೦೨

[ಎರಡನೆಯ ಸರ್ಗ]

ಭಾಗಸೂಚನಾ

ರಾಜ್ಯಾಭಿಷೇಕದ ಸಿದ್ಧತೆ ಹಾಗೂ ವಸಿಷ್ಠರು ಮತ್ತು ರಘುನಾಥನ ಸಂವಾದ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಅಥ ರಾಜಾ ದಶರಥಃ ಕದಾಚಿದ್ರಹಸಿ ಸ್ಥಿತಃ ।
ವಸಿಷ್ಠಂ ಸ್ವಕುಲಾಚಾರ್ಯಮಾಹೂಯೇದಮಭಾಷತ ॥

2
ಮೂಲಮ್

ಭಗವನ್ ರಾಮಮಖಿಲಾಃ ಪ್ರಶಂಸಂತಿ ಮುಹುರ್ಮುಹುಃ ।
ಪೌರಾಶ್ಚ ನಿಗಮಾ ವೃದ್ಧಾ ಮಂತ್ರಿಣಶ್ಚ ವಿಶೇಷತಃ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಪಾರ್ವತಿ! ಒಂದು ದಿನ ದಶರಥ ಮಹಾರಾಜನು ಏಕಾಂತದಲ್ಲಿರುವಾಗ ತನ್ನ ಕುಲಗುರುಗಳಾದ ವಸಿಷ್ಠರನ್ನು ಬರಮಾಡಿಕೊಂಡು ಹೇಳಿದನು ಪೂಜ್ಯರೇ! ಎಲ್ಲ ಪುರವಾಸಿಗಳೂ, ವೇದವಿದರಾದ ವೃದ್ಧರೂ ವಿಶೇಷವಾಗಿ ಮಂತ್ರಿಗಳೂ ಆಗಾಗ ಶ್ರೀರಾಮನನ್ನು ಹೊಗಳುತ್ತಿದ್ದಾರೆ.॥1-2॥

3
ಮೂಲಮ್

ತತಃ ಸರ್ವಗುಣೋಪೇತಂ ರಾಮಂ ರಾಜೀವಲೋಚನಮ್ ।
ಜ್ಯೇಷ್ಠಂ ರಾಜ್ಯೇಽಭಿಷೇಕ್ಷ್ಯಾಮಿ ವೃದ್ಧೋಹಂ ಮುನಿಪುಂಗವ ॥

ಅನುವಾದ

ಮುನಿಶ್ರೇಷ್ಠರೇ! ಹೇಗೂ ನಾನೂ ಮುದುಕನಾಗಿದ್ದೇನೆ. ಆದ್ದರಿಂದ ಸಕಲ ಗುಣಸಂಪನ್ನನೂ, ಹಿರಿಯ ಮಗನೂ ಆದ ಕಮಲನಯನ ರಾಮನನ್ನು ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಬೇಕೆಂದಿರುವೆನು. ॥3॥

4
ಮೂಲಮ್

ಭರತೋ ಮಾತುಲಂ ದ್ರಷ್ಟುಂ ಗತಃ ಶತ್ರುಘ್ನಸಂಯುತಃ ।
ಅಭಿಷೇಕ್ಷ್ಯೇ ಶ್ವ ಏವಾಶು ಭವಾಂಸ್ತಚ್ಚಾನುಮೋದತಾಮ್ ॥

ಅನುವಾದ

ಈಗ ಭರತನು ಶತ್ರುಘ್ನನೊಡನೆ ಸೋದರಮಾವನನ್ನು ನೋಡಲು ಮಾವನ ಮನೆಗೆ ಹೋಗಿರುವನು. ಇರಲಿ; ನಾನು ಆದಷ್ಟು ಬೇಗ ನಾಳೆಯೇ ರಾಮನಿಗೆ ಪಟ್ಟಾಭಿಷೇಕಮಾಡ ಬೇಕೆಂದಿದ್ದೇನೆ. ಈ ವಿಷಯದಲ್ಲಿ ನೀವೂ ನಿಮ್ಮ ಅನುಮತಿಯನ್ನು ಕೊಡಬೇಕು. ॥4॥

5
ಮೂಲಮ್

ಸಂಭಾರಾಃ ಸಂಭ್ರಿಯಂತಾಂ ಚ ಗಚ್ಛ ಮಂತ್ರಯ ರಾಘವಮ್ ।
ಉಚ್ಛ್ರೀಯಂತಾಂ ಪತಾಕಾಶ್ಚ ನಾನಾವರ್ಣಾಃ ಸಮಂತತಃ ॥

6
ಮೂಲಮ್

ತೋರಣಾನಿ ವಿಚಿತ್ರಾಣಿ ಸ್ವರ್ಣಮುಕ್ತಾಮಯಾನಿ ವೈ ।
ಆಹೂಯ ಮಂತ್ರಿಣಂ ರಾಜಾ ಸುಮಂತ್ರಂ ಮಂತ್ರಿಸತ್ತಮಮ್ ॥

7
ಮೂಲಮ್

ಆಜ್ಞಾಪಯತಿ ಯದ್ಯತ್ತ್ವಾಂ ಮುನಿಃ ತತ್ತತ್ಸಮಾನಯ ।
ಯೌವರಾಜ್ಯೇಽಭಿಷೇಕ್ಷ್ಯಾಮಿ ಶ್ವೋಭೂತೇ ರಘುನಂದನಮ್ ॥

ಅನುವಾದ

ಮುನಿಶ್ರೇಷ್ಠರೇ! ನೀವು ಅಭಿಷೇಕದ ಸಾಮಗ್ರಿಗಳನ್ನು ಸಿದ್ಧಗೊಳಿಸಿರಿ. ರಾಮನಲ್ಲಿಗೆ ಹೋಗಿ ಸಮಾ ಲೋಚನೆ ನಡೆಸಿರಿ. ನಾನಾಬಣ್ಣದ ಬಾವುಟಗಳನ್ನು ಚಿತ್ರ ವಿಚಿತ್ರವಾದ ಚಿನ್ನದ ಹಾಗೂ ಮುತ್ತಿನ ತೋರಣಗಳನ್ನು ಸುತ್ತಲೂ ಎತ್ತಿಕಟ್ಟಲಿ. ದಶರಥನು ಮಂತ್ರಿಶ್ರೇಷ್ಠನಾದ ಸುಮಂತ್ರನನ್ನು ಕರೆದು-ನಾಳೆಯ ದಿನವೇ ರಘುನಂದನನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಲಿದ್ದೇನೆ. ಅದಕ್ಕಾಗಿ ಮುನಿಶ್ರೇಷ್ಠರಾದ ವಸಿಷ್ಠರು ಏನೇನು ಹೇಳುವರೋ ಅದೆಲ್ಲವನ್ನು ಅಣಿಗೊಳಿಸು. ॥5-7॥

8
ಮೂಲಮ್

ತಥೇತಿ ಹರ್ಷಾತ್ಸ ಮುನಿಂ ಕಿಂ ಕರೋಮೀತ್ಯಭಾಷತ ।
ತಮುವಾಚ ಮಹಾತೇಜಾ ವಸಿಷ್ಠೋ ಜ್ಞಾನಿನಾಂ ವರಃ ॥

9
ಮೂಲಮ್

ಶ್ವಃ ಪ್ರಭಾತೇ ಮಧ್ಯಕಕ್ಷೇ ಕನ್ಯಕಾಃ ಸ್ವರ್ಣಭೂಷಿತಾಃ ।
ತಿಷ್ಠಂತು ಷೋಡಶ ಗಜಃ ಸ್ವರ್ಣರತ್ನಾದಿಭೂಷಿತಃ ॥

10
ಮೂಲಮ್

ಚತುರ್ದಂತಃ ಸಮಾಯಾತು ಐರಾವತಕುಲೋದ್ಭವಃ ।
ನಾನಾತೀಥೋದಕೈಃ ಪೂರ್ಣಾಃ ಸ್ವರ್ಣಕುಂಭಾಃ ಸಹಸ್ರಶಃ ॥

ಅನುವಾದ

ಹಾಗೆಯೇ ಆಗಲಿ! ಎಂದು ಸಂತೋಷದಿಂದ ಸುಮಂತ್ರನು ವಸಿಷ್ಠರಲ್ಲಿ- ‘ನಾನು ಏನು ಮಾಡಬೇಕು’ ಅಪ್ಪಣೆಯಾಗಲೀ. ಆಗ ಮಹಾತೇಜಸ್ವಿಗಳೂ ಜ್ಞಾನಿಗಳಲ್ಲಿ ಶ್ರೇಷ್ಠರೂ ಆದ ವಸಿಷ್ಠರು ಸುಮಂತ್ರನಲ್ಲಿ ಹೇಳಿದರು- ‘ನಾಳೆಯ ದಿನ ಪ್ರಾತಃಕಾಲಕ್ಕೆ ಸರಿಯಾಗಿ ನಡುವಿನ ರಾಜಾಂಗಣದಲ್ಲಿ ಸುವರ್ಣ ಭೂಷಿತರಾದ ಹದಿನಾರು ಕನ್ನಿಕೆಯರು (ಎಂಟು ವರ್ಷದೊಳಗಿನ ಹುಡುಗಿಯರು) ಸಿದ್ಧರಾಗಿರಲಿ. ಸುವರ್ಣ ರತ್ನಾಭರಣಗಳಿಂದ ಅಲಂಕೃತವಾದ ಐರಾವತಕುಲದಲ್ಲಿ ಹುಟ್ಟಿದ ನಾಲ್ಕುದಂತಗಳುಳ್ಳ ಆನೆಯು ಬಂದು ನಿಲ್ಲಲಿ. ಅನೇಕ ಪುಣ್ಯ ತೀರ್ಥಗಳಿಂದ ತುಂಬಿದ ಸಾವಿರಾರು ಚಿನ್ನದ ಕಲಶಗಳನ್ನು ತರಿಸಿಡು. ॥8-10॥

11
ಮೂಲಮ್

ಸ್ಥಾಪ್ಯಂತಾಂ ನವವೈಯಾಘ್ರಚರ್ಮಾಣಿ ತ್ರೀಣಿ ಚಾನಯ ।
ಶ್ವೇತಚ್ಛತ್ರಂ ರತ್ನದಂಡಂ ಮುಕ್ತಾಮಣಿವಿರಾಜಿತಮ್ ॥

12
ಮೂಲಮ್

ದಿವ್ಯಮಾಲ್ಯಾನಿ ವಸ್ತ್ರಾಣಿ ದಿವ್ಯಾನ್ಯಾಭರಣಾನಿ ಚ ।
ಮುನಯಃ ಸತ್ಕೃತಾಸ್ತತ್ರ ತಿಷ್ಠಂತು ಕುಶಪಾಣಯಃ ॥

ಅನುವಾದ

ಮೂರು ಹೊಸದಾದ ವ್ಯಾಘ್ರಚರ್ಮಗಳನ್ನು ತರಿಸಿ ಇಡು. ಮುತ್ತುಗಳ ಝಲ್ಲರಿಯಿಂದ ಶೋಭಿಸುವ, ಒಂದು ಶ್ವೇತಛತ್ರ ಮತ್ತು ಮುತ್ತು ನವರತ್ನಗಳಿಂದ ಅಲಂಕೃತವಾದ ರಾಜದಂಡ, ದಿವ್ಯವಾದ ಹಾರಗಳೂ, ವಸ್ತ್ರಗಳೂ, ಬೆಲೆಬಾಳುವ ಆಭರಣಗಳೂ ಸಿದ್ಧವಾಗಲಿ. ಅಭಿಷೇಕ ಸ್ಥಾನದಲ್ಲಿ ಒಳ್ಳೆಯ ರೀತಿಯಿಂದ ಸತ್ಕರಿಸಿ ಪೂಜಿತರಾದ ಅನೇಕ ಮುನಿಗಳು ಕೈಯಲ್ಲಿ ದರ್ಭೆಗಳನ್ನು ಹಿಡಿದುಕೊಂಡು ಸನ್ನಿಹಿತರಾಗಿರಲಿ. ॥11-12॥

13
ಮೂಲಮ್

ನರ್ತಕ್ಯೋ ವಾರಮುಖ್ಯಾಶ್ಚ ಗಾಯಕಾ ವೇಣುಕಾಸ್ತಥಾ ।
ನಾನಾವಾದಿತ್ರಕುಶಲಾ ವಾದಯಂತು ನೃಪಾಂಗಣೇ ॥

14
ಮೂಲಮ್

ಹಸ್ತ್ಯಶ್ವರಥಪಾದಾತಾ ಬಹಿಸ್ತಿಷ್ಠಂತು ಸಾಯುಧಾಃ ।
ನಗರೇ ಯಾನಿ ತಿಷ್ಠಂತಿ ದೇವತಾಯತನಾನಿ ಚ ॥

15
ಮೂಲಮ್

ತೇಷು ಪ್ರವರ್ತತಾಂ ಪೂಜಾ ನಾನಾಬಲಿಭಿರಾದೃತಾ ।
ರಾಜಾನಃ ಶೀಘ್ರಮಾಯಾಂತು ನಾನೋಪಾಯನಪಾಣಯಃ ॥

ಅನುವಾದ

ಅನೇಕ ನುರಿತ ನರ್ತಕಿಯರೂ, ಸುಂದರ ವಾರಾಂಗನೆಯರೂ, ಖ್ಯಾತ ಸಂಗೀತಗಾರರೂ, ವೇಣುವಾದನ ಕುಶಲಿಗಳೂ, ನಾನಾವಿಧವಾಗಿ ವಾದ್ಯಗಳನ್ನು ನುಡಿಸುವ ನಿಪುಣರೂ ಇವರಿಂದ ರಾಜಸಭಾ ಭವನದಲ್ಲಿ ನೃತ್ಯ-ವಾದ್ಯ ಸಂಗೀತವು ನಡೆಯುತ್ತಿರಲಿ. ಹೊರ ಭಾಗದಲ್ಲಿ ಆನೆ, ಕುದುರೆ, ರಥದಲ್ಲಿ ಕುಳಿತ ರಥಿಕರು, ಪದಾತಿಗಳು ಹೀಗೆ ಚತುರಂಗ ಸೈನ್ಯವು ಸಜ್ಜಾಗಿರಲಿ. ನಮ್ಮ ನಗರದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ವಿಧಾನಗಳಿಂದ ಆರಾಧನೆ, ಅರ್ಚನೆಗಳು ನಡೆಯಲಿ. ಬಹುವಿಧವಾದ ಕಪ್ಪಕಾಣಿಕೆಗಳನ್ನು ಹಿಡಿದು ಸಾಮಂತರಾಜರು ಶೀಘ್ರವಾಗಿ ಬಂದು ನೆರೆಯಲಿ. ॥13-15॥

16
ಮೂಲಮ್

ಇತ್ಯಾದಿಶ್ಯ ಮುನಿಃ ಶ್ರೀಮಾನ್ ಸುಮಂತ್ರಂ ನೃಪಮಂತ್ರಿಣಮ್ ।
ಸ್ವಯಂ ಜಗಾಮ ಭವನಂ ರಾಘವಸ್ಯಾತಿಶೋಭನಮ್ ॥

ಅನುವಾದ

ರಾಜ್ಯದ ಮಂತ್ರಿ ಸುಮಂತ್ರನಿಗೆ ಜ್ಞಾನನಿಧಿ ವಸಿಷ್ಠರು ಅಪ್ಪಣೆ ಮಾಡಿ ಸ್ವತಃ ಶ್ರೀರಾಮನ ಅತ್ಯಂತ ಮಂಗಳಕರ ಸುಂದರ ಅರಮನೆಯತ್ತ ಹೊರಟರು.॥16॥

17
ಮೂಲಮ್

ರಥಮಾರುಹ್ಯ ಭಗವಾನ್ವಸಿಷ್ಠೋ ಮುನಿಸತ್ತಮಃ ।
ತ್ರೀಣಿ ಕಕ್ಷಾಣ್ಯತಿಕ್ರಮ್ಯ ರಥಾತ್ ಕ್ಷಿತಿಮವಾತರತ್ ॥

18
ಮೂಲಮ್

ಅಂತಃ ಪ್ರವಿಶ್ಯ ಭವನಂ ಸ್ವಾಚಾರ್ಯತ್ವಾದವಾರಿತಃ ।
ಗುರುಮಾಗತಮಾಜ್ಞಾಯ ರಾಮಸ್ತೂರ್ಣಂ ಕೃತಾಂಜಲಿಃ ॥

19
ಮೂಲಮ್

ಪ್ರತ್ಯುದ್ಗಮ್ಯ ನಮಸ್ಕೃತ್ಯ ದಂಡವದ್ ಭಕ್ತಿಸಂಯುತಃ ।
ಸ್ವರ್ಣಪಾತ್ರೇಣ ಪಾನೀಯಮಾನಿನಾಯಾಶು ಜಾನಕಿ ॥

ಅನುವಾದ

ಮುನಿಶ್ರೇಷ್ಠರಾದ ವಸಿಷ್ಠರು ರಥವನ್ನೇರಿ ಅರಮನೆಯ ಮೂರು ಪ್ರಾಕಾರಗಳನ್ನು ದಾಟಿ, ರಥದಿಂದ ಕೆಳಕ್ಕಿಳಿದು ಒಳಗೆ ನಡೆದರು. ರಾಜಗುರುಗಳಾದ್ದರಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ರಾಮನ ಅರಮನೆಯೊಳಗೆ ಪ್ರವೇಶಿಸಿದರು. ಗುರುವರ್ಯರು ಬಂದಿರುವುದನ್ನು ನೋಡಿದ ಕೂಡಲೇ ರಾಮನು ಅವರನ್ನು ಇದಿರ್ಗೊಂಡು, ಭಕ್ತಿಯಿಂದ ಕೈ ಮುಗಿದು, ದಂಡವತ್ ನಮಸ್ಕಾರ ಮಾಡಿದನು. ಜಾನಕಿಯು ಲಗುಬಗೆಯಿಂದ ಚಿನ್ನದ ಪಾತ್ರೆಯಲ್ಲಿ ನೀರನ್ನು ತಂದಿತ್ತಳು. ॥17-19॥

20
ಮೂಲಮ್

ರತ್ನಾಸನೇ ಸಮಾವೇಶ್ಯ ಪಾದೌ ಪ್ರಕ್ಷಾಲ್ಯ ಭಕ್ತಿತಃ ।
ತದಪಃ ಶಿರಸಾ ಧೃತ್ವಾ ಸೀತಯಾ ಸಹ ರಾಘವಃ ॥

21
ಮೂಲಮ್

ಧನ್ಯೋಽಸ್ಮೀತ್ಯಬ್ರವೀದ್ರಾಮಸ್ತವ ಪಾದಾಂಬುಧಾರಣಾತ್ ।
ಶ್ರೀರಾಮೇಣೈವಮುಕ್ತಸ್ತು ಪ್ರಹಸನ್ಮುನಿರಬ್ರವೀತ್ ॥

ಅನುವಾದ

ಆಗ ರಘುನಾಥನು ಕುಲಗುರುಗಳನ್ನು ರತ್ನಸಿಂಹಾಸನದಲ್ಲಿ ಆದರದಿಂದ ಕುಳ್ಳಿರಿಸಿ, ಸೀತೆಯು ತಂದಿತ್ತ ನೀರಿನಿಂದ ಅವರ ಎರಡೂ ಕಾಲುಗಳನ್ನು ತೊಳೆದು ಆ ಪಾದೋದಕವನ್ನು ಶಿರದಲ್ಲಿ ಧರಿಸಿಕೊಂಡು, ಮುನಿಶ್ರೇಷ್ಠರೇ! ನಿಮ್ಮ ಪಾದೋಕದಿಂದ ಇಂದು ನಾನು ಧನ್ಯನಾದೆನು ಎಂದು ವಿನಂತಿಸಿಕೊಂಡನು. ಭಗವಾನ್ ಶ್ರೀರಾಮನು ಹೀಗೆ ಹೇಳಿದಾಗ ವಸಿಷ್ಠಮುನಿಗಳು ನಗುತ್ತ ಹೇಳತೊಡಗಿದರು.॥20-21॥

22
ಮೂಲಮ್

ತ್ವತ್ಪಾದಸಲಿಲಂ ಧೃತ್ವಾ ಧನ್ಯೋಽಭೂದ್ಗಿರಿಜಾಪತಿಃ ।
ಬ್ರಹ್ಮಾಪಿ ಮತ್ಪಿತಾ ತೇ ಹಿ ಪಾದತೀರ್ಥಹತಾಶುಭಃ ॥

ಅನುವಾದ

‘‘ಓ ರಘುಶ್ರೇಷ್ಠಾ! ನಿನ್ನ ಪಾದೋಕವನ್ನು ಶಿರದಲ್ಲಿ ಧರಿಸಿಕೊಂಡು ಗಿರಿಜಾವಲ್ಲಭ ಭಗವಾನ್ ಶಂಕರನು ಧನ್ಯನಾದನು. ನನ್ನ ತಂದೆಯಾದ ಬ್ರಹ್ಮದೇವರೂ ಕೂಡ ನಿನ್ನ ಪಾದತೀರ್ಥದ ಮಹಿಮೆಯಿಂದ ಎಲ್ಲ ಅಮಂಗಳಗಳನ್ನು ಕಳೆದುಕೊಂಡರು.’’ ॥22॥

23
ಮೂಲಮ್

ಇದಾನೀಂ ಭಾಷಸೇ ಯತ್ತ್ವಂ ಲೊಕಾನಾಮುಪದೇಶಕೃತ್ ।
ಜಾನಾಮಿ ತ್ವಾಂ ಪರಾತ್ಮಾನಂ ಲಕ್ಷ್ಮ್ಯಾ ಸಂಜಾತಮೀಶ್ವರಮ್ ॥

ಅನುವಾದ

ಗುರುಗಳೊಂದಿಗೆ ಯಾವ ಪ್ರಕಾರದಿಂದ ವ್ಯವಹರಿಸಬೇಕೆಂಬ ಆದರ್ಶದ ಉಪದೇಶವನ್ನು ಜಗತ್ತಿಗೆ ಕೊಡಲು ಈ ರೀತಿಯಿಂದ ಮಾತಾಡುತ್ತಿರುವೆ ಎಂಬುದನ್ನು ನಾನು ಬಲ್ಲೆ; ನೀನು ದೇವತೆಗಳ ಕಾರ್ಯ ಸಿದ್ಧಗೊಳಿಸಲು, ಭಕ್ತರಿಗೆ ಭಕ್ತಿಯನ್ನು ಉಂಟುಮಾಡಲು ಲಕ್ಷ್ಮೀಸಹಿತ ಅವತರಿಸಿದ ಸಾಕ್ಷಾತ್ ಪರಮಾತ್ಮಾ ಭಗವಾನ್ ವಿಷ್ಣುವೇ ಆಗಿರುವೆ. ॥23॥

24
ಮೂಲಮ್

ದೇವಕಾರ್ಯಾರ್ಥಸಿಧ್ಯರ್ಥಂ ಭಕ್ತಾನಾಂ ಭಕ್ತಿಸಿದ್ಧಯೇ ।
ರಾವಣಸ್ಯ ವಧಾರ್ಥಾಯ ಜಾತಂ ಜಾನಾಮಿ ರಾಘವ ॥

ಅನುವಾದ

ಹೇ ರಾಘವಾ! ನೀನು ದೇವತೆಗಳ ಕಾರ್ಯಸಿದ್ಧಿಗಾಗಿ, ರಾವಣನನ್ನು ವಧಿಸಲಿಕ್ಕಾಗಿಯೇ ಅವತರಿಸಿರುವುದನ್ನು ನಾನು ಬಲ್ಲೆನು. ॥24॥

25
ಮೂಲಮ್

ತಥಾಪಿ ದೇವಕಾರ್ಯಾರ್ಥಂ ಗುಹ್ಯಂ ನೋದ್ಘಾಟಯಾಮ್ಯಹಮ್ ।
ಯಥಾ ತ್ವಂ ಮಾಯಯಾ ಸರ್ವಂ ಕರೋಷಿ ರಘುನಂದನ ॥

26
ಮೂಲಮ್

ತಥೈವಾನುವಿಧಾಸ್ಯೇಽಹಂ ಶಿಷ್ಯಸ್ತ್ವಂ ಗುರುರಪ್ಯಹಮ್ ।
ಗುರುರ್ಗುರೂಣಾಂ ತ್ವಂ ದೇವ ಪಿತೃಣಾಂ ತ್ವಂ ಪಿತಾಮಹಃ ॥

ಅನುವಾದ

ಆದರೂ ದೇವತೆಗಳ ಕಾರ್ಯಸಿದ್ಧಿಗಾಗಿ ನಾನು ಈ ಗೋಪ್ಯವಾದ ರಹಸ್ಯವನ್ನು ಹೊರಗೆಡಹುವುದಿಲ್ಲ. ನೀನು ಮಾಯೆಯ ಆಶ್ರಯದಿಂದ ಎಲ್ಲವನ್ನೂ ಮಾಡುತ್ತಿರುವೆಯೋ ಹಾಗೆಯೇ ನಾನೂ ಅನುಸರಿಸುವೆನು. ಈಗ ‘‘ನೀನು ಶಿಷ್ಯ, ‘ನಾನು ಗುರು’ವೆಂದೇ ವ್ಯವಹರಿಸುವೆನು. ಆದರೆ ದೇವಾ! ನಿಜವೇನೆಂದರೆ ಎಲ್ಲ ಗುರುಗಳಿಗೂ ನೀನೇ ಪರಮ ಗುರುವಾಗಿರುವೆ ಮತ್ತು ಎಲ್ಲ ತಂದೆಯರಿಗೆ ತಂದೆಯಾಗಿರುವೆ, ಪಿತೃಗಣಗಳಿಗೂ ಪಿತಾಮಹನಾಗಿರುವೆ. ॥25-26॥

27
ಮೂಲಮ್

ಅಂತರ್ಯಾಮೀ ಜಗದ್ಯಾತ್ರಾವಾಹಕಸ್ತ್ವಮಗೋಚರಃ ।
ಶುದ್ಧಸತ್ತ್ವಮಯಂ ದೇಹಂ ಧೃತ್ವಾ ಸ್ವಾಧೀನಸಂಭವಮ್ ॥

28
ಮೂಲಮ್

ಮನುಷ್ಯ ಇವ ಲೋಕೇಽಸ್ಮಿನ್ ಭಾಸಿತ್ವಂ ಯೋಗಮಾಯಯಾ ।
ಪೌರೋಹಿತ್ಯಮಹಂ ಜಾನೇ ವಿಗರ್ಹ್ಯಂ ದೂಷ್ಯಜೀವನಮ್ ॥

ಅನುವಾದ

ನೀನೇ ಅಂತರ್ಯಾಮಿಯೂ, ಜಗದ್ ವ್ಯಾಪಾರಗಳನ್ನು ನಡೆಸುವವನೂ, ಮನ-ವಾಣಿಗಳಿಗೆ ಅಗೋಚರನಾಗಿರುವೆ. ಶುದ್ಧ ಸತ್ತ್ವಗುಣದಿಂದ ಕೂಡಿದ, ಸ್ವೇಚ್ಛೆಯಿಂದ ಶರೀರವನ್ನು ಧರಿಸಿರುವ ನೀನು ಈ ಲೋಕದಲ್ಲಿ ಯೋಗಮಾಯೆಯಿಂದ ಮನುಷ್ಯನಂತೆ ತೋರಿಸಿಕೊಳ್ಳುವೆ. ಪೌರೋಹಿತ್ಯವು ಅತಿ ನಿಂದನೀಯ ಮತ್ತು ದೂಷಿತ ಜೀವನವೆಂದು ನಾನು ಬಲ್ಲೆನು. ॥27-28॥

29
ಮೂಲಮ್

ಇಕ್ಷ್ವಾಕೂಣಾಂ ಕುಲೇ ರಾಮಃ ಪರಮಾತ್ಮಾಜನಿಷ್ಯತೇ ।
ಇತಿ ಜ್ಞಾತಂ ಮಯಾ ಪೂರ್ವಂ ಬ್ರಹ್ಮಣಾ ಕಥಿತಂ ಪುರಾ ॥

30
ಮೂಲಮ್

ತತೋಽಹಮಾಶಯಾ ರಾಮ ತವ ಸಂಬಂಧಕಾಂಕ್ಷಯಾ ।
ಅಕಾರ್ಷಂ ಗರ್ಹಿತಮಪಿ ತವಾಚಾರ್ಯತ್ವಸಿದ್ಧಯೇ ॥

ಅನುವಾದ

ಆದರೂ ಇಕ್ಷ್ವಾಕುವಂಶದಲ್ಲಿ ಪರಮಾತ್ಮನು ಶ್ರೀರಾಮನಾಗಿ ಅವತರಿಸಲಿದ್ದಾನೆ ಎಂಬುದನ್ನು ತಂದೆಯಾದ ಬ್ರಹ್ಮದೇವರು ನನಗೆ ಹೇಳಿರುವರು. ರಘುನಂದನಾ! ಅದರಿಂದ ನಾನು ನಿನ್ನೊಡನೆ ಸಂಬಂಧ ಉಂಟಾಗುವ ಆಶೆಯಿಂದ ಈ ನಿಂದನೀಯ ಪೌರೋಹಿತ್ಯವನ್ನು ಸ್ವೀಕರಿಸಿದ್ದೇನೆ. ॥29-30॥

31
ಮೂಲಮ್

ತತೋ ಮನೋರಥೋ ಮೇಽದ್ಯ ಫಲಿತೋ ರಘುನಂದನ ।
ತ್ವದಧೀನಾ ಮಹಾಮಾಯಾ ಸರ್ವಲೋಕೈಕಮೋಹಿನೀ ॥

32
ಮೂಲಮ್

ಮಾಂ ಯಥಾ ಮೋಹಯೇನ್ನೈವ ತಥಾ ಕುರು ರಘೂದ್ವಹ ।
ಗುರುನಿಷ್ಕೃತಿಕಾಮಸ್ತ್ವಂ ಯದಿ ದೇಹ್ಯೇತದೇವ ಮೇ ॥

ಅನುವಾದ

ಹೇ ರಘುವಂಶಕುಲಮಣಿ! ಇಂದು ನನ್ನ ಇಷ್ಟಾರ್ಥವು ಸಫಲವಾಯಿತು. ಒಂದು ವೇಳೆ ನೀನು ಗುರುದಕ್ಷಿಣೆಯನ್ನು ಕೊಡಲು ಬಯಸುವಿಯಾದರೆ ‘ಎಲ್ಲ ಲೋಕಗಳನ್ನು ಮೋಹಗೊಳಿಸುವಂತಹ ನಿನ್ನ ಅಧೀನವಾಗಿರುವ ಮಹಾಮಾಯೆಯು ನನ್ನನ್ನು ಮೋಹಗೊಳಿಸದೆ ಇರಲಿ’ ಎಂಬ ವರವನ್ನು ಕರುಣಿಸು. ॥31-32॥

33
ಮೂಲಮ್

ಪ್ರಸಂಗಾತ್ಸರ್ವಮಪ್ಯುಕ್ತಂ ನ ವಾಚ್ಯಂ ಕುತ್ರಚಿನ್ಮಯಾ ।
ರಾಜ್ಞಾ ದಶರಥೇನಾಹಂ ಪ್ರೇಷಿತೋಽಸ್ಮಿ ರಘೂದ್ವಹ ॥

34
ಮೂಲಮ್

ತ್ವಾಮಾಮಂತ್ರಯಿತುಂ ರಾಜ್ಯೇ ಶ್ವೋಽಭಿಷೇಕ್ಷ್ಯತಿ ರಾಘವ ।
ಅದ್ಯ ತ್ವಂ ಸೀತಯಾ ಸಾರ್ಧಮುಪವಾಸಂ ಯಥಾವಿಧಿ ॥

35
ಮೂಲಮ್

ಕೃತ್ವಾ ಶುಚಿರ್ಭೂಮಿಶಾಯಿ ಭವ ರಾಮ ಜಿತೇಂದ್ರಿಯಃ ।
ಗಚ್ಛಾಮಿ ರಾಜಸಾನ್ನಿಧ್ಯಂ ತ್ವಂ ತು ಪ್ರಾತರ್ಗಮಿಷ್ಯಸಿ ॥

ಅನುವಾದ

ಹೇ ರಘುನಂದನಾ! ಸಂದರ್ಭವು ಒದಗಿದ್ದರಿಂದ ಎಲ್ಲವನ್ನು ನಿನ್ನಲ್ಲಿ ಹೇಳಿರುವೆನು. ಬೇರೆಲ್ಲಿಯೂ ಈ ವಿಷಯವನ್ನು ಹೇಳಲಾರೆ. ಹೇ ರಾಘವಾ! ದಶರಥ ಮಹಾರಾಜರು ನಾಳೆ ನಿನಗೆ ಪಟ್ಟಾಭಿಷೇಕ ಮಾಡಲಿದ್ದಾರೆ, ಈ ಮಾತನ್ನು ನಿನಗೆ ತಿಳಿಸಲು ಅವರು ನನ್ನನ್ನು ಕಳಿಸಿರುವರು. ಇಂದು ನೀನು ವಿಧಿಪೂರ್ವಕವಾಗಿ ಸೀತೆಯೊಡನೆ ಉಪವಾಸವಿದ್ದು, ಜಿತೇಂದ್ರಿಯನಾಗಿದ್ದುಕೊಂಡು ಶುದ್ಧವಾದ ನೆಲದ ಮೇಲೆ ಮಲಗಿರಬೇಕು. ಈಗ ನಾನು ರಾಜನ ಬಳಿಗೆ ಹೋಗುತ್ತೇನೆ. ನೀನು ಬೆಳಿಗ್ಗೆ ಹೋಗುವಿಯಂತೆ.’’ ॥33-35॥

36
ಮೂಲಮ್

ಇತ್ಯುಕ್ತ್ವಾ ರಥಮಾರುಹ್ಯ ಯಯೌ ರಾಜಗುರುರ್ದ್ರುತಮ್ ।
ರಾಮೋಽಪಿ ಲಕ್ಷ್ಮಣಂ ದೃಷ್ಟ್ವಾ ಪ್ರಹಸನ್ನಿದಮಬ್ರವೀತ್ ॥

37
ಮೂಲಮ್

ಸೌಮಿತ್ರೇ ಯೌವರಾಜ್ಯೇ ಮೇ ಶ್ವೋಭಿಷೇಕೋ ಭವಿಷ್ಯತಿ ।
ನಿಮಿತ್ತಮಾತ್ರಮೇವಾಹಂ ಕರ್ತಾ ಭೋಕ್ತಾ ತ್ವಮೇವ ಹಿ ॥

ಅನುವಾದ

ಹೀಗೆ ಹೇಳಿ ರಾಜಪುರೋಹಿತ ವಸಿಷ್ಠರು ರಥವನ್ನೇರಿ ಶೀಘ್ರವಾಗಿ ಹೊರಟು ಹೋದರು. ಆಗ ರಾಮಚಂದ್ರನು ಲಕ್ಷ್ಮಣನನ್ನು ಕಂಡು ನಸುನಗುತ್ತ ಹೀಗೆಂದನು ‘ಹೇ ಸೌಮಿತ್ರಿ! ನಾಳೆ ನನಗೆ ಯುವರಾಜ ಪಟ್ಟಾಭಿಷೇಕವಾಗಲಿದೆಯಂತೆ, ಆದರೆ ನಾನು ನೆಪಮಾತ್ರಕ್ಕೆ ಯುವರಾಜನಾಗಿರುವೆ. ಅದರ ಎಲ್ಲ ಕಾರ್ಯಗಳನ್ನು ಮಾಡುವವನೂ, ಫಲವನ್ನು (ಸುಖವನ್ನು) ಅನುಭವಿಸುವವನೂ ನೀನೇ ಆಗಿರುವೆ. ॥36-37॥

38
ಮೂಲಮ್

ಮಮ ತ್ವಂ ಹಿ ಬಹಿಃಪ್ರಾಣೋ ನಾತ್ರ ಕಾರ್ಯಾ ವಿಚಾರಣಾ ।
ತತೋ ವಸಿಷ್ಠೇನ ಯಥಾ ಭಾಷಿತಂ ತತ್ತಥಾಕರೋತ್ ॥

ಅನುವಾದ

ಏಕೆಂದರೆ, ನೀನೇ ನನ್ನ ಪ್ರಾಣ ಸಮವಾಗಿರುವೆ. ಈ ವಿಷಯದಲ್ಲಿ (ಅಭಿಪ್ರಾಯ ಭೇದವಿಲ್ಲದುದರಿಂದ) ವಿಶೇಷ ವಿಚಾರದ ಆವಶ್ಯಕತೆಯೇ ಇಲ್ಲ’ ಎಂದು ಹೇಳಿದನು. ಅನಂತರ ವಸಿಷ್ಠರು ಹೇಳಿದಂತೆ ಎಲ್ಲವನ್ನು ಹಾಗೆಯೇ ಮಾಡಿದನು. ॥38॥

39
ಮೂಲಮ್

ವಸಿಷ್ಠೋಽಪಿ ನೃಪಂ ಗತ್ವಾ ಕೃತಂ ಸರ್ವಂ ನ್ಯವೇದಯತ್ ।
ವಸಿಷ್ಠಸ್ಯ ಪುರೋ ರಾಜ್ಞಾ ಹ್ಯುಕ್ತಂ ರಾಮಾಭಿಷೇಚನಮ್ ॥

40
ಮೂಲಮ್

ಯದಾ ತದೈವ ನಗರೇ ಶ್ರುತ್ವಾ ಕಶ್ಚಿತ್ಪುಮಾನ್ ಜಗೌ ।
ಕೌಸಲ್ಯಾಯೈ ರಾಮಮಾತ್ರೇ ಸುಮಿತ್ರಾಯೈ ತಥೈವ ಚ ॥

ಅನುವಾದ

ಇತ್ತ ವಸಿಷ್ಠರು ರಾಜನ ಬಳಿಗೆ ಬಂದು ಏನೆಲ್ಲ ಮಾಡಲಾಗಿದೆಯೋ ಅದೆಲ್ಲವನ್ನು ನಿವೇದಿಸಿ ಕೊಂಡರು. ಆಗ ವಸಿಷ್ಠರೊಡನೆ ರಾಜನು ರಾಮನ ಪಟ್ಟಾಭಿಷೇಕದ ವಿಷಯವನ್ನು ಮಾತನಾಡಿದುದನ್ನು ಕೇಳಿದ ಓರ್ವ ರಾಜ ಸೇವಕನು ರಾಮನ ತಾಯಿಯಾದ ಕೌಸಲ್ಯೆಗೂ ಮತ್ತು ಸುಮಿತ್ರೆಗೂ ಹಾಗೂ ನಗರದಲ್ಲೆಲ್ಲ ತಿಳಿಸಿದನು. ॥39-40॥

41
ಮೂಲಮ್

ಶ್ರುತ್ವಾ ತೇ ಹರ್ಷಸಂಪೂರ್ಣೇ ದದತುರ್ಹಾರಮುತ್ತಮಮ್ ।
ತಸ್ಮೈ ತತಃ ಪ್ರೀತಮನಾಃ ಕೌಸಲ್ಯಾ ಪುತ್ರವತ್ಸಲಾ ॥

42
ಮೂಲಮ್

ಲಕ್ಷ್ಮೀಂ ಪರ್ಯಚರದ್ದೇವೀಂ ರಾಮಸ್ಯಾರ್ಥಪ್ರಸಿದ್ಧಯೇ ।
ಸತ್ಯವಾದೀ ದಶರಥಃ ಕರೋತ್ಯೇವ ಪ್ರತಿಶ್ರುತಮ್ ॥

ಅನುವಾದ

ಅವರಿಬ್ಬರು ಕೇಳುತ್ತಲೇ ಬಹಳ ಸಂತೋಷಗೊಂಡರು. ವಾರ್ತೆಯನ್ನು ತಿಳಿಸಿದವನಿಗೆ ಕೌಸಲ್ಯೆಯು ಅತ್ಯುತ್ತಮ ಒಂದು ಹಾರವನ್ನು ಉಡುಗೊರೆಯಾಗಿ ನೀಡಿದಳು. ಅನಂತರ ಪುತ್ರವಾತ್ಸಲ್ಯದಿಂದ ಕೌಸಲ್ಯೆಯು ರಾಮಚಂದ್ರನ ಇಷ್ಟಾರ್ಥ ಸಿದ್ಧಿಗಾಗಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಿದಳು. ‘ದಶರಥ ರಾಜರಾದರೋ ಸತ್ಯವಾದಿಯಾಗಿದ್ದಾರೆ. ಅವರು ತಮ್ಮ ಪ್ರತಿಜ್ಞೆಯನ್ನು ಪಾಲಿಸಿಯೇ ತೀರುತ್ತಾರೆ’ ಎಂಬುದು ಪ್ರಸಿದ್ಧವಾಗಿದೆ. ॥41-42॥

43
ಮೂಲಮ್

ಕೈಕೇಯೀವಶಗಃ ಕಿಂತು ಕಾಮುಕಃ ಕಿಂ ಕರಿಷ್ಯತಿ ।
ಇತಿ ವ್ಯಾಕುಲಚಿತ್ತಾ ಸಾ ದುರ್ಗಾಂ ದೇವೀಮಪೂಜಯತ್ ॥

ಅನುವಾದ

ಆದರೂ ಕಾಮುಕರಾದ ಅವರು ಕೈಕೆಯಿಯ ಅಧಿನರಾಗಿರುವುದರಿಂದ ಏನು ಮಾಡುತ್ತಾರೋ! ಹೀಗೆ ಚಿಂತೆಯಿಂದ ವ್ಯಾಕುಲಳಾದ ಅವಳು ದುರ್ಗಾದೇವಿಯನ್ನು ಅರ್ಚಿಸ ತೊಡಗಿದಳು. ॥43॥

44
ಮೂಲಮ್

ಏತಸ್ಮಿನ್ನಂತರೇ ದೇವಾ ದೇವೀಂ ವಾಣಿಮಚೋದಯನ್ ।
ಗಚ್ಛ ದೇವಿ ಭುವೋ ಲೋಕಮಯೋಧ್ಯಾಯಾಂ ಪ್ರಯತ್ನತಃ ॥

45
ಮೂಲಮ್

ರಾಮಾಭಿಷೇಕವಿಘ್ನಾರ್ಥಂ ಯತಸ್ವ ಬ್ರಹ್ಮವಾಕ್ಯತಃ ।
ಮಂಥರಾಂ ಪ್ರವಿಶಸ್ವಾದೌ ಕೈಕೇಯೀಂ ಚ ತತಃ ಪರಮ್ ॥

ಅನುವಾದ

ಇದೇ ಸಮಯದಲ್ಲಿ ದೇವಲೋಕದಲ್ಲಿ ದೇವತೆಗಳು ಸರಸ್ವತೀ ದೇವಿಯನ್ನು ಆಗ್ರಹಪಡಿಸಿದರು. ‘‘ತಾಯೇ! ನೀನು ಭೂಲೋಕದ ಅಯೋಧ್ಯೆಗೆ ಹೋಗಿ ಬ್ರಹ್ಮದೇವರ ಮಾತಿನಂತೆ ರಾಮನ ಪಟ್ಟಾಭಿಷೇಕಕ್ಕೆ ಪ್ರಯತ್ನಪೂರ್ವಕ ಅಡ್ಡಿಯನ್ನುಂಟುಮಾಡು. ಮೊದಲು ಮಂಥರೆಯಲ್ಲಿ, ಬಳಿಕ ಕೈಕೆಯಲ್ಲಿ ಪ್ರವೇಶಿಸಿ ಅವರು ವಿಘ್ನವುಂಟುಮಾಡುವಂತೆ ಮಾಡು. ॥44-45॥

46
ಮೂಲಮ್

ತತೋ ವಿಘ್ನೇ ಸಮುತ್ಪನ್ನೇ ಪುನರೇಹಿ ದಿವಂ ಶುಭೇ ।
ತಥೇತ್ಯುಕ್ತ್ವಾ ತಥಾ ಚಕ್ರೇ ಪ್ರವಿವೇಶಾಥ ಮಂಥರಾಮ್ ॥

ಅನುವಾದ

ಶುಭಪ್ರದಳೇ! ಈ ಪ್ರಕಾರ ವಿಘ್ನವನ್ನೊಡ್ಡಿದ ಮೇಲೆ ನೀನು ಸ್ವರ್ಗಲೋಕಕ್ಕೆ ಬಂದುಬಿಡು.’’ ‘ಹಾಗೆಯೇ ಆಗಲಿ’ ಎಂದು ಹೇಳಿ ಸರಸ್ವತಿಯು ಮೊದಲಿಗೆ ಮಂಥರೆಯಲ್ಲಿ ಪ್ರವೇಶಿಸಿದಳು.॥46॥

47
ಮೂಲಮ್

ಸಾಪಿ ಕುಬ್ಜಾ ತ್ರಿವಕ್ರಾ ತು ಪ್ರಾಸಾದಾಗ್ರಮಥಾರುಹತ್ ।
ನಗರಂ ಪರಿತೋ ದೃಷ್ಟ್ವಾ ಸರ್ವತಃ ಸಮಲಂಕೃತಮ್ ॥

48
ಮೂಲಮ್

ನಾನಾತೋರಣಸಂಬಾಧಂ ಪತಾಕಾಭಿರಲಂಕೃತಮ್ ।
ಸರ್ವೋತ್ಸವಸಮಾಯುಕ್ತಂ ವಿಸ್ಮಿತಾ ಪುನರಾಗಮತ್ ॥

ಅನುವಾದ

ಆಗ ಶರೀರದಲ್ಲಿ ಮೂರು ಕಡೆ ಡೊಂಕಾದವಳೂ, ಕುಳ್ಳಿಯಾದ ಆ ಮುದಿ ಮಂಥರೆಯು ಉಪ್ಪರಿಗೆಯನ್ನೇರಿ ನಗರವನ್ನು ಸುತ್ತಲೂ ನೋಡಿದಳು. ಅಯೋಧ್ಯೆಯು ಅನೇಕ ರೀತಿಯಿಂದ ತಳಿರುತೋರಣಗಳಿಂದಲೂ ಧ್ವಜ ಪತಾಕೆಗಳಿಂದಲೂ ಅಲಂಕೃತವಾಗಿ ಸಜ್ಜುಗೊಂಡು ವೈಭವದಿಂದ ಕಂಗೊಳಿಸುವುದನ್ನು ನೋಡಿ ಆಶ್ಚರ್ಯಚಕಿತಳಾಗಿ ಹಿಂದಿರುಗಿದಳು. ॥47-48॥

49
ಮೂಲಮ್

ಧಾತ್ರೀಂ ಪಪ್ರಚ್ಛ ಮಾತಃ ಕಿಂ ನಗರಂ ಸಮಲಂಕೃತಮ್ ।
ನಾನೋತ್ಸವಸಮಾಯುಕ್ತಾ ಕೌಸಲ್ಯಾ ಚಾತಿಹರ್ಷಿತಾ ॥

50
ಮೂಲಮ್

ದದಾತಿ ವಿಪ್ರಮುಖ್ಯೇಭ್ಯೋ ವಸ್ತ್ರಾಣಿ ವಿವಿಧಾನಿ ಚ ।
ತಾಮುವಾಚ ತದಾ ಧಾತ್ರೀ ರಾಮಚಂದ್ರಾಭಿಷೇಚನಮ್ ॥

51
ಮೂಲಮ್

ಶ್ವೋ ಭವಿಷ್ಯತಿ ತೇನಾದ್ಯ ಸರ್ವತೋಽಲಂಕೃತಂ ಪುರಮ್ ।
ತಚ್ಛ್ರುತ್ವಾ ತ್ವರಿತಂ ಗತ್ವಾ ಕೈಕೇಯೀಂ ವಾಕ್ಯಮಬ್ರವೀತ್ ॥

ಅನುವಾದ

ದಾರಿಯಲ್ಲಿ ಓರ್ವ ದಾಸಿಯನ್ನು ಕೇಳಿದಳು — ‘‘ಅಮ್ಮಾ! ಇದೇನು? ನಗರವೆಲ್ಲ ಅಲಂಕೃತವಾಗಿದೆಯಲ್ಲ! ಮಹಾರಾಣಿ ಕೌಸಲ್ಯೆಯೂ ಕೂಡ ಉತ್ಸಾಹ ಭರಿತಳಾಗಿ ಸಂತೋಷದಿಂದ ಓಡಾಡುತ್ತಿರುವಳಲ್ಲ! ಅನೇಕ ಉತ್ತಮೋತ್ತಮ ವಸ್ತ್ರಾಭೂಷಣಗಳನ್ನು ಬ್ರಾಹ್ಮಣರಿಗೆ ದಾನ ಮಾಡುತ್ತಿರುವಳು; ಕಾರಣವೇನು?’’ ಆಗ ಆ ದಾಸಿಯು ‘‘ನಾಳೆಯೇ ಶ್ರೀರಾಮನಿಗೆ ಪಟ್ಟಾಭಿಷೇಕವಾಗಲಿದೆ; ಆದ್ದರಿಂದ ಈಗಿನಿಂದಲೇ ನಗರವೆಲ್ಲ ಸಜ್ಜಾಗುತ್ತಿದೆ’’ ಎಂದು ಹೇಳಿದಳು. ಇದನ್ನು ಕೇಳುತ್ತಲೇ ಮಂಥರೆಯು ಲಗುಬಗೆಯಿಂದ ಕೈಕೆಯಿಯ ಬಳಿಗೆ ಓಡಿದಳು. ॥49-51॥

52
ಮೂಲಮ್

ಪರ್ಯಂಕಸ್ಥಾಂ ವಿಶಾಲಾಕ್ಷೀಮೇಕಾಂತೇ ಪರ್ಯವಸ್ಥಿತಾಮ್ ।
ಕಿಂ ಶೇಷೇ ದುರ್ಭಗೇ ಮೂಢೇ ಮಹದ್ಭಯಮುಪಸ್ಥಿಮ್ ॥

53
ಮೂಲಮ್

ನ ಜಾನೀ ಷೇಽತಿಸೌಂದರ್ಯಮಾನಿನೀ ಮತ್ತಗಾಮಿನೀ ॥

54
ಮೂಲಮ್

ರಾಮಸ್ಯಾನುಗ್ರಹಾದ್ರಾಜ್ಞಃ ಶ್ವೋಽಭಿಷೇಕೋ ಭವಿಷ್ಯತಿ ।
ತಚ್ಛ್ರುತ್ವಾ ಸಹಸೋತ್ಥಾಯ ಕೈಕೇಯೀ ಪ್ರಿಯವಾದಿನಿ ॥

ಅನುವಾದ

ವಿಶಾಲ ಕಣ್ಣುಗಳುಳ್ಳ ಕೈಕೆಯಿಯು ಅಂತಃಪುರದಲ್ಲಿ ಏಕಾಂಗಿಯಾಗಿ ಮಂಚದ ಮೇಲೆ ಕುಳಿತಿದ್ದಳು. ಮಂಥರೆಯು ಅಲ್ಲಿಗೆ ಬರುತ್ತಲೇ ಅವಳಲ್ಲಿ ಹೇಳಿದಳು - ‘‘ಎಲೈ ದುರದೃಷ್ಟಳೇ, ಮೂಢಳೇ! ಏಕೆ ಸುಮ್ಮನೆ ಮಲಗಿರುವೆ? (ಉದಾಸೀನಳಾಗಿರುವೆ) ನಿನಗೀಗ ಭಾರೀ ದೊಡ್ಡ ಸಂಕಟವೇ ಬಂದೊದಗಿದೆ. ನಾನೇ ಸುಂದರಳು ಎಂದು ಭಾವಿಸಿಕೊಂಡು ಮೈಮರೆತಿರುವ ಮಂದಮತಿಯಾದ ನೀನು ಏನನ್ನೂ ಅರಿಯದೇ ಇರುವೆ. ನೋಡು ಮಹಾರಾಜರ ದಯೆಯಿಂದ ನಾಳೆಯೇ ರಾಮನಿಗೆ ಪಟ್ಟಾಭಿಷೇಕವಾಗಲಿದೆ.’’ ಇದನ್ನು ಕೇಳಿ ಪ್ರಿಯವಾದಿನಿಯಾದ ಕೈಕೆಯಿಯು ತಟ್ಟನೆ ಮೇಲಕ್ಕೆದ್ದಳು. ॥52-54॥

55
ಮೂಲಮ್

ತಸ್ಯೈ ದಿವ್ಯಂ ದದೌ ಸ್ವರ್ಣನೂಪುರಂ ರತ್ನಭೂಷಿತಮ್ ।
ಹರ್ಷಸ್ಥಾನೇ ಕಿಮಿತಿ ಮೇ ಕಥ್ಯತೇ ಭಯಮಾಗತಮ್ ॥

ಅನುವಾದ

ಇಂತಹ ಒಳ್ಳೆಯ ಸುದ್ದಿಯನ್ನು ತಿಳಿಸಿದ ಮಂಥರೆಗೆ ದಿವ್ಯ ರತ್ನಗಳಿಂದ ಅಲಂಕೃತವಾದ ಚಿನ್ನದ ಗೆಜ್ಜೆಸರವನ್ನು ಕೊಟ್ಟು ಹೇಳಿದಳು — ‘‘ಇದಾದರೋ ಸಂತೋಷ ಪಡುವ ಮಾತಾಗಿದೆ. ಏನೇ! ಇದರಲ್ಲಿ ಸಂಕಟವು ಉಂಟಾಗಿದೆ ಎಂದು ಹೇಗೆ ಹೇಳುತ್ತಿರುವೆ?” ॥55॥

56
ಮೂಲಮ್

ಭರತಾದಧಿಕೋ ರಾಮಃ ಪ್ರಿಯಕೃನ್ಮೇ ಪ್ರಿಯಂವದಃ ।
ಕೌಸಲ್ಯಾಂ ಮಾಂ ಸಮಂ ಪಶ್ಯನ್ ಸದಾ ಶುಶ್ರೂಷತೇ ಹಿ ಮಾಮ್ ॥

ಅನುವಾದ

ರಾಮನಾದರೋ ನನಗೆ ಭರತನಿಗಿಂತಲೂ ಹೆಚ್ಚಿನವನಾಗಿದ್ದು, ಪ್ರಿಯವನ್ನು ಮಾಡುವವನೂ, ಮಧುರವಾಗಿ ಮಾತಾಡುವವನೂ ಆಗಿದ್ದಾನೆ. ಅವನು ಕೌಸಲ್ಯೆಯನ್ನೂ, ನನ್ನನ್ನೂ ಸಮಾನವಾಗಿ ಕಾಣುತ್ತಾ ಯಾವಾಗಲೂ ಸೇವಿಸುತ್ತಿರುವನು. ॥56॥

57
ಮೂಲಮ್

ರಾಮಾದ್ಭಯಂ ಕಿಮಾಪನ್ನಂ ತವ ಮೂಢೇ ವದಸ್ವ ಮೇ ।
ತಚ್ಛ್ರುತ್ವಾ ವಿಷಸಾದಾಥ ಕುಬ್ಜಾಕಾರಣವೈರಿಣೀ ॥

ಅನುವಾದ

ಎಲೈ ಮೂರ್ಖಳೇ! ರಾಮನ ಕಡೆಯಿಂದ ನನಗೆ ಭಯವೇಕೆ ಬಂದೀತು? ಹೇಳು!’’ ಇದನ್ನು ಕೇಳಿ ಸಕಾರಣದಿಂದ ದ್ವೇಷಮಾಡುವ ಸ್ವಭಾವವುಳ್ಳ ಆ ಕುಳ್ಳಿಯಾದ ಮಂಥರೆಯು ಬಹಳ ವಿಷಾದಿಸ ತೊಡಗಿದಳು. ॥57॥

58
ಮೂಲಮ್

ಶ್ರುಣು ಮದ್ವಚನಂ ದೇವಿ ಯಥಾರ್ಥಂ ತೇ ಮಹದ್ಭಯಮ್ ।
ತ್ವಾಂ ತೋಷಯನ್ ಸದಾ ರಾಜಾ ಪ್ರಿಯವಾಕ್ಯಾನಿ ಭಾಷತೇ ॥

59
ಮೂಲಮ್

ಕಾಮುಕೋಽತಥ್ಯವಾದೀ ಚ ತ್ವಾಂ ವಾಚಾ ಪರಿತೋಷಯನ್ ।
ಕಾರ್ಯಂ ಕರೋತಿ ತಸ್ಯಾ ವೈ ರಾಮಮಾತುಃ ಸುಪುಷ್ಕಲಮ್ ॥

60
ಮೂಲಮ್

ಮನಸ್ಯೇತನ್ನಿಧಾಯೈವ ಪ್ರೇಷಯಾಮಾಸ ತೇ ಸುತಮ್ ।
ಭರತಂ ಮಾತುಲಕುಲೇ ಪ್ರೇಷಯಾಮಾಸ ಸಾನುಜಮ್ ॥

ಅನುವಾದ

ಹಾಗೂ ಹೇಳುತ್ತಾಳೆ - ‘‘ದೇವಿಯೇ! ನನ್ನ ಮಾತನ್ನು ಕೇಳು. ನಿನಗೆ ನಿಜವಾಗಿ ಭಯ ಉಂಟಾಗಿದೆ. ರಾಜನು ನಿನ್ನನ್ನು ಸಂತೋಷ ಪಡಿಸಲು ಯಾವಾಗಲೂ ಬಣ್ಣ-ಬಣ್ಣದ ಮಾತುಗಳನ್ನೇ ಆಡುತ್ತಾನೆ. ಆದರೆ ಕಾಮುಕನೂ, ಮಿಥ್ಯಾವಾದಿಯೂ ಆದ ಅವನು ನಿನ್ನನ್ನು ಕೇವಲ ಮಾತುಗಳಿಂದಲೇ ಸಂತೋಷಪಡಿಸುತ್ತ, ರಾಮನ ತಾಯಿಗೆ ಅನುಕೂಲವಾದ ಕೆಲಸವನ್ನೇ ಚೆನ್ನಾಗಿ ಮಾಡುತ್ತಾನೆ. ಪಟ್ಟಾಭಿಷೇಕದ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ನಿನ್ನ ಮಗನಾದ ಭರತನನ್ನು ಶತ್ರುಘ್ನನೊಂದಿಗೆ ಸೋದರಮಾವನ ಮನೆಗೆ ಕಳಿಸಿರುವನು. ॥58-60॥

61
ಮೂಲಮ್

ಸುಮಿತ್ರಾಯಾಃ ಸಮೀಚೀನಂ ಭವಿಷ್ಯತಿ ನ ಸಂಶಯಃ ।
ಲಕ್ಷ್ಮಣೋ ರಾಮಮನ್ವೇತಿ ರಾಜ್ಯಂ ಸೋಽನುಭವಿಷ್ಯತಿ ॥

62
ಮೂಲಮ್

ಭರತೋ ರಾಘವಸ್ಯಾಗ್ರೆ ಕಿಂಕರೋ ವಾ ಭವಿಷ್ಯತಿ ।
ವಿವಾಸ್ಯತೇ ವಾ ನಗರಾತ್ಪ್ರಾಣೈರ್ವಾ ಹಾಪ್ಯತೇ ಚಿರಾತ್ ॥

ಅನುವಾದ

ಇದರಿಂದ ಸುಮಿತ್ರೆಗೂ ಒಳ್ಳೆಯದೇ ಆಗುವುದು; ಕಾರಣ ಲಕ್ಷ್ಮಣನು ರಾಮನನ್ನು ಅನುಸರಿಸುತ್ತಾನೆ; ಆದ್ದರಿಂದ ಅವನಾದರೋ ರಾಜ್ಯಸುಖವನ್ನು ಅನುಭವಿಸುವನು ಇದರಲ್ಲಿ ಸಂದೇಹವೇ ಇಲ್ಲ. ಭರತನಾದರೋ ರಾಮನ ಸೇವಕನಾಗಿರಬೇಕಾಗುವುದು; ಇಲ್ಲವೇ ಬೇಗನೇ ಅವನನ್ನು ನಗರದಿಂದ ಓಡಿಸಿಬಿಡುತ್ತಾರೆ, ಅಥವಾ ಪ್ರಾಣವನ್ನೇ ತೆಗೆದುಬಿಡಲಾದೀತು. ॥61-62॥

63
ಮೂಲಮ್

ತ್ವಂ ತು ದಾಸೀವ ಕೌಸಲ್ಯಾಂ ನಿತ್ಯಂ ಪರಿಚರಿಷ್ಯಸಿ ।
ತತೋಽಪಿ ಮರಣಂ ಶ್ರೇಯೋ ಯತ್ಸಪತ್ಯ್ನಾಃ ಪರಾಭವಃ ॥

ಅನುವಾದ

ನೀನಾದರೋ ದಾಸಿಯಂತೆ ಕೌಸಲ್ಯೆಯನ್ನು ಯಾವಾಗಲೂ ಸೇವೆಮಾಡಿಕೊಂಡಿರಬೇಕಾಗುವುದು. ಸವತಿಯಿಂದ ಹೀಗೆ ಅಪಮಾನಿತಳಾಗಿ ಸೇವಕಿಯಾಗಿರುವುದಕ್ಕಿಂತ ಸಾಯುವುದೇ ಲೇಸು. ॥63॥

64
ಮೂಲಮ್

ಅತಃ ಶೀಘ್ರಂ ಯತಸ್ವಾದ್ಯ ಭರತಸ್ಯಾಭಿಷೇಚನೇ ।
ರಾಮಸ್ಯ ವನವಾಸಾರ್ಥಂ ವರ್ಷಾಣಿ ನವ ಪಂಚ ಚ ॥

ಅನುವಾದ

ಆದ್ದರಿಂದ ಈಗ ನೀನು ಶೀಘ್ರವಾಗಿ ಭರತನ ರಾಜ್ಯಾಭಿಷೇಕಕ್ಕಾಗಿ ಮತ್ತು ರಾಮನ ಹದಿನಾಲ್ಕು ವರ್ಷಗಳ ವನವಾಸಕ್ಕಾಗಿ ಪ್ರಯತ್ನ ಮಾಡು. ॥64॥

65
ಮೂಲಮ್

ತತೋ ರೂಢೋಽಭಯೇ ಪುತ್ರಸ್ತವ ರಾಜ್ಞಿ ಭವಿಷ್ಯತಿ ।
ಉಪಾಯಂ ತೇ ಪ್ರವಕ್ಷ್ಯಾಮಿ ಪೂರ್ವಮೇವ ಸುನಿಶ್ಚಿತಮ್ ॥

ಅನುವಾದ

ರಾಣಿಯೇ! ಹೀಗಾದರೆ ನಿನ್ನ ಮಗನು ನಿರ್ಭಯನಾಗಿ ನಿಷ್ಕಂಟಕ ರಾಜ್ಯಕ್ಕೆ ಅಧಿಕಾರಿಯಾಗುವನು. ಇದಕ್ಕಾಗಿ ತಕ್ಕ ಉಪಾಯವನ್ನು ಮೊದಲೇ ನಾನು ನಿಶ್ಚಯಿಸಿ ಇರುವೆನು. ಅದನ್ನು ಹೇಳುವೆನು ಕೇಳು. ॥65॥

66
ಮೂಲಮ್

ಪುರಾ ದೇವಾಸುರೇ ಯುದ್ಧೇ ರಾಜಾ ದಶರಥಃ ಸ್ವಯಮ್ ।
ಇಂದ್ರೇಣ ಯಾಚಿತೋ ಧನ್ವೀ ಸಹಾಯಾರ್ಥಂ ಮಹಾರಥಃ ॥

ಅನುವಾದ

ಎಲೈ ಶುಭಾಂಗಿಯೇ! ಹಿಂದೆ ದೇವಾಸುರರ ಯುದ್ಧಕಾಲದಲ್ಲಿ ಸ್ವಯಂ ದೇವೇಂದ್ರನು ಧನುರ್ಧರ ಮಹಾರಥಿ ರಾಜಾ ದಶರಥನಲ್ಲಿ ಸಹಾಯಕ್ಕಾಗಿ ಪ್ರಾರ್ಥಿಸಿದ್ದನು. ॥66॥

67
ಮೂಲಮ್

ಜಗಾಮ ಸೇನಯಾ ಸಾರ್ಧಂ ತ್ವಯಾ ಸಹ ಶುಭಾನನೇ ।
ಯುದ್ಧಂ ಪ್ರಕುರ್ವತಸ್ತಸ್ಯ ರಾಕ್ಷಸೈಃ ಸಹ ಧನ್ವಿನಃ ॥

68
ಮೂಲಮ್

ತದಾಕ್ಷಕೀಲೋ ನ್ಯಪತಚ್ಛಿನ್ನಸ್ತಸ್ಯ ನ ವೇದ ಸಃ ।
ತ್ವಂ ತು ಹಸ್ತಂ ಸಮಾವೇಶ್ಯ ಕಿಲರಂಧ್ರೇಽತಿಧೈರ್ಯತಃ ॥

ಅನುವಾದ

ಆಗ ಸೇನಾಸಮೇತನಾಗಿ ಹೋಗುವಾಗ ನಿನ್ನನ್ನು ಕರೆದುಕೊಂಡು ಹೋಗಿದ್ದನು. ಧನ್ವಿಯಾದ ದಶರಥನು ರಾಕ್ಷಸರೊಡನೆ ಯುದ್ಧ ಮಾಡುತ್ತಿರುವಾಗ ರಥದ ಅಚ್ಚಿನ ಕೀಲು ಕಳಚಿಬಿತ್ತು. ಅವನು ಅದನ್ನು ಅರಿಯದಾದನು. ನೀನು ಧೈರ್ಯಸಾಹಸದಿಂದ ಅದರ ರಂಧ್ರದೊಳಗೆ ಕೈಯನ್ನು ಚಾಚಿದೆ. ॥67-68॥

69
ಮೂಲಮ್

ಸ್ಥಿತವತ್ಯಸಿತಾಪಾಂಗಿ ಪತಿಪ್ರಾಣಪರೀಪ್ಸಯಾ ।
ತತೋ ಹತ್ವಾಸುರಾನ್ಸರ್ವಾನ್ ದದರ್ಶ ತ್ವಾಮರಿಂದಮಃ ॥

ಅನುವಾದ

ಪತಿಯ ಪ್ರಾಣಗಳನ್ನು ಉಳಿಸಲು ಎಷ್ಟೋ ಹೊತ್ತಿನವರೆಗೆ ಹಾಗೆಯೇ ನಿಂತೆ. ಅನಂತರ ಎಲ್ಲ ರಾಕ್ಷಸರನ್ನು ಸಂಹಾರ ಮಾಡಿ ಶತ್ರುಸಂಹಾರಕನಾದ ರಾಜನು ನಿನ್ನ ಕಡೆಗೆ ನೋಡಿದನು. ॥69॥

70
ಮೂಲಮ್

ಆಶ್ಚರ್ಯಂ ಪರಮಂ ಲೇಭೇ ತ್ವಾಮಾಲಿಂಗ್ಯ ಮುದಾನ್ವಿತಃ ।
ವೃಣೀಷ್ವ ಯತ್ತೇ ಮನಸಿ ವಾಂಛಿತಂ ವರದೋಸ್ಮ್ಯಹಮ್ ॥

ಅನುವಾದ

ಇಂತಹ ಸ್ಥಿತಿಯಲ್ಲಿ ನೋಡಿದ ಅವನು ಆಶ್ಚರ್ಯ ಚಕಿತನಾದನು. ಸಂತೋಷದಿಂದ ನಿನ್ನನ್ನು ತಬ್ಬಿಕೊಂಡು ‘ಇದೋ, ನಾನು ವರವನ್ನು ಕೊಡುವವನಿದ್ದೇನೆ. ನಿನ್ನ ಮನಸ್ಸಿನ ಬಯಕೆಯೇನಿದೆಯೋ ಅದನ್ನು ಕೇಳು. ॥70॥

71
ಮೂಲಮ್

ವರದ್ವಯಂ ವೃಣೀಶ್ವ ತ್ವಮೇವಂ ರಾಜಾವದತ್ಸ್ವಯಮ್ ।
ತ್ವಯೋಕ್ತೋ ವರದೋ ರಾಜನ್ಯದಿ ದತ್ತಂ ವರದ್ವಯಮ್ ॥

72
ಮೂಲಮ್

ತ್ವಯ್ಯೇವ ತಿಷ್ಠತು ಚಿರಂ ನ್ಯಾಸಭೂತಂ ಮಮಾನಘ ।
ಯದಾ ಮೇಽವಸರೋ ಭೂಯಾತ್ತದಾ ದೇಹಿ ವರದ್ವಯಮ್ ॥

ಅನುವಾದ

ಈಗ ನೀನು ಎರಡು ವರಗಳನ್ನು ಕೇಳಬಲ್ಲೆ’ ಎಂದು ರಾಜನು ತಾನಾಗಿ ಹೇಳಿದಾಗ ನೀನು ಪ್ರಾಣ ಪ್ರಿಯಾ! ‘ನೀನು ಎರಡು ವರಗಳನ್ನು ಕೊಟ್ಟಿರುವೆಯಾದರೆ ಅವು ಮೀಸಲಾಗಿ ನಿನ್ನಲ್ಲಿಯೇ ಚಿರಕಾಲ ಇದ್ದುಕೊಂಡಿರಲಿ; ನನಗೆ ಸಂದರ್ಭವೊದಗಿದಾಗ ಈ ಎರಡು ವರಗಳನ್ನು ನೀನು ಕೊಡುವೆಯಂತೆ’’ ಎಂದು ಹೇಳಿದೆ. ॥71-72॥

73
ಮೂಲಮ್

ತಥೇತ್ಯುಕ್ತ್ವಾ ಸ್ವಯಂ ರಾಜಾ ಮಂದಿರಂ ವ್ರಜ ಸುವ್ರತೇ ।
ತ್ವತ್ತಃ ಶ್ರುತಂ ಮಯಾ ಪೂರ್ವಮಿದಾನೀಂ ಸ್ಮೃತಿಮಾಗತಮ್ ॥

ಅನುವಾದ

‘‘ಮಹಾರಾಣಿ! ಹಾಗೇ ಆಗಲೀ’’ ಎಂದು ಹೇಳಿ ರಾಜನು ತನ್ನ ಅರಮನೆಗೆ ಮರಳಿದನು. ನಿನ್ನಿಂದ ಹಿಂದೆಯೇ ಕೇಳಿದ್ದ ವಿಷಯವು ಈಗ ನನಗೆ ನೆನಪಿಗೆ ಬಂದಿದೆ. ॥73॥

74
ಮೂಲಮ್

ಅತಃ ಶೀಘ್ರಂ ಪ್ರವಿಶ್ಯಾದ್ಯ ಕ್ರೋಧಾಗಾರಂ ರುಷಾನ್ವಿತಾ ।
ವಿಮುಚ್ಯ ಸರ್ವಾಭರಣಂ ಸರ್ವತೋ ವಿನಿಕೀರ್ಯ ಚ ।
ಭೂಮಾವೇವ ಶಯಾನಾ ತ್ವಂ ತೂಷ್ಣೀಮಾತಿಷ್ಠಭಾಮಿನಿ ॥

75
ಮೂಲಮ್

ಯಾವತ್ಸತ್ಯಂ ಪ್ರತಿಜ್ಞಾಯ ರಾಜಾಭೀಷ್ಟಂ ಕರೋತಿ ತೇ ।
ಶ್ರುತ್ವಾ ತ್ರಿವಕ್ರಯೋಕ್ತಂ ತತ್ತದಾ ಕೆಕಯನಂದಿನೀ ॥

76
ಮೂಲಮ್

ತಥ್ಯಮೆವಾಖಿಲಂ ಮೇನೆ ದುಃಸಂಗಾಹಿತವಿಭ್ರಮಾ ।
ತಾಮಾಹ ಕೈಕೆಯೀ ದುಷ್ಟಾ ಕುತಸ್ತೇ ಬುದ್ಧಿರೀದೃಶಿ ॥

ಅನುವಾದ

ಆದ್ದರಿಂದ ಹೇ ಭಾಮಿನಿ! ಜಾಗ್ರತೆಯಾಗಿ ನೀನು ಕೋಪಗೊಂಡವಳಾಗಿ ಎಲ್ಲ ಒಡವೆಗಳನ್ನು ಕಳಚಿ ದಿಕ್ಕಾಪಾಲಾಗಿ ಎಸೆದು, ಕೋಪಾಗಾರವನ್ನು ಹೊಕ್ಕು ನೆಲದ ಮೇಲೆ ಸುಮ್ಮನೆ ಬಿದ್ದುಕೊಂಡಿರು. ರಾಜನು ಬಂದು ನಿನ್ನ ಇಷ್ಟವನ್ನು ಸತ್ಯವಾಗಿ ನಡೆಸಿಕೊಡುತ್ತೇನೆಂದು ಪ್ರತಿಜ್ಞೆ ಮಾಡುವವರೆಗೆ ಹಾಗೆಯೇ ಇದ್ದುಬಿಡು. ತ್ರಿವಕ್ರೆಯಾದ ಮಂಥರೆಯು ಹೇಳಿದ್ದನ್ನು ಕೇಳಿದ ಆ ಕೇಕೆಯನಂದಿನಿ ದುಸ್ಸಂಗವಶಳಾಗಿ, ಬುದ್ಧಿವೈಪರೀತ್ಯಕ್ಕೆ ಒಳಗಾಗಿ ಎಲ್ಲವೂ ನಿಜವೆಂದೇ ಭಾವಿಸಿದಳು. ಬುದ್ಧಿಯು ದೂಷಿತವಾಗಿ ಪರಿವರ್ತಿತಳಾದ ಕೈಕೆಯಿಯು ಆಕೆಯನ್ನು ಕುರಿತು ‘‘ಎಲೆಗೆ, ನಿನಗೆ ಇಂತಹ ಬುದ್ಧಿಯು ಹೇಗೆ ಹೊಳೆಯಿತು.” ಎಂದು ಕೇಳಿದಳು. ॥74-76॥

77
ಮೂಲಮ್

ಏವಂ ತ್ವಾಂ ಬುದ್ಧಿಸಂಪನ್ನಾಂ ನ ಜಾನೇ ವಕ್ರಸುಂದರಿ ।
ಭರತೋ ಯದಿ ರಾಜಾ ಮೇ ಭವಿಷ್ಯತಿ ಸುತಃ ಪ್ರಿಯಃ ॥

78
ಮೂಲಮ್

ಗ್ರಾಮಾನ್ ಶತಂ ಪ್ರದಾಸ್ಯಾಮಿ ಮಮ ತ್ವಂ ಪ್ರಾಣವಲ್ಲಭಾ ।
ಇತ್ಯುಕ್ತ್ವಾ ಕೋಪಭವನಂ ಪ್ರವಿಶ್ಯ ಸಹಸಾ ರುಷಾ ॥

ಅನುವಾದ

ಎಲೈ ವಕ್ರಸುಂದರೀ! ನೀನು ಇಷ್ಟೊಂದು ಬುದ್ಧಿವಂತಳೆಂದು ನಾನು ತಿಳಿದಿರಲಿಲ್ಲ. ನನ್ನ ಪ್ರಿಯ ಪುತ್ರನಾದ ಭರತನು ರಾಜನಾದರೆ, ನನ್ನ ಪ್ರಾಣಗಳಿಗಿಂತ ಪ್ರೀತಿಪಾತ್ರಳಾದ ನಿನಗೆ ಒಂದುನೂರು ಊರುಗಳನ್ನು ಕೊಡುವೆನು’’ ಹೀಗೆ ಹೇಳಿ ತಟಕ್ಕನೆ ಸಿಟ್ಟಿನಿಂದ ಕೋಪಭವನವನ್ನು ಹೊಕ್ಕಳು. ॥77-78॥

79
ಮೂಲಮ್

ವಿಮುಚ್ಯ ಸರ್ವಾಭರಣಂ ಪರಿಕೀರ್ಯ ಸಮಂತತಃ ।
ಭೂಮೌ ಶಯಾನಾ ಮಲಿನಾ ಮಲಿನಾಂಬರಧಾರಿಣೀ ॥

80
ಮೂಲಮ್

ಪ್ರೋವಾಚ ಶ್ರುಣು ಮೇ ಕುಬ್ಜೇ ಯಾವದ್ರಾಮೋ ವನಂ ವ್ರಜೇತ್ ।
ಪ್ರಾಣಾಂಸ್ತ್ಯಕ್ಷ್ಯೇಽಥ ವಾ ವಕ್ರೇ ಶಯಿಷ್ಯೇ ತಾವದೇವ ಹಿ ॥

ಅನುವಾದ

ಕೋಪಭವನವನ್ನು ಪ್ರವೇಶಿಸಿ ಎಲ್ಲಾ ಒಡವೆಗಳನ್ನು ಕಳಚಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿಬಿಟ್ಟಳು, ಮಲಿನಾಂಬರವನ್ನು ಉಟ್ಟು ಮೈಯೆಲ್ಲ ಕೊಳೆಮಾಡಿಕೊಂಡು ನೆಲದ ಮೇಲೆ ಮಲಗಿದಳು. ಕುಬ್ಜೆಯನ್ನು ಕುರಿತು - ‘‘ಹೇ ಸಖಿ! ಕೇಳು, ರಾಮನು ಕಾಡಿಗೆ ಹೋಗುವವರೆಗೆ ಹೀಗೆಯೇ ಮಲಗಿರುವೆನು, ಬೇಕಾದರೆ ಪ್ರಾಣಗಳೇ ಹೋಗಲಿ’’ ಎಂದು ಹೇಳಿದಳು. ॥79-80॥

81
ಮೂಲಮ್

ನಿಶ್ಚಯಂ ಕುರು ಕಲ್ಯಾಣಿ ಕಲ್ಯಾಣಂ ತೇ ಭವಿಷ್ಯತಿ ।
ಇತ್ಯುಕ್ತ್ವಾ ಪ್ರಯಯೌ ಕುಬ್ಜಾ ಗೃಹಂ ಸಾಪಿ ತಥಾಕರೋತ್ ॥

ಅನುವಾದ

ಆಗ ಮಂಥರೆಯು ‘‘ಕಲ್ಯಾಣಿ! ನೀನು ಅವಶ್ಯವಾಗಿ ಹೀಗೆಯೇ ಮಾಡು. ಇದರಿಂದ ಖಂಡಿತವಾಗಿ ಒಳಿತಾಗುವುದು. ಹೀಗೆ ಹೇಳಿ ಕುಬ್ಜೆಯು ತನ್ನ ಮನೆಗೆ ನಡೆದಳು. ಕೈಕೆಯಿಯು ಹಾಗೇ ಮಾಡಿದಳು. ॥81॥

82
ಮೂಲಮ್

ಧೀರೋಽತ್ಯಂತದಯಾನ್ವಿತೋಪಿ ಸಗುಣಾ-
ಚಾರಾನ್ವಿತೊ ವಾಥವಾ
ನೀತಿಜ್ಞೋ ವಿಧಿವಾದದೇಶಿಕಪರೋ
ವಿದ್ಯಾವಿವೇಕೋಽಥವಾ ।
ದುಷ್ಟಾನಾಮತಿಪಾಪಭಾವಿತಧಿಯಾಂ
ಸಂಗಂ ಸದಾ ಚೇದ್ಭಜೇ-
ತ್ತದ್ ಬುದ್ಧ್ಯಾ ಪರಿಭಾವಿತೋ ವ್ರಜತಿ ತತ್
ಸಾಮ್ಯಂ ಕ್ರಮೇಣ ಸ್ಫುಟಮ್ ॥

ಅನುವಾದ

ಧೀರನಾಗಿರಲಿ, ಬಹಳ ದಯಾವಂತನಾಗಿರಲಿ, ಒಳ್ಳೆಯ ಗುಣ ಆಚಾರಗಳಿಂದ ಕೂಡಿದವನಾಗಿರಲಿ, ನೀತಿಯನ್ನು ತಿಳಿದವನಾಗಿರಲಿ, ವೇದಶಾಸ್ತ್ರಗಳನ್ನು ಜನರಿಗೆ ಅನುಶಾಸನ ಮಾಡುವವನೇ ಆಗಲಿ, ವಿದ್ಯಾ-ವಿವೇಕ ಉಳ್ಳವನಾಗಿರಲಿ, ಅಂತಹವನೂ ಕೂಡ ಅತ್ಯಂತ ಪಾಪಬುದ್ಧಿಯುಳ್ಳ ದುಷ್ಟರ ಸಂಗವನ್ನು ಎಂದಾದರೂ ಮಾಡಿದ್ದೆಯಾದರೆ, ಅವಶ್ಯವಾಗಿಯೇ ಕ್ರಮಶಃ ದುಷ್ಟಬುದ್ಧಿಯಿಂದ ಪ್ರಭಾವಿತನಾಗಿ ಅವನಂತೇ ಆಗುವನು. ಇದು ನಿಶ್ಚಯವು. ॥82॥

83
ಮೂಲಮ್

ಅತಃ ಸಂಗಃ ಪರಿತ್ಯಾಜ್ಯೋ ದುಷ್ಟಾನಾಂ ಸರ್ವದೈವ ಹಿ ।
ದುಃಸಂಗೀ ಚ್ಯವತೇ ಸ್ವಾರ್ಥಾದ್ಯಥೇಯಂ ರಾಜಕನ್ಯಕಾ ॥

ಅನುವಾದ

ಅದಕ್ಕಾಗಿ ದುಷ್ಟರ ಸಂಗವನ್ನು ಸದಾಕಾಲ ಬಿಟ್ಟುಬಿಡಬೇಕು; ಏಕೆಂದರೆ, ಕೆಟ್ಟಸಂಗವುಳ್ಳವನು ಈ ರಾಜಪುತ್ರಿ ಕೈಕೆಯಿಯಂತೆ ಪುರುಷಾರ್ಥದಿಂದ ಪತನನಾಗುತ್ತಾನೆ. ॥83॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.