿಪ್ತ್ವಾದೂತಾನಥಾಬ್ರವೀತ್ ।
ಗಚ್ಛತ ತ್ವರಿತಂ ಸಾಶ್ವಾ ಯುಧಾಜಿನ್ನಗರಂ ಪ್ರತಿ ॥
51
ಮೂಲಮ್
ತತ್ರಾಸ್ತೇ ಭರತಃ ಶ್ರೀಮಾಂಛತ್ರುಘ್ನಸಹಿತಃ ಪ್ರಭುಃ ।
ಉಚ್ಯತಾಂ ಭರತಃ ಶೀಘ್ರಮಾಗಚ್ಛೇತಿ ಮಮಾಜ್ಞಯಾ ॥
52
ಮೂಲಮ್
ಅಯೋಧ್ಯಾಂ ಪ್ರತಿ ರಾಜಾನಂ ಕೈಕೆಯೀಂ ಚಾಪಿ ಪಶ್ಯತು ।
ಇತ್ಯುಕ್ತಾಸ್ತ್ವರಿತಂ ದೂತಾ ಗತ್ವಾ ಭರತ ಮಾತುಲಮ್ ॥
53
ಮೂಲಮ್
ಯುಧಾಜಿತಂ ಪ್ರಣಮ್ಯೋಚುರ್ಭರತಂ ಸಾನುಜಂ ಪ್ರತಿ ।
ವಸಿಷ್ಠಸ್ತ್ವಾಬ್ರವೀದ್ರಾಜನ್ ಭರತಃ ಸಾನುಜಃ ಪ್ರಭುಃ ॥
54
ಮೂಲಮ್
ಶೀಘ್ರಮಾಗಚ್ಛತು ಪುರೀಮಯೋಧ್ಯಾಮವಿಚಾರಯನ್ ।
ಇತ್ಯಾಜ್ಞಪ್ತೋಽಥ ಭರತಸ್ತ್ವರಿತಂ ಭಯವಿಹ್ವಲಃ ॥
55
ಮೂಲಮ್
ಆಯಯೌ ಗುರುಣಾದಿಷ್ಟಃ ಸಹ ದೂತೈಸ್ತು ಸಾನುಜಃ ।
ರಾಜ್ಞೋ ವಾ ರಾಘವಸ್ಯಾಪಿ ದುಃಖಂ ಕಿಂಚಿದುಪಸ್ಥಿತಮ್ ॥
ಅನುವಾದ
ದಶರಥನ ಮೃತಶರೀರವನ್ನು ಎಣ್ಣೆಯ ದೋಣಿಯಲ್ಲಿ ಇರಿಸಲಾಯಿತು. ಬಳಿಕ ದೂತರನ್ನು ಕರೆದು ‘‘ನೀವು ಈಗಲೇ ಕುದುರೆಯನ್ನೇರಿ ಯುಧಾಜಿತ್ತುವಿನ ರಾಜಧಾನಿಗೆ ತೆರಳಿರಿ. ಅಲ್ಲಿ ಶತ್ರುಘ್ನನೊಂದಿಗೆ ಗುಣಶಾಲಿಯಾದ ಭರತನಿರುವನು. ಅವರು ಕೂಡಲೇ ಅಯೋಧ್ಯೆಗೆ ಬಂದು, ದಶರಥ ಮತ್ತು ಕೈಕೇಯಿಯನ್ನು ಕಾಣಬೇಕು’’ ಈ ಸಂದೇಶವನ್ನು ತಲುಪಿಸಿರಿ ಎಂದು ಆಜ್ಞಾಪಿಸಿದರು. ವಸಿಷ್ಠರ ಈ ಅಪ್ಪಣೆಯಂತೆ ದೂತರು ವೇಗವಾಗಿ ಕೇಕಯ ರಾಜ್ಯಕ್ಕೆ ಹೋಗಿ ಭರತನ ಸೋದರಮಾವನಾದ ಯುಧಾಜಿತ್ತುವಿಗೆ ನಮಸ್ಕರಿಸಿ ಹೀಗೆಂದರು ‘ಹೇ ರಾಜನೆ! ತಮ್ಮನೊಡಗೂಡಿ ಪ್ರಭುವಾದ ಭರತನು ಶೀಘ್ರವಾಗಿ ಮತ್ತೇನನ್ನೂ ವಿಚಾರಮಾಡದೆ ಅಯೋಧ್ಯಾನಗರಿಗೆ ಬರಬೇಕು ಎಂದು ವಸಿಷ್ಠರು ಹೇಳಿರುತ್ತಾರೆ.’ ಹೀಗೆ ಗುರುವಾಜ್ಞೆಯನ್ನು ಕೇಳಿದ ಭರತನು ಭಯದಿಂದ ವ್ಯಾಕುಲನಾಗಿ ಜಾಗ್ರತೆಯಾಗಿ ಶತ್ರುಘ್ನ ಹಾಗೂ ದೂತರೊಡನೆ ಹೊರಟನು. ಮಹಾರಾಜರ ಮೇಲೆ ಅಥವಾ ಶ್ರೀರಘುನಾಥನ ಮೇಲೆ ಅವಶ್ಯವಾಗಿ ಏನೋ ಸಂಕಟ ಬಂದೊದಗಿರಬೇಕು, ಎಂದು ಯೋಚಿಸಿದನು. ॥50-55॥
56
ಮೂಲಮ್
ಇತಿ ಚಿಂತಾಪರೋ ಮಾರ್ಗೇ ಚಿಂತಯನ್ನಗರಂ ಯಯೌ ।
ನಗರಂ ಭ್ರಷ್ಟಲಕ್ಷ್ಮೀಕಂ ಜನಸಂಬಾಧವರ್ಜಿತಮ್ ॥
57
ಮೂಲಮ್
ಉತ್ಸವೈಶ್ಚ ಪರಿತ್ಯಕ್ತಂ ದೃಷ್ಟ್ವಾ ಚಿಂತಾಪರೋಽಭವತ್ ।
ಪ್ರವಿಶ್ಯ ರಾಜಭವನಂ ರಾಜಲಕ್ಷ್ಮೀವಿವರ್ಜಿತಮ್ ॥
58
ಮೂಲಮ್
ಅಪಶ್ಯತ್ಕೈಕೇಯೀಂ ತತ್ರ ಏಕಾಮೇವಾಸನೇ ಸ್ಥಿತಾಮ್ ।
ನನಾಮ ಶಿರಸಾ ಪಾದೌ ಮಾತುರ್ಭಕ್ತಿಸಮನ್ವಿತಃ ॥
ಅನುವಾದ
ಮಾರ್ಗದಲ್ಲಿ ಮನಸ್ಸಿನಲ್ಲಿಯೇ ಚಿಂತಾಕ್ರಾಂತನಾಗಿ ನಗರವನ್ನು ಹೊಕ್ಕನು. ಪಟ್ಟಣವು ಕಾಂತಿಹೀನವಾಗಿಯೂ, ಜನಜಂಗುಳಿಯಿಲ್ಲದೆ, ಉತ್ಸವ ಹೀನವಾಗಿದೆ. ಇದನ್ನು ನೋಡಿದ ಭರತನು ಅತ್ಯಂತ ಚಿಂತಿತನಾದನು. ರಾಜ ಭವನವನ್ನು ಪ್ರವೇಶಿಸುತ್ತಿರುವಂತೆ ರಾಜ್ಯಲಕ್ಷ್ಮಿಯಿಂದ ಶೂನ್ಯವಾದಂತೆ ಕಂಡಿತು. ಅಲ್ಲಿ ಆಸನದಲ್ಲಿ ಒಬ್ಬಂಟಿಗಳಾಗಿ ಕುಳಿತ್ತಿದ್ದ ಕೈಕೇಯಿಯನ್ನು ಕಂಡು ಭಕ್ತಿಯಿಂದ ಕೂಡಿದವನಾಗಿ ಶಿರಬಾಗಿ ತಾಯಿಯ ಪಾದಗಳಿಗೆ ನಮಸ್ಕರಿಸಿದನು. ॥56-58॥
59
ಮೂಲಮ್
ಆಗತಂ ಭರತಂ ದೃಷ್ಟ್ವಾ ಕೈಕೇಯೀ ಪ್ರೇಮಸಂಭ್ರಮಾತ್ ।
ಉತ್ಥಾಯಾಲಿಂಗ್ಯ ರಭಸಾ ಸ್ವಾಂಕಮಾರೋಪ್ಯ ಸಂಸ್ಥಿತಾ ॥
