೦೬

[ಆರನೆಯ ಸರ್ಗ]

ಭಾಗಸೂಚನಾ

ಗಂಗೆಯನ್ನು ದಾಟಿ ಭರದ್ವಾಜ ಮತ್ತು ವಾಲ್ಮೀಕಿಗಳ ಭೇಟಿ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಸುಪ್ತಂ ರಾಮಂ ಸಮಾಲೋಕ್ಯ ಗುಹಃ ಸೋಶ್ರುಪರಿಪ್ಲುತಃ ।
ಲಕ್ಷ್ಮಣಂ ಪ್ರಾಹ ವಿನಯಾದ್ ಭ್ರಾತಃ ಪಶ್ಯಸಿ ರಾಘವಮ್ ॥

2
ಮೂಲಮ್

ಶಯಾನಂ ಕುಶಪತ್ರೌಘಸಂಸ್ತರೇ ಸೀತಯಾ ಸಹ ।
ಯಃ ಶೇತೇ ಸ್ವರ್ಣಪರ್ಯಂಕೇ ಸ್ವಾಸ್ತೀರ್ಣೇ ಭವನೋತ್ತಮೇ ॥

3
ಮೂಲಮ್

ಕೈಕೇಯೀ ರಾಮ ದುಃಖಸ್ಯ ಕಾರಣಂ ವಿಧಿನಾ ಕೃತಾ ।
ಮಂಥರಾಬುದ್ಧಿಮಾಸ್ಥಾಯ ಕೈಕೇಯೀ ಪಾಪಮಾಚರತ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಪಾರ್ವತಿ! ಮಲಗಿದ್ದ ಶ್ರೀರಾಮನನ್ನು ನೋಡಿದ ಗುಹನು ಕಣ್ಣೀರು ತುಂಬಿಕೊಂಡು ವಿನಯದಿಂದ ಲಕ್ಷ್ಮಣನಲ್ಲಿ ‘‘ಸೋದರನೆ! ಶ್ರೀರಾಮನನ್ನು ನೋಡುತ್ತಿರುವೆಯಲ್ಲ. ಉತ್ತಮವಾದ, ವಿಶಾಲವಾದ ಅರಮನೆಯಲ್ಲಿ ಬಂಗಾರದ ಮಂಚದ ಮೇಲೆ ಹಂಸತೂಲಿಕಾತಲ್ಪದಲ್ಲಿ ಸೀತೆಯೊಡನೆ ಪವಡಿಸುತ್ತಿದ್ದವನು ಇಂದು ಜಾನಕಿಯೊಂದಿಗೆ ಹುಲ್ಲು ಮತ್ತು ಎಲೆಗಳನ್ನು ಹರಡಿರುವ ಪರ್ಣಶಯ್ಯೆಯಲ್ಲಿ ಮಲಗಿರುವನು. ದೈವವು ಕೈಕೇಯಿಯನ್ನು ರಾಮನ ಕಷ್ಟಕ್ಕೆ ಕಾರಣಳನ್ನಾಗಿ ಮಾಡಿತು. ಆಕೆಯಾದರೋ ಮಂಥರೆಯ ಬುದ್ಧಿಯನ್ನು ಅನುಸರಿಸಿ ಪಾಪವನ್ನು ಮಾಡಿದಳು’’ ಎಂದು ಹೇಳಿದನು. ॥1-3॥

4
ಮೂಲಮ್

ತಚ್ಛ್ರುತ್ವಾ ಲಕ್ಷ್ಮಣಃ ಪ್ರಾಹ ಸಖೇ ಶೃಣು ವಚೋ ಮಮ ।
ಕಃ ಕಸ್ಯ ಹೇತುರ್ದುಃಖಸ್ಯ ಕಶ್ಚ ಹೇತುಃ ಸುಖಸ್ಯ ವಾ ॥

5
ಮೂಲಮ್

ಸ್ವಪೂರ್ವಾರ್ಜಿತಕರ್ಮೈವ ಕಾರಣಂ ಸುಖದುಃಖಯೋಃ ॥

ಅನುವಾದ

ಅದನ್ನು ಕೇಳಿದ ಲಕ್ಷ್ಮಣನು ಇಂತೆಂದನು - ‘‘ಎಲೈ ಸ್ನೇಹಿತನೇ! ನನ್ನ ಮಾತನ್ನು ಕೇಳು. ದುಃಖಕ್ಕಾಗಲಿ, ಸುಖಕ್ಕಾಗಲಿ ಯಾರು ಯಾರಿಗೆ ಕಾರಣರು? ಯಾರೂ ಅಲ್ಲ. ಮನುಷ್ಯನು ಹಿಂದೆ ಮಾಡಿದ ಕರ್ಮವೇ ಅವನ ಸುಖ-ದುಃಖಗಳಿಗೆ ಕಾರಣವು.॥4-5॥

6
ಮೂಲಮ್

ಸುಖಸ್ಯ ದುಃಖಸ್ಯ ನ ಕೋಽಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ ।
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ॥

ಅನುವಾದ

ಸುಖವನ್ನಾಗಲಿ, ದುಃಖವನ್ನಾಗಲಿ ಯಾರೂ ಯಾರಿಗೂ (ಒಬ್ಬರಿಗೊಬ್ಬರು) ಕೊಡುವುದಿಲ್ಲ. ಮತ್ತೊಬ್ಬನಿಂದ ಸುಖ-ದುಃಖಗಳು ಉಂಟಾದುವು ಎಂದು ತಿಳಿಯುವುದು ಕೆಟ್ಟಬುದ್ಧಿಯಾಗಿದೆ. ‘ನಾನು ಮಾಡುತ್ತೇನೆ’ ಎಂಬುದೂ ವ್ಯರ್ಥವಾದ ಅಭಿಮಾನವೇ ಸರಿ. ಏಕೆಂದರೆ, ಲೋಕದ ಜನರೆಲ್ಲರೂ ತಮ್ಮ-ತಮ್ಮ ಕರ್ಮಗಳಿಂದ ಬಂಧಿತರಾಗಿದ್ದಾರೆ. ॥6॥

7
ಮೂಲಮ್

ಸುಹೃನ್ಮಿತ್ರಾರ್ಯುದಾಸೀನದ್ವೇಷ್ಯಮಧ್ಯಸ್ಥಬಾಂಧವಾಃ ।
ಸ್ವಯಮೇವಾಚರನ್ಕರ್ಮ ತಥಾ ತತ್ರ ವಿಭಾವ್ಯತೇ ॥

ಅನುವಾದ

ಈ ಮನುಷ್ಯನು ತಾನೇ ಮಾಡಿದ ಕರ್ಮಗಳ ಫಲವಾಗಿ ಸ್ನೇಹಿತ, ಆಪ್ತ, ಶತ್ರು, ಉದಾಸೀನ, ಬೇಡದವನು, ಮಧ್ಯಸ್ಥ, ಬಂಧು ಎಂಬುದಾಗಿ ಲೋಕದಲ್ಲಿ ಕಲ್ಪಿಸಿಕೊಳ್ಳುತ್ತಾನೆ. ॥7॥

8
ಮೂಲಮ್

ಸುಖಂ ವಾ ಯದಿ ವಾ ದುಃಖಂ ಸ್ವಕರ್ಮವಶಗೋ ನರಃ ।
ಯದ್ಯದ್ಯಥಾಗತಂ ತತ್ತದ್ ಭುಕ್ತ್ವಾ ಸ್ವಸ್ಥಮನಾ ಭವೇತ್ ॥

ಅನುವಾದ

ಆದ್ದರಿಂದ ಮನುಷ್ಯನು ತನ್ನ ಕರ್ಮಾನುಸಾರ ಸುಖವೋ, ದುಃಖವೋ ಯಾವುದು ಹೇಗೆ ಬರುತ್ತದೋ ಹಾಗೆ-ಹಾಗೆಯೇ ಅನುಭವಿಸುತ್ತಾ ಶಾಂತಚಿತ್ತನಾಗಿ ಇರಬೇಕು. ॥8॥

9
ಮೂಲಮ್

ನ ಮೇ ಭೋಗಾಗಮೇ ವಾಂಛಾ ನ ಮೇ ಭೋಗವಿವರ್ಜನೇ ।
ಆಗಚ್ಛತ್ವಥ ಮಾಗಚ್ಛತ್ವಭೋಗವಶಗೋ ಭವೇತ್ ॥

ಅನುವಾದ

ನಮಗೆ ಭೋಗಗಳ ಪ್ರಾಪ್ತಿಯ ಇಚ್ಛೆಯಾಗಲಿ, ಅವುಗಳ ತ್ಯಾಗದ ಇಚ್ಛೆಯಾಗಲಿ ಇರಬಾರದು. ಭೋಗಗಳು ಬಂದರೆ ಬರಲಿ, ಹೋದರೆ ಹೋಗಲಿ ಎಂದು ಉದಾಸೀನತೆಯಿಂದ ಭೋಗಗಳ ಹಿಡಿತಕ್ಕೆ ಸಿಗದಂತೆ ಇರಬೇಕು. ॥9॥

10
ಮೂಲಮ್

ಯಸ್ಮಿನ್ ದೇಶೇ ಚ ಕಾಲೇ ಚ ಯಸ್ಮಾದ್ವಾಯೇನ ಕೇನ ವಾ ।
ಕೃತಂ ಶುಭಾಶುಭಂ ಕರ್ಮ ಭೋಜ್ಯಂ ತತ್ತತ್ರ ನಾನ್ಯಥಾ ॥

ಅನುವಾದ

ಯಾವ ದೇಶದಲ್ಲಿ, ಕಾಲದಲ್ಲಿ ಯಾರು ಯಾವ ಕಾರಣಕ್ಕಾಗಿ ಏನೇನು ಪಾಪಪುಣ್ಯಗಳನ್ನು ಮಾಡುವನೋ ಅವುಗಳನ್ನು ಹಾಗೆಯೇ ನಿಃಸಂದೇಹವಾಗಿ ಭೋಗಿಸಬೇಕಾಗುತ್ತದೆ. ಬೇರೆ ಉಪಾಯವಿರುವುದಿಲ್ಲ. ॥10॥

11
ಮೂಲಮ್

ಅಲಂ ಹರ್ಷವಿಷಾದಾಭ್ಯಾಂ ಶುಭಾಶುಭಫಲೋದಯೇ ।
ವಿಧಾತ್ರಾ ವಿಹಿತಂ ಯದ್ಯತ್ತದಲಂಘ್ಯಂ ಸುರಾಸುರೈಃ ॥

ಅನುವಾದ

ಆದ್ದರಿಂದ ವಿಧಾತನು ಗೊತ್ತು ಪಡಿಸಿದ ಒಳ್ಳೆಯ ಹಾಗೂ ಕೆಟ್ಟ ಫಲಗಳ ವಿಷಯಕ್ಕೆ ಸಂತೋಷ-ದುಃಖಗಳನ್ನು ತಂದುಕೊಳ್ಳುವುದು ಇನ್ನು ಸಾಕು; ಏಕೆಂದರೆ ವಿಧಾತನ ಗತಿಯನ್ನು ದೇವಾಸುರರಿಂದಲೂ ಮೀರಲಾಗುವುದಿಲ್ಲ. ॥11॥

