೦೫

[ಐದನೆಯ ಸರ್ಗ]

ಭಾಗಸೂಚನಾ

ಶ್ರೀರಾಮನ ವನಗಮನ

1
ಮೂಲಮ್ (ವಾಚನಮ್)

ಶ್ರೀ ಮಹಾದೇವ ಉವಾಚ

ಮೂಲಮ್

ಆಯಾಂತಂ ನಾಗರಾ ದೃಷ್ಟ್ವಾ ಮಾರ್ಗೇ ರಾಮಂ ಸಜಾನಕಿಮ್ ।
ಲಕ್ಷ್ಮಣೇನ ಸಮಂ ವೀಕ್ಷ್ಯ ಊಚುಃ ಸರ್ವೇ ಪರಸ್ಪರಮ್ ॥

2
ಮೂಲಮ್

ಕೈಕೇಯ್ಯಾ ವರದಾನಾದಿ ಶ್ರುತ್ವಾ ದುಃಖಸಮಾವೃತಾಃ ।
ಬತ ರಾಜಾ ದಶರಥಃ ಸತ್ಯಸಂಧಂ ಪ್ರಿಯಂ ಸುತಮ್ ॥

3
ಮೂಲಮ್

ಸ್ತ್ರೀಹೇತೋರತ್ಯಜತ್ಕಾಮೀ ತಸ್ಯ ಸತ್ಯಾತ್ಮತಾ ಕುತಃ ।
ಕೈಕೇಯೀ ವಾ ಕಥಂ ದುಷ್ಟಾ ರಾಮಂ ಸತ್ಯಂ ಪ್ರಿಯಂಕರಮ್ ॥

4
ಮೂಲಮ್

ವಿವಾಸಯಾಮಾಸ ಕಥಂ ಕ್ರೂರಕರ್ಮಾತಿ ಮೂಢಧೀಃ ।
ಹೇ ಜನಾ ನಾತ್ರ ವಸ್ತವ್ಯಂ ಗಚ್ಛಾಮೋಽದ್ಯೈವ ಕಾನನಮ್ ॥

5
ಮೂಲಮ್

ಯತ್ರ ರಾಮಃ ಸಭಾರ್ಯಶ್ಚ ಸಾನುಜೋ ಗಂತುಮಿಚ್ಛತಿ ।
ಪಶ್ಯಂತು ಜಾನಕೀಂ ಸರ್ವೇ ಪಾದಚಾರೇಣ ಗಚ್ಛತೀಮ್ ॥

ಅನುವಾದ

ಶ್ರೀಮಹಾದೇವನು ಹೇಳುತ್ತಾನೆ — ಎಲೈ ಗಿರಿಜೆ! ಸೀತಾ ಲಕ್ಷ್ಮಣ ಸಮೇತನಾಗಿ ಬರುತ್ತಿರುವ ಶ್ರೀರಾಮನನ್ನು ನಾಗರಿಕರು ನೋಡಿ ಕೈಕೆಯಿಗೆ ರಾಜನು ಕೊಟ್ಟ ವರಗಳ ವಿಷಯವನ್ನು ಕೇಳಿ ದುಃಖಿತರಾಗಿ ಪರಸ್ಪರ ಮಾತಾಡಿಕೊಳ್ಳುತ್ತಿದ್ದಾರೆ ‘‘ಅಯ್ಯೊ! ಕಾಮುಕನಾದ ದಶರಥ ರಾಜನು-ಸತ್ಯಸಂಧನೂ, ಪ್ರೀತಿಯ ಪುತ್ರನೂ ಆದ ಶ್ರೀರಾಮನನ್ನು ಹೆಂಗಸಿನ ನಿಮಿತ್ತದಿಂದ ಕೈಬಿಟ್ಟನಲ್ಲ! ಇವನ ಸತ್ಯತೆ ಎಲ್ಲಿ ಉಳಿಯಿತು? ಕ್ರೂರಕರ್ಮಳೂ, ಅತಿ ಮೂಢಬುದ್ಧಿಯುಳ್ಳವಳೂ, ದುಷ್ಟಳೂ ಆದ ಕೈಕೆಯಿಯಾದರೋ ಪ್ರೀತಿಪಾತ್ರನಾದ, ಸತ್ಯನಿಷ್ಠನಾದ ಶ್ರೀರಾಮನನ್ನು ಹೇಗೆ ತಾನೇ ಊರಿನಿಂದ ಹೊರಡಿಸಿದಳು? ಎಲೈ ಜನಗಳಿರಾ! ಇಲ್ಲಿ ನಾವು ಇರಬಾರದು; ಶ್ರೀರಾಮನು ಸೋದರ ಮತ್ತು ಪತ್ನಿಯೊಂದಿಗೆ ಹೋಗಲಿಚ್ಛಿಸುವ ಆ ಕಾಡಿಗೆ ಈಗಲೇ ಹೋಗೋಣ. ಅಯ್ಯೋ! ಕಾಲುನಡಿಗೆಯಿಂದ ಹೋಗುತ್ತಿರುವ ಸೀತೆಯನ್ನು ಎಲ್ಲರೂ ನೋಡಿರಿ! ॥1-5॥

6
ಮೂಲಮ್

ಪುಂಭಿಃ ಕದಾಚಿದ್ದೃಷ್ಟಾ ವಾ ಜಾನಕೀ ಲೋಕಸುಂದರೀ ।
ಸಾಪಿ ಪಾದೇನ ಗಚ್ಛಂತಿ ಜನಸಂಘೇಷ್ವನಾವೃತಾ ॥

ಅನುವಾದ

ಲೋಕ ಸುಂದರಿಯಾದ ಈಕೆಯು ಯಾವ ಗಂಡಸರ ಕಣ್ಣಿಗೂ ಗೋಚರಿಸುವವಳಲ್ಲ. ಅಂತಹವಳೂ ಕೂಡ ಜನಗಳ ಗುಂಪಿನಲ್ಲಿ ಕಾಲುನಡಿಗೆಯಿಂದ ಹೋಗುತ್ತಿದ್ದಾಳೆ. ॥6॥

7
ಮೂಲಮ್

ರಾಮೋಽಪಿ ಪಾದಚಾರೇಣ ಗಜಾಶ್ವಾದಿವಿವರ್ಜಿತಃ ।
ಗಚ್ಛತಿ ದ್ರಕ್ಷ್ಯಥ ವಿಭುಂ ಸರ್ವಲೋಕೈಕ ಸುಂದರಮ್ ॥

ಅನುವಾದ

ಅಯ್ಯಾ! ಸರ್ವಲೋಕ ಸುಂದರನೂ ಒಡೆಯನೂ ಆದ ಶ್ರೀರಾಮನನ್ನು ನೋಡಿರಿ! ಅವನೂ ಕೂಡ ಇಂದು ಆನೆ, ಕುದುರೆಗಳ ವಾಹನವಿಲ್ಲದೆ ನಡೆದೇ ಬರುತ್ತಿದ್ದಾನೆ. ॥7॥

8
ಮೂಲಮ್

ರಾಕ್ಷಸೀ ಕೈಕೆಯೀನಾಮ್ನೀ ಜಾತಾ ಸರ್ವವಿನಾಶಿನೀ ।
ರಾಮಸ್ಯಾಪಿ ಭವೇದ್ದುಃಖಂ ಸೀತಾಯಾಃ ಪಾದಯಾನತಃ ॥

ಅನುವಾದ

ಎಲ್ಲವನ್ನು ನಾಶಗೊಳಿಸುವ ಕೈಕೆಯಿ ಎಂಬ ರಾಕ್ಷಸಿಯು ಹುಟ್ಟಿರುವಳು. ಸೀತಾದೇವಿಯು ಕಾಲುನಡಿಗೆಯಿಂದ ಹೋಗುವುತ್ತಿರುವುದರಿಂದ ರಾಮನಿಗೂ ದುಃಖವಾಗಿರಬೇಕು. ॥8॥

9
ಮೂಲಮ್

ಬಲವಾನ್ವಿಧಿರೇವಾತ್ರ ಪುಂಪ್ರಯತ್ನೋ ಹಿ ದುರ್ಬಲಃ ।
ಇತಿ ದುಃಖಾಕುಲೇ ವೃಂದೇ ಸಾಧೂನಾಂ ಮುನಿಪುಂಗವಃ ॥