ಅನುವಾದ
ಬಂದಂಥ ಭರತನನ್ನು ನೋಡಿ ಕೈಕೇಯಿಯು ಪ್ರೀತಿ ಸಂಭ್ರಮದಿಂದ ಬೇಗನೇ ಮೇಲೆದ್ದು ಆಲಿಂಗಿಸಿಕೊಂಡು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಳು. ॥59॥
60
ಮೂಲಮ್
ಮೂರ್ಧ್ನ್ಯವಘ್ರಾಯ ಪಪ್ರಚ್ಛ ಕುಶಲಂ ಸ್ವಕುಲಸ್ಯ ಸಾ ।
ಪಿತಾ ಮೇ ಕುಶಲೀ ಭ್ರಾತಾ ಮಾತಾ ಚ ಶುಭಲಕ್ಷಣಾ ॥
61
ಮೂಲಮ್
ದಿಷ್ಟ್ಯಾ ತ್ವಮದ್ಯ ಕುಶಲೀ ಮಯಾ ದೃಷ್ಟೋಸಿ ಪುತ್ರಕ ।
ಇತಿ ಪೃಷ್ಟಃ ಸ ಭರತೋ ಮಾತ್ರಾ ಚಿಂತಾಕುಲೇಂದ್ರಿಯಃ ॥
62
ಮೂಲಮ್
ದೂಯಮಾನೇನ ಮನಸಾ ಮಾತರಂ ಸಮಪೃಚ್ಛತ ।
ಮಾತಃ ಪಿತಾ ಮೇ ಕುತ್ರಾಸ್ತೇ ಏಕಾ ತ್ವಮಿಹ ಸಂಸ್ಥಿತಾ ॥
ಅನುವಾದ
ಶಿರವನ್ನು ಆಘ್ರಾಣಿಸಿ ತನ್ನ ತವರಿನ ಬಾಂಧವರ ಕುಶಲವನ್ನು ಕೇಳಿದಳು ‘‘ಮಗು! ನೀನು ಚೆನ್ನಾಗಿದ್ದಿಯಾ? ನನ್ನ ಪುಣ್ಯದಿಂದ ಈಗ ನಿನ್ನನ್ನು ಕಂಡೆನು. ನನ್ನ ತಂದೆಯವರು, ಸಹೋದರರು, ಶುಭಲಕ್ಷಣಳಾದ ತಾಯಿಯು ಕ್ಷೇಮವೇ?’’ ಹೀಗೆ ತಾಯಿಯ ಮಾತುಗಳನ್ನು ಕೇಳಿದ ಭರತನು ಚಿಂತಾಕ್ರಾಂತನಾಗಿ ದುಗುಡದಿಂದ ಕೂಡಿದ ಮನಸ್ಸಿನಿಂದ ‘‘ಅಮ್ಮಾ! ನನ್ನ ತಂದೆಯವರು ಎಲ್ಲಿದ್ದಾರೆ? ನೀನೊಬ್ಬಳೇ ಈಗ ಇಲ್ಲಿರುವೆಯಲ್ಲ? ॥60-62॥
63
ಮೂಲಮ್
ತ್ವಯಾ ವಿನಾ ನ ಮೇ ತಾತಃ ಕದಾಚಿದ್ರಹಸಿ ಸ್ಥಿತಃ ।
ಇದಾನೀಂ ದೃಶ್ಯತೇ ನೈವ ಕುತ್ರ ತಿಷ್ಠತಿ ಮೇ ವದ ॥
64
ಮೂಲಮ್
ಅದೃಷ್ಟ್ವಾ ಪಿತರಂ ಮೇಽದ್ಯ ಭಯಂ ದುಃಖಂ ಚ ಜಾಯತೇ ।
ಅಥಾಹ ಕೈಕೇಯೀ ಪುತ್ರಂ ಕಿಂ ದುಃಖೇನ ತವಾನಘ ॥
65
ಮೂಲಮ್
ಯಾ ಗತಿರ್ಧರ್ಮಶೀಲಾನಾಮಶ್ವಮೇಧಾದಿಯಾಜಿನಾಮ್ ।
ತಾಂ ಗತಿಂ ಗತವಾನದ್ಯ ಪಿತಾ ತೇ ಪಿತೃವತ್ಸಲ ॥
ಅನುವಾದ
ನನ್ನ ತಂದೆಯವರು ಯಾವಾಗಲೂ ನಿನ್ನ ಹೊರತು ತಾವೊಬ್ಬರೇ ಇದ್ದುದನ್ನು ನಾನು ಕಂಡಿಲ್ಲ. ಆದರೆ ಈಗ ಕಾಣಿಸುವುದಿಲ್ಲವಲ್ಲ! ಅವರೆಲ್ಲಿರುವರು? ನನಗೆ ಹೇಳು. ತಂದೆಯವರನ್ನು ಕಾಣದೆ ನನಗೆ ಭಯವೂ ದುಃಖವೂ ಉಂಟಾಗುತ್ತಿದೆ.’’ ಎಂದು ಕೇಳಿದನು. ಆಗ ಕೈಕೇಯಿಯು ಮಗನನ್ನು ಕುರಿತು ‘‘ಹೇ ಪಾಪರಹಿತನೆ! ಪಿತೃಭಕ್ತನೆ! ನಿನಗೆ ದುಃಖವಾದರೂ ಏತರದು. ಅಶ್ವಮೇಧವೇ ಮುಂತಾದ ಯಜ್ಞಗಳನ್ನು ಮಾಡುವ ಧರ್ಮಶೀಲರಾದವರಿಗೆ ದೊರಕುವ ಗತಿಯನ್ನೇ ನಿನ್ನ ತಂದೆಯವರು ಪಡೆದಿರುವರು’’ ಎಂದು ಹೇಳಿದಳು. ॥63-65॥
66
ಮೂಲಮ್
ತಚ್ಛ್ರುತ್ವಾ ನಿಪಪಾತೋರ್ವ್ಯಾಂ ಭರತಃ ಶೋಕವಿಹ್ವಲಃ ।
ಹಾ ತಾತ ಕ್ವ ಗತೋಽಸಿ ತ್ವಂ ತ್ಯಕ್ತ್ವಾ ಮಾಂ ವೃಜಿನಾರ್ಣವೇ ॥
ಅನುವಾದ
ಈ ಮಾತನ್ನು ಕೇಳುತ್ತಲೇ ಶೋಕದಿಂದ ದಿಕ್ಕುಗಾಣದೆ ಕುಸಿದು ಬಿದ್ದ ಭರತನು ‘‘ಅಯ್ಯೋ! ಅಪ್ಪಾ! ದುಃಖ ಸಮುದ್ರದಲ್ಲಿ ನನ್ನನ್ನು ಕೆಡಹಿ ನೀನು ಎಲ್ಲಿಗೆ ಹೋದೆ? ॥66॥
67
ಮೂಲಮ್
ಅಸಮರ್ಪ್ಯೈವ ರಾಮಾಯ ರಾಜ್ಞೇ ಮಾಂ ಕ್ವ ಗತೋಽಸಿ ಭೋಃ ।
ಇತಿ ವಿಲಪಿತಂ ಪುತ್ರಂ ಪತಿತಂ ಮುಕ್ತಮೂರ್ಧಜಮ್ ॥
68
ಮೂಲಮ್
ಉತ್ಥಾಪ್ಯಾಮೃಜ್ಯ ನಯನೇ ಕೈಕೇಯೀ ಪುತ್ರಮಬ್ರವೀತ್ ।
ಸಮಾಶ್ವಸಿಹಿ ಭದ್ರಂ ತೇ ಸರ್ವಂ ಸಂಪಾದಿತಂ ಮಯಾ ॥
ಅನುವಾದ
