೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮನು ಮಾತೆಯಿಂದ ಬೀಳ್ಕೊಳ್ಳುವುದು ಹಾಗೂ ಸೀತಾ-ಲಕ್ಷ್ಮಣ ಸಹಿತ ವನ ಗಮನದ ಸಿದ್ಧತೆ ಮಾಡುವುದು

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ತತಃ ಸುಮಿತ್ರಾ ದೃಷ್ಟೈನಂ ರಾಮಂ ರಾಜ್ಞೀಂ ಸಸಂಭ್ರಮಾ ।
ಕೌಸಲ್ಯಾಂ ಬೋಧಯಾಮಾಸ ರಾಮೋಯಂ ಸಮುಪಸ್ಥಿತಃ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಎಲೈ ಪಾರ್ವತಿ! ಆಗ ಸುಮಿತ್ರೆ ಯಾದರೋ ಶ್ರೀರಾಮನು ಬಂದಿದ್ದನ್ನು ನೋಡಿ ಸಂಭ್ರಮದಿಂದ ಕೂಡಿ ರಾಣಿಯಾದ ಕೌಸಲ್ಯೆಯನ್ನು ಎಚ್ಚರಿಸಿ ‘ರಾಮನು ಬಂದಿದ್ದಾನೆ’ ಎಂದು ಹೇಳಿದಳು. ॥1॥

2
ಮೂಲಮ್

ಶ್ರುತ್ವೈವ ರಾಮನಾಮೈಷಾ ಬಹಿರ್ದೃಷ್ಟಿಪ್ರವಾಹಿತಾ ।
ರಾಮಂ ದೃಷ್ಟ್ವಾ ವಿಶಾಲಾಕ್ಷಮಾಲಿಂಗ್ಯಾಂಕೇ ನ್ಯವೇಶಯತ್ ॥

3
ಮೂಲಮ್

ಮೂರ್ಧ್ನ್ಯವಘ್ರಾಯ ಪಸ್ಪರ್ಶ ಗಾತ್ರಂ ನೀಲೋತ್ಪಲಚ್ಛವಿ ।
ಭುಂಕ್ಷ್ವ ಪುತ್ರೇತಿ ಚ ಪ್ರಾಹ ಮಿಷ್ಟಮನ್ನಂ ಕ್ಷುಧಾರ್ದಿತಃ ॥

ಅನುವಾದ

ರಾಮನ ಹೆಸರು ಕೇಳುತ್ತಲೇ ಬಹಿರ್ಮುಖಳಾದ ಆಕೆಯು ವಿಶಾಲವಾದ ಕಣ್ಣುಗಳುಳ್ಳ ರಾಮನನ್ನು ನೋಡಿ ಅವನನ್ನು ತಬ್ಬಿಕೊಂಡು ತೊಡೆಯಮೇಲೆ ಕುಳ್ಳಿರಿಸಿಕೊಂಡಳು ಹಾಗೂ ಶಿರವನ್ನು ಆಘ್ರಾಣಿಸಿ ಕನ್ನೈದಿಲೆಯ ಬಣ್ಣದಂತಿರುವ ಅವನ ನೀಲ ಶರೀರವನ್ನು ಕೈಯಿಂದ ನೇವರಿಸಿ, ‘‘ಮಗೂ! ಹಸಿದಿರುವ ನೀನು ಇದೋ ಮೃಷ್ಟಾನ್ನವನ್ನು ಸೇವಿಸು’’ ಎಂದಳು. ॥2-3॥

4
ಮೂಲಮ್

ರಾಮಃ ಪ್ರಾಹ ನ ಮೇ ಮಾತರ್ಭೋಜನಾವಸರಃ ಕೃತಃ ।
ದಂಡಕಾಗಮನೇ ಶೀಘ್ರಂ ಮಮ ಕಾಲೋದ್ಯ ನಿಶ್ಚಿತಃ ॥

5
ಮೂಲಮ್

ಕೈಕೆಯೀವರದಾನೇನ ಸತ್ಯಸಂಧಃ ಪಿತಾ ಮಮ ।
ಭರತಾಯ ದದೌ ರಾಜ್ಯಂ ಮಮಾಪ್ಯಾರಣ್ಯಮುತ್ತಮಮ್ ॥

6
ಮೂಲಮ್

ಚತುರ್ದಶ ಸಮಾಸ್ತತ್ರ ಹ್ಯುಷಿತ್ವಾ ಮುನಿವೇಷಧೃಕ್ ।
ಆಗಮಿಷ್ಯೇ ಪುನಃ ಶೀಘ್ರಂ ನ ಚಿಂತಾಂ ಕರ್ತುಮರ್ಹಸಿ ॥

ಅನುವಾದ

ಶ್ರೀರಾಮನಿಂತೆಂದನು - ‘‘ಅಮ್ಮಾ! ನನಗೆ ಈಗ ಊಟಮಾಡಲು ಸಮಯವಿಲ್ಲ. ಇಂದೇ ಶೀಘ್ರವಾಗಿ ದಂಡಕಾರಣ್ಯಕ್ಕೆ ಹೋಗಲು ನನ್ನ ಸಮಯವು ನಿಶ್ಚಿತವಾಗಿದೆ. ಸತ್ಯಸಂಧನಾದ ನನ್ನ ತಂದೆಯವರು ಕೈಕೆಯಿಗೆ ಕೊಟ್ಟಿದ್ದ ವರಗಳ ಪ್ರಕಾರ ಭರತನಿಗೆ ರಾಜ್ಯವನ್ನು, ನನಗೆ ಉತ್ತಮವಾದ ವನರಾಜ್ಯವನ್ನು ಅನುಗ್ರಹಿಸಿರುತ್ತಾರೆ. ಅಲ್ಲಿ ನಾನು ಹದಿನಾಲ್ಕು ವರ್ಷಗಳ ಕಾಲ ಋಷಿಗಳ ವೇಷದಿಂದ ಇದ್ದು ಮತ್ತೆ ಬೇಗನೇ ಹಿಂದಿರುಗಿ ಬರುವೆನು. ನೀನೇನೂ ಚಿಂತಿಸಬೇಡ. ॥4-6॥

7
ಮೂಲಮ್

ತಚ್ಛ್ರುತ್ವಾ ಸಹಸೋದ್ವಿಗ್ನಾ ಮೂರ್ಛಿತಾ ಪುನರುತ್ಥಿತಾ ।
ಆಹ ರಾಮಂ ಸುದುಃಖಾರ್ತಾ ದುಃಖಸಾಗರಸಂಪ್ಲುತಾ ॥

8
ಮೂಲಮ್

ಯದಿ ರಾಮ ವನಂ ಸತ್ಯಂ ಯಾಸಿ ಚೇನ್ನಯ ಮಾಮಪಿ ।
ತದ್ವಿಹೀನಾ ಕ್ಷಣಾರ್ದ್ಧಂ ವಾ ಜೀವಿತಂ ಧಾರಯೇ ಕಥಮ್ ॥

9
ಮೂಲಮ್

ಯಥಾ ಗೌರ್ಬಾಲಕಂ ವತ್ಸಂ ತ್ಯಕ್ತ್ವಾ ತಿಷ್ಠೇನ್ನ ಕುತ್ರಚಿತ್ ।
ತಥೈವ ತ್ವಾಂ ನ ಶಕ್ನೋಮಿ ತ್ಯಕ್ತುಂ ಪ್ರಾಣಾತ್ಪ್ರಿಯಂ ಸುತಮ್ ॥

10
ಮೂಲಮ್

ಭರತಾಯ ಪ್ರಸನ್ನಶ್ಚೇದ್ರಾಜ್ಯಂ ರಾಜಾ ಪ್ರಯಚ್ಛತು ।
ಕಿಮರ್ಥಂ ವನವಾಸಾಯ ತ್ವಾಮಾಜ್ಞಾಪಯತಿ ಪ್ರಿಯಮ್ ॥

ಅನುವಾದ

ಆ ಮಾತನ್ನು ಕೇಳಿದ ಕೂಡಲೇ ಕೌಸಲ್ಯೆಯು ತಳಮಳಗೊಂಡವಳಾಗಿ ಮೂರ್ಛೆಹೋದಳು. ಮತ್ತೆ ಎಚ್ಚರಗೊಂಡು ಮೇಲಕ್ಕೆದ್ದು ದುಃಖದಿಂದ ಬಳಲಿದವಳಾಗಿ ಹಾಗೂ ಶೋಕಸಮುದ್ರದಲ್ಲಿ ಮುಳುಗಿದವಳಾಗಿ ರಾಮನ ಕುರಿತು ಹೇಳುತ್ತಾಳೆ - ‘‘ಹೇ ರಾಮಭದ್ರಾ! ನೀನು ನಿಜವಾಗಿಯೂ ಕಾಡಿಗೆ ಹೋಗುವುದಾದರೆ ನನ್ನನ್ನೂ ಕರೆದುಕೊಂಡು ಹೋಗು. ನೀನಿಲ್ಲದೆ ಅರೆಕ್ಷಣವೂ ನಾನು ಬದುಕಿರಲಾರೆನು. ಹಸುವು ತನ್ನ ಪುಟ್ಟ ಕರುವನ್ನು ಹೇಗೆ ಬಿಟ್ಟಿರಲಾರದೋ ಹಾಗೇ ನಾನೂ ಪ್ರಾಣಕ್ಕಿಂತಲೂ ಪ್ರಿಯನಾದ ನಿನ್ನನ್ನು ಬಿಟ್ಟಿರಲಾರೆನು. ಮಹಾರಾಜರು ಸಂತೋಷಗೊಂಡು ಭರತನಿಗೆ ರಾಜ್ಯವನ್ನು ಕೊಡುವುದಾದರೆ ಕೊಟ್ಟುಕೊಳ್ಳಲಿ; ಆದರೆ ಪ್ರಿಯ ಪುತ್ರನಾದ ನಿನ್ನನ್ನು ವನವಾಸಕ್ಕೆ ಏಕೆ ಕಳಿಸಬೇಕು ತಿಳಿಯದು. ॥ 7-10॥

11
ಮೂಲಮ್

ಕೈಕೇಯ್ಯಾ ವರದೋ ರಾಜಾ ಸರ್ವಸ್ವಂ ವಾ ಪ್ರಯಚ್ಛತು ।
ತ್ವಯಾ ಕಿಮಪರಾದ್ಧಂ ಹಿ ಕೈಕೇಯ್ಯಾ ವಾ ನೃಪಸ್ಯ ವಾ ॥

12
ಮೂಲಮ್

ಪಿತಾ ಗುರುರ್ಯಥಾ ರಾಮ ತವಾಹಮಧಿಕಾ ತತಃ ।
ಪಿತ್ರಾಽಽಜ್ಞಪ್ತೋ ವನಂ ಗಂತುಂ ವಾರಯೇಯಮಹಂ ಸುತಮ್ ॥

13
ಮೂಲಮ್

ಯದಿ ಗಚ್ಛಸಿ ಮದ್ವಾಕ್ಯಮುಲ್ಲಂಘ್ಯ ನೃಪವಾಕ್ಯತಃ ।
ತದಾ ಪ್ರಾಣಾನ್ಪರಿತ್ಯಜ್ಯ ಗಚ್ಛಾಮಿ ಯಮಸಾದನಮ್ ॥