10
ಮೂಲಮ್

ಅಬ್ರವೀದ್ವಾಮದೇವೋಽಥ ಸಾಧೂನಾಂ ಸಂಘಮಧ್ಯಗಃ ।
ಮಾನುಶೋಚಥ ರಾಮಂ ವಾ ಸೀತಾಂ ವಾ ವಚ್ಮಿ ತತ್ತ್ವತಃ ॥

ಅನುವಾದ

ಆದರೆ ಏನು ಮಾಡಲಾದೀತು? ಇದರಲ್ಲಿ ದೈವವೇ ಪ್ರಬಲವೆಂದಾಯಿತು. ಮನುಷ್ಯ ಪ್ರಯತ್ನ ದುರ್ಬಲವೇ ಸರಿ!’’ ಹೀಗೆ ಸಹೃದಯ ಸಮಾಜವು ದುಃಖದಲ್ಲಿ ಮುಳುಗಿರಲು, ಸಾಧುಗಳಲ್ಲಿ ಶ್ರೇಷ್ಠರಾದ ಹಾಗೂ ಸಾಧುಗಳ ಮಧ್ಯದಲ್ಲಿಯೇ ಇದ್ದ ವಾಮದೇವ ಮಹಾಮುನಿಗಳು ಹೀಗೆ ಹೇಳಿದರು - ‘‘ಎಲೈ ಜನಗಳಿರಾ! ಸೀತೆಯ ಕುರಿತಾಗಲೀ, ಶ್ರೀರಾಮನ ಕುರಿತಾಗಲೀ ದುಃಖಪಡಬೇಡಿರಿ. ನಿಜವನ್ನು ಹೇಳುವೆನು, ಕೇಳಿರಿ. ॥9-10॥

11
ಮೂಲಮ್

ಏಷ ರಾಮಃ ಪರೋ ವಿಷ್ಣುರಾದಿನಾರಾಯಣಃ ಸ್ಮೃತಃ ।
ಏಷಾ ಸಾ ಜಾನಕೀ ಲಕ್ಷ್ಮೀರ್ಯೋಗಮಾಯೇತಿ ವಿಶ್ರುತಾ ॥

ಅನುವಾದ

ಈ ರಾಮನೆಂಬುವನು ಆದಿ ನಾರಾಯಣನಾದ ಭಗವಾನ್ ಶ್ರೀವಿಷ್ಣುವೇ ಆಗಿದ್ದಾನೆ ಮತ್ತು ಸೀತೆಯಾದರೋ ಯೋಗಮಾಯೆಯೆಂದು ಪ್ರಸಿದ್ಧಳಾದ ಶ್ರೀಲಕ್ಷ್ಮೀಯಾಗಿದ್ದಾಳೆ. ॥11॥

12
ಮೂಲಮ್

ಅಸೌ ಶೇಷಸ್ತಮನ್ವೇತಿ ಲಕ್ಷ್ಮಣಾಖ್ಯಶ್ಚ ಸಾಂಪ್ರತಮ್ ।
ಏಷ ಮಾಯಾಗುಣೈರ್ಯುಕ್ತಸ್ತತ್ತದಾಕಾರವಾನಿವ ॥

ಅನುವಾದ

ಈಗ ಶ್ರೀರಾಮನನ್ನು ಅನುಸರಿಸುವ ಲಕ್ಷ್ಮಣನೆಂಬುವನು ಆದಿಶೇಷನು. ಈ ಶ್ರೀರಾಮನು ಮಾಯಾಗುಣಗಳಿಂದ ವಿಶಿಷ್ಟನಾಗಿ ಆಯಾ ರೂಪಗಳುಳ್ಳವನಂತೆ ಕಾಣಿಸಿಕೊಳ್ಳುತ್ತಾನೆ. ॥12॥

13
ಮೂಲಮ್

ಏಷ ಏವ ರಜೋಯುಕ್ತೋ ಬ್ರಹ್ಮಾಭೂದ್ವಿಶ್ವಭಾವನಃ ।
ಸತ್ತ್ವಾವಿಷ್ಟಸ್ತಥಾ ವಿಷ್ಣುಸ್ತ್ರಿಜಗತ್ಪ್ರತಿಪಾಲಕಃ ॥

ಅನುವಾದ

ಈತನೇ ರಜೋಗುಣದಿಂದ ಕೂಡಿಕೊಂಡು ಜಗತ್ತನ್ನು ಸೃಷ್ಟಿ ಮಾಡುವ ಬ್ರಹ್ಮನಾಗಿದ್ದಾನೆ. ಹಾಗೆಯೇ ಸತ್ತ್ವಗುಣ ವಿಶಿಷ್ಟನಾದಾಗ ವಿಷ್ಣುವೆಂದೂ ಪ್ರಸಿದ್ಧನಾಗಿ ಮೂರು ಲೋಕಗಳನ್ನೂ ಕಾಪಾಡುವವನಾಗಿರುವನು. ॥13॥

14
ಮೂಲಮ್

ಏಷ ರುದ್ರಸ್ತಾಮಸೋಽನ್ತೇ ಜಗತ್ಪ್ರಲಯಕಾರಣಮ್ ।
ಏಷ ಮತ್ಸ್ಯಃ ಪುರಾ ಭೂತ್ವಾ ಭಕ್ತಂ ವೈವಸ್ವತಂ ಮನುಮ್ ॥

15
ಮೂಲಮ್

ನಾವ್ಯಾರೋಪ್ಯ ಲಯಸ್ಯಾಂತೇ ಪಾಲಯಾಮಾಸ ರಾಘವಃ ।
ಸಮುದ್ರಮಥನೇ ಪೂರ್ವಂ ಮಂದರೇ ಸುತಲಂ ಗತೇ ॥

16
ಮೂಲಮ್

ಅಧಾರಯತ್ಸ್ವಪೃಷ್ಠೇಽದ್ರಿಂ ಕೂರ್ಮರೂಪೀ ರಘೂತ್ತಮಃ ।
ಮಹೀ ರಸಾತಲಂ ಯಾತಾ ಪ್ರಲಯೇ ಸೂಕರೋಽಭವತ್ ॥

17
ಮೂಲಮ್

ತೋಲಯಾಮಾಸ ದಂಷ್ಟ್ರಾಗ್ರೇ ತಾಂ ಕ್ಷೋಣೀಂ ರಘುನಂದನಃ ।
ನಾರಸಿಂಹಂ ವಪುಃ ಕೃತ್ವಾ ಪ್ರಹ್ಲಾದವರದಃ ಪುರಾ ॥

18
ಮೂಲಮ್

ತ್ರೈಲೋಕ್ಯಕಂಟಕಂ ರಕ್ಷಃ ಪಾಟಯಾಮಾಸ ತನ್ನಖೈಃ ।
ಪುತ್ರರಾಜ್ಯಂ ಹೃತಂ ದೃಷ್ಟ್ವಾ ಹ್ಯದಿತ್ಯಾ ಯಾಚಿತಃ ಪುರಾ ॥

19
ಮೂಲಮ್

ವಾಮನತ್ವಮುಪಾಗಮ್ಯ ಯಾಂಚಯಾ ಚಾಹರತ್ಪುನಃ ।
ದುಷ್ಟಕ್ಷತ್ರಿಯಭೂಭಾರನಿವೃತ್ತ್ಯೆ ಭಾರ್ಗವೋಽಭವತ್ ॥

ಅನುವಾದ

ಇವನೇ ತಮೋಗುಣದಿಂದ ಕೂಡಿದ ರುದ್ರನಾಗಿ ಪ್ರಳಯ ಕಾಲದಲ್ಲಿ ಜಗತ್ತನ್ನು ಪ್ರಳಯಗೊಳಿಸಲು ಕಾರಣನಾಗುವನು. ಇದೇ ರಘುನಾಥನು ಹಿಂದೆ ಮತ್ಸ್ಯನಾಗಿ ಅವತರಿಸಿ ಭಕ್ತನಾದ ವೈವಸ್ವತ ಮನುವನ್ನು ಹಡಗಿನಲ್ಲಿ ಕುಳ್ಳಿರಿಸಿಕೊಂಡು ಪ್ರಳಯಕಾಲದ ಕೊನೆಯಲ್ಲಿ ಕಾಪಾಡಿದನು. ಹಾಗೆಯೇ ಮತ್ತೊಮ್ಮೆ ಹಿಂದೆ ಸಮುದ್ರಮಂಥನದ ಸಮಯದಲ್ಲಿ ಕಡಗೋಲಾಗಿದ್ದ ಮಂದರಾಚಲವು ಸುತಲಲೋಕಕ್ಕೆ ಮುಳುಗಿ ಹೋಗುವಾಗ ಕೂರ್ಮನಾದ ರಘುವರನು ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಧರಿಸಿಕೊಂಡಿದ್ದನು. ಪ್ರಳಯಕಾಲದಲ್ಲಿ ರಸಾತಳಕ್ಕೆ ಮುಳುಗಿ ಹೋಗಿದ್ದ ಭೂಮಿಯನ್ನು ರಘುನಂದನನು ವರಾಹ ರೂಪವನ್ನು ಧರಿಸಿ ಕೋರೆದಾಡೆಯ ತುದಿಯಿಂದ ಎತ್ತಿ ತಂದನು. ಇನ್ನೊಮ್ಮೆ ಪ್ರಹ್ಲಾದವರದನಾದ ಈತನು ನರಸಿಂಹರೂಪವನ್ನು ತಳೆದು ಮೂರು ಲೋಕಗಳಿಗೂ ಕಂಟಕಪ್ರಾಯನಾಗಿದ್ದ ದೈತ್ಯರಾಜ ಹಿರಣ್ಯಕಶಿಪುವನ್ನು ತನ್ನ ಉಗುರುಗಳಿಂದ ಸೀಳಿಹಾಕಿದನು. ಮಗನಾದ ಇಂದ್ರನ ರಾಜ್ಯವನ್ನು ಅಸುರರು ಅಪಹರಿಸಿದಾಗ ತಾಯಿ ಅದಿತಿಯು ಬಂದು ಪ್ರಾರ್ಥಿಸಿಕೊಳ್ಳಲಾಗಿ, ತಾನು ವಾಮನನಾಗಿ ಭಿಕ್ಷೆ ಬೇಡಿ ಮತ್ತೆ ರಾಜ್ಯವನ್ನು ಕೊಡಿಸಿದನು. ದುಷ್ಟರಾದ ಕ್ಷತ್ರಿಯರಿಂದ ಭೂಮಿಯ ಭಾರವು ಹೆಚ್ಚಾದಾಗ ಅದನ್ನು ಪರಿಹರಿಸಲು ಪರಶುರಾಮನಾದನು. ॥14-19॥