12
ಮೂಲಮ್

ಸರ್ವದಾ ಸುಖದುಃಖಾಭ್ಯಾಂ ನರಃ ಪ್ರತ್ಯವರುಧ್ಯತೇ ।
ಶರೀರಂ ಪುಣ್ಯಪಾಪಾಭ್ಯಾಮುತ್ಪನ್ನಂ ಸುಖದುಃಖವತ್ ॥

13
ಮೂಲಮ್

ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ ।
ದ್ವಯಮೇತದ್ಧಿ ಜಂತೂನಾಮಲಂಘ್ಯಂ ದಿನರಾತ್ರಿವತ್ ॥

ಅನುವಾದ

ಮನುಷ್ಯನು ಯಾವಾಗಲೂ ಸುಖ-ದುಃಖಗಳಿಂದ ಸುತ್ತುವರಿದಿರುವನು. ಸುಖ-ದುಃಖಗಳುಳ್ಳ ಶರೀರವು ಪಾಪ ಪುಣ್ಯಗಳ ನಿಮಿತ್ತವಾಗಿಯೇ ಹುಟ್ಟಿರುತ್ತದೆ. ಪ್ರಾಣಿಗಳಿಗೆ ಹಗಲು-ರಾತ್ರಿಗಳಂತೆ ಸುಖವಾದ ಮೇಲೆ ದುಃಖವು, ದುಃಖವಾದ ಮೇಲೆ ಸುಖವು ಬರುತ್ತಿರುವುವು. ಇದನ್ನು ಪ್ರಾಣಿಗಳು ಉಲ್ಲಂಘಿಸಲಾರವು. ॥12-13॥

14
ಮೂಲಮ್

ಸುಖಮಧ್ಯೇ ಸ್ಥಿತಂ ದುಃಖಂ ದುಃಖಮಧ್ಯೇ ಸ್ಥಿತಂ ಸುಖಮ್ ।
ದ್ವಯಮನ್ಯೋನ್ಯಸಂಯುಕ್ತಂ ಪ್ರೋಚ್ಯತೇ ಜಲಪಂಕವತ್ ॥

ಅನುವಾದ

ಸುಖದ ನಡುವೆ ದುಃಖವು, ದುಃಖದ ನಡುವೆ ಸುಖವು ಸದಾಕಾಲ ಇದ್ದುಕೊಂಡಿರುತ್ತವೆ. ಇವೆರಡೂ ಒಂದಕ್ಕೊಂದು ನೀರು ಕೆಸರುಗಳಂತೆ ಕೂಡಿಕೊಂಡಿರುವವು.॥14॥

15
ಮೂಲಮ್

ತಸ್ಮಾದ್ಧೈರ್ಯೇಣ ವಿದ್ವಾಂಸ ಇಷ್ಟಾನಿಷ್ಟೋಪಪತ್ತಿಷು ।
ನ ಹೃಷ್ಯಂತಿ ನ ಮುಹ್ಯಂತಿ ಸರ್ವಂ ಮಾಯೇತಿ ಭಾವನಾತ್ ॥

ಅನುವಾದ

ಆದ್ದರಿಂದ ವಿವೇಕಿಗಳು ಧೈರ್ಯದಿಂದ ಇಷ್ಟವಾಗಲಿ, ಅನಿಷ್ಟವಾಗಲಿ ಬಂದೊದಗಿದಾಗ ಇವೆಲ್ಲವೂ ಮಾಯೆ ಎಂಬ ಭಾವನೆ ಯಿಂದ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ.’’ ॥15॥

16
ಮೂಲಮ್

ಗುಹಲಕ್ಷ್ಮಣಯೋರೇವಂ ಭಾಷತೋರ್ವಿಮಲಂ ನಭಃ ।
ಬಭೂವ ರಾಮಃ ಸಲಿಲಂ ಸ್ಪೃಷ್ಟ್ವಾ ಪ್ರಾತಃ ಸಮಾಹಿತಃ ॥

17
ಮೂಲಮ್

ಉವಾಚ ಶೀಘ್ರಂ ಸುದೃಢಾಂ ನಾವಮಾನಯ ಮೇ ಸಖೇ ।
ಶ್ರುತ್ವಾ ರಾಮಸ್ಯ ವಚನಂ ನಿಷಾದಾಧಿಪತಿರ್ಗುಹಃ ॥

18
ಮೂಲಮ್

ಸ್ವಯಮೇವ ದೃಢಾಂ ನಾವಮಾನಿನಾಯ ಸುಲಕ್ಷಣಾಮ್ ।
ಸ್ವಾಮಿನ್ನಾರುಹ್ಯತಾಂ ನೌಕಾ ಸೀತಯಾ ಲಕ್ಷ್ಮಣೇನ ಚ ॥

ಅನುವಾದ

ಈ ರೀತಿಯಾಗಿ ಗುಹ ಮತ್ತು ಲಕ್ಷ್ಮಣರು ಮಾತನಾಡುತ್ತಿರುವಂತೆಯೇ ಮೂಡಣ ದಿಕ್ಕು ಬೆಳಗಿತು (ಬೆಳಕು ಹರಿಯಿತು). ಶ್ರೀರಾಮನು ಗಂಗಾಸ್ನಾನ ಮಾಡಿ ಪ್ರಾತಃಕಾಲದ ಜಪಾದಿಗಳನ್ನು ಪೂರೈಸಿದನು. ಅನಂತರ ‘‘ಎಲೈ ಮಿತ್ರಾ! ದೃಢವಾದ ಒಳ್ಳೆಯದೊಂದು ಹರಿಗೋಲನ್ನು ತೆಗೆದುಕೊಂಡು ಬಾ’’ ಎಂದು ಗುಹನಿಗೆ ಹೇಳಿದನು. ನಿಷಾದರಾಜನಾದ ಗುಹನು ರಾಮನ ಮಾತನ್ನು ಕೇಳಿ ಲಕ್ಷಣಯುಕ್ತವಾದ ಭದ್ರವಾದ ಹರಿಗೋಲನ್ನು ತಾನೇ ಸ್ವತಃ ತಂದನು. ‘‘ಪ್ರಭುವೇ! ಸೀತಾಲಕ್ಷ್ಮಣರೊಡಗೂಡಿ ನೌಕೆಯನ್ನು ಏರೋಣವಾಗಲಿ.” ॥16-18॥

19
ಮೂಲಮ್

ವಾಹಯೇ ಜ್ಞಾತಿಭಿಃ ಸಾರ್ಧಮಹಮೇವ ಸಮಾಹಿತಃ ।
ತಥೇತಿ ರಾಘವಃ ಸೀತಾಮಾರೋಪ್ಯ ಶುಭಲಕ್ಷಣಾಮ್ ॥

20
ಮೂಲಮ್

ಗುಹಸ್ಯ ಹಸ್ತಾವಾಲಂಬ್ಯ ಸ್ವಯಂ ಚಾರೋಹದಚ್ಯುತಃ ।
ಆಯುಧಾದೀನ್ ಸಮಾರೋಪ್ಯ ಲಕ್ಷ್ಮಣೋಽಪ್ಯಾರುರೋಹ ಚ ॥

ಅನುವಾದ

“ಜ್ಞಾತಿ ಬಾಂಧವರೊಡನೆ ನಾನೇ ಎಚ್ಚರಿಕೆಯಿಂದ ದೋಣಿಯನ್ನು ಒಯ್ಯುತ್ತೇನೆ’’ ಎಂದು ಹೇಳಿದನು. ಹಾಗೆಯೇ ಆಗಲೀ ಎಂದು ಅಚ್ಯುತನಾದ ಶ್ರೀರಾಮನು ಶುಭಲಕ್ಷಣಳಾದ ಸೀತೆಯನ್ನು ಮೊದಲಿಗೆ ಹತ್ತಿಸಿ, ತಾನು ಗುಹನ ಕೈಯನ್ನು ಹಿಡಿದುಕೊಂಡು ನಾವೆಯನ್ನೇರಿದನು. ಅನಂತರ ಆಯುಧಗಳನ್ನೆಲ್ಲ ಏರಿಸಿ ಲಕ್ಷ್ಮಣನು ತಾನೂ ಹತ್ತಿದನು. ॥19-20॥

21
ಮೂಲಮ್

ಗುಹಸ್ತಾನ್ವಾಹಯಾಮಾಸ ಜ್ಞಾತಿಭಿಃ ಸಹಿತಃ ಸ್ವಯಮ್ ।
ಗಂಗಾಮಧ್ಯೇ ಗತಾ ಗಂಗಾಂ ಪ್ರಾರ್ಥಯಾಮಾಸ ಜಾನಕೀ ॥

ಅನುವಾದ

ಆಗ ಗುಹನು ಜ್ಞಾತಿಗಳೊಡಗೂಡಿ ತಾನೇ ನಾವೆಯನ್ನು ನಡೆಸಿದನು. ದೋಣಿಯು ಗಂಗಾನದಿಯ ಮಧ್ಯಕ್ಕೆ ಬಂದಾಗ ಜಾನಕಿಯು ಗಂಗೆಯನ್ನು ಪ್ರಾರ್ಥಿಸಿದಳು. ॥21॥

22
ಮೂಲಮ್

ದೇವಿ ಗಂಗೇ ನಮಸ್ತುಭ್ಯಂ ನಿವೃತ್ತಾ ವನವಾಸತಃ ।
ರಾಮೇಣ ಸಹಿತಾಹಂ ತ್ವಾಂ ಲಕ್ಷ್ಮಣೇನ ಚ ಪೂಜಯೇ ॥

23
ಮೂಲಮ್

ಇತ್ಯುಕ್ತ್ವಾ ಪರಕೂಲಂ ತೌ ಶನೈರುತ್ತೀರ್ಯ ಜಗ್ಮತುಃ ॥

ಅನುವಾದ

‘‘ಗಂಗಾದೇವಿಯೇ! ನಿನಗೆ ನಮಸ್ಕಾರವು. ವನವಾಸದಿಂದ ನಾನು ರಾಮ ಲಕ್ಷ್ಮಣರೊಡನೆ ಸುಖವಾಗಿ ಹಿಂತಿರುಗುವಾಗ ನಿನ್ನನ್ನು ಪೂಜಿಸುತ್ತೇನೆ’’ ಎಂದು ಹರಸಿಕೊಂಡಳು. ಹೀಗೆ ಪ್ರಾರ್ಥಿಸಿ ಅವರು ಮೆಲ್ಲನೆ ಆಚೆಯ ದಡವನ್ನು ಸೇರಿ, ಮುಂದಕ್ಕೆ ಹೊರಟರು. ॥22-23॥

24
ಮೂಲಮ್

ಗುಹೋಽಪಿ ರಾಘವಂ ಪ್ರಾಹ ಗಮಿಷ್ಯಾಮಿ ತ್ವಯಾ ಸಹ ।
ಅನುಜ್ಞಾಂ ದೇಹಿ ರಾಜೇಂದ್ರ ನೋಚೇತ್ಪ್ರಾಣಾಂಸ್ತ್ಯಜಾಮ್ಯಹಮ್ ॥

