[ಏಳನೆಯ ಸರ್ಗ]
ಭಾಗಸೂಚನಾ
ಪರುಶುರಾಮರ ಭೇಟಿ
1
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಅಥ ಗಚ್ಛತಿ ಶ್ರೀರಾಮೇ ಮೈಥಿಲಾದ್ಯೋಜನತ್ರಯಮ್ ।
ನಿಮಿತ್ತಾನ್ಯತಿಘೋರಾಣಿ ದದರ್ಶ ನೃಪಸತ್ತಮಃ ॥
2
ಮೂಲಮ್
ನತ್ವಾ ವಸಿಷ್ಠಂ ಪಪ್ರಚ್ಛ ಕಿಮಿದಂ ಮುನಿಪುಂಗವ ।
ನಿಮಿತ್ತಾನೀಹ ದೃಶ್ಯಂತೇ ವಿಷಮಾಣಿ ಸಮಂತತಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶ್ರೀರಾಮಚಂದ್ರನು ಮಿಥಿಲೆಯಿಂದ ಮೂರು ಯೋಜನ ಮುಂದೆ ಸಾಗಿದಾಗ, ನೃಪಶ್ರೇಷ್ಠ ದಶರಥನು ಅತ್ಯಂತ ಭಯಂಕರವಾದ ಅಪಶಕುನಗಳನ್ನು ಕಂಡನು. ವಸಿಷ್ಠರಿಗೆ ನಮಸ್ಕರಿಸಿ, ಮುನಿಶ್ರೇಷ್ಠರೇ! ಸುತ್ತಲೂ ವಿಷಮವಾದ ಮತ್ತು ಘೋರವಾದ ಅಪಶಕುನಗಳು ಕಂಡು ಬರುತ್ತಿವೆಯಲ್ಲ! ಇದರ ಕಾರಣವೇನು? ಎಂದು ಕೇಳಿದನು. ॥1-2॥
3
ಮೂಲಮ್
ವಸಿಷ್ಠಸ್ತಮಥ ಪ್ರಾಹ ಭಯಮಾಗಾಮಿ ಸೂಚ್ಯತೇ ।
ಪುನರಪ್ಯಭಯಂ ತೇಽದ್ಯ ಶೀಘ್ರಮೇವ ಭವಿಷ್ಯತಿ ॥
4
ಮೂಲಮ್
ಮೃಗಾಃ ಪ್ರದಕ್ಷಿಣಂ ಯಾಂತಿ ಪಶ್ಯ ತ್ವಾಂ ಶುಭಸೂಚಕಾಃ ।
ಇತ್ಯೇವಂ ವದತಸ್ತಸ್ಯ ವವೌ ಘೋರತರೋಽನಿಲಃ ॥
ಅನುವಾದ
ಆಗ ವಸಿಷ್ಠರು ಹೇಳಿದರು- ಈ ಅಪಶಕುನಗಳಿಂದ ನಿನಗೆ ಮುಂದೆ ಭಯವು ಉಂಟಾಗುವ ಸೂಚನೆ ಕಂಡುಬರುತ್ತದೆ. ಆದರೆ ಜೊತೆಗೆ ಶೀಘ್ರವಾಗಿಯೇ ಆ ಭಯವು ತೊಲಗುವಂತೆ ಸೂಚಿಸುತ್ತದೆ. ಏಕೆಂದರೆ ಶುಭ ಸೂಚಕಗಳಾದ ಮೃಗಗಳು ನಿನ್ನ ಬಲಭಾಗದಲ್ಲಿ ಹೋಗುತ್ತಿವೆ. ವಸಿಷ್ಠರು ಹೀಗೆ ಹೇಳುತ್ತಿರುವಂತೆ ಭಾರೀ ಪ್ರಚಂಡ ಗಾಳಿಯು ಬೀಸತೊಡಗಿತು.॥3-4॥
5
ಮೂಲಮ್
ಮುಷ್ಣಂಶ್ಚಕ್ಷೂಂಷಿ ಸರ್ವೇಷಾಂ ಪಾಂಸುವೃಷ್ಟಿಭಿರರ್ದಯನ್ ।
ತತೋ ವ್ರಜನ್ ದದರ್ಶಾಗ್ರೇ ತೇಜೋರಾಶಿಮುಪಸ್ಥಿತಮ್ ॥
ಅನುವಾದ
ಆ ಬಿರುಗಾಳಿಯಿಂದ ಎದ್ದ ಧೂಳಿನಿಂದ ಎಲ್ಲರ ಕಣ್ಣುಗಳು ಹಿಂಸೆಗೊಳಗಾಗಿ ಮುಚ್ಚಿಕೊಂಡವು. ಮತ್ತೆ ಮುಂದಕ್ಕೆ ಸಾಗುತ್ತಿರುವಾಗ ಒಂದು ತೇಜಸ್ಸಿನ ಬೆಟ್ಟವೇ ಇದಿರಾಯಿತು.॥5॥
6
ಮೂಲಮ್
ಕೋಟಿಸೂರ್ಯಪ್ರತೀಕಾಶಂ ವಿದ್ಯುತ್ಪುಂಜಸಮಪ್ರಭಮ್ ।
ತೇಜೋರಾಶಿಂ ದದರ್ಶಾಥ ಜಾಮದಗ್ನ್ಯಂ ಪ್ರತಾಪವಾನ್ ॥
7
ಮೂಲಮ್
ನೀಲಮೇಘನಿಭಂ ಪ್ರಾಂಶುಂ ಜಟಾಮಂಡಲಮಂಡಿತಮ್ ।
ಧನುಃಪರಶುಪಾಣಿಂ ಚ ಸಾಕ್ಷಾತ್ಕಾಲಮಿವಾಂತಕಮ್ ॥
ಅನುವಾದ
ಕೋಟಿ ಸೂರ್ಯರಿಗೆ ಸಮಾನವಾದ ಕಾಂತಿಯುಳ್ಳ, ಮಿಂಚುಗಳ ಸಮೂಹದಂತೆ ಪ್ರಕಾಶಮಾನನಾದ ಜಮದಗ್ನಿಯ ಪುತ್ರನಾದ ಪರಶುರಾಮನೆಂಬ ತೇಜೋರಾಶಿಯನ್ನು ಪ್ರತಾಪಶಾಲಿಯಾದ ದಶರಥನು ಕಂಡನು. ಕಪ್ಪಾದ ಮೋಡದಂತೆ ಕಾಂತಿಯುಳ್ಳ, ಎತ್ತರವಾದ ಜಟೆಗಳ ಸಮೂಹದಿಂದ ಕೂಡಿದ, ಹಾಗೂ ಕೈಯಲ್ಲಿ ಧನುಸ್ಸನ್ನು, ಕೊಡಲಿಯನ್ನು ಧರಿಸಿರುವ, ಪ್ರತ್ಯಕ್ಷ ಯಮನಂತೆ ಇರುವ, ಕಾರ್ತವೀರ್ಯಾರ್ಜುನನನ್ನು ಸಂಹರಿಸಿದ ಮತ್ತು ಕೊಬ್ಬಿದ ಕ್ಷತ್ರಿಯರನ್ನೆಲ್ಲ ಸದೆಬಡಿದ, ಕಾಲ ಮೃತ್ಯುವಿನ ಅಪರಾವತಾರದಂತಿರುವ ಪರಶುರಾಮನು ದಶರಥನ ಎದುರಿಗೆ ಬಂದು ನಿಂತನು.॥6-7॥