ಪೂಜ್ಯನೆ! ಮಹಾರಾಜಾ ರಾಮನಿಗೆ ನನ್ನನ್ನು ಒಪ್ಪಿಸದೆ ಎಲ್ಲಿಗೆ ಹೊರಟು ಹೋಗಿರುವೆ ?’’ ಹೀಗೆ ಪ್ರಲಾಪಿಸುತ್ತಾ ಕೆದರಿದ ತಲೆ ಕೂದಲಿನಿಂದ ನೆಲದಮೇಲೆ ಬಿದ್ದಿರುವ ಮಗನನ್ನು ಮೇಲಕ್ಕೆತ್ತಿ ಕಣ್ಣುಗಳನ್ನು ಒರೆಸುತ್ತಾ ಕೈಕೆಯಿಯು ‘‘ಮಗು! ನಿನಗೆ ಮಂಗಳವಾಗಲಿ! ಸಮಾಧಾನದಿಂದ ಇರು. ನಾನು ಎಲ್ಲವನ್ನು ಸಂಪಾದಿಸಿ ಇಟ್ಟಿರುವೆನು’’ ಎಂದು ಹೇಳಿದಳು. ॥67-68॥
69
ಮೂಲಮ್
ತಾಮಾಹ ಭರತಸ್ತಾತೋ ಮ್ರಿಯಮಾಣಃ ಕಿಮಬ್ರವೀತ್ ।
ತಮಾಹ ಕೈಕೇಯೀ ದೇವೀ ಭರತಂ ಭಯವರ್ಜಿತಾ ।॥
70
ಮೂಲಮ್
ಹಾ ರಾಮ ರಾಮ ಸೀತೇತಿ ಲಕ್ಷ್ಮಣೇತಿ ಪುನಃ ಪುನಃ ।
ವಿಲಪನ್ನೇವ ಸುಚಿರಂ ದೇಹಂ ತ್ಯಕ್ತ್ವಾ ದಿವಂ ಯಯೌ ॥
ಅನುವಾದ
ಆಗ ಭರತನು ‘‘ತಾಯೆ! ತಂದೆಯು ಸಾಯುವಾಗ ಏನು ಹೇಳಿದನು?’’ ಎಂದು ಕೇಳಿದಾಗ ಕೈಕಾದೇವಿಯು ನಿರ್ಭಯಳಾಗಿ ಭರತನಲ್ಲಿ ಹೇಳಿದಳು ‘ಅಯ್ಯೋ! ರಾಮಾ! ರಾಮಾ! ಹಾ ಸೀತಾ, ಹಾ ಲಕ್ಷ್ಮಣಾ’ ಈ ಪ್ರಕಾರ ಬಹಳ ಹೊತ್ತಿನವರೆಗೆ ವಿಲಾಪಿಸುತ್ತಾ ತನ್ನ ದೇಹವನ್ನು ಬಿಟ್ಟು ಸ್ವರ್ಗಕ್ಕೆ ಹೊರಟು ಹೋದರು. ॥69-70॥
71
ಮೂಲಮ್
ತಾಮಾಹ ಭರತೋ ಹೇಽಂಬರಾಮಃ ಸನ್ನಿಹಿತೋ ನ ಕಿಮ್ ।
ತದಾನೀಂ ಲಕ್ಷ್ಮಣೋ ವಾಪಿ ಸೀತಾ ವಾ ಕುತ್ರ ತೇ ಗತಾಃ ॥
ಅನುವಾದ
ಆಗ ಭರತನು - ‘‘ಅಮ್ಮಾ! ಶ್ರೀರಾಮನು ಹತ್ತಿರವಿರಲಿಲ್ಲವೆ? ಆಗ ಲಕ್ಷ್ಮಣನಾಗಲಿ, ಸೀತೆಯಾಗಲಿ ಎಲ್ಲಿಗೆ ಹೋಗಿದ್ದರು?’’ ಎಂದು ಕೇಳಿದನು. ॥71॥
72
ಮೂಲಮ್ (ವಾಚನಮ್)
ಕೈಕೇಯ್ಯುವಾಚ
ಮೂಲಮ್
ರಾಮಸ್ಯ ಯೌವರಾಜ್ಯಾರ್ಥಂ ಪಿತ್ರಾ ತೇ ಸಂಭ್ರಮಃ ಕೃತಃ ।
ತವ ರಾಜ್ಯಪ್ರದಾನಾಯ ತದಾಹಂ ವಿಘ್ನಮಾಚರಮ್ ॥
ಅನುವಾದ
ಕೈಕೇಯಿಯು ಹೇಳಿದಳು - ‘‘ಶ್ರೀರಾಮನಿಗೆ ಯುವ ರಾಜ್ಯಾಭಿಷೇಕವನ್ನು ಮಾಡುವುದಕ್ಕಾಗಿ ನಿನ್ನ ತಂದೆಯು ಸಿದ್ಧತೆ ಮಾಡಿಸಿದ್ದರು. ಆಗ ನಾನು ನಿನಗೆ ರಾಜ್ಯವನ್ನು ಕೊಡಬೇಕೆಂದು ಅಡ್ಡಿಯುಂಟುಮಾಡಿದೆನು. ॥72॥
73
ಮೂಲಮ್
ರಾಜ್ಞಾ ದತ್ತಂ ಹಿ ಮೇ ಪೂರ್ವಂ ವರದೇನ ವರದ್ವಯಮ್ ।
ಯಾಚಿತಂ ತದಿದಾನೀಂ ಮೇ ತಯೋರೇಕೇನ ತೇಖಿಲಮ್ ॥
74
ಮೂಲಮ್
ರಾಜ್ಯಂ ರಾಮಸ್ಯ ಚೈಕೇನ ವನವಾಸೋ ಮುನಿವ್ರತಮ್ ।
ತತಃ ಸತ್ಯಪರೋ ರಾಜಾ ರಾಜ್ಯಂ ದತ್ತ್ವಾ ತವೈವ ಹಿ ॥
75
ಮೂಲಮ್
ರಾಮಂ ಸಂಪ್ರೇಷಯಾಮಾಸ ವನಮೇವ ಪಿತಾ ತವ ।
ಸೀತಾಪ್ಯನುಗತಾ ರಾಮಂ ಪಾತಿವ್ರತ್ಯಮುಪಾಶ್ರಿತಾ ॥
ಅನುವಾದ
ವರಪ್ರದನಾದ ಮಹಾರಾಜರು ಹಿಂದೆ ನನಗೆ ಎರಡು ವರಗಳನ್ನು ಕೊಟ್ಟಿದ್ದರು. ಈಗ ನಾನು ಅವೆರಡರಲ್ಲಿ ಒಂದರಿಂದ ನಿನಗೆ ಸಮಸ್ತ ರಾಜ್ಯವೂ ಬರಬೇಕೆಂದೂ, ಮತ್ತೊಂದರಿಂದ ರಾಮನು ಮುನಿವ್ರತನಾಗಿ ವನವಾಸ ಮಾಡುವಂತೆಯೂ ಬೇಡಿಕೊಂಡೆನು. ಸತ್ಯನಿಷ್ಠನಾದ ನಿನ್ನ ತಂದೆಯಾದ ಮಹಾರಾಜಾ ದಶರಥನು ನಿನಗೆ ರಾಜ್ಯವನ್ನು ಕೊಟ್ಟು, ರಾಮನನ್ನು ಕಾಡಿಗೆ ಕಳುಹಿಸಿದನು. ಪಾತಿವ್ರತ್ಯ ಧರ್ಮವನ್ನಾಶ್ರಯಿಸಿ ಸೀತೆಯೂ ಶ್ರೀರಾಮನನ್ನು ಅನುಸರಿಸಿದಳು. ॥73-75॥
76
ಮೂಲಮ್
ಸೌಭ್ರಾತ್ರಂ ದರ್ಶಯನ್ರಾಮಮನುಯಾತೋಽಪಿ ಲಕ್ಷ್ಮಣಃ ।
ವನಂ ಗತೇಷು ಸರ್ವೇಷು ರಾಜಾ ತಾನೇವ ಚಿಂತಯನ್ ॥
77
ಮೂಲಮ್
ಪ್ರಲಪನ್ ರಾಮ ರಾಮೇತಿ ಮಮಾರ ನೃಪಸತ್ತಮಃ ।
ಇತಿ ಮಾತುರ್ವಚಃ ಶ್ರುತ್ವಾ ವಜ್ರಾಹತ ಇವ ದ್ರುಮಃ ॥