20
ಮೂಲಮ್

ಸ ಏವ ಜಗತಾಂ ನಾಥ ಇದಾನೀಂ ರಾಮತಾಂ ಗತಃ ।
ರಾವಣಾದೀನಿ ರಕ್ಷಾಂಸಿ ಕೋಟಿಶೋ ನಿಹನಿಷ್ಯತಿ ॥

ಅನುವಾದ

ಆ ಜಗತ್ಪತಿಯಾದ ವಿಷ್ಣುವೇ ಈಗ ಶ್ರೀರಾಮನಾಗಿ ಪ್ರಕಟಗೊಂಡಿರುವನು. ಮುಂದೆ ರಾವಣನೇ ಮುಂತಾದ ಕೋಟಿ-ಕೋಟಿ ರಾಕ್ಷಸರನ್ನೆಲ್ಲ ಕೊಲ್ಲಲಿದ್ದಾನೆ. ॥20॥

21
ಮೂಲಮ್

ಮಾನುಷೇಣೈವ ಮರಣಂ ತಸ್ಯ ದೃಷ್ಟಂ ದುರಾತ್ಮನಃ ।
ರಾಜ್ಞಾ ದಶರಥೇನಾಪಿ ತಪಸಾರಾಧಿತೋ ಹರಿಃ ॥

22
ಮೂಲಮ್

ಪುತ್ರತ್ವಾಕಾಂಕ್ಷಯಾ ವಿಷ್ಣೋಸ್ತದಾ ಪುತ್ರೋಽಭವದ್ಧರಿಃ ।
ಸ ಏವ ವಿಷ್ಣುಃ ಶ್ರೀರಾಮೋ ರಾವಣಾದಿವಧಾಯ ಹಿ ॥

23
ಮೂಲಮ್

ಗಂತಾದ್ಯೈವ ವನಂ ರಾಮೋ ಲಕ್ಷ್ಮಣೇನ ಸಹಾಯವಾನ್ ।
ಏಷಾ ಸೀತಾ ಹರೇರ್ಮಾಯಾ ಸೃಷ್ಟಿಸ್ಥಿತ್ಯಂತಕಾರಿಣೀ ॥

ಅನುವಾದ

ಆ ದುರಾತ್ಮನಾದ ರಾವಣನಿಗೆ ಮನುಷ್ಯನಿಂದಲೇ ಮರಣವುಂಟಾಗಬೇಕಾಗಿದೆ. ರಾಜನಾದ ದಶರಥನು ತಪಸ್ಸಿನಿಂದ ಶ್ರೀಹರಿಯನ್ನು ಆರಾಧಿಸಿ ಮಗನಾಗಿ ಹುಟ್ಟಬೇಕೆಂದು ಪ್ರಾರ್ಥಿಸಿದ್ದನು. ಆ ಪ್ರಾರ್ಥನೆಗನುಸಾರ ಭಗವಾನ್ ಮಹಾವಿಷ್ಣುವು ಶ್ರೀರಾಮನಾಗಿರುವನು. ರಾವಣಾದಿಗಳನ್ನು ಕೊಲ್ಲುವುದಕ್ಕಾಗಿ ಲಕ್ಷ್ಮಣನೊಂದಿಗೆ ಅವನು ಈಗಲೇ ಕಾಡಿಗೆ ಹೋಗಲಿದ್ದಾನೆ. ಈ ಸೀತೆಯಾದರೋ, ಜಗತ್ತಿನ ಉತ್ಪತ್ತಿಸ್ಥಿತಿಲಯಗಳನ್ನು ಮಾಡುತ್ತಿರುವ ಸಾಕ್ಷಾತ್ ಶ್ರೀಹರಿಯ ಮಾಯಾಶಕ್ತಿರೂಪಿಣಿಯಾಗಿರುವಳು. ॥21-23॥

24
ಮೂಲಮ್

ರಾಜಾ ವಾ ಕೈಕೇಯೀ ವಾಪಿ ನಾತ್ರ ಕಾರಣಮಣ್ವಪಿ ।
ಪೂರ್ವೇದ್ಯುರ್ನಾರದಃ ಪ್ರಾಹ ಭೂಭಾರಹರಣಾಯ ಚ ॥

ಅನುವಾದ

ಇವನ ವನಗಮನದಲ್ಲಿ ದಶರಥನಾಗಲಿ, ಕೈಕೆಯಿಯಾಗಲಿ ಅಣುಮಾತ್ರವೂ ಕಾರಣರಲ್ಲ. ನಿನ್ನೆಯೇ ನಾರದರು ಬಂದು ಭೂಭಾರವನ್ನು ಪರಿಹಾರಮಾಡಬೇಕೆಂದು ಪ್ರಾರ್ಥಿಸಿದ್ದರು. ॥24॥

25
ಮೂಲಮ್

ರಾಮೋಽಪ್ಯಾಹ ಸ್ವಯಂ ಸಾಕ್ಷಾತ್ ಶ್ವೋ ಗಮಿಷ್ಯಾಮ್ಯಹಂ ವನಮ್ ।
ಅತೋ ರಾಮಂ ಸಮುದ್ದಿಶ್ಯ ಚಿಂತಾಂ ತ್ಯಜತ ಬಾಲಿಶಾಃ ॥

ಅನುವಾದ

ರಾಮನೂ ಖುದ್ದಾಗಿ ‘ನಾನು ನಾಳೆ ಕಾಡಿಗೆ ಹೋಗುವೆನು’ ಎಂದು ತಾನೇ ಹೇಳಿದ್ದನು. ಆದ್ದರಿಂದ ಅಲ್ಪಪ್ರಜ್ಞರಾದ ನೀವು ರಾಮನ ಕುರಿತು ದುಃಖಿಸುವುದನ್ನು ಬಿಡಿರಿ. ॥25॥

26
ಮೂಲಮ್

ರಾಮರಾಮೇತಿ ಯೇ ನಿತ್ಯಂ ಜಪಂತಿ ಮನುಜಾ ಭುವಿ ।
ತೇಷಾಂ ಮೃತ್ಯುಭಯಾದೀನಿ ನ ಭವಂತಿ ಕದಾಚನ ॥

ಅನುವಾದ

ಜಗತ್ತಿನಲ್ಲಿ ಯಾವಾಗಲೂ ರಾಮ! ರಾಮ! ಎಂದು ಜಪಮಾಡುವ ಮನುಷ್ಯನಿಗೆ ಮೃತ್ಯುವೇ ಮುಂತಾದ ಭಯಗಳು ಉಂಟಾಗುವುದಿಲ್ಲ. ॥26॥

27
ಮೂಲಮ್

ಕಾ ಪುನಸ್ತಸ್ಯ ರಾಮಸ್ಯ ದುಃಖಶಂಕಾ ಮಹಾತ್ಮನಃ ।
ರಾಮನಾಮ್ನೈವ ಮುಕ್ತಿಃ ಸ್ಯಾತ್ಕಲೌ ನಾನ್ಯೇನ ಕೇನಚಿತ್ ॥

ಅನುವಾದ

ಹೀಗಿರುವಲ್ಲಿ ಮಹಾತ್ಮನಾದ ಆ ರಾಮನಿಗೆ ದುಃಖವು ಒದಗುವ ವಿಚಾರದಲ್ಲಿ ಶಂಕೆಯಾದರೂ ಹೇಗೆ ಬಂದೀತು? ಕಲಿಯುಗದಲ್ಲಿ ರಾಮನಾಮವೊಂದರಿಂದಲೇ ಮುಕ್ತಿಯಾಗ ಬಲ್ಲದು. ಬೇರೆಯಾವುದರಿಂದಲೂ ಆಗಲಾರದು. ॥27॥