8
ಮೂಲಮ್
ಕಾರ್ತವೀರ್ಯಾಂತಕಂ ರಾಮಂ ದೃಪ್ತಕ್ಷತ್ರಿಯಮರ್ದನಮ್ ।
ಪ್ರಾಪ್ತಂ ದಶರಥಸ್ಯಾಗ್ರೇ ಕಾಲಮೃತ್ಯುಮಿವಾಪರಮ್ ॥
9
ಮೂಲಮ್
ತಂ ದೃಷ್ಟ್ವಾ ಭಯಸಂತ್ರಸ್ತೋ ರಾಜಾ ದಶರಥಸ್ತದಾ ।
ಅರ್ಘ್ಯಾದಿಪೂಜಾಂ ವಿಸ್ಮೃತ್ಯ ತ್ರಾಹಿ ತ್ರಾಹೀತಿ ಚಾಬ್ರವೀತ್ ॥
ಅನುವಾದ
ಆಗ ದಶರಥ ಮಹಾರಾಜನು ಅವನನ್ನು ಕಂಡು ಭಯಗೊಂಡು ನಡುಗುತ್ತಾ, ಅವನನ್ನು ಅರ್ಘ್ಯಪಾದ್ಯಾದಿಗಳಿಂದ ಪೂಜಿಸುವುದನ್ನು ಮರೆತು ‘ಕಾಪಾಡು, ಕಾಪಾಡು’ ಎಂದು ಅಂಗಲಾಚಿದನು. ॥8-9॥
10
ಮೂಲಮ್
ದಂಡವತ್ಪ್ರಣಿಪತ್ಯಾಹ ಪುತ್ರಪ್ರಾಣಂ ಪ್ರಯಚ್ಛ ಮೇ ।
ಇತಿ ಬ್ರುವಂತಂ ರಾಜಾನಮನಾದೃತ್ಯ ರಘೂತ್ತಮಮ್ ॥
11
ಮೂಲಮ್
ಉವಾಚ ನಿಷ್ಠುರಂ ವಾಕ್ಯಂ ಕೋಧಾತ್ಪ್ರಚಲಿತೇಂದ್ರಿಯಃ ।
ತ್ವಂ ರಾಮ ಇತಿ ನಾಮ್ನಾ ಮೇ ಚರಸಿ ಕ್ಷತ್ರಿಯಾಧಮ ॥
12
ಮೂಲಮ್
ದ್ವಂದ್ವಯುದ್ಧಂ ಪ್ರಯಚ್ಛಾಶು ಯದಿ ತ್ವಂ ಕ್ಷತ್ರಿಯೋಽಸಿ ವೈ ।
ಪುರಾಣಂ ಜರ್ಜರಂ ಚಾಪಂ ಭಂಕ್ತ್ವಾ ತ್ವಂ ಕತ್ಥಸೇ ಮುಧಾ ॥
ಅನುವಾದ
ದಶರಥನು ದೀರ್ಘ ದಂಡನಮಸ್ಕಾರ ಮಾಡಿ ‘ನನಗೆ ಮಗನ ಪ್ರಾಣಗಳನ್ನು ಉಳಿಸಿಕೊಡು. ಎಂದು ಬೇಡಿಕೊಂಡನು. ಹೀಗೆ ಹೇಳುತ್ತಿರುವ ರಘುಶ್ರೇಷ್ಠನಾದ ರಾಜನನ್ನು ತಿರಸ್ಕರಿಸಿ, ಕೋಪದಿಂದ ಕಿಡಿ-ಕಿಡಿಯಾಗಿ ಭಾರ್ಗವ ರಾಮನು ನಿಷ್ಠುರವಾದ ಮಾತಿನಿಂದ ರಘೂತ್ತಮನಾದ ಶ್ರೀರಾಮಚಂದ್ರನನ್ನು ಉದ್ದೇಶಿಸಿ ಇಂತೆಂದನು - ಎಲೈ ರಾಮಾ! ಕ್ಷತ್ರಿಯಾಧಮನಾದ ನೀನು ನನ್ನ ಹೆಸರಿನಿಂದ ಮೆರೆಯುತ್ತಿರುವೆ, ನೀನು ಕ್ಷತ್ರಿಯನೇ ಆದರೆ ಇದೋ ನನ್ನೊಡನೆ ದ್ವಂದ್ವಯುದ್ಧಮಾಡು. ಹಳೆಯದಾದ-ಮುದಿಯಾದ ಶಿವಧನುಸ್ಸನ್ನು ಮುರಿದು ವ್ಯರ್ಥವಾಗಿ ಜಂಭಕೊಚ್ಚಿಕೊಳ್ಳುತ್ತಿರುವೆ. ॥10-12॥
13
ಮೂಲಮ್
ಅಸ್ಮಿಂಸ್ತು ವೈಷ್ಣವೇ ಚಾಪ ಆರೋಪಯಸಿ ಚೇದ್ಗುಣಮ್ ।
ತದಾ ಯುದ್ಧಂ ತ್ವಯಾ ಸಾರ್ಧಂ ಕರೋಮಿ ರಘುವಂಶಜ ॥
14
ಮೂಲಮ್
ನೋ ಚೇತ್ಸರ್ವಾನ್ ಹನಿಷ್ಯಾಮಿ ಕ್ಷತ್ರಿಯಾಂತಕರೋ ಹ್ಯಹಮ್ ।
ಇತಿ ಬ್ರುವತಿ ವೈ ತಸ್ಮಿಂಶ್ಚಚಾಲ ವಸುಧಾ ಭೃಶಮ್ ॥
ಅನುವಾದ
ಎಲೈ ರಘುವಂಶಜನೇ! ನೀನು ಈ ವೈಷ್ಣವ ಧನುಸ್ಸಿಗೆ ಹೆದೆಯೇರಿಸುವೆಯಾದರೆ ಆಗ ನಾನು ನಿನ್ನೊಡನೆ ಯುದ್ಧ ಮಾಡುವೆನು. ಇಲ್ಲವಾದರೆ ಎಲ್ಲರನ್ನು ಕೊಂದು ಹಾಕುವೆನು. ಏಕೆಂದರೆ ಕ್ಷತ್ರಿಯರೆಲ್ಲರನ್ನು ಮುಗಿಸುವುದೇ ನನ್ನ ಕೆಲಸವಾಗಿದೆ. ಪರಶುರಾಮನು ಹೀಗೆ ಹೇಳುತ್ತಿರಲು ಭೂಮಿಯು ಪುನಃ ಪುನಃ ನಡುಗತೊಡಗಿತು.॥13-14॥
15
ಮೂಲಮ್
ಅಂಧಕಾರೋ ಬಭೂವಾಥ ಸರ್ವೇಷಾಮಪಿ ಚಕ್ಷುಷಾಮ್ ।
ರಾಮೋ ದಾಶರಥಿರ್ವೀರೋ ವೀಕ್ಷ್ಯ ತಂ ಭಾರ್ಗವಂ ರುಷಾ ॥
16
ಮೂಲಮ್
ಧನುರಾಚ್ಛಿದ್ಯ ತದ್ಧಸ್ತಾದಾರೋಪ್ಯ ಗುಣಮಂಜಸಾ ।
ತೂಣೀರಾದ್ಬಾಣಮಾದಾಯ ಸಂಧಾಯಾಕೃಷ್ಯ ವೀರ್ಯವಾನ್ ॥
17
ಮೂಲಮ್
ಉವಾಚ ಭಾರ್ಗವಂ ರಾಮಂ ಶೃಣು ಬ್ರಹ್ಮನ್ವಚೋ ಮಮ ।
ಲಕ್ಷ್ಯಂ ದರ್ಶಯ ಬಾಣಸ್ಯ ಹ್ಯಮೋಘೋ ಮಮ ಸಾಯಕಃ ॥
ಅನುವಾದ
ಎಲ್ಲರ ಕಣ್ಣುಗಳಿಗೆ ಕತ್ತಲೆ ಆವರಿಸಿತು. ಆಗ ವೀರನಾದ ದಶರಥನಂದನ ಶ್ರೀರಾಮನು ಕೋಪದಿಂದ ಭಾರ್ಗವರಾಮನನ್ನು ನೋಡುತ್ತ ಅವನ ಕೈಯಿಂದ ಬಲ್ಲನ್ನು ಕಿತ್ತುಕೊಂಡನು. ಆಗಲೇ ಅವನ ವೈಷ್ಣವ ತೇಜಸ್ಸು ಶ್ರೀರಾಮನಲ್ಲಿ ಸೇರಿ ಹೋಯಿತು ಅದನ್ನು ಬಗ್ಗಿಸಿ ಹಗ್ಗವನ್ನು ಬಿಗಿದುಕಟ್ಟಿ, ಬತ್ತಳಿಕೆಯಿಂದ ಬಾಣವನ್ನು ತೆಗೆದು ಹೂಡಿ, ಚೆನ್ನಾಗಿ ಸೆಳೆದು ಪರಾಕ್ರಮಿಯಾದ ರಾಮನು ಭೃಗುನಂದನ ಪರಶುರಾಮನಲ್ಲಿ ಹೇಳಿದನು - ಎಲೈ ಬ್ರಾಹ್ಮಣನೇ! ನನ್ನ ಬಾಣವು ಅಮೋಘ ವಾದುದು, ಇದು ವ್ಯರ್ಥವಾಗಲಾರದು. ಇದಕ್ಕೆ ಗುರಿಯನ್ನು ತೋರಿಸು. ॥15-17॥
18
ಮೂಲಮ್
ಲೋಕಾನ್ಪಾದಯುಗಂ ವಾಪಿ ವದ ಶೀಘ್ರಂ ಮಮಾಜ್ಞಯಾ ।
ಅಯಂ ಲೋಕಃ ಪರೋ ವಾಥ ತ್ವಯಾ ಗಂತುಂ ನ ಶಕ್ಯತೇ ॥
19
ಮೂಲಮ್
ಏವಂ ತ್ವಂ ಹಿ ಪ್ರಕರ್ತವ್ಯಂ ವದ ಶೀಘ್ರಂ ಮಮಾಜ್ಞಯಾ ।
ಏವಂ ವದತಿ ಶ್ರೀರಾಮೇ ಭಾರ್ಗವೋ ವಿಕೃತಾನನಃ ॥
20
ಮೂಲಮ್
ಸಂಸ್ಮರನ್ಪೂರ್ವವೃತ್ತಾಂತಮಿದಂ ವಚನಮಬ್ರವೀತ್ ।
ರಾಮ ರಾಮ ಮಹಾಬಾಹೋ ಜಾನೇ ತ್ವಾಂ ಪರಮೇಶ್ವರಮ್ ॥
21
ಮೂಲಮ್
ಪುರಾಣಪುರುಷಂ ವಿಷ್ಣುಂ ಜಗತ್ಸರ್ಗಲಯೋದ್ಭವಮ್ ।
ಬಾಲ್ಯೇಽಹಂ ತಪಸಾ ವಿಷ್ಣುಮಾರಾಧಯಿತುಮಂಜಸಾ ॥
22
ಮೂಲಮ್
ಚಕ್ರತೀರ್ಥಂ ಶುಭಂ ಗತ್ವಾ ತಪಸಾ ವಿಷ್ಣುಮನ್ವಹಮ್ ।
ಅತೋಷಯಂ ಮಹಾತ್ಮಾನಂ ನಾರಾಯಣ ಮನನ್ಯಧೀಃ ॥
ಅನುವಾದ
(ನಿನ್ನ ತಪಃ ಫಲವಾದ ಪುಣ್ಯ) ಲೋಕಗಳನ್ನಾಗಲೀ, ಅಥವಾ ನಿನ್ನ ಕಾಲುಗಳನ್ನಾದರೂ ನನ್ನ ಆಜ್ಞೆಯಂತೆ ಕೂಡಲೇ ತೋರಿಸು.* (ಅದನ್ನೇ ಈ ಬಾಣದಿಂದ ಭೇದಿಸುವೆನು) ಈಗ ನೀನು ಈ ಲೋಕವಾಗಲೀ ಅಥವಾ ಪರಲೋಕವಾಗಲೀ ಯಾವುದಾದರೊಂದನ್ನೂ ನೀನು ಪಡೆಯ ಬಲ್ಲೆ. ಈಗ ನೀನು ಹೀಗೆಯೇ ನಡೆದುಕೊಳ್ಳಬೇಕು. ಬೇಗ ಹೇಳು ಎಂದನು. ಶ್ರೀರಾಮನು ಹೀಗೆ ಹೇಳಿದಾಗ ಬಾಡಿದ ಮುಖದಿಂದ ಪರಶುರಾಮನು ಹಿಂದಿನ ವೃತ್ತಾಂತವನ್ನು ನೆನೆದುಕೊಂಡು ಹೇಳಿದನು - ಮಹಾಬಾಹುವಾದ ಶ್ರಿರಾಮಾ! ನೀನು ಪರಮೇಶ್ವರನೆಂದು ತಿಳಿದುಕೊಂಡೆ. ನೀನು ಪುರಾಣ ಪುರುಷನೂ, ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳಿಗೆ ಮೂಲ ಕಾರಣನಾದ ಸಾಕ್ಷಾತ್ ಭಗವಾನ್ ವಿಷ್ಣುವೇ ಆಗಿರುವೆ. ನಾನು ಬಾಲ್ಯದಲ್ಲಿಯೇ ಭಗವಾನ್ ಮಹಾವಿಷ್ಣುವನ್ನು ತಪಸ್ಸಿನಿಂದ ಆರಾಧಿಸುವುದಕ್ಕಾಗಿ ಶುಭವಾದ ಚಕ್ರ ತೀರ್ಥವನ್ನು ಸೇರಿ ಅಲ್ಲಿ ಪ್ರತಿದಿನವೂ ಏಕಾಗ್ರತೆಯಿಂದ ಅನನ್ಯಭಾವದಿಂದ ಮಹಾತ್ಮನಾದ ನಾರಾಯಣನನ್ನು ಧ್ಯಾನಿಸಿ ಸಂತೋಷ ಗೊಳಿಸಿದೆನು.॥18-22॥
ಟಿಪ್ಪನೀ
- ಕಾಲುಗಳನ್ನು ಕತ್ತರಿಸಿದರೆ ಈ ಲೋಕದಲ್ಲಿ ನಡೆಯಲಾಗುವುದಿಲ್ಲ. ಪರಲೋಕಗಳಿಗೆ ಸಾಧನವಾದ ಪುಣ್ಯವು ನಾಶವಾದರೆ ಪರಲೋಕಗಳೂ ದಕ್ಕಲಾರವು.ಅಂತೂ ಯಾವುದಾದರೊಂದನ್ನು ಬಾಣಕ್ಕೆ ಗುರಿಯಾಗಿಸು ಎಂಬ ಅಭಿಪ್ರಾಯ.
23
ಮೂಲಮ್
ತತಃ ಪ್ರಸನ್ನೋ ದೇವೇಶಃ ಶಂಖಚಕ್ರಗದಾಧರಃ ।
ಉವಾಚ ಮಾಂ ರಘುಶ್ರೇಷ್ಠ ಪ್ರಸನ್ನಮುಖಪಂಕಜಃ ॥
ಅನುವಾದ
ಹೇ ರಘುಶ್ರೇಷ್ಠ! ಅನಂತರ ಶಂಖ-ಚಕ್ರಗದಾಧಾರಿಯಾದ, ಪ್ರಸನ್ನವದನನಾದ ನಾರಾಯಣನು ಒಲಿದು ನನಗೆ ಹೀಗೆಂದು ಹೇಳಿದ್ದನು.॥23॥
24
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಉತ್ತಿಷ್ಠ ತಪಸೋ ಬ್ರಹ್ಮನ್ಫಲಿತಂ ತೇ ತಪೋ ಮಹತ್ ।
ಮಚ್ಚಿದಂಶೇನ ಯುಕ್ತಸ್ತ್ವಂ ಜಹಿ ಹೈಹಯಪುಂಗವಮ್ ॥
25
ಮೂಲಮ್
ಕಾರ್ತವೀರ್ಯಂ ಪಿತೃಹಣಂ ಯದರ್ಥಂ ತಪಸಃ ಶ್ರಮಃ ।
ತತಸ್ತ್ರೀಃ ಸಪ್ತಕೃತ್ವಸ್ತ್ವಂ ಹತ್ವಾ ಕ್ಷತ್ರಿಯಮಂಡಲಮ್ ॥
26
ಮೂಲಮ್
ಕೃತ್ಸ್ನಾಂ ಭೂಮಿಂ ಕಶ್ಯಪಾಯ ದತ್ತ್ವಾ ಶಾಂತಿಮುಪಾವಹ ।
ತ್ರೇತಾಮುಖೇ ದಾಶರಥಿರ್ಭೂತ್ವಾ ರಾಮೋಽಹಮವ್ಯಯಃ ॥
27
ಮೂಲಮ್
ಉತ್ಪತ್ಸ್ಯೇ ಪರಯಾ ಶಕ್ತ್ಯಾ ತದಾ ದ್ರಕ್ಷ್ಯಸಿ ಮಾಂ ತತಃ ।
ಮತ್ತೇಜಃ ಪುನರಾದಾಸ್ಯೇ ತ್ವಯಿ ದತ್ತಂ ಮಯಾ ಪುರಾ ॥
28
ಮೂಲಮ್
ತದಾ ತಪಶ್ಚರಲ್ಲೋಕೇ ತಿಷ್ಠ ತ್ವಂ ಬ್ರಹ್ಮಣೋ ದಿನಮ್ ।
ಇತ್ಯುಕ್ತ್ವಾಂತರ್ದಧೇ ದೇವಸ್ತಥಾ ಸರ್ವಂ ಕೃತಂ ಮಯಾ ॥
ಅನುವಾದ
ಶ್ರೀಭಗವಂತನು ಇಂತೆಂದನು — ‘ಎಲೈ ಬ್ರಾಹ್ಮಣನೇ! ನಿನ್ನ ಮಹತ್ತಾದ ತಪಸ್ಸು ಸಿದ್ಧಿಸಿರುತ್ತದೆ. ಆದ್ದರಿಂದ ಅದನ್ನು ಬಿಟ್ಟು ಮೇಲೇಳು. ನೀನು ನನ್ನ ಚಿದಂಶದಿಂದ ಕೂಡಿದವನಾಗಿ, ಹೈಹಯ ಶ್ರೇಷ್ಠನೂ, ನಿನ್ನ ತಂದೆಯನ್ನು ಕೊಂದಿರುವನೂ ಆದ ಕಾರ್ತ ವೀರ್ಯವನ್ನು ಕೊಲ್ಲು. ಅದಕ್ಕಾಗಿಯಲ್ಲವೇ ನೀನು ಕಠಿಣ ತಪಸ್ಸು ಮಾಡಿದ್ದು? ಅನಂತರ ಇಪ್ಪತ್ತೊಂದು ಬಾರಿ ಭೂ ಮಂಡಲದದುಷ್ಟು ಕ್ಷತ್ರಿಯರೆಲ್ಲರನ್ನು ಕೊಂದು, ಸಮಸ್ತ ಪೃಥ್ವಿಯನ್ನು ಕಶ್ಯಪರಿಗೆ ದಾನಮಾಡಿ ಶಾಂತಿಯನ್ನು ಹೊಂದುವವನಾಗು. ತ್ರೇತಾಯುಗದ ಆದಿಯಲ್ಲಿ ಅವ್ಯಯನಾದ ನಾನು ದಶರಥನ ಪುತ್ರನಾಗಿ, ರಾಮನೆಂಬ ಹೆಸರಿನಿಂದ ಅವತರಿಸುವೆನು. ಆ ಸಮಯ ನನ್ನ ಪರಮ ಶಕ್ತಿ(ಸೀತೆ)ಯ ಸಹಿತ ನೀನು ನನ್ನನ್ನು ನೋಡುವೆ. ಆಗ ನಾನು ನಿನ್ನಲ್ಲಿ ಇಟ್ಟಿರುವ ತೇಜಸ್ಸನ್ನು ಪುನಃ ಹಿಂದಕ್ಕೆ ಪಡೆಯುವೆನು. ಬಳಿಕ ನೀನು ತಪಸ್ಸನ್ನಾಚರಿಸುತ್ತ ಕಲ್ಪಾಂತ್ಯದವರೆಗೆ ಭೂಮಿಯಲ್ಲಿ ಇರುವೆ.’ ಹೀಗೆ ಹೇಳಿ ಭಗವಾನ್ ವಿಷ್ಣುವು ಅಂತರ್ಧಾನನಾದನು; ಮತ್ತೆ ನಾನು ಎಲ್ಲವನ್ನು ಹಾಗೆಯೇ ಮಾಡಿದೆ.॥24-28॥
29
ಮೂಲಮ್
ಸ ಏವ ವಿಷ್ಣುಸ್ತ್ವಂ ರಾಮ ಜಾತೋಽಸಿ ಬ್ರಹ್ಮಣಾರ್ಥಿತಃ ।
ಮಯಿ ಸ್ಥಿತಂ ತು ತ್ವತ್ತೇಜ ಸ್ತ್ವಯೈವ ಪುನರಾಹೃತಮ್ ॥
30
ಮೂಲಮ್
ಅದ್ಯ ಮೇ ಸಫಲಂ ಜನ್ಮ ಪ್ರತೀತೋಽಸಿ ಮಮ ಪ್ರಭೋ ।
ಬ್ರಹ್ಮಾದಿಭಿರಲಭ್ಯಸ್ತ್ವಂ ಪ್ರಕೃತೇಃ ಪಾರಗೋ ಮತಃ ॥
31
ಮೂಲಮ್
ತ್ವಯಿ ಜನ್ಮಾದಿಷಡ್ಭಾವಾ ನ ಸಂತ್ಯಜ್ಞಾನಸಂಭವಾಃ ।
ನಿರ್ವಿಕಾರೋಽಸಿ ಪೂರ್ಣಸ್ತ್ವಂ ಗಮನಾದಿವಿವರ್ಜಿತಃ ॥
ಅನುವಾದ
ರಾಮನೇ! ಬ್ರಹ್ಮನು ಪ್ರಾರ್ಥಿಸಿದ ಆ ವಿಷ್ಣುವು ನೀನೇ ಆಗಿರುವೆ. ನನ್ನಲ್ಲಿದ್ದ ನಿನ್ನ ತೇಜಸ್ಸನ್ನು ಪುನಃ ನೀನೇ ಹಿಂತೆಗೆದುಕೊಂಡೆ. ಈಗ ನನ್ನ ಜನ್ಮವು ಸಾರ್ಥಕವಾಯಿತು. ಹೇ ಪ್ರಭುವೇ! ಬ್ರಹ್ಮಾದಿದೇವತೆಗಳಿಗೂ ದೊರಕದಿರುವ, ಪ್ರಕೃತಿಯಿಂದ ಆಚೆಗಿರುವ ನೀನು ನನಗೆ ಗೋಚರನಾಗಿರುವೆ. ಅಜ್ಞಾನದಿಂದುಂಟಾದ ಜನ್ಮಾದಿ ಆರು ಭಾವವಿಕಾರಗಳು ನಿನ್ನಲ್ಲಿಲ್ಲ. ನೀನು ಪರಿಪೂರ್ಣನೂ, ಗಮನಾದಿಗಳಿಲ್ಲದವನೂ, ನಿರ್ವಿಕಾರಿಯೂ ಆಗಿರುವೆ.॥29-31॥
32
ಮೂಲಮ್
ಯಥಾ ಜಲೇ ಪೇನಜಾಲಂ ಧೂಮೋ ವಹ್ನೌ ತಥಾ ತ್ವಯಿ ।
ತ್ವದಾಧಾರಾ ತ್ವದ್ವಿಷಯಾ ಮಾಯಾ ಕಾರ್ಯಂ ಸೃಜತ್ಯಹೋ ॥
ಅನುವಾದ
ನೀರಿನಲ್ಲಿ ನೊರೆಯ ಸಮೂಹವೂ, ಬೆಂಕಿಯಲ್ಲಿ ಹೊಗೆಯೂ ಇರುವಂತೆ, ನಿನ್ನನ್ನೇ ವಿಷಯಿಕರಿಸಿಕೊಂಡು, ನಿನ್ನನ್ನೆ ಆಶ್ರಯಿಸಿರುವ ಮಾಯೆಯು ಸೃಷ್ಟ್ಯಾದಿ ಕಾರ್ಯಗಳನ್ನು ಮಾಡುತ್ತಿದ್ದಾಳೆ. ಆಶ್ಚರ್ಯ! ॥32॥
33
ಮೂಲಮ್
ಯಾವನ್ಮಾಯಾವೃತಾ ಲೋಕಾಸ್ತಾವತ್ತ್ವಾಂ ನ ವಿಜಾನತೇ ।
ಅವಿಚಾರಿತಸಿದ್ಧೈಷಾವಿದ್ಯಾ ವಿದ್ಯಾವಿರೋಧಿನೀ ॥
ಅನುವಾದ
ಜನರು ಮಾಯೆಯಿಂದ ಆವರಿಸಿರುವವರೆಗೆ ನಿನ್ನನ್ನು ಅರಿಯಲಾರರು. ವಿದ್ಯೆಯ ವಿರೋಧೀ ಈ ಅವಿದ್ಯೆಯು ವಿಚಾರ ಮಾಡದೆ ಇರುವವರೆಗೆ ಇರುತ್ತದೆ.॥33॥
34
ಮೂಲಮ್
ಅವಿದ್ಯಾಕೃತದೇಹಾದಿಸಂಘಾತೇ ಪ್ರತಿಬಿಂಬಿತಾ ।
ಚಿಚ್ಛಕ್ತಿರ್ಜೀವಲೋಕೇಽಸ್ಮಿನ್ ಜೀವ ಇತ್ಯಭಿಧೀಯತೇ ॥
ಅನುವಾದ
ಅವಿದ್ಯೆಯಿಂದ ಉಂಟಾದ ದೇಹವೇ ಮುಂತಾದ ಗುಂಪಿನಲ್ಲಿ ಪ್ರತಿ ಬಿಂಬಿತವಾಗಿರುವ ಚಿಚ್ಛಕ್ತಿಯು ಈ ಜೀವಲೋಕದಲ್ಲಿ ‘ಜೀವ’ ನೆನಿಸಿಕೊಳ್ಳುತ್ತದೆ. ॥34॥
35
ಮೂಲಮ್
ಯಾವದ್ದೇಹ ಮನಃಪ್ರಾಣಬುದ್ಧ್ಯಾದಿಷ್ವಭಿಮಾನವಾನ್ ।
ತಾವತ್ಕರ್ತೃತ್ವಭೋಕ್ತೃತ್ವಸುಖದುಃಖಾದಿಭಾಗ್ಭವೇತ್ ॥
ಅನುವಾದ
ಈ ಜೀವನು ದೇಹ, ಮನಸ್ಸು, ಪ್ರಾಣ, ಬುದ್ಧ್ಯಾದಿಗಳಲ್ಲಿ ತಾನೆಂದು ಅಭಿಮಾನ ಉಳ್ಳವನಾಗುವವರೆಗೆ ಕರ್ತೃತ್ವ, ಭೋಕ್ತೃತ್ವಗಳು ಇರುವುದರಿಂದ ಸುಖ-ದುಃಖಾದಿಗಳನ್ನು ಭೋಗಿಸುತ್ತಿರುತ್ತಾನೆ.॥35॥
36
ಮೂಲಮ್
ಆತ್ಮನಃ ಸಂಸೃತಿರ್ನಾಸ್ತಿ ಬುದ್ಧೇರ್ಜ್ಞಾನಂ ನ ಜಾತ್ವಿತಿ ।
ಅವಿವೇಕಾದ್ದ್ವಯಂ ಯುಂಕ್ತ್ವಾ ಸಂಸಾರೀತಿ ಪ್ರವರ್ತತೇ ॥
ಅನುವಾದ
ವಾಸ್ತವವಾಗಿ ಆತ್ಮನಲ್ಲಿ ಜನ್ಮ-ಮರಣಾದಿ ಸಂಸಾರವು ಯಾವುದೇ ಅವಸ್ಥೆಯಲ್ಲಿ ಇರುವುದಿಲ್ಲ. ಪ್ರಕೃತಿಯ ಕಾರ್ಯವಾದ ಬುದ್ದಿಯಲ್ಲಿ ಎಂದೂ ಜ್ಞಾನ ಶಕ್ತಿ ಇರುವುದಿಲ್ಲ. ಅವಿವೇಕದಿಂದ ಇವೆರಡನ್ನು ಒಂದಾಗಿಸಿ ಜೀವಿಯು ನಾನು ಸಂಸಾರಿ ಎಂದು ಭಾವಿಸಿಕೊಂಡು ಕರ್ಮಗಳಲ್ಲಿ ಪ್ರವೃತ್ತನಾಗುತ್ತಾನೆ.॥36॥
37
ಮೂಲಮ್
ಜಡಸ್ಯ ಚಿತ್ಸಮಾಯೋಗಾಚ್ಚಿತ್ತ್ವಂ ಭೂಯಾಚ್ಚಿತೇಸ್ತಥಾ ।
ಜಡಸಂಗಾಜ್ಜಡತ್ವಂಹಿಜಲಾಗ್ನ್ಯೋರ್ಮೇಲನಂ ಯಥಾ ॥
ಅನುವಾದ
ಬೆಂಕಿಗೂ ನೀರಿಗೂ ಸಂಬಂಧವಾದಾಗ ನೀರಿನಲ್ಲಿ ಉಷ್ಣತೆ, ಬೆಂಕಿಯಲ್ಲಿ ಶಾಂತತೆಯು ಉಂಟಾಗುವಂತೆ, ಜಡವಸ್ತುವಿಗೆ, (ಬುದ್ಧಿ) ಚಿದ್ವಸ್ತುವಿನ (ಆತ್ಮಾ) ಸಂಪರ್ಕದಿಂದ ಚೈತನವೂ, ಚಿದ್ವಸ್ತುವಿಗೆ ಜಡವಸ್ತುವಿನ ಸಂಪರ್ಕದಿಂದ ಜಡತ್ವವೂ (ಕರ್ತೃತ್ವ ಭೋಕ್ತೃತ್ವಾದಿ) ಔಪಾಧಿಕವಾಗಿ ಉಂಟಾಗುತ್ತದೆ. ॥37॥
38
ಮೂಲಮ್
ಯಾವತ್ತ್ವತ್ಪಾದಭಕ್ತಾನಾಂ ಸಂಗಸೌಖ್ಯಂ ನ ವಿಂದತಿ ।
ತಾವತ್ಸಂಸಾರದುಃಖೌಘಾನ್ ನನಿವರ್ತೇನ್ನರಃ ಸದಾ ॥
39
ಮೂಲಮ್
ತತ್ಸಂಗಲಬ್ಧಯಾ ಭಕ್ತ್ಯಾಯದಾ ತ್ವಾಂ ಸಮುಪಾಸತೇ ।
ತದಾ ಮಾಯಾ ಶನೈರ್ಯಾತಿ ತಾನವಂ ಪ್ರತಿಪದ್ಯತೇ ॥
ಅನುವಾದ
ಮನುಷ್ಯನು ನಿನ್ನ ಪಾದಭಕ್ತರ ಸಂಗಸುಖವನ್ನು ಪಡೆಯುವವರೆಗೂ ಸಂಸಾರದುಃಖ ಸಮೂಹದಿಂದ ಪಾರಾಗಲಾರನು. ಅವನು ಭಕ್ತಜನರ ಸಂಗದಿಂದ ಪ್ರಾಪ್ತವಾದ ಭಕ್ತಿಯ ಮೂಲಕ ನಿನ್ನ ಉಪಾಸನೆ ಮಾಡಿದಾಗ ನಿನ್ನ ಮಾಯೆಯು ಮೆಲ್ಲನೆ ಹೊರಟು ಹೋಗುವುದು ಹಾಗೂ ಕೃಶವಾಗುವದು.॥38-39॥
40
ಮೂಲಮ್
ತತಸ್ತ್ವಜ್ಞಾನಸಂಪನ್ನಃ ಸದ್ಗುರುಸ್ತೇನ ಲಭ್ಯತೇ ।
ವಾಕ್ಯಜ್ಞಾನಂ ಗುರೋರ್ಲಬ್ಧ್ವಾ ತ್ವತ್ಪ್ರಸಾದಾದ್ವಿಮುಚ್ಯತೇ ॥
ಅನುವಾದ
ಅನಂತರ ನಿನ್ನ ಜ್ಞಾನದಿಂದ ಕೂಡಿದ ಸದ್ಗುರುವು ಅವನಿಗೆ ದೊರಕುವನು. ಆ ಸದ್ಗುರುವಿನಿಂದ (ವೇದಾಂತ) ವಾಕ್ಯಜ್ಞಾನವನ್ನು ಪಡೆದುಕೊಂಡು ನಿನ್ನ ದಯೆಯಿಂದ ಸಂಸಾರದಿಂದ ಬಿಡುಗಡೆ ಹೊಂದುವನು. ॥40॥
41
ಮೂಲಮ್
ತಸ್ಮಾತ್ತ್ವದ್ಭಕ್ತಿಹೀನಾನಾಂ ಕಲ್ಪಕೋಟಿಶತೈರಪಿ ।
ನ ಮುಕ್ತಿಶಂಕಾ ವಿಜ್ಞಾನಶಂಕಾ ನೈವ ಸುಖಂ ತಥಾ ॥
ಅನುವಾದ
ಆದುದರಿಂದ ನಿನ್ನ ಭಕ್ತಿಯಿಲ್ಲದವರಿಗೆ ನೂರುಕೋಟಿ ಕಲ್ಪಗಳಾದರೂ ಮುಕ್ತಿ ಅಥವಾ ಬ್ರಹ್ಮಜ್ಞಾನವು ದೊರಕುವ ಸಂಭವವೇ ಇಲ್ಲ.॥41॥
42
ಮೂಲಮ್
ಅತಸ್ತ್ವ ತ್ಪಾದಯುಗಲೇ ಭಕ್ತಿರ್ಮೇ ಜನ್ಮಜನ್ಮನಿ ।
ಸ್ಯಾತ್ತ್ವದ್ಭಕ್ತಿಮತಾಂ ಸಂಗೋಽವಿದ್ಯಾ ಯಾಭ್ಯಾಂ ವಿನಶ್ಯತಿ ॥
ಅನುವಾದ
ಆದ್ದರಿಂದ ಜನ್ಮ-ಜನ್ಮಾಂತರಗಳಲ್ಲಿ ನಿನ್ನ ಚರಣಗಳಲ್ಲಿ ಭಕ್ತಿ ಉಂಟಾಗಲೀ ಮತ್ತು ನನಗೆ ನಿನ್ನ ಭಕ್ತರ ಸಂಗವು ದೊರಕಲಿ ಎಂದು ಬಯಸುತ್ತೇನೆ; ಏಕೆಂದರೆ ಈ ಎರಡೇ ಸಾಧನೆಗಳಿಂದ ಅವಿದ್ಯೆಯ ನಾಶವಾಗುತ್ತದೆ. ॥42॥
43
ಮೂಲಮ್
ಲೋಕೇ ತ್ವದ್ಭಕ್ತಿನಿರತಾಸ್ತ್ವದ್ಧರ್ಮಾಮೃತವರ್ಷಿಣಃ ।
ಪುನಂತಿ ಲೋಕಮಖಿಲಂ ಕಿಂ ಪುನಃ ಸ್ವಕುಲೋದ್ಭವಾನ್ ॥
ಅನುವಾದ
ಲೋಕದಲ್ಲಿ ನಿನ್ನ ಭಕ್ತಿಯಲ್ಲಿಯೇ ತೊಡಗಿರುವವರೂ, ನಿನ್ನ ಧರ್ಮವೆಂಬ ಅಮೃತವನ್ನೇ ಸುರಿಸುವವರೂ ಆದ ಭಕ್ತ ಜನರು ಸಮಸ್ತ ಲೋಕವನ್ನೇ ಪಾವನಗೊಳಿಸುವರು. ಹೀಗಿರುವಾಗ ತಮ್ಮ ವಂಶದಲ್ಲಿ ಹುಟ್ಟಿರುವವರನ್ನು ಉದ್ಧಾರ ಮಾಡುತ್ತಾರೆಂದು ಹೇಳುವುದೇನಿದೆ? ॥43॥
44
ಮೂಲಮ್
ನಮೋಽಸ್ತು ಜಗತಾಂ ನಾಥ ನಮಸ್ತೇ ಭಕ್ತಿಭಾವನ ।
ನಮಃ ಕಾರುಣಿಕಾನಂತ ರಾಮಚಂದ್ರ ನಮೋಽಸ್ತು ತೇ ॥
ಅನುವಾದ
ಜಗತ್ತಿಗೆ ಒಡೆಯನಾದವನೇ! ಭಕ್ತಿಭಾವನನೇ! ಕರುಣಾ ಮೂರ್ತಿಯೇ! ಅನಂತನೇ! ಶ್ರೀರಾಮಚಂದ್ರನೇ ನಿನಗೆ ನಮಸ್ಕಾರಗಳು. ॥44॥
45
ಮೂಲಮ್
ದೇವ ಯದ್ಯತ್ಕೃತಂ ಪುಣ್ಯಂ ಮಯಾ ಲೋಕಜಿಗೀಷಯಾ ।
ತತ್ಸರ್ವಂ ತವ ಬಾಣಾಯ ಭೂಯಾದ್ರಾಮ ನಮೋಸ್ತು ತೇ ॥
ಅನುವಾದ
ದೇವ ದೇವಾ! ನಾನು ಪುಣ್ಯಲೋಕಗಳ ಪ್ರಾಪ್ತಿಗಾಗಿ ಯಾವ ಪುಣ್ಯ ಕರ್ಮಗಳನ್ನು ಮಾಡಿರುವೆನೋ, ಅವೆಲ್ಲವು ನಿನ್ನ ಬಾಣಕ್ಕೆ ಗುರಿಯಾಗಲೀ. ಹೇ ರಾಮಾ! ನಿನಗೆ ನಮಸ್ಕಾರವಿರಲಿ.॥45॥
46
ಮೂಲಮ್
ತತಃ ಪ್ರಸನ್ನೋ ಭಗವಾನ್ ಶ್ರೀರಾಮಃ ಕರುಣಾಮಯಃ ।
ಪ್ರಸನ್ನೋಽಸ್ಮಿ ತವ ಬ್ರಹ್ಮನ್ಯತ್ತೇ ಮನಸಿ ವರ್ತತೇ ॥
47
ಮೂಲಮ್
ದಾಸ್ಯೇ ತದಖಿಲಂ ಕಾಮಂ ಮಾ ಕುರುಷ್ವಾತ್ರ ಸಂಶಯಮ್ ।
ತತಃ ಪ್ರೀತೇನ ಮನಸಾ ಭಾರ್ಗವೋ ರಾಮಮಬ್ರವೀತ್ ॥
ಅನುವಾದ
ಆಗ ಪ್ರಸನ್ನನಾದ ಕರುಣಾಮಯ ಭಗವಾನ್ ಶ್ರೀರಾಮಚಂದ್ರನು ಎಲೈ ಬ್ರಹ್ಮವಿದನೇ! ನಾನು ಪ್ರಸನ್ನನಾಗಿರುವೆ. ನಿನ್ನ ಹೃದಯದಲ್ಲಿ ಏನೇನು ಇಷ್ಟಾರ್ಥಗಳಿವೆಯೋ ಅವೆಲ್ಲವನ್ನು ನಾನು ಪೂರ್ಣಗೊಳಿಸುವೆನು, ಇದರಲ್ಲಿ ಸಂಶಯ ಪಡಬೇಡ ಎಂದು ಹೇಳಿದನು. ಆಗ ಪರಶುರಾಮನು ಪ್ರಸನ್ನ ಚಿತ್ತನಾಗಿ ರಾಮನಲ್ಲಿ ಹೇಳಿದನು. ॥46-47॥
48
ಮೂಲಮ್
ಯದಿ ಮೇಽನುಗ್ರಹೋ ರಾಮ ತವಾಸ್ತಿ ಮಧುಸೂದನ ।
ತ್ವದ್ಭಕ್ತಸಂಗಸ್ತ್ವತ್ಪಾದೇ ದೃಢಾ ಭಕ್ತಿಃ ಸದಾಸ್ತು ಮೇ ॥
49
ಮೂಲಮ್
ಸ್ತೋತ್ರಮೇತತ್ಪಠೇದ್ಯಸ್ತು ಭಕ್ತಿಹೀನೋಽಪಿ ಸರ್ವದಾ ।
ತ್ವದ್ಭಕ್ತಿಸ್ತಸ್ಯ ವಿಜ್ಞಾನಂ ಭೂಯಾದಂತೇ ಸ್ಮೃತಿಸ್ತವ ॥
ಅನುವಾದ
ಹೇ ಮಧುಸೂದನ ರಾಮಾ! ನೀನು ನನಗೆ ಅನುಗ್ರಹಿಸುವುದಾದರೆ, ನಿನ್ನ ಭಕ್ತರ ಸಂಗವೂ, ನಿನ್ನ ಪಾದಗಳಲ್ಲಿ ಸದೃಢವಾದ ಭಕ್ತಿಯು ನನಗೆ ಉಂಟಾಗಲಿ. ಯಾರು ಈ ಸ್ತೋತ್ರವನ್ನು ಪಠಿಸುವನೋ ಅಂಥವನಿಗೆ ಹಾಗೂ ಭಕ್ತಿಯಿಲ್ಲದವನಿಗೂ ನಿನ್ನ ಭಕ್ತಿ ಜ್ಞಾನವು ಉಂಟಾಗುವಂತೆ, ಅಂತ್ಯದಲ್ಲಿ ನಿನ್ನ ಸ್ಮರಣೆಯು ದೊರಕುವಂತೆ ಮಾಡು. ॥48-49॥
50
ಮೂಲಮ್
ತಥೇತಿ ರಾಘವೇಣೋಕ್ತಃ ಪರಿಕ್ರಮ್ಯ ಪ್ರಣಮ್ಯ ತಮ್ ।
ಪೂಜಿತಸ್ತದನುಜ್ಞಾತೋ ಮಹೇಂದ್ರಾಚಲಮನ್ವಗಾತ್ ॥
ಅನುವಾದ
ಹಾಗೆಯೇ ಆಗಲೀ ಎಂದು ಶ್ರೀರಾಮನು ಹೇಳಿದಾಗ, ಪರಶುರಾಮನು ಅವನಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ, ರಾಮನಿಂದ ಪೂಜಿತನಾಗಿ ಅವನಿಂದ ಆಜ್ಞೆಯನ್ನು ಪಡೆದು ಮಹೇಂದ್ರ ಪರ್ವತಕ್ಕೆ ಹೊರಟು ಹೋದನು.॥50॥
51
ಮೂಲಮ್
ರಾಜಾ ದಶರಥೋ ಹೃಷ್ಟೋ ರಾಮಂ ಮೃತಮಿವಾಗತಮ್ ।
ಆಲಿಂಗ್ಯಾಲಿಂಗ್ಯ ಹರ್ಷೇಣನೇತ್ರಾಭ್ಯಾಂ ಜಲಮುತ್ಸೃಜತ್ ॥
ಅನುವಾದ
ಸಂತುಷ್ಟನಾದ ದಶರಥ ರಾಜನು ಸತ್ತು ಬದುಕಿ ಬಂದಂತೆ ಆದ ರಾಮನನ್ನು ಮತ್ತೆ-ಮತ್ತೆ ಆಲಿಂಗಿಸಿಕೊಂಡು ಕಣ್ಣುಗಳಿಂದ ಆನಂದ ಬಾಷ್ಪವನ್ನು ಸರಿಸಿದನು. ॥51॥
52
ಮೂಲಮ್
ತತಃ ಪ್ರೀತೇನ ಮನಸಾ ಸ್ವಸ್ಥಚಿತ್ತಃ ಪುರಂ ಯಯೌ ।
ರಾಮಲಕ್ಷ್ಮಣಶತ್ರುಘ್ನಭರತಾ ದೇವಸಂಮಿತಾಃ ।
ಸ್ವಾಂ ಸ್ವಾಂ ಭಾರ್ಯಾಮುಪಾದಾಯ ರೇಮಿರೇ ಸ್ವಸ್ವಮಂದಿರೇ ॥
ಅನುವಾದ
ಅನಂತರ ಅವರೆಲ್ಲರೂ ಪ್ರಸನ್ನ ಚಿತ್ತರಾಗಿ, ಸಮಾಧಾನಗೊಂಡು ಅಯೋಧ್ಯೆಗೆ ಬಂದರು. ದೇವತೆಗಳಂತೆ ವಿರಾಜಮಾನರಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರು ತಮ್ಮ-ತಮ್ಮ ಪತ್ನಿಯರಿಂದೊಡಗೂಡಿ ಅರಮನೆಯಲ್ಲಿ ಅನಂದದಿಂದ ಇರತೊಡಗಿದರು. ॥52॥
53
ಮೂಲಮ್
ಮಾತಾಪಿತೃಭ್ಯಾಂ ಸಂಹೃಷ್ಟೋ ರಾಮಃ ಸೀತಾಸಮನ್ವಿತಃ ।
ರೇಮೇ ವೈಕುಂಠಭವನೇ ಶ್ರಿಯಾ ಸಹ ಯಥಾ ಹರಿಃ ॥
ಅನುವಾದ
ವೈಕುಂಠದಲ್ಲಿ ಭಗವಾನ್ ವಿಷ್ಣುವು ಲಕ್ಷ್ಮಿಯೊಂದಿಗೆ ವಿಹರಿಸುತ್ತಿರುವಂತೆ ಶ್ರೀರಾಮನು ಸೀತೆಯೊಂದಿಗೆ ರಮಿಸುತ್ತಾ ತಂದೆ-ತಾಯಿಯರ ಆನಂದವನ್ನು ಹೆಚ್ಚಿಸುತ್ತಿದ್ದನು. ॥53॥
54
ಮೂಲಮ್
ಯುಧಾಜಿನ್ನಾಮ ಕೈಕೇಯೀಭ್ರಾತಾ ಭರತಮಾತುಲಃ ।
ಭರತಂ ನೇತುಮಾಗಚ್ಛತ್ ಸ್ವರಾಜ್ಯಂ ಪ್ರೀತಿಸಂಯುತಃ ॥
ಅನುವಾದ
ಇದೇ ಸಮಯದಲ್ಲಿ ಕೈಕೆಯಿಯ ಸಹೋದರ-ಭರತನ ಸೋದರ ಮಾವ ಯುಧಾಜಿತ್ತನು ಭರತನನ್ನು ಪ್ರೀತಿ ಪೂರ್ವಕ ತನ್ನ ಊರಿಗೆ ಕರೆದೊಯ್ಯಲು ಬಂದನು. ॥54॥
55
ಮೂಲಮ್
ಪ್ರೇಷಯಾಮಾಸ ಭರತಂ ರಾಜಾ ಸ್ನೇಹಸಮನ್ವಿತಃ ।
ಶತ್ರುಘ್ನಂ ಚಾಪಿ ಸಂಪೂಜ್ಯ ಯುಧಾಜಿತಮರಿಂದಮಃ ॥
ಅನುವಾದ
ಶತ್ರು ಸಂಹಾರಕನಾದ ದಶರಥ ರಾಜನು ಯುಧಾಜಿತನನ್ನು ಸತ್ಕರಿಸಿ, ಸ್ನೇಹಪೂರ್ವಕ ಭರತ ಮತ್ತು ಶತ್ರುಘ್ನರನ್ನು ಅವನೊಂದಿಗೆ ಕಳಿಸಿಕೊಟ್ಟನು. ॥55॥
56
ಮೂಲಮ್
ಕೌಸಲ್ಯಾ ಶುಶುಭೇ ದೇವೀ ರಾಮೇಣ ಸಹ ಸೀತಯಾ ।
ದೇವಮಾತೇವ ಪೌಲೋಮ್ಯಾ ಶಚ್ಯಾ ಶಕ್ರೇಣ ಶೋಭನಾ ॥
ಅನುವಾದ
ದೇವ ಮಾತೆಯಾದ ಅದಿತಿಯು ಪುಲೋಮ ಪುತ್ರಿ ಶಚಿ ಮತ್ತು ಇಂದ್ರನೊಡನೆ ಶೋಭಿಸುವಂತೆ, ಕೌಸಲ್ಯೆಯು ರಾಮ ಮತ್ತು ಸೀತೆಯೊಂದಿಗೆ ಶೋಭಾಯಮಾನಳಾಗಿದ್ದಳು. ॥56॥
57
ಮೂಲಮ್
ಸಾಕೇತೇ ಲೋಕನಾಥಪ್ರಥಿತಗುಣಗಣೋ
ಲೋಕಸಂಗೀತಕೀರ್ತಿಃ
ಶ್ರೀರಾಮಃ ಸೀತಯಾಸ್ತೇಽಖಿಲಜನನಿಕರಾ-
ನಂದಸಂದೋಹಮೂರ್ತಿಃ ।
ನಿತ್ಯಶ್ರೀರ್ನಿರ್ವಿಕಾರೋನಿರವಧಿವಿಭವೋ
ನಿತ್ಯಮಾಯಾನಿರಾಸೋ
ಮಾಯಾ ಕಾರ್ಯಾನುಸಾರೀ ಮನುಜ ಇವ ಸದಾ
ಭಾತಿ ದೇವೋಽಖಿಲೇಶಃ ॥
ಅನುವಾದ
ಯಾರ ಗುಣಸಮೂಹವನ್ನು ಬ್ರಹ್ಮಾದಿ ಸಕಲ ಲೋಕ ಪಾಲಕರುಗಳು ಕೊಂಡಾಡುವರೋ, ಯಾರ ಕೀರ್ತಿ ಸಮಸ್ತ ಲೋಕಗಳಲ್ಲಿ ಹಾಡಲಾಗುತ್ತದೋ, ಯಾರು ಎಲ್ಲಾ ಜನ ಸಮೂಹಕ್ಕೆ ಆನಂದ-ಸಮೂಹದ ಮೂರ್ತಿಯಾಗಿರುವನೋ, ಯಾರು ನಿತ್ಯ ಶೋಭಾ ಧಾಮನೋ, ನಿರ್ವಿಕಾರಿಯೋ, ಅನಂತ ವೈಭವಗಳಿದ್ದರೂ, ಸದಾಕಾಲ ಮಾಯಾತೀತನಾದರೂ ಮಾಯೆಯ ಕಾರ್ಯಗಳನ್ನು ಅನುಸರಿಸುತ್ತ ಮನುಷ್ಯರಂತೆ ಕಂಡು ಬರುವ, ಎಲ್ಲರಿಗೂ ಒಡೆಯನಾದ ಭಗವಾನ್ ಶ್ರೀರಾಮನು ಸೀತೆಯೊಡನೆ ಸಾಕೇತ (ಅಯೋಧ್ಯೆ) ಧಾಮದಲ್ಲಿ ವಿರಾಜಿಸುತ್ತಿದ್ದನು.॥57॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.
ಬಾಲಕಾಂಡವು ಮುಗಿಯಿತು.