[ಮೂರನೆಯ ಸರ್ಗ]
ಭಾಗಸೂಚನಾ
ದಶರಥ ರಾಜನು ಕೈಕೆಯಿಗೆ ವರ ಕೊಡುವುದು
1
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತತೋ ದಶರಥೋ ರಾಜಾ ರಾಮಾಭ್ಯುದಯಕಾರಣಾತ್ ।
ಆದಿಶ್ಯ ಮಂತ್ರಿಪ್ರಕೃತೀಃ ಸಾನಂದೋ ಗೃಹಮಾವಿಶತ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಗಿರಿಜೆ! ಅನಂತರ ದಶರಥ ಮಹಾರಾಜಾನು ರಾಮಚಂದ್ರನ ಅಭ್ಯುದಯಕ್ಕಾಗಿ ಪ್ರಜಾವರ್ಗ ಮತ್ತು ಮಂತ್ರಿಗಳಿಗೆ ಪಟ್ಟಾಭಿಷೇಕದ ವ್ಯವಸ್ಥೆಯ ಕುರಿತು ಆಜ್ಞಾಪಿಸಿ ಆನಂದದಿಂದ ತನ್ನ ರಾಣಿವಾಸವನ್ನು ಪ್ರವೇಶಿಸಿದನು. ॥1॥
2
ಮೂಲಮ್
ತತ್ರಾದೃಷ್ಟ್ವಾ ಪ್ರಿಯಾಂ ರಾಜಾ ಕಿಮೇತದಿತಿ ವಿಹ್ವಲಃ ।
ಯಾ ಪುರಾ ಮಂದಿರಂ ತಸ್ಯಾಃ ಪ್ರವಿಷ್ಟೇ ಮಯಿ ಶೋಭನಾ ॥
3
ಮೂಲಮ್
ಹಸಂತೀ ಮಾಮುಪಾಯಾತಿ ಸಾ ಕಿಂ ನೈವಾದ್ಯ ದೃಶ್ಯತೇ ।
ಇತ್ಯಾತ್ಮನ್ಯೇವ ಸಂಚಿಂತ್ಯ ಮನಸಾತಿವಿದೂಯತಾ ॥
ಅನುವಾದ
ಅಲ್ಲಿ ರಾಜನು ಪ್ರಿಯಪತ್ನಿಯಾದ ಕೈಕೆಯನ್ನು ಕಾಣದೆ, ಅತ್ಯಂತ ವಿಹ್ವಲನಾಗಿ, ಚಿಂತಾಕ್ರಾಂತನಾಗಿ ಮನಸ್ಸಿನಲ್ಲಿಯೇ, ‘ಇದೇನು! ನಾನು ಅಂತಃಪುರವನ್ನು ಪ್ರವೇಶಿಸುತ್ತಿರುವಂತೆ ಸದಾ ನಗು-ನಗುತ್ತಾ ಇದಿರ್ಗೊಳ್ಳುವ ಸುಮುಖಿ ಕೈಕೆಯಿಯು ಇಂದೇಕೆ ಕಾಣಿಸಿಕೊಳ್ಳುವುದಿಲ್ಲ? ಎಂದು ಯೋಚಿಸುತ್ತಾ ತಳಮಳ ಗೊಂಡು, ॥2-3॥
4
ಮೂಲಮ್
ಪಪ್ರಚ್ಛ ದಾಸೀನಿಕರಂ ಕುತೋ ವಃ ಸ್ವಾಮಿನೀ ಸುಭಾ ।
ನಾಯಾತಿ ಮಾಂ ಯಥಾಪೂರ್ವಂ ಮತ್ಪ್ರಿಯಾ ಪ್ರಿಯದರ್ಶನಾ ॥
ಅನುವಾದ
ಅವನು ದಾಸಿಯರನ್ನು ಕುರಿತು ‘ಶುಭ ಲಕ್ಷಣೆಯಾದ ನಿಮ್ಮ ಒಡತಿಯು ಎಲ್ಲಿ? ಎಂದಿನಂತೆ ನನ್ನನ್ನು ಎದುರುಗೊಳ್ಳಲಿಲ್ಲವೇಕೆ? ಪ್ರಿಯದರ್ಶನಳೂ, ನನಗೆ ಪ್ರೀತಿ ಪಾತ್ರಳೂ ಆದ ಅವಳೆಲ್ಲಿ?’ ಎಂದು ಕೇಳಿದನು. ॥4॥
5
ಮೂಲಮ್
ತಾ ಊಚುಃ ಕ್ರೋಧಭವನಂ ಪ್ರವಿಷ್ಟಾ ನೈವ ವಿದ್ಮಹೇ ।
ಕಾರಣಂ ತತ್ರ ದೇವ ತ್ವಂ ಗತ್ವಾ ನಿಶ್ಚೇತುಮರ್ಹಸಿ ॥
ಅನುವಾದ
ದಾಸಿಯರು ಹೇಳಿದರು — ‘‘ಒಡೆಯಾ! ಆಕೆಯು ಕೋಪಾಗಾರವನ್ನು ಪ್ರವೇಶಿಸಿರುವಳು, ಕಾರಣವನ್ನು ನಾವು ಅರಿಯೆವು. ನೀವೇ ಸ್ವತಃ ಹೋಗಿ ತಿಳಿದುಕೊಳ್ಳಿರಿ.’’ ॥5॥
6
ಮೂಲಮ್
ಇತ್ಯುಕ್ತೋ ಭಯಸಂತ್ರಸ್ತೋ ರಾಜಾ ತಸ್ಯಾಃ ಸಮೀಪಗಃ ।
ಉಪವಿಶ್ಯ ಶನೈರ್ದೇಹಂ ಸ್ಪೃಶನ್ವೈ ಪಾಣಿನಾಬ್ರವೀತ್ ॥
ಅನುವಾದ
ದಾಸಿಯರ ಈ ಮಾತನ್ನು ಕೇಳಿದ ರಾಜನು ಹೆದರಿದವನಾಗಿ ಆಕೆಯ ಸಮೀಪಕ್ಕೆ ಹೋಗಿ ಕುಳಿತು ಮೆಲ್ಲ-ಮೆಲ್ಲನೆ ತನ್ನ ಕೈಯಿಂದ ಅವಳ ಮೈನೇವರಿಸುತ್ತಾ ಕೇಳಿದನು. ॥6॥
7
ಮೂಲಮ್
ಕಿಂ ಶೇಷೇ ವಸುಧಾಪೃಷ್ಠೇ ಪರ್ಯಂಕಾದೀನ್ ವಿಹಾಯ ಚ ।
ಮಾಂ ತ್ವಂ ಖೇದಯಸೇ ಭೀರು ಯತೋ ಮಾಂ ನಾವಭಾಷಸೇ ॥
8
ಮೂಲಮ್
ಅಲಂಕಾರಂ ಪರಿತ್ಯಜ್ಯ ಭೂಮೌ ಮಲಿನವಾಸಸಾ ।
ಕಿಮರ್ಥಂ ಬ್ರೂಹಿ ಸಕಲಂ ವಿಧಾಸ್ಯೇ ತವ ವಾಂಛಿತಮ್ ॥
ಅನುವಾದ
‘‘ಎಲೈ ಭೀರು! ಇಂದು ಮಂಚವೇ ಮುಂತಾದ ಸೌಕರ್ಯಗಳನ್ನು ಬಿಟ್ಟು ನೆಲದ ಮೇಲೆ ಏಕೆ ಮಲಗಿರುವೆ? ನನ್ನನ್ನು ಮಾತನಾಡಿಸದೆ ಏಕೆ ದುಃಖವನ್ನು ಉಂಟುಮಾಡುವೆ? ಒಡವೆಗಳನ್ನೆಲ್ಲ ಬಿಸುಟು, ಮಲಿನಾಂಬರವನ್ನು ತೊಟ್ಟು, ನೆಲದ ಮೇಲೆ ಏಕೆ ಮಲಗಿರುವೆ? ಒಂದೂ ಬಿಡದೆ ಎಲ್ಲವನ್ನು ಹೇಳು. ನಿನ್ನ ಇಷ್ಟಾರ್ಥವನ್ನು ನೆರವೇರಿಸಿಕೊಡುವೆನು. ॥7-8॥
9
ಮೂಲಮ್
ಕೋ ವಾ ತವಾಹಿತಂ ಕರ್ತಾ ನಾರಿ ವಾ ಪುರುಷೋಪಿ ವಾ ।
ಸ ಮೇ ದಂಡ್ಯಶ್ಚ ವಧ್ಯಶ್ಚ ಭವಿಷ್ಯತಿ ನ ಸಂಶಯಃ ॥
ಅನುವಾದ
ನಿನಗೆ ಅಹಿತವಾದುದನ್ನು ಮಾಡಿದ ಗಂಡಸಾಗಲಿ, ಹೆಂಗಸಾಗಲಿ ಯಾರವರು? ಅಂಥವರನ್ನು ಶಿಕ್ಷಿಸಲಾಗುವುದು, ಬಯಸಿದರೆ ಕೊಲ್ಲಿಸಲಾಗುವುದು. ಇದರಲ್ಲಿ ಸಂಶಯವೇ ಇಲ್ಲ. ॥9॥
10
ಮೂಲಮ್
ಬ್ರೂಹಿ ದೇವಿ ಯಥಾ ಪ್ರೀತಿಸ್ತದವಶ್ಯಂ ಮಮಾಗ್ರತಃ ।
ತದಿದಾನೀಂ ಸಾಧಯಿಷ್ಯೇ ಸುದುರ್ಲಭಮಪಿ ಕ್ಷಣಾತ್ ॥
ಅನುವಾದ