28
ಮೂಲಮ್

ಮಾಯಾಮಾನುಷರೂಪೇಣ ವಿಡಂಬಯತಿ ಲೋಕಕೃತ್ ।
ಭಕ್ತಾನಾಂ ಭಜನಾರ್ಥಾಯ ರಾವಣಸ್ಯ ವಧಾಯ ಚ ॥

ಅನುವಾದ

ಈ ಜಗತ್ಕರ್ತೃನಾದ ಪ್ರಭು ರಾಮಚಂದ್ರನು ಗುಣ-ಕೀರ್ತನದ ಸುಯೋಗವನ್ನು ದೊರಕಿಸಿಕೊಡಲೂ ಮತ್ತು ರಾವಣನನ್ನು ಸಂಹಾರಮಾಡುವುದಕ್ಕಾಗಿಯೂ, ಮಾಯಾಮಾ ನುಷರೂಪದಿಂದ ಜಗತ್ತಿನಲ್ಲಿ ಲೀಲೆ ಮಾಡುತ್ತಿರುವನು. ॥28॥

29
ಮೂಲಮ್

ರಾಜ್ಞಶ್ಚಾಭೀಷ್ಟಸಿದ್ಧ್ಯರ್ಥಂ ಮಾನುಷಂ ವಪುರಾಶ್ರಿತಃ ।
ಇತ್ಯುಕ್ತ್ವಾ ವಿರರಾಮಾಥ ವಾಮದೇವೋ ಮಹಾಮುನಿಃ ॥

ಅನುವಾದ

ಇದಲ್ಲದೆ ದಶರಥನ ಇಷ್ಟಾರ್ಥಸಿದ್ಧಿಗಾಗಿಯೂ ಇವನು ಈ ಮನುಷ್ಯ ಶರೀರವನ್ನು ಧರಿಸಿರುವನು.’’ ಹೀಗೆಂದು ಹೇಳಿ ವಾಮದೇವ ಮಹಾಮುನಿಗಳು ಸುಮ್ಮನಾದರು. ॥29॥

30
ಮೂಲಮ್

ಶ್ರುತ್ವಾತೇಽಪಿ ದ್ವಿಜಾಃ ಸರ್ವೇ ರಾಮಂಜ್ಞಾತ್ವಾ ಹರಿಂ ವಿಭುಮ್ ।
ಜಹುರ್ಹೃತ್ಸಂಶಯಗ್ರಂಥಿಂ ರಾಮಮೇವಾನ್ವಚಿಂತಯನ್ ॥

ಅನುವಾದ

ಈ ಉಪದೇಶವನ್ನು ಕೇಳಿದ ಬ್ರಾಹ್ಮಣರೆಲ್ಲರೂ ಭಗವಾನ್ ಶ್ರೀರಾಮನನ್ನು ಸರ್ವ ವ್ಯಾಪಕ ಭಗವಾನ್ ಶ್ರೀಹರಿಯೆಂದೇ ತಿಳಿದುಕೊಂಡು ಹೃದಯದಲ್ಲಿದ್ದ ಸಂಶಯದ ಗಂಟನ್ನು ಕಳಚಿಕೊಂಡರು ಮತ್ತು ಶ್ರೀರಾಮಚಂದ್ರನನ್ನೇ ಧ್ಯಾನಿಸ ತೊಡಗಿದರು. ॥30॥

31
ಮೂಲಮ್

ಯ ಇದಂ ಚಿಂತಯೇನ್ನಿತ್ಯಂ ರಹಸ್ಯಂ ರಾಮಸೀತಯೋಃ ।
ತಸ್ಯ ರಾಮೇ ದೃಢಾ ಭಕ್ತಿರ್ಭವೇದ್ವಿಜ್ಞಾನ ಪೂರ್ವಿಕಾ ॥

ಅನುವಾದ

ಸೀತಾ ರಾಮರ ಈ ತತ್ತ್ವವನ್ನು ಸದಾ ಅನುಸಂಧಾನ ಮಾಡುವವನಿಗೆ ಭಗವಾನ್ ಶ್ರೀರಾಮನಲ್ಲಿ ವಿಜ್ಞಾನ ಪೂರ್ವಕವಾದ ದೃಢ ಭಕ್ತಿಯು ಉಂಟಾಗುವುದು. ॥31॥

32
ಮೂಲಮ್

ರಹಸ್ಯಂ ಗೋಪನೀಯಂ ವೋ ಯೂಯಂ ವೈ ರಾಘವಪ್ರಿಯಾಃ ।
ಇತ್ಯುಕ್ತ್ವಾ ಪ್ರಯಯೌ ವಿಪ್ರಸ್ತೇಽಪಿ ರಾಮಂ ಪರಂ ವಿದುಃ ॥

ಅನುವಾದ

‘‘ನೀವೆಲ್ಲ ಈ ರಹಸ್ಯವನ್ನು ಕಾಪಾಡಿಕೊಳ್ಳಿರಿ, ನೀವೆಲ್ಲರೂ ರಾಮನಿಗೆ ಪರಮ ಪ್ರಿಯರಾಗಿರುವಿರಿ.’’ ಹೀಗೆ ಹೇಳಿ ಆ ವಿಪ್ರವರ ವಾಮದೇವರು ಹೊರಟು ಹೋದರು. ಪುರಜನರೆಲ್ಲರೂ ರಾಮನನ್ನು ಪರಬ್ರಹ್ಮನೆಂದೇ ತಿಳಿದುಕೊಂಡರು. ॥32॥

33
ಮೂಲಮ್

ತತೋ ರಾಮಃ ಸಮಾವಿಶ್ಯ ಪಿತೃಗೇಹಮವಾರಿತಃ ।
ಸಾನುಜಃ ಸೀತಯಾ ಗತ್ವಾ ಕೈಕೇಯೀಮಿದಮಬ್ರವೀತ್ ॥

34
ಮೂಲಮ್

ಆಗತಾಃ ಸ್ಮೋ ವಯಂ ಮಾತಸ್ತ್ರಯಸ್ತ್ರೇ ಸಮ್ಮತಂ ವನಮ್ ।
ಗಂತುಂ ಕೃತಧಿಯಃ ಶೀಘ್ರಮಾಜ್ಞಾಪಯತು ನಃ ಪಿತಾ ॥

ಅನುವಾದ

ಅನಂತರ ಶ್ರೀರಾಮನು ನೇರವಾಗಿ ತಂದೆಯ ಅರಮನೆಯನ್ನು ಪ್ರವೇಶಿಸಿ, ಸೀತಾಲಕ್ಷಣರೊಡಗೂಡಿ ಕೈಕೆಯಿಯನ್ನು ಕುರಿತು ಹೀಗೆಂದನು - ‘‘ಅಮ್ಮಾ! ನಾವು ಮೂವರೂ ನಿಮ್ಮ ಮಾತಿನಂತೆ ವನವಾಸಕ್ಕೆ ಹೋಗಲು ಸಿದ್ಧರಾಗಿ ಬಂದಿದ್ದೇವೆ. ಈಗ ಬೇಗನೇ ತಂದೆಯ ಅಪ್ಪಣೆಯನ್ನು ಬೇಡುತ್ತೇವೆ.’’ ॥33-34॥

35
ಮೂಲಮ್

ಇತ್ಯುಕ್ತಾ ಸಹಸೋತ್ಥಾಯ ಚೀರಾಣಿ ಪ್ರದದೌ ಸ್ವಯಮ್ ।
ರಾಮಾಯ ಲಕ್ಷ್ಮಣಾಯಾಥ ಸೀತಾಯೈ ಚ ಪೃಥಕ್ ಪೃಥಕ್ ॥

ಅನುವಾದ

ರಾಮನು ಹೀಗೆ ಹೇಳಿದಾಗ ಕೈಕೆಯಿಯು ತಾನೇ ಸ್ವತಃ ರಾಮನಿಗೂ, ಲಕ್ಷ್ಮಣನಿಗೂ, ಸೀತೆಗೂ ಬೇರೆ-ಬೇರೆಯಾಗಿ ನಾರುಮಡಿಗಳನ್ನು ಕೊಟ್ಟಳು. ॥35॥

36
ಮೂಲಮ್

ರಾಮಸ್ತು ವಸ್ತ್ರಾಣ್ಯುತ್ಸೃಜ್ಯ ವನ್ಯಚೀರಾಣಿ ಪರ್ಯಧಾತ್ ।
ಲಕ್ಷ್ಮಣೋಽಪಿ ತಥಾ ಚಕ್ರೇ ಸೀತಾ ತನ್ನ ವಿಜಾನತೀ ॥

37
ಮೂಲಮ್

ಹಸ್ತೇ ಗೃಹೀತ್ವಾ ರಾಮಸ್ಯ ಲಜ್ಜಯಾ ಮುಖಮೈಕ್ಷತ ।
ರಾಮೋ ಗೃಹೀತ್ವಾ ತಚ್ಚೀರಮಂಶುಕೇ ಪರ್ಯವೇಷ್ಟಯತ್ ॥