ಅನುವಾದ

ಮಹಾರಾಜರು ಕೈಕೆಯಿಗೆ ವರವನ್ನು ಕೊಟ್ಟಿರುವರಾದರೆ ಎಲ್ಲವನ್ನು ಆಕೆಗೆ ಕೊಡಲಿ! ಆದರೆ ರಾಜರಿಗಾಗಲೀ, ಕೈಕೆಯಿಗಾಗಲಿ ನೀನು ಮಾಡಿರುವ ಅಪರಾಧವಾದರೂ ಏನು? ಹೇ ರಾಮಚಂದ್ರಾ! ನಿನಗೆ ತಂದೆಯವರು ಪೂಜ್ಯರಿರುವಂತೆ ಅದಕ್ಕಿಂತ ಹೆಚ್ಚಾಗಿ ನಾನು ಪೂಜ್ಯಳಾಗಿದ್ದೇನೆ. ತಂದೆಯಿಂದ ಅಪ್ಪಣೆಯನ್ನು ಪಡೆದು ನೀನು ಕಾಡಿಗೆ ಹೋಗುವಿಯಾದರೆ ನಾನು ಅದನ್ನು ತಡೆಯುತ್ತೇನೆ. ಆದರೆ ನನ್ನ ಮಾತನ್ನು ಮೀರಿ ರಾಜರ ಆಜ್ಞೆಯಂತೆಯೇ ನೀನು ಕಾಡಿಗೇ ಹೋಗುವಿಯಾದರೆ ನಾನು ಪ್ರಾಣವನ್ನು ಕಳೆದುಕೊಂಡು ಯಮಪುರಕ್ಕೆ ಹೊರಟು ಹೋಗುವೆನು.’’ ॥ 11-13॥

14
ಮೂಲಮ್

ಲಕ್ಷ್ಮಣೋಽಪಿ ತತಃ ಶ್ರುತ್ವಾ ಕೌಸಲ್ಯಾವಚನಂ ರುಷಾ ।
ಉವಾಚ ರಾಘವಂ ವೀಕ್ಷ್ಯ ದಹನ್ನಿವ ಜಗತಯಮ್ ॥

15
ಮೂಲಮ್

ಉನ್ಮತ್ತಂ ಭ್ರಾಂತಮನಸಂ ಕೈಕೇಯೀವಶವರ್ತಿನಮ್ ।
ಬದ್ಧ್ವಾ ನಿಹನ್ಮಿ ಭರತಂ ತದ್ಬಂಧೂನ್ಮಾತುಲಾನಪಿ ॥

16
ಮೂಲಮ್

ಅದ್ಯ ಪಶ್ಯಂತು ಮೇ ಶೌರ್ಯಂ ಲೋಕಾನ್ಪ್ರದಹತಃ ಪುರಾ ।
ರಾಮ ತ್ವಮಭಿಷೇಕಾಯ ಕುರು ಯತ್ನಮರಿಂದಮ ॥

ಅನುವಾದ

ಅನಂತರ ಲಕ್ಷ್ಮಣನು ಕೌಸಲ್ಯೆಯ ಮಾತನ್ನು ಕೇಳಿ ರಾಮನನ್ನು ಕುರಿತು ಮೂರು ಲೋಕಗಳನ್ನು ಸುಡುವವನಂತೆ ಕೋಪಗೊಂಡು ಹೀಗೆಂದನು ‘‘ಅಣ್ಣಾ! ಉನ್ಮತ್ತನೂ, ಭ್ರಾಂತ ಚಿತ್ತನೂ, ಕೈಕೆಯಿಗೆ ಅಧೀನನೂ ಆದ ತಂದೆಯನ್ನೂ, ಭರತನನ್ನೂ, ಅವನ ಬಂಧುಗಳಾದ ಸೋದರಮಾವಂದಿರನ್ನೂ ಕಟ್ಟಿಹಾಕಿ ಕೊಂದು ಬಿಡುವೆನು. ಈಗ ಲೋಕಗಳನ್ನೆಲ್ಲ ಸುಟ್ಟು ಬಿಡುವ ಕಾಲಾನಲನಂತಿರುವ ನನ್ನ ಪೌರುಷವನ್ನು ಎಲ್ಲರೂ ನೋಡಲಿ. ಹೇ ಶತ್ರುಸೂದನ ರಾಮಾ! ನೀನು ಪಟ್ಟಾಭಿಷಿಕ್ತನಾಗು. ॥14-16॥

17
ಮೂಲಮ್

ಧನುಷ್ಪಾಣಿರಹಂ ತತ್ರ ನಿಹನ್ಯಾಂ ವಿಘ್ನಕಾರಿಣಃ ।
ಇತಿ ಬ್ರುವಂತಂ ಸೌಮಿತ್ರಿಮಾಲಿಂಗ್ಯ ರಘುನಂದನಃ ॥

18
ಮೂಲಮ್

ಶೂರೋಽಸಿ ರಘುಶಾರ್ದೂಲ ಮಮಾತ್ಯಂತಹಿತೇ ರತಃ ।
ಜಾನಾಮಿ ಸರ್ವಂ ತೇ ಸತ್ಯಂ ಕಿಂತು ತತ್ಸಮಯೋ ನ ಹಿ ॥

ಅನುವಾದ

ಅದರಲ್ಲಿ ಅಡ್ಡಿ ಪಡಿಸುವವರನ್ನು ಧನುರ್ಧಾರಿಯಾದ ನಾನು ನಾಶಮಾಡುವೆನು.’’ ಹೀಗೆ ಹೇಳುತ್ತಿದ್ದ ಲಕ್ಷ್ಮಣನನ್ನು ರಘುನಾಥನು ಬಾಚಿ ತಬ್ಬಿಕೊಂಡು ಇಂತೆಂದನು ‘‘ಹೇ ರಘುಶ್ರೇಷ್ಠ ಲಕ್ಷ್ಮಣಾ! ನೀನು ಮಹಾ ಪರಾಕ್ರಮಿ ಮತ್ತು ನನ್ನ ಹಿತದಲ್ಲಿಯೇ ನಿರತನಾಗಿರುವುದು ಸರಿ! ಇದೆಲ್ಲವನ್ನು ನಾನು ಬಲ್ಲೆನು. ಆದರೆ ಅದಕ್ಕೆ ಈಗ ಸಕಾಲವಲ್ಲ. ॥17-18॥

19
ಮೂಲಮ್

ಯದಿದಂ ದೃಶ್ಯತೇ ಸರ್ವಂ ರಾಜ್ಯಂ ದೇಹಾದಿಕಂ ಚ ಯತ್ ।
ಯದಿ ಸತ್ಯಂ ಭವೇತ್ತತ್ರ ಆಯಾಸಃ ಸಲಶ್ಚ ತೇ ॥

20
ಮೂಲಮ್

ಭೋಗಾ ಮೇಘವಿತಾನಸ್ಥವಿದ್ಯುಲ್ಲೇಖೇವ ಚಂಚಲಾಃ ।
ಆಯುರಪ್ಯಗ್ನಿಸಂತಪ್ತಲೋಹಸ್ಥಜಲಬಿಂದುವತ್ ॥

21
ಮೂಲಮ್

ಯಥಾ ವ್ಯಾಲಗಲಸ್ಥೋಽಪಿ ಭೇಕೋ ದಂಶಾನಪೇಕ್ಷತೇ ।
ತಥಾ ಕಾಲಾಹಿನಾ ಗ್ರಸ್ತೋ ಲೋಕೋ ಭೋಗಾನಶಾಶ್ವತಾನ್ ॥

ಅನುವಾದ

ಈ ರಾಜ್ಯವು, ಶರೀರಾದಿಗಳೇ ಮುಂತಾಗಿ ಕಂಡು ಬರುವುದೆಲ್ಲವೂ ಸತ್ಯವಾಗಿದ್ದಿದ್ದರೆ ನಿನ್ನ ಪರಿಶ್ರಮವು ಸಾರ್ಥಕವಾಗುತ್ತಿತ್ತು. ಆದರೆ ಭೋಗಗಳಾದರೋ ಹರಡಿರುವ ಮೋಡಗಳ ನಡುವೆ ತೋರಿಬರುವ ಮಿಂಚಿನ ಬಳ್ಳಿಯಂತೆ ಅನಿತ್ಯವಾಗಿವೆ. ಆಯುಷ್ಯವಾದರೋ ಬೆಂಕಿಯಿಂದ ಕಾದ ಕಬ್ಬಿಣದ ಮೇಲೆ ಬಿದ್ದಿರುವ ಬಿಂದು ಜಲದಂತೆ ಕ್ಷಣಿಕವಾಗಿದೆ. ಹೆಬ್ಬಾವಿನ ಬಾಯಿಯಲ್ಲಿ ಸಿಕ್ಕಿಕೊಂಡಿದ್ದರೂ ಕಪ್ಪೆಯು ನೊಣಗಳಿಗೆ ನಾಲಿಗೆ ಚಾಚುವಂತೆಯೇ ಕಾಲನೆಂಬ ಮೃತ್ಯುವು ನುಂಗುತ್ತಿದ್ದರೂ ಪ್ರಪಂಚದ ಜನರು ಅಶಾಶ್ವತವಾದ ಭೋಗಗಳನ್ನು ಬಯಸುತ್ತಿರುತ್ತಾರೆ. ॥19-21॥

22
ಮೂಲಮ್

ಕರೋತಿ ದುಃಖೇನ ಹಿ ಕರ್ಮತಂತ್ರಂ
ಶರೀರಭೋಗಾರ್ಥಮಹರ್ನಿಶಂ ನರಃ ।
ದೇಹಸ್ತು ಭಿನ್ನಃ ಪುರುಷಾಸ್ತಮೀಕ್ಷ್ಯತೇ
ಕೋ ವಾತ್ರ ಭೋಗಃ ಪುರುಷೇಣ ಭುಜ್ಯತೇ ॥

ಅನುವಾದ

ಮನುಷ್ಯರು ಶರೀರಸುಖಕ್ಕಾಗಿ ಹಗಲೂ ರಾತ್ರಿಯೂ ಕರ್ಮವಶರಾಗಿ ಕಷ್ಟಗಳನ್ನು ಸಹಿಸಿಕೊಂಡು ಕಾರ್ಯಮಾಡುತ್ತಿರುತ್ತಾರೆ. ಆದರೆ ಆತ್ಮನಿಗಿಂತ ದೇಹವು ಬೇರೆಯೇ ಆಗಿದೆ, ಇದನ್ನು ತಿಳಿದಿರುವ ಪುರುಷನು ಯಾವ ಭೋಗಗಳನ್ನು ತಾನೇ ತನಗಾಗಿ ಅನುಭವಿಸಿಯಾನು? ॥22॥

23
ಮೂಲಮ್

ಪಿತೃಮಾತೃಸುತಭ್ರಾತೃದಾರಬಂಧ್ವಾದಿಸಂಗಮಃ ।
ಪ್ರಪಾಯಾಮಿವ ಜಂತೂನಾಂ ನದ್ಯಾಂ ಕಾಷ್ಠೌಘವಚ್ಚಲಃ ॥

ಅನುವಾದ

ತಂದೆ, ತಾಯಿ, ಮಗ, ಸೋದರ, ಹೆಂಡತಿ, ಬಂಧುಗಳೇ ಮುಂತಾದವರ ಸಂಬಂಧವು ಅರವಟ್ಟಿಗೆಗಳಲ್ಲಿ ಬಾಯಾರಿಕೆಯನ್ನು ತೀರಿಸಿಕೊಳ್ಳಲು ಒಟ್ಟುಗೂಡಿದ ಪ್ರಾಣಿಗಳಂತೆ ಅಥವಾ ಪ್ರವಾಹದಲ್ಲಿ ತೇಲಿಬಂದ ಮರದ ತುಂಡುಗಳಂತೆ ಕ್ಷಣ ಕಾಲಮಾತ್ರ ಒಡನಿದ್ದು, ಅನಂತರ ಅಗಲುವಂತಹವರು. ॥23॥