ಅನುವಾದ

ಆಗ ಗುಹನು ಶ್ರೀರಘುರಾಮ ಚಂದ್ರನಲ್ಲಿ ಹೇಳಿದನು - ‘‘ಹೇ ರಾಜೇಂದ್ರಾ! ನಾನೂ ನಿನ್ನೊಡನೆ ಬರುತ್ತೇನೆ. ನನಗೆ ಅಪ್ಪಣೆಯನ್ನು ಕೊಡು. ಹಾಗಿಲ್ಲದಿದ್ದರೆ ಇಲ್ಲಿಯೇ ಪ್ರಾಣತ್ಯಾಗವನ್ನು ಮಾಡುವೆ. ॥24॥

25
ಮೂಲಮ್

ಶ್ರುತ್ವಾ ನೈಷಾದಿವಚನಂ ಶ್ರೀರಾಮಸ್ತಮಥಾಬ್ರವೀತ್ ।
ಚತುರ್ದಶ ಸಮಾಃ ಸ್ಥಿತ್ವಾ ದಂಡಕೇ ಪುನರಪ್ಯಹಮ್ ॥

26
ಮೂಲಮ್

ಆಯಾಸ್ಯಾಮ್ಯುದಿತಂ ಸತ್ಯಂ ನಾಸತ್ಯಂ ರಾಮಭಾಷಿತಮ್ ।
ಇತ್ಯುಕ್ತ್ವಾಲಿಂಗ್ಯ ತಂ ಭಕ್ತಂ ಸಮಾಶ್ವಾಸ್ಯ ಪುನಃ ಪುನಃ ॥

ಅನುವಾದ

ನಿಷಾದರಾಜನ ಮಾತನ್ನು ಕೇಳಿದ ಶ್ರೀರಾಮನು ಅವನನ್ನು ಸಂತೈಸುತ್ತಾ ‘‘ಮಿತ್ರಾ! ನಾನು ಹದಿನಾಲ್ಕು ವರ್ಷ ದಂಡಕಾರಣ್ಯದಲ್ಲಿ ವಾಸಮಾಡಿ ಅನಂತರ ಹಿಂದಿರುಗಿ ಬರುವೆನು. ನಾನು ಹೇಳುತ್ತಿರುವುದು ಸತ್ಯವು. ರಾಮನ ಮಾತು ಎಂದೂ ಸುಳ್ಳಾಗಲಾರದು’’ ಎಂದು ಹೇಳಿ ಭಕ್ತನಾದ ಗುಹನಿಗೆ ಧೈರ್ಯತುಂಬಿ ಗಾಢವಾಗಿ ಆಲಿಂಗಿಸಿ ಹಿಂದಕ್ಕೆ ಬೀಳ್ಕೊಟ್ಟನು. ರಾಮನಿಂದ ಅಗಲಿದ ಅವನು ಕಷ್ಟದಿಂದ ಮನೆಗೆ ಮರಳಿದನು. ॥25-27॥

27
ಮೂಲಮ್

ನಿವರ್ತಯಾಮಾಸ ಗುಹಂ ಸೋಽಪಿ ಕೃಚ್ಛ್ರಾದ್ಯಯೌ ಗೃಹಮ್ ॥

28
ಮೂಲಮ್

ತತೋ ರಾಮಸ್ತು ವೈದೇಹ್ಯಾ ಲಕ್ಷ್ಮಣೇನ ಸಮನ್ವಿತಃ ॥

29
ಮೂಲಮ್

ಭರದ್ವಾಜಾಶ್ರಮಪದಂ ಗತ್ವಾ ಬಹಿರುಪಸ್ಥಿತಃ ।
ತತ್ರೈಕಂ ವಟುಕಂ ದೃಷ್ಟ್ವಾ ರಾಮಃ ಪ್ರಾಹ ಚ ಹೇ ವಟೋ ॥
(ಶ್ಲೋಕ - 30)
ರಾಮೋ ದಾಶರಥಿಃ ಸೀತಾಲಕ್ಷ್ಮಣಾಭ್ಯಾಂ ಸಮನ್ವಿತಃ ।
ಆಸ್ತೇ ಬಹಿರ್ವನಸ್ಯೇತಿ ಹ್ಯುಚ್ಯತಾಂ ಮುನಿಸನ್ನಿಧೌ ॥

ಅನುವಾದ

ಅನಂತರ ಶ್ರೀರಾಮನು ಸೀತಾಲಕ್ಷ್ಮಣರೊಡಗೂಡಿ ಭರದ್ವಾಜರ ಆಶ್ರಮಸ್ಥಾನಕ್ಕೆ ತಲುಪಿ ತಪೋವನದ ಹೊರಗಡೆಯೇ ನಿಂತುಕೊಂಡನು. ಅಲ್ಲೊಬ್ಬ ಬ್ರಹ್ಮಚಾರಿಯನ್ನು ಕಂಡು ಶ್ರೀರಾಮನು ‘‘ಎಲೈ ವಟುವೆ! ಸೀತಾಲಕ್ಷ್ಮಣರೊಡನೆ ರಘುನಾಥನು ಬಂದು ವನದ ಹೊರಗೆ ನಿಂತಿರುವನು ಎಂದು ಭರದ್ವಾಜ ಮುನಿಗಳಿಗೆ ತಿಳಿಸುವವನಾಗು’’ ಎಂದು ಹೇಳಿ ಕಳಿಸಿದನು. ॥28-30॥

31
ಮೂಲಮ್

ತಚ್ಛ್ರುತ್ವಾ ಸಹಸಾ ಗತ್ವಾ ಪಾದಯೋಃ ಪತಿತೋ ಮುನೇಃ ।
ಸ್ವಾಮಿನ್ ರಾಮಃ ಸಮಾಗತ್ಯ ವನಾದ್ಬಹಿರವಸ್ಥಿತಃ ॥

32
ಮೂಲಮ್

ಸಭಾರ್ಯಃ ಸಾನುಜಃ ಶ್ರೀಮಾನಾಹ ಮಾಂ ದೇವಸನ್ನಿಭಃ ।
ಭರದ್ವಾಜಾಯ ಮುನಯೇ ಜ್ಞಾಪಯಸ್ವ ಯಥೋಚಿತಮ್ ॥

ಅನುವಾದ

ರಾಮಚಂದ್ರನ ವಚನವನ್ನು ಕೇಳಿದ ವಟುವು ಓಡುತ್ತಾ ಹೋಗಿ ಮುನಿಗಳ ಪಾದಗಳಿಗೆ ವಂದಿಸಿಕೊಂಡು ‘‘ಗುರುಗಳೇ! ಪತ್ನೀ ಮತ್ತು ಸಹೋದರನೊಡಗೂಡಿ ದೇವಮಾನವನಾದ ಶ್ರೀರಾಮನು ಬಂದು ಆಶ್ರಮದ ಹೊರಗಡೆ ನಿಂತಿರುವನು. ನನ್ನನ್ನು ಕುರಿತು ‘ಸಮಯೋಚಿತವಾಗಿ ಭರದ್ವಾಜಮುನಿಗಳಿಗೆ ತಿಳಿಸುವವನಾಗು’ ಎಂದು ವಿಜ್ಞಾಪಿಸಿಕೊಂಡನು. ॥31-32॥

33
ಮೂಲಮ್

ತಚ್ಛ್ರುತ್ವಾ ಸಹಸೋತ್ಥಾಯ ಭರದ್ವಾಜೋ ಮುನೀಶ್ವರಃ ।
ಗೃಹೀತ್ವಾರ್ಘ್ಯಂ ಚ ಪಾದ್ಯಂ ಚ ರಾಮಸಾಮೀಪ್ಯಮಾಯಮೌ ॥

ಅನುವಾದ

ಇದನ್ನು ಕೇಳುತ್ತಲೇ ಮುನೀಶ್ವರರಾದ ಭರದ್ವಾಜರು ತಟ್ಟನೆದ್ದು ಅರ್ಘ್ಯಪಾದ್ಯಾದಿಗಳನ್ನು ತೆಗೆದುಕೊಂಡು ಶ್ರೀರಾಮನ ಸಮೀಪಕ್ಕೆ ಬಂದರು. ॥33॥

34
ಮೂಲಮ್

ದೃಷ್ಟ್ವಾ ರಾಮಂ ಯಥಾನ್ಯಾಯಂ ಪೂಜಯಿತ್ವಾ ಸಲಕ್ಷ್ಮಣಮ್ ।
ಆಹ ಮೇ ಪರ್ಣಶಾಲಾಂ ಭೋ ರಾಮ ರಾಜೀವಲೋಚನ ॥

35
ಮೂಲಮ್

ಆಗಚ್ಛ ಪಾದರಜಸಾ ಪುನೀಹಿ ರಘುನಂದನ ।
ಇತ್ಯುಕ್ತ್ವೋಟಜಮಾನೀಯ ಸೀತಯಾ ಸಹ ರಾಘವೌ ॥

ಅನುವಾದ

ರಾಮನನ್ನು ಕಂಡು ಯೋಗ್ಯವಾದ ರೀತಿಯಿಂದ ಲಕ್ಷ್ಮಣಸಹಿತ ಅವನನ್ನು ಗೌರವಿಸಿ ಪೂಜಿಸಿದರು. ‘‘ಹೇ ರಾಜೀವಲೋಚನ ರಘುನಂದನಾ! ನನ್ನ ಪರ್ಣಶಾಲೆಗೆ ಬಂದು ನಿನ್ನ ಪಾದ ಧೂಳಿನಿಂದ ಅದನ್ನು ಪವಿತ್ರಗೊಳಿಸು’’ ಹೀಗೆಂದು ಹೇಳಿ ಸೀತೆಯೊಡನೆ ಶ್ರೀರಾಮಲಕ್ಷ್ಮಣರಿಬ್ಬರನ್ನು ತಮ್ಮ ಪರ್ಣಶಾಲೆಗೆ ಕರೆದೊಯ್ದರು. ॥34-35॥

36
ಮೂಲಮ್

ಭಕ್ತ್ಯಾ ಪುನಃ ಪೂಜಯಿತ್ವಾ ಚಕಾರಾತಿಥ್ಯಮುತ್ತಮಮ್ ।
ಅದ್ಯಾಹಂ ತಪಸಃ ಪಾರಂ ಗತೋಽಸ್ಮಿ ತವ ಸಂಗಮಾತ್ ॥

ಅನುವಾದ

ಅಲ್ಲಿ ಪುನಃ ಭಕ್ತಿಯಿಂದ ಪೂಜಿಸಿ ಉತ್ತಮವಾದ ಆತಿಥ್ಯ ಸತ್ಕಾರವನ್ನು ನೀಡಿದರು. ಅನಂತರ ಭರದ್ವಾಜರು ‘‘ರಾಮಚಂದ್ರಾ! ಇಂದು ನಿನ್ನ ಸಂದರ್ಶನದಿಂದ ನನ್ನ ತಪಸ್ಸು ಪೂರ್ಣಗೊಂಡಿತು. ॥36॥