ಅನುವಾದ

ರಾಮನಾದರೋ ತನ್ನ ರಾಜೋಚಿತ ವಸಗಳನ್ನು ಕಳಚಿ ನಾರುಮಡಿಯನ್ನು ಧರಿಸಿಕೊಂಡನು. ಲಕ್ಷ್ಮಣನೂ ಹಾಗೇ ಮಾಡಿದನು. ಆದರೆ ಸೀತೆಯು ಆ ನಾರು ಬಟ್ಟೆಯನ್ನು ಉಡಲು ಅರಿಯದವಳಾಗಿ ಕೈಯಲ್ಲೆ ಹಿಡಿದುಕೊಂಡು ನಾಚಿಕೆಯಿಂದ ರಾಮನ ಮುಖವನ್ನು ನೋಡಿದಳು. ರಾಮನು ಆ ಬಟ್ಟೆಗಳನ್ನು ತೆಗೆದುಕೊಂಡು ಸೀತೆಯು ಉಟ್ಟಿದ್ದ ಸೀರೆಯ ಮೇಲೆಯೇ ಉಡಿಸಿದನು. ॥36-37॥

38
ಮೂಲಮ್

ತದ್ದೃಷ್ಟ್ವಾ ರುರುದುಃ ಸರ್ವೇ ರಾಜದಾರಾಃ ಸಮಂತತಃ ।
ವಸಿಷ್ಠಸ್ತು ತದಾಕರ್ಣ್ಯ ರುದಿತಂ ಭರ್ತ್ಸಯನ್ ರುಷಾಃ ॥

39
ಮೂಲಮ್

ಕೈಕೇಯೀಂ ಪ್ರಾಹ ದುರ್ವೃತ್ತೇ ರಾಮ ಏವ ತ್ವಯಾ ವೃತಃ ।
ವನವಾಸಾಯ ದುಷ್ಟೇ ತ್ವಂ ಸೀತಾಯೈ ಕಿಂ ಪ್ರಯಚ್ಛಸಿ ॥

ಅನುವಾದ

ಇದನ್ನು ನೋಡಿ ಸುತ್ತಲೂ ಇದ್ದ ರಾಣಿವಾಸದ ಎಲ್ಲ ರಾಜಪತ್ನಿಯರು ಅಳಲಾರಂಭಿಸಿದರು. ಆ ಅಳುವನ್ನು ಕೇಳಿದ ವಸಿಷ್ಠರು ಕೋಪದಿಂದ ಕೈಕೆಯನ್ನು ಗದರಿಸುತ್ತಾ, ‘‘ಎಲೈ ದುಷ್ಟಳೇ! ವನವಾಸಕ್ಕಾಗಿ ರಾಮನನ್ನು ಮಾತ್ರ ನೀನು ಕೇಳಿಕೊಂಡಿರುವೆ. ಹಾಗಿರುವಾಗ ಸೀತೆಗೆ ಏಕೆ ನಾರು ಬಟ್ಟೆಯನ್ನು ಕೊಡುತ್ತಿರುವೆ? ॥38-39॥

40
ಮೂಲಮ್

ಯದಿ ರಾಮಂ ಸಮನ್ವೇತಿ ಸೀತಾ ಭಕ್ತ್ಯಾ ಪತಿವ್ರತಾ ।
ದಿವ್ಯಾಂಬರಧರಾ ನಿತ್ಯಂ ಸರ್ವಾಭರಣಭೂಷಿತಾ ॥

ಅನುವಾದ

ಪತಿವ್ರತೆಯಾದ ಸೀತೆಯು ಭಕ್ತಿಯಿಂದ ಒಂದು ವೇಳೆ ರಾಮನನ್ನು ಅನುಸರಿಸುತ್ತಾಳಾದರೆ ಆಕೆಯು ದಿವ್ಯ ವಸ್ತ್ರಗಳನ್ನುಟ್ಟು ಸರ್ವಾಭರಣಗಳಿಂದಲೂ ಅಲಂಕೃತಳಾಗಿ ಹೋಗಲಿ ॥40॥

41
ಮೂಲಮ್

ರಮಯತ್ವನಿಶಂ ರಾಮಂ ವನದುಃಖನಿವಾರಿಣೀ ।
ರಾಜಾ ದಶರಥೋಪ್ಯಾಹ ಸುಮಂತ್ರಂ ರಥಮಾನಯ ॥

ಅನುವಾದ

ಹಾಗೂ ಅರಣ್ಯವಾಸದ ದುಃಖವನ್ನು ಕಳೆಯುತ್ತಾ ರಾಮನನ್ನು ಯಾವಾಗಲೂ ಸಂತೋಷಗೊಳಿಸುತ್ತಿರಲಿ’’ ಎಂದು ನುಡಿದರು. ಆಗ ದಶರಥ ಮಹಾರಾಜರೂ ಸುಮಂತ್ರನನ್ನು ಕುರಿತು ‘‘ಮಂತ್ರಿವರ್ಯಾ! ನೀನು ರಥವನ್ನು ತೆಗೆದುಕೊಂಡು ಬಾ. ॥41॥

42
ಮೂಲಮ್

ರಥಮಾರುಹ್ಯ ಗಚ್ಛಂತು ವನಂ ವನಚರಪ್ರಿಯಾಃ ।
ಇತ್ಯುಕ್ತ್ವಾ ರಾಮಮಾಲೋಕ್ಯ ಸೀತಾಂ ಚೈವ ಸಲಕ್ಷ್ಮಣಮ್ ॥

43
ಮೂಲಮ್

ದುಃಖಾನ್ನಿಪತಿತೋ ಭೂಮೌ ರುರೋದಾಶ್ರುಪರಿಪ್ಲುತಃ ।
ಆರುರೋಹ ರಥಂ ಸೀತಾ ಶೀಘ್ರಂ ರಾಮಸ್ಯ ಪಶ್ಯತಃ ॥

ಅನುವಾದ

ವನವಾಸಿಗಳಿಗೆ ಪ್ರಿಯರಾದ ಇವರುಗಳು ರಥವನ್ನೇರಿ ಕಾಡಿಗೆ ಹೋಗಲಿ’’ ಎಂದು ಹೇಳುತ್ತಾ ರಾಜನು ಲಕ್ಷ್ಮಣ ಸಹಿತ ಸೀತಾರಾಮರನ್ನು ನೋಡುತ್ತಾ ದುಃಖದಿಂದ ನೆಲದ ಮೇಲೆ ಕುಸಿದು ಬಿದ್ದನು. ಕಣ್ಣೀರು ತುಂಬಿಕೊಂಡು ಅಳತೊಡಗಿದನು. ಆಗ ಶ್ರೀರಾಮನು ನೋಡುತ್ತಿರುವಂತೆ ಸೀತೆಯು ಜಾಗ್ರತೆಯಾಗಿ ರಥವನ್ನೇರಿದಳು. ॥42-43॥

44
ಮೂಲಮ್

ರಾಮಃ ಪ್ರದಕ್ಷಿಣಂ ಕೃತ್ವಾ ಪಿತರಂ ರಥಮಾರುಹತ್ ।
ಲಕ್ಷ್ಮಣಃ ಖಡ್ಗಯುಗಲಂ ಧನುಸ್ತೂಣೀಯುಗಂ ತಥಾ ॥

45
ಮೂಲಮ್

ಗೃಹೀತ್ವಾ ರಥಮಾರುಹ್ಯ ನೋದಯಾಮಾಸ ಸಾರಥಿಮ್ ।
ತಿಷ್ಠ ತಿಷ್ಠ ಸುಮಂತ್ರೇತಿ ರಾಜಾ ದಶರಥೋಽಬ್ರವೀತ್ ॥

46
ಮೂಲಮ್

ಗಚ್ಛ ಗಚ್ಛೇತಿ ರಾಮೇಣ ನೋದಿತೋಽಚೋದಯದ್ರಥಮ್ ।
ರಾಮೇ ದೂರಂ ಗತೇ ರಾಜಾ ಮೂರ್ಚ್ಛಿತಃ ಪ್ರಾಪತದ್ಭುವಿ ॥