24
ಮೂಲಮ್

ಛಾಯೇವ ಲಕ್ಷ್ಮೀಶ್ಚಪಲಾ ಪ್ರತೀತಾ
ತಾರುಣ್ಯಮಂಬೂರ್ಮಿವದಧ್ರುವಂ ಚ ।
ಸ್ವಪ್ನೋಪಮಂ ಸ್ತ್ರೀಸುಖಮಾಯುರಲ್ಪಂ
ತಥಾಪಿ ಜಂತೋರಭಿಮಾನ ಏಷಃ ॥

ಅನುವಾದ

ಐಶ್ವರ್ಯವಾದರೋ ನೆರಳಿನಂತೆ ಅಶಾಶ್ವತವಾಗಿರುವುದು; ನೀರಿನ ಅಲೆಗಳಂತೆ ಯೌವನವು ಅನಿತ್ಯವಾಗಿರುವುದು; ಸ್ತ್ರೀಸುಖವಾದರೋ ಕನಸಿನಂತೆ ಮಿಥ್ಯೆಯಾಗಿದೆ. ಆಯುಷ್ಯವು ತೀರ ಸ್ವಲ್ಪವಾಗಿದೆ. ಆದರೂ ಈ ಮನುಷ್ಯರನ್ನು ನಾನು-ನನ್ನದು ಎಂಬ ಅಭಿಮಾನವು ಬಿಗಿದುಕೊಂಡಿದೆ. ॥24॥

25
ಮೂಲಮ್

ಸಂಸೃತಿಃ ಸ್ವಪ್ನಸದೃಶೀ ಸದಾ ರೋಗಾದಿಸಂಕುಲಾ ।
ಗಂಧರ್ವನಗರಪ್ರಖ್ಯಾ ಮೂಢಸ್ತಾಮನುವರ್ತತೇ ॥

ಅನುವಾದ

ಸಂಸಾರವೆಂಬುದು ಯಾವಾಗಲೂ ರೋಗಾದಿಗಳಿಂದ ಕೂಡಿರುವುದಾಗಿ ಸ್ವಪ್ನಸಮಾನವಾಗಿದೆ. ಗಂಧರ್ವ ನಗರದಂತೆ ಹುಸಿತೋರಿಕೆಯಾಗಿರುವ ಅದನ್ನು ದಡ್ಡನು ಮಾತ್ರ ಆಶ್ರಯಿಸುವನು. ॥25॥

26
ಮೂಲಮ್

ಆಯುಷ್ಯಂ ಕ್ಷೀಯತೇ ಯಸ್ಮಾದಾದಿತ್ಯಸ್ಯ ಗತಾಗತೈಃ ।
ದೃಷ್ಟ್ವಾನ್ಯೇಷಾಂ ಜರಾಮೃತ್ಯೂ ಕಥಂಚಿನ್ನೈವ ಬುಧ್ಯತೇ ॥

ಅನುವಾದ

ಸೂರ್ಯನ ಬರುವಿಕೆ, ಹೋಗುವಿಕೆಗಳಿಂದ ಆಯುಷ್ಯವು ಕ್ಷೀಣವಾಗುತ್ತಿದೆ. ಬೇರೊಬ್ಬರಿಗೆ ಸಂಭವಿಸುವ ಮುಪ್ಪು, ಮರಣಗಳನ್ನು ಕಂಡುಕೊಂಡಾದರೂ ಮಾನವನು ಒಮ್ಮೆಯೂ ಎಚ್ಚತ್ತುಕೊಳ್ಳುವುದಿಲ್ಲ. ॥26॥

27
ಮೂಲಮ್

ಸ ಏವ ದಿವಸಃ ಸೈವ ರಾತ್ರಿರಿತ್ಯೇವ ಮೂಢಧೀಃ ।
ಭೋಗಾನನುಪತತ್ಯೇವ ಕಾಲವೇಗಂ ನ ಪಶ್ಯತಿ ॥

ಅನುವಾದ

ನಿತ್ಯ ಅದೇ ದಿನ, ಅದೇ ರಾತ್ರಿಯೇ ಬರುತ್ತಿದೆ ಎಂಬ ಭ್ರಾಂತಿಯಿಂದ ಮೂಢನು ಭೋಗಗಳನ್ನು ಅನುಸರಿಸಿ ಕಾಲಕಳೆಯುತ್ತಾ ಮೃತ್ಯು ವಿನ ವೇಗವನ್ನು (ಬರುವಿಕೆಯನ್ನು) ಗಮನಿಸುತ್ತಿಲ್ಲ. ॥27॥

28
ಮೂಲಮ್

ಪ್ರತಿಕ್ಷಣಂ ಕ್ಷರತ್ಯೇತದಾಯುರಾಮಘಟಾಂಬುವತ್ ।
ಸಪತ್ನಾ ಇವ ರೋಗೌಘಾಃ ಶರೀರಂ ಪ್ರಹರಂತ್ಯಹೋ ॥

ಅನುವಾದ

ಹಸಿಯ ಮಡಕೆಯಲ್ಲಿರುವ ನೀರಿನಂತೆ ಪ್ರತಿಕ್ಷಣವೂ ಆಯುಸ್ಸು ಸೋರಿಹೋಗುತ್ತಿದೆ. ರೋಗಗಳ ಸಮೂಹವು ಸವತಿಯಂತೆ ಶರೀರವನ್ನು ಬಾಧಿಸುತ್ತಿದೆ. ॥28॥

29
ಮೂಲಮ್

ಜರಾ ವ್ಯಾಘ್ರೀವ ಪುರತಸ್ತರ್ಜಯಂತ್ಯವತಿಷ್ಠತೇ ।
ಮೃತ್ಯುಃ ಸಹೈವ ಯಾತ್ಯೇಷ ಸಮಯಂ ಸಂಪ್ರತೀಕ್ಷತೇ ॥

30
ಮೂಲಮ್

ದೇಹೇಽಹಂಭಾವಮಾಪನ್ನೋ ರಾಜಾಹಂ ಲೋಕವಿಶ್ರುತಃ ।
ಇತ್ಯಸ್ಮಿನ್ಮನುತೇ ಜಂತುಃ ಕೃಮಿವಿಡ್ಭಸ್ಮಸಂಜ್ಞಿತೇ ॥

ಅನುವಾದ

ಮುಪ್ಪು ಹೆಣ್ಣು ಹುಲಿಯಂತೆ ಗರ್ಜಿಸುತ್ತಾ ಎದುರಾಗಿದೆ. ಜೊತೆಯಲ್ಲೇ ಮೃತ್ಯುವೂ ಇದ್ದು ಕೊಂಡು ಸಮಯವನ್ನು ನಿರೀಕ್ಷಿಸುತ್ತಿದೆ. ಆದರೆ ಜೀವಿಯು ಕೇವಲ ಕ್ರಿಮಿಗಳು, ಮಲ, ಬೂದಿಯಾಗಿ ಮಾರ್ಪಾಡಾಗುವ ಈ ದೇಹದಲ್ಲಿ ನಾನು ನನ್ನದೆಂಬ ಅಭಿಮಾನವನ್ನು ಹೊಂದಿ ‘ರಾಜನಾದ ನಾನು ಲೋಕ ಪ್ರಸಿದ್ಧನು’ ಎಂದು ಭಾವಿಸುತ್ತಾನೆ. ॥29-30॥

31
ಮೂಲಮ್

ತ್ವಗಸ್ಥಿಮಾಂಸವಿಣ್ಮೂತ್ರರೇತೋರಕ್ತಾದಿಸಂಯುತಃ ।
ವಿಕಾರೀ ಪರಿಣಾಮೀ ಚ ದೇಹ ಆತ್ಮಾ ಕಥಂ ವದ ॥

32
ಮೂಲಮ್

ಯಮಾಸ್ಥಾಯ ಭವಾಂಲ್ಲೋಕಂ ದಗ್ಧುಮಿಚ್ಛತಿ ಲಕ್ಷ್ಮಣ ।
ದೇಹಾಭಿಮಾನಿನಃ ಸರ್ವೇ ದೋಷಾಃ ಪ್ರಾದುರ್ಭವಂತಿ ಹಿ ॥

ಅನುವಾದ

ಚರ್ಮ, ಎಲುಬು, ಮಾಂಸ, ರೇತಸ್ಸು, ಅಮೇಧ್ಯ, ಮೂತ್ರ, ರಕ್ತಗಳಿಂದ ಕೂಡಿ ವಿಕಾರ ಹೊಂದುವಂತಹ, ಬದಲಾವಣೆಯಾಗತಕ್ಕ ಈ ದೇಹವು ಹೇಗೆ ಆತ್ಮವಾದೀತೆಂಬುದನ್ನು ಹೇಳು? ಹೇ ಲಕ್ಷ್ಮಣಾ! ನೀನು ಈ ದೇಹವನ್ನು ಮುಂದುಮಾಡಿಕೊಂಡು ಲೋಕಗಳನ್ನೆಲ್ಲ ಸುಡುವೆನೆಂದು ಹೊರಟಿರುವೆಯೋ ಅದು ಸರಿಯಲ್ಲ. ದೇಹಾಭಿಮಾನಿಯಾದವನಿಗೇ ಈ ಎಲ್ಲ ದೋಷಗಳು ಕಾಣಿಸಿಕೊಳ್ಳುವುವು. ॥31-32॥

33
ಮೂಲಮ್

ದೇಹೋಽಹಮಿತಿ ಯಾ ಬುದ್ಧಿರವಿದ್ಯಾ ಸಾ ಪ್ರಕೀರ್ತಿತಾ ।
ನಾಹಂ ದೇಹಶ್ಚಿದಾತ್ಮೇತಿ ಬುದ್ಧಿರ್ವಿದ್ಯೇತಿ ಭಣ್ಯತೇ ॥

ಅನುವಾದ

ಈ ದೇಹವೇ ನಾನು ಎಂಬ ತಪ್ಪು ತಿಳಿವಳಿಕೆಯೇ ಅವಿದ್ಯೆಯು, ನಿಜವಾಗಿ ಈ ದೇಹವು ನಾನಲ್ಲ, ಚಿತ್ಸ್ವರೂಪನಾದ ಆತ್ಮನು ನಾನು ಎಂಬ ನಿಶ್ಚಯವೇ ವಿದ್ಯೆಯೆನಿಸುವುದು. ॥33॥

34
ಮೂಲಮ್

ಅವಿದ್ಯಾ ಸಂಸೃತೇರ್ಹೇತುರ್ವಿದ್ಯಾ ತಸ್ಯಾ ನಿವರ್ತಿಕಾ ।
ತಸ್ಮಾದ್ಯತ್ನಃ ಸದಾ ಕಾರ್ಯೋ ವಿದ್ಯಾಭ್ಯಾಸೇ ಮುಮುಕ್ಷುಭಿಃ ।
ಕಾಮಕ್ರೋಧಾದಯಸ್ತತ್ರ ಶತ್ರವಃ ಶತ್ರುಸೂದನ ॥