ಹೇ ದೇವಿಯೇ! ನಿನಗೆ ನನ್ನಲ್ಲಿರುವ ಪ್ರೀತಿಗೆ ತಕ್ಕಂತೆ ಅವಶ್ಯವಾಗಿ ಹೇಳು. ಅದು ಎಷ್ಟೇ ಕಷ್ಟಕರವಾಗಿದ್ದರೂ ಕ್ಷಣಮಾತ್ರದಲ್ಲಿ ಸಾಧಿಸಿಕೊಡುವೆನು. ॥10॥
11
ಮೂಲಮ್
ಜಾನಾಸಿ ತ್ವಂ ಮಮ ಸ್ವಾಂತಂ ಪ್ರಿಯಂ ಮಾಂ ಸ್ವವಶೇ ಸ್ಥಿತಮ್ ।
ತಥಾಪಿ ಮಾಂ ಖೇದಯಸೇ ವೃಥಾ ತವ ಪರಿಶ್ರಮಃ ॥
ಅನುವಾದ
ನೀನು ನನ್ನ ಅಂತರಂಗವನ್ನು ಬಲ್ಲವಳು. ನಿನ್ನ ಅಧೀನದಲ್ಲಿರುವ ಪ್ರಿಯನಾದ ನನ್ನನ್ನು ತಿಳಿದೂ ದುಃಖಕ್ಕೆ ಈಡುಮಾಡುತ್ತಿರುವೆ. ಇದು ನಿನ್ನ ವ್ಯರ್ಥಪರಿಶ್ರಮವಲ್ಲವೇ? ॥11॥
12
ಮೂಲಮ್
ಬ್ರೂಹಿ ಕಂ ಧನಿನಂ ಕುರ್ಯಾಂ ದರಿದ್ರಂ ತೇ ಪ್ರಿಯಂಕರಮ್ ।
ಧನಿನಂ ಕ್ಷಣಮಾತ್ರೇಣ ನಿರ್ಧನಂ ಚ ತವಾಹಿತಮ್ ॥
13
ಮೂಲಮ್
ಬ್ರೂಹಿ ಕಂ ವಾ ವಧಿಷ್ಯಾಮಿ ವಧಾರ್ಹೋ ವಾ ವಿಮೋಕ್ಷ್ಯತೇ ।
ಕಿಮತ್ರ ಬಹುನೋಕ್ತೇನ ಪ್ರಾಣಾಂದಾಸ್ಯಾಮಿ ತೇ ಪ್ರಿಯೇ ॥
14
ಮೂಲಮ್
ಮಮ ಪ್ರಾಣಾತ್ಪ್ರಿಯತರೋ ರಾಮೋ ರಾಜೀವಲೋಚನಃ ।
ತಸ್ಯೋಪರಿ ಶಪೇ ಬ್ರೂಹಿ ತ್ವದ್ಧಿತಂ ತತ್ಕರೋಮ್ಯಹಮ್ ॥
ಅನುವಾದ
ನಿನಗೆ ಬೇಕಾದ ಯಾವ ದರಿದ್ರನನ್ನು ನಾನು ಶ್ರೀಮಂತಗೊಳಿಸಲೀ? ಅಥವಾ ನಿನಗೆ ಬೇಡದವನಾದ ಯಾವ ಧನಿಕನನ್ನು ದರಿದ್ರನನ್ನಾಗಿಸಲಿ? ಯಾರನ್ನು ಸಂಹಾರ ಮಾಡಲಿ? ಅಥವಾ ವಧೆಗೆ ಅರ್ಹ ನಾದವನನ್ನು ಬಿಡುಗಡೆ ಮಾಡಲಿ? ಹೇ ಪ್ರಿಯಳೇ! ಬಹಳ ಹೇಳುವುದರಿಂದ ಏನು ಪ್ರಯೋಜನ! ನಿನಗೆ ನನ್ನ ಪ್ರಾಣಗಳನ್ನಾದರೂ ಅರ್ಪಿಸಿ ಬಿಡುವೆನು. ಕಮಲನಯನ ರಾಮನು ನನಗೆ ಪ್ರಾಣಕ್ಕಿಂತ ಹೆಚ್ಚಿನವನು. ಅವನ ಮೇಲೆ ಆಣೆಯಿಟ್ಟು ಹೇಳುವೆನು ನಿನಗೆ ಏನು ಇಷ್ಟವಿದೆಯೋ ಅದನ್ನು ನೆರವೇರಿಸಿಕೊಡುವೆನು.’’ ॥12-14॥
15
ಮೂಲಮ್
ಇತಿ ಬ್ರುವಾಣಂ ರಾಜಾನಂ ಶಪಂತಂ ರಾಘವೋಪರಿ ।
ಶನೈರ್ವಿಮೃಜ್ಯ ನೇತ್ರೇ ಸಾ ರಾಜಾನಂ ಪ್ರತ್ಯಭಾಷತ ॥
ಅನುವಾದ
ಹೀಗೆ ರಾಮನ ಮೇಲೆ ಆಣೆಯಿಟ್ಟು ಹೇಳುತ್ತಿರುವ ರಾಜನನ್ನು ಮೆಲ್ಲನೆ ನೋಡಿ, ಕಣ್ಣೊರಸಿಕೊಂಡು ನೋಡಿದ ಆಕೆಯು ಪ್ರತ್ಯುತ್ತರವನ್ನು ಕೊಟ್ಟಳು. ॥15॥
16
ಮೂಲಮ್
ಯದಿ ಸತ್ಯಪ್ರತಿಜ್ಞೋಽಸಿ ಶಪಥಂ ಕುರುಷೇ ಯದಿ ।
ಯಾಂಚಾಂ ಮೇ ಸಫಲಾಂ ಕರ್ತುಂ ಶೀಘ್ರಮೇವ ತ್ವಮರ್ಹಸಿ ॥
ಅನುವಾದ
ಮಹರಾಜರೇ! ನೀವು ಸತ್ಯಪ್ರತಿಜ್ಞರಾದರೆ, ಹಾಗೂ ಶಪಥ ಮಾಡುವಿರಾದರೆ ನನ್ನ ಪ್ರಾರ್ಥನೆಯನ್ನು ಬೇಗನೆ ಸಫಲಗೊಳಿಸಲು ನೀವು ಸಮರ್ಥರಿರುವಿರಿ. ॥16॥
17
ಮೂಲಮ್
ಪೂರ್ವಂ ದೇವಾಸುರೇ ಯುದ್ಧೇ ಮಯಾ ತ್ವಂ ಪರಿರಕ್ಷಿತಃ ।
ತದಾ ವರದ್ವಯಂ ದತ್ತಂ ತ್ವಯಾ ಮೇ ತುಷ್ಟಚೇತಸಾ ॥
ಅನುವಾದ
ಹಿಂದೆ ದೇವಾಸುರರ ಸಂಗ್ರಾಮದಲ್ಲಿ ನಾನು ನಿಮ್ಮನ್ನು ರಕ್ಷಿಸಿದ್ದೆ. ಆಗ ಸಂತುಷ್ಟ ಮನಸ್ಸಿನಿಂದ ನೀವು ನನಗೆ ಎರಡು ವರವನ್ನು ಕೊಟ್ಟಿರುವಿರಿ. ॥17॥
18
ಮೂಲಮ್
ತದ್ದ್ವಯಂ ನ್ಯಾಸಭೂತಂ ಮೇ ಸ್ಥಾಪಿತಂ ತ್ವಯಿ ಸುವ್ರತ ।
ತತ್ರೈಕೇನ ವರೇಣಾಶು ಭರತಂ ಮೇ ಪ್ರಿಯಂ ಸುತಮ್ ॥
19
ಮೂಲಮ್
ಏಭಿಃ ಸಂಭೃತಸಂಭಾರೈರ್ಯೌವರಾಜ್ಯೇಽಭಿಷೇಚಯ ।
ಅಪರೇಣ ವರೇಣಾಶು ರಾಮೋ ಗಚ್ಛತು ದಂಡಕಾನ್ ॥
ಅನುವಾದ
ಸುವ್ರತರೇ! ನಾನು ಆ ಎರಡೂ ವರಗಳನ್ನು ನಿಮ್ಮ ಬಳಿಯಲ್ಲೇ ಒತ್ತೆಯಾಗಿ ಇಟ್ಟಿದ್ದೆ. ಈಗ ಅವುಗಳಲ್ಲಿ ಒಂದರಿಂದ ನನ್ನ ಪ್ರಿಯಪುತ್ರನಾದ ಭರತನನ್ನು, ಈಗ ಸಿದ್ಧಪಡಿಸಿದ ಪದಾರ್ಥಗಳಿಂದ ಯುವರಾಜನನ್ನಾಗಿಸಿ ಪಟ್ಟಾಭಿಷೇಕವನ್ನು ಮಾಡಬೇಕು. ಮತ್ತೊಂದು ವರದಿಂದ ರಾಮನು ಈಗಲೇ ದಂಡಕಾರಣ್ಯಕ್ಕೆ ಹೋಗಲಿ. ॥18-19॥
20
ಮೂಲಮ್
ಮುನಿವೇಷಧರಃ ಶ್ರೀಮಾನ್ ಜಟಾವಲ್ಕಲಭೂಷಣಃ ।
ಚತುರ್ದಶ ಸಮಾಸ್ತತ್ರ ಕಂದಮೂಲಲಾಶನಃ ॥
ಅನುವಾದ
ಅಲ್ಲಿ ಶ್ರೀರಾಮನು ಮುನಿಗಳ ವೇಷವನ್ನು ಧರಿಸಿ ಜಟಾವಲ್ಕಲಗಳನ್ನು ತೊಟ್ಟು ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ಕಂದಮೂಲ ಲಗಳನ್ನು ತಿನ್ನುತ್ತಾ ಇರಬೇಕು. ॥20॥
21
ಮೂಲಮ್
ಪುನರಾಯಾತು ತಸ್ಯಾಂತೇ ವನೇ ವಾ ತಿಷ್ಠತು ಸ್ವಯಮ್ ।
ಪ್ರಭಾತೇ ಗಚ್ಛತು ವನಂ ರಾಮೋ ರಾಜೀವಲೋಚನಃ ॥
ಅನುವಾದ