ಅನುವಾದ

ಮತ್ತೆ ಶ್ರೀರಾಮನು ತಂದೆಗೆ ಪ್ರದಕ್ಷಣೆಯನ್ನು ಮಾಡಿ ರಥವನ್ನೇರಿದನು. ಲಕ್ಷ್ಮಣನು ಒಂದು ಜೊತೆ ಖಡ್ಗಗಳನ್ನು, ಎರಡು ಬತ್ತಳಿಕೆ, ಎರಡು ಧನುಷ್ಯಗಳನ್ನು ತೆಗೆದುಕೊಂಡು ರಥವನ್ನೇರಿದನು ಹಾಗೂ ರಥ ನಡೆಸುವಂತೆ ಸಾರಥಿಯನ್ನು ಪ್ರೇರೇಪಿಸಿದನು. ಆಗ ದಶರಥನು ಸುಮಂತ್ರನನ್ನು ಕುರಿತು ‘ನಿಲ್ಲಿಸು, ನಿಲ್ಲಿಸು’ ಎಂದು ಹೇಳುತ್ತಿರುವಂತೆ, ರಾಮನು ಹೊರಡು-ಹೊರಡು, ಎಂದು ಅವಸರಪಡಿಸುತ್ತಿರಲು ಸಾರಥಿಯಾದ ಸುಮಂತ್ರನು ರಥವನ್ನು ಓಡಿಸಿದನು. ಶ್ರೀರಾಮನು ದೂರಕ್ಕೆ ಹೋಗುತ್ತಿರುವಂತೆ ರಾಜನು ಮೂರ್ಛಿತನಾಗಿ ನೆಲದಮೇಲೆ ಬಿದ್ದನು. ॥44-46॥

47
ಮೂಲಮ್

ಪೌರಾಸ್ತು ಬಾಲವೃದ್ಧಾಶ್ಚ ವೃದ್ಧಾ ಬ್ರಾಹ್ಮಣಸತ್ತಮಾಃ ।
ತಿಷ್ಠ ತಿಷ್ಠೇತಿ ರಾಮೇತಿ ಕ್ರೋಶಂತೋ ರಥಮನ್ವಯುಃ ॥

ಅನುವಾದ

ಹುಡುಗರು ಮುದುಕರೇ ಮುಂತಾದ ಎಲ್ಲ ಪುರವಾಸಿಗಳೂ, ಪೂಜ್ಯರಾದ ಬ್ರಾಹ್ಮಣ ಶ್ರೇಷ್ಠರೂ ‘ಹೇ ರಾಮಾ! ನಿಲ್ಲು-ನಿಲ್ಲು’ ಎಂದು ಕೂಗುತ್ತಾ ರಥವನ್ನು ಹಿಂಬಾಲಿಸಿದರು. ॥47॥

48
ಮೂಲಮ್

ರಾಜಾ ರುದಿತ್ವಾ ಸುಚಿರಂ ಮಾಂ ನಯಂತು ಗೃಹಂ ಪ್ರತಿ ।
ಕೌಸಲ್ಯಾಯಾ ರಾಮಮಾತುರಿತ್ಯಾಹ ಪರಿಚಾರಕಾನ್ ॥

ಅನುವಾದ

ರಾಜನು ಬಹಳ ಕಾಲ ಅಳುತ್ತಾ, ದುಃಖಿಸುತ್ತಾ ಇದ್ದು ಮತ್ತೆ ಪರಿಚಾರಕರನ್ನು ಕುರಿತು ‘‘ರಾಮನ ತಾಯಿಯಾದ ಕೌಸಲ್ಯೆಯ ಮನೆಗೆ ನನ್ನನ್ನು ಕರೆದೊಯ್ಯಿರಿ. ॥48॥

49
ಮೂಲಮ್

ಕಿಂಚಿತ್ಕಾಲಂ ಭವೇತ್ತತ್ರ ಜೀವನಂ ದುಃಖಿತಸ್ಯ ಮೇ ।
ಅತ ಊರ್ಧ್ವಂ ನ ಜೀವಾಮಿ ಚಿರಂ ರಾಮಂ ವಿನಾ ಕೃತಃ ॥

ಅನುವಾದ

ದುಃಖಿತನಾದ ನಾನು ಸ್ವಲ್ಪವೇ ಸಮಯದವರೆಗೆ ಜೀವಿಸಿರ ಬಲ್ಲೆ; ಆದರೆ ರಾಮನಿಂದ ಅಗಲಿದ ನಾನು ಇನ್ನು ಹೆಚ್ಚುಕಾಲ ಬದುಕಿರಲಾರೆ’’ ಎಂದನು. ॥49॥

50
ಮೂಲಮ್

ತತೋ ಗೃಹಂ ಪ್ರವಿಶ್ಯೈವ ಕೌಸಲ್ಯಾಯಾಃ ಪಪಾತ ಹ ।
ಮೂರ್ಚ್ಛಿತಶ್ಚ ಚಿರಾದ್ಬುದ್ಧ್ವಾ ತೂಷ್ಣೀಮೇವಾವತಸ್ಥಿವಾನ್ ॥

ಅನುವಾದ

ಹಾಗೆಯೇ ಕೌಸಲ್ಯೆಯ ಅರಮನೆಯನ್ನು ಪ್ರವೇಶಿಸಿದವನೇ ಕುಸಿದು ಬಿದ್ದು ಮೂರ್ಛೆ ಹೋದನು. ಬಹಳ ಹೊತ್ತಿನ ಮೇಲೆ ಎಚ್ಚೆತ್ತು ಸುಮ್ಮನೇ ಕುಳಿತುಕೊಂಡನು. ॥50॥

51
ಮೂಲಮ್

ರಾಮಸ್ತು ತಮಸಾತೀರಂ ಗತ್ವಾ ತತ್ರಾವಸತ್ಸುಖೀ ।
ಜಲಂ ಪ್ರಾಶ್ಯ ನಿರಾಹಾರೋ ವೃಕ್ಷಮೂಲೇಽಸ್ವಪದ್ವಿಭುಃ ॥

52
ಮೂಲಮ್

ಸೀತಯಾ ಸಹ ಧರ್ಮಾತ್ಮಾ ಧನುಷ್ಪಾಣಿಸ್ತು ಲಕ್ಷ್ಮಣಃ ।
ಪಾಲಯಾಮಾಸ ಧರ್ಮಜ್ಞಃ ಸುಮಂತ್ರೇಣ ಸಮನ್ವಿತಃ ॥

ಅನುವಾದ

ಈ ಕಡೆಗೆ ವಿಭುವಾದ, ಧರ್ಮಾತ್ಮನಾದ ರಾಮನು ತಮಸಾನದಿಯ ತೀರಕ್ಕೆ ಬಂದು ಅಲ್ಲಿ ನೀರನ್ನು ಕುಡಿದು ನಿರಾಹಾರನಾಗಿ ಮರದ ಬುಡದಲ್ಲಿ ಸೀತೆಯೊಡನೆ ವಿಶ್ರಾಂತಿಯನ್ನು ಪಡೆದನು. ಧನುರ್ಧಾರಿಯಾದ ಧರ್ಮಜ್ಞನಾದ ಲಕ್ಷ್ಮಣನು ಸುಮಂತ್ರನೊಡಗೂಡಿ ಕಾವಲು ಕಾಯುತ್ತಿದ್ದನು. ॥51-52॥

53
ಮೂಲಮ್

ಪೌರಾಃ ಸರ್ವೇ ಸಮಾಗತ್ಯ ಸ್ಥಿತಾಸ್ತಸ್ಯಾವಿದೂರತಃ ।
ಶಕ್ತಾ ರಾಮಂ ಪುರಂ ನೇತುಂ ನೋಚೇದ್ಗಚ್ಛಾಮಹೇ ವನಮ್ ॥

ಅನುವಾದ

ಪಟ್ಟಣಿಗರೆಲ್ಲರೂ ಬಂದು ರಾಮನಿಗೆ ಸ್ವಲ್ಪವೇ ದೂರದಲ್ಲಿ ಬೀಡುಬಿಟ್ಟರು. ನಾವು ರಾಮನನ್ನು ಪಟ್ಟಣಕ್ಕೆ ಹಿಂತಿರುಗಿ ಕರಕೊಂಡು ಹೋಗಲು ಶಕ್ತರಾಗದಿದ್ದರೆ ವನಕ್ಕೆ ಹೊರಡುತ್ತೇವೆ ಎಂದು ನಿಶ್ಚಿಯಿಸಿದರು. ॥53॥

54
ಮೂಲಮ್

ಇತಿ ನಿಶ್ಚಯಮಾಜ್ಞಾಯ ತೇಷಾಂ ರಾಮೋಽತಿವಿಸ್ಮಿತಃ ।
ನಾಹಂ ಗಚ್ಛಾಮಿ ನಗರಮೇತೇ ವೈ ಕ್ಲೇಶಭಾಗಿನಃ ॥

55
ಮೂಲಮ್

ಭವಿಷ್ಯಂತೀತಿ ನಿಶ್ಚಿತ್ಯ ಸುಮಂತ್ರಮಿದಮಬ್ರವೀತ್ ।
ಇದಾನೀಮೇವ ಗಚ್ಛಾಮಃ ಸುಮಂತ್ರ ರಥಮಾನಯ ॥

ಅನುವಾದ

ಇದನ್ನು ತಿಳಿದ ಶ್ರೀರಾಮನು ಆಶ್ಚರ್ಯಯುಕ್ತನಾಗಿ ‘ನಾನು ಅಯೋಧ್ಯೆಗೆ ಹಿಂದಿರುಗಿ ಹೋಗುವವನಲ್ಲ. ಆದರೆ ಇವರು ತೊಂದರೆಗೆ ಒಳಗಾಗುತ್ತಾರಲ್ಲ!’ ಎಂದು ಆಲೋಚಿಸಿ, ‘‘ಸುಮಂತ್ರನೇ! ರಥವನ್ನು ತೆಗೆದುಕೊಂಡು ಬಾ; ಈಗಲೇ ಹೊರಡೋಣ.’’ ॥54-55॥

56
ಮೂಲಮ್

ಇತ್ಯಾಜ್ಞಪ್ತಃ ಸುಮಂತ್ರೋಽಪಿ ರಥಂ ವಾಹೈರಯೋಜಯತ್ ।
ಆರುಹ್ಯ ರಾಮಃ ಸೀತಾ ಚ ಲಕ್ಷ್ಮಣೋಽಪಿ ಯಯುರ್ದ್ರುತಮ್ ॥

ಅನುವಾದ

ಹೀಗೆಂದು ಆಜ್ಞಪ್ತನಾದ ಸುಮಂತ್ರನು ರಥವನ್ನು ಕುದುರೆಗಳಿಂದ ಸಜ್ಜುಗೊಳಿಸಿದನು. ಸೀತಾ ರಾಮ ಲಕ್ಷ್ಮಣರು ರಥವನ್ನೇರಿ ವೇಗವಾಗಿ ಹೊರಟರು. ॥56॥

57
ಮೂಲಮ್

ಅಯೋಧ್ಯಾಭಿಮುಖಂ ಗತ್ವಾ ಕಿಂಚಿದ್ದೂರಂ ತತೋ ಯಯುಃ ।
ತೇಪಿ ರಾಮಮದೃಷ್ಟೈವ ಪ್ರಾತರುತ್ಥಾಯ ದುಃಖಿತಾಃ ॥

58
ಮೂಲಮ್

ರಥನೇಮಿಗತಂ ಮಾರ್ಗಂ ಪಶ್ಯಂತಸ್ತೇ ಪುರಂ ಯಯುಃ ।
ಹೃದಿ ರಾಮಂ ಸಸೀತಂ ತೇ ಧ್ಯಾಯಂತಃ ತಸ್ಥುರನ್ವಹಮ್ ॥

ಅನುವಾದ

ಸ್ವಲ್ಪ ದೂರದವರೆಗೆ ಅಯೋಧ್ಯೆಯ ಕಡೆಗೆ ಹೋಗಿ ಅನಂತರ ವನಕ್ಕೆ ತೆರಳಿದರು. ಬೆಳಗಾಗುತ್ತಲೇ ಪೌರರು ಎದ್ದು ರಾಮನನ್ನು ಕಾಣದೆ ದುಃಖಿತರಾಗಿ ರಥದ ಗುರುತನ್ನು ನೋಡಿಕೊಂಡವರಾಗಿ ಅಯೋಧ್ಯೆಗೆ ಮರಳಿದರು. ಪ್ರತಿದಿನವೂ ಹೃದಯದಲ್ಲಿ ಸೀತಾಸಮೇತ ಶ್ರೀರಾಮನನ್ನು ಯಾವಾಗಲೂ ಧ್ಯಾನಿಸುತ್ತಾ ಇರತೊಡಗಿದರು. ॥57-58॥

59
ಮೂಲಮ್

ಸುಮಂತ್ರೋಽಪಿ ರಥಂ ಶೀಘ್ರಂ ನೋದಯಾಮಾಸ ಸಾದರಮ್ ।
ಸ್ಫೀತಾಂಜನಪದಾನ್ ಪಶ್ಯನ್ ರಾಮಃ ಸೀತಾಸಮನ್ವಿತಃ ॥

60
ಮೂಲಮ್

ಗಂಗಾತೀರಂ ಸಮಾಗಚ್ಛಚ್ಛತ್ ಶೃಂಗವೇರಾವಿದೂರತಃ ।
ಗಂಗಾಂ ದೃಷ್ಟ್ವಾ ನಮಸ್ಕೃತ್ಯ ಸ್ನಾತ್ವಾ ಸಾನಂದಮಾನಸಃ ॥

ಅನುವಾದ

ಇತ್ತ ಸುಮಂತ್ರನೂ ರಥವನ್ನು ವೇಗವಾಗಿ ಶ್ರದ್ಧೆಯಿಂದ ನಡೆಯಿಸುತ್ತಿದ್ದನು. ಸೀತಾಸಮೇತನಾದ ಶ್ರೀರಾಮನು ವಿಸ್ತಾರವಾದ ದೇಶವಿಭಾಗಗಳನ್ನು ನೋಡುತ್ತಾ ಶೃಂಗವೇರವೆಂಬ ಪಟ್ಟಣಕ್ಕೆ ಸಮೀಪದಲ್ಲಿ ಗಂಗಾನದಿಯ ತೀರಕ್ಕೆ ಬಂದನು. ಪರಮಪಾವನಿ ಗಂಗೆಯನ್ನು ದರ್ಶಸಿ ನಮಸ್ಕರಿಸಿ ಆನಂದಮನಸ್ಕನಾಗಿ ಸ್ನಾನ ಮಾಡಿದನು. ॥59-60॥

61
ಮೂಲಮ್

ಶಿಂಶಪಾವೃಕ್ಷಮೂಲೇ ಸ ನಿಷಸಾದ ರಘೂತ್ತಮಃ ।
ತತೋ ಗುಹೋ ಜನೈಃ ಶ್ರುತ್ವಾ ರಾಮಾಗಮಮಹೋತ್ಸವಮ್ ॥

ಅನುವಾದ

ಮತ್ತೆ ರಘುಶ್ರೇಷ್ಠನಾದ ಶ್ರೀರಾಮನು ಶಿಂಶಪಾ ವೃಕ್ಷದ ಬುಡದಲ್ಲಿ ಕುಳಿತುಕೊಂಡನು. ಆಗಲೇ ನಿಷಾದರಾಜ ಗುಹನು ಶ್ರೀರಾಮನು ಬಂದಿರುವ ಸಂತೋಷದ ಸುದ್ದಿಯನ್ನು ಪರಿಜನರಿಂದ ಕೇಳಿದನು. ॥61॥

62
ಮೂಲಮ್

ಸಖಾಯಂ ಸ್ವಾಮಿನಂ ದ್ರಷ್ಟುಂ ಹರ್ಷಾತ್ತೂರ್ಣಂ ಸಮಾಪತತ್ ।
ಫಲಾನಿ ಮಧುಪುಷ್ಪಾದಿ ಗೃಹೀತ್ವಾ ಭಕ್ತಿ ಸಂಯುತಃ ॥

63
ಮೂಲಮ್

ರಾಮಸ್ಯಾಗ್ರೇ ವಿನಿಕ್ಷಿಪ್ಯ ದಂಡವತ್ಪ್ರಾಪತದ್ಭುವಿ ।
ಗುಹಮುತ್ಥಾಪ್ಯ ತಂ ತೂರ್ಣಂ ರಾಘವಃ ಪರಿಷಸ್ವಜೇ ॥

ಅನುವಾದ

ಸಖನೂ, ಒಡೆಯನೂ ಆದ ರಘುಪುಂಗವನನ್ನು ನೋಡುವುದಕ್ಕಾಗಿ ಅತ್ಯಂತ ಹರ್ಷಿತನಾಗಿ ಹಣ್ಣುಗಳನ್ನು, ಜೇನು, ಹೂವು ಮುಂತಾದುವನ್ನು ಎತ್ತಿಕೊಂಡು ಭಕ್ತಿಯಿಂದ ಕೂಡಿ ಪರಿವಾರದ ಸಹಿತ ಬಂದು ರಾಮನ ಮುಂದೆ ಎಲ್ಲವನ್ನು ಸಮರ್ಪಿಸಿ ದಂಡವತ್ ಪ್ರಣಾಮವನ್ನು ಮಾಡಿದನು. ಆಗ ಶ್ರೀರಾಮನು ಬೇಗನೆ ಗುಹನನ್ನು ಮೇಲಕ್ಕೆತ್ತಿಕೊಂಡವನಾಗಿ ಆಲಿಂಗಿಸಿಕೊಂಡನು. ॥62-63॥

64
ಮೂಲಮ್

ಸಂಪೃಷ್ಟಕುಶಲೋ ರಾಮಂ ಗುಹಃ ಪ್ರಾಂಜಲಿರಬ್ರವೀತ್ ।
ಧನ್ಯೋಽಹಮದ್ಯ ಮೇ ಜನ್ಮ ನೈಷಾದಂ ಲೋಕಪಾವನ ॥

ಅನುವಾದ

ಶ್ರೀರಾಮನು ಕುಶಲ ಪ್ರಶ್ನೆಗಳು ಕೇಳಿದ ಬಳಿಕ ಗುಹನು ಕೈ ಮುಗಿದುಕೊಂಡು ಅವನಲ್ಲಿ ಹೇಳಿದನು ‘‘ಹೇ ಲೋಕಪಾವನನೆ, ರಘುಶ್ರೇಷ್ಠನೆ! ನಾನು ಈ ನಿಷಾದ (ಬೇಡರ) ಜಾತಿಯಲ್ಲಿ ಹುಟ್ಟಿದುದು ಸಾರ್ಥಕವಾಯಿತು. ನಾನು ಧನ್ಯನಾದೆನು. ॥64॥

65
ಮೂಲಮ್

ಬಭೂವ ಪರಮಾನಂದಃ ಸ್ಪೃಷ್ಟ್ವಾತೇಂಽಗಂ ರಘೂತ್ತಮ ।
ನೈಷಾದರಾಜ್ಯಮೇತತ್ತೇ ಕಿಂಕರಸ್ಯ ರಘೂತ್ತಮ ॥

66
ಮೂಲಮ್

ತ್ವದಧೀನಂ ವಸನ್ನತ್ರ ಪಾಲಯಾಸ್ಮಾನ್ ರಘೂದ್ವಹ ।
ಆಗಚ್ಛಯಾಮೋ ನಗರಂ ಪಾವನಂ ಕುರು ಮೇ ಗೃಹಮ್ ॥

ಅನುವಾದ

ನಿನ್ನ ಶರೀರವನ್ನು ಮುಟ್ಟಿದ್ದರಿಂದ ನನಗೆ ಪರಮಾನಂದವಾಗಿದೆ. ಸೇವಕನಾದ ನನ್ನ ಈ ನೈಷಾದ ರಾಜ್ಯವು ನಿನ್ನ ಅಧೀನವಾಗಿದೆ. ಇಲ್ಲಿ ವಾಸಮಾಡುತ್ತಾ ನಮ್ಮನ್ನು ಕಾಪಾಡುವವನಾಗು. ನಡೆಯಿರಿ ಊರೊಳಗೆ ಹೋಗೋಣ. ನನ್ನ ಮನೆಯನ್ನು ಪವಿತ್ರವಾಗಿಸು. ॥65-66॥

67
ಮೂಲಮ್

ಗೃಹಾಣ ಫಲಮೂಲಾನಿ ತ್ವದರ್ಥಂ ಸಂಚಿತಾನಿ ಮೇ ।
ಅನುಗೃಹ್ಣೀಷ್ವ ಭಗವನ್ ದಾಸಸ್ತೇಽಹಂ ಸುರೋತ್ತಮ ॥

ಅನುವಾದ

ಪೂಜ್ಯನೇ! ನಿನಗಾಗಿ ಸಂಗ್ರಹಿಸಿಟ್ಟಿರುವ ಈ ಕಂದ ಮೂಲ ಫಲಗಳನ್ನು ಸ್ವೀಕರಿಸು. ಸುರಶ್ರೇಷ್ಠನೆ! ನಾನು ನಿನ್ನ ದಾಸನಾಗಿರುವೆನು. ನನ್ನನ್ನು ಅನುಗ್ರಹಿಸು’’ ॥67॥

68
ಮೂಲಮ್

ರಾಮಸ್ತಮಾಹ ಸುಪ್ರೀತೋ ವಚನಂ ಶೃಣು ಮೇ ಸಖೇ ।
ನ ವೇಕ್ಷ್ಯಾಮಿ ಗೃಹಂ ಗ್ರಾಮಂ ನವ ವರ್ಷಾಣಿ ಪಂಚ ಚ ॥

69
ಮೂಲಮ್

ದತ್ತಮನ್ಯೇನ ನೋ ಭುಂಜೇ ಫಲಮೂಲಾದಿ ಕಿಂಚನ ।
ರಾಜ್ಯಂ ಮಮೈತತ್ತೇ ಸರ್ವಂ ತ್ವಂ ಸಖಾ ಮೇಽತಿವಲ್ಲಭಃ ॥

ಅನುವಾದ

ಆಗ ಸಂತುಷ್ಟನಾದ ಶ್ರೀರಾಮನು - ‘‘ಎಲೈ ಸ್ನೇಹಿತನೆ! ನನ್ನ ಮಾತನ್ನು ಕೇಳು. ನಾನು ಊರನ್ನಾಗಲಿ, ಮನೆಯನ್ನಾಗಲಿ ಹದಿನಾಲ್ಕು ವರ್ಷಗಳ ಕಾಲ ಪ್ರವೇಶಿಸುವುದಿಲ್ಲ. ಕಂದ ಮೂಲ ಫಲಗಳೇ ಮುಂತಾಗಿ ಏನನ್ನೂ ಬೇರೊಬ್ಬರು ಕೊಟ್ಟಿದ್ದನ್ನು ನಾನು ತಿನ್ನುವುದಿಲ್ಲ. ನಿನ್ನ ಈ ರಾಜ್ಯವೆಲ್ಲವೂ ನನ್ನದೇ ಆಗಿದೆ. ನೀನು ನನಗೆ ಅತ್ಯಂತ ಪ್ರೀತಿಪಾತ್ರನಾದ ಸ್ನೇಹಿತನಾಗಿರುವೆ. ॥68-69॥

70
ಮೂಲಮ್

ವಟಕ್ಷೀರಂ ಸಮಾನಾಯ್ಯ ಜಟಾಮುಕುಟಮಾದರಾತ್ ।
ಬಬಂಧ ಲಕ್ಷ್ಮಣೇನಾಥ ಸಹಿತೋ ರಘುನಂದನಃ ॥

ಅನುವಾದ

ಹೀಗೆಂದು ಹೇಳಿದ ಅನಂತರ ಶ್ರೀರಾಮನು ಲಕ್ಷ್ಮಣನೊಡಗೂಡಿ ಆಲದ ಹಾಲನ್ನು ತರಿಸಿ ಜಟಾಕಿರೀಟವನ್ನು ಕಟ್ಟಿಕೊಂಡನು. ॥70॥

71
ಮೂಲಮ್

ಜಲಮಾತ್ರಂ ತು ಸಂಪ್ರಾಶ್ಯ ಸೀತಯಾ ಸಹ ರಾಘವಃ ।
ಆಸ್ತೃತಂ ಕುಶಪರ್ಣಾದ್ಯೈಃ ಶಯನಂ ಲಕ್ಷ್ಮಣೇನ ಹಿ ॥

72
ಮೂಲಮ್

ಉವಾಸ ತತ್ರ ನಗರಪ್ರಾಸಾದಾಗ್ರೇ ಯಥಾ ಪುರಾ ।
ಸುಷ್ವಾಪ ತತ್ರ ವೈದೇಹ್ಯಾ ಪರ್ಯಂಕ ಇವ ಸಂಸ್ಕೃತೇ ॥

ಅನುವಾದ

ಸೀತೆಯೊಡನೆ ಕೇವಲ ನೀರನ್ನು ಮಾತ್ರ ಕುಡಿದು, ಲಕ್ಷ್ಮಣನು ಹುಲ್ಲು ಮತ್ತು ಎಳೆ ಚಿಗುರುಗಳಿಂದ ಸಿದ್ಧಗೊಳಿಸಿದ ಹಾಸಿಗೆಯನ್ನು ಆಶ್ರಯಿಸಿ, ನಗರದ ಉಪ್ಪರಿಗೆಯ ಮೇಲೆ ಸೀತೆಯೊಡಗೂಡಿ ಸುಸಜ್ಜಿತ ಮಂಚದ ಮೇಲೆ ಹೇಗೆ ಹಿಂದೆ ಮಲಗುತ್ತಿದ್ದನೋ ಅದೇ ರೀತಿಯಿಂದ ಆನಂದವಾಗಿ ಪವಡಿಸಿದನು. ॥71-72॥

73
ಮೂಲಮ್

ತತೋಽವಿದೂರೇ ಪರಿಗೃಹ್ಯ ಚಾಪಂ
ಸಬಾಣತೂಣೀರಧನುಃ ಸ ಲಕ್ಷ್ಮಣಃ ।
ರರಕ್ಷ ರಾಮಂ ಪರಿತೋ ವಿಪಶ್ಯನ್
ಗುಹೇನ ಸಾರ್ಧಂ ಸಶರಾಸನೇನ ॥

ಅನುವಾದ

ಅನಂತರ ಲಕ್ಷ್ಮಣನು ಬಾಣ ಬತ್ತಳಿಕೆಗಳೊಡನೆ ಬಿಲ್ಲನ್ನು ಹಿಡಿದವನಾಗಿ ಸಮೀಪದಲ್ಲೇ ಇದ್ದುಕೊಂಡು, ಧನುರ್ಧಾರಿಯಾಗಿದ್ದ ಗುಹನೊಡಗೂಡಿ ಸುತ್ತಲೂ ಕಣ್ಣು ಹಾಯಿಸುತ್ತಾ ಶ್ರೀರಾಮಚಂದ್ರನಿಗೆ ಕಾವಲು ಕಾಯುತ್ತಿದ್ದನು. ॥73॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.