ಅನುವಾದ

ಅವಿದ್ಯೆಯೇ ಜನ್ಮ-ಮರಣರೂಪೀ ಸಂಸಾರಕ್ಕೆ ಕಾರಣವು. ವಿದ್ಯೆಯು ಅದನ್ನು ನಾಶಗೊಳಿಸುತ್ತದೆ. ಆದ್ದರಿಂದ ಮುಮುಕ್ಷುಗಳು ಯಾವಾಗಲೂ ವಿದ್ಯೆಯನ್ನು ಅನುಸಂಧಾನ ಮಾಡುವುದರಲ್ಲೇ ಕಾರ್ಯಮಗ್ನರಾಗಬೇಕು. ಹೇ ಶತ್ರುನಾಶಕನೇ! ಕಾಮ, ಕ್ರೋಧ ಮುಂತಾದವುಗಳೇ ವಿದ್ಯೆಯಲ್ಲಿ ವಿಘ್ನಗಳನ್ನೊಡ್ಡುವ ಶತ್ರುಗಳು. ॥34॥

35
ಮೂಲಮ್

ತತ್ರಾಪಿ ಕ್ರೋಧ ಏವಾಲಂ ಮೋಕ್ಷವಿಘ್ನಾಯ ಸರ್ವದಾ ।
ಯೇನಾವಿಷ್ಟಃ ಪುಮಾನ್ ಹಂತಿ ಪಿತೃಭ್ರಾತೃಸುಹೃತ್ಸಖೀನ್ ॥

ಅನುವಾದ

ಅದರಲ್ಲಿಯೂ ಮೋಕ್ಷಕ್ಕೆ ಅಡ್ಡಿಯನ್ನುಂಟುಮಾಡುವುದರಲ್ಲಿ ಕ್ರೋಧವೇ ಯಾವಾಗಲೂ ಮುಖ್ಯವಾದುದು; ಏಕೆಂದರೆ, ಅದರಿಂದ ಮೈಮರೆತವನು ತಂದೆ, ಸೋದರರನ್ನು, ಸುಹೃದರನ್ನು, ಬಂಧುಗಳನ್ನು ಕೂಡ ಕೊಂದು ಬಿಡುವನು. ॥35॥

36
ಮೂಲಮ್

ಕ್ರೋಧಮೂಲೋ ಮನಸ್ತಾಪಃ ಕ್ರೋಧಃ ಸಂಸಾರಬಂಧನಮ್ ।
ಧರ್ಮಕ್ಷಯಕರಃ ಕ್ರೋಧಸ್ತಸ್ಮಾತ್ಕ್ರೋಧಂ ಪರಿತ್ಯಜ ॥

ಅನುವಾದ

ಮನಸ್ಸಿನ ಉದ್ವೇಗಕ್ಕೆ ಕೋಪವೇ ಮೂಲವು, ಅದೇ ಸಂಸಾರವೆಂಬ ಬಂಧನವು. ಈ ಕೋಪವು ಧರ್ಮವನ್ನು ಕೂಡ ಕರಗಿಸಿಬಿಡುವುದು. ಆದ್ದರಿಂದ ಕೋಪವನ್ನು ಬಿಟ್ಟು ಬಿಡು. ॥36॥

37
ಮೂಲಮ್

ಕ್ರೋಧ ಏಷ ಮಹಾನ್ ಶತ್ರುಸ್ತೃಷ್ಣಾ ವೈತರಣೀ ನದೀ ।
ಸಂತೋಷೋ ನಂದನವನಂ ಶಾಂತಿರೇವ ಹಿ ಕಾಮಧುಕ್ ॥

ಅನುವಾದ

ಈ ಕ್ರೋಧವು ದೊಡ್ಡ ವೈರಿಯು. ಆಸೆ ಎಂಬುದೇ ವೈತರಣೀ ನದಿಯೆಂದು ತಿಳಿ. ಸಂತೋಷವೇ ನಂದನವನವು. ಶಾಂತಿಯೇ ಕಾಮಧೇನುವು.॥37॥

38
ಮೂಲಮ್

ತಸ್ಮಾಚ್ಛಾಂತಿಂ ಭಜಸ್ವಾದ್ಯ ಶತ್ರುರೇವಂ ಭವೇನ್ನ ತೇ ।
ದೇಹೇಂದ್ರಿಯಮನಃ ಪ್ರಾಣಬುದ್ಧ್ಯಾದಿಭ್ಯೋ ವಿಲಕ್ಷಣಃ ॥

39
ಮೂಲಮ್

ಆತ್ಮಾ ಶುದ್ಧಃ ಸ್ವಯಂಜ್ಯೋತಿರವಿಕಾರೀ ನಿರಾಕೃತಿಃ ।
ಯಾವದ್ದೇಹೇಂದ್ರಿಯಪ್ರಾಣೈರ್ಭಿನ್ನತ್ವಂ ನಾತ್ಮನೋ ವಿದುಃ ॥

40
ಮೂಲಮ್

ತಾವತ್ಸಂಸಾರದುಃಖೌಘೈಃ ಪೀಡ್ಯಂತೇ ಮೃತ್ಯುಸಂಯುತಾಃ ।
ತಸ್ಮಾತ್ತ್ವಂ ಸರ್ವದಾ ಭಿನ್ನಮಾತ್ಮಾನಂ ಹೃದಿ ಭಾವಯ ॥

41
ಮೂಲಮ್

ಬುದ್ಧ್ಯಾದಿಭ್ಯೋ ಬಹಿಃ ಸರ್ವಮನುವರ್ತಸ್ವ ಮಾ ಖಿದಃ ।
ಭುಂಜನ್ಪ್ರಾರಬ್ಧಮಖಿಲಂ ಸುಖಂ ವಾ ದುಃಖಮೇವ ವಾ ॥

ಅನುವಾದ

ಆದ್ದರಿಂದ ನೀನು ಶಾಂತಿಯನ್ನು ಹೊಂದುವವನಾಗು. ಹಾಗಾದರೆ ನಿನಗೆ ಶತ್ರು(ಕಾಮಾದಿಗಳು)ಗಳು ಇರಲಾರವು. ಆತ್ಮನು ದೇಹ, ಇಂದ್ರಿಯಗಳು, ಪ್ರಾಣಗಳು, ಮನಸ್ಸು, ಬುದ್ಧಿ ಇವುಗಳಿಗಿಂತ ವಿಲಕ್ಷಣವಾದ ಶುದ್ಧನಾದ ಸ್ವಯಂ ಜ್ಯೋತಿಯೂ ವಿಕಾರರಹಿತನೂ, ಆಕಾರವಿಲ್ಲದವನೂ ಆಗಿರುವನು. ದೇಹ, ಇಂದ್ರಿಯಗಳು, ಮನಸ್ಸು, ಪ್ರಾಣ, ಇವುಗಳಿಗಿಂತ ಆತ್ಮನು ಬೇರೆಯೆಂದು ತಿಳಿಯುವವರೆಗೆ ಜನರು ಮೃತ್ಯುವಿನಿಂದ ಕೂಡಿದವರಾಗಿ (ಶೋಕ, ಮೋಹಾದಿ) ಸಂಸಾರ ದುಃಖಗಳಿಂದ ಪೀಡಿತರಾಗುವರು. ಆದ್ದರಿಂದ ನೀನು ಯಾವಾಗಲೂ ಬುದ್ಧ್ಯಾದಿಗಳಿಗಿಂತ ಬೇರೆಯಾದ ಆತ್ಮನನ್ನೇ ಮನಸ್ಸಿನಲ್ಲಿ ತಿಳಿಯುವವನಾಗು. ಹೊರಗಡೆ (ವ್ಯವಹಾರದಲ್ಲಿ) ಎಲ್ಲವನ್ನು ಎಲ್ಲರಂತೆಯೇ ಅನುಸರಿಸುವವನಾಗು, ದುಃಖ ಪಡಬೇಡ. ಪ್ರಾರಬ್ಧ ಕರ್ಮಗಳೆಲ್ಲವನ್ನು ಭೋಗಿಸುತ್ತಾ ಸುಖವಾಗಲಿ, ದುಃಖವಾಗಲಿ, ಜೀವನದಲ್ಲಿ ಪ್ರವಾಹದಂತೆ ಒದಗಿ ಬಂದಿರುವುದನ್ನು ಅನುಭವಿಸುತ್ತಿದ್ದರೂ ನಿನಗೆ ಲೇಪವಾಗುವುದಿಲ್ಲ. ॥38-41॥

42
ಮೂಲಮ್

ಪ್ರವಾಹ ಪತಿತಂ ಕಾರ್ಯಂ ಕುರ್ವನ್ನಪಿ ನ ಲಿಪ್ಯಸೇ ।
ಬಾಹ್ಯೇ ಸರ್ವತ್ರ ಕರ್ತೃತ್ವಮಾವಹನ್ನಪಿ ರಾಘವ ॥

43
ಮೂಲಮ್

ಅಂತಃಶುದ್ಧಸ್ವಭಾವಸ್ತ್ವಂ ಲಿಪ್ಯಸೇ ನ ಚ ಕರ್ಮಭಿಃ ।
ಏತನ್ಮಯೋದಿತಂ ಕೃತ್ಸ್ನಂ ಹೃದಿ ಭಾವಯ ಸರ್ವದಾ ॥

ಅನುವಾದ

ಹೇ ರಘುಪುತ್ರ! ಬಾಹ್ಯ ಇಂದ್ರಿಯಗಳ ಮೂಲಕ ಉಪಸ್ಥಿತವಾಗುವ ಕರ್ಮಗಳನ್ನು ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದರೂ ನೀನು ಕರ್ಮಬಂಧನದಲ್ಲಿ ಬೀಳಲಾರೆ. ಅಂತಃಕರಣದಲ್ಲಿ ರಾಗ-ದ್ವೇಷ ರಹಿತ, ಶುದ್ಧ ಸ್ವಭಾವದಿಂದ ನೀನಿರುವ ಕಾರಣ ಕರ್ಮಗಳಿಂದ ಲಿಪ್ತನಾಗಲಾರೆ. ಈವರೆಗೆ ನಾನು ಹೇಳಿದ್ದನ್ನೆಲ್ಲ ಯಾವಾಗಲೂ ಹೃದಯದಲ್ಲಿ ನೆನೆಯುತ್ತಿರು. ॥42-43॥

44
ಮೂಲಮ್

ಸಂಸಾರದುಃಖೈರಖಿಲೈರ್ಬಾಧ್ಯಸೇ ನ ಕದಾಚನ ।
ತ್ವಮಪ್ಯಂಬ ಮಯಾಽಽದಿಷ್ಟಂ ಹೃದಿ ಭಾವಯ ನಿತ್ಯದಾ ॥

ಅನುವಾದ

ಹಾಗಾದರೆ ಎಲ್ಲ ಸಂಸಾರ ದುಃಖಗಳ ಬಾಧೆಗಳಿಂದಲೂ ಮುಕ್ತನಾಗುವೆ. ಅಮ್ಮಾ! ನೀನೂ ಕೂಡ ನಾನು ಉಪದೇಶಮಾಡಿದ್ದನ್ನು ಯಾವಾಗಲೂ ಹೃದಯದಲ್ಲಿ ಚಿಂತಿಸುತ್ತಿರು. ॥44॥