78
ಮೂಲಮ್
ಪಪಾತ ಭೂಮೌ ನಿಃಸಂಜ್ಞಸ್ತಂ ದೃಷ್ಟ್ವಾ ದುಃಖಿತಾ ತದಾ ।
ಕೈಕೇಯೀ ಪುನರಪ್ಯಾಹ ವತ್ಸ ಶೋಕೇನ ಕಿಂ ತವ ॥
ಅನುವಾದ
ಭ್ರಾತೃಸ್ನೇಹಕ್ಕೆ ತಕ್ಕಂತೆ ಲಕ್ಷ್ಮಣನೂ ಶ್ರೀರಾಮನನ್ನು ಹಿಂಬಾಲಿಸಿದನು. ಅವರೆಲ್ಲರು ಕಾಡಿಗೆ ಹೋಗಲಾಗಿ ರಾಜನು ಅವರುಗಳನ್ನೇ ಚಿಂತಿಸುತ್ತಾ. ‘ರಾಮಾ! ರಾಮಾ!’ ಎಂದು ಅಳುತ್ತಾ ನೃಪಶ್ರೇಷ್ಠನು ಮರಣವನ್ನೈದಿದನು.’’ ಹೀಗೆಂದ ತಾಯಿಯ ಮಾತನ್ನು ಕೇಳಿದ ಭರತನು ಸಿಡಿಲು ಬಡಿದ ಮರದಂತೆ ಜ್ಞಾನತಪ್ಪಿದವನಾಗಿ ನೆಲಕ್ಕೆ ಉರುಳಿಬಿದ್ದನು. ಅವನನ್ನು ಕಂಡು ದುಃಖಪೀಡಿತಳಾದ ಕೈಕೇಯಿಯು ಮತ್ತೊಮ್ಮೆ ‘‘ಮಗು! ನೀನು ದುಃಖಿಸುವುದರಿಂದ ಏನು ಪ್ರಯೋಜನ?’’ ॥76-78॥
79
ಮೂಲಮ್
ರಾಜ್ಯೇ ಮಹತಿ ಸಂಪ್ರಾಪ್ತೇ ದುಃಖಸ್ಯಾವಸರಃ ಕುತಃ ।
ಇತಿ ಬ್ರುವಂತೀಮಾಲೋಕ್ಯ ಮಾತರಂ ಪ್ರದಹನ್ನಿವ ॥
80
ಮೂಲಮ್
ಅಸಂಭಾಷ್ಯಾಸಿ ಪಾಪೇ ಮೇ ಘೋರೆ ತ್ವಂ ಭರ್ತೃಘಾತಿನೀ ।
ಪಾಪೇ ತ್ವದ್ಗರ್ಭಜಾತೋಽಹಂ ಪಾಪವಾನಸ್ಮಿ ಸಾಂಪ್ರತಮ್ ।
ಅಹಮಗ್ನಿಂ ಪ್ರವೇಕ್ಷ್ಯಾಮಿ ವಿಷಂ ವಾ ಭಕ್ಷಯಾಮ್ಯಹಮ್ ॥
81
ಮೂಲಮ್
ಖಡ್ಗೇನ ವಾಥ ಚಾತ್ಮಾನಂ ಹತ್ವಾಯಾಮಿ ಯಮಕ್ಷಯಮ್ ।
ಭರ್ತೃಘಾತಿನಿ ದುಷ್ಟೇ ತ್ವಂ ಕುಂಭೀಪಾಕಂ ಗಮಿಷ್ಯಸಿ ॥
ಅನುವಾದ
ವಿಶಾಲವಾದ ರಾಜ್ಯವು ಕೈವಶವಾಗಿರಲು ದುಃಖಪಡಲು ಕಾರಣವಾದರೂ ಏನಿದೆ? ಹೀಗೆ ಹೇಳುತ್ತಿರುವ ತಾಯಿಯನ್ನು ಸುಡುವವನಂತೆ ನೋಡುತ್ತಾ ‘‘ಎಲೌ ಪಾಪಿಷ್ಠಳೇ, ಕ್ರೂರಳೆ! ಗಂಡನನ್ನು ಕೊಂದವಳೆ! ನೀನು ಮಾತನಾಡಿಸಲು ಯೋಗ್ಯಳಲ್ಲ. ನಿನ್ನ ಗರ್ಭದಲ್ಲಿ ಜನಿಸಿದ ನಾನೂ ಈಗ ಪಾಪಿಯಾಗಿ ಬಿಟ್ಟಿರುವೆನು. ನಾನಾದರೋ ಈಗ ಬೆಂಕಿಯನ್ನು ಪ್ರವೇಶಿಸುವೆನು ಅಥವಾ ವಿಷವನ್ನಾದರೂ ತಿಂದು ಬಿಡುವೆನು ಅಥವಾ ಖಡ್ಗದಿಂದ ನನ್ನನ್ನು ಕೊಂದುಕೊಂಡು ಯಮಸದನಕ್ಕೆ ಹೋಗುವೆನು. ದುಷ್ಟಳೇ! ಗಂಡನನ್ನು ನಾಶಮಾಡಿದವಳೆ! ನೀನು ಕುಂಭೀಪಾಕ ನರಕಕ್ಕೆ ಹೋಗುವೆ! ॥79-81॥
82
ಮೂಲಮ್
ಇತಿ ನಿರ್ಭರ್ತ್ಸ್ಯ ಕೈಕೇಯೀಂ ಕೌಸಲ್ಯಾಭವನಂ ಯಯೌ ।
ಸಾಪಿ ತಂ ಭರತಂ ದೃಷ್ಟ್ವಾ ಮುಕ್ತಕಂಠಾ ರುರೋದ ಹ ॥
ಅನುವಾದ
ಹೀಗೆ ಕೈಕೆಯಿಯನ್ನು ಜರೆದು ಕೌಸಲ್ಯೆಯ ಭವನಕ್ಕೆ ಹೋದನು. ಭರತನನ್ನು ಕಾಣುತ್ತಲೇ ತಾಯಿ ಕೌಸಲ್ಯೆಯು ಮುಕ್ತಕಂಠದಿಂದ ಗಟ್ಟಿಯಾಗಿ ಅಳತೊಡಗಿದಳು. ॥82॥
83
ಮೂಲಮ್
ಪಾದಯೋಃ ಪತಿತಸ್ತಸ್ಯಾ ಭರತೋಽಪಿ ತದಾರುದತ್ ।
ಆಲಿಂಗ್ಯ ಭರತಂ ಸಾಧ್ವೀ ರಾಮಮಾತಾ ಯಶಸ್ವಿನೀ ।
ಕೃಶಾತಿದೀನವದನಾ ಸಾಶ್ರುನೇತ್ರೇದಮಬ್ರವೀತ್ ॥
ಅನುವಾದ
ಆಗ ಭರತನಾದರೋ ಆಕೆಯ ಚರಣಗಳಲ್ಲಿ ಬಿದ್ದು ಅಳತೊಡಗಿದನು. ರಾಮನ ತಾಯಿಯಾದ ಯಶೋವಂತಳಾದ, ಕೃಶಳಾದ, ಚಿಂತೆಯಿಂದ ಬಾಡಿದ ಮುಖವುಳ್ಳ ಸಾಧ್ವೀ ಕೌಸಲ್ಯೆಯು ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಭರತನನ್ನು ತಬ್ಬಿಕೊಂಡು ಹೇಳುತ್ತಾಳೆ. ॥83॥
84
ಮೂಲಮ್
ಪುತ್ರ ತ್ವಯಿ ಗತೇ ದೂರಮೇವಂ ಸರ್ವಮಭೂದಿದಮ್ ।
ಉಕ್ತಂ ಮಾತ್ರಾ ಶ್ರುತಂ ಸರ್ವಂ ತ್ವಯಾ ತೇ ಮಾತೃಚೇಷ್ಟಿತಮ್ ॥
ಅನುವಾದ