37
ಮೂಲಮ್

ಜ್ಞಾತಂ ರಾಮ ತವೋದಂತ ಭೂತಂ ಚಾಗಾಮಿಕಂ ಚ ಯತ್ ।
ಜಾನಾಮಿ ತ್ವಾಂ ಪರಾತ್ಮಾನಂ ಮಾಯಯಾ ಕಾರ್ಯಮಾನುಷಮ್ ॥

ಅನುವಾದ

ಹೇ ರಘುಶ್ರೇಷ್ಠಾ! ನಿನ್ನ ಹಿಂದಿನ ಮತ್ತು ಮುಂದಿನ ಎಲ್ಲ ವೃತ್ತಾಂತವೂ ನನಗೆ ತಿಳಿದಿದೆ. ನೀನು ಪರಮಾತ್ಮನೇ ಆಗಿದ್ದು, ದೇವತೆಗಳ ಕಾರ್ಯಸಿದ್ಧಿಗಾಗಿ ಮನುಷ್ಯ ರೂಪವನ್ನು ಧರಿಸಿರುವುದನ್ನೂ ಕೂಡ ನಾನು ಬಲ್ಲೆನು. ॥37॥

38
ಮೂಲಮ್

ಯದರ್ಥಮವತೀರ್ಣೋಸಿ ಪ್ರಾರ್ಥಿತೋ ಬ್ರಹ್ಮಣಾ ಪುರಾ ।
ಯದರ್ಥಂ ವನವಾಸಸ್ತೇ ಯತ್ಕರಿಷ್ಯಸಿ ವೈ ಪುರಃ ॥

39
ಮೂಲಮ್

ಜಾನಾಮಿ ಜ್ಞಾನದೃಷ್ಟ್ಯಾಹಂ ಜಾತಯಾ ತ್ವದುಪಾಸನಾತ್ ।
ಇತಃ ಪರಂ ತ್ವಾಂ ಕಿಂ ವಕ್ಷ್ಯೇ ಕೃತಾರ್ಥೋಽಹಂ ರಘೂತ್ತಮ ॥

40
ಮೂಲಮ್

ಯಸ್ತ್ವಾಂ ಪಶ್ಯಾಮಿ ಕಾಕುತ್ಸ್ಥಂ ಪುರುಷಂ ಪ್ರಕೃತೇಃ ಪರಮ್ ।
ರಾಮಸ್ತಮಭಿವಾದ್ಯಾಹ ಸೀತಾಲಕ್ಷ್ಮಣಸಂಯುತಃ ॥

ಅನುವಾದ

ಹಿಂದೆ ಬ್ರಹ್ಮದೇವರು ಪ್ರಾರ್ಥಿಸಿದ್ದರಿಂದ ನೀನು ಏತಕ್ಕಾಗಿ ಅವತಾರ ಮಾಡಿರುವೆ, ವನವಾಸವನ್ನೇಕೆ ಕೈಗೊಂಡಿರುವೆ, ಮುಂದೆ ಏನೇನು ಕೈಗೊಳ್ಳುವೆ ಇವೆಲ್ಲ ವಿಷಯಗಳನ್ನು ನಿನ್ನ ಉಪಾಸನೆಯಿಂದಲೇ ಉಂಟಾಗಿರುವ ಜ್ಞಾನದೃಷ್ಟಿಯಿಂದ ನಾನು ಅರಿತಿರುವೆನು. ಇದಕ್ಕಿಂತಲು ಹೆಚ್ಚೇನು ಹೇಳಲಿ? ರಘುವರನೆ! ನಾನು ಕೃತಾರ್ಥನಾದೆನು. ಏಕೆಂದರೆ, ಪ್ರಕೃತಿಯನ್ನು ಮೀರಿದ ಪರಮ ಪುರುಷನಾದ ನಿನ್ನನ್ನು ಕಾಣುತ್ತಿದ್ದೇನಲ್ಲವೆ?’’ ಆಗ ಸೀತಾಲಕ್ಷ್ಮಣರೊಡನೆ ಶ್ರೀರಾಮನು ಮುನಿಗೆ ನಮಸ್ಕರಿಸುತ್ತಾ ಹೇಳಿದನು. ॥38-40॥

41
ಮೂಲಮ್

ಅನುಗ್ರಾಹ್ಯಾಸ್ತ್ವಯಾ ಬ್ರಹ್ಮನ್ವಯಂ ಕ್ಷತ್ರಿಯಬಾಂಧವಾಃ ।
ಇತಿ ಸಂಭಾಷ್ಯ ತೇಽನ್ಯೋನ್ಯಮುಷಿತ್ವಾ ಮುನಿಸನ್ನಿಧೌ ॥

ಅನುವಾದ

‘‘ಎಲೈ ಬ್ರಹ್ಮನಿಷ್ಠರೆ! ನೀವು ಕ್ಷತ್ರಿಯ ಬಂಧುಗಳಾದ ನಮ್ಮನ್ನು ಅನುಗ್ರಹಿಸಬೇಕು.’’ ಈ ರೀತಿಯಾಗಿ ಅವರುಗಳು ಪರಸ್ಪರವಾಗಿ ಸಂಭಾಷಿಸಿದ ಬಳಿಕ ರಾಮನು ಋಷಿಗಳೊಡನೆ ಅಲ್ಲಿಯೇ ತಂಗಿದನು. ॥41॥

42
ಮೂಲಮ್

ಪ್ರಾತರುತ್ಥಾಯ ಯಮುನಾಮುತ್ತೀರ್ಯ ಮುನಿದಾರಕೈಃ ।
ಕೃತಾಪ್ಲವೇನ ಮುನಿನಾ ದೃಷ್ಟಮಾರ್ಗೇಣ ರಾಘವಃ ॥

43
ಮೂಲಮ್

ಪ್ರಯಯೌ ಚಿತ್ರಕೂಟಾದ್ರಿಂ ವಾಲ್ಮೀಕೇರ್ಯತ್ರ ಚಾಶ್ರಮಃ ।
ಗತ್ವಾ ರಾಮೋಽಥ ವಾಲ್ಮೀಕೇರಾಶ್ರಮಂ ಋಷಿಸಂಕುಲಮ್ ॥

44
ಮೂಲಮ್

ನಾನಾಮೃಗದ್ವಿಜಾಕೀರ್ಣಂ ನಿತ್ಯಪುಷ್ಪಫಲಾಕುಲಮ್ ।
ತತ್ರ ದೃಷ್ಟ್ವಾ ಸಮಾಸೀನಂ ವಾಲ್ಮೀಕಿಂ ಮುನಿಸತ್ತಮಮ್ ॥

ಅನುವಾದ

ಪ್ರಾತಃಕಾಲದಲ್ಲೆದ್ದು ಶ್ರೀರಾಮನು ನಿತ್ಯಾಹ್ನಿಕಗಳನ್ನು ಪೂರೈಸಿ, ಭರದ್ವಾಜರಿಂದ ಬೀಳ್ಕೊಂಡು ಮುನಿಕುಮಾರರು ಸಿದ್ಧಪಡಿಸಿದ ತೆಪ್ಪದ ಮೂಲಕ ಸೀತಾಲಕ್ಷ್ಮಣರೊಂದಿಗೆ ಯಮುನೆಯನ್ನು ದಾಟಿ ಮುನಿವರ್ಯರು ತೋರಿಸಿದ ಮಾರ್ಗವನ್ನು ಹಿಡಿದು ವಾಲ್ಮೀಕಿ ಋಷಿಗಳ ಆಶ್ರಮವಿರುವ ಚಿತ್ರಕೂಟಕ್ಕೆ ಪ್ರಯಾಣ ಮಾಡಿದರು. ಋಷಿಮುನಿಗಳಿಂದ ತುಂಬಿದ, ಅನೇಕ ಜಾತಿಯ ಮೃಗ-ಪಕ್ಷಿಗಳಿಂದ ಕೂಡಿದ, ಯಾವಾಗಲೂ ಹೂವು-ಹಣ್ಣುಗಳಿಂದ ಶೋಭಾಯಮಾನವಾದ ಆದಿಕವಿ ವಾಲ್ಮೀಕಿಗಳ ಆಶ್ರಮವನ್ನು ಸೇರಿ ಅಲ್ಲಿ ಕುಳಿತಿದ್ದ ಮುನಿಶ್ರೇಷ್ಠರಾದ ವಾಲ್ಮೀಕಿಯವರನ್ನು ಕಂಡನು. ॥42-44॥

45
ಮೂಲಮ್

ನನಾಮ ಶಿರಸಾ ರಾಮೋ ಲಕ್ಷ್ಮಣೇನ ಚ ಸೀತಯಾ ।
ದೃಷ್ಟ್ವಾ ರಾಮಂ ರಮಾನಾಥಂ ವಾಲ್ಮೀಕಿರ್ಲೋಕಸುಂದರಮ್ ॥

46
ಮೂಲಮ್

ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಂಡಿತಮ್ ।
ಕಂದರ್ಪಸದೃಶಾಕಾರಂ ಕಮನೀಯಾಂಬುಜೇಕ್ಷಣಮ್ ॥

47
ಮೂಲಮ್

ದೃಷ್ಟೈವ ಸಹಸೋತ್ತಸ್ಥೌ ವಿಸ್ಮಯಾನಿಮಿಷೇಕ್ಷಣಃ ।
ಆಲಿಂಗ್ಯ ಪರಮಾನಂದಂ ರಾಮಂ ಹರ್ಷಾಶ್ರುಲೋಚನಃ ॥

ಅನುವಾದ

ಶ್ರೀರಾಮಚಂದ್ರನು ಲಕ್ಷ್ಮಣ ಸೀತೆಯೊಂದಿಗೆ ಮುನಿಗೆ ತಲೆಬಾಗಿ ನಮಸ್ಕರಿಸಿದನು. ಆಗ ವಾಲ್ಮೀಕಿಗಳು ಲಕ್ಷ್ಮೀಪತಿಯಾ, ಲೋಕಸುಂದರನೂ, ಸೀತಾ ಲಕ್ಷ್ಮಣ ಸಮೇತನೂ, ಜಟೆಯೆಂಬ ಕಿರೀಟದಿಂದ ಅಲಂಕೃತನೂ, ಮನ್ಮಥನಂತೆ ಸುಂದರನೂ, ರಮಣೀಯವಾದ ಕಮಲದಂತೆ ಕಣ್ಣುಗಳುಳ್ಳವನೂ ಆದ ಶ್ರೀರಾಮನನ್ನು ಕಂಡೊಡನೆಯೇ ಮೇಲೆದ್ದು ಆಶ್ಚರ್ಯದಿಂದ ಎವೆಯಿಕ್ಕದೆ ನೋಡುತ್ತಾ ಹರ್ಷಾಶ್ರುಗಳಿಂದ ತುಂಬಿದ ಕಣ್ಣುಗಳಿಂದ ಪರಮಾನಂದ ಸ್ವರೂಪನಾದ ಶ್ರೀರಘುವರನನ್ನು ಆಲಿಂಗಿಸಿಕೊಂಡನು. ॥45-47॥

ಮೂಲಮ್

(ಶ್ಲೋಕ - 48)
ಪೂಜಯಿತ್ವಾ ಜಗತ್ಪೂಜ್ಯಂ ಭಕ್ತ್ಯಾರ್ಘ್ಯಾದಿಭಿರಾದೃತಃ ।
ಫಲಮೂಲೈಃ ಸ ಮಧುರೈರ್ಭೋಜಯಿತ್ವಾ ಚ ಲಾಲಿತಃ ॥

ಅನುವಾದ

ಅನಂತರ ಭಕ್ತ್ಯಾದರಗಳಿಂದ ಕೂಡಿ ಜಗತ್ಪೂಜ್ಯನಾದ ಶ್ರೀರಾಮನನ್ನು ಅರ್ಘ್ಯಾದಿಗಳಿನ್ನಿತ್ತು ಪೂಜಿಸಿ, ರುಚಿ-ರುಚಿಯಾದ ಫಲ ಮೂಲಗಳಿಂದ ಭೋಜನ ಮಾಡಿಸಿ ಆನಂದಪಡಿಸಿದನು. ॥48॥

49
ಮೂಲಮ್

ರಾಘವಃ ಪ್ರಾಂಜಲಿಃ ಪ್ರಾಹ ವಾಲ್ಮೀಕಿಂ ವಿನಯಾನ್ವಿತಃ ।
ಪಿತುರಾಜ್ಞಾಂ ಪುರಸ್ಕೃತ್ಯ ದಂಡಕಾನಾಗತಾ ವಯಮ್ ॥

ಅನುವಾದ

ಬಳಿಕ ಶ್ರೀರಾಮನು ವಿನಯದಿಂದ ಕೂಡಿ ಅಂಜಲಿಬದ್ಧನಾಗಿ ವಾಲ್ಮೀಕಿಯರನ್ನು ಕುರಿತು ಇಂತೆಂದನು ‘‘ಮಹಾಮುನಿಯೇ! ನಾವು ತಂದೆಯ ಆಜ್ಞೆಯನ್ನು ಮನ್ನಿಸಿ ದಂಡಕಾರಣ್ಯಕ್ಕೆ ಬಂದಿರುತ್ತೇವೆ. ॥49॥

50
ಮೂಲಮ್

ಭವಂತೋ ಯದಿ ಜಾನಂತಿ ಕಿಂ ವಕ್ಷ್ಯಾಮೋಽತ್ರ ಕಾರಣಮ್ ।
ಯತ್ರ ಮೇ ಸುಖವಾಸಾಯ ಭವೇತ್ಸ್ಥಾನಂ ವದಸ್ವ ತತ್ ॥

ಅನುವಾದ

ನೀವು ಇದೆಲ್ಲ ತಿಳಿದೇ ಇದ್ದೀರಿ, ಪುನಃ ನಾವು ನಿಮಗೆ ಕಾರಣವೇನೆಂಬುದನ್ನು ಹೇಳಬೇಕಾಗಿಲ್ಲ. ಸೀತಾಸಮೇತನಾಗಿ ನಾನು ಸ್ವಲ್ಪಕಾಲ ಸುಖವಾಗಿ ವಾಸಿಸಲು ಯೋಗ್ಯವಾದ ಸ್ಥಳವನ್ನು ಹೇಳೋಣವಾಗಲಿ. ॥50॥

51
ಮೂಲಮ್

ಸೀತಯಾ ಸಹಿತಃ ಕಾಲಂ ಕಿಂಚಿತ್ತತ್ರ ನಯಾಮ್ಯಹಮ್ ।
ಇತ್ಯುಕ್ತೋ ರಾಘವೇಣಾಸೌ ಮುನಿಃ ಸಸ್ಮಿತಮಬ್ರವೀತ್ ॥

ಅನುವಾದ

ನೀವು ತೋರಿದ ಸ್ಥಾನದಲ್ಲಿ ನಾವು ಸ್ವಲ್ಪ ಸಮಯವಿದ್ದು ಕಾಲಕಳೆಯುವೆವು.’’ ಶ್ರೀರಘುಪ್ರವರನು ಹೀಗೆ ಹೇಳಿದುದನ್ನು ಕೇಳಿ ವಾಲ್ಮೀಕಿಗಳು ಮುಗುಳುನಗುತ್ತಾ ಹೇಳಿದರು. ॥51॥

52
ಮೂಲಮ್

ತ್ವಮೇವ ಸರ್ವಲೋಕಾನಾಂ ನಿವಾಸಸ್ಥಾನಮುತ್ತಮಮ್ ।
ತವಾಪಿ ಸರ್ವಭೂತಾನಿ ನಿವಾಸಸದನಾನಿ ಹಿ ॥

ಅನುವಾದ

‘‘ರಾಮಾ! ಎಲ್ಲಾ ಲೋಕಗಳಿಗೂ, ಸಮಸ್ತ ಪ್ರಾಣಿಗಳಿಗೂ ನೀನೇ ಏಕಮಾತ್ರ ಶ್ರೇಷ್ಠ ನಿವಾಸ ಸ್ಥಾನವಾಗಿರುವೆ. ॥52॥

53
ಮೂಲಮ್

ಏವಂ ಸಾಧಾರಣಂ ಸ್ಥಾನಮುಕ್ತಂ ತೇ ರಘುನಂದನ ।
ಸೀತಯಾ ಸಹಿತಸ್ಯೇತಿ ವಿಶೇಷಂ ಪೃಚ್ಛತಸ್ತವ ॥

54
ಮೂಲಮ್

ತದ್ವಕ್ಷ್ಯಾಮಿ ರಘುಶ್ರೇಷ್ಠ ಯತ್ತೇ ನಿಯತಮಂದಿರಮ್ ।
ಶಾಂತಾನಾಂ ಸಮದೃಷ್ಟೀನಾಮದ್ವೇಷ್ಟೄಣಾಂ ಚ ಜಂತುಷು ।
ತ್ವಾಮೇವ ಭಜತಾಂ ನಿತ್ಯಂ ಹೃದಯಂ ತೇಽಧಿಮಂದಿರಮ್ ॥

ಅನುವಾದ

ಹೇ ರಘುನಂದನಾ! ಹೀಗೆ ಸಾಧಾರಣವಾದ ವಾಸಸ್ಥಾನವನ್ನು ತಿಳಿಸಿದ್ದೇನೆ. ಇನ್ನು ಸೀತಾ ಸಮೇತನಾದ ನಿನಗೆ ವಿಶೇಷವಾದ ವಾಸಸ್ಥಾನವನ್ನು ಕೇಳುತ್ತಿರುವೆಯಾದರೆ ಇದೋ, ನಿನ್ನ ಶಾಶ್ವತವಾದ ವಾಸಮಂದಿರವು ಯಾವುದೆಂಬುದನ್ನು ಹೇಳುವೆನು. ರಘೂತ್ತಮನೆ! ಶಾಂತರೂ, ಸಮದೃಷ್ಟಿಯುಳ್ಳವರೂ, ಯಾವ ಪ್ರಾಣಿಯನ್ನು ದ್ವೇಷಿಸದೆ ಇರುವವರೂ ಸದಾಕಾಲ ನಿನ್ನನ್ನೇ ಚಿಂತಿಸುತ್ತಿರುವವರ ಹೃದಯವೇ ನಿನ್ನ ಪ್ರಧಾನ ವಾಸಮಂದಿರವು. ॥53-54॥

55
ಮೂಲಮ್

ಧರ್ಮಾಧರ್ಮಾನ್ಪರಿತ್ಯಜ್ಯ ತ್ವಾಮೇವ ಭಜತೋಽನಿಶಮ್ ।
ಸೀತಯಾ ಸಹ ತೇ ರಾಮ ತಸ್ಯ ಹೃತ್ಸುಖಮಂದಿರಮ್ ॥

ಅನುವಾದ

ಧರ್ಮ ಮತ್ತು ಅಧರ್ಮಗಳೆರಡನ್ನು ಕೈಬಿಟ್ಟು ನಿರಂತರ ನಿನ್ನನ್ನೇ ಭಜಿಸುವವನ ಹೃದಯಮಂದಿರದಲ್ಲಿ ಹೇ ರಾಮಾ! ಸೀತಾಸಹಿತ ನೀನು ಸುಖಪೂರ್ವಕ ಇರುತ್ತೀಯೆ. ॥55॥

56
ಮೂಲಮ್

ತ್ವನ್ಮಂತ್ರಜಾಪಕೋ ಯಸ್ತು ತ್ವಾಮೇವ ಶರಣಂ ಗತಃ ।
ನಿರ್ದ್ವಂದ್ವೋ ನಿಃಸ್ಪೃಹಸ್ತಸ್ಯ ಹೃದಯಂ ತೇ ಸುಮಂದಿರಮ್ ॥

ಅನುವಾದ

ನಿನ್ನ ಮಂತ್ರವನ್ನೇ ಜಪಿಸುತ್ತಾ ನಿನ್ನಲ್ಲಿಯೇ ಶರಣಾಗಿರುವವನೂ ಮತ್ತು ಶೀತೋಷ್ಣಾದಿ ದ್ವಂದ್ವಗಳಿಲ್ಲದವನೂ, ಆಸೆಯಿಲ್ಲದವನೂ ಆಗಿರುವವನ ಹೃದಯಮಂದಿರವು ನಿನ್ನ ಸುಂದರವಾಸಸ್ಥಾನವು. ॥56॥

57
ಮೂಲಮ್

ನಿರಹಂಕಾರಿಣಃ ಶಾಂತಾ ಯೇ ರಾಗದ್ವೇಷವರ್ಜಿತಾಃ ।
ಸಮಲೋಷ್ಟಾಶ್ಮಕನಕಾಸ್ತೇಷಾಂ ತೇ ಹೃದಯಂ ಗೃಹಮ್ ॥

ಅನುವಾದ

ಯಾರು ಅಹಂಕಾರ ಶೂನ್ಯರೋ, ಶಾಂತ ಸ್ವಭಾವದವರೋ, ರಾಗ-ದ್ವೇಷರಹಿತರಾಗಿ ಮಣ್ಣು ಹೆಂಟೆಯನ್ನು, ಚಿನ್ನವನ್ನು ಸಮಾನವಾಗಿ ಕಾಣುವವರೋ ಅವರ ಹೃದಯವು ನಿನಗೆ ಮನೆಯು. ॥57॥

58
ಮೂಲಮ್

ತ್ವಯಿ ದತ್ತಮನೋಬುದ್ಧಿರ್ಯಃ ಸಂತುಷ್ಟಃ ಸದಾ ಭವೇತ್ ।
ತ್ವಯಿ ಸಂತ್ಯಕ್ತಕರ್ಮಾ ಯಸ್ತನ್ಮನಸ್ತೇ ಶುಭಂ ಗೃಹಮ್ ॥

ಅನುವಾದ

ನಿನ್ನಲ್ಲಿಯೇ ಮನೋ ಬುದ್ಧಿಗಳನ್ನು ತೊಡಗಿಸಿ ಸಂತುಷ್ಟನಾಗಿರುವವನ ಮತ್ತು ತನ್ನ ಎಲ್ಲ ಕರ್ಮಗಳನ್ನು ನಿನ್ನಲ್ಲಿಯೇ ಅರ್ಪಿಸಿರುವವನ ಮನಸ್ಸೇ ನಿನಗೆ ಶುಭವಾದ ಗೃಹವು. ॥58॥

59
ಮೂಲಮ್

ಯೋ ನ ದ್ವೇಷ್ಟ್ಯಪ್ರಿಯಂ ಪ್ರಾಪ್ಯ ಪ್ರಿಯಂ ಪ್ರಾಪ್ಯ ನ ಹೃಷ್ಯತಿ ।
ಸರ್ವಂ ಮಾಯೇತಿ ನಿಶ್ಚಿತ್ಯ ತ್ವಾಂ ಭಜೇತ್ತನ್ಮನೋ ಗೃಹಮ್ ॥

ಅನುವಾದ

ಕೆಟ್ಟದ್ದು ಒದಗಿದರೆ ದ್ವೇಷಿಸದೆ, ಒಳ್ಳೆಯದು ಬಂದರೆ ಹಿಗ್ಗದೆ, ಇವೆಲ್ಲವೂ ಮಾಯೆ ಎಂದು ನಿಶ್ಚಯಿಸಿಕೊಂಡು ನಿನ್ನನ್ನೇ ಭಜಿಸುವವನ ಮನಸ್ಸೇ ನಿನಗೆ ಮನೆಯು. ॥59॥

60
ಮೂಲಮ್

ಷಡ್ಭಾವಾದಿವಿಕಾರಾನ್ಯೋ ದೇಹೇ ಪಶ್ಯತಿ ನಾತ್ಮನಿ ।
ಕ್ಷುತ್ತೃಟ್ ಸುಖಂ ಭಯಂ ದುಃಖಂ ಪ್ರಾಣಬುದ್ಧ್ಯೋರ್ನಿರೀಕ್ಷತೇ ॥

61
ಮೂಲಮ್

ಸಂಸಾರಧರ್ಮೈರ್ನಿರ್ಮುಕ್ತಸ್ತಸ್ಯ ತೇ ಮಾನಸಂ ಗೃಹಮ್ ॥

ಅನುವಾದ

ಆರು ಭಾವವಿಕಾರ (ಇರುವುದು, ಹುಟ್ಟುವುದು, ಬೆಳೆಯುವುದು, ಬದಲಾಗುವುದು, ಕ್ಷೀಣವಾಗುವುದು, ನಾಶವಾಗುವುದು)ಗಳನ್ನು ದೇಹದಲ್ಲೇ ಕಂಡುಕೊಂಡವನಾಗಿ ಮತ್ತು ಹಸಿವು, ಬಾಯಾರಿಕೆ, ಸುಖ, ದುಃಖ, ಭಯ ಮುಂತಾದವುಗಳು ಪ್ರಾಣ ಹಾಗೂ ಬುದ್ಧಿಯ ಧರ್ಮಗಳೆಂದು ಕಂಡುಕೊಂಡು, ಆತ್ಮನಿಗೆ ಇವುಗಳು ಅಂಟಿಲ್ಲವೆಂದು ತಿಳಿದುಕೊಂಡು ಸಂಸಾರ ಧರ್ಮಗಳಿಗೆ ಅಂಟದೆ ಮುಕ್ತನಾಗಿರುವವನ ಮನಸ್ಸೇ ನಿನಗೆ ವಾಸಸ್ಥಾನವು. ॥60-61॥

ಮೂಲಮ್

(ಶ್ಲೋಕ - 62)
ಪಶ್ಯಂತಿ ಯೇ ಸರ್ವಗುಹಾಶಯಸ್ಥಂ
ತ್ವಾಂ ಚಿದ್ಘನಂ ಸತ್ಯಮನಂತಮೇಕಮ್ ।
ಅಲೇಪಕಂ ಸರ್ವಗತಂ ವರೇಣ್ಯಂ
ತೇಷಾಂ ಹೃದಬ್ಜೇ ಸಹ ಸೀತಯಾ ವಸ ॥

ಅನುವಾದ

ಎಲ್ಲ ಪ್ರಾಣಿಗಳ ಹೃದಯಗುಹೆಯಲ್ಲಿ ಚಿದ್ಘನನೂ, ಸತ್ಯ ಸ್ವರೂಪನೂ, ಅನಂತನೂ, ಅದ್ವಿತೀಯನೂ, ಲೇಪವಿಲ್ಲದವನೂ, ಸರ್ವಗತನೂ, ಶ್ರೇಷ್ಠನೂ ಆದ ನಿನ್ನನ್ನು ಕಂಡುಕೊಳ್ಳುವವರ ಹೃದಯ ಕಮಲದಲ್ಲಿ ಸೀತಾಸಮೇತನಾಗಿ ವಾಸಮಾಡುವವನಾಗು. ॥62॥

63
ಮೂಲಮ್

ನಿರಂತರಾಭ್ಯಾಸದೃಢೀಕೃತಾತ್ಮನಾಂ
ತ್ವತ್ಪಾದಸೇವಾಪರಿನಿಷ್ಠಿತಾನಾಮ್ ।
ತ್ವನ್ನಾಮಕೀರ್ತ್ಯಾ ಹತಕಲ್ಮಷಾಣಾಂ
ಸೀತಾಸಮೇತಸ್ಯ ಗೃಹಂ ಹೃದಬ್ಜೇ ॥

ಅನುವಾದ

ಎಡೆಬಿಡದ ಅಭ್ಯಾಸದಿಂದ ದೃಢವಾದ ಮನಸ್ಸುಳ್ಳವವರ ಮತ್ತು ನಿನ್ನ ಪಾದಸೇವೆಯಲ್ಲಿಯೇ ನೆಲೆಗೊಂಡಿರುವವರ ಹಾಗೂ ನಿನ್ನ ನಾಮ ಕೀರ್ತನೆಯಿಂದ ಪಾಪಗಳನ್ನು ಕಳೆದುಕೊಂಡಿರುವವರ ಹೃದಯವೇ ಸೀತಾ ಸಮೇತನಾದ ನಿನಗೆ ಗೃಹವು. ॥63॥

64
ಮೂಲಮ್

ರಾಮ ತ್ವನ್ನಾಮಮಹಿಮಾ ವರ್ಣ್ಯತೇ ಕೇನ ವಾ ಕಥಮ್ ।
ಯತ್ಪ್ರಭಾವಾದಹಂ ರಾಮ ಬ್ರಹ್ಮರ್ಷಿತ್ವಮವಾಪ್ತವಾನ್ ॥

ಅನುವಾದ

ಹೇ ರಾಮನೆ! ನಿನ್ನ ನಾಮದ ಪ್ರಭಾವದಿಂದ ನಾನು ಬ್ರಹ್ಮರ್ಷಿತ್ವವನ್ನು ಪಡೆದುಕೊಂಡೆನು. ಅಂತಹ ನಾಮದ ಮಹಿಮೆಯನ್ನು ಯಾರು ತಾನೇ ವರ್ಣಿಸಬಲ್ಲರು? ॥64॥

65
ಮೂಲಮ್

ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ ।
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ॥

ಅನುವಾದ

ಹಿಂದೆ ನಾನು ಕಿರಾತರ ಗುಂಪಿನಲ್ಲಿ ಸೇರಿ ಅವರ ಬಳಿಯಲ್ಲೇ ಬೆಳೆದೆನು. ಹುಟ್ಟಿನಿಂದ ಮಾತ್ರ ಬ್ರಾಹ್ಮಣನಾಗಿದ್ದು ಶೂದ್ರಾಚಾರದಲ್ಲಿಯೇ ಯಾವಾಗಲೂ ತೊಡಗಿದ್ದೆನು. ॥65॥

66
ಮೂಲಮ್

ಶೂದ್ರಾಯಾಂ ಬಹವಃ ಪುತ್ರಾ ಉತ್ಪನ್ನಾ ಮೇಽಜಿತಾತ್ಮನಃ ।
ತತಶ್ಚೌರೈಶ್ಚ ಸಂಗಮ್ಯ ಚೌರೋಽಹಮಭವಂ ಪುರಾ ॥

ಅನುವಾದ

ಜಿತೇಂದ್ರಿಯನಲ್ಲದ ನನಗೆ ಶೂದ್ರ ಸ್ತ್ರೀಯಲ್ಲಿ ಅನೇಕ ಮಕ್ಕಳು ಹುಟ್ಟಿದರು. ಅನಂತರ ಕಳ್ಳರೊಡನೆ ಸೇರಿ ನಾನೂ ದೊಡ್ಡ ಕಳ್ಳನೇ ಆದೆ. ॥66॥

67
ಮೂಲಮ್

ಧನುರ್ಬಾಣಧರೋ ನಿತ್ಯಂ ಜೀವಾನಾಮಂತಕೋಪಮಃ ।
ಏಕದಾ ಮುನಯಃ ಸಪ್ತ ದೃಷ್ಟಾ ಮಹತಿ ಕಾನನೇ ॥

68
ಮೂಲಮ್

ಸಾಕ್ಷಾನ್ಮಯಾ ಪ್ರಕಾಶಂತೋ ಜ್ವಲನಾರ್ಕಸಮಪ್ರಭಾಃ ।
ತಾನನ್ವಧಾವಂ ಲೋಭೇನ ತೇಷಾಂ ಸರ್ವಪರಿಚ್ಛದಾನ್ ॥

69
ಮೂಲಮ್

ಗ್ರಹೀತುಕಾಮಸ್ತತ್ರಾಹಂ ತಿಷ್ಠ ತಿಷ್ಠೇತಿ ಚಾಬ್ರವಮ್ ।
ದೃಷ್ಟ್ವಾ ಮಾಂ ಮುನಯೋಽಪೃಚ್ಛನ್ ಕಿಮಾಯಾಸಿ ದ್ವಿಜಾಧಮ ॥

ಅನುವಾದ

ಧನುರ್ಬಾಣಗಳನ್ನು ಧರಿಸಿಕೊಂಡು ಪ್ರಾಣಿಗಳಿಗೆ ಯಮನಂತೆ (ಭಯಂಕರ) ಇದ್ದೆ. ಒಮ್ಮೆ ದಟ್ಟವಾದ ಕಾಡಿನಲ್ಲಿ ತೇಜಸ್ಸಿನಲ್ಲಿ ಸೂರ್ಯನಂತೆ ಹೊಳೆಯುತ್ತಿರುವ ಕಾಂತಿಯುಳ್ಳ ಸಪ್ತರ್ಷಿಗಳನ್ನು ನೋಡಿದೆ. ಅವರ ಎಲ್ಲಾ ಪದಾರ್ಥಗಳನ್ನು ಅಪಹರಿಸುವ ಆಸೆಯಿಂದ ಅವರ ಹಿಂದೆ ಓಡಿದೆ ಹಾಗೂ ನಿಲ್ಲಿರಿ, ನಿಲ್ಲಿರಿ ಎಂದಾಗ ಮುನೀಶ್ವರನು ನನ್ನನ್ನು ನೋಡಿ ಎಲೈ ದ್ವಿಜಾಧಮನೆ! ಏಕೆ ನಮ್ಮ ಬಳಿಗೆ ಬರುತ್ತಿರುವೆ ಎಂದು ಕೇಳಿದರು. ॥67-69॥

70
ಮೂಲಮ್

ಅಹಂ ತಾನಬ್ರವಂ ಕಿಂಚಿತ್ ಆದಾತುಂ ಮುನಿಸತ್ತಮಾಃ ।
ಪುತ್ರದಾರಾದಯಃ ಸಂತಿ ಬಹವೋ ಮೇ ಬುಭುಕ್ಷಿತಾಃ ॥

71
ಮೂಲಮ್

ತೇಷಾಂ ಸಂರಕ್ಷಣಾರ್ಥಾಯ ಚರಾಮಿ ಗಿರಿಕಾನನೇ ।
ತತೋ ಮಾಮುಚುರವ್ಯಗ್ರಾಃ ಪೃಚ್ಛ ಗತ್ವಾ ಕುಟುಂಬಕಮ್ ॥

72
ಮೂಲಮ್

ಯೋ ಯೋ ಮಯಾ ಪ್ರತಿದಿನಂ ಕ್ರಿಯತೇ ಪಾಪಸಂಚಯಃ ।
ಯೂಯಂ ತದ್ಭಾಗಿನಃ ಕಿಂ ವಾ ನೇತಿ ವೇತಿ ಪೃಥಕ್ಪೃಥಕ್ ॥

ಅನುವಾದ

ನಾನು ಅವರನ್ನು ಕುರಿತು ಹೇ ಮುನಿಶ್ರೇಷ್ಠರೇ! ನನಗೆ ಹಸಿದಿರುವ ಅನೇಕ ಮಂದಿ ಮಕ್ಕಳು ಮತ್ತು ಹೆಂಡತಿ ಎಲ್ಲರೂ ಇದ್ದಾರೆ. ಅವರನ್ನು ಸಾಕುವುದಕ್ಕಾಗಿ ಏನನ್ನಾದರು ಸಂಪಾದಿಸಿಕೊಳ್ಳಲು ಈ ಬೆಟ್ಟ ಕಾಡುಗಳಲ್ಲಿ ಸಂಚರಿಸುತ್ತಿದ್ದೇನೆ. ಎಲೈ ರಘುಶ್ರೇಷ್ಠನೇ! ಅನಂತರ ಅವರು ನಿರ್ಭಯರಾಗಿ ಹೀಗೆಂದರು ‘ಎಲೈ ಕಿರಾತನೆ! ಸರಿ; ಒಮ್ಮೆ ನೀನು ಮನೆಗೆ ಹೋಗಿ ಕುಟುಂಬದವರನ್ನು ಬೇರೆ- ಬೇರೆಯಾಗಿ ಒಬ್ಬೊಬ್ಬರನ್ನೇ ‘ಪ್ರತಿದಿನವೂ ನಾನು ಏನೇನು ಪಾಪಗಳನ್ನು ಕೂಡಿಹಾಕುವೆನೋ ಅದರಲ್ಲಿ ನೀವುಗಳು ಪಾಲುದಾರರಾಗುತ್ತೀರೋ? ಇಲ್ಲವೋ?’ ಎಂದು ಕೇಳು.॥70-72॥

73
ಮೂಲಮ್

ವಯಂ ಸ್ಥಾಸ್ಯಾಮಹೇ ತಾವದಾಗಮಿಷ್ಯಸಿ ನಿಶ್ಚಯಃ ।
ತಥೇತ್ಯುಕ್ತ್ವಾ ಗೃಹಂ ಗತ್ವಾ ಮುನಿಭಿರ್ಯದುದೀರಿತಮ್ ॥

74
ಮೂಲಮ್

ಅಪೃಚ್ಛಂ ಪುತ್ರದಾರಾದೀಂ ಸ್ತೈರುಕ್ತೋಹಂ ರಘೂತ್ತಮ ।
ಪಾಪಂ ತವೈವ ತತ್ಸರ್ವಂ ವಯಂ ತು ಫಲಭಾಗಿನಃ ॥

ಅನುವಾದ

ನೀನು ಹಿಂದಿರುಗಿ ಬರುವವರೆಗೆ ನಾವು ಇಲ್ಲೇ ಇರುವೆವು. ಇದು ನಿಶ್ಚಯವು. ಹಾಗೆಯೇ ಆಗಲೆಂದು ಹೇಳಿ ನಾನು ಮನೆಗೆ ಹೋದೆ. ಋಷೀಶ್ವರರು ಹೇಳಿದಂತೆಯೇ ನಾನು ಹೆಂಡತಿ ಮಕ್ಕಳನ್ನು ಕೇಳಿದೆನು. ಅವರೆಲ್ಲರು ಹೇಳಿದರು ‘ಒಡಲು ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು, ನಿಮ್ಮ ಪಾಪಕ್ಕೆಲ್ಲ ನೀವೇ ಹೊಣೆಗಾರರು, ನಾವಲ್ಲ.’ ॥73-74॥

75
ಮೂಲಮ್

ತಚ್ಛ್ರುತ್ವಾ ಜಾತನಿರ್ವೇದೋ ವಿಚಾರ್ಯ ಪುನರಾಗಮಮ್ ।
ಮುನಯೋ ಯತ್ರ ತಿಷ್ಠಂತಿ ಕರುಣಾಪೂರ್ಣಮಾನಸಾಃ ॥

ಅನುವಾದ

ಅದನ್ನು ಕೇಳಿ ನನಗೆ ವೈರಾಗ್ಯ ಉಂಟಾಯಿತು. ವಿಚಾರ ಮಾಡಿ ನೋಡಿ ಮತ್ತೆ ಕರುಣಾಪೂರ್ಣರಾದ ಋಷಿಗಳಿರುವಲ್ಲಿಗೆ ಬಂದೆನು. ॥75॥

76
ಮೂಲಮ್

ಮುನೀನಾಂ ದರ್ಶನಾದೇವ ಶುದ್ಧಾಂತಃಕರಣೋಽಭವಮ್ ।
ಧನುರಾದೀನ್ಪರಿತ್ಯಜ್ಯ ದಂಡವತ್ಪತಿತೋಽಸ್ಮ್ಯಹಮ್ ॥

ಅನುವಾದ

ಮುನೀಶ್ವರರ ದರ್ಶನದಿಂದಲೇ ನನ್ನ ಅಂತಃಕರಣ ಶುದ್ಧವಾಯಿತು. ಕೈಯಲ್ಲಿದ್ದ ಧನುರ್ಬಾಣಗಳನ್ನು ಎಸೆದು ದಂಡವತ್ ಪ್ರಣಾಮವನ್ನು ಮಾಡಿದೆನು. ॥76॥

77
ಮೂಲಮ್

ರಕ್ಷಧ್ವಂ ಮಾಂ ಮುನಿಶ್ರೇಷ್ಠಾ ಗಚ್ಛಂತಂ ನಿರಯಾರ್ಣವಮ್ ।
ಇತ್ಯಗ್ರೇ ಪತಿತಂ ದೃಷ್ಟ್ವಾ ಮಾಮೂಚುರ್ಮುನಿಸತ್ತಮಾ ॥

78
ಮೂಲಮ್

ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಸಫಲಃ ಸತ್ಸಮಾಗಮಃ ।
ಉಪದೇಕ್ಷ್ಯಾಮಹೇ ತುಭ್ಯಂ ಕಿಂಚಿತ್ತೇನೈವ ಮೋಕ್ಷಸೇ ।
ಪರಸ್ಪರಂ ಸಮಾಲೋಚ್ಯ ದುವೃತ್ತೋಽಯಂ ದ್ವಿಜಾಧಮಃ ॥

79
ಮೂಲಮ್

ಉಪೇಕ್ಷ್ಯ ಏವ ಸದ್ ವೃತ್ತೈಸ್ತಥಾಪಿ ಶರಣಂ ಗತಃ ।
ರಕ್ಷಣೀಯಃ ಪ್ರಯತ್ನೇನ ಮೋಕ್ಷಮಾರ್ಗೋಪದೇಶತಃ ॥

ಅನುವಾದ

‘ಎಲೈ ಮುನಿಶ್ರೇಷ್ಠರೇ! ನರಕಕ್ಕೆ ಬೀಳುತ್ತಿರುವ ನನ್ನನ್ನು ಕಾಪಾಡಿ’ ಹೀಗೆಂದು ಹೇಳುತ್ತಾ ಎದುರಿಗೆ ನಮಸ್ಕರಿಸಿದ ನನ್ನನ್ನು ಕುರಿತು ಆ ಮುನಿಸತ್ತಮರು ಹೇಳಿದರು ‘ಕಿರಾತನೆ! ಏಳು! ಮೇಲಕ್ಕೇಳು! ನಿನಗೆ ಒಳ್ಳೆಯದಾಗಲಿ! ಸಾಧುಗಳ ಸಮಾಗಮವು ಸಫಲವಾಯಿತು. ನಿನಗೆ ಏನಾದರೂ ಉಪದೇಶ ಮಾಡುತ್ತೇವೆ. ಅದರಿಂದ ನೀನು ಪಾಪಗಳಿಂದ ಬಿಡುಗಡೆ ಹೊಂದುವೆ’ ಎಂದುಕೊಂಡು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ‘ಈ ಪಾಪಿಯು ಭ್ರಷ್ಟನಾದ ಬ್ರಾಹ್ಮಣನು, ಸತ್ಪುರುಷರು ಇಂತಹವನನ್ನು ತಿರಸ್ಕರಿಸತಕ್ಕದ್ದೇ ಸರಿ; ಆದರೂ ಇವನು ಶರಣಾಗಿದ್ದಾನಲ್ಲ! ಆದ್ದರಿಂದ ಮೋಕ್ಷಮಾರ್ಗವನ್ನು ಉಪದೇಶಿಸಿ ಪ್ರಯತ್ನ ಪೂರ್ವಕ ಇವನನ್ನು ಕಾಪಾಡಬೇಕು’ ಎಂದು ನಿಶ್ಚಯಿಸಿದರು. ॥77-79॥

80
ಮೂಲಮ್

ಇತ್ಯುಕ್ತ್ವಾ ರಾಮ ತೇ ನಾಮ ವ್ಯತ್ಯಸ್ತಾಕ್ಷರಪೂರ್ವಕಮ್ ।
ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ ॥

ಅನುವಾದ

ಹೀಗೆಂದುಕೊಂಡು ಹೇ ರಾಮನೆ! ಆ ಸಪ್ತರ್ಷಿಗಳು ನಿನ್ನ ನಾಮಾಕ್ಷರಗಳನ್ನು ಅದಲು ಬದಲು ಮಾಡಿ ‘ಮರಾ ಮರಾ’ ಎಂದು ಯಾವಾಗಲೂ ಒಂದೇ ಮನಸ್ಸಿನಿಂದ ಜಪಿಸುತ್ತಾ ಇಲ್ಲೆ ಇರು. ॥80॥

81
ಮೂಲಮ್

ಆಗಚ್ಛಾಮಃ ಪುನರ್ಯಾವತ್ತಾವದುಕ್ತಂ ಸದಾ ಜಪ ।
ಇತ್ಯುಕ್ತ್ವಾ ಪ್ರಯಯುಃ ಸರ್ವೇ ಮುನಯೋ ದಿವ್ಯದರ್ಶನಾಃ ॥

ಅನುವಾದ

ನಾವು ಮತ್ತೊಮ್ಮೆ ಇಲ್ಲಿಗೆ ಬರುತ್ತೇವೆ. ಅಲ್ಲಿಯವರೆಗೂ ನಾವು ಹೇಳಿದ್ದನ್ನು ಜಪಿಸುತ್ತಿರು. ಎಂದು ಹೇಳಿ ದಿವ್ಯಜ್ಞಾನಿಗಳಾದ ಮುನಿಗಳೆಲ್ಲರೂ ಹೊರಟು ಹೋದರು. ॥81॥

82
ಮೂಲಮ್

ಅಹಂ ಯಥೊಪದಿಷ್ಟಂ ತ್ರೈಸ್ತಥಾಕರವಮಂಜಸಾ ।
ಜಪನ್ನೇಕಾಗ್ರಮನಸಾ ಬಾಹ್ಯಂ ವಿಸ್ಮೃತವಾನಹಮ್ ॥

83
ಮೂಲಮ್

ಏವಂ ಬಹುತಿಥೇ ಕಾಲೇ ಗತೇ ನಿಶ್ಚಲರೂಪಿಣಃ ।
ಸರ್ವಸಂಗವಿಹೀನಸ್ಯ ವಲ್ಮೀಕೋಽಭೂನ್ಮಮೋಪರಿ ॥

ಅನುವಾದ

ನಾನು ಅವರು ಉಪದೇಶ ಮಾಡಿದಂತೆಯೇ ನಿರಂತರ ಏಕಾಗ್ರ ಮನಸ್ಸಿನಿಂದ ಜಪಿಸುತ್ತಾ ಇದ್ದು ಹೊರಗಿನ ಪ್ರಪಂಚವನ್ನು ಮರೆತು ಬಿಟ್ಟೆ. ಹೀಗೆ ಬಹಳ ಕಾಲ ಕಳೆಯಿತು, ಅಳ್ಳಾಡದೆ ಕುಳಿತ್ತಿದ್ದ ಎಲ್ಲ ವಿಧವಾದ ವಿಷಯಸಂಗಗಳಿಂದಲೂ ದೂರನಾದ ನನ್ನ ಮೇಲೆ ಹುತ್ತವು ಬೆಳೆಯಿತು. ॥82-83॥

84
ಮೂಲಮ್

ತತೋ ಯುಗಸಹಸ್ರಾಂತೇ ಋಷಯಃ ಪುನರಾಗಮನ್ ।
ಮಾಮೂಚುರ್ನಿಷ್ಕ್ರಮಸ್ವೇತಿ ತಚ್ಛ್ರುತ್ವಾ ತೂರ್ಣಮುತ್ಥಿತಃ ॥

ಅನುವಾದ

ಅನಂತರ ಸಾವಿರ ಯುಗಗಳ ಕೊನೆಯಲ್ಲಿ ಸಪ್ತರ್ಷಿಗಳು ಮರಳಿ ಬಂದು ನನಗೆ ಆಜ್ಞಾಪಿಸಿದರು ‘ಹೊರಗೆ ಬಾ’. ಅದನ್ನು ಕೇಳುತ್ತಲೇ ನಾನು ಕೂಡಲೇ ಎದ್ದು ಬಂದೆನು. ॥84॥

85
ಮೂಲಮ್

ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ ।
ಮಾಮಪ್ಯಾಹುರ್ಮುನಿಗಣಾ ವಾಲ್ಮೀಕಿಸ್ತ್ವಂ ಮುನೀಶ್ವರ ॥

86
ಮೂಲಮ್

ವಲ್ಮೀಕಾತ್ಸಂಭವೋ ಯಸ್ಮಾದ್ ದ್ವಿತೀಯಂ ಜನ್ಮ ತೇಽಭವತ್ ।
ಇತ್ಯುಕ್ತ್ವಾ ತೇ ಯಯುರ್ದಿವ್ಯಗತಿಂ ರಘುಕುಲೋತ್ತಮ ॥

ಅನುವಾದ

ಮಂಜಿನಿಂದ ಸೂರ್ಯನು ಹೊರಬಂದಂತೆ ನಾನು ಹುತ್ತದಿಂದ ಹೊರಬಂದೆನು. ಆಗ ಋಷಿಗಣರು- ‘ಮುನಿಶ್ರೇಷ್ಠನೆ! ಹುತ್ತದಿಂದ ಹೊರ ಬರುವುದರಿಂದ ನಿನಗೆ ಎರಡನೆಯ ಹುಟ್ಟು ಸಂಭವಿಸಿದೆ ಆದ್ದರಿಂದ ನೀನು ‘ವಾಲ್ಮೀಕಿ ಎಂದು ಪ್ರಸಿದ್ಧನಾಗು’ ಎಂದು ಹರಸಿದರು. ಹೀಗೆ ಹೇಳಿ ಹೇ ರಘುಕುಲ ಶ್ರೇಷ್ಠನೆ! ಅವರು ದಿವ್ಯಗತಿಯಿಂದ ಹೊರಟು ಹೋದರು. ॥85-86॥

87
ಮೂಲಮ್

ಅಹಂ ತೇ ರಾಮ ನಾಮ್ನಶ್ಚ ಪ್ರಭಾವಾದೀದೃಶೋಭವಮ್ ।
ಅದ್ಯ ಸಾಕ್ಷಾತ್ಪ್ರಪಶ್ಯಾಮಿ ಸಸೀತಂ ಲಕ್ಷ್ಮಣೇನ ಚ ॥

88
ಮೂಲಮ್

ರಾಮಂ ರಾಜೀವಪತ್ರಾಕ್ಷಂ ತ್ವಾಂ ಮುಕ್ತೋ ನಾತ್ರ ಸಂಶಯಃ ।
ಆಗಚ್ಛ ರಾಮ ಭದ್ರಂ ತೇ ಸ್ಥಲಂ ವೈ ದರ್ಶಯಾಮ್ಯಹಮ್ ॥

ಅನುವಾದ

ಹೇ ರಾಮನೆ! ನಿನ್ನ ನಾಮದ ಮಹಿಮೆಯಿಂದ ನಾನು ಹೀಗೆ ಋಷಿ ಆಗಿ ‘ಈಗ ಸೀತಾ ಲಕ್ಷ್ಮಣರೊಡಗೂಡಿದ, ಕಮಲನಯನನಾದ ನಿನ್ನನ್ನು ಸಾಕ್ಷಾತ್ತಾಗಿ ನೋಡುತ್ತಿದ್ದೇನೆ. ಈಗ ನಾನು ನಿಸ್ಸಂದೇಹವಾಗಿ ಮುಕ್ತನಾದೆನು. ರಾಮನೇ, ನಿನಗೆ ಮಂಗಳವಾಗಲಿ; ನಿನಗೆ ಸ್ಥಳವನ್ನು ತೋರಿಸುತ್ತೇನೆ ಬಾ’ ॥87-88॥

89
ಮೂಲಮ್

ಏವಮುಕ್ತ್ವಾ ಮುನಿಃ ಶ್ರೀಮಾನ್ ಲಕ್ಷ್ಮಣೇನ ಸಮನ್ವಿತಃ ।
ಶಿಷ್ಯೈಃ ಪರಿವೃತೋ ಗತ್ವಾ ಮಧ್ಯೇ ಪರ್ವತಗಂಗಯೋಃ ॥

90
ಮೂಲಮ್

ತತ್ರ ಶಾಲಾಂ ಸುವಿಸ್ತೀರ್ಣಾಂ ಕಾರಯಾಮಾಸ ವಾಸಭೂಃ ।
ಪ್ರಾಕ್ಪಶ್ಚಿಮಂ ದಕ್ಷಿಣೋದಕ್ ಶೋಭನಂ ಮಂದಿರದ್ವಯಮ್ ॥

ಅನುವಾದ

ಹೀಗೆ ವಾಲ್ಮೀಕಿಗಳು ಹೇಳಿ ಅಲ್ಲೇ ಚಿತ್ರಕೂಟದಲ್ಲಿ ಲಕ್ಷ್ಮಣನೊಡಗೂಡಿ ಶಿಷ್ಯಸಂದೋಹದೊಂದಿಗೆ ಕೂಡಿಕೊಂಡು ಗಂಗಾ ನದಿ ಮತ್ತು ಪರ್ವತದ ನಡುವಣ ಭಾಗಕ್ಕೆ ಹೋಗಿ ಅಲ್ಲಿ ಪೂರ್ವ ಪಶ್ಚಿಮವಾಗಿ ಒಂದು, ದಕ್ಷಿಣೋತ್ತರವಾಗಿ ಮತ್ತೊಂದು ಹೀಗೆ ವಿಸ್ತಾರವಾದ ಕೋಣೆಗಳುಳ್ಳ ಎರಡು ಪರ್ಣ ಶಾಲೆಯನ್ನು ಕಟ್ಟಿದರು. ॥89-90॥

91
ಮೂಲಮ್

ಜಾನಕ್ಯಾ ಸಹಿತೋ ರಾಮೋ ಲಕ್ಷ್ಮಣೇನ ಸಮನ್ವಿತಃ ।
ತತ್ರ ತೇ ದೇವಸದೃಶಾ ಹ್ಯವಸನ್ ಭವನೋತ್ತಮೇ ॥

ಅನುವಾದ

ಆ ಶ್ರೇಷ್ಠವಾದ ಪರ್ಣ ಶಾಲೆಯಲ್ಲಿ ಜಾನಕೀ ಸಹಿತ ಶ್ರೀರಾಮ ಲಕ್ಷ್ಮಣರು ದೇವತೆಗಳಂತೆ ಇರತೊಡಗಿದರು. ॥91॥

92
ಮೂಲಮ್

ವಾಲ್ಮೀಕಿನಾ ತತ್ರ ಸುಪೂಜಿತೋಽಯಂ
ರಾಮಃ ಸಸೀತಃ ಸಹ ಲಕ್ಷ್ಮಣೇನ ।
ದೇವೈರ್ಮುನೀಂದ್ರೈಃ ಸಹಿತೋ ಮುದಾಸ್ತೇ
ಸ್ವರ್ಗೇ ಯಥಾ ದೇವಪತಿಃ ಸ ಶಚ್ಯಾ॥

ಅನುವಾದ

ಶ್ರೀ ವಾಲ್ಮೀಕಿ ಮುನಿಗಳಿಂದ ಪೂಜಿತನಾಗಿ ಸ್ವರ್ಗದಲ್ಲಿ ದೇವೇಂದ್ರನು ಶಚೀದೇವಿಯೊಡನೆ ಕೂಡಿ ದೇವತೆಗಳಿಂದ ಪರಿವೃತನಾಗಿ ಸಂತೋಷದಿಂದ ಇರುವನೋ ಹಾಗೆ ಶ್ರೀರಾಮಚಂದ್ರನು ಸೀತಾಲಕ್ಷ್ಮಣ ರೊಡನೆ ಹಾಗೂ ಮುನಿಗಳೊಡನೆ ಸಂತೋಷವಾಗಿ ವಾಸಮಾಡಿಕೊಂಡಿದ್ದನು. ॥92॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.