45
ಮೂಲಮ್

ಸಮಾಗಮಂ ಪ್ರತೀಕ್ಷಸ್ವ ನ ದುಃಖೈಃ ಪೀಡ್ಯಸೇ ಚಿರಮ್ ।
ನ ಸದೈಕತ್ರ ಸಂವಾಸಃ ಕರ್ಮಮಾರ್ಗಾನುವರ್ತಿನಾಮ್ ॥

46
ಮೂಲಮ್

ಯಥಾ ಪ್ರವಾಹಪತಿತಪ್ಲವಾನಾಂ ಸರಿತಾಂ ತಥಾ ।
ಚತುರ್ದಶಸಮಾಸಂಖ್ಯಾ ಕ್ಷಣಾರ್ದ್ಧಮಿವ ಜಾಯತೇ ॥

47
ಮೂಲಮ್

ಅನುಮನ್ಯಸ್ವ ಮಾಮಂಬ ದುಃಖಂ ಸಂತ್ಯಜ್ಯ ದೂರತಃ ।
ಏವಂ ಚೇತ್ಸುಖಸಂವಾಸೋ ಭವಿಷ್ಯತಿ ವನೇ ಮಮ ॥

ಅನುವಾದ

ಮತ್ತೆ ನಾನು ಹಿಂದಿರುಗಿ ಬರುವುದನ್ನೇ ನಿರೀಕ್ಷಿಸುತ್ತಾ ಕಾದುಕೊಂಡಿರು. ಹಾಗಾದರೆ ಬಹಳಕಾಲ ದುಃಖಗಳಿಂದ ಪೀಡಿತಳಾಗದೇ ಇರುವೆ. ಕರ್ಮಮಾರ್ಗವನ್ನನುಸರಿಸುವ ಜೀವರಿಗೆ ಹೇಗೆ ನದಿಯ ಪ್ರವಾಹದಲ್ಲಿ ಬಿದ್ದಿರುವ ದೋಣಿಗಳಿಗೆ ಒಂದೇ ಜಾಗದಲ್ಲಿ ಇರುವಿಕೆಯು ಸಾಧ್ಯವಾಗಲಾರದೋ, ಗತಿಯು ಒಂದೇ ಸ್ಥಳಕ್ಕೆ ಇರಲಾರದೋ ಹಾಗೇ ಒಂದೇ ಸ್ಥಳದಲ್ಲಿ ವಾಸವು ದೊರಕಲಾರದು. ತಾಯೇ! ಈ ಹದಿನಾಲ್ಕು ವರ್ಷದ ಅವಧಿಯು ಅರ್ಧ ಕ್ಷಣದಂತೆ ಕಳೆದು ಹೋಗುವುದು. ಈಗ ದುಃಖವನ್ನು ದೂರೀಕರಿಸಿ ನನಗೆ ಅಪ್ಪಣೆಯನ್ನು ಕೊಡು. ಹೀಗೆ ನೀನು ಮಾಡುವುದರಿಂದ ವನವಾಸವು ಸುಖಕರವಾಗುವುದು’’ ॥45-47॥

48
ಮೂಲಮ್

ಇತ್ಯುಕ್ತ್ವಾ ದಂಡವನ್ಮಾತುಃ ಪಾದಯೋರಪತಚ್ಚಿರಮ್ ।
ಉತ್ಥಾಪ್ಯಾಂಕೇ ಸಮಾವೇಶ್ಯ ಆಶೀರ್ಭಿರಭ್ಯನಂದಯತ್ ॥

49
ಮೂಲಮ್

ಸರ್ವೇ ದೇವಾಃ ಸಗಂಧರ್ವಾ ಬ್ರಹ್ಮವಿಷ್ಣುಶಿವಾದಯಃ ।
ರಕ್ಷಂತು ತ್ವಾಂ ಸದಾ ಯಾಂತಂ ತಿಷ್ಠಂತಂ ನಿದ್ರಯಾ ಯುತಮ್ ॥

ಅನುವಾದ

ಹೀಗೆಂದು ಹೇಳಿ ಶ್ರೀರಾಮ ಚಂದ್ರನು ತಾಯಿಯ ಎರಡೂ ಪಾದಗಳ ಮೇಲೆ ದೀರ್ಘದಂಡ ನಮಸ್ಕಾರಮಾಡಿ ಎಷ್ಟೋ ಹೊತ್ತಿನವರೆಗೆ ಹಾಗೆಯೇ ಇದ್ದನು. ಕೌಸಲ್ಯೆಯು ಅವನನ್ನು ಮೇಲಕ್ಕೆಬ್ಬಿಸಿ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಆಶೀರ್ವಾದಗಳಿಂದ ಹರಸಿದಳು ‘‘ನಿನ್ನನ್ನು ಎಲ್ಲ ದೇವತೆಗಳೂ, ಗಂಧರ್ವರೂ, ಬ್ರಹ್ಮ, ವಿಷ್ಣು, ಮಹೇಶ್ವರ ಇವರೆಲ್ಲರೂ ನೀನು ನಡೆಯುತ್ತಿರುವಾಗ, ನಿದ್ರಿಸುತ್ತಿರುವಾಗ, ನಿಂತಿರುವಾಗ ಹೀಗೆ ಎಲ್ಲಾ ಕಾಲಗಳಲ್ಲಿಯೂ ಕಾಪಾಡಲೀ. ॥48-49॥

50
ಮೂಲಮ್

ಇತಿ ಪ್ರಸ್ಥಾಪಯಾಮಾಸ ಸಮಾಲಿಂಗ್ಯ ಪುನಃ ಪುನಃ ।
ಲಕ್ಷ್ಮಣೋಽಪಿ ತದಾ ರಾಮಂ ನತ್ವಾ ಹರ್ಷಾಶ್ರುಗದ್ಗದಃ ॥

51
ಮೂಲಮ್

ಆಹ ರಾಮ ಮಮಾಂತಃ ಸ್ಥಃ ಸಂಶಯೋಽಯಂ ತ್ವಯಾಹೃತಃ ।
ಯಾಸ್ಯಾಮಿ ಪೃಷ್ಠತೋ ರಾಮ ಸೇವಾಂ ಕರ್ತುಂ ತದಾದಿಶ ॥

ಅನುವಾದ

ಹೀಗೆಂದು ಹರಸಿ ಮತ್ತೆ-ಮತ್ತೆ ಆಲಂಗಿಸಿಕೊಂಡು ಅನಂತರ ಕಳುಹಿಸಿಕೊಟ್ಟಳು. ಆಗ ಲಕ್ಷ್ಮಣನು ರಾಮನಿಗೆ ನಮಸ್ಕರಿಸಿ, ಹರ್ಷಾಶ್ರುಗಳನ್ನು ಸುರಿಸುತ್ತಾ ಗದ್ಗದಕಂಠನಾಗಿ ರಾಮನಲ್ಲಿ ಹೇಳಿದನು ‘‘ಅಣ್ಣಾ! ನೀನು ನನ್ನ ಆಂತರಿಕ ಸಂಶಯವನ್ನು ದೂರ ಮಾಡಿದೆ. ಈಗ ನಾನು ನಿನ್ನ ಸೇವೆಯನ್ನು ಮಾಡುವುದಕ್ಕಾಗಿ ನಿನ್ನ ಹಿಂದೆಯೇ ಬರುವೆನು. ಅದಕ್ಕೆ ಅಪ್ಪಣೆ ಮಾಡು. ॥50-51॥

52
ಮೂಲಮ್

ಅನುಗೃಹ್ಣೀಷ್ವ ಮಾಂ ರಾಮ ನೋಚೇತ್ಪ್ರಾಣಾಂಸ್ತ್ಯಜಾಮ್ಯಹಮ್ ।
ತಥೇತಿ ರಾಘವೋಽಪ್ಯಾಹ ಲಕ್ಷ್ಮಣಂ ಯಾಹಿ ಮಾಚಿರಮ್ ॥

ಅನುವಾದ

ಹೇ ಪ್ರಭೋ! ನನ್ನನ್ನು ಹೀಗೆ ಅನುಗ್ರಹಿಸು. ಹಾಗಿಲ್ಲದಿದ್ದರೆ ನಾನು ಪ್ರಾಣ ತ್ಯಾಗಮಾಡಿ ಬಿಡುವೆನು.’’ ಆಗ ರಘುನಾಥನು ಲಕ್ಷ್ಮಣನಲ್ಲಿ ‘‘ಆಗಲೀ, ಹಾಗೆಯೇ ಮಾಡು, ತಡಮಾಡಬೇಡ, ಬೇಗನೇ ಬಂದು ಬಿಡು’’ ಎಂದನು. ॥52॥

53
ಮೂಲಮ್

ಪ್ರತಸ್ಥೇ ತಾಂ ಸಮಾಧಾತುಂ ಗತಃ ಸೀತಾಪತಿರ್ವಿಭುಃ ।
ಆಗತಂ ಪತಿಮಾಲೋಕ್ಯ ಸೀತಾ ಸುಸ್ಮಿತಭಾಷಿಣೀ ॥

54
ಮೂಲಮ್

ಸ್ವರ್ಣಪಾತ್ರಸ್ಥಸಲಿಲೈಃ ಪಾದೌ ಪ್ರಕ್ಷಾಲ್ಯ ಭಕ್ತಿತಃ ।
ಪಪ್ರಚ್ಛ ಪತಿಮಾಲೋಕ್ಯ ದೇವ ಕಿಂ ಸೇನಯಾ ವಿನಾ ॥

55
ಮೂಲಮ್

ಆಗತೋಽಸಿ ಗತಃ ಕುತ್ರ ಶ್ವೇತಚ್ಛತ್ರಂ ಚ ತೇ ಕುತಃ ।
ವಾದಿತ್ರಾಣಿ ನ ವಾದ್ಯಂತೇ ಕಿರೀಟಾದಿವಿವರ್ಜಿತಃ ॥

ಅನುವಾದ

ಅನಂತರ ಸರ್ವವ್ಯಾಪಕನಾದ ಸೀತಾಪತಿಯಾದ ಭಗವಾನ್ ಶ್ರೀರಾಮನು ಸೀತೆಯನ್ನು ಸಮಾಧಾನ ಪಡಿಸಲು ಹೊರಟನು. ತನ್ನ ಬಳಿಗೆ ಬಂದ ಪತಿಯನ್ನು ನೋಡಿದ ಸೀತೆಯು ಮುಗುಳು ನಗೆಯಿಂದ ಮಾತುಗಳನ್ನಾಡುತ್ತಾ ಭಕ್ತಿಯಿಂದ ಚಿನ್ನದ ಪಾತ್ರೆಯಲ್ಲಿ ನೀರನ್ನು ತಂದು ಪತಿಯ ಚರಣಗಳನ್ನು ತೊಳೆದು ಒಡೆಯನ ಕಡೆಗೆ ನೋಡುತ್ತಾ ಕೇಳುತ್ತಾಳೆ ‘‘ಸ್ವಾಮಿ! ಇದೇನು? ಸೈನ್ಯದ ಗೌರವವಿಲ್ಲದೆ ಒಬ್ಬರೇ ಬಂದಿರುವಿರಲ್ಲ! ಬೆಳಿಗ್ಗೆ ಎಲ್ಲಿಗೆ ಹೋಗಿ ಬಂದಿರಿ? ರಾಜ ಚಿಹ್ನೆಯಾದ ಶ್ವೇತಚ್ಛತ್ರ ಏನಾಯಿತು? ವಾದ್ಯಗಳ ಮೊಳಗುವಿಕೆ ಏಕೆ ನಿಂತುಹೋದುವು? ಕಿರೀಟಾದಿ ರಾಜೋಚಿತ ಭೂಷಣರಹಿತರೇಕೆ ಇರುವಿರಿ? ॥53-55॥