‘‘ಮಗು! ನೀನು ದೂರ ದೇಶಕ್ಕೆ ಹೊರಟು ಹೋಗಲಾಗಿ ಇವೆಲ್ಲವೂ ನಡೆದು ಹೋಯಿತು. ನಿನ್ನ ತಾಯಿಯು ಗೈದಿರುವ ಕುತಂತ್ರವೆಲ್ಲವನ್ನು ನೀನು ಅವಳ ಮುಖದಿಂದಲೇ ಕೇಳಿರುವೆಯಷ್ಟೆ! ॥84॥
85
ಮೂಲಮ್
ಪುತ್ರಃ ಸಭಾರ್ಯೋ ವನಮೇವ ಯಾತಃ
ಸಲಕ್ಷ್ಮಣೋ ಮೇ ರಘುರಾಮಚಂದ್ರಃ ।
ಚೀರಾಂಬರೋ ಬದ್ಧಜಟಾಕಲಾಪಃ
ಸಂತ್ಯಜ್ಯ ಮಾಂ ದುಃಖಸಮುದ್ರಮಗ್ನಾಮ್ ॥
ಅನುವಾದ
ನನ್ನ ಮಗನಾದ ರಘುಶ್ರೇಷ್ಠ ಶ್ರೀರಾಮನು ನಾರುಮಡಿಯನ್ನು ಉಟ್ಟು, ಜಟೆಯನ್ನು ಕಟ್ಟಿಕೊಂಡು, ಹೆಂಡತಿ ಯೊಡನೆ ಹಾಗೂ ಲಕ್ಷ್ಮಣನ ಸಹಿತ ನಮ್ಮನ್ನು ದುಃಖ ಸಮುದ್ರದಲ್ಲಿ ಮುಳುಗಿಸಿ ಕಾಡಿಗೆ ಹೊರಟು ಹೋದನು. ॥85॥
86
ಮೂಲಮ್
ಹಾ ರಾಮ ಹಾ ಮೇ ರಘುವಂಶನಾಥ
ಜಾತೋಽಸಿ ಮೇ ತ್ವಂ ಪರತಃ ಪರಾತ್ಮಾ ।
ತಥಾಪಿ ದುಃಖಂ ನ ಜಹಾತಿ ಮಾಂ ವೈ
ವಿಧಿರ್ಬಲೀಯಾನಿತಿ ಮೇ ಮನೀಷಾ ॥
ಅನುವಾದ
ಹಾ ರಾಮಾ! ಹಾ ನನ್ನ ರಘುವಂಶ ಶಿರೋಮಣಿ! ನೀನು ಪರಾತ್ಪರ ನಾದ ಭಗವಂತನೇ ಆಗಿದ್ದು ನನ್ನ ಹೊಟ್ಟೆಯಲ್ಲಿ ಹುಟ್ಟಿರುವೆ. ಹೀಗಿದ್ದರೂ ದುಃಖವು ನನ್ನನ್ನು ಬಿಡಲೊಲ್ಲದು ಎಂದ ಮೇಲೆ ವಿಧಾತನೇ ಬಲಿಷ್ಠನಾಗಿದ್ದಾನೆ ಎಂದು ನಾನು ತಿಳಿಯುತ್ತೇನೆ.’’ ॥86॥
87
ಮೂಲಮ್
ಸ ಏವಂ ಭರತೋ ವೀಕ್ಷ್ಯ ವಿಲಪಂತೀಂ ಭೃಶಂ ಶುಚಾ ।
ಪಾದೌ ಗೃಹೀತ್ವಾ ಪ್ರಾಹೇದಂ ಶ್ರುಣು ಮಾತರ್ವಚೋ ಮಮ ॥
ಅನುವಾದ
ಈ ವಿಧವಾಗಿ ಬಹಳ ದುಃಖದಿಂದ ಅಳುತ್ತಿರುವ ತಾಯಿಯನ್ನು ನೋಡಿ ಭರತನು ಆಕೆಯ ಚರಣಗಳನ್ನು ಹಿಡಿದುಕೊಂಡು ಹೀಗೆಂದನು ‘‘ಅಮ್ಮಾ! ನನ್ನ ಮಾತನ್ನು ಕೇಳು. ॥87॥
88
ಮೂಲಮ್
ಕೈಕೇಯ್ಯಾ ಯತ್ಕೃತಂ ಕರ್ಮ ರಾಮರಾಜ್ಯಾಭಿಷೇಚನೇ ।
ಅನ್ಯದ್ವಾ ಯದಿ ಜಾನಾಮಿ ಸಾ ಮಯಾ ನೋದಿತಾ ಯದಿ ॥
89
ಮೂಲಮ್
ಪಾಪಂ ಮೇಽಸ್ತು ತದಾ ಮಾತರ್ಬ್ರಹ್ಮಹತ್ಯಾಶತೋದ್ಭವಮ್ ।
ಹತ್ವಾ ವಸಿಷ್ಠಂ ಖಡ್ಗೇನ ಅರುಂಧತ್ಯಾ ಸಮನ್ವಿತಮ್ ॥
90
ಮೂಲಮ್
ಭೂಯಾತ್ತತ್ಪಾಪಮಖಿಲಂ ಮಮ ಜಾನಾಮಿ ಯದ್ಯಹಮ್ ।
ಇತ್ಯೇವಂ ಶಪಥಂ ಕೃತ್ವಾ ರುರೋದ ಭರತಸ್ತದಾ ॥
ಅನುವಾದ
ರಾಮನ ರಾಜ್ಯಾಭಿಷೇಕದ ವಿಷಯದಲ್ಲಿ ಅಡ್ಡಿಯನ್ನುಂಟು ಮಾಡಿದ ಕೈಕೆಯಿಯ ಯಾವ ಕಾರ್ಯಗಳುಂಟೋ, ಅವುಗಳು ನನಗೆ ಖಂಡಿತವಾಗಿ ತಿಳಿಯದು. ಆ ಕಾರ್ಯಗಳಲ್ಲಿ ಆಕೆಯನ್ನು ನಾನು ಪ್ರೇರೇಪಿಸಿದ್ದರೆ ಒಂದು ನೂರು ಬ್ರಹ್ಮಹತ್ಯೆಯನ್ನು ಮಾಡಿದ ಪಾಪವು ನನಗೆ ಉಂಟಾಗಲಿ! ನಾನು ಮೊದಲೇ ಈ ಕಾರ್ಯಗಳ ವಿಷಯವನ್ನು ತಿಳಿದವನಾಗಿದ್ದರೆ ಅರುಂಧತೀಸಹಿತ ಗುರು ವಸಿಷ್ಠರನ್ನು ಖಡ್ಗದಿಂದ ಕೊಂದ ಸಮಸ್ತ ಪಾಪವು ನನಗೆ ಉಂಟಾಗಲಿ!’’ ಹೀಗೆಂದು ಆಣೆಯಿಟ್ಟು ಹೇಳುತ್ತಾ ಭರತನು ಅಳತೊಡಗಿದನು. ॥88-90॥
91
ಮೂಲಮ್
ಕೌಸಲ್ಯಾ ತಮಥಾಲಿಂಗ್ಯ ಪುತ್ರ ಜಾನಾಮಿ ಮಾ ಶುಚಃ ।
ಏತಸ್ಮಿನ್ನಂತರೇ ಶ್ರುತ್ವಾ ಭರತಸ್ಯ ಸಮಾಗಮಮ್ ॥
92
ಮೂಲಮ್
ವಸಿಷ್ಠೋ ಮಂತ್ರಿಭಿಃ ಸಾರ್ಧಂ ಪ್ರಯಯೌ ರಾಜಮಂದಿರಮ್ ।
ರುದಂತಂ ಭರತಂ ದೃಷ್ಟ್ವಾ ವಸಿಷ್ಠಃ ಪ್ರಾಹ ಸಾದರಮ್ ॥
ಅನುವಾದ
ಅನಂತರ ಕೌಸಲ್ಯೆಯು ಅವನನ್ನು ತಬ್ಬಿಕೊಂಡು ‘‘ಮಗು! ಇದೆಲ್ಲ ನನಗೆ ತಿಳಿದಿದೆ. ನೀನು ಯಾವುದೇ ಪ್ರಕಾರದಿಂದ ದುಃಖಿಸಬೇಡ’’ ಎಂದು ಸಂತೈಸಿದಳು. ಅಷ್ಟರೊಳಗೆ ಭರತನು ಬಂದಿರುವ ವಾರ್ತೆಯನ್ನು ತಿಳಿದ ವಸಿಷ್ಠರು ಮಂತ್ರಿಗಳೊಂದಿಗೆ ರಾಜಮಂದಿರಕ್ಕೆ ಬಂದರು. ಅಳುತ್ತಿರುವ ಭರತನನ್ನು ಕಂಡು ಆದರದಿಂದ ಹೀಗೆಂದರು ॥91-92॥