ಆ ಅವಧಿ ಮುಗಿದಮೇಲೆ ಹಿಂತಿರುಗಲಿ ಅಥವಾ ಅವನೇ ಇಷ್ಟಪಟ್ಟರೆ ಕಾಡಿನಲ್ಲೇ ಇದ್ದುಕೊಂಡಿರಲಿ. ಆದರೆ ರಾಜೀವನೇತ್ರನಾದ ರಾಮನು ನಾಳೆ ಬೆಳಿಗ್ಗೆಯೇ ಅವಶ್ಯವಾಗಿ ಕಾಡಿಗೆ ಹೊರಡಬೇಕು. ॥21॥
22
ಮೂಲಮ್
ಯದಿ ಕಿಂಚಿದ್ವಿಲಂಬೇತ ಪ್ರಾಣಾಂಸ್ತ್ಯಕ್ಷ್ಯೇ ತವಾಗ್ರತಃ ।
ಭವ ಸತ್ಯಪ್ರತಿಜ್ಞಸ್ತ್ವಮೇತದೇವ ಮಮ ಪ್ರಿಯಮ್ ॥
ಅನುವಾದ
ಒಂದು ವೇಳೆ ಅವನು ಸ್ವಲ್ಪವಾದರೂ ತಡ ಮಾಡಿದರೆ ನಿಮ್ಮ ಎದುರಿನಲ್ಲೇ ನಾನು ಪ್ರಾಣತ್ಯಾಗ ಮಾಡಿಬಿಡುವೆನು. ನೀವು ನಿಮ್ಮ ಪ್ರತಿಜ್ಞೆಯನ್ನು ಸತ್ಯವಾಗಿಸಿರಿ. ನನಗೆ ಇದೇ ಪ್ರಿಯವಾದ ಕಾರ್ಯವಾಗಿದೆ. ॥22॥
23
ಮೂಲಮ್
ಶ್ರುತ್ವೈತದ್ದಾರುಣಂ ವಾಕ್ಯಂ ಕೈಕೇಯ್ಯಾ ರೋಮಹರ್ಷಣಮ್ ।
ನಿಪಪಾತ ಮಹೀಪಾಲೋ ವಜ್ರಾಹತ ಇವಾಚಲಃ ॥
ಅನುವಾದ
ರೋಮಾಂಚಕರವೂ, ಕ್ರೂರವೂ ಆದ ಕೈಕೆಯಿಯ ಕಠೋರ ವಚನಗಳನ್ನು ಕೇಳಿ, ವಜ್ರಾಘಾತದಿಂದ ಕುಸಿಯುವ ಪರ್ವತದಂತೆ ರಾಜನು ಕುಸಿದು ಬಿದ್ದನು. ॥23॥
24
ಮೂಲಮ್
ಶನೈರುನ್ಮೀಲ್ಯ ನಯನೇ ವಿಮೃಜ್ಯ ಪರಯಾ ಭಿಯಾ ।
ದುಃಸ್ವಪ್ನೋ ವಾ ಮಯಾ ದೃಷ್ಟೋ ಹ್ಯಥವಾ ಚಿತ್ತವಿಭ್ರಮಃ ॥
25
ಮೂಲಮ್
ಇತ್ಯಾಲೋಕ್ಯ ಪುರಃ ಪತ್ನೀಂ ವ್ಯಾಘ್ರಿಮಿವ ಪುರಃ ಸ್ಥಿತಾಮ್ ।
ಕಿಮಿದಂ ಭಾಷಸೇ ಭದ್ರೇ ಮಮ ಪ್ರಾಣಹರಂ ವಚಃ ॥
ಅನುವಾದ
ನಿಧಾನವಾಗಿ ಎರಡೂ ಕಣ್ಣುಗಳನ್ನು ತೆರೆದು ಬಹಳವಾದ ಹೆದರಿಕೆಯಿಂದ ಕಣ್ಣೀರನ್ನು ಒರೆಸುತ್ತಾ ‘ಓಹೋ! ನಾನು ಕೆಟ್ಟ ಕನಸನ್ನು ಕಾಣುತ್ತಿರುವೆನೋ! ಅಥವಾ ನನಗೆ ಬುದ್ಧಿ ವಿಕಲ್ಪವಾಗಿದೆಯೋ!’ ಎಂದು ಮನದಲ್ಲಿ ಅಂದುಕೊಂಡು, ಹೆಣ್ಣು ಹುಲಿಯಂತೆ ಮುಂದಿರುವ ರಾಣೀ ಕೈಕೆಯಿಯನ್ನು ಕುರಿತು ಎಲೈ ಭದ್ರೆ! ‘‘ನನ್ನ ಪ್ರಾಣಗಳನ್ನೇ ಹರಣ ಮಾಡುವಂತಹ ವಚನಗಳನ್ನು ನೀನು ಏಕೆ ಹೇಳುತ್ತಿರುವೆ? ॥ 24-25॥
26
ಮೂಲಮ್
ರಾಮಃ ಕಮಪರಾಧಂ ತೇ ಕೃತವಾನ್ ಕಮಲೇಕ್ಷಣಃ ।
ಮಮಾಗ್ರೇ ರಾಘವಗುಣಾನ್ವರ್ಣಯಸ್ಯನಿಶಂ ಶುಭಾನ್ ॥
27
ಮೂಲಮ್
ಕೌಸಲ್ಯಾಂ ಮಾಂ ಸಮಂ ಪಶ್ಯನ್ ಶುಶ್ರೂಷಾಂ ಕುರುತೇ ಸದಾ ।
ಇತಿ ಬ್ರುವಂತೀ ತ್ವಂ ಪೂರ್ವಮಿದಾನೀಂ ಭಾಷಸೇನ್ಯಥಾ ॥
28
ಮೂಲಮ್
ರಾಜ್ಯಂ ಗೃಹಾಣ ಪುತ್ರಾಯ ರಾಮಸ್ತಿಷ್ಠತು ಮಂದಿರೇ ।
ಅನುಗೃಹ್ಣೀಷ್ವಮಾಂ ವಾಮೇ ರಾಮಾನ್ನಾಸ್ತಿ ಭಯಂ ತವ ॥
ಅನುವಾದ
ಕಮಲನಯನ ರಾಮನು ನಿನಗೆ ಯಾವ ಅಪರಾಧ ಮಾಡಿದನು? ನನ್ನೆದುರಿಗೆ ಯಾವಾಗಲೂ ರಾಮನ ಸದ್ಗುಣಗಳನ್ನು ನೀನು ವರ್ಣಿಸುತ್ತಿದ್ದೆಯಲ್ಲ? ‘ರಾಮನು ನನ್ನನ್ನು ಕೌಸಲ್ಯೆಯನ್ನು ಒಂದೇ ರೀತಿಯಾಗಿ ಕಾಣುತ್ತಾ ಯಾವಾಗಲೂ ಸೇವಿಸುತ್ತಾನೆ’ ಎಂದು ಈ ಮೊದಲು ಹೇಳುತ್ತಿದ್ದವಳು ಈಗ ಬೇರೆಯೇ ಮಾತನಾಡುತ್ತಿರುವೆಯಲ್ಲ? ನಿನ್ನ ಮಗನಿಗೆ ರಾಜ್ಯವನ್ನು ಬೇಕಾದರೆ ತೆಗೆದುಕೋ. ಆದರೆ ರಾಮನು ಮನೆಯಲ್ಲೇ ಇದ್ದುಕೊಂಡಿರಲಿ. ಎಲೈ ಪ್ರಿಯೆ! ನನ್ನನ್ನು ಅನುಗ್ರಹಿಸು. ನಿನಗೆ ರಾಮನಿಂದ ಯಾವ ಭಯವೂ ಇಲ್ಲ.’’ ॥26-28॥
29
ಮೂಲಮ್
ಇತ್ಯುಕ್ತ್ವಾಶ್ರುಪರೀತಾಕ್ಷಃ ಪಾದಯೋರ್ನಿಪಪಾತ ಹ ।
ಕೈಕೇಯಿ ಪ್ರತ್ಯುವಾಚೇದಂ ಸಾಪಿ ರಕ್ತಾಂತಲೋಚನಾ ॥
ಅನುವಾದ
ಹೀಗೆಂದು ಹೇಳಿ ಕಣ್ಣೀರಿನಿಂದ ಕೂಡಿದ ರಾಜನು ಕೈಕೆಯಿಯ ಕಾಲುಗಳಿಗೆ ಬಿದ್ದನು. ಆಗ ಕೈಕೆಯಿಯು ಕಣ್ಣುಗಳನ್ನು ಕೆಂಪಗಾಗಿಸಿ ಹೀಗೆ ಹೇಳಿದಳು. ॥29॥
30
ಮೂಲಮ್
ರಾಜೇಂದ್ರ ಕ್ವಿಂ ತ್ವಂ ಭ್ರಾಂತೋಽಸಿ ಉಕ್ತಂ ತದ್ಭಾಷಸೇನ್ಯಥಾ ।
ಮಿಥ್ಯಾ ಕರೋಷಿ ಚೇತ್ ಸ್ವೀಯಂ ಭಾಷಿತಂ ನರಕೋ ಭವೇತ್ ॥
ಅನುವಾದ
‘‘ಹೇ ರಾಜಶ್ರೇಷ್ಠರೇ! ನೀವು ಭ್ರಾಂತರಾಗಿರುವಿರಾ? ನಿಮ್ಮ ಮಾತಿಗೆ ವಿರುದ್ಧವಾಗಿ ಈಗ ಮಾತನಾಡುತ್ತಿರುವಿರಲ್ಲ! ತಮ್ಮ ಪ್ರತಿಜ್ಞೆಯನ್ನು ಭಂಗಗೊಳಿಸಿದರೆ ನರಕವನ್ನು ಅನುಭವಿಸಬೇಕಾದೀತು, ಎಚ್ಚರವಿರಲಿ. ॥30॥
31
ಮೂಲಮ್
ವನಂ ನ ಗಚ್ಛೇದ್ಯದಿ ರಾಮಚಂದ್ರಃ
ಪ್ರಭಾತಕಾಲೇಽಜಿನಚೀರಯುಕ್ತಃ ।
ಉದ್ಬಂಧನಂ ವಾ ವಿಷಭಕ್ಷಣಂ ವಾ
ಕೃತ್ವಾ ಮರಿಷ್ಯೇ ಪುರತಸ್ತವಾಹಮ್ ॥
ಅನುವಾದ
ನಾಳೆ ಬೆಳಿಗ್ಗೆ ಶ್ರೀರಾಮನು ಮೃಗಚರ್ಮ, ವಲ್ಕಲಗಳನ್ನು ಧರಿಸಿ ಕಾಡಿಗೆ ಹೋಗದಿದ್ದರೆ ನಾನು ನೇಣು ಬಿಗಿದುಕೊಂಡಾಗಲೀ, ವಿಷವನ್ನು ತಿಂದಾಗಲೀ, ನಿಮ್ಮ ಎದುರಿಗೆ ಸಾಯುತ್ತೇನೆ. ॥31॥
32
ಮೂಲಮ್
ಸತ್ಯಪ್ರತಿಜ್ಞೋಽಹಮಿತೀಹ ಲೋಕೇ
ವಿಡಂಬಸೇ ಸರ್ವಸಭಾಂತರೇಷು ।
ರಾಮೋಪರಿ ತ್ವಂ ಶಪಥಂ ಚ ಕೃತ್ವಾ
ಮಿಥ್ಯಾಪ್ರತಿಜ್ಞೋ ನರಕಂ ಪ್ರಯಾಹಿ ॥
ಅನುವಾದ
‘ನಾನು ಸತ್ಯಪ್ರತಿಜ್ಞನು’ ಎಂದು ಈ ಲೋಕದಲ್ಲಿ ಎಲ್ಲಾ ಸಭೆಗಳಲ್ಲಿ (ಸಭಾ ಸದರಲ್ಲಿ) ಬಡಾಯಿ ಕೊಚ್ಚಿಕೊಳ್ಳುತ್ತಿರುವಿರಲ್ಲ. ಹೀಗೆ ಹೇಳಿ ಜನರನ್ನು ಮೋಸಗೊಳಿಸುತ್ತಿರುವಿರಿ. ಈಗ ರಾಮನ ಮೇಲೆ ಆಣೆ ಯಿಟ್ಟು ನೀವು ಮಾಡಿದ ಪ್ರತಿಜ್ಞೆಯನ್ನು ಮುರಿಯುತ್ತಿರುವಿರಲ್ಲ! ಅದಕ್ಕಾಗಿ ನೀವು ನರಕಕ್ಕೆ ಹೋಗಬೇಕಾದೀತು.’’ ॥32॥
33
ಮೂಲಮ್
ಇತ್ಯುಕ್ತಃ ಪ್ರಿಯಯಾ ದೀನೋ ಮಗ್ನೋ ದುಃಖಾರ್ಣವೇ ನೃಪಃ ।
ಮೂರ್ಚ್ಛಿತಃ ಪತಿತೋ ಭೂವೌ ವಿಸಂಜ್ಞೋ ಮೃತಕೋ ಯಥಾ ॥
ಅನುವಾದ
ತನ್ನ ಪ್ರಿಯತಮೆಯ ಇಂತಹ ಕಠೋರ ವಚನಗಳನ್ನು ಕೇಳಿದ ದಶರಥನು ದುಃಖಸಾಗರದಲ್ಲಿ ಮುಳುಗಿ ತುಂಬಾ ವ್ಯಾಕುಲನಾದನು ಮತ್ತು ಸತ್ತವನಂತೆ ಮೂರ್ಛಿತನಾಗಿ ನೆಲದ ಮೇಲೆ ಉರುಳಿದನು. ॥33॥
34
ಮೂಲಮ್
ಏವಂ ರಾತ್ರಿರ್ಗತಾ ತಸ್ಯ ದುಃಖಾತ್ಸಂವತ್ಸರೋಪಮಾ ।
ಅರುಣೋದಯಕಾಲೇ ತು ಬಂದಿನೋ ಗಾಯಕಾ ಜಗುಃ ॥
ಅನುವಾದ
ಹೀಗೆ ದುಃಖದಿಂದ ಕೂಡಿದ ಅವನಿಗೆ ಆ ರಾತ್ರಿಯು ಒಂದು ವರ್ಷದಷ್ಟು ದೀರ್ಘವಾಗಿ ಕಂಡಿತು. ಇತ್ತ ಅರುಣೋದಯವಾಗುತ್ತಲೇ ವಂದಿಮಾಗಧರು ಗಾಯಕರು ಹಾಡಲಾರಂಭಿಸಿದರು. ॥34॥
35
ಮೂಲಮ್
ನಿವಾರಯಿತ್ವಾ ತಾನ್ ಸರ್ವಾನ್ಕೈಕೇಯೀ ರೋಷಮಾಸ್ಥಿತಾ ।
ತತಃ ಪ್ರಭಾತಸಮಯೇ ಮಧ್ಯಕಕ್ಷಮುಪಸ್ಥಿತಾಃ ॥
36
ಮೂಲಮ್
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಋಷಯಃ ಕನ್ಯಕಾಸ್ತಥಾ ।
ಛತ್ರಂ ಚ ಚಾಮರಂ ದಿವ್ಯಂ ಗಜೋ ವಾಜೀ ತಥೈವ ಚ ॥
37
ಮೂಲಮ್
ಅನ್ಯಾಶ್ಚ ವಾರಮುಖ್ಯಾ ಯಾಃ ಪೌರಜಾನ ಪದಾಸ್ತಥಾ ।
ವಸಿಷ್ಠೇನ ಯಥಾಜ್ಞಪ್ತಂ ತತ್ಸರ್ವಂ ತತ್ರ ಸಂಸ್ಥಿತಮ್ ॥
ಅನುವಾದ
ಆದರೆ ಕೈಕೆಯಿಯು ಅವರನ್ನೆಲ್ಲ ತಡೆಗಟ್ಟಿ ಕೋಪದಿಂದ ಕುಳಿತಳು. ಅನಂತರ ಪ್ರಾತಃಕಾಲದ ವೇಳೆಗೆ ಸರಿಯಾಗಿ ಬ್ರಾಹ್ಮಣರೂ, ಕ್ಷತ್ರಿಯರೂ, ವೈಶ್ಯರೂ, ಋಷಿಗಳೂ, ಕನ್ನಿಕೆಯರೂ ಅರಮನೆಯ ಮಧ್ಯದ ಅಂಗಳಕ್ಕೆ ಬಂದು ಸೇರಿದರು. ಹಾಗೆಯೇ ಛತ್ರ, ಚಾಮರ, ಆನೆ, ಕುದುರೆ ಉಳಿದ ವಾರಾಂಗನೆಯರೂ ನಾಗರಿಕರೇ ಮುಂತಾದವರೆಲ್ಲರೂ ಬಂದಿದ್ದರು. ವಸಿಷ್ಠರು ಆಜ್ಞೆಮಾಡಿದಂತೆಯೇ ಸಮಸ್ತವೂ ಸಿದ್ಧವಾಗಿತ್ತು. ॥35-37॥
38
ಮೂಲಮ್
ಸ್ತ್ರೀಯೋ ಬಾಲಾಶ್ಚ ವೃದ್ಧಾಶ್ಚ ರಾತ್ರೌ ನಿದ್ರಾಂ ನ ಲೇಭಿರೇ ।
ಕದಾ ದ್ರಕ್ಷ್ಯಾಮಹೇ ರಾಮಂ ಪೀತಕೌಶೇಯವಾಸಸಮ್ ॥
39
ಮೂಲಮ್
ಸರ್ವಾಭರಣಸಂಪನ್ನಂ ಕಿರೀಟಕಟಕೋಜ್ಜ್ವಲಮ್ ।
ಕೌಸ್ತುಭಾಭರಣಂ ಶ್ಯಾಮಂ ಕಂದರ್ಪಶತಸುಂದರಮ್ ॥
40
ಮೂಲಮ್
ಅಭಿಷಿಕ್ತಂ ಸಮಾಯಾತಂ ಗಜಾರೂಢಂ ಸ್ಮಿತಾನನಮ್ ।
ಶ್ವೇತಚ್ಛತ್ರಧರಂ ತತ್ರ ಲಕ್ಷ್ಮಣಂ ಲಕ್ಷಣಾನ್ವಿತಮ್ ॥
41
ಮೂಲಮ್
ರಾಮಂ ಕದಾ ವಾ ದ್ರಕ್ಷ್ಯಾಮಃ ಪ್ರಭಾತಂ ವಾ ಕದಾ ಭವೇತ್ ।
ಇತ್ಯುತ್ಸುಕಧಿಯಃ ಸರ್ವೇ ಬಭೂವುಃ ಪುರವಾಸಿನಃ ॥
ಅನುವಾದ
ಹೆಂಗಸರು, ಬಾಲಕರು, ವಯಸ್ಕರು ಯಾರೊಬ್ಬರೂ ರಾತ್ರಿಯಲ್ಲಿ ನಿದ್ದೆಮಾಡಿರಲಿಲ್ಲ. ‘ಹಳದಿ ರೇಶ್ಮೆಯ ವಸ್ತ್ರವನ್ನುಟ್ಟು, ಎಲ್ಲ ಆಭರಣಗಳಿಂದ ಅಲಂಕೃತನಾಗಿ, ಕಿರೀಟ, ಕುಂಡಲ, ಕಡಗಗಳ ಕಾಂತಿಯಿಂದ ಹೊಳೆಯುತ್ತಿರುವ, ಕೌಸ್ತುಭಮಣಿಯಿಂದ ವಿಭೂಷಿತ, ನೀಲವಾದ ಕಾಂತಿಯುಳ್ಳವನಾದ ನೂರು ಮನ್ಮಥರಷ್ಟು ಸುಂದರನಾದ, ಮುಳುನಗೆಯನ್ನು ಚೆಲ್ಲುತ್ತಾ ಆನೆಯನ್ನೇರಿ ಬರುತ್ತಿರುವ ಶ್ರೀರಾಮನನ್ನೂ, ಬೆಳ್ಗೊಡೆಯನ್ನು ಪಿಡಿದು ರಾಮನೊಡನೆ ಇರುವ ಲಕ್ಷಣ ಸಂಪನ್ನ ಲಕ್ಷ್ಮಣನನ್ನು ನಾವು ಯಾವಾಗ ಕಂಡೇವು? ಆ ಮಂಗಳ ಸುಪ್ರಭಾತ ಯಾವಾಗ ಆದೀತು?’ ಹೀಗೆಂದು ಕುತೂಹಲದಿಂದ ಕೂಡಿದವರಾಗಿ ಪುರವಾಸಿಗಳೆಲ್ಲರೂ ಉತ್ಸುಕರಾಗಿ ನಿರೀಕ್ಷಿಸುತ್ತಿದ್ದರು. ॥38-41॥
42
ಮೂಲಮ್
ನೇದಾನೀಮುತ್ಥಿತೋ ರಾಜಾ ಕಿಮರ್ಥಂ ಚೇತಿ ಚಿಂತಯನ್ ।
ಸುಮಂತ್ರಃ ಶನಕೈಃ ಪ್ರಾಯಾದ್ಯತ್ರ ರಾಜಾವತಿಷ್ಠತೇ ॥
43
ಮೂಲಮ್
ವರ್ಧಯನ್ ಜಯಶಬ್ದೇನ ಪ್ರಣಮನ್ ಶಿರಸಾ ನೃಪಮ್ ।
ಅತಿಖಿನ್ನಂ ನೃಪಂ ದೃಷ್ಟ್ವಾ ಕೈಕೇಯೀಂ ಸಮಪೃಚ್ಛತ ॥
ಅನುವಾದ
ಇದೇ ಸಮಯ ಮಂತ್ರಿವರ ಸುಮಂತ್ರನು ‘ಇದೇನು? ಮಹಾರಾಜರು ಇಷ್ಟು ಹೊತ್ತಾದರೂ ಎದ್ದಿಲ್ಲವಲ್ಲ! ಏಕಿರಬಹುದು!’ ಎಂದು ಯೋಚಿಸುತ್ತಾ ಮೆಲ್ಲನೆ ರಾಜನಿದ್ದಲ್ಲಿಗೆ ಬಂದನು. ಜಯ-ಜಯಕಾರದಿಂದ ರಾಜನನ್ನು ಅಭಿನಂದಿಸುತ್ತಾ ತಲೆಬಾಗಿ ನಮಸ್ಕರಿಸಿದನು. ಅತೀವ ದುಃಖಿತನಾದ ನೃಪನನ್ನು ಕಂಡು ಕೇಕೆಯ ನಂದಿನಿಯಲ್ಲಿ ಕೇಳಿದನು. ॥ 42-43॥
44
ಮೂಲಮ್
ದೇವಿ ಕೈಕೇಯಿ ವರ್ಧಸ್ವ ಕಿಂ ರಾಜಾ ದೃಷ್ಯತೇನ್ಯಥಾ ।
ತಮಾಹ ಕೈಕೇಯೀ ರಾಜಾ ರಾತ್ರೌ ನಿದ್ರಾಂ ನ ಲಬ್ಧವಾನ್ ॥
ಅನುವಾದ
‘‘ದೇವೀ ಕೈಕೆಯಿ! ನಿನಗೆ ಅಭಿವೃದ್ಧಿಯುಂಟಾಗಲಿ; ಮಹಾರಾಜರು ಇಂದು ಖಿನ್ನರಾಗಿ ಕಾಣುತ್ತಿರುವರಲ್ಲ ಏಕೆ?’’ ಎಂದು ನುಡಿದಾಗ, ಕೈಕೆಯಿಯು ‘‘ಮಂತ್ರಿಗಳೇ! ರಾಜರು ರಾತ್ರಿಯಲ್ಲಿ ನಿದ್ದೆಯೇ ಮಾಡಲಿಲ್ಲ. ॥44॥
45
ಮೂಲಮ್
ರಾಮ ರಾಮೇತಿ ರಾಮೇತಿ ರಾಮಮೇವಾನುಚಿಂತಯನ್ ।
ಪ್ರಜಾಗರೇಣ ವೈ ರಾಜಾ ಹ್ಯಸ್ವಸ್ಥ ಇವ ಲಕ್ಷ್ಯತೇ ।
ರಾಮಮಾನಯ ಶೀಘ್ರಂ ತ್ವಂ ರಾಜಾ ದ್ರಷ್ಟುಮಿಹೇಚ್ಛತಿ ॥
ಅನುವಾದ
ರಾಮಾ! ರಾಮಾ!! ಎಂದು ರಾಮನನ್ನೇ ನೆನೆಯುತ್ತಿದ್ದರು. ಹೀಗೆ ನಿದ್ದೆಮಾಡದೆ ಇರುವುದರಿಂದ ಅನಾರೋಗ್ಯದಿಂದ ಕೂಡಿದವರಂತೆ ಕಂಡು ಬರುತ್ತಿದ್ದಾರೆ. ಮಹಾರಾಜರು ರಾಮನನ್ನು ಈಗಲೇ ನೋಡಲು ಬಯಸುತ್ತಿದ್ದಾರೆ; ನೀವು ಬೇಗನೇ ರಾಮನನ್ನು ಕರೆದುಕೊಂಡು ಬನ್ನಿರಿ.’’॥45॥
46
ಮೂಲಮ್
ಅಶ್ರುತ್ವಾ ರಾಜವಚನಂ ಕಥಂ ಗಚ್ಛಾಮಿ ಭಾಮಿನಿ ।
ತಚ್ಛ್ರುತ್ವಾ ಮಂತ್ರಿಣೋ ವಾಕ್ಯಂ ರಾಜಾ ಮಂತ್ರಿಣಮಬ್ರವೀತ್ ॥
47
ಮೂಲಮ್
ಸುಮಂತ್ರ ರಾಮಂ ದ್ರಕ್ಷ್ಯಾಮಿ ಶೀಘ್ರಮಾನಯ ಸುಂದರಮ್ ।
ಇತ್ಯುಕ್ತಸ್ತ್ವರಿತಂ ಗತ್ವಾ ಸುಮಂತ್ರೋ ರಾಮಮಂದಿರಮ್ ॥
ಅನುವಾದ
ಆಗ ಸುಮಂತ್ರನೆಂದ ಎಲೈ ತಾಯಿಯೇ! ಮಹಾರಾಜರ ಅಪ್ಪಣೆಯನ್ನು ಪಡೆಯದೆ ಹೇಗೆ ಹೋಗಲಿ? ಎಂಬ ಮಾತನ್ನು ಕೇಳಿದ ದಶರಥನು ಮಂತ್ರಿಯನ್ನು ಕುರಿತು ‘‘ಎಲೈ ಸುಮಂತ್ರನೇ! ಮನೋಹರಮೂರ್ತಿಯಾದ ರಾಮನನ್ನು ನೋಡಲಿಚ್ಛಿಸುತ್ತೇನೆ, ಸುಕುಮಾರನಾದ ಅವನನ್ನು ಬೇಗನೇ ಕರೆದುಕೊಂಡು ಬಾ’’ ಎಂದು ಆಜ್ಞಾಪಿಸಿದನು. ಕೂಡಲೇ ಸುಮಂತ್ರನು ಶ್ರೀರಾಮನ ಅರಮನೆಗೆ ಜಾಗ್ರತೆಯಾಗಿ ಹೊರಟನು. ॥46-47॥
48
ಮೂಲಮ್
ಅವಾರಿತಃ ಪ್ರವಿಷ್ಟೋಯಂ ತ್ವರಿತಂ ರಾಮಮಬ್ರವವೀತ್ ।
ಶೀಘ್ರಮಾಗಚ್ಛ ಭದ್ರಂ ತೇ ರಾಮ ರಾಜೀವಲೋಚನ ॥
49
ಮೂಲಮ್
ಪಿತುರ್ಗೇಹಂ ಮಯಾ ಸಾರ್ಧಂ ರಾಜಾ ತ್ವಾಂ ದ್ರಷ್ಟುಮಿಚ್ಛತಿ ।
ಇತ್ಯುಕ್ತೋ ರಥಮಾರುಹ್ಯ ಸಂಭ್ರಮಾತ್ತ್ವರಿತೋ ಯಯೌ ॥
ಅನುವಾದ
ಯಾರ ಅಡೆ-ತಡೆಯಿಲ್ಲದೆ ಅವನು ಶ್ರೀರಾಮ ಮಂದಿರವನ್ನು ಪ್ರವೇಶಿಸಿ ಅವಸರ-ಅವಸರವಾಗಿ ರಾಮನಲ್ಲಿ ಹೇಳಿದನು ಹೇ ರಾಜೀವಲೋಚನಾ! ನಿನಗೆ ಮಂಗಳವಾಗಲೀ. ಶ್ರೀರಾಮಾ! ನೀನು ಬೇಗನೇ ನನ್ನೊಡನೆ ತಂದೆಯ ಅರಮನೆಗೆ ಹೊರಡು. ಮಹಾರಾಜರು ನಿನ್ನನ್ನು ನೋಡಬಯಸಿದ್ದಾರೆ.’’ ಇದನ್ನು ಕೇಳುತ್ತಲೇ ರಾಮನು ಚಕಿತನಂತಾಗಿ ತತ್ ಕ್ಷಣ ರಥವನ್ನೇರಿ ಹೊರಟನು. ॥48-49॥
50
ಮೂಲಮ್
ರಾಮಃ ಸಾರಥಿನಾ ಸಾರ್ಧಂ ಲಕ್ಷ್ಮಣೇನ ಸಮನ್ವಿತಃ ।
ಮಧ್ಯಕಕ್ಷೇ ವಸಿಷ್ಠಾದೀನ್ ಪಶ್ಯನ್ನೇವ ತ್ವರಾನ್ವಿತಃ ॥
51
ಮೂಲಮ್
ಪಿತುಃ ಸಮೀಪಂ ಸಂಗಮ್ಯ ನನಾಮ ಚರಣೌ ಪಿತುಃ ।
ರಾಮಮಾಲಿಂಗಿತುಂ ರಾಜಾ ಸಮುತ್ಥಾಯ ಸಸಂಭ್ರಮಃ ॥
52
ಮೂಲಮ್
ಬಾಹೂ ಪ್ರಸಾರ್ಯ ರಾಮೇತಿ ದುಃಖಾನ್ಮಧ್ಯೇ ಪಪಾತ ಹ ।
ಹಾಹೇತಿ ರಾಮಸ್ತಂ ಶೀಘ್ರಮ್ ಆಲಿಂಗ್ಯಾಂಕೇ ನ್ಯವೇಶಯತ್ ॥
ಅನುವಾದ
ಲಗುಬಗೆಯಿಂದ ಸಾರಥಿಯೊಂದಿಗೆ, ಲಕ್ಷ್ಮಣನೊಡಗೂಡಿ ಬಂದಿರುವ ಭಗವಾನ್ ಶ್ರೀರಾಮನು ಮಧ್ಯದ ಅಂಗಳದಲ್ಲಿ ನೆರೆದಿದ್ದ ವಸಿಷ್ಠಾದಿ ಹಿರಿಯರನ್ನು ಕೇವಲ ಕಣ್ನೋಟದಿಂದಲೇ ಸತ್ಕರಿಸಿ ಆತುರದಿಂದ ತಂದೆಯ ಸಮೀಪಕ್ಕೆ ಬಂದು ಎರಡೂ ಕಾಲುಗಳಿಗೆ ವಂದಿಸಿದನು. ಮಹಾರಾಜನು ಶ್ರೀರಾಮನನ್ನು ಅಪ್ಪಿಕೊಳ್ಳುವುದಕ್ಕಾಗಿ ಸಂಭ್ರಮದಿಂದ ಮೇಲಕ್ಕೆದ್ದು ಎರಡೂ ತೋಳುಗಳನ್ನು ಚಾಚಿ ದುಃಖದಿಂದ ‘ಹಾ ರಾಮಾ! ಹಾ ರಾಮಾ!’ ಎನ್ನುವಷ್ಟರಲ್ಲಿ ಕುಸಿದು ಬಿದ್ದನು. ರಾಮನು ಅಯ್ಯೋ ಏನಾಯಿತು? ಎಂದು ಹೇಳುತ್ತಾ ಬೇಗನೇ ಅವನನ್ನು ತಬ್ಬಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ॥50-52॥
53
ಮೂಲಮ್
ರಾಜಾನಂ ಮೂರ್ಚ್ಛಿತಂ ದೃಷ್ಟ್ವಾ ಚುಕ್ರುಶುಃ ಸರ್ವಯೋಷಿತಃ ।
ಕಿಮರ್ಥಂ ರೋದನಮಿತಿ ವಸಿಷ್ಠೋಽಪಿ ಸಮಾವಿಶತ್ ॥
ಅನುವಾದ
ಮೂರ್ಛೆಹೊಂದಿದ ಮಹಾರಾಜರನ್ನು ಕಂಡು ರಾಣಿವಾಸದ ಎಲ್ಲ ಸ್ತ್ರೀಯರೂ ಅಳುತ್ತಿದ್ದರು. ಆಗ ಇದೇಕೆ ಅಳುತ್ತಿರುವುದು? ಏಕೆ? ಎಂದು ವಸಿಷ್ಠರೂ ಅಲ್ಲಿಗೆ ಬಂದರು. ॥53॥
54
ಮೂಲಮ್
ರಾಮಃ ಪಪ್ರಚ್ಛ ಕಿಮಿದಂ ರಾಜ್ಞೋ ದುಃಖಸ್ಯ ಕಾರಣಮ್ ।
ಏವಂ ಪೃಚ್ಛತಿ ರಾಮೇ ಸಾ ಕೈಕೆಯೀ ರಾಮಮಬ್ರವೀತ್ ॥
55
ಮೂಲಮ್
ತ್ವಮೇವ ಕಾರಣಂ ಹ್ಯತ್ರ ರಾಜ್ಞೋ ದುಃಖೋಪಶಾಂತಯೇ ।
ಕಿಂಚಿತ್ಕಾರ್ಯಂ ತ್ವಯಾ ರಾಮ ಕರ್ತವ್ಯಂ ನೃಪತೇರ್ಹಿತಮ್ ॥
ಅನುವಾದ
ಭಗವಾನ್ ಶ್ರೀರಾಮನು ಕೈಕೆಯಿಯ ಬಳಿ ಅಮ್ಮಾ! ‘‘ಮಹಾರಾಜರ ಈ ದುಃಖಕ್ಕೆ ಏನು ಕಾರಣ?’’ ಎಂದು ಪ್ರಶ್ನಿಸಿದಾಗ ಆಕೆಯು ರಾಮ ನನ್ನು ಕುರಿತು ಇಂತೆಂದಳು ‘‘ಹೇ ರಾಮಭದ್ರಾ! ಮಹಾರಾಜರ ಈ ದುಃಖಕ್ಕೆ ನೀನೇ ಕಾರಣನಾಗಿರುವೆ, ಇವರ ದುಃಖವನ್ನು ಶಾಂತಗೊಳಿಸಲು ಅವರಿಗೆ ಹಿತವಾಗುವಂತಹ ಒಂದು ಸಣ್ಣ ಕೆಲಸ ನಿನ್ನಿಂದಾಗಬೇಕು. ॥54-55॥
56
ಮೂಲಮ್
ಕುರು ಸತ್ಯಪ್ರತಿಜ್ಞಸ್ತ್ವಂ ರಾಜಾನಂ ಸತ್ಯವಾದಿನಮ್ ।
ರಾಜ್ಞಾ ವರದ್ವಯಂ ದತ್ತಂ ಮಮ ಸಂತುಷ್ಟಚೇತಸಾ ॥
ಅನುವಾದ
ಸತ್ಯ ಪ್ರತಿಜ್ಞನಾದ ನೀನು ಮಹಾರಾಜರನ್ನು ಸತ್ಯವಾದಿಯನ್ನಾಗಿ ಮಾಡುವವನಾಗು. ಅವರು ಸಂತುಷ್ಟಮನಸ್ಸಿನಿಂದ ನನಗೆ ಎರಡು ವರಗಳನ್ನು ಕೊಟ್ಟಿರುವರು. ॥56॥
57
ಮೂಲಮ್
ತ್ವದಧೀನಂ ತು ತತ್ಸರ್ವಂ ವಕ್ತುಂ ತ್ವಾಂ ಲಜ್ಜತೇ ನೃಪಃ ।
ಸತ್ಯಪಾಶೇನ ಸಂಬದ್ಧಂ ಪಿತರಂ ತ್ರಾತುಮರ್ಹಸಿ ॥
ಅನುವಾದ
ಆದರೆ ಅದರ ಸಲತೆ ನಿನ್ನ ಸ್ವಾಧೀನದಲ್ಲಿದೆ. ರಾಜರು ನಿನ್ನ ಬಳಿ ಹೇಳಲು ಸಂಕೋಚ ಪಡುತ್ತಿರುವರು. ಹೀಗೆ ಸತ್ಯಪಾಶದಿಂದ ಬಂಧಿತನಾದ ನಿನ್ನ ತಂದೆಯನ್ನು ಅವಶ್ಯವಾಗಿ ಕಾಪಾಡಬೇಕಾಗಿದೆ. ॥57॥
58
ಮೂಲಮ್
ಪುತ್ರಶಬ್ದೇನ ಚೈತದ್ಧಿ ನರಕಾತಾಯತೇ ಪಿತಾ ।
ರಾಮಸ್ತಯೋದಿತಂ ಶ್ರುತ್ವಾ ಶೂಲೇನಾಭಿಹತೋ ಯಥಾ ॥
59
ಮೂಲಮ್
ವ್ಯಥಿತಃ ಕೈಕೆಯೀಂ ಪ್ರಾಹ ಕಿಂ ಮಾಮೇವಂ ಪ್ರಭಾಷಸೇ ।
ಪಿತ್ರರ್ಥೇ ಜೀವಿತಂ ದಾಸ್ಯೇ ಪಿಬೇಯಂ ವಿಷಮುಲ್ಬಣಮ್ ॥
ಅನುವಾದ
ತಂದೆಯನ್ನು ನರಕದಿಂದ ಕಾಪಾಡುವವನೇ ಪುತ್ರನೆಂದು ಹೇಳಿಸಿಕೊಳ್ಳುವನಷ್ಟೆ! ಕೈಕೆಯಿಯ ಮಾತನ್ನು ಕೇಳಿದ ರಾಮನು ಶೂಲದಿಂದ ತಿವಿಯಲ್ಪಟ್ಟವನಂತೆ ದುಃಖದಿಂದೊಡಗೊಂಡು ಹೇಳಿದನು ಅಮ್ಮಾ! ಇಂದು ನನ್ನೊಂದಿಗೆ ಹೀಗೇಕೆ ಮಾತಾಡುತ್ತಿರುವೆ? ನಾನು ತಂದೆಗಾಗಿ ಪ್ರಾಣವನ್ನಾದರೂ ಕೊಡಬಲ್ಲೆ. ಕ್ರೂರವಾದ ವಿಷವನ್ನು ಕುಡಿಯಬಲ್ಲೆನು. ॥58-59॥
60
ಮೂಲಮ್
ಸೀತಾಂ ತ್ಯಕ್ಷ್ಯೇಽಥ ಕೌಸಲ್ಯಾಂ ರಾಜ್ಯಂ ಚಾಪಿ ತ್ಯಜಾಮ್ಯಹಮ್ ।
ಅನಾಜ್ಞಪ್ತೋಽಪಿ ಕುರುತೇ ಪಿತುಃ ಕಾರ್ಯಂ ಸ ಉತ್ತಮಃ ॥
61
ಮೂಲಮ್
ಉಕ್ತಃ ಕರೋತಿ ಯಃ ಪುತ್ರಃ ಸ ಮಧ್ಯಮ ಉದಾಹೃತಃ ।
ಉಕ್ತೋಽಪಿ ಕುರುತೇ ನೈವ ಸ ಪುತ್ರೋ ಮಲ ಉಚ್ಯತೇ ॥
ಅನುವಾದ
ಸೀತೆಯನ್ನಾಗಲೀ, ಕೌಸಲ್ಯೆಯನ್ನಾಗಲೀ, ರಾಜ್ಯವನ್ನಾಗಲೀ ಬಿಡಬಲ್ಲೆನು. ತಂದೆಯು ಅಪ್ಪಣೆ ಮಾಡದೆ ಹೋದರೂ ಪಿತೃವಿನ ಕರ್ತವ್ಯವನ್ನು ಅರಿತು ಕಾರ್ಯ ಮಾಡುವವನೇ ಉತ್ತಮನು. ಹೇಳಿಸಿಕೊಂಡು ಮಾಡುವವನು ಮಧ್ಯಮನು. ಹೇಳಿದರೂ ಮಾಡದೆ ಇರುವ ಪುತ್ರನು ಅಧಮನು. ॥60-61॥
62
ಮೂಲಮ್
ಅತಃ ಕರೋಮಿ ತತ್ಸರ್ವಂ ಯನ್ಮಾಮಾಹ ಪಿತಾ ಮಮ ।
ಸತ್ಯಂ ಸತ್ಯಂ ಕರೋಮ್ಯೇವ ರಾಮೋ ದ್ವಿರ್ನಾಭಿಭಾಷತೇ ॥
ಅನುವಾದ
ಆದ್ದರಿಂದ ನನ್ನ ತಂದೆಯು ಏನು ಆಜ್ಞೆ ಮಾಡಿರುವನೋ ಅದೆಲ್ಲವನ್ನು ನಾನು ನಿಜವಾಗಿಯೂ, ನಿಶ್ಚಿತವಾಗಿಯೂ ಮಾಡಿಯೇ ತೀರುವೆನು. ರಾಮನೆಂದರೆ ಎರಡು ಬಗೆಯ ಮಾತನ್ನಾಡುವವನಲ್ಲ.’’ ॥62॥
63
ಮೂಲಮ್
ಇತಿ ರಾಮಪ್ರತಿಜ್ಞಾಂ ಸಾ ಶ್ರುತ್ವಾ ವಕ್ತುಂ ಪ್ರಚಕ್ರಮೇ ।
ರಾಮ ತ್ವದಭಿಷೇಕಾರ್ಥಂ ಸಂಭಾರಾಃ ಸಂಭೃತಾಶ್ಚ ಯೇ ॥
64
ಮೂಲಮ್
ತೈರೇವ ಭರತೋಽವಶ್ಯಮಭಿಷೇಚ್ಯಃ ಪ್ರಿಯೋ ಮಮ ।
ಅಪರೇಣ ವರೇಣಾಶು ಚೀರವಾಸಾ ಜಟಾಧರಃ ॥
65
ಮೂಲಮ್
ವನಂ ಪ್ರಯಾಹಿ ಶೀಘ್ರಂ ತ್ವಮ್ ಅದ್ಯೈವ ಪಿತುರಾಜ್ಞಯಾ ।
ಚತುರ್ದಶ ಸಮಾಸ್ತತ್ರ ವಸ ಮುನ್ಯನ್ನಭೋಜನಃ ॥
66
ಮೂಲಮ್
ಏತದೇವ ಪಿತುಸ್ತೇಽದ್ಯ ಕಾರ್ಯಂ ತ್ವಂ ಕರ್ತುಮರ್ಹಸಿ ।
ರಾಜಾ ತು ಲಜ್ಜತೇ ವಕ್ತುಂ ತ್ವಾಮೇವಂ ರಘುನಂದನ ॥
ಅನುವಾದ
ಶ್ರೀರಾಮನು ಹೀಗೆ ಪ್ರತಿಜ್ಞೆ ಮಾಡಿದುದನ್ನು ಕೇಳಿ ಕೈಕೆಯಿಯು ಹೀಗೆ ಹೇಳಲಾರಂಭಿಸಿದಳು ‘‘ಹೇ ರಾಮಚಂದ್ರಾ! ನಿನ್ನ ಪಟ್ಟಾಭಿಷೇಕಕ್ಕಾಗಿ ಸಜ್ಜುಗೊಂಡಿರುವ ಸಾಮಗ್ರಿಗಳಿಂದಲೇ ನನ್ನ ಪ್ರಿಯಪುತ್ರನಾದ ಭರತನ ಪಟ್ಟಾಭಿಷೇಕವಾಗಬೇಕು. (ಇದೇ ನನ್ನ ಮೊದಲನೇ ವರ.) ಮತ್ತೊಂದು ವರದಿಂದ ನೀನು ಈಗಲೇ ತಂದೆಯ ಆಜ್ಞೆಯಂತೆ ಜಟಾವಲ್ಕಲನ್ನು ಧರಿಸಿ ಹದಿನಾಲ್ಕು ವರ್ಷಗಳ ಕಾಲ ಕಾಡಿಗೆ ಹೋಗಬೇಕು. ಅಲ್ಲಿ ಮುನಿಗಳಿಗೊಪ್ಪುವ ಆಹಾರವಾದ ಗಡ್ಡೆ, ಗೆಣಸುಗಳನ್ನು ತಿಂದುಕೊಂಡು ವಾಸಮಾಡಬೇಕು. ಇಷ್ಟೇ ನಿನ್ನ ತಂದೆಯು ನಿನಗೆ ವಿಧಿಸಿರುವ ಕರ್ತವ್ಯವು. ಇದನ್ನು ನೀನು ಮಾಡಬೇಕು. ರಘುನಂದನಾ! ರಾಜರಾದರೋ ಬಾಯಿಬಿಟ್ಟು ಹೀಗೆ ಹೇಳಲು ನಾಚಿಕೊಳ್ಳುತ್ತಿದ್ದಾರೆ.’’ ॥63-66॥
67
ಮೂಲಮ್ (ವಾಚನಮ್)
ಶ್ರಿರಾಮ ಉವಾಚ
ಮೂಲಮ್
ಭರತಸ್ಯೈವ ರಾಜ್ಯಂ ಸ್ಯಾದಹಂ ಗಚ್ಛಾಮಿ ದಂಡಕಾನ್ ।
ಕಿಂತು ರಾಜಾ ನ ವಕ್ತೀಹ ಮಾಂ ನ ಜಾನೇತ್ರ ಕಾರಣಮ್ ॥
ಅನುವಾದ
ಶ್ರೀರಾಮಚಂದ್ರನೆಂದನು - ಅಮ್ಮಾ! ಭರತನು ಆನಂದದಿಂದ ಈ ರಾಜ್ಯವನ್ನು ಆಳಲಿ; ನಾನು ದಂಡಕಾರಣ್ಯಕ್ಕೆ ಈಗಲೇ ಹೋಗುತ್ತೇನೆ. ಆದರೆ ಮಹಾರಾಜರು ನನ್ನ ಬಳಿ ಹೇಳದೆ ಇರಲು ಕಾರಣವೇನೋ ತಿಳಿಯದಾಗಿದೆ. ॥67॥
68
ಮೂಲಮ್
ಶ್ರುತ್ವೈತದ್ರಾಮವಚನಂ ದೃಷ್ಟ್ವಾ ರಾಮಂ ಪುರಃ ಸ್ಥಿತಮ್ ।
ಪ್ರಾಹ ರಾಜಾ ದಶರಥೋ ದುಃಖಿತೋ ದುಃಖಿತಂ ವಚಃ ॥
69
ಮೂಲಮ್
ಸ್ತ್ರೀಜಿತಂ ಭ್ರಾಂತಹೃದಯಮುನ್ಮಾರ್ಗಪರಿವರ್ತಿನಮ್ ।
ನಿಗೃಹ್ಯ ಮಾಂ ಗೃಹಾಣೇದಂ ರಾಜ್ಯಂ ಪಾಪಂ ನ ತದ್ಭವೇತ್ ॥
ಅನುವಾದ
ಶ್ರೀರಾಮನ ಈ ಮಾತನ್ನು ಕೇಳಿ ಎದುರಿಗೆ ಇದ್ದ ಅವನನ್ನು ಕುರಿತು ಮಹಾರಾಜಾ ದಶರಥನು ಬಹಳ ದುಃಖದಿಂದ ಈ ರೀತಿ ಹೇಳಿದನು ‘‘ವತ್ಸಾ! ಹೆಂಗಸಿಗೆ ಸೋತವನಾಗಿಯೂ, ಬುದ್ಧಿ ಭ್ರಮಣೆಯಾಗಿರುವವನೂ, ಅಡ್ಡದಾರಿಯನ್ನು ತುಳಿಯುತ್ತಿರುವವನೂ, ಆದ ನನ್ನನ್ನು ಬಂಧಿಸಿ ಈ ರಾಜ್ಯವನ್ನು ನೀನು ಸ್ವೀಕರಿಸು. ಅದೆಂದಿಗೂ ಪಾಪವಾಗಲಾರದು. ॥68-69॥
70
ಮೂಲಮ್
ಏವಂ ಚೇದನೃತಂ ನೈವ ಮಾಂ ಸ್ಪೃಶೇದ್ರಘುನಂದನ ।
ಇತ್ಯುಕ್ತ್ವಾ ದುಃಖಸಂತಪ್ತೋ ವಿಲಲಾಪ ನೃಪಸ್ತದಾ ॥
ಅನುವಾದ
ಹೀಗಾದರೆ ಹೇ ರಘುನಂದನಾ! ಅಸತ್ಯವೂ ನನ್ನನ್ನು ಸ್ಪರ್ಶಿಸಲಾರದು.’’ ಹೀಗೆಂದು ಹೇಳಿ ದುಃಖದಿಂದ ಪೀಡಿತನಾದ ರಾಜನು ವಿಲಪಿಸ ತೊಡಗಿದನು. ॥70॥
71
ಮೂಲಮ್
ಹಾ ರಾಮ ಹಾ ಜಗನ್ನಾಥ ಹಾ ಮಮ ಪ್ರಾಣವಲ್ಲಭ ।
ಮಾಂ ವಿಸೃಜ್ಯ ಕಥಂ ಘೋರಂ ವಿಪಿನಂ ಗಂತುಮರ್ಹಸಿ ॥
ಅನುವಾದ
‘ಎಲೈ ರಾಮನೇ! ಜಗನ್ನಿವಾಸನೇ! ಪ್ರಾಣಗಳೊಡೆಯನೇ! ನನ್ನನ್ನು ಬಿಟ್ಟು ಭಯಂಕರವಾದ ಕಾಡಿಗೆ ನೀನೊಬ್ಬನೇ ಹೇಗೆ ಹೋಗುವೆ? ಇದು ನಿನಗೆ ಉಚಿತವೇ?’ ॥71॥
72
ಮೂಲಮ್
ಇತಿ ರಾಮಂ ಸಮಾಲಿಂಗ್ಯ ಮುಕ್ತಕಂಠೋ ರುರೋದ ಹ ।
ವಿಮೃಜ್ಯ ನಯನೇ ರಾಮಃ ಪಿತುಃ ಸಜಲಪಾಣಿನಾ ॥
73
ಮೂಲಮ್
ಆಶ್ವಾಸಯಾಮಾಸ ನೃಪಂ ಶನೈಃ ಸ ನಯಕೋವಿದಃ ।
ಕಿಮತ್ರ ದುಃಖೇನ ವಿಭೋ ರಾಜ್ಯಂ ಶಾಸತು ಮೇಽನುಜಃ ॥
74
ಮೂಲಮ್
ಅಹಂ ಪ್ರತಿಜ್ಞಾಂ ನಿಸ್ತೀರ್ಯ ಪುನರ್ಯಾಸ್ಯಾಮಿ ತೇ ಪುರಮ್ ।
ರಾಜ್ಯಾತ್ಕೋಟಿಗುಣಂ ಸೌಖ್ಯಂ ಮಮ ರಾಜನ್ವನೇ ಸತಃ ॥
ಅನುವಾದ
ಹೀಗೆ ಹೇಳುತ್ತಾ ರಾಮನನ್ನು ಬಿಗಿದಪ್ಪಿಕೊಂಡು ಗಟ್ಟಿಯಾಗಿ ಅಳತೊಡಗಿದನು. ಜಾಣನಾದ ರಾಮನು ಒದ್ದೆಯಾದ ಕೈಯಿಂದ ತಂದೆಯ ಕಣ್ಣುಗಳೆರಡನ್ನೂ ಒರೆಸುತ್ತಾ ಮೆಲ್ಲನೆ ರಾಜನನ್ನು ಸಮಾಧಾನ ಪಡಿಸಿದನು. ನೀತಿ ಕುಶಲಿಯಾದ ಶ್ರೀರಾಮನು ಧೈರ್ಯವನ್ನು ತುಂಬುತ್ತಾ ಹೇಳುತ್ತಾನೆ - ‘‘ಹೇ ಪ್ರಭುವೇ! ನನ್ನ ತಮ್ಮನು ರಾಜ್ಯವನ್ನಾಳುವುದರಲ್ಲಿ ದುಃಖದ ಮಾತೇನಿದೆ? ನಾನು ಈ ಪ್ರತಿಜ್ಞೆಯನ್ನು ಪೂರೈಸಿ ಮತ್ತೆ ನಿಮ್ಮ ಬಳಿಗೆ ಅಯೋಧ್ಯೆಗೆ ಹಿಂದಿರುಗುವೆನು. ಮಹಾರಾಜರೇ! ವನದಲ್ಲಿರುವ ನನಗೆ ರಾಜ್ಯ ಕ್ಕಿಂತಲೂ ಕೋಟಿಪಟ್ಟು ಸೌಖ್ಯವು ಆಗುವುದು. ॥72-74॥
75
ಮೂಲಮ್
ತ್ವತ್ಸತ್ಯಪಾಲನಂ ದೇವಕಾರ್ಯಂ ಚಾಪಿ ಭವಿಷ್ಯತಿ ।
ಕೈಕೇಯ್ಯಾಶ್ಚ ಪ್ರಿಯೋ ರಾಜನ್ ವನವಾಸೋ ಮಹಾಗುಣಃ ॥
ಅನುವಾದ
ಅಪ್ಪಾ! ಇದರಲ್ಲಿ ನಿಮ್ಮ ಸತ್ಯಪ್ರತಿಜ್ಞೆಯನ್ನು ಪಾಲಿಸುವ, ದೇವತೆಗಳ ಕಾರ್ಯ ನೆರವೇರಿಸುವ ಮತ್ತು ಕೈಕೆಯಮ್ಮನಿಗೂ ಪ್ರಿಯವಾದ ನನ್ನ ಈ ವನವಾಸದಲ್ಲಿ ಅನೇಕ ಗುಣಗಳಿವೆ. ॥75॥
76
ಮೂಲಮ್
ಇದಾನೀಂ ಗಂತುಮಿಚ್ಛಾಮಿ ವ್ಯೇತು ಮಾತುಶ್ಚಹೃಜ್ಜ್ವರಃ ।
ಸಂಭಾರಾಶ್ಚೋಪಹ್ರಿಯಂತಾಮಭಿಷೇಕಾರ್ಥಮಾಹೃತಾಃ ॥
ಅನುವಾದ
ಈಗ ನಾನು ಬೇಗನೇ ಕಾಡಿಗೆ ಹೊರಡಲು ಇಷ್ಟಪಡುತ್ತೇನೆ. ತಾಯಿಯಾದ ಕೈಕೆಯಿಯ ಮನೋವ್ಯಥೆಯು ಪರಿಹಾರವಾಗಲಿ; ಅಭಿಷೇಕಕ್ಕಾಗಿ ಅಣಿಗೊಳಿಸಿದ ಸಾಮಗ್ರಿಯೂ ಬೇರೆಯಾಗಿ ಇರಿಸಲಾಗುವುದು. ॥76॥
77
ಮೂಲಮ್
ಮಾತರಂ ಚ ಸಮಾಶ್ವಾಸ್ಯ ಅನುನೀಯ ಚ ಜಾನಕೀಮ್ ।
ಆಗತ್ಯ ಪಾದೌ ವಂದಿತ್ವಾ ತವ ಯಾಸ್ಯೇ ಸುಖಂ ವನಮ್ ॥
ಅನುವಾದ
ನಾನು ತಾಯಿಯಾದ ಕೌಸಲ್ಯಾ ಅಮ್ಮನವರನ್ನು ಮತ್ತು ಮಡದಿ ಸೀತೆಯನ್ನು ಸಮಾಧಾನಪಡಿಸಿ ಮತ್ತೆ ಇಲ್ಲಿಗೆ ಬಂದು ನಿಮ್ಮ ಪಾದಗಳಿಗೆ ನಮಸ್ಕರಿಸಿ ಸುಖವಾಗಿ ಕಾಡಿಗೆ ಹೋಗುವೆನು. ॥77॥
78
ಮೂಲಮ್
ಇತ್ಯುಕ್ತ್ವಾ ತು ಪರಿಕ್ರಮ್ಯ ಮಾತರಂ ದ್ರಷ್ಟುಮಾಯಯೌ ।
ಕೌಸಲ್ಯಾಪಿ ಹರೇಃ ಪೂಜಾಂ ಕುರುತೇ ರಾಮಕಾರಣಾತ್ ॥
ಅನುವಾದ
ಹೀಗೆ ಹೇಳಿ ತಂದೆಗೆ ಪ್ರದಕ್ಷಿಣೆ ಮಾಡಿ, ತಾಯಿಯನ್ನು ನೋಡುವುದಕ್ಕಾಗಿ ಅವಳ ಬಳಿಗೆ ಬಂದನು. ಕೌಸಲ್ಯಾ ದೇವಿಯರು ಕೂಡ ಶ್ರೀರಾಮನಿಗೆ ಒಳ್ಳೆಯದಾಗಲೆಂಬ ಕಾರಣದಿಂದ ಭಗವಾನ್ ಶ್ರೀವಿಷ್ಣುವನ್ನು ಪೂಜಿಸುತ್ತಿದ್ದಳು.॥78॥
79
ಮೂಲಮ್
ಹೋಮಂ ಚ ಕಾರಯಾಮಾಸ ಬ್ರಾಹ್ಮಣೇಭ್ಯೋ ದದೌ ಧನಮ್ ।
ಧ್ಯಾಯತೇ ವಿಷ್ಣುಮೇಕಾಗ್ರಮನಸಾ ಮೌನಮಾಸ್ಥಿತಾ ॥
ಅನುವಾದ
ಅವಳು ಬ್ರಾಹ್ಮಣರಿಂದ ಹೋಮ ಹವನಾದಿಗಳನ್ನು ಮಾಡಿಸಿ, ಅವರಿಗೆ ಹೇರಳವಾದ ಧನವನ್ನು ದಾನಮಾಡಿದ್ದಳು. ಈಗ ಮೌನವನ್ನು ಧರಿಸಿ ಏಕಾಗ್ರ ಚಿತ್ತದಿಂದ ಭಗವಾನ್ ಶ್ರೀವಿಷ್ಣುವನ್ನು ಧ್ಯಾನ ಮಾಡುತ್ತಿದ್ದಳು. ॥79॥
80
ಮೂಲಮ್
ಅಂತಸ್ಥಮೇಕಂ ಘನಚಿತ್ಪ್ರಕಾಶಂ ನಿರಸ್ತಸರ್ವಾತಿಶಯಸ್ವರೂಪಮ್ ।
ವಿಷ್ಣುಂ ಸದಾನಂದಮಯಂ ಹೃದಬ್ಜೇ ಸಾ ಭಾವಯಂತೀ ನ ದದರ್ಶ ರಾಮಮ್ ॥
ಅನುವಾದ
ಎಲ್ಲರ ಹೃದಯದೊಳಗಿರುವವನೂ, ಚಿತ್ಪ್ರಕಾಶ ಸ್ವರೂಪನೂ, ಎಲ್ಲ ವಸ್ತುಗಳನ್ನು ಮೀರಿದ ಸ್ವರೂಪನೂ ಆದ ಭಗವಾನ್ ವಿಷ್ಣುವನ್ನು ಹೃದಯಕಮಲದಲ್ಲಿ ಆಕೆಯು ಚಿಂತಿಸುತ್ತಾ ಇದ್ದುದರಿಂದ ರಾಮನು ಬಂದಿದ್ದನ್ನು ಗಮನಿಸದಾದಳು. ॥80॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.