೦೧

[ಮೊದಲನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮನ ಬಳಿಗೆ ನಾರದರ ಆಗಮನ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಏಕದಾ ಸುಖಮಾಸೀನಂ ರಾಮಂ ಸ್ವಾಂತಃಪುರಾಜಿರೇ ।
ಸರ್ವಾಭರಣಸಂಪನ್ನಂ ರತ್ನಸಿಂಹಾಸನೇ ಸ್ಥಿತಮ್ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಎಲೈ ಪಾರ್ವತಿ! ಒಂದುದಿನ ಸರ್ವಾಲಂಕಾರಭೂಷಿತನಾದ ಶ್ರೀರಾಮಚಂದ್ರನು ತನ್ನ ಅಂತಃಪುರದ ಅಂಗಳದಲ್ಲಿ ರತ್ನಸಿಂಹಾಸನದಲ್ಲಿ ಸುಖವಾಗಿ ಕುಳಿತಿದ್ದನು.॥1॥

2
ಮೂಲಮ್

ನೀಲೋತ್ಪಲದಲಶ್ಯಾಮಂ ಕೌಸ್ತುಭಾಮುಕ್ತಕಂಧರಮ್ ।
ಸೀತಯಾ ರತ್ನದಂಡೇನ ಚಾಮರೇಣಾಥ ವೀಜಿತಮ್ ॥

ಅನುವಾದ

ಆಗ ಕನ್ನೈದಿಲೆಯಂತೆ ನೀಲವರ್ಣನಾದ, ಕೌಸ್ತುಭಮಣಿಮಂಡಿತ ವಿರಾಜಮಾನ ಕಂಠವುಳ್ಳ ರಘುನಾಥನಿಗೆ ರತ್ನದಂಡವುಳ್ಳ ಚಾಮರದಿಂದ ಸೀತಾದೇವಿಯು ಗಾಳಿ ಬೀಸುತ್ತಿದ್ದಳು.॥2॥

3
ಮೂಲಮ್

ವಿನೋದಯಂತಂ ತಾಂಬೂಲಚರ್ವಣಾದಿಭಿರಾದರಾತ್ ।
ನಾರದೋಽವತರದ್ ದ್ರಷ್ಟುಮಂಬರಾದ್ಯತ್ರ ರಾಘವಃ ॥

ಅನುವಾದ

ಆದರಪೂರ್ವಕ ಅವಳು ಕೊಟ್ಟ ವೀಳೆಯವನ್ನು ಸವಿಯುತ್ತ, ಪ್ರೇಮದಿಂದ ಆಕೆಯನ್ನು ವಿನೋದಪಡಿಸುತ್ತಿರುವ ಶ್ರೀರಾಮನ ದರ್ಶನಮಾಡುವುದಕ್ಕಾಗಿ ದೇವರ್ಷಿ ನಾರದ ಮಹಾಮುನಿಗಳು ಶ್ರೀರಾಮನಿದ್ದಲ್ಲಿಗೆ ಆಕಾಶಮಾರ್ಗದಿಂದ ಬಂದಿಳಿದರು.॥3॥

4
ಮೂಲಮ್

ಶುದ್ಧಸ್ಫಟಿಕಸಂಕಾಶಃ ಶರಚ್ಚಂದ್ರ ಇವಾಮಲಃ ।
ಅತರ್ಕಿತಮುಪಾಯಾತೋ ನಾರದೋ ದಿವ್ಯದರ್ಶನಃ ॥

5
ಮೂಲಮ್

ತಂ ದೃಷ್ಟ್ವಾ ಸಹಸೋತ್ಥಾಯ ರಾಮಃ ಪ್ರೀತ್ಯಾ ಕೃತಾಂಜಲಿಃ ।
ನನಾಮ ಶಿರಸಾ ಭೂಮೌ ಸೀತಯಾ ಸಹ ಭಕ್ತಿಮಾನ್ ॥

ಅನುವಾದ

ಶುದ್ಧ ಸ್ಫಟಿಕ ಮಣಿಯಂತೆ ಕಾಂತಿಯುಳ್ಳವರೂ, ಶರತ್ಕಾಲದ ಚಂದ್ರನಂತೆ ಪರಿಶುದ್ಧರೂ ಆದ ದಿವ್ಯರೂಪವುಳ್ಳ ನಾರದರು ಅನಿರೀಕ್ಷಿತವಾಗಿ ಬಂದುದನ್ನು ನೋಡಿ, ಭಗವಾನ್ ಶ್ರೀರಾಮನು ಕೂಡಲೇ ಮೇಲೆದ್ದು, ಪ್ರೀತಿಯಿಂದ ಕರಜೋಡಿಸಿ ಭಕ್ತಿಯಿಂದ ಸೀತೆಯಿಂದೊಡಗೂಡಿ ತಲೆಬಾಗಿ ನೆಲಮುಟ್ಟಿ ನಮಸ್ಕರಿಸಿದನು.॥4-5॥

6
ಮೂಲಮ್

ಉವಾಚ ನಾರದಂ ರಾಮಃ ಪ್ರೀತ್ಯಾ ಪರಮಯಾ ಯುತಃ ।
ಸಂಸಾರಿಣಾಂ ಮುನಿಶ್ರೇಷ್ಠ ದುರ್ಲಭಂ ತವ ದರ್ಶನಮ್ ।
ಅಸ್ಮಾಕಂ ವಿಷಯಾಸಕ್ತಚೇತಸಾಂ ನಿತರಾಂ ಮುನೇ ॥

7
ಮೂಲಮ್

ಅವಾಪ್ತಂ ಮೇ ಪೂರ್ವಜನ್ಮಕೃತಪುಣ್ಯಮಹೋದಯೈಃ ।
ಸಂಸಾರಿಣಾಪಿ ಹಿ ಮುನೇ ಲಭ್ಯತೇ ಸತ್ಸಮಾಗಮಃ ॥

8
ಮೂಲಮ್

ಅತಸ್ತ್ವದ್ದರ್ಶನಾದೇವ ಕೃತಾರ್ಥೋಽಸ್ಮಿ ಮುನೀಶ್ವರ ।
ಕಿಂ ಕಾರ್ಯಂ ತೇ ಮಯಾ ಕಾರ್ಯಂ ಬ್ರೂಹಿ ತತ್ಕರವಾಣಿ ಭೋಃ ॥

ಅನುವಾದ

ಪರಮ ಪ್ರೀತಿಯಿಂದ ರಾಮನು ನಾರದರನ್ನು ಕುರಿತು ‘ಮುನಿಶ್ರೇಷ್ಠರೇ! ನಮ್ಮಂತಹ ವಿಷಯಾಸಕ್ತ ಸಂಸಾರೀ ಮನುಷ್ಯರಿಗೆ ನಿಮ್ಮ ದರ್ಶನವು ದುರ್ಲಭವೇ ಆಗಿದೆ. ಮುನಿಯೇ! ಇಂದು ನನ್ನ ಪೂರ್ವಜನ್ಮದ ಪುಣ್ಯವಿಶೇಷಗಳಿಂದ ಮತ್ತು ಸುಕೃತದಿಂದ ನಿಮ್ಮ ದರ್ಶನವಾಯಿತು. ಏಕೆಂದರೆ ಪುಣ್ಯೋದಯವಾದಾಗಲೇ ಸಂಸಾರಿಗಳಿಗೆ ಸತ್ಸಂಗವು ದೊರೆಯುತ್ತದೆ. ಆದ್ದರಿಂದ ನಿಮ್ಮ ದರ್ಶನದಿಂದಲೇ ನಾನು ಕೃತಕೃತ್ಯನಾದೆ. ಹೇ ಮಹಾಮುನೇ! ಈಗ ನನ್ನಿಂದ ನಿಮ್ಮ ಯಾವ ಕಾರ್ಯವಾಗಬೇಕು? ಅದನ್ನು ನಾನು ಈಗಲೇ ನೆರವೇರಿಸಿಕೊಡುವೆನು ಹೇಳಿ’ ಎಂದನು.॥6-8॥

9
ಮೂಲಮ್

ಅಥ ತಂ ನಾರದೋಽಪ್ಯಾಹ ರಾಘವಂ ಭಕ್ತವತ್ಸಲಮ್ ।
ಕಿಂ ಮೋಹಯಸಿ ಮಾಂ ರಾಮ ವಾಕ್ಯೈರ್ಲೋಕಾನುಸಾರಿಭಿಃ ॥

10
ಮೂಲಮ್

ಸಂಸಾರ್ಯಹಮಿತಿ ಪ್ರೋಕ್ತಂ ಸತ್ಯಮೇತತ್ತ್ವಯಾ ವಿಭೋ ।
ಜಗತಾಮಾದಿಭೂತಾ ಯಾ ಸಾ ಮಾಯಾ ಗೃಹಿಣೀ ತವ ॥

ಅನುವಾದ

ಆಗ ನಾರದರು ಭಕ್ತವತ್ಸಲನಾದ ರಾಮನಲ್ಲಿ ಹೇಳಿದರು. ಶ್ರೀರಾಮನೇ! ನೀನು ಸಾಮಾನ್ಯ ಜನರಂತೆ ಈ ವಾಕ್ಯಗಳಿಂದ ನನ್ನನ್ನು ಏಕೆ ಮೋಹಗೊಳಿಸುತ್ತಿರುವೆ? ಹೇ ವಿಭೋ! ‘ನಾನು ಸಂಸಾರಿಯಾಗಿದ್ದೇನೆ’ ಎಂದು ನೀನು ಹೇಳಿದುದು ಸರಿಯೇ; ಏಕೆಂದರೆ ಜಗತ್ತಿಗೆ ಮೂಲಕಾರಣಳಾದ ಮಾಯೆಯೇ ನಿನ್ನ ಮಡದಿಯಾಗಿದ್ದಾಳೆ.॥9-10॥

11
ಮೂಲಮ್

ತ್ವತ್ಸನ್ನಿಕರ್ಷಾಜ್ಜಾಯಂತೇ ತಸ್ಯಾಂ ಬ್ರಹ್ಮಾದಯಃ ಪ್ರಜಾಃ ।
ತ್ವದಾಶ್ರಯಾ ಸದಾ ಭಾತಿ ಮಾಯಾ ಯಾ ತ್ರಿಗುಣಾತ್ಮಿಕಾ ॥

12
ಮೂಲಮ್

ಸೂತೇಽಜಸ್ರಂ ಶುಕ್ಲಕೃಷ್ಣ ಲೋಹಿತಾಃ ಸರ್ವದಾ ಪ್ರಜಾಃ ।
ಲೋಕತ್ರಯಮಹಾಗೇಹೇ ಗೃಹಸ್ಥಸ್ತ್ವಮುದಾಹೃತಃ ॥

ಅನುವಾದ

ನಿನ್ನ ಸಾನ್ನಿಧ್ಯ ಮಾತ್ರದಿಂದಲೇ ಆಕೆಯಲ್ಲಿ ಬ್ರಹ್ಮಾದಿ ಪ್ರಜೆಗಳು ಹುಟ್ಟುವರು. ತ್ರಿಗುಣಾತ್ಮಕನಾದ ನಿನ್ನನ್ನು ಆಶ್ರಯಿಸಿರುವ ಆ ಮಾಯೆಯು ಸದಾಕಾಲ ಬಿಳಿಪು-ಕಪ್ಪು, ಕೆಂಪು, (ತ್ರಿಗುಣಾತ್ಮಕವಾದ) ಪ್ರಜೆಗಳನ್ನು ಸತತವಾಗಿ ಉಂಟುಮಾಡುತ್ತಾಳೆ. ಲೋಕತ್ರಯವೆಂಬ ಈ ಗೃಹದಲ್ಲಿ ನೀನು ಅವ್ಯಾಕೃತಗೃಹಸ್ಥನಾಗಿರುವೆ. ॥11-12॥

13
ಮೂಲಮ್

ತ್ವಂ ವಿಷ್ಣುರ್ಜಾನಕೀ ಲಕ್ಷ್ಮೀಃ ಶಿವಸ್ತ್ವಂ ಜಾನಕೀ ಶಿವಾ ।
ಬ್ರಹ್ಮಾ ತ್ವಂ ಜಾನಕೀ ವಾಣೀ ಸೂರ್ಯಸ್ತ್ವಂ ಜಾನಕೀ ಪ್ರಭಾ ॥

14
ಮೂಲಮ್

ಭವಾನ್ ಶಶಾಂಕಃ ಸೀತಾ ತು ರೋಹಿಣೀ ಶುಭಲಕ್ಷಣಾ ।
ಶಕ್ರಸ್ತ್ವಮೇವ ಪೌಲೋಮೀ ಸೀತಾ ಸ್ವಾಹಾನಲೋ ಭವಾನ್ ॥

15
ಮೂಲಮ್

ಯಮಸ್ತ್ವಂ ಕಾಲರೂಪಶ್ಚ ಸೀತಾ ಸಂಯಮಿನೀ ಪ್ರಭೋ ।
ನಿರ್ಋತಿಸ್ತ್ವಂ ಜಗನ್ನಾಥ ತಾಮಸೀ ಜಾನಕೀ ಶುಭಾ ॥

16
ಮೂಲಮ್

ರಾಮ ತ್ವಮೇವ ವರುಣೋ ಭಾರ್ಗವೀ ಜಾನಕೀ ಶುಭಾ ।
ವಾಯುಸ್ತ್ವಂ ರಾಮ ಸೀತಾ ತು ಸದಾಗತಿರಿತೀರಿತಾ ॥

ಅನುವಾದ

ನೀನು ವಿಷ್ಣುವೆನಿಸಿದಾಗ ಜಾನಕಿಯು ಲಕ್ಷ್ಮಿಯಾಗಿರುವಳು, ನೀನು ಶಿವನಾದಾಗ ಆಕೆಯು ಪಾರ್ವತಿಯು, ನೀನು ಬ್ರಹ್ಮನೆನಿಸಿದಾಗ ಆಕೆ ಸರಸ್ವತಿಯು, ನೀನು ಸೂರ್ಯನೆನಿಸಿದಾಗ ಅವಳು ಪ್ರಭೆಯು, ನೀನು ಚಂದ್ರನಾಗಿರುವಾಗ ಅವಳು ರೋಹಿಣಿಯು, ನೀನು ಇಂದ್ರನೆನಿಸಿದಾಗ ಅವಳು ಶಚಿಯು, ಸೀತೆಯು ಸ್ವಾಹಾದೇವಿಯೆನಿಸಿದಾಗ ನೀನು ಅಗ್ನಿಯು, ಹೇ ಪ್ರಭೋ! ನೀನು ಕಾಲರೂಪೀ ಮೃತ್ಯುವಾದಾಗ ಆಕೆಯು ಸಂಯಮಿನಿಯು, ಜಗನ್ನಾಥನೇ! ನೀನು ನಿರ್ಋತಿಯೆನಿಸಿದಾಗ ಸೀತೆಯು ತಾಮಸಿಯಾಗುವಳು. ನೀನು ವರುಣನಾದಾಗ ಅವಳು ಭಾರ್ಗವಿಯು, ನೀನು ವಾಯುವಾದಾಗ ಸೀತೆಯು ಸದಾಗತಿ (ಭಾರತೀ) ಆಗುವಳು. ॥13-16॥

17
ಮೂಲಮ್

ಕುಬೇರಸ್ತ್ವಂ ರಾಮ ಸೀತಾ ಸರ್ವಸಂಪತ್ಪ್ರಕೀರ್ತಿತಾ ।
ರುದ್ರಾಣೀ ಜಾನಕೀ ಪೋಕ್ತಾ ರುದ್ರಸ್ತ್ವಂ ಲೋಕನಾಶಕೃತ್ ॥

18
ಮೂಲಮ್

ಲೋಕೇ ಸ್ತ್ರೀವಾಚಕಂ ಯಾವತ್ತತ್ಸರ್ವಂ ಜಾನಕೀ ಶುಭಾ ।
ಪುನ್ನಾಮವಾಚಕಂ ಯಾವತ್ತತ್ಸರ್ವಂ ತ್ವಂ ಹಿ ರಾಘವ ॥

19
ಮೂಲಮ್

ತಸ್ಮಾಲ್ಲೋಕತ್ರಯೇ ದೇವ ಯುವಾಭ್ಯಾಂ ನಾಸ್ತಿ ಕಿಂಚನ ॥

ಅನುವಾದ

ಶ್ರೀರಾಮಾ! ನೀನು ಕುಬೇರನಾಗಿರುವೆ, ಸೀತೆಯು ಸರ್ವ ಸಂಪತ್ತಾಗಿರುವಳು. ನೀನು ಲೋಕನಾಶಕನಾದ ರುದ್ರನಾಗಿರುವೆ, ಸೀತೆಯು ರುದ್ರಾಣೀ ಎನಿಸುವಳು. ಹೇ ರಾಘವಾ! ಹೀಗೆ ಲೋಕದಲ್ಲಿ ಏನೆಲ್ಲ ಪುರುಷ ವಾಚಕವಾಗಿದೆಯೋ ಅದೆಲ್ಲ ನೀನೇ ಆಗಿರುವೆ ಮತ್ತು ಸ್ತ್ರೀವಾಚಕವೆಲ್ಲವೂ ಮಂಗಳಪ್ರದಳಾದ ಜಾನಕಿಯೇ ಆಗಿದ್ದಾಳೆ. ಆದ್ದರಿಂದ ಹೇ ದೇವಾ! ಮೂರು ಲೋಕಗಳಲ್ಲಿ ನಿಮ್ಮಿಬ್ಬರ ಹೊರತಾಗಿ ಬೇರೇನು ಇಲ್ಲವೇ ಇಲ್ಲ.॥17-19॥

20
ಮೂಲಮ್

ತ್ವದಾಭಾಸೋದಿತಾಜ್ಞಾನಮವ್ಯಾಕೃತಮಿತೀರ್ಯತೇ ।
ತಸ್ಮಾನ್ಮಹಾಂಸ್ತತಃ ಸೂತ್ರಂ ಲಿಂಗಂ ಸರ್ವಾತ್ಮಕಂ ತತಃ ॥

ಅನುವಾದ

ನಿನ್ನ ಆಭಾಸದಿಂದ ಪ್ರಕಟವಾದ ಅಜ್ಞಾನವು ಅವ್ಯಾಕೃತವೆನಿಸುವುದು. ಅದರಿಂದ ಮಹತ್ತತ್ತ್ವವು, ಮಹತ್ತತ್ತ್ವದಿಂದ ಸೂತ್ರಾತ್ಮಾ (ಹಿರಣ್ಯಗರ್ಭ) ಮತ್ತು ಸೂತ್ರಾತ್ಮನಿಂದ ಸರ್ವಾತ್ಮಕ ಲಿಂಗದೇಹ ಉಂಟಾಗುತ್ತದೆ. ॥20॥

21
ಮೂಲಮ್

ಅಹಂಕಾರಶ್ಚ ಬುದ್ಧಿಶ್ಚ ಪಂಚಪ್ರಾಣೇಂದ್ರಿಯಾಣಿ ಚ ।
ಲಿಂಗಮಿತ್ಯುಚ್ಯತೇ ಪ್ರಾಜ್ಞೈರ್ಜನ್ಮಮೃತ್ಯುಸುಖಾದಿಮತ್ ॥

ಅನುವಾದ

ಅಹಂಕಾರ, ಬುದ್ಧಿ, ಪಂಚಪ್ರಾಣ ಮತ್ತು ಹತ್ತು ಇಂದ್ರಿಯಗಳು ಇವುಗಳ ಗುಂಪಿಗೆ ಪ್ರಾಜ್ಞರು ಜನ್ಮ, ಮೃತ್ಯು ಮತ್ತು ಸುಖ-ದುಃಖಾದಿ ಧರ್ಮವುಳ್ಳ ಲಿಂಗ ದೇಹವೆಂದು ಹೇಳುತ್ತಾರೆ. ॥21॥

22
ಮೂಲಮ್

ಸ ಏವ ಜೀವಸಂಜ್ಞಶ್ಚ ಲೋಕೇ ಭಾತಿ ಜಗನ್ಮಯಃ ।
ಅವಾಚ್ಯಾನಾದ್ಯವಿದ್ಯೈವ ಕಾರಣೋಪಾಧಿರುಚ್ಯತೇ ॥

ಅನುವಾದ

ಅವನೇ (ಲಿಂಗದೇಹಾಭಿಮಾನೀ ಚೇತನಾಭಾಸ) ಜಗತ್ತಿನಲ್ಲಿ ತನ್ಮಯನಾಗಿ ಜೀವನೆಂಬ ಹೆಸರಿನಿಂದ ಖ್ಯಾತವಾಗಿದ್ದಾನೆ. ಸತ್ತೆಂದಾಗಲೀ, ಅಸತ್ತೆಂದಾಗಲೀ ಹೇಳಲೂ ಬಾರದೆ ಇರುವಂತಹ ಅನಾದಿ ಅವಿದ್ಯೆಯೇ (ಈ ಜೀವಿಯ) ಕಾರಣ-ಉಪಾಧಿ ಎಂದು ಹೇಳಲಾಗುತ್ತದೆ. ॥22॥

23
ಮೂಲಮ್

ಸ್ಥೂಲಂ ಸೂಕ್ಷ್ಮಂ ಕಾರಣಾಖ್ಯಮುಪಾಧಿತ್ರಿತಯಂ ಚಿತೇಃ ।
ಏತೈರ್ವಿಶಿಷ್ಟೋ ಜೀವಃ ಸ್ಯಾದ್ವಿಯುಕ್ತಃ ಪರಮೇಶ್ವರಃ ॥

ಅನುವಾದ

ಶುದ್ಧ ಚೇತನಕ್ಕೆ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಈ ಮೂರು ಉಪಾಧಿಗಳಿವೆ. ಈ ಉಪಾಧಿಗಳಿಂದ ಕೂಡಿದ್ದರಿಂದ ಅವನನ್ನು ಜೀವನೆಂದು ಹೇಳುತ್ತಾರೆ. ಇದರಿಂದ ಬಿಡುಗಡೆ ಹೊಂದಿದಾಗ ಅವನೇ ಪರಮೇಶ್ವರನಾಗುತ್ತಾನೆ. ॥23॥

24
ಮೂಲಮ್

ಜಾಗ್ರತ್ಸ್ವಪ್ನಸುಷುಪ್ತ್ಯಾಖ್ಯಾ ಸಂಸೃತಿರ್ಯಾ ಪ್ರವರ್ತತೇ ।
ತಸ್ಯಾ ವಿಲಕ್ಷಣಃ ಸಾಕ್ಷೀ ಚಿನ್ಮಾತ್ರಸ್ತ್ವಂ ರಘೂತ್ತಮ ॥

ಅನುವಾದ

ಹೇ ರಘುಶ್ರೇಷ್ಠ! ಜಾಗ್ರತ್, ಸ್ವಪ್ನ, ಸುಷುಪ್ತಿ ಹೀಗೆ ಮೂರು ಪ್ರಕಾರದ ಅವಸ್ಥೆಗಳಲ್ಲಿ ಜೀವಿಯ ಸಂಚಾರಕ್ಕಿಂತ ನೀನು ವಿಲಕ್ಷಣನಾಗಿರುವೆ ಮತ್ತು ಅದರ ಚೇತನಾಮಾತ್ರ ಸಾಕ್ಷಿಯಾಗಿರುವೆ.॥24॥

25
ಮೂಲಮ್

ತ್ವತ್ತ ಏವ ಜಗಜ್ಜಾತಂ ತ್ವಯಿ ಸರ್ವಂ ಪ್ರತಿಷ್ಠಿತಮ್ ।
ತ್ವಯ್ಯೇವ ಲೀಯತೇ ಕೃತ್ಸ್ನಂ ತಸ್ಮಾತ್ತ್ವಂ ಸರ್ವಕಾರಣಮ್ ॥

ಅನುವಾದ

ಈ ಸಮಸ್ತ ಜಗತ್ತು ನಿನ್ನಿಂದಲೇ ಹುಟ್ಟಿಕೊಂಡಿದೆ ನಿನ್ನಲ್ಲಿಯೇ ಸ್ಥಿತವಾಗಿದೆ ಮತ್ತು ನಿನ್ನಲ್ಲಿಯೇ ಲೀನವಾಗುತ್ತದೆ. ಆದ್ದರಿಂದ ನೀನೇ ಎಲ್ಲಕ್ಕೂ ಕಾರಣನಾಗಿರುವೆ. ॥25॥

26
ಮೂಲಮ್

ರಜ್ಜಾವಹಿಮಿವಾತ್ಮಾನಂ ಜೀವಂ ಜ್ಞಾತ್ವಾ ಭಯಂ ಭವೇತ್ ।
ಪರಾತ್ಮಾಹಮಿತಿ ಜ್ಞಾತ್ವಾ ಭಯದುಃಖೈರ್ವಿಮುಚ್ಯತೇ ॥

ಅನುವಾದ

ಹಗ್ಗದಲ್ಲಿ ಹಾವನ್ನು ಕಂಡಂತೆ ತನ್ನನ್ನು ಜೀವನೆಂದು (ತಪ್ಪಾಗಿ) ತಿಳಿದುಕೊಂಡಾಗ ಮನುಷ್ಯನಿಗೆ ಭಯವುಂಟಾಗುತ್ತದೆ. ತಾನೇ ಪರಮಾತ್ಮನು ಎಂದುಕೊಂಡಾಗ ಭಯದುಃಖಾದಿಗಳಿಂದ ಬಿಡುಗಡೆ ಹೊಂದುವನು.॥26॥

27
ಮೂಲಮ್

ಚಿನ್ಮಾತ್ರಜ್ಯೋತಿಷಾ ಸರ್ವಾಃ ಸರ್ವದೇಹೇಷು ಬುದ್ಧಯಃ ।
ತ್ವಯಾ ಯಸ್ಮಾತ್ಪ್ರಕಾಶ್ಯಂತೇ ಸರ್ವಸ್ಯಾತ್ಮಾ ತತೋ ಭವಾನ್ ॥

ಅನುವಾದ

ಚಿನ್ಮಾತ್ರ ಜ್ಯೋತಿಃಸ್ವರೂಪನಾದ ನೀನೇ ಎಲ್ಲರ ದೇಹಗಳಲ್ಲಿಯೂ ಇದ್ದುಕೊಂಡು ಅವರ ಬುದ್ಧಿಗಳನ್ನು ಪ್ರಕಾಶಿಸುತ್ತಿರುವೆ, ಅದಕ್ಕಾಗಿ ನೀನು ಎಲ್ಲರ ಆತ್ಮನಾಗಿರುವೆ.॥27॥

28
ಮೂಲಮ್

ಅಜ್ಞಾನಾನ್ನ್ಯಸ್ಯತೇ ಸರ್ವಂ ತ್ವಯಿ ರಜ್ಜೌ ಭುಜಂಗವತ್ ।
ತ್ವಜ್ ಜ್ಞಾನಾಲ್ಲೀಯತೇ ಸರ್ವಂ ತಸ್ಮಾಜ್ ಜ್ಞಾನಂ ಸದಾಭ್ಯಸೇತ್ ॥

ಅನುವಾದ

ಹಗ್ಗದಲ್ಲಿ ಹಾವನ್ನು ಆರೋಪಿಸಿದಂತೆ ಅಜ್ಞಾನದಿಂದ ಎಲ್ಲವೂ ನಿನ್ನಲ್ಲಿ ಅಧ್ಯಾಸಮಾಡುತ್ತಾರೆ. ಆದರೆ ನಿನ್ನ ಸ್ವರೂಪದ ಜ್ಞಾನ ಉಂಟಾಗುವುದರಿಂದ ಅದೆಲ್ಲವು (ಸಂಸಾರ ದುಃಖಗಳು) ನಾಶವಾಗುತ್ತವೆ. ಆದ್ದರಿಂದ ಸಾಧಕನು ಯಾವಾಗಲೂ ಜ್ಞಾನಾನು ಸಂಧಾನ ಮಾಡುತ್ತಿರಬೇಕು.॥28॥

29
ಮೂಲಮ್

ತ್ವತ್ಪಾದಭಕ್ತಿಯುಕ್ತಾನಾಂ ವಿಜ್ಞಾನಂ ಭವತಿ ಕ್ರಮಾತ್ ।
ತಸ್ಮಾತ್ತ್ವದ್ಭಕ್ತಿಯುಕ್ತಾ ಯೇ ಮುಕ್ತಿಭಾಜಸ್ತ ಏವ ಹಿ ॥

ಅನುವಾದ

ನಿನ್ನ ಚರಣಾರವಿಂದಗಳಲ್ಲಿ ಭಕ್ತಿಯಿಂದ ಕೂಡಿದವರಿಗೆ ಕ್ರಮವಾಗಿ ಜ್ಞಾನವುಂಟಾಗುತ್ತದೆ. ಆದ್ದರಿಂದ ನಿನ್ನಲ್ಲಿ ಭಕ್ತಿಯುಳ್ಳವರೇ ನಿಜವಾಗಿ ಮುಕ್ತಿಗೆ ಯೋಗ್ಯರಾಗುತ್ತಾರೆ.॥29॥

30
ಮೂಲಮ್

ಅಹಂ ತ್ವದ್ಭಕ್ತಭಕ್ತಾನಾಂ ತದ್ಭಕ್ತಾನಾಂ ಚ ಕಿಂಕರಃ ।
ಅತೋ ಮಾಮನುಗೃಹ್ಣೀಷ್ವ ಮೋಹಯಸ್ವ ನ ಮಾಂ ಪ್ರಭೋ ॥

ಅನುವಾದ

ಹೇ ಪ್ರಭೋ! ನಾನಾದರೋ ನಿನ್ನ ಭಕ್ತರ-ಭಕ್ತನು, ಸೇವಕರ-ಸೇವಕನಾಗಿರುವೆ. ಆದ್ದರಿಂದ ನೀನು ನನ್ನನ್ನು ಮೋಹಗೊಳಿಸದೆ ನನ್ನನ್ನು ಅನುಗ್ರಹಿಸು.॥30॥

31
ಮೂಲಮ್

ತ್ವನ್ನಾಭಿಕಮಲೋತ್ಪನ್ನೋ ಬ್ರಹ್ಮಾ ಮೇ ಜನಕಃ ಪ್ರಭೋ ।
ಅತಸ್ತವಾಹಂ ಪೌತ್ರೋಽಸ್ಮಿ ಭಕ್ತಂ ಮಾಂ ಪಾಹಿ ರಾಘವ ॥

ಅನುವಾದ

ಹೇ ಪ್ರಭೋ! ನನ್ನ ತಂದೆಯಾದ ಬ್ರಹ್ಮನು ನಿನ್ನ ನಾಭಿಕಮಲದಿಂದ ಹುಟ್ಟಿರುವನು. ಆದ್ದರಿಂದ ನಾನು ನಿನ್ನ ಮೊಮ್ಮಗನಾಗಿರುವೆನು. ಹೇ ರಾಘವಾ! ಭಕ್ತನಾದ ನನ್ನನ್ನು ಕಾಪಾಡು.॥31॥

32
ಮೂಲಮ್

ಇತ್ಯುಕ್ತ್ವಾ ಬಹುಶೋ ನತ್ವಾ ಸ್ವಾನಂದಾಶ್ರುಪರಿಪ್ಲುತಃ ।
ಉವಾಚ ವಚನಂ ರಾಮ ಬ್ರಹ್ಮಣಾ ನೋದಿತೋಽಸ್ಮ್ಯಹಮ್ ॥

33
ಮೂಲಮ್

ರಾವಣಸ್ಯ ವಧಾರ್ಥಾಯ ಜಾತೋಽಸಿ ರಘುಸತ್ತಮ ।
ಇದಾನೀಂ ರಾಜ್ಯರಕ್ಷಾರ್ಥಂ ಪಿತಾ ತ್ವಾಮಭಿಷೆಕ್ಷ್ಯತಿ ॥

ಅನುವಾದ

ಹೀಗೆಂದು ಹೇಳಿ ಬಾರಿ-ಬಾರಿಗೂ ನಮಸ್ಕರಿಸಿ, ಆನಂದ ಬಾಷ್ಪಗಳನ್ನು ಸುರಿಸುತ್ತಾ ನಾರದರು ಹೇಳಿದರು ಹೇ ರಾಮಾ! ನಾನು ಬ್ರಹ್ಮನಿಂದ ಪ್ರೇರಿತನಾಗಿ ನಿನ್ನ ಬಳಿಗೆ ಬಂದಿರುವೆನು. ಹೇ ರಘುಶ್ರೇಷ್ಠನೇ! ರಾವಣನ ವಧೆಗಾಗಿ ನಿನ್ನ ಅವತಾರವಾಗಿದೆ. ಈಗ ರಾಜ್ಯದ ರಕ್ಷಣೆಗಾಗಿ ದಶರಥನು ನಿನ್ನನ್ನು ಪಟ್ಟಾಭಿಷಿಕ್ತನನ್ನಾಗಿ ಮಾಡಲಿದ್ದಾನೆ.॥32-33॥

34
ಮೂಲಮ್

ಯದಿ ರಾಜ್ಯಾಭಿಸಂಸಕ್ತೊ ರಾವಣಂ ನ ಹನಿಷ್ಯಸಿ ।
ಪ್ರತಿಜ್ಞಾ ತೇ ಕೃತಾ ರಾಮ ಭೂಭಾರಹರಣಾಯ ವೈ ॥

35
ಮೂಲಮ್

ತತ್ಸತ್ಯಂ ಕುರು ರಾಜೇಂದ್ರ ಸತ್ಯಸಂಧಸ್ತ್ವಮೇವ ಹಿ ।
ಶ್ರುತ್ವೈತದ್ಗದಿತಂ ರಾಮೋ ನಾರದಂ ಪ್ರಾಹ ಸಸ್ಮಿತಮ್ ॥

ಅನುವಾದ

ಹೇ ರಾಜೇಂದ್ರಾ! ಆದರೆ ನೀನು ರಾಜ್ಯದಲ್ಲಿ ಆಸಕ್ತಿಯುಳ್ಳವನಾಗಿ ರಾವಣನನ್ನು ಕೊಲ್ಲದಿದ್ದರೆ ಪ್ರತಿಜ್ಞೆಯು ನೆರವೇರಿದಂತಾಗುವುದಿಲ್ಲ. ಭೂ ಭಾರವನ್ನು ಪರಿಹರಿಸುವುದಕ್ಕಾಗಿ ನೀನು ಪ್ರತಿಜ್ಞೆಯನ್ನು ಕೈಗೊಂಡಿರುವೆ. ಅದನ್ನು ಸತ್ಯವಾಗಿಸು. ಏಕೆಂದರೆ ನೀನು ಸತ್ಯ ಪ್ರತಿಜ್ಞನಾಗಿರುವೆ. ನಾರದರ ಈ ಮಾತನ್ನು ಕೇಳಿ ಶ್ರೀರಾಮಚಂದ್ರನು ಮುಗುಳ್ನಗುತ್ತಾ ನಾರದರಲ್ಲಿ ಹೀಗೆ ಹೇಳಿದನು.॥34-35॥

36
ಮೂಲಮ್

ಶ್ರುಣು ನಾರದ ಮೇ ಕಿಂಚಿದ್ವಿದ್ಯತೇಽವಿದಿತಂ ಕ್ವಚಿತ್ ।
ಪ್ರತಿಜ್ಞಾತಂ ಚ ಯತ್ಪೂರ್ವಂ ಕರಿಷ್ಯೇ ತನ್ನ ಸಂಶಯಃ ॥

ಅನುವಾದ

ನಾರದರೇ! ಕೇಳಿರಿ. ನನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಹಿಂದೆ ನಾನು ಕೈಗೊಂಡಿರುವ ಪ್ರತಿಜ್ಞೆಯನ್ನು ನಿಸ್ಸಂದೇಹವಾಗಿ ನೆರವೇರಿಸುವೆನು. ॥36॥

37
ಮೂಲಮ್

ಕಿಂತು ಕಾಲಾನುರೋಧೇನ ತತ್ತತ್ಪ್ರಾರಬ್ಧಸಂಕ್ಷಯಾತ್ ।
ಹರಿಷ್ಯೇ ಸರ್ವಭೂಭಾರಂ ಕ್ರಮೇಣಾಸುರಮಂಡಲಮ್ ॥

ಅನುವಾದ

ಆದರೆ ಕಾಲಾನುಕ್ರಮದಿಂದ ಪ್ರಾರಬ್ಧವು ಕ್ಷೀಣವಾಗುತ್ತ ಹೋಗುವ ದೈತ್ಯರನ್ನು ಕೊಂದು ನಾನು ಕ್ರಮವಾಗಿ ಭೂ ಭಾರವನ್ನು ಪರಿಹರಿಸುವೆನು.॥37॥

38
ಮೂಲಮ್

ರಾವಣಸ್ಯ ವಿನಾಶಾರ್ಥಂ ಶ್ವೋ ಗಂತಾ ದಂಡಕಾನನಮ್ ।
ಚತುರ್ದಶ ಸಮಾಸ್ತತ್ರ ಹ್ಯುಷಿತ್ವಾ ಮುನಿವೇಷಧೃಕ್ ॥

ಅನುವಾದ

ರಾವಣನ ವಧೆಗಾಗಿ ನಾನು ನಾಳೆ ದಂಡಕಾರಣ್ಯಕ್ಕೆ ಹೋಗುವೆನು. ಅಲ್ಲಿ ಹದಿನಾಲ್ಕು ವರ್ಷಗಳ ಕಾಲ ಋಷಿವೇಷವನ್ನು ಧರಿಸಿ ಇರುವೆನು. ॥38॥

39
ಮೂಲಮ್

ಸೀತಾಮಿಷೇಣ ತಂ ದುಷ್ಟಂ ಸಕುಲಂ ನಾಶಯಾಮ್ಯಹಮ್ ।
ಏವಂ ರಾಮೆ ಪ್ರತಿಜ್ಞಾತೇ ನಾರದಃ ಪ್ರಮುಮೋದ ಹ ॥

40
ಮೂಲಮ್

ಪ್ರದಕ್ಷಿಣತ್ರಯಂ ಕೃತ್ವಾ ದಂಡವತ್ಪ್ರಣಿಪತ್ಯ ತಮ್ ।
ಅನುಜ್ಞಾತಶ್ಚ ರಾಮೇಣ ಯಯೌ ದೇವಗತಿಂ ಮುನಿಃ ॥

ಅನುವಾದ

ಸೀತಾಹರಣದ ನೆಪದಿಂದ ಆ ದುಷ್ಟರನ್ನು ಕುಲಬಾಂಧವರ ಸಹಿತ ನಾನು ನಾಶ ಮಾಡುವೆನು. ರಾಮಚಂದ್ರನು ಹೀಗೆಂದು ಪ್ರತಿಜ್ಞೆ ಮಾಡಿದಾಗ ನಾರದರು ಸಂತೋಷಗೊಂಡರು. ಅನಂತರ ಅವರು ರಾಮನಿಗೆ ಮೂರು ಪ್ರದಕ್ಷಿಣೆ ಬಂದು, ದಂಡವತ್ ಪ್ರಣಾಮ ಮಾಡಿ, ಅವನ ಆಜ್ಞೆಯನ್ನು ಪಡೆದು ಆಕಾಶ ಮಾರ್ಗದಿಂದ ದೇವಲೋಕಕ್ಕೆ ಹೊರಟು ಹೋದರು. ॥39-40॥

41
ಮೂಲಮ್

ಸಂವಾದಂ ಪಠತಿ ಶೃಣೋತಿ ಸಂಸ್ಮರೇದ್ವಾ
ಯೋ ನಿತ್ಯಂ ಮುನಿವರರಾಮಯೋಃ ಸ ಭಕ್ತ್ಯಾ ।
ಸಂಪ್ರಾಪ್ನೋತ್ಯಮರಸುದುರ್ಲಭಂ ವಿಮೋಕ್ಷಂ
ಕೈವಲ್ಯಂ ವಿರತಿಪುರಃಸರಂ ಕ್ರಮೇಣ ॥

ಅನುವಾದ

ನಾರದ ಮತ್ತು ಶ್ರೀರಾಮಚಂದ್ರರ ಈ ಸಂವಾದವನ್ನು ಪ್ರತಿದಿನವೂ ಓದುವ, ಕೇಳುವ, ಅಥವಾ ನೆನೆಯುವ ಮನುಷ್ಯನು ವೈರಾಗ್ಯದಿಂದ ಕೂಡಿದವನಾಗಿ ಕ್ರಮವಾಗಿ ದೇವತೆಗಳಿಗೂ ಅತ್ಯಂತ ದುರ್ಲಭವಾದ ಕೈವಲ್ಯ ಮೋಕ್ಷವನ್ನು ಪಡೆದುಕೊಳ್ಳುವನು.॥41॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಅಯೋಧ್ಯಾಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಅಯೋಧ್ಯಾಕಾಂಡದಲ್ಲಿ ಮೊದಲನೆಯ ಸರ್ಗವು ಮುಗಿಯಿತು.