93
ಮೂಲಮ್
ವೃದ್ಧೋ ರಾಜಾ ದಶರಥೋ ಜ್ಞಾನೀ ಸತ್ಯಪರಾಕ್ರಮಃ ।
ಭುಕ್ತ್ವಾ ಮರ್ತ್ಯಸುಖಂ ಸರ್ವಮಿಷ್ಟ್ವಾ ವಿಪುಲದಕ್ಷಿಣೈಃ ॥
94
ಮೂಲಮ್
ಅಶ್ವಮೇಧಾದಿಭಿರ್ಯಜ್ಞೈರ್ಲಬ್ಧ್ವಾ ರಾಮಂ ಸುತಂ ಹರಿಮ್ ।
ಅಂತೇ ಜಗಾಮ ತ್ರಿದಿವಂ ದೇವೇಂದ್ರಾರ್ದ್ಧಾಸನಂ ಪ್ರಭುಃ ॥
ಅನುವಾದ
‘‘ಮಹಾರಾಜಾ ದಶರಥನು ವೃದ್ಧನೂ, ಜ್ಞಾನಿಯೂ, ಸತ್ಯ ಪರಾಕ್ರಮನೂ ಆಗಿದ್ದನು. ಅವನು ಮರ್ತ್ಯಲೋಕದ ಸಮಸ್ತ ಸುಖಗಳನ್ನು ಅನುಭವಿಸಿ, ಧಾರಾಳವಾದ ಭಾರೀ ದಕ್ಷಿಣೆಗಳೊಂದಿಗೆ ಅಶ್ವಮೇಧಾದಿ ಯಜ್ಞಗಳ ಮೂಲಕ ಪರಮಾತ್ಮನನ್ನು ಮೆಚ್ಚಿಸಿ ಭಗವಾನ್ ವಿಷ್ಣುವೇ ಶ್ರೀರಾಮನಾಗಿರುವ ಮಗನನ್ನು ಪಡೆದುಕೊಂಡು ಕೊನೆಯಲ್ಲಿ ದೇವೇಂದ್ರನ ಅರ್ಧಾಸನಕ್ಕೆ ಒಡೆಯನಾಗಿರುವನು. ॥93-94॥
95
ಮೂಲಮ್
ತಂ ಶೋಚಸಿ ವೃಥೈವ ತ್ವಮಶೋಚ್ಯಂ ಮೋಕ್ಷಭಾಜನಮ್ ।
ಆತ್ಮಾ ನಿತ್ಯೋಽವ್ಯಯಃ ಶುದ್ಧೋ ಜನ್ಮನಾಶಾದಿವರ್ಜಿತಃ ॥
ಅನುವಾದ
ಹೀಗೆ ಮೋಕ್ಷಕ್ಕೆ ತಕ್ಕವನಾದ, ಅಶೋಚ್ಯನಾದ ಅವನ ಕುರಿತು ಶೋಕಿಸುವುದು ವ್ಯರ್ಥವಾಗಿದೆ. ಆತ್ಮನು ನಿತ್ಯನೂ, ನಾಶರಹಿತನೂ, ಶುದ್ಧನೂ, ಹುಟ್ಟು-ಸಾವುಗಳಿಲ್ಲದವನೂ ಆಗಿರುವನು. ॥95॥
96
ಮೂಲಮ್
ಶರೀರಂ ಜಡಮತ್ಯರ್ಥಮಪವಿತ್ರಂ ವಿನಶ್ವರಮ್ ।
ವಿಚಾರ್ಯಮಾಣೇ ಶೋಕಸ್ಯ ನಾವಕಾಶಃ ಕಥಂಚನ ॥
ಅನುವಾದ
ಶರೀರವು ಅಚೇತನವೂ, ಅತ್ಯಂತ ಅಪವಿತ್ರವೂ, ಪೂರ್ಣವಾಗಿ ನಾಶವಾಗತಕ್ಕದ್ದೂ ಆಗಿದೆ. ಈ ಪ್ರಕಾರ ವಿಚಾರ ಮಾಡಿದರೆ ದುಃಖಕ್ಕೆ ಆಸ್ಪದವೇ ಇಲ್ಲ. ॥96॥
97
ಮೂಲಮ್
ಪಿತಾ ವಾ ತನಯೋ ವಾಪಿ ಯದಿ ಮೃತ್ಯುವಶಂ ಗತಃ ।
ಮೂಢಾಸ್ತಮನುಶೋಚಂತಿ ಸ್ವಾತ್ಮತಾಡನಪೂರ್ವಕಮ್ ॥
ಅನುವಾದ
ಆದರೂ ತಂದೆಯಾಗಲಿ, ಮಗನಾಗಲಿ ಕಾಲವಶರಾದರೆ ತಮ್ಮ ಎದೆಯನ್ನು ತಾವೇ ಬಡಿದುಕೊಂಡು ಮೂಢರಾದವರು ದುಃಖಿಸುತ್ತಿರುತ್ತಾರೆ. ॥97॥
98
ಮೂಲಮ್
ನಿಃಸಾರೇ ಖಲು ಸಂಸಾರೇ ವಿಯೋಗೋ ಜ್ಞಾನಿನಾಂ ಯದಾ ।
ಭವೇದ್ವೈರಾಗ್ಯಹೇತುಃ ಸ ಶಾಂತಿಸೌಖ್ಯಂ ತನೋತಿ ಚ ॥
ಅನುವಾದ
ಆದರೆ ಅಸಾರವಾದ ಈ ಸಂಸಾರದಲ್ಲಿ ಜ್ಞಾನಿಗಳಿಗೆ ಒಂದು ವೇಳೆ ಬಂಧು ವಿಯೋಗವಾದರೆ ಅದು ವೈರಾಗ್ಯಕ್ಕೆ ಕಾರಣವಾಗುತ್ತದೆ ಮತ್ತು ಮನಸ್ಸಿಗೆ ಸುಖ-ಶಾಂತಿಗಳನ್ನು ನೀಡುತ್ತದೆ. ॥98॥
99
ಮೂಲಮ್
ಜನ್ಮವಾನ್ಯದಿ ಲೋಕೇಽಸ್ಮಿಂಸ್ತರ್ಹಿ ತಂ ಮೃತ್ಯುರನ್ವಗಾತ್ ।
ತಸ್ಮಾದಪರಿಹಾರ್ಯೋಽಯಂ ಮೃತ್ಯುರ್ಜನ್ಮವತಾಂ ಸದಾ ॥
ಅನುವಾದ
ಈ ಲೋಕದಲ್ಲಿ ಹುಟ್ಟಿದವನಿಗೆ ಸಾವು ಹಿಂಬಾಲಿಸಿಕೊಂಡೇ ಇರುವುದು. ಆದ್ದರಿಂದ ಹುಟ್ಟಿದವರಿಗೆ ಮೃತ್ಯುವು ಸದಾಕಾಲ ಅನಿವಾರ್ಯವಾಗಿದೆ. ॥99॥
100
ಮೂಲಮ್
ಸ್ವಕರ್ಮವಶತಃ ಸರ್ವಜಂತೂನಾಂ ಪ್ರಭವಾಪ್ಯಯೌ ।
ವಿಜಾನನ್ನಪ್ಯವಿದ್ವಾನ್ಯಃ ಕಥಂ ಶೋಚತಿ ಬಾಂಧವಾನ್ ॥
ಅನುವಾದ
ಎಲ್ಲ ಪ್ರಾಣಿಗಳಿಗೂ ಅವರವರ ಕರ್ಮಾನುಗುಣವಾಗಿ ಜನ್ಮ-ಮರಣಗಳು ಸಂಭವಿಸುತ್ತವೆ. ಇದನ್ನು ತಿಳಿದೂ ತಿಳಿಯದವನಂತೆ ಬಂಧುಗಳಿಗಾಗಿ ದುಃಖಿಸುವವನು ಮೂರ್ಖನೇ ಸರಿ. ॥100॥
101
ಮೂಲಮ್
ಬ್ರಹ್ಮಾಂಡಕೋಟಯೋ ನಷ್ಟಾಃ ಸೃಷ್ಟಯೋ ಬಹುಶೋ ಗತಾಃ ।
ಶುಷ್ಯಂತಿ ಸಾಗರಾಃ ಸರ್ವೇ ಕೈವಾಸ್ಥಾ ಕ್ಷಣಜೀವಿತೇ ॥
ಅನುವಾದ
ಈವರೆಗೆ ಕೋಟಿ ಬ್ರಹ್ಮಾಂಡಗಳು ಹುಟ್ಟಿ ಕಣ್ಮರೆಯಾಗಿವೆ. ಎಷ್ಟೋ ಸೃಷ್ಟಿಗಳಾಗಿ ಕಳೆದುಹೋಗಿವೆ. ಎಲ್ಲ ಸಮುದ್ರಗಳು ಭವಿಷ್ಯತ್ ಕಾಲದಲ್ಲಿ ಒಣಗಿಹೋಗುವವು. ಹೀಗಿರುವಲ್ಲಿ ಕ್ಷಣಕಾಲ ಬದುಕಿರುವ ಈ ಜೀವನದಲ್ಲಿ ವಿಶ್ವಾಸವೇನಿದ್ದೀತು? ॥101॥
102
ಮೂಲಮ್
ಚಲಪತ್ರಾಂತಲಗ್ನಾಂಬುಬಿಂದುವತ್ ಕ್ಷಣಭಂಗುರಮ್ ।
ಆಯುಸ್ತ್ಯಜತ್ಯವೇಲಾಯಾಂ ಕಃ ಸ್ತತ್ರ ಪ್ರತ್ಯಯಸ್ತವ ॥
ಅನುವಾದ
ಅಲ್ಲಾಡುತ್ತಿರುವ ಗಿಡದ ಎಲೆಯ ತುದಿಯಲ್ಲಿ ಅಂಟಿಕೊಂಡಿರುವ ನೀರಿನ ಹನಿಯಂತೆ ಆಯುಷ್ಯವು ಕ್ಷಣಭಂಗುರವಾಗಿದ್ದು, ಅಕಾಲದಲ್ಲಿ ಬಿಟ್ಟು ಅಗಲುವುದು. ಇದರಲ್ಲಿ ನಂಬಿಕೆಯಾದರೂ ಏನಿದ್ದೀತು? ॥102॥
103
ಮೂಲಮ್
ದೇಹೀ ಪ್ರಾಕ್ತನದೇಹೋತ್ಥಕರ್ಮಣಾ ದೇಹವಾನ್ಪುನಃ ।
ತದ್ದೇಹೋತ್ಥೇನ ಚ ಪುನರೇವಂ ದೇಹಃ ಸದಾತ್ಮನಃ ॥
ಅನುವಾದ
ಈ ಜೀವಾತ್ಮನು ತನ್ನ ಹಿಂದಿನ ಶರೀರದಲ್ಲಿ ಮಾಡಿದ್ದ ಕರ್ಮ ಫಲಗಳಿಂದ ದೇಹವನ್ನು ಧರಿಸುತ್ತಾನೆ. ಆ ದೇಹದಲ್ಲಿ ಮಾಡಿದ ಕರ್ಮಗಳಿಂದ ಮತ್ತೆ ಪುನಃ ಇನ್ನೊಂದು ದೇಹವನ್ನು ಪಡೆಯುವನು. ಹೀಗೆ ಜೀವನಿಗೆ ಜ್ಞಾನವುಂಟಾಗುವವರೆಗೆ ಯಾವಾಗಲೂ ದೇಹಸಂಬಂಧವಿದ್ದುಕೊಂಡೇ ಇರುವುದು. ॥103॥
104
ಮೂಲಮ್
ಯಥಾ ತ್ಯಜತಿ ವೈ ಜೀರ್ಣಂ ವಾಸೋ ಗೃಹ್ಣಾತಿ ನೂತನಮ್ ।
ತಥಾ ಜೀರ್ಣಂ ಪರಿತ್ಯಜ್ಯ ದೇಹೀ ದೇಹಂ ಪುನರ್ನವಮ್ ॥
105
ಮೂಲಮ್
ಭಜತ್ಯೇವ ಸದಾ ತತ್ರ ಶೋಕಸ್ಯಾವಸರಃ ಕುತಃ ।
ಆತ್ಮಾ ನ ಮ್ರಿಯತೇ ಜಾತು ಜಾಯತೇ ನ ಚ ವರ್ಧತೇ ॥
ಅನುವಾದ
ಮನುಷ್ಯನು ಹಳೆಯ ಬಟ್ಟೆಯನ್ನು ಬಿಸುಟು ಹೊಸ ಬಟ್ಟೆಯನ್ನು ತೆಗೆದುಕೊಳ್ಳುವಂತೆಯೇ ದೇಹಧಾರೀ ಜೀವಿಯು ಮುಪ್ಪಾದ ಶರೀರವನ್ನು ಎಸೆದು ಹೊಸದನ್ನು ಸ್ವೀಕರಿಸುವನು. ಹೀಗಿರುವುದರಿಂದ ಅಳುವುದಕ್ಕೆ ಕಾರಣವಾದರೂ ಏನಿದೆ? ಆತ್ಮನಾದರೋ ಎಂದೂ ಸಾಯುವುದಿಲ್ಲ; ಹುಟ್ಟುವುದಿಲ್ಲ; ಬೆಳೆಯುವುದೂ ಇಲ್ಲ. ॥104-105॥
106
ಮೂಲಮ್
ಷಡ್ ಭಾವರಹಿತೋಽನಂತಃ ಸತ್ಯಪ್ರಜ್ಞಾನವಿಗ್ರಹಃ ।
ಆನಂದರೂಪೋ ಬುದ್ಧ್ಯಾದಿಸಾಕ್ಷೀ ಲಯವಿವರ್ಜಿತಃ ॥
ಅನುವಾದ
ಸತ್ಯಜ್ಞಾನಸ್ವರೂಪನಾದ ಅನಂತನಾದ ಆತ್ಮನು ಹುಟ್ಟುವುದೇ ಮುಂತಾದ ಆರು ವಿಕಾರಗಳಿಲ್ಲದವನು. ಆನಂದ ಸ್ವರೂಪನೂ, ಬುದ್ಧಿಯೇ ಮುಂತಾದವುಗಳಿಗೆ ಸಾಕ್ಷಿಯು; ವಿನಾಶವಿಲ್ಲದವನು. ॥106॥
107
ಮೂಲಮ್
ಏಕ ಏವ ಪರೋ ಹ್ಯಾತ್ಮಾ ಹ್ಯದ್ವಿತೀಯಃ ಸಮಃ ಸ್ಥಿತಃ ।
ಇತ್ಯಾತ್ಮಾನಂ ದೃಢಂ ಜ್ಞಾತ್ವಾ ತ್ಯಕ್ತ್ವಾ ಶೋಕಂ ಕುರು ಕ್ರಿಯಾಮ್ ॥
ಅನುವಾದ
ಈ ಆತ್ಮನು ಏಕನೂ, ಅದ್ವಿತೀಯನೂ, ಸಮಭಾವದಿಂದ ಸದಾ ಸ್ಥಿತನಾಗಿದ್ದಾನೆ. ಹೀಗೆಂದು ನಿಶ್ಚಯವಾದ ಆತ್ಮಜ್ಞಾನವನ್ನು ಸಂಪಾದಿಸಿಕೊಂಡು ಶೋಕವನ್ನು ಬಿಟ್ಟು ಕರ್ಮಗಳನ್ನು ಮಾಡು. ॥107॥
108
ಮೂಲಮ್
ತೈಲದ್ರೋಣ್ಯಾಃ ಪಿತುರ್ದೇಹಮುದ್ಧೃತ್ಯ ಸಚಿವೈಃ ಸಹ ।
ಕೃತ್ಯಂ ಕುರು ಯಥಾನ್ಯಾಯಮಸ್ಮಾಭಿಃ ಕುಲನಂದನ ॥
ಅನುವಾದ
ಹೇ ಕುಲನಂದನ ಭರತಾ! ನಿನ್ನ ತಂದೆಯ ಶರೀರವನ್ನು ಎಣ್ಣೆಯ ದೋಣಿಯಿಂದ ಹೊರತೆಗೆದು ಮಂತ್ರಿಗಳೊಡಗೂಡಿ ನಾವು ತಿಳಿಸಿದಂತೆ ಸೂಕ್ತರೀತಿಯಿಂದ ಪಿತೃ ಕಾರ್ಯವನ್ನು ನೆರವೇರಿಸು.’’ ॥108॥
109
ಮೂಲಮ್
ಇತಿ ಸಂಬೋಧಿತಃ ಸಾಕ್ಷಾದ್ಗುರುಣಾ ಭರತಸ್ತದಾ ।
ವಿಸೃಜ್ಯಾಜ್ಞಾನಜಂ ಶೋಕಂ ಚಕ್ರೇ ಸವಿಧಿವತ್ಕ್ರಿಯಾಮ್ ॥
ಅನುವಾದ
ಗುರುಗಳಾದ ವಸಿಷ್ಠರು ಈ ಪ್ರಕಾರ ಎಚ್ಚರಿಸಿದಾಗ ಭರತನು ಅಜ್ಞಾನದಿಂದ ಉಂಟಾಗಿದ್ದ ಶೋಕವನ್ನು ಬಿಟ್ಟು, ವಿಧಿಪೂರ್ವಕವಾಗಿ ಪಿತೃಕರ್ಮವನ್ನು ನೆರವೇರಿಸಿದನು. ॥109॥
110
ಮೂಲಮ್
ಗುರುಣೋಕ್ತಪ್ರಕಾರೇಣ ಆಹಿತಾಗ್ನೇರ್ಯಥಾವಿಧಿ ।
ಸಂಸ್ಕೃತ್ಯ ಸ ಪಿತುರ್ದೇಹಂ ವಿಧಿದೃಷ್ಟೇನ ಕರ್ಮಣಾ ॥
ಅನುವಾದ
ಗುರುಗಳು ತಿಳಿಸಿದ ಪ್ರಕಾರ ಆಹಿತಾಗ್ನಿ (ಅಗ್ನಿಹೋತ್ರವನ್ನು ಇಟ್ಟಿದ್ದ)ಯಾಗಿದ್ದ ದಶರಥನ ಶರೀರವನ್ನು ಶಾಸವಿಧಿಗನುಸಾರವಾಗಿ ಸಂಸ್ಕಾರಮಾಡಿ ವಿಧಿಪ್ರಕಾರವಾಗಿ ಪೈತ್ರಿಕಕರ್ಮಗಳನ್ನು ಮಾಡಿದನು. ॥110॥
111
ಮೂಲಮ್
ಏಕಾದಶೇಽಹನಿ ಪ್ರಾಪ್ತೇ ಬ್ರಾಹ್ಮಣಾನ್ವೇದಪಾರಗಾನ್ ।
ಭೋಜಯಾಮಾಸ ವಿಧಿವಚ್ಛತಶೋಽಥ ಸಹಸ್ರಶಃ ॥
112
ಮೂಲಮ್
ಉದ್ದಿಶ್ಯ ಪಿತರಂ ತತ್ರ ಬ್ರಾಹ್ಮಣೇಭ್ಯೋ ಧನಂ ಬಹು ।
ದದೌ ಗವಾಂ ಸಹಸ್ರಾಣಿ ಗ್ರಾಮಾನ್ ರತ್ನಾಂಬರಾಣಿ ಚ ॥
ಅನುವಾದ
ಹನ್ನೊಂದನೆಯ ದಿನದಂದು ವೇದನಿಷ್ಣಾತರಾದ ಸಾವಿರಾರು ಬ್ರಾಹ್ಮಣರಿಗೆ, ಕ್ರಮಬದ್ಧವಾಗಿ ಭೋಜನ ಮಾಡಿಸಿದನು. ಆಗ ತಂದೆಯ ಸದ್ಗತಿಗಾಗಿ ಸಂಕಲ್ಪಿಸಿ ಬ್ರಾಹ್ಮಣರಿಗೆ ಹೆಚ್ಚಿನ ದಕ್ಷಿಣೆಯನ್ನೂ, ಸಾವಿರಾರು ಗೋವುಗಳನ್ನೂ, ಗ್ರಾಮಗಳನ್ನೂ, ರತ್ನಾದಿಗಳನ್ನೂ, ಬಟ್ಟೆಗಳನ್ನೂ ದಾನ ಮಾಡಿದನು. ॥111-112॥
113
ಮೂಲಮ್
ಅವಸತ್ಸ್ವಗೃಹೇ ತತ್ರ ರಾಮಮೇವಾನುಚಿಂತಯನ್ ।
ವಸಿಷ್ಠೇನ ಸಹ ಭ್ರಾತ್ರಾ ಮಂತ್ರಿಭಿಃ ಪರಿವಾರಿತಃ ॥
ಅನುವಾದ
ಅನಂತರ ರಾಮನನ್ನೇ ಧ್ಯಾನಿಸುತ್ತಾ ವಸಿಷ್ಠರು, ಮಂತ್ರಿಗಳು, ತಮ್ಮನಾದ ಶತ್ರುಘ್ನರೊಡಗೂಡಿ ಭರತನು ತನ್ನ ಅರಮನೆಯಲ್ಲಿ ಇರತೊಡಗಿದನು. ॥113॥
114
ಮೂಲಮ್
ರಾಮೇಽರಣ್ಯಂ ಪ್ರಯಾತೇ ಸಹ ಜನಕಸುತಾ -
ಲಕ್ಷ್ಮಣಾಭ್ಯಾಂ ಸುಘೋರಂ
ಮಾತಾ ಮೇ ರಾಕ್ಷಸೀವ ಪ್ರದಹತಿ ಹೃದಯಂ
ದರ್ಶನಾದೇವ ಸದ್ಯಃ ।
ಗಚ್ಛಾಮ್ಯಾರಣ್ಯಮದ್ಯ ಸ್ಥಿರಮತಿರಖಿಲಂ
ದೂರತೋಽಪಾಸ್ಯ ರಾಜ್ಯಂ
ರಾಮಂ ಸೀತಾಸಮೇತಂ ಸ್ಮಿತರುಚಿರಮುಖಂ
ನಿತ್ಯಮೇವಾನುಸೇವೇ ॥
ಅನುವಾದ
ಅರಮನೆಯಲ್ಲಿ ವಾಸಿಸುತ್ತಿದ್ದರೂ ‘ಜನಕನಂದಿನಿ ಮಹಾರಾಣಿ ಸೀತಾದೇವಿ, ಲಕ್ಷ್ಮಣಸಹಿತ ಶ್ರೀ ರಘುನಾಥನು ಘೋರಾರಣ್ಯಕ್ಕೆ ಹೋಗಿರುವುದರಿಂದ, ತಾಯಿ ಕೈಕೆಯಿಯು ತನ್ನ ದರ್ಶನಮಾತ್ರದಿಂದಲೇ ರಾಕ್ಷಸಿಯಂತೆ ನನ್ನ ಹೃದಯವನ್ನು ಸುಡುತ್ತಿರುವಳು. ಆದ್ದರಿಂದ ನಾನು ಈಗ ದೃಢ ಬುದ್ಧಿಯುಳ್ಳವನಾಗಿ ಎಲ್ಲ ರಾಜ್ಯ-ಕೋಶಗಳನ್ನು ತ್ಯಜಿಸಿ ಅರಣ್ಯಕ್ಕೆ ಹೋಗುವೆನು. ಮುಗುಳ್ನಗೆಯಿಂದ ಸುಂದರವಾದ ಮುಖವುಳ್ಳ ಸೀತಾ ಸಮೇತ ಶ್ರೀರಾಮಚಂದ್ರನನ್ನು ಪ್ರತಿದಿನ ಸೇವೆ ಮಾಡುತ್ತಾ ಇರುವೆನು’, ಎಂದು ಮನಸ್ಸಿನಲ್ಲಿ ನಿಶ್ಚಿಯಿಸಿದನು. ॥114॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.