56
ಮೂಲಮ್

ಸಾಮಂತರಾಜಸಹಿತಃ ಸಂಭ್ರಮಾನ್ನಾಗತೋಽಸಿ ಕಿಮ್ ।
ಇತಿ ಸ್ಮ ಸೀತಯಾ ಪೃಷ್ಟೋ ರಾಮಃ ಸಸ್ಮಿತಮಬ್ರವೀತ್ ॥

57
ಮೂಲಮ್

ರಾಜ್ಞಾ ಮೇ ದಂಡಕಾರಣ್ಯೇ ರಾಜ್ಯಂ ದತ್ತಂ ಶುಭೇಽಖಿಲಮ್ ।
ಅತಸ್ತತ್ಪಾಲನಾರ್ಥಾಯ ಶೀಘ್ರಂ ಯಾಸ್ಯಾಮಿ ಭಾಮಿನಿ ॥

ಅನುವಾದ

ಸಾಮಂತರಾಜರುಗಳೊಡಗೂಡಿ ಸಂಭ್ರಮದಿಂದ ಏಕೆ ಬರಲಿಲ್ಲ?’’ ಸೀತೆಯು ಹೀಗೆ ಕೇಳಿದಾಗ ಶ್ರೀರಾಮನು ಮುಗುಳುನಗುತ್ತಾ ಹೇಳಿದನು ‘‘ಎಲೈ ಶುಭಳೇ! ಮಹಾರಾಜರು ನನಗೆ ದಂಡಕಾರಣ್ಯದ ಸಮಸ್ತ ರಾಜ್ಯವನ್ನು ಕೊಟ್ಟಿರುವರು. ಆದ್ದರಿಂದ ಅದನ್ನು ಕಾಪಾಡುವುದಕ್ಕಾಗಿ ತಂದೆಯ ಆಜ್ಞೆಯನ್ನು ಪಾಲಿಸಲಿಕ್ಕಾಗಿ ನಾನು ಶೀಘ್ರವಾಗಿ ಹೊರಡಲಿರುವೆನು. ॥56-57॥

58
ಮೂಲಮ್

ಅದ್ಯೈವ ಯಾಸ್ಯಾಮಿ ವನಂ ತ್ವಂ ತು ಶ್ವಶ್ರೂಸಮೀಪಗಾ ।
ಶುಶ್ರೂಷಾಂ ಕುರು ಮೇ ಮಾತುರ್ನ ಮಿಥ್ಯಾವಾದಿನೋ ವಯಮ್ ॥

ಅನುವಾದ

ಹೇ ಭಾಮಿನಿ! ಇಂದೇ ನಾನು ಕಾಡಿಗೆ ಹೋಗುವೆನು. ನೀನಾದರೋ ಅತ್ತೆಯ ಸಮೀಪದಲ್ಲಿದ್ದುಕೊಂಡು ಅವಳ ಸೇವೆಯನ್ನು ಮಾಡಿಕೊಂಡಿರು. ಇದನ್ನು ನಾನು ಪಾರಿಹಾಸ್ಯಕ್ಕಾಗಿ ಹೇಳುತ್ತಿಲ್ಲ. ॥58॥

59
ಮೂಲಮ್

ಇತಿ ಬ್ರುವಂತಂ ಶ್ರೀರಾಮಂ ಸೀತಾ ಭೀತಾಬ್ರವೀದ್ವಚಃ ।
ಕಿಮರ್ಥಂ ವನರಾಜ್ಯಂ ತೇ ಪಿತ್ರಾ ದತ್ತಂ ಮಹಾತ್ಮನಾ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಸೀತೆಯು ಭಯಗೊಂಡು ಹೇಳಿದಳು ‘‘ಮಹಾತ್ಮರಾದ ನಿಮ್ಮ ತಂದೆಯವರು ನಿಮಗೆ ವನರಾಜ್ಯವನ್ನು ಏಕೆ ಕೊಟ್ಟರು?’’ ॥59॥

60
ಮೂಲಮ್

ತಾಮಾಹ ರಾಮಃ ಕೈಕೇಯ್ಯೈ ರಾಜಾ ಪ್ರೀತೋ ವರಂ ದದೌ ।
ಭರತಾಯ ದದೌ ರಾಜ್ಯಂ ವನವಾಸಂ ಮಮಾನಘೇ ॥

ಅನುವಾದ

ಆಗ ರಾಮನೆಂದನು - ‘‘ಹೇ ನಿಷ್ಪಾಪಳಾದ ಸೀತಾ! ಮಹಾರಾಜರು ಸಂತೋಷಗೊಂಡು ಕೈಕೆಯಿಗೆ ವರವನ್ನಿತ್ತು ಭರತನಿಗೆ ರಾಜ್ಯವನ್ನು ಮತ್ತು ನನಗೆ ವನವಾಸವನ್ನು ಅನುಗ್ರಹಿಸಿದರು. ॥60॥

61
ಮೂಲಮ್

ಚತುರ್ದಶ ಸಮಾಸ್ತತ್ರ ವಾಸೋ ಮೇ ಕಿಲ ಯಾಚಿತಃ ।
ತಯಾ ದೇವ್ಯಾ ದದೌ ರಾಜಾ ಸತ್ಯವಾದೀ ದಯಾಪರಃ ॥

ಅನುವಾದ

ಕೈಕೆಯಾಮ್ಮನವರು ನಾನು ಹದಿನಾಲ್ಕು ವರ್ಷಗಳವರೆಗೆ ವನದಲ್ಲಿರಲು ಬೇಡಿದ್ದರು. ನನ್ನ ಮೇಲೆ ಅಪಾರ ದಯೆ, ಪ್ರೇಮ ವಿರಿಸುವ ಮಹಾರಾಜರು ತಮ್ಮ ಮಾತನ್ನು ನಡೆಸಲು ಕೈಕೆಯಮ್ಮನ ವರವನ್ನು ಸ್ವೀಕರಿಸಬೇಕಾಯಿತು. ॥61॥

62
ಮೂಲಮ್

ಅತಃ ಶೀಘ್ರಂ ಗಮಿಷ್ಯಾಮಿ ಮಾ ವಿಘ್ನಂ ಕುರು ಭಾಮಿನಿ ।
ಶ್ರುತ್ವಾ ತದ್ರಾಮವಚನಂ ಜಾನಕೀ ಪ್ರೀತಿಸಂಯುತಾ ॥

63
ಮೂಲಮ್

ಅಹಮಗ್ರೇ ಗಮಿಷ್ಯಾಮಿ ವನಂ ಪಶ್ಚಾತ್ತ್ವಮೇಷ್ಯಸಿ ।
ಇತ್ಯಾಹ ಮಾಂ ವಿನಾ ಗಂತುಂ ತವ ರಾಘವ ನೋಚಿತಮ್ ॥

ಅನುವಾದ

ಆದ್ದರಿಂದ ನಾನು ಬೇಗನೇ ಹೊರಡಲಿರುವೆನು. ಹೇ ಭಾಮಿನಿಯೇ! ನೀನು ಇದರಲ್ಲಿ ಯಾವ ವಿಘ್ನವನ್ನು ತಂದೊಡ್ಡಬೇಡ. ರಾಮನ ಆ ಮಾತನ್ನು ಕೇಳಿ ಸೀತೆಯು ಪ್ರೀತಿಯಿಂದೊಡಗೊಂಡು ‘‘ರಾಘವಾ! ಕಾಡಿಗೆ ಮುಂದಾಗಿ ನಾನು ಹೋಗುವೆನು; ಅನಂತರ ನೀನು ಬರುವಿಯಂತೆ; ನನ್ನನ್ನು ಬಿಟ್ಟು ಹೋಗುವುದು ಉಚಿತವಲ್ಲ’’ ಎಂದು ಹೇಳಿದಳು. ॥62-63॥

64
ಮೂಲಮ್

ತಾಮಾಹ ರಾಘವಃ ಪ್ರೀತಃ ಸ್ವಪ್ರಿಯಾಂ ಪ್ರಿಯವಾದಿನೀಮ್ ।
ಕಥಂ ವನಂ ತ್ವಾಂ ನೇಷ್ಯೇಽಹಂ ಬಹುವ್ಯಾಘ್ರಮೃಗಾಕುಲಮ್ ॥

ಅನುವಾದ

ಪ್ರಿಯವಾದ ಮಾತುಗಳನ್ನಾಡುವ ತನ್ನ ಮಡದಿಯನ್ನು ಕುರಿತು ಶ್ರೀರಾಮನು ಸಂತುಷ್ಟನಾಗಿ ಆಕೆಗೆ ಹೀಗೆ ಹೇಳಿದನು ‘‘ಬಹಳವಾಗಿ ಹುಲಿಯೇ ಮುಂತಾದವುಗಳಿಂದ ಕೂಡಿದ ಕಾಡಿಗೆ ನಿನ್ನನ್ನು ನಾನು ಹೇಗೆ ಕರೆದೊಯ್ಯಲಿ? ॥64॥

65
ಮೂಲಮ್

ರಾಕ್ಷಸಾ ಘೋರರೂಪಾಶ್ಚ ಸಂತಿ ಮಾನುಷಭೋಜಿನಃ ।
ಸಿಂಹವ್ಯಾಘ್ರವರಾಹಾಶ್ಚ ಸಂಚರಂತಿ ಸಮಂತತಃ ॥

66
ಮೂಲಮ್

ಕಟ್ವಮ್ಲಫಲಮೂಲಾನಿ ಭೋಜನಾರ್ಥಂ ಸುಮಧ್ಯಮೇ ।
ಅಪೂಪಾನಿ ವ್ಯಂಜನಾನಿ ವಿದ್ಯಂತೇ ನ ಕದಾಚನ ॥

ಅನುವಾದ

ಅಲ್ಲಿ ಭಯಂಕರರಾದ ಮನುಷ್ಯರನ್ನೇ ತಿಂದುಹಾಕುವಂತಹ ರಾಕ್ಷಸರೂ, ಸಿಂಹ, ಹುಲಿ, ಕಾಡುಹಂದಿ ಮೊದಲಾದ ಕ್ರೂರ ಮೃಗಗಳು ಸಂಚರಿಸುತ್ತಿರುವವು. ಹೇ ಸುಂದರೀ ಸೀತೆ! ಅಲ್ಲಿ ಕಹಿ, ಹುಳಿಯಾದ ಹಣ್ಣುಗಳು, ಗೆಡ್ಡೆ-ಗೆಣಸುಗಳು, ಭೋಜನಕ್ಕಾಗಿ ದೊರೆಯುವವು. ಕಡಬುಗಳು, ತರಕಾರಿಗಳು ಎಂದಿಗೂ ಸಿಗಲಾರವು. ॥ 65-66॥

67
ಮೂಲಮ್

ಕಾಲೇ ಕಾಲೇ ಫಲಂ ವಾಪಿ ವಿದ್ಯತೇ ಕುತ್ರ ಸುಂದರಿ ।
ಮಾರ್ಗೋ ನ ದೃಶ್ಯತೇ ಕ್ವಾಪಿ ಶರ್ಕರಾಕಂಟಕಾನ್ವಿತಃ ॥

ಅನುವಾದ

ಎಲೈ ಸುಂದರಿಯೇ! ಹಣ್ಣುಗಳೂ ಕೂಡ ಬೇಕಾದಾಗಲೆಲ್ಲ, ಕಾಲಕಾಲಕ್ಕೆ ಎಲ್ಲಿ ಸಿಗಬಲ್ಲವು? ಕಲ್ಲು ಮುಳ್ಳುಗಳಿಂದ ಕೂಡಿದ ಆ ಕಾಡಿನಲ್ಲಿ ದಾರಿಯೂ ಇರುವುದಿಲ್ಲ. ॥67॥

68
ಮೂಲಮ್

ಗುಹಾಗಹ್ವರಸಂಬಾಧಂ ಝಿಲ್ಲೀದಂಶಾದಿಭಿರ್ಯುತಮ್ ।
ಏವಂ ಬಹುವಿಧಂ ದೋಷಂ ವನಂ ದಂಡಕಸಂಜ್ಞಿತಮ್ ॥

ಅನುವಾದ

ದಟ್ಟವಾದ ಪೊದೆಗಳಿಂದಲೂ, ಗುಹೆಗಳಿಂದಲೂ ಕೂಡಿರುವ ಹಾಗೂ ಚಿಗಟ, ಸೊಳ್ಳೆಗಳಿಂದ ತುಂಬಿರುವ ದಂಡಕಾರಣ್ಯವೆಂಬ ಕಾಡು ಅನೇಕ ವಿಧವಾದ ತೊಂದರೆಗಳಿಂದ ಕೂಡಿರುತ್ತದೆ. ॥68॥

69
ಮೂಲಮ್

ಪಾದಚಾರೇಣ ಗಂತವ್ಯಂ ಶೀತವಾತಾತಪಾದಿಮತ್ ।
ರಾಕ್ಷಸಾದೀನ್ವನೇ ದೃಷ್ಟ್ವಾ ಜೀವಿತಂ ಹಾಸ್ಯಸೇಽಚಿರಾತ್ ॥

ಅನುವಾದ

ಅಲ್ಲಿ ಕಾಲು ನಡಿಗೆಯಿಂದಲೇ ಹೋಗಬೇಕು. ಚಳಿ, ಗಾಳಿ, ಬಿಸಿಲುಗಳಿಂದ ಕೂಡಿರುವ ಆ ಜಾಗವು ವಾಸಕ್ಕೆ ಕಷ್ಟಕರವು. ರಾಕ್ಷಸರೇ ಮುಂತಾದ ಭಯಂಕರ ರೂಪಗಳನ್ನು ಕಂಡು ನೀನು ಹೆದರಿ ಬಹುಬೇಗನೇ ಪ್ರಾಣಗಳನ್ನು ಬಿಟ್ಟು ಬಿಡುತ್ತೀಯೆ. ॥69॥

70
ಮೂಲಮ್

ತಸ್ಮಾದ್ಭದ್ರೇ ಗೃಹೇ ತಿಷ್ಠ ಶೀಘ್ರಂ ದ್ರಕ್ಷ್ಯಸಿ ಮಾಂ ಪುನಃ ।
ರಾಮಸ್ಯ ವಚನಂ ಶ್ರುತ್ವಾ ಸೀತಾ ದುಃಖಸಮನ್ವಿತಾ ॥

71
ಮೂಲಮ್

ಪ್ರತ್ಯುವಾಚ ಸ್ಫುರದ್ವಕ್ತ್ರಾ ಕಿಂಚಿತ್ಕೋಪಸಮನ್ವಿತಾ ।
ಕಥಂ ಮಾಮಿಚ್ಛಸೇ ತ್ಯಕ್ತುಂ ಧರ್ಮಪತ್ನೀಂ ಪತಿವ್ರತಾಮ್ ॥

ಅನುವಾದ

ಆದ್ದರಿಂದ ಹೇ ಭದ್ರೆ! ನೀನು ಮನೆಯಲ್ಲೇ ಇದ್ದುಕೊಂಡಿರು. ಮತ್ತೆ ಬೇಗನೆ ನನ್ನನ್ನು ನೋಡುವಿಯಂತೆ.’’ ಶ್ರೀರಾಮನ ಮಾತನ್ನು ಕೇಳಿ ದುಃಖದಿಂದ ಕೂಡಿದ ಸೀತೆಯು ಕೊಂಚ ಕೋಪಗೊಂಡು, ತುಟಿಗಳು ಅದರುತ್ತಿರಲು ರಾಮನಲ್ಲಿ ಹೇಳಿದಳು ‘‘ಧರ್ಮಪತ್ನಿಯೂ, ಪತಿವ್ರತೆಯೂ ಆದ, ನನ್ನನ್ನು ಮನೆಯಲ್ಲಿ ಬಿಡಲು ನೀವು ಹೇಗೆ ಬಯಸುವಿರಿ? ॥70-71॥

72
ಮೂಲಮ್

ತ್ವದನನ್ಯಾಮದೋಷಾಂ ಮಾಂ ಧರ್ಮಜ್ಞೋಽಸಿ ದಯಾಪರಃ ।
ತ್ವತ್ಸಮೀಪೇ ಸ್ಥಿತಾಂ ರಾಮ ಕೋ ವಾ ಮಾಂ ಧರ್ಷಯೇದ್ವನೇ ॥

ಅನುವಾದ

ದೋಷರಹಿತಳಾದ, ಎಂದೆಂದಿಗೂ ನಿಮಗಿಂತ ಬೇರೆಯಲ್ಲದ ನನ್ನನ್ನು ದಯಾಪೂರ್ಣರೂ, ಧರ್ಮವನ್ನು ಅರಿತಿರುವವರೂ ಆದ ನೀವು ಬಿಡಲು ಹೇಗೆ ಇಷ್ಟ ಪಡುವಿರಿ? ಹೇ ರಾಮಾ! ನಿಮ್ಮ ಸಮೀಪದಲ್ಲಿಯೇ ಇದ್ದುಕೊಂಡಿರುವ ನನ್ನನ್ನು ಯಾರು ತಾನೇ ಕೆಡಿಸಬಲ್ಲರು? ॥72॥

73
ಮೂಲಮ್

ಫಲಮೂಲಾದಿಕಂ ಯದ್ಯತ್ತವ ಭುಕ್ತಾವಶೇಷಿತಮ್ ।
ತದೇವಾಮೃತತುಲ್ಯಂ ಮೇ ತೇನ ತುಷ್ಟಾ ರಮಾಮ್ಯಹಮ್ ॥

ಅನುವಾದ

ನೀವು ತಿಂದು ಉಳಿದಿರುವ ಕಂದ ಮೂಲ ಫಲಗಳೇ ನನಗೆ ಅಮೃತಸಮಾನವು. ಅದರಿಂದಲೇ ತೃಪ್ತಳಾಗಿ ಆನಂದದಿಂದ ಇರುವೆನು. ॥73॥

74
ಮೂಲಮ್

ತ್ವಯಾ ಸಹ ಚರಂತ್ಯಾ ಮೇ ಕುಶಾಃ ಕಾಶಾಶ್ಚಕಂಟಕಾಃ ।
ಪುಷ್ಪಾಸ್ತರಣತುಲ್ಯಾ ಮೇ ಭವಿಷ್ಯಂತಿ ನ ಸಂಶಯಃ ॥

ಅನುವಾದ

ನಿಮ್ಮೊಡನೆ ಸಂಚರಿಸುವಾಗ ಹುಲ್ಲು, ದರ್ಭೆಗಳು, ಮುಳ್ಳುಗಳೂ ಕೂಡ ಹೂವಿನ ಹಾಸಿಗೆಯಂತೆ ಸುಖಕರವಾಗುವುದರಲ್ಲಿ ಸಂಶಯವೇ ಇಲ್ಲ. ॥74॥

75
ಮೂಲಮ್

ಅಹಂ ತ್ವಾ ಕ್ಲೇಶಯೇ ನೈವ ಭವೇಯಂ ಕಾರ್ಯಸಾಧಿನೀ ।
ಬಾಲ್ಯೇ ಮಾಂ ವೀಕ್ಷ್ಯ ಕಶ್ಚಿದ್ವೈಜ್ಯೋತಿಃ ಶಾಸ್ತ್ರವಿಶಾರದಃ ॥

76
ಮೂಲಮ್

ಪ್ರಾಹ ತೇ ವಿಪಿನೇ ವಾಸಃ ಪತ್ಯಾ ಸಹ ಭವಿಷ್ಯತಿ ।
ಸತ್ಯವಾದೀ ದ್ವಿಜೋ ಭೂಯಾದ್ಗಮಿಷ್ಯಾಮಿ ತ್ವಯಾ ಸಹ ॥

ಅನುವಾದ

ನಾನು ನಿಮಗೆ ಎಂದಿಗೂ ಯಾವುದೇ ಪ್ರಕಾರದ ಕಷ್ಟಕೊಡುವುದಿಲ್ಲ. ನಿಮ್ಮ ಕೆಲಸಗಳಿಗೆ ಅನುಕೂಲಳಾಗಿಯೇ ಇರುವೆನು. ನಾನು ಸಣ್ಣವಳಿದ್ದಾಗ ಓರ್ವ ಜೋಯಿಸನು ನನ್ನನ್ನು ನೋಡಿ- ‘ಮಗಳೇ! ನಿನಗೆ ಗಂಡನೊಡನೆ ಕಾಡಿನಲ್ಲಿ ವಾಸಿಸುವ ಯೋಗವಿದೆ’ ಎಂದು ಹೇಳಿದ್ದನು. ಆ ಬ್ರಾಹ್ಮಣನ ಮಾತು ನಿಜವಾಗಲಿ! ನಾನು ನಿಮ್ಮೊಡನೆ ಕಾಡಿಗೆ ಬರಲಿರುವೆನು. ॥75-76॥

77
ಮೂಲಮ್

ಅನ್ಯತ್ಕಿಂಚಿತ್ಪ್ರವಕ್ಷ್ಯಾಮಿ ಶ್ರುತ್ವಾ ಮಾಂ ನಯ ಕಾನನಮ್ ।
ರಾಮಾಯಣಾನಿ ಬಹುಶಃ ಶ್ರುತಾನಿ ಬಹುಭಿರ್ದ್ವಿಜೈಃ ॥

78
ಮೂಲಮ್

ಸೀತಾಂ ವಿನಾ ವನಂ ರಾಮೋ ಗತಃ ಕಿಂ ಕುತ್ರಚಿದ್ವದ ।
ಅತಸ್ತ್ವಯಾ ಗಮಿಷ್ಯಾಮಿ ಸರ್ವಥಾ ತ್ವತ್ಸಹಾಯಿನೀ ॥

ಅನುವಾದ

ಮತ್ತೊಂದು ವಿಚಾರವನ್ನು ಸ್ವಲ್ಪವೇ ಹೇಳಲಿರುವೆನು; ಅದನ್ನು ಕೇಳಿದ ಅನಂತರ ನನ್ನನ್ನು ಕರೆದೊಯ್ಯುವವರಾಗಿರಿ. ಬ್ರಾಹ್ಮಣರಿಂದ ಬಹಳ ಸಲ ಅನೇಕ ರಾಮಾಯಣಗಳನ್ನು ನಾನು ಕೇಳಿರುವೆನು. ಆದರೆ ಎಲ್ಲಿಯಾದರೂ ರಾಮನು ಸೀತೆಯನ್ನು ಬಿಟ್ಟು ಕಾಡಿಗೆ ಹೋದಂತಹ ಸಂದರ್ಭವುಂಟೇ?* ಆದ್ದರಿಂದ ನಾನು ಎಲ್ಲ ರೀತಿಯಿಂದಲೂ ನಿಮಗೆ ಸಹಾಯಕಳಾಗಿ ನಿಮ್ಮೊಡನೆ ಬರಲಿರುವೆನು. ॥77-78॥

ಟಿಪ್ಪನೀ
  • ಇಲ್ಲಿ ಪ್ರತಿಯೊಂದು ಕಲ್ಪದಲ್ಲಿಯೂ ಶ್ರೀರಾಮಾಯಣಕಥೆ ನಡೆದಿರುತ್ತದೆ. ಹಿಂದಿನ ಕಲ್ಪಗಳಲ್ಲಿ ನಡೆದ ರಾಮಾಯಣ ಕಥೆಯನ್ನು ಸೀತೆ ಶ್ರವಣಿಸಿರಬಹುದೆಂದು ತಿಳಿಯಬೇಕು.
79
ಮೂಲಮ್

ಯದಿ ಗಚ್ಛಸಿ ಮಾಂ ತ್ಯಕ್ತ್ವಾ ಪ್ರಾಣಾಂಸ್ತ್ಯಕ್ಷ್ಯಾಮಿತೇಽಗ್ರತಃ ।
ಇತಿ ತಂ ನಿಶ್ಚಯಂ ಜ್ಞಾತ್ವಾ ಸೀತಾಯಾ ರಘುನಂದನಃ ॥

80
ಮೂಲಮ್

ಅಬ್ರವೀದ್ದೇವಿ ಗಚ್ಛ ತ್ವಂ ವನಂ ಶೀಘ್ರಂ ಮಯಾ ಸಹ ।
ಅರುಂಧತ್ಯೈ ಪ್ರಯಚ್ಛಾಶು ಹಾರಾನಾಭರಣಾನಿ ಚ ॥

ಅನುವಾದ

ಒಂದು ವೇಳೆ ನನ್ನನ್ನು ಬಿಟ್ಟು ನೀವೊಬ್ಬರೇ ಕಾಡಿಗೆ ಹೊರಡುವಿರಾದರೆ ನಿಮ್ಮ ಎದುರಿಗೇ ಪ್ರಾಣಗಳನ್ನು ಕಳೆದುಕೊಂಡು ಬಿಡುವೆನು.’’ ಶ್ರೀರಾಮನು ಸೀತೆಯ ಆ ನಿರ್ಣಯವನ್ನು ಅರಿತು ಕೊಂಡು ‘‘ದೇವಿಯೆ! ನೀನು ಜಾಗ್ರತೆಯಾಗಿ ನನ್ನೊಡನೆ ಕಾಡಿಗೆ ಹೊರಡುವವಳಾಗು; ಈ ಒಡವೆ ಹಾರಗಳನ್ನು ಅರುಂಧತಿಗೆ ಅರ್ಪಿಸಿಬಿಡು. ॥79-80॥

81
ಮೂಲಮ್

ಬ್ರಾಹ್ಮಣೇಭ್ಯೋ ಧನಂ ಸರ್ವಂ ದತ್ತ್ವಾ ಗಚ್ಛಾಮಹೇ ವನಮ್ ।
ಇತ್ಯುಕ್ತ್ವಾ ಲಕ್ಷ್ಮಣೇ ನಾಶು ದ್ವಿಜಾನಾಹೂಯ ಭಕ್ತಿತಃ ॥

82
ಮೂಲಮ್

ದದೌ ಗವಾಂ ವೃಂದಶತಂ ಧನಾನಿವಸ್ತ್ರಾಣಿ ದಿವ್ಯಾನಿ ವಿಭೂಷಣಾನಿ ।
ಕುಟುಂಬವದ್ಭ್ಯಃ ಶ್ರುತಶೀಲವದ್ಭ್ಯೋ ಮುದಾ ದ್ವಿಜೇಭ್ಯೋ ರಘುವಂಶಕೇತುಃ ॥

83
ಮೂಲಮ್

ಅರಂಧತ್ಯೈ ದದೌ ಸೀತಾ ಮುಖ್ಯಾನ್ಯಾಭರಣಾನಿ ಚ ।
ರಾಮೋ ಮಾತುಃ ಸೇವಕೇಭ್ಯೋ ದದೌ ಧನಮನೇಕಧಾ ॥

84
ಮೂಲಮ್

ಸ್ವಕಾಂತಃಪುರವಾಸಿಭ್ಯಃ ಸೇವಕೇಭ್ಯಸ್ತಥೈವ ಚ ।
ಪೌರಜಾನಪದೇಭ್ಯಶ್ಚ ಬ್ರಾಹ್ಮಣೇಭ್ಯಃ ಸಹಸ್ರಶಃ ॥

ಅನುವಾದ

ನಮ್ಮ ಎಲ್ಲಾ ಧನವನ್ನೂ ಬ್ರಾಹ್ಮಣರಿಗೆ ಕೊಟ್ಟು ನಾವು ಕಾಡಿಗೆ ಹೊರಡೋಣ’’ ಎಂದು ಹೇಳಿದನು. ಹೀಗೆಂದು ಹೇಳಿ ಲಕ್ಷ್ಮಣನ ಮೂಲಕ ಬ್ರಾಹ್ಮಣರನ್ನು ಕರೆಯಿಸಿದನು. ಆ ರಘುಕುಲ ಕೇತು ಭಗವಾನ್ ಶ್ರೀರಾಮನು ಭಕ್ತಿಯಿಂದ ನೂರಾರು ಗೋವುಗಳ ಗುಂಪನ್ನೂ, ಹಣವನ್ನೂ, ಬಟ್ಟೆಗಳನ್ನೂ ಅಮೂಲ್ಯವಾದ ಆಭರಣಗಳನ್ನೂ, ಒಳ್ಳೆಯ ವಿದ್ಯೆ-ನಡತೆಗಳಿಂದ ಕೂಡಿದವರೂ, ಗೃಹಸ್ಥರೂ ಆದ ದ್ವಿಜರಿಗೆ ಸಂತೋಷದಿಂದ ದಾನಮಾಡಿದನು. ಸೀತಾದೇವಿಯೂ ಮುಖ್ಯ-ಮುಖ್ಯವಾದ ಕೆಲವು ಒಡವೆಗಳನ್ನು ಅರುಂಧತಿಗೆ ಕೊಟ್ಟಳು. ಹಾಗೆಯೇ ತನ್ನ ಅಂತಃಪುರನಿವಾಸಿಗಳಾದ ಸೇವಕರಿಗೂ ಪೌರರಿಗೂ, ನಾಗರಿಕರಿಗೂ ಸಹಸ್ರಾರು ಬ್ರಾಹ್ಮಣರಿಗೂ ಹೇರಳವಾಗಿ ಧನವನ್ನು ದಾನ ಮಾಡಿದಳು. ॥81-84॥

85
ಮೂಲಮ್

ಲಕ್ಷ್ಮಣೋಽಪಿ ಸುಮಿತ್ರಾಂ ತು ಕೌಸಲ್ಯಾಯೈ ಸಮರ್ಪಯತ್ ।
ಧನುಷ್ಪಾಣಿಃ ಸಮಾಗತ್ಯ ರಾಮಸ್ಯಾಗ್ರೇ ವ್ಯವಸ್ಥಿತಃ ॥

86
ಮೂಲಮ್

ರಾಮಃ ಸೀತಾ ಲಕ್ಷ್ಮಣಶ್ಚ ಜಗ್ಮುಃ ಸರ್ವೇ ನೃಪಾಲಯಂ ॥

ಅನುವಾದ

ಇತ್ತ ಲಕ್ಷ್ಮಣನೂ ಕೂಡ ತನ್ನ ತಾಯಿಯಾದ ಸುಮಿತ್ರೆಯನ್ನು ಕೌಸಲ್ಯೆಯ ವಶಕ್ಕೆ ಒಪ್ಪಿಸಿ ತಾನು ಧನುರ್ಧಾರಿಯಾಗಿ ಬಂದು ರಾಮನ ಮುಂದೆ ನಿಂತುಕೊಂಡನು. ಅನಂತರ ರಾಮ, ಲಕ್ಷ್ಮಣ ಮತ್ತು ಸೀತೆ ಮೂವರೂ ದಶರಥ ಮಹಾರಾಜರ ದರ್ಶನಕ್ಕೆ ಹೊರಟರು.॥85-86॥

87
ಮೂಲಮ್

ಶ್ರೀರಾಮಃ ಸಹ ಸೀತಯಾ ನೃಪಪಥೇ
ಗಚ್ಛನ್ ಶನೈಃ ಸಾನುಜಃ
ಪೌರಾನ್ ಜಾನಪದಾನ್ಕುತೂಹಲದೃಶಃ
ಸಾನಂದಮುದ್ವೀಕ್ಷಯನ್ ।
ಶ್ಯಾಮಃ ಕಾಮಸಹಸ್ರಸುಂದರವಪುಃ
ಕಾಂತ್ಯಾ ದಿಶೋ ಭಾಸಯನ್
ಪಾದನ್ಯಾಸಪವಿತ್ರತಾಖಿಲಜಗತ್
ಪ್ರಾಪಾಲಯಂ ತತ್ಪಿತುಃ ॥

ಅನುವಾದ

ಸೀತಾ ಸಮೇತನಾದ ಶ್ರೀರಾಮನು ಮೆಲ್ಲನೆ ಹೆಜ್ಜೆಯನ್ನಿಡುತ್ತಾ, ತಮ್ಮನೊಡಗೂಡಿ ರಾಜಮಾರ್ಗದಲ್ಲಿ ಬರುತ್ತಿರುವಾಗ, ಕುತೂಹಲ ದೃಷ್ಟಿಯಿಂದ ನೋಡುತ್ತಿರುವ ಪಟ್ಟಣಿಗರನ್ನು, ಹೊರಗಿನ ಜನರನ್ನು ಆನಂದದಿಂದ ನೋಡುತ್ತಾ ಸಾವಿರ ಮನ್ಮಥರಿಗೆ ಸಮಾನವಾದ ಸುಂದರವಾದ ಕಾಂತಿಯುಳ್ಳ, ನೀಲವಾದ ತನ್ನ ಶರೀರ ಕಾಂತಿಯಿಂದ ದಿಕ್ಕುಗಳನ್ನು ಬೆಳಗುತ್ತಾ, ಹೆಜ್ಜೆಯಿಟ್ಟ ಮಾತ್ರದಿಂದಲೇ ಪ್ರಪಂಚವನ್ನೆಲ್ಲ ಪಾವನಗೊಳಿಸುವವನು ತನ್ನ ತಂದೆಯ ಅರಮನೆಯನ್ನು ತಲುಪಿದನು. ॥